Tuesday, February 8, 2011

ಗಾನಲೋಕದ ಭೀಮಸೇನ



ಉಲ್ಲಾಸ

‘ಅವರು ಅದ್ಭುತ ಸಂಗೀತಗಾರ. ಸಂಗೀತ ಕಾರ‍್ಯಕ್ರಮಕ್ಕೆ ವ್ಯವಸ್ಥಾಪಕರು ಆಟೋದಲ್ಲಿ ಕರೆದೊಯ್ದರೂ ಬೇಸರ ಪಟ್ಟುಕೊಳ್ಳದ ಸರಳತೆ ಅವರದು. ಯಾರ ಹತ್ತಿರ ಒಳ್ಳೆಯ ಸಂಗೀತವಿದೆಯೋ ಅವರ ಸೇವೆ ಮಾಡಿ ತಮ್ಮ ಸಂಗೀತವಾಗಿಸಿಕೊಂಡವರು. ಹೀಗಾಗಿ ಭೀಮಸೇನ ಜೋಶಿ ಅವರದು ಭೀಮಸೇನ ಜೋಶಿ ಘರಾನಾ...’
-ಹೀಗೆಂದು ಪಂಡಿತ ಭೀಮಸೇನ ಜೋಶಿ ಅವರನ್ನು ಕುರಿತಂತೆ ಹೆಮ್ಮೆಯಿಂದ ಹೇಳಿದವರು ಹಿರಿಯ ಸಂಗೀತಗಾರ ಪಂಡಿತ್ ವಿನಾಯಕ ತೊರವಿ.
ಇದು ಅಕ್ಷರಶಃ ಸತ್ಯವೂ ಹೌದು. ಭೀಮಸೇನರ ಸರಳತೆ, ಸಂಗೀತವನ್ನು ಸಿದ್ಧಿಸಿಕೊಳ್ಳುವಲ್ಲಿನ ಅವರ ಬದ್ಧತೆ ಆ ಪರಿಯದ್ದು.
ಪಂಡಿತ್ ಭೀಮಸೇನ ಜೋಶಿ ಭಾರತೀಯ ಸಂಗೀತ ಕಂಡ ಅನನ್ಯ ಗಾಯಕ, ಅಪರೂಪದ ಸಾಧಕ. ಅವರದ್ದು ಮನಸು ತಟ್ಟುವ ಗಾಯನ. ಸಂಗೀತ ಮತ್ತು ಬದುಕನ್ನು ಒಂದೇ ಬಗೆಯಲ್ಲಿ ಕಂಡ ಭೀಮಸೇನ ಅಕ್ಷರಶಃ ಹಿಂದೂಸ್ತಾನಿ ಸಂಗೀತದ ಭೀಮಸೇನರೇ ಆಗಿದ್ದರು ಎಂದರೆ ಅತಿಶಯೋಕ್ತಿ ಅಲ್ಲ.
‘ಕರ್ನಾಟಕದ ಹೆಮ್ಮೆ ಗದಗ ಜಿಲ್ಲೆಯ ರೋಣ ಭೀಮಸೇನರ ಹುಟ್ಟೂರು. ೧೯೨೨ರ ಫೆಬ್ರವರಿ ೪ರಂದು ಜನಿಸಿದ ಭೀಮಸೇನ ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ ಸವಾಯಿ ಗಂಧರ್ವರ ಬಳಿ ಸಂಗೀತಾಭ್ಯಾಸ ಮಾಡಿದವರು. ಆದರೆ ಅವರು ತಮ್ಮ ಕರ್ಮಭೂಮಿಯನ್ನಾಗಿ ಆರಿಸಿಕೊಂಡಿದ್ದು ಮಹಾರಾಷ್ಟ್ರ್ರದ ಸಾಂಸ್ಕೃತಿಕ ನಗರಿ ಪುಣೆಯನ್ನು.
ಗದಗ ಜಿಲ್ಲೆಯ ಸಾಮಾನ್ಯ ಭೀಮಸೇನ ಸಂಗೀತದ ಮೂಲಕ ರಾಜ್ಯ ಮತ್ತು ದೇಶ ವಿದೇಶಗಳ ಸೀಮೋಲ್ಲಂಘನ ಮಾಡಿ ‘ಪಂಡಿತ ಭೀಮಸೇನ ಜೋಶಿ’ ಆದ ಸಂಗತಿ ಸಾಮಾನ್ಯವಾದ ಸಂಗತಿಯಲ್ಲ.
ಗದುಗಿನ ಭೂಸದ ಅಂಗಡಿಯೊಂದರ ಗ್ರಾಮಾಫೋನ್ ಮೂಲಕ ಬಿತ್ತರವಾಗುತ್ತಿದ್ದ ಉಸ್ತಾದ್ ಅಬ್ದುಲ್ ಕರೀಂ ಖಾನರ ಸಂಗೀತ ಕೇಳಿ ಮೈಮರೆಯುತ್ತಿದ್ದ ಹುಡುಗ ನೋಡನೋಡುತ್ತ್ತಿದ್ದಂತೆಯೇ ಹಿಮಾಲಯದಷ್ಟೇ ಎತ್ತರಕ್ಕೆ ಬೆಳೆದದ್ದು ನಿಜಕ್ಕೂ ಒಂದು ದಂತಕಥೆ!
ಬಹುಶಃ ಅನೇಕರಿಗೆ ತಿಳಿದಿರಲಿಕ್ಕಿಲ್ಲ. ಭೀಮಸೇನರು ಜಗತ್ತಿನ ೨೩ ದೇಶಗಳ ೬೭ ನಗರಗಳಲ್ಲಿ ಸಂಗೀತ ಕಾರ‍್ಯಕ್ರಮ ನೀಡಿದ್ದಾರೆ. ದೇಶದ ಬಹುತೇಕ ಕಲಾವಿದರು ತಮ್ಮ ಸಂಗೀತ ಪ್ರವಾಸ ಆರಂಭಿಸುವುದು ಯುರೋಪ್ ಅಥವಾ ಅಮೆರಿಕ ಖಂಡಗಳ ದೇಶಗಳಿಗೆ. ವಿಶೇಷವೆಂದರೆ ಭೀಮಸೇನರು ತಮ್ಮ ಗಾಯನ ಪ್ರವಾಸ ಆರಂಭಿಸಿದ್ದು ೧೯೬೪ರಲ್ಲಿ, ಅದೂ ಅಪಘಾನಿಸ್ತಾನದಿಂದ!
ಅವರದ್ದು ಗಂಡುಸ್ವರ...
ಭೀಮಸೇನ ಜೋಷಿ ಸ್ವರವೆತ್ತಿ ಹಾಡತೊಡಗಿದರೆಂದರೆ ಅಲ್ಲಿ ನಿಜಕ್ಕೂ ಗಂಧರ್ವ ಲೋಕವೇ ಸೃಷ್ಟಿಯಾಗುತ್ತಿತ್ತು. ಬಿಳಿಯ ದೊಗಳೆ ಪೈಜಾಮಾ, ನೆಹರೂ ಅಂಗಿ ಧರಿಸಿ ವೇದಿಕೆ ಏರಿದರೆಂದರೆ ಅಲ್ಲಿ ನೀರವ ಮೌನ. ಕ್ಷಣಕ್ಕೇ ನಿಧಾನವಾಗಿ ಅವರ ಕಂಚಿನ ಕಂಠ ಮೊರೆಯಿತೆಂದರೆ ನೆರೆದ ಮನಸ್ಸುಗಳು ಸಮ್ಮೋಹನಕ್ಕೆ ಒಳಗಾಗುತ್ತಿದ್ದವು. ಇಡೀ ಜನಸ್ತೋಮವೇ ಭಾವಪರವಶವಾಗುತ್ತಿತ್ತು.
ಪಂಡಿತ ಭೀಮಸೇನ ಜೋಶಿ ಅವರು ಸೃಷ್ಟಿಸುತ್ತ್ತಿದ್ದ ಗಂಧರ್ವ ನಗರಿಯ ಪರಿಯೇ ಆ ರೀತಿ ಇರುತ್ತಿತ್ತು. ಹಿಂದೂಸ್ಥಾನ ಸಂಗೀತ ಲೋಕದಲ್ಲಿ ಯಾರಲ್ಲೂ ಇಲ್ಲದ ಅಪ್ರತಿಮ ಸಂಪೂರ್ಣ ‘ಪುರುಷಕಂಠ’ ಅವರದ್ದಾಗಿತ್ತು ಎಂದು ಹಿಂದೂಸ್ಥಾನಿ ಕ್ಷೇತ್ರದ ದಿಗ್ಗಜರುಗಳೇ ಹೇಳುತ್ತಾರೆ.
ಈ ಗಂಡುಸ್ವರವೇ ಭೀಮಸೇನರಿಗೆ ಕೀರ್ತಿ ಮತ್ತು ಯಶಸ್ಸು ಎರಡನ್ನೂ ಮೊಗೆಮೊಗೆದು ಕಟ್ಟಿಕೊಟ್ಟಿದ್ದು!
ಭೀಮಸೇನರನ್ನು ಸಂಗೀತ ಕ್ಷೇತ್ರದಲ್ಲಿ ಬಹು ಎತ್ತರಕ್ಕೆ ಏರಿಸಿದ್ದು ಅವರ ಕಲಿಯುವಿಕೆಯ ಹಂಬಲ ಮತ್ತು ಸ್ವೀಕಾರ ಗುಣದಿಂದ. ಸವಾಯಿ ಗಂಧರ್ವರ ಬಳಿ ಗುರು ಶಿಷ್ಯ ಪರಂಪರೆಯಡಿ ಬರೋಬ್ಬರಿ ನಾಲ್ಕು ವರ್ಷ ಸಂಗೀತ ಕಲಿತರು.
ಸವಾಯಿ ಗಂಧರ್ವರ ಬಳಿ ನಾಲ್ಕು ವರ್ಷ ಸಂಗೀತ ಕಲಿತರೂ ಸವಾಯಿ ಗಂಧರ್ವರ ಶೈಲಿಗಿಂತ ಇವರದ್ದು ತೀರಾ ಭಿನ್ನ. ಇವರ ಗಾಯನವೇನಿದ್ದರೂ ಸವಾಯಿ ಗಂಧರ್ವರ ಗುರು ಉಸ್ತಾದ್ ಅಬ್ದುಲ್ ಕರೀಂ ಖಾನರ ಗಾಯನಕ್ಕೆ ಹೆಚ್ಚು ಹತ್ತಿರವಾಗಿತ್ತು. ಯಾಕೆಂದರೆ, ಬಾಲ್ಯದಲ್ಲಿ ಅಬ್ದುಲ್ ಕರೀಂ ಖಾನರ ಗಾಯನ ಭೀಮಸೇನರ ಮೇಲೆ ಬಹುಮಟ್ಟಿಗೆ ಪ್ರಭಾವ ಬೀರಿತ್ತು.
ಪ್ರಯೋಗಶೀಲ...
ಬಹುಶಃ ಸಂಗೀತ ಕ್ಷೇತ್ರದಲ್ಲಿ ಭೀಮಸೇನರಷ್ಟು ಪ್ರಯೋಗಶೀಲರು ಮತ್ಯಾರೂ ಇರಲಿಕ್ಕಿಲ್ಲ. ಇನ್ನೇನು ಸಿದ್ಧಿಸಿತು ಎನ್ನುವಾಗ ಅವರು ಮತ್ತೊಂದು ಸಿದ್ಧಿಯ ಕಡೆ ಹೆಜ್ಜೆ ಹಾಕುತ್ತಿದ್ದರು...ಅಲ್ಲೂ ಸಿಕ್ಕಷ್ಟನ್ನು ಮೊಗೆದು ಮತ್ತೆ ಇನ್ನೊಂದರ ಹುಡುಕಾಟ...ಹೀಗೆ ಇದ್ದಷ್ಟೂ ದಿನ ಹುಡುಕಾಟ ಮತ್ತು ಸಿದ್ಧಿಯ ಕಡೆ ತುಡಿದ ಜೀವ ಭೀಮಸೇನರದ್ದು.
ಸವಾಯಿ ಗಂಧರ್ವರ ಬಳಿ ಭೀಮಸೇನರು ಕಿರಾಣಾ ಘರಾಣಾದ ಶಾಸ್ತ್ರ ಶುದ್ಧ ಹಾಗೂ ಕಾರುಣ್ಯ ಸಂಗೀತ ಕಲಿಯಲು ಅವಕಾಶ ದೊರೆತರೂ ಅವರು ಮತ್ತೂ ಭಿನ್ನತೆಯ ಹಾದಿ ಹಿಡಿದರು. ಭೀಮಸೇನರ ವಿಶೇಷತೆ ಎಂದರೆ, ಜೈಪುರ- ಅತ್ರೌಲಿ, ಗ್ವಾಲೇರ್, ಆಗ್ರಾ ಘರಾಣೆಗಳಿಂದ ಅತ್ತುತ್ತಮ ಸ್ವರಗಳನ್ನು ಅಳವಡಿಸಿಕೊಂಡದ್ದು.
ಭೀಮಸೇನರ ಮತ್ತೊಂದು ವಿಶೇಷತೆ ಅಂದ್ರೆ ಅವರು ಯಾರಲ್ಲಿಯೂ ಹೆಚ್ಚು ಕಲಿಯಲಿಲ್ಲ. ಆದರೆ ಸಂಗೀತ ಗೀಳನ್ನು ಮನಪೂರ ಹಚ್ಚಿಕೊಂಡರು. ಈ ಸಂಬಂಧ ಹುಡುಕಾಟ ನಡೆಸಿದರು...ಸುತ್ತಿದರು....ಹೀಗೆ ಎಲ್ಲೆಲ್ಲಿ ಸುತ್ತಿದರೋ ಅಲ್ಲಲ್ಲಿ ಆಯಾ ಘರಾಣಿಗಳ ದೊಡ್ಡ ದೊಡ್ಡ ಬುವಾಜಿಗಳಿಂದ ವಿವಿಧ ಘರಾಣೆಗಳ ವೈಶಿಷ್ಟಗಳನ್ನು ಕಲಿತರು ಮತ್ತು ಅವೆಲ್ಲವನ್ನೂ ತಮ್ಮ ಸ್ವರ ಧರ್ಮಕ್ಕೆ ತಕ್ಕಂತೆ ಅಳವಡಿಸಿಕೊಂಡರು.
ಸಂತನಂತೆ...
ಇಂಥ ಅಮೋಘ ಕಂಠಸಿರಿಯ ಅಪರೂಪದ ಹಾಡುಗಾರನಿಗೆ ಯಶಸ್ಸು ಯಾವತ್ತಿಗೂ ತಲೆತಿರುಗಿಸಲಿಲ್ಲ. ಅಕ್ಷರಶಃ ಅವರು ಸಂತನಂತೆಯೇ ಬದುಕಿದವರು. ಭೀಮಸೇನರು ದೇಶದ ಮೊದಲ ಸಾಲಿನ ಗಾಯಕರಾದಾಗಲೂ ಸಂಗೀತ ಕಛೇರಿಗಳಿಗೆ ಹೋಗುವಾಗ ತಮಗೆ ಕಾರು ಬೇಕು, ಉಳಿದುಕೊಳ್ಳಲು ದೊಡ್ಡ ಹೋಟೆಲ್‌ಗಳೇ ಬೇಕು ಎಂದು ರಚ್ಚೆ ಹಿಡಿದು ಕೂತವರಲ್ಲ. ಅನ್ನ, ಸಾರು, ಚಟ್ನಿ ತಿಂದು ತಿಂದು ಚಾಪೆ ಮೇಲೇ ಮಲಗುತ್ತಿದ್ದರು. ಇವರು ಪಾಲ್ಗೊಳ್ಳುವ ಸಂಗೀತ ಕಛೇರಿಗಳಲ್ಲಿ ನೀಡುವ ಹಣಕಾಸಿನ ವಿಚಾರದಲ್ಲೂ ಎಲ್ಲೂ ತಂಟೆ ತಕರಾರು ಮಾಡಿಕೊಂಡವರಲ್ಲ. ಬಹುಮುಖ್ಯವಾಗಿ ಸಭೆಯಲ್ಲಿ ಲಕ್ಷ ಜನರಿರಲಿ, ಬೆರಳೆಣಿಕೆಯಷ್ಟು ಶೋತೃಗಳಿರಲಿ ಯಾವುದೇ ಕಾರಣಕ್ಕೂ ಭೀಮಸೇನರ ಸಂಗೀತ ಶೈಲಿಯಲ್ಲಿ ಭಿನ್ನತೆ ಕಾಣುತ್ತಿರಲಿಲ್ಲ.
ಸಿನಿಮಾ ನಂಟು
ಭೀಮಸೇನ ಜೋಶಿ ಹಲವು ಚಲನಚಿತ್ರಗಳಲ್ಲೂ ತಮ್ಮ ಸಂಗೀತಸುಧೆ ಹರಿಸಿದ್ದಾರೆ. ಅವರು ಹಾಡಿರುವ ಹಿಂದಿ ಚಲನಚಿತ್ರಗೀತೆ, ಕನ್ನಡ ಸಿನಿಮಾ ಮತ್ತು ಮರಾಠಿ ಹಾಡುಗಳು ಇವತ್ತಿಗೂ ಮನೆ ಮಾತು.
ಶಂಕರ್‌ನಾಗ್ ನಿರ್ದೇಶನದ ‘ನೋಡಿ ಸ್ವಾಮಿ ನಾವಿರೋದೆ ಹೀಗೆ’ ಚಿತ್ರದ ‘ಭಾಗ್ಯದ ಲಕ್ಷ್ಮೀ ಬಾರಮ್ಮಾ ಎಂಬ ಪುರಂದರ ದಾಸರ ಹಾಡು ‘ಬಿಭಾಸ್ ರಾಗದಲ್ಲಿದೆ. ಡಾ.ರಾಜ್ ಅಭಿನಯದ ಸಂಧ್ಯಾರಾಗ ಚಿತ್ರದ ‘ನಂಬಿದೆ ನಿನ್ನ ನಾದ ದೇವತೆಯೇ...’ ಗೀತೆ ‘ಪೂರ್ಯ ಕಲ್ಯಾಣ್ ರಾಗದಲ್ಲಿ ಹಾಡಿದ್ದರು.
ಭೀಮಸೇನರಲ್ಲಿ ವಿಶಿಷ್ಟ್ಯವೆನಿಸುವ ಹಾಡುಗಾರಿಕೆ ಸಾಮರ್ಥ್ಯವಿತ್ತು. ಬಹುಶಃ ಅದು ದೇವರು ಕೊಟ್ಟ ಕೊಡುಗೆಯೇ ಇರಬೇಕು. ವಿಲಂಬಿತ್ ಕಾಲದಲ್ಲಿ ಹಾಡುವಾಗ ಉಸಿರಿನ ನಿಯಂತ್ರಣ ಕಷ್ಟಸಾಧ್ಯ. ಅದು ಎಲ್ಲಾ ಗಾಯಕರಿಗೂ ಸುಲುಭವಾಗಿ ಸಿದ್ಧಿಸುವಂಥದ್ದಲ್ಲ. ಆದರೆ ಭೀಮಸೇನರು ಅದಕ್ಕೆ ಹೊರತಾಗಿದ್ದರು. ವಿಲಂಬಿತ್‌ನ ಒಂದು ಆವರ್ತವನ್ನು ಒಂದೇ ಉಸಿರಿನಲ್ಲಿ ಹಾಡುತ್ತಿದ್ದರು. ಅವರ ಉಸಿರು ನಿಯಂತ್ರಣ ಸಾಮರ್ಥ್ಯ ಅಚ್ಚರಿ ಮೂಡಿಸುವಂತಿತ್ತು.
ಕೊನೆಯ ಗಾಯನ
ಭೀಮಸೇನರು ಕರ್ನಾಟಕದಲ್ಲಿ ಕೊನೆಯ ಬಾರಿ ಹಾಡಿದ್ದು ೨೦೦೪ರ ಮೈಸೂರು ದಸರಾ ಮಹೋತ್ಸವದಲ್ಲಿ. ಆ ನಂತರ ಅವರ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರು ಮತ್ತೆ ಹಾಡಲಾಗಲಿಲ್ಲ.
ಕೇವಲ ಹಾಡುಗಾರಿಕೆಗಷ್ಟೇ ತಮ್ಮನ್ನು ಸೀಮಿತಗೊಳಿಸಿಕೊಳ್ಳದ ಭೀಮಸೇನ್ ಜೋಶಿ ಪುಣೆಯಲ್ಲಿ ಸವಾಯಿ ಗಂಧರ್ವರ ಪುಣ್ಯಸ್ಮರಣೆ ಅಂಗವಾಗಿ ಸಂಗೀತೋತ್ಸವವನ್ನೂ ಆಯೋಜಿಸುತ್ತಿದ್ದರು. ಆ ಮೂಲಕ ಲಕ್ಷಾಂತರ ಶ್ರೋತೃಗಳಿಗೆ ಸಂಗೀತದ ರಸದೌತಣ ನೀಡುತ್ತಿದ್ದರು. ಇಂಥದೊಂದು ಕಾರ‍್ಯಕ್ರಮದಿಂದಾಗಿ ಪ್ರವರ್ಧಮಾನಕ್ಕೆ ಬರುವ ಸಂಗೀತಗಾರರಿಗೆ ಒಂದು ಅಪೂರ್ವ ಅವಕಾಶ ಸಿಕ್ಕಂತಾಗಿತ್ತು. ಶಾಸ್ತ್ರೀಯ ಕಲೆಗಳಿಗೆ ಗ್ರಹಣ ಹಿಡಿದಂತಿರುವ ಈ ಸಂದರ್ಭದಲ್ಲಿ ಭೀಮಸೇನರು ಭಾರತೀಯ ಸಂಸ್ಕೃತಿಯ ಹರಿಕಾರನಂತೆ ಕೆಲಸ ಮಾಡಿ ಸೈ ಅಂತ ಅನ್ನಿಸಿಕೊಂಡವರು.
ಎಲ್ಲವೂ ಸರಿಯಾಗಿದ್ದರೆ ಇದೇ ಫೆಬ್ರವರಿ ೪ಕ್ಕೆ ಪಂಡಿತ್ ಭೀಮಸೇನ ಜೋಶಿ ೯೦ನೇ ವರ್ಷಕ್ಕೆ ಕಾಲಿಡುತ್ತಿದ್ದರು. ಆದರೆ ವಿಧಿಯ ಲೆಕ್ಕಾಚಾರವೇ ಬೇರೆ ಇತ್ತಲ್ಲಾ? ಕೊನೆಗೂ ಹಿಂದೂಸ್ಥಾನಿ ಸಂಗೀತ ಕ್ಷೇತ್ರದ ಭೀಮಸೇನ ಮೌನಕ್ಕೆ ಶರಣಾಗಿದ್ದಾರೆ...ಹಾಡು ಮುಗಿಸಿದ ಹಕ್ಕಿ ಬಾನಿನತ್ತ ಹಾರಿದೆ ಶಾಶ್ವತ. ಇನ್ನು ಉಳಿದಿರುವುದು ಮಾತ್ರ ಭೀಮಸೇನರ ಹಾಡುಗಳಷ್ಟೇ...

No comments:

Post a Comment

ಹಿಂದಿನ ಬರೆಹಗಳು