Saturday, June 5, 2010

ಅಪಘಾತವಲ್ಲ, ಸಾಮೂಹಿಕ ಕೊಲೆ!


ವಿಶಾಲಾಕ್ಷಿ
ಸಂಪಾದಕಿ




ಮೇ ೨೨ರಂದು ಮಂಗ ಳೂರಿನ ಬಜ್ಪೆ ವಿಮಾನ ನಿಲ್ದಾಣದಲ್ಲಿ ನಡೆದ ದುರ್ಘಟನೆಯಿಂದಾಗಿ ೧೫೮ ಮಂದಿ ಮೃತಪಟ್ಟಿದ್ದಾರೆ. ೧೫೮ ಮಂದಿ ನತದೃಷ್ಟರು ಅಪಘಾತದಿಂದ ಸತ್ತರು ಎಂಬುದಕ್ಕಿಂದ ಕೊಲೆಗೀಡಾದರು ಎಂದರೆ ಸೂಕ್ತವೆನಿಸುತ್ತದೆ. ಮಂಗಳೂರು ವಿಮಾನ ನಿಲ್ದಾಣ ಕಳಪೆ ಗುಣಮಟ್ಟದ್ದು ಎಂಬುದು ಓಡಾಡುವ ಪ್ರಯಾಣಿಕರಿಗೇ ಗೊತ್ತಿರುವ ವಿಷಯ. ಈ ಬಗ್ಗೆ ನ್ಯಾಯಾಲಯಗಳಲ್ಲೂ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳು ದಾಖಲಾಗಿದ್ದವು. ಆದರೆ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ನ್ಯಾಯಾಲಯಗಳಲ್ಲಿ ಸುಳ್ಳು ಪ್ರಮಾಣಪತ್ರ ಸಲ್ಲಿಸಿ, ಮೊಕದ್ದಮೆಗಳು ವಜಾ ಆಗಲು ಕಾರಣರಾಗಿದ್ದರು.
ಇದೀಗ ಆಗಬಾರದ್ದು ಆಗಿಹೋಗಿದೆ, ೧೫೮ ಮಂದಿ ಅಮಾಯಕರು ಜೀವ ತೆತ್ತಿದ್ದಾರೆ. ಈ ಜೀವಗಳನ್ನು ಹಿಂದಿರುಗಿಸಲು ನಾಗರಿಕ ವಿಮಾನಯಾನ ಸಚಿವಾಲಯಕ್ಕಾಗಲಿ, ಏರ್ ಇಂಡಿಯಾಗಾಗಲಿ, ವಿಮಾನ ನಿಲ್ದಾಣ ಪ್ರಾಧಿಕಾರಕ್ಕಾಗಲಿ, ಕೇಂದ್ರ-ರಾಜ್ಯ ಸರ್ಕಾರಗಳಿಗಾಗಲಿ ಸಾಧ್ಯವಿಲ್ಲ. ಹೋದವರು ಹೋದರು, ಒಂದಷ್ಟು ದಿನ ಅದರ ಸುದ್ದಿ, ನಂತರ ಎಲ್ಲವೂ ತಣ್ಣಗಾಗುತ್ತದೆ; ಮುಂದಿನ ಅವಘಡ ಜರುಗುವವರೆಗೆ.
ಅಪಘಾತಕ್ಕೆ ಕಾರಣಗಳೇನು ಎಂಬುದು ಇಲ್ಲಿಯವರೆಗೆ ಗೊತ್ತಾಗಿಲ್ಲ. ಪೈಲೆಟ್ ದೋಷವೋ, ವಿಮಾನದ ದೋಷವೋ ಎಂಬುದು ಇನ್ನೂ ತೀರ್ಮಾನಕ್ಕೆ ಬರಲಾಗಿಲ್ಲ. ಎಲ್ಲ ರಹಸ್ಯಗಳನ್ನು ಬಯಲು ಮಾಡಬಹುದಿದ್ದ ‘ಕಪ್ಪು ಪೆಟ್ಟಿಗೆ’ಯೂ ಸುಟ್ಟು ಹೋಗಿರುವುದರಿಂದ ರಹಸ್ಯಗಳು ರಹಸ್ಯಗಳಾಗೇ ಉಳಿಯಲಿವೆ. ಆದರೆ ಒಂದಂತೂ ನಿಜ. ಮಂಗಳೂರು ವಿಮಾನ ನಿಲ್ದಾಣ ಅಂತಾರಾಷ್ಟ್ರೀಯ ಗುಣಮಟ್ಟವನ್ನು ಹೊಂದಿದ್ದರೆ, ಈ ಅಪಘಾತ ನಡೆಯುತ್ತಿರಲಿಲ್ಲ. ಬಜ್ಪೆ ವಿಮಾನ ನಿಲ್ದಾಣದ ಅಪಾಯಕಾರಿ ೨ನೇ ರನ್‌ವೇ ತುರ್ತು ವಿಮಾನಸ್ಪರ್ಶಕ್ಕೆ ಯೋಗ್ಯವಾಗಿರಲಿಲ್ಲ. ರನ್ ವೇ ಇನ್ನೂ ಉದ್ದವಿದ್ದಿದ್ದರೆ, ಅಪಘಾತ ನಡೆಯುತ್ತಿರಲಿಲ್ಲ.
ಇಂಥ ದುರಂತ ಸಂಭವಿಸಬಹುದು ಎಂಬ ಉದ್ದೇಶದಿಂದಲೇ ‘ವಿಮಾನ ನಿಲ್ದಾಣ ವಿಸ್ತರಣಾ ವಿರೋಧಿ ಸಮಿತಿ’ ಹಾಗು ಇತರ ಸಂಘಟನೆಗಳು ೧೯೯೦ರಿಂದಲೂ ಬಜ್ಪೆ ವಿಮಾನ ನಿಲ್ದಾಣವನ್ನು ಅವೈಜ್ಞಾನಿಕವಾಗಿ, ಅಪಾಯಕಾರಿಯಾಗಿ ವಿಸ್ತರಿಸುವುದನ್ನು ವಿರೋಧಿಸುತ್ತ ಬಂದಿದ್ದವು. ಮಾತ್ರವಲ್ಲ, ೧೯೯೭ರಲ್ಲಿ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನೂ ಹೂಡಿದ್ದವು.
ಆದರೆ ಈ ಸಂಬಂಧ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿದ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಮುಖ್ಯಸ್ಥರು, ರನ್ ವೇ ಅಗಲ ಮತ್ತು ಉದ್ದ ಕಡಿಮೆ ಇದೆ ಎಂಬ ವಾದವನ್ನು ತಳ್ಳಿ ಹಾಕಿದ್ದರಲ್ಲದೆ, ಅಂತರಾಷ್ಟ್ರೀಯ ಗುಣಮಟ್ಟದಲ್ಲೇ ರನ್ ವೇ ನಿರ್ಮಿಸಲಾಗಿದೆ ಎಂದು ಹೇಳಿದ್ದರು. ನ್ಯಾಯಾಲಯವೂ ಸಹ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳ ಮಾತನ್ನು ನಂಬಿ, ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳನ್ನು ವಜಾ ಮಾಡಿತ್ತು. ಅದಾದ ನಂತರವೂ ಹಲವಾರು ವರ್ಷಗಳ ಕಾಲ ಮತ್ತೆ ಮತ್ತೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳನ್ನು ಹೂಡಲಾಯಿತು. ಈ ಮೊಕದ್ದಮೆಗಳನ್ನು ನ್ಯಾಯಾಲಯ ವಜಾಗೊಳಿಸುತ್ತಲೇ ಬಂದಿತಾದರೂ, ಪದೇಪದೇ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಹಾಗು ಕೇಂದ್ರ ಸರ್ಕಾರಕ್ಕೆ ಅರ್ಜಿಯ ಗಂಭೀರತೆಯನ್ನು ಪರಿಗಣಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆದೇಶಿಸುತ್ತ ಬಂದಿತ್ತು.
ಅವಘಡ ನಡೆದು ಹೋಗಿದೆ. ಇದನ್ನು ಅವಘಡ ಎನ್ನುವುದಕ್ಕಿಂತ ವಿಮಾನ ನಿಲ್ದಾಣ ಪ್ರಾಧಿಕಾರ, ಸರ್ಕಾರ, ಏರ್ ಇಂಡಿಯಾ ನಡೆಸಿದ ಸಾಮೂಹಿಕ ಕೊಲೆ ಎಂದರೂ ತಪ್ಪಾಗಲಾರದು. ಆದರೂ ದುರಂತವೆಂದರೆ ಯಾರೂ ಸಹ ಈ ದುರ್ಘಟನೆಯ ನೈತಿಕ ಜವಾಬ್ದಾರಿ ಹೊತ್ತುಕೊಳ್ಳಲು ಸಿದ್ಧರಿಲ್ಲ. ಒಬ್ಬರು ಮತ್ತೊಬ್ಬರ ಮೇಲೆ ಜವಾಬ್ದಾರಿ ಹೊರೆಸುವುದರಲ್ಲಿ ನಿಸ್ಸೀಮರು. ೧೫೮ ಕುಟುಂಬಗಳ ಆಕ್ರಂದನಕ್ಕೆ ಬೆಲೆ ತೆರುವವರು ಯಾರು ಎಂದರೆ ಯಾರ ಬಳಿಯೂ ಉತ್ತರವಿಲ್ಲ.
*****
ಯಾಕೋ, ಏನೋ ಮೇ ತಿಂಗಳು ರಾಜ್ಯದ ಪಾಲಿಗೆ ಕಹಿಯಾಗಿ ಹೋಯಿತು. ಚಳ್ಳೆಕೆರೆಯ ಬಳಿ ಮೇ.೩೦ರಂದು ನಡೆದ ಬಸ್ ದುರಂತದಲ್ಲಿ ೩೦ ಮಂದಿ ಅಸುನೀಗಿದರು. ಎಲ್ಲರೂ ಕೂಲಿ ಮಾಡಲೆಂದು ಬೆಂಗಳೂರಿಗೆ ಕೆಲಸ ಅರಸಿಕೊಂಡು ಬರುತ್ತಿದ್ದವರು. ನೆರೆಯಲ್ಲಿ ಎಲ್ಲವನ್ನು ಕಳೆದುಕೊಂಡ ಜನರೂ ಈ ಪೈಕಿ ಬಹಳಷ್ಟಿದ್ದರು. ಬಸ್ ಚಾಲಕನ ಬೇಜವಾಬ್ದಾರಿತನಕ್ಕೆ ೩೦ ಜೀವಗಳು ಬಲಿಯಾದವು. ಮತ್ತೆ ಹಲವರು ಮಾರಣಾಂತಿಕವಾಗಿ ಗಾಯಗೊಂಡರು. ಎಲ್ಲರೂ ಬಡಪಾಯಿಗಳೇ. ಯಥಾಪ್ರಕಾರ ರಾಜ್ಯ ಸರ್ಕಾರ ಮೃತರ ಕುಟುಂಬಗಳಿಗೆ ಒಂದಷ್ಟು ಪರಿಹಾರ ಘೋಷಿಸಿದೆ. ಪರಿಹಾರಗಳು ಕಳೆದುಕೊಂಡವರನ್ನು ವಾಪಾಸು ತಂದುಕೊಡಲಾರವು.
*****
ಉತ್ತರ ಕರ್ನಾಟಕದಲ್ಲಿ ಸಂಭವಿಸಿದ ನೆರೆಯಿಂದಾಗಿ ಸಂತ್ರಸ್ತರಾದ ಜನರ ಬದುಕು ಕಟ್ಟಿಕೊಡುವುದಾಗಿ ಸರ್ಕಾರ ಘೋಷಣೆಗಳ ಮೇಲೆ ಘೋಷಣೆಗಳನ್ನು ಮಾಡಿತ್ತು. ಸ್ವತಃ ಮುಖ್ಯಮಂತ್ರಿಗಳೇ ಚಂದಾ ವಸೂಲಿ ಮಾಡಿ, ನೆರೆಯಲ್ಲಿ ನೊಂದವರ ಮೊಗಗಳಲ್ಲಿ ಮಂದಹಾಸ ಚಿಗುರಿಸುವುದಾಗಿ ಹೇಳಿಕೊಂಡಿದ್ದರು. ಆದರೆ ಉತ್ತರ ಕರ್ನಾಟಕ ಭಾಗಗಳಲ್ಲಿ ಇನ್ನೂ ಮನೆಗಳ ನಿರ್ಮಾಣವಾಗಿಲ್ಲ. ಮನೆ, ಹೊಲ, ಗದ್ದೆ ಕಳೆದುಕೊಂಡ ಜನರು ಆತ್ಮಹತ್ಯೆಯ ಹಾದಿ ಹಿಡಿದಿದ್ದಾರೆ. ನೆರೆ ಸಂತ್ರಸ್ತರ ಪುನರ್ ವಸತಿಗಾಗಿ ೧೦ ಕೋಟಿ ರೂ. ದೇಣಿಗೆ ನೀಡಿದ್ದ ಪೂಜ್ಯ ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರು, ಕೊಟ್ಟ ಹಣ ಏನಾಯ್ತು, ಲೆಕ್ಕ ಕೊಡಿ ಎಂದು ಸರ್ಕಾರಕ್ಕೆ ಬಹಿರಂಗವಾಗಿಯೇ ಕೇಳಿದ್ದಾರೆ. ಎಲ್ಲ ದಾನಿಗಳೂ ಸಹ ಅದನ್ನೇ ಕೇಳುವ ದಿನಗಳು ಹತ್ತಿರವಾಗುತ್ತಿವೆ. ಸರ್ಕಾರ ನೆರೆ ಸಂತ್ರಸ್ತರನ್ನು ಮರೆತು ಎಷ್ಟೋ ದಿನಗಳಾಗಿ ಹೋದವು.
ಅಲ್ಲಿ ಸಾವಿರಾರು ಜನ ಪರಿಹಾರ ಶಿಬಿರಗಳಲ್ಲಿ ಭಿಕ್ಷುಕರಿಗಿಂತಲೂ ಕಡೆಯಾಗಿ ಬದುಕುತ್ತಿದ್ದರೆ, ಇತ್ತ ಬೆಂಗಳೂರಿನಲ್ಲಿ ಸಾವಿರಾರು ಕೋಟಿ ರೂ. ವೆಚ್ಚದಲ್ಲಿ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಯುತ್ತಿದೆ. ಸಮಾವೇಶದ ಹೆಸರಿನಲ್ಲಿ ಕರ್ನಾಟಕದ ಭೂಮಿಯನ್ನು, ನೀರನ್ನು, ಭೌಗೋಳಿಕ ಸಂಪತ್ತನ್ನು ಹರಾಜಿಗಿಡುವ ಕೆಲಸವನ್ನು ಸರ್ಕಾರ ಮಾಡುತ್ತಿದೆ.

ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದ ಹಿಂದಿನ ಮಸಲತ್ತುಗಳೇನು ಎಂಬುದರ ಕುರಿತು ಈ ಸಂಚಿಕೆಯಲ್ಲಿ ವಿಸ್ತ್ರತ ವರದಿಯಿದೆ. ಹಾಗೆಯೇ ಹೊಗೇನಕಲ್ ಕರ್ನಾಟಕಕ್ಕೆ ಸೇರಿದ್ದು ಎಂಬುದಕ್ಕೆ ಸಾಕ್ಷಿಯನ್ನೂ ಈ ಸಂಚಿಕೆಯಲ್ಲಿ ಒದಗಿಸಿದ್ದೇವೆ. ನಮ್ಮೆಲ್ಲರ ಪ್ರೀತಿಯ ಕವಿ ಪ್ರೊ.ಕೆ.ಎಸ್.ನಿಸಾರ್ ಅಹಮದ್ ‘ನಲ್ನುಡಿ’ಗೆ ವಿಶೇಷ ಸಂದರ್ಶನ ನೀಡಿದ್ದಾರೆ. ‘ನಲ್ನುಡಿ’ ಲೋಕಾರ್ಪಣೆ ಸಂದರ್ಭದಲ್ಲಿ ಡಾ.ಯು.ಆರ್.ಅನಂತಮೂರ್ತಿಯವರು ಆಡಿದ ಮಾತುಗಳ ಪೂರ್ಣಪಾಠವೂ ಈ ಸಂಚಿಕೆಯಲ್ಲಿದೆ. ಈ ಬಾರಿ ನೂರು ಪುಟಗಳ ‘ನಲ್ನುಡಿ’ ನಿಮ್ಮ ಮುಂದಿದೆ. ಓದಿ, ನಿಮ್ಮ ಅಭಿಪ್ರಾಯ ಹೇಳಲು ಮರೆಯಬೇಡಿ.
*****
ಮಂಗಳೂರು, ಚಳ್ಳೆಕೆರೆಗಳಲ್ಲಿ ನಡೆದ ದುರ್ಘಟನೆಗಳಲ್ಲಿ ನಮ್ಮನ್ನು ಅಗಲಿ ಹೋದ ಎಲ್ಲ ಜೀವಗಳಿಗೂ ‘ನಲ್ನುಡಿ’ ತನ್ನ ಕಂಬನಿಯನ್ನು ಸಮರ್ಪಿಸುತ್ತದೆ. ಅಸುನೀಗಿದವರ ಕುಟುಂಬಗಳು ಎಲ್ಲ ನೋವು ಮರೆತು ಮತ್ತೆ ಹೊಸ ಬದುಕನ್ನು ಎದುರುಗೊಳ್ಳುವಂತಾಗಲಿ ಎಂದು ಹಾರೈಸುತ್ತೇನೆ.

No comments:

Post a Comment

ಹಿಂದಿನ ಬರೆಹಗಳು