Saturday, July 3, 2010

`ನಲ್ನುಡಿ'ಯ ಯಶಸ್ಸಿನ ಓಟ

- ಪ.ಬ.ಜ್ಞಾನೇಂದ್ರಕುಮಾರ್


‘ಕನ್ನಡವೆಂದರೆ ಬರಿ ನುಡಿಯಲ್ಲ
ಹಿರಿದಿದೆ ಅದರರ್ಥ
ಎಂದಿದ್ದಾರೆ ನಿತ್ಯೋತ್ಸವದ ಕವಿ ಪ್ರೊ.ಕೆ.ಎಸ್. ನಿಸಾರ್ ಅಹಮದ್.
ಆದರೆ ಹಿರಿದಾದ ಅರ್ಥವನ್ನು ಗ್ರಹಿಸಲು ನಮ್ಮ ಜನಪ್ರತಿನಿಧಿಗಳಿಂದ ಸಾಧ್ಯವೇ ಆಗುತ್ತಿಲ್ಲ ಎಂಬುದು ನಿಜವಾದ ದುರಂತ.
ಪದೇ ಪದೇ ಕನ್ನಡ-ಕನ್ನಡಿಗನ ಮೇಲೆ ದುಷ್ಪರಿಣಾಮ ಬೀರುವಂಥ ತೀರ್ಮಾನಗಳನ್ನೇ ಸರ್ಕಾರ ಕೈಗೊಳ್ಳುತ್ತಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಶಾಲೆಗಳನ್ನು ಸಿಬಿಎಸ್‌ಇ ಶಾಲೆಗಳನ್ನಾಗಿ ಪರಿವರ್ತಿಸುವ ಹುನ್ನಾರಗಳನ್ನು ನೋಡಿದರೆ, ಈ ಸರ್ಕಾರ ಕನ್ನಡವನ್ನು ಶಿಕ್ಷಣದಿಂದ ನಾಮಾವಶೇಷ ಮಾಡುವ ಹಾಗೆ ಕಾಣಿಸುತ್ತಿದೆ.
ಕರ್ನಾಟಕ ರಕ್ಷಣಾ ವೇದಿಕೆ ಇಂಥದ್ದನ್ನು ಎಂದಿಗೂ ಸಹಿಸಿಲ್ಲ, ಸಹಿಸುವುದೂ ಇಲ್ಲ. ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರ ನೇತೃತ್ವದಲ್ಲಿ ಮಹಾನಗರಪಾಲಿಕೆ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಲಾಗಿದೆ. ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಪ್ರೊ.ಚಂದ್ರಶೇಖರ ಪಾಟೀಲರೂ ಪಾಲ್ಗೊಂಡಿದ್ದರು.
ಪ್ರತಿಭಟನೆಯ ನಂತರ ಮಹಾಪೌರ ಎಸ್.ಕೆ.ನಟರಾಜ್ ಮತ್ತವರ ಸಹೋದ್ಯೋಗಿಗಳು ಆಗ್ರಹ ಪತ್ರ ಸ್ವೀಕರಿಸಿ, ಈ ಅನ್ಯಾಯವಾಗದಂತೆ ನೋಡಿಕೊಳ್ಳುವ ಭರವಸೆ ನೀಡಿದ್ದಾರೆ. ಒಂದು ವೇಳೆ ಸರ್ಕಾರ ತನ್ನ ನಿರ್ಧಾರದೊಂದಿಗೆ ಮುಂದುವರೆದರೆ, ಕರ್ನಾಟಕ ರಕ್ಷಣಾ ವೇದಿಕೆ ಈ ಹೋರಾಟವನ್ನು ತೀವ್ರಗೊಳಿಸಬೇಕಾಗುತ್ತದೆ ಎಂದು ಗೌಡರು ನೇರವಾಗಿ ಎಚ್ಚರಿಕೆ ನೀಡಿದ್ದಾರೆ.
ಇನ್ನು ಹೊಗೇನಕಲ್ ಚಳವಳಿಯನ್ನು ಚಾಮರಾಜನಗರ ಜಿಲ್ಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತೀವ್ರಗೊಳಿಸಿದೆ. ಗಡಿ ಬಂದ್ ಕಾರ್ಯಕ್ರಮ ನಡೆದಿದೆ. ಒಂದು ದಿನದ ಚಾಮರಾಜನಗರ ಬಂದ್ ಸಂಪೂರ್ಣ ಯಶಸ್ವಿಯಾಗಿದೆ.
ಸರ್ಕಾರ ಇನ್ನೂ ಸುಮ್ಮನಿದ್ದರೆ ಹೊಗೇನಕಲ್ ಚಲೋ ನಡೆಸಬೇಕಾದೀತು ಎಂದು ಟಿ.ಎ.ನಾರಾಯಣಗೌಡರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.
ಇನ್ನು ಕರ್ನಾಟಕ ರಕ್ಷಣಾ ವೇದಿಕೆ ಮತ್ತೊಂದು ಮಹತ್ವದ ಹೋರಾಟ ನಡೆಸಿದೆ. ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆಯವರ ರಾಜೀನಾಮೆಗೆ ಕಾರಣವಾದ ಭ್ರಷ್ಟ ಸರ್ಕಾರದ ವಿರುದ್ಧ ನಾರಾಯಣಗೌಡರ ನೇತೃತ್ವದಲ್ಲಿ ಮಹಾತ್ಮಗಾಂಧಿ ಪ್ರತಿಮೆ ಮುಂಭಾಗ ಬೃಹತ್ ಪ್ರತಿಭಟನೆ ನಡೆದಿದೆ. ಸಂತೋಷ್ ಹೆಗಡೆಯವರು ಲೋಕಾಯುಕ್ತ ಸಂಸ್ಥೆಯ ಬಲವೃದ್ಧಿಗೆ ಕೋರಿರುವ ಎಲ್ಲ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು, ನ್ಯಾಯಮೂರ್ತಿಗಳ ಮನವೊಲಿಸಿ ರಾಜೀನಾಮೆ ಹಿಂದಕ್ಕೆ ಪಡೆಯುವಂತೆ ಮಾಡಬೇಕು ಎಂದು ನಾರಾಯಣಗೌಡರು ಒತ್ತಾಯಿಸಿದ್ದಾರೆ.
******
ಇದು ‘ಕರವೇ ನಲ್ನುಡಿಯ ಮೂರನೇ ಸಂಚಿಕೆ. ಪ್ರತಿ ಸಂಚಿಕೆಯೂ ವಿಭಿನ್ನವಾಗಿರಬೇಕು ಎಂಬುದು ನಮ್ಮ ಆಶಯ. ಹಾಗಾಗಿ ಈ ಬಾರಿ ಯಡಿಯೂರಪ್ಪರನವರ ನೇತೃತ್ವದ ಕರ್ನಾಟಕ ಸರ್ಕಾರದ ಎರಡು ವರ್ಷಗಳ ಪರಾಮರ್ಶೆಯನ್ನು ನಡೆಸಿದ್ದೇವೆ. ಈ ಸರ್ಕಾರ ತಳೆದ ಜನವಿರೋಧಿ ನೀತಿಯನ್ನು ಮುಚ್ಚುಮರೆಯಿಲ್ಲದೆ ಬಹಿರಂಗಪಡಿಸಿದ್ದೇವೆ. ಕನಿಷ್ಠ ಉಳಿದ ಮೂರು ವರ್ಷಗಳಲ್ಲಾದರೂ ಸರ್ಕಾರದ ಚಾಲಕ ಶಕ್ತಿಗಳು ಬದಲಾಗಲಿ, ಜನಪರವಾಗಿ ಚಿಂತಿಸಲಿ, ಕನ್ನಡಿಗರ ಆಶೋತ್ತರಗಳಿಗೆ ಕಿವಿಗೊಡಲಿ ಎಂಬುದು ನಮ್ಮ ಬಯಕೆ.
ಸಂಚಿಕೆಯಿಂದ ಸಂಚಿಕೆಗೆ ‘ನಲ್ನುಡಿಯ ಪ್ರಸಾರ ಸಂಖ್ಯೆ ಏರುತ್ತಲೇ ಇದೆ. ರಾಜ್ಯ ಹಾಗು ಹೊರರಾಜ್ಯಗಳಿಂದ ಪತ್ರಿಕೆಗೆ ಬೇಡಿಕೆಯ ಮಹಾಪೂರವೇ ಹರಿದು ಬರುತ್ತಿದೆ. ರಾಜ್ಯದ ಎಲ್ಲ ವಲಯದ ವಿದ್ವಜ್ಜನರು ಮುಕ್ತ ಮನಸ್ಸಿನಿಂದ ಈ ಪ್ರಯೋಗವನ್ನು ಮೆಚ್ಚಿ ಬರೆಯುತ್ತಿದ್ದಾರೆ.
ನಿಜ, ಕನ್ನಡ ಚಳವಳಿಯನ್ನು ಮುಖ್ಯ ಭೂಮಿಕೆಯಾಗಿಟ್ಟುಕೊಂಡು ಬರುವ ಪತ್ರಿಕೆಗಳು ಈಗ ಇಲ್ಲ. ‘ನಲ್ನುಡಿ ಆ ಕೊರತೆಯನ್ನು ನೀಗಿದೆ. ಅದು ನಮ್ಮ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ ಕೂಡ.
ಕನ್ನಡ ಚಳವಳಿಯಲ್ಲಿ ಸದಾ ತೊಡಗಿಕೊಳ್ಳುವ ಹಿರಿಯ ಸಾಹಿತಿಗಳಾದ ಚಂದ್ರಶೇಖರ ಪಾಟೀಲರ ಚಂಪಾಂಕಣ ಈ ಸಂಚಿಕೆಯಿಂದ ಆರಂಭಗೊಂಡಿದೆ. ಕನ್ನಡ ರಂಗಭೂಮಿಯ ಬೆಳವಣಿಗೆ ಕುರಿತಾದ ಲೇಖನಮಾಲಿಕೆಯೊಂದನ್ನು ಡಾ.ರಾಜಪ್ಪ ದಳವಾಯಿ ಆರಂಭಿಸಿದ್ದಾರೆ. ಪತ್ರಿಕೆಯ ಪ್ರಧಾನ ಸಂಪಾದಕ ದಿನೇಶ್ ಕುಮಾರ್ ಅವರ ದೇಸೀಮಾತು ಅಂಕಣ ಪ್ರಾರಂಭವಾಗಿದೆ.
ಸಾಕಷ್ಟು ಸಲಹೆಗಳೂ ಕೂಡ ಬರುತ್ತಿವೆ. ಎಲ್ಲವನ್ನೂ ಮುಕ್ತ ಮನಸ್ಸಿನಿಂದ ಸ್ವೀಕರಿಸಿದ್ದೇವೆ ಎಂದು ವಿನಯದಿಂದ ಹೇಳಲು ಬಯಸುತ್ತೇವೆ. ಈ ಪೈಕಿ ಕೆಲವು ಸಲಹೆಗಳನ್ನು ಈಗಾಗಲೇ ಕಾರ್ಯಗತಗೊಳಿಸಿದ್ದೇವೆ. ಮುಂದಿನ ಸಂಚಿಕೆಯಲ್ಲಿ ಮತ್ತಷ್ಟು ಪ್ರಯೋಗಗಳನ್ನು ಮಾಡಲಿದ್ದೇವೆ.
ತಿಪಟೂರಿನಿಂದ ಡಾ.ಅಬ್ದುಲ್ ಹಮೀದ್ ಅವರು ಸಂಚಿಕೆಗಳಲ್ಲಿ ಕಣ್ತಪ್ಪಿನಿಂದ ಆಗಿರುವ ಸಣ್ಣಪುಟ್ಟ ದೋಷಗಳನ್ನು ಎತ್ತಿ ತೋರಿಸಿದ್ದಾರೆ. ಅವರಿಗೆ ಧನ್ಯವಾದಗಳು.
ಕನ್ನಡ ನಾಡು-ನುಡಿ ಕುರಿತಾಗಿ ನೂರಾರು ಕವಿತೆಗಳನ್ನು ರಾಜ್ಯದ ಮೂಲೆಮೂಲೆಗಳ ಕವಿ-ಕವಯತ್ರಿಯರು ಕಳುಹಿಸುತ್ತಿದ್ದಾರೆ. ಎಲ್ಲವನ್ನೂ ಪ್ರಕಟಿಸಲು ಸಾಧ್ಯವಿಲ್ಲದೇ ಇರುವ ನಮ್ಮ ಅಸಹಾಯಕತೆಯನ್ನು ಅವರು ಅರ್ಥ ಮಾಡಿಕೊಳ್ಳುತ್ತಾರೆ ಎಂದು ಭಾವಿಸಿದ್ದೇವೆ.
ಆದರೆ ಕರ್ನಾಟಕ ರಕ್ಷಣಾ ವೇದಿಕೆ ಆರಂಭಿಸಿರುವ ಪ್ರಕಾಶನ ಸಂಸ್ಥೆ ‘ಗಂಗಾ ಪ್ರಕಾಶನ ತಿಂಗಳಿಗೊಂದು ಕೃತಿಯನ್ನು ಹೊರತರಲು ನಿರ್ಧರಿಸಿದೆ. ಈ ಪ್ರಕಾಶನದ ಮೂಲಕ ಕನ್ನಡ ನಾಡು-ನುಡಿ ಕುರಿತಾದ ಕವಿತೆಗಳದ್ದೇ ಒಂದು ಸಂಪುಟ ತರಲು ತೀರ್ಮಾನಿಸಿದ್ದೇವೆ. ಈ ಸಂಕಲನದಲ್ಲಿ ಕವಿತೆಗಳನ್ನು ಬಳಸಿಕೊಳ್ಳಲಾಗುವುದು.
ಚಂದಾದಾರರಿಗೆ ಒಂದು ಮಾಹಿತಿ: ಪತ್ರಿಕೆ ನಿಮಗೆ ಪ್ರತಿ ತಿಂಗಳ ೫ನೇ ತಾರೀಕಿನಿಂದ ೧೦ರೊಳಗೆ ತಲುಪುತ್ತದೆ. ಒಂದು ವೇಳೆ ತಲುಪದೇ ಇದ್ದ ಪಕ್ಷದಲ್ಲಿ ಒಂದು ದೂರವಾಣಿ ಕರೆ ಮಾಡಿ ತಿಳಿಸಿ.
ಪತ್ರಿಕೆಯನ್ನು ಓದಿದ ಮೇಲೆ ಅಭಿಪ್ರಾಯ ತಿಳಿಸಲು ಮರೆಯಬೇಡಿ.

No comments:

Post a Comment

ಹಿಂದಿನ ಬರೆಹಗಳು