Saturday, June 5, 2010

ಅಪಘಾತವಲ್ಲ, ಸಾಮೂಹಿಕ ಕೊಲೆ!


ವಿಶಾಲಾಕ್ಷಿ
ಸಂಪಾದಕಿ




ಮೇ ೨೨ರಂದು ಮಂಗ ಳೂರಿನ ಬಜ್ಪೆ ವಿಮಾನ ನಿಲ್ದಾಣದಲ್ಲಿ ನಡೆದ ದುರ್ಘಟನೆಯಿಂದಾಗಿ ೧೫೮ ಮಂದಿ ಮೃತಪಟ್ಟಿದ್ದಾರೆ. ೧೫೮ ಮಂದಿ ನತದೃಷ್ಟರು ಅಪಘಾತದಿಂದ ಸತ್ತರು ಎಂಬುದಕ್ಕಿಂದ ಕೊಲೆಗೀಡಾದರು ಎಂದರೆ ಸೂಕ್ತವೆನಿಸುತ್ತದೆ. ಮಂಗಳೂರು ವಿಮಾನ ನಿಲ್ದಾಣ ಕಳಪೆ ಗುಣಮಟ್ಟದ್ದು ಎಂಬುದು ಓಡಾಡುವ ಪ್ರಯಾಣಿಕರಿಗೇ ಗೊತ್ತಿರುವ ವಿಷಯ. ಈ ಬಗ್ಗೆ ನ್ಯಾಯಾಲಯಗಳಲ್ಲೂ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳು ದಾಖಲಾಗಿದ್ದವು. ಆದರೆ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ನ್ಯಾಯಾಲಯಗಳಲ್ಲಿ ಸುಳ್ಳು ಪ್ರಮಾಣಪತ್ರ ಸಲ್ಲಿಸಿ, ಮೊಕದ್ದಮೆಗಳು ವಜಾ ಆಗಲು ಕಾರಣರಾಗಿದ್ದರು.
ಇದೀಗ ಆಗಬಾರದ್ದು ಆಗಿಹೋಗಿದೆ, ೧೫೮ ಮಂದಿ ಅಮಾಯಕರು ಜೀವ ತೆತ್ತಿದ್ದಾರೆ. ಈ ಜೀವಗಳನ್ನು ಹಿಂದಿರುಗಿಸಲು ನಾಗರಿಕ ವಿಮಾನಯಾನ ಸಚಿವಾಲಯಕ್ಕಾಗಲಿ, ಏರ್ ಇಂಡಿಯಾಗಾಗಲಿ, ವಿಮಾನ ನಿಲ್ದಾಣ ಪ್ರಾಧಿಕಾರಕ್ಕಾಗಲಿ, ಕೇಂದ್ರ-ರಾಜ್ಯ ಸರ್ಕಾರಗಳಿಗಾಗಲಿ ಸಾಧ್ಯವಿಲ್ಲ. ಹೋದವರು ಹೋದರು, ಒಂದಷ್ಟು ದಿನ ಅದರ ಸುದ್ದಿ, ನಂತರ ಎಲ್ಲವೂ ತಣ್ಣಗಾಗುತ್ತದೆ; ಮುಂದಿನ ಅವಘಡ ಜರುಗುವವರೆಗೆ.
ಅಪಘಾತಕ್ಕೆ ಕಾರಣಗಳೇನು ಎಂಬುದು ಇಲ್ಲಿಯವರೆಗೆ ಗೊತ್ತಾಗಿಲ್ಲ. ಪೈಲೆಟ್ ದೋಷವೋ, ವಿಮಾನದ ದೋಷವೋ ಎಂಬುದು ಇನ್ನೂ ತೀರ್ಮಾನಕ್ಕೆ ಬರಲಾಗಿಲ್ಲ. ಎಲ್ಲ ರಹಸ್ಯಗಳನ್ನು ಬಯಲು ಮಾಡಬಹುದಿದ್ದ ‘ಕಪ್ಪು ಪೆಟ್ಟಿಗೆ’ಯೂ ಸುಟ್ಟು ಹೋಗಿರುವುದರಿಂದ ರಹಸ್ಯಗಳು ರಹಸ್ಯಗಳಾಗೇ ಉಳಿಯಲಿವೆ. ಆದರೆ ಒಂದಂತೂ ನಿಜ. ಮಂಗಳೂರು ವಿಮಾನ ನಿಲ್ದಾಣ ಅಂತಾರಾಷ್ಟ್ರೀಯ ಗುಣಮಟ್ಟವನ್ನು ಹೊಂದಿದ್ದರೆ, ಈ ಅಪಘಾತ ನಡೆಯುತ್ತಿರಲಿಲ್ಲ. ಬಜ್ಪೆ ವಿಮಾನ ನಿಲ್ದಾಣದ ಅಪಾಯಕಾರಿ ೨ನೇ ರನ್‌ವೇ ತುರ್ತು ವಿಮಾನಸ್ಪರ್ಶಕ್ಕೆ ಯೋಗ್ಯವಾಗಿರಲಿಲ್ಲ. ರನ್ ವೇ ಇನ್ನೂ ಉದ್ದವಿದ್ದಿದ್ದರೆ, ಅಪಘಾತ ನಡೆಯುತ್ತಿರಲಿಲ್ಲ.
ಇಂಥ ದುರಂತ ಸಂಭವಿಸಬಹುದು ಎಂಬ ಉದ್ದೇಶದಿಂದಲೇ ‘ವಿಮಾನ ನಿಲ್ದಾಣ ವಿಸ್ತರಣಾ ವಿರೋಧಿ ಸಮಿತಿ’ ಹಾಗು ಇತರ ಸಂಘಟನೆಗಳು ೧೯೯೦ರಿಂದಲೂ ಬಜ್ಪೆ ವಿಮಾನ ನಿಲ್ದಾಣವನ್ನು ಅವೈಜ್ಞಾನಿಕವಾಗಿ, ಅಪಾಯಕಾರಿಯಾಗಿ ವಿಸ್ತರಿಸುವುದನ್ನು ವಿರೋಧಿಸುತ್ತ ಬಂದಿದ್ದವು. ಮಾತ್ರವಲ್ಲ, ೧೯೯೭ರಲ್ಲಿ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನೂ ಹೂಡಿದ್ದವು.
ಆದರೆ ಈ ಸಂಬಂಧ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿದ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಮುಖ್ಯಸ್ಥರು, ರನ್ ವೇ ಅಗಲ ಮತ್ತು ಉದ್ದ ಕಡಿಮೆ ಇದೆ ಎಂಬ ವಾದವನ್ನು ತಳ್ಳಿ ಹಾಕಿದ್ದರಲ್ಲದೆ, ಅಂತರಾಷ್ಟ್ರೀಯ ಗುಣಮಟ್ಟದಲ್ಲೇ ರನ್ ವೇ ನಿರ್ಮಿಸಲಾಗಿದೆ ಎಂದು ಹೇಳಿದ್ದರು. ನ್ಯಾಯಾಲಯವೂ ಸಹ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳ ಮಾತನ್ನು ನಂಬಿ, ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳನ್ನು ವಜಾ ಮಾಡಿತ್ತು. ಅದಾದ ನಂತರವೂ ಹಲವಾರು ವರ್ಷಗಳ ಕಾಲ ಮತ್ತೆ ಮತ್ತೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳನ್ನು ಹೂಡಲಾಯಿತು. ಈ ಮೊಕದ್ದಮೆಗಳನ್ನು ನ್ಯಾಯಾಲಯ ವಜಾಗೊಳಿಸುತ್ತಲೇ ಬಂದಿತಾದರೂ, ಪದೇಪದೇ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಹಾಗು ಕೇಂದ್ರ ಸರ್ಕಾರಕ್ಕೆ ಅರ್ಜಿಯ ಗಂಭೀರತೆಯನ್ನು ಪರಿಗಣಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆದೇಶಿಸುತ್ತ ಬಂದಿತ್ತು.
ಅವಘಡ ನಡೆದು ಹೋಗಿದೆ. ಇದನ್ನು ಅವಘಡ ಎನ್ನುವುದಕ್ಕಿಂತ ವಿಮಾನ ನಿಲ್ದಾಣ ಪ್ರಾಧಿಕಾರ, ಸರ್ಕಾರ, ಏರ್ ಇಂಡಿಯಾ ನಡೆಸಿದ ಸಾಮೂಹಿಕ ಕೊಲೆ ಎಂದರೂ ತಪ್ಪಾಗಲಾರದು. ಆದರೂ ದುರಂತವೆಂದರೆ ಯಾರೂ ಸಹ ಈ ದುರ್ಘಟನೆಯ ನೈತಿಕ ಜವಾಬ್ದಾರಿ ಹೊತ್ತುಕೊಳ್ಳಲು ಸಿದ್ಧರಿಲ್ಲ. ಒಬ್ಬರು ಮತ್ತೊಬ್ಬರ ಮೇಲೆ ಜವಾಬ್ದಾರಿ ಹೊರೆಸುವುದರಲ್ಲಿ ನಿಸ್ಸೀಮರು. ೧೫೮ ಕುಟುಂಬಗಳ ಆಕ್ರಂದನಕ್ಕೆ ಬೆಲೆ ತೆರುವವರು ಯಾರು ಎಂದರೆ ಯಾರ ಬಳಿಯೂ ಉತ್ತರವಿಲ್ಲ.
*****
ಯಾಕೋ, ಏನೋ ಮೇ ತಿಂಗಳು ರಾಜ್ಯದ ಪಾಲಿಗೆ ಕಹಿಯಾಗಿ ಹೋಯಿತು. ಚಳ್ಳೆಕೆರೆಯ ಬಳಿ ಮೇ.೩೦ರಂದು ನಡೆದ ಬಸ್ ದುರಂತದಲ್ಲಿ ೩೦ ಮಂದಿ ಅಸುನೀಗಿದರು. ಎಲ್ಲರೂ ಕೂಲಿ ಮಾಡಲೆಂದು ಬೆಂಗಳೂರಿಗೆ ಕೆಲಸ ಅರಸಿಕೊಂಡು ಬರುತ್ತಿದ್ದವರು. ನೆರೆಯಲ್ಲಿ ಎಲ್ಲವನ್ನು ಕಳೆದುಕೊಂಡ ಜನರೂ ಈ ಪೈಕಿ ಬಹಳಷ್ಟಿದ್ದರು. ಬಸ್ ಚಾಲಕನ ಬೇಜವಾಬ್ದಾರಿತನಕ್ಕೆ ೩೦ ಜೀವಗಳು ಬಲಿಯಾದವು. ಮತ್ತೆ ಹಲವರು ಮಾರಣಾಂತಿಕವಾಗಿ ಗಾಯಗೊಂಡರು. ಎಲ್ಲರೂ ಬಡಪಾಯಿಗಳೇ. ಯಥಾಪ್ರಕಾರ ರಾಜ್ಯ ಸರ್ಕಾರ ಮೃತರ ಕುಟುಂಬಗಳಿಗೆ ಒಂದಷ್ಟು ಪರಿಹಾರ ಘೋಷಿಸಿದೆ. ಪರಿಹಾರಗಳು ಕಳೆದುಕೊಂಡವರನ್ನು ವಾಪಾಸು ತಂದುಕೊಡಲಾರವು.
*****
ಉತ್ತರ ಕರ್ನಾಟಕದಲ್ಲಿ ಸಂಭವಿಸಿದ ನೆರೆಯಿಂದಾಗಿ ಸಂತ್ರಸ್ತರಾದ ಜನರ ಬದುಕು ಕಟ್ಟಿಕೊಡುವುದಾಗಿ ಸರ್ಕಾರ ಘೋಷಣೆಗಳ ಮೇಲೆ ಘೋಷಣೆಗಳನ್ನು ಮಾಡಿತ್ತು. ಸ್ವತಃ ಮುಖ್ಯಮಂತ್ರಿಗಳೇ ಚಂದಾ ವಸೂಲಿ ಮಾಡಿ, ನೆರೆಯಲ್ಲಿ ನೊಂದವರ ಮೊಗಗಳಲ್ಲಿ ಮಂದಹಾಸ ಚಿಗುರಿಸುವುದಾಗಿ ಹೇಳಿಕೊಂಡಿದ್ದರು. ಆದರೆ ಉತ್ತರ ಕರ್ನಾಟಕ ಭಾಗಗಳಲ್ಲಿ ಇನ್ನೂ ಮನೆಗಳ ನಿರ್ಮಾಣವಾಗಿಲ್ಲ. ಮನೆ, ಹೊಲ, ಗದ್ದೆ ಕಳೆದುಕೊಂಡ ಜನರು ಆತ್ಮಹತ್ಯೆಯ ಹಾದಿ ಹಿಡಿದಿದ್ದಾರೆ. ನೆರೆ ಸಂತ್ರಸ್ತರ ಪುನರ್ ವಸತಿಗಾಗಿ ೧೦ ಕೋಟಿ ರೂ. ದೇಣಿಗೆ ನೀಡಿದ್ದ ಪೂಜ್ಯ ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರು, ಕೊಟ್ಟ ಹಣ ಏನಾಯ್ತು, ಲೆಕ್ಕ ಕೊಡಿ ಎಂದು ಸರ್ಕಾರಕ್ಕೆ ಬಹಿರಂಗವಾಗಿಯೇ ಕೇಳಿದ್ದಾರೆ. ಎಲ್ಲ ದಾನಿಗಳೂ ಸಹ ಅದನ್ನೇ ಕೇಳುವ ದಿನಗಳು ಹತ್ತಿರವಾಗುತ್ತಿವೆ. ಸರ್ಕಾರ ನೆರೆ ಸಂತ್ರಸ್ತರನ್ನು ಮರೆತು ಎಷ್ಟೋ ದಿನಗಳಾಗಿ ಹೋದವು.
ಅಲ್ಲಿ ಸಾವಿರಾರು ಜನ ಪರಿಹಾರ ಶಿಬಿರಗಳಲ್ಲಿ ಭಿಕ್ಷುಕರಿಗಿಂತಲೂ ಕಡೆಯಾಗಿ ಬದುಕುತ್ತಿದ್ದರೆ, ಇತ್ತ ಬೆಂಗಳೂರಿನಲ್ಲಿ ಸಾವಿರಾರು ಕೋಟಿ ರೂ. ವೆಚ್ಚದಲ್ಲಿ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಯುತ್ತಿದೆ. ಸಮಾವೇಶದ ಹೆಸರಿನಲ್ಲಿ ಕರ್ನಾಟಕದ ಭೂಮಿಯನ್ನು, ನೀರನ್ನು, ಭೌಗೋಳಿಕ ಸಂಪತ್ತನ್ನು ಹರಾಜಿಗಿಡುವ ಕೆಲಸವನ್ನು ಸರ್ಕಾರ ಮಾಡುತ್ತಿದೆ.

ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದ ಹಿಂದಿನ ಮಸಲತ್ತುಗಳೇನು ಎಂಬುದರ ಕುರಿತು ಈ ಸಂಚಿಕೆಯಲ್ಲಿ ವಿಸ್ತ್ರತ ವರದಿಯಿದೆ. ಹಾಗೆಯೇ ಹೊಗೇನಕಲ್ ಕರ್ನಾಟಕಕ್ಕೆ ಸೇರಿದ್ದು ಎಂಬುದಕ್ಕೆ ಸಾಕ್ಷಿಯನ್ನೂ ಈ ಸಂಚಿಕೆಯಲ್ಲಿ ಒದಗಿಸಿದ್ದೇವೆ. ನಮ್ಮೆಲ್ಲರ ಪ್ರೀತಿಯ ಕವಿ ಪ್ರೊ.ಕೆ.ಎಸ್.ನಿಸಾರ್ ಅಹಮದ್ ‘ನಲ್ನುಡಿ’ಗೆ ವಿಶೇಷ ಸಂದರ್ಶನ ನೀಡಿದ್ದಾರೆ. ‘ನಲ್ನುಡಿ’ ಲೋಕಾರ್ಪಣೆ ಸಂದರ್ಭದಲ್ಲಿ ಡಾ.ಯು.ಆರ್.ಅನಂತಮೂರ್ತಿಯವರು ಆಡಿದ ಮಾತುಗಳ ಪೂರ್ಣಪಾಠವೂ ಈ ಸಂಚಿಕೆಯಲ್ಲಿದೆ. ಈ ಬಾರಿ ನೂರು ಪುಟಗಳ ‘ನಲ್ನುಡಿ’ ನಿಮ್ಮ ಮುಂದಿದೆ. ಓದಿ, ನಿಮ್ಮ ಅಭಿಪ್ರಾಯ ಹೇಳಲು ಮರೆಯಬೇಡಿ.
*****
ಮಂಗಳೂರು, ಚಳ್ಳೆಕೆರೆಗಳಲ್ಲಿ ನಡೆದ ದುರ್ಘಟನೆಗಳಲ್ಲಿ ನಮ್ಮನ್ನು ಅಗಲಿ ಹೋದ ಎಲ್ಲ ಜೀವಗಳಿಗೂ ‘ನಲ್ನುಡಿ’ ತನ್ನ ಕಂಬನಿಯನ್ನು ಸಮರ್ಪಿಸುತ್ತದೆ. ಅಸುನೀಗಿದವರ ಕುಟುಂಬಗಳು ಎಲ್ಲ ನೋವು ಮರೆತು ಮತ್ತೆ ಹೊಸ ಬದುಕನ್ನು ಎದುರುಗೊಳ್ಳುವಂತಾಗಲಿ ಎಂದು ಹಾರೈಸುತ್ತೇನೆ.

Friday, June 4, 2010

ಕನ್ನಡ ಕೊಲ್ಲುವ ಮುನ್ನ ಎನ್ನ ಕೊಲ್ಲು



ಟಿ.ಎ.ನಾರಾಯಣಗೌಡ

‘ಕರವೇ ನಲ್ನುಡಿ ಲೋಕಾರ್ಪಣೆಯ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಕರವೇ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರು ಮಾಡಿದ ಅಧ್ಯಕ್ಷತೆಯ ಭಾಷಣ ಇಲ್ಲಿದೆ. ಕನ್ನಡ ನಾಡು-ನುಡಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ವಿಸ್ತ್ರತವಾಗಿ ಮಾತನಾಡಿದ ಗೌಡರು, ರಾಜಕೀಯ ವ್ಯವಸ್ಥೆ ಕನ್ನಡ-ಕರ್ನಾಟಕ-ಕನ್ನಡಿಗರನ್ನು ಮರೆತು ಮುಂದೆ ಹೋಗುತ್ತಿರುವ ಕುರಿತಂತೆ ನೋವಿನಿಂದ ಪ್ರಸ್ತಾಪಿಸಿದರು. ಕನ್ನಡ ಹೋರಾಟಗಾರರ ಮೇಲಿನ ಮೊಕದ್ದಮೆಗಳು, ಬೆಂಗಳೂರು ಎದುರಿಸುತ್ತಿರುವ ಸಮಸ್ಯೆಗಳು, ಕನ್ನಡಿಗರು ಅನುಭವಿಸುತ್ತಿರುವ ಯಾತನೆ, ಬದುಕು ಕಳೆದುಕೊಂಡ ಕುಶಲಕರ್ಮಿಗಳ ಬವಣೆ, ಜನಪ್ರತಿನಿಧಿಗಳ ಬೇಜವಾಬ್ದಾರಿತನ... ಈ ಎಲ್ಲ ವಿಷಯಗಳ ಕುರಿತು ಮಾತನಾಡಿದರು. ಅವರ ಭಾಷಣ ನಮ್ಮ ಜನಪ್ರತಿನಿಧಿಗಳ ಕಣ್ತೆರೆಸುವಂತಿದೆ. ಒಮ್ಮೆ ಜುಳುಜುಳು ಹರಿವ ನದಿ, ಮತ್ತೊಮ್ಮೆ ಸಿಡಿಲು-ಗುಡುಗು, ಮತ್ತೊಮ್ಮೆ ಕೋಲ್ಮಿಂಚು... ಹೀಗಿತ್ತು ಗೌಡರ ವಾಗ್ಝರಿ.

ಎಲ್ಲಾ ಆತ್ಮೀಯ ಕನ್ನಡ ಬಂಧುಗಳೇ, ಸಡಗರದಿಂದ, ಸಂಭ್ರಮದಿಂದ ಕಾರ್ಯಕ್ರಮವನ್ನು ವೀಕ್ಷಣೆ ಮಾಡುತ್ತಿರುವ ಕರ್ನಾಟಕ ರಕ್ಷಣಾ ವೇದಿಕೆಯ ಕನ್ನಡ ಸೇನಾನಿಗಳೇ,
ನಿಮಗೇನಾದರೂ ಖುಷಿ ಆದರೆ ಜೋರಾಗಿ ಚಪ್ಪಾಳೆ ಹೊಡೆಯಿರಿ. ಶಿಳ್ಳೆ ಹೊಡೆಯಬೇಡಿರಿ. ಶಿಳ್ಳೆ ಹೊಡೆಯುವುದು ಕರ್ನಾಟಕ ರಕ್ಷಣಾ ವೇದಿಕೆಯ ಸಂಸ್ಕೃತಿ ಅಲ್ಲ. ಯಾರಿಗೆ ಏನು ಅನಿಸುತ್ತೋ ಗೊತ್ತಿಲ್ಲ. ಏನೇ ಕಾರ್ಯಕ್ರಮ ಮಾಡಿದರೂ ನಾವೆಲ್ಲಾ ಒಟ್ಟಾಗಿ ಕುಳಿತು ನಾಡು, ನುಡಿ ಬಗ್ಗೆ ಗಂಭೀರವಾದ ಚಿಂತನೆ ನಡೆಸಬೇಕು ಎಂದು ಬಯಸುವವನು ನಾನು. ನಮ್ಮ ಭಾವನೆಗಳನ್ನು ಗಂಭೀರವಾಗಿ ಹಂಚಿಕೊಳ್ಳಲು ಇದೊಂದು ವೇದಿಕೆ. ಹಾಗಾಗಿ ಶಿಳ್ಳೆ ಬೇಡ, ಚಪ್ಪಾಳೆ ಇರಲಿ.
ಸಮಸ್ತ ಕನ್ನಡಿಗರ ಜೊತೆ ನಮ್ಮೆಲ್ಲರ ಭಾವನೆಗಳನ್ನು, ದುಃಖ ದುಮ್ಮಾನಗಳನ್ನು ಹಂಚಿಕೊಳ್ಳಲು ಒಂದು ಮಾಧ್ಯಮದ ಅವಶ್ಯಕತೆ ಇತ್ತು. ಕರ್ನಾಟಕ ರಕ್ಷಣಾ ವೇದಿಕೆಯ ಮುಖವಾಣಿಯಾಗಿ ಕೆಲಸ ಮಾಡುವಂಥ ಒಂದು ಮಾಧ್ಯಮ ಬೇಕು ಎಂದು ಅನೇಕ ಸಂದರ್ಭಗಳಲ್ಲಿ ಅನಿಸುತ್ತಾ ಇತ್ತು. ಅಂಥದೊಂದು ದಿನ ಇಂದು ಒದಗಿ ಬಂದಿದೆ.
ಈ ಪತ್ರಿಕೆಯನ್ನು ಕರ್ನಾಟಕ ರಕ್ಷಣಾ ವೇದಿಕೆಯ ಮುಖವಾಣಿ ಅನ್ನುವುದಕ್ಕಿಂತ ಐದೂವರೆ ಕೋಟಿ ಕನ್ನಡಿಗರ ಮುಖವಾಣಿ ಎಂದು ನಾನಾದರೂ ಭಾವಿಸಿದ್ದೇನೆ. ಕನ್ನಡದ ಜ್ಯೋತಿಯನ್ನು ಹಿರಿಯರು ಹಚ್ಚಿದ್ದಾರೆ. ಆ ಜ್ಯೋತಿ ನಿರಾತಂಕವಾಗಿ ಉರಿಯುತ್ತಿದೆ. ಕರ್ನಾಟಕದ ಪ್ರತಿಯೊಬ್ಬನ ಮನೆಯಲ್ಲೂ ಈ ಜ್ಯೋತಿ ಇರಬೇಕು ಮತ್ತು ಅದು ಸದಾ ಬೆಳಕು ಹರಿಸುತ್ತಲೇ ಇರಬೇಕು ಎಂದು ನಾನು ಹಾರೈಸುತ್ತೇನೆ.
ಪತ್ರಿಕೆಯನ್ನು ಹೊರ ತರುವ ಸಂದರ್ಭದಲ್ಲಿ ನಮ್ಮ ದಿನೇಶ್ ಅವರಿಗೆ ಒಂದು ಮಾತು ಹೇಳಿದ್ದೆ. ಕರವೇಯಲ್ಲಿ ಏನೇ ಕೆಲಸ ಮಾಡಿದರೂ ಗುಣಮಟ್ಟದಲ್ಲಿ ಕಳಪೆಯಾಗಬಾರದು. ಎಲ್ಲಾ ರೀತಿಯಲ್ಲೂ ಆಂಗ್ಲ ಪತ್ರಿಕೆಗಳಿಗಿಂತಲೂ ಈ ಪತ್ರಿಕೆ ಒಳ್ಳೆಯ ಗುಣಮಟ್ಟದಲ್ಲಿ ಹೊರಬರಬೇಕು ಅಂತ ಅವರಿಗೆ ಹೇಳಿದ್ದೆ. ದಿನೇಶ್ ಅವರು ಸಹ ಬಹಳ ದಿನಗಳಿಂದ ಕರ್ನಾಟಕ ರಕ್ಷಣಾ ವೇದಿಕೆಗೊಂದು ಮುಖವಾಣಿ ಬೇಕು ಅಂತ ಹೇಳುತ್ತಲೇ ಇದ್ದರು. ಇವತ್ತು ನಮ್ಮೆಲ್ಲರ ಆಸೆ ಇಡೀ ಲಕ್ಷಾಂತರ ನನ್ನ ಕಾರ್ಯಕರ್ತರ ಆಸೆ ಈಡೇರಿದೆ ಅಂತ ಭಾವಿಸಿದ್ದೇನೆ.
ಈ ಕಾರ್ಯಕ್ರಮದಲ್ಲಿ ಬಹಳ ಮಹತ್ವದ ಗಣ್ಯರು ಭಾಗವಹಿಸಿದ್ದಾರೆ. ನಾವು ಕಲ್ಯಾಣ ಕರ್ನಾಟಕ ಎಂದು ಕರೆಯುವ ಹೈದ್ರಾಬಾದ್-ಕರ್ನಾಟಕ ಭಾಗದ ಬೀದರ್ ಜಿಲ್ಲೆಯಲ್ಲಿ ನಿಜಾಮರ ಕಾಲದಲ್ಲಿ ಕನ್ನಡವನ್ನು ಮಾತನಾಡುವುದೇ ಕಷ್ಟದ ಕೆಲಸವಾಗಿತ್ತು. ದೌರ್ಜನ್ಯ, ದಬ್ಬಾಳಿಕೆ ನಡುವೆಯೂ ತಮ್ಮ ಮಠದ ಹೊರಗೆ ಉರ್ದು ನಾಮಫಲಕವನ್ನು ಹಾಕಿ ಒಳಗೆ ಕನ್ನಡ ಕಲಿಸಿದ ಒಂದು ಮಠವಿದೆ; ಅದು ಭಾಲ್ಕಿ ಮಠ. ಈ ಇತಿಹಾಸವುಳ್ಳ ಮಠದ ಪರಮಪೂಜ್ಯರಾದ ಶ್ರೀ ಡಾ. ಬಸವಲಿಂಗ ಪಟ್ಟದೇವರು ಅವರಿಗೆ ಕಾರ್ಯಕ್ರಮದ ಸಾನ್ನಿಧ್ಯವನ್ನು ವಹಿಸಲು ಮನವಿ ಮಾಡಿದ್ದೆ. ನೀವು ಬಂದರೆ ಕಾರ್ಯಕ್ರಮಕ್ಕೆ ನಿಜವಾದ ಅರ್ಥ ದೊರೆಯುತ್ತದೆ ಎಂದು ಹೇಳಿದ್ದೆ. ಅವರು ಬಂದಿದ್ದಾರೆ, ಅವರ ಪಾದಗಳಿಗೆ ನನ್ನ ನಮಸ್ಕಾರಗಳು.
ಕನ್ನಡದ ಸಾಹಿತ್ಯ ಶಿಖರ ಡಾ.ಯು.ಆರ್.ಅನಂತಮೂರ್ತಿಯವರು ‘ಕರವೇ ನಲ್ನುಡಿ’ ಪತ್ರಿಕೆಯನ್ನು ಲೋಕಾರ್ಪಣೆ ಮಾಡಿದ್ದಾರೆ. ಸಾಹಿತಿ ಎಂದರೆ ಕಾವ್ಯ, ನಾಟಕ, ಗದ್ಯ ಬರೆದು ಪುಸ್ತಕ ಪ್ರಕಟಣೆ ಮಾಡುವುದಕ್ಕೆ ಸೀಮಿತರಾಗುವರು ಇದ್ದಾರೆ. ಆದರೆ, ಅನಂತಮೂರ್ತಿಯವರು ಹಾಗಲ್ಲ. ನಾಡಿಗೆ ಕಂಟಕವಾಗುವ ಯಾವುದೇ ತೀರ್ಮಾನಗಳನ್ನು ಸರ್ಕಾರ ಅಥವಾ ಯಾವುದೇ ಸಂಸ್ಥೆ-ವ್ಯಕ್ತಿ ತೆಗೆದುಕೊಂಡಾಗ ನಾನು ಹೇಳಬೇಕಾದದ್ದನ್ನು ಹೇಳಿಯೇ ತೀರುತ್ತೇನೆ ಎಂದು ಪ್ರತಿಕ್ರಿಯಿಸುವರು ಅನಂತಮೂರ್ತಿಯವರು. ಕನ್ನಡಕ್ಕೆ ಮಾರಕವಾಗುವ ಎಂಥದೇ ದೊಡ್ಡ ಶಕ್ತಿ ಇದ್ದರೂ ಅದರ ವಿರುದ್ಧ ಹೋರಾಡಲು ಅವರು ನಿಂತು ಬಿಡುತ್ತಾರೆ. ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿರುವ ಅನಂತಮೂರ್ತಿಯವರು ಅನೇಕ ಸಂದರ್ಭಗಳಲ್ಲಿ ತಮ್ಮ ಚಾಟಿಯೇಟಿನಂತಹ ಮಾತುಗಳ ಮೂಲಕ ಎಚ್ಚರಿಸುತ್ತಾ ಇರುತ್ತಾರೆ.
’ನೀವು ಹೀಗೆ ಕೂತರೆ ಆಗೋದಿಲ್ಲ. ಹೆಚ್ಚು ಹೆಚ್ಚು ಕೆಲಸ ಮಾಡಿ. ಆ ಶಕ್ತಿ ನಿಮಗಿದೆ’ ಎಂದು ನಮ್ಮನ್ನು ಎಚ್ಚರಿಸುವ ಅನಂತಮೂರ್ತಿಯವರು ಇವತ್ತು ಮಾತನಾಡುವ ಸಂದರ್ಭದಲ್ಲಿ ತಮ್ಮ ನೋವುಗಳನ್ನು ವ್ಯಕ್ತಪಡಿಸಿದರು. ’ನನ್ನ ಕೊನೆಯ ಆಸೆಗಳನ್ನು, ಭಾವನೆಗಳನ್ನು ನಿಮ್ಮ ಮುಂದೆ ಹಂಚಿಕೊಳ್ಳುತ್ತಿದ್ದೇನೆ’ ಎಂದರು. ಅವರ ನೋವು ಕನ್ನಡದ ನೆಲದ ನೋವು, ಕನ್ನಡಿಗರ ನೋವು. ತಮ್ಮ ಭಾವನೆಗಳನ್ನು ಹೀಗೆ ಮುಕ್ತವಾಗಿ ವ್ಯಕ್ತಪಡಿಸಿದ್ದಕ್ಕಾಗಿ ನಾನು ಅವರಿಗೆ ಧನ್ಯವಾದ ಅರ್ಪಿಸುತ್ತೇನೆ.
ಸಮಾರಂಭದಲ್ಲಿ ಮೋಟಮ್ಮನವರಿದ್ದಾರೆ. ನಾಡು-ನುಡಿ ಬಗ್ಗೆ ಅಪಾರವಾದ ಕಾಳಜಿ ಇರುವವರು ಅವರು. ಸಾಹಿತ್ಯ, ಜನಪದ, ಸಂಸ್ಕೃತಿಗಳ ಬಗ್ಗೆ ಆಸಕ್ತಿ ಇಟ್ಟುಕೊಂಡಿದ್ದಾರೆ. ನಾನು ಬಹಳಷ್ಟು ಸಂದರ್ಭದಲ್ಲಿ ಗಮನಿಸಿದ್ದೇನೆ; ಮೋಟಮ್ಮನವರು ಇದ್ದ ಕಡೆ ಸಾಹಿತ್ಯವಿರುತ್ತೆ, ಜನಪದವಿರುತ್ತೆ, ಸಂಗೀತವಿರುತ್ತೆ. ಅವರೇ ಇಂದು ಈ ಸಮಾರಂಭದಲ್ಲಿ ಜ್ಯೋತಿಯನ್ನು ಬೆಳಗಿಸಿದ್ದಾರೆ. ಅದು ನಿರುಮ್ಮಳವಾಗಿ ಉರಿಯುತ್ತದೆ.
ಕನ್ನಡ ಜಾನಪದ ಸಾಹಿತ್ಯದ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿರುವ ಇವತ್ತಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೂ ಆಗಿರುವ, ಕರ್ನಾಟಕ ರಕ್ಷಣಾ ವೇದಿಕೆಯ ಹಿತೈಷಿಗಳಾಗಿರುವ ಡಾ.ನಲ್ಲೂರು ಪ್ರಸಾದ್‌ರವರು ಸಹ ಕಾರ್ಯಕ್ರಮದಲ್ಲಿದ್ದಾರೆ.
ಈ ಸಂದರ್ಭದಲ್ಲಿ ಒಂದು ವಿಷಯ ನಿಮ್ಮ ಜೊತೆ ಹಂಚಿಕೊಳ್ಳಬೇಕು. ನಾವೆಲ್ಲ ಹಳ್ಳಿಯಿಂದ ಬೆಳೆದು ಬಂದ ಮಕ್ಕಳು. ಜಾನಪದವೇ ನಮ್ಮ ತಾಯಿ ದೇವರು. ನಾವು ಸಾಹಿತ್ಯದ ಭಾಷೆ, ಪಂಡಿತರ ಭಾಷೆ ಮಾತನಾಡದೆ ಹೋದರೂ ನಿಜವಾದ ಕನ್ನಡದ ಸೊಗಡಿನ ಭಾಷೆಯನ್ನು ನಿರರ್ಗಳವಾಗಿ ಮಾತನಾಡುತ್ತೇವೆ. ನಮ್ಮದು ದೇವ ಭಾಷೆ ಅಲ್ಲ; ಜನರ ಭಾಷೆ.
ನಲ್ಲೂರು ಪ್ರಸಾದ್‌ರವರು ಮಾತನಾಡುವಾಗ ಕನ್ನಡ ಚಳವಳಿಗಾರರ ಮೇಲೆ ಇರುವಂತಹ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯಬೇಕು. ಜನಪ್ರತಿನಿಧಿಗಳು ಪಕ್ಷಭೇದ ಮರೆತು ವಿಧಾನಪರಿಷತ್, ವಿಧಾನಸಭೆಗಳಲ್ಲಿ ಈ ವಿಷಯ ಪ್ರಸ್ತಾಪಿಸಬೇಕು. ಎಲ್ಲಾ ಜನಪ್ರತಿನಿಧಿಗಳು ಕನ್ನಡದ ಧ್ವನಿಯಾಗಿ ಕೆಲಸ ಮಾಡಬೇಕು ಎಂದು ಹೇಳಿದರು.
ಎಲ್ಲರಿಗೂ ಗೊತ್ತಿರುವ ವಿಚಾರವೇ. ನಾವು ನಮ್ಮ ಸ್ವಾರ್ಥಕ್ಕೆ ಹೋರಾಟ ಮಾಡಿದವರಲ್ಲ. ಕನ್ನಡಕ್ಕೆ ಅನ್ಯಾಯವಾದಾಗ, ಕನ್ನಡ ಭಾಷೆಗೆ, ನೆಲಕ್ಕೆ, ಜಲಕ್ಕೆ ಅನ್ಯಾಯವಾದಾಗ, ಕನ್ನಡದ ಮಕ್ಕಳ ಬದುಕಿಗೆ ಅನ್ಯಾಯವಾದಾಗ ರಕ್ಷಣಾ ವೇದಿಕೆಯ ಕನ್ನಡ ಪಡೆ ಧ್ವನಿಯೆತ್ತುತ್ತಾ ಬಂದಿದೆ.
ನಾವು ಯಾವತ್ತೂ ಮೊಕದ್ದಮೆಗಳಿಗೆ ಹೆದರಲಿಲ್ಲ; ಹೆದರೋದು ಇಲ್ಲ. ಮೈಯಲ್ಲಿ ಕೊನೆಯ ಹನಿ ರಕ್ತ ಇರುವವರೆಗೂ ನೆಲಕ್ಕಾಗಿ, ನಾಡು-ನುಡಿಗಾಗಿ ಹೋರಾಟ ಮಾಡಿ ಈ ಸ್ವರ್ಗಭೂಮಿಯಲ್ಲಿ ಪ್ರಾಣ ಬಿಡುತ್ತೇವೆಯೇ ಹೊರತು ಹೆದರಿ ಹಿಂದಕ್ಕೆ ಹೋಗುವ ಪ್ರಶ್ನೆಯೇ ಇಲ್ಲ. ಆದರೆ, ಒಂದು ವಿಚಾರವನ್ನು ಪ್ರಾಜ್ಞರು ಹೇಳುತ್ತಿದ್ದಾರೆ. ಕನ್ನಡದ ಹೋರಾಟ ಮಾಡುವ ಕೈಗಳಿಗೆ ಶಕ್ತಿ ತುಂಬುವಂಥ ಕೆಲಸವನ್ನು ಯಾವುದೇ ಸರ್ಕಾರ ಮಾಡಬೇಕು. ಏಕೆಂದರೆ ಯಾವುದೇ ಸರ್ಕಾರಕ್ಕೆ, ಸರ್ಕಾರವನ್ನು ನಡೆಸುವ ಪಕ್ಷಕ್ಕೆ ಅವುಗಳದೇ ಆದಂತಹ ಚೌಕಟ್ಟು ಇರುತ್ತದೆ. ಅದನ್ನು ಮೀರಿ ಅವರು ಒಮ್ಮೊಮ್ಮೆ ಕನ್ನಡದ ಕೆಲಸ ಮಾಡಲು ಸಾಧ್ಯವಾಗದೆ ಇರಬಹುದು. ಇಂಥ ಸಂದರ್ಭದಲ್ಲಿ ಸರ್ಕಾರದಿಂದ ಆಗದ ಕೆಲಸಗಳನ್ನು ಹೋರಾಟಗಾರರೇ ಮಾಡಬೇಕಾಗುತ್ತದೆ.
ಆದರೆ ನಮ್ಮ ಹಾದಿಯಲ್ಲಿ ಮುಂದೆ ಇವರು ಅಡ್ಡಿಯಾಗಬಹುದು ಅನ್ನೋ ಕಾರಣಕ್ಕೆ ಹೋರಾಟದ ಶಕ್ತಿಯನ್ನೇ ಕುಂದಿಸುವಂತಹ ಕೆಲಸ ಮಾಡ್ತಾರಲ್ಲ, ಅದನ್ನು ಸಹಿಸಿಕೊಳ್ಳೋಕೆ ಆಗಲ್ಲ. ಹೋರಾಟಗಾರರನ್ನು ಹುಡುಕಿ ಕೇಸ್ ಹಾಕ್ತಿದ್ದಾರೆ. ಕನ್ನಡ ಚಳವಳಿಗಾರರನ್ನು ರೌಡಿ ಪಟ್ಟಿಗೆ ಸೇರಿಸುತ್ತಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆಯ ಅನೇಕ ಮುಂಚೂಣಿಯ ನಾಯಕರನ್ನು ರೌಡಿ ಲಿಸ್ಟ್ ಮಾಡಿ ಕೂರಿಸಿದ್ದಾರೆ. ಇವರ‍್ಯಾರು ಯಾರಿಗೂ ಅನ್ಯಾಯ ಮಾಡಿದವರಲ್ಲ, ದ್ರೋಹ ಮಾಡಿದವರಲ್ಲ, ಮಾಡಬಾರದ ಕೆಲಸ ಮಾಡಿದವರಲ್ಲ. ಮಾಡಿದ್ದೆಲ್ಲ ಕನ್ನಡದ ಕೆಲಸ; ಪ್ರತಿಫಲ ರೌಡಿ ಪಟ್ಟಿ.
ನಾನು ನನ್ನ ಕಾರ್ಯಕರ್ತರಿಗೆ ಯಾವಾಗಲೂ ಹೇಳುತ್ತೇನೆ. ನಾನು ಒಬ್ಬ ಪೊಲೀಸ್ ಇನ್ಸ್‌ಪೆಕ್ಟರ್ ಹತ್ತಿರ, ಸಬ್ ಇನ್ಸ್‌ಪೆಕ್ಟರ್ ಹತ್ತಿರ ಮಾತನಾಡೋದು ಯಾವಾಗ ಎಂದರೆ ಕನ್ನಡದ ಕೆಲಸ ಇದ್ದಾಗ ಮಾತ್ರ. ಬೇರೆ ಕೆಲಸವಿದ್ದರೆ ನನ್ನ ಕಾರ್ಯಕರ್ತರಿಗಾಗಿ ಪೊಲೀಸ್ ಅಧಿಕಾರಿಗಳೊಂದಿಗೆ ನಾನು ಮಾತನಾಡುವುದಿಲ್ಲ. ಕನ್ನಡದ ಕೆಲಸಕ್ಕಾಗಿ ನನ್ನ ಕಾರ್ಯಕರ್ತರು ಪೊಲೀಸ್ ಠಾಣೆಗೆ ಹೋಗಿದ್ದರೆ, ಜೈಲಿಗೆ ಹೋಗಿದ್ದರೆ ಮಾತ್ರ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ.
ಆದರೆ ಇವತ್ತೂ ಏನಾಗಿದೆ ನೋಡಿ. ಒಬ್ಬೊಬ್ಬರ ಮೇಲೆ ೩೦-೪೦ ಮೊಕದ್ದಮೆಗಳಿವೆ. ಮನೆಯಲ್ಲಿ ಕುಳಿತಿದ್ದ ಕಾರ್ಯಕರ್ತರನ್ನು ಕರೆದುಕೊಂಡು ಹೋಗಿ ನೀವು ಡಕಾಯಿತಿ ಕೇಸ್ ಹಾಕ್ತಿರಾ. ಯಾವುದ್ಯಾವುದೋ ಸೆಕ್ಷನ್ ಹಾಕಿ ನಮ್ಮ ಕಾರ್ಯಕರ್ತರನ್ನು ಬಂಧಿಸುತ್ತೀರಾ. ಹೀಗಾದರೆ ನಾಳೆ ಕನ್ನಡದ ವಿಚಾರದಲ್ಲಿ ಬೀದಿಗೆ ಇಳಿಯಲು ಯಾರು ಬರುತ್ತಾರೆ? ಮೊನ್ನೆ ‘ವಿಜಯ ಕರ್ನಾಟಕ’ದಲ್ಲಿ ಈ ಬಗ್ಗೆ ಸಂಪೂರ್ಣ ವರದಿ ಮಾಡಿದ್ದರು. ಆದರೂ ಸರ್ಕಾರದ ಕಣ್ಣು ತೆರೆಯುತ್ತಿಲ್ಲ.
ಅಲ್ರೀ, ಗಡಿರೇಖೆಯನ್ನೇ ಬದಲಾಯಿಸಿ ನೂರಾರು ಕೋಟಿ ರೂ. ಗಣಿ ಸಂಪತ್ತನ್ನು ಲೂಟಿ ಮಾಡಿದವರ ಮೇಲೆ ಇದ್ದ ಕೇಸ್ ವಾಪಸ್ ಪಡೆದಿರಿ. ಮಸೀದಿ, ಚರ್ಚ್‌ಗಳ ಮೇಲೆ ದಾಳಿ ಮಾಡಿದ ದುಷ್ಕರ್ಮಿಗಳ ಮೇಲೆ ಇದ್ದ ಕೇಸುಗಳನ್ನು ವಾಪಾಸು ತಗೊಂಡ್ರಿ. ಕನ್ನಡಕ್ಕಾಗಿ ಹೋರಾಟ ಮಾಡಿದವರ ಮೇಲೆ ಇದ್ದ ಕೇಸ್ ಯಾಕೆ ವಾಪಾಸ್ ತೆಗೆದುಕೊಳ್ಳಲಿಲ್ಲ?
ಇತ್ತೀಚೆಗೆ ಬೆಳಗಾವಿ ಮಹಾಪೌರರ ಆಯ್ಕೆ ಸಂದರ್ಭದಲ್ಲಿ ಕನ್ನಡ ಸದಸ್ಯರಿಗೆ ಎಂಇಎಸ್‌ನವರು ಚಪ್ಪಲಿ ತೋರಿಸಿದ್ರು, ಬಳೆ ತೋರಿಸಿದ್ರು. ಅದನ್ನು ನೋಡಿದ ನಿಜವಾದ ಕನ್ನಡಿಗನಿಗೆ ಏನನಿಸುತ್ತದೆ ಹೇಳಿ. ಬೆಂಗಳೂರಿಗೂ ಒಂದು ಎಂಇಎಸ್ ನಿಯೋಗ ಬಂದಿತ್ತು; ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಿಕ್ಕೆ. ಭೇಟಿ ಸಾಧ್ಯವಾಗಲಿಲ್ಲ. ನಂತರ ಆ ನಿಯೋಗ ರಾಜ್ಯದ ಕಾನೂನು ಸಚಿವರ ಮನೆಯಲ್ಲಿ ಬೀಡು ಬಿಟ್ಟಿತ್ತು. ಅಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ ನಡೆಸಿದರು. ಸಾಂಕೇತಿಕವಾಗಿ ನಡೆದ ಆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತರನ್ನು ಬಂಧಿಸಿ ಕರೆದೊಯ್ದರು. ಕ್ರಿಮಿನಲ್ ಮೊಕದ್ದಮೆಗಳನ್ನು ಹಾಕಿದರು. ಅಷ್ಟೇ ಆದರೂ ಪರವಾಗಿಲ್ಲ. ಒಬ್ಬೊಬ್ಬರೂ ೪-೫ ಸಾವಿರ ರೂಪಾಯಿ ಹಣವನ್ನು ಕಟ್ಟಿ ಅವತ್ತು ಆಚೆ ಬರಬೇಕಾಯಿತು. ನಾಡಿಗಾಗಿ, ನುಡಿಗಾಗಿ ಹೋರಾಡಿದ್ದಕ್ಕಾಗಿ ಈ ಸತ್ಕಾರ ನಮಗೆ.
ತಿರುವಳ್ಳುವರ್ ಪ್ರತಿಮೆ ಅನಾವರಣದ ಸಂದರ್ಭದಲ್ಲೂ ಹೀಗೆಯೇ ಆಯಿತು. ಇನ್ನೊಮ್ಮೆ ಹೇಳ್ತಿದ್ದೇನೆ: ನಾವ್ಯಾರು ತಿರುವಳ್ಳುವರ್ ಪ್ರತಿಮೆ ಅನಾವರಣಕ್ಕೆ ವಿರೋಧ ಮಾಡಿರಲಿಲ್ಲ. ಪ್ರತಿಮೆ ಅನಾವರಣ ಷರತ್ತುಬದ್ಧವಾಗಿ ನಡೆಯಬೇಕು ಎಂಬುದಷ್ಟೆ ನಮ್ಮ ಬೇಡಿಕೆಯಾಗಿತ್ತು. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಲಭಿಸಲು ಅಡ್ಡಿಯಾಗಿದ್ದ ಪ್ರಕರಣವನ್ನು ಮದ್ರಾಸ್ ಹೈಕೋರ್ಟ್‌ನಿಂದ ಹಿಂದಕ್ಕೆ ಪಡೆಯುವಂತೆ ಕ್ರಮ ಕೈಗೊಳ್ಳಬೇಕು ಹಾಗೂ ಹೊಗೇನಕಲ್‌ನಲ್ಲಿ ಜಂಟಿ ಸಮೀಕ್ಷೆ ನಡೆಯುವವರೆಗೆ ಯಾವುದೇ ಕಾರಣಕ್ಕೂ ಯೋಜನೆ ಆರಂಭಿಸಬಾರದು ಎಂಬುದು ನಮ್ಮ ಬೇಡಿಕೆಯಾಗಿತ್ತು. ಆದರೆ ನಮ್ಮನ್ನು ಎಲ್ಲರೂ ಅಪಾರ್ಥಮಾಡಿಕೊಂಡರು.
ತಿರುವಳ್ಳುವರ್ ಪ್ರತಿಮೆ ಅನಾವರಣದ ಸಂದರ್ಭದಲ್ಲಿ ರಾತ್ರೋರಾತ್ರಿ ೧೮೦ ಕಾರ್ಯಕರ್ತರನ್ನು ಬಂಧಿಸಿದ್ದರು. ಬೆಂಗಳೂರಿನ ಒಟ್ಟು ೧೧ ಪೊಲೀಸ್ ಠಾಣೆಗಳಲ್ಲಿ ನನ್ನ ಮೇಲೆ ಕೇಸುಗಳನ್ನು ಹಾಕಲಾಯಿತು. ತಮಾಷೆ ನೋಡಿ, ಬೆಂಗಳೂರಿನಲ್ಲಿರುವ ನನ್ನ ಮೇಲೆ ಬೆಳಗಾವಿಯಲ್ಲಿ ನಡೆದ ಪ್ರತಿಭಟನೆಯಲ್ಲೂ ಎ-೧ ಮಾಡಿ ಪ್ರಕರಣ ಹೂಡಲಾಯಿತು. ಬೆಂಗಳೂರಿನಲ್ಲೇ ಇರುವ ನಾರಾಯಣಗೌಡರ ಮೇಲೆ ರಾಯಚೂರಿನಲ್ಲಿ ಎ-೧ ಮಾಡಲಾಯಿತು.
ಅಲ್ರೀ ಇವರ ತಲೆಯಲ್ಲಿ ಏನಿದೆ? ಬೆಂಗಳೂರಿನಲ್ಲೋ, ಮೈಸೂರಿನಲ್ಲೋ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮಾಡಿದರೆ ಸೋನಿಯಾಗಾಂಧಿ ಮೇಲೆ ಕೇಸ್ ಹಾಕ್ತಾರಾ? ಮಂಡ್ಯದಲ್ಲಿ, ತುಮಕೂರಿನಲ್ಲಿ ಜೆಡಿಎಸ್ ಕಾರ್ಯಕರ್ತರು ಹೋರಾಟ ಮಾಡಿದರೆ ದೇವೇಗೌಡರ ಮೇಲೆ ಕೇಸ್ ಹಾಕ್ತಾರಾ, ಎ-೧ ಮಾಡ್ತಾರಾ? ಮಂಗಳೂರಿನಲ್ಲಿ ಬಿಜೆಪಿಯವರು ಪ್ರತಿಭಟನೆ ಮಾಡಿದರೆ, ಅಡ್ವಾಣಿ-ವಾಜಪೇಯಿ ಮೇಲೆ ಕೇಸು ಹಾಕ್ತಾರಾ? ಇವತ್ತು ೪೮ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಾ ಇದ್ದೇನೆ. ನಾವು ಯಾರ ಮೇಲೂ ದಾಳಿ ಮಾಡಿದವರಲ್ಲ, ದೌರ್ಜನ್ಯ ಮಾಡಿದವರಲ್ಲ, ಇನ್ನೇನೋ ಮಾಡಿದವರಲ್ಲ. ಕನ್ನಡಕ್ಕಾಗಿ ಹೋರಾಟ ಮಾಡಿದ್ದಕ್ಕೆ ೧೩೩೦ ಕೇಸ್ ಇದೆ ರಕ್ಷಣಾ ವೇದಿಕೆ ಮೇಲೆ. ಬೆಳಿಗ್ಗೆ ಆದರೆ ಹೋಗಿ ಕೋರ್ಟಿನಲ್ಲಿ ನಿಂತುಕೊಳ್ಳಬೇಕು.
ನ್ಯಾಯಾಧೀಶರಿಗೆ ಇರುವ ಮಾನವೀಯತೆ, ಕನ್ನಡ ಕಾಳಜಿ ನಮ್ಮನಾಳುವ ನಾಯಕರಿಗೆ ಇಲ್ಲ. ಕೆಲ ನ್ಯಾಯಾಧೀಶರು ಕೇಳ್ತಾರೆ: ‘ಏನ್ರೀ ನಾರಾಯಣಗೌಡ್ರೇ, ದಿನಾ ಬಂದು ಕೋರ್ಟ್‌ನಲ್ಲಿ ನಿಂತುಕೊಳ್ಳುತ್ತೀರಲ್ಲ. ನಿಮಗೆ ಅಂತ ಒಂದು ಬದುಕಿಲ್ಲವೇ. ಯಾಕಿಷ್ಟು ಕೇಸ್ ಹಾಕಿದ್ದಾರೆ?
ಒಬ್ಬ ನ್ಯಾಯಾಧೀಶರ ಟೇಬಲ್ ಮೇಲೆ ೨೦-೩೦ ಕೇಸ್ ಇರುತ್ತೆ. ಒಂದು ಕೋರ್ಟಿನಿಂದ ಇನ್ನೊಂದು ಕೋರ್ಟಿಗೆ ಓಡಾಡಬೇಕು. ಒಂದು ಕೋರ್ಟಿನಲ್ಲಿ ಕೇಸ್ ನಡೆಯುವಾಗ ಇನ್ನೊಂದು ಕೋರ್ಟಿಗೆ ಹೋಗದೆ ಇದ್ದರೆ ಬೇಲ್ ಕ್ಯಾನ್ಸಲ್ ಆಗಿರುತ್ತೆ. ಅಥವಾ ವಾರೆಂಟ್ ಆಗಿರುತ್ತೆ. ಪೊಲೀಸ್‌ನವರು ಮನೆಗೆ ಹುಡುಕಿಕೊಂಡು ಬರ‍್ತಾರೆ.
ಒಂದು ದಿನ ಒಬ್ಬ ಗೌರವಾನ್ವಿತ ನ್ಯಾಯಾಧೀಶರು ಇನ್ಸ್‌ಪೆಕ್ಟರ್ ಒಬ್ಬರನ್ನು ಗದರಿದರು: ದಿನಾ ಬೆಳಗಾದರೆ ಇವರು ಕೋರ್ಟಿಗೆ ಬರ‍್ತಾರೆ. ತಲೆ ಮರೆಸಿಕೊಂಡು ಹೋಗಿದ್ದಾರೆ ಅಂತ ಸುಳ್ಳು ಹೇಳ್ತಿರಲ್ರಿ. ನಿಮ್ಮಂಥ ಇನ್ಸ್‌ಪೆಕ್ಟರ್‌ಗಳನ್ನು ಹುಚ್ಚಾಸ್ಪತ್ರೆಗೆ ಕಳುಹಿಸಬೇಕು.
ಒಂದು ತಮಾಷೆ ವಿಷಯ ಹೇಳ್ತಿನಿ. ಒಬ್ಬ ಇನ್ಸ್‌ಪೆಕ್ಟರ್ ನನ್ನ ಮೇಲೆ ಐಪಿಸಿ ೫೩೦ನೇ ಕಲಂ ಅನ್ವಯ ಕೇಸು ಹಾಕಿದ್ದ. ಐಪಿಸಿಯಲ್ಲಿ ೫೩೦ನೇಯ ಸೆಕ್ಷನ್ನೇ ಇಲ್ಲ! ಯಾಕೆ ಅವನು ಇಲ್ಲದ ಸೆಕ್ಷನ್ ಹಾಕಿದ್ದನೋ ಏನೋ? ಪಾಪ, ಅವನಿಗೆ ಯಾವ ಒತ್ತಡವಿತ್ತೋ ಏನೋ?
ಮೋಟಮ್ಮನವರು ಮಾತನಾಡುತ್ತ ಒಂದು ಮಾತು ಹೇಳಿದರು. ‘ಕನ್ನಡಕ್ಕೆ ದ್ರೋಹ ಮಾಡಿದರೆ ಹೆತ್ತ ತಾಯಿಗೆ ದ್ರೋಹ ಮಾಡಿದ ಹಾಗೆ’. ಅದ್ಭುತವಾದ ಮಾತು. ಈ ನೆಲದಲ್ಲಿ ಬದುಕುವಂತಹ ಯಾರೇ ಆಗಲಿ ಇದೊಂದು ಮಾತನ್ನು ಅರ್ಥ ಮಾಡಿಕೊಂಡರೆ ಸಾಕು ಎಂದು ನಾನು ಅಂದುಕೊಳ್ಳುತ್ತೇನೆ. ಈ ನಾಡಿನ ಋಣವನ್ನು ತೀರಿಸದೆ, ಹೆತ್ತ ತಾಯಿಯ ಸೇವೆಯನ್ನು ಮಾಡದೆ ಇನ್ಯಾರದೋ ಸೇವೆಗೆ ಹೊರಡುವುದರಲ್ಲಿ ಯಾವ ಅರ್ಥವೂ ಇಲ್ಲ. ನಾಡಭಕ್ತ ಆಗದವನು ದೇಶಭಕ್ತ ಆಗುವುದು ಹೇಗೆ ಸಾಧ್ಯ? ಮೊದಲು ನನ್ನ ಮನೆ ಶುದ್ಧವಾಗಬೇಕು. ನಂತರ ಸುತ್ತಲ ಪರಿಸರ, ಊರು, ನಗರ, ರಾಜ್ಯ ಆನಂತರ ದೇಶ. ಇತಿಹಾಸವನ್ನು ಗಮನಿಸಿದರೆ ಕನ್ನಡತನದ, ಕನ್ನಡರಾಜ್ಯದ ರಕ್ಷಣೆಗಾಗಿ ಸಾಕಷ್ಟು ಹೋರಾಟಗಳು ನಡೆದುಹೋಗಿವೆ. ಹಿರಿಯರು ಹೇಳುತ್ತಾರೆ: ‘ಯಾರಿಗೆ ಇತಿಹಾಸ ಗೊತ್ತಿರುತ್ತದೋ ಅವರಷ್ಟೆ ಇತಿಹಾಸ ನಿರ್ಮಾಣ ಮಾಡಲು ಸಾಧ್ಯ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ನಾಡಿನ ಇತಿಹಾಸವನ್ನೇ ಪ್ರೇರಣೆಯಾಗಿಟ್ಟುಕೊಂಡು ಕೆಲಸ ಮಾಡುತ್ತಿದೆ.
ಸಭೆಯಲ್ಲಿ ನಮ್ಮೆಲ್ಲರಿಗೂ ಪ್ರಿಯವಾದ ಅಧಿಕಾರಿಗಳಾದ, ನಿಜವಾದ ಕನ್ನಡದ ಕಳಕಳಿ ಇಟ್ಟುಕೊಂಡಿರುವ ಅಧಿಕಾರಿಗಳಾದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಮನು ಬಳಿಗಾರ್ ಇದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ದಲ್ಲಾಳಿಗಳಿಂದ ಮುಕ್ತಗೊಳಿಸಿದವರು ಅವರು. ರವೀಂದ್ರ ಕಲಾಕ್ಷೇತ್ರದ ಬಳಿ ಒಂದು ದೊಡ್ಡ ತಂಡವೇ ಇದೆ. ಅವರೇ ಕಲಾಕ್ಷೇತ್ರವನ್ನು ತಿಂಗಳುಗಟ್ಟಲೆ ಬುಕ್ ಮಾಡಿಕೊಂಡು ಬೇರೆಯವರಿಗೆ ಮಾರುವ ಕೆಲಸ ಮಾಡುತ್ತಾರೆ. ಇದನ್ನೆಲ್ಲಾ ತಪ್ಪಿಸಿದವರು ಬಳಿಗಾರ್ ಅವರು.
ಇವತ್ತು ಕನ್ನಡದ ಕಲಾವಿದರಿಗೆ ನಿಜವಾಗಿ ಸಲ್ಲಬೇಕಾದ ಪ್ರಶಸ್ತಿ, ಪುರಸ್ಕಾರ, ಅನುದಾನ ಸಲ್ಲುತ್ತಿಲ್ಲ. ಅಪಾತ್ರರ ಪಾಲಾಗುತ್ತಿದೆ. ಗುರುರಾಜ ಹೊಸಕೋಟೆ ಇಲ್ಲಿದ್ದಾರೆ; ಯಾರ‍್ಯಾರಿಗೋ ರಾಜ್ಯೋತ್ಸವ ಪ್ರಶಸ್ತಿ ಕೊಡುತ್ತಾರೆ. ಸುಮಾರು ಐದು ಸಾವಿರ ಹಾಡು ಬರೆದು ಹಾಡಿರುವ ಗುರುರಾಜ್ ಹೊಸಕೋಟೆ ಅವರಿಗೆ ಇದುವರೆಗೂ ರಾಜ್ಯೋತ್ಸವ ಪ್ರಶಸ್ತಿ ದೊರೆತಿಲ್ಲ. ಉದಾಹರಣೆಗೆ ಈ ಮಾತು ಹೇಳಿದೆ. ಇಂಥ ಲಾಬಿ ಎಲ್ಲೆಡೆಯೂ ನಡೆಯುತ್ತಿದೆ.
ಮನು ಬಳಿಗಾರ್ ಇಲಾಖೆಗೆ ಬಂದ ನಂತರ ದಲ್ಲಾಳಿಗಳನ್ನು ದೂರವಿಟ್ಟರು. ಒಬ್ಬ ಕಲಾವಿದ ಈಗ ನೇರವಾಗಿ ಬಳಿಗಾರ್ ಅವರನ್ನು ಮಾತನಾಡಬಹುದು. ಒಂದು ಉದಾಹರಣೆ ಹೇಳ್ತಿನಿ. ಈಗಷ್ಟೆ ನಮ್ಮ ಕೋಲಾರದ ಗೆಳೆಯ, ಕೋಲಾರ ರಕ್ಷಣಾ ವೇದಿಕೆ ಸಾಂಸ್ಕೃತಿಕ ಘಟಕದ ಅಧ್ಯಕ್ಷ ಜನಘಟ್ಟ ಕೃಷ್ಣಮೂರ್ತಿ ಹಾಡ್ತಾ ಇದ್ದ. ಸ್ವಲ್ಪ ಅನಾರೋಗ್ಯದಿಂದ ಅವನು ಸಣ್ಣಗಾಗಿದ್ದಾನೆ. ಇಲ್ಲೇ ಸಮಾರಂಭದಲ್ಲೇ ಆತನನ್ನು ಕರೆದು ಸರ್ಕಾರದಿಂದ ಹದಿನೈದು ಸಾವಿರ ರೂ. ಮಂಜೂರು ಮಾಡಿದರು. ಯಾಕೆ ಈ ಮಾತು ಹೇಳ್ತೀನಿ ಅಂದ್ರೆ ನಿಜವಾದ ಕಳಕಳಿ ಇದ್ದಾಗ ಇಂಥವೆಲ್ಲ ಆಗೋದಕ್ಕೆ ಸಾಧ್ಯ. ಇವತ್ತು ಮನುಬಳಿಗಾರ್ ಬಂದಿರೋದ್ರಿಂದ ಕರ್ನಾಟಕ ಸರ್ಕಾರವೇ ಕಾರ್ಯಕ್ರಮಕ್ಕೆ ಬಂದಿದೆ ಅಂತ ನಾನಾದರೂ ಭಾವಿಸಿದ್ದೇನೆ. ಏನಾದರೂ, ಯಾರಾದರೂ ಕಾರ್ಯಕ್ರಮ ಮಾಡಬೇಕು ಅಂದ್ರೆ ಸರ್ಕಾರದ ಮುಂದೆ ಹೋಗಿ ಕೈ ಕಟ್ಟಿಕೊಳ್ಳಬೇಕಾದ ದಿವಸ ಇದು. ಇಂಥ ಸನ್ನಿವೇಶದಲ್ಲೂ ತಾವೇ ಕನ್ನಡದ ಡಿಂಡಿಮವನ್ನು ಬಾರಿಸುತ್ತಿರುವ ಮನು ಬಳಿಗಾರ್ ಅವರನ್ನು ನಾನು ರಕ್ಷಣಾ ವೇದಿಕೆ ಪರವಾಗಿ ಅಭಿನಂದಿಸುತ್ತೇನೆ.
ಹಾಗೆಯೇ ಇವತ್ತಿನ ಸಮಾರಂಭದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾಗಿರುವ ಪರಮೇಶ್ವರ್ ಅವರು ಮಾತನಾಡಿದರು. ಅವರು, ಕರ್ನಾಟಕ ರಕ್ಷಣಾ ವೇದಿಕೆಯ ಹೋರಾಟದ ದಾಖಲೆಗಳನ್ನೇ ಜೊತೆಯಲ್ಲಿಟ್ಟುಕೊಂಡು ಬಂದಿದ್ದರು. ಕರವೇ ನಡೆಸಿದ ಹೋರಾಟಗಳ ಬಗ್ಗೆ ಅವರು ಮಾತನಾಡುವಾಗ ನಿಜಕ್ಕೂ ಖುಷಿಯಾಯಿತು. ಮಾಧ್ಯಮ ಕ್ಷೇತ್ರದಿಂದಲೇ ಬಂದ ಅವರು ಮಾಧ್ಯಮಗಳ ಬಗ್ಗೆ ಮಾತನಾಡಿದರು.
ಬಂಧುಗಳೇ, ಡಾ.ಯು.ಆರ್.ಅನಂತಮೂರ್ತಿಯವರು ಮಾತನಾಡುವಾಗ ಈ ನಾಡಿನ ಗಣಿ ಸಂಪತ್ತನ್ನು ಉಳಿಸಿಕೊಳ್ಳುವ ವಿಷಯ ಪ್ರಸ್ತಾಪಿಸಿದರು. ನಿಜಕ್ಕೂ ಇವತ್ತು ಗಣಿಗಾರಿಕೆ ವಿಷಯ ಪ್ರಸ್ತಾಪವಾದರೆ, ಗಣಿ ನಡೆಸುವವರ ವಿಚಾರಗಳನ್ನು ಎತ್ತಿದ ತಕ್ಷಣ ನನ್ನ ರಕ್ತ ಕುದಿಯುತ್ತದೆ. ಒಂದೇ ಒಂದು ಕುಟುಂಬ ಇಡೀ ನಾಡಿನ ಸಂಪತ್ತು ಲೂಟಿ ಮಾಡ್ತಾ ಇದೆಯಲ್ಲ, ಇದನ್ನು ನಾವು ಸಹಿಸಿಕೊಂಡು ಕುಳಿತಿದ್ದೇವಲ್ಲ. ಇದಕ್ಕೆಲ್ಲಾ ಯಾವಾಗ ಅಂತ್ಯ ಎಂಬ ಪ್ರಶ್ನೆ, ನೋವು ನಮ್ಮನ್ನು ಕಾಡ್ತಾ ಇದೆ. ಮುಂದೊಂದು ದಿನ ನಮ್ಮ ಮುಂದಿನ ಪೀಳಿಗೆಯ ನಮ್ಮ ಮಕ್ಕಳಿಗೆ ಬಳ್ಳಾರಿಯಲ್ಲಿ ಹಿಂದೆಲ್ಲಾ ಇಂಥ ಗಣಿ ಸಂಪತ್ತು ಇತ್ತು ಅಂತ ನಾವು ಚಿತ್ರದಲ್ಲಿ ಬರೆದು ತೋರಿಸಬೇಕಾಗುತ್ತದೆ. ವಿಜಯನಗರ ಸಾಮ್ರಾಜ್ಯದಲ್ಲಿ ಮುತ್ತುರತ್ನಗಳನ್ನು ಬೀದಿಯಲ್ಲಿ ರಾಶಿ ಹಾಕಿ ಅಳೆಯುತ್ತಿದ್ದರು, ಅಂಥದೊಂದು ಭವ್ಯವಾದ ಶ್ರೀಮಂತವಾದ ಸಾಮ್ರಾಜ್ಯ ನಮ್ಮದಾಗಿತ್ತು ಅಂತ ನಾವು ಇವತ್ತು ಭಾಷಣಗಳಲ್ಲಿ ಹೇಳ್ತಾ ಇದ್ದೀವಲ್ಲ, ಹಾಗೆಯೇ ಮುಂದೊಂದು ದಿನ ರಾಜ್ಯದ ಭೌಗೋಳಿಕ ಸಂಪತ್ತು ಸಹ ನಮಗೆ ಬರಿಯ ನೆನಪಿನ ವಿಷಯವಾಗುತ್ತದೆ. ಯಾರೋ ಲಾಡ್, ಯಾರೋ ಸಿಂಗ್, ಮತ್ಯಾರೋ ರೆಡ್ಡಿ ಎಲ್ಲರೂ ಸೇರಿ ಲೂಟಿ ಹೊಡೆಯುತ್ತಿದ್ದರೂ ಇವತ್ತು ಯಾರೂ ಏನು ಮಾಡಲೂ ಸಾಧ್ಯವಾಗುತ್ತಿಲ್ಲ.
ಕನ್ನಡದ ಮಕ್ಕಳ ಸ್ಥಿತಿ ಏನಾಗಿ ಹೋಗಿದೆ. ಬೆಂಗಳೂರಿನಲ್ಲಿ ಏನಾಗ್ತಾ ಇದೆ. ಇವತ್ತು ಬೆಂಗಳೂರು ಮಹಾನಗರ ಪಾಲಿಕೆಯ ಅನೇಕ ಸದಸ್ಯರು ಈ ಕಾರ್ಯಕ್ರಮದಲ್ಲಿ ಇದ್ದಾರೆ. ಅವರಿಗೆಲ್ಲಾ ಗೊತ್ತಿದೆ. ಸಣ್ಣ ಗುತ್ತಿಗೆಯೂ ಸಹ ಕನ್ನಡಿಗರಿಗೆ ಸಿಗೋದಿಲ್ಲ. ಅದ್ಯಾವುದೋ ನಿರ್ಮಲ ಅನ್ನೋ ಬಾತ್‌ರೂಂ ನೋಡಿಕೊಳ್ಳುವುದಕ್ಕೂ ರಾಜಸ್ಥಾನಿ ಮಾರವಾಡಿಯೇ ಗುತ್ತಿಗೆ ಪಡೆಯುತ್ತಾನೆಂದರೆ ಯಾವ ಪರಿಸ್ಥಿತಿ ಇದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕಾಗಿದೆ.
ನನ್ನ ಕಚೇರಿಗೆ ಬರುವ ಪತ್ರಗಳನ್ನು, ಜನರನ್ನು ನೋಡಬೇಕು. ’ನನ್ನ ಪಕ್ಕದ ಮನೆಯಲ್ಲಿ ಯಾರೋ ತಮಿಳರಿದ್ದಾರೆ. ನನ್ನ ಮನೆ ಖಾಲಿ ಮಾಡಿಸಲು ಉದ್ದೇಶಪೂರ್ವಕವಾಗಿ ಟಿ.ವಿ.ವಾಲ್ಯೂಮ್ ಜಾಸ್ತಿ ಇಡ್ತಾರೆ. ನನಗೆ ಸಹಿಸಿಕೊಳ್ಳೋಕೆ ಆಗಲ್ಲ. ದಯಮಾಡಿ ಪಕ್ಕದ ಮನೆಯವರ ಟಿ.ವಿ.ವಾಲ್ಯೂಮ್ ಕಡಿಮೆ ಮಾಡಿಸಿ’ ಅಂತ ಕೇಳಿಕೊಂಡು ಬರುತ್ತಾರೆ. ಇನ್ನೊಬ್ಬರು ಬರ‍್ತಾರೆ ’ನಾನು ಮಾರವಾಡಿಗಳಿಗೆ ಮನೆ ಬಾಡಿಗೆಗೆ ಕೊಟ್ಟಿದ್ದೆ. ಈಗ ನೋಡಿದರೆ ನೀನೇ ಮನೆ ಖಾಲಿ ಮಾಡಿಕೊಂಡು ಹೋಗು ಎಂದು ಧಮಕಿ ಹಾಕುತ್ತಾರೆ. ನನಗೇ ಮಾರಿಬಿಡು ಅಂತಾರೆ. ನನಗೆ ಬದುಕಲಿಕ್ಕೆ ಇರೋದು ಒಂದು ಮನೆ. ಅದನ್ನು ಮಾರಿ ಎಲ್ಲಿಗೆ ಹೋಗಲಿ. ದಯವಿಟ್ಟು ಮಾರವಾಡಿ ಇಂದ ಮನೆ ಖಾಲಿ ಮಾಡಿಸಿಕೊಡಿ’ ಎನ್ನುತ್ತಾರೆ.
ರಾಜ್ಯದ ಗಡಿ-ನೆಲ-ಜಲದ ಸಮಸ್ಯೆಗಳು ಒಂದು ಕಡೆಯಾದರೆ, ಕನ್ನಡದ ಜನರು ಅನುಭವಿಸುತ್ತಿರುವ ವೈಯಕ್ತಿಕ ಸಮಸ್ಯೆಗಳು ಮತ್ತೊಂದು ಕಡೆ. ದಿನನಿತ್ಯ ನಮ್ಮ ಕಚೇರಿಗೆ ಬರುವ ಜನರನ್ನು ನೋಡಿದರೆ, ಸಂಕಟವಾಗುತ್ತದೆ. ಕನ್ನಡಿಗನೇ ಅಸಹಾಯಕನಾಗಿ ಕರ್ನಾಟಕ ರಕ್ಷಣಾ ವೇದಿಕೆ ಕಚೇರಿಗೆ ಬಂದು ತನ್ನ ನೋವುಗಳನ್ನು ಹೇಳಿಕೊಳ್ಳುವಂಥ ಪರಿಸ್ಥಿತಿಯು ನಿರ್ಮಾಣವಾಗಿದೆಯಲ್ಲ. ಕನ್ನಡಿಗನೇ ಕನ್ನಡ ನಾಡಿನಲ್ಲಿ ಅಸಹಾಯಕನಾಗುವ ಪರಿಸ್ಥಿತಿ ಉದ್ಭವವಾಗಿದೆಯಲ್ಲ, ಇದಕ್ಕೆ ಯಾರು ಹೊಣೆ?
ಬೆಂಗಳೂರಿನಲ್ಲಿ ನಾವು ನೋಡಿದ ಹಾಗೆ ಆಚಾರರು ಇದ್ದರು. ಅವರೇ ಚಿನ್ನ, ಬೆಳ್ಳಿ ವ್ಯಾಪಾರ ಮಾಡುತ್ತಿದ್ದರು. ಈಗ ಬಂಗಾಲಿಗಳು ಬಂದು ಕುಳಿತಿದ್ದಾರೆ. ದೇವಾಂಗ ಸಮುದಾಯದವರು ಕೈಮಗ್ಗ, ನೇಯ್ಗೆ, ರೇಷ್ಮೆ ಉದ್ಯಮ ಮಾಡುತ್ತಿದ್ದರು. ಇವತ್ತು ಅದು ಕೂಡ ಅವರ ಕೈಯಲಿಲ್ಲ. ಮಾರವಾಡಿಗಳ ಕೈ ಸೇರಿಹೋಗಿದೆ. ಐಷಾರಾಮಿ ಪಾರ್ಲರ್‌ಗಳ ಹೆಸರಿನಲ್ಲಿ ಕ್ಷೌರದ ಅಂಗಡಿಗಳನ್ನು ಮಾರವಾಡಿಗಳೇ ತೆರೆದು ಸ್ಥಳೀಯ ಸವಿತಾ ಸಮಾಜದವರು ಅತಂತ್ರರಾಗಿದ್ದಾರೆ. ಕೆಂಪೇಗೌಡರ ಆಳ್ವಿಕೆಯಲ್ಲಿ ಕುಲಕಸುಬುಗಳನ್ನು ನೆಚ್ಚಿಕೊಂಡ ಎಲ್ಲ ಸಮುದಾಯಗಳಿಗೆ ಮಹತ್ವ ನೀಡಲಾಗಿತ್ತು. ಅವರ ಏಳಿಗೆಗಾಗಿಯೇ ಬೆಂಗಳೂರಿನಲ್ಲಿ ೭೪ ಪೇಟೆಗಳನ್ನು ಕೆಂಪೇಗೌಡರು ಕಟ್ಟಿದ್ದರು. ಕುಂಬಾರಪೇಟೆ, ಅಕ್ಕಿಪೇಟೆ, ಸುಲ್ತಾನ್‌ಪೇಟೆ, ಅರಳೇಪೇಟೆ, ಬಳೆಪೇಟೆ, ಚಿಕ್ಕಪೇಟೆ, ದೊಡ್ಡಪೇಟೆ ಹೀಗೆ ಒಂದೊಂದು ಪೇಟೆಗಳಲ್ಲೂ ಒಂದೊಂದು ಸಮುದಾಯದವರು ತಮ್ಮ ಕುಲಕಸುಬುಗಳನ್ನು ಜೀವಂತವಾಗಿ ನಡೆಸಿಕೊಂಡು ಬದುಕು ಕಟ್ಟಿಕೊಂಡಿದ್ದರು. ಇವತ್ತು ಅದಿಲ್ಲ. ಕುಲಕಸುಬುಗಳನ್ನು ನೆಚ್ಚಿಕೊಂಡು ಬಂದ ಬೆಂಗಳೂರಿನ ಮೂಲನಿವಾಸಿ ಕನ್ನಡಿಗರು ವಲಸೆ ಹೋಗುತ್ತಿದ್ದಾರೆ. ಬೆಂಗಳೂರಿನಲ್ಲಿ ಇವತ್ತು ಮೂಲ ಬೆಂಗಳೂರಿಗರನ್ನು ನೋಡಲು ಸಾಧ್ಯವಾಗುತ್ತಿಲ್ಲ.
ಇಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯ ಹತ್ತಾರು ಸದಸ್ಯರು ಇದ್ದಾರೆ. ಚುನಾವಣೆಯ ಪೂರ್ವದಲ್ಲಿ ಎಲ್ಲಾ ಪಕ್ಷಗಳ ಮುಖಂಡರಲ್ಲಿ ನಾನು ಮನವಿ ಮಾಡಿದ್ದೆ: ’ಕನ್ನಡಿಗರಿಗೆ ಟಿಕೆಟ್ ಕೊಡಿ’ ಅಂತ. ಇವತ್ತು ಬೆಂಗಳೂರು ಮಹಾನಗರ ಪಾಲಿಕೆಗೆ ಆಯ್ಕೆಯಾಗಿ ಬಂದಿರುವವರಲ್ಲಿ ಎಷ್ಟು ಮಂದಿ ಕನ್ನಡ ಮಾತೃ ಭಾಷೆಯವರಿದ್ದಾರೆ. ಹುಡುಕಿದರೆ ನೂರು ಜನ ಸಿಗಬಹುದೇನೋ? ಕನ್ನಡೇತರ ಸದಸ್ಯರು ನಾಳೆ ಯಾವ ತೀರ್ಮಾನ ಬೇಕಾದರೂ ತೆಗೆದುಕೊಳ್ಳುತ್ತಾರೆ. ದುರಂತ ಎಂದರೆ, ಮಚ್ಚು, ದೊಣ್ಣೆಗಳನ್ನು ಇಟ್ಟುಕೊಂಡು ಯಾರು ಬೆಂಗಳೂರಿನ ಬೀದಿ ಬೀದಿಗಳಲ್ಲಿ ಗೂಂಡಾಗಿರಿ ಮಾಡುತ್ತಿದ್ದರೋ ಅವರು ಸಹ ಆಯ್ಕೆಯಾಗಿ ಬಂದಿದ್ದಾರೆ. ಇವರ ಆರ್ಭಟದಲ್ಲಿ ಸಭ್ಯರಾದ ಪಾಲಿಕೆ ಸದಸ್ಯರು ಏನು ಮಾಡಲು ಸಾಧ್ಯ?
ಮೋಟಮ್ಮನವರು ಮಾತನಾಡುತ್ತಾ ಹೇಳಿದರು: ’ನಾರಾಯಣಗೌಡರು ಚುನಾವಣೆಗೆ ನಿಂತಿದ್ರು ಅಂತ. ಗೌಡರು ನಿಂತಿರಲಿಲ್ಲ; ಕೆಲವು ಕನ್ನಡಪರ ಅಭ್ಯರ್ಥಿಗಳನ್ನು ನಿಲ್ಲಿಸಿದ್ರು ಅಷ್ಟೆ. ಮಹಾನಗರ ಪಾಲಿಕೆಯಲ್ಲಿ ಕನ್ನಡದ ಧ್ವನಿ ಇರಬೇಕು ಎನ್ನುವ ಕಾರಣಕ್ಕೆ ಕೆಲವರನ್ನು ಆಯ್ಕೆ ಮಾಡಿ ಸ್ವತಂತ್ರ ಅಭ್ಯರ್ಥಿಗಳನ್ನಾಗಿ ಕಣಕ್ಕೆ ಇಳಿಸಿದ್ವಿ. ೯ ಜನ ಹೀಗೆ ನಿಂತಿದ್ರು. ಅವರ ಪರವಾಗಿ ಪ್ರಚಾರ ಮಾಡುವಾಗ ಮೋಟಮ್ಮನವರು ನನ್ನನ್ನು ನೋಡಿ ನಾನೇ ಚುನಾವಣೆಗೆ ನಿಂತಿದ್ದೇನೆ ಅಂದುಕೊಂಡಿರಬಹುದು.
ಹಿಂದೆ ಈ ಕನ್ನಡದ ಶಾಲನ್ನು ಯಾರೋ ಒಬ್ಬ ಕನ್ನಡಿಗ ಹಾಕಿಕೊಂಡರೆ, ಇವನಿಗೆ ಮಾಡಲು ಕೆಲಸವಿಲ್ಲ ಅಂತಿದ್ರು. ಆದರೆ, ಇವತ್ತು ನೋಡಿ, ಎಲ್ಲರೂ ಕನ್ನಡ ಶಾಲು ಹಾಕುತ್ತಾರೆ. ಮೊನ್ನೆ ಯಾರೋ ದರೋಡೆ ಮಾಡಿ ಸಿಕ್ಕಿ ಬಿದ್ದಿದ್ದಾನೆ; ಅವನ ಕೊರಳಲ್ಲೂ ಕನ್ನಡದ ಶಾಲು. ಮಾಧ್ಯಮಗಳಲ್ಲಿ ರಕ್ಷಣಾ ವೇದಿಕೆ ಕಾರ್ಯಕರ್ತನಿಂದ ದರೋಡೆ ಅಂತ ಸುದ್ದಿ ಬಂತು. ನನಗೆ ರಾತ್ರಿಯೆಲ್ಲಾ ನಿದ್ದೆ ಬರಲಿಲ್ಲ. ಈ ನಾಡಿಗಾಗಿ ನುಡಿಗಾಗಿ ಎಲ್ಲ ತ್ಯಾಗಕ್ಕೂ ಸಿದ್ಧವಾದ ಕನ್ನಡದ ಶಕ್ತಿಯೊಂದು ಉದಯವಾಗಬೇಕು ಎಂಬ ಉದ್ದೇಶವಿಟ್ಟುಕೊಂಡು ಇಡೀ ರಾಜ್ಯದಲ್ಲಿ ಹಗಲು-ರಾತ್ರಿ ಹೋರಾಡಿ ಈ ಸಂಘಟನೆ ಕಟ್ಟಿದ್ದೇವೆ. ೬೦ ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಸದಸ್ಯತ್ವ ಪಡೆದಿದ್ದಾರೆ. ೨೮,೬೮೦ ಶಾಖೆಗಳು ಕೆಲಸ ಮಾಡುತ್ತಿವೆ. ಹೀಗಿರುವಾಗ ಇಂಥದೊಂದು ಸಣ್ಣ ವಿಚಾರ ಬಂದಾಗ ರಾತ್ರಿಯೆಲ್ಲಾ ನಿದ್ದೆ ಬರೋದಿಲ್ಲ.
ಒಂದು ದಿನ ನಿವೃತ್ತ ನ್ಯಾಯಧೀಶರೊಬ್ಬರು ಫೋನ್ ಮಾಡಿದ್ರು: ’ರೀ ನಾರಾಯಣಗೌಡರೇ ಟಿ.ವಿ. ನೋಡಿದ್ರೇನ್ರಿ ಎಂದರು. ಇಲ್ಲ ಸಾರ್ ಅಂದೆ. ’ನೋಡ್ರಿ ನಿಮ್ಮವರು ಆ ಹೆಣ್ಣುಮಕ್ಕಳ ಮೇಲೆ ಗಲಾಟೆ ಮಾಡಿ ಹೊಡೀತಿದ್ದಾರೆ’ ಎಂದರು. ಟಿ.ವಿ.ಹಾಕಿ ನೋಡಿದರೆ ಅವರ‍್ಯಾರೂ ನಮ್ಮವರಾಗಿರಲಿಲ್ಲ. ಆದರೆ, ಶಾಲು ಹಾಕಿಕೊಂಡಿದ್ದರು. ಮೊನ್ನೆ ಯಾರೋ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಗಲಾಟೆ ಮಾಡಿದ್ದಾರೆ. ನಾಲ್ಕು ಲಕ್ಷ ಬಿಲ್ ಆಗಿದೆ. ಕಟ್ಟೋದಿಕ್ಕೆ ಆಗಿಲ್ಲ. ಒಂದಷ್ಟು ಜನ ಶಾಲು ಹಾಕಿಕೊಂಡು ಹೋಗಿ, ನಾವು ಕರ್ನಾಟಕ ರಕ್ಷಣಾ ವೇದಿಕೆಯವರು ಅಂತ ಗಲಾಟೆ ಮಾಡಿದ್ದಾರೆ. ಕೊನೆಗೆ ಸ್ವಾಮೀಜಿಯವರೇ ಫೋನ್ ಮಾಡಿ ಹೇಳಿದರು. ನೋಡಿದರೆ, ಅವರ‍್ಯಾರೂ ನಮ್ಮವರಾಗಿರಲಿಲ್ಲ.
ಇಂತಹವು ಅನೇಕ ಬಾರೀ ನಡೆಯುತ್ತವೆ. ಆದರೆ, ನಿಜವಾದ ಕನ್ನಡದ ಕಳಕಳಿ ಇಟ್ಟುಕೊಂಡಿರುವ ಜನ ಇದನ್ನು ಮಾಡೋದಿಲ್ಲ.
ಮೋಟಮ್ಮನವರು ಮಾತನಾಡುವಾಗ ರಾಜಕಾರಣಕ್ಕೆ ಕರವೇ ಬರಬಾರದಿತ್ತು ಎಂದರು. ನಾವು ರಾಜಕೀಯ ಬೇಕು ಎಂದು ಯಾವತ್ತು ಅಂದುಕೊಂಡವರಲ್ಲ. ಆದರೆ ಇವತ್ತು ನಾವು ರಾಜಕಾರಣಕ್ಕೆ ಇಳಿಯುವಂಥ ಪರಿಸ್ಥಿತಿ ನಿರ್ಮಾಣ ಮಾಡಿದ್ದು ಸಹ ನೀವೇ. ಆ ಹೊಣೆಗಾರಿಕೆ ನಿಮ್ಮದು. ನೀವೇ ಹೇಳಿ ಮೋಟಮ್ಮನವರೇ, ಎಲ್ಲಾ ಪಕ್ಷಗಳ ಜನಪ್ರತಿನಿಧಿಗಳು ಎಲ್ಲಾ ಸರ್ಕಾರಗಳು ಸಂಪೂರ್ಣವಾಗಿ ಕನ್ನಡದ ಧ್ವನಿಯಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿಬಿಡಲಿ. ನಾರಾಯಣಗೌಡರೇ ನೀವು ನಿಮ್ಮ ಬದುಕು ನೋಡಿಕೊಳ್ರಿ, ಕನ್ನಡ, ಕನ್ನಡಿಗ, ಕರ್ನಾಟಕದ ರಕ್ಷಣೆಯ ಕಾರ್ಯವನ್ನು ನಮಗೆ ಬಿಡಿ ಎಂದು ನೀವೆಲ್ಲಾ ಒಮ್ಮೆ ಹೇಳಿಬಿಡಿ. ನಾಳೆಯಿಂದನೇ ನಾನು ಶಾಲು ಹಾಕೋದಿಲ್ಲ.
ಹೊಗೇನಕಲ್ ವಿಚಾರದಲ್ಲಿ ನಾರಾಯಣಗೌಡರೇ ಮಾತನಾಡಬೇಕಾ? ತಮಿಳುನಾಡು ಸರ್ಕಾರ ನಮ್ಮ ಗಡಿಯಲ್ಲಿ ಕಾಮಗಾರಿ ಆರಂಭ ಮಾಡಿದರೂ ಯಾರೂ ಬಾಯಿ ಬಿಡಲಿಲ್ಲ. ನಾನು ಸಹ ಒಂದು ವಾರ ಕಾದು ನೋಡಿದೆ; ಯಾರಾದರೂ ಮಾತಾಡ್ತಾರಾ? ಅಂತ. ಯಾರೂ ಮಾತಾಡಲಿಲ್ಲ. ಮನಸ್ಸು ತಡೆಯಲಿಲ್ಲ. ಒಳಗೆ ಕುದಿತ. ಅನಿವಾರ್ಯವಾಗಿ ಬೀದಿಗಿಳಿಯಬೇಕಾಯಿತು. ಬಾಯಿ ಬಿಡ್ರಿ ಎಂದು ನಮ್ಮ ಸಂಸದರ ಮನೆ ಮುಂದೆ ಧರಣಿ ಮಾಡಬೇಕಾಯಿತು. ನಾವೇನು ಕುಡಿಯುವ ನೀರಿನ ಯೋಜನೆ ಮಾಡಬೇಡಿ ಎಂದು ತಮಿಳುನಾಡಿಗೆ ಹೇಳುತ್ತಿಲ್ಲ. ಅವರು ಯೋಜನೆ ಮಾಡುತ್ತಿರುವ ಪ್ರದೇಶ ಕರ್ನಾಟಕದ್ದು. ಮೊದಲು ಕೇಂದ್ರ ಸರ್ಕಾರದ ಮಧ್ಯಸ್ಥಿಕೆಯಲಿ ಜಂಟಿ ಸರ್ವೆ ನಡೆಯಲಿ. ಆ ಪ್ರದೇಶ ಯಾರದು ಅಂತ ತೀರ್ಮಾನವಾಗಲಿ. ಆಮೇಲೆ ಬೇಕಾದರೆ, ನೀವು ಯೋಜನೆ ಮಾಡಿಕೊಳ್ಳಿ ಅಂತ ತಾವು ಹೇಳುತ್ತಿದ್ದೇವೆ. ಇದೇ ಮಾತನ್ನು ಲೋಕಸಭೆಯಲ್ಲಿ, ದೆಹಲಿಯಲ್ಲಿ ಹೇಳಿ ಅಂತ ನಾವು ಲೋಕಸಭಾ ಸದಸ್ಯರ ಮನೆಮುಂದೆ ಧರಣಿ ಮಾಡಬೇಕಾದ ಸ್ಥಿತಿ ಬಂದಿದೆ.
ನಾರಾಯಣಗೌಡರು ನಾಳೆ ಧರಣಿ ಮಾಡುತ್ತಾರೆಂದರೆ, ಹಿಂದಿನ ದಿನ ರಾತ್ರಿ ಫೋನ್ ಕಾಲ್ ಬರುತ್ತೆ: ’ನಮ್ಮ ಮನೆ ಮುಂದೆ ಬೇಡ, ಅವರ ಮನೆ ಮುಂದೆ ಮಾಡಿ. ಅವರ ಮನೆ ಮುಂದೆ ಬೇಡ, ಇವರ ಮನೆ ಮುಂದೆ ಮಾಡಿ. ನಾವು ಮಾತಾಡೋದಿಕ್ಕೆ ಅರ್ಜಿ ಹಾಕಿದ್ದೇವೆ, ಸಮಯ ಕೊಟ್ಟಿಲ್ಲ. ಕೊಟ್ಟಾಗ ಮಾತಾಡ್ತೀವಿ’ ಇತ್ಯಾದಿ...ಇತ್ಯಾದಿ. ಇದೇನು ನಮ್ಮ ಕರ್ಮನೋ? ಕನ್ನಡದ ಕರ್ಮನೋ? ಗೊತ್ತಿಲ್ಲ.
ಮೊನ್ನೆ ಪ್ರತಿಭಟನೆ ಹಮ್ಮಿಕೊಂಡಾಗ ಒಂದು ವಿಶೇಷ ನಡೆಯಿತು. ಒಂದೇ ಕಡೆ ಒಬ್ಬ ಬಿಜೆಪಿ ಮತ್ತೋರ್ವ ಕಾಂಗ್ರೆಸ್ ಸಂಸದರ ಮನೆಯಿತ್ತು. ನಾವು ನಡುವಿನಲ್ಲಿ ಕುಳಿತು ಧರಣಿ ಮಾಡ್ತಾ ಇದ್ವಿ. ಒಬ್ಬರು ಫೋನ್ ಮಾಡಿ ಹೇಳಿದರು: ’ಸದ್ಯ, ನಮ್ಮ ಮನೆ ಮುಂದೆ ಧರಣಿ ಮಾಡುತ್ತಿಲ್ಲ ಅಂತ ಖುಷಿ ಪಟ್ಟರು. ಆಗ ನಾನು ಹೇಳಿದೆ: ’ನೀವು ಸರಿಯಾಗಿ ಗಮನಿಸಿಲ್ಲ ಅನ್ನಿಸುತ್ತೆ. ನಮ್ಮ ಕಾರ್ಯಕರ್ತರು ನಿಮ್ಮನ್ನು ಸೇರಿಸಿಯೇ ಛೀಮಾರಿ ಹಾಕಿದ್ದಾರೆ, ಧಿಕ್ಕಾರ ಕೂಗಿದ್ದಾರೆ. ಕರ್ನಾಟಕದಲ್ಲಿ ನೀವು ಯಾಕಾಗಿ ಹುಟ್ಟಿದಿರೋ ಅಂತ ಅನ್ನಿಸುತ್ತಿದೆ’.
ಲೋಕಸಭೆಯಲ್ಲಿ ಯಾವುದಾದರೂ ಒಂದು ರಾಜ್ಯದ ವಿಷಯ ಬಂದಾಗ ಆ ರಾಜ್ಯದ ಸಂಸದರೆಲ್ಲಾ ಒಂದಾಗುತ್ತಾರೆ. ಅವರವರ ವಿಧಾನಸಭೆಗಳಲ್ಲಿ ಪರಸ್ಪರರ ಸೀರೆ ಎಳೆದದ್ದು ಉಂಟು, ಪಂಚೆ ಎಳೆದಿದ್ದು ಉಂಟು. ಆದರೆ, ಅವರ ರಾಜ್ಯದ ವಿಷಯ ಬಂದಾಗ ಎಲ್ಲರೂ ಒಂದಾಗುತ್ತಾರೆ. ತಮಿಳುನಾಡಿನ ಜನ, ಆಂಧ್ರದ ಜನ, ಮಹಾರಾಷ್ಟ್ರದ ಜನ ಲಾಬಿ ಮಾಡುವುದನ್ನು ನೋಡಿಯಾದರೂ ತಮ್ಮವರು ಕಲಿಯಬಾರದೆ?
ಹೊಗೇನಕಲ್ ವಿಚಾರ ಬಂದಾಗ ’ತಮಿಳುನಾಡಿನವರು ಕುಡಿಯುವ ನೀರಿನ ಯೋಜನೆ ಮಾಡುತ್ತಿದ್ದಾರೆ. ಕುಡಿಯುವ ನೀರಿಗೆ ಅಡ್ಡಿ ಬರಬೇಡಿ’ ಎಂದು ಕೇಂದ್ರ ಸರ್ಕಾರದವರು, ನ್ಯಾಯಮಂಡಳಿಗಳು ಹೇಳುತ್ತವೆ. ಆದರೆ, ಕಳಸಾಬಂಡೂರಿ ಯೋಜನೆ ವಿಷಯದಲ್ಲಿ ಇದೇ ಮಾತನ್ನು ಕೇಂದ್ರ ಸರ್ಕಾರ ಗೋವಾ ಸರ್ಕಾರಕ್ಕೆ ಏಕೆ ಹೇಳುವುದಿಲ್ಲ? ಕಳಸಾ ಬಂಡೂರಿಯಲ್ಲಿ ನಾವು ಮಾಡಲು ಹೊರಟಿರುವುದು ನೀರಾವರಿ ಯೋಜನೆಯೇನಲ್ಲ. ಐದು ಜಿಲ್ಲೆಗಳ ಕುಡಿಯುವ ನೀರಿಗಾಗಿ ೭ ಟಿಎಂಸಿ ನೀರು ಬಳಸಿಕೊಳ್ಳುವ ಯೋಜನೆಯದು. ಯಾಕೆ ಗೋವಾ ಸರ್ಕಾರಕ್ಕೆ ಈ ಜನ ಬುದ್ಧಿ ಹೇಳೋದಿಲ್ಲ. ಯಾಕೆಂದರೆ ಅವರಿಗೆ ಚೆನ್ನಾಗಿ ಗೊತ್ತಿದೆ. ಕನ್ನಡದ ಜನ ನೀರು ಕೇಳಿದರೆ ಪಾನಕ ಕೊಡುವಷ್ಟು ಒಳ್ಳೇ ಜನ. ಇವರು ಎಲ್ಲವನ್ನು ಸಹಿಸಿಕೊಳ್ಳುತ್ತಾರೆ.
ಹೀಗಾಗಿಯೇ ನಮ್ಮ ಮೇಲೆ ಎಷ್ಟೇ ದೌರ್ಜನ್ಯ ದಬ್ಬಾಳಿಕೆ ಮಾಡಿದರೂ ನಾವು ಸುಮ್ಮನಿದ್ದೇವೆ, ನಿರಂತರ ದೌರ್ಜನ್ಯಕ್ಕೆ ಒಳಗಾಗಿದ್ದೇವೆ. ಜೆ.ಎಚ್.ಪಟೇಲ್‌ರ ಕಾಲದಲ್ಲಿ ನಡೆದ ಒಪ್ಪಂದವಾದರೂ ಏನು? ಹೊಗೇನಕಲ್‌ನಲ್ಲಿ ೧.೪ ಟಿಎಂಸಿ ನೀರು ಬಳಸಿಕೊಳ್ಳುವ ಯೋಜನೆ ಮಾಡುತ್ತೇವೆ, ೨ ಜಿಲ್ಲೆಗಳಿಗೆ ನೀರು ಕೊಡುತ್ತೇವೆ ಎಂದಿದ್ದರು ತಮಿಳುನಾಡಿನವರು. ೩೦ ಲಕ್ಷ ಜನರಿಗೆ ನೀರು ಕೊಡುತ್ತೇವೆ ಎಂದರು. ಆದರೆ, ಈಗ ೩ ಜಿಲ್ಲೆಗಳ ೫೦ ಲಕ್ಷ ಜನರಿಗೆ ನೀರು ಕೊಡುವ ಯೋಜನೆ ಮಾಡಲು ಹೊರಟಿದ್ದಾರೆ.
ಆದರೂ ನಾವು ತಕರಾರು ಮಾಡ್ತಿಲ್ಲ. ನಮ್ಮ ತಕರಾರು ಇರುವುದು ಯೋಜನೆಗೆ ಬಳಸಲಾಗುತ್ತಿರುವ ಪ್ರದೇಶದ್ದು. ಅದು ನಮ್ಮದು. ಭಾಷಾವಾರು ಪ್ರಾಂತ್ಯ ರಚನೆಯಾದ ಸಂದರ್ಭದಲ್ಲಿ ಹೊಗೇನಕಲ್‌ನ ಮೂರನೇ ಎರಡು ಭಾಗ ಕರ್ನಾಟಕದ್ದು, ಉಳಿದ ಒಂದು ಭಾಗ ತಮಿಳುನಾಡಿಗೆ ಸೇರಿದ್ದು ಎಂದು ತೀರ್ಮಾನವಾಗಿದೆ. ಆದರೆ, ಅವರು ಅದನ್ನು ತಿರುಚಿದ್ದಾರೆ. ಇದೆಲ್ಲವನ್ನು ಮಾತಾಡಬೇಕಾದ ನಮ್ಮ ಜನಪ್ರತಿನಿಧಿಗಳು ಮೌನವಾಗಿದ್ದಾರೆ.
ಬೆಳಗಾವಿಯಲ್ಲಿ ಗೆದ್ದು ಬಂದ ಜನ ವಿಧಾನಸಭೆಯಲ್ಲಿ ನಿಂತು ’ಶಿವಾಜಿ ಮಹಾರಾಜ್ ಕೀ ಜೈ.... ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು’ ಎಂದು ಅರಚುತ್ತಿದ್ದರೆ, ಹೊರಗಿರುವ ನಮ್ಮ ರಕ್ತ ಕುದಿಯುತ್ತದೆ. ಅವತ್ತು ಕಾವೇರಿ ನ್ಯಾಯಮಂಡಳಿಯ ಅಂತಿಮ ತೀರ್ಪು ಮಧ್ಯಾಹ್ನ ೨.೧೫ಕ್ಕೆ ಹೊರಬಿತ್ತು. ಆ ಕ್ಷಣದಿಂದಲೇ ರಕ್ಷಣಾ ವೇದಿಕೆಯ ಕಾರ್ಯಕರ್ತರು ಬೀದಿಗಿಳಿದು ಹೋರಾಟ ಆರಂಭ ಮಾಡಿದರು. ಒಬ್ಬ ಲೋಕಸಭಾ ಸದಸ್ಯನು ಬರಲಿಲ್ಲ, ಒಬ್ಬ ಜನಪ್ರತಿನಿಧಿಯು ಬರಲಿಲ್ಲ.
ಡಾ.ಯು.ಆರ್.ಅನಂತಮೂರ್ತಿಯವರು ಮಾತನಾಡುವಾಗ ಹೇಳಿದರು: ’ನಾವು ಜಾತಿ-ಧರ್ಮದ ಹೆಸರಿನಲ್ಲಿ ಒಗ್ಗೂಡುತ್ತೇವೆ. ಕನ್ನಡ ಭಾಷೆ ಹೆಸರಿನಲ್ಲಿ ಒಗ್ಗೂಡುತ್ತಿಲ್ಲ. ಮುಂದಾದರೂ ಕನ್ನಡದ ಹೆಸರಿನಲ್ಲಿ ಎಲ್ಲಾ ಸಮುದಾಯಗಳು ಒಗ್ಗೂಡುವಂಥ ದಿನ ಬರಬೇಕು’.
ಅನಕೃ, ಮ.ರಾಮಮೂರ್ತಿ ಮೊದಲಾದವರು ದೊಡ್ಡ ಕನಸನ್ನು ಕಟ್ಟಿಕೊಂಡು ಈ ಕನ್ನಡ ಬಾವುಟವನ್ನು ನಮ್ಮ ಕೈಗೆ ಕೊಟ್ಟಿದ್ದಾರೆ. ಪಕ್ಷ, ಧರ್ಮ, ಜಾತಿಗಳ ಹೆಸರುಗಳನ್ನು ಬಿಟ್ಟು ನಾವು ಕನ್ನಡದ ಹೆಸರಿನಲ್ಲಿ ಒಂದಾದಾಗ ಮಾತ್ರ ಬೆಳಗಾವಿ ಉಳಿಯುತ್ತೆ, ಬಳ್ಳಾರಿ ಉಳಿಯುತ್ತೆ, ಕಾವೇರಿ ಕೃಷ್ಣೆಯರು ಉಳಿಯುತ್ತಾರೆ. ಹೊಗೇನಕಲ್ ಉಳಿಯುತ್ತದೆ. ಬೆಂಗಳೂರು ನಮ್ಮ ಪಾಲಿಗೆ ಉಳಿಯುತ್ತದೆ. ಇಲ್ಲ ಅಂದರೆ ಎಲ್ಲವನ್ನು ನಾವು ಕಳೆದುಕೊಳ್ಳುತ್ತೇವೆ.
ಇವತ್ತು ಬೆಂಗಳೂರಿನ ಸ್ಥಿತಿ ಹೇಗಿದೆ. ಭಾರತ ಸುತ್ತುವುದು ಬೇಕಿಲ್ಲ. ಬೆಂಗಳೂರು ಸುತ್ತಿ ಬಂದರೆ ಇಡೀ ಭಾರತ ಸುತ್ತಿ ಬಂದಂತೆ ಆಗುತ್ತದೆ. ಇವತ್ತು ತರಕಾರಿ ಮಾರಾಟ ಮಾಡುವುದಕ್ಕೂ ನಮ್ಮ ಕೈಯಿಂದ ಸಾಧ್ಯವಾಗುತ್ತಿಲ್ಲ. ತರಕಾರಿ, ಮಾಂಸವನ್ನು ಸಹ ಬಹುರಾಷ್ಟ್ರೀಯ ಕಂಪನಿಗಳು ಮಾರಾಟ ಮಾಡುತ್ತಿವೆ. ದೊಡ್ಡ ದೊಡ್ಡ ಕಂಪನಿಗಳು ಬಂದು ಸಾವಿರಾರು ಜನರ ಬದುಕನ್ನು ನಾಶ ಮಾಡಿದೆ. ಇದಕ್ಕೆ ಪ್ರತಿಯಾಗಿ ಒಬ್ಬ ವ್ಯಕ್ತಿ, ಒಂದು ಸಂಸ್ಥೆ, ಒಂದು ಕುಟುಂಬ ನೂರಾರು ಕೋಟಿ ರೂಪಾಯಿಗಳನ್ನು ಬಾಚುತ್ತಿವೆ.
ಕರ್ನಾಟಕದಲ್ಲಿ ನೂರಾರು ತಮಿಳು ಶಾಲೆಗಳು ನಡೆಯುತ್ತಿವೆ. ಆದರೆ, ತಮಿಳುನಾಡಿನಲ್ಲಿರುವ ಕೇವಲ ೬೨ ಕನ್ನಡ ಶಾಲೆಗಳನ್ನು ತಮಿಳು ಶಾಲೆಗಳನ್ನಾಗಿ ಮಾಡಲು ಹೊರಟಿದ್ದಾರೆ. ಕೃಷ್ಣಗಿರಿ, ಧರ್ಮಗಿರಿ, ಊಟಿ, ಕೊಯಮತ್ತೂರುಗಳಲ್ಲಿ ಲಕ್ಷಾಂತರ ಕನ್ನಡದ ಜನ ಬದುಕುತ್ತಿದ್ದಾರೆ. ಅಲ್ಲಿ ಇನ್ನು ಕನ್ನಡ ಶಾಲೆಗಳು ಇರೋದಿಲ್ಲ. ಆದರೆ, ಇವತ್ತು ನಮ್ಮ ರಾಜ್ಯದಲ್ಲಿ ಇರುವ ತಮಿಳು ಶಾಲೆಗಳಿಗೆ ಯಾವ ತೊಂದರೆಯೂ ಇಲ್ಲ. ಅವುಗಳಿಗೆ ಸರ್ಕಾರದ ಅನುದಾನವೂ ದೊರೆಯುತ್ತಿದೆ. ಯಾಕೆ ಕನ್ನಡಿಗರಿಗೆ ಈ ಶಿಕ್ಷೆ? ಯಾಕೆ ಇದನ್ನೆಲ್ಲಾ ನಾವು ಸಹಿಸಿಕೊಳ್ಳುತ್ತೇವೆ?
ಇದೆಲ್ಲಾ ದುಃಖದುಮ್ಮಾನಗಳನ್ನು ಕನ್ನಡದ ನೋವು-ಸಂಕಟಗಳನ್ನು ಹೇಳಿಕೊಳ್ಳಲೆಂದೇ ‘ಕರವೇ ನಲ್ನುಡಿ’ ಹೆಸರಿನಲ್ಲಿ ಪತ್ರಿಕೆ ಆರಂಭಿಸಿದ್ದೇವೆ. ಕರ್ನಾಟಕ ರಕ್ಷಣಾ ವೇದಿಕೆಗೆ ಹತ್ತು ವರ್ಷ ತುಂಬಿದ ಈ ಸಂದರ್ಭದಲ್ಲಿ ಪತ್ರಿಕೆ ಮೂಲಕವು ಕನ್ನಡದ ಕೆಲಸವನ್ನು ಮಾಡಲೆಂದೇ ಇದನ್ನು ಆರಂಭಿಸಿದ್ದೇವೆ.
ಬಂಧುಗಳೇ, ಕನ್ನಡದ ವಿಚಾರದಲ್ಲಿ ಕುವೆಂಪುರವರು ಒಂದು ಮಾತನ್ನು ಹೇಳುತ್ತಾರೆ: ’ಕನ್ನಡ ಕೊಲ್ಲುವ ಮುನ್ನ ಎನ್ನ ಕೊಲ್ಲು ನಾವು ಸಹ ಅದನ್ನೇ ಹೇಳುತ್ತೇವೆ. ಇದೇ ರಕ್ಷಣಾ ವೇದಿಕೆಯ ಸಿದ್ಧಾಂತ, ವೇದಾಂತ ಎಲ್ಲವೂ. ಕನ್ನಡವನ್ನು ಕೊಲ್ಲುತ್ತೇವೆ ಅನ್ನುವವರು, ನಾಡನ್ನು ಹಾಳು ಮಾಡುತ್ತೇವೆ ಎನ್ನುವವರು, ಲೂಟಿ ಮಾಡುತ್ತೇವೆ ಎನ್ನುವವರು, ನಾಡಿಗೆ ವಿರುದ್ಧವಾಗಿ ನಿಲ್ಲುತ್ತೇವೆ ಎನ್ನುವವರು ಮೊದಲು ನಮ್ಮನ್ನು ಎದುರಿಸಬೇಕು. ಇಂಥವರನ್ನು ಎದುರಿಸುವ ತಾಕತ್ ನಮಗಿದೆ.
ಯಾವ ಪಕ್ಷ, ಸರ್ಕಾರ, ವ್ಯಕ್ತಿ ನಮ್ಮ ಶತ್ರುಗಳಲ್ಲ. ಯಾರು ಕರ್ನಾಟಕವನ್ನು ದ್ವೇಷಿಸುತ್ತಾರೋ, ಕರ್ನಾಟಕದ ಖಳನಾಯಕರಾಗಿ ವರ್ತಿಸುತ್ತಾರೋ ಅಂಥವರಿಗೆ ನಾವು ಶತ್ರುಗಳು. ಅವರ ಪಾಲಿಗೆ ನಾವು ಸಿಂಹ ಸ್ವಪ್ನ.
ಈ ನೆಲದಲ್ಲಿ ಹುಟ್ಟಿದ್ದೇವೆ. ಈ ತಾಯ್ನಾಡಿನ ಋಣ ತೀರಿಸುವುದಕ್ಕೆ ರಕ್ಷಣಾ ವೇದಿಕೆ ಕಟ್ಟಿಕೊಂಡು ಹೋರಾಡುತ್ತಿದ್ದೇವೆ. ಅದನ್ನು ಹೊರತು ಪಡಿಸಿ ಬೇರೇನೂ ಇಲ್ಲ. ಕೆಲವರು ನಮ್ಮನ್ನು ಅರ್ಥಮಾಡಿಕೊಳ್ಳುತ್ತಿಲ್ಲ.
ಅನಂತಮೂರ್ತಿ ಹೇಳಿದರು. ಬೆಂಗಳೂರಿನಲ್ಲಿ ಒಳ್ಳೆಯ ಕನ್ನಡದ ಶಾಲೆಗಳು ಇಲ್ಲ. ನಾರಾಯಣಗೌಡರೇ, ನೀವಾದರೂ ಒಂದು ಒಳ್ಳೇ ಕನ್ನಡದ ಶಾಲೆ ಆರಂಭಿಸಿ ಅಂತ ಹಲವರು ನನ್ನ ಬಳಿ ಹೇಳುತ್ತಾರೆ. ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲೂ ಪರಿಪೂರ್ಣವಾದ, ಸುಸಜ್ಜಿತವಾದ ಕನ್ನಡ ಶಾಲೆಗಳನ್ನು ತೆರೆಯುವ ಕೆಲಸವನ್ನು ಸರ್ಕಾರ ಮಾಡಬೇಕಾಗಿದೆ. ಅನಂತಮೂರ್ತಿಯವರೇ, ನೀವು ಹಿರೀಕರು ಆದೇಶ ಮಾಡಿದ್ದೀರಿ. ನಿಮ್ಮ ಆದೇಶವನ್ನು ರಕ್ಷಣಾ ವೇದಿಕೆ ಸಂಪೂರ್ಣವಾಗಿ ಒಪ್ಪಿ ಸ್ವೀಕರಿಸುತ್ತದೆ. ನಿಮ್ಮ ನೋವು ಇಡೀ ಕನ್ನಡ ನಾಡಿನ ನೋವು. ಹೀಗಾಗಿ ನಿಮ್ಮ ಸಲಹೆಯನ್ನು ಆದೇಶವಾಗಿ ಸ್ವೀಕರಿಸಿ ನಾವು ಕೆಲಸ ಮಾಡುತ್ತೇವೆ.
ಇನ್ನೊಂದು ವಿಷಯ ಹೇಳಿಬಿಡುತ್ತೇನೆ. ಕರವೇಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಅವರದೇ ಆದ ಬದುಕಿದೆ. ಚಳವಳಿ ಅವರ ಬದುಕಿನ ಒಂದು ಭಾಗ ಅಷ್ಟೇ. ನನ್ನ ಕಾರ್ಯಕರ್ತರಿಗೆ ನಾನು ಅದನ್ನೇ ಹೇಳುತ್ತೇನೆ. ಹೋರಾಟವೇ ನಿಮ್ಮ ಜೀವನವಾಗಬಾರದು. ಹಾಗಾದಾಗ ಚಳವಳಿ ದಿಕ್ಕು ತಪ್ಪುತ್ತದೆ, ದಾರಿ ತಪ್ಪುತ್ತದೆ. ಹಲವರು ಕೇಳುತ್ತಾರೆ: ’ನಾರಾಯಣಗೌಡರೇ, ನಿಮ್ಮ ಕಾರ್ಯಕರ್ತರು ಸ್ಕಾರ್ಪಿಯೋ, ಇನೋವಾಗಳಲ್ಲಿ ಓಡಾಡುತ್ತಾರೆ. ನೀವು ಹೊರಟರೆ ನಿಮ್ಮ ಹಿಂದೆ ಹತ್ತಾರು ಐಷಾರಾಮಿ ಕಾರುಗಳು ಹಿಂಬಾಲಿಸುತ್ತವೆ’. ನಾನು ಅವರಿಗೆ ಹೇಳುತ್ತೇನೆ: ’ನನ್ನ ಕಾರ್ಯಕರ್ತರ‍್ಯಾರೂ ಫುಟ್‌ಪಾತ್‌ನಲ್ಲಿಲ್ಲ. ಅವರದೇ ಆದ ಬದುಕನ್ನು ಕಟ್ಟಿಕೊಂಡಿದ್ದಾರೆ. ಎಲ್ಲರಂತೆ ಬದುಕುವ ತಾಕತ್ ಅವರಿಗಿದೆ. ಅದಕ್ಕೆ ಕಾರಿನಲ್ಲಿ ಓಡಾಡುತ್ತಾರೆ. ಯಾರೋ ಮಾರವಾಡಿಗಳು, ಸಿಂಧಿಗಳು ಕಾರಿನಲ್ಲಿ ಓಡಾಡೋದನ್ನು, ಗಣಿ ಲೂಟಿಕೋರರು ಸ್ವಂತದ ಹೆಲಿಕಾಪ್ಟರ್‌ನಲ್ಲಿ ಓಡಾಡುವುದನ್ನು ಸಹಿಸಿಕೊಳ್ಳುವ ನಮ್ಮ ಜನ, ಈ ನೆಲದ ಹೋರಾಟಗಾರರು ಕಾರಿನಲ್ಲಿ ಓಡಾಡಿದರೆ ಸಹಿಸಿಕೊಳ್ಳೋದಿಲ್ಲ ಏಕೆ?
ಯಾರ‍್ಯಾರೋ, ಏನೇನೋ ಮಾಡುತ್ತಾರೆ. ಬಸವಣ್ಣನವರು ಹೇಳುತ್ತಾರೆ. ’ಉಳ್ಳವರು ಶಿವಾಲಯ ಮಾಡುವರು ನಾನೇನು ಮಾಡಲಿ ಬಡವನಯ್ಯ, ಕಾಲೇ ಕಂಬವಯ್ಯ. ದೇಹವೇ ದೇಗುಲವಯ್ಯ. ಶಿರವೇ ಹೊನ್ನ ಕಳಸವಯ್ಯ.’ ನಮ್ಮ ಕನ್ನಡದ ಕಂದಮ್ಮಗಳು ಮತ್ತೇನು ಮಾಡಲು ಸಾಧ್ಯವಿಲ್ಲದಿದ್ದರೂ ಚಿಕ್ಕಪುಟ್ಟದಾಗಿ ಬದುಕು ಕಟ್ಟಿಕೊಂಡಿದ್ದಾರೆ. ಅವರ ಮೇಲೆ ಏಕೆ ನಿಮ್ಮ ಕೆಂಗೆಣ್ಣು. ಕರ್ನಾಟಕದ ಐದೂವರೆ ಕೋಟಿ ಕನ್ನಡಿಗರು ಕಾರಿನಲ್ಲಿ ಓಡಾಡುವಂತಾಗಬೇಕು. ಅದು ನನ್ನ ಕನಸು.
ಪುಟ್ಟಪ್ಪನವರು ಒಂದು ಮಾತನ್ನು ಹೇಳಿದರು: ’ಸರ್ವಜನಾಂಗದ ಶಾಂತಿಯ ತೋಟ. ರಸಿಕರ ಕಂಗಳ ಸೆಳೆಯುವ ನೋಟ.’ ಈ ಸರ್ವಜನಾಂಗದ ಶಾಂತಿಯ ನೋಟದಲ್ಲಿ ಹೊರಗಿನಿಂದ ಬಂದವರಿಗೆಲ್ಲಾ ರತ್ನಗಂಬಳಿ ಹಾಸಿ ಕೂರಿಸಿದ್ದೇವೆ. ಎಲ್ಲವನ್ನು ಸಹಿಸಿಕೊಂಡಿದ್ದೇವೆ. ಈಗಲೂ ಅಷ್ಟೇ. ಅವರ‍್ಯಾರಿಗೂ ಇಲ್ಲಿ ಬದುಕಬೇಡಿ ಎಂದು ನಾವು ಹೇಳುವುದಿಲ್ಲ. ನೀವು ಬಂದಿದ್ದೀರಿ, ನೀವು ನಮ್ಮ ಅತಿಥಿಗಳು; ಮಾಲೀಕರಲ್ಲ.
ಕನ್ನಡನಾಡಿನಲ್ಲಿ ಕನ್ನಡಿಗನೇ ಸಾರ್ವಭೌಮ. ಈ ನೆಲದ ಸುಖ-ಸಂಪತ್ತು ಎಲ್ಲವೂ ಅವನಿಗೆ ಸಿಗಬೇಕು. ಈ ನಿಟ್ಟಿನಲ್ಲಿ ಕರವೇ ತನ್ನ ಚಳವಳಿಯನ್ನು ಮುಂದುವರೆಸುತ್ತಾ ಹೋಗುತ್ತದೆ. ಕುವೆಂಪು ಹೇಳಿದ್ದರು: ’ಕನ್ನಡ ವಿಚಾರದಲ್ಲಿ ನಾನು ಬುಲ್ಡೋಜರ್ ಇದ್ದ ಹಾಗೆ. ಅಡ್ಡ ಬರಬೇಡಿ, ಅಪ್ಪಚ್ಚಿ ಆಗಿ ಬಿಡುತ್ತೀರಿ.
ಇದೇ ಮಾತನ್ನು ರಕ್ಷಣಾ ವೇದಿಕೆಯೂ ಹೇಳುತ್ತದೆ. ಕನ್ನಡದ ಶತ್ರುಗಳಿಗೆಲ್ಲಾ ಹೇಳುತ್ತಿದ್ದೇನೆ. ’ನಾಡು-ನುಡಿ ವಿಚಾರದಲ್ಲಿ ಅಡ್ಡಿ ಬರಬೇಡಿ ಅಪ್ಪಚ್ಚಿ ಆಗ್ಬಿಡ್ತೀರಾ.
ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲಾ ಕನ್ನಡದ ಮನಸುಗಳಿಗೆ ಶರಣು ಶರಣು...

ಪ್ರತಿಗ್ರಾಮದಲ್ಲಿ ಭಾರತದ ಕೇಂದ್ರ ಇದೆ




ಇವತ್ತಿನ ಕರ್ನಾಟಕದ ಸಂದರ್ಭದಲ್ಲಿ ಕನ್ನಡಿಗರ ಆತ್ಮಸಾಕ್ಷಿಯಂತೆ ಮಾತನಾಡುವ ಡಾ.ಯು.ಆರ್.ಅನಂತಮೂರ್ತಿ ‘ಕರವೇ ನಲ್ನುಡಿ’ ಪತ್ರಿಕೆಯನ್ನು ಲೋಕಾರ್ಪಣೆಗೊಳಿಸಿದರು. ನಂತರ ಅವರ ಮಾತುಗಳು ಚೌಡಯ್ಯ ಸ್ಮಾರಕ ಭವನದಲ್ಲಿ ಅನುರಣಿಸಿದವು. ಕನ್ನಡವನ್ನು ಉಳಿಸುವ ಬಗೆ ಹೇಗೆ ಎಂಬುದು ಅವರ ಒಟ್ಟು ಭಾಷಣದ ಕೇಂದ್ರಪ್ರಜ್ಞೆಯಾಗಿತ್ತು. ಅನಂತಮೂರ್ತಿಯವರ ಮಾತುಗಳು ಕನ್ನಡ ಚಳವಳಿಗಾರರಿಗೆ, ಕನ್ನಡ ಶ್ರೀಸಾಮಾನ್ಯನಿಗೆ ಹೊಸ ಮಾರ್ಗವೊಂದರ ದರ್ಶನವನ್ನು ಮಾಡಿಸಿತು. ಅವರ ಭಾಷಣದ ಯಥಾವತ್ತು ಇಲ್ಲಿದೆ.

ಕನ್ನಡದ ಮಾತನ್ನ ಎತ್ತುವುದೇ ಅಪಾಯಕಾರಿಯಾಗಿದ್ದ ಸಂದರ್ಭದಲ್ಲಿ ಹೈದರಾಬಾದ್ ಕರ್ನಾಟಕದಲ್ಲಿ ಕನ್ನಡವನ್ನು ಉಳಿಸಿದ ಹಿರಿಯರ ಸಂಸ್ಥಾನಕ್ಕೆ ಸೇರಿದ ಪೂಜ್ಯರಾದ ಶ್ರೀ ಡಾ. ಬಸವಲಿಂಗ ಪಟ್ಟದೇವರು ಅವರೇ, ಇಂಥ ಒಂದು ಬೃಹತ್ ಸಭೆಯನ್ನು ಬೆಂಗಳೂರಿನಲ್ಲಿ ಕನ್ನಡಕ್ಕಾಗಿ ಏರ್ಪಾಡು ಮಾಡುವುದನ್ನು ಸಾಧ್ಯವಾಗುವಂತೆ ಮಾಡಿದ ಶ್ರೀ ಟಿ.ಎ. ನಾರಾಯಣಗೌಡರೇ, ಮಹಾಪೌರರಾದ ಎಸ್.ಕೆ ನಟರಾಜ್ ಅವರೇ, ನಮಗೆಲ್ಲರಿಗೂ ಬಹಳ ಪ್ರೀತಿಪಾತ್ರರಾದ ಶ್ರೀಮತಿ ಮೋಟಮ್ಮ ನವರೇ, ನಮ್ಮ ಅತ್ಯಂತ ಮುಖ್ಯವಾದ ಕನ್ನಡದ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಲ್ಲೂರು ಪ್ರಸಾದ್‌ರವರೇ, ನನಗೆ ಬಹಳ ಕಾಲದಿಂದ ವಿಶ್ವಾಸವನ್ನು ಇಟ್ಟಿರುವ ಮನುಬಳಿಗಾರ್ ಅವರೇ, ಪತ್ರಿಕೆಯ ಸಂಪಾದಕರಾದ ಶ್ರೀಮತಿ ವಿಶಾಲಾಕ್ಷಿ ಅವರೆ ಮತ್ತು, ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಪರಮೇಶ್ವರ್‌ರವರೆ,
ಯಾವ ಬಂಗಾಳಿ ಆದರೂ ಪ್ರಪಂಚದಲ್ಲಿ ಎಲ್ಲೇ ಇದ್ದರೂ, ನೀನು ಯಾರು ಅಂದರೆ, ನಾನು ಬಂಗಾಳಿ ಅಂತಾನೆ. ಇಂಥ ಜಾತಿ ಅಂಥ ಹೇಳಲ್ಲ. ಒಬ್ಬ ತಮಿಳರವನು ಎಲ್ಲಿದ್ದರು ನೀನು ಯಾರು ಅಂದರೆ ನಾನು ತಮಿಳವನು ಎನ್ನುತ್ತಾನೆ. ಕನ್ನಡದವರ ಮಟ್ಟಿಗೆ ಅಮೆರಿಕದಲ್ಲಿದ್ದರೆ ನೀವು ಯಾರು ಅಂದರೆ, ನಾವು ವೀರಶೈವರು, ನಾವು ಗೌಡರು, ನಾವು ಬ್ರಾಹ್ಮಣರು ಅಂತಾರೆ. ಆಮೇಲಿಂದ ಒತ್ತಾಯಪೂರ್ವಕವಾಗಿ ನೋಡಿದರೆ ಐ ಆಮ್ ಎ ಕನ್ನಡಿಗ ಅಂಥ ಇಂಗ್ಲಿಷ್‌ನಲ್ಲಿ ಹೇಳ್ತಾರೆ. ಇದು ಬಹಳ ದುರದೃಷ್ಟದ ವಿಷಯ. ನಾವು ಮೊದಲು ಗುರುತಿಸಿಕೊಳ್ಳಬೇಕಾದುದು ನಮ್ಮನ್ನ ಕನ್ನಡಿಗರು ಅಂಥ. ಯಾಕೆಂದರೆ ಭಾರತದಲ್ಲಿ ಇರೋದು ಫೆಡರಲ್ ವ್ಯವಸ್ಥೆ, ಕೇಂದ್ರ ಸರ್ಕಾರ ಅಂತೀವಲ್ಲ ಅದು ತಪ್ಪು ಶಬ್ದ, ಭಾರತ ಬಹುಕೇಂದ್ರಿತ ರಾಷ್ಟ್ರ, ಎಲ್ಲಾ ರಾಜ್ಯಗಳಲ್ಲೂ ಭಾರತದ ಕೇಂದ್ರ ಇದೆ. ಗಾಂಧೀಜಿ ಅವರು ಕಲ್ಪಿಸಿದ್ದು ಸಹ ಇದನ್ನೇ. ಭಾರತದ ಪ್ರತಿ ಗ್ರಾಮದಲ್ಲೂ ಭಾರತದ ಕೇಂದ್ರ ಇದೆ. ಕೊನೆಪಕ್ಷ ನಾವು ಪ್ರತಿ ರಾಜ್ಯದಲ್ಲೂ ಭಾರತದ ಕೇಂದ್ರ ಇದೆ ಅಂಥ ಅರ್ಥಮಾಡಿಕೊಳ್ಳಬೇಕು. ಇದು ಫೆಡರಲ್ ಆದ್ದರಿಂದಲೇ ರೈಲ್ವೆಯಲ್ಲಿ ಇತ್ಯಾದಿ ನೌಕರಿಯಲ್ಲಿ ಪ್ರತಿಯೊಂದರಲ್ಲೂ ಕನ್ನಡಕ್ಕೆ ಸಿಗಬೇಕಾದ ಸ್ಥಾನಮಾನ ಸಿಗಲೇಬೇಕು.
ಇಲ್ಲದೇ ಹೋದರೆ ಏನಾಗತ್ತೆ ಅಂದರೆ, ನೀವು ಅಸ್ಸಾಂನಲ್ಲಿ ನೋಡಿದ್ರೆ, ಅಸ್ಸಾಂನಲ್ಲಿ ಅಸ್ಸಾಂನ ಜನರೇ ಇಲ್ಲದಂತ ರಾಜಕಾರಣ ನಡೀತಿದೆ. ನನ್ನನ್ನ ೨-೩ ವರ್ಷಗಳ ಹಿಂದೆ ನಮ್ಮಲ್ಲಿ ಸಾಹಿತ್ಯ ಸಮ್ಮೇಳನ ನಡೆಯತ್ತಲ್ಲ ಅಂಥದ್ದೇ ಒಂದು ಅಸ್ಸಾಂ ಭಾಷೆಯ ಸಮ್ಮೇಳನಕ್ಕೆ ನನ್ನನ್ನ ಉದ್ಘಾಟನೆ ಮಾಡೋದಕ್ಕೆ ಕರೆದಿದ್ದರು. ನಾನು ಹೋಗಿ ನೋಡಿದರೆ ಒಂದು ದೊಡ್ಡ ಮೈದಾನದಲ್ಲಿ ಲಕ್ಷೋಪಲಕ್ಷ ಅಸ್ಸಾಮಿ ಜನರು ಸೇರಿದ್ದರು. ಅಸ್ಸಾಂನಲ್ಲಿ ಅವರು ನಿಜವಾಗಲೂ ತಮ್ಮನ್ನ ಗುರುತಿಸಿಕೊಳ್ಳುವುದು ನಾವು ಅಸ್ಸಾಮಿ ಎಂದೇ. ಯಾಕೆಂದರೆ ಅಸ್ಸಾಮಿನ ಭಾಷೆಗೆ ಒಂದು ದೊಡ್ಡ ಅಪಾಯ ಬಂದೊದಗಿದೆ. ಬೆಂಗಳೂರಿನಲ್ಲಿ ಕನ್ನಡಕ್ಕೆ ಇಂಥ ಅಪಾಯ ಬಂದೊದಗಿದೆ. ನನ್ನ ಸ್ನೇಹಿತರು, ನನ್ನ ಮಗುವನ್ನ ಒಂದು ಒಳ್ಳೆಯ ಕನ್ನಡ ಶಾಲೆಗೆ ಕಳಿಸಬೇಕು, ಕನ್ನಡ ಮಾಧ್ಯಮದ ಶಾಲೆಗೆ ಕಳಿಸಬೇಕು ಅಂದರೆ ಇಲ್ಲಿ ಒಂದೆ ಒಂದು ಕನ್ನಡ ಮಾಧ್ಯಮ ಶಾಲೆ ಸಿಗುತ್ತಿಲ್ಲ; ಬೆಂಗಳೂರಿನಲ್ಲಿ ಎನ್ನುತ್ತಾರೆ. ಹೀಗೆ ಆಗಬಾರದು. ಇದು ನಮ್ಮ ರಾಜಧಾನಿ ಮತ್ತು ಕೆಲವು ವಿಷಯಗಳಲ್ಲಿ ನಾರಾಯಣಗೌಡರಿಗೆ ಸಂಪೂರ್ಣ ಬೆಂಬಲ ನಿಂತು ನಾವು, ನಾವು ಅಂದರೆ ಪ್ರಜ್ಞಾವಂತರಾದವರು ಕೆಲಸ ಮಾಡಬೇಕು.
ಉದಾಹರಣೆಗೆ ಇಲ್ಲಿ ಯಾವ ಬಹುರಾಷ್ಟ್ರೀಯ ಕಂಪನಿ ಬಂದರೂ ಕನ್ನಡವನ್ನೂ ಒಂದು ಭಾಷೆಯನ್ನಾಗಿ ಅವರು ಬಳಸಬೇಕು, ಕನ್ನಡವನ್ನೇ ಅಲ್ಲ. ಕನ್ನಡವನ್ನೂ ಒಂದು ಭಾಷೆಯಾಗಿ. ಯಾಕೆಂದರೆ ಅವರಿಗೆ ಬೇರೆ ಭಾಷೆ ಗೊತ್ತಿಲ್ಲ. ಯಾಕೆಂದರೆ ಇದೇ ಬಹುರಾಷ್ಟ್ರೀಯ ಕಂಪನಿ ಹಾಲೆಂಡ್‌ಗೆ ಹೋದರೆ ಅಲ್ಲಿನ ಭಾಷೆಯನ್ನ ಉಪಯೋಗಿಸುತ್ತಾರೆ. ಫ್ರಾನ್ಸ್‌ಗೆ ಹೋದರೆ ಅಲ್ಲಿನ ಭಾಷೆ ಉಪಯೋಗಿಸುತ್ತಾರೆ. ಕರ್ನಾಟಕಕ್ಕೆ ಬಂದರೆ, ಅವರು ಕನ್ನಡವನ್ನು ಬಳಸಲ್ಲ. ನಮ್ಮ ಸರ್ಕಾರ ಇಂಥಹ ಒಂದು ಒತ್ತಾಯವನ್ನು ಅವರ ಮೇಲೆ ಹಾಕಬೇಕು. ನಿಮಗೆ ಜಾಗ ಕೊಡಬೇಕಾದರೆ ನಿಮ್ ಆಫೀಸಿನಲ್ಲಿ ಕನ್ನಡವನ್ನೂ ಒಂದು ಭಾಷೆಯಾಗಿ ಬಳಸಬೇಕು ಎಂದು ಕಟ್ಟಳೆ ಹೇರಬೇಕು. ಕನ್ನಡವನ್ನೂ ಅಂತೀನಿ,ಕನ್ನಡವನ್ನೇ ಅಲ್ಲ .ಯಾಕೆಂದರೆ ಬೇರೆ ಬೇರೆ ಕಡೆ ಅವರು ವ್ಯವಹಾರ ಮಾಡಬೇಕಾಗುತ್ತೇ. ಕನ್ನಡವಿಲ್ಲದೇ ಅಲ್ಲ.
ಹಾಗೇನೆ ಇಷ್ಟು ಜನ ಕನ್ನಡಿಗರಿಗೆ ಕೆಲಸ ಸಿಗಲೇಬೇಕು ಅನ್ನೋದನ್ನ ಮಾಡಬೇಕು. ಜೊತೆಗೆ ಇದೊಂದು ದೊಡ್ಡ ಚಳವಳಿ ಅಂಥ ತಿಳಿದುಕೊಂಡಿದ್ದೇನೆ ನಾನು. ಕರವೇ ಅವರು ಕನ್ನಡಿಗರನ್ನ ಎಲ್ಲಾ ಕೆಲಸವನ್ನು ಮಾಡಬಲ್ಲಂತಹ ತರಬೇತಿ ಕೊಡುವಂತಹ ಒಂದು ಚಳವಳಿಯನ್ನ ಮಾಡಬೇಕು. ನಮ್ಮಲ್ಲಿ ಮನೆ ಕಟ್ಟಬೇಕು ಅಂದರೆ ತಮಿಳರೆ ಸಿಗೋದು, ಇವತ್ತೇನಾದರು, ನಾವು ಮರಗೆಲಸ ಮಾಡಬೇಕು ಅಂದರೆ ರಾಜಸ್ಥಾನಿಗಳೇ ಸಿಗೋದು. ಹಿಂದಿನ ಕಾಲದಲ್ಲಿ ಚಿನ್ನದ ಕೆಲಸ, ಮರಗೆಲಸವನ್ನ, ಮಡಿಕೆಗಳನ್ನ ಏನನ್ನಾದರು ಮಾಡಬಲ್ಲಂಥ ಶಕ್ತಿ ಕರ್ನಾಟಕದಲ್ಲಿತ್ತು. ಅದು ಹೋಗ್ತಾ ಇದೆ, ನಾವು ಸೋಮಾರಿಗಳಾಗುತ್ತಿದ್ದೇವೆ. ಅದು ಎಲ್ಲಾ ದೇಶದಲ್ಲೂ ಆಗುತ್ತೆ, ಏನಾಗತ್ತೆ ಅಂದರೆ ನಾವು ಅನೇಕ ಸಲ ಸ್ವಲ್ಪ ಶ್ರೀಮಂತರಾಗಿಬಿಟ್ಟರೆ ಸೋಮಾರಿಗಳಾಗಿಬಿಡುತ್ತೇವೆ. ಬಂಗಾಳದಲ್ಲಿ ಏನಾದರೂ ಬೇರೆ ಕೆಲಸ ಮಾಡಬೇಕು ಅಂದರೆ ಬಿಹಾರಿಗಳು ಅಲ್ಲಿಗೆ ಹೋಗಬೇಕು. ಬೇರೆಯವರು ಹೋದರೆ ಆಗಲ್ಲ. ನಾನು ಕೇರಳದಲ್ಲಿ ವೈಸ್ ಚಾನ್ಸಲರ್ ಆಗಿದ್ದೆ, ಅಲ್ಲಿ ಒಂದು ಎಲೆಕ್ಟ್ರಿಕ್ ರಿಪೇರಿ ವರ್ಕ್ ಮಾಡಕ್ಕೆ ಮಾಲಯಾಳಿ ಸಿಗೋದಿಲ್ಲ. ಯಾವುನೋ ತಮಿಳೋನೋ ಬಂದು ಮಾಡ್ತಾನೆ. ಕಷ್ಟದ ಕೆಲಸವನ್ನ ನಾವು ಮಾಡಲ್ಲ. ಹಾಗೇನೆ ಪಾಪ ಬೀದರ್ ಕಡೆಯವರು ಗೋವಾಗೆ ಹೋಗದೆ ಇದ್ದರೆ ಯಾವ ಕೆಲಸವೂ ಆಗಲ್ಲ.
ಹೀಗೆ ನಾವು ನಮ್ಮ ಎಲ್ಲ ಕೆಲಸವನ್ನು ಮಾಡೋದಕ್ಕೆ ಇನ್ನೊಂದು ಭಾಷೆ ಜನರನ್ನು ಬಳಸಿಕೊಳ್ಳುತ್ತೇವೆ. ಆದ್ದರಿಂದಲೇ ಇನ್ನೊಂದು ಭಾಷೆ ಜನರು ಹೆಚ್ಚೆಚ್ಚು ನಮ್ಮೊಳಗೆ ಬರಬೇಕಾಗತ್ತೆ. ನಾವು ಸ್ವಲ್ಪ ಸ್ವತಂತ್ರವಾಗಿ ಒಂದು ರಾಜ್ಯವಾಗಿ ಗಟ್ಟಿಯಾಗಿ ಇರಬೇಕು ಅಂದರೆ ನಮ್ಮಲ್ಲೇ ಎಲ್ಲಾ ಕೆಲಸವನ್ನ ಮಾಡುವಂತಹ ಸೋಮಾರಿಗಳಲ್ಲದಂತಹ, ನೆಚ್ಚಿಕೆ ಉಳ್ಳಂತಹ ಜನರನ್ನು ತಯಾರಿಮಾಡುವ ಒಂದು ಚಳವಳಿಯೂ ಈ ಕರವೇ ಮೂಲಕ ಆಗಬೇಕು ಅಂತ ನಾನು ಬಯಸುತ್ತೇನೆ. ಕನ್ನಡ ಸ್ವಾಭಿಮಾನ ಬೆಳೆಯೋದಕ್ಕೆ ನಾವು ಎಲ್ಲಾ ಕೆಲಸವನ್ನೂ ಮಾಡಬಲ್ಲವೆ ಅನ್ನೋದು ಕೂಡ ಬಹಳ ಮುಖ್ಯ. ಕನ್ನಡದವರನ್ನು ಬೇರೆಯವರು ಕರೆಯಬೇಕು, ಆ ರೀತಿಯ ಕೆಲಸವನ್ನು ಮಾಡಬಲ್ಲಂತಹವರು ನಮ್ಮಲ್ಲಿ ಇರಬೇಕು.
ಜ್ಞಾನದ ಮೂಲಕ ಮಾತ್ರದ ಕೆಲಸವಲ್ಲ, ದೇಹದ ಮೂಲಕ ಮಾಡುವ ಕೆಲಸಗಳನ್ನು ಮಾಡುವಂತಹವರು ದೊರೆಯುವಂತೆ ನೋಡಬೇಕು. ಅವರಿಗೆ ಬೇಕಾದಂತಹ ಶಿಕ್ಷಣವನ್ನು ಕೊಡುವುದನ್ನು ನಾರಾಯಣಗೌಡರು ಶುರು ಮಾಡಿದ್ದಾರೆ. ಅದು ಬರೀ ಹೋರಾಟ ಅಲ್ಲ. ಗಾಂಧೀಜಿ ಮಾಡ್ತಾ ಇದ್ರಲ್ಲ ಚರಕ, ಅದು ಇದು ಅಂಥ ಈ ರೀತಿಯ ಸಮಾಜವನ್ನೂ ಬೆಳೆಸುವಂತಹ ಕೆಲಸಗಳನ್ನು ಹಚ್ಚಿಕೊಳ್ಳಬೇಕು. ಆಗ ನಿಮ್ಮ ಶಕ್ತಿಯೂ ಹೆಚ್ಚಾಗುತ್ತೆ. ನಿಮಗೆ ಇರುವ ಶಕ್ತಿಯೂ ಹೆಚ್ಚಾಗುತ್ತೆ. ನಿಮಗೆ ಇರೋ ಗೌರವವೂ ಹೆಚ್ಚಾಗತ್ತೆ, ಕನ್ನಡದ ಸ್ವಾಭಿಮಾನವೂ ಬೆಳೆಯುತ್ತೆ. ನಾವು ಇವತ್ತು ಅನಕೃ ಅವರಿಂದ ಪ್ರಾರಂಭವಾದ ಕನ್ನಡ ಚಳವಳಿಯನ್ನ ನೆನೆಯಬೇಕು. ಬಹಳ ದೊಡ್ಡವರಿಂದ ಶುರುವಾಗಿದೆ. ಕುವೆಂಪು ಇದ್ದಾರೆ. ನಿಮ್ಮ ಮ್ಯಾಗಜಿನ್ ನೋಡಿದರೆ ಗೊತ್ತಾಗತೆ.
ರಾಜ್‌ಕುಮಾರ್ ಇದ್ದರು. ಅನಕೃರವರು ಇದ್ದರು. ಮಾಸ್ತಿ, ಬೇಂದ್ರೆ ಇದ್ದರು. ರಾಜ್‌ಕುಮಾರ್ ಎಷ್ಟು ಮುಖ್ಯ ಅಂಥ ನಾನು ಒಂದು ಕಡೆ ಬರೆದೆ. ಇಡೀ ಕರ್ನಾಟಕದಲ್ಲಿ ನಾವು ಎಲ್ಲರೂ ಬೇರೆ ಬೇರೆ ಕನ್ನಡಗಳನ್ನು ಮಾತನಾಡುತ್ತೀವಿ. ಬೆಳಗಾವಿಗೆ ಒಂದು ಕನ್ನಡ ಇದೆ, ನಮಗೊಂದು ಕನ್ನಡ ಇದೆ, ಬೀದರ್‌ಗೆ ಒಂದು ಕನ್ನಡ ಇದೆ. ರಾಜ್‌ಕುಮಾರ್ ಖ್ಯಾತರಾದ ಮೇಲೆ ಅವರು ಎಲ್ಲರಿಗೂ ಆಗಬಹುದಾದ ಒಂದು ಕನ್ನಡವನ್ನು ಮಾತನಾಡುತ್ತಿದ್ದರು. ಈಗ ಜರ್ಮನಿಯಲ್ಲಿ ಅಂತ ಒಂದು ಜರ್ಮನ್ ಸೃಷ್ಟಿ ಯಾಯಿತು, ಇಂಗ್ಲೆಂಡ್‌ನಲ್ಲಿ ನೂರು ಇಂಗ್ಲಿಷ್ ಇವೆ. ಆದರೆ ಒಂದು ಇಂಗ್ಲಿಷ್ ಬೇಕು ಅದೊಂದು ಭಾಷೆಯಾಗಬೇಕಾದರೆ, ಅದೊಂದು ರಾಜ್ಯವಾಗಬೇಕಾದರೆ, ಸಾರ್ವಜನಿಕ ಭಾಷೆಯಾಗಬೇಕಾದರೆ ಏನು ಮಾಡಬೇಕು ಎನ್ನುವುದನ್ನು ಬೇಂದ್ರೆ ಹೇಳಿದರು.
ನಮಗೆ ಅನೇಕ ಒಳದಾರಿಗಳಿವೆ, ಬೇರೆ ಬೇರೆ ಕನ್ನಡಗಳಿವೆ. ಅದನ್ನ ದೊಡ್ಡ ಹಾದಿಯಾಗುವ ಕನ್ನಡವನ್ನ ನಮ್ಮ ಕವಿಗಳು ಮಾಡಿದರು. ಅದನ್ನ ಭಾಷೆಯಲ್ಲಿ ಮಾಡಿದವರು ರಾಜ್‌ಕುಮಾರ್. ಆದರಿಂದ ಕರ್ನಾಟಕ ಅನ್ನೋದಕ್ಕೆ ಭಾಷೆಯ ಶಕ್ತಿಯನ್ನು ತಂದವರು ರಾಜ್‌ಕುಮಾರ್. ಅವರನ್ನೆಲ್ಲಾ ಇಂದು ನೆನಪಿಸಿಕೊಳ್ಳೋಣ. ಮತ್ತು ಇದು ಬಹುಕೇಂದ್ರಿತ ರಾಷ್ಟ್ರವಾದ್ದರಿಂದ ಭಾರತದ ರಾಷ್ಟ್ರಕ್ಕೆ ಕರ್ನಾಟಕವು ಒಂದು ಕೇಂದ್ರ, ಸ್ವಾಭಿಮಾನ ಕೇಂದ್ರ ಹೇಗಾಗಬಲ್ಲದು? ಕುವೆಂಪು ಅವರು ಹೇಳಿದ ಹಾಗೆ ಅದರ ಜೊತೆ ಹೊಂದಿಕೊಂಡು. ಭಾರತದ ಜೊತೆ ಹೊಂದಿಕೊಂಡು ನಮ್ಮನ್ನು ನಾವು ಬಿಟ್ಟುಕೊಡದೆ ಇರೊದನ್ನ ನಾವು ಕಲಿಯಬೇಕು. ನಾವು ಹೊಂದಿಕೊಳ್ಳುತ್ತಾ ಹೋಗಿ ಕನ್ನಡವನ್ನೆ ಬಿಡೋದು, ಕನ್ನಡವನ್ನೆ ಕಟ್ಟಿಕೊಂಡು ಭಾರತವನ್ನು ಮರೆಯೋದು, ಎರಡೂ ಕೂಡ ಅಪಾಯಕಾರಿ. ಈ ಹೊಂದಾಣಿಕೆಯನ್ನು ಮಾಡೋದು ಹೇಗೆ ಅನ್ನೋದು ಇದೆಯಲ್ಲಾ ಅದು ಬಹಳ ಕಷ್ಟ ಸಾಧ್ಯವಾದದ್ದು.
ಈ ಸಂದರ್ಭದಲ್ಲಿ ಎಲ್ಲಾ ಕನ್ನಡಿಗರಿರೋದ್ರಿಂದ ನನ್ನ ಕನಸನ್ನು ನಾನು ಹೇಳಿಬಿಡ್ತೀನಿ. ನನಗೆ ವಯಸ್ಸಾಗಿದೆ. ಸಾಯೋದ್ರೋಳಗೆ ನೋಡಬೇಕು ಅಂತ ಬಯಸೋದು ಏನನ್ನ ಅಂದ್ರೆ ಎಲ್ಲಾ ಮಕ್ಕಳಿಗೂ ಸಮಾನವಾದ ಶಿಕ್ಷಣ ಕನ್ನಡ ಮಾಧ್ಯಮದಲ್ಲಿ ಸಿಗುವಂತೆ ಆಗಬೇಕು. ಎಲ್ಲಾ ಮಕ್ಕಳಿಗೂ ಅಂದ್ರೆ ಇಲ್ಲಿ ಫ್ರಾನ್ಸ್‌ನವನು ಒಬ್ಬ ಬಂದು ೧೦-೨೦ ವರ್ಷ ಇಲ್ಲಿ ಇರೋದಾದ್ರೆ, ಅವನ ಮಗು ಇಲ್ಲಿ ಬೆಳೆಯೋದಾದ್ರೆ ಫ್ರಾನ್ಸ್‌ನವನ ಮಗು ಕೂಡ ಕನ್ನಡವನ್ನ ಕಲಿಯಬೇಕು. ಯಾಕೆಂದರೆ ಒಂದು ಮಗು ಜ್ಞಾನವನ್ನ ಕಲಿಯೋದು ಶಾಲೆಯಲ್ಲಿ ಮಾತ್ರವಲ್ಲ, ಬೀದಿಯಲ್ಲಿ ಕೂಡ. ಯಾವುದು ಬೀದಿಯ ಭಾಷೆಯೋ ಅದನ್ನ ಕಲಿಯದೇ ಇದ್ದರೆ ಮಗುವಿನ ಜ್ಞಾನ ಬೆಳೆಯೋಲ್ಲ. ಆದರೆ ನನ್ನ ಮಗುವೊಂದು ತಮಿಳುನಾಡಿನಲ್ಲಿದ್ದರೆ ಅದು ತಮಿಳಿನಲ್ಲಿ ಕಲಿಯಬೇಕು. ನಾನು ಕನ್ನಡಿಗನಿರಬಹುದು ನಾನು ತಮಿಳುನಾಡಿನಲ್ಲಿ ಇದ್ದರೆ ತಮಿಳಿನಲ್ಲಿ ಕಲಿಯಬೇಕು. ತಮಿಳಿನವನೊಬ್ಬ ಕನ್ನಡನಾಡಿನಲ್ಲಿ ಇದ್ದರೆ ಕನ್ನಡದಲ್ಲಿ ಕಲಿಯಲಿ. ಯಾಕೆಂದರೆ ಇದು ಸಾರ್ವತ್ರಿಕವಾಗಿ ಒಬ್ಬ ಶಿಕ್ಷಣ ವೇದಿತನಾಗಿ ನಾನು ಹೇಳೋದು. ನಾನು ಸ್ಪೇನ್‌ನಲ್ಲಿದ್ದರೆ ಸ್ಪ್ಯಾನಿಷ್‌ನಲ್ಲಿ ಕಲಿಯಬೇಕು. ಏಕೆಂದರೆ ಇಡೀ ಬೀದಿಯಲ್ಲಿ ಸ್ಪ್ಯಾನಿಷ್ ಮಾತಾಡುತ್ತಾರೆ. ನನ್ನ ಮಗುಗೆ ಸ್ಪ್ಯಾನಿಷ್ ಬರದೇ ಇದ್ದರೆ?
ಇದನ್ನ ಹೆಂಗಸರು ಕಲಿತಿರುತ್ತಾರೆ, ಅವರು ಅಂಗಡಿಯಲ್ಲಿ ಸಾಮಾನು ತಗೋಬೇಕಾಗಿರೋತ್ತೆ. ಹಾಗಾಗಿ ಅವರು ಯಾವ ಭಾಷೆಯವರಾಗಿದ್ದರೂ ಸ್ವಲ್ಪ ಕನ್ನಡ ಕಲಿತಿರುತ್ತಾರೆ. ಆದರೆ ಈಗ ಬಹುರಾಷ್ಟ್ರೀಯ ಕಂಪನಿಗಳ ದೊಡ್ಡ ದೊಡ್ಡ ಮಾಲ್‌ಗಳು ಬರೋದಕ್ಕೆ ಶುರುವಾಗಿರೋದರಿಂದ ಆ ಅಗತ್ಯವೂ ಕೂಡ ಹೋಗಿ ಬಿಟ್ಟಿದೆ. ಈಗ ಹೆಂಗಸರು ಕೂಡ ಕನ್ನಡವನ್ನು ಕಲಿಯೋದಿಲ್ಲ. ಮಕ್ಕಳು ಕಲಿಯೋದಿಲ್ಲ. ಹಿಂದೆ ಹಾಗಲ್ಲ, ತರಕಾರಿಯವನ ಹತ್ತಿರ ವಾದ ಮಾಡೊದಕ್ಕೆ ಅವನು ೧೦ ರೂಪಾಯಿ ಅಂದರೆ ೫ ರೂಪಾಯಿಗೆ ಇಳಿಸೋದಕ್ಕೆ ಉತ್ತರ ಭಾರತದವರಿಗೂ ಕನ್ನಡ ಬರುತ್ತಿತ್ತು, ತಮಿಳರಿಗೂ ಕನ್ನಡ ಬರುತಿತ್ತು. ಈಗ ಕನ್ನಡದ ಅಗತ್ಯವೇ ಇಲ್ಲದಂತಹ ಸ್ಥಿತಿ ಬಂದಿದೆ. ಆದ್ದರಿಂದ ಇವತ್ತು ಹುಟ್ಟುವ ಮಕ್ಕಳಿಗೆಲ್ಲಾ ಎಷ್ಟು ಶ್ರೀಮಂತನ ಮಗುವಾಗಿರಲಿ, ಯಾವ ಭಾಷೆಯವನ ಮಗುವಾಗಿರಲಿ ಸಮಾನ ಶಿಕ್ಷಣ ಸಾಮಾನ್ಯ ಶಾಲೆಯಲ್ಲಿ ಸಿಗಬೇಕು. ಮನೆಮಾತಾಗಿ ಎಲ್ಲಾ ಭಾಷೆಗಳು ಉಳಿಯಬೇಕು.
ಕರ್ನಾಟಕದ ಒಂದು ಹೆಚ್ಚುಗಾರಿಕೆ ಏನು ಅಂಥ ನೀವು ನನ್ನ ಕೇಳಿದರೆ, ಬೇರೆ ಎಲ್ಲಾ ಭಾಷೆಗಳಿಗಿಂತಲೂ ಹೆಚ್ಚುಗಾರಿಕೆ ಏನಂದರೆ ನಾನು ಒಬ್ಬ ಬರಹಗಾರನಾಗಿ ನಿಮಗೆ ಹೇಳ್ತೀನಿ ಇವತ್ತು ಕನ್ನಡದ ಒಂದು ನಾವೆಲ್ ತಗೊಂಡರೆ, ಆ ನಾವೆಲ್‌ನನ್ನು ಒಬ್ಬ ಕೊಂಕಣಿ ಮಾತನಾಡುವವನು ಬರೆದಿದ್ದರೆ, ಈ ಯಶವಂತ ಚಿತ್ತಾಲರು ಅಂಥವರು ಬರೆದಿದ್ದರೆ ಅಲ್ಲಿರುವ ಪಾತ್ರಗಳೆಲ್ಲಾ ಮಾತನಾಡುತ್ತಿರುವುದು ಕೊಂಕಣಿಯಲ್ಲೇ. ಆದರೆ ಅದು ಬರೆದಿರುವುದು ಕನ್ನಡದಲ್ಲಿ. ಕೊಂಕಣಿ ಕನ್ನಡದಲ್ಲಿ ಸಾನ್ನಿಧ್ಯವನ್ನು ಪಡೆದಿದೆ. ಚೋಮನದುಡಿ ಬಹಳ ದೊಡ್ಡ ಕಾದಂಬರಿ ಕಾರಂತರದ್ದು. ಚೋಮನದುಡಿಯಲ್ಲಿ ಎಲ್ಲಾ ನಡೆಯುವ ಘಟನೆಗಳು, ಅಲ್ಲಿರುವ ಪಾತ್ರಗಳೆಲ್ಲಾ ಮಾತನಾಡುತ್ತಿರುವುದು ತುಳುವಿನಲ್ಲಿ, ಆದರೆ ಅದು ಇರೋದು ಕನ್ನಡದಲ್ಲಿ. ಮರಾಠಿ ಮಾತು ಕನ್ನಡದ ಒಳಗೆ ಬಂದಿದೆ. ತುಳುವಿನ ಮಾತು ಕನ್ನಡದ ಒಳಗೆ ಬಂದಿದೆ. ಕೊಂಕಣಿ ಮಾತು ಕನ್ನಡದ ಒಳಗೆ ಬಂದಿದೆ, ಅಂದರೆ ಕನ್ನಡ ಹಲವು ಭಾಷೆಗಳನ್ನ ತನ್ನ ಹೊಟ್ಟೆಯಲ್ಲಿ ಇಟ್ಟುಕೊಂಡಿದೆ. ಇದು ತಮಿಳಿನ ಬಗ್ಗೆ ಅಥವಾ ಮರಾಠಿ ಬಗ್ಗೆ ನಿಜವಲ್ಲ. ಇದು ಕನ್ನಡದ ಬಗ್ಗೆ ನಿಜ. ಆದ್ದರಿಂದ ಕನ್ನಡವನ್ನು ನಾನು ಮಿನಿ ಇಂಡಿಯಾ ಅಂತ ಕರೆಯುತ್ತೇನೆ. ನಿಜವಾಗಿಯೂ ನಾನು ಒಬ್ಬ ಭಾಷಾತಜ್ಞನಾಗಿ ಹೇಳ್ತಾ ಇದೀನಿ. ಒಂದು ಸರಿ ಈ ಚೋಮನ ದುಡಿ ತುಳುವಿಗೆ ಟ್ರಾನ್ಸ್‌ಲೇಟ್ ಆಯ್ತು. ಟ್ರಾನ್ಸ್‌ಲೇಟ್ ಆದಾಗ ನಾನು ಹೇಳಿದೆ, ಇದು ಮೂಲ ಭಾಷೆಗೆ ಹೋಯ್ತು ಅಂತ. ಮೂಲ ಇರುವುದು ತುಳುವಿನಲ್ಲಿ ಆದರೆ ಇರೋದು ಕನ್ನಡದಲ್ಲಿ. ಆದ್ದರಿಂದ ಈ ಕನ್ನಡಕ್ಕೆ ಇರುವ ವಿಶಿಷ್ಟತೆಯನ್ನ ಕನ್ನಡ ಚಳವಳಿಗಾರರು ಅರಿಯಬೇಕು. ಏಕೆಂದರೆ ಕನ್ನಡ ಒಳಗೊಳ್ಳುವ ಭಾಷೆ. ಇದನ್ನ ನನ್ನ ಸ್ನೇಹಿತರೊಬ್ಬರು ಬರೆಯುತ್ತಾರೆ. ಸಾವಿರ ವರ್ಷದ ಹಿಂದೆ ನಮ್ಮಲ್ಲಿ ಕವಿರಾಜಮಾರ್ಗ ಹುಟ್ಟಿಕೊಂಡಿತು.
ಸುಮಾರು ಒಂದು ಸಾವಿರ ವರ್ಷದ ಹಿಂದೆ ನಮ್ಮ ಭಾಷೆಯಲ್ಲಿ ಬರೆಯೋದೆ ಆದರೆ ಬರವಣಿಗೆ ಹೇಗಿರಬೇಕು, ಅದರ ಲಕ್ಷಣಗಳೇನು? ಎನ್ನುವ ಗ್ರಂಥ ಪ್ರಪಂಚದ ಯಾವ ಭಾಷೆಯಲ್ಲೂ ಇಲ್ಲ. ತಮಿಳಿನಲ್ಲೊಂದು ತೊಲಕಾಪಿಯಂ ಅಂತಿದೆ. ಆದರೆ ಆ ಗ್ರಂಥದ ಲಕ್ಷಣ ಬೇರೆ. ನಮ್ಮದು ಹೇಗೆ ಬರೆಯಬೇಕು ಅಂತಿದೆ, ಅದು ಕವಿರಾಜಮಾರ್ಗ; ಸಾವಿರ ವರ್ಷದ ಹಿಂದಿನದು. ನೀವು ಅದನ್ನು ತಗೊಂಡು ದೊಡ್ಡ ಸಭೆಯನ್ನು ಮಾಡಬೇಕು. ಕವಿರಾಜಮಾರ್ಗನಿಗೆ ಜೈ ಎನ್ನಬೇಕು. ಏಕೆಂದರೆ ಕನ್ನಡ ಕೊಟ್ಟವನು ಅವನು. ಆ ಸಾವಿರ ವರ್ಷ ಹಿಂದೆ ಹುಟ್ಟಿಕೊಂಡ ಕನ್ನಡದ ಬೆಳವಣಿಗೆ ಸತತವಾಗಿ ನಡೆದುಕೊಂಡು ಬಂದಿದೆ.
ಇವತ್ತು ಭಾರತೀಯ ಭಾಷೆಗಳಲ್ಲಿ ಅತ್ಯಂತ ಮೇಲಿರುವ ಭಾಷೆಗಳ ಪೈಕಿ ಕನ್ನಡವೂ ಒಂದು. ಹಿಂದೆ ಬಂಗಾಳಿಗೆ ಆ ಸ್ಥಾನವಿತ್ತು. ಈಗ ನಾವು ಹೆಚ್ಚು ಕಡಿಮೆ ಆ ಸ್ಥಾನದಲ್ಲಿದ್ದೇವೆ. ಏಕೆಂದರೆ ನಮ್ಮದು ಸ್ವೀಕಾರದ ಭಾಷೆ. ಆ ಸ್ವೀಕಾರದ ಭಾಷೆ ಅನ್ನೋದಕ್ಕೆ ಒಂದೇ ಒಂದು ಉದಾಹರಣೆ ಕೊಡುತ್ತೇನೆ. ತಮಿಳಿನಲ್ಲಿ ಕ್ಲಿಂಟನ್ ಅಂತ ಬರೆಯೋಕೆ ಆಗಲ್ಲ, ಗ್ಲಿಂಟನ್ ಆಗ್ತಾನೆ. ತಮಿಳಿನಲ್ಲಿ ಗಾಂಧಿ ಕಾಂತಿ ಆಗ್ತಾನೆ. ಕನ್ನಡದಲ್ಲಿ ಗಾಂಧಿ ಅಂತ ಬರೀಬಹುದು ಕ್ಲಿಂಟನ್ ಅಂತ ಬರಿಬಹುದು, ಯಾಕೆಂದರೆ ನಮಗೆ ಬೇಕಾಗಿಲ್ಲದ ಅಕ್ಷರಗಳನ್ನು ಮೊದಲೇ ತೆಗೆದುಕೊಂಡಿದ್ದೀವಿ. ಕನ್ನಡ ಭಾಷೆಯನ್ನ ಬರೆಯೋದಕ್ಕೆ ಅಗತ್ಯವಿಲ್ಲದ ಅಕ್ಷರಗಳೂ ಕೂಡ ನಮ್ಮ ೫೨ ಅಕ್ಷರದಲ್ಲಿ ಇದೆ.
ಆದ್ದರಿಂದ ಯಾವ ಭಾಷೆ, ಯಾವ ಶಬ್ದವನ್ನಾದರೂ ಕನ್ನಡದಲ್ಲಿ ಬರೆಯೋದಕ್ಕೆ ಸಾಧ್ಯ. ಇದು ಕನ್ನಡದ ಸ್ವೀಕಾರದ ಶಕ್ತಿಯನ್ನ ಹೆಚ್ಚಿಸಿದೆ. ನಾನು ಭಾಷೆಗಳಲ್ಲಿ ಎರಡು ತರಹ ಅಂತೀನಿ: ಒಂದು ಚಲಿಸುವ ಭಾಷೆ, ಇನ್ನೊಂದು ಚಲಿಸದ ಭಾಷೆ. ನಮ್ಮದು ಚಲಿಸುವ ಭಾಷೆಯಲ್ಲ. ಇದು ಕರ್ನಾಟಕಕ್ಕೆ ಸೀಮಿತವಾದದ್ದು. ಕೆಲವು ಭಾಷೆಗಳು ಊರಿಂದ ಊರಿಗೆ ಚಲಿಸುತ್ತಾ ಹೋಗುತ್ತವೆ. ಆದರೆ ಚಲಿಸದ ಭಾಷೆಯಾದರೂ ಕೂಡ ಕವಿರಾಜ ಮಾರ್ಗ ಕನ್ನಡದ ಕಾವೇರಿಯಿಂದ ಗೋದಾವರಿವರೆಗೂ ಹರಡಿ ಇಡೀ ಪ್ರಪಂಚದಲ್ಲೇ ಪ್ರತಿಫಲಿತವಾಗಿದೆ. ನಮ್ಮ ಗೋವಿನ ಹಾಡು ಬರೆದವರು ‘ಧರಣಿ ಮಂಡಲ ಮದ್ಯದೊಳಗೆ ಮೆರೆಯುತಿಹ ಕರ್ನಾಟಕದೊಳು ದೇಶವನು’ ಎಂದರು. ಅಂದರೆ ಪ್ರಪಂಚದ ನಡುವಿನಲಿ ಕರ್ನಾಟಕ ಇದೆ ಅಂತ. ಆ ರೀತಿಯ ಒಂದು ಭಾವನೆ ನಮ್ಮಲ್ಲಿದೆ.
ನಮ್ಮಲ್ಲಿ ನೊಬೆಲ್ ಪ್ರೈಜ್ ಬರುವಂತಹ ಯೋಗ್ಯತೆಯುಳ್ಳ ಬಹಳಷ್ಟು ರೈಟರ್ ಬಂದಿದ್ದಾರೆ. ಅವರಿಗೆ ಸಿಗದೆ ಇರೋದು ಮುಖ್ಯ ಅಂತ ನೀವು ತಿಳಿಯಬಾರದು. ಆ ಯೋಗ್ಯತೆ ಇರೋರು ಇದಾರಾ? ಇದ್ದಾರೆ. ಕನ್ನಡ ಬೆಳೆದಿದೆಯಾ ಬೆಳೆದಿದೆ. ಭಾರತದ ಬಹುಮುಖ್ಯ ಭಾಷೆಗಳಲ್ಲಿ ಒಂದಾ? ಹೌದು. ಹಾಗೆ ಉಳಿದಿದೆಯೋ ಇಲ್ಲೋ.. ಯಾಕೆಂದರೆ ನಮಗೆ ಕನ್ನಡ ಶಾಲೆಗಳಿಲ್ಲ. ನಾವೆಲ್ಲಾ ಕನ್ನಡ ಶಾಲೆಗಳಲ್ಲಿ ಓದಿ ಬಂದವರು, ನಾನು ಕನ್ನಡ ಮಾದ್ಯಮದಲ್ಲಿ ಓದಿದವನು. ಆಮೇಲೆ ಇಂಗ್ಲೆಂಡ್‌ನಲ್ಲಿ ಹೋಗಿ ಓದಿ ಬಂದವನು. ನಾನು ಇಂಗ್ಲೆಂಡ್‌ನಲ್ಲಿ ಇಂಗ್ಲಿಷ್ ಫ್ರೊಫೆಸರ್ ಆಗಬಹುದಾದಷ್ಟು ವಿದ್ಯೆಯನ್ನು ಪಡೆದವನು. ಇದು ಒಂದು ಕಾಲದಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಇದು ಸಾಧ್ಯವಿತ್ತು. ಮೂರ್ತಿರಾಯರು, ಬಿ.ಎಂ ಶ್ರೀಕಂಠಯ್ಯನವರಿದ್ದರು, ಮಾಸ್ತಿ ಅವರಿದ್ದರು, ಎಲ್ಲರೂ ಇದ್ದರು. ಇವತ್ತು ಅದು ಸಾಧ್ಯವೇ ಆಗದೆ ಇರೋ ಹಾಗೆ ಆಗ್ತಿದೆ. ಈ ತಪ್ಪಿಗೆ ಕಾರಣ ಬೇರೆ ಯಾರು ಅಲ್ಲ, ನಮ್ಮ ಅಭಿಮಾನ ಶೂನ್ಯತೆ. ನಮ್ಮ ಮಕ್ಕಳು ಕನ್ನಡವನ್ನು ಕನ್ನಡದಲ್ಲಿ ಬರೆಯಬೇಕು.
ನಾನು ಇಂಗ್ಲಿಷ್ ಕಲಿಯಿರಿ ಕನ್ನಡದಲ್ಲಿ ಕಲಿಸಿರಿ ಅಂದಿದ್ದೆ. ಇಂಗ್ಲಿಷ್ ಅನ್ನು ಒಂದು ಭಾಷೆಯಾಗಿ ಕಲಿಯಿರಿ ಅಂದಿದ್ದೆ. ಕನ್ನಡದಲ್ಲಿ ಕಲಿತಾಗ ಜ್ಞಾನ ಕೂಡ ಚೆನ್ನಾಗಿ ಬೆಳೆಯುತ್ತೆ. ಇನ್ನೊಂದು ಬಹಳ ಮುಖ್ಯವಾದ ವಿಷಯವನ್ನು ಹೇಳಿಬಿಡ್ತೀನಿ. ಆಮೇಲೆ ನನ್ನ ಮಾತು ಸಾಕು. ಇಲ್ಲಿ ಮನುಬಳಿಗಾರ್ ಇದ್ದಾರೆ. ಅವರಲ್ಲೂ ಕೂಡ ನಾನು ಸಂಕಟವನ್ನು ತೊಡಿಕೊಂಡಿದ್ದೇನೆ. ೮೦ ಎಕರೆ ಭೂಮಿಯನ್ನು ಕನ್ನಡ ವಿಶ್ವವಿದ್ಯಾಲಯದಿಂದ ಅವರು ತೆಗೆದುಕೊಂಡು ಬಿಟ್ಟಾಗ ಒಂದು ಚಳವಳಿ ಆಯ್ತು, ಆ ಚಳವಳಿಗೆ ನಿಜವಾಗಲು ಬೆನ್ನೆಲುಬಾಗಿ ನಿಂತವರು ಕರ್ನಾಟಕ ರಕ್ಷಣಾ ವೇದಿಕೆಯವರು. ಅದರ ಜೊತೆಯಲ್ಲೇ ನಾನು ಹೇಳಬೇಕು; ನಮ್ಮ ಮುಖ್ಯಮಂತ್ರಿಗಳು ಬಹಳ ದೊಡ್ಡ ಮನಸ್ಸು ಮಾಡಿ ಇದಕ್ಕೆ ಸ್ಪಂದಿಸಿ ೮೦ ಎಕರೆಯನ್ನು ಹಿಂದಕ್ಕೆ ಕೊಟ್ಟರು. ಅವರಿಗೆ ನಮ್ಮ ವಂದನೆಯನ್ನು ಹೇಳಬೇಕು. ಇದು ನಾನು ಯಾಕೆ ಹೇಳ್ತಿದೀನಿ, ಅಂದರೆ ಕನ್ನಡಕ್ಕೆ ಒಂದು ದನಿ ಇದೆ. ಅದನ್ನು ನಾವು ಉಳಿಸಿಕೊಳ್ಳಬೇಕು.
ನಾನು ಒಂದು ಮಾತು ಹೇಳಿ ಮುಗಿಸುತ್ತೇನೆ. ಕರ್ನಾಟಕದಲ್ಲಿ ಅಪಾರವಾದ ಆಸ್ತಿ ಇದೆ. ಅಂದರೆ ಅದನ್ನ ನಮ್ಮ ಗಣಿಗಾರಿಕೆ ಮಾಡುವ ನಮ್ಮ ಮಂತ್ರಿಗಳು ಸತತವಾಗಿ ಚೀಪಾಗಿ ಮಾರಿ, ಮೋಸ ಮಾಡಿ ಕನ್ನಡದ ಸಂಪತ್ತನ್ನೆಲ್ಲಾ ಲೂಟಿ ಮಾಡಿದ್ದಾರೆ. ಕನ್ನಡದ ಇಡೀ ಸಂಘಟನೆ ಇದಕ್ಕೆ ವಿರೋಧವಾಗಬೇಕು.
ಯಾಕೆ ಈ ಕರೆಯನ್ನು ನಾನು ಕೋಡುತ್ತಿದ್ದೇನೆ ಅಂದರೆ, ಲ್ಯಾಟಿನ್ ಅಮೆರಿಕದಲ್ಲಿ ನೀವು ಕೇಳಿರಬೇಕು ಕೆನಡಾ ಮತ್ತು ಅಮೆರಿಕದವರು ಗಣಿಗಾರಿಕೆ ಸಂಸ್ಥೆಗಳು ಪೆರುವಿನಲ್ಲಿ, ಚಿಲಿಯಲ್ಲಿ ಅವರ ಪ್ರತಿಯೊಂದು ಊರಿನಲ್ಲಿ ಎಲ್ಲಿ ಬಂಗಾರ ಸಿಗತ್ತೋ, ಪೆಟ್ರೋಲ್ ಸಿಗತ್ತೋ ಎಲ್ಲಿ ಯಾವ ಅದಿರು ಸಿಗತ್ತೋ ಅದನ್ನ ಅಗೆದು ಬಗೆದು ಅದನ್ನ ಚೀಪಾಗಿ ಮಾರಿ ಆ ದೇಶದಲ್ಲಿ ಜನ ವೇಶ್ಯಾವೃತ್ತಿಯಿಂದಲೇ ಬದುಕುವ ಹಾಗೆ ಮಾಡಿ ಅವರನ್ನ ದರಿದ್ರರನ್ನಾಗಿ ಮಾಡಿದ್ದಾರೆ. ಇವತ್ತು ಲ್ಯಾಟಿನ್ ಅಮೆರಿಕ ಮತ್ತೆ ತಲೆಎತ್ತಿ ನಿಂತು ಜಗಳವಾಡಕ್ಕೆ ಸಿದ್ಧವಾಗಿದೆ. ಲ್ಯಾಟಿನ್ ಅಮೆರಿಕದ ಇಡೀ ಸಂಸ್ಕೃತಿಯನ್ನ ಅಮೆರಿಕ ಮತ್ತು ಕೆನಡಾ ನಾಶ ಮಾಡಿತು. ಕರ್ನಾಟಕದ ಸಂಸ್ಕೃತಿಯನ್ನ ಇವತ್ತು ಗಣಿಗಾರಿಕೆಯವರು ನಾಶ ಮಾಡುತ್ತಿದ್ದಾರೆ. ನಮ್ಮ ಸಂಪತ್ತನ್ನ ನಾಶ ಮಾಡುತ್ತಿದ್ದಾರೆ. ಇನ್ನೊಂದು ೧೦ ವರ್ಷದಲ್ಲಿ ಏನು ಉಳಿದಿರೋಲ್ಲ.
ಇದನ್ನು ನಿಲ್ಲಿಸಬೇಕು. ನಮ್ಮ ಮೊಮ್ಮಕ್ಕಳಿಗೆ ಕನ್ನಡನೂ ಉಳಿಬೇಕು, ಗಣಿ ಅದಿರೂ ಸಹ ಉಳಿಬೇಕು ಅನ್ನೋದಾದರೆ ಗಣಿಗಾರಿಕೆಯನ್ನು ನಿಷೇಧ ಮಾಡಬೇಕು. ಒಂದು, ಗಣಿಗಾರಿಕೆ ನಡೆಸುವುದು ಅಗತ್ಯವಾದರೆ ಅದನ್ನ ಸರ್ಕಾರವೇ ನಡೆಸಬೇಕು. ಎರಡನೇದು ಅನಿವಾರ‍್ಯವಾಗಿ ಗಣಿಗಾರಿಕೆ ಮಾಡಬೇಕಾಗಿ ಬಂದರೆ ನಾವೇ ಉಕ್ಕನ್ನು ತಯಾರಿಸುವ ಸಾಧ್ಯತೆಯನ್ನು ನೋಡಿಕೊಳ್ಳಬೇಕು. ಅಥವಾ ನಮಗೆ ಯಾವುದೋ ಒಂದು ಅದಿರು ಬೇಕಾಗಿರುತ್ತೆ, ಅದು ನಮ್ಮಲ್ಲಿ ಇಲ್ಲದಿದ್ದರೆ ನಮ್ಮ ಅದಿರನು ಕೊಟ್ಟು ಇನ್ನೊಂದು ಅದಿರನ್ನು ತೆಗೆದುಕೊಳ್ಳಬೇಕು. ಒಂದು ರಾಜ್ಯಕ್ಕೆ ನೈತಿಕವಾದ ಸ್ವಾರ್ಥವು ಇರಬೇಕು. ಇದು ನೈತಿಕವಾದ ಸ್ವಾರ್ಥದಿಂದ ನಾನು ಹೇಳುತ್ತಿದ್ದೇನೆ. ನಮ್ಮ ನಾಡು ಗಟ್ಟಿಯಾಗಿ ಉಳಿಯಬೇಕು ಅನ್ನುವ ಆಸೆಯಿಂದ ಹೇಳುತ್ತಿದ್ದೇನೆ. ಆದ್ದರಿಂದ ಇವತ್ತು ನಡೆಯುತ್ತಿರೋ ಗಣಿ ಲೂಟಿಯಿಂದ ನಮ್ಮ ಡೆಮಾಕ್ರಸಿ ಕೂಡ ಅರ್ಥಹೀನವಾಗಿ ಕೆಟ್ಟುಹೋಗಿದೆ. ನಮ್ಮ ಡೆಮಾಕ್ರಸಿಯನ್ನ ಮತ್ತೆ ನಾವು ಸ್ಕ್ಯಾನರ್ ಕೆಳಗೆ ಇಟ್ಟು ನೋಡಬೇಕಾಗುತ್ತೆ.
ನಕ್ಸಲೈಟರು ಅಲ್ಲಿ ವಿಜೃಂಭಿಸುತ್ತಿದ್ದಾರೆ ಯಾಕೆ ? ಅಲ್ಲೂ ಕೂಡ ಗಣಿಗಾರಿಕೆ, ಬಾಕ್ಸೈಟ್ ಅದಿರಿದೆ. ಅದು ಸಿಗೋದು ಗುಡ್ಡದಲ್ಲಿ ಹಾಗಾಗಿ ಗುಡ್ಡಗಳಲ್ಲಿ ಹೋಗಿ ಅಗೆಯಬೇಕು. ಆದ್ದರಿಂದ ಅಲ್ಲಿರುವ ಟ್ರೈಬಲ್ಸ್‌ನ ಅವರು ಓಡಿಸಬೇಕು. ಅವರು ಹೋಗಲ್ಲ ಅಂತಾರೆ, ಅಲ್ಲಿ ಹೋಗಿ ಇವರು ಕೂತಿದ್ದಾರೆ. ಯಾಕೆಂದರೆ ಅವರಿಗೆ ಆ ಬೆಟ್ಟಗಳು ದೇವತೆಗಳು. ನಾವು ಎಲ್ಲಾ ದೇವರನ್ನು ನಾಶಮಾಡುತ್ತಿದ್ದೇವೆ.
ಮುಸ್ಲಿಂರ ಮಸೀದಿಯನ್ನು ನಾಶ ಮಾಡಿದ್ರು.. ಸಿಕ್ಕರ ದೇವಸ್ಥಾನದ ಮೇಲೆ ದಾಳಿ ಆಯಿತು. ಈಗ ಆದಿವಾಸಿಗಳ ದೇವರನ್ನು ನಾಶ ಮಾಡಕ್ಕೆ ಹೊರಟಿದ್ದಾರೆ. ಆ ಹಕ್ಕು ನಮಗಿಲ್ಲ, ಅವರ ಜೀವನ ಕ್ರಮವನ್ನು ಬದಲಿಸುವ ಹಕ್ಕು ನಮಗಿಲ್ಲ. ಆದ್ದರಿಂದ ಪ್ರಪಂಚದಲ್ಲೆಲ್ಲಾ ಒಂದು ಎಚ್ಚರ ಇದೆ, ಅದು ಗಣಿಗಾರಿಕೆ ನಡೆಯುವುದು ಅನಿವಾರ‍್ಯವಾದರೆ ಅದು ಹೇಗೆ ನಡೆಯಬೇಕು, ಎಷ್ಟು ಶುದ್ಧವಾಗಿ ನಡೆಯಬೇಕು, ಯಾವ ಹದದಲ್ಲಿ ನಡೆಯಬೇಕು, ಯಾವ ಕಾರಣಕ್ಕಾಗಿ ನಡೆಯಬೇಕು. ಅದು ಎಷ್ಟು ಕಾಲ ಉಳಿದಿರಬೇಕು. ಇದೆಲ್ಲವನ್ನೂ ನಾವು ಯೋಚಿಸಬೇಕು. ಸಂಪತ್ತು ನಮ್ಮ ಮೊಮ್ಮಕ್ಕಳ ಕಾಲಕ್ಕೂ ಉಳಿದಿರೋ ಹಾಗೆ ನೋಡಬೇಕು.
ಅಮೆರಿದಲ್ಲಿ ಸಿಕ್ಕಾಪಟ್ಟೆ ಪೆಟ್ರೋಲ್ ಇದೆ. ಅವರು ಅದನ್ನು ತೆಗೆದು ಮಾರುತ್ತಾರೇನು? ಯಾಕೆಂದರೆ ಮುಂದೆ ಆಪತ್ತು ಕಾಲ ಬಂದರೆ ಅಂತ ಪೆಟ್ರೋಲ್ ಅನ್ನು ಉಳಿಸಿಕೊಂಡಿದ್ದಾರೆ. ಕರ್ನಾಟಕಕ್ಕೆ ಮತ್ತೆ ಆರೀತಿಯ ನೈತಿಕವಾದ ಸ್ವಾರ್ಥದ ಚಿಂತೆ ಬೇಕು. ಅದನ್ನ ಕನ್ನಡಿಗರು ಒತ್ತಾಯ ಮಾಡಿ ನಮ್ಮ ಸರ್ಕಾರದ ಮೇಲೆ ಹೇರಬೇಕು. ಕನ್ನಡ ಉಳಿಯುವುದೇ ಆದರೆ, ಕನ್ನಡದ ಅದಿರು ಉಳಿದಿರಬೇಕು, ಕನ್ನಡದ ಮಾನವು ಉಳಿದಿರಬೇಕು.
ಕೊನೆ ಮಾತು; ನಂದೊಂದು ಆಸೆ ಇದೆ, ಒಂದು ಕಾಲದಲ್ಲಿ ಕರ್ನಾಟಕದವರು ಗವರ್ನರ್‌ಗಳು ಆಗುತ್ತಿದ್ದರು, ಐಎಎಸ್ ಆಫೀಸರ್‌ಗಳಾಗುತ್ತಿದ್ದರು, ಹೀಗೆಲ್ಲಾ ಆಗೊದ್ರಿಂದ ಅಲ್ಲಿ ನಮ್ಮ ದೆಹಲಿಯಲ್ಲಿ ನಮ್ಮದೊಂದು ಶಕ್ತಿ ಇರುತ್ತೆ, ಬಲ ಇರುತ್ತೆ. ಈಗ ಬಿಹಾರ್‌ನವರಿಗೆ ಬಲ ಇದೆ, ನಮ್ಮ ಕೇರಳದವರಿಗೆ ಬಲ ಇದೆ, ತಮಿಳವರಿಗೆ ಬಲ ಇದೆ. ಕನ್ನಡದವರಿಗೆ ಬಲವೇ ಇಲ್ಲ. ನಮ್ಮ ಮಾತನ್ನು ಆಡುವವರು ಬಹಳ ಕಡಿಮೆ ಆಗಿದ್ದಾರೆ. ಅಂತಹವರ ಸಂಖ್ಯೆ ಹೆಚ್ಚುವ ಹಾಗೆ ಮಾಡಬೇಕು. ಯಾಕೆಂದರೆ ಭಾರತ ಬಹು ಕೇಂದ್ರೀತ ರಾಷ್ಟ್ರ ಅಂದರೆ ಫೆಡರಲ್ ವ್ಯವಸ್ಥೆ ಇದೆ, ಈ ರಾಜ್ಯಕ್ಕೂ ಒಂದು ಬೆಲೆ ಬರಬೇಕು ಅಂದರೆ ಫೆಡರಲ್ ವ್ಯವಸ್ಥೆಯಲ್ಲಿ ನಮ್ಮವರು ದೆಹಲಿಯಲ್ಲಿ ಕೂಡ ಇರಬೇಕು. ಅದಕ್ಕೋಸ್ಕರವಾಗಿ ಈ ಸಂಘಟನೆ ಹೋರಾಡಲಿ, ಮತ್ತು ಬೇರೆ ಭಾಷೆಯ ಜನರನ್ನು ಕನ್ನಡಿಗರನ್ನಾಗಿ ಮಾಡುವ ಕೆಲಸ ಮಾಡಲಿ.
ಒಂದೇ ಒಂದು ಡೆಫನೇಷನ್ ಕನ್ನಡಿಗ ಅಂದರೆ ಕನ್ನಡ ಬಲ್ಲವನು ಕನ್ನಡಿಗ. ತಮಿಳಿನವನಿಗೆ ಕನ್ನಡ ಬಂದರೆ, ಅವನು ಕನ್ನಡ ಮಾತನಾಡಿದರೆ ಅವನು ಕನ್ನಡಿಗ. ಯಾವ ಭಾಷೆಯವನೇ ಆಗಲಿ ಕನ್ನಡ ಭಾಷೆ ಕಲಿತಕೂಡಲೇ, ಬಳಸೋದಕ್ಕೆ ಶುರು ಮಾಡಿದ್ರೆ ಅವನು ಕನ್ನಡಿಗ. ಆವಾಗ ಅನಗತ್ಯವಾದ ಹಿಂಸೆ ಯಾವುದು ಇರೋದಿಲ್ಲ. ಆದರೆ, ಕನ್ನಡ ಮಾತ್ರ ಕಡ್ಡಾಯ. ಅದು ನಮ್ಮ ಘೋಷಣೆ ಆಗಬೇಕು.
ಈ ಪತ್ರಿಕೆ ಬಹಳ ಚೆನ್ನಾಗಿ ಬಂದಿದೆ. ನನ್ನದೇ ಎರಡು ಲೇಖನ ಬಳಸಿಕೊಂಡಿದ್ದಾರೆ. ನಾರಾಯಣಗೌಡರು ಈ ಪತ್ರಿಕೆಯನ್ನು ತುಂಬಾ ಚೆನ್ನಾಗಿ ಸಿದ್ಧಪಡಿಸಿದ್ದಾರೆ. ಅದರ ಸಂಪಾದಕ ವರ್ಗದವರು ಬಹಳ ಚೆನ್ನಾಗಿ ದುಡಿದಿದ್ದಾರೆ. ಇದು ಪ್ರತಿ ತಿಂಗಳು ಬಂದು ಕನ್ನಡದವರನ್ನು ಬರೀ ಹೋರಾಟಕ್ಕೆ ಮಾತ್ರ ಎಚ್ಚರಿಸದೆ ತಮ್ಮ ಕರ್ತವ್ಯ ಪ್ರಜ್ಞೆಯನ್ನು ಕೂಡ ಮೂಡಿಸುವಂತಹ ಕೆಲಸವನ್ನು ಮಾಡಲಿ ಅಂತ ಹೇಳಿ ನನ್ನ ಮಾತುಗಳನ್ನು ಮುಗಿಸುತ್ತೇನೆ.
ಜೈ ಕರ್ನಾಟಕ.

ಡಾ.ಯು.ಆರ್.ಅನಂತಮೂರ್ತಿ

ಹೊಗೇನಕಲ್ ನಮ್ಮದು ಸಾಕ್ಷಿ ಇಲ್ಲಿದೆ!




ದಿನೇಶ್ ಕುಮಾರ್ ಎಸ್.ಸಿ.

ಯಾಕೆ ತಮಿಳುನಾಡು ಸರ್ಕಾರ ದುರಹಂಕಾರದಿಂದ ವರ್ತಿಸುತ್ತಿದೆ? ಯಾಕೆ ಹಠಕ್ಕೆ ಬಿದ್ದಿದೆ? ಯಾಕೆ ಹೊಗೇನಕಲ್‌ನಲ್ಲೇ ತನ್ನ ಕುಡಿಯುವ ನೀರು ಯೋಜನೆಯನ್ನು ಆರಂಭಿಸುತ್ತಿದೆ? ೧೯೯೫ರಿಂದ ಈಚೆ ಹಲವು ಬಾರಿ ಕರ್ನಾಟಕ-ತಮಿಳುನಾಡು ಜಂಟಿ ಸರ್ವೆಗೆ ಅಡ್ಡಿ-ಆತಂಕಗಳನ್ನು ಒಡ್ಡುತ್ತಿದೆ? ಕಾವೇರಿ ನ್ಯಾಯಾಧಿಕರಣದ ಅನುಮತಿಯೂ ಇಲ್ಲದಂತೆ ಯೋಜನೆ ಆರಂಭಿಸಲು ಹೊರಟಿದ್ದೇಕೆ?
ಪ್ರಶ್ನೆಗಳು ಸಾವಿರ ಸಂಖ್ಯೆಯಲ್ಲಿದೆ. ಕೇಳಬೇಕಾದ ನಮ್ಮ ರಾಜ್ಯ ಸರ್ಕಾರ ಬಾಯಿ ಕಳೆದುಕೊಂಡಿದೆ.
ತಿರುವಳ್ಳುವರ್ ಪ್ರತಿಮೆಯನ್ನು ಅನಾವರಣ ಮಾಡುತ್ತೇವೆ, ಬನ್ನಿ ಎಂದು ಕರುಣಾನಿಧಿ ಮುಂದೆ ಯಡಿಯೂರಪ್ಪ ಕೈಕಟ್ಟಿ ನಿಂತುಕೊಂಡಾಗಲೇ ನಮ್ಮ ಸರ್ಕಾರದ ಹುಳುಕುಗಳು ಅಲ್ಲಿನ ಜನರಿಗೆ ಗೊತ್ತಾಗಿ ಹೋಗಿತ್ತು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅತಿಹೆಚ್ಚು ಸ್ಥಾನ ಗೆಲ್ಲಬೇಕು ಎಂಬ ಏಕಮಾತ್ರ ಉದ್ದೇಶದಿಂದ ಯಡಿಯೂರಪ್ಪ ಚೆನ್ನೈಗೆ ಓಡಿ ಹೋಗಿ ತಮಿಳುನಾಡು ಮುಖ್ಯಮಂತ್ರಿ ಎದುರು ಬೆನ್ನು ಬಾಗಿಸಿ ನಿಂತುಕೊಂಡರು. ತಿರುವಳ್ಳುವರ್ ಪ್ರತಿಮೆ ಅನಾವರಣ ಮಾಡುತ್ತೇವೆ, ಬನ್ನಿ ಎಂದು ವೀಳ್ಯ ಕೊಟ್ಟು ಬಂದರು. ಒಂದು ವಾರ ಮೊದಲೇ ಬೆಂಗಳೂರಿಗೆ ಬಂದು ಕುಳಿತ ಕರುಣಾನಿಧಿಗೆ ರಾಜಾತಿಥ್ಯ. ಕೆಂಪು ಹಾಸಿನ ಸ್ವಾಗತ.
ಪ್ರತಿಮೆ ಅನಾವರಣವನ್ನು ವಿರೋಧಿಸಿದ ಎಲ್ಲರನ್ನು ಬಂಧಿಸಿ ಜೈಲಿಗಟ್ಟಲಾಯಿತು. ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರೂ ಸೇರಿದಂತೆ ವೇದಿಕೆಯ ಸಹಸ್ರಾರು ಕಾರ್ಯಕರ್ತರನ್ನು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಬಂಧಿಸಿ ಜೈಲಿಗೆ ತಳ್ಳಲಾಯಿತು. ತಿರುವಳ್ಳುವರ್ ಪ್ರತಿಮೆ ಅನಾವರಣ ನಡೆದೇ ಹೋಯಿತು. ಅತ್ತ ಚೆನ್ನೈ ನಗರದ ಒಂದು ಮೂಲೆಯಲ್ಲಿ ಸರ್ವಜ್ಞಮೂರ್ತಿಯ ಪ್ರತಿಮೆಯೂ ತೋರಿಕೆಗೆಂದು ಅನಾವರಣಗೊಳಿಸಲಾಯಿತು.
ತಮಿಳರಿಗೆ ಮಾಡಿದ ಈ ಮಹದುಪಕಾರಕ್ಕೆ ಪ್ರತಿಯಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಹಲವೆಡೆ ತಮಿಳರು ಬಿಜೆಪಿಯನ್ನು ಬೆಂಬಲಿಸಿದರು. ಕಾಲಕಾಲದಿಂದಲೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿಕೊಂಡು ಬಂದಿದ್ದ ತಮಿಳರು ಈ ಬಾರಿ ಬಿಜೆಪಿಗೆ ಒಲಿದರು. ಬಿಜೆಪಿ ಅಭ್ಯರ್ಥಿಗಳು ತಮ್ಮ ಕರಪತ್ರದಲ್ಲಿ ತಿರುವಳ್ಳುವರ್ ಭಾವಚಿತ್ರವನ್ನೂ ಛಾಪಿಸಿ ತಮಿಳರಿರುವ ಬಡಾವಣೆಗಳಲ್ಲಿ ಮತ ಕೇಳಿದರು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಪ್ರಥಮ ಮೇಯರ್ ಸ್ಥಾನ ಬಿಜೆಪಿಗೇ ಲಭಿಸಿತು.
ತಿರುವಳ್ಳುವರ್ ಪ್ರತಿಮೆ ಅನಾವರಣ ಸಂದರ್ಭದಲ್ಲಿ ಯಡಿಯೂರಪ್ಪ ಹೇಳಿದ್ದೇನು? ಎರಡೂ ರಾಜ್ಯಗಳ ನಡುವೆ ಇರುವ ಮನಸ್ತಾಪ ಕರಗಿಸಲು ಇದು ಸರಿಯಾದ ಕಾಲ ಎಂದರು. ಪರಸ್ಪರ ಸಹೋದರತ್ವ ಈ ಪ್ರತಿಮೆ ಅನಾವರಣದಿಂದ ನಡೆಯುತ್ತದೆ ಎಂದು ಕೊಚ್ಚಿಕೊಂಡಿದ್ದರು. ನಾವೆಲ್ಲರೂ ಒಂದಾಗಿ ಹೋಗೋಣ ಎಂದು ಸಂತನ ಹಾಗೆ ಮಾತನಾಡಿದ್ದರು. ಕರುಣಾನಿಧಿ ಸಹ ಯಡಿಯೂರಪ್ಪ ಅವರನ್ನು ‘ಚಿನ್ನ ತಂಬಿ’ ಎಂದು ಬಾಯ್ತುಂಬ ಕೊಂಡಾಡಿದ್ದರು.
ಆದರೆ ಹೊಗೇನಕಲ್‌ನಲ್ಲಿ ಯೋಜನೆ ಆರಂಭಿಸಲು ಹೊರಟ ಗಳಿಗೆಯಲ್ಲಿ ಅವರಿಗೆ ಯಡಿಯೂರಪ್ಪ ಎಂಬ ಕಿರಿಯ ಸಹೋದರ ನೆನಪಾಗಲೇ ಇಲ್ಲ, ಆತನೊಂದಿಗೆ ಒಂದು ಸುತ್ತು ಮಾತನಾಡಬೇಕು ಎಂದೆನಿಸಲೇ ಇಲ್ಲ. ಯಾಕೆ, ಸಹೋದರತ್ವದ ಭಾವ ಅಷ್ಟು ಬೇಗ ಕರಗಿ ಹೋಯಿತೆ? ಭ್ರಾತೃತ್ವದ ಪರ್ವ ತಿರುವಳ್ಳುವರ್ ಪ್ರತಿಮೆ ಅನಾವರಣದೊಂದಿಗೇ ಮುಗಿದುಹೋಯಿತೆ?
ಅಷ್ಟಕ್ಕೂ ಯಡಿಯೂರಪ್ಪ ಹಾಗು ಕರುಣಾನಿಧಿ ನಡುವೆ ಏನೇನು ಮಾತುಕತೆ ನಡೆದಿತ್ತು ಎಂಬುದನ್ನು ಅರಿಯಲು ರಾಜ್ಯದ ಜನತೆ ಬಯಸುತ್ತಿದ್ದಾರೆ. ಒಪ್ಪಂದವಾಗಿದ್ದು ತಿರುವಳ್ಳುವರ್-ಸರ್ವಜ್ಞ ಪ್ರತಿಮೆಗಳ ಅನಾವರಣದ ವಿಷಯ ಮಾತ್ರವೇ ಅಥವಾ ಅದರಿಂದಾಚೆಗೂ ಮಾತುಕತೆ ನಡೆದಿದೆಯೇ? ಹೊಗೇನಕಲ್‌ನಲ್ಲಿ ಕೆಲಕಾಲ ಬಿಟ್ಟು ಯೋಜನೆ ಆರಂಭಿಸಿ, ನಾವು ನಿಮಗೆ ಯಾವುದೇ ವಿರೋಧ ಮಾಡುವುದಿಲ್ಲ ಎಂದು ಯಡಿಯೂರಪ್ಪ ಮಾತು ಕೊಟ್ಟಿದ್ದಾರೆಯೇ? ಕಾವೇರಿ ನ್ಯಾಯಾಧಿಕರಣದ ಅಂತಿಮ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ ಹೂಡಲಾಗಿರುವ ದಾವೆಯ ವಿಚಾರಣೆ ಸಂದರ್ಭದಲ್ಲೂ ನಮ್ಮ ವಕೀಲರು ಮಗುಮ್ಮಾಗಿ ಇದ್ದುಬಿಡುತ್ತಾರೆ ಎಂದು ಯಡಿಯೂರಪ್ಪ ಏನಾದರೂ ಮಾತು ಕೊಟ್ಟಿರಬಹುದೇ? ಶಿವನಸಮುದ್ರ ವಿದ್ಯುತ್ ಯೋಜನೆಗೆ ಕಿತಾಪತಿ ಮಾಡಿ, ನಾವು ನಿಮಗೆ ತಲೆಬಾಗುತ್ತೇವೆ ಎಂದೇನಾದರೂ ಆಣೆ ಮಾಡಿರಬಹುದೇ? ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶ ಮಾಡಬೇಕು, ಕರ್ನಾಟಕದಲ್ಲಿ ತಮಿಳನ್ನು ಎರಡನೇ ಅಧಿಕೃತ ಭಾಷೆಯನ್ನಾಗಿ ಮಾಡಬೇಕು ಎಂಬ ನಿಮ್ಮ ಬೇಡಿಕೆಗೆ ನಾವು ಒಪ್ಪಿಕೊಳ್ಳುತ್ತೇವೆ ಎಂದೇನಾದರೂ ಪ್ರಮಾಣ ಮಾಡಿರಬಹುದೇ?
ಯಡಿಯೂರಪ್ಪ ತನ್ನ ಹಿರಿಯ ಸಹೋದರನೊಂದಿಗೆ ಒಂದು ದೂರವಾಣಿ ಕರೆ ಮಾಡಿ ಮಾತೂ ಆಡುತ್ತಿಲ್ಲವೆಂದರೆ ಅನುಮಾನಗಳು ಸಾವಿರ ಹುಟ್ಟುತ್ತವೆ. ‘ಕರ್ನಾಟಕ ರಕ್ಷಣಾ ವೇದಿಕೆಯೋರು ಪ್ರತಿಭಟನೆ ಮಾಡಿದರೆ ವಿವಾದ ಬಗೆಹರಿಯೋದಿಲ್ಲ, ಮಾತುಕತೆ ಮಾಡಬೇಕು, ಮಾತುಕತೆ ಮೂಲಕ ವಿವಾದ ಪರಿಹರಿಸಬೇಕು’ ಎಂದು ಮೇ.೨೫ರಂದು ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.
‘ಅಲ್ಲಾ ಸ್ವಾಮಿ, ನಾವು ಹೇಳ್ತಾ ಇರೋದೂ ಸಹ ಅದನ್ನೇ. ನಮಗೇನು ಅನುದಿನವೂ ಹೋರಾಟ ಮಾಡಿಕೊಂಡಿರಲು ಹುಚ್ಚು ಹಿಡಿದಿಲ್ಲ. ಮಾತುಕತೆ ಮಾಡೋದು ನಮ್ಮ ಕೆಲಸವಲ್ಲ. ಮಾತುಕತೆ ಆಡ್ರೀ ಅಂತನೇ ನಿಮ್ಮನ್ನು ಆಯ್ಕೆ ಮಾಡಿ ವಿಧಾನಸೌಧದಲ್ಲಿ ಕೂರಿಸಿರೋದು. ನೀವು ಅದನ್ನೂ ಮಾಡದೇ ಇದ್ರೆ ನಿಮ್ಮನ್ನು ನಿದ್ರೆಯಿಂದ ಎಬ್ಬಿಸಲು ಹೋರಾಟ ಮಾಡದೇ ಮತ್ತೇನು ಆಯ್ಕೆ ನಮ್ಮ ಮುಂದಿದೆ’ ಎಂದು ನಾರಾಯಗೌಡರು ಪ್ರತಿಕ್ರಿಯೆ ನೀಡಿದರು.
ಯಡಿಯೂರಪ್ಪ ಸರ್ಕಾರದ ಮಂತ್ರಿಗಳಿಗೆ ಹೊಗೇನಕಲ್ ವಿವಾದದ ತಲೆ ಬುಡವೇ ಗೊತ್ತಿದ್ದಂತೆ ಇಲ್ಲ. ಮುಖ್ಯಮಂತ್ರಿಯ ನಂತರ ಸ್ಥಾನದಲ್ಲಿರುವ ಗೃಹ ಸಚಿವ ವಿ.ಎಸ್.ಆಚಾರ‍್ಯ ಇತ್ತೀಚಿಗೆ ಒಂದು ಹೇಳಿಕೆ ನೀಡಿದರು. ಹೊಗೇನಕಲ್‌ನಲ್ಲಿ ಅವರು ಕುಡಿಯುವ ನೀರು ಯೋಜನೆ ಮಾಡಿಕೊಳ್ಳಲಿ, ನಾವು ಇಲ್ಲಿ ಜಲವಿದ್ಯುತ್ ಯೋಜನೆ ಮಾಡಿಕೊಳ್ಳುತ್ತೇವೆ. ಇದೊಂದು ರೀತಿಯಲ್ಲಿ ಕೊಟ್ಟು-ಕೊಳ್ಳುವ ವ್ಯವಹಾರ’ ಎಂದರು.
ಒಬ್ಬ ಗೃಹಮಂತ್ರಿಗೆ ವಿವಾದ ಏನು ಎಂಬುದೇ ಗೊತ್ತಿಲ್ಲದಿದ್ದರೆ ಇಂಥ ಬೇಜವಾಬ್ದಾರಿ ಹೇಳಿಕೆಗಳು ಹೊರಬರುತ್ತವೆ. ತಮಿಳುನಾಡು ಸರ್ಕಾರ ತನ್ನ ಯೋಜನೆಯನ್ನು ಆರಂಭಿಸಿರುವುದು ಕರ್ನಾಟಕದ ಭೂಭಾಗದಲ್ಲಿ. ಹೀಗಿರುವಾಗ ಅವರು ಮಾಡಿಕೊಳ್ಳಲಿ ಎಂದು ರಾಜ್ಯದ ಗೃಹಮಂತ್ರಿ ಹೇಗೆ ಹೇಳುತ್ತಾರೆ? ರಾಜ್ಯದ ಭಾಗವನ್ನು ಇನ್ನೊಂದು ರಾಜ್ಯಕ್ಕೆ ಮಾರಲು, ಪರಭಾರೆ ಮಾಡಲು ಆಚಾರ್ಯ ಯಾರು?
ಅಸಲಿಗೆ ಹೊಗೇನಕಲ್‌ನಲ್ಲಿ ತಮಿಳುನಾಡು ಸರ್ಕಾರ ಯೋಜನೆ ಆರಂಭಿಸುತ್ತಿರುವ ಜಾಗ ಕರ್ನಾಟಕಕ್ಕೆ ಸೇರಿದ್ದು ಎಂಬುದಕ್ಕೆ ಸಾಕಷ್ಟು ಸಾಕ್ಷಿಗಳಿವೆ. ೧೯೭೪-೭೫ರಲ್ಲಿ ನಡೆದ ಸರ್ವೆಯ ಪ್ರಕಾರ ಹೊಗೇನಕಲ್ ನಡುಗಡ್ಡೆಯ ಮೂರನೇ ಎರಡು ಭಾಗ ಕರ್ನಾಟಕಕ್ಕೆ ಸೇರುತ್ತದೆ. (ನಕ್ಷೆ ನೋಡಿ) ಕರ್ನಾಟಕದ ಭೂಭಾಗದಲ್ಲೇ ಹೊಗೇನಕಲ್ ಫಾಲ್ಸ್ ಇರುವುದು ಈ ನಕ್ಷೆಯ ಪ್ರಕಾರ ಸತ್ಯ. ಈ ಸಮೀಕ್ಷೆಯನ್ನು ಕೇವಲ ಕರ್ನಾಟಕ ನಡೆಸಿದ್ದೇನು ಅಲ್ಲ, ಎರಡೂ ರಾಜ್ಯಗಳೂ ಸೇರಿದ ನಡೆಸಿದ ಸಮೀಕ್ಷೆ ಪ್ರಕಾರವೇ ಸಿದ್ಧಗೊಳಿಸಿದ ನಕ್ಷೆ ಇದು. ಇದನ್ನು ಯಾಕೆ ತಮಿಳುನಾಡು ಒಪ್ಪುತ್ತಿಲ್ಲ?
ವಿಶೇಷವೆಂದರೆ ಯಾವ ಹೊಗೇನಕಲ್ ಕರ್ನಾಟಕದಲ್ಲಿ ಸೇರಿದೆಯೋ ಅಲ್ಲಿ, ತಮಿಳುನಾಡು ಸರ್ಕಾರ ಬಂದು ಕುಳಿತು ಹಲವು ವರ್ಷಗಳೇ ಕಳೆದುಹೋದವು. ಅಲ್ಲಿ ತಮಿಳುನಾಡು ಸರ್ಕಾರದ ಪ್ರವಾಸೋದ್ಯಮ ಇಲಾಖೆ ಬಂದಿದೆ. ತಮಿಳು ಬೋರ್ಡ್‌ಗಳಿವೆ. ಬೋಟ್‌ಗಳನ್ನು ನಡೆಸುವ ತಮಿಳು ಜನರಿದ್ದಾರೆ. ಇಡೀ ಜಾಗವೇ ತಮ್ಮದು ಎಂಬಂತೆ ಬಿಂಬಿಸಿಕೊಳ್ಳುವ ಸಲುವಾಗಿ ಹಲವು ವರ್ಷಗಳಿಂದ ಅಲ್ಲಿ ತಮಿಳುನಾಡು ಸರ್ಕಾರ ಠಿಕಾಣಿ ಹೂಡಿದೆ. ಅವರನ್ನು ಎಬ್ಬಿಸಬೇಕಾದ ನಮ್ಮ ಸರ್ಕಾರಕ್ಕೆ ಜಾಣ ನಿದ್ರೆ.
ಹೀಗೆ ಬಂದು ಕುಳಿತ ಮೇಲೆ, ಅಲ್ಲಿ ಯೋಜನೆ ಆರಂಭಿಸುವ ಮಾತುಗಳನ್ನು ಆಡತೊಡಗಿತು ತಮಿಳುನಾಡು ಸರ್ಕಾರ. ಜೆ.ಎಚ್.ಪಟೇಲರ ಕಾಲದಲ್ಲಿ ಆದ ಒಪ್ಪಂದದಲ್ಲಿ ಹೊಗೇನಕಲ್‌ನ ತನ್ನ ಭಾಗದಲ್ಲಿ ಕುಡಿಯುವ ನೀರು ಯೋಜನೆ ಆರಂಭಿಸುವುದಾಗಿ ತಮಿಳುನಾಡು ಹೇಳಿತ್ತು. ಆದರೆ ಈಗ ಕುಳಿತಿರುವುದು ಕರ್ನಾಟಕದ ಭಾಗದಲ್ಲಿ. ಇದು ತಮಿಳುನಾಡು ಸರ್ಕಾರಕ್ಕೂ ಗೊತ್ತಿದೆ, ಕರ್ನಾಟಕ ಸರ್ಕಾರಕ್ಕೂ ಗೊತ್ತಿದೆ. ಮಾತನಾಡಲು ಇವರಿಗೆ ಬಾಯಿ ಇಲ್ಲ, ಇವರ ಜೀವ ಇರುವುದು ತಮಿಳರ ಓಟಿನಲ್ಲಿ ಎಂದು ತಮಿಳುನಾಡು ಸರ್ಕಾರ ಅರ್ಥಮಾಡಿಕೊಂಡು ಬಿಟ್ಟಿದೆ. ಹೀಗಾಗಿ ಕರುಣಾನಿಧಿ ರಾಜಾರೋಷವಾಗಿ ಹೊಗೇನಕಲ್‌ನಲ್ಲಿ ಯೋಜನೆ ಮಾಡೇ ಮಾಡ್ತೀವಿ ಅಂತ ಕೇಂದ್ರ ಸರ್ಕಾರದ ಬೆಂಬಲವನ್ನೂ ಗಿಟ್ಟಿಸಿಕೊಂಡು ಹೂಂಕರಿಸುತ್ತಿದ್ದಾರೆ.
ಇತ್ತ ಇಲ್ಲಿ ಯಡಿಯೂರಪ್ಪ ಸರ್ಕಾರ ಈಗೀಗ ಹತ್ತಿರವಾಗಿರುವ ತಮಿಳು ಮತದಾರರನ್ನು ಯಾಕೆ ಕಳೆದುಕೊಳ್ಳುವುದು ಎಂದು ನಿರ್ಧರಿಸಿದಂತಿದೆ. ಕಳೆದುಕೊಂಡ ತಮಿಳು ಮತಗಳನ್ನು ಗಿಟ್ಟಿಸುವ ಸಲುವಾಗಿ ಕಾಂಗ್ರೆಸ್-ಜೆಡಿಎಸ್ ಮುಖಂಡರೂ ಸಹ ಹೊಗೇನಕಲ್ ವಿಷಯದಲ್ಲಿ ಬಾಯಿ ತೆರೆಯುತ್ತಿಲ್ಲ.
ಆದರೆ ಎಲ್ಲರ ಬಾಯಿ ತೆರೆಸುವ ಕೆಲಸವನ್ನು ಅಂತಿಮವಾಗಿ ಕರ್ನಾಟಕ ರಕ್ಷಣಾ ವೇದಿಕೆಯೇ ಮಾಡಬೇಕಾಗುತ್ತದೆ. ಅದಕ್ಕೆ ಕಾಲ ಈಗ ಪಕ್ವವಾಗಿದೆ.

ಚಾಮರಾಜನಗರದಲ್ಲಿ ರಣಘೋಷ





ಯಾರೋ ಮುಠ್ಠಾಳರು ಚಾಮರಾಜನಗರವನ್ನು ಶಾಪಗ್ರಸ್ಥ ನಗರವೆಂದರು. ಆ ನಗರಕ್ಕೆ ಕಾಲಿಟ್ಟವರೆಲ್ಲ ಅಧಿಕಾರ ಕಳೆದುಕೊಳ್ಳುತ್ತಾರೆ ಎಂದರು. ಕಾಕತಾಳೀಯ ಎಂಬಂತೆ ಹಲವರು ಹಾಗೆಯೇ ಅಧಿಕಾರ ಕಳೆದುಕೊಂಡರು. ಇನ್ನು ನಮ್ಮ ಜನಪ್ರತಿನಿಧಿಗಳನ್ನು ಕೇಳಬೇಕೆ? ಗಿಣಿಶಾಸ್ತ್ರ, ಕವಡೆ ಶಾಸ್ತ್ರದಿಂದ ಹಿಡಿದು ಹೈಟೆಕ್ ಜ್ಯೋತಿಷಿಗಳ ಒಡ್ಡೋಲಗದಲ್ಲಿ ಕೈ ಚಾಚಿ ನಿಲ್ಲುವುದರಲ್ಲಿ ಸದಾ ಮುಂದು. ಇನ್ನು ಇಂಥದ್ದೊಂದು ಮೂಢನಂಬಿಕೆಯನ್ನು ನಂಬದೇ ಇರುತ್ತಾರೆಯೇ? ಚಾಮರಾಜನಗರಕ್ಕೆ ಮಂತ್ರಿಗಳು ಬರುವುದನ್ನೇ ನಿಲ್ಲಿಸಿದರು. ಮುಖ್ಯಮಂತ್ರಿಗಳಂತೂ ಚಾಮರಾಜನಗರದ ಹೆಸರನ್ನು ಕೇಳಿದರೆ ಹೆದರುತ್ತಾರೆ.
ಆದರೆ ನಿಜವಾಗಿಯೂ ಶಾಪಗ್ರಸ್ಥರು ಚಾಮರಾಜನಗರಕ್ಕೆ ಬಾರದೇ ಹೋಗುವವರು ಮಾತ್ರ. ಡಾ.ರಾಜಕುಮಾರ್, ಪ್ರೊ.ಎಂ.ಡಿ.ನಂಜುಂಡಸ್ವಾಮಿಯಂಥವರನ್ನು ನೀಡಿದ ಪುಣ್ಯಭೂಮಿ ಅದು. ಗಡಿಭಾಗದಲ್ಲಿದ್ದರೂ ಕನ್ನಡತನವನ್ನು ಮೈಗೂಡಿಸಿಕೊಂಡು ಕನ್ನಡವನ್ನೇ ಉಸಿರಾಡುವ ಜನರಿರುವ ನಾಡು ಇದು. ಇಲ್ಲಿನ ಜನರು ರಾಗವಾಗಿ ಆಡುವ ಕನ್ನಡದ ಮಾತುಗಳನ್ನು ಕೇಳದವನೇ ಪಾಪಿ. ಇಲ್ಲಿನ ಜನರು ತಾವು ನಂಬಿದವರನ್ನು ಅತಿಯಾಗಿ ಪ್ರೀತಿಸುತ್ತಾರೆ, ಆರಾಧಿಸುತ್ತಾರೆ.
ಮೇ. ೨೫ರಂದು ಕರ್ನಾಟಕ ರಕ್ಷಣಾ ವೇದಿಕೆ ಚಾಮರಾಜನಗರದಲ್ಲಿ ಆಯೋಜಿಸಿದ್ದ ‘ಹೊಗೇನಕಲ್ ಉಳಿಸಿ’ ಹೋರಾಟದ ಬೃಹತ್ ಬಹಿರಂಗ ಸಭೆಯಲ್ಲಿ ನಿಜವಾದ ಕನ್ನಡಿಗರು ಎದ್ದು ನಿಂತಿದ್ದರು. ಇಡೀ ನಗರವೇ ಅಂದು ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರ ಆಗಮನಕ್ಕೆ ಕಾದು ನಿಂತಿತ್ತು. ರಥಬೀದಿಯಲ್ಲಿ ಬಹಿರಂಗ ಸಭೆ ಏರ್ಪಾಡಾಗಿತ್ತು. ಚಾಮರಾಜನಗರದ ಹೆಬ್ಬಾಗಿಲಿನಿಂದ ರಥಬೀದಿಯವರೆಗೆ ಸಾವಿರ ಸಾವಿರ ಸಂಖ್ಯೆಯಲ್ಲಿ ಅಭಿಮಾನಿಗಳು ಕಾದು ನಿಂತಿದ್ದರು. ಸಂಜೆ ನಾರಾಯಣಗೌಡರು ಆಗಮಿಸುತ್ತಿದ್ದಂತೆ ಇಡೀ ನಗರದಲ್ಲಿ ವಿದ್ಯುತ್ ಸಂಚಲನ. ವೇದಿಕೆಗೆ ಗೌಡರನ್ನು ಕರೆದೊಯ್ಯುವುದೇ ಹರಸಾಹಸವಾಗಿತ್ತು; ಕಾರ್ಯಕರ್ತರಿಗೆ.
ಆಗ ಅಲ್ಲಿದ್ದವರಿಗೆ ಅನ್ನಿಸಿದ್ದು; ಇಲ್ಲಿನ ಜನರ ಪ್ರೀತಿಯನ್ನು, ಅಭಿಮಾನವನ್ನು ಸ್ವೀಕರಿಸದವನೇ ನಿಜವಾದ ಪಾಪಿ ಎಂದು. ಚಾಮರಾಜನಗರ ಶಾಪಗ್ರಸ್ಥನಲ್ಲ; ಇಲ್ಲಿಗೆ ಬಾರದವನೇ ಶಾಪಗ್ರಸ್ಥ ಎಂದು.
‘ಒಂದು ಇಂಚು ಭೂಮಿಯನ್ನೂ ಯಾರಿಂದಲೂ ಕಿತ್ತುಕೊಳ್ಳಲು ಬಿಡುವುದಿಲ್ಲ; ಇದು ನಮ್ಮ ಶಪಥ’ ಎಂದು ನಾರಾಯಣಗೌಡರು ಗುಡುಗಿದರು. ನಾಡಿನ ಗಡಿಯನ್ನು ರಕ್ಷಿಸಬೇಕಾದವರು ಎಲ್ಲವನ್ನೂ ಮರೆತು ಕುಳಿತಿದ್ದಾರೆ. ಇಂಥವರನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ನುಡಿದರು.
ಕೇಂದ್ರ ಸರ್ಕಾರ ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಎಂಬ ನೀತಿಯನ್ನು ಅನುಸರಿಸುತ್ತಿದೆ. ಹೊಗೇನಕಲ್ ಪ್ರದೇಶ ವಿವಾದದಲ್ಲಿರುವ ವಿಷಯ ಗೊತ್ತಿದ್ದರೂ ಯೋಜನೆಗೆ ಹಸಿರು ನಿಶಾನೆ ತೋರುವುದರ ಜತೆಗೆ ವಿದೇಶಿ ಸಾಲಕ್ಕೆ ಗ್ಯಾರೆಂಟಿ ನೀಡಿದೆ. ಇದನ್ನು ಸಹಿಸಿಕೊಳ್ಳುವುದು ಸಾಧ್ಯವಿಲ್ಲ ಎಂದು ಗುಡುಗಿದ ಗೌಡರು, ಎರಡೂ ರಾಜ್ಯ ಸರ್ಕಾರಗಳು ಹಾಗು ಕೇಂದ್ರ ಸರ್ಕಾರ ಇದಕ್ಕೆ ಭಾರಿ ಬೆಲೆ ತೆರಬೇಕಾದೀತು ಎಂದು ನುಡಿದರು.
ಮುಖ್ಯಮಂತ್ರಿಯಾಗುವುದಕ್ಕೂ ಮುನ್ನ ಹೊಗೇನಕಲ್‌ನಲ್ಲಿ ದೋಣಿ ವಿಹಾರ ನಡೆಸಿ, ಯಾವುದೇ ಕಾರಣಕ್ಕೂ ಈ ಪ್ರದೇಶವನ್ನು ತಮಿಳುನಾಡು ಕಬಳಿಸಲು ಬಿಡುವುದಿಲ್ಲ ಎಂದು ಘೋಷಿಸಿದ್ದ ಯಡಿಯೂರಪ್ಪನವರು, ಈಗ ಜಾಣ ಮೌನ ವಹಿಸಿರುವುದು ಏಕೆ ಎಂದು ಪ್ರಶ್ನಿಸಿದ ಅವರು, ತಿರುವಳ್ಳುವರ್ ಪ್ರತಿಮೆ ಅನಾವರಣ ಸಂಬಂಧದಲ್ಲಿ ಕರುಣಾನಿಧಿ ಜತೆ ನಡೆದ ಕಳ್ಳ ಒಪ್ಪಂದದಲ್ಲಿ ಏನೇನು ನಡೆದಿದೆ ಎಂಬುದನ್ನು ಬಹಿರಂಗಪಡಿಸಲು ಆಗ್ರಹಿಸಿದರು.
ನಾವು ಸ್ನೇಹಕ್ಕೂ ಬದ್ಧ, ಸಮರಕ್ಕೂ ಸಿದ್ಧ ಎಂದು ಸಾರಿ ಸಾರಿ ಹೇಳಿದ್ದೇವೆ. ಈಗಲೂ ಅದನ್ನೇ ಹೇಳುತ್ತಿದ್ದೇವೆ. ಒಂದು ವೇಳೆ ತಮಿಳುನಾಡು ಸರ್ಕಾರ ಮೊಂಡುಹಠಕ್ಕೆ ಬಿದ್ದರೆ, ನಾವು ತಮಿಳುನಾಡಿನೊಂದಿಗಿನ ಎಲ್ಲ ಸಂಪರ್ಕ, ವ್ಯವಹಾರಗಳನ್ನು ನಿಲ್ಲಿಸಬೇಕಾಗುತ್ತದೆ. ಕರ್ನಾಟಕದಲ್ಲಿ ತಮಿಳು ಚಲನಚಿತ್ರಗಳನ್ನು ನಿಷೇಧಿಸಲಾಗುವುದು, ತಮಿಳು ಕೇಬಲ್‌ಗಳನ್ನು ಬಂದ್ ಮಾಡಲಾಗುವುದು. ಗಡಿಯನ್ನು ಮುಚ್ಚಲಾಗುವುದು ಎಂದು ಎಚ್ಚರಿಸಿದರು.
ನಾರಾಯಣಗೌಡರ ಪ್ರತಿ ಮಾತಿಗೂ ಅಲ್ಲಿ ನೆರೆದಿದ್ದ ಸಾವಿರಾರು ಸಂಖ್ಯೆಯ ಜನರು ಚಪ್ಪಾಳೆ ತಟ್ಟಿ ಅನುಮೋದಿಸಿದರು. ೧೦ ದಿನಗಳ ಒಳಗಾಗಿ ಎರಡೂ ರಾಜ್ಯ ಸರ್ಕಾರಗಳು ಕುಳಿತು ಮಾತನಾಡಬೇಕು, ಕೂಡಲೇ ಜಂಟಿ ಸರ್ವೆ ಆರಂಭಿಸಬೇಕು. ಇಲ್ಲದಿದ್ದಲ್ಲಿ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಗೌಡರು ಎಚ್ಚರಿಸಿದರು.
ಕರ್ನಾಟಕ ರಾಜ್ಯ ರೈತಸಂಘದ ಕಾರ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ಯಡಿಯೂರಪ್ಪ ಸರ್ಕಾರ ಹೊಗೇನಕಲ್ ವಿಚಾರದಲ್ಲಿ ಅವಿವೇಕ, ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ. ಒಂದು ವೇಳೆ ಕನ್ನಡದ ಭೂಪ್ರದೇಶವನ್ನು ತಮಿಳುನಾಡು ಕಿತ್ತುಕೊಳ್ಳಲು ಯತ್ನಿಸಿದರೆ ರಾಜ್ಯದ ರೈತರೂ ಸಹ ದಂಗೆ ಏಳಲಿದ್ದಾರೆ ಎಂದು ಎಚ್ಚರಿಸಿದರು.
ಸಮತಾ ಸೈನಿಕ ದಳ ಹಾಗು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಎಂ.ವೆಂಕಟಸ್ವಾಮಿ ಮಾತನಾಡಿ, ರಾಜ್ಯದ ಗಡಿಯನ್ನು ರಕ್ಷಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಬಳ್ಳಾರಿಯಲ್ಲಿ ರಾಜ್ಯದ ಗಡಿ ಒತ್ತುವರಿಯಾಗಿದೆ. ಬೆಳಗಾವಿಯಲ್ಲಿ ರಾಜ್ಯದ ಹಳ್ಳಿಗಳನ್ನು ಕಬಳಿಸುವ ಯತ್ನ ನಡೆದಿದೆ. ಹೊಗೇನಕಲ್‌ನಲ್ಲಿ ತಮಿಳುನಾಡು ಅಕ್ರಮವಾಗಿ ಯೋಜನೆ ನಡೆಸುತ್ತಿದೆ. ರಾಜ್ಯ ಸರ್ಕಾರ ಇದೆಲ್ಲವನ್ನು ನೋಡಿಕೊಂಡು ಸುಮ್ಮನಿದೆ ಎಂದು ಆರೋಪಿಸಿದರು. ಮೊದಲು ಜಂಟಿ ಸರ್ವೆ ನಡೆಯಲಿ, ಆನಂತರ ಯೋಜನೆ ಆರಂಭಿಸಲಿ ಎಂದು ಅವರು ಆಗ್ರಹಿಸಿದರು.
ಪ್ರಜಾ ವಿಮೋಚನಾ ಚಳವಳಿಯ ರಾಜ್ಯಾಧ್ಯಕ್ಷ ಪಟಾಪಟ್ ನಾಗರಾಜ್ ಮಾತನಾಡಿ, ಚಾಮರಾಜನಗರ ಜಿಲ್ಲೆ ಪ್ರೊ.ಎಂ.ಡಿ.ನಂಜುಂಡಸ್ವಾಮಿ, ಡಾ.ರಾಜ್‌ಕುಮಾರ್‌ರಂಥ ವಿಶ್ವಮಾನವರಿಗೆ ಜನ್ಮ ನೀಡಿದ ತಪೋಭೂಮಿ. ಈ ಭೂಮಿಯ ಒಂದು ಅಡಿ ಜಾಗವನ್ನೂ ಕಬಳಿಸಲು ಅವಕಾಶ ನೀಡುವುದಿಲ್ಲ ಎಂದು ನುಡಿದರು.
‘ಕರವೇ ನಲ್ನುಡಿ’ಯ ಪ್ರಧಾನ ಸಂಪಾದಕ ದಿನೇಶ್ ಕುಮಾರ್ ಎಸ್.ಸಿ. ಮಾತನಾಡಿ, ಹಿಂದೆ ರಾಜ್ಯಪಾಲರ ಆಡಳಿತವಿದ್ದ ಸಂದರ್ಭದಲ್ಲಿ ಮೋಸದಿಂದ ಯೋಜನೆ ಆರಂಭಿಸಲು ತಮಿಳುನಾಡು ಸರ್ಕಾರ ಹುನ್ನಾರ ನಡೆಸಿತ್ತು. ಆದರೆ ಅಂದು ಕರ್ನಾಟಕ ರಕ್ಷಣಾ ವೇದಿಕೆ ನಡೆಸಿದ ಹೋರಾಟದ ಪರಿಣಾಮವಾಗಿ ತನ್ನ ನಿರ್ಧಾರದಿಂದ ಕರುಣಾನಿಧಿ ಹಿಂದೆ ಸರಿದಿದ್ದರು. ಇದೀಗ ರಾಜ್ಯದಲ್ಲಿರುವ ಬಿಜೆಪಿ ಸರ್ಕಾರದ ನಿಷ್ಕಿಯತೆ, ಬೇಜವಾಬ್ದಾರಿತನಗಳನ್ನು ಗಮನಿಸಿಯೇ ಮತ್ತೆ ಅಕ್ರಮ ಯೋಜನೆ ಆರಂಭಿಸುವ ಹುನ್ನಾರ ನಡೆಸಿದೆ ಎಂದರು.
ಬಹಿರಂಗ ಸಭೆಯಲ್ಲಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಮಹೇಶ್ ಪ್ರಭು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗಮಲ್ಲಪ್ಪ, ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಮಹೇಶ್ ಗೌಡ, ಪ್ರಧಾನಕಾರ್ಯದರ್ಶಿ ಶೇಷಪ್ರಸಾದ್ ಸೇರಿದಂತೆ ಗಣ್ಯರು ಪಾಲ್ಗೊಂಡಿದ್ದರು.

ಚಾರ್ವಾಕ

ಕನ್ನಡ ಹೋರಾಟಗಾರರ ಮೇಲಿನ ಮೊಕದ್ದಮೆಗಳ ವಾಪಸಾತಿ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ



ದಿನೇಶ್ ಕುಮಾರ್ ಎಸ್.ಸಿ.

ಅಶೋಕ್ ಮೇಲಿಂದ ಮೇಲೆ ಜವಾಬ್ದಾರಿಗಳನ್ನು ವಹಿಸಿಕೊಳ್ಳುತ್ತ ಹೆಚ್ಚು ಹೆಚ್ಚು ಕ್ರಿಯಾಶೀಲರಾಗುತ್ತಿದ್ದಾರೆ. ಅಶೋಕ್ ಅವರನ್ನು ನಲ್ನುಡಿಗೆಂದು ಸಂದರ್ಶಿಸಿದಾಗ ಅವರು ತಮಗನ್ನಿಸಿದ್ದನ್ನು ಮುಕ್ತವಾಗಿ ಮಾತನಾಡಲು ಪ್ರಯತ್ನಿಸಿದ್ದಾರೆ.

ಸದಾ ಉತ್ಸಾಹ ಪುಟಿಯುವ ಮುಗುಳ್ನಗೆಯೊಂದಿಗೆ ಕ್ರಿಯಾಶೀಲರಾಗಿರುವ ಸಾರಿಗೆ ಸಚಿವ ಆರ್.ಅಶೋಕ್ ಬಿಜೆಪಿ ಸರ್ಕಾರ ಮಂತ್ರಿಗಳ ಪೈಕಿ ಹೆಚ್ಚು ಕೆಲಸ ಮಾಡುವ ಸಚಿವ ಎಂದು ಹೆಸರು ಪಡೆದವರು. ಇದೀಗ ಅವರ ಹೆಗಲಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯೂ ಸೇರಿಕೊಂಡಿದೆ. ಬೆಂಗಳೂರು ದಕ್ಷಿಣ ಉಸ್ತುವಾರಿಯೊಂದಿಗೆ, ಮಂಡ್ಯ ಜಿಲ್ಲಾ ಉಸ್ತುವಾರಿಯೂ ಅವರದೇ. ಇದೆಲ್ಲಕ್ಕಿಂತ ಮಿಗಿಲಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಳಿ ತಪ್ಪದಂತೆ ಎಚ್ಚರ ವಹಿಸುವ ಜವಾಬ್ದಾರಿಯೂ ಅವರ ಮೇಲಿದೆ.
ಹಾಗೆ ನೋಡಿದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಕಾರಣರಾದವರು ಆರ್.ಅಶೋಕ್ ಮತ್ತು ವಿ.ಸೋಮಣ್ಣ. ಇಬ್ಬರೂ ಸಾಕಷ್ಟು ಪ್ರತಿರೋಧಗಳನ್ನು ಎದುರಿಸಿಯೇ ರಾಜಕೀಯವಾಗಿ ಎತ್ತರಕ್ಕೇರಿದವರು. ತಮ್ಮ ವಿರುದ್ಧದ ಪಿತೂರಿಗಳನ್ನೆಲ್ಲ ಮೆಟ್ಟಿ ನಿಂತವರು. ವಿ.ಸೋಮಣ್ಣ ಇನ್ನೇನು ಮತ್ತೆ ಸಚಿವರಾಗುತ್ತಿದ್ದಾರೆ. ಅಶೋಕ್ ಮೇಲಿಂದ ಮೇಲೆ ಜವಾಬ್ದಾರಿಗಳನ್ನು ವಹಿಸಿಕೊಳ್ಳುತ್ತ ಹೆಚ್ಚು ಹೆಚ್ಚು ಕ್ರಿಯಾಶೀಲರಾಗುತ್ತಿದ್ದಾರೆ. ಅಶೋಕ್ ಅವರನ್ನು ನಲ್ನುಡಿಗೆಂದು ಸಂದರ್ಶಿಸಿದಾಗ ಅವರು ತಮಗನ್ನಿಸಿದ್ದನ್ನು ಮುಕ್ತವಾಗಿ ಮಾತನಾಡಲು ಪ್ರಯತ್ನಿಸಿದ್ದಾರೆ.
ನಲ್ನುಡಿ: ಇಷ್ಟೊಂದು ಜವಾಬ್ದಾರಿಗಳು, ಹೊರೆಯೆನ್ನಿಸುವುದಿಲ್ಲವೆ?
ಅಶೋಕ್: ಹಾಗೇನೂ ಇಲ್ಲ. ಕೆಲಸ ಹೆಚ್ಚು ಮಾಡುವವರಿಗೆ ಹೆಚ್ಚು ಕೆಲಸ ಕೊಡೋದು ಸಹಜ. ನನ್ನಲ್ಲಿ ಆ ಶಕ್ತಿ ಇದೆ ಎಂಬ ಕಾರಣಕ್ಕೆ ಜವಾಬ್ದಾರಿ ಹೊರೆಸಿದ್ದಾರೆ. ಅದನ್ನು ನಿಭಾಯಿಸುವ ಶಕ್ತಿ ಸಾಮರ್ಥ್ಯವೂ ನನ್ನಲ್ಲಿದೆ. ಜವಾಬ್ದಾರಿಯಿಂದ ನುಣುಚಿಕೊಂಡು ಓಡಿಹೋಗುವ ಪ್ರಶ್ನೆಯೇ ಇಲ್ಲ.
ನಲ್ನುಡಿ: ಸಾರಿಗೆ ಇಲಾಖೆಗೆ ಬಂದಾಗಿನಿಂದ ನಿಮ್ಮ ಪ್ರಮುಖ ಸಾಧನೆಗಳೇನು?
ಅಶೋಕ್: ನರ್ಮ್ ಯೋಜನೆಯಡಿ ನೂರಾರು ಬಸ್‌ಗಳನ್ನು ಆರಂಭಿಸಿದ್ದು, ಸುಮಾರು ೨೦,೦೦೦ಕ್ಕೂ ಹೆಚ್ಚು ಉದ್ಯೋಗಗಳನ್ನು ನಿಡಿದ್ದು. ಅದರಲ್ಲೂ ವಿಶೇಷವಾಗಿ ಶೇ.೯೯ರಷ್ಟು ಉದ್ಯೋಗಗಳನ್ನು ಕನ್ನಡಿಗರಿಗೇ ನೀಡಿದ್ದು. ಹೈಟೆಕ್ ಬಸ್‌ಗಳ ಓಡಾಟವನ್ನು ಆರಂಭಿಸಿದ್ದು, ಸಾರಿಗೆ ಇಲಾಖೆಯನ್ನು ಜನಸ್ನೇಹಿಯಾಗಿ ಮಾರ್ಪಡಿಸಿದ್ದು, ಪ್ರತಿ ತಿಂಗಳು ಬಸ್ ದಿನಾಚರಣೆ ಆರಂಭಿಸಿ ಎಲ್ಲ ವರ್ಗದ ಜನರೂ ಬಸ್‌ನಲ್ಲಿ ಓಡಾಡುವಂತೆ ಮಾಡಿದ್ದು...
ನಲ್ನುಡಿ: ಬೆಂಗಳೂರು ಕನ್ನಡೀಕರಣವಾಗಬೇಕು. ಜಾಹೀರಾತು ಫಲಕಗಳು, ನಾಮಫಲಕಗಳು ಕನ್ನಡದಲ್ಲೇ ಇರಬೇಕು ಎಂಬುದು ರಾಜ್ಯ ಸರ್ಕಾರವೇ ರೂಪಿಸಿದ ಕಾನೂನು. ನಾಮಫಲಕಗಳಲ್ಲಿ ಕನ್ನಡವೇ ಪ್ರಧಾನವಾಗಿರಬೇಕು ಎಂದು ಕಾಯ್ದೆ ಹೇಳುತ್ತದೆ. ಆದರೆ ಅನುಷ್ಠಾನವಾಗುತ್ತಿಲ್ಲವೇಕೆ? ವಿಶೇಷವಾಗಿ ಬೆಂಗಳೂರಿನಲ್ಲಿ ಇಂಗ್ಲಿಷ್ ನಾಮಫಲಕಗಳು, ಜಾಹೀರಾತು ಫಲಕಗಳು ರಾರಾಜಿಸುತ್ತಿವೆಯಲ್ಲಾ?
ಅಶೋಕ್: ಈಗ ಪರಿಸ್ಥಿತಿ ಸುಧಾರಿಸಿದೆ. ಈಗ ತಕ್ಕಮಟ್ಟಿಗೆ ಕನ್ನಡ ನಾಮಫಲಕಗಳು ಕಾಣಿಸುತ್ತವೆ. ಮುಂದೆ ಸಂಪೂರ್ಣ ಕನ್ನಡಮಯ ಮಾಡುವತ್ತ ನಾವು ಗಮನ ಹರಿಸುತ್ತೇವೆ.
ನಲ್ನುಡಿ: ಸಾರಿಗೆ ಇಲಾಖೆಯಲ್ಲಿ ಕೆಲವು ವಲಯಗಳ ಸಂಸ್ಥೆಗಳು ಇನ್ನೂ ನಷ್ಟದಲ್ಲಿವೆ? ಏನು ಕಾರಣ?
ಅಶೋಕ್: ನಷ್ಟದಲ್ಲಿರುವುದು ನಿಜ. ಆದರೆ ಅವು ನಾನು ಬರುವುದಕ್ಕಿಂತ ಮೊದಲೇ ನಷ್ಟದಲ್ಲಿದ್ದವು. ಪರಿಸ್ಥಿತಿ ಸುಧಾರಿಸಲು ಪ್ರಯತ್ನ ಪಡುತ್ತಿದ್ದೇವೆ.
ನಲ್ನುಡಿ: ಬೃಹತ್ ಬೆಂಗಳೂರು ಪಾಲಿಕೆಯಲ್ಲಿ ಈಗ ನಿಮ್ಮದೇ ಅಧಿಕಾರ. ನಿಮ್ಮ ಪ್ರಮುಖ ಆದ್ಯತೆಗಳೇನು?
ಅಶೋಕ್: ಕೆರೆಗಳನ್ನು ಅಭಿವೃದ್ಧಿಪಡಿಸೋದು. ೧೬೫ ಕೆರೆಗಳನ್ನು ಒತ್ತುವರಿ ತೆರವುಗೊಳಿಸಿ ಅಭಿವೃದ್ಧಿಪಡಿಸುತ್ತಾ ಇದ್ದೇವೆ.
ನಲ್ನುಡಿ: ಕೆರೆಗಳನ್ನು ಒತ್ತುವರಿ ಮಾಡಿಕೊಂಡವರೆಲ್ಲ ಪ್ರಭಾವಿಗಳು, ಹಣವುಳ್ಳವರು,
ರಾಜಕೀಯ ಶಕ್ತಿಯುಳ್ಳವರು. ಕಷ್ಟ ಅಲ್ವಾ?
ಅಶೋಕ್: ಹಾಗೇನಿಲ್ಲ, ಈಗಾಗಲೇ ೪೦ ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಿದ್ದೇವೆ. ಅಭಿವೃದ್ಧಿಗಾಗಿ ಟೆಂಡರ್ ಕರೆದಿದ್ದೇವೆ. ಗಟ್ಟಿ ನಿರ್ಧಾರ ಮಾಡಿದ್ದೇವೆ. ಹಾಗಾಗಿ ಕೆರೆಗಳ ಅಭಿವೃದ್ಧಿ ಮಾಡೇ ಮಾಡ್ತೀವಿ.
ನಲ್ನುಡಿ: ಕೆಂಪೇಗೌಡರ ಜಯಂತಿ ಆಚರಣೆ ಮಾಡ್ತೀವಿ ಅಂತ ಹೇಳಿಕೆ ನೀಡಿದ್ದಿರಿ..
ಅಶೋಕ್: ಹೌದು, ಬೆಂಗಳೂರು ನಿರ್ಮಾತೃ, ನಾಡಪ್ರಭು ಕೆಂಪೇಗೌಡರ ಜನ್ಮದಿನವನ್ನು ಬೆಂಗಳೂರು ಮತ್ತು ಹಳೆ ಮೈಸೂರು ಭಾಗದ ಎಲ್ಲ ನಗರಗಳಲ್ಲೂ ಆಚರಿಸುತ್ತೇವೆ. ಈ ಬಾರಿ ಜುಲೈನಲ್ಲಿ ಉತ್ಸವ ನಡೆಯುತ್ತದೆ. ಮುಂದೆ ಪ್ರತಿ ವರ್ಷವೂ ಕರಗದ ಸಂದರ್ಭದಲ್ಲೇ ಉತ್ಸವ ನಡೆಸುತ್ತೇವೆ. ಈ ಬಾರಿ ಐದು ಮಂದಿ ಸಾಧಕರಿಗೆ ತಲಾ ಐದು ಲಕ್ಷ ರೂ. ನಗದು ಪುರಸ್ಕಾರವಿರುವ ಪ್ರಶಸ್ತಿಗಳನ್ನು ನೀಡುತ್ತೇವೆ. ಮೂರು ದಿನಗಳ ಕಾಲ ನ್ಯಾಷನಲ್ ಕಾಲೇಜು ಮೈದಾನದಲ್ಲಿ ವಿಜೃಂಬಣೆಯ ಕಾರ್ಯಕ್ರಮಗಳಿರುತ್ತವೆ. ಈ ಸಂದರ್ಭದಲ್ಲಿ ಕೆಂಪೇಗೌಡರ ಜೀವನ ಚರಿತ್ರೆ, ಸಾಧನೆಗಳನ್ನು ಬಿಂಬಿಸುವ ಹೊತ್ತಿಗೆಗಳ ಬಿಡುಗಡೆಯೂ ನಡೆಯುತ್ತದೆ.
ನಲ್ನುಡಿ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಕನ್ನಡೇತರ ಅಭ್ಯರ್ಥಿಗಳನ್ನು ನಿಲ್ಲಿಸುವ ಕೆಟ್ಟ ಪರಂಪರೆ ಇತ್ತೀಚಿಗೆ ಆರಂಭಗೊಂಡಿದೆ. ನಿಮ್ಮ ಪಕ್ಷವೂ ಸೇರಿದಂತೆ ಎಲ್ಲ ಪಕ್ಷಗಳು ಎಲ್ಲಿಂದಲೋ ಬಂದವರಿಗೆ ಮಣೆ ಹಾಸುತ್ತಿವೆ.
ಅಶೋಕ್: ಈ ಬಾರಿ ಪರವಾಗಿಲ್ಲ. ಗೆದ್ದಿರುವವರನ್ನು ಗಮನಿಸಿ. ಈ ಬಾರಿ ಅತಿ ಹೆಚ್ಚು ಕನ್ನಡಿಗರೇ ಗೆದ್ದುಬಂದಿದ್ದಾರೆ. ನಾವು ಸ್ಥಳೀಯರಿಗೇ ಹೆಚ್ಚು ಟಿಕೆಟ್‌ಗಳನ್ನು ನೀಡಿದ್ದೇವೆ.
ನಲ್ನುಡಿ: ಚುನಾವಣೆಗೂ ಮುನ್ನ ಯಡಿಯೂರಪ್ಪನವರು ಹೊಗೇನಕಲ್‌ಗೆ ತೆರಳಿ, ಕರ್ನಾಟಕದ ಭೂಭಾಗವನ್ನು ಯಾರಿಗೂ ಕಬಳಿಸಲು ಬಿಡುವುದಿಲ್ಲ ಎಂದಿದ್ದರು. ಈಗ ಅಲ್ಲಿ ತಮಿಳುನಾಡಿನವರು ಯೋಜನೆ ಆರಂಭಿಸಿದ್ದಾರೆ. ನಿಮ್ಮ ಸರ್ಕಾರದ ನಿಲುವೇನು ಹೇಳ್ತೀರಾ?
ಅಶೋಕ್: ಚರ್ಚೆ ಶುರುವಾಗಿದೆ. ಈಗಾಗಲೇ ನಮ್ಮ ಜಲಸಂಪನ್ಮೂಲ ಸಚಿವರು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ಸರ್ಕಾರದ ನಡೆ ಏನಾಗಿರಬೇಕು ಎಂಬುದರ ಕುರಿತು ವಿಚಾರ ವಿನಿಮಯ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ನಮ್ಮ ನೆಲದ ಇಂಚು ಭೂಮಿಯನ್ನೂ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಸರ್ಕಾರ ತಮಿಳುನಾಡಿನ ಯೋಜನೆಗೆ ವಿರೋಧಿಸುತ್ತಲೇ ಇದೆ. ಹೊಗೇನಕಲ್ ಅನ್ನು ನಮ್ಮದಾಗೇ ಉಳಿಸಿಕೊಳ್ಳಲು ಎಲ್ಲ ಪ್ರಯತ್ನಗಳನ್ನೂ ಮಾಡುತ್ತೇವೆ.
ನಲ್ನುಡಿ: ನಿಮ್ಮ ಸರ್ಕಾರಕ್ಕೆ ಕನ್ನಡ ಹೋರಾಟಗಾರರ ಮೇಲೇಕೆ ಮುನಿಸು? ರೈತ ಸಂಘಟನೆಗಳ ಮೇಲಿದ್ದ ಹೋರಾಟದ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆದಿರಿ, ಭಜರಂಗದಳ-ಶ್ರೀರಾಮಸೇನೆಗಳ ಮೇಲಿದ್ದ ಗಲಾಟೆ-ದೊಂಬಿ ಪ್ರಕರಣಗಳನ್ನು ಹಿಂದಕ್ಕೆ ಪಡೆದಿರಿ. ರಾಜಕೀಯ ನಾಯಕರ ಕ್ರಿಮಿನಲ್ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆದಿರಿ. ಕನ್ನಡ ಹೋರಾಟಗಾರರ ಮೇಲಿನ ಚಳವಳಿಯ ಪ್ರಕರಣಗಳನ್ನು ಯಾಕೆ ಹಿಂದಕ್ಕೆ ಪಡೆಯುತ್ತಿಲ್ಲ?
ಅಶೋಕ್: ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪನವರು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಓದಿದವರಲ್ಲ. ಸಹಿಯನ್ನೂ ಕೂಡ ಅವರು ಕನ್ನಡದಲೇ ಮಾಡುತ್ತಾರೆ. ಇಂಗ್ಲಿಷ್ ವ್ಯಾಮೋಹ ಅವರಿಗಿಲ್ಲ. ಅವರಿಗೆ ಬೇರೆ ಭಾಷೆಗಳನ್ನು ಮಾತನಾಡಲು ಬರೋದೂ ಇಲ್ಲ. ಬೇರೆ ಮುಖ್ಯಮಂತ್ರಿಗಳು ಸಂದರ್ಭ ಬಂದಾಗ ಇಂಗ್ಲಿಷ್‌ನಲ್ಲಿ ಮಾತನಾಡುತ್ತಿದ್ದರು. ಆದರೆ ನಮ್ಮ ಮುಖ್ಯಮಂತ್ರಿಗಳು ಕನ್ನಡದಲ್ಲೇ ಮಾತನಾಡುತ್ತಾರೆ. ಹೀಗಿರುವಾಗ ಅವರು ಕನ್ನಡ ವಿರೋಧಿ ಹೇಗಾಗುತ್ತಾರೆ?
ನಲ್ನುಡಿ: ‘ಕನ್ನಡ ವಿರೋಧಿ ಅಂತಲ್ಲ ಹೇಳಿದ್ದು, ಕನ್ನಡ ಸಂಘಟನೆಗಳ ಮೇಲೆ ಯಾಕೆ ಮುನಿಸು ಅಂತ?
ಅಶೋಕ್: (ಸ್ವಲ್ಪ ಹೊತ್ತು ಸುಮ್ಮನಿದ್ದು) ಕನ್ನಡ ಸಂಘಟನೆಗಳ ಮೇಲಿರುವ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯಿರಿ ಅಂತ ಮುಖ್ಯಮಂತ್ರಿಗಳನ್ನು ಮನವಿ ಮಾಡುತ್ತೇನೆ.
ನಲ್ನುಡಿ: ಕಡೆಯದಾಗಿ ಒಂದು ಪ್ರಶ್ನೆ, ನಿಮಗೆ ಮುಖ್ಯಮಂತ್ರಿಯಾಗುವ ಆಸೆಯಿದೆಯೇ?
ಅಶೋಕ್: (ನಕ್ಕು) ಈ ಪ್ರಶ್ನೆಯನ್ನು ಕೇಳೇ ಇಲ್ಲ ಅಂದುಕೊಂಡುಬಿಡಿ!!! (ಮತ್ತೆ ನಗು)
(ಅಶೋಕ್ ಅವರ ನಗು ನೂರಾರು ಅರ್ಥಗಳನ್ನು ಧ್ವನಿಸುತ್ತಿತ್ತು.)

ಕರ್ನಾಟಕ ಮಾರಾಟಕ್ಕಿದೆ!




ದಿನೇಶ್‌ಕುಮಾರ್ ಎಸ್.ಸಿ.

ಕರ್ನಾಟಕವನ್ನು ಸಾರಾಸಗಟಾಗಿ ಹರಾಜಿಗೆ ಇಡಲೆಂದೇ ಜೂನ್ ೩ ಮತ್ತು ೪ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆದಿದೆ. ಸಾಮಾನ್ಯ ಜನರು ಕೊಡುವ ತೆರಿಗೆಯಿಂದಲೇ ಸಂಗ್ರಹಿಸಿದ ಸರಿಸುಮಾರು ಸಾವಿರ ಕೋಟಿ ರೂ.ಗಳನ್ನು ಬಂಡವಾಳ ಹೂಡಲು ಬರುವ ಧಣಿಗಳಿಗೆಂದು ವೆಚ್ಚ ಮಾಡಲಾಗಿದೆ. ಕರ್ನಾಟಕದ ನೆಲ, ಜಲ, ವಿದ್ಯುತ್ ಎಲ್ಲವನ್ನು ಬಹುರಾಷ್ಟ್ರೀಯ ಕಂಪೆನಿಗಳಿಗೆ, ಕಾರ್ಪರೇಟ್ ಸಂಸ್ಥೆಗಳಿಗೆ ಧಾರೆ ಎರೆದಿರುವ ಯಡಿಯೂರಪ್ಪ ಸರ್ಕಾರ ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ಮಾಡುತ್ತೇವೆ ಎಂದು ಹೇಳುತ್ತಿದೆ.
ಏನಿದು ಜಾಗತಿಕ ಹೂಡಿಕೆದಾರರ ಸಮಾವೇಶ:
ಸುಮಾರು ನಾಲ್ಕು ಲಕ್ಷ ಕೋಟಿ ರೂ. ಬಂಡವಾಳ ನಿರೀಕ್ಷೆ ಇಟ್ಟುಕೊಂಡಿರುವ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಸರ್ಕಾರ ಖರ್ಚು ಮಾಡಿರುವುದು ಸರಿಸುಮಾರು ಒಂದು ಸಾವಿರ ಕೋಟಿ. ಕೇವಲ ವೇದಿಕೆ ನಿರ್ಮಾಣಕ್ಕೆ ಹಲವಾರು ಕೋಟಿ ರೂ.ಗಳನ್ನು ವ್ಯಯಿಸಲಾಗಿದೆ ಎಂದರೆ, ಸಮಾವೇಶದ ಭರ್ಜರಿ ಬಜೆಟ್ ಅರ್ಥವಾಗುತ್ತದೆ. ವಿವಿಧೆಡೆಯಿಂದ ಬಂದಿರುವ ಬಂಡವಾಳ ಹೂಡಿಕೆದಾರರಿಗೆ, ಅವರ ಏಜೆಂಟರಿಗೆ, ಪಂಚತಾರಾ ಸೌಲಭ್ಯದ ಹೋಟೆಲ್‌ಗಳನ್ನೇ ವಾರಗಟ್ಟಲೆ ಕಾದಿರಿಸಲಾಗಿತ್ತು. ವಿಶ್ವದ ಹಲವು ಪ್ರಮುಖ ನಗರಗಳಲ್ಲಿ ರಾಜ್ಯ ಸರ್ಕಾರ ನಡೆಸಿರುವ ರೋಡ್ ಶೋ ನೆಪದಲ್ಲಿ ಹಲವಾರು ಕೋಟಿ ರೂ.ಗಳು ಹರಿದು ಹೋಗಿವೆ. ಕೇವಲ ಮಾಧ್ಯಮ ಸಲಹೆಗಾಗಿ ಇಟ್ಟುಕೊಂಡಿರುವ, ಕೆಲಸವೇ ಮಾಡದ ಏಜೆನ್ಸಿಯೊಂದಕ್ಕೆ ಕೊಟ್ಟಿರುವುದು ಎರಡು ಕೋಟಿ ರೂ.!
ವಿಶೇಷವೆಂದರೆ, ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೂ ಮುನ್ನವೇ ಸರ್ಕಾರ ಹಲವು ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಕೆಲವು ಸಂಸ್ಥೆಗಳಿಗಾಗಿ ರೈತರ ಜಮೀನನ್ನು ಭೂ ಸ್ವಾಧೀನಗೊಳಿಸಿಕೊಳ್ಳುವ ಪ್ರಕ್ರಿಯೆಯೂ ಮುಗಿದಿದೆ. ಉದಾಹರಣೆಗೆ, ಭೂ ಸ್ವಾಧೀನಕ್ಕೆಂದೇ ಮಿತ್ತಲ್ ಸಂಸ್ಥೆ ಈಗಾಗಲೇ ೨೦೬ಕೋಟಿ ರೂ. ಪಾವತಿಸಿದೆ. ಬಳ್ಳಾರಿಯಲ್ಲಿ ೬೦ದಶಲಕ್ಷ ಟನ್ ಉಕ್ಕು ಉತ್ಪಾದನಾ ಘಟಕ ಸ್ಥಾಪಿಸುತ್ತಿರುವ ಮಿತ್ತಲ್, ೪,೮೦೦ ಎಕರೆ ಪ್ರದೇಶದಲ್ಲಿ ೩೨ಸಾವಿರ ಕೋಟಿ ರೂ. ಬಂಡವಾಳ ಹೂಡುತ್ತಿದೆ.
ಮೊದಲೇ ಒಪ್ಪಂದಗಳನ್ನು ಮಾಡಿಕೊಂಡಿದ್ದರೆ, ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದ ಅಗತ್ಯತೆಯಾದರೂ ಏನಿತ್ತು ಎಂಬ ಪ್ರಶ್ನೆಗೆ ಮುಖ್ಯಮಂತ್ರಿ ಯಡಿಯೂರಪ್ಪ, ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿಯವರೇ ಉತ್ತರಿಸಬೇಕು.
ಸಮಾವೇಶದ ಹೆಸರಿನಲ್ಲಿ ನೂರಾರು ಕೋಟಿ ರೂ. ಲೂಟಿಯಾಗುತ್ತಿರುವುದಂತೂ ನಿಜ. ಈ ಪೈಕಿ ಸಾಕಷ್ಟು ಹಣ ರಾಜಕಾರಣಿಗಳ ಕೈಗೆ, ಅಧಿಕಾರಿಗಳ ಕೈಗೆ ಸೇರಿಹೋಗಿವೆ. ಸಾಧನೆಗಳೇ ಇಲ್ಲದ ಸರ್ಕಾರಕ್ಕೆ ಸಮಾವೇಶದ ಹೆಸರಿನಲ್ಲಿ ’ಅಭಿವೃದ್ಧಿಯ ಹರಿಕಾರ’ ಎಂಬ ಬಿರುದು ಬೇಕಿತ್ತು. ಲೂಟಿಕೋರರಿಗೆ ಹಣ ದೋಚುವ ಸಂದರ್ಭವೂ ಸೃಷ್ಟಿಯಾಗಬೇಕಿತ್ತು. ಈ ಹಿನ್ನೆಲೆಯಲ್ಲೇ ಸಮಾವೇಶ ನಡೆಯಿತು.
ಏನಿದರ ಪರಿಣಾಮ:
ಬಂಡವಾಳ ಹೂಡಿಕೆಯನ್ನು ಬಹುದೊಡ್ಡ ಸಾಧನೆಯೆಂದು ಬಿಂಬಿಸಿಕೊಳ್ಳುತ್ತಿರುವ ಸರ್ಕಾರಕ್ಕೆ ಜಾಗತಿಕ ಬಂಡವಾಳ ಹೂಡಿಕೆದಾರರ ಅಸಲಿ ಸ್ವರೂಪ ಗೊತ್ತಿಲ್ಲವೆಂದೇನಿಲ್ಲ. ೯೦ರ ದಶಕದಿಂದ ಈಚೆಗೆ ಬಂಡವಾಳ ಹೂಡಿಕೆಯ ನೆಪದಲ್ಲಿ ಬಂದ ಸಂಸ್ಥೆಗಳಿಗೆ ಕೊಡಲಾದ ಜಮೀನೆಷ್ಟು, ಇದರಿಂದಾಗಿ ಭೂಮಿ ನೀಡಿ ದಿಕ್ಕು ದೆಸೆ ಕಳೆದುಕೊಂಡ ರೈತರ ಪಾಡೇನಾಗಿ ಹೋಗಿದೆ? ಈ ಸಂಸ್ಥೆಗಳು ಸರೋಜಿನಿ ಮಹಿಷಿ ವರದಿಯಂತೆ ಸ್ಥಳೀಯರಿಗೆ ಅರ್ಥಾತ್ ಕನ್ನಡಿಗರಿಗೆ ಉದ್ಯೋಗ ನೀಡಿವೆಯೇ? ಈ ನಾಡಿನ ಭೂಮಿ, ನೀರು, ವಿದ್ಯುತ್ ಬಳಸಿಕೊಂಡು ನೂರಾರು ಕೋಟಿ ರೂ. ಗಳಿಸುತ್ತಿರುವ ಸಂಸ್ಥೆಗಳಿಗೆ ರಾಜ್ಯ ಸರ್ಕಾರ ನೀಡಿರುವ ಕೊಡುಗೆಗಳಿಗೆ ತಕ್ಕಂತೆ ಅವು ನಡೆದುಕೊಂಡಿವೆಯೇ?
ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಹುಡುಕುತ್ತಾ ಹೊರಟರೆ ನಿರಾಶೆಯೇ ಕಾದಿದೆ. ಈ ಆಧುನಿಕ ಈಸ್ಟ್ ಇಂಡಿಯಾ ಕಂಪೆನಿಗಳು ಕನ್ನಡಿಗರ ಬದುಕನ್ನೇ ಕಿತ್ತುಕೊಂಡಿದೆ. ಭೂಮಿ ಕೊಟ್ಟ ರೈತರು ಬೀದಿಪಾಲಾಗಿದ್ದಾರೆ. ಅವರದೇ ಭೂಮಿಯಲ್ಲಿ ನಡೆಯುತ್ತಿರುವ ಸಂಸ್ಥೆಗಳಲ್ಲಿ ನಾಲ್ಕನೇ ದರ್ಜೆ ನೌಕರಿಯು ಅವರಿಗೆ ಕೊಡಲಾಗಿಲ್ಲ. ಇನ್ನು ಸ್ಥಳೀಯರಿಗೆ ಉದ್ಯೋಗವಂತೂ ಇಲ್ಲವೇ ಇಲ್ಲ. ಹೊರರಾಜ್ಯಗಳಿಂದ ಗುತ್ತಿಗೆ ಆಧಾರದಲ್ಲಿ ನೌಕರರನ್ನು ಆಮದು ಮಾಡಿಕೊಳ್ಳುವ ಈ ಸಂಸ್ಥೆಗಳು ಎಲ್ಲರನ್ನು ವಂಚಿಸುತ್ತಿದೆ.
ಬಂಡವಾಳ ಹೂಡಿಕೆದಾರರ ಸಮಾವೇಶದ ಹೆಸರಿನಲ್ಲಿ ರಾಜ್ಯವನ್ನು ಪ್ರವೇಶಿಸಿರುವ ಬೃಹತ್ ಸಂಸ್ಥೆಗಳು ಮಾಡುವುದೂ ಇದನ್ನೇ.
ಸುಳ್ಳುಗಳ ಮಹಾಪೂರ:ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಸಚಿವ ಸಂಪುಟದ ಸಹೋದ್ಯೋಗಿಗಳೆಲ್ಲಾ ಸುಳ್ಳಿನ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಕೃಷಿ ಯೋಗ್ಯ ಜಮೀನು ಭೂಸ್ವಾಧೀನಗೊಳಿಸುವುದಿಲ್ಲವೆಂದು ಅವರು ಮೇಲಿಂದ ಮೇಲೆ ಹೇಳುತ್ತಿದ್ದಾರೆ. ಸುಮಾರು ಒಂದು ಲಕ್ಷ ಎಕರೆ ಜಮೀನನ್ನು ಈ ಸಂಸ್ಥೆಗಳಿಗೆ ನೀಡಲಾಗುತ್ತಿದೆ. ಒಂದು ಲಕ್ಷ ಎಕರೆ ಬಂಜರು ಜಮೀನನ್ನು ಮುಖ್ಯಮಂತ್ರಿಗಳು ಎಲ್ಲಿಂದ ಹುಡುಕುತ್ತಾರೆ? ಪ್ರತಿ ಬಾರಿ ಭೂ ಸ್ವಾಧೀನ ಮಾಡಿಕೊಂಡಾಗಲೂ ಈ ಹಿಂದೆಲ್ಲಾ ಕೃಷಿ ಭೂಮಿಯನ್ನೇ ಪಡೆಯಲಾಗಿದೆ ಎಂಬುದು ಸತ್ಯ. ಈ ಬಾರಿಯೂ ಅದೇ ಆಗುತ್ತದೆ.
ಭೂಮಿ ಕಳೆದುಕೊಂಡವರಿಗೆ ಅಲ್ಲಿ ಸ್ಥಾಪನೆಯಾಗುವ ಉದ್ದಿಮೆಯ ಶೇರುಗಳನ್ನು ನೀಡಲಾಗುವುದು ಎಂಬುದು ಕೈಗಾರಿಕಾ ಮಂತ್ರಿಗಳ ಹೇಳಿಕೆ. ಇದಂತೂ ಮೂಗಿಗೆ ತುಪ್ಪ ಸವರುವ ಕಾರ್ಯ. ಹೀಗೆ ಶೇರುಗಳನ್ನು ಕೊಡುವ ವಿಷಯ ಸಂಸ್ಥೆಗಳೊಂದಿಗೆ ಮಾಡಿಕೊಂಡ ಒಪ್ಪಂದದಲ್ಲಿ ಸೇರಿಸಲಾಗಿದೆಯೇ ಎಂಬ ಪ್ರಶ್ನೆಗೆ ಕೈಗಾರಿಕಾ ಸಚಿವರು ಉತ್ತರಿಸಬೇಕಾಗುತ್ತದೆ. ಅದೇ ರೀತಿ ಎಷ್ಟು ಶೇರುಗಳನ್ನು ನೀಡಲಾಗುವುದು ಅವುಗಳ ಮೌಲ್ಯ ಏನು ಎಂಬುದನ್ನು ಸಹ ಖಚಿತಗೊಳಿಸಬೇಕಾಗಿದೆ.
ವಿದ್ಯುತ್ ಹೇಗೆ ಒದಗಿಸುತ್ತಾರೆ?
ವಿದ್ಯುತ್ ಕ್ಷಾಮದ ಈ ದಿನಗಳಲ್ಲಿ ಹಳ್ಳಿಗಳಿಗಂತೂ ಅಕ್ಷರಶಃ ವಿದ್ಯುತ್ ಪೂರೈಕೆಯೇ ನಿಂತು ಹೋಗಿದೆ. ನಗರಗಳಲ್ಲಿ ದಿನಕ್ಕೆ ೧೨ಗಂಟೆ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ. ಬೆಂಗಳೂರು ಮಹಾನಗರದಲ್ಲೇ ಲೋಡ್ ಶೆಡ್ಡಿಂಗ್ ಹಾವಳಿಯಿಂದಾಗಿ ಜನ ಪರದಾಡುವಂತಾಗಿದೆ. ಆದರೂ, ಸರ್ಕಾರ ಬಂಡವಾಳ ಹೂಡುವ ಸಂಸ್ಥೆಗಳಿಗೆ ಅವರು ಕೇಳಿದಷ್ಟು ವಿದ್ಯುತ್ ರಿಯಾಯಿತಿ ದರದಲ್ಲಿ ನೀಡುತ್ತದೆ. ಈ ಸಂಸ್ಥೆಗಳಿಗೆ ಕೊಟ್ಟು ಉಳಿದ ವಿದ್ಯುತ್ ಜನ ಸಾಮಾನ್ಯರ ಪಾಲಿಗೆ!
ಒಂದು ಲಕ್ಷ ಎಕರೆ ಭೂಮಿ ಭೂಸ್ವಾಧೀನ ಪಡಿಸಿಕೊಳ್ಳುವಾಗ ರೈತರಿಗೆ ಮಾರುಕಟ್ಟೆ ದರದಲ್ಲಿ ಪರಿಹಾರ ನೀಡಲಾಗುತ್ತವೆಯೇ ಅಥವಾ ಸರ್ಕಾರ ನಿಗದಿಪಡಿಸುವ ಬೆಲೆಯನ್ನು ನೀಡಲಾಗುತ್ತದೆಯೇ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಿಲ್ಲ. ಅದರ ಅರ್ಥ ಕವಡೆ ಕಾಸು ಕೊಟ್ಟು ರೈತರಿಂದ ಜಮೀನು ಕಿತ್ತುಕೊಳ್ಳುವ ಹುನ್ನಾರ ನಡೆದಿದೆ. ಸಾವಿರಾರು ಉದ್ಯೋಗಗಳು ಸೃಷ್ಟಿಯಾಗುತ್ತವೆ ಎಂದು ಸರ್ಕಾರದ ವಕ್ತಾರರು ಹೇಳಿಕೊಳ್ಳುತ್ತಿದ್ದಾರೆ ಆದರೆ, ಈ ಉದ್ಯೋಗಗಳಾವುದೂ ನಮ್ಮ ಪಾಲಿಗೆ ಉಳಿದಿರುವುದಿಲ್ಲ. ಯಥಾ ಪ್ರಕಾರ ಹೊರರಾಜ್ಯಗಳಿಂದಲೇ ಉದ್ಯೋಗಿಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ.
ಸ್ಥಳೀಯರಿಗೆ ಉದ್ಯೋಗ ನೀಡಿದರೆ, ಅವರು ತಿರುಗಿ ಬೀಳಬಹುದು, ಮುಷ್ಕರ ಹೂಡಬಹುದು, ಹಕ್ಕುಗಳಿಗಾಗಿ ಹೋರಾಡಬಹುದು ಎಂಬ ಆತಂಕ ಈ ಕಂಪೆನಿಗಳದು. ಹೀಗಾಗಿಯೇ ಅವರು ಸ್ಥಳೀಯರನ್ನು ಯಾವುದೇ ಕಾರಣಕ್ಕೂ ನೇಮಕಾತಿ ಮಾಡಿಕೊಳ್ಳುವುದಿಲ್ಲ.
ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎಂಬ ಅಂಶವನ್ನು ಸರ್ಕಾರ ಯಾವುದೇ ಸಂಸ್ಥೆಯೊಂದಿಗೆ ಮಾಡಿಕೊಳ್ಳುವ ಒಪ್ಪಂದದಲ್ಲಿ ಪ್ರಸ್ತಾಪಿಸುತ್ತಿಲ್ಲ. ಇದು ನಾಡಿಗೆ ಮಾಡುವ ದ್ರೋಹ. ಡಾ.ಸರೋಜಿನಿ ಮಹಿಷಿ ವರದಿ ಪ್ರಕಾರ ಖಾಸಗಿ ಸಂಸ್ಥೆಗಳು ಸಹ ಶೇ.೮೫ರಷ್ಟು ಉದ್ಯೋಗ ನೀಡಬೇಕು. ಹಾಗೆ ಸ್ಥಳೀಯರಿಗೂ ಉದ್ಯೋಗ ನೀಡುವಂತೆ ರಾಜ್ಯ ಸರ್ಕಾರ ತಾಕೀತು ಮಾಡಬೇಕು. ಆದರೆ, ಸರ್ಕಾರ ಇದನ್ನು ಮಾಡುತ್ತಿಲ್ಲ.
ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಎಂಬ ದಂಧೆ:
ರಾಜ್ಯ ಸರ್ಕಾರ ಪದೇ ಪದೇ ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಎಂಬ ಪದಪುಂಜವನ್ನು ಬಳಸುತ್ತಿದೆ. ಇದರ ಆಳಕ್ಕೆ ಇಳಿದು ನೋಡಿದರೆ, ವಿಧಾನಸೌಧವೊಂದನ್ನು ಹೊರತುಪಡಿಸಿ ಇಡೀ ಸರ್ಕಾರಿ ಅವಯವಗಳನ್ನೇ ಮಾರಾಟಕ್ಕೆ ಇಡಲಾಗಿದೆಯೇನೋ ಎಂಬ ಸಂಶಯಗಳು ವ್ಯಕ್ತವಾಗುತ್ತಿದೆ.
ಪಿಪಿಪಿ(ಪಬ್ಲಿಕ್ ಪ್ರೈವೇಟ್ ಪಾರ್ಟನರ್‌ಶಿಪ್) ಹೆಸರಿನಲ್ಲಿ ಗ್ರಾಮೀಣ ರಸ್ತೆಗಳ ನಿರ್ವಹಣೆ ಮತ್ತು ದುರಸ್ಥಿ ಕಾರ್ಯವನ್ನು ನಡೆಸಲು ಸಂಚು ನಡೆದಿದೆ. ಗ್ರಾಮೀಣ ರಸ್ತೆಗಳ ನಿರ್ವಹಣೆ ಮತ್ತು ನಿಯಂತ್ರಣವನ್ನು ಖಾಸಗಿ ಸಂಸ್ಥೆಗಳಿಗೆ ನೀಡುವ ಮೂಲಕ ಹಳ್ಳಿಯ ಜನರಿಂದಲೂ ಶುಲ್ಕಗಳನ್ನು (ಟೋಲ್) ಸಂಗ್ರಹಿಸುವ ಕುತಂತ್ರ ರೂಪಿಸಲಾಗುತ್ತಿದೆ.
ಗ್ರಾಮೀಣ ಕೆರೆಗಳ ಅಭಿವೃದ್ಧಿಯನ್ನೂ ಪಿಪಿಪಿ ಅನ್ವಯ ಖಾಸಗಿ ಸಂಸ್ಥೆಗಳಿಗೆ ಒಪ್ಪಿಸುವ ಹುನ್ನಾರ ನಡೆಯುತ್ತಿದೆ. ’ಹೊಳೆನೀರು ಕುಡಿಯಲು ದೊಣ್ಣೆನಾಯಕನ ಅಪ್ಪಣೆ ಬೇಕೇ?’ ಎಂಬುದು ಚಾಲ್ತಿಯಲ್ಲಿರುವ ಗಾದೆಮಾತು. ಆದರೆ, ಈ ಗಾದೆಯನ್ನೇ ಸುಳ್ಳು ಮಾಡುವಂತೆ ನಮ್ಮ ಹಳ್ಳಿಯ ಜನ ತಮ್ಮ ಊರಿನ ಕೆರೆಯ ನೀರನ್ನು ಬಳಸಲು ಖಾಸಗಿ ದೊಣ್ಣೆನಾಯಕರಿಗೆ ಕಪ್ಪ ಕೊಟ್ಟು, ಅನುಮತಿ ಪಡೆಯಬೇಕು.
ರಾಜ್ಯದ ಎಲ್ಲಾ ಗ್ರಾಮಗಳ ಕುಡಿಯುವ ನೀರು ಸರಬರಾಜು ಯೋಜನೆಯನ್ನೂ ಸಹ ಪಿಪಿಪಿ ಅನ್ವಯ ನಡೆಸಲು ಉದ್ದೇಶಿಸಲಾಗುತ್ತಿದೆ. ಅದರರ್ಥ ಹಳ್ಳಿಗಳಲ್ಲೂ ಇನ್ನು ಮುಂದೆ ದುಬಾರಿ ಹಣ ತೆತ್ತು ನೀರು ಪಡೆಯಬೇಕಾಗುತ್ತದೆ. ಗ್ರಾಮೀಣ ಬಡವರಿಗೆ ಸರ್ಕಾರದ ವಿವಿಧ ಯೋಜನೆಗಳಡಿಯಲ್ಲಿ ಮನೆಗಳನ್ನು ಕಟ್ಟಿಕೊಡಲಾಗುತ್ತಿತ್ತು. ಅದನ್ನು ಸಹ ಪಿಪಿಪಿ ಮೂಲಕ ಮಾಡಲು ಸರ್ಕಾರ ಹೊರಟಿದೆ. ಇನ್ನು ಮುಂದೆ ಹೀಗೆ ಕಟ್ಟಿಕೊಡಲಾದ ಮನೆಗಳಿಗೆ ಗ್ರಾಮೀಣ ಬಡವರು ಕಂತುಗಳ ಮೂಲಕ ಹಣ ಪಾವತಿಸಬೇಕಿದೆ.
ಇನ್ನು ನಗರ ಪ್ರದೇಶಗಳಲ್ಲೂ ಇದೇ ಅಪಾಯ ಪಿಪಿಪಿಯಿಂದ ಆಗುತ್ತಿದೆ. ಕರ್ನಾಟಕದ ಎಲ್ಲಾ ನಗರಗಳ ಕುಡಿಯುವ ನೀರು ಸರಬರಾಜು ಮತ್ತು ನಿರ್ವಹಣೆಯನ್ನು ಖಾಸಗಿ ಸಂಸ್ಥೆಗಳಿಗೆ ವಹಿಸಲು ಎಲ್ಲಾ ಸಿದ್ಧತೆಗಳು ನಡೆದಿವೆ. ಇನ್ನು ಮುಂದೆ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ನಗರಗಳ ನಾಗರಿಕರು ಈಗ ಪಾವತಿಸುತ್ತಿರುವ ಹಣಕ್ಕಿಂತ ಹತ್ತು ಪಟ್ಟು ಹಣವನ್ನು ಕುಡಿಯುವ ನೀರಿಗಾಗಿ ಖಾಸಗಿ ಸಂಸ್ಥೆಗಳಿಗೆ ಕೊಡಬೇಕಾಗಿದೆ.
ನಗರಗಳಲ್ಲಿ ಸರ್ಕಾರವೇ ತನ್ನ ವಿವಿಧ ಸಂಸ್ಥೆಗಳ ಮೂಲಕ ನಿರ್ಮಿಸುತ್ತಿದ್ದ ಮೇಲ್ಸೇತುವೆಗಳು, ಕೆಳಸೇತುವೆಗಳು ಇನ್ನು ಮುಂದೆ ಖಾಸಗಿಯವರ ಪಾಲಾಗಲಿವೆ. ಅದರರ್ಥ ನಗರಗಳಲ್ಲಿ ಓಡಾಡುವ ಜನ ಪ್ರತಿನಿತ್ಯ ಸುಂಕ ಕಟ್ಟಿ ಪ್ರಯಾಣ ಮಾಡಬೇಕು. ಪಾದಚಾರಿ ರಸ್ತೆ(ಫುಟ್ ಪಾತ್)ಗಳನ್ನು ಅಭಿವೃದ್ಧಿ ಪಡಿಸಿ ಅವುಗಳ ಮೇಲೆ ಓಡಾಡುವ ಜನರಿಂದಲೂ ಸುಂಕ ಪಡೆಯಲು ಸರ್ಕಾರ ಖಾಸಗಿ ಸಂಸ್ಥೆಗಳಿಗೆ ಅನುಮತಿ ನೀಡಲು ಮುಂದಾಗಿದೆ. ಅಂದರೆ, ನಗರಗಳಲ್ಲಿ ನಡೆದಾಡಲು ಸಹ ಹಣ ಕಟ್ಟಬೇಕಿದೆ.
ಸರ್ಕಾರಿ ಶಾಲೆ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳನ್ನು ಸಹ ಖಾಸಗಿ ಸಹಭಾಗಿತ್ವದ ಹೆಸರಿನಲ್ಲಿ ಅಭಿವೃದ್ಧಿ ಪಡಿಸುವ, ಅಂತಿಮವಾಗಿ ಅವುಗಳ ನಿಯಂತ್ರಣ ಹಾಗೂ ನಿರ್ವಹಣೆಯನ್ನು ಖಾಸಗಿ ವ್ಯಕ್ತಿಗಳಿಗೆ ಒಪ್ಪಿಸುವ ಹುನ್ನಾರವೂ ನಡೆದಿದೆ. ಈ ಹಿನ್ನೆಲೆಯಲ್ಲೇ ನಗರಾಭಿವೃದ್ಧಿ ಸಚಿವ ಸುರೇಶ್ ಕುಮಾರ್ ಇತ್ತೀಚೆಗೆ ಹೇಳಿಕೆ ನೀಡಿ, ಪಾಲಿಕೆ ಶಾಲೆಗಳಲ್ಲೂ ಸಿಬಿಎಸ್‌ಇ ಪದ್ಧತಿ ಅಳವಡಿಸಲಾಗುವುದು ಎಂದು ಹೇಳಿದ್ದರು. ಇನ್ನು ಬಡಮಕ್ಕಳಿಗೆ ಶಿಕ್ಷಣ ಕನಸಿನ ಗಂಟು. ಸರ್ಕಾರಿ ಶಾಲೆಗಳೂ ಖಾಸಗಿ ಒಡೆತನಕ್ಕೆ ಹೋಗುವುದರಿಂದ ದುಬಾರಿ ಶುಲ್ಕ ನೀಡಬೇಕಾಗುತ್ತದೆ. ಶುಲ್ಕ ನೀಡುವ ಶಕ್ತಿ ಇಲ್ಲದ ಬಡ ಮಕ್ಕಳಿಗೆ ಶಿಕ್ಷಣ ದೊರೆಯುವುದೆಂತು?
ನಗರಗಳ ಉದ್ಯಾನವನಗಳು ಸಹ ಪಿಪಿಪಿ ಅಡಿಯಲ್ಲಿ ಖಾಸಗಿ ಸಂಸ್ಥೆಗಳ ತೆಕ್ಕೆಗೆ ಸಿಲುಕುತ್ತಿವೆ. ಈ ಉದ್ಯಾನವನಗಳನ್ನು ಅಭಿವೃದ್ಧಿ ಪಡಿಸುವ ಹೆಸರಿನಲ್ಲಿ ಅವುಗಳ ನಿರ್ವಹಣೆಯನ್ನು ಪಡೆಯಲಿರುವ ಖಾಸಗಿ ಸಂಸ್ಥೆಗಳು ಉದ್ಯಾನದಲ್ಲಿ ನಡಿಗೆಗೆ (ವಾಕಿಂಗ್) ಬರುವ ನಾಗರಿಕರಿಂದಲೂ ಶುಲ್ಕ ಪಡೆಯಲಿವೆ.
ಇನ್ನೂ ಬಸ್ ನಿಲ್ದಾಣಗಳನ್ನು ನವೀಕರಿಸುವ ಹೆಸರಿನಲ್ಲಿ ಖಾಸಗಿ ಸಂಸ್ಥೆಗಳು ಅಲ್ಲಿಗೂ ಲಗ್ಗೆ ಹಾಕಲಿವೆ. ಬಸ್ ಪ್ರಯಾಣಿಕನಿಗೆ ಪ್ರಯಾಣ ದರದ ಹೊರೆಯನ್ನೇ ಹೊರಲಾಗುತ್ತಿಲ್ಲ. ಇದೀಗ ಬಸ್ ನಿಲ್ದಾಣ ಪ್ರವೇಶಕ್ಕೂ ಶುಲ್ಕ ಕಟ್ಟಬೇಕಾಗುತ್ತದೆ.
ಇಂತಹ ನೂರಾರು ಪ್ರಸ್ತಾಪಗಳು ಸರ್ಕಾರದ ಮುಂದಿವೆ. ಇಂತಹ ಮನೆಹಾಳು ಪ್ರಸ್ತಾಪಗಳನ್ನು ಇಟ್ಟುಕೊಂಡು ಬಂದಿರುವವರನ್ನೇ ರಾಜ್ಯಸರ್ಕಾರ ರಾಜಾತಿಥ್ಯ ನೀಡಿ ಸಮಾವೇಶ ನಡೆಸಿದೆ. ಅವರೆಲ್ಲಾ ಬೇಡಿಕೆಗಳಿಗೂ ಒಪ್ಪಿ ಕರ್ನಾಟಕ ರಾಜ್ಯವನ್ನೂ ಅಕ್ಷರಶಃ ಮಾರಾಟಕ್ಕೆ ಇಟ್ಟಿದೆ.
ರಸ್ತೆ, ನೀರು, ಮನೆ, ಆಸ್ಪತ್ರೆ, ಶಿಕ್ಷಣ, ವಸತಿ, ಪ್ರವಾಸೋದ್ಯಮ, ಸಾರಿಗೆ, ಕೈಗಾರಿಕೆ ಮುಂತಾದ ಎಲ್ಲವನ್ನು ಖಾಸಗಿಯವರಿಗೆ ಒಪ್ಪಿಸುವುದಾದರೆ ಸರ್ಕಾರವಾದರೂ ಯಾಕಿರಬೇಕು? ಕರ್ನಾಟಕ ರಾಜ್ಯದೊಳಗೆ ಟೌನ್‌ಶಿಪ್‌ಗಳ ಹೆಸರಿನಲ್ಲಿ ಯಾರ ಅಂಕೆಗೂ ಸಿಗದ ಹೊಸ ಹೊಸ ರಾಜ್ಯಗಳನ್ನು ನಿರ್ಮಿಸುವ ಅಧಿಕಾರವನ್ನೂ ಈ ಸರ್ಕಾರಕ್ಕೆ ಕೊಟ್ಟವರ‍್ಯಾರು? ಸುಮಾರು ೨ಲಕ್ಷ ಎಕರೆ ಕೃಷಿ ಭೂಮಿಯನ್ನು ಕಿತ್ತುಕೊಳ್ಳುವುದರ ಪರಿಣಾಮವಾಗಿ ಕೃಷಿಕರ ಪಾಡೇನಾಗಬೇಕು? ಕೃಷಿಯನ್ನು ಅವಲಂಬಿಸಿರುವ ಇತರ ಕಸುಬುಗಳನ್ನು ಮಾಡುವ ಲಕ್ಷಾಂತರ ಕುಶಲಕರ್ಮಿಗಳ ಜೀವನವನ್ನು ಕಟ್ಟಿಕೊಡುವವರ‍್ಯಾರು? ಕೃಷಿಕರನ್ನೇ ನಂಬಿರುವ ಕೃಷಿ ಕೂಲಿ ಕಾರ್ಮಿಕರು ಕೆಲಸಕ್ಕಾಗಿ ಎಲ್ಲಿಗೆ ಹೋಗಬೇಕು?
ಸುಮಾರು ೨೭೫ಕ್ಕೂ ಹೆಚ್ಚು ಹಳ್ಳಿಗಳು ಬಂಡವಾಳ ಹೂಡಿಕೆದಾರರಿಗಾಗಿ ಸ್ಥಳಾಂತರಗೊಳ್ಳುತ್ತಿವೆ. ಈ ಹಳ್ಳಿಗಳ ಜನಸಂಸ್ಕೃತಿ, ಅವರ ಕಲೆ-ಸಾಹಿತ್ಯ, ಈ ಹಳ್ಳಿಗಳ ಜನ ರೂಢಿಸಿಕೊಂಡು ಬಂದ ಜ್ಞಾನ ಪರಂಪರೆಗಳು ಸರ್ವನಾಶವಾಗುತ್ತವೆ. ಅವುಗಳ ಬಗ್ಗೆ ಯಾರಿಗೆ ಕಾಳಜಿ ಇದೆ?
ಅಂತರಾಷ್ಟ್ರೀಯ ಹೂಡಿಕೆದಾರರ ಸಮಾವೇಶದಲ್ಲಿ ಬಿಕರಿಯಾಗಿದ್ದು ಇಲ್ಲಿನ ನೆಲ, ಜಲ ಮಾತ್ರವಲ್ಲ. ಕರ್ನಾಟಕದ ಸಂಸ್ಕೃತಿ, ಬದುಕು ಸಹ ಮಾರಾಟದ ಸರಕಾಗಿದೆ. ನೂರರ ಒಳಗಿನ ಸಂಖ್ಯೆಯ ಸಂಸ್ಥೆಗಳ ಮಾಲೀಕರು ಇನ್ನು ಮುಂದೆ ಕರ್ನಾಟಕದ ಬದುಕು, ಆರ್ಥಿಕ ವ್ಯವಹಾರಗಳು, ಶಿಕ್ಷಣ, ಆರೋಗ್ಯ ಇತ್ಯಾದಿ ಹಾಗೂ ಒಟ್ಟು ಸಮಾಜವನ್ನು ನಿಯಂತ್ರಿಸಲಿದ್ದಾರೆ. ಅದರರ್ಥ ಪ್ರಜಾಪ್ರಭುತ್ವವೇ ಅರ್ಥ ಕಳೆದುಕೊಳ್ಳಲಿದೆ.
ಈಗಷ್ಟೇ ಎರಡು ವರ್ಷಗಳ ಅಧಿಕಾರಾವಧಿ ಮುಗಿಸಿರುವ ಯಡಿಯೂರಪ್ಪನವರು ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ’ಸಾಧನೆ’ಯೆಂದು ಹೇಳಿಕೊಳ್ಳುತ್ತಾರೆಯೇ?
ನಾಚಿಕೆಗೇಡು.

ಹೊರನಾಡಲ್ಲಿ ಕನ್ನಡದ ತೇರನೆಳೆವರು

’ತೇರನೆಳೆಯುವರು ನಾವು
ಎಲ್ಲಿದ್ದರೇನು
ಬೊಂಬಾಯಿ ಮದ್ರಾಸು ಕಲ್ಕತ್ತ
ಡೆಲ್ಲಿ ಎಲ್ಲೆಂದರಲ್ಲಿ
ಕನ್ನಡದ ಉಸಿರಾಟ
ಎದೆಗಳಿರುವಲ್ಲಿ....(ಜಿ.ಎಸ್.ಎಸ್.)
ಭೌಗೋಳಿಕವಾಗಿ ಕನ್ನಡ ನಾಡಿನ ಹೊರಗಿದ್ದು ಕನ್ನಡವನ್ನು ಉಸಿರಾಗಿಸಿಕೊಂಡವರು ಹೊರನಾಡ ಕನ್ನಡಿಗರು. ಕನ್ನಡ ಎನ್ನುವುದು ಕೇವಲ ಒಂದು ಭಾಷೆಯಷ್ಟೇ ಅಲ್ಲ. ಅದೊಂದು ಸಂಸ್ಕೃತಿ: ಜೀವನ ವಿಧಾನ. ಒಂದು ಭಾಷೆಗೆ; ಒಂದು ಸಂಸ್ಕೃತಿಗೆ, ಭೌಗೋಳಿಕವಾಗಿ ಸೀಮೆಯನ್ನು ಎಲ್ಲೆಯನ್ನು ಗುರುತಿಸಬಹುದೇ ಹೊರತು ಸಾಂಸ್ಕೃತಿಕವಾಗಿ ಎಲ್ಲೆ ಕಟ್ಟುಗಳನ್ನು ಹಾಕುವುದು ಸಾಧ್ಯವಾಗಲಾರದು. ಕರ್ನಾಟಕದ ಹೊರಗಿರುವ ಕನ್ನಡಿಗರನ್ನು ಗಡಿನಾಡ ಕನ್ನಡಿಗರು, ಹೊರನಾಡ ಕನ್ನಡಿಗರು ಹಾಗೂ ಹೊರರಾಷ್ಟ್ರದ ಕನ್ನಡಿಗರು ಎಂಬುದಾಗಿ ವರ್ಗೀಕರಿಸಿ ಅವರವರ ಸಾಂಸ್ಕೃತಿಕ ಚಟುವಟಿಕೆಗಳನ್ನು ಅವಲೋಕನ ಮಾಡಬಹುದಾಗಿದೆ. "ತಾಂತ್ರಿಕ ಕಾರಣಗಳಿಗಾಗಿ ಕರ್ನಾಟಕದ ಒಳಗಿರುವವರನ್ನು, ಅದರಲ್ಲೂ ಖಾಯಂ ವಾಸಿಗಳನ್ನು ಕನ್ನಡಿಗರು ಎಂದು ಗುರುತಿಸಿದಂತೆ, ಮೂಲತಃ ಕರ್ನಾಟಕದವರಾಗಿ ಸದ್ಯಕ್ಕೆ ಹೊರನಾಡಿನಲ್ಲಿರುವವರೂ ಕನ್ನಡಿಗರಾಗುತ್ತಾರೆ; ಗಡಿನಾಡು ಅಥವಾ ಹೊರನಾಡು ಎಂಬ ಪದದ ಜೊತೆಗೂಡಿದ ಕನ್ನಡಿಗರಾಗುತ್ತಾರೆ" ಎಂಬುದಾಗಿ ಪ್ರೊ.ಬರಗೂರು ರಾಮಚಂದ್ರಪ್ಪ ಅವರು ಒಂದೆಡೆ ಅಭಿಪ್ರಾಯ ಪಟ್ಟಿದ್ದಾರೆ.
"ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು" ಎಂಬ ಕವಿವಾಣಿಯನ್ನು ಹೊರನಾಡು ಕನ್ನಡಿಗರು ಮೈಗೂಡಿಸಿಕೊಂಡಿದ್ದಾರೆ. ಹೀಗಾಗಿ ಭಾರತವಲ್ಲದೆ ಜಗತ್ತಿನ ಬೇರೆ ಬೇರೆ ರಾಷ್ಟ್ರಗಳಲ್ಲಿ ನೆಲೆನಿಂತ ಕನ್ನಡಿಗರು ತಾವಿರುವ ಪ್ರದೇಶಗಳಲ್ಲಿ ಸಂಘಟಿತರಾಗಿ ಕನ್ನಡ ನಾಡು ನುಡಿ ಸಾಹಿತ್ಯ ಸಂಸ್ಕೃತಿಯ ಬಲವರ್ಧನೆಗೆ ಶ್ರಮಿಸುತ್ತಾ ಬಂದಿದ್ದಾರೆ. ತಾವು ಕನ್ನಡಿಗರಾಗಿ ಉಳಿಯಲು ಬೆಳೆಯಲು ತಮ್ಮದೇ ಆದ ಸಂಘ ಸಂಸ್ಥೆಗಳನ್ನು ಕಟ್ಟಿಕೊಂಡು ತಮ್ಮ ಅಸ್ಮಿತೆಯನ್ನು ಉಳಿಸಿಕೊಳ್ಳುವುದರ ಜೊತೆಗೆ ಕನ್ನಡೇತರರಿಗೆ ಕನ್ನಡತ್ವದ ಪರಿಚಯ ಮಾಡಿಕೊಟ್ಟು ಅವರೊಡನೆ ಸಹಬಾಳ್ವೆ ಮಾಡುವುದನ್ನೂ ಚನ್ನಾಗಿ ಕಲಿತಿದ್ದಾರೆ. "ಪರಭಾಷೆ ನಮಗೆ ಏಕೆ ಅಯ್ಯಾ, ನಮ್ಮ ಭಾಷೆ ನಮಗೆ ಸಾಲದೆ" ಎಂದು ಹೊರನಾಡ ಕನ್ನಡಿಗರು ಕನ್ನಡವನ್ನೇ ಹಾಸಿ ಹೊದ್ದು ನಿದ್ದೆ ಮಾಡುವ ಸ್ಥಿತಿಯಲ್ಲಿರಲಾರರು. ಹಾಗೆಂದು ಪರಭಾಷೆಯನ್ನೇ ತಲೆದಿಂಬಾಗಿಸಿಕೊಂಡು ಕನ್ನಡವನ್ನು ಕಾಲ್ದೆಸೆಗೆ ತಳ್ಳಿ ಬದುಕಲೂ ಆಗದು. ಕನ್ನಡ ನಾಡಿನಿಂದ ಹಲವೊಂದು ಕಾರಣಗಳಿಗಾಗಿ ಹೊರದೇಶ ಪ್ರದೇಶಗಳಿಗೆ ವಲಸೆ ಹೋದ ಕನ್ನಡಿಗರು ಕನ್ನಡಿಗರಿಗಾಗಿ ಉಳಿಯಲು ಕನ್ನಡ ಭಾಷೆಯೇ ಒಂದು ಪ್ರಮುಖ ಸಾಧನವೆನಿಸುವುದು" ಎಂಬುವುದಾಗಿ ಬಹುಕಾಲ ಹೊರನಾಡಿನಲ್ಲಿದ್ದು ಸಾಹಿತ್ಯ ಕೃಷಿ ಮಾಡಿದ ಡಾ.ಬಿ.ಎ.ಸನದಿ ಅವರು ಇಂಗಿತ ವ್ಯಕ್ತಪಡಿಸಿದ್ದಾರೆ.
"ಎಲ್ಲೆಲ್ಲಿ ಕನ್ನಡದ ಕಂಪು ಸೂಸಲಲ್ಲಲ್ಲಿ ಕರಣ ಚಾಚೇವು" ಎಂದು ಹೊರನಾಡ ಕನ್ನಡಿಗರು ನಾನಾ ಬಗೆಯ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಸಂಗತಿಯೇ ಆಗಿದೆ. ಸುಮಾರು ಎರಡು ಕೋಟಿ ಜನ ಕರ್ನಾಟಕದ ಹೊರಗೆ ನೆಲೆಸಿ ಕನ್ನಡದ ಕೈಂಕರ್ಯದಲ್ಲಿ ತೊಡಗಿರುವುದು ಸಾಮಾನ್ಯ ಸಂಗತಿಯಲ್ಲ. ಕಾಸರಗೋಡು, ಅಕ್ಕಲಕೋಟೆ, ಜತ್ತ, ಅದವನಿ, ಆಲೂರು, ರಾಯದುರ್ಗ, ಮಡಕಶಿರ ಮೊದಲಾದ ಗಡಿಭಾಗಗಳಲ್ಲಿ ಇಂದಿಗೂ ಕನ್ನಡ ಭಾಷೆ, ಸಂಸ್ಕೃತಿ ತಲೆ ಎತ್ತಿ ನಿಂತಿರುವುದನ್ನು ಕಾಣಬಹುದು. ಮುಂಬಯಿ, ಚೆನ್ನೈ, ದೆಹಲಿ, ಕಾಶಿ, ಲಖನೌ, ಮಧುರೈ, ಭೂಪಾಲ್, ಗೋವಾ, ಹೈದರಾಬಾದ್, ಪಣಜಿ, ಅಹ್ಮದಾಬಾದ್, ವಾಪಿ, ಪುಣೆ, ಕಾಲಿಕತ್, ಪಾಂಡಿಚೇರಿ, ಚಂಡೀಗಢ, ನೈವೇಲಿ, ಭಿಲಾಯಿ, ಗುಂತಕಲ್, ಕರ್ನೂಲ್, ಬರೋಡಾ, ಅಲಹಾಬಾದ್, ರಾಂಚಿ, ತ್ರಿವೇಂಡ್ರಮ್, ಇಂದೋರ್, ಪನ್ವೇಲ್ ಮೊದಲಾದ ಕಡೆಗಳಲ್ಲಿ ಕನ್ನಡಿಗರು ದೊಡ್ಡ ಪ್ರಮಾಣದಲ್ಲಿ ನೆಲೆಸಿದ್ದು, ತಮ್ಮದೇ ಆದ ಸಂಘ ಸಂಸ್ಥೆಗಳನ್ನು ಕಟ್ಟಿಕೊಂಡಿದ್ದಾರೆ.
ಹೊರದೇಶಗಳಲ್ಲೂ ಕನ್ನಡಿಗರು ತಮ್ಮ ಅಸ್ಮಿತೆಯನ್ನು ಉಳಿಸಿಕೊಂಡು ಬರಲು ಶ್ರಮಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇಂಗ್ಲೆಂಡ್, ಸಿಂಗಪುರ, ಅಮೇರಿಕಾ, ಕೆನಡಾ, ಜರ್ಮನಿ, ದುಬಾಯಿ, ಬಹರಿನ್, ಅಬುಧಾಬಿ, ಆಸ್ಟ್ರೇಲಿಯಾ ಮೊದಲಾದ ಸ್ಥಳಗಳಲ್ಲೂ ಕನ್ನಡಿಗರು ಸಂಘಟಿತರಾಗಿ ತಮ್ಮ ನಾಡು ನುಡಿಗಳ ಮೇಲಿನ ಅಭಿಮಾನ, ಗೌರವ, ಪ್ರೀತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದಾರೆ. ಈ ಮೂಲಕ ಕನ್ನಡದ ಕಂಪು ಕರ್ನಾಟಕಕ್ಕಷ್ಟೇ ಸೀಮಿತವಾಗದೇ ಅದು ವಿಶ್ವವ್ಯಾಪಿಯಾಗುವಂತೆ ಮಾಡಿದ ಶ್ರೇಯಸ್ಸು ಹೊರನಾಡ ಕನ್ನಡಿಗರಿಗೆ ಸಲ್ಲುತ್ತದೆ.
ಕರ್ನಾಟಕ ಏಕೀಕರಣಗೊಂಡು ಐವತ್ತು ವರ್ಷಗಳೇ ಸಂದು ಹೋದರೂ ಕರ್ನಾಟಕದಲ್ಲಿಯೇ ಕನ್ನಡ ಭಾಷೆಗೆ ದೊರೆಯಬೇಕಾಗಿದ್ದ ಸ್ಥಾನಮಾನಗಳು ದೊರೆಯುತ್ತಿಲ್ಲ ಎಂಬ ಬೇಸರ ಎಲ್ಲೆಡೆ ದಟ್ಟವಾಗಿರುವಾಗ, ನಾಡಿನ ಹೊರಗೆ ಹೊರನಾಡ ಕನ್ನಡಿಗರು ಕನ್ನಡ ಸಂಸ್ಕೃತಿಯ ಬಣ್ಣ ಬನಿಯನ್ನು ಗಾಢಗೊಳಿಸಲು ಶ್ರಮಿಸುತ್ತಿರುವುದು ಉಲ್ಲೇಖನೀಯ ಸಂಗತಿ. ಹೀಗಾಗಿ ಕರ್ನಾಟಕ ರಾಜ್ಯವೆಂದ ತಕ್ಷಣ ಬರೇ ಭೌತಿಕ ಗಡಿರೇಖೆಗಳನ್ನಷ್ಟೇ ಗುರುತಿಸುವಂತಾಗಬಾರದು. ರಾಜ್ಯವೆನ್ನುವುದು ಅನೇಕ ಭೌತಿಕ ಸಂಸ್ಕೃತಿ, ಅಭೌತಿಕ ಸಂಸ್ಕೃತಿಗಳ ಮಹಾಸಂಗಮವೇ ಆಗಿರುತ್ತದೆಂಬುವುದನ್ನು ಯಾರೂ ಮರೆಯುವಂತಿಲ್ಲ. ನಾವಿಂದು ವಿಶಾಲವಾದ ನೆಲೆಯಲ್ಲಿ ಬೃಹತ್ ಕರ್ನಾಟಕ-ಸಾಂಸ್ಕೃತಿಕ ಕರ್ನಾಟಕವನ್ನು ಕಲ್ಪಿಸಿಕೊಳ್ಳಬೇಕಾಗಿದೆ. ಅದನ್ನು ಕಟ್ಟಲು ಹೆಣಗಬೇಕಾಗಿದೆ.
"ನಾವು ಕನ್ನಡಿಗರು; ನಾವು ಒಂದು ಭವ್ಯ ಹಾಗೂ ಶ್ರೀಮಂತ ಸಂಸ್ಕೃತಿಯ ಪರಂಪರೆಯ ವಾರಸುದಾರರು" ಎಂಬ ಮಾತನ್ನು ಮರೆಯದೆ ತಮ್ಮೆಲ್ಲ ಕಷ್ಟನಷ್ಟಗಳನ್ನು ಬದಿಗೊತ್ತಿ ಬದುಕನ್ನು ನಡೆಸುತ್ತಿರುವ ಹೊರನಾಡ ಕನ್ನಡಿಗರಿಗೇ ಮನ್ನಣೆ ಇಲ್ಲ ಎಂಬುದು ವಿಷಾದದ ಸಂಗತಿ. ಕಳೆದ ಐದು ದಶಕಗಳಲ್ಲಿ ನಾಡಿನ ಉಜ್ವಲ ಭವಿಷ್ಯಕ್ಕಾಗಿ ಹೊರನಾಡ ಕನ್ನಡಿಗರು ಮನಸಾ ಶ್ರಮಿಸುತ್ತಾ ಬಂದಿರುವುದು ಉಲ್ಲೇಖನೀಯ ಸಂಗತಿ.
ಮುಂಬಯಿಯ ಕೆಲವು ಮೊದಲುಗಳು
ಸಾಂಸ್ಕೃತಿಕ ಕರ್ನಾಟಕದ ಸಾಧನೆಯನ್ನು ಸಿಂಹಾವಲೋಕನ ಮಾಡುವ ಸಂದರ್ಭದಲ್ಲಿ ಇತಿಹಾಸಕಾರರು ಅನೇಕ ಬಾರಿ ಮುಂಬಯಿ ಕಡೆಗೆ ಮುಖ ಮಾಡಬೇಕಾಗುತ್ತದೆ. ಅಂಥ ಕೆಲವು ಮಹತ್ವದ ಘಟನೆಗಳನ್ನು ಇಲ್ಲಿ ಕೊಡಲಾಗಿದೆ.
ಕಾಳಿದಾಸನ ಶಾಕುಂತಲ ನಾಟಕವನ್ನು, ಮೊದಲ ಬಾರಿಗೆ ಕನ್ನಡಕ್ಕೆ ಅನುವಾದಿಸಿದವರು ಒಬ್ಬ ಮುಂಬಯಿ ಕನ್ನಡಿಗ, ಚುರಮುರಿ ಶೇಷಗಿರಿರಾಯರ ಶಾಕುಂತಲ ನಾಟಕವು ೧೮೬೯ರಲ್ಲಿ ಮುಂಬಯಿಯಲ್ಲಿ ಪ್ರಕಟವಾಯಿತು. ಚುರಮುರಿ ಅವರು ವೃತ್ತಿಯಲ್ಲಿ ಇಂಜಿನಿಯರ್.
ಮರಾಠಿ ರಂಗಭೂಮಿಯ ಪಿತಾಮಹ ಅಣ್ಣಾ ಕಿರ್ಲೋಸ್ಕರ್ ಅವರ ಶಾಕುಂತಲಾ ನಾಟಕಕ್ಕೆ ಚುರಮುರಿ ಅವರ ಕೃತಿಯೇ ಪ್ರೇರಣೆ.
ಕನ್ನಡದ ಮೊದಲ ಸಾಮಾಜಿಕ ನಾಟಕ ’ಇಗ್ಗಪ್ಪ ಹೆಗ್ಗಡೆಯ ವಿವಾಹ ಪ್ರಹಸನ’ ಪ್ರಕಟವಾದುದು ದೂರದ ಮುಂಬಯಿಯಲ್ಲಿ. ಕರ್ಕಿ ವೆಂಕಟರಮಣ ಶಾಸ್ತ್ರಿಗಳು ಬರೆದ ಈ ನಾಟಕ ೧೮೮೭ರಲ್ಲಿ ಬೆಳಕು ಕಂಡಿತು.
ಕನ್ನಡ ಪತ್ರಿಕೆಯೊಂದರಲ್ಲಿ ಮೊದಲ ಬಾರಿಗೆ ವ್ಯಂಗ್ಯಚಿತ್ರ ಪ್ರಕಟವಾದುದು ಹವ್ಯಕ ಸುಭೋದದಲ್ಲಿ (೧೮೮೫) ಇದು ಮುಂಬಯಿಯಿಂದ ಪ್ರಕಟವಾಗುತ್ತಿತ್ತು.
ಶಿವರಾಮ ಕಾರಂತರ ಯಕ್ಷಗಾನ ಬ್ಯಾಲೆ ಪ್ರದರ್ಶನ ಕಂಡದ್ದು ಈ ಮಹಾನಗರದಲ್ಲಿ.
ಖ್ಯಾತ ಕಾದಂಬರಿಕಾರ ಚದುರಂಗ, ಸಾಹಿತಿ ಅನುಪಮಾ ನಿರಂಜನ, ಡಾ.ಬಿ.ಎ.ಸನದಿ ಅವರ ಮೊದಲ ಕತೆಗಳು ಬೆಳಕು ಕಂಡದ್ದು ರಂಗಸ್ವಾಮಿಯವರ ’ಆದರ್ಶ ಪತ್ರಿಕೆಯಲ್ಲಿ.
೧೯೫೦ರ ಮುಂಬಯಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಒಂದು ಚಾರಿತ್ರಿಕ ಮಹತ್ವವಿದೆ. ಕನ್ನಡ ’ನವ್ಯಪಂಥ’ ಕಣ್ಣು ಬಿಟ್ಟಿದ್ದೇ ಈ ದೂರದ ಮಹಾನಗರಿಯಲ್ಲಿ. ವಿ.ಕೃ. ಗೋಕಾಕರು ಅದರ ರೂವಾರಿ.
ಕನ್ನಡದ ಮೊದಲ ಪ್ರವಾಸ ಸಾಹಿತ್ಯ ಕೃತಿಯನ್ನು ಬರೆದವರು ಕರ್ಕಿ ವೆಂಕಟರಮಣ ಶಾಸ್ತ್ರಿ (೧೮೮೭); ಕೃತಿಯ ಹೆಸರು ದಕ್ಷಿಣಾಯಾತ್ರಾ ಚರಿತ್ರೆ.
ಹೊಸಗನ್ನಡದ ಮೊದಲ ಕೃತಿ ಬಿ.ಎಂ.ಶ್ರೀ ಅವರ ಇಂಗ್ಲೀಷ್ ಗೀತೆಗಳು ಎಂಬ ಮಾತಿದೆ. ಇದು ತರವಲ್ಲ. ಮುಂಬಯಿಯಲ್ಲಿ ಕನ್ನಡಿಗ ಹಟ್ಟಿಯಂಗಡಿ ನಾರಾಯಣರಾಯರ ’ಆಂಗ್ಲ ಕವಿತಾವಳಿ’ ಹೊಸಗನ್ನಡದ ಮೊದಲ ಅನುವಾದ ಕಾವ್ಯ ಕೃತಿ (೧೯೯೧).
ಕನ್ನಡ ಲೇಖಕ, ಸಾಹಿತಿಯೊಬ್ಬರು ಸ್ಥಾಪಿಸಿದ ಬ್ಯಾಂಕ್-ಶ್ಯಾಮರಾವ್ ವಿಠಲ್ ಬ್ಯಾಂಕ್. ಕೈಕಣೀ ಅವರೇ ಅದರ ಹರಿಕಾರರು.
ಪ್ರಸಾರಭಾರತಿಯ ಅಧ್ಯಕ್ಷರಾದ ಮೊದಲ ಕನ್ನಡಿಗ ಎಂ.ವಿ.ಕಾಮತ್ ಅವರೂ ಮುಂಬಯಿ ಕನ್ನಡಿಗರೇ.
ಆಗಬೇಕಾದದ್ದೇನು?
ಕಳೆದ ಒಂದೆರಡು ದಶಕಗಳಿಂದ ಗಡಿನಾಡು ಹಾಗೂ ಹೊರನಾಡಿನಲ್ಲಿ ಕನ್ನಡ ಶಿಕ್ಷಣ ಕ್ಷೇತ್ರ ಸೊರಗುತ್ತಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಸರಕಾರ ವಿಶೇಷವಾಗಿ ಸ್ಪಂದಿಸಬೇಕು.
ಕನ್ನಡಿಗರು ಹೆಚ್ಚು ಸಂಖ್ಯೆಯಲ್ಲಿ ನೆಲೆಸಿರುವ ಚೆನ್ನೈ, ಗೋವಾ, ಮುಂಬೈ, ಹೈದರಾಬಾದ್ ಮೊದಲಾದ ಕಡೆ ’ಕನ್ನಡಭವನ’ಗಳನ್ನು ’ಮಾಹಿತಿ ಕೇಂದ್ರಗಳನ್ನು ಸ್ಥಾಪಿಸಿ ಹೆಚ್ಚು ಪ್ರವಾಸಿಗರು ಕರ್ನಾಟಕಕ್ಕೆ ಬರುವಂತೆ ಮಾಡಬಹುದು. ಪ್ರವಾಸೋದ್ಯಮವನ್ನು ಸರಕಾರ ಬಲಪಡಿಸಲು ಹೊರನಾಡ ಸಂಘ ಸಂಸ್ಥೆಗಳ ಸಹಯೋಗವನ್ನು ಪಡೆಯಬಹುದು.
ಹೊರನಾಡ ಕನ್ನಡ ಸಂಘ ಸಂಸ್ಥೆಗಳ ಅಭಿವೃದ್ಧಿಯತ್ತಲೂ ಸರಕಾರ ಮುತುವರ್ಜಿ ವಹಿಸಬೇಕು. ತಮ್ಮದೇ ಆದ ಕಟ್ಟಡಗಳನ್ನು ಕಟ್ಟಿಕೊಳ್ಳಲು ’ಆರ್ಥಿಕ ಸಹಾಯ’ ನೀಡಬೇಕು.
ಕರ್ನಾಟಕ ಸರಕಾರ ಹೊರನಾಡ ಕನ್ನಡಿಗರ ಅಭಿವೃದ್ಧಿಗೆ ತನ್ನ ವಾರ್ಷಿಕ ಬಜೆಟ್‌ನಲ್ಲಿ ಕನಿಷ್ಠ ೧೦ಕೋಟಿ ರೂಪಾಯಿ ತೆಗೆದಿರಿಸಬೇಕು.
ಸಂಸ್ಕೃತಿ ಇಲಾಖೆ ಹೊರನಾಡ ಕನ್ನಡಿಗರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಹೀಗಾಗಿ ಪ್ರತ್ಯೇಕ ’ಹೊರನಾಡ ಕನ್ನಡ ಪ್ರಾಧಿಕಾರ’ವೊಂದು ಅಗತ್ಯ ಕರ್ನಾಟಕ ಸರಕಾರ ತುರ್ತಾಗಿ ಸ್ಥಾಪಿಸಿ; ಕನ್ನಡ ಹೊರನಾಡಿನಲ್ಲಿ ಅಳಿದುಹೋಗದಂತೆ ತಡೆಯಬೇಕು.
ಹೊರನಾಡ ಲೇಖಕರ ಕೃತಿಗಳನ್ನು ಕರ್ನಾಟಕ ಸರಕಾರ ಖರೀದಿಸಬೇಕು. ಈಗಿರುವ ಗ್ರಂಥಾಲಯ ಯೋಜನೆಗಳಲ್ಲಿ ಈ ಭಾಗದ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ.
ಕರ್ನಾಟಕ ವಿವಿಧ ಅಕಾಡೆಮಿಗಳಲ್ಲಿ ಹೊರನಾಡ ಕನ್ನಡಿಗರಿಗೆ ಪ್ರಾತಿನಿಧ್ಯ ಸಿಗಬೇಕು. ಪ್ರಶಸ್ತಿ ಪುರಸ್ಕಾರ ಕೊಡುವಾಗ ಹೊರಭಾಗದ ಯೋಗ್ಯ ವ್ಯಕ್ತಿ ಸಂಸ್ಥೆಗಳನ್ನು ಗಮನಿಸಬೇಕು.
ಹೊರನಾಡಿನಲ್ಲಿ ಕನ್ನಡ ಅಧ್ಯಯನದಲ್ಲಿ ತೊಡಗಿಕೊಂಡ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಬೇಕು.
ಹೊರನಾಡಿನಲ್ಲಿ ಗಡಿನಾಡಿನ ಕೆಲವು ಕನ್ನಡ ಶಾಲೆಗಳಲ್ಲಿ, ಸದ್ಯ ಪ್ರಾಥಮಿಕ ಶಾಲೆಯಲ್ಲಿ ಒಂದರಿಂದ ನಾಲ್ಕನೆಯ ಇಯತ್ತೆಯವರೆಗೆ ೪೦ ವಿದ್ಯಾರ್ಥಿಗಳಿಗಾಗಿ ಒಬ್ಬ ಶಿಕ್ಷಕರನ್ನು ಕೊಡಲಾಗುತ್ತಿದೆ. ಈ ನಿಯಮ ಬದಲಿಸಿ ಕನಿಷ್ಠ ೧೫ ವಿದ್ಯಾರ್ಥಿಗಳಿದ್ದರೆ ತರಗತಿ ನಡೆಸುವುದಕ್ಕೆ ಅವಕಾಶ ನೀಡಬೇಕು.
ಅಲ್ಪ ಸಂಖ್ಯಾತ ಭಾಷಿಕರಿಗೆ ಸಿಗುವ ಎಲ್ಲಾ ಸೌಲಭ್ಯ ರಿಯಾಯಿತಿಗಳು ಗಡಿಭಾಗದ ಹಾಗೂ ಹೊರನಾಡ ಕನ್ನಡಿಗರಿಗೆ ಸಿಗುವಂತಾಗಬೇಕು.

-ಡಾ.ಜಿ.ಎನ್.ಉಪಾಧ್ಯಕನ್ನಡ ವಿಭಾಗ, ಮುಂಬಯಿ ವಿಶ್ವವಿದ್ಯಾಲಯ, ವಿದ್ಯಾನಗರಿ
ಮುಂಬಯಿ-೪೦೦ ೦೯೮

ಮುಗಿಯದ ಯುದ್ಧ ಬೆಳಗಾವಿ ನಮ್ಮದು





ಇದು ಇನ್ನೂ ಮುಗಿಯದ ಕಥೆ. ಮುಗಿಯದ ಯುದ್ಧ ಕೂಡ. ಬೆಳಗಾವಿ ಯಾರಿಗೆ ಸೇರಬೇಕೆಂಬ ಬಗ್ಗೆ ಜಗಳ-ಕದನ, ಆರೋಪ-ಪ್ರತ್ಯಾರೋಪ ನಿರಂತರ. ಇದಕ್ಕೊಂದು ಇತಿಶ್ರೀ ಹಾಡುವ ಇಚ್ಛಾಶಕ್ತಿಯನ್ನು ಯಾವ ರಾಜಕೀಯ ಪಕ್ಷದವರೂ ಪ್ರದರ್ಶಿಸಿಲ್ಲ. ಕನ್ನಡಿಗರು-ಮರಾಠಿಗರ ಮಧ್ಯೆ ಮನಸ್ತಾಪ, ಮಡುಗಟ್ಟುತ್ತಿರುವ ದ್ವೇಷ ಭಾವನೆಗೆ ಇದು ಇಂಬು ಕೊಡುತ್ತಿದೆ.
ಇದೇ ಅಂತಿಮ ಎಂದು ಎಲ್ಲಾ ಆಯೋಗಗಳ ವರದಿಗಳು ಸ್ಪಷ್ಟವಾಗಿ, ನಿಖರವಾಗಿ ದಾಖಲೆ ಸಮೇತ ಹೇಳಿದ ಮೇಲೂ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಭಾಗವೆಂಬುದನ್ನು ಮಹಾರಾಷ್ಟ್ರದ ನಾಯಕರು ಒಪ್ಪಿಕೊಳ್ಳಲು ಸುತಾರಾಂ ತಯಾರಿಲ್ಲ. ಮತಗಳಿಕೆಯ ಕಾರಣಕ್ಕಾಗಿ ಮರಾಠ ನಾಯಕರಿಗೆ ಬೆಳಗಾವಿಯ ವಿಷಯ ಜೀವಂತವಾಗಿರಬೇಕು. ಹಲವು ರಾಜ್ಯಗಳನ್ನೊಳಗೊಂಡ ಒಕ್ಕೂಟದ ದೇಶವಾಗಿರುವ ಭಾರತದಲ್ಲಿ ಇಂತಹ ವಿವಾದಗಳನ್ನು ನಿರ್ವಿವಾದವಾಗಿ ಪರಿಹರಿಸಬೇಕಾದ ಕೇಂದ್ರ ಸರ್ಕಾರ ತನ್ನದೇ ಆದ ರಾಜಕೀಯ ಕಾರಣಕ್ಕಾಗಿ ಬೆಂಕಿಗೆ ತುಪ್ಪ ಸುರಿಯುವ ಕೆಲಸವನ್ನೂ ಮಾಡುತ್ತಲೇ ಇದೆ.
ದೇಶ ಸ್ವಾತಂತ್ರ್ಯವಾಗುವ ಪೂರ್ವದಲ್ಲಿ ರಾಜರು, ಪಾಳೆಯಗಾರರು ತಮ್ಮ ಗಡಿ ಯಾವುದೆಂಬುದರ ನಿಷ್ಕರ್ಷೆಗೆ ಕಚ್ಚಾಡುತ್ತಿದ್ದಂತೆ, ಆಗಾಗ್ಗೆ ಯುದ್ಧ ಮಾಡುತ್ತಿದ್ದಂತೆ ಸ್ವಾತಂತ್ರ್ಯಾನಂತರದ ೬೩ ವರ್ಷ ಕಳೆದರೂ ನಾವಿನ್ನೂ ಜಗಳವಾಡುತ್ತಿದ್ದೇವೆ. ಬೆಳಗಾವಿ ಯಾರಿಗೆ ಸೇರಬೇಕೆಂಬ ಇತ್ಯರ್ಥವಾಗಿಬಿಟ್ಟರೆ ಮಹಾರಾಷ್ಟ್ರ ಹಾಗೂ ಕರ್ನಾಟಕದ ವಿವಿಧ ರಾಜಕೀಯ ಪಕ್ಷಗಳ ನಾಯಕರಿಗೆ ಒಂದು ಕಸುಬು ಕೊರತೆಯಾಗುತ್ತದೆ. ಚುನಾವಣೆ ಹತ್ತಿರವಾದಾಗ ಮತ ಸೆಳೆಯಲು ಅಡ್ಡಿಯಾಗುತ್ತದೆ. ಹಾಗಾಗಿ ಅದನ್ನು ಬಗೆಹರಿಸುವ ಇರಾದೆ ರಾಜಕೀಯ ಪಕ್ಷಗಳಿಗೆ ಇಲ್ಲ.
ಆಕ್ರಮಣಕಾರಿ:
ಬೆಳಗಾವಿ ವಿಷಯದಲ್ಲಿ ಮಹಾರಾಷ್ಟ್ರದ ಎಲ್ಲಾ ರಾಜಕೀಯ ಪಕ್ಷಗಳು ಆಕ್ರಮಣಕಾರಿ ಯಾಗಿಯೇ ವರ್ತಿಸುತ್ತಿವೆ. ಅದರಲ್ಲೂ ೧೯೬೭ರ ಆಗಸ್ಟ್‌ನಲ್ಲಿ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಮೆಹರ್‌ಚಂದ್ ಮಹಾಜನ್ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ವರದಿಯ ನಂತರ ಮಹಾರಾಷ್ಟ್ರದ ಎಲ್ಲಾ ಧುರೀಣರೂ ಬೆಳಗಾವಿ ನಮ್ಮದೆಂಬ ಹಠಕ್ಕೆ ಬಿದ್ದವರಂತೆ ವರ್ತಿಸುತ್ತಿದ್ದಾರೆ.
ಮರಾಠಿಗರಲ್ಲಿ ಇರುವ ಅಭಿಮಾನ ಕನ್ನಡಿಗರಲ್ಲಿ ಅದರಲ್ಲೂ ಮುಖ್ಯವಾಗಿ ಕರ್ನಾಟಕದ ರಾಜಕೀಯ ನೇತಾರರಲ್ಲಿ, ಸಂಸದರಲ್ಲಿ ಇರದೇ ಇರುವುದರಿಂದ ಬೆಳಗಾವಿಯ ವಿಷಯ ಇನ್ನೂ ಇತ್ಯರ್ಥವಾಗಿಲ್ಲ.
ಮರಾಠಿಗರು ಗಡಿ ತಂಟೆ ಶುರುವಿಟ್ಟಾಗ ಅಥವಾ ಮಹಾರಾಷ್ಟ್ರದ ಯಾವುದಾದರೂ ಮಂತ್ರಿ ಬೆಳಗಾವಿ ನಮ್ಮದೆಂದು ಅಬ್ಬರಿಸಿದಾಗ ಅಥವಾ ಮಹಾರಾಷ್ಟ್ರ ಏಕೀಕರಣ ಸಮಿತಿ ಮಹಾಮೇಳಾವ ನಡೆಸಲು ಮುಂದಾದಾಗ ಅಥವಾ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿದ್ದೆಂಬ ವಿವರ ಒಳಗೊಂಡ ಪತ್ರ ಕೇಂದ್ರದಿಂದ ರವಾನೆಯಾದಾಗ ಕರ್ನಾಟಕದ ರಣಹೇಡಿ ರಾಜಕಾರಣಿಗಳು ತಮ್ಮ ಇಷ್ಟಗಲ ಬಾಯನ್ನು ತೆರೆದುಕೊಂಡು ಬಿಡುತ್ತಾರೆ. ತಾವೇ ಕರ್ನಾಟಕ ಉದ್ಧಾರಕರು, ಗಡಿ ರಕ್ಷಕರು ಎಂದು ಬೀಗುತ್ತಾರೆ. ಮಾಧ್ಯಮಗಳಲ್ಲಿ ಮಿಂಚಿ ಮರೆಯಾದ ಅವರು ಮಹಾರಾಷ್ಟ್ರದ ಕಡೆಯಿಂದ ಮತ್ತೊಂದು ಕಲ್ಲು ಎಸೆಯುವವರೆಗೂ ಸುಮ್ಮನಿರುತ್ತಾರೆ. ತಮ್ಮ ಬಾಯಿಗೆ ಚರ್ಮದ ದಾರಗಳನ್ನು ಹೊಲಿದು ಕೊಂಡು ಕುಳಿತು ಬಿಡುವ ಕರ್ನಾಟಕದ ರಾಜಕಾರಣಿಗಳಿಂದಲೇ ಬೆಳಗಾವಿ ಸಮಸ್ಯೆ ಜೀವಂತವಾಗಿ ಉಳಿದಿದೆ ಎಂಬುದರಲ್ಲಿ ಅನುಮಾನವೇ ಬೇಡ.
ಮಹಾಮೇಳಾವ ನಡೆಸಿ ಬೆಳಗಾವಿಯ ಮೇಲೆ ಪ್ರಭುತ್ವ ಸಾಧಿಸಲು ಮರಾಠಿಗರು ಮುಂದಾದಾಗ ಮಾತ್ರ ನಮ್ಮ ಸರ್ಕಾರ ಕಣ್ಣು ತೆರೆಯುತ್ತದೆ. ಕಣ್ಣಿಗೆ ಖಾರದ ಪುಡಿ ಹಾಕಿಕೊಂಡ ರೀತಿ ಅರಚುತ್ತದೆ. ಆಮೇಲೆ ಸ್ಮಶಾನದಲ್ಲಿ ಹೆಣ ಮಲಗಿದಂತೆ ಮಲಗಿ ಬಿಡುತ್ತದೆ. ಇದು ಯಡಿಯೂರಪ್ಪನವರ ಸರ್ಕಾರ ಕತೆ ಮಾತ್ರವಲ್ಲ. ಇಲ್ಲಿವರೆಗೆ ಆಗಿ ಹೋದ ಎಲ್ಲಾ ಸರ್ಕಾರಗಳು ಮಾಡಿಕೊಂಡು ಬಂದಿದ್ದು ಇದನ್ನೇ. ಈ ಆಪಾದನೆಗೆ ಯಾವುದೇ ರಾಜಕೀಯ ಪಕ್ಷಗಳೂ ಹೊರತಲ್ಲ.
ಐದು ವರ್ಷಗಳ ಅವಧಿಯಲ್ಲಿ ನಮ್ಮ ರಾಜ್ಯದ ಹಿತ ಕಾಪಾಡಲಿ ಎಂದು ನಾವು ಆರಿಸಿಕಳಿಸುವ ಸಂಸದರಾದರೂ ಇದರ ಬಗ್ಗೆ ಧ್ವನಿಯೆತ್ತುತ್ತಾರಾ ಎಂದರೆ ಅವರು ಮೈಯ ಸುತ್ತ ಮಂಜುಗಡ್ಡೆ ಹಾಕಿಕೊಂಡು ಮರಗಟ್ಟಿ ಹೋಗಿ ಬಿಡುತ್ತಾರೆ. ಸಂಸತ್‌ಗೆ ಆರಿಸಿ ಹೋಗುವವರೇನೂ ಸಾಮಾನ್ಯರಲ್ಲ. ರಾಜ್ಯದ ಮುಖ್ಯಮಂತ್ರಿಯಾಗಿ, ಪ್ರಮುಖ ಖಾತೆಗಳ ಸಚಿವರಾಗಿ, ಕರ್ನಾಟಕದಲ್ಲಿ ಕಾನೂನು ಮಂತ್ರಿಯಾಗಿ ಬೆಳಗಾವಿ ವಿಷಯವನ್ನು ಅರೆದು ಕುಡಿದವರೇ ಆಗಿರುತ್ತಾರೆ. ಅಂದರೆ ಅವರೆಲ್ಲರಿಗೂ ಬೆಳಗಾವಿಯ ಕುರಿತು ಮರಾಠಿಗರು ತೆಗೆಯುವ ತಂಟೆ ತಕರಾರುಗಳ ಸ್ಪಷ್ಟ ಅರಿವಿದೆ. ಮಾತನಾಡಲು ಅವರಿಗೆ ಬಾಯಿಲ್ಲ ಅಷ್ಟೆ!
ಇತಿಹಾಸದ ದಾಖಲೆ ಬಗೆದರೆ ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಿದ್ದ ಬಹುತೇಕರು ನಂತರ ಅಥವಾ ಮೊದಲು ಸಂಸದರಾಗಿದ್ದವರು. ವೀರೇಂದ್ರಪಾಟೀಲ್, ಎಸ್.ಆರ್.ಬೊಮ್ಮಾಯಿ, ದೇವೇಗೌಡ, ಜೆ.ಎಚ್.ಪಟೇಲ್, ಎಸ್. ಬಂಗಾರಪ್ಪ, ಎಚ್.ಡಿ. ಕುಮಾರಸ್ವಾಮಿ, ವೀರಪ್ಪ ಮೊಯಿಲಿ ಹೀಗೆ ಎಲ್ಲರೂ ಸಂಸದರಾಗಿದ್ದವರು. ರಾಮಕೃಷ್ಣಹೆಗಡೆ, ಎಸ್.ಎಂ. ಕೃಷ್ಣ ರಾಜ್ಯಸಭೆ ಸದಸ್ಯರಾಗಿ ಕರ್ನಾಟಕವನ್ನು ಪ್ರತಿನಿಧಿಸಿದವರು. ಈ ಮಹಾಮಹಿಮರ‍್ಯಾರೂ ಸಂಸತ್‌ನಲ್ಲಿ ಬೆಳಗಾವಿಯ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸಿದ ನಿದರ್ಶನ, ದಾಖಲೆಗಳೇ ಇಲ್ಲ. ಇದೆಂತಾ ದುರಂತ ಕನ್ನಡಿಗರದು.
೧೯೫೬ರಲ್ಲಿ ಭಾಷಾವಾರು ಪ್ರಾಂತ್ಯ ವಿಂಗಡಣೆಯ ತರುವಾಯ ಬೆಳಗಾವಿ ಯಾರಿಗೆ ಸೇರಬೇಕೆಂಬ ಕ್ಯಾತೆ ಶುರುವಾಯಿತೇ ವಿನಃ ಅಲ್ಲಿಯವರೆಗೂ ಅದರ ಸುದ್ದಿಯೇ ಇರಲಿಲ್ಲ. ದಶಕದಿಂದೀಚೆಗೆ ಮರಾಠಿಗರು ಆಕ್ರಮಣಕಾರಿಯಾಗಿ ವರ್ತಿಸುತ್ತಾ, ಬೆಳಗಾವಿ ತಮ್ಮದೇ ಎಂಬ ಹಠಕ್ಕೆ ಬಿದ್ದಿದ್ದಾರೆ ವಿನಃ ಅದಕ್ಕೂ ಮೊದಲು ಅವರೂ ಹಕ್ಕು ಪ್ರತಿಪಾದಿಸುತ್ತಿರಲಿಲ್ಲ.
ಟಿ.ಎ. ನಾರಾಯಣಗೌಡರ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ ಬೆಳಗಾವಿ ವಿಷಯದಲ್ಲಿ ಮಧ್ಯಪ್ರವೇಶಿಸಿ, ಅದು ಕರ್ನಾಟಕದ ಅವಿಭಾಜ್ಯ ಅಂಗವೆಂದು ಪ್ರತಿಪಾದಿಸಿ, ಹೋರಾಟ ಕಟ್ಟುವವರೆಗೆ ಕರ್ನಾಟಕದಲ್ಲಿ ಪ್ರಬಲ ಧ್ವನಿಯೂ ಇರಲಿಲ್ಲ. ಕರ್ನಾಟಕದ ಸ್ವಾಭಿಮಾನ ಹೋರಾಟಕ್ಕೆ ಹೊಸ ಕಸುವು ತಂದುಕೊಟ್ಟ ರಕ್ಷಣಾ ವೇದಿಕೆ ಬೆಳಗಾವಿ ರಕ್ಷಣೆಗೆ ಸಂತತ ಹೋರಾಟ ನಡೆಸಿದ್ದರಿಂದಾಗಿ ಇಂದು ಬೆಳಗಾವಿ ಕರ್ನಾಟಕದಲ್ಲೇ ಉಳಿದಿದೆ. ಕನ್ನಡಿಗರಲ್ಲಿ ಬೆಳಗಾವಿ ರಕ್ಷಣೆಯ ಕಿಚ್ಚು ಹೊತ್ತಿಸಿದ ರಕ್ಷಣಾ ವೇದಿಕೆ ಅದಕ್ಕಾಗಿ ನಡೆಸಿದ ಹೋರಾಟ ಅನೇಕ. ಅದಕ್ಕಾಗಿ ಜೈಲು ಸೇರಿದ್ದು, ಹತ್ತಾರು ಮೊಕದ್ದಮೆಗಳನ್ನು ಮೈಮೇಲೆ ಹಾಕಿಕೊಂಡು ದಿನವೂ ಕೋರ್ಟಿಗೆ ಅಲೆಯುತ್ತಿರುವುದರಿಂದಲೇ ಬೆಳಗಾವಿ ಇನ್ನೂ ಕರ್ನಾಟಕದ ಭಾಗವಾಗಿದೆ ಎಂದರೆ ಉತ್ಪೇಕ್ಷೆಯಾಗಲಾರದು.
ಎನ್.ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದಾಗ ಬೆಳಗಾವಿ ನಗರಪಾಲಿಕೆಯ ಆಡಳಿತ ಮಹಾರಾಷ್ಟ್ರ ಏಕೀಕರಣ ಸಮಿತಿಯ ಕೈಯಲ್ಲಿತ್ತು. ನಗರ ಪಾಲಿಕೆಯ ಮೇಲೆ ಎಂ ಇ ಎಸ್ ಬಾವುಟ ಹಾರಿಸಲಾಗುತ್ತಿತ್ತು. ಅಲ್ಲದೇ ಪಾಲಿಕೆಯ ನಿರ್ಣಯಗಳನ್ನೂ ಮರಾಠಿಯಲ್ಲೇ ಬರೆಯಲು ಒತ್ತಾಯಿಸಲಾಗುತ್ತಿತ್ತು. ಈ ಸಂದರ್ಭದಲ್ಲಿ ಬೆಳಗಾವಿ ಮೇಯರ್ ಆಗಿದ್ದವರು ವಿಜಯ ಮೋರೆ ಎಂಬ ಮರಾಠಿ ಭಾಷಾಂಧ. ಒಮ್ಮೆ ಬೆಳಗಾವಿ ಮಹಾನಗರಪಾಲಿಕೆಯ ಸಭೆಯಲ್ಲಿ ಎಂಇಎಸ್ ಸದಸ್ಯರು ಕುತಂತ್ರ ನಡೆಸಿ, ಬೆಳಗಾವಿ ನಗರವು ಮಹಾರಾಷ್ಟ್ರಕ್ಕೆ ಸೇರಬೇಕೆಂಬ ನಿರ್ಣಯ ಅಂಗೀಕರಿಸಿದರು.
ಈ ಘಟನೆ ನಡೆಯುತ್ತಿದ್ದಂತೆ ಇಡೀ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಯಿತು. ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಇಡೀ ರಾಜ್ಯಾದ್ಯಂತ ಹೋರಾಟ ಸಂಘಟಿಸಿದರು. ಈ ಸಂದರ್ಭದಲ್ಲಿ ವಿಜಯ ಮೋರೆ ಇತರ ಎಂಇಎಸ್ ಮುಖಂಡರೊಂದಿಗೆ ಬೆಂಗಳೂರಿಗೆ ಬಂದರು. ಶಾಸಕರ ಭವನದಲ್ಲಿ ವಿಜಯ್ ಮೋರೆ ಇರುವುದನ್ನು ಖಚಿತಪಡಿಸಿಕೊಂಡ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಅಲ್ಲಿಗೆ ತೆರಳಿ ಮೋರೆ ಮೂತಿಗೆ ಮಸಿ ಬಳಿದರು.
ಮೋರೆ ಮುಖಕ್ಕೆ ಮಸಿ ಇಡೀ ರಾಜ್ಯವ್ಯಾಪಿ ಪ್ರಚಾರ ಪಡೆಯಿತು. ಮಸಿ ಬಳಿದ ಪ್ರಕರಣದಿಂದಾಗಿ ನಿಜವಾಗಿಯೂ ಕನ್ನಡಿಗರಲ್ಲಿ ಸ್ವಾಭಿಮಾನ ಪ್ರಜ್ಞೆ ಜಾಗೃತವಾಯಿತು. ಬೆಳಗಾವಿಯ ವಿಷಯ ರಾಜ್ಯದಾದ್ಯಂತ ಪ್ರತಿಧ್ವನಿಸಿತು. ರಕ್ಷಣಾ ವೇದಿಕೆಯ ವರ್ತನೆಯನ್ನು ಕೆಲವು ಮಂದಿ ಟೀಕಿಸಿದರೂ ಕೂಡ ಬಹುಸಂಖ್ಯಾತರೂ ಬೆಂಬಲಿಸಿದರು. ಅದೇ ಉತ್ಸಾಹದಲ್ಲೇ ನಗರಪಾಲಿಕೆಯ ಮೇಲೆ ಹಾರಿಸಲಾಗಿದ್ದ ಎಂ.ಇ.ಎಸ್. ಬಾವುಟವನ್ನೂ ಕಿತ್ತೆಸೆದು, ಕನ್ನಡ ಬಾವುಟವನ್ನು ಹಾರಿಸಲಾಯಿತು.
ಆನಂತರ ನಿರಂತರ ಹೋರಾಟ ನಡೆಯಿತು. ಹೋರಾಟದ ಫಲವಾಗಿ ರಾಜ್ಯ ಸರ್ಕಾರ ನಗರಪಾಲಿಕೆ ಆಡಳಿತವನ್ನು ಸೂಪರ್ ಸೀಡ್ ಮಾಡಿತು. ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾದಾಗ ಬೆಳಗಾವಿಯಲ್ಲಿ ವಿಧಾನಸಭೆ ಅಧಿವೇಶನ ನಡೆಸುವ ಮೂಲಕ ಬೆಳಗಾವಿ ಕರ್ನಾಟಕದ ಅವಿಚ್ಛಿನ್ನ ಅಂಗವೆಂದು ಸಾರಿದರು. ಕಿತ್ತೂರು ಚೆನ್ನಮ್ಮರಂತ ಸ್ವಾಭಿಮಾನಿ ಮಹಿಳೆಯ ತವರು ಕರ್ನಾಟಕದ್ದೆಂಬ ಸ್ಪಷ್ಟ ಸಂದೇಶವನ್ನು ಮರಾಠಿಗರಿಗೆ ಕುಮಾರಸ್ವಾಮಿ ರವಾನಿಸಿದರು.
ಬೆಳಗಾವಿ ಕರ್ನಾಟಕದ ಉತ್ತರದ ರಾಜಧಾನಿ ಎಂದು ಬಿಂಬಿಸಲು ಈ ವಿಧಾನಸಭಾಧಿವೇಶನ ದಾರಿ ಮಾಡಿಕೊಟ್ಟಿತು. ಈ ಸತ್‌ಸಂಪ್ರದಾಯವನ್ನು ಮುಂದುವರೆಸಿದ ಹಾಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ಬೆಳಗಾವಿಯಲ್ಲಿ ವಿಧಾನಸಭೆ ಅಧಿವೇಶನ ನಡೆಸಿದರು. ಬೆಳಗಾವಿ ಪರವಾದ ನಿರ್ಣಯವನ್ನೂ ಕೈಗೊಂಡಿದ್ದಲ್ಲದೇ, ಅಲ್ಲಿಯೇ ವಿಧಾನಸೌಧದಂತಹ ಕಟ್ಟಡ ನಿರ್ಮಾಣಕ್ಕೂ ಮುಂದಾದರು.
ರಕ್ಷಣಾ ವೇದಿಕೆಯ ಹೋರಾಟದ ಫಲ, ಸರ್ಕಾರಗಳು ತೋರಿದ ಇಚ್ಛಾಶಕ್ತಿಯಿಂದ ಇತ್ತೀಚೆಗೆ ನಡೆದ ಬೆಳಗಾವಿ ನಗರಪಾಲಿಕೆ ಚುನಾವಣೆಯಲ್ಲಿ ಕನ್ನಡಿಗರೊಬ್ಬರು ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಮರಾಠಿಗರ ಬೆಂಬಲ ಪಡೆದಿದ್ದ ಎಂ ಇ ಎಸ್ ಮಣ್ಣು ಮುಕ್ಕಿದ್ದು, ಕನ್ನಡಿಗರು ಪ್ರಾಬಲ್ಯ ಮೆರೆದಿದ್ದಾರೆ. ಅಷ್ಟರಮಟ್ಟಿಗೆ ರಕ್ಷಣಾ ವೇದಿಕೆಯ ಹೋರಾಟ ಸಾಫಲ್ಯ ಕಂಡಿದೆ.
ಹಾಗಿದ್ದೂ ಬೆಳಗಾವಿಯ ವಿಷಯ ಇತ್ಯರ್ಥವಾಗಿಲ್ಲ. ಗಡಿ ಭಾಗದಲ್ಲಿ ಮೇಳಾವ, ಮಹಾಮೇಳಾವ ನಡೆಸುತ್ತಿರುವ ಎಂ ಇ ಎಸ್ ಬೆಳಗಾವಿಯ ಹಕ್ಕು ಪ್ರತಿಪಾದಿಸಲು ಯತ್ನಿಸುತ್ತಲೇ ಇದೆ. ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಛಗನ್ ಭುಜಬಲ್, ಗೃಹಸಚಿವ ಪಾಟೀಲ್ ಮೊದಲಾದವರು ಕ್ಯಾತೆಯನ್ನು ಮುಂದುವರೆಸುತ್ತಲೇ ಇದ್ದಾರೆ. ಮಹಾರಾಷ್ಟ್ರ ಕ್ಯಾತೆ ತೆಗೆದಾಗಲಷ್ಟೇ ಗರ್ಜಿಸುವ ರಾಜ್ಯ ಸರ್ಕಾರ ನಂತರ ಸುಮ್ಮನಾಗಿದೆ. ಮೊದಲ ವರ್ಷ ಬೆಳಗಾವಿಯಲ್ಲಿ ಅಧಿವೇಶನ ನಡೆಸಿದ್ದ ಯಡಿಯೂರಪ್ಪನವರು ಕಳೆದ ವರ್ಷ ಕುಂಟುನೆಪವೊಡ್ಡಿ ಬೆಳಗಾವಿ ಅಧಿವೇಶನವನ್ನು ರದ್ದುಗೊಳಿಸಿದರು. ಮಹಾರಾಷ್ಟ್ರದಲ್ಲಿ ನಡೆಯುತ್ತಿದ್ದ ಚುನಾವಣೆಯಲ್ಲಿ ಅಲ್ಲಿನ ಬಿಜೆಪಿಗೆ ಹಿನ್ನಡೆಯಾಗದಿರಲಿ ಎಂದೇ ಅಧಿವೇಶನ ನಡೆಸಿರಲಿಲ್ಲ ಎಂಬುದು ಬೇರೆ ಮಾತು.
ಮಹಾಜನ್ ವರದಿ: ಏನು ಎತ್ತ?
ಬೆಳಗಾವಿ ವಿಷಯದಲ್ಲಿ ಐತೀರ್ಪು ಅಥವಾ ಇದಮಿತ್ಥಂ ಎಂದು ಹೇಳಬಹುದಾಗಿದ್ದು ನ್ಯಾಯಮೂರ್ತಿ ಮೆಹರ್‌ಚಂದ್ ಮಹಾಜನ್ ಆಯೋಗದ ವರದಿ. ಕರ್ನಾಟಕ-ಕೇರಳ-ಮಹಾರಾಷ್ಟ್ರ ಗಡಿ ತಕರಾರಿನ ಬಗ್ಗೆ ಅಧ್ಯಯನ ನಡೆಸಿ ಮಹಾಜನ್ ರೂಪಿಸಿದ ವರದಿ ಐತಿಹಾಸಿಕ ದಾಖಲೆಯಾಗಿದೆ. ಮಹಾಜನ್ ವರದಿ ಸಲ್ಲಿಸುವವರೆಗೆ ಅದೇ ಅಂತಿಮ ತೀರ್ಪೆಂದು ಹೇಳುತ್ತಿದ್ದ ಮಹಾರಾಷ್ಟ್ರ ’ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದೆಂದು ಮಹಾಜನ್ ದಾಖಲೆ ಸಮೇತ’ ಋಜುವಾತು ಪಡಿಸಿದ ತರವಾಯ ವರಸೆ ಬದಲಿಸಲು ಆರಂಭಿಸಿತು. ಅದೇ ಈಗ ವಿವಾದಕ್ಕೆ ಕಾರಣವಾಗಿರುವ ಸಂಗತಿಯಾಗಿದೆ.
ಮಹಾಜನ್ ಆಯೋಗವನ್ನು ನೇಮಿಸಲು ಒತ್ತಾಯಿಸಿದ್ದು ಕರ್ನಾಟಕವಲ್ಲ. ಬದಲಿಗೆ ಮಹಾರಾಷ್ಟ್ರವೇ. ಕರ್ನಾಟಕವೆಂಬುದು ಘೋಷಣೆಯಾಗದೇ ಇದ್ದ ಹೊತ್ತಿನಲ್ಲಿ ಅಸ್ತಿತ್ವದಲ್ಲಿದ್ದ ಮೈಸೂರು ಸರ್ಕಾರ ಹಾಗೂ ಆಗಿನ ವಿರೋಧ ಪಕ್ಷಗಳ ಪ್ರಬಲ ವಿರೋಧದ ಮಧ್ಯೆಯೂ ಕೇಂದ್ರ ಸರ್ಕಾರ ಮಹಾಜನ್ ನೇತೃತ್ವದ ಆಯೋಗವನ್ನು ರಚಿಸಿ, ಕರ್ನಾಟಕ-ಮಹಾರಾಷ್ಟ್ರ-ಕೇರಳದ ಮಧ್ಯೆ ಇದ್ದ ಗಡಿ ತಕರಾರಿನ ಬಗ್ಗೆ ಸಮಗ್ರ ವರದಿ ಸಲ್ಲಿಸಲು ನಿವೇದಿಸಿಕೊಂಡಿತ್ತು.
ಸ್ವಾತಂತ್ರ್ಯಪೂರ್ವದಲ್ಲಾಗಲಿ, ಮಹಾತ್ಮಗಾಂಧಿ ಸಮ್ಮುಖದಲ್ಲಿ ನಡೆದ ೧೯೨೪ರ ಐತಿಹಾಸಿಕ ಬೆಳಗಾವಿಯ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧಿವೇಶನದಲ್ಲಿ ಕೂಡ ಬೆಳಗಾವಿಯ ವಿಷಯ ಚರ್ಚೆಯ ಸಂಗತಿಯಾಗಿರಲೇ ಇಲ್ಲ. ಎಐಸಿಸಿ ಅಧಿವೇಶನದಲ್ಲಿ ಕರ್ನಾಟಕ ಏಕೀಕರಣ ಹೋರಾಟದ ಮುಂಚೂಣಿಯ ಕರ್ತೃಗಳಲ್ಲಿ ಒಬ್ಬರಾದ ಹುಯಿಲಗೋಳ ನಾರಾಯಣರು ರಚಿಸಿದ ’ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು’ ಎಂಬ ಹಾಡು ಮಾರ್ದನಿಸಿತ್ತು. ಆಗ ೧೦ ವರ್ಷದವರಾಗಿದ್ದ ಗಂಗೂಬಾಯಿ ಹಾನಗಲ್ ಗಾಂಧೀಜಿ ಸಮ್ಮುಖದಲ್ಲೇ ಈ ಗೀತೆಯನ್ನು ಹಾಡಿದ್ದರು. ಕರ್ನಾಟಕದ ಹೆಮ್ಮೆಯನ್ನು ಸಾರಿದ್ದರು. ಆಗಲೂ ಯಾವುದೇ ತಕರಾರು ಮೂಡಿರಲಿಲ್ಲ.
ಆ ಕಾಲದಲ್ಲಿ ಮಹಾರಾಷ್ಟ್ರ, ಕರ್ನಾಟಕ ರಾಜ್ಯಗಳು ರಚನೆಯಾಗಿರಲಿಲ್ಲ. ಮಹಾರಾಷ್ಟ್ರ ಮುಂಬೈ ಪ್ರಾಂತ್ಯಕ್ಕೆ ಒಳಪಟ್ಟಿದ್ದರೆ, ಕರ್ನಾಟಕ ಮೈಸೂರು ಹಾಗೂ ಹೈದರಾಬಾದ್ ಪ್ರಾಂತ್ಯಗಳಲ್ಲಿ ಹಂಚಿಹೋಗಿತ್ತು.
ಕನ್ನಡಿಗರ ಸ್ವಾಭಿಮಾನದ ಹೋರಾಟದ ಫಲವಾಗಿ ೧೯೫೬ರ ನವೆಂಬರ್ ೧ರಂದು ಮೈಸೂರು ಸ್ವತಂತ್ರ್ಯ ರಾಜ್ಯವೆಂದು ಕರೆಸಿಕೊಂಡಿತು. ಕರ್ನಾಟಕ ಏಕೀಕರಣದ ಮೊದಲ ಮಜಲು ಇದಾಗಿತ್ತು. ಆಗಲೂ ಕೂಡ ಮಹಾರಾಷ್ಟ್ರ ಉದಯವಾಗಿರಲಿಲ್ಲ.
ಫಜಲ್ ಅಲಿ ಕಮೀಶನ್ ಅಥವಾ ರಾಜ್ಯ ಪುನರ್ವಿಂಗಡಣಾ ಆಯೋಗದ ಶಿಫಾರಸ್ಸಿನ ಮೇರೆಗೆ ೧೯೫೬ರಲ್ಲಿ ರಾಜ್ಯಗಳು ಪುನರ್ವಿಂಗಡಣೆಯಾದ ಮೇಲೆ ಯಾವ ಭಾಗ ಯಾವ ರಾಜ್ಯಕ್ಕೆ ಸೇರಬೇಕೆಂಬ ಚರ್ಚೆ ಶುರುವಾಯಿತು. ಜನರಾಡುವ ಭಾಷೆಯ ಆಧಾರದ ಮೇಲೆ ರಾಜ್ಯಗಳ ವಿಂಗಡಣೆಯಾದಾಗ ಕನ್ನಡ, ಮಲೆಯಾಳಿ, ಮರಾಠಿ, ತೆಲುಗು ಮಾತನಾಡುವ ಅನೇಕ ಪ್ರದೇಶಗಳ ಜನ ಗಡಿ ಭಾಗದ ಅಕ್ಕಪಕ್ಕದ ರಾಜ್ಯಗಳಲ್ಲಿ ಹಂಚಿ ಹೋದರು. ಫಜಲ್ ಅಲಿ ಆಯೋಗ ಕೂಡ ಬೆಳಗಾವಿಯನ್ನು ಕರ್ನಾಟಕದಲ್ಲೇ ಉಳಿಸಿತ್ತು.
ಆನಂತರ ಶುರುವಾದ ತಕರಾರುಗಳನ್ನು ಪರಿಶೀಲಿಸಿ, ಜನರನ್ನು ಸಮಾಧಾನ ಮಾಡಲು ಧಾರ್ ಆಯೋಗ ಹಾಗೂ ಜೆವಿಪಿ ಕಮೀಶನ್ ಎಂದೇ ಖ್ಯಾತವಾದ ಜವಾಹರ್ ಲಾಲ್ ನೆಹರು, ವಲ್ಲಭಬಾಯ್ ಪಟೇಲ್ ಹಾಗೂ ಪಟ್ಟಾಭಿ ಸೀತಾರಾಮಯ್ಯ ಅವರನ್ನೊಳಗೊಂಡ ಆಯೋಗಗಳು ರಚನೆಗೊಂಡವು. ಧಾರ್ ಹಾಗೂ ಜೆವಿಪಿ ಆಯೋಗಗಳು ಬೆಳಗಾವಿಯು ಕರ್ನಾಟಕದ್ದೇ ಎಂದು ಸ್ಪಷ್ಟವಾಗಿ ಹೇಳಿವೆ.
ಕರ್ನಾಟಕ-ಮಹಾರಾಷ್ಟ್ರ ಮಧ್ಯೆ ಉಂಟಾದ ತಕರಾರನ್ನು ಎರಡೂ ರಾಜ್ಯಗಳೂ ಬಗೆಹರಿಸಿಕೊಳ್ಳಲಾಗದೇ ಇದ್ದ ಪರಿಸ್ಥಿತಿ ನಿರ್ಮಾಣವಾಯಿತು. ಆಗಷ್ಟೇ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಮುಂಚೂಣಿ ಪಾತ್ರವಹಿಸಿದ್ದ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಎಲ್ಲಾ ವಿಷಯಗಳಲ್ಲೂ ನಿರ್ಣಾಯಕವಾಗಿತ್ತು. ಎ ಐ ಸಿಸಿ ತೀರ್ಮಾನಕ್ಕೆ ಎಲ್ಲಾ ರಾಜ್ಯಗಳೂ ತಲೆಬಾಗುತ್ತಿದ್ದವು.
೧೯೬೫-೬೬ರ ಆಸುಪಾಸಿನಲ್ಲಿ ಮಹಾರಾಷ್ಟ್ರ-ಕರ್ನಾಟಕದ ಗಡಿ ತಕರಾರು ಎರಡೂ ಸರ್ಕಾರಗಳಲ್ಲಿ, ಕಾಂಗ್ರೆಸ್ ಸಭೆಗಳಲ್ಲಿ ತೀವ್ರ ಚರ್ಚೆಗೆ ಒಳಗಾಯಿತು. ೧೯೬೫ರಲ್ಲಿ ಬೆಂಗಳೂರಿನಲ್ಲಿ ನಡೆದ ಎಐಸಿಸಿ ಸಭೆಯಲ್ಲಿ ಚರ್ಚೆಗೆ ನಡೆದು, ಎರಡೂ ರಾಜ್ಯಗಳು ಸರ್ವಸಮ್ಮತ ತೀರ್ಮಾನಕ್ಕೆ ಬರಲು ಸಾಧ್ಯವಾಗದೇ ಇರುವುದರಿಂದ ಎ ಐ ಸಿಸಿಯೇ ಇದಕ್ಕೆ ಪರಿಹಾರ ಕಲ್ಪಿಸಬೇಕೆಂಬ ನಿರ್ಣಯವನ್ನೂ ಕೈಗೊಳ್ಳಲಾಯಿತು.
೧೯೬೬ರಲ್ಲಿ ಮುಂಬೈಯ ಷಣ್ಮುಗಾನಂದ ಭವನನಲ್ಲಿ ತಮಿಳುನಾಡು ಮುಖ್ಯಮಂತ್ರಿಯೂ ಆಗಿದ್ದ ಎಐಸಿಸಿ ಅಧ್ಯಕ್ಷ ಕೆ. ಕಾಮರಾಜ್ ಅಧ್ಯಕ್ಷತೆಯಲ್ಲಿ ಎಐಸಿಸಿ ಕಾರ್ಯಕಾರಿ ಸಮಿತಿ ಸಭೆ ಆಯೋಜನೆಗೊಂಡಿತ್ತು. ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದ ವಸಂತ್ ಪಿ ನಾಯಕ್, ಕೇಂದ್ರ ರಕ್ಷಣಾ ಸಚಿವರಾಗಿದ್ದ ಮಹಾರಾಷ್ಟ್ರದವರೇ ಆದ ವೈ.ಬಿ. ಚವ್ಹಾಣ್, ಸದೋಬ ಪಾಟೀಲ್ ಮತ್ತಿತರ ಮಹಾರಾಷ್ಟ್ರ ನಾಯಕರು ಸಮಸ್ಯೆ ಇತ್ಯರ್ಥಕ್ಕೆ ಏಕಸದಸ್ಯ ಆಯೋಗವನ್ನು ರಚಿಸುವಂತೆ ಆಗ್ರಹಿಸಿದರು. ರಾಷ್ಟ್ರೀಯ ದೃಷ್ಟಿಯಿಂದ ಇದು ಅನಿವಾರ್ಯವಾಗಿದೆ ಎಂದು ಅಭಿಪ್ರಾಯಪಟ್ಟ ಎಐಸಿಸಿ ಏಕಸದಸ್ಯ ಆಯೋಗವನ್ನು ರಚಿಸುವುದಾಗಿ ನಿರ್ಣಯ ಕೈಗೊಂಡಿತು. ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಸಿದ್ದವನಹಳ್ಳಿ ನಿಜಲಿಂಗಪ್ಪ ಇದನ್ನು ಸ್ಪಷ್ಟವಾಗಿ ವಿರೋಧಿಸಿದ್ದರು.
ಎಐಸಿಸಿ ಶಿಫಾರಸ್ಸಿನ ಮೇರೆಗೆ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಾಧೀಶರಾಗಿದ್ದ ಮೆಹರ್‌ಚಂದ್ ಮಹಾಜನ್‌ರ ನೇತೃತ್ವದ ಏಕ ಸದಸ್ಯ ಆಯೋಗವನ್ನು ಕೇಂದ್ರ ಸರ್ಕಾರ ರಚಿಸಿತು. ಮಹಾಜನ್‌ರವರು ಈ ಹಿಂದೆ ಕಾಶ್ಮೀರ ಗಡಿಯನ್ನು ನಿರ್ಣಯಿಸುವ ಆಯೋಗದ ನೇತೃತ್ವವನ್ನೂ ವಹಿಸಿದ್ದವರು.
ಮೂರು ರಾಜ್ಯಗಳ ಗಡಿಭಾಗದಲ್ಲಿ ಓಡಾಡಿದ ಮಹಾಜನ್‌ರವರು, ವಿವಾದಿತ ಪ್ರದೇಶಗಳ ಜನರನ್ನು, ರಾಜಕೀಯ ನಾಯಕರನ್ನು, ಸಂಘಸಂಸ್ಥೆಗಳ ಪ್ರಮುಖರನ್ನು ಭೇಟಿ ಮಾಡಿ ಅಹವಾಲು ಸ್ವೀಕರಿಸಿದರು. ಬ್ರಿಟಿಶರ ಆಡಳಿತಾವಧಿಯಲ್ಲಿ ರವಾನೆಯಾಗಿದ್ದ, ದಾಖಲಾಗಿದ್ದ ಸರ್ಕಾರಿ ಕಡತಗಳನ್ನು ಪರಿಶೀಲಿಸಿ ಸಂಗ್ರಹಿಸಿದರು. ಎಲ್ಲವನ್ನೂ ಆಮೂಲಾಗ್ರವಾಗಿ ಅಧ್ಯಯನ ಮಾಡಿ ೧೯೬೭ರ ಆಗಸ್ಟ್ ೨೭ರಂದು ಕೇಂದ್ರ ಗೃಹಖಾತೆಗೆ ವರದಿಯನ್ನು ಸಲ್ಲಿಸಿದರು.
ಏಕಸದಸ್ಯ ಆಯೋಗದ ರಚನೆಗಾಗಿ ಒತ್ತಾಯಿಸಿದ್ದ ಮಹಾರಾಷ್ಟ್ರದ ಮುಖ್ಯಮಂತ್ರಿ ವಸಂತ್ ಪಿ ನಾಯಕ್, ಕೇಂದ್ರ ರಕ್ಷಣಾ ಸಚಿವ ವೈ.ಬಿ. ಚವ್ಹಾಣ್ ಮೊದಲಾದವರು ಮಹಾರಾಷ್ಟ್ರವು ಮಹಾಜನ್ ವರದಿಯ ಶಿಫಾರಸ್ಸಿಗೆ ಶಿರಬಾಗಿ ಬದ್ಧವಾಗಿರುತ್ತದೆ ಎಂದು ಘೋಷಿಸಿದ್ದರಲ್ಲದೇ, ಎಐಸಿಸಿ ತೀರ್ಮಾನಕ್ಕೆ ಉಭಯರಾಜ್ಯಗಳು ಬದ್ಧವಾಗಿರಬೇಕೆಂದು ಕರೆ ನೀಡಿದ್ದರು.
ಆಯೋಗದ ರಚನೆಯನ್ನು ವಿರೋಧಿಸಿದ್ದ ಕರ್ನಾಟಕದ ಆಗಿನ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಆ ತರುವಾಗ ಮಹಾಜನ್ ವರದಿಯನ್ನು ಪಾಲಿಸುವುದಾಗಿ ಹೇಳಿದ್ದರು. ಅದರಂತೆ ೧೯೬೭ ಡಿಸೆಂಬರ್ ೨೦ರಂದು ನಡೆದ ಕರ್ನಾಟಕ ವಿಧಾನ ಮಂಡಲದ ಅಧಿವೇಶನವು ಸರ್ವಾನುಮತದ ನಿರ್ಣಯ ಕೈಗೊಂಡು, ಮಹಾಜನ್ ವರದಿಯನ್ನು ಅನುಷ್ಠಾನ ಮಾಡುವಂತೆ ಕೇಂದ್ರವನ್ನು ಕೋರಿತು.
ಏನಿತ್ತು ವರದಿ?
ಮಹಾಜನ್ ನೀಡಿದ ವರದಿ ಪ್ರಕಾರ ಕನ್ನಡಿಗರೇ ಹೆಚ್ಚಾಗಿರುವ ಸೊಲ್ಲಾಪುರ, ಅಕ್ಕಲಕೋಟೆ, ಜತ್ ಸೇರಿದಂತೆ ೩೦೦ ಹಳ್ಳಿಗಳು ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಸೇರಬೇಕು. ಅದೇ ರೀತಿ ಅರಣ್ಯ ಸಂಪತ್ತಿನ ಆಗರವಾಗಿರುವ ಕರ್ನಾಟಕದಲ್ಲಿರುವ ಖಾನಾಪುರ, ನಿಪ್ಪಾಣಿ, ವೀರರಾಣಿ ಚೆನ್ನಮ್ಮನ ತವರು ಕಿತ್ತೂರು ಸೇರಿದಂತೆ ೨೪೦ ಹಳ್ಳಿಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಹೇಳಲಾಗಿತ್ತು.
ಆದರೆ ಬೆಳಗಾವಿಯನ್ನು ಭೌಗೋಳಿಕವಾಗಿ ಅಚ್ಚ ಕನ್ನಡ ಪ್ರದೇಶಗಳು ಸುತ್ತುವರೆದಿದ್ದು, ಅದು ಕರ್ನಾಟಕಕ್ಕೆ ಸೇರಬೇಕೆಂದು ಮಹಾಜನ್ ಸ್ಪಷ್ಟವಾಗಿ ಉಲ್ಲೇಖಿಸಿದ್ದರು. ಬೆಳಗಾವಿಯ ದಾಖಲೆಗಳೆಲ್ಲಾ ಕನ್ನಡದಲ್ಲಿದ್ದು, ಆಗಿನ ಅಮಲ್ದಾರ್, ಕಲೆಕ್ಟರ್ ಕನ್ನಡದಲ್ಲೇ ರೆಕಾರ್ಡ್ಸ್ ಆಫ್ ರೈಟ್ಸ್‌ಗಳನ್ನು ಬರೆದಿಟ್ಟಿದ್ದಾರೆಂದು ವಿವರಿಸಿದ್ದರು.
ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರುವುದಿಲ್ಲವೆಂಬ ಖಚಿತ ವರದಿಯನ್ನು ನೋಡಿದ ಮಹಾರಾಷ್ಟ್ರದ ಮುಖ್ಯಮಂತ್ರಿ ವಸಂತ್ ಪಿ ನಾಯಕ್ ಹಾಗೂ ಆಗಿನ ರಕ್ಷಣಾ ಸಚಿವ ವೈ.ಬಿ. ಚವ್ಹಾಣ್ ಮಾತು ಬದಲಿಸಿದರು. ಅದೇ ಅಂತಿಮ ಎಂದು ಹೇಳುತ್ತಿದ್ದವರು ಅದನ್ನು ಒಪ್ಪುವುದಿಲ್ಲವೆಂದರು. ಮಹಾರಾಷ್ಟ್ರದ ಸೇನಾಪತಿ ಬಾಪಟ್ ಎಂಬುವರು ೧೯೬೭ರ ಅಕ್ಟೋಬರ್‌ನಲ್ಲಿ ಹೋರಾಟವನ್ನು ಆರಂಭಿಸಿ, ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಮಹಾಜನ್ ವರದಿ ಉಲ್ಲೇಖಿಸಬೇಕೆಂದು ಒತ್ತಾಯಿಸಿದ್ದೂ ನಡೆಯಿತು.
ಅಂದಿನಿಂದ ಶುರುವಾದ ಮರಾಠಿಗರ ಉಪಟಳ ಇಂದೂ ಕೂಡ ಮುಂದುವರೆದಿದೆ. ಆಗಿನ ಮುಖ್ಯಮಂತ್ರಿ ವಸಂತ್ ನಾಯಕ್‌ರಿಂದ ಹಿಡಿದು ಈಗಿನ ಮುಖ್ಯಮಂತ್ರಿ ಅಶೋಕ್ ಚವ್ಹಾಣ್‌ವರೆಗೆ ಎಲ್ಲರೂ ಬೆಳಗಾವಿಯ ವಿಷಯದಲ್ಲಿ ತಮ್ಮ ನಿಲುವು ಬದಲಿಸಲಿಲ್ಲ. ಮಹಾಜನ ವರದಿಯನ್ನು ಒಪ್ಪಿಕೊಂಡೇ ಇಲ್ಲ.
ಕರ್ನಾಟಕ ಮಾತ್ರ ತನ್ನ ಭಾಗವನ್ನೂ ಉಳಿಸಿಕೊಳ್ಳಲು ಹೆಣಗಾಡುತ್ತಲೇ ಇದೆ. ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ, ಎಸ್. ನಿಜಲಿಂಗಪ್ಪ, ವೀರೇಂದ್ರ ಪಾಟೀಲ್, ರಾಮಕೃಷ್ಣ ಹೆಗಡೆ, ಎಸ್. ಬಂಗಾರಪ್ಪ ತಮ್ಮದೇ ಪಕ್ಷದ ಸರ್ಕಾರವಿದ್ದಾಗ ಕೇಂದ್ರದ ಮೇಲೆ ಒತ್ತಡವನ್ನು ಹಾಕಿದ್ದಾರೆ. ಮಹಾರಾಷ್ಟ್ರದ ಸಂಸದರು, ಕೇಂದ್ರ ಸರ್ಕಾರದಲ್ಲಿ ಪ್ರಾಬಲ್ಯ ಹೊಂದಿರುವ ಸಚಿವರು ಕೇಂದ್ರ ಸರ್ಕಾರದಲ್ಲಿ ಈವರೆಗೂ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಬೆಳಗಾವಿಯ ಸಂಗತಿ ಇನ್ನೂ ಇತ್ಯರ್ಥವಾಗಿಲ್ಲ.
ಮಹಾರಾಷ್ಟ್ರದಲ್ಲಿ ಕಾಂಗ್ರೆಸ್, ಬಿಜೆಪಿ, ಶಿವಸೇನೆ, ಎಂ ಇ ಎಸ್, ಎನ್‌ಸಿಪಿ ಹೀಗೆ ಎಲ್ಲಾ ಪಕ್ಷದವರೂ ಬೆಳಗಾವಿಗಾಗಿ ಪಟ್ಟು ಹಿಡಿದಿದ್ದಾರೆ. ಅವಶ್ಯಕತೆ ಬಿದ್ದಾಗಲೆಲ್ಲಾ ಕೇಂದ್ರದ ಮೇಲೆ ಒತ್ತಡ ಹಾಕುತ್ತಲೇ ಇದ್ದಾರೆ.
ಆದರೆ ನಮ್ಮ ರಾಜ್ಯದ ಸಂಸದರ ನಿರ್ಲಕ್ಷ್ಯ, ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆ ಬೆಳಗಾವಿಯ ಹಿತ ಕಾಪಾಡುವಲ್ಲಿ ಎದ್ದು ಕಾಣುತ್ತಿದೆ. ಮುಖ್ಯಮಂತ್ರಿಗಳಾಗಿದ್ದವರು ಪತ್ರ ಬರೆವ ಮೂಲಕ ಕೇಂದ್ರದ ಮೇಲೆ ಒತ್ತಡ ಹಾಕಿದರೆ ಸಾಲದು. ಕೇಂದ್ರದ ಮೇಲೆ ಒತ್ತಡ ತರುವ ನಿಟ್ಟಿನಲ್ಲಿ ಜನಾಂದೋಲನ ಅಥವಾ ದೆಹಲಿ ಮಟ್ಟದ ಲಾಬಿ ಮಾಡಬೇಕು. ರಾಜ್ಯದಲ್ಲಿರುವ ಸರ್ಕಾರಗಳು ಅದನ್ನು ಮಾಡುವುದರಿಂದ ಮಾತ್ರ ಬೆಳಗಾವಿ ಉಳಿಯಬಲ್ಲದು.
ಯಾರು ಹೊಣೆ?
ಕರ್ನಾಟಕದಲ್ಲಿ ೧೯ ಸಂಸದರನ್ನು ಹೊಂದಿರುವ ಬಿಜೆಪಿ ಈಗಲಾದರೂ ಕೇಂದ್ರದ ಮೇಲೆ ಒತ್ತಡ ಹೇರಬೇಕು. ಸಂಸತ್‌ನಲ್ಲಿ ಬೆಳಗಾವಿಯ ಪರವಾದ ಧ್ವನಿ ಎತ್ತಬೇಕು. ಆಗ ಮಾತ್ರ ಕರ್ನಾಟಕದ ಜನತೆ ಬಿಜೆಪಿಯನ್ನು ಗೆಲ್ಲಿಸಿದ್ದಕ್ಕೆ ಸಾರ್ಥಕತೆ ಅನುಭವಿಸಿಯಾರು. ಕೇಂದ್ರ ಮಟ್ಟದಲ್ಲಿ ಪ್ರಭಾವಿಯಾಗಿರುವ, ಕೇಂದ್ರ ಸಚಿವರೂ ಆಗಿದ್ದ ಅನಂತಕುಮಾರ್, ಮಾಜಿ ಕಾನೂನು ಸಚಿವ ಡಿ.ಬಿ. ಚಂದ್ರೇಗೌಡ ಬಿಜೆಪಿಯನ್ನು ಪ್ರತಿನಿಧಿಸುತ್ತಿದ್ದಾರೆ. ಅವರಾದರೂ ಎಲ್ಲಾ ಸಂಸದರನ್ನು ಒಗ್ಗೂಡಿಸಿ ಕೇಂದ್ರವನ್ನು ಮಣಿಸುವ ಕೆಲಸ ಮಾಡಬೇಕು.
ಅದು ಅವರ ಹೊಣೆ ಮಾತ್ರವಲ್ಲ. ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕಕ್ಕೆ ಸಿಗದಷ್ಟು ಪ್ರಾತಿನಿಧ್ಯ ಈ ಬಾರಿಯ ಕೇಂದ್ರ ಸಚಿವ ಸಂಪುಟದಲ್ಲಿ ಇದೆ. ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ಎಸ್.ಎಂ. ಕೃಷ್ಣ ಕೇಂದ್ರ ವಿದೇಶಾಂಗ ಸಚಿವರಾಗಿದ್ದಾರೆ. ಮತ್ತೋರ್ವ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ, ಬೆಳಗಾವಿಯ ವಿಷಯವನ್ನು ಕಾನೂನು ಪ್ರಕಾರ ಇತ್ಯರ್ಥ ಪಡಿಸುವ ಅಧಿಕಾರ ಹೊಂದಿದ ಕಾನೂನು ಸಚಿವರಾಗಿದ್ದಾರೆ. ಪ್ರಭಾವಿ ನಾಯಕ ಮಲ್ಲಿಕಾರ್ಜುನ ಖರ್ಗೆ ಕಾರ್ಮಿಕ ಸಚಿವರಾಗಿದ್ದು, ಕೋಲಾರದ ಹಿರಿಯ ರಾಜಕಾರಣಿ ಮುನಿಯಪ್ಪ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದಾರೆ.
ಎಐಸಿಸಿಯಲ್ಲಿ ತನ್ನದೇ ಆದ ಪ್ರಭಾವಹೊಂದಿರುವ ಆಸ್ಕರ್ ಫರ್ನಾಂಡೀಸ್, ಬಿ.ಕೆ. ಹರಿಪ್ರಸಾದ್ ರಾಜ್ಯಸಭಾ ಸದಸ್ಯರಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಸಂಸದರಾಗಿದ್ದಾರೆ. ಇವರೆಲ್ಲರೂ ಒಕ್ಕೊರಲಿನಿಂದ ಕೂಗಿದರೆ ಎಐಸಿಸಿ ಮಹಾರಾಷ್ಟ್ರ ಸರ್ಕಾರವನ್ನು ಮಣಿಸುವುದು ಅಸಾಧ್ಯದ ಸಂಗತಿಯಲ್ಲ. ರಾಜ್ಯದ ಹಿತದೃಷ್ಟಿಯಿಂದ ಎಐಸಿಸಿ ಮೇಲೆ ಒತ್ತಡ ಹಾಕುವ ಗೈರತ್ತನ್ನು ಕಾಂಗ್ರೆಸ್ ಮುಖಂಡರು ತೋರಬೇಕಾಗಿದೆ.
ಜೆಡಿಎಸ್ ಪಕ್ಷದಲ್ಲಿ ಕೂಡ ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸಂಸದರಾಗಿದ್ದಾರೆ. ದೇವೇಗೌಡರು, ಮುಖ್ಯಮಂತ್ರಿ, ಪ್ರಧಾನಮಂತ್ರಿಯಾಗಿ ಅನುಭವ ಹೊಂದಿದವರು. ತಮ್ಮ ಅನುಭವ, ಹೋರಾಟದ ಛಲವನ್ನು ಕೇಂದ್ರ ಮಟ್ಟದಲ್ಲಿ ರಾಜ್ಯದ ಹಿತಕ್ಕಾಗಿ ಬಳಸುವ ಕಾಳಜಿಯನ್ನು ದೇವೇಗೌಡರು ತೋರಬೇಕಾಗಿದೆ.
ಬೆಳಗಾವಿ ಕರ್ನಾಟಕದ್ದೇ. ಕರ್ನಾಟಕದ್ದೇ ಆಗಿ ಉಳಿಯಬೇಕು. ಮರಾಠಿಗರ ಸೊಲ್ಲು ಅಡಗಬೇಕು. ಅದಕ್ಕೆ ರಾಜಕಾರಣಿಗಳು, ಹೋರಾಟಗಾರರು, ಸಂಘಸಂಸ್ಥೆಗಳು, ಆಡಳಿತಾರೂಢರು, ಸಮಸ್ತ ಕನ್ನಡಿಗರು ಒಂದಾಗಿ, ಒಮ್ಮನಸ್ಸಿನಿಂದ ಕೂಡಿ ಹೋರಾಡಬೇಕಿದೆ.

ಖುಷಿ. ಜೆ.ಎಸ್.

ಈ ಸಾವು ನ್ಯಾಯವೇ?

ಮಂಗಳೂರಿನಲ್ಲಿ ನಡೆದ ದುಬಾಯಿ - ಮಂಗಳೂರು ನಡುವೆ ಸಂಚರಿಸುವ ಏರ್ ಇಂಡಿಯಾ ವಿಮಾನದ ಅಪಘಾತ ಎಂತಹವರ ಮನಸ್ಸನ್ನೂ ನೋಯಿಸುವಂತಹದ್ದು. ಹಲವಾರು ಕನಸುಗಳನ್ನು ಹೊತ್ತು ಊರಿಗೆ ಹಿಂದಿರುಗುತ್ತಿದ್ದ ಅನಿವಾಸಿ ಭಾರತೀಯರು ಊರು ತಲುಪಿದರೂ ಮನೆ ತಲುಪಲಾಗದೆ ದುರಂತದ ಬೆಂಕಿಯಲ್ಲಿ ಬೆಂದು ತಮ್ಮವರಿಗೂ ತಮ್ಮ ಗುರುತು ಸಿಗಲಾರದಂತೆ ಸುಟ್ಟು ಕರಕಲಾಗಿ ಹೋಗಿದ್ದರು.
ಹೇಳಿ ಕೇಳಿ ಮಂಗಳೂರು ವಿಮಾನ ನಿಲ್ದಾಣ ಅಷ್ಟೇನೂ ಸುರಕ್ಷಿತವಲ್ಲದ ಬೆಟ್ಟ ಗುಡ್ಡಗಳ ನಡುವೆ ನಿರ್ಮಿಸಿದ ಕಿರಿದಾದ ರನ್ ವೇ ಯನ್ನು ಒಳಗೊಂಡ ಅಪಾಯಕಾರಿ ವಿಮಾನ ನಿಲ್ದಾಣ. ಇದು ಅಲ್ಲಿ ವಿಮಾನದ ಮೂಲಕ ಬಂದಿಳಿದವರಿಗೆ ಸಾಮಾನ್ಯವಾಗಿ ಅನುಭವವಾಗಿರುತ್ತದೆ. ವಿಮಾನ ಇಳಿಯುತ್ತಿದ್ದಂತೆ ಕಾಣುವ ಬೆಟ್ಟಗುಡ್ಡಗಳನ್ನೊಳಗೊಂಡ ವಿಮಾನ ನಿಲ್ದಾಣದ ನೋಟ ಪ್ರಯಾಣಿಕರ ಎದೆ ಜುಂ ಎನಿಸುತ್ತದೆ. ವಿಮಾನ ಭೂಸ್ಪರ್ಶವಾಗುತ್ತಿದ್ದಂತೆ ಅಲ್ಲಿ ಹಾಕುವ ಬ್ರೇಕ್ ಒಮ್ಮೆಲೇ ವಿಮಾನದ ಒಳಗಿರುವ ಪ್ರಯಾಣಿಕರನ್ನು ಎತ್ತಿನಗಾಡಿಯ ಪ್ರಯಾಣದ ನೆನಪಿಗೆ ಕೊಂಡು ಹೋಗುತ್ತದೆ. ಬ್ರೇಕ್ ಹಾಕುವಾಗ ವಿಮಾನದ ಒಳಗೆ ಅಲುಗಾಡುವ ಪರಿ ಅಂತಹದ್ದು. ಇದು ಈ ರನ್ ವೇ ಎಷ್ಟು ಅಪಾಯಕಾರಿ ಎಂಬುವದನ್ನು ಪ್ರಾಯೋಗಿಕವಾಗಿಯೇ ನಮ್ಮ ಮುಂದೆ ತೆರೆದಿಡುತ್ತದೆ. ನನ್ನ ಅನುಭವದ ಪ್ರಕಾರ ನಾನು ಅಬುಧಾಬಿ, ಶಾರ್ಜಾ, ಬೆಂಗಳೂರು, ಮುಂಬೈ, ರಿಯಾದ್, ತಬೂಕ್, ಮಂಗಳೂರು ವಿಮಾನ ನಿಲ್ದಾಣಗಳ ರನ್ ವೇ ಗಳಲ್ಲಿ ವಿಮಾನದ ಮೂಲಕ ಇಳಿದಿದ್ದೇನೆ. ಆದರೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಆಗುವಂತಹ ಅನುಭವವೇ ಬೇರೇ.
ನನ್ನ ಪ್ರಕಾರ ಇದು ನನ್ನ ಒಬ್ಬನ ಅನುಭವವಲ್ಲ. ಸಾಧಾರಣ ಪ್ರಯಾಣಿಕರಿಗೆ ಇದರ ಅನುಭವವಾಗಿರುತ್ತದೆ. ಮೊನ್ನೆ ನಡೆದ ವಿಮಾನ ದುರಂತದಲ್ಲಿ ಮೃತಪಟ್ಟ ಮುಂಬೈ ಮೂಲದ ಗಗನ ಯಾತ್ರಿ ಈ ನಿಲ್ದಾಣದ ಅಪಾಯಕಾರಿ ರನ್ ವೇ ಬಗ್ಗೆ ತನ್ನ ಪೋಷಕರಲ್ಲಿ ಹೇಳಿ ಇಲ್ಲಿ ವಿಮಾನದ ಲ್ಯಾಂಡಿಂಗ್ ಮೊದಲು ಗಗನ ಸಖಿಯರಾದ ನಾವು ವಿಮಾನದ ಸುರಕ್ಷಿತ ಲ್ಯಾಂಡಿಂಗ್ ಗಾಗಿ ದೇವರಲ್ಲಿ ಪ್ರಾರ್ಥಿಸುತಿದ್ದೆವು ಎಂದು ಹೇಳಿದ ವಿಚಾರವನ್ನು ಆಕೆಯ ಶವ ಪಡೆಯಲು ಬಂದ ಆಕೆಯ ಪೋಷಕರು ಮಾಧ್ಯಮಗಳ ಮುಂದೆ ತೆರೆದಿಟ್ಟಿದ್ದಾರೆ. ಇದು ಈ ರನ್ ವೇಯ ಅಪಾಯಕಾರಿ ಮಟ್ಟವನ್ನು ಸೂಚಿಸುತ್ತದೆ.
ದುರಂತ ನಡೆದ ನಂತರ ವಿಮಾನ ನಿಲ್ದಾಣದ ಸುರಕ್ಷತಾ ವಿಭಾಗದ ಅಧಿಕಾರಿಗಳು ಹಾಗೂ ನೌಕರರು ಕೈಗೊಂಡ ಪರಿಹಾರ ಕ್ರಮಗಳು ಸಕಾಲಿಕವಾಗಿ ಜರುಗಿದ್ದರೆ ಇನ್ನೂ ಅನೇಕ ಜೀವಗಳನ್ನು ಉಳಿಸಬಹುದಿತ್ತು ಎಂಬುವುದು ದುರಂತ ನಡೆದ ತಕ್ಷಣ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ದುರಂತ ಸ್ಥಳಕ್ಕೆ ಓಡಿ ಹೋದ ಸ್ಥಳೀಯ ನಾಗರಿಕರ ಅಭಿಪ್ರಾಯ. ಅವರ ಪ್ರಕಾರ ವಿಮಾನ ಬಿದ್ದ ಹತ್ತು ನಿಮಿಷಗಳಲ್ಲಿ ವಿಮಾನ ನಿಲ್ದಾಣದ ರನ್ ವೇ ಮೇಲಿನಿಂದ ಎರಡು ಅಗ್ನಿಶಾಮಕ ವಾಹನಗಳು ನೊರೆಭರಿತ ನೀರನ್ನು ವಿಮಾನದ ಮೇಲೆ ಸಿಂಪಡಿಸಿದವು. ಆದರೆ ಅವು ವಿಮಾನವನ್ನು ತಲುಪಲೇ ಇಲ್ಲ . ಕೊನೆಗೆ ಅವು ಹಿಂತಿರುಗಿ ಹೋಗಿ ಇನ್ನೊಂದು ದಾರಿಯ ಮೂಲಕ ಸುಮಾರು ಇಪ್ಪತ್ತು ನಿಮಿಷದ ದುರ್ಗಮ ಹಾದಿಯ ಮೂಲಕವಾಗಿ ದುರಂತ ಸ್ಥಳಕ್ಕೆ ಬಂದವು. ಆನಂತರ ಬೆಂಕಿಯ ತೀವ್ರತೆಯನ್ನು ಕಡಿಮೆ ಮಾಡಲು ಸಾಧ್ಯವಾಯಿತು. ಮತ್ತು ಕೆಲವು ಶವಗಳನ್ನು ಹೊರಗೆ ಎಳೆಯಲು ಸಾಧ್ಯವಾಯಿತು. ಇಲ್ಲಿ ವಿಮಾನ ನಿಲ್ದಾಣ ಪ್ರಾಧಿಕಾರದ ಸುರಕ್ಷತಾ ಕ್ರಮಗಳ ಲೋಪ ಮತ್ತು ಅವು ಅಳವಡಿಸಿಕೊಂಡ ಅವೈಜ್ಞಾನಿಕ ರೀತಿಯ ವ್ಯವಸ್ಥೆ ಎದ್ದು ಕಾಣುತ್ತದೆ. ಬೆಟ್ಟ ಗುಡ್ಡಗಳ ನಡುವೆ ಇರುವ ವಿಮಾನ ನಿಲ್ದಾಣ ಇಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ವಿಮಾನ ಗುಂಡಿಗೆ ಬೀಳುವ ಸಾಧ್ಯತೆಯೇ ಅಧಿಕ . ಈ ಮುಂಚೆ ವೀರಪ್ಪ ಮೊಯ್ಲಿ ಪ್ರಯಾಣಿಸಿದ ವಿಮಾನ ಸಹ ಈ ರೀತಿ ಗುಂಡಿಗೆ ಬೀಳುವುದರಿಂದ ಸ್ವಲ್ಪದರಲ್ಲೇ ತಪ್ಪಿಸಿಕೊಂಡು ಅವರ ಜೀವ ಉಳಿದಿತ್ತು. ಅಂದು ಕೂಡ ಅದು ತಡೆಗೋಡೆಗೆ ಡಿಕ್ಕಿ ಹೊಡೆಯದಿದ್ದರೆ ಅವರೂ ಕೂಡ ವಿಮಾನದೊಟ್ಟಿಗೆ ಗುಂಡಿಗೆ ಬೀಳುತಿದ್ದರು. ಈ ಎಲ್ಲಾ ಘಟನೆಗಳನ್ನು ಅವರು ಈ ದುರಂತ ನಡೆಯುವ ಒಂದು ವಾರ ಮೊದಲು ನಡೆದ ನೂತನ ರನ್ ವೇಯ ಉದ್ಘಾಟನೆಯಲ್ಲೂ ನೆನಪಿಸಿಕೊಂಡಿದ್ದರು.
ಹೀಗಿರುವಾಗ ವಿಮಾನ ನಿಲ್ದಾಣದ ಮೇಲಿನಿಂದ ಅಗ್ನಿಶಾಮಕ ವಾಹನಗಳು ಹಾರಿಸಿದ ನೊರೆಭರಿತ ನೀರು ಕೆಳಗಿದ ವಿಮಾನಕ್ಕೆ ತಲುಪಿಲ್ಲ ಅಂದರೆ ಇಲ್ಲಿ ಕೈಗೊಂಡ ಸುರಕ್ಷತಾ ಕ್ರಮಗಳು ಎಷ್ಟೊಂದು ಅವೈಜ್ಞಾನಿಕ ಎನ್ನುವುದನ್ನು ಸೂಚಿಸುತ್ತದೆ. ಅದಲ್ಲದೆ ಪರ್ಯಾಯ ದಾರಿ ಇಲ್ಲದೆ ಇದ್ದ ಕಚ್ಛಾ ರಸ್ತೆಯನ್ನು ಬಳಸಿಕೊಂಡು ಬರಲು ತೆಗೆದು ಕೊಂಡ ಅಮೂಲ್ಯ ಇಪ್ಪತ್ತು ನಿಮಿಷವೂ ಸಹ ಸಾವಿನ ಸಂಖ್ಯೆ ಹೆಚ್ಚಲು ಕಾರಣ ಎಂಬುವುದು ಪ್ರತ್ಯಕ್ಷದರ್ಶಿಗಳ ಸ್ಪಷ್ಟ ಅಭಿಪ್ರಾಯ.
ದುರಂತವೇನೋ ನಡೆದಿದೆ. ಸಮಗ್ರ ವರದಿ ಬಂದ ನಂತರ ಸ್ಪಷ್ಟವಾಗಿ ತಿಳಿಯಲಿದೆ. ಆದರೆ ಈ ರೀತಿಯ ದುರಂತ ಮರುಕಳಿಸದಂತೆ ಎಚ್ಚರ ವಹಿಸಬೇಕಿದೆ. ಜೊತೆಗೆ ವಿಮಾನ ನಿಲ್ದಾಣದ ಸುರಕ್ಷತಾ ಕ್ರಮಗಳ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಬೇಕಿದೆ. ದುರಂತದಲ್ಲಿ ಮಡಿದ ಅಮಾಯಕ ನಾಗರಿಕರಿಗೆ ಅಲ್ಲಲ್ಲಿ ಶೋಕ ಸಭೆಗಳು ನಡೆಯುತ್ತಿದೆ. ಸಭೆ ಸಮಾರಂಭಗಳ ಮೂಲಕ ಜನತೆ ಅವರಿಗೆ ತಮ್ಮ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತಿದ್ದಾರೆ. ಆದರೆ ದುರಂತದ ಬಗ್ಗೆ ಮತ್ತು ವಿಮಾನ ನಿಲ್ದಾಣದ ಸುರಕ್ಷತಾ ಕ್ರಮಗಳ ಬಗ್ಗೆ ಉನ್ನತ ಮಟ್ಟದ ನಿಷ್ಪಕ್ಷಪಾತವಾದ ತನಿಖೆ ನಡೆದು ಮೃತರ ಕುಟುಂಬಸ್ಥರಿಗೆ ಯಾವುದೇ ಅಡಚಣೆ ಇಲ್ಲದೆ ಪರಿಹಾರ ದೊರಕಿಸಿಕೊಟ್ಟರೆ ಅದು ಮಾತ್ರ ಮೃತರಿಗೆ ಸಲ್ಲಿಸುವ ನೈಜ ಶ್ರದ್ದಾಂಜಲಿಯಾಗಬಹುದು.

ಅಶ್ರಫ್ ಮಂಜ್ರಾಬಾದ್, ಸಕಲೇಶಪುರ

ಹಿಂದಿನ ಬರೆಹಗಳು