Friday, June 4, 2010

ಕರ್ನಾಟಕ ಮಾರಾಟಕ್ಕಿದೆ!




ದಿನೇಶ್‌ಕುಮಾರ್ ಎಸ್.ಸಿ.

ಕರ್ನಾಟಕವನ್ನು ಸಾರಾಸಗಟಾಗಿ ಹರಾಜಿಗೆ ಇಡಲೆಂದೇ ಜೂನ್ ೩ ಮತ್ತು ೪ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆದಿದೆ. ಸಾಮಾನ್ಯ ಜನರು ಕೊಡುವ ತೆರಿಗೆಯಿಂದಲೇ ಸಂಗ್ರಹಿಸಿದ ಸರಿಸುಮಾರು ಸಾವಿರ ಕೋಟಿ ರೂ.ಗಳನ್ನು ಬಂಡವಾಳ ಹೂಡಲು ಬರುವ ಧಣಿಗಳಿಗೆಂದು ವೆಚ್ಚ ಮಾಡಲಾಗಿದೆ. ಕರ್ನಾಟಕದ ನೆಲ, ಜಲ, ವಿದ್ಯುತ್ ಎಲ್ಲವನ್ನು ಬಹುರಾಷ್ಟ್ರೀಯ ಕಂಪೆನಿಗಳಿಗೆ, ಕಾರ್ಪರೇಟ್ ಸಂಸ್ಥೆಗಳಿಗೆ ಧಾರೆ ಎರೆದಿರುವ ಯಡಿಯೂರಪ್ಪ ಸರ್ಕಾರ ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ಮಾಡುತ್ತೇವೆ ಎಂದು ಹೇಳುತ್ತಿದೆ.
ಏನಿದು ಜಾಗತಿಕ ಹೂಡಿಕೆದಾರರ ಸಮಾವೇಶ:
ಸುಮಾರು ನಾಲ್ಕು ಲಕ್ಷ ಕೋಟಿ ರೂ. ಬಂಡವಾಳ ನಿರೀಕ್ಷೆ ಇಟ್ಟುಕೊಂಡಿರುವ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಸರ್ಕಾರ ಖರ್ಚು ಮಾಡಿರುವುದು ಸರಿಸುಮಾರು ಒಂದು ಸಾವಿರ ಕೋಟಿ. ಕೇವಲ ವೇದಿಕೆ ನಿರ್ಮಾಣಕ್ಕೆ ಹಲವಾರು ಕೋಟಿ ರೂ.ಗಳನ್ನು ವ್ಯಯಿಸಲಾಗಿದೆ ಎಂದರೆ, ಸಮಾವೇಶದ ಭರ್ಜರಿ ಬಜೆಟ್ ಅರ್ಥವಾಗುತ್ತದೆ. ವಿವಿಧೆಡೆಯಿಂದ ಬಂದಿರುವ ಬಂಡವಾಳ ಹೂಡಿಕೆದಾರರಿಗೆ, ಅವರ ಏಜೆಂಟರಿಗೆ, ಪಂಚತಾರಾ ಸೌಲಭ್ಯದ ಹೋಟೆಲ್‌ಗಳನ್ನೇ ವಾರಗಟ್ಟಲೆ ಕಾದಿರಿಸಲಾಗಿತ್ತು. ವಿಶ್ವದ ಹಲವು ಪ್ರಮುಖ ನಗರಗಳಲ್ಲಿ ರಾಜ್ಯ ಸರ್ಕಾರ ನಡೆಸಿರುವ ರೋಡ್ ಶೋ ನೆಪದಲ್ಲಿ ಹಲವಾರು ಕೋಟಿ ರೂ.ಗಳು ಹರಿದು ಹೋಗಿವೆ. ಕೇವಲ ಮಾಧ್ಯಮ ಸಲಹೆಗಾಗಿ ಇಟ್ಟುಕೊಂಡಿರುವ, ಕೆಲಸವೇ ಮಾಡದ ಏಜೆನ್ಸಿಯೊಂದಕ್ಕೆ ಕೊಟ್ಟಿರುವುದು ಎರಡು ಕೋಟಿ ರೂ.!
ವಿಶೇಷವೆಂದರೆ, ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೂ ಮುನ್ನವೇ ಸರ್ಕಾರ ಹಲವು ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಕೆಲವು ಸಂಸ್ಥೆಗಳಿಗಾಗಿ ರೈತರ ಜಮೀನನ್ನು ಭೂ ಸ್ವಾಧೀನಗೊಳಿಸಿಕೊಳ್ಳುವ ಪ್ರಕ್ರಿಯೆಯೂ ಮುಗಿದಿದೆ. ಉದಾಹರಣೆಗೆ, ಭೂ ಸ್ವಾಧೀನಕ್ಕೆಂದೇ ಮಿತ್ತಲ್ ಸಂಸ್ಥೆ ಈಗಾಗಲೇ ೨೦೬ಕೋಟಿ ರೂ. ಪಾವತಿಸಿದೆ. ಬಳ್ಳಾರಿಯಲ್ಲಿ ೬೦ದಶಲಕ್ಷ ಟನ್ ಉಕ್ಕು ಉತ್ಪಾದನಾ ಘಟಕ ಸ್ಥಾಪಿಸುತ್ತಿರುವ ಮಿತ್ತಲ್, ೪,೮೦೦ ಎಕರೆ ಪ್ರದೇಶದಲ್ಲಿ ೩೨ಸಾವಿರ ಕೋಟಿ ರೂ. ಬಂಡವಾಳ ಹೂಡುತ್ತಿದೆ.
ಮೊದಲೇ ಒಪ್ಪಂದಗಳನ್ನು ಮಾಡಿಕೊಂಡಿದ್ದರೆ, ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದ ಅಗತ್ಯತೆಯಾದರೂ ಏನಿತ್ತು ಎಂಬ ಪ್ರಶ್ನೆಗೆ ಮುಖ್ಯಮಂತ್ರಿ ಯಡಿಯೂರಪ್ಪ, ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿಯವರೇ ಉತ್ತರಿಸಬೇಕು.
ಸಮಾವೇಶದ ಹೆಸರಿನಲ್ಲಿ ನೂರಾರು ಕೋಟಿ ರೂ. ಲೂಟಿಯಾಗುತ್ತಿರುವುದಂತೂ ನಿಜ. ಈ ಪೈಕಿ ಸಾಕಷ್ಟು ಹಣ ರಾಜಕಾರಣಿಗಳ ಕೈಗೆ, ಅಧಿಕಾರಿಗಳ ಕೈಗೆ ಸೇರಿಹೋಗಿವೆ. ಸಾಧನೆಗಳೇ ಇಲ್ಲದ ಸರ್ಕಾರಕ್ಕೆ ಸಮಾವೇಶದ ಹೆಸರಿನಲ್ಲಿ ’ಅಭಿವೃದ್ಧಿಯ ಹರಿಕಾರ’ ಎಂಬ ಬಿರುದು ಬೇಕಿತ್ತು. ಲೂಟಿಕೋರರಿಗೆ ಹಣ ದೋಚುವ ಸಂದರ್ಭವೂ ಸೃಷ್ಟಿಯಾಗಬೇಕಿತ್ತು. ಈ ಹಿನ್ನೆಲೆಯಲ್ಲೇ ಸಮಾವೇಶ ನಡೆಯಿತು.
ಏನಿದರ ಪರಿಣಾಮ:
ಬಂಡವಾಳ ಹೂಡಿಕೆಯನ್ನು ಬಹುದೊಡ್ಡ ಸಾಧನೆಯೆಂದು ಬಿಂಬಿಸಿಕೊಳ್ಳುತ್ತಿರುವ ಸರ್ಕಾರಕ್ಕೆ ಜಾಗತಿಕ ಬಂಡವಾಳ ಹೂಡಿಕೆದಾರರ ಅಸಲಿ ಸ್ವರೂಪ ಗೊತ್ತಿಲ್ಲವೆಂದೇನಿಲ್ಲ. ೯೦ರ ದಶಕದಿಂದ ಈಚೆಗೆ ಬಂಡವಾಳ ಹೂಡಿಕೆಯ ನೆಪದಲ್ಲಿ ಬಂದ ಸಂಸ್ಥೆಗಳಿಗೆ ಕೊಡಲಾದ ಜಮೀನೆಷ್ಟು, ಇದರಿಂದಾಗಿ ಭೂಮಿ ನೀಡಿ ದಿಕ್ಕು ದೆಸೆ ಕಳೆದುಕೊಂಡ ರೈತರ ಪಾಡೇನಾಗಿ ಹೋಗಿದೆ? ಈ ಸಂಸ್ಥೆಗಳು ಸರೋಜಿನಿ ಮಹಿಷಿ ವರದಿಯಂತೆ ಸ್ಥಳೀಯರಿಗೆ ಅರ್ಥಾತ್ ಕನ್ನಡಿಗರಿಗೆ ಉದ್ಯೋಗ ನೀಡಿವೆಯೇ? ಈ ನಾಡಿನ ಭೂಮಿ, ನೀರು, ವಿದ್ಯುತ್ ಬಳಸಿಕೊಂಡು ನೂರಾರು ಕೋಟಿ ರೂ. ಗಳಿಸುತ್ತಿರುವ ಸಂಸ್ಥೆಗಳಿಗೆ ರಾಜ್ಯ ಸರ್ಕಾರ ನೀಡಿರುವ ಕೊಡುಗೆಗಳಿಗೆ ತಕ್ಕಂತೆ ಅವು ನಡೆದುಕೊಂಡಿವೆಯೇ?
ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಹುಡುಕುತ್ತಾ ಹೊರಟರೆ ನಿರಾಶೆಯೇ ಕಾದಿದೆ. ಈ ಆಧುನಿಕ ಈಸ್ಟ್ ಇಂಡಿಯಾ ಕಂಪೆನಿಗಳು ಕನ್ನಡಿಗರ ಬದುಕನ್ನೇ ಕಿತ್ತುಕೊಂಡಿದೆ. ಭೂಮಿ ಕೊಟ್ಟ ರೈತರು ಬೀದಿಪಾಲಾಗಿದ್ದಾರೆ. ಅವರದೇ ಭೂಮಿಯಲ್ಲಿ ನಡೆಯುತ್ತಿರುವ ಸಂಸ್ಥೆಗಳಲ್ಲಿ ನಾಲ್ಕನೇ ದರ್ಜೆ ನೌಕರಿಯು ಅವರಿಗೆ ಕೊಡಲಾಗಿಲ್ಲ. ಇನ್ನು ಸ್ಥಳೀಯರಿಗೆ ಉದ್ಯೋಗವಂತೂ ಇಲ್ಲವೇ ಇಲ್ಲ. ಹೊರರಾಜ್ಯಗಳಿಂದ ಗುತ್ತಿಗೆ ಆಧಾರದಲ್ಲಿ ನೌಕರರನ್ನು ಆಮದು ಮಾಡಿಕೊಳ್ಳುವ ಈ ಸಂಸ್ಥೆಗಳು ಎಲ್ಲರನ್ನು ವಂಚಿಸುತ್ತಿದೆ.
ಬಂಡವಾಳ ಹೂಡಿಕೆದಾರರ ಸಮಾವೇಶದ ಹೆಸರಿನಲ್ಲಿ ರಾಜ್ಯವನ್ನು ಪ್ರವೇಶಿಸಿರುವ ಬೃಹತ್ ಸಂಸ್ಥೆಗಳು ಮಾಡುವುದೂ ಇದನ್ನೇ.
ಸುಳ್ಳುಗಳ ಮಹಾಪೂರ:ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಸಚಿವ ಸಂಪುಟದ ಸಹೋದ್ಯೋಗಿಗಳೆಲ್ಲಾ ಸುಳ್ಳಿನ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಕೃಷಿ ಯೋಗ್ಯ ಜಮೀನು ಭೂಸ್ವಾಧೀನಗೊಳಿಸುವುದಿಲ್ಲವೆಂದು ಅವರು ಮೇಲಿಂದ ಮೇಲೆ ಹೇಳುತ್ತಿದ್ದಾರೆ. ಸುಮಾರು ಒಂದು ಲಕ್ಷ ಎಕರೆ ಜಮೀನನ್ನು ಈ ಸಂಸ್ಥೆಗಳಿಗೆ ನೀಡಲಾಗುತ್ತಿದೆ. ಒಂದು ಲಕ್ಷ ಎಕರೆ ಬಂಜರು ಜಮೀನನ್ನು ಮುಖ್ಯಮಂತ್ರಿಗಳು ಎಲ್ಲಿಂದ ಹುಡುಕುತ್ತಾರೆ? ಪ್ರತಿ ಬಾರಿ ಭೂ ಸ್ವಾಧೀನ ಮಾಡಿಕೊಂಡಾಗಲೂ ಈ ಹಿಂದೆಲ್ಲಾ ಕೃಷಿ ಭೂಮಿಯನ್ನೇ ಪಡೆಯಲಾಗಿದೆ ಎಂಬುದು ಸತ್ಯ. ಈ ಬಾರಿಯೂ ಅದೇ ಆಗುತ್ತದೆ.
ಭೂಮಿ ಕಳೆದುಕೊಂಡವರಿಗೆ ಅಲ್ಲಿ ಸ್ಥಾಪನೆಯಾಗುವ ಉದ್ದಿಮೆಯ ಶೇರುಗಳನ್ನು ನೀಡಲಾಗುವುದು ಎಂಬುದು ಕೈಗಾರಿಕಾ ಮಂತ್ರಿಗಳ ಹೇಳಿಕೆ. ಇದಂತೂ ಮೂಗಿಗೆ ತುಪ್ಪ ಸವರುವ ಕಾರ್ಯ. ಹೀಗೆ ಶೇರುಗಳನ್ನು ಕೊಡುವ ವಿಷಯ ಸಂಸ್ಥೆಗಳೊಂದಿಗೆ ಮಾಡಿಕೊಂಡ ಒಪ್ಪಂದದಲ್ಲಿ ಸೇರಿಸಲಾಗಿದೆಯೇ ಎಂಬ ಪ್ರಶ್ನೆಗೆ ಕೈಗಾರಿಕಾ ಸಚಿವರು ಉತ್ತರಿಸಬೇಕಾಗುತ್ತದೆ. ಅದೇ ರೀತಿ ಎಷ್ಟು ಶೇರುಗಳನ್ನು ನೀಡಲಾಗುವುದು ಅವುಗಳ ಮೌಲ್ಯ ಏನು ಎಂಬುದನ್ನು ಸಹ ಖಚಿತಗೊಳಿಸಬೇಕಾಗಿದೆ.
ವಿದ್ಯುತ್ ಹೇಗೆ ಒದಗಿಸುತ್ತಾರೆ?
ವಿದ್ಯುತ್ ಕ್ಷಾಮದ ಈ ದಿನಗಳಲ್ಲಿ ಹಳ್ಳಿಗಳಿಗಂತೂ ಅಕ್ಷರಶಃ ವಿದ್ಯುತ್ ಪೂರೈಕೆಯೇ ನಿಂತು ಹೋಗಿದೆ. ನಗರಗಳಲ್ಲಿ ದಿನಕ್ಕೆ ೧೨ಗಂಟೆ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ. ಬೆಂಗಳೂರು ಮಹಾನಗರದಲ್ಲೇ ಲೋಡ್ ಶೆಡ್ಡಿಂಗ್ ಹಾವಳಿಯಿಂದಾಗಿ ಜನ ಪರದಾಡುವಂತಾಗಿದೆ. ಆದರೂ, ಸರ್ಕಾರ ಬಂಡವಾಳ ಹೂಡುವ ಸಂಸ್ಥೆಗಳಿಗೆ ಅವರು ಕೇಳಿದಷ್ಟು ವಿದ್ಯುತ್ ರಿಯಾಯಿತಿ ದರದಲ್ಲಿ ನೀಡುತ್ತದೆ. ಈ ಸಂಸ್ಥೆಗಳಿಗೆ ಕೊಟ್ಟು ಉಳಿದ ವಿದ್ಯುತ್ ಜನ ಸಾಮಾನ್ಯರ ಪಾಲಿಗೆ!
ಒಂದು ಲಕ್ಷ ಎಕರೆ ಭೂಮಿ ಭೂಸ್ವಾಧೀನ ಪಡಿಸಿಕೊಳ್ಳುವಾಗ ರೈತರಿಗೆ ಮಾರುಕಟ್ಟೆ ದರದಲ್ಲಿ ಪರಿಹಾರ ನೀಡಲಾಗುತ್ತವೆಯೇ ಅಥವಾ ಸರ್ಕಾರ ನಿಗದಿಪಡಿಸುವ ಬೆಲೆಯನ್ನು ನೀಡಲಾಗುತ್ತದೆಯೇ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಿಲ್ಲ. ಅದರ ಅರ್ಥ ಕವಡೆ ಕಾಸು ಕೊಟ್ಟು ರೈತರಿಂದ ಜಮೀನು ಕಿತ್ತುಕೊಳ್ಳುವ ಹುನ್ನಾರ ನಡೆದಿದೆ. ಸಾವಿರಾರು ಉದ್ಯೋಗಗಳು ಸೃಷ್ಟಿಯಾಗುತ್ತವೆ ಎಂದು ಸರ್ಕಾರದ ವಕ್ತಾರರು ಹೇಳಿಕೊಳ್ಳುತ್ತಿದ್ದಾರೆ ಆದರೆ, ಈ ಉದ್ಯೋಗಗಳಾವುದೂ ನಮ್ಮ ಪಾಲಿಗೆ ಉಳಿದಿರುವುದಿಲ್ಲ. ಯಥಾ ಪ್ರಕಾರ ಹೊರರಾಜ್ಯಗಳಿಂದಲೇ ಉದ್ಯೋಗಿಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ.
ಸ್ಥಳೀಯರಿಗೆ ಉದ್ಯೋಗ ನೀಡಿದರೆ, ಅವರು ತಿರುಗಿ ಬೀಳಬಹುದು, ಮುಷ್ಕರ ಹೂಡಬಹುದು, ಹಕ್ಕುಗಳಿಗಾಗಿ ಹೋರಾಡಬಹುದು ಎಂಬ ಆತಂಕ ಈ ಕಂಪೆನಿಗಳದು. ಹೀಗಾಗಿಯೇ ಅವರು ಸ್ಥಳೀಯರನ್ನು ಯಾವುದೇ ಕಾರಣಕ್ಕೂ ನೇಮಕಾತಿ ಮಾಡಿಕೊಳ್ಳುವುದಿಲ್ಲ.
ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎಂಬ ಅಂಶವನ್ನು ಸರ್ಕಾರ ಯಾವುದೇ ಸಂಸ್ಥೆಯೊಂದಿಗೆ ಮಾಡಿಕೊಳ್ಳುವ ಒಪ್ಪಂದದಲ್ಲಿ ಪ್ರಸ್ತಾಪಿಸುತ್ತಿಲ್ಲ. ಇದು ನಾಡಿಗೆ ಮಾಡುವ ದ್ರೋಹ. ಡಾ.ಸರೋಜಿನಿ ಮಹಿಷಿ ವರದಿ ಪ್ರಕಾರ ಖಾಸಗಿ ಸಂಸ್ಥೆಗಳು ಸಹ ಶೇ.೮೫ರಷ್ಟು ಉದ್ಯೋಗ ನೀಡಬೇಕು. ಹಾಗೆ ಸ್ಥಳೀಯರಿಗೂ ಉದ್ಯೋಗ ನೀಡುವಂತೆ ರಾಜ್ಯ ಸರ್ಕಾರ ತಾಕೀತು ಮಾಡಬೇಕು. ಆದರೆ, ಸರ್ಕಾರ ಇದನ್ನು ಮಾಡುತ್ತಿಲ್ಲ.
ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಎಂಬ ದಂಧೆ:
ರಾಜ್ಯ ಸರ್ಕಾರ ಪದೇ ಪದೇ ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಎಂಬ ಪದಪುಂಜವನ್ನು ಬಳಸುತ್ತಿದೆ. ಇದರ ಆಳಕ್ಕೆ ಇಳಿದು ನೋಡಿದರೆ, ವಿಧಾನಸೌಧವೊಂದನ್ನು ಹೊರತುಪಡಿಸಿ ಇಡೀ ಸರ್ಕಾರಿ ಅವಯವಗಳನ್ನೇ ಮಾರಾಟಕ್ಕೆ ಇಡಲಾಗಿದೆಯೇನೋ ಎಂಬ ಸಂಶಯಗಳು ವ್ಯಕ್ತವಾಗುತ್ತಿದೆ.
ಪಿಪಿಪಿ(ಪಬ್ಲಿಕ್ ಪ್ರೈವೇಟ್ ಪಾರ್ಟನರ್‌ಶಿಪ್) ಹೆಸರಿನಲ್ಲಿ ಗ್ರಾಮೀಣ ರಸ್ತೆಗಳ ನಿರ್ವಹಣೆ ಮತ್ತು ದುರಸ್ಥಿ ಕಾರ್ಯವನ್ನು ನಡೆಸಲು ಸಂಚು ನಡೆದಿದೆ. ಗ್ರಾಮೀಣ ರಸ್ತೆಗಳ ನಿರ್ವಹಣೆ ಮತ್ತು ನಿಯಂತ್ರಣವನ್ನು ಖಾಸಗಿ ಸಂಸ್ಥೆಗಳಿಗೆ ನೀಡುವ ಮೂಲಕ ಹಳ್ಳಿಯ ಜನರಿಂದಲೂ ಶುಲ್ಕಗಳನ್ನು (ಟೋಲ್) ಸಂಗ್ರಹಿಸುವ ಕುತಂತ್ರ ರೂಪಿಸಲಾಗುತ್ತಿದೆ.
ಗ್ರಾಮೀಣ ಕೆರೆಗಳ ಅಭಿವೃದ್ಧಿಯನ್ನೂ ಪಿಪಿಪಿ ಅನ್ವಯ ಖಾಸಗಿ ಸಂಸ್ಥೆಗಳಿಗೆ ಒಪ್ಪಿಸುವ ಹುನ್ನಾರ ನಡೆಯುತ್ತಿದೆ. ’ಹೊಳೆನೀರು ಕುಡಿಯಲು ದೊಣ್ಣೆನಾಯಕನ ಅಪ್ಪಣೆ ಬೇಕೇ?’ ಎಂಬುದು ಚಾಲ್ತಿಯಲ್ಲಿರುವ ಗಾದೆಮಾತು. ಆದರೆ, ಈ ಗಾದೆಯನ್ನೇ ಸುಳ್ಳು ಮಾಡುವಂತೆ ನಮ್ಮ ಹಳ್ಳಿಯ ಜನ ತಮ್ಮ ಊರಿನ ಕೆರೆಯ ನೀರನ್ನು ಬಳಸಲು ಖಾಸಗಿ ದೊಣ್ಣೆನಾಯಕರಿಗೆ ಕಪ್ಪ ಕೊಟ್ಟು, ಅನುಮತಿ ಪಡೆಯಬೇಕು.
ರಾಜ್ಯದ ಎಲ್ಲಾ ಗ್ರಾಮಗಳ ಕುಡಿಯುವ ನೀರು ಸರಬರಾಜು ಯೋಜನೆಯನ್ನೂ ಸಹ ಪಿಪಿಪಿ ಅನ್ವಯ ನಡೆಸಲು ಉದ್ದೇಶಿಸಲಾಗುತ್ತಿದೆ. ಅದರರ್ಥ ಹಳ್ಳಿಗಳಲ್ಲೂ ಇನ್ನು ಮುಂದೆ ದುಬಾರಿ ಹಣ ತೆತ್ತು ನೀರು ಪಡೆಯಬೇಕಾಗುತ್ತದೆ. ಗ್ರಾಮೀಣ ಬಡವರಿಗೆ ಸರ್ಕಾರದ ವಿವಿಧ ಯೋಜನೆಗಳಡಿಯಲ್ಲಿ ಮನೆಗಳನ್ನು ಕಟ್ಟಿಕೊಡಲಾಗುತ್ತಿತ್ತು. ಅದನ್ನು ಸಹ ಪಿಪಿಪಿ ಮೂಲಕ ಮಾಡಲು ಸರ್ಕಾರ ಹೊರಟಿದೆ. ಇನ್ನು ಮುಂದೆ ಹೀಗೆ ಕಟ್ಟಿಕೊಡಲಾದ ಮನೆಗಳಿಗೆ ಗ್ರಾಮೀಣ ಬಡವರು ಕಂತುಗಳ ಮೂಲಕ ಹಣ ಪಾವತಿಸಬೇಕಿದೆ.
ಇನ್ನು ನಗರ ಪ್ರದೇಶಗಳಲ್ಲೂ ಇದೇ ಅಪಾಯ ಪಿಪಿಪಿಯಿಂದ ಆಗುತ್ತಿದೆ. ಕರ್ನಾಟಕದ ಎಲ್ಲಾ ನಗರಗಳ ಕುಡಿಯುವ ನೀರು ಸರಬರಾಜು ಮತ್ತು ನಿರ್ವಹಣೆಯನ್ನು ಖಾಸಗಿ ಸಂಸ್ಥೆಗಳಿಗೆ ವಹಿಸಲು ಎಲ್ಲಾ ಸಿದ್ಧತೆಗಳು ನಡೆದಿವೆ. ಇನ್ನು ಮುಂದೆ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ನಗರಗಳ ನಾಗರಿಕರು ಈಗ ಪಾವತಿಸುತ್ತಿರುವ ಹಣಕ್ಕಿಂತ ಹತ್ತು ಪಟ್ಟು ಹಣವನ್ನು ಕುಡಿಯುವ ನೀರಿಗಾಗಿ ಖಾಸಗಿ ಸಂಸ್ಥೆಗಳಿಗೆ ಕೊಡಬೇಕಾಗಿದೆ.
ನಗರಗಳಲ್ಲಿ ಸರ್ಕಾರವೇ ತನ್ನ ವಿವಿಧ ಸಂಸ್ಥೆಗಳ ಮೂಲಕ ನಿರ್ಮಿಸುತ್ತಿದ್ದ ಮೇಲ್ಸೇತುವೆಗಳು, ಕೆಳಸೇತುವೆಗಳು ಇನ್ನು ಮುಂದೆ ಖಾಸಗಿಯವರ ಪಾಲಾಗಲಿವೆ. ಅದರರ್ಥ ನಗರಗಳಲ್ಲಿ ಓಡಾಡುವ ಜನ ಪ್ರತಿನಿತ್ಯ ಸುಂಕ ಕಟ್ಟಿ ಪ್ರಯಾಣ ಮಾಡಬೇಕು. ಪಾದಚಾರಿ ರಸ್ತೆ(ಫುಟ್ ಪಾತ್)ಗಳನ್ನು ಅಭಿವೃದ್ಧಿ ಪಡಿಸಿ ಅವುಗಳ ಮೇಲೆ ಓಡಾಡುವ ಜನರಿಂದಲೂ ಸುಂಕ ಪಡೆಯಲು ಸರ್ಕಾರ ಖಾಸಗಿ ಸಂಸ್ಥೆಗಳಿಗೆ ಅನುಮತಿ ನೀಡಲು ಮುಂದಾಗಿದೆ. ಅಂದರೆ, ನಗರಗಳಲ್ಲಿ ನಡೆದಾಡಲು ಸಹ ಹಣ ಕಟ್ಟಬೇಕಿದೆ.
ಸರ್ಕಾರಿ ಶಾಲೆ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳನ್ನು ಸಹ ಖಾಸಗಿ ಸಹಭಾಗಿತ್ವದ ಹೆಸರಿನಲ್ಲಿ ಅಭಿವೃದ್ಧಿ ಪಡಿಸುವ, ಅಂತಿಮವಾಗಿ ಅವುಗಳ ನಿಯಂತ್ರಣ ಹಾಗೂ ನಿರ್ವಹಣೆಯನ್ನು ಖಾಸಗಿ ವ್ಯಕ್ತಿಗಳಿಗೆ ಒಪ್ಪಿಸುವ ಹುನ್ನಾರವೂ ನಡೆದಿದೆ. ಈ ಹಿನ್ನೆಲೆಯಲ್ಲೇ ನಗರಾಭಿವೃದ್ಧಿ ಸಚಿವ ಸುರೇಶ್ ಕುಮಾರ್ ಇತ್ತೀಚೆಗೆ ಹೇಳಿಕೆ ನೀಡಿ, ಪಾಲಿಕೆ ಶಾಲೆಗಳಲ್ಲೂ ಸಿಬಿಎಸ್‌ಇ ಪದ್ಧತಿ ಅಳವಡಿಸಲಾಗುವುದು ಎಂದು ಹೇಳಿದ್ದರು. ಇನ್ನು ಬಡಮಕ್ಕಳಿಗೆ ಶಿಕ್ಷಣ ಕನಸಿನ ಗಂಟು. ಸರ್ಕಾರಿ ಶಾಲೆಗಳೂ ಖಾಸಗಿ ಒಡೆತನಕ್ಕೆ ಹೋಗುವುದರಿಂದ ದುಬಾರಿ ಶುಲ್ಕ ನೀಡಬೇಕಾಗುತ್ತದೆ. ಶುಲ್ಕ ನೀಡುವ ಶಕ್ತಿ ಇಲ್ಲದ ಬಡ ಮಕ್ಕಳಿಗೆ ಶಿಕ್ಷಣ ದೊರೆಯುವುದೆಂತು?
ನಗರಗಳ ಉದ್ಯಾನವನಗಳು ಸಹ ಪಿಪಿಪಿ ಅಡಿಯಲ್ಲಿ ಖಾಸಗಿ ಸಂಸ್ಥೆಗಳ ತೆಕ್ಕೆಗೆ ಸಿಲುಕುತ್ತಿವೆ. ಈ ಉದ್ಯಾನವನಗಳನ್ನು ಅಭಿವೃದ್ಧಿ ಪಡಿಸುವ ಹೆಸರಿನಲ್ಲಿ ಅವುಗಳ ನಿರ್ವಹಣೆಯನ್ನು ಪಡೆಯಲಿರುವ ಖಾಸಗಿ ಸಂಸ್ಥೆಗಳು ಉದ್ಯಾನದಲ್ಲಿ ನಡಿಗೆಗೆ (ವಾಕಿಂಗ್) ಬರುವ ನಾಗರಿಕರಿಂದಲೂ ಶುಲ್ಕ ಪಡೆಯಲಿವೆ.
ಇನ್ನೂ ಬಸ್ ನಿಲ್ದಾಣಗಳನ್ನು ನವೀಕರಿಸುವ ಹೆಸರಿನಲ್ಲಿ ಖಾಸಗಿ ಸಂಸ್ಥೆಗಳು ಅಲ್ಲಿಗೂ ಲಗ್ಗೆ ಹಾಕಲಿವೆ. ಬಸ್ ಪ್ರಯಾಣಿಕನಿಗೆ ಪ್ರಯಾಣ ದರದ ಹೊರೆಯನ್ನೇ ಹೊರಲಾಗುತ್ತಿಲ್ಲ. ಇದೀಗ ಬಸ್ ನಿಲ್ದಾಣ ಪ್ರವೇಶಕ್ಕೂ ಶುಲ್ಕ ಕಟ್ಟಬೇಕಾಗುತ್ತದೆ.
ಇಂತಹ ನೂರಾರು ಪ್ರಸ್ತಾಪಗಳು ಸರ್ಕಾರದ ಮುಂದಿವೆ. ಇಂತಹ ಮನೆಹಾಳು ಪ್ರಸ್ತಾಪಗಳನ್ನು ಇಟ್ಟುಕೊಂಡು ಬಂದಿರುವವರನ್ನೇ ರಾಜ್ಯಸರ್ಕಾರ ರಾಜಾತಿಥ್ಯ ನೀಡಿ ಸಮಾವೇಶ ನಡೆಸಿದೆ. ಅವರೆಲ್ಲಾ ಬೇಡಿಕೆಗಳಿಗೂ ಒಪ್ಪಿ ಕರ್ನಾಟಕ ರಾಜ್ಯವನ್ನೂ ಅಕ್ಷರಶಃ ಮಾರಾಟಕ್ಕೆ ಇಟ್ಟಿದೆ.
ರಸ್ತೆ, ನೀರು, ಮನೆ, ಆಸ್ಪತ್ರೆ, ಶಿಕ್ಷಣ, ವಸತಿ, ಪ್ರವಾಸೋದ್ಯಮ, ಸಾರಿಗೆ, ಕೈಗಾರಿಕೆ ಮುಂತಾದ ಎಲ್ಲವನ್ನು ಖಾಸಗಿಯವರಿಗೆ ಒಪ್ಪಿಸುವುದಾದರೆ ಸರ್ಕಾರವಾದರೂ ಯಾಕಿರಬೇಕು? ಕರ್ನಾಟಕ ರಾಜ್ಯದೊಳಗೆ ಟೌನ್‌ಶಿಪ್‌ಗಳ ಹೆಸರಿನಲ್ಲಿ ಯಾರ ಅಂಕೆಗೂ ಸಿಗದ ಹೊಸ ಹೊಸ ರಾಜ್ಯಗಳನ್ನು ನಿರ್ಮಿಸುವ ಅಧಿಕಾರವನ್ನೂ ಈ ಸರ್ಕಾರಕ್ಕೆ ಕೊಟ್ಟವರ‍್ಯಾರು? ಸುಮಾರು ೨ಲಕ್ಷ ಎಕರೆ ಕೃಷಿ ಭೂಮಿಯನ್ನು ಕಿತ್ತುಕೊಳ್ಳುವುದರ ಪರಿಣಾಮವಾಗಿ ಕೃಷಿಕರ ಪಾಡೇನಾಗಬೇಕು? ಕೃಷಿಯನ್ನು ಅವಲಂಬಿಸಿರುವ ಇತರ ಕಸುಬುಗಳನ್ನು ಮಾಡುವ ಲಕ್ಷಾಂತರ ಕುಶಲಕರ್ಮಿಗಳ ಜೀವನವನ್ನು ಕಟ್ಟಿಕೊಡುವವರ‍್ಯಾರು? ಕೃಷಿಕರನ್ನೇ ನಂಬಿರುವ ಕೃಷಿ ಕೂಲಿ ಕಾರ್ಮಿಕರು ಕೆಲಸಕ್ಕಾಗಿ ಎಲ್ಲಿಗೆ ಹೋಗಬೇಕು?
ಸುಮಾರು ೨೭೫ಕ್ಕೂ ಹೆಚ್ಚು ಹಳ್ಳಿಗಳು ಬಂಡವಾಳ ಹೂಡಿಕೆದಾರರಿಗಾಗಿ ಸ್ಥಳಾಂತರಗೊಳ್ಳುತ್ತಿವೆ. ಈ ಹಳ್ಳಿಗಳ ಜನಸಂಸ್ಕೃತಿ, ಅವರ ಕಲೆ-ಸಾಹಿತ್ಯ, ಈ ಹಳ್ಳಿಗಳ ಜನ ರೂಢಿಸಿಕೊಂಡು ಬಂದ ಜ್ಞಾನ ಪರಂಪರೆಗಳು ಸರ್ವನಾಶವಾಗುತ್ತವೆ. ಅವುಗಳ ಬಗ್ಗೆ ಯಾರಿಗೆ ಕಾಳಜಿ ಇದೆ?
ಅಂತರಾಷ್ಟ್ರೀಯ ಹೂಡಿಕೆದಾರರ ಸಮಾವೇಶದಲ್ಲಿ ಬಿಕರಿಯಾಗಿದ್ದು ಇಲ್ಲಿನ ನೆಲ, ಜಲ ಮಾತ್ರವಲ್ಲ. ಕರ್ನಾಟಕದ ಸಂಸ್ಕೃತಿ, ಬದುಕು ಸಹ ಮಾರಾಟದ ಸರಕಾಗಿದೆ. ನೂರರ ಒಳಗಿನ ಸಂಖ್ಯೆಯ ಸಂಸ್ಥೆಗಳ ಮಾಲೀಕರು ಇನ್ನು ಮುಂದೆ ಕರ್ನಾಟಕದ ಬದುಕು, ಆರ್ಥಿಕ ವ್ಯವಹಾರಗಳು, ಶಿಕ್ಷಣ, ಆರೋಗ್ಯ ಇತ್ಯಾದಿ ಹಾಗೂ ಒಟ್ಟು ಸಮಾಜವನ್ನು ನಿಯಂತ್ರಿಸಲಿದ್ದಾರೆ. ಅದರರ್ಥ ಪ್ರಜಾಪ್ರಭುತ್ವವೇ ಅರ್ಥ ಕಳೆದುಕೊಳ್ಳಲಿದೆ.
ಈಗಷ್ಟೇ ಎರಡು ವರ್ಷಗಳ ಅಧಿಕಾರಾವಧಿ ಮುಗಿಸಿರುವ ಯಡಿಯೂರಪ್ಪನವರು ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ’ಸಾಧನೆ’ಯೆಂದು ಹೇಳಿಕೊಳ್ಳುತ್ತಾರೆಯೇ?
ನಾಚಿಕೆಗೇಡು.

No comments:

Post a Comment

ಹಿಂದಿನ ಬರೆಹಗಳು