Saturday, July 3, 2010

ಧನ್ಯತಾಭಾವದೊಂದಿಗೆ ನಾಲ್ಕು ಮಾತು....




ನಿಜಕ್ಕೂ ಹೆಮ್ಮೆಯೆನಿಸುತ್ತದೆ, ಸಾರ್ಥಕತೆಯ ಭಾವ ಮೂಡುತ್ತಿದೆ.
ರೈಲ್ವೆಯಲ್ಲಿ ಕನ್ನಡಿಗರಿಗೆ ಉದ್ಯೋಗ ಕೊಡಿಸಬೇಕು ಎಂಬ ನಮ್ಮ ಬಹುಕಾಲದ ಹೋರಾಟ ಕಡೆಗೂ ಯಶಸ್ವಿಯಾಗಿದೆ. ಇದೇ ಮೊದಲ ಬಾರಿಗೆ ಕನ್ನಡದ ಮಕ್ಕಳು ರೈಲ್ವೆ ಪರೀಕ್ಷೆಗಳಲ್ಲಿ ಕನ್ನಡದಲ್ಲೇ ಬರೆದಿದ್ದಾರೆ, ಉತ್ತೀರ್ಣರಾಗಿದ್ದಾರೆ. ನೈರುತ್ಯ ರೈಲ್ವೆಯಲ್ಲಿ ಅವರು ಇನ್ನು ಮಂದೆ ಕೆಲಸ ಮಾಡಲಿದ್ದಾರೆ.
ಕನ್ನಡ ಚಳವಳಿಗಳು ಭಾವೋದ್ರೇಕದ ಚಳವಳಿಗಳಾಗಿದ್ದೇ ಹೆಚ್ಚು. ಆದರೆ ಕರ್ನಾಟಕ ರಕ್ಷಣಾ ವೇದಿಕೆ ಆರಂಭಗೊಂಡ ದಿನದಿಂದಲೂ ಕನ್ನಡಿಗರ ಬದುಕಿನ ಹೋರಾಟವನ್ನೇ ಪ್ರಧಾನ ಭೂಮಿಕೆಯನ್ನಾಗಿ ಮಾಡಿಕೊಂಡಿದೆ.
ನೀವು ರೈಲ್ವೆ ನಿಲ್ದಾಣಗಳಲ್ಲಿ ಗಮನಿಸಿರಬಹುದು. ಅಲ್ಲಿ ಸ್ಟೇಷನ್ ಮಾಸ್ಟರ್‌ಗಳಿಂದ ಹಿಡಿದು ಗಾರ್ಡ್‌ಗಳವರೆಗೆ ಕೆಲಸ ಮಾಡುವವರು ಒಂದೇ ತಮಿಳಿನವರಾಗಿರುತ್ತಾರೆ, ಅಥವಾ ಬಿಹಾರಿಗಳಾಗಿರುತ್ತಾರೆ. ಸ್ಟೇಷನ್ ಮಾಸ್ಟರ್ ಕೆಲಸ ಹಾಗಿರಲಿ, ಗಾರ್ಡ್ ಕೆಲಸ ಮಾಡಲು ಕನ್ನಡದ ಯುವಕರಿಗೆ ಅರ್ಹತೆಯಿಲ್ಲವೆ? ಕೇಂದ್ರ ಸರ್ಕಾರದ, ರೈಲ್ವೆ ಇಲಾಖೆಯ ಈ ಮಲತಾಯಿ ಧೋರಣೆಯನ್ನು ನೋಡಿದರೆ ನೋವಾಗುತ್ತದೆ.
ಸಿ.ಕೆ.ಜಾಫರ್ ಷರೀಫ್ ಅವರು ರೈಲ್ವೆ ಮಂತ್ರಿಯಾಗಿದ್ದ ಸಂದರ್ಭದಲ್ಲಿ ದಕ್ಷಿಣ ರೈಲ್ವೆ ಮತ್ತು ರೈಲ್ವೆ ಭದ್ರತಾ ಪಡೆಯಲ್ಲಿ ಕನ್ನಡಿಗರಿಗೆ ಒಂದಷ್ಟು ಅವಕಾಶಗಳು ದೊರೆತಿದ್ದನ್ನು ಬಿಟ್ಟರೆ, ಉಳಿದಂತೆ ನೇಮಕಾತಿ ಆಗುತ್ತಿದ್ದವರೆಲ್ಲ ಹೊರರಾಜ್ಯದವರು.
ಈ ಅನ್ಯಾಯವನ್ನು ಕೊನೆಗಾಣಿಸಲೇಬೇಕು ಎಂದು ನಾವು ತೀರ್ಮಾನಿಸಿದೆವು. ಉತ್ತರ ಸಿಗದ, ಫಲ ಕಾಣದ ಹೋರಾಟಗಳಲ್ಲಿ ನನಗೆ ನಂಬಿಕೆಯಿಲ್ಲ. ಅಂಥ ಹೋರಾಟಗಳನ್ನು ಕೈಗೆತ್ತಿಕೊಳ್ಳುವುದರಲ್ಲಿ ಯಾವ ಅರ್ಥವೂ ಇಲ್ಲ ಎಂದು ನಂಬಿದವನು ನಾನು.
ಈ ಸಂದರ್ಭದಲ್ಲಿ ಒಂದು ವಿಷಯವನ್ನು ಸ್ಮರಿಸಿಕೊಳ್ಳಬೇಕು. ಕನ್ನಡದ ಪತ್ರಿಕೆಗಳು ರೈಲ್ವೆಯಲ್ಲಿ ಆಗುತ್ತಿದ್ದ ಅನ್ಯಾಯಗಳನ್ನು ಒಂದೊಂದಾಗಿ ಬಯಲಿಗೆ ತಂದ ಪರಿಣಾಮವಾಗಿಯೇ ನಾವು ಹೋರಾಟಕ್ಕೆ ಇಳಿಯುವಂತಾಯಿತು. ಅದರಲ್ಲೂ ವಿಶೇಷವಾಗಿ ‘ಕನ್ನಡಪ್ರಭ ಪತ್ರಿಕೆಯಲ್ಲಿ ರೈಲ್ವೆ ಇಲಾಖೆ ಕದ್ದು ಮುಚ್ಚಿ ನಡೆಸುತ್ತಿದ್ದ ನೇಮಕಾತಿ ಪರೀಕ್ಷೆಗಳ ಬಗ್ಗೆ ಮಾಹಿತಿ ಪ್ರಕಟಿಸಿದ್ದು, ನಮ್ಮ ಚಳವಳಿಗೆ ಪ್ರೇರಣೆ ತಂದಿತು.
೨೦೦೮ರ ಜನವರಿ ತಿಂಗಳಲ್ಲಿ ನಾವು ನಡೆಸಿದ ಹೋರಾಟವಂತೂ ಕರ್ನಾಟಕದ ಚಳವಳಿಗಳ ಇತಿಹಾಸದಲ್ಲಿ ಪ್ರಮುಖ ದಾಖಲೆಯಾಗಿ ಉಳಿಯುವಂಥದ್ದು. ಆ ದಿನಗಳಲ್ಲಿ ಕನ್ನಡದ ಜನತೆ ನಮ್ಮನ್ನು ಅಭೂತಪೂರ್ವವಾಗಿ ಬೆಂಬಲಿಸಿದರು. ಅವರ ಬೆಂಬಲದಿಂದಲೇ ಆ ಚಳವಳಿ ರಾಜ್ಯದ ಎಲ್ಲ ಭಾಗಗಳಿಗೂ ವಿಸ್ತರಿಸಿ ದೊಡ್ಡ ಪ್ರಮಾಣದ ಒತ್ತಡವನ್ನು ಕೇಂದ್ರ, ರಾಜ್ಯ ಸರ್ಕಾರಗಳ ಮೇಲೆ ಹೇರಲು ಯಶಸ್ವಿಯಾಯಿತು.
* * * *
ಹುಬ್ಬಳ್ಳಿಯನ್ನು ಕೇಂದ್ರವನ್ನಾಗಿಟ್ಟುಕೊಂಡು ಸ್ಥಾಪಿತವಾಗಿರುವ ನೈರುತ್ಯ ರೈಲ್ವೆ ವಲಯ ರೂಪುಗೊಂಡ ನಂತರವಾದರೂ ಕನ್ನಡಿಗರಿಗೆ ಉದ್ಯೋಗ ಕೆಲಸವನ್ನು ರೈಲ್ವೆ ಇಲಾಖೆ ಮಾಡಬೇಕಿತ್ತು. ನೈರುತ್ಯ ರೈಲ್ವೆ ವಲಯದಲ್ಲಿ ಕನ್ನಡಿಗರಿಗೇ ಉದ್ಯೋಗ ನೀಡಬೇಕಾದ್ದು ಕೇಂದ್ರ ಸರ್ಕಾರದ ನೈತಿಕ ಜವಾಬ್ದಾರಿಯಾಗಿತ್ತು.
ಆದರೆ ನಡೆಯುತ್ತಿದ್ದದ್ದೇ ಬೇರೆ. ೨೦೦೭ ರ ಸೆಪ್ಟಂಬರ್ ತಿಂಗಳಿನಲ್ಲಿ ನೈರುತ್ಯ ವಲಯ ಬೆಂಗಳೂರಿನಲ್ಲಿ ಶೀಘ್ರಲಿಪಿಗಾರರ ಹುದ್ದೆಗೆ ಲಿಖಿತ ಪರೀಕ್ಷೆ ನಡೆಸುತ್ತಿತ್ತು. ಈ ಪರೀಕ್ಷೆಯಲ್ಲಿ ಹೊರರಾಜ್ಯದವರೇ ಭಾಗವಹಿಸುತ್ತಿದ್ದಾರೆ ಎಂಬ ಮಾಹಿತಿ ನಮಗೆ ಗೊತ್ತಾಗಿತ್ತು. ಪರೀಕ್ಷೆ ನಡೆಯುತ್ತಿದ್ದ ಸ್ಥಳದಲ್ಲೇ ನಾವು ಪ್ರತಿಭಟಿಸಿದೆವು, ಪರಿಣಾಮವಾಗಿ ಪರೀಕ್ಷೆ ರದ್ದಾಯಿತು.
ಇದಾದ ತರುವಾಯ ಸುಮಾರು ೩೦೦೦ಕ್ಕೂ ಹೆಚ್ಚು ಡಿ ದರ್ಜೆಯ ಹುದ್ದೆಗಳಿಗೆ ನೇಮಕಾತಿ ಆರಂಭವಾಯಿತು. ೨೦೦೮ರ ಜನವರಿಯಲ್ಲಿ ಬೆಂಗಳೂರು, ಹುಬ್ಬಳ್ಳಿ, ಮೈಸೂರು ನಗರಗಳಲ್ಲಿ ಏಕಕಾಲಕ್ಕೆ ನಡೆಯುತ್ತಿದ್ದ ದೈಹಿಕ ಅರ್ಹತಾ ಪರೀಕ್ಷೆಗಳಿಗಾಗಿ ಬಿಹಾರದಿಂದ ಸಾವಿರಾರು ಯುವಕರನ್ನು ಕರೆ ತರಲಾಗಿತ್ತು. ವಿಶೇಷವೆಂದರೆ ಈ ಯುವಕರಿಗೆ ಉಚಿತ ರೈಲ್ವೆ ಟಿಕೆಟ್, ವಸತಿ ಹಾಗು ಊಟೋಪಚಾರಗಳನ್ನೂ ಏರ್ಪಡಿಸಲಾಗಿತ್ತು.
ರೈಲ್ವೆ ಇಲಾಖೆಯನ್ನು ಅಂದು ನಿಭಾಯಿಸುತ್ತಿದ್ದ ಲಾಲೂ ಪ್ರಸಾದ್ ಯಾದವ್ ತನ್ನ ರಾಜ್ಯದ ಜನರನ್ನು ನೈರುತ್ಯ ರೈಲ್ವೆಯಲ್ಲಿ ತುಂಬಲು ಯತ್ನಿಸಿದ್ದರು.
ಭರ್ತಿಯಾಗಬೇಕಿದ್ದ ಡಿ ಗುಂಪಿನ ಕೆಲಸಗಳಾದ ಗ್ಯಾಂಗ್ ಮನ್, ಹಳಿ ನಿಯಂತ್ರಕ, ಖಲಾಸಿ (ಕಾರ್ಯಾಗಾರಗಳ ಸಹಾಯಕ), ಸಾಮಾನು ಹೊರುವ ಕೂಲಿ ಕೆಲಸಗಳಿಗೂ ಸಹ ಕನ್ನಡ ಅಭ್ಯರ್ಥಿಗಳಿಗೆ ಆದ್ಯತೆ ನೀಡದೆ, ಬಿಹಾರ ಮತ್ತು ಕರ್ನಾಟಕೇತರ ರಾಜ್ಯಗಳಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಹುನ್ನಾರ ನಮ್ಮನ್ನು ಕೆರಳಿಸಿತ್ತು. ಬೆಂಗಳೂರು, ಮೈಸೂರು, ಹುಬ್ಬಳ್ಳಿಗಳಲ್ಲಿ ನಾವು ಪ್ರತಿಭಟನೆ ಆರಂಭಿಸಿದೆವು. ಪರೀಕ್ಷೆಗಳಿಗೆ ಅಡ್ಡಿಪಡಿಸಿದೆವು.
ಸಿ ಮತ್ತು ಡಿ ದರ್ಜೆಯ ಉದ್ಯೋಗಗಳು ಸರೋಜಿನಿ ಮಹಿಷಿ ವರದಿ ಅನುಸಾರವಾಗಿ ಕನ್ನಡಿಗರಿಗೇ ದೊರೆಯಬೇಕು ಎಂಬುದು ನಮ್ಮ ಪ್ರಧಾನ ಬೇಡಿಕೆಯಾಗಿತ್ತು. ಇಂಗ್ಲಿಷ್ ಹಾಗು ಹಿಂದಿ ಪ್ರಶ್ನೆ ಪತ್ರಿಕೆಗಳನ್ನು ಮಾತ್ರ ಪರೀಕ್ಷೆಗಳಲ್ಲಿ ನೀಡಲಾಗುತ್ತಿತ್ತು. ಕನ್ನಡದಲ್ಲೂ ಪ್ರಶ್ನೆ ಪತ್ರಿಕೆ ಒದಗಿಸಬೇಕು ಎಂಬುದು ನಮ್ಮ ಮತ್ತೊಂದು ಬೇಡಿಕೆಯಾಗಿತ್ತು.
ಬೆಂಗಳೂರು, ಮೈಸೂರು, ಹುಬ್ಬಳ್ಳಿಗಳಲ್ಲಿ ಪರಿಸ್ಥಿತಿ ಕೈ ಮೀರಿ ಹೋದ ಪರಿಣಾಮವಾಗಿ ಅಂತಿಮವಾಗಿ ರೈಲ್ವೆ ಇಲಾಖೆ ಅಧಿಕಾರಿಗಳು ಕೈಚೆಲ್ಲಿ ಪರೀಕ್ಷೆಗಳನ್ನು ರದ್ದುಗೊಳಿಸಿದರು. ನಮ್ಮ ಪ್ರತಿರೋಧವನ್ನು ಎದುರಿಸಲಾಗದೆ, ಸ್ಥಳೀಯರಿಗೆ ನೌಕರಿಯ ಬೇಡಿಕೆ ಈಡೇರಿಸುವವರೆಗೆ ಇಲ್ಲಿ ಪರೀಕ್ಷೆಗಳನ್ನು ನಡೆಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಬರೆದರು.
* * * *
ಲಾಲೂ ಪ್ರಸಾದ್ ಯಾದವ್ ಹೋದರು, ಮಮತಾ ಬ್ಯಾನರ್ಜಿ ಬಂದರು. ಆ ಹೊತ್ತಿಗಾಗಲೇ ನಮ್ಮ ರೈಲ್ವೆ ಹೋರಾಟವನ್ನು ಇಡೀ ದೇಶದ ಜನತೆ ಗಮನಿಸಿತ್ತು. ಮಹಾರಾಷ್ಟ್ರ ಸೇರಿದಂತೆ ದೇಶದ ಇತರ ಭಾಗಗಳಲ್ಲೂ ಸ್ಥಳೀಯರಿಗೆ ನೌಕರಿ ನೀಡಬೇಕೆಂದು ರೈಲ್ವೆ ವಿರುದ್ಧ ಹೋರಾಟಗಳು ಆರಂಭಗೊಂಡವು.
ಇದೆಲ್ಲವನ್ನು ಗಮನಿಸಿದ್ದ ಮಮತಾ ಬ್ಯಾನರ್ಜಿ ಕಡೆಗೂ ನಮ್ಮ ಬೇಡಿಕೆಯನ್ನು ಈಡೇರಿಸುವ ಭರವಸೆ ನೀಡಿದರು. ಕನ್ನಡವೂ ಸೇರಿದಂತೆ ಸ್ಥಳೀಯ ಭಾಷೆಗಳಲ್ಲಿ ಪ್ರಶ್ನೆ ಪತ್ರಿಕೆಗಳನ್ನು ನೀಡಲಾಗುವುದು ಎಂದು ತಮ್ಮ ಬಜೆಟ್ ಭಾಷಣದಲ್ಲಿ ಘೋಷಿಸಿದರು. ಅವರು ತೆಗೆದುಕೊಂಡ ಮತ್ತೊಂದು ಮಹತ್ವದ ತೀರ್ಮಾನವೆಂದರೆ, ರೈಲ್ವೆ ಪರೀಕ್ಷೆಗಳನ್ನು ದೇಶದಲ್ಲಿ ಏಕಕಾಲಕ್ಕೆ ನಡೆಸುವುದು. ಒಂದು ರಾಜ್ಯದೊಳಗೆ ಮತ್ತೊಂದು ರಾಜ್ಯದವರು ರಾಜ್ಯಭಾರ ಮಾಡುವುದನ್ನು ತಪ್ಪಿಸುವುದು ಅವರ ಉದ್ದೇಶವಾಗಿತ್ತು.
* * * *
ಇದೀಗ ಮತ್ತೆ ರೈಲ್ವೆ ಪರೀಕ್ಷೆಗಳು ನಡೆಯುತ್ತಿವೆ. ಕನ್ನಡದ ನೂರಾರು ಯುವಕರು ಪರೀಕ್ಷೆ ಬರೆದಿದ್ದಾರೆ, ಉತ್ತೀರ್ಣರೂ ಆಗಿದ್ದಾರೆ. ಹೀಗೆ ಪರೀಕ್ಷೆ ಬರೆದವರ ಪೈಕಿ ಸಾಕಷ್ಟು ಮಂದಿ ನನ್ನ ಬಳಿ ಬಂದು ಧನ್ಯವಾದ ಹೇಳುತ್ತಿದ್ದಾರೆ. ನಿಮ್ಮ ಹೋರಾಟದಿಂದಾಗಿಯೇ ನಮಗೆ ನೌಕರಿ ಸಿಗುವಂತಾಗಿದೆ ಎಂದು ಹರ್ಷದಿಂದ ಹೇಳುತ್ತಿದ್ದಾರೆ.
ನಿಜಕ್ಕೂ ಇದು ಧನ್ಯತಾಭಾವವನ್ನು ಮೂಡಿಸುತ್ತಿದೆ. ನಮ್ಮ ಪರಿಶ್ರಮ ಫಲ ಕಂಡಿದೆ. ರೈಲ್ವೆ ಹೋರಾಟದ ಸಂದರ್ಭದಲ್ಲಿ ನನ್ನ ಹುಡುಗರನೇಕರು ಸಾಕಷ್ಟು ಬಾರಿ ಲಾಠಿ ಏಟು ತಿಂದಿದ್ದಾರೆ. ಆ ಹುಡುಗರು ತಿಂದ ಏಟುಗಳ ಗಾಯಗಳಿನ್ನೂ ಮಾಸಿಲ್ಲ. ಹೋರಾಡಿದ ಹುಡುಗರು ಇನ್ನೂ ಕೋರ್ಟುಗಳನ್ನು ಅಲೆಯುತ್ತಿದ್ದಾರೆ. ಇದೆಲ್ಲ ನೋವೂ ಸಹ ನಮ್ಮ ರಾಜ್ಯದ ಸಾವಿರಾರು ಯುವಕರು ರೈಲ್ವೆಯಲ್ಲಿ ಉದ್ಯೋಗ ಪಡೆಯುತ್ತಿರುವ ಸಂಭ್ರಮದ ಕ್ಷಣಗಳಿಂದಾಗಿ ಮರೆಯುತ್ತಿದೆ. ಕನ್ನಡ-ಕನ್ನಡಿಗನಿಗಾಗಿ ಇಂಥ ಸಾಕಷ್ಟು ತ್ಯಾಗಗಳನ್ನು ನಾವು ಹಿಂದೆಯೂ ಮಾಡಿದ್ದೇವೆ, ಮುಂದೆಯೂ ಮಾಡಲಿದ್ದೇವೆ.
ಆದರೆ ನಮ್ಮ ಚಳವಳಿ ಯಶಸ್ವಿಯಾಗಿ, ಕನ್ನಡಿಗನಿಗೆ ನ್ಯಾಯ ದೊರಕಿದರೆ ಸಿಗುವ ಆತ್ಮತೃಪ್ತಿ ಎಲ್ಲ ನೋವನ್ನೂ ಮರೆಸುತ್ತದೆ.
* * * *
೧೯೯೫ರ ಏಪ್ರಿಲ್ ೨೧ರಂದು ಕರ್ನಾಟಕ ಸರ್ಕಾರ ಆದೇಶವೊಂದನ್ನು ಹೊರಡಿಸಿತ್ತು. (ಸರ್ಕಾರಿ ಆದೇಶ ಸಂಖ್ಯೆ: ಸಿಐ ೨೨೮ ಆರ್‌ಐಎಸ್ ೯೦) ಆ ಆದೇಶದ ಕೆಲವು ಅಂಶಗಳನ್ನು ಗಮನಿಸಿ:
೧. ಕನ್ನಡಿಗರಿಗೆ (ಯಾರು ರಾಜ್ಯದಲ್ಲಿ ಕನಿಷ್ಠ ಹದಿನೈದು ವರ್ಷ ವಾಸವಾಗಿರುವರೋ ಮತ್ತು ಕನ್ನಡ ಓದುವ ಮತ್ತು ಬರೆಯುವ ಜ್ಞಾನವಿದೆಯೋ ಅಂಥವರನ್ನು ಕನ್ನಡಿಗರೆಂದು ಪರಿಗಣಿಸಲಾಗುವುದು.) ಕೈಗಾರಿಕಾ ಘಟಕಗಳಲ್ಲಿ ಉದ್ಯೋಗ ದೊರಕಿಸಿಕೊಡಲು, ಈ ಘಟಕಗಳ ಸ್ಥಾಪನೆಗಾಗಿ ಭೂಮಿಯನ್ನು ಕಳೆದುಕೊಂಡ ರೈತ ಕುಟುಂಬದಲ್ಲಿ ಒಬ್ಬರಿಗೆ ಉದ್ಯೋಗವನ್ನು ಅವರ ವಿದ್ಯಾರ್ಹತೆಗೆ ತಕ್ಕಂತೆ ಮತ್ತು ಕೈಗಾರಿಕಾ ಘಟಕಗಳ ಉಪಯುಕ್ತತೆಗೆ ತಕ್ಕಂತೆ ಕಡ್ಡಾಯವಾಗಿ ದೊರಕಿಸಿಕೊಡಲು ಕ್ರಮ ಕೈಗೊಳ್ಳುವುದು.
೨. ಎಲ್ಲಾ ಕೈಗಾರಿಕಾ ಘಟಕಗಳ ಸಿಬ್ಬಂದಿ ಅಧಿಕಾರಿಯು ಕನ್ನಡಿಗನೇ ಆಗಿರಬೇಕು ಎಂದು ಒತ್ತಾಯಿಸುವುದು. ಇತ್ಯಾದಿ, ಇತ್ಯಾದಿ...
ಈ ಆದೇಶ ನಿಜಕ್ಕೂ ಪಾಲನೆಯಾಗಿದೆಯೇ? ಕೈಗಾರಿಕೆಗಳಿಗೆ ಭೂಮಿ ಕೊಟ್ಟ ರೈತನ ಕುಟುಂಬದವರಿಗೆ ನೌಕರಿ ನೀಡಲಾಗಿದೆಯೇ? ಎಷ್ಟು ರೈತರಿಗೆ ಇಂಥ ಉದ್ಯೋಗ ಕೊಡಲಾಗಿದೆ ಎಂಬುದರ ಕುರಿತು ಸರ್ಕಾರ ಮಾಹಿತಿ ನೀಡುವುದೇ? ಒಂದು ವೇಳೆ ಉದ್ಯೋಗ ನೀಡಿಲ್ಲವಾದರೆ ಸರ್ಕಾರಿ ಆದೇಶ ಉಲ್ಲಂಘನೆಯ ಹಿನ್ನೆಲೆಯಲ್ಲಿ ಕೈಗಾರಿಕೆಗಳ ಮೇಲೆ ಯಾವ ಕ್ರಮ ಕೈಗೊಳ್ಳಲಾಗಿದೆ? ಈ ಎಲ್ಲ ಪ್ರಶ್ನೆಗಳಿಗೂ ಸರ್ಕಾರ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಉತ್ತರಿಸಬೇಕಾಗುತ್ತದೆ. ಉದ್ದಿಮೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಬೇಕೆಂಬ ಆದೇಶ ಪಾಲನೆ ಮಾಡುವ ನಿಟ್ಟಿನಲ್ಲಿ ಕಾರ್ಮಿಕ ಇಲಾಖೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕೈಗಾರಿಕಾ ಇಲಾಖೆಗಳು ತೆಗೆದುಕೊಂಡಿರುವ ಕ್ರಮಗಳೇನು ಎಂಬುದನ್ನೂ ಪ್ರಶ್ನಿಸಬೇಕಾಗುತ್ತದೆ.
ಈ ನಾಡಿನಲ್ಲಿ ಉತ್ಪತ್ತಿಯಾಗುವ ಉದ್ಯೋಗ ಇಲ್ಲಿನ ಮಣ್ಣಿನ ಮಕ್ಕಳಿಗೆ ಸಿಗದಿದ್ದರೆ ಆ ಉದ್ದಿಮೆಗಳು ಯಾಕಾದರೂ ಇರಬೇಕು? ಇಂಥವುಗಳನ್ನು ನಾವು ಯಾಕಾದರೂ ಸಹಿಸಿಕೊಳ್ಳಬೇಕು? ಅಷ್ಟಕ್ಕೂ ನಾಡಮಕ್ಕಳಿಗೆ ಉದ್ಯೋಗ ಕೊಡಿ ಎಂದು ನಾವು ಹೊಸದಾಗಿ ಇಟ್ಟಿರುವ ಬೇಡಿಕೆಯೇನಿಲ್ಲ. ಸರ್ಕಾರವೇ ನೇಮಿಸಿದ್ದ ಸರೋಜಿನಿ ಮಹಿಷಿ ಆಯೋಗ ನೀಡಿದ ವರದಿ ಹೇಳಿದ ಮಾತುಗಳಿವು. ಅದನ್ನು ಸರ್ಕಾರವೂ ಒಪ್ಪಿಕೊಂಡಿದೆ. ಮಾತ್ರವಲ್ಲ, ಸಾಕಷ್ಟು ಆದೇಶಗಳನ್ನೂ ಮಾಡಿದೆ. ನಿಮ್ಮದೇ ಸರ್ಕಾರದ ಆದೇಶಗಳನ್ನು ನೀವೇ ಪಾಲಿಸದಿದ್ದರೆ ಹೇಗೆ ಎಂಬುದಷ್ಟೆ ನಮ್ಮ ಪ್ರಶ್ನೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಈಗಿನ ಅಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರುರವರು ಕನ್ನಡದ ವಿಷಯದಲ್ಲಿ ಬದ್ಧತೆಯುಳ್ಳವರು. ಅವರ ಕನ್ನಡನಿಷ್ಠೆ ಪ್ರಶ್ನಾತೀತ. ಅವರು ನಮ್ಮೊಂದಿಗೆ ಹಲವಾರು ಹೋರಾಟಗಳಲ್ಲಿ ಪಾಲ್ಗೊಂಡವರು. ಕರ್ನಾಟಕ ರಕ್ಷಣಾ ವೇದಿಕೆಯು ಕಾಲಕಾಲಕ್ಕೆ ಕೈಗೆತ್ತಿಕೊಂಡು ಬಂದ ಚಳವಳಿಗಳಿಗೆ ಪೂರ್ಣಪ್ರಮಾಣದಲ್ಲಿ ಬೆಂಬಲ ನೀಡಿಕೊಂಡು ಬಂದವರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಮುಖ್ಯಮಂತ್ರಿ ಚಂದ್ರು ಅವರಿಗಿಂತ ಯೋಗ್ಯರು ಬಿಜೆಪಿಯಲ್ಲಿ ಇನ್ನೊಬ್ಬರಿರಲು ಸಾಧ್ಯವಿಲ್ಲ. ಹೀಗಿದ್ದಾಗ್ಯೂ ಅವರಿಂದ ನಾವು ನಿರೀಕ್ಷಿಸಿದಷ್ಟು ಕೆಲಸಗಳಾಗುತ್ತಿಲ್ಲ. ಸರ್ಕಾರ ಅವರ ಕೈಗಳನ್ನೂ ಕಟ್ಟಿಹಾಕಿದೆಯೇ ಎಂಬ ಚಿಂತೆ ನಮ್ಮದು.
ನಲ್ನುಡಿಯ ಮುಂದಿನ ಸಂಚಿಕೆಯಲ್ಲಿ ಪ್ರಾಧಿಕಾರ ಮಾಡಬೇಕಾಗಿದ್ದೇನು? ಆಗಿರುವುದೇನು ಎಂಬ ವಿಷಯಗಳ ಕುರಿತು ಬೆಳಕು ಚೆಲ್ಲುವ ಮಾಹಿತಿಗಳನ್ನು ಒದಗಿಸಲಿದ್ದೇವೆ. ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಿಗರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ತನ್ನ ಪ್ರಯತ್ನಗಳನ್ನು ಮುಂದುವರೆಸುತ್ತದೆ. ರೈಲ್ವೆ ಚಳವಳಿಯ ವಿಜಯ ನಮ್ಮನ್ನು ಇನ್ನಷ್ಟು ಆಂದೋಲನಗಳಿಗೆ ಪ್ರೇರಣೆ ಒದಗಿಸಿದೆ. ಆ ನಿಟ್ಟಿನಲ್ಲಿ ನಾವು ಮುಂದೆ ಸಾಗುತ್ತೇವೆ.

ಕೈಚೆಲ್ಲಿ ಹೊರಟರು ಸಂತೋಷ್ ಹೆಗಡೆಯವರು...


ಪ್ರಗತಿಪರ ನಿಲುವಿನ ಪತ್ರಕರ್ತ, ಪತ್ರಿಕೆಯ ಪ್ರಧಾನ ಸಂಪಾದಕ ದಿನೇಶ್ ಕುಮಾರ್ ಎಸ್.ಸಿ. ಅವರ ‘ದೇಸೀಮಾತು ಅಂಕಣ ಈ ಸಂಚಿಕೆಯಿಂದ ಆರಂಭಗೊಳ್ಳುತ್ತಿದೆ. ಅವರ ಭಾಷೆ ಹರಿತ, ಧೋರಣೆ ಸ್ಪಷ್ಟ. ಸರ್ವಸಮಾನ ಸಮಾಜ ನಿರ್ಮಾಣವಾಗಬೇಕು ಎಂಬುದು ಅವರ ಬರವಣಿಗೆಯ ಅಂತರಾತ್ಮ. ಕನ್ನಡ ಚಳವಳಿಯೂ ಸೇರಿದಂತೆ ಎಲ್ಲ ಜನಪರ ಚಳವಳಿಗಳ ಒಡನಾಡಿಯಾದ ದಿನೇಶ್ ಪತ್ರಿಕಾವೃತ್ತಿಯ ಜತೆಗೇ ಹೊಸ ಸಾಧ್ಯತೆಗಳನ್ನು ಹುಡುಕುತ್ತಾ ಇರುವವರು. ಓದುಗರಿಗೆ ಈ ಅಂಕಣ ಇಷ್ಟವಾದೀತು ಎಂಬುದು ನಮ್ಮ ನಂಬುಗೆ. -ಸಂ

ನ್ಯಾಯಮೂರ್ತಿ ಸಂತೋಷ್ ಹೆಗಡೆಯವರು ರಾಜೀನಾಮೆ ಕೊಡ್ತಿದ್ದಾರೆ ಎಂದು ನಮ್ಮ ಶರಣಬಸಪ್ಪ ಮಧ್ಯಾಹ್ನವೇ ಹೇಳಿದಾಗ ಗಾಬರಿಯಾಯಿತು. ನಿಜಾನಾ? ಅಂತ ಮತ್ತೆ ಪ್ರಶ್ನಿಸಿದೆ. ‘ಹೌದು ಸಾರ್, ಸಂಜೆ ಸಂಜೆ ಆರು ಗಂಟೆಗೆ ರಾಜೀನಾಮೆ ಕೊಟ್ಟು ಪತ್ರಿಕಾಗೋಷ್ಠಿ ಮಾಡ್ತಾರೆ ಅಂದರು ಶರಣ್. ಯಾಕೋ ತುಂಬ ಸಂಕಟವೆನಿಸಿತು. ಸಂಜೆಯ ಹೊತ್ತಿಗೆ ಎಲ್ಲವೂ ಬಯಲಾದವು. ಹೆಗಡೆಯವರು ರಾಜೀನಾಮೆ ಕೊಟ್ಟರು. ಅವರ ಸುದೀರ್ಘ ಪತ್ರಿಕಾಗೋಷ್ಠಿಯನ್ನು ನೇರಪ್ರಸಾರದಲ್ಲಿ ನೋಡಿದ ನಂತರ ವಿಷಾದ ಮಡುಗಟ್ಟಿದಂತಾಯ್ತು.
ನಾರಾಯಣಗೌಡರು ಮೊಬೈಲ್‌ನಲ್ಲಿ ಮಾತನಾಡಿ, ಈ ಬಾರಿಯ ಸಂಚಿಕೆಯಲ್ಲಿ ಇದೇ ಪ್ರಮುಖ ವಿಷಯವಾಗಬೇಕು ಎಂದರು. ನನಗೆ ತುಂಬ ಹತಾಶೆ ಎನಿಸಿದ್ದು, ಯಾಕೆ ಜನ ಇಂಥ ಸಂದರ್ಭದಲ್ಲೂ ಮನೆಯಲ್ಲಿ ಬೆಚ್ಚಗೆ ಕುಳಿತುಕೊಳ್ಳುತ್ತಾರೆ ಎಂಬುದಕ್ಕೆ. ಅದನ್ನೇ ಗೌಡರ ಬಳಿ ಹೇಳಿದೆ. ‘ಯಾಕೆ ಜನ ಬೀದಿಗೆ ಇಳೀತಾ ಇಲ್ಲ. ಪ್ರತಿಭಟಿಸಬೇಕು ಎಂದು ಯಾಕೆ ನಮ್ಮ ಶ್ರೀಸಾಮಾನ್ಯನಿಗೆ ಅನ್ನಿಸುತ್ತಿಲ್ಲ.
‘ಯಾರು ಮಾಡ್ತಾರೋ ಬಿಡ್ತಾರೋ, ನಾವಂತೂ ಪ್ರತಿಭಟಿಸೋಣ. ಇದು ಕರಾಳ ದಿನ. ರಾಜ್ಯ ಪೂರ್ಣ ಪ್ರಮಾಣದಲ್ಲಿ ಭ್ರಷ್ಟರ ಕೈ ಸೇರುತ್ತಿದೆ ಎಂದರು ಗೌಡರು.
*****
ಇತ್ತೀಚಿಗಷ್ಟೆ ಪ್ರೆಸ್ ಕ್ಲಬ್‌ನಲ್ಲಿ ಸಂತೋಷ್ ಹೆಗಡೆಯವರನ್ನು ‘ವರ್ಷದ ವ್ಯಕ್ತಿ ಎಂದು ಗೌರವಿಸಿದ್ದು ನೆನಪಾಯಿತು. ವರ್ಷದ ಪ್ರಶಸ್ತಿಗಾಗಿ ನಮ್ಮ ಕ್ಲಬ್ ಸದಸ್ಯರಿಂದ ಅಭಿಪ್ರಾಯ ಸಂಗ್ರಹಿಸಿದಾಗ ನೂರಕ್ಕೆ ೯೦ ಭಾಗ ಪತ್ರಕರ್ತರು ಸೂಚಿಸಿದ್ದು ಸಂತೋಷ್ ಹೆಗಡೆಯವರ ಹೆಸರನ್ನು.
ಕಾರ್ಯಕ್ರಮಕ್ಕೆ ಹೆಗಡೆಯವರು ಬಂದಾಗ ನಾನು ಅವರ ಬಳಿ ಅದನ್ನೇ ಹೇಳಿದ್ದೆ. ‘ಸರ್, ನಿಮ್ಮದು ಸಹಜ ಆಯ್ಕೆ. ವರ್ಷದ ವ್ಯಕ್ತಿ ಹುದ್ದೆಗೆ ಇನ್ನೊಬ್ಬರ ಹೆಸರನ್ನು ಪರಿಗಣಿಸುವ ಪ್ರಶ್ನೆಯೇ ಇರಲಿಲ್ಲ ಎಂದೆ. ಅವರು ನಸುನಕ್ಕಿದ್ದರು.
ಹೆಗಡೆಯವರು ತಮ್ಮ ಶ್ರೀಮತಿಯವರೊಂದಿಗೆ ಕಾರ್ಯಕ್ರಮಕ್ಕೆ ಬಂದಿದ್ದರು. ಅವರು ಅಂದು ಮಾತನಾಡಿದ್ದು ತುಂಬ ಕಡಿಮೆ. ನಾನು ನಿಮಿತ್ತ ಮಾತ್ರ. ಲೋಕಾಯುಕ್ತ ಇಲಾಖೆಯ ಸಮಸ್ತ ಸಿಬ್ಬಂದಿಯ ಶ್ರಮದಿಂದಲೇ ಪ್ರಶಸ್ತಿ ನನಗೆ ಸಂದಿದೆ. ಪ್ರಶಸ್ತಿಯ ಶ್ರೇಯ ಆ ಎಲ್ಲ ಸಿಬ್ಬಂದಿಗೂ ಸೇರಬೇಕು ಎಂದು ಅವರು ವಿನಯದಿಂದ ಹೇಳಿದ್ದರು.
*****
ಲೋಕಾಯುಕ್ತ ಸಂಸ್ಥೆಯಿಂದ ಹೊರಹೋಗುವಾಗಲೂ ಸಂತೋಷ್ ಹೆಗಡೆಯವರು ತಮ್ಮ ಸಿಬ್ಬಂದಿಯ ಬಗ್ಗೆಯೇ ಕಾಳಜಿಯಿಂದ ಮಾತಾಡಿದ್ದನ್ನು ನಾವು ಕೇಳಿದ್ದೇವೆ. ಸುಮಾರು ೨೦೦೦ ಕೋಟಿ ರೂ ಬೆಲೆಬಾಳುವ ಕಬ್ಬಿಣದ ಅದಿರು ಅಕ್ರಮ ಸಾಗಣೆಯನ್ನು ತಡೆಗಟ್ಟಿದ್ದ ಕಾರ್ಯದಲ್ಲಿ ತಮ್ಮೊಂದಿಗೆ ತೊಡಗಿಕೊಂಡಿದ್ದ ಅಧಿಕಾರಿಯೊಬ್ಬರನ್ನು ಸಚಿವ ಕೃಷ್ಣ ಪಾಲೇಮಾರ್ ಪತ್ರದಿಂದಾಗಿ ಅಮಾನತುಗೊಳಿಸಲು ಸರ್ಕಾರ ಯತ್ನಿಸುತ್ತಿರುವ ಅಂಶವೇ ಅವರನ್ನು ಚಿಂತೆಗೀಡು ಮಾಡಿತ್ತು.
‘ಕನಿಷ್ಠ ನನ್ನ ರಾಜೀನಾಮೆಯಿಂದಲಾದರೂ ಆ ಅಧಿಕಾರಿಯನ್ನು ಸಸ್ಪೆಂಡ್ ಮಾಡುವ ಸಾಹಸಕ್ಕೆ ಸರ್ಕಾರ ಕೈ ಹಾಕುವುದಿಲ್ಲ ಎಂದು ಹೆಗಡೆಯವರು ಹೇಳುತ್ತಾ ಇರುವುದನ್ನು ಕೇಳಿದರೆ ನಿಜಕ್ಕೂ ಮನಸ್ಸಿಗೆ ಘಾಸಿಯಾಗುತ್ತದೆ. ಒಬ್ಬ ಅಧಿಕಾರಿಯನ್ನು ಉಳಿಸಲೆಂದು ಸಂತೋಷ್ ಹೆಗಡೆಯವರಂಥವರು ರಾಜೀನಾಮೆ ಕೊಡುವಂಥ ಪ್ರಸಂಗ ಉದ್ಭವಿಸಬೇಕೆ? ಇದೆಂಥ ಅನಾಗರಿಕ ಸರ್ಕಾರ?
‘ನಾನು ರಾಜೀನಾಮೆ ಕೊಡುವ ವಿಷಯವನ್ನು ಹೇಳಿದಾಗ ನನ್ನ ಅಧಿಕಾರಿಗಳು ಆಘಾತಗೊಂಡರು. ನಮ್ಮನ್ನೆಲ್ಲ ಇಲ್ಲಿಗೆ ಕರೆಸಿಕೊಂಡು ನೀವೇ ಬಿಟ್ಟು ಹೋದರೆ ಹೇಗೆ?ಎಂದು ನೋವು ತೋಡಿಕೊಂಡರು. ನಾನು ಅವರನ್ನು ಸಮಾಧಾನಿಸಿದೆ. ನನ್ನ ರಾಜೀನಾಮೆಯಿಂದಲಾದರೂ ಸರ್ಕಾರ ಎಚ್ಚೆತ್ತುಕೊಂಡು ಈ ಸಂಸ್ಥೆಯನ್ನು ಬಲಪಡಿಸಬಹುದು ಎಂದು ಹೇಳಿದೆ ಎಂದವರು ಹೆಗಡೆಯವರು ಹೇಳುತ್ತಿದ್ದರು.
ಸಂತೋಷ್ ಹೆಗಡೆಯವರು ಲೋಕಾಯುಕ್ತರಾಗಿ ಬಂದ ನಂತರ ಪೊಲೀಸ್ ಇಲಾಖೆಯಲ್ಲಿದ್ದ ಪ್ರಾಮಾಣಿಕ ಅಧಿಕಾರಿಗಳನ್ನು ಹುಡುಹುಡುಕಿ ತಂದು ಜತೆಗಿಟ್ಟುಕೊಂಡಿದ್ದರು. ನಿಷ್ಠುರ ಅಧಿಕಾರಿ ದತ್ತ ಅವರನ್ನು ಕರೆತಂದಿದ್ದರು.
ಮಧುಕರ ಶೆಟ್ಟಿ, ಈಶ್ವರಚಂದ್ರ ವಿದ್ಯಾಸಾಗರ್, ರೂಪ್‌ಕುಮಾರ್, ರಂಗಸ್ವಾಮಿ ನಾಯಕ್‌ರಂಥ ಅತ್ಯಂತ ಪ್ರಾಮಾಣಿಕರನ್ನು ಇಲಾಖೆಗೆ ಕರೆಸಿದ್ದರು. ಮೊದಲು ಲೋಕಾಯುಕ್ತ ಇಲಾಖೆ ಯಲ್ಲಿರುವ ಭ್ರಷ್ಟರನ್ನು ಹೊರಗೆ ಅಟ್ಟಬೇಕು ಎಂಬುದು ಅವರ ಉದ್ದೇಶ ವಾಗಿತ್ತು. ಅದನ್ನು ಅವರು ಭಾಗಶಃ ಈಡೇರಿಸಿಕೊಂಡಿದ್ದರು.
‘ನನ್ನ ತಂದೆ ಹೇಳ್ತಾ ಇದ್ದರು. ಎಲ್ಲಿ ನಿನ್ನ ಅವಶ್ಯಕತೆ ಇರುವುದಿಲ್ಲವೋ ಅಲ್ಲಿ ಒಂದು ಕ್ಷಣವೂ ಇರಬೇಡ. ಅದೇ ಮಾತಿನಂತೆ ನಾನು ರಾಜೀನಾಮೆ ನೀಡುತ್ತಿದ್ದೇನೆ. ಇದು ಮೊದಲ ಬಾರಿಯೇನು ಅಲ್ಲ. ಹಿಂದೆಯೂ ಹೀಗೆಯೇ ನಡೆದುಕೊಂಡಿದ್ದೇನೆ.
ಲೋಕಾಯುಕ್ತ ಸಂಸ್ಥೆಯಲ್ಲಿ ಈಗ ಏನೂ ಉಳಿದಿಲ್ಲ. ಅಧಿಕಾರವೇ ಇಲ್ಲದ ಮೇಲೆ ಇಲ್ಲಿದ್ದು ಏನನ್ನು ಸಾಧಿಸಲಿ. ಜನರಿಗೆ ಏನು ಉತ್ತರ ಕೊಡಲಿ. ನನ್ನ ಬಳಿ ಸಮಸ್ಯೆ ಹೇಳಿಕೊಂಡು ಬರುವ ಬಡವರ ಕಷ್ಟಕ್ಕೆ ಹೇಗೆ ಸ್ಪಂದಿಸಲಿ. ಸರ್ಕಾರಿ ಬಂಗಲೆಯಲ್ಲಿದ್ದು, ಸುಮ್ಮನೆ ಸಂಬಳ ಎಣಿಸಲು ನಾನಿರಬೇಕೇ? ಅದು ನನಗೆ ಬೇಕಿಲ್ಲ. ಎಂದು ಸ್ಪಷ್ಟವಾಗಿ ಹೇಳಿದರು ಸಂತೋಷ್ ಹೆಗಡೆ.
ಸಂತೋಷ್ ಹೆಗಡೆಯವರು ರಾಜೀನಾಮೆ ಕೊಡಬಾರದಿತ್ತು. ಒಳಗೇ ಇದ್ದು ಹೋರಾಟ ನಡೆಸಬೇಕಿತ್ತು. ಈಗ ರಾಜೀನಾಮೆ ಕೊಟ್ಟಿರುವುದು ಅಂಜಿ ಓಡಿ ಹೋದಂತೆ ಎಂದು ಮಾತನಾಡುವುದು ಸುಲಭ.
ಪತ್ರಿಕಾಗೋಷ್ಠಿಯಲ್ಲಿ ಇಂಥದೇ ಪ್ರಶ್ನೆಗಳಿಗೆ ಉತ್ತರಿಸುವಾಗ ಹೆಗಡೆಯವರು ಬಹಳ ಸ್ಪಷ್ಟವಾಗಿದ್ದರು. ‘ನನಗಿಲ್ಲಿ ಮಾಡಲು ಕೆಲಸವೇ ಇಲ್ಲ. ಮಾಡಿದ ಕೆಲಸಗಳಿಗೆ ಸರ್ಕಾರದ ಅಡ್ಡಗಾಲು. ಇಲ್ಲಿರುವುದು ಇನ್ನು ನನ್ನಿಂದ ಸಾಧ್ಯವೇ ಇಲ್ಲ. ಸುಮ್ಮನೆ ಇದ್ದು ಸಾಧಿಸುವುದೇನನ್ನು? ಹೀಗಾಗಿ ಹೊರಹೋಗುತ್ತಿದ್ದೇನೆ.
*****
ಹೆಗಡೆಯವರು ಲೋಕಾಯುಕ್ತ ಸಂಸ್ಥೆಗೆ ಬಂದಾಗ ದೊಡ್ಡ ಸವಾಲನ್ನೇ ಅವರು ಎದುರುಗೊಳ್ಳಬೇಕಾಗಿತ್ತು. ಸಂತೋಷ್ ಹೆಗಡೆಯವರ ಕುರಿತಾಗಿ ರಾಜ್ಯದ ಜನತೆಗೆ ಅಷ್ಟಾಗಿ ಗೊತ್ತಿರಲೂ ಇಲ್ಲ. ಅವರ ತಂದೆ ಕೆ.ಎಸ್.ಹೆಗಡೆಯವರು ಲೋಕಸಭೆಯ ಸ್ಪೀಕರ್ ಆಗಿದ್ದರು, ಅದಕ್ಕೂ ಮುನ್ನ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿದ್ದರು. ಇಂದಿರಾ ಗಾಂಧಿಯವರ ವಿರುದ್ಧ ತೀರ್ಪು ಬರೆದ ಹಿನ್ನೆಲೆಯಲ್ಲಿ ಅವರಿಗೆ ನ್ಯಾಯಯುತವಾಗಿ ಸಲ್ಲಬೇಕಾಗಿದ್ದ ಬಡ್ತಿಯನ್ನು ಕಾಂಗ್ರೆಸ್ ಸರ್ಕಾರ ತಪ್ಪಿಸಿತ್ತು. ಈ ಹಿನ್ನೆಲೆಯಲ್ಲಿ ರಾಜೀನಾಮೆ ಸಲ್ಲಿಸಿ ಅವರು ರಾಜಕೀಯ ಅಖಾಡ ಪ್ರವೇಶಿಸಿದ್ದರು. ಗೆದ್ದು ಲೋಕಸಭೆಯ ಸ್ಪೀಕರ್ ಕೂಡ ಆಗಿದ್ದರು.
ಇನ್ನು ಸಂತೋಷ್ ಹೆಗಡೆಯವರು ನ್ಯಾಯವಾದಿಯಾಗಿ ವೃತ್ತಿ ಜೀವನ ನಡೆಸಿ, ಅಡ್ವೊಕೇಟ್ ಜನರಲ್ ಹುದ್ದೆಗೇರಿ ನಂತರ ಸಾಲಿಸಿಟರ್ ಜನರಲ್ ಆಗಿ ಕೆಲಸ ಮಾಡಿ, ತದನಂತರ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿದ್ದರು ಎಂಬುದಷ್ಟೆ ಎಲ್ಲರಿಗೂ ಗೊತ್ತಿದ್ದ ವಿಷಯಗಳು.
ಹೆಗಡೆಯವರು ಹೊಸದಾಗಿ ತಮ್ಮ ಇಮೇಜನ್ನು ಕಟ್ಟಿಕೊಳ್ಳಬೇಕಾಗಿತ್ತು. ಸುಪ್ರೀಂ ಕೋರ್ಟ್ ನ್ಯಾಯಾಧೀಶರುಗಳು ಜನಸಾಮಾನ್ಯರಿಗೆ ಅಪರಿಚಿತರಾಗಿಯೇ ಉಳಿಯುತ್ತಾರೆ. ಹೀಗಾಗಿ ಹೆಗಡೆಯಂಥವರು ಎಲ್ಲರಿಗೂ ಗೊತ್ತಿರುವ ಸಾಧ್ಯತೆಗಳು ಕಡಿಮೆಯೇ.
ಆದರೆ ಲೋಕಾಯುಕ್ತ ಹುದ್ದೆ ನಿರಂತರ ಸಾರ್ವಜನಿಕ ಸಂಪರ್ಕಕ್ಕೆ ಬರುವಂಥದ್ದು. ದಿನನಿತ್ಯ ಮೀಡಿಯಾಗಳಲ್ಲಿ ಕಾಣಿಸಿಕೊಳ್ಳಬೇಕಾಗುತ್ತದೆ. ನೈತಿಕ ಪ್ರಶ್ನೆಗಳ ಕಾರಣಕ್ಕಾಗಿ ಲೋಕಾಯುಕ್ತರ ನಡೆ-ನುಡಿಯನ್ನು ಸಾರ್ವಜನಿಕರು ಗಮನಿಸುತ್ತಲೇ ಇರುತ್ತಾರೆ.
ಸಂತೋಷ್ ಹೆಗಡೆಯವರು ಬಂದ ಕೂಡಲೇ ತಮ್ಮ ಆಸ್ತಿಪಾಸ್ತಿಗಳ ವಿವರಗಳನ್ನು ವೆಬ್‌ಸೈಟ್‌ನಲ್ಲಿ ದಾಖಲಿಸಿದರು. ಭ್ರಷ್ಟಾಚಾರದ ವಿರುದ್ಧ ಕ್ರಿಯೆಗಿಳಿಯಬೇಕಾದ ವ್ಯಕ್ತಿ ಮೊದಲು ಶುದ್ಧ ಚಾರಿತ್ರ್ಯ ಹೊಂದಿರಬೇಕು ಮತ್ತು ಪಾರದರ್ಶಕತೆಯಿಂದ ವರ್ತಿಸಬೇಕು ಎಂಬುದು ಹೆಗಡೆಯವರು ನೀಡಿದ ಸ್ಪಷ್ಟ ಸಂದೇಶ ಅದಾಗಿತ್ತು.
****
ಆದರೆ ಸಂತೋಷ್ ಹೆಗಡೆಯವರನ್ನು ಈ ರಾಜ್ಯದ ಜನತೆ ಬೇರೆಯದೇ ಆದ ರೀತಿಯಲ್ಲಿ ನೋಡಬಯಸಿದ್ದರು. ನ್ಯಾ. ವೆಂಕಟಾಚಲ ಅವರು ಲೋಕಾಯುಕ್ತ ಹುದ್ದೆಗೊಂದು ಹೆಸರು, ಹಿರಿಮೆಯನ್ನು ತಂದುಕೊಟ್ಟಿದ್ದರು. ಅಸಲಿಗೆ ಲೋಕಾಯುಕ್ತ ಎಂಬುದೊಂದು ಸಂಸ್ಥೆ ಇದೆ ಎಂಬುದನ್ನು ಜನರಿಗೆ ಗೊತ್ತು ಮಾಡಿಕೊಟ್ಟವರೇ ವೆಂಕಟಾಚಲ ಅವರು.
ನ್ಯಾ.ವೆಂಕಟಾಚಲ ಅವರೇ ರೈಡ್‌ಗಳಿಗೆ ಹೊರಡುತ್ತಿದ್ದರು. ಲಂಚಕೋರ ಅಧಿಕಾರಿಗಳನ್ನು ಮೀಡಿಯಾಗಳ ಸಮ್ಮುಖದಲ್ಲಿ ಗದರುತ್ತಿದ್ದರು. ‘ಅಮಾಯಕ ಜನರ ಶ್ರಮದ ಹಣವನ್ನು ಕಿತ್ತುಕೊಳ್ತೀರಲ್ಲ, ನಾಚಿಕೆಯಾಗೋದಿಲ್ವೆ? ಎಂದು ಟಿವಿ ಕ್ಯಾಮರಾಗಳ ಎದುರು ಸಿಟ್ಟಿಗೇಳುತ್ತಿದ್ದರು.
ಇದೆಲ್ಲವೂ ನಿಜಕ್ಕೂ ಸಿನಿಮೀಯವಾಗಿರುತ್ತಿತ್ತು. ಜನಸಾಮಾನ್ಯರ ಒಳಗಿನ ಒಬ್ಬ ಆದರ್ಶ ಸಮಾಜದ ಕಲ್ಪನೆ ಗರಿಗೆದರಿ ಕುಣಿಯುವ ಸಮಯವದು. ಇಂಥವನ್ನು ನೋಡಿದ ಜನ ‘ಹೇಗೆ ಗ್ರಹಚಾರ ಬಿಡಿಸಿದರು ನೋಡಿ, ಇದ್ದರೆ ಇಂಥವರು ಇರಬೇಕು ನೋಡಿ ಎನ್ನತೊಡಗಿದರು.
ಪರಿಣಾಮವಾಗಿ ಲೋಕಾಯುಕ್ತಕ್ಕೆ ಒಂದು ಹೆಸರು ಪ್ರಾಪ್ತವಾಯಿತು. ನಿಜವಾದ ಅರ್ಥದಲ್ಲಿ ಜನಜಾಗೃತಿಯೂ ಆಯಿತು. ಭ್ರಷ್ಟರ ಪಾಲಿಗೆ ಲೋಕಾಯುಕ್ತ ಎಂಬುದು ತಲೆನೋವಿನ ಸಂಗತಿಯಾಯಿತು. ವಿಶೇಷವಾಗಿ ನ್ಯಾ.ವೆಂಕಟಾಚಲ ಜನಸಾಮಾನ್ಯರ ನಡುವೆ ‘ಹೀರೋ ಆಗಿ ಉದ್ಭವಿಸಿದ್ದರು. ಲೋಕಾಯುಕ್ತ ಅಂದರೆ ವೆಂಕಟಾಚಲ, ವೆಂಕಟಾಚಲ ಅಂದ್ರೆ ಲೋಕಾಯುಕ್ತ ಅನ್ನುವ ಹಾಗೆ ಆಗಿತ್ತು.
*****
ವೆಂಕಟಾಚಲ ಅವರ ನಂತರ ಬಂದ ಸಂತೋಷ್ ಹೆಗಡೆಯವರು ಇದನ್ನೆಲ್ಲ ಮೀರಿ ಇನ್ನಷ್ಟು ಸಾಧಿಸಬೇಕು ಎಂದು ಜನ ಬಯಸುತ್ತಿದ್ದರು. ವೆಂಕಟಾಚಲ ಅವರು ಮಾಡಿದ ಹಾಗೆಯೇ ಭ್ರಷ್ಟರ ಮೇಲೆ ದಾಳಿ ನಡೆಸಿ, ‘ಸಾರ್ವಜನಿಕ ವಿಚಾರಣೆ ಮಾಡಬೇಕು ಎಂದು ಅವರು ಬಯಸುತ್ತಿದ್ದರು.
ಆದರೆ ಸಂತೋಷ್ ಹೆಗಡೆಯವರು ಹಾಗೆ ಮಾಡಲಿಲ್ಲ. ದಾಳಿ ಮಾಡುವುದು ಲೋಕಾಯುಕ್ತರ ಕೆಲಸವಲ್ಲ ಎಂದುಬಿಟ್ಟರು. ಅದು ಕಾಯ್ದೆಯಲ್ಲಿ ಇಲ್ಲ, ದಾಳಿ ಮಾಡುವವರು ಪೊಲೀಸರು ಎಂದರು.
ಅಲ್ಲಿಗೆ ಹೊಸ ಲೋಕಾಯುಕ್ತರು ಪ್ರಯೋಜನಕ್ಕಿಲ್ಲ ಬಿಡಿ, ಎಂದು ಕೆಲ ಸಿನಿಕರು ತೀರ್ಮಾನ ಮಾಡಿಬಿಟ್ಟರು.
ಈ ಸಂದರ್ಭದಲ್ಲಿ ಏನೊಂದೂ ಮಾತನಾಡದ ಸಂತೋಷ್ ಹೆಗಡೆಯವರು ನಿಜವಾಗಿಯೂ ಲೋಕಾಯುಕ್ತರು ಮಾಡಬೇಕಾದ್ದನ್ನೇ ಮಾಡಿದರು. ಸಬ್ ರಿಜಿಸ್ಟ್ರಾರ್, ತಹಸೀಲ್ದಾರ್‌ಗಿಂತ ಕೆಳಮಟ್ಟದ ಅಧಿಕಾರಿಗಳ ಮೇಲೆ ಅದುವರೆಗೆ ನಡೆಯುತ್ತಿದ್ದ ದಾಳಿಗಳನ್ನು ಅವರು ಐಎಎಸ್, ಐಪಿಎಸ್ ಹಂತದ ಅಧಿಕಾರಿಗಳವರೆಗೆ ವಿಸ್ತರಿಸಿದರು. ಅಷ್ಟೇಕೆ, ಸೀದಾ ವಿಧಾನಸೌಧದ ಅಂಗಳಕ್ಕೆ ತಮ್ಮ ತಂಡವನ್ನು ನುಗ್ಗಿಸಿ, ಶಾಸಕರ ಭವನದಲ್ಲಿ ಲಂಚ ಪಡೆಯುತ್ತಿದ್ದ ಶಾಸಕನನ್ನು ಬಂಧಿಸಿ ತಂದರು.
******
ಸಂತೋಷ್ ಹೆಗಡೆಯವರು ಲೋಕಾಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ನಾನು ಸಂಜೆಪತ್ರಿಕೆಯೊಂದರ ಸಂಪಾದಕನಾಗಿದ್ದೆ. ಸರಿಸುಮಾರು ಮೂರು ವರ್ಷಗಳ ಕಾಲ ಲೋಕಾಯುಕ್ತರು ನಡೆಸಿದ ಪ್ರತಿದಾಳಿಯನ್ನು ಸುದ್ದಿ ಮಾಡಿದ ನೆನಪುಗಳು. ‘ಭ್ರಷ್ಟರಿಗೆ ಬಲೆ ‘ಬಲೆಗೆ ಬಿದ್ದ ತಿಮಿಂಗಲಗಳು ‘ಕಡುಭ್ರಷ್ಟರಿಗೆ ಗಾಳ ‘ಲೂಟಿಕೋರರು ‘ಕೋಟಿಧಣಿಗಳು ‘ಕುಬೇರರ ಮೇಲೆ ದಾಳಿ ಹೀಗೆ ಹೆಡ್ಡಿಂಗುಗಳನ್ನು ಕೊಟ್ಟು ಕೊಟ್ಟು ನನಗೆ ಸಾಕಾಗಿ ಹೋಗಿತ್ತು. ಪ್ರತಿಬಾರಿ ಹೊಸ ಹೆಡ್ಡಿಂಗು ಹುಡುಕುವ ಕಾಯಕ. ಒಂದನ್ನು ಸಿದ್ಧಮಾಡಿದರೆ ಇದನ್ನು ಹಿಂದೆ ಎಂದೋ ಕೊಟ್ಟಿದ್ದೆವಲ್ಲ ಎಂದು ಬದಲಾಯಿಸುವುದು.
ಕನಿಷ್ಠ ತಿಂಗಳಿಗೊಂದಾದರೂ ದಾಳಿ. ‘ರಾಜ್ಯಾದ್ಯಂತ ಏಕಕಾಲಕ್ಕೆ ಲೋಕಾಯುಕ್ತರ ದಾಳಿ ಎಂಬ ಉಪಶೀರ್ಷಿಕೆ ಮಾಮೂಲಿ. ‘ಕೋಟ್ಯಂತರ ರೂ. ಬೆಲೆಬಾಳುವ ಆಸ್ತಿ, ನಗದು, ಚಿನ್ನಾಭರಣ ವಶಕ್ಕೆ ಎಂಬುದು ಮತ್ತೊಂದು ಉಪಶೀರ್ಷಿಕೆ. ಲೋಕಾಯುಕ್ತರು ದಾಳಿ ನಡೆಸುತ್ತಿದ್ದಾರೆ ಎಂಬ ವಿಷಯ ಗೊತ್ತಾಗುತ್ತಿದ್ದಂತೆ ಲೀಡ್ (ಪ್ರಮುಖ) ಸುದ್ದಿಗಾಗಿ ಹುಡುಕಾಡುವ ತಲೆನೋವೇ ನಮಗಿರುತ್ತಿರಲಿಲ್ಲ. ಸಹಜವಾಗಿಯೇ ಅದು ಪ್ರಮುಖ ಸುದ್ದಿಯಾಗಿರುತ್ತಿತ್ತು.
ಒಬ್ಬ ಅಧಿಕಾರಿಯ ಮೇಲೆ ದಾಳಿ ನಡೆಸಬೇಕೆಂದರೆ, ಆ ಅಧಿಕಾರಿಗೆ ಸಂಬಂಧಿಸಿದ ಎಲ್ಲ ವಿವರಗಳನ್ನು ಕಲೆಹಾಕಬೇಕು. ಅವರ ಆರ್ಥಿಕ ವ್ಯವಹಾರಗಳ ಮೇಲೆ ಕಣ್ಣಿಡಬೇಕು. ಆದಾಯಕ್ಕಿಂದ ಹೆಚ್ಚಿನ ಆಸ್ತಿಯನ್ನು ಆತ ಗಳಿಸಿದ್ದಾನೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ತದನಂತರ ಇಂಥ ಅಧಿಕಾರಿಯ ಮೇಲೆ ದಾಳಿ ನಡೆಯುತ್ತದೆ ಎಂಬುದನ್ನು ಗೌಪ್ಯವಾಗಿಡಬೇಕು. ಅಧಿಕಾರಿಗಳನ್ನು ಸಜ್ಜುಗೊಳಿಸಿ ಇದ್ದಕ್ಕಿದ್ದಂತೆ ದಾಳಿ ನಡೆಸಬೇಕು. ಇದೆಲ್ಲವೂ ಸುಲಭದ ಕೆಲಸವೇನೂ ಆಗಿರಲಿಲ್ಲ. ಆದರೆ ಹೆಗಡೆಯವರು ಕಟ್ಟಿಕೊಂಡ ಟೀಮು ಸಮರ್ಥವಾಗಿತ್ತು. ಭ್ರಷ್ಟರು ಒಬ್ಬರಾದ ಮೇಲೊಬ್ಬರು ಬಲೆಗೆ ಬಿದ್ದರು. ಅಧಿಕಾರಿಗಳು ನನ್ನ ಸರದಿ ಯಾವಾಗ? ಎಂದು ಭೀತಿಯಿಂದ ಕಾಯುವಂತಾಗಿ ಹೋಯಿತು.
ರಾಜ್ಯ ಸರ್ಕಾರ ನೌಕರರಿಗೆ ನಿವೃತ್ತಿ ವಯಸ್ಸನ್ನು ೫೮ ರಿಂದ ೬೦ಕ್ಕೆ ಏರಿಸಿತು. ಅಧಿಕಾರಿಯೊಬ್ಬರ ಜತೆ ಮಾತನಾಡುವಾಗ ಅವರ ಪ್ರತಿಕ್ರಿಯೆ ಆಶ್ಚರ್ಯ ಹುಟ್ಟಿಸುವಂತಿತ್ತು. ‘ಇದು ಯಾರಿಗೆ ಬೇಕಾಗಿತ್ತು ಸರ್ ಎಂದರು ಅವರು. ನಾನು ಕುತೂಹಲದಿಂದ ಯಾಕೆ? ಎಂದೆ. ‘ಯಾವಾಗ ಈ ಲೋಕಾಯುಕ್ತರು ದಾಳಿ ಮಾಡ್ತಾರೋ ಗೊತ್ತಿಲ್ಲ. ನಾವೆಲ್ಲ ಇನ್ನೂ ಎರಡು ವರ್ಷ ಭೀತಿಯಿಂದ ಕಳೆಯುವಂತಾಯ್ತು ಎಂದು ನುಡಿದರು ಅವರು.
ಇದು ಸಂತೋಷ್ ಹೆಗಡೆಯವರ ಎಫೆಕ್ಟ್!
*********
ಬಹಳ ಜನರಿಗೆ ಗೊತ್ತಿಲ್ಲದ ವಿಷಯ ಒಂದಿದೆ. ಲೋಕಾಯುಕ್ತರು ಭ್ರಷ್ಟಾಚಾರದ ವಿರುದ್ಧ ಮಾತ್ರ ಕೆಲಸ ಮಾಡುತ್ತಾರೆ ಎಂದು ಬಹುತೇಕರು ಅಂದುಕೊಂಡಿದ್ದಾರೆ. ಆದರೆ ಸಾರ್ವಜನಿಕ ಸೇವೆಯಲ್ಲಿ ಅಧಿಕಾರಿ, ನೌಕರರಿಂದ ಯಾವುದೇ ರೀತಿಯ ತೊಂದರೆ ಕಿರುಕುಳವಾದರೂ ಜನರು ಲೋಕಾಯುಕ್ತರಲ್ಲಿ ದೂರು ಸಲ್ಲಿಸಬಹುದು. ಇಂಥ ಪ್ರಕರಣಗಳನ್ನು ಲೋಕಾಯುಕ್ತರು ತನಿಖೆ ಮಾಡಿ, ನೊಂದವರಿಗೆ ನ್ಯಾಯ ಕೊಡಿಸುತ್ತಾರೆ. ಸಂತೋಷ್ ಹೆಗಡೆಯವರು ಇಂಥ ಕೆಲಸಗಳನ್ನು ಆಸ್ಥೆಯಿಂದ ನಿಭಾಯಿಸಿದರು. ಅವರ ಕಚೇರಿ ನೊಂದು ಬಂದ ಮನಸ್ಸುಗಳಿಗೆ ಸಮಾಧಾನ ನೀಡುತ್ತಿತ್ತು. ಅವರ ಸಮಸ್ಯೆಗಳಿಗೆ ಪರಿಹಾರಗಳು ದೊರೆಯುತ್ತಿದ್ದವು. ಒಮ್ಮೊಮ್ಮೆ ಲೋಕಾಯುಕ್ತರ ವ್ಯಾಪ್ತಿಗೆ ಮೀರಿದ ಅಹವಾಲುಗಳೂ ಅಲ್ಲಿಗೆ ಬರುತ್ತಿದ್ದವು. ಅಂಥವುಗಳನ್ನೂ ಸಹ ಬಗೆಹರಿಸಲು ಸಂತೋಷ್ ಹೆಗಡೆಯವರು ಪ್ರಯತ್ನಿಸುತ್ತಿದ್ದರು. ಒಮ್ಮೊಮ್ಮೆ ಪತ್ರಿಕೆಗಳಲ್ಲಿ ಬಂದ ಸುದ್ದಿಗಳೂ ಸಹ ಲೋಕಾಯುಕ್ತರ ಕಣ್ಣಿಗೆ ಬಿದ್ದು ಪ್ರಕರಣಗಳಾಗಿ ಪರಿವರ್ತನೆಗೊಳ್ಳುತ್ತಿದ್ದವು.
*****
ಗಣಿ ಹಗರಣದ ಕುರಿತಾದ ತನಿಖೆ ನಡೆಸಲು ಕುಮಾರಸ್ವಾಮಿಯವರ ಸರ್ಕಾರ ಲೋಕಾಯುಕ್ತರಿಗೆ ವಹಿಸಿತ್ತು. ಈ ಕುರಿತು ವಿಸ್ತೃತ ತನಿಖೆ ನಡೆಸಿ ಲೋಕಾಯುಕ್ತರು ವರದಿಯನ್ನೂ ಸಲ್ಲಿಸಿದ್ದರು. ಆಗಲೇ ಗಣಿ ಲೂಟಿಕೋರರ ಕಣ್ಣು ಲೋಕಾಯುಕ್ತರ ಮೇಲೆ ಬಿದ್ದಿತ್ತು. ಕಾರವಾರ ಬಂದರಿನಲ್ಲಿ ಸಾಗಣೆಯಾಗುತ್ತಿದ್ದ ಸಾವಿರಾರು ಕೋಟಿ ರೂ.ಮೌಲ್ಯದ ಕಬ್ಬಿಣದ ಅದಿರನ್ನು ಲೋಕಾಯುಕ್ತರೇನೋ ಹಿಡಿದು ಮುಟ್ಟುಗೋಲು ಹಾಕಿಸಿದರು. ಆದರೆ ಸರ್ಕಾರದ ಶ್ರೀರಕ್ಷೆಯಿಂದಾಗಿ ಅದೆಲ್ಲವೂ ಅಲ್ಲಿಂದ ಮಾಯವಾದವು. ತನಿಖೆಗೆ ಸಹಕರಿಸಿದ್ದ ಅಧಿಕಾರಿಯ ಮೇಲೆ ಶಿಸ್ತುಕ್ರಮದ ತಯಾರಿಗಳು ನಡೆದವು.
ಇಷ್ಟಾದ ಮೇಲೂ ಕುರ್ಚಿಯ ಮೇಲೆ ಕುಳಿತಿರಲು ಸಂತೋಷ್ ಹೆಗಡೆಯವರಿಗೆ ಮನಸ್ಸಾಗಲಿಲ್ಲ. ಅವರು ಬಿಟ್ಟು ಹೊರಟಿದ್ದಾರೆ.
ಅಲ್ಲಿಗೆ ಕರ್ನಾಟಕದಲ್ಲಿ ಪ್ರಜಾತಂತ್ರ ವ್ಯವಸ್ಥೆ ಸಂಪೂರ್ಣ ಕುಸಿದು ಹೋಗಿದೆ ಎಂದೇ ಅರ್ಥ. ಕಿಸೆಗಳ್ಳರು, ಮನೆಗಳ್ಳರನ್ನು ನಮ್ಮ ಜನ ಬೀದಿಯಲ್ಲಿ ಹಿಡಿದು ಬೆತ್ತಲೆಗೊಳಿಸಿ ಹೊಡೆಯುವ ದೃಶ್ಯಗಳನ್ನು ನಾವು ನೋಡಿದ್ದೇವೆ. ಸಾವಿರಾರು ಕೋಟಿ ರೂ.ಗಳನ್ನು ಸರ್ಕಾರದ ಬೆಂಬಲದಿಂದಲೇ ತಿಂದು, ಲೋಕಾಯುಕ್ತ-ನ್ಯಾಯವ್ಯವಸ್ಥೆಯನ್ನೇ ಗೇಲಿ ಮಾಡುತ್ತಿರುವ ಶಕ್ತಿಗಳು ಮೆರೆಯುತ್ತಲೇ ಇವೆ. ದುರಂತವೆಂದರೆ ಈ ಶಕ್ತಿಗಳು ಈಗ ಸರ್ಕಾರದಲ್ಲೇ ಸೇರಿ ಹೋಗಿವೆ.
ಇನ್ನು ಕರ್ನಾಟಕವನ್ನು ಯಡಿಯೂರಪ್ಪ ನಂಬಿಕೊಂಡಿರುವ ಸಕಲೆಂಟು ಕೋಟಿ ದೇವರುಗಳೂ ಕಾಪಾಡಲಾರರು.

ಇಂತಿ ನಿಮ್ಮ ಪ್ರೀತಿಯ...

ದಿನೇಶ್ ಕುಮಾರ್ ಎಸ್.ಸಿ.

ಕರ್ನಾಟಕ ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬೂಕನಕೆರೆ ಸಿದ್ಧಲಿಂಗಪ್ಪ ಯಡಿಯೂರಪ್ಪನವರಿಗೆ,
ಸಪ್ರೇಮ ನಮಸ್ಕಾರಗಳು.

ಈಗಷ್ಟೇ ನಿಮ್ಮ ಎರಡು ವರ್ಷಗಳ ಸಾಧನಾ ಸಮಾವೇಶ ಮಾಡಿ, ಖುಷಿಯಲ್ಲಿದ್ದೀರಿ. ‘ಯಶಸ್ಸಿನ ಎರಡು ವರ್ಷ ಎಂಬ ಪತ್ರಿಕಾ ಜಾಹೀರಾತುಗಳು ಎಲ್ಲೆಲ್ಲೂ ಕಣ್ಣಿಗೆ ರಾಚುತ್ತಿವೆ. ಆದರೆ ಇದನ್ನು ‘ವಿಶ್ವಾಸದ್ರೋಹದ ಎರಡು ವರ್ಷಗಳು ಎಂದು ‘ನಲ್ನುಡಿ ಹೇಳಬಯಸಿದೆ. ನಿಮ್ಮ ಸಂತೋಷ ಭಂಗ ಮಾಡಿದ್ದಕ್ಕೆ ಕ್ಷಮೆಯಿರಲಿ. ‘ವಿಶ್ವಾಸದ್ರೋಹ ಎಂದಿದ್ದಕ್ಕೆ ಮೊದಲು ಕಾರಣಗಳನ್ನು ನೀಡುತ್ತೇನೆ. ಇದೇ ‘ವಿಶ್ವಾಸದ್ರೋಹ, ವಚನಭಂಗ ಇತ್ಯಾದಿ ಪದಪುಂಜಗಳನ್ನೇ ಬಳಸಿ ನೀವು ಚುನಾವಣೆಯಲ್ಲಿ ಗೆದ್ದದ್ದು. ನಿಮ್ಮ ೨೦ ತಿಂಗಳ ಒಡನಾಡಿ ಎಚ್.ಡಿ.ಕುಮಾರಸ್ವಾಮಿಯವರು ನಿಮ್ಮೀರ್ವರ ಜಂಟಲ್‌ಮನ್ ಒಪ್ಪಂದದ ಪ್ರಕಾರ ನಡೆದುಕೊಳ್ಳಲಿಲ್ಲ. ನಿಮ್ಮನ್ನು ಮುಖ್ಯಮಂತ್ರಿಯಾಗಿ ಇರಗೊಡಲಿಲ್ಲ. ಅದಕ್ಕಾಗಿ ನೀವು ಜನರೆದುರು ಹೋದಿರಿ, ದ್ರೋಹವಾಗಿದೆ ಎಂದಿರಿ. ಜನ ನೀವು ಹೇಳಿದ್ದನ್ನೆಲ್ಲ ಒಪ್ಪಿದರು. ನಿಮ್ಮ ಪಕ್ಷವನ್ನು ಬಹುಮತದ ಹತ್ತಿರಕ್ಕೆ ತಂದು ನಿಲ್ಲಿಸಿದರು. ಆದರೆ ಯಾವ ವಿಶ್ವಾಸದ್ರೋಹದ ಹೆಸರಿನಲ್ಲಿ ನೀವು ಮತಗಳಿಸಿದಿರೋ, ಅದೇ ವಿಶ್ವಾಸದ್ರೋಹದ ಆರೋಪವನ್ನು ನಿಮ್ಮ ಮೇಲೂ ಹೊರೆಸಬೇಕಾಗಿದೆ. ನಿಮಗೆ ಕುಮಾರಸ್ವಾಮಿಯವರು ವಿಶ್ವಾಸದ್ರೋಹವೆಸಗಿರಬಹುದು. ಆದರೆ ನೀವು ಕರ್ನಾಟಕದ ಜನತೆಗೆ ವಿಶ್ವಾಸದ್ರೋಹವೆಸಗಿದ್ದೀರಿ. ಆ ಹಿನ್ನೆಲೆಯಲ್ಲಿ ಈ ಉದ್ದನೆಯ ಪತ್ರ. ಇಷ್ಟುದ್ದದ ಪತ್ರವನ್ನು ನಿಮಗೆ ಹಿಂದೆ ಯಾರೂ ಬರೆದಿರಲಾರರು. ಆದರೂ ಸಾವಧಾನದಿಂದ ಕುಳಿತು ‘ಕರವೇ ನಲ್ನುಡಿಯ ಆರೋಪಪಟ್ಟಿಗಳನ್ನು ಓದಿ ಎಂಬುದು ನನ್ನ ಅರಿಕೆ.
ಯಡಿಯೂರಪ್ಪನವರೆ, ಕರ್ನಾಟಕದ ಜನತೆ ಹೃದಯವಂತರು. ರಾಜಕಾರಣಿಗಳು ಪದೇ ಪದೇ ಸುಳ್ಳು ಹೇಳುತ್ತಾರೆ, ನಕಲಿ ಭರವಸೆಗಳನ್ನು ಕೊಡುತ್ತಾರೆ. ಉಪಯೋಗಿಸಿಕೊಂಡು ಬಿಸಾಕುತ್ತಾರೆ ಎಂಬುದು ಗೊತ್ತಿದ್ದರೂ ಮೇಲಿಂದ ಮೇಲೆ ಜನನಾಯಕರ ಮೇಲೆ ವಿಶ್ವಾಸವಿಡುತ್ತಾರೆ. ಅದು ಅವರ ಅನಿವಾರ್ಯ ಕರ್ಮವೂ ಹೌದು. ಇರುವವರಲ್ಲಿ ಯಾರು ಉತ್ತಮ ಎಂದೇ ಅವರು ಆಯ್ಕೆಗೆ ಹೊರಡುತ್ತಾರೆ. ಅದೇ ಸರಿಯಾದ ಕ್ರಮವೂ ಹೌದು. ಈ ಬಾರಿ ನಿಮ್ಮನ್ನು ಅವರು ಆಯ್ಕೆ ಮಾಡಿಕೊಂಡರು. ಅದಕ್ಕಾಗಿ ಈಗ ಪಶ್ಚಾತ್ತಾಪ ಪಡುವಂತಾಗಿದೆ.
ಈಗ ನೋಡಿ, ನಿಮ್ಮ ಸಾಧನಾ ಸಮಾವೇಶಕ್ಕೆ ಎರಡು ದಿನವಿರುವಾಗ ನ್ಯಾಯಮೂರ್ತಿ ಸಂತೋಷ್ ಹೆಗಡೆಯವರು ಲೋಕಾಯುಕ್ತ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ನಿಮ್ಮ ಘನ ಸರ್ಕಾರಕ್ಕೆ ಮಂಗಳಾರತಿ ಎತ್ತಿದ್ದಾರೆ. ಇದನ್ನು ‘ಕಪಾಳ ಮೋಕ್ಷ ಎನ್ನುವವರೂ ಇದ್ದಾರೆ. ಅದೂ ಸರಿಯಿರಬಹುದು. ನೀವೇ ಪದೇ ಪದೇ ಹೇಳಿದಂತೆ ಸಂತೋಷ್ ಹೆಗಡೆಯವರು ಅತ್ಯಂತ ಪ್ರಾಮಾಣಿಕರು, ತಮ್ಮ ಕ್ರಿಯೆಗಳಿಂದಲೇ ಗೌರವ ಸಂಪಾದಿಸಿದವರು. ಭ್ರಷ್ಟಾಚಾರದ ವಿರುದ್ಧ ಅವರು ಸಮರ ಸಾರಿದ್ದರು. ನೀವು ಅವರಿಗೆ ಕಿರುಕುಳ ಕೊಟ್ಟಿರಿ. ಅವರಿಗೆ ಅಡ್ಡಗಾಲಾದಿರಿ. ಸಹಿಸಲಾರದೆ ಅವರು ಹೊರನಡೆದರು. ಎರಡು ವರ್ಷಗಳ ನಿಮ್ಮ ‘ಯಶಸ್ಸಿನ ಹಾದಿಯಲ್ಲಿ ನಿಮ್ಮ ಕಿರೀಟಕ್ಕೆ ಧರಿಸಿಕೊಳ್ಳಬೇಕಾದ ‘ಸಾಧನೆ ‘ಗರಿಯೇ ಇದು? ನೀವು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗ ಹಸಿರು ಶಾಲು ಹೊದ್ದು ಬಂದು ನಾನು ರೈತನ ಮಗ ಎಂದಿರಿ. ದುರದೃಷ್ಟ ನೋಡಿ, ನಿಮ್ಮ ಸಾಧನಾ ಸಮಾವೇಶದಲ್ಲೇ ರೈತನೊಬ್ಬ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ. ಇದು ಒಂದು ರೀತಿಯಲ್ಲಿ ನಿಮ್ಮ ‘ಸಾಧನೆಯ ರೂಪಕವಿರಬಹುದೆ? ರೈತರ ಮೇಲೆ ನಿಮ್ಮ ಸರ್ಕಾರ ನಡೆಸಿದ ಗೋಲಿಬಾರ್‌ನಿಂದ ಹಿಡಿದು, ನ್ಯಾಯಮೂರ್ತಿ ಸಂತೋಷ್ ಹೆಗಡೆಯವರು ಕುರ್ಚಿ ಬಿಟ್ಟು ಏಳುವಂತೆ ಮಾಡಿದ ಪಿತೂರಿಯವರೆಗೆ ಎಲ್ಲವನ್ನೂ ಇಲ್ಲಿ ಪಟ್ಟಿ ಮಾಡಿದ್ದೇನೆ, ಇದು ಜನರ ಆರೋಪಪಟ್ಟಿ. ಜತೆಗೆ ಈ ವಿವಿಧ ಕ್ಷೇತ್ರಗಳ ಗಣ್ಯರೂ ಸಹ ಇಲ್ಲಿ ಮಾತನಾಡಿದ್ದಾರೆ. ಎಲ್ಲವನ್ನೂ ತಣ್ಣಗೆ ಕುಳಿತು ಓದಿ. ಅಂದಹಾಗೆ ಈ ಬಹಿರಂಗ ಪತ್ರಕ್ಕೆ ಉತ್ತರವನ್ನು ನಾನು ಬಯಸುವ ಮೂರ್ಖತನ ಮಾಡಲಾರೆ, ಬಳ್ಳಾರಿ ರೆಡ್ಡಿಗಳ ಬಂಡಾಯಪರ್ವದ ನಂತರ ನೀವು ಸಂವೇದನಾಶೀಲತೆಯನ್ನೇ ಕಳೆದುಕೊಂಡಿದ್ದೀರಿ ಎಂಬುದು ನನಗೆ ತಿಳಿದುಬಂದ ಮಾಹಿತಿ. ಆದರೂ ಇದನ್ನೊಮ್ಮೆ ಮನಸ್ಸಿಟ್ಟು ಓದಿ ಎಂದಷ್ಟೇ ವಿನಂತಿಸಬಲ್ಲೆ.
ಆದರಗಳೊಂದಿಗೆ,
ಇಂತಿ ನಿಮ್ಮ ಪ್ರೀತಿಯ
‘ಕನ್ನಡಿಗ

ರೈತರಿಗೆ ಗುಂಡಿಟ್ಟಿದ್ದು....


ಮಾನ್ಯ ಯಡಿಯೂರಪ್ಪನವರೆ,

ನ್ಯಾಯಮೂರ್ತಿ ಜಗನ್ನಾಥ ಶೆಟ್ಟಿಯವರು ಹಾವೇರಿ ಗೋಲಿಬಾರ್ ಕುರಿತ ವರದಿಯನ್ನು ಸಲ್ಲಿಸಿದ್ದಾರೆ. ನೀವು ಅದನ್ನು ವಿಧಾನಮಂಡಲದಲ್ಲಿ ಮಂಡಿಸುವ ಮುನ್ನವೇ ವರದಿಯ ಅಂಶಗಳು ಮಾಧ್ಯಮಗಳಿಗೆ ಸೋರಿಕೆಯಾಗಿವೆ. (ಸೋರಿಕೆಯಾಗಿರುವುದು ನಿಮ್ಮ ಸರಕಾರದಲ್ಲಿ ಇರುವ ತೂತುಗಳಿಗೆ ಉದಾಹರಣೆ.) ಮಾಧ್ಯಮಗಳಲ್ಲಿ ವರದಿಯಾದಂತೆ ಜಗನ್ನಾಥ ಶೆಟ್ಟಿಯವರ ವರದಿ ಹೇಳಿರುವುದಾದರೆ, ಅದು ಅತ್ಯಂತ ಅಮಾನವೀಯ.
ಘಟನೆಯಲ್ಲಿ ಸಾವನ್ನಪ್ಪಿದ ಸಿದ್ಧಲಿಂಗಪ್ಪ ಚೂರಿ ಮತ್ತು ಪುಟ್ಟಪ್ಪ ಹೊನ್ನತ್ತಿ ರೈತರೇ ಅಲ್ಲ ಎಂದು ನೀವೂ ಒಪ್ಪುವುದಾದರೆ, ನ್ಯಾಯ-ಅನ್ಯಾಯಗಳ ಕುರಿತ ಯಾವ ಚರ್ಚೆಯೂ ಅಗತ್ಯವಿಲ್ಲ.
ಆಗಷ್ಟೇ ಅಧಿಕಾರ ಸ್ವೀಕರಿಸಿದ್ದಿರಿ. ೨೦೦೮ರ ಜೂನ್‌ನಲ್ಲಿ ರಸಗೊಬ್ಬರ ರಗಳೆ ಆರಂಭವಾಯಿತು. ಅಸಲಿಗೆ ಅದು ರಗಳೆಯ ವಿಷಯವೇ ಆಗಿರಲಿಲ್ಲ. ಸರಿಯಾದ ಸಂದರ್ಭಕ್ಕೆ ರಸಗೊಬ್ಬರ ಕೊಡಬೇಕು ಎಂಬುದು ಕಾಮನ್‌ಸೆನ್ಸ್. ಅದು ನಿಮಗಿರಲಿಲ್ಲ, ನಿಮ್ಮ ಕೃಷಿ ಮಂತ್ರಿಗೂ, ನಿಮ್ಮನ್ನು ನಿಯಂತ್ರಿಸುವ ಅಧಿಕಾರಿಗಳಿಗೂ ಇರಲಿಲ್ಲ. ಹಾಗಾಗಿ ರೈತರು ಎಲ್ಲೆಡೆ ಬೀದಿಗಿಳಿದರು. ಹಾವೇರಿಯಲ್ಲಿ ನಿಮ್ಮ ಪೊಲೀಸು ಪಡೆ ನಿರ್ದಯವಾಗಿ ಗುಂಡು ಹಾರಿಸಿತು. ಗುಂಡು ಹಾರಿಸಲು ಆದೇಶ ನೀಡಿದವರ‍್ಯಾರು ಎಂಬುದು ಇಂದಿಗೂ ನಿಗೂಢ. ಇಬ್ಬರು ರೈತರ ತಲೆಗಳು ಉರುಳಿದವು.
ವಿಧಾನಸೌಧದ ಮೆಟ್ಟಿಲ ಮೇಲೆ ಭಾವುಕರಾಗಿ ನಿಂತು ನೀವು ಹಸಿರು ಶಾಲು ಹೊದೆ ಪ್ರಮಾಣ ವಚನ ಸ್ವೀಕರಿಸಿ ರೈತರನ್ನು ರಕ್ಷಿಸುತ್ತೇನೆ ಎಂದು ಪ್ರಮಾಣ ವಚನ ಸ್ವೀಕರಿಸಿ ಹೆಚ್ಚು ದಿನಗಳೇನು ಆಗಿರಲಿಲ್ಲ. ಆದರೂ ಗುಂಡು ಹಾರಿತು. ರೈತರು ಸತ್ತರು. ಆ ಸಂದರ್ಭದಲ್ಲಿ ನೀವು ಪಶ್ಚಾತ್ತಾಪ ಪಟ್ಟವರಂತೆ ಕಂಡಿರಿ. ನೀವೇ (ನಿಮ್ಮ ಸರ್ಕಾರವೇ) ಕೈಯಾರೆ ಕೊಂದ ರೈತರಿಗೆ ಸ್ಮಾರಕ ಕಟ್ಟುವುದಾಗಿ ಪೆದ್ದುಪೆದ್ದಾಗಿ ಘೋಷಿಸಿದಿರಿ.
ಆದರೆ ನಂತರ ನೀವು ರೈತರ ವಿಷಯದಲ್ಲಿ ನಡೆದುಕೊಂಡ ರೀತಿಯನ್ನು ನೋಡಿದ ಮೇಲೆ ಪಶ್ಚಾತ್ತಾಪವೂ ನಾಟಕವೆನ್ನಿಸತೊಡಗಿತು. ಹರಿಹರ-ಚಾಮರಾಜನಗರಗಳಲ್ಲಿ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ರೈತರ ಮೇಲೆ ಲಾಠಿ ಪ್ರಹಾರ ನಡೆಯಿತು. ಎತ್ತಿನ ಗಾಡಿ ಹೊಡೆದುಕೊಂಡು ಬಂದಿದ್ದ ರೈತರನ್ನು ಹಿಡಿದು ಹಿಡಿದು ಚಚ್ಚಲಾಯಿತು. ಇತಿಹಾಸದಲ್ಲೇ ಮೊದಲ ಬಾರಿಗೆ ಚಳವಳಿ ನಡೆಸಿದ ರೈತರ ಕೈಗೆ ಕೊಳ ತೊಡಿಸಿದ ಪ್ರಕರಣವೂ ನಿಮ್ಮ ಅಧಿಕಾರಾವಧಿಯಲ್ಲೇ ನಡೆದುಹೋಯಿತು.
ಈಗ ಈ ಎಲ್ಲದಕ್ಕೂ ಕಳಶವಿಟ್ಟಂತೆ ನ್ಯಾಯಮೂರ್ತಿ ಜಗನ್ನಾಥ ಶೆಟ್ಟಿಯವರ ವರದಿ ಹೊರಗೆ ಬಂದಿದೆ. ಹಾವೇರಿಯಲ್ಲಿ ಸತ್ತವರು ರೈತರೇ ಅಲ್ಲ ಎಂದು ನೀವು ಕೈ ತೊಳೆದುಕೊಳ್ಳಲಿದ್ದೀರಿ. ಪ್ರತಿಪಕ್ಷಗಳು ನಿಮ್ಮ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ರಸಗೊಬ್ಬರದ ಹೆಸರಲ್ಲಿ ಗಲಭೆ ಎಬ್ಬಿಸಿದವು ಎಂದು ಹೇಳಿ ರಕ್ತ ಮೆತ್ತಿದ ನಿಮ್ಮ ಕೈಗಳನ್ನು ಶುದ್ಧಗೊಳಿಸಲಿದ್ದೀರಿ. ಆದರೆ ಜನರ ಕೋರ್ಟಿನಲ್ಲಿ ನೀವು ಅಷ್ಟು ಸುಲಭವಾಗಿ ಪಾರಾಗಲಾರಿರಿ. ಗಲಭೆ ನಡೆದದ್ದು ಹಾವೇರಿಯಲ್ಲಿ ಮಾತ್ರವಲ್ಲ. ರಸಗೊಬ್ಬರಕ್ಕಾಗಿ ದಾವಣಗೆರೆ, ಧಾರವಾಡ, ಚಿತ್ರದುರ್ಗ, ಶಿವಮೊಗ್ಗ, ಗದಗ ಮತ್ತಿತರ ಜಿಲ್ಲೆಗಳಲ್ಲೂ ಪ್ರತಿಭಟನೆ ನಡೆದಿತ್ತು. ಗಲಭೆಗಳ ನಂತರವೂ ನಿಮ್ಮಿಂದ ರಸಗೊಬ್ಬರ ಕೊಡಲು ಸಾಧ್ಯವಾಗಿರಲಿಲ್ಲ. ನಿಮ್ಮ ಬೇಜವಾಬ್ದಾರಿ ಹಾಗು ಉಡಾಫೆಗಳಿಂದಲೇ ಇದೆಲ್ಲವೂ ಸಂಭವಿಸಿತ್ತು.
ಇದನ್ನು ಇಡೀ ರಾಜ್ಯದ ಜನತೆ ನೋಡಿದ್ದಾರೆ. ಅದನ್ನು ನೀವು ಬರೆಸಿಕೊಂಡ ವರದಿಯೊಂದರಿಂದ ಬದಲಿಸಲು ಸಾಧ್ಯವೇ ಇಲ್ಲ.
ಯಡಿಯೂರಪ್ಪನವರೇ,
ರೈತರನ್ನು ಕೊಂದ ಪಾಪ ನಿಮ್ಮನ್ನು ಸುತ್ತಿಕೊಂಡಿದೆ, ಅದರಿಂದ ಬಿಡಿಸಿಕೊಳ್ಳಲಾರಿರಿ.
ಎರಡು ವರ್ಷಗಳ ನಿಮ್ಮ ಸಾಧನೆಗಳ ಹಾದಿಯಲ್ಲಿ ‘ಹಾವೇರಿ ಗೋಲಿಬಾರ್ ನಿಮ್ಮ ಮೊದಲ ಮಹತ್ಸಾಧನೆ. ಹಾಗಾಗಿ ನಿಮ್ಮ ಕೋಟಿಗಟ್ಟಲೆ ಹಣ ಸುರಿದು ನೀಡಿರುವ ೨ ವರ್ಷಗಳ ಸಾಧನೆಯ ಜಾಹೀರಾತುಗಳಲ್ಲಿ ಗೋಲಿಬಾರ್‌ನಲ್ಲಿ ಸತ್ತ ರೈತರ ಫೋಟೋಗಳನ್ನು ಬಳಸಿದ್ದರೆ ಚೆನ್ನಾಗಿರುತ್ತಿತ್ತು...

ವೀರಪ್ಪನ್ ಬೇಡಿಕೆ ಈಡೇರಿಸಿದ್ದು...


ಶ್ರೀ ಯಡಿಯೂರಪ್ಪನವರೆ,

ಇತಿಹಾಸದ ಪುಟಗಳಲ್ಲಿ ದಾಖಲಾಗುವಂತೆ ಮಾಡಿದ ನಿಮ್ಮ ಮತ್ತೊಂದು ಮಹತ್ಸಾಧನೆ ಎಂದರೆ ನರಹಂತಕ ವೀರಪ್ಪನ್ ಬೇಡಿಕೆಯಾಗಿದ್ದ ತಮಿಳು ಕವಿ ತಿರುವಳ್ಳುವರ್ ಪ್ರತಿಮೆಯನ್ನು ಬೆಂಗಳೂರಿನಲ್ಲಿ ಅನಾವರಣಗೊಳಿಸಿದ್ದು! ನೀವು ಅದನ್ನು ಸಾಧನೆಯೆನ್ನುತ್ತೀರಿ, ನಾವು ಅದನ್ನು ನಾಚಿಕೆಗೇಡು ಎನ್ನುತ್ತೇವೆ.
ತಿರುವಳ್ಳುವರ್ ಪ್ರತಿಮೆ ಯಾರು ಯಾವ ಕಾರಣಕ್ಕೆ ಬೆಂಗಳೂರಿಗೆ ತಂದು ಕದ್ದು ಮುಚ್ಚಿ ಅನಾವರಣಕ್ಕೆ ಯತ್ನಿಸಿದರು ಎಂಬುದು ನಿಮಗೂ ಗೊತ್ತು, ರಾಜ್ಯದ ಸಮಸ್ತ ಜನತೆಗೂ ಗೊತ್ತು. ಬೆಂಗಳೂರಿನಲ್ಲಿರುವ ಎಲ್‌ಟಿಟಿಇ ಸಂಘಟನೆಯ ದರಿದ್ರ ಮುಖಗಳು ದಬ್ಬಾಳಿಕೆಯಿಂದ ತಂದಿಟ್ಟ ಪ್ರತಿಮೆ ಅದು. ಭಯೋತ್ಪಾದಕರು ತಂದಿಡುವ ಪ್ರತಿಮೆ ಬೇಡ ಎಂದು ಆಗ ಕನ್ನಡ ಸಂಘಟನೆಗಳು ಪ್ರತಿಭಟಿಸಿ ಆ ಪ್ರತಿಮೆಗೆ ಮುಸುಕು ಹಾಕಿದ್ದವು.
ಆದರೆ ನೀವು ಎರಡೂ ರಾಜ್ಯಗಳ ಬಾಂಧವ್ಯ ಬೆಸೆಯುವ ನಿಟ್ಟಿನಲ್ಲಿ ಮಹಾತ್ಮನ ಫೋಜು ನೀಡಿ ಸಾಹಿತಿಗಳ ಮನವೊಲಿಸಿಕೊಂಡಿರಿ. ತಮಿಳರನ್ನು ವಿರೋಧ ಕಟ್ಟಿಕೊಳ್ಳಲಾಗದ ವಿರೋಧಪಕ್ಷಗಳು ನಿಮ್ಮನ್ನು ಬೆಂಬಲಿಸಿದವು. ನೀವೇ ಖುದ್ದಾಗಿ ಚೆನ್ನೈಗೆ ಹೋಗಿ ಆರೋಗ್ಯ ಕೆಟ್ಟು ಮಲಗಿದ್ದ ಕರುಣಾನಿಧಿ ಜತೆ ಒಪ್ಪಂದ ಮಾಡಿಕೊಂಡು ತಿರುವಳ್ಳುವರ್ ಪ್ರತಿಮೆ ಅನಾವರಣ ಆಗಲಿದೆ ಎಂದು ಘೋಷಿಸಿದಿರಿ.
ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಕನ್ನಡ ಸಂಘಟನೆಗಳು ಪ್ರತಿಭಟನೆಗೆ ಇಳಿದಾಗ ನಿಮ್ಮ ಪೊಲೀಸು ಪಡೆಯನ್ನು ಬಿಟ್ಟು ದೌರ್ಜನ್ಯವೆಸಗಿದಿರಿ. ಮನೆಯಲ್ಲಿದ್ದ ಕಾರ‍್ಯಕರ್ತರನ್ನೂ ಬಿಡದೆ ಜೈಲಿಗೆ ಅಟ್ಟಿದಿರಿ. ಪ್ರತಿಭಟನೆಗೂ ಅವಕಾಶ ನೀಡದೆ ಕರವೇ ಕಾರ್ಯಕರ್ತರನ್ನು ಸಿಕ್ಕಸಿಕ್ಕಲ್ಲಿ ಬಂಧಿಸಿದಿರಿ. ಇದು ನಿಮ್ಮ ಹೇಡಿತನದ, ಪ್ರಜಾತಂತ್ರ ವಿರೋಧಿ ಕ್ರಮವಾಗಿತ್ತು. ಬಂಧನಕ್ಕೊಳಗಾದ ಕರವೇ ಮುಖಂಡರು, ಕಾರ್ಯಕರ್ತರ ಮೇಲೆ ಸುಳ್ಳು ಮೊಕದ್ದಮೆಗಳನ್ನು ಜಡಿದು, ವಾರಗಟ್ಟಲೆ ಜೈಲಿನಿಂದ ಹೊರಬರದಂತೆ ಮಾಡಿದಿರಿ.
ಅದಾದ ನಂತರ ನೀವಂದುಕೊಂಡಂತೆ ಕರುಣಾನಿಧಿ ಬಂದು ಇಲ್ಲಿ ತಿರುವಳ್ಳುವರ್ ಪ್ರತಿಮೆ ಅನಾವರಣ ಮಾಡಿಹೋದರು. ಅನಾವರಣದ ಕಾರ್ಯಕ್ರಮದಲ್ಲಿ ನಿಮ್ಮ ಭಾವಚಿತ್ರದೊಂದಿಗೆ ಎಲ್‌ಟಿಟಿಇ ಮುಖ್ಯಸ್ಥ ಪ್ರಭಾಕರನ್ ಭಾವಚಿತ್ರಗಳೂ ಕಾಣಿಸಿಕೊಂಡವು. ಡಾ.ರಾಜ್‌ಕುಮಾರ್ ಅಪಹರಣ ಮಾಡಿದ ನಂತರ ವೀರಪ್ಪನ್ ಬೇಡಿಕೆಗಳ ಪೈಕಿ ತಿರುವಳ್ಳುವರ್ ಪ್ರತಿಮೆ ಅನಾವರಣವೂ ಒಂದಾಗಿತ್ತು. ಬಹುಶಃ ವೀರಪ್ಪನ್ ಆತ್ಮಕ್ಕೂ ನಿಮ್ಮ ಈ ನಡೆಯಿಂದ ಸಂತಸವಾಗಿರಬೇಕು.
ಆದರೆ, ಕನ್ನಡಿಗರ ಬೆನ್ನಿಗೆ ಚೂರಿ ಹಾಕಿ ನೀವು ಮಾಡಿದ ಈ ಕೃತ್ಯದಿಂದ ಇಡೀ ನಾಡು ತಲೆತಗ್ಗಿಸುವಂತಾಯ್ತು. ತಮಿಳು ಭಯೋತ್ಪಾದಕರಿಗೆ ನೀವು ಭದ್ರ ನೆಲೆಯನ್ನು ಒದಗಿಸಿದಂತಾಯ್ತು.
ಅಷ್ಟಕ್ಕೂ ಬಾಂಧವ್ಯ ಬೆಸೆಯಲು ನೀವೇನು ಆಕಾಶದಿಂದ ಅವತರಿಸಿದ ಶಾಂತಿದೂತರೇ? ನೀವು ಒಪ್ಪಿ ನಡೆಯುತ್ತಿರುವ ನಿಮ್ಮ ಪಕ್ಷದ ಸಿದ್ಧಾಂತದಲ್ಲಿ ‘ಬಾಂಧವ್ಯ ಎಂಬ ಶಬ್ದಕ್ಕೇನಾದರೂ ಅರ್ಥವಿದೆಯೇ? ದೇಶವನ್ನು ಧರ್ಮದ ಆಧಾರದಲ್ಲಿ ಒಡೆದ ಕುಖ್ಯಾತಿಯ ನಿಮ್ಮ ಪಕ್ಷಕ್ಕೆ ನಿಜವಾದ ಬಾಂಧವ್ಯದ ಅರ್ಥ ತಿಳಿದಿದಿಯೇ?
ಅಸಲಿಗೆ ನಿಮಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಗದ್ದುಗೆ ಹಿಡಿಯಬೇಕಿತ್ತು. ಸೋಲಿನ ಭೀತಿಯಿಂದಲೇ ಚುನಾವಣೆಯನ್ನು ನೀವು ಮುಂದೂಡಿಕೊಂಡುಬಂದಿದ್ದಿರಿ. ಬೆಂಗಳೂರಿನಲ್ಲಿರುವ ತಮಿಳು ಮತದಾರರು ಮೊದಲಿನಿಂದಲೂ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆ ತೋರಿದವರು. ಅವರ ಮತ ಗಳಿಸಿದರೆ ಮೇಯರ್ ಗಾದಿಯನ್ನು ಪಡೆಯಬಹುದು ಎಂಬುದು ನಿಮ್ಮ ದೂರಾಲೋಚನೆ.
ಅದಕ್ಕಾಗಿಯೇ ‘ಬಾಂಧವ್ಯದ ನಾಟಕ ಹೂಡಿ ತಿರುವಳ್ಳುವರ್ ತಂದು ಕೂರಿಸಿದಿರಿ. ಅದಕ್ಕೆ ಪ್ರತಿಫಲವಾಗಿ ಬಿಬಿಎಂಪಿಯಲ್ಲೂ ಗೆದ್ದುಬಂದಿರಿ.
ನಿಮ್ಮ ತೀಟೆಗಾಗಿ ವೀರಪ್ಪನ್ ಬೇಡಿಕೆ ಈಡೇರಿಸಿದಕ್ಕಾಗಿ ಧಿಕ್ಕಾರವಿರಲಿ....

ಇದೇನು ಸಭ್ಯತೆ, ಇದೇನು ಸಂಸ್ಕೃತಿ...


ಸನ್ಮಾನ್ಯ ಯಡಿಯೂರಪ್ಪನವರೆ,

ಬಿಜೆಪಿಯವರು ಅಂದ್ರೆ ಸಂಸ್ಕೃತಿವಂತರು, ಶಿಸ್ತಿಗೆ ಹೆಸರಾದವರು, ನೀತಿ-ನಿಯತ್ತು ಇಟ್ಟುಕೊಂಡವರು ಎಂದು ಮೊದಲಿನಿಂದ ಹೇಳಿಕೊಂಡು ಬಂದಿದ್ದಿರಿ. ಆದರೆ ಕಳೆದ ಎರಡು ವರ್ಷಗಳಲ್ಲಿ ನಿಮ್ಮ ಸಂಸ್ಕೃತಿ ಏನೆಂಬುದನ್ನು ಬಹಳ ಚೆನ್ನಾಗಿಯೇ ತೋರಿಸಿಕೊಟ್ಟಿದ್ದೀರಿ.
ಈಗ ನಿಮ್ಮ ಸಚಿವ ಸಂಪುಟದಲ್ಲಿರುವ, ಆಗ ಶಾಸಕರಾಗಿದ್ದ ರೇಣುಕಾಚಾರ್ಯ ಅವರು ನರ್ಸ್ ಜಯಲಕ್ಷ್ಮಿಗೆ ಮುದ್ದಿಸುವ ದೃಶ್ಯಗಳ ಫೋಟೋಗಳು ಹೊರಬಂದಾಗಲೇ ರಾಜ್ಯದ ಜನ ಛೀ..ಥೂ ಎಂದಿದ್ದರು. ನಿಮ್ಮ ಕುರ್ಚಿ ಉಳಿಸಿಕೊಳ್ಳಲು ಅದೇ ರೇಣುಕಾಚಾರ್ಯ ಅವರನ್ನು ತಂದು ಅಬಕಾರಿ ಸಚಿವ ಸ್ಥಾನಕ್ಕೆ ಕೂರಿಸಿದಿರಿ. ಪಾಪ ನೋಡಿ, ನಿಮ್ಮ ಪಕ್ಷದ ಪರವಾಗಿ ಚುನಾವಣೆಗಳಲ್ಲಿ ಪ್ರಚಾರ ಮಾಡಿಕೊಂಡೇ ಬಂದಿದ್ದ ಶ್ರುತಿ ಎಂಬ ಚಿತ್ರನಟಿ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದಾಗ ನೀವು ಆಕೆಯನ್ನು ಮಹಿಳಾ ಅಭಿವೃದ್ಧಿ ನಿಗಮದಿಂದ ಕಿತ್ತು ಹಾಕಿದಿರಿ. ಆದರೆ ಮಾನಭಂಗದ ಆರೋಪ ಎದುರಿಸುತ್ತಿದ್ದ ಶಾಸಕನನ್ನು ಸಚಿವಗಿರಿಗೆ ಕುಳ್ಳಿರಿಸಿದಿರಿ.
ಅದಾದ ನಂತರ ನಿಮ್ಮದೇ ಸಂಪುಟದ ಸಚಿವರು, ನಿಮ್ಮದೇ ಜಿಲ್ಲೆಯವರಾದ ಹಾಲಪ್ಪ ತನ್ನ ಸ್ನೇಹಿತನ ಪತ್ನಿಯ ಮೇಲೆ ಅತ್ಯಾಚಾರದ ಆರೋಪ ಎದುರಿಸಿ ಜೈಲಿಗೆ ಹೋದರು. ನಿಮ್ಮ ಪಕ್ಷದ ಶಾಸಕರೋರ್ವರು ಶಾಸಕರ ಭವನದಲ್ಲಿ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತರ ಕೈಗೆ ಸಿಕ್ಕು ಬಿದ್ದರು.
ಇದೆಲ್ಲ ಒಂದೆಡೆಯಿರಲಿ, ನಿಮ್ಮ ಪಕ್ಷದ ನೇತಾರರು ಬಳಸುವ ಭಾಷೆಯನ್ನು ಗಮನಿಸಿದ್ದೀರಾ? ನಿಮ್ಮ ಸಂಪುಟದಲ್ಲೇ ಇರುವ ಬಳ್ಳಾರಿ ಸಚಿವರು ನಿಮ್ಮನ್ನು ಮುದುಕ, ಕಂಸ ಎಂದೆಲ್ಲಾ ಕರೆದು ಅಪಮಾನಿಸಿದರು. ಕಳೆದ ಲೋಕಸಭಾ ಚುನಾವಣೆಗಳ ಸಂದರ್ಭದಲ್ಲಿ ನಿಮ್ಮ ಪಕ್ಷದ ಮುಖಂಡರು ಕೈ ಕತ್ತರಿಸುತ್ತೇವೆ, ಕಾಲು ಕತ್ತರಿಸುತ್ತೇವೆ, ತಲೆ ಕತ್ತರಿಸುತ್ತೇವೆ ಎಂದೆಲ್ಲ ಪಕ್ಕಾ ಗೂಂಡಾಗಳ ಶೈಲಿಯಲ್ಲಿ ಮಾತನಾಡಿದರು.
ಮೊನ್ನೆ ಮೊನ್ನೆ ನೋಡಿ, ಸಿದ್ಧರಾಮಯ್ಯ ಅವರು ನೆರೆಸಂತ್ರಸ್ತರ ಮನೆಯಲ್ಲಿ ವಾಸ್ತವ್ಯ ಹೂಡುತ್ತೇನೆ ಎಂದರು. ಅದಕ್ಕೆ ನಿಮ್ಮ ಈಶ್ವರಪ್ಪ ನೀಡಿದ ಹೇಳಿಕೆ ಗಮನಿಸಿ. ಸಿದ್ಧರಾಮಯ್ಯ ಅವರಿಗೆ ಇನ್ನು ಮುಂದೇ ಅದೇ ಮನೆಯೇ ಗತಿ ಎಂದರು.
ಅದರರ್ಥ ನೆರೆಸಂತ್ರಸ್ಥರ ಮನೆ ಕೀಳು ಎಂದಾಯಿತು ಅಲ್ಲವೆ? ಆ ಮನೆಗಳು ವಾಸಕ್ಕೆ ಅಯೋಗ್ಯ ಎಂದಾಗುವುದಿಲ್ಲವೆ? ಮೊದಲೇ ಎಲ್ಲವನ್ನೂ ಕಳೆದುಕೊಂಡು ನೋವಿನಲ್ಲಿರುವ ಜನರನ್ನು ನೈತಿಕವಾಗಿ ಕುಗ್ಗಿಸುವ ಭಾಷೆ ಇದಲ್ಲವೆ? ಇಷ್ಟು ಅಮಾನವೀಯವಾಗಿ ಮಾತನಾಡುವ ಜನರ ಬಗ್ಗೆ ಹೇಸಿಗೆ ಎನ್ನಿಸುವುದಿಲ್ಲವೆ?
ಬೇರೆಯವರ ವಿಷಯ ಹಾಗಿರಲಿ. ನೀವು ಹೇಗೆ ಮಾತನಾಡುತ್ತಿದ್ದೀರಿ? ನ್ಯಾಯಮೂರ್ತಿ ಜಗನ್ನಾಥ್ ಶೆಟ್ಟಿ ವರದಿ ವಿಚಾರದಲ್ಲಿ ದೇವೇಗೌಡರು ಆಡಿದ ಮಾತಿಗೆ ನಿಮ್ಮ ಪ್ರತಿಕ್ರಿಯೆ ಹೇಗಿತ್ತು?
ದೇವೇಗೌಡ, ಬೋರೇಗೌಡ, ತಿಮ್ಮೇಗೌಡರ ಪ್ರಶ್ನೆಗಳಿಗೆಲ್ಲ ಉತ್ತರಿಸುವುದಿಲ್ಲ ಎಂದು ಅಹಂಕಾರದಲ್ಲಿ ಮಾತನಾಡಿದಿರಿ ನೀವು. ಅದೇಕೆ ದೇವೇಗೌಡ, ಬೊರೇಗೌಡ, ತಿಮ್ಮೇಗೌಡ ಎಂದು ನಿರ್ದಿಷ್ಟವಾಗಿ ಹೇಳಿದಿರಿ? ನೀವು ಒಕ್ಕಲಿಗ ಸಮುದಾಯವನ್ನು ದ್ವೇಷಿಸುತ್ತೀರಿ ಎಂದಾಯಿತಲ್ಲವೆ? ಅಷ್ಟಕ್ಕೂ ಒಕ್ಕಲಿಗ ಸಮುದಾಯ ನಿಮಗೆ ಮಾಡಿರುವ ದ್ರೋಹವಾದರೂ ಏನು?
ಸಮುದಾಯಗಳ ವಿಷಯ ಹಾಗಿರಲಿ, ರಾಜ್ಯದ ಐದೂವರೆ ಕೋಟಿ ಕನ್ನಡ ಜನತೆಗೂ ನೀವು ಉತ್ತರದಾಯಿಯಾಗಿದ್ದೀರಿ. ಎಲ್ಲರ ಪ್ರಶ್ನೆಗೂ ನೀವು ಉತ್ತರಿಸಲೇಬೇಕು. ಆಗೋದಿಲ್ಲ ಎಂದರೆ ಕುರ್ಚಿ ಬಿಟ್ಟು ಹೊರಡುವುದು ಒಳ್ಳೆಯದು. ದೇವೇಗೌಡ, ಬೋರೇಗೌಡರು ಮಾತ್ರವಲ್ಲ ಶಿವಲಿಂಗು, ಸಿದ್ಧರಾಮ, ಬೋರ, ಜಾರ್ಜ್, ಇಸ್ಮಾಯಿಲ್ ಸೇರಿದಂತೆ ಎಲ್ಲರಿಗೂ ನೀವು ಉತ್ತರಿಸಲೇಬೇಕು. ಇಷ್ಟು ಕನಿಷ್ಠ ಜ್ಞಾನ ನಿಮಗಿದೆ ಎಂದೇ ಭಾವಿಸಿದ್ದೇನೆ.
ಇವೆಲ್ಲ ಕೆಲವು ಉದಾಹರಣೆಗಳು ಮಾತ್ರ. ನಿಮ್ಮ ಸಂಸ್ಕೃತಿ ಏನೆಂಬುದನ್ನು ನೀವೇ ಪ್ರದರ್ಶಿಸುತ್ತಿದ್ದೀರಿ. ರಾಜ್ಯದ ಜನತೆಯೂ ಸಹ ಇದನ್ನು ಗಮನಿಸುತ್ತಿದೆ ಎಂಬುದನ್ನು ಮರೆಯಬೇಡಿ.

ಚರ್ಚ್‌ದಾಳಿ ಇತ್ಯಾದಿ...


ಯಡಿಯೂರಪ್ಪನವರೆ,


ನೀವು ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವಾಗ ಏನು ಹೇಳುತ್ತೀರಿ ಎಂಬುದನ್ನು ಗಮನಿಸಿದ್ದೀರಾ?
‘...ಭಯ ಅಥವಾ ಪಕ್ಷಪಾತವಿಲ್ಲದೆ, ರಾಗ ಅಥವಾ ದ್ವೇಷವಿಲ್ಲದೆ ಎಲ್ಲ ಬಗೆಯ ಜನರಿಗೂ ಸಂವಿಧಾನ ಮತ್ತು ವಿಧಿಗೆ ಅನುಸಾರವಾಗಿ ನ್ಯಾಯವನ್ನು ಮಾಡುತ್ತೇನೆಂದು ಪ್ರಮಾಣ ಮಾಡುತ್ತೇನೆ.
ನಿಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ಕೆಲದಿನಗಳಲ್ಲೇ ಆಗಿದ್ದೇನು? ಚರ್ಚ್‌ಗಳ ಮೇಲೆ ಸರಣಿ ದಾಳಿಗಳು ನಡೆದವು. ಕ್ರೈಸ್ತರ ಪ್ರಾರ್ಥನಾ ಮಂದಿರಗಳಿಗೆ ನುಗ್ಗಿ ಮೂರ್ತಿಗಳನ್ನು ಕೆಡವಲಾಯಿತು. ಪ್ರತಿಭಟಿಸಿದ ಜನರ ಮೇಲೆ ಪೊಲೀಸರು ದಾಳಿ ನಡೆಸಿದರು.
ನಿಮ್ಮದೇ ಸಂಘಪರಿವಾರದರಾದ ಆಗಿನ ಭಜರಂಗದಳದ ಸಂಚಾಲಕ ಮಹೇಂದ್ರ ಕುಮಾರ್ ‘ನಾವೇ ಇದನ್ನು ಮಾಡ್ತಾ ಇರೋದು ಅಂತ ಹೇಳಿದರೂ ನಿಮ್ಮ ಗೃಹಸಚಿವರು ತರಾತುರಿಯಲ್ಲಿ ಹೇಳಿಕೆ ನೀಡಿ, ಸಂಘಪರಿವಾರದ ಕೈವಾಡವಿಲ್ಲ ಎಂದು ಕ್ಲೀನ್ ಚಿಟ್ ನೀಡಿದರು. ನಾವು ಇದನ್ನು ಮಾಡ್ತಾ ಇರೋದು ಪ್ರೊಟೆಸ್ಟೆಂಟರು, ಇವಾಂಜಲಿಸ್ಟರ ವಿರುದ್ಧ, ಕ್ಯಾಥೋಲಿಕರು ಸುಮ್ಮನಿರಬೇಕು. ಅವರು ಮೈ ಮೇಲೆ ಎಳೆದುಕೊಂಡರೆ ನಾವೇನೂ ಮಾಡಲು ಸಾಧ್ಯವಿಲ್ಲ ಎಂದು ಮಹೇಂದ್ರ ಕುಮಾರ್ ಬಹಿರಂಗವಾಗಿ ಧಮಕಿ ಹಾಕಿದರೂ ನೀವು ಸುಮ್ಮನಿದ್ದಿರಿ.
ಚರ್ಚ್‌ಗಳ ಮೇಲೆ ದಾಳಿ ನಡೆಸಿದ ಜನರನ್ನು ಕಾಟಾಚಾರಕ್ಕೆ ಬಂಧಿಸಿ, ಬಿಡುಗಡೆ ಮಾಡಲಾಯಿತು. ಮತ್ತೆ ಮತ್ತೆ ದಾಳಿಗಳು ನಡೆದವು. ‘ಪಕ್ಷಪಾತವಿಲ್ಲದೆ ಎಲ್ಲ ಜನರಿಗೆ ನ್ಯಾಯ ಮಾಡುತ್ತೇನೆ ಎಂದು ವಿಧಾನಸೌಧದ ಮೆಟ್ಟಿಲ ಮೇಲೆ ನಿಂತು ಮಾಡಿದ ನಿಮ್ಮ ಪ್ರಮಾಣ ಸುಳ್ಳಾಯಿತು.
ಇದಾದ ನಂತರ ಮತಾಂತರ ನಿಷೇಧ, ಗೋಹತ್ಯೆ ನಿಷೇಧದಂಥ ವಿವಾದಾಸ್ಪದ ವಿಷಯಗಳಿಗೆ ಕೈ ಹಾಕಿದಿರಿ. ಪಠ್ಯ ಪುಸ್ತಕಗಳಲ್ಲಿ ನಿಮ್ಮ ಸಿದ್ಧಾಂತಗಳನ್ನು ಹೇರುವ ಪ್ರಯತ್ನಗಳನ್ನು ಯಶಸ್ವಿಯಾಗಿ ನಡೆಸಿದಿರಿ. ಕನ್ನಡದ ಮಹಾನ್ ಸಾಹಿತಿಗಳ ಕೃತಿಗಳನ್ನು ಬೇರೆ ಭಾಷೆಗಳಿಗೆ ಅನುವಾದ ಮಾಡಬೇಕಾದ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಮೂಲಕ ನಿಮ್ಮ (ಜನಸಂಘ) ಪಕ್ಷದ ಸ್ಥಾಪಕ ದೀನ್ ದಯಾಳ್ ಉಪಾಧ್ಯಾಯ ಅವರ ಕೃತಿಗಳನ್ನು ೪೦ ಲಕ್ಷ ರೂ.ಗಳ ಖರ್ಚಿನಲ್ಲಿ ಕನ್ನಡಕ್ಕೆ ತರುವಂಥ ನಿರುಪಯೋಗಿ ಕೆಲಸಗಳನ್ನು ಮಾಡಿದಿರಿ. ಮಹಾನಗರ ಪಾಲಿಕೆ ಶಾಲೆಗಳನ್ನು ಉದ್ಧಾರ ಮಾಡುವ ಸೋಗಿನಲ್ಲಿ ಅವುಗಳ ಬೆಲೆಬಾಳುವ ಜಾಗವನ್ನು ಭಾರತೀಯ ವಿದ್ಯಾಭವನಕ್ಕೆ ‘ದಾನ ಮಾಡುವ ಪ್ರಯತ್ನಕ್ಕೂ ಕೈ ಹಾಕಿದಿರಿ. ಹಂಪಿ ವಿಶ್ವವಿದ್ಯಾಲಯದ ಭೂಮಿಯನ್ನು ನಿಮ್ಮ ಪಕ್ಷದ ಪ್ರಚಂಡರ ಟ್ರಸ್ಟ್ ಒಂದಕ್ಕೆ ಉದ್ರಿಯಾಗಿ ಕೊಡಲು ಯತ್ನಿಸಿ ಸಾಹಿತಿ-ಕಲಾವಿದರಿಂದ ಛೀಮಾರಿ ಹಾಕಿಸಿಕೊಂಡಿರಿ. ಎಲ್ಲ ವಿಭಾಗಗಳಲ್ಲೂ ನಿಮ್ಮ ಜನವಿರೋಧಿ ಹಿಡನ್ ಅಜೆಂಡಾಗಳನ್ನು ಹೇರಲು ಯತ್ನಿಸಿದಿರಿ.
ಇದೆಲ್ಲವೂ ನಿಮ್ಮ ಎರಡು ವರ್ಷದ ಸಾಧನೆ ಅಂತೀರಾ ಯಡಿಯೂರಪ್ಪನವರೇ? ಇದನ್ನು ಯಶಸ್ಸಿನ ಎರಡು ವರ್ಷ ಎಂದು ಕರೆಯುತ್ತೀರಾ?

ನೆರೆಯಲ್ಲಿ ನೊಂದವರೊಂದಿಗೆ ಚೆಲ್ಲಾಟ


ಗೌರವಾನ್ವಿತ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರೆ,

ನಿಮ್ಮ ಎರಡು ವರ್ಷಗಳ ಅಧಿಕಾರಾವಧಿಯಲ್ಲಿ ನೀವು ಮಾಡಿರುವ ಅಪರಾಧಗಳ ಪೈಕಿ ಯಾವುದನ್ನು ಬೇಕಾದರೂ ಕ್ಷಮಿಸಬಹುದೇನೋ. ಆದರೆ ಉತ್ತರ ಕರ್ನಾಟಕದ ನೆರೆಪೀಡಿತರ ವಿಷಯದಲ್ಲಿ ನೀವು ನಡೆದುಕೊಂಡ ರೀತಿಯನ್ನು ನೀವು ನಂಬುವ ಭಗವಂತನೂ ಕ್ಷಮಿಸಲಾರ.
ಎಂದೂ ಬಾರದ ನೆರೆ ಬಂದು ಉತ್ತರ ಕರ್ನಾಟಕದ ಜನ ಪರಿತಪಿಸುತ್ತಿದ್ದಾಗ, ಆಪ್ತೇಷ್ಟರು, ಜಾನುವಾರುಗಳನ್ನು ಕಳೆದುಕೊಂಡು ನರಳುತ್ತಿದ್ದಾಗ, ತುತ್ತು ಕೂಳಿಗೂ ಗತಿಯಿಲ್ಲದೆ ಒದ್ದಾಡುತ್ತಿದ್ದಾಗ ನೀವು ಬಳ್ಳಾರಿ ರೆಡ್ಡಿಗಳ ಜತೆ ಫೈಟಿಂಗ್ ಮಾಡಿಕೊಂಡು ಬೆಂಗಳೂರು-ದೆಹಲಿಗಳಲ್ಲಿ ತಲೆಮರೆಸಿಕೊಂಡಿದ್ದಿರಿ. ನಿಮ್ಮ ಪಕ್ಷದ ಶಾಸಕರು ರೆಸಾರ್ಟ್‌ಗಳಲ್ಲಿ ಮೋಜು ಮಾಡುತ್ತ ಕುಳಿತಿದ್ದರು. ಇದಕ್ಕಿಂತ ಅಸಹ್ಯ ಇನ್ನೊಂದಿದೆಯೇ ಯಡಿಯೂರಪ್ಪನವರೆ?
ಈಚೆಗೆ ತಾನೇ ಆರೋಗ್ಯ ಸಚಿವ ಶ್ರೀರಾಮುಲು ಸತ್ಯವೊಂದನ್ನು ಒಪ್ಪಿಕೊಂಡಿದ್ದಾರೆ. ನಾವು ಇನ್ನೂ ಸಹ ಆಸರೆ ಯೋಜನೆಯಡಿ ನೆರೆಸಂತ್ರಸ್ಥರಿಗೆ ಮನೆ ಕಟ್ಟಿಕೊಡಲು ಸಾಧ್ಯವಾಗಿಲ್ಲ, ಕ್ಷಮೆಯಿರಲಿ ಎಂದು ಹೇಳಿದ್ದಾರೆ. ನಾಚಿಕೆಯಾಗಬೇಕು ನಿಮ್ಮ ಸಚಿವರುಗಳಿಗೆ, ನಿಮ್ಮ ಅಧಿಕಾರಿಗಳಿಗೆ.
ಮನೆ ಕಟ್ಟಿಕೊಡಲು ಹಣ ನೀಡಿದ್ದ ಆದಿಚುಂಚನಗಿರಿ ಶ್ರೀಗಳು ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೇಳಿಕೊಂಡರು. ‘ಮೊದಲು ಕೊಟ್ಟಿರುವ ಹಣಕ್ಕೆ ಲೆಕ್ಕ ಕೊಡಿ. ನಿಮ್ಮ ಕೊಟ್ಟಿರುವ ಹಣ ಸಾಲ ಮಾಡಿ ಕೊಟ್ಟದ್ದು, ಮತ್ತೆ ಕೊಡಬೇಕೆಂದರೂ ಸಾಲ ಮಾಡಿಯೇ ಕೊಡಬೇಕು. ಮೊದಲು ನಿಮ್ಮ ಕೆಲಸ ಮಾಡಿ’ ಎಂದು ನೇರವಾಗಿ ಹೇಳಿದರು. ದಪ್ಪ ಚರ್ಮದವರು ನಿಮ್ಮ ಸರ್ಕಾರದಲ್ಲಿ ಇರುವವರು. ಎಂಥ ಮಾತುಗಳೂ ಅವರನ್ನು ತಟ್ಟುವುದಿಲ್ಲ.
ನೆರೆ ಸಂತ್ರಸ್ತ ಜಿಲ್ಲೆಗಳಲ್ಲಿ ಈಗಲೂ ಸಹ ಆ ಜನರು ತಾತ್ಕಾಲಿಕ ಶೆಡ್‌ಗಳಲ್ಲಿ ಭಿಕಾರಿಗಳಂತೆ ಬದುಕುತ್ತಿರುವುದನ್ನು ನೋಡಿಯಾದರೂ ನಿಮ್ಮ ಕರುಳು ಚುರುಕ್ ಎನ್ನುವುದಿಲ್ಲವೇ? ರೈತರ ಪರವಾಗಿ ನಿರಂತರ ಹೋರಾಟ ಮಾಡಿಕೊಂಡು ಬಂದಿದ್ದ ನಿಮಗೆ ನಿಮ್ಮದೇ ಜನ ಈಗ ಬೀದಿಗೆ ಬಿದ್ದಿದ್ದರೂ ಏನೂ ಅನಿಸುತ್ತಿಲ್ಲವೇಕೆ?
ತಲಾ ಒಂದು ಲಕ್ಷ ರೂ ವೆಚ್ಚದಲ್ಲಿ ಒಂದು ಲಕ್ಷ ಮನೆ ನಿರ್ಮಾಣಕ್ಕೆ ಒಂದು ಸಾವಿರ ಕೋಟಿ ರೂ.ಗಳನ್ನು ಸಂಗ್ರಹಿಸಲಾಗಿದೆ ಎಂದು ನೀವೇ ಹೇಳಿದ್ದೀರಿ. ಒಟ್ಟು ಮೂರು ಲಕ್ಷ ಮನೆಗಳನ್ನು ಕಟ್ಟುತ್ತೇವೆ ಎಂದು ನೀವು ಹೇಳಿಕೊಂಡಿರಿ. ಎಲ್ಲಿ ಕಟ್ಟಿದ್ದೀರಿ ಮನೆಗಳನ್ನು? ದಾನಿಕೊಟ್ಟ ದುಡ್ಡೆಲ್ಲ ಏನಾಯ್ತು?
ಅದಕ್ಕಿಂತ ಹೇಸಿಗೆ ಎಂದರೆ ನೆರೆ ಪರಿಹಾರದ ವಿಷಯದಲ್ಲೂ ತಾರತಮ್ಯ ಎಸಗಿದರು ನಿಮ್ಮ ಅಧಿಕಾರಿಗಳು. ಈ ಕುರಿತು ಲೋಕಾಯುಕ್ತರು ತನಿಖೆಯನ್ನೂ ನಡೆಸಿದರು. ನೆರೆ ಪರಿಹಾರದಲ್ಲಿ ಲೋಪವಾಗಿದೆ ಎಂದು ನಿಮ್ಮ ಸರ್ಕಾರದ ಮುಖ್ಯ ಕಾರ್ಯದರ್ಶಿಗಳೇ ಹೋಗಿ ಲೋಕಾಯುಕ್ತರ ಎದುರು ಒಪ್ಪಿಕೊಂಡು ಬಂದರು.
ಇಷ್ಟೆಲ್ಲ ನಡೆಯುತ್ತಿದ್ದರೂ ನೀವು ಇಲ್ಲಿ ಸೂಟು-ಬೂಟು ಧರಿಸಿಕೊಂಡು ವಿಶ್ವದ ಉದ್ದಿಮೆದಾರರನ್ನೆಲ್ಲ ಕರೆಸಿಕೊಂಡು ಕೋಟ್ಯಂತರ ರೂ. ಜನರ ತೆರಿಗೆಯ ಹಣ ಖರ್ಚು ಮಾಡಿ ಸಮಾವೇಶ ಮಾಡಿದಿರಿ. ನಿಮ್ಮ ಎರಡು ವರ್ಷಗಳ ಯಾತ್ರೆಯ ಸಾಧನಾ ಸಮಾವೇಶವನ್ನೂ ಮಾಡಿದಿರಿ.
ಅತ್ತ ತಾತ್ಕಾಲಿಕ ಶೆಡ್‌ಗಳಲ್ಲಿ ಮಳೆ ಶುರುವಾಗಿರುವ ಈ ಹೊತ್ತಿನಲ್ಲಿ ಸಂತ್ರಸ್ಥ ಜನತೆ ಕಣ್ಣೀರಿಡುತ್ತ ಬದುಕುತ್ತಿದ್ದಾರೆ. ಅವರ ಕಣ್ಣೀರ ಶಾಪ ನಿಮ್ಮ ಸರ್ಕಾರವನ್ನು ತಟ್ಟುವುದಿಲ್ಲವೇ ಯಡಿಯೂರಪ್ಪನವರೆ?

ಜಿ-ಪ್ರವರ್ಗದ ಬಿಡಿಎ ಸೈಟುಗಳ್ಳರು...



ಮಾನ್ಯ ಯಡಿಯೂರಪ್ಪನವರೆ,



ಮುಖ್ಯಮಂತ್ರಿಗಳ ವಿವೇಚನಾ ಕೋಟಾದಡಿಯಲ್ಲಿ ನೀವು ಆಗಾಗ ಅತಿಗಣ್ಯರಿಗೆ ಬಿಡಿಎ ನಿವೇಶನಗಳನ್ನು ಮಂಜೂರು ಮಾಡುತ್ತೀರಿ. ಬೆಂಗಳೂರಿನಲ್ಲಿ ಯಾವುದೇ ರೀತಿಯ ಆಸ್ತಿ ಹೊಂದದೇ ಇರುವ ಅತಿಗಣ್ಯರಿಗೆ ಮಾತ್ರ ಇದು ಅನ್ವಯಿಸುತ್ತದೆ. ಹೀಗೆ ಯಾವುದೇ ಆಸ್ತಿ ಹೊಂದಿಲ್ಲ ಎಂದು ನಿವೇಶನ ಪಡೆಯುವವರು ಪ್ರಮಾಣಪತ್ರವನ್ನೂ ಸಲ್ಲಿಸಬೇಕು.
ನಿಮ್ಮ ಕಾಲದಲ್ಲಿ ನೀವು ಇದುವರೆಗೆ ಎಷ್ಟು ಮಂದಿಗೆ ನಿವೇಶನ ನೀಡಿದ್ದೀರಿ? ಅವರ ಪೈಕಿ ಬೆಂಗಳೂರಿನಲ್ಲಿ ನಿವೇಶನ ಹೊಂದದೇ ಇರುವವರು ಎಷ್ಟು ಮಂದಿ? ಸುಳ್ಳು ಪ್ರಮಾಣಪತ್ರಗಳನ್ನು ನೀಡಿ ನಿವೇಶನ ಪಡೆದವರು ಎಷ್ಟು ಮಂದಿ? ಬಹಿರಂಗಪಡಿಸುತ್ತೀರಾ ಯಡಿಯೂರಪ್ಪನವರೆ?
ಮುಖ್ಯಮಂತ್ರಿಗಳ ವಿವೇಚನಾ ಕೋಟಾದಲ್ಲಿ ಮುಖ್ಯಮಂತ್ರಿಗಳ ಮಗ, ಮಗಳು, ನೆಂಟರು, ಇಷ್ಟರು ನಿವೇಶನ ಪಡೆಯಬೇಕಾ? ಬಿಡಿಎ ಸಂಸ್ಥೆಯೇನು ಮುಖ್ಯಮಂತ್ರಿಗಳಿಗೆ ಬರೆದುಕೊಡಲಾದ ಜಹಗೀರಾ?
ನಿಮ್ಮ ಕಂದಾಯ ಸಚಿವ ಕರುಣಾಕರರೆಡ್ಡಿಯವರಿಗೆ ಬೆಂಗಳೂರಿನಲ್ಲಿ ಆಸ್ತಿಯೇ ಇಲ್ಲವೇ? ಅವರೇ ಚುನಾವಣೆ ಸಂದರ್ಭದಲ್ಲಿ ಕೊಟ್ಟಿರುವ ಪ್ರಮಾಣಪತ್ರದ ಪ್ರಕಾರ ಕೃಷ್ಣರಾಜಪುರದಲ್ಲಿ ಅವರಿಗೆ ಕೃಷಿಯೇತರ ಭೂಮಿ ಇದೆ. ಹೀಗಿದ್ದಾಗ್ಯೂ ನಿಯಮ ಉಲ್ಲಂಘಿಸಿ ಅವರಿಗೇಕೆ ನಿವೇಶನ ಕೊಟ್ಟಿರಿ?
ಜಿ ಪ್ರವರ್ಗದಡಿಯಲ್ಲಿ ನಿವೇಶನಗಳನ್ನು ಪಡೆದಿರುವ ನಿಮ್ಮ ಶಾಸಕರ ಪೈಕಿ ಎಷ್ಟು ಜನರಿಗೆ ಎಷ್ಟು ಆಸ್ತಿ ಇದೆ ಎಂಬುದು ನಿಮಗೆ ಗೊತ್ತಿಲ್ಲವೆ? ಗೊತ್ತಿಲ್ಲದಿದ್ದರೆ ಚುನಾವಣೆಗೆ ಸ್ಪರ್ಧಿಸುವ ಸಂದರ್ಭದಲ್ಲಿ ಅವರು ಸಲ್ಲಿಸಿದ ಪ್ರಮಾಣಪತ್ರಗಳನ್ನಾದರೂ ಪರಿಶೀಲಿಸಬಹುದಿತ್ತಲ್ಲವೆ? ಕಡೇ ಪಕ್ಷ ಗೆದ್ದು ಬಂದ ನಂತರ ಅವರು ಲೋಕಾಯುಕ್ತರಿಗೆ ಸಲ್ಲಿಸಿದ ಪ್ರಮಾಣಪತ್ರಗಳನ್ನಾದರೂ ಕೆದಕಿ ನೋಡಬಹುದಿತ್ತಲ್ಲವೆ? ಬೆಂಗಳೂರಿನಲ್ಲಿ ಇರಲು ನಮಗೆ ಸೂರಿಲ್ಲ ಎಂದು ಅವರು ಕೊಟ್ಟ ಖೊಟ್ಟಿ ಪ್ರಮಾಣಪತ್ರಗಳನ್ನು ಪಡೆದು ನಿವೇಶನ ಕೊಟ್ಟಿರಲ್ಲ, ಇದ್ಯಾವ ನ್ಯಾಯ? ಯಾರ‍್ಯಾರು ಸುಳ್ಳು ಪ್ರಮಾಣಪತ್ರ ನೀಡಿದ್ದಾರೋ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ ಎಂದು ನೀವೇ ಘೋಷಿಸಿದಿರಿ. ಎಷ್ಟು ಮಂದಿಯ ಮೇಲೆ ಕಾನೂನು ಕ್ರಮ ಕೈಗೊಂಡಿದ್ದೀರಿ? ಕರುಣಾಕರ ರೆಡ್ಡಿ ವಿರುದ್ಧ ಕ್ರಮ ಕೈಗೊಳ್ಳುವ ಧೈರ್ಯವಿದೆಯೇ ನಿಮಗೆ?
ಯಡಿಯೂರಪ್ಪನವರೆ, ರಾಜ್ಯದಲ್ಲಿ ನೂರಾರು ಮಂದಿ ಹಿರಿಯ ಕಲಾವಿದರು, ಸಾಹಿತಿಗಳು ಬೆಂಗಳೂರಿನಲ್ಲಿ ವಾಸಕ್ಕೊಂದು ಮನೆಯಿಲ್ಲದೆ ಒದ್ದಾಡುತ್ತಿದ್ದಾರೆ. ಆ ಪೈಕಿ ಕೆಲ ಮಂದಿ ನಿಮ್ಮ ಕಚೇರಿ ಸುತ್ತಿ ಸುತ್ತಿ ಸಾಕಾಗಿ ಹೋಗಿದ್ದಾರೆ. ಕನ್ನಡ ಚಿತ್ರರಂಗದ ಮೇರುನಟಿ ಲೀಲಾವತಿಯಂತವರಿಗೇ ನೀವು(ಹಿಂದೆ ಇದ್ದ ಮುಖ್ಯಮಂತ್ರಿಗಳೂ ಸೇರಿದಂತೆ) ನಿವೇಶನ ಕೊಡಲಿಲ್ಲ. ಪುಡಿಗಾಸು ಪಡೆದು ಅಭಿನಯ ಮಾಡಿಕೊಂಡು ಬಂದು, ಈ ಇಳಿ ವಯಸ್ಸಿನಲ್ಲಿ ಒಂದು ಮನೆ ಕಟ್ಟಿಕೊಳ್ಳಲೂ ಸಾಧ್ಯವಾಗದ ಹೆಣಗುತ್ತಿರುವ ನೂರಾರು ಪೋಷಕ ನಟರುಗಳಿದ್ದಾರೆ. ದೊಡ್ಡ ದೊಡ್ದ ಸಾಹಿತಿಗಳಿದ್ದಾರೆ. ಅವರಿಗೆ ನ್ಯಾಯಯುತವಾಗಿ ಕೊಡಬೇಕಾದ ನಿವೇಶನಗಳನ್ನು ಸಾವಿರಾರು ಕೋಟಿ ರೂ. ಒಡೆಯರಿಗೆ ಸತ್ಯನಾರಾಯಣ ಪೂಜೆಯ ಪ್ರಸಾದದಂತೆ ಹಂಚುತ್ತಿದ್ದೀರಲ್ಲ, ಇದಕ್ಕೇನು ಹೇಳಬೇಕು?
ಕಡೇ ಪಕ್ಷ ಜನ ಏನಂದುಕೊಂಡಾರು ಎಂಬ ಯೋಚನೆಯಾದರೂ ಬೇಡವೇ ನಿಮಗೆ?

೪ ಲಕ್ಷ ಕೋಟಿ ಬಂಡವಾಳ ತಂದು..?


ಯಡಿಯೂರಪ್ಪ ಸರ್,‘ಸ್ವದೇಶಿ ಬಚಾವೋ, ವಿದೇಶಿ ಭಗಾವೋ’ ಎಂಬುದು ನಿಮ್ಮ ಸಂಘಪರಿವಾರದ ಒಂದು ಘೋಷಣೆಯಾಗಿತ್ತು. ನಿಮ್ಮ ಸರ್ಕಾರಕ್ಕೆ ಈಗ ವಿದೇಶಿ ಬಂಡವಾಳದ ಹುಚ್ಚು ಹಿಡಿದಿದೆ. ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೂ ಮುನ್ನ ಒಂದು ಲಕ್ಷ ಕೋಟಿ ರೂ. ಬಂಡವಾಳ ತರುತ್ತೇನೆ ಎನ್ನುತ್ತಿದ್ದಿರಿ. ಈಗ ಅದು ನಾಲ್ಕು ಲಕ್ಷ ಕೋಟಿ ರೂ.ಗೆ ಏರಿದೆ. ಸುಮಾರು ಎಂಟೂವರೆ ಲಕ್ಷ ಉದ್ಯೋಗಗಳು ಸೃಷ್ಟಿಯಾಗುತ್ತವೆ ಎಂದು ಹೇಳುತ್ತಿದ್ದೀರಿ.
ಇದನ್ನೆಲ್ಲ ನಂಬಬೇಕೆ ನಾವು? ಕೇಂದ್ರ ಸರ್ಕಾರ ಹಾಗು ರಿಸರ್ವ್ ಬ್ಯಾಂಕಿನ ಅಂಕಿ ಅಂಶಗಳ ಪ್ರಕಾರ ೨೦೦೦ನೇ ಇಸವಿಯಿಂದ ೨೦೧೦ರವರೆಗೆ ಒಟ್ಟು ೧೦ ವರ್ಷಗಳಲ್ಲಿ ಇಡೀ ದೇಶಕ್ಕೆ ಹರಿದು ಬಂದ ವಿದೇಶಿ ಬಂಡವಾಳವೇ ೪,೮೮,೦೦ ಕೋಟಿ ರೂಪಾಯಿಗಳು. ಮತ್ತೊಮ್ಮೆ ಕೇಳಿಸಿಕೊಳ್ಳಿ, ಇದು ಇಡೀ ದೇಶದ ಲೆಕ್ಕ; ರಾಜ್ಯದ್ದಲ್ಲ.
ನೀವು ಹೇಳ್ತಾ ಇರೋದೆಲ್ಲವೂ ಹಸಿಹಸಿ ಸುಳ್ಳು ಎಂದು ಬಿಡಿಸಿ ಹೇಳಬೇಕೆ? ವಿದೇಶಿ, ಸ್ವದೇಶಿ ಬಂಡವಾಳಗಳೆಲ್ಲವೂ ಸೇರಿದರೂ ನೀವು ಹೇಳುತ್ತಿರುವ ಅಂಕಿಅಂಶಗಳು ನಿಜವಾಗುವ ಸಾಧ್ಯತೆಗಳು ಇಲ್ಲವೇ ಇಲ್ಲ.
ಅದು ಒಂದೆಡೆಯಿರಲಿ, ಎಂಟೂವರೆ ಲಕ್ಷ ಕೋಟಿ ಉದ್ಯೋಗ ಸೃಷ್ಟಿಯಾಗುತ್ತದೆ ಎಂಬ ನಿಮ್ಮ ಮಾತನ್ನೇ ನಂಬಿಕೊಳ್ಳೋಣ. ಆ ಉದ್ಯೋಗಗಳೆಲ್ಲವೂ ಕನ್ನಡದ ಮಕ್ಕಳಿಗೇ ಕೊಡಿಸ್ತೀನಿ ಎಂದು ಎದೆ ಮುಟ್ಟಿಕೊಂಡು ಹೇಳಿ ನೋಡೋಣ?
ನಿಜ ಹೇಳಲಾ ಯಡಿಯೂರಪ್ಪನವರೇ, ನಿಮ್ಮದು ಉದ್ಯೋಗ ಕೊಡಿಸುವ ಪ್ರಾಜೆಕ್ಟ್ ಅಲ್ಲ; ಈ ನೆಲದ ಮಕ್ಕಳಿಂದ ಉದ್ಯೋಗ ಕಿತ್ತುಕೊಳ್ಳುವ ಪ್ರಾಜೆಕ್ಟ್. ಬಂಡವಾಳ ಹೂಡಿಕೆದಾರರಿಗಾಗಿ ನೀವು ಯಾವ ಪ್ರಮಾಣದಲ್ಲಿ ರೈತರ ಜಮೀನು ಸ್ವಾಧೀನ ಪಡಿಸಿಕೊಳ್ಳಲಿದ್ದೀರಿ ಎಂಬುದು ಎಲ್ಲರಿಗೂ ಸ್ಪಷ್ಟವಾಗಿ ಗೊತ್ತಿದೆ. ಸುಮಾರು ಎರಡು ಲಕ್ಷ ಎಕರೆ ಜಮೀನು ಸ್ವಾಧೀನ ಸದ್ಯದ ನಿಮ್ಮ ಗುರಿ ಇದ್ದಿರಬಹುದು.
ಪ್ರತಿ ಎಕರೆ ಜಮೀನು ರೈತರು-ಕೃಷಿ ಕೂಲಿಗಳೂ ಸೇರಿದಂತೆ ಕನಿಷ್ಠ ೫ ಜನರಿಗೆ ಅನ್ನ ನೀಡುತ್ತಿದೆ, ಅರ್ಥಾತ್ ಉದ್ಯೋಗ ನೀಡುತ್ತಿದೆ. ಅದರ ಲೆಕ್ಕಾಚಾರದಲ್ಲಿ ನೀವು ಈ ನೆಲದ ಮಕ್ಕಳ ೧೦ ಲಕ್ಷ ಉದ್ಯೋಗ ಕಸಿಯಲಿದ್ದೀರಿ. ಹಾಗು ಅವರನ್ನು ಅವಲಂಬಿಸಿದ ಕನಿಷ್ಟ ೫೦ ಲಕ್ಷ ಜನರ ಬದುಕು ಮೂರಾಬಟ್ಟೆಯಾಗಲಿದೆ. ಈ ವಾಸ್ತವವನ್ನೇಕೆ ಮರೆ ಮಾಚುತ್ತಿದ್ದೀರಿ. ಕವಡೆ ಕಿಮ್ಮತ್ತಿಗೆ ಜಮೀನು ಕೊಡುವ ರೈತರ ಬಳಿ ಆ ಹಣ ಎಷ್ಟು ದಿನ ಇದ್ದೀತು? ಆ ನಂತರ ಅವರೇನು ಮಾಡಿಯಾರು? ಉಳುಮೆಯನ್ನು ಬಿಟ್ಟು ಬೇರೆ ಯಾವ ಕೌಶಲ್ಯವಿದೆ ಅವರಲ್ಲಿ? ರೈತರಿಗೆ ಸಣ್ಣಪುಟ್ಟ ಪರಿಹಾರವಾದರೂ ಸಿಗುತ್ತದೆ, ಕೃಷಿ ಕಾರ್ಮಿಕರ ಗತಿ ಏನು? ಅವರನ್ನು ಕೇಳುವವರು ಯಾರು?
ನಿಮ್ಮ ಅಚ್ಚುಮೆಚ್ಚಿನ ಕಾರ್ಪರೇಟ್ ಸಂಸ್ಥೆಗಳು ಸೃಷ್ಟಿಸುವ ಉದ್ಯೋಗಗಳು ಎಂಥದ್ದು ಎಂಬುದು ನಿಮಗೂ ಗೊತ್ತಿದೆ. ಅವರಿಗೆ ಈ ನೆಲದ ಜನರಿಗೆ ಉದ್ಯೋಗ ಕೊಟ್ಟು ಅಭ್ಯಾಸವಿಲ್ಲ. ಅದು ಅಪಾಯಕಾರಿ ಎಂಬುದೇ ಅವರ ನಂಬಿಕೆ. ಹಾಗಾಗಿ ಅವರು ಹೊರರಾಜ್ಯಗಳಿಂದಲೇ ಉದ್ಯೋಗಿಗಳನ್ನು ಆಮದು ಮಾಡಿಕೊಳ್ಳುತ್ತಾರೆ. ಸಿ ಮತ್ತು ಡಿ ದರ್ಜೆಯ ಹುದ್ದೆಗಳಿಗೂ ಬೇರೆ ರಾಜ್ಯಗಳಿಂದ ಗುತ್ತಿಗೆ ಆಧಾರದಲ್ಲಿ ಜನರನ್ನು ಕರೆಸುವುದು ಅವರಿಗೆ ಗೊತ್ತಿದೆ.
ಇದೆಲ್ಲ ಒಂದೆಡೆಯಿರಲಿ, ನಿಮ್ಮ ಬಂಡವಾಳ ಹೂಡಿಕೆದಾರರು ಹಣವನ್ನು ಎಲ್ಲಿಂದ ತರುತ್ತಿದ್ದಾರೆ ಗೊತ್ತೆ? ಅವರಿಗೆ ನೀವು ಭೂಮಿ ಕೊಟ್ಟ ತಕ್ಷಣ ನಮ್ಮದೇ ರಾಷ್ಟ್ರೀಕೃತ ಬ್ಯಾಂಕುಗಳು ಸಾವಿರಾರು ಕೋಟಿ ರೂ. ಸಾಲ ನೀಡುತ್ತವೆ. ಆ ಬ್ಯಾಂಕುಗಳಲ್ಲಿ ಇರುವ ಹಣ ಬರಾಕ್ ಒಬಾಮಾಗೇ ಸೇರಿದ್ದೇನಲ್ಲ; ಈ ನೆಲದ ಜನರ ದುಡಿಮೆಯ ಹಣ.
ನಮ್ಮದೇ ಹಣ, ನಮ್ಮದೇ ಭೂಮಿ, ನಮ್ಮದೇ ನೀರು, ನಮ್ಮದೇ ವಿದ್ಯುತ್ ಎಲ್ಲವನ್ನೂ ಕೊಟ್ಟು ನಮ್ಮ ಜನರನ್ನು ಭಿಕ್ಷುಕರನ್ನಾಗಿ ಮಾಡುವ ಈ ವೈಟ್ ಕಾಲರ್ ಜನರಿಗೆ ನೀವು ರತ್ನಗಂಬಳಿ ಹಾಸಿ ಕರೆಯುವುದನ್ನು ನಿಮ್ಮ ದೊಡ್ಡ ಸಾಧನೆ ಎಂದು ನಾವು ಕೊಂಡಾಡಬೇಕೆ?

ಹೊಗೇನಕಲ್ ಪರರ ಪಾಲಾದರೆ ನಿಮಗೇನು ಅಲ್ವೆ?


ಯಡಿಯೂರಪ್ಪಾಜಿ,ಮುಖ್ಯಮಂತ್ರಿ ಕುರ್ಚಿಯ ಮೇಲೆ ಕುಳಿತುಕೊಳ್ಳುವುದಕ್ಕೂ ಮುನ್ನ ನೀವು ಹೊಗೇನಕಲ್‌ನಲ್ಲಿ ನಡೆಸಿದ ಬೋಟಿಂಗ್ ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಯಾವುದೇ ಕಾರಣಕ್ಕೂ ಈ ನೆಲದ ಒಂದಿಂಚು ಜಮೀನು ಬೇರೆಯವರ ಪಾಲಾಗಲು ಬಿಡುವುದಿಲ್ಲ ಎಂದು ಎಷ್ಟು ವೀರಾವೇಶದಲ್ಲಿ ಗುಡುಗಿದ್ದಿರಿ ನೀವು. ಈಗೇನಾಯ್ತು ಯಡಿಯೂರಪ್ಪನವರೆ?
ಅಲ್ಲಿ, ಹೊಗೇನಕಲ್‌ನಲ್ಲಿ ೨.೧ ಟಿಎಂಸಿ ಕುಡಿಯುವ ನೀರು ಯೋಜನೆಯನ್ನು ತಮಿಳುನಾಡಿನವರು ಆರಂಭಿಸಿ, ಈಗಾಗಲೇ ಶೇ.೩೦ ರಷ್ಟು ಕೆಲಸ ಮುಗಿಸಿದ್ದಾರೆ. ನೀವು, ನಿಮ್ಮ ಸರ್ಕಾರ ಕಣ್ಣು ಮುಚ್ಚಿಕೊಂಡು ಕುಳಿತಿರುವ ಮರ್ಮವಾದರೂ ಏನು? ಕಡೆ ಪಕ್ಷ ಉತ್ತರವನ್ನಾದರೂ ಕೊಡಿ. ಸತ್ಯವನ್ನಾದರೂ ಹೇಳಿ.
ನಮಗಿರುವ ಗುಮಾನಿಯೇನು ಗೊತ್ತೇ ಯಡಿಯೂರಪ್ಪನವರೆ? ತಿರುವಳ್ಳುವರ್ ಪ್ರತಿಮೆ ಅನಾವರಣಕ್ಕೂ ಮುನ್ನ ಚೆನ್ನೈಗೆ ಹೋಗಿ ನೀವು ಕರುಣಾನಿಧಿಯವರಿಗೆ ವೀಳ್ಯ ಕೊಟ್ಟು ಬಂದರಲ್ಲ. ಆಗಲೇ ಹೊಗೇನಕಲ್‌ನಲ್ಲಿ ಕಾಮಗಾರಿ ಮಾಡಿಕೊಂಡರೆ ನಾವು ಸುಮ್ಮನಿರುತ್ತೇವೆ ಎಂದು ನೀವು ಹೇಳಿಬಂದಿರುತ್ತೀರೇನೋ ಅಂತ ಅನ್ನಿಸುತ್ತಿದೆ. ಈ ತರಹದ ಒಪ್ಪಂದವೇನಾದರೂ ಆಗಿದ್ದರೆ ಅದನ್ನಾದರೂ ಹೇಳಿ.
ನಿಮ್ಮ ಸರ್ಕಾರದ ನಂ.೨ ಸ್ಥಾನದಲ್ಲಿರುವ ಗೃಹ ಸಚಿವ ವಿ.ಎಸ್.ಆಚಾರ್ಯ ಅವರಿಗೆ ಪೆದ್ದುಪೆದ್ದಾಗಿ ಮಾತಾಡಿ ಅಭ್ಯಾಸ. ಅವರು ಅಲ್ಲಿ ಕುಡಿಯುವ ನೀರು ಯೋಜನೆ ಮಾಡಿಕೊಳ್ಳಲಿ, ನಾವು ಇಲ್ಲಿ ವಿದ್ಯುತ್ ಯೋಜನೆ ಮಾಡುತ್ತೇವೆ ಎಂದು ಹೇಳಿಕೆ ಕೊಟ್ಟರು. ಅಸಲಿಗೆ ಹೊಗೇನಕಲ್‌ನ ಪ್ರದೇಶದಲ್ಲಿ ಎಷ್ಟು ಭಾಗ ಕರ್ನಾಟಕಕ್ಕೆ, ಎಷ್ಟು ಭಾಗ ತಮಿಳುನಾಡಿಗೆ ಸೇರುತ್ತದೆ ಎಂಬ ಕಾಮನ್‌ಸೆನ್ಸ್ ಆದರೂ ನಿಮ್ಮ ಸಚಿವರಿಗೆ ಇರಬೇಕು ಅಲ್ಲವೇ. ಗಡಿ ಗುರುತಿಸುವಿಕೆಗಾಗಿಯೇ ೨೦೦೫ರಲ್ಲಿ ಜಂಟಿ ಸರ್ವೆ ಆರಂಭವಾಗಿತ್ತು ಎಂಬುದು ಸರ್ಕಾರಿ ಕಡತಗಳಲ್ಲೇ ಇದೆ ಎಂಬುದನ್ನು ನಿಮ್ಮ ಗೃಹ ಸಚಿವರಿಗೆ ಹೇಳುವವರ‍್ಯಾರು. ಈ ಸರ್ವೆ ಕಾರ್ಯ ತಮಿಳುನಾಡು ಸರ್ಕಾರದ ಅಸಹಕಾರದಿಂದಲೇ ನಿಂತು ಹೋಗಿದೆ ಎಂಬುದು ಉಭಯ ಸರ್ಕಾರಗಳ ನಡುವೆ ನಡೆದ ಪತ್ರವ್ಯವಹಾರದಲ್ಲೇ ಗೊತ್ತಾಗುತ್ತದೆ ಎಂಬುದನ್ನು ಸಚಿವರಿಗೆ ಅರ್ಥ ಮಾಡಿಸುವುದು ಹೇಗೆ?
ಜಂಟಿ ಸರ್ವೆಯೇ ನಡೆಯದೆ, ಗಡಿ ಗುರುತಿಸುವಿಕೆಯೇ ಆಗದೆ, ಯಾರ ಭಾಗ ಎಷ್ಟು ಎಂದು ಸ್ಪಷ್ಟವಾಗಿ ಗೊತ್ತಿಲ್ಲದೆ ಅವರು ಅಲ್ಲಿ ಕುಡಿಯುವ ನೀರು ಯೋಜನೆ ಮಾಡಿಕೊಳ್ಳಲಿ ಎಂದು ಹೇಳಲು ಕರ್ನಾಟಕದ ಭೂಮಿಯೇನು ಪುಗಸಟ್ಟೆ ಪುನುಗೇ; ಸಿಕ್ಕಿದವರಿಗೆ ಹಂಚಿಕೊಂಡು ಬರಲು? ನಾಳೆ ಬೆಂಗಳೂರಿನಲ್ಲಿ ತಮಿಳುನಾಡಿನವರು ಬಂದು ಏನೋ ಮಾಡ್ತೀವಿ, ನಮಗೇ ಬಿಟ್ಟುಕೊಡಿ ಅಂದರೆ, ಆಯ್ತು ನೀವಿಲ್ಲಿ ಏನಾದ್ರೂ ಮಾಡಿಕೊಳ್ಳಿ ನಾವು ತುಮಕೂರಿಗೋ, ಹಾಸನಕ್ಕೋ ಹೋಗ್ತಿವಿ ಅನ್ನುತ್ತಾರೆಯೇ ಗೃಹಸಚಿವರು?
ಹೊಗೇನಕಲ್ ವಿಷಯದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆಗಳ ಮೇಲೆ ಪ್ರತಿಭಟನೆ ಮಾಡುತ್ತಿದ್ದರೂ ನಿಮ್ಮ ಸರ್ಕಾರಕ್ಕೆ ಜಾಣ ಕಿವುಡು, ಕುರುಡು. ಹೋರಾಟ ಮಾಡೋದ್ರಿಂದ ಏನೂ ಆಗೋಲ್ಲರೀ, ಮಾತುಕತೆ ಮಾಡಬೇಕು ಎಂಬುದು ನಿಮ್ಮ ಎಂದಿನ ಉಡಾಫೆಯ ಉತ್ತರ. ಹೋಗಲಿ ಅದನ್ನಾದರೂ ಮಾಡಿದಿರಾ? ತಮಿಳುನಾಡು ಮುಖ್ಯಮಂತ್ರಿ, ನಿಮ್ಮ ಹಿರಿಯಣ್ಣ ಕರುಣಾನಿಧಿ ಜತೆ ಮಾತನಾಡಿ ಜಂಟಿ ಸಮೀಕ್ಷೆ ಮಾಡೋಣ ಎಂದು ಹೇಳುವ ಧೈರ್ಯ ನಿಮಗಿಲ್ಲವೆ?
ಕರ್ನಾಟಕದ ಗಡಿಯನ್ನೇ ತಮಿಳುನಾಡು ಆವರಿಸಿಕೊಳ್ಳುತ್ತಿದ್ದರೂ, ನಾಡರಕ್ಷಣೆಯ ಹೊಣೆ ಹೊತ್ತ ನೀವು ಹೀಗೆ ಮೌನವ್ರತ ತಾಳುವುದೂ ಒಂದು ಸಾಧನೆಯೇ? ಇದೂ ಯಶಸ್ಸಿನ ಒಂದು ಭಾಗವೇ?

ನಾಡದ್ರೋಹಿಗಳೊಂದಿಗೆ ಚಕ್ಕಂದ ಬೇಕೆ?


ಮುಖ್ಯಮಂತ್ರಿಗಳೇ,ನೀವು ಅಧಿಕಾರ ವಹಿಸಿಕೊಂಡ ಮೊದಲ ವರ್ಷ ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ನಡೆಸಿದಿರಿ. ಕುಮಾರಸ್ವಾಮಿ ಸರ್ಕಾರ ಆರಂಭಿಸಿದ್ದ ಸತ್ ಸಂಪ್ರದಾಯವನ್ನು ನೀವು ಅನುಸರಿಸಿದಿರಿ. ಅದಕ್ಕೆ ನಿಮ್ಮನ್ನು ಮೆಚ್ಚಬೇಕು.
ಆದರೆ ಎರಡನೇ ವರ್ಷ ಏನಾಗಿ ಹೋಯ್ತು? ಯಾಕಾಗಿ ನೀವು ಬೆಳಗಾವಿ ಅಧಿವೇಶನ ನಡೆಸಲಿಲ್ಲ? ಬೆಳಗಾವಿಯಲ್ಲಿ ವಿಶ್ವಕನ್ನಡ ಸಮ್ಮೇಳನ ನಡೆಸಬೇಕು. ಅದಕ್ಕೆ ಸಿದ್ಧತೆ ನಡೆಯಬೇಕು. ಹೀಗಾಗಿ ಈ ಬಾರಿ ಅಧಿವೇಶನ ಇಲ್ಲ ಎಂದು ನೀವು ಹೇಳಿದ ನೆನಪು.
ಆದರೆ ಸತ್ಯ ಮುಚ್ಚಿಟ್ಟಿರಿ ನೀವು. ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ನಡೆಯುವುದರಲ್ಲಿತ್ತು. ಸೋತು ಹೈರಾಣಾಗಿರುವ ಅಲ್ಲಿನ ನಿಮ್ಮ ಬಿಜೆಪಿ ಘಟಕಕ್ಕೆ ಗೆಲುವಿನ ದಾಹ. ಒಂದು ವೇಳೆ ಬೆಳಗಾವಿಯಲ್ಲಿ ನೀವು ಅಧಿವೇಶನ ನಡೆಸಿದರೆ ಮಹಾರಾಷ್ಟ್ರದ ಬಿಜೆಪಿ ಘಟಕಕ್ಕೆ ಕಿರಿಕಿರಿ. ಬೀಳುವ ಮತಗಳೂ ಬೀಳಲಾರವು ಎಂಬ ಭೀತಿ. ಅದಕ್ಕಾಗಿ ಬೆಳಗಾವಿ ಅಧಿವೇಶನವನ್ನೇ ರದ್ದು ಮಾಡಿದಿರಿ. ನಿಜ ತಾನೇ?
ಇದನ್ನು ನಾವು ನಾಡದ್ರೋಹ ಅಂತಲೇ ಕರೆಯುತ್ತೇವೆ. ಬೇಸರ ಪಟ್ಟುಕೊಳ್ಳಬೇಡಿ. ನಿಮ್ಮ ಪಕ್ಷ ಮಹಾರಾಷ್ಟ್ರದಲ್ಲೋ, ಇನ್ನೆಲ್ಲೋ ಗೆದ್ದು ನಮಗೇನೂ ಆಗಬೇಕಿಲ್ಲ. ನಮಗೆ, ಕನ್ನಡಿಗರಿಗೆ ನಮ್ಮ ಬೆಳಗಾವಿ ಉಳಿಯಬೇಕು, ಅಲ್ಲಿ ಕಿತಾಪತಿ ಮಾಡಿಕೊಂಡೇ ಬಂದಿರುವ ಎಂಇಎಸ್ ಗೂಂಡಾಗಳ ಸೊಕ್ಕು ಅಡಗಬೇಕು. ಆದರೆ ನೀವು ನಿಮ್ಮ ಪಕ್ಷದ ತೀಟೆಗೆ ನಮ್ಮ ಸ್ವಾಭಿಮಾನವನ್ನು ಬಲಿ ಕೊಟ್ಟಿರಿ.
ಮೊದಲ ಬಾರಿ ಅಧಿವೇಶನ ನಡೆಸುವ ಸಂದರ್ಭದಲ್ಲಿ ಮರಾಠಿ ಮಹಾಮೇಳಾವ ಎಂಬ ಕನ್ನಡ ದ್ರೋಹದ ಎಂಇಎಸ್ ಕಾರ್ಯಕ್ರಮ ನಡೆಯಕೂಡದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ ನಡೆಸಿತು. ನೀವು ಆ ಕಾರ್ಯಕ್ರಮಕ್ಕೆ ನಿಷೇಧವನ್ನೂ ಹೇರಿದಿರಿ. ಆದರೆ ಇತ್ತೀಚಿಗೆ ಮತ್ತೆ ಮರಾಠಿ ಸೀಮಾ ಪರಿಷತ್ ಹೆಸರಿನಲ್ಲಿ ಮತ್ತೆ ಅವರು ಸಮಾವೇಶ ಮಾಡಿದರು. ನೀವು ಅನುಮತಿ ಕೊಟ್ಟಿರಿ. ಅದನ್ನು ತಡೆಯಲು ಹೋದ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರ ಮೇಲೆ ಮರಾಠಿ ಗೂಂಡಾಗಳು ದಾಳಿ ನಡೆಸಿದರು. ದೌರ್ಜನ್ಯವೆಸಗಿದ ಗೂಂಡಾಗಳನ್ನು ಹಾಗೇ ಬಿಟ್ಟು, ಪ್ರತಿಭಟಿಸಿದ ಕರವೇ ಕಾರ್ಯಕರ್ತರನ್ನು ನೀವು ಬಂಧಿಸಿದಿರಿ.
ಮಹಾರಾಷ್ಟ್ರದಲ್ಲಿ ಕನ್ನಡಿಗರನ್ನು ಹಿಡಿದು ಥಳಿಸಲಾಯಿತು, ಕರ್ನಾಟಕದ (ನಿಮ್ಮದೇ ಸರ್ಕಾರದ) ಬಸ್ಸುಗಳಿಗೆ ಬೆಂಕಿ ಹಚ್ಚಲಾಯಿತು. ಅದನ್ನು ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ಕರವೇ ಕಾರ್ಯಕರ್ತರ ಮೇಲೆ ಬೆಂಗಳೂರಿನಲ್ಲಿ ನಿಮ್ಮ ಪೊಲೀಸರು ನಿರ್ದಯವಾಗಿ ಹಲ್ಲೆ ನಡೆಸಿದರು. ಯಾಕೆ ಈ ತರಹದ ನಡವಳಿಕೆ? ಬೆಳಗಾವಿ ನಮ್ಮದು ಎಂದು ಮಹಾಜನ್ ವರದಿ ಹೇಳಿ ಎಷ್ಟೋ ವರ್ಷಗಳಾಗಿ ಹೋಗಿವೆ. ವಿಧಾನಮಂಡಲದಲ್ಲಿ ಎಷ್ಟೋ ಬಾರಿ ನಿರ್ಣಯ ಅಂಗೀಕರಿಸಿ ನೀವೇ ಆಳುವ ಪ್ರಭುಗಳು ಬೆಳಗಾವಿ ಕರ್ನಾಟಕದ್ದು ಎಂದು ಘೋಷಿಸಿದ್ದೀರಿ. ಹಾಗಿದ್ದ ಮೇಲೆ ಕಣ್ಣಾಮುಚ್ಚಾಲೆ ಆಟವೆಲ್ಲ ಏಕೆ?
ನಿಮ್ಮ ಪಕ್ಷದ ಸಂಸದರು, ಕೆಲ ಶಾಸಕರು ಎಂಇಎಸ್ ಜತೆ ಚಕ್ಕಂದ ಆಡುತ್ತಿರುವುದು ನಿಮಗೆ ಗೊತ್ತಲ್ಲವೆ? ಎಂಇಎಸ್‌ನ ಭಗವಾಧ್ವಜವನ್ನು ಹಿಡಿದು ನಿಮ್ಮದೇ ಪಕ್ಷದ ಮುಖಂಡರು ಆ ಗೂಂಡಾ ಸಂಘಟನೆಗಳ ಕಾರ್ಯಕರ್ತರ ಜತೆ ಮೆರವಣಿಗೆ ಮಾಡಿದ್ದು ನಿಮಗೆ ಗೊತ್ತಲ್ಲವೆ? ಎಂಇಎಸ್ ಜತೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂದರ್ಭದಲ್ಲಿ ನಿಮ್ಮ ಪಕ್ಷ ಒಳಒಪ್ಪಂದ, ಗುಪ್ತ ಮೈತ್ರಿ ಮಾಡಿಕೊಂಡಿರುವುದೂ ಸಹ ನಿಮಗೆ ಗೊತ್ತಲ್ಲವೆ?
ಹೌದು, ಎಲ್ಲವೂ ನಿಮಗೆ ಗೊತ್ತಿದೆ. ಹಾಗಾಗಿಯೇ ಯಾವುದನ್ನೂ ಮೈಮೇಲೆ ಹಾಕಿಕೊಳ್ಳಲು ನೀವು ಸಿದ್ಧರಿಲ್ಲ. ನಿಮಗೆ ಎಲ್‌ಟಿಟಿಇನೂ ಬೇಕು, ಎಂಇಎಸ್ಸೂ ಬೇಕು. ನಿಮ್ಮ ಪಾಲಿಗೆ ಅವು ಕೇವಲ ಭಯೋತ್ಪಾದಕ, ಗೂಂಡಾ ಸಂಘಟನೆಗಳಲ್ಲ; ಬದಲಿಗೆ ತಮಿಳು, ಮರಾಠಿ ಮತಗಳನ್ನು ಕೊಡುವ ಅಕ್ಷಯ ಪಾತ್ರೆಗಳು.
ಹಾಗಾಗಿ ನೀವು ಹಾವನ್ನೂ ಸಾಯಿಸೋಲ್ಲ, ಕೋಲನ್ನೂ ಮುರಿಯಗೊಡುವುದಿಲ್ಲ.

ಶ್ರೀ ರಾಮ ಈಗ ನಿಮಗೆ ಬೇಡವೇ?


ಯಡ್ಯೂರಪ್ಪನವರೆ,ರಾಮ ಮಂದಿರ ಕಟ್ತೀವಿ ಅಂತ ನಿಮ್ಮ ಪಕ್ಷದವರು ಮಾಡಿದ ಆರ್ಭಟವನ್ನು ನೆನಪಿಸಿಕೊಳ್ಳಿ. ಬಾಬರಿ ಮಸೀದಿ ಇದ್ದ ಜಾಗದಲ್ಲೇ ರಾಮ ಹುಟ್ಟಿದ್ದ ಎಂದು ವಾದಿಸಿದಿರಿ, ದೇಶದ ತುಂಬೆಲ್ಲ ಇಟ್ಟಿಗೆ ಯಾತ್ರೆ ಮಾಡಿದಿರಿ, ಕೋಟಿಗಟ್ಟಲೆ ಹಣ ಸಂಗ್ರಹ ಮಾಡಿದಿರಿ. ಆನಂತರ ನಿಮ್ಮ ನಾಯಕ ಅಡ್ವಾಣಿಯವರು ರಥಯಾತ್ರೆ ಮಾಡಿದರು. ನಿಮ್ಮವರೆಲ್ಲ ಸೇರಿ ಮಸೀದಿಯನ್ನೂ ಬೀಳಿಸಿದರು. ಜೈ ಶ್ರೀರಾಮ್ ಎಂದು ನಿಮ್ಮ ಪಕ್ಷದವರು ಕೂಗಿದ ಘೋಷಣೆಗೆ ಇಡೀ ದೇಶವೇ ಧರ್ಮದ ಹೆಸರಿನಲ್ಲಿ ವಿಭಜನೆಯಾಗಿಹೋಯ್ತು.
ಬೆಂಗಳೂರು ಪಕ್ಕದಲ್ಲೇ ರಾಮನಗರವಿದೆ. ಊರ ಹೆಸರಲ್ಲೇ ರಾಮ ಇದ್ದಾನೆ. ಅಲ್ಲಿ ರಾಮದೇವರ ಬೆಟ್ಟವೂ ಇದೆ. ಆ ಹೆಸರಿನಲ್ಲೂ ರಾಮ ಇದ್ದಾನೆ. ನೀವು ರಾಮಭಕ್ತರು, ದೇಶಭಕ್ತರು, ಸರಿ. ನೀವು ಪುರಾಣವನ್ನು ನಂಬುತ್ತೀರಿ, ಸರಿ.
ರಾಮನಗರದ ಕುರಿತು, ರಾಮದೇವರ ಬೆಟ್ಟದ ಕುರಿತೂ ಕೂಡ ಪುರಾಣದ ಕೆಲವು ಮಾತುಗಳು ಇವೆ. ಸೀತೆಯನ್ನು ರಾವಣ ಅಪಹರಿಸಿಕೊಂಡು ಹೋಗುವಾಗ ಈ ರಾಮದೇವರ ಬೆಟ್ಟದ ಬಳಿ ಜಟಾಯು ಎಂಬ ಪಕ್ಷಿ ಅಡ್ಡಗಟ್ಟುತ್ತದೆ. ರಾವಣ ಹಾಗು ಜಟಾಯು ನಡುವೆ ಭೀಕರ ಕದನ ನಡೆಯುತ್ತದೆ. ಜಟಾಯುವನ್ನು ಘಾಸಿಗೊಳಿಸಿ ರಾವಣ ಅಲ್ಲಿಂದ ಸೀತೆಯನ್ನು ಕರೆದೊಯ್ಯುತ್ತಾನೆ. ಸೀತೆಯ ವಸ್ತ್ರ, ಒಡವೆಗಳನ್ನು ಜಟಾಯು ಮುಂದೊಂದು ದಿನ ರಾಮನಿಗೆ ತಲುಪಿಸಿ ಅಸುನೀಗುತ್ತದೆ.
ಇದು ಪುರಾಣದ ಕಥೆ, ಪುರಾಣವನ್ನು ನೀವು ನಂಬುವುದಾದರೆ ಇದನ್ನೂ ನೀವು ನಂಬಬೇಕು.
ಅದನ್ನೂ ಬಿಡಿ, ರಾಮ ದೇವರ ಬೆಟ್ಟ ಪರಿಸರ ಪ್ರಿಯರಿಗೆ ಅತ್ಯಂತ ನೆಚ್ಚಿನ ತಾಣ. ಇಲ್ಲಿ ರಣಹದ್ದುಗಳಿವೆ. (ಪುರಾಣ ನಂಬುವುದಾದರೆ ಅವುಗಳನ್ನು ನೀವು ಜಟಾಯುವಿನ ವಂಶಸ್ಥರು ಅಂತನೂ ಅಂದುಕೊಳ್ಳಬಹುದು.) ರಣಕಾಟಿ ಎಂತಲೂ ಇವನ್ನು ಕರೆಯುತ್ತಾರೆ. ಹಲವು ಪಕ್ಷಿಪ್ರಿಯರು, ತಜ್ಞರು ರಣಹದ್ದುಗಳ ಕುರಿತ ಅಧ್ಯಯನಕ್ಕಾಗಿ ಇಲ್ಲಿಗೆ ಬರುತ್ತಾರೆ. ಕೆಲದಿನಗಳ ಹಿಂದೆ ಕಣ್ಮರೆಯಾಗಿದ್ದ ಈ ಹದ್ದುಗಳು ಇತ್ತೀಚಿಗೆ ಬೆಟ್ಟದ ಬುಡದಲ್ಲಿ ಮೊಟ್ಟೆಗಳನ್ನಿಟ್ಟು ಮತ್ತೆ ಸಂತಾನೋತ್ಪತ್ತಿ ಮಾಡುತ್ತಿವೆ ಎಂಬ ಮಾಹಿತಿಯೂ ಇದೆ.
ಈಗ ವಿಷಯಕ್ಕೆ ಬರೋಣ. ರಾಮದೇವರ ಬೆಟ್ಟದಲ್ಲಿ ಕೇರಳ ಮೂಲದ ಹಾಸ್ಪಿಟಾಲಿಟಿ ಎಂಬ ಸಂಸ್ಥೆಗೆ ಮೋಜಿನ ತಾಣವೊಂದನ್ನು ನಿರ್ಮಿಸಲು ಜಿಲ್ಲಾಡಳಿತ ಅನುಮತಿ ನೀಡಿದೆ. ಹೀಗೆ ಇಂಥ ಅವಿವೇಕದ ತೀರ್ಮಾನ ಕೈಗೊಳ್ಳಲು ನಿಮ್ಮ ಸಂಪುಟದ ಸಚಿವರೊಬ್ಬರು ಕಾರಣ ಎಂಬ ಮಾತುಗಳೂ ಸಹ ಇವೆ. ಈಗಾಗಲೇ ಈ ಮೋಜಿನ ತಾಣಕ್ಕೆ ರಾಮನಗರದಲ್ಲಿ ಮಾತ್ರವಲ್ಲದೆ ರಾಜ್ಯದ ವಿವಿಧೆಡೆ ವಿರೋಧ ವ್ಯಕ್ತವಾಗಿದೆ. ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ನೇರವಾಗಿ ರಾಜ್ಯಪಾಲರಿಗೇ ದೂರು ನೀಡಿದ್ದಾರೆ. ರಾಮನಗರದ ಪರಿಸರಪ್ರಿಯರು ಚಳವಳಿ ಆರಂಭಿಸಿದ್ದಾರೆ. ಆದರೂ ನೀವು ಇನ್ನೂ ತುಟಿ ಪಿಟಕ್ಕೆನ್ನುತ್ತಿಲ್ಲ.
ನಮ್ಮ ಮೂಲಭೂತವಾದ ಪ್ರಶ್ನೆಯೆಂದರೆ ನಿಮ್ಮ ಪಕ್ಷವನ್ನು ದೇಶದ ಚುಕ್ಕಾಣಿ ಹಿಡಿಯಲು ಪ್ರಧಾನ ಕಾರಣನಾಗಿದ್ದ ರಾಮ ಈಗ ನಿಮಗೆ ಬೇಡವಾದನೆ? ರಾಮನ ಹೆಸರಿನ ಊರಿನಲ್ಲಿ, ರಾಮನ ಹೆಸರಿನ ಬೆಟ್ಟದಲ್ಲಿ, ರಾಮನ ಕುರಿತಾದ ಪುರಾಣ ಚಾಲ್ತಿಯಲ್ಲಿರುವ ಪ್ರದೇಶದಲ್ಲಿ ಮೋಜಿನ ತಾಣ ಕಟ್ಟುವುದು ಎಷ್ಟು ಸರಿ? ಇದು ನಿಮಗೆ ಶೋಭೆ ತರುವ ವಿಷಯವೇ? ಇದು ಒಂದು ಉದಾಹರಣೆ. ನಿಮ್ಮ ಸರ್ಕಾರದ ಭೂಸ್ವಾಧೀನ ಕ್ರಮಗಳಿಂದ ಎಷ್ಟೋ ಹಳ್ಳಿಗಳು ನಾಶವಾಗುತ್ತಿದೆ. ಖಾಸಗಿ ಕಂಪೆನಿಗಳಿಗಾಗಿ ನೀವು ಹಳ್ಳಿಗಳ ಜತೆ ಅವುಗಳಲ್ಲಿ ಜನ ಅನೂಚಾನವಾಗಿ ರೂಢಿಸಿಕೊಂಡ ಪರಂಪರೆ, ಸಂಸ್ಕೃತಿಗಳೂ ನಾಶವಾಗುತ್ತವೆಯಲ್ಲವೆ? ಸಂಸ್ಕೃತಿಯ ಪ್ರತಿಪಾದಕರಾದ ನಿಮಗೆ ಇದನ್ನೆಲ್ಲ ವಿವರಿಸಿ ಹೇಳಬೇಕೆ?
ಭಾರತದ ನಿಜವಾದ ಸಂಸ್ಕೃತಿ ಇರುವುದು ಹಳ್ಳಿಗಳಲ್ಲಿ. ಆದರೆ ಆ ಹಳ್ಳಿಗಳ ಜೀವನಕ್ರಮವನ್ನೇ ನಿಮ್ಮ ಸರ್ಕಾರದ ನೀತಿಗಳು ಹೊಸಕಿಹಾಕುತ್ತಿವೆಯಲ್ಲ ಅದಕ್ಕೇನು ಹೇಳುತ್ತೀರಿ?
ಉತ್ತರ ಕೊಡ್ತೀರಾ ಯಡಿ ಯೂರಪ್ಪನವರೆ?

ಕನ್ನಡಿಗರ ಮೇಲೆ ಕೇಸು, ಜೈಲು


ಬಿ.ಎಸ್.ಯಡಿಯೂರಪ್ಪನವರ ಸನ್ನಿಧಾನಕ್ಕೆ
ಮತ್ತೆ ಮತ್ತೆ ಈ ವಿಷಯ ಹೇಳಿ ಹೇಳಿ ನಮಗೂ ಬೇಸರವೆದ್ದು ಹೋಗಿದೆ. ಕನ್ನಡ ನೆಲ, ಜಲ, ಭಾಷೆಯ ರಕ್ಷಣೆಗಾಗಿ ಪ್ರಜಾಸತ್ತಾತ್ಮಕ ಹೋರಾಟವನ್ನು ನಡೆಸಿಕೊಂಡು ಬರುತ್ತಿರುವ ಕರ್ನಾಟಕ ರಕ್ಷಣಾ ವೇದಿಕೆ ನಾಯಕರ, ಕಾರ್ಯಕರ್ತರ ಮೇಲೆ ಹಾಗು ಇತರ ಕನ್ನಡ ಸಂಘಟನೆಗಳ ಮುಖಂಡರ ಮೇಲೆ ನೀವು ಹೂಡಿರುವ ಮೊಕದ್ದಮೆಗಳ ವಿಷಯವಿದು.
ಬೆಂಗಳೂರಿನಿಂದ ಹಿಡಿದು ಬೀದರ್‌ವರೆಗೆ ಎಲ್ಲ ಕಡೆಯೂ ನೂರಾರು ಮೊಕದ್ದಮೆಗಳು. ಕಾರ್ಯಕರ್ತರಿಗೆ ಜೈಲು, ಕೋರ್ಟುಗಳಿಗೆ ಪದೇ ಪದೇ ಅಲೆಯುವ ಪರದಾಟ. ಬೀದಿಗಳಿದು ನಿಮ್ಮ ವಿರುದ್ಧ ಘೋಷಣೆ ಕೂಗಿದರೂ ಚಿತ್ರ ವಿಚಿತ್ರ ಕೇಸುಗಳನ್ನು ಪೊಲೀಸರು ಹೆಣೆಯುತ್ತಾರೆ. ಪ್ರತಿಭಟನೆಗಳನ್ನು ನಡೆಸುವವರ ಮೇಲೆ ಕೊಲೆಬೆದರಿಕೆ, ಹಲ್ಲೆ ಯತ್ನ, ದರೋಡೆಯಂಥ ಕೇಸುಗಳನ್ನು ಹೂಡಿದ್ದು ಇದೇ ಮೊದಲಿರಬೇಕು. ಅದೇನು ಸಂದೇಶ ನೀಡಿದ್ದೀರೋ ಏನೋ, ಪಾಪ ಪೊಲೀಸರು ಸಿಕ್ಕ ಸಿಕ್ಕ ಸೆಕ್ಷನ್‌ಗಳನ್ನು ಹೂಡಿ ಕನ್ನಡ ಹೋರಾಟಗಾರರನ್ನು ಜೈಲಿಗೆ ತಳ್ಳುತ್ತಾರೆ.
ಮೊನ್ನೆ ಚಾಮರಾಜನಗರದಲ್ಲಿ ಹೊಗೇನಕಲ್ ವಿಚಾರದಲ್ಲಿ ಕರವೇ ಜಿಲ್ಲಾ ಬಂದ್ ಕರೆ ನೀಡಿತ್ತಲ್ಲ; ಆ ಸಂದರ್ಭದಲ್ಲಿ ನಿಮ್ಮ ಪ್ರತಿಕೃತಿ ದಹನ ಮಾಡಲು ಪೊಲೀಸರು ಬಿಟ್ಟಿರಲಿಲ್ಲ. ಬೇಕಾದರೆ ಪ್ರಧಾನ ಮಂತ್ರಿ ಭೂತದಹನ ಮಾಡಿಕೊಳ್ಳಿ, ಯಡಿಯೂರಪ್ಪನವರದು ಬೇಡ ಅಂದ್ರಂತೆ ಪೊಲೀಸರು. ಪಾಪ, ಅವರ ಕಷ್ಟವನ್ನೂ ನಾವು ಅರ್ಥ ಮಾಡಿಕೊಳ್ಳಬೇಕು.
ನೀವಂದುಕೊಂಡಿರಬೇಕು, ಅಥವಾ ನಿಮಗೆ ಸಲಹೆ ನೀಡುವ ಅಧಿಕಾರಿಗಳು ಹೇಳಿರಬೇಕು: ಸರ್‌ಸರಿಯಾಗಿ ಕೇಸು ಜಡಿದುಬಿಡೋಣ ಸರ್, ಮುಂದೆ ಹೋರಾಟನೇ ಮಾಡಲ್ಲ ಅವರು ಅಂತ. ಆದರೆ ಅದು ಸುಳ್ಳು ಅನ್ನೋದು ನಿಮಗೆ ಈಗಾಗಲೇ ಗೊತ್ತಾಗಿರಬೇಕು. ನೀವು ಎಷ್ಟೆಷ್ಟು ಕೇಸು ಜಡಿಯುತ್ತೀರೋ, ಅದೇ ಪ್ರಮಾಣದಲ್ಲಿ ಪ್ರತಿಭಟನೆಗಳೂ ಹೆಚ್ಚುತ್ತವೆ.
ದಶಕಗಳ ಕಾಲ ಪ್ರತಿಭಟನೆಗಳನ್ನೇ ಮಾಡಿ ಇದೀಗ ಮುಖ್ಯಮಂತ್ರಿ ಕುರ್ಚಿ ಹಿಡಿದವರು ನೀವು. ತುಂಬಾ ಹಿಂದೆ ಹೋಗೋದೇನು ಬೇಡ. ಕುಮಾರಸ್ವಾಮಿ ನಿಮ್ಮ ಕಾಲೆಳೆದಾಗ ಇಡೀ ಬೆಂಗಳೂರಿನ ಟ್ರಾಫಿಕ್ ವ್ಯವಸ್ಥೆ ಕುಲಗೆಡಿಸಿ ನೀವೇ, ನಿಮ್ಮ ಪಕ್ಷದವರೇ ಪ್ರತಿಭಟನೆ ಮಾಡಿದ್ದಿರಿ. ಅಧಿಕಾರದ ಗದ್ದುಗೆ ಹಿಡಿದ ಮೇಲೆ ಇದನ್ನೆಲ್ಲ ನೀವು ಮರೆತಿರಬೇಕು.
ಈಗ ಪ್ರತಿಭಟನೆ ನಡೆಸುವವರ ಮೇಲೆ ನಿಮ್ಮ ಸರ್ಕಾರ ಏನೆಲ್ಲ ಪ್ರತಿಬಂಧಗಳನ್ನು ಹೇರಿದೆ ಅಂದರೆ, ನಿಮ್ಮ ಅಧಿಕಾರಿಗಳ ಪ್ರಕಾರ ಪ್ರತಿಭಟನೆ ಮಾಡೋದೆ ತಪ್ಪು. ಚಿತ್ರ ವಿಚಿತ್ರ ನಿಯಮಗಳನ್ನು ಜಾರಿಗೆ ತಂದಿದ್ದಾರೆ ಅಧಿಕಾರಿಗಳು.
ಅದೆಲ್ಲ ಹಾಗಿರಲಿ, ನೀವು ಪ್ರತಿ ಬಾರಿ ಕ್ಯಾಬಿನೆಟ್ ಸಭೆ ನಡೆಸುವಾಗಲೂ ಒಂದಷ್ಟು ಜನರ ಮೇಲಿನ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯುತ್ತೀರಿ. ಜನಾರ್ಧನ ರೆಡ್ಡಿ ಮತ್ತವರ ತಂಡದ ಮೇಲಿದ್ದ ಕ್ರಿಮಿನಲ್ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆದಿರಿ. ಭಜರಂಗದಳ, ಶ್ರೀರಾಮಸೇನೆಯ ಮೇಲಿದ್ದ ಪ್ರಕರಣಗಳನ್ನು ಹಿಂದಕ್ಕೆ ಪಡೆದಿರಿ. ನಿಮ್ಮ ಪಕ್ಷದ ಮುಖಂಡರ ಮೇಲಿದ್ದ ಪ್ರಕರಣಗಳು ವಾಪಾಸ್ಸಾದವು. ರೈತರ ಮೇಲಿನ ಮಮಕಾರಕ್ಕಾಗಿ ರೈತರ ಸಂಘಟನೆ ಮುಖಂಡರು, ಕಾರ್ಯಕರ್ತರ ಮೇಲಿದ್ದ ಪ್ರಕರಣಗಳನ್ನೂ ಹಿಂದಕ್ಕೆ ಪಡೆಯಲಾಯಿತು. ಕಡೆಗೆ ನಿಮ್ಮ ರಾಜಕೀಯ ಎದುರಾಳಿ ಸಿದ್ಧರಾಮಯ್ಯನವರ ಮೇಲಿದ್ದ ಕೇಸನ್ನೂ ಹಿಂದಕ್ಕೆ ಪಡೆದಿರಿ.
ಆದರೆ ಕನ್ನಡ ಚಳವಳಿಗಾರರ ಮೇಲೆ, ವಿಶೇಷವಾಗಿ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರ ಮೇಲಿದ್ದ ಸಾವಿರಾರು ಮೊಕದ್ದಮೆಗಳ ಪೈಕಿ ಒಂದನ್ನಾದರೂ ಹಿಂದಕ್ಕೆ ಪಡೆದಿರಾ? ಇಲ್ಲ.
ಯಾಕೆ ಈ ದ್ವೇಷ? ನಿಜ ಹೇಳಿ, ಕನ್ನಡ ಹೋರಾಟಗಾರರು ಕಳೆದ ಚುನಾವಣೆ ಸಂದರ್ಭದಲ್ಲಿ ನಿಮ್ಮ ಕುರಿತಾಗಿ ಅನುಕಂಪ ತೋರಿರಲಿಲ್ಲವೆ? ಯಡಿಯೂರಪ್ಪ ಅವರಿಗೊಂದು ಅವಕಾಶ ದೊರೆಯಲಿ ಎಂದು ನಿಮ್ಮ ಪರವಾಗಿ ನಿಂತಿರಲಿಲ್ಲವೆ? ಈಗೇನಾಗಿ ಹೋಯಿತು? ನಿಮ್ಮ ಸರ್ಕಾರದ ಕನ್ನಡ ವಿರೋಧಿ ನೀತಿಗಳನ್ನು ಟೀಕಿಸಿದರೆ ನಿಮಗೆ ಸಹ್ಯವಾಗುವುದಿಲ್ಲವೆ?
ನಿಮ್ಮ ವಿರುದ್ಧ ಯಾರೂ ಪ್ರತಿಭಟಿಸಬಾರದು ಎಂಬ ಅಹಂಕಾರವೇ?
ಇತ್ತೀಚಿಗೆ ಮಾಧ್ಯಮದವರು ಈ ವಿಷಯ ನಿಮ್ಮ ಬಳಿ ಕೇಳಿದಾಗ ಕಾನೂನು ಚೌಕಟ್ಟಿನ ಒಳಗಿನ ಕನ್ನಡ ಹೋರಾಟದ ಕೇಸುಗಳನ್ನು ಹಿಂದಕ್ಕೆ ಪಡೆಯುವ ಕುರಿತು ಚಿಂತನೆ ನಡೆಸುತ್ತೇವೆ ಎಂದು ಹೇಳಿದಿರಿ. ಕಾನೂನು ಚೌಕಟ್ಟಿನ ಒಳಗಿನ ಹೋರಾಟಗಳ ಮೇಲೆ ಕೇಸು ಯಾಕೆ ಜಡಿಯುತ್ತಾರೆ? ನೀವು ನಿಮ್ಮ ಅಧಿಕಾರಿಗಳನ್ನು ಕೇಳಬೇಕಲ್ಲವೇ?
ಹೇಳಿ ಸರ್, ಉತ್ತರ ಕೊಡಿ.

ಗಣಿ ಧೂಳಿನಿಂದ ಎದ್ದಿರುವುದೇನು?


ಶ್ರೀಯುತ ಯಡಿಯೂರಪ್ಪನವರೆ,
ಬಳ್ಳಾರಿ ರೆಡ್ಡಿಗಳ ಬಗ್ಗೆ, ಗಣಿ ಲೂಟಿಯ ಬಗ್ಗೆ ವಿಶೇಷವಾಗಿ ನಾವು ಏನನ್ನೂ ಹೇಳಬೇಕಾಗಿಲ್ಲ. ಬಹುಶಃ ಇದೊಂದು ವಿಷಯದಲ್ಲಿ ನಾವು ಹೇಳಿದ್ದಕ್ಕೆಲ್ಲ ನೀವು ಸರಿ ಎನ್ನುತ್ತೀರೇನೋ?
ನೀವೇ ಒಮ್ಮೆ ಹೇಳಿದ್ದಿರಿ. ‘ ಈ ರಾಜ್ಯದ ಗಣಿ ಸಂಪತ್ತು ಪ್ರತಿನಿತ್ಯ ಲೂಟಿಯಾಗುತ್ತಿದೆ. ನಿತ್ಯವೂ ಕೋಟಿಗಟ್ಟಲೆ ಹಣ ರಾಜ್ಯದ ಬೊಕ್ಕಸಕ್ಕೆ ನಷ್ಟವಾಗುತ್ತದೆ. ಈ ಅನ್ಯಾಯವನ್ನೂ ನೋಡಿಯೂ ಏನನ್ನೂ ಮಾಡಲಾಗದೆ ಅಸಹಾಯಕನಾಗಿದ್ದೇನೆ’ ಎಂದಿದ್ದಿರಿ ನೀವು.
ನೀವು ಹೇಳಿದ್ದು ಅಕ್ಷರಶಃ ಸತ್ಯ. ಲೋಕಾಯುಕ್ತರು ನಿಮಗೆ ನೀಡಿದ ಅಕ್ರಮ ಗಣಿಗಾರಿಕೆ ಕುರಿತ ವರದಿಯೂ ಅದನ್ನೇ ಹೇಳುತ್ತದೆ. ಗಣಿ ರೆಡ್ಡಿಗಳು ಕರ್ನಾಟಕದ ಗಡಿಯನ್ನೇ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ದಾಖಲೆಗಳು ಹೇಳುತ್ತಿವೆ. ಗಡಿರೇಖೆಯನ್ನೇ ಅಳಿಸಿದ ಮಹಾಪ್ರತಾಪಿಗಳು ಅವರು.
ನೀವು ಅವರ ಜತೆ ಜಗಳಕ್ಕೆ ಬಿದ್ದಿರಿ. ಅವರು ತಮ್ಮ ಪೌರುಷ ತೋರಿಸಿಕೊಂಡರು. ಇನ್ನೇನು ಯಡಿಯೂರಪ್ಪ ಕುರ್ಚಿ ಬಿಟ್ಟು ಎದ್ದರು ಎಂದು ನಾವೆಲ್ಲ ಅಂದುಕೊಳ್ಳುವ ಹೊತ್ತಿಗೆ ಅದೇನು ಒಪ್ಪಂದಗಳಾದವೋ ಏನೋ, ನೀವು ಸುಷ್ಮಾ ಸ್ವರಾಜ್ ನಿವಾಸದಲ್ಲಿ ರಾಜಿ ಮಾಡಿಕೊಂಡಿರಿ. ಅಡ್ವಾಣಿಯವರಿಗೆ ಒಟ್ಟಿಗೆ ಹೋಗಿ ಸಿಹಿ ತಿನ್ನಿಸಿ ಬಂದಿರಿ. ಅದುವರೆಗೆ ನಿಮ್ಮನ್ನು ಬೈದುಕೊಂಡು ಓಡಾಡುತ್ತಿದ್ದ ಜನಾರ್ದನರೆಡ್ಡಿ ಇದ್ದಕ್ಕಿದ್ದಂತೆ ಬಳ್ಳಾರಿಯ ಕಾರ್ಯಕ್ರಮದಲ್ಲಿ ನಿಮ್ಮನ್ನು ಅಭಿನವ ಕೃಷ್ಣದೇವರಾಯ ಎಂಬ ಅರ್ಥದಲ್ಲಿ ಮಾತನಾಡಿದರು. ವಿಜಯನಗರ ಕಾಲದ ವೈಭವವನ್ನು ಮರುಕಳಿಸುತ್ತಿರುವ ಮಹಾನ್ ಮುಖ್ಯಮಂತ್ರಿ ನೀವು ಎಂದು ಬಣ್ಣಿಸಿದರು. ನೀವೂ ಸಹ ಭಾವಪರವಶರಾಗಿ ನಾವೆಲ್ಲರೂ ಒಂದಾಗಿದ್ದೇವೆ, ನಮ್ಮನ್ನು ಬೇರ್ಪಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಗದ್ಗದಿತರಾಗಿ ನುಡಿದಿರಿ.
ಹೀಗೆ ಪರಸ್ಪರ ಬೈದಾಡಿಕೊಂಡವರು ರಾಜಿಯಾದರಲ್ಲ, ಯಾವ ಹಿತಾಸಕ್ತಿ ಈ ರಾಜಿಯಲ್ಲಿ ಅಡಗಿತ್ತು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ರೆಡ್ಡಿಗಳ ನಿಲುವಿಗೆ ವಿರುದ್ಧವಾಗಿ ನೀವು ವರ್ಗಾವಣೆ ಮಾಡಿದ್ದ ಬಳ್ಳಾರಿ ಜಿಲ್ಲೆಯ ಹಿರಿಯ ಅಧಿಕಾರಿಗಳನ್ನು ಮತ್ತದೇ ಸ್ಥಾನಗಳಿಗೆ ಮರುಸ್ಥಾಪಿಸಿದಿರಿ. ಅವರ ತಾಳಕ್ಕೆ ತಕ್ಕಂತೆ ನೀವು ವರ್ತಿಸಿದಿರಿ.
ನಿಮ್ಮ ಮುಖ್ಯಮಂತ್ರಿ ಕುರ್ಚಿ ಹೋದರೂ ಚಿಂತೆಯಿಲ್ಲ, ಬಳ್ಳಾರಿಯಲ್ಲಿ ನಡೆಯುತ್ತಿರುವ ಗಣಿ ಲೂಟಿ ಇನ್ನು ಮೇಲಾದರೂ ನಿಲ್ಲುತ್ತದೆ ಎಂದು ಈ ರಾಜ್ಯದ ಮಾನವಂತ ಜನರು ನಿರೀಕ್ಷಿಸಿದ್ದರು. ಇನ್ನೇನು ಯಡಿಯೂರಪ್ಪ ಗಣಿ ಹಗರಣಗಳ ಕುರಿತಾಗಿ ಸಿಬಿಐ ತನಿಖೆಗೆ ಕೋರಿ ಆಂಧ್ರಪ್ರದೇಶ ಮುಖ್ಯಮಂತ್ರಿಯ ಮಾದರಿಯಲ್ಲೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುತ್ತಾರೆ ಎಂದು ರಾಜಕೀಯ ಪಂಡಿತರು ಭಾವಿಸಿದ್ದರು. ಆದರೆ ಹಾಗಾಗಲೇ ಇಲ್ಲ. ರಾಜಕಾರಣದ ಕೊಳಕು ಸಾಧ್ಯತೆಗಳೆಲ್ಲ ಅನಾವರಣಗೊಳ್ಳುವುದನ್ನು ನಾವೆಲ್ಲ ಮೂಕವಿಸ್ಮಿತರಾಗಿ ನೋಡಿದೆವು.
ಇವತ್ತು ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆಯವರು ಬಯಲು ಮಾಡಿದ ಕಾರವಾರ ಬಂದರಿನಿಂದ ಮಾಯವಾದ ಕಬ್ಬಿಣದ ಅದಿರಿನ ವಿವಾದವೊಂದೇ ಸಾಕು, ಈ ರಾಜ್ಯದಲ್ಲಿ ನಡೆಯುತ್ತಿರುವ ಗಣಿ ಸಂಪತ್ತಿನ ಲೂಟಿಯ ಆಳ-ಅಗಲವನ್ನು ಅಂದಾಜು ಮಾಡಬಹುದು. ಎಲ್ಲರಿಗಿಂತ ಹೆಚ್ಚು ಸ್ಪಷ್ಟವಾಗಿ ಅದು ನಿಮಗೆ ಗೊತ್ತಿದೆ. ಆದರೆ ನಿಮಗೆ ಕುರ್ಚಿ ಮೇಲೆ ಆಸೆ. ಹೀಗಾಗಿ ಮತ್ತೆ ಗಣಿ ರೆಡ್ಡಿಗಳನ್ನು ಎದುರು ಹಾಕಿಕೊಳ್ಳಲಾರಿರಿ. ಯಾವ ವರದಿ ಬಂದರೇನು? ಯಾವ ನ್ಯಾಯಾಲಯ ತೀರ್ಪು ಕೊಟ್ಟರೇನು? ರಕ್ಷಣೆಗೆ ನೀವಿರುವಾಗ ಬಳ್ಳಾರಿ ರೆಡ್ಡಿಗಳನ್ನು ತಡೆಯುವವರ‍್ಯಾರು?
ಬಳ್ಳಾರಿಯಲ್ಲಿ ಈಗ ಧೂಳೋ ಧೂಳು. ಅಲ್ಲಿ ಬೆಟ್ಟಗಳನ್ನು ಕಡಿದು ಪಾತಾಳದವರೆಗೆ ಅಗೆಯಲಾಗುತ್ತಿದೆ. ಪ್ರಕೃತಿಯ ಮೇಲೆ ನಿರಂತರ ಅತ್ಯಾಚಾರ. ಅಲ್ಲಿನ ಜನರಿಗೆ ಈಗಾಗಲೇ ಚಿತ್ರವಿಚಿತ್ರ ಖಾಯಿಲೆಗಳು. ಬಳ್ಳಾರಿಯ ಧೂಳಿನಿಂದ ಹೆಲಿಕಾಪ್ಟರ್‌ಗಳು ಏಳುತ್ತವೆ, ಕೋಟಿಧಣಿಗಳು ಇನ್ನೊಂದಷ್ಟು ಜಿಲ್ಲೆಗಳನ್ನು ತಮ್ಮ ಹಿಡಿತಕ್ಕೆ ತಂದುಕೊಳ್ಳು ಹರಸಾಹಸ ನಡೆಸುತ್ತಿದ್ದಾರೆ.
ಡಾ.ಯು.ಆರ್.ಅನಂತಮೂರ್ತಿಯವರು ಪದೇ ಪದೇ ಲ್ಯಾಟಿನ್ ಅಮೆರಿಕಾದ ಉದಾಹರಣೆ ಕೊಡುತ್ತಾರೆ. ಅಲ್ಲಿ ಮೈನಿಂಗ್ ಸಂಸ್ಥೆಗಳು ಅಲ್ಲಿನ ಎಲ್ಲ ಸಂಪನ್ಮೂಲಗಳನ್ನು ಲೂಟಿ ಹೊಡೆದು, ಅಲ್ಲಿನ ಜನರನ್ನು ವೇಶ್ಯಾವಟಿಕೆಗೆ ತಳ್ಳಿದ್ದವು.
ಕರ್ನಾಟಕದಲ್ಲೂ ಇಂಥ ದುರಂತಗಳು ಸಂಭವಿಸಬೇಕಾ ಯಡಿಯೂರಪ್ಪನವರೇ? ಎರಡು ವರ್ಷಗಳ ಅವಧಿಯಲ್ಲಿ ಮೈನಿಂಗ್ ಮಾಫಿಯಾ ಈ ಪರಿಯಲ್ಲಿ ಬೆಳೆಯಲು ಅವಕಾಶ ನೀಡಿದ್ದು ನಿಮ್ಮ ಸಾಧನೆಯೇ?

ಸಂತೋಷವಾಯಿತೆ ಸರ್ಕಾರಕ್ಕೆ?


ಯಡಿಯೂರಪ್ಪನವರೆ,

ಇದೊಂದಕ್ಕೆ ನೀವು ಅವಕಾಶ ಕೊಡಲೇಬಾರದಿತ್ತು. ನ್ಯಾಯಮೂರ್ತಿ ಸಂತೋಷ್ ಹೆಗಡೆಯವರು ಲೋಕಾಯುಕ್ತ ಸ್ಥಾನಕ್ಕೆ ರಾಜೀನಾಮೆ ಕೊಡುವಂಥ ಸನ್ನಿವೇಶವನ್ನು ನೀವು ಸೃಷ್ಟಿಸಬಾರದಿತ್ತು. ಆದರೆ ಅದನ್ನು ನೀವು ಮಾಡಿದ್ದೀರಿ. ನಿಮ್ಮ ಬಾಡಿಲಾಂಗ್ವೇಜ್ ಗಮನಿಸಿದರೆ ಈ ಬಗ್ಗೆ ನಿಮಗೆ ಕನಿಷ್ಠ ಪಶ್ಚಾತ್ತಾಪವೂ ಇದ್ದ ಹಾಗೆ ಕಾಣುತ್ತಿಲ್ಲ. ಸ್ವತಃ ರಾಜ್ಯಪಾಲರೇ ರಾಜೀನಾಮೆ ಹಿಂದಕ್ಕೆ ಪಡೆಯಲು ಲೋಕಾಯುಕ್ತರ ಮನವೊಲಿಸಿ ಎಂದು ಹೇಳಿದರೂ ನೀವು ಜಪ್ಪಯ್ಯ ಅನ್ನುತ್ತಿಲ್ಲ. ಅಂದರೆ ನಿಮಗೆ ಬೇಕಾಗಿದ್ದೂ ಅದೇ; ಲೋಕಾಯುಕ್ತರ ರಾಜೀನಾಮೆ.
ನಿಮಗೆ ಲೋಕಾಯುಕ್ತ ಮಾತ್ರವಲ್ಲ ನ್ಯಾಯನೀಡಿಕೆಯ ಇತರ ಸಂಸ್ಥೆಗಳ ಮೇಲೂ ವಿಶ್ವಾಸವಿಲ್ಲ. ವಿಶ್ವಾಸವಿಲ್ಲ ಎಂಬುದಕ್ಕಿಂತ ಅವುಗಳು ನಿಮ್ಮ ಹಾದಿಯ ಮುಳ್ಳುಗಳು ಎಂದೇ ನೀವು ಭಾವಿಸಿದ್ದೀರಿ ಎನಿಸುತ್ತದೆ.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸತತ ಕಿರುಕುಳ ನೀಡುತ್ತ ಬಂದಿರಿ. ನೀವು ಅಧಿಕಾರಕ್ಕೆ ಬಂದ ಹೊಸದರಲ್ಲೇ ಅನೈತಿಕವಾಗಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು, ಸದಸ್ಯರನ್ನು ಪದಚ್ಯುತಿಗೊಳಿಸಲು ಯತ್ನಿಸಿದಿರಿ. ನ್ಯಾಯಾಲಯದ ಮಧ್ಯಪ್ರವೇಶದಿಂದ ಅದು ಸಾಧ್ಯವಾಗಲಿಲ್ಲ. ನಂತರ ಆಯೋಗದ ಕಾರ್ಯ ಚಟುವಟಿಕೆಗಳು ಮುಂದೆ ಸಾಗದಂತೆ ಅಸಹಕಾರ ಶುರು ಮಾಡಿದಿರಿ. ಅಧಿಕಾರಿಗಳನ್ನು ನಿಯೋಜನೆ ಮಾಡದೆ ಕಿರುಕುಳ ನೀಡಲಾಯಿತು. ಜಾತಿವಾರು ಸಮೀಕ್ಷೆ ಆರಂಭವೇ ಆಗದಂತೆ ನೋಡಿಕೊಳ್ಳಲಾಯಿತು. ರಾಜ್ಯ ಹೈಕೋರ್ಟ್ ನ್ಯಾಯಾಧೀಶರ ದರ್ಜೆಯ ಸ್ಥಾನಮಾನವನ್ನು ಹೊಂದಿರುವ ಆಯೋಗದ ಅಧ್ಯಕ್ಷರನ್ನು ಮಡಿಕೇರಿಯಲ್ಲಿ ಬಿಜೆಪಿಯ ಗೂಂಡಾಗಳು ಅಪಮಾನಿಸಿ ಹಲ್ಲೆ ನಡೆಸಿದರು. ಕಡೆಗೆ ಆಯೋಗದ ಸ್ಥಾನಮಾನವನ್ನೇ ಕಡಿಮೆ ಮಾಡಿ, ಅಧ್ಯಕ್ಷರಿಗೆ ಸಚಿವಸ್ಥಾನದ ಸ್ಥಾನಮಾನ ನೀಡಿ ಆಯೋಗ ಸ್ಥಾಪನೆಯ ಉದ್ದೇಶವನ್ನೇ ಹಾಳುಗೆಡವಲು ಯತ್ನಿಸಿದಿರಿ.
ಮಾನವಹಕ್ಕುಗಳ ಆಯೋಗದ ವಿಷಯದಲ್ಲೂ ಇದೇ ಆಯಿತು. ಆಯೋಗಕ್ಕೆ ಕನಿಷ್ಠ ಸಿಬ್ಬಂದಿಯನ್ನೂ ನೀಡದೆ ಸತಾಯಿಸಿದಿರಿ. ಮಾನವ ಹಕ್ಕುಗಳಿಗೆ ಸಂಬಂಧಿಸಿದಂತೆ ಆಯೋಗದಲ್ಲಿ ದಾಖಲಾದ ದೂರುಗಳ ವಿಚಾರಣೆ ನಿಮಗೆ ಕಿರಿಕಿರಿ ಹುಟ್ಟಿಸಿರಬೇಕು. ಅದಕ್ಕಾಗಿ ನಿಮ್ಮ ರಾಜಕೀಯ ಛೇಲಾಗಳು ಅವರ ವಿರುದ್ಧ ಪುಂಖಾನುಪುಂಖ ಆರೋಪಗಳನ್ನು ಎಸಗಿದರು. ಒಬ್ಬ ನ್ಯಾಯಮೂರ್ತಿಯನ್ನು ನಡೆಸಿಕೊಳ್ಳುವ ರೀತಿಯೇ ಇದು ಎಂದು ನಿಮಗೆ ನೀವೇ ಕೇಳಿಕೊಳ್ಳಬಹುದಿತ್ತು; ಆದರೆ ನೀವು ಹಾಗೆ ಮಾಡಲಿಲ್ಲ.
ಲೋಕಾಯುಕ್ತ ಸಂಸ್ಥೆಗೆ ಅಗತ್ಯವಿರುವ ಅಧಿಕಾರವನ್ನು ಕೊಡುತ್ತೇನೆ ಎಂದು ನೀವು ಸ್ವತಃ ಸಂತೋಷ್ ಹೆಗಡೆಯವರಿಗೆ ವಾಗ್ದಾನ ಮಾಡಿದಿರಿ. ಆದರೆ ಮಾತು ಉಳಿಸಿಕೊಳ್ಳಲಿಲ್ಲ. ಬದಲಾಗಿ ಅವರ ಕಾರ್ಯಚಟುವಟಿಕೆಗಳಿಗೇ ನಿಮ್ಮ ಸರ್ಕಾರಿ ವ್ಯವಸ್ಥೆ ಅಡ್ಡಿಯಾಗತೊಡಗಿತು. ದಾಳಿಗೆ ಒಳಗಾಗಿ ಅಮಾನತುಗೊಂಡ ಅಧಿಕಾರಿಗಳು ಮೀಸೆ ತೀಡಿಕೊಂಡು ಮತ್ತದೇ ಸ್ಥಾನಗಳಿಗೆ ಹಿಂದಿರುಗಿ ಬಂದರು. ಲೋಕಾಯುಕ್ತರನ್ನು ಅಪಮಾನಗೊಳಿಸುವ ಉದ್ದೇಶವೇ ಈ ಮರುನೇಮಕಾತಿಯಲ್ಲಿ ಇದ್ದಂತಿತ್ತು.
ಇನ್ನು ಲೋಕಾಯುಕ್ತರ ಆದೇಶದಂತೆ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದ ಅಧಿಕಾರಿಗಳಿಗೂ ಕಿರುಕುಳ ಆರಂಭಗೊಂಡಿತು. ಅವರು ಭ್ರಷ್ಟಾಚಾರದ ಹುತ್ತಕ್ಕೆ ಕೈ ಹಾಕಿದ್ದರು. ಹಾವುಗಳು ಜಾಗೃತಗೊಂಡವು. ನಿಮ್ಮನ್ನು, ಸರ್ಕಾರವನ್ನು ಬಳಸಿಕೊಂಡು ಲೋಕಾಯುಕ್ತರನ್ನು ಹಣಿಯುವ ಕುತಂತ್ರ ಆರಂಭಿಸಿದವು. ಲೋಕಾಯುಕ್ತರು ಹತಾಶೆಗೆ ಒಳಗಾಗುವಂತೆ ಮಾಡಲು ಏನೇನು ಷಡ್ಯಂತ್ರ ರೂಪಿಸಬೇಕೋ ಅದೆಲ್ಲವನ್ನೂ ಮಾಡಲಾಯಿತು; ಥೇಟ್ ಸಿನಿಮಾಗಳ ಚಿತ್ರಕತೆಯ ಹಾಗೆ.
ಈಗ ಸಂತೋಷ್ ಹೆಗಡೆ ಹೊರನಡೆಯುತ್ತಿದ್ದಾರೆ. ರಾಜ್ಯದ ಜನತೆ ಎಲ್ಲವನ್ನೂ ಗಮನಿಸುತ್ತಿದ್ದಾರೆ. ನೀವು ಒಂದು ಸೂಕ್ಷ್ಮವನ್ನು ಗುರ್ತಿಸಿರಬಹುದು; ಲೋಕಾಯುಕ್ತರ ರಾಜೀನಾಮೆ ಪ್ರಕರಣದ ನಂತರ ಒಂದೇ ಒಂದು ಧ್ವನಿಯೂ ಅವರ ವಿರುದ್ಧ ಮಾತನಾಡುತ್ತಿಲ್ಲ. ಸಂತೋಷ್ ಹೆಗಡೆಯವರ ಮೇಲೆ ಜನ ಇಟ್ಟಿರುವ ನಂಬಿಕೆ, ವಿಶ್ವಾಸವನ್ನು ಇದು ವ್ಯಕ್ತಪಡಿಸುತ್ತದೆ.
ತಪ್ಪು ಮಾಡಿದಿರಿ. ಸರಿಪಡಿಸಿಕೊಳ್ಳುವ ಅವಕಾಶವನ್ನೂ ನೀವು ಕಳೆದುಕೊಂಡಿರಿ. ಭ್ರಷ್ಟಾಚಾರಿಗಳಿಗೆ ಬೆಂಬಲವಾಗಿ ನಿಂತಿರಿ ಎಂಬ ಶಾಶ್ವತ ಅಪವಾದವನ್ನು ನೀವು ಹೊತ್ತುಕೊಂಡಿರಿ. ಇದು ಬೇಕಿತ್ತಾ ಸರ್?

ಕನ್ನಡದ್ರೋಹದ ಹಲವಾರು ಉದಾಹರಣೆಗಳು...


ಯಡಿಯೂರಪ್ಪನವರೆ,
ನಿಮ್ಮ ಸರ್ಕಾರ ಹಲವು ಕನ್ನಡದ್ರೋಹದ ಕೆಲಸಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿವೆ. ತಿರುವಳ್ಳುವರ್ ಪ್ರತಿಮೆ ಸಂದರ್ಭದಲ್ಲಿ ನಡೆದುಕೊಂಡಿದ್ದು ಒಂದೆಡೆಯಾದರೆ ಎಂಇಎಸ್ ಜತೆ ಕೂಡಾವಳಿ ಮಾಡಿಕೊಂಡಿದ್ದು ಮತ್ತೊಂದು ಕಡೆ.
ಓಟಿನ ಬೇಟೆಗಾಗಿ ನೀವು ಶಿವಮೊಗ್ಗದಲ್ಲಿ ತಮಿಳು ಸಮಾವೇಶ ನಡೆಸಿದಿರಿ. ಇತ್ತ ಬೆಂಗಳೂರಿನಲ್ಲಿ ವೆಂಕಯ್ಯ ನಾಯ್ಡು ಸಮ್ಮುಖದಲ್ಲಿ ‘ಸ್ನೇಹಮಿಲನ’ದ ಹೆಸರಿನಲ್ಲಿ ತೆಲುಗು ಸಮಾವೇಶವೂ ನಡೆಯಿತು. ತೆಲುಗರು ತೆಲುಗು ಸಮಾವೇಶ ಮಾಡಿಕೊಳ್ಳಲಿ, ತಮಿಳರು ತಮಿಳು ಸಮಾವೇಶ ಮಾಡಿಕೊಳ್ಳಲಿ. ಅದು ಅವರವರ ಇಷ್ಟ. ಆದರೆ ನಿಮಗೆ ಅದನ್ನು ಮಾಡುವ ದರ್ದೇನು ಇತ್ತು? ಮತ್ತದೇ ಮೂರನೇ ದರ್ಜೆ ವೋಟ್‌ಬ್ಯಾಂಕ್ ರಾಜಕಾರಣವಲ್ಲವೆ?
ಕನ್ನಡ ವಿಶ್ವವಿದ್ಯಾಲಯವನ್ನೇ ಕೇಳುವವರು ಗತಿಯಿಲ್ಲ. ಅದನ್ನು ಇನ್ನಷ್ಟು ಅಭಿವೃದ್ಧಿಪಡಿಸುವ, ಕನ್ನಡ ಸಂಶೋಧನೆಯ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆಸುವ ಬದಲು ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪಿಸಿದಿರಿ. ಅದು ಯಾವ ಪುರುಷಾರ್ಥಕ್ಕೆ ಅನ್ನೋದು ಇನ್ನೂ ನಮಗೆ ಅರ್ಥವಾಗಿಲ್ಲ. ದೇಶದ ಹಲವಾರು ಭಾಗಗಳಲ್ಲಿ ಈಗಾಗಲೇ ಸಂಸ್ಕೃತ ವಿಶ್ವವಿದ್ಯಾಲಯಗಳು ನಡೆಯುತ್ತಿವೆ. ಕರ್ನಾಟಕದಲ್ಲೂ ಒಂದು ಬೇಕಿತ್ತೇ?
ಬೃಹತ್ ಬೆಂಗಳೂರು ಮಹಾನಗರಪಾಲಿಕೆ ಶಾಲೆಗಳನ್ನು ಸಿಬಿಎಸ್‌ಇ ಶಾಲೆಗಳನ್ನಾಗಿ ಪರಿವರ್ತಿಸಲು ಹೊರಟಿದ್ದೀರಿ. ಅದಕ್ಕಾಗಿ ಈ ಶಾಲೆಗಳನ್ನು ನಿಮ್ಮ ಸಂಘಪರಿವಾರದ್ದೇ ಒಂದು ಸಂಸ್ಥೆಗೆ ದತ್ತು ಕೊಡಲು ಹೊರಟಿದ್ದೀರಿ. ಸಿಬಿಎಸ್‌ಇ ಶಾಲೆಗಳ ಅಪಾಯಗಳ ಕುರಿತು ಈ ಸಂಚಿಕೆಯಲ್ಲೇ ಮತ್ತಷ್ಟು ಬರೆದಿದ್ದೇವೆ, ದಯಮಾಡಿ ಓದಿ.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರು ಇಡಬೇಕೆಂಬುದು ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ನೂರಾರು ಸಂಘಟನೆಗಳ ಬೇಡಿಕೆ. ಈ ಕುರಿತು ಹಲವು ಬಾರಿ ಪ್ರತಿಭಟನೆಗಳು ನಡೆದಿವೆ. ಸರ್ಕಾರವೇ ನೇಮಿಸಿದ ಜಂಟಿ ಸದನ ಸಮಿತಿಯೂ ಇದನ್ನೇ ಶಿಫಾರಸು ಮಾಡಿದೆ. ಆದರೆ ಇದುವರೆಗೆ ಆ ಬಗ್ಗೆ ನೀವು ತಲೆಕೆಡಿಸಿಕೊಂಡ ಹಾಗೆ ಕಾಣುತ್ತಿಲ್ಲ.
ಬೆಳಗಾವಿಯಲ್ಲಿ ವಿಶ್ವಕನ್ನಡ ಸಮ್ಮೇಳನ ಮಾಡುವ ಯೋಜನೆ ಎಷ್ಟು ವರ್ಷಗಳದ್ದು? ಅದೇಕೆ ಇನ್ನೂ ಸಾಧ್ಯವಾಗಿಲ್ಲ? ಪ್ರತಿಬಾರಿಯೂ ಯಾವುದೋ ಒಂದು ಚುನಾವಣೆಯ ನೆಪ ನಿಮಗೆ. ಅದನ್ನು ಇನ್ನೆಷ್ಟು ವರ್ಷ ಮುಂದೂಡಿಕೊಂಡು ಬರುತ್ತೀರಿ? ನಮಗೆ ಈ ಸಮ್ಮೇಳನ ನಡೆಸುವ ಆಸಕ್ತಿಯಿಲ್ಲ ಎಂದಾದರೂ ನೀವು ಹೇಳಿಬಿಟ್ಟರೆ ಮಹದುಪಕಾರವಾಗುತ್ತದೆ.
ತುಂಬ ವಿಷಾದದ ವಿಷಯವೆಂದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೊಂದು ಸಚಿವರನ್ನು ನೇಮಿಸಲು ನಿಮ್ಮಿಂದ ಆಗಿಲ್ಲ. ಆ ಇಲಾಖೆಯನ್ನು ನಿರ್ವಹಿಸುವ ಯೋಗ್ಯರು ನಿಮ್ಮ ಪಕ್ಷದಲ್ಲಿ ಇಲ್ಲವೇ ಎಂಬ ಪ್ರಶ್ನೆಗೆ ನೀವೇ ಉತ್ತರಿಸಬೇಕಾಗುತ್ತದೆ. ಹೆಚ್ಚು ಬಂಡವಾಳವಿಲ್ಲದ ಇಲಾಖೆ ಇದಾದ್ದರಿಂದ ಯಾರಿಗೂ ಬೇಡವಾಗಿದೆ ಅನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಸಂಸ್ಕೃತಿ ಇಲಾಖೆಗೊಬ್ಬ ಮಂತ್ರಿಯಿಲ್ಲವೆಂದರೆ ಸರ್ಕಾರಕ್ಕೆ ಸಂಸ್ಕೃತಿ ಇಲ್ಲ ಎಂದಾಗುತ್ತದೆ, ಮರೆಯಬೇಡಿ.
ಕರ್ನಾಟಕ ರಕ್ಷಣಾ ವೇದಿಕೆಯ ವಿಶ್ವ ಕನ್ನಡಿಗರ ಜಾಗೃತಿ ಸಮಾವೇಶದಲ್ಲಿ ಭಾಗವಹಿಸಿ ನೀವು ಆಡಿದ ಮಾತುಗಳು ಇಂದೂ ನಮಗೆ ನೆನಪಿದೆ. ನಾನು ಕನ್ನಡದ ಮುಖ್ಯಮಂತ್ರಿ, ಕನ್ನಡ ನೆಲ-ಜಲ-ಸಂಸ್ಕೃತಿ-ಭಾಷೆಗೆ ಧಕ್ಕೆಯಾದರೆ ನನ್ನ ಅಧಿಕಾರ ತ್ಯಾಗಕ್ಕೂ ಸಿದ್ಧ ಎಂದು ನೀವು ಹೇಳಿದ್ದಿರಿ. ಆದರೆ ಅಧಿಕಾರ ಬೇರೆಯದೇ ಪಾಠಗಳನ್ನು ಹೇಳಿಕೊಡುತ್ತದೆ. ಅಧಿಕಾರದ ಉಳಿವಿಗಾಗಿ ಕನ್ನಡತನದ ತ್ಯಾಗಕ್ಕೂ ಸಿದ್ಧ ಎಂಬುದು ನಿಮ್ಮ ಹೊಸ ವರಸೆಯಾಗಿರಬಹುದು. ಇತರೆಲ್ಲರ ಹಾಗೆ ನೀವೂ ಆದಿರಿ, ಇದಲ್ಲವೇ ದ್ರೋಹ?

ಕೊನೆಯ ಮಾತುಗಳು...


ಯಡಿಯೂರಪ್ಪನವರೆ,
ಈ ಮ್ಯಾರಥಾನ್ ಪತ್ರ ಬರೆದು ನನಗೂ ಸುಸ್ತಾಗಿ ಹೋಯಿತು. ಆದರೆ ನನ್ನ ಪ್ರಶ್ನೆಗಳಿನ್ನೂ ಮುಗಿದಿಲ್ಲ. ಸರಣಿ ಸರಣಿಯಾಗಿ ಅವು ಇನ್ನೂ ಹೊರಬರುತ್ತಲೇ ಇವೆ.
ರೈತರಿಗೆ ಸರಿಯಾದ ಸಮಯಕ್ಕೆ ಗೊಬ್ಬರ ಕೊಡಲಿಲ್ಲ, ವಿದ್ಯುತ್ ಕೊಡಲಿಲ್ಲ. ಚುನಾವಣಾ ಪ್ರಣಾಳಿಕೆಯಲ್ಲಿ ಏನನ್ನು ಹೇಳಿದ್ದಿರಿ ಎಂಬುದನ್ನು ನೀವು ಮರೆತು ಬಹುಕಾಲವೇ ಆಯಿತು. ಕೃಷಿಯ ಬೆಳವಣಿಗೆಗೆ ಪೂರಕವಾಗಿ ಒಂದು ಸ್ಪಷ್ಟ ನೀತಿಯೇ ನಿಮ್ಮ ಬಳಿಯಿಲ್ಲ. ಬಜೆಟ್‌ನಲ್ಲಿ ಅವರಿಗಿಷ್ಟು-ಇವರಿಗಿಷ್ಟು ಎಂದು ಹಂಚಿದ್ದೇ ಆಯ್ತು. ವರ್ಗಾವಣೆ ದಂಧೆಗೆ ಮಿತಿಯೇ ಇಲ್ಲದಂತಾಯಿತು. ಜಾತಿ ರಾಜಕಾರಣವನ್ನು ತೀರಾ ಅಸಹ್ಯ ಎನಿಸುವಷ್ಟು ಬೆಳೆಸಿದ್ದು ನಿಮ್ಮ ಸರ್ಕಾರದ ಮತ್ತೊಂದು ಸಾಧನೆ.
ಮಹಿಳೆಯರು, ದುರ್ಬಲರು, ಅಲ್ಪಸಂಖ್ಯಾತರು, ಪರಿಶಿಷ್ಟರ ಏಳಿಗೆ ಬರಿಯ ಮಾತಿನಲ್ಲೇ ಹೊರತು ಕೃತಿಯಲ್ಲಿ ಆಗುತ್ತಿಲ್ಲ. ನಿಮ್ಮ ಸಂಪುಟದಲ್ಲಿ ಇದ್ದ ಏಕೈಕ ಮಹಿಳೆಯನ್ನೂ ಹೊರದೂಡಿ ಇಡೀ ಸರ್ಕಾರವೇ ಪುರುಷಮಯ
ಗೊಳಿಸಿರುವುದರಿಂದ ಲಿಂಗ ಸಮಾನತೆಯ ಆದರ್ಶವನ್ನು ಮಣ್ಣುಪಾಲು ಮಾಡಿದ್ದೀರಿ.
ನಿಮ್ಮ ಸರ್ಕಾರದ ಮಂತ್ರಿಗಳು ವಿಧಾನಸೌಧಕ್ಕೆ ಬರುವುದನ್ನೇ ಬಿಟ್ಟಿದ್ದಾರೆ. ಬರುವ ಮಂತ್ರಿಗಳಿಗೆ ಮಾಡಲು ಕೈಯಲ್ಲಿ ಕೆಲಸವಿಲ್ಲ.
ಇಷ್ಟೆಲ್ಲ ಆದರೂ ನೀವು ನಮ್ಮ ಮುಖ್ಯಮಂತ್ರಿ, ಕನ್ನಡದ ಮುಖ್ಯಮಂತ್ರಿ. ಹಸಿರು ಶಾಲು ಹೊದ್ದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗ ನೀವು ಈಗಿನಂತಿರಲಿಲ್ಲ. ನಿಮ್ಮ ಕಣ್ಣುಗಳಲ್ಲಿ ಕನಸುಗಳಿದ್ದಂತಿತ್ತು. ಅದೇನಾಯಿತೋ ಏನೋ?
ಬಹುಶಃ ನಿಮ್ಮ ಬಳ್ಳಾರಿ ಶತ್ರುಗಳು ನಿಮ್ಮದೇ ಶಾಸಕರನ್ನು ಕೊಂಡುಕೊಂಡು ಬ್ಲಾಕ್‌ಮೇಲ್ ಮಾಡಿದ ನಂತರ ನೀವು ಬದಲಾದಿರಿ ಅನ್ನಿಸುತ್ತದೆ.
ಆದರೆ ನಾವು ಇನ್ನೂ ತಾಳ್ಮೆಯಿಂದ ಕಾಯುತ್ತೇವೆ. ಅದು ಅನಿವಾರ್ಯ ಕರ್ಮವೂ ಹೌದು. ಇನ್ನೂ ಮೂರು ವರ್ಷಗಳ ಅವಧಿಯಿದೆ. ತಪ್ಪುಗಳನ್ನು ತಿದ್ದಿಕೊಳ್ಳಲು ಇನ್ನೂ ಅವಕಾಶವಿದೆ.
ನಿಮ್ಮ ಸಂಪುಟದಲ್ಲಿರುವ ಭ್ರಷ್ಟ, ದುಷ್ಟರನ್ನು ಮೊದಲು ಹೊರಗೆ ಹಾಕಿ. ಅದರಿಂದಾಗಿ ಅಧಿಕಾರ ಕಳೆದುಕೊಳ್ಳುತ್ತೇನೆಂಬ ಭೀತಿಯಿಂದ ಮೊದಲು ಪಾರಾಗಿ. ಕುತಂತ್ರಗಳನ್ನೇ ಬೋಧಿಸುವ ನಿಮ್ಮ ಸುತ್ತಲಿನ ಆಪ್ತ ಸಲಹೆಗಾರರನ್ನು ಸ್ವಲ್ಪ ದೂರವಿಡಿ.
ನೀವು ಕರ್ನಾಟಕದ ಮುಖ್ಯಮಂತ್ರಿ, ಕನ್ನಡದ ಮುಖ್ಯಮಂತ್ರಿ. ಕನ್ನಡ ವಿಚಾರದಲ್ಲಿ ಕನ್ನಡಿಗರ ಸ್ವಾಭಿಮಾನವನ್ನು ಇನ್ಯಾವುದೋ ಮುಖ್ಯಮಂತ್ರಿಯ ಮುಂದೆಯೋ, ದಿಲ್ಲಿ ದೊರೆಗಳ ಮುಂದೆಯೋ ಅಡವಿಡಬೇಡಿ.
ದಯಮಾಡಿ ಸಾರ್ವಜನಿಕವಾಗಿ ಕಣ್ಣೀರು ಹಾಕಬೇಡಿ. ದುರ್ಬಲ ಪ್ರತಿಪಕ್ಷ ಎನ್ನುವವರೂ ನೀವೇ, ಪ್ರತಿಪಕ್ಷಗಳು ಟೀಕೆ ಮಾಡುತ್ತವೆ ಎಂದು ಕಣ್ಣೀರ್ಗೆರೆಯುವವರೂ ನೀವೆ. ನಿಮ್ಮ ಕಣ್ಣೀರು ನಿಮ್ಮ ದುರ್ಬಲ ಮನಸ್ಸನ್ನು ಪ್ರದರ್ಶಿಸುತ್ತದೆ. ನೀವು ಅಸಹಾಯಕರಂತೆ ಕಾಣಿಸಿದರೆ ಜನರೂ ಅಧೀರರಾಗುತ್ತಾರೆ.
ಮೊದಲು ಈ ನಾಡನ್ನು ಇರಿದು ಕೊಲ್ಲುತ್ತಿರುವ ಗಣಿ ಮಾಫಿಯಾವನ್ನು ನಿಯಂತ್ರಿಸಿ. ಸದ್ಯದ ಮಟ್ಟಿಗಾದರೂ ಎಲ್ಲ ರೀತಿಯ ಗಣಿಗಾರಿಕೆಯನ್ನು ನಿಲ್ಲಿಸಿ. ರಾಜ್ಯದ ಗಣಿ ಸಂಪತ್ತು ನಮ್ಮ ಮುಂದಿನ ಪೀಳಿಗೆಗಳಿಗೂ ಬೇಕು ಎಂಬ ಸಾಮಾನ್ಯಜ್ಞಾನ ನಿಮ್ಮ ಸರ್ಕಾರಕ್ಕಿರಲಿ.
ಬಂಡವಾಳ ಹೂಡಿಕೆಯ ಹೆಸರಿನಲ್ಲಿ ರೈತರನ್ನು ಒಕ್ಕಲೆಬ್ಬಿಸುವ ಅಮಾನವೀಯ ಚಟುವಟಿಕೆಗಳನ್ನು ಮೊದಲು ನಿಲ್ಲಿಸಿ. ಇದು ರಾಜ್ಯಕ್ಕೆ ಶ್ರೇಯಸ್ಸು ತರುವ ವಿಷಯವಲ್ಲ. ಕನ್ನಡಿಗರನ್ನು ಭಿಕ್ಷುಕರನ್ನಾಗಿ ಮಾಡಬೇಡಿ. ರೈತರನ್ನು ಆತ್ಮಹತ್ಯೆಗೆ ದೂಡಬೇಡಿ.
ಮೊದಲು ನಮ್ಮ ಗಡಿಯನ್ನು ರಕ್ಷಿಸುವ ಕೆಲಸ ಮಾಡಿ. ಬಳ್ಳಾರಿಯಲ್ಲಿ ಒತ್ತುವರಿಯಾಗಿರುವ ನಮ್ಮ ಭೂಮಿಯನ್ನು ವಾಪಾಸು ನಕ್ಷೆಗೆ ತನ್ನಿ. ಹಾಗೆಯೇ ಹೊಗೇನಕಲ್‌ನಲ್ಲಿ ತಮಿಳುನಾಡು ಸರ್ಕಾರ ನಡೆಸುತ್ತಿರುವ ಕಾಮಗಾರಿಯನ್ನು ಹೇಗಾದರೂ ನಿಲ್ಲಿಸಿ. ಎಲ್‌ಟಿಟಿಇ, ಎಂಇಎಸ್ ತರಹದ ಸಂಘಟನೆಗಳನ್ನು ಮುದ್ದು ಮಾಡುವುದನ್ನು ಮೊದಲು ನಿಲ್ಲಿಸಿ.
ಸರೋಜಿನಿ ಮಹಿಷಿ ವರದಿಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಯತ್ನಿಸಿ. ಮೊದಲು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಒಂದಷ್ಟು ಅಧಿಕಾರ ಕೊಡಿ, ಕನ್ನಡ ದ್ರೋಹಿಗಳನ್ನು ಶಿಕ್ಷಿಸುವ ಅವಕಾಶ ನೀಡಿ.
ನೀವು ಹೋರಾಟಗಳ ಮೂಲಕ ರಾಜಕಾರಣದಲ್ಲಿ ಮೇಲಕ್ಕೆ ಬಂದವರು. ಆ ಹಿನ್ನೆಲೆಯನ್ನು ಮರೆಯಬೇಡಿ. ಹೋರಾಟಗಾರರನ್ನು ಭಯೋತ್ಪಾದಕರಂತೆ ನೋಡುವ ನಿಮ್ಮ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳಿ. ಜನಪರ ಹೋರಾಟಗಳಿಂದಲೇ ಸಮಾಜ ಜೀವಂತಿಕೆಯಿಂದ ಇರಲು ಸಾಧ್ಯ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಿ.

ಕನ್ನಡದ ಮೊದಲ ನಾಟಕ ಶಾಕುಂತಲ





ಡಾ. ರಾಜಪ್ಪ ದಳವಾಯಿ

ಕನ್ನಡದಲ್ಲಿ ನಾಟಕ ಪ್ರಾಚೀನ ಕಾಲದಿಂದಲೂ ಇಲ್ಲ ಎನ್ನುವುದಕ್ಕಿಂತ ಕನ್ನಡ ಕಾವ್ಯದೊಳಗೆ ನಾಟಕವೂ ಅಂತರ್ಗತವಾಗಿದೆ ಎನ್ನಲಿಕ್ಕೆ ಅಡ್ಡಿಯಿಲ್ಲ. ಇದನ್ನು ಶ್ರೀ ಅವರು ರನ್ನನ ಗದಾಯುದ್ಧವನ್ನು ನಾಟಕವನ್ನಾಗಿಸಿರುವುದರಲ್ಲೇ ತಿಳಿಯುತ್ತದೆ. ಆದರೆ ಮಿತ್ರವಿಂದಾಗೋವಿಂದ ಮೊದಲ ನಾಟಕ ಎಂದರೂ ಅದು ಸಾಹಿತ್ಯ ಕೃತಿಯಾಗಿ ಮೊದಲ ದಾಖಲೆ. ಅದೂ ಸಂಸ್ಕೃತದ ರತ್ನಾವಳಿ ನಾಟಕದ ಅನುವಾದ. ಇದು ಕಾವ್ಯರೂಪದಲ್ಲಿ ಬರೆದ ನಾಟಕ. ಇದಕ್ಕೂ ಶಾಕುಂತಲ ನಾಟಕಕ್ಕೂ ೨೦೦ ವರ್ಷಗಳ ಅಂತರವಿದೆ. ೧೬೮೦ರಲ್ಲಿ ಆದರೆ ನಾವು ಬಹುಕಾಲ ಮರೆತಿದ್ದ, ನಮ್ಮ ಸಾಹಿತ್ಯ ಚರಿತ್ರೆಯಾಗಲಿ, ರಂಗಭೂಮಿ ಚರಿತ್ರೆಯಾಗಲಿ ಮರೆತಿದ್ದ ಒಂದು ಕಲಾಕೃತಿ ಎಂದರೆ ಚುರಮರಿ ಶೇಷಗಿರಿರಾಯರ ಶಾಕುಂತಲ. ಕನ್ನಡದಲ್ಲಿ ಸಾಹಿತ್ಯ ಚರಿತ್ರೆ ಇದ್ದಂತೆ ರಂಗಭೂಮಿ ಚರಿತ್ರೆ ಇಲ್ಲ. ಅಲ್ಲಿ ಇಲ್ಲಿ ಬಿಡಿ ಬರಹಗಳನ್ನು ಬಿಟ್ಟರೆ ಅಧ್ಯಯನ ಕ್ರಮಬದ್ಧತೆ ಇರುವ ರಂಗಭೂಮಿ ಚರಿತ್ರೆ ವಿಭಿನ್ನ ಅಭಿಪ್ರಾಯಗಳ ಹೆಗ್ಗಾಡಾಗಿದೆ. ಕಾರಣ ರಂಗಭೂಮಿ ಸಂಶೋಧನೆಯ ಭಾಗವಾಗಿಲ್ಲ. ಆದರೆ ಸಾಹಿತ್ಯ ಅಧ್ಯಯನದ ಕ್ರಮ ಸಂಶೋಧನೆಯ ಭಾಗವಾದುದರಿಂದ, ಕ್ರಿಸ್ತ ಮಿಷನರಿಗಳಿಂದ ೧೯೬೦ರಿಂದಲೇ ಭಿನ್ನ ಅಧ್ಯಯನಗಳು ಆರಂಭವಾ ದವು. ಇತ್ತೀಚೆಗೆ ನಿಧನರಾದ ಡಾ.ಶ್ರೀನಿವಾಸ ಹಾವನೂರರ ಸಂಶೋಧನೆ ಯಿಂದ ಪುನಃ ಬೆಳಕಿಗೆ ಬಂದ ಒಂದು ಮಹತ್ವದ ಮೊದಲ ಕನ್ನಡ ನಾಟಕ ಶಾಕುಂತಲ. ಸಾಹಿತ್ಯ ಕೃತಿಯಾಗಿ ಚುರಮರಿ ಶೇಷಗಿರಿರಾಯರ ಕೃತಿಗಿಂತ ಬಸವಪ್ಪ ಶಾಸ್ತ್ರಿಯವರ ಕರ್ಣಾಟಕ ಶಾಕುಂತಲಂ ಹೆಚ್ಚು ಪ್ರಸಿದ್ಧವಾದುದು. ಈ ನಾಟಕ ಅನುವಾದಗೊಂಡು ಪ್ರಕಟ ವಾದುದು ೧೮೮೦ರಲ್ಲಿ. ಆದರೆ ರಂಗಭೂಮಿಯ ಪ್ರಯೋಗ ಶೀಲತೆಯ ದೃಷ್ಟಿಯಿಂದ ಚುರಮರಿ ಶೇಷಗಿರಿರಾಯರ ಶಾಕುಂತಲ ಅನೇಕ ಹೊಸತನಗಳನ್ನು ಮೆರೆದ ಕಲಾಕೃತಿಯಾಗಿದೆ. ಇದು ಮೊದಲಿಗೆ ೧೮೬೯ರಲ್ಲಿ ಮುಂಬ ಯಿಂದ ಪ್ರಕಟವಾಗಿತ್ತು. ಈ ನಾಟಕ ರಂಗಭೂಮಿಯ ಪ್ರಯೋಗಕ್ಕಾಗಿಯೇ ಬರೆದು ಕನ್ನಡ ರಂಗಭೂಮಿಯ ಒಂದು ವಿಶೇಷವಾಗಿದೆ.
ಚುರಮರಿ ಶೇಷಗಿರಿಯವರು ಧಾರವಾಡದ ಡೆಪ್ಯುಟಿ ಚನ್ನಬಸಪ್ಪ ಶಿಷ್ಯರು. ಅವರ ಮನೆತನದ ಮೂಲ ಬೆಳಗಾವಿ ಜಿಲ್ಲೆಯ ರಾಮದುರ್ಗ. ನಂತರ ಆ ಮನೆತನ ಧಾರವಾಡಕ್ಕೂ ಬಂದು ನೆಲೆ ನಿಲ್ಲುತ್ತದೆ. ಶೇಷಗಿರಿಯವರ ತಂದೆ ರಾಮಚಂದ್ರರಾಯ. ಬಾಗಲಕೋಟೆ ಫೌಜದಾರ ಪೊಲೀಸ್ ಸೂಪರಿಡೆಂಟಿಗೇ ಹೊಡೆದು ಜೈಲು ಸೇರಿದ್ದವರು. ಅವರು ರಸಿಕರು, ಕವಿಗಳೂ ಆಗಿದ್ದರು. ಶೇಷಗಿರಿರಾಯರು ಪುಣೆಯಲ್ಲಿ ಎಂಜಿನಿಯರಿಂಗ್ ಮುಗಿಸಿ, ಮುಂಬಯಿ ಬಂದರು ಕಟ್ಟುವಾಗ ಓವರ್‌ಸೀಯರ್ ಆಗಿ ಕೆಲಸ ಮಾಡಿದವರು. ಮುಂದೆ ಸಿಂಧ್ ಪ್ರಾಂತ್ಯಕ್ಕೆ ವರ್ಗ. ನಂತರ ಧಾರವಾಡ, ಮೈಸೂರಿನ ಕೆರೆ ನಿರ್ಮಾಣದ ಜವಾಬ್ದಾರಿ ಇವರದೇ ಆಗಿತ್ತು. ಮುಂದೆ ಸಂಸಾರದಿಂದ ದೂರಾದ ಶೇಷಗಿರಿರಾಯರು ತಮ್ಮ ಗಳಿಕೆಯನ್ನು ಚುರಮರಿ ಸ್ಕಾಲರ್ ಶಿಪ್ ಹೆಸರಿನಲ್ಲಿ ಮೆಡಿಕಲ್ ಓದುವ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಮೀಸಲಿಟ್ಟರು. ಅದು ಇಂದಿಗೂ ನಡೆಯುತ್ತಿದೆ. ಶೇಷಗಿರಿರಾಯರು ಮುಂದೆ ೧೯೨೯ರಲ್ಲಿ ಶೂದ್ರಕನ ಮೃಚ್ಛಕಟಿಕ ನಾಟಕವನ್ನು ಬೆಳಗಾವಿಯಿಂದ ಪ್ರಕಟಿಸಿದ್ದಾರೆ. ಸುಂದರಾ ನಾಟಕ ಅವರ ಮತ್ತೊಂದು ನಾಟಕ. ತಮ್ಮ ಗ್ರಂಥಾಲಯವನ್ನು ಮಾರಿ ಬಂದ ೩ಸಾವಿರ ಹಣದಿಂದ ವಿದ್ಯಾರ್ಥಿಗಳ ಸ್ಕಾಲರ್‌ಶಿಪ್ ಆರಂಭಿಸಿದ ಮಹಾನುಭಾವರವರು. ಪಬ್ಲಿಕ್ ವರ್ಕ್ ಡಿಪಾರ್ಟ್‌ಮೆಂಟಿನಲ್ಲಿದ್ದರೂ ಕನ್ನಡದಲ್ಲಿ ಉತ್ತಮ ನಾಟಕಗಳನ್ನು ಬರೆದ ಕೀರ್ತಿ ಅವರದು. ಅವರಿಗೆ ಗಣಿತ, ಸಂಗೀತ, ಬಡಗಿತನ, ಕಮ್ಮಾರಿಕೆ ಗೊತ್ತಿತ್ತು. ರಸಾಯನ ಶಾಸ್ತ್ರದಲ್ಲಿ ಪರಿಣಿತಿ ಇದ್ದ ಅವರು ಗಾಜು ಕರಗಿಸಿ ಮಸಿ ಕುಡಿಕೆ ಮಾಡುವ ಸಂದರ್ಭದಲ್ಲಿ ರಾಸಾಯನಿಕ ಹೊಗೆಯ ಪರಿಣಾಮದಿಂದ ಅವರ ಜೀವವೇ ಹೊರಟು ಹೋಯಿತು. ಇಂಥ ಬಹುವಿಷಯ ಜ್ಞಾನಿಗಳಾದ ಶೇಷಗಿರಿರಾಯರು ರಂಗಭೂಮಿಯ ಪ್ರಯೋಗಕ್ಕೆ ಶಾಕುಂತಲ ನಾಟಕ ರಚಿಸಿದ್ದರ ಕಾರಣ ಅವರಿಗಿದ್ದ ಬಹುಶಾಸ್ತ್ರೀಯ ಜ್ಞಾನ ಎಂದರೆ ತಪ್ಪಲ್ಲ.
ಕನ್ನಡಕ್ಕೆ ಕಾಳಿದಾಸನ ಶಾಕುಂತಲವನ್ನು ಮೂರು ಜನ ವಿದ್ವಜ್ಜನರು ತಂದಿದ್ದಾರೆ. ಮೊದಲಿಗೆ ಚುರಮರಿ ಶೇಷಗಿರಿರಾಯ, ನಂತರ ಬಸವಪ್ಪಶಾಸ್ತ್ರಿ ಅನಂತರ ಗದ್ಯದಲ್ಲಿ ಬಿ.ಕೃಷ್ಣಪ್ಪ. ಕೃಷ್ಣಪ್ಪನವರು ಮಹಾರಾಜ ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದವರು. (ದಲಿತ ಸಂಘರ್ಷ ಸಮಿತಿ ಆರಂಭಿಸಿದ ಭದ್ರಾವತಿ ಬಿ.ಕೃಷ್ಣಪ್ಪನವರು ಅಲ್ಲ) ಶೇಷಗಿರಿರಾಯರದು ರಂಗಕೃತಿ. ಬಸವಪ್ಪ ಶಾಸ್ತ್ರಿಯವರದು ನಾಟಕಕೃತಿ. ಶೇಷಗಿರಿರಾಯರ ಕಲಾಕೃತಿ ಗೆ ೩೫ವರ್ಷಗಳಾದರೂ ಅದನ್ನು ಪ್ರಯೋಗಿಸುವ ಭಾಗ್ಯ ಬರಲೇ ಇಲ್ಲ. ಕಾರಣ ನಾಟಕ ಮಾಡುವುದೆಂದರೆ ಕೀಳು ಕೆಲಸವೆಂಬ ಭಾವನೆ. ಆದರೆ ಇದೇ ಶಾಕುಂತಲ ಅಣ್ಣಾ ಕಿರ್ಲೋಸ್ಕರ್ ಅವರಿಂದ ಮರಾಠಿಗರ ಮನೆಮಾತಾಗಿ ಹೋಯಿತು. ಕಿರ್ಲೋಸ್ಕರರೂ ಕನ್ನಡಿಗರೆ. ಆಗ ಮರಾಠಿ ನಾಟಕಗಳ ಮೇಲುಗೈ ಕರ್ನಾಟಕದಲ್ಲೂ ಆಯಿತು. ನಾಟಕ, ಸಂಗೀತ ಮುಂತಾದ ಕಲೆಗಳು ಭಾಷಾಗಡಿ ಮೀರಿ ಎಲ್ಲ ಕಾಲಕ್ಕೂ ಬೆಳೆಯುವಂಥವುಗಳೇ ಆಗಿರುತ್ತವೆ. ಅನ್ಯರು ಗುರುತಿಸಿದ ಮೇಲೆ ನಮ್ಮವರು ಗುರುತಿಸುವುದು ಅನೇಕರ ವಿಷಯದಲ್ಲಿ ಸಹಜವಾದಂತೆಯೇ ಈ ನಾಟಕವನ್ನು ೧೯೦೫ರಲ್ಲಿ ಧಾರವಾಡದ ವಿಕ್ಟೋರಿಯಾ ಥಿಯೇಟರ್‌ನಲ್ಲಿ ಭರತ ಕಲೋತ್ತೇಜಕ ಸಂಗೀತ ಸಮಾಜ ಎಂಬ ಅಮೆಚೂರ್ ತಂಡ ಕನ್ನಡದಲ್ಲಿ ಅಭಿನಯಿಸಿತು. ನಾಟಕ ದೊಡ್ಡದಿದ್ದುರಿಂದ ಮುಂದೆ ಮೊದಲ ನಾಲ್ಕಂಕ ಒಂದು ದಿನ. ಉಳಿದ ಮೂರಂಕ ಮರುದಿನ ಪ್ರದರ್ಶನವಾಗುತ್ತಿದ್ದುದೂ ಉಂಟು. ಈ ತಂಡ ಆರಂಭವಾಗಲು ಮುದವೀಡು ಕೃಷ್ಣರಾಯರು ಕಾರಣ. ೧೯೦೫ರಿಂದ ೧೯೧೩ರವರೆಗೆ ಹತ್ತಿಪ್ಪತ್ತು ಪ್ರಯೋಗಗಳು ನಡೆದಿವೆ. ಧಾರವಾಡ, ಹುಬ್ಬಳ್ಳಿ, ಗದಗ, ವಿಜಾಪುರ, ಬಾಗಲಕೋಟೆ, ಬಾದಾಮಿ ಮುಂತಾದ ಕಡೆಯೂ ಈ ನಾಟಕ ಹಲವು ತಂಡಗಳಿಂದ ಪ್ರದರ್ಶನ ಕಂಡಿದೆ. ಶೇಷಗಿರಿರಾಯರ ಶಾಕುಂತಲ ಕಂದ, ವೃತ್ತಾದಿ ಪರಂಪರಾಗತ ಛಂದೋರೂಪಗಳಿಂದಲೂ ಕರ್ನಾಟಕ, ಹಿಂದೂಸ್ತಾನಿ ಮಟ್ಟಗಳ ರಾಗಗಳಿಂದ ಆವೃತವಾದ ಹಾಡುಗಳಿಂದಲೂ ದಿನಬಳಕೆ ಗದ್ಯದಿಂದಲೂ ಕೂಡಿದೆ. ನಾಟಕ ರಚನೆ-ನಾಟಕ ಪ್ರದರ್ಶನ ಬೇರೆ ವಿಷಯಗಳು. ಈ ನಾಟಕದ ಮುಖ್ಯ ರಸ ಶೃಂಗಾರ. ನಂತರ ಕರುಣ. ಶಾಕುಂತಲೆಗೆ ದುಷ್ಯಂತ ಆಕರ್ಷಿತನಾಗುವುದು ಮತ್ತು ವಿಕರ್ಷಿತನಾಗುವುದು ಮುಖ್ಯವಾದರೂ ಪ್ರಸಿದ್ಧ ಹಾಡುಗಳಿಂದ ರಂಗಭಾವಗಳಿಗೆ ತಕ್ಕನಾಗಿ ನಾಟಕವನ್ನು ಲಂಬಿಸಿರುವುದು ಒಂದು ವಿಶೇಷ.
ಶಾಕುಂತಲ ನಾಟಕ ಜಗತ್ಪ್ರಸಿದ್ಧವಾದ ನಾಟಕ. ಸಂಸ್ಕೃತದಿಂದ ಇದನ್ನು ಮಾಕ್ಸ್‌ಮುಲ್ಲರ್ ಜರ್ಮನ್ ಭಾಷೆಗೆ ಅನುವಾದಿಸುತ್ತಾನೆ. ಈ ಅನುವಾದವನ್ನು ಓದಿಕೊಂಡು ಗಯಟೆ ತಾನೂ ಕವಿಯಾಗಲು ಸಾಧ್ಯವಾಯಿತೆಂದು, ನಾಟಕಕಾರ ಆಗಲು ಸಾಧ್ಯವಾಯಿತೆಂದು ಹೇಳಿಕೊಂಡಿದ್ದಾನೆ. ಶಾಕುಂತಲ ಕನ್ನಡ ರಂಗಭೂಮಿಯ
ಒಂದು ಜೀವಮಿಡಿತ ಎಂದರೆ ತಪ್ಪಾಗಲಾರದು. ಕನ್ನಡದಲ್ಲಿ ಚುರಮರಿ ಶೇಷಗಿರಿರಾಯ, ಬಸವಪ್ಪಶಾಸ್ತ್ರಿ, ಡಿವಿಜಿ, ಕೆ.ವಿ.ಸುಬ್ಬಣ್ಣ ಮುಂತಾದವರೂ ನಾಟಕ, ನೃತ್ಯರೂಪಕ, ಗೀತರೂಪಕಗಳನ್ನು ರಚಿಸಿದ್ದಾರೆ. ಮೂಲ ಮಹಾಭಾರತದ ಒಂದು ಆಖ್ಯಾನವಾದ ಈ ಪ್ರಸಂಗ ನಿರಂತರ ಬೆಳೆಯುತ್ತಾ ಬಂದಿದೆ. ಕಾಳಿದಾಸನಂಥ ಪ್ರತಿಭಾಶಾಲಿಯಿಂದ ಪ್ರಸಿದ್ಧ ನಾಟಕವಾದ ಈ ಕಲಾಕೃತಿಯು ಇಂದಿಗೂ ತನ್ನ ಕಲಾಪೇಕ್ಷೆಯನ್ನಿಟ್ಟುಕೊಂಡೇ ಇದೆ. ಒಂದು ನಾಟಕಕ್ಕೆ ಇರುವ ಜೀವಂತಿಕೆಯನ್ನು ಗಮನಿಸಿ ಹೇಳುವುದಾದರೆ, ಶಾಕುಂತಲದಷ್ಟು ಜೀವಂತ ನಾಟಕ ಮತ್ತೊಂದಿಲ್ಲ. ಅದಕ್ಕೂ ಕಾರಣ ಗಂಡು-ಹೆಣ್ಣಿನ ಆಕರ್ಷಣೆ ಮತ್ತು ವಿಕರ್ಷಣೆ. ಕನ್ನಡ ಸಂಶೋಧನೆಯ ಕಾರಣದಿಂದಾಗಿ ಇಂದು ಚುರಮರಿ ಶೇಷಗಿರಿರಾಯರ ಶಾಕುಂತಲ ಕಿರ್ಲೋಸ್ಕರ್ ಸಂಗೀತ ಶಾಕುಂತಲಕ್ಕಿಂತ ಹಳೆಯದೊಂದು ಸಾಬೀತುಪಡಿಸಲಾಗಿದೆ. ಈ ಕೃತಿ ಕನ್ನಡ-ಮರಾಠಿ ಎರಡೂ ರಂಗಭೂಮಿಯನ್ನು ಹೆಚ್ಚು ಜೀವಂತವಾಗಿಟ್ಟಿದೆ ಎಂಬುದೇ ಇದರ ಹೆಗ್ಗಳಿಕೆ.
ಸಾಹಿತ್ಯಾಧ್ಯಾಯನ ಕೃತಿಯಾಗಿಯೂ ಈ ನಾಟಕ ಮಹತ್ವದ್ದು. ಇದರಲ್ಲಿನ ಮನಮೋಹಕ ಹಾಡುಗಳು, ಸಖಿಯರ ಮಾತುಗಳಲ್ಲಿ ವಿರೂಪಾಕ್ಷನ ಸೃಷ್ಟಿ ಮುಂತಾದ ಹೊಸ ಸೃಷ್ಟಿಗಳೂ ಇಲ್ಲಿ ಸಾಧ್ಯವಾಗಿದೆ. ಚುರಮರಿಯವರ ಶಾಕುಂತಲ ಇಂದಿಗೂ ರಂಗ ಪ್ರಯೋಗದ ಹೊಸತನಗಳಿಂದ ಕೂಡಿದೆ. ಕನ್ನಡ ರಂಗಭೂಮಿಯ ಮತ್ತು ನಾಟಕ ಸಾಹಿತ್ಯದ ಸಾಂಸ್ಕೃತಿಕ ಹೆಗ್ಗಳಿಕೆಯನ್ನು ಪುನರ್‌ರಚಿಸಿಕೊಳ್ಳುವ ಸಂದರ್ಭದಲ್ಲಿ ಶಾಕುಂತಲ ನಾಟಕಕ್ಕೆ ಹೆಚ್ಚಿನ ಮಹತ್ವ ಇರುವುದನ್ನು ನಾವು ಕಾಣಬಹುದಾಗಿದೆ. ಇಲ್ಲಿನ ಹಾಡುಗಳಲ್ಲಿ ಹಳಗನ್ನಡ ಭಾಷೆಯ ಬಿಗುವೊಂದು ಮನೋಹರವಾಗಿದೆ. ಅದನ್ನು ಕಾಲಮಾನಕ್ಕೆ ತಕ್ಕ ಭಾಷೆಗೆ ಅಳವಡಿಸಿದಲ್ಲಿ ಸುಂದರವಾದೊಂದು ನಾಟಕವನ್ನು ಈಗಲೂ ರಂಗಸ್ವಾದನೆ ಮಾಡಲು ಇಂದಿಗೂ ಅಡ್ಡಿಯಿಲ್ಲ ಎಂಬುದೇ ಈ ನಾಟಕದ ವಿಶೇಷ. ಸರಿಸುಮಾರು ೧೪೦ ವರ್ಷಗಳ ಹಿಂದೆ ಪ್ರಕಟವಾದ ಈ ನಾಟಕ ಕೃತಿ ತನ್ನ ಸಾಹಿತ್ಯಕ ಮತ್ತು ರಂಗಭೂಮಿಯ ಸತ್ವಗಳಿಂದ ಕನ್ನಡ ರಂಗಭೂಮಿ ಪರಂಪರೆಯ ಅಗ್ರಮಾನ್ಯ ನವಿಲುಗರಿಯಾಗಿದೆ ಎಂಬುದು ಮುಖ್ಯ. ಸಮಕಾಲೀನ ನಿರ್ದೇಶಕರು ಇದರ ಪ್ರಯೋಗದತ್ತ ಗಮನಹರಿಸಿದರೆ ನೂರು ವರ್ಷದ ಹಿಂದಿನ ರಂಗವೈಭವವನ್ನು ಮತ್ತೊಮ್ಮೆ ಸಮಕಾಲೀನಗೊಳಿಸುವ ಕೆಲಸ ಸಾಧ್ಯವಾಗಬಹುದು. ಆದರೆ ನಿರ್ದೇಶಕರು ಇಲ್ಲಿನ ಹಳಗನ್ನಡಕ್ಕೆ ಹೆದರಬಾರದಷ್ಟೆ. ಹಾಗೆಂದು ಹೊಸಗನ್ನಡಕ್ಕೆ ಅನುವಾದವನ್ನೂ ಮಾಡಬೇಕಾಗಿಲ್ಲ. ಇಲ್ಲಿನ ಹಳಗನ್ನಡ ಪದ್ಯಗಳಲ್ಲೆ ಒಂದು ಮನೋಹರವಾದ ನಾವೀನ್ಯತೆ ಇರುವುದನ್ನು ಗಮನಿಸಬೇಕು; ಜೀರ್ಣಿಸಿಕೊಳ್ಳಬೇಕು.

ಕರವೇ ಸಮರ ಸೇನಾನಿ: ಜಯದೇವ ಪ್ರಸನ್ನ





ಕನ್ನಡ ನಾಡು, ನುಡಿ, ನೆಲ, ಜಲ, ಸಂಸ್ಕೃತಿ ಇವುಗಳ ರಕ್ಷಣೆಗೆ ನಿರಂತರ ಸಂಘರ್ಷ, ಹೋರಾಟ, ಚಳವಳಿಗಳು ನಡೆಯುತ್ತಲೇ ಇವೆ. ಇಂತಹ ಅವಿರತ ಹೋರಾಟಗಳಿಗೆ ಒಂದು ಐತಿಹ್ಯವೇ ಇದೆ. ಕನ್ನಡಮ್ಮನ ರಕ್ಷಣೆಗೆ ಟೊಂಕ ಕಟ್ಟಿ ನಿಂತ ಮೇರು ಚೇತನಗಳು ಅದೆಷ್ಟು ಮಂದಿಯೋ.
ತಮ್ಮ ಸತ್ವಯುತ ಬರವಣಿಗೆಯ ಮೂಲಕ ಕನ್ನಡದ, ಕನ್ನಡಿಗರ ‘ಧೀ’ ಶಕ್ತಿಯನ್ನು ಬಡಿದೆಬ್ಬಿಸಿದ ಸಾಹಿತ್ಯ ಲೋಕದ ಕಣ್ಮಣಿಗಳು, ಕನ್ನಡಕ್ಕೆ ಕುತ್ತು ಬಂದಾಗಲೆಲ್ಲ ಪ್ರಾಣದ ಹಂಗು ತೊರೆದು ಹೋರಾಟದ ಹಾದಿಯತ್ತ ಮುನ್ನುಗಿದ, ಮುನ್ನುಗುತ್ತಿರುವ ಕಲಿಗಳು, ಕನ್ನಡದ ಉಳಿವಿಗೆ, ಬೆಳವಣಿಗೆಗೆ ವೈಚಾರಿಕ ನೆಲೆಗಟ್ಟನ್ನು ರೂಪಿಸಿಕೊಟ್ಟ ಉದ್ಧಾಮ ಪಂಡಿತರು, ಕರ್ನಾಟಕದ ಏಕೀಕರಣಕ್ಕೆ, ಸಮಗ್ರತೆ ದುಡಿದು ಅಜರಾಮರರಾದ ಕನ್ನಡಮ್ಮನ ಸುಪುತ್ರರು...ಹೀಗೆ ಕೆಚ್ಚೆದೆಯ ಕನ್ನಡಿಗರ ವೀರ ಪರಂಪರೆಯ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
‘ಕನ್ನಡಕ್ಕಾಗಿ ಕೈ ಎತ್ತು, ನಿನ್ನ ಕೈ ಕಲ್ಪವೃಕ್ಷವಾಗುವುದು’ ಎಂಬ ಕವಿವಾಣಿಯಂತೆ ಇಂದು ನೂರಾರು, ಸಾವಿರಾರು, ಲಕ್ಷಾಂತರ ಕನ್ನಡ ಸೇನಾನಿಗಳು ಕನ್ನಡದ ಉದ್ಧಾರಕ್ಕೆ, ರಕ್ಷಣೆಗೆ ಹೋರಾಟದ ಹಾದಿ ತುಳಿದಿದ್ದಾರೆ. ಇಂತಹ ಪ್ರತಿಯೊಬ್ಬ ಕನ್ನಡಿಗನ ಬದುಕು ಸಂಘರ್ಷಮಯ ಹಾಗೂ ಆದರ್ಶಪ್ರಾಯವೇ.
ಇಂತಹ ಆದರ್ಶಪ್ರಾಯ ಅಸಂಖ್ಯ ಕನ್ನಡ ಸೇನಾನಿಗಳಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿರುವ ಜಯದೇವ ಪ್ರಸನ್ನ ಅಗ್ರಪಂಕ್ತಿಯರಾಗಿದ್ದಾರೆ.
ಜುಲೈ ೪,೧೯೫೭ರಲ್ಲಿ ತಂದೆ ಸುಮಿತ್ರಪ್ಪ, ತಾಯಿ ವರ‍್ಜಿಯಮ್ಮ ಅವರ ಪುತ್ರರಾಗಿ ಜನಿಸಿದ ಜಯದೇವ ಪ್ರಸನ್ನ ಅವರು, ಬಾಲ್ಯದಿಂದಲೇ ಕನ್ನಡದ ನಾಡು, ನುಡಿಯ ಬಗೆಗೆ ಆಕರ್ಷಿತರಾದವರು. ಹೋರಾಟ ಮನೋಭಾವದ ಜತೆಜತೆಗೆ ವೈಚಾರಿಕತೆಯನ್ನು ಬೆಳಸಿಕೊಂಡವರು. ಕನ್ನಡಕ್ಕೆ ಯಾವುದೇ ರೀತಿಯ ಅನ್ಯಾಯವಾದಾಗಲೂ ಅದರ ಬಗೆಗೆ ಪೂರ್ಣ ವಿಚಾರಗಳನ್ನು ಗ್ರಹಿಸಿಕೊಂಡು, ಅಧ್ಯಯನ ನಡೆಸಿ, ಅರ್ಥಪೂರ್ಣ ಹೋರಾಟಗಳನ್ನು ರೂಪಿಸುವುದರಲ್ಲಿ ಜಯದೇವ ಪ್ರಸನ್ನ ಅವರು ನಿಷ್ಣಾತರು.
ಕನ್ನಡದ ಹೋರಾಟ, ಸ್ಥಿತಿಗತಿಗಳ ಬಗೆಗೆ ಅಧಿಕೃತತೆಯನ್ನು, ‘ಇದಂ ಮಿತ್ಥಂ’ ಎಂದು ಹೇಳಬಲ್ಲ ಶಕ್ತಿಯನ್ನು ಮೈಗೂಡಿಸಿಕೊಂಡ ಇವರು ಬಾಲ್ಯದಿಂದಲೇ ಕನ್ನಡ ನಾಡಿನ ಆಗುಹೋಗುಗಳನ್ನು ಗಮನಿಸುತ್ತ ಬಂದವರು.
ತಮ್ಮ ಯುವಾವಸ್ಥೆಯಲ್ಲಿ ಕನ್ನಡದ ಹೋರಾಟದ ಅಖಾಡಕ್ಕೆ ಇಳಿದ ಜಯದೇವ ಪ್ರಸನ್ನ ಅವರ ಸಂಘರ್ಷಮಯ ಬದುಕು ಇಂದಿಗೂ ಪ್ರತಿಯೊಬ್ಬ ಕನ್ನಡಿಗನಿಗೂ ಆದರ್ಶಪ್ರಾಯವಾಗಿದೆ. ತಾವು ಮಾಡುತ್ತಿದ್ದ ಎಲ್‌ಐಸಿ ಉದ್ಯೋಗವನ್ನು ತೊರೆದು ಕರ್ನಾಟಕ ರಕ್ಷಣಾ ವೇದಿಕೆಯ ಮೂಲಕ ಕನ್ನಡದ ಕೈಂಕರ್ಯಕ್ಕೆ ತೊಡಗಿಸಿಕೊಂಡ ಇವರು ಪ್ರತಿಯೊಬ್ಬ ಕನ್ನಡಿಗರನ್ನು ಸಂಘಟಿಸಿ, ಅವರಿಗೆ ಕನ್ನಡದ ದೀಕ್ಷೆ ತೊಡಿಸಿ, ಹೋರಾಟದ ಪಥದಲ್ಲಿ ಮುನ್ನಡೆಸುವಲ್ಲಿ ಮುಂದಾಗಿ ಯಶಸ್ವಿಯೂ ಆದರು. ಕೇವಲ ಹೋರಾಟಗಾರರಾಗಿ ಮಾತ್ರವಲ್ಲ; ಅತ್ಯುತ್ತಮ ಸಂಘಟಕರಾಗಿ, ಉತ್ತಮ ವಾಗ್ಮಿಯಾಗಿಯೂ ಜನಮಾನಸದಲ್ಲಿ ಕನ್ನಡದ ಕಿಚ್ಚು ಹಚ್ಚಿದರು. ಪ್ರತಿಯೊಬ್ಬರು ನಾಡಿನ ಪರವಾಗಿ ಚಿಂತಿಸುವ, ಹೋರಾಟ ನಡೆಸುವ ಮನೋಭೂಮಿಕೆಯನ್ನು ಸಿದ್ದಗೊಳಿಸಿದರು.
ಜಯದೇವ ಪ್ರಸನ್ನ ಅವರ ಈ ಸಾಧನೆ ಕಡಿಮೆಯೇನಲ್ಲ. ಇಂತಹದೊಂದು ಕಾರ್ಯ ಆಗಬೇಕಾದರೆ ಮೊದಲು ನಮ್ಮಲ್ಲಿ ಅಂತಹದೊಂದು ಆತ್ಮವಿಶ್ವಾಸ, ಕತೃತ್ವ ಶಕ್ತಿ, ಬೌದ್ಧಿಕ ಪ್ರೌಢಿಮೆ ಬೇಕು. ಇಂತಹ ಗುಣಗಳು ಇವರಲ್ಲಿದ್ದುದರಿಂದಲೇ ಸಂಘಟನೆ, ಹೋರಾಟ, ಕನ್ನಡದ ದೀಕ್ಷಾ ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸಲು ಸಾಧ್ಯವಾಗಿದೆ.
ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರಾಗಿ, ಮೊತ್ತಮೊದಲ ಜಿಲ್ಲಾಧ್ಯಕ್ಷ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಜಯದೇವ ಪ್ರಸನ್ನ ಅವರು, ತಾವು ಅಧ್ಯಕ್ಷರಾಗಿದ್ದ ಕೋಲಾರ ಜಿಲ್ಲೆಯಲ್ಲಿ ೨೦೦೨ರಲ್ಲಿ ರಾಜ್ಯ ಮಟ್ಟದ ಸಮಾವೇಶವನ್ನು ಆಯೋಜಿಸಿ ಅದನ್ನು ಯಶಸ್ವಿಗೊಳಿಸಿದ ಕೀರ್ತಿಗೂ ಭಾಜನರಾಗಿದ್ದಾರೆ.
ಅಂದಿನ ಕನ್ನಡದ ಸ್ಥಿತಿಗತಿಗಳ ಮೇಲೆ ಬೆಳಕು ಚೆಲ್ಲಿ ಕನ್ನಡಿಗರನ್ನು ಜಾಗೃತಿಗೊಳಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿದ್ದ ಸಮಾವೇಶದಲ್ಲಿ ನಾಡಿನ ಹಿರಿಯ ಸಾಹಿತಿಗಳು, ಚಿಂತಕರು, ಉದ್ಧಾಮ ಪಂಡಿತರು, ಹೋರಾಟಗಾರರು ಪಾಲ್ಗೊಂಡು ಕನ್ನಡವನ್ನು ಕಾಡುತ್ತಿದ್ದ ಅಭಿಮಾನ ಶೂನ್ಯತೆ, ಅನ್ಯ ಭಾಷಿಗರ ವಲಸೆ, ಸಂಸ್ಕೃತಿ ನಾಶ, ಕನ್ನಡದ ಐಕ್ಯತೆಗೆ ಒದಗುತ್ತಿದ್ದ ಧಕ್ಕೆ...ಹೀಗೆ ಹತ್ತು ಹಲವು ವಿಚಾರಗಳ ಬಗ್ಗೆ ಬೆಳಕು ಚೆಲ್ಲಿ ಸ್ವಾಭಿಮಾನಿ ಕನ್ನಡ ನಾಡಿನ ನಿರ್ಮಾಣಕ್ಕಾಗಿ ಕನ್ನಡಿಗರನ್ನು ಹೋರಾಟಕ್ಕೆ ಅಣಿಗೊಳಿಸಲು ಸಮಾವೇಶ ಭೂಮಿಕೆಯಾಯಿತು. ಅದರಲ್ಲೂ ಇಂತಹದೊಂದು ಸಮಾವೇಶವನ್ನು ತಮಿಳು, ತೆಲುಗು ಭಾಷಿಕರೇ ಹೆಚ್ಚಿರುವ ಕೋಲಾರದಲ್ಲಿ ಯಶಸ್ವಿಯನ್ನಾಗಿಸಿ ದುದು ಒಂದು ಐತಿಹಾಸಿಕ ಸಾಧನೆಯೇ ಸರಿ.
ಟಿ.ಎ.ನಾರಾಯಣಗೌಡರು ಕರ್ನಾಟಕ ಜಯದೇವ ಪ್ರಸನ್ನ ಅವರ ಕರ್ತೃತ್ವ ಶಕ್ತಿಯನ್ನು ಗಮನಿಸಿ ಇವರನ್ನು ರಾಜ್ಯ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಿದರು. ಇಂದಿಗೂ ಇದೇ ಜವಾಬ್ದಾರಿಯಲ್ಲಿ ಜಯದೇವ ಪ್ರಸನ್ನ ಅವರು ಮುಂದುವರೆದಿದ್ದಾರೆ.
ಹಿಂದೆ ಕನ್ನಡ ಪರವಾದ ಹೋರಾಟಗಳು ಪ್ರಖರವಾಗಿದ್ದ ಕಾಲ. ಆಗ ಜಯದೇವ ಪ್ರಸನ್ನ ಅವರು ಸ್ವಂತ ಬದುಕನ್ನು ಲೆಕ್ಕಿಸದೇ, ಪ್ರಾಣದ ಹಂಗು ತೊರೆದು ಕನ್ನಡಮ್ಮನ ರಕ್ಷಣೆಗೆ ತೊಡಗಿಸಿಕೊಂಡಿದ್ದರು. ಆಗ ನಡೆದ ಅದೆಷ್ಟೋ ಹೋರಾಟಗಳ ಮುಂಚೂಣಿ ನಾಯಕರಾಗಿ ಪೊಲೀಸರ ಲಾಠಿ ಏಟಿಗೆ ಮೈಯೊಡ್ಡಿ, ೯ ಬಾರಿ ಸೆರೆಮನೆ ವಾಸವನ್ನು ಅನುಭವಿಸಿದರು. ಇದು ಅವರ ಹೋರಾಟಕ್ಕೆ ದೊರೆತ ಬಳುವಳಿ!
ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ನಡೆದ ಕಾವೇರಿ ಹೋರಾಟದಲ್ಲಿ ಸಕ್ರಿಯರಾದ ಜಯದೇವ ಪ್ರಸನ್ನ ಅವರು, ಕಂಠೀರವ ಕ್ರೀಡಾಂಗಣದಲ್ಲಿ ಕಪ್ಪು ಬಾವುಟ ಪ್ರದರ್ಶಿಸಿ ಪೊಲೀಸರ ಲಾಠಿ ಏಟಿಗೂ ಎದೆ ಗುಂದದೆ, ಬಳ್ಳಾರಿ ಜೈಲಿನಲ್ಲಿ ಸೆರೆವಾಸ ಅನುಭವಿಸಿದರು. ಜನಸಾಮಾನ್ಯರಿಗೆ ಮಾರಕವಾಗಿ, ಅವರ ಬದುಕನ್ನು ಮೂರಾಬಟ್ಟೆ ಮಾಡಲು ಹೊರಟ್ಟಿದ್ದ ‘ಪ್ಲೇವಿನ್ ಮಹಾಮಾರಿಯ ವಿರುದ್ಧ ಟಿ.ಎ.ನಾರಾಯಣಗೌಡರ ನಾಯಕತ್ವದಲ್ಲಿ ನಡೆದ ಹೋರಾಟದಲ್ಲಿ ಜಯದೇವ ಪ್ರಸನ್ನ ಅವರು ಮುಂಚೂಣಿಯಲ್ಲಿ ನಿಂತು ಪ್ಲೇವಿನ್ ಮಳಿಗೆಗಳ ಮೇಲೆ ದಾಳಿ ನಡೆಸಿ ಬಂಧಿತರಾದರು. ಸತತ ಹೋರಾಟದ ಫಲವಾಗಿ ಕೊನೆಗೂ ಪ್ಲೇವಿನ್ ರಾಜ್ಯದಿಂದಲೇ ಕಾಲ್ಕಿತ್ತಿತು.
ಇದಕ್ಕಾಗಿ ಪೊಲೀಸರು ಶಹಭಾಸ್‌ಗಿರಿ ನೀಡಿದರು. ಕಾರಣ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಈ ಆಟದಲ್ಲಿ ತೊಡಗಿದ್ದರು! ಆದರೂ ಪ್ಲೇವಿನ್ ಎಂಬ ಸಮಾಜಘಾತಕ ಆಟದ ವಿರುದ್ಧ ಹೋರಾಡಿದ ಇವರನ್ನು ಪೊಲೀಸರೇ ಬಂಧಿಸಿದರು.
ಇಂಥ ವೈರುಧ್ಯಗಳು, ವಿಪರ‍್ಯಾಸಗಳು ಜಯದೇವ ಪ್ರಸನ್ನ ಅವರ ಹೋರಾಟದ ಬದುಕಲ್ಲಿ ಸಾಕಷ್ಟಿವೆ.
ಆಂಧ್ರದ ಹಾಲು ರಾಜ್ಯಕ್ಕೆ ಬರುವುದನ್ನು ವಿರೋಧಿಸಿ ನಡೆಸಿದ ಹೋರಾಟ, ಕಾವೇರಿಗಾಗಿ ನಡೆಸಿದ ೪ ದಿನಗಳ ಅಮರಣಾಂತ ಉಪವಾಸ, ವಿದ್ಯುತ್ ಸಮಸ್ಯೆ ಹೀಗೆ ನಾಡು, ನುಡಿ ಪರವಾದ ಹೋರಾಟಗಳು ಸೇರಿದಂತೆ ಜನಹಿತಕ್ಕೆ ಮಾರಕವಾಗುವ ಹಲವು ವಿಚಾರಗಳ ವಿರುದ್ಧದ ಹೋರಾಟಗಳನ್ನು ನಡೆಸಿರುವ ಜಯದೇವ ಪ್ರಸನ್ನ ಅವರು ದೆಹಲಿಯಲ್ಲಿ ಕಾವೇರಿ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ನಡೆಸಿದ ಹೋರಾಟದಲ್ಲಿ ಟಿ.ಎ.ನಾರಾಯಣಗೌಡರ ನೇತೃತ್ವದಲ್ಲಿ ಪಾಲ್ಗೊಂಡು ಯಶಸ್ವಿಯಾದರು.
ಉಪೇಂದ್ರ ಅಭಿನಯದ ‘ಎಚ್೨ಓ’ ಚಿತ್ರದ ಶೀರ್ಷಿಕೆಯನ್ನು ಬದಲಿಸುವಂತೆ ಒತ್ತಾಯಿಸಿ ಕೋಲಾರದಲ್ಲಿ ಚಿತ್ರದ ಮೊದಲ ಪ್ರಿಂಟ್ ಪ್ರದರ್ಶನ ತಡೆಗೆ ಯತ್ನಿಸಿ ಯಶಸ್ವಿಯೂ ಆದರು. ಹೀಗೆ ರೈಲ್ವೇ ನೇಮಕಾತಿಯಲ್ಲಿ ಕನ್ನಡಿಗರಿಗೆ ಆದ ಅನ್ಯಾಯ, ಹೊಗೇನಕಲ್ ಯೋಜನೆಗೆ ವಿರೋಧ, ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದ ಹೆಸರಿನಲ್ಲಿ ರೈತರ ಭೂಮಿ ಕಸಿಯಲು ಸರ್ಕಾರ ನಡೆಸಿದ ಹುನ್ನಾರದ ವಿರುದ್ಧವೂ ದನಿಯೆತ್ತಿ, ಸತತ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ.
ಇಂದಿನ ಕಾರ್ಯಕರ್ತರಿಗೆ ಮಾದರಿಯಾಗಿ, ಕಿರಿಯರಿಗೆ ಅಣ್ಣನಾಗಿ, ಹಿರಿಯರಿಗೆ ನೆಚ್ಚಿನ ಬಂಟನಾಗಿ, ಕನ್ನಡ ವಿರೋಧಿಗಳಿಗೆ ಸಿಂಹಸ್ವಪ್ನರಾಗಿ ತಮ್ಮ ಬದುಕನ್ನು ಹೋರಾಟಕ್ಕೆ ಸಮರ್ಪಿಸಿಕೊಂಡಿರುವ ಇಂತಹ ಕಲಿಗಳ ಬದುಕು ನಿಜಕ್ಕೂ ಸಾರ್ಥಕವಾದುದು.

ಸಿ.ಬಿ.ಎಸ್.ಇ ಪದ್ದತಿ ಬೇರು ಸಡಿಲಿಸೋ ಬಗೆ





ಘನ ಕರ್ನಾಟಕ ರಾಜ್ಯಸರ್ಕಾರ, ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ನಗರ ಪಾಲಿಕೆಗಳಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಸಿ.ಬಿ.ಎಸ್.ಇ ಶಿಕ್ಷಣ ಪದ್ದತಿಯ ಬೋಧನೆಯನ್ನು (ಪ್ರಾಯೋಗಿಕವಾಗಿ?) ಆರಂಭಿಸಲು ಮನಸ್ಸು ಮಾಡಿದೆ ಅನ್ನೋ ಸುದ್ದಿ ಇತ್ತೀಚಿಗೆ ಹೊರಬಿದ್ದಿತ್ತು. ಇದು ಕರ್ನಾಟಕ ರಾಜ್ಯಸರ್ಕಾರವು ನಾಡಿನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ವ್ಯವಸ್ಥೆಯನ್ನು ರೂಪಿಸುವ ತನ್ನ ಮೂಲಭೂತ ಹೊಣೆಗಾರಿಕೆಯಿಂದ ನುಣುಚಿಕೊಳ್ಳೋ ನಡೆಯಾಗಿದೆ ಎಂತಲೂ, ಈ ಕಲಿಕಾ ವ್ಯವಸ್ಥೆಯಿಂದಾಗಿ ನಮ್ಮ ನಾಡಿನ ಮಕ್ಕಳು ತಮ್ಮ ನುಡಿಯಿಂದಲೇ ದೂರಾಗಿ, ಅವರ ಸಂಸ್ಕೃತಿ, ಪರಂಪರೆ ಹಾಗೂ ಇತಿಹಾಸದ ಬೇರುಗಳು ಸಡಿಲವಾಗುತ್ತದೆಯೆಂಬುದಾಗಿಯೂ, ಆ ಕಾರಣದಿಂದಾಗಿಯೇ ಈ ನಿರ್ಧಾರವನ್ನು ಬದಲಿಸಬೇಕೆಂದೂ ಸಂಬಂಧಪಟ್ಟವರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನವನ್ನು ಮಾಡಲಾಗಿತ್ತು. ಸಿ.ಬಿ.ಎಸ್.ಇ ಪದ್ದತಿಯನ್ನು ಪ್ರಾಥಮಿಕ ಶಾಲೆಯ ಹಂತದಲ್ಲಿ ಜಾರಿಗೆ ತರೋ ಉದ್ದೇಶ ಸರ್ಕಾರಕ್ಕೆ ಇರುವುದರಿಂದಾಗಿ, ಪ್ರಾಥಮಿಕ ಹಂತದ ಅಂದರೆ ಒಂದರಿಂದ ಏಳನೇ ತರಗತಿಯ ಹಂತದವರೆಗಿನ ಸಿ.ಬಿ.ಎಸ್.ಇ ಪದ್ದತಿಯ ಕಲಿಕೆಯಲ್ಲಿ ಯಾವುದು ತೊಡಕಿನದ್ದು ಅನ್ನುವುದರತ್ತ ಕೊಂಚ ಗಮನ ಸೆಳೆಯುವ ಪ್ರಯತ್ನ ನಮ್ಮದು.
ಅಧಿಕೃತ ಪಠ್ಯಪುಸ್ತಕ ಮತ್ತು ಸಿ.ಬಿ.ಎಸ್.ಇ
ಮೊದಲನೇ ತರಗತಿಯಿಂದ ಏಳನೇ ತರಗತಿಯವರೆಗಿನ ಪಠ್ಯಪುಸ್ತಕಗಳಲ್ಲಿ ಎನ್.ಸಿ.ಇ.ಆರ್.ಟಿಯ ಮಾರ್ಗಸೂಚಿ ನಿಯಮಗಳಂತೆ ಸಿದ್ಧಪಡಿಸಲಾಗಿದೆ ಎನ್ನುವ ಒಕ್ಕಣೆ ಪುಸ್ತಕದ ರಕ್ಷಾಪುಟದಲ್ಲೇ ಅಚ್ಚು ಹಾಕಿರುತ್ತಾರೆ. ಈ ಪಠ್ಯಪುಸ್ತಕಗಳ ಪ್ರಕಾಶಕರು ಖಾಸಗಿ ಮಂದಿ. ಇದನ್ನು ಅಧಿಕೃತ ಪಠ್ಯಪುಸ್ತಕವೆಂದು ಎಲ್ಲೂ ಹೇಳಿರುವುದಿಲ್ಲ. ಆಯಾ ಶಾಲೆಯವರು ಬೇಕಾದ ಪ್ರಕಾಶಕರ ಪುಸ್ತಕಗಳನ್ನು ಅಳವಡಿಸಿಕೊಳ್ಳಲು ಸ್ವತಂತ್ರರು. ಅಂದರೆ ಇಡೀ ದೇಶಾದ್ಯಂತ ಒಂದೇ ಪಠ್ಯಪುಸ್ತಕವಿರುವುದಿಲ್ಲ. ಸಾಮಾನ್ಯವಾಗಿ ಈ ಪಠ್ಯಕ್ರಮದ ಯಾವ ಪುಸ್ತಕವೂ ೧೨೫ ರೂಪಾಯಿಗಿಂತ ಕಮ್ಮಿ ಬೆಲೆ ಹೊಂದಿಲ್ಲ. ಏಳನೆ ತರಗತಿಯ ಪುಸ್ತಕದ ಬೆಲೆ ೨೨೫ ರೂ ಅಂದರೆ ಅಚ್ಚರಿಯಾಗುತ್ತದೆ. ಹಾಗಂತಾ ಪುಸ್ತಕವೇನು ಅಷ್ಟೊಂದು ದೊಡ್ಡದ್ದೂ ಅಲ್ಲ, ಬರೀ ೨೬೦ ಪುಟದ್ದು. ಒಂದೊಂದು ತರಗತಿಯ ಎಲ್ಲಾ ಪುಸ್ತಕಗಳನ್ನು ಕೊಳ್ಳಬೇಕೆಂದರೆ ಕಮ್ಮಿ ಎಂದರೂ ಅಂದಾಜು ೧೫೦೦ ರೂಪಾಯಿ ಆಗುತ್ತದೆ. ಸರ್ಕಾರ ಈ ಖರ್ಚನ್ನೂ ಭರಿಸುವ ಉದ್ದೇಶ ಇಟ್ಟುಕೊಂಡಿದೆಯೋ ಏನೋ ಕಾಣೆವು! ಒಂದೊಂದು ವಿಷಯಕ್ಕೆ ಒಂದೊಂದು ಪ್ರಕಾಶನ ಸಂಸ್ಥೆ ಖ್ಯಾತಿ ಹೊಂದಿದೆ. ಹಾಗೆ ಸಿ.ಬಿ.ಎಸ್.ಇ ಪ್ರಾಥಮಿಕ ಶಿಕ್ಷಣದ ಸಮಾಜ ವಿಜ್ಞಾನದ ಪಠ್ಯಪುಸ್ತಕದ ವಿಷಯಕ್ಕೆ ಬಂದಾಗ ಹೈದರಾಬಾದ್ ಮೂಲದ ಓರಿಯೆಂಟ್ ಬ್ಲಾಕ್ ಸ್ವಾನ್ ಪ್ರಕಾಶಕರದ್ದು ಮುಂಚೂಣಿಯಲ್ಲಿರೋ ಪುಸ್ತಕ. ಇಲ್ಲಿ ಎನ್.ಸಿ.ಇ.ಆರ್.ಟಿ ಮಾನದಂಡಕ್ಕೆ ಇದು ಒಳಪಡುತ್ತಿದ್ದು, ಬೆಂಗಳೂರಿನ (ಕರ್ನಾಟಕದ?) ಶಾಲೆಗಳು ವ್ಯಾಪಕವಾಗಿ ಇದನ್ನೇ ಕೊಳ್ಳಲು ಶಿಫಾರಸ್ಸು ಮಾಡುವುದರಿಂದಾಗಿ ಆ ಪುಸ್ತಕಗಳೊಳಗೇನಿದೆ ಎಂಬುದನ್ನು ಸ್ವಲ್ಪ ನೋಡೋಣ. ಇದಲ್ಲದೆ ರತ್ನಸಾಗರ , ಗೋಯಲ್ ಬ್ರದರ್ಸ್ ಅನ್ನೋ ಪ್ರಕಾಶನದ ಪುಸ್ತಕಗಳೂ ಇದ್ದು ಒಳಗೇನಿದೆ ನೋಡೋಣ, ಬನ್ನಿ.
ಸಮಾಜದ ಪರಿಕಲ್ಪನೆ ಮತ್ತು ಮಕ್ಕಳಿಗೆ
ಕಲಿಸುವಿಕೆಯ ವಿಧಾನ!
ಸಮಾಜದ ಪರಿಕಲ್ಪನೆಯನ್ನು ಮಕ್ಕಳಿಗೆ ಕಲಿಸುವ ಪಾಠಗಳಲ್ಲಿ ನಮ್ಮ ಪರಿಸರದ ಕುಟುಂಬಗಳ ಬಗ್ಗೆ ಪರಿಚಯ ಮಾಡಿಕೊಡಬೇಕಾಗುತ್ತದೆ. ಯಾವುದೇ ಕಲಿಕೆಯನ್ನು ಮಗುವಿನ ಅನುಭವಕ್ಕೆ ದೊರೆಯುವ ವಸ್ತು, ಮಾತು, ಭಾವನೆಗಳ ಆಧಾರದಲ್ಲಿ ಕಲಿಸುವುದು ಸರಿಯಾದ ವಿಧಾನ. ಆದರೆ ನಮ್ಮ ಮಕ್ಕಳಿಗೆ ಇಲ್ಲಿ ಮಿಸ್ಟರ್ ಶರ್ಮಾ, ಮಿಸೆಸ್ ಶರ್ಮಾ ಅನ್ನುವ ಕಲಿಕೆಯಿದೆ. ಕರ್ನಾಟಕದ ಬಹುಪಾಲು ಮಕ್ಕಳು ಕಂಡೇ ಇರದ ಸಿಖ್ಖರ ಕುಟುಂಬದ ಚಿತ್ರಗಳನ್ನು ಬಳಸಲಾಗಿದೆ. ಮದುವೆ ಎನ್ನುವುದರ ಚಿತ್ರದಲ್ಲಿ ಗಂಡು ಹೆಣ್ಣು ಧರಿಸಿರೋ ವೇಷ ನಮ್ಮ ಸಮಾಜದಲ್ಲಿ ಇಲ್ಲದ್ದು. ದೇವಸ್ಥಾನದ ಚಿತ್ರ, ಶಾಲೆಯ ಚಿತ್ರ, ಮದುವೆಯ ಚಿತ್ರ, ಮಾರುಕಟ್ಟೆ ಚಿತ್ರ... ಊಹೂಂ, ಇದರಲ್ಲಿ ಯಾವುದರಲ್ಲೂ ನಮ್ಮೂರಿನ ದೃಶ್ಯಗಳ ಚಿತ್ರಣ ಇಲ್ಲ. ನಮ್ಮ ದೇಶದ ಹಬ್ಬಗಳು ಎನ್ನುವುದನ್ನು ಪರಿಚಯಿಸುವಾಗ ಹೋಲಿ, ದಿವಾಲಿ, ದಶ್ಶೇರಾ ಮೊದಲಾದ ಹೆಸರುಗಳಿವೆ. ಹೆಚ್ಚಿನ ಕನ್ನಡಿಗರು ಹೆಸರೇ ಕೇಳಿರದ ಬಿಹು, ಗುರುಪರ್ವ್ ಅನ್ನೋ ಹಬ್ಬಗಳ ಪರಿಚಯ ಇದೆ. ನಮ್ಮ ಮನೆಗಳಲ್ಲಿ ಆಚರಿಸುವ ಸಂಕ್ರಾಂತಿ, ಯುಗಾದಿ, ಗಣಪತಿ ಹಬ್ಬ, ದೀಪಾವಳಿಗಳ ಪ್ರಸ್ತಾಪವೇ ಇಲ್ಲ. ಇದು ಮಕ್ಕಳ ಮನಸ್ಸಲ್ಲಿ ಯಾವ ಪರಿಣಾಮ ಉಂಟುಮಾಡೀತು? ನಮ್ಮ ಆಚರಣೆಗಳು ಭಾರತದ ಹಬ್ಬಗಳ ಪಟ್ಟಿಯಲ್ಲಿ ಸೇರಲು ಯೋಗ್ಯವಲ್ಲದ್ದು ಎಂತಲೇ? ಇನ್ನು ನಮ್ಮ ವಾತಾವರಣದ ಬಗ್ಗೆ ಬರೆಯುವಾಗ ಚಳಿಗಾಲದಲ್ಲಿ ಮನೆಗಳಲ್ಲಿ ಬೆಂಕಿ ಕಾಯಿಸಿಕೊಳ್ಳುತ್ತೇವೆ ಎಂದಿದೆ. ಹೌದಾ? ಅಂತಾ ಮಕ್ಕಳು ಕೇಳಿದರೆ ಅಚ್ಚರಿಯಿಲ್ಲ. ಭಾರತದ ವಿವಿಧ ನಗರಗಳ/ ರಾಜ್ಯಗಳ ಪರಿಚಯ ನೀಡುವ ಒಂದು ಪಾಠದಲ್ಲಿ ಬೆಂಗಳೂರಿನಲ್ಲಿ ಆಡುವ ಭಾಷೆ ಕನ್ನಡ ಮತ್ತು ಕೊಂಕಣಿ ಎಂದು ಬರೆಯಲಾಗಿದೆ. ಕರ್ನಾಟಕದ ಜನರ ಉಡುಗೆ ಎಂದರೆ ಸೀರೆ ಮತ್ತು ಪಂಚೆ ಎಂದು ಬರೆಯಲಾಗಿದೆ. ಇದ್ಯಾವ ಸೀಮೆಯ ಪರಿಚಯ? ನಮ್ಮ ಮಕ್ಕಳಿಗೆ ನಮ್ಮ ಕಣ್ಣೆದುರು ಇರುವುದನ್ನೇ ತಪ್ಪು ತಪ್ಪಾಗಿ ಪರಿಚಯಿಸುವ ಈ ಕ್ರಮದಿಂದ ಮಕ್ಕಳಿಗೆ, ತಾವು ಕಲಿಯುತ್ತಿರುವುದು ತಪ್ಪೆಂದು ತಿಳಿದರೂ ಹಾಗೇ ಓದಬೇಕಾದ, ಕಲಿಯಬೇಕಾದ, ಬರೆಯಬೇಕಾದ ಅನಿವಾರ್ಯತೆ ಹುಟ್ಟುವುದಿಲ್ಲವೇ?
ಭಾರತದ ಇತಿಹಾಸದಲ್ಲಿ ಕರ್ನಾಟಕ!
ನಂಬಿ, ಏಳನೇ ತರಗತಿಯವರೆಗೆ ಸಿ.ಬಿ.ಎಸ್.ಇ ಕಲಿಕೆಯಲ್ಲಿ ನಮ್ಮ ಮಕ್ಕಳು ಕನ್ನಡದ ಇತಿಹಾಸ ಎಂದು ಓದುವುದು ಅಬ್ಬಬ್ಬಾ ಎಂದರೆ ಎರಡು ಮೂರು ಪುಟಗಳಷ್ಟು ಮಾತ್ರಾ! ನಮ್ಮ ರಾಜ ಮನೆತನಗಳಲ್ಲಿ ಕೇಳುವ ಎರಡು ಹೆಸರುಗಳು ಚಾಲುಕ್ಯ ಮತ್ತು ವಿಜಯನಗರ ಮಾತ್ರಾ. ರಾಜರೆಂದರೆ ಪುಲಿಕೇಶಿನ್ (ಪುಲಿಕೇಶಿ ಅಲ್ಲಾ!) ಮತ್ತು ಕೃಷ್ಣದೇವರಾಯನೆಂಬ ಎರಡು ಹೆಸರು ಮಾತ್ರಾ! ವೀರ ಮಹಿಳೆ ಎಂದರೆ ಝಾನ್ಸಿರಾಣಿ ಲಕ್ಷ್ಮಿಬಾಯಿ. ಈ ವೀರಮಹಿಳೆಯರ ಸಾಲಿನಲ್ಲಿ ಚೆನ್ನಮ್ಮನ್ನೂ ಇಲ್ಲಾ, ಓಬವ್ವನೂ ಇಲ್ಲಾ, ಅಬ್ಬಕ್ಕನೂ ಇಲ್ಲಾ. ಉತ್ತರಾಪಥೇಶ್ವರ ಹರ್ಷವರ್ಧನನ ಬಗ್ಗೆ ಪುಟಗಟ್ಟಲೆ ಪಾಠವಿದೆ. ಅವನ ಆಡಳಿತದಲ್ಲಿ ಸಾಮಾಜಿಕ ವ್ಯವಸ್ಥೆ ಹೇಗಿತ್ತು? ಅದೂ ಇದೂ ಅಂತೆಲ್ಲಾ ಬರೆಯಲಾಗಿದೆ. ಆದರೆ ಅವನನ್ನು ಮಣ್ಣುಮುಕ್ಕಿಸಿ ದಕ್ಷಿಣಾಪಥೇಶ್ವರನಾಗಿದ್ದ ಇಮ್ಮಡಿ ಪುಲಿಕೇಶಿ ಪರಮೇಶ್ವರನಾದದ್ದು ಇಲ್ಲಿಲ್ಲ. ಗಂಗರ, ಕದಂಬರ, ರಾಷ್ಟ್ರಕೂಟರ ಪ್ರಸ್ತಾಪವೇ ಇಲ್ಲ. ಇಡೀ ಭಾರತದಲ್ಲಿ ಸಾವಿರ ವರ್ಷಕ್ಕಿಂತಲೂ ದೀರ್ಘಕಾಲ ಅವಿಚ್ಛಿನ್ನವಾಗಿ ಸಾಮ್ರಾಜ್ಯ ನಡೆಸಿದ ಕನ್ನಡಿಗರ ಬಗ್ಗೆ ಏನೂ ಇಲ್ಲಾ! ಇತಿಹಾಸವನ್ನು ತಿಳಿದವನು ಇತಿಹಾಸ ಬರೆಯಬಲ್ಲ ಎಂಬಾಶಯವನ್ನೇ ನಂಬುವುದಾದರೆ ನಮ್ಮ ಮಕ್ಕಳನ್ನು ಕನ್ನಡ ನಾಡಿನ ಇತಿಹಾಸದಿಂದಲೇ ದೂರಮಾಡುವ ಶಿಕ್ಷಣ ಪದ್ದತಿಗೆ ನಮ್ಮ ಸರ್ಕಾರವೇ ಮಣೆ ಹಾಕುವುದು ಸರಿಯೇ? ಈಗಾಗಲೇ ಕರ್ನಾಟಕದ ಏಕೀಕರಣ ಹೋರಾಟದ ತ್ಯಾಗ ಬಲಿದಾನಗಳ ಇತಿಹಾಸವನ್ನು ನಮ್ಮ ಮಕ್ಕಳಿಂದ ಮರೆ ಮಾಡಲಾಗಿದೆ. ಇನ್ನು ಸಿ.ಬಿ.ಎಸ್.ಇ ಕಲಿಕಾ ಪದ್ದತಿಗೆ ಮೊರೆ ಹೋದರೆ ನಾಳೆ ಎಂತಹ ಪೀಳಿಗೆಯನ್ನು ಸಿದ್ಧಪಡಿಸುತ್ತೇವೆಯೋ, ಆ ರಾಜರಾಜೇಶ್ವರಿಯೇ ಬಲ್ಲಳು. ಒಟ್ಟಾರೆ ನಮ್ಮತನವನ್ನೇ ಕಡೆಗಣಿಸುವ, ಕರ್ನಾಟಕದ ಇತಿಹಾಸಕ್ಕೆ ಎಳ್ಳುಮೊನೆಯಷ್ಟು ಮಾತ್ರವೇ ಮಾನ್ಯತೆಯಿರುವ ಸಿ.ಬಿ.ಎಸ್.ಇ ಕಲಿಕೆಗೆ ಸರ್ಕಾರ ಮುಂದಾಗದಿರಲಿ.
ಸಿ.ಬಿ.ಎಸ್.ಇ ಕಲಿಕಾ ಪದ್ದತಿ
ಇದರ ಮೂಲೋದ್ದೇಶದಲ್ಲಿ ಸ್ಪಷ್ಟವಾಗಿ ತಿಳಿಸಿರುವಂತೆ, ಇಡೀ ಕಲಿಕಾ ವ್ಯವಸ್ಥೆಯನ್ನು ವಲಸಿಗ/ ವರ್ಗಾವಣೆಗೆ ಈಡಾಗಬಲ್ಲ ಕೇಂದ್ರಸರ್ಕಾರಿ ನೌಕರರ ಮಕ್ಕಳಿಗಾಗಿ ರೂಪಿಸಲಾಗಿದೆ. ಈ ಪದ್ದತಿಯ ಕಲಿಕೆಯಲ್ಲಿ ಹಾಗಾಗಿಯೇ ಭೌಗೋಳಿಕ ಹರವು ಹೆಚ್ಚು, ನಮ್ಮತನದ ಅರಿವು ಕಮ್ಮಿ. ನಮ್ಮ ನಿನ್ನೆಗಳ ಜೊತೆ, ನಮ್ಮತನದ ಜೊತೆ ಆಳವಾದ ಜೋಡಣೆಯೇ ಇಲ್ಲಿ ಮಾಯ. ಭಾರತವೆನ್ನುವ ವಿಶಾಲ ಭೂ ಪ್ರದೇಶದ ಸಾವಿರಾರು ವರ್ಷಗಳ ಕಥನವನ್ನು ಸಮಗ್ರವಾಗಿ ಹೇಳಿಬಿಡಬೇಕೆನ್ನುವ ದುಡುಕುತನ ಸಮಾಜ ವಿಜ್ಞಾನದ ಪಠ್ಯಗಳಲ್ಲಿ ಎದ್ದು ಕಾಣುತ್ತದೆ. ಆದ್ರೆ ಕರ್ನಾಟಕದ ಮಕ್ಕಳನ್ನು ಕರ್ನಾಟಕದ ಸಂಸ್ಕೃತಿಯ ಪರಿಚಯದಿಂದಲೇ ವಂಚಿಸಲಾಗುತ್ತದೆ.
ಕರ್ನಾಟಕ ರಾಜ್ಯ ಶಿಕ್ಷಣ ಮಂತ್ರಿಗಳಾದ ಮಾನ್ಯ ಶ್ರೀ ವಿಶ್ವೇಶ್ವರಹೆಗ್ಡೆ ಕಾಗೇರಿಯವರೂ, ನಗರಾಭಿವೃದ್ಧಿ ಸಚಿವರಾದ ಶ್ರೀ ಸುರೇಶ್ ಕುಮಾರ್ ಅವರೂ ಈ ವಿಷಯದಲ್ಲಿ ದುಡುಕದೆ ಘನ ಕರ್ನಾಟಕ ಸರ್ಕಾರದ ಮಹಾನಗರ ಪಾಲಿಕೆ ಶಾಲೆಗಳಲ್ಲಿ ಸಿ.ಬಿ.ಎಸ್.ಇ ಕಲಿಕಾ ಪದ್ದತಿ ಎನ್ನುವ ನಿಲುವನ್ನು ಕೈಬಿಡಲಿ!
ರಾಜ್ಯದಲ್ಲಿ ಅಃSಇ ಶಾಲೆಗಳಿಗೆ ಅನುಮತಿ:
ಹೇಗೆಂದು ಬಲ್ಲಿರಾ?
ಬೆಂಗಳೂರೂ ಸೇರಿದಂತೆ ಮಹಾನಗರ ಪಾಲಿಕೆ ವ್ಯಾಪ್ತಿಯ ಶಾಲೆಗಳಲ್ಲಿ, ಸಿ.ಬಿ.ಎಸ್.ಇ ಪದ್ದತಿಯನ್ನು ಖಾಸಗಿ ಸಹಭಾಗಿತ್ವದಲ್ಲಿ ಅಳವಡಿಸಲು ಕರ್ನಾಟಕ ರಾಜ್ಯಸರ್ಕಾರವು ಗಟ್ಟಿ ಮನಸ್ಸು ಮಾಡಿದ ಹಾಗಿದೆ. ಆದರೆ ಹೀಗೆ ಪಾಲಿಕೆಯ ಶಾಲೆಯನ್ನು ಭಾರತೀಯ ವಿದ್ಯಾಭವನಕ್ಕೆ ಕೇಂದ್ರೀಯ ಪಠ್ಯಕ್ರಮದಲ್ಲಿ ಕಲಿಸಲು ಒಪ್ಪಿಸಲು ಸರ್ಕಾರದ ನೀತಿನಿಯಮಗಳ ರೀತ್ಯಾ ಅವಕಾಶ ಇದೆಯೇ? ಅಂತಾ ನೋಡಿದರೆ ಕುತೂಹಲಕಾರಿ ವಿಷಯಗಳು ಕಾಣುತ್ತಿವೆ!
ಮಾನ್ಯತೆ ನೀಡಲು ಸಿ.ಬಿ.ಎಸ್.ಇ ಬೋರ್ಡು
ವಿಧಿಸಿರೋ ಕರಾರು...
ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ (ಸಿ.ಬಿ.ಎಸ್.ಇ) ತನ್ನ ಪಠ್ಯಕ್ರಮವನ್ನು ಅನುಸರಿಸಲು ಸಿದ್ಧವಾಗಿರೋ ವಿದ್ಯಾಸಂಸ್ಥೆಗಳಿಗೆ ಆಯಾ ರಾಜ್ಯಸರ್ಕಾರದಿಂದ ನಿರಪೇಕ್ಷಣಾ ಪತ್ರ (ಓ.ಔ.ಅ) ಸಲ್ಲಿಸಬೇಕು ಅನ್ನುವ ನಿಯಮವನ್ನು ಹೊಂದಿದೆ. ಖಾಸಗಿ, ಅನುದಾನಿತ, ಸರ್ಕಾರಿ ಯಾವುದೇ ಶಾಲೆಯಿದ್ದರೂ ಸರ್ಕಾರದ ಅನುಮತಿಯಿಲ್ಲದೆಯೇ ಮಾನ್ಯತೆಯನ್ನು ನೀಡುವಂತೆಯೇ ಇಲ್ಲ.
ನಿರಪೇಕ್ಷಣಾ ಪತ್ರ ಕೊಡಲು ಇರುವ ನಿಯಮಾ...
ಕರ್ನಾಟಕ ಸರ್ಕಾರವೂ ಕೂಡಾ ಸಿ.ಬಿ.ಎಸ್.ಇ ಶಾಲೆಗಳಿಗೆ ನಿರಪೇಕ್ಷಣಾ ಪತ್ರ ಕೊಡಲು ಅನುಸರಿಸಬೇಕಾದ ಒಂದು ನಿಯಮವನ್ನು ೧೯೮೯ರಲ್ಲೇ ಮಾಡಿದೆ. ಆ ನಿಯಮಕ್ಕೆ ಆಗಿಂದಾಗ್ಗೆ ತಿದ್ದುಪಡಿಗಳನ್ನೂ ಮಾಡಿಕೊಂಡು ಬಂದಿದೆ. ಈ ನಿಯಮದಲ್ಲಿರೋ ಪ್ರಮುಖವಾದ ಅಂಶಗಳು ಹೀಗಿವೆ.
ಒಂದರಿಂದ ಐದನೇ ತರಗತಿಯವರೆಗೆ ಕಡ್ಡಾಯವಾಗಿ ಮಾತೃಭಾಷೆ ಅಥವಾ ಕನ್ನಡ ಮಾಧ್ಯಮವನ್ನು ಹೊಂದಿರತಕ್ಕದ್ದು.
ರಾಜ್ಯದಿಂದ ರಾಜ್ಯಕ್ಕೆ ವರ್ಗಾವಣೆಗೆ ಬದ್ಧರಾದ ಅಖಿಲ ಭಾರತ ಸೇವೆ, ಕೇಂದ್ರ ಸರ್ಕಾರದ ಸೇವೆ ಮತ್ತು ಕೇಂದ್ರಸರ್ಕಾರದ ಉದ್ದಿಮೆಗಳಿಗೆ ಸೇರಿದ ಪೋಷಕರ ಮಕ್ಕಳಿದ್ದಲ್ಲಿ (ಇದನ್ನು ಪುಷ್ಟೀಕರಿಸಲು ಸಂಬಂಧಪಟ್ಟ ಇಲಾಖೆ/ ಸಂಸ್ಥೆಗಳಿಂದ ಧೃಡೀಕರಣ ಪತ್ರ ಸಲ್ಲಿಸುವುದು)
ಒಂದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಶಾಖೆಗಳನ್ನು ಹೊಂದಿದ ಹಾಗೂ ಅಂತರ ರಾಜ್ಯ ವರ್ಗಾವಣೆಗೆ ಒಳಪಡುವ ಬ್ಯಾಂಕ್‌ಗಳು, ಸಂಸ್ಥೆಗಳು (ಫರ್ಮುಗಳು) ಅಥವಾ ವಾಣಿಜ್ಯ ಸಂಸ್ಥೆಗಳಲ್ಲಿ ಕೆಲಸ ಮಾಡುವ ಪೋಷಕರ ಮಕ್ಕಳಿದ್ದಲ್ಲಿ (ಇದನ್ನು ಪುಷ್ಟೀಕರಿಸಲು ಸಂಬಂಧಪಟ್ಟ ಬ್ಯಾಂಕ್/ ಸಂಸ್ಥೆಗಳಿಂದ ಧೃಡೀಕರಣ ಪತ್ರ ಸಲ್ಲಿಸುವುದು)
ಸರ್ಕಾರವು ಕಾಲಕಾಲಕ್ಕೆ ಹೊರಡಿಸಿರುವ ಸೂಚನೆಗಳನ್ನು ಪಾಲಿಸಿರಬೇಕು/ ಪಾಲಿಸಬೇಕು.
ಇದಕ್ಕೆ ೨೦೦೨ರಲ್ಲಿ ತಿದ್ದುಪಡಿ ಮಾಡಿ, ಕರ್ನಾಟಕ ರಾಜ್ಯಸರ್ಕಾರದ ಭಾಷಾನೀತಿಯನ್ನು ಕಾಲಕಾಲಕ್ಕೆ ನಿಗದಿಪಡಿಸಿದಂತೆ ಪಾಲಿಸತಕ್ಕದ್ದು ಎಂದೂ ಸೇರಿಸಿದ್ದಾರೆ.
ಸರ್ಕಾರದ ನಿಲುವು ಸರಿಯೇ?
ಮುಂದಿನ ಹೆಜ್ಜೆ ಇಡುವ ಮೊದಲು ಘನ ಕರ್ನಾಟಕ ಸರ್ಕಾರ ಒಂದು ಸಲ ತಾನೇ ವಿಧಿಸಿರೋ ಈ ಎಲ್ಲಾ ನಿಯಮಗಳನ್ನು ಅನುಸರಿಸಲಾಗಿದೆಯೇ ಎಂದು ನೋಡಲಿ.
ಈಗ ನಗರಪಾಲಿಕೆಯೋರು ಭಾರತೀಯ ವಿದ್ಯಾಭವನಕ್ಕೆ ಒಪ್ಪಿಸಲು ಮುಂದಾಗಿರುವ ಶಾಲೆಯಲ್ಲಿ ಕೇಂದ್ರಸರ್ಕಾರಿ ನೌಕರರ ಮಕ್ಕಳು, ವರ್ಗಾವಣೆಗೆ ಈಡಾಗಬಲ್ಲ ಮಕ್ಕಳು ಇರುವುದರ ಬಗ್ಗೆ ಖಚಿತ ಪಡಿಸಿಕೊಳ್ಳಲಾಗಿದೆಯೇ? ರಾಜ್ಯ ಸರ್ಕಾರ, ತಾನೇ ವಿಧಿಸಿರುವ ಭಾಷಾನೀತಿ ಬಗೆಗಿನ ನಿಯಮಾನ ಉಲ್ಲಂಘನೆ ಮಾಡ್ತಾ ಇದೆಯೇ? ಅಷ್ಟೇ ಏಕೆ? ಇದುವರೆಗೂ ನಮ್ಮ ರಾಜ್ಯದಲ್ಲಿ ಗಲ್ಲಿಗೊಂದರಂತೆ ನಡೀತಾ ಇರೋ ಸಿ.ಬಿ.ಎಸ್.ಇ ಶಾಲೆಗಳಲ್ಲೆಲ್ಲಾ ಒಂದರಿಂದ ಐದನೇ ತರಗತಿಯವರೆಗೆ ಮಾತೃಭಾಷೆಯಲ್ಲಿ/ ಕನ್ನಡದಲ್ಲಿ ಕಲಿಸುತ್ತಾ ಇದ್ದಾರೆಯೇ? ಅನ್ನೋದನ್ನೆಲ್ಲಾ ನೋಡಲಿ. ಇಲ್ಲದಿದ್ದಲ್ಲಿ ಜನರಿಗೆ ಹುಟ್ಟುವ ಅನುಮಾನಗಳೇ ಬೇರೆ. ಸರ್ಕಾರಕ್ಕೇ ತನ್ನ ನೀತಿಗಳ ಬಗ್ಗೆ ಬೆಲೆಯಿಲ್ಲ, ಬರೀ ಕಣ್ಣೊರೆಸುವ ನಾಟಕವಾಡುತ್ತಿದೆ ಎಂದು ಜನತೆ ಸರ್ಕಾರದ ಮೇಲಿನ ಭರವಸೆಯನ್ನೇ ಕಳೆದುಕೊಂಡಾರು.

ಆನಂದ್
ಬನವಾಸಿ ಬಳಗ

ಡಾ.ಬಸವಲಿಂಗ ಪಟ್ಟದೇವರು ಸಾರ್ಥಕ ೨೫ ವರ್ಷಗಳ ಜಂಗಮ ಸೇವೆ





ವಿಶ್ವಾರಾಧ್ಯ ಸತ್ಯಂಪೇಟೆ

ಬಸವಾದಿ ಶರಣರ ವಚನಗಳನ್ನು ಓದುತ್ತ ಓದುತ್ತ ಹೋಗುತ್ತಿರುವಂತೆ ಅದೇಕೋ ನನಗೆ ಅರಿವಿಲ್ಲದೆ ಸಮಾಜದಲ್ಲಿನ ಹಲವಾರು ಮುಖವಾಡಗಳು ಸ್ಪಷ್ಟವಾಗಿ ಕಾಣಲಾರಂಭಿಸಿದವು. ಅದುವರೆಗೆ ಕತ್ತಲೆಯ ಸಾಮ್ರಾಜ್ಯವೆ ನಿಜವಾದ ಸಾಮ್ರಾಜ್ಯ ಎಂದು ನಂಬಿಕೊಂಡು ಬಂದಿದ್ದ ನನ್ನ ನಂಬಿಕೆಗಳೆಲ್ಲ ಗಾಳಿಗೆ ಓಡುವ ತರಗಲೆಗಳಂತೆ ದಿಕ್ಕಾಪಾಲಾದವು. ಯಾವುದೆ ವ್ಯಕ್ತಿ/ಸಂಗತಿಯಾದರೂ ಮೇಲ್ನೋಟಕ್ಕೆ ಕಂಡದ್ದೆ ಸತ್ಯವಾಗಿರಲಾರದು. ಅದನ್ನು ಪರೀಕ್ಷಿಸದೆ ಒಪ್ಪಿಕೊಳ್ಳಬಾರದು ಎಂಬ ನನ್ನ ತಂದೆಯವರ ಲಿಂಗಣ್ಣ ಸತ್ಯಂಪೇಟೆ ಧೋರಣೆಯೂ ನನ್ನ ಮೇಲೆ ಅಚ್ಚಳಿಯದ ಪ್ರಭಾವ ಬೀರಿದೆ.
ಇದೆಲ್ಲದರಿಂದ ಹಾಗೂ ಇಂದಿನ ಸಮಾಜದಲ್ಲಿರುವ ಬಹುತೇಕ ಸ್ವಾಮಿಗಳ ನಡವಳಿಕೆಗಳು, ಅವರು ಆಡುತ್ತಿರುವ ಮಾತುಗಳು ಮುಂತಾದವನ್ನು ಗಮನಿಸಿ ನನಗೆ ಅರಿವಿಲ್ಲದೆ ಕಾವಿಧಾರಿಗಳು ಕಂಡರೆ ಹೇವರಿಕೆ ಉಂಟಾಗತೊಡಗಿತು. ಮಂಡೆ ಬೋಳಾದರೇನು ಮನಬೋಳಾಗದನ್ನಕ್ಕರ?! ಎಂಬ ಅಲ್ಲಮಪ್ರಭುವಿನ ವಚನಗಳಿಂದ ಹಿಡಿದು ಅಮ್ಮುಗೆಯ ರಾಯಮ್ಮ ಎಂಬ ವಚನ ಕಾರ್ತಿಯೂ ಕೂಡ ಕಾವಿ ಕಾಷಾಂಬರವ ಹೊದ್ದು ತಿರುಗುವ ಗಾವಿಲರ ಮುಖವ ನೋಡಲಾಗದು ಎಂಬ ಮುಂತಾದ ವಚನಗಳನ್ನು ಓದುತ್ತಾ ಹೋದಂತೆ (ಡೋಂಗಿ) ಕಾವಿಧಾರಿಗಳ ಬಗ್ಗೆ ಯಾವತ್ತೂ ಅನುಮಾನದ ದೃಷ್ಟಿಯಿಂದ ನೋಡುವ ಮನಸ್ಸು ನನಗೆ ಅರಿವಿಲ್ಲದೆ ಬೆಳೆದಿದೆ.
ಹೀಗಾಗಿ ನಾನು ಯಾವುದೆ ಕಾವಿಧಾರಿಗಳೊಂದಿಗೂ ಸ್ನೇಹ - ಸಂಬಂಧಗಳನ್ನು ಇಟ್ಟುಕೊಂಡಿದ್ದರೂ ನನ್ನ ಒಳಗಣ್ಣನ್ನು ಸದಾ ತೆರೆದುಕೊಂಡೆ ಇರುತ್ತೇನೆ. ಆದರೆ ಈ ಮಾತನ್ನು ನಿಶ್ಚಿತವಾಗಿಯೂ ಎಲ್ಲ ಸ್ವಾಮಿಗಳನ್ನು ಕುರಿತು ಆಡಲಾಗುವುದಿಲ್ಲ. ಇಂಥ ಬೆರಳೆಣಿಕೆಯ ಕೆಲವೇ ಸ್ವಾಮಿಗಳಲ್ಲಿ ಸವ್ಯಸಾಚಿಯಾಗಿದ್ದವರು ಭಾಲ್ಕಿಯ ಡಾ.ಬಸವಲಿಂಗಪಟ್ಟದ್ದೇವರು.
ಲಿಂ.ಚೆನ್ನಬಸವ ಪಟ್ಟದ್ದೇವರು ಇನ್ನೂ ಬದುಕಿರುವ ದಿನಗಳಲ್ಲಿ ಒಂದೆರಡು ಬಾರಿ ಅವರನ್ನು ನೋಡುವ, ಅವರ ಮಾತುಗಳನ್ನು ಕೇಳುವ ಸುಯೋಗ ನನಗೆ ದೊರಕಿದೆ. ನಿಜಕ್ಕೂ ಡಾ.ಚೆನ್ನಬಸವ ಪಟ್ಟದ್ದೇವರು ಸದ್ವಿನಯದ ತುಂಬಿದ ಕೊಡ. ಅಲ್ಲಿ ಲವಲೇಶವೂ ತೋರಿಕೆ ಇರಲಿಲ್ಲ. ಎಲ್ಲವನ್ನೂ ಸಮರ್ಪಿಸಿಕೊಂಡ ಭಾವ ತುಂಬಿಕೊಂಡಿತ್ತು.
ಬೀದರನಲ್ಲಿ ಜರುಗಿದ ಕಲ್ಯಾಣ ನಾಡಿನ ಶರಣ ಸಮ್ಮೇಳನ ಕ್ಕೆ ಬಹುಸಂಖ್ಯೆಯಲ್ಲಿ ನೆರೆದಿದ್ದ ಬಸವಾಭಿಮಾನಿಗಳನ್ನು ಕಂಡು ಆನಂದ ತುಂದಿಲರಾಗಿ ವೇದಿಕೆಯ ಮೇಲೆ ನಿಂತುಕೊಂಡು ಗದ್ಗದಿತರಾದರು. ಕಣ್ಣಿನಿಂದ ಅವರಿಗೆ ಅರಿವಿಲ್ಲದೆ ಆನಂದ ಭಾಷ್ಪ ಹರಿಯತೊಡಗಿತು. ಇಷ್ಟೆಲ್ಲ ಸಾಲದೆಂಬಂತೆ ಭಾವುಕರಾದ ಪಟ್ಟದ್ದೇವರು ಬಹಿರಂಗವಾಗಿಯೆ ಸಭೆಯಲ್ಲಿ ನೆರೆದಿದ್ದ ಜನಗಳತ್ತ ಮುಖಮಾಡಿ ದೀರ್ಘದಂಡ ಪ್ರಮಾಣಗಳನ್ನು ಸಲ್ಲಿಸಿದರು. ಜನ ಇದನ್ನೆಲ್ಲ ನಿರೀಕ್ಷಿಸದೆ ಇದ್ದುದರಿಂದ ಅವರೆಲ್ಲ ಪಟ್ಟದ್ದೇವರ ನಡವಳಿಕೆ ಕಂಡು ಕ್ಷಣ ದಂಗಾಗಿ ಹೋದರು. ಅವರಿಗೆ ಅರಿವಿಲ್ಲದೆ ಗಕ್ಕನೆ ಎದ್ದು ನಿಂತು ಗೌರವ ಸೂಚಿಸಿದರು.
ಮತ್ತೊಂದು ಸಲ ಕ್ರಾಂತಿಯ ಗಂಗೋತ್ರಿಯೆಂದೆ ಕರೆಯಿಸಿಕೊಂಡಿರುವ ಶಿವಶರಣೆ ಅಕ್ಕನಾಗಮ್ಮಳ ಕುರಿತು ನನ್ನ ತಾಯಿಯವರು ಬರೆದಿರುವ ಕ್ರಾಂತಿಮಾತೆ ಎಂಬ ಪುಸ್ತಕವನ್ನು ತಮ್ಮ ಮಠದಲ್ಲಿಯೆ ಬಿಡುಗಡೆಗೊಳಿಸುತ್ತ , ಆ ಶರಣೆಯ ಚಿತ್ರವನ್ನು ನೋಡುತ್ತ ನೋಡುತ್ತ ಬಸವ ಎಂಬ ಕ್ರಾಂತಿ ಶಿಶುವನ್ನು ಸಾಕಿ, ಸಲಹಿದ ತಾಯಿ. ಜ್ಯೋತಿ ಬೆಳಗಿಸಿದ ಮಹಾಜ್ಯೋತಿ. ಕ್ರಾಂತಿಯ ಗಂಗೋತ್ರಿ.... ಎಂದು ಮುಂತಾಗಿ ಹೇಳುತ್ತ ಆ ಪುಸ್ತಕವನ್ನು ತಮ್ಮ ಹಣೆಗೆ ಮುಟ್ಟಿಸಿಕೊಂಡರು. ಹಾಗೂ ಈ ಪುಸ್ತಕ ಬರೆದ ನನ್ನ ತಾಯಿಗೂ ಹೃತ್ಪೂರ್ವಕ ನಮನಗಳನ್ನು ಸಲ್ಲಿಸಿದರು.
ಈ ಎರಡು ಘಟನೆಗಳನ್ನು ಇಲ್ಲಿ ಹೇಳುವ ಮುಖ್ಯ ಉದ್ದೇಶವೆಂದರೆ ಬಸವಾದಿ ಶರಣರ ಬಗೆಗೆ ಡಾ. ಚೆನ್ನಬಸವ ಪಟ್ಟದ್ದೇವರಿಗೆ ಇನ್ನಿಲ್ಲದ ಪ್ರೀತಿ ಇತ್ತು. ಶರಣರ ವಚನಗಳನ್ನು ಓದಿಕೊಂಡಿದ್ದರಲ್ಲದೆ ಅದನ್ನು ಅಂತರ್ಗತ ಮಾಡಿಕೊಂಡಿದ್ದರು. ಅವನ್ನು ತಮ್ಮ ನಡೆಯೊಳಗೆ ತಮ್ಮ ಜೀವನದ ಉದ್ದಕ್ಕೂ ತೋರಿಸುತ್ತಲೆ ಬಂದಿದ್ದರು. ವಚನಗಳು ಜನರಿಗಾಗಿ ಬರೆದವುಗಳು. ಆದ್ದರಿಂದ ಅವು ಎಲ್ಲರಿಗೂ ತಲುಪಬೇಕು. ಶರಣರ ಸದಾಶಯ ಸಮಾಜದೊಳಗೆ ಚಾಲ್ತಿಯಲ್ಲಿ ಬಂದರೆ ಸಕಲ ಜೀವಾತ್ಮರಿಗೂ ಲೇಸಾಗುವುದು ಖಂಡಿತ ಎಂದವರು ತಿಳಿದುಕೊಂಡಿದ್ದರು.
ಇಂಥ ಘನ ವ್ಯಕ್ತಿತ್ವವನ್ನು ಕಟ್ಟಿಕೊಂಡಿದ್ದ ಡಾ. ಚೆನ್ನಬಸವ ಪಟ್ಟದ್ದೇವರ ತರುವಾಯ ಭಾಲ್ಕಿಯ ಹಿರೇಮಠಕ್ಕೆ ಮತ್ತಾವ ಅಯೋಗ್ಯ ಸ್ವಾಮಿ ಅಮರಿಕೊಳ್ಳುತ್ತಾನೋ ? ಎಂಬ ಆತಂಕವೂ ಬಹಳ ಜನರಲ್ಲಿ ಇದ್ದದ್ದು ಸುಳ್ಳಲ್ಲ. ಆದರೆ ಡಾ. ಬಸವಲಿಂಗಪಟ್ಟದ್ದೇವರು ಜನರ ಅನುಮಾನಗಳನ್ನು ತಮ್ಮ ನೈಜ ನಡಾವಳಿಗಳ ಮೂಲಕ ಹುಸಿಗೊಳಿಸಿದ್ದಾರೆ. ಬಸವಾದಿ ಪ್ರಮಥರ ವಿಚಾರಗಳನ್ನು ಒಪ್ಪಿಕೊಂಡು - ಅಪ್ಪಿಕೊಂಡು ಅವನ್ನು ಅಹರ್ನಿಶಿ ಪ್ರಚುರಗೊಳಿಸಲು ಕ್ರಿಯಾ ಯೋಜನೆ ರೂಪಿಸಿ ಹೊರಟಿದ್ದಾರೆ. ಬಸವಣ್ಣನ ಕಾರ್ಯಕ್ಷೇತ್ರವಾದ ಬೀದರ ಜಿಲ್ಲೆಯಲ್ಲಿ ವಚನ ವಿಶ್ವವಿದ್ಯಾಲಯವನ್ನು ಆರಂಭಿಸಿ ಅಲ್ಲಿ ವಚನಾರ್ಥಿಗಳಿಗೆ, ಸಂಶೋಧಕರಿಗೆ, ಸಾಧಕರಿಗೆ ಎಲ್ಲಾ ರೀತಿಯ ನೆರವು ನೀಡುವುದರ ಜೊತೆ ಜೊತೆಗೆ ಶರಣ ಸಾಹಿತ್ಯ ಪ್ರಸಾರದ ಸೇವೆಯನ್ನು ಅದು ಕೈಗೊಳ್ಳಲಿದೆಯಂತೆ . ಈಗಾಗಲೇ ಇವರು ಆರಂಭಿಸಿ ಯಶಸ್ಸುಗಳಿಸಿದ ಡಾ.ಚೆನ್ನಬಸವಪಟ್ಟದ್ದೇವರ ಹೆಸರಿನ ಗುರುಕುಲ ಇಡೀ ಜಿಲ್ಲೆಯ ಗಮನವನ್ನು ತನ್ನತ್ತ ಸೆಳೆದುಕೊಂಡಿದೆ. ಹೀಗಾಗಿ ಇವರ ಕಾಲ ತೊಡಕಾಗಿ ಬಂದ ಹಲವಾರು ಸಮಸ್ಯೆಗಳು ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಹೊರಟು ಹೋಗಿವೆ. ಒಡಲೊಳಗಣ ಕಿಚ್ಚು ಒಡಲ ಸುಡುವುದಲ್ಲದೆ ನೆರೆಮನೆಯ ಸುಡದು ನೋಡಾ ! ಎಂದು ಹೇಳುವಂತೆ ಡಾ. ಬಸವಲಿಂಗಪಟ್ಟದ್ದೇವರನ್ನು ಕೆಡಿಸಲೇ ಬೇಕೆಂದು ಹೊಂಚುಹಾಕಿದ್ದ ಹಿತಾಸಕ್ತ ಜನಗಳಿಗೆ ತಮ್ಮ ಬಾಣವೆ ತಮಗೆ ತಿರುಗೇಟು ನೀಡಿದೆ. ಯಾರು ಮುನಿದು ನಮ್ಮನೇನ ಮಾಡುವರು ? ಊರು ಮುನಿದು ನಮ್ಮನ್ನೆಂತು ಮಾಡುವುದು! ಎಂಬ ಧ್ಯೇಯ ವಾಕ್ಯದೊಂದಿಗೆ ಎನ್ನ ಕ್ಷೇಮ ನಿಮ್ಮದಯ್ಯ , ಎನ್ನ ಹಾನಿ ವೃದ್ಧಿ ನಿಮ್ಮದಯ್ಯ , ಎನ್ನ ಮಾನಾಪಮಾನವೂ ನಿಮ್ಮದಯ್ಯ ಎಂದು ತೆರೆದ ಹೃದಯದ ಮೂಲಕ ಹೊರಟ ಈ ಜಂಗಮವರ್ಯನಿಗೆ ದಿಗ್ವಿಜಯವೆ ದೊರಕಿದೆ. ಅವರು ಮುಟ್ಟಿದ್ದೆಲ್ಲ ಚಿನ್ನ ಎಂದು ಹೇಳುವ ಗಳಿಗೆ ಇಂದು ಬಂದಿದೆ.
ಹಾಗಂತಲೆ ಡಾ. ಬಸವಲಿಂಗಪಟ್ಟದ್ದೇವರು ಇದುವರೆಗೂ ಸಾಕಷ್ಟು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಇದೆಲ್ಲ ಸಾಲದೆಂಬಂತೆ ತಮ್ಮ ಪ್ರಕಾಶನದ ವತಿಯಿಂದ ಮರಾಠಿ - ಹಿಂದಿ ಭಾಷೆಯಲ್ಲಿ ವಚನಗಳನ್ನು ತರ್ಜುಮೆಗೊಳಿಸಿ ಬಸವಾದಿ ಶರಣರ ವಿಚಾರಗಳನ್ನು ಪ್ರಚುರ ಪಡಿಸುವಲ್ಲಿ ಶ್ರಮಿಸುತ್ತಿದ್ದಾರೆ. ಹಲವಾರು ಕಡೆ ಸಭೆ - ಸಮಾರಂಭಗಳೆ ಅಲ್ಲದೆ ಇನ್ನಿತರ ಪ್ರಸಂಗಗಳಲ್ಲಿ ಭಕ್ತನ ಮನೆಗೆ ಹೋದರೂ ಅಲ್ಲಿ ಅವರ ನಡೆ- ನುಡಿಗಳು ಕರ್ಮಠವಾಗಿದ್ದರೆ ತಿಳಿಸಿ ಹೇಳಿ ಅವರೆಲ್ಲ ಬಸವ ಮಾರ್ಗದತ್ತ ಹರಿದುಬರುವಂತೆ ಮನದಟ್ಟು ಮಾಡಿಕೊಟ್ಟಿದ್ದಾರೆ. ಅನಾಥ ಮಕ್ಕಳ ಬಂಧುವಾಗಿ ಅವರ ಕೈ ಹಿಡಿದಿದ್ದಾರೆ. ಅವರಿಗಾಗಿಯೆ ಶಾಲೆ ತೆರೆದಿದ್ದಾರೆ. ಇದೆಲ್ಲಕ್ಕಿಂತ ಮುಖ್ಯವಾಗಿ ಡಾ. ಚೆನ್ನಬಸವಪಟ್ಟದ್ದೇವರ ಲಿಂಗೈಕ್ಯ ಸ್ಥಾನವನ್ನು ಭವ್ಯ ಘೋರಿಯನ್ನಾಗಿ ಮಾಡದೆ ಅದನ್ನೊಂದು ಐತಿಹಾಸಿಕ ಸ್ಮಾರಕವನ್ನಾಗಿ ಮಾಡಿದ್ದಾರೆ. ಡಾ. ಚೆನ್ನಬಸವಪಟ್ಟದ್ದೇವರ ಆಶಯಕ್ಕೆ ತಕ್ಕಂತೆ ಅಲ್ಲಿ ವಚನ ಗ್ರಂಥಗಳನ್ನು ಇಟ್ಟು ಅಲ್ಲಿಗೆ ಬರುವ ಭಕ್ತಾಧಿಗಳು ವಚನಗಳನ್ನು ಪಠಿಸುವ ವ್ಯವಸ್ಥೆ ಮಾಡಿದ್ದಾರೆ. ಧ್ಯಾನ- ಮೌನದೊಂದಿಗೆ ವಚನಗಳ ಪಠಣ ನಡೆದರೆ ಆ ವ್ಯಕ್ತಿ ಖಂಡಿತವಾಗಿಯೂ ಬಸವ ಮಾರ್ಗವನ್ನಲ್ಲದೆ ಅನ್ಯ ಮಾರ್ಗದತ್ತ ಹಣಕಿಯೂ ಹಾಕಲಾರ ಎಂಬುದು ಡಾ. ಬಸವಲಿಂಗಪಟ್ಟದ್ದೇವರ ಆಶಯ. ಈ ಆಶಯಕ್ಕೆ ತಕ್ಕಂತೆ ಡಾ. ಚೆನ್ನಬಸವಪಟ್ಟದ್ದೇವರ ಸ್ಮಾರಕವನ್ನು ರೂಪಿಸುತ್ತಿದ್ದಾರೆ.
ಬಹುತೇಕ ಸ್ವಾಮಿಗಳು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು, ಹೇಳುವುದು ಒಂದು ಬಗೆಯಾದರೆ ಸ್ವತಃ ಅವರೇ ಜೀವಿಸುವುದು ಇನ್ನೊಂದು ಬಗೆ. ಈ ಮಾತಿಗೆ ಪಟ್ಟದ್ದೇವರು ಅಪವಾದವಾಗಿದ್ದಾರೆ. ಮೂಢನಂಬಿಕೆಗಳ ಆಗರವಾಗಿರುವ ಕರ್ನಾಟಕದ ಬಹುತೇಕ ಮಠಗಳಿಗೆ ಭಾಲ್ಕಿಯ ಹಿರೇಮಠವೊಂದು ಅಪವಾದ. ಇಲ್ಲಿಗೆ ಭೇಟಿ ನೀಡುವ ಯಾರೂ ಚೀಟಿ- ಚಿಪಾಟಿ ಕಟ್ಟಿಕೊಂಡು ಹೋಗಲು ಬರುವುದಿಲ್ಲ. ಕಾಯಿ- ಕರ್ಪುರ ತರುವುದಿಲ್ಲ. ಒಂದು ವೇಳೆ ಅಂಥವರು ಬಂದರೂ ಪಟ್ಟದ್ದೇವರು ಅವರಿಗೆ ವೈಜ್ಞಾನಿವಾಗಿ ತಿಳಿಸಿ
ಹೇಳುತ್ತಾರೆ. ಅವರನ್ನು ಬಸವ ತತ್ವದ ರಹದಾರಿಗೆ ಕರೆತರುತ್ತಾರೆ.
ಸಾಮಾಜಿಕ, ಧಾರ್ಮಿಕ , ಶೈಕ್ಷಣಿಕ ಹಾಗೂ ಸಾಹಿತ್ಯಿಕ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಡಾ. ಬಸವಲಿಂಗ ಪಟ್ಟದ್ದೇವರಿಗೆ ಪಟ್ಟಾಧಿಕಾರವಾಗಿ ಇಪ್ಪತ್ತೈದು ವರ್ಷ ಕಳೆದುಹೋಗಿವೆ. ಈ ವರ್ಷಗಳು ಡಾ. ಬಸವಲಿಂಗ ಪಟ್ಟದ್ದೇವರು ಕಳೆದಿರುವ ಸಾರ್ಥಕ ದಿನಗಳು, ಅಲ್ಲವೆ?

ಗಲ್ಫ್ ಕನ್ನಡಿಗರ ಒಗ್ಗಟ್ಟಿನಿಂದ ವಿಮೋಚನೆಗೊಂಡ ಲೋಹಿತಾಕ್ಷ



ರಿಯಾದ್ : ಕಳೆದ ಎಂಟು ತಿಂಗಳಿಂದ ತನ್ನದಲ್ಲದ ತಪ್ಪಿಗೆ ಶಿಕ್ಷೆಗೆ ಗುರಿಯಾಗಿ ಸೌದಿ ಅರೇಬಿಯಾದ ಜೈಲಿನಲ್ಲಿದ್ದ ಮಂಗಳೂರು ದೇರೆಬೈಲು ಕೊಂಚಾಡಿ ನಿವಾಸಿ ಲೋಹಿತಾಕ್ಷ ಮಂಗಳೂರು ಅಸೋಸಿಯೇಶನ್ ಫಾರ್ ಸೌದಿ ಅರೇಬಿಯಾ (ಒಂSಂ) ಮತ್ತು ಇತರ ಕೆಲವು ಸಮಾನ ಮನಸ್ಕ ಸಂಘಟನೆಗಳ ನೆರವಿನೊಂದಿಗೆ ಬಿಡುಗಡೆಗೊಂಡಿದ್ದಾರೆ. ಕರ್ನಾಟಕದಲ್ಲಿ ನಡೆದ ಹಾಲಪ್ಪ, ನಿತ್ಯಾನಂದರ ರಾಸಲೀಲೆಗಳ ಸುದ್ಧಿಗಳ ಭರಾಟೆಯಲ್ಲಿರುವ ಕನ್ನಡ ನಾಡಿನ ಪತ್ರಿಕೆಗಳಿಗೆ ಈ ವಿಷಯ ಒಂದು ದೊಡ್ಡ ಸುದ್ದಿಯಾಗಿ ಕಾಣಲೇ ಇಲ್ಲ. ಗಲ್ಫ್ ನಾಡಿನಲ್ಲಿ ಅದರಲ್ಲೂ ಸೌದಿ ಅರೇಬಿಯಾದಲ್ಲಿ ಬಹಳ ಸಣ್ಣ ಪ್ರಮಾಣದಲ್ಲಿರುವ ಕನ್ನಡಿಗರ ಸಂಘಗಳು ಮಾಡಿದ ಈ ಕೆಲಸ ಅಷ್ಟು ಸುಲಭವಾಗಿ ತಳ್ಳಿಬಿಡುವಂತಹದ್ದಲ್ಲ. ಗಲ್ಫ್ ನಾಡಿನಲ್ಲಿ ಸದಾ ಒತ್ತಡದ ನಡುವೆ ಬಿಡುವಿಲ್ಲದೆ ತಮ್ಮ ಕೆಲಸ ಕಾರ್ಯಗಳಲ್ಲಿ ನಿರತರಾಗಿರುವ ವಿದೇಶಿಯರು ಸಂಘಟಿತರಾಗುವುದು ಅಷ್ಟೊಂದು ಸುಲಭವಲ್ಲ. ಹಾಗೇನಾದರೂ ಸಂಘಟಿತವಾಗಿದ್ದರೆ ಅದು ಹೆಚ್ಚಿನದಾಗಿ ಕೇರಳೀಯರು. ತಮ್ಮ ರಾಜ್ಯದ ಜನರಿಗೆ ಏನಾದರೂ ಆದರೆ ಅದಕ್ಕೆ ಅತೀ ಶೀಘ್ರ ಸ್ಪಂದಿಸುವ ಮಲಯಾಳಿ ಸಂಘಟನೆಗಳನ್ನು ನಾನು ನೋಡಿದ್ದೇನೆ. ಅದೇ ರೀತಿ ಈಗ ‘ಮಾಸಾದ ನೇತೃತ್ವದಲ್ಲಿ ಸೌದಿ ಅರೇಬಿಯಾ ಮತ್ತು ಯು.ಎ.ಇ. ಯ ಕೆಲವು ಸಂಘಟನೆಗಳು ಒಂದಾಗಿ ಲೋಹಿತಾಕ್ಷರನ್ನು ಬಿಡುಗಡೆ ಮಾಡಿಸಿದ್ದು ಕನ್ನಡಿಗರು ಒಂದಾದಲ್ಲಿ ಏನನ್ನೂ ಸಾಧಿಸಿಯಾರು ಎಂಬ ಸಂದೇಶವನ್ನು ಅಸಂಘಟಿತ ಗಲ್ಫ್ ಕನ್ನಡಿಗರ ಮುಂದೆ ಸಾಧಿಸಿ ತೋರಿಸುವುದರ ಜೊತೆಗೆ ಕನ್ನಡಿಗರನ್ನು ಸಂಘಟಿತರಾಗುವಂತೆ ಪ್ರೇರೇಪಿಸಿದೆ.
ಅಸಲಿಗೆ ಲೋಹಿತಾಕ್ಷರನ್ನು ಜೈಲಿಗೆ ತಳ್ಳಲು ಕಾರಣವೇನು ಎಂದು ನೋಡಿದರೆ ವಿದೇಶಿಯರ ಜೊತೆ ಇಲ್ಲಿ ಎಂತಹ ಅನ್ಯಾಯಗಳು ಕೆಲವೊಮ್ಮೆ ನಡೆಯುತ್ತವೆ ಎಂಬ ವಾಸ್ತವ ವಿಚಾರವನ್ನು ನಮ್ಮ ಮುಂದಿಡುತ್ತವೆ. ಕಳೆದ ಹದಿನೈದು ವರ್ಷಗಳಿಂದ ಸೌದಿ ಅರೇಬಿಯಾದ ಬಂದರು ನಗರ ದಮ್ಮಾಮಿನಲ್ಲಿ ವೃತ್ತಿಯಲ್ಲಿ ಕ್ರೇನ್ ಚಾಲಕರಾಗಿ ದುಡಿಯುತ್ತಿರುವ ಲೋಹಿತಾಕ್ಷ ತಮ್ಮ ಕಷ್ಟದ ಕೆಲಸದ ನಡುವೆಯೂ ನಿಷ್ಠೆಯಿಂದ ಕೆಲಸ ನಿರ್ವಹಿಸಿಕೊಂಡು ಬರುತ್ತಿದ್ದರು. ಆದರೆ ಈ ಹದಿನೈದು ವರ್ಷದಲ್ಲಿ ನಡೆಯದ ಅನೀರೀಕ್ಷಿತ ಅಪಘಾತವೊಂದು ಅವರ ಜೀವನದಲ್ಲಿ ನಡೆಯಿತು. ಅವರು ನಿಯಂತ್ರಿಸುತ್ತಿದ್ದ ಕ್ರೇನ್ ಅಕಸ್ಮಾತ್ತಾಗಿ ಅವರ ನಿಯಂತ್ರಣ ತಪ್ಪಿ ಹೊಂಡವೊಂದಕ್ಕೆ ಬಿದ್ದು ಪುಡಿಪುಡಿಯಾಯಿತು. ಏನೋ ದೇವರ ದಯೆ ಲೋಹಿತಾಕ್ಷ ಯಾವುದೇ ರೀತಿಯ ಅಪಾಯವಿಲ್ಲದೆ ಪಾರಾದರು. ಆದರೆ ಇಲ್ಲಿ ವಿಧಿ ಅವರ ಬೆನ್ನು ಬಿಡಲಿಲ್ಲ. ಮಾಲೀಕ ತನ್ನ ಕ್ರೇನ್ ಪುಡಿಯಾದ ಬಗ್ಗೆ ಇವರ ವಿರುದ್ಧವೇ ದೂರು ಕೊಟ್ಟ. ದೂರಿನ ಪ್ರಕಾರ ಹಿಂದು ಮುಂದು ನೋಡದೆ ಪೊಲೀಸರು ಇವರನ್ನು ಬಂಧಿಸಿ ಜೈಲಿಗೆ ತಳ್ಳಿದರು. ವಾಸ್ತವವಾಗಿ ನೋಡುವುದಾದರೆ ಈ ಅಪಘಾತದಲ್ಲಿ ಲೋಹಿತಾಕ್ಷರದೇನೂ ತಪ್ಪಿಲ್ಲ. ನಡೆಯಬೇಕಾಗಿದ್ದ ಒಂದು ದುರ್ಘಟನೆ ಅನೀರೀಕ್ಷಿತವಾಗಿ ನಡೆದು ಹೋಗಿತ್ತು. ಆದರೆ ಇದರಲ್ಲಿ ಸುಮ್ಮನೆ ಲೋಹಿತಾಕ್ಷ ಬಲಿಪಶುವಾದರು. ಆನಂತರ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ ಕ್ರೇನ್ ಮಾಲೀಕನಿಗೆ ಪರಿಹಾರವಾಗಿ ಲೋಹಿತಾಕ್ಷ ಹತ್ತು ಲಕ್ಷ ರೂಪಾಯಿ ಅಂದರೆ ಎಂಬತ್ತು ಸಾವಿರ ರಿಯಾಲ್ ಪರಿಹಾರ ಕೊಡಬೇಕೆಂದು ತೀರ್ಪಾಯಿತು. ಹೇಳಿ ಕೇಳಿ ಲೋಹಿತಾಕ್ಷ ಕಡಿಮೆ ಸಂಬಳಕ್ಕೆ ದುಡಿಯುವ ಒಬ್ಬ ಬಡ ಕಾರ್ಮಿಕ . ಎಲ್ಲಿಂದ ಹೊಂದಿಸಿಯಾರು ಅಷ್ಟೊಂದು ದೊಡ್ಡ ಮೊತ್ತವನ್ನು ?. ಅದಲ್ಲದೆ ಎಂಟು ತಿಂಗಳಿನಿಂದ ಜೈಲಿನಲ್ಲಿದ್ದಾರೆ. ಇಂತಹವರಿಗೆ ಹತ್ತು ಲಕ್ಷ ರೂಪಾಯಿ ದಂಡ ಹಾಕಿದರೆ ಅವರು ಏನು ಮಾಡಿಯಾರು? ಲೋಹಿತಾಕ್ಷ ಜೀವನದ ಆಸೆಯನ್ನೇ ಬಿಟ್ಟರು. ಒಮ್ಮೆ ಮನೆಗೆ ದೂರವಾಣಿ ಕರೆ ಮಾಡಿದ ಅವರು ತನ್ನ ಬರುವಿಕೆಯ ಬಗೆಗಿನ ಆಸೆಯನ್ನು ಬಿಟ್ಟುಬಿಡುವಂತೆ ಹೇಳಿದ್ದರಂತೆ. ಆದರೆ ಈ ವಿಷಯ ತಿಳಿದ ಮಾಸಾದ ಅಧ್ಯಕ್ಷ ಮಾಧವ ಅಮೀನ್ ಜಾಗೃತರಾದರು.
ಸೌದಿ ಅರೇಬಿಯಾದಲ್ಲಿ ಕನ್ನಡಿಗರ ಸೇವೆಯಲ್ಲಿ ಸದಾ ಮುಂದೆ ನಿಲ್ಲುವ ಮಾಧವ ಅಮೀನ್ ತನ್ನ ಸಂಘಟನೆಯ ಉಪಾಧ್ಯಕ್ಷರಾದ ರವಿ ಕರ್ಕೇರಾ, ಪ್ರಧಾನ ಕಾರ್ಯದರ್ಶಿ ಸಂತೋಷ್ ಶೆಟ್ಟಿ, ಹಾಗೂ ಪಧಾದಿಕಾರಿಗಳಾದ ಮಧುಕರ ದೇವಾಡಿಗ, ಬಾಬು ಕೋಟೆಬೆಟ್ಟು, ದಯಾನಂದ ಶ್ರೀಯಾನ್, ಅಲ್ ರಾಜಿ ಬ್ಯಾಂಕಿನ ವಸಂತ್ ಕುಮಾರ್ ಹೆಗ್ಡೆ ಅವರೊಂದಿಗೆ ಸೇರಿ ಈ ವಿಷಯದಲ್ಲಿ ಲೋಹಿತಾಕ್ಷರಿಗೆ ನೆರವಾಗಬೇಕೆಂದು ರಂಗಕ್ಕಿಳಿದರು. ಜೊತೆಗೆ ಇವರು ತಮ್ಮ ಸಂಘಟನೆಯ ಪರವಾಗಿ ಸ್ವಲ್ಪ ಮಟ್ಟಿಗಿನ ಹಣವನ್ನು ಸಂಗ್ರಹಿಸಿದರು. ಇವರ ಈ ಕೆಲಸವನ್ನು ಗಮನಿಸಿದ ಕರಾವಳಿಯ ಜನತೆ ಹಾಗೂ ಸಂಘ ಸಂಸ್ಥೆಗಳು ಇವರ ಬೆಂಬಲಕ್ಕೆ ನಿಂತು ತಮ್ಮ ಕೈಯಲ್ಲಿ ಸಾಧ್ಯವಾದಷ್ಟು ಹಣ ಸಂಗ್ರಹಿಸಿ ಕೊಟ್ಟವು. ರಿಯಾದ್ ಕರಾವಳಿ ಅಸೋಸಿಯೇಶನ್ ಅಧ್ಯಕ್ಷ ವಿಜಯ್ ರೈ, ರಿಯಾದ್ ಬಂಟರ ಸಂಘದ ಮೋಹನದಾಸ್ ಶೆಟ್ಟಿ, ಭಟ್ಕಳ ಸಮಾಜದ ಅರ್ಶದ್, ಜುಬೈರ್, ಫಯಾಜ್, ಮಂಗಳೂರಿನ ರೋಯಿಸ್ತನ್ ಪ್ರಭು ಹಾಗೂ ಇತರರು ತಮ್ಮ ಕೈಲಾದ ನೆರವು ನೀಡುವುದರ ಜೊತೆಗೆ ಈ ಕಾರ್ಯದಲ್ಲಿ ತಮ್ಮ ಸಹಕಾರವನ್ನೂ ಕೊಟ್ಟರು. ಇತ್ತ ಸೌದಿ ಅರೇಬಿಯಾದಲ್ಲಿ ಈ ರೀತಿಯ ಬೆಳವಣಿಗೆಗಳು ನಡೆಯುತ್ತಿದ್ದರೆ ಅತ್ತ ಯು.ಎ.ಇ. ಯಲ್ಲಿ ಶೋಧನ್ ಪ್ರಸಾದ್ ಈ ವಿಷಯದಲ್ಲಿ ರಂಗಕ್ಕಿಳಿದಿದ್ದರು. ಮಿತ್ರ ಅಫ್ರೋಜ್ ಅಸ್ಸಾದಿ ಜೊತೆ ನಮ್ಮ ತುಳುವೆರ್, ದೇವಾಡಿಗ ಸಂಘ ಈ ಕಾರ್ಯದಲ್ಲಿ ಇವರ ಬೆಂಬಲಕ್ಕೆ ನಿಂತವು. ಈ ಎಲ್ಲಾ ಸಹೃದಯರ ನೆರವಿನಿಂದ ಕೊನೆಗೂ ಜೂನ್ ಎಂಟರಂದು ಲೋಹಿತಾಕ್ಷರ ಬಿಡುಗಡೆಯಾಯಿತು. ಲೋಹಿತಾಕ್ಷರನ್ನು ಆದರದಿಂದ ಬರಮಾಡಿಕೊಂಡ ಮಾಸಾ ಸಂಘಟನೆಯ ಪಧಾದಿಕಾರಿಗಳು ಅವರನ್ನು ಎರಡೇ ದಿನಗಳಲ್ಲಿ ತಾಯ್ನಾಡಾದ ಮಂಗಳೂರಿಗೆ ಬೀಳ್ಕೊಟ್ಟರು. ತನ್ನದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದ ಒಬ್ಬ ಅನಿವಾಸಿ ಕನ್ನಡಿಗನ ನೆರವಿಗೆ ಧಾವಿಸಿದ ಮಾಸಾದ ಪಧಾಧಿಕಾರಿಗಳಿಗೆ ಅವರ ಬೆಂಬಲಕ್ಕೆ ನಿಂತ ಕೊಲ್ಲಿ ರಾಷ್ಟ್ರದ ಅನಿವಾಸಿ ಕನ್ನಡ ಸಂಘ ಸಂಸ್ಥೆಗಳಿಗೆ ಮತ್ತು ನಾಗರಿಕರಿಗೆ, ಈ ವಿಷಯವನ್ನು ಜನರ ಮುಂದೆ ತಂದ ದಾಯ್ಜಿ ವರ್ಲ್ಡ್ ತಂಡಕ್ಕೆ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸಬೇಕಾದದ್ದು ಪ್ರತಿಯೊಬ್ಬ ಅನಿವಾಸಿ ಕನ್ನಡಿಗನ ಕರ್ತವ್ಯ ಎಂದರೂ ತಪ್ಪಾಗಲಾರದು.

ಅಶ್ರಫ್ ಮಂಜ್ರಾಬಾದ್, ಸಕಲೇಶಪುರ

ಹಿಂದಿನ ಬರೆಹಗಳು