Friday, June 4, 2010

ಹೊರನಾಡಲ್ಲಿ ಕನ್ನಡದ ತೇರನೆಳೆವರು

’ತೇರನೆಳೆಯುವರು ನಾವು
ಎಲ್ಲಿದ್ದರೇನು
ಬೊಂಬಾಯಿ ಮದ್ರಾಸು ಕಲ್ಕತ್ತ
ಡೆಲ್ಲಿ ಎಲ್ಲೆಂದರಲ್ಲಿ
ಕನ್ನಡದ ಉಸಿರಾಟ
ಎದೆಗಳಿರುವಲ್ಲಿ....(ಜಿ.ಎಸ್.ಎಸ್.)
ಭೌಗೋಳಿಕವಾಗಿ ಕನ್ನಡ ನಾಡಿನ ಹೊರಗಿದ್ದು ಕನ್ನಡವನ್ನು ಉಸಿರಾಗಿಸಿಕೊಂಡವರು ಹೊರನಾಡ ಕನ್ನಡಿಗರು. ಕನ್ನಡ ಎನ್ನುವುದು ಕೇವಲ ಒಂದು ಭಾಷೆಯಷ್ಟೇ ಅಲ್ಲ. ಅದೊಂದು ಸಂಸ್ಕೃತಿ: ಜೀವನ ವಿಧಾನ. ಒಂದು ಭಾಷೆಗೆ; ಒಂದು ಸಂಸ್ಕೃತಿಗೆ, ಭೌಗೋಳಿಕವಾಗಿ ಸೀಮೆಯನ್ನು ಎಲ್ಲೆಯನ್ನು ಗುರುತಿಸಬಹುದೇ ಹೊರತು ಸಾಂಸ್ಕೃತಿಕವಾಗಿ ಎಲ್ಲೆ ಕಟ್ಟುಗಳನ್ನು ಹಾಕುವುದು ಸಾಧ್ಯವಾಗಲಾರದು. ಕರ್ನಾಟಕದ ಹೊರಗಿರುವ ಕನ್ನಡಿಗರನ್ನು ಗಡಿನಾಡ ಕನ್ನಡಿಗರು, ಹೊರನಾಡ ಕನ್ನಡಿಗರು ಹಾಗೂ ಹೊರರಾಷ್ಟ್ರದ ಕನ್ನಡಿಗರು ಎಂಬುದಾಗಿ ವರ್ಗೀಕರಿಸಿ ಅವರವರ ಸಾಂಸ್ಕೃತಿಕ ಚಟುವಟಿಕೆಗಳನ್ನು ಅವಲೋಕನ ಮಾಡಬಹುದಾಗಿದೆ. "ತಾಂತ್ರಿಕ ಕಾರಣಗಳಿಗಾಗಿ ಕರ್ನಾಟಕದ ಒಳಗಿರುವವರನ್ನು, ಅದರಲ್ಲೂ ಖಾಯಂ ವಾಸಿಗಳನ್ನು ಕನ್ನಡಿಗರು ಎಂದು ಗುರುತಿಸಿದಂತೆ, ಮೂಲತಃ ಕರ್ನಾಟಕದವರಾಗಿ ಸದ್ಯಕ್ಕೆ ಹೊರನಾಡಿನಲ್ಲಿರುವವರೂ ಕನ್ನಡಿಗರಾಗುತ್ತಾರೆ; ಗಡಿನಾಡು ಅಥವಾ ಹೊರನಾಡು ಎಂಬ ಪದದ ಜೊತೆಗೂಡಿದ ಕನ್ನಡಿಗರಾಗುತ್ತಾರೆ" ಎಂಬುದಾಗಿ ಪ್ರೊ.ಬರಗೂರು ರಾಮಚಂದ್ರಪ್ಪ ಅವರು ಒಂದೆಡೆ ಅಭಿಪ್ರಾಯ ಪಟ್ಟಿದ್ದಾರೆ.
"ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು" ಎಂಬ ಕವಿವಾಣಿಯನ್ನು ಹೊರನಾಡು ಕನ್ನಡಿಗರು ಮೈಗೂಡಿಸಿಕೊಂಡಿದ್ದಾರೆ. ಹೀಗಾಗಿ ಭಾರತವಲ್ಲದೆ ಜಗತ್ತಿನ ಬೇರೆ ಬೇರೆ ರಾಷ್ಟ್ರಗಳಲ್ಲಿ ನೆಲೆನಿಂತ ಕನ್ನಡಿಗರು ತಾವಿರುವ ಪ್ರದೇಶಗಳಲ್ಲಿ ಸಂಘಟಿತರಾಗಿ ಕನ್ನಡ ನಾಡು ನುಡಿ ಸಾಹಿತ್ಯ ಸಂಸ್ಕೃತಿಯ ಬಲವರ್ಧನೆಗೆ ಶ್ರಮಿಸುತ್ತಾ ಬಂದಿದ್ದಾರೆ. ತಾವು ಕನ್ನಡಿಗರಾಗಿ ಉಳಿಯಲು ಬೆಳೆಯಲು ತಮ್ಮದೇ ಆದ ಸಂಘ ಸಂಸ್ಥೆಗಳನ್ನು ಕಟ್ಟಿಕೊಂಡು ತಮ್ಮ ಅಸ್ಮಿತೆಯನ್ನು ಉಳಿಸಿಕೊಳ್ಳುವುದರ ಜೊತೆಗೆ ಕನ್ನಡೇತರರಿಗೆ ಕನ್ನಡತ್ವದ ಪರಿಚಯ ಮಾಡಿಕೊಟ್ಟು ಅವರೊಡನೆ ಸಹಬಾಳ್ವೆ ಮಾಡುವುದನ್ನೂ ಚನ್ನಾಗಿ ಕಲಿತಿದ್ದಾರೆ. "ಪರಭಾಷೆ ನಮಗೆ ಏಕೆ ಅಯ್ಯಾ, ನಮ್ಮ ಭಾಷೆ ನಮಗೆ ಸಾಲದೆ" ಎಂದು ಹೊರನಾಡ ಕನ್ನಡಿಗರು ಕನ್ನಡವನ್ನೇ ಹಾಸಿ ಹೊದ್ದು ನಿದ್ದೆ ಮಾಡುವ ಸ್ಥಿತಿಯಲ್ಲಿರಲಾರರು. ಹಾಗೆಂದು ಪರಭಾಷೆಯನ್ನೇ ತಲೆದಿಂಬಾಗಿಸಿಕೊಂಡು ಕನ್ನಡವನ್ನು ಕಾಲ್ದೆಸೆಗೆ ತಳ್ಳಿ ಬದುಕಲೂ ಆಗದು. ಕನ್ನಡ ನಾಡಿನಿಂದ ಹಲವೊಂದು ಕಾರಣಗಳಿಗಾಗಿ ಹೊರದೇಶ ಪ್ರದೇಶಗಳಿಗೆ ವಲಸೆ ಹೋದ ಕನ್ನಡಿಗರು ಕನ್ನಡಿಗರಿಗಾಗಿ ಉಳಿಯಲು ಕನ್ನಡ ಭಾಷೆಯೇ ಒಂದು ಪ್ರಮುಖ ಸಾಧನವೆನಿಸುವುದು" ಎಂಬುವುದಾಗಿ ಬಹುಕಾಲ ಹೊರನಾಡಿನಲ್ಲಿದ್ದು ಸಾಹಿತ್ಯ ಕೃಷಿ ಮಾಡಿದ ಡಾ.ಬಿ.ಎ.ಸನದಿ ಅವರು ಇಂಗಿತ ವ್ಯಕ್ತಪಡಿಸಿದ್ದಾರೆ.
"ಎಲ್ಲೆಲ್ಲಿ ಕನ್ನಡದ ಕಂಪು ಸೂಸಲಲ್ಲಲ್ಲಿ ಕರಣ ಚಾಚೇವು" ಎಂದು ಹೊರನಾಡ ಕನ್ನಡಿಗರು ನಾನಾ ಬಗೆಯ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಸಂಗತಿಯೇ ಆಗಿದೆ. ಸುಮಾರು ಎರಡು ಕೋಟಿ ಜನ ಕರ್ನಾಟಕದ ಹೊರಗೆ ನೆಲೆಸಿ ಕನ್ನಡದ ಕೈಂಕರ್ಯದಲ್ಲಿ ತೊಡಗಿರುವುದು ಸಾಮಾನ್ಯ ಸಂಗತಿಯಲ್ಲ. ಕಾಸರಗೋಡು, ಅಕ್ಕಲಕೋಟೆ, ಜತ್ತ, ಅದವನಿ, ಆಲೂರು, ರಾಯದುರ್ಗ, ಮಡಕಶಿರ ಮೊದಲಾದ ಗಡಿಭಾಗಗಳಲ್ಲಿ ಇಂದಿಗೂ ಕನ್ನಡ ಭಾಷೆ, ಸಂಸ್ಕೃತಿ ತಲೆ ಎತ್ತಿ ನಿಂತಿರುವುದನ್ನು ಕಾಣಬಹುದು. ಮುಂಬಯಿ, ಚೆನ್ನೈ, ದೆಹಲಿ, ಕಾಶಿ, ಲಖನೌ, ಮಧುರೈ, ಭೂಪಾಲ್, ಗೋವಾ, ಹೈದರಾಬಾದ್, ಪಣಜಿ, ಅಹ್ಮದಾಬಾದ್, ವಾಪಿ, ಪುಣೆ, ಕಾಲಿಕತ್, ಪಾಂಡಿಚೇರಿ, ಚಂಡೀಗಢ, ನೈವೇಲಿ, ಭಿಲಾಯಿ, ಗುಂತಕಲ್, ಕರ್ನೂಲ್, ಬರೋಡಾ, ಅಲಹಾಬಾದ್, ರಾಂಚಿ, ತ್ರಿವೇಂಡ್ರಮ್, ಇಂದೋರ್, ಪನ್ವೇಲ್ ಮೊದಲಾದ ಕಡೆಗಳಲ್ಲಿ ಕನ್ನಡಿಗರು ದೊಡ್ಡ ಪ್ರಮಾಣದಲ್ಲಿ ನೆಲೆಸಿದ್ದು, ತಮ್ಮದೇ ಆದ ಸಂಘ ಸಂಸ್ಥೆಗಳನ್ನು ಕಟ್ಟಿಕೊಂಡಿದ್ದಾರೆ.
ಹೊರದೇಶಗಳಲ್ಲೂ ಕನ್ನಡಿಗರು ತಮ್ಮ ಅಸ್ಮಿತೆಯನ್ನು ಉಳಿಸಿಕೊಂಡು ಬರಲು ಶ್ರಮಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇಂಗ್ಲೆಂಡ್, ಸಿಂಗಪುರ, ಅಮೇರಿಕಾ, ಕೆನಡಾ, ಜರ್ಮನಿ, ದುಬಾಯಿ, ಬಹರಿನ್, ಅಬುಧಾಬಿ, ಆಸ್ಟ್ರೇಲಿಯಾ ಮೊದಲಾದ ಸ್ಥಳಗಳಲ್ಲೂ ಕನ್ನಡಿಗರು ಸಂಘಟಿತರಾಗಿ ತಮ್ಮ ನಾಡು ನುಡಿಗಳ ಮೇಲಿನ ಅಭಿಮಾನ, ಗೌರವ, ಪ್ರೀತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದಾರೆ. ಈ ಮೂಲಕ ಕನ್ನಡದ ಕಂಪು ಕರ್ನಾಟಕಕ್ಕಷ್ಟೇ ಸೀಮಿತವಾಗದೇ ಅದು ವಿಶ್ವವ್ಯಾಪಿಯಾಗುವಂತೆ ಮಾಡಿದ ಶ್ರೇಯಸ್ಸು ಹೊರನಾಡ ಕನ್ನಡಿಗರಿಗೆ ಸಲ್ಲುತ್ತದೆ.
ಕರ್ನಾಟಕ ಏಕೀಕರಣಗೊಂಡು ಐವತ್ತು ವರ್ಷಗಳೇ ಸಂದು ಹೋದರೂ ಕರ್ನಾಟಕದಲ್ಲಿಯೇ ಕನ್ನಡ ಭಾಷೆಗೆ ದೊರೆಯಬೇಕಾಗಿದ್ದ ಸ್ಥಾನಮಾನಗಳು ದೊರೆಯುತ್ತಿಲ್ಲ ಎಂಬ ಬೇಸರ ಎಲ್ಲೆಡೆ ದಟ್ಟವಾಗಿರುವಾಗ, ನಾಡಿನ ಹೊರಗೆ ಹೊರನಾಡ ಕನ್ನಡಿಗರು ಕನ್ನಡ ಸಂಸ್ಕೃತಿಯ ಬಣ್ಣ ಬನಿಯನ್ನು ಗಾಢಗೊಳಿಸಲು ಶ್ರಮಿಸುತ್ತಿರುವುದು ಉಲ್ಲೇಖನೀಯ ಸಂಗತಿ. ಹೀಗಾಗಿ ಕರ್ನಾಟಕ ರಾಜ್ಯವೆಂದ ತಕ್ಷಣ ಬರೇ ಭೌತಿಕ ಗಡಿರೇಖೆಗಳನ್ನಷ್ಟೇ ಗುರುತಿಸುವಂತಾಗಬಾರದು. ರಾಜ್ಯವೆನ್ನುವುದು ಅನೇಕ ಭೌತಿಕ ಸಂಸ್ಕೃತಿ, ಅಭೌತಿಕ ಸಂಸ್ಕೃತಿಗಳ ಮಹಾಸಂಗಮವೇ ಆಗಿರುತ್ತದೆಂಬುವುದನ್ನು ಯಾರೂ ಮರೆಯುವಂತಿಲ್ಲ. ನಾವಿಂದು ವಿಶಾಲವಾದ ನೆಲೆಯಲ್ಲಿ ಬೃಹತ್ ಕರ್ನಾಟಕ-ಸಾಂಸ್ಕೃತಿಕ ಕರ್ನಾಟಕವನ್ನು ಕಲ್ಪಿಸಿಕೊಳ್ಳಬೇಕಾಗಿದೆ. ಅದನ್ನು ಕಟ್ಟಲು ಹೆಣಗಬೇಕಾಗಿದೆ.
"ನಾವು ಕನ್ನಡಿಗರು; ನಾವು ಒಂದು ಭವ್ಯ ಹಾಗೂ ಶ್ರೀಮಂತ ಸಂಸ್ಕೃತಿಯ ಪರಂಪರೆಯ ವಾರಸುದಾರರು" ಎಂಬ ಮಾತನ್ನು ಮರೆಯದೆ ತಮ್ಮೆಲ್ಲ ಕಷ್ಟನಷ್ಟಗಳನ್ನು ಬದಿಗೊತ್ತಿ ಬದುಕನ್ನು ನಡೆಸುತ್ತಿರುವ ಹೊರನಾಡ ಕನ್ನಡಿಗರಿಗೇ ಮನ್ನಣೆ ಇಲ್ಲ ಎಂಬುದು ವಿಷಾದದ ಸಂಗತಿ. ಕಳೆದ ಐದು ದಶಕಗಳಲ್ಲಿ ನಾಡಿನ ಉಜ್ವಲ ಭವಿಷ್ಯಕ್ಕಾಗಿ ಹೊರನಾಡ ಕನ್ನಡಿಗರು ಮನಸಾ ಶ್ರಮಿಸುತ್ತಾ ಬಂದಿರುವುದು ಉಲ್ಲೇಖನೀಯ ಸಂಗತಿ.
ಮುಂಬಯಿಯ ಕೆಲವು ಮೊದಲುಗಳು
ಸಾಂಸ್ಕೃತಿಕ ಕರ್ನಾಟಕದ ಸಾಧನೆಯನ್ನು ಸಿಂಹಾವಲೋಕನ ಮಾಡುವ ಸಂದರ್ಭದಲ್ಲಿ ಇತಿಹಾಸಕಾರರು ಅನೇಕ ಬಾರಿ ಮುಂಬಯಿ ಕಡೆಗೆ ಮುಖ ಮಾಡಬೇಕಾಗುತ್ತದೆ. ಅಂಥ ಕೆಲವು ಮಹತ್ವದ ಘಟನೆಗಳನ್ನು ಇಲ್ಲಿ ಕೊಡಲಾಗಿದೆ.
ಕಾಳಿದಾಸನ ಶಾಕುಂತಲ ನಾಟಕವನ್ನು, ಮೊದಲ ಬಾರಿಗೆ ಕನ್ನಡಕ್ಕೆ ಅನುವಾದಿಸಿದವರು ಒಬ್ಬ ಮುಂಬಯಿ ಕನ್ನಡಿಗ, ಚುರಮುರಿ ಶೇಷಗಿರಿರಾಯರ ಶಾಕುಂತಲ ನಾಟಕವು ೧೮೬೯ರಲ್ಲಿ ಮುಂಬಯಿಯಲ್ಲಿ ಪ್ರಕಟವಾಯಿತು. ಚುರಮುರಿ ಅವರು ವೃತ್ತಿಯಲ್ಲಿ ಇಂಜಿನಿಯರ್.
ಮರಾಠಿ ರಂಗಭೂಮಿಯ ಪಿತಾಮಹ ಅಣ್ಣಾ ಕಿರ್ಲೋಸ್ಕರ್ ಅವರ ಶಾಕುಂತಲಾ ನಾಟಕಕ್ಕೆ ಚುರಮುರಿ ಅವರ ಕೃತಿಯೇ ಪ್ರೇರಣೆ.
ಕನ್ನಡದ ಮೊದಲ ಸಾಮಾಜಿಕ ನಾಟಕ ’ಇಗ್ಗಪ್ಪ ಹೆಗ್ಗಡೆಯ ವಿವಾಹ ಪ್ರಹಸನ’ ಪ್ರಕಟವಾದುದು ದೂರದ ಮುಂಬಯಿಯಲ್ಲಿ. ಕರ್ಕಿ ವೆಂಕಟರಮಣ ಶಾಸ್ತ್ರಿಗಳು ಬರೆದ ಈ ನಾಟಕ ೧೮೮೭ರಲ್ಲಿ ಬೆಳಕು ಕಂಡಿತು.
ಕನ್ನಡ ಪತ್ರಿಕೆಯೊಂದರಲ್ಲಿ ಮೊದಲ ಬಾರಿಗೆ ವ್ಯಂಗ್ಯಚಿತ್ರ ಪ್ರಕಟವಾದುದು ಹವ್ಯಕ ಸುಭೋದದಲ್ಲಿ (೧೮೮೫) ಇದು ಮುಂಬಯಿಯಿಂದ ಪ್ರಕಟವಾಗುತ್ತಿತ್ತು.
ಶಿವರಾಮ ಕಾರಂತರ ಯಕ್ಷಗಾನ ಬ್ಯಾಲೆ ಪ್ರದರ್ಶನ ಕಂಡದ್ದು ಈ ಮಹಾನಗರದಲ್ಲಿ.
ಖ್ಯಾತ ಕಾದಂಬರಿಕಾರ ಚದುರಂಗ, ಸಾಹಿತಿ ಅನುಪಮಾ ನಿರಂಜನ, ಡಾ.ಬಿ.ಎ.ಸನದಿ ಅವರ ಮೊದಲ ಕತೆಗಳು ಬೆಳಕು ಕಂಡದ್ದು ರಂಗಸ್ವಾಮಿಯವರ ’ಆದರ್ಶ ಪತ್ರಿಕೆಯಲ್ಲಿ.
೧೯೫೦ರ ಮುಂಬಯಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಒಂದು ಚಾರಿತ್ರಿಕ ಮಹತ್ವವಿದೆ. ಕನ್ನಡ ’ನವ್ಯಪಂಥ’ ಕಣ್ಣು ಬಿಟ್ಟಿದ್ದೇ ಈ ದೂರದ ಮಹಾನಗರಿಯಲ್ಲಿ. ವಿ.ಕೃ. ಗೋಕಾಕರು ಅದರ ರೂವಾರಿ.
ಕನ್ನಡದ ಮೊದಲ ಪ್ರವಾಸ ಸಾಹಿತ್ಯ ಕೃತಿಯನ್ನು ಬರೆದವರು ಕರ್ಕಿ ವೆಂಕಟರಮಣ ಶಾಸ್ತ್ರಿ (೧೮೮೭); ಕೃತಿಯ ಹೆಸರು ದಕ್ಷಿಣಾಯಾತ್ರಾ ಚರಿತ್ರೆ.
ಹೊಸಗನ್ನಡದ ಮೊದಲ ಕೃತಿ ಬಿ.ಎಂ.ಶ್ರೀ ಅವರ ಇಂಗ್ಲೀಷ್ ಗೀತೆಗಳು ಎಂಬ ಮಾತಿದೆ. ಇದು ತರವಲ್ಲ. ಮುಂಬಯಿಯಲ್ಲಿ ಕನ್ನಡಿಗ ಹಟ್ಟಿಯಂಗಡಿ ನಾರಾಯಣರಾಯರ ’ಆಂಗ್ಲ ಕವಿತಾವಳಿ’ ಹೊಸಗನ್ನಡದ ಮೊದಲ ಅನುವಾದ ಕಾವ್ಯ ಕೃತಿ (೧೯೯೧).
ಕನ್ನಡ ಲೇಖಕ, ಸಾಹಿತಿಯೊಬ್ಬರು ಸ್ಥಾಪಿಸಿದ ಬ್ಯಾಂಕ್-ಶ್ಯಾಮರಾವ್ ವಿಠಲ್ ಬ್ಯಾಂಕ್. ಕೈಕಣೀ ಅವರೇ ಅದರ ಹರಿಕಾರರು.
ಪ್ರಸಾರಭಾರತಿಯ ಅಧ್ಯಕ್ಷರಾದ ಮೊದಲ ಕನ್ನಡಿಗ ಎಂ.ವಿ.ಕಾಮತ್ ಅವರೂ ಮುಂಬಯಿ ಕನ್ನಡಿಗರೇ.
ಆಗಬೇಕಾದದ್ದೇನು?
ಕಳೆದ ಒಂದೆರಡು ದಶಕಗಳಿಂದ ಗಡಿನಾಡು ಹಾಗೂ ಹೊರನಾಡಿನಲ್ಲಿ ಕನ್ನಡ ಶಿಕ್ಷಣ ಕ್ಷೇತ್ರ ಸೊರಗುತ್ತಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಸರಕಾರ ವಿಶೇಷವಾಗಿ ಸ್ಪಂದಿಸಬೇಕು.
ಕನ್ನಡಿಗರು ಹೆಚ್ಚು ಸಂಖ್ಯೆಯಲ್ಲಿ ನೆಲೆಸಿರುವ ಚೆನ್ನೈ, ಗೋವಾ, ಮುಂಬೈ, ಹೈದರಾಬಾದ್ ಮೊದಲಾದ ಕಡೆ ’ಕನ್ನಡಭವನ’ಗಳನ್ನು ’ಮಾಹಿತಿ ಕೇಂದ್ರಗಳನ್ನು ಸ್ಥಾಪಿಸಿ ಹೆಚ್ಚು ಪ್ರವಾಸಿಗರು ಕರ್ನಾಟಕಕ್ಕೆ ಬರುವಂತೆ ಮಾಡಬಹುದು. ಪ್ರವಾಸೋದ್ಯಮವನ್ನು ಸರಕಾರ ಬಲಪಡಿಸಲು ಹೊರನಾಡ ಸಂಘ ಸಂಸ್ಥೆಗಳ ಸಹಯೋಗವನ್ನು ಪಡೆಯಬಹುದು.
ಹೊರನಾಡ ಕನ್ನಡ ಸಂಘ ಸಂಸ್ಥೆಗಳ ಅಭಿವೃದ್ಧಿಯತ್ತಲೂ ಸರಕಾರ ಮುತುವರ್ಜಿ ವಹಿಸಬೇಕು. ತಮ್ಮದೇ ಆದ ಕಟ್ಟಡಗಳನ್ನು ಕಟ್ಟಿಕೊಳ್ಳಲು ’ಆರ್ಥಿಕ ಸಹಾಯ’ ನೀಡಬೇಕು.
ಕರ್ನಾಟಕ ಸರಕಾರ ಹೊರನಾಡ ಕನ್ನಡಿಗರ ಅಭಿವೃದ್ಧಿಗೆ ತನ್ನ ವಾರ್ಷಿಕ ಬಜೆಟ್‌ನಲ್ಲಿ ಕನಿಷ್ಠ ೧೦ಕೋಟಿ ರೂಪಾಯಿ ತೆಗೆದಿರಿಸಬೇಕು.
ಸಂಸ್ಕೃತಿ ಇಲಾಖೆ ಹೊರನಾಡ ಕನ್ನಡಿಗರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಹೀಗಾಗಿ ಪ್ರತ್ಯೇಕ ’ಹೊರನಾಡ ಕನ್ನಡ ಪ್ರಾಧಿಕಾರ’ವೊಂದು ಅಗತ್ಯ ಕರ್ನಾಟಕ ಸರಕಾರ ತುರ್ತಾಗಿ ಸ್ಥಾಪಿಸಿ; ಕನ್ನಡ ಹೊರನಾಡಿನಲ್ಲಿ ಅಳಿದುಹೋಗದಂತೆ ತಡೆಯಬೇಕು.
ಹೊರನಾಡ ಲೇಖಕರ ಕೃತಿಗಳನ್ನು ಕರ್ನಾಟಕ ಸರಕಾರ ಖರೀದಿಸಬೇಕು. ಈಗಿರುವ ಗ್ರಂಥಾಲಯ ಯೋಜನೆಗಳಲ್ಲಿ ಈ ಭಾಗದ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ.
ಕರ್ನಾಟಕ ವಿವಿಧ ಅಕಾಡೆಮಿಗಳಲ್ಲಿ ಹೊರನಾಡ ಕನ್ನಡಿಗರಿಗೆ ಪ್ರಾತಿನಿಧ್ಯ ಸಿಗಬೇಕು. ಪ್ರಶಸ್ತಿ ಪುರಸ್ಕಾರ ಕೊಡುವಾಗ ಹೊರಭಾಗದ ಯೋಗ್ಯ ವ್ಯಕ್ತಿ ಸಂಸ್ಥೆಗಳನ್ನು ಗಮನಿಸಬೇಕು.
ಹೊರನಾಡಿನಲ್ಲಿ ಕನ್ನಡ ಅಧ್ಯಯನದಲ್ಲಿ ತೊಡಗಿಕೊಂಡ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಬೇಕು.
ಹೊರನಾಡಿನಲ್ಲಿ ಗಡಿನಾಡಿನ ಕೆಲವು ಕನ್ನಡ ಶಾಲೆಗಳಲ್ಲಿ, ಸದ್ಯ ಪ್ರಾಥಮಿಕ ಶಾಲೆಯಲ್ಲಿ ಒಂದರಿಂದ ನಾಲ್ಕನೆಯ ಇಯತ್ತೆಯವರೆಗೆ ೪೦ ವಿದ್ಯಾರ್ಥಿಗಳಿಗಾಗಿ ಒಬ್ಬ ಶಿಕ್ಷಕರನ್ನು ಕೊಡಲಾಗುತ್ತಿದೆ. ಈ ನಿಯಮ ಬದಲಿಸಿ ಕನಿಷ್ಠ ೧೫ ವಿದ್ಯಾರ್ಥಿಗಳಿದ್ದರೆ ತರಗತಿ ನಡೆಸುವುದಕ್ಕೆ ಅವಕಾಶ ನೀಡಬೇಕು.
ಅಲ್ಪ ಸಂಖ್ಯಾತ ಭಾಷಿಕರಿಗೆ ಸಿಗುವ ಎಲ್ಲಾ ಸೌಲಭ್ಯ ರಿಯಾಯಿತಿಗಳು ಗಡಿಭಾಗದ ಹಾಗೂ ಹೊರನಾಡ ಕನ್ನಡಿಗರಿಗೆ ಸಿಗುವಂತಾಗಬೇಕು.

-ಡಾ.ಜಿ.ಎನ್.ಉಪಾಧ್ಯಕನ್ನಡ ವಿಭಾಗ, ಮುಂಬಯಿ ವಿಶ್ವವಿದ್ಯಾಲಯ, ವಿದ್ಯಾನಗರಿ
ಮುಂಬಯಿ-೪೦೦ ೦೯೮

No comments:

Post a Comment

ಹಿಂದಿನ ಬರೆಹಗಳು