Tuesday, May 17, 2011

ಮಹಿಳಾ ಸ್ವಾತಂತ್ರ್ಯ ಮತ್ತು ಹಕ್ಕುಗಳು

ಹೆಣ್ಣು ಇರುವಲ್ಲಿ ದೇವತೆಗಳು ಪೂಜಿಸಲ್ಪಡುತ್ತಾರೆ ಎಂಬ ನಾಣ್ಣುಡಿಯೇ ಇದೆ. ೨೧ನೇ ಶತಮಾನದಲ್ಲಿರುವ ನಾವು ಈ ಹಿಂದೆ ಕಳೆದ ಶತಮಾನಗಳ ಬರ್ಬರ ಶೋಷಣೆ, ಆಕ್ರಂದನ, ವಂಚನೆ, ಹಿಂಸೆಗಳನ್ನೆಲ್ಲ ನೋಡಿದಾಗ ಮೈ ಝುಮ್ಮೆನ್ನುತ್ತದೆ. ಯಾವತ್ತು ಹೆಣ್ಣಿಗೆ ಸ್ಥಾನಮಾನ ಇರಬೇಕು ಕೊಡಬೇಕು ಎಂಬುದು ಶಿಷ್ಟಾಚಾರದ ಮಾತೇ ಆಗಬಾರದು. ಅದು ಸಿದ್ಧಾಂತವು ಇರಬೇಕು ಅಂದಾಗ ಹೆಣ್ಣಿಗೆ ತುಂಬಾ ಬೆಲೆ. ಯಾವುದೇ ಗ್ರಂಥವಿರಲಿ, ಧರ್ಮವಿರಲಿ, ಪ್ರವಚನವಿರಲಿ ಅಲ್ಲಿ ಮೊದಲು ಮಾತನಾಡುವುದು ಹೆಣ್ಣಿನ ಬಗ್ಗೆ ಪೂಜ್ಯತೆಯ ಬಗ್ಗೆ ಗೌರವದ ಬಗ್ಗೆಯೇ. ಮೊದಲು ತಾಯಿಯಾಗಿ, ಮಗಳಾಗಿ, ಸೊಸೆಯಾಗಿ, ಮೊಮ್ಮಗಳಾಗಿ ಸ್ವೀಕರಿಸಲ್ಪಡುವ ಮನುಷ್ಯರು ಪ್ರೀತಿ ಪ್ರೇಮಗಳನ್ನು ಜೊತೆಯಾಗಿ ಬೆಳೆಸಿಕೊಳ್ಳುತ್ತೇವೆ. ಅದು ಸಹಜ ಧರ್ಮ.
ಬಹು ಹಿಂದೆ ಅಕ್ಷರ ಜಗತ್ತು ಇರಲಿಲ್ಲ. ಅಲ್ಲಿ ಏನಿದ್ದರೂ ಬೆಳಿಗ್ಗೆಯಿಂದ ರಾತ್ರಿಯವರೆಗೂ ದುಡಿಮೆಯೇ ಸಾಧನೆಯಾಗಿರುತ್ತಿತ್ತು. ಯಾರು ಹೆಚ್ಚು ಕೆಲಸ ಮಾಡುವರೋ ಅಲ್ಲಿ ಹೆಚ್ಚು ಹೆಚ್ಚು ಗೌರವಕ್ಕೆ ಪಾತ್ರರಾಗುವ ಸಂದರ್ಭ ಅದಾಗಿರುತ್ತಿತ್ತು. ಯಾವ ಯಾವ ಮನೆತನದಲ್ಲಿ ಜನ್ಮವೆತ್ತಿರುತ್ತಿದ್ದರೋ ಅಲ್ಲಿಯ ಸಂಸ್ಕಾರ, ಅಲ್ಲಿಯ ಪರಿಸರ, ಅಲ್ಲಿಯ ವಿಧಾನ ಅನುಕರಣೆ ಆಗಿರುತ್ತಿತ್ತು. ಗ್ರಾಮದಲ್ಲಿದ್ದವರಾದರೆ ಅಲ್ಲಿನ ಸಹಜ ಸಂಸ್ಕೃತಿ ಆಚರಣೆ ಜನಪದ ಜಗತ್ತು ಹಾಡು ಕುಣಿತ ಜಾತ್ರೆ ಹಬ್ಬ ಹರಿದಿನಗಳದೇ ಸಂಭ್ರಮ ಇರುತ್ತಿತ್ತು. ಅದು ಸಹಜವಾದ ಸಂತೋಷ, ಸೌಹಾರ್ದತೆ ಸಿಕ್ಕುತ್ತಿತ್ತು. ಇನ್ನು ಪಟ್ಟಣ ನಗರದಲ್ಲಾದರೆ ಅಲ್ಲಿನ ಸ್ಥಿತಿಯ ಕುರಿತು ಅಲ್ಲಿನ ನಾಗರಿಕತೆಯ ಕುರಿತು ಹಾವಭಾವಗಳು ಕೂಡ ಸಹಜವಾಗಿರುತ್ತವೆ. ಇಲ್ಲಿನ ಪಟ್ಟಣ, ನಗರ, ಗ್ರಾಮ, ಕುಗ್ರಾಮಗಳು ಏನೇ ಇರಲಿ ಒಟ್ಟಾರೆ ಹೆಣ್ಣಿನ ಬಗೆಗಿನ ಸಹಕಾರ ಸಹಾನುಭೂತಿ ಸೌಜನ್ಯ ಸಜ್ಜನಿಕೆಗಳು ಮುಖ್ಯ. ಊರುಗಳು ಮುಂದಿರಲಿ ಹಿಂದುಳಿದಾಗಿರಲಿ ಅದು ಅಲ್ಲ ಬೇಕಿರುವುದು ಹೆಣ್ಣಿಗೆ ಗಂಡಿನಷ್ಟೇ ಸಮಾನತೆ ಗೌರವ ಹಕ್ಕು ಮತ್ತು ಸ್ವಾತಂತ್ರ್ಯ. ಇದು ಇಲ್ಲದೆ ಹೋದರೆ ಯಾರಿಗೂ ಒಳಿತಿಲ್ಲ, ಹಿತವಿಲ್ಲ, ಭವಿಷ್ಯವೇ ಮಂಕು.
ಇಲ್ಲಿ ನಾನು ಹೇಳ ಹೊರಟಿರುವುದು ಹೆಣ್ಣಿನ ಸ್ವಾತಂತ್ರ್ಯ ಮತ್ತು ಹಕ್ಕಿನ ಬಗ್ಗೆ. ಸ್ವಾತಂತ್ರ್ಯ ಅಂದರೆ ಹೇಗಿರಬೇಕು ಒಂದು ಕುಟುಂಬದಲ್ಲಿ ಜನಿಸಿದ ಆಕೆಗೆ ದಿಗ್ಬಂಧನವಿರಬಾರದಷ್ಟೇ. ಮಗುವಾಗಿದ್ದಾಗ ತಾಯಿ ತಂದೆ ಪಕ್ಕದ ಕುಟುಂಬ ಓಣಿಯ ವಾರಿಗೆಯವರಿಂದ ಸಂಬಂಧದ ಅಂತರ ತಾಯಿ ತಂದೆಯರಿಗೆ ಗೌರವ ಸಹೋದರರ ಬಗೆಗಿನ ಕಾಳಜಿ, ಸಹೋದರಿಯ ಕುರಿತ ಕರುಳತನ ನೆರೆ ಹೊರೆಯವರೊಂದಿಗಿನ ಕಕ್ಕುಲತೆ ಎಲ್ಲ ಹೊಂದಿಯೇ ಬೆಳೆದಿರುತ್ತಾರೆ. ಹೆಣ್ಣಿನ ಒಳಿತು ಕೆಡಕಿನ ಬಗೆಗೆ ತಿಳುವಳಿಕೆ ಅರಿವು ಇದ್ದೇ ಇರುತ್ತದೆ. ಹೀಗಾಗಿ ಆಕೆಗೆ ಅತಿಯಾದ ಮಾತುಗಳು ಕಿರುಕುಳ ಇರಬಾರದು. ಹುಟ್ಟಿದ ಮನೆಯಿಂದಲೆ ಬೆಳೆದ ಮಗಳಿಗೆ ಕಿರಿಕಿರಿಯಾದರೆ ಮಾನಸಿಕವಾಗಿ ಕುಗ್ಗಿ ನಾನು ಹುಟ್ಟಲೇಬಾರದಿತ್ತು ಎಂಬ ಕೀಳರಿಮೆಗೆ ಒಳಗಾಗುತ್ತಾಳೆ. ಹೆತ್ತವರು ಒಡಹುಟ್ಟಿದವರು ಎಲ್ಲರು ತಿಳಿಯಬೇಕು.
ಈಗಿನ ೨೧ನೇ ಶತಮಾನದಲ್ಲಿ ಮೂಲಭೂತ ಹಕ್ಕು, ಸ್ವಾತಂತ್ರ್ಯದ ಹಕ್ಕು, ಶೋಷಣೆಯ ವಿರುದ್ಧದ ಹಕ್ಕು, ಅಭಿವ್ಯಕ್ತಿಯ ಹಕ್ಕು, ಶಿಕ್ಷಣದ ಹಕ್ಕು, ಸಮಾನತೆಯ ಹಕ್ಕು ಈ ಎಲ್ಲವು ತಿಳಿದಿವೆ. ಆಕೆಯೂ ಅರಿತಿದ್ದಾಳೆ. ಸಂವಿಧಾನದಲ್ಲಿ ಮಹಿಳೆಗೆ ಮೀಸಲಾತಿಯೂ ದೊರೆತಿದೆ. ಇವತ್ತಿನ ದಿನದಲ್ಲಿ ಹೆಣ್ಣು ಗುಲಾಮಳಾಗುವುದಾಗಲಿ, ಅಬಲೆ ಅನಿಸಿಕೊಳ್ಳುವುದಾಗಲಿ ಸಾಧ್ಯವಿಲ್ಲ. ಶಿಕ್ಷಣದ ಹಕ್ಕನ್ನು ಪಡೆದ ಮೇಲೆ ಸ್ವಾವಲಂಬನೆಯ ಸಿದ್ಧಾಂತ ವ್ಯಕ್ತವಾಗುತ್ತದೆ. ತಾನು ಪಡೆದ ವಿದ್ಯೆಯಿಂದ ಅರಿವಿನ ಗುರುವಿನಿಂದ ಗುರಿಯ ಕುರಿತು ಯೋಚಿಸುತ್ತಾಳೆ. ಗಂಡಿಗಿಂತಲು ಮನೆಯಲ್ಲಿ ಹೆಣ್ಣಿಗೆ ಬದುಕು ಸ್ವಾತಂತ್ರ್ಯ ಬೇಗನೆ ಅರ್ಥವಾಗಿಬಿಡುತ್ತದೆ. ಆರ್ಥಿಕ ಶೋಷಣೆ ಎಂಥವರಲ್ಲೂ ಜಾಗ್ರತೆ ಮೂಡಿಸುತ್ತದೆ. ಗಂಡಿನಷ್ಟು ಸಮಯ ವ್ಯಯ ಮಾಡುವುದಿಲ್ಲ. ಬರೀ ಮಾತಲ್ಲೇ ಕಾಲ ಕಳೆಯುವುದಿಲ್ಲ. ದೀರ್ಘವಾದ ಆಲೋಚನೆಯೊಂದಿಗೆ ಪರಿಹಾರಕ್ಕಾಗಿ ಕೈಚೆಲ್ಲದೆ ಏನಾದರೂ ದುಡಿಮೆ ಮಾಡಿ ಬದುಕು ಸಾಗಿಸುವ ಹಂಬಲ ತುಡಿಯುತ್ತಿರುತ್ತದೆ. ಹೀಗಾಗಿ ತಂದೆತಾಯಿಯ ಅಸಹಾಯಕತೆ, ಅಣ್ಣತಮ್ಮರ ನಿರುದ್ಯೋಗ, ತಂಗಿಯರ ಭವಿಷ್ಯ ಕಾಡುತ್ತಲೇ ನಿಸ್ಸಾಹಕರಾಗಿ ಬದುಕುವುದಕ್ಕಿಂತ ’ದುಡಿಮೆ’ಯ ಸ್ವಾವಲಂಬನೆಯೇ ಆಕೆಯಲ್ಲಿ ರೊಚ್ಚನ್ನು ಕಿಚ್ಚನ್ನು ಹುಟ್ಟಿಸಿ ಬದುಕನ್ನು ರೂಢಿಸುವುದನ್ನು ಕಲಿಸುತ್ತದೆ.
ಪ್ರತಿಯೊಂದು ಕುಟುಂಬದಲ್ಲಿ ನಾವು ನೋಡಲಾಗಿ ಎಲ್ಲರು ಮಾತಾಡುವುದು ಹೆಣ್ಣಿನ ಬಗ್ಗೆ ಚುರುಕಾಗಿದ್ದಾಳೆ. ಜಾಣೆಯಾಗಿದ್ದಾಳೆ. ಬಹಳ ತಿಳುವಳಿಕೆಯುಳ್ಳವಳಾಗಿದ್ದಾಳೆ. ಆಕೆ ಹೋದಲ್ಲಿ ಹೊಂದಿಕೊಂಡಿದ್ದಾಳೆ. ಪ್ರತಿಯೊಂದು ಮನೆಯಲ್ಲೂ ಆತರದ ಹೆಣ್ಣುಮಕ್ಕಳಿದ್ದರೆ.... ಎನ್ನುವ ಉದ್ಗಾರವನ್ನು ಎಲ್ಲರೂ ಕೇಳಿರುತ್ತೇವೆ, ನೋಡಿರುತ್ತೇವೆ, ಅನುಭವಿಸಿದ್ದೇವೆ ಕೂಡ. ಹಾಗಾದರೆ ನಾವು ಮೊದಲು ಮಾಡಬೇಕಾದ್ದು ಹೆಣ್ಣಿಗೆ ಕಡ್ಡಾಯ ಶಿಕ್ಷಣ, ನಂತರ ಆಕೆಗೆ ಗುರಿಯ ಬಗ್ಗೆ ಭವಿಷ್ಯದ ಬಗ್ಗೆ ನಿರ್ಧಾರ. ಎಷ್ಟು ಕಲಿತರು ಮುಸುರೆ ತಿಕ್ಕೋದು ತಪ್ಪಲ್ಲ ಎಂದು ಹೀಗಳಿಯುವುದು ಬೇಡ. ಹೆಣ್ಣಿನ ಜವಾಬ್ದಾರಿಗಳು ಯಾರೂ ಹೇಳಬೇಕಿಲ್ಲ ಪ್ರಕೃತಿಗನುಗುಣವಾಗಿ ಅದು ಹುಟ್ಟಿನೊಂದಿಗೆ, ತಾಯಿಯೊಂದಿಗೆ, ಅಜ್ಜಿಯೊಂದಿಗೆ ಬಳುವಳಿಯಾಗಿ ಬಂದೇ ಇರುತ್ತದೆ.
ಸಂವಿಧಾನದಲ್ಲು ವಿಧೇಯಕ ಮಂಡನೆಗಳು ತಿದ್ದುಪಡಿಯಾಗಿ ಶೇಕಡಾ ೨೨% ರಿಯಾಯಿತಿಯನ್ನು ನೀಡುವ ಕಾನೂನು ಜಾರಿಗೆ ಬಂದಾಗಿದೆ. ಹೀಗಾಗಿ ನಾವೆಲ್ಲ ಬರೀ ಯಾಂತ್ರಿಕವಾಗಿ ಯೋಚಿಸುವುದು ಬೇಡ. ನಾಗರಿಕ ಪ್ರಜ್ಞೆಯಿಂದ, ಸಮಾನತೆಯ ದೃಷ್ಟಿಯಿಂದ ಸಾಮಾಜಿಕ ಸುಧಾರಣೆಯಿಂದ, ಶೋಷಣೆಯ ಪರಿಣಾಮದಿಂದ ಇಂದು ಮಹಿಳೆ ಎಲ್ಲ ದೌರ್ಬಲ್ಯಗಳನ್ನು ಮೆಟ್ಟಿನಿಲ್ಲುವುದು ಅವಶ್ಯವಿದೆ. ಮಹಿಳೆಗೆ ಸ್ವಾತಂತ್ರ್ಯವು ಪೂರಕವಾಗಿದ್ದರಿಂದ ಎಲ್ಲ ನಾಗರಿಕರು ಸಬಲಗೊಳಿಸುವುದು ಸಮಾಜದ ಆದ್ಯ ಕರ್ತವ್ಯ. ಇಂದು ಸಮಾಜದಲ್ಲಿ ನಾವು ನೋಡುತ್ತಿರುವ ಹಾಗೆ ಬಹಳಷ್ಟು ಕುಟುಂಬಗಳ ನಿರ್ವಹಣೆ ಹೆಣ್ಣಿನಿಂದಲೇ ನಡೆಯುವಂತಹದ್ದು. ಈ ತಾಯಿ ತಾನು ಪಡೆದ ಮಕ್ಕಳನ್ನೆಲ್ಲ ತನ್ನೊಂದಿಗೆ ಸ್ವಾಭಿಮಾನ ಬಾಳು ಕಲಿಸಿ ದುಡಿಮೆಗೆ ಹಚ್ಚುತ್ತಾಳೆ. ತನ್ನ ಗಂಡನಂತೆ ನನ್ನ ಮಕ್ಕಳಾಗಬಾರದು. ಅವರೇನಿದ್ದರು ಸ್ವಂತ ಬಲದ ಮೇಲೆ, ಕಾಲ ಮೇಲೆ ನಿಂತು ಜೀವನ ನಡೆಸಲಿ ಎನ್ನುವ ಬಯಕೆ. ಆಜುಬಾಜಿನವರಲ್ಲು ಕೈ ಒಡ್ಡಬಾರದು. ಎಲ್ಲರು ಮೆಚ್ಚುವಂತೆ ನನ್ನ ಕುಟುಂಬ ಬದುಕಲೆನ್ನುವುದು ಹೆಣ್ಣೆ ಹೊರತು ಗಂಡಲ್ಲ. ಗಂಡನ ಬಗ್ಗೆಯೂ ತಾತ್ಸಾರ ಮಾಡದೆ ಮೂದಲಿಸದೆ ಆತನನ್ನು ಸಂಬಾಳಿಸಿಕೊಂಡು ಆತನಿಗೂ ಖರ್ಚನ್ನು ಬರಿಸಿ ಗಂಡನಿಗೂ ಗೌರವ ತಂದುಕೊಡುವ ಗುಣ ’ಹೆಣ್ಣಿ’ಗೆ ಇರುವುದನ್ನು ಸಾರ್ವತ್ರಿಕವಾಗಿಯೇ ತಿಳಿಯುತ್ತದೆ.
ಇಂಥ ಹೆಣ್ಣಿಗೆ ಸ್ವಾತಂತ್ರ್ಯ ಹಾಗೂ ಹಕ್ಕುಗಳು ವಂಚನೆಯಾಗದೆ ನೇರ ಸಿಗಲಿ. ಆಕೆಯ ಬಾಳು ನೆಟ್ಟಗಿದ್ದರೆ ಗಂಡಿನ ಬಾಳು ಅರಳುತ್ತದೆ. ಪ್ರಕೃತಿ ಸಹಜವಾದ ಸಂತಸ, ಸಮಾಧಾನ, ಒಲವು-ನಲಿವು, ಗೆಲುವು ಕೂಡ ಸಿಗುವುದರಲ್ಲಿ ಯಾವ ಅನುಮಾನಗಳು ಇಲ್ಲ.

ಅಕ್ಬರ್ ಸಿ. ಕಾಲಿಮಿರ್ಚಿ
ಭಾಗ್ಯನಗರ (ಕೊಪ್ಪಳ ಜಿಲ್ಲೆ), ದೂ: ೯೭೩೧೩೨೭೮೨೯

No comments:

Post a Comment

ಹಿಂದಿನ ಬರೆಹಗಳು