Wednesday, May 18, 2011

ಜಾತಿ ಪಕ್ಷಪಾತಿಗಳು ಪಾಪಿಗಳು, ದೇಶದ್ರೋಹಿಗಳು!



ಡಾ.ಎಲ್.ಎಸ್. ಶೇಷಗಿರಿರಾವ್


ಕನ್ನಡ ಸಾಹಿತ್ಯದ ಇವತ್ತಿನ ಸ್ಥಿತಿಗತಿ ಏನು? ಕನ್ನಡ ಸಾಹಿತ್ಯ-ಸಂಸ್ಕೃತಿ ವಿಮರ್ಶಕರಾಗಿ ತಮ್ಮ ಅಭಿಪ್ರಾಯವೇನು?

ಕನ್ನಡ ಸಾಹಿತ್ಯದ ಇಂದಿನ ಸ್ಥಿತಿಯನ್ನು ಪರಿಭಾವಿಸಿದಾಗ ಸಂತೋಷವೇ ಆಗುತ್ತದೆ. ಕಳೆದ ಶತಮಾನದ ೭೦, ೮೦ ಮತ್ತು ೯೦ರ ದಶಕಗಳು ಕನ್ನಡ ಸಾಹಿತ್ಯಕ್ಕೆ ಬಹಳ ಮುಖ್ಯವಾದವು. ಮಹಿಳೆಯರು, ದಲಿತರು ಮತ್ತು ಮುಸ್ಲಿಮರು ಈ ಅವಧಿಯಲ್ಲಿ ಕನ್ನಡ ಸಾಹಿತ್ಯಕ್ಕೆ ಹೊಸ ಆಯಾಮವನ್ನು ತಂದುಕೊಟ್ಟರು. ಆವರೆಗೆ ಬೆಳಕಿಗೆ ಬಾರದಿದ್ದ ಸಮಕಾಲೀನ ಬದುಕಿನ ಅನುಭವಗಳನ್ನು ತೆರೆದಿಟ್ಟರು. ಈಚೆಗೆ ಸಾಹಿತಿಗಳು ಒಂದು ಸಾಮಾಜಿಕ ಅಥವಾ ಆರ್ಥಿಕ ‘ಇಸಂ’ಗೆ ಬದ್ಧರಾಗದೆ ತಮ್ಮ ಅನುಭವ ಮತ್ತು ಬಾಳ ಶೋಧನೆಗಳಿಗೆ ಬದ್ಧವಾಗಿ ಬರೆಯುತ್ತಿದ್ದಾರೆ. ಇದರಿಂದ ಕನ್ನಡ ಸಾಹಿತ್ಯ ಹೊಸ ಆಯಾಮಗಳನ್ನು ಪಡೆದುಕೊಳ್ಳುತ್ತಿವೆ.
ಕನ್ನಡ ಸಂಸ್ಕೃತಿಯ ವಿಷಯ ಇಷ್ಟು ಸಮಾಧಾನದಿಂದ ಮಾತನಾಡುವಂತಿಲ್ಲ. ಪಾಶ್ಚಾತ್ಯ ಸಂಸ್ಕೃತಿಯ ಬಿರುಗಾಳಿ ನಮ್ಮನ್ನು ಹಾರಿಸಿಕೊಂಡು ಹೋಗುತ್ತಿರುವಂತೆ ಕಾಣುತ್ತದೆ. ಹಣ, ಅಧಿಕಾರ, ಭೋಗಗಳ ಬೆನ್ನು ಹತ್ತುವುದೇ ನಮ್ಮ ಬದುಕಿನ ರೀತಿಯಾಗುತ್ತಿದೆ. ಸ್ವಂತಿಕೆ, ಸ್ವಾಭಿಮಾನಗಳು ಕನ್ನಡ ಸಂಸ್ಕೃತಿಯ ಜೀವಾಳ, ಇವು ನಮ್ಮ ಬದುಕಿನಿಂದ ಮರೆಯಾಗುತ್ತಿವೆ.

ಒಕ್ಕೂಟ ವ್ಯವಸ್ಥೆಯಲ್ಲಿ ಕನ್ನಡ ನಾಡು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸಾಕಷ್ಟು ಅಧ್ಯಯನ ನಡೆಸಿದ್ದೀರಿ. ಈ ಸಂದರ್ಭದಲ್ಲಿ ನಮ್ಮ ಎದುರು ಇರುವ ಪ್ರಮುಖ ಸವಾಲುಗಳು ಯಾವುವು? ಅವುಗಳನ್ನು ಎದುರಿಸುವ ಬಗೆ ಹೇಗೆ?
ಸಂವಿಧಾನದ ಪ್ರಕಾರ ಭಾರತವು ಒಕ್ಕೂಟವಾಗಿದೆ ಅಷ್ಟೆ. ಆಡಳಿತದಲ್ಲಿ ನಿಜವಾದ ಸಂವಿಧಾನದ ಮನೋಧರ್ಮ ಇಲ್ಲ. ರಾಷ್ಟ್ರೀಯ ಪಕ್ಷಗಳು ತಮ್ಮ ವೋಟು ಗಳಿಕೆಯನ್ನು ಮುಖ್ಯ ಮಾಡಿಕೊಂಡಿವೆ. ಗಡಿ ಸಮಸ್ಯೆಯ ನಿರ್ವಹಣೆಯಲ್ಲಿ ನದಿ ನೀರಿನ ಹಂಚಿಕೆಯಲ್ಲಿ - ಅಂಚೆ ಚೀಟಿಗಳ ಬಿಡುಗಡೆಯಂತಹ ವಿಷಯದಲ್ಲಿ ಸಹ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಶ್ರೀ ಎಸ್.ಎಂ.ಕೃಷ್ಣ ಅವರು ವಿದೇಶಿ ವ್ಯವಹಾರಗಳ ಸಚಿವರಾಗುವವರೆಗೆ ಕರ್ನಾಟಕದ ರಾಜಕಾರಣಿಗಳಿಗೆ ಹಣಕಾಸು, ರಕ್ಷಣೆ, ಗೃಹ, ವಿದೇಶಿ ವ್ಯವಹಾರಗಳು ಇಂಥ ಮುಖ್ಯ ವಿಭಾಗಗಳು ಲಭ್ಯವಾಗಿದ್ದುಂಟೆ? ರಾಷ್ಟ್ರೀಯ ಪಕ್ಷಗಳು ಬೇರೆಡೆ ಸಲ್ಲದ ತಮ್ಮ ಧುರೀಣರನ್ನು ರಾಜ್ಯಸಭೆಗೆ ಕಳುಹಿಸಲು ಕರ್ನಾಟಕವನ್ನು ಬಳಸಿಕೊಳ್ಳುತ್ತಾರೆ. ಇವರು ವರ್ಷಗಟ್ಟಲೆ ಕರ್ನಾಟಕದಿಂದ ಆಯ್ಕೆಯಾಗಿ ಹೋದರೂ ಕನ್ನಡವನ್ನು ಕಲಿಯುವ ಕೃತಜ್ಞತೆಯ ಪ್ರಥಮ ಪಾಠವನ್ನೂ ಕಲಿಯುವುದಿಲ್ಲ.
ಇಂದು ಅಗತ್ಯವಾಗಿರುವುದು ಎರಡು ಹೆಜ್ಜೆಗಳು. ಒಂದು, ಪ್ರಬಲವಾದ ಪ್ರಾದೇಶಿಕ ಪಕ್ಷ ಒಂದನ್ನು ಕಟ್ಟುವುದು. ಎರಡನೆಯದು, ಸಂವಿಧಾನವನ್ನೇ ತಿದ್ದುಪಡಿ ಮಾಡಿ, ರಾಷ್ಟ್ರದ ಸದಸ್ಯತ್ವ ಮತ್ತು ರಾಜ್ಯದ ಸದಸ್ಯತ್ವ ಹೀಗೆ ಎರಡು ಬಗೆಯ ಸದಸ್ಯತ್ವಗಳನ್ನು ಮಾನ್ಯ ಮಾಡುವುದು. ರಾಜ್ಯದಲ್ಲಿ ಹುಟ್ಟಿ ಬೆಳೆದು ರಾಜ್ಯದ ಸದಸ್ಯತ್ವ ಪಡೆದವರಿಗೆ ಮಾತ್ರ ಆ ರಾಜ್ಯದ ಶಾಸನ ಸಭೆಗಳು ಮತ್ತು ಮಹಾನಗರ ಪಾಲಿಕೆಯಂತಹ ಇತರ ಚುನಾಯಿತ ಸಂಸ್ಥೆಗಳಿಗೆ ಮತದಾನ ಹಕ್ಕನ್ನು ಸೀಮಿತಗೊಳಿಸುವುದು ಇತ್ಯಾದಿ ಕ್ರಮಗಳನ್ನು ಜಾರಿಗೆ ತರುವುದು. ರಾಷ್ಟ್ರೀಯ ಪಕ್ಷಗಳ ಹೈಕಮಾಂಡ್‌ಗಳ ಸ್ವೇಚ್ಛಾಧಿಕಾರಕ್ಕೆ ಕಡಿವಾಣ ಹಾಕಬೇಕಾಗಿದೆ.

ಪದೇಪದೇ ಸಾಹಿತಿಯ ಗುಣಲಕ್ಷಣವೇನು ಎಂಬ ಪ್ರಶ್ನೆ ಬೌದ್ಧಿಕ ವಲಯದಲ್ಲಿ ಚರ್ಚಿತವಾಗುತ್ತದೆ. ಸಾಹಿತ್ಯ ಸಮಕಾಲೀನ ಸಾಮಾಜಿಕ, ರಾಜಕೀಯ ವರ್ತಮಾನಗಳಿಗೆ ಸ್ಪಂದಿಸುತ್ತಿರುತ್ತದೆ. ಹೀಗಿರುವಾಗ ಸಾಹಿತಿಯ ನೈತಿಕ ಜವಾಬ್ದಾರಿಗಳೇನು?
ಓದುಗರಲ್ಲಿ ಭಾವನಾ ಸೂಕ್ಷ್ಮತೆಯನ್ನು ಬೆಳೆಸುವುದು. ಸಮಾಜದಲ್ಲಿ ಎಲ್ಲ ಅನ್ಯಾಯಗಳ ಮೂಲ, ಜೀವನ ವಿರೋಧಿ ಮನೋಧರ್ಮದ ಮೂಲ ಭಾವನಾ ಸೂಕ್ಷ್ಮತೆಯ ಅಭಾವ, ಇತರರ ವಿಷಯದಲ್ಲಿ ನ್ಯಾಯ, ಅನುಕಂಪಗಳ ಅಭಾವ. ತನ್ನನ್ನು ಹಣ, ಅಧಿಕಾರ, ಜಾತಿ ಮೊದಲಾದುವುಗಳಿಗೆ ಮಾರಿಕೊಳ್ಳದೆ ಮಾನವ ಧರ್ಮಕ್ಕೆ ಅನುಗುಣವಾಗಿ ಬದುಕುವುದು, ಬರೆಯುವುದು.

ನೀವು ಕಥೆಗಳನ್ನು ಬರೆಯುವ ಮೂಲಕ ಸಾಹಿತ್ಯ ಲೋಕಕ್ಕೆ ಬಂದವರು. ಕನ್ನಡದಲ್ಲಿ ಈಗ ಕಥಾಸಾಹಿತ್ಯದ ಸ್ಥಿತಿ ಹೇಗಿದೆ? ಹೊಸ ತಲೆಮಾರಿನ ಕಥೆಗಾರರ ಬಗ್ಗೆ ನಿಮ್ಮ ಅನಿಸಿಕೆಯೇನು?
ಸಂತೋಷ ಪಡುವಂತೆ ಸಮೃದ್ಧಿಯಾಗಿದೆ, ಶ್ರೇಷ್ಠ ಗುಣಮಟ್ಟವನ್ನು ಮುಟ್ಟಿದೆ. ಡಾ.ಯು.ಆರ್.ಅನಂತಮೂರ್ತಿಯವರ ಪೀಳಿಗೆಯಿಂದ ಕನ್ನಡ ಸಣ್ಣ ಕಥೆಗೆ ಹೊಸ ಶಕ್ತಿ ಬಂದಿತ್ತು. ಹೊಸ ತೇಜಸ್ಸು ಬಂದಿತು. ಆನಂತರದ ವರ್ಷಗಳಲ್ಲಿಯೂ ಕನ್ನಡ ಸಣ್ಣ ಕಥೆ ವೈವಿಧ್ಯಮಯವಾಗಿದೆ. ಶ್ರೀಮಂತವಾಗಿದೆ. ಹೊಸ ಒಳನೋಟಗಳನ್ನು ಸಾಧಿಸಿದೆ. (ಕೆಲವೇ ಹೆಸರುಗಳನ್ನು ಹೇಳುವುದಾದರೂ ಜಯಂತ್ ಕಾಯ್ಕಿಣಿ, ರಾಘವೇಂದ್ರ ಪಾಟೀಲ, ವಿವೇಕ ಶಾನ್‌ಭಾಗ್, ಶ್ರೀಮತಿ ವೀಣಾ ಶಾಂತೇಶ್ವರ್, ಶ್ರೀಮತಿ ವೈದೇಹಿ, ದೇವನೂರು ಮಹಾದೇವ, ಕುಂ. ವೀರಭದ್ರಪ್ಪ, ಫಕೀರ ಮಹಮದ್ ಕಟ್ಪಾಡಿ, ನೇಮಿಚಂದ್ರ, ಉಮಾರಾವ್ ಮೊದಲಾದವರ ಸಣ್ಣ ಕಥೆಗಳು ವಿಶಿಷ್ಣ ಸಾಧನೆಗಳು.

ಮಕ್ಕಳ ಜ್ಞಾನವರ್ಧನೆಗಾಗಿ ನೀವು ವಿಶ್ವಕೋಶದ ಮಾದರಿಯಲ್ಲಿ ನೂರಾರು ಪುಟ್ಟ ಪುಸ್ತಕಗಳನ್ನು ಹೊರತಂದಿದ್ದೀರಿ. ಇಂಥ ಕೆಲಸ ಈಗಲೂ ಆಗಬೇಕಿದೆ. ಈ ನಿಮ್ಮ ಸತ್ಕಾರ್ಯಕ್ಕೆ ಪ್ರೇರಣೆಯೇನು?
೧೯೪೭ರಲ್ಲಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದಿತು. ಆ ರೋಮಾಂಚನವನ್ನು ಅನುಭವಿಸಿದ ತರುಣ ವರ್ಗಕ್ಕೆ ಸೇರಿದವನು ನಾನು. ಅಂದಿನ ರೋಮಾಂಚನ, ಆತ್ಮವಿಶ್ವಾಸ, ಭರವಸೆಗಳನ್ನು ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ. ಇಂತಹ ಅದ್ಭುತ ಅನುಭವವನ್ನು ಪಡೆದವರು ಅದೃಷ್ಟಶಾಲಿಗಳು. ಆದರೆ ೧೯೬೩, ೬೪ರ ಹೊತ್ತಿಗೆ (ಚೀನಾದೊಡನೆ ಯುದ್ಧದ ಅನುಭವ, ಅಪಮಾನದ ಅನುಭವಗಳ ಕಾಲ) ಈ ಧನ್ಯಭಾವಗಳು, ಹೆಮ್ಮೆ ಮಂಕಾಗಲು ಪ್ರಾರಂಭವಾಗಿ, ‘ಸಿನಿಸಿಸಂ’ ಮೂಡಲು ಪ್ರಾರಂಭವಾಯಿತು. ಗಾಂಧೀಜಿ, ಸುಭಾಷ್ ಚಂದ್ರಬೋಸ್, ವಲ್ಲಭಾಯಿ ಪಟೇಲ್ ಮೊದಲಾದವರು ನಮ್ಮನ್ನು ಅಗಲಿದ್ದರು. ಉಳಿದಿದ್ದ ಹಿಂದಿನ ವೀರರ ಕೀರ್ತಿ ಮಾಸುತ್ತಾ ಬಂದಿತ್ತು. ಜವಾಹರಲಾಲ್ ನೆಹರು ಅವರೇ ನಮ್ಮನ್ನು ನಿರಾಸೆಗೊಳಿಸಿದ್ದರು. ಸ್ವಜನ ಪಕ್ಷಪಾತ, ಭ್ರಷ್ಟಾಚಾರ ಪ್ರಾರಂಭವಾಗಿದ್ದವು. ಆದರೆ ‘ಸಿನಿಸಿಸಂ’, ಯಾವ ದೇಶಕ್ಕೆ ಆಗಲಿ ಪೀಳಿಗೆಗೇ ಮಾರಕ. ಆಗಲೇ ಎಳೆಯರಿಗಾಗಿ ಮನುಷ್ಯನ ಹಿರಿಮೆಯ ದರ್ಶನ ಮಾಡಿಸುವ ಪುಟ್ಟ ಪುಸ್ತಕಗಳ ಕಲ್ಪನೆ ಬಂದದ್ದು.

ಇಂಗ್ಲಿಷ್ ಭಾಷೆಯ ಮೇಲೆ ಪ್ರಭುತ್ವ ಹೊಂದಿರುವ ಕನ್ನಡ ಲೇಖಕರು ನೀವು. ಇಂಗ್ಲಿಷ್‌ನಿಂದ ಇವತ್ತಿನ ಕಾಲಮಾನದಲ್ಲಿ ನಾವು ಪಡೆದುಕೊಳ್ಳಬೇಕಿರುವುದು ಏನನ್ನು? ತಿರಸ್ಕರಿಸಬೇಕಾಗಿರುವುದು ಏನನ್ನು?
ನಾನು ಈಗ ಇಂಗ್ಲಿಷ್ ಭಾಷೆಯ ವಿಷಯ ಮಾತ್ರ ಮಾತನಾಡುತ್ತೇನೆ. ಇಂಗ್ಲಿಷ್ ಸಾಹಿತ್ಯದ ವಿಷಯವಲ್ಲ. ಇಂಗ್ಲಿಷ್ ಭಾಷೆಯಿಂದ ನಾವು ಪಡೆದುಕೊಳ್ಳಬೇಕಾದದ್ದು, ಮೊದಲನೆಯದಾಗಿ ಆಧುನಿಕ ಬದುಕಿಗೆ ಅಗತ್ಯವಾದಂತೆ ಭಾಷೆಯ ಸಂಪತ್ತನ್ನು ಎರವಲಿನಿಂದ ಬೆಳೆಸುವುದು. ಯಾವ ಪರಿಕಲ್ಪನೆಗೆ ತಮ್ಮ ಭಾಷೆಯಲ್ಲಿ ಪದವಿಲ್ಲದಾಗ ನಿಸ್ಸಂಕೋಚವಾಗಿ ಬೇರೆ ಭಾಷೆಯಿಂದ ಇಂಗ್ಲಿಷರು ತೆಗೆದುಕೊಳ್ಳುತ್ತಾರೆ. ‘ಬ್ರಹ್ಮ ‘ಪಂಡಿತ್ ಇಂಥ ಪದಗಳನ್ನು ನಮ್ಮಿಂದ ತೆಗೆದುಕೊಂಡರು. (ಚಪ್ಪಾತಿ, ಚಟ್ನಿ ಇಂದು ಕೇಂಬ್ರಿಡ್ಜ್ ನಿಘಂಟಿನಲ್ಲಿವೆ. ‘ಕಿಯಾಸ್ಕ್’ ಪದವನ್ನು ಜಪಾನಿ ಭಾಷೆಯಿಂದ ತೆಗೆದುಕೊಂಡರು) ಇಂದು ಎಲ್ಲ ಜ್ಞಾನಕ್ಷೇತ್ರಗಳು ವೇಗವಾಗಿ ವಿಸ್ತಾರಗೊಳ್ಳುತ್ತಿವೆ. ಹೊಸ ಹೊಸ ಪದಗಳ ಅಗತ್ಯ ಬೀಳುತ್ತದೆ. ಇಂಗ್ಲಿಷರು ಎಷ್ಟೋ ಬಾರಿ ಪದಗಳನ್ನು ಬೇರೆ ಭಾಷೆಗಳಿಂದ ಆಮದು ಮಾಡಿಕೊಂಡು ಬಿಡುತ್ತಾರೆ. ಎರಡನೆಯದಾಗಿ, ಸರಿ-ತಪ್ಪುಗಳ ನಿರ್ಧಾರದಲ್ಲಿ ಅವರು ಉದಾರವಾಗಿರುತ್ತಾರೆ. ಯಾವ ಭಾಷೆಯನ್ನು ಬಳಸುವವರೂ ಸರಿ-ತಪ್ಪುಗಳ ಕಲ್ಪನೆಯನ್ನು ಸಂಪೂರ್ಣವಾಗಿ ಕೈಬಿಟ್ಟು ‘ಹೇಗೆ ಬೇಕಾದರೂ ಮಾತನಾಡಲಿ, ಬರೆಯಲಿ’ ಎನ್ನುವಷ್ಟು ಉದಾರವಾಗಿರುವುದು ಸಾಧ್ಯವಿಲ್ಲ. ಆದರೆ ತಪ್ಪು ಎಂದು ಪರಿಗಣಿಸಿದ್ದ ಪ್ರಯೋಗವನ್ನು ಬಹುಜನರು ಸ್ವೀಕರಿಸಿದಾಗ, ಒಂದು ಘಟ್ಟದಲ್ಲಿ ಅದನ್ನು ಸ್ವೀಕರಿಸುವ ಮನೋಧರ್ಮ ಇಂಗ್ಲಿಷರದು. ‘ಂim ಚಿಣ’, ‘box oಜಿ mಚಿಣಛಿhes’, ಇವೇ ಸರಿಯಾದ ಪ್ರಯೋಗಗಳು ಎನ್ನುತ್ತಿದ್ದ ಕಾಲವಿತ್ತು. ಈಗ ‘ಂim ಜಿoಡಿ’ ‘mಚಿಣಛಿh box’ ಇವೂ ಸರಿ ಎಂದು ಪರಿಗಣಿತವಾಗಿವೆ. ‘ಮೊರೆಹೊಗು’ ಸರಿಯಾದ ಪ್ರಯೋಗ. ನಮ್ಮ ವೃತ್ತ ಪತ್ರಿಕೆಗಳು ‘ಮೊರೆ ಹೋಗು’ ಎಂದು ಬಳಸುತ್ತವೆ. ‘ಮೊರೆ ಹೊಗು’ ಎಂಬ ರೂಪವನ್ನು ಕೇಳುವುದೇ ಅಪರೂಪ. ‘ಮೊರೆ ಹೊಗು’ ಎನ್ನುವುದು ಸ್ವೀಕಾರಾರ್ಹವೆ?
ತಿರಸ್ಕರಿಸಬೇಕಾದದ್ದು ಇಂಗ್ಲಿಷರೇ ಕೈ ಬಿಟ್ಟಿರುವ ಹಳೆಯ ಪದಗಳನ್ನು sಚಿಟಿs, ಞim, hಚಿiಟ ಜಿಡಿom ಇಂತಹ ಪಳೆಯುಳಿಕೆಗಳನ್ನು.
ನಿಘಂಟು ರಚನೆಯ ಕ್ಷೇತ್ರದಲ್ಲಿ ನಿಮ್ಮದು ಬಹಳ ಮುಖ್ಯವಾದ ಹೆಸರು. ನಿಮಗೆ ಈ ಕ್ಷೇತ್ರ ಆಸಕ್ತಿ ಮೂಡಿಸಿದ್ದು ಹೇಗೆ? ನಿಘಂಟು ಕ್ಷೇತ್ರದಲ್ಲಿ ತುರ್ತಾಗಿ ಆಗಬೇಕಿರುವುದು ಏನು?
ಸರ್ಕಾರವು ನನ್ನನ್ನು ವಿಶೇಷ ತರಬೇತಿಗಾಗಿ ಹೈದರಾಬಾದಿನ ಸೆಂಟ್ರಲ್ ಇನ್ಸ್‌ಟಿಟ್ಯೂಟ್ ಆಫ್ ಇಂಗಿಷ್‌ಗೆ ಕಳಿಸಿತು. ಅಲ್ಲಿ ಭಾಷಾ ವಿಜ್ಞಾನದ ಅಧ್ಯಯನ ಮಾಡಿದೆ. ಆಗ ಹೊಸದೊಂದು ಜಗತ್ತೆ ನನ್ನ ಮುಂದೆ ತೆರೆದುಕೊಂಡಿತು. ಆಗ ನಿಘಂಟುಗಳಲ್ಲಿ ಆಸಕ್ತಿ ಮೂಡಿತು. ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಬಂದ ನಂತರ, ಐ.ಬಿ.ಎಚ್. ಅನ್ನು ಆಗ ನಿರ್ವಹಿಸುತ್ತಿದ್ದ ಶ್ರೀ ಅನಂತರಾಮ್ ಅವರು ಪ್ರೊ. ಜಿ.ವೆಂಕಟಸುಬ್ಬಯ್ಯನವರು, ಪ್ರೊ.ಎಚ್.ಕೆ.ರಾಮ, ಚಂದ್ರಮೂರ್ತಿ ಮತ್ತು ನಾನು ಒಂದು ಇಂಗ್ಲಿಷ್-ಇಂಗ್ಲಿಷ್-ಕನ್ನಡ ನಿಘಂಟನ್ನು ಸಿದ್ಧಪಡಿಸಿಕೊಡಬೇಕೆಂದು ಸಲಹೆ ಮಾಡಿದರು. ಅದೊಂದು ವಿಶಿಷ್ಟವಾದ ಅನುಭವವಾಯಿತು. ಅನಂತರ ನನ್ನ ಕೆಲವು ಯೋಜನೆಗಳನ್ನು ಕಾರ್ಯಗತಮಾಡಲು ಒಬ್ಬನೇ ನಿಘಂಟನ್ನು ಸಿದ್ಧಪಡಿಸಲು ನಿರ್ಧರಿಸಿದೆ. ಸುಭಾಷ್ ಸ್ಟೋರ್ಸ್‌ನವರು ಪ್ರಕಟಿಸಿದ ‘ವಿದ್ಯಾರ್ಥಿ ಮಿತ್ರ ಇಂಗ್ಲಿಷ್-ಕನ್ನಡ ನಿಘಂಟು’ ಒಂದು. ಇದು ವಿದ್ಯಾರ್ಥಿಗಳಿಗಾಗಿಯೇ ಸಿದ್ಧಪಡಿಸಿದ್ದು, ಇದರ ಎರಡನೆಯ ಭಾಗ (ಇಕೋ ನೆರವು’) ಬೇರೆ ಯಾವುದೇ ನಿಘಂಟಿನಲ್ಲಿಲ್ಲದ ಭಾಗಗಳಿವೆ (ಉದಾಃ ಕಾಗುಣಿತ ಗಮನಿಸಿ, ಉಚ್ಚಾರಣೆ ಗಮನಿಸಿ. ಭಾಷೆಯ ಭಾಗವಾಗಿ ಹೋಗಿರುವ ಹೆಸರುಗಳು) ಇದರ ನಂತರ ನಾನು ಸಿದ್ಧಪಡಿಸಿದ ನಿಘಂಟುಗಳಲ್ಲಿ ಹೊಸ ಭಾಗಗಳನ್ನು ಸೇರಿಸಿದ್ದೇನೆ. ಇತ್ತೀಚೆಗೆ ಪ್ರಕಟವಾದ ‘ಪ್ರೊ. ಎಲ್.ಎಸ್.ಎಸ್-ಸುಭಾಷ್ ಇಂಗ್ಲಿಷ್-ಇಂಗ್ಲಿಷ್-ಕನ್ನಡ ನಿಘಂಟಿನಲ್ಲಿ ಇಂಗ್ಲಿಷ್ ಪದಗಳ ಉಚ್ಚಾರಣೆಯನ್ನು ಇಂಗ್ಲಿಷ್ ಫೊರ್ನೆಕ್ ಸ್ಪೆಲಿಂಗ್‌ನಲ್ಲಿ ಕೊಟ್ಟಿದ್ದೇನೆ.
ಇಂಗ್ಲೀಷ್ ಪದಬಂಧಗಳು, ನುಡಿಕಟ್ಟುಗಳ ಬಳಕೆಯ ನಿದರ್ಶನಗಳನ್ನು ಕೊಡುವ ಆಧುನಿಕ ನಿಘಂಟು ಸಿದ್ಧವಾಗಬೇಕಾಗಿದೆ. (೬೦ ವರ್ಷಗಳ ಹಿಂದೆ ಪ್ರಕಟವಾದ ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್-ಕನ್ನಡ ನಿಘಂಟು ನಿದರ್ಶನಗಳನ್ನು ಕೊಟ್ಟಿತ್ತು) ಒಂದು ವಿಸ್ತಾರವಾದ ನುಡಿಕೋಶ ಸಿದ್ಧವಾಗಬೇಕಾಗಿದೆ. ನಿಘಂಟುಗಳನ್ನು ಬಳಸುವವರಲ್ಲಿ ಬೇರೆ ಬೇರೆ ಸಮುದಾಯಗಳ ಅಗತ್ಯಗಳನ್ನು ಪೂರೈಸುವ ನಿಘಂಟುಗಳು ಪ್ರಕಟವಾಗಬೇಕಾಗಿದೆ.

ನೀವು ಮಕ್ಕಳ ಸಾಹಿತ್ಯದಲ್ಲೂ ತೊಡಗಿದವರು. ಇವತ್ತು ಮಕ್ಕಳ ಸಾಹಿತ್ಯ ಅವಗಣನೆಗೆ ಗುರಿಯಾಗಿದೆ. ಹೊಸ ತಲೆಮಾರಿನ ಲೇಖಕರು ಮಕ್ಕಳ ಸಾಹಿತ್ಯ ಬರೆಯುವುದನ್ನು ಅಪಮಾನವೆಂದು ಭಾವಿಸಿರುವ ಸಾಧ್ಯತೆಯಿದೆ. ಏಕೆ ಹೀಗೆ? ಮಕ್ಕಳ ಸಾಹಿತ್ಯ ಕನ್ನಡದಲ್ಲಿ ಕಳೆಗುಂದುತ್ತಿರುವುದು ನಿಜವಲ್ಲವೆ?
ನವೋದಯ ಯುಗದಲ್ಲಿ ಮಕ್ಕಳ ಸಾಹಿತ್ಯ ಸಮೃದ್ಧವಾಗಿತ್ತು. ಕುವೆಂಪು, ರಾಜರತ್ನಂ, ಕಾವ್ಯಾನಂದ ಮೊದಲಾದವರೆಲ್ಲ ಮಕ್ಕಳ ಸಾಹಿತ್ಯವನ್ನು ಸೃಷ್ಟಿಸಿದರು. ಆನಂತರ ಇದು ಅವಜ್ಞತೆಗೆ ಒಳಗಾಯಿತು. ಈಚೆಗೆ ಡಾ.ಲಕ್ಷ್ಮೀನಾರಾಯಣ ಭಟ್ಟ, ಡಾ.ಎಚ್.ಎಸ್. ವೆಂಕಟೇಶ್‌ಮೂರ್ತಿ, ಟಿ.ಎಸ್.ನಾಗರಾಜಶೆಟ್ಟಿ, ಕೆ.ವಿ. ಸುಬ್ಬಣ್ಣ ಮೊದಲಾದವರು ಈ ಕ್ಷೇತ್ರಕ್ಕೆ ಒಳ್ಳೆಯ ಕೊಡುಗೆ ನೀಡಿದ್ದಾರೆ. ಆದರೂ ಇಲ್ಲಿ ಆಗಬೇಕಾದ ಕೆಲಸ ಬೆಟ್ಟದಷ್ಟಿದೆ.
ನಮ್ಮಲ್ಲಿ ಒಳ್ಳೆಯ ಮಕ್ಕಳ ಕವನ ‘ಬೊಮ್ಮನಹಳ್ಳಿಯ ಕಿಂದರಿಜೋಗಿ’ ಇದಕ್ಕೆ ಪ್ರೇರಣೆ ಬ್ರೌನಿಂಗನ ಒಂದು ಕವನ. ಇಂಥ ಕವನ ಅಥವಾ ‘ಆಲಿಸ್ ಇನ್ ವಂಡರ್‌ಲೆಂಡ್ನಂಥ ಕವನ ನಮ್ಮಲ್ಲಿ ಸ್ವತಂತ್ರವಾಗಿ ಬರಲೇ ಇಲ್ಲ. ಏಕೆ?
ಕನ್ನಡ ಸಾಹಿತ್ಯ ಲೋಕ ವರ್ತಮಾನದ ತವಕ, ತಲ್ಲಣಗಳಿಗೆ ಕ್ರಿಯಾಶೀಲವಾಗಿ ಸ್ಪಂದಿಸುತ್ತಿಲ್ಲ ಎಂಬ ಮಾತಿದೆ. ಹಿಂದೆ ಸಾಹಿತಿಗಳು ಚಳವಳಿಗೆ ಇಳಿದು ಜನಪರ ಚಳವಳಿಗಳನ್ನು ಮುನ್ನಡೆಸಿದ್ದರು. ಈಗ ಕೆಲವರನ್ನು ಬಿಟ್ಟರೆ ಇತರರಿಗೆ ಆ ಕುರಿತು ಆಸಕ್ತಿ ಇಲ್ಲ. ಹೀಗಾಗಿದ್ದಕ್ಕೆ ಕಾರಣವೇನು?
ಕನ್ನಡ ಸಾಹಿತ್ಯ ಲೋಕ ವರ್ತಮಾನದ ತವಕ, ತಲ್ಲಣಗಳಿಗೆ ಸ್ಪಂದಿಸುತ್ತಿದೆಯೆ ಇಲ್ಲವೆ ಎನ್ನುವುದು. ಕುತೂಹಲಕರ ಪ್ರಶ್ನೆ. ಸಾಹಿತ್ಯ ಸೃಷ್ಟಿಯಮಟ್ಟಿಗೆ ಹೇಳುವುದಾದರೆ, ಸಾಹಿತಿ ನೇರವಾಗಿ ಸಮಕಾಲೀನ ಬದುಕಿಗೆ ಸ್ಪಂದಿಸದಿರಬಹುದು. ಆದರೆ ಅವನ ಸಾಹಿತ್ಯದ ಸ್ಪಂದನದಲ್ಲಿ ಅದು ಭಾಗವಾಗಿರಬಹುದು. ಪಂಪ, ಕಾಳಿದಾಸ, ಷೇಕ್ಸ್‌ಪಿಯರರ ಸಾಹಿತ್ಯದಲ್ಲಿ ಕಾಣುವಂತೆ. ಪ್ರಗತಿಶೀಲ, ದಲಿತ, ಬಂಡಾಯ ಸಾಹಿತಿಗಳಂತೆ ನೇರವಾಗಿ ಸ್ಪಂದಿಸುವುದು ಒಂದು ಬಗೆ. ನವೋದಯ ಸಾಹಿತಿಗಳಂತೆ ಪರೋಕ್ಷವಾಗಿ ಸ್ಪಂದಿಸುವುದು ಒಂದು ಬಗೆ. ಇಂದು ಸೃಜನಸಾಹಿತ್ಯವನ್ನು ಕೊಡುತ್ತಿರುವ ತರುಣ ಪೀಳಿಗೆ ಸಹ ಸಮಕಾಲೀನ ಬದುಕಿಗೆ ಸ್ಪಂದಿಸುತ್ತಿದೆ ಎನ್ನಿಸುತ್ತದೆ.
ಚಳವಳಿಗಳ ಮಾತು-ನಿಮ್ಮ ಅಭಿಪ್ರಾಯ ಸರಿ ಎನ್ನಿಸುತ್ತದೆ. ಬಿ.ಎಂ.ಶ್ರೀ, ಕುವೆಂಪು, ಮಾಸ್ತಿ, ಕಾರಂತ, ಬೇಂದ್ರೆ ಮೊದಲಾದವರು ಸಾಂಸ್ಕೃತಿಕ ಚಳವಳಿಯ ಭಾಗವಾಗಿದ್ದರು. ಅನಕೃ ಅವರಿಂದ ಹೊಸ ಯುಗವೇ ಪ್ರಾರಂಭವಾಯಿತು. ನೇರವಾಗಿ ಹೋರಾಟಕ್ಕೆ ಅ.ನ.ಕೃ, ನಾಡಿಗೇರ ಕೃಷ್ಣರಾವ್, ಮ.ರಾಮಮೂರ್ತಿ ಮೊದಲಾದವರು ಧುಮುಕಿದರು. ಗೋಕಾಕ್ ವರದಿಗೆ ಸಂಬಂಧಿಸಿದ ಚಳವಳಿಯಲ್ಲಿಯೂ ಸಾಹಿತಿಗಳು ಪ್ರಮುಖ ಭಾಗವಹಿಸಿದರು. ಇದು ಚಳವಳಿಗಳ ಯುಗ. ಯಾವುದೇ ಅಗತ್ಯವು ಆಡಳಿತಗಾರರ ಗಮನ ಸೆಳೆಯಬೇಕಾದರೆ ಚಳವಳಿಯಾಗಬೇಕು. ಪ್ರಾಯಶಃ ಇಂದಿನ ಜೀವನದ ವೇಗ ಮತ್ತು ಒತ್ತಡಗಳಿಂದ ಸಾಹಿತಿಗಳು ಚಳವಳಿಗೆ ಇಳಿಯುವುದು ಕಡಿಮೆಯಾಗುತ್ತಿದೆ. ಇದು ವಿಷಾದಕರ.
ಸಾಹಿತ್ಯ ಕ್ಷೇತ್ರದ ಎಲ್ಲ ವಿಭಾಗಗಳಲ್ಲೂ ಕೈಯಾಡಿಸಿದ್ದೀರಿ. ಹಿಂತಿರುಗಿ ನೋಡಿದಾಗ ಏನನ್ನಿಸುತ್ತದೆ.
ನಾನು ಸಾಹಿತ್ಯ ಕ್ಷೇತ್ರಕ್ಕೆ ಕಾಲಿಟ್ಟು ಅರವತ್ತೈದು ವರ್ಷಗಳಾದವು. ನನ್ನ ಚಟುವಟಿಕೆಗಳ ಬಹುಭಾಗ ವಿಮರ್ಶೆಗೆ ಮೂಡಿಪಾಯಿತು. ನಾನು ಇಂಗ್ಲಿಷ್ ಆನರ್ಸ್ ತರಗತಿಗೆ ಸೇರುವಾಗ ಸಂದರ್ಶನದಲ್ಲಿ ಬಿ.ಎಂ.ಶ್ರೀ ಅವರು (ಆಗ ಅವರು ಸೆಂಟ್ರಲ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರು) ‘ನೀವು ಇಂಗ್ಲಿಷ್ ಸಾಹಿತ್ಯದ ಅಭ್ಯಾಸದಲ್ಲಿ ಪಡೆದುಕೊಂಡದ್ದನ್ನು ಕನ್ನಡದ ಸೇವೆಗೆ ಬಳಸಿ’ ಎಂದು ಹೇಳಿದ್ದರು. ಅವರ ಆದೇಶದಂತೆ ನಡೆದುಕೊಂಡೆ ಎನ್ನುವ ಸಮಾಧಾನವಿದೆ. ಹಿರಿಯರಾದ ಮಾಸ್ತಿಯವರು, ಸಿ.ಕೆ.ವೆಂಕಟರಾಮಯ್ಯ, ವಿ.ಸೀ, ರಾಜರತ್ನಂ, ಅನಕೃ, ಕಾರಂತರು ಮೊದಲಾದವರು ನನ್ನ ವಿಮರ್ಶೆಯನ್ನು ಕುರಿತು ಒಳ್ಳೆಯ ಮಾತನ್ನಾಡಿದರು. ಪತ್ರಿಕೆಗಳು ಲೇಖನ ಮತ್ತು ವಿಮರ್ಶೆಯನ್ನು ಬರೆಯಲು ಆಹ್ವಾನಿಸಿದರು. ನನ್ನ ಪೀಳಿಗೆಯ ಬಸವರಾಜ ಕಟ್ಟಿಮನಿ, ನಿರಂಜನ, ತರಾಸು, ವೆಂಕಟೇಶ್ ಮೊದಲಾದವರೂ ನನ್ನ ವಿಮರ್ಶೆಯಲ್ಲಿ ಬಯಸಿದರು. ಹೀಗಾಗಿ ನನಗೆ ಅರಿವಿಲ್ಲದೆಯೇ ನನ್ನ ಸಮಯ-ಶಕ್ತಿಗಳನ್ನೆಲ್ಲ ವಿಮರ್ಶೆಯೇ ಪಡೆದುಕೊಂಡಿತು. ಈ ಕ್ಷೇತ್ರದಲ್ಲಿ ನನ್ನ ಸಾಧನೆಗೆ ತೃಪ್ತಿ ಇದೆ. ಅಖಿಲ ಭಾರತ ಕನ್ನಡ ಸಾಹಿತ್ಯ, ಸಮ್ಮೇಳನದ ಅಧ್ಯಕ್ಷನಾಗಿ ಆಯ್ಕೆಯಾದ ಮೊದಲನೆಯ ವಿಮರ್ಶಕ ನಾನು. ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಬಂದದ್ದು, ವಿಮರ್ಶಕ ಕೃತಿಗೆ - ‘ಇಂಗ್ಲಿಷ್ ಸಾಹಿತ್ಯ ಚರಿತ್ರೆ ನನ್ನ ‘ಆಧುನಿಕ ಕನ್ನಡ ಸಾಹಿತ್ಯ ಮೂವತ್ತೈದು ವರ್ಷಗಳಲ್ಲಿ ಹತ್ತು ಆವೃತ್ತಿಗಳನ್ನು ಕಂಡಿದೆ. ಪ್ರಾಚೀನ ಗ್ರೀಕ್ ನಾಟಕವನ್ನು ಕುರಿತು ಕನ್ನಡದಲ್ಲಿರುವ ಏಕೈಕ ಸಮಗ್ರ ಅಧ್ಯಯನ ನನ್ನ ‘ಗ್ರೀಕ್ ರಂಗಭೂಮಿ ಮತ್ತು ನಾಟಕ’. ಕನ್ನಡ ಸಾಹಿತ್ಯ ಪರಿಷತ್ತಿನ ವಜ್ರ ಮಹೋತ್ಸವದಲ್ಲಿ ವಿಮರ್ಶೆಗೆ ಸನ್ಮಾನ ಸಂದದ್ದು ನನಗೆ. ಪಾಶ್ಚಾತ್ಯ ಸಾಹಿತ್ಯವನ್ನು ಬಹುದೊಡ್ಡ ಪ್ರಮಾಣದಲ್ಲಿ ಕನ್ನಡಿಗರಿಗೆ ಪರಿಚಯ ಮಾಡಿಕೊಟ್ಟಿದ್ದೇನೆ. ಗೋಲ್ಡ್‌ಸ್ಮಿತ್, ಷೇಕ್ಸ್‌ಪಿಯರ್, ಕಾಫ್ಕ ಮೊದಲಾದವರನ್ನು ಕುರಿತು ಪುಸ್ತಕಗಳನ್ನು ಬರೆದಿದ್ದೇನೆ. ಆಧುನಿಕ ಕನ್ನಡ ಬರಹಗಾರರನ್ನು ಕುರಿತು ‘ಇಂಡಿಯನ್ ಏಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ನನ್ನ ಮೂವತ್ತೈದು ಲೇಖನಗಳ ಮಾಲೆಯೇ ಪ್ರಕಟವಾಯಿತು. ಮಾಸ್ತಿ, ಕೈಲಾಸಂ ಮೊದಲಾದವರನ್ನು ಕುರಿತು ಇಂಗ್ಲೀಷಿನಲ್ಲಿ ಪುಸ್ತಕಗಳನ್ನು ಬರೆದಿದ್ದೇನೆ. ಕನ್ನಡ ಸಾಹಿತಿಗಳನ್ನು ಕುರಿತು, ಇಂಗ್ಲಿಷ್‌ನಲ್ಲಿ ಕೇರಳದಲ್ಲಿ, ಮುಂಬೈಯಲ್ಲಿ, ಚೆನ್ನೈನಲ್ಲಿ, ದೆಹಲಿಯಲ್ಲಿ, ವಾರಣಾಸಿಯಲ್ಲಿ, ಹೈದರಾಬಾದಿನಲ್ಲಿ ಅಮೃತಸರದಲ್ಲಿ ಭಾಷಣ ಮಾಡಿದ್ದೇನೆ. ವಿಮರ್ಶೆಯಲ್ಲಿ ತಪ್ಪು ಮಾಡಿರಬಹುದು. ಆದರೆ ಪ್ರಾಮಾಣಿಕತೆಯನ್ನು ಉಳಿಸಿಕೊಂಡಿದ್ದೇನೆ. (ತಪ್ಪು ಮಾಡುವ ‘ರಿಸ್ಕ್’ ತೆಗೆದುಕೊಳ್ಳದಿದ್ದರೆ ವಿಮರ್ಶೆಯೇ ಸಾಧ್ಯವಿಲ್ಲ. ಪ್ರಸಿದ್ಧ ವಿಮರ್ಶಕ, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ‘ಪ್ರೊಫೆಸರ್ ಆಫ್ ಪೋಯಟ್ರಿ ಆಗಿದ್ದ ಕ್ವಿಲರ್‌ಕೂಜ್, ಮುಂದೆ ಕಾವ್ಯಕ್ಕೆ ನೊಬೆಲ್ ಬಹುಮಾನ ಪಡೆದ ಟಿ.ಎಸ್. ಎಲಿಯೆಟನ ಮೊದಲನೆ ಗಮನಾರ್ಹ ಕವನವನ್ನು ಓದಿ ‘ಈತನಿಗೆ ಐದು ಪಂಕ್ತಿ ಕಾವ್ಯ ಬರೆಯಲು ಬರುವುದಿಲ್ಲ ಎಂದು ಹೇಳಿರಲಿಲ್ಲವೆ?)
ವಿಮರ್ಶಕನಾಗಿ ಸಾಧನೆಯ ವಿಷಯದಲ್ಲಿ ಸಮಾಧಾನವಿದ್ದರೂ ಸಣ್ಣ ಕಥೆಗಳನ್ನು ಬರೆಯುವುದನ್ನು ಬಿಟ್ಟುದಕ್ಕಾಗಿ ವಿಷಾದವಿದೆ. ೧೯೪೭ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನಡೆಸಿದ ಅಖಿಲ ಕರ್ನಾಟಕ ಸಣ್ಣ ಕಥೆಗಳ ಸ್ಪರ್ಧೆಯಲ್ಲಿ ಮೊದಲ ಬಹುಮಾನವನ್ನು ಪಡೆದೆ. ನನ್ನ ‘ಮುಯ್ಯಿ ಕಥೆ ಜನಪ್ರಿಯವಾಯಿತು. ಕೆಲವು ವರ್ಷಗಳ ಹಿಂದೆ ಪತ್ರಿಕಾ ಜಗತ್ತಿನ ಸ್ನೇಹಿತರ ಒತ್ತಾಯಕ್ಕಾಗಿ ಬರೆದ ‘ಸತ್ಯನಾರಾಯಣ’ ಕಥೆಯನ್ನು ಭಾರತ ಸರ್ಕಾರದ ಪ್ರಕಟಣ ವಿಭಾಗ ವರ್ಷದ ಉತ್ತಮ ಕಥೆಗಳಲ್ಲಿ ಒಂದೆಂದು ಆರಿಸಿ ಹಿಂದಿ ಭಾಷೆಗೆ ಅನುವಾದ ಮೂಡಿಸಿತು. ಸಣ್ಣ ಕಥೆಗಳನ್ನು ಬರೆದಾಗ ಒಂದು ವಿಶಿಷ್ಟ ಸಂತೋಷವಾಗುತ್ತಿತ್ತು. ಅದನ್ನು ನಿಲ್ಲಿಸಬಾರದಾಗಿತ್ತು.

ಈ ಸಂದರ್ಭಕ್ಕೆ, ಈ ಕಾಲಘಟ್ಟಕ್ಕೆ ‘ನಲ್ನುಡಿ’ಯ ಓದುಗರೊಂದಿಗೆ ಹಂಚಿಕೊಳ್ಳಬಯಸುವ ನಿಮ್ಮ ಮಾತುಗಳೇನು?
ಎರಡು ಅಂಶಗಳನ್ನು ಒತ್ತಿ ಹೇಳಲು ಬಯಸುತ್ತೇನೆ. ಪಾಶ್ಚಾತ್ಯ ಸಂಸ್ಥೆಗಳು ಎಲ್ಲ ದೇಶಗಳಲ್ಲಿನ ಭ್ರಷ್ಟಾಚಾರದ ಅಳತೆ ಮಾಡಿದ್ದಾರೆ. ಭಾರತಕ್ಕೆ ಬಹಳ ದೊಡ್ಡ ರ‍್ಯಾಂಕ್ ಸಿಕ್ಕಿದೆ. ಜಗತ್ತಿನಲ್ಲಿ ಲಂಚದ ತವರು ದೇಶಗಳಲ್ಲಿ ಒಂದೆಂದು ಭಾರತ ಪ್ರಸಿದ್ಧಿಯಾಗತೊಡಗಿದೆ. ಲಂಚವಲ್ಲದೆ ಇತರ ರೀತಿಯ ಭ್ರಷ್ಟಾಚಾರ ನಮ್ಮೆಲ್ಲರಿಗೆ ಅನುಭವಕ್ಕೆ ಬಂದಿದೆ. ಈ ಅಪಕೀರ್ತಿಯನ್ನು ತೊಡೆದು ಹಾಕಲು ಶ್ರಮಿಸೋಣ. ಭ್ರಷ್ಟಾಚಾರ ಮಾಡಿದವರು ನಮ್ಮ ಪಕ್ಷದವರು, ನಮ್ಮ ಜಾತಿಯವರು, ನಮ್ಮ ಬಂಧುಗಳು ಅಥವಾ ನೆಂಟರು ಎಂದು ಪಕ್ಷಪಾತ ಮಾಡುವುದು ಬೇಡ. ಅವರು ಪಾಪಿಗಳು, ದೇಶದ್ರೋಹಿಗಳು.
ಎರಡನೆಯದು, ಪ್ರಪಂಚದಲ್ಲಿ ಇಂದು ಸುಮಾರು ಆರರಿಂದ ಏಳು ಸಾವಿರ ಭಾಷೆಗಳಿವೆ. ಇವುಗಳಲ್ಲಿ ಲಿಪಿ ಇರುವುದು ಸುಮಾರು ನಾಲ್ಕು ನೂರು ಭಾಷೆಗಳಿಗೇ, ಇವುಗಳಲ್ಲಿ ಭವ್ಯ ಸಾಹಿತ್ಯವಿರುವುದು ಇನ್ನು ಕಡಿಮೆ ಸಂಖ್ಯೆಯ ಭಾಷೆಗಳಿಗೆ. ಅವುಗಳಲ್ಲಿ ಸುಮಾರು ಎರಡೂವರೆ ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆ ಒಂದು. ತೇಜಸ್ವೀ ಸಂಸ್ಕೃತಿ ಇರುವ ರಾಜ್ಯಗಳಲ್ಲಿ ಒಂದು ಕರ್ನಾಟಕ. ಈ ಭಾಷೆಗಾಗಿ, ಸಂಸ್ಕೃತಿಗಾಗಿ ಶ್ರಮಿಸೋಣ, ಹೆಮ್ಮೆಪಡೋಣ. ಭಾಷೆಯ ಹಿರಿಮೆ ಆ ಭಾಷೆಯನ್ನು ಬಳಸುವವರನ್ನು ಅವಲಂಬಿಸುತ್ತದೆ. ಕನ್ನಡ ಮಾತನಾಡೋಣ, ಬರೆಯೋಣ, ಕನ್ನಡ ಪುಸ್ತಕಗಳನ್ನು ಪತ್ರಿಕೆಗಳನ್ನು ಕೊಂಡುಕೊಂಡು ಓದೋಣ. ಕನ್ನಡ-ಕನ್ನಡಿಗ-ಕರ್ನಾಟಕಕ್ಕಾಗಿ ಶ್ರಮಿಸುವ ಸಂಸ್ಥೆಗಳಿಗೆ ಕ್ರಿಯಾಶೀಲ ಬೆಂಬಲ ನೀಡೋಣ. ಆದ ಹಣ ಸಹಾಯ ಮಾಡೋಣ, ಕನ್ನಡ-ಕನ್ನಡಿಗ-ಕರ್ನಾಟಕಗಳಿಗೆ ಅನ್ಯಾಯವಾದಾಗ ಪ್ರತಿಭಟಿಸುವ ಸಭೆಗಳಿಗೆ ಹೋಗೋಣ, ಚಳವಳಿಗಳನ್ನು ಬೆಂಬಲಿಸೋಣ. ಎರಡೂವರೆ ಸಾವಿರ ವರ್ಷಗಳ ಕಾಲ ಕನ್ನಡ ಭಾಷೆ-ಸಂಸ್ಕೃತಿಗಳನ್ನು ಉಳಿಸಿ ಬೆಳೆಸಿ ನಮಗೆ ಬಿಟ್ಟು ಹೋದವರಿಗೆ ನಾವು ಬೇರೆ ರೀತಿಯಲ್ಲಿ ಕೃತಜ್ಞತೆ ತೋರಿಸಿಬಿಟ್ಟೆವು? ಬಾಯಿ ಮಾತಿನ ಹೆಮ್ಮೆ, ಮೆಚ್ಚಿಕೆ ಇರಲಿ, ಆತ್ಮಸಾಕ್ಷಿಯಾಗಿ ಬೆಂಬಲ ನೀಡೋಣ, ಕೃತಘ್ನರಾಗುವುದು ಬೇಡ. ಸಿರಿಗನ್ನಡಂ ಗೆಲ್ಗೆ!


ಸಂದರ್ಶನ: ಭಾನುಮತಿ, ಚಿತ್ರಗಳು: ಶರಣ್ ಶಹಾಪುರ

ಇಲ್ಲಿ ದಲಿತರೂ ಜನಿವಾರ ತೊಡುತ್ತಾರೆ! ಮುಸ್ಲಿಮರು ಕೊಂಡ ಹಾಯುತ್ತಾರೆ....



ನೀವು ನಂಬಿದ್ರೆ ನಂಬಿ ಬಿಟ್ಟರೆ ಬಿಡಿ, ಇಲ್ಲಿ ದಲಿತರೂ ಜನಿವಾರ ತೊಟ್ಟು ಬ್ರಾಹ್ಮಣರಾಗ್ತಾರೆ, ಮಡಿಯುಟ್ಟು ದೇವಿಗೆ ಪೂಜೆ ಸಲ್ಲಿಸುತ್ತಾರೆ. ಅಷ್ಟೇ ಅಲ್ಲ, ಮುಸ್ಲಿಮರೂ ಕೂಡ ಕೊಂಡ ಹಾಯೋ ಮೂಲಕ ಹಿಂದೂಗಳ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗ್ತಾರೆ!
ಪರಸ್ಪರ ಕೋಮು ವೈಷಮ್ಯ, ಜಾತೀಯತೆಯೇ ಮೇಳೈಸುತ್ತಿರುವ ಈಗಿನ ಸಂದರ್ಭದಲ್ಲಿ ಹೀಗೂ ಒಂದು ಆಚರಣೆ ಇದೆ ಅಂದ್ರೆ ಅದು ನಿಜಕ್ಕೂ ಅಚ್ಚರಿಯ ವಿಚಾರವೇ ಸರಿ. ಒಂದು ಸಂಪ್ರದಾಯವನ್ನ ಮತ್ತೊಬ್ಬರು ಆಚರಿಸೋ ಇಂಥ ಅಪರೂಪದ ಪ್ರಕರಣ ನಡೆಯುತ್ತಿರೋದು ಬೇರೆ ಎಲ್ಲೂ ಅಲ್ಲ, ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗ ಹೋಬಳಿಯ ಉಜ್ಜನಿ ಗ್ರಾಮದಲ್ಲಿ!
ಜನಿವಾರ ಅಂದ್ರೆ ಅದನ್ನು ಒಂದು ಜಾತಿಯ, ಮೇಲ್ವರ್ಗದ ಜನರೇ ಧರಿಸಬೇಕು ಎಂಬ ಪ್ರತೀತಿಯನ್ನ ಸುಳ್ಳು ಮಾಡುವಂತೆ ಇಲ್ಲಿ ದಲಿತರೂ ಜನಿವಾರ ಧರಿಸುತ್ತಾರೆ, ದೇವರನ್ನು ಹೊತ್ತು ಮೆರವಣಿಗೆ ಹೊರಡುತ್ತಾರೆ!
ಹಬ್ಬ, ಹರಿದಿನಗಳ ಆಚರಣೆ ಮೂಲಕ ಐಕ್ಯತೆ ಮತ್ತು ಸಾಮರಸ್ಯಕ್ಕೆ ರಾಜ್ಯಕ್ಕೆ ಮಾದರಿಯಾಗಿರುವ ಕುಣಿಗಲ್‌ನಲ್ಲಿ ಇಂಥದೊಂದು ಸಾಮರಸ್ಯದ ವಾತಾವರಣ ಕಾಣಲು ಸಾಧ್ಯ. ಹುಲಿಯೂರು ದುರ್ಗ ಹೋಬಳಿಯ ಉಜ್ಜನಿ ಗ್ರಾಮದಲ್ಲಿ ನಡೆಯುವ ಈ ಹಬ್ಬ ವಿಶಿಷ್ಟ ಹಾಗೂ ಅಚ್ಚರಿ ಎನಿಸಿದರೂ ನಮ್ಮೆಲ್ಲರ ಕಲ್ಪನೆಗೆ ಮೀರಿ ಆಚರಿಸಲ್ಪಡುತ್ತದೆ.
ನಾಗರಿಕತೆ ಎಷ್ಟೇ ಮುಂದುವರೆದಿದ್ದರೂ ಗ್ರಾಮೀಣ ಪ್ರದೇಶಗಳಲ್ಲಿ ಇವತ್ತಿಗೂ ದಲಿತರು-ಸವರ್ಣೀಯರು ಎಂಬ ಭಿನ್ನತೆ ದೂರವಾಗಿಲ್ಲ. ಅದೆಷ್ಟೋ ದೇವಸ್ಥಾನಗಳಲ್ಲಿ ಈಗಲೂ ಹರಿಜನರಿಗೆ ಪ್ರವೇಶವೇ ಇಲ್ಲದೆ, ಬಹಿಷ್ಕಾರಕ್ಕೆ ಒಳಗಾಗುತ್ತಿರುವ ನಾನಾ ಪ್ರಕರಣಗಳು ನಾವಿನ್ನೂ ಕೇಳುತ್ತಲೇ ಇದ್ದೇವೆ. ಇಂಥ ಕಾಲಘಟ್ಟದಲ್ಲೇ ಹರಿಜನರು ಜನಿವಾರ ಧರಿಸಿ ಪೂಜೆ ಮಾಡುವ ಮೂಲಕ ಇಡೀ ಹಬ್ಬದ ಕೇಂದ್ರ ಬಿಂದುವಾಗುವುದು ನಿಜಕ್ಕೂ ವಿಶೇಷ ಎನ್ನಲೇ ಬೇಕು.
ಉಜ್ಜನಿ ಗ್ರಾಮದ ಗ್ರಾಮ ದೇವತೆ ಶ್ರೀ ಚೌಡೇಶ್ವರಿ ಅಮ್ಮನವರ ಹಬ್ಬ ಸುತ್ತ-ಮುತ್ತಲ ೧೫ ಹಳ್ಳಿಗಳಲ್ಲಿ ಪ್ರತಿ ವರ್ಷ ನಡೆಯುತ್ತದೆ. ಏಪ್ರಿಲ್ ೧೮ ರಿಂದ ೨೦ ರವರೆಗೆ ನಡೆಯಲಿದೆ.
ಅಂದ ಹಾಗೆ, ಈ ಹಬ್ಬದಲ್ಲಿ ವಿಶೇಷವಾಗಿ ‘ಹೆಬ್ಬಾರೆ ಗುಡ್ಡರು’ ಎಂದೇ ಕರೆಸಿಕೊಳ್ಳುವ ೬ ಮಂದಿ ಹರಿಜನರು ಹಬ್ಬಕ್ಕೂ ಮುನ್ನ ೧೫ ದಿನ ಜನಿವಾರ ಧರಿಸುತ್ತಾರೆ ಮತ್ತು ದೇವಿಗೆ ಪೂಜೆ ಸಲ್ಲಿಸುತ್ತಾರೆ. ಆ ದಿನಗಳಲ್ಲಿ ಇವರು ಯಾವುದೇ ಕಾರಣಕ್ಕೂ ತಮ್ಮ ಮನೆಗೆ ಹೋಗುವಂತಿಲ್ಲ. ದೇವಸ್ಥಾನದ ಕೋಣೆಯೊಂದರಲ್ಲೇ ಅಡುಗೆ ಮಾಡಿಕೊಂಡು ಊಟ ಮಾಡಬೇಕು. ಹಬ್ಬ ಮುಗಿಯುವವರೆಗೂ ಯಾವುದೇ ಕಾರಣಕ್ಕೂ ’ಮೈಲಿಗೆ’ ಆಗುವಂತಿಲ್ಲ. ಹಬ್ಬದಲ್ಲಿ ಪೂಜೆ, ಪುನಸ್ಕಾರ ಎಲ್ಲವೂ ಇವರದ್ದೇ!
ಮತ್ತೂ ವಿಶೇಷ ಅಂದ್ರೆ ಮುಸ್ಲಿಂರೂ ಗ್ರಾಮದೇವತೆಯ ಹಬ್ಬದಲ್ಲಿ ಸಕ್ರಿಯವಾಗಿ ಭಾಗಿಯಾಗ್ತಾರೆ. ಐದು ಮಂದಿ ಮುಸ್ಲಿಂ ಜೋಡಿಗಳು ಬಾಬಯ್ಯನ ಕೊಂಡ ಹಾಯುವ ಮೂಲಕ ಸೌಹಾರ್ದತೆ ಮೆರೆಯುತ್ತಾರೆ, ಭಕ್ತಿ ಭಾವ ಮೆರೆಯುತ್ತಾರೆ.
ಬಹುಶಃ ಇಂಥದೊಂದು ಸೌಹಾರ್ದತೆ ಮತ್ತು ಸಾಮರಸ್ಯವನ್ನ ಉಜ್ಜನಿ ಗ್ರಾಮದಲ್ಲಿ ಮಾತ್ರವೇ ಕಾಣಲಿಕ್ಕೆ ಸಾಧ್ಯ, ಇಲ್ಲಿರುವ ಬಹುಸಂಖ್ಯಾತ ಒಕ್ಕಲಿಗರು ಸೇರಿದಂತೆ ಎ ಸಮುದಾಯದ ಜನರು ಸೇರಿಕೊಂಡು ವಿಶಿಷ್ಟ ಹಾಗೂ ವಿಭಿನ್ನ ಆಚರಣೆಯ ಹಬ್ಬವನ್ನು ಗ್ರಾಮದಲ್ಲಿ ನೂರಾರು ವರ್ಷಗಳಿಂದ ಯಾವುದೇ ಅಡ್ಡಿ ಆತಂಕವಿಲ್ಲದೆ ನಡೆಸಿಕೊಂಡು ಬರುತ್ತಿzರೆ.
ಬ್ರಾಹ್ಮಣರೆಂದೇ ಕರೆಯುತ್ತಾರೆ!
ಉಜ್ಜನಿ ಗ್ರಾಮದಲ್ಲಿ ಪ್ರತಿ ವರ್ಷ ೧೫ ದಿನಗಳ ಕಾಲ ಚೌಡೇಶ್ವರಿ ಹಬ್ಬ ನಡೆಯುತ್ತದೆ. ಹಬ್ಬಕ್ಕೂ ಮೊದಲೇ ಗ್ರಾಮದಲ್ಲಿ ಕಂಭ ಹಾಕಲಾಗುತ್ತದೆ. ಹೀಗೆ ಕಂಭ ಹಾಕಿದ ದಿನದಿಂದಲೇ ಹೆಬ್ಬಾರೆ ಅಮ್ಮನ ಕರಗ ಹೊರುವ ಸಲುವಾಗಿ ’ಹೆಬ್ಬಾರೆ ಗುಡ್ಡರು’ ಎಂದೇ ಕರೆಸಿಕೊಳ್ಳುವ ಆರು ಮಂದಿ ಹರಿಜನರು ಬಿಳಿ ಕಚ್ಚೆ ಧರಿಸಿ ಚೌಡಮ್ಮನ ಪೂಜಾರಿಯಿಂದ ಹೋಮ ಮಾಡಿದ ತೀರ್ಥ ಸ್ವೀಕರಿಸಿ ಜನಿವಾರ ಧರಿಸುತ್ತಾರೆ. ಆ ದಿನದಿಂದಲೇ ಅವರನ್ನು ಬ್ರಾಹ್ಮಣರೆಂದೇ ಕರೆಯಲಾಗುತ್ತದೆ.
೮೫೦ ವರ್ಷಗಳ ಇತಿಹಾಸ
ವಿಶೇಷ ಅಂದ್ರೆ, ಏಪ್ರಿಲ್ ೧೮ ರಿಂದ ೨೦ರವರೆಗೆ ಮೂರು ದಿನಗಳ ಕಾಲ ನಡೆಯುವ ವಿಜೃಂಭಣೆಯ ಜಾತ್ರೆ ಕಳೆಗಟ್ಟುವುದು ಈ ಬ್ರಾಹ್ಮಣರಿಂದಲೇ. ಮಾರ್ಚ್ ೧೯ ರಂದು ಅಗ್ನಿಕೊಂಡ ನಡೆಯಲಿದೆ. ಹಬ್ಬಕ್ಕೆ ಕಂಭ ನೆಟ್ಟ ದಿನದಿಂದ ಊರಿನಲ್ಲಿ ಯಾರೂ ಕಂಟು ಹಾಕುವಂತಿಲ್ಲ. ಮೆಣಸಿನಕಾಯಿ ಸುಡುವಂತಿಲ್ಲ. ಇದು ಊರಿನಲ್ಲಿ ಕಟ್ಟುನಿಟ್ಟಿನ ಸಂಪ್ರದಾಯ. ಸುತ್ತ-ಮುತ್ತಲ ಹತ್ತಾರು ಗ್ರಾಮಗಳು ಸೇರಿ ಆಚರಿಸುವ ಈ ಚೌಡೇಶ್ವರಿ ಜಾತ್ರೆಗೆ ೮೫೦ ವರ್ಷಗಳ ಐತಿಹಾಸಿಕ ಹಿನ್ನೆಲೆ ಇದೆ.
ಅಂದ ಹಾಗೆ, ಹರಿಜನರು ಇಲ್ಲಿ ಬ್ರಾಹ್ಮಣರಾಗಿ ಪೂಜೆ ಸಲ್ಲಿಸಲು ಬಲವಾದ ಕಾರಣವಿದೆ. ಈ ಹಿಂದೆ, ಅದೇ ಗ್ರಾಮದ ಹರಿಜನ ಯುವಕನೊಬ್ಬ ತಾನು ಬ್ರಾಹ್ಮಣ ಜಾತಿಯವನು ಎಂದು ಸುಳ್ಳು ಹೇಳಿ ಬ್ರಾಹ್ಮಣ ಕನ್ಯೆಯನ್ನು ಮದುವೆಯಾಗಿದ್ದನಂತೆ. ಆ ದಂಪತಿಗಳಿಗೆ ಐವರು ಗಂಡು ಮಕ್ಕಳು ಇದ್ದರೆಂದೂ, ನಂತರ ಗಂಡನ ಜಾತಿ ವಿಷಯ ತಿಳಿದು ಆಕೆ ಅಗ್ನಿಪ್ರವೇಶ ಮಾಡಿದಳು ಎಂಬ ಪ್ರತೀತಿ ಇದೆ. ಇದರಿಂದ ಆಕೆಯನ್ನು ಸಂತೈಸಲಿಕ್ಕಾಗಿ ಐವರು ಮಕ್ಕಳು ಮತ್ತು ತಂದೆ ಸೇರಿ ಆರು ಮಂದಿ ಪ್ರತೀ ವರ್ಷವೂ ಹಬ್ಬದ ವೇಳೆ ೧೫ ದಿನಗಳ ಮಟ್ಟಿಗೆ ಬ್ರಾಹ್ಮಣರಾಗುತ್ತಿzರೆ ಜತೆಗೆ ಪೂಜೆ ಸಲ್ಲಿಸುತ್ತಾರೆ.
ಮುಸ್ಲಿಂ ಜಾತಿಯ ಐವರು ದಂಪತಿ ತಲೆಯ ಮೇಲೆ ಸಿಂಗರಿಸಿದ ಗಡಿಗೆಗಳನ್ನು ಹೊತ್ತು ಕುಣಿಯುತ್ತಾ ಬಾಬಯ್ಯನ ಕೊಂಡ ಹಾಯುತ್ತಾರೆ. ಹರಕೆ ಹೊತ್ತ ಮಹಿಳೆಯರು ಬಾಯಿಬೀಗ ಚುಚ್ಚಿಸಿಕೊಂಡು ದೇವಿಗೆ ಭಕ್ತಿ ಮೆರೆಯುತ್ತಾರೆ. ಚೌಡೇಶ್ವರಿ ದೇವಿಯ ಕಂಭ ಹಾಕುವ ದಿನ ಬೆಳ್ಳಿ ಕಂಕಣ ತೊಡುವ ಪೂಜಾರಿ ಹಬ್ಬ ಮುಗಿಯುವವರೆಗೂ ಮನೆಯಲ್ಲಿ ಊಟ ಮಾಡುವಂತಿಲ್ಲ. ಆತನೇ ಅಡುಗೆ ತಯಾರಿಸಿಕೊಳ್ಳಬೇಕು. ಅಗ್ನಿಕೊಂಡದ ದಿನ ಉಜ್ಜನಿ ಗ್ರಾಮದಲ್ಲಿ ಹಬ್ಬದ ಸಡಗರ, ಎಲ್ಲೂ ಜನಸಾಗರವೇ ನೆರೆಯುತ್ತದೆ.
ಉಜ್ಜನಿ ಗ್ರಾಮದಲ್ಲಿ ನಡೆಯುವ ಈ ಹಬ್ಬ ಪ್ರತೀ ಗ್ರಾಮದಲ್ಲೂ ನಡೆದಿದ್ದೇ ಆದಲ್ಲಿ ಸಮಾಜದಲ್ಲಿ, ಅದರಲ್ಲೂ ಮುಖ್ಯವಾಗಿ ಹಳ್ಳಿಗಾಡಿನಲ್ಲಿ ಬೇರುಬಿಟ್ಟಿರುವ ಜಾತೀಯತೆ, ಕೋಮು ವೈಷಮ್ಯ ಕೊಂಚ ಮಟ್ಟಿಗಾದರೂ ಶಮನಗೊಂಡು, ಮನುಷ್ಯ ಮನುಷ್ಯರ ಮಧ್ಯೆ ಮಾನವೀಯತೆ ಮತ್ತು ಅಂತಃಕರಣದ ಬೀಜ ಮೊಳೆಯಲು ಸಾಧ್ಯವೇನೋ....

ಉಲ್ಲಾಸ

ಕವಿ ಮುದ್ದಣನ ಅನನ್ಯತೆ



’ಪದ್ಯಂ ವಧ್ಯಂ ಗದ್ಯಂ ಪದ್ಯಂ’ ಎನ್ನುತ್ತಾ ಹೊಸಗನ್ನಡದ ಅರುಣೋದಯವನ್ನು ಎತ್ತಿ ಹಿಡಿದವನು ಕವಿ ಮುದ್ದಣ. "ಹಳಸಿ ತಂಗೂಳಾದ ರೀತಿಗಳ ಹೀಗಳಿಸಿ ಬಳಬಳಸಿ ಸವಿಗೆಟ್ಟ ನಲ್ಗತೆಯ ರಸವೆರಸುಧ ಬಳಸಿ ಪೇಳಿದನು ಒಳ ಹರಳವನು ಹದಮಾಡಿ ತನ್ನ ಮಾತಿನಿಂದ" ಎಂದು ಮುದ್ದಣನ ಅನನ್ಯತೆಯನ್ನು ವರಕವಿ ಬೇಂದ್ರೆಯವರು ಸರಿಯಾಗಿ ಗುರುತಿಸಿದ್ದಾರೆ. "ಹಳಗನ್ನಡ ಹೊಸಗನ್ನಡ ಹಾರದ ಮಧ್ಯಮಣಿ ನಮ್ಮ ಮುದ್ದಿನ ಮುದ್ದಣ ಕನ್ನಡ ನವೋದಯದ ಮುಂಗೋಳಿ" ಎಂಬುದಾಗಿ ಸೇಡಿಯಾಪು ಕೃಷ್ಣಭಟ್ಟರು ಅಭಿಪ್ರಾಯ ಪಟ್ಟಿದ್ದಾರೆ. ಮುದ್ದಣನ ನಿಜನಾಮ ’ನಂದಳಿಕೆ ಲಕ್ಷ್ಮೀನಾರಾಯಣಯ್ಯ. ಮುದ್ದಣ ಹುಟ್ಟಿದ್ದು ೧೮೭೦ರಲ್ಲಿ; ಆತ ತೀರಿಕೊಂಡಿದ್ದು ೧೯೦೧ರಲ್ಲಿ. ೩೧ ವರ್ಷಗಳ ಅಲ್ಪ ಅವಧಿಯಲ್ಲೇ ಗಣನೀಯ ಸಾಧನೆ ಮಾಡಿದ ಶ್ರೇಯಸ್ಸು ನಂದಳಿಕೆ ಲಕ್ಷ್ಮೀನಾರಾಯಣಯ್ಯಗೆ ಸಲ್ಲುತ್ತದೆ.
ಬಡತನದಲ್ಲೇ ಬಾಳಿ ಬೆಳಗಿ ಅಳು ನುಂಗಿ ನಗೆ ನಕ್ಕ ಮುದ್ದಣ ಪ್ರತಿಭಾನ್ವಿತ ಕವಿ. ವೃತ್ತಿಯಲ್ಲಿ ಆತ ವ್ಯಾಯಾಮ ಶಿಕ್ಷಕನಾಗಿದ್ದ. ಕಡು ಬಡತನದಲ್ಲಿ ಬೆಳೆದ ಆತ ಓದಿದ್ದು ಪ್ರಾಥಮಿಕ ಶಾಲೆಯವರೆಗೆ ಮಾತ್ರ. ಸ್ವಪರಿಶ್ರಮ, ಸ್ವಯಂ ಪ್ರತಿಭೆಯಿಂದಲೇ ಮುದ್ದಣ ಮಹಾನ್ ಕವಿಯಾಗಿ ಲೋಕ ವಿಖ್ಯಾತನಾದುದು ಸಾಮಾನ್ಯ ಸಂಗತಿಯಲ್ಲ. ಮುದ್ದಣನ ತಂದೆ ಪಾಟಾಳಿ ತಿಮ್ಮಪ್ಪಯ್ಯ, ತಾಯಿ ಮಹಾಲಕ್ಷ್ಮಮ್ಮ. ಆತ ತನ್ನ ಇಪ್ಪತ್ತಮೂರನೆಯ ವಯಸ್ಸಿನಲ್ಲಿ ಕಮಲಾಬಾಯಿಯನ್ನು ಮದುವೆಯಾದ. ಈಕೆ ಮುದ್ದಣನ ಕಾವ್ಯದ ’ಮನೋರಮೆ’ಯೂ ಆಗಿದ್ದಾಳೆ.
"ಸ್ವಭಾವತಃ: ಮಹಾ ಸರಸಿಯಾಗಿದ್ದ ನಾರಣಪ್ಪನವರು ಬಿಡುವಿದ್ದಾಗಲೆಲ್ಲಾ ಬರೆಯುವುದು, ಓದುವುದು ಇವುಗಳಲ್ಲೇ ಮಗ್ನ. ಪ್ರಾಚೀನಕಾಲದ ಗ್ರಂಥಗಳನ್ನೂ ತಾಡೋಲೆಗಳನ್ನೂ ಸಂಗ್ರಹಿಸಿ ಅಧ್ಯಯನ ಮಾಡುವುದು ಅಭ್ಯಾಸ. ಅಲ್ಲದೇ ಆ ಕಾಲಕ್ಕೆ ಅಮೋಘವೂ ಅಧಿಕೃತವೂ ಎನಿಸಿದ್ದ ಕಿಟ್ಟೆಲ್ ಡಿಕ್ಷನರಿಯನ್ನು ಆಮೂಲಾಗ್ರವಾಗಿ ಓದುವುದರ ಜೊತೆಗೆ ಅದರಲ್ಲಿರುವ ಪದಗಳನ್ನು ಪದ ಅರ್ಥಗಳನ್ನು ಉರುಹಚ್ಚುವುದು ನಾರಾಣಪ್ಪನವರ ಮತ್ತೊಂದು ಹವ್ಯಾಸ. ನಾರಣಪ್ಪನವರು ಬಹುಭಾಷಾಪ್ರಿಯರು" ಎಂಬ ಬಿ.ಎಸ್.ಕೇಶವರಾವ್ ಅವರ ಮಾತು ನಿಜವೇ ಆಗಿದೆ.
ಸೊಗಸಾದ ಅಂಗಸೌಷ್ಠವವನ್ನು ಹೊಂದಿದ್ದ ಯುವಕ ಲಕ್ಷ್ಮೀನಾರಾಯಣಯ್ಯನ ಕುರಿತು ಗೋವಿಂದ ಪೈ ಅವರು "ನಾರಾಣಪ್ಪನವರ ಎತ್ತರ ಐದು ಅಡಿ ನಾಲ್ಕು ಇಂಚು, ಗಂಭೀರ ಮುಖ ಮುದ್ರೆಯಿಂದಲೇ ಸದಾ ಕಾಲವಿರುತ್ತಿದ್ದ ನಾರಣಪ್ಪ ಸುಂದರಾಂಗ. ಯಾವಾಗಲೂ ಏನನ್ನೋ ಹುಡುಕುವುದರಲ್ಲಿ ಹಾತೊರೆಯುವಂತಿದ್ದ ಚುರುಕು ದೃಷ್ಟಿಯ ಕಣ್ಣುಗಳು, ಎದ್ದು ಕಾಣುವಂತಿದ್ದ ಉದ್ದನೆಯ ನಾಸಿಕ, ದಿಟ್ಟ ನಿಲುವು, ನಡಿಗೆ, ಹರಿತವೆನಿಸುವ ಚುರುಕುಬುದ್ಧಿ, ಆದರೆ ಮಿತಭಾಷಿ. ಆತ ಬಹುಸೂಕ್ಷ್ಮಗ್ರಾಹಿ, ಏಕಪಾಠಿ" ಎಂದು ಮುದ್ದಣ ಕವಿಯ ವ್ಯಕ್ತಿತ್ವವನ್ನು ಅನಾವರಣಗೊಳಿಸಿದ್ದಾರೆ. ವ್ಯಾಯಾಮ ಶಿಕ್ಷಕನಾಗಿದ್ದ ಮುದ್ದಣ ತನ್ನ ಪ್ರತಿಭೆ ಹಾಗೂ ಸ್ವಾಧ್ಯಾಯದ ಮೂಲಕ ಕನ್ನಡ ಪಾಂಡಿತ್ಯವನ್ನು ಕೈವಶ ಮಾಡಿಕೊಂಡಿದ್ದನೆಂಬುದು ಯಾರನ್ನೂ ಹುಬ್ಬೇರಿಸುವಂತೆ ಮಾಡುತ್ತದೆ. ಮುದ್ದಣ ಜೀವಿಸಿದ್ದ ಕಾಲ ಕನ್ನಡ ವಾಙ್ಞಯದ ದೃಷ್ಟಿಯಿಂದ ಸಂಧಿಕಾಲ. ಕನ್ನಡ ಸಾಹಿತ್ಯಲೋಕ ಹೊಸತಿಗಾಗಿ ಹಾತೊರೆಯುತ್ತಿದ್ದ ಸಂದರ್ಭ. ಕನ್ನಡದಲ್ಲಿ ಆಗತಾನೆ ಪ್ರಕಟಣಾ ಕಾರ್ಯ ಶುರುವಾಗಿತ್ತು. ಕಿಟ್ಟೆಲ್‌ಕೋಶ, ಶಬ್ದಮಣಿದರ್ಪಣ, ಛಂದೋಂಬುಧಿ ಮೊದಲಾದವು ಲಭ್ಯವಿದ್ದ ಬಹುಮುಖ್ಯ ಸಾಹಿತ್ಯ ಹಾಗೂ ಶಾಸ್ತ್ರಕೃತಿಗಳು. ಯಕ್ಷಗಾನ ಬಯಲಾಟ ಪ್ರಭಾವವೂ ಅವನ ಮೇಲಾಯಿತು. ಇದೆಲ್ಲವುಗಳಿಂದ ಸಿದ್ಧಿಸಿದ್ದು ತುಸು ಪ್ರೌಢಶೈಲಿ, ಹಳಗನ್ನಡ ನಡುಗನ್ನಡಗಳನ್ನು ನಾಂದಿ ಮಾಡಿದ ವಿಶಿಷ್ಟ ಶೈಲಿ-ಅವನದು. "ಮುದ್ದಣನಿಗೆ ಹಳಗನ್ನಡದ ಮೇಲೆ ವಿಶೇಷ ಒಲವು. ಅವನ ಕಾಲವೆಂದರೆ ನಮ್ಮ ನಾಡು ಆಧುನಿಕತೆಗೆ ತೆರೆದುಕೊಳ್ಳಲು ತೊಡಗಿದ ಸಂಧಿಕಾಲವೆಂಬುದು ನೆನಪಿಸಬೇಕಾದ ವಿಷಯ. ಅವನಲ್ಲಿ ಆಧುನಿಕತೆಯೆಂಬುದು ಹಳೆಯ ಗ್ರಂಥಗಳ ಮರು ಓದು, ಪುನರ್ಮನನ, ಪುನರ್‌ವಿಮರ್ಶೆಗಳ ಮೂಲಕವೇ ಮೂಡಿಬಂತೆಂಬುದು ಗಮನಿಸಬೇಕಾದ ವಿಷಯ. ಹೊಸಕಾಲದ ಒಲವು ಗದ್ಯದೆಡೆಗೆಂಬುದನ್ನು ಕನ್ನಡದ ನಾಡಿಮಿಡಿತದಿಂದ ಮುದ್ದಣ ತಿಳಿದುಕೊಂಡವನಾಗಿದ್ದ". ಸಂಕ್ರಮಣ ಕಾಲಘಟ್ಟದಲ್ಲಿ ನಿಂತು ಕೃತಿ ರಚಿಸಿ ಪ್ರಯೋಗಶೀಲತೆಯನ್ನು ಮೆರೆದ ಮುದ್ದಣನ ಅಪೂರ್ವ ಸಾಧನೆಯನ್ನು ಡಾ||ಪಾದೇಕಲ್ಲು ವಿಷ್ಣುಭಟ್ಟ ಅವರು ಸರಿಯಾಗಿಯೇ ವಿಶ್ಲೇಷಿಸಿದ್ದಾರೆ. ಮುದ್ದಣ ಶಬ್ದಗಾರುಡಿಗನಾಗಿದ್ದ; ಆತನ ಶಬ್ದಸೃಷ್ಟಿ ಸೋಜಿಗ ಹುಟ್ಟಿಸುತ್ತದೆ. ನಿಜವಾದ ಅರ್ಥದಲ್ಲಿ ಮುದ್ದಣ ವಾಗ್ದೇವಿಯ ಭಂಡಾರದ ಮುದ್ರೆಯನ್ನೊಡೆದ ಪ್ರತಿಭಾ ಸಂಪನ್ನ ಕವಿ. ವರ್ತಮಾನದ ಸಾಹಿತ್ಯ ಹೇಗಿರಬೇಕೆಂಬ ಕುರಿತು ಗಂಭೀರವಾಗಿ ಚಿಂತನಮಂಥನ ನಡೆಸಿಯೇ ಆತ ಸಾಹಿತ್ಯ ಕೃತಿಗಳನ್ನು ರಚಿಸಿದಂತೆ ತೋರುತ್ತದೆ. ’ಉಳಿದೊಡಂ ಅಳಿದೊಡಂ ಬಟ್ಟೆದೋರಿಪ ರಸಭರಿತಂ ಚರಿತಂ’ ಅರ್ಥಾತ್ ಇಹಪರಕ್ಕೆ ದಾರಿತೋರುವ, ಬರುವ ಮನ್ವಂತರದಲ್ಲಿ ಇತರರಿಗೆ ಮಾದರಿಯಾಗುವ, ಮಾರ್ಗದರ್ಶನ ಮಾಡುವ, ದಾರಿತೋರುವ ಮಹತ್ವಾಕಾಂಕ್ಷೆಯ ಕೃತಿಗಳನ್ನು ರಚಿಸಿ ಆತ ಕನ್ನಡಿಗರ ಭಾವಕೋಶದಲ್ಲಿ ಸೇರಿ ಹೋಗಿದ್ದಾನೆ. ಇಂದಿಗೂ ಮುದ್ದಣ ವಿರಚಿತ ಕೃತಿಗಳ ಓದು, ಅಧ್ಯಯನ, ವಾಚನ, ವಿಶ್ಲೇಷಣೆ ಸತತವಾಗಿ ನಡೆಯುತ್ತಿರುವುದು ಅವನ ಕೃತಿಗಳ ಹಿರಿಮೆಗೆ ಸಾಕ್ಷಿ.
’ಕನ್ನಡಂ ಕತ್ತುರಿಯಲ್ತೆ’ ಎಂದು ಸಾರಿದ ಮುದ್ದಣ ಶ್ರೀರಾಮಾಶ್ವಮೇಧಂ, ಅದ್ಭುತ ರಾಮಾಯಣ, ಶ್ರೀರಾಮ ಪಟ್ಟಾಭಿಷೇಕಂ, ರತ್ನಾವತೀಕಲ್ಯಾಣ, ಕುಮಾರವಿಜಯ ಮೊದಲಾದ ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯ ಭಂಡಾರವನ್ನು ಸಮೃದ್ಧಗೊಳಿಸಿದ್ದಾನೆ. ’ರಾಮಾಶ್ವಮೇಧ’ ಒಂದು ಅಭಿಜಾತಕೃತಿ. ಹಳೆಯ ಹೊಸ ಸಂವೇದನೆಗಳ ಸಂಗಮ ಇಲ್ಲಿ ಮೇಳೈಸಿದೆ. ಸಂಸ್ಕೃತ ಮೂಲದಿಂದ ಕಥಾವಸ್ತುವನ್ನು ಆಯ್ದುಕೊಂಡರೂ ಕಥೆಯ ಆರಂಭದಿಂದ ತೊಡಗಿ ಕೊನೆಯವರೆಗೂ ಕವಿ ಮುದ್ದಣನ ಸ್ವಂತಿಕೆಯ ಛಾಪು ಎದ್ದುಕಾಣುತ್ತದೆ. ’ಓವೋ ಕಾಲ ಪುರುಷಂಗೆ ಗುಣಮಣಮಿಲ್ಲಂ ಗಡ’ ಎಂದು ಬಿಚ್ಚಿಕೊಳ್ಳುವ ಕಾವ್ಯ ಲಲಿತ ಮನೋಹರವಾಗಿ ಅರಳಿದೆ. ಮುದ್ದಣ ಮನೋರಮೆಯರ ನಡುವಿನ ಸರಸ ಸಲ್ಲಾಪ ಸಂವಾದ ರಸದ ಮಡು, ತೀಕ್ಷ್ಣ ವಿಮರ್ಶೆ, ವ್ಯಂಗ್ಯ ವಿಡಂಬನೆಗಳಿಂದ ಈ ಕಾವ್ಯ ಕನ್ನಡ ಭಾಷೆಯ ಹಿರಿಮೆಗೂ ಕನ್ನಡಿ ಹಿಡಿಯುತ್ತದೆ. ಆ ಕಾವ್ಯದ ಒಂದು ಸಂದರ್ಭ ಇಂತಿದೆ.
ಕೊನೆಗೆ ಕವಿ ಹೇಳುತ್ತಾನೆ. ಮನೋರಮೆಗೆ:
ಮುದ್ದಣ: ಏನೆನ್ನ ಕಬ್ಬಂ ನಿನಗೆ ಮೆಚ್ಚುಗೆಯಾಯ್ತೆ?
ಮನೋರಮೆ: ಎನಗೊರ್ವಳ್ಗೇಂ? ನಾಡೊಳೆಲ್ಲರ್ಗಂ.
ಮುದ್ದಣ: ಎನ್ನೊಳೊಂದಭಿಮಾನದಿನಿಂತುಸಿರ‍್ದೆಯಕ್ಕುಂ.
ಮನೋರಮೆ: ಎನ್ನ ಮುದ್ದಿನರಸ! ಅಂತಲ್ತು. ನಿನ್ನ ಪೆಸರೆಂತಂತು ಕಬ್ಬಮುಂ ಮುದ್ದುಮುದ್ದಾಯ್ತು ಜಗಕೆ.
ಮುದ್ದಣ: ಎಂತು ನಿನಗೆ ಸೊಗಸಾಯ್ತಲೆ! ಇದವೆ ರಮಾನಂದಮೆನಗೆ.
ಮನೋರಮೆ: ಬಿನ್ನಣದ ಬಣ್ಣನೆಯಲ್ತು. ನೀನೆಂದ ಕತೆ.
ಮುದ್ದಣ: ಅಂತಪ್ಪೊಡೆ ತಾರೆಲೆ ನೀನೆಂದ ಮೆಚ್ಚುಗೆಯನುಡುಗೊರೆಯಂ.
ಮನೋರಮೆ: ಆಯ್ತಾಯ್ತು. ಪೇಳ್ದ ಕತೆ ಮಂಗಳಂ ಮಾಡು, ಮೆಚ್ಚುಗಿಚ್ಚು ಬಳಿಕ್ಕಮಲ್ತೆ?
ಮುದ್ದಣ: ಬರಿದೆ ಮಂಗಳಮಕ್ಕುಮೆ? ಹೋಳಿಗೆ ತುಪ್ಪಮಂ ತಿನವಡಿಸವೇಡಾ?
ಮನೋರಮೆ: ಹೋಳಿಗೆ ತುಪ್ಪಕ್ಕಿಂದೇಂ ನಿನಗೆ ಶೋಭನವೆ?
ಮುದ್ದಣ: ಇಂದೆನಗೆಂಡದೊಡೇಂ? ಎನಗಂ ನಿನಗಂ.
ಮನೋರಮೆ: ಪೋ, ಸಾಲ್ಗುಮೀ ಬಣ್ಣದ ನುಡಿ. (ಅನಿತರೊಳ್ ಎದ್ದು ಪೋಪಳ್).
ಮುದ್ದಣ: ಬಲ್ಸೆಡಕುಗಾರ್ತಿ ಕಣಾ! ಮುದ್ದಣನಂ ಟಕ್ಕಿಪ ಪೆಂಡಿರೊಳರೆ? ಮೆಚ್ಚನಿತ್ತಲ್ಲದೆ ಬಿಡುವೆನೆ?
ಮನೋರಮೆ: ಕತೆಗೆ ಮಂಗಳಮಂ ಮಾಡದೆ, ಬಹುದೆ ಉಡುಗೊರೆ ತುಡುಗೊರೆ?
ಮುದ್ದಣ: ಕತೆಗೆ ಮಂಗಳಮನಾಗಳೆ ಪೇಳ್ದೆಂ. ಈಗುಳಿದುದೊಂದೆ ನಿನ್ನುಡುಗೊರೆ.
ಮನೋರಮೆ: ನಿನ್ನುಡುಗೊರೆಯ ಕಾಟಕ್ಕಿನ್ನೆತ್ತ ಪೋಪೆಂ! ನೀನೇನು ಬೇಡುವಯ್?
ಮುದ್ದಣ: ಬೇಡುವೊಡೇಂ ತಿರುಕನೆ? ಮನೆಗೆ ಬಂದನೆ? ಮೆಚ್ಚಿತ್ತೊಡದನೆ ಕೊಳ್ವೆಂ.
ಮನೋರಮೆ: ಆಂ ಪರಾಧೀನೆ ಗಡ, ಏನನೀವೆನೆಂತೀವೆಂ?
ಮುದ್ದಣ: ಏನೊ ಎಂತೊ, ಆಂ ಮೆಚ್ಚುವಂತೆಯುಂ, ಕತೆಯ ತಿರುಳ್ಗೋವಂತುಂ, ನಾಲ್ವರ್ ತಲೆದೂಗುವಂತುಂ ಉಡುಗೊರೆ ಇತ್ತೊಡಾಯ್ತು.
ಇದೇ ರೀತಿಯ ಸಂಭಾಷಣೆ, ಚರ್ಚೆ, ವಿಮರ್ಶೆ, ಸಂವಾದ ಮುದ್ದಣನ ಕಾವ್ಯದ ಪ್ರಮುಖ ವೈಶಿಷ್ಟ್ಯಗಳು.
ಯಕ್ಷಗಾನ ಕಲೆಯ ಬಗೆಗೆ ಮುದ್ದಣನಿಗೆ ವಿಶೇಷವಾದ ಗೌರವ, ಆದರಗಳಿದ್ದವು. ಹೀಗಾಗಿ ಅವನು ಎರಡು ಮಹತ್ವದ ಕೃತಿಗಳನ್ನು ರಚಿಸಿ ಕಲಾಸೇವೆಗೂ ಕೈಜೋಡಿಸಿದ್ದಾನೆ.
ಮುದ್ದಣ ಸಾಹಿತ್ಯ ಕೃಷಿ ಮಾಡಿದ್ದು ಇಪ್ಪತ್ತನೆಯ ಶತಮಾನದ ಶುರುವಾತಿನಲ್ಲಿ. ಅದು ಆಧುನಿಕ ಕಾಲದ ಪ್ರಾರಂಭವೂ ಆಗಿತ್ತು. ಆಗ ಕವಿ ಸಾಹಿತಿಗಳಿಗೆ ಅಂಥ ಗೌರವವೇನೂ ಇರಲಿಲ್ಲ. ಮುದ್ದಣನದು ಸಂಕೋಚದ ಸ್ವಭಾವ. ಹೀಗಾಗಿ ಆತ ತನ್ನ ನಿಜನಾಮವನ್ನು ಮರೆಸಿ ಕೃತಿರಚನೆ ಮಾಡಿದ. ಕೊನೆಗೂ ’ಮುದ್ದಣ’ ಎಂಬ ಹೆಸರೇ ಸ್ಥಿರವೂ ಜನಪ್ರಿಯವೂ ಆಗುಳಿಯಿತು. ಮುದ್ದಣ ಬದುಕಿದ್ದು ಕೇವಲ ಮೂವತ್ತೊಂದು ವರ್ಷಗಳಷ್ಟು ಕಾಲ. ಅಂಥ ಚೇತನಕ್ಕೆ ಊರವರೆಲ್ಲ ಸೇರಿ ನಂದಳಿಕೆಯಲ್ಲಿ ಒಂದು ಸೊಗಸಾದ ಸ್ಮಾರಕಸೌಧವನ್ನು ನಿರ್ಮಿಸಿ ಕೃತಾರ್ಥರಾಗಿದ್ದಾರೆ. ಕನ್ನಡ ಸಾಹಿತ್ಯದ ನವಯುಗದ ಹರಿಕಾರ ಮುದ್ದಣನ ಸಾಹಿತ್ಯದ ಕಂಪು ಈ ಮೂಲಕ ಎಲ್ಲೆಡೆ ಪಸರಿಸುವಂತಾಗಿದೆ.
ಹೀಗೆ ಮುದ್ದಣ ಹೊಸಗನ್ನಡದಲ್ಲಿ ಯೋಚಿಸಿ ಹಳಗನ್ನಡದಲ್ಲಿ ಕೃತಿಗಳನ್ನು ರಚಿಸಿ ಕನ್ನಡ ವಾಙ್ಞಯಕ್ಕೆ ಹೊಸ ತಿರುವು ನೀಡಿದ ಸೀಮಾಪುರುಷ. ’ಕರ್ಮಣಿಸರದಲ್ಲಿ ಚೆಂಬವಳಮಂ ಕೋದಂತೆ’ ಸಂಸ್ಕೃತ-ಕನ್ನಡದ ಸಮನ್ವಯವನ್ನು ಸಾಧಿಸಿದ್ದಾನೆ. "ಮುದ್ದಣ ಜೀವನ ಸಾಹಿತ್ಯಗಳೆರಡರಲ್ಲಿಯೂ ಕನ್ನಡದ ಒಬ್ಬ ವಿಶಿಷ್ಟ ಕವಿ. ದಟ್ಟ ದಾರಿದ್ರ್ಯದಿಂದ ಪಡಬಾರದ ಕಷ್ಟಪಟ್ಟು ಕೊನೆಗೆ ಕ್ಷಯರೋಗದಂತಹ ಭಯಂಕರ ರೋಗಕ್ಕೆ ತುತ್ತಾಗಿ ದೈಹಿಕವಾಗಿ ಸಂಕಟವನ್ನೂ ಮಾನಸಿಕವಾದ ನೋವನ್ನೂ ಸಾಕಷ್ಟು ಅನುಭವಿಸಿದ ಕವಿ, ಕುಸ್ತಿ ಮಾಸ್ತರ್, ಎಲ್ಲೂ ತನ್ನ ನೋವನ್ನು ವ್ಯಕ್ತಪಡಿಸಲಿಲ್ಲ! ಎಂಬ ಹಾಮಾನಾ ಅವರ ಮಾತು ನಿಜವೇ ಆಗಿದೆ. ತನ್ನ ಪದ ಪ್ರಯೋಗ ಪ್ರತಿಭೆಯಿಂದ ಕನ್ನಡವನ್ನು ಕಸ್ತೂರಿ ಕನ್ನಡವಾಗಿಸಿದ ಮುದ್ದಣನ ಸಾಧನೆ ಅನುಕರಣೀಯವಾಗಿದೆ.
ನಂದಳಿಕೆಯ ನಂದನ
ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ’ನಂದಳಿಕೆ’ ಗ್ರಾಮಕ್ಕೆ ವಿಶಿಷ್ಟವಾದ ಸ್ಥಾನಮಾನ ಪ್ರಾಪ್ತವಾದುದು ಕವಿ ಮುದ್ದಣನಿಂದ. ಕವಿ ಮುದ್ದಣ ಸ್ಮಾರಕ ಭವನದ ಮೂಲಕ ನಂದಳಿಕೆಯಲ್ಲಿ ಮತ್ತೆ ಕವಿ ಮುದ್ದಣನ ವಾಙ್ಞಯ ಸೇವೆಯನ್ನು ಲೋಕಮುಖಕ್ಕೆ ಪರಿಚಯಿಸಿದ ಕೀರ್ತಿ ಬಾಲಚಂದ್ರರಾವ್ ನಂದಳಿಕೆ ಅವರಿಗೆ ಸಲ್ಲುತ್ತದೆ. ಬಾಲಚಂದ್ರರಾವ್ ಅವರು ವೃತ್ತಿಯಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ದುಡಿದು ನಿವೃತ್ತರಾಗಿದ್ದಾರೆ.
ಕಳೆದ ನಾಲ್ಕು ದಶಕಗಳಿಂದ ಅವರು ಮುದ್ದಣ ಮಿತ್ರ ಮಂಡಳಿಯ ಮೂಲಕ ನಂದಳಿಕೆಯಲ್ಲಿ ಮಾಡಿದ ಕನ್ನಡ ಕೈಂಕರ್ಯ ನಾಡಿಗೆ ಮಾದರಿಯಾಗಿದೆ. ಒಂದು ಅಕಾಡೆಮಿ, ಒಂದು ವಿವಿ ಮಾಡಬಹುದಾದಷ್ಟು ಕಾರ್ಯವನ್ನು ರಾವ್ ಅವರು ಮಾಡಿದ್ದಾರೆ. ಹಿಂದುಳಿದ ಹಳ್ಳಿಯಾಗಿದ್ದ ನಂದಳಿಕೆ ಮುದ್ದಣ ಸ್ಮಾರಕದ ಮೂಲಕ ಅಭಿವೃದ್ಧಿ ಕಂಡು ಜಗತ್ತಿಗೆ ಪರಿಚಯವಾದದ್ದು ಬಾಲಚಂದ್ರರಾಯರ ಸತತ ಹೋರಾಟ ಹಾಗೂ ಪರಿಶ್ರಮದಿಂದ. ಮುದ್ದಣನ ಸಾಹಿತ್ಯ ಸಾಧನೆಯನ್ನು ಗ್ರಂಥ ಪ್ರಕಟಣೆ ಪ್ರಶಸ್ತಿ, ಪ್ರಚಾರ, ಉಪನ್ಯಾಸ, ಗ್ರಂಥಾಲಯ, ಸ್ಮಾರಕ ಭವನದ ಮೂಲಕ ಕನ್ನಡಿಗರ ಮನ ಮನೆಗೆ ಮುಟ್ಟಿಸುವ ವ್ರತ ತೊಟ್ಟಿರುವ ನಂದಳಿಕೆ ಬಾಲಚಂದರಾಯರ ಕನ್ನಡ ಪ್ರೀತಿಗೆ ಕನ್ನಡಿಗರು ಯಾವತ್ತೂ ಕೃತಜ್ಞರಾಗಿದ್ದಾರೆ.

ಡಾ.ಜಿ.ಎನ್.ಉಪಾಧ್ಯ
ಮುಖ್ಯಸ್ಥರು, ಕನ್ನಡ ವಿಭಾಗ, ಮುಂಬೈ ವಿಶ್ವವಿದ್ಯಾಲಯ.
ವಿದ್ಯಾನಗರಿ, ಮುಂಬಯಿ-೪೦೦ ೦೯೮

ಗಡಿ ಕನ್ನಡ ಪ್ರದೇಶ ಸಮಸ್ಯೆಗಳು

೯ನೇ ಶತಮಾನದ ’ಕವಿರಾಜಮಾರ್ಗ ಕೃತಿಯಲ್ಲಿ ಕನ್ನಡನಾಡು ದಕ್ಷಿಣದ ಕಾವೇರಿಯಿಂದ ಉತ್ತರದ ಗೋದಾವರಿಯವರೆಗೆ ವ್ಯಾಪಿಸಿತ್ತು ಎನ್ನಲಾಗಿದೆ. ಆದರೆ ಇಂದಿನ ಕರ್ನಾಟಕದ ಉತ್ತರ ಗಡಿಯಿಂದ ೪೦ ಮೈಲು ಆಚೆ ಗೋದಾವರಿ ಹರಿಯುತ್ತದೆ. ಆದರೆ ಆ ನದಿಯ ಆಚೆ-ಈಚೆ ಇರುವ ಶಾಸನಗಳು ಕನ್ನಡದಲ್ಲಿವೆ. ಅಂದರೆ ಹಿಂದೆ ಅದು ಕನ್ನಡನಾಡು ಆಗಿತ್ತು. ಈಗ ಆ ಭಾಗವೆಲ್ಲ ಮಹಾರಾಷ್ಟ್ರ-ಆಂಧ್ರಗಳಿಗೆ ಸೇರಿವೆ. ಮಹಾರಾಷ್ಟ್ರದ ಒಟ್ಟು ೧೦೦೦ ಶಾಸನಗಳಲ್ಲಿ ೩೦೦ ಶಾಸನಗಳು ಕನ್ನಡದಲ್ಲಿವೆ. ದಕ್ಷಿಣ ಮಹಾರಾಷ್ಟ್ರ ಮೂಲತಃ ಕರ್ನಾಟಕವೇ ಎಂದು ಮರಾಠಿ ವಿದ್ವಾಂಸರು ಒಪ್ಪಿಕೊಂಡಿದ್ದಾರೆ, ಕರ್ನಾಟಕದ ಅಂಚಿನ ಕೊಲ್ಲಾಪುರ, ಸಾಂಗ್ಲಿ, ಸೊಲ್ಲಾಪುರ, ನಾಂದೇಡ ಜಿಲ್ಲೆಗಳು ಮೂಲತಃ ಅಚ್ಚಗನ್ನಡ ಪ್ರದೇಶಗಳು, ರಾಷ್ಟ್ರಕೂಟರು ದೇವಗಿರಿ ಯಾದವರು ಕನ್ನಡಿಗರು. ಔರಂಗಬಾದ್ ಜಿಲ್ಲೆಯಲ್ಲಿ ಕನ್ನಡ ಎಂಬ ಹೆಸರಿನ ತಾಲೂಕು ಇದೆ. ಅಜಾತ-ಎಲ್ಲೋರ ಗುಹೆ ನಿರ್ಮಾತರು ರಾಷ್ಟ್ರಕೂಟರು.
ಆಂಧ್ರದ ಕರ್ನೂಲ್, ಅನಂತಪುರ, ಚಿತ್ತೂರು, ನಿಜಾಮಬಾದ್ ಜಿಲ್ಲೆಗಳಲ್ಲಿ ಕನ್ನಡ ಶಾಸನಗಳು ಇವೆ. ಅಲ್ಲಿ ಕನ್ನಡ ಮಾತನಾಡುವ ಜನರಿದ್ದಾರೆ. ತಮಿಳುನಾಡಿನ ನೀಲಗಿರಿ ಪ್ರದೇಶದವರ ಭಾಷೆ ಬಡಗ ಭಾಷೆ. ಇದು ಕನ್ನಡದ ಪ್ರಬೇಧ ಎನ್ನಲಾಗಿದೆ. ಕೇರಳದ ಕಾಸರಗೋಡು ಕನ್ನಡ ಪ್ರದೇಶ.
ಕರ್ನಾಟಕದ ಗಡಿಗೆ ಹೊಂದಿಕೊಂಡ ರಾಜ್ಯಗಳ ಜೊತೆ ನಮಗೆ ಜಗಳವಿದೆ. ಅಥವಾ ಅವು ನಮ್ಮ ಜೊತೆ ಜಗಳ ಮಾಡುತ್ತಲೇ ಇವೆ. ಗಡಿ, ನೀರು, ಭಾಷೆ, ರಸ್ತೆ ಪ್ರದೇಶ ಇತ್ಯಾದಿ ಕಾರಣಗಳು.
ಕರ್ನಾಟಕ / ಮಹರಾಷ್ಟ್ರ:- ಈ ರಾಜ್ಯಗಳ ವಿವಾದದ ಕೇಂದ್ರ ಬೆಳಗಾವಿ. ಬೆಳಗಾವಿ ಮತ್ತು ಸುತ್ತಲಿನ ಮರಾಠಿ ಭಾಷಿಕ ಪ್ರದೇಶಗಳನ್ನು ತನಗೆ ನೀಡಬೇಕೆಂದು ಮಹಾರಾಷ್ಟ್ರದ ತಕರಾರು. ಅದಕ್ಕೆ ನೇಮಕವಾದದ್ದು ಮಹಾಜನ್ ಆಯೋಗ. ಆಗಸ್ಟ್ ೧೯೬೭ರಲ್ಲಿ ನ್ಯಾಯಮೂರ್ತಿ ಮಹಾಜನ್ ೧೯೬ ಪುಟಗಳ ವರದಿ ಸಲ್ಲಿಸಿದ್ದರು. ಮಹಾರಾಷ್ಟ್ರ, ಬೆಳಗಾವಿ ಸೇರಿ ೮೧೪ ಹಳ್ಳಿಗಳನ್ನು ಕೇಳಿತ್ತು. ಆದರೆ ೨೬೪ ಹಳ್ಳಿಗಳನ್ನು ೬೫೬೩ ಚದುರ ಮೈಲು ಪ್ರದೇಶದೊಂದಿಗೆ ವರ್ಗಾಯಿಸಲಾಯಿತು. ಇದಕ್ಕೊಪ್ಪದ ಮಹಾರಾಷ್ಟ್ರ ರಾಜಕೀಯ ಅನೇಕ ಹೋರಾಟಗಳನ್ನು ಮಾಡಿದೆ. ಬಳಿಕ ಈಗ ನ್ಯಾಯಾಲಯದ ಮೊರೆಹೋಗಿದೆ. ಈ ಎರಡು ರಾಜ್ಯಗಳ ಗಡಿವಿವಾದಕ್ಕೆ ೫೦ ವರ್ಷಗಳ ಇತಿಹಾಸವಿದೆ ೧೯೬೧ರಿಂದ ಎಂ.ಇ.ಎಸ್. ನಾಯಕತ್ವ ವಹಿಸಿದೆ. ೧೯೫೭ರಲ್ಲಿಯೇ ಮುಂಬೈ ಸರಕಾರದ ಮೂಲಕ ಕೇಂದ್ರಕ್ಕೆ ಮನವಿ ಸಲ್ಲಿಸಿ ಬೆಳಗಾವಿ ಕಾರವಾರ ನಿಪ್ಪಾಣಿ ಒಳಗೊಂಡು ೮೧೪ ಗ್ರಾಮಗಳನ್ನು ಮಹಾರಾಷ್ಟ್ರದಲ್ಲಿ ವಿಲೀನ ಮಾಡಬೇಕೆಂದು ಒತ್ತಡ ಹಾಕಿದ್ದರು. ಮಹಾರಾಷ್ಟ್ರ ಸರಕಾರ ಮಹಾಜನ್ ವರದಿಯನ್ನು ತಿರಸ್ಕರಿಸುವ ನಿರ್ಣಯ ಅಂಗೀಕರಿಸಿತು. ಕರ್ನಾಟಕ ಸರಕಾರ ಮಹಾಜನ್ ವರದಿ ಅಂತಿಮ ಎನ್ನುವ ನಿರ್ಣಯ ಅಂಗೀಕರಿಸಿವೆ. ರಾಜಕೀಯ ಷಡ್ಯಂತ್ರಗಳು ಫಲಿಸದಿದ್ದಾಗ ಮಹಾರಾಷ್ಟ್ರ ಕೇಂದ್ರ ಸರಕಾರವನ್ನು ಮೊದಲ ಮತ್ತು ಕರ್ನಾಟಕವನ್ನು ಎರಡನೇ ಪ್ರತಿವಾದಿಯನ್ನಾಗಿ ಮಾಡಿ ೨೯-೦೩-೨೦೦೪ರಂದು ಸುಪ್ರೀಂ ಕೋರ್ಟ್‌ನಲ್ಲಿ ದಾವೆ ದಾಖಲು ಮಾಡಿದೆ. ಮಹಾರಾಷ್ಟ್ರದ ದಾವೆಗೆ ಕರ್ನಾಟಕದಿಂದ ಸೆಪ್ಟೆಂಬರ್ ೨೦೦೫ರಲ್ಲಿ ಆಕ್ಷೇಪಣಾ ಪತ್ರ ಸಲ್ಲಿಕೆ. ೨೭-೪-೨೦೦೬ರಲ್ಲಿ ಮಹಾರಾಷ್ಟ್ರದಿಂದ ಗಡಿಯಲ್ಲಿ ಕೇಂದ್ರಾಡಳಿತ ಜಾರಿಗೆ ಆಗ್ರಹಿಸುವ ಮಧ್ಯಂತರ ಅರ್ಜಿ ಸಲ್ಲಿಕೆ. ಈ ಅರ್ಜಿ ಸುಪ್ರೀಂ ಕೋರ್ಟಿಗೆ ಸಲ್ಲಿಸಲು ೧೬-೧೧-೨೦೦೬ರಂದು ಪ್ರಮಾಣ ಪತ್ರ ಸಲ್ಲಿಕೆ. ೧೩-೦೨-೨೦೦೯ರಂದು ಮಹಾರಾಷ್ಟ್ರದಿಂದ ಎರಡನೇ ತಿದ್ದುಪಡಿ ಅರ್ಜಿ ಸಲ್ಲಿಕೆ. ಅದಕ್ಕೆ ಕೇಂದ್ರ ಸರಕಾರ ತನ್ನ ನಿಲುವಿನ ಪ್ರಮಾಣ ಪತ್ರ ಸಲ್ಲಿಸಿದೆ. ದಾವೆ ವಿಚಾರಣೆ ವಿಳಂಬಕ್ಕೆ ಮಹಾರಾಷ್ಟ್ರ ಕಾರಣ. ಜುಲೈ ೮, ೨೦೧೦ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಸುಪ್ರೀಂ ಕೋರ್ಟಿಗೆ ಕೇಂದ್ರ ಸರಕಾರ ಪ್ರಮಾಣ ಪತ್ರ ಸಲ್ಲಿಸಿತು. ಅದು ರಾಜಕೀಯ ನಿರ್ಧಾರವನ್ನು ಸಂಸತ್ತಿನಲ್ಲಿ ಪ್ರಕಟಿಸಬೇಕಿದೆ.
ಕೃಷ್ಣಾನದಿ ನೀರಿನಲ್ಲಿ ಮಹಾರಾಷ್ಟ್ರದ ಪಾಲೂ ಇದ್ದು, ಆಂಧ್ರದ ಜೊತೆ ಸೇರಿ ನದಿ ನೀರು ಹಂಚಿಕೆಗಾಗಿ ನ್ಯಾಯಾಧೀಕರಣ ರಚನೆಯಾಗದಂತೆ ನೋಡಿಕೊಂಡು ಬಂದಿದೆ. ಈಗ ಕರ್ನಾಟಕದ ಪಾಲಿನ ನೀರಿನ ಮೇಲೂ ಕಣ್ಣು ಹಾಕಿ, ಅದನ್ನು ತನಗೆ ನೀಡುವಂತೆ ನ್ಯಾಯಾಧೀಕರಣದ ಮುಂದೆ ಅರ್ಜಿ ಹಾಕಿ ಕುಳಿತಿದೆ.
ಕರ್ನಾಟಕ / ಗೋವಾ:- ಪೋರ್ಚುಗೀಸರ ಕೈಯಿಂದ ವಾಪಸ್ಸು ಪಡೆದ ನಂತರ ಗೋವಾ ಪ್ರದೇಶವನ್ನು ಕರ್ನಾಟಕಕ್ಕೆ ಸೇರಿಸಬೇಕಾಗಿತ್ತು. ಗೋವಾ ರಚನೆಯಾದಾಗ ಭಾಷಾವಾರು ಅಂಶವನ್ನು ಪರಿಗಣಿಸಲಿಲ್ಲ. ಈಗ ಗೋವಾ, ಕರ್ನಾಟಕದಲ್ಲಿರುವ ಕೊಂಕಣಿ ಭಾಷಿಕರಿರುವ ಕಾರವಾರ ಜೊಮಿಡಾ, ಹಳಿಯಾಳ, ಬೆಳಗಾಂ ಪ್ರದೇಶವನ್ನು ತನಗೆ ಬಿಟ್ಟುಕೊಡಬೇಕೆಂದು ಹೇಳುತ್ತಿದೆ. ಇನ್ನೊಂದು ವಿವಾದವೂ ಇದೆ. ಮಹದಾಯಿ ನದಿಯ ೩೪ ಟಿಎಂಸಿ ನೀರನ್ನು ಗೋವಾ ಬಳಸುತ್ತಿದೆ. ಆದರೆ ಹುಬ್ಬಳ್ಳಿ-ಧಾರವಾಡಕ್ಕೆ ಕುಡಿಯುವ ನೀರಿಗಾಗಿ ೭ ಟಿಎಂಸಿ ನೀರು ಬಳಸಲು ಕಳಸಾ ಬಂಡೂರಿ ಯೋಜನೆ ತೆಗೆದುಕೊಂಡರೆ ಅದಕ್ಕೆ ಅಡ್ಡಗಾಲು ಹಾಕುತ್ತಲಿದೆ. ಸಮಸ್ಯೆ ಪರಿಹಾರಕ್ಕೆ ನ್ಯಾಯಾಧೀಕರಣ ರಚನೆ ಮಾಡಲು ಗೋವಾ ಕೇಂದ್ರದ ಮೇಲೆ ಒತ್ತಡ ತರುತ್ತಿದೆ. ಕರ್ನಾಟಕ ಒಪ್ಪುತ್ತಿಲ್ಲ.
ಆಂಧ್ರ / ಕರ್ನಾಟಕ:- ಕೃಷ್ಣಾನದಿಯ ಹಂಚಿಕೆ ಪ್ರಮುಖ ವಿವಾದ. ಕೃಷ್ಣಾ ನ್ಯಾಯಾಧೀಕರಣವು ಆಂಧ್ರ, ಕರ್ನಾಟಕ, ಮಹಾರಾಷ್ಟ್ರಗಳಿಗೆ ಇಂತಿಷ್ಟು ನೀರು ಎಂದು ಸ್ಪಷ್ಟವಾಗಿ ಹಂಚಿಕೆ ಮಾಡಿದ್ದರೂ ತನ್ನ ಪಾಲು ಹೆಚ್ಚಿಸಿಕೊಳ್ಳಲು ಆಂಧ್ರ ಪ್ರಯತ್ನಿಸುತ್ತಿದೆ. ಈ ಮೂರು ರಾಜ್ಯಗಳು ಸೇರಿ ತಮಿಳುನಾಡಿನ ಚೆನ್ನೈಗೆ ತೆಲುಗು-ಗಂಗಾ ಯೋಜನೆಯಡಿ ಕುಡಿಯುವ ನೀರು ಪೂರೈಸಲು ಬಿಡುಗಡೆ ಮಾಡಬೇಕಾದ ನೀರಿನ ಪ್ರಮಾಣವೂ ವಿವಾದದಲ್ಲಿದೆ.
ಆಂಧ್ರದ ಮೆಹಬೂಬನಗರ ಜಿಲ್ಲೆಯ ಜುರಾಲ ಎಂಬಲ್ಲಿ ಕೃಷ್ಣಾ ನದಿಗೆ ಪ್ರಿಯದರ್ಶಿನಿ ಅಣೆಕಟ್ಟು ಕಟ್ಟಲಾಗಿದ್ದು, ಅದರಿಂದ ರಾಯಚೂರು ಜಿಲ್ಲೆ ಹತ್ತೂರು ಗ್ರಾಮ ನೂರಾರು ಎಕರೆ ಫಲವತ್ತಾದ ಕೃಷಿ ಭೂಮಿ ಮುಳುಗಿದೆ. ಅಣೆಕಟ್ಟಿನಲ್ಲಿ ಹೆಚ್ಚಿನ ನೀರು ಸಂಗ್ರಹಿಸಬಾರದೆಂದು ಕರ್ನಾಟಕ ಎಷ್ಟು ಸಲ ಹೇಳಿದರೂ ಕಿವುಡಾಗಿದೆ.
ಪಾಲಾರ್ ಪೆನ್ನಾರ್ ನದಿ ಹರಿಯುವ ಕೋಲಾರ, ಚಿಕ್ಕಬಳ್ಳಾಪುರ, ಜಿಲ್ಲೆಗಳ ಬಂಜರು ಭೂಮಿಗೆ ನೀರುಣಿಸಲು ಕರ್ನಾಟಕ ರೂಪಿಸುವ ಪರಗೋಡು ಯೋಜನೆಗೆ ಆಂಧ್ರ ತಕರಾರು ತೆಗೆದಿದೆ.
ಗಣಿಧಣಿಗಳಿಗೆ ಅನುಕೂಲ ಮಾಡಿ ಕೊಡಲು ಆಂಧ್ರ ಕರ್ನಾಟಕಕ್ಕೆ ಸೇರಿದ ಬಳ್ಳಾರಿ ಜಿಲ್ಲೆಯ ಗಡಿ ಭಾಗವನ್ನು ಒತ್ತುವರಿ ಮಾಡಿ ವಿವಾದ ಸೃಷ್ಟಿಸಿದೆ.
ರಾಯಚೂರು ತಾಲೂಕಿನಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ಕರ್ನಾಟಕ ನಿರ್ಮಿಸುತ್ತಿರುವ ’ಗೂಗಲ್ ಬ್ಯಾರೇಜ್ ಕೈಬಿಡಬೇಕೆಂದು ಆಂಧ್ರ ತಕರಾರು ಮಾಡಿದೆ. ಈ ಸಂಬಂಧ ಆಂಧ್ರ ವಿಧಾನಸಭೆಯಲ್ಲಿ ಗೊತ್ತುವಳಿ ಅಂಗೀಕರಿಸಿ ಕೇಂದ್ರ ಪ್ರವೇಶಿಸುವಂತೆ ಆಗ್ರಹಿಸಲಾಗಿದೆ.
ಕರ್ನಾಟಕ / ಕೇರಳ:- ಬಂಡಿಪುರ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿ ವನ್ಯಮೃಗಗಳ ಸುರಕ್ಷತೆಗಾಗಿ ರಾತ್ರಿ ರಸ್ತೆ ಸಂಚಾರ ನಿಷೇಧಿಸಿ ಚಾಮರಾಜನಗರ ಜಿಲ್ಲಾಧಿಕಾರಿ ಹೊರಡಿಸಿದ ಆದೇಶದಿಂದ ಬಂಡೀಪುರ ಸುತ್ತ ಮುತ್ತ ರಾತ್ರಿ ಸಂಚಾರಕ್ಕೆ ಅವಕಾಶ ನೀಡಲು ಬಿಗಿಪಟ್ಟು ಹಾಕಿದೆ ಏಕೆಂದರೆ ಕೇರಳದ ಪ್ರವಾಸ, ವಾಣಿಜ್ಯವ್ಯವಹಾರಕ್ಕೆ ನಷ್ಟವಾಗಿದೆ. ಬೆಂಗಳೂರಿನಿಂದ ಕೇರಳಕ್ಕೆ ಹೋಗುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ.
ಕರ್ನಾಟಕ / ತಮಿಳುನಾಡು:- ೧೨೦ ವರ್ಷಗಳ ಇತಿಹಾಸ ಹೊಂದಿದ ಕಾವೇರಿ ಜಲವಿವಾದಕ್ಕೆ ಕಾವೇರಿ ನ್ಯಾಯಾಧೀಕರಣದ ಅಂತಿಮ ತೀರ್ಪು ಹೊರಬಿದ್ದು ನ್ಯಾಯಾಧೀಕರಣದ ಅವಧಿ ಮುಗಿದಿದ್ದರೂ ವಿವಾದ ಬಗೆಹರಿದಿಲ್ಲ. ತಮಿಳುನಾಡು ಹೆಚ್ಚು ನೀರು ಕೇಳುತ್ತಲಿದೆ.
ಚಾಮರಾಜನಗರ ಜಿಲ್ಲೆಯ ಗಡಿಯಲ್ಲಿರುವ ಹೊಗೇನಕಲ್ ತಮ್ಮದು ಎಂದು ಎರಡೂ ರಾಜ್ಯಗಳ ವಿವಾದ. ಹೊಗೇನಕಲ್‌ನಿಂದ ತನ್ನ ಅನೇಕ ಜಿಲ್ಲೆಗಳಿಗೆ ನೀರುಣಿಸುವ, ವಿದ್ಯುತ್ ಉತ್ಪಾದಿಸುವ ಯೋಜನೆಗೆ ತಮಿಳುನಾಡು ಚಾಲನೆ ನೀಡಿದೆ. ಕೇಂದ್ರದ ಸಹಕಾರ ಇದೆ. ಕರ್ನಾಟಕ ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿನಲ್ಲಿ ದಾವೆ ಹಾಕಿದೆ.
ಚಾಮರಾಜನಗರದ ಸ್ವಲ್ಪ ದೂರದಲ್ಲಿರುವ ತಾಳವಾಡಿ ಕರ್ನಾಟಕಕ್ಕೆ ತೀರ ಹತ್ತಿರ ’ಕನ್ನಡಿಗರು ಸಾಕಷ್ಟು ಇದ್ದಾರೆ. ತಮಿಳುನಾಡಿನಲ್ಲಿದ್ದರೂ ಚಾಮರಾಜನಗರವೇ ಅತಿ ಪ್ರಿಯ. ವ್ಯವಹಾರ ಇಲ್ಲಿಯೇ’ ತಾಳವಾಡಿ ಬಿಟ್ಟುಕೊಡಿ ಎಂಬುದು ಕನ್ನಡಿಗರ ವಾದ.
ಹೀಗೆ ರಾಜ್ಯದೊಂದಿಗೆ ಬೆಸೆದ ಐದು ಗಡಿ ರಾಜ್ಯಗಳ ಜೊತೆಗೆ ಒಂದಿಲ್ಲೊಂದು ವಿವಾದಗಳು ಇವೆ. ರಾಜ್ಯಕ್ಕೆ ೧೮ ಗಡಿ ಜಿಲ್ಲೆಗಳು ೫೨ ತಾಲೂಕುಗಳಿವೆ. ನಂಜುಂಡಪ್ಪ ವರದಿ ಪ್ರಕಾರ ೪೨ ತಾಲೂಕುಗಳ ಗಡಿ ಭಾಗದಲ್ಲಿ ಬರುತ್ತವೆ. ೧೭ ಗಡಿ ಜಿಲ್ಲೆಗಳು ಯಾವುದೆಂದರೆ, ಗುಲ್ಬರ್ಗಾ, ಬೆಳಗಾವಿ, ಬೀದರ್, ರಾಯಚೂರು, ಬಿಜಾಪುರ, ಬಳ್ಳಾರಿ, ಉಡುಪಿ, ಮಂಗಳೂರು, ಉತ್ತರಕನ್ನಡ, ದಕ್ಷಿಣ ಕನ್ನಡ, ಚಾಮರಾಜನಗರ, ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಚಿತ್ರದುರ್ಗಾ ಮತ್ತು ಕೊಡಗು. ಈ ಎಲ್ಲ ಜಿಲ್ಲೆ ಮತ್ತು ತಾಲೂಕುಗಳು ಮಾರ್ಚ್ ೨೦೧೦ರಂದು ರಚಿತವಾದ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಡಿಯಲ್ಲಿ ಬರುತ್ತವೆ. ಚಂದ್ರಕಾಂತ ಬೆಲ್ಲದ ಅವರು ಅಧ್ಯಕ್ಷರಾಗಿದ್ದಾರೆ.
ಪ್ರಾಧಿಕಾರ ಗಡಿ ಪ್ರದೇಶದಲ್ಲಿ ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ. ಗಡಿಯ ಒಳಗೂ ಹೊರಗೂ ಇರುವ ಕನ್ನಡಿಗರ ಸ್ಥಿತಿ ಸುಧಾರಣೆ ಗಡಿಯಾಚೆ ಕನ್ನಡ ಮಾಧ್ಯಮಗಳ ಶಾಲೆಗಳ ಸ್ಥಾಪನೆ. ಗ್ರಂಥಾಲಯಗಳ ಸ್ಥಾಪನೆ. ಕನ್ನಡ ಪರ ಸಂಘಟನೆಗಳಿಗೆ ಭಾಷಾ ಚಟುವಟಿಕೆಗಳಿಗೆ ಅನುದಾನ ನೀಡುವುದು, ಉಪನ್ಯಾಸ ಮಾಲಿಕೆಗಳನ್ನು ನಡೆಸುವುದು, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಘಟನೆ, ಗಡಿಯಲ್ಲಿರುವ ಕಲೆ, ಸಂಸ್ಕೃತಿ ಉಳಿಸುವಿಕೆ. ಅಭಿವೃದ್ಧಿ ಕಾರ್ಯಕ್ರಮ ಹಾಕಿಕೊಳ್ಳುವುದು, ಜನರ ಸಾಂಸ್ಕೃತಿಕ ಆರ್ಥಿಕ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮ ವಹಿಸುವುದು ಸಾಂಸ್ಕೃತಿಕ ಭವನಗಳ ನಿರ್ಮಾಣ, ಇತ್ಯಾದಿ ಚಟುವಟಿಕೆಗಳನ್ನು ನಡೆಸುವುದು.
ಗಡಿಭಾಗದಲ್ಲಿರುವ ಗ್ರಾಮಗಳ ಜನರು ಹೊರ ರಾಜ್ಯಗಳ ಜನರಿಗೆ ಸಿಗುತ್ತಿರುವ ಸೌಲಭ್ಯ ನೋಡಿ ನಿರಾಶರಾಗುತ್ತಿದ್ದಾರೆ. ಆಂಧ್ರ ಸರಕಾರ ಕೃಷಿಕರಿಗೆ ಹೆಚ್ಚಿನ ಸೌಲಭ್ಯ ನೀಡುತ್ತದೆ. ವಸತಿ ಸೌಲಭ್ಯ, ನೀರಾವರಿ, ಗ್ಯಾಸ್, ರಸ್ತೆ ಅಭಿವೃದ್ಧಿ ಅಪಾರ. ಒಂದೇ ಹಳ್ಳಿಯಲ್ಲಿ ಅರ್ಧದಷ್ಟು ಜನ ಆಂಧ್ರಕ್ಕೂ ಇನ್ನರ್ಧ ಜನ ಕರ್ನಾಟಕಕ್ಕೂ ಸೇರಿದ ಉದಾಹರಣೆಗಳಿವೆ. ಇಲ್ಲಿ ಆಗುವ ತಾರತಮ್ಯ ನಿವಾರಣೆಯಾಗಬೇಕು. ಈ ದಿಶೆಯಲ್ಲಿ ಪ್ರಾಧಿಕಾರ ಸಫಲವಾಗಬೇಕು. ಗಡಿಯ ಜನರ ಬದುಕನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಮಾರುಕಟ್ಟೆ, ಸಾರಿಗೆ-ಸಂಪರ್ಕ ರಸ್ತೆ, ಶಿಕ್ಷಣ, ವಸತಿ, ಆರೋಗ್ಯ ಮೂಲಭೂತ ಅವಶ್ಯಕತೆಗಳ ಪೂರೈಕೆ ಆಗಬೇಕು.
ಗಡಿನಾಡು ಕನ್ನಡಿಗರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಅದರಲ್ಲಿ ಕನ್ನಡಿಗರು ಮಕ್ಕಳ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಪರದಾಡುವಂತಾಗಿದೆ. ಗಡಿಯ ಶಾಲೆಗಳು ಕನ್ನಡದ ಅಧ್ಯಾಪಕರ ಕೊರತೆ ಎದುರಿಸುತ್ತಿದೆ. ಕನ್ನಡ ಪಠ್ಯಪುಸ್ತಕಗಳು ಸಿಗದೆ ಪ್ರತಿವರ್ಷ ಮಕ್ಕಳು ಗೋಳಾಡುತ್ತಾರೆ. ಕನ್ನಡ ಓದಿದ ಮಕ್ಕಳು ಶಿಕ್ಷಣ ಮುಂದುವರಿಸಲು ಅವರಿರುವ ರಾಜ್ಯ ಸಹಾಯ ಮಾಡುವುದಿಲ್ಲ. ಕರ್ನಾಟಕ ಸರ್ಕಾರ ಗಮನ ಕೊಡುವುದಿಲ್ಲ. ಹೀಗಾಗಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ. ಉದ್ಯೋಗದ ವಿಚಾರದಲ್ಲಿ ಗಡಿನಾಡ ಮಕ್ಕಳು ಯಾರಿಗೂ ಬೇಡವಾಗಿದ್ದಾರೆ. ಹೀಗಾಗಿ ಗಡಿನಾಡ ಕನ್ನಡಿಗರು ಅನಾಥ ಪ್ರಜ್ಞೆ ಅನುಭವಿಸುತ್ತಿದ್ದಾರೆ. ಗಡಿನಾಡ ಕನ್ನಡಿಗರ, ಕನ್ನಡ ಓದುವ ಮಕ್ಕಳಿಗೆ ಅಗತ್ಯವಾದ ಸೌಲಭ್ಯ ಕೊಡಲು ಸರಕಾರ ಮುಂದಾಗಬೇಕು.
ಗಡಿನಾಡು ಶಿಕ್ಷಣ ನಿರ್ದೇಶನಾಲಯ ಸ್ಥಾಪನೆ ಆಗಬೇಕು. ಗಡಿ ತಾಲೂಕುಗಳಲ್ಲಿ ಕನಿಷ್ಠ ಹೋಬಳಿಗೆ ಒಂದರಂತೆ ಕನ್ನಡ ಮಾಧ್ಯಮ ವಸತಿ ಶಾಲೆ ಸ್ಥಾಪನೆ ಆಗಬೇಕು. ಪರಿಶಿಷ್ಟ ಜಾತಿ/ಪಂಗಡ, ಹಿಂದುಳಿದ, ಅಲ್ಪ ಸಂಖ್ಯಾತರಿಗೆ ಉಚಿತ ವಿದ್ಯಾರ್ಥಿ ನಿಲಯಗಳು ಸ್ಥಾಪನೆಯಾಗಬೇಕು. ಸಂಸದರು/ಶಾಸಕರು ತಮ್ಮ ನಿಧಿಯಿಂದ ಗಡಿನಾಡಿನ ಅಭಿವೃದ್ಧಿಗೆ ನಿರ್ದಿಷ್ಟ ಮೊತ್ತವನ್ನು ಕಡ್ಡಾಯವಾಗಿ ಮೀಸಲಿಡಬೇಕು. ಗಡಿನಾಡು ಅಭಿವೃದ್ಧಿ ಮಂಡಳಿ ಸ್ಥಾಪನೆಯಾಗಬೇಕು. ಕನ್ನಡದ ಆಸಕ್ತಿ ಇರುವ ಅಧಿಕಾರಿಗಳನ್ನು ನೇಮಿಸಬೇಕು/ವರ್ಗಾಯಿಸಬೇಕು. ಎಲ್ಲ ವರ್ಗದ ಸರಕಾರಿ ನೌಕರರು ಮೂರು ವರ್ಷ ಕಡ್ಡಾಯವಾಗಿ ಗಡಿಭಾಗದಲ್ಲಿ ಸೇವೆಯನ್ನು ಸಲ್ಲಿಸಬೇಕು. ಗಡಿಭಾಗದಲ್ಲಿ ಉತ್ತಮ ಸಾರಿಗೆ ಸಂಪರ್ಕ ಆರೋಗ್ಯ ಕಲ್ಪಿಸಬೇಕು. ಅಲ್ಲಿಯ ನೈಸರ್ಗಿಕ ಸಂಪತ್ತು/ಸಂಪನ್ಮೂಲಗಳನ್ನು ಆಧರಿಸಿ ಕೈಗಾರಿಕೆಗಳನ್ನು ಸ್ಥಾಪಿಸಬೇಕು. ಗಿರಿಜನರ ಅಭಿವೃದ್ಧಿಗೆ ಚಾಮರಾಜನಗರದಲ್ಲಿ ಅಭಿವೃದ್ಧಿ ಸಂಶೋಧನಾ ಕೇಂದ್ರ ಸ್ಥಾಪಿಸಬೇಕು. ಪ್ರತಿ ತಾಲೂಕಿನಲ್ಲಿ ’ಕನ್ನಡ ಸಂಸ್ಕೃತಿ ಭವನ’ ಸ್ಥಾಪಿಸಬೇಕು. ಕನ್ನಡ ಕರ್ನಾಟಕ ಸಂಸ್ಕೃತಿಗೆ ದುಡಿದ ಗಡಿನಾಡ ಪ್ರತಿಭೆಗಳಿಗೆ ಅಕಾಡೆಮಿ, ಪ್ರಾಧಿಕಾರ ಪ್ರಶಸ್ತಿ ಕೊಡಬೇಕು. ಪ್ರೇಕ್ಷಣೀಯ ಸ್ಥಳಗಳ ಅಭಿವೃದ್ಧಿ ಮಾಡಬೇಕು. ಕರ್ನಾಟಕ ಗಡಿನಾಡು ಚಲನಚಿತ್ರ ಕಲಾ ಕೇಂದ್ರ ಸ್ಥಾಪನೆ ಆಗಬೇಕು. ಕೋಲಾರದಲ್ಲಿ, ಬೆಳಗಾವಿಯಲ್ಲಿ ಸಾಮಾಜಿಕ ಅಭಿವೃದ್ಧಿ ಸಂಶೋಧನಾ ಕನ್ನಡ ಕೇಂದ್ರ ಸ್ಥಾಪನೆ ಆಗಬೇಕು. ಗುಡಿ ಕೈಗಾರಿಕೆ, ಹೈನುಗಾರಿಕೆ ಸಣ್ಣ ಕೈಗಾರಿಕೆಗಳ ಬೆಳವಣಿಗೆಗೆ ಒತ್ತು ಕೊಡಬೇಕು.
ಸರಕಾರಗಳು ಗಡಿ ಕನ್ನಡಿಗರ ಬಗ್ಗೆ ಅನಾಸ್ಥೆ, ಅನಾಸಕ್ತಿ, ನಿರ್ಲಕ್ಷ್ಯ ವಹಿಸಿದರೆ ಅಖಂಡ ಕರ್ನಾಟಕದ ಪರಿಕಲ್ಪನೆ ಬರಿಯ ಕಲ್ಪನೆಯಾಗುವುದು.

ಯು.ಎನ್. ಸಂಗನಾಳಮಠ
ವಿಶ್ರಾಂತ ಉಪನ್ಯಾಸಕರು-ಲೇಖಕರು
’ಜ್ಯೋತಿರ್ಲಿಂಗ’ ೮ನೇ ತಿರುವು, ಹೈಸ್ಕೂಲ್ ಬಡಾವಣೆ
ಶಿವಮೊಗ್ಗ ರಸ್ತೆ, ಹೊನ್ನಾಳಿ-೫೭೭ ೨೧೭
ದಾವಣಗೆರೆ ಜಿಲ್ಲೆ

ಸದ್ದುಗದ್ದಲವಿರದೆ ಗದ್ದುಗೆಗೇರಿದ ಸಾಧನೆ



ಸದ್ದುಗದ್ದಲವಿರದ ಸಾಧನೆ ಇಲ್ಲಿ ಗದ್ದುಗೆಯೇರಿದೆ!
ಕಾಯಕವೇ ಕೈಲಾಸವೆನ್ನುವ ಮಾತು ಕೃತಿಯೊಳಗೆ ಮೂಡಿದೆ
ಕಾವಿಯುಡುಗೆಯನುಟ್ಟು ನಭವೇ ಕಿರಣ ಹಸ್ತವ ಚಾಚಿದೆ!
ಎಲ್ಲ ನನ್ನವರೆನುವ ಭಾವದ ಕರುಣೆಯೇ ಕಣ್ತೆರೆದಿದೆ.
-ರಾಷ್ಟ್ರಕವಿ ಡಾ.ಜಿ.ಎಸ್.ಎಸ್.


ಲಿಂಗಾಯತ ಮಠಪರಂಪರೆಯಲ್ಲಿಯೇ ವಿಶಿಷ್ಟವಾದ ದಾಸೋಹದ ಮಠ ಶ್ರೀ ಸಿದ್ಧಗಂಗಾ ಮಠ. ಸಾರ್ಥಕ ೧೦೩ ವರ್ಷ ಕಳೆದಿರುವ ನಡೆದಾಡುವ ದೇವರು ಶ್ರೀ.ಶಿವಕುಮಾರ ಸ್ವಾಮಿಗಳು. ಗುರು ಪರಂಪರೆಯಲ್ಲಿಯೇ ಕಳಸ ಪ್ರಾಯರಾದವರು. ಶ್ರೀಗಳ ಜನನ ಬೆಂಗಳೂರು ಗ್ರಾ.ಜಿಲ್ಲೆ ಮಾಗಡಿ (ತಾ) ವೀರಾಪುರಗ್ರಾಮದಲ್ಲಿ. ತಂದೆ ಪಟೇಲ್ ಹೊನ್ನೇಗೌಡರು. ತಾಯಿ ಗಂಗಮ್ಮ ಜನನ ೧/೪/೧೯೦೮, ಬಾಲ್ಯ ವಿದ್ಯಾಭ್ಯಾಸ, ವೀರಾಪುರ ಮತ್ತು ಪಾಲನಹಳ್ಳಿ ಕೂಲಿಮಠದಲ್ಲಿ. ಎಂಟನೇ ವಯಸ್ಸಿನಲ್ಲಿ ತಾಯಿಯ ವಿಯೋಗ. ೧೩ನೇ ಮಗುವಾಗಿ ಜನಿಸಿದ ಶಿವಣ್ಣನ ಪ್ರಾಥಮಿಕ ವಿದ್ಯಾಭ್ಯಾಸ ನಾಗವಲ್ಲಿಯಲ್ಲಿ. ಹಿರಿಯಕ್ಕ ಪುಟ್ಟ ಹೊನ್ನಮ್ಮನ ಆರೈಕೆಯಲ್ಲಿ ಬೆಳೆದ ಶಿವಣ್ಣ. ೧೯೧೯ರಲ್ಲಿ ಅಂದಿನ ಲೋಯರ್ ಸೆಕೆಂಡರಿ ತೇರ್ಗಡೆಯಾದರು. ೧೯೨೨ರಲ್ಲಿ ತುಮಕೂರು ಸರ್ಕಾರಿ ಪ್ರೌಢಶಾಲೆ ಸೇರಿದರು. ೧೯೨೬ರಲ್ಲಿ ಮೆಟ್ರಿಕ್ ಪಾಸ್ ಮಾಡಿದರು. ಸಿದ್ದಗಂಗೆಯ ಶ್ರೀ ಉದ್ಯಾನ ಶಿವಯೋಗಿಗಳ ದಾಸೋಹ ಕೀರ್ತಿಯಿಂದ ಆಕರ್ಷಿತರಾದರು. ಶ್ರೀ ಉದ್ಧಾನ ಶಿವಯೋಗಿಗಳು ಶಿವಣ್ಣನಿಗೆ ಶ್ರೀಮಠದಲ್ಲಿ ಆಶ್ರಯ ನೀಡಿದರು. ಎಂಟ್ರೆನ್ಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಶಿವಣ್ಣ, ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಿದರು. ತೋಟದಪ್ಪನವರ ಛತ್ರದಲ್ಲಿ ಆಶ್ರಯ ಪಡೆದರು. ಸಿದ್ಧಗಂಗಾಮಠದ ಸಂಸ್ಕೃತಿಯನ್ನು ರೂಢಿಸಿಕೊಂಡಿದ್ದ ಶಿವಣ್ಣ ಕಟ್ಟುನಿಟ್ಟಿನ ವಿದ್ಯಾರ್ಥಿ ಜೀವನ ನಡೆಸಿದರು. ವಿದ್ವಾಂಸರಾದ ಟಿ.ಎಸ್.ವೆಂಕಣ್ಣಯ್ಯ, ಎ.ಆರ್.ಕೃಷ್ಣಶಾಸ್ತ್ರಿಗಳ ಪ್ರಿಯ ಶಿಷ್ಯರೆನಿಸಿದರು. ವಿನಯ, ಸದಾಚಾರ, ಸತ್‌ಕ್ರಿಯಾಚರಣೆಗಳಿಂದ ಎಲ್ಲರ ಗಮನ ಸೆಳೆದರು.
ಆ ವೇಳೆಗೆ ಉದ್ಧಾನ ಶಿವಯೋಗಿಗಳ ಉತ್ತರಾಧಿಕಾರಿಗಳಾಗಿ ನಿಯೋಜಿತರಾಗಿದ್ದ ಮರುಳಾರಾಧ್ಯರು ಶಿವಣ್ಣನ ಆತ್ಮೀಯ ಒಡನಾಡಿಯಾಗಿದ್ದರು. ಪರೀಕ್ಷೆಗೆ ಸಿದ್ಧತೆ ನಡೆಸಿದ್ದಾಗ ೧೯೩೦ರಲ್ಲಿ ಮರುಳಾರಾಧ್ಯರು ಅಕಾಲ ಮರಣಕ್ಕೆ ತುತ್ತಾದರೆಂಬ ಸುದ್ಧಿ ಬಂದಿತು. ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಿದ ಶಿವಣ್ಣನತ್ತ ಉದ್ಯಾನ ಶಿವಯೋಗಿಗಳ ಕೃಪಾದೃಷ್ಟಿ ಹರಿಯಿತು. ಸಿದ್ಧಗಂಗಾಮಠದ ಭಕ್ತರ ಅಭಿಲಾಷೆಯೂ ಸೇರಿತು. ಶ್ರೀ ಮಠದ ಜವಾಬ್ದಾರಿಗೆ ಶಿವಣ್ಣ ಒಪ್ಪಿಗೆ ಸೂಚಿಸಿದರು. ಹೆತ್ತ ತಂದೆ ಅಡ್ಡಿ ಬಂದರೂ ಶಿವಣ್ಣ ಜವಾಬ್ದಾರಿಯಿಂದ ವಿಮುಖರಾಗಲಿಲ್ಲ.
ಗೋಸಲ ಸಿದ್ಧೇಶ್ವರರಿಂದ ಹರಿದುಬಂದ ಸಿದ್ಧಗಂಗಾಮಠ ಪರಂಪರೆಯ ಮುಂದುವರಿಕೆಯಾಗಿ ೩-೩-೧೯೯೦ರಂದು ಶಿವಕುಮಾರ ದೇವರು ಪೀಠಾಧಿಕಾರಿಗಳಾಗಿ ನಿಯುಕ್ತರಾದರು. ಶ್ರೀ ಉದ್ಧಾನ ಶಿವಯೋಗಿಗಳವರ ಕಮ್ಮಟದಲ್ಲಿ ರೂಪುಗೊಂಡು ಶ್ರೀ ಶಿವಕುಮಾರ ಸ್ವಾಮಿಗಳಾಗಿ ಶ್ರೀ ಸಿದ್ಧಗಂಗಾಮಠದ ಶಿಕ್ಷಣ ಸಂಸ್ಥೆಗಳ ಮತ್ತು ಶ್ರೀ ಮಠದ ದಾಸೋಹ ವ್ಯವಸ್ಥೆಯ ಜವಾಬ್ದಾರಿಗೆ ಹೆಗಲು ಕೊಟ್ಟರು. ಆಗ ಶ್ರೀ ಮಠಕ್ಕೆ ಅಲ್ಪ ಆದಾಯವಿದ್ದಿತು. ನಡೆದೇ ಭಕ್ತರ ಮನೆಗೆ ಹೋಗಿ ದವಸ ಕಾಣಿಕೆ ತರಬೇಕಾಗಿತ್ತು. ಉತ್ಸಾಹಿ ತರುಣ ಶ್ರೀ ಶಿವಕುಮಾರ ಸ್ವಾಮಿಗಳಿಗೆ ಕೊರಳಲಿ ಕಟ್ಟಿದ ಬೆಂಡು, ಕಾಲಲ್ಲಿ ಕಟ್ಟಿದ ಗುಂಡು, ಎಂಬಂಥ ಪರಿಸ್ಥಿತಿಯಲ್ಲಿ ಅಗ್ನಿದಿವ್ಯವನ್ನು ಧೈರ್ಯದಿಂದ ಎದುರಿಸಿದರು. ಭಕ್ತರ ಅಪಾರ ಪ್ರೀತಿಯನ್ನು ಗೌರವವನ್ನು ಸಂಪಾದಿಸಿದರು. ದಾಸೋಹ ನಿರ್ವಿಘ್ನವಾಗಿ ನಡೆಯುವಂತೆ ಮಾಡಿದರು. ಶ್ರೀ ಮಠದ ಕಾರ್ಯವ್ಯಾಪ್ತಿ ಹೆಚ್ಚಾದಂತೆ ದಾಸೋಹ ವ್ಯವಸ್ಥೆಯೂ ಬೆಳೆಯಿತು.
ಶ್ರೀ ಶಿವಕುಮಾರ ಸ್ವಾಮಿಗಳ ತ್ಯಾಗ ಜೀವನ ಅನುಪಮವಾದದ್ದು. ಮಾತು ಮನಗಳಿಂದತ್ತತ್ತ ಮೀರಿದ ವ್ಯಕ್ತಿತ್ವದ ದಿವ್ಯ ಮೂರುತಿ, ನಿಜವನರಿತ ನಿಶ್ಚಿಂತ, ಮರಣವ ಗೆದ್ದ ಮಹಂತ, ಪರಮವನೊಳಗೊಂಡ ಪರಿಣಾಮಿ. ಶ್ರೀ ಸಿದ್ಧಗಂಗಾಮಠದ ಇತಿಹಾಸದಲ್ಲಿ ಬೆಳಕಿನ ಯುಗವನ್ನು ಪ್ರಾರಂಭಿಸಿದ ನಿರ್ಮಲ ಮೂರ್ತಿ. ಶ್ರೀ ಶಿವಕುಮಾರಸ್ವಾಮಿಗಳದ್ದು ಎತ್ತರದ ನಿಲುವು, ವಿಶಾಲವಾದ ಹಣೆ ಸದಾ ಭಸ್ಮಧಾರಿ, ಪ್ರೀತಿ ಸೂಸುವ ಕಣ್ಣುಗಳು, ಮಾತೃ ಹೃದಯ, ಶುದ್ಧ ಕಾವಿಧಾರಿ, ಸೇವೆಯೇ ಜೀವನದ ಧ್ಯೇಯ, ಗಂಭೀರ ನಡಿಗೆ, ಮಾತು ಮಾಣಿಕ್ಯ, ಇಳಿವಯಸ್ಸಿನಲ್ಲೂ ಪ್ರಖರವಾದ ಶರಣ ಚಿಂತನ, ಅನುಭಾವದ ವಾಣಿಯಿಂದ ಅಭಿನವ ಬಸವಣ್ಣನವರಾಗಿದ್ದಾರೆ. ಸದಾ ಬಾಗಿದ ತಲೆ, ಹಸನ್ಮುಖ, ಎದ್ದು ಕಾಣುವ ಗಂಭೀರ ಮುಖಮುದ್ರೆ ಕಾಯಕ ದಾಸೋಹಗಳೇ ಮೈವೆತ್ತು ಬಂದಂತಿರುವ ಶ್ರೀ ಶಿವಕುಮಾರಸ್ವಾಮಿಗಳ ದರ್ಶನವೇ ಚೇತೋಹಾರಿ. ನಿರ್ಮಲಾಂತಃ ಕರಣವುಳ್ಳ ಶ್ರೀಗಳು, ತಮ್ಮ ಅಪೂರ್ವ ಪ್ರತಿಭೆಯಿಂದ ಬಾಳಿಗೊಂದು ಭರವಸೆ ನೀಡುವ ಆಶಾದೀಪವಾಗಿದ್ದಾರೆ.
ಕರುಣೆಯ ಮೂರ್ತಿಗಳಾಗಿದ್ದ ಶ್ರೀ ಉದ್ಧಾನ ಶಿವಯೋಗಿಗಳು ೧೧-೧-೧೯೪೧ರಂದು ಲಿಂಗದೊಳಗಾದರು. ಭಕ್ತರ ಸಹಕಾರದಿಂದ ಹಿರಿಯ ಶ್ರೀಗಳ ಸ್ಮರಣೆಯನ್ನು ಅದ್ಧೂರಿಯಾಗಿ ನೆರವೇರಿಸಿದರು. ಲಿಂಗಾಯತ ಜನಾಂಗ ವಿದ್ಯೆಯಿಂದ ವಂಚಿತರಾಗಿದ್ದಾರೆ. ವಿದ್ಯಾವಂತರಾದರೆ ಮಾತ್ರ ಸಮಾಜದ ಉದ್ಧಾರ ಸಾಧ್ಯವೆಂಬ ಪೂಜ್ಯ ಉದ್ಧಾನ ಶಿವಯೋಗಿಗಳು ೧೯೧೭ರಲ್ಲಿ ಶ್ರೀ ಸಿದ್ಧಲಿಂಗೇಶ್ವರ ಸಂಸ್ಕೃತ ಪಾಠಶಾಲೆ ಪ್ರಾರಂಭಿಸಿದರು. ಅದು ಮುಂದೆ ಸಂಸ್ಕೃತ ಕಾಲೇಜ್ ಆಗಿ ಇಂದಿಗೂ ನಡೆದುಬಂದಿದೆ. ೧೯೪೪ರಲ್ಲಿ ತುಮಕೂರಿನಲ್ಲಿ ಪ್ರೌಢಶಾಲೆ ಪ್ರಾರಂಭ ಮಾಡಿದರು, ನಂತರ ಗ್ರಾಮೀಣ ಜನರಿಗಾಗಿ ಹಲವಾರು ಗ್ರಾಮಾಂತರ ಶಾಲೆ, ಪ್ರೌಢಶಾಲೆ, ಕಾಲೇಜುಗಳನ್ನು ಸ್ಥಾಪಿಸಿದರು. ಸಾರ್ವಜನಿಕ ಗ್ರಂಥಾಲಯಗಳನ್ನು, ಶ್ರೀ ಸಿದ್ಧಲಿಂಗೇಶ್ವರ ಮುದ್ರಣಾಲಯವನ್ನು, ಸಂಶೋಧನಾ ಕೇಂದ್ರ ಮತ್ತು ಸಿದ್ಧಗಂಗಾ ಮಾಸಪತ್ರಿಕೆಯನ್ನು ೧೯೬೪ರಲ್ಲಿ ಪ್ರಾರಂಭಿಸಿದರು. ೧೯೬೩ರಲ್ಲಿ ಆರಂಭವಾದ ಶ್ರೀ ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯ ನಾಡಿನಲ್ಲೇ ಹೆಸರಾಂತ ಎಂಜಿನಿಯರ್‌ಗಳನ್ನು ತಯಾರು ಮಾಡುವ ಕೇಂದ್ರವಾಗಿದೆ.
ಶ್ರೀ ಸಿದ್ಧಗಂಗಾಮಠ ಹೆಸರಿಗೆ ಲಿಂಗಾಯುತ ಮಠ, ದಾಸೋಹ, ವಿದ್ಯಾದಾನಕ್ಕೆ ಜಾತಿ ಎಂದೂ ಅಡ್ಡಿಯಾಗಿಲ್ಲವೆಂಬುದು ಮಾತ್ರ ಸತ್ಯ. ಹಿಂದುಳಿದ ಅನೇಕ ಜಾತಿ, ಪಂಗಡಗಳಿಗೆ ಸೇರಿದ ವಿದ್ಯಾರ್ಥಿಗಳು ಇಲ್ಲಿ ಆಶ್ರಯ ಪಡೆದಿದ್ದಾರೆ. ಲಿಂಗಾಯತರು, ಮರಾಠ, ಕ್ರೈಸ್ತ, ಜೈನ, ವಿಶ್ವಕರ್ಮ, ಬ್ರಾಹ್ಮಣ, ಮೊದಲಿಯರ್, ವೈಶ್ಯರು, ಮುಸ್ಲಿಮರು, ಪರಿಶಿಷ್ಟರು, ಮುಂತಾದ ಎಲ್ಲ ವರ್ಗ ವರ್ಣದ ಎಂಟು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಊಟ, ವಸತಿ, ವಿದ್ಯೆಯನ್ನು ಉಚಿತವಾಗಿ ನೀಡುತ್ತಿರುವ ಸಂಸ್ಥೆಯಾಗಿ ಬೆಳೆದಿದೆ. ಇವರಲ್ಲಿ ಅರ್ಧಭಾಗ, ಅನಾಥಮಕ್ಕಳಿರುವುದು ಇಲ್ಲಿನ ವಿಶೇಷ. ಅಪ್ಪ ಅಮ್ಮ ದೂರ ಮಾಡಿದ ಅನಾಥರಿಗೂ ಪ್ರೀತಿಯ ಕೊರತೆ ಕಂಡುಬಂದಿಲ್ಲ. ಕಿರಿಯ ಸ್ವಾಮಿಗಳಾದ ಶ್ರೀ ಸಿದ್ಧಲಿಂಗಸ್ವಾಮಿಗಳು ಸ್ವತಃ ನೂರಾರು ಅನಾಥ ಮಕ್ಕಳಿಗೆ ಬಿಸಿ ನೀರಿನ ಸ್ನಾನ ಮಾಡಿಸುತ್ತಾರೆಂಬುದನ್ನು ಕೇಳಿದಾಗ ವಿಸ್ಮಯವಾಯಿತು. ಕಾಯಕ ಮತ್ತು ದಾಸೋಹ ತತ್ವಗಳು ನಿಜವಾದ ಅರ್ಥದಲ್ಲಿ ಸಿದ್ಧಗಂಗೆಯಲ್ಲಿ ಸಾಕಾರಗೊಂಡಿದೆ. ಶರಣತತ್ವಗಳನ್ನು ತಮ್ಮ ಬದುಕಿನಲ್ಲಿ ಅಮೂಲ್ಯ ಸಂಪತ್ತನ್ನಾಗಿರಿಸಿಕೊಂಡಿರುವ ಶ್ರೀ ಶಿವಕುಮಾರ ಸ್ವಾಮಿಗಳಿಗೆ ನೂರು ವರ್ಷ ತುಂಬುತ್ತಿರುವಾಗಲೂ ನಿತ್ಯ ಜಂಗಮರಾಗಿ, ಗುರುವಂದನೆಗೆ ಪಾತ್ರರಾಗಿರುವುದು ವಿಶೇಷ. ಕಾಯಕದಲ್ಲಿ ಮೇಲು ಕೀಳೆಂಬುದಿಲ್ಲ ಎಂಬ ಬಸವಣ್ಣನವರ ವಾಣಿಯಂತೆ, ದಿನನಿತ್ಯದ ಬದುಕಿನ ಎಲ್ಲ ಕಾಯಕಗಳೂ ಸಮಾನವೆಂದೂ ಸ್ವತಃ ಆಚರಿಸಿ ತೋರಿಸಿದ್ದಾರೆ.
ಪೂಜ್ಯರ ದಿನಚರಿಯೊಂದು ವಿಸ್ಮಯ, ಬೆಳಗಿನ ಮೂರು ಗಂಟೆಗೆ ಏಳುವ ಸ್ವಾಮಿಗಳು ಶೌಚಾದಿ ನಿತ್ಯಕರ್ಮಗಳ ನಂತರ ಸ್ನಾನ, ಶಿವಪೂಜೆ ಏಕಾಂತ ಧ್ಯಾನ, ಶರಣರ ವಚನಗಳು, ಭಕ್ತಿಗೀತೆಗಳೊಂದಿಗೆ ಮಂಗಳ. ಹತ್ತಾರು ಭಕ್ತರ ನಡುವೆ ಗುರು, ಲಿಂಗ, ಜಂಗಮಾಚಾರಣೆ, ಮಾತು ಮೌನಗಳಿಂದತ್ತತ್ತ ಮೂಕವಾಗುವ ಅನುಭಾವ. ಇಷ್ಟಲಿಂಗಾರ್ಚನೆ ನಂತರ ಪ್ರಸಾದ ಸ್ವೀಕಾರ. ಅನುಭಾವದ ಹಾಡುಗಳನ್ನು ಪೂಜ್ಯರೇ ಹಾಡುತ್ತಾರೆ. ಮಿತ ಆಹಾರ, ಒಂದಿಷ್ಟು ಹಣ್ಣು ಭಕ್ತರೊಂದಿಗೆ ಪ್ರಸಾದ ಸ್ವೀಕರಿಸುವ ಸತ್ವಪರಂಪರೆ. ೫.೩೦ ರಿಂದ ಅಧ್ಯಯನ, ಕೆಲಕಾಲ ನಂತರ ದಿನನಿತ್ಯ ಕಾಯಕದತ್ತ ಗಮನ ಮುಂಜಾನೆಯ ಪ್ರಾರ್ಥನಾ ಸಭೆ ಸುಮಾರು ೪ ರಿಂದ ೫ ಸಾವಿರ ವಿದ್ಯಾರ್ಥಿಗಳ ಸಾಮೂಹಿಕ ಪ್ರಾರ್ಥನೆಯಲ್ಲಿ ನಿತ್ಯ ಪಾಲ್ಗೊಳ್ಳುತ್ತಾರೆ. ಶ್ರೀ ಮಠದ ವಾತಾವರಣದಲ್ಲಿ ವಿದ್ಯುತ್ ಸಂಚಾರ. ೧೦ ನಿಮಿಷಗಳು ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಆಶೀರ್ವಚನ. ಕಾರ್ಯಾಲಯಕ್ಕೆ ಆಗಮನ, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಮಾತುಕತೆ. ಹೊಲಗದ್ದೆಗಳ ಕೆಲಸಗಳ ಮಾಹಿತಿ ಪಡೆದು ಆಗಬೇಕಾದ ಕೆಲಸಗಳ ನಿರ್ದೇಶನ, ಕಟ್ಟಡ ನಿರ್ಮಾಣಗಳ ಪರಿಶೀಲನೆ, ಪತ್ರಗಳ ಪರಿಶೀಲನೆ, ಅವುಗಳಿಗೆ ಉತ್ತರ ಬರೆಸುವುದು, ಹೊರಗಿನಿಂದ ಬಂದ ಹರಗುರುಚರ ಮೂರ್ತಿಗಳೊಂದಿಗೆ ಧಾರ್ಮಿಕ, ಆಧ್ಯಾತ್ಮಿಕ ಚಿಂತನೆ. ಶಾಸಕರು, ಸಚಿವರೊಂದಿಗೆ ರಾಜ್ಯ, ರಾಷ್ಟ್ರ ರಾಜಕಾರಣದ ಆಗುಹೋಗುಗಳ ಪರಾಮರ್ಶೆ. ಹಿತೋಪದೇಶ.
ಶ್ರೀ ಸಿದ್ಧಗಂಗಾ ಮಠದಲ್ಲಿ ಪೂಜ್ಯರೇ ಜೀವಕಳೆ. ಭಕ್ತರು ಮಠಕ್ಕೆ ಬಂದರೆ ಪೂಜ್ಯರಿಗೆ ತುಂಬಿದ ಸಂತೋಷ. ಸ್ವಾಮೀಜಿಗಳ ದರ್ಶನ ಭಕ್ತರಿಗೆ ಅವರ್ಣನೀಯ ಆನಂದ. ತಮ್ಮ ಕಷ್ಟ ಸುಖಗಳ ನಿವೇದನೆ. ಪೂಜ್ಯರಿಂದ ಭಕ್ತರಿಗೆ ಸಾಂತ್ವಾನ, ಸಮಸ್ಯೆಗಳ ಪರಿಹಾರದಲ್ಲಿ ಪೂಜ್ಯರಿಗೆ ಆಸಕ್ತಿ ಮತ್ತು ತೃಪ್ತಿ. ಶಿವಕುಮಾರ ಸ್ವಾಮಿಗಳ ದರ್ಶನ ಭಾಗ್ಯದಿಂದ ಭಕ್ತರಿಗೆ ನೆಮ್ಮದಿ. ಮಠಕ್ಕೆ ಆಗಮಿಸುವ ಭಕ್ತರಿಗೆ ಪ್ರಸಾದ ಸ್ವೀಕರಿಸಿ ಎಂಬ ಪೂಜ್ಯರವಾಣಿ, ಪ್ರಸಾದ ಸ್ವೀಕರಿಸುವುದರಿಂದ ಧನ್ಯತೆಯ ಭಾವ. ಪ್ರಸಾದ ಮಂದಿರದ ಉಸ್ತುವಾರಿಯೂ ಪೂಜ್ಯರದೆ. ಶರಣ ಸಂಸ್ಕೃತಿ ಮತ್ತು ದಾಸೋಹ ಸಂಸ್ಕೃತಿಯ ಪ್ರತ್ಯಕ್ಷ ರೂಪ ಸಿದ್ಧಗಂಗಾಮಠ. ಸರ್ವಸಮಾನತೆ, ಎನಗಿಂತ ಕಿರಿಯರಿಲ್ಲ ಎಂಬ ವಿನಮ್ರ ಭಾವ.
ಸಿದ್ಧಗಂಗಾ ಮಠದ ಸ್ವಾಮಿಗಳ ಜೀವನವೇ ಒಂದು ಆದರ್ಶ. ಪೂಜ್ಯರು ಶ್ರೀಮಠವನ್ನು ಅಭಿವೃದ್ಧಿ ಪಡಿಸಿದ ರೀತಿ, ಅದನ್ನು ನಡೆಸಿಕೊಂಡು ಬರುತ್ತಿರುವ ರೀತಿ ಅನನ್ಯವಾದದ್ದು. ಜಾತಿಮತವನ್ನು ಲೆಕ್ಕಿಸದೆ ೭೧ ವರ್ಷಗಳಿಂದ ಮಠವನ್ನು ಪ್ರಗತಿಯತ್ತ ಮುನ್ನಡೆಸುತ್ತಿರುವುದು, ಎಂಥವರಲ್ಲೂ ಅಭಿಮಾನ, ಗೌರವ ಮೂಡಿಸುತ್ತದೆ. ಬಡ ಮಕ್ಕಳಿಗೆ ಉಚಿತ ಶಿಕ್ಷಣ, ದಾಸೋಹ ನೀಡುತ್ತಿರುವ ಶ್ರೀ ಶಿವಕುಮಾರ ಸ್ವಾಮಿಗಳ ಸಾಧನೆ ಸಾಮಾನ್ಯದ್ದಲ್ಲ. ರಾಜ್ಯದ ಹೊರರಾಜ್ಯದ ಎಲ್ಲ ಮಠಾಧೀಶ್ವರರೊಂದಿಗೆ, ಅನ್ಯಧರ್ಮದ ಧರ್ಮಾಧಿಕಾರಿಗಳೊಂದಿಗೆ ಸೌಹಾರ್ದ ಸಂಬಂಧ ಇಟ್ಟುಕೊಂಡಿದ್ದಾರೆ. ಶ್ರೀಗಳ ಆಹ್ವಾನದ ಮೇರೆಗೆ ರಾಜ್ಯದ ಎಲ್ಲ ಮುಖ್ಯಮಂತ್ರಿಗಳು ರಾಜ್ಯಪಾಲರು ಮಾತ್ರವಲ್ಲ ರಾಷ್ಟ್ರಪತಿಗಳು, ಪ್ರಧಾನ ಮಂತ್ರಿಗಳೂ ಸಿದ್ಧಗಂಗಾ ಮಠಕ್ಕೆ ಬಂದಿದ್ದಾರೆ. ಶ್ರೀ ಮಠದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆಂದರೆ ಅತಿಶಯೋಕ್ತಿ ಏನಲ್ಲ.
ಬೆಂಗಳೂರು-ತುಮಕೂರು ರಸ್ತೆಯಲ್ಲಿ ಬೆಂಗಳೂರಿನಿಂದ ೬೫ ಕಿ.ಮೀ. ದೂರದಲ್ಲಿರುವ ರಾಷ್ಟ್ರೀಯ ಹೆದ್ದಾರಿಯ ಬಲಭಾಗದಲ್ಲಿ, ರೈಲುದಾರಿ ದಾಟಿ ಸುಮಾರು ೧/೨ ಕಿ.ಮೀ. ದೂರದಲ್ಲಿ ಸಿದ್ಧಗಂಗೆ ಬೆಟ್ಟದ ತಡಿಯಲ್ಲಿದೆ. ಇತಿಹಾಸ ಪ್ರಸಿದ್ಧ ಶ್ರೀ ಸಿದ್ಧಗಂಗಾ ಮಠ. ಪ್ರಕೃತಿ ಸೌಂದರ್ಯದ ಮ್ಯೆ, ಗಟ್ಟಿ ಕಣಶಿಲೆಯ ಬೆಟ್ಟದ ಮೇಲೆ ಪವಿತ್ರವಾದ ಸಿದ್ಧಗಂಗೆ ಕೊಳವಿದೆ. ವರ್ಷದುದ್ದಕ್ಕೂ ಶಿಲೆಯ ಮಧೆ ಹರಿದು ಬರುವ ಶೀತಲ ಜಲ, ಕೊಳದಲ್ಲಿ ಪೂಜೆಗೊಳ್ಳುತ್ತಿದೆ. ಬೃಹದಾಕಾರದ ಬಂಡೆಗಳ ಮಧ್ಯೆ ಕ್ಷೇತ್ರದ ದೇಗುಲವೂ ಇದೆ. ಸುಮಾರು ೭೦೦ ವರ್ಷಗಳ ಹಿಂದೆ ಗೋಸಲ ಸಿದ್ದೇಶ್ವರರು ಶ್ರೀಮಠ ಸ್ಥಾಪಿಸಿದರೆಂದು ತಿಳಿದುಬರುತ್ತದೆ. ನೂರೊಂದು ವಿರಕ್ತರೊಂದಿಗೆ ಶಿವಗಂಗೆ ಮತ್ತು ಸಿದ್ಧಗಂಗೆ ಕ್ಷೇತ್ರಗಳಲ್ಲಿ ಮಠ ಸ್ಥಾಪಿಸಿದರೆಂಬ ಉಲ್ಲೇಖಗಳಿವೆ. ಈ ಪರಂಪರೆ ಮುಂದುವರಿದು ಬಂದಿದೆ. ಬೆಟ್ಟದ ಮೇಲಿರುವ ಕಲ್ಲಿನ ಬೃಹತ್ ಬಂಡೆಗಳ ಮಧ್ಯದ ಗಂಗಾಮಾತೆ, ಶ್ರೀ ಸಿದ್ಧಲಿಂಗೇಶ್ವರ ಪೂಜಾ ಮಂದಿರಗಳು ಬೆಟ್ಟದ ಆರಂಭದಲ್ಲಿ ಹಳೆಮಠ, ಉದ್ಧಾನ ಶಿವಯೋಗಿಗಳ ಗದ್ದುಗೆ ಬೆಟ್ಟಕ್ಕೆ ಹೋಗುವ ವಿಶಾಲವಾದ ಪಾವಟಿಗಳು ಮಾರ್ಗಮಧ್ಯದಲ್ಲಿ ಪುಷ್ಕರಣಿ, ಅಡಿಗೆ ಕೋಣೆಯಲ್ಲಿ ದೊಡ್ಡ ಗಾತ್ರದ ಅಡುಗೆ ಪಾತ್ರೆ, ಕೊಳಗಗಳು, ಮುಪ್ಪಿನ ಸ್ವಾಮಿಗಳ ಗದ್ದುಗೆ, ಮಹಾನವಮಿ ಮಂಟಪ, ಶ್ರೀ ಮರುಳಾರಾಧ್ಯರ ಗದ್ದುಗೆ, ಗೋಶಾಲೆ, ಪೂಜ್ಯರ ಕಾರ್ಯಾಲಯ, ದರ್ಶನ ಕೊಠಡಿ, ಪವಿತ್ರ ಮಂಚ, ಶ್ರೀ ಅಡವಿ ಸ್ವಾಮಿಗಳ ಗದ್ದುಗೆ, ಸಿದ್ಧಗಂಗಾ ಹಳೆ ವಿದ್ಯಾರ್ಥಿಗಳ ಸಂಘದ ಕಾರ್ಯಾಲಯ, ಮುದ್ರಣಾಲಯ, ಅಕ್ಕಿಗಿರಣಿ, ಅಂಧರ ಪಾಠಶಾಲೆ, ವೇದಪಾಠಶಾಲೆ, ಕಲ್ಯಾಣ ಮಂಟಪ, ವಸತಿ ಗೃಹಗಳು, ತರಬೇತಿ ಸಂಸ್ಥೆಗಳು ವಸ್ತು ಪ್ರದರ್ಶನದ ವಿಶಾಲ ಆವರಣ, ಸುತ್ತ ತೆಂಗಿನ ತೋಟಗಳು, ಭಕ್ತರ ಮನಸ್ಸಿಗೆ ತಂಪನ್ನೀಯುತ್ತವೆ.
ಈಗ ಲಭ್ಯವಿರುವ ದಾಖಲೆಗಳ ಪ್ರಕಾರ ಶ್ರೀ ನಂಜುಂಡಸ್ವಾಮಿಗಳು (೧೭೮೪-೧೮೨೦) ರುದ್ರಸ್ವಾಮಿಗಳು (೧೮೨೦-೧೮೫೩) ಸಿದ್ಧಲಿಂಗ ಸ್ವಾಮಿಗಳು (೧೮೫೩-೧೯೦೧) ಈ ಅವಧಿಯಲ್ಲಿ ಉತ್ತರ ಕರ್ನಾಟಕದ ಮುಪ್ಪಿನ ಸ್ವಾಮಿಗಳು, ಅಟವೀ ಸ್ವಾಮಿಗಳು ಸಿದ್ಧಗಂಗಾ ಕ್ಷೇತ್ರದಲ್ಲಿ ಸಿದ್ಧಗಂಗಾ ಕ್ಷೇತ್ರದಲ್ಲಿ ನೆಲೆನಿಂತು, ದಾಸೋಹಾದಿ ಧಾರ್ಮಿಕ ಸೇವಾ ಕಾರ್ಯಗಳಿಗೆ ಚಾಲನೆ ನೀಡಿದರೆಂದು ತಿಳಿದುಬರುತ್ತದೆ. ೧೯೦೧ರ ನಂತರ ಪಟ್ಟಕ್ಕೆ ಬಂದ ಉದ್ಧಾನ ಶಿವಯೋಗಿಗಳವರು, ಲೋಕ ಕಲ್ಯಾಣ ಪರವಾದ ಸೇವಾಕಾರ್ಯಗಳನ್ನು ಮುಂದುವರಿಸಿದರು. ಶ್ರೀ ಕ್ಷೇತ್ರದಲ್ಲಿ ಸಿದ್ಧಲಿಂಗೇಶ್ವರ ಜಾತ್ರೆಯನ್ನು ೧೯೦೯-೧೦ರಲ್ಲಿ ಪ್ರಾರಂಭಿಸಿ, ಧಾರ್ಮಿಕ, ಸಾಂಸ್ಕೃತಿಕ ಮತ್ತು ಜನಪದರಿಗೆ ಪ್ರೋತ್ಸಾಹ ನೀಡಿದರು. ಅನ್ನದಾಸೋಹದೊಂದಿಗೆ ಜ್ಞಾನದಾಸೋಹಕ್ಕೆ ಆದ್ಯತೆ ನೀಡಿದರು. ಶ್ರೀ ಮಠದ ಸಂಸ್ಕೃತ ಪಾಠಶಾಲೆಯಲ್ಲಿ ಎಲ್ಲ ಜಾತಿ, ವರ್ಗದ ಜನರಿಗೂ ಸಂಸ್ಕೃತ ಅಧ್ಯಯನಕ್ಕೆ ಅವಕಾಶ ಕಲ್ಪಿಸಿದರು. ೧೦ ದಿನಗಳ ಪರ್ಯಂತ ನಡೆಯುವ ಸಿದ್ಧಗಂಗಾ ಜಾತ್ರೆ ಹಳೆ ಮೈಸೂರಿನ ಉದ್ದಗಲಕ್ಕೂ ಪ್ರಸಿದ್ಧವಾಗಿದೆ.
ಕಾಯಕ
ಭಾರತೀಯ ಸಂಸ್ಕೃತಿಯ ಜೀವಾಳವಾದ ಶರಣ ಸಂಸ್ಕೃತಿಯನ್ನು ಸ್ವತಃ ತಮ್ಮ ನಡೆ ನುಡಿ ಚಿಂತನೆಗಳಲ್ಲಿ ಅಳವಡಿಸಿಕೊಂಡಿರುವ ಶ್ರೀ ಶಿವಕುಮಾರಸ್ವಾಮಿಗಳು, ಶಿಸ್ತು, ಸಂಯಮ, ಕಾಯಕ, ಸದ್ಭಾವನೆ, ಸಮತಾಭಾವಗಳನ್ನು ವಿದ್ಯಾರ್ಥಿಗಳಲ್ಲಿ ತುಂಬಿ ಅವರನ್ನು ಸತ್ಪ್ರಜೆಗಳನ್ನಾಗಿ ರೂಪಿಸುವ ಮಹಾಮಣಿಹದಲ್ಲಿ ತೊಡಗಿದ್ದಾರೆ. ಶ್ರೀಗಳ ಪ್ರಕಾರ, ಮಠವೆಂದರೆ ಕಲ್ಲಿನ ಕಟ್ಟಡಗಳಲ್ಲ, ಆಡಂಬರದ, ವೈಭವದ ಜೀವನಕ್ರಮವಲ್ಲ, ಬೆಳ್ಳಿ ಸಿಂಹಾಸನ, ಬೆಳ್ಳಿ ಪಲ್ಲಕ್ಕಿಗಳಲ್ಲ ಸರಳವಾದ ಜೀವನ ನಡೆಸುತ್ತಾ ಶರಣ ತತ್ವ ಪ್ರಸಾರ ಮತ್ತು ಶರಣರ ಬದುಕು ಬಾಳುವುದು. ಮಠದಿಂದ ಘಟವಲ್ಲ, ಘಟದಿಂದ ಮಠ ಎನ್ನುವ ಮಾತಿಗೆ ಪ್ರತ್ಯಕ್ಷ ಸಾಕ್ಷಿ ಶ್ರೀ ಶಿವಕುಮಾರ ಸ್ವಾಮಿಗಳು. ನಿಶ್ಚಿತ ಜ್ಞಾನ, ಉಜ್ವಲ ವೈರಾಗ್ಯ, ನಿರ್ಮಲ ಕ್ರಿಯೆ ಮುಪ್ಪರಿಗೊಂಡಿರುವ ಸರ್ವಾಂಗಲಿಂಗಿ ಶ್ರೀ ಶಿವಕುಮಾರ ಸ್ವಾಮೀಗಳು ೧೦೪ನೇ ವರ್ಷಕ್ಕೆ ಕಾಲಿಟ್ಟಿರುವುದು ನಾಡಿನ, ರಾಷ್ಟ್ರದ ಪುಣ್ಯ ಮತ್ತು ಹೆಮ್ಮೆ. ಸಕಲ ಜೀವರಾಶಿಗಳನ್ನು ಪ್ರೀತಿಸುವ, ಭಕ್ತರ ಕುರಿತು ಅಪಾರ ಅನುಕಂಪ ಹೊಂದಿರುವ ಶ್ರೀಗಳವರು ಪಂಡಿತ, ಪಾಮರರಿಬ್ಬರೂ ಏಕಪ್ರಕಾರವಾಗಿ ಮೆಚ್ಚುವ ಅಪೂರ್ವ ವಾಗ್ಮಿಗಳು. ವೈಜ್ಞಾನಿಕ ದೃಷ್ಠಿ, ಆಧ್ಯಾತ್ಮಿಕ ಔನ್ನತ್ಯ, ಸ್ವಧರ್ಮ ನಿಷ್ಠೆ, ಪರಧರ್ಮ ಸಹಿಷ್ಣುತೆ, ಸಾಹಿತ್ಯ, ಸಂಸ್ಕೃತಿ, ಕಲೆಗಳ ಪೋಷಕರಾಗಿ ಶ್ರೀ ಶಿವಕುಮಾರ ಸ್ವಾಮಿಗಳು ಪ್ರಸಿದ್ಧರಾಗಿದ್ದಾರೆ. ಶ್ರೀಗಳ ಸಂಘಟನಾ ಶಕ್ತಿ, ವಿಷಯ ಪರಿಣತಿ ಕುಶಲತೆ, ಇಳಿವಯಸ್ಸಿನಲ್ಲೂ ಪ್ರಖರವಾಗಿಸಿರುವ ವಿಚಾರಶಕ್ತಿ ಅನನ್ಯವಾದವು. ಪ್ರತಿದಿವೂ, ಶ್ರೀಮಠಕ್ಕೆ ಬರುವ ಸಹಸ್ರಾರು ಭಕ್ತರ ದುಃಖ ದುಮ್ಮಾನಗಳನ್ನು ಕೇಳಿ ಸೂಚಿಸಿದ ಪರಿಹಾರಗಳು ವ್ಯಾಜ್ಯಗಳ ತೀರ್ಮಾನಗಳು ಸರ್ವಮಾನ್ಯವಾಗಿದೆ. ದಾಸೋಹ, ವಿದ್ಯಾರ್ಥಿನಿಲಯ, ನೂರಾರು ಶಾಲಾಕಾಲೇಜುಗಳ ಆಡಳಿತ ಜಟಿಲ ಸಮಸ್ಯೆಗಳನ್ನು ಲೀಲಾ ಜಾಲವಾಗಿ ಬಗೆಹರಿಸುವ ಶ್ರೀಗಳು ಸದಾ ಸಮಚಿತ್ತವನ್ನು ಕಾಪಾಡಿಕೊಂಡು ಎಲ್ಲರ ಆದರ ಗೌರವಗಳಿಗೆ ಪಾತ್ರರಾಗಿದ್ದಾರೆ.
ದಿನನಿತ್ಯದ ಪೂಜೆಗಳಲ್ಲದೆ, ಜಾತ್ರಾ ಸಮಯದಲ್ಲಿ ಗೋಸಲ ಸಿದ್ಧೇಶ್ವರ ಉತ್ಸವ, ಪಾರಂಪರಿಕ ಉತ್ಸವಗಳು. ಮಹಾ ರಥೋತ್ಸವ ರುದ್ರಾಕ್ಷಿ ಮಂಟಪ ಪೂಜೆ, ಶಿವಾನುಭವ ಸಮ್ಮೇಳನ, ತೆಪ್ಪೋತ್ಸವಗಳು ನಡೆಯುತ್ತವೆ. ಶರಣ ಸಂದೇಶವನ್ನು ಜನಸಾಮಾನ್ಯರಗೆ ತಲುಪಿಸುವ ಕಾರ್ಯಕ್ರಮಗಳನ್ನು ವರ್ಷದುದ್ದಕ್ಕೂ ನಡೆಯುತ್ತಲೇ ಇರುತ್ತವೆ. ನಾಡಿನ ಹೊರನಾಡಿನ ಖ್ಯಾತ ಮಠಾಧೀಶರನ್ನು ಧರ್ಮಾಧಿಕಾರಗಳನ್ನು ಆಹ್ವಾನಿಸಿ ಅವರ ವಾಣಿಯನ್ನು ಭಕ್ತರಿಗೆ ಕೇಳಿಸುತ್ತಾರೆ. ಶರಣ ಸಂದೇಶವನ್ನು ಉಸಿರಾಗಿಸಿಕೊಂಡಿರುವ ಪೂಜ್ಯರು ತನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ ಎಂಬ ಬಸವಣ್ಣನವರ ವಾಣಿಯನ್ನು ಆಚರಣೆಯಲ್ಲಿ ತಂದಿದ್ದಾರೆ. ಶ್ರೀಮಠದ ಭಕ್ತರಲ್ಲಿ ಬಹುಪಾಲು ಕೃಷಿಕರು, ನೀಡುವ ದವಸ ಧಾನ್ಯಗಳಿಂದ ಶ್ರೀಮಠದ ದಾಸೋಹ ನಿರಂತರವಾಗಿ ನಡೆಯುತ್ತಾ ಬಂದಿದೆ. ಇಂತಹ ಕೃಷಿಕರ ಬದುಕಿಗೆ ನೆರವಾಗುವಂತೆ ಜಾತ್ರೆ ಸಂದರ್ಭದಲ್ಲಿ, ಶ್ರೀ ಸಿದ್ಧಲಿಂಗೇಶ್ವರ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನವನ್ನು ೧೫ ದಿನಗಳವರೆಗೆ ಏರ್ಪಡಿಸಿ, ರೈತರಿಗೆ ಉಪಯುಕ್ತವಾದ ಕೃಷಿ ಮಾಹಿತಿಗಳನ್ನು ನೀಡುವ ವ್ಯವಸ್ಥೆಯನ್ನು ಮಾಡಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳು ಮಳಿಗೆ ತೆರೆದು ಇತ್ತೀಚಿಗೆ ಕೃಷಿ ಕ್ಷೇತ್ರದಲ್ಲಿ ಆಗಿರುವ ಹೊಸ ತಳಿ ಬೀಜ, ಗೊಬ್ಬರ, ನೈಸರ್ಗಿಕ ಕೃಷಿ, ನೀರಿನ ಸದ್ಭಳಕೆ, ಕುರಿತು ಕೃಷಿಕರಿಗೆ ಅರಿವು ಮೂಡಿಸುತ್ತಾರೆ. ವಚನ ಗಾಯನ, ಶಾಸ್ತ್ರೀಯ ಸಂಗೀತ, ಜನಪದ ನೃತ್ಯ, ಕಲೆ, ನಾಟಕಗಳನ್ನು ಜಾತ್ರೆಯುದ್ದಕ್ಕೂ ಪ್ರತಿ ದಿನ ಏರ್ಪಡಿಸಿ ಪ್ರೋತ್ಸಾಹಿಸುತ್ತಾರೆ. ಪ್ರತಿ ವರ್ಷ ಮಹಾಶಿವರಾತ್ರಿ ಸಮಯದಲ್ಲಿ ೫೦ ಸಾವಿರಕ್ಕೂ ಹೆಚ್ಚು ಜನರು ಬರುತ್ತಾರೆ. ಎಲ್ಲರಿಗೂ ಪ್ರಸಾದ ವ್ಯವಸ್ಥೆ ಶ್ರೀಮಠದಿಂದ ನಡೆಯುತ್ತದೆ. ೫೦ ರಿಂದ ೬೦ ಸಾವಿರ ದನಗಳು ಸೇರುತ್ತವೆ. ಇವುಗಳಿಗೆ ಮೇವು ನೀರಿನ ವ್ಯವಸ್ಥೆಯನ್ನು ಶ್ರೀಮಠ ಮಾಡುತ್ತದೆ. ಉತ್ತಮ ರಾಸುಗಳಿಗೆ ಪ್ರೋತ್ಸಾಹ ಬಹುಮಾನ ನೀಡಲಾಗುತ್ತದೆ. ಜಾತ್ರೆಗೆ ಬರುವ ದನಕರುಗಳಿಗೆ ವಿಮೆಯನ್ನು ಸಹ ಶ್ರೀ ಮಠದ ವತಿಯಿಂದ ಮಾಡಿಸಿ, ರೈತರಿಗೆ ನೆರವಾಗುತ್ತದೆ. ಇಂತಹ ಜನಸಾಮಾನ್ಯರಿಗೆ, ರೈತರಿಗೆ ಜನಕಲ್ಯಾಣ ಯೋಜನೆಗಳಿಂದ ಯಾತ್ರಾತ್ರಿಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದಾರೆ.
ಶ್ರೀಮಠದ ಹಳೆ ವಿದ್ಯಾರ್ಥಿ ಸಂಘ ಶ್ರೀ ಸಿದ್ಧಗಂಗಾ ಮಠದ ಎಲ್ಲ ಕಾರ್ಯಗಳಲ್ಲಿ ತನು-ಮನ ಧನದಿಂದ ಸೇವೆ ಸಲ್ಲಿಸುತ್ತಿದೆ. ಹಳೆ ವಿದ್ಯಾರ್ಥಿ ಸಂಘದ ಕಾರ್ಯಕಾರಿ ಸಮಿತಿ ಕಾಲಕಾಲಕ್ಕೆ ಆಯ್ಕೆ ಆಗುತ್ತದೆ. ಖರ್ಚು ವೆಚ್ಚ ಲೆಕ್ಕ ಪತ್ರಗಳನ್ನು ಸರ್ವ ಸದಸ್ಯರ ಸಭೆಯಲ್ಲಿ ಮಂಡಿಸಿ ಅಂಗೀಕಾರ ಪಡೆಯುತ್ತದೆ. ಗ್ರಾಮಾಂತರ ಕಲ್ಯಾಣ ಕಾರ್ಯಕ್ರಮಗಳನ್ನು, ಜ್ಞಾನದಾಸೋಹವನ್ನು ನಿರಂತರವಾಗಿ ನಡೆಸುತ್ತಾ ಸಕ್ರಿಯವಾಗಿದೆ. ಸುಸಂಸ್ಕೃತ ಜನಾಂಗ ನಿರ್ಮಾಣಕ್ಕೆ ಶಿಕ್ಷಣವೇ ಮೂಲ, ಶಿಕ್ಷಣವಂತ ಜನಾಂಗ ರಾಷ್ಟ್ರದ ಸಂಪತ್ತು. ಜ್ಞಾನಕ್ಕೆ ಸಮಾನವಾದುದು ಬೇರೆ ಇಲ್ಲ ಎಂದು ಮನಗಂಡಿರುವ ಪೂಜ್ಯಶ್ರೀಗಳು. ಸಿದ್ಧಗಂಗಾ ಕ್ಷೇತ್ರವನ್ನು ಶಿಕ್ಷಣ ಕೇಂದ್ರವನ್ನಾಗಿಸಲು ಸತತವಾಗಿ ಶ್ರಮಿಸುತ್ತಾ ಬಂದಿದ್ದಾರೆ. ಅನಕ್ಷರತೆಯಿಂದ ಹಿಂದುಳಿದ ಬಡಜನರಿಗೆ ಉಚಿತ ಶಿಕ್ಷಣ, ಉಚಿತ ದಾಸೋಹವನ್ನು ನೀಡಿ ದೀನರು, ದಲಿತರು, ಅನಾಥರು, ಹಿಂದುಳಿದ ಜನಾಂಗಗಳ, ಅನಾದರಕ್ಕೆ ಒಳಗಾದ ಶೂದ್ರರಿಗೂ, ಅಸ್ಪೃಶ್ಯರಿಗೂ ವಿದ್ಯೆಗೆ ಮುಕ್ತ ಅವಕಾಶ ಕಲ್ಪಿಸಿ, ರಾಷ್ಟ್ರದ ಗಮನ ಸೆಳೆದಿದೆ.
ಶ್ರೀ ಸಿದ್ಧಗಂಗಾ ಕ್ಷೇತ್ರದಲ್ಲಿ ಪೂರ್ವ ಪ್ರಾಥಮಿಕ ಪಾಠಶಾಲೆ, ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆಗಳು, ಶಿಕ್ಷಕರ ತರಬೇತಿ ಸಂಸ್ಥೆ, ಅಂಧ ಮಕ್ಕಳ ಶಾಲೆ, ಸಂಗೀತ ಪಾಠ ಶಾಲೆ, ವಾಣಿಜ್ಯ ವಿದ್ಯಾಸಂಸ್ಥೆ ಚಿತ್ರಕಲಾ ಶಾಲೆಗಳು ನಡೆಯುತ್ತಿದ್ದು, ಸುಮಾರು ಐದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಚಿತ ಶಿಕ್ಷಣ, ಉಚಿತ ಊಟ, ವಸತಿ, ಬಟ್ಟೆಗಳ ಆಶ್ರಯ ಪಡೆದಿದ್ದಾರೆ. ಇಷ್ಟೊಂದು ಬೃಹತ್ ಸಂಸ್ಥೆಯನ್ನು ಉಚಿತವಾಗಿ ನಡೆಸುವ ಸಂಸ್ಥೆ ರಾಜ್ಯದಲ್ಲಿ ಮಾತ್ರವಲ್ಲ ರಾಷ್ಟ್ರದಲ್ಲೇ ಇದೊಂದೇ ಎನ್ನಬಹುದು. ಇವುಗಳೊಂದಿಗೆ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ ಹೆಸರಿನಲ್ಲಿ ತುಮಕೂರು ಜಿಲ್ಲೆಯಲ್ಲಿ ಮಾತ್ರವಲ್ಲದೆ ನಾಡಿನ ವಿವಿಧ ಮೂಲೆಗಳಲ್ಲಿ, ಗ್ರಾಮಾಂತರ ಪ್ರದೇಶಗಳಲ್ಲಿ ಪ್ರೌಢಶಾಲೆಗಳನ್ನು, ಪದವಿ ಪೂರ್ವ ಕಾಲೇಜುಗಳನ್ನು, ಪ್ರಥಮ ದರ್ಜೆ ಕಾಲೇಜುಗಳನ್ನು ನಡೆಸುತ್ತಿದೆ. ತುಮಕೂರು ನಗರದಲ್ಲಿ ಶ್ರೀ ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯವನ್ನು ೧೯೬೩ರಷ್ಟು ಹಿಂದೆಯೇ ಸ್ಥಾಪಿಸಿ, ನಾಡಿಗೆ ಸಹಸ್ರಾರು ಎಂಜಿನಿಯರುಗಳ ಕೊಡುಗೆ ನೀಡಿದೆ. ರಾಜ್ಯದ ಬಡ ವಿದ್ಯಾರ್ಥಿಗಳಿಗೆ, ಹೊರನಾಡಿನ ವಿದ್ಯಾಕಾಂಕ್ಷಿಗಳಿಗೆ ಅವಕಾಶ ಕಲ್ಪಿಸಿದ ನಾಡಿನಲ್ಲೇ ಹೆಸರಾಂತ ಸಂಸ್ಥೆಯಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಎಲ್ಲ ವರ್ಗ, ವರ್ಣದ ವಿದ್ಯಾರ್ಥಿಗಳು, ಶಿಕ್ಷಕರೂ ಸೇವೆ ಸಲ್ಲಿಸುತ್ತಿದ್ದಾರೆ. ಮಹತ್ಮಾಗಾಂಧಿಯವರ ಕಲ್ಪನೆಯ ಗ್ರಾಮ ರಾಜ್ಯ ಸಮಾಜವಾದ ಇಲ್ಲಿ ಸಾಕಾರಗೊಂಡಿದೆ. ಶ್ರೀ ಸಿದ್ಧಗಂಗಾ ಕ್ಷೇತ್ರದಲ್ಲಿ ಶ್ರೀ ಕ್ಷೇತ್ರದ ಆವರಣ ಸದಾ ಕಾಲ ವಿದ್ಯಾರ್ಥಿಗಳಿಂದ ತುಂಬಿರುತ್ತದೆ. ಎಲ್ಲಿ ನೋಡಿದರೂ ಶಿಕ್ಷಣಾರ್ಥಿಗಳೇ ಕಂಡು ಬರುತ್ತಾರೆ. ಶ್ರೀ ಮಠದ ಪ್ರತಿಯೊಬ್ಬ ವಿದ್ಯಾರ್ಥಿಯೂ ವಾರಕ್ಕೆರಡು ದಿನ ಶ್ರಮದಾನ ಮಾಡಲೇಬೇಕೆಂಬುದು ಕಡ್ಡಾಯ ನಿಯಮ. ಶ್ರಮದಾನದಲ್ಲಿ ಶಿಕ್ಷಕರೂ, ಸಿಬ್ಬಂದಿಗಳೊಂದಿಗೆ ಪೂಜ್ಯರು ಭಾಗವಹಿಸುವುದು ಸಿದ್ಧಗಂಗಾ ಮಠದ ವಿಶೇಷ. ಎಲ್ಲರೂ ಸಮಾನರು ಎಂಬ ತತ್ವದ ಆಚರಣೆ.
ಅನ್ನವನು ಇಕ್ಕುವುದು, ನನ್ನಿಯನು ನುಡಿಯುವುದು, ತನ್ನಂತೆ ಪರರ ಬಗೆವೊಡೆ, ಕೈಲಾಸ ಭಿನ್ನಾಣವನ್ನು ಸರ್ವಜ್ಞ ಎಂಬ ಸರ್ವಜ್ಞನ ವಚನ ಶ್ರೀ ಸಿದ್ಧಗಂಗಾ ಕ್ಷೇತ್ರದಲ್ಲಿ ಸಾಕಾರಗೊಂಡಿದೆ. ದಿನ ನಿತ್ಯ ಸಾವಿರಾರು ಭಕ್ತರು ಶ್ರೀ ಕ್ಷೇತ್ರಕ್ಕೆ ಬರುತ್ತಾರೆ. ಪೂಜ್ಯರನ್ನು ಕಂಡು, ಗದ್ದುಗೆ ದರ್ಶನ ಮಾಡಿ, ದಾಸೋಹದಲ್ಲಿ ಪ್ರಸಾದ ಸ್ವೀಕರಿಸಿ ಧನ್ಯತೆಯ ಭಾವದಿಂದ ಹಿಂದಿರುಗುತ್ತಾರೆ. ಶ್ರೀಮಠದಲ್ಲಿ ಹೊತ್ತಿದ ಒಲೆ ಆರದಿರಲಿ ಎಂಬುದು ಹಿರಿಯ ಸ್ವಾಮಿಗಳ ಆಶಯ. ವಿರಕ್ತ ಪರಂಪರೆಯ ಲಿಂಗಾಯತ ಮಠ ಎಲ್ಲ ಜಾತಿ, ಜನಾಂಗ, ಧರ್ಮದ ಜನರೂ ಒಂದೇ ಕಡೆ ಪ್ರಸಾದ ಸ್ವೀಕರಿಸುವ ಏಕ ಮಾತ್ರ ಪವಿತ್ರ ತಾಣ ಶ್ರೀ ಸಿದ್ಧಗಂಗಾ ಮಠ. ಭಕ್ತರ ಕೊಡುಗೆಯಿಂದಲೇ ಇಷ್ಟೊಂದು ಬೃಹತ್ ದಾಸೋಹ ನಡೆಸುವ ಪೂಜ್ಯರ ಕ್ರಿಯಾಶೀಲತೆಗೆ ಎಂತಹವರೂ ತಲೆಬಾಗಲೇಬೇಕು. ಶ್ರೀಮಠಕ್ಕೆ ನೀಡಿದ ಪ್ರತಿಯೊಂದು ರೂಪಾಯಿ, ದವಸಧಾನ್ಯಗಳು, ದೀನ ದಲಿತರ ಸೇವೆಗೆ, ವಿದ್ಯಾರ್ಥಿಗಳಿಗೆ ಮೀಸಲು. ಆ ಕಾರಣಕ್ಕಾಗಿ ಭಕ್ತರೂ ಆತ್ಮ ಸಂತೋಷದಿಂದ, ತೃಪ್ತಿಯಿಂದ ಶ್ರೀಮಠದ ಸೇವಾ ಕಾರ್ಯಗಳಿಗೆ ಕೊಡುಗೈ ದಾನ ನೀಡುತ್ತಾರೆ. ಇಲ್ಲಿಗೆ ನೀಡುವ ದಾನ, ಕಾಣಿಕೆಗಳು ಸದ್ಬಳಕೆಯಾಗುತ್ತದೆ ಎಂಬುದು ದಾನಿಗಳಿಗೆ ತೃಪ್ತಿ ತಂದಿದೆ. ೧೯೫೪ರಲ್ಲಿ ಆರಂಭಿಸಲಾಯಿತು. ಈ ಪತ್ರಿಕೆಯನ್ನು ೧೯೭೫ರಿಂದ ಮಾಸ ಪತ್ರಿಕೆಯನ್ನಾಗಿ ಪ್ರಕಟಿಸುತ್ತಾ ಬಂದಿದೆ. ಶ್ರೀಮಠ ಸಮಾರಂಭಗಳು, ಕಾರ್ಯಚಟುವಟಿಕೆಗಳ ವರದಿಯೊಂದಿಗಳೊಂದಿಗೆ ಶರಣರ ತತ್ವ, ಸಂದೇಶಗಳನ್ನು ಹಿರಿಯ ವಿದ್ವಾಂಸರಿಂದ ಬರೆಸಿ, ಮೌಲಿಕ ಲೇಖನಗಳನ್ನು ಪ್ರಕಟಿಸುತ್ತಿದೆ. ಸುಮಾರು ಹತ್ತು ಸಾವಿರ ಚಂದಾದಾರರಿರುವ ಧಾರ್ಮಿಕ, ವೈಚಾರಿಕ ಮಾಸಿಕವಾಗಿ ಪ್ರಸಿದ್ಧವಾಗಿದೆ. ಭಕ್ತರ ಆಧ್ಯಾತ್ಮಕ ಹಸಿವನ್ನು ಪೂರೈಸುವ ಪತ್ರಿಕೆಯಾಗಿ ರೂಪುಗೊಂಡಿದೆ.
ಶ್ರೀ ಸಿದ್ಧಗಂಗಾ ಮಠವೊಂದು ಬಸವ ತತ್ವದ ಪ್ರಯೋಗ ಶಾಲೆ. ಶ್ರೀ ಮಠಕ್ಕೆ ಹೆಚ್ಚಿನ ಆಸ್ತಿ ಇಲ್ಲ ಆದಾಯ ಮೂಲವೂ ಇಲ್ಲ. ಭಕ್ತರೇ ಶ್ರೀಮಠದ ಆಸ್ತಿ. ಅವರು ನೀಡುವ ಕಾಣಿಕೆ, ದವಸ-ಧಾನ್ಯಗಳೇ ಆದಾಯ ಮೂಲಗಳು. ಮಹಾಜನರ ಉದಾರ ಕೊಡುಗೆ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನೀಡುವ ಸಹಾಯ ಧನಗಳೇ ಶ್ರೀ ಸಿದ್ಧಗಂಗಾ ಮಠದ ಸಂಪನ್ಮೂಲಗಳು. ದೀನದಲಿತರ ಸೇವೆಗೆ ಮೀಸಲಾಗಿರುವ ಶ್ರೀ ಮಠದಲ್ಲಿ ಯಾವುದೇ ದುಂದು ವೆಚ್ಚಗಳಿಲ್ಲ. ಆಡಂಬರ, ವೈಭವಗಳಿಗೂ ಸ್ಥಾನವಿಲ್ಲ. ಭಕ್ತರು ನೀಡುವ ಪ್ರತಿ ಪೈಸೆಯೂ ದಾಸೋಹಕ್ಕೆ ಮೀಸಲು. ಬಡ, ಹಿಂದುಳಿದ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುವ, ಸಮಾಜದಲ್ಲಿ ತಲೆ ಎತ್ತಿ ಸ್ವಾವಲಂಬಿಯಾಗಿ ಬಾಳುವ ವಿದ್ಯೆಯ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಸಮಾನ ಅವಕಾಶ. ಲೇಖನ, ಭಾಷಣ, ಕವನ ರಚನೆ, ವಾಚನ, ವಚನ ಕಂಠಪಾಠ ಸ್ಪರ್ಧೆಗಳು. ಆಟೋಟ ಸ್ಪರ್ಧೆಗಳನ್ನು ಏರ್ಪಡಿಸುವುದು. ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಯನ್ನು ಅರಳಿಸುವ ಕಾರ್ಯ ನಿರಂತರ. ಈ ದಿಕ್ಕಿನಲ್ಲಿ ಶಿಕ್ಷಕರ, ಸಿಬ್ಬಂದಿಗಳ ವಿದ್ಯಾರ್ಥಿಗಳಿಗೆ ನಾಟಕ ಕಮ್ಮಟ, ಕಲಾಸೇವೆಯಲ್ಲಿ ಪ್ರಕಾರಗಳಲ್ಲಿ ತರಬೇತಿ ನೀಡಿದ್ದಾರೆ.
ಶ್ರೀ ಸಿದ್ಧಲಿಂಗೇಶ್ವರ ನಾಟಕ ಮಂಡಳಿಯ ಜಗಜ್ಯೋತಿ ಬಸವೇಶ್ವರ ನಾಟಕ ೬೦೦ ಕ್ಕೂ ಹೆಚ್ಚು ಪ್ರದರ್ಶನ ನೀಡಿ ಜನ ಮನ್ನಣೆ ಪಡೆದಿದೆ.
ಶ್ರೀ ಮಠದ ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಮತ್ತು ಶ್ರೀ ಸಿದ್ಧಗಂಗಾ ಪ್ರಕಾಶನ ಸಂಸ್ಥೆಗಳ ಮೂಲಕ ನೂರಾರು ಗ್ರಂಥಗಳನ್ನು ಪ್ರಕಟಿಸುತ್ತಾ ಬಂದಿದೆ. ಧಾರ್ಮಿಕ, ಆಧ್ಯಾತ್ಮಕ, ಸಾಮಾಜಿಕ, ಶೈಕ್ಷಣಿಕ ಗ್ರಂಥಗಳ ಜೊತೆಗೆ ಶರಣರ ಜೀವನ, ಶರಣ ಕ್ಷೇತ್ರಗಳ ಪರಿಚಯ ಗ್ರಂಥಗಳನ್ನು ವಚನ ಸಾಹಿತ್ಯ ಕುರಿತ ಮೌಲಿಕ ಗ್ರಂಥಗಳನ್ನು ಪ್ರಕಟಿಸಿದೆ. ಖ್ಯಾತ ಸಾಹಿತಿಗಳಾದ ಶ್ರೀ ತಿಪ್ಪೇರುದ್ರಸ್ವಾಮಿ ಅವರ ಕರ್ತಾರನ ಕಮ್ಮಟ ಬೃಹತ್ ಗ್ರಂಥವನ್ನು ಪ್ರಕಟಿಸಿ, ಸುಲಭ ಬೆಲೆಗೆ ಮಾರಾಟ ಮಾಡಿದೆ. ಈ ಕೃತಿ ಹಲವಾರು ಮುದ್ರಣಗಳನ್ನು ಕಂಡು ಜನಪ್ರಿಯವಾಗಿದೆ. ವಚನ ಗಂಗಾ, ವಚನ ಬಿಲ್ವ, ದಾಸೋಹ ಸಿರಿ ಅಭಿನಂದನ ಗ್ರಂಥ ಪ್ರಕಟಿಸಿದೆ. ಶ್ರೀ ಬಸವೇಶ್ವರರು ಮತ್ತು ಅವರ ಸಮಕಾಲೀನವರು ಎಂಬ ಬೃಹತ್ ಗ್ರಂಥವನ್ನು ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳೆರಡರಲ್ಲೂ ಪ್ರಕಟಿಸಿದೆ. ಕುಸುಮಾಂಜಲಿ, ಕರ್ಮಯೋಗಿ ಸಿದ್ಧರಾಮ, ಉದ್ಧಾನ ಶಿವಯೋಗಿ ಮುಂತಾದ ಗ್ರಂಥಗಳು ಶ್ರೀ ಮಠದಿಂದ ಪ್ರಕಟವಾಗಿದೆ.
೧೯೭೯ರಿಂದಲೂ ಶ್ರೀ ಸಿದ್ಧಗಂಗಾ ಮಠದಲ್ಲಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿವರ್ಷ ಬಸವ ಜಯಂತಿ ಉತ್ಸವವನ್ನು ಆಚರಿಸುತ್ತಾ ಬಂದಿದೆ. ಬಸವಣ್ಣನವರ ಭಾವಚಿತ್ರ ಮೆರವಣಿಗೆ, ವಚನೋತ್ಸವ, ವ್ಯಕ್ತಿತ್ವ ವಿಕಸನ, ಉಪನ್ಯಾಸಗಳ ಮೂಲಕ ವಿದ್ಯಾರ್ಥಿಗಳಲ್ಲಿ ಬಸವತತ್ವ ಕುರಿತು ಆಸಕ್ತಿ ಮೂಡಿಸಿ ಸತ್ಪ್ರಜೆಗಳನ್ನಾಗಿ ರೂಪಿಸುತ್ತಿದ್ದಾರೆ. ಶರಣ ತತ್ವ, ವಚನ ಸಾಹಿತ್ಯಕ್ಕಾಗಿ ದುಡಿದ ಮಹನೀಯರನ್ನು ವಿದ್ವಾಂಸರನ್ನು ಶ್ರೀಮಠಕ್ಕೆ ಬರಮಾಡಿಕೊಂಡು ಅವರಿಂದ ಉಪನ್ಯಾಸ ಏರ್ಪಡಿಸಿ, ಸನ್ಮಾನ ಗೌರವ ಪ್ರಶಸ್ತಿಗಳನ್ನು ನೀಡಿದ್ದಾರೆ. ವಚನ ಗಾಯನ ಏರ್ಪಡಿಸಿ ಸಂಗೀತ ಸುಧೆ ಹರಿಸಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಬಸವತತ್ವ ಪ್ರಚಾರ, ಕಾಯಕ, ದಾಸೋಹ ಮೂಲಕ ಅಸ್ಪೃಶ್ಯತೆ ನಿವಾರಣೆ, ಮಾನವೀಯತೆ, ವಿಚಾರವಂತಿಕೆಯ ಜಾಗೃತಿ ಮೂಡಿಸುತ್ತಿದ್ದಾರೆ.
ಶ್ರೀ ಸಿದ್ಧಗಂಗಾ ಕ್ಷೇತ್ರ ವರ್ಷದುದ್ದಕ್ಕೂ ಧಾರ್ಮಿಕ, ಶೈಕ್ಷಣಿಕ, ಕ್ರೀಡಾ ಶಿಬಿರಗಳು, ಸಮ್ಮೇಳನಗಳು, ವಿಚಾರ ಸಂಕೀರ್ಣಗಳು ನಡೆಯುತ್ತಲೇ ಇರುತ್ತವೆ. ೧೯೮೯ರಿಂದ ನಿರಂತರವಾಗಿ ಶರಣಮೇಳಗಳನ್ನು ನಡೆಸಿಕೊಂಡು ಬಂದಿವೆ. ಪ್ರತಿವರ್ಷ ಸಂಕ್ರಾಂತಿಯಿಂದ ಉದ್ಧಾನ ಶಿವಯೋಗಿಗಳ ಪುಣ್ಯಸ್ಮರಣೆಯನ್ನು ಆಚರಿಸುತ್ತಾ ಬಂದಿದ್ದಾರೆ. ಅನುಭಾವಿಗಳು, ಮಠಾಧೀಶರು, ವಿದ್ವಾಂಸರು ಈ ಸಮಾರಂಭದಲ್ಲಿ ಭಾಗವಹಿಸಿ ಬಸವಾದಿ ಶರಣ ಜೀವನ ಸಂದೇಶಗಳ ಉಪನ್ಯಾಸ ನೀಡುತ್ತಾ ಬಂದಿದ್ದಾರೆ. ಶಿಕ್ಷಣ ದಾಸೋಹ, ಜ್ಞಾನದಾಸೋಹ, ಪ್ರಸಾದ ದಾಸೋಹ ಮೂರು ಮುಪ್ಪರಿಗೊಂಡಿರುವ ಕ್ಷೇತ್ರವೆಂದರೆ ಶ್ರೀ ಸಿದ್ಧಗಂಗಾ ಕ್ಷೇತ್ರ. ಭಾಗವಹಿಸುವ ಎಲ್ಲರಿಗೂ ವಸತಿ, ಪ್ರಸಾದ ವ್ಯವಸ್ಥೆಗಳನ್ನು ಶ್ರೀಮಠ ಏರ್ಪಡಿಸುತ್ತದೆ. ೧೯೬೩ರಲಿ ೪೪ನೇ ಕನ್ನಡ ಸಾಹಿತ್ಯ ಸಮ್ಮೇಳನ ಪ್ರೊ.ರಂ.ಶ್ರೀ ಮುಗಳಿ ಅವರ ಅಧ್ಯಕ್ಷತೆಯಲ್ಲಿ ಸಿದ್ಧಗಂಗಾ ಕ್ಷೇತ್ರದಲ್ಲಿ ನಡೆಯಿತು. ನಾಡಿನ ಎಲ್ಲ ಕಡೆಗಳಿಂದ ಬಂದ ಸಾಹಿತ್ಯ ಪ್ರಿಯರು ಶ್ರೀಕ್ಷೇತ್ರ ಸೇವೆಯನ್ನು ಹೃದಯ ತುಂಬಿ ಪ್ರಶಂಸಿಸಿದರು. ೧೯೯೭ರಲ್ಲಿ ಶಿವಕುಮಾರ ಸ್ವಾಮಿಗಳಿಗೆ ೯೦ ವರ್ಷ ತುಂಬಿದ ಸಂದರ್ಭದಲ್ಲಿ ಭಕ್ತರು ಗುರುವಂದನ ಸಮಾರಂಭ ಏರ್ಪಡಿಸಿ ಗೌರವಿಸಿದರು. ಲಕ್ಷಾಂತರ ಭಕ್ತರು ದಾಸೋಹ ಸಿರಿ ಎಂಬ ಬೃಹತ್ ಗ್ರಂಥ ಅರ್ಪಿಸಿ ಜನ್ಮ ದಿನ ಆಚರಣೆಗೆ ಸೇರಿ ತಮ್ಮ ಭಕ್ತಿ, ಗೌರವ ತೋರಿದ್ದರು. ಅಂದಿನಿಂದ ಪ್ರತಿವರ್ಷವೂ ಪೂಜ್ಯರ ಜನ್ಮ ದಿನಾಚರಣೆಯನ್ನು ಶ್ರೀ ಕ್ಷೇತ್ರದಲ್ಲಿ ಮತ್ತು ನಾಡಿನ ಎಲ್ಲ ಭಾಗಗಳಲ್ಲಿ ಗುರುವಂದನೆ ಸಮಾರಂಭವಾಗಿ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತಿದೆ. ಈ ಸಮಾರಂಭಗಳಲ್ಲಿ ರಾಷ್ಟ್ರಪತಿಗಳು, ರಾಜ್ಯಪಾಲರು, ಪ್ರಧಾನ ಮಂತ್ರಿಗಳು, ಮುಖ್ಯಮಂತ್ರಿಗಳು ಎಲ್ಲ ಧರ್ಮದ ಧರ್ಮಾಧಿಕಾರಗಳೂ ಭಾಗವಹಿಸುತ್ತಾರೆ. ನ್ಯಾಯಮೂರ್ತಿಗಳ ಹೆಸರಾಂತ ವೈದ್ಯರು, ಶಿಕ್ಷಣವೆತ್ತರನ್ನು ಗುರುತಿಸಿ ಗೌರವಿಸಲಾಗುತ್ತಿದೆ.
೧೯೩೦ರಲ್ಲಿ ಶ್ರೀ ಸಿದ್ಧಗಂಗಾ ಮಠದ ಅಧಿಕಾರ ವಹಿಸಿಕೊಂಡ ಶ್ರೀ ಶಿವಕುಮಾರ ಸ್ವಾಮಿಗಳು ೭೭ ವರ್ಷಗಳಿಂದ ಶ್ರೀ ಕ್ಷೇತ್ರವನ್ನು ಬಹುಮುಖವಾಗಿ ವಿಸ್ತರಿಸಿದ್ದಾರೆ. ದಾಸೋಹಕ್ಕೆ ಮತ್ತೊಂದು ಹೆಸರು ಶ್ರೀ ಸಿದ್ಧಗಂಗಾ ಮಠ ಶ್ರೀ ಶಿವಕುಮಾರ ಸ್ವಾಮಿಗಳು ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಶ್ರೀ ಗಳ ಮಾತೃ ಹೃದಯ, ದೀನರು, ದಲಿತರು, ಬಡವರ ಬಗ್ಗೆ ಸದಾ ಮಿಡಿಯುತ್ತಿರುತ್ತದೆ. ೧೯೭೨ರಲ್ಲಿ ಶ್ರೀ ಶಿವಕುಮಾರ ಸ್ವಾಮಿಗಳ ರಜತಮಹೋತ್ಸವದಲ್ಲಿ ಅಂದಿನ ರಾಷ್ಟ್ರಪತಿ ಶ್ರೀ ನೀಲಂ ಸಂಜೀವರೆಡ್ಡಿ ಅವರು ಭಾಗವಹಿಸಿದ್ದರು. ಪೂಜ್ಯರಿಗೆ ಬೃಹತ್ ಗ್ರಂಥ ಸಿದ್ಧಗಂಗಾ ಶ್ರೀ ಅರ್ಪಿಸಲಾಯಿತು. ೨೦೦೬ರಲ್ಲಿ ೯೯ನೇ ಹುಟ್ಟುಹಬ್ಬವನ್ನು ಆಚರಿಸಲಾಯಿತು. ೨೦೦೬ರಿಂದ ವರ್ಷವಿಡೀ ನಾಡಿನ ಎಲ್ಲ ಭಾಗಗಳಲ್ಲಿ ಗುರುವಂದನಾ ಕಾರ್ಯಕ್ರಮಗಳು ಪ್ರತಿದಿನವೂ ಎಂಬಂತೆ ನಡೆಯುತ್ತದೆ.
ಎನಿತು ಜನ್ಮದಲ್ಲಿ, ಎನಿತು ಜೀವರಿಗೆ ಎನಿತು ನಾವು ಋಣಿಯೋ ತಿಳಿದು ನೋಡಿದರೆ ಬಾಳು ಎಂಬುದಿದು ಋಣದ ರತ್ನಗಣಿಯೋ ಎಂದಿದ್ದಾರೆ ಡಾ.ಜಿ.ಎಸ್.ಎಸ್. ಶ್ರೀ ಸಿದ್ಧಗಂಗಾ ಮಠ ತಮಗೆ ೩ ವರ್ಷ (೧೯೪೧-೧೯೪೪) ಆಶ್ರಯ ನೀಡಿದ್ದನ್ನು ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪನವರು ನೆನೆಯುತ್ತಾರೆ. ಅಂದು ಶ್ರೀ ಶಿವಕುಮಾರ ಸ್ವಾಮಿಗಳು ಆಶ್ರಯ ನೀಡದೇ ಹೋಗಿದ್ದರೆ ನನ್ನ ಬದುಕು ಏನಾಗುತ್ತಿತ್ತೋ ಹೇಳಲು ಬಾರದು ಎಂದಿದ್ದಾರೆ. ಆ ದಿನಗಳಲ್ಲೇ ಸುಮಾರು ನಾಲ್ಕು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಿದ್ಧಗಂಗಾ ಮಠದಲ್ಲಿ ವಸತಿ ದಾಸೋಹ ಪಡೆದಿದ್ದರು ಎಂದು ಡಾ.ಜಿ.ಎಸ್.ಎಸ್. ದಾಖಲಿಸಿದ್ದಾರೆ. ಭಕ್ತಿ ಎಂಬುದ ಮಾಡಬಾರದು, ಅದು ಹೋಗುತ್ತಲೂ ಕೊಯ್ಯುತ್ತದೆ, ಬರುತ್ತಲೂ ಕೊಯ್ಯುತ್ತದೆ, ಕಾವಿಯೂ ಅಷ್ಟೇ, ಲೋಕದ ಕಣ್ಣಿಗೆ ಪವಿತ್ರವೆಂಬಂತೆ ಕಂಡು ಬಂದರೆ ಸಾಲದು, ತನ್ನ ಒಳಗಣ್ಣಿಗೆ ತಾನೆಷ್ಟು ಪವಿತ್ರ, ಪರಿಶುದ್ಧ ಎಂಬುದನ್ನು ತನಗೆ ತಾನೇ ಒರೆಗೆ ಹಚ್ಚಿ ನೋಡಿಕೊಳ್ಳಬೇಕು, ಜನಮೆಚ್ಚಿ ನಡೆಕೊಂಡರೇನುಂಟು ಜಗದೊಳಗೆ ಮನಮೆಚ್ಚಿ ನಡಕೊಂಬುದೆ ಚಂದವು ಎನ್ನುತ್ತಾರೆ ಪೂಜ್ಯ ಶ್ರೀ ಶಿವಕುಮಾರ ಸ್ವಾಮಿಗಳು. ಸ್ವಾಮಿಗಳಾಗುವವರು ಕಾರುಣ್ಯದ ಕಾರಂಜಿಯಾಗಬೇಕು. ಮಗುವಿನ ಮುಗ್ಧ ಮನಸ್ಸಿನೊಂದಿಗೆ, ಪ್ರಬುದ್ಧ ವಿಚಾರವಂತರೂ, ಶುದ್ಧರೂ ಆಗಿರಬೇಕು.
ಶ್ರೀ ಗಳವರದು ಶುದ್ಧಾಂತಃ ಕರಣ ನಿಜವನರಿದ ನಿಶ್ಚಿಂತ, ಮರಣವಗೆಲಿದ ಮಹಾಂತ, ನೂರು ವರ್ಷ ಜೀವಿಸಿ ಸಾರ್ಥಕ ಸೇವೆಯಲಿ ತೊಡಗಿರುವ ಶತಾಯುಷಿ, ಬಸವ ತತ್ವವೇ ಮೈವೆತ್ತಂತಿರುವ ಪುಣ್ಯಪುರುಷ, ಇಂತಹ ಮಹಾಮಹಿಮರನ್ನು ಕಾಣುವ ಭಾಗ್ಯ, ಅವರ ಜೀವಿತದಲ್ಲಿ ನಾವೂ ಇದ್ದೆವು ಎಂಬುದೇ ಒಂದು ಮಹಾ ಭಾಗ್ಯ.

ಜಯದೇವಪ್ಪ ಜೈನಕೇರಿ, ನಂ.೮೭, ಶಾಂತಲಾ, ಕುವೆಂಪು ರಸ್ತೆ, ಶಿವಮೊಗ್ಗ.

ಸಮಗ್ರ ಕ್ರಾಂತಿಗೆ ಕರೆನೀಡುವ ಇಷ್ಟಲಿಂಗ



ಎಡದ ಕೈಯಲಿ ಕತ್ತಿ, ಬಲದ ಕೈಯಲಿ ಮಾಂಸ,
ಬಾಯಲಿ ಸುರೆಯ ಗಡಿಗೆ, ಕೊರಳಲಿ ದೇವರಿರಲು
ಅವರ ಲಿಂಗನೆಂಬೆ, ಸಂಗನೆಂಬೆ,
ಕೂಡಲಸಂಗಮದೇವಾ, ಅವರ ಮುಖಲಿಂಗಿಗಳೆಂಬೆನು.
-ಬಸವಣ್ಣ

ಆರ್ಥಿಕ ಮತ್ತು ಪಾರಮಾರ್ಥಿಕ ಸಮಾನತೆಯ ಸಮಾಜದ ನಿರ್ಮಾಣಕ್ಕೆ ಬಸವಣ್ಣನವರು ಇಡೀ ಬದುಕನ್ನೇ ಮುಡಿಪಾಗಿಟ್ಟರು. ಈ ನವಸಮಾಜ ನಿರ್ಮಾಣಕ್ಕಾಗಿ ಬಸವಣ್ಣನವರು ಒಳ್ಳೆಯವರನ್ನು ಸ್ವರ್ಗದಿಂದ ತರುವ ಕನಸು ಕಾಣಲಿಲ್ಲ. ದೇವರೇ ಬಂದು ಎಲ್ಲವನ್ನೂ ಸರಿಪಡಿಸಬೇಕೆಂದು ಪ್ರಾರ್ಥಿಸಲಿಲ್ಲ. ಒಳ್ಳೆಯವರನ್ನು ಈ ಭೂಮಿಯ ಮೇಲೆಯೆ ರೂಪಿಸಬೇಕೆಂಬುದು ಬಸವಣ್ಣನವರ ಆಶಯವಾಗಿದೆ.
ಮಾನವನ ಒಳಗೂ ಹೊರಗೂ ಮಾನವೀಯ ಪರಿಸರ ನಿರ್ಮಾಣ ಮಾಡಿದಾಗ ಎಂಥವರೂ ಒಳ್ಳೆಯವರಾಗುತ್ತಾರೆ. ಕೆಟ್ಟ ಮನುಷ್ಯರು ಹುಟ್ಟಿನಿಂದಲೇ ಕೆಟ್ಟವರಾಗಿರುವುದಿಲ್ಲ. ಅವರಿಗೆ ಲಭ್ಯವಾಗುವ ಅನಾಗರಿಕ ವಾತಾವರಣ ಮತ್ತು ಅದರಿಂದ ರೂಪುಗೊಳ್ಳುವ ಅಸಭ್ಯ ಮನಸ್ಸಿನ ಕಾರಣ ಅವರು ಹಾಗೆ ವರ್ತಿಸುತ್ತಿರುತ್ತಾರೆ. ಮನುಷ್ಯರ ಒಳಗನ್ನು ಸ್ವಚ್ಛಗೊಳಿಸುವುದರ ಜೊತೆಗೆ ಹೊರಗಿನ ಸಮಾಜವನ್ನೂ ಸ್ವಚ್ಛಗೊಳಿಸುವುದು ಈ ಶರಣರ ಪ್ರಮುಖ ಕಾಯಕವಾಗಿದೆ. ಚಾಕು ಚೂರಿ ಹಿಡಿದುಕೊಂಡು ಮಾಂಸ ತಿನ್ನುತ್ತ ಮತ್ತು ರಸ್ತೆಯ ಮೇಲೆಯೆ ಸಾರಾಯಿ ಕುಡಿಯುತ್ತ ಬರುವವರ ವಿಕೃತ ದೃಶ್ಯವನ್ನು ನೆನೆಪಿಸಿಕೊಳ್ಳಲೂ ಹೇಸಿಗೆ ಎನಿಸುತ್ತದೆ. ಆದರೆ ದಾರಿ ತಪ್ಪಿದವರನ್ನು ಸನ್ಮಾರ್ಗಕ್ಕೆ ತರಲೇಬೇಕು ಎಂಬ ದೃಢನಿರ್ಧಾರದವನ್ನು ಬಸವಣ್ಣನವರು ಹೊಂದಿದ್ದರು. ಒಳ್ಳೆಯ ಸಮಾಜ ನಿರ್ಮಾಣ ಮಾಡಲು ಒಳ್ಳೆಯವರು ಬೇಕು. ಅಂಥ ಒಳ್ಳೆಯ ಸಮಾಜವೇ ಒಳ್ಳೆಯವರನ್ನು ರೂಪಿಸುತ್ತದೆ ಎಂಬುದನ್ನು ಬಸವಣ್ಣನವರು ಜಗತ್ತಿಗೆ ತೋರಿಸಿಕೊಟ್ಟರು. ಅವರು ಶರಣರೆಂಬ ಮಹೋನ್ನತ ವ್ಯಕ್ತಿಗಳನ್ನು ಜನಸಾಮಾನ್ಯರೊಳಗೆ ಗುರುತಿಸಿದರು. ಅಂಥ ಮಹಾನುಭಾವಿಗಳೊಂದಿಗೆ ಕಾಯಕಜೀವಿಗಳನ್ನು ಒಂದುಗೂಡಿಸಿದರು. ಅವರೆಲ್ಲರಿಗೆ ಸರ್ವಸಮತ್ವದ ಲಿಂಗತತ್ತ್ವದ ಮಹತ್ವವನ್ನು ಅರುಹಿದರು. ಆ ಮೂಲಕ ಶರಣ ಸಂಕುಲವೆಂಬ ಮಹೋನ್ನತ ಸಮಾಜವನ್ನು ಸೃಷ್ಟಿಸಿ ತೋರಿಸಿದರು. ಅಂತೆಯೆ ಬಸವಣ್ಣನವರಿಗೆ ’ಲಿಂಗಾನುಭಾವಿಗಳ ಮಧ್ಯೆ ಎಂಥವರೂ ಒಳ್ಳೆಯವರಾಗುತ್ತಾರೆ’ ಎಂಬುದರ ಬಗ್ಗೆ ಎಲ್ಲಿಲ್ಲದ ಆತ್ಮವಿಶ್ವಾಸವಿದೆ.
ಇಷ್ಟಲಿಂಗವು ಪರಿವರ್ತನೆಯ ಲಾಂಛನ ಎಂಬ ಅವರ ನಂಬಿಕೆ ಅನನ್ಯವಾದುದು. ವ್ಯಕ್ತಿಯೊಬ್ಬ ಎಷ್ಟೇ ಅಧೋಗತಿಗೆ ಇಳಿದರೂ ಇಷ್ಟಲಿಂಗದ ಜೊತೆ ಶರಣಸಂಕುಲದಲ್ಲಿ ಬದಲಾಗುತ್ತಾನೆ ಎಂಬುದನ್ನು ಅವರು ಸಾಧಿಸಿ ತೋರಿಸಿದರು. ತಾವು ಕಂಡುಹಿಡಿದ ಸರ್ವಸಮತ್ವ ಸಾರುವ ಇಷ್ಟಲಿಂಗತತ್ತ್ವದ ಬಗ್ಗೆ ಮತ್ತು ಜನರು ಬದಲಾಗುತ್ತಾರೆ ಎಂಬ ಸತ್ಯದ ಬಗ್ಗೆ ಅವರಿಗೆ ಎಂದೂ ಸಂಶಯ ಬರಲಿಲ್ಲ. ಆ ಕಾರಣದಿಂದಲೇ ಅವರು ಜಿಗುಪ್ಸೆ ಹುಟ್ಟಿಸುವಂಥ ಜನರ ಕೊರಳಿಗೂ ಇಷ್ಟಲಿಂಗ ಕಟ್ಟಲು ಮುಂದಾದರು. ಅಷ್ಟೇ ಅಲ್ಲ ಅವರಿಗೆ ಸಾಕ್ಷಾತ್ ಕೂಡಲಸಂಗಮದೇವ ಎಂದರು. ಅವರನ್ನು ಮಾತನಾಡುವ ದೇವರುಗಳೆಂದು ಹೇಳಿದರು. ಈ ’ಮಾತನಾಡುವ ದೇವರುಗಳು’ ಬಸವಣ್ಣನವರ ಜೀವನಪ್ರೇಮವನ್ನು ಕಂಡು ದಂಗಾಗಿ ಬದಲಾಗುವುದರಲ್ಲಿ ಸಂಶಯವಿಲ್ಲ.
ಬಸವಣ್ಣನವರಂಥ ಮಹಾಮಹಿಮರು ಇಷ್ಟೊಂದು ವಿಶ್ವಾಸವಿಟ್ಟು ಗೌರವ ತೋರಿಸುತ್ತಿರುವಾಗ ಮತ್ತು ಶರಣರು ಆದರ್ಶ ಸಮಾಜ ನಿರ್ಮಿಸುತ್ತಿರುವಾಗ ಆ ಸಮಾಜದಲ್ಲಿ ಘನತೆಯಿಂದ ಬದುಕುವುದಕ್ಕಿಂತ ಹೆಚ್ಚಿನ ಆನಂದವಿಲ್ಲ ಎಂಬುದರ ಅರಿವು ಆ ದಾರಿತಪ್ಪಿದ ಜನರಿಗೆ ಬಾರದೆ ಇರದು.
ಮನುವಾದಿಗಳ ಹಳೆಯ ಸಮಾಜದಲ್ಲಿ ಎಲ್ಲ ಘನತೆ ಗೌರವಗಳನ್ನು ಕಳೆದುಕೊಂಡು ಹೀಗೆ ಹೀನಸ್ಥಿತಿಗೆ ಇಳಿಸಲ್ಪಟ್ಟ ಅವರು, ಶರಣರ ಹೊಸ ಸಮಾಜದಲ್ಲಿ ಹೊಸ ಬದುಕನ್ನು ಪಡೆದು ಶಿವಸ್ವರೂಪಿಗಳಾಗಿ ಬದುಕುವುದನ್ನು ಅದು ಹೇಗೆ ನಿರಾಕರಿಸುತ್ತಾರೆ? ಇದೇ ಬಸವಣ್ಣನವರ ಮಹಾಸಾಧನೆ.
ಅನಿಷ್ಟಗಳನ್ನು ಹೊಡೆದೋಡಿಸುವ ಪರಿಕಲ್ಪನೆಯ ಇಷ್ಟಲಿಂಗವು ಶರಣಸಂಕುಲವೆಂಬ ನವಸಮಾಜ ನಿರ್ಮಿಸುವ ಮಹತ್ಕಾರ್ಯಕ್ಕೆ ಪ್ರೇರಕವಾಗುತ್ತದೆ. ಈ ವಾತಾವರಣ ವ್ಯಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಒಬ್ಬ ವ್ಯಕ್ತಿ ತನ್ನನ್ನು ತಾನು ಅರಿತುಕೊಳ್ಳಲು ಸಮಾಜವು ಅವಶ್ಯವಾಗಿದೆ. ಸಾಮಾಜಿಕ ವಾತಾವರಣವು ಮಾನವನ ವ್ಯಕ್ತಿತ್ವ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಅದೇ ರೀತಿ ಘನತೆಯುಳ್ಳ ವ್ಯಕ್ತಿಗಳು ಒಳ್ಳೆಯ ಸಮಾಜ ನಿರ್ಮಾಣಕ್ಕೆ ಪ್ರೇರಕರಾಗುತ್ತಾರೆ.
ಇಷ್ಟಲಿಂಗವು ವ್ಯಕ್ತಿ ಮತ್ತು ಸಮಾಜದ ಮಧ್ಯದ ಸಂಬಂಧವನ್ನು ಆಧ್ಯಾತ್ಮಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಸೃಷ್ಟಿಸುವ ತಾತ್ತ್ವಿಕ ಸಂಕೇತವಾಗಿದೆ. ಅದು ಮನುಷ್ಯರ ಒಳಗನ್ನು ಮತ್ತು ಹೊರಗನ್ನು ಸ್ವಚ್ಛಗೊಳಿಸುವ ಮನಸ್ಥಿತಿಯನ್ನು ಸೃಷ್ಟಿಸುವ ಸಾಧನ. ಈ ರೀತಿ ಮಾನವಕುಲವನ್ನು ಒಂದಾಗಿಸುತ್ತ ಸುಂದರ ಸಮಾಜವನ್ನು ನಿರ್ಮಿಸುವ ಉದ್ದೇಶ ಶರಣರದಾಗಿತ್ತು.
ಇಂಥ ಅನುಭಾವದ ಮನಸ್ಥಿತಿಗೆ ಶರಣರು ’ಅರಿವು’ ಎಂದು ಕರೆದರು. ಇಷ್ಟಲಿಂಗವೆಂಬ ಕುರುಹು ಇಂಥ ಅರಿವಿನ ಸಂಕೇತವಾಗಿದೆ ಎಂದು ಅಲ್ಲಮಪ್ರಭುಗಳು ತಮ್ಮ ವಚನದಲ್ಲಿ ತಿಳಿಸಿದ್ದಾರೆ. ಶರಣ ಸಂಕುಲದ ಪರಿಸರದಲ್ಲಿ ಮಾನವರು ಇಂಥ ಅರಿವು ಹೊಂದಿದಾಗ ಅವರಿಗೆ ಲಿಂಗಧ್ಯಾನದ ಹೊರತಾಗಿ ಮತ್ತೇನೂ ಹಿಡಿಸದು. ಅವರು ಲಿಂಗಸಾನಿಧ್ಯದಿಂದಾಗಿ ಮತ್ತು ಶರಣಸಂಕುಲದ ಕಾರಣ ಎಲ್ಲ ದೌರ್ಬಲ್ಯಗಳಿಂದ ಮುಕ್ತರಾಗುವರು ಎಂ ಅಚಲವಾದ ನಂಬಿಕೆ ಬಸವಣ್ಣನವರಿಗೆ ಇದ್ದುದರಿಂದಲೇ ಇಂಥ ಆತ್ಮವಿಶ್ವಾಸದ ವಚನ ಬರೆಯಲು ಸಾಧ್ಯವಾಯಿತು.
ಈ ವಚನದಲ್ಲಿ ಬರುವ ಕತ್ತಿ, ಮಾಂಸ ಮತ್ತು ಮದ್ಯ ಒಬ್ಬ ವ್ಯಕ್ತಿಯ ಹೀನಾಯ ಸ್ಥಿತಿಯನ್ನು ಸೂಚಿಸುತ್ತವೆ. ಆತ ತನ್ನ ಈ ಇರುವಿಕೆಯ ಬಗ್ಗೆ ಯಾವುದೇ ರೀತಿಯ ಪಶ್ಚಾತ್ತಾಪ ಪಡುವುದಿಲ್ಲ ಎಂಬುದನ್ನೂ ಈ ವಚನ ಸೂಚಿಸುತ್ತದೆ. ಆದರೆ ಆ ವ್ಯಕ್ತಿಯ ಬಗ್ಗೆ ಬಸವಣ್ಣನವರಿಗೆ ಇರುವ ಒಂದೇ ಒಂದು ಆಶಾಭಾವವೆಂದರೆ ಆತನ ಕೊರಳಲ್ಲಿ ಎಲ್ಲ ಅನಿಷ್ಟಗಳಿಗೆ ತದ್ವಿರುದ್ಧವಾದ ಇಷ್ಟಲಿಂಗವಿದೆ. ಇಷ್ಟಲಿಂಗವಂತೂ ಅವನ ಹಾಗೆ ಆಗುವುದಿಲ್ಲ. ಆದರೆ ಆತ ಇಷ್ಟಲಿಂಗದ ಹಾಗೆ ಆಗುವದರಲ್ಲಿ ಅಂದರೆ ಕಾಯಕ, ಪ್ರಸಾದ ಮತ್ತು ದಾಸೋಹ ಪ್ರಜ್ಞೆಯಿಂದ ಕೂಡಿದ ಘನತೆವೆತ್ತ ಬದುಕನ್ನು ಪಡೆಯುವುದರಲ್ಲಿ ಬಸವಣ್ಣನವರಿಗೆ ನಂಬಿಕೆ ಇದೆ. ಮನುವಾದಿ ಸಮಾಜದಲ್ಲಿ ಅಧೋಗತಿಗೆ ಇಳಿಸಲ್ಪಟ್ಟ ಆತ ಬಸವವಾದಿ ಸಮಾಜದಲ್ಲಿ ಇಷ್ಟಲಿಂಗಧಾರಿ ಆಗಿರುವುದರಿಂದ ಸಹಜವಾಗಿಯೇ ಶರಣಸಂಕುಲದ ಭಾಗವಾಗಿದ್ದಾನೆ. ಶರಣಸಂಕುಲದ ಒಡನಾಟದಲ್ಲಿರುವ ಆತನ ಮೇಲೆ ಅಲ್ಲಿನ ಸಾತ್ವಿಕ ಬದುಕಿನ ವಾತಾವರಣ ಪರಿಣಾಮ ಬೀರದೆ ಇರದು. ಶರಣಸಂಕುಲದ ಒಡನಾಟ ಮತ್ತು ಇಷ್ಟಲಿಂಗದ ಸಂಬಂಧದಲ್ಲಿ ಆತನಿಗೆ ಅರಿವು ಮೂಡುವುದರಲ್ಲಿ ಸಂಶಯವಿಲ್ಲ. ಆ ಅರಿವು ಗುರುವಾಗುವುದು. ನಂತರ ಆ ಗುರುವೇ ದೇವರಾಗುವುದು. ಹೀಗೆ ಮನುವಾದಿ ಸಮಾಜದಲ್ಲಿ ಅಸಹ್ಯ ಬದುಕನ್ನು ಬದುಕುತ್ತಿರುವವರಿಗಾಗಿ ಕೂಡ ಬಸವಣ್ಣನವರು ಇಂಥ ಪವಿತ್ರ ಬದುಕಿನ ಮಾರ್ಗ ಕಂಡುಹಿಡಿದರು. ಅರಿವುಂಟಾದಾಗ ಇಂಥವರೂ ದೇವಸ್ವರೂಪರೇ ಆಗುವರು.
ಮಂದಿರಕ್ಕೆ ಪ್ರವೇಶ ಸಿಗದ ಶೂದ್ರರು, ಅಸ್ಪೃಶ್ಯರು ಮತ್ತು ಮಂದಿರ ಸಂಸ್ಕೃತಿಯನ್ನು ನಿರಾಕರಿಸಿ ಬಸವ ತತ್ತ್ವವನ್ನು ಎತ್ತಿಹಿಡಿದ ಸವರ್ಣೀಯರೇ ಎದೆಯ ಮೇಲೆ ಇಷ್ಟಲಿಂಗವುಳ್ಳವರ ಪೂರ್ವಜರು.
ಈ ರೀತಿಯಲ್ಲಿ ಬಸವಣ್ಣನವರು ಸಮಾಜದ ಕೆಳಸ್ತರದ ಜನರನ್ನು ಮತ್ತು ಮೇಲ್ ಸ್ತರದ ಪ್ರಜ್ಞಾವಂತರನ್ನು ಒಂದುಗೂಡಿಸಿದರು ಮತ್ತು ಅವರಿಗಾಗಿ ಹೊಸ ಸಮಾಜವೊಂದನ್ನು ಸೃಷ್ಟಿಸಿದರು. ಮನುವಾದಿ ಸಮಾಜದಲ್ಲಿ ಯಾರನ್ನು ತಮ್ಮ ಸಾಕುಪ್ರಾಣಿಗಳಿಗಿಂತ ಕೀಳು ಎಂದು ಭಾವಿಸಲಾಗುತ್ತಿತ್ತೋ ಮತ್ತು ನಿಷ್ಕರುಣೆಯಿಂದ ನೋಡಲಾಗುತ್ತಿತ್ತೋ ಅಂಥವರಿಗಾಗಿ ಬಸವಣ್ಣನವರು ದಯೆಯ ವಾತಾವರಣ ಸೃಷ್ಟಿಸಿ ಅವರಲ್ಲಿ ಅಗಾಧವಾದ ಪರಿವರ್ತನೆಯಾಗುವಂತೆ ನೋಡಿಕೊಂಡರು. ಹೀಗೆ ನಿಜಮನುಷ್ಯರಾಗ ಬಯಸಿದ ಎಲ್ಲರನ್ನೂ ಸೇರಿಸಿ ಶರಣಸಂಕುಲವನ್ನು ಸ್ಥಾಪಿಸಿದ ಶ್ರೇಯಸ್ಸು ಬಸವಣ್ಣನವರಿಗೆ ಸಲ್ಲುತ್ತದೆ.
ಬಸವಣ್ಣನವರ ಇಂಥ ನವಸಮಾಜದ ಪರಿಕಲ್ಪನೆಯಿಂದಾಗಿ ನಾಡಿನ ವಿವಿಧ ಸ್ತರಗಳ ಜನಸಮಾನ್ಯರು ಸ್ವಾಭಿಮಾನದಿಂದ ದುಡಿದು ಬದುಕುವುದನ್ನು ಕಲಿತರು. ತಮ್ಮ ಕಾಯಕದೊಂದಿಗೆ ತತ್ತ್ವಚಿಂತನೆಯಲ್ಲಿ ತೊಡಗಿದರು. ಲೋಕಕ್ಕೆ ಮಾದರಿಯಾದರು.
ಇಷ್ಟಲಿಂಗವು ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ, ಧಾರ್ಮಿಕ, ಸ್ತ್ರೀ ಮತ್ತು ಪುರುಷ ಸಮಾನತೆಯನ್ನು ಮನದಲ್ಲಿ ತುಂಬುವ ಅರಿವಿನ ಬೆಳಕಾಗಿದೆ. ಇಷ್ಟಲಿಂಗವನ್ನು ಧರಿಸುವವರು ಜಾತಿಭೇದ, ಲಿಂಗಭೇದ, ವರ್ಣಭೇದ, ವರ್ಗಭೇದ ಮತ್ತು ಕಾಯಕಭೇದಗಳನ್ನು ಮಾಡುವ ಹಾಗಿಲ್ಲ. ಲಿಂಗವಂತರಲ್ಲಿ ಒಳಪಂಗಡಗಳನ್ನು ಎತ್ತಿಕಟ್ಟುವಂತಿಲ್ಲ. ಒಳಪಂಗಡಗಳಲ್ಲಿನ ಮೇಲುಕೀಳುಗಳನ್ನು ಪರಿಗಣಿಸುವಂತಿಲ್ಲ. ಇಷ್ಟಲಿಂಗ ದೀಕ್ಷೆಯನ್ನು ತೆಗೆದುಕೊಂಡವರ ಮೂಲವನ್ನು ಹುಡುಕುವಮಂತಿಲ್ಲ. ಅವರು ದಾಸೀಪುತ್ರರಾದರೂ ಸರಿಯೆ, ವೇಶ್ಯಾಪುತ್ರರಾದರೂ ಸರಿಯೆ. ಲಿಂಗವಂತರಾದವರೆಲ್ಲ ಶಿವಸ್ವರೂಪಿಗಳೇ ಆಗಿರುತ್ತಾರೆ ಎಂಬ ದೃಢ ನಿಲುವನ್ನು ಮಹಾತ್ಮಾ ಬಸವೇಶ್ವರರು ಹೊಂದಿದ್ದರು.
ಇಷ್ಟಲಿಂಗಧಾರಿಗಳು ಸ್ಥಾವರಲಿಂಗವನ್ನು ಅಥವಾ ಅದರ ಕಿರಿಯ ಸ್ವರೂಪವಾದ ಚರಲಿಂಗವನ್ನು ಪೂಜಿಸುವಂತಿಲ್ಲ. ತಮ್ಮಲ್ಲೇ ದೇವರಿರುವ ಕಾರಣ ಯಾವುದೇ ಗುಡಿ ಗುಂಡಾರಗಳಿಗೆ ಹೋಗುವಂತಿಲ್ಲ. ಗುಡಿಗಳ ಶೋಷಣೆಗೆ ಬಲಿಯಾಗುವಂತಿಲ್ಲ.
ಮಂದಿರಗಳಿಗೆ ಹೋಗುವವರು ಮತ್ತು ಮೂರ್ತಿ ಪೂಜೆ ಮಾಡುವವರು ತಮಗರಿಯದಂತೆಯೆ ವೈದಿಕದ ಕಡೆಗೆ ಜಾರಿರುತ್ತಾರೆ. ನಮ್ಮ ಅರಿವಿಗೆ ಮತ್ತು ಸೃಷ್ಟಿಗೆ ಮೂಲವಾದ ಪರವಸ್ತುವಿನ ಕುರುಹು ಆದ ಇಷ್ಟಲಿಂಗದ ಯೌಗಿಕ ಮಹತ್ವವನ್ನು ಅರಿಯದೆ ಪೂಜಿಸುವವರು ಉಣ್ಣದ ಲಿಂಗಕ್ಕೆ ನೈವೇದ್ಯ ಹಿಡಿದಂತಾಗುತ್ತದೆ. ಆ ಮೂಲಕ ಮತ್ತೆ ವೈದಿಕದ ಕಡೆಗೇ ಹೋದಂತಾಗುತ್ತದೆ.
ಇಷ್ಟಲಿಂಗವು ಸಂಪೂರ್ಣವಾಗಿ ಅವೈದಿಕ ಪೂಜೆಯಾಗಿದೆ. ಅಂದರೆ ಅದು ಶಿವಯೋಗ, ಶಿವಧ್ಯಾನ ಮತ್ತು ನಿತ್ಯಲಿಂಗೈಕ್ಯಸ್ಥಿತಿಯನ್ನೇ ಹೊಂದುವ ಶಿವತಪಸ್ಸಾಗಿದೆ. ಶರಣರ ಶಿವ, ಸತ್ಯ ಮತ್ತು ಸೌಂದರ್ಯದಿಂದ ಕೂಡಿದ ಮಂಗಳಮಯ ಪರಮಾತ್ಮನಾಗಿದ್ದಾನೆ. ಅನಿಷ್ಟವನ್ನು ಕೊನೆಗಾಣಿಸುವ ’ಇಷ್ಟ’ವಾಗಿದ್ದಾನೆ. ಈ ಶಿವನಿಗೆ ಹೆಂಡಿರು ಮಕ್ಕಳಿಲ್ಲ. ಶೈವ ಬ್ರಾಹ್ಮಣರು, ಜಾತಿಜಂಗಮರು ಮತ್ತು ಬಸವಣ್ಣನವರನ್ನು ಧರ್ಮಗುರು ಎಂದು ಒಪ್ಪಿಕೊಳ್ಳದ ಪಂಚಾಚಾರ್ಯರು, ವೀರಶೈವ ಹಾಗೂ ಲಿಂಗಾಯತರು ಎಂದು ಕರೆಯಿಸಿಕೊಳ್ಳುವ ಅನೇಕರು ಪೂಜಿಸುವ ಸ್ಥಾವರಲಿಂಗವಾಗಲೀ ಶಿವಮೂರ್ತಿಯಾಗಲೀ ಶರಣರು ಧ್ಯಾನಿಸುವ ಶಿವನಲ್ಲ. ಇಷ್ಟಲಿಂಗದೇವನೇ ಶರಣರ ಶಿವ. ಪೂಜಿಸುವ ಇಷ್ಟಲಿಂಗಕ್ಕೆ ಮೂಲಾಧಾರವಾಗಿರುವವನೇ ಇಷ್ಟಲಿಂಗದೇವ. ಸರ್ವ ಶರಣರ ವಚನಾಂಕಿತಗಳ ಮೂಲ ಸ್ವರೂಪನೇ ಇಷ್ಟಲಿಂಗದೇವ. ನಮ್ಮ ಒಳ ಮತ್ತು ಹೊರಜಗತ್ತುಗಳನ್ನು ರೂಪಿಸಿದವನೇ ಇಷ್ಟಲಿಂಗದೇವ. ’ದೇವನೊಬ್ಬ ನಾಮ ಹಲವು’ ಎಂದು ಬಸವಣ್ಣನವರು ಹೇಳುವಂತೆ ಈ ನಿರಾಕಾರ ಮತ್ತು ನಿರ್ಗುಣನಾದ ದೇವನಿಗೆ ವಿವಿಧ ಧರ್ಮಗಳವರು ವಿವಿಧ ಹೆಸರುಗಳಿಂದ ಕರೆದು ವಿವಿಧ ರೀತಿಯಲ್ಲಿ ಆರಾಧನೆ ಮಾಡುತ್ತಾರೆ. ಅನೇಕರು ತಾವು ಪೂಜಿಸುವ ಕಲ್ಲು, ಕಾಷ್ಠ ಮತ್ತು ಲೋಹಗಳ ದೇವರನ್ನೇ ಸುಲಿಗೆಯ ಸಾಧನ ಮಾಡಿಕೊಂಡಿದ್ದಾರೆ. ಈ ಅನೀತಿಯನ್ನು ತಪ್ಪಿಸುವ ಮೂಲಕ ಜನರನ್ನು ದೇವರೊಡನೆ ಒಂದಾಗಿಸುವ ಘನ ಉದ್ದೇಶದಿಂದಲ್ಲೇ ಬಸವಣ್ಣನವರು ಮಂದಿರಗಳನ್ನು ತಿರಸ್ಕರಿಸಿ ಮತ್ತು ಮೂರ್ತಿ ಪೂಜೆಯನ್ನು ನಿಷೇಧಿಸಿ ಇಷ್ಟಲಿಂಗ ಪೂಜೆಯನ್ನು ಜಾರಿಗೊಳಿಸಿದರು.
ಇಷ್ಟಲಿಂಗ ಪೂಜೆಯು ಹೊರಗಿನ ಮೂರ್ತಿಗಳಿಗೆ ಮಾಡುವ ಪೂಜೆಯಲ್ಲ. ತಮ್ಮನ್ನು ತಾವು ಪೂಜೆ ಮಾಡಿಕೊಳ್ಳುವುದೂ ಅಲ್ಲ. ಆದರೆ ತಮ್ಮೊಳಗಿನ ತೋರಬಾರದ ಘನಕ್ಕೆ ಮಾಡುವ ಪೂಜೆಯೇ ಇಷ್ಟಲಿಂಗ ಪೂಜೆ. ಹೀಗೆ ಒಳಜಗತ್ತನ್ನು ಅರಿತುಕೊಳ್ಳುವ ಕ್ರಮ ಇದಾಗಿದೆ. ಹಾಗೆ ಅರಿತುಕೊಂಡ ಮೇಲೆ ಕಾಯಕ, ಪ್ರಸಾದ ಮತ್ತು ದಾಸೋಹ ತತ್ತ್ವದ ಮೂಲಕ ಹೊರಜಗತ್ತಿನಲ್ಲಿ ಸಮಾನತೆಯನ್ನು ತರುವುದಾಗಿದೆ.
’ಅರಿವಿನ ಮನೆ’ ಮತ್ತು ’ಮಹಾಮನೆ’ ಎಂಬುವು ಬಸವಕಲ್ಯಾಣದಲ್ಲಿ ಸಾಂಕೇತಿಕವಾಗಿ ಇದ್ದವು. ಆದರೆ ತಾತ್ತ್ವಿಕವಾಗಿ ನೋಡಿದಾಗ ಅರಿವಿನ ಮನೆ ಎಂಬುದು ನಮ್ಮ ಒಳಜಗತ್ತನ್ನು ಮತ್ತು ’ಮಹಾಮನೆ’ ಎಂಬುದು ನಮ್ಮ ಹೊರಗಿನ ಜಗತ್ತನ್ನು ಸೂಚಿಸುವ ಪದಗಳಾಗಿವೆ. ಅರಿವಿನ ಮನೆಯಲ್ಲಿ ಇಷ್ಟಲಿಂಗ ಪೂಜೆ ನಡೆಯಬೇಕು. ಅಂದರೆ ಇಷ್ಟಲಿಂಗದ ಮೂಲಕ ನಮ್ಮ ಒಳಗಿನ ಅರಿವು-ಅಂತಃಸಾಕ್ಷಿ ಎಂಬ ಘನದ ಪೂಜೆ ಮಾಡಬೇಕು. ಸೃಷ್ಟಿಕರ್ತನ ಸೃಷ್ಟಿಯೇ ಆಗಿರುವ ವಿಶ್ವವೆಂಬ ’ಮಹಾಮನೆ’ಯಲ್ಲಿ ಕಾಯಕ, ಪ್ರಸಾದ ಮತ್ತು ದಾಸೋಹ ಪ್ರಜ್ಞೆಯೊಂದಿಗೆ ಸಮಾಜವೆಂಬ ಜಂಗಮಲಿಂಗದ ಪೂಜೆ ಮಾಡಬೇಕು. ಅಂದರೆ ಸರ್ವಸಮತ್ವದ ಸಮಾಜ ನಿರ್ಮಾಣದಲ್ಲಿ ತೊಡಗಬೇಕು. ಹೀಗೆ ಅರಿವಿನ ಮನೆಯಲ್ಲಿ ಇಷ್ಟಲಿಂಗ ಪೂಜೆ ಮತ್ತು ಮಹಾಮನೆಯಲ್ಲಿ ಜಂಗಮಲಿಂಗ ಪೂಜೆ ನಡೆಯಬೇಕು. ಇದುವೇ ಬಸವಣ್ಣನವರು ಹೇಳುವ ಉಭಯಕುಳ.
ಇಷ್ಟಲಿಂಗದ ಅರಿವು ಆಚರಣೆಯಲ್ಲಿ ಬಂದಾಗ ಮಾತ್ರ ಬಸವಣ್ಣನವರ ಕನಿಸಿನ ನವಸಮಾಜ ನಿರ್ಮಾಣ ಮಾಡಲು ಸಾಧ್ಯ. ಬಸವಣ್ಣನವರ ಅನುಭಾವದ ಅರಿವು ಮತು ಅನುಭವದ ಪ್ರಜ್ಞೆಯ ಕೂಡಲಸಂಗಮವಾದಾಗಲೇ ಇಷ್ಟಲಿಂಗದ ಜನನವಾಯಿತು. ನಂತರ ಬಸವಧರ್ಮದ ಲಾಂಛನವಾಯಿತು. ಅರಿವಿನ ಕುರುಹು ಆಗಿರುವ ಇಷ್ಟಲಿಂಗ ಸರ್ವಸಮತ್ವದ ಸಂಕೇತವಾಗಿ ಕಂಗೊಳಿಸುತ್ತಿದೆ. ಇಷ್ಟಲಿಂಗವು ಸಮಗ್ರ ಕ್ರಾಂತಿಯ ಮಾರ್ಗದರ್ಶಿ. ಸರ್ವರನ್ನು, ಅವರೊಳಗಿನ ಪರಮಾತ್ಮನೊಡನೆ ಒಂದುಗೂಡಿಸುವ ಸಾಧನ. ಆನಂದಮಯವಾಗಿ ಬದುಕಲೆಂದು ಬಸವಣ್ಣನವರು ಲೋಕಕ್ಕೆ ಕೊಟ್ಟ ಅನುಪಮ ಕಾಣಿಕೆ.

ರಂಜಾನ್ ದರ್ಗಾ
ನಿರ್ದೇಶಕ, ವಚನ ಅಧ್ಯಯನ ಕೇಂದ್ರ ಬಸವ ಸೇವಾ ಪ್ರತಿಷ್ಠಾನ, ಶರಣ ಉದ್ಯಾನ, ಶರಣ ನಗರ, ಬೀದರ -೫೮೫೪೦೧ ಮೊಬೈಲ್: ೯೨೪೨೪೭೦೩೮೪

Tuesday, May 17, 2011

ನನ್ನ ಕನಸಿನ ಕರ್ನಾಟಕ



ಟಿ.ಎ.ನಾರಾಯಣಗೌಡರು

‘ಕನಸಿನ ಕರ್ನಾಟಕ’ ಎಂಬ ವಿಷಯವೇ ರೋಮಾಂಚನಗೊಳಿಸುವಂಥದ್ದು, ಕನಸುಗಳು ಇಲ್ಲದೆ ಬದುಕಿಲ್ಲ. ಹಾಗಂತ ಕನಸುಗಳೆಲ್ಲಾ ನಿಜವಾಗದು. ಆದರೆ, ನಾವು ಹೊಸಹೊಸ ಕನಸುಗಳನ್ನು ಕಟ್ಟುವುದನ್ನು ನಿಲ್ಲಿಸುವುದಿಲ್ಲ. ಹೊಸ ಕನಸುಗಳು ಹಳೆಯ ಕೆಟ್ಟ ನೆನಪುಗಳನ್ನು ಕೈಬಿಟ್ಟು ಮುಂದೆ ಹೋಗಲು ಸ್ಫೂರ್ತಿ, ಪ್ರೇರಣೆಯನ್ನು ಒದಗಿಸುತ್ತವೆ. ಹೀಗಾಗಿ ಕನಸುಗಳು ಬೇಕು. ಈ ಕನಸುಗಳು ಲೌಕಿಕ ಭ್ರಮೆಗಳಿಂದ ಹೊರತಾಗಿರಬೇಕು, ಪ್ರಾಮಾಣಿಕವಾಗಿರಬೇಕು. ಕನಸು ಕಟ್ಟುವವರಿಗೆ ಅದನ್ನು ನನಸಾಗಿಸುವ ಇಚ್ಛಾಶಕ್ತಿಯೂ, ಕ್ರಿಯಾಶಕ್ತಿಯೂ, ಧೀಶಕ್ತಿಯೂ ಇರಬೇಕು.
ಈ ನಾಡನ್ನು ಕಟ್ಟಿದ ಲಕ್ಷಾಂತರ ಮಹನೀಯರು ಇಂಥ ಕನಸುಗಳನ್ನು ಕಂಡೇ, ಇವತ್ತಿನ ಅಖಂಡ, ಸಮೃದ್ಧ, ಸುಸಂಸ್ಕೃತ ನಾಡನ್ನು ನಿರ್ಮಿಸಿದ್ದಾರೆ. ಅವರುಗಳು ಹೊತ್ತಿಸಿದ ದೀವಿಗೆ ನಮ್ಮ ಕೈಯಲ್ಲಿದೆ. ದೀಪದಿಂದ ದೀಪವನ್ನು ಹಚ್ಚುತ್ತ ಬೆಳಕು ಎಂದೆಂದಿಗೂ ಆರದಂತೆ; ಕತ್ತಲು ಆವರಿಸಿಕೊಳ್ಳದಂತೆ ಕಾಪಾಡುವ ಹೊಣೆಗಾರಿಕೆ ನಮ್ಮದು.
ಕುವೆಂಪು ಅವರು ಹೇಳಿದ್ದರು:
ಕರ್ನಾಟಕ ಎಂಬುದೇನು ಹೆಸರೆ ಬರಿಯ ಮಣ್ಣಿಗೆ?
ಮಂತ್ರ ಕಣಾ! ಶಕ್ತಿ ಕಣಾ!
ತಾಯಿ ಕಣಾ! ದೇವಿ ಕಣಾ!
ಬೆಂಕಿ ಕಣಾ! ಸಿಡಿಲು ಕಣಾ!
ಕಾವ ಕೊಲುವ ಒಲವ ಬಲವ
ಪಡೆದ ಚಲದ ಚಂಡಿಕಣಾ!
ಋಷಿಯ ಕಾಣ್ಬಕಣ್ಣಿಗೆ!
ಹೌದು ಕರ್ನಾಟಕ ಎಂದರೆ ಬರಿಯ ಮಣ್ಣಲ್ಲ. ಅದು ಮಂತ್ರ, ಶಕ್ತಿ, ತಾಯಿ, ದೇವಿ, ಸಿಡಿಲು, ಬೆಂಕಿ... ಈ ಎಲ್ಲವೂ ಹೌದು. ಇಂಥ ತಪೋಭೂಮಿಯಲ್ಲಿ ಬದುಕಿರುವ ನಾವು ಪುಣ್ಯವಂತರು. ಆದರೆ, ಕನ್ನಡಿಗನ ಆಶೋತ್ತರಗಳೆಲ್ಲವೂ ಈಡೇರಿವೆಯೇ? ಕನ್ನಡ ನಾಡು ಎಲ್ಲ ಸಮಸ್ಯೆಗಳಿಂದ ಮುಕ್ತವಾಗಿದೆಯೇ? ಈಗಿರುವ ನಾಡು ನಮ್ಮ ಕನಸಿನ ಕರ್ನಾಟಕವೇ? ಖಂಡಿತವಾಗಿಯೂ ಅಲ್ಲ. ನಾವು ಸಾಗಬೇಕಾದ ಹಾದಿ ಬಹುದೂರವಿದೆ. ಆ ಕಡೆಗೆ ನಮ್ಮ ಗಮನವನ್ನು ಕೇಂದ್ರೀಕರಿಸಬೇಕಿದೆ.
ಕನಸಿನ ಕರ್ನಾಟಕದಲ್ಲಿ ಕನ್ನಡ ಭಾಷೆ:
ಕವಿ ಗೋಪಾಲಕೃಷ್ಣ ಅಡಿಗರ ಸಾಲುಗಳು ನೆನಪಾಗುತ್ತವೆ.
ನನ್ನ ನಿನ್ನ ಕನ್ನಡ,
ಎಲ್ಲ ಜನದ ಕನ್ನಡ;
ಈರ, ಬೋರ, ಭಟ್ಟ, ಶೆಟ್ಟಿ,
ಕೂಲಿಗಾರ, ರೈತರ;
ಸುಸಂಸ್ಕೃತರ, ಅಸಂಸ್ಕೃತರ,
ಮಾನ್ಯರ, ಸಾಮಾನ್ಯರ;
ಈ ನೆಲ ಈ ನುಡಿ ನುಡಿಸುವ
ಎಲ್ಲ ಎಲ್ಲ ಬಾಯಿಯೂ;
ಮಾಗಲೆಂದು ಕಾದಿರುವೀ
ಎಲ್ಲ ಎಲ್ಲ ಕಾಯಿಯೂ;
ಕನ್ನಡವೋ ಕನ್ನಡ.
ಕನ್ನಡ ಭಾಷೆಯನ್ನು ಆಡುವ ಕೋಟ್ಯಂತರ ಮಂದಿ ಕರ್ನಾಟಕದಲ್ಲೂ, ಕರ್ನಾಟಕದ ಹೊರಗೆಯೂ ವ್ಯಾಪಿಸಿಕೊಂಡಿದ್ದಾರೆ. ಇದು ಎಲ್ಲರ ಭಾಷೆ. ಧರ್ಮ, ಜಾತಿ, ಮತ, ಪಂಥಗಳನ್ನು ಮೀರಿ ನಿಂತ ಭಾಷೆ. ಕನ್ನಡ ಭಾಷೆಗೆ ಸಹಸ್ರಾರು ವರ್ಷಗಳ ಇತಿಹಾಸವಿದೆ. ಕವಿಗಳು, ಸಂತರು, ಶರಣರು, ದಾಸರು, ಸೂಫಿಗಳು ಎಲ್ಲರು ಸೇರಿಯೇ ಕನ್ನಡ ಭಾಷೆಯನ್ನು ಬೆಳೆಸಿದ್ದಾರೆ.
ಆದರೆ ಪರಭಾಷೆಗಳು ಇಂದು ಕನ್ನಡದ ಕತ್ತು ಹಿಸುಕಲು ಯತ್ನಿಸುತ್ತಿವೆ. ಸಾಮ್ರಾಜ್ಯಶಾಹಿ ಭಾಷೆಯಾಗಿ ಭಾರತದೊಳಗೆ ಕಾಲಿಟ್ಟ ಇಂಗ್ಲಿಷ್ ಇತರ ಭಾರತೀಯ ಭಾಷೆಗಳನ್ನು ದಮನ ಮಾಡುತ್ತಿರುವ ಹಾಗೆಯೇ ಕನ್ನಡದ ಮೇಲೆಯೂ ಸವಾರಿ ನಡೆಸುತ್ತಿದೆ. ಭಾರತದ ರಾಜಕಾರಣದಲ್ಲಿ ಮೇಲುಗೈ ಪಡೆಯುತ್ತಲೇ ಬಂದಿರುವ ಉತ್ತರಭಾರತೀಯರು ಇತರ ರಾಜ್ಯಗಳಲ್ಲಿ ಹಿಂದಿ ಭಾಷೆಯನ್ನು ಹೇರುವ ಪ್ರಯತ್ನ ಮಾಡುತ್ತಲೇ ಬಂದಿದ್ದಾರೆ. ಆ ಕುತಂತ್ರದ ಪ್ರಯೋಗ ಕರ್ನಾಟಕದಲ್ಲೂ ಆಗುತ್ತಿದೆ.
ಈ ಹುನ್ನಾರಗಳನ್ನೆಲ್ಲ ನಾವು ವಿಫಲಗೊಳಿಸಬೇಕಿದೆ. ಕರ್ನಾಟಕದಲ್ಲಿ ಸಂಪೂರ್ಣ ಆಡಳಿತ ಕನ್ನಡಮಯವಾಗಬೇಕು. ಈ ಕೆಲಸ ವಿಧಾನಸೌಧದಿಂದಲೇ ಆರಂಭವಾಗಬೇಕು. ಕನ್ನಡವನ್ನು ಬಳಕೆಮಾಡದ ಅಧಿಕಾರಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಅಂಥವರನ್ನು ಕರ್ನಾಟಕದಲ್ಲಿ ಇಟ್ಟುಕೊಳ್ಳದಿರುವುದೇ ಒಳ್ಳೆಯದು. ನ್ಯಾಯಾಂಗದಲ್ಲೂ ಕನ್ನಡ ಬಳಕೆ ಕಡ್ಡಾಯವಾಗಬೇಕು. ಸರ್ಕಾರಿ ಆದೇಶಗಳೆಲ್ಲವೂ ಕನ್ನಡದಲ್ಲೇ ಇರಬೇಕು. ಸರ್ಕಾರದ ಅಧೀನದಲ್ಲಿರುವ ಇತರ ಸ್ಥಳೀಯ ಸಂಸ್ಥೆಗಳು, ನಿಗಮ ಮಂಡಳಿಗಳು ಸಂಪೂರ್ಣ ಕನ್ನಡವನ್ನೇ ಬಳಸಬೇಕು.
ಕರ್ನಾಟಕದ ಯಾವ ಮೂಲೆಗೆ ಹೋದರೂ ಕನ್ನಡವೇ ಕಿವಿಗೆ ಬೀಳಬೇಕು. ಕನ್ನಡವೇ ಕಣ್ಣಿಗೆ ಕಾಣಬೇಕು. ಕನ್ನಡವನ್ನು ಹೊರತಾಗಿ ಇತರ ಮಾತೃಭಾಷೆಗಳನ್ನು ಹೊಂದಿರುವವರು ತಮ್ಮ ತಮ್ಮ ಮನೆಗಳಲ್ಲಿ ಆಯಾ ಭಾಷೆಗಳನ್ನು ಮಾತನಾಡಲಿ. ಆದರೆ ಕನ್ನಡ ನಾಡಲ್ಲಿ ಬದುಕುತ್ತಿರುವವರು ಸಾರ್ವಜನಿಕವಾಗಿ ಕನ್ನಡವನ್ನೇ ಬಳಸಬೇಕು. ಎಲ್ಲ ಅಂಗಡಿ-ಮುಂಗಟ್ಟು, ವಾಣಿಜ್ಯ ಸಂಸ್ಥೆಗಳ ಮುಂದೆ ಪ್ರದರ್ಶಿಸುವ ನಾಮಫಲಕಗಳು ಕನ್ನಡಮಯವಾಗಿರಬೇಕು. ಇದೇ ಮಾತು ಜಾಹೀರಾತು ಫಲಕಗಳಿಗೂ ಅನ್ವಯಿಸುತ್ತದೆ.
ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಲಭ್ಯವಾಗಿದೆ. ಕನ್ನಡ ಭಾಷೆಯ ಕುರಿತಾದ ಅಧ್ಯಯನ, ಸಂಶೋಧನೆ ಇತ್ಯಾದಿಗಳು ಈಗಲಾದರೂ ವೇಗ ಪಡೆದುಕೊಳ್ಳಬೇಕು. ಕನ್ನಡ ಸಾಹಿತಿಗಳನ್ನು ಪರಭಾಷಿಕರಿಗೆ ಪರಿಚಯಿಸುವ ದೃಷ್ಟಿಯಲ್ಲಿ ಕನ್ನಡ ಕೃತಿಗಳ ಅನುವಾದ ಕಾರ್ಯ ಇನ್ನಷ್ಟು ವ್ಯಾಪಕವಾಗಿ ನಡೆಯಬೇಕು.
ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕ
ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕ ಬೇರೆ ಬೇರೆ ರಾಜಕೀಯ ಕಾರಣಗಳಿಂದಾಗಿ ಹಿಂದುಳಿಯುವಂತಾಗಿದೆ. ಸಂಪನ್ಮೂಲಗಳ ಹಂಚಿಕೆಯಲ್ಲಿ ತಾರತಮ್ಯವಿದೆ. ನೆರೆ, ಬರದಂಥ ಪ್ರಕೃತಿ ವಿಕೋಪಗಳು ಸಂಭವಿಸಿದಾಗ ಪರಿಹಾರ ನೀಡುವಾಗಲೂ ಕೇಂದ್ರ ಸರ್ಕಾರ ಕರ್ನಾಟಕದ ವಿಷಯದಲ್ಲಿ ಮಲತಾಯಿ ಧೋರಣೆ ಪ್ರದರ್ಶಿಸುತ್ತದೆ.
ಕರ್ನಾಟಕದ ಪರವಾದ ಲಾಬಿ ಕೇಂದ್ರ ಸರ್ಕಾರದಲ್ಲಿ ಪ್ರಬಲವಾಗಿಲ್ಲದೇ ಇರುವುದು ಇದಕ್ಕೆ ಕಾರಣ. ಕರ್ನಾಟಕದಲ್ಲಿ ರಾಷ್ಟ್ರೀಯ ಪಕ್ಷಗಳೇ ಅಧಿಕಾರ ಅನುಭವಿಸಿದ್ದರ ಪರಿಣಾಮವಿದು. ಕರ್ನಾಟಕದಲ್ಲಿ ಪ್ರಬಲ ಪ್ರಾದೇಶಿಕ ಶಕ್ತಿ ಜಾಗೃತಗೊಂಡು, ರಾಷ್ಟ್ರೀಯ ಪಕ್ಷಗಳ ಅನ್ಯಾಯಗಳಿಗೆ ಕಡಿವಾಣ ಹಾಕಬೇಕು. ನಮ್ಮ ಪಾಲನ್ನು ನಾವು ಪಡೆದುಕೊಳ್ಳುವಂತಾಗಬೇಕು.
ಕೇಂದ್ರ ಸರ್ಕಾರದ ಸಂಪುಟದಲ್ಲಿ ರಾಜ್ಯದ ಪಾಲು ಸಮರ್ಪಕವಾಗಿರಬೇಕು. ರಾಜ್ಯಸಭೆಗೆ ರಾಜ್ಯದಿಂದ ಆಯ್ಕೆಯಾಗುವವರು ಕನ್ನಡಿಗರೇ ಆಗಿರಬೇಕು. ಕರ್ನಾಟಕದಿಂದ ಐಎಎಸ್, ಐಪಿಎಸ್‌ನಂಥ ಉನ್ನತ ಶ್ರೇಣಿಯ ಅಧಿಕಾರಿಗಳು ಹೆಚ್ಚು ಸಂಖ್ಯೆಯಲ್ಲಿ ಆಯ್ಕೆಯಾಗುವುದಕ್ಕೆ ತಕ್ಕ ವಾತಾವರಣವನ್ನು ನಾವು ನಿರ್ಮಿಸಬೇಕಿದೆ.
ಶಿಕ್ಷಣದಲ್ಲಿ ಕನ್ನಡ
ಕನ್ನಡ ಮಾಧ್ಯಮ ಶಾಲೆಗಳು ಇಂಗ್ಲಿಷ್ ಮಾಧ್ಯಮ ಶಾಲೆಗಳೊಂದಿಗೆ ಸೆಣಸಲಾಗದೆ ಸೊರಗಿಹೋಗುತ್ತಿವೆ. ಗೊಂದಲದ ಭಾಷಾ ನೀತಿಗಳಿಂದ, ಶಿಕ್ಷಣವನ್ನು ದಂಧೆಯನ್ನಾಗಿ ಮಾಡಿಕೊಂಡಿರುವ ಬಂಡವಾಳಶಾಹಿಗಳಿಂದ, ಸರ್ಕಾರಗಳ ಇಚ್ಛಾಶಕ್ತಿಯ ಕೊರತೆಯಿಂದ ಮಾತೃಭಾಷಾ ಶಿಕ್ಷಣ ನೀತಿ ಇನ್ನೂ ಜಾರಿಯಾಗಿಲ್ಲ.
ನಮ್ಮ ಕನಸಿನ ಕರ್ನಾಟಕದಲ್ಲಿ ಕನ್ನಡವೇ ಸರ್ವಮಾಧ್ಯಮವಾಗಬೇಕು. ಒಂದರಿಂದ ೧೦ನೇ ತರಗತಿಯವರೆಗೆ ಕನ್ನಡ ಮಾಧ್ಯಮ ಕಡ್ಡಾಯವಾಗಬೇಕು. ಕೇಂದ್ರೀಯ ಪಠ್ಯಕ್ರಮಗಳ ಮೂಲಕ ಕನ್ನಡವನ್ನು ಕೊಲ್ಲುವ ಚಟುವಟಿಕೆಗಳು ನಿಲ್ಲಬೇಕು. ಕರ್ನಾಟಕದ ಸರ್ವಭಾಗಗಳಲ್ಲಿ ಎಲ್ಲ ಮಕ್ಕಳಿಗೂ ಒಂದೇ ರೀತಿಯ ಶಿಕ್ಷಣ ಸೌಲಭ್ಯಗಳು ಲಭ್ಯವಾಗಬೇಕು.
ಆಧುನಿಕ ಶಿಕ್ಷಣ ವಲಯಕ್ಕೆ ಕನ್ನಡ ಭಾಷೆಯನ್ನು ಹಿಗ್ಗಿಸುವ ಪ್ರಾಮಾಣಿಕ ಪ್ರಯತ್ನಗಳು ನಡೆಯಬೇಕು. ನಮ್ಮ ಕನಸಿನ ಕರ್ನಾಟಕದಲ್ಲಿ ಕನ್ನಡಿಗರು, ಕನ್ನಡ ಮಾಧ್ಯಮದಲ್ಲೇ ಎಂ.ಬಿ.ಬಿ.ಎಸ್., ಬಿಇ ಮತ್ತಿತರ ತಾಂತ್ರಿಕ ಪದವಿಗಳನ್ನು ಪಡೆಯಬೇಕು. ಇದು ಅಸಾಧ್ಯವೇನೂ ಅಲ್ಲ. ಇದಕ್ಕೆ ತಕ್ಕ ತಾಂತ್ರಿಕ ಪದಕೋಶಗಳು ನಿರ್ಮಾಣವಾಗಬೇಕು.
ಈಗಲಾದರೂ ನಾವು ತ್ರಿಭಾಷಾ ಸೂತ್ರವನ್ನು ತಿರಸ್ಕರಿಸುವ ಧೈರ್ಯ ತೋರಬೇಕು. ತಮಿಳುನಾಡು ಮಾದರಿಯಲ್ಲಿ ದ್ವಿಭಾಷಾ ಸೂತ್ರವೇ ಸೂಕ್ತ. ತ್ರಿಭಾಷಾ ಸೂತ್ರ ವಾಸ್ತವವಾಗಿ ಕನ್ನಡ ಮಕ್ಕಳ ಎದೆಗೆ ತ್ರಿಶೂಲ ಸದೃಶವೇ ಆಗಿದೆ ಎಂದು ಕುವೆಂಪು ಹೇಳಿದ್ದರು. ರಾಜಕೀಯಪ್ರೇರಿತವಾದ ತ್ರಿಭಾಷಾ ಸೂತ್ರವನ್ನು ತಿರಸ್ಕರಿಸಿ ದ್ವಿಭಾಷಾ ಸೂತ್ರವನ್ನು ಅಳವಡಿಸಿಕೊಳ್ಳುವುದು ಎಲ್ಲ ರೀತಿಯಲ್ಲೂ ಶ್ರೇಯಸ್ಕರ. ಎಲ್ಲಕ್ಕಿಂತ ಮುಖ್ಯವಾಗಿ ಹಿಂದಿಯನ್ನು ರಾಷ್ಟ್ರಭಾಷೆ ಎಂದು ಹಸಿಹಸಿ ಸುಳ್ಳು ಹೇಳುವುದನ್ನು ಬಿಡಬೇಕು.
ರೈತರು-ಕುಶಲಕರ್ಮಿಗಳ ಬಾಳು ಹಸನಾಗಬೇಕು
ಕನ್ನಡ ಭಾಷೆಯಷ್ಟೇ ಪ್ರಮುಖವಾಗಿರುವುದು ಕನ್ನಡಿಗರ ಬದುಕು. ಕನ್ನಡಿಗರು ಮೇಧಾವಿಗಳು, ಅಸಾಮಾನ್ಯ ಪ್ರೌಢಿಮೆ ಉಳ್ಳವರು, ವಿಚಾರಶೀಲರು, ಶ್ರಮಜೀವಿಗಳು ಆಗಿದ್ದಾರೆ. ಆದರೆ, ಭಾರತ ಒಕ್ಕೂಟದ ಒಂದು ರಾಜ್ಯವಾಗಿ ಕೆಲವು ಕಟ್ಟುಪಾಡುಗಳ ನಡುವೆ ಬದುಕಬೇಕಿರುವ ಕನ್ನಡಿಗರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಜಾಗತಿಕ ಉದಾರೀಕರಣ ನೀತಿಯಿಂದಾಗಿ ದೇಶದ ಎಲ್ಲೆಡೆ ರೈತರು ಬವಣೆ ಎದುರಿಸುತ್ತಿದ್ದಾರೆ. ಸಾವಿರಾರು ಮಂದಿ ಅನ್ನದಾತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳೆದ ಬೆಳೆಗೆ ಬೆಲೆ ಇಲ್ಲದಂತಾಗಿದೆ. ಸಾಲದ ಶೂಲಕ್ಕೆ ಸಿಕ್ಕಿ ರೈತ ಕಂಗಾಲಾಗಿದ್ದಾನೆ. ಮತ್ತೊಂದೆಡೆ ಬೃಹತ್ ಯೋಜನೆಗಳಿಗಾಗಿ, ಬಹುರಾಷ್ಟ್ರೀಯ ಕಂಪನಿಗಳಿಗಾಗಿ, ಉಳ್ಳವರ ಟೌನ್‌ಶಿಪ್‌ಗಳಿಗಾಗಿ, ದೊಡ್ಡದೊಡ್ಡ ರಸ್ತೆಗಳಿಗಾಗಿ, ವಿಶೇಷ ಆರ್ಥಿಕ ವಲಯಗಳಿಗಾಗಿ ರೈತರ ಫಲವತ್ತಾದ ಜಮೀನನ್ನು ಸರ್ಕಾರಗಳು ಕಿತ್ತುಕೊಳ್ಳುತ್ತಿವೆ. ವ್ಯವಸಾಯವನ್ನು ಹೊರತುಪಡಿಸಿ ಬೇರಿನ್ನೇನೂ ಮಾಡಿಗೊತ್ತಿಲ್ಲದ ರೈತರು ಸರ್ಕಾರಗಳು ಕೊಡುವ ಕವಡೆಕಾಸಿನ ಪರಿಹಾರ ಪಡೆದು ನಿರ್ಗತಿಕರಾಗುತ್ತಿದ್ದಾರೆ. ವ್ಯವಸಾಯವನ್ನು ನೆಚ್ಚಿಕೊಂಡ ಜನ ಬದುಕಲಾರದೆ ಹಳ್ಳಿಗಳಿಂದ ಬೃಹತ್ ನಗರಗಳಿಗೆ ವಲಸೆಹೋಗುತ್ತಿದ್ದಾರೆ. ಇದು ಭೀಕರ ಪರಿಣಾಮಗಳಿಗೆ ದಾರಿಮಾಡಿಕೊಟ್ಟಿದೆ.
ನಮ್ಮ ಕನಸಿನ ಕರ್ನಾಟಕದಲ್ಲಿ ರೈತರ ಬದುಕು ಹಸನಾಗಲೇಬೇಕು. ಅನ್ನದಾತ ಸುಖ, ನೆಮ್ಮದಿಯಿಂದಿಲ್ಲದಿದ್ದರೆ ನಾಡು ಸಮೃದ್ಧಿ, ಶಾಂತಿಯಿಂದ ಇರುವುದು ಸಾಧ್ಯವಿಲ್ಲ. ಕರ್ನಾಟಕದ ಕೃಷಿ ವಲಯ ಸದೃಢವಾಗಿ ಬೆಳೆಯಬೇಕಿದೆ. ರೈತರ ಫಲವತ್ತಾದ ಭೂಮಿಯನ್ನು ಕಿತ್ತುಕೊಳ್ಳುವ ಸರ್ಕಾರದ ನೀತಿಗಳು ಬದಲಾಗಬೇಕು. ರೈತ ಬೆಳೆದ ಬೆಳೆಗೆ ತಕ್ಕ ಬೆಲೆ ದೊರೆಯಲೇ ಬೇಕು. ರೈತನಿಗೆ ಕಾಲಕಾಲದ ಅಗತ್ಯಗಳಾದ ಬಿತ್ತನೆ ಬೀಜ, ಗೊಬ್ಬರ, ಆಧುನಿಕ ತಂತ್ರಜ್ಞಾನವನ್ನು ಒದಗಿಸುವ ಹೊಣೆಗಾರಿಕೆಯನ್ನು ಸರ್ಕಾರಗಳು ಸಮರ್ಪಕವಾಗಿ ನಿರ್ವಹಿಸಬೇಕು. ಪ್ರಕೃತಿ ವಿಕೋಪದಂತಹ ಸಂದರ್ಭಗಳಲ್ಲಿ ಸರ್ಕಾರ ಮತ್ತು ಸಮಾಜ ರೈತನ ನೆರವಿಗೆ ನಿಲ್ಲಬೇಕು. ನಮ್ಮ ಕನಸಿನ ಕರ್ನಾಟಕದಲ್ಲಿ ನಾಡಿನ ರೈತರು ಎಲ್ಲಾ ಬಗೆಯ ಸಾಲ ಋಣಗಳಿಂದ ಮುಕ್ತವಾಗಬೇಕು.
ಜಾಗತೀಕರಣದ ಅಬ್ಬರದಲ್ಲಿ ಕುಶಲಕರ್ಮಿಗಳೂ ಸಹ ಸಮಸ್ಯೆಗೆ ಸಿಲುಕಿಕೊಂಡಿದ್ದಾರೆ. ಅವರನ್ನು ಉಳಿಸಿಕೊಳ್ಳುವ ಹೊಣೆಯೂ ಸರ್ಕಾರ ಮತ್ತು ಸಮಾಜದ್ದಾಗಿದೆ. ಆಧುನಿಕ ಕಾಲಕ್ಕೆ ತಕ್ಕಂತೆ ಕುಶಲಕರ್ಮಿಗಳಿಗೆ ಸೂಕ್ತ ತರಬೇತಿ ನೀಡುವುದರ ಜತೆಗೆ, ಅವರ ಜೀವನೋಪಾಯಕ್ಕೆ ಮಾರ್ಗವನ್ನು ಕಲ್ಪಿಸಿಕೊಡಬೇಕಾಗಿದ್ದು ಸರ್ಕಾರದ ಕರ್ತವ್ಯ.
ಸಮಾಜದಲ್ಲಿ ಇನ್ನೂ ಹಿಂದುಳಿದಿರುವ ದುರ್ಬಲವರ್ಗಗಳ ಜನರನ್ನು ಮೇಲೆತ್ತುವ ಕಾರ್ಯ ಅಡೆತಡೆಯಿಲ್ಲದಂತೆ ನಡೆಯಬೇಕು. ಅದಕ್ಕೆ ಅಗತ್ಯವಾದ ಸೌಲಭ್ಯಗಳನ್ನೂ ಸರ್ಕಾರ ಕಲ್ಪಿಸಬೇಕು.
ನೀರಾವರಿ-ವಿದ್ಯುತ್
ಕರ್ನಾಟಕದ ಹಲವಾರು ನೀರಾವರಿ ಯೋಜನೆಗಳು ಇನ್ನೂ ಕುಂಟುತ್ತ ಸಾಗಿವೆ. ನಮ್ಮ ನಾಡನ್ನು ಸಮೃದ್ಧಗೊಳಿಸಿರುವ ಕೃಷ್ಣ, ಕಾವೇರಿ ಮತ್ತಿತರ ನದಿಗಳ ನೀರನ್ನು ನಾವೇ ಸಮರ್ಪಕವಾಗಿ ಬಳಸಿಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ. ಸರ್ಕಾರಗಳ ನಿರುತ್ಸಾಹದಿಂದ ಹಸಿರಿನಿಂದ ಕಂಗೊಳಿಸಬೇಕಿದ್ದ ಸಾವಿರಾರು ಎಕರೆ ಜಮೀನು ಇನ್ನೂ ಪಾಳುಬಿದ್ದಿದೆ. ನೀರಾವರಿ ಯೋಜನೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಿ ರೈತರ ಅನುಕೂಲಕ್ಕೆ ಮುಕ್ತಗೊಳಿಸುವ ಇಚ್ಛಾಶಕ್ತಿಯನ್ನು ಸರ್ಕಾರಗಳು ತೋರಬೇಕಿದೆ.
ವಿದ್ಯುತ್ ಉತ್ಪಾದನೆಯ ಕ್ಷೇತ್ರದಲ್ಲೂ ನಾವು ಹಿಂದೆ ಬಿದ್ದಿದ್ದೇವೆ. ಪ್ರತಿ ವರ್ಷ ವಿದ್ಯುತ್ ಕೊರತೆಯ ಬವಣೆಯನ್ನು ನಾವು ತೀವ್ರವಾಗಿ ಅನುಭವಿಸುತ್ತಿದ್ದೇವೆ. ಪರ್ಯಾಯ ಇಂಧನ ಸೃಷ್ಟಿಯ ಕಡೆ ನಾವು ಹೆಚ್ಚು ಗಮನ ಹರಿಸದ ಹೊರತು ಈ ಸಮಸ್ಯೆ ಪರಿಹಾರವಾಗುವುದಿಲ್ಲ. ಪ್ರತಿ ವರ್ಷ ದುಬಾರಿ ಬೆಲೆ ತೆತ್ತು ವಿದ್ಯುತ್ ಕೊಳ್ಳುವುದರ ಬದಲು ಸರ್ಕಾರ ವಿದ್ಯುತ್ ವಿಷಯದಲ್ಲಿ ಸ್ವಾವಲಂಬನೆಯೆಡೆಗೆ ಒತ್ತುಕೊಡಬೇಕು.
ಉದ್ಯೋಗ ಮತ್ತು ಉದ್ಯಮ
ಕರ್ನಾಟಕದಲ್ಲಿ ಉದ್ಯಮ ಮತ್ತು ಉದ್ಯೋಗ ಎರಡರಲ್ಲೂ ಕನ್ನಡಿಗರೇ ಸಾರ್ವಭೌಮರಾಗಬೇಕು. ಆದರೆ ಇಂದು ದಯನೀಯವಾದ ಸ್ಥಿತಿಯಲ್ಲಿ ನಾವಿದ್ದೇವೆ. ಕರ್ನಾಟಕದಲ್ಲಿರುವ ಉದ್ಯಮಗಳು ಪರಭಾಷಿಗರ ಕೈಗೆ ಹೋಗಿವೆ. ಉದ್ಯಮಗಳು ಪರಭಾಷಿಗರ ಕೈಗೆ ಹೋಗುತ್ತಿರುವ ಕಾರಣದಿಂದ ಉದ್ಯೋಗಗಳೂ ಸಹ ಪರಭಾಷಿಗರ ಪಾಲಾಗುತ್ತಿವೆ.
ಸರ್ಕಾರಿ ಉದ್ಯೋಗಗಳಲ್ಲಿ ಕನ್ನಡಿಗರು ಹೆಚ್ಚಿನ ಪಾಲು ಪಡೆದಿರಬಹುದು. ಆದರೆ ಖಾಸಗಿ ಕ್ಷೇತ್ರದಲ್ಲಿ ಇದೇ ಮಾತನ್ನು ಹೇಳುವಂತಿಲ್ಲ. ಕರ್ನಾಟಕದ ನೆಲ, ಜಲ, ವಿದ್ಯುತ್ ಬಳಸಿಕೊಳ್ಳುವ ಪರದೇಶಿ ಸಂಸ್ಥೆಗಳು ಕನ್ನಡಿಗರಿಗೆ ಉದ್ಯೋಗ ಕೊಡುವಲ್ಲಿ ಮಾತ್ರ ಅಸಡ್ಡೆಯಿಂದ ವರ್ತಿಸುತ್ತವೆ. ಡಾ.ಸರೋಜಿನಿ ಮಹಿಷಿ ವರದಿ ಸಮರ್ಪಕವಾಗಿ ಅನುಷ್ಠಾನವೇ ಆಗಿಲ್ಲ. ಈ ಆಯೋಗದ ವರದಿಯನ್ನು ಕೇಂದ್ರ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು, ಬ್ಯಾಂಕುಗಳು ಪಾಲಿಸುತ್ತಿಲ್ಲ. ರೈಲ್ವೆಯಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ ಇದಕ್ಕೆ ಸ್ಪಷ್ಟ ಉದಾಹರಣೆ. ನಮ್ಮ ಹೋರಾಟದ ಫಲವಾಗಿ ಡಿ ದರ್ಜೆಯ ಉದ್ಯೋಗಗಳ ನೇಮಕಾತಿ ಸಂದರ್ಭದಲ್ಲಿ ಸ್ಥಳೀಯ ಭಾಷೆಗಳಲ್ಲಿ ಪ್ರಶ್ನೆ ಪತ್ರಿಕೆಗಳನ್ನು ನೀಡುವ ಹಾಗು ದೇಶದಲ್ಲಿ ಏಕಕಾಲಕ್ಕೆ ಪರೀಕ್ಷೆಗಳನ್ನು ನಡೆಸುವ ತೀರ್ಮಾನಕ್ಕೆ ಕೇಂದ್ರ ಸರ್ಕಾರ ಬಂದಿದೆ. ಆದರೆ ಉನ್ನತ ಸ್ಥಾನಗಳಲ್ಲಿ ಕುಳಿತಿರುವ ಪರಭಾಷಿಗ ಅಧಿಕಾರಿಗಳು ಕನ್ನಡಿಗರನ್ನು ವಂಚಿಸಿ, ಇತರ ಭಾಷಿಕರಿಗೆ ಅವಕಾಶ ಕಲ್ಪಿಸಲು ಪಿತೂರಿ ನಡೆಸುತ್ತ ಬಂದಿದ್ದಾರೆ.
ನಮ್ಮ ಕನಸಿನ ಕರ್ನಾಟಕದಲ್ಲಿ ಈ ನಾಡಿನ ಉದ್ಯಮಗಳು ಕನ್ನಡಿಗರಿಗೇ ದಕ್ಕಬೇಕು. ಉದ್ಯೋಗಗಳೂ ಕನ್ನಡಿಗರಿಗೇ ದೊರೆಯಬೇಕು. ರಾಜ್ಯದಲ್ಲಿ ಒಬ್ಬನೇ ಒಬ್ಬ ನಿರುದ್ಯೋಗಿ ಯುವಕ-ಯುವತಿಯೂ ಇರಬಾರದು. ಕಾಯಕದ ಮಹತ್ವವನ್ನು ಜಗತ್ತಿಗೆ ಸಾರಿದ್ದು ಬಸವಾದಿ ಶರಣರು. ಕನ್ನಡ ನಾಡಿನ ಎಲ್ಲರೂ ಶ್ರಮಜೀವಿಗಳಾಗಿ, ಕಾಯಕಯೋಗಿಗಳಾಗಬೇಕು. ಅದಕ್ಕೆ ತಕ್ಕ ವ್ಯವಸ್ಥೆ ನಿರ್ಮಾಣವಾಗಬೇಕು. ವೃತ್ತಿ ಕೌಶಲ್ಯವನ್ನು ಹೆಚ್ಚಿಸುವ, ಸ್ವಂತ ಉದ್ದಿಮೆ ಸ್ಥಾಪಿಸುವ ಕನ್ನಡಿಗರನ್ನು ಪ್ರೋತ್ಸಾಹಿಸುವ, ಒಟ್ಟಾರೆಯಾಗಿ ದುಡಿಯುವುದಕ್ಕೆ ಪ್ರೇರಣೆ ನೀಡುವ ಕೆಲಸವನ್ನು ನಮ್ಮ ಸರ್ಕಾರ ಮಾಡಬೇಕು.
ವಲಸೆ ನಿಯಂತ್ರಣಗೊಳ್ಳಬೇಕು
ಸರ್ವ ಜನಾಂಗದ ಶಾಂತಿಯ ತೋಟವಾದ ಕರ್ನಾಟಕಕ್ಕೆ ವಲಸೆ ಪ್ರಮಾಣ ಮಿತಿಮೀರಿದೆ. ಎಲ್ಲ ರಾಜ್ಯಗಳಿಂದಲೂ ಬದುಕನ್ನು ಅರಸಿಕೊಂಡು ರಾಜ್ಯಕ್ಕೆ ಜನರು ತಂಡೋಪತಂಡವಾಗಿ ಬರುತ್ತಿದ್ದಾರೆ. ಇದು ಒಕ್ಕೂಟ ಮಾದರಿಯ ರಾಷ್ಟ್ರ. ಹೀಗಾಗಿ ವಲಸೆಯೂ ಕೂಡ ಕಾನೂನುಬದ್ಧ. ಆದರೆ ಈ ವಲಸೆ ಮಿತಿ ಮೀರಿದರೆ ಅಶಾಂತಿ, ಅರಾಜಕತೆ ನಿರ್ಮಾಣವಾಗುತ್ತದೆ. ವಿಶೇಷವಾಗಿ ಬೆಂಗಳೂರು, ಹುಬ್ಬಳ್ಳಿ, ಮೈಸೂರುಗಳಂಥ ದೊಡ್ಡ ನಗರಗಳಲ್ಲಿ ಈ ವಲಸೆಕೋರರಿಂದ ಆಗುತ್ತಿರುವ ಅಪಾಯಗಳು ಅಷ್ಟಿಷ್ಟಲ್ಲ. ಸರ್ಕಾರ ಈ ಅನಿಯಂತ್ರಿತ ವಲಸೆಯನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು.
ಕನ್ನಡಿಗರೂ ಉದ್ಯೋಗ ನಿಮಿತ್ತ ಬೇರೆ ಬೇರೆ ರಾಜ್ಯಗಳು ಮಾತ್ರವಲ್ಲ, ಬೇರೆ ರಾಷ್ಟ್ರಗಳಲ್ಲೂ ಬದುಕುತ್ತಿದ್ದಾರೆ. ಆದರೆ ಕನ್ನಡಿಗರು ಯಾರಿಗೂ ಸಮಸ್ಯೆ ತಂದೊಡ್ಡಿದವರಲ್ಲ. ಆಯಾ ರಾಜ್ಯಗಳ ಭಾಷೆ, ಸಂಸ್ಕೃತಿಗಳನ್ನು ಗೌರವಿಸುತ್ತ ಅವರು ಬದುಕುತ್ತಿದ್ದಾರೆ. ಆದರೆ ಕರ್ನಾಟಕಕ್ಕೆ ವಲಸೆ ಬರುತ್ತಿರುವವರು ಹತ್ತು ಇಪ್ಪತ್ತು ವರ್ಷಗಳಾದರೂ ಕನ್ನಡ ಭಾಷೆ ಕಲಿಯದೆ, ಇಲ್ಲಿನ ಸಂಸ್ಕೃತಿಗೆ ಹೊಂದಿಕೊಳ್ಳದೆ ಉಡಾಫೆಯಿಂದ ವರ್ತಿಸುತ್ತಾರೆ. ಇದು ವೈಷಮ್ಯಗಳಿಗೆ ಕಾರಣವಾಗುತ್ತದೆ. ಹೀಗಾಗಿ ಅನಿಯಂತ್ರಿತ ವಲಸೆಗೆ ಕಡಿವಾಣ ಹಾಕಲೇಬೇಕಾಗಿದೆ.
ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು
ಕರ್ನಾಟಕ ಏಕೀಕರಣ ಇನ್ನೂ ಸಂಪೂರ್ಣವಾಗಿಲ್ಲ. ಕಾಸರಗೋಡಿನ ಕವಿ ಕಯ್ಯಾರ ಕಿಞ್ಞಣ್ಣ ರೈ ನೊಂದು ನುಡಿದ ಮಾತುಗಳಿವು:
ಕನ್ನಡದ ಕುಲಕೋಟಿಯೆಚ್ಚರೆಚ್ಚರವಿರಲಿ
ಸಿಂಹ, ಸ್ವಪ್ನವ ಬಿಟ್ಟು ಕೆರಳಿ ನಿಲಲಿ!
ಅನ್ನೆಯಕ್ಕೆಡೆಗೊಡದೆ,
ಅಂಗುಲ ನೆಲಂ ಬಿಡದೆ,
ಅನ್ಯರ ತಡೆ ಹಿಡಿದೆ
ನಾಡುಳಿಸಲಿ
ಆದರೆ ಕಾಸರಗೋಡು ಕರ್ನಾಟಕದ ಕೈ ತಪ್ಪಿ ಹೋಯಿತು. ಕಾಸರಗೋಡು ಮಾತ್ರವಲ್ಲ ಕನಿಷ್ಠ ೧೩ ಜಿಲ್ಲೆಗಳು ಕರ್ನಾಟಕದ ಕೈ ತಪ್ಪಿವೆ. ಈ ಎಲ್ಲವೂ ಕರ್ನಾಟಕದ ಒಳಗೆ ಬರುವಂತಾಗಬೇಕು. ಮಹಾಜನ್ ಆಯೋಗದ ವರದಿ ಅನುಷ್ಠಾನವೇ ಇದಕ್ಕೆ ಪರಿಹಾರ. ಆದರೆ ಮಹಾರಾಷ್ಟ್ರದ ಕುತಂತ್ರದಿಂದಾಗಿ ಮಹಾಜನ್ ವರದಿ ಧೂಳು ತಿನ್ನುತ್ತಿದೆ.
ಪ್ರಾದೇಶಿಕ ಅಸಮಾನತೆ ನಿವಾರಣೆಯಾಗಬೇಕು
ಕರ್ನಾಟಕದಲ್ಲಿ ಪ್ರಾದೇಶಿಕ ಅಸಮಾನತೆ ಗಂಭೀರವಾದ ಸಮಸ್ಯೆ. ಇದು ಪರಿಹಾರವಾಗದ ಹೊರತು ಎಲ್ಲ ಕನ್ನಡಿಗರು ಭಾವನಾತ್ಮಕವಾಗಿ ಒಂದಾಗಲು ಸಾಧ್ಯವಾಗದು. ಆದರೆ ಸ್ವಾತಂತ್ರ್ಯೋತ್ತರ ಭಾರತದ ಎಲ್ಲ ಸರ್ಕಾರಗಳು ಈ ಕಡೆ ಗಮನ ಹರಿಸಲೇ ಇಲ್ಲ. ಈ ಸಂಬಂಧ ರಚನೆಯಾದ ಡಿ.ಎಂ.ನಂಜುಡಪ್ಪ ವರದಿ ಹಿಂದುಳಿದ, ಅತಿ ಹಿಂದುಳಿದ ಪ್ರದೇಶಗಳನ್ನು ಪಟ್ಟಿ ಮಾಡಿ, ಈ ಭಾಗಗಳ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕ್ರಮಗಳನ್ನೂ ಸೂಚಿಸಿತು. ಆದರೆ ಈ ವರದಿ ಪೂರ್ಣ ಅನುಷ್ಠಾನವಾಗಿಲ್ಲ.
ಕರ್ನಾಟಕವು ಕಳೆದುಕೊಂಡ ಗಡಿಭಾಗಗಳ ಬಗ್ಗೆ ನಾವು ಕೊರಗುತ್ತೇವೆ. ಆದರೆ ನಮ್ಮದೇ ರಾಜ್ಯದ ಗಡಿ ಪ್ರದೇಶವನ್ನು ಮರೆತಿದ್ದೇವೆ. ಗಡಿನಾಡಿನಲ್ಲಿ ಕನ್ನಡಿಗರು ನಿರಂತರ ಸಂಕಷ್ಟದಲ್ಲಿದ್ದಾರೆ. ಈ ಕುರಿತು ಹಲವು ವರದಿಗಳೂ ಬಂದಿವೆ. ಆದರೆ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಗಡಿಭಾಗ ಅಭಿವೃದ್ಧಿ ಹೊಂದುತ್ತಿಲ್ಲ. ಎಲ್ಲರೂ ಎಚ್ಚೆತ್ತು ನಮ್ಮ ಗಡಿಭಾಗಗಳ ಅಭಿವೃದ್ಧಿಗೆ ಗಮನಹರಿಸಬೇಕಿದೆ.
ಎಲ್ಲರಲ್ಲೂ ಕನ್ನಡಪ್ರಜ್ಞೆ ಜಾಗೃತಗೊಳ್ಳಲಿ.
ದೀಕ್ಷೆಯ ತೊಡು ಇಂದೇ;
ಕಂಕಣ ಕಟ್ಟಿಂದೇ!
ಕನ್ನಡ ನಾಡೊಂದೇ;
ಇನ್ನೆಂದೂ ತಾನೊಂದೆ!
ಕನ್ನಡ ಜನರೆಲ್ಲರ ಮೇಲಾಣೆ
ಕನ್ನಡ ನಾಡೊಂದಾಗದೆ ಮಾಣೆ
ತೊಡು ದೀಕ್ಷೆಯ! ಇಡು ರಕ್ಷೆಯ
ಕಂಕಣ ಕಟ್ಟಿಂದೇ!
ಇದು ಜಗದ ಕವಿ, ಯುಗದ ಕವಿ ಕುವೆಂಪು ಅವರ ಕರೆ. ಅವರ ಕರೆಯಂತೆ ನಾವೆಲ್ಲರೂ ಕನ್ನಡದ ದೀಕ್ಷೆ ತೊಡೋಣ. ನಮ್ಮ ಕನಸಿನ ಕರ್ನಾಟಕವನ್ನು ನಿರ್ಮಿಸೋಣ. ಮತಧರ್ಮಗಳ ಗೊಡವೆಗಳನ್ನು ಬಿಟ್ಟು, ಶಾಂತಿ ಸಾಮರಸ್ಯದ ಹೊಸ ನಾಡೊಂದನ್ನು ಕಟ್ಟೋಣ.

ಪ್ರಾದೇಶಿಕ ಪಕ್ಷ ಬೇಕೆ? ಬೇಡವೇ?

1) ಭ್ರಷ್ಟಾಚಾರ, ಸ್ವಜನಪಕ್ಷಪಾತ, ಜಾತೀಯತೆ, ಕೋಮುವಾದ ಇತ್ಯಾದಿ ಅನೈತಿಕ ಮಾರ್ಗಗಳನ್ನು ಹಿಡಿದಿರುವ ರಾಜಕೀಯ ಪಕ್ಷಗಳು ಕರ್ನಾಟಕದ ಭವಿಷ್ಯಕ್ಕೆ ಕಂಟಕವಾಗಿವೆ. ಇವುಗಳಿಂದ ಬಿಡುಗಡೆ ಹೇಗೆ?

2) ಹೈಕಮಾಂಡ್ ಗುಲಾಮಗಿರಿಯಿಂದ ನರಳುತ್ತಿರುವ ರಾಷ್ಟ್ರೀಯ ಪಕ್ಷಗಳ ರಾಜ್ಯ ನಾಯಕರು ಕರ್ನಾಟಕದ ಹಿತಾಸಕ್ತಿಗಳನ್ನು ಮರೆತಿದ್ದಾರೆ. ಪ್ರಾದೇಶಿಕ ಪಕ್ಷವೊಂದು ಮೂಡಿ ಬರಲು ಸಕಾಲವಲ್ಲವೆ?

3) ಒಕ್ಕೂಟ ವ್ಯವಸ್ಥೆಯಲ್ಲಿ, ಬಹುಪಕ್ಷಗಳ ಕೇಂದ್ರ ಸರಕಾರಗಳೇ ಆಳ್ವಿಕೆ ನಡೆಸುತ್ತಿರುವ ಸಂದರ್ಭದಲ್ಲಿ ಚೌಕಾಶಿ ರಾಜಕಾರಣ ಮಾಡಬಲ್ಲ ಪ್ರಾದೇಶಿಕ ಪಕ್ಷಗಳೇ ಹೆಚ್ಚು ಶಕ್ತಿಶಾಲಿಯಾಗಿವೆ. ಕರ್ನಾಟಕದಲ್ಲೂ ಇಂಥದೊಂದು ಪಕ್ಷ ರಚನೆ ಅನಿವಾರ್ಯವಲ್ಲವೆ?

4) ಒಂದು ಪ್ರಾದೇಶಿಕ ಶಕ್ತಿ ಕರ್ನಾಟಕದಲ್ಲಿ ಮೂಡಿಬರುವುದಾದರೆ ಅದರ ಧ್ಯೇಯೋದ್ದೇಶಗಳೇನಾಗಿರಬೇಕು?

5) ಹಣವೇ ಪ್ರಧಾನವಾಗಿರುವ ಇಂದಿನ ರಾಜಕೀಯ ಸಂದರ್ಭದಲ್ಲಿ
ಭ್ರಷ್ಟ ರಾಜಕೀಯ ಪಕ್ಷಗಳ ಎದುರಿಸಲು ಪ್ರಾದೇಶಿಕ
ಪಕ್ಷವೊಂದು ಯಾವ ಕ್ರಮಗಳನ್ನು ಅನುಸರಿಸಬೇಕು?


ಕರ್ನಾಟಕದ ರಾಜಕಾರಣ ಎಷ್ಟು ಹದಗೆಟ್ಟಿದೆಯೆಂದರೆ, ಇದನ್ನು ಸರಿಪಡಿಸಲು ಬ್ರಹ್ಮನಿಂದಲೂ ಸಾಧ್ಯವಿಲ್ಲ ಎಂದು ಬಹುತೇಕ ಜನರು ತೀರ್ಮಾನಕ್ಕೆ ಬಂದ ಹಾಗೆ ಕಾಣುತ್ತಿದೆ. ಅದರಲ್ಲೂ ವಿಶೇಷವಾಗಿ ರಾಜ್ಯದ ಯುವಜನತೆ ರಾಜಕಾರಣದ ಕುರಿತು ಸಿನಿಕರಂತೆ ಮಾತನಾಡುವುದನ್ನು ನಾವು ನೋಡಬಹುದು. ಅದು ಅವರ ತಪ್ಪೂ ಅಲ್ಲ. ನಮ್ಮ ಜನಪ್ರತಿನಿಧಿಗಳು ರಾಜಕೀಯ ರಂಗವನ್ನು ರಾಡಿಯೆಬ್ಬಿಸಿದ್ದಾರೆ. ಇಲ್ಲಿ ಹಣ, ಜಾತಿ, ಧರ್ಮವೇ ರಾಜಕಾರಣವನ್ನು ಆಪೋಷನ ತೆಗೆದುಕೊಂಡಿದೆ. ಹಣ ಎಸೆದು ಓಟು ಪಡೆದು ಅಧಿಕಾರಕ್ಕೆ ಬರುವವರು ಹಣ ಗಳಿಸುವ ದಂಧೆಗೇ ನಿಲ್ಲುತ್ತಾರಲ್ಲವೆ? ರಾಜಕಾರಣವೇ ಇಂದು ದಂಧೆ ಎನ್ನುವಂತಾಗಿದೆ.
ಇದರ ಜತೆಗೆ ಕರ್ನಾಟಕವನ್ನು ಕಳೆದ ೬ ದಶಕಕ್ಕೂ ಹೆಚ್ಚು ಕಾಲ ಕಾಡುತ್ತಿರುವುದು ರಾಷ್ಟ್ರೀಯ ಪಕ್ಷಗಳ ಭೂತಗಳು. ರಾಷ್ಟ್ರೀಯ ಪಕ್ಷಗಳ ಹೆಸರಿನಲ್ಲಿ ರಾಜ್ಯವನ್ನು ಲೂಟಿ ಹೊಡೆಯುತ್ತಿರುವ ರಾಜಕೀಯ ಪಕ್ಷಗಳು ಎಂದೂ ಕನ್ನಡ-ಕರ್ನಾಟಕ-ಕನ್ನಡಿಗನ ಕುರಿತು ಕಾಳಜಿ ವಹಿಸಿದವರಲ್ಲ. ಈ ಪಕ್ಷಗಳ ರಾಜ್ಯ ಮುಖಂಡರಿಗೆ ತಮ್ಮ ಹೈಕಮಾಂಡ್ ಹೇಳಿದ್ದಷ್ಟೇ ವೇದವಾಕ್ಯ. ದಿಲ್ಲಿಯಲ್ಲಿ ಕುಳಿತಿರುವ ಪಕ್ಷದ ಹೈಕಮಾಂಡ್‌ನ ಎದುರು ಭಿಕ್ಷೆ ಬೇಡಿ, ಅಂಗಲಾಚಿ ಅಧಿಕಾರ ಪಡೆದುಕೊಳ್ಳುವ ರಾಜ್ಯ ನಾಯಕರು ನಂತರ ಗುಲಾಮಗಿರಿಯನ್ನೇ ಮುಂದುವರೆಸಿಕೊಂಡು ಹೋಗುತ್ತಾರೆ.
ಕಾವೇರಿ ಜಲವಿವಾದ, ಬೆಳಗಾವಿ ಗಡಿ ವಿವಾದ, ಕೃಷ್ಣಾ ಜಲವಿವಾದ, ಕಳಸಾ ಬಂಡೂರಿ ವಿವಾದ, ಹೊಗೇನಕಲ್ ವಿವಾದ ಇತ್ಯಾದಿ ಯಾವುದೇ ವಿವಾದಗಳ ಸಂದರ್ಭದಲ್ಲಿ ಈ ರಾಷ್ಟ್ರೀಯ ಪಕ್ಷಗಳ ರಾಜ್ಯ ಮುಖಂಡರು ಬಾಯಿಬಿಟ್ಟು ಎಂದಾದರೂ ಮಾತನಾಡಿದ್ದನ್ನು ನೋಡಿದ್ದೀರಾ? ಒಂದು ವೇಳೆ ಮಾತನಾಡಿದರೂ ಅದು ನಾಟಕದ ಮಾತುಗಳು. ಅದೇ ಮಾತನ್ನು ತಮ್ಮ ಹೈಕಮಾಂಡ್ ಎದುರು ಹೇಳಲು ಅಳುಕುವ ಸಮಯ ಸಾಧಕರು ಇವರು.
ಇದೇ ರಾಷ್ಟ್ರೀಯ ಪಕ್ಷಗಳಿಂದ ಆಯ್ಕೆಯಾಗಿ ದೆಹಲಿ ಪಾರ್ಲಿಮೆಂಟಿಗೆ ಹೋಗುವ ಇದೇ ನಾಯಕರುಗಳು ಲೋಕಸಭೆ-ರಾಜ್ಯಸಭೆಗಳಲ್ಲೂ ತುಟಿ ಬಿಚ್ಚುವುದಿಲ್ಲ. ತಮ್ಮ ಪಕ್ಷದ ಹೈಕಮಾಂಡ್‌ಗೆ ಇರಿಸು ಮುರಿಸಾಗಬಾರದು ಎಂಬುದು ಅವರ ಉದ್ದೇಶ. ಹೇಗೂ ಮಾತನಾಡದ ಬೊಂಬೆಗಳೇ ಆಯ್ಕೆಯಾಗುತ್ತಿರುವುದರಿಂದ ರಾಷ್ಟ್ರೀಯ ಪಕ್ಷಗಳೂ ಒಂದು ಹೊಸ ವಿಧಾನ ಅನುಸರಿಸುತ್ತಿವೆ. ರಾಜ್ಯಸಭೆಗೆ ಅಭ್ಯರ್ಥಿಗಳನ್ನು ಇತರ ರಾಜ್ಯಗಳಿಂದ ಹುಡುಕಿ ತಂದು ಕರ್ನಾಟಕದಲ್ಲಿ ನಿಲ್ಲಿಸುತ್ತಿವೆ. ಈ ರಾಜಕೀಯ ವ್ಯಭಿಚಾರವನ್ನೂ ಸಹ ನಮ್ಮ ರಾಜ್ಯ ನಾಯಕರು ಪ್ರೀತಿಯಿಂದ, ಭೀತಿಯಿಂದ ಸ್ವೀಕರಿಸಿ, ಇಂಥ ಪರದೇಶಿಗಳನ್ನು ಗೆಲ್ಲಿಸಿ ಕಳುಹಿಸುತ್ತಿದ್ದಾರೆ.
ಇದೇ ಸಂಪ್ರದಾಯ ಮುಂದುವರೆದರೆ ಇತರ ರಾಜ್ಯಗಳ ನಾಯಕರನ್ನೇ ನಮ್ಮ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲೂ ಈ ಹೈಕಮಾಂಡ್‌ಗಳು ಹಿಂಜರಿಯುವುದಿಲ್ಲ. ವಿಧಾನಸಭೆ, ಲೋಕಸಭೆ ಚುನಾವಣೆಗಳಿಗೂ ಪರದೇಶಿ ಅಭ್ಯರ್ಥಿಗಳಿಗೇ ಟಿಕೆಟ್ ಕೊಡುವ ಸಾಧ್ಯತೆಗಳು ಈಗಾಗಲೇ ಕಾಣಿಸಿಕೊಂಡಿವೆ.
ರಾಷ್ಟ್ರೀಯ ಪಕ್ಷಗಳು ಕರ್ನಾಟಕದ ಮೇಲೆ ಮಾಡಿರುವ ಅನಾಚಾರಗಳು ಒಂದಲ್ಲ, ಎರಡಲ್ಲ. ಈ ರೀತಿಯ ಆಕ್ರಮಣವನ್ನು ಗ್ರಹಿಸಿಯೇ ನೆರೆಯ ತಮಿಳುನಾಡು, ಆಂಧ್ರಪ್ರದೇಶ, ಕೇರಳ ಮತ್ತಿತರ ಭಾಗಗಳಲ್ಲಿ ಪ್ರಾದೇಶಿಕ ಪಕ್ಷಗಳು ಪ್ರವರ್ಧಮಾನಕ್ಕೆ ಬಂದಿವೆ. ಈ ಪಕ್ಷಗಳು ಅಧಿಕಾರ ಅನುಭವಿಸುತ್ತಿರುವುದರಿಂದ ಆಯಾ ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಅನ್ಯಾಯವೂ ನಡೆಯುತ್ತಿಲ್ಲ. ಕೇಂದ್ರ ಸರ್ಕಾರದ ದೊಡ್ಡ ಪ್ರಮಾಣದ ನೆರವು ತಮಿಳುನಾಡಿಗೇ ಏಕೆ ಹರಿಯುತ್ತದೆ ಎಂದರೆ ಅಲ್ಲಿನ ಪ್ರಾದೇಶಿಕ ಪಕ್ಷಗಳು ಬಹುಪಕ್ಷೀಯ ಸರ್ಕಾರವೇ ರಚನೆಯಾಗುತ್ತಿರುವ ಕೇಂದ್ರದ ಇಂದಿನ ವಿದ್ಯಮಾನದಲ್ಲಿ ಚೌಕಾಶಿ ರಾಜಕಾರಣಕ್ಕೆ ಇಳಿಯುತ್ತದೆ. ಡಿಎಂಕೆಯಾಗಲೀ, ಎಐಡಿಎಂಕೆಯಾಗಲಿ ಯಾವುದೇ ಪಕ್ಷ ಹೆಚ್ಚು ಸ್ಥಾನ ಗೆದ್ದರೂ ಅದು ಕೇಂದ್ರ ಸರ್ಕಾರದಲ್ಲಿ ಭಾಗೀದಾರನಾಗಿ, ತನ್ನ ರಾಜ್ಯಕ್ಕೆ ಬೇಕಾದ್ದನ್ನು ಮಾಡಿಕೊಳ್ಳುತ್ತದೆ. ಆಯಾ ರಾಜ್ಯದ ಸಂಪೂರ್ಣ ಆಡಳಿತವೂ ರಾಜ್ಯದಲ್ಲೇ ಉಳಿಯುತ್ತದೆ. ಎಲ್ಲದಕ್ಕೂ ದಿಲ್ಲಿಯ ಕಡೆ ನೋಡುವ ಗೋಳು ಅದಕ್ಕಿಲ್ಲ. ದಿಲ್ಲಿಯನ್ನೇ ತನ್ನ ರಾಜ್ಯದ ಕಡೆ ತಿರುಗಿಸಿಕೊಳ್ಳುವ, ಬೇಕಾದ ನಾಯಕರನ್ನು ಚೈನ್ನೈಗೇ ಕರೆಸಿಕೊಳ್ಳುವ ತಾಕತ್ತು ತಮಿಳುನಾಡಿನ ರಾಜಕಾರಣಿಗಳಿವೆ. ಅದಕ್ಕೆ ಕಾರಣ, ಅಲ್ಲಿನ ಪ್ರಾದೇಶಿಕ ಪಕ್ಷಗಳು.
ಇಂಥ ಸಂದರ್ಭದಲ್ಲಿ ಕರ್ನಾಟಕಕ್ಕೂ ಒಂದು ಪ್ರಾದೇಶಿಕ ಪಕ್ಷ ಬೇಡವೇ? ಒಂದು ವೇಳೆ ಪ್ರಾದೇಶಿಕ ಪಕ್ಷ ಸ್ಥಾಪನೆಯಾದಲ್ಲಿ ಅದರ ಸಂರಚನೆ ಹೇಗಿರಬೇಕು? ಅದರ ಧ್ಯೇಯೋದ್ದೇಶಗಳ ಏನಾಗಿರಬೇಕು ಎಂಬ ಪ್ರಶ್ನೆಗಳನ್ನಿಟ್ಟುಕೊಂಡು, ರಾಜ್ಯದ ಕೆಲವು ಗಣ್ಯರನ್ನು ಮಾತನಾಡಿಸಿದ್ದೇವೆ. ಅವರ ಅಭಿಪ್ರಾಯಗಳು ಇಲ್ಲಿವೆ.
-ಸಂ


ಪಿ.ವಿ. ನಾರಾಯಣ

ನಾಡಿನ ಜನತೆ ಎಚ್ಚರಗೊಂಡರೆ, ಅನ್ಯಾಯಗಳನ್ನು ಪ್ರಶ್ನಿಸುವಂತಾದರೆ ಮತ್ತು ಪ್ರತಿಭಟಿಸುವಂತಾದರೆ ರಾಜ್ಯದ ಭವಿಷ್ಯಕ್ಕೆ ಕಂಟಕವಾಗಿರುವ ಎಲ್ಲಾ ರೀತಿಯ ಅನೈತಿಕ ಮಾರ್ಗಗಳಿಗೂ ವಿರಾಮ ಹಾಕುವುದು ಅಸಾಧ್ಯವೇನಲ್ಲ. ಭ್ರಷ್ಟಾಚಾರಿಗಳಿಗೆ ಮತ ಹಾಕದೆ ಮತ್ತು ಅವರಿಗೆ ಅಧಿಕಾರ ನೀಡದಿರುವ ಬಗ್ಗೆ ರಾಜ್ಯದಲ್ಲಿ ಜನಾಂದೋಲನ ಆಗಬೇಕಿದೆ. ನಾಡಿನ ಸಾಮಾನ್ಯ ಜನತೆಗೆ ಧೈರ್ಯ ನೀಡುವಂತಹ ಮತ್ತು ಈ ಬಗ್ಗೆ ಉತ್ತಮ ಮಾರ್ಗದರ್ಶನ ನೀಡುವಂತಹ ಕೆಲಸಗಳು ಆಗಬೇಕಿದೆ. ಭ್ರಷ್ಟ ವ್ಯವಸ್ಥೆಗೆ ಪರ್ಯಾಯವಾಗಿ ಬದಲಿ ವ್ಯವಸ್ಥೆಯೊಂದನ್ನು ನೀಡಿದರೆ ಹೊಸ ದಿಕ್ಕಿನತ್ತ ಕರ್ನಾಟಕವನ್ನು ಕೊಂಡೊಯ್ಯಬಹುದು.
ಹೌದು. ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವೊಂದು ಅಸ್ತಿತ್ವಕ್ಕೆ ಬರಲು ಸದ್ಯದ ಸ್ಥಿತಿ ಅನುಕೂಲಕರವಾಗಿದೆ. ರಾಷ್ಟ್ರೀಯ ಪಕ್ಷಗಳ ರಾಜ್ಯ ನಾಯಕರು ನಾಡಿನ ಹಿತಾಸಕ್ತಿಗಳನ್ನು ಮರೆತು ತಮ್ಮ ತಮ್ಮ ಪಕ್ಷಗಳ, ಸ್ವಾರ್ಥ ಸಾಧನೆಗಳ ಬೆನ್ನತ್ತಿ ನಾಡಿನ ಹಿತ ಮರೆತಿದ್ದಾರೆ. ಕನ್ನಡ ನಾಡು-ನುಡಿ ಜನಪದವನ್ನೇ ಪ್ರಮುಖವಾಗಿಸುವ ಪ್ರಾದೇಶಿಕ ಪಕ್ಷವೊಂದು ಅಸ್ತಿತ್ವಕ್ಕೆ ಬರಬೇಕಿದೆ. ಕರ್ನಾಟಕದ ಉದ್ದಾರಕ್ಕೆ ರಾಷ್ಟ್ರೀಯ ಪಕ್ಷಗಳಿಂದ ಪೂರಕವಾದ ವಾತಾವರಣ ಸೃಷ್ಟಿಯಾಗದ ಹಿನ್ನೆಲೆಯಲ್ಲಿ ಕರ್ನಾಟಕದ ಪ್ರಜ್ಞಾ ಕೇಂದ್ರವನ್ನು ಬಿಂಬಿಸುವ ಪ್ರಾದೇಶಿಕ ಪಕ್ಷ ಮೂಡಬೇಕಿದೆ.
ಭಾರತ ದೇಶ ರಾಜ್ಯಗಳ ಒಕ್ಕೂಟ. ದೇಶದಲ್ಲಿ ಬೇರೆಬೇರೆ ಭಾಷೆಯ ಪಕ್ಷಗಳು ಅಸ್ತಿತ್ವದಲ್ಲಿವೆ. ಕೆಲ ರಾಜ್ಯಗಳು ಪ್ರಬಲ ಪ್ರಾದೇಶಿಕ ಪಕ್ಷಗಳನ್ನು ಹೊಂದಿದ್ದು, ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರಗಳನ್ನು ತಮ್ಮ ಹಿಡಿತಕ್ಕೆ ತಂದುಕೊಂಡು ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಆದರೆ ನಾಡಿನಲ್ಲಿ ಉದಯವಾಗುವ ಪ್ರಾದೇಶಿಕ ಪಕ್ಷ ಒಕ್ಕೂಟ ವ್ಯವಸ್ಥೆಯಲ್ಲಿ ಅನ್ಯರಾಜ್ಯಗಳಿಗೆ ಅನಾನುಕೂಲವಾಗದಂತೆ ನಾಡಿನ ಅಭಿವೃದ್ಧಿಗೆ ಪೂರಕವಾಗುವ ಯೋಜನೆಗಳನ್ನು ಜನಾಭಿಪ್ರಾಯದ ಮೂಲಕ ಅನುಷ್ಠಾನಗೊಳಿಸುವಂತಹ ರಚನಾತ್ಮಕ ಕಾರ್ಯ ನಡೆಯಬೇಕಿದೆ.
ನಾಡಿನ ಹಿತಕ್ಕೆ ಪೂರಕವಾಗುವಂತಹ ರಾಜ್ಯದ ಹಿತಾಸಕ್ತಿಯನ್ನು ಕಾಪಾಡಬಲ್ಲ ಧ್ಯೇಯೋದ್ದೇಶಗಳನ್ನು ಹೊಂದಿದ ಸಮತೋಲನ ಪ್ರಾದೇಶಿಕ ಪಕ್ಷದ ಅನಿವಾರ್ಯತೆ ಇದೆ. ಕೊಡು-ಕೊಳ್ಳುವಿಕೆ ಮೂಲಕ ನಾಡನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಬಲ್ಲ ಸರ್ವರೀತಿಯ ಧ್ಯೇಯೋದ್ದೇಶಗಳನ್ನು ಪ್ರಾದೇಶಿಕ ಪಕ್ಷ ಹೊಂದಬೇಕಿದೆ.
ಪ್ರಾದೇಶಿಕ ಪಕ್ಷದಲ್ಲಿ ಪ್ರಾಮಾಣಿಕರಿಗಷ್ಟೆ ಅವಕಾಶ ಕಲ್ಪಿಸುವಂತಾಗಬೇಕು. ಜನತೆಯ ಸಮಸ್ಯೆಗಳನ್ನು ಗಂಭೀರವಾಗಿ ಚಿಂತಿಸಬಲ್ಲ ನಿಷ್ಠ ವ್ಯಕ್ತಿಗಳಿಗೆ ಪ್ರಾದೇಶಿಕ ಪಕ್ಷ ಅಧಿಕಾರ ನೀಡುವಂತಾಗಬೇಕು. ನಾಡು-ನುಡಿ-ಜನಪದ ಏಳಿಗೆಯ ಧ್ಯೇಯವನ್ನು ಹೊಂದಿದವರ ಪ್ರಾದೇಶಿಕ ಪಕ್ಷವಾಗಿ ಕಟ್ಟುವ ಕೆಲಸವಾಗಬೇಕು.


ಎಚ್.ಎಸ್. ದೊರೆಸ್ವಾಮಿ

ರಾಜ್ಯಕ್ಕೆ ಕಂಟಕಪ್ರಾಯವಾಗಿರುವ ಅನೈತಿಕ ಮಾರ್ಗಗಳ ನಿರ್ಮೂಲನೆಗೆ ಪಕ್ಷ ರಾಜಕೀಯದಿಂದ ಪರಿಹಾರ ಅಸಾಧ್ಯ. ಬೇರೆಬೇರೆ ರಾಜಕೀಯ ಪಕ್ಷಗಳಿಂದ ನಿರಂತರವಾಗಿ ಆಗಿರುವ ಅನಾಹುತಗಳೇ ಮತ್ಯಾವುದೇ ಪಕ್ಷವನ್ನು ರಚಿಸಿದರೂ ಆಗುವ ಸಾಧ್ಯತೆಗಳೇ ಹೆಚ್ಚಿದೆ. ಯಾವುದೇ ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಪ್ರತಿನಿಧಿಸದಂತೆ ಕಡಿವಾಣ ಹಾಕಬೇಕಿದೆ. ಇದಕ್ಕೆ ಪರ್ಯಾಯವಾಗಿ ಪ್ರತಿ ಕ್ಷೇತ್ರಗಳಲ್ಲೂ ಮತದಾರರ ಸಂಘವನ್ನು ರಚಿಸಬೇಕು. ಆ ಸಂಘವೇ ಚುನಾವಣಾ ಅಭ್ಯರ್ಥಿಯನ್ನು ಸೂಚಿಸಬೇಕು. ಹಳ್ಳಿಯಿಂದ ದಿಲ್ಲಿಯಿಂದ ತನಕ ಇಂತಹ ಪ್ರಯತ್ನ ನಡೆದರೆ ಮತದಾರನ ಸಮಸ್ಯೆಗಳನ್ನು ಬಗೆಹರಿಸುವ ಅಭ್ಯರ್ಥಿಗಳು ಜನಪ್ರತಿನಿಧಿಗಳಾಗುತ್ತಾರೆ. ಆಗ ಮಾತ್ರ ಎಲ್ಲಾ ರೀತಿಯ ಅನೈತಿಕ ಮಾರ್ಗಗಳಿಗೂ ಕಡಿವಾಣ ಬೀಳಲು ಸಾಧ್ಯವಾಗಿದೆ.
ಪಕ್ಷ ರಾಜಕಾರಣ ಒಪ್ಪುವುದಾದರೆ ಹೈಕಮಾಂಡ್ ಗುಲಾಮಗಿರಿಯನ್ನು ಒಪ್ಪಿಕೊಳ್ಳಬೇಕಾದಂತಹ ಅನಿವಾರ್ಯ ಸ್ಥಿತಿ ಸೃಷ್ಟಿಯಾಗಿದೆ. ದೇಶದಲ್ಲಿರುವ ಹಲವು ಪ್ರಾದೇಶಿಕ ಪಕ್ಷಗಳು ತಮ್ಮ ಯೋಗ್ಯತೆಗಳನ್ನು ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಮತ್ತು ನಾಡಿನಲ್ಲಿ ಉದಯಿಸಿದ ಹಲವು ಪ್ರಾದೇಶಿಕ ಪಕ್ಷಗಳು ಅಸ್ತಿತ್ವ ಕಾಪಾಡಿಕೊಳ್ಳುವಲ್ಲಿ ವೈಫಲ್ಯಹೊಂದಿರುವ ಅನೇಕ ನಿದರ್ಶನಗಳು ನಮ್ಮ ಕಣ್ಣಮುಂದಿರುವಾಗ ಜನತೆಯ ಅಭ್ಯರ್ಥಿಯನ್ನೇ ಚುನಾವಣಾ ಕಣಕ್ಕೆ ಇಳಿಸುವುದೇ ಸೂಕ್ತ ಅನ್ನಿಸುತ್ತದೆ.
ದೇಶದ ಒಕ್ಕೂಟ ವ್ಯವಸ್ಥೆಗೆ ಮಾರಕವಾಗುವಂತಹ ಗೊಂದಲದ ವಾತಾವರಣ ಸೃಷ್ಟಿಯಾಗಲು ಬಹುಪಕ್ಷಗಳ ಕೇಂದ್ರ ಸರ್ಕಾರ ಅಸ್ತಿತ್ವದಲ್ಲಿರುವುದೇ ಕಾರಣವಾಗಿದೆ. ಅನುಕೂಲ ಮತ್ತ ಅನಾನುಕೂಲಗಳ ಲೆಕ್ಕಾಚಾರದಲ್ಲಿ ಕೇಂದ್ರ ಸರ್ಕಾರದ ಸ್ಥಿರತೆ ಮತ್ತು ಅಸ್ಥಿರತೆ ನಿರ್ಧಾರವಾಗುತ್ತಿದೆ. ಒಂದೆರಡು ಬಲಿಷ್ಠ ಪಕ್ಷಗಳನ್ನು ಹೊಂದಿದ ಕೇಂದ್ರ ಸರ್ಕಾರ ಅಸ್ತಿತ್ವದಲ್ಲಿದ್ದರೆ ಒಕ್ಕೂಟ ವ್ಯವಸ್ಥೆಯಲ್ಲಿ ಸಮತೋಲನ ಕಾಪಾಡಬಹುದು. ಆದರೆ ಕಿಚಿಡಿ ಸರ್ಕಾರಗಳಿಂದ ಒಕ್ಕೂಟ ವ್ಯವಸ್ಥೆಗೆ ಅಸಹ್ಯ ಹುಟ್ಟಿಸುವಂತಹ ಪರಿಸ್ಥಿತಿಗಳು ಇತ್ತಿಚಿನ ದಿನಮಾನಗಳಲ್ಲಿ ಕಾಣತೊಡಗಿದೆ.
ಪ್ರಬಲವಾದ ಪ್ರಾದೇಶಿಕ ಶಕ್ತಿ ಕರ್ನಾಟಕದಲ್ಲಿ ಮೂಡುವುದಾದರೆ ಜನತೆಯ ಪಕ್ಷವಾಗಿ, ಜನಹಿತವನ್ನೇ ಪ್ರಮುಖವಾಗಿಟ್ಟುಕೊಂಡು ಜನತೆಯನ್ನು ಪ್ರತಿನಿಧಿಸುವವರ ಜಾತಿರಹಿತ, ಭ್ರಷ್ಟಾಚಾರ ಮುಕ್ತ, ಸ್ವಜನಪಕ್ಷಪಾತ, ಕೋಮುವಾದ ವಿರೋಧಿ ಪ್ರಾದೇಶಿಕ ಶಕ್ತಿಯ ಅನಾವರಣ ಆಗಬೇಕಿದೆ.
ಜನಪ್ರತಿನಿಧಿ ಜನರ ಪ್ರತಿನಿಧಿಯಾಗಿರಬೇಕು. ಚುನಾವಣಾ ಅಖಾಡಕ್ಕೆ ಇಳಿಯುವ ಅಭ್ಯರ್ಥಿ ಸಮಾಜಕ್ಕೆ ಯೋಗ್ಯನಿರಬೇಕು. ಜನರ ಆಶೋತ್ತರಗಳನ್ನು ಈಡೇರಿಸುವಂತಾಗಬೇಕು. ಹಣಬಲ, ತೋಳ್ಬಲ ಉಳ್ಳವನನ್ನು, ಕೈಗಾರಿಕೋದ್ಯಮಿಯನ್ನು, ಸ್ವಾರ್ಥ ಸಾಧನೆಗಾಗಿ ರಾಜಕಾರಣ ಮಾಡುವವನನ್ನು ಪ್ರಾದೇಶಿಕ ಶಕ್ತಿಯಿಂದ ದೂರವಿಡಬೇಕು. ಈ ನಿಟ್ಟಿನಲ್ಲಿ ಹೊಸ ವಾತಾವರಣವನ್ನು ಪ್ರಾದೇಶಿಕ ಶಕ್ತಿ ಮೈಗೂಡಿಸಿಕೊಳ್ಳಬೇಕು.


ನಲ್ಲೂರು ಪ್ರಸಾದ್

ಕರ್ನಾಟಕದ ಭವಿಷ್ಯಕ್ಕೆ ಕಂಟಕವಾಗಿರುವ ಅನೈತಿಕ ಮಾರ್ಗಗಳನ್ನು ಹಿಡಿದಿರುವ ರಾಜಕೀಯ ಪಕ್ಷಗಳನ್ನು ಸರಿದಾರಿಗೆ ತರಲು ಅಥವಾ ಅವುಗಳಿಗೆ ಪರ‍್ಯಾಯವಾದ ವ್ಯವಸ್ಥೆಯನ್ನು ಕಲ್ಪಿಸಲು ಜನಪರವಾದಂತಹ ಚಳವಳಿ ನಡೆದು ಒಟ್ಟು ವ್ಯವಸ್ಥೆ ರಿಪೇರಿ ಆಗಬೇಕಿದೆ. ಅಂತಹ ಒಂದು ವಾತಾವರಣವನ್ನು ನಿರ್ಮಾಣ ಮಾಡಬೇಕಾದ ಅಗತ್ಯತೆ ಇದೆ. ರಾಜ್ಯದ ಭ್ರಷ್ಟ ವ್ಯವಸ್ಥೆಯನ್ನು ಸರಿಪಡಿಸಲು, ಶುದ್ಧೀಕರಣ ಮಾಡಲು ಸಮುದಾಯ-ಸಮಾಜ ಎಚ್ಚರಗೊಳ್ಳಬೇಕಿದೆ.
ಪ್ರಾದೇಶಿಕ ಪಕ್ಷ ಉದಯವಾಗಬೇಕೆಂಬ ಮಹಾದಾಸೆಯನ್ನು ಬಹುದಿನಗಳಿಂದ ಹೊಂದಿದ್ದೇನೆ. ಆದರೆ, ಪ್ರಾದೇಶಿಕ ಪಕ್ಷವು ಹೈಕಮಾಂಡ್ ಗುಲಾಮಗಿರಿಯಿಂದ ಹೊರತಾಗಿರುತ್ತದೆ ಎಂಬ ನಂಬಿಕೆಯಿಲ್ಲ. ಪ್ರಾದೇಶಿಕ ಪಕ್ಷಕ್ಕೂ ಇಂತಹ ಅಪಾಯ ಇದ್ದೇ ಇದೆ. ಜನರ ಆಶಯಗಳ ಈಡೇರಿಕೆಗಾಗಿ ಉದಯಿಸಿದ ನೆರೆ ರಾಜ್ಯಗಳ ಹಲವು ಪ್ರಾದೇಶಿಕ ಪಕ್ಷಗಳಲ್ಲೂ ಇಂದಿಗೂ ಭಿನ್ನತೆ ಇದೆ. ಆದರೆ, ಪ್ರಾದೇಶಿಕ ಪಕ್ಷಗಳನ್ನು ಮುನ್ನಡೆಸುವವರು ಯಾರು ಮತ್ತು ಯಾವ ನಡವಳಿಕೆ ಉಳ್ಳವರು ಎಂಬುದು ಪ್ರಮುಖವಾಗಿರುತ್ತದೆ. ಪ್ರತಿಯೊಂದು ಪಕ್ಷಗಳಲ್ಲೂ ಹೈಕಮಾಂಡ್ ಸಂಸ್ಕೃತಿ ಸಾಮಾನ್ಯವಾಗಿದ್ದು, ಸರಿ-ತಪ್ಪುಗಳ ಪ್ರಜ್ಞೆಯಿಂದ ಕೆಲಸ ಮಾಡಿದರೆ ಯಾವ ದುಷ್ಪರಿಣಾವೂ ಬೀರುವುದಿಲ್ಲ. ಇಂದು ಇದಕ್ಕೆ ವ್ಯತಿರಿಕ್ತವಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ತೀವ್ರವಾಗಿದೆ.
ರಾಜ್ಯ ನಾಯಕರುಗಳು ಪಕ್ಷ ಬೇಧ ಮರೆತು ನಾಡಿನ ಹಿತರಕ್ಷಣೆಯನ್ನೇ ಪ್ರಮುಖವಾಗಿರಿಸಿಕೊಂಡು ಕಾರ್ಯನಿರ್ವಹಿಸಿದರೆ ಸರಿಯಾಗುತ್ತದೆ. ವೈವಿಧ್ಯತೆಯಲ್ಲಿ ಏಕತೆ ಕಾಣಬೇಕಿದೆ.
ಕೆಲ ರಾಜ್ಯಗಳ ಪ್ರಾದೇಶಿಕ ಪಕ್ಷಗಳು ಕೇಂದ್ರ ಸರ್ಕಾರದಲ್ಲಿ ಪಾಲುದಾರಿಕೆ ಹೊಂದಿ ಸಾಂದರ್ಭಿಕ ಚೌಕಾಶಿ ರಾಜಕಾರಣ ನಡೆಸುತ್ತಿರುವುದು ಬೇಸರದ ಸಂಗತಿ. ಚೌಕಾಶಿ ರಾಜಕಾರಣಕ್ಕಾಗಿ ರಾಜ್ಯದಲ್ಲೂ ಪ್ರಾದೇಶಿಕ ಪಕ್ಷದ ಉದಯ ಆಗಬೇಕಾಗಿಲ್ಲ. ಪ್ರಾದೇಶಿಕ ಪಕ್ಷಗಳು ನಾಡಿಗೆ ದಕ್ಕಬೇಕಾದ ನ್ಯಾಯಯುತವಾದ ಹಕ್ಕುಗಳನ್ನು ಗಟ್ಟಿ ಧ್ವನಿಯಲ್ಲಿ ಕೇಳಿ ದಕ್ಕಿಸಿಕೊಳ್ಳುವಂತಾಗಬೇಕು. ಅಂತಹ ಒಂದು ಪ್ರಾದೇಶಿಕ ಪಕ್ಷದ ಅನಿವಾರ್ಯತೆ ಇದೆ. ಗುಂಪು ರಾಜಕಾರಣ ಮತ್ತು ತಂತ್ರಗಾರಿಕೆ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುತ್ತದೆ. ರಾಜ್ಯದ ಹಿತ ಕಾಯಬಲ್ಲ, ಸ್ಥಳೀಯ ಯೋಜನೆಗಳಿಗೆ ಅಭಿವೃದ್ಧಿ ಪೂರಕವಾದ ಪ್ರಾದೇಶಿಕ ಪಕ್ಷದ ಅಗತ್ಯತೆ ಹೆಚ್ಚಿದೆ.
ಸಮಗ್ರ ಕರ್ನಾಟಕವನ್ನು ಪ್ರಗತಿ ದಿಕ್ಕಿನತ್ತ ಕೊಂಡೊಯ್ಯಬಲ್ಲ, ತಳ ಸಮುದಾಯಗಳ ನೋವು-ನಲಿವುಗಳನ್ನು ಸರಿಪಡಿಸಬಲ್ಲ, ನಾಡಿನ ನೆಲ-ಜಲ-ಸಂಸ್ಕೃತಿ-ಉದ್ಯೋಗ-ಆರೋಗ್ಯ ಕಾಪಾಡಬಲ್ಲಂತಹ ಶುದ್ಧಾತಿಶುದ್ಧ ಉದ್ದೇಶಗಳನ್ನು ಮತ್ತು ವ್ಯಕ್ತಿಗಳನ್ನು ಒಳಗೊಂಡಂತಹ ಧ್ಯೆಯೋದ್ಧೇಶಗಳನ್ನು ಒಳಗೊಂಡ ಪ್ರಾದೇಶಿಕ ಶಕ್ತಿಯ ಉದಯವಾದರೆ ಕರ್ನಾಟಕದಲ್ಲಿ ಉಜ್ವಲ ಭವಿಷ್ಯವನ್ನು ನಿರೀಕ್ಷಿಸಬಹುದು.
ಭ್ರಷ್ಟ ರಾಜಕೀಯ ಪಕ್ಷಗಳನ್ನು ಎದುರಿಸುವ ಸದುದ್ದೇಶದಿಂದ ಪ್ರಾದೇಶಿಕ ಪಕ್ಷವೊಂದು ಉದಯವಾಗುವುದಾದರೆ ಮೊದಲನೆಯದಾಗಿ ಪ್ರಾದೇಶಿಕ ಅಸಮತೋಲನೆ ಸೇರಿದಂತೆ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಜಾತೀಯತೆ, ಕೋಮುವಾದ ಇತ್ಯಾದಿ ಕುರಿತು ದೊಡ್ಡ ಮಟ್ಟದ ಜನಾಂದೋಲನ ಆಗಬೇಕಿದೆ ಮತ್ತು ವೈಚಾರಿಕ ಬದ್ಧತೆಯನ್ನು ಹೊಂದಬೇಕಿದೆ. ಭ್ರಷ್ಟ ಪಕ್ಷಗಳನ್ನು, ಜನಪ್ರತಿನಿಧಿಗಳನ್ನು ಎದುರಿಸುವ ತಾಕತ್ತು ಮತ್ತು ಮುಕ್ತ-ಪರಿಶುದ್ಧವಾದ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಭಿನ್ನ ಪರಿಸರವನ್ನು ಪ್ರಾದೇಶಿಕ ಪಕ್ಷ ಸೃಷ್ಟಿಸಬೇಕಿದೆ. ಹಣಬಲವೇ ರಾಜಕೀಯ ಶಕ್ತಿಯಲ್ಲ ಎಂಬುದಾಗಿ ಮತದಾರರಲ್ಲಿ ಜಾಗೃತಿ ಮೂಡಿಸಬೇಕಿದೆ.

ದ್ವಾರಕನಾಥ್

ಭ್ರಷ್ಟಚಾರ, ಸ್ವಜನಪಕ್ಷಪಾತ, ಜಾತೀಯತೆ, ಕೋಮುವಾದದಂತಹ ಪಿಡುಗುಗಳಿಂದ ಕರ್ನಾಟಕ ರಾಜ್ಯ ವಿಮುಖವಾಗಬೇಕಿದ್ದರೆ ಪರ್ಯಾಯ ವಿರೋಧ ಪಕ್ಷವೊಂದರ ತುರ್ತು ರಚನೆಯಾಗಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯವನ್ನು ಇದುವರೆಗೂ ಆಳಿರುವ ಎಲ್ಲಾ ರಾಜಕೀಯ ಪಕ್ಷಗಳು ವೈಫಲ್ಯಕಂಡಿವೆ. ಪ್ರಗತಿಪರವಾದಂತಹ ಪ್ರಬಲ ಸಂಘಟನೆ ಹೊಂದಿದಂತಹ ಪಕ್ಷ ಉದಯಿಸಬೇಕಿದೆ. ಹೀಗಾದಾಗ ಮಾತ್ರ ಕರ್ನಾಟಕ ರಾಜ್ಯಕ್ಕೊಂದು ಉಜ್ವಲ ಭವಿಷ್ಯ ದೊರಕಲು ಸಾಧ್ಯವಾಗಬಹುದು.
ಯಾವುದೇ ದೃಷ್ಟಿಯಲ್ಲಿ ಆಲೋಚಿಸಿದರೂ ರಾಜ್ಯದ ಹಿತದೃಷ್ಟಿಯಿಂದ ಪ್ರಾದೇಶಿಕ ಪಕ್ಷ ಉದಯವಾಗಲು ಸದ್ಯದ ಸ್ಥಿತಿ ಸೂಕ್ತವಾಗಿದೆ ಅನ್ನಿಸುತ್ತದೆ. ಎಲ್ಲಾ ರಾಜಕೀಯ ಪಕ್ಷಗಳು ಹೈಕಮಾಂಡ್ ಕಪಿಮುಷ್ಠಿಯಲ್ಲಿ ನಲುಗುತ್ತಿರುವುದು ಸಾರ್ವಜನಿಕವಾಗಿದೆ. ನೆರೆ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಅಸ್ತಿತ್ವಕ್ಕೆ ಬಂದು ಕೆಲವು ಯಶಸ್ವಿಗೊಂಡಿದೆ. ಸಮಗ್ರ ಕರ್ನಾಟಕದ ಆಶಯಗಳು ಈಡೇರಬೇಕಾದರೆ ಪ್ರಾದೇಶಿಕ ಪಕ್ಷದ ಅಗತ್ಯತೆ ಅನಿವಾರ್ಯವಾಗಿದೆ.
ಕೇಂದ್ರದಲ್ಲಿ ಅಧಿಕಾರ ನಡೆಸಿರುವ ಎಲ್ಲಾ ರಾಜಕೀಯ ಪಕ್ಷಗಳು ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿವೆ. ಕೆಲ ರಾಜ್ಯಗಳ ಪ್ರಾದೇಶಿಕ ಪಕ್ಷಗಳು ಚೌಕಾಶಿ ರಾಜಕಾರಣದ ಮೂಲಕ ಕೇಂದ್ರ ಸರ್ಕಾರಗಳಲ್ಲಿ ಹಿಡಿತ ಸಾಧಿಸಿವೆ. ಆದರೆ, ಇದು ಒಕ್ಕೂಟ ವ್ಯವಸ್ಥೆಗೆ ತದ್ವಿರುದ್ಧವಾದಂತಹ ಕ್ರಿಯೆ. ಇವೆಲ್ಲದರ ನಡುವೆ ರಾಜ್ಯವನ್ನು ಪ್ರತಿನಿಧಿಸಿರುವ ಮತ್ತು ಪ್ರತಿನಿಧಿಸುತ್ತಿರುವ ಜನಪ್ರತಿನಿಧಿಗಳು ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಅಥವ ಮನವರಿಕೆ ಮಾಡಿ ನಾಡಿನ ಹಿತ ಕಾಪಾಡುತ್ತಿಲ್ಲ. ಹೀಗಾಗಿ, ಕರ್ನಾಟಕದಲ್ಲೂ ಪ್ರಾದೇಶಿಕ ಪಕ್ಷದ ರಚನೆ ಅನಿವಾರ್ಯವಾಗಿದೆ.
ರಾಜ್ಯದಲ್ಲಿ ಅಧಿಕಾರ ನಡೆಸಿರುವ ರಾಜಕೀಯ ಪಕ್ಷಗಳು ಅನುಸರಿಸಿರುವ ಅನೈತಿಕ ಮಾರ್ಗಗಳಿಗೆ ವಿರುದ್ಧವಾದಂತಹ ಧ್ಯೇಯೋದ್ದೇಶಗಳನ್ನು ಹೊಂದಿದ ಪ್ರಾದೇಶಿಕ ಪಕ್ಷ ಉದಯಿಸಬೇಕಿದೆ. ಪ್ರಗತಿಪರ ಚಳವಳಿಗಳು, ರೈತ, ದಲಿತ, ಕನ್ನಡ ಮಹಿಳಾ, ಕಾರ್ಮಿಕ ಸಂಘಟನೆಗಳು ಒಗ್ಗೂಡಿ ಪ್ರಾದೇಶಿಕ ಪಕ್ಷವನ್ನು ಬಲಗೊಳಿಸಬೇಕಾದ ತುರ್ತು ಸೃಷ್ಟಿಯಾಗಿದೆ.
ಆಸೆ-ಆಮಿಷಗಳಿಗೆ ಒಳಗಾಗಿ ಮತವನ್ನು ಮಾರಾಟಮಾಡಿಕೊಳ್ಳುತ್ತಿರುವ ಮತದಾರರನ್ನು ಜಾಗೃತಗೊಳಿಸುವಂತಹ ಜನಾಂದೋಲನದ ಮೂಲಕ ಪ್ರಾದೇಶಿಕ ಪಕ್ಷಕ್ಕೆ ಚಾಲನೆ ನೀಡಬೇಕಿದೆ. ರಾಜಕಾರಣಕ್ಕೆ ಹಣವೇ ಅನಿವಾರ್ಯ ಎಂಬಂತಹ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಈ ಬಗ್ಗೆ ಸಾಮಾನ್ಯ ಜನತೆಯಲ್ಲಿ ತಿಳಿವಳಿಕೆ ಮೂಡಿಸುವ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕಿದೆ. ಸಮಾಜದಿಂದ ಲೂಟಿಮಾಡಿದ ಹಣವನ್ನೇ ನೀಡಿ ಮತದಾರರನ್ನು ವಂಚಿಸುತ್ತಿರುವ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸಬೇಕಿದೆ.


ಪಟಾಪಟ್ ನಾಗರಾಜ್

ರಾಜ್ಯದ ಭವಿಷ್ಯಕ್ಕೆ ಕಂಟಕವಾಗಿರುವ ರಾಜಕೀಯ ಪಕ್ಷಗಳ ಅನೈತಿಕ ಮಾರ್ಗಗಳ ಕುರಿತು ಅರಿವು ಮೂಡಿಸುವ ಕೆಲಸ ಆಗಬೇಕಿದೆ. ಪ್ರಮುಖವಾಗಿ ಮತದಾರರಲ್ಲಿ ಓಟಿನ ಮೌಲ್ಯವನ್ನು ಅರ್ಥಮಾಡಿಸಬೇಕಿದೆ. ಸಂವಿಧಾನಬದ್ಧವಾದ ಚುನಾವಣೆಗಳು ನಡೆಯುವಂತಾಗಬೇಕು. ರಾಜಕೀಯ ಅಧಿಕಾರದ ಮಹತ್ವ ಸಮಾಜದ ಕಟ್ಟಕಡೆಯ ಮನುಷ್ಯನಿಗೂ ಅರಿವಾದಾಗ ಮಾತ್ರ ಎಲ್ಲಾ ಬಿಡುಗಡೆಗಳಿಗೆ ಸಾಧ್ಯವಾಗುತ್ತದೆ.
ಸ್ಥಳೀಯ ಅವಶ್ಯಕತೆಗಳಿಗೆ ಅನುಗುಣವಾಗಿ, ನಾಡಿನ ಸರ್ವತೋಮುಖ ಅಭಿವೃದ್ಧಿಗಾಗಿ ರಾಷ್ಟ್ರೀಯ ಮನೋಭಾವನೆ ಜೊತೆಯಲ್ಲೇ ಪ್ರಾಂತೀಯ ಅಭಿವೃದ್ಧಿಯನ್ನು ಬಯಸುವ ಪ್ರಾದೇಶಿಕ ಪಕ್ಷವೊಂದು ಮೂಡಿಬರಲು ಸಕಾಲವಾಗಿದ್ದು, ಹೈಕಮಾಂಡ್ ಗುಲಾಮಗಿರಿಯಿಂದ ನಲುಗಿರುವ ರಾಷ್ಟ್ರೀಯ ಪಕ್ಷಗಳಿಗೆ ತಕ್ಕ ಪಾಠ ಕಲಿಸಬೇಕಿದೆ.
ಪ್ರಾದೇಶಿಕ ಸಮಸ್ಯೆಗಳನ್ನು ಕೇಂದ್ರ ಸರ್ಕಾರದ ಮೇಲೆ ಪ್ರಭಾವ ಬೀರಿ ನ್ಯಾಯಬದ್ಧವಾದ ಪರಿಹಾರವನ್ನು ಕಂಡುಕೊಳ್ಳಬೇಕಾದ ಪ್ರಾದೇಶಿಕ ಪಕ್ಷ ಅನಿವಾರ್ಯವಿದೆಯೇ ಹೊರತು ಚೌಕಾಶಿ ರಾಜಕಾರಣದ ಮೂಲಕ ಅನ್ಯ ರಾಜ್ಯಗಳಿಗೆ ದ್ರೋಹ ಮಾಡುವ ಪ್ರಾದೇಶಿಕ ಪಕ್ಷದ ಅನಿವಾರ್ಯತೆ ಇಲ್ಲ. ಚೌಕಾಶಿ ರಾಜಕಾರಣದಲ್ಲಿ ವಿಶ್ವಾಸವಿಲ್ಲ. ಆದರೆ, ರಾಜ್ಯದಲ್ಲಿ ಸಮಗ್ರ ರಾಜಕೀಯ ಬದಲಾವಣೆ ಮತ್ತು ಅಭಿವೃದ್ಧಿ ಬದಲಾವಣೆ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಸಾಮೂಹಿಕ ನಾಯಕತ್ವದ ಪ್ರಾದೇಶಿಕ ಪಕ್ಷ ಉದಯವಾದರೆ ಅರ್ಥವಿರುತ್ತದೆ.
ರಾಷ್ಟ್ರದ ಏಕತೆಗೆ ಪೂರಕವಾದಂತಹ, ಒಕ್ಕೂಟ ವ್ಯವಸ್ಥೆಯನ್ನು ಬುಡಮೇಲು ಮಾಡದ ರಾಜ್ಯ ಕಾಳಜಿ ಮತ್ತು ರಾಷ್ಟ್ರ ನಿಷ್ಠೆಯನ್ನು ಹೊಂದಿದ ಧ್ಯೆಯೋದ್ದೇಶಗಳನ್ನೇ ಪ್ರಮುಖವಾಗಿರಿಸಿಕೊಂಡು ಅಸಮಾನತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಪ್ರಾದೇಶಿಕ ಪಕ್ಷ ಉದಯವಾಗುವಂತಹ ಪರಿಸ್ಥಿತಿ ನಿರ್ಮಾಣವಾಗಲಿ.
ಭ್ರಷ್ಟ ರಾಜಕೀಯ ಪಕ್ಷಗಳನ್ನು ಎದುರಿಸಲು ಪ್ರಾದೇಶಿಕ ಪಕ್ಷ ಜನರ ನಡುವಿನ ಪಕ್ಷವಾಗಿ, ಜನತೆಯ ಪಕ್ಷವಾಗಿ ಜನಾಭಿಪ್ರಾಯವನ್ನೇ ಪ್ರಮುಖವಾಗಿಟ್ಟುಕೊಂಡು ಜನಶಕ್ತಿಯ ಮೇಲೆ ತನ್ನ ಕಾರ್ಯತಂತ್ರವನ್ನು ರೂಪಿಸಬೇಕು. ಜಾತೀಯತೆ-ಕೋಮುವಾದ, ಭ್ರಷ್ಟಾಚಾರ-ಸ್ವಜನಪಕ್ಷಪಾತ ಇವುಗಳಿಗೆ ತಕ್ಕ ಪಾಠ ಕಲಿಸುವಂತಹ ಪರಿಸರವನ್ನು ನಿರ್ಮಿಸಿಕೊಂಡರೆ ಪ್ರಾದೇಶಿಕ ಪಕ್ಷಕ್ಕೆ ಭವಿಷ್ಯವಿದೆ.


ಕುಂ.ವೀರಭದ್ರಪ್ಪ

ಕಳೆದ ಒಂದು ದಶಕದಿಂದ ರಾಜ್ಯದ ರಾಜಕಾರಣಿಗಳು ಮತ್ತು ರಾಜ್ಯಾಧಿಕಾರ ನಡೆಸಿರುವ ರಾಜಕೀಯ ಪಕ್ಷಗಳು ಸಾರ್ವಜನಿಕವಾಗಿ ಮತದಾರರನ್ನು ಭ್ರಷ್ಟರನ್ನಾಗಿಸುವ ಮೂಲಕ ಮತದಾನ ಎಂಬುದು ಬಿಕರಿ ಆಗುತ್ತಿದೆ. ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿರುವ ಸಾಮಾಜಿಕ ಅನಿಷ್ಠಗಳ ವಿರುದ್ಧ ಹೋರಾಟ ನಡೆಸುವಂತಹ ಸನ್ನಿವೇಶ ಆರಂಭವಾಗಬೇಕಿದೆ. ರಾಜಕೀಯ ಪಕ್ಷಗಳಿಗೆ ಸಮಾಜ ಮತ್ತು ದೇಶದ ಬಗ್ಗೆ ಕನಿಷ್ಟ ಪ್ರೀತಿ ಇಲ್ಲದೇ ಇರುವುದು ಎಲ್ಲಾ ಅರಾಜಕತೆಗೆ ದಾರಿಯಾಗಿದೆ. ಕರ್ನಾಟಕದ ಮಟ್ಟಿಗೆ ಕಡಿಮೆ ಹಣವನ್ನು ವಿನಿಯೋಗಿಸಿ ನಡೆಯುವ ಚುನಾವಣೆಗಳು ಅಸ್ತಿತ್ವಕ್ಕೆ ಬರಬೇಕಿದೆ. ಚುನಾವಣೆಗಳು ಇಂದು ವ್ಯಾಪಾರಿ ಕೇಂದ್ರಗಳಾಗಿ ಪರಿಣಮಿಸಿದ್ದು, ಇದಕ್ಕೆ ಭಿನ್ನವಾದ ಪರಿಸ್ಥಿತಿ ನಿರ್ಮಾಣವಾದಾಗ ಮಾತ್ರ ಕರ್ನಾಟಕದ ಭವಿಷ್ಯಕ್ಕೆ ಮಾರಕವಾಗಿರುವ ಕಂಟಕದಿಂದ ವಿಮುಕ್ತಿ ಪಡೆಯಲು ಸಾಧ್ಯವಾಗುತ್ತದೆ.
ಕರ್ನಾಟಕದ ಹಿತಾಸಕ್ತಿಗಳನ್ನು ಮರೆತಿರುವ ರಾಷ್ಟ್ರೀಯ ಪಕ್ಷಗಳಿಗೆ ಪರ‍್ಯಾಯವಾಗಿ ಪ್ರಾದೇಶಿಕ ಪಕ್ಷವೊಂದು ಮೂಡಿಬರಲು ಸಕಾಲವಾಗಿದ್ದರೂ ತೀವ್ರ ಸ್ವರೂಪದ, ಶಾಶ್ವತವಾದ ಪ್ರಾದೇಶಿಕ ಪಕ್ಷ ರಾಜ್ಯದಲ್ಲಿ ಬೇರೂರಬೇಕಿದೆ. ಭಾಷಾ ಚಳವಳಿ ನಾಡಿನಲ್ಲಿ ತೀವ್ರವಾಗಿದ್ದರೂ ಇಂತಹ ಒಂದು ಪ್ರಯತ್ನ ಇದುವರೆಗೂ ಸಾಧ್ಯವಾಗಿಲ್ಲ. ಈ ನಿಟ್ಟಿನಲ್ಲಿ ಸಾರ್ವಜನಿಕವಾಗಿ ತಿಳಿವಳಿಕೆ ಮೂಡಿಸುವಂತಹ ತುರ್ತು ಕೆಲಸಗಳು ನಡೆಯಬೇಕಿದ್ದು, ಅಧಿಕಾರ ವಿಕೇಂದ್ರೀಕರಣ ಎಂಬುದು ಅನುಷ್ಠಾನಗೊಳ್ಳದಿರುವ ಸಂದರ್ಭದಲ್ಲಿ ದೆಹಲಿಯನ್ನೇ ಕೇಂದ್ರವಾಗಿಟ್ಟುಕೊಂಡು ರಾಜ್ಯ ನಾಯಕರು ರಾಜಕಾರಣ ಅವಲಂಬಿತರಾಗಿರುವುದರಿಂದ ಹೈ ಕಮಾಂಡ್ ಗುಲಾಮಗಿರಿಯಿಂದ ರಾಜ್ಯದ ಹಿತಾಸಕ್ತಿಗಳಿಗೆ ಧಕ್ಕೆಯಾಗುತ್ತಿದೆ. ಓಟ್ ಬ್ಯಾಂಕ್ ರಾಜಕಾರಣವನ್ನೇ ಪ್ರಮುಖವಾಗಿರಿಸಿಕೊಂಡಿರುವ ರಾಷ್ಟ್ರೀಯ ಪಕ್ಷಗಳಿಗೆ ಯಾವ ರಾಜ್ಯದ ಹಿತಾಸಕ್ತಿಗಳು ಪ್ರಮುಖ ಎನಿಸುವುದಿಲ್ಲ. ಕರ್ನಾಟಕದ ಗ್ರಾಮೀಣ ಪ್ರದೇಶಗಳ ಸಮಸ್ಯೆಗಳಿಗೆ ದಿಲ್ಲಿಯ ಪರಿಹಾರ ದೊರಕಬೇಕಾದರೆ ಇಂತಹ ಸಂದಿಗ್ಧತೆಯಲ್ಲೇ ಪ್ರಾದೇಶಿಕ ಪಕ್ಷವೊಂದು ಮೂಡಿಬರಬೇಕಿದೆ.
ಪ್ರಾದೇಶಿಕ ಪಕ್ಷ ರಚನೆಯ ಅನಿವಾರ್ಯತೆ ರಾಜ್ಯದಲ್ಲಿ ನಿಜಕ್ಕೂ ಇದೆ. ಪ್ರಾದೇಶಿಕ ಪಕ್ಷಗಳಿಗೆ ಅವಲಂಬಿತವಾಗಿ ಕೇಂದ್ರದಲ್ಲಿ ಸರ್ಕಾರವೊಂದು ಅಸ್ತಿತ್ವಕ್ಕೆ ಬಂದರೆ ಪ್ರಾತಿನಿಧಿಕ ಅವಕಾಶ ದೊರೆಯುವುದರಲ್ಲಿ ಅನುಮಾನವಿಲ್ಲ. ಆದರೆ ಒಕ್ಕೂಟ ವ್ಯವಸ್ಥೆಯಲ್ಲಿ ಅಧಿಕಾರ ವಿಕೇಂದ್ರಿಕರಣದ ಧ್ಯೆಯೋದ್ದೇಶಗಳನ್ನು ಗಮನೀಕರಿಸಿ ಮುಂದಿನ ೨೦ವರ್ಷಗಳ ಸಾಮಾಜಿಕ ಪರಿಸ್ಥಿತಿಯನ್ನು ಆಲೋಚಿಸಿ ರಾಜ್ಯದಲ್ಲೂ ಪ್ರಾದೇಶಿಕ ಪಕ್ಷ ರಚನೆಗೊಳ್ಳಬೇಕಿದೆ.
ಕರ್ನಾಟಕದಲ್ಲಿ ಪ್ರಾದೇಶಿಕ ಶಕ್ತಿಯೊಂದು ಮೂಡುವುದಾದರೆ ಗ್ರಾಮೀಣ ಪ್ರದೇಶಗಳ ಸಾಮಾನ್ಯ ಮತದಾರ ಭ್ರಷ್ಟಗೊಳ್ಳದಂತೆ ನೋಡಿಕೊಳ್ಳುವ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕಿದೆ. ರಾಷ್ಟ್ರೀಯ ಮತ್ತು ರಾಜ್ಯ ಪರ ಕಾಳಜಿಯನ್ನು ನಾಡಿನ ಸಾಮಾನ್ಯ ಜನತೆಯಲ್ಲೂ ಮೂಡಿಸಬೇಕಾದ ಅನಿವಾರ್ಯತೆ ಇದೆ. ಎಲ್ಲದಕ್ಕೂ ಮಿಗಿಲಾಗಿ ನಾಡಿನ ಪ್ರತಿ ಮತದಾರನಲ್ಲೂ ನೈತಿಕ ಶಕ್ತಿಯೊಂದನ್ನು ಸೃಷ್ಟಿಸುವ ನಿಟ್ಟಿನಲ್ಲಿ ಜನಾಂದೋಲನ ನಡೆದಾಗ ಮಾತ್ರ ಆ ಹಿನ್ನಲೆಯಲ್ಲಿ ಉದಯಿಸುವ ಪ್ರಾದೇಶಿಕ ಶಕ್ತಿಗೆ ಅರ್ಥವಿರುತ್ತದೆ.
ಹಣ ಮತ್ತು ಅಧಿಕಾರ ಎಂದರೆ ಭಯಪಡುವಂತಹ ವಾತಾವರಣವನ್ನು ಸೃಷ್ಟಿಸಬೇಕಿದ್ದು, ಇಂತಹ ಹಿನ್ನೆಲೆಯುಳ್ಳವರೇ ಪ್ರಾದೇಶಿಕ ಪಕ್ಷ ರಚನೆಗೆ ಮುಂದಾಗಬೇಕಿದೆ. ಲಜ್ಜಾರಹಿತ ರಾಜಕಾರಣ ಪ್ರಜಾತಂತ್ರ ವ್ಯವಸ್ಥೆಗೆ ಅಪಾಯಕಾರಿಯಾಗಿದ್ದು, ಇದಕ್ಕೆ ವಿರುದ್ಧವಾದಂತಹ ಎಲ್ಲಾ ಕ್ರಮಗಳನ್ನು ಪ್ರಾದೇಶಿಕ ಪಕ್ಷ ಅನುಸರಿಸಬೇಕಿದೆ.


ಎಸ್. ದೊರೆರಾಜ್

ಕೇಂದ್ರಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಭ್ರಷ್ಠಾಚಾರ ಅತಿರೇಕಕ್ಕೆ ಹೋಗಿದ್ದು, ಈ ಎರಡು ಸರ್ಕಾರಗಳ ಒಳ ಒಪ್ಪಂದದಿಂದಾಗಿ ಸಮಗ್ರ ದೇಶದ ಪ್ರಜಾಸತ್ತೆಗೆ ಮಾರಕವಾಗಿದೆ.
ರಾಜ್ಯದಲ್ಲಂತೂ ಎಲ್ಲವೂ ಶುದ್ಧ ಕ್ರಯಕ್ಕೆ ಒಳಗಾಗಿವೆ. ರಾಜ್ಯಾಂಗ, ಕಾರ್ಯಾಂಗ, ನ್ಯಾಯಾಂಗ ಎಲ್ಲವೂ ಸಮ ಪ್ರಮಾಣದಲ್ಲಿ ಹೊಲಸೆದ್ದಿವೆ. ಇಂತಹ ನೀತಿಗಳನ್ನು ಧಿಕ್ಕರಿಸುವ ಕಾಲ ಸನ್ನಿಹಿತವಾಗಿದೆ. ಪ್ರತಿಯೊಬ್ಬರೂ ಜವಾಬ್ದಾರಿಯುತವಾಗಿ ಪ್ರಜ್ಞಾಪೂರಕವಾಗಿ ನಡೆದುಕೊಂಡರೆ-ಚಿಂತಿಸಿದರೆ ಮಾತ್ರ ಎಲ್ಲಾ ಕಂಟಕಗಳಿಂದ ರಾಜ್ಯ ಬಿಡುಗಡೆಗೊಳ್ಳಲು ಸಾಧ್ಯ.
ರಾಜ್ಯದಲ್ಲಿ ಕೇವಲ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಜಾತೀಯತೆ, ಕೋಮುವಾದ ಮಾತ್ರ ಮೇರೆ ಮೀರಿಲ್ಲ. ಇದರೊಂದಿಗೆ ವಾಮಾಚಾರವೂ ಎಲ್ಲೆ ಮೀರಿದೆ. ಇಂತಹ ಸಂದಿಗ್ಧತೆಯಲ್ಲಿ ಪ್ರಾದೇಶಿಕ ಪಕ್ಷ ಮೂಡಿಬರಲು ಸಕಾಲವಾಗಿದೆ. ಅನೈತಿಕ ರಾಜಕಾರಣಕ್ಕೆ ತಿಲಾಂಜಲಿ ಹಾಡಬೇಕಿದೆ. ರಾಜ್ಯದ ಹಿತಾಸಕ್ತಿಯನ್ನು ಸಮಸ್ತ ಕನ್ನಡಿಗರು ಕಾಪಾಡಬೇಕಿದೆ.
ನೆರೆ ರಾಜ್ಯಗಳ ಪ್ರಾದೇಶಿಕ ಪಕ್ಷಗಳು ಬಲಪ್ರಯೋಗಿಸಿ ಆಯಾ ರಾಜ್ಯಗಳ ಅಭಿವೃದ್ಧಿಗೆ ಪೂರಕವಾದಂತಹ ಯೋಜನೆಗಳನ್ನು ಧಕ್ಕಿಸಿಕೊಳ್ಳುವಲ್ಲಿ ಯಶಸ್ವಿಯಾಗಿವೆ. ಹೈಕಮಾಂಡ್ ಸಂಸ್ಕೃತಿ ಸರ್ವಾಧಿಕಾರಿ ಮನೋಭಾವನೆ ಹೊಂದಿದ್ದು, ರಾಜ್ಯಗಳ ಸ್ಥಳೀಯ ಸಮಸ್ಯೆಗಳು ಅವರಿಗೆ ಮುಖ್ಯವಲ್ಲ. ಅಧಿಕಾರವಷ್ಟೇ ಮುಖ್ಯ ಎಂಬ ಉದ್ದೇಶಕ್ಕೆ ಬಲಶಾಲಿ ಪ್ರಾದೇಶಿಕ ಪಕ್ಷಗಳನ್ನು ಬೆಂಬಲಿಸುತ್ತಿವೆ.
ರಾಷ್ಟ್ರೀಯ ಪಕ್ಷಗಳನ್ನು ಬೆಂಬಲಿಸುವ ರಾಜ್ಯ ನಾಯಕರುಗಳಿಗೆ ನಾಡಿನ ಹಿತಕ್ಕಿಂತ ಪಕ್ಷಗಳ ಹಿತವೇ ಮುಖ್ಯವಾಗಿರುತ್ತವೆ. ಈ ನಿಟ್ಟಿನಲ್ಲಿ ಪ್ರಾದೇಶಿಕ ಅಸಮತೋಲನವನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರಬಲ್ಲ ಮತ್ತು ಸ್ಥಳೀಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ದೊರಕಿಸುವಂತಹ ಒಕ್ಕೂಟ ವ್ಯವಸ್ಥೆಯಲ್ಲಿ ನಂಬಿಕೆ ಹೊಂದಿದ ಪ್ರಾದೇಶಿಕ ಪಕ್ಷದ ಅನಿವಾರ್ಯತೆ ಇದೆ.
ಅನೈತಿಕ ರಾಜಕಾರಣಕ್ಕೆ ತಿಲಾಂಜಲಿ ಇಡಬಲ್ಲ ಎಲ್ಲಾ ಅನೈತಿಕ ಮಾರ್ಗಗಳಿಗೂ ಅವಕಾಶ ಕಲ್ಪಿಸದ ಜನಪ್ರತಿನಿಧಿಯನ್ನು ಜನರೇ ನಿರ್ಧರಿಸುವಂತಹ ಪ್ರಾದೇಶಿಕ ಪಕ್ಷ ಧ್ಯೆಯೋದ್ದೇಶಗಳನ್ನು ಹೊಂದಬೇಕಿದೆ. ಪ್ರಸ್ತುತ ರಾಜಕೀಯ ಪಕ್ಷಗಳಿಗೆ ಭಿನ್ನವಾಗಿ ಮೂಡಿಬರುವ ಪ್ರಾದೇಶಿಕ ಪಕ್ಷ ಪಕ್ಷಾಂತರ ಮಾಡುವ ಜನಪ್ರತಿನಿಧಿ ಮತ್ತು ರಾಜೀನಾಮೆ ನೀಡುವ ಜನಪ್ರತಿನಿಧಿ ಚುನಾವಣಾ ವೆಚ್ಚವನ್ನು ಭರಿಸುವಂತಹ ಹೊಸ ನೀತಿಯನ್ನು ಹೊಂದಬೇಕು. ಭ್ರಷ್ಟಾಚಾರ, ಅನಾಚಾರ ಎಸಗುವ ಜನಪ್ರತಿನಿಧಿಗಳನ್ನು ವಾಪಸ್ಸು ಕರೆಸಿಕೊಳ್ಳುವ ಬದ್ಧತೆಗೆ ಪ್ರಾದೇಶಿಕ ಪಕ್ಷ ಒಳಗಾಗಬೇಕು. ಉದ್ಯೋಗ ಆರ್ಥಿಕತೆ, ನೈತಿಕತೆಗೆ ಪ್ರಾಮುಖ್ಯತೆ ನೀಡಬೇಕು.
ಮೊದಲನೆಯದಾಗಿ ಮತದಾರರಲ್ಲಿ ಜಾಗೃತಿ ಮೂಡಿಸುವ ಕ್ರಮ ಕೈಗೊಳ್ಳಬೇಕಿದೆ. ಹಣದ ಆಮಿಷಕ್ಕೆ ಮತದಾರ ಬಲಿಯಾಗದಂತೆ ಜನಾಂದೋಲನ ನಡೆಸಬೇಕಿದೆ. ಒಟ್ಟಾರೆ ಪ್ರಸ್ತುತ ಇರುವ ಸನ್ನಿವೇಶಕ್ಕೆ ವಿರುದ್ಧವಾದಂತಹ ವಾತಾವರಣವನ್ನು ನಿರ್ಮಿಸಬೇಕಿದೆ.


ಕೋಡಿಹಳ್ಳಿ ಚಂದ್ರಶೇಖರ್

ರಾಜ್ಯ ಕಟ್ಟುವ ಇಚ್ಛಾಶಕ್ತಿ, ನಾಡು, ನುಡಿ, ನಾಡಿನ ಜನರ ಸಂಕಷ್ಟಗಳ ಬಗ್ಗೆ ಈಗಿನ ರಾಜಕೀಯ ಪಕ್ಷಗಳಲ್ಲಿ ಸ್ವಲ್ಪವೂ ಕಾಳಜಿಯಿಲ್ಲ. ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಸ್ವಾರ್ಥತೆಗಳೇ ತುಂಬಿರುವ ವ್ಯಕ್ತಿಗಳು ಇಂದು ನಮ್ಮನ್ನು ಆಳುತ್ತಿದ್ದಾರೆ, ಜಾತೀಯತೆ, ಕೋಮುವಾದಗಳು ರಾಜ್ಯದಲ್ಲಿ ವಿಜೃಂಭಿಸುತ್ತಿವೆ. ಇವೆಲ್ಲದಕ್ಕೂ ವ್ಯತಿರಿಕ್ತವಾದ ವಾತಾವರಣ ಸೃಷ್ಟಿಯಾಗಬೇಕು. ಹೊಸದೊಂದು ಬೆಳಕು ಮೂಡಬೇಕು. ಈ ಬೆಳಕು ಹೊತ್ತಿಸಲು ಒಬ್ಬ ವ್ಯಕ್ತಿಯಲ್ಲ, ಇಡೀ ಸಮುದಾಯವೇ ದುಡಿಯಬೇಕು. ಆಗಷ್ಟೇ ಇವುಗಳಿಂದ ಬಿಡುಗಡೆ ಸಾಧ್ಯ.
ರಾಜ್ಯದಲ್ಲಿ ಅನೈತಿಕತೆಯೇ ಮೆರೆಯುತ್ತಿರುವ ಈ ಕಾಲ ಘಟ್ಟದಲ್ಲಿ ಹೊಸದೊಂದು ಪ್ರಾದೇಶಿಕ ಪಕ್ಷದ ಅನಿವಾರ್ಯತೆ ಇದೆ. ಇದಕ್ಕೆ ಚಾಲನೆ ನೀಡಲು ಇದು ಸಕಾಲವೂ ಹೌದು. ಕನ್ನಡ, ಕನ್ನಡ ಜನರ, ನಾಡಿನ ಕಾಯಕಲ್ಪಕ್ಕೆ ಬದ್ಧರಾಗಿರುವ, ಕನ್ನಡಕ್ಕಾಗಿ ಅಹರ್ನಿಶಿ ದುಡಿಯುವ ವ್ಯಕ್ತಿತ್ವದ ಮುಂಚೂಣಿಯಲ್ಲಿ ಕನ್ನಡಪರ ಮನಸ್ಸುಗಳು ಒಗ್ಗೂಡಿ ಪಕ್ಷ ಕಟ್ಟುವ ಕಾಯಕಕ್ಕೆ ಮುಂದಾಗಬೇಕಿದೆ. ಕನ್ನಡ ಕಾಯಕದಲ್ಲಿ ನಾ ಮೇಲು, ನೀ ಕೀಳು ಎಂಬ ಭೇದ-ಭಾವ ತೊರೆದು ಕನ್ನಡ ಕಟ್ಟುವ ಕೆಲಸದಲ್ಲಿ ಒಗ್ಗೂಡಿ ಮುನ್ನುಗ್ಗಬೇಕಿದೆ.
ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಬಹುಪಕ್ಷಗಳ ಕೇಂದ್ರ ಸರಕಾರಗಳೇ ಆಳ್ವಿಕೆ ನಡೆಸುತ್ತಿದ್ದು, ಕೆಲ ಪ್ರಬಲ ಪ್ರಾದೇಶಿಕ ಪಕ್ಷಗಳು ಚೌಕಾಶಿ ರಾಜಕಾರಣದಲ್ಲಿ ತೊಡಗಿವೆ. ಚೌಕಾಶಿ ರಾಜಕಾರಣದ ಸಲುವಾಗಿ ಪ್ರಾದೇಶಿಕ ಪಕ್ಷ ಎಂಬ ಭಾವನೆ ಬೇಡ. ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಯನ್ನೇ ಮೂಲಮಂತ್ರವಾಗಿರಿಸಿಕೊಂಡು ಪ್ರಾದೇಶಿಕ ಪಕ್ಷದ ಉದಯವಾಗಬೇಕಿದೆ.
ಭ್ರಷ್ಟತೆಯನ್ನು ಕಿತ್ತೊಗೆದು, ನಾಡಿನ ಸಮಸ್ಯೆಗಳಿಗೆ ಸ್ಪಂದಿಸಬೇಕಿದೆ. ನಮ್ಮಲ್ಲಿರುವ ಪ್ರಾಕೃತಿಕ ಸಂಪತ್ತು, ಅರಣ್ಯ ಸಂಪತ್ತು, ಮಾನವ ಸಂಪನ್ಮೂಲದ ಸದ್ಬಳಕೆಯಾಗಬೇಕಿದೆ. ನಾಡಿನ ಜನರ ಹಿತದೃಷ್ಟಿಯನ್ನೇ ಗಮನದಲ್ಲಿರಿಸಿಕೊಂಡು ಅದಕ್ಕೆ ಪೂರಕವಾಗಿ ಕ್ರಿಯಾಯೋಜನೆಗಳನ್ನು ರೂಪಿಸಿ, ಅನುಷ್ಠಾನಗೊಳಿಸುವ ದೀಕ್ಷೆ ತೊಟ್ಟು ಮುನ್ನಡೆಯಬೇಕಿದೆ.
ಭ್ರಷ್ಟಾಚಾರ, ಜಾತೀಯತೆ, ಕೋಮುವಾದ ಇವುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಾದ ಜರೂರತ್ತು ಇದೆ. ನಾಡಿನ ಜನರು ಅಭಿವೃದ್ಧಿ ಮಂತ್ರಕ್ಕೆ ಮಾತ್ರ ತಲೆ ಬಾಗುವಂತಹ ಸನ್ನಿವೇಶವನ್ನು, ವಾತಾವರಣವನ್ನು ಸೃಷ್ಟಿಸಬೇಕಿದೆ. ಇದು ಪ್ರತಿಯೊಬ್ಬ ಅಕ್ಷರಸ್ಥ ಕನ್ನಡಿಗನ ಮೇಲಿರುವ ಮಹತ್ವಪೂರ್ಣ ಜವಾಬ್ದಾರಿಯಾಗಿದೆ.
ಪ್ರಜಾಪ್ರಭುತ್ವದ ನಾಲ್ಕು ಮುಖ್ಯ ಅಂಗಗಳು ಇಂದು ಭ್ರಷ್ಟಗೊಂಡಿವೆ. ಅವುಗಳ ಮೌಲ್ಯಗಳು ಕುಸಿದಿವೆ. ಇವುಗಳನ್ನು ಮತ್ತೆ ಗಟ್ಟಿಗೊಳಿಸಬೇಕಿದೆ.
ದೊಡ್ಡ ಮಟ್ಟದ ಜನಾಂದೋಲನದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ಇದು ಆದಾಗ ಮಾತ್ರ ರಾಷ್ಟ್ರೀಯ ಪಕ್ಷಗಳ ಹಣ ಬಲ, ಜಾತಿ ಬಲ ಮತ್ತಿತರ ಬಲಗಳ ಅಹಂ ಭಾವಗಳನ್ನು ಅಳಿಸಿ ಹೊಸ ನಾಡೊಂದನ್ನು ಕಟ್ಟಲು ಸಾಧ್ಯವಾಗುತ್ತದೆ.
ಈ ಕಾರ್ಯ ಅತಿ ಶೀಘ್ರ ಆಗಬೇಕಿದೆ.


ಎಂ. ವೆಂಕಟಸ್ವಾಮಿ

ಕರ್ನಾಟಕದಲ್ಲಿ ಆಡಳಿತ ನಡೆಸಿರುವ ಮೂರೂ ಪಕ್ಷಗಳು ಕರ್ನಾಟಕದ ಭವಿಷ್ಯಕ್ಕೆ ಕಂಟಕವಾಗಿರುವುದು ಸತ್ಯ ಸಂಗತಿಯಾಗಿದೆ. ಇಂತಹ ಸಂದರ್ಭದಲ್ಲಿ ಸ್ವಾಭಿಮಾನಿ ಮತ್ತು ಸ್ವಾವಲಂಬನೆಯ ನವಕರ್ನಾಟಕವನ್ನು ಕಟ್ಟಬೇಕಾದಂತಹ ಅನಿವಾರ್ಯ ಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ. ಭಾಷಾ ಚಳವಳಿ, ರೈತಚಳವಳಿ, ದಲಿತ ಚಳವಳಿ ಒಗ್ಗೂಡಿ ಪರ್ಯಾಯವಾದಂತಹ ಆಲೋಚನೆಗಳನ್ನು ಮಾಡುವ ಮೂಲಕ ಸಮಸ್ತ ಕರ್ನಾಟಕವನ್ನು ಹೊಸದಿಕ್ಕಿನತ್ತ ಕೊಂಡೊಯ್ಯಬೇಕಿದೆ.
ಪ್ರಸ್ತುತ ರಾಜ್ಯ ರಾಜಕೀಯ ಪರಿಸ್ಥಿತಿಯನ್ನು ಅವಲೋಕಿಸಿದರೆ ಪ್ರಾದೇಶಿಕ ಪಕ್ಷವೊಂದು ಮೂಡಿಬರಲು ಇದು ಸಕಾಲ ಅನ್ನಿಸುತ್ತದೆ. ಇದರಲ್ಲಿ ಅನುಮಾನವಿಲ್ಲ. ರಾಷ್ಟ್ರೀಯ ಪಕ್ಷಗಳ ರಾಜ್ಯ ನಾಯಕರುಗಳು ಕರ್ನಾಟಕದ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ರಾಷ್ಟ್ರದ ಹಿತಾಸಕ್ತಿ ಕಾಪಾಡುವ ನೆಪದಲ್ಲಿ ರಾಜ್ಯವನ್ನು ನಿರ್ದಾಕ್ಷಿಣ್ಯವಾಗಿ ಬಲಿಕೊಡುವ ಕೆಲಸ ಸ್ವತಂತ್ರಪೂರ್ವದಿಂದಲೂ ನಿರಂತರವಾಗಿ ನಡೆದುಕೊಂಡು ಬಂದಿದೆ. ಪ್ರಾದೇಶಿಕ ಸಮಸ್ಯೆ, ಪ್ರಾದೇಶಿಕ ವಿಚಾರಗಳನ್ನು ಅವಲೋಕಿಸುವಂತಹ ಈ ಬಗ್ಗೆ ಕ್ರಿಯಾತ್ಮಕವಾದಂತಹ ಕೆಲಸಗಳು ಆಗಬೇಕಿದೆ. ರಾಜ್ಯದ ಮೂರು ಪ್ರಮುಖ ಪಕ್ಷಗಳು ಪ್ರಾದೇಶಿಕ ಜನತೆಯ ಆಶೋತ್ತರಗಳನ್ನು ಈಡೇರಿಸುವಲ್ಲಿ ವಿಫಲವಾಗಿವೆ.
ರಾಜ್ಯದ ನೆಲ, ಜಲ, ಭಾಷೆ, ಉದ್ಯೋಗ, ಸಂಸ್ಕೃತಿಯನ್ನು ಕಾಪಾಡುವಂತಹ ಧ್ಯೇಯೋದ್ದೇಶಗಳನ್ನು ಹೊಂದಿದ ಒಂದು ಪ್ರಾದೇಶಿಕ ಶಕ್ತಿಯ ಅನಿವಾರ್ಯತೆ ರಾಜ್ಯಕ್ಕೆ ಇದೆ. ನಾಡಿನ ಬೆಳವಣಿಗೆಗೆ ಪೂರಕವಾದಂತಹ ಎಲ್ಲಾ ಅಂಶಗಳನ್ನು ಹೊಂದಿದ ಪ್ರಾದೇಶಿಕ ಶಕ್ತಿ ರಾಜ್ಯದಲ್ಲಿ ಉದಯವಾಗುವುದಾದರೆ ಸದ್ಯದ ಸ್ಥಿತಿಯಲ್ಲಿ ಪ್ರಾದೇಶಿಕ ಪಕ್ಷಕ್ಕೆ ಉತ್ತಮ ಭವಿಷ್ಯ ದೊರಕಲಿದೆ. ರಾಜ್ಯವನ್ನಾಳಿರುವ ಮೂರೂ ಪಕ್ಷಗಳ ವೈಫಲ್ಯತೆಯ ನೈಜ ಕಾರಣಗಳನ್ನು ಹುಡುಕಿ ನಾಡಿನ ಶ್ರೆಯೋಭಿವೃದ್ಧಿಗೆ ಅನುಕೂಲವಾಗುವಂತಹ ಧ್ಯೇಯೋದ್ದೇಶಗಳನ್ನು ಅಳವಳಡಿಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಪ್ರಾದೇಶಿಕ ಪಕ್ಷವನ್ನು ರಚನೆಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರವನ್ನು ನೆರೆರಾಜ್ಯಗಳ ಕೆಲ ಪ್ರಾದೇಶಿಕ ಪಕ್ಷಗಳು ಚೌಕಾಸಿ ರಾಜಕಾರಣದ ಮೂಲಕ ಬ್ಲಾಕ್‌ಮೇಲ್ ತಂತ್ರ ಅನುಸರಿಸುತ್ತ ನಾಡಿನ ಕೆಲ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಪಡಿಸಿವೆ. ಇವೆಲ್ಲವನ್ನು ರಾಜ್ಯವನ್ನು ಪ್ರತಿನಿಧಿಸುವ ಪಕ್ಷಗಳು ವಿರೋಧಿಸುವಲ್ಲಿ ಎಡವಿದ್ದು, ರಾಜ್ಯದ ಪ್ರಾದೇಶಿಕ ಪಕ್ಷವೊಂದು ಅಸ್ತಿತ್ವಕ್ಕೆ ಬಂದು ನಾಡಿನ ಹಿತಕಾಯಬೇಕಿದೆ.
ಸಮಾಜದ ಪ್ರಗತಿಗೆ ಮಾರಕವಾಗಿರುವ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಜಾತಿಯತೆ, ಕೋಮುವಾದ ಇತ್ಯಾದಿಗಳನ್ನು ನಿರ್ಮೂಲನೆ ಮಾಡುವ ಪಣವನ್ನು ಪ್ರಾದೇಶಿಕ ಪಕ್ಷ ಹೊಂದಬೇಕಿದೆ. ಎಲ್ಲಾ ಕ್ಷೇತ್ರಗಳ ಅಸಮಾನತೆ ಹೋಗಲಾಡಿಸಬೇಕಿದೆ. ಗ್ರಾಮೀಣ ಪ್ರದೇಶ ಹಾಗು ನಗರ ಪ್ರದೇಶಗಳ ಭಿನ್ನ-ಭೇದವನ್ನು ಹೋಗಲಾಡಿಸುವ ಯೋಜನೆಗಳನ್ನು ಅಳವಡಿಸಿಕೊಂಡು ಕಾರ್ಮಿಕರ ಹಿತಕಾಪಾಡುವ ಕಾರ್ಯಸೂಚಿಯೂ ಸೇರಿದಂತೆ ಅರ್ಥಬದ್ಧ ದೇಯೋದ್ದೇಶಗಳನ್ನು ಹೊಂದಬೇಕು.
ಭ್ರಷ್ಟ ರಾಜಕೀಯ ಪಕ್ಷಗಳನ್ನು ಎದುರಿಸಬೇಕಾದ ಪ್ರಾದೇಶಿಕ ಪಕ್ಷ ಸಂವಿಧಾನಾತ್ಮಕ ಮೌಲ್ಯಗಳನ್ನು ಪ್ರತಿಪಾದಿಸಬೇಕಿದೆ. ಒಂದು ಓಟು-ಒಂದು ನೋಟು ಎಂಬುದಾಗಿ ಜನಾಭಿಪ್ರಾಯವನ್ನು ಮೂಡಿಸುವ ಮೂಲಕ ರಾಜ್ಯದಲ್ಲಿ ಪ್ರಬಲವಾದ ರಾಜಕೀಯ ಜನಾಂದೋಲನ ಆರಂಭವಾಗಬೇಕಿದೆ. ಪ್ರಜಾಪ್ರಭುತ್ವ ಮೌಲ್ಯಗಳ ಅಡಿಯಲ್ಲಿ ಪ್ರಾದೇಶಿಕ ಪಕ್ಷ ಜನರ ದನಿಯಾಗಿ ಪ್ರತಿನಿಧಿಸುವ ಅಭ್ಯರ್ಥಿಗಳನ್ನು ಪ್ರತಿನಿಧಿಗಳನ್ನಾಗಿ ಆಯ್ಕೆಮಾಡಬೇಕಿದೆ. ಸಂವಿಧಾನಾತ್ಮಕ ಮೌಲ್ಯಗಳನ್ನು ಕಾಪಾಡುವ ತಳಹದಿಯ ಮೇಲೆ ಪ್ರಾದೇಶಿಕ ಪಕ್ಷವನ್ನು ಕಟ್ಟಬೇಕಿದೆ.

ರಾಜಶೇಖರ ಹತಗುಂದಿ

ಸಾರ್ವಜನಿಕ ಬದುಕಿನಿಂದ ಚುನಾವಣೆಗಳಿಗೆ ಅಭ್ಯರ್ಥಿಗಳು ಬರುವಂತಾಗಬೇಕು. ಬದ್ಧತೆಯಿರುವ ರಾಜಕಾರಣಿಗಳನ್ನಷ್ಟೇ ಮತದಾರರು ಬೆಂಬಲಿಸುವಂತಾಗಬೇಕು. ದುಬಾರಿ ಚುನಾವಣೆಗಳು ಕಣ್ಮರೆಯಾಗಬೇಕು. ಲಿಕ್ಕರ್, ಎಜುಕೇಶನ್ ಮುಂತಾದ ಮಾಫಿಯಾಗಳು ರಾಜಕಾರಣವನ್ನು ನಿರ್ಣಯಿಸುವಂತಹ ಪರಿಸ್ಥಿತಿ ನಿರ್ಮೂಲನವಾಗಬೇಕು. ಇತ್ತೀಚಿನ ದಿನಗಳಲ್ಲಿ ಗಣಿ ಮಾಫಿಯಾದಿಂದಾಗಿ ರಾಜ್ಯ ರಾಜಕಾರಣದ ಪರಿಸ್ಥಿತಿ ಬಿಗಡಾಯಿಸಿದೆ. ರಾಜ್ಯದ ಹಿತದೃಷ್ಟಿಯನ್ನೇ ಕೇಂದ್ರೀಕರಿಸಿಕೊಂಡು ಸಂಘ ಸಂಸ್ಥೆಗಳು ಎಚ್ಚರಗೊಂಡರೆ ಕರ್ನಾಟಕಕ್ಕೊಂದು ಹೊಸದಿಕ್ಕನ್ನು ಹುಡಕಬಹುದಾಗಿದೆ.
ಹೈಕಮಾಂಡ್ ಗುಲಾಮಗಿರಿಯಿಂದ ನರಳುತ್ತಿರುವ ರಾಷ್ಟ್ರೀಯ ಪಕ್ಷಗಳ ರಾಜ್ಯ ನಾಯಕರು ಕರ್ನಾಟಕದ ಹಿತಾಸಕ್ತಿಗಳನ್ನು ಮರೆತಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಇಂತಹ ಸಂದಿಗ್ಧತೆಯಲ್ಲಿ ಪ್ರಾದೇಶಿಕ ಪಕ್ಷವೊಂದು ಮೂಡಿಬರಬೇಕಾದ ಅಗತ್ಯವಿದ್ದು ಅದಕ್ಕೆ ಸಾಮೂಹಿಕ ನಾಯಕತ್ವದ ಜೂರೂರತ್ತಿದೆ. ಕರ್ನಾಟಕದ ಹಿತವನ್ನೇ ಮುಖ್ಯವಾಗಿರಿಸಿಕೊಂಡು ಪ್ರಾದೇಶಿಕ ಪಕ್ಷವೊಂದು ಮೂಡಿಬರಬೇಕಿದೆ.
ಬಹುಪಕ್ಷಗಳ ಕೇಂದ್ರ ಸರ್ಕಾರಗಳೇ ಆಡಳಿತ ನಡೆಸುತ್ತಿರುವುದರಿಂದ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗಿದ್ದು, ಇದು ರಾಜ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಉಂಟು ಮಾಡಿದೆ. ಕೆಲ ಪ್ರಬಲ ಪ್ರಾದೇಶಿಕ ಪಕ್ಷಗಳ ಬ್ಲ್ಯಾಕ್ ಮೇಲ್ ರಾಜಕಾರಣದಿಂದಾಗಿ ಕರ್ನಾಟಕದ ಅಭಿವೃದ್ಧಿ ಕಾರ್ಯಗಳಿಗೆ ಹಲವು ಅಡೆ ತಡೆಗಳು ಉಂಟಾಗುತ್ತಿರುವುದು ಸರ್ವೇಸಾಮಾನ್ಯವಾಗಿದೆ. ಒಕ್ಕೂಟ ವ್ಯವಸ್ಥೆಯನ್ನೇ ಅಸ್ಥಿರಗೊಳಿಸುವಂತಹ ಪ್ರಾದೇಶಿಕ ಪಕ್ಷಗಳ ಅಗತ್ಯವಿಲ್ಲ. ಆದರೆ, ಪ್ರಾದೇಶಿಕ ಕಾಳಜಿಯೊಂದಿಗೆ ಪ್ರತಿನಿಧಿಸುವ ಪ್ರಾದೇಶಿಕ ಪಕ್ಷದ ಅನಿವಾರ್ಯತೆ ಇದೆ. ಬಹುಪಕ್ಷಗಳ ಕೇಂದ್ರ ಸರ್ಕಾರ ಒಕ್ಕೂಟ ವ್ಯವಸ್ಥೆಯ ಧರ್ಮಕ್ಕೆ ಬದ್ಧವಾಗಿರಬೇಕು. ನಾಡಿನ ಹಿತಕ್ಕಾಗಿ ಪ್ರಾದೇಶಿಕ ಪಕ್ಷ ರಾಜ್ಯದಲ್ಲಿ ಉದಯವಾಗಲಿ.
ಕರ್ನಾಟಕದ ಸಮಗ್ರ ಅಭಿವೃದ್ಧಿಯನ್ನೇ ಮೂಲಮಂತ್ರವಾಗಿರಿಸಿಕೊಂಡು ಜಾತಿ-ಧರ್ಮ, ಪ್ರದೇಶವಾರು ಭಿನ್ನಬೇಧವಿಲ್ಲದೇ ಹೈದರಾಬಾದ್ ಕರ್ನಾಟಕದ ಅಭಿವೃದ್ಧಿಯೂ ಸೇರಿದಂತೆ ಸಮಸ್ತ ಕರ್ನಾಟಕದ ಏಳಿಗೆಗೆ ಶ್ರಮಿಸಲು ಪೂರಕವಾದ ಉದ್ದೇಶಗಳನ್ನು ಒಳಗೊಂಡ ಪ್ರಾದೇಶಿಕ ಶಕ್ತಿ ರಾಜ್ಯದಲ್ಲಿ ಮೂಡಿಬರಲಿ.
ಪ್ರಾದೇಶಿಕ ಶಕ್ತಿಯಲ್ಲಿ ಬದ್ಧತೆಗೆ ಪ್ರಾಮುಖ್ಯತೆ ನೀಡಬೇಕು. ಚುನಾವಣೆಗಳನ್ನು ಹಣಬಲವೊಂದೇ ನಿಯಂತ್ರಿಸುವಂತಾಗಬಾರದು. ಪ್ರಾದೇಶಿಕ ಪಕ್ಷದ ಮೂಲೋದ್ದೇಶ ದುರಾಡಳಿತಕ್ಕೆ ವಿರಾಮ ಹಾಕುವ ನಿಟ್ಟಿನಲ್ಲಿರಬೇಕು. ರಾಜ್ಯದ ಮತದಾರರನ್ನು ಸರಿದಿಕ್ಕಿನಲ್ಲಿ ಕೊಂಡೊಯ್ಯುವ ಜನಾಂದೋಲನ ನಡೆಯಬೇಕಿದೆ.

ಹಿಂದಿನ ಬರೆಹಗಳು