Friday, June 4, 2010

ಕನ್ನಡ ಕೊಲ್ಲುವ ಮುನ್ನ ಎನ್ನ ಕೊಲ್ಲು



ಟಿ.ಎ.ನಾರಾಯಣಗೌಡ

‘ಕರವೇ ನಲ್ನುಡಿ ಲೋಕಾರ್ಪಣೆಯ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಕರವೇ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರು ಮಾಡಿದ ಅಧ್ಯಕ್ಷತೆಯ ಭಾಷಣ ಇಲ್ಲಿದೆ. ಕನ್ನಡ ನಾಡು-ನುಡಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ವಿಸ್ತ್ರತವಾಗಿ ಮಾತನಾಡಿದ ಗೌಡರು, ರಾಜಕೀಯ ವ್ಯವಸ್ಥೆ ಕನ್ನಡ-ಕರ್ನಾಟಕ-ಕನ್ನಡಿಗರನ್ನು ಮರೆತು ಮುಂದೆ ಹೋಗುತ್ತಿರುವ ಕುರಿತಂತೆ ನೋವಿನಿಂದ ಪ್ರಸ್ತಾಪಿಸಿದರು. ಕನ್ನಡ ಹೋರಾಟಗಾರರ ಮೇಲಿನ ಮೊಕದ್ದಮೆಗಳು, ಬೆಂಗಳೂರು ಎದುರಿಸುತ್ತಿರುವ ಸಮಸ್ಯೆಗಳು, ಕನ್ನಡಿಗರು ಅನುಭವಿಸುತ್ತಿರುವ ಯಾತನೆ, ಬದುಕು ಕಳೆದುಕೊಂಡ ಕುಶಲಕರ್ಮಿಗಳ ಬವಣೆ, ಜನಪ್ರತಿನಿಧಿಗಳ ಬೇಜವಾಬ್ದಾರಿತನ... ಈ ಎಲ್ಲ ವಿಷಯಗಳ ಕುರಿತು ಮಾತನಾಡಿದರು. ಅವರ ಭಾಷಣ ನಮ್ಮ ಜನಪ್ರತಿನಿಧಿಗಳ ಕಣ್ತೆರೆಸುವಂತಿದೆ. ಒಮ್ಮೆ ಜುಳುಜುಳು ಹರಿವ ನದಿ, ಮತ್ತೊಮ್ಮೆ ಸಿಡಿಲು-ಗುಡುಗು, ಮತ್ತೊಮ್ಮೆ ಕೋಲ್ಮಿಂಚು... ಹೀಗಿತ್ತು ಗೌಡರ ವಾಗ್ಝರಿ.

ಎಲ್ಲಾ ಆತ್ಮೀಯ ಕನ್ನಡ ಬಂಧುಗಳೇ, ಸಡಗರದಿಂದ, ಸಂಭ್ರಮದಿಂದ ಕಾರ್ಯಕ್ರಮವನ್ನು ವೀಕ್ಷಣೆ ಮಾಡುತ್ತಿರುವ ಕರ್ನಾಟಕ ರಕ್ಷಣಾ ವೇದಿಕೆಯ ಕನ್ನಡ ಸೇನಾನಿಗಳೇ,
ನಿಮಗೇನಾದರೂ ಖುಷಿ ಆದರೆ ಜೋರಾಗಿ ಚಪ್ಪಾಳೆ ಹೊಡೆಯಿರಿ. ಶಿಳ್ಳೆ ಹೊಡೆಯಬೇಡಿರಿ. ಶಿಳ್ಳೆ ಹೊಡೆಯುವುದು ಕರ್ನಾಟಕ ರಕ್ಷಣಾ ವೇದಿಕೆಯ ಸಂಸ್ಕೃತಿ ಅಲ್ಲ. ಯಾರಿಗೆ ಏನು ಅನಿಸುತ್ತೋ ಗೊತ್ತಿಲ್ಲ. ಏನೇ ಕಾರ್ಯಕ್ರಮ ಮಾಡಿದರೂ ನಾವೆಲ್ಲಾ ಒಟ್ಟಾಗಿ ಕುಳಿತು ನಾಡು, ನುಡಿ ಬಗ್ಗೆ ಗಂಭೀರವಾದ ಚಿಂತನೆ ನಡೆಸಬೇಕು ಎಂದು ಬಯಸುವವನು ನಾನು. ನಮ್ಮ ಭಾವನೆಗಳನ್ನು ಗಂಭೀರವಾಗಿ ಹಂಚಿಕೊಳ್ಳಲು ಇದೊಂದು ವೇದಿಕೆ. ಹಾಗಾಗಿ ಶಿಳ್ಳೆ ಬೇಡ, ಚಪ್ಪಾಳೆ ಇರಲಿ.
ಸಮಸ್ತ ಕನ್ನಡಿಗರ ಜೊತೆ ನಮ್ಮೆಲ್ಲರ ಭಾವನೆಗಳನ್ನು, ದುಃಖ ದುಮ್ಮಾನಗಳನ್ನು ಹಂಚಿಕೊಳ್ಳಲು ಒಂದು ಮಾಧ್ಯಮದ ಅವಶ್ಯಕತೆ ಇತ್ತು. ಕರ್ನಾಟಕ ರಕ್ಷಣಾ ವೇದಿಕೆಯ ಮುಖವಾಣಿಯಾಗಿ ಕೆಲಸ ಮಾಡುವಂಥ ಒಂದು ಮಾಧ್ಯಮ ಬೇಕು ಎಂದು ಅನೇಕ ಸಂದರ್ಭಗಳಲ್ಲಿ ಅನಿಸುತ್ತಾ ಇತ್ತು. ಅಂಥದೊಂದು ದಿನ ಇಂದು ಒದಗಿ ಬಂದಿದೆ.
ಈ ಪತ್ರಿಕೆಯನ್ನು ಕರ್ನಾಟಕ ರಕ್ಷಣಾ ವೇದಿಕೆಯ ಮುಖವಾಣಿ ಅನ್ನುವುದಕ್ಕಿಂತ ಐದೂವರೆ ಕೋಟಿ ಕನ್ನಡಿಗರ ಮುಖವಾಣಿ ಎಂದು ನಾನಾದರೂ ಭಾವಿಸಿದ್ದೇನೆ. ಕನ್ನಡದ ಜ್ಯೋತಿಯನ್ನು ಹಿರಿಯರು ಹಚ್ಚಿದ್ದಾರೆ. ಆ ಜ್ಯೋತಿ ನಿರಾತಂಕವಾಗಿ ಉರಿಯುತ್ತಿದೆ. ಕರ್ನಾಟಕದ ಪ್ರತಿಯೊಬ್ಬನ ಮನೆಯಲ್ಲೂ ಈ ಜ್ಯೋತಿ ಇರಬೇಕು ಮತ್ತು ಅದು ಸದಾ ಬೆಳಕು ಹರಿಸುತ್ತಲೇ ಇರಬೇಕು ಎಂದು ನಾನು ಹಾರೈಸುತ್ತೇನೆ.
ಪತ್ರಿಕೆಯನ್ನು ಹೊರ ತರುವ ಸಂದರ್ಭದಲ್ಲಿ ನಮ್ಮ ದಿನೇಶ್ ಅವರಿಗೆ ಒಂದು ಮಾತು ಹೇಳಿದ್ದೆ. ಕರವೇಯಲ್ಲಿ ಏನೇ ಕೆಲಸ ಮಾಡಿದರೂ ಗುಣಮಟ್ಟದಲ್ಲಿ ಕಳಪೆಯಾಗಬಾರದು. ಎಲ್ಲಾ ರೀತಿಯಲ್ಲೂ ಆಂಗ್ಲ ಪತ್ರಿಕೆಗಳಿಗಿಂತಲೂ ಈ ಪತ್ರಿಕೆ ಒಳ್ಳೆಯ ಗುಣಮಟ್ಟದಲ್ಲಿ ಹೊರಬರಬೇಕು ಅಂತ ಅವರಿಗೆ ಹೇಳಿದ್ದೆ. ದಿನೇಶ್ ಅವರು ಸಹ ಬಹಳ ದಿನಗಳಿಂದ ಕರ್ನಾಟಕ ರಕ್ಷಣಾ ವೇದಿಕೆಗೊಂದು ಮುಖವಾಣಿ ಬೇಕು ಅಂತ ಹೇಳುತ್ತಲೇ ಇದ್ದರು. ಇವತ್ತು ನಮ್ಮೆಲ್ಲರ ಆಸೆ ಇಡೀ ಲಕ್ಷಾಂತರ ನನ್ನ ಕಾರ್ಯಕರ್ತರ ಆಸೆ ಈಡೇರಿದೆ ಅಂತ ಭಾವಿಸಿದ್ದೇನೆ.
ಈ ಕಾರ್ಯಕ್ರಮದಲ್ಲಿ ಬಹಳ ಮಹತ್ವದ ಗಣ್ಯರು ಭಾಗವಹಿಸಿದ್ದಾರೆ. ನಾವು ಕಲ್ಯಾಣ ಕರ್ನಾಟಕ ಎಂದು ಕರೆಯುವ ಹೈದ್ರಾಬಾದ್-ಕರ್ನಾಟಕ ಭಾಗದ ಬೀದರ್ ಜಿಲ್ಲೆಯಲ್ಲಿ ನಿಜಾಮರ ಕಾಲದಲ್ಲಿ ಕನ್ನಡವನ್ನು ಮಾತನಾಡುವುದೇ ಕಷ್ಟದ ಕೆಲಸವಾಗಿತ್ತು. ದೌರ್ಜನ್ಯ, ದಬ್ಬಾಳಿಕೆ ನಡುವೆಯೂ ತಮ್ಮ ಮಠದ ಹೊರಗೆ ಉರ್ದು ನಾಮಫಲಕವನ್ನು ಹಾಕಿ ಒಳಗೆ ಕನ್ನಡ ಕಲಿಸಿದ ಒಂದು ಮಠವಿದೆ; ಅದು ಭಾಲ್ಕಿ ಮಠ. ಈ ಇತಿಹಾಸವುಳ್ಳ ಮಠದ ಪರಮಪೂಜ್ಯರಾದ ಶ್ರೀ ಡಾ. ಬಸವಲಿಂಗ ಪಟ್ಟದೇವರು ಅವರಿಗೆ ಕಾರ್ಯಕ್ರಮದ ಸಾನ್ನಿಧ್ಯವನ್ನು ವಹಿಸಲು ಮನವಿ ಮಾಡಿದ್ದೆ. ನೀವು ಬಂದರೆ ಕಾರ್ಯಕ್ರಮಕ್ಕೆ ನಿಜವಾದ ಅರ್ಥ ದೊರೆಯುತ್ತದೆ ಎಂದು ಹೇಳಿದ್ದೆ. ಅವರು ಬಂದಿದ್ದಾರೆ, ಅವರ ಪಾದಗಳಿಗೆ ನನ್ನ ನಮಸ್ಕಾರಗಳು.
ಕನ್ನಡದ ಸಾಹಿತ್ಯ ಶಿಖರ ಡಾ.ಯು.ಆರ್.ಅನಂತಮೂರ್ತಿಯವರು ‘ಕರವೇ ನಲ್ನುಡಿ’ ಪತ್ರಿಕೆಯನ್ನು ಲೋಕಾರ್ಪಣೆ ಮಾಡಿದ್ದಾರೆ. ಸಾಹಿತಿ ಎಂದರೆ ಕಾವ್ಯ, ನಾಟಕ, ಗದ್ಯ ಬರೆದು ಪುಸ್ತಕ ಪ್ರಕಟಣೆ ಮಾಡುವುದಕ್ಕೆ ಸೀಮಿತರಾಗುವರು ಇದ್ದಾರೆ. ಆದರೆ, ಅನಂತಮೂರ್ತಿಯವರು ಹಾಗಲ್ಲ. ನಾಡಿಗೆ ಕಂಟಕವಾಗುವ ಯಾವುದೇ ತೀರ್ಮಾನಗಳನ್ನು ಸರ್ಕಾರ ಅಥವಾ ಯಾವುದೇ ಸಂಸ್ಥೆ-ವ್ಯಕ್ತಿ ತೆಗೆದುಕೊಂಡಾಗ ನಾನು ಹೇಳಬೇಕಾದದ್ದನ್ನು ಹೇಳಿಯೇ ತೀರುತ್ತೇನೆ ಎಂದು ಪ್ರತಿಕ್ರಿಯಿಸುವರು ಅನಂತಮೂರ್ತಿಯವರು. ಕನ್ನಡಕ್ಕೆ ಮಾರಕವಾಗುವ ಎಂಥದೇ ದೊಡ್ಡ ಶಕ್ತಿ ಇದ್ದರೂ ಅದರ ವಿರುದ್ಧ ಹೋರಾಡಲು ಅವರು ನಿಂತು ಬಿಡುತ್ತಾರೆ. ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿರುವ ಅನಂತಮೂರ್ತಿಯವರು ಅನೇಕ ಸಂದರ್ಭಗಳಲ್ಲಿ ತಮ್ಮ ಚಾಟಿಯೇಟಿನಂತಹ ಮಾತುಗಳ ಮೂಲಕ ಎಚ್ಚರಿಸುತ್ತಾ ಇರುತ್ತಾರೆ.
’ನೀವು ಹೀಗೆ ಕೂತರೆ ಆಗೋದಿಲ್ಲ. ಹೆಚ್ಚು ಹೆಚ್ಚು ಕೆಲಸ ಮಾಡಿ. ಆ ಶಕ್ತಿ ನಿಮಗಿದೆ’ ಎಂದು ನಮ್ಮನ್ನು ಎಚ್ಚರಿಸುವ ಅನಂತಮೂರ್ತಿಯವರು ಇವತ್ತು ಮಾತನಾಡುವ ಸಂದರ್ಭದಲ್ಲಿ ತಮ್ಮ ನೋವುಗಳನ್ನು ವ್ಯಕ್ತಪಡಿಸಿದರು. ’ನನ್ನ ಕೊನೆಯ ಆಸೆಗಳನ್ನು, ಭಾವನೆಗಳನ್ನು ನಿಮ್ಮ ಮುಂದೆ ಹಂಚಿಕೊಳ್ಳುತ್ತಿದ್ದೇನೆ’ ಎಂದರು. ಅವರ ನೋವು ಕನ್ನಡದ ನೆಲದ ನೋವು, ಕನ್ನಡಿಗರ ನೋವು. ತಮ್ಮ ಭಾವನೆಗಳನ್ನು ಹೀಗೆ ಮುಕ್ತವಾಗಿ ವ್ಯಕ್ತಪಡಿಸಿದ್ದಕ್ಕಾಗಿ ನಾನು ಅವರಿಗೆ ಧನ್ಯವಾದ ಅರ್ಪಿಸುತ್ತೇನೆ.
ಸಮಾರಂಭದಲ್ಲಿ ಮೋಟಮ್ಮನವರಿದ್ದಾರೆ. ನಾಡು-ನುಡಿ ಬಗ್ಗೆ ಅಪಾರವಾದ ಕಾಳಜಿ ಇರುವವರು ಅವರು. ಸಾಹಿತ್ಯ, ಜನಪದ, ಸಂಸ್ಕೃತಿಗಳ ಬಗ್ಗೆ ಆಸಕ್ತಿ ಇಟ್ಟುಕೊಂಡಿದ್ದಾರೆ. ನಾನು ಬಹಳಷ್ಟು ಸಂದರ್ಭದಲ್ಲಿ ಗಮನಿಸಿದ್ದೇನೆ; ಮೋಟಮ್ಮನವರು ಇದ್ದ ಕಡೆ ಸಾಹಿತ್ಯವಿರುತ್ತೆ, ಜನಪದವಿರುತ್ತೆ, ಸಂಗೀತವಿರುತ್ತೆ. ಅವರೇ ಇಂದು ಈ ಸಮಾರಂಭದಲ್ಲಿ ಜ್ಯೋತಿಯನ್ನು ಬೆಳಗಿಸಿದ್ದಾರೆ. ಅದು ನಿರುಮ್ಮಳವಾಗಿ ಉರಿಯುತ್ತದೆ.
ಕನ್ನಡ ಜಾನಪದ ಸಾಹಿತ್ಯದ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿರುವ ಇವತ್ತಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೂ ಆಗಿರುವ, ಕರ್ನಾಟಕ ರಕ್ಷಣಾ ವೇದಿಕೆಯ ಹಿತೈಷಿಗಳಾಗಿರುವ ಡಾ.ನಲ್ಲೂರು ಪ್ರಸಾದ್‌ರವರು ಸಹ ಕಾರ್ಯಕ್ರಮದಲ್ಲಿದ್ದಾರೆ.
ಈ ಸಂದರ್ಭದಲ್ಲಿ ಒಂದು ವಿಷಯ ನಿಮ್ಮ ಜೊತೆ ಹಂಚಿಕೊಳ್ಳಬೇಕು. ನಾವೆಲ್ಲ ಹಳ್ಳಿಯಿಂದ ಬೆಳೆದು ಬಂದ ಮಕ್ಕಳು. ಜಾನಪದವೇ ನಮ್ಮ ತಾಯಿ ದೇವರು. ನಾವು ಸಾಹಿತ್ಯದ ಭಾಷೆ, ಪಂಡಿತರ ಭಾಷೆ ಮಾತನಾಡದೆ ಹೋದರೂ ನಿಜವಾದ ಕನ್ನಡದ ಸೊಗಡಿನ ಭಾಷೆಯನ್ನು ನಿರರ್ಗಳವಾಗಿ ಮಾತನಾಡುತ್ತೇವೆ. ನಮ್ಮದು ದೇವ ಭಾಷೆ ಅಲ್ಲ; ಜನರ ಭಾಷೆ.
ನಲ್ಲೂರು ಪ್ರಸಾದ್‌ರವರು ಮಾತನಾಡುವಾಗ ಕನ್ನಡ ಚಳವಳಿಗಾರರ ಮೇಲೆ ಇರುವಂತಹ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯಬೇಕು. ಜನಪ್ರತಿನಿಧಿಗಳು ಪಕ್ಷಭೇದ ಮರೆತು ವಿಧಾನಪರಿಷತ್, ವಿಧಾನಸಭೆಗಳಲ್ಲಿ ಈ ವಿಷಯ ಪ್ರಸ್ತಾಪಿಸಬೇಕು. ಎಲ್ಲಾ ಜನಪ್ರತಿನಿಧಿಗಳು ಕನ್ನಡದ ಧ್ವನಿಯಾಗಿ ಕೆಲಸ ಮಾಡಬೇಕು ಎಂದು ಹೇಳಿದರು.
ಎಲ್ಲರಿಗೂ ಗೊತ್ತಿರುವ ವಿಚಾರವೇ. ನಾವು ನಮ್ಮ ಸ್ವಾರ್ಥಕ್ಕೆ ಹೋರಾಟ ಮಾಡಿದವರಲ್ಲ. ಕನ್ನಡಕ್ಕೆ ಅನ್ಯಾಯವಾದಾಗ, ಕನ್ನಡ ಭಾಷೆಗೆ, ನೆಲಕ್ಕೆ, ಜಲಕ್ಕೆ ಅನ್ಯಾಯವಾದಾಗ, ಕನ್ನಡದ ಮಕ್ಕಳ ಬದುಕಿಗೆ ಅನ್ಯಾಯವಾದಾಗ ರಕ್ಷಣಾ ವೇದಿಕೆಯ ಕನ್ನಡ ಪಡೆ ಧ್ವನಿಯೆತ್ತುತ್ತಾ ಬಂದಿದೆ.
ನಾವು ಯಾವತ್ತೂ ಮೊಕದ್ದಮೆಗಳಿಗೆ ಹೆದರಲಿಲ್ಲ; ಹೆದರೋದು ಇಲ್ಲ. ಮೈಯಲ್ಲಿ ಕೊನೆಯ ಹನಿ ರಕ್ತ ಇರುವವರೆಗೂ ನೆಲಕ್ಕಾಗಿ, ನಾಡು-ನುಡಿಗಾಗಿ ಹೋರಾಟ ಮಾಡಿ ಈ ಸ್ವರ್ಗಭೂಮಿಯಲ್ಲಿ ಪ್ರಾಣ ಬಿಡುತ್ತೇವೆಯೇ ಹೊರತು ಹೆದರಿ ಹಿಂದಕ್ಕೆ ಹೋಗುವ ಪ್ರಶ್ನೆಯೇ ಇಲ್ಲ. ಆದರೆ, ಒಂದು ವಿಚಾರವನ್ನು ಪ್ರಾಜ್ಞರು ಹೇಳುತ್ತಿದ್ದಾರೆ. ಕನ್ನಡದ ಹೋರಾಟ ಮಾಡುವ ಕೈಗಳಿಗೆ ಶಕ್ತಿ ತುಂಬುವಂಥ ಕೆಲಸವನ್ನು ಯಾವುದೇ ಸರ್ಕಾರ ಮಾಡಬೇಕು. ಏಕೆಂದರೆ ಯಾವುದೇ ಸರ್ಕಾರಕ್ಕೆ, ಸರ್ಕಾರವನ್ನು ನಡೆಸುವ ಪಕ್ಷಕ್ಕೆ ಅವುಗಳದೇ ಆದಂತಹ ಚೌಕಟ್ಟು ಇರುತ್ತದೆ. ಅದನ್ನು ಮೀರಿ ಅವರು ಒಮ್ಮೊಮ್ಮೆ ಕನ್ನಡದ ಕೆಲಸ ಮಾಡಲು ಸಾಧ್ಯವಾಗದೆ ಇರಬಹುದು. ಇಂಥ ಸಂದರ್ಭದಲ್ಲಿ ಸರ್ಕಾರದಿಂದ ಆಗದ ಕೆಲಸಗಳನ್ನು ಹೋರಾಟಗಾರರೇ ಮಾಡಬೇಕಾಗುತ್ತದೆ.
ಆದರೆ ನಮ್ಮ ಹಾದಿಯಲ್ಲಿ ಮುಂದೆ ಇವರು ಅಡ್ಡಿಯಾಗಬಹುದು ಅನ್ನೋ ಕಾರಣಕ್ಕೆ ಹೋರಾಟದ ಶಕ್ತಿಯನ್ನೇ ಕುಂದಿಸುವಂತಹ ಕೆಲಸ ಮಾಡ್ತಾರಲ್ಲ, ಅದನ್ನು ಸಹಿಸಿಕೊಳ್ಳೋಕೆ ಆಗಲ್ಲ. ಹೋರಾಟಗಾರರನ್ನು ಹುಡುಕಿ ಕೇಸ್ ಹಾಕ್ತಿದ್ದಾರೆ. ಕನ್ನಡ ಚಳವಳಿಗಾರರನ್ನು ರೌಡಿ ಪಟ್ಟಿಗೆ ಸೇರಿಸುತ್ತಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆಯ ಅನೇಕ ಮುಂಚೂಣಿಯ ನಾಯಕರನ್ನು ರೌಡಿ ಲಿಸ್ಟ್ ಮಾಡಿ ಕೂರಿಸಿದ್ದಾರೆ. ಇವರ‍್ಯಾರು ಯಾರಿಗೂ ಅನ್ಯಾಯ ಮಾಡಿದವರಲ್ಲ, ದ್ರೋಹ ಮಾಡಿದವರಲ್ಲ, ಮಾಡಬಾರದ ಕೆಲಸ ಮಾಡಿದವರಲ್ಲ. ಮಾಡಿದ್ದೆಲ್ಲ ಕನ್ನಡದ ಕೆಲಸ; ಪ್ರತಿಫಲ ರೌಡಿ ಪಟ್ಟಿ.
ನಾನು ನನ್ನ ಕಾರ್ಯಕರ್ತರಿಗೆ ಯಾವಾಗಲೂ ಹೇಳುತ್ತೇನೆ. ನಾನು ಒಬ್ಬ ಪೊಲೀಸ್ ಇನ್ಸ್‌ಪೆಕ್ಟರ್ ಹತ್ತಿರ, ಸಬ್ ಇನ್ಸ್‌ಪೆಕ್ಟರ್ ಹತ್ತಿರ ಮಾತನಾಡೋದು ಯಾವಾಗ ಎಂದರೆ ಕನ್ನಡದ ಕೆಲಸ ಇದ್ದಾಗ ಮಾತ್ರ. ಬೇರೆ ಕೆಲಸವಿದ್ದರೆ ನನ್ನ ಕಾರ್ಯಕರ್ತರಿಗಾಗಿ ಪೊಲೀಸ್ ಅಧಿಕಾರಿಗಳೊಂದಿಗೆ ನಾನು ಮಾತನಾಡುವುದಿಲ್ಲ. ಕನ್ನಡದ ಕೆಲಸಕ್ಕಾಗಿ ನನ್ನ ಕಾರ್ಯಕರ್ತರು ಪೊಲೀಸ್ ಠಾಣೆಗೆ ಹೋಗಿದ್ದರೆ, ಜೈಲಿಗೆ ಹೋಗಿದ್ದರೆ ಮಾತ್ರ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ.
ಆದರೆ ಇವತ್ತೂ ಏನಾಗಿದೆ ನೋಡಿ. ಒಬ್ಬೊಬ್ಬರ ಮೇಲೆ ೩೦-೪೦ ಮೊಕದ್ದಮೆಗಳಿವೆ. ಮನೆಯಲ್ಲಿ ಕುಳಿತಿದ್ದ ಕಾರ್ಯಕರ್ತರನ್ನು ಕರೆದುಕೊಂಡು ಹೋಗಿ ನೀವು ಡಕಾಯಿತಿ ಕೇಸ್ ಹಾಕ್ತಿರಾ. ಯಾವುದ್ಯಾವುದೋ ಸೆಕ್ಷನ್ ಹಾಕಿ ನಮ್ಮ ಕಾರ್ಯಕರ್ತರನ್ನು ಬಂಧಿಸುತ್ತೀರಾ. ಹೀಗಾದರೆ ನಾಳೆ ಕನ್ನಡದ ವಿಚಾರದಲ್ಲಿ ಬೀದಿಗೆ ಇಳಿಯಲು ಯಾರು ಬರುತ್ತಾರೆ? ಮೊನ್ನೆ ‘ವಿಜಯ ಕರ್ನಾಟಕ’ದಲ್ಲಿ ಈ ಬಗ್ಗೆ ಸಂಪೂರ್ಣ ವರದಿ ಮಾಡಿದ್ದರು. ಆದರೂ ಸರ್ಕಾರದ ಕಣ್ಣು ತೆರೆಯುತ್ತಿಲ್ಲ.
ಅಲ್ರೀ, ಗಡಿರೇಖೆಯನ್ನೇ ಬದಲಾಯಿಸಿ ನೂರಾರು ಕೋಟಿ ರೂ. ಗಣಿ ಸಂಪತ್ತನ್ನು ಲೂಟಿ ಮಾಡಿದವರ ಮೇಲೆ ಇದ್ದ ಕೇಸ್ ವಾಪಸ್ ಪಡೆದಿರಿ. ಮಸೀದಿ, ಚರ್ಚ್‌ಗಳ ಮೇಲೆ ದಾಳಿ ಮಾಡಿದ ದುಷ್ಕರ್ಮಿಗಳ ಮೇಲೆ ಇದ್ದ ಕೇಸುಗಳನ್ನು ವಾಪಾಸು ತಗೊಂಡ್ರಿ. ಕನ್ನಡಕ್ಕಾಗಿ ಹೋರಾಟ ಮಾಡಿದವರ ಮೇಲೆ ಇದ್ದ ಕೇಸ್ ಯಾಕೆ ವಾಪಾಸ್ ತೆಗೆದುಕೊಳ್ಳಲಿಲ್ಲ?
ಇತ್ತೀಚೆಗೆ ಬೆಳಗಾವಿ ಮಹಾಪೌರರ ಆಯ್ಕೆ ಸಂದರ್ಭದಲ್ಲಿ ಕನ್ನಡ ಸದಸ್ಯರಿಗೆ ಎಂಇಎಸ್‌ನವರು ಚಪ್ಪಲಿ ತೋರಿಸಿದ್ರು, ಬಳೆ ತೋರಿಸಿದ್ರು. ಅದನ್ನು ನೋಡಿದ ನಿಜವಾದ ಕನ್ನಡಿಗನಿಗೆ ಏನನಿಸುತ್ತದೆ ಹೇಳಿ. ಬೆಂಗಳೂರಿಗೂ ಒಂದು ಎಂಇಎಸ್ ನಿಯೋಗ ಬಂದಿತ್ತು; ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಿಕ್ಕೆ. ಭೇಟಿ ಸಾಧ್ಯವಾಗಲಿಲ್ಲ. ನಂತರ ಆ ನಿಯೋಗ ರಾಜ್ಯದ ಕಾನೂನು ಸಚಿವರ ಮನೆಯಲ್ಲಿ ಬೀಡು ಬಿಟ್ಟಿತ್ತು. ಅಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ ನಡೆಸಿದರು. ಸಾಂಕೇತಿಕವಾಗಿ ನಡೆದ ಆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತರನ್ನು ಬಂಧಿಸಿ ಕರೆದೊಯ್ದರು. ಕ್ರಿಮಿನಲ್ ಮೊಕದ್ದಮೆಗಳನ್ನು ಹಾಕಿದರು. ಅಷ್ಟೇ ಆದರೂ ಪರವಾಗಿಲ್ಲ. ಒಬ್ಬೊಬ್ಬರೂ ೪-೫ ಸಾವಿರ ರೂಪಾಯಿ ಹಣವನ್ನು ಕಟ್ಟಿ ಅವತ್ತು ಆಚೆ ಬರಬೇಕಾಯಿತು. ನಾಡಿಗಾಗಿ, ನುಡಿಗಾಗಿ ಹೋರಾಡಿದ್ದಕ್ಕಾಗಿ ಈ ಸತ್ಕಾರ ನಮಗೆ.
ತಿರುವಳ್ಳುವರ್ ಪ್ರತಿಮೆ ಅನಾವರಣದ ಸಂದರ್ಭದಲ್ಲೂ ಹೀಗೆಯೇ ಆಯಿತು. ಇನ್ನೊಮ್ಮೆ ಹೇಳ್ತಿದ್ದೇನೆ: ನಾವ್ಯಾರು ತಿರುವಳ್ಳುವರ್ ಪ್ರತಿಮೆ ಅನಾವರಣಕ್ಕೆ ವಿರೋಧ ಮಾಡಿರಲಿಲ್ಲ. ಪ್ರತಿಮೆ ಅನಾವರಣ ಷರತ್ತುಬದ್ಧವಾಗಿ ನಡೆಯಬೇಕು ಎಂಬುದಷ್ಟೆ ನಮ್ಮ ಬೇಡಿಕೆಯಾಗಿತ್ತು. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಲಭಿಸಲು ಅಡ್ಡಿಯಾಗಿದ್ದ ಪ್ರಕರಣವನ್ನು ಮದ್ರಾಸ್ ಹೈಕೋರ್ಟ್‌ನಿಂದ ಹಿಂದಕ್ಕೆ ಪಡೆಯುವಂತೆ ಕ್ರಮ ಕೈಗೊಳ್ಳಬೇಕು ಹಾಗೂ ಹೊಗೇನಕಲ್‌ನಲ್ಲಿ ಜಂಟಿ ಸಮೀಕ್ಷೆ ನಡೆಯುವವರೆಗೆ ಯಾವುದೇ ಕಾರಣಕ್ಕೂ ಯೋಜನೆ ಆರಂಭಿಸಬಾರದು ಎಂಬುದು ನಮ್ಮ ಬೇಡಿಕೆಯಾಗಿತ್ತು. ಆದರೆ ನಮ್ಮನ್ನು ಎಲ್ಲರೂ ಅಪಾರ್ಥಮಾಡಿಕೊಂಡರು.
ತಿರುವಳ್ಳುವರ್ ಪ್ರತಿಮೆ ಅನಾವರಣದ ಸಂದರ್ಭದಲ್ಲಿ ರಾತ್ರೋರಾತ್ರಿ ೧೮೦ ಕಾರ್ಯಕರ್ತರನ್ನು ಬಂಧಿಸಿದ್ದರು. ಬೆಂಗಳೂರಿನ ಒಟ್ಟು ೧೧ ಪೊಲೀಸ್ ಠಾಣೆಗಳಲ್ಲಿ ನನ್ನ ಮೇಲೆ ಕೇಸುಗಳನ್ನು ಹಾಕಲಾಯಿತು. ತಮಾಷೆ ನೋಡಿ, ಬೆಂಗಳೂರಿನಲ್ಲಿರುವ ನನ್ನ ಮೇಲೆ ಬೆಳಗಾವಿಯಲ್ಲಿ ನಡೆದ ಪ್ರತಿಭಟನೆಯಲ್ಲೂ ಎ-೧ ಮಾಡಿ ಪ್ರಕರಣ ಹೂಡಲಾಯಿತು. ಬೆಂಗಳೂರಿನಲ್ಲೇ ಇರುವ ನಾರಾಯಣಗೌಡರ ಮೇಲೆ ರಾಯಚೂರಿನಲ್ಲಿ ಎ-೧ ಮಾಡಲಾಯಿತು.
ಅಲ್ರೀ ಇವರ ತಲೆಯಲ್ಲಿ ಏನಿದೆ? ಬೆಂಗಳೂರಿನಲ್ಲೋ, ಮೈಸೂರಿನಲ್ಲೋ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮಾಡಿದರೆ ಸೋನಿಯಾಗಾಂಧಿ ಮೇಲೆ ಕೇಸ್ ಹಾಕ್ತಾರಾ? ಮಂಡ್ಯದಲ್ಲಿ, ತುಮಕೂರಿನಲ್ಲಿ ಜೆಡಿಎಸ್ ಕಾರ್ಯಕರ್ತರು ಹೋರಾಟ ಮಾಡಿದರೆ ದೇವೇಗೌಡರ ಮೇಲೆ ಕೇಸ್ ಹಾಕ್ತಾರಾ, ಎ-೧ ಮಾಡ್ತಾರಾ? ಮಂಗಳೂರಿನಲ್ಲಿ ಬಿಜೆಪಿಯವರು ಪ್ರತಿಭಟನೆ ಮಾಡಿದರೆ, ಅಡ್ವಾಣಿ-ವಾಜಪೇಯಿ ಮೇಲೆ ಕೇಸು ಹಾಕ್ತಾರಾ? ಇವತ್ತು ೪೮ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಾ ಇದ್ದೇನೆ. ನಾವು ಯಾರ ಮೇಲೂ ದಾಳಿ ಮಾಡಿದವರಲ್ಲ, ದೌರ್ಜನ್ಯ ಮಾಡಿದವರಲ್ಲ, ಇನ್ನೇನೋ ಮಾಡಿದವರಲ್ಲ. ಕನ್ನಡಕ್ಕಾಗಿ ಹೋರಾಟ ಮಾಡಿದ್ದಕ್ಕೆ ೧೩೩೦ ಕೇಸ್ ಇದೆ ರಕ್ಷಣಾ ವೇದಿಕೆ ಮೇಲೆ. ಬೆಳಿಗ್ಗೆ ಆದರೆ ಹೋಗಿ ಕೋರ್ಟಿನಲ್ಲಿ ನಿಂತುಕೊಳ್ಳಬೇಕು.
ನ್ಯಾಯಾಧೀಶರಿಗೆ ಇರುವ ಮಾನವೀಯತೆ, ಕನ್ನಡ ಕಾಳಜಿ ನಮ್ಮನಾಳುವ ನಾಯಕರಿಗೆ ಇಲ್ಲ. ಕೆಲ ನ್ಯಾಯಾಧೀಶರು ಕೇಳ್ತಾರೆ: ‘ಏನ್ರೀ ನಾರಾಯಣಗೌಡ್ರೇ, ದಿನಾ ಬಂದು ಕೋರ್ಟ್‌ನಲ್ಲಿ ನಿಂತುಕೊಳ್ಳುತ್ತೀರಲ್ಲ. ನಿಮಗೆ ಅಂತ ಒಂದು ಬದುಕಿಲ್ಲವೇ. ಯಾಕಿಷ್ಟು ಕೇಸ್ ಹಾಕಿದ್ದಾರೆ?
ಒಬ್ಬ ನ್ಯಾಯಾಧೀಶರ ಟೇಬಲ್ ಮೇಲೆ ೨೦-೩೦ ಕೇಸ್ ಇರುತ್ತೆ. ಒಂದು ಕೋರ್ಟಿನಿಂದ ಇನ್ನೊಂದು ಕೋರ್ಟಿಗೆ ಓಡಾಡಬೇಕು. ಒಂದು ಕೋರ್ಟಿನಲ್ಲಿ ಕೇಸ್ ನಡೆಯುವಾಗ ಇನ್ನೊಂದು ಕೋರ್ಟಿಗೆ ಹೋಗದೆ ಇದ್ದರೆ ಬೇಲ್ ಕ್ಯಾನ್ಸಲ್ ಆಗಿರುತ್ತೆ. ಅಥವಾ ವಾರೆಂಟ್ ಆಗಿರುತ್ತೆ. ಪೊಲೀಸ್‌ನವರು ಮನೆಗೆ ಹುಡುಕಿಕೊಂಡು ಬರ‍್ತಾರೆ.
ಒಂದು ದಿನ ಒಬ್ಬ ಗೌರವಾನ್ವಿತ ನ್ಯಾಯಾಧೀಶರು ಇನ್ಸ್‌ಪೆಕ್ಟರ್ ಒಬ್ಬರನ್ನು ಗದರಿದರು: ದಿನಾ ಬೆಳಗಾದರೆ ಇವರು ಕೋರ್ಟಿಗೆ ಬರ‍್ತಾರೆ. ತಲೆ ಮರೆಸಿಕೊಂಡು ಹೋಗಿದ್ದಾರೆ ಅಂತ ಸುಳ್ಳು ಹೇಳ್ತಿರಲ್ರಿ. ನಿಮ್ಮಂಥ ಇನ್ಸ್‌ಪೆಕ್ಟರ್‌ಗಳನ್ನು ಹುಚ್ಚಾಸ್ಪತ್ರೆಗೆ ಕಳುಹಿಸಬೇಕು.
ಒಂದು ತಮಾಷೆ ವಿಷಯ ಹೇಳ್ತಿನಿ. ಒಬ್ಬ ಇನ್ಸ್‌ಪೆಕ್ಟರ್ ನನ್ನ ಮೇಲೆ ಐಪಿಸಿ ೫೩೦ನೇ ಕಲಂ ಅನ್ವಯ ಕೇಸು ಹಾಕಿದ್ದ. ಐಪಿಸಿಯಲ್ಲಿ ೫೩೦ನೇಯ ಸೆಕ್ಷನ್ನೇ ಇಲ್ಲ! ಯಾಕೆ ಅವನು ಇಲ್ಲದ ಸೆಕ್ಷನ್ ಹಾಕಿದ್ದನೋ ಏನೋ? ಪಾಪ, ಅವನಿಗೆ ಯಾವ ಒತ್ತಡವಿತ್ತೋ ಏನೋ?
ಮೋಟಮ್ಮನವರು ಮಾತನಾಡುತ್ತ ಒಂದು ಮಾತು ಹೇಳಿದರು. ‘ಕನ್ನಡಕ್ಕೆ ದ್ರೋಹ ಮಾಡಿದರೆ ಹೆತ್ತ ತಾಯಿಗೆ ದ್ರೋಹ ಮಾಡಿದ ಹಾಗೆ’. ಅದ್ಭುತವಾದ ಮಾತು. ಈ ನೆಲದಲ್ಲಿ ಬದುಕುವಂತಹ ಯಾರೇ ಆಗಲಿ ಇದೊಂದು ಮಾತನ್ನು ಅರ್ಥ ಮಾಡಿಕೊಂಡರೆ ಸಾಕು ಎಂದು ನಾನು ಅಂದುಕೊಳ್ಳುತ್ತೇನೆ. ಈ ನಾಡಿನ ಋಣವನ್ನು ತೀರಿಸದೆ, ಹೆತ್ತ ತಾಯಿಯ ಸೇವೆಯನ್ನು ಮಾಡದೆ ಇನ್ಯಾರದೋ ಸೇವೆಗೆ ಹೊರಡುವುದರಲ್ಲಿ ಯಾವ ಅರ್ಥವೂ ಇಲ್ಲ. ನಾಡಭಕ್ತ ಆಗದವನು ದೇಶಭಕ್ತ ಆಗುವುದು ಹೇಗೆ ಸಾಧ್ಯ? ಮೊದಲು ನನ್ನ ಮನೆ ಶುದ್ಧವಾಗಬೇಕು. ನಂತರ ಸುತ್ತಲ ಪರಿಸರ, ಊರು, ನಗರ, ರಾಜ್ಯ ಆನಂತರ ದೇಶ. ಇತಿಹಾಸವನ್ನು ಗಮನಿಸಿದರೆ ಕನ್ನಡತನದ, ಕನ್ನಡರಾಜ್ಯದ ರಕ್ಷಣೆಗಾಗಿ ಸಾಕಷ್ಟು ಹೋರಾಟಗಳು ನಡೆದುಹೋಗಿವೆ. ಹಿರಿಯರು ಹೇಳುತ್ತಾರೆ: ‘ಯಾರಿಗೆ ಇತಿಹಾಸ ಗೊತ್ತಿರುತ್ತದೋ ಅವರಷ್ಟೆ ಇತಿಹಾಸ ನಿರ್ಮಾಣ ಮಾಡಲು ಸಾಧ್ಯ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ನಾಡಿನ ಇತಿಹಾಸವನ್ನೇ ಪ್ರೇರಣೆಯಾಗಿಟ್ಟುಕೊಂಡು ಕೆಲಸ ಮಾಡುತ್ತಿದೆ.
ಸಭೆಯಲ್ಲಿ ನಮ್ಮೆಲ್ಲರಿಗೂ ಪ್ರಿಯವಾದ ಅಧಿಕಾರಿಗಳಾದ, ನಿಜವಾದ ಕನ್ನಡದ ಕಳಕಳಿ ಇಟ್ಟುಕೊಂಡಿರುವ ಅಧಿಕಾರಿಗಳಾದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಮನು ಬಳಿಗಾರ್ ಇದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ದಲ್ಲಾಳಿಗಳಿಂದ ಮುಕ್ತಗೊಳಿಸಿದವರು ಅವರು. ರವೀಂದ್ರ ಕಲಾಕ್ಷೇತ್ರದ ಬಳಿ ಒಂದು ದೊಡ್ಡ ತಂಡವೇ ಇದೆ. ಅವರೇ ಕಲಾಕ್ಷೇತ್ರವನ್ನು ತಿಂಗಳುಗಟ್ಟಲೆ ಬುಕ್ ಮಾಡಿಕೊಂಡು ಬೇರೆಯವರಿಗೆ ಮಾರುವ ಕೆಲಸ ಮಾಡುತ್ತಾರೆ. ಇದನ್ನೆಲ್ಲಾ ತಪ್ಪಿಸಿದವರು ಬಳಿಗಾರ್ ಅವರು.
ಇವತ್ತು ಕನ್ನಡದ ಕಲಾವಿದರಿಗೆ ನಿಜವಾಗಿ ಸಲ್ಲಬೇಕಾದ ಪ್ರಶಸ್ತಿ, ಪುರಸ್ಕಾರ, ಅನುದಾನ ಸಲ್ಲುತ್ತಿಲ್ಲ. ಅಪಾತ್ರರ ಪಾಲಾಗುತ್ತಿದೆ. ಗುರುರಾಜ ಹೊಸಕೋಟೆ ಇಲ್ಲಿದ್ದಾರೆ; ಯಾರ‍್ಯಾರಿಗೋ ರಾಜ್ಯೋತ್ಸವ ಪ್ರಶಸ್ತಿ ಕೊಡುತ್ತಾರೆ. ಸುಮಾರು ಐದು ಸಾವಿರ ಹಾಡು ಬರೆದು ಹಾಡಿರುವ ಗುರುರಾಜ್ ಹೊಸಕೋಟೆ ಅವರಿಗೆ ಇದುವರೆಗೂ ರಾಜ್ಯೋತ್ಸವ ಪ್ರಶಸ್ತಿ ದೊರೆತಿಲ್ಲ. ಉದಾಹರಣೆಗೆ ಈ ಮಾತು ಹೇಳಿದೆ. ಇಂಥ ಲಾಬಿ ಎಲ್ಲೆಡೆಯೂ ನಡೆಯುತ್ತಿದೆ.
ಮನು ಬಳಿಗಾರ್ ಇಲಾಖೆಗೆ ಬಂದ ನಂತರ ದಲ್ಲಾಳಿಗಳನ್ನು ದೂರವಿಟ್ಟರು. ಒಬ್ಬ ಕಲಾವಿದ ಈಗ ನೇರವಾಗಿ ಬಳಿಗಾರ್ ಅವರನ್ನು ಮಾತನಾಡಬಹುದು. ಒಂದು ಉದಾಹರಣೆ ಹೇಳ್ತಿನಿ. ಈಗಷ್ಟೆ ನಮ್ಮ ಕೋಲಾರದ ಗೆಳೆಯ, ಕೋಲಾರ ರಕ್ಷಣಾ ವೇದಿಕೆ ಸಾಂಸ್ಕೃತಿಕ ಘಟಕದ ಅಧ್ಯಕ್ಷ ಜನಘಟ್ಟ ಕೃಷ್ಣಮೂರ್ತಿ ಹಾಡ್ತಾ ಇದ್ದ. ಸ್ವಲ್ಪ ಅನಾರೋಗ್ಯದಿಂದ ಅವನು ಸಣ್ಣಗಾಗಿದ್ದಾನೆ. ಇಲ್ಲೇ ಸಮಾರಂಭದಲ್ಲೇ ಆತನನ್ನು ಕರೆದು ಸರ್ಕಾರದಿಂದ ಹದಿನೈದು ಸಾವಿರ ರೂ. ಮಂಜೂರು ಮಾಡಿದರು. ಯಾಕೆ ಈ ಮಾತು ಹೇಳ್ತೀನಿ ಅಂದ್ರೆ ನಿಜವಾದ ಕಳಕಳಿ ಇದ್ದಾಗ ಇಂಥವೆಲ್ಲ ಆಗೋದಕ್ಕೆ ಸಾಧ್ಯ. ಇವತ್ತು ಮನುಬಳಿಗಾರ್ ಬಂದಿರೋದ್ರಿಂದ ಕರ್ನಾಟಕ ಸರ್ಕಾರವೇ ಕಾರ್ಯಕ್ರಮಕ್ಕೆ ಬಂದಿದೆ ಅಂತ ನಾನಾದರೂ ಭಾವಿಸಿದ್ದೇನೆ. ಏನಾದರೂ, ಯಾರಾದರೂ ಕಾರ್ಯಕ್ರಮ ಮಾಡಬೇಕು ಅಂದ್ರೆ ಸರ್ಕಾರದ ಮುಂದೆ ಹೋಗಿ ಕೈ ಕಟ್ಟಿಕೊಳ್ಳಬೇಕಾದ ದಿವಸ ಇದು. ಇಂಥ ಸನ್ನಿವೇಶದಲ್ಲೂ ತಾವೇ ಕನ್ನಡದ ಡಿಂಡಿಮವನ್ನು ಬಾರಿಸುತ್ತಿರುವ ಮನು ಬಳಿಗಾರ್ ಅವರನ್ನು ನಾನು ರಕ್ಷಣಾ ವೇದಿಕೆ ಪರವಾಗಿ ಅಭಿನಂದಿಸುತ್ತೇನೆ.
ಹಾಗೆಯೇ ಇವತ್ತಿನ ಸಮಾರಂಭದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾಗಿರುವ ಪರಮೇಶ್ವರ್ ಅವರು ಮಾತನಾಡಿದರು. ಅವರು, ಕರ್ನಾಟಕ ರಕ್ಷಣಾ ವೇದಿಕೆಯ ಹೋರಾಟದ ದಾಖಲೆಗಳನ್ನೇ ಜೊತೆಯಲ್ಲಿಟ್ಟುಕೊಂಡು ಬಂದಿದ್ದರು. ಕರವೇ ನಡೆಸಿದ ಹೋರಾಟಗಳ ಬಗ್ಗೆ ಅವರು ಮಾತನಾಡುವಾಗ ನಿಜಕ್ಕೂ ಖುಷಿಯಾಯಿತು. ಮಾಧ್ಯಮ ಕ್ಷೇತ್ರದಿಂದಲೇ ಬಂದ ಅವರು ಮಾಧ್ಯಮಗಳ ಬಗ್ಗೆ ಮಾತನಾಡಿದರು.
ಬಂಧುಗಳೇ, ಡಾ.ಯು.ಆರ್.ಅನಂತಮೂರ್ತಿಯವರು ಮಾತನಾಡುವಾಗ ಈ ನಾಡಿನ ಗಣಿ ಸಂಪತ್ತನ್ನು ಉಳಿಸಿಕೊಳ್ಳುವ ವಿಷಯ ಪ್ರಸ್ತಾಪಿಸಿದರು. ನಿಜಕ್ಕೂ ಇವತ್ತು ಗಣಿಗಾರಿಕೆ ವಿಷಯ ಪ್ರಸ್ತಾಪವಾದರೆ, ಗಣಿ ನಡೆಸುವವರ ವಿಚಾರಗಳನ್ನು ಎತ್ತಿದ ತಕ್ಷಣ ನನ್ನ ರಕ್ತ ಕುದಿಯುತ್ತದೆ. ಒಂದೇ ಒಂದು ಕುಟುಂಬ ಇಡೀ ನಾಡಿನ ಸಂಪತ್ತು ಲೂಟಿ ಮಾಡ್ತಾ ಇದೆಯಲ್ಲ, ಇದನ್ನು ನಾವು ಸಹಿಸಿಕೊಂಡು ಕುಳಿತಿದ್ದೇವಲ್ಲ. ಇದಕ್ಕೆಲ್ಲಾ ಯಾವಾಗ ಅಂತ್ಯ ಎಂಬ ಪ್ರಶ್ನೆ, ನೋವು ನಮ್ಮನ್ನು ಕಾಡ್ತಾ ಇದೆ. ಮುಂದೊಂದು ದಿನ ನಮ್ಮ ಮುಂದಿನ ಪೀಳಿಗೆಯ ನಮ್ಮ ಮಕ್ಕಳಿಗೆ ಬಳ್ಳಾರಿಯಲ್ಲಿ ಹಿಂದೆಲ್ಲಾ ಇಂಥ ಗಣಿ ಸಂಪತ್ತು ಇತ್ತು ಅಂತ ನಾವು ಚಿತ್ರದಲ್ಲಿ ಬರೆದು ತೋರಿಸಬೇಕಾಗುತ್ತದೆ. ವಿಜಯನಗರ ಸಾಮ್ರಾಜ್ಯದಲ್ಲಿ ಮುತ್ತುರತ್ನಗಳನ್ನು ಬೀದಿಯಲ್ಲಿ ರಾಶಿ ಹಾಕಿ ಅಳೆಯುತ್ತಿದ್ದರು, ಅಂಥದೊಂದು ಭವ್ಯವಾದ ಶ್ರೀಮಂತವಾದ ಸಾಮ್ರಾಜ್ಯ ನಮ್ಮದಾಗಿತ್ತು ಅಂತ ನಾವು ಇವತ್ತು ಭಾಷಣಗಳಲ್ಲಿ ಹೇಳ್ತಾ ಇದ್ದೀವಲ್ಲ, ಹಾಗೆಯೇ ಮುಂದೊಂದು ದಿನ ರಾಜ್ಯದ ಭೌಗೋಳಿಕ ಸಂಪತ್ತು ಸಹ ನಮಗೆ ಬರಿಯ ನೆನಪಿನ ವಿಷಯವಾಗುತ್ತದೆ. ಯಾರೋ ಲಾಡ್, ಯಾರೋ ಸಿಂಗ್, ಮತ್ಯಾರೋ ರೆಡ್ಡಿ ಎಲ್ಲರೂ ಸೇರಿ ಲೂಟಿ ಹೊಡೆಯುತ್ತಿದ್ದರೂ ಇವತ್ತು ಯಾರೂ ಏನು ಮಾಡಲೂ ಸಾಧ್ಯವಾಗುತ್ತಿಲ್ಲ.
ಕನ್ನಡದ ಮಕ್ಕಳ ಸ್ಥಿತಿ ಏನಾಗಿ ಹೋಗಿದೆ. ಬೆಂಗಳೂರಿನಲ್ಲಿ ಏನಾಗ್ತಾ ಇದೆ. ಇವತ್ತು ಬೆಂಗಳೂರು ಮಹಾನಗರ ಪಾಲಿಕೆಯ ಅನೇಕ ಸದಸ್ಯರು ಈ ಕಾರ್ಯಕ್ರಮದಲ್ಲಿ ಇದ್ದಾರೆ. ಅವರಿಗೆಲ್ಲಾ ಗೊತ್ತಿದೆ. ಸಣ್ಣ ಗುತ್ತಿಗೆಯೂ ಸಹ ಕನ್ನಡಿಗರಿಗೆ ಸಿಗೋದಿಲ್ಲ. ಅದ್ಯಾವುದೋ ನಿರ್ಮಲ ಅನ್ನೋ ಬಾತ್‌ರೂಂ ನೋಡಿಕೊಳ್ಳುವುದಕ್ಕೂ ರಾಜಸ್ಥಾನಿ ಮಾರವಾಡಿಯೇ ಗುತ್ತಿಗೆ ಪಡೆಯುತ್ತಾನೆಂದರೆ ಯಾವ ಪರಿಸ್ಥಿತಿ ಇದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕಾಗಿದೆ.
ನನ್ನ ಕಚೇರಿಗೆ ಬರುವ ಪತ್ರಗಳನ್ನು, ಜನರನ್ನು ನೋಡಬೇಕು. ’ನನ್ನ ಪಕ್ಕದ ಮನೆಯಲ್ಲಿ ಯಾರೋ ತಮಿಳರಿದ್ದಾರೆ. ನನ್ನ ಮನೆ ಖಾಲಿ ಮಾಡಿಸಲು ಉದ್ದೇಶಪೂರ್ವಕವಾಗಿ ಟಿ.ವಿ.ವಾಲ್ಯೂಮ್ ಜಾಸ್ತಿ ಇಡ್ತಾರೆ. ನನಗೆ ಸಹಿಸಿಕೊಳ್ಳೋಕೆ ಆಗಲ್ಲ. ದಯಮಾಡಿ ಪಕ್ಕದ ಮನೆಯವರ ಟಿ.ವಿ.ವಾಲ್ಯೂಮ್ ಕಡಿಮೆ ಮಾಡಿಸಿ’ ಅಂತ ಕೇಳಿಕೊಂಡು ಬರುತ್ತಾರೆ. ಇನ್ನೊಬ್ಬರು ಬರ‍್ತಾರೆ ’ನಾನು ಮಾರವಾಡಿಗಳಿಗೆ ಮನೆ ಬಾಡಿಗೆಗೆ ಕೊಟ್ಟಿದ್ದೆ. ಈಗ ನೋಡಿದರೆ ನೀನೇ ಮನೆ ಖಾಲಿ ಮಾಡಿಕೊಂಡು ಹೋಗು ಎಂದು ಧಮಕಿ ಹಾಕುತ್ತಾರೆ. ನನಗೇ ಮಾರಿಬಿಡು ಅಂತಾರೆ. ನನಗೆ ಬದುಕಲಿಕ್ಕೆ ಇರೋದು ಒಂದು ಮನೆ. ಅದನ್ನು ಮಾರಿ ಎಲ್ಲಿಗೆ ಹೋಗಲಿ. ದಯವಿಟ್ಟು ಮಾರವಾಡಿ ಇಂದ ಮನೆ ಖಾಲಿ ಮಾಡಿಸಿಕೊಡಿ’ ಎನ್ನುತ್ತಾರೆ.
ರಾಜ್ಯದ ಗಡಿ-ನೆಲ-ಜಲದ ಸಮಸ್ಯೆಗಳು ಒಂದು ಕಡೆಯಾದರೆ, ಕನ್ನಡದ ಜನರು ಅನುಭವಿಸುತ್ತಿರುವ ವೈಯಕ್ತಿಕ ಸಮಸ್ಯೆಗಳು ಮತ್ತೊಂದು ಕಡೆ. ದಿನನಿತ್ಯ ನಮ್ಮ ಕಚೇರಿಗೆ ಬರುವ ಜನರನ್ನು ನೋಡಿದರೆ, ಸಂಕಟವಾಗುತ್ತದೆ. ಕನ್ನಡಿಗನೇ ಅಸಹಾಯಕನಾಗಿ ಕರ್ನಾಟಕ ರಕ್ಷಣಾ ವೇದಿಕೆ ಕಚೇರಿಗೆ ಬಂದು ತನ್ನ ನೋವುಗಳನ್ನು ಹೇಳಿಕೊಳ್ಳುವಂಥ ಪರಿಸ್ಥಿತಿಯು ನಿರ್ಮಾಣವಾಗಿದೆಯಲ್ಲ. ಕನ್ನಡಿಗನೇ ಕನ್ನಡ ನಾಡಿನಲ್ಲಿ ಅಸಹಾಯಕನಾಗುವ ಪರಿಸ್ಥಿತಿ ಉದ್ಭವವಾಗಿದೆಯಲ್ಲ, ಇದಕ್ಕೆ ಯಾರು ಹೊಣೆ?
ಬೆಂಗಳೂರಿನಲ್ಲಿ ನಾವು ನೋಡಿದ ಹಾಗೆ ಆಚಾರರು ಇದ್ದರು. ಅವರೇ ಚಿನ್ನ, ಬೆಳ್ಳಿ ವ್ಯಾಪಾರ ಮಾಡುತ್ತಿದ್ದರು. ಈಗ ಬಂಗಾಲಿಗಳು ಬಂದು ಕುಳಿತಿದ್ದಾರೆ. ದೇವಾಂಗ ಸಮುದಾಯದವರು ಕೈಮಗ್ಗ, ನೇಯ್ಗೆ, ರೇಷ್ಮೆ ಉದ್ಯಮ ಮಾಡುತ್ತಿದ್ದರು. ಇವತ್ತು ಅದು ಕೂಡ ಅವರ ಕೈಯಲಿಲ್ಲ. ಮಾರವಾಡಿಗಳ ಕೈ ಸೇರಿಹೋಗಿದೆ. ಐಷಾರಾಮಿ ಪಾರ್ಲರ್‌ಗಳ ಹೆಸರಿನಲ್ಲಿ ಕ್ಷೌರದ ಅಂಗಡಿಗಳನ್ನು ಮಾರವಾಡಿಗಳೇ ತೆರೆದು ಸ್ಥಳೀಯ ಸವಿತಾ ಸಮಾಜದವರು ಅತಂತ್ರರಾಗಿದ್ದಾರೆ. ಕೆಂಪೇಗೌಡರ ಆಳ್ವಿಕೆಯಲ್ಲಿ ಕುಲಕಸುಬುಗಳನ್ನು ನೆಚ್ಚಿಕೊಂಡ ಎಲ್ಲ ಸಮುದಾಯಗಳಿಗೆ ಮಹತ್ವ ನೀಡಲಾಗಿತ್ತು. ಅವರ ಏಳಿಗೆಗಾಗಿಯೇ ಬೆಂಗಳೂರಿನಲ್ಲಿ ೭೪ ಪೇಟೆಗಳನ್ನು ಕೆಂಪೇಗೌಡರು ಕಟ್ಟಿದ್ದರು. ಕುಂಬಾರಪೇಟೆ, ಅಕ್ಕಿಪೇಟೆ, ಸುಲ್ತಾನ್‌ಪೇಟೆ, ಅರಳೇಪೇಟೆ, ಬಳೆಪೇಟೆ, ಚಿಕ್ಕಪೇಟೆ, ದೊಡ್ಡಪೇಟೆ ಹೀಗೆ ಒಂದೊಂದು ಪೇಟೆಗಳಲ್ಲೂ ಒಂದೊಂದು ಸಮುದಾಯದವರು ತಮ್ಮ ಕುಲಕಸುಬುಗಳನ್ನು ಜೀವಂತವಾಗಿ ನಡೆಸಿಕೊಂಡು ಬದುಕು ಕಟ್ಟಿಕೊಂಡಿದ್ದರು. ಇವತ್ತು ಅದಿಲ್ಲ. ಕುಲಕಸುಬುಗಳನ್ನು ನೆಚ್ಚಿಕೊಂಡು ಬಂದ ಬೆಂಗಳೂರಿನ ಮೂಲನಿವಾಸಿ ಕನ್ನಡಿಗರು ವಲಸೆ ಹೋಗುತ್ತಿದ್ದಾರೆ. ಬೆಂಗಳೂರಿನಲ್ಲಿ ಇವತ್ತು ಮೂಲ ಬೆಂಗಳೂರಿಗರನ್ನು ನೋಡಲು ಸಾಧ್ಯವಾಗುತ್ತಿಲ್ಲ.
ಇಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯ ಹತ್ತಾರು ಸದಸ್ಯರು ಇದ್ದಾರೆ. ಚುನಾವಣೆಯ ಪೂರ್ವದಲ್ಲಿ ಎಲ್ಲಾ ಪಕ್ಷಗಳ ಮುಖಂಡರಲ್ಲಿ ನಾನು ಮನವಿ ಮಾಡಿದ್ದೆ: ’ಕನ್ನಡಿಗರಿಗೆ ಟಿಕೆಟ್ ಕೊಡಿ’ ಅಂತ. ಇವತ್ತು ಬೆಂಗಳೂರು ಮಹಾನಗರ ಪಾಲಿಕೆಗೆ ಆಯ್ಕೆಯಾಗಿ ಬಂದಿರುವವರಲ್ಲಿ ಎಷ್ಟು ಮಂದಿ ಕನ್ನಡ ಮಾತೃ ಭಾಷೆಯವರಿದ್ದಾರೆ. ಹುಡುಕಿದರೆ ನೂರು ಜನ ಸಿಗಬಹುದೇನೋ? ಕನ್ನಡೇತರ ಸದಸ್ಯರು ನಾಳೆ ಯಾವ ತೀರ್ಮಾನ ಬೇಕಾದರೂ ತೆಗೆದುಕೊಳ್ಳುತ್ತಾರೆ. ದುರಂತ ಎಂದರೆ, ಮಚ್ಚು, ದೊಣ್ಣೆಗಳನ್ನು ಇಟ್ಟುಕೊಂಡು ಯಾರು ಬೆಂಗಳೂರಿನ ಬೀದಿ ಬೀದಿಗಳಲ್ಲಿ ಗೂಂಡಾಗಿರಿ ಮಾಡುತ್ತಿದ್ದರೋ ಅವರು ಸಹ ಆಯ್ಕೆಯಾಗಿ ಬಂದಿದ್ದಾರೆ. ಇವರ ಆರ್ಭಟದಲ್ಲಿ ಸಭ್ಯರಾದ ಪಾಲಿಕೆ ಸದಸ್ಯರು ಏನು ಮಾಡಲು ಸಾಧ್ಯ?
ಮೋಟಮ್ಮನವರು ಮಾತನಾಡುತ್ತಾ ಹೇಳಿದರು: ’ನಾರಾಯಣಗೌಡರು ಚುನಾವಣೆಗೆ ನಿಂತಿದ್ರು ಅಂತ. ಗೌಡರು ನಿಂತಿರಲಿಲ್ಲ; ಕೆಲವು ಕನ್ನಡಪರ ಅಭ್ಯರ್ಥಿಗಳನ್ನು ನಿಲ್ಲಿಸಿದ್ರು ಅಷ್ಟೆ. ಮಹಾನಗರ ಪಾಲಿಕೆಯಲ್ಲಿ ಕನ್ನಡದ ಧ್ವನಿ ಇರಬೇಕು ಎನ್ನುವ ಕಾರಣಕ್ಕೆ ಕೆಲವರನ್ನು ಆಯ್ಕೆ ಮಾಡಿ ಸ್ವತಂತ್ರ ಅಭ್ಯರ್ಥಿಗಳನ್ನಾಗಿ ಕಣಕ್ಕೆ ಇಳಿಸಿದ್ವಿ. ೯ ಜನ ಹೀಗೆ ನಿಂತಿದ್ರು. ಅವರ ಪರವಾಗಿ ಪ್ರಚಾರ ಮಾಡುವಾಗ ಮೋಟಮ್ಮನವರು ನನ್ನನ್ನು ನೋಡಿ ನಾನೇ ಚುನಾವಣೆಗೆ ನಿಂತಿದ್ದೇನೆ ಅಂದುಕೊಂಡಿರಬಹುದು.
ಹಿಂದೆ ಈ ಕನ್ನಡದ ಶಾಲನ್ನು ಯಾರೋ ಒಬ್ಬ ಕನ್ನಡಿಗ ಹಾಕಿಕೊಂಡರೆ, ಇವನಿಗೆ ಮಾಡಲು ಕೆಲಸವಿಲ್ಲ ಅಂತಿದ್ರು. ಆದರೆ, ಇವತ್ತು ನೋಡಿ, ಎಲ್ಲರೂ ಕನ್ನಡ ಶಾಲು ಹಾಕುತ್ತಾರೆ. ಮೊನ್ನೆ ಯಾರೋ ದರೋಡೆ ಮಾಡಿ ಸಿಕ್ಕಿ ಬಿದ್ದಿದ್ದಾನೆ; ಅವನ ಕೊರಳಲ್ಲೂ ಕನ್ನಡದ ಶಾಲು. ಮಾಧ್ಯಮಗಳಲ್ಲಿ ರಕ್ಷಣಾ ವೇದಿಕೆ ಕಾರ್ಯಕರ್ತನಿಂದ ದರೋಡೆ ಅಂತ ಸುದ್ದಿ ಬಂತು. ನನಗೆ ರಾತ್ರಿಯೆಲ್ಲಾ ನಿದ್ದೆ ಬರಲಿಲ್ಲ. ಈ ನಾಡಿಗಾಗಿ ನುಡಿಗಾಗಿ ಎಲ್ಲ ತ್ಯಾಗಕ್ಕೂ ಸಿದ್ಧವಾದ ಕನ್ನಡದ ಶಕ್ತಿಯೊಂದು ಉದಯವಾಗಬೇಕು ಎಂಬ ಉದ್ದೇಶವಿಟ್ಟುಕೊಂಡು ಇಡೀ ರಾಜ್ಯದಲ್ಲಿ ಹಗಲು-ರಾತ್ರಿ ಹೋರಾಡಿ ಈ ಸಂಘಟನೆ ಕಟ್ಟಿದ್ದೇವೆ. ೬೦ ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಸದಸ್ಯತ್ವ ಪಡೆದಿದ್ದಾರೆ. ೨೮,೬೮೦ ಶಾಖೆಗಳು ಕೆಲಸ ಮಾಡುತ್ತಿವೆ. ಹೀಗಿರುವಾಗ ಇಂಥದೊಂದು ಸಣ್ಣ ವಿಚಾರ ಬಂದಾಗ ರಾತ್ರಿಯೆಲ್ಲಾ ನಿದ್ದೆ ಬರೋದಿಲ್ಲ.
ಒಂದು ದಿನ ನಿವೃತ್ತ ನ್ಯಾಯಧೀಶರೊಬ್ಬರು ಫೋನ್ ಮಾಡಿದ್ರು: ’ರೀ ನಾರಾಯಣಗೌಡರೇ ಟಿ.ವಿ. ನೋಡಿದ್ರೇನ್ರಿ ಎಂದರು. ಇಲ್ಲ ಸಾರ್ ಅಂದೆ. ’ನೋಡ್ರಿ ನಿಮ್ಮವರು ಆ ಹೆಣ್ಣುಮಕ್ಕಳ ಮೇಲೆ ಗಲಾಟೆ ಮಾಡಿ ಹೊಡೀತಿದ್ದಾರೆ’ ಎಂದರು. ಟಿ.ವಿ.ಹಾಕಿ ನೋಡಿದರೆ ಅವರ‍್ಯಾರೂ ನಮ್ಮವರಾಗಿರಲಿಲ್ಲ. ಆದರೆ, ಶಾಲು ಹಾಕಿಕೊಂಡಿದ್ದರು. ಮೊನ್ನೆ ಯಾರೋ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಗಲಾಟೆ ಮಾಡಿದ್ದಾರೆ. ನಾಲ್ಕು ಲಕ್ಷ ಬಿಲ್ ಆಗಿದೆ. ಕಟ್ಟೋದಿಕ್ಕೆ ಆಗಿಲ್ಲ. ಒಂದಷ್ಟು ಜನ ಶಾಲು ಹಾಕಿಕೊಂಡು ಹೋಗಿ, ನಾವು ಕರ್ನಾಟಕ ರಕ್ಷಣಾ ವೇದಿಕೆಯವರು ಅಂತ ಗಲಾಟೆ ಮಾಡಿದ್ದಾರೆ. ಕೊನೆಗೆ ಸ್ವಾಮೀಜಿಯವರೇ ಫೋನ್ ಮಾಡಿ ಹೇಳಿದರು. ನೋಡಿದರೆ, ಅವರ‍್ಯಾರೂ ನಮ್ಮವರಾಗಿರಲಿಲ್ಲ.
ಇಂತಹವು ಅನೇಕ ಬಾರೀ ನಡೆಯುತ್ತವೆ. ಆದರೆ, ನಿಜವಾದ ಕನ್ನಡದ ಕಳಕಳಿ ಇಟ್ಟುಕೊಂಡಿರುವ ಜನ ಇದನ್ನು ಮಾಡೋದಿಲ್ಲ.
ಮೋಟಮ್ಮನವರು ಮಾತನಾಡುವಾಗ ರಾಜಕಾರಣಕ್ಕೆ ಕರವೇ ಬರಬಾರದಿತ್ತು ಎಂದರು. ನಾವು ರಾಜಕೀಯ ಬೇಕು ಎಂದು ಯಾವತ್ತು ಅಂದುಕೊಂಡವರಲ್ಲ. ಆದರೆ ಇವತ್ತು ನಾವು ರಾಜಕಾರಣಕ್ಕೆ ಇಳಿಯುವಂಥ ಪರಿಸ್ಥಿತಿ ನಿರ್ಮಾಣ ಮಾಡಿದ್ದು ಸಹ ನೀವೇ. ಆ ಹೊಣೆಗಾರಿಕೆ ನಿಮ್ಮದು. ನೀವೇ ಹೇಳಿ ಮೋಟಮ್ಮನವರೇ, ಎಲ್ಲಾ ಪಕ್ಷಗಳ ಜನಪ್ರತಿನಿಧಿಗಳು ಎಲ್ಲಾ ಸರ್ಕಾರಗಳು ಸಂಪೂರ್ಣವಾಗಿ ಕನ್ನಡದ ಧ್ವನಿಯಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿಬಿಡಲಿ. ನಾರಾಯಣಗೌಡರೇ ನೀವು ನಿಮ್ಮ ಬದುಕು ನೋಡಿಕೊಳ್ರಿ, ಕನ್ನಡ, ಕನ್ನಡಿಗ, ಕರ್ನಾಟಕದ ರಕ್ಷಣೆಯ ಕಾರ್ಯವನ್ನು ನಮಗೆ ಬಿಡಿ ಎಂದು ನೀವೆಲ್ಲಾ ಒಮ್ಮೆ ಹೇಳಿಬಿಡಿ. ನಾಳೆಯಿಂದನೇ ನಾನು ಶಾಲು ಹಾಕೋದಿಲ್ಲ.
ಹೊಗೇನಕಲ್ ವಿಚಾರದಲ್ಲಿ ನಾರಾಯಣಗೌಡರೇ ಮಾತನಾಡಬೇಕಾ? ತಮಿಳುನಾಡು ಸರ್ಕಾರ ನಮ್ಮ ಗಡಿಯಲ್ಲಿ ಕಾಮಗಾರಿ ಆರಂಭ ಮಾಡಿದರೂ ಯಾರೂ ಬಾಯಿ ಬಿಡಲಿಲ್ಲ. ನಾನು ಸಹ ಒಂದು ವಾರ ಕಾದು ನೋಡಿದೆ; ಯಾರಾದರೂ ಮಾತಾಡ್ತಾರಾ? ಅಂತ. ಯಾರೂ ಮಾತಾಡಲಿಲ್ಲ. ಮನಸ್ಸು ತಡೆಯಲಿಲ್ಲ. ಒಳಗೆ ಕುದಿತ. ಅನಿವಾರ್ಯವಾಗಿ ಬೀದಿಗಿಳಿಯಬೇಕಾಯಿತು. ಬಾಯಿ ಬಿಡ್ರಿ ಎಂದು ನಮ್ಮ ಸಂಸದರ ಮನೆ ಮುಂದೆ ಧರಣಿ ಮಾಡಬೇಕಾಯಿತು. ನಾವೇನು ಕುಡಿಯುವ ನೀರಿನ ಯೋಜನೆ ಮಾಡಬೇಡಿ ಎಂದು ತಮಿಳುನಾಡಿಗೆ ಹೇಳುತ್ತಿಲ್ಲ. ಅವರು ಯೋಜನೆ ಮಾಡುತ್ತಿರುವ ಪ್ರದೇಶ ಕರ್ನಾಟಕದ್ದು. ಮೊದಲು ಕೇಂದ್ರ ಸರ್ಕಾರದ ಮಧ್ಯಸ್ಥಿಕೆಯಲಿ ಜಂಟಿ ಸರ್ವೆ ನಡೆಯಲಿ. ಆ ಪ್ರದೇಶ ಯಾರದು ಅಂತ ತೀರ್ಮಾನವಾಗಲಿ. ಆಮೇಲೆ ಬೇಕಾದರೆ, ನೀವು ಯೋಜನೆ ಮಾಡಿಕೊಳ್ಳಿ ಅಂತ ತಾವು ಹೇಳುತ್ತಿದ್ದೇವೆ. ಇದೇ ಮಾತನ್ನು ಲೋಕಸಭೆಯಲ್ಲಿ, ದೆಹಲಿಯಲ್ಲಿ ಹೇಳಿ ಅಂತ ನಾವು ಲೋಕಸಭಾ ಸದಸ್ಯರ ಮನೆಮುಂದೆ ಧರಣಿ ಮಾಡಬೇಕಾದ ಸ್ಥಿತಿ ಬಂದಿದೆ.
ನಾರಾಯಣಗೌಡರು ನಾಳೆ ಧರಣಿ ಮಾಡುತ್ತಾರೆಂದರೆ, ಹಿಂದಿನ ದಿನ ರಾತ್ರಿ ಫೋನ್ ಕಾಲ್ ಬರುತ್ತೆ: ’ನಮ್ಮ ಮನೆ ಮುಂದೆ ಬೇಡ, ಅವರ ಮನೆ ಮುಂದೆ ಮಾಡಿ. ಅವರ ಮನೆ ಮುಂದೆ ಬೇಡ, ಇವರ ಮನೆ ಮುಂದೆ ಮಾಡಿ. ನಾವು ಮಾತಾಡೋದಿಕ್ಕೆ ಅರ್ಜಿ ಹಾಕಿದ್ದೇವೆ, ಸಮಯ ಕೊಟ್ಟಿಲ್ಲ. ಕೊಟ್ಟಾಗ ಮಾತಾಡ್ತೀವಿ’ ಇತ್ಯಾದಿ...ಇತ್ಯಾದಿ. ಇದೇನು ನಮ್ಮ ಕರ್ಮನೋ? ಕನ್ನಡದ ಕರ್ಮನೋ? ಗೊತ್ತಿಲ್ಲ.
ಮೊನ್ನೆ ಪ್ರತಿಭಟನೆ ಹಮ್ಮಿಕೊಂಡಾಗ ಒಂದು ವಿಶೇಷ ನಡೆಯಿತು. ಒಂದೇ ಕಡೆ ಒಬ್ಬ ಬಿಜೆಪಿ ಮತ್ತೋರ್ವ ಕಾಂಗ್ರೆಸ್ ಸಂಸದರ ಮನೆಯಿತ್ತು. ನಾವು ನಡುವಿನಲ್ಲಿ ಕುಳಿತು ಧರಣಿ ಮಾಡ್ತಾ ಇದ್ವಿ. ಒಬ್ಬರು ಫೋನ್ ಮಾಡಿ ಹೇಳಿದರು: ’ಸದ್ಯ, ನಮ್ಮ ಮನೆ ಮುಂದೆ ಧರಣಿ ಮಾಡುತ್ತಿಲ್ಲ ಅಂತ ಖುಷಿ ಪಟ್ಟರು. ಆಗ ನಾನು ಹೇಳಿದೆ: ’ನೀವು ಸರಿಯಾಗಿ ಗಮನಿಸಿಲ್ಲ ಅನ್ನಿಸುತ್ತೆ. ನಮ್ಮ ಕಾರ್ಯಕರ್ತರು ನಿಮ್ಮನ್ನು ಸೇರಿಸಿಯೇ ಛೀಮಾರಿ ಹಾಕಿದ್ದಾರೆ, ಧಿಕ್ಕಾರ ಕೂಗಿದ್ದಾರೆ. ಕರ್ನಾಟಕದಲ್ಲಿ ನೀವು ಯಾಕಾಗಿ ಹುಟ್ಟಿದಿರೋ ಅಂತ ಅನ್ನಿಸುತ್ತಿದೆ’.
ಲೋಕಸಭೆಯಲ್ಲಿ ಯಾವುದಾದರೂ ಒಂದು ರಾಜ್ಯದ ವಿಷಯ ಬಂದಾಗ ಆ ರಾಜ್ಯದ ಸಂಸದರೆಲ್ಲಾ ಒಂದಾಗುತ್ತಾರೆ. ಅವರವರ ವಿಧಾನಸಭೆಗಳಲ್ಲಿ ಪರಸ್ಪರರ ಸೀರೆ ಎಳೆದದ್ದು ಉಂಟು, ಪಂಚೆ ಎಳೆದಿದ್ದು ಉಂಟು. ಆದರೆ, ಅವರ ರಾಜ್ಯದ ವಿಷಯ ಬಂದಾಗ ಎಲ್ಲರೂ ಒಂದಾಗುತ್ತಾರೆ. ತಮಿಳುನಾಡಿನ ಜನ, ಆಂಧ್ರದ ಜನ, ಮಹಾರಾಷ್ಟ್ರದ ಜನ ಲಾಬಿ ಮಾಡುವುದನ್ನು ನೋಡಿಯಾದರೂ ತಮ್ಮವರು ಕಲಿಯಬಾರದೆ?
ಹೊಗೇನಕಲ್ ವಿಚಾರ ಬಂದಾಗ ’ತಮಿಳುನಾಡಿನವರು ಕುಡಿಯುವ ನೀರಿನ ಯೋಜನೆ ಮಾಡುತ್ತಿದ್ದಾರೆ. ಕುಡಿಯುವ ನೀರಿಗೆ ಅಡ್ಡಿ ಬರಬೇಡಿ’ ಎಂದು ಕೇಂದ್ರ ಸರ್ಕಾರದವರು, ನ್ಯಾಯಮಂಡಳಿಗಳು ಹೇಳುತ್ತವೆ. ಆದರೆ, ಕಳಸಾಬಂಡೂರಿ ಯೋಜನೆ ವಿಷಯದಲ್ಲಿ ಇದೇ ಮಾತನ್ನು ಕೇಂದ್ರ ಸರ್ಕಾರ ಗೋವಾ ಸರ್ಕಾರಕ್ಕೆ ಏಕೆ ಹೇಳುವುದಿಲ್ಲ? ಕಳಸಾ ಬಂಡೂರಿಯಲ್ಲಿ ನಾವು ಮಾಡಲು ಹೊರಟಿರುವುದು ನೀರಾವರಿ ಯೋಜನೆಯೇನಲ್ಲ. ಐದು ಜಿಲ್ಲೆಗಳ ಕುಡಿಯುವ ನೀರಿಗಾಗಿ ೭ ಟಿಎಂಸಿ ನೀರು ಬಳಸಿಕೊಳ್ಳುವ ಯೋಜನೆಯದು. ಯಾಕೆ ಗೋವಾ ಸರ್ಕಾರಕ್ಕೆ ಈ ಜನ ಬುದ್ಧಿ ಹೇಳೋದಿಲ್ಲ. ಯಾಕೆಂದರೆ ಅವರಿಗೆ ಚೆನ್ನಾಗಿ ಗೊತ್ತಿದೆ. ಕನ್ನಡದ ಜನ ನೀರು ಕೇಳಿದರೆ ಪಾನಕ ಕೊಡುವಷ್ಟು ಒಳ್ಳೇ ಜನ. ಇವರು ಎಲ್ಲವನ್ನು ಸಹಿಸಿಕೊಳ್ಳುತ್ತಾರೆ.
ಹೀಗಾಗಿಯೇ ನಮ್ಮ ಮೇಲೆ ಎಷ್ಟೇ ದೌರ್ಜನ್ಯ ದಬ್ಬಾಳಿಕೆ ಮಾಡಿದರೂ ನಾವು ಸುಮ್ಮನಿದ್ದೇವೆ, ನಿರಂತರ ದೌರ್ಜನ್ಯಕ್ಕೆ ಒಳಗಾಗಿದ್ದೇವೆ. ಜೆ.ಎಚ್.ಪಟೇಲ್‌ರ ಕಾಲದಲ್ಲಿ ನಡೆದ ಒಪ್ಪಂದವಾದರೂ ಏನು? ಹೊಗೇನಕಲ್‌ನಲ್ಲಿ ೧.೪ ಟಿಎಂಸಿ ನೀರು ಬಳಸಿಕೊಳ್ಳುವ ಯೋಜನೆ ಮಾಡುತ್ತೇವೆ, ೨ ಜಿಲ್ಲೆಗಳಿಗೆ ನೀರು ಕೊಡುತ್ತೇವೆ ಎಂದಿದ್ದರು ತಮಿಳುನಾಡಿನವರು. ೩೦ ಲಕ್ಷ ಜನರಿಗೆ ನೀರು ಕೊಡುತ್ತೇವೆ ಎಂದರು. ಆದರೆ, ಈಗ ೩ ಜಿಲ್ಲೆಗಳ ೫೦ ಲಕ್ಷ ಜನರಿಗೆ ನೀರು ಕೊಡುವ ಯೋಜನೆ ಮಾಡಲು ಹೊರಟಿದ್ದಾರೆ.
ಆದರೂ ನಾವು ತಕರಾರು ಮಾಡ್ತಿಲ್ಲ. ನಮ್ಮ ತಕರಾರು ಇರುವುದು ಯೋಜನೆಗೆ ಬಳಸಲಾಗುತ್ತಿರುವ ಪ್ರದೇಶದ್ದು. ಅದು ನಮ್ಮದು. ಭಾಷಾವಾರು ಪ್ರಾಂತ್ಯ ರಚನೆಯಾದ ಸಂದರ್ಭದಲ್ಲಿ ಹೊಗೇನಕಲ್‌ನ ಮೂರನೇ ಎರಡು ಭಾಗ ಕರ್ನಾಟಕದ್ದು, ಉಳಿದ ಒಂದು ಭಾಗ ತಮಿಳುನಾಡಿಗೆ ಸೇರಿದ್ದು ಎಂದು ತೀರ್ಮಾನವಾಗಿದೆ. ಆದರೆ, ಅವರು ಅದನ್ನು ತಿರುಚಿದ್ದಾರೆ. ಇದೆಲ್ಲವನ್ನು ಮಾತಾಡಬೇಕಾದ ನಮ್ಮ ಜನಪ್ರತಿನಿಧಿಗಳು ಮೌನವಾಗಿದ್ದಾರೆ.
ಬೆಳಗಾವಿಯಲ್ಲಿ ಗೆದ್ದು ಬಂದ ಜನ ವಿಧಾನಸಭೆಯಲ್ಲಿ ನಿಂತು ’ಶಿವಾಜಿ ಮಹಾರಾಜ್ ಕೀ ಜೈ.... ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು’ ಎಂದು ಅರಚುತ್ತಿದ್ದರೆ, ಹೊರಗಿರುವ ನಮ್ಮ ರಕ್ತ ಕುದಿಯುತ್ತದೆ. ಅವತ್ತು ಕಾವೇರಿ ನ್ಯಾಯಮಂಡಳಿಯ ಅಂತಿಮ ತೀರ್ಪು ಮಧ್ಯಾಹ್ನ ೨.೧೫ಕ್ಕೆ ಹೊರಬಿತ್ತು. ಆ ಕ್ಷಣದಿಂದಲೇ ರಕ್ಷಣಾ ವೇದಿಕೆಯ ಕಾರ್ಯಕರ್ತರು ಬೀದಿಗಿಳಿದು ಹೋರಾಟ ಆರಂಭ ಮಾಡಿದರು. ಒಬ್ಬ ಲೋಕಸಭಾ ಸದಸ್ಯನು ಬರಲಿಲ್ಲ, ಒಬ್ಬ ಜನಪ್ರತಿನಿಧಿಯು ಬರಲಿಲ್ಲ.
ಡಾ.ಯು.ಆರ್.ಅನಂತಮೂರ್ತಿಯವರು ಮಾತನಾಡುವಾಗ ಹೇಳಿದರು: ’ನಾವು ಜಾತಿ-ಧರ್ಮದ ಹೆಸರಿನಲ್ಲಿ ಒಗ್ಗೂಡುತ್ತೇವೆ. ಕನ್ನಡ ಭಾಷೆ ಹೆಸರಿನಲ್ಲಿ ಒಗ್ಗೂಡುತ್ತಿಲ್ಲ. ಮುಂದಾದರೂ ಕನ್ನಡದ ಹೆಸರಿನಲ್ಲಿ ಎಲ್ಲಾ ಸಮುದಾಯಗಳು ಒಗ್ಗೂಡುವಂಥ ದಿನ ಬರಬೇಕು’.
ಅನಕೃ, ಮ.ರಾಮಮೂರ್ತಿ ಮೊದಲಾದವರು ದೊಡ್ಡ ಕನಸನ್ನು ಕಟ್ಟಿಕೊಂಡು ಈ ಕನ್ನಡ ಬಾವುಟವನ್ನು ನಮ್ಮ ಕೈಗೆ ಕೊಟ್ಟಿದ್ದಾರೆ. ಪಕ್ಷ, ಧರ್ಮ, ಜಾತಿಗಳ ಹೆಸರುಗಳನ್ನು ಬಿಟ್ಟು ನಾವು ಕನ್ನಡದ ಹೆಸರಿನಲ್ಲಿ ಒಂದಾದಾಗ ಮಾತ್ರ ಬೆಳಗಾವಿ ಉಳಿಯುತ್ತೆ, ಬಳ್ಳಾರಿ ಉಳಿಯುತ್ತೆ, ಕಾವೇರಿ ಕೃಷ್ಣೆಯರು ಉಳಿಯುತ್ತಾರೆ. ಹೊಗೇನಕಲ್ ಉಳಿಯುತ್ತದೆ. ಬೆಂಗಳೂರು ನಮ್ಮ ಪಾಲಿಗೆ ಉಳಿಯುತ್ತದೆ. ಇಲ್ಲ ಅಂದರೆ ಎಲ್ಲವನ್ನು ನಾವು ಕಳೆದುಕೊಳ್ಳುತ್ತೇವೆ.
ಇವತ್ತು ಬೆಂಗಳೂರಿನ ಸ್ಥಿತಿ ಹೇಗಿದೆ. ಭಾರತ ಸುತ್ತುವುದು ಬೇಕಿಲ್ಲ. ಬೆಂಗಳೂರು ಸುತ್ತಿ ಬಂದರೆ ಇಡೀ ಭಾರತ ಸುತ್ತಿ ಬಂದಂತೆ ಆಗುತ್ತದೆ. ಇವತ್ತು ತರಕಾರಿ ಮಾರಾಟ ಮಾಡುವುದಕ್ಕೂ ನಮ್ಮ ಕೈಯಿಂದ ಸಾಧ್ಯವಾಗುತ್ತಿಲ್ಲ. ತರಕಾರಿ, ಮಾಂಸವನ್ನು ಸಹ ಬಹುರಾಷ್ಟ್ರೀಯ ಕಂಪನಿಗಳು ಮಾರಾಟ ಮಾಡುತ್ತಿವೆ. ದೊಡ್ಡ ದೊಡ್ಡ ಕಂಪನಿಗಳು ಬಂದು ಸಾವಿರಾರು ಜನರ ಬದುಕನ್ನು ನಾಶ ಮಾಡಿದೆ. ಇದಕ್ಕೆ ಪ್ರತಿಯಾಗಿ ಒಬ್ಬ ವ್ಯಕ್ತಿ, ಒಂದು ಸಂಸ್ಥೆ, ಒಂದು ಕುಟುಂಬ ನೂರಾರು ಕೋಟಿ ರೂಪಾಯಿಗಳನ್ನು ಬಾಚುತ್ತಿವೆ.
ಕರ್ನಾಟಕದಲ್ಲಿ ನೂರಾರು ತಮಿಳು ಶಾಲೆಗಳು ನಡೆಯುತ್ತಿವೆ. ಆದರೆ, ತಮಿಳುನಾಡಿನಲ್ಲಿರುವ ಕೇವಲ ೬೨ ಕನ್ನಡ ಶಾಲೆಗಳನ್ನು ತಮಿಳು ಶಾಲೆಗಳನ್ನಾಗಿ ಮಾಡಲು ಹೊರಟಿದ್ದಾರೆ. ಕೃಷ್ಣಗಿರಿ, ಧರ್ಮಗಿರಿ, ಊಟಿ, ಕೊಯಮತ್ತೂರುಗಳಲ್ಲಿ ಲಕ್ಷಾಂತರ ಕನ್ನಡದ ಜನ ಬದುಕುತ್ತಿದ್ದಾರೆ. ಅಲ್ಲಿ ಇನ್ನು ಕನ್ನಡ ಶಾಲೆಗಳು ಇರೋದಿಲ್ಲ. ಆದರೆ, ಇವತ್ತು ನಮ್ಮ ರಾಜ್ಯದಲ್ಲಿ ಇರುವ ತಮಿಳು ಶಾಲೆಗಳಿಗೆ ಯಾವ ತೊಂದರೆಯೂ ಇಲ್ಲ. ಅವುಗಳಿಗೆ ಸರ್ಕಾರದ ಅನುದಾನವೂ ದೊರೆಯುತ್ತಿದೆ. ಯಾಕೆ ಕನ್ನಡಿಗರಿಗೆ ಈ ಶಿಕ್ಷೆ? ಯಾಕೆ ಇದನ್ನೆಲ್ಲಾ ನಾವು ಸಹಿಸಿಕೊಳ್ಳುತ್ತೇವೆ?
ಇದೆಲ್ಲಾ ದುಃಖದುಮ್ಮಾನಗಳನ್ನು ಕನ್ನಡದ ನೋವು-ಸಂಕಟಗಳನ್ನು ಹೇಳಿಕೊಳ್ಳಲೆಂದೇ ‘ಕರವೇ ನಲ್ನುಡಿ’ ಹೆಸರಿನಲ್ಲಿ ಪತ್ರಿಕೆ ಆರಂಭಿಸಿದ್ದೇವೆ. ಕರ್ನಾಟಕ ರಕ್ಷಣಾ ವೇದಿಕೆಗೆ ಹತ್ತು ವರ್ಷ ತುಂಬಿದ ಈ ಸಂದರ್ಭದಲ್ಲಿ ಪತ್ರಿಕೆ ಮೂಲಕವು ಕನ್ನಡದ ಕೆಲಸವನ್ನು ಮಾಡಲೆಂದೇ ಇದನ್ನು ಆರಂಭಿಸಿದ್ದೇವೆ.
ಬಂಧುಗಳೇ, ಕನ್ನಡದ ವಿಚಾರದಲ್ಲಿ ಕುವೆಂಪುರವರು ಒಂದು ಮಾತನ್ನು ಹೇಳುತ್ತಾರೆ: ’ಕನ್ನಡ ಕೊಲ್ಲುವ ಮುನ್ನ ಎನ್ನ ಕೊಲ್ಲು ನಾವು ಸಹ ಅದನ್ನೇ ಹೇಳುತ್ತೇವೆ. ಇದೇ ರಕ್ಷಣಾ ವೇದಿಕೆಯ ಸಿದ್ಧಾಂತ, ವೇದಾಂತ ಎಲ್ಲವೂ. ಕನ್ನಡವನ್ನು ಕೊಲ್ಲುತ್ತೇವೆ ಅನ್ನುವವರು, ನಾಡನ್ನು ಹಾಳು ಮಾಡುತ್ತೇವೆ ಎನ್ನುವವರು, ಲೂಟಿ ಮಾಡುತ್ತೇವೆ ಎನ್ನುವವರು, ನಾಡಿಗೆ ವಿರುದ್ಧವಾಗಿ ನಿಲ್ಲುತ್ತೇವೆ ಎನ್ನುವವರು ಮೊದಲು ನಮ್ಮನ್ನು ಎದುರಿಸಬೇಕು. ಇಂಥವರನ್ನು ಎದುರಿಸುವ ತಾಕತ್ ನಮಗಿದೆ.
ಯಾವ ಪಕ್ಷ, ಸರ್ಕಾರ, ವ್ಯಕ್ತಿ ನಮ್ಮ ಶತ್ರುಗಳಲ್ಲ. ಯಾರು ಕರ್ನಾಟಕವನ್ನು ದ್ವೇಷಿಸುತ್ತಾರೋ, ಕರ್ನಾಟಕದ ಖಳನಾಯಕರಾಗಿ ವರ್ತಿಸುತ್ತಾರೋ ಅಂಥವರಿಗೆ ನಾವು ಶತ್ರುಗಳು. ಅವರ ಪಾಲಿಗೆ ನಾವು ಸಿಂಹ ಸ್ವಪ್ನ.
ಈ ನೆಲದಲ್ಲಿ ಹುಟ್ಟಿದ್ದೇವೆ. ಈ ತಾಯ್ನಾಡಿನ ಋಣ ತೀರಿಸುವುದಕ್ಕೆ ರಕ್ಷಣಾ ವೇದಿಕೆ ಕಟ್ಟಿಕೊಂಡು ಹೋರಾಡುತ್ತಿದ್ದೇವೆ. ಅದನ್ನು ಹೊರತು ಪಡಿಸಿ ಬೇರೇನೂ ಇಲ್ಲ. ಕೆಲವರು ನಮ್ಮನ್ನು ಅರ್ಥಮಾಡಿಕೊಳ್ಳುತ್ತಿಲ್ಲ.
ಅನಂತಮೂರ್ತಿ ಹೇಳಿದರು. ಬೆಂಗಳೂರಿನಲ್ಲಿ ಒಳ್ಳೆಯ ಕನ್ನಡದ ಶಾಲೆಗಳು ಇಲ್ಲ. ನಾರಾಯಣಗೌಡರೇ, ನೀವಾದರೂ ಒಂದು ಒಳ್ಳೇ ಕನ್ನಡದ ಶಾಲೆ ಆರಂಭಿಸಿ ಅಂತ ಹಲವರು ನನ್ನ ಬಳಿ ಹೇಳುತ್ತಾರೆ. ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲೂ ಪರಿಪೂರ್ಣವಾದ, ಸುಸಜ್ಜಿತವಾದ ಕನ್ನಡ ಶಾಲೆಗಳನ್ನು ತೆರೆಯುವ ಕೆಲಸವನ್ನು ಸರ್ಕಾರ ಮಾಡಬೇಕಾಗಿದೆ. ಅನಂತಮೂರ್ತಿಯವರೇ, ನೀವು ಹಿರೀಕರು ಆದೇಶ ಮಾಡಿದ್ದೀರಿ. ನಿಮ್ಮ ಆದೇಶವನ್ನು ರಕ್ಷಣಾ ವೇದಿಕೆ ಸಂಪೂರ್ಣವಾಗಿ ಒಪ್ಪಿ ಸ್ವೀಕರಿಸುತ್ತದೆ. ನಿಮ್ಮ ನೋವು ಇಡೀ ಕನ್ನಡ ನಾಡಿನ ನೋವು. ಹೀಗಾಗಿ ನಿಮ್ಮ ಸಲಹೆಯನ್ನು ಆದೇಶವಾಗಿ ಸ್ವೀಕರಿಸಿ ನಾವು ಕೆಲಸ ಮಾಡುತ್ತೇವೆ.
ಇನ್ನೊಂದು ವಿಷಯ ಹೇಳಿಬಿಡುತ್ತೇನೆ. ಕರವೇಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಅವರದೇ ಆದ ಬದುಕಿದೆ. ಚಳವಳಿ ಅವರ ಬದುಕಿನ ಒಂದು ಭಾಗ ಅಷ್ಟೇ. ನನ್ನ ಕಾರ್ಯಕರ್ತರಿಗೆ ನಾನು ಅದನ್ನೇ ಹೇಳುತ್ತೇನೆ. ಹೋರಾಟವೇ ನಿಮ್ಮ ಜೀವನವಾಗಬಾರದು. ಹಾಗಾದಾಗ ಚಳವಳಿ ದಿಕ್ಕು ತಪ್ಪುತ್ತದೆ, ದಾರಿ ತಪ್ಪುತ್ತದೆ. ಹಲವರು ಕೇಳುತ್ತಾರೆ: ’ನಾರಾಯಣಗೌಡರೇ, ನಿಮ್ಮ ಕಾರ್ಯಕರ್ತರು ಸ್ಕಾರ್ಪಿಯೋ, ಇನೋವಾಗಳಲ್ಲಿ ಓಡಾಡುತ್ತಾರೆ. ನೀವು ಹೊರಟರೆ ನಿಮ್ಮ ಹಿಂದೆ ಹತ್ತಾರು ಐಷಾರಾಮಿ ಕಾರುಗಳು ಹಿಂಬಾಲಿಸುತ್ತವೆ’. ನಾನು ಅವರಿಗೆ ಹೇಳುತ್ತೇನೆ: ’ನನ್ನ ಕಾರ್ಯಕರ್ತರ‍್ಯಾರೂ ಫುಟ್‌ಪಾತ್‌ನಲ್ಲಿಲ್ಲ. ಅವರದೇ ಆದ ಬದುಕನ್ನು ಕಟ್ಟಿಕೊಂಡಿದ್ದಾರೆ. ಎಲ್ಲರಂತೆ ಬದುಕುವ ತಾಕತ್ ಅವರಿಗಿದೆ. ಅದಕ್ಕೆ ಕಾರಿನಲ್ಲಿ ಓಡಾಡುತ್ತಾರೆ. ಯಾರೋ ಮಾರವಾಡಿಗಳು, ಸಿಂಧಿಗಳು ಕಾರಿನಲ್ಲಿ ಓಡಾಡೋದನ್ನು, ಗಣಿ ಲೂಟಿಕೋರರು ಸ್ವಂತದ ಹೆಲಿಕಾಪ್ಟರ್‌ನಲ್ಲಿ ಓಡಾಡುವುದನ್ನು ಸಹಿಸಿಕೊಳ್ಳುವ ನಮ್ಮ ಜನ, ಈ ನೆಲದ ಹೋರಾಟಗಾರರು ಕಾರಿನಲ್ಲಿ ಓಡಾಡಿದರೆ ಸಹಿಸಿಕೊಳ್ಳೋದಿಲ್ಲ ಏಕೆ?
ಯಾರ‍್ಯಾರೋ, ಏನೇನೋ ಮಾಡುತ್ತಾರೆ. ಬಸವಣ್ಣನವರು ಹೇಳುತ್ತಾರೆ. ’ಉಳ್ಳವರು ಶಿವಾಲಯ ಮಾಡುವರು ನಾನೇನು ಮಾಡಲಿ ಬಡವನಯ್ಯ, ಕಾಲೇ ಕಂಬವಯ್ಯ. ದೇಹವೇ ದೇಗುಲವಯ್ಯ. ಶಿರವೇ ಹೊನ್ನ ಕಳಸವಯ್ಯ.’ ನಮ್ಮ ಕನ್ನಡದ ಕಂದಮ್ಮಗಳು ಮತ್ತೇನು ಮಾಡಲು ಸಾಧ್ಯವಿಲ್ಲದಿದ್ದರೂ ಚಿಕ್ಕಪುಟ್ಟದಾಗಿ ಬದುಕು ಕಟ್ಟಿಕೊಂಡಿದ್ದಾರೆ. ಅವರ ಮೇಲೆ ಏಕೆ ನಿಮ್ಮ ಕೆಂಗೆಣ್ಣು. ಕರ್ನಾಟಕದ ಐದೂವರೆ ಕೋಟಿ ಕನ್ನಡಿಗರು ಕಾರಿನಲ್ಲಿ ಓಡಾಡುವಂತಾಗಬೇಕು. ಅದು ನನ್ನ ಕನಸು.
ಪುಟ್ಟಪ್ಪನವರು ಒಂದು ಮಾತನ್ನು ಹೇಳಿದರು: ’ಸರ್ವಜನಾಂಗದ ಶಾಂತಿಯ ತೋಟ. ರಸಿಕರ ಕಂಗಳ ಸೆಳೆಯುವ ನೋಟ.’ ಈ ಸರ್ವಜನಾಂಗದ ಶಾಂತಿಯ ನೋಟದಲ್ಲಿ ಹೊರಗಿನಿಂದ ಬಂದವರಿಗೆಲ್ಲಾ ರತ್ನಗಂಬಳಿ ಹಾಸಿ ಕೂರಿಸಿದ್ದೇವೆ. ಎಲ್ಲವನ್ನು ಸಹಿಸಿಕೊಂಡಿದ್ದೇವೆ. ಈಗಲೂ ಅಷ್ಟೇ. ಅವರ‍್ಯಾರಿಗೂ ಇಲ್ಲಿ ಬದುಕಬೇಡಿ ಎಂದು ನಾವು ಹೇಳುವುದಿಲ್ಲ. ನೀವು ಬಂದಿದ್ದೀರಿ, ನೀವು ನಮ್ಮ ಅತಿಥಿಗಳು; ಮಾಲೀಕರಲ್ಲ.
ಕನ್ನಡನಾಡಿನಲ್ಲಿ ಕನ್ನಡಿಗನೇ ಸಾರ್ವಭೌಮ. ಈ ನೆಲದ ಸುಖ-ಸಂಪತ್ತು ಎಲ್ಲವೂ ಅವನಿಗೆ ಸಿಗಬೇಕು. ಈ ನಿಟ್ಟಿನಲ್ಲಿ ಕರವೇ ತನ್ನ ಚಳವಳಿಯನ್ನು ಮುಂದುವರೆಸುತ್ತಾ ಹೋಗುತ್ತದೆ. ಕುವೆಂಪು ಹೇಳಿದ್ದರು: ’ಕನ್ನಡ ವಿಚಾರದಲ್ಲಿ ನಾನು ಬುಲ್ಡೋಜರ್ ಇದ್ದ ಹಾಗೆ. ಅಡ್ಡ ಬರಬೇಡಿ, ಅಪ್ಪಚ್ಚಿ ಆಗಿ ಬಿಡುತ್ತೀರಿ.
ಇದೇ ಮಾತನ್ನು ರಕ್ಷಣಾ ವೇದಿಕೆಯೂ ಹೇಳುತ್ತದೆ. ಕನ್ನಡದ ಶತ್ರುಗಳಿಗೆಲ್ಲಾ ಹೇಳುತ್ತಿದ್ದೇನೆ. ’ನಾಡು-ನುಡಿ ವಿಚಾರದಲ್ಲಿ ಅಡ್ಡಿ ಬರಬೇಡಿ ಅಪ್ಪಚ್ಚಿ ಆಗ್ಬಿಡ್ತೀರಾ.
ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲಾ ಕನ್ನಡದ ಮನಸುಗಳಿಗೆ ಶರಣು ಶರಣು...

1 comment:

  1. ನಾರಾಯಣಗೌಡರ ಭಾಷಣ ಕೇಳಿ ಬಹಳ ಸಂತೋಷವಾಯಿತು. ಈ ರೀತಿ ಖಡಾ-ಖಂಡಿತವಾದ ಮಾತುಗಳನ್ನು ಆಡಲು ಅವರೊಬ್ಬರಿಂದಲೇ ಸಾಧ್ಯ.

    -ವಾಸು

    ReplyDelete

ಹಿಂದಿನ ಬರೆಹಗಳು