Tuesday, August 3, 2010

ಕೊಡವ ರಂಗಭೂಮಿ





ಕೊಡಗು ತನ್ನದೇ ಪ್ರಾದೇಶಿಕ ವೈಶಿಷ್ಟ್ಯಗಳಿಂದ ಕೂಡಿದೆ. ಅಲ್ಲಿನ ಭಾಷೆ, ಜನಾಂಗ ಕೊಡವ ಎಂಬ ಹೆಸರಿನಿಂದ ಗುರುತಿಸಲ್ಪಡುತ್ತದೆ. ಪ್ರಾದೇಶಿಕ ವ್ಯಾಪ್ತಿ ಸಿಕ್ಕದಿದ್ದರೂ ಕೊಡಗು ಹಲವು ವೈಶಿಷ್ಟ್ಯಗಳನ್ನೊಳಗೊಂಡ ಪ್ರದೇಶ. ನಿಸರ್ಗ, ಕಾಫಿ, ಟೀ ಮುಂತಾದ ಎಸ್ಟೇಟ್ ಮತ್ತು ಅರಣ್ಯೋತ್ಪನ್ನಗಳು ಅಲ್ಲಿ ಅಧಿಕ. ಎಲ್ಲಾ ಸಿನಿಮಾದ ಕ್ಯಾಮೆರಾಗಳು ಇಲ್ಲಿ ಆನ್ ಆಗಲೇಬೇಕು. ಮಿಲಿಟರಿಯಲ್ಲಿ ಒಂದು ರೆಜಿಮೆಂಟೇ ಇದೆ. ಕೊಡಗು ಎಂದರೆ ಕಡಿದಾದ ಬೆಟ್ಟ ಪ್ರದೇಶ ಎಂದರ್ಥ. ಕುರುಹಂ ಎಂಬ ಪದದಿಂದ ನಿಷ್ಪನ್ನವಾಗಿದೆ. ೨೩ ವಿವಿಧ ಜಾತಿ ಜನಾಂಗಗಳ ಬೀಡಿದು. ಬ್ರಿಟಿಷ್ ವಸಾಹತುಶಾಹಿಯ ಮುಖ್ಯ ನೆಲೆ ಕೊಡಗು. ಕಾರಣ ಅಲ್ಲಿನ ವಾತಾವರಣ ಮತ್ತು ಹೊಸದಾಗಿ ಆರಂಭವಾದ ಎಸ್ಟೇಟ್ ಕಲ್ಚರ್. ೧೮೬೭ರಲ್ಲಿ ಮೇಜರ್ ಎ.ಆರ್.ಕೋಲ್ ಕೊಡವ ಭಾಷೆಗೆ ಛಿooಡಿg ಉಡಿಚಿmmಚಿಡಿ ಎಂಬ ವ್ಯಾಕರಣ ರಚಿಸಿದ್ದಾನೆ. ೧೮೮೪ರಲ್ಲಿ ಡಾಕ್ಟರ್ ಅಪ್ಪಯ್ಯ ಎಂಬ ವೈದ್ಯ ಜಲರತ್ನಾಕರ ಎಂಬ ನೀರಿನ ಗುಣದೋಷ ಕುರಿತ ಕೃತಿ ಬರೆದಿದ್ದಾರೆ. ೧೯೦೨ರಲ್ಲಿ ಕೊಡವರ ಕುಲಾಚಾರದಿ ತತ್ತ್ವೋಜ್ಜೀವಿನಿ ೧೯೨೪ರಲ್ಲಿ ನಡೋರಿಯಂಡ ಚಿಣ್ಣಪ್ಪ ಅವರ ಪಟ್ಟೋಲೆ ಪಳಮೆ ಕೊಡವ ಸಂಸ್ಕೃತಿ ತಿಳಿಸುವ ಬಹುಮುಖ್ಯ ಕೃತಿಗಳು. ಕಾವೇರಿ ಜೀವ ನದಿಯಾದಂತೆ ಅದರ ಮಹಾತ್ಮೆ ಕಾವ್ಯ ಮತ್ತು ನಾಟಕಗಳಲ್ಲಿ ಮಾತು ಮಾತಿನಲ್ಲಿ ಹಾಡು ಕುಣಿತಗಳಲ್ಲಿ ಹಾಸು ಹೊಕ್ಕಾಗಿದೆ. ಕೊಡವ ಭಾಷೆಗೆ ಸ್ವಂತ ಲಿಪಿಯಿಲ್ಲ. ೧೯೦೬ರಲ್ಲಿ ಹರಿದಾಸ ಅಪ್ಪ ನೆರವಂಡ ಅಪ್ಪಚ್ಚು ಕವಿ ಕನ್ನಡ ಲಿಪಿ ಬಳಸಿ ತಮ್ಮ ಕೃತಿಗಳನ್ನು ಬರೆಯುವ ಮೂಲಕ ಕನ್ನಡ-ಕೊಡವ ಬಾಂಧವ್ಯಕ್ಕೆ ನಾಂದಿ ಹಾಡಿದ್ದಾರೆ.
ಕೊಡವ ರಂಗಭೂಮಿ ತನ್ನದೇ ಆದ ವಿಶಿಷ್ಟ್ಯತೆಗಳಿಂದ ಕೂಡಿದೆ. ಅದು ಮೊದಲಿಗೆ ಜನಪದ ರಂಗಭೂಮಿಯಿಂದ ಇಂದಿಗೂ ಜೀವಂತವಾಗಿದೆ. ಹುತ್ತರಿ ಹಬ್ಬ ಪೊಂಜೊಳೆರೂಯೆ ಮತ್ತು ಸೀನ್‌ವಾರ್ ಪ್ರಸಂಗಗಳು ನಾಟಕದ ಎಲ್ಲ ಲಕ್ಷಣಗಳನ್ನು ಹೊಂದಿದೆ. ಬೋಡ್‌ನೆಮ್ಮ ಹಬ್ಬದ ಬೋಡ್‌ತಳಿ ಪ್ರಸಂಗ ಮುಖ್ಯವಾಗಿ ನಾಟಕಗಳೇ ಆಗಿವೆ. ಘಟ್ಟದ ಕೆಳಗಿನವರ ಪ್ರಭಾವದಿಂದ ಯಕ್ಷಗಾನ, ಕಥಾ ಶ್ರವಣಗಳು ಅಲ್ಲಿ ಪ್ರಧಾನ ಪಾತ್ರ ವಹಿಸಿವೆ.
೧೮೯೦ರಲ್ಲಿ ತಿಪಟೂರು ನಾಟಕ ಕಂಪನಿ ಮಡಿಕೇರಿಯಲ್ಲಿ ಬೀಡು ಬಿಟ್ಟಿದಾಗ ಹರದಾಸ ಅಪ್ಪಚ್ಚುಕವಿ ಆ ನಾಟಕಗಳ ಅಭಿನಯ, ಸಂಭಾಷಣೆಗಳಿಂದ ಆಕರ್ಷಿತರಾಗಿ, ಕೆಲವು ನಟರ ಪರಿಚಯ ಮಾಡಿಕೊಂಡು ಅವರಿಂದ ನಾಟಕದ ಪದಗಳನ್ನು, ರಾಗ ಜ್ಞಾನವನ್ನು ಅಭ್ಯಾಸ ಮಾಡಿ ಅವರ ನಾಟಕಗಳಲ್ಲಿ ತಾವೂ ಸಣ್ಣಪುಟ್ಟ ಪಾತ್ರಗಳನ್ನು ಮಾಡುವ ಅವಕಾಶ ಪಡೆದುಕೊಂಡು ನಾಟಕ ಕಲೆಯಲ್ಲಿ ಸ್ವಲ್ಪ ನುರಿತರಾದರು. ನಂತರ ಕೊಡಗು ಬಿಟ್ಟು ಹೋಗುತ್ತಿದ್ದ ನಾಟಕ ಮಂಡಳಿಯೊಂದರ ರಂಗಪರಿಕರಗಳನ್ನು ತನ್ನ ಸ್ನೇಹಿತರ ಹಾಗೂ ಶ್ರೀಮಂತರ ಆರ್ಥಿಕ ನೆರವಿನಿಂದ ಖರೀದಿಸಿ, ಸಪ್ತಮಿತ್ರರ ಜೊತೆ ಚಂದ್ರಹಾಸ ಕಥಾ ಎಂಬ ನಾಟಕ ಕಲಿತು ೧೮೯೧ರಲ್ಲಿ ಪ್ರದರ್ಶಿಸಿದರು. ಆದ್ದರಿಂದ ಹರದಾಸ ಅಪ್ಪಚ್ಚು ಕವಿಯೇ ಕೊಡವ ರಂಗಭೂಮಿಯ ಆದ್ಯ ಪ್ರವರ್ತಕರು. ಅವರು ನಾಟಕಗಳನ್ನು ನೋಡಿ ಪ್ರೇರಿತರಾದರು. ಅಭಿನಯ ಕಲಿತರು ನಂತರ ನಾಟಕ ರಚನೆ ಮತ್ತು ಅದನ್ನು ಅಭಿನಯಿಸುವ ಮಂಡಳಿಯ ನೇತೃತ್ವವನ್ನೂ ವಹಿಸಿದರು. ಜೊತೆಯಲ್ಲಿ ಕೊಡಗಿಗೆ ಗುಬ್ಬಿ ಕಂಪನಿ, ಮಹಮ್ಮದ್ ವೀರ್ ಕಂಪನಿಯ ಪ್ರಭಾವವೂ ಇದೆ. ಅಪ್ಪಚ್ಚು ಕವಿಯ ನಾಟಕ ಮಂಡಳಿ ೧೯೦೬ರಲ್ಲಿ ಯಯಾತಿರಾಜ ನಾಟಕದೊಂದಿಗೆ ಹೊಸಶಕೆಯನ್ನು ಆರಂಭಿಸಿತು. ಅದೇ ವರ್ಷ ಸಾವಿತ್ರಿ ಎಂಬ ನಾಟಕ, ೧೯೦೮ರಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಮತ್ತು ೧೯೧೨ರಲ್ಲಿ ಶ್ರೀ ಕಾವೇರಿ ನಾಟಕಗಳು ಪ್ರದರ್ಶನ ಕಂಡವು.
ಮುಂದೆ ೧೯೫೮ರಲ್ಲಿ ಡಾ.ಐ.ಮಾ.ಮುತ್ತಣ್ಣ ಅವರ ಅಭಿಜ್ಞಾನ ಶಾಕುಂತಲದವರೆಗೆ ಕೊಡವ ನಾಟಕಗಳೇ ಇಲ್ಲ. ಇದೊಂದು ವಿಶೇಷ. ೧೯೫೯ರಲ್ಲಿ ಮುಕ್ಕಾಟಿಕ ಎಸ್.ಪೂವಯ್ಯ ವಿಧಿಮಹಿಮೆ ಎಂಬ ಧ್ರುವನ ಕತೆಯನ್ನಾಧರಿಸಿ ನಾಟಕ ಬರೆದಿದ್ದಾರೆ. ಶ್ರೀ ಕಾವೇರಿ ನಾಟಕ ಮುಂದೆ ಅನೇಕ ಅದೇ ರೀತಿಯ ನಾಟಕಗಳಿಗೆ ಪ್ರೇರಣೆ ನೀಡಿದೆ. ಆದಿ ಶ್ರೀ ಕಾವೇರಿ (ಬಿ.ಎಸ್.ಚಿಟ್ಟಿಯಪ್ಪ ೧೯೭೯) ಬ್ರಹ್ಮತೀರ್ಥ (ಕೊಳೇರ ಸನ್ನು ಕಾವೇರಿಪ್ಪ ೧೯೯೬) ೧೦೦ಕ್ಕೂ ಹೆಚ್ಚು ಪ್ರದರ್ಶನ ಕಂಡ ನಾಟಕ. ಹಾಗೆಯೇ ಮತ್ತೊಂದು ಸ್ಪೂರ್ತಿಯ ಕಣಜವೆಂದರೆ ಪಟ್ಟೋಲೆ ಪಳಮೆ ಕೊಡವರ ಸಂಸ್ಕೃತಿಯನ್ನು ಪ್ರತಿನಿಧಿಸುವ ಮಹತ್ವದ ಸಾಂಸ್ಕೃತಿಕ ಅಧ್ಯಯನ ಕೃತಿ ೧೯೨೪ರಲ್ಲಿ ಪ್ರಕಟವಾದರೂ ೭೦ರ ದಶಕದ ನಂತರ ಇದರ ಪ್ರಭಾವ ರಂಗಭೂಮಿಯ ಮೇಲೆ ಅಪಾರವಾಗಿ ಆಗಿದೆ. ಮಾಗುರು ಇಗ್ಗುತಪ್ಪ (ಕೋಳೇರ ಸ್ನನು ಕಾವೇರಪ್ಪ ೧೯೯೯) ಎವ್ವಮಕ್ಕದೇಬುವ (ಕಲಿಯಂಡ ಸಾಬು ಅಯ್ಯಣ್ಣ ೨೦೦೬) ಕಲ್ಲಕೆರೆ ಮಾದೇವಿ (ಕಲಿಯಂಡ ಸಾಬು ಅಯ್ಯಣ್ಣ ೨೦೦೬) ಮಾಸ್ತಿಯವರ ಚಿಕವೀರರಾಜೇಂದ್ರ ಕಾದಂಬರಿ ಚೌರೀರ ಅಪ್ಪಣ್ಣಾಂಡ ಸುತ್ತ (ಅಡ್ಡಂಡ ಸಿ.ಕಾರ್ಯಪ್ಪ ೧೯೮೮) ದಿವಾನ್ ಬೋಪಣ್ಣ (ಅಡ್ಡಂಡ ಸಿ.ಕಾರ್ಯಪ್ಪ ೧೯೮೯) ಚಿಕ್ಕವೀರರಾಜಂಡ ಬಾಳೋಪಾಟ್ (ಬಿದ್ದಂಡ ಎಸ್.ಚಿಟ್ಟಿಯಪ್ಪ ೧೯೯೧) ಅಂದ್ ನಡಂದದ್ (ಉಳಿಯಡ ಡಾಲಿ ಪೂವಯ್ಯ ೨೦೦೨) ರಾಜ ಲಿಂಗರಾಜನ ಕಾಮುಕ ಮುಖವನ್ನು ತೋರುವ ನಾಟಕ. ಕಿ.ರಂ.ನಾಗರಾಜರ ನೀಗಿಕೊಂಡ ಸಂಸ ನಾಟಕದ ರೀತಿಯಲ್ಲೋ ಅಮರಕವಿ ಅಪ್ಪಚ್ಚು ನಾಟಕ ರಚನೆಯಾಗಿದೆ. (ಅಡ್ಡಂಡ ಶ್ರೀ ಕಾರ್ಯಪ್ಪ ೧೯೯೪).
ಕೊಡವ ರಂಗಭೂಮಿ ಅನುವಾದದಿಂದಲೂ ತನ್ನನ್ನು ಸಮೃದ್ಧಿಗೊಳಿಸಿಕೊಂಡಿದೆ. ಡಾ.ಐ.ಮಾ ಮುತ್ತಣ್ಣ ಸಂಸ್ಕೃತ ಶಾಕುಂತಲವನ್ನು ೧೯೫೮ರಲ್ಲಿ ಅನುವಾದಿಸುವ ಮೂಲಕ ಹೊಸಶಕೆ ಆರಂಭಿಸಿದರು. ಕೆಲವು ಪ್ರಮುಖ ಅನುವಾದಿತ ನಾಟಕಗಳೆಂದರೆ: ದಂಗೆಕಿಂಜ ಮಿಂಞ (ಮೂಲ: ಪ್ರಸನ್ನ ಅವರ ದಂಗೆಯ ಮುಂಚಿನ ದಿನಗಳು ಅನು: ಅಡ್ಡಂಡ ಸಿ.ಕಾರ್ಯಪ್ಪ ೧೯೮೮). ಮಹತ್ವಾಕಾಂಕ್ಷಿ ಮಾಚಯ್ಯ (ಮೂಲ: ಶೇಕ್ಸ್‌ಪಿಯರ್‌ನ ಮ್ಯಾಕ್ಬೆತ್. ಅನು: ಅಡ್ಡಂಡ ಸಿ.ಕಾರ್ಯಪ್ಪ ೧೯೯೦) ಅಣ್ಣ ಚತ್ತ್‌ದ್‌ನಂದಾಜಿ, ಅಂಬುಬಿಲ್ಲ್ ನಾಕಾಚಿ (ಮೂಲ: ಶೇಕ್ಸ್‌ಪಿಯರ್‌ನ ಹ್ಯಾಮ್ಲೆಟ್. ಅನು: ಅಡ್ಡಂಡ ಸಿ.ಕಾರ್ಯಪ್ಪ (೧೯೯೬) ಕೊಡಗ್‌ಡ ಕೋಮಟಿ (ಮೂಲ: ಶೇಕ್ಸ್‌ಪಿಯರ್‌ನ ಮರ್ಚೆಂಡ್ ಆಫ್ ವೆನಿಸ್ ೧೯೯೬) ಪೆರ‍್ಚೋಳಿಯ (ಮೂಲ: ನಿಕಾಲೊಯ್ ಗೋಗಲ್ ಇನ್ಸ್‌ಪೆಕ್ಟರ್ ಜನರಲ್ ಕನ್ನಡ ಅನು: ಕೆ.ವಿ.ಸುಬ್ಬಣ್ಣ. ಕೊಡವ ಅನು: ಅಡ್ಡಂಡ ಸಿ.ಕಾರ್ಯಪ್ಪ (೧೯೮೭). ಬಿದ್ದು ಟೈಲರ್‌ನ ಪೊಣ್ಣ್ (ಮೂಲ: ಲೋರ್ಕಾ ಶೂಮೇಕರ್, ಕನ್ನಡ ಅನು: ಎಚ್.ಎಸ್.ಶಿವಪ್ರಕಾಶ್, ಕೊಡವ ಅನು: ಅಡ್ಡಂಡ ಸಿ.ಕಾರ್ಯಪ್ಪ (೧೯೯೩) ಬಾಬು ಪಟೇಲ (ಮೂಲ: ಮಳೆಯಾಳಂ ಪೌಲ್ ಸಕ್ಕಾರಿ, ಕೊಡವಾನುವಾದ: ಐನಂಡ ಎಂ.ಧನು ೧೯೯೬) ಮಿಲ್ಟ್ರಿಕಾರ (ಮೂಲ: ಆಂಟನ್ ಚೆಕಾವನ್ ದಿ ಬೇರ್, ಕೊಡವಾನುವಾದ: ಅಡ್ಡಂಡ ಸಿ.ಕಾರ್ಯಪ್ಪ ೨೦೦೫).
ಕೊಡವ ರಂಗಭೂಮಿ ಸಾಮಾಜಿಕ ವಸ್ತುವಿನ್ಯಾಸಕ್ಕೂ ತನ್ನದೇ ಆದ ಮಹತ್ವವನ್ನು ನೀಡಿದೆ. ಪಾಪಿಪಣ (ಬಿ.ಡಿ.ಗಣಪತಿ (೧೯೭೩) ಕೊಂಬ್‌ತಪ್ಪನ್ ಕೋಡ.(ಮನೆಯಂಡ ಸಿ.ಪ್ರಭು (೧೯೭೪) ನಾಗಿ (ಬಿ.ಎಸ್.ಚಿಟ್ಟಿಯಪ್ಪ (೧೯೭೧) ಪುದಿಯಕ್ಕಿಕೊಳ್ (ಬಿ.ಎಸ್.ಚಿಟ್ಟಿಯಪ್ಪ (೧೯೭೮) ಜಮ್ಮ (ಇಟ್ಟೀರ ಕೆ.ಬಿದ್ದಪ್ಪ (೧೯೮೦) ಬಿ.ಎಸ್.ಚಿಟ್ಟಿಯಪ್ಪ ಅವರು ಅತಿ ಹೆಚ್ಚು ಸಾಮಾಜಿಕ ನಾಟಕಗಳನ್ನು, ಬರೆದವರಾಗಿದ್ದಾರೆ. ಸೊಪನ ಅಡ್ಡಂಡ ಕಾವೇರಪ್ಪ ೧೯೯೭) ಪರಿಂಜ ಕಣ್ಣೀರ್ (ಕೋಳೇರ ಸನ್ನು ಕಾವೇರಪ್ಪ ೧೯೯೮) ಪೊಗೆ (ಮಂಡೀರ ಜಯಾ ಅಪ್ಪಣ್ಣ ೧೯೯೮) ಬಾಳ್ ಬಂಡಾಟ (ನಾಗೇಶ್ ಕಾಲೂರು ೨೦೦೧) ಬದ್‌ಲಾನ ಬಾಲ್ಯ (ಬೊಟ್ಟೋಳಂಡ ಮಿಟ್ಟು ಪೂಣಚ್ಚ ೨೦೦೪).
ನೀನಾಸಂನಿಂದ ಕಲಿತು ಬಂದ ಅಡ್ಡಂಡ ಸಿ.ಕಾರ್ಯಪ್ಪ ಸೃಷ್ಟಿ ಕೊಡವ ರಂಗ ಸ್ಥಾಪಿಸಿ ಅದರ ಮೂಲಕ ಕೊಡವ ರಂಗಭೂಮಿಗೆ ಭದ್ರ ಬುನಾದಿ ಹಾಕಿದರು. ಅವರು ಬೀದಿ ನಾಟಕಗಳನ್ನು ತಮ್ಮ ಅಭಿವ್ಯಕ್ತಿಯ ಮುಖ್ಯ ಮಾಧ್ಯಮವನ್ನಾಗಿ ಮಾಡಿಕೊಂಡಿದ್ದಾರೆ. ೧೯೮೦ರ ನಂತರ ಅಲ್ಲಿ ಬೀದಿ ನಾಟಕ ಹೊಸ ಚೈತನ್ಯ ಪಡೆಯಿತು. ೧೯೯೦ರಲ್ಲಿ ಕೊಡಗು ಏಕೀಕರಣ ರಂಗ ಆರಂಭವಾಗಿ ಪ್ರತ್ಯೇಕ ಕೊಡಗು ಬೇಡಿಕೆಗೆ ಬೀದಿ ನಾಟಕ ಸಮರ್ಥ ಮಾಧ್ಯಮವಾಗಿದೆ. ೧೯೯೫ರಿಂದ ಪರಿಸರ ಜಾಗೃತಿಗಾಗಿ ವಿವಿಧ ಸರ್ಕಾರಿ ಯೋಜನೆಗಳಿಗೂ ಬೀದಿ ನಾಟಕ ಕೊಡಗಿನಾದ್ಯಂತ ಜೀವಂತವಾಗಿದೆ.
ಕಾವೇರಿ ಕಲಾ ಮಂಡಳಿ ೧೯೮೬ ರಿಂದ ಮಡಿಕೇರಿಯಲ್ಲಿ ಕೊಡಂದೇರ ಎಂ.ಬೋಪಯ್ಯನವರ ನೇತೃತ್ವದಲ್ಲಿ ಆರಂಭವಾಯಿತು. ಬಿಇಎಲ್ ಕೊಡವ ಸಂಘ, ಕೊಡವ ತಕ್ಕ ಎಳ್ತ್‌ಕಾಂಡ್ ಕೂಟ ೧೯೮೧ರಿಂದ ಅಸ್ತಿತ್ವದಲ್ಲಿದೆ. ಕೂರ್ಗ್ ಫೌಂಡೇಶನ್ ಕೂಡ ರಂಗ ತರಬೇತಿ ಶಿಬಿರ ನಡೆಸುತ್ತದೆ.
ಹೀಗೆ ಕೊಡವ ರಂಗಭೂಮಿ ೧೨೦ ವರ್ಷಗಳಿಂದಲೂ ಸದಾ ಜೀವಂತವಾಗಿ ರಂಗಕಾವೇರಿಯಾಗಿ ಸಾಗಿ ಬಂದಿದೆ. ಅದು ಕನ್ನಡ ರಂಗಭೂಮಿಯ ಒಂದು ಅವಿಭಾಜ್ಯ ಅಂಗವೇ ಆಗಿದೆ. ಕೊಡಗಿನ ಸಂಪನ್ಮೂಲ, ಕೊಡವರ ಸಂಸ್ಕೃತಿಯ ಪ್ರತೀಕವಾಗಿ ಕೊಡಗಿಗೊಂದು ರಂಗಶಾಲೆ ತೀರಾ ಅಗತ್ಯವಾಗಿದೆ. ಕೊಡವರು ಸೈನ್ಯಕ್ಕೆ ಸೇರಿ ನಮ್ಮ ದೇಶ ಕಾಯುವುದು ಎಷ್ಟು ಮುಖ್ಯವೋ ಹಾಗೆಯೇ ರಂಗಶಾಲೆಯಲ್ಲಿ ಕಲಿತು ರಂಗ ಚಟುವಟಿಕೆಗಳಿಂದ ಕೊಡಗನ್ನು ರಂಗಭೂಮಿಯಿಂದ ಜೀವಂತವಾಗಿ ಇಡಬೇಕಾಗಿದೆ. ಕೊಡಗು ಚಾರಿತ್ರಿಕ ಅಂಶಗಳ ವಿಜೃಂಭಣೆಯಿಂದ ಹೊರಬಂದು ಸಮಕಾಲೀನ ಸಾಮಾಜಿಕ ಸಮಸ್ಯೆಗಳತ್ತ ಕೊಡವ ರಂಗಭೂಮಿ ಇಂದು ಹೆಚ್ಚು ಕ್ರಿಯಾಶೀಲ ಆಗಬೇಕಾದ ಅನಿವಾರ್ಯತೆ ಕೊಡವ-ಕನ್ನಡ ರಂಗಭೂಮಿ ಎರಡಕ್ಕೂ ಇದೆ. (ಪ್ರಸಾರಂಗ, ಮಂಗಳೂರು ವಿಶ್ವವಿದ್ಯಾಲಯ ಪ್ರಕಟಣೆ೨೦೦೬ ನೋಡಬಹುದು.)


ಡಾ.ರಾಜಪ್ಪ ದಳವಾಯಿ
ಉಪನ್ಯಾಸಕರು.

1 comment:

  1. Really appreciate for the hard work. But i found lot of mistakes in the family name and also the name of the persons.

    Eg:Mr. Chinnappa Family name is Nadikeriyanda but it has mentioned as Nadoriyanda.

    Ulliyada Dati Poovaiah mentioned as Uliyada Dali Poovaiah and many more....

    Please try to correct the same.

    Jai Karnataka
    With Appreciation,
    Thammaiah G C

    ReplyDelete

ಹಿಂದಿನ ಬರೆಹಗಳು