Saturday, July 3, 2010

ರೈತರಿಗೆ ಗುಂಡಿಟ್ಟಿದ್ದು....


ಮಾನ್ಯ ಯಡಿಯೂರಪ್ಪನವರೆ,

ನ್ಯಾಯಮೂರ್ತಿ ಜಗನ್ನಾಥ ಶೆಟ್ಟಿಯವರು ಹಾವೇರಿ ಗೋಲಿಬಾರ್ ಕುರಿತ ವರದಿಯನ್ನು ಸಲ್ಲಿಸಿದ್ದಾರೆ. ನೀವು ಅದನ್ನು ವಿಧಾನಮಂಡಲದಲ್ಲಿ ಮಂಡಿಸುವ ಮುನ್ನವೇ ವರದಿಯ ಅಂಶಗಳು ಮಾಧ್ಯಮಗಳಿಗೆ ಸೋರಿಕೆಯಾಗಿವೆ. (ಸೋರಿಕೆಯಾಗಿರುವುದು ನಿಮ್ಮ ಸರಕಾರದಲ್ಲಿ ಇರುವ ತೂತುಗಳಿಗೆ ಉದಾಹರಣೆ.) ಮಾಧ್ಯಮಗಳಲ್ಲಿ ವರದಿಯಾದಂತೆ ಜಗನ್ನಾಥ ಶೆಟ್ಟಿಯವರ ವರದಿ ಹೇಳಿರುವುದಾದರೆ, ಅದು ಅತ್ಯಂತ ಅಮಾನವೀಯ.
ಘಟನೆಯಲ್ಲಿ ಸಾವನ್ನಪ್ಪಿದ ಸಿದ್ಧಲಿಂಗಪ್ಪ ಚೂರಿ ಮತ್ತು ಪುಟ್ಟಪ್ಪ ಹೊನ್ನತ್ತಿ ರೈತರೇ ಅಲ್ಲ ಎಂದು ನೀವೂ ಒಪ್ಪುವುದಾದರೆ, ನ್ಯಾಯ-ಅನ್ಯಾಯಗಳ ಕುರಿತ ಯಾವ ಚರ್ಚೆಯೂ ಅಗತ್ಯವಿಲ್ಲ.
ಆಗಷ್ಟೇ ಅಧಿಕಾರ ಸ್ವೀಕರಿಸಿದ್ದಿರಿ. ೨೦೦೮ರ ಜೂನ್‌ನಲ್ಲಿ ರಸಗೊಬ್ಬರ ರಗಳೆ ಆರಂಭವಾಯಿತು. ಅಸಲಿಗೆ ಅದು ರಗಳೆಯ ವಿಷಯವೇ ಆಗಿರಲಿಲ್ಲ. ಸರಿಯಾದ ಸಂದರ್ಭಕ್ಕೆ ರಸಗೊಬ್ಬರ ಕೊಡಬೇಕು ಎಂಬುದು ಕಾಮನ್‌ಸೆನ್ಸ್. ಅದು ನಿಮಗಿರಲಿಲ್ಲ, ನಿಮ್ಮ ಕೃಷಿ ಮಂತ್ರಿಗೂ, ನಿಮ್ಮನ್ನು ನಿಯಂತ್ರಿಸುವ ಅಧಿಕಾರಿಗಳಿಗೂ ಇರಲಿಲ್ಲ. ಹಾಗಾಗಿ ರೈತರು ಎಲ್ಲೆಡೆ ಬೀದಿಗಿಳಿದರು. ಹಾವೇರಿಯಲ್ಲಿ ನಿಮ್ಮ ಪೊಲೀಸು ಪಡೆ ನಿರ್ದಯವಾಗಿ ಗುಂಡು ಹಾರಿಸಿತು. ಗುಂಡು ಹಾರಿಸಲು ಆದೇಶ ನೀಡಿದವರ‍್ಯಾರು ಎಂಬುದು ಇಂದಿಗೂ ನಿಗೂಢ. ಇಬ್ಬರು ರೈತರ ತಲೆಗಳು ಉರುಳಿದವು.
ವಿಧಾನಸೌಧದ ಮೆಟ್ಟಿಲ ಮೇಲೆ ಭಾವುಕರಾಗಿ ನಿಂತು ನೀವು ಹಸಿರು ಶಾಲು ಹೊದೆ ಪ್ರಮಾಣ ವಚನ ಸ್ವೀಕರಿಸಿ ರೈತರನ್ನು ರಕ್ಷಿಸುತ್ತೇನೆ ಎಂದು ಪ್ರಮಾಣ ವಚನ ಸ್ವೀಕರಿಸಿ ಹೆಚ್ಚು ದಿನಗಳೇನು ಆಗಿರಲಿಲ್ಲ. ಆದರೂ ಗುಂಡು ಹಾರಿತು. ರೈತರು ಸತ್ತರು. ಆ ಸಂದರ್ಭದಲ್ಲಿ ನೀವು ಪಶ್ಚಾತ್ತಾಪ ಪಟ್ಟವರಂತೆ ಕಂಡಿರಿ. ನೀವೇ (ನಿಮ್ಮ ಸರ್ಕಾರವೇ) ಕೈಯಾರೆ ಕೊಂದ ರೈತರಿಗೆ ಸ್ಮಾರಕ ಕಟ್ಟುವುದಾಗಿ ಪೆದ್ದುಪೆದ್ದಾಗಿ ಘೋಷಿಸಿದಿರಿ.
ಆದರೆ ನಂತರ ನೀವು ರೈತರ ವಿಷಯದಲ್ಲಿ ನಡೆದುಕೊಂಡ ರೀತಿಯನ್ನು ನೋಡಿದ ಮೇಲೆ ಪಶ್ಚಾತ್ತಾಪವೂ ನಾಟಕವೆನ್ನಿಸತೊಡಗಿತು. ಹರಿಹರ-ಚಾಮರಾಜನಗರಗಳಲ್ಲಿ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ರೈತರ ಮೇಲೆ ಲಾಠಿ ಪ್ರಹಾರ ನಡೆಯಿತು. ಎತ್ತಿನ ಗಾಡಿ ಹೊಡೆದುಕೊಂಡು ಬಂದಿದ್ದ ರೈತರನ್ನು ಹಿಡಿದು ಹಿಡಿದು ಚಚ್ಚಲಾಯಿತು. ಇತಿಹಾಸದಲ್ಲೇ ಮೊದಲ ಬಾರಿಗೆ ಚಳವಳಿ ನಡೆಸಿದ ರೈತರ ಕೈಗೆ ಕೊಳ ತೊಡಿಸಿದ ಪ್ರಕರಣವೂ ನಿಮ್ಮ ಅಧಿಕಾರಾವಧಿಯಲ್ಲೇ ನಡೆದುಹೋಯಿತು.
ಈಗ ಈ ಎಲ್ಲದಕ್ಕೂ ಕಳಶವಿಟ್ಟಂತೆ ನ್ಯಾಯಮೂರ್ತಿ ಜಗನ್ನಾಥ ಶೆಟ್ಟಿಯವರ ವರದಿ ಹೊರಗೆ ಬಂದಿದೆ. ಹಾವೇರಿಯಲ್ಲಿ ಸತ್ತವರು ರೈತರೇ ಅಲ್ಲ ಎಂದು ನೀವು ಕೈ ತೊಳೆದುಕೊಳ್ಳಲಿದ್ದೀರಿ. ಪ್ರತಿಪಕ್ಷಗಳು ನಿಮ್ಮ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ರಸಗೊಬ್ಬರದ ಹೆಸರಲ್ಲಿ ಗಲಭೆ ಎಬ್ಬಿಸಿದವು ಎಂದು ಹೇಳಿ ರಕ್ತ ಮೆತ್ತಿದ ನಿಮ್ಮ ಕೈಗಳನ್ನು ಶುದ್ಧಗೊಳಿಸಲಿದ್ದೀರಿ. ಆದರೆ ಜನರ ಕೋರ್ಟಿನಲ್ಲಿ ನೀವು ಅಷ್ಟು ಸುಲಭವಾಗಿ ಪಾರಾಗಲಾರಿರಿ. ಗಲಭೆ ನಡೆದದ್ದು ಹಾವೇರಿಯಲ್ಲಿ ಮಾತ್ರವಲ್ಲ. ರಸಗೊಬ್ಬರಕ್ಕಾಗಿ ದಾವಣಗೆರೆ, ಧಾರವಾಡ, ಚಿತ್ರದುರ್ಗ, ಶಿವಮೊಗ್ಗ, ಗದಗ ಮತ್ತಿತರ ಜಿಲ್ಲೆಗಳಲ್ಲೂ ಪ್ರತಿಭಟನೆ ನಡೆದಿತ್ತು. ಗಲಭೆಗಳ ನಂತರವೂ ನಿಮ್ಮಿಂದ ರಸಗೊಬ್ಬರ ಕೊಡಲು ಸಾಧ್ಯವಾಗಿರಲಿಲ್ಲ. ನಿಮ್ಮ ಬೇಜವಾಬ್ದಾರಿ ಹಾಗು ಉಡಾಫೆಗಳಿಂದಲೇ ಇದೆಲ್ಲವೂ ಸಂಭವಿಸಿತ್ತು.
ಇದನ್ನು ಇಡೀ ರಾಜ್ಯದ ಜನತೆ ನೋಡಿದ್ದಾರೆ. ಅದನ್ನು ನೀವು ಬರೆಸಿಕೊಂಡ ವರದಿಯೊಂದರಿಂದ ಬದಲಿಸಲು ಸಾಧ್ಯವೇ ಇಲ್ಲ.
ಯಡಿಯೂರಪ್ಪನವರೇ,
ರೈತರನ್ನು ಕೊಂದ ಪಾಪ ನಿಮ್ಮನ್ನು ಸುತ್ತಿಕೊಂಡಿದೆ, ಅದರಿಂದ ಬಿಡಿಸಿಕೊಳ್ಳಲಾರಿರಿ.
ಎರಡು ವರ್ಷಗಳ ನಿಮ್ಮ ಸಾಧನೆಗಳ ಹಾದಿಯಲ್ಲಿ ‘ಹಾವೇರಿ ಗೋಲಿಬಾರ್ ನಿಮ್ಮ ಮೊದಲ ಮಹತ್ಸಾಧನೆ. ಹಾಗಾಗಿ ನಿಮ್ಮ ಕೋಟಿಗಟ್ಟಲೆ ಹಣ ಸುರಿದು ನೀಡಿರುವ ೨ ವರ್ಷಗಳ ಸಾಧನೆಯ ಜಾಹೀರಾತುಗಳಲ್ಲಿ ಗೋಲಿಬಾರ್‌ನಲ್ಲಿ ಸತ್ತ ರೈತರ ಫೋಟೋಗಳನ್ನು ಬಳಸಿದ್ದರೆ ಚೆನ್ನಾಗಿರುತ್ತಿತ್ತು...

No comments:

Post a Comment

ಹಿಂದಿನ ಬರೆಹಗಳು