Saturday, December 11, 2010

ಅಂಥ ನಿಜಲಿಂಗಪ್ಪ ಮತ್ತು ಇಂಥ ಯಡಿಯೂರಪ್ಪ




“ನಾನು ಬಂದೂಕ ಹಿಡಿದಿಲ್ಲವಾದರೂ ಅನೇಕ ರಾಜಕೀಯ ಬಂದೂಕಧಾರಿಗಳಿಗೆ ಪರಿಣಾಮಕಾರಿಯಾಗಿ ತರಬೇತಿ ನೀಡಿದ್ದೇನೆ. ಕೆಲವೊಮ್ಮೆ ನಾನು ಪರಾಜಯವನ್ನು ಅನುಭವಿಸಿದ್ದೇನೆನ್ನುವುದೂ ನಿಜ, ಆದರೂ ಆ ಬಗ್ಗೆ ನನಗೆ ಸಂಕಟವಿಲ್ಲ. ನನಗೆ ಮುಕ್ತಿ ಬೇಕಿಲ್ಲ. ಈ ದೇಶದಲ್ಲಿ ಮಾತ್ರವಲ್ಲ, ಈ ರಾಜ್ಯದಲ್ಲಿ ಮತ್ತೆ ಮತ್ತೆ ಹುಟ್ಟುವ ಆಸೆ ನನಗಿದೆ. ನನ್ನ ಶಕ್ತಿ ಮೀರಿ ನನ್ನ ಜನರಿಗಾಗಿ ದುಡಿಯುವುದೇ ನನ್ನ ಹಂಬಲ. ನಾನು ಹಣ ಕೂಡಿಹಾಕಿಲ್ಲ. ಮಕ್ಕಳಿಗೂ ಕೊಟ್ಟಿಲ್ಲ. ನಾನು ಮುಖ್ಯಮಂತ್ರಿಯಾದಾಗ ನನ್ನ ಲೆಕ್ಕದಲ್ಲಿ ಕೇವಲ ಏಳು ಸಾವಿರ ರೂಪಾಯಿಗಳಿದ್ದವು. ಬ್ಯಾಂಕಿನಲ್ಲಿರುವ ಹಣ ಮತ್ತು ಆಸ್ತಿ ಸುಖ ಕೊಡಲಾರವೆಂಬುದನ್ನು ನಾನು ಬಲ್ಲೆ. ಮುಪ್ಪಿನಲ್ಲಿ ಜೋಗಿ ಮಠದಲ್ಲಿ ಸಣ್ಣದೊಂದು ಕುಟೀರ ಕಟ್ಟಿಕೊಂಡಿರಬೇಕೆಂದಿದ್ದೆ. ಆ ಬಗ್ಗೆ ಸರ್ಕಾರಕ್ಕೊಂದು ಯೋಜನೆ ಕಳಿಸಿದ್ದೆ. ಅದು ಮಂಜೂರಾಗಿ ಬರಲು ಮೂರು ವರ್ಷ ಹಿಡಿಯಿತು. ಆ ಹೊತ್ತಿಗೆ ನನ್ನ ಉತ್ಸಾಹದ ನೆರೆಯೂ ಇಳಿದಿತ್ತು. ನನ್ನ ಜನರಿಗೆ ಸಾಕಷ್ಟು ಸೇವೆ ಸಲ್ಲಿಸಿದ್ದೇನೆಯೇ ಎಂಬ ಶಂಕೆಯೇನೋ ಇದೆ. ಆದರೂ ನಾನು ಪಶ್ಚಾತ್ತಾಪವಿಲ್ಲದೆ ಮೃತ್ಯುದೇವತೆಯನ್ನು ಸ್ವಾಗತಿಸುತ್ತೇನೆ” ಹೀಗೆಂದಿದ್ದವರು ಎಸ್.ನಿಜಲಿಂಗಪ್ಪ. ಅಖಂಡ ಕರ್ನಾಟಕದ ಕನಸು ಕಂಡು ಅದನ್ನು ನನಸು ಮಾಡಿದ ಮಹಾಪುರುಷ ನಿಜಲಿಂಗಪ್ಪನವರು. ರಾಷ್ಟ್ರ ರಾಜಕಾರಣದಲ್ಲಿ ಇಂದಿರಾಗಾಂಧಿಗೆ ಸೆಡ್ಡು ಹೊಡೆದು ನಿಂತವರು. ಇಂದಿರಾ ಅವರ ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದವರು. ಎರಡು ಅವಧಿಗಳ ಕಾಲ ಏಕೀಕೃತ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದವರು.
ಒಂದೊಮ್ಮೆ ನಿಜಲಿಂಗಪ್ಪನವರೂ ಭ್ರಷ್ಟರಾಗಿದ್ದರೆ ಇಂದಿರಾಗಾಂಧಿಯವರ ಜತೆಗಿನ ಯುದ್ಧದಲ್ಲೇ ಅವರ ಕೈ ಮೇಲಾಗುತ್ತಿತ್ತೇನೋ? ಆದರೆ ಅವರು ಭ್ರಷ್ಟರಾಗಲಿಲ್ಲ. ಪಾರ್ಟಿ ಫಂಡುಗಳ ಹೆಸರಿನಲ್ಲಿ ಹರಿದು ಬರುವ ಹಣ ಎಂಥದ್ದು ಎಂಬುದನ್ನು ನಿಜಲಿಂಗಪ್ಪನವರು ಸರಿಯಾಗೇ ಗುರುತಿಸಿದ್ದರು. ಹಣ ಕೊಟ್ಟವರು ಅಧಿಕಾರಸ್ಥರಿಂದ ಏನೇನನ್ನು ಬಯಸುತ್ತಾರೆ ಎಂಬುದು ಅವರಿಗೆ ಗೊತ್ತಿತ್ತು. ಆ ಕಾರಣಕ್ಕೆ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾಗಲೂ ಅವರು ಇಂಥ ಕಪ್ಪು ಹಣವನ್ನು ಸಂಗ್ರಹಿಸುವ ಮನಸ್ಸು ಮಾಡಿರಲಿಲ್ಲ. ಅದೇ ಅವಕಾಶವನ್ನು ಬಳಸಿಕೊಂಡು ತನ್ನ ನಿಷ್ಠರನ್ನು ಬಳಸಿಕೊಂಡು ಇಂದಿರಾಗಾಂಧಿಯವರೇ ಆ ಕೆಲಸ ಮಾಡಿದರು. ನಿಜಲಿಂಗಪ್ಪನವರು ನೇಪಥ್ಯಕ್ಕೆ ಸರಿದರು.
ಎಲ್ಲಿಯ ನಿಜಲಿಂಗಪ್ಪ, ಎಲ್ಲಿಯ ಯಡಿಯೂರಪ್ಪ! ಸಾಯುವಾಗ ಜೋಗಿ ಮಠದಲ್ಲಿ ಸಣ್ಣ ಕುಟೀರದಲ್ಲಿ ಕಳೆಯುತ್ತೇನೆ ಎಂದಿದ್ದ ನಿಜಲಿಂಗಪ್ಪ ಅವರೆಲ್ಲಿ? ತಾನು ತನ್ನ ಮಕ್ಕಳು, ವಂಶಸ್ಥರು ಇನ್ನೂ ಹಲವಾರು ಪೀಳಿಗೆಯವರೆಗೆ ಕುಳಿತು ತಿನ್ನಲು ಆಸ್ತಿ ಸಂಗ್ರಹಿಸುತ್ತಿರುವ ಯಡಿಯೂರಪ್ಪನವರೆಲ್ಲಿ?
ಅಧಿಕಾರದ ಮದ ಜನಪ್ರತಿನಿಧಿಗಳಿಂದ ಏನೇನನ್ನು ಮಾಡಿಸುತ್ತದೆ ಎಂಬುದನ್ನು ನಿಜಲಿಂಗಪ್ಪನವರು ಬಲ್ಲವರಾಗಿದ್ದರು. ಅದಕ್ಕೇ ಅವರು ಹೇಳಿದರು: “ಅಧಿಕಾರಪ್ರಮತ್ತರಾದ ಮಂತ್ರಿಗಳಿಗೆ ನೀತಿ ಮೀಮಾಂಸೆ ಎಂಬುದೇ ಇಲ್ಲ. ಅವರಿಗೆ ಸಮಾಜ ರೂಪಿಸಿದ, ಪರಂಪರೆಯಿಂದ ಬಂದ, ಋಷಿಸಂತ ಸಾಧುಗಳು ಬೋಧಿಸಿದ ನೀತಿ ಸೂತ್ರಗಳು ಬೇಕಿಲ್ಲ. ತಾವೇ ರಚಿಸಿಕೊಂಡ, ತಮ್ಮ ನಡೆನುಡಿಗಳಿಂದ ಹೊರಹೊಮ್ಮಿದ ನೀತಿಸೂತ್ರಗಳೇ ಅವರಿಗೆ ಮೆಚ್ಚು. ತರುಣಿಯರ ಮಾನಭಂಗ ಮಾಡುವುದು ಪೌರುಷದ ಕುರುಹು. ಲಂಚ ಲಪಟಾಯಿಸುವುದು ರಾಜಕೀಯ ಕೌಶಲದ ಚಿಹ್ನೆ. ಶಾಸನಗಳನ್ನು ಅತಿಕ್ರಮಿಸುವುದು ಯಜಮಾನ್ಯದ ಸಂಕೇತ. ಇಂಥವರು ಮತ್ತೆ ಸಾರ್ವಜನಿಕ ಸೇವಾಕ್ಷೇತ್ರಕ್ಕೆ ಮರಳದಂತೆ ಶಾಸನಮಾಡಲೇಬೇಕು, ಶಾಸನ ಮಾಡದಿದ್ದಲ್ಲಿ ಜನರೇ ಕ್ರಮ ಜರುಗಿಸಬೇಕು.”
ಯಡಿಯೂರಪ್ಪನವರು ಹೋರಾಟದ ಮೂಲಕವೇ ರಾಜಕೀಯದಲ್ಲಿ ಪ್ರವರ್ಧಮಾನಕ್ಕೆ ಬಂದವರು. ಭಾರತೀಯ ಜನತಾ ಪಕ್ಷವನ್ನು ಕಾಂಗ್ರೆಸ್ ಹಾಗು ಜನತಾ ಪರಿವಾರಕ್ಕೆ ಪ್ರತಿಯಾಗಿ ಬೇರುಮಟ್ಟದಲ್ಲಿ ಕಟ್ಟಿ ಬೆಳೆಸಿದವರಲ್ಲಿ ಒಬ್ಬರು. ಭಾರತೀಯ ಜನತಾ ಪಕ್ಷವೇ ನೀತಿ-ಸಿದ್ಧಾಂತಗಳ ಅಡಿಯಲ್ಲಿ ರೂಪುಗೊಂಡಿದ್ದು. ಹೀಗಾಗಿ ಯಡಿಯೂರಪ್ಪ ಅಧಿಕಾರಕ್ಕೆ ಬಂದಾಗ ರಾಮರಾಜ್ಯವಲ್ಲದಿದ್ದರೂ ಭ್ರಷ್ಟಾಚಾರಮುಕ್ತವಾದ ಸದೃಢ, ಪ್ರಗತಿಪರ ರಾಜ್ಯವಾಗಿ ಕರ್ನಾಟಕ ರೂಪುಗೊಳ್ಳಬಹುದು ಎಂಬ ನಿರೀಕ್ಷೆ ಹಲವರಲ್ಲಿತ್ತು.
ಎಲ್ಲಿಂದ ಎಲ್ಲಿಗೆ ಬಂದು ತಲುಪಿದರು ಯಡಿಯೂರಪ್ಪ? ನಾನು, ನನ್ನ ಮಕ್ಕಳು ಮಾಡಿಕೊಂಡಿರುವ ಭೂಮಿ ಕಾನೂನುಬದ್ಧವಾಗೇ ಪಡೆದುಕೊಂಡಿದ್ದು ಎಂದು ಹೇಳುವ ಮೂಲಕ ಯಡಿಯೂರಪ್ಪ ಯಾವ ಸಂದೇಶ ನೀಡಲು ಹೊರಟಿದ್ದಾರೆ? ಕಾನೂನುಬದ್ಧ ಭ್ರಷ್ಟಾಚಾರ ಎಂಬ ಹೊಸ ನುಡಿಗಟ್ಟನ್ನು ಅವರು ಸೃಷ್ಟಿಸುವ ಮೂಲಕ ತಮ್ಮನ್ನು ತಾವು ರಾಜಕೀಯ ಕೌಶಲದ ನಿಪುಣ ಮುಖ್ಯಮಂತ್ರಿ ಎಂದು ಬಿಂಬಿಸಿಕೊಳ್ಳಲು ಹೊರಟಿದ್ದಾರೆಯೇ?
ಇವತ್ತು ಯಡಿಯೂರಪ್ಪ ಪರವಾಗಿ ನಿಂತಿರುವವರು ಯಾರು? ಸಾರ್ವಜನಿಕ ಆಸ್ತಿಯನ್ನು ಮಕ್ಕಳಿಗೆ, ಅಳಿಯಂದಿರು, ಸೊಸೆಯರು, ವಂಶಸ್ಥರಿಗೆ ಬೇಕಾಬಿಟ್ಟಿ ಹಂಚಿ ಕೋಟಿಗಟ್ಟಲೆ ಹಣ ಲೂಟಿ ಮಾಡಿದ ಯಡಿಯೂರಪ್ಪನವರನ್ನು ಉಳಿಸಿಕೊಳ್ಳಲೇಬೇಕೆಂದು ನಿಂತವರು ಕೆಲವು ಮಠಾಧೀಶರು. ಯಡಿಯೂರಪ್ಪ ಉಳಿದುಕೊಂಡರೆ ಅವರಿಗೇನು ಲಾಭ? ಯಾಕೆ ಒಂದೇ ಸಮಾಜದ ಮಠಾಧೀಶರು ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಉಳಿಯಬೇಕು ಎಂದು ಬೀದಿಗೆ ಬಂದರು?
ಬಸವರಾಜ ಕಟ್ಟೀಮನಿಯವರು ತಮ್ಮ ಆತ್ಮಕಥೆಯಲ್ಲಿ ಉಲ್ಲೇಖಿಸಿರುವ ಕೆಲವು ವಿಷಯಗಳನ್ನು ಗಮನಿಸಿ. “ನಿಜಲಿಂಗಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಅವರು ಲಿಂಗಾಯತರು, ನಮ್ಮವರು, ನಮ್ಮ ಕೆಲಸ ಸುಲಭವಾಗಿ ಆದೀತು ಎಂದೆಲ್ಲ ಆಶೆಯಿಟ್ಟುಕೊಂಡು ಕೆಲವರು ಕಾವಿಧಾರಿಗಳು ಬಾಲಬ್ರೂಯಿಗೆ ದಯಮಾಡಿಸುತ್ತಿದ್ದರು. ನಿಜಲಿಂಗಪ್ಪನವರು ಮಾತ್ರ ಇಂಥವರನ್ನು ದೂರದಲ್ಲಿಯೇ ಇಟ್ಟುಬಿಡುತ್ತಿದ್ದರು. ಅವರಿಗೆ ಹೆಚ್ಚಿನ ಸಲಿಗೆ ನೀಡುತ್ತಿರಲಿಲ್ಲ. ಅವರು ಹೇಳುವ ಕೆಲಸ ನಿಯಮಗಳ ಚೌಕಟ್ಟಿನಲ್ಲಿ ಬರುವಂತಿದ್ದರೆ ಮಾತ್ರ ಆ ಬಗೆಗೆ ಆಜ್ಞೆ ಮಾಡುತ್ತಿದ್ದರು. ಅವರು ಲಿಂಗಾಯಿತ ಸ್ವಾಮಿಗಳೆಂಬ ಕಾರಣಕ್ಕಾಗಿ ಸರ್ಕಾರದ ನಿಯಮಗಳನ್ನು ಅವರಿಗಾಗಿ ಸಡಿಲಿಸುತ್ತಿರಲಿಲ್ಲ. ‘ಲಿಂಗಾಯಿತರ ಸರ್ಕಾರ ಬಂದಿದೆ. ನಾವು ಹೇಳಿದ್ದೆಲ್ಲ ಆಗ್ತದೆ’ ಎಂದು ಆಶೆಯಿಟ್ಟುಕೊಂಡು ಬಂದವರೆಲ್ಲರಿಗೂ ನಿರಾಶೆಯಾಗುತ್ತಿತ್ತು. ಇಂಥ ಅನೇಕ ಸ್ವಾಮಿಗಳು ನನ್ನೆದುರಿಗೆ ನಿಜಲಿಂಗಪ್ಪನವರನ್ನು, ವಿರೇಂದ್ರ ಪಾಟೀಲರನ್ನು ಬಯ್ದದ್ದುಂಟು”
ಯಡಿಯೂರಪ್ಪನವರು ಅಧಿಕಾರಕ್ಕೆ ಬಂದಾಗಿನಿಂದ ಮಠ-ಮಾನ್ಯಗಳಿಗೆ ಕೇಳಿದಷ್ಟು ಹಣ ಕೊಟ್ಟರು. ಕೆಲವು ಮಠಗಳಿಗೆ ಅಧಿಕಾರಿಗಳೇ ಹೋಗಿ ಅಲ್ಲೇ ಫೈಲುಗಳ ವಿಲೇವಾರಿ ಮಾಡತೊಡಗಿದರು. ಮಠಾಧೀಶರು ಹೇಳಿದವರಿಗೆ ಕೆಲಸ-ಕಾರ್ಯಗಳನ್ನು ಮಾಡಿಕೊಟ್ಟರು.
ಈಗ ಋಣಸಂದಾಯದ ಕಾಯಕ ನಡೆಯುತ್ತಿದೆ!
ನಾಳೆ ಇನ್ಯಾವುದೋ ಸಮುದಾಯದ ವ್ಯಕ್ತಿ ಮುಖ್ಯಮಂತ್ರಿಯಾಗುತ್ತಾನೆ. ಆ ವ್ಯಕ್ತಿಯೂ ಲಂಪಟನಾಗಿ, ಲೂಟಿಕೋರನಾಗಿ ಹಗರಣಗಳೆಲ್ಲವೂ ಬಯಲಾದಾಗ ಆತನ ಸಮುದಾಯದ ಸ್ವಾಮಿಗಳೂ ಬೀದಿಗಿಳಿದು ರಕ್ಷಣೆಗೆ ನಿಂತರೆ? ಪ್ರಜಾಪ್ರಭುತ್ವಕ್ಕೇನು ಅರ್ಥ? ಈ ನಾಡನ್ನು ಕಾಪಾಡುವವರು ಯಾರು? ಧರ್ಮಬೋಧೆ ಮಾಡಿಕೊಂಡು ಇರಬೇಕಾದ ಸ್ವಾಮಿಗಳು ನೇರವಾಗಿ ದರೋಡೆಕೋರ ರಾಜಕಾರಣಿಗಳನ್ನು ಸಮರ್ಥಿಸಿಕೊಳ್ಳುತ್ತ ಹೋದರೆ ಧರ್ಮಕ್ಕೇನು ಅರ್ಥ ಉಳಿಯಿತು?
ಯಡಿಯೂರಪ್ಪ ಅವರ ಬ್ಲಾಕ್‌ಮೇಲ್‌ಗೆ ಮಣಿದು ಬಿಜೆಪಿಯ ಹೈಕಮಾಂಡ್ ಮುಖ್ಯಮಂತ್ರಿಯನ್ನು ಬದಲಿಸುವುದಿಲ್ಲ ಎಂದು ದಿಲ್ಲಿಯಲ್ಲಿ ಘೋಷಣೆ ಮಾಡಿದಾಗ ನಾನು ಹುಬ್ಬಳ್ಳಿಯಲ್ಲಿದ್ದೆ. ಪತ್ರಕರ್ತರು ಈ ಬಗ್ಗೆ ಪ್ರಶ್ನಿಸಿದಾಗ ನಾನು ಹೇಳಿದ್ದಿಷ್ಟು: “ಇದು ಭ್ರಷ್ಟ ಸರ್ಕಾರ. ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರ ಅಪರಾಧಗಳನ್ನು ತನ್ನ ಮೈಮೇಲೆ ಹಾಕಿಕೊಂಡಿದೆ. ಅದರರ್ಥ ಹೈಕಮಾಂಡ್‌ಗೂ ಭ್ರಷ್ಟಾಚಾರದಲ್ಲಿ ಪಾಲಿರಬೇಕು.
ಆದರೆ ಕರ್ನಾಟಕದ ಜನತೆ ಈ ಮುಖ್ಯಮಂತ್ರಿಯನ್ನು ಸಹಿಸಿಕೊಂಡಿರಲು ಸಾಧ್ಯವಿಲ್ಲ. ಬಿಜೆಪಿಯಲ್ಲಿ ಮತ್ತೊಬ್ಬ ಪರ್ಯಾಯ

ಸಾರ್ಥಕ ದಶಕ ಒಂದು ನೋಟ




ಕರ್ನಾಟಕ ರಕ್ಷಣಾ ವೇದಿಕೆಗೆ ಈಗ ಹತ್ತು ವರ್ಷ. ಅಕೌಂಟೆಂಟ್ ಜನರಲ್ ಕಚೇರಿಯಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡದೆ ವಂಚಿಸಿದ್ದನ್ನು ವಿರೋಧಿಸಿ ಕನ್ನಡ ಕಟ್ಟಾಳುಗಳು ನಡೆಸಿದ ಹೋರಾಟವೇ ಕರವೇ ಉದಯಕ್ಕೆ ಮುನ್ನುಡಿಯಾಯಿತು. ಅಲ್ಲಿಂದ ಇಲ್ಲಿಯವರೆಗೆ ಸಾರ್ಥಕ ಹತ್ತು ವರ್ಷಗಳನ್ನು ಪೂರೈಸಿದ ಹೆಮ್ಮೆ ಕರ್ನಾಟಕ ರಕ್ಷಣಾ ವೇದಿಕೆಯದ್ದು.
ಹತ್ತು ವರ್ಷಗಳ ಹಿಂದೆ ಕನ್ನಡಪರ ಚಳವಳಿ ದಿಕ್ಕಿಲ್ಲದಂತಾಗಿತ್ತು. ಕನ್ನಡದ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹೋರಾಡುವ ನೂರಾರು ಸಂಘಟನೆಗಳು ಇದ್ದವು ಎಂಬುದೇನೋ ನಿಜ. ಆದರೆ ಬಿಡಿಬಿಡಿಯಾದ ಹೋರಾಟಗಳು ಪರಿಣಾಮದ ದೃಷ್ಟಿಯಿಂದ ಸೋಲುತ್ತಿದ್ದವು. ಹೀಗಾಗಿ ಒಗ್ಗಟ್ಟಾದ ಹೋರಾಟ ಅನಿವಾರ್ಯತೆಯಿತ್ತು. ಇಂಥ ಸಂದರ್ಭದಲ್ಲಿ ಕನ್ನಡಪರ ಸಂಘಟನೆಗಳ ಒಕ್ಕೂಟವಾಗಿ ರೂಪುಗೊಂಡಿದ್ದು ಕರ್ನಾಟಕ ರಕ್ಷಣಾ ವೇದಿಕೆ.
ಕನ್ನಡತನವೇ ಸಿದ್ಧಾಂತ
ಕರ್ನಾಟಕ ರಕ್ಷಣಾ ವೇದಿಕೆ ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ದೇವರು ಎಂಬ ಘೋಷವಾಕ್ಯದೊಂದಿಗೆ ಚಳವಳಿಯ ಕಣಕ್ಕೆ ಇಳಿಯಿತು. ‘ಕನ್ನಡವಿಲ್ಲದ ಸ್ವರ್ಗ ನನಗೆ ನರಕ ಸಮಾನ, ಕನ್ನಡವಿರುವ ನರಕ ನನಗೆ ಸ್ವರ್ಗ ಸಮಾನ’ ಎಂದು ಹೇಳಿದ ಮಹಾಕವಿ ಕುವೆಂಪು ಅವರೇ ಸಂಘಟನೆಗೆ ಆದರ್ಶ ಪುರುಷ. ಸ್ನೇಹಕ್ಕೂ ಬದ್ಧ, ಸಮರಕ್ಕೂ ಸಿದ್ಧ ಎಂಬುದು ವೇದಿಕೆಯ ಪ್ರಬಲ ಘೋಷಣೆಯಾಗಿ ಮೊಳಗಿತು. ಕನ್ನಡದ ಶತ್ರುಗಳೆಲ್ಲ ನಮ್ಮ ಶತ್ರುಗಳು ಎಂಬಂತೆ ಕರವೇ ಸಮರಾಂಗಣಕ್ಕೆ ಇಳಿಯಿತು. ಅದರ ಪರಿಣಾಮವಾಗಿ ಕನ್ನಡ ಚಳವಳಿಯ ಕ್ಷೇತ್ರದಲ್ಲಿ ಹೊಸ ಅಲೆಯೇ ಸೃಷ್ಟಿಯಾಯಿತು. ಕರ್ನಾಟಕದಲ್ಲಿ ಕನ್ನಡಿಗನೇ ಅಸಹಾಯಕನಾಗಿದ್ದ ಸನ್ನಿವೇಶದಲ್ಲಿ ತಮ್ಮ ನೆಲದಲ್ಲಿ ಆಗುತ್ತಿದ್ದ ಅನ್ಯಾಯಗಳ ವಿರುದ್ಧ ಜೀವದ ಹಂಗು ತೊರೆದು ಹೋರಾಡಲು ವೀರ ಕನ್ನಡಿಗರ ಪಡೆಯೇ ಸೃಷ್ಟಿಯಾಯಿತು.
ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾಗಿ ಟಿ.ಎ.ನಾರಾಯಣಗೌಡರು ಅಧಿಕಾರ ವಹಿಸಿಕೊಂಡ ನಂತರ ಇಡೀ ರಾಜ್ಯಾದ್ಯಂತ ಹೊಸ ಸಂಚಲನವೇ ಮೂಡಿತು. ಹಳೆ ಮೈಸೂರು ಪ್ರಾಂತ್ಯದಲ್ಲಿ ಆಗಷ್ಟೆ ಬೇರುಬಿಡುತ್ತಿದ್ದ ಸಂಘಟನೆಯನ್ನು ಇಡೀ ಕರ್ನಾಟಕಕ್ಕೆ ವಿಸ್ತರಿಸಿದ್ದು ನಾರಾಯಣಗೌಡರು. ಅವರ ಚುಂಬಕ ವ್ಯಕ್ತಿತ್ವಕ್ಕೆ ಮನಸೋತು ನಾಡಿನ ಲಕ್ಷಾಂತರ ಕಾರ್ಯಕರ್ತರು ರಕ್ಷಣಾ ವೇದಿಕೆಯೆಡೆಗೆ ಆಕರ್ಷಿತರಾದರು. ಪರಿಣಾಮವಾಗಿ ರಾಜ್ಯದಲ್ಲಿ ಹೊಸ ಕನ್ನಡ ಶಕ್ತಿ ಉದಯವಾಯಿತು. ಕನ್ನಡಿಗರ ಹತ್ತು ಹಲವು ಸಮಸ್ಯೆಗಳಿಗೆ ಉತ್ತರಗಳು ದಕ್ಕಿದವು. ಕನ್ನಡ ವಿರೋಧಿಗಳ ಅಟ್ಟಹಾಸ ತಕ್ಕಮಟ್ಟಿಗೆ ಅಡಗಿತು. ರಾಜಧಾನಿ ಬೆಂಗಳೂರಿನಲ್ಲಿ ಪರಭಾಷಿಗರ ದೌರ್ಜನ್ಯವನ್ನು ಮಟ್ಟಹಾಕಲಾಯಿತು. ಕನ್ನಡದ ಜನತೆ ನಾರಾಯಣಗೌಡರಲ್ಲಿ ಹೊಸ ನಾಯಕನನ್ನು ಗುರುತಿಸಿತು.
ಉದ್ಯೋಗದ ಹೋರಾಟ
ಕನ್ನಡ ಚಳವಳಿ ಬಹುತೇಕ ಸಂದರ್ಭಗಳಲ್ಲಿ ಭಾವನಾತ್ಮಕ ವಿಷಯಗಳ ಸುತ್ತಲೇ ಗಿರಕಿ ಹೊಡೆಯುತ್ತಿದ್ದ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಿಗರ ಬದುಕಿನ ಸಮಸ್ಯೆಗಳನ್ನು ಕೈಗೆತ್ತಿಕೊಂಡಿತು. ಕನ್ನಡಿಗರಿಗೆ ಸರ್ಕಾರಿ, ಅರೆಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ದೊರೆಯಬೇಕು ಎಂಬುದು ರಕ್ಷಣಾ ವೇದಿಕೆಯ ಪ್ರಧಾನ ಉದ್ದೇಶವಾಗಿತ್ತು. ಹೀಗಾಗಿ ಕೇಂದ್ರ ಸರ್ಕಾರಿ ಸ್ವಾಮ್ಯದ ಕಾರ್ಖಾನೆಗಳು, ಕಛೇರಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ ತೀವ್ರ ಸ್ವರೂಪದ ಹೋರಾಟಗಳನ್ನು ಸಂಘಟಿಸಿತು.
ಕರ್ನಾಟಕದಲ್ಲಿ ಕನ್ನಡಿಗರಿಗೇ ಉದ್ಯೋಗ ದೊರೆಯದಂಥ ಸಂದರ್ಭ ಸೃಷ್ಟಿಯಾಗಿದ್ದಾಗ ಅದರ ವಿರುದ್ಧ ಕರವೇ ಸೆಟೆದು ನಿಂತಿತು. ಕರ್ನಾಟಕಕ್ಕೆ ದೇಶದ ನಾನಾ ಭಾಗಗಳಿಂದ ಲಕ್ಷಾಂತರ ಮಂದಿ ಉದ್ಯೋಗ ಅರಸಿಕೊಂಡು ಬಂದಿದ್ದರ ಪರಿಣಾಮವಾಗಿ ಕನ್ನಡಿಗರಿಗೆ ಉದ್ಯೋಗ ದೊರೆಯಲು ಕಷ್ಟಸಾಧ್ಯವಾಯಿತು. ಈ ಅನಿಯಂತ್ರಿತ ವಲಸೆಗೆ ರಾಜಕಾರಣಿಗಳು ಪ್ರಮುಖ ಕಾರಣ. ಓಟ್‌ಬ್ಯಾಂಕ್ ರಾಜಕಾರಣಕ್ಕಾಗಿ ನಮ್ಮ ಜನಪ್ರತಿನಿಧಿಗಳು ವಲಸಿಗರನ್ನು ಓಲೈಸತೊಡಗಿದ್ದರು (ಈಗಲೂ ಓಲೈಸುತ್ತಾರೆ). ಇಂಥ ಸನ್ನಿವೇಶದಲ್ಲಿ ಕನ್ನಡಿಗರಿಗೆ ಉದ್ಯೋಗ ದೊರಕದ ಹೊರತು ಕನ್ನಡಿಗರ ಸಮಸ್ಯೆಗಳು ಪರಿಹಾರವಾಗದು ಎಂಬುದನ್ನು ಕರ್ನಾಟಕ ರಕ್ಷಣಾ ವೇದಿಕೆ ಮನಗಂಡಿತ್ತು. ಹೀಗಾಗಿ ಉದ್ಯೋಗದ ಹೋರಾಟವನ್ನು ಕರವೇ ತನ್ನ ಬಹುಮುಖ್ಯ ಆದ್ಯತೆಯನ್ನಾಗಿ ಗುರುತಿಸಿತ್ತು. ಎಜಿ ಕಛೇರಿಯಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡದೆ ವಂಚಿಸುತ್ತಿದ್ದ ರೀತಿಯನ್ನು ವಿರೋಧಿಸಿ ನಡೆದದ್ದೇ ಕರ್ನಾಟಕ ರಕ್ಷಣಾ ವೇದಿಕೆಯ ಮೊದಲ ಹೋರಾಟ. ಈ ಮೊದಲ ಹೋರಾಟದಲ್ಲೇ ವೇದಿಕೆಗೆ ಜಯ ಲಭಿಸಿತು. ಕಳೆದ ಹತ್ತು ವರ್ಷಗಳಲ್ಲಿ ಇಂಥ ನೂರಾರು ಹೋರಾಟಗಳನ್ನು ವೇದಿಕೆ ಸಮರ್ಥವಾಗಿ ಮುನ್ನಡೆಸಿ ಕನ್ನಡಿಗರಿಗೆ ನ್ಯಾಯ ದೊರಕಿಸಿಕೊಟ್ಟಿದೆ.
ರೈಲ್ವೆ ಹೋರಾಟ
ಕರ್ನಾಟಕ ರಕ್ಷಣಾ ವೇದಿಕೆಯ ಯಶಸ್ವಿ ಹೋರಾಟಗಳಲ್ಲಿ ಬಹುಮುಖ್ಯವಾದುದು ರೈಲ್ವೆ ಹೋರಾಟ. ಕಳೆದ ಆರು ದಶಕಕ್ಕೂ ಹೆಚ್ಚು ಕಾಲ ಕೇಂದ್ರದ ರೈಲ್ವೆ ಇಲಾಖೆ ಕನ್ನಡಿಗರನ್ನು ವಂಚಿಸಿಕೊಂಡೇ ಬಂದಿದೆ. ರೈಲ್ವೆ ಇಲಾಖೆಯಲ್ಲಿ ಇಷ್ಟು ವರ್ಷಗಳ ಕಾಲ ಕನ್ನಡಿಗರಿಗೆ ಆದ್ಯತೆಯ ಮೇರೆ ಉದ್ಯೋಗ ಕೊಡುವಂತಹ ವಾತಾವರಣವೇ ಇರಲಿಲ್ಲ. ಸಿ.ಕೆ.ಜಾಫರ್ ಷರೀಫ್ ಕೇಂದ್ರ ಸಚಿವರಾಗಿದ್ದ ಸಂದರ್ಭದಲ್ಲಿ ಸ್ವಲ್ಪ ಮಟ್ಟಿಗೆ ಕನ್ನಡಿಗರಿಗೆ ಉದ್ಯೋಗ ದೊರಕಿದ್ದನ್ನು ಹೊರತುಪಡಿಸಿದರೆ ಆರು ದಶಕಗಳಲ್ಲಿ ಇಲಾಖೆಗೆ ಕನ್ನಡಿಗರ ಸೇರ್ಪಡೆ ನಗಣ್ಯವಾಗಿತ್ತು. ಕರ್ನಾಟಕದ ರೈಲ್ವೆ ಸ್ಟೇಷನ್‌ಗಳಲ್ಲಿ ಕಾರ್ಯ ನಿರ್ವಹಿಸುವ ಸ್ಟೇಷನ್ ಮಾಸ್ಟರ್ ಹುದ್ದೆಯಿಂದ ಹಿಡಿದು ಗ್ಯಾಂಗ್‌ಮನ್ ಗಳವರೆಗೆ ಎಲ್ಲರೂ ಪರಭಾಷಿಕರೇ ಆಗಿದ್ದಾರೆ. ಅದರಲ್ಲೂ ವಿಶೇಷವಾಗಿ ತಮಿಳುನಾಡು, ಕೇರಳ ಮತ್ತಿತರ ರಾಜ್ಯಗಳಿಂದ ಬಂದವರೇ ಕರ್ನಾಟಕದಲ್ಲಿ ಉದ್ಯೋಗ ಹಿಡಿದಿದ್ದಾರೆ.
ದುರಂತವೆಂದರೆ, ಕರ್ನಾಟಕವನ್ನಾಳಿದ ಯಾವ ಸರ್ಕಾರಕ್ಕೂ, ಯಾವ ರಾಜಕೀಯ ಪಕ್ಷಕ್ಕೂ ಈ ಅನ್ಯಾಯದ ಅರಿವೇ ಇರಲಿಲ್ಲ (ಈಗಲೂ ಇಲ್ಲ). ಕರ್ನಾಟಕದಿಂದ ಸಂಸತ್ತಿಗೆ ಆರಿಸಿ ಹೋಗುವ ಜನಪ್ರತಿನಿಧಿಗಳಿಗೂ "ಇದು ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ" ಎಂಬ ಕನಿಷ್ಠ ತಿಳಿವಳಿಕೆಯೂ ಇರಲಿಲ್ಲ.
ರೈಲ್ವೆಯಲ್ಲಿ ಕನ್ನಡಿಗರಿಗೆ ಆಗುತ್ತಿರುವ ವಂಚನೆಯನ್ನು ಗುರುತಿಸಿದ ಟಿ.ಎ.ನಾರಾಯಣಗೌಡರು ನಿರ್ಣಾಯಕ ಹೋರಾಟಕ್ಕೆ ವೇದಿಕೆಯ ಕಾರ್ಯಕರ್ತರನ್ನು ಸಜ್ಜುಗೊಳಿಸಿದರು. ಅದರ ಪರಿಣಾಮವಾಗಿ ನಡೆದದ್ದೇ ಐತಿಹಾಸಿಕ ರೈಲ್ವೆ ಚಳವಳಿ.
ಮೊದಲ ಬಾರಿ ದೇಶದಲ್ಲಿ ಯುಪಿಎ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಬಿಹಾರದ ಲಾಲೂ ಪ್ರಸಾದ್ ಯಾದವ್ ರೈಲ್ವೆ ಸಚಿವರಾಗಿದ್ದರು. ಹಿಂದೆ ನಡೆದ ಸಂಪ್ರದಾಯಗಳ ಹಾಗೆಯೇ ಲಾಲೂ ಯಾದವ್ ಸಹ ತನ್ನ ರಾಜ್ಯದ ನಿರುದ್ಯೋಗಿ ಯುವಕರಿಗೆ ರೈಲ್ವೆಯಲ್ಲಿ ಉದ್ಯೋಗ ಕೊಡಿಸಲು ಮುಂದಾದರು. ಇದಕ್ಕಾಗಿ ಅವರು ಆಯ್ಕೆ ಮಾಡಿಕೊಂಡಿದ್ದು ಕರ್ನಾಟಕ ರಾಜ್ಯವನ್ನು. ಇತರ ರಾಜ್ಯಗಳಲ್ಲಿ ಹಿಂಡುಗಟ್ಟಲೆ ಬಿಹಾರಿಗಳನ್ನು ತುಂಬಲು ಮುಂದಾದರೆ ಪ್ರತಿರೋಧ ಎದುರಾಗಬಹುದು. ಈ ಹಿನ್ನೆಲೆಯಲ್ಲಿ ಕರ್ನಾಟಕವೇ ಸೂಕ್ತ ಎಂಬ ಕಾರಣಕ್ಕೆ ನೀತಿ ನಿಯಮಾವಳಿಗಳನ್ನು ಗಾಳಿಗೆ ತೂರಿ ಕರ್ನಾಟಕದ ರೈಲ್ವೆಯಲ್ಲಿ ಸಾವಿರಾರು ಬಿಹಾರಿ ಯುವಕರಿಗೆ ಉದ್ಯೋಗ ದೊರಕಿಸಿಕೊಡಲು ಕಳ್ಳ ಮಾರ್ಗಗಳನ್ನು ಹಿಡಿದರು.
ನೈಋತ್ಯ ರೈಲ್ವೆ ವಲಯದಲ್ಲಿ ಸಿ ಮತ್ತು ಡಿ ದರ್ಜೆಯ ಹುದ್ದೆಗಳಿಗೆ ನೇಮಕಾತಿ ಕಾರ್ಯ ಆರಂಭವಾಯಿತು. ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿಗಳಲ್ಲಿ ಏಕಕಾಲಕ್ಕೆ ಪರೀಕ್ಷೆಗಳು ಆರಂಭವಾದವು. ವಿಶೇಷವೆಂದರೆ, ಈ ಪರೀಕ್ಷೆಗಳಿಗೆ ಸಾವಿರಾರು ಬಿಹಾರಿ ಯುವಕರು ಆಗಮಿಸಿದ್ದರು. ಇವರನ್ನು ವಿಶೇಷ ರೈಲುಗಳಲ್ಲಿ ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿಗೆ ಕರೆ ತರಲಾಗಿತ್ತು. ಇವರ ವಾಸ್ತವ್ಯ ಮತ್ತು ಊಟೋಪಚಾರದ ವ್ಯವಸ್ಥೆಗಳನ್ನು ಸಹ ಲಾಲೂ ಯಾದವ್ ಅವರ ಅಣತಿಯ ಮೇರೆಗೆ ರೈಲ್ವೆ ಇಲಾಖೆಯೇ ವಹಿಸಿಕೊಂಡಿತ್ತು. ಈ ವಿಷಯ ಟಿ.ಎ.ನಾರಾಯಣಗೌಡರಿಗೆ ಗೊತ್ತಾಗುತ್ತಿದ್ದಂತೆ ಹೋರಾಟದ ರಣಕಹಳೆಯನ್ನೇ ಮೊಳಗಿಸಿದರು.
ರೈಲ್ವೆ ಪರೀಕ್ಷೆಗಳ ನಡೆಯುತ್ತಿದ್ದ ಬೆಂಗಳೂರು, ಹುಬ್ಬಳ್ಳಿ ಹಾಗೂ ಮೈಸೂರು ಪರೀಕ್ಷಾ ಕೇಂದ್ರಗಳ ಮೇಲೆ ಕರ್ನಾಟಕ ರಕ್ಷಣಾ ವೇದಿಕೆಯ ಸಾವಿರಾರು ಕಾರ್ಯಕರ್ತರು ಏಕಕಾಲಕ್ಕೆ ದಾಳಿ ನಡೆಸಿದರು. ಪರೀಕ್ಷೆಗಳು ನಡೆಯದಂತೆ ತಡೆದರು. ಹೆಚ್ಚು ರಕ್ಷಣಾ ಸಿಬ್ಬಂದಿಗಳನ್ನು ಇಟ್ಟುಕೊಂಡು ಪುನಃ ಪರೀಕ್ಷೆಗಳನ್ನು ನಡೆಸಲು ಇಲಾಖೆ ಪ್ರಯತ್ನಿಸಿತು. ಒಂದು ವಾರಕ್ಕೂ ಹೆಚ್ಚು ಕಾಲ ನಡೆದ ಈ ಎಲ್ಲಾ ಕುತಂತ್ರಗಳನ್ನು ಕರವೇ ಕಾರ್ಯಕರ್ತರು ವಿಫಲಗೊಳಿಸಿದರು. ಈ ಹೋರಾಟದ ಸಂದರ್ಭದಲ್ಲಿ ಪೊಲೀಸರ ಲಾಠಿಗೆ ಗುರಿಯಾದ ಕಾರ್ಯಕರ್ತರು ಜೀವದ ಹಂಗು ತೊರೆದು ಚಳವಳಿ ನಡೆಸಿದರು. ಎಲ್ಲೆಡೆ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಯಿತು. ಕನ್ನಡಿಗರ ಪ್ರತಿರೋಧದ ನಡುವೆಯೂ ಬಿಹಾರಿ ಯುವಕರನ್ನು ನಾಲ್ಕು ಸಾವಿರಕ್ಕೂ ಹೆಚ್ಚು ಸಿ ಮತ್ತು ಡಿ ದರ್ಜೆ ಹುದ್ದೆಗಳಿಗೆ ನೇಮಕ ಮಾಡಲು ಯತ್ನಿಸುತ್ತಿದ್ದ ಇಲಾಖೆಯ ಅಧಿಕಾರಿಗಳ ವಿರುದ್ಧ ಆಕ್ರೋಶ ಭುಗಿಲೆದ್ದಿತು.
ಹುಬ್ಬಳ್ಳಿಯ ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಹಾಗೂ ಬೆಂಗಳೂರಿನ ನೈಋತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕರ ಕಛೇರಿಗಳ ಮೇಲೂ ದಾಳಿಗಳು ನಡೆದವು. ಪರಿಣಾಮವಾಗಿ ಸಿ ಮತ್ತು ಡಿ ದರ್ಜೆಯ ಹುದ್ದೆಗಳಿಗೆ ನಡೆಯುತ್ತಿದ್ದ ಪರೀಕ್ಷೆಗಳು ಸ್ಥಗಿತಗೊಂಡವು. ಬಿಹಾರಿ ಯುವಕರು ಬಂದ ದಾರಿಗೆ ಸುಂಕವಿಲ್ಲವೆಂದು ಹಿಂದಿರುಗಿದರು.
ಸಿ ಮತ್ತು ಡಿ ದರ್ಜೆಯ ಹುದ್ದೆಗಳಿಗೆ ವಿಶೇಷ ಅರ್ಹತೆಗಳ ಅಗತ್ಯವಿಲ್ಲದೇ ಇರುವುದರಿಂದ, ಡಾ.ಸರೋಜಿನಿ ಮಹಿಷಿ ವರದಿ ಅನ್ವಯ ಈ ಹುದ್ದೆಗಳನ್ನು ಸ್ಥಳೀಯರಿಗೆ ಅರ್ಥಾತ್ ಕನ್ನಡಿಗರಿಗೆ ಕೊಡಬೇಕು ಎಂಬ ಕಾನೂನು ಇರುವುದರಿಂದ ಈ ಹುದ್ದೆಗಳಿಗೆ ಅನ್ಯ ಭಾಷಿಕರನ್ನು ನೇಮಕ ಮಾಡಬಾರದು ಎಂಬುದು ಕರ್ನಾಟಕ ರಕ್ಷಣಾ ವೇದಿಕೆಯ ಪ್ರಮುಖ ಬೇಡಿಕೆಯಾಗಿತ್ತು. ಈ ಹುದ್ದೆಗಳಿಗೆ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳ ಪ್ರಶ್ನೆ ಪತ್ರಿಕೆಗಳನ್ನು ಮಾತ್ರ ನೀಡಲಾಗುತ್ತಿತ್ತು. ಇದರ ಪರಿಣಾಮವಾಗಿ ಎಸ್‌ಎಸ್‌ಎಲ್‌ಸಿ ಪಾಸು ಮಾಡಿದ ನಿರುದ್ಯೋಗಿ ಕನ್ನಡದ ಯುವಕರು ಪರೀಕ್ಷೆಗಳಲ್ಲಿ ಪಾಲ್ಗೊಳ್ಳುವುದು ಕಷ್ಟಸಾಧ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಕಡ್ಡಾಯವಾಗಿ ಕನ್ನಡ ಪ್ರಶ್ನೆಪತ್ರಿಕೆಗಳನ್ನು ನೀಡಬೇಕು ಎಂಬುದು ಕರವೇ ಬೇಡಿಕೆಯಾಗಿತ್ತು.
ಲಾಲೂ ಪ್ರಸಾದ್‌ಯಾದವ್ ಅವರ ಷಡ್ಯಂತ್ರವನ್ನು ಕರ್ನಾಟಕ ರಕ್ಷಣಾ ವೇದಿಕೆ ವಿಫಲಗೊಳಿಸಿತ್ತು. ಇದರಿಂದಾಗಿ ಲಾಲೂ ಯಾದವ್ ವ್ಯಗ್ರರಾಗಿದ್ದರು. ಈ ಹಿನ್ನೆಲೆಯಲ್ಲಿ ಕನ್ನಡ ಚಳವಳಿಗಾರರನ್ನು ತನ್ನ ಹೊಲಸು ಬಾಯಿಂದ ನಿಂದಿಸಿದರು. ಇದರಿಂದ ಕರ್ನಾಟಕದ ಜನತೆ ಕೆರಳಿತು. ರಾಜ್ಯಾದ್ಯಂತ ಲಾಲೂ ವಿರುದ್ಧ ಹೋರಾಟಗಳು ತೀವ್ರಗೊಂಡವು. ಚಿತ್ರದುರ್ಗಾದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ರೈಲಿನಲ್ಲಿ ಆಗಮಿಸಿದ್ದ ಲಾಲೂಗೆ ತುಮಕೂರು ಸೇರಿದಂತೆ ಪ್ರತಿ ನಿಲ್ದಾಣಗಳಲ್ಲೂ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟಿಸಿದರು.
ಚಳವಳಿಗೆ ಜಯ
ನಾಲ್ಕು ಸಾವಿರಕ್ಕೂ ಹೆಚ್ಚು ಸಿ ಮತ್ತು ಡಿ ದರ್ಜೆಯ ಹುದ್ದೆಗಳ ನೇಮಕಾತಿಯ ಪರೀಕ್ಷೆಗಳೇನೋ ಸ್ಥಗಿತಗೊಂಡವು. ಆದರೆ, ಇದು ತಾತ್ಕಾಲಿಕ ವಿಜಯವಾಗಿತ್ತು. ಕಾನೂನು ಮತ್ತು ಸುವ್ಯವಸ್ಥೆ ಹದಗೆಡುವ ಹಿನ್ನೆಲೆಯಲ್ಲಿ ಪರೀಕ್ಷೆಗಳನ್ನು ನಡೆಸಲು ಸಾಧ್ಯವಾಗದು ಎಂದು ನೈಋತ್ಯ ರೈಲ್ವೆಯ ಹಿರಿಯ ಅಧಿಕಾರಿಗಳು ಕೇಂದ್ರ ಸರ್ಕಾರಕ್ಕೆ, ರೈಲ್ವೆ ಇಲಾಖೆಗೆ ವರದಿ ಸಲ್ಲಿಸಿ ಪರೀಕ್ಷೆಗಳನ್ನು ಸ್ಥಗಿತಗೊಳಿಸಿದ್ದರು. ಆದರೆ, ಮುಂದೆ ಕಳ್ಳ ಮಾರ್ಗದಲ್ಲಿ ಪರೀಕ್ಷೆಗಳನ್ನು ಇಲಾಖೆ ನಡೆಸುವುದಿಲ್ಲವೆಂಬ ಖಾತರಿ ಏನೂ ಇರಲಿಲ್ಲ.
ಈ ಹಿನ್ನೆಲೆಯಲ್ಲಿ ರಕ್ಷಣಾ ವೇದಿಕೆ ತನ್ನ ಹೋರಾಟವನ್ನು ಸ್ಥಗಿತಗೊಳಿಸದೆ ಇಲಾಖೆಯ ಎಲ್ಲಾ ಚಟುವಟಿಕೆಗಳಿಗೂ ಒಂದು ಕಣ್ಣಿಟ್ಟುಕೊಂಡೇ ಬಂದಿತು. ಕರ್ನಾಟಕದಲ್ಲಿ ಮತ್ತೆ ಪರೀಕ್ಷೆ ನಡೆಸದಂತೆ ಒತ್ತಡ ಹೇರಿಕೊಂಡೇ ಬಂತು.
ಕರ್ನಾಟಕ ರಕ್ಷಣಾ ವೇದಿಕೆಯ ರೈಲ್ವೆ ಚಳವಳಿ ಇತರ ರಾಜ್ಯಗಳಿಗೂ ಸ್ಫೂರ್ತಿಯನ್ನು, ಪ್ರೇರಣೆಯನ್ನು ನೀಡಿತು. ವಿಶೇಷವಾಗಿ ಮಹಾರಾಷ್ಟ್ರದಲ್ಲಿ ರೈಲ್ವೆ ಇಲಾಖೆಗೆ ಬಿಹಾರಿಗಳನ್ನು ತುಂಬುವ ಯತ್ನದ ವಿರುದ್ಧ ಪ್ರತಿಭಟನೆಗಳಾದವು.
ಇದೆಲ್ಲವನ್ನೂ ಕೇಂದ್ರ ಸರ್ಕಾರ ಗಮನಿಸಿತ್ತು. ಕೇಂದ್ರದಲ್ಲಿ ಎರಡನೇ ಅವಧಿಗೆ ಯುಪಿಎ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಚುನಾವಣೆಯಲ್ಲಿ ಲಾಲೂ ಪ್ರಸಾದ್ ಯಾದವ್ ಬಿಹಾರದಲ್ಲೇ ಧೂಳಿಪಟವಾಗಿದ್ದರು. ತೃಣಮೂಲ ಕಾಂಗ್ರೆಸ್‌ನ ಮಮತಾ ಬ್ಯಾನರ್ಜಿ ಹೊಸ ರೈಲ್ವೆ ಮಂತ್ರಿಯಾದರು. ಪ್ರಾದೇಶಿಕ ಪಕ್ಷವೊಂದರ ನೇತಾರರಾದ ಮಮತಾ ಪ್ರಾದೇಶಿಕ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬಲ್ಲವರಾಗಿದ್ದರು. ಹೀಗಾಗಿ ತಮ್ಮ ಪ್ರಥಮ ಬಜೆಟ್‌ನಲ್ಲೇ ಕರ್ನಾಟಕ ರಕ್ಷಣಾ ವೇದಿಕೆಯ ಬೇಡಿಕೆಯನ್ನು ಈಡೇರಿಸಿದರು. ರೈಲ್ವೆ ಇಲಾಖೆಯ ಪರೀಕ್ಷೆಗಳನ್ನು ದೇಶಾದ್ಯಂತ ಏಕಕಾಲಕ್ಕೆ ನಡೆಸುವುದಾಗಿ ಅವರು ಘೋಷಿಸಿದರು. ಏಕಕಾಲಕ್ಕೆ ಪರೀಕ್ಷೆಗಳನ್ನು ನಡೆಸುವುದರಿಂದಾಗಿ ಒಂದು ರಾಜ್ಯದ ಅಭ್ಯರ್ಥಿ ಇನ್ನೊಂದು ರಾಜ್ಯದಲ್ಲಿ ಉದ್ಯೋಗ ಗಿಟ್ಟಿಸುವುದನ್ನು ತಪ್ಪಿಸುವುದು ಈ ಘೋಷಣೆಯ ಉದ್ದೇಶವಾಗಿತ್ತು. ಇದಲ್ಲದೇ, ಕರ್ನಾಟಕ ರಕ್ಷಣಾ ವೇದಿಕೆಯ ಬಹುಮುಖ್ಯ ಬೇಡಿಕೆಯಾಗಿದ್ದ ಪ್ರಶ್ನೆಪತ್ರಿಕೆಗಳನ್ನು ಸ್ಥಳೀಯ ಭಾಷೆಯಲ್ಲೇ ನೀಡುವ ಕುರಿತು ಮಮತಾ ಬ್ಯಾನರ್ಜಿ ಘೋಷಣೆ ಮಾಡಿದರು.
ಇದರಿಂದಾಗಿ ಆರು ದಶಕಗಳಿಂದ ಕನ್ನಡಿಗರ ಮೇಲೆ ರೈಲ್ವೆ ಇಲಾಖೆಯಲ್ಲಿ ನಡೆಯುತ್ತಿದ್ದ ನಿರಂತರ ಶೋಷಣೆ ನಿಂತಂತಾಗಿದೆ. ಕನ್ನಡದ ಮಕ್ಕಳು ಮುಂಬರುವ ದಿನಗಳಲ್ಲಿ ನೈಋತ್ಯ ರೈಲ್ವೆಯಲ್ಲಿ ಹೆಚ್ಚುಹೆಚ್ಚು ನೌಕರಿಗಳನ್ನು ಪಡೆಯಲಿದ್ದಾರೆ. ಈಗಾಗಲೇ ಈ ಪ್ರಕ್ರಿಯೆ ಪ್ರಾರಂಭವಾಗಿದ್ದು, ಕನ್ನಡಿಗರು ಉದ್ಯೋಗಗಳನ್ನು ಪಡೆಯುತ್ತಿದ್ದಾರೆ. ನೂರಾರು ಯುವಕರು ರೈಲ್ವೆಯಲ್ಲಿ ಉದ್ಯೋಗ ಪಡೆದು ಟಿ.ಎ.ನಾರಾಯಣಗೌಡರ ಬಳಿ ಬಂದು "ನಿಮ್ಮಿಂದಾಗಿಯೇ ನಮಗೆ ಉದ್ಯೋಗ ದೊರಕಿದೆ" ಎಂದು ಕೃತಜ್ಞತೆ ಸಲ್ಲಿಸುತ್ತಿದ್ದಾರೆ. ಇದಕ್ಕಿಂತ ಸಾರ್ಥಕತೆ ಇನ್ನೇನು ಬೇಕು?
ಕಾವೇರಿ ಹೋರಾಟ
ಶತಮಾನಗಳ ವಿವಾದವಾಗಿರುವ ಕಾವೇರಿ ನದಿ ನೀರಿನ ಹಕ್ಕಿನ ವಿಷಯದಲ್ಲಿ ಕರ್ನಾಟಕಕ್ಕೆ ಪದೇ ಪದೇ ಅನ್ಯಾಯವಾಗುತ್ತಲೇ ಇದೆ. ಕರ್ನಾಟಕ ರಕ್ಷಣಾ ವೇದಿಕೆ ಪ್ರಾರಂಭಗೊಂಡ ಕಾಲದಿಂದಲೂ ಕಾವೇರಿ ಚಳವಳಿಯಲ್ಲಿ ಪ್ರಧಾನ ಪಾತ್ರ ವಹಿಸುತ್ತಾ ಬಂದಿದೆ. ಈ ಹೋರಾಟದಲ್ಲಿ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರು ಸೇರಿದಂತೆ ಪ್ರಮುಖ ಮುಖಂಡರು, ಕಾರ್ಯಕರ್ತರು ಪೊಲೀಸ್ ದೌರ್ಜನ್ಯಕ್ಕೆ ಒಳಗಾಗಿದ್ದಾರೆ, ಹಲವಾರು ಬಾರಿ ಜೈಲು ಸೇರಿದ್ದಾರೆ.
ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರಾತ್ರೋರಾತ್ರಿ ತಮಿಳುನಾಡಿಗೆ ನೀರು ಹರಿಸಿದ್ದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ತೀವ್ರ ಸ್ವರೂಪದ ಹೋರಾಟವನ್ನು ಸಂಘಟಿಸಿತು. ಈ ಸಂದರ್ಭದಲ್ಲಿ ನಾರಾಯಣಗೌಡರು ಸೇರಿದಂತೆ ವೇದಿಕೆಯ ನೂರಾರು ಹೋರಾಟಗಾರರು ಬಳ್ಳಾರಿ ಜೈಲಿಗೆ ಕಳುಹಿಸಲಾಯಿತು.
ಕಾವೇರಿ ನ್ಯಾಯಮಂಡಳಿಯ ಅಂತಿಮ ವರದಿ ಹೊರಬಂದಾಗ ಅದು ಕನ್ನಡಿಗರ ಪಾಲಿಗೆ ಮರಣಶಾಸನ ಎಂಬುದನ್ನು ಸರಿಯಾಗಿಯೇ ಗ್ರಹಿಸಿದ ಕರ್ನಾಟಕ ರಕ್ಷಣಾ ವೇದಿಕೆ ಈ ಸಂಬಂಧ ಪ್ರಬಲ ಹೋರಾಟಕ್ಕೆ ಸಿದ್ಧವಾಯಿತು. ನಾರಾಯಣಗೌಡರು ರಾಜ್ಯಾದ್ಯಂತ ಸಂಚರಿಸಿ ಕನ್ನಡ ಕಾರ್ಯಕರ್ತರನ್ನು ಸಂಘಟಿಸಿದರು. ಕನ್ನಡಿಗರ ಪಾಲಿಗೆ ಅಕ್ಷರಶಃ ಮರಣ ಶಾಸನದಂತೆ ಹೊರಬಿದ್ದ ಕಾವೇರಿ ನ್ಯಾಯಮಂಡಳಿಯ ಅಂತಿಮ ತೀರ್ಪಿನ ವಿರುದ್ಧ ಇಡೀ ರಾಜ್ಯಾದ್ಯಂತ ಮೊದಲು ಬೀದಿಗಿಳಿದು ಕಾವೇರಿ ಚಳವಳಿಗೊಂದು ಮೂರ್ತ ರೂಪ ನೀಡಿದ್ದೇ ರಕ್ಷಣಾ ವೇದಿಕೆ. ನ್ಯಾಯಮಂಡಳಿಯ ಅನ್ಯಾಯದ ತೀರ್ಪಿನ ವಿರುದ್ಧ ಹಳ್ಳಿಯಿಂದ ದಿಲ್ಲಿಯವರೆಗೆ ವ್ಯಾಪಕ ಮತ್ತು ಸಂಘಟಿತ ಆಂದೋಲನ ನಡೆಸಿದ ರಕ್ಷಣಾ ವೇದಿಕೆ ‘ದಿಲ್ಲಿ ದೊರೆ’ಗಳಿಗೆ ಬಿಸಿ ಮುಟ್ಟಿಸುವಲ್ಲಿಯೂ ಹಿಂದೆ ಬೀಳಲಿಲ್ಲ.
ಸುಮಾರು ೨ ಸಾವಿರಕ್ಕೂ ಹೆಚ್ಚು ವೇದಿಕೆಯ ಕಾರ್ಯಕರ್ತರು ದಿಲ್ಲಿಗೆ ತೆರಳಿ ಜಂತರ್ ಮಂತರ್ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು.
ಕಾವೇರಿ ವಿವಾದಕ್ಕೆ ಒಂದು ತಾರ್ಕಿಕ ಅಂತ್ಯ ನೀಡಲೇಬೇಕೆಂದು ನಿರ್ಧರಿಸಿದ್ದ ನಾರಾಯಣಗೌಡರು ಅಷ್ಟಕ್ಕೇ ಸುಮ್ಮನಾಗಲಿಲ್ಲ. ‘ಇನ್ನೇನು ಎಲ್ಲವೂ ಮುಗೀತು’ ಅಂತ ಈ ನೆಲದ ಜನನಾಯಕರು ಕೈ ಕಟ್ಟಿ ಕೂತ ಹೊತ್ತಲ್ಲೇ ಗೌಡರು ರಾಜ್ಯಾದ್ಯಂತ ಕಾವೇರಿ ಯಾತ್ರೆ ಹೊರಟರು. ಲಕ್ಷಾಂತರ ಕನ್ನಡಿಗರು ಕಾವೇರಿ ಯಾತ್ರೆಗೆ ಬೆಂಬಲ ಸೂಚಿಸಿದರು. ಅದರ ನಡುವೆಯೇ ಚಳವಳಿಯ ತೀವ್ರತೆಗೆ ರೈತ ಸಂಘಟನೆಗಳು, ದಲಿತ ಸಂಘಟನೆಗಳು ಸೇರಿದಂತೆ ಇನ್ನಿತರೆ ಸಂಘಟನೆಗಳ ಜತೆಗೂಡಿ ‘ಕೃಷ್ಣ-ಕಾವೇರಿ ಹೋರಾಟ ಸಮನ್ವಯ ಸಮಿತಿ’ ಅಡಿಯಲ್ಲಿ ಬೃಹತ್ ಹೋರಾಟಕ್ಕೆ ಸಜ್ಜುಗೊಂಡರು.
ಸುಮಾರು ಇಪ್ಪತ್ತು ಸಾವಿರ ಕಾರ್ಯಕರ್ತರೊಂದಿಗೆ ದೆಹಲಿ ಮುತ್ತಿಗೆ ನಡೆಯಿತು. ದೆಹಲಿಯ ಇತಿಹಾಸದಲ್ಲಿ ಹೀಗೆ ರಾಜ್ಯವೊಂದರಿಂದ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಹೋರಾಟಗಾರರು ಬಂದು ರಣಕಹಳೆ ಮೊಳಗಿಸಿರಲಿಲ್ಲ. ಕನ್ನಡಿಗರ ಬೃಹತ್ ಪ್ರದರ್ಶನವನ್ನು ನೋಡಿ ದಿಲ್ಲಿ ದೊರೆಗಳೇ ದಂಗಾಗಿ ಹೋದರು. ನಾರಾಯಣಗೌಡರ ನೇತೃತ್ವದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಮನವಿ ಸಲ್ಲಿಸಲಾಯಿತು. ಕಾವೇರಿ ನ್ಯಾಯಾಧೀಕರಣ ನೀಡಿರುವ ಅಂತಿಮ ವರದಿಯಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಈ ಕಾರಣದಿಂದ ಯಾವುದೇ ಕಾರಣಕ್ಕೂ ತೀರ್ಪನ್ನು ಗೆಜೆಟ್‌ನಲ್ಲಿ ಪ್ರಕಟಿಸಬೇಡಿ. ಹಾಗೊಂದು ವೇಳೆ ಪ್ರಕಟಿಸಿದ್ದೇ ಆದಲ್ಲಿ ಅದರಿಂದ ಕರ್ನಾಟಕದಲ್ಲಿ ಪ್ರತಿಕೂಲ ಪರಿಣಾಮಗಳಾಗುತ್ತದೆ ಎಂದು ಮನವಿ ಮಾಡಲಾಯಿತು.
ಇದರ ಪರಿಣಾಮ; ಕೇಂದ್ರ ಸರ್ಕಾರ ಅಂತಿಮ ತೀರ್ಪನ್ನು ಗೆಝೆಟ್‌ನಲ್ಲಿ ಪ್ರಕಟಿಸಲಿಲ್ಲ. ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಯಿತು.
ಕಾವೇರಿ ವಿವಾದ ಸದ್ಯ ನ್ಯಾಯಾಲದಲ್ಲಿದೆ. ವಿವಾದಕ್ಕೆ ತಾರ್ಕಿಕ ಅಂತ್ಯ ಸಿಕ್ಕಿಲ್ಲ. ಆದರೆ ಕರ್ನಾಟಕಕ್ಕೆ ಮಾರಣಾಂತಿಕವೇ ಆಗಿದ್ದ ನ್ಯಾಯಾಧೀಕರಣ ತೀರ್ಪು ಗೆಜೆಟ್‌ನಲ್ಲಿ ಪ್ರಕಟವಾಗದಂತೆ ಕೇಂದ್ರದ ಮೇಲೆ ತನ್ನ ‘ಕನ್ನಡ ಶಕ್ತಿ’ಯಿಂದ ಒತ್ತಡ ಹೇರಿದ್ದು ಕರ್ನಾಟಕ ರಕ್ಷಣಾ ವೇದಿಕೆ. ಈ ಮೂಲಕ ವಾದರೂ ದಿಲ್ಲಿಯಲ್ಲಿ ಕನ್ನಡಿಗರು ‘ಒಂದು ಹಂತದ ಜಯ’ ಸಾಧಿಸಿದರೆಂದರೆ ಅದಕ್ಕೆ ಕಾರಣ ಕರ್ನಾಟಕ ರಕ್ಷಣಾ ವೇದಿಕೆ ಎಂದರೆ ಅದು ಉತ್ಪ್ರೇಕ್ಷೆಯಲ್ಲ.
ಆಂಧ್ರ ಹಾಲಿಗೆ ಕೊಡಲಿಪೆಟ್ಟು:
ರಕ್ಷಣಾ ವೇದಿಕೆ ಯಾವುದೇ ಹೋರಾಟಗಳನ್ನು ಕೈಗೆತ್ತಿಕೊಂಡರೂ ಅದಕ್ಕೊಂದು ತಾರ್ಕಿಕ ಅಂತ್ಯ ನೀಡದೇ ವಿಶ್ರಮಿಸಿದ ಉದಾಹರಣೆಗಳಿಲ್ಲ. ಚಳವಳಿಯ ಬದ್ಧತೆ ಆ ಮಟ್ಟದ್ದು. ಹೋರಾಟದ ಆಳಕ್ಕಿಳಿದು, ಅದಕ್ಕೊಂದು ಸಂಘಟಿತ ವ್ಯಾಪಕತೆ ನೀಡುವ ಪರಿ ಸಾಮಾನ್ಯವಲ್ಲ.
ಇಂಥ ಹೋರಾಟದ ಹಲವು ಮಜಲುಗಳ ಪೈಕಿ ಆಂಧ್ರಪ್ರದೇಶದ ಹಾಲಿನ ವಿರುದ್ಧ ನಡೆದ ಚಳವಳಿಯೂ ಒಂದು;
ಆಂಧ್ರದ ಪ್ರಭಾವಿ ರಾಜಕಾರಣಿಯೊಬ್ಬರ ಒಡೆತನಕ್ಕೆ ಸೇರಿದ ಹಾಲು ಕರ್ನಾಟಕಕ್ಕೆ ಧಾಗುಂಡಿ ಇಟ್ಟಿತ್ತು. ಬೆಂಗಳೂರು, ಕೋಲಾರ ಇಲ್ಲೆಲ್ಲಾ ಈ ಕಲಬೆರಕೆ ಹಾಲಿನದ್ದೇ ಹಾಲಾಹಲ. ಹೈನುಗಾರಿಕೆಯನ್ನೇ ನಂಬಿ ಬದುಕು ಕಟ್ಟುತ್ತಿರುವ ಈ ನೆಲದ ಅಸಂಖ್ಯಾತ ರೈತ ಸಮೂಹದ ‘ಹೊಟ್ಟೆ ಮೇಲೆ ಹೊಡೆಯುವ’ ಆಂಧ್ರ ಹಾಲಿನ ವಿರುದ್ಧ ರಕ್ಷಣಾ ವೇದಿಕೆ ದಿಟ್ಟ ಹೋರಾಟವನ್ನೇ ರೂಪಿಸಿತ್ತು. ನೆರೆಯ ಕೋಲಾರದಲ್ಲಿ ವ್ಯಾಪಕವಾಗಿ ಮಾರಾಟವಾಗುತ್ತಿದ್ದ ಆಂಧ್ರ ಹಾಲಿನ ವಿರುದ್ಧ ಅಲ್ಲಿನ ವೇದಿಕೆಯ ಕಾರ‍್ಯಕರ್ತರು ಸೆಟೆದು ನಿಂತರು. ಆರೋಗ್ಯಕ್ಕೂ ಮಾರಕವಾಗಿರುವ ಆಂಧ್ರ ಹಾಲು ಪೂರೈಕೆ ಸ್ಥಗಿತಗೊಳ್ಳಬೇಕು. ಆ ಮೂಲಕ ಸ್ಥಳೀಯ ರೈತರ ಬದುಕು ಹಸನಾಗಬೇಕು ಎಂಬುದು ವೇದಿಕೆ ಕಾರ‍್ಯಕರ್ತರ ಒಕ್ಕೊರೊಲ ದನಿಯಾಗಿತ್ತು. ಈ ಸಂಬಂಧ ವ್ಯಾಪಕ ಮತ್ತು ಉಗ್ರ ಪ್ರತಿಭಟನೆಗಳೇ ನಡೆದವು. ಕಾರ್ಯಕರ್ತರ ವಿರುದ್ಧ ಪೊಲೀಸ್ ಕೇಸುಗಳು ದಾಖಲಾದವು, ದೌರ್ಜನ್ಯ, ಹಲ್ಲೆಗಳು ಎಗ್ಗಿಲ್ಲದೇ ನಡೆಯಿತು. ಅಷ್ಟಾದರೂ ರಕ್ಷಣಾ ವೇದಿಕೆ ಬಗ್ಗಲಿಲ್ಲ. ಆಂಧ್ರ ರಾಜಕಾರಣಿಯ ಏನೆಲ್ಲಾ ಪ್ರಭಾವ, ಪ್ರಾಬಲ್ಯಗಳು ಕಾರ‍್ಯಕರ್ತರ ಕಾಠಿಣ್ಯದ ಮುಂದೆ ಕೆಲಸ ಮಾಡಲಿಲ್ಲ.
ಇದರ ಪರಿಣಾಮ; ಯಥೇಚ್ಛವಾಗಿ ಸರಬರಾಜಾಗುತ್ತಿದ್ದ ಆಂಧ್ರದ ಹಾಲು ಸ್ಥಗಿತಗೊಂಡಿತು. ಸ್ಥಳೀಯ ರೈತರು ನೆಮ್ಮದಿಯ ನಿಟ್ಟುಸಿರಿಟ್ಟರು.
ಕರವೇಯ ಹೋರಾಟದ ದಿಕ್ಕು ಕೇವಲ ಕರ್ನಾಟಕ, ಕನ್ನಡಿಗರಷ್ಟೇ ಅಲ್ಲ, ಈ ನೆಲದ ದುಡಿಯುವ ಮಂದಿ, ಬೆವರಿಳಿಸುವ ರೈತ, ಅನ್ಯಾಯಕ್ಕೊಳಗಾದ ಅಸಹಾಯಕ ಎಂಬುದಕ್ಕೆ ಈ ಹೋರಾಟ ಉದಾಹರಣೆಯಷ್ಟೆ.
ಬೆಂಗಳೂರು ವಿಮಾನ ನಿಲ್ದಾಣ
ದೇವನಹಳ್ಳಿಯಲ್ಲಿ ನಿರ್ಮಾಣಗೊಂಡ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿರುದ್ಧ ನಡೆದ ಹೋರಾಟ ಅವಿಸ್ಮರಣೀಯವಾದುದು.
ರೈತರ ಸಾವಿರಾರು ಎಕರೆ ಕೃಷಿ ಭೂಮಿಯನ್ನು ರೈತರಿಂದ ಕಸಿದುಕೊಂಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ ತಾನು ಈ ಹಿಂದೆ ನೀಡಿದ್ದ ವಾಗ್ದಾನವನ್ನು ಮರೆಯಿತು. ಸೂಕ್ತ ಪರಿಹಾರ ನೀಡದೆ ರೈತರನ್ನು ವಂಚಿಸಿತ್ತು. ಅಷ್ಟಲ್ಲದೇ ಹಳೇ ವಿಮಾನ ನಿಲ್ದಾಣದಲ್ಲಿ ಉದ್ಯೋಗ ಕಟ್ಟಿಕೊಂಡಿದ್ದ ಕನ್ನಡಿಗರನ್ನು ಬೀದಿಪಾಲು ಮಾಡುವ ಹುನ್ನಾರವನ್ನೂ ಅದು ನಡೆಸಿತ್ತು.
ಇದೆಲ್ಲಾ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಮನಗಂಡ ರಕ್ಷಣಾ ವೇದಿಕೆ ರೈತ ಪರ ಹೋರಾಟಕ್ಕೆ ಸಿದ್ಧಗೊಂಡಿತು. ಸ್ವಾಧೀನಪಡಿಸಿಕೊಂಡ ರೈತರ ಜಮೀನುಗಳಿಗೆ ಸೂಕ್ತ ಪರಿಹಾರ ನೀಡಬೇಕು. ರೈತರ ಮಕ್ಕಳಿಗೆ ವಿಮಾನ ನಿಲ್ದಾಣದಲ್ಲಿ ಕೆಲಸ ನೀಡಬೇಕು. ಉದ್ಯೋಗದಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ ನೀಡಬೇಕು ಎನ್ನುವುದು ವೇದಿಕೆಯ ಬೇಡಿಕೆಯಾಗಿತ್ತು.
ಹೋರಾಟಕ್ಕೆ ಸಾಕಷ್ಟು ಅಡ್ಡಿ ಆತಂಕಗಳು ಎದುರಾದವು. ಆಳುವ ಸರ್ಕಾರದಿಂದಲೇ ಚಳವಳಿಯನ್ನು ನಿಯಂತ್ರಿಸುವ, ನಿಗ್ರಹಿಸುವ ಚಟುವಟಿಕೆಗಳೂ ನಡೆದವು. ಆದರೆ ವೇದಿಕೆಯ ಹೋರಾಟದ ಮುಂದೆ ಸರ್ಕಾರವೇ ಮಂಡಿಯೂರಿ ಕೂರಬೇಕಾಯಿತು.
ಭೂಮಿ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ದೊರೆಯಿತು. ವಿಮಾನ ನಿಲ್ದಾಣದಲ್ಲಿ ಟ್ಯಾಕ್ಸಿ ಸೇವೆಯನ್ನು ಬೇರೆ ರಾಜ್ಯದ ಯುವಕರಿಗೆ ಒದಗಿಸುವ ನಿಲುವಿನಿಂದ ಸರ್ಕಾರ ಹಿಂದೆ ಸರಿಯಬೇಕಾಯಿತು. ಕನ್ನಡಿಗ ಯುವಕರಿಗೆ ಸೂಕ್ತ ಉದ್ಯೋಗಾವಕಾಶವೂ ದೊರೆಯಿತು. ಬಹುಮುಖ್ಯವಾಗಿ ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರಿಡಬೇಕೆಂಬ ವೇದಿಕೆಯ ಮತ್ತೊಂದು ಬೇಡಿಕೆಗೆ ಜಂಟಿ ಸದನ ಸಮಿತಿ ಪೂರಕವಾಗಿಯೇ ಸ್ಪಂದಿಸಿತ್ತು.
ಕನ್ನಡ ಉದ್ದಿಮೆದಾರರ ಪರ
ರಾಜ್ಯದಲ್ಲಿ ಬೃಹತ್ ಉದ್ದಿಮೆಗಳ ಸ್ಥಾಪನೆಗೆ ಹೊರರಾಜ್ಯ, ವಿದೇಶಿ ಬಂಡವಾಳಿಗರಿಗೇ ಹೆಚ್ಚಿ ಆದ್ಯತೆ ನೀಡುತ್ತಿತ್ತು ಸರ್ಕಾರ. ಹಾಗೊಂದು ವೇಳೆ ಇದ್ದ ಒಂದಿಷ್ಟು ಕನ್ನಡಿಗ ಉದ್ದಿಮೆದಾರರ ಮೇಲೆ ಇನ್ನಿಲ್ಲದ ದಬ್ಬಾಳಿಕೆ, ನಿರ್ಲಕ್ಷ್ಯ, ದೌರ್ಜನ್ಯ ವ್ಯಾಪಕವಾಗಿಯೇ ಇತ್ತು. ಈ ಸಂದರ್ಭದಲ್ಲಿ ಸ್ಥಳೀಯ ಉದ್ದಿಮೆದಾರರ ಪರ ಮೊಟ್ಟಮೊದಲ ಬಾರಿಗೆ ದನಿ ಎತ್ತಿದ್ದು ರಕ್ಷಣಾ ವೇದಿಕೆ.
ಬೃಹತ್ ಅಥವಾ ಸಣ್ಣ ಉದ್ಯಮಗಳು ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಸದೃಢಗೊಳಿಸುವುದಷ್ಟೇ ಅಲ್ಲದೆ, ಸ್ಥಳೀಯರ ಜೀವನಮಟ್ಟವನ್ನು ಸುಧಾರಿಸುತ್ತದೆ. ಕರ್ನಾಟಕದಲ್ಲಿ ಉದ್ದಿಮೆ ನಡೆಸಲು ಕನ್ನಡಿಗರಿಗೆ ಬೇಕಾದ ಸೂಕ್ತ ವಾತಾವರಣ ಕಲ್ಪಿಸಿ, ಅವರಿಗೆ ನೈತಿಕ ಬೆಂಬಲ ನೀಡುವುದು ಮತ್ತು ಅಂತಹ ಉದ್ದಿಮೆಗಳಲ್ಲಿ ಕನ್ನಡಿಗರಿಗೇ ಹೆಚ್ಚು ಉದ್ಯೋಗಾವಕಾಶ ಕಲ್ಪಿಸುವಂತೆ ನೋಡಿಕೊಳ್ಳುವುದು ವೇದಿಕೆಯ ಮುಖ್ಯ ನಿಲುವಾಗಿತ್ತು.
ಈ ನಿಟ್ಟಿನಲ್ಲಿ ಕನ್ನಡಿಗರ ಉದ್ದಿಮೆದಾರರು, ಅನಿವಾಸಿ ಕನ್ನಡಿಗರಿಗೆ ಹೆಚ್ಚಿನ ಬಂಡವಾಳ ಹೂಡಲು ಅವಕಾಶ ಕಲ್ಪಿಸುವಂತೆ ವೇದಿಕೆ ಹೋರಾಟ ನಡೆಸಿತು. ಅಷ್ಟಲ್ಲದೆ, ಉದ್ದಿಮೆದಾರರಿಗೆ ಅನ್ಯಾಯವಾದಾಗಲೆಲ್ಲಾ ಅವರ ಪರ ನಿಂತಿತು. ಸರ್ಕಾರದ ಮಟ್ಟದಿಂದಲೂ ಇದಕ್ಕೆ ಪೂರಕ ಸ್ಪಂದನೆ ವ್ಯಕ್ತವಾಯಿತು.
ಶಾಸ್ತ್ರೀಯ ಸ್ಥಾನಮಾನ
ರಕ್ಷಣಾ ವೇದಿಕೆಯ ಹೋರಾಟದ ಮಜಲುಗಳಲ್ಲಿ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡುವಂತೆ ನಡೆಸಿದ ಹೋರಾಟವೂ ಒಂದು. ಕನ್ನಡ ಭಾಷೆಗೆ ೨೦೦೦ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ. ಅತೀ ಹೆಚ್ಚು ಜ್ಞಾನಪೀಠ ಪುರಸ್ಕಾರದ ಹೆಗ್ಗಳಿಕೆ ಸಿಕ್ಕಿದ್ದು ಕನ್ನಡ ಸಾಹಿತ್ಯಕ್ಕೆ. ಅತೀ ಪ್ರಾಚೀನ ಮತ್ತು ಶ್ರೀಮಂತ ಹಿನ್ನೆಲೆಯುಳ್ಲ ಕನ್ನಡಕ್ಕೆ ಕೇಂದ್ರ ಸರ್ಕಾರ ಶಾಸ್ತ್ರೀಯ ಸ್ಥಾನಮಾನ ನೀಡದೆ ಪೂರ್ವಾಗ್ರಹಪೀಡಿತವಾಗಿತ್ತು.
ಇದನ್ನು ಗಂಭೀರವಾಗಿ ಪರಿಗಣಿಸಿದ ರಕ್ಷಣಾ ವೇದಿಕೆ ಕಾಲದಿಂದಲೂ ಕರ್ನಾಟಕದ ವಿಚಾರದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಲೇ ಬಂದಿರುವ ಕೇಂದ್ರಕ್ಕೆ ಬಿಸಿ ಮುಟ್ಟಿಸಲು ನಿರ್ಧರಿಸಿತು. ಶಾಸ್ತ್ರೀಯ ಸ್ಥಾನಮಾನಕ್ಕೆ ಆಗ್ರಹಿಸಿ ನಾಡೋಜ ಡಾ.ದೇ.ಜವರೇಗೌಡರು ಮೈಸೂರಿನಲ್ಲಿ ಉಪವಾಸ ನಿರತರಾದರು. ನಾರಾಯಣಗೌಡರು ದೇಜಗೌ ಉಪವಾಸಕ್ಕೆ ಬೆಂಬಲ ಸೂಚಿಸಿದರಲ್ಲದೆ, ರಾಜ್ಯವ್ಯಾಪಿ ಹೋರಾಟದ ಮುಂಚೂಣಿ ವಹಿಸಿದರು.
ಮತ್ತೆ ದೂರದ ದಿಲ್ಲಿಯಲ್ಲಿ ಕನ್ನಡದ ಘೋಷಣೆಗಳು ಮೊಳಗಿದವು. ಈ ಬಾರಿ ಸಾವಿರಾರು ಕನ್ನಡದ ಕಾರ‍್ಯಕರ್ತರು ದಿಲ್ಲಿಯಲ್ಲಿ ಕಾಣಿಸಿಕೊಂಡರು. ದಿಲ್ಲಿಯ ಇತಿಹಾಸದಲ್ಲೇ ಇಷ್ಟು ಪ್ರಮಾಣದಲ್ಲಿ ಕಾರ‍್ಯಕರ್ತರು ಬಂದಿಳಿದು, ಕನ್ನಡದ ಹಕ್ಕಿಗಾಗಿ ಅಬ್ಬರಿಸಿದ್ದು ಅದೇ ಪ್ರಥಮ. ದಿಲ್ಲಿಯ ಜಂತರ್ ಮಂತರ್‌ನಲ್ಲಂತೂ ಕನ್ನಡಿಗರದ್ದೇ ಕಲರವ....
ಗೌಡರ ನೇತೃತ್ವದಲ್ಲಿ ಪ್ರಧಾನಿಗಳಿಗೆ ಮನವಿ ಸಲ್ಲಿಸಲಾಯಿತು. ದಿಲ್ಲ್ಲಿಯ ರಾಜಕಾರಣಿಗಳು ಕನ್ನಡಿಗರ ಹಿಂಡು ಕಂಡು ಬೆಚ್ಚಿಬಿದ್ದರು. ಕನ್ನಡದ ಬದ್ಧತೆ ಇಲ್ಲೂ ಹುಸಿಯಾಗಲಿಲ್ಲ. ನವೆಂಬರ್ ಹೊತ್ತಿಗೆ ಕೊನೆಗೂ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ದೊರೆಯಿತು. ಸಮಸ್ತ ಕನ್ನಡಿಗರು ಸಂಭ್ರಮಿಸಿದರು.
ಕನ್ನಡಿಗರ ಸವಾಲು...
ವೇದಿಕೆ ಸಾಗಿ ಬಂದ ಹಾದಿ ತುಂಬಾ ಹೋರಾಟಗಳೇ ಹೋರಾಟಗಳು. ಹೋರಾಟದ ಮೂಲ ಉದ್ದೇಶ ಮಾತ್ರ
ಒಂದೇ ಕನ್ನಡ ಮತ್ತು ಕರ್ನಾಟಕ. ಬೆಂಗಳೂರಿನಲ್ಲಿ ರೇಡಿಯೋ ಸಿಟಿ ಎಂಬ ಎಫ್ ಎಂ ವಾಹಿನಿ ಅಕ್ಷರಶಃ ಕನ್ನಡ ವಿರೋಧಿ ಧೋರಣೆ ಅನುಸರಿಸಿತ್ತು. ಕನ್ನಡ ಹಾಡುಗಳನ್ನು ಕೇಳುವವರೇ ಇಲ್ಲ, ಅಂಥ ಹಾಡಿಗೆ ಮಾರುಕಟ್ಟೆಯೂ ಇಲ್ಲ ಎಂದು ಕಣ್ಣಿಗೆ ಬಟ್ಟೆ ಕಂಡ ಎಫ್‌ಎಂ ವಾಹಿನಿ ಬರೇ ಹಿಂದಿ ಹಾಡುಗಳನ್ನೇ ಕನ್ನಡದ ಕೇಳುಗರಿಗೆ ಬಲವಂತವಾಗಿ ತುರುಕುವ ಕೃತ್ಯಕ್ಕೆ ಕೈಹಾಕಿತ್ತು. ಇದರ ವಿರುದ್ಧ ಹರಿಹಾಯ್ದ ರಕ್ಷಣಾ ವೇದಿಕೆ ಮೊದಲ ಬಾರಿಗೆ ರೇಡಿಯೋ ಸಿಟಿ ವಾಹಿನಿ ವಿರುದ್ಧ ಪ್ರತಿಭಟನೆ ನಡೆಸಿತು. ಇದರ ಪರಿಣಾಮ ವಾಹಿನಿ ಕನ್ನಡ ಚಿತ್ರಗೀತೆಗಳನ್ನು ಬಿತ್ತರಿಸಿತು. ಕನ್ನಡದ ಕೇಳುಗರು ಸಂಭ್ರಮಿಸಿದರು...ಮಾರುಕಟ್ಟೆ ವಿಸ್ತರಿಸಿತು. ನೋಡನೋಡುತ್ತಿದ್ದಂತೆ ಒಂದೊರ ಹಿಂದೊಂದರಂತೆ ಎಫ್ ಎಂ ವಾಹಿನಿಗಳು ಬರತೊಡಗಿದವು. ಎಲ್ಲೆಡೆ ಕನ್ನಡದ ಹಾಡುಗಳು...ಕನ್ನಡ ಕೇಳುಗರ ಸಂಖ್ಯೆಯೂ ನಿರೀಕ್ಷೆಗೂ ಮೀರಿ ಬೆಳೆಯಿತು, ಮಾರುಕಟ್ಟೆ ವ್ಯಾಪಕವಾಯಿತು....ಹೀಗೆ ಎಫ್‌ಎಂ ವಾಹಿನಿಗಳಲ್ಲಿ ಕನ್ನಡಕ್ಕೆ, ಕನ್ನಡ ಚಿತ್ರಗೀತೆಗಳಿಗೆ ಭದ್ರ ಬುನಾದಿ ಕಲ್ಪಿಸಿದ ಹೆಗ್ಗಳಿಕೆ ರಕ್ಷಣಾ ವೇದಿಕೆಯದ್ದು.
ಅಷ್ಟಲ್ಲದೆ, ವಿಜಾಪುರ ವಿವಿಯ ಸಿಂಡಿಕೇಟ್‌ಗೆ ಆಂಧ್ರ ಮೂಲದ ಮಹಿಳೆಯನ್ನು ಸದಸ್ಯೆಯಾಗಿ ಸರ್ಕಾರ ನೇಮಕ ಮಾಡಿತ್ತು. ಕನ್ನಡದ ವಿವಿಯಲ್ಲಿ ಸದಸ್ಯೆಯಾಗಿ ನೇಮಕಗೊಳ್ಳಲು ಕನ್ನಡಿಗರ‍್ಯಾರೂ ಇಲ್ಲವೇ ಅಥವಾ ಕನ್ನಡಿಗರಿಗೆ ಅರ್ಹತೆಯೇ ಇಲ್ಲವೇ ಎಂಬುದು ವೇದಿಕೆ ಪ್ರಶ್ನೆಯಾಗಿತ್ತು. ಕರವೇ ಚಳವಳಿಯ ತೀವ್ರತೆಗೆ ಬೆದರಿದ ಸರ್ಕಾರ ನೇಮಕಾತಿಯನ್ನು ರದ್ದುಗೊಳಿಸಿತು.
ರಾಜ್ಯ ಸರ್ಕಾರ ಆನ್ ಲೈನ್ ಲಾಟರಿಯನ್ನು ಆರಂಭಿಸಿತು. ಪ್ಲೇವಿನ್ ಹೆಸರಿನಲ್ಲಿ ಆರಂಭಗೊಂಡ ಆನ್‌ಲೈನ್ ಲಾಟರಿ ಬೇರೆ ಬೇರೆ ಹೆಸರುಗಳೊಂದಿಗೆ ರಾಜ್ಯವನ್ನೇ ವ್ಯಾಪಿಸಿಕೊಂಡಿತು. ಇದರ ಪ್ರಭಾವ ಎಷ್ಟಿತ್ತೆಂದರೆ ರಾಜ್ಯಾದ್ಯಂತ ಶ್ರಮಿಕ ಜನವರ್ಗ ಇದರಿಂದಾಗಿ ದುಡಿದ ಹಣವನ್ನೆಲ್ಲ ಆನ್‌ಲೈನ್ ಜೂಜಿಗೆ ತೊಡಗಿಸಿ ದರಿದ್ರರಾಗತೊಡಗಿದರು. ಹಲವು ಸಂಸಾರಗಳು ಒಡೆದು ಹೋದವು. ಸಾಕಷ್ಟು ಮಂದಿ ತಮ್ಮೆಲ್ಲ ಗಳಿಕೆ, ಆಸ್ತಿಯನ್ನೆಲ್ಲ ಕಳೆದುಕೊಂಡು ಆತ್ಮಹತ್ಯೆಗೆ ಶರಣಾದರು.
ಈ ಆನ್‌ಲೈನ್ ಲಾಟರಿ ವಿರುದ್ಧ ಅಕ್ಷರಶಃ ಸಮರವನ್ನೇ ಕರವೇ ಘೋಷಿಸಿತು. ಎಲ್ಲೆಡೆ ಕರವೇ ಕಾರ್ಯಕರ್ತರು ಆನ್‌ಲೈನ್ ಲಾಟರಿ ಅಂಗಡಿಗಳ ಮೇಲೆ ದಾಳಿ ನಡೆಸಿದರು. ಲಾಟರಿಗೆ ಬಳಸುತ್ತಿದ್ದ ಕಂಪ್ಯೂಟರ್‌ಗಳನ್ನು ರಸ್ತೆಗೆ ಎಸೆದರು. ಹೋರಾಟದ ತೀವ್ರತೆಯಿಂದ ಬೆಚ್ಚಿ ಬಿದ್ದ ಸರ್ಕಾರ ಆನ್‌ಲೈನ್ ಲಾಟರಿಯನ್ನು ಸಂಪೂರ್ಣ ನಿಷೇಧಿಸಿತು.
ಶಾಸಕರ ವಿರುದ್ಧ ಕಿಡಿ
ಡೆರಿಕ್ ಫುಲಿನ್ ಫಾ ಎಂಬುವವರನ್ನು ಬಿಜೆಪಿ ಸರ್ಕಾರ ಆಂಗ್ಲೋ ಇಂಡಿಯನ್ ಕೋಟಾದಡಿ ವಿಧಾನ ಪರಿಷತ್‌ಗೆ ನೇಮಕ ಮಾಡಿತ್ತು. ದುರಂತವೆಂದರೆ ಈ ಪುಣ್ಯಾತ್ಮನಿಗೆ ಕನ್ನಡವೇ ಬಾರದು! ಕನ್ನಡ ಬಾರದ ಈ ಶಾಸಕ ವಿಧಾನಸಭೆಯಲ್ಲಿ ಇಂಗ್ಲೀಷಿನಲ್ಲಿ ಭಾಷಣ ಮಾಡತೊಡಗಿದರು. ‘ದಯಮಾಡಿ ಕನ್ನಡದಲ್ಲಿ ಮಾತನಾಡಿ’ ಅಂತ ಖುದ್ದು ವಿದಾನಸಭಾಧ್ಯಕ್ಷರೇ ಕೋರಿದರೂ ಡೆರಿಕ್ ಫುಲಿನ್ ಫಾ ಉದ್ಧಟತನದಿಂದ ವರ್ತಿಸಿದರು. ನನಗೆ ಕನ್ನಡ ಬಾರದು...ನಾನು ಇಂಗ್ಲೀಷಿನಲ್ಲಿಯೇ ಮಾತನಾಡುವುದು ಎಂದು ಉತ್ತರಿಸಿದ್ದರು.
ಇಷ್ಟಾದರೂ ಡೆರಿಕ್ ಫುಲಿನ್ ಫಾ ಅವರ ಕನ್ನಡ ವಿರೋಧಿ ಹೇಳಿಕೆಯನ್ನು ಯಾರೂ ಗಂಭೀರವಾಗಿ ಪರಿಗಣಿಸಲೇ ಇಲ್ಲ. ಆದರೆ ಗಂಭೀರವಾಗಿ ಪರಿಗಣಿಸಿದ್ದು ರಕ್ಷಣಾ ವೇದಿಕೆ. ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ವ್ಯವಸ್ಥೆಗೊಳಿಸಿದ್ದ ಸಭೆಯೊಂದರಲ್ಲಿ ಪಾಲ್ಗೊಂಡಿದ್ದ ಡೆರಿಕ್ ಫುಲಿನ್ ಫಾ ಅವರಿಗೆ ವೇದಿಕೆಯ ಕಾರ‍್ಯಕರ್ತರು ಘೇರಾವ್ ಹಾಕಿದರು. ಕನ್ನಡ ಕಲಿಯುವಂತೆ ತಾಕೀತು ಮಾಡಿದರು. ರಕ್ಷಣಾ ವೇದಿಕೆ ಕಾರ‍್ಯಕರ್ತರ ಅದಮ್ಯ ಕನ್ನಡ ಪ್ರೇಮ ಕಂಡು ಖುದ್ದು ಡೆರಿಕ್ ಫುಲಿನ್ ಫಾ ಬೆಕ್ಕಸಬೆರಗಾದರು.
ಈ ಘಟನೆ ನಡೆದ ಮಾರನೇ ದಿನವೇ ಖುದ್ದು ಡೆರಿಕ್ ಫುಲಿನ್ ಫಾ ತಮ್ಮ ಪತ್ನಿಯ ಜತೆ ಗಾಂಧಿನಗರದಲ್ಲಿರುವ ರಕ್ಷಣಾ ವೇದಿಕೆಯ ಕಚೇರಿಗೆ ಭೇಟಿ ನೀಡಿ, ನಾರಾಯಣ ಗೌಡರನ್ನು ಭೇಟಿಯಾದರು. ತಮ್ಮ ನಡವಳಿಕೆಗೆ ಕ್ಷಮೆ ಕೋರಿದ್ದಲ್ಲದೆ ತಾವು ಖಂಡಿತಾ ಕನ್ನಡ ಕಲಿಯುವುದಾಗಿ ಭರವಸೆ ನೀಡಿದರು!
ಇದನ್ನೇ ಹೋಲುವ ಮತ್ತೊಂದು ಪ್ರಕರಣವೂ ರಕ್ಷಣಾ ವೇದಿಕೆಯ ಇತಿಹಾಸದ ಪುಟಗಳಲ್ಲಿದೆ. ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ವಿಧಾನಸಭೆ ಪ್ರವೇಶಿಸಿದ್ದರು. ಸಚಿವ ಸ್ಥಾನ ಒಲಿದು ಬಂದಾಗ ಕನ್ನಡ ಬಾರದು ಎಂಬ ಕಾರಣಕ್ಕೆ ಇಂಗ್ಲೀಷಿನಲ್ಲಿಯೇ ಪ್ರಮಾಣ ವಚನ ಸ್ವೀಕರಿಸಿದ್ದರು. ಇದರ ವಿರುದ್ಧ ಪ್ರತಿಭಟಿಸಿದ ಕಾರ‍್ಯಕರ್ತರು ಸದನ ನಡೆಯುವ ಸಂದರ್ಭದಲ್ಲಿ ಪ್ರೇಕ್ಷಕರ ಗ್ಯಾಲರಿಯಿಂದ ಕರಪತ್ರಗಳನ್ನು ಎಸೆದು ಗಟ್ಟಿದನಿಯಲ್ಲಿ ಪ್ರತಿಭಟಿಸಿ, ಬಿಸಿಮುಟ್ಟಿಸಿದ್ದರು.
ಮೇರು ನಟ ಡಾ.ರಾಜ್ ವೀರಪ್ಪನ್ ಕಪಿಮುಷ್ಠಿಯಿಂದ ಬಿಡುಗಡೆಯಾದ ನಂತರ ರಾಜ್ಯದಲ್ಲಿದ್ದ ಕೆಲವು ತಮಿಳು ವ್ಯಾಮೋಹಿಗಳು ಬೆಂಗಳೂರಿನಲ್ಲಿ ಸಮಾವೇಶವೊಂದಕ್ಕೆ ಸಿದ್ಧತೆ ನಡೆಸಿದ್ದರು. ಈ ಸಮಾವೇಶದಲ್ಲಿ ಎಲ್‌ಟಿಟಿಇ ಬೆಂಬಲಿಗ ನೆಡುಮಾರನ್‌ಗೆ ಸನ್ಮಾನಿಸುವ ಉದ್ದೇಶವಿತ್ತು. ಅದಕ್ಕಾಗಿ ಭರದ ಸಿದ್ಧತೆಯೇ ನಡೆಯಿತು. ಸಮಾವೇಶಕ್ಕೆ ವಿರೋಧ ವ್ಯಕ್ತಪಡಿಸಿದ್ದು ರಕ್ಷಣಾ ವೇದಿಕೆ. ಒಂದು ವೇಳೆ ಬೆಂಗಳೂರಿನಲ್ಲಿ ತಮಿಳು ಸಮಾವೇಶ ನಡೆದರೆ ರಕ್ತಪಾತವೇ ಆದೀತು ಎಂಬ ಸ್ಪಷ್ಟ ಎಚ್ಚರಿಕೆಯನ್ನೂ ಸಂಘಟಕರಿಗೆ ರವಾನಿಸಿತು. ಇರದ ಪರಿಣಾಮ ನೆಡುಮಾರನ್‌ಗೆ ಸತ್ಕಾರ ರದ್ದಾಯಿತು.
ಬೆಳಗಾವಿಯಲ್ಲಿ ಕನ್ನಡದ ಕಂಪು...
ಕರ್ನಾಟಕ-ಮಹಾರಾಷ್ಟ್ರದ ಗಡಿಭಾಗದಲ್ಲಿರುವ ಬೆಳಗಾವಿಯನ್ನು ಕಾಲದಿಂದಲೂ ಆಳುವ ಸರ್ಕಾರಗಳು ನಿರ್ಲಕ್ಷ್ಯ ತೋರುತ್ತಲೇ ಬಂದಿದ್ದವು. ಇದರ ಪರಿಣಾಮ ಬೆಳಗಾವಿ ಕರ್ನಾಟಕದಲ್ಲಿದ್ದರೂ ಅಲ್ಲಿ ಮರಾಠಿ ಭಾಷಿಕರ ಆಟೋಟಾಪ. ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಎಂಇಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿ)ದ್ದೇ ಆಧಿಪತ್ಯ.
ಇದನ್ನೇ ದುರ್ಬಳಕೆ ಮಾಡಿಕೊಂಡ ಎಂಇಎಸ್‌ನ ಕಿಡಿಗೇಡಿಗಳು ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸುವ ನಿರ್ಧಾರಕ್ಕೆ ಬಂದರು. ಬೆಳಗಾವಿ ಪಾಲಿಕೆಯೂ ಇದನ್ನೇ ನಿರ್ಣಯಿಸಿತು. ಆಗ ಕಾಂಗ್ರೆಸ್‌ನ ಧರಂಸಿಂಗ್ ಮುಖ್ಯಮಂತ್ರಿಯಾಗಿದ್ದರು.
ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂಬ ಪಾಲಿಕೆ ತೀರ್ಮಾನದ ವಿರುದ್ಧ ಸೆಟೆದು ನಿಂತಿದ್ದು ರಕ್ಷಣಾ ವೇದಿಕೆ. ಈ ಸಂಬಂಧ ಉಗ್ರ ಹೋರಾಟಕ್ಕೆ ಕಾರ‍್ಯಕರ್ತರು ಸಜ್ಜಾದರು. ಬೆಂಗಳೂರಿನ ಶಾಸಕರ ಭವನಕ್ಕೆ ಬೆಳಗಾವಿ ಪಾಲಿಕೆ ಮೇಯರ್ ವಿಜಯ್ ಮೋರೆ ಬಂದಿರುವ ಮಾಹಿತಿ ಪಡೆದ ಕಾರ‍್ಯಕರ್ತರು ಆತನ ಮುಖಕ್ಕೆ ಮಸಿ ಬಳಿದರು. ಈ ಪ್ರಕರಣ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಯಿತು. ಟೀಕೆ, ಬೆಂಬಲ ಎರಡೂ ವ್ಯಕ್ತವಾಯಿತು. ಈ ಸಂದರ್ಭದಲ್ಲಿ ರಕ್ಷಣಾ ವೇದಿಕೆ ಕಾರ‍್ಯಕರ್ತರ ಬೆಂಬಲಕ್ಕೆ ನಿಂತಿದ್ದು ಡಾ.ಪೂರ್ಣಚಂದ್ರ ತೇಜಸ್ವಿ. ‘ನಾಡದ್ರೋಹದ ಕೆಲಸ ಮಾಡಿರುವಾತನ ಮುಖಕ್ಕೆ ಮಸಿ ಬಳಿಯದೆ ಫೇರ್ ಅಂಡ್ ಲವ್ಲಿ ಹಚ್ಬೇಕಿತ್ತೇ?’ ಅಂತ ಕುಟುಕಿದ್ದರು. ಇಡೀ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಧರಂಸಿಂಗ್ ಸರ್ಕಾರ ಬೆಳಗಾವಿ ಪಾಲಿಕೆಯ ಚುನಾಯಿತ ಮಂಡಳಿಯನ್ನು ವಜಾಗೊಳಿಸಿತು.
ಹೀಗೆ ಎಂಇಎಸ್‌ನ ಆಟೋಟಾಪ, ದಬ್ಬಾಳಿಕೆಯನ್ನು ನಿಯಂತ್ರಿಸಿ, ಬೆಳಗಾವಿ ಪಾಲಿಕೆಯಲ್ಲಿ ಕನ್ನಡ ಬಾವುಟ ಹಾರಿಸುವ ಐತಿಹಾಸಿಕ ನಿರ್ಧಾರಕ್ಕೆ ಬಂದ ನಾರಾಯಣಗೌಡರು ಇಡೀ ಬೆಳಗಾವಿಯನ್ನು ಸುತ್ತಿದ್ದರು. ಸಮಸ್ತ ಕನ್ನಡಿಗರನ್ನೂ ಒಗ್ಗೂಡಿಸಿದರು. ಕನ್ನಡೇತರರ ವಿಶ್ವಾಸ ಗಳಿಸಿದರು. ಬೆಳಗಾವಿ ಪಾಲಿಕೆ ಚುನಾವಣೆಯಲ್ಲಿ ಕನ್ನಡ ಅಭ್ಯರ್ಥಿಗಳನ್ನು ನಿಲ್ಲಿಸಿದರು. ಕನ್ನಡ ಅಭ್ಯರ್ಥಿಗಳ ಪ್ರಚಾರ ನಡೆಸಿ, ಅವರಿಗೆ ನೈತಿಕ ಬೆಂಬಲ ನೀಡಿದರು. ಸರ್ವ ಪಕ್ಷಗಳ ಮುಖಂಡರನ್ನೂ ಒಗ್ಗೂಡಿಸಿದರು. ಇದೆಲ್ಲದರ ಪರಿಣಾಮ ಕನ್ನಡ ಅಭ್ಯರ್ಥಿಗಳೇ ಚುನಾವಣೆಯಲ್ಲಿ ಆಯ್ಕೆಯಾದರು. ರಕ್ಷಣಾ ವೇದಿಕೆಯ ಸಾಮಾನ್ಯ ಕಾರ‍್ಯಕರ್ತೆಯಾಗಿದ್ದ ಪ್ರಶಾಂತ ಬುಡವಿ ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಆಗಿ ಆಯ್ಕೆಯಾದರು!
ಬರೋಬ್ಬರಿ ೧೯ ವರ್ಷಗಳ ನಂತರ ಬೆಳಗಾವಿ ಪಾಲಿಕೆ ಕನ್ನಡಿಗರ ಕೈಗೆ!!
ಇಷ್ಟೆಲ್ಲಾ ಘಟನೆ ನಂತರವೂ ಎಂಇಎಸ್ ತನ್ ಪುಂಡಾಟಿಕೆ ಬಿಡಲಿಲ್ಲ. ಮರಾಠಿ ಮಹಾಮೇಳಾವ ಮತ್ತಿತರೆ ಚಟುವಟಿಕೆ ನಡೆಸುವ ಮೂಲಕ ಅದು ಇನ್ನಲ್ಲದ ತಗಾದೆ ತೆಗೆಯುತ್ತಲೇ ಬಂತು. ಮಹಾರಾಷ್ಟ್ರದ ಬುದ್ಧಿಗೇಡಿ ರಾಜಕಾರಣಿಗಳು, ಶಿವಸೇನೆ, ಎಂಎನ್‌ಎಸ್ ನಾಯಕರು ಉದ್ರೇಕಕಾರಿ ಭಾಷಣ ಮಾಡುವ ಮೂಲಕ ಜಗಳಕ್ಕೂ ಯತ್ನಿಸಿತ್ತು. ಆದರೆ ಅವೆಲ್ಲದ್ದಕ್ಕೂ ರಕ್ಷಣಾ ವೇದಿಕೆ ಕಾಲಕಾಲಕ್ಕೆ, ಸಂದರ್ಭಕ್ಕೆ ತಕ್ಕಂತೆ ಸೂಕ್ತ ಉತ್ತರವನ್ನೇ ನೀಡುತ್ತಾ ಬಂದಿದೆ.
ಹಿಂದಿ ಸಪ್ತಾಹ ಏಕೆ?
ನಮ್ಮದು ಒಕ್ಕೂಟ ವ್ಯವಸ್ಥೆ. ಒಕ್ಕೂಟ ವ್ಯವಸ್ಥೆಯಲ್ಲಿ ಕನ್ನಡದಷ್ಟೇ ಸ್ಥಾನಮಾನವನ್ನು ಹಿಂದಿ ಭಾಷೆ ಹೊಂದಿದ್ದರೂ ಅದನ್ನು ರಾಷ್ಟ್ರ ಭಾಷೆ ಎಂದು ಸುಳ್ಳು ಹೇಳುತ್ತಾ ಹಿಂದಿ ಹೇರಿಕೆ ಮಾಡುವ ವ್ಯವಸ್ಥಿತ ಪಿತೂರಿ ವಿರುದ್ಧ ದನಿ ಎತ್ತಿದ್ದು ರಕ್ಷಣಾ ವೇದಿಕೆ. ಹಿಂದಿ ಭಾಷೆಯನ್ನು ಬಲವಂತವಾಗಿ ಹೇರುವ ಮೂಲಕ ಹಿಂದಿ ಮೇಲ್ದರ್ಜೆ ಭಾಷೆ ಇತರ ಭಾಷೆಗಳು ಕೆಳದರ್ಜೆ ಭಾಷೆ ಎಂಬ ಹುನ್ನಾರವನ್ನು ಮಟ್ಟಹಾಕಿದ್ದು ನಾರಾಯಣಗೌಡರು.
ಬಲವಂತವಾಗಿ ಹಿಂದಿ ಹೇರುವಂಥ ಈ ಬೆಳವಣಿಗೆಗಳು ಹೀಗೆ ಮುಂದುವರೆದರೆ ಭವಿಷ್ಯದಲ್ಲಿ ಕನ್ನಡದ ಅಸ್ತಿತ್ವವೇ ಇರುವುದಿಲ್ಲ ಎಂಬ ಮುನ್ಸೂಚನೆ ಅರಿತ ವೇದಿಕೆ ಹಿಂದಿ ಹೇರಿಕೆ ವಿರುದ್ಧ ವ್ಯಾಪಕ ಹೋರಾಟವನ್ನು ನಡೆಸುತ್ತಾ ಬಂದಿದೆ.
ಕರವೇಯ ಹೋರಾಟದ ಹಾದಿಗಳಾವುದೂ ಸುಗುಮವಾಗಿರಲಿಲ್ಲ. ಪೊಲೀಸರ ಲಾಠಿ ಏಟು, ಸಾವಿರಾರು ಕೇಸುಗಳು...ಸರ್ಕಾರದ ಕೆಂಗಣ್ಣು..ಹೀಗೆ ಎಲ್ಲವನ್ನೂ ಅನುಭವಿಸುತ್ತಲೇ ಬಂದಿದೆ. ಪ್ರತೀ ಹೋರಾಟಕ್ಕೆ ಸಿದ್ಧಗೊಂಡಾಗಲೆಲ್ಲಾ ಇಲ್ಲಿನ ಕಾರ‍್ಯಕರ್ತರು ಜೀವಭಯ ಎದುರಿಸುವ ಪರಿಸ್ಥಿತಿಯೂ ಸೃಷ್ಟಿಯಾಗಿದೆ. ಮನೆ, ಮಠ, ಬಂಧು, ಬಳಗ ಎಲ್ಲವನ್ನೂ ಮರೆತು ಎಷ್ಟೋ ದಿನಗಳ ಕಾಲ ಜೈಲಿನಲ್ಲಿ ರಬೇಕಾದ ಸ್ಥಿತಿಯನ್ನೂ ಅನುಭವಿಸಿದ್ದಾರೆ.
ಅಂಥವುಗಳ ಪೈಕಿ ಕಾರವಾರವನ್ನು ಗೋವಾಗೆ ಸೇರಿಸಬೇಕೆಂಬ ಕುತಂತ್ರದ ವಿರುದ್ಧ ಕರವೇ ನಡೆಸಿದ ಹೋರಾಟವೂ ಒಂದು. ಇನ್ನು ಪರಭಾಷೆ ಹಾವಳಿಯಿಂದ ಕನ್ನಡ ಚಿತ್ರರಂಗz ಕಂಗೆಟ್ಟು ಕುಳಿತಿದ್ದಾಗ ನಡೆಸಿದ ಹೋರಾಟವೂ ಐತಿಹಾಸಿಕ. ಹೋರಾಟದ ಫವಾಗಿ ಕನ್ನಡ ಚಿತ್ರಗಳಿಗೆ ಪೂರಕವಾತಾವರಣ ನಿರ್ಮಾಣವಾಯಿತಲ್ಲದೆ, ಮಲ್ಟಿಪ್ಲೆಕ್ಸ್‌ಗಳಲ್ಲೂ ಕನ್ನಡ ಚಿತ್ರಗಳು ಪ್ರದರ್ಶಿತಗೊಳ್ಳಲು ಅವಕಾಶ ದೊರೆಯಿತು. ಅಷ್ಟಲ್ಲದೆ, ಕನ್ನಡಿಗರ ಜೀವನದಿಯಾಗಿದ್ದ ಮಹಾದಾಯಿ ನದಿ ನೀರಿನಲ್ಲಿ ಕಳಸಾ-ಬಂಡೂರಿ ಯೋಜನೆ ಕೈಗೆತ್ತಿಕೊಳ್ಳಲು ನಡೆಸಿದ ಬೃಹತ್ ಜಾಥಾ ಕೂಡ ಐತಿಹಾಸಿಕ. ನವೆಂಬರ್ ೧ ರಂದು ಕನ್ನಡ ಬಾವುಟ ಹಾರಿಸುವಂತಿಲ್ಲ ಎಂಬ ಸರ್ಕಾರದ ಎಡಬಿಡಂಗಿ ಆದೇಶದ ವಿರುದ್ಧ ಚಳವಳಿ ನಡೆಸಿ, ಆದೇಶವನ್ನು ಹಿಂತೆಗೆದುಕೊಳ್ಳುವಂತೆ ಮಾಡಿದ್ದು ಇದೇ ಕರ್ನಾಟಕ ರಕ್ಷಣಾ ವೇದಿಕೆ
ತಿರುವಳ್ಳುವರ್ ವಿವಾದ
ಇನ್ನು ತಿರುವಳ್ಳುವರ್ ಪ್ರತಿಮೆ ವಿವಾದ ಕರ್ನಾಟಕ ರಕ್ಷಣಾ ವೇದಿಕೆ ಪಾಲಿಗೆ ಅತ್ಯಂತ ಮಹತ್ವದ್ದು. ಕೆಲವು ಎಲ್‌ಟಿಟಿಇ ಬೆಂಬಲಿಗರು ಬೆಂಗಳೂರಿನಲ್ಲಿ ತಮಿಳು ಕವಿ ತಿರುವಳ್ಳುವರ್ ಪ್ರತಿಮೆ ಸ್ಥಾಪನೆಗೆ ಮುಂದಾದಾಗ ಅದನ್ನು ಗಟ್ಟಿ ದನಿಯಲ್ಲಿ ವಿರೋಧಿಸಿ, ಭದ್ರ ಹೋರಾಟಕ್ಕೆ ಬುನಾದಿ ಹಾಕಿದ್ದು ಕನ್ನಡಪರ ಕಾರ್ಯಕರ್ತರು. ತಮಿಳು ಶಕ್ತಿಗಳು ತಮ್ಮ ಇನ್ನಿಲ್ಲದ ಪ್ರಾಬಲ್ಯ, ಪ್ರಭಾವ ಬಳಸಿ ಏನೆಲ್ಲಾ ಹುನ್ನಾರಗಳನ್ನು ನಡೆಸಿದರೂ ಅದಕ್ಕೆ ಜಗ್ಗದ ಕನ್ನಡ ಹೋರಾಟಗಾರರು ರಾಜ್ಯವ್ಯಾಪಿ ಹೋರಾಟಕ್ಕೆ ಮುನ್ನುಡಿ ಬರೆದದ್ದೂ ಆಯಿತು.
ಆದರೆ ಕನ್ನಡಿಗರ ಸ್ವಾಭಿಮಾನದ ಹೋರಾಟದ ಪರವಾಗಿ ನಿಲ್ಲಬೇಕಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಹಲವಾರು ವರ್ಷಗಳಿಂದ ಹಲಸೂರು ಕೆರೆ ಆವರಣದಲ್ಲಿ ಮುಸುಕು ಹೊತ್ತು ನಿಂತಿದ್ದ ತಿರುವಳ್ಳುವರ್ ಪ್ರತಿಮೆಯನ್ನು ಅನಾವರಣಗೊಳಿಸುವ ನಿರ್ಧಾರಕ್ಕೆ ಬಂದರು. ತನ್ಮೂಲಕ ಕನ್ನಡಿಗರ ಬೆನ್ನಿಗೆ ಇರಿದರು. ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಸ್ಥಾಪಿಸಲು ಮುಹೂರ್ತವನ್ನೂ ನಿಗದಿಗೊಳಿಸಿದರು. ಪ್ರತಿಮೆ ಅನಾವರಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ರಕ್ಷಣಾ ವೇದಿಕೆಯ ನಾರಾಯಣಗೌಡರೂ ಸೇರಿದಂತೆ ಸಾವಿರಾರು ಕಾರ‍್ಯಕರ್ತರನ್ನು ಪೊಲೀಸರು ರಾತ್ರೋರಾತ್ರಿ ಬಂಧಿಸಿ ಜೈಲಿಗೆ ತಳ್ಳಿದರು. ತಮಿಳುನಾಡಿನಿಂದ ದೌಡಾಯಿಸಿ ಬಂದ ಮುಖ್ಯಮಂತ್ರಿ ಕರುಣಾನಿಧಿ ಯಡಿಯೂರಪ್ಪ ಅವರನ್ನು ‘ಚಿನ್ನತಂಬಿ’ ಅಂತ ಬಾಯ್ತುಂಬಾ ಕರೆದು, ನೆಟಿಕೆ ಮುರಿದು, ಪ್ರತಿಮೆ ಅನಾವರಣಗೊಳಿಸಿ ನೆಟ್ಟಗೆ ಎದ್ದುಹೋದರು.
ಕನ್ನಡಿಗರ ಆಕ್ರೋಶವನ್ನು, ಸ್ವಾಭಿಮಾನವನ್ನು ಪೊಲೀಸ್ ಬಲದ ಮೂಲಕ ನಿಯಂತ್ರಿಸಿ ಸಂಭ್ರಮಿಸಿದ ಯಡಿಯೂರಪ್ಪನವರ ದರ್ಪ, ದವಲತ್ತಿಗೆ ಕನ್ನಡಿಗರು ಮೌನ ಪ್ರತಿಭಟನೆ ವ್ಯಕ್ತಪಡಿಸಬೇಕಾಯಿತು. ಸೂಕ್ತ ಕಾಲದಲ್ಲಿ ಸೂಕ್ತ ಉತ್ತರ ನೀಡುವ ಕನ್ನಡಿಗರ ಸಾತ್ವಿಕ ಸಿಟ್ಟಿನಿಂದ ಯಡಿಯೂರಪ್ಪ ಖಂಡಿತಾ ತಪ್ಪಿಸಿಕೊಳ್ಳುವ ಸಾಧ್ಯತೆಯೇ ಇಲ್ಲ. ಕುತಂತ್ರದಿಂದ ತಿರುವಳ್ಳುವರ್ ಪ್ರತಿಮೆ ಅನಾವರಣಗೊಳಿಸಿದ ಯಡಿಯೂರಪ್ಪ ಅದಕ್ಕೆ ತಕ್ಕ ಪಾಠವನ್ನು ಕಲಿತೇ ಕಲಿಯುತ್ತಾರೆ.
ಹೊಗೇನಕಲ್ ಗಡಿ ವಿವಾದ
ಕಾಲದಿಂದಲೂ ನೆರೆಯ ತಮಿಳು ನಾಡು ಕರ್ನಾಟಕದ ಜತೆ ಹಲವು ಯೋಜನೆಗಳಿಗೆ ಸಂಬಂಧಿಸಿದಂತೆ ಕಾಲು ಕೆರೆದು ಜಗಳಕ್ಕೆ ನಿಲ್ಲುತ್ತಲೇ ಇದೆ. ಅದು ಕಾವೇರಿ ವಿವಾದವಾಗಿರಬಹುದು, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಮಾನ ನೀಡುವ ಬಗ್ಗೆಯಾದರೂ ಆಗಬಹುದು ಅಥವಾ ಹೊಗೇನಕಲ್ ವಿವಾದವಾದರೂ ಆಗಿರಬಹುದು. ಆಳುವ
ಸರ್ಕಾರಗಳ ಬೇಜವಾಬ್ದಾರಿ ನಡವಳಿಕೆ, ದಿವ್ಯ ನಿರ್ಲಕ್ಷ್ಯದಿಂದ ಏನೆಲ್ಲಾ ಯಡವಟ್ಟುಗಳು ಆಗಬಹುದೋ ಅವೆಲ್ಲಕ್ಕೆ ಸೂಕ್ತ ಉದಾಹರಣೆ ಅಂದ್ರೆ ಹೊಗೇನಕಲ್ ವಿವಾದ.
ಏನೆಲ್ಲಾ ಕಾಯ್ದೆ, ಕಾನೂನು, ಇತಿಹಾಸ ಕೆದಕಿದರೂ ಹೊಗೇನಕಲ್ ಕರ್ನಾಟಕಕ್ಕೇ ಸೇರಿದ್ದು ಎಂಬ ಪುರಾವೆ ದೊರೆಯುತ್ತದೆ. ಆದರೆ ಅವೆಲ್ಲವನ್ನೂ ಉಲ್ಲಂಘಿಸುವ ಉದ್ಧಟತನ ತಮಿಳುನಾಡು ಸರ್ಕಾರದ್ದು. ಹೊಗೇನಕಲ್‌ನಲ್ಲಿ ಕಾಮಗಾರಿ ನಡೆಸುವ ಮೂಲಕ ಕರ್ನಾಟಕ್ಕೆ ಮಂಕು ಬೂದಿ ಎರಚುವ ದುಸ್ಸಾಹಸಕ್ಕೆ ರಕ್ಷಣಾ ವೇದಿಕೆ ಚಳವಳಿಗಳ ಮೂಲಕ ಸೂಕ್ತ ಉತ್ತರವನ್ನೇ ನೀಡುತ್ತಾ ಬಂದಿದೆ. ಶಿವನಸಮುದ್ರ ಯೋಜನೆಗೆ ಕಿತಾಪತಿ ಮಾಡಿದ ತಮಿಳುನಾಡಿನ ಕಿಡಿಗೇಡಿ ರಾಜಕಾರಣಿಗಳು ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡುವ ಹುನ್ನಾರ ಹೂಡಿದ್ದನ್ನೂ ವೇದಿಕೆ ಬೆತ್ತಲುಗೊಳಿಸಿದೆ. ಕರ್ನಾಟಕದಲ್ಲಿ ತಮಿಳನ್ನು ಎರಡನೇ ಅಧಿಕೃತ ಭಾಷೆಯನ್ನಾಗಿಸಬೇಕೆಂಬ ಧಾರ್ಷ್ಟ್ಯತನಕ್ಕೂ ಬಲವಾದ ಪೆಟ್ಟು ನೀಡಿದೆ.
ಹಾಗೆ ನೋಡಿದರೆ, ಹೊಗೇನಕಲ್ ವಿವಾದ ಅತ್ಯಂತ ಗಂಭೀರವಾದದ್ದು. ರಾತ್ರೋರಾತ್ರಿ ಹೊಗೇನಕಲ್‌ನಲ್ಲಿ ಯೋಜನೆ ಆರಂಭಿಸುವ ದುಸ್ಸಾಹಸಕ್ಕೆ ಇಳಿದ ತಮಿಳುನಾಡು ಸರ್ಕಾರದ ಕೃತ್ಯದ ಮೇಲೆ ಚಾಮರಾಜನಗರದ ರಕ್ಷಣಾ ವೇದಿಕೆ ಕಾರ‍್ಯಕರ್ತರು ಪ್ರತಿಭಟಿಸುತ್ತಲೇ ಇದ್ದಾರೆ. ರಾಜ್ಯಾದ್ಯಂತ ಹೋರಾಟ ನಡೆಯುತ್ತಲೇ ಇದೆ.
ಹೊಗೇನಕಲ್ ಯೋಜನೆಯ ವಿವಾದ ಭುಗಿಲೆಬ್ಬಿಸಿ ಗಾಯದ ಮೇಲೆ ಉಪ್ಪು ಸವರುವ ಕೆಲಸ ಮಾಡುವುದು ಸಲ್ಲದು ಅಂತ ಖುದ್ದು ಹೈಕೋರ್ಟ್ ‘ಬುದ್ಧಿ’ ಮಾತು ಹೇಳಿದೆ. ವಿವಾದವನ್ನು ಸರ್ಕಾರದ ಮಟ್ಟದಲ್ಲಿಯೇ ಬಗೆಹರಿಸಿ ಅಂತಲೂ ಅದು ಸೂಚಿಸಿದೆ. ಅಷ್ಟಾದರೂ ತಮಿಳುನಾಡು ತನ್ನ ಕ್ಯಾತೆ ನಿಲ್ಲಿಸುವ ಲಕ್ಷಣಗಳು ಕಾಣುತ್ತಿಲ್ಲ. ಕರ್ನಾಟಕ ಸರ್ಕಾರಕ್ಕೆ ವಿವಾದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ಮನಸ್ಸು ಇದ್ದಂತಿಲ್ಲ.
ಜೀವ ಹೋದರೂ ಸರಿ ಕರ್ನಾಟಕದ ಒಂದಿಂಚು ನೆಲವೂ ತಮಿಳುನಾಡಿನ ಪಾಲಾಗಲು ಬಿಡೆವು ಎನ್ನುವ ವೇದಿಕೆ ಧ್ಯೇಯ ವಾಕ್ಯವನ್ನ ನಮ್ಮ ಸರ್ಕಾರಗಳು, ಜನನಾಯಕರು ಅರ್ಥ ಮಾಡಿಕೊಳ್ಳಬೇಕಷ್ಟೇ.
ದಿಕ್ಕು ಬದಲಾಗದು...
ಕರ್ನಾಟಕ ರಕ್ಷಣಾ ವೇದಿಕೆಗೆ ಕನ್ನಡವೇ ಧರ್ಮ, ಕನ್ನಡವೇ ದೇವರು ಮತ್ತು ಕನ್ನಡವೇ ಜಾತಿ. ಇಲ್ಲಿ ಜಾತಿ, ಧರ್ಮದ ಗೊಡವೆಯಿಲ್ಲ. ಹಮ್ಮು ಬಿಮ್ಮು, ಬಿಗುಮಾನವಿಲ್ಲ. ಇಲ್ಲೇನಿದ್ದರೂ ಸರ್ವೋದಯ ತತ್ವ. ವಿಶ್ವಮಾನವ ಸಂದೇಶ.
‘ರೂಪರೂಪಗಳನು ದಾಟಿ
ನಾಮಕೋಟಿಗಳನು ಮೀಟಿ
ಎದೆಯ ಬಿರಿಯೆ ಭಾವ ದೀಂಟಿ...
ಓ ನನ್ನ ಚೇತನ
ಆಗು ನೀ ಅನಿಕೇತನ....’
-ಎಂಬಂತೆ ಮಹಾನ್ ಕವಿ ಕುವೆಂಪು ಅವರ ಚಿಂತನೆಗಳ ಒಂದಿಷ್ಟಾದರೂ ಪಸರಿಸುವ ಅದಮ್ಯ ಕನಸು ನಾರಾಯಣಗೌಡರದ್ದು.
ಇಲ್ಲಿ ಯಾರನ್ನೂ ದೂಷಿಸುವುದಿಲ್ಲ, ದೂರೀಕರಿಸುವುದೂ ಇಲ್ಲ. ಇಲ್ಲೇನಿದ್ದರೂ ಒಕ್ಕೊರೊಲ ಕನ್ನಡ ಮಂತ್ರ. ಕನ್ನಡ...ಕನ್ನಡ...ಮತ್ತು ಕನ್ನಡ. ಕಾರ‍್ಯಕರ್ತರೇ ಇಲ್ಲಿ ಸೇವಕರು ಮತ್ತು ಅವರೇ ಯಜಮಾನರು. ಪ್ರತಿಯೊಬ್ಬ ಕಾರ‍್ಯಕರ್ತನೊಳಗೂ ಒಬ್ಬ ಅದಮ್ಯ ಸಂಘಟಕ ಇದ್ದೇ ಇರ‍್ತಾನೆ ಅಂತ ನಂಬಿದವರು ನಾರಾಯಣಗೌಡರು. ಆ ಕಾರಣಕ್ಕಾಗೇ ಸರ್ವರಿಗೂ ಮನ್ನಣೆ, ಸರ್ವರಿಗೂ ವಂದನೆ.
ಯಾವುದೇ ಕಾರಣಕ್ಕೂ ರಕ್ಷಣಾ ವೇದಿಕೆಯಲ್ಲಿ ಜಾತಿ, ಮತ, ಧರ್ಮ, ಭಾಷೆಗಳ ಗೋಡೆ ಇಲ್ಲವೇ ಇಲ್ಲ. ಕನ್ನಡತನಕ್ಕೆ ಬದ್ಧರಾಗಿ ಯಾರೇ ಬಂದರೂ ಅವರಿಗೆ ಸ್ವಾಗತ. ವಿಶೇಷವೆಂದರೆ, ಬೇರೆ ಮಾತೃಭಾಷೆಗಳನ್ನು ಹೊಂದಿದವರೂ ವೇದಿಕೆಯ ಹಲವು ಘಟಕಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಕನ್ನಡ ಕಟ್ಟುವ ಕೆಲಸಕ್ಕೆ ಹೃದಯಪೂರ್ವಕವಾಗಿ ಹೆಗಲು ಕೊಟ್ಟು ದುಡಿಯುತ್ತಿದ್ದಾರೆ.
‘ಇವನಾರವ ಇವನಾರವ ಎನ್ನದಿರು
ಇವ ನಮ್ಮವ ಇವ ನಮ್ಮವ ಎನ್ನು’

-ಎಂದು ಶುದ್ಧ ಮನಸ್ಸುಗಳನ್ನು, ವಿಶಾಲ ಹೃದಯಿಗಳನ್ನು ಯಾವುದೇ ಪೂರ್ವಾಗ್ರಹಗಳಿಲ್ಲದೆ ಒಪ್ಪಿಕೊಳ್ಳುವ ಔದಾರ‍್ಯ ಗೌಡರದ್ದು.
ಇನ್ನು ಕಪ್ಪೆ ಆರಭಟ್ಟ ಹೇಳಿದಂತೆ ಕನ್ನಡಿಗರು ‘ಸಾಧುಂಗೆ ಸಾಧು ಮಾಧುರ‍್ಯಂಗೆ ಮಾಧುರ‍್ಯ...ಬಾದಿಪ್ಪ ಕಲಿಗೆ ಕಲಿಯುಗ ವಿಪರೀತನ್...’ ಎನ್ನುವಂತೆ ವೇದಿಕೆಯ ಕಾರ‍್ಯಕರ್ತರು ಸಾಧುಗಳಿಗೆ ಸಾಧು ಮತ್ತು ಬಾಧಿಸುವವರಿಗೆ, ಸುಖಾಸಮ್ಮನೆ ದಬ್ಬಾಳಿಕೆ ನಡೆಸುವವರಿಗೆ ಅಕ್ಷರಶಃ ಕಲಿಗಳೇ.
ರಕ್ಷಣಾ ವೇದಿಕೆಯಲ್ಲಿ ವ್ಯಕ್ತಿ ಮುಖ್ಯವಲ್ಲ. ಇಲ್ಲೇನಿದ್ದರೂ ವಿಚಾರಗಳಿಗಷ್ಟೇ ಆದ್ಯತೆ. ಕನ್ನಡ ವಿಚಾರ, ಕನ್ನಡ ಆಲೋಚನೆ ಮತ್ತು ಕನ್ನಡದ ಅಭಿವೃದ್ಧಿಗಷ್ಟೇ ಕಾರ‍್ಯಕರ್ತರು ಬದ್ಧ. ವೇದಿಕೆಯ ದಶಕದ ಹೋರಾಟ, ಚಳವಳಿಗಳನ್ನು ಸೂಕ್ಷ್ಮವಾಗಿ ಬಲ್ಲವರಿಗಷ್ಟೇ ಇದು ಅರ್ಥವಾದೀತು. ಯಾವುದೇ ಕಾರಣಕ್ಕೂ, ಎಂಥದ್ದೇ ಸಂದರ್ಭದಲ್ಲೂ ಕರ್ನಾಟಕ ರಕ್ಷಣಾ ವೇದಿಕೆಯ ಆಲೋಚನೆಯ ದಿಕ್ಕು, ಹೋರಾಟದ ಶೈಲಿ, ಚಳವಳಿಯ ತೀವ್ರತೆ ಬದಲಾಗದು.
ಬೆಂಗಳೂರು ಕೇಂದ್ರಿತವಾಗಿದ್ದ ಕನ್ನಡ ಚಳವಳಿಯನ್ನು ದಶದಿಕ್ಕುಗಳಿಗೆ ವ್ಯಾಪಿಸುವಂತೆ ಮಾಡಿದ್ದು ನಾರಾಯಣಗೌಡರು. ಹಾಗೆ ನೋಡಿದರೆ ಚಳವಳಿಯ ಮೂಲಕವೇ ಇಡೀ ರಾಜ್ಯವನ್ನು ಭಾವನಾತ್ಮಕವಾಗಿ ಬೆಸೆಯಲು ನಿರಂತರವಾಗಿ ಪ್ರಯತ್ನಿಸುತ್ತಲೇ ಇದ್ದಾರೆ. ಹಿಂದೆಲ್ಲ ಉತ್ತರ ಕರ್ನಾಟಕದ ಜನರ ಸಮಸ್ಯೆಗಳಿಗೆ ಹಳೇ ಮೈಸೂರು ಭಾಗದ ಚಳವಳಿಗಾರರು ಸ್ಪಂದಿಸಿದ್ದು ಕಡಿಮೆ. ಆದರೆ ಕೃಷ್ಣಾ, ಮಹದಾಯಿ ನದಿ ವಿವಾದಗಳೂ ಸೇರಿದಂತೆ ಉತ್ತರ ಕರ್ನಾಟಕದ ಎಲ್ಲ ಸಮಸ್ಯೆಗಳಿಗೆ ತೀವ್ರವಾಗಿ ಸ್ಪಂದಿಸಿದ್ದು ಕರ್ನಾಟಕ ರಕ್ಷಣಾ ವೇದಿಕೆ. ಉತ್ತರ ಕರ್ನಾಟಕದ ಸುತ್ತಗಲಕ್ಕೂ ಪ್ರವಾಸ ಮಾಡಿ, ಅಲ್ಲಿನ ಜನರ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡು ಅಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಿದ್ದು ನಾರಾಯಣಗೌಡರ ಹೆಗ್ಗಳಿಕೆ. ಬೆಳಗಾವಿಯಲ್ಲಿ ಮತ್ತೆ ಕನ್ನಡಿಗರು ಸ್ವಾಭಿಮಾನದಿಂದ ತಲೆ ಎತ್ತಿ ಬಾಳುವಂತೆ ಮಾಡಿದ್ದು ಕರ್ನಾಟಕ ರಕ್ಷಣಾ ವೇದಿಕೆ. ಹೀಗಾಗಿ ಬೆಳಗಾವಿ ಕನ್ನಡಿಗರು ನಾರಾಯಣಗೌಡರನ್ನು, ಕರ್ನಾಟಕ ರಕ್ಷಣಾ ವೇದಿಕೆಯನ್ನು ವಿಶೇಷ ಅಭಿಮಾನದಿಂದ ನೋಡುತ್ತಾರೆ.
ಕನ್ನಡಿಗರ ಮುಖವಾಣಿ....
ಕನ್ನಡಿಗರ ಸ್ವಾಭಿಮಾನದ ಸಂಕೇತದಂತಿರುವ ಕರ್ನಾಟಕ ರಕ್ಷಣಾ ವೇದಿಕೆಯ ಯಶಸ್ವಿ ನಡಿಗೆಯಲ್ಲಿ ಕರವೇ ನಲ್ನುಡಿ ಮಾಸ ಪತ್ರಿಕೆಯದ್ದು ಮಹತ್ವದ ಹೆಜ್ಜೆ ಗುರುತು. ಕರವೇ ನಲ್ನಡಿ ಕನ್ನಡಿಗರ ಧೀಶಕ್ತಿಯ ಅನಾವರಣ. ಇದು ಕೇವಲ ಕರ್ನಾಟಕ ರಕ್ಷಣಾ ವೇದಿಕೆಯ ಮುಖವಾಣಿಯಷ್ಟೇ ಅಲ್ಲ ಸಮಸ್ತ ಕನ್ನಡಿಗರ ಮುಖವಾಣಿ, ಎದೆಯ ದನಿ.
ನಲ್ನುಡಿ ನಡಿಗೆ ಆರಂಭಿಸಿದ ಕೆಲವೇ ತಿಂಗಳುಗಳಲ್ಲಿ ಅದರ ವ್ಯಾಪಕತೆ ಬೆರಗು ಮೂಡಿಸಿದೆ. ಇದು ಕನ್ನಡ ಮತ್ತು ಕನ್ನಡಿಗರಿಗಾಗಿಯೇ ರೂಪುಗೊಂಡ ಅಪರೂಪದ ಪತ್ರಿಕೆ. ಕನ್ನಡ ಪತ್ರಿಕೋದ್ಯಮದ ಮಟ್ಟಿಗಂತೂ ವಿಶಿಷ್ಟ ಪ್ರಯೋಗ. ‘ಹೀಗೂ ಮಾಡಬಹುದೇ’ ಎಂಬ ಬೆರಗುಗಣ್ಣುಗಳ ನಡುವೆಯೇ ರಕ್ಷಣಾ ವೇದಿಕೆ ತನ್ನ ಸಾಂಸ್ಕೃತಿಕ ಶ್ರೀಮಂತಿಕೆಗೆ ಸಾಕ್ಷಿಯಾಗಿ ನಿಂತಿದೆ.
ಟೀಕೆಗಳು-ಟಿಪ್ಪಣಿಗಳು
ಕಳೆದ ಹತ್ತು ವರ್ಷಗಳಿಂದ ಸಮರೋಪಾದಿಯಲ್ಲಿ ಕನ್ನಡ ಕಾಯಕದಲ್ಲಿ ತೊಡಗಿಕೊಂಡಿರುವ ಕರ್ನಾಟಕ ರಕ್ಷಣಾ ವೇದಿಕೆ ಟೀಕೆ-ಟಿಪ್ಪಣಿಗಳನ್ನೂ ಎದುರಿಸುತ್ತ ಬಂದಿದೆ. ಆರೋಗ್ಯಕರ ಟೀಕೆಗಳಿಗೆ ವೇದಿಕೆ ಸ್ಪಂದಿಸುತ್ತದೆ. ಮುಕ್ತ ಸಲಹೆಗಳಿಗೆ ವೇದಿಕೆ ಯಾವತ್ತಿಗೂ ತೆರೆದುಕೊಂಡೇ ಇದೆ. ಕೆಲವರಿರುತ್ತಾರೆ; ಟೀಕೆಗಳಿಗಾಗಿ ಟೀಕಿಸುತ್ತಾರೆ. ಅಂಥವರನ್ನು ವೇದಿಕೆ ಗಂಭೀರವಾಗಿ ಪರಿಗಣಿಸುವುದಿಲ್ಲ. ಮತ್ತೆ ಕೆಲವರು ಜಾಣ ಜಾಣೆಯರೆಂದು ಬೋರ್ಡು ತಗುಲಿಸಿಕೊಂಡವರು, ಅವರಿಂದ ಹೊರಡುವುದು ಕೇವಲ ಅಮೇಧ್ಯದ ವಾಸನೆ. ಮೀರ್ ಸಾಧಕ್, ಮಲ್ಲಪ್ಪಶೆಟ್ಟಿಗಳಂಥ ಕೊಳಕುಪಿಂಡಗಳಿಂದ ಭಕ್ಷೀಸು ಪಡೆದು ರಕ್ಷಣಾ ವೇದಿಕೆಯ ಮೇಲೆ ಕಲ್ಲು ಒಗೆದು ಹೊಲಸು ಕಾರುವ ಇಂಥ ಕ್ರಿಮಿಗಳು ಎಲ್ಲ ಕಾಲದಲ್ಲೂ ಇರುತ್ತಾರೆ. ‘ಕೊಚ್ಚೆಗೆ ಕಲ್ಲು ಎಸೆಯಬೇಡಿ; ಅದು ನಿಮಗೇ ಸಿಡಿಯುತ್ತದೆ’ ಎಂದು ಹಿರಿಯರು ಎಚ್ಚರಿಸಿದ್ದಾರೆ. ಹೀಗಾಗಿ ಅಂಥವರಿಗೂ ಪ್ರತಿಕ್ರಿಯಿಸುವುದನ್ನು ವೇದಿಕೆ ಇತ್ತೀಚಿಗೆ ಬಿಟ್ಟಿದೆ.
ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ
ಕನ್ನಡ ಕೊಲ್ಲುವ ಮುನ್ನ ಎನ್ನ ಕೊಲ್ಲು ಎಂದರು ರಾಷ್ಟ್ರಕವಿ ಕುವೆಂಪು. ನಾರಾಯಣಗೌಡರ ಮೂಲಮಂತ್ರವೂ ಇದೆ. ಕನ್ನಡಕ್ಕೆ, ಕನ್ನಡಿಗನಿಗೆ, ಕರ್ನಾಟಕಕ್ಕೆ ಧಕ್ಕೆ ತರುವ ಯಾರೇ ಆದರೂ ಮೊದಲು ನಮ್ಮನ್ನು ಎದುರಿಸಿ ಎಂದು ರಣವೀಳ್ಯ ಕೊಟ್ಟವರು ನಾರಾಯಣಗೌಡರು. ಕನ್ನಡದ ಶತ್ರುಗಳನ್ನು ಯಾವ ಬೆಲೆ ತೆತ್ತಾದರೂ ಮಣಿಸುವ ಧೈರ್ಯ, ಶಕ್ತಿ, ಲಕ್ಷಾಂತರ ಕಾರ್ಯಕರ್ತರ ಬೆಂಬಲ ಅವರಿಗಿದೆ. ಈ ಕ್ಷಾತ್ರ ತೇಜಸ್ಸೇ ಸಂಘಟನೆಯನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆಸಿದೆ.
ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮನಾಗಬೇಕು, ಈ ನೆಲದ ಸುಖ, ಸಂಪತ್ತು ಎಲ್ಲವೂ ಕನ್ನಡಿಗನಿಗೇ ದೊರೆಯಬೇಕು ಎಂಬುದು ಕರ್ನಾಟಕ ರಕ್ಷಣಾ ವೇದಿಕೆಯ ಗುರಿ. ಈ ಗುರಿಯ ಮಾರ್ಗದಲ್ಲೇ ವೇದಿಕೆ ಮುನ್ನಡೆಯುತ್ತದೆ.

ಗಡಿ ಧೋತರದ ಧಡಿ ಇದ್ದಂಗ!









ನವೆಂಬರ್ ೨೪ರಂದು ಹುಬ್ಬಳ್ಳಿಯಲ್ಲಿ ‘ಕರವೇ ನಲ್ನುಡಿ ಕಥಾಸ್ಪರ್ಧೆ-೨೦೧೦’ರ ವಿಜೇತರಿಗೆ, ಮೆಚ್ಚುಗೆ ಪಡೆದ ಕಥೆಗಾರರಿಗೆ ಸತ್ಕರಿಸುವ ಕಾರ್ಯಕ್ರಮ. ೨೨ರ ರಾತ್ರಿಯೇ ಹುಬ್ಬಳ್ಳಿಯೆಡೆಗೆ ನಮ್ಮ ಪಯಣ. ಉತ್ತರ ಕರ್ನಾಟಕ ಪ್ರವಾಸದಲ್ಲಿದ್ದ ನಾರಾಯಣಗೌಡರು ಸಾಧ್ಯವಾದರೆ ಚಿಂಚಣಿ ಮಠಕ್ಕೆ ಭೇಟಿ ಕೊಟ್ಟು ಬನ್ನಿ. ಅಲ್ಲಿ ಅಪರೂಪದ ‘ಕನ್ನಡದ ಸ್ವಾಮಿ’ ಇದ್ದಾರೆ. ಗಡಿಭಾಗದಲ್ಲಿ ಕನ್ನಡದ ಕಾರ್ಯವನ್ನೇ ಧರ್ಮದ ಕಾರ್ಯ ಎಂದುಕೊಂಡು ಕೆಲಸ ಮಾಡುತ್ತಿದ್ದಾರೆ. ಯಾವ ಗಡಿ ಭಾಗವನ್ನು ಮರಾಠಿಗರು ತಮ್ಮದೆಂದು ವಾದಿಸುತ್ತಿದ್ದಾರೋ ಆ ಭಾಗದಲ್ಲಿ ಶತಮಾನದ ಹಿಂದೆ ಸಂಪೂರ್ಣ ಕನ್ನಡ ವಾತಾರವಣವಿತ್ತು, ಕನ್ನಡವೇ ಆಡಳಿತ ಭಾಷೆಯಾಗಿತ್ತು ಎಂಬುದಕ್ಕೆ ಅವರ ಬಳಿ ದಾಖಲೆಗಳಿವೆ. ಒಂದಷ್ಟು ಚಿತ್ರಗಳನ್ನೂ ಸಂಗ್ರಹಿಸಬಹುದು.’ ಎಂದಿದ್ದರು.
ಚಿಕ್ಕೋಡಿ ತಾಲ್ಲೂಕಿನ ಗಡಿಯಲ್ಲಿರುವ ಅಲ್ಲಮಪ್ರಭು ಸಿದ್ಧ ಸಂಸ್ಥಾನ ಮಠದ ಶ್ರೀ ಅಲ್ಲಮಪ್ರಭು ಸ್ವಾಮೀಜಿಗಳನ್ನು ಬಹುತೇಕ ಕನ್ನಡದ ಸಾಹಿತಿಗಳು ಬಲ್ಲರು. ಯಾಕೆಂದರೆ ಅವರು ಅಲ್ಲಮಪ್ರಭು ಜನಕಲ್ಯಾಣ ಸಂಸ್ಥೆಯ ಕನ್ನಡ ಜಾಗೃತಿ ಪುಸ್ತಕಮಾಲೆಯ ಮೂಲಕ ೨೭ ಪುಸ್ತಕಗಳನ್ನು ಹೊರತಂದಿದ್ದಾರೆ. ಹೀಗಾಗಿ ನನಗೂ ಈ ಮಠದ ಕುರಿತು ಕುತೂಹಲವಿತ್ತು.
೨೨ರ ರಾತ್ರಿ ಬೆಂಗಳೂರಿನಿಂದ ಹೊರಟು ೨೩ರ ಬೆಳಿಗ್ಗೆ ಹುಬ್ಬಳ್ಳಿ ತಲುಪಿಕೊಂಡಿದ್ದಾಗಿತ್ತು. ಮತ್ತೆ ಅಲ್ಲಿಂದ ಬೆಳಗಾವಿಯ ಮೂಲಕ ಚಿಂಚಣಿಯತ್ತ ಪಯಣ. ಚಿಂಚಣಿಯಿರುವುದು ಚಿಕ್ಕೋಡಿಯಿಂದ ಆಚೆ. ಮರಾಠಿಗರ ಪ್ರಾಬಲ್ಯವಿರುವ ನಿಪ್ಪಾಣಿಯ ಸಮೀಪ.
ಬೆಳಗಾವಿಯಲ್ಲಿ ಜಿಲ್ಲಾ ಘಟಕದ ಉಪಾಧ್ಯಕ್ಷರಾದ ಮಹದೇವ ಕೂಡಿಕೊಂಡರು. ನಂತರ ಚಿಕ್ಕೋಡಿಯಲ್ಲಿ ತಾಲ್ಲೂಕು ಘಟಕದ ಅಧ್ಯಕ್ಷ ಸಂಜೀವ್ ಬಡಿಗೇರ್, ಉಪಾಧ್ಯಕ್ಷ ಶಿವಾನಂದ ಗರಬುಡೆ ನಮ್ಮೊಂದಿಗೆ ಸೇರಿಕೊಂಡರು. ಚಿಕ್ಕೋಡಿಯಿಂದ ಸುಮಾರು ಹತ್ತು ಕಿ.ಮೀ ಸಾಗಿದರೆ ಸಿಗುವುದೇ ಚಿಂಚಣಿ.
ಸ್ವಾಮೀಜಿಯವರಿಗೆ ನಾವು ಬರುವುದನ್ನು ಮೊದಲೇ ತಿಳಿಸಿದ್ದರಿಂದ ಅವರು ನಮಗಾಗಿ ನಿರೀಕ್ಷಿಸುತ್ತಿದ್ದರು. ಇತ್ತ ಬೆಂಗಳೂರಿನಲ್ಲಿ ಬೇರೆಡೆಗಳಲ್ಲಿ ‘ಯಡಿಯೂರಪ್ಪ ಉಳಿತಾರಾ, ಹೋಗ್ತಾರಾ?’ ಎಂಬ ಧಾವಂತದಲ್ಲಿ ನಮ್ಮ ಮಠಪೀಠಗಳ ಸ್ವಾಮಿಗಳು ಧಗಧಗಿಸುತ್ತಿದ್ದರೆ ಅಲ್ಲಮಪ್ರಭು ಸ್ವಾಮಿಗಳು ಅಲ್ಲಿ ತಣ್ಣಗೆ, ಪ್ರಸನ್ನವದನರಾಗಿ ಕುಳಿತಿದ್ದರು.
ರಾಜಧಾನಿಯಿಂದ ಇಷ್ಟು ದೂರವಿರುವ ಈ ಗಡಿಯ ಹಳ್ಳಿಯಲ್ಲಿ ಕನ್ನಡದ ಕಾಯಕ ನಡೆಸುತ್ತಿರುವ ಸ್ವಾಮೀಜಿಯವರ ಕರ್ತೃತ್ವಶಕ್ತಿಯ ಕುರಿತು ಅಭಿಮಾನವೆನಿಸಿತು, ಅಚ್ಚರಿಯೆನಿಸಿತು.
‘ನನ್ನ ಗುರುಗಳು ತೋಂಟದ ಸಿದ್ಧಲಿಂಗ ಸ್ವಾಮಿಗಳು. ಧರ್ಮದ ಕಾಯಕ ನಡೆಸಲು ಸಾವಿರಾರು ಮಠಗಳಿವೆ. ಅವು ಆ ಕೆಲಸ ಮಾಡುತ್ತವೆ. ನೀವು ನಾಡಿನ ಗಡಿಯಲ್ಲಿದ್ದೀರಿ. ಅಲ್ಲಿ ಆಗಬೇಕಿರುವುದು ಕನ್ನಡದ ಕೆಲಸ. ಅದನ್ನು ನೀವು ಮಾಡಿ, ಎಂದು ಹೇಳಿದ್ದರು. ಅವರು ಹೇಳಿದಂತೆಯೇ ಮಾಡುತ್ತಾ ಬಂದಿದ್ದೇನೆ, ಅದರಲ್ಲಿ ಹೆಚ್ಚುಗಾರಿಕೆ ಏನೂ ಇಲ್ಲ ಎಂದು ವಿನಯವಂತಿಕೆ ಮೆರೆದರು ಸ್ವಾಮೀಜಿ.
ನನಗೆ ನಿಜಕ್ಕೂ ಕುತೂಹಲ ಅನಿಸಿದ್ದು ಸ್ವಾಮೀಜಿಯವರು ನಡೆಸುತ್ತಿರುವ ಪ್ರಕಾಶನ ಸಂಸ್ಥೆ. ನಿಮ್ಮ ಕುತೂಹಲಕ್ಕಾಗಿ ಅವರು ಪ್ರಕಟಿಸಿರುವ ಕೆಲವು ಕೃತಿಗಳ ಪಟ್ಟಿಯನ್ನು ನೀಡುತ್ತೇನೆ, ಗಮನಿಸಿ. ಆಧುನಿಕ ಕರ್ನಾಟಕದ ಆತಂಕಗಳು, ಕನ್ನಡತನ ಮತ್ತು ಭಾರತೀಯತೆ, ಮಹಾಜನ ವರದಿ ಒಂದು ಅವಲೋಕನ, ಕನ್ನಡ ಕೋಟೆ ಕೆಎಲ್‌ಇ, ನಾಥ ಸಂಪ್ರದಾಯದ ಇತಿಹಾಸ, ರಂಗಭೂಮಿಯ ಕನ್ನಡದ ಸಂವೇದನೆ, ಸೀಮೆ, ಕನ್ನಡಪರ ಚಿಂತನೆ ಮತ್ತು ಪರಂಪರೆ, ನಮ್ಮ ನಾಡು ನುಡಿ ಮತ್ತು ಗಡಿ, ಕನ್ನಡ ಕಟ್ಟೋಣ, ಕರ್ನಾಟಕದ ಹಿಂದೂಸ್ತಾನಿ ಸಂಗೀತಗಾರರು, ಕನ್ನಡದ ಕೂಲಿ ರಾಮ ಜಾಧವ, ಸಿರಿಗನ್ನಡ ತೇರು, ದತ್ತ ಸಂಪ್ರದಾಯದ ಇತಿಹಾಸ, ಚೆಲುವ ಕನ್ನಡ ನಾಡು, ಕರ್ನಾಟಕದ ಗಂಧರ್ವರು, ಕವಿ ಕಣವಿ ಸಂದರ್ಶನ, ಜ್ಞಾನ ಒಂದು ಇದ್ದ ಮ್ಯಾಲ ಮಾನಕೇನ ಕಡ್ಮಿ ಇಲ್ಲ, ಕನ್ನಡ ಜಗದ್ಗುರು, ಕರ್ನಾಟಕ ಏಕೀಕರಣ ಚಳವಳಿ ಮತ್ತು ಮಹಿಳೆ, ಕನ್ನಡ-ಕನ್ನಡಿಗ-ಕರ್ನಾಟಕ... ಈ ಕೃತಿಗಳನ್ನು ಬರೆದಿರುವವರ ಪಟ್ಟಿಯನ್ನೂ ಒಮ್ಮೆ ಗಮನಿಸಿ. ಎಸ್.ವಿ.ಪಾಟೀಲ, ವಿಜಯಲಕ್ಷ್ಮಿ ಬೋಸಲೆ, ಸದಾನಂದ ಕನವಳ್ಳಿ, ಡಾ.ಕಾ.ವೆಂ.ಶ್ರೀನಿವಾಸಮೂರ್ತಿ, ಡಾ. ಅನಿಲ ಕಮತಿ, ಚಂದ್ರಕಾಂತ ಪೋಕಳೆ, ಡಾ.ರಾಮಕೃಷ್ಣ ಮರಾಠೆ, ಪ್ರೊ.ಚಂದ್ರಶೇಖರ ವಸ್ತ್ರದ, ಡಾ. ರತ್ನಶೀಲ ಶಿವಲಿಂಗಪ್ಪ ಗುರಡ್ಡಿ, ಡಾ. ಪಿ.ಜಿ.ಕೆಂಪಣ್ಣವರ, ಡಾ. ಪಿ.ವಿ.ನಾರಾಯಣ, ಡಾ. ಜಿ.ಎಂ.ಹೆಗಡೆ, ಶಿರೀಷ ಜೋಷಿ, ಡಾ. ಓಂಕಾರ ಕಾಕಡೆ, ರಾ.ನಂ.ಚಂದ್ರಶೇಖರ, ಸುರೇಶ ವೆ. ಕುಲಕರ್ಣಿ, ಶ್ರೀಪಾದ ಕುಂಬಾರ, ಬಿ.ಎಸ್.ಗವಿಮಠ.
ಇವತ್ತಿನ ಕಾಲದಲ್ಲಿ ಮಠಗಳ ಆದ್ಯತೆಯೇನು? ಅವು ಎತ್ತ ಸಾಗಿವೆ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ. ಹೀಗಿರುವಾಗ ಅಲ್ಲಮಪ್ರಭು ಸ್ವಾಮೀಜಿಗಳು ಇಂಥ ಕೃತಿಗಳನ್ನು ಹೊರತರುವ ಮನಸ್ಸು ಮಾಡಿದ್ದಾದರೂ ಹೇಗೆ ಎಂಬುದೇ ಸೋಜಿಗ. ಯಾವ ಕೃತಿಯಲ್ಲೂ ಸ್ವಾಮೀಜಿಯ ಒಂದು ಸಣ್ಣ ಫೋಟೋ ಸಹ ಇಲ್ಲ. ಎಲ್ಲೂ ಮಠದ ಕುರಿತು ವಿವರಣೆಗಳಿಲ್ಲ.
ಈ ಪ್ರಕಾಶನ ಸಂಸ್ಥೆ ಆರಂಭಿಸುವ ಸಂದರ್ಭದಲ್ಲಿ ಡಾ.ಎಂ.ಎಂ.ಕಲಬುರ್ಗಿಯವರು ಸ್ವಾಮೀಜಿಯವರಿಗೆ ಒಂದು ಮಾತು ಹೇಳಿದ್ದರಂತೆ. ‘ನೀವು ಪ್ರಕಾಶನ ಆರಂಭಿಸುತ್ತಿರುವುದೇನೋ ಸರಿ. ಆದರೆ ಅಲ್ಲಿ ನಿಮ್ಮದೇ ವೈಭವೀಕರಣವಿದ್ದರೆ ಅದಕ್ಕೆ ಅರ್ಥವಿರುವುದಿಲ್ಲ. ಇದನ್ನು ನೀವು ನಿಮ್ಮ ಮಠದ ಪ್ರಚಾರಕ್ಕೆ ಬಳಸಕೂಡದು. ಹಾಗೇನಾದರೂ ಆದರೆ ನಿಮ್ಮ ಉದ್ದೇಶಕ್ಕೆ ಕಳಂಕ ಬಂದಂತಾಗುತ್ತದೆ.’
ಕಲಬುರ್ಗಿಯವರ ಮಾತನ್ನು ಸ್ವಾಮೀಜಿ ಯಥಾವತ್ತಾಗಿ ಆಚರಣೆಗೆ ತಂದರು. ಅದೇ ಪ್ರಕಾರವೇ ಒಂದೊಂದೇ ಕೃತಿಗಳನ್ನು ಹೊರತಂದರು. ನಿಜಕಾಳಜಿ ಇದ್ದಲ್ಲಿ ಮಾತ್ರ ಇಂಥದ್ದು ಸಾಧ್ಯವಾಗುತ್ತದೆಯಲ್ಲವೆ?
ಸ್ವಾಮೀಜಿ ತಮ್ಮ ಸಹಾಯಕರಿಗೆ ಹೇಳಿ ಒಂದಷ್ಟು ಪುಸ್ತಕಗಳನ್ನು ತರಿಸಿ ನಮ್ಮ ಮುಂದೆ ಹರವಿದರು. ಎಲ್ಲ ಪುಸ್ತಕಗಳ ಬಗೆಯೂ ಹೇಳಲು ಅವರ ಬಳಿ ಸಾಕಷ್ಟು ವಿಷಯಗಳಿದ್ದವು. ಒಂದೊಂದನ್ನೂ ಕೈಯಲ್ಲಿ ಹಿಡಿದು ಆಸ್ಥೆಯಿಂದ ವಿವರಿಸಿತೊಡಗಿದರು. ಆಯಾ ಪುಸ್ತಕ ಪ್ರಕಟಣೆಗೊಂಡ ಸಂದರ್ಭದಿಂದ ಹಿಡಿದು ಅವುಗಳ ಸಾಂಸ್ಕೃತಿಕ ಮಹತ್ವವನ್ನು ಬಿಡಿಸಿ ಹೇಳತೊಡಗಿದರು. ಆ ಕೃತಿಗಳು ಅವರಿಗೆ ಕೇವಲ ಪುಸ್ತಕಗಳಲ್ಲ, ಕನ್ನಡ ಬೆಳೆಸುವ ಸಾಧನಗಳು.
‘ನೋಡಿ, ಮರಾಠಿಯ ಕೆಲವು ಪುಸ್ತಕಗಳನ್ನು ಅನುವಾದ ಮಾಡಿಸಿದ್ದೇವೆ. ಕನ್ನಡದ ಕೃತಿಗಳನ್ನೂ ಮರಾಠಿಯಲ್ಲಿ ತರುವ ಉದ್ದೇಶವಿದೆ. ಸಾಂಸ್ಕೃತಿಕ ಕೊಡು-ಕೊಳ್ಳುವಿಕೆಯಿಂದ ಎಲ್ಲ ಸಮಸ್ಯೆಗಳನ್ನು ಬಗೆಹರಿಸಬಹುದು.’ ಎಂದು ಸ್ವಾಮೀಜಿ ಆತ್ಮವಿಶ್ವಾಸದಿಂದ ಮಾತನಾಡುತ್ತಿದ್ದರು.
ಸ್ವಾಮೀಜಿ ಕೇವಲ ಪುಸ್ತಕ ಪ್ರಕಟಣೆ ಮಾಡಿಕೊಂಡು ಕುಳಿತುಕೊಳ್ಳಲಿಲ್ಲ. ಗಡಿ ಭಾಗದ ಹಳ್ಳಿ ಹಳ್ಳಿಗಳಿಗೂ ತೆರಳಿ ಕನ್ನಡದ ಕೆಲಸಗಳನ್ನು ಮಾಡುತ್ತ ಬಂದಿದ್ದಾರೆ. ಕನ್ನಡದ ಕಾರ್ಯಕ್ರಮ ಎಲ್ಲಿದ್ದರೂ, ಯಾರು ಮಾಡಿದರೂ ಸ್ವಾಮೀಜಿ ಅಲ್ಲಿಗೆ ಹೋಗುತ್ತಾರೆ. ನಮ್ಮದೇ ನಾಡಿನಲ್ಲಿ ತಬ್ಬಲಿತನ ಅನುಭವಿಸುತ್ತಿರುವ ಕನ್ನಡಿಗರಲ್ಲಿ ಆತ್ಮವಿಶ್ವಾಸ ಮೂಡಿಸುತ್ತಾರೆ. ಮರಾಠಿಗಳಲ್ಲಿರುವ ತಪ್ಪು ಕಲ್ಪನೆಗಳನ್ನು, ದ್ವೇಷವನ್ನು ಕಿತ್ತುಹಾಕಲು ಯತ್ನಿಸುತ್ತಾರೆ.
ಅಷ್ಟು ಮಾತ್ರವಲ್ಲ, ಕನ್ನಡಕ್ಕೆ, ಕನ್ನಡತನಕ್ಕೆ ಅನ್ಯಾಯವಾದಾಗ, ಅಪಮಾನವಾದಾಗ ಸ್ವಾಮೀಜಿ ಬೀದಿಗಿಳಿದು ಹೋರಾಡುತ್ತಾರೆ. (ಯಡಿಯೂರಪ್ಪ ಅವರ ಕುರ್ಚಿ ಉಳಿಸಲು ಬೀದಿಗಿಳಿದ ಸ್ವಾಮಿಗಳು ಕನ್ನಡಕ್ಕಾಗಿ ಒಮ್ಮೆಯೂ ಬೀದಿಗಿಳಿದಿದ್ದನ್ನು ನಾವು ನೋಡಿಲ್ಲ ಬಿಡಿ) ಕನ್ನಡಪರ ಸಂಘಟನೆಗಳಿಗೆ ಸ್ವಾಮೀಜಿಯೇ ಇಲ್ಲಿ ಸ್ಫೂರ್ತಿ. ಚಳವಳಿಗಳಿಗೆ ಅವರೇ ಮಾರ್ಗದರ್ಶಿ. ಚಳವಳಿ ಅತಿರೇಕಕ್ಕೆ ಹೋಗಬಾರದು ಎಂಬ ಎಚ್ಚರವೂ ಸ್ವಾಮೀಜಿಗಿದೆ. ಇಂಥ ಅತಿರೇಕಗಳು ಕನ್ನಡ-ಮರಾಠಿ ಜನರಲ್ಲಿ ಶಾಶ್ವತ ಕಂದರ ನಿರ್ಮಿಸಬಾರದು ಎಂಬುದು ಅವರ ಅಭಿಪ್ರಾಯ. ಹೀಗಾಗಿ ಅವರು ಅನುನಯದಿಂದಲೇ ಹೆಚ್ಚಿನದನ್ನು ಸಾಧಿಸಬಹುದು ಎಂದು ನಂಬಿದ್ದಾರೆ. ಆ ಮಾರ್ಗದಲ್ಲೇ ಸಾಕಷ್ಟು ಯಶಸ್ಸನ್ನು ಗಳಿಸಿದ್ದಾರೆ.
ಇತರೆಡೆಗಳಲ್ಲಿ ಮಠಪೀಠಗಳು ರಾಜ್ಯೋತ್ಸವ ಆಚರಿಸುವುದು ವಿರಳ. ಆದರೆ ಅಲ್ಲಮಪ್ರಭು ಮಠದಲ್ಲಿ ಪ್ರತಿವರ್ಷವೂ ಅದ್ದೂರಿ ರಾಜ್ಯೋತ್ಸವ ಜರುಗುತ್ತದೆ. ಸಾಧಕರಿಗೆ ಸನ್ಮಾನ ನಡೆಯುತ್ತದೆ. ಈ ವರ್ಷ ನವೆಂಬರ್ ೨ರಂದು ರಾಜ್ಯೋತ್ಸವ ನಡೆದಿದೆ. ನಾಡೋಜ ಪಾಟೀಲ ಪುಟ್ಟಪ್ಪ ಅವರನ್ನು ಕಾರ್ಯಕ್ರಮಕ್ಕೆ ಕರೆಸಲಾಗಿದೆ. ಈ ಕಾರ್ಯಕ್ರಮದಲ್ಲೇ ಕರವೀರ ನಿವಾಸಿ ಶ್ರೀ ಮಹಾಲಕ್ಷ್ಮಿ ಎಂಬ ಕೃತಿಯ ಲೋಕಾರ್ಪಣೆಯೂ ನಡೆದಿದೆ. ಮೂಲ ಕೃತಿ ಮರಾಠಿಯದ್ದು. ಅದನ್ನು ರಾಮಚಂದ್ರ ಮರಾಠೆ ಕನ್ನಡಕ್ಕೆ ಅನುವಾದಿಸಿದ್ದಾರೆ.
ಈ ಕೃತಿಯ ಕುರಿತು ಮಾತನಾಡುತ್ತ ಸ್ವಾಮೀಜಿ ಮರಾಠಿ ಜನರು ಆರಾಧಿಸುವ ಪಂಚದೇವತೆಗಳ ಬಗ್ಗೆ ಹೇಳುತ್ತ ಹೋದರು. ಖಂಡೋಬ, ಜಿಜೋಬ, ಕೊಲ್ಲಾಪುರ ಲಕ್ಷ್ಮಿ, ತುಳಜಾ ಭವಾನಿ ಮತ್ತು ಪಂಡರಾಪುರ ವಿಠಲ ಈ ಎಲ್ಲ ಐದು ದೇವತೆಗಳೂ ಅಪ್ಪಟ ಕನ್ನಡದ ದೇವತೆಗಳು ಎಂದು ಹೇಳಿ ನಕ್ಕರು ಸ್ವಾಮೀಜಿ. ( ಈ ಕುರಿತ ವಿಸ್ತ್ರತ ಲೇಖನ ಕರವೇ ನಲ್ನುಡಿಯ ಮೇ ಸಂಚಿಕೆಯಲ್ಲಿ ಪ್ರಕಟಗೊಂಡಿದೆ ಲೇಖಕರು ಪ್ರೊ. ಸಂಗನಾಳಮಠ ಯು.ಎನ್.)
ಕನ್ನಡ ಮತ್ತು ಮರಾಠಿ ಸಂಸ್ಕೃತಿಗಳ ಕೊಡು-ಕೊಳ್ಳುವಿಕೆ, ಒಂದರೊಳಗೆ ಒಂದಾಗಿ ಇರುವ ರೀತಿಯ ಕುರಿತು ಸ್ವಾಮೀಜಿಗೆ ಸ್ಪಷ್ಟ ಚಿತ್ರಣವಿದೆ. ಹೀಗಾಗಿಯೇ ಅಕ್ಷರ ಮಾಧ್ಯಮದ ಮೂಲಕ ಜನರನ್ನು ಒಂದುಗೂಡಿಸಲು ಅವರು ಯತ್ನಿಸುತ್ತಿದ್ದಾರೆ.
‘ಭಾಷೆ ದೇವರುಗಳಿಂತ ಪವರ್‌ಫುಲ್ ನೋಡ್ರೀ, ಭಾಷೆಯ ಹೆಸರಲ್ಲಿ ಜನರು ಬೇಗ ಒಂದಾಗುತ್ತಾರೆ, ಬೇಗ ಕೆರಳುತ್ತಾರೆ. ಹುಡುಗರಿಲ್ಲಾಂದ್ರೂ ಮರಾಠಿ ಶಾಲೆಗಳಿಗೆ ಮೇಷ್ಟ್ರುಗಳನ್ನು ನಮ್ಮ ಜನಪ್ರತಿನಿಧಿಗಳೇ ತಂದು ಹಾಕಿಸ್ತಾರೆ. ಆದರೆ ಕನ್ನಡ ಶಾಲೆಗಳನ್ನು ಕೇಳುವವರೇ ಇಲ್ಲ.’ ಎಂದು ಸ್ವಾಮೀಜಿ ಗಡಿಭಾಗದ ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಡಿಸಿಡತೊಡಗಿದರು.
‘ಶಾಲೆಯೊಂದರಲ್ಲಿ ಕನ್ನಡ ಸಾಹಿತಿಗಳ ಬಗ್ಗೆ ಭಾಷಣ ಸ್ಪರ್ಧೆ ಏರ್ಪಡಿಸಿದ್ದೆವು. ಬೇಂದ್ರೆ ಬಗ್ಗೆ ಭಾಷಣ ಮಾಡಿದ ಹುಡುಗ ಮೊದಲ ಬಹುಮಾನ ಪಡೆದ. ಆದರೆ ದುರಂತವೆಂದರೆ ಆತನಿಗೆ ಕನ್ನಡದಲ್ಲಿ ಬರೆಯಲು ಬರುವುದಿಲ್ಲ. ಯಾಕೆಂದರೆ ಆತ ಅನಿವಾರ್ಯವಾಗಿ ಓದುತ್ತಾ ಇರುವುದು ಮರಾಠಿ ಶಾಲೆಯಲ್ಲಿ. ಆದರೂ ಅವನಿಗೆ ಕನ್ನಡ ಅಭಿಮಾನ. ಹೀಗಾಗಿ ಮರಾಠಿಯಲ್ಲಿ ಬರೆದುಕೊಂಡುಬಂದು ಕನ್ನಡದಲ್ಲಿ ಭಾಷಣ ಮಾಡಿದ’ ಎಂದು ಮನಸ್ಸಿಗೆ ಕಸಿವಿಸಿಯಾಗುವ ಘಟನೆಯೊಂದನ್ನು ವರ್ಣಿಸಿದರು.
‘ಇಲ್ಲಿ ಕನ್ನಡ. ಮರಾಠಿ ಜನರ ನಡುವೆ ದ್ವೇಷವೇನೂ ಇಲ್ಲ. ಆದರೆ ರಾಜಕೀಯ ಸ್ವಾರ್ಥಕ್ಕಾಗಿ ದ್ವೇಷದ ಬೆಂಕಿಯನ್ನು ಹಚ್ಚಲಾಗುತ್ತದೆ. ಇದರ ಪರಿಣಾಮ ಒಟ್ಟು ಸಮಾಜದ ಮೇಲಾಗುತ್ತದೆ ಎಂಬ ಗಂಭೀರ ಅಪಾಯವೂ ಬೆಂಕಿ ಹಚ್ಚುವ ಜನರಿಗೆ ಗೊತ್ತಾಗೋದಿಲ್ಲ.’
‘ಗಡಿಯಿಂದ ಆಚೆ ಎಲ್ಲವೂ ಮರಾಠಿಮಯವಾಗಿದೆ. ಅಲ್ಲಿನ ಕನ್ನಡಿಗರನ್ನೂ ಮರಾಠೀಕರಣಗೊಳಿಸಲಾಗಿದೆ. ಅಪ್ಪಟ ಕನ್ನಡದ ಹಳ್ಳಿಗಳಲ್ಲಿ ಈಗ ಕನ್ನಡದ ಶಾಲೆಗಳೇ ಇಲ್ಲ. ಕನ್ನಡದ ಕಂದಮ್ಮಗಳಿಗೆ ಕನ್ನಡದ ಪರಿಚಯವೇ ಇಲ್ಲದಂತೆ ಮಾಡಲಾಗಿದೆ. ಆದರೆ ಇಲ್ಲಿ ಅದರ ತದ್ವಿರುದ್ಧ ಸ್ಥಿತಿಯಿದೆ’
‘ಸರ್ಕಾರ ಮೊದಲು ಇಲ್ಲಿ ಅತ್ಯುತ್ತಮ ವಸತಿ ಶಾಲೆಗಳನ್ನು ತೆರೆಯಬೇಕು. ಕನಿಷ್ಠ ತಾಲ್ಲೂಕಿಗೊಂದರಂತೆಯಾದರೂ ಈ ಶಾಲೆಗಳು ಆರಂಭಗೊಳ್ಳಬೇಕು. ಶಾಲೆಯೊಳಗೆ ಕಾಲಿಡುತ್ತಿದ್ದಂತೆ ಮಕ್ಕಳಿಗೆ ರಾಣಿ ಚನ್ನಮ್ಮ, ಬಸವಣ್ಣ, ಕುವೆಂಪು, ಬೇಂದ್ರೆಯವರ ಪರಿಚಯವಾಗಬೇಕು. ಹಾಗಾದಾಗ ಮಾತ್ರ ಕನ್ನಡೀಕರಣವಾಗೋದು ಸಾಧ್ಯ. ಇಲ್ಲವಾದಲ್ಲಿ ಮಾಸ್ತರುಗಳಿಲ್ಲದ ಕನ್ನಡ ಶಾಲೆಗಳಲ್ಲಿ ಕನ್ನಡದ ಮಕ್ಕಳು ಏನನ್ನು ಕಲಿಯುತ್ತಾರೆ?
‘ಈಗೀಗ ನಿಧಾನವಾಗಿ ಪರಿಸ್ಥಿತಿ ತಿಳಿಯಾಗುತ್ತಿದೆ. ಮರಾಠಿಯಲ್ಲಿ ಮದುವೆ ಮುಂಜಿ ಇತ್ಯಾದಿಗಳ ಆಮಂತ್ರಣ ಪತ್ರಿಕೆ ಹೊರಡಿಸುವವರಿಗೆ ನಾನು ಹಲವು ವಿಧಾನಗಳ ಮೂಲಕ ತಿಳಿಹೇಳಿ ಮರಾಠಿಯ ಜತೆಯಲ್ಲಿ ಕನ್ನಡದಲ್ಲೂ ಮುದ್ರಣ ಮಾಡುವಂತೆ ಮನವೊಲಿಸಿದ್ದೇನೆ. ಹಲವರು ಈಗೀಗ ಎರಡೂ ಭಾಷೆಗಳನ್ನು ಬಳಸುತ್ತಿದ್ದಾರೆ. ಹಲವೆಡೆ ಮರಾಠಿ ಹುಡುಗರೇ ಕನ್ನಡ ಸಂಘಟನೆಗಳಲ್ಲಿ ಕೆಲಸ ಮಾಡುವಂತಾಗಿದೆ. ಇದು ಹೀಗೇ ಮುಂದುವರೆಯಬೇಕು.’
‘ಸಾಹಿತ್ಯ ಸಮ್ಮೇಳನಗಳು, ಸರ್ಕಾರ ನಡೆಸುವ ವಿವಿಧ ಸಾಂಸ್ಕೃತಿಕ ಸಮಾವೇಶಗಳನ್ನು ಹೆಚ್ಚು ಹೆಚ್ಚು ಗಡಿಭಾಗದಲ್ಲೇ ಮಾಡಬೇಕು. ತನ್ಮೂಲಕ ಇಲ್ಲಿ ಕನ್ನಡದ ವಾತಾವರಣ ನಿರ್ಮಾಣವಾಗುವಂತೆ ಮಾಡಬೇಕು.’
‘ಕನ್ನಡ ಸಂಸ್ಕೃತಿ ಮರಾಠಿ ಭಾಷೆಗೆ, ಸಂಸ್ಕೃತಿಗೆ ನೀಡಿದ ಕೊಡುಗೆ ಅಪಾರವಾದದ್ದು. ಕನ್ನಡವನ್ನು ಹೊರತುಪಡಿಸಿ ಮರಾಠಿ ಸಂಸ್ಕೃತಿಗೆ ಅಸ್ಮಿತೆಯೇ ಇಲ್ಲ. ಇದನ್ನು ದೌರ್ಜನ್ಯಕ್ಕೆ ಇಳಿಯುವ ಮರಾಠಿಗರಿಗೆ ಮನವರಿಕೆ ಮಾಡುವ ಕೆಲಸವನ್ನು ಎಲ್ಲರೂ ಕೂಡಿ ಮಾಡಬೇಕು. ಇತಿಹಾಸದ ಅರಿವು ಅವರಿಗೆ ಮೂಡಿದರೆ ತನ್ನಿಂತಾನೇ ಸಮಸ್ಯೆಗಳು ಬಗೆಹರಿಯುತ್ತದೆ.’
ಹೀಗೆ ಸ್ವಾಮೀಜಿಯವರ ಚಿಂತನೆಗಳು ಒಂದೊಂದಾಗಿ ಹರಿಯುತ್ತಿದ್ದವು.
ಬನ್ನಿ, ಇಲ್ಲೊಂದು ಕನ್ನಡ ಭವನ ಕಟ್ಟಿದ್ದೇನೆ ಎಂದು ಸ್ವಾಮೀಜಿ ಮಠದ ಪಕ್ಕದ ಕಟ್ಟಡಕ್ಕೆ ಕರೆದೊಯ್ದರು. ಅಲ್ಲಿ ಕನ್ನಡದ್ದೇ ಕಲರವ. ಕನ್ನಡದ್ದೇ ಪೂಜೆ. (ಚಿತ್ರಗಳನ್ನು ಗಮನಿಸಿ) ‘ನೋಡಿ, ನಿಮ್ಮ ರಕ್ಷಣಾ ವೇದಿಕೆಯ ಘೋಷಣೆಗಳನ್ನೂ ಬರೆಸಿದ್ದೇನೆ ಎಂದು ಸ್ವಾಮೀಜಿ ತೋರಿಸಿದರು. ದಾರಿಯಲ್ಲಿ ಹೋಗೋ ಶಾಲೆ ಮಕ್ಕಳು ದಿನವೂ ಇದನ್ನು ನೋಡುತ್ತಾರೆ. ಈ ಘೋಷಣೆಗಳನ್ನು ಓದುತ್ತಾರೆ. ಅವು ಆ ಮಕ್ಕಳ ಎದೆಗಳಲ್ಲಿ ಇಳಿಯಲಿ ಎಂಬುದು ನನ್ನ ಉದ್ದೇಶ’ ಎಂದು ಅವರು ಹೇಳುವಾಗ ಅವರ ಕಣ್ಣುಗಳಲ್ಲಿ ವಿಶ್ವಾಸದ ಬೆಳಕು.
ಸ್ವಾಮೀಜಿ ಹಲವು ಮನೆಬಳಕೆಯ ಅಪರೂಪದ ವಸ್ತುಗಳನ್ನು ಸಂಗ್ರಹಿಸಿದ್ದಾರೆ. ಅವುಗಳಿಗಾಗಿ ಒಂದು ಮ್ಯೂಸಿಯಂ ಮಾಡುವ ಉದ್ದೇಶವೂ ಅವರಿಗಿದೆ. ಇತ್ತೀಚಿಗೆ ಒಂದು ಭುವನೇಶ್ವರಿಯ ವಿಗ್ರಹವೊಂದನ್ನು ಮಾಡಿಸಿದ್ದಾರೆ. ಅದನ್ನು ತಾವು ಕುಳಿತುಕೊಳ್ಳುವ ಪೀಠದ ಪಕ್ಕದಲ್ಲೇ ಇಟ್ಟುಕೊಂಡಿದ್ದಾರೆ.
ಚಿಕ್ಕೋಡಿಯ ಗಡಿಯ ಹಳ್ಳಿಗಳಾದ ಚಾಂದ ಶಿರದವಾಡ, ಜನವಾಡ, ಬೋರಗಾವ, ಕುನ್ನೂರು, ಕಾರದಗಾ, ಕಾಣಕಾಪೂರ, ಮಾಂಗೂರು, ಕಸನಾಳ ಇತ್ಯಾದಿ ಹಳ್ಳಿಗಳು ಮರಾಠಿ ಪ್ರಾಬಲ್ಯ ಹೊಂದಿವೆ. ಇಲ್ಲೆಲ್ಲ ಸ್ವಾಮೀಜಿ ಅಡ್ಡಾಡಿ ಪರಿಸ್ಥಿತಿಯನ್ನು ಬದಲಿಸಿದ್ದಾರೆ. ಕನ್ನಡದ ಕೆಚ್ಚನ್ನು ಬೆಳೆಸಿದ್ದಾರೆ. ಚಿಕ್ಕೋಡಿ ಮಾತ್ರವಲ್ಲ, ನಿಪ್ಪಾಣಿಯಲ್ಲೂ ಸಾಕಷ್ಟು ಬದಲಾವಣೆ ತಂದಿದ್ದಾರೆ. ನಿಪ್ಪಾಣಿಯಲ್ಲಿ ಈ ಬಾರಿ ರಾಜ್ಯೋತ್ಸವವೂ ಅದ್ದೂರಿಯಾಗಿ ನಡೆದಿದೆ. ಅದರ ನೇತೃತ್ವವನ್ನೂ ಸ್ವಾಮೀಜಿಯವರೇ ವಹಿಸಿಕೊಂಡಿದ್ದಾರೆ.
ಅಲ್ಲಮಪ್ರಭು ಜನಕಲ್ಯಾಣ ಸಂಸ್ಥೆಯ ಮೂಲಕ ಚಿಕ್ಕೋಡಿಯಲ್ಲಿ ಕೈಗಾರಿಕಾ ತರಬೇತಿ ಕೇಂದ್ರವನ್ನು ಆರಂಭಿಸಿ, ನೂರಾರು ಮಕ್ಕಳು ವೃತ್ತಿಪರ ಶಿಕ್ಷಣ ಪಡೆದುಕೊಂಡು ಸ್ವಾವಲಂಬನೆಯ ಬದುಕು ನಡೆಸಲು ದಾರಿ ಮಾಡಿಕೊಟ್ಟಿದ್ದಾರೆ. ಮಠದಲ್ಲಿಯೇ ಬಾಳಬುತ್ತಿ ಎಂಬ ಕಲಿಕಾ ಕೇಂದ್ರವನ್ನು ತೆರೆದಿದ್ದಾರೆ. ಶಾಲೆ ಮುಗಿದ ನಂತರ ಮಕ್ಕಳು ಇಲ್ಲಿ ಬಂದು ಇನ್ನಷ್ಟು ಕಲಿಯುತ್ತಾರೆ. ಮುಸ್ಲಿಂ ಸಮುದಾಯದ ನಿವೃತ್ತ ಶಿಕ್ಷಕರೊಬ್ಬರು ಈ ಮಕ್ಕಳಿಗೆ ಕಲಿಸುವ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತ ಬಂದಿದ್ದಾರೆ. ನಾನು ಸೂಕ್ಷ್ಮವಾಗಿ ಗಮನಿಸಿದ್ದು, ಗುರುತಿಸಿದ್ದು ಸ್ವಾಮೀಜಿಯವರ ಬದ್ಧತೆ ಮತ್ತು ಕ್ರಿಯಾಶೀಲತೆಯನ್ನು. ಈ ಬದ್ಧತೆಗೆ ಸೈದ್ಧಾಂತಿಕ ತಳಹದಿಯೂ ಇದೆ. ತಾವು ಏನನ್ನು ಪ್ರತಿಪಾದಿಸುತ್ತಿದ್ದಾರೋ ಅದರ ಕುರಿತು ಅವರಿಗೆ ಸ್ಪಷ್ಟ ಕಲ್ಪನೆಯಿದೆ, ಅದಕ್ಕೆ ತಕ್ಕ ಅಧ್ಯಯನವೂ ಅವರಿಗಿದೆ. ಇದೆಲ್ಲವನ್ನೂ ಪ್ರಚಾರದ ಗೀಳಿಲ್ಲದೆ ಮಾಡುವ ಸ್ವಾರ್ಥ ಮನೋಭಾವವೂ ಅವರಿಗಿದೆ. ಅಲ್ಲಮಪ್ರಭು ಸ್ವಾಮೀಜಿಗಳೇ ಇಲ್ಲಿ ಏಕಕಾಲಕ್ಕೆ ಸರ್ಕಾರ ಮತ್ತು ಅದರ ಅವಯವಗಳು ನಡೆಸುವ ಕೆಲಸಗಳನ್ನು ಮಾಡುತ್ತಿದ್ದಾರೆ, ಕನ್ನಡಪರ ಸಂಘಟನೆಗಳು ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.
ಕಳೆದ ನವೆಂಬರ್ ೨ರಂದು ಮಠದಲ್ಲಿ ಏರ್ಪಡಿಸಲಾಗಿದ್ದ ಕರ್ನಾಟಕ ರಾಜ್ಯೋತ್ಸವದಲ್ಲಿ ಭಾಗವಹಿಸಿದ್ದ ಪಾಟೀಲ ಪುಟ್ಟಪ್ಪನವರು ಈ ಸಂಸ್ಥೆಗೆ ಸರ್ಕಾರ ವಾರ್ಷಿಕ ೨೫ ಕೋಟಿ ರೂ. ಅನುದಾನ ನೀಡಬೇಕು ಎಂದು ಆಗ್ರಹಿಸಿದ್ದರು. ಆದರೆ ಸರ್ಕಾರ ಇಂಥ ಮಠಗಳಿಗೆ ಹಣ ನೀಡುತ್ತದೆಯೇ? ಅದು ಹಣ ನೀಡುವುದು ಸಮುದಾಯದ ಮತಗಳನ್ನು ಕೊಡಿಸುವ, ಆಪತ್ತು ಬಂದಾಗ ಕುರ್ಚಿ ಉಳಿಸುವ, ಹಗರಣಗಳನ್ನು ಮಾಡಿಕೊಂಡಾಗ ಬೀದಿಗಿಳಿದು ಸಮರ್ಥನೆ ಮಾಡಿಕೊಳ್ಳುವ ಸ್ವಾಮಿಗಳಿಗಲ್ಲವೇ?
ಹೊರಡುವಾಗ ಸ್ವಾಮೀಜಿ ನನಗೆ ಹೇಳಿದ್ದು: ‘ನನ್ನ ಬಗ್ಗೆ ಏನು ಬರೆಯೋದು ಬ್ಯಾಡ್ರಿ. ಈ ದಾಖಲೆಗಳು ಇವೆಯಲ್ಲ, ಇವು ಬಹಳ ಮುಖ್ಯವಾದವು. ಅವುಗಳ ಬಗ್ಗೆ ಬರೀರಿ’ ಎಂದು.
ಅಲ್ಲಮಪ್ರಭು ಸ್ವಾಮೀಜಿಗಳಿಗೆ ವಂದಿಸಿ ಹೊರಟಾಗ ರಾತ್ರಿಯಾಗಿತ್ತು. ಪ್ರಸಾದ ತಗೊಂಡು ಹೋಗ್ರೀ ಎಂದರು. ಪ್ರಸಾದ ತೆಗೆದುಕೊಂಡು ಹುಬ್ಬಳ್ಳಿಯ ಹಾದಿ ಹಿಡಿದೆವು.
ಹುಬ್ಬಳ್ಳಿಯಲ್ಲಿ ೨೪ರಂದು ಕಥಾಸ್ಪರ್ಧೆ ವಿಜೇತರಿಗೆ ಬಹುಮಾನ, ಸತ್ಕಾರ. ಅದೊಂದು ಹಬ್ಬ. ಹದಿನಾಲ್ಕು ಮಂದಿಯ ಪೈಕಿ ಮೂವರು ಅನಿವಾರ್ಯ ಕಾರಣಗಳಿಂದ ಬರಲು ಸಾಧ್ಯವಾಗಿರಲಿಲ್ಲ. ಉಳಿದ ಹನ್ನೊಂದು ಮಂದಿಯೂ ಬಂದರು. ಎಲ್ಲರನ್ನೂ ನಮ್ಮ ಬಳಗ ಮೊದಲ ಬಾರಿ ನೋಡಿದ್ದು. ಎಲ್ಲರೂ ಹೊಸದಾಗಿ ಪರಿಚಯವಾದವರು. ಕನ್ನಡದ ಸಮರ್ಥ ಉದಯೋನ್ಮುಖ ಕಥೆಗಾರರನ್ನು ಒಟ್ಟೊಟ್ಟಿಗೆ ನೋಡುವುದೇ ಒಂದು ಸಂಭ್ರಮ. ನಮ್ಮ ಕಥಾಸ್ಪರ್ಧೆ ಸಾರ್ಥಕತೆ ಪಡೆದ ಅನುಭೂತಿ ನಮ್ಮದು. ಆ ಕುರಿತು ಇನ್ನೊಮ್ಮೆ ಬರೆದೇನು.
ಕಾರ್ಯಕ್ರಮದ ನಡುವೆಯೂ ಅಲ್ಲಮಪ್ರಭು ಸ್ವಾಮೀಜಿ ಹೇಳಿದ್ದ ಒಂದು ಮಾತು ಮತ್ತೆ ಮತ್ತೆ ನೆನಪಾಗುತ್ತಿತ್ತು: ಸೀರೆಗೆ ಅದರ ಧಡಿ ಹೇಗೆ ಮುಖ್ಯವೋ ಹಾಗೆ ಒಂದು ರಾಜ್ಯಕ್ಕೆ ಅದರ ಗಡಿ ಪ್ರದೇಶವೂ ಮುಖ್ಯವಾಗಬೇಕು. ಗಡಿ ಧೋತರದ ಧಡಿ ಇದ್ದಂಗ!
ಈ ಮಾತು ನಮ್ಮನ್ನು ಆಳುವ ಮಹಾನುಭಾವರಿಗೆ ಅರ್ಥವಾದೀತೇ? ಅರ್ಥವಾದರೂ ಎಂದು ಅರ್ಥವಾದೀತು? ಅರ್ಥವಾಗುವ ಹೊತ್ತಿಗೆ ಗಡಿಯ ಜನರ ಬದುಕು ಸರ್ವನಾಶವಾಗಬಾರದು ಅಲ್ಲವೇ?

Wednesday, December 8, 2010

ನಾನು ಕಂಡ ತೇಜಸ್ವಿ...




ಪೂರ್ಣಚಂದ್ರ ತೇಜಸ್ವಿಯವರ ಮಾಯಾಲೋಕದ ಅನಾವರಣ ಅವರ ಮೊದಲ ಬರಹಗಳೊಂದಿಗೆ ಪ್ರಾರಂಭವಾಗುತ್ತವೆ ಮಲೆನಾಡಿನ ಜನರಿಗೆ ವಿಶಿಷ್ಟವಾದ ಹಾಸ್ಯಪ್ರಜ್ಞೆಯೊಂದಿಗೆ ಇಲ್ಲಿನ ಪಾತ್ರಗಳೆಲ್ಲ ತಮ್ಮೆಲ್ಲ ನೋವು ನಲಿವು, ಸುಖ-ದುಃಖ, ಕೋಪ-ತಾಪಗಳನ್ನು ಹಂಚಿಕೊಳ್ಳುತ್ತವೆ. ತೇಜಸ್ವಿಯವರ ಒಟ್ಟೂ ಕಥಾಲೋಕವನ್ನು, ಅವರ ವ್ಯಕ್ತಿತ್ವದ ಭಾಗವಾಗಿಯೇ ನೋಡುವ ಮಲೆನಾಡಿಗನಾಗಿ ಅವರನ್ನಿಲ್ಲಿ ನೋಡಿದ್ದೇನೆ.
ಅವರ ಕಥೆ ಕಾದಂಬರಿಗಳಲ್ಲೆಲ್ಲ ಬರುವ ಪಾತ್ರಗಳೆಲ್ಲ ನಮ್ಮ ನಡುವೆ ಓಡಾಡುತ್ತಿರುವವರೇ. ಇಲ್ಲಿ ಬರುವ, ಕರಿಯಪ್ಪ, ಬೋಬಣ್ಣ, ಶಾಂತಕುಮಾರ್, ಖಾಸಿಂಸಾಬಿ, ಬಿ.ಎಸ್.ಪಿ. ಹುಡುಗರುಗಳಾಗಲೀ, ಗಾರೆಯವ, ಹಾವುಗೊಲ್ಲರ ಎಂಕ್ಟ, ಚೀಂಕ್ರಮೇಸ್ತ್ರಿಗಳಾಗಲೀ ಇವರೆಲ್ಲರನ್ನೂ ಅವರು ಯಥಾವತ್ತಾಗಿ ನಿಜವ್ಯಕ್ತಿಗಳಾಗಿ ಚಿತ್ರಿಸಿದ್ದಾರೆಂದು ಅರ್ಥವಲ್ಲ. ಅಲ್ಲಿ ಬರುವ ಪಾತ್ರಗಳೆಲ್ಲವೂ ಈ ಜೀವಂತ ವ್ಯಕ್ತಿಗಳನ್ನು ಹೋಲುತ್ತವಷ್ಟೆ. ತೇಜಸ್ವಿಯವರ ಕಥಾಲೋಕದಲ್ಲಿ ಅವರೆಲ್ಲ ಇನ್ನೊಂದು ಆಯಾಮವನ್ನು ಪಡೆದುಕೊಂಡಿದ್ದಾರೆ.
ತೇಜಸ್ವಿಯವರ ಬರಹಗಳು ಅರೆನಗರ ಜೀವನ (ಮೊಫುಸಿಲ್) ಸಂವೇದನೆಗಳನ್ನು ಹೊಂದಿರುವಂತದ್ದಾಗಿದೆಯೆಂದು, ಯು.ಆರ್. ಅನಂತಮೂರ್ತಿವರು ಹೇಳಿದ್ದಾರೆ. ಆದರೆ ಅವರ ಎಲ್ಲ ಬರಹಗಳೂ ಈಗ ಜಾಗತೀಕರಣದ ಪರಿಣಾಮವಾಗಿ ಗ್ರಾಮಾಂತರದ ಎಲ್ಲ ಪ್ರದೇಶಗಳೂ ಕೂಡಾ ಅರೆನಗರ ಪ್ರದೇಶಗಳಾಗಿ ಪರಿವರ್ತಿತವಾಗುತ್ತಿರುವ ಸಂದರ್ಭದ ಕಥಾನಕವೂ ಆಗಿವೆ. ಇಷ್ಟೆಲ್ಲ ಯಾಂತ್ರೀಕರಣದ ನಡುವೆಯೂ ಮೊಬೈಲ್ ಫೋನ್ ಹಿಡಿದು ತಿರುಗುವ, ಬಸವನಕುಣಿಸುವವರು, ರಸ್ತೆಬದಿಯ ಬುಟ್ಟಿಹೆಣೆಯುವವರು ಮುಂತಾದವರಂತೆ, ಇದ್ದಕ್ಕಿದ್ದಂತೆ ರಾತ್ರಿಹೊತ್ತು ಊರಿಗೆಬಂದು ಶಕುನನುಡಿಯವ ಸುಡುಗಾಡುಸಿದ್ಧರಂತೆ. ಅಪರೂಪಕ್ಕೊಮ್ಮೆ ಕಾಣಸಿಗುವ ಗುಬ್ಬಚ್ಚಿ- ನೀರುನಾಯಿಗಳಂತೆ ’ಮಾಯವಾಗದೆ ಉಳಿದುಕೊಂಡಿರುವ ಮಾಯಾಲೋಕದ’ ಕಥಾನಕವೂ ಹೌದು.
ತೇಜಸ್ವಿಯವರ ಸಾಹಿತ್ಯದ ಬಗ್ಗೆ ಇತರರು ಹೇಳಿದಂತೆ ಅಥವಾ ಅವರೇ ಅವರ ಬರಹಗಳಲ್ಲಿ ಉಲ್ಲೇಖಿಸಿರುವ ಹಾಗೆ ಅವರದೊಂದು ವಿಸ್ಮಯದ ಲೋಕ. ನಾವು ಈ ’ವಿಸ್ಮಯ’ ಎಂಬ ಪದವನ್ನು ಭಾರತೀಯ ಸಾಹಿತ್ಯದಲ್ಲಿ ಮುಖ್ಯವಾಗಿ ಬಳಸುವುದು ಮಹಾಭಾರತದ ಬಗ್ಗೆ, ಮಹಾಭಾರತದ ಕಥಾಲೋಕವೂ ವಿಸ್ಮಯದ್ದೇ. ಆ ಬೆರಗಿನ ಲೋಕದೊಳಗೆ ಸೇರಿಕೊಂಡಿರುವ ಉಪಕಥೆಗಳನ್ನಂತೂ ಯಾರು, ಯಾವಾಗ, ಎಲ್ಲಿ, ಮತ್ತು ಹೇಗೆ ಸೇರಿಸಿದರು-ಪ್ರಕ್ಷೇಪಿಸಿದರು ಎನ್ನುವುದೇ ಅಮುಖ್ಯವಾಗುವ ಹಾಗೆ, ಬೆರೆತು. ಮರೆತುಹೋಗುವ ಹಾಗೆ ಸೇರಿಕೊಂಡಿವೆ.
ತೇಜಸ್ವಿಯವರ ಕಥಾಲೋಕಕ್ಕೆ ಎಷ್ಟು ಪಾತ್ರಗಳನ್ನಾದರೂ ಸೇರಿಸಬಹುದು-ಅವರ ವ್ಯಕ್ತಿತ್ವದ ಸುತ್ತ ಆವರಿಸಿಕೊಂಡಿರುವ ಕಥಾಲೋಕಕ್ಕೆ (ಅವರು ಜಲ್ಲಿಗುಡ್ಡೆ ಹತ್ತಿನಿಂತದ್ದು, ಸ್ಕೂಟರಿನ ಹಿಂಬದಿ ಸೀಟನ್ನು ಕಳಚಿಟ್ಟದ್ದು, ಅವರು ಫೋಟೋ ತೆಗೆಯಲೆಂದು ಅಡಗಿ ಕುಳಿತಿದ್ದಲ್ಲಿಗೇ ಬಂದು ಕರೆದವನನ್ನು, ಕೋಲು ಹಿಡಿದು ಅಟ್ಟಾಡಿಸಿದ್ದು ಹೀಗೇ) ಎಷ್ಟು ಉಪಕಥೆಗಳನ್ನಾದರೂ ಸೇರಿಸಬಹುದು, ಯಾವುದನ್ನಾದರೂ ಪ್ರಕ್ಷೇಪಿಸಬಹುದು. ಇದಾವುದರಿಂದಲೂ ಅವರ ಮಾಯಾಲೋಕ ಬದಲಾಗದು.
’ಮುಖ್ಯರ ಮಹಾಭಾರತ ತೆರೆದಿಡುವ ವಿಸ್ಮಯದ ಲೋಕವೊಂದಾದರೆ. ತೇಜಸ್ವಿಯವರು ತೆರೆದಿಟ್ಟಿರುವ ಅಮುಖ್ಯರಾಗಿಯೂ- ಅಮುಖ್ಯರಲ್ಲದವರ ಈ ಆಧುನಿಕ ಭಾರತ ಕಥಾಲೋಕದ ಕೆಲವು ಪಾತ್ರಗಳ ಮೂಲಕವೇ ಅವರನ್ನು ನೋಡಲು ಇಲ್ಲಿ ಪ್ರಯತ್ನಿಸಿದ್ದೇನೆ.
ಕೆ.ವಿ.ಸುಬ್ಬಣ್ಣನವರು ಕುವೆಂಪುರವರ ಬಗ್ಗೆ ಹೇಳುತ್ತಾ ’ಅವರ ಸಾಹಿತ್ಯಕ್ಕಿಂತ ಹೆಚ್ಚಾಗಿ ನಾವರಿಯದ ಒಂದು ಅಗೋಚರ ಸ್ಥರದಲ್ಲಿ ಅವರು, ಇಡೀ ಕರ್ನಾಟಕದ ಸಮಸ್ತ ಜನರರೊಂದಿಗೆ ಸಂವಾದಿಸುತ್ತಾ ಸಾಹಿತ್ಯವನ್ನೇ ಓದದವರ ಮೇಲೂ ಅತ್ಯಂತ ಸೂಕ್ಷವಾದ ಪ್ರಭಾವ ಬೀರಿ ಅವರನ್ನು ರೂಪಿಸುತ್ತಿದ್ದರು’ಎಂದಿದ್ದಾರೆ.
ತೇಜಸ್ವಿಯವರು ಕಥೆಗಾರರಾಗಿ ನೀಡಿದ ಮಾಯಾಲೋಕಕ್ಕಿಂತಲೂ, ವ್ಯಕ್ತಿಯಾಗಿ ನಿರ್ಮಿಸಿದ ಯಾರೂ ಅಮುಖ್ಯರಲ್ಲದ ಮಾಯಾಲೋಕ ಹಿರಿದಾದದ್ದು ಎಂದು ನನ್ನ ಅನಿಸಿಕೆ.
ತೇಜಸ್ವಿಯವರಿಂದು ನಮ್ಮೊಡನಿಲ್ಲ. ಎಪ್ಪತ್ತು ವರ್ಷ ಅಂಥ ವಯಸ್ಸೂ ಅಲ್ಲ. ತೇಜಸ್ವಿ, ಕೆ.ವಿ.ಸುಬ್ಬಣ್ಣ, ಲಂಕೇಶ್ ಅಂಥವರಿದ್ದಾಗ ನಮ್ಮ ಸುತ್ತಲಿನ ಆಗುಹೋಗುಗಳಿಗೆ ಅವರು ಪ್ರತಿಕ್ರಿಯಿಸುತ್ತಿದ್ದ ರೀತಿಯೇ ಅರೋಗ್ಯಪೂರ್ಣ ಮನಸ್ಸುಗಳು ಯೋಚಿಸಬೇಕಾದ ದಿಕ್ಕನ್ನು ಸೂಚಿಸುವಂತಿರುತ್ತಿತ್ತು. ಈಗ ಆ ಜವಾಬ್ದಾರಿಯನ್ನು ನಮಗೆ ನಾವೇ ವಹಿಸಿಕೊಳ್ಳಬೇಕಾಗಿದೆ.
ನಮ್ಮ ನಡುವಿನ ತೇಜಸ್ವಿ
ಎಪ್ಪತ್ತರ ದಶಕದ ಪ್ರಾರಂಭದ ವರ್ಷಗಳು, ನಾನು ಪಿ.ಯು. ವಿದ್ಯಾರ್ಥಿಯಾಗಿದ್ದೆ. ರಜೆಯಲ್ಲಿ, ನಮ್ಮೂರು ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಬೆಳ್ಳೇಕೆರೆಯಿಂದ, ದಕ್ಷಿಣಕನ್ನಡ ಜಿಲ್ಲೆಯ ಸುಳ್ಯದ ಸಮೀಪದಲ್ಲಿರುವ ಬಂಧುಗಳ ಮನೆಗೆ ಹೋದವನು, ಸುಳ್ಯದ ಬಸ್ ನಿಲ್ದಾಣದಲ್ಲಿ ಸುಬ್ರಹ್ಮಣ್ಯದತ್ತ ಹೋಗುವ ಬಸ್ಸಿಗಾಗಿ ಕಾಯುತ್ತ ನಿಂತಿದ್ದೆ. ನಿಲ್ದಾಣದಲ್ಲಿ ಒಬ್ಬರು ವ್ಯಕ್ತಿ ನನ್ನ ಗಮನ ಸೆಳೆದರು. ಕಪ್ಪು ಬಣ್ಣದ ಮೂಲಂಗಿ ಪ್ಯಾಂಟು, ಬಿಳಿ ಬಣ್ಣದ ಚೌಕುಳಿಗಳಿದ್ದ ಅಂಗಿ, ಮೀಸೆಯನ್ನು ಸೇರಿದಂತೆ ಬಾಯಿಯನ್ನು ಸುತ್ತುವರಿದ ಉರುಟಾದ ಗಡ್ಡ, ಕೈಯಲ್ಲೊಂದು ವಿಚಿತ್ರ ಆಕಾರದ ಚೀಲ. ಇವರು ದಕ್ಷಿಣ ಕನ್ನಡ ಜಿಲ್ಲೆಯವರಲ್ಲವೆಂದು ಮೇಲ್ನೋಟಕ್ಕೇ ತಿಳಿಯುವಂತಿತ್ತು.
ನಾನು ನೋಡುತ್ತಿದ್ದಂತೆಯೇ ಒಬ್ಬೊರಾಗಿ ಹಲವು ಜನ ಅವರ ಸುತ್ತ ಸೇರತೊಡಗಿದರು. ಕೆಲವರು ಅವರನ್ನು ಮಾತಾಡಿಸುತ್ತಿದ್ದರು. ಏಳೆಂಟು ಜನರು ಸೇರುತ್ತಿದ್ದಂತೆಯೇ ಅವರ‍್ಯಾರೋ ಸಿನಿಮಾ ನಟರೆಂದು ನನ್ನ ತಲೆಯಲ್ಲಿ ಸುಳಿದುಹೋಯಿತು. ನಾನು ಈಗಾಗಲೇ ನೋಡಿದ, ಮಾತನಾಡಿಸಿದ ಸಿನಿಮಾನಟರ ಪಟ್ಟಿಗೆ ಇನ್ನೂ ಒಬ್ಬರ ಹೆಸರನ್ನು ಸೇರಿಸಿಕೊಂಡು ಬೀಗುವ ಘನ ಉದ್ದೇಶದಿಂದ, ಅವರಿದ್ದಲ್ಲಿಗೆ ಓಡಿದೆ. ನಾನು ಓಡುತ್ತಿರುವುದನ್ನು ನೋಡಿ ಕುತೂಹಲದಿಂದ ಇನ್ನೂ ಕೆಲವರು ಅಲ್ಲಿಗೆ ಜಮಾಯಿಸಿದರು. ಅಲ್ಲಿದ್ದವರು ಏನು ಮಾತನಾಡುತ್ತಿದ್ದಾರೆಂದು ತಿಳಿಯದೆ, ಅಕ್ಕಪಕ್ಕದವರಲ್ಲಿ ವಿಚಾರಿಸುತ್ತಿದ್ದಂತೆ ಮಡಿಕೇರಿಗೆ ಹೋಗುವ ಬಸ್ ಬಂತು. ಆ ವ್ಯಕ್ತಿ ಬಸ್ ಹತ್ತಿದರು. ಆನಂತರ ಗುಂಪು ಕರಗಿತು. ಅಲ್ಲೇ ಇದ್ದ ಸ್ವಲ್ಪ ಹಿರಿಯರಲ್ಲಿ ಅವರ‍್ಯಾರೆಂದು ಕೇಳಿದೆ. "ಕೆ.ವಿ.ಪುಟ್ಟಪ್ಪನವರ ಮಗ ಇಲ್ಲೇ ನೆಂಟರ ಮನೆಗೆ ಬಂದಿದ್ದರಂತೆ" ಎಂದರು.
ಪ್ರಯಾಣ ಮುಂದುವರೆಸಿ ಜಿ.ಎಸ್. ಉಬರಡ್ಕ ಅವರ ಮನೆ ಸೇರಿದೆ. ಆ ಕಾಲದಲ್ಲಿ, ನಮ್ಮೂರು ಬೆಳ್ಳೇಕೆರೆಯಿಂದ ಸುಳ್ಯದ ನಾರ್ಣಕಜೆಯಲ್ಲಿರುವ ಉಬರಡ್ಕ ಅವರ ಮನೆಯನ್ನು ತಲಪಬೇಕಾದರೆ ಬೆಳಗಿನಿಂದ ಸಂಜೆಯ ತನಕದ ಪ್ರಯಾಣ, ಸ್ನಾನ ಊಟಗಳ ನಂತರ ಜಿ.ಎಸ್.ರೊಂದಿಗೆ ಮಾತನಾಡುತ್ತ (ಅವರಾಗಲೇ ಕವನ-ಲೇಖನಗಳನ್ನು ಬರೆಯುತ್ತಿದ್ದರು). "ಇವತ್ತು ಸುಳ್ಯದ ಬಸ್‌ಸ್ಟಾಂಡಿನಲ್ಲಿ ಕುವೆಂಪು ಅವರ ಮಗ ಇದ್ದರು. ಹಲವಾರು ಜನರು ಅವರ ಸುತ್ತ ಸೇರಿದ್ದರು. ನಾನು ಅವರನ್ನು ನೋಡಿ ಯಾರೋ ಸಿನಿಮಾನಟರು ಅಂದುಕೊಂಡೆ" ಎಂದೆ. ಅದಕ್ಕವರು "ಹೋ ತೇಜಸ್ವಿ, ಸಿನಿಮಾ ನಟರಿಗಿಂತ ಹೆಚ್ಚು, ಒಳ್ಳೆಯ ಕಥೆಗಾರ ಈಗ ನಿಮ್ಮೂರಿನ ಹತ್ರವೇ ಇದ್ದಾರೆ" ಎಂದರು. ಸ್ವಲ್ಪ ಹೊತ್ತಿನಲ್ಲಿ ತೇಜಸ್ವಿಯವರ ’ಅಬಚೂರಿನ ಪೋಸ್ಟಾಫೀಸು’ ಪುಸ್ತಕವನ್ನು ತಂದು "ಇಕೊ ಅವರನ್ನು ನೋಡಿಯಾಯ್ತಲ್ಲ, ಈಗ ಓದಿ ನೋಡು" ಎಂದು ಕೊಟ್ಟರು.
ಹೀಗೆ ನನಗೆ ತೇಜಸ್ವಿಯವರ ಪ್ರಥಮ ದರ್ಶನವಾಯಿತು. ಅವರಾಗಲೇ ಮೈಸೂರನ್ನು ಬಿಟ್ಟು ಮೂಡಿಗೆರೆಯ ಬಳಿ ’ಚಿತ್ರಕೂಟ’ದಲ್ಲಿ ಬಂದು ನೆಲೆಸಿದ್ದರು. ಅಬಚೂರಿನ ಪೋಸ್ಟಾಫೀಸು ಓದಿದೆ. ನಮ್ಮದೇ ಪರಿಸರದ ಕಥೆಯಾದ್ದರಿಂದ ಅರ್ಥವಾಗದಿದ್ದರೂ ಖುಷಿಯಾಯಿತು. ಊರಿಗೆ ಹಿಂದಿರುಗುವಾಗ ಜಿ.ಎಸ್.ರಲ್ಲಿ ಲಭ್ಯವಿದ್ದ ತೇಜಸ್ವಿಯವರ ಇನ್ನೂ ಕೆಲವು ಪುಸ್ತಕಗಳನ್ನು ಹಿಡಿದುಕೊಂಡು ಬಂದೆ. ಆಗ ’ಕುಬಿ ಮತ್ತು ಇಯಾಲ’, ’ಡೇರ್ ಡೆವಿಲ್ ಮುಸ್ತಾಫ’, ’ತುಕ್ಕೋಜಿ’ ಮುಂತಾದ ಕಥೆಗಳನ್ನು ಮನೆಯವರೆಲ್ಲ ಓದಿದೆವು.
ಆ ಕಾಲದಲ್ಲಿ ಸಾಮಾನ್ಯವಾಗಿ ಯಾವುದೇ ಹಳ್ಳಿಯ ಪೋಸ್ಟಾಫೀಸುಗಳಲ್ಲಿ ವಿತರಣೆಗೆ ಬರುವ ಪೋಸ್ಟ್ ಮಾಸ್ಟರ್, ಪೋಸ್ಟ್‌ಮ್ಯಾನ್, ಮತ್ತಿತರ ಎಲ್ಲ ಸಿಬ್ಬಂದಿಯವರಿಂದ ದಿನಪತ್ರಿಕೆಗಳಂತೆ ಓದಿಸಿಕೊಂಡು ವಿಳಾಸದಾರರಿಗೆ ತಲಪುತ್ತಿದ್ದುದು, ಎಲ್ಲರಿಗೂ ತಿಳಿದಿದ್ದ ಸಾಮಾನ್ಯ ಸಂಗತಿಯಾಗಿತ್ತು. ಇದು ಹಳ್ಳಿಯಲ್ಲಿದ್ದ ನಮಗೂ ತಿಳಿದೇ ಇದ್ದುದರಿಂದ, ನಾನು ಮತ್ತು ನನ್ನಕ್ಕ ’ಅಬಚೂರಿನ ಪೋಸ್ಟಾಫೀಸು’ ಓದಿದ ನಂತರ
ಯಾವುದೇ ಹಳ್ಳಿಯ ಪೋಸ್ಟಾಫೀಸನ್ನು ಕಂಡರೂ ’ಬೋಬಣ್ಣನ ಮನೆ’ ಎನ್ನುತ್ತಿದ್ದೆವು. ತೇಜಸ್ವಿಯವರ ’ಚಿತ್ರಕೂಟ’
ಮೂಡಿಗೆರೆಯ ಬಳಿಯ ಜನ್ನಾಪುರದ ಪಕ್ಕದ
ಚಂದ್ರಾಪುರ ಎಂಬ ಹಳ್ಳಿಯಲ್ಲಿತ್ತು. ಜನ್ನಾಪುರಕ್ಕೆ ಸಮೀಪದಲ್ಲೇ ಎರಡು ಕಿಲೋಮೀಟರ್ ದೂರದಲ್ಲಿ ಗೋಣೀಬೀಡು ಎಂಬ ಊರು ಇದೆ. ಇದು ತೇಜಸ್ವಿಯವರ ಹಲವು ಕಥೆಗಳಲ್ಲಿ ಬರುವ ಊರು. (ಈ ಊರಿನಲ್ಲಿ ಯು.ಆರ್. ಅನಂತಮೂರ್ತಿಯವರು ಬಾಲ್ಯದಲ್ಲಿ ಶಾಲೆಗೆ ಹೋಗಿದ್ದರಂತೆ, ಅನಂತಮೂರ್ತಿಯವರ ಅಜ್ಜ ಈ ಗೋಣಿಬೀಡಿನ ದೇವಸ್ಥಾನದಲ್ಲಿ ಅರ್ಚಕರಾಗಿದ್ದರಂತೆ). ತೇಜಸ್ವಿಯವರ ಹತ್ತು ಹಲವು ಹವ್ಯಾಸಗಳಿಂದಾಗಿ ಮೂಡಿಗರೆಯ ಸುತ್ತಮುತ್ತಲ ಊರುಗಳಲ್ಲಿ ಹುಚ್ಚು ಹವ್ಯಾಸಿಯೆಂಬ ಖ್ಯಾತಿಯನ್ನು ಆಗಿನ್ನೂ ಗಳಿಸುತ್ತಿದ್ದರಷ್ಟೆ. ಜನರು ಕುತೂಹಲದಿಂದ ಅಲ್ಲಲ್ಲಿ ಅವರ ಬಗ್ಗೆ ಮತ್ತು ಅವರ ಹಲವು ಹವ್ಯಾಸಗಳ ಬಗ್ಗೆ ಮಾತನಾಡುವುದು ಕೇಳಿಬರುತ್ತಿತ್ತು.
ನಾನು ಆಗ ತಾನೇ ಕಾಲೇಜು ಶಿಕ್ಷಣ ಮುಗಿಸಿ ಊರಿಗೆ ಬಂದಿದ್ದೆ. ಬೆಳ್ಳೇಕೆರೆಯ ಸುತ್ತಮುತ್ತ ನಾವೊಂದಷ್ಟು ಜನ ಗೆಳೆಯರು, ರಾತ್ರಿಶಾಲೆ ನಡೆಸುತ್ತಾ, ಜನಸಂಘಟನೆಗಳಲ್ಲಿ ತೊಡಗಿಕೊಳ್ಳಲು ಪ್ರಾರಂಭಿಸಿದ್ದೆವು. ಆ ಸಂದರ್ಭದಲ್ಲಿ ನಾನು ವಿದ್ಯೆ ಕಲಿತ ಹಾನುಬಾಳು ಹೈಸ್ಕೂಲಿನ ವಾರ್ಷಿಕೋತ್ಸವಕ್ಕೆ ತೇಜಸ್ವಿಯವರು ಆಹ್ವಾನಿತರಾಗಿ ಬರಲಿದ್ದಾರೆಂದು ತಿಳಿಯಿತು. ಹಾನುಬಾಳು, ಮೂಡಿಗೆರೆಗೂ ನಮ್ಮೂರು ಬೆಳ್ಳೇಕೆರೆಗೂ ಮಧ್ಯದಲ್ಲಿರುವ ಹೋಬಳಿ ಕೇಂದ್ರ ಸ್ಥಳ. ಆ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ನಾನೂ ಸೇರಿದಂತೆ ನಮ್ಮಲ್ಲಿ ಕೆಲವರ ಸವಾರಿ ಹಾನುಬಾಳಿಗೆ ಹೋಯಿತು. ಅಂದು ತೇಜಸ್ವಿಯವರು ಸಾಹಿತ್ಯ, ಸಾಮಾಜಿಕತೆ, ಇತ್ಯಾದಿಗಳ ಬಗ್ಗೆ ಮಾತಾಡಿದಂತೆ ನೆನಪು. ಆ ವೇಳೆಗಾಗಲೇ ಕರ್ನಾಟಕದಾದ್ಯಂತ ಸಾಹಿತ್ಯವಲಯದಲ್ಲಿ ’ಬ್ರಾಹ್ಮಣ-ಶೂದ್ರ ಚರ್ಚೆ ಜೋರಾಗಿ ನಡೆದಿತ್ತು. ಸಭೆಯಲ್ಲಿದ್ದವರೊಬ್ಬರು ಕುವೆಂಪುರವರ ಸಾಹಿತ್ಯದ ಬಗ್ಗೆ ಕೇಳಿದ ಪ್ರಶ್ನೆ ತೇಜಸ್ವಿಯವರನ್ನು ಸಿಟ್ಟಿಗೆಬ್ಬಿಸಿತು. "ಸಂಸ್ಕೃತ ಜ್ಞಾನವಿಲ್ಲದವರೊಬ್ಬರು ರಾಮಾಯಣ ಬರೆಯೋಕೆ ಹೇಗೆ ಸಾಧ್ಯ ಅಂತೇನೋ ಅವರು ಕೇಳಿದ್ದರು. ಅದಕ್ಕೆ ಉತ್ತರಿಸುತ್ತಾ ಅವರು "ಹೌದ್ರಿ ಶೂದ್ರನೊಬ್ಬ ಸಾಹಿತಿಯಾಗೋದಿರ‍್ಲಿ ಸ್ವಲ್ಪ ಬುದ್ಧಿವಂತ ಅನ್ನಿಸಿಕೊಂಡ್ರೂ ಅವನ ಹುಟ್ಟಿನ ಬಗ್ಗೆ ಅನುಮಾನಪಡೋ ಸಮಾಜ ನಮ್ಮದು, ಹಾಗಾದರೆ ಮೇಲ್ಜಾತಿಯಲ್ಲಿ ಹುಟ್ಟಿದ ದಡ್ಡರ ಬಗ್ಗೆ ಏನನ್ಬೇಕು" ಎಂದು ಗುಡುಗಿದರು. ಆಗ ತಾನೇ ಜೆ.ಪಿ.ಯವರ ಸಂಪೂರ್ಣ ಕ್ರಾಂತಿ, ಹಾಗೂ ಎಡಪಂಥೀಯ ಧೋರಣೆಗಳ ಹುಮ್ಮಸ್ಸಿನಲ್ಲಿದ್ದ ನಮಗೆಲ್ಲ ಅವರ ಮಾತನ್ನು ಕೇಳಿ, ಬತ್ತಳಿಕೆಗೆ ಹೊಸ ಅಸ್ತ್ರವೊಂದು ಸಿಕ್ಕಿದ ಸಂತೋಷವಾಯಿತು. ಆದರೆ ಸಭೆಗೆ ಬಂದಿದ್ದ ಅನೇಕ ಹಿರಿಯರಿಗೆ ತೇಜಸ್ವಿಯವರ ಆ ಮಾತು ಇಷ್ಟವಾಗಲಿಲ್ಲವೆಂದು ನಮಗೆ ನಂತರ ತಿಳಿಯಿತು. "ಏನಾದ್ರೂ ಪುಟ್ಟಪ್ಪನ ಮಗ ಹಂಗ್ ಮಾತಾಡ್ಬಾರ‍್ದಾಗಿತ್ತು" ಎಂದು ಕೆಲವರು ಹೇಳುವುದು ಕೇಳಿಸಿತು.
ಅವರು ಸಾಹಿತ್ಯ, ಸಾಮಾಜಿಕತೆ, ನಮ್ಮ ಪರಿಸರ ಅಂತೆಲ್ಲ ಮಾತಾಡಿದ್ದು ನನ್ನ ತಲೆಯಲ್ಲಿ ಸುತ್ತುತ್ತಲೇ ಇತ್ತು. ಅವರ ಕೆಲವು ಕಥೆಗಳನ್ನೂ ಓದಿಕೊಂಡಿದ್ದೆ. ಆದ್ದರಿಂದ ನಮ್ಮ ಪರಿಸರ ಯಾರು ಬೇಕಾದರೂ ಕಥೆಬರೆಯಲು ಬಹಳ ಸೂಕ್ತವಾದ ಸ್ಥಳ ಎಂಬ ತೀರ್ಮಾನಕ್ಕೆ ಬಂದೆ. ಕಥೆಯೊಂದನ್ನು ಬರೆದು ಸುಧಾ ವಾರಪತ್ರಿಕೆಗೆ ಕಳುಹಿಸಿದೆ. ಅದು ಪ್ರಕಟವಾಗಿಯೇ ಬಿಟ್ಟಿತು.
ಕಥೆಯಲ್ಲಿ ನಮ್ಮೂರಿನ ಕೆಲವರನ್ನು ನನಗೆ ತಿಳಿದ ಮಟ್ಟಿಗೆ ಯಥಾವತ್ತಾಗಿ ಚಿತ್ರಿಸಿದ್ದೆ. ಯಾರ ಮೂಲಕವೋ ಅವರಿಗೆಲ್ಲ ಆ ವಿಚಾರ ತಿಳಿದು ಅದು ಊರಲ್ಲಿ ಗುಸುಗುಸು ಸುದ್ದಿಯಾಯಿತು. ಕುತೂಹಲದಿಂದ ಪತ್ರಿಕೆ ತರಿಸಿಕೊಂಡು ಓದಿದ ಕೆಲವರು "ಪಾಪ ರೈಟ್ರು (ನಮ್ಮಪ್ಪ ಕಾಫಿ ತೋಟವೊಂದರಲ್ಲಿ ರೈಟರ್ ಆಗಿ ಕೆಲಸ ಮಾಡುತ್ತಿದ್ದರು) ಕಷ್ಟಪಟ್ಟು ಮಗನಿಗೆ ವಿದ್ಯೆ ಕಲಿಸಿದರೆ ಇವನು ಹೀಗಾದನಲ್ಲ ಎಂದು ನಮ್ಮಪ್ಪನ ಬಗ್ಗೆ ಮರುಕ ತೋರಿದರು!. ಆ ಕಾಲದಲ್ಲಿ ಕಥೆ, ಸಾಹಿತ್ಯ, ನಾಟಕ ಇತ್ಯಾದಿಗಳ ಹುಚ್ಚು ಹತ್ತಿಸಿಕೊಂಡವರು ಕೆಲಸಕ್ಕೆ ಬಾರದ ನಾಲಾಯಕ್ ಜನರೆಂಬ ಭಾವನೆಯೇ ಹೆಚ್ಚಿನವರಲ್ಲಿ ಇತ್ತು. ನಾನು ಮಾತ್ರ, ನಾನೂ ಒಬ್ಬ ಕಥೆಗಾರ ಎಂದು ನಾನು ಬೀಗುತ್ತ ತಿರುಗಿದೆ.
ತೇಜಸ್ವಿಯವರ ಕಥೆಗಳಂತೆಯೇ ಅವರ ಫೋಟೋಗ್ರಫಿ, ಮೀನುಹಿಡಿಯುವ ಹವ್ಯಾಸಗಳೂ ಪ್ರಚಾರ ಪಡೆಯುತ್ತಿದ್ದಂತೆ, ’ಆಚೆವಾರ ಮದನಾಪುರಕ್ಕೆ ಬಂದಿದ್ರಂತೆ ಮೀನು ಹಿಡಿಯೋಕೆ’, ’ಹೋದವಾರ ಮಾವಿನಹಳ್ಳಿ ಎಣ್ಣೆಹೊಳೇಲಿ(ಹೇಮಾವತಿ ನದಿ) ಮೀನು ಹಿಡೀತಿದ್ದರಂತೆ’, ನಮ್ಮ ಮಾವ ಹೇಳ್ದ. ’ಮೊನ್ನೆ ನಾನೇ ಹೋಗಿದ್ದೆ ’ಅಗನಿ ಬೆಣಗಿನ ಹಳ್ಳದಲ್ಲಿ ಸಕತ್ ಮೀನು ಹಿಡುದ್ರು, ಎಂದು ತೇಜಸ್ವಿಯೆಂದರೆ ವಾರದ ಸಂತೆಗೆ ಬರುವ ಮೀನುವ್ಯಾಪಾರಿಯೆಂಬಂತೆ ವರ್ಣಿಸುವವರು ಹುಟ್ಟಿಕೊಂಡರು. ಹಾಗೇ ’ಹೆಂಗ್ ಮೀನಿಡಿತಾರೆ ಅಂತೀರಿ, ಎಲ್ಲ ಬ್ರಿಟಿಷ್‌ನೋರ ತರನೇ ಮಿಷಿನ್‌ಗಾಣ(ಗಾಳ) ಹಿಡ್ಕೊಂಡ್ ಬಂದಿದ್ರು, ಒಂದೊಂದೇ ಮೀನು ಹಿಡ್ದು ತೂಕ ನೋಡಿ ಸಣ್ಣವುನೆಲ್ಲಾ ವಾಪಸ್ ನೀರಿಗೆ ಬಿಡೋರು, ಅವ್ರಿಗೆ ಯಾವುದು ಬೇಕು ಅದನ್ನ ಮಾತ್ರ ಹಿಡಿಯೋರು, ಅದನ್ನ ನೋಡೋದೆ ಒಂದು ಚಂದ.. ನಂಗೂ ನೋಡಿ .. ನೋಡಿ ಸಾಕಾಯ್ತಪ್ಪ ಎಂದು ರೀಲು ಸುತ್ತುವವರೂ ಇದ್ದರು. ಇವರೆಲ್ಲ ಹೇಳುವ ಜಾಗದಲ್ಲಿ ನಿಜವಾಗಿಯೂ ಮೀನು ಇದೆಯೆ ಅಥವಾ ತೇಜಸ್ವಿಯವರು ಅಲ್ಲಿಗೆ ಬಂದಿದ್ದರೇ ಇಲ್ಲವೇ ಅನ್ನುವುದನ್ನು ಯಾರೂ ವಿಚಾರಿಸುತ್ತಿರಲಿಲ್ಲ. ಎಂಬತ್ತರ ದಶಕದ ಹೊತ್ತಿಗಾಗಲೇ ’ಮೀನು ಹಿಡಿಯುವ ತೇಜಸ್ವಿ ನಮ್ಮೂರ ಸುತ್ತಮುತ್ತ, ಭಾರತದಾದ್ಯಂತ ಸಾವಿರಾರು ಊರುಗಳಲ್ಲಿ ಹೇಳುವ, "ಭೀಮ ಬಕಾಸುರನನ್ನು ಕೊಂದಸ್ಥಳ ಇದೇ" ಎಂದು ರಸವತ್ತಾಗಿ ವರ್ಣಿಸುವ, ಸ್ಥಳಪುರಾಣದಂತೆ ಆಗಿಹೋದರು!.
ಹೀಗಿದ್ದ ಸಂದರ್ಭದಲ್ಲಿ ಮುಂದಿನವಾರ ತೇಜಸ್ವಿಯವರು ಎತ್ತಿನಹಳ್ಳಕ್ಕೆ ಮೀನು ಹಿಡಿಯಲು ಬರುತ್ತಾರೆಂಬ ಸುದ್ದಿ ನಮ್ಮ ಪಕ್ಕದ ಗಾಣದಹೊಳೆಯ ಗೆಳೆಯರಿಂದ ಬಂತು (ಊರಿನ ಹೆಸರು ಮಾತ್ರ ಗಾಣದ ಹೊಳೆ, ಅಲ್ಲಿ ಯಾವುದೇ ಹೊಳೆ ಇಲ್ಲ. ಆ ಊರಿನಲ್ಲಿ ನಾವೊಂದಷ್ಟು ಜನ ಗೆಳೆಯರು ’ಮಿತ್ರ ರೈತ ಯುವಕ ಸಂಘ’ ಎಂಬ ಸಂಘವನ್ನು ಸ್ಥಾಪಿಸಿಕೊಂಡಿದ್ದೆವು). ತೇಜಸ್ವಿಯವರು ಮೀನು ಹಿಡಿಯವ ವೃತ್ತಾಂತ ಆಗಲೇ ಧಾರಾವಾಹಿಯಾಗಿ ನಮ್ಮೂರ ಸುತ್ತ ಸುತ್ತುತ್ತಿದ್ದುದರಿಂದ ಮೀನು ಹಿಡಿಯುವುದನ್ನು ನೋಡಲು ನಾನೂ ಹೊರಟೆ. ಆಗ ಇಂದಿನಂತೆ ಮೊಬೈಲ್‌ಗಳಿರಲಿ ಹಳ್ಳಿಗಳಲ್ಲಿ ಫೋನೇ ಇರಲಿಲ್ಲ. ನಾನು ಸೈಕಲ್ಲೇರಿ ಗಾಣದಹೊಳೆ ತಲಪುವ ವೇಳೆಗೆ ಅವರೆಲ್ಲ ಸೇರಿ ಎತ್ತಿನ ಹಳ್ಳಕ್ಕೆ ಹೊರಟು ಹೋಗಿಯಾಗಿತ್ತು. ಅವರಿವರಲ್ಲಿ ಮೀನು ಹಿಡಿಯಲು ಹೋದವರ ದಿಕ್ಕನ್ನು ವಿಚಾರಿಸುತ್ತಾ ನಾನು ಏಕಾಂಗಿಯಾಗಿ ಐದಾರು ಕಿಲೋಮೀಟರು ಸುತ್ತಾಡಿ ಅವರಿರುವ ಸ್ಥಳವನ್ನು ಪತ್ತೆಮಾಡುವ ವೇಳೆಗೆ ಮಧ್ಯಾಹ್ನವಾಯಿತು. ದಟ್ಟ ಕಾಡಿನ ಮಧ್ಯೆ ಎತ್ತಿನಹಳ್ಳದ ಪುಟ್ಟ ಜಲಪಾತವೊಂದರ ಪಕ್ಕದಲ್ಲಿ ಅವರೆಲ್ಲ ಠಿಕಾಣಿ ಹೂಡಿದ್ದರು. ಕಲ್ಲುಗಳನ್ನು ಜೋಡಿಸಿಟ್ಟು ಮಾಡಿದ ಒಲೆಯಮೇಲೆ ದೊಡ್ಡ ಪಾತ್ರೆಯಲ್ಲಿ ಅನ್ನ ಬೇಯುತ್ತಿತ್ತು. ಅಲ್ಲಿ ಏಳೆಂಟು ಜನರಿದ್ದರು. ತೇಜಸ್ವಿಯವರ ಜೊತೆ ಮೂಡಿಗೆರೆಯಿಂದಲೂ ಒಬ್ಬರು ಬಂದಿದ್ದರು. ಅವರಿಗೆ ಹೆಚ್ಚೇನೂ ಮೀನು ದೊರೆತಂತೆ ಕಾಣಿಸಲಿಲ್ಲ. ತೇಜಸ್ವಿಯವರಾಗಲೇ ಉಳಿದವರಿಗೆ, ಹೊಳೆಯಲ್ಲಿ ಸಿಗುವ ಮೀನುಗಳ ಬಗ್ಗೆ ವಿವರಿಸುತ್ತಿದ್ದರು. ನನಗೆ ಮೀನುಗಳ ಬಗ್ಗೆಯಾಗಲೀ, ಮೀನು ಹಿಡಿಯುವ ಬಗ್ಗೆಯಾಗಲೀ ಏನೂ ಜ್ಞಾನವಿಲ್ಲದ್ದರಿಂದ ಸುಮ್ಮನಿದ್ದೆ. ಅಲ್ಲೇ ಇದ್ದ ನನ್ನ ಗೆಳೆಯನೊಬ್ಬ ತೇಜಸ್ವಿಯವರಿಗೆ ನನ್ನನ್ನು ತೋರಿಸಿ "ಇವ್ನೂ ಕಥೆ ಬರೀತಾನೆ" ಎಂದು ಹೇಳಿದ. ಹೊಳೆಯ ಸದ್ದಿನಲ್ಲಿ ಅವರಿಗೆ ಕೇಳಿಸಿತೋ ಇಲ್ಲವೋ ನನ್ನನ್ನು ನೋಡಿ ನಕ್ಕರು. ಅವರೇನಾದರೂ ಕೇಳಿದರೆ ಏನು ಹೇಳುವುದೆಂದು ತಿಳಿಯದೆ ಮೆಲ್ಲನೆ ಹೊಳೆಯತ್ತ ಜಾರಿಕೊಂಡೆ. ಹೊಳೆಯಲ್ಲಿ ಸಾಕಷ್ಟು ನೀರಿತ್ತು. ಒಂದಿಬ್ಬರು ಈಜುತ್ತಿದ್ದರು. ನಾನೂ ಅವರೊಡನೆ ಸೇರಿ ಈಜತೊಡಗಿದೆ. ದಡದಲ್ಲಿ ತೇಜಸ್ವಿಯವರಿಂದ ಮೀನಿನ ಪಾಠ ಮುಂದುವರಿದಿತ್ತು.
ಊಟಕ್ಕೆ ಕುಳಿತಾಗ ದೊಡ್ಡ ದೊಡ್ಡ ಎಲೆಗಳಲ್ಲಿ ಅನ್ನದ ಗುಡ್ಡೆಯನ್ನು ಪೇರಿಸಿಕೊಂಡು ನಮ್ಮ ಗಾಣದಹೊಳೆಯ ಹುಡುಗರು ಕುಳಿತರು. ಊಟ ಮುಂದುವರಿದಂತೆ ಈ ಅನ್ನದ ಗುಡ್ಡೆಗಳು ಕರಗಿ ಖಾಲಿಯಾಗುತ್ತಿದ್ದ ಪರಿಯನ್ನು ಕಂಡ ತೇಜಸ್ವಿಯವರು "ನಿಮ್ಗೆ ಸಣ್ಣ ಪುಟ್ಟ ಶಿಕಾರಿ ಸಾಕಾಗಲ್ಲ ಕಣ್ರಯ್ಯ ಏನಿದ್ರೂ ಮೂರು ಆನೆ ಹೊಡ್ಕೊಡ್ಬೇಕು ಅಷ್ಟೆ" ಎಂದು ಗಹಗಹಿಸಿ ನಕ್ಕರು.
ನಂತರದ ದಿನಗಳಲ್ಲಿ ಅವರು ಮೀನು ಹಿಡಿಯಲು ಬರುವುದನ್ನು ಕಡಿಮೆಮಾಡಿದರು.
ನಾವು ಹಲವು ಮಂದಿ ಗೆಳೆಯರು ರೈತ ಚಳವಳಿಯಲ್ಲಿ ತೊಡಗಿಕೊಂಡಿದ್ದೆವು. ತಾಲ್ಲೂಕುಕೇಂದ್ರ ಅಥವಾ ಜಿಲ್ಲಾಕೇಂದ್ರಗಳಲ್ಲಿ ರೈತ ಸಂಘ ನಡೆಸುತ್ತಿದ್ದ ಅಭ್ಯಾಸ ಶಿಬಿರಗಳಲ್ಲಿ ಕೆಲವು ಬಾರಿ ತೇಜಸ್ವಿಯವರು ಬಂದು ಮಾತಾಡಿದ್ದುಂಟು. ಆದರೆ ನಮಗ್ಯಾರಿಗೂ ಆಗ ಅವರೊಂದಿಗೆ ಹೆಚ್ಚಿನ ಸಂಪರ್ಕವಾಗಲೀ ಸಲಿಗೆಯಾಗಲೀ ಬೆಳೆಯಲಿಲ್ಲ.
ರೈತಸಂಘದ ಅಭ್ಯಾಸ ಶಿಬಿರಗಳಲ್ಲೂ ಅಷ್ಟೆ ರೈತ ಸಂಘದ ಕಾರ್ಯಕ್ರಮಗಳೂ ಅವರ ವಿಮರ್ಶೆಗೆ ಒಳಗಾಗುತ್ತಿದ್ದವು. ಅದರಲ್ಲೂ ಕಾನೂನುಭಂಗದಂತಹ ಚಳವಳಿಗಳನ್ನು ನೀವು ಕೈಗೆತ್ತಿಕೊಂಡಾಗ ನಿಮ್ಮಲ್ಲಿ ಸ್ಪಷ್ಟತೆ ಮತ್ತು ಸಮರ್ಥ ನಾಯಕತ್ವ ಎರಡೂ ಇಲ್ಲದಿದ್ದರೆ ಖಂಡಿತವಾಗಿಯೂ ಅರಾಜಕತೆಯನ್ನು ಸೃಷ್ಟಿಸುತ್ತೀರಿ, ನಿಮ್ಮ ಉದ್ದೇಶವೂ ಸಾಧ್ಯವಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು. ಆ ಸಂದರ್ಭದಲ್ಲಿ ರೈತ ಸಂಘ ಹಳ್ಳಿಗಳಲಿ, ಸಣ್ಣಪುಟ್ಟ ಜಗಳಗಳ ತೀರ್ಮಾನದಿಂದ ಹಿಡಿದು, ಪ್ರತಿಯೊಂದು ನಿರ್ಧಾರವೂ ಸಂಘದ ನೇತೃತ್ವದಲ್ಲೇ ನಡೆಯುವಂತೆ ಪ್ರಯತ್ನಿಸುತ್ತಿತ್ತು. ಇದರಿಂದ ಕೆಲವು ಕಡೆ ಘರ್ಷಣೆಗಳೂ ಆದವು. ಇನ್ನು ಕೆಲವು ಕಡೆಗಳಲ್ಲಿ ರೈತಸಂಘದ ಹೆಸರಿನಲ್ಲಿ ಕೆಲವರು ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿದರು. ತೇಜಸ್ವಿಯವರು ಅಂದು ಹೇಳಿದ ಮಾತುಗಳು ಮಲೆನಾಡಿನ ಮಟ್ಟಿಗಂತೂ ಬಹಳ ಬೇಗ ನಿಜವಾಗಿಬಿಟ್ಟಿತು.
ಮಲೆನಾಡಿನಲ್ಲಿ ರೈತ ಸಂಘದ ಪ್ರಬಲ ಸಮರ್ಥಕರಾಗಿದ್ದವರೆಲ್ಲ ಹಳ್ಳಿಗಳ ಸಣ್ಣ ರೈತರೇ. ಕಾಫಿ ವಲಯದ ಹೆಚ್ಚಿನ ಪ್ಲಾಂಟರುಗಳೆಲ್ಲ ರೈತ ಸಂಘದ ವಿರೋಧವೇ ಇದ್ದರು. ತೋಟ ಕಾರ್ಮಿಕರಲ್ಲೂ ರೈತಸಂಘದ ಬಗ್ಗೆ ಅಂಥಾ ಒಲವೇನೂ ಇರಲಿಲ್ಲ. ರೈತಸಂಘವೆಂದರೆ ಜಮೀನಿದ್ದವರ ಸಂಘವೆಂದೇ ಅವರು ತಿಳಿದಿದ್ದರು. ಅದಲ್ಲದೆ ರೈತಸಂಘಕ್ಕೆ ಮಲೆನಾಡಿನಲ್ಲಿ ಭೂ ರಹಿತ ಕೂಲಿಕಾರ್ಮಿಕರ- ದಲಿತರ ಬೆಂಬಲ ಕೂಡಾ ಅಷ್ಟಾಗಿ ದೊರಕಲೇ ಇಲ್ಲ. ಇದಕ್ಕೆ ರೈತಸಂಘದ ಸೈದ್ಧಾಂತಿಕ ನೆಲೆಗಟ್ಟಿನ ದೌರ್ಬಲ್ಯವೇ ಕಾರಣವಾಗಿರಬಹುದು. ನಮ್ಮೂರಿನಲ್ಲಿದ್ದಂತಹ ಕೆಲವು ರೈತಸಂಘದ ಶಾಖೆಗಳನ್ನು ಬಿಟ್ಟರೆ ಹೆಚ್ಚಿನ ಕಡೆಗಳಲ್ಲಿ ರೈತಸಂಘದ ಸದಸ್ಯರು ಕೂಲಿ ಕಾರ್ಮಿಕರನ್ನು ತಮ್ಮೊಂದಿಗೆ ಸೇರಿಸಿಕೊಳ್ಳುವುದಿರಲಿ, ಏಕ ಪಕ್ಷೀಯವಾಗಿ ಕೃಷಿಕೂಲಿಯನ್ನು ಇಳಿಸುವಂತಹ ಕ್ರಮಕ್ಕೂ ಮುಂದಾಗಿದ್ದರು. ಇದರೊಂದಿಗೆ ರೈತ ಸಂಘದ ನಗರ - ಹಳ್ಳಿ ವಿಭಜನೆ ಕೂಡಾ ಸ್ಪಷ್ಟತೆಯನ್ನು ಪಡೆದುಕೊಳ್ಳದೆ ನಗರಗಳ ಕೆಳವರ್ಗದ ಜನರ ಬೆಂಬಲ ಕೂಡಾ ರೈತಸಂಘಕ್ಕೆ ಸಿಗದೇ ಹೋಯಿತು. ಕಾಂಗ್ರೆಸ್ ವಿರೋಧಿ ನೆಲೆಯಲ್ಲಿ ರೈತಸಂಘದಲ್ಲಿದ್ದ ಅನೇಕರು ಹೆಗಡೆ ಸರ್ಕಾರದ ಬಗ್ಗೆ ಮೃದು ಧೋರಣೆ ಹೊಂದಿದ್ದರು. ಅಲ್ಲದೆ ಅಂದಿನ ಹೆಗಡೆ ಸರ್ಕಾರ ಕೂಡಾ ರೈತಸಂಘವನ್ನು ಒಂದೆಡೆ ಪೋಲಿಸ್ ಬಲದಿಂದ ತುಳಿಯುತ್ತಾ ಇನ್ನೊಂದೆಡೆ ಓಲೈಸುತ್ತಾ ಜನರಲ್ಲಿ ಗೊಂದಲ ಸೃಷ್ಟಿಸಿ ಬಿಟ್ಟಿತು. ಅದಕ್ಕೆ ಸರಿಯಾಗಿ ಪಂಚಾಯತ್ ಚುನಾವಣೆ ಮಟ್ಟದಲ್ಲಿ ಪ್ರಯತ್ನಿಸದೆ ಏಕಾಏಕಿ ಪಾರ್ಲಿಮೆಂಟಿಗೇ ಅಭ್ಯರ್ಥಿಗಳನ್ನು ಹಾಕುವಂತಹ ಆತುರದ ನಿರ್ಧಾರವನ್ನು ರೈತಸಂಘ ಮಾಡಿತು. ಈ ಎಲ್ಲಾ ಕಾರಣಗಳಿಂದ ಅನೇಕರು ರೈತಸಂಘದಿಂದ ದೂರವಾಗಿ ಅನೇಕ ಪಕ್ಷಗಳಲ್ಲಿ ಹಂಚಿಹೋದರು. ಬಯಲು ಸೀಮೆಯಲ್ಲಿ ರೈತ ಸಂಘ ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡು ಮುಂದುವರಿದರೂ ಮಲೆನಾಡಿನಲ್ಲಿ ನಾಮಾವಶೇಷವಾಗಿಹೋಯಿತು.
* * *
ತೇಜಸ್ವಿಯವರು ಈ ದಾರಿಯಲ್ಲಿ ಅನೇಕ ಬಾರಿ ಓಡಾಡಿದ್ದರೂ ನಮ್ಮೂರು ಬೆಳ್ಳೇಕೆರೆಗೆ (ಬೆಳ್ಳೇಕೆರೆ ಸಕಲೇಶಪುರ-ಮೂಡಿಗೆರೆ ರಸ್ತೆಯಲ್ಲಿ ಹತ್ತು ಕಿ.ಮೀ. ದೂರದಲ್ಲಿರುವ ಹಳ್ಳಿ) ಕಾರ್ಯಕ್ರಮವೊಂದಕ್ಕೆ ಪ್ರಥಮಬಾರಿಗೆ ಬಂದದ್ದು ೧೯೮೮ ರಲ್ಲಿ. ಆ ವೇಳೆಗಾಗಲೇ ಅವರು ’ಚಿತ್ರಕೂಟ’ವನ್ನು ಬಿಟ್ಟು ಮೂಡಿಗೆರೆ ಹ್ಯಾಂಡ್‌ಫೋಸ್ಟ್ ಹತ್ತಿರದ ’ನಿರುತ್ತರ’ದಲ್ಲಿ ನೆಲೆಸಿದ್ದರು. ನಮ್ಮ ಗೆಳೆಯರ ಬಳಗ ಆ ವೇಳೆಗಾಗಲೇ ಸುಮಾರು ಹತ್ತುವರ್ಷಗಳಿಂದ ಹಲವು ಚಳುವಳಿಗಳು, ಹೋರಾಟಗಳು, ಮತ್ತು ಕೆಲವು ವರ್ಷಗಳ ರಂಗ ಚಟುವಟಿಕೆಗಳನ್ನು ನಡೆಸಿದ್ದೆವಾದರೂ, ಆಗಷ್ಟೇ ಪ್ರಥಮ ಬಾರಿಗೆ ಒಂದು ರಂಗ ತರಬೇತಿ ಶಿಬಿರವನ್ನು ನಡೆಸುವ ಯೋಜನೆ ಹಾಕಿದ್ದೆವು. ಶಿಬಿರದ ನಿರ್ದೇಶಕರಾಗಿ ಮಂಡ್ಯ ರಮೇಶ್ ಮತ್ತು ಈಗ ರಂಗಾಯಣದಲ್ಲಿ ನಟರಾಗಿರುವ ಕೃಷ್ಣಕುಮಾರ್ ನಾರ್ಣಕಜೆ ಬರುವವರಿದ್ದರು. ಶಿಬಿರದ ಉದ್ಘಾಟನೆಗೆ ತೇಜಸ್ವಿಯವರನ್ನು ಆಹ್ವಾನಿಸುವುದೆಂದು ತೀರ್ಮಾನವಾಯ್ತು. ಆದರೆ ನಮಗ್ಯಾರಿಗೂ ಅವರಲ್ಲಿ ನೇರವಾಗಿ ಮಾತನಾಡಿ ಆಹ್ವಾನಿಸುವಷ್ಟು ಪರಿಚಯ-ಧೈರ್ಯ ಎರಡೂ ಇರಲಿಲ್ಲ. ಆದ್ದರಿಂದ ತೇಜಸ್ವಿಯವರಿಗೆ ಚೆನ್ನಾಗಿ ಪರಿಚಯವಿರುವ ಮೂಡಿಗೆರೆಯ ರೈತಸಂಘದ ನಮ್ಮ ಗೆಳೆಯರೊಬ್ಬರ ಸಹಾಯವನ್ನು ಕೇಳಿದೆವು.(ನಮ್ಮ ರಂಗತಂಡದ ಹಲವರು ರೈತಸಂಘದಲ್ಲಿದ್ದೆವು.) ಆದರೆ ಆ ಗೆಳೆಯರು
"ತೇಜಸ್ವಿಯವರು ಹೇಳಿದ ಯಾವುದೋ ಕೆಲಸವನ್ನು ಒಪ್ಪಿಕೊಂಡು ಮಾಡದೆ ಈಗ ಅವರ ಎದುರಿಗೆ ಸಿಕ್ಕದೆ ಕದ್ದು ತಿರುಗುತ್ತಿದ್ದೇನೆ ನಾನು ಬರುವುದಿಲ್ಲ ಎಂದರು!.
ಆ ಸಮಯದಲ್ಲಿ ನಮ್ಮ ಬಳಗದ ಗೆಳೆಯ ರಿಚರ‍್ಡ್ ಲೋಬೊ ಬೆಳ್ಳೇಕೆರೆಯಲ್ಲಿ ಮಂಡಲ ಉಪಪ್ರಧಾನರಾಗಿದ್ದರು. ಅವರ ತಂದೆ ಜಾನ್ ಲೋಬೋರವರಿಗೆ ಹಿಂದೆ ಮೂಡಿಗೆರೆಯ ಪಕ್ಕದ ಜನ್ನಾಪುರದಲ್ಲಿ ಕಾಫಿತೋಟವಿದ್ದು ತೇಜಸ್ವಿಯವರ ನೆರೆಯವರಾಗಿದ್ದರು. ಮೂಡಿಗೆರೆಯ ಚರ್ಚಿನ ಪಾದ್ರಿಯೊಬ್ಬರು ಆಗಾಗ ಲೋಬೋರವರ ಮನೆಗೆ ಭೇಟಿ ನೀಡುತ್ತಿದ್ದರಂತೆ. ಆ ಪಾದ್ರಿ ಬಿಳಿಯ ಜುಬ್ಬಾ ಪೈಜಾಮ ಧರಿಸುತ್ತಿದ್ದು ಬರುವಾಗಲೆಲ್ಲ ಮಕ್ಕಳಿಗೆಂದು ಚಾಕಲೇಟ್ ತರುತ್ತಿದ್ದರಂತೆ. ಅವರನ್ನು ಕಂಡೊಡನೆಯೇ ರಿಚರ‍್ಡ್ ಮತ್ತು ಅವರ ಅಣ್ಣ ತಮ್ಮಂದಿರೆಲ್ಲ ಅವರ ಸುತ್ತ ಸೇರುತ್ತಿದ್ದರು.
ಪಕ್ಕದಲ್ಲೇ ತೋಟವನ್ನು ಹೊಂದಿದ್ದ ತೇಜಸ್ವಿಯವರು ಕೂಡಾ ಕೆಲವುಸಾರಿ ಜುಬ್ಬಾ ಪೈಜಾಮ ಧರಿಸುತ್ತಿದ್ದರಂತೆ. ಅದರಿಂದ ತೇಜಸ್ವಿಯವರನ್ನು ’ಇವರೂ ಒಬ್ಬರು ಪಾದ್ರಿಯಿರಬೇಕೆ’ಂದುಕೊಂಡಿದ್ದ ರಿಚರ‍್ಡ್‌ರ ಅಣ್ಣ ತಮ್ಮಂದಿರು (ಆಗ ಇವರೆಲ್ಲ ಶಾಲೆಗೆ ಹೋಗುವ ಹುಡುಗರು)ಚಾಕಲೇಟ್ ಸಿಕ್ಕೀತೆಂಬ ಆಸೆಯಿಂದ
ತೇಜಸ್ವಿಯವರು ಬರುವ ದಾರಿಯಲ್ಲಿ ಕಾದು ನಿಂತು, ಅವರ ಮುಂದೆ ಸುಳಿದಾಡುತ್ತಿದ್ದರಂತೆ!. ಈ ನೆನಪಿನ ಎಳೆಯನ್ನೇ ಹಿಡಿದು ರಿಚರ‍್ಡ್ ಮತ್ತು ನಾನು ಮೂಡಿಗೆರೆಗೆ ತೇಜಸ್ವಿಯವರ ಮನೆಗೆ ಹೋದೆವು. ರಿಚರ‍್ಡ್ ತಮ್ಮ ಪರಿಚಯ ಹೇಳಿಕೊಂಡೊಡನೆ ತೇಜಸ್ವಿಯವರು ಜಾನ್ ಲೋಬೋರವರನ್ನು ನೆನಪಿಸಿಕೊಂಡು ತುಂಬ ಮಾತನಾಡಿದರು ಮನೆಮಂದಿಯ ಬಗ್ಗೆಯೆಲ್ಲ ಮಾತುಕತೆ ಸಾಗಿತು.
ನಾನು ಹೇಗಾದರೂ ಅವರನ್ನು ಮಾತಿಗೆ ಎಳೆಯುವ ಉದ್ದೇಶದಿಂದ ಮಧ್ಯೆ ಬಾಯಿ ಹಾಕಿ "ತೋಟ ಹೇಗಿದೆ ಸಾರ್ ಎಂದೆ.
"ಈಗ ಬರ‍್ತಾ ದಾರೀಲಿ ನೋಡ್ಲಿಲ್ವೇನ್ರಿ, ಗಿಡ ಹಾಕಿ ಎಂಟು ವರ್ಷ ಆಯ್ತು, ಈಗ ನೋಡಿದ್ರೆ ಜಾಡ್ಸಿ ಒದ್ದು ಬಿಡಬೇಕು ಹಂಗಿದೆ!" ಎಂದರು. ನಾನು ತೆಪ್ಪಗಾದೆ. ಲೋಬೋ ಮಾತು ಮುಂದುವರೆಸಿದರು.
"ನೀವೆಲ್ಲ ಹುಡುಗ್ರು ಬೆಳ್ದಿದ್ದೀರಿ ನಾನು ಗುರುತು ಹಿಡಿಯೋಕ್ಕಾಗಲ್ಲ ಸದ ನೀನು ನೆನಪಿಟ್ಕೊಂಡಿದ್ದೀಯಲ್ಲ! ಮತ್ತೆ ಏನ್ ವಿಷ್ಯ ಎಂದರು. ಲೋಬೋ ನನ್ನತ್ತ ನೋಡಿದರು.
ನಾನು ಮೆಲ್ಲನೆ ನಮ್ಮ ರಂಗತರಬೇತಿ ಶಿಬಿರದ ವಿಚಾರವಾಗಿ ಮುದ್ರಿಸಿಕೊಂಡಿದ್ದ ಸಣ್ಣ ಕರಪತ್ರವೊಂದನ್ನು ಅವರಿಗೆ ಕೊಟ್ಟೆ. ಅದನ್ನು ತೆಗೆದುಕೊಂಡು ಸ್ವಲ್ಪ ಹುಬ್ಬುಗಂಟಿಕ್ಕಿ ನನ್ನನ್ನೇ ನೋಡಿದರು. ನೋಡಿದ ರೀತಿ ಚಂದಾ ವಸೂಲಿಗೆ ಬರುವವರನ್ನು ನೋಡಿದಂತಿತ್ತು. ಕೂಡಲೇ ನಾನು ಗಾಬರಿಯಿಂದ "ಇದೊಂದು ಕಾರ್ಯಕ್ರಮ ಮಾಡ್ತಾ ಇದ್ದೀವಿ ನೀವು ಬರ‍್ಬೇಕು"ಎಂದೆ.
ನಿಧಾನವಾಗಿ ಕರಪತ್ರವನ್ನು ಓದಿದರು. ನಿಧಾನವಾಗಿ ಮುಖಚಹರೆ ಬದಲಾಯಿತು.
"ಈ ಕಾಡಲ್ಲಿ ಕೂತ್ಕೊಂಡು ಇದೆಲ್ಲ ಮಾಡೋಕೆ ನಿಮ್ಗೆ ಹೆಂಗ್ ಹೊಳೀತು ಮಾರಾಯ್ರ, ಎಂದ್ ಹೇಳು ಬರ‍್ತೀನಿ" ಎಂದರು.
"ಸಾರ್ ನೀವು ಬರುವ ವ್ಯವಸ್ಥೆ" ಎಂದೆ ಅವಸರದಿಂದ.
"ಎಂಥದ್ದೂ ಬೇಡ ನನ್ ಸ್ಕೂಟರಿದೆ ಬರ‍್ತೀನಿ"
ಕಾರ್ಯಕ್ರಮದ ದಿನಾಂಕ ಸಮಯವನ್ನೆಲ್ಲ ತಿಳಿಸಿದ ರಿಚರ‍್ಡ್ ತೇಜಸ್ವಿಯವರನ್ನು ಕಾರ್ಯಕ್ರಮದ ದಿನ ರಾತ್ರಿ ಊಟಕ್ಕೆ ಅವರಲ್ಲಿಗೆ ಬರುವಂತೆ ಆಹ್ವಾನಿಸಿದರು. ತೇಜಸ್ವಿಯವರನ್ನು ಒಪ್ಪಿಸಿದ ಖುಷಿಯಲ್ಲಿ ಊರಿಗೆ ಬಂದೆವು. ಉದ್ಘಾಟನಾ ಸಮಾರಂಭದ ಸಿದ್ದತೆಗಳು ನಡೆದವು ಮತ್ತು ಅದಕ್ಕೊಂದು ಕರಪತ್ರವೂ ತಯಾರಾಯಿತು.
೧೯೮೮ ನವೆಂಬರ್ ಒಂದರಂದು-ಕನ್ನಡ ರಾಜ್ಯೋತ್ಸವದ ದಿನ ಸಂಜೆ ಐದು ಗಂಟೆಗೆ ರಂಗ ತರಬೇತಿ ಶಿಬಿರದ ಉದ್ಘಾಟನೆಯಾಗಲಿತ್ತು. ನಮ್ಮ ಗೆಳೆಯರ ಬಳಗವೆಲ್ಲ ಉತ್ಸಾಹದಿಂದ ಸೇರಿತ್ತು. ನಿರ್ದೇಶಕರುಗಳಾದ ಮಂಡ್ಯರಮೇಶ್ ಮತ್ತು ಕೃಷ್ಣಕುಮಾರ್ ಹಿಂದಿನ ದಿನವೇ ಬಂದಿದ್ದರು.
ಸಂಜೆ ವೇಳೆಗೆ ಸಕಲೇಶಪುರದಿಂದ ಬಂದ ಕೆಲವರು ಗೆಳೆಯರು "ನಿಮಗೆ ಅಷ್ಟೂ ಬುದ್ದಿ ಬೇಡ್ವಾ? ಅವರಿಗೆ ಇವತ್ತು ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ಇದೆ. ಅವರೇನೋ ಮರ‍್ತು ನಿಮಗೆ ಡೇಟ್ ಕೊಟ್ಟಿದ್ದಾರೆ. ನೀವು ಫೋನ್ ಮಾಡಿ ವಿಚಾರಿಸೋದಲ್ವ?" ಎಂದು ಬೈದರು. ಫೋನ್ ಮಾಡಿ ಕೇಳಲು ಆಗ ನಮ್ಮೂರಲ್ಲಿ ಫೋನೇ ಇರಲಿಲ್ಲ. ದೂರದ ಕೆಲವು ದೊಡ್ಡ ಕಾಫಿ ತೋಟಗಳಲ್ಲಿ ಮಾತ್ರ ಫೋನಿತ್ತು ಅಥವಾ ನಾವೇ ಮೂಡಿಗೆರೆಗೆ ಹೋಗಿ ವಿಚಾರಿಸಬೇಕಿತ್ತು ಆದರೆ ಮೂಡಿಗೆರೆ ಇಲ್ಲಿಂದ ೨೬ ಕಿ ಮೀ ದೂರವಿದೆ.
ತೇಜಸ್ವಿಯವರ ಆಸೆ ಬಿಟ್ಟು ಊರಲ್ಲೇ ಯಾರಾದರೂ ಹಿರಿಯರಿಂದ ಉದ್ಘಾಟನೆ ಮಾಡಿಸುವುದೆಂದು ತೀರ್ಮಾನಿಸಿ ಹಿರಿಯರೊಬ್ಬರನ್ನು ಹುಡುಕಿ ಕಾರ್ಯಕ್ರಮ ಉದ್ಘಾಟನೆಗೆ ಅವರನ್ನು ಒಪ್ಪಿಸಿ ಕರೆತಂದೂ ಆಯ್ತು. ಸಂಜೆ ಐದು ಗಂಟೆಗೆ ಸರಿಯಾಗಿ ತೇಜಸ್ವಿಯವರು ಸ್ಕೂಟರಿನಲ್ಲಿ ಹಾಜರ್! ಜೊತೆಯಲ್ಲಿ ಕೆಂಜಿಗೆ ಪ್ರದೀಪ್ ಕೂಡ ಇದ್ದರು.
"ಸಾರ್ ಬೆಂಗಳೂರಿಗೆ ಹೋಗಲಿಲ್ವೆ?" ಆಶ್ಚರ್ಯ ಮತ್ತು ಸಂತೋಷದಿಂದ ನಾವೆಲ್ಲ ಒಟ್ಟಿಗೆ ಕಿರುಚಿಕೊಂಡೆವು.
"ಯಾರಿಗೆ ಬೇಕು ಮಾರಾಯ್ರ, ಅಲ್ಲಿ ವೇದಿಕೆ ಮೇಲೆ ಕೂರ‍್ಸಿ ವಾಚಾಮಗೋಚರವಾಗಿ ಹೊಗಳೋದು ತಡ್ಕೊಳ್ಳೋಕ್ಕಾಗಲ್ಲ ಇಲ್ಲೇ ಇಷ್ಟ ಆಯ್ತು ಬಂದ್ ಬಿಟ್ಟೆ" ಎಂದರು!
ಶಿಬಿರವನ್ನು ಉದ್ಘಾಟಿಸಿ, ರಂಗಶಿಬಿರದ ಅಗತ್ಯದ ಬಗ್ಗೆ ಹಾಗೂ ಮಲೆನಾಡಿನಲ್ಲಿ ರಂಗ ಚಟುವಟಿಕೆಗಳನ್ನು ನಡೆಸಲು ಇರುವ ಕಷ್ಟಗಳ ಬಗ್ಗೆ ಮಾತಾಡಿದರು ಅಂದು ಮಕ್ಕಳಿಂದ ಒಂದು ನಾಟಕ ಪ್ರದರ್ಶನವಿತ್ತು. ನಾಟಕದ ವಸ್ತುವೂ ಕಾಡು, ಪ್ರಾಣಿಗಳು ಮತ್ತು ಪರಿಸರದ ಬಗ್ಗೆಯೇ ಇತ್ತು. ಮಕ್ಕಳ ಅಭಿನಯವನ್ನು ಮೆಚ್ಚಿಕೊಂಡು ಈ ಕೆಲಸ ಮುಂದುವರಿಸಿ ಮಕ್ಕಳಿಗೆ ಆಸಕ್ತಿ ಮೂಡಿಸೋದು ಬಹಳ ಮುಖ್ಯ ಎಂದು ಹೇಳಿ, ನಮ್ಮೆಲ್ಲರ ಬೆನ್ನು ತಟ್ಟಿ ಹೋದರು.
* * *
೨೦೦೮ ರಲ್ಲಿ ಸಕಲೇಶಪುರದ ರೋಟರಿ ಸಂಸ್ಥೆಯ ಆಶ್ರಯದಲ್ಲಿ ’ತೇಜಸ್ವಿ ನೆನಪು’ ಕಾರ್ಯಕ್ರಮವಿತ್ತು. ತೇಜಸ್ವಿಯವರ ಬಗ್ಗೆ ಮಾತನಾಡಲು ವೇದಿಕೆಯಲ್ಲಿ ಪ್ರದೀಪ್ ಕೆಂಜಿಗೆ ಮತ್ತು ನಾನು ಇದ್ದೆವು. ಮೊದಲು ಮಾತನಾಡಿದ ನಾನು ಈ ಮೇಲಿನ ಘಟನೆಯನ್ನು ನೆನಪಿಸಿಕೊಂಡು ತೇಜಸ್ವಿಯವರ ಬಗ್ಗೆ ಮಾತನಾಡಿದೆ. ನಂತರ ಮಾತನಾಡುವಾಗ ಪ್ರದೀಪ್ ಅಂದು ನಡೆದ ಸಂಗತಿಯನ್ನು ಒಂದು ತಿದ್ದುಪಡಿಯೊಂದಿಗೆ ವಿವರಿಸಿದರು. ಆ ದಿನ ನಾವೆಂದುಕೊಂಡಂತೆ ತೇಜಸ್ವಿಯವರು ಸ್ವೀಕರಿಸಬೇಕಾದ್ದು ರಾಜ್ಯೋತ್ಸವ ಪ್ರಶಸ್ತಿ ಅಲ್ಲ. ಅಂದಿನ ಘಟನೆಯನ್ನು ಪ್ರದೀಪ್ ಅವರ ಮಾತಿನಲ್ಲಿ ಕೇಳಿ.
"ಅಂದು ಸಂಜೆ ನಾಲ್ಕರವೇಳೆಗೆ ತೇಜಸ್ವಿಯವರು ’ಬಾ ಇಲ್ಲೇ ಬೆಳ್ಳೇಕೆರೆಗೆ ಹೋಗಿಬರೋಣ, ಒಂದು ರಂಗ ತರಬೇತಿಶಿಬಿರ ಮಾಡ್ತಾ ಇದ್ದಾರೆ’ ಎಂದರು. ಇಬ್ಬರೂ ಅವರ ಸ್ಕೂಟರಿನಲ್ಲೇ ಹೊರಟೆವು. ದಾರಿಯಲ್ಲಿ ಚಿಟ್ಟನಹಳ್ಳದ (ಹಾನುಬಾಳಿನಿಂದೀಚೆ ಅಗಲಟ್ಟಿ ಗ್ರಾಮದಲ್ಲಿ ಚಿಟ್ಟನ ಹಳ್ಳ ಹರಿಯುತ್ತದೆ) ಹತ್ತಿರ ಬರುವಾಗ ಸ್ಕೂಟರ್ ನಿಲ್ಲಿಸಿ ’ಇಲ್ಲಿ ಎಂಥ ಮೀನಿದೆ ನೋಡೋಣ ಬಾ’ ಎಂದು ಹಳ್ಳದ ಹತ್ತಿರ ಹೋದರು. ನಾನು ಅವರ ಹಿಂದೆಯೇ ಹೋದೆ. ಹಳ್ಳದ ಬಳಿ ಪ್ಯಾಂಟಿನ ಜೇಬಿಗೆ ಕೈ ಹಾಕಿ ಏನನ್ನೋ ತೆಗೆದರು. ಅಷ್ಟರಲ್ಲಿ ಒಂದು ಚೀಟಿ ಅವರ ಜೇಬಿನಿಂದ ಜಾರಿ ಕೆಳಗೆ ಬಿತ್ತು. ಹೆಕ್ಕಿ ಕೊಡೋಣವೆಂದು ತೆಗೆದು ನೋಡಿದೆ. ಅದೊಂದು ವಿಮಾನಯಾನದ ಟಿಕೆಟ್ ಅದೂ ದೆಹಲಿಗೆ. ’ನೋಡಿ ಫ್ಲೈಟ್ ಟಿಕೆಟ್ ಎಂದು ಅವರಿಗೆ ಕೊಟ್ಟೆ. ಅದನ್ನೊಮ್ಮೆ ಬಿಡಿಸಿನೋಡಿ ’ಇದರಮನೆ ಹಾಳಾಯ್ತು’ ಎಂದು ಹೊಳೆಗೆಸೆದರು. ಹೊಳೆಯಲ್ಲಿನ ಮೀನುಗಳನ್ನು ನೋಡಿ ಮತ್ತೆ ಬೆಳ್ಳೇಕೆರೆಯತ್ತ ಹೊರಟೆವು.
ಅವರ ತಬರನ ಕಥೆ ಸಿನಿಮಾ ಆಗಿ ಕಥಾ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ಗಳಿಸಿತ್ತು. ಪ್ರಶಸ್ತಿ ಸ್ವೀಕರಿಸಲು ದೆಹಲಿಗೆ ಹೋಗಲು ಸರ್ಕಾರ ಕಳಿಸಿದ ವಿಮಾನಯಾನದ ಟಿಕೆಟ್ಟಾಗಿತ್ತು ಅದು." ದೆಹಲಿಗೆ ಹೋಗುವುದನ್ನು ಬಿಟ್ಟು ಅಂದು ಅವರು ಬೆಳ್ಳೇಕೆರೆಗೆ ನಮ್ಮ ರಂಗ ಶಿಬಿರದ ಉದ್ಘಾಟನೆಗಾಗಿ ಬಂದಿದ್ದರು !
* * *
ನಮ್ಮ ರಂಗ ತಂಡದ ನಟಿ ಶೋಭಾ, ತೇಜಸ್ವಿಯವರ ಕಾದಂಬರಿ ’ಕರ್ವಾಲೋ’ ದಲ್ಲಿ ಬರುವ "ಬಿರ್ಯಾನಿ ಕರಿಯಪ್ಪನ ಮಗಳು. ನಮ್ಮೂರಿಗೆ ಅಂಗನವಾಡಿಗೋ ಶಿಶುವಿಹಾರಕ್ಕೋ ಟೀಚರಾಗಿ ಬಂದ ಶೋಭಾ ನಮ್ಮ ರಂಗತಂಡದ ಹಿರಿಯ ನಟ ಉಗ್ಗಪ್ಪನನ್ನು ಮದುವೆಯಾಗಿ ಇಲ್ಲೇ ನೆಲೆಸಿದಳು. ತೇಜಸ್ವಿಯವರು ಜನ್ನಾಪುರದ "ಚಿತ್ರಕೂಟ"ದಲ್ಲಿದ್ದಾಗ ಈ ಕರಿಯಪ್ಪನ ಸಂಸಾರವೆಲ್ಲ ಅವರಲ್ಲಿಗೆ ಕೆಲಸಕ್ಕೆ ಹೋಗುತ್ತಿತ್ತಂತೆ. ಆ ಪರಿಚಯದಿಂದ ಈಕೆ ರಂಗ ಶಿಬಿರದ ಉದ್ಘಾಟನೆಗೆಂದು ಬಂದಿದ್ದ ತೇಜಸ್ವಿಯವರನ್ನು ಮಾತಾಡಿಸಿದಳು.
ಮುಂದೆ ಈ ಶೋಭಾ ಮೂಡಿಗೆರೆಗೆ ಹೋದಾಗ ಕೆಲವುಸಾರಿ ತೇಜಸ್ವಿಯವರ ಮನೆಗೆ ಹೋಗಿ ನಮ್ಮ ರಂಗ ವಾರ್ತೆಗಳನ್ನು ಬಿತ್ತರಿಸತೊಡಗಿದಳು. ಈಕೆಯ ಮೂಲಕ ತೇಜಸ್ವಿಯವರಿಗೆ ನಮ್ಮ ರಂಗ ಚಟುವಟಿಕೆಗಳು, ನಮ್ಮ ಜಗಳಗಳೆಲ್ಲ ವರದಿಯಾಗತೊಡಗಿದವು.
"ಬಿರ್ಯಾನಿ ಕರಿಯಪ್ಪ ಮಾಂಸದಡುಗೆಗೆ ಬಹಳ ಪ್ರಸಿದ್ಧ. ಈತನ ಖ್ಯಾತಿ ನಮ್ಮ ಸಕಲೇಶಪುರ-ಮೂಡಿಗೆರೆ ಮಾತ್ರವಲ್ಲ ಕೊಡಗಿನ ಸೋಮವಾರಪೇಟೆ ತಾಲ್ಲೂಕಿನವರೆಗೂ ಹರಡಿದೆ. ೧೯೭೦ ಮತ್ತು ೮೦ರ ದಶಕಗಳಲ್ಲಿ ಯಾವುದೇ ಸಮಾರಂಭದಲ್ಲಿ "ಕರಿಯಪ್ಪ ಗೌಡರ ಅಡಿಗೆ" ಎಂದು ಸುದ್ದಿಯಾದರೆ ಸಾಕು ಊಟಕ್ಕೆ ಹಾಜರಾಗುವವರ ಸಂಖ್ಯೆ ಇಮ್ಮಡಿಯಾಗುತಿತ್ತು! ಈ ಅಡಿಗೆ ಕಲೆ ತಂದೆಯಿಂದ ಮಗಳಿಗೂ ಇಳಿದುಬಂದಿದೆ.
* * *
ರಾಜ್ಯದಲ್ಲಿ ಜಿಲ್ಲಾ ಪಂಚಾಯತ್ ಚುನಾವಣೆ ಘೋಷಣೆಯಾಗಿತ್ತು. ಹಾನುಬಾಳು ಕ್ಷೇತ್ರದಿಂದ (ನಮ್ಮ ಬೆಳ್ಳೇಕೆರೆ ಹಾನುಬಾಳು ಹೋಬಳಿಗೆ ಸೇರಿರುವ ಗ್ರಾಮ) ಆ ಬಾರಿ, ಕಾಂಗ್ರೆಸ್‌ಪಕ್ಷದಲ್ಲಿದ್ದ ಅಪ್ಪಣ್ಣ ಎಂಬವರನ್ನು ಕರೆದುತಂದು ಜನತಾದಳದಿಂದ ಅಭ್ಯರ್ಥಿಯಾಗಿ ನಿಲ್ಲಿಸಿದರು. ಜನತಾದಳಕ್ಕೆ ಅನುಕೂಲವಾದ ವಾತಾವರಣ ಕಂಡುಬರುತ್ತಿದ್ದುದರಿಂದ ಆ ಪಕ್ಷದ ಕಾರ್ಯಕರ್ತರು ಎಲ್ಲಾಕಡೆ ಉತ್ಸಾಹದಿಂದ ಓಡಾಡುತ್ತಿದ್ದರು. ನಮ್ಮ ರಂಗ ತಂಡದ ಸದ್ಯರೆಲ್ಲ ಒಟ್ಟಾಗಿ ಚುನಾವಣೆಗೆ ಮುಂಚೆಯೇ ಅಪ್ಪಣ್ಣನವರಲ್ಲಿ "ನೀವು ಗೆದ್ದರೆ ಈ ಬಾರಿ ನಮ್ಮಲ್ಲಿ ನಡೆಯುವ ನೀನಾಸಂ ತಿರುಗಾಟದ ನಾಟಕಗಳಿಗೆ ನೀವು ಪ್ರಾಯೋಜಕರಾಗಬೇಕು" (ನಾಟಕ ಪ್ರದರ್ಶನವೇರ್ಪಡಿಸಲು ಬೇಕಾದ ಹಣಕ್ಕೆ ನಮ್ಮಲ್ಲಿ ಕೊರತೆ ಇತ್ತು) ಎಂಬ ಶರತ್ತಿನೊಡನೆ ಅವರಿಗೆ ಬೆಂಬಲ ಕೊಟ್ಟಿದ್ದೆವು.! ಕಾಂಗ್ರೆಸ್‌ನವರು "ಜನತಾದಳದ ಅಭ್ಯರ್ಥಿ ಕಾಂಗ್ರೆಸ್ ಅಪ್ಪಣ್ಣ" ಎಂದು ಹಾಸ್ಯ ಮಾಡತೊಡಗಿದರು. ಆ ಚುನಾವಣೆಯ ಸಂದರ್ಭದಲ್ಲಿ ರಾಜ್ಯದಲ್ಲಿ ಜನತಾ ಅಲೆ ಇದ್ದುದರಿಂದ ಅಪ್ಪಣ್ಣ ಚುನಾವಣೆಯಲ್ಲಿ ಗೆದ್ದು ಜಿಲ್ಲಾಪಂಚಾಯತ್ ಸದಸ್ಯರಾದರು.
ನಮ್ಮ ಬಳಗವೆಲ್ಲ ಅಪ್ಪಣ್ಣನವರ ಪರವಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದುದರಿಂದ, ಚುನಾವಣೆ ಮುಗಿಯುವವರೆಗೆ ನಾವು ಯಾವುದೇ ರಂಗ ಚಟುಚಟಿಕೆಗೆ ಇಳಿಯಲಿಲ್ಲ. ಆದರೆ ’ನೀನಾಸಂ ತಿರುಗಾಟ’ವನ್ನು ನಮ್ಮಲ್ಲಿ ಪ್ರದರ್ಶನ ನೀಡಲು ಆಹ್ವಾನಿಸಿದ್ದೆವು. ನಮ್ಮ "ಶರತ್ತಿನ ಅಭ್ಯರ್ಥಿ ಚುನಾವಣೆಯಲ್ಲಿ ಗೆದ್ದಿದ್ದರಾದ್ದರಿಂದ ನಾಟಕಗಳ ಪ್ರಾಯೋಜಕರಾಗಲು ಒಪ್ಪಿಕೊಂಡಿದ್ದರು. ಆದ್ದರಿಂದ ನಾವು ಖರ್ಚುವೆಚ್ಚಗಳ ಬಗೆಗೆ ತಲೆಕೆಡಿಸಿಕೊಳ್ಳದೆ ನಾಟಕ ಪ್ರದರ್ಶನದ ವ್ಯವಸ್ಥೆ ಮಾಡಿದರೆ ಸಾಕಾಗಿತ್ತು. ನಾಟಕ ತಂಡದ ವಸತಿಗೆ ನಮ್ಮೂರ ಶಾಲೆಯಿದ್ದರೆ, ಊಟದ ವ್ಯವಸ್ಥೆಗೆ ಮತ್ತು ಅಡಿಗೆಗೆ ಕರಿಯಪ್ಪ ಗೌಡರನ್ನೇ ಕರೆಸಿದ್ದೆವು.
ಆ ವರ್ಷ. ನೀನಾಸಂ ತಿರುಗಾಟ ’ಕನಕಾಗಮನ’, ’ಆಊರು-ಈಊರು’ ಮತ್ತು ’ಕಿರಗೂರಿನ ಗಯ್ಯಾಳಿಗಳು’ ಎಂಬ ಮೂರು ನಾಟಕಗಳನ್ನು ಪ್ರದರ್ಶನಕ್ಕೆ ಸಿದ್ಧಪಡಿಸಿಕೊಂಡಿತ್ತು. ನಾಟಕಗಳಿಗೆ ಪ್ರಾಯೋಜಕರಿದ್ದುದರಿಂದ ಟಿಕೆಟ್ ಇಟ್ಟಿರಲಿಲ್ಲ. ಆಗಷ್ಟೇ ಚುನಾವಣೆಗಳು ಮುಗಿದ ಹುಮ್ಮಸ್ಸಿನಲ್ಲಿ ಇದ್ದುದರಿಂದ ಸುತ್ತಮುತ್ತ ಹಲವು ಊರುಗಳಿಂದ ನಾಟಕ ನೋಡಲು ತುಂಬಾ ಜನ ಬಂದು ಸೇರಿದ್ದರು. ಮೊದಲನೇ ದಿನವೇ ’ಕಿರಗೂರಿನ ಗಯ್ಯಾಳಿಗಳು’ ನಾಟಕ. ಈ ನಾಟಕದಲ್ಲಿ ಕೆಲವು ಮಾತುಗಳು ದಲಿತರನ್ನು ಅವಹೇಳನ ಮಾಡುವಂತೆ ಇದೆ ಎಂದು ಯಾರೋ ಕೆಲವರು ನಮ್ಮೂರಿನ ದಲಿತ ಹುಡುಗರಿಗೆ ಹೇಳಿದ್ದರಂತೆ. ಅದಕ್ಕೆ ತಾಳೆಯಾಗುವಂತೆ ನಾಟಕದ ಪ್ರಥಮಾರ್ಧದಲ್ಲಿ ದಲಿತರನ್ನು ಬೈಯುವ ಒಂದೆರಡು ಮಾತುಗಳೂ ಇವೆ. ಇದನ್ನು ಕೇಳಿದ ತಕ್ಷಣ ಕೆಲವು ಕಿಡಿಗೇಡಿಗಳು ಆ ಬೈಗುಳ ಮಾತುಗಳನ್ನು ಬೇಕೆಂದೇ ಎಲ್ಲರಿಗೂ ಕೇಳುವಂತೆ ಗಟ್ಟಿಯಾಗಿ ಪುನರುಚ್ಚರಿಸುತ್ತಾ ಕೂತರು. ದಲಿತ ಹುಡುಗರು ರೊಚ್ಚಿಗೆದ್ದರು. ಇನ್ನೇನು ಪ್ರೇಕ್ಷಕರಲ್ಲೇ ಎರಡು ಗುಂಪಾಗಿ ಹೊಡೆದಾಟವಾಗುವ ಲಕ್ಷಣಗಳು ಕಾಣಿಸತೊಡಗಿತು. ಅಷ್ಟರಲ್ಲಿ ನಾಟಕದ ಮಧ್ಯಂತರ ವಿರಾಮ ಬಂತು.
ಆಗ ಕೆಲವರು ದಲಿತ ಹುಡುಗರು "ಈ ನಾಟಕದಿಂದ ನಮಗೆ ಅವಮಾನವಾಗುತ್ತಿದೆ. ಈ ನಾಟಕವನ್ನು ಕೂಡಲೇ ನಿಲ್ಲಿಸಬೇಕೆಂದು" ನಮ್ಮಲ್ಲಿ ಒತ್ತಾಯ ಮಾಡತೊಡಗಿದರು. ಅಲ್ಲೇ ಇದ್ದ ಕೆಲವರು ಮರಿ ರಾಜಕಾರಣಿಗಳಿಗೆ, ನಾಟಕದ ಬಗ್ಗೆ ಏನೇನೂ ಗೊತ್ತಿಲ್ಲದ್ದಿದ್ದರೂ ’ದಲಿತ ವಿರೋಧಿಗಳು’ ಎಂಬ ಹಣೆಪಟ್ಟಿ ತಮಗೂ ಬಂದೀತೆಂಬ ಭಯ ಕಾಡತೊಡಗಿ "ಈ ನಾಟಕ ನಿಲ್ಲಿಸುವುದೇ ಒಳ್ಳೆಯದು, ಸುಮ್ಮನೆ ಗಲಾಟೆ ಯಾಕೆ" ಎಂದೆಲ್ಲ ಹೇಳತೊಡಗಿದರು.
ನಾವೇನಾದರೂ ನಾಟಕವನ್ನು ನಿಲ್ಲಿಸಿದರೆ ದೊಡ್ಡ ರಾದ್ಧಾಂತವೇ ಆಗುತ್ತಿತ್ತು. ನಾಟಕವನ್ನು ನಿಲ್ಲಿಸಿದ ಕೂಡಲೇ ಇತರರು ಗಲಾಟೆ ಮಾಡುವುದಲ್ಲದೆ ದಲಿತರ ಮೇಲೆ ಹೊಡೆದಾಟಕ್ಕೂ ಹೋಗುತ್ತಿದ್ದರು. ಅಲ್ಲದೆ ಮುಂದಿನ ಎರಡು ದಿನಗಳಲ್ಲೂ ನಾಟಕ ಮಾಡಲು ಸಾಧ್ಯವಾಗುತ್ತಿರಲಿಲ್ಲ. ನಾವು ಇದುವರೆಗೆ ನಂಬಿಕೊಂಡು ಬಂದ ಮೌಲ್ಯಗಳನ್ನು ಗಾಳಿಗೆ ತೂರಿದಂತಾಗುವುದಲ್ಲದೆ, ’ನಾಟಕ ದಲಿತ ವಿರೋಧಿಯಾಗಿದೆ’ ಎಂದು ಪ್ರಚಾರವಾಗುತ್ತಿತ್ತು.
ಈ ದಲಿತ ಹುಡುಗರೆಲ್ಲ ನಮ್ಮ ಸುತ್ತಲಿನ ಊರವರೇ. ನಮಗೆಲ್ಲ ಚೆನ್ನಾಗಿ ಪರಿಚಿತರೇ. ಆದರೆ ಯಾರೂ ಹೆಚ್ಚಿನ ವಿದ್ಯಾವಂತರಿರಲಿಲ್ಲ.
ಈ ವೇಳೆಗೆ ನಮ್ಮ ತಾಲ್ಲೂಕಿನಲ್ಲಿ ಬಹುಜನ ಸಮಾಜ ಪಾರ್ಟಿ ಸ್ವಲ್ಪ ಮಟ್ಟಿಗೆ ಪ್ರಚಾರಕ್ಕೆ ಬಂದಿತ್ತು. ಒಂದೆರಡು ಚುನಾವಣೆಗಳಲ್ಲಿ ಬಿ.ಎಸ್.ಪಿ. ಅಭ್ಯರ್ಥಿಗಳು ಸ್ಪರ್ಧಿಸಿಯೂ ಇದ್ದರು. ಈ ಹುಡುಗರಲ್ಲಿ ಕೆಲವರು ಬಿ.ಎಸ್.ಪಿ ಕಾರ್ಯಕರ್ತರೂ ಇದ್ದರು. ನಾವೊಂದೆರಡು ಜನರು ಅವರಲ್ಲಿ ಕೆಲವರನ್ನು ಸ್ವಲ್ಪ ದೂರಕ್ಕೆ ಕರೆದೊಯ್ದು ಹೇಳಿದೆವು.
"ನಿಮ್ಮಲ್ಲಿ ಕೆಲವರು ಬಿ.ಎಸ್.ಪಿ ಕಾರ್ಯಕರ್ತರಿದ್ದೀರ ಹೌದಲ್ಲ
"ಹ್ಞುಂ"
"ಬಿ.ಎಸ್.ಪಿ. ಪೋಸ್ಟರ್‌ಗಳಲ್ಲಿ ಕುವೆಂಪು ಚಿತ್ರ ಇದೆ ಯಾಕೆ?"
"ಅವರು ವಿಚಾರವಾದಿಗಳು ಅದಕ್ಕೆ"
"ಅಂದರೆ ನೀವು ನಂಬಿದ ತತ್ವಕ್ಕೆ ಹೊಂದಿಕೆಯಾಗುವಂತೆ ಅವರ ವಿಚಾರಗಳು ಇದೆ ಅಲ್ವೆ?"
"ಹೌದು, ಆದ್ರೆ ಅದ್ಕೂ ಇದ್ಕೂ ಏನು ಸಂಬಂಧ?"
"ಅದೇ ಹೇಳ್ತೀವಿ, ಈ ನಾಟಕದ ಕಥೆ ಬರೆದವರು ಯಾರು ಗೊತ್ತಾ?"
"ಅದೇ ಹಾಕಿದ್ದೀರಲ್ಲ- ಹ್ಯಾಂಡ್‌ಬಿಲ್ಲಲ್ಲಿ ತೇಜಸ್ವಿ ಅಂತ"
"ಅವರ‍್ಯಾರು ಗೊತ್ತಾ?"
".............."
"ಹೇಳಿ"
"ಕುವೆಂಪು ಮಗ"
"ಸರಿ ಅವರು ನಿಮ್ಮ ವಿರುದ್ಧ ಇದ್ದಾರಾ?"
". . . . . . . . ."
"ತೇಜಸ್ವಿ ಕೂಡಾ ಕುವೆಂಪು ಅವರಷ್ಟೇ ವಿಚಾರವಾದಿಗಳು, ನಿಮಗೆ ಗೊತ್ತಿರಬೇಕಲ್ಲ?"
".........................."

(ಮುಂದುವರೆಯುವುದು)


ಪ್ರಸಾದ್ ರಕ್ಷಿದಿ

ರಂಗಕರ್ಮಿಗಳು, ಬೆಳ್ಳೇಕೆರೆ, ಸಕಲೇಶಪುರ ತಾಲ್ಲೂಕು

ಜಾಗತೀಕರಣ ಸಂದರ್ಭದಲ್ಲಿ ಇತ್ತೀಚಿನ ಕನ್ನಡ ಸಾಹಿತ್ಯದ ಧೋರಣೆಗಳು





ಜಾಗತೀಕರಣಗೊಂಡ ಕನ್ನಡ ಸಾಹಿತ್ಯದ ಚರಿತ್ರೆಯನ್ನು ಗಮನಿಸುವಾಗ ಹಲವಾರು ಮಹತ್ವದ ಸ್ಥಿತ್ಯಂತರಗಳು ಎದ್ದುಕಾಣುತ್ತವೆ. ಕುವೆಂಪು; ಬೇಂದ್ರೆ. ಗೋಕಾಕರಿಂದ ಹಿಡಿದು ಯು.ಆರ್.ಅನಂತಮೂರ್ತಿ. ಗಿರೀಶಕಾರ್ನಾಡರವರೆಗೆ ಕನ್ನಡ ಸಾಹಿತ್ಯ ಜಾಗತೀಕರಣದ ಛಾಯೆಯನ್ನೇ ಪಡೆದುಕೊಂಡು ಮಣ್ಣಿನ ವಾಸನೆಯಿಂದ ಬೆಳೆದುಬಂದಿದೆ. ಒಂದು ಅರ್ಥದಲ್ಲಿ ಆಧುನಿಕ ಕನ್ನಡ ಸಾಹಿತ್ಯವೆಂದು ಕರೆದರೂ ಅದು ಪರ್ಯಾಯವಾಗಿ ಜಾಗತೀಕರಣಗೊಂಡ ಕನ್ನಡ ಸಾಹಿತ್ಯವೆ ಸರಿ. ಐವತ್ತು ವರ್ಷಗಳ ಈ ಕನ್ನಡ ಸಾಹಿತ್ಯ ಹಲವು ಪ್ರಮುಖ-ಅಪ್ರಮುಖ ಸಾಹಿತ್ಯದಾರಿಗಳನ್ನು ಮಾಡಿಕೊಂಡು ಹುಟ್ಟಿಕೊಂಡಿತು. ಇದೊಂದು ನಿರಂತರ ಪ್ರಯೋಗಗಳ ಚಟುವಟಿಕೆಯ ಕಾಲವಾಗಿ ಪರಿಗಣಿಸಲ್ಪಟ್ಟಿರುವುದಕ್ಕೆ ಇತಿಹಾಸವೇ ಸಾಕ್ಷಿಯಾಗಿದೆ. ಜಾಗತೀಕರಣದಿಂದ ಕನ್ನಡ ಸಾಹಿತ್ಯ ಸೊರಗುತ್ತದೆಂಬ ಇತ್ತೀಚಿನ ಕೂಗು ತನ್ನ ಅರ್ಥವನ್ನು ಕಳೆದುಕೊಂಡು ಕಾಲದಿಂದ ಕಾಲಕ್ಕೆ ಜಾಗೃತಗೊಂಡು ಇನ್ನಷ್ಟು ಮತ್ತಷ್ಟೂ ಬೆಳೆದು ಸಂಮೃದ್ಧ ಸಾಹಿತ್ಯವಾಗಿ ಬೆಳೆಯಲು ಕಾರಣವಾಗಿದೆ.
ಜಾಗತೀಕರಣದ ಬದಲಾವಣೆಯಿಂದ ಕನ್ನಡ ಸಾಹಿತ್ಯ ಹಾಗೂ ಸಂಸ್ಕೃತಿಯಲ್ಲಿ ಆದ ಬದಲಾಣೆಯನ್ನು ಪಾಶ್ಚಾತ್ಯ ಜೀವನ ಶೈಲಿಯಿಂದ ಪಡೆದುಕೊಳ್ಳಬೇಕಾಯಿತು. ಈ ಬದಲಾವಣೆಗಳನ್ನು ಹತ್ತಿರದಿಂದ ಗಮನಿಸಿದ ಸಮಾಜ ನವಜೀವನದ ಧೋರಣೆಯನ್ನೇ ಅನುಭವಿಸಿ ಪಾಶ್ಚಾತ್ಯ ಶೈಲಿಯನ್ನು ಕನ್ನಡಕ್ಕೆ ಅಳವಡಿಸಿಕೊಂಡಿತ್ತು. ಇದನ್ನೇ ನಾವು ”ಒoಜeಡಿಟಿ ಖಿhiಟಿಞ ಖಿಚಿಟಿಞ” ಎಂಬ ವಾದದ ಮೂಲಕ ಕನ್ನಡ ಸಾಹಿತ್ಯವೂ ಹೊಸ ಹೊಸ ವಿಚಾರಗಳಿಂದ ಪರಂಪರಾಗತವಾದ ಜೀವನ ಮೌಲ್ಯಗಳನ್ನು ಪರಿವರ್ತಿಸುವ, ಪುನಃ ಸೃಷ್ಟಿಸುವ ಕಾರ್ಯಕ್ಕೆ ಕತೃವಾದವರು ವಿ.ಕೃ. ಗೋಕಾಕ, ಮತ್ತು ಗೋಪಾಲಕೃಷ್ಣ ಅಡಿಗರು. ಇವರಿಂದ ಪ್ರಾರಂಭಗೊಂಡ ಕನ್ನಡ ಪರಂಪರೆ ಜಾಗತೀಕರಣದ ಕನ್ನಡ ಸಾಹಿತ್ಯದ ರೂಪವಾಗಿ ಬೆಳೆಯಿತು.
ಜಾಗತೀಕರಣ ಸಂದರ್ಭದಲ್ಲಿ ಕನ್ನಡ ಸಾಹಿತ್ಯದ ಒಂದು ಗಟ್ಟಿ ಪರಂಪರೆ ಅನೇಕ ಆ ತಲೆಮಾರಿನ ಹಿರಿಕಿರಿಯ ಸಾಹಿತಿಗಳ ಮಾಗದರ್ಶನದಿಂದ ಕನ್ನಡ ಸಾಹಿತ್ಯವನ್ನು ಬಿತ್ತಿಬೆಳೆದು ಸಂಮೃದ್ಧಿಯ ಬೆಳಯನ್ನು ತೆಗೆಯಲು ಕಾರಣರಾದರು. ಕನ್ನಡ ಸಾಹಿತ್ಯ ನವ್ಯತೆಯತ್ತ ದಾಪುಗಾಲು ಹಾಕಿತು. ಕನ್ನಡ ಕಾವ್ಯ ಪಂಪನಿಂದ ಇಂದಿನವರೆಗೂ ಹಲವಾರು ರೂಪಗಳನ್ನು ಪಡೆದುಕೊಂಡು ಪ್ರಯೋಗಗೊಂಡು, ನವೋದಯ, ನವ್ಯ, ನವ್ಯೇತ್ತರ, ದಲಿತ ಬಂಡಾಯದಂತಹ ಸಾಹಿತ್ಯ ಪ್ರಕಾರಗಳು ಹುಟ್ಟಿಬಂದವು, ಇವೆ ಕನ್ನಡ ಸಾಹಿತ್ಯ ರೂಪಗಳೂ ಜಾಗತೀಕರಣಗೊಂಡು ಹೊಸ ಹೊಸ ಪ್ರಯೋಗಕ್ಕೆ ನಾಂದಿಯಾಯಿತು, ಜಗತ್ತಿನ ಇತರ ಭಾಷೆಗಳ ಸಾಹಿತ್ಯದಲ್ಲಿ ಇದೆ ತೆರನಾದ ಬದಲಾವಣೆಗಳಾದವು, ಹಾಗೆಯೇ ಕನ್ನಡ ಸಾಹಿತ್ಯದಲ್ಲಿಯೂ ಸಾಕಷ್ಟು ಬದಲಾವಣೆಗಳನ್ನು ಪಡೆದುಕೊಂಡಿತು, ಕನ್ನಡದ ನವ್ಯತೆ ಪಾಶ್ಚತ್ಯರ ಧೋರಣೆಯ ಫಲಶೃತಿಯಾಗಿಯೇ ಬಂದದ್ದು, ಟಿ.ಎಸ್. ಎಲಿಯಟ್‌ನ, ವೇಸ್ಟ್ ಲ್ಯಾಂಡ್‌ದಂತಹ ಕಾವ್ಯ ಹಾಗೂ ವಿಮರ್ಶೆಯ ವಿಚಾರಗಳು ಜಗತ್ತಿನ ಸಾಹಿತ್ಯದ ದಿಕ್ಕನ್ನೇ ಬದಲಿಸಿದಂತೆ ನವ್ಯ ಪ್ರಯೋಗಗಳು ಕನ್ನಡ ಸಾಹಿತ್ಯ ತನ್ನ ಗರ್ಭದಲ್ಲಿ ಕರಗಿಸಿಕೊಂಡು ಮಾದರಿಯಾಗಿ ಬೆಳೆಯಿತು. ಕನ್ನಡ ಸಾಹಿತ್ಯಕ್ಕೆ ಜಾಗತೀಕರಣವೆಂಬುದು ಇಂದು ನಿನ್ನೆಯದಲ್ಲ, ಅದು ಪಂಪ, ರನ್ನರ ಕಾಲದಿಂದಲೂ ನಡೆದುಬಂದ ವಿಚಾರ. ಸಂಸ್ಕೃತದಿಂದ ಪ್ರಭಾವಿತನಾದ ಪಂಪ ಕನ್ನಡದಲ್ಲಿ ಆ ಸಾಹಿತ್ಯದ ರೂಪಗಳನ್ನು ತರಲು ಪ್ರಯತ್ನಿಸಿ ಯಶಸ್ವಿಯಾದ, ಪಂಪನ ಕಾಲದಲ್ಲಿ ಕನ್ನಡದ ಜಾಗತೀಕರಣ ಇಂದಿಗೂ ಅದು ಹೊಸ ಹೊಸ ಆಯಾಮಗಳನ್ನು ಪಡೆದು ಮತ್ತಷ್ಟು ಶ್ರೀಮಂತವಾಗಿದೆ.
ಕನ್ನಡ ಸಾಹಿತ್ಯವನ್ನು ಗಮನಿಸುವಾಗ ಮುಖ್ಯವಾಗಿ ಕನ್ನಡಿಗರಿಗೆ ಪಾಶ್ಚಾತ್ಯರ ಪ್ರಭಾವದಿಂದ ಪ್ರೇರಿತರಾಗಿ ಸಾಹಿತ್ಯದ ಲಕ್ಷಣಗಳನ್ನು ನಮ್ಮಲ್ಲಿಯೂ ಬದಲಾವಣೆ ತರಲು ಪ್ರಯತ್ನಿಸಿದರ ಫಲವೇ ಹೊಸ ಲಕ್ಷಣಗಳನ್ನು ಪಡೆಯಬೇಕಾಯಿತು, ಪಾಶ್ಚಾತ್ಯ ದೇಶಗಳಲ್ಲಿ ಮುಖ್ಯವಾಗಿ, ಇಂಗ್ಲೆಂಡಿನಲ್ಲಿ ಈ ಶತಮಾನದ ಪ್ರಾರಂಭದಿಂದಲೇ ನವ್ಯತೆಯ ಲಕ್ಷಣಗಳು ಗೋಚರಿಸಲು ಕಾರಣವಾಯಿತು. ವೈಚಾರಿಕ ಕ್ಷೇತ್ರದಲ್ಲಿ ಹೊಸ ಕ್ರಾಂತಿಯ ಅಲೆಯೇ ಶುರುವಾಯಿತು. ಡಾರ್ವಿನ್ನರ ವಿಕಾಸವಾದ, ಮಾರ್ಕ್ಸ್‌ನ ಆರ್ಥಿಕ ಸಿದ್ಧಾಂತ ಹಾಗೂ ಫ್ರಾಯಿಡನ ಮನೋವೈಜ್ಞಾನಿಕ ವಿಚಾರಗಳನ್ನು ತಿಳಿದುಕೊಂಡ ನಮ್ಮವರು ಕನ್ನಡ ಸಾಹಿತ್ಯದಲ್ಲಿ ಅಂಥಹ ವಿಚಾರಗಳು ದಾಖಲಿಸುವುದಕ್ಕೆ ಪ್ರಯತ್ನಿಸಿದರು, ಪರಂಪರಾಗತವಾದ ಜೀವನ ಮೌಲ್ಯಗಳಿಗೆ ಆಹ್ವಾನವನ್ನೊಡ್ಡಿ ಹೊಸ ಸಾಮಾಜಿಕ ಸಂಘರ್ಷಗಳನ್ನು ಹುಟ್ಟು ಹಾಕಿದರು, ಇದರಿಂದ ಹಳೆಯ ಸಾಮಾಜಿಕ ವ್ಯವಸ್ಧೆ ಕೊನೆಗೊಂಡು ಅಧುನಿಕ ಯಂತ್ರನಾಗರಿಕತೆಗೆ ಮಾರುಹೋಗಬೇಕಾಯಿತು, ಇದೇ ಲಕ್ಷಣಗಳು ಸಾಹಿತ್ಯ ಪ್ರಕಾರಗಳಲ್ಲಿ ಬಂದವು. ಮಾನವನು ಜೀವನದ ಸಹಜತೆಯನ್ನು ಕಳೆದುಕೊಂಡು ಯಾಂತ್ರಿಕನಾದ. ಹಾಲೋಮನ್; ಹಾಗೂ, ವೇಸ್ಟಲ್ಯಾಂಡ್. ಕವಿತೆಗಳಲ್ಲಿ ಅನನ್ಯತೆಯ ರೀತಿಯಲ್ಲಿ ಅಭಿವ್ಯಕ್ತಗೊಂಡಿದೆ. ಇದರಂತೆ ಕನ್ನಡ ಸಾಹಿತ್ಯವೂ ಹೊರಗುಳಿಯಲಿಲ್ಲ. ನವ್ಯ ತಂತ್ರಗಳನ್ನು ಪ್ರಚುರಪಡಿಸಿದ ಕೀರ್ತಿ ಎಲಿಯಟನ ಕಾವ್ಯಕ್ಕಿದೆ ರೋಮಾಂಟ್ಯಿಕ್ ಕಾವ್ಯದ ಸರಳ ಅಭಿವ್ಯಕ್ತಿ ಮಾರ್ಗವನ್ನು ಬಿಟ್ಟು ಐತಿಹಾಸಿಕ ಪ್ರಜ್ಞೆಯ ದಾರಿಯಲ್ಲಿ ಜಗತ್ತಿನ ಸಾಹಿತ್ಯವೂ ಸಹ ಪುನಃಸೃಷ್ಟಿಯನ್ನು ಪಡೆದುಕೊಂಡಿತು. ಒಂದು ರೀಯಲ್ಲಿ ಇಡೀ ಜಗತ್ತೇ ಸಾಹಿತ್ಯದ ಜಾಗತೀಕರಣವಾಯಿತು. ನವ್ಯಮಾರ್ಗದ ಹರಿಕಾರರಾಗಿ ವಿ.ಕೃ.ಗೋಕಾಕರು ಕಾಣುತ್ತಾರೆ. ೧೯೫೧ರ ಮುಂಬಯಿ ಸಾಹಿತ್ಯ ಸಮ್ಮೇಳನದಲ್ಲಿ ”ಕನ್ನಡ ಕೂಡಾ ನವ್ಯಮಾರ್ಗ” ಹಿಡಿದು ಸಾಗಬೇಕಾದ ಅನಿವಾರ್ಯತೆಗೆ ಒತ್ತುಕೊಟ್ಟರು. ಆಧುನಿಕ-ಸಾಹಿತ್ಯ ಸಹಜ ಹಾಗೂ ಅನಿವಾರ್ಯ ಬೆಳವಣಿಗೆಯೆಂದು ಅಭಿಪ್ರಾಯ ಪಟ್ಟರು. ಆ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಬದಲಾವಣೆಗೆ ಪ್ರೇರಕ ಶಕ್ತಿಯನ್ನು ನೀಡಿದ್ದು ಜಾಗತೀಕರಣ. ಗೋಕಾಕರ ಕಾವ್ಯ. "ಸಮುದ್ರ ಗೀತೆಗಳಲ್ಲಿ" ಇಂತಹ ನವ್ಯತೆಯ ಲಕ್ಷಣಗಳು ಎದ್ದು ಕಾಣುತ್ತವೆ.
ಜಾಗತೀಕರಣಗೊಂಡ ಕನ್ನಡ ನವ್ಯಕಾವ್ಯಕ್ಕೆ ಗೋಪಾಲಕೃಷ್ಣ ಅಡಿಗರ ಸೇವೆಗೆ ಎತ್ತರದ ಸ್ಧಾನವಿದೆ. ನವೋದಯ ಕಾವ್ಯಧೋರಣೆಯಲ್ಲಿ ಕಾವ್ಯ ರಚನೆ ಪ್ರಾರಂಭಿಸಿದ ಇವರು "ಚಂಡಮದ್ದಳೆ", "ಭೂಮಿಗೀತ", "ವರ್ಧಮಾನ" ಆ ಕಾಲದ ನವ್ಯಕಾವ್ಯ ಸಂಗ್ರಹಗಳಾದರೂ ಇಂದಿಗೂ ಅವು ಹೊಸ ವಿಚಾರಗಳನ್ನು ನೀಡುತ್ತವೆ. ಕನ್ನಡದಲ್ಲಿ "ನವ್ಯಕಾವ್ಯ" ಆಧುನಿಕತೆ. ಜಾಗತೀಕರಣ ರೂಪದಲ್ಲಿ ಹೊರಹೊಮ್ಮುವುದು ಐತಿಹಾಸಿಕ ಅವಶ್ಯಕತೆಯೂ ಆಗಿತ್ತು. ಸ್ವಾತಂತ್ರ್ಯ ನಂತರದ ದಿನಗಳಲ್ಲಿ ಮೋಡವಾಗಿ ಮೇಲೆದ್ದ ಮನಸ್ಸು ಮಳೆಯಾಗಿ ಮತ್ತೆ ಹಳ್ಳಕೊಳ್ಳಗಳಲ್ಲಿ ತುಂಬಿ ತಳದಲ್ಲಿ ಕೂಡಿದ್ದ ಕೊಳೆಕೆಸರುರಾಡಿಯಲ್ಲಾ ಮೇಲೆದ್ದು ಬಂದು ಕನ್ನಡಿಯಂತಹ ತಿಳಿನೀರು ನಿಂತಿದೆ. ಹೊಸ ತಲೆಮಾರಿನ ಜನಾಂಗದ ಜಾಣತನವೇ ಸರಿ. ಆಧುನಿಕ ಜೀವಂತ ಜನಾಂಗದ ಸಂವೇದನೆಗಳು ಅಭಿವ್ಯಕ್ತಗೊಳಿಸಿದ ರೀತಿ ಅನನ್ಯವಾದದ್ದು. ನವೋದಯ ಕಾಲದ ಕವಿಗಳು ಹೊಸ ಪ್ರತಿಮೆ, ರೂಪಕ. ಪ್ರತೀಕ, ಸಂಕೇತಗಳ ನವ್ಯತಂತ್ರವೊಂದನ್ನು ಪ್ರಯೋಗದಲ್ಲಿ ತಂದರು. ಇದರಿಂದ ಕನ್ನಡ ಕಾವ್ಯ ಗಟ್ಟಿಗೊಂಡು ನಿಲ್ಲಲು ಕಾರಣವಾಯಿತು. ಬದಲಾವಣೆಯ ಧೋರಣೆ ”ಸಾವಯವ ಸಾಮಗ್ರೀಕರಣ”ವೇ ಇಂದಿನ "ಸಾವಯವ ಜಾಗತೀಕರಣ” ರೂಪ ಪಡೆದುಕೊಂಡಿದೆ. ಸಮಕಾಲಿನ ಪ್ರಜ್ಞೆ ಸಾವಯದ ಸಾಮಗ್ರೀಕರಣವನ್ನು ಪಡೆದುಕೊಂಡು ಗೋಕಾಕ ಅಡಿಗರ ಕಾವ್ಯ ಯಶಸ್ಸಿಗೆ ಕಾರಣವಾಗಿದೆ.
ನವ್ಯ ಕವಿಗಳೆಂದು ಹೆಸರಾದ ಕೆ.ಎಸ್. ನರಸಿಂಹಸ್ವಾಮಿ, ಜಿ.ಎಸ್, ಶಿವರುದ್ರಪ್ಪ, ಚನ್ನವೀರ ಕಣವಿಯಂತಹ ಕವಿಗಳು ನವೋದಯ ಕಾವ್ಯದ ಧೋರಣೆಯಲ್ಲಿ ಜಾಗತೀಕರಣಗೊಂಡರು. ಇವರು ನವೋದಯ, ನವ್ಯ ಧೋರಣೆಯನ್ನು ಸಮನ್ವಯಗೊಳಿಸುವ ದಿಶೆಯಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಿದರು. ಇವರನ್ನು ಸಮನ್ವಯ ಪಂಥದವರೆಂದು ಕರೆಯಲಾಯಿತು. ಇವರ ಪ್ರಭಾವದಿಂದ ಅನೇಕ ಹಿರಿಕಿರಿಯ ಕವಿಗಳು ನವ್ಯಕಾವ್ಯ ಕೃಷಿಗೆ ಕೈಹಾಕಿದರು. ರಾಮಚಂದ್ರಶರ್ಮ, ನಿಸಾರ ಅಹ್ಮದ್, ಚಂದ್ರಶೇಖರ ಕಂಬಾರ, ಪಿ.ಲಂಕೇಶ
ಯು.ಆರ್, ಅನಂತಮೂರ್ತಿ, ಗಿರೀಶಕಾರ್ನಾಡ್‌ರ ಕಾವ್ಯದಲ್ಲಿ ಎಂತೋ ಕಾದಂಬರಿ, ನಾಟಕ, ಸಣ್ಣಕತೆ ಮೊದಲಾದ ಗದ್ಯ ಪ್ರಾಕಾರಗಳಲ್ಲಿಯೂ ಆಧುನಿಕತೆಯ ಜಾಗತೀಕರಣವಾಯಿತು.
ಜಾಗತೀಕರಣವು ಕಾಲದಿಂದ ಕಾಲಕ್ಕೆ ಭಿನ್ನತೆಯ ರೂಪವನ್ನು ಪಡೆದುಕೊಂಡು ಅದು ನವೋದಯ, ನವ್ಯ, ಆಧುನಿಕ, ದಲಿತ, ಬಂಡಾಯದಂತಹ ಧೋರಣೆಯ ಮೌಲ್ಯಗಳನ್ನು ರೂಪಿಸುತ್ತಾ ಬೆಳೆದದ್ದು ಕನ್ನಡ ಸಾಹಿತ್ಯದ ಇತಿಹಾಸ, ಸಮಕಾಲಿನ ರಾಜಕೀಯ, ಆಥಿಕ, ಸಾಮಾಜಿಕ ಕ್ಷೇತ್ರದಲ್ಲಿ ಬದಲಾವಣೆಯಾದವು,
ಯುವಜನಾಂಗದ ಕವಿಗಳು ಇದರಿಂದ ಪ್ರೇರಿತರಾಗಿ ಬಂಡಾಯ ಧೋರಣೆಯ ಮೂಲಕ ನವ್ಯಕಾವ್ಯ ಜಾತಿವರ್ಣವ್ಯಸ್ಧೆಯನ್ನು ತೊಡೆದು ಹಾಕುವ ಮೂಲಕ ಕನ್ನಡ ಕಾವ್ಯ ಸಾಹಿತ್ಯದಲ್ಲಿ ಪ್ರಬಲ ಆಂದೋಲನಗಳಾಗಿ ರೂಪುಗೊಂಡವು. ಬಂಡಾಯ ಹಾಗೂ ದಲಿತ ಧೋರಣೆಗಳಿಗೆ ಆಧುನಿಕ ಸಮಾಜದಲ್ಲಿ ನಡೆಯುತ್ತಿರುವ ವರ್ಣವ್ಯವಸ್ಧೆಯ ಸಂಘರ್ಷ ಹಾಗೂ ಜಾತಿ ಸಂಘರ್ಷಗಳೇ ಕಾರಣವಾದವು. ಇಂದು ದಲಿತರು ಮತ್ತು ಜಾಗತೀಕರಣಯೆನ್ನುವ ಚಿಂತನೆಯಲ್ಲಿ ಡಾ||ಮೊಗಳ್ಳಿ ಗಣೇಶರು ಹೊಸ ಹೊಸ ವಿಚಾರದತ್ತ ಸಾಹಿತ್ಯವನ್ನು ತಲುಪಿಸುತ್ತಿದ್ದಾರೆ. ಜಾಗತೀಕರಣದ ಬಗ್ಗೆ ಅನೇಕರು ವಿವಿಧ ನೆಲೆಯಿಂದ ಚಿಂತಿಸಲು ಆರಂಭಿಸಿದ್ದಾರೆ. ಆದಿವಾಸಿಗಳು ಮತ್ತು ಅಲ್ಪಸಂಖ್ಯಾತ ಜನಾಂಗಗಳ ಹಾಗೂ ಮಹಿಳೆಯರ ಹಿನ್ನೆಲೆಯಲ್ಲಿ ಜಾಗತೀಕರಣವನ್ನು ಪರ ಮತ್ತು ವಿರೋಧಗಳ ಧೋರಣೆಗಳಿಂದ ನಮ್ಮ ಕನ್ನಡ ಸಾಹಿತ್ಯ ಸಾಗಿ ಬಂದಿದೆ. ಶತಮಾನಗಳಿಂದ ವರ್ಣಬೇಧ ನೀತಿಗೆ ಬಲಿಯಾಗಿ ಅಪಮಾನ, ಅತ್ಯಾಚಾರಗಳಿಗೊಳಗಾದ ನಿಗ್ರೋ ಜನಾಂಗವು ಸಿಡಿದೆದ್ದು ಬಿಳಿಯ ನಾಗರಿಕ ವ್ಯವಸ್ಥೆಯಲ್ಲಿ ಕರಿಯರಿಗೂ ಸಮಪಾಲುಬೇಕೆಂದು ಅಮೇರಿಕೆಯ ನಿಗ್ರೋ ಸಂಘಟನೆ ಸಿಡಿದೇಳಲು ಕಾರಣವಾಯಿತು. "ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು" ಎನ್ನುವ ಕುವೆಂಪುರವರ ಕಾವ್ಯ ಧೋರಣೆಗೆ ಅದು ಪ್ರೇರಕಶಕ್ತಿಯಾಗಿ ಬಂದಿರಬಹುದು. ಕಪ್ಪು ಜನಾಂಗದ ಸಿಡಿದೆದ್ದ ಪ್ರಜ್ಞೆಯ ಪ್ರತಿಧ್ವನಿ ಜಗತ್ತಿನಾದ್ಯಂತ ಮೊಳಗಿ ದಬ್ಬಾಳಿಕೆಗೊಳಗಾದ ದಲಿತರಲ್ಲಿ ಹೊಸ ಸಾಮಾಜಿಕ ಆರ್ಥಿಕ-ಸಂಘರ್ಷಕ್ಕೆ ನಾಂದಿ ಹಾಡಿತು. ದಲಿತರು ಜಾಗತೀಕರಣಗೊಳ್ಳಲು ಕಾರಣವಾಯಿತು. ವರ್ತಮಾನ ಭಾರತದಲ್ಲಿ ಮಹಾರಾಷ್ಟ, ಆಂಧ್ರ, ಬಂಗಾಳದಲ್ಲಿ ದಲಿತರು ಸಂಘಟಿತ ಹೋರಾಟಕ್ಕೆ ಅಣಿಯಾದರು. ಸಾಹಿತ್ಯವು ಸಾಮಾಜಿಕ ಪರಿವರ್ತನೆಗೆ ಚಾಲನೆಯನ್ನು ಒದಗಿಸಿಕೊಟ್ಟಿತು. ಇದುವೇ ಸಾಮಾಜಿಕ ಜಾಗತೀಕರಣ, ಆರ್ಥಿಕ ಜಾಗತೀಕರಣ, ಸಾಂಸ್ಕೃತಿಕ ಜಾಗತೀಕರಣದಂತಹ ಹೊಸ ಆಯಾಮಗಳು ಬೆಳೆದುಬಂದವು. ಕರ್ನಾಟಕದ ದಲಿತವೇದಿಕೆಗೆ ಸಂಘಟಿತವಾಯಿತು. ಸಮಾಜದ ದುರ್ವ್ಯವಸ್ಥೆ ದುರಾಡಳಿತಗಳಿಗೆ ಕ್ರಿಯಾಶೀಲ ಪ್ರತಿಭಟನೆ ವ್ಯಕ್ತಪಡಿಸುವಂತಹ ಸಂಘಟನೆಗಳು ರೂಪುಗೊಂಡವು. ಕನ್ನಡ ಪರ ಚಿಂತನೆಗಳು, ಕನ್ನಡ ನೆಲ-ಜಲದ ಸಮಸ್ಯೆಗಳು ಎದುರಾದಾಗ ಒಟ್ಟಿಗೆ ಹೋರಾಟ ಮಾಡಿ ಎದುರಿಸುವ ಸಂಘಟನೆಗಳು ಸಹ ಹುಟ್ಟಿಕೊಂಡವು. ಕರ್ನಾಟಕದಲ್ಲಿ ಇತ್ತೀಚೆಗೆ ಹುಟ್ಟಿಕೊಂಡ ಸಂಘಟನೆ "ಕರವೇ" ಕರ್ನಾಟಕ ರಕ್ಷಣಾ ವೇದಿಕೆ ತನ್ನ ಹಲವಾರು ಕಾರ್ಯಕ್ರಮಗಳ ಮೂಲಕ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ರಕ್ಷಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಹಿಂದಿನ ಬಂಡಾಯ ಹಾಗೂ ದಲಿತ ವೇದಿಕೆಗಳ ಪ್ರಧಾನ ಆಶಯವೂ ಇದೆ ಆಗಿದೆ. ದಲಿತ ವೇದಿಕೆ ಕೇವಲ ದಲಿತರ ಸಮಸ್ಯೆಗಳಿಗೆ ಸೀಮಿತವಾದರೆ ಬಂಡಾಯ ವೇದಿಕೆ ಇಡೀ ಸಮಾಜವನ್ನೇ ಎದುರಿಸುವ ಧೋರಣೆಯನ್ನು ಹೊಂದಿದೆ. ಈ ಧೋರಣೆಯಲ್ಲಿ ಸೃಷ್ಟಿಗೊಳ್ಳುತ್ತಿರುವ ಕನ್ನಡ ಸಾಹಿತ್ಯ ಕಾವ್ಯ, ಕಥೆ, ನಾಟಕ, ಕಾದಂಬರಿ ಮತ್ತು ಇತರ ಸಾಹಿತ್ಯಗಳಲ್ಲಿ ಆಕ್ರೋಶ ಚಿತ್ಕಾರಗಳೇ ಕೇಳಿ ಬರುತ್ತಿವೆ. ಹೊಸ ಧೋರಣೆ ಮೂಡಿಬರುತ್ತಿದೆ. ಕಲಾತ್ಮಕ ಅಭಿವ್ಯಕ್ತಿಯಲ್ಲಿ ಸಾರ್ಥಕತೆ ಪಡೆಯುವ ಆರೋಗ್ಯಪೂರ್ಣ ಲಕ್ಷಣಗಳು ಕನ್ನಡ ಸಾಹಿತ್ಯದ ಲೇಖಕರಲ್ಲಿ ಕಾಣಬಹುದು. ಸಾಹಿತ್ಯ ಜಾಗತೀಕರಣದ ಹೊಡೆತಕ್ಕೆ ಸೊರಗುವುದಿಲ್ಲ. ಅದು ಮತ್ತೇ ಹೊಸ ಹೊಸ ಆಯಾಮದೊಂದಿಗೆ ಬೆಳಗುತ್ತದೆ. ಕನ್ನಡ ಥಳ ಥಳ ಹೊಳೆಯುತ್ತದೆ. ಕನ್ನಡ ಕಹಳೆ ವಿಶ್ವದಾದ್ಯಂತ ಮೊಳಗುತ್ತದೆ. ಕನ್ನಡ ಕ್ಷೇತ್ರ ಪರಂಪರೆ ಯಾವ ಕಾಲಕ್ಕೂ ಮೊಂಡಾಗದು ಆಧುನಿಕ ಬದುಕಿನೊಂದಿಗೆ ತೆರೆದುಕೊಂಡು ಇನ್ನಷ್ಟೂ ವಿಶ್ವಸ್ಥವಾಗುತ್ತದೆ. ಅದು ಯಾವಾಗಲೂ ಜಾಗತೀಕರಣದ ಧೋರಣೆಗಳನ್ನು ಒಳಗೊಂಡು ಬೆಳೆಯುತ್ತದೆ, ಕನ್ನಡ ಉಳಿಯುತ್ತದೆ.

ಗೌಸುದ್ದೀನ್ ತುಮಕೂರಕರ
ಕನ್ನಡ ಉಪನ್ಯಾಸಕರು.

ದೋಷಪೂರಿತ ಕಾವೇರಿ ನ್ಯಾಯಮಂಡಳಿಯ ಅಂತಿಮ ವರದಿ




ಕಾವೇರಿ ನ್ಯಾಯ ಮಂಡಳಿಯ ಅಂತಿಮ ವರದಿ ದಿನಾಂಕ: ೦೫-೦೨-೨೦೦೭ರಂದು ಪ್ರಕಟಗೊಂಡು ಕರ್ನಾಟಕದ ಪಾಲಿಗೆ ನಿರಾಶಾದಾಯಕವಾಗಿದೆ. ಕಾವೇರಿ ನದಿ ನೀರಿನ ಹಂಚಿಕೆ, ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪಾಂಡಿಚೆರಿ ರಾಜ್ಯಗಳಿಗೆ ಸಂಬಂಧಪಟ್ಟಿದ್ದು ಕರ್ನಾಟಕದ ಪಾಲಿಗೆ ಮಾತ್ರ ಅತೀವ ನಿರಾಶದಾಯಕವಾಗಿದೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ವಾರ್ಷಿಕವಾಗಿ ಸಂಗ್ರಹವಾಗುವ ಸರಾಸರಿ ೭೪೦ ಟಿ.ಎಂ.ಸಿ. ನೀರೆಂದು (ಕೊಲೆರೂನ್ ಅಣೆಕಟ್ಟಿನವರೆಗೆ) ನ್ಯಾಯ ಮಂಡಳಿ ನಿರ್ಧರಿಸಿ, ತೀರ್ಮಾನಿಸಿದ ಶೇಕಡಾವಾರು ಕಾವೇರಿ ನದಿ ನೀರಿನ ಹಂಚಿಕೆ ಈ ಕೆಳಗಿನಂತಿದೆ.
ಎ) ಕರ್ನಾಟಕ - ೨೭೦ ಟಿ.ಎಂ.ಸಿ. - ೩೬.೪%
ಬಿ) ತಮಿಳುನಾಡು - ೪೧೯ ಟಿ.ಎಂ.ಸಿ. - ೫೬.೬೨%
ಸಿ) ಕೇರಳ - ೩೦ ಟಿ.ಎಂ.ಸಿ. - ೪.೧%
ಡಿ) ಪಾಂಡಿಚೆರಿ - ೭ ಟಿ.ಎಂ.ಸಿ. - ೦.೯೪%
ಇ)ಇತರೆ - ೧೪ ಟಿ.ಎಂ.ಸಿ. - ೧.೮೯%
ಕಾವೇರಿ ನದಿ ಕರ್ನಾಟಕದಲ್ಲಿ ೩೮೧ ಕಿ.ಮೀ. ಹರಿಯುತ್ತಿದೆ. ಅದು ಪ್ರತಿವಾದಿ ತಮಿಳುನಾಡಿನಲ್ಲಿಗಿಂತ ಹೆಚ್ಚಾಗಿದೆ. ಅಲ್ಲಿ ಅದು ೩೫೭ ಕಿ.ಮೀ. ಹರಿಯುತ್ತಿದೆ ಹಾಗೂ ಕಾವೇರಿ ಜಲಾನಯನ ಪ್ರದೇಶವು ಕರ್ನಾಟಕದಲ್ಲಿ ಪ್ರತಿಶತ ೬೦%ಗಿಂತಲೂ ಹೆಚ್ಚಾಗಿರುವುದರಿಂದ ಕಾವೇರಿ ನ್ಯಾಯಮಂಡಳಿಯ ಅಂತಿಮ ತೀರ್ಪು ಅವೈಜ್ಞಾನಿಕ, ವಾಸ್ತವಿಕತೆಗೆ ವಿರುದ್ಧವಾಗಿಯೂ ಇರುವುದರಿಂದ ಕರ್ನಾಟಕಕ್ಕೆ ಅನ್ಯಾಯವಾಗಿರುವುದು ಸ್ಪಟಿಕದಂತೆ ಗೋಚರಿಸುತ್ತದೆ. ನ್ಯಾಯ ಮಂಡಳಿ ಅನುಸರಿಸಿದ ಒಂದೇ ಒಂದು ಮಾನದಂಡವೆಂದರೆ ತಮಿಳುನಾಡು ಹಿಂದಿನಿಂದಲೂ ಸಾಂಪ್ರದಾಯಿಕವಾಗಿಯೂ ಮತ್ತು ವಾಸ್ತವಿಕವಾಗಿಯೂ ಕರ್ನಾಟಕಕ್ಕಿಂತ ಹೆಚ್ಚಿನ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಮತ್ತು ನ್ಯಾಯಮಂಡಳಿ ತಮಿಳರ ’ಆಜ್ಞಾಪಿಸುವ ಹಕ್ಕುಗಳು’ ಎಂದು ಒಪ್ಪಿಕೊಂಡು ಒಟ್ಟು ೭೪೦ ಟಿ.ಎಂ.ಸಿ. ಸಂಗ್ರಹವಾಗುವ ನೀರಿನಲ್ಲಿ ೪೧೯ ಟಿ.ಎಂ.ಸಿ. ನೀರನ್ನು ತಮಿಳುನಾಡಿಗೆ ಹಂಚಿಕೊಟ್ಟಿದೆ (ಕೊಲೆನೂರ್ ಅಣೆಕಟ್ಟುವರೆಗಿನ ಸಂಗ್ರಹ ಮತ್ತು ಅಂತಿಮ ವರದಿಯ ಪ್ರಕಾರ). ತಮಿಳುನಾಡಿನಲ್ಲಿ ಕಾವೇರಿ ನದಿಯು ಹರಿವು ಶೇ.೪೮% ಮತ್ತು ಜಲಾನಯನ ಪ್ರದೇಶವು ಶೇ.೨೫%ಗಿಂತ ಕಡಿಮೆ ಇರುವಾಗಲೂ ತಮಿಳುನಾಡಿಗೆ ಹಂಚಿಕೆಯಾಗಿರುವ ನೀರು ಒಟ್ಟು ಸಂಗ್ರಹಣೆಯ ಮೊತ್ತದ ೫೭% ಪ್ರತಿಶತವಾಗಿರುತ್ತದೆ. ಈ ಅಂಕಿ ಅಂಶಗಳನ್ನು ನ್ಯಾಯಮಂಡಳಿಯ ಅಂತಿಮ ವರದಿಯು ತರ್ಕಬದ್ಧವಲ್ಲವೆಂದು ಮತ್ತು ಅವೈಜ್ಞಾನಿಕವಾಗಿರುತ್ತದೆಂದು ಸಾಬೀತು ಪಡಿಸುತ್ತದೆ.
ವಿಷಯವೇನೆಂದರೆ ಕಾವೇರಿ ನದಿಯು ಎರಡೂ ರಾಜ್ಯಗಳಲ್ಲಿ ಸಮಾನ ದೂರ ಕಮಿಸುತ್ತಿದ್ದಾಗ ನದಿ ನೀರಿನ ಹಂಚಿಕೆಯೂ ಕೂಡ ಅನುರೂಪವಾಗಿರಬೇಕಾಗಿರುತ್ತದೆ.
ಎರಡೂ ರಾಜ್ಯಗಳ ಭೌಗೋಳಿಕ ವರ್ಣನೆ ಮತ್ತು ಮಣ್ಣಿನ ಗುಣಮಟ್ಟಗಳನ್ನು ತುಲನೆ ಮಾಡಿದಾಗ, ತಮಿಳುನಾಡಿನ ಅಂತರ್ಜಲ ಸಾಮರ್ಥ್ಯವು ಕರ್ನಾಟಕಕ್ಕಿಂತ ನಿಸರ್ಗದತ್ತವಾಗಿ ಅಧಿಕವಾಗಿದೆ ಮತ್ತು ತಮಿಳುನಾಡಿನ ಮಣ್ಣು ನೀರನ್ನು ಹಿಡಿದಿಟ್ಟುಕೊಳ್ಳುವ ಅಧಿಕ ಸಾಮರ್ಥ್ಯವನ್ನು ಹೊಂದಿರುತ್ತದೆ. ಕರ್ನಾಟಕದಲ್ಲಿ ಅರ್ಧ ಡಜನ್ ಪ್ರಮುಖ ನದಿಗಳು ಇವೆಯಾದರೂ, ಇಲ್ಲಿನ ಭೂಮಿಯ ಭೌಗೋಳಿಕತೆ ಮತ್ತು ಮಣ್ಣಿನಲ್ಲಿನ ಗುಣ ನೀರನ್ನು ಹಿಡಿದಿಟ್ಟುಕೊಳ್ಳುವ ಅಧಿಕ ಸಾಮರ್ಥ್ಯವನ್ನು ಹೊಂದಿರುವುದಿಲ್ಲ. ತಮಿಳುನಾಡು ಮತ್ತು ಆಂಧ್ರ ಪ್ರದೇಶ ರಾಜ್ಯಗಳಲ್ಲಿ ಈ ಸಾಮರ್ಥ್ಯ ಅಧಿಕವಾಗಿದೆ.
ಈ ಮೇಲಿನ ತಾಂತ್ರಿಕ ಅಂಶಗಳನ್ನು ಕಾವೇರಿ ನ್ಯಾಯ ಮಂಡಳಿ ತನ್ನ ಅಂತಿಮ ತೀರ್ಪಿನಲ್ಲಿ ಗಣನೆಗೆ ತೆಗೆದುಕೊಳ್ಳದೆ ಇರುವುದು ನಮಗೆ ಆಶ್ಚರ್ಯವನ್ನು ತರುವಂತಿದೆ.
ಐತಿಹಾಸಿಕವಾಗಿ ತಮಿಳುನಾಡು ಸಾಂಪ್ರದಾಯಿಕವಾಗಿ ನೂರಾರು ವರ್ಷಗಳಿಂದಲೂ ಕಾವೇರಿ ನೀರನ್ನು ನೀರಾವರಿ ಬಳಕೆಗಾಗಿ ಉಪಯೋಗಿಸುತ್ತಿರುವಾಗ, ಸಮಕಾಲಿಕವಾಗಿ ಕರ್ನಾಟಕದಲ್ಲಿ ಕಾವೇರಿ ನದಿ ನೀರನ್ನು ಅಂದಿನ ಸಂದರ್ಭ ಮತ್ತು ಕೆಲವುಕಟ್ಟಳೆಗಳಿಂದಾಗಿಯೂ ತಮ್ಮ ನೀರಾವರಿ ಚಟುವಟಿಕೆಗಳಿಗೆ ಉಪಯೋಗಿಸುವ ಹಂತಕ್ಕೆ ಅಂದಿನ ಕರ್ನಾಟಕವು ತಲುಪಿರಲಿಲ್ಲ. ಇದಕ್ಕೆ ಈ ಕೆಳಗಿನ ಕಾರಣಗಳೆಂದು ಪಟ್ಟಿ ಮಾಡಬಹುದು.
ಅ) ಕರ್ನಾಟಕದಲ್ಲಿ ಕಾವೇರಿಯ ಜಲಾನಯನ ಪ್ರದೇಶ ಶೇ.೬೦% ಹೆಚ್ಚಾಗಿದ್ದಾಗಲೂ ಕಾವೇರಿ ನದಿ ಹರಿಯುವ ಮಾರ್ಗ ಗುಡ್ಡ, ಬೆಟ್ಟ ಮತ್ತು ಅಸಮತಟ್ಟು ಪ್ರದೇಶವಾಗಿದ್ದುದರಿಂದ ಐತಿಹಾಸಿಕ ಮೈಸೂರು ಭಾಗದ ಕರ್ನಾಟಕ, ನೀರಾವರಿಗಾಗಿ ನೀರನ್ನು ಬಳಸಲಾಗಲಿಲ್ಲ. ಅದೇ ತಮಿಳುನಾಡಿನಲ್ಲಿ ಕಾವೇರಿ ಜಲಾನಯನ ಪ್ರದೇಶ ಬಹುಪಾಲು ಸಮತಟ್ಟಾಗಿರುವುದರಿಂದ ಕಡಿಮೆ ಖರ್ಚಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸದೆ, ನೀರಾವರಿಗಾಗಿ ಕಾವೇರಿ ನೀರನ್ನು ಇತಿಹಾಸದ ದಿನಗಳಿಂದಲೂ ಬಳಸುತ್ತಾ ಬಂದಿದೆ.
ಬ) ಈ ಮೇಲಿನ ಕಾರಣದಿಂದಾಗಿ, ಆದಿ ಕಾಲ ಮತ್ತು ಅದಕ್ಕೂ ಹಿಂದಿನ ಕಾಲದಲ್ಲಿ ನಮ್ಮ ದೇಶದಲ್ಲಿ ಭೌಗೋಳಿಕವಾಗಿ ಗುಡ್ಡಗಾಡು ಪ್ರದೇಶದಲ್ಲಿ ನೀರಾವರಿ ಚಟುವಟಿಕೆಗಳಿಗೆ ನೀರನ್ನು ಬಳಸಬಹುದಾದ ತಂತ್ರಜ್ಞಾನ ಈ ಹಿಂದೆ ಇಲ್ಲದ್ದರಿಂದ, ಹಿಂದಿನ ಕರ್ನಾಟಕ ಸಾಂಪ್ರದಾಯಿಕವಾಗಿ ನೀರಾವರಿಗಾಗಿ ಕಾವೇರಿ ನೀರನ್ನು ಬಳಸಲಾಗಲಿಲ್ಲ.
ಕ) ಈ ಮೇಲಿನ ಅಡೆತಡೆಗಳಿದ್ದಾಗಲೂ ಒಂದು ವೇಳೆ ಆ ಕಾಲದಲ್ಲಿ ತಂತ್ರಜ್ಞಾನ ಮತ್ತು ಸಾರ್ವಜನಿಕ ಸೇವೆಗಳ ವ್ಯವಸ್ಥೆ ಇದ್ದಿದಾದರೂ ಆರ್ಥಿಕ ಮುಗ್ಗಟ್ಟು (ಅಸಮರ್ಥತೆ) ಹಿಡಿದ ಕಾರ್ಯಗಳನ್ನು ನೆರವೇರಿಸಲಾಗದ ಪರಿಸ್ಥಿತಿ ಎದುರಾಗುತ್ತಿತ್ತೇನು? ಉದಾಹರಣೆಗೆ ಸರ್ ಎಂ. ವಿಶ್ವೇಶ್ವರಯ್ಯನವರು ೨೦ನೇ ಶತಮಾನದಲ್ಲಿ ಕೃಷ್ಣರಾಜಸಾಗರ ಜಲಾಶಯ (೧೯೧೧-೧೯೩೨) ಕಟ್ಟುವಾಗ ಆದ ಕಷ್ಟ ಕಾರ್ಪಣ್ಯ ಮತ್ತು ಆರ್ಥಿಕ ಮುಗ್ಗಟ್ಟು ಒಂದು ಜೀವಂತ ನಿದರ್ಶನವಾಗಿದೆ.
ತಮಿಳುನಾಡು ಬ್ರಿಟಿಷರ ಆಳ್ವಿಕೆಯಲ್ಲಿ ನೀರಾವರಿ ಅನುಕೂಲಕ್ಕಾಗಿ ಆಗಬೇಕಾದ ಕಾಮಗಾರಿಗಳನ್ನು ಬಗೆಬಗೆಯಾಗಿ ಉತ್ತಮಪಡಿಸಿಕೊಳ್ಳುವಲ್ಲಿ ಮತ್ತು ಒಂದು ಮೇಲುಗೈ ಸಾಧಿಸುವಲ್ಲಿ ಅಂದಿನ ಬ್ರಿಟಿಷರ (ಮದ್ರಾಸ್ ಪ್ರೆಸಿಡೆನ್ಸಿ) ಪೋಷಕತ್ವವು ಒಂದು ಕಾರಣ. ತಮಿಳುನಾಡಿನ ಭೂಮಿಯ ಭೌಗೋಳಿಕ ಸ್ಥಿತಿ, ಜೊತೆಯಾಗಿ ಅಲ್ಲಿನ ಮಣ್ಣಿನ ಫಲವತ್ತತೆ ಇವುಗಳು ಅಲ್ಲಿನ ಭೂಮಿಯನ್ನು ಕಾವೇರಿ ನೀರಿನಿಂದ ನೀರಾವರಿ ಭೂಮಿಯನ್ನಾಗಿಸಲು ಕಡಿಮೆ ಖರ್ಚು ಹಾಗು ಸುಧಾರಿತ ವೈಜ್ಞಾನಿಕ ನೈಪುಣ್ಯತೆಗಳಿಲ್ಲದೆ ಐತಿಹಾಸಿಕವಾಗಿ ಸಹಾಯಕಾರಿ ಆಗಿವೆ. ಇದು ತಮಿಳುನಾಡಿಗೆ ಒಂದು ನೈಸರ್ಗಿಕ ಕೊಡುಗೆಯೂ ಆಗಿದೆ. ಆದ ಕಾರಣ ಕರ್ನಾಟಕವನ್ನು ಐತಿಹಾಸಿಕವಾಗಿ ಬಲಹೀನವಾಗಿತ್ತೆಂದು ಕರೆಯಲಾಗದು. ಒಂದು ವೇಳೆ ತಮಿಳುನಾಡು ನಮ್ಮ ಸ್ಥಾನದಲ್ಲಿದಿದ್ದರೂ ಕರ್ನಾಟಕದ ಪರಿಸ್ಥಿತಿಯನ್ನೇ ಎದುರಿಸಬೇಕಾಗುತ್ತಿತ್ತು.
ಕಾವೇರಿ ನ್ಯಾಯಮಂಡಳಿಯು ಕರ್ನಾಟಕದ ಈ ಹಿಂದಿನ ನಿರ್ಬಂಧದ ೧೧.೨೫ ಲಕ್ಷ ಎಕರೆ ಭೂಮಿಯ ನೀರಾವರಿಯ ಬದಲು ೧೮.೮೫ ಲಕ್ಷ ಎಕರೆಯ ಭೂಮಿಯನ್ನು ನೀರಾವರಿಗೆ ಒಳಪಡಿಸಿಹೆಚ್ಚಿಸಲು ನಿರ್ಧರಿಸಲಾಗಿದೆ. ಇದು ವಾಸ್ತವವಾಗಿರದೆ ಕಣ್ಣೊರೆಸುವ ತಂತ್ರವಾಗಿದೆ. ನ್ಯಾಯಮಂಡಳಿಯ ಈ ನಿರ್ಧಾರದ ಫಲವನ್ನು ಕರ್ನಾಟಕ ಅನುಭವಿಸುವುದಾದರೂ ಎಂದು? ೧೦ ವರ್ಷಕ್ಕೊಮ್ಮೆ ಅಥವಾ ಇನ್ಯಾವಗಲೋ ಅಧಿಕ ಮಳೆಯಾದಗಲೋ? ನೀರಾವರಿ ಕಾಮಗಾರಿಗಳಿಗೆ ರಾಜ್ಯ ಹಣ ವಿನಿಯೋಗ ಮಾಡಿ ವ್ಯರ್ಥವಾಗಿ ಕಾಯುವುದೇ? ಇನ್ನಾವ
ರೀತಿಯಲ್ಲಿ ನ್ಯಾಯಮಂಡಳಿಯ ನಿರ್ಧಾರ ಈ ನಿಯಮದ ಪ್ರಕಾರ ನೀರಿನ ಹಂಚಿಕೆ ಕರ್ನಾಟಕಕ್ಕೆ ನೆರವಾಗಲಿದೆ.
ಕರ್ನಾಟಕವು ಸಾಂಪ್ರದಾಯಿಕವಾಗಿ ಕಾವೇರಿ ನದಿ ನೀರನ್ನು ತಮಿಳುನಾಡಿನ ತರಹ ಆದಿ ಕಾಲದಲ್ಲಿ ಉಪಯೋಗಿಸಲಾಗಲಿಲ್ಲ. ಈ ಹಿಂದೆ ವಿವರಿಸಿದಂತೆ ಆಗಿಂದಾಗೆ ಸಮಯವು ತಮಿಳುನಾಡನ್ನು ತಾಂತ್ರಿಕವಾಗಿ, ಆರ್ಥಿಕವಾಗಿ ಸಹಾಯಹಸ್ತ ನೀಡುತ್ತಿದೆ; ಆಗಾಗ್ಗೆ ಅವಷ್ಯಕತೆ ಇದ್ದಾಗ ತಮ್ಮ ಹಕ್ಕೊತ್ತಾಯ ಮಾಡುತ್ತಲೇ ಇರುತ್ತಾರೆ. ಯವ ಕಾರಣಕ್ಕಾಗಲೀ ಯರೇ ಆಗಲೀ ಕರ್ನಾಟಕಕ್ಕೆ ನಮ್ಮ ನ್ಯಾಯಸಮ್ಮತ ನೀರಿನ ಹಂಚಿಕೆ ಮೂಲಭೂತ ಹಕ್ಕಲ್ಲವೆಂದು ವಾದಿಸುವುದು ತರವಲ್ಲ.
ಈ ಹಿಂದಿನ ಇತಿಹಾಸದಿಂದ ಆದ ದೊಡ್ಡ ಪ್ರಮಾದದಿಂದಾಗಿ ಈ ವಿದ್ಯಾಮಾನದಲ್ಲಿ ತಿಳಿಯಪಡಿಸಿದ ದಿಗಿಲುಗಳು ಮತ್ತು ಹೋರಾಟಗಳಿಂದಾಗಿ, ಈ ಹಿಂದೆ ದೊಡ್ಡ ಪ್ರಮಾದಗಳು ಮತ್ತು ನಿಯಮ ಬಾಹಿರ ಚಟುವಟಿಕೆಗಳು ಇದ್ದಾಗಲೂ ನಮಗಿರುವ ಭಯವೆಂದರೆ ಕಾವೇರಿ ನೀರನ್ನೇ ಅವಲಂಬಿತ ತಮಿಳುನಾಡಿನ ಈಗಾಗಲೇ ಇರುವ ಮತ್ತು ನಡೆಯುತ್ತಿರುವ ಕೃಷಿ ಆರ್ಥಿಕತೆಗೆ ಒಂದು ದೊಡ್ಡ ಪೆಟ್ಟು ಬೀಳಬಹುದು. ಈ ಕಾರಣದಿಂದಾಗಿಯೇ ಕಾವೇರಿ ನ್ಯಾಯಮಂಡಳಿಯು ಶರಣಾಗತವಾಗಿ ’ಆಜ್ಞಾಪಿಸುವ ಹಕ್ಕು’ಗಳಿಗೆ ಅಂಟಿಕೊಂಡು ತಮಿಳುನಾಡಿಗೆ ನೀರು ಹಂಚಿಕೆ ಮಾಡಿರಬಹುದು.
ಅನುರೂಪವಾಗಿ ನಾವು ತಿಳಿಯಪಡಿಸುವುದೇನೆಂದರೆ ಈ ಹಿಂದೆ ಐತಿಹಾಸಕವಾಗಿ ಆದ ದೊಷಗಳನ್ನು ಹಿಂದಿನ ಆಡಳಿತಗಳಲ್ಲಿ ಸರಿಪಡಿಸುವುದಾದರೂ ಯವಾಗ? ಪ್ರಜಾಪ್ರಭುತ್ವ ದೇಶವೆಂದು ಕರೆಯುವ ನಾವುಗಳು ನಮ್ಮ ಮೂಲಭೂತ ಹಕ್ಕಿಗಾಗಿ ಹೋರಾಡಲು ಯವ ಮಾರ್ಗವನ್ನಾದರೂ ಅನುಸರಿಸಲು ತಯರಾಗಿದ್ದೇವೆ.
ಕಾವೇರಿ ನದಿ ಕೇರಳ ಮತ್ತು ಪಾಂಡಿಚೆರಿಗಳಲ್ಲಿ ಹರಿಯದಿದ್ದರೂ ಆ ರಾಜ್ಯಗಳಿಗೆ ನೀರನ್ನು ಹಂಚಲಾಗಿದೆ. ಪ್ರಾಯಶಃ, ಕಾವೇರಿ ಜಲಾನಯನ ಪ್ರದೇಶದಲ್ಲಿ ಕೆಲ ಭಾಗ ಸೇರಿದ ಕಾರಣದಿಂದಾಗಿ ಅನುರೂಪವಾಗಿ ಅವರ ಹಕ್ಕಿನ ನೀರಿನ ಪಾಲನ್ನು ಕೊಡಲಾಗಿದೆ. ಅದೇ ಕರ್ನಾಟಕದಲ್ಲಿ ಕಾವೇರಿ ಜಲಾನಯನ ಪ್ರದೇಶವು ಶೇಕಡ ೬೦% ಗಿಂತ ಹೆಚ್ಚಾಗಿದ್ದು ನದಿಯ ಹರಿವು ಒಟ್ಟು ದೂರದ ೫೨% ಪ್ರತಿಶತ ಇರುವಾಗಲೂ ಇದರ ಅನುಪಾತವಾಗಿ ಶೇಕಡಾವಾರು ಜಲಾನಯನ ಪ್ರದೇಶದ ಅನುಗುಣವಾಗಿ ನೀರಿನ ಹಂಚಿಕೆ ಆಗಿರುವುದಿಲ್ಲ. ನದಿ ದಡದ ರಾಜ್ಯಗಳ ಮಧ್ಯೆ ಯಾಕೆ ಈ ತಾರತಮ್ಯ?
ಸಂಕಟ ಸೂತ್ರ ಅರ್ಥಾತ್ ಬಳಲಿಕೆಯ ಸೂತ್ರ:
ಹೇಳುವುದೇನೆಂದರೆ ಬರದ ಬಳಲಿಕೆಯ ಸಂದರ್ಭದಲ್ಲಿ ನೀರಿನ ಹಂಚಿಕೆ ಸರಿಯಗಿ ಎರಡೂ ರಾಜ್ಯಗಳಿಗೆ ಹೊಂದಿಕೆಯಾಗುವ ತರಹ ಇರಬೇಕು, ಬರದ ಕಾಲದಲ್ಲಾದರೂ ಸಂಕಟವನ್ನು ಸಮಾನವಾಗಿ ಹಂಚಿಕೊಳ್ಳಬೇಕು. ಅದರೆ ತಮಿಳುನಾಡಿಗೆ ಮಾತ್ರ ತನ್ನ ಪಾಲನ್ನು ಸವಿಯಲು ಅನುಮತಿ ನೀಡಲಾಗಿದೆ. ಇದು ಸ್ಪಷ್ಟ ಮಾನವ ಹಕ್ಕುಗಳ ಉಲ್ಲಂಘನೆಯಾಗಿರುತ್ತದೆ. ತಾವು ಬದುಕಿ ಇತರರನ್ನು ಬದುಕಲು ಬಿಡುವ ಸೂತ್ರ ಅನುಸರಿಸಬೇಕು. ಈ ತರಹದ ಮನೋಭಾವ ದೇಶದ ಏಕತೆ, ಭ್ರಾತೃತ್ವಕ್ಕೆ ಧಕ್ಕೆ, ತರುವಂತಹದಾಗಿದ್ದು ದೇಶದ ಐಕ್ಯತೆ ಮತ್ತು ಸಾರ್ವಭೌಮತ್ವಕ್ಕೆ ಕಂಟಕಪ್ರಾಯವಾಗಿದೆ.
ಕರ್ನಾಟಕವು ನ್ಯಾಯಮಂಡಳಿ ರಚನೆ ಆದಾಗಿನಿಂದಲೂ ಈ ೧೭ ವರ್ಷಗಳಲ್ಲಿ ೧೧ ಮುಖ್ಯ ಮಂತ್ರಿಗಳನ್ನು ಕಂಡಿದೆ. ಯಾವುದೇ ಮುಖ್ಯಮಂತ್ರಿ ಯವ ಪಕ್ಷದವರೇ ಅಗಿರಲಿ ಯರೂ ಕಾವೇರಿ ಸಮಸ್ಯೆಯ ಪರಿಹಾರಕ್ಕೆ ಜವಾಬ್ದಾರಿಯನ್ನು ಹೊರಲು ತಯಾರಾಗಿರಲಿಲ್ಲ.
ಇತ್ತೀಚಿನ ವಿದ್ಯಾಮಾನಗಳನ್ನು ಗಮನಿಸಿದಾಗ ಪರಸ್ಪರ ಮಾತುಕತೆಯ ಮೂಲಕ ಸಮಸ್ಯೆಯ ಪರಿಹಾರ ಅಸಾಧ್ಯವೆನಿಸುತ್ತದೆ. ನಾವು ಈ ೧೭ ವರ್ಷಗಳಲ್ಲಿ ಕರ್ನಾಟಕವು ೧೧ ಮುಖ್ಯಮಂತ್ರಿಗಳನ್ನು ಕಂಡಿರುತ್ತದೆ. ಆದ್ದರಿಂದ ತಮಿಳುನಾಡಿನ ಉದ್ದೇಶವನ್ನು ಅರಿತು ಕರ್ನಾಟಕ ರಾಜ್ಯವು ಸಮಯವನ್ನು ವ್ಯರ್ಥ ಮಾಡದೆ ಕಾವೇರಿ ನ್ಯಾಯಮಂಡಳಿಗೆ ಒಂದು ಮರು ಮನವಿಯನ್ನು ಹಾಗೂ ಸರ್ವೋಚ್ಚ ನ್ಯಾಯಾಲಯಕ್ಕೆ
ಒಂದು ಭಿನ್ನವೆತ್ತಳೆ (ಪೆಟಿಷನ್) ಯನ್ನು ಅಂತಿಮ ತೀರ್ಪಿನ ವಿರುದ್ಧ ನ್ಯಾಯಕ್ಕಾಗಿ ಸಲ್ಲಿಸಬೇಕು. ಕಾನೂನು ತನ್ನ ಕ್ರಮವನ್ನು ಜರುಗಿಸಲಿ. ಪರಸ್ಪರ ಮಾತುಕತೆಯಿಂದ ಭ್ರಷ್ಟಾಚಾರ, ರಾಜಕೀಯ, ಸ್ವಜನ ಪಕ್ಷಪಾತ ಇಂತಹ ಅನ್ಯಾಯದ ಮಾರ್ಗಗಳಿಗೆ ಅನುವು ಮಾಡಿಕೊಟ್ಟಂತಾಗುತ್ತದೆ. ಇದು ತಾತ್ಕಾಲಿಕ ಪರಿಹಾರವಾಗಬಹುದಷ್ಟೇ.
ನ್ಯಾಯ ಸ್ಥಾನದ ಸಹಾಯಕರು, ಕಾವೇರಿ ನದಿಯಲ್ಲಿ ಯವಾಗಲೂ ನೀರಿನ ನ್ಯೂನ್ಯತೆ ಇರುವುದರಿಂದ ಕಾವೇರಿ ನದಿಯನ್ನು ಕೊರತೆಯುಕ್ತ ನದಿಯೆಂದು ತೀರ್ಮಾನಿಸಿದ್ದಾರೆ. ಜಗತ್ತಿನ ಯವುದೇ ನದಿಯು ಕೊರತೆಯುಕ್ತ ನದಿಯಗಿರುವುದಿಲ್ಲ. ಸಂಬಂಧಪಟ್ಟವರು ನದಿ ನೀರನ್ನು ಸಂಪೂರ್ಣ ಪ್ರಮಾಣದಲ್ಲಿ ಉಪಯೋಗಿಸಿದ್ದೇ ಆದಲ್ಲಿ ಜಗತ್ತಿನ ಯವುದೇ ನದಿಯನ್ನು ಕೊರತೆಯುಕ್ತ ನದಿ ಎಂದು ಕರೆಯಲಾಗದು. ಆದ್ದರಿಂದ ಜ್ಞಾನವತ್ತಾಗಿ ಮತ್ತು ನಿಜಾಂಶಯುಕ್ತವಾಗಿ ನೀರಿನ ಹಂಚಿಕೆಯನ್ನು ವೈಜ್ಞಾನಿಕ ಮತ್ತು ತಾಂತ್ರಿಕ ತಳಹದಿಯ ಮೇಲೆ ನಿರ್ಧರಿಸಬೇಕಾಗುತ್ತದೆ ಮತ್ತು ಆಯಾ ಫಿರ್ಯಾದುದಾರರು ತಮ್ಮ ದೈವದತ್ತ ತಾಂತ್ರಿಕ ನೈಪುಣತೆಗೆ ಅರ್ಹರಾಗಿರುತ್ತಾರೆ.
ನಮ್ಮ ದೇಶದ ಬೇರೆ ಬೇರೆ ನದಿ ನೀರಿನ ನ್ಯಾಯಮಂಡಳಿಗಳ, ನಿಯಮಾವಳಿಗಳಿಂದಾಗಿ ಅನೇಕ ತಾರತಮ್ಯಗಳು ನಮ್ಮಲ್ಲಿ ಸಂಭವಿಸುತ್ತಿವೆ. ಆದ ಕಾರಣ ನಮ್ಮ ದೇಶದ ನದಿಗಳ ನೀರನ್ನು ಹಂಚಿಕೆ ಮಾಡುವ ಮಾರ್ಗದರ್ಶಿಗಾಗಿ ರಾಷ್ಟ್ರೀಯ ನದಿ ನೀರು ಹಂಚಿಕೆ ನಿಗಧಿಪಡಿಸುವ ಕಾನೂನುಗಳು ಮತ್ತು ಕಟ್ಟಳೆಗಳನ್ನು ಜಾರಿಗೆ ತರುವುದು ಅವಷ್ಯಕ, ಇವುಗಳಿಂದ ನಮ್ಮ ದೇಶ ವಂಚಿತವಾಗಿದೆ. ಈ ತರಹದ ರಾಷ್ಟ್ರೀಯ ನದಿ ನೀರು ಹಂಚಿಕೆಯಲ್ಲಿ ನಿಗಮಗಳು ಇಲ್ಲದೆ ಇರುವುದು ಅನೇಕ ಕ್ಲಿಷ್ಟತೆಗಳಾದ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಮತ್ತು ರಾಜಕೀಯ ಚಟುವಟಿಕೆಗಳಿಗೆ ಅನುವು ಮಾಡಿಕೊಟ್ಟಂತಾಗುತ್ತದೆ.
ನಿಶ್ಚಯವಾಗಿ ತಮಿಳುನಾಡು ಕರ್ನಾಟಕ ಮತ್ತು ಕೇರಳಕ್ಕೆ ಹೋಲಿಸಿದಾಗ ಹಿಂದಿನಿಂದಲೂ ಸಾಂಪ್ರದಾಯಿಕವಾಗಿ ಕಾವೇರಿ ನೀರನ್ನು ಬಳಸಿ ಕೃಷಿ ಚಟುವಟಿಕೆಗಳನ್ನು ಮಾಡುತ್ತಿದೆ. ಆದರೆ ಅತಿ ಕಡಿಮೆ ಪ್ರಮಾಣದ ಹೆಚ್ಚುವರಿ ನೀರಾವರಿಯುಕ್ತ ಭೂಮಿ ವಾಸ್ತವವಾಗಿ ಸಾಮ್ರಾಜ್ಯಶಾಹಿ ದೊರೆಗಳ ಪೋಷಣೆಯಿಂದಾದುದು.
ಒಂದು ವೇಳೆ ತಮಿಳುನಾಡಿನಲ್ಲಿ ಕೃಷಿಚಟುವಟಿಕೆಗಳ ಸಾಮರ್ಥ್ಯವು ನೀರಾವರಿಯಿಂದಲೇ ಎಂದು ಮತ್ತು ಭತ್ತದ ಕೃಷಿಗಾಗಿಯೇ ಪ್ರಾಶಸ್ತ್ಯ ಕೊಡಬೇಕೆಂದು ಯರಾದರೂ ಪ್ರತಿಪಾದಿಸಿ ’ಆಜ್ಞಾಪಿಸುವ ಹಕ್ಕುಗಳಿಗಾಗಿ’ ಒತ್ತಾಯಿಸಬಹುದೇ? ಹಾಗಾದಲ್ಲಿ ಪಕ್ಕದ ರಾಜ್ಯವಾದ ಕರ್ನಾಟಕದಲ್ಲೂ ಮನುಷ್ಯರು ವಾಸವಾಗಿದ್ದರೆಂದು ತಿಳಿಯಪಡಿಸಬೇಕಾಗುತ್ತದೆ; ಕರ್ನಾಟಕ ಕಾವೇರಿ ನೀರನ್ನು ಸ್ವಾಧೀನಪಡಿಸಿಕೊಳ್ಳುವ ತಾಂತ್ರಿಕ ಸಾಮರ್ಥ್ಯ ತಮಿಳುನಾಡಿಗಿಂತಲೂ ಹೆಚ್ಚಾಗಿರುತ್ತದೆ. ನೀರು ಹಂಚಿಕೆಯ ಶೇಕಡಾವಾರು ಪ್ರತಿಶತದಲ್ಲಿ ತಾರತಮ್ಯವಾಗಿರುವುದು ಎಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ. ಅದನ್ನು ಎಲ್ಲಾ ಪಕ್ಷಗಳೂ ದೃಢಪಡಿಸಿವೆ.
ನಮ್ಮಲ್ಲಿ ಏನಾದರೂ ರಾಷ್ಟ್ರೀಯ ಭಾವೈಕ್ಯತೆ, ನ್ಯಾಯ ಸಹಿಷ್ಣುತೆ, ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ರಾಷ್ಟ್ರೀಯ ಭ್ರಾತೃತ್ವ ಏನಾದರೂ ಇದ್ದಲ್ಲಿ ಕರ್ನಾಟಕ ತನ್ನ ಪಾಲಿನ ನ್ಯಾಯ ಸಮ್ಮತವಾಗಿ ಕರ್ನಾಟಕಕ್ಕೆ ಸೇರಬೇಕಾದ ಹೆಚ್ಚಿನ ನೀರನ ಉಪಯೋಗಕ್ಕೆ ನ್ಯಾಯಮಂಡಳಿ ಅನುಮತಿಸಲೇಬೇಕು. ಹಾಗಾದಲ್ಲಿ ಕರ್ನಾಟಕಕ್ಕೆ ಹೆಚ್ಚಿನ ನೀರಿನ ಹಂಚಿಕೆಯಗಿ ತಮಿಳುನಾಡಿಗೆ ನೀರು ಕಡಿಮೆಯಗುವ ಸಾಧ್ಯತೆ ಎದುರಾಗುತ್ತದೆ. ಈ ಬದಲಾವಣೆಗಳಾದಲ್ಲಿ ತಮಿಳುನಾಡಿನ ಕೃಷಿ-ಆರ್ಥಿಕ ಸಾಮರ್ಥ್ಯಕ್ಕೆ ಪೆಟ್ಟುಬಿದ್ದು, ಕೃಷಿ ಕಾಲಚಕ್ರದಲ್ಲಿ ಒಂದು ಬಿರುಕು ಕಾಣಬಹುದು ಹಾಗೂ ಕೃಷಿಯಲ್ಲಿ ಹಿನ್ನೆಡೆಯನ್ನು ಪಡೆಯಬಹುದು. ಈ ಬೆಳವಣಿಗೆಗಳು ಸಂಭವಿಸಬಹುದಾದ ಪಕ್ಷದಲ್ಲಿ, ಅಲ್ಲಿನ ಸಂತ್ರಸ್ತ ಜನರಿಗೆ ಯೋಗ್ಯವಾದ, ಸರಿಹೊಂದುವ ಪುನರ್ವಸತಿಯನ್ನು ಕಲ್ಪಿಸಿ ನಷ್ಟಭರಿಸಬಹುದು. ಇದು ಅಲ್ಲಿನ ಸಂತ್ರಸ್ತ ಜನರನ್ನು ಈ ಕಷ್ಟದಿಂದ ಪಾರಾಗಿಸಿ ಅವರಿಗೆ ಒಂದು ಹೊಸ ಜೀವನಕ್ಕೆ ಮಾರ್ಗಸೂಚಿಯಾಗಬಹುದು.
ಕಾವೇರಿ ನ್ಯಾಯಮಂಡಳಿಯ ಅಂತಿಮ ವರದಿಯಿಂದಾದ ಆಘಾತವನ್ನು ಸುಧಾರಿಸುತ್ತಿರುವಾಗಲೇ ಕರ್ನಾಟಕವು ಹೊಗೆನಿಕಲ್ ಯೋಜನೆಯ ಕ್ರೌರ್ಯತೆಗೆ ಬಲಿಯಾಗಬೇಕಾಯಿತು. ಅಂತಿಮ ವರದಿ ಬರುವ ಮುನ್ನ ಈ ಹಿಂದೆ ನ್ಯಾಯಮಂಡಳಿಯು ಕರ್ನಾಟಕದ ಮೇಲೆ ತನ್ನ ನೀರಾವರಿ ಯೋಜನೆಗಳಿಗೆ ಒಂದು ನಿಬಂಧನೆಗೆ ಒಳಪಡಿಸಿ ನಿರ್ಬಂಧಿಸಲಾಗಿತ್ತು. ಆದರೆ ನ್ಯಾಯಮಂಡಳಿ, ಕೃಷ್ಣಗಿರಿ ಮತ್ತು ಧರ್ಮಪುರಿ ಜಿಲ್ಲೆಗಳ ಕುಡಿಯುವ ನೀರಿನ ಯೋಜನೆಗೆ ನಿಗಧಿಪಡಿಸಿದ ೧.೪ ಟಿ.ಎಂ.ಸಿ. ನೀರಿನ ಬದಲು ಕಾನೂನಿನ ವಿರುದ್ಧವಾಗಿ ೨.೧ ಟಿ.ಎಂ.ಸಿ. ಸಂಗ್ರಹಣೆಗೆ ಮುಂದಾಗಿರುವಾಗ, ನ್ಯಾಯಮಂಡಳಿ ಮತ್ತು ಕೇಂದ್ರ ಸರ್ಕಾರಗಳು ಮೌನವಹಿಸಿರುವುದೇಕೆ? ಅಲ್ಲದೆ ಈ ಯೋಜನೆಯು ಕರ್ನಾಟಕದ ಗಡಿಯಲ್ಲಿ ಬರಬಹುದೆಂದು ಗ್ರಹಿಸಲಾಗಿದೆ. ಈ ಹಂತದಲ್ಲಿ ಕೇಂದ್ರ ಸರ್ಕಾರ ಹೊಗೆನಿಕಲ್ ಯೋಜನೆಗೆ ಮಧ್ಯಸ್ಥಿಕೆ ವಹಿಸಲು ನಿರಾಕರಿಸುತ್ತಿರುವುದು, ಪ್ರಾಯಶಃ ಕೇಂದ್ರ ಸರ್ಕಾರದಲ್ಲಿ ಡಿಎಂಕೆ ಪಕ್ಷವು ಪಾಲುದಾರರಾಗಿರುವುದರಿಂದ ಎನ್ನಲೂಬಹುದು. ಮಾನವೀಯತೆಯ ದೃಷ್ಟಿಯಿಂದ ೧.೪ ಟಿ.ಎಂ.ಸಿ. ಇಂದ ೨.೧ ಟಿ.ಎಂ.ಸಿ.ಗೆ ಹೆಚ್ಚಿಸಿದ್ದನ್ನು ಸಹಿಸಿಕೊಳ್ಳಬೇಕೆಂದು ತಮಿಳುನಾಡು ಮತ್ತು ನ್ಯಾಯಮಂಡಳಿಗಳು ಕರ್ನಾಟಕವನ್ನು ಆಗ್ರಹಪಡಿಸಿವೆ. ಈ ಮಾನವೀಯತೆಯು ಅಂತಿಮ ವರದಿಯ ಕಾಲದಲ್ಲಿ ಎಲ್ಲಿ ಹೋಗಿತ್ತೆಂದು ನಾವು ಆಗ್ರಹಪಡಿಸುತ್ತೇವೆ. ಉದಹಾರಣೆಗೆ ಸಂಕಟಸೂತ್ರ ಅರ್ಥಾತ್ ಬಳಲಿಕೆಯ ಸೂತ್ರವನ್ನು ಗಮನಿಸಿದಾಗ ಕರುಣೆಯಿಲ್ಲದೆ ಯವುದೇ ಮಾನವರ ಮೂಲಭೂತ ಮೌಲ್ಯಗಳನ್ನು ಗಣನೆಗೆ ತೆಗೆದುಕೊಳ್ಳದೆ ಅಂತಿಮ ವರದಿ ನೀಡಲಾಗಿದೆ; ಇದು ಒಂದು ಶುದ್ಧ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ.
ಈಗಾಗಲೇ ಒಂದು ಶತಮಾನ ಕಳೆದರೂ ನಾವುಗಳು ಕಾವೇರಿ ನೀರಿನ ವಾದ ವಿವಾದದ ಸಂಶಯದಲ್ಲಿ ಬಳಲುತ್ತಿದ್ದೇವೆ. ಇಂದಿನವರೆಗೆ ನಾವುಗಳು ಅತ್ಯಮೂಲ್ಯವಾದ ಸಮಯ, ಶಕ್ತಿ, ಹಣ ಮತ್ತು ಕಾವೇರಿ ನೀರನ್ನು ಕಳೆದುಕೊಂಡಿರುತ್ತೇವೆ. ಇದನ್ನು ಮನಗಂಡ ನಾವುಗಳು ಶೀಘ್ರವಾಗಿ
ಕಾರ್ಯಪ್ರವೃತ್ತರಾಗಬೇಕಾಗುತ್ತದೆ. ಆದ ಕಾರಣ ನಾವುಗಳು ಇಂದಿನ ಭಾ.ಜ.ಪ. ನೇತೃತ್ವದ ಸರ್ಕಾರವು ಶೀಘ್ರವಾಗಿ ಸರ್ವೋಚ್ಚ ನ್ಯಾಯಾಯಲಕ್ಕೆ ಒಂದು ಭಿನ್ನವತ್ತಳಿಕೆ (ಪೆಟಿಷನ್) ಯನ್ನು ಸಲ್ಲಿಸಬೇಕೆಂದು ಕರ್ನಾಟಕದ ಸಮಗ್ರ ಪ್ರಜೆಗಳ ಹಿತದೃಷ್ಟಿಯಿಂದ ಮನವಿ ಮಾಡಿಕೊಳ್ಳುತ್ತೇವೆ.

ಸೇತುರಾಮ ಅಸ್ಪರಿ, ಪ್ರಕಾಶ್ ತಮ್ಬಕದ್

ವಚನಕಾರರು ಅಚ್ಚಕನ್ನಡದ ಬೇಸಾಯಗಾರರು





ತಾಳಮಾನಸರಿಸವನರಿಯೆ, ಓಜೆಬಜಾವಣೆಯ ಲೆಕ್ಕವನರಿಯೆ ಅಮೃತಗಣ ದೇವಗಣವನರಿಯೆ!
ಕೂಡಲ ಸಂಗಮದೇವಾ, ನಿನಗೆ ಕೇಡಿಲ್ಲವಾಗಿ ಆನುವೊಲಿದಂತೆ ಹಾಡುವೆನಯ್ಯ - ಬಸವಣ್ಣ


ಕನ್ನಡ ನಾಡಿನ ಧಾರ್ಮಿಕ, ಸಾಮಾಜಿಕ ಸಂಸ್ಕೃತಿ ಮತ್ತು ಭಾಷೆಯ ಸಂದರ್ಭದ ಪರ್ವಕಾಲವೆಂದರೆ ೧೨ನೇ ಶತಮಾನ. ಸಾಹಿತ್ಯ, ಧರ್ಮ, ಭಾಷೆ, ಬದುಕು ಮುಂತಾಗಿ ಎಲ್ಲ ಕ್ಷೇತ್ರಗಳಲ್ಲಿ ಮಹತ್ತರವಾದುದನ್ನು ಅನ್ವೇಷಿಸಿದ ಕಾಲ. ಈ ಅನ್ವೇಷಣೆಯ ಹಿಂದೆ ಬಹುಪಾಲು ಶ್ರಮಜೀವಿಗಳು, ಹಿಂದುಳಿದವರು, ಅಶ್ಪೃಶ್ಯರು ಇದ್ದದ್ದು ವಿಶೇಷ. ಅಲ್ಲಿ ವಿವಿಧ ಕಾಯಕ ಜೀವಿಗಳಿದ್ದರು. ನೇಯ್ಗೆಯವರು, ಮಡಿವಾಳರು, ಬಣಗಾರರು, ಸೂಜಿ ಕಾಯಕದವರು, ಬೆಸ್ತರು, ವೈದ್ಯರು, ಅಂಬಿಗರು, ಸುಂಕದವರು, ದನಕಾಯುವವರು, ಮುಂತಾದ ಸಮಾಜದ ಎಲ್ಲ ವರ್ಗ, ವರ್ಣದ, ಸ್ಥರಗಳ ಪುರುಷರು ಮತ್ತು ಸ್ತ್ರೀಯರು ಇದ್ದರು. ಬಸವೇಶ್ವರರ ನೇತೃತ್ವದಲ್ಲಿ ನಡೆದ ಶರಣ ಚಳವಳಿಯಲ್ಲಿ ಪಾಲ್ಗೊಂಡು ಸರ್ವಸಮಾನತೆಯ ಸವಿಗಾಳಿಯನ್ನು ಸೇವಿಸಿದರು. ಬದುಕಿನಲ್ಲಿ ಅಧ್ಯಾತ್ಮಿಕ ನೆಮ್ಮದಿಯನ್ನು ಕಂಡುಕೊಂಡರು. ಸತ್ಯ ಶುದ್ದ ಕಾಯಕ, ದಾಸೋಹಗಳು ಶರಣರ ನಿತ್ಯಬದುಕಿನ ಮಂತ್ರಗಳಾದವು.
ಕನ್ನಡ ಭಾಷಾ ಸಾಹಿತ್ಯ ಚರಿತ್ರೆಯಲ್ಲಿಯೂ ೧೨ನೇ ಶತಮಾನ ಒಂದು ಪರ್ವಕಾಲ. ಕನ್ನಡ ಭಾಷೆಯಲ್ಲಿ ಹೊಸ ಸಂವೇದನೆಗಳು, ಹೊಸ ಬಗೆಯ ಅಭಿವ್ಯಕ್ತಿ ಸಾಧ್ಯವಾಯಿತು. ರೂಢಿಗತವಾಗಿದ್ದ ಸಂಸ್ಕೃತ ಮತ್ತು ಹಳಗನ್ನಡ, ಚಂಪೂಕಾವ್ಯಗಳ ಸ್ಥಾನವನ್ನು ಕನ್ನಡ ಆಡುಭಾಷೆ ತನ್ನದಾಗಿಸಿಕೊಂಡಿದ್ದು ವಿಶೇಷ. ದೇವಭಾಷೆಯಾದ ಸಂಸ್ಕೃತಕ್ಕೆ ಬದಲಾಗಿ ಜನ ಸಾಮಾನ್ಯರ ಆಡುಭಾಷೆ ಕನ್ನಡವನ್ನು ದೇವಭಾಷೆಯನ್ನಾಗಿಸಿದ ಕೀರ್ತಿ ವಚನಕಾರರಿಗೆ ಸಲ್ಲುತ್ತದೆ. ಗದ್ಯವೂ ಅಲ್ಲದ ಪದ್ಯವೂ ಅಲ್ಲದ ಲಯಬದ್ದ ಮುಕ್ತ ಛಂದಸ್ಸಿನ ವಚನಗಳು ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದವು. ಕನ್ನಡಭಾಷೆಯ ಆಭಿವ್ಯಕ್ತಿ ಸಾಮರ್ಥ್ಯವೂ ಹೆಚ್ಚಿತು. ಮೂಢನಂಬಿಕೆಗಳನ್ನು ಅಲ್ಲಗಳೆದ ಶರಣರು, ಜನ ಸಾಮಾನ್ಯರಿಗೆ, ಅಕ್ಷರ ಸಂಸ್ಕೃತಿಯಿಂದ ದೂರ ಇದ್ದವರಿಗೆ ಹೊಸ ಧಾರ್ಮಿಕ ತಿಳಿವಳಿಕೆಯನ್ನು ಸರಳವಾಗಿ ಅರ್ಥವಾಗುವ ಭಾಷೆಯಲ್ಲಿ ನೀಡುವ ಪ್ರಯತ್ನದ ಅಂಗವಾಗಿ ನಾಲ್ಕರಿಂದ ಇಪ್ಪತ್ತು ಸಾಲುಗಳ ವಚನಗಳನ್ನು ರಚಿಸಿದರು. ತಮ್ಮ ಮನದ ಭಾವನೆಗಳನ್ನು ಭಕ್ತಿ ಮಾರ್ಗದಲ್ಲಿ ಹೃದಯದಿಂದ-ಹೃದಯಕ್ಕೆ ತಲುಪಿಸುವ ಪ್ರಯತ್ನದಲ್ಲಿ ಬಹುಪಾಲು ಸಫಲರೂ ಆದರು.
ವಚನ ಸಾಹಿತ್ಯ ಅದು ಎರವಲು ಸಾಹಿತ್ಯವಲ್ಲ. ಅದು ಅಚ್ಚ ಕನ್ನಡದ ಸ್ವಯಾರ್ಜಿತ ಸ್ವತ್ತು. ವಚನಕಾರರು ಪಂಡಿತರಲ್ಲ. ಅವರು ಅಚ್ಚ ಕನ್ನಡದ ಬೇಸಾಯಗಾರರು ಎಂದಿದ್ದಾರೆ ವಿದ್ವಾಂಸರಾದ ಎಂ. ಆರ್. ಶ್ರೀನಿವಾಸಮೂರ್ತಿ ಅವರು. ಬಹು ಸಂಖ್ಯಾತ ಅಕ್ಷರ ವಂಚಿತರಿಗೆ, ಅಕ್ಷರ ಲೋಕವನ್ನು ತೆರೆದಿಟ್ಟು, ಅರಿವನ್ನು ಮೂಡಿಸಿ, ಹೊಸ ಧಾರ್ಮಿಕ ಪರಿಕಲ್ಪನೆಯನ್ನು ನೀಡಿದವರು ಬಸವೇಶ್ವರರು. ಬಾಹ್ಯಾಚರಣೆ ಜೊತೆಗೆ ಅಂತರಂಗದ ಶುದ್ಧತೆಗೂ ಆದತೆ ನೀಡಿದವರು ಶರಣರು. ಬಸವಣ್ಣನವರ ಭಕ್ತಿ ಮಾರ್ಗದ ತೆಕ್ಕೆಗೆ ಬಂದು ಇಷ್ಟಲಿಂಗಧಾರಿಗಳಾಗಿ, ಅನುಭಾವಿಗಳಾಗಿ, ತಮ್ಮ ಹೊಸಧಾರ್ಮಿಕ, ಸಾಮಾಜಿಕ ಅನುಭವಗಳನ್ನು ವಚನಗಳ ಮೂಲಕ ಶರಣರು ಅಭಿವ್ಯಕ್ತಿಸಿದರು.
ವಚನ ಸಾಹಿತ್ಯಕ್ಕೆ ತನ್ನದೆ ಆದ ಸೌಂದರ್ಯವಿದೆ, ವೈಭವವಿದೆ, ಅವುಗಳಲ್ಲಿ ಅನುಭವಿದೆ, ಅನುಭಾವವಿದೆ, ಕಾವ್ಯಾಂಶಗಳಿವೆ, ರಸಾಭಿವ್ಯಕ್ತಿ ಇದೆ, ಎಲ್ಲಕ್ಕಿಂತ ಹೆಚ್ಚಾಗಿ ಮಾನವೀಯ ಮೌಲ್ಯಗಳಿವೆ. ವಚನಗಳಲ್ಲಿ ಕೆಲವು ಭಾವಗೀತಾತ್ಮಕವಾಗಿದ್ದರೆ, ಕೆಲವು ನವ್ಯ ಕವನಗಳನ್ನು ಹೋಲುತ್ತವೆ. ವಿಷಯ ವೈವಿಧ್ಯವಿದ್ದರೂ, ಅವುಗಳ ಹಿನೆಲೆಯಲ್ಲಿ ಅಧ್ಯಾತ್ಮಿಕ, ದೈವಿಕ ಮತ್ತು ತಾತ್ತ್ವಿಕ ಚಿಂತನೆಗಳು ಪ್ರಧಾನವಾಗಿವೆ. ಇಹದ ಬದುಕನ್ನು ಹಸನುಗೊಳಿಸುವ ಮಾರ್ಗವಿದೆ. ವಚನಗಳ ಅಭಿವ್ಯಕ್ತಿಯಲ್ಲಿನ ಸೂಕ್ಷ್ಮತೆ, ರೂಪಕ ಪ್ರತಿಮೆಗಳ ಸಮರ್ಥ ಬಳಕೆ, ಆಡು ನುಡಿಯ ಸರಳತೆ, ರಸಕ್ಕೆ ಮಿಗಿಲಾದ ವೈಚಾರಿಕತೆ, ಕಲ್ಪನೆಗೆ ಬದಲಾಗಿ ವಾಸ್ತವಿಕತೆ, ಬದುಕಿನ ವಾಸ್ತವಿಕತೆ ಜೊತೆಗೆ ಆತ್ಮ ಪರವಾದ ನಿವೇದನೆ ಹರಳುಗಟ್ಟಿವೆ. ವಚನಗಳು ಶರಣರ ಸಾಕ್ಷಿ ಪ್ರಜ್ಞೆಯ ಸಂಕೇತಗಳಾಗಿ ರೂಪುಗೊಂಡಿರುವುದು ವಿಶೇಷ.
ವಚನಕಾರರು ವೈಭವಾಪೇಕ್ಷಿಗಳಲ್ಲ. ಸರಳವಾಗಿ, ಪ್ರಾಮಾಣಿಕ ಜೀವನ ನಡೆಸಿದವರು. ಸತ್ಯಶುದ್ಧ ಕಾಯಕ ಜೀವಿಗಳು. ಅವರು ರಚಿಸಿದ ಮನದಾಳದ ಮಾತುಗಳು ಜೀವನಾನುಭವದ ವೈಭವದಿಂದ ಕೂಡಿರುವುದು ವಿಶೇಷ. ಜನರಾಡುವ ಗದ್ಯಕ್ಕೆ ಕಾವ್ಯದ ಮಾಂತ್ರಿಕ ಸ್ಪರ್ಶ ನೀಡಿದವರು ೧೨ನೇ ಶತಮಾನದ ವಚನಕಾರರು. ಜನಸಾಮಾನ್ಯರ ಭಾಷೆಯಲ್ಲಿ ರಚಿತವಾದ ವಚನಗಳು, ಹಿಂದುಳಿದವರ, ಅಕ್ಷರವಂಚಿತರಿಗೆ ಅರಿವನ್ನು ನೀಡಿ, ಅಧ್ಯಾತ್ಮಿಕ ಹಸಿವನ್ನು ಹಿಂಗಿಸಿ, ಸತ್ಪಥದಲ್ಲಿ ಆತ್ಮ ಸಮ್ಮಾನದಿಂದ ಬದುಕುವ ಮಾರ್ಗ ತೋರಿದ್ದು ಇತಿಹಾಸ. ಇಂತಹ ವಿಶಿಷ್ಟ ಶಕ್ತಿಯನ್ನು ಪಡೆದ ವಚನಸಾಹಿತ್ಯದ ವಿಷಯ ವ್ಯಾಪ್ತಿ ಘನವಾದದ್ದು. ವಚನಕಾರರ ಉದ್ದೇಶವೂ ಕಿರಿದರಲ್ಲಿ ಹಿರಿದಾದುದನ್ನು ತಿಳಿಸುವ ಪ್ರಯತ್ನ " ಕರಿಯನ್ನು ಕನ್ನಡಿಯಲ್ಲಿ ತೋರಿದಂತೆ" ವಚನಗಳು ಜನಸಾಮಾನ್ಯರ ಮೇಲೆ ಪ್ರಭಾವ ಬೀರಿವೆ.
ಕನ್ನಡ ಭಾಷಾ ಸಾಹಿತ್ಯವನ್ನು ಸಮೃದ್ದಗೊಳಿಸಿ, ಉನ್ನತಸ್ಥಾನ ದೊರಕಿಸಿದವರು ೧೨ನೇ ಶತಮಾನದ ಶರಣರು. ಅಧ್ಯಾತ್ಮಿಕ ಸಮಾನತೆಯ ಹರಿಕಾರರಾದ ಶರಣರು ತಮ್ಮ ಅಭಿವ್ಯಕ್ತಿ ಮಾಧ್ಯಮವಾಗಿ ಕನ್ನಡ ಆಡುಭಾಷೆಯನ್ನು ಬಳಸಿದರು. ಜನಸಾಮಾನ್ಯರ ಧಾರ್ಮಿಕ, ಅಧ್ಯಾತ್ಮಿಕ ಹಸಿವು ಧರ್ಮದ ಮೇಲಿನ ಮೋಹ ಏಕದೇವೋಪಾಸನೆಯ ನಿಷ್ಠೆ, ಸಾಮಾಜಿಕ ಕಾಳಜಿ, ಸುಧಾರಣೆಯ ಕಳಕಳಿ ಇವೆಲ್ಲವೂ ಸಂಗಮಿಸಿದ ಭಾವಗಳು ವಚನ ಸಾಹಿತ್ಯ ರಚನೆಗೆ ಸ್ಪೂರ್ತಿ ಎನ್ನಬಹುದು. ಅಧ್ಯಾತ್ಮಿಕ ಮಾರ್ಗದಲ್ಲಿ ಶರಣರಿಗಾದ ಅನುಭವಗಳನ್ನು ಅತೀಂದ್ರಿಯ ಅನುಭಾವಗಳನ್ನು ಅರ್ಥಪೂರ್ಣವಾಗಿ ಅಭಿವ್ಯಕ್ತಿಸಲು ಸಮರ್ಥ ಸಾಧನವಾಗಿ ವಚನ ಸಾಹಿತ್ಯ ರೂಪುಗೊಂಡಿದೆ. ವಚನಕಾರರು ಆಡುಭಾಷೆ ಗದ್ಯವನ್ನು ಕಾವ್ಯದ ಮಟ್ಟಕ್ಕೆ ಏರಿಸಿದರು. ವಚನಕಾರರು ತಮ್ಮ ಸಂವೇದನೆಗಳನ್ನು ಅಕ್ಷರಕ್ಕಿಳಿಸುವ ಸಂದರ್ಭದಲ್ಲಿ ಒಂದು ಪದವನ್ನೂ ದುಂದು ಮಾಡದೆ ಇದಕ್ಕಿಂತ ಕಡಿಮೆ ಪದಗಳಲ್ಲಿ ಬರೆಯಲು ಸಾಧ್ಯವೇ ಇಲ್ಲ ಎನ್ನುವ ಬಿಗಿಯಲ್ಲಿ ಸಾಂದ್ರವಾಗಿ ವಚನಗಳನ್ನು ರಚಿಸಿದ್ದಾರೆ. ನಾಲ್ಕಾರು ಸಾಲುಗಳಲ್ಲಿರುವಂತೆ, ದೀರ್ಘ ವಚನಗಳೂ ಈ ಮಾತಿನಿಂದ ಹೊರತಾಗಿಲ್ಲ ಎನ್ನಬಹುದು. ದೈನಂದಿನ ಜೀವನದ ಸಾಧಾರಣ ಸಂದರ್ಭಗಳಲ್ಲಿಯೂ, ಆಡುವವನ ಇಂಗಿತವನ್ನು ಮೀರಿ ಕೇಳುವವನಲ್ಲಿ ಬೇರೇನೊ ಧ್ವನಿಸಿಬಿಡುವ ಭಾಷೆಯು ವಚನರೂಪ ಪಡೆದುಕೊಳ್ಳುವ ಸ್ವರೂಪವನ್ನು ಸ್ವಾರಸ್ಯಕರವಾಗಿ ಮಂಡಿಸುತ್ತಾರೆ. ಭಾಷೆಯ ನೆಲೆಯಲ್ಲಿ ಮಾತ್ರವಲ್ಲದೆ, ಅನುಭವದ ನೆಲೆಯಲ್ಲಿಯೂ ಮೂರ್ತವು, ವಾಚ್ಯವು ಅಮೂರ್ತದ ಅನಿರ್ವಚನೀಯ ಸ್ಥರಗಳನ್ನು ಮುಟ್ಟುವಂತೆ ವಚನಗಳು ರೂಪುಗೊಂಡಿವೆ. ಲೌಕಿಕದಲ್ಲಿದ್ದೂ ಅಲೌಕಿಕ ಅನುಭವವನ್ನು ನಿಡುತ್ತವೆ
ರೂಪ ಸ್ವರೂಪಗಳೆಡರಲ್ಲಿಯೂ ತಮ್ಮದೆ ಆದ ವಿಶಿಷ್ಟತೆಯನ್ನು ಮೆರೆಯುವ ವಚನಗಳು ಬಿಡಿ ಮುಕ್ತಕಗಳಾಗಿ, ಅನುಭವ ಮತ್ತು ಅನುಭಾವಗಳಿಂದ ಮಿರುಗುವ ಅಣಿಮುತ್ತುಗಳಾಗಿ ಕನ್ನಡ ಸಾಹಿತ್ಯದ ವೈಭವದ, ಅರಿವಿನ ಸಂಕೇತಗಳಾಗಿವೆ. ಇಂತಹ ವೈಶಿಷ್ಟ್ಯಪೂರ್ಣ ವಚನಗಳ ಹುಟ್ಟಿಗೆ ೧೨ನೇ ಶತಮಾನದಲ್ಲಿದ್ದ ಸಾಮಾಜಿಕ, ಧಾರ್ಮಿಕ ಅಸಮಾನತೆಗಳು ಕಾರಣವಾಗಿದ್ದವು.
ಸರ್ವಸಮಾನತೆಯ ಸ್ವಾತಂತ್ರ್ಯವನ್ನು ಪಡೆದ ಶರಣರು, ತಮ್ಮ ಪರಮಾನಂದದ ಸವಿಯ ಉದ್ಗಾರಗಳು ನುಡಿಯ ರೂಪು ತಳೆದು ವಚನಗಳಾಗಿ ಮೂಡಿಬಂದವು. ಶರಣರು ತಮ್ಮ ಹೊಸ ಪರಿಸರಕ್ಕೆ ಸ್ಪಂದಿಸಿದರು. ಅಂದಿಗೆ ಆಗಲೇ ಭಾರತದಲ್ಲಿ ಪ್ರವೇಶ ಪಡೆದಿದ್ದ ಕ್ರಿಶ್ಚಿಯನ್ ಮತ್ತು ಮುಸ್ಲಿಂ ಧರ್ಮಗಳ ಪ್ರಭಾವವೂ ಲಿಂಗಾಯತ ಆಚರಣೆಗಳಲ್ಲಿ ಕಂಡುಬರುತ್ತವೆ.

ಜಯದೇವಪ್ಪ ಜೈನಕೇರಿ

ಹಿಂದಿನ ಬರೆಹಗಳು