Saturday, March 27, 2010

ಬೆಂಕಿಗೆ ಬಿದ್ದವರನ್ನು ನಾಳೆ ಎತ್ತುತ್ತೇನೆಂದರೆ ದೊರೆಯುವುದೇನು? ಬೂದಿಯಲ್ಲವೆ!


ಹೇ ರಾಜಕಾರಣಿ, ಹೇ ಮಂತ್ರಿವರೇಣ್ಯ, ಹೇ ಅಧಿಕಾರಿ ಸರ್ವೋತ್ತಮ, ಹೇ ವಣಿಗ್ವರ, ಹೇ ಶ್ರಮಜೀವಿ, ಹೇ ಹೇ ಅಧ್ಯಾಪಕ ಮಹಾಶಯ, ಓ ನೇಗಿಲಯೋಗಿ, ನೀನು ಯಾರೆ ಆಗಿರು, ಎಲ್ಲಿಯೇ ಇರು, ಕನ್ನಡವನ್ನು ಕೈಬಿಡದಿರು.

ನಾಳೆ ಎಂದರಾಗದು; ಮುಂದೆ ಎಂದರಾಗದು; ಇಂದೇ ನೀನು ನಿರ್ಣಯಿಸಬೇಕು. ಇಂದೇ ಎತ್ತಿ ಪೊರೆಯಬೇಕು. ಬೆಂಕಿಗೆ ಬಿದ್ದವರನ್ನು ನಾಳೆ ಎತ್ತುತ್ತೇನೆಂದರೆ ದೊರೆಯುವುದೇನು? ಬೂದಿಯಲ್ಲವೆ! ನೀರಿಗೆ ಬಿದ್ದವರನ್ನು ಲಭಿಸುವುದೇನು? ಹೆಣವಲ್ಲವೆ!
ಇದು ನಿನ್ನ ಭಾಷೆ; ಇದು ದೇಶಭಾಷೆ; ಇದು ಸಾವಿರಾರು ವರ್ಷಗಳ ಸುಪುಷ್ಟ ಸಾಹಿತ್ಯ ಭಾಷೆ; ಇದು ಮಹಾಕವಿಗಳನ್ನೂ, ಶಿಲ್ಪಿಗಳನ್ನೂ, ರಾಜಾಧಿರಾಜರನ್ನೂ, ವೀರಾಧಿವೀರರನ್ನೂ, ರಸಋಷಿದಾರ್ಶನಿಕರನ್ನೂ ಹಡೆದಿರುವ ಭಾಷೆ! ಏನೊ ನಡುವೆ ನಾಲ್ಕು ದಿನ ವಿಧಿ ಮುನಿಯೆ ಸಿರಿಯಳಿದು, ಮನೆ ಮುರಿಯೆ ಬೀದಿ ಸೇರಿದ ಮಾತ್ರದಿಂದ ನಿನ್ನ ತಾಯಿ ರಾಣಿಗಾಗಿದ್ದಳೆಂಬುದನ್ನು ಮರೆತುಬಿಡುವೆಯ? ಸ್ವತಂತ್ರನಾದ ಮೇಲೆಯೂ ಆಕೆಯನ್ನು ತೊತ್ತಾಗಿರಿಸುವೆಯ?

ಹೀಗೆಂದಿದ್ದರು ರಸ ಋಷಿ, ಜಗದ ಕವಿ, ಯುಗದ ಕವಿ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪನವರು. ಇದೇ ಪ್ರಶ್ನೆಗಳನ್ನು ಮತ್ತೆ ಮತ್ತೆ ಕೇಳುವ ಕಾಲ ಇದೀಗ ಉದ್ಭವಿಸಿದೆ. ಆಧುನಿಕ ಕಾಲಘಟ್ಟದಲ್ಲಿ ಜಗತ್ತೇ ಒಂದು ಹಳ್ಳಿಯಾಗುತ್ತಿದೆ ಎಂದು ಸಂಭ್ರಮಿಸುವಾಗಲೇ, ದೇಸೀಯ ಭಾಷೆ, ಸಂಸ್ಕೃತಿಗಳನ್ನು ವ್ಯವಸ್ಥಿತವಾಗಿ ಕತ್ತು ಹಿಚುಕಿ ಕೊಲ್ಲುವ ಪಿತೂರಿಗಳು ನಡೆಯುತ್ತಿವೆ.

ನಿಜ, ಕುವೆಂಪು ಅವರು ಹೇಳಿದಂತೆ ನಾವು ಎಲ್ಲವನ್ನೂ ಮರೆತಿದ್ದೇವೆ. ಕ್ರಿ.ಶ. ಆರನೆಯ ಶತಮಾನದ ಪೂರ್ವದಲ್ಲೇ ಕನ್ನಡ ಭಾಷೆಯು ರೇವಾ ನದಿ(ನರ್ಮದಾ) ತಟದ ಅರಸುಮನೆತನ ಭಾಷೆಯಾಗಿತ್ತು. ದಂತಿದುರ್ಗನೂ ಸೇರಿದಂತೆ ಗೋವಿಂದನವರೆಗೆ ರಾಷ್ಟ್ರಕೂಟ ರಾಜರ ರಾಜಧಾನಿ ವಿಧ್ಯಾಂದ್ರಿ ತಪ್ಪಲಿನ ರೇವಾನದಿ ತಪ್ಪಲಿನಲ್ಲಿ ನೆಲೆಗೊಂಡು ರೇವಾನಗರಿ ಎನಿಸಿಕೊಂಡಿತ್ತು. ಕ್ರಿ.ಶ.೬೩೪ರ ಐಹೊಳೆ ಶಾಸನದಲ್ಲಿ ಈ ಉಲ್ಲೇಖವು ಇದೆ. ಕವಿರಾಜಮಾರ್ಗದಲ್ಲಿ ಕನ್ನಡ ಭಾಷೆಯ ದಕ್ಷಿಣೋತ್ತರ ಮೇರೆಗಳು ಕಾವೇರಿ, ಗೋದಾವರಿಗಳೆಂದು ಗುರುತಿಸಲಾಗಿದೆ. ಹೀಗೆ ಕನ್ನಡವು ಅರ್ಧ ಭಾರತವನ್ನೇ ವ್ಯಾಪಿಸಿಕೊಂಡು ವೈಭವದ ಸುವರ್ಣಯುಗವನ್ನು ಕಂಡಿತ್ತು ಎಂಬುದನ್ನು ನಾವು ಮರೆತಿದ್ದೇವೆ. ಕನ್ನಡ ನಾಡು ಎಂಥೆಂಥ ಮಹಾತ್ಮರಿಗೆ ಜನ್ಮ ನೀಡಿತ್ತು ಎಂಬುದನ್ನು ಮರೆತಿದ್ದೇವೆ.
ಕನ್ನಡದಲ್ಲಿ ದೊರೆಯುವ ಮೊದಲ ಲಿಖಿತ ದಾಖಲೆ ಹಲ್ಮಿಡಿ ಶಾಸನವಾದರೂ (ಕ್ರಿ.ಶ.೪೫೦) ಅದಕ್ಕೂ ಬಹಳ ಹಿಂದೆಯೇ ಕನ್ನಡ ಲಿಪಿ ಇತ್ತೆಂಬುದು ಸ್ಪಷ್ಟ. ಅದಕ್ಕೂ ಹಿಂದೆ ಶತಮಾನಗಳ ಕಾಲ ಕನ್ನಡ ಭಾಷೆ ಆಡುಭಾಷೆಯಾಗಿ ಚಾಲ್ತಿಯಲ್ಲಿತ್ತು. ಅರ್ಥಾತ್ ೨೦೦೦ ವರ್ಷಗಳಿಗೂ ಹೆಚ್ಚು ಕಾಲದ ಇತಿಹಾಸವನ್ನು ಹೊಂದಿರುವ ನಮ್ಮ ಕನ್ನಡ ಇವತ್ತು ಸೊರಗುತ್ತಿರುವುದೇಕೆ?

ಇಲ್ಲ, ಈ ಅನ್ಯಾಯವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಹುಸಿರಾಷ್ಟ್ರೀಯತೆಯ ಹೆಸರಿನಲ್ಲಿ, ಜಾಗತೀಕರಣದ ಹೆಸರಿನಲ್ಲಿ, ಹೇಡಿತನವಾಗಿ ಮಾರ್ಪಟ್ಟಿರುವ ಸಹಿಷ್ಣುತೆಯ ಹೆಸರಿನಲ್ಲಿ ಕನ್ನಡವನ್ನು, ಕನ್ನಡಿಗರನ್ನು, ಕರ್ನಾಟಕವನ್ನು ಬಲಿಕೊಡುವವರನ್ನು ಸಹಿಸಿಕೊಂಡಿರಲು ಸಾಧ್ಯವೇ ಇಲ್ಲ.

ಇದನ್ನು ಮನಗಂಡೇ ೧೦ ವರ್ಷಗಳ ಹಿಂದೆ ಉದ್ಭವವಾಗಿದ್ದು ಕರ್ನಾಟಕ ರಕ್ಷಣಾ ವೇದಿಕೆ. ಅದು ಈಗ ಹಿಮಾಲಯಸದೃಶವಾಗಿ ಬೆಳೆದು ನಿಂತಿದೆ. ಕರ್ನಾಟಕದ ಉದ್ದಗಲಕ್ಕೂ ವ್ಯಾಪಿಸಿಕೊಂಡು ಲಕ್ಷಾಂತರ ಕನ್ನಡದ ಯುವಕ-ಯುವತಿಯರನ್ನು ಕನ್ನಡದ, ಕನ್ನಡಿಗರ ಉಳಿವಿಗೆ ಸಜ್ಜುಗೊಳಿಸಿದೆ. ಇಂಥ ವಿರಾಟ್ ಸಂಘಟನೆಯ ಹಿಂದಿರುವ ಧೀಶಕ್ತಿ ಶ್ರೀ ಟಿ.ಎ.ನಾರಾಯಣಗೌಡರು. ಅವರ ನೇತೃತ್ವದಲ್ಲಿ ಕನ್ನಡದ ಕಹಳೆ ಹಳ್ಳಿಯಿಂದ ದಿಲ್ಲಿಯವರೆಗೆ ಮೊಳಗುತ್ತಿದೆ.

ಕರ್ನಾಟಕ ರಕ್ಷಣಾ ವೇದಿಕೆಯ ಮುಖವಾಣಿಯಾಗಿ ಒಂದು ಪತ್ರಿಕೆ ಹೊರಬರಬೇಕು ಎಂಬುದು ಲಕ್ಷಾಂತರ ಕಾರ್ಯಕರ್ತರ ಬಹುಕಾಲ ಬೇಡಿಕೆಯಾಗಿದ್ದು. ಕರವೇ ನಲ್ನುಡಿಯ ಮೂಲಕ ಈ ಕನಸು ನನಸಾಗುತ್ತಿದೆ. ಇದು ರಕ್ಷಣಾ ವೇದಿಕೆಯ ಮುಖವಾಣಿ ಮಾತ್ರವಲ್ಲದೆ ಇಡೀ ಕರ್ನಾಟಕದ ಕೈಗನ್ನಡಿಯಾಗಬೇಕು, ಕನ್ನಡಿಗರ ಒಡಲಧ್ವನಿಯಾಗಬೇಕು ಎಂಬುದು ನಮ್ಮ ಆಶಯ. ನಲ್ನುಡಿ ಕರ್ನಾಟಕ ರಕ್ಷಣಾ ವೇದಿಕೆಯ ಸಾಂಸ್ಕೃತಿಕ ಮುಖವನ್ನು ಪರಿಚಯಿಸುತ್ತದೆ. ನಲ್ನುಡಿ ಎಂದರೆ ಒಳ್ಳೆಯ ಅಕ್ಕರೆಯ ಪ್ರೀತಿಯ ಮಾತು. ನಾವು ಇಲ್ಲಿ ಒಳ್ಳೆಯ ಮಾತನ್ನೇ ದಾಖಲಿಸುತ್ತೇವಾದರೂ, ಕನ್ನಡ ದ್ರೋಹಿಗಳು ಇದನ್ನೇ ನಿರೀಕ್ಷಿಸುವಂತಿಲ್ಲ. ಕಪ್ಪೆ ಅರಭಟ್ಟನ ಶಾಸನದಲ್ಲಿ ಬರೆಯಲಾಗಿರುವಂತೆ ಕನ್ನಡಿಗರು ಸಾಧುಗೆ ಸಾಧು, ಮಾಧುರ್ಯಂಗೆ ಮಾಧುರ್ಯಂ, ಬಾದಿಪ್ಪ ಕಲಿಗೆ ಕಲಿಯುಗ ವಿಪರೀತನ್! ನಾವು ಸಹ ಹೀಗೆಯೇ.

ನಲ್ನುಡಿಯನ್ನು ಪ್ರೀತಿಯಿಂದ ಬರಮಾಡಿಕೊಳ್ಳಿ, ಪೋಷಿಸಿ. ಕನ್ನಡದ ಕೈಂಕರ್ಯದಲ್ಲಿ ನಾವು-ನೀವು ಎಲ್ಲರೂ ನಡೆಯುವ ಹಾದಿ ಇನ್ನೂ ಸಾಕಷ್ಟು ದೂರವಿದೆ. ನಿಮ್ಮ ಸಹಚಾರ ನಮಗಿರಲಿ.

ಕುವೆಂಪು ಅವರು ಹೇಳಿದಂತೆ ಅನ್ಯಮೋಹಕ್ಕೆ ಇಂದು ಅವಕಾಶವಿಲ್ಲ, ಮೀನಮೇಷಕ್ಕೆ ಇದು ಸಮಯವಲ್ಲ. ಧೈರ್ಯವಿರಲಿ, ಶ್ರದ್ಧೆಯಿರಲಿ; ಮನಸ್ಸು ಚಂಚಲವಾಗದಿರಲಿ.

-ವಿಶಾಲಾಕ್ಷಿ
ಸಂಪಾದಕಿ

No comments:

Post a Comment