Friday, June 4, 2010

ಸೇವಾ ಕೈಂಕರ್ಯಗಳ ಹರಿಕಾರ ಆದಿಚುಂಚನಗಿರಿ ಶ್ರೀ




ಇಂದು ದೇಶ-ವಿದೇಶದ ಜನತೆಯೂ ಸೋಜಿಗಪಡುವಷ್ಟು ಎತ್ತರಕ್ಕೆ ಶ್ರೀ ಆದಿಚುಂಚನಗಿರಿ ಮಠ ಬೆಳೆದಿದೆ. ಜನೋಪಕಾರಿ ಸೇವಾ ಕಾರ್ಯಗಳಿಂದ ಅಸಂಖ್ಯಾತ ಜನರಿಗೆ ಶಿಕ್ಷಣ, ಉದ್ಯೋಗ ಹಾಗು ಆಶ್ರಯವನ್ನು ಈ ಮಠ ನೀಡುತ್ತಿದೆ. ಈ ಎಲ್ಲವಕ್ಕೂ ಶ್ರೀ ಜಗದ್ಗುರು ಶ್ರೀಶ್ರೀಶ್ರೀ ಬಾಲಗಂಗಾಧರನಾಥ ಸ್ವಾಮಿಗಳು ಸ್ಫೂರ್ತಿಯ ಚಿಲುಮೆಯಾಗಿದ್ದಾರೆ. ಇವೆಲ್ಲವೂ ಶ್ರೀಮಠದ ವತಿಯಿಂದ ಶೈಕ್ಷಣಿಕ ಹಾಗು ಸಾಮಾಜಿಕ ಆಯಾಮಗಳಿಗೆ ಅದ್ಭುತ ಸಂಚಲನವನ್ನುಂಟುಮಾಡಿವೆ. ಪೀಠಾರೋಹಣ ಮಾಡಿದ ಕೇವಲ ಮೂರು ದಶಕಗಳಲ್ಲಿ ಶತಮಾನದ ಯಶಸ್ಸನ್ನು ಗಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.
೭೧ ನೇ ಪೀಠಾಧ್ಯಕ್ಷರಾಗಿ ೧೯೭೪ ರಲ್ಲಿ ಶ್ರೀಬಾಲಗಂಗಾಧರನಾಥ ಸ್ವಾಮಿಗಳು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಅಧಿಕಾರ ವಹಿಸಿಕೊಂಡರು. ಆಗ ಅವರಿಗೆ ಹತ್ತಾರು ಸಮಸ್ಯೆಗಳು ಒಮ್ಮೆಲೆ ಎದುರಾದವು. ಆದರೆ, ಇದಕ್ಕೆ ಹಿಂಜರಿಯದ ಸ್ವಾಮಿಗಳು ಉಳ್ಳವರ ಮುಂದೆ ಇಲ್ಲದವರ ಪಾಡು ಭೋದಿಸಿದರು. ಉದಾರಿಗಳು ಕೈಜೋಡಿಸಿದರು. ಮಠದ ಅಭಿವೃದ್ಧಿಗೆ ಹಾಗು ತಮ್ಮ ಜನರ ಕಲ್ಯಾಣಕ್ಕಾಗಿ ದೇಶ, ವಿದೇಶಗಳಲ್ಲಿ ಓಡಾಡಿ ಮಠದ ಅಭಿವೃದ್ಧಿಗೆ ಶ್ರಮಿಸಿದರು.
ಇಷ್ಟಾದರು ಮಠವು ಯಾವುದೇ ಜಾತಿ, ಮತ, ಧರ್ಮಗಳ ಭೇದ ಭಾವವಿಲ್ಲದೆ ಸರ್ವಜನರಿಗೂ ಮುಕ್ತವಾಗಿರುವುದನ್ನು ಗಮನಿಸಬಹುದು. ಧಾರ್ಮಿಕ, ಶೈಕ್ಷಣಿಕ ಹಾಗು ಸಾಮಾಜಿಕ ಸೇವಾ ಕೈಂಕರ್ಯಗಳಲ್ಲಿ ಇವರು ಮುಂಚೂಣಿಯಲ್ಲಿದ್ದಾರೆ. ಜನಸೇವೆಯೇ ಉಸಿರನ್ನಾಗಿಸಿಕೊಂಡಿದ್ದಾರೆ.
ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಿದ್ದಾರೆ ಎಂದರೆ ತಪ್ಪಾಗಲಾರದು. ಶ್ರೀಗಳು ಶಿಕ್ಷಣದ ಬಗ್ಗೆ ಅಪಾರ ಕಳಕಳಿ ಹೊಂದಿದ್ದು, ಶ್ರೀ ಆದಿಚುಂಚನಗಿರಿ ಟ್ರಸ್ಟ್
ಒಂದು ಬೃಹದಾಕಾರವಾಗಿ ಬೆಳೆದು ನಿಂತಿದೆ. ನಾಡಿನಾದ್ಯಂತ ಸುಮಾರು ೪೫೦ಕ್ಕೂ ಹೆಚ್ಚು ಶಾಲಾ ಕಾಲೇಜುಗಳನ್ನು ಮಠ ಹೊಂದಿದ್ದು, ಅಸಂಖ್ಯಾತ ವಿದ್ಯಾರ್ಥಿಗಳು ಉತ್ತಮ ಭವಿಷ್ಯದ ಕನಸನ್ನು ಹೊತ್ತಿದ್ದಾರೆ. ವೈದ್ಯಕೀಯ, ತಾಂತ್ರಿಕ, ಆಯರ್ವೇದಿಕ್ ಕಾಲೇಜುಗಳನ್ನೊಳಗೊಂಡಿದೆ. ವಿದ್ಯೆಯ ಜೊತೆಗೆ ಊಟ, ವಸತಿ ಕಲ್ಪಿಸಿಕೊಟ್ಟಿರುವ ಶ್ರೀಗಳು, ಬಡ ಮಕ್ಕಳ ಕಣ್ಗಳಲ್ಲಿ ಬೆಳಕನ್ನು ಮೂಡಿಸಿದ್ದಾರೆ. ಇದಲ್ಲದೆ, ಗ್ರಾಮೀಣ ಪ್ರದೇಶಗಳಲ್ಲಿ ಸುಸಜ್ಜಿತ ಆಸ್ಪತ್ರೆಗಳು , ಅಂಗವಿಕಲರು, ಅಬಲೆಯರು ಮುಂತಾದ ಸಮಾಜದ ನಿರ್ಲಕ್ಷ್ಯಕ್ಕೊಳಗಾದವರಿಗಾಗಿ ಹಲವು ಆಶ್ರಯ ತಾಣಗಳನ್ನು ತೆರೆದಿದ್ದಾರೆ. ಯುವಜನರಿಗೆ ಪ್ರತಿವರ್ಷ ಜಾಗೃತಿ ಶಿಬಿರಗಳನ್ನು ಏರ್ಪಡಿಸುವುದರ ಮೂಲಕ ಸ್ವಾವಲಂಬಿಗಳನ್ನಾಗಿ ಮಾಡಿದ್ದಾರೆ. ಜನರ ನೆಮ್ಮದಿಯ ಬದುಕಿಗಾಗಿ ಹಗಲಿರುಳೆನ್ನದೆ ಸೇವಾ ಕೈಂಕರ್ಯದಲ್ಲಿ ತಮ್ಮನ್ನೇ ಸಮರ್ಪಿಸಿಕೊಂಡಿದ್ದಾರೆ.
ಆದಿಚುಂಚನಗಿರಿಯ ಆಧುನಿಕ ಶಿಲ್ಪಿಗಳೆನಿಸಿದ ಪರಮಪೂಜ್ಯ ಶ್ರೀ ಆದಿಚುಂಚನಗಿರಿ ಕ್ಷೇತ್ರವನ್ನು ತಮ್ಮ ಸೇವಾಕ್ಷೇತ್ರವನ್ನಾಗಿ ಮಾಡಿಕೊಂಡವರಲ್ಲ ಇಡೀ ನಾಡನ್ನೇ ತಮ್ಮ ಸೇವಕ್ಷೇತ್ರವನ್ನಾಗಿಸಿಕೊಂಡು ಮಿಂಚಿನ ಸಂಚಾರ ನಡೆಸಿದ್ದಾರೆ. ಜನರ ಅಗತ್ಯಕ್ಕೆ ತಕ್ಕಂತೆ ಸೇವಾಕ್ಷೇತ್ರವೂ ದಿನೇ ದಿನೇ ಹೆಚ್ಚುತ್ತಿದೆ. ಇದೆಲ್ಲವು ಈಗ ವಿಶ್ವವ್ಯಾಪಿಯಾಗಿದೆ. ಇದನ್ನು ವಿಶ್ವವೇ ಗಮನಿಸುತ್ತಿದೆ ಎಂದರೆ ತಪ್ಪಾಗಲಾರದು. ಅಂತೆಯೇ ಹರಿದು ಹಂಚಿಹೋಗಿದ್ದ ಸಮಾಜವನ್ನು ಸಂಘಟಿಸಿ ಅದಕ್ಕೊಂದು ಶಕ್ತಿಯನ್ನು, ರೂಪವನ್ನು ಕೊಟ್ಟ ಸಂಘಟನೆಯ ಹರಿಕಾರರಾಗಿದ್ದಾರೆ. ರಾಜ್ಯದ ಜಿಲ್ಲೆಗಳಲ್ಲಿ ಮಾತ್ರವಲ್ಲದೆ, ಹೊರರಾಜ್ಯಗಳಲ್ಲೂ ಮಠದ ಬಗ್ಗೆ ಶ್ರದ್ಧಾಭಕ್ತಿ ಬೆಳೆಯುವಂತೆ ಮಾಡಿರುವುದು, ಅವರ ಋಜುತನಕ್ಕೆ , ನಿಸ್ವಾರ್ಥ ಅಂತ:ಕರಣಕ್ಕೆ ಸಾಕ್ಷಿ. ಒಕ್ಕಲಿಗ ಸಮಾಜವನ್ನು ಇಂದು ವಿಶ್ವದೆಲ್ಲೆಡೆ ಗುರುತಿಸುವಂತೆ ಮಾಡಿದ್ದಾರಲ್ಲದೆ, ವಿಶ್ವಮಾನ್ಯತೆಯನ್ನು ತಂದುಕೊಟ್ಟಿದ್ದಾರೆ. ಸಮಾಜದ ಸ್ವಾಭಿಮಾನ ಹೆಚ್ಚಿಸಿದ ಶ್ರೀಗಳು ಸಾಮಾನ್ಯ ವ್ಯಕ್ತಿಯಲ್ಲ, ಒಂದು ಶಕ್ತಿ, ಸಮುದಾಯದ ಆಸ್ತಿಯಾಗಿದ್ದಾರೆ.
ಎಲ್ಲ ಕ್ಷೇತ್ರಗಳಲ್ಲೂ ಹಿಂದುಳಿದಿದ್ದ ಒಕ್ಕಲಿಗ ಸಮಾಜಕ್ಕೆ ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ, ಹಾಗು ಸಾಂಸ್ಕೃತಿಕ ಮಹತ್ವ ಸಿಗುವಂತೆ ಮಾಡುವ ಮೂಲಕ ವಿಚಾರವಂತಿಕೆ, ಸ್ವಂತಿಕೆ ಮತ್ತು ಸ್ವಾಭಿಮಾನವನ್ನು ಜಾಗೃತಿಗೊಳಿಸಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮಾತ್ರವಲ್ಲ ಹೊರ ರಾಜ್ಯ ಹಾಗೂ ವಿದೇಶಗಳಲ್ಲೂ ಶ್ರೀ ಮಠದ ಬಗ್ಗೆ ಹೆಚ್ಚುವಂತೆ ಮಾಡಿ ನಿಸ್ವಾರ್ಥ ಅಂತಃಕರಣಕ್ಕೆ ಬಾಲಗಂಗಾದರನಾಥ ಶ್ರೀಗಳು ಸಾಕ್ಷಿಯಾಗಿದ್ದಾರೆ. ತನ್ನ ಸಾಮಾಜಿಕ ಸೇವಾ ಕಾರ್ಯಗಳು ವಿಸ್ತಾರಗೊಳ್ಳ ಬೇಕೆಂಬ ಮಹತ್ವಕಾಂಕ್ಷೆಯೊಂದಿಗೆ ರಾಜ್ಯಾದಾದ್ಯಂತ ಶ್ರೀ ಮಠದ ಶಾಖಾ ಮಠಗಳನ್ನು ತೆರೆವ ಮೂಲಕ ಸಾಮಾನ್ಯ ಜನತೆ ನೋವು-ನಲಿವಿಗೆ ಸ್ಪಂದಿಸುವ ಪೀಠಾಧಿಪತಿಯಾಗಿದ್ದಾರೆ.
ಆರಂಭದಿಂದಲೂ ಶ್ರೀಗಳು ನಿರಂತರವಾಗಿ ನಡೆಸಿಕೊಂಡು ಬಂದಿರುವ ಸಾಮೂಹಿಕ ವಿವಾಹ, ರೋಗ ತಪಾಸಣಾ ಶಿಬಿರಗಳು, ಜನಜಾಗೃತಿ ಶಿಬಿರಗಳು, ಸರ್ವಧರ್ಮ ಶಿಬಿರಗಳು, ಸಂಸ್ಕೃತ-ಸಂಸ್ಕೃತಿ ಶಿಬಿರಗಳು, ಸಾಹಿತ್ಯ ಮೇಳಗಳು ಸೇರಿದಂತೆ ಹಲವು ಸಾಮಾಜಿಕ ಕಳಕಳಿ ಕಾರ್ಯಗಳು ಇಂದಿಗೂ ಜನಜನಿತವಾಗಿವೆ.
ವೈದಕೀಯ ಶಿಕ್ಷಣವೆಂಬುದು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಗಗನ ಕುಸುಮವಾಗಿದ್ದ ಕಾಲದಲ್ಲೇ ಬೆಳ್ಳೂರಿನಂತಹ ಅಪ್ಪಟ ಗ್ರಾಮೀಣ ಪ್ರದೇಶದಲ್ಲಿ ವೈದ್ಯಕೀಯ ಕಾಲೇಜನ್ನು ಪ್ರಾರಂಬಿಸಿ, ಅಲ್ಲಿಯೂ ಹಗಲಿರುಳು ಸಮಾಜದ ಕಟ್ಟಕಡೆಯ ಜನತೆಗೆ ತುರ್ತು ವೈದಕೀಯ ಸೇವೆ ಸದಾ ಲಭಿಸುವಂತೆ ಮಾಡಿ, ಭಾರತದಲ್ಲೇ ಮೊಟ್ಟಮೊದಲ ಭಾರಿಗೆ ಸಾವಿರ ಹಾಸಿಗೆಗಳುಳ್ಳ ಅತ್ಯಾಧುನಿಕ ಸಕಲ ಸೌಲಭ್ಯಗಳುಳ್ಳ ಅತ್ಯಾಧುನಿಕ ಆಸ್ಪತ್ರೆ ತೆರೆದು ಗ್ರಾಮೀಣ ಪ್ರದೇಶದ ಜನರ ಆರೋಗ್ಯ ರಕ್ಷಣೆಗೂ ಮುಂದಾಗಿದ್ದಾರೆ. ಕಳೆದ ೪ ದಶಕಗಳ ಹಿಂದೆ ಗ್ರಾಮೀಣ ಪ್ರದೇಶದ ಮಕ್ಕಳು ಶಾಲೆಗಳಿಲ್ಲದೆ ಶಿಕ್ಷಣದಿಂದ ವಂಚಿತರಾಗುತ್ತಿರುವುದನ್ನು ಮನಗಂಡು ಆ ಪ್ರದೇಶಗಳಲ್ಲಿ ಪ್ರಾಥಮಿಕದಿಂದ ಪ್ರೌಢಶಾಲೆಯವರೆಗಿನ ಶಾಲೆಗಳನ್ನು ತೆರೆದು ಶಿಕ್ಷಣ ಕ್ಷೇತ್ರಕ್ಕೆ ಅರ್ಪಿಸಿರುವ ಪೂಜ್ಯರು, ಬಡಮಕ್ಕಳ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಉಚಿತ ವಿದ್ಯಾರ್ಥಿ ನಿಲಯಗಳನ್ನು ತೆರೆದು ಆ ಮೂಲಕ ವಿದ್ಯಾರ್ಥಿಗಳಿಗೆ ಜ್ಞಾನ ದಾಸೋಹದ ಜೊತೆಗೆ ಅನ್ನ ದಾಸೋಹವನ್ನು ನೀಡುತ್ತಿದ್ದಾರೆ.
ಜಗದ್ಗುರು ಬಾಲಗಂಗಾಧರ ನಾಥ ಸ್ವಾಮೀಜಿ ಅಂಧರ ಶಾಲೆ
ಎಲ್ಲಕ್ಕೂ ಕಿರೀಟ ಪಾತ್ರವೆಂಬಂತೆ ಅವರು ತೆರೆದಿರುವ ಅಂಧರ ಶಾಲೆ ಈ ನಾಡಿನ ಮಾದರಿ ಶಾಲೆಗಳಲ್ಲಿ ಒಂದಾಗಿದೆ. ವಿಶೇಷ ಆಸ್ಥೆಯನ್ನು ವಹಿಸಿದರೆ ಅಂಧರ ಬಾಳಿನಲ್ಲೂ ಜ್ಞಾನದ ಜ್ಯೋತಿಯನ್ನು ಬೆಳಗಿಸಬಹುದೆಂಬುದನ್ನು ತೋರಿಸಿಕೊಟ್ಟಿದ್ದಾರೆ.
ಮಕ್ಕಳು ನಾನಾ ಕಾರಣಗಳಿಂದ ಅಂಧರಾಗುತ್ತಾರೆ. ಕಣ್ಣನ್ನು ಕಳೆದುಕೊಂಡ ಮಕ್ಕಳಿಗೆ ಇಡೀ ಲೋಕವೇ ಕತ್ತಲಾಗುತ್ತದೆ. ತಂದೆ-ತಾಯಿಗಳಿಂದಲೂ ನಿರ್ಲಕ್ಷಿತರಾಗುವ ಅವರ ಬದುಕು ಕಾರ್ಗತ್ತಲೆಯಲ್ಲಿ ಮುಳುಗಿ ಬದುಕು ಘೋರವಾಗುತ್ತದೆ. ದೃಷ್ಟಿ ವಂಚಿತರಾಗಿ ಜೀವನವಿಡೀ ಪರಾವಲಂಬಿಗಳಾಗಿ ಅಂಧಕಾರದಲ್ಲಿ ತೊಳಲುತ್ತಿರುವ ಅಂಧ ಮಕ್ಕಳನ್ನು ಕಂಡುಮನನೊಂದಿದ್ದ ಶ್ರೀಶ್ರೀಶ್ರೀ ಬಾಲಗಂಗಾಧರನಾಥ ಸ್ವಾಮಿಗಳವರು, ಅಂಧರೂ ಸಹ ಈ ಸಮಾಜದಲ್ಲಿ ಸ್ವಾವಲಂಬಿಗಳಾಗಿ ಬಾಳಲು ಅನುಕೂಲವಾಗುವಂತೆ ಮಾಡಲು, ಅವರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಲು ಶಿಕ್ಷಣ ಸಂಸ್ಥೆಯೊಂದನ್ನು ತೆರೆಯಬೇಕೆಂದು ಸಂಕಲ್ಪಿಸಿ ಬೆಂಗಳೂರು ಜಿಲ್ಲೆಯ ರಾಮನಗರ ತಾಲ್ಲೂಕಿನ ಅರ್ಚಕರ ಹಳ್ಳಿಯಲ್ಲಿ ಜಗದ್ಗುರು ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅಂಧರ ಶಾಲೆಯನ್ನು ತೆರೆದಿದ್ದಾರೆ.
ಬೆಂಗಳೂರು-ಮೈಸೂರು ಹೆದ್ದಾರಿಯ ಜಾನಪದ ಲೋಕದ ಪಕ್ಕದಲ್ಲಿಯೇ ಇರುವ ಭವ್ಯವೂ, ಸುಂದರವೂ ಆದ ಈ ಕಟ್ಟಡಗಳ ಸಮೂಹ ಎಲ್ಲರನ್ನೂ ಆಕರ್ಷಿಸುತ್ತದೆ. ಕಟ್ಟಡದ ಮುಂಭಾಗದಲ್ಲಿ ಸ್ಥಾಪಿಸಲಾಗಿರುವ ಸರಸ್ವತಿ ಪ್ರತಿಮೆಯನ್ನು ಕಂಡವರಿಗೆ ಯಾವುದೋ ವಿಶ್ವವಿದ್ಯಾಲಯವಿರಬೇಕೆಂಬ ಕಲ್ಪನೆ ಮೂಡಿದರೂ ಅಚ್ಚರಿ ಇಲ್ಲ. ಅಂಥ ಭವ್ಯ ದೇಗುಲವಿದು.
ಬಿ.ಜಿ.ಎಸ್.ಅಂತರಾಷ್ಟ್ರೀಯ ವಸತಿ ಶಾಲೆ
ಜಗದ್ಗುರು ಶ್ರೀಶ್ರೀಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಗಳವರು ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ವತಿಯಿಂದ ವೈದ್ಯಕೀಯ, ತಾಂತ್ರಿಕ, ಆಯುರ್ವೇದ ಕಾಲೇಜುಗಳನ್ನೊಳಗೊಂಡಂತೆ ಸುಮಾರು ೪೫೦ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ತೆರೆದು ಸುಮಾರು ೮೫ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಿಕ್ಷಣ ಸೌಲಭ್ಯವನ್ನು ಕಲ್ಪಿಸಿಕೊಟ್ಟಿದ್ದಾರೆ.
ಸ್ವಾಮಿಗಳು ವರ್ಗ, ವರ್ಣಾದಿಗಳಿಂದ ಛಿದ್ರ ಛಿದ್ರವಾಗಿರುವ ಜನತೆಯನ್ನು ಸಂಘಟಿಸಿ ಅವರಲ್ಲಿ ಸಮಾನತೆ ಸೋದರತೆ, ಧರ್ಮಪರತೆಗಳನ್ನು ಭಿತ್ತುತ್ತಿದ್ದಾರೆ, ಅಂತೆಯೇ ಹಲವಾರು ಬಾರಿ ವಿದೇಶ ಪ್ರವಾಸಗಳನ್ನು ಹಮ್ಮಿಕೊಂಡ ಸಂದರ್ಭದಲ್ಲಿ ಅಲ್ಲಿನ ಮಕ್ಕಳು ಪಡೆಯುತ್ತಿರುವ ಶ್ರೇಷ್ಠ ಮೊತ್ತದ ಶಿಕ್ಷಣ ಕ್ರಮವನ್ನು ಕಂಡು ಬಹಳವಾಗಿ ಮೆಚ್ಚಿ ನಮ್ಮಲ್ಲಿಯೂ ಅಂತಹ ಗುಣಮಟ್ಟದ ಶಿಕ್ಷಣವನ್ನು ನೀಡಬೇಕೆಂಬ ದೃಷ್ಟಿಯಿಂದ ಸುಸಜ್ಜಿತವಾದ ಅಂತರಾಷ್ಟ್ರೀಯ ವಸತಿ ಶಾಲೆಯನ್ನು ಪ್ರಾರಂಭಿಸಿದ್ದಾರೆ. ೧೯೯೭ರಲ್ಲಿ ಪ್ರಾರಂಭವಾದ ಈ ಬಿ.ಜಿ.ಎಸ್.ಅಂತರಾಷ್ಟ್ರೀಯ ವಸತಿ ಸಹಿತ ವಿದ್ಯಾಲಯವು ಪ್ರಾಥಮಿಕದಿಂದ ಪದವಿಪೂರ್ವ ತರಗತಿಯವರೆಗೆ ಸಿ.ಬಿ.ಎಸ್.ಇ ಪಠ್ಯ ಕ್ರಮದಲ್ಲಿ ಶಿಕ್ಷಣ ನೀಡುತ್ತಾ ದೇಶದ ಅಗ್ರಮಾನ್ಯ ಶಿಕ್ಷಣ ಸಂಸ್ಥೆಗಳಲ್ಲಿಯೇ ಮುಂಚೂಣಿಯಲ್ಲಿದೆ.
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಕುಂಬಳಗೂಡಿನಿಂದ ಪೂರ್ವಕ್ಕೆ ಆರು ಕಿಲೋಮೀಟರ್ ದೂರದಲ್ಲಿ ನಿತ್ಯಾನಂದ ನಗರದಲ್ಲಿ ತೆರೆದಿರುವ ಈ ಶಾಲೆಯ ಸುತ್ತಣ ಪರಿಸರದಲ್ಲೆಲ್ಲಾ ಬಾಳೆ, ತೆಂಗು, ತೇಗ, ಮುಂತಾದ ವಿಧ ವಿಧದ ಹಣ್ಣು, ಹೂವುಗಳ ನೂರಾರು ಎಕರೆಯಷ್ಟು ವಿಸ್ತಾರವಾದ ತೋಟವನ್ನು ನಿರ್ಮಿಸಿದ್ದಾರೆ. ನಿಸರ್ಗ ರಮಣೀಯವಾದ ಸುಂದರ ಪರಿಸರದಲ್ಲಿ ತಲೆ ಎತ್ತಿನಿಂತಿರುವ ಬಿ.ಜಿ.ಎಸ್.ಶಾಲೆ ಪ್ರಸ್ತುತ ಪ್ರತಿವರ್ಷ ೫೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿವೆ.
ಗ್ರಾಮೀಣ ಬಡಜನರ ಆರೋಗ್ಯ ರಕ್ಷಣೆಯಲ್ಲಿ ನಿರತ ಆಸ್ಪತ್ರೆಗಳು
ಶ್ರೀಗಳವರ ಸಾಮಾಜಿಕ ಕಳಕಳಿಗೆ ಸಾಕ್ಷಿಯಾಗಿದೆ.ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ಗಗನಕುಸುಮವಾಗಿದ್ದುದನ್ನು ಅರಿತ ಸ್ವಾಮಿಗಳವರು ಗ್ರಾಮೀಣ ಮಕ್ಕಳಿಗೂ ವೈದ್ಯಕೀಯ ಶಿಕ್ಷಣ ದೊರಕಲಿ ಎಂಬ ಸದುದ್ದೇಶದಿಂದ ವೈದ್ಯಕೀಯ ಕಾಲೇಜನ್ನು ಗ್ರಾಮೀಣ ಪ್ರದೇಶದಲ್ಲೇ ತೆರೆದಿದ್ದಾರೆ. ಕುರುಚಲು ಗಿಡಗಳೂ ಬೆಳೆಯದಿದ್ದ ಜವರನಹಳ್ಳಿ ಪ್ರದೇಶ ಪೂಜ್ಯರ ಪಾದಸ್ಪರ್ಶದಿಂದ ಇಂದು ಬಿ.ಜಿ.ನಗರವೆಂದು ಪ್ರಸಿದ್ಧಿಯಾಗಿ ದೀನದಲಿತರ ಪಾಲಿನ ಆರೋಗ್ಯಧಾಮ ಆಗಿದೆ.
ಬಿ.ಜಿ.ಎಸ್.ಗ್ಲೋಬಲ್ ಸೂಪರ್ ಸ್ಟೆಷಾಲಿಟಿ ಆಸ್ಪತ್ರೆ
ಪರಮಪೂಜ್ಯ ಶ್ರೀಶ್ರೀಗಳವರ ೬೩ನೇ ಜನ್ಮದಿನೋತ್ಸವದ ಶುಭ ಸಂದರ್ಭದಲ್ಲಿ ಲೋಕಾರ್ಪಣೆಗೊಂಡ ಬಿ.ಜಿ.ಎಸ್.ಗ್ಲೋಬಲ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ೧೫೦ಕೋಟಿ ರೂ. ವೆಚ್ಚದಲ್ಲಿ ನಾಲ್ಕು ಲಕ್ಷ ಚದರ ಅಡಿ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಅತ್ಯಾಕರ್ಷಕ ಶೈಲಿಯಿಂದ ಕೂಡಿದೆ.
ಸಾಮಾಜಿಕ ಕಳಕಳಿ
ಪರಮಪೂಜ್ಯ ಸ್ವಾಮಿಗಳವರು ತಮ್ಮ ಅರವತ್ತೈದು ವರ್ಷಗಳ ಸಾರ್ಥಕ ಜೀವನದಲ್ಲಿ ಸಮಾಜಕ್ಕೊಂದು ಆದರ್ಶವನ್ನು ಕೊಟ್ಟಿದ್ದಾರೆ. ಭಕ್ತಜನತೆಯ ಮನಸ್ಸಿನ ತುಡಿತ, ಮಿಡಿತಗಳನ್ನು ಅರಿತು ಅವರಿಗೆ ಏನೆಲ್ಲಾ ಬೇಕೋ ಅವನ್ನೆಲ್ಲಾ ಕರುಣಿಸಿದ್ದಾರೆ. ಜನರ ನೆಮ್ಮದಿಯ ಬದುಕಿಗಾಗಿ ತಮ್ಮನ್ನೇ ಸಮರ್ಪಿಸಿಕೊಂಡಿದ್ದಾರೆ. ಪೂಜ್ಯ ಸ್ವಾಮಿಗಳವರ ಸೇವೆ ಹಾಗೂ ಸಾಧನೆಗಳ ಫಲವನ್ನು ಉಣ್ಣುತ್ತಿರುವ ಭಕ್ತ ಜನತೆ ಕೃತಜ್ಞತಾಪೂರ್ವಕವಾಗಿ ಪ್ರತಿವರ್ಷ ಆಚರಿಸಿ ತಮ್ಮ ಭಕ್ತಿ ಗೌರವಗಳನ್ನು ಸಮರ್ಪಿಸುತ್ತಾರೆ. ಸಂಭ್ರಮಿಸಿ ಆನಂದಪಡುತ್ತಾರೆ. ಸ್ವಾಮಿಗಳವರ ಜನ್ಮದಿನೋತ್ಸವ ಎಂದರೆ ಕೇವಲ ಹಾರ-ತುರಾಯಿಗಳ, ಅಭಿನಂದನೆಗಳ ಸುರಿಮಳೆ ಮಾತ್ರ ಆಗಿರುವುದಿಲ್ಲ. ಅದೊಂದು ಸಾಂಸ್ಕೃತಿಕ ಸಮಾವೇಶ ಆಗಿರುತ್ತದೆ. ಅಂದು ಸಮಾಜಕ್ಕೆ ಹತ್ತು ಹಲವು ಕೊಡುಗೆಗಳು ಶ್ರೀಮಠದಿಂದ ಸಮರ್ಪಣೆ ಆಗುತ್ತದೆ.
ಪ್ರತಿವರ್ಷ ಈ ಸಂದರ್ಭದಲ್ಲಿ ಸಾವಿರಾರು ಮಕ್ಕಳಿಗೆ, ಬಡಜನತೆಗೆ ಬಟ್ಟೆಯನ್ನು ವಿತರಿಸುವ ಸ್ವಾಮಿಗಳವರು ಸಾವಿರಾರು ಮಂದಿ ರೈತರಿಗೆ ಕೃಷಿ ಸಲಕರಣೆಗಳನ್ನು ವಿತರಿಸುತ್ತಾರೆ. ಇನ್ನೊಂದು ವರ್ಷ ಸಾವಿರಾರು ಅಂಗವಿಕಲರಿಗೆ ಗಾಲಿಕುರ್ಚಿಗಳನ್ನು, ಕೃತಕಕಾಲುಗಳನ್ನು ವಿತರಿಸುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿ ಶಿಥಿಲಗೊಂಡಿರುವ ನೂರಾರು ದೇವಾಲಯಗಳ ಜೀರ್ಣೋದ್ಧಾರವನ್ನು ಒಂದು ವರ್ಷ ಮಾಡಿದರೆ, ಮುಂದಿನ ವರ್ಷ ಆ ದೇವಾಲಯಗಳಿಗೆಲ್ಲ ರಥಗಳನ್ನು ನಿರ್ಮಿಸಿಕೊಡುತ್ತಾರೆ. ನಿರುದ್ಯೋಗಿ ಯುವಕರಿಗೆ, ನಿರ್ಗತಿಕ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು, ಕಂಪ್ಯೂಟರ್‌ಗಳನ್ನು ವಿತರಿಸುವ ಸ್ವಾಮಿಗಳವರು ಮತ್ತೊಂದು ವರ್ಷ ಗ್ರಾಮೀಣ ಜನತೆಗೆ ಕುಲಕಸುಬಿನ ಪರಿಕರಗಳನ್ನು ವಿತರಿಸುವ ಮೂಲಕ ಅವರ ಜೀವನ ನಿರ್ವಹಣೆಗೆ ನೆರವಾಗುತ್ತಾರೆ.
ಪರಿಸರ ಸಂರಕ್ಷಣೆಯಲ್ಲಿ ಶ್ರೀಗಳು ಎತ್ತಿದ ಕೈ
ಸಸ್ಯ ಸಂಪದ್ಭರಿತ ಅರಣ್ಯ ಜೀವಕೋಟಿಯ ಜೀವ ಜೀವಾಳ. ಪ್ರಾಣಿ ಪಕ್ಷಿಗಳ ಆಶ್ರಯ ತಾಣ. ಮಾನವನ ಬದುಕಿಗೆ ಬೇಕಾದ ಎಲ್ಲಾ ಸಂಪನ್ಮೂಗಳನ್ನು ಪ್ರಕೃತಿ ಕೊಟ್ಟಿದೆ ಅದನ್ನು ಬೆಳೆಸಿ, ಸಂರಕ್ಷಿಸಿ ಸೂಕ್ತ ರೀತಿಯಲ್ಲಿ ಬಳಸಿಕೊಂಡಾಗ ಮಾತ್ರ ಮಾನವನ ಪ್ರಗತಿ ಸಾಧ್ಯ. ಆದರೆ ಮಾನವ ತನ್ನ ಸಂಪನ್ಮೂಲಗಳನ್ನು ಪ್ರಕೃತಿ ಕೊಟ್ಟಿದೆ. ಅದನ್ನು ಬೆಳೆಸಿ, ಸಂರಕ್ಷಿಸಿ ಸೂಕ್ತ ರೀತಿಯಲ್ಲಿ ಬಳಸಿಕೊಂಡಾಗ ಮಾತ್ರ ಮಾನವನ ಪ್ರಗತಿ ಸಾಧ್ಯ. ಆದರೆ ಮಾನವ ತನ್ನ ಸಂಪನ್ಮೂಲಗಳ ವೃದ್ಧಿಯಲ್ಲಿ ತೊಡಗಿ ಸಸ್ಯ ಸಂಕುಲವನ್ನು, ಪರಿಸರವನ್ನು ನಿರ್ಲಕ್ಷಿಸಿದ ಪರಿಣಾಮವಾಗಿ ನಾಡು ಮಳೆ ಬೆಳೆಯಿಲ್ಲದೆ ಜಾನುವಾರು ಮುಂತಾದ ಪ್ರಾಣಿ ಸಂಕುಲ ಸಂಕಷ್ಟಕ್ಕೀಡಾಗುತ್ತಿದೆ. ಪರಿಸರದ ಸಮೃದ್ಧವಾಗಿದ್ದರೆ ನಾಡು ಸುಭಿಕ್ಷವಾಗುತ್ತದೆ. ಆ ನಿಟ್ಟಿನಲ್ಲಿ ಸಸ್ಯ ಸಂಪತ್ತಿನ ಅನಿವಾರ್ಯತೆಯನ್ನು ಮನಗಂಡವರು ಪ್ರೇಮಿಗಳಾದ ಪೂಜ್ಯರು ತಮ್ಮ ನೇತೃತ್ವದಲ್ಲಿ ರಾಜ್ಯದ ಎಲ್ಲ ಧರ್ಮಗುರುಗಳನ್ನೊಳಗೊಂಡ ಕರ್ನಾಟಕ ವನಸಂವರ್ಧನ ಟ್ರಸ್ಟ್‌ನ್ನು ರಚಿಸಿದ್ದಾರೆ.
ಮಹಿಳಾ ತರಬೇತಿ ಶಿಬಿರಗಳು
ಮಹಿಳೆಯ ಮಾನಸಿಕ ಆರೋಗ್ಯ ಸ್ವಾಸ್ಥ್ಯಗಳು ಉತ್ತಮವಾಗಿದ್ದಾಗ ಮಾತ್ರ ಸಮಾಜದ ನಿರ್ಮಾಣ ಸಾಧ್ಯವಾಗುತ್ತದೆ. ಮಹಿಳೆಯರನ್ನು ಧಾರ್ಮಿಕವಾಗಿ, ಸಾಮಾಜಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಜಾಗೃತಗೊಳಿಸಿ ಅವರಲ್ಲಿ ಆತ್ಮಸ್ಥೈರ್ಯವನ್ನು ತುಂಬಿ ಅವರನ್ನು ಸ್ವಾವಲಂಬಿಗಳನ್ನಾಗಿ ರೂಪಿಸಿದಾಗ ಅವರ ಬಾಳಿನಲ್ಲಿ ಸುಖ ಶಾಂತಿ ನೆಮ್ಮದಿಗಳನ್ನು ಪಡೆಯುವುದಕ್ಕೆ ಸಾಧ್ಯ. ಆ ದೃಷ್ಟಿಯಿಂದ ಮಹಿಳೆಯರ ಸರ್ವತೋಮುಖ ಅಭಿವೃದ್ದಿಗಾಗಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ. ಅಂತಹ ಹಲವು ಯೋಜನೆಗಳಲ್ಲಿ ಮಹಿಳಾ ಜಾಗೃತಿ ತರಬೇತಿ ಶಿಬಿರವೂ ಒಂದು. ಕಳೆದ ಹದಿನೈದು ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಿರುವ ಈ ಶಿಬಿರಗಳಲ್ಲಿ ಯಾವುದೇ ಜಾತಿ, ಮತಗಳ ಭೇದವಿಲ್ಲದೆ ರಾಜ್ಯದಾದ್ಯಂತ ೩೫೦೦ಕ್ಕೂ ಹೆಚ್ಚು ಯುವ ಮಹಿಳೆಯರು ಪಾಲ್ಗೊಂಡು ತರಬೇತಿಯನ್ನು ಪಡೆಯುತ್ತಾರೆ. ಈ ಶಿಬಿರಗಳಲ್ಲಿ ಪರಿಸರ ನೈರ್ಮಲ್ಯ, ಆರೋಗ್ಯ ರಕ್ಷಣೆಯ ಅರಿವು, ಸದಾಚಾರ, ಪ್ರಾರ್ಥನೆ, ಧರ್ಮ, ಸಂಸ್ಕೃತಿ, ಗೃಹಕೈಗಾರಿಕೆ ಮುಂತಾದ ವಿಷಯಗಳನ್ನು ಕುರಿತು ಶಿಕ್ಷಣವನ್ನು ನೀಡಲಾಗುತ್ತದೆ.
ಗೋ ಸಂರಕ್ಷಣೆಯಲ್ಲಿ ಶ್ರೀಗಳು
ಭಾರತೀಯ ಸಂಸ್ಕೃತಿಯಲ್ಲಿ ಗೋವುಗಳಿಗೆ ಪೂಜನೀಯ ಸ್ಥಾನವಿದೆ. ಅವುಗಳ ಸಂಗವಿಲ್ಲದ ಮಾನವನ ಬದುಕನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ರೈತರ ಪಾಲಿಗಂತೂ ಅವು ಭಾಗ್ಯದ ನಿಧಿಯಾಗಿದೆ. ಆದರೆ ಇಂದು ಗೋವುಗಳ ಸ್ಥಿತಿ ಶೋಚನೀಯವಾಗಿದೆ. ಸಕಾಲದಲ್ಲಿ ಮಳೆ-ಬೆಳೆಗಳಿಲ್ಲದೆ ಅವುಗಳ ಸ್ಥಿತಿ ಚಿಂತಾಜನಕವಾಗಿರುವುದು ಒಂದೆಡೆಯಾದರೆ, ಮನುಷ್ಯನ ನಾಲಿಗೆ ಚಪಲಕ್ಕೆ ಒಳಗಾಗಿ ಕಸಾಯಿ ಖಾನೆ ಸೇರುತ್ತಿರುವುದು ಅವುಗಳ ದಯನೀಯ ಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ. ಅವುಗಳ ಘೋರ ಸ್ಥಿತಿಯನ್ನು ಕಂಡು ಮನನೊಂದು ಅವುಗಳನ್ನು ಸೂಕ್ತವಾಗಿ ಸಂರಕ್ಷಿಸುವ ಬಗ್ಗೆ ಪರಮಪೂಜ್ಯ ಶ್ರೀಗಳವರು ಸಂಕಲ್ಪಿಸಿ ಮಹಾಸಂಸ್ಥಾನ ಮಠದಲ್ಲಿ ಹಾಗೂ ಎಲ್ಲಾ ಶಾಖಾಮಠಗಳಲ್ಲಿ ಗೋಶಾಲೆಗಳನ್ನು ತೆರೆದಿದ್ದಾರೆ.
ವಿಶೇಷವಾಗಿ ಮಂಡ್ಯದಲ್ಲಿರುವ ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಶಾಖಾಮಠದಲ್ಲಿ ಹಾಗೂ ಚಿತ್ರದುರ್ಗದಲ್ಲಿ ಕನಿಷ್ಠ ಐದು ಸಾವಿರ ಗೋವುಗಳನ್ನು ಸಾಕಿ-ಸಂರಕ್ಷಿಸುವ ಸಲುವಾಗಿ ಸುಸಜ್ಜಿತ ಗೋಶಾಲೆಗಳನ್ನು ತೆರೆದಿದ್ದಾರೆ. ನೀರು, ಮೇವು, ನೆರಳಿನ ವ್ಯವಸ್ಥೆಯನ್ನು ಮಾಡಿರುವ ಪರಮಪೂಜ್ಯರ ದಯೆಯಿಂದಾಗಿ ಇಂದು ಸಾವಿರಾರು ಗೋವುಗಳು ಸಂತೃಪ್ತಿಯಿಂದಿವೆ.
ಪರಿವರ್ತನೆಯ ಹರಿಕಾರ
ಮಠಗಳಿರುವುದು ಗುರುಗಳು ಆಡಂಬರದಿಂದ ಮೆರೆಯುವುದಕ್ಕಲ್ಲ. ಮಠಗಳಿರುವುದು ಗುರುಗಳ ಸುಖಜೀವನಕ್ಕಲ್ಲ. ಮನೆ ತ್ಯಜಿಸಿ ಸನ್ಯಾಸಿಗಳಾದವರಿಗೆ ಮಠವೇಕೆ. ಮಠಗಳಿರುವುದು ಸರ್ವಜನರ ಸೇವೆಗಾಗಿ. ಗುರುಗಳ ಆಧ್ಯಾತ್ಮಾನುಷ್ಠಾನಕ್ಕಾಗಿ ಹೀಗೆಂದು ಕಾವಿಧಾರಿ ಸ್ವಾಮಿಗಳೋರ್ವರು ಘೋಷಿಸಿದ್ದು ಇತಿಹಾಸದಲ್ಲೇ ಮೊದಲು. ಇಂತಹ ಕ್ರಾಂತಿಕಾರಿ ನುಡಿಗಳನ್ನಾಡಿದವರು ಶ್ರೀಶ್ರೀಶ್ರೀ ಬಾಲಗಂಗಾಧರನಾಥ ಸ್ವಾಮಿಗಳು.
ಅವರು ಕೇವಲ ನುಡಿಯಲ್ಲಲ್ಲ; ನುಡಿದಂತೆ ನಡೆದು ತೋರಿಸಿದರು. ಆದಿಚುಂಚನಗಿರಿ ಮಠವನ್ನು ಕೇವಲ ಜಗದ್ಗುರುಗಳ ಕೇಂದ್ರವಾಗಿಸದೆ ಶ್ರೀ ಸಾಮಾನ್ಯರ ಕೇಂದ್ರವಾಗಿಸಿದರು. ಸಾವಿರಾರು ಅನಾಥ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ಆಶ್ರಯ ನೀಡಿದರು.
ಮಠದಲ್ಲಿ ವಿದ್ಯಾರ್ಥಿಗಳ ಜಾತ್ರೆ
ಪುರಾಣೇತಿಹಾಸ ಪ್ರಸಿದ್ಧವೂ ದಿವ್ಯ ಧರ್ಮಪೀಠವೂ ಆಗಿರುವ ಶ್ರೀ ಆದಿಚುಂಚನಗಿರಿ ಮಠ ಕರ್ನಾಟಕದ ಒಂದು ಪುಣ್ಯಕ್ಷೇತ್ರ. ಈ ಕ್ಷೇತ್ರದ ಪರಂಪರೆ ಮಹಿಮಾ ಪೂರ್ಣ, ಪರಮಪವಿತ್ರವಾದುದು. ಸಾಮಾಜಿಕ ಮತ್ತು ಧಾರ್ಮಿಕ ಕ್ರಾಂತಿಯ ಹೊಂಗಿರಣದಂತೆ ಕಂಗೊಳಿಸುತ್ತಿರುವ ಶ್ರೀ ಆದಿಚುಂಚನಗಿರಿ ಕ್ಷೇತ್ರವು ತ್ರಿವಿಧ ದಾಸೋಹದ ಮಹಾಮನೆಯಾಗಿದೆ. ಮಕ್ಕಳ ಮಹಾಮಂದಿರ, ಧರ್ಮ ಸಂದೇಶದ ದಿವ್ಯಧಾಮ, ಕಾಯಕ ತತ್ವದ ಕ್ರಿಯಾ ಕೇಂದ್ರ, ಜ್ಞಾನ ಪ್ರಸಾರದ ಮಹಾವಿದ್ಯಾಲಯ, ಸಮಕಾಲೀನ ಸಾಮಾಜಿಕ ಪ್ರಜ್ಞೆಯ ಈ ಸಮರ್ಥ ಪೀಠದ ಆಶ್ರಯದಲ್ಲಿ ಅರಳಿದ ಅಸಂಖ್ಯಾತ ಆಸ್ತಿಕರು, ಧರ್ಮಾಭಿಮಾನಿಗಳು ವಿದ್ಯಾರ್ಥಿಗಳು ಸಾತ್ವಿಕ ಜೀವನದ ಮಾರ್ಗ ಕಂಡುಕೊಂಡಿದ್ದಾರೆ.
ಆದಿಚುಂಚನಗಿರಿ ಎಂಬ ಹೆಸರೇ ಮಂತ್ರಪೂರ್ಣ. ಪರಿಶುದ್ಧಾತ್ಮರ ದಿವ್ಯ ತಪಸ್ಸು, ಶ್ರದ್ದೆ ಮತ್ತು ನಿಷ್ಠೆಗಳ ಭದ್ರ ಬುನಾದಿಯ ಮೇಲೆ ನೆಲೆಗೊಂಡಿರುವ ಪವಿತ್ರ ಕ್ಷೇತ್ರ.
ಬಾನಂದೂರಿನಲ್ಲಿ ಶಾಖಾಮಠ
ಜೂನ್,೨೪. ೨೦೦೮ರಾಮನಗರ ಜಿಲ್ಲೆ, ಬಿಡದಿ ಹೋಬಳಿ, ಬಾನಂದೂರಿನ ತುಂಬೆಲ್ಲಾ ಭಕ್ತಿಯ ವಾತಾವರಣ ನೆಲೆಸಿತು. ಶ್ರೀ ಆದಿಚುಂಚನಗಿರಿ ಮಠದ ಅಸಂಖ್ಯಾತ ಭಕ್ತರು ಸಡಗರ ಸಂಭ್ರಮದಿಂದ ನೆರೆದಿದ್ದರು. ಕಾರಣ, ಅಂದು ಬಾನಂದೂರು ಶಾಖಾ ಮಠದ ನೂತನ ಕಟ್ಟಡದ ಉದ್ಘಾಟನೆ ಒಂದಾದರೆ, ಮತ್ತೊಂದು ಬಾನಂದೂರು ಗ್ರಾಮ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಬಾಲಗಂಗಾಧರ ನಾಥ ಮಹಾಸ್ವಾಮಿಗಳವರಿಗೆ ಜನ್ಮ ನೀಡಿದ ಪುಣ್ಯಭೂಮಿ ಎಂಬುದು. ನೂತನ ಕಟ್ಟಡದ ಉದ್ಘಾಟನೆಗೆ ಪರಮಪೂಜ್ಯ ಮಹಾಸ್ವಾಮಿಗಳವರು ಬಾನಂದೂರಿಗೆ ಆಗಮಿಸುತ್ತಿದ್ದಾರೆ ಎಂಬ ಸುದ್ದಿ ತಿಳಿದು ಆ ಪ್ರದೇಶದ ಭಕ್ತ ಜನತೆ ಭಕ್ತಿ ತುಂದಿಲರಾಗಿದ್ದರು. ಇಡೀ ಬಾನಂದೂರಿನಲ್ಲಿ ಗುರುಭಕ್ತಿಯ ಕಂಪು ಪಸರಿಸಿತ್ತು.
ಕಾಶಿಯಲ್ಲಿ ಶ್ರೀಮಠ
ಪರಮಪೂಜ್ಯರು ದೇಶದೆಲ್ಲೆಡೆ ಇವರು ಪವಿತ್ರ ಪುಣ್ಯ ಕ್ಷೇತ್ರಗಳಲ್ಲಿ ಶ್ರೀಮಠದ ಶಾಖೆಗಳನ್ನು ತೆರೆಯಬೇಕೆಂಬುದು ಸಂಕಲ್ಪಿಸಿ ಉಜ್ಜಯಿನಿ, ಕಾಶಿ, ರಾಮೇಶ್ವರ, ಮಥುರಾ, ತಿರುಪತಿ ಮುಂತಾದೆಡೆಯಲ್ಲಿ ಕಾರ್ಯಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ. ಈಗಾಗಲೇ ಮಧ್ಯ ಪ್ರದೇಶದಲ್ಲಿ ಉಜ್ಜಯಿನಿಯಲ್ಲಿ ಶ್ರೀ ಮಠದ ಶಾಖೆ ಪ್ರಾರಂಭಗೊಂಡು ತನ್ನ ಸೇವೆಯನ್ನು ಸಲ್ಲಿಸುತ್ತಿದೆ. ಪ್ರಸ್ತುತ ಉತ್ತರ ಪ್ರದೇಶದ ವಾರಣಾಸಿ(ಕಾಶಿ)ಯಲ್ಲಿ ಶ್ರೀಮಠದ ಶಾಖೆಯನ್ನು ನಾಡಿನ ಪ್ರಮುಖ ಮಠಾಧೀಶರ ಸಾನಿಧ್ಯದಲ್ಲಿ ಸಾವಿರಾರು ಮಂದಿ ಭಕ್ತರ ಉಪಸ್ಥಿತಿಯಲ್ಲಿ ಹರ್ಷೋದ್ಘಾರ ಹಾಗೂ ಜೈಕಾರಗಳ ನಡುವೆ ಪರಮಪೂಜ್ಯ ಜಗದ್ಗುರು ಶ್ರೀಶ್ರೀಶ್ರೀ ಅನಾವರಣಗೊಳಿಸಿ ಭಕ್ತರ ಸೇವೆಗಾಗಿ ಸಮರ್ಪಿಸಿದ್ದಾರೆ.
ಆದಿ ಚುಂಚನಗಿರಿ ಮಠ-ಸಾಮಾಜಿಕ ಸೇವೆಗಳು
ಧರ್ಮದ ಅರ್ಥ-ಕಲ್ಪನೆಗಳು ಇಂದು ಬದಲಾಗಿವೆ. ಹೆಚ್ಚು ವಿಸ್ತೃತಗೊಂಡಿದೆ. ವಿವೇಕಾನಂದರೇ ಹೇಳುವಂತೆ ದೇವರ ಕೃಪೆ ಪಡೆಯಲು ಕಾಡಿಗೆ ಹೋಗಿ ಮೂಗು ಹಿಡಿದು, ಕಣ್ಮುಚ್ಚಿ ಕುಳಿತು ತಪಸ್ಸು ಮಾಡಬೇಕಾಗಿಲ್ಲ. ಯಜ್ಞಯಾಗಾದಿಗಳನ್ನು ಮಾಡಬೇಕಾಗಿಲ್ಲ. ಇಲ್ಲಿಯೇ ಬಡಬಗ್ಗರ ಸೇವೆಯಲ್ಲಿ ಅದನ್ನು ಪಡೆಯಲು ಸಾಧ್ಯ. ಸ್ವಾಮಿ ವಿವೇಕಾನಂದರ ಈ ಮಾತುಗಳನ್ನು ಬಹುವಾಗಿ ಕಾರ್ಯರೂಪಕ್ಕೆ ತಂದವರು ಶ್ರೀಶ್ರೀಶ್ರೀ ಬಾಲಗಂಗಾಧರ ನಾಥ ಸ್ವಾಮಿಗಳು. ಧರ್ಮದ ರಹಸ್ಯವನ್ನು ಮನಗಂಡು ಅದರ ವಿಶಾಲ ಚೌಕಟ್ಟಿನಲ್ಲಿ ಕಾರ್ಯರೂಪಕ್ಕೆ ಇಳಿದು, ಕೆಲವೇ ಕೆಲವು ಸಮಯದಲ್ಲಿ ಸಮಾಜದ ಸರ್ವತೋಮುಖ ಅಭಿವೃದ್ಧಿಯ ಯಶಸ್ಸು ಕಂಡ ಕೀರ್ತಿ ಅವರದು. ೧೯೭೪ರಲ್ಲಿ ಶ್ರೀಮಠದ ಪೀಠಾಧ್ಯಕ್ಷರಾಗಿ ಬಂದ ಮೇಲೆ ಅವರು ಮಾಡಿದ ಕಾರ್ಯಗಳೆಲ್ಲವೂ ಪವಾಡ ಸದೃಶ್ಯವಾದುವುಗಳು. ಅಸಮಾನ್ಯವೆನಿಸಿದವುಗಳು. ಮುಟ್ಟಿದ್ದೆಲ್ಲವೂ ಚಿನ್ನ ಎಂಬ ಮಾತು ಅಕ್ಷರಶಃ ನಿಜವಾದುದನ್ನು ಇಲ್ಲಿ ಕಾಣಬಹುದು.
ಮೊದಲು ಮಠ ಗಮನ ನೀಡಿದ್ದು ಶಿಕ್ಷಣಕ್ಕೆ. ಶಿಕ್ಷಣದ ಅಗತ್ಯವನ್ನು ಅರಿತು ಸ್ವಾಮೀಜಿ ಅವರು ಸಮಾಜದ ಎಲ್ಲಾ ವರ್ಗದ ಜನರಿಗೂ ಅದು ಸುಲಭವಾಗಿ ದೊರೆಯುವಂತೆ ಅವಕಾಶ ಕಲ್ಪಿಸಿದ್ದು ಎಲ್ಲೊ ಒಂದು ಕಡೆ ಅದನ್ನು ಕೇಂದ್ರಿಕರಿಸದೆ ಹಳ್ಳಿ ಹಳ್ಳಿಗೂ, ಜಿಲ್ಲೆ ಜಿಲ್ಲೆಗಳಿಗೆ ಅದನ್ನು ವಿಸ್ತರಿಸಿದ್ದು. ಅವಕಾಶವಿಲ್ಲದೆ ವಂಚಿತರಾಗಿದ್ದ ಅದೆಷ್ಟೊ ಮಂದಿ ಇದರಿಂದ ಲಾಭ ಪಡೆಯುವಂತಾಯಿತು. ಶ್ರೀ ಮಠದಲ್ಲಿ ಸ್ವಾಮೀಜಿ ಅವರು ಗ್ರಾಮೀಣ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಟ್ಟು ಊಟ, ವಸತಿಗಳನ್ನು ಕಲ್ಪಿಸಿರುವಂತೆಯೇ ಹೊರದೇಶದ ವಿದ್ಯಾಭ್ಯಾಸದ ಕನಸು ಹೊತ್ತ ಶ್ರೀಮಂತ ಮನೆತನದ ಮಕ್ಕಳಿಗೂ ಬೇಕಾದ ವ್ಯವಸ್ಥೆಯನ್ನು ಮಠದ ಮೂಲಕವೇ ಕಲ್ಪಿಸಿರುವುದು ಸ್ವಾಮೀಜಿ ಅವರ ವಿಶಾಲ ಮನೋಭಾವಕ್ಕೆ ಸಾಕ್ಷಿ.

ಮೇಲುಕೋಟೆ ವಿ.ಎನ್.ಗೌಡ

No comments:

Post a Comment

ಹಿಂದಿನ ಬರೆಹಗಳು