Friday, June 4, 2010

ರೈತರ ಕಿಂದರಿಜೋಗಿಯ ಇನ್ನಷ್ಟು ನೆನಪುಗಳು...

ಕರ್ನಾಟಕ ಕಂಡ ಬಹು ಅಪರೂಪದ ಹೋರಾಟಗಾರ ಮೇಧಾವಿಗಳಲ್ಲಿ ಒಬ್ಬರಾದ ಪ್ರೊ. ನಂಜುಂಡಸ್ವಾಮಿ ಅವರನ್ನು ತೀರಾ ಹತ್ತಿರದಿಂದ ಕಂಡಿದ್ದೇನೆ ಎಂಬುದೇ ನನ್ನ ಬದುಕಿನ ಮಹತ್ವದ ಸಂಗತಿ. ಅವರ ಮಾತುಗಳಲ್ಲಿ ಇರುತ್ತಿದ್ದ ಮೊನಚು, ತಿವಿತ ಮರ್ಮಾಘಾತಕವಾಗಿರುತ್ತಿತ್ತು. ಅವರ ಸಣ್ಣನೆಯ ಕೂರಲಗಿನಂತೆ ಹರಿತವಾಗಿರುತ್ತಿದ್ದ ಆ ಧ್ವನಿಯ ಅಗಾಧತೆ ನನ್ನನ್ನು ಇಂದಿಗೂ ಜಾಗೃತಗೊಳಿಸುತ್ತದೆ. ಅಂದಂತೆ ಪ್ರೊಫೆಸರ್ ನಂಜುಂಡಸ್ವಾಮಿಯವರ ಹೋರಾಟದ ಬದುಕಿಗೆ ನನ್ನದು ಇಂದಿಗೂ ಹೆಮ್ಮೆಯ ನೋಟ. ಇಂಥ ನಂಜುಂಡಸ್ವಾಮಿಯವರಿಗೂ ನನ್ನ ತಂದೆ (ಲಿಂಗಣ್ಣ ಸತ್ಯಂಪೇಟೆ)ಯವರಿಗೂ ತೀರ ಹತ್ತಿರದ ನಂಟು ಎಂಬುದೇ ನನಗೊಂದು ಹೆಮ್ಮೆ. ಲಂಕೇಶ್ ಪತ್ರಿಕೆಯ ಲಂಕೇಶರಿಗೆ ಪರಿಚಯಿಸಿ ಆ ಪತ್ರಿಕೆಯಲ್ಲಿ ನನ್ನ ತಂದೆಯವರನ್ನು ಬರೆಯಲು ಹಚ್ಚಿದವರೇ ನಂಜುಂಡಸ್ವಾಮಿಯವರು.
ನಮ್ಮ ತಂದೆಯವರ ಆಸಕ್ತಿಯ ಕಾರಣದಿಂದ ನಮ್ಮ ಮನೆಯಲ್ಲಿ ನಿತ್ಯವೂ ಲೋಹಿಯಾ,ಪೆರಿಯಾರ, ಬುದ್ಧ, ಬಸವ ,ಗಾಂಧಿ,ಅಂಬೇಡ್ಕರ್‌ರ ಹೋರಾಟದ ಬದುಕು ಹಾಗೂ ವಿಚಾರಗಳ ಕುರಿತು ಚರ್ಚೆಗಳು ನಡೆಯದೇ ಇರುವ ದಿನಗಳು ಇಲ್ಲವೆಂದೂ ತಪ್ಪಾಗಲಿಕ್ಕಿಲ್ಲ. ಈ ಸಂದರ್ಭದಲ್ಲಿಯೆ ಆ ಚರ್ಚೆಗಳಲ್ಲಿ ನಡು ನಡುವೆ ನಂಜುಂಡಸ್ವಾಮಿ, ಲಂಕೇಶ್ ,ತೇಜಸ್ವಿ ಮುಂತಾದವರೆಲ್ಲ ತೂರಿ ಬರುತ್ತಿದ್ದರು.ಲಂಕೇಶ್ ಪತ್ರಿಕೆ ಮತ್ತು ರೈತ ಸಂಘದ ಚಳುವಳಿ ನನ್ನ ಬದುಕಿನ ಅವಿಭಾಜ್ಯ ಅಂಗಗಳಾಗಿ ಹೋದವು ಎಂದೆನಿಸುತ್ತದೆ. ಅಂದಂತೆ ನನ್ನ ಕಾಲೇಜಿನ ಆ ದಿನಗಳಲ್ಲಿ ಅತ್ಯಂತ ಸಂತೋಷ ಹಾಗೂ ಹೆಮ್ಮೆಯಿಂದ ಹಸಿರು ಟವಲನ್ನು ಹಾಕಿಕೊಂಡು ಎದೆ ಉಬ್ಬಿಸಿಕೊಂಡು ಕಾಲೇಜಿಗೆ ಹೋಗುತ್ತಿದ್ದೆ. ನನ್ನ ಸುತ್ತ ಮುತ್ತ ಕಂಡು ಬರುವ ಅನ್ಯಾಯ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಮುಂತಾದವುಗಳನ್ನು ಪ್ರತಿಭಟಿಸುವ ಪ್ರತಿಭಟನಾತ್ಮಕ ಮನಸ್ಸು ಆಗಲೇ ಕಾರ್ಯೋನ್ಮುಖವಾಗಿತ್ತು. ಬಹುಶಃ ರೈತ ಸಂಘಟನೆ ಉಚ್ಚ್ರಾಯವಾಗಿದ್ದ ಆ ದಿನಗಳಲ್ಲಿಯೇ ಹೊರಬಂದಿದ್ದ ಪ್ರೊ. ಹಿ.ಶಿ.ರಾಮಚಂದ್ರೇಗೌಡರ ಹೊಂಬಾಳೆ ಯ ರೈತ ಹೋರಾಟದ ಹಾಡುಗಳು ನನ್ನೊಳಗೆ ಪ್ರತಿಭಟನೆಯ ಜ್ವಾಲೆಯ ಕಿಡಿಗಳನ್ನು ಮತ್ತಷ್ಟು ಹರಿತಗೊಳಿಸಿದವೆಂದೇ ಹೇಳಬೇಕು. ಉತ್ತರ ಕರ್ನಾಟಕದ ಆಡು ಭಾಷೆಯಲ್ಲಿ ಸಾಹಿತ್ಯ ಬರೆದು ಅವನ್ನು ನಮ್ಮ ಜಾನಪದ ಲೋಕದ ಕಲಾವಿದನಿಂದ ಹಾಡಿಸಿದ ಒಕ್ಕಲತಿ ಕ್ಯಾಸೆಟ್ ನಲ್ಲಿದ್ದ ನನ್ನ ತಂದೆಯವರು ಬರೆದ ಹಾಡುಗಳು ಇಂದಿಗೂ ರೋಮಾಂಚನ ಉಂಟು ಮಾಡುತ್ತವೆ.
ಒಕ್ಕಲತಿ ಕಕ್ಕುಲತಿ ಮಣ್ಣ ಮಗಳು ನೀನು
ಈ ಲೋಕ ಕಾಮಧೇನು ,ಮೈ ಕೊಡವಿ ಬಾ ತಂಗಿ
ಕಳ್ಳ ಖೂಳ ರಕ್ಕಸರ ಬಡಿ ತಂಗಿ
ಓಟು ತಿಂದು ನೋಟು ತಿಂದು
ಪ್ಯಾಟಿಯಲ್ಲಿ ಕುಂತು ಹೊಟ್ಟೆ ಬಾಸಿಕೊಂಡಿವೆ
ದೇಶವೆಲ್ಲ ದಿಕ್ಕೆಟ್ಟಿದೆ ನೀ ನೋಡೋದಿಲ್ಲವೆ ?
ಗಂಡುಗಚ್ಚೆ ಹಾಕು ಮೊಂಡು ಪೋರಕೆ ಸಾಕು.........
ಇಂಥ ಇನ್ನೂ ಹಲವಾರು ಹಾಡುಗಳ ಮೂಲಕ ರೈತಾಪಿ ವರ್ಗದ ಜನಗಳಲ್ಲಿ ನೌಕರಶಾಹಿ ಹಾಗೂ ರಾಜಶಾಯಿಗಳ ಬಗೆಗೆ ಇದ್ದ ಭಯ-ಭೀತಿಯನ್ನು ಕಿತ್ತೊಗೆದು ಅವರನ್ನು ಹೋರಾಟಕ್ಕೆ ಅಣಿಗೊಳಿಸುತ್ತಿದ್ದ ನನ್ನ ತಂದೆಯವರ ಸಂಘಟನಾ ಚಾತುರ್ಯ್ಯದ ಬಗ್ಗೆ ನನಗೆ ಹೆಮ್ಮೆ ಇದೆ. ದಿನ ನಿತ್ಯ ಒಂದಿಲ್ಲೊಂದು ಹಳ್ಳಿಗೆ ಹೋಗಿ ರೈತ ಸಂಘವನ್ನು ಸ್ಥಾಪಿಸಿ, ಅಲ್ಲಿ ಪದಾಧಿಕಾರಿಗಳನ್ನು ನೇಮಿಸಿ ಬರುವುದೇ ನನ್ನ ತಂದೆಯ ಅನುದಿನದ ಕೆಲಸವಾಗಿತ್ತು. ನಿತ್ಯವೂ ಹೀಗೆ ಸಂಘಟನೆಗೆ ತಿರುಗಾಡುತ್ತಿರುವುದರಿಂದ ನನ್ನ ತಂದೆಯ ಸುತ್ತ ಮುತ್ತ ರೈತರ ಒಂದು ಬೃಹತ್ ಗುಂಪೆ ಬೆಳೆದು ಹೋಯಿತು. ಆ ಸಂಘಟಕರೆಲ್ಲ ನಮ್ಮ ಮನೆಯ ಬಂಧುವಿನಂತಾಗಿ ಹೋದರು. ದಿನ ಬೈಗು ಬೆಳಗಾದರೂ ಅವರೆಲ್ಲ ನಮ್ಮ ಮನೆಗೆ ಬಂದು ಹೋಗುತ್ತಿದ್ದರು. ಅವರಾದರೂ ಅಷ್ಟೇ , ನಮ್ಮ ತಂದೆಯವರು ಹೇಳಿದ ಮಾತನ್ನು ಚಾಚೂ ತಪ್ಪದೇ ಅದನ್ನು ಪಾಲಿಸಿಕೊಂಡು ಹೋಗುತ್ತಿದ್ದರು. ಎಂಥದ್ದೇ ಪ್ರಸಂಗ ಬಂದರೂ ಅವರು ಹಿಂದೆ ಸರಿಯುತ್ತಿರಲಿಲ್ಲ. ನನ್ನ ತಂದೆ ಕೇವಲ ರೈತ ಹೋರಾಟಗಾರನಾಗಿರದೇ ಒಬ್ಬ ಪತ್ರಕರ್ತರೂ ಆಗಿರುವುದರಿಂದ ಅವರಿಗೆಲ್ಲ ಭೀಮ ಬಲ ಬಂದಿತ್ತು. ಹಾಗಾಗಿ ಯಾವುದೇ ಸರಕಾರಿ ನೌಕರ, ಪುಢಾರಿಯನ್ನು ಕೇರ್ ಮಾಡದೆ ತಮ್ಮ ರೈತಾಪಿ ವರ್ಗದ ಕೆಲಸವನ್ನು ಸಲಿಸಾಗಿ ಮಾಡಿಸಿಕೊಳ್ಳುತ್ತಿದ್ದರು.
ಅದೇನೋ ಒಂದೊಂದು ಸಲ ಅಧಿಕಾರಿ ವರ್ಗದವರು ದಪ್ಪ ಚರ್ಮದವರು ಇದ್ದಾಗ ರೈತರ ಸಂಘಟನಾ ಶಕ್ತಿ ಗೊತ್ತಿಲ್ಲದವರು ಏನೇನೋ ಎಡವಟ್ಟುಗಳನ್ನು ಮಾಡಿಕೊಂಡ ಹಲವಾರು ಉದಾಹರಣೆಗಳಿವೆ. ಒಂದು ಸಲವಂತೂ ನಮ್ಮ ತಾಲೂಕಿನ ಪಂಚಾಯತಿ ದರ್ಪಿಷ್ಟ ಅಧಿಕಾರಿಯೊಬ್ಬ ರೈತರಿಗಾಗಿಯೇ ಸರಕಾರದಿಂದ ಬಂದ ಎಲ್ಲಾ ಸಬ್ಸಿಡಿ ಹಣವನ್ನು ಗುಳುಂ ಮಾಡಿ ಗಪ್‌ಚುಪ್ ಕುಳಿತ. ಇದನ್ನು ಪ್ರಶ್ನಿಸಿ ಸದರಿ ಕಛೇರಿಯ ಮುಂದೆ ಉಪವಾಸ ಸತ್ಯಾಗ್ರಹ ಕುಳಿತ ಹುಲಕಲ್ ಗ್ರಾಮದ ಬಾಳಪ್ಪ ಮತ್ತು ರೈತ ಸಂಘಟಕರನ್ನು ಅಲ್ಲಿಂದ ಹೇಗಾದರೂ ಮಾಡಿ ಓಡಿಸಬೇಕೆಂದು ಪ್ಲ್ಯಾನ್ ಮಾಡಿದ ಈ ಆಸಾಮಿ , ತಮ್ಮ ಕಛೇರಿಯ ಸಿಪಾಯಿಯನ್ನು ಬಳಸಿಕೊಂಡು ಸತ್ಯಾಗ್ರಹಿಗಳಿಗೆ ತೊಂದರೆ ಕೊಡಲು ಮುಂದಾದ. ಆ ಸಿಪಾಯಿಯಾದರೋ ಕುಡಿದ ಅಮಲಿನಲ್ಲಿ ಸತ್ಯಾಗ್ರಹಿಗಳು ತಮ್ಮ ಮುಂದೆ ಇಟ್ಟುಕೊಂಡು ಕುಳಿತಿದ್ದ ಮಹಾತ್ಮಗಾಂಧಿಯವರ ಭಾವಚಿತ್ರವನ್ನು ತನ್ನ ಕಾಲಲ್ಲಿ ಹಾಕಿ ತುಳಿಯುತ್ತ ಕುಣಿದಾಡಿದ.
ಈ ಸಂಗತಿ ನನಗೆ ಆಗಲೇ ಗೊತ್ತಾಯಿತು. ಮರುದಿನ ನಮ್ಮ ತಾಲೂಕಿನ ಎಲ್ಲಾ ಶಾಲಾ ಕಾಲೇಜುಗಳಿಗೆ ಸ್ವತಃ ನಾನೇ ತೆರಳಿ ಮಹಾತ್ಮ ಗಾಂಧೀಜಿ ನಮ್ಮ ದೇಶದ ಸ್ವಾಭಿಮಾನದ ಸಂಕೇತ. ಆತ ರಾಷ್ಟ್ರಪಿತ. ನಮ್ಮ ರಾಷ್ಟ್ರದ ಗೌರವದ ವ್ಯಕ್ತಿಗಳಲ್ಲಿ ಬಾಪು ಅಗ್ರಗಣ್ಯರು. ಅಂಥವರ ಚಿತ್ರವನ್ನು ಕಾಲಲ್ಲಿ ಹಾಕಿ ಸರಕಾರಿ ನೌಕರನೊಬ್ಬ ತುಳಿಯುವುದೆಂದರೆ ದೇಶವನ್ನೆ ಅವಮಾನಿಸಿದಂತೆ ಎಂದೆಲ್ಲ ಹೇಳಿ ಆ ನೌಕರನ ಉದ್ಧಟತನವನ್ನು ಖಂಡಿಸಿ ಶಾಲಾ ವಿದ್ಯಾರ್ಥಿಗಳೆಲ್ಲ ಚಳುವಳಿಗೆ ತೊಡಗುವಂತೆ ಮಾಡಿದ್ದೆ. ನಮ್ಮ ತಾಲೂಕಿನ ಇತಿಹಾಸದಲ್ಲೇ ಆಗಿರದಂಥ ಚಳುವಳಿಯೊಂದನ್ನು ರೂಪಿಸಿದ್ದೆ. ಇದಕ್ಕೆಲ್ಲ ಮೂಲ ಪ್ರೇರಕ ಶಕ್ತಿಯಾಗಿ ನಿಂತವರು ಪ್ರೊ. ಎಂ.ಡಿ.ನಂಜುಂಡಸ್ವಾಮಿ.
ಒಂದು ಕಡೆ ರೈತರ ಹೋರಾಟ. ಮತ್ತೊಂದು ಕಡೆ ಹರಿತವಾದ ಬರವಣಿಗೆಯಲ್ಲಿ ನನ್ನ ತಂದೆ ತೊಡಗಿಸಿಕೊಳ್ಳುತ್ತಿರುವಂತೆ ಕೆಲವು ಪಟ್ಟಭದ್ರಶಕ್ತಿಗಳು ಸತ್ಯಂಪೇಟೆ ಲಿಂಗಣ್ಣನನ್ನು ಹೇಗಾದರೂ ಸೈ ಹಣಿಯಬೇಕೆಂದು ತೀರ್ಮಾನಿಸಿ, ಅವರ ಮೇಲೆ ಹಲ್ಲೆ ಮಾಡಿಸಿದವು. ನಮ್ಮ ತಂದೆಯವರ ಹಿಂದಿನ ವಾಹನಗಳಲ್ಲೇ ಬರುತ್ತಿದ್ದ ಪ್ರೊ. ನಂಜುಂಡಸ್ವಾಮಿ ಇದನ್ನು ಕೇಳುತ್ತಲೇ ಕೆಂಡಾಮಂಡಲವಾದರು. ಅವರು ಮುಂದೆ ನಡೆಸಬೇಕಾದ ಸಭೆಯಲ್ಲಂತೂ ಈ ಬಗ್ಗೆ ಪ್ರಸ್ತಾಪಿಸಿ ಯಾವುದೇ ಅಂಜಿಕೆ - ಅಳುಕುಗಳಿಲ್ಲದೆ ನೇರವಾಗಿ ಆ ಪುಢಾರಿಗೆ ಸವಾಲನ್ನೇ ಹಾಕಿಬಿಟ್ಟರು. ನಾವು ಮನಸ್ಸು ಮಾಡಿದರೆ ಆ ಪುಢಾರಿಯನ್ನು ಈಗಲೆ ನೊರಜು ಒರೆಸಿಹಾಕುವಂತೆ ಹೊಸಕಿಹಾಕಿಬಿಡುತ್ತೇವೆ ಎಂಬ ಗಂಡೆದೆಯ ಉತ್ತರ ಕೊಟ್ಟು ಆ ಪುಢಾರಿಯ ಜಂಘಾಬಲವೇ ಉಡುಗಿಹೋಗುವಂತೆ ಪ್ರೊಫೆಸರ್ ನನ್ನ ತಂದೆಯ ಪರವಾಗಿ ಮಾತನಾಡಿದ್ದರು. ಅಷ್ಟೇ ಅಲ್ಲ ಇನ್ನೊಂದು ಸಲ ಪ್ರಾಮಾಣಿಕ ಪತ್ರಕರ್ತನ ಮೇಲೆ ಹಲ್ಲೆಯಾದರೆ ರೈತರೆಲ್ಲ ಏನು ಮಾಡಬೇಕು ? ಎಂಬ ಬಗ್ಗೆಯೂ ರೈತರಲ್ಲಿ ಜಾಗೃತಿ ಉಂಟು ಮಾಡಿದರು. ಇದನ್ನು ಪ್ರೊಫೆಸರ್ ಯಾವುದೋ ದೂರದ ಊರುಗಳಲ್ಲಿ ಕುಂತು ಮಾಡಲಿಲ್ಲ. ಆ ಪುಢಾರಿಯ ಮತಕ್ಷೇತ್ರದ ಅವನದೇ ಓಟ್ ಬ್ಯಾಂಕ್ ಇರುವ ಹಳ್ಳಿಗಳಲ್ಲಿ ಎಂಬುದು ಗಮನಾರ್ಹ!
ಮತ್ತೊಂದು ಸಲ ರಾಯಚೂರಿನ ಮಂತ್ರಾಲಯ ರಾಘವೇಂದ್ರಸ್ವಾಮಿಯ ಗುಡಿಯನ್ನು ನೋಡಲು ಹೋದಾಗ ಅಲ್ಲಿರುವ ವಟುಗಳು ಪ್ರೊಫೆಸರ್‌ರ ಹಸಿರು ಟೋಪಿ, ಹಸಿರು ಜುಬ್ಬಾ, ಹಾಗೂ ಸಣ್ಣಗಿನ ಬಿಳಿ ಗಡ್ಡ ಇವನ್ನು ನೋಡಿ ಪ್ರೊಫೆಸರ್ ಅವರನ್ನು ಮುಸಲ್ಮಾನರೆಂದು ಪರಿಗಣಿಸಿ ಒಳಗೊಳಗೆ ಉರಿಯುತ್ತಿರಲು ಪ್ರೊ. ಕೀಟಲೆಯ , ವ್ಯಂಗ್ಯದ ದನಿಯಲ್ಲಿ ಯಾಕೆ ನಿಮ್ಮ ರಾಘವೇಂದ್ರನಿಗೆ ಗಂಡಸರ ಬರಿಮೈ ನೋಡುವ ಆಸೆಯೆ? ಎಂದು ಕೇಳಿ ಅಲ್ಲಿನ ಜನರೊಂದಿಗೆ ಗುದ್ದಾಡಿದ್ದು. ಅದೇ ಊರಲ್ಲಿ ಒಂದೆರಡು ದಿನ ನೆಲೆ ನಿಂತು ಆ ಊರಿನ ಯುವಕರನ್ನೇ ಸಂಘಟಿಸಿ ಬೂಟುಗಾಲು ಸಮೇತ ಗರ್ಭಗುಡಿ ಪ್ರವೇಶ ಮಾಡಿಬಂದದ್ದೊಂದು ಇತಿಹಾಸ.
ನನ್ನ ತಂದೆಯವರ ಬಗ್ಗೆ ಅಪಾರ ವಿಶ್ವಾಸ ಮತ್ತು ಪ್ರೀತಿಯನ್ನು ಹೊಂದಿದ್ದ ಪ್ರೊಫೆಸರ್‌ಗೆ ಒಮ್ಮಿದೊಮ್ಮೆ ಕಾಮಾಲೆ ರೋಗಕ್ಕೆ ಒಳಗಾದವರಂತೆ ವರ್ತಿಸುತ್ತಿದ್ದರು. ಲಂಕೇಶ್ ಹಾಗೂ ಅವರ ನಡುವೆ ಮುರಿದು ಬಿದ್ದ ಸ್ನೇಹಕ್ಕಾಗಿ ಆ ಪತ್ರಿಕೆಗೆ ಬರೆಯುತ್ತಿದ್ದ ನನ್ನ ತಂದೆಯ ಮೇಲೆ ಸುಕಾಸುಮ್ಮನೆ ಗುಮಾನಿ ಮಾತುಗಳನ್ನಾಡತೊಡಗಿದರು. ನನ್ನ ತಂದೆಯವರೇ ಸಂಘಟಿಸಿ ರೈತ ಮುಖಂಡರನ್ನಾಗಿ ಮಾಡಿದ್ದ ಕಾರ್ಯಕರ್ತರ ಎದುರಿಗೆ ರೈತ ವಿರೋಧಿ ಲಂಕೇಶ್ ಪತ್ರಿಕೆ ಹಾಗೂ ಆ ಪತ್ರಿಕೆಯ ವರದಿಗಾರನನ್ನು ನಂಬಬೇಡಿ ಎಂದು ಫರ್ಮಾನು ಹೊರಡಿಸತೊಡಗಿದರು.ಆದರೂ ನನ್ನ ತಂದೆ ಮಾತ್ರ ಪ್ರೊಫೆಸರ್ ಬಗೆಗೆ ಇದ್ದ ಪ್ರೀತಿ ಹಾಗೂ ರೈತ ಚಳವಳಿಯ ಬಗೆಗಿನ ತಮ್ಮ ವ್ಯಾಮೋಹ ತೊರೆಯಲಿಲ್ಲ.
ಬೆಂಗಳೂರಿನ ಕಬ್ಬನ್ ಪಾರ್ಕಿನಲ್ಲಿ ಹೆಗಡೆ ಸರಕಾರವನ್ನು ಬೆಂಬಲಿಸಿ ಬರೆದಿದ್ದಕ್ಕೆ. ಆ ನಂತರ ಹೆಗಡೆ ರೇವಜೀತು,ಬಾಟ್ಲಿಂಗ್ ಹಗರಣದಲ್ಲಿ ಕಂಟಮಠ ಸಿಗಹಾಕಿಕೊಂಡದ್ದನ್ನು ನೋಡಿ ಖತಿಗೊಂಡು ಲಂಕೇಶರು ಆತ್ಮಾವಲೋಕನ ಸಭೆಯೊಂದನ್ನು ಆಯೋಜಿಸಿದ್ದರು. ಆ ಸಭೆಗೆ ತಂದೆಯವರ ಜೊತೆ ನಾನೂ ಹೋಗಿದ್ದೆ. ಈ ಆತ್ಮಾವಲೋಕನ ಸಭೆ ಮುಗಿದ ತರುವಾಯ ನನ್ನ ತಂದೆಯವರು ಎಂದಿನಂತೆ ನಂಜುಂಡಸ್ವಾಮಿಯವರನ್ನು ಭೇಟಿಯಾಗಲೂ ಯಾವುದೋ ಹೊಟೆಲ್ ಹುಡುಕಿಕೊಂಡು ಹೋದರು. ನನ್ನ ತಂದೆಯವರೂ ಹಾಗೂ ಅವರ ಜೊತೆಗಿದ್ದ ಹತ್ತೆಂಟು ಜನಗಳ ಗುಂಪನ್ನು ನೋಡಿದವರೆ ಏನು ಲಿಂಗಣ್ಣ , ನಿಮ್ಮ ಲಂಕೇಶ್‌ಗೆ ಎದ್ದರೆ ಕುಳಿತುಕೊಳ್ಳುವುದಕ್ಕಾಗುವುದಿಲ್ಲ. ಕುಳಿತರೆ ಎದ್ದೇಳುವುದಕ್ಕಾಗುವುದಿಲ್ಲ ಅಂಥವನು ಪ್ರಗತಿರಂಗ ಕಟ್ಟಬಹುದೆ ? ಬರ‍್ಕೋ ಲಿಂಗಣ್ಣ ಬರ‍್ಕೋ.... ಅದು ಪ್ರಗತಿ ರಂಗ ಅಲ್ಲ. ಕುಂಭಕರ್ಣರಂಗ ! ಎಂದು ತಮ್ಮ ಎಂದಿನ ಹರಿತವಾದ ಧಾಟಿಯಲ್ಲಿ ಛೇಡಿಸಿ ಮಾತಾಡಿದ್ದರು. ಲಿಂಗಣ್ಣ ನಿಮ್ಮ ಲಂಕೇಶ್‌ಗೂ ಆತ್ಮ ಇದೆಯಾ ? ಆತ್ಮವೇ ಇಲ್ಲದೆ ಆತ್ಮಾವಲೋಕನ ಸಾಧ್ಯವೆ ? ಅವನೇನಾದರೂ ಹಾಳಾಗಲಿ ನಿನಗಾದರೂ ಬುದ್ದಿಬೇಡವೆ ? ನಿಮ್ಮೂರಿನಿಂದಲೂ ಸಾಕಷ್ಟು ಜನರನ್ನು ಕರಕೊಂಡು ಬಂದು ಈ ಲಂಕಣ್ಣನ ಸಭೆಗೆ ಬರುವ ಜರುರತ್ತಾದರೂ ಏನಿತ್ತು ? ಎಂದು ನಮ್ಮ ತಂದೆಯವರನ್ನೇ ಪ್ರೊಫೆಸರ್ ತರಾಟೆಗೆ ತೆಗೆದುಕೊಂಡಿದ್ದರು.
ಲಂಕೇಶ್ ಪತ್ರಿಕೆಯಲ್ಲಿ ಬರೆಯುವ ಕಾರಣಕ್ಕೊ ಏನೋ ನನ್ನ ತಂದೆಯ ಮೇಲೆ ಆಗಾಗ ನಂಜುಂಡಸ್ವಾಮಿ ಮುನಿಸುತೋರಿಸುತ್ತಿದ್ದರು. ಆದರೆ ಅದು ಸೌಜನ್ಯದ ಎಲ್ಲೆಯನ್ನು ದಾಟಿರಲಿಲ್ಲ. ಯಾವಾಗ ನನ್ನ ತಂದೆ ಕರ್ನಾಟಕ ರಾಜ್ಯ ರೈತ ಸಂಘ ರಾಜಕೀಯ ಪಕ್ಷವಾಗುವುದು ಸದ್ಯಕ್ಕೆ ಬೇಡ. ಇದಕ್ಕೆ ಇನ್ನಷ್ಟು ಕಾಲಬೇಕು ಎಂಬ ವಾದವನ್ನು ಪ್ರೊಫೆಸರರು ಕರೆದ ರಾಜ್ಯಮಟ್ಟದ ಸಭೆಯಲ್ಲಿ ಮುಂದಿಟ್ಟರೋ ಅಂದೇ ಪ್ರೊಫೆಸರ್ ನನ್ನ ತಂದೆಯನ್ನು ಹಗುರವಾದ ಮಾತುಗಳಿಂದ ಛೇಡಿಸಲಾರಂಭಿಸಿದರು. ಇದೆಲ್ಲ ನನಗೂ ಗೊತ್ತಿತ್ತು. ಆದರೂ ಅದೇಕೋ ಅವರ ಮೊನಚಾದ ಮಾತು, ಸರಳ ವ್ಯಕ್ತಿತ್ವ ನನ್ನನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿತ್ತು.
ಅದೊಂದು ದಿನ ಮಾನ್ವಿ ತಾಲೂಕಿನ ರೈತ ಹೋರಾಟಗಾರನಾಗಿದ್ದ ಬಲ್ಲಟಗಿಯ ಸೂಗಣ್ಣಗೌಡ ಎಂಬ ವ್ಯಕ್ತಿಯನ್ನು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಬರ್ಬರವಾಗಿ ಕೊಂದುಹಾಕಿದ್ದವು. ಬಲ್ಲಟಗಿ ಸೂಗಣ್ಣಗೌಡರನ್ನು ನನ್ನ ತಂದೆಯವರೇ ರೈತ ಸಂಘಟಕ್ಕೆ ಎಳೆತಂದವರು. ಅವರಲ್ಲಿ ಹೋರಾಟದ ಕಿಡಿ ಹೊತ್ತಿಸಿದ್ದರು. ಆದ್ದರಿಂದ ಸೂಗಣ್ಣಗೌಡರ ಕೊಲೆ ನನ್ನ ತಂದೆಯವರನ್ನು ಬಹುವಾಗಿ ಕಾಡಿತ್ತು. ಆ ಕಾರಣಕ್ಕಾಗಿ ಅವರ ಸ್ಮರಣೆಯ ದಿನದಂದು ಬಲ್ಲಟಿಗೆಗೆ ಹೋಗಲೆಬೇಕೆಂದು ಮಾನ್ವಿಯ ತನಕ ಹೋದರೆ ಬಲ್ಲಟಿಗೆಗೆ ಹೋಗುವ ಬಸ್ ಆಗಲೇ ಹೋಗಿ ಆಗಿತ್ತು. ಮತ್ತೆ ಆ ಊರಿಗೆ ಹೋಗಲು ಮರುದಿನಕ್ಕೆ ಕಾಯಬೇಕು. ನನ್ನ ತಂದೆಗಾದರೋ ಅಲ್ಲಿಗೆ ಹೋಗಲೇಬೇಕು ಎಂಬ ತವಕ. ಬಲ್ಲಟಿಗೆ ಕ್ರಾಸ್ ಗೆ ಹೋಗಿ ನಿಂತರೆ ಯಾವುದಾದರೂ ವಾಹನ ಸಿಗಬಹುದೆಂದು ಅಲ್ಲಿಗೆ ಹೋದರೆ ಸ್ವಲ್ಪ ಸಮಯ ಕಳೆಯುತ್ತಲೆ ರೈತ ಸಂಘದ್ದೇ ಒಂದು ಟ್ರ್ಯಾಕ್ಟರ್ ಸಿಕ್ಕಿತು. ಖುಷಿಯಿಂದ ನನ್ನ ತಂದೆ ಮತ್ತು ನಾನು ಹತ್ತಿ ಕುಳಿತು ಅರ್ಧದಾರಿ ಹೊರಟಿದ್ದೆವು. ನಮ್ಮ ಎದುರಿಗೆ ಪ್ರೊಫೆಸರ್ ನಂಜುಂಡಸ್ವಾಮಿಯವರ ಕಾರು ಬಂತು. ಟ್ರಾಕ್ಟರ್ ನಲ್ಲಿದ್ದ ರೈತಸಂಘದ ಸ್ನೇಹಿತರೆಲ್ಲ ಟ್ರ್ಯಾಕ್ಟರ್ ನಿಲ್ಲಿಸಿ ಪ್ರೊಫೆಸರ್ ರನ್ನು ಮಾತಾಡಿಸತೊಡಗಿದರು. ನನಗೂ ಅವರನ್ನು ಮಾತನಾಡಿಸುವ ತವಕ. ನನ್ನ ತಂದೆಯ ಕಡೆಗೆ ನೋಡಿದೆ. ಅವರು ಅದೇಕೋ ಅಷ್ಟು ಆಸಕ್ತಿ ತೋರಿಸಲಿಲ್ಲ. ನಾನೇ ನನ್ನ ತಂದೆಯನ್ನು ಒತ್ತಾಯಿಸುತ್ತ.
ಪ್ರೊಫೆಸರ್ ಬಂದಿದ್ದಾರೆ. ಅವರೊಂದಿಗೆ ಮಾತಾಡುವುದಿಲ್ಲವೆ? ಎಂದು ಸಾವಕಾಶವಾಗಿ ಅಂದೆ. ಅದಕ್ಕೆ ಅವರು
ಅದು ಎಡವಟ್ಟು ಗಿರಾಕಿ, ಏನು ಮಾತಾಡುತ್ತೋ ಯಾರಿಗೆ ಗೊತ್ತು? ಎಂದು ನನ್ನ ತಂದೆ ಸುಮ್ಮನಾದರು. ಆದರೆ ನಾನು ಮಾತ್ರ
ಪಾಪ, ಅವರು ನಮ್ಮ ಭಾಗಕ್ಕೆ ಬಂದಿದ್ದಾರೆ,ಮಾತಾಡಿಸಿದರೆ ಏನಂತೆ ? ಎಂದು ಆಶೆಯಿಂದ ಅವರತ್ತ ನೋಡಿದೆ, ತಕ್ಷಣವೇ ಟ್ರ್ಯಾಕ್ಟರ್ ಇಳಿದ ನನ್ನ ತಂದೆ ನೇರ ನಂಜುಂಡಸ್ವಾಮಿಯವರು ಕುಳಿತ ಕಾರಿನ ಕಿಟಕಿಯ ಹತ್ತಿರ ಹೋದರು. ಅಲ್ಲಿದ ರೈತರೆಲ್ಲ ದೂರ ಸರಿದು
ಲಿಂಗಣ್ಣ ನವರು ಸತ್ಯಂಪೇಟೆ ಲಿಂಗಣ್ಣನವರು...... ! ಎಂದು ಪ್ರೊಫೆಸರ್ ಅವರಿಗೆ ಹೇಳುತ್ತಿರುವಂತೆ , ಆಗ ನಂಜುಂಡಸ್ವಾಮಿ ಏನು ಅಂದರು ಗೊತ್ತೆ ?
ಯಾರು? ಲಿಂಗಣ್ಣ? ಯಾವ ಲಿಂಗಣ್ಣ ಸತ್ಯಂಪೇಟೆ?! ನನಗೆ ಪರಿಚಯವೇ ಇಲ್ಲವಲ್ಲ ! ಎನ್ನುತ್ತ ತಮ್ಮ ಕುಹಕ ಧಾಟಿಯಲ್ಲಿ ರೈತ ವಿರೋಧಿಗಳನ್ನು ನಮ್ಮ ಯಾವುದೇ ವಾಹನಗಳಲ್ಲಿ ಕರಕೊಂಡು ಹೋಗಬಾರದು , ತಿಳಿಯಿತೆ ? ಎಂದೆನ್ನುತ್ತ ಪ್ರೊಫೆಸರ್ ಕಾರು ಚಾಲು ಮಾಡಲು ಸೂಚಿಸುತ್ತಿರುವಂತೆ , ನನ್ನ ತಂದೆ ಅಷ್ಟೇ ಪೆಡಸಿನಿಂದ
ನಾನು ಪ್ರೊಫೆಸರ್ ನಂಜುಂಡಸ್ವಾಮಿ ಎಂದು ತಿಳಿದು ಮಾತಾಡಿದೆ, ನೀವು ಬೇರೆ ಯಾರೋ ಗೊತ್ತಾಗಲಿಲ್ಲ , ಕ್ಷಮಿಸಿ ಎನ್ನಬೇಕೆ ? ಈ ಮಾತುಗಳನ್ನು ಕೇಳುತ್ತ ತಬ್ಬಿಬ್ಬಾಗುವ ಸರದಿ ಮಾತ್ರ ನನ್ನದಾಗಿತ್ತು !!
ಬಹುರಾಷ್ಟ್ರೀಯ ಕಂಪನಿಗಳು ಭಾರತ ಪ್ರವೇಶಿಸಿ ಇಲ್ಲಿನ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಆರ್ಥಿಕ ಜೀವನವನ್ನೇ ಏರುಪೇರುಮಾಡುವ ಹುನ್ನಾರವನ್ನು ಬಹುಬೇಗನೆ ಗ್ರಹಿಸಿಕೊಂಡಿದ್ದ ಪ್ರೊಫೆಸರ್ ಅದಕ್ಕೆ ವಿರುದ್ಧವಾಗಿ ವಿಶಿಷ್ಟ ಚಳವಳಿಯನ್ನೇ ಹಮ್ಮಿಕೊಂಡಿದ್ದರು. ಕೆಂಟುಕಿ ಚಿಕನ್ ಸೆಂಟರ್‌ಗಳ ಮೇಲೆ ದಾಳಿ ಮಾಡುವ ಮೂಲಕ ಜನಸಾಮಾನ್ಯರಲ್ಲಿಯೂ ಪ್ರಜ್ಞೆ ಉಂಟುಮಾಡಲು ಬಯಸುತ್ತಿದ್ದರು. ರೈತರ ಬದುಕಿಗೆ ಮಾರಕವಾಗಬಲ್ಲ ಬಿ.ಟಿ.ಹತ್ತಿಯನ್ನಂತೂ ಅವರು ಬಿಟ್ಟಿಕೊಟ್ಟರೂ ಬೇಡವೆಂದೆ ಹೇಳಿದರು. ಬಿ.ಟಿ.ಹತ್ತಿ ಉಳುಮೆ ಮಾಡಿದ ಹೊಲವನ್ನು ಕಾನೂನು ಬಾಹಿರವಾಗಿ ಪ್ರವೇಶಿಸಿ ಅದಕ್ಕೆ ಬೆಂಕಿ ಹಚ್ಚಿದರು. ಪ್ರತಿಯೊಬ್ಬ ರೈತರಲ್ಲಿ ಆತ್ಮ ಪ್ರಜ್ಞೆಯನ್ನುಂಟು ಮಾಡಿ ಅವರು ದೇಶದ ಆಳುಗಳಲ್ಲಿ ಈ ದೇಶದ ಧಣಿಗಳು ಎಂಬ ಎಚ್ಚರಿಕೆ ಉಂಟುಮಾಡಿದರು. ಇತಿಹಾಸದಲ್ಲಿಯೇ ಮೊಟ್ಟಮೊದಲಬಾರಿಗೆ ಗಾಂಧೀಜಿಯ ಮಾದರಿಯ ಸ್ವಾತಂತ್ರ್ಯ ಚಳುವಳಿಯನ್ನು ನೆನಪಿಸುವಂತೆ ಜೇಲ್ ಬರೋ ಕಾರ್ಯಕ್ರಮ ಹಮ್ಮಿಕೊಂಡು ಯಶಸ್ವಿಯಾದರು. ಹಲವಾರು ಸಲ ಬೆಂಗಳೂರಿನಲ್ಲಿ ರೈತರ ರ‍್ಯಾಲಿಗಳನ್ನು ಏರ್ಪಡಿಸಿ ಒಂದೇ ಒಂದು ಸಣ್ಣ ದಾಂಧಲೆ ಆಗದಿರುವಂತೆ ನೋಡಿಕೊಂಡು ಯಶಸ್ವಿಯಾದರು. ಹಲವಾರು ಸಲ ಬೆಂಗಳೂರಿನಲ್ಲಿ ರೈತರ ರ‍್ಯಾಲಿಗಳನ್ನು ಏರ್ಪಡಿಸಿ ಒಂದೇ ಒಂದು ಸಣ್ಣ ದಾಂಧಲೆ ಆಗದಿರುವಂತೆ ನೋಡಿಕೊಂಡ ಶ್ರೇಯಸ್ಸು ನಂಜುಂಡಸ್ವಾಮಿಯವರಿಗೇ ಸಲ್ಲುತ್ತದೆ. ಹೋರಾಟದ ನಿಗಿ ನಿಗಿ ಕೆಂಡವಾಗಿದ್ದ , ಸಂಘಟನಾ ಚತುರರಾಗಿದ್ದ ಕಿಂದರ ಜೋಗಿಯಂತೆ ಅಕ್ಷರಶಃ ರೈತರನ್ನು ತಮ್ಮ ಮಾತುಗಳ ಮೂಲಕ ಸೂಜಿಗಲ್ಲಿನಂತೆ ಸೇಲೆಯುತ್ತಿದ್ದ ನಂಜುಂಡಸ್ವಾಮಿಯವರಂಥ ಕೆಚ್ಚೆದೆಯ ಹೋರಾಟಗಾರರನನ್ನು ನಾವು ಈಗ ಮತ್ತೆ ಎಲ್ಲಿ ಹುಡುಕುವುದು?
ವಿಶ್ವಾರಾಧ್ಯ ಸತ್ಯಂಪೇಟೆ

No comments:

Post a Comment

ಹಿಂದಿನ ಬರೆಹಗಳು