Tuesday, February 8, 2011

ಕೆಂಪೇಗೌಡರು ಕಟ್ಟಿದ ನಾಡಲ್ಲಿ ನುಡಿಹಬ್ಬ




ಟಿ.ಎ.ನಾರಾಯಣಗೌಡರು


ಆಕೆ ಲಕ್ಷ್ಮಿದೇವಿ, ನಾಡಪ್ರಭು ಕೆಂಪೇಗೌಡರ ಸೊಸೆ. ಸೋಮಣ್ಣ ಗೌಡರ (ದೊಡ್ಡವೀರಪ್ಪಗೌಡರು) ಪತ್ನಿ. ಬೆಂಗಳೂರೆಂಬ ಅದ್ಭುತ ನಾಡನ್ನು ಕಟ್ಟುವ ಸಂದರ್ಭದಲ್ಲಿ ಮಾವನವರು ಕೊನೆಯ ಕಾರ್ಯವಾಗಿ ಕಟ್ಟಿದ ಕೋಟೆ ಹೆಬ್ಬಾಗಿಲು ಪದೇ ಪದೇ ಕುಸಿದು ಬೀಳುತ್ತಿದ್ದಾಗ ಅದನ್ನು ಉಳಿಸಲೆಂದು ನಾಡಿಗೆ ಸಮರ್ಪಿಸಿಕೊಂಡ ವೀರಮಹಿಳೆ.
ನಾಡಪ್ರಭು ಕೆಂಪೇಗೌಡರು ಒಂದು ಬೃಹತ್ ನಗರಿಯನ್ನು ಕಟ್ಟುವ ಕಾರ್ಯವನ್ನು ಆರಂಭಿಸಿ ಅದನ್ನು ಸಂಪೂರ್ಣಗೊಳಿಸಿದ್ದರು. ಆದರೆ ಕೋಟೆಯ ಹೆಬ್ಬಾಗಿಲು ಮಾತ್ರ ಕಟ್ಟಿದಂತೆ ಕುಸಿದು ಬೀಳುತ್ತಿತ್ತು. ಹೀಗೆ ಕೋಟೆ ಹೆಬ್ಬಾಗಿಲು ಪದೇ ಪದೇ ಹಾಳಾಗುವುದಕ್ಕೆ ತಮ್ಮ ವಿರೋಧಿಗಳ ಕುತಂತ್ರ ಕಾರಣ ಎಂಬುದನ್ನು ಅವರು ಅರಿಯದಾಗಿದ್ದರು.
ಈ ಸಂದರ್ಭದಲ್ಲಿ ತುಂಬು ಗರ್ಭಿಣಿಯನ್ನು ಬಲಿ ಕೊಟ್ಟರೆ ಹೆಬ್ಬಾಗಿಲು ಉಳಿದುಕೊಳ್ಳುತ್ತದೆ ಎಂದು ಕ್ಷುಲ್ಲಕ ಉಪದೇಶ ನೀಡಿದವರು ಪುರೋಹಿತರು. ಇದನ್ನು ಕೆಂಪೇಗೌಡರು ಒಪ್ಪಲಿಲ್ಲ. ಇಂಥ ಅಮಾನವೀಯ ಕೃತ್ಯವನ್ನು ನಾನು ನಡೆಸಲಾರೆ ಎಂದು ಸಾರಾಸಗಟಾಗಿ ಹೇಳಿದರು. ಆದರೆ ಪ್ರಭುವಿನ ಸಂಕಟ ನೋಡಲಾಗದ ನಾಗರಿಕರು ಇಂಥ ಬಲಿಗೆ ತಾವು ಸಿದ್ಧರಿದ್ದೇವೆ ಎಂದರು. ಆದರೆ ಕೆಂಪೇಗೌಡರು ನಾಡಿನ ಯಾವುದೇ ತುಂಬುಗರ್ಭಿಣಿಯನ್ನೂ ನಾನು ಬಲಿಗೊಡಲಾರೆ, ಹೆಬ್ಬಾಗಿಲು ನಿಲ್ಲದಿದ್ದರೂ ಚಿಂತೆಯಿಲ್ಲ ಎಂದು ತೀರ್ಮಾನ ಕೈಗೊಂಡರು.
ಆದರೆ ವಿಧಿ ಬೇರೆಯದೇ ಆಟ ಹೂಡಿತ್ತು. ಕೆಂಪೇಗೌಡರ ಮನೆಯಲ್ಲೇ ಇದ್ದ ಜೀವವೊಂದು ಬಲಿಯಾಗಲು ತಯಾರಾಗಿ ನಿಂತಿತ್ತು. ಕೋಟೆ ಹೆಬ್ಬಾಗಿಲು ನಿಲ್ಲಲಿಲ್ಲವೆಂಬ ಕಾರಣಕ್ಕೆ ಸಂಕಟಪಟ್ಟು ಹಾಸಿಗೆ ಹಿಡಿದಿದ್ದ ಮಾವನವರ ಯಾತನೆಯನ್ನು ಸಹಿಸಲಾಗದ ಸೊಸೆ ಲಕ್ಷ್ಮಿದೇವಿ ನಿರ್ಧಾರವೊಂದಕ್ಕೆ ಬಂದಿದ್ದಳು. ಅದೊಂದು ದಿನ ನಸುಕಿನಲ್ಲೇ ಎದ್ದು ಕೋಟೆ ಹೆಬ್ಬಾಗಿಲ ಬಳಿ ತೆರಳಿ ತನ್ನ ಕತ್ತನ್ನೇ ಸೀಳಿಕೊಂಡು ಆತ್ಮಾರ್ಪಣೆ ಮಾಡಿಕೊಂಡರು. ಕೆಂಪೇಗೌಡರ ವಂಶದ ಕುಡಿಯೊಂದಿಗೆ ಮಹಾತಾಯಿ ಲಕ್ಷ್ಮಿದೇವಿ ಇಹಲೋಕ ತ್ಯಜಿಸಿದ್ದರು. ನಾಡಪ್ರಭು ಕೆಂಪೇಗೌಡರ ಇಡೀ ಕುಟುಂಬವೇ ಹೇಗೆ ಜನಾನುರಾಗಿಯಾಗಿತ್ತು ಎಂಬುದಕ್ಕೆ ಇದು ಸಾಕ್ಷಿ. ಕೆಂಪೇಗೌಡರ ತಂದೆ ಕೆಂಪನಂಜೇಗೌಡರು ವಿಜಯನಗರ ಅರಸರ ಬಲಗೈಯಂತಿದ್ದವರು. ವಿಜಯನಗರದ ಅರಸರ ಸಾಮಂತರಾಗಿದ್ದರೂ ಯಲಹಂಕದ ನಾಡಪ್ರಭುಗಳು ದಕ್ಷಿಣ ಭಾಗದಲ್ಲಿ ಸಾಮ್ರಾಟರಂತಿದ್ದರು. ದಂಗೆಯೆದ್ದ ಸಾಮಂತರನ್ನು ಹಣಿದು, ವಿಜಯನಗರ ಅರಸರಿಗೆ ಒಪ್ಪಿಸುತ್ತಿದ್ದ ಯಲಹಂಕ ನಾಡಪ್ರಭುಗಳು ಜನರಿಗಾಗಿಯೇ ಬದುಕಿದರು. ಕೆಂಪೇಗೌಡರು ಅತ್ಯಂತ ಸಾಹಸಿಗಳು. ಅವರ ಸಾಹಸದ ಫಲವೇ ಇವತ್ತಿನ ಬೆಂಗಳೂರು. ಹೊಸದಾದ ನಗರವೊಂದನ್ನು ಕಟ್ಟುವ ಕಲ್ಪನೆಯೇ ಸಾಹಸಮಯವಾದ್ದು. ಕೆಂಪೇಗೌಡರಿಗೆ ಆ ಇಚ್ಛಾಶಕ್ತಿಯಿತ್ತು. ಹೀಗಾಗಿಯೇ ಅವರು ನಗರ ನಿರ್ಮಾಣಕ್ಕೆ ಹೊರಟರು. ತಮ್ಮ ಕಲ್ಪನೆಯ ನಗರದಲ್ಲಿ ಎಲ್ಲ ಸಮುದಾಯ, ಕಸುಬಿನವರೂ ಗೌರವಯುತ ಜೀವನ ನಡೆಸಬೇಕು, ಈ ಉದ್ದೇಶಿತ ನಗರಿಯಲ್ಲಿ ಯಾವುದಕ್ಕೂ ಕೊರತೆಯಿರಬಾರದು ಎಂದು ಕೆಂಪೇಗೌಡರು ಮುಂದಾಲೋಚನೆ ಮಾಡಿದ್ದರು.
ಪೂರ್ವ, ಪಶ್ಚಿಮ, ದಕ್ಷಿಣ, ಉತ್ತರ ಹೀಗೆ ಎಲ್ಲಾ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಗಡಿ ನಿಷ್ಕರ್ಷಾ ಮಂಟಪ ಗೋಪುರಗಳನ್ನು ನಿರ್ಮಿಸಿದರು. ಹಾಗೆಯೇ ನಾಲ್ಕೂ ದಿಕ್ಕುಗಳಲ್ಲಿ ನಾಲ್ಕು ಮಹಾದ್ವಾರಗಳನ್ನು ನಿರ್ಮಿಸಿದರು.
ಒಟ್ಟು ೬೪ ಪೇಟೆಗಳನ್ನು ನಿರ್ಮಿಸಿದ ಕೀರ್ತಿ ಕೆಂಪೇಗೌಡರದ್ದು. ಬಹುಶಃ ಇಂಥ ಪೇಟೆಗಳನ್ನು ಇತಿಹಾಸದಲ್ಲಿ ಯಾವುದೇ ರಾಜ-ಮಹಾರಾಜರೂ ಇಷ್ಟು ದೂರದೃಷ್ಟಿಯಲ್ಲಿ ನಿರ್ಮಿಸಿರಲಾರರು.
ಅರಳೆಪೇಟೆ, ಅಕ್ಕಿಪೇಟೆ, ಕುಂಬಾರಪೇಟೆ, ರಾಗಿಪೇಟೆ, ಗಾಣಿಗರ ಪೇಟೆ, ಮಡಿವಾಳ ಪೇಟೆ, ಗೊಲ್ಲರಪೇಟೆ, ಹೂವಾಡಿಗರ ಪೇಟೆ, ಮಂಡಿಪೇಟೆ, ಅಂಚೆಪೇಟೆ, ಬಳೇಪೇಟೆ, ತರಗುಪೇಟೆ, ಸುಣ್ಣಕಲ್ ಪೇಟೆ, ಮೇದಾರ ಪೇಟೆ, ಕುರುಬರ ಪೇಟೆ, ಮುತ್ಯಾಲಪೇಟೆ, ಕುಂಚಿಟಿಗರ ಪೇಟೆ, ದೊಡ್ಡಪೇಟೆ, ಚಿಕ್ಕಪೇಟೆ, ಉಪ್ಪಾರಪೇಟೆ, ಕಲ್ಲಾರಪೇಟೆ, ತಿಗಳರ ಪೇಟೆ, ಮಾಮೂಲ್ ಪೇಟೆ, ನಗರ್ತಪೇಟೆ, ಸುಲ್ತಾನಪೇಟೆ, ಮನವರ್ತಪೇಟೆ, ಕಬ್ಬನ್‌ಪೇಟೆ, ಬಿನ್ನಿಪೇಟೆ.... ಹೀಗೆ ಸಾಗುತ್ತವೆ ಈ ಪಟ್ಟಿ. ಈ ಎಲ್ಲ ಪೇಟೆಗಳಿಗೆ ಕುಲಕಸುಬುದಾರರನ್ನು ಕರೆದುಕೊಂಡು ಬಂದು, ಅವರಿಗೆ ಸ್ಥಳ ನೀಡಿ ಅವರ ಜೀವನಕ್ಕೆ ಆಧಾರವಾದರ. ಒಂದು ನಗರವನ್ನು ಹೇಗೆ ಕಟ್ಟಬೇಕು ಎಂಬುದನ್ನು ಕೆಂಪೇಗೌಡರು ಹೀಗೆ ತೋರಿಸಿಕೊಟ್ಟಿದ್ದರು.
ಕೆರೆಕಟ್ಟೆಗಳಿಲ್ಲದೆ ಊರು-ಜನ ಇರಲಾಗದು. ಕೆರೆಗಳನ್ನು ಕಟ್ಟಿಸುವುದು ಕೆಂಪೇಗೌಡರ ವಿಶೇಷ ಆದ್ಯತೆಯಾಗಿತ್ತು. ಈ ಕಾರಣದಿಂದಲೇ ಅವರು ನೂರಾರು ಕೆರೆಗಳನ್ನು ಕಟ್ಟಿಸಿದರು. ಹೊಸ ನಗರದಲ್ಲಿ ಕುಡಿಯುವ ನೀರಿಗೆ, ಕೃಷಿ ಬಳಕೆಯ ನೀರಿಗೆ ಯಾವುದೇ ಕೊರತೆಯಾಗದಂತೆ ಈ ಕೆರೆ, ಕಟ್ಟೆ, ಕಲ್ಯಾಣಿಗಳನ್ನು ಕಟ್ಟಿಸಿದ್ದರು.
ಇಂದಿನ ಟ್ಯಾಂಕ್‌ಬಂಡ್, ರೈಲ್ವೆ ನಿಲ್ದಾಣ, ಸುಭೇದಾರ್ ಛತ್ರ ರಸ್ತೆಯಿಂದ ಗಾಂಧಿನಗರದವರೆಗಿನ ಪ್ರದೇಶದಲ್ಲಿ ಬೃಹತ್ ಪ್ರಮಾಣದ ಕೆರೆಯನ್ನು ಕೆಂಪೇಗೌಡರು ನಿರ್ಮಿಸಿದ್ದರು. ಧರ್ಮದೇವತೆ ಧಮಾಂಬುದಿಯ ಹೆಸರನ್ನು ಕೆರೆಗೆ ಇಡಲಾಗಿತ್ತು. ಕೆರೆಗೆ ಎರಡು ವಿಶಿಷ್ಟ ತೂಬುಗಳನ್ನು ಕಲ್ಪಿಸಲಾಗಿತ್ತು. ಒಂದು ತೂಬಿನ ಮೂಲಕ ಕೃಷಿ ಚಟುವಟಿಕೆಗಳಿಗೆ ನೀರು ಸರಬರಾಜು ಮಾಡಲಾಗುತ್ತಿತ್ತು. ಇನ್ನೊಂದು ತೂಬಿನಿಂದ ಅರಮನೆಗೆ ನೀರು ಸೌಕರ್ಯ ಕಲ್ಪಿಸಲಾಗಿತ್ತು. ಕೆರೆಯ ಪಕ್ಕದಲ್ಲೇ ನಾಡದೇವಿ ಅಣ್ಣಮ್ಮ ದೇವಿಯ ದೇಗುಲವನ್ನು ಕೆಂಪೇಗೌಡರು ನಿರ್ಮಿಸಿ, ಕೆರೆಯ ನಾಲ್ಕು ಮೂಲೆಗಳಲ್ಲಿ ನಾಲ್ಕು ಗೋಪುರಗಳನ್ನು ರಚಿಸಿದ್ದರು. ಧರ್ಮಾಂಬುದಿ ಕೆರೆಯೇ ಈಗ ಕೆಂಪೇಗೌಡ ಬಸ್ ನಿಲ್ದಾಣ ಮತ್ತು ಸುತ್ತಲಿನ ಜನವಸತಿ ಪ್ರದೇಶವಾಗಿದೆ.
ಇವತ್ತು ಸಂಪಂಗಿರಾಮ ನಗರವೆಂದು ಕರೆಯಲಾಗುವ ಮಹಾನಗರಪಾಲಿಕೆ ಬಳಿಯ ಪ್ರದೇಶದಲ್ಲಿ ಕೆಂಪೇಗೌಡರು ಇನ್ನೊಂದು ಕರೆಯನ್ನು ಕಟ್ಟಿದ್ದರು, ಅದೇ ಸಂಪಂಗಿ ಕೆರೆ. ಇನ್ನು ತಮ್ಮ ಕುಲದೇವತೆ ಕೆಂಪಮ್ಮನವರ ಹೆಸರಿನಲ್ಲಿ ಈಗಿನ ಬಸವನಗುಡಿಯಲ್ಲಿ ಕೆಂಪೇಗೌಡರು ಕಟ್ಟಿದ್ದು ಕೆಂಪಾಂಬುದಿ ಕೆರೆ. ೧೫೭೦ರಲ್ಲಿ ಈ ಕೆರೆ ಅಂಗಳದಲ್ಲೇ ಬಂಡಿಮಾಂಕಾಳಿ ದೇವಸ್ಥಾನವನ್ನು ಅವರು ನಿರ್ಮಿಸಿದ್ದರು. ಈ ಬೃಹತ್ ಕೆಂಪಾಂಬುದಿ ಕೆರೆಯ ಬಹುಪಾಲು ಈಗ ಗವಿಪುರ, ಹನುಮಂತನಗರ, ಶ್ರೀನಗರ ಮತ್ತು ರಾಘವೇಂದ್ರ ಕಾಲನಿ ಎಂಬ ಜನವಸತಿ ಪ್ರದೇಶಗಳಾಗಿ ಮಾರ್ಪಾಡಾಗಿವೆ.
ಕೆಂಪೇಗೌಡರು ಬೆಂಗಳೂರು ದಕ್ಷಿಣದ ಕೋಟೆಯ ಸಮೀಪ ಕಟ್ಟಿದ್ದು ಕಾರಂಜಿ ಕೆರೆ. ಇದು ಈಗ ಸಂಪೂರ್ಣ ನಾಶವಾಗಿದೆ. ಈ ದಕ್ಷಿಣದ ಹಲವು ಭಾಗಗಳಿಗೆ ನೀರು ಸರಬರಾಜಾಗುತ್ತಿತ್ತು.
ಹಲಸೂರು ಕೆರೆ ಇಂದು ಬೇರೆ ಬೇರೆ ಕಾರಣಗಳಿಗೆ ಖ್ಯಾತಿಯಾಗಿದೆ. ಆದರೆ ಇದನ್ನು ನಿರ್ಮಿಸಿದ ಕೆಂಪೇಗೌಡರು ಪಕ್ಕದಲ್ಲೇ ಸೋಮೇಶ್ವರ ದೇವಸ್ಥಾನವನ್ನು ಸ್ಥಾಪಿಸಿ, ಯಾತ್ರಾರ್ಥಿಗಳಿಗೆ ತಂಗುದಾಣ, ಸ್ನಾನಘಟ್ಟಗಳನ್ನು ನಿರ್ಮಿಸಿದ್ದರು.
ಇವಿಷ್ಟೇ ಅಲ್ಲದೆ, ಚನ್ನಮ್ಮನ ಕೆರೆ, ಗಿಡ್ಡಪ್ಪನ ಕೆರೆ, ಕೆಂಪಾಪುರ ಅಗ್ರಹಾರ ಕೆರೆ, ಮಾವಳ್ಳಿ ಸಿದ್ಧಾಪುರ ಕೆರೆ, ಯಡಿಯೂರು ಕೆರೆ, ವೈಯಾಲಿಕಾವಲ್ ಕೆರೆ, ವರ್ತೂರು ಕೆರೆ, ಅಕ್ಕಿತಿಮ್ಮನಹಳ್ಳಿ ಕೆರೆ, ಸ್ಯಾಂಕಿ ಕೆರೆ (ಹಿಂದೆ ಅದು ಗಂಧದ ಕೋಟಿ ಕೆರೆ) ಇತ್ಯಾದಿ ಕೆರೆಗಳನ್ನು ನಿರ್ಮಿಸಿದ್ದರು.
ಇಂಥ ಕೆರೆಗಳೇ ಬೆಂಗಳೂರು ನಗರದ ಅಂತರ್ಜಲವನ್ನು ವೃದ್ಧಿಸಿದವು. ಎಲ್ಲೆಡೆ ಹಸಿರು ಕಂಗೊಳಿಸಿತು. ಇವತ್ತು ಬೆಂಗಳೂರನ್ನು ಉದ್ಯಾನನಗರಿ ಎಂದು ಕರೆಯಲಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಕೆಂಪೇಗೌಡರ ದೂರದರ್ಶಿತ್ವ.
ಬಸವನಗುಡಿಯಲ್ಲಿ ಪ್ರತಿವರ್ಷವೂ ನಡೆಯುವ ಕಡಲೆಕಾಯಿ ಪರಿಶೆಯ ಕಾರಣಕರ್ತರೂ ಕೆಂಪೇಗೌಡರು. ಆ ದಿನಗಳಲ್ಲಿ ಕಡಲೆಕಾಯಿಯನ್ನು ಬೆಳೆಯುತ್ತಿದ್ದ ರೈತರು ತಮ್ಮ ಬೆಳೆಯೆಲ್ಲ ರಾತ್ರೋರಾತ್ರಿ ನಾಶವಾಗುತ್ತಿದ್ದುದರಿಂದ ಗಾಬರಿಗೊಂಡಿದ್ದರು. ಇದು ಕೆಂಪೇಗೌಡರ ಗಮನಕ್ಕೆ ಬಂದಿತು. ಕೆಂಪೇಗೌಡರು ಸ್ಥಳದಲ್ಲಿ ಬಸವಣ್ಣನ ಮೂರ್ತಿಯನ್ನು ಸ್ಥಾಪಿಸಿ, ಕಡಲೆಕಾಯಿ ನೈವೇದ್ಯವನ್ನು ಸಮರ್ಪಿಸಿ ತನ್ನ ರೈತರನ್ನು ಕಾಪಾಡುವಂತೆ ಪ್ರಾರ್ಥಿಸಿದರಂತೆ. ನಂತರ ರೈತರ ಬೆಳೆಗಳು ಉಳಿದವು. ತಮ್ಮ ಬೆಳೆ ಉಳಿಸಿದ ಕೃತಜ್ಞತೆ ಸಲ್ಲಿಸಲು ರೈತರು ಪ್ರತಿವರ್ಷ ಬಂದು ಕಡಲೆಕಾಯಿ ನೈವೇದ್ಯ ಸಮರ್ಪಿಸಿ, ಸುತ್ತಲ ಪ್ರದೇಶಗಳಿಂದ ಬರುವ ಜನರಿಗೆ ಕಡಲೆಕಾಯಿಯನ್ನು ಮಾರಾಟ ಮಾಡುವ ಪರಿಪಾಠ ಆರಂಭಿಸಿದರು.
ಕೆಂಪೇಗೌಡರು ಎಂಥ ಜನಾನುರಾಗಿಗಳಾಗಿದ್ದರು ಎಂಬುದಕ್ಕೆ ನೂರಾರು ಉದಾಹರಣೆಗಳಿವೆ. ಒಮ್ಮೆ ಮಳೆಯಾಗದೆ ಬರ ಬಂದು, ಜನ ಸಂಕಟದಲ್ಲಿ ಒದ್ದಾಡುತ್ತಿದ್ದಾಗ ಇಡೀ ಕೋಶವನ್ನೇ ಬರಿದುಮಾಡಿ ಜನರ ಸಹಾಯಕ್ಕೆ ನಿಂತ ಕೆಂಪೇಗೌಡರು ಆ ಮೂಲಕ ಅವರ ಕಣ್ಣೀರು ಒರೆಸಲು ಯತ್ನಿಸುತ್ತಾರೆ. ಇಂಥ ಸಂದಿಗ್ಧ ಸ್ಥಿತಿಯಲ್ಲಿ ನಾಡಿನ ಶ್ರೀಮಂತರ ಮುಂದೆ ಬೊಗಸೆಯೊಡ್ಡಲೂ ನಾಡಪ್ರಭುಗಳು ಹಿಂಜರಿಕೆ ಮಾಡಲಿಲ್ಲ. ಒಟ್ಟಿನಲ್ಲಿ ಜನರ ಸಂಕಟ ಬಗೆಹರಿಸಲು ಸಾಧ್ಯವಿರುವ ಯಾವ ಅವಕಾಶವನ್ನೂ ಅವರು ಕಳೆದುಕೊಳ್ಳುತ್ತಿರಲಿಲ್ಲ.
ಬೆಂಗಳೂರು ನಗರ ನಿರ್ಮಾಣದ ಸಂದರ್ಭದಲ್ಲಿ ಕೆಂಪೇಗೌಡರ ದೂರಾಲೋಚನೆ ಹಾಗು ಸಾಹಸಪ್ರವೃತ್ತಿಯನ್ನು ಗಮನಿಸಿದ್ದ ವಿಜಯನಗರದ ಅರಸರು, ನಗರ ನಿರ್ಮಾಣವಾಗುವವರೆಗೂ ಕಪ್ಪ-ಕಾಣಿಕೆ ಕೊಡುವ ಅಗತ್ಯವಿಲ್ಲ ಎಂದು ಕೆಂಪೇಗೌಡರಿಗೆ ಪ್ರೀತಿಯಿಂದ ಹೇಳಿದ್ದರಂತೆ. ಮಾತ್ರವಲ್ಲದೆ, ನಾಡಿನ ದಕ್ಷಿಣ ಭಾಗವನ್ನು ಅನ್ಯರ ಆಕ್ರಮಣಗಳಿಂದ ಕಾಯುವ ಹೊಣೆ ನಿಮ್ಮದು, ಆ ಶಕ್ತಿ ನಿಮಗೆ ಮಾತ್ರ ಇದೆ ಎಂದು ಬೆನ್ನುತಟ್ಟಿದ್ದರು. ಇಂಥ ಮಹೋನ್ನತ ಇತಿಹಾಸ ಬೆಂಗಳೂರಿನದ್ದು, ಕೆಂಪೇಗೌಡರದ್ದು.
ಬೆಂಗಳೂರಿನಲ್ಲಿ ೪೦ ವರ್ಷಗಳ ಬಳಿಕ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಈ ಹೊತ್ತಿನಲ್ಲಿ ಈ ನಮ್ಮ ವೈಭವದ ಬೆಂಗಳೂರು ಹುಟ್ಟಿದ ದಿನಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲೆಂದು ಈ ವಿಷಯಗಳನ್ನು ಪ್ರಸ್ತಾಪಿಸಿದೆ.
ದುರಂತವೆಂದರೆ ಕೆಂಪೇಗೌಡರ ಕುರಿತು ಇನ್ನೂ ಸರಿಯಾದ ಅಧ್ಯಯನಗಳು ನಡೆದಿಲ್ಲ. ಹಿಂದೆಯೇ ಕುತ್ಸಿತ ಮನಸ್ಸಿನವರು ಶಾಸನಗಳನ್ನು ನಾಶಪಡಿಸಿದ ಪರಿಣಾಮವಾಗಿ ಸಾಕಷ್ಟು ಮಾಹಿತಿಗಳು ಇತಿಹಾಸದ ಗರ್ಭದಲ್ಲೇ ಹೂತು ಹೋಗಿವೆ. ಆದರೂ ಸಮಕಾಲೀನ ಸಂಶೋಧಕರನೇಕರು ಕೆಂಪೇಗೌಡರ ಕಾಲದ ಶಾಸನಗಳು, ದತ್ತಿ ಪತ್ರಗಳು ಇತ್ಯಾದಿಗಳನ್ನು ಸಂಗ್ರಹಿಸಿ ಸಾಕಷ್ಟು ಬೆಳಕು ಚೆಲ್ಲಿದ್ದಾರೆ.
ಇವತ್ತು ಕೆಂಪೇಗೌಡರ ಸಾಧನೆಗಳ ಕುರಿತು ಹೇಳಲು ಹೊರಟರೆ ಅದನ್ನು ಜಾತಿಯ ಕಣ್ಣಲ್ಲಿ ನೋಡುವ ಜನರಿದ್ದಾರೆ. ಇಂಥ ಜನರೇ ಕೆಂಪೇಗೌಡರ ಸೊಸೆ ಲಕ್ಷ್ಮಿದೇವಿಯನ್ನು ಬಲಿತೆಗೆದುಕೊಂಡವರು.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರು ಇಡಬೇಕೆಂಬುದು ನಮ್ಮ ಹಲವು ದಿನಗಳ ಬೇಡಿಕೆ. ಹಾಗೆಯೇ ಮಂಗಳೂರು ವಿಮಾನ ನಿಲ್ದಾಣಕ್ಕೆ ರಾಣಿ ಅಬ್ಬಕ್ಕನ ಹೆಸರು, ಬೆಳಗಾವಿ ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣನ ಹೆಸರು, ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಕಿತ್ತೂರು ರಾಣಿ ಚೆನ್ನಮ್ಮನ ಹೆಸರು, ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿಯ ಹೆಸರು ಇಡಬೇಕೆಂಬ ಬೇಡಿಕೆಗಳನ್ನು ಇಟ್ಟುಕೊಂಡು ಬಂದಿದ್ದೇವೆ. ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು ಎಂಬ ಮಾತಿದೆ. ನಮ್ಮ ಇತಿಹಾಸವನ್ನು ಉಳಿಸುವ ದೃಷ್ಟಿಯಿಂದ ನಾವು ಇಂಥ ಹೆಸರುಗಳನ್ನು ಸ್ಮರಿಸಿಕೊಳ್ಳುವ ಕಾರ್ಯ ಮಾಡಬೇಕಾಗುತ್ತದೆ. ಇಲ್ಲವಾದಲ್ಲಿ ಇತಿಹಾಸವೇ ನಾಶವಾಗುತ್ತದೆ. ನಮಗೆ ಇಂಥ ಸುಂದರ ನಾಡನ್ನು ಕಟ್ಟಿಕೊಟ್ಟು ಹೋದ ಪ್ರಾತಃಸ್ಮರಣೀಯರಿಗೆ ನಾವು ಕೃತಘ್ನರಾಗಿಬಿಡುತ್ತೇವೆ.
ಕೆಂಪೇಗೌಡರು ಕಟ್ಟಿದ ಬೆಂಗಳೂರಿನಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಈ ಸಂದರ್ಭದಲ್ಲಾದರೂ ರಾಜ್ಯ-ಕೇಂದ್ರ ಸರ್ಕಾರಗಳು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಡುವ ಘೋಷಣೆಯನ್ನು ಮಾಡಬೇಕು. ಇದಿಷ್ಟೇ ಅಲ್ಲ, ರಾಜ್ಯವನ್ನು ಕಾಡುವ ಎಲ್ಲ ಸಮಸ್ಯೆಗಳ ಕುರಿತು ಪರಿಷತ್ತು ಸಮ್ಮೇಳನದಲ್ಲಿ ತೆಗೆದುಕೊಳ್ಳುವ ಹೊಸ-ಹಳೆಯ ನಿರ್ಣಯಗಳನ್ನು ಜಾರಿ ಮಾಡುವ ಇಚ್ಛಾಶಕ್ತಿಯನ್ನು ತೋರಬೇಕು.
ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎಂದೇ ಹೆಸರಾಗಿದೆ. ಸಾಹಿತಿಗಳು ಮಾತ್ರವಲ್ಲದೆ ಪ್ರತಿಯೊಬ್ಬ ಕನ್ನಡಾಭಿಮಾನಿಯೂ ಈ ಸಂಸ್ಥೆಯನ್ನು ಪ್ರೀತಿಸುತ್ತಾನೆ. ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ, ಜನಪದ - ಇವುಗಳ ಬೆಳವಣಿಗೆ ಹಾಗೂ ಸಂರಕ್ಷಣೆ ಮತ್ತು ಸಂವರ್ಧನೆಯ ಆಶಯದಿಂದ ದಿನಾಂಕ ೫-೫-೧೯೧೫ರಲ್ಲಿ ಕನ್ನಡಿಗರ ಈ ಸಂಸ್ಥೆ ಸ್ಥಾಪನೆಯಾಗಿದೆ. ಈ ಸಂಸ್ಥೆ ರೂಪುಗೊಳ್ಳಲು ಪ್ರೇರಣೆಯಾದವರು ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸರ್ ಎಂ.ವಿಶ್ವೇಶ್ವರಯ್ಯನವರು. ಬೆಂಗಳೂರಿನ ಶಂಕರಪುರ ಬಡಾವಣೆಯಲ್ಲಿ ಚಿಕ್ಕ ಕೊಠಡಿಯೊಂದರಲ್ಲಿ ಆರಂಭವಾದ ಅಂದಿನ ’ಕರ್ಣಾಟಕ ಸಾಹಿತ್ಯ ಪರಿಷತ್ತು’ ಇಂದು ಕನ್ನಡ ಸಾಹಿತ್ಯ ಪರಿಷತ್ತು ಆಗಿದೆ, ವಿಶಾಲವಾಗಿ ಬೆಳೆದಿದೆ. ಕನ್ನಡ ಸಾಹಿತ್ಯ ಪರಿಷತ್ತು ನಡೆಸುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂಘಟನೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸಾವಿರಾರು ಕಾರ್ಯಕರ್ತರು ಉತ್ಸಾಹದಿಂದ ತೊಡಗಿಕೊಂಡಿದ್ದಾರೆ. ಸಮ್ಮೇಳನದ ಮೆರವಣಿಗೆಯನ್ನು ರೂಪಿಸುವ ಸಮಿತಿಯ ಅಧ್ಯಕ್ಷನ ಹೊಣೆಯನ್ನು ನನಗೆ ನೀಡಲಾಗಿದೆ. ಅಭೂತಪೂರ್ವವಾದ ಮೆರವಣಿಗೆಯನ್ನು ದಸರಾ ಮೆರವಣಿಗೆ ಮಾದರಿಯಲ್ಲಿ ರೂಪಿಸುವ ಕನಸು ನನ್ನದು. ನುಡಿಹಬ್ಬದ ಕೈಂಕರ್ಯದಲ್ಲಿ ಇದು ನಮ್ಮ ಅಳಿಲು ಸೇವೆ.
ಈ ಸಮ್ಮೇಳನ ಹಿಂದೆಂದಿಗಿಂತಲೂ ಹೆಚ್ಚು ಯಶಸ್ವಿಯಾಗಿ ನಡೆಯಬೇಕಿದೆ. ಪರಭಾಷಿಗರ ಆರ್ಭಟದಿಂದ ಕಂಗಾಲಾಗಿರುವ ಬೆಂಗಳೂರಿನಲ್ಲಿ ಕನ್ನಡಿಗರು ತಮ್ಮತನವನ್ನು ಮೆರೆಸುವ, ನಮ್ಮ ಸಂಸ್ಕೃತಿ-ಪರಂಪರೆಯನ್ನು ಮೆರೆಸುವ ಸಂಭ್ರಮದ ಅವಕಾಶ ಇದಾಗಿದೆ. ಕನ್ನಡನಾಡಿನಲ್ಲಿ, ಅದರಲ್ಲೂ ವಿಶೇಷವಾಗಿ ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರಿನಲ್ಲಿ ಕನ್ನಡಿಗನೇ ಸಾರ್ವಭೌಮ ಎಂಬುದನ್ನು ನಾವು ಸಾರಬೇಕಿದೆ.
ಹೀಗಾಗಿ ಈ ಸಮ್ಮೇಳನದಲ್ಲಿ ಎಲ್ಲ ಕನ್ನಡಿಗರು ಪ್ರೀತಿ, ಅಭಿಮಾನದಿಂದ ಪಾಲ್ಗೊಂಡು ಸಮ್ಮೇಳನವನ್ನು ಯಶಸ್ವಿಗೊಳಿಸಬೇಕೆಂದು ವಿನಂತಿಸುತ್ತೇನೆ.

ಉದ್ಯಾನ ನಗರಿಯ ಒಡಲಿಲ್ಲ ಅಕ್ಷರ ಜಾತ್ರೆಯ ಪುಳಕ...



ನ. ನಾಗೇಶ್

ಅಕ್ಷರ ಜಾತ್ರೆಗೆ ಉದ್ಯಾನನಗರಿ ಅಣಿಗೊಂಡಿದೆ.
ಬರೋಬ್ಬರಿ ನಾಲ್ಕು ದಶಕಗಳ ನಂತರ ಬೆಂದಕಾಳೂರಿನಲ್ಲಿ ನುಡಿ ಜಾತ್ರೆಗೆ ಕನ್ನಡಮ್ಮ ಸಿಂಗರಿಸಿಕೊಳ್ಳುತ್ತಿದ್ದಾಳೆ. ಅಕ್ಷರ ಜಾತ್ರೆಯನ್ನು ಪ್ರತಿಯೊಬ್ಬ ಕನ್ನಡಿಗನ ಮನೆ-ಮನದ ಹಬ್ಬವನ್ನಾಗಿಸಲು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು ಹಲವು ಹೊಸತುಗಳಿಗೆ ನಾಂದಿ ಹಾಡಿದೆ.
ಇತಿಹಾಸ ಪ್ರಸಿದ್ಧವಾದ ಬೆಂಗಳೂರಿನ ಬಸವನಗುಡಿಯಲ್ಲಿರು ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಎಪ್ಪತ್ತೇಳನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಉದ್ಯಾನಗರಿಯ ಕನ್ನಡ ಮನಸ್ಸುಗಳಲ್ಲಿ ಹೊಸತೊಂದು ಹುರುಪು, ಜೀವಕಳೆ ತಂದಿದೆ.
ಫೆ.೪ರಿಂದ ಮೂರು ದಿನಗಳ ಕಾಲ ನಡೆಯುವ ಸಮ್ಮೇಳನದಲ್ಲಿ ಸಾಹಿತ್ಯ ಸರಸ್ವತಿಯದೇ ಆರಾಧನೆ. ವಿಚಾರಪೂರ್ಣ ಭಾಷಣಗಳು, ಸ್ವಾರಸ್ಯಪೂರ್ಣ ಚರ್ಚೆಗಳು, ಭರವಸೆಯ ಬೆಳಕಿನ ಕಾವ್ಯ, ಕನ್ನಡ ಸಂಸ್ಕೃತಿಯ ನಾನಾ ಮಗ್ಗಲುಗಳ ಅವಲೋಕನ, ನೆಚ್ಚಿನ ಲೇಖಕರು, ಇಷ್ಟಪಟ್ಟ ಪುಸ್ತಕಗಳು, ಮನರಂಜಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು, ರುಚಿಗಟ್ಟಾದ ತಿನಿಸುಗಳು, ಸಾಗರೋಪಾದಿಯ ಸಾಹಿತ್ಯ ಪ್ರೇಮಿಗಳು ...ಹೀಗೆ ಬೆಂಗಳೂರು ಮೂರು ದಿನಗಳ ಕಾಲ ಮಗ್ಗಲು ಬದಲಿಸಿದಾಗ ಜಂಜಡದ ಬದುಕಿನಲ್ಲಿ ರೋಸಿಹೋದ ಮನಸ್ಸಿನಲ್ಲಿ ನೆಮ್ಮದಿಯ ಹಾಯಿದೋಣಿ. ಇಂಥದ್ದೊಂದು ಸಮ್ಮೇಳನವನ್ನು ಮನ:ಪಟಲದಲ್ಲಿ ಸೆರೆಹಿಡಿದುಕೊಳ್ಳುವುದೇ ಒಂದು ಆನಂದ.
ಬೆಂಗಳೂರಿನಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನ ಹಲವು ಕುತೂಹಲಗಳಿಗೆ, ಬದಲಾವಣೆಗಳಿಗೆ ಮೈ ತೆರೆದಿದೆ. ಇದಕ್ಕೆ ಕಾರಣವೂ ಇದೆ. ರಾಜಧಾನಿಯಲ್ಲಿ ಪರಭಾಷಿಗರ ವಲಸೆ ಮಿತಿಮೀರಿದೆ. ಇಂಗ್ಲಿಷ್ ವ್ಯಾಮೋಹ, ಕಂಗ್ಲೀಷ್ ಭಾಷೆಗಳ ಭರಾಟೆ ಜೋರಾಗಿಯೇ ಇದೆ. ಪ್ರತಿಯೊಂದಕ್ಕೂ ಹೋರಾಟ ಮಾಡಿಯೇ ದಕ್ಕಿಸಿಕೊಳ್ಳಬೇಕಾದ ದು:ಸ್ಥಿತಿ ಕನ್ನಡದ್ದು. ಹಾಗಾಗಿ ಈ ಬಾರಿಯ ಸಮ್ಮೇಳನ ಜಡಬಿದ್ದ ಜನರಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಲು ಸಿದ್ದಗೊಂಡಿದೆ.
ಪ್ರತಿ ಬಾರಿ ಸಮ್ಮೇಳನ ನಡೆದಾಗಲೂ ಹೆಚ್ಚಿಗೆ ಸುದ್ದಿಯಾಗುವುದು ಊಟದ ವ್ಯವಸ್ಥೆ ಸರಿಯಿಲ್ಲ, ಕಿಟ್ ಸಿಕ್ಕಿಲ್ಲ, ವಾಸ್ತವ್ಯ ಪಕ್ಕಾಗಿಲ್ಲ, ವಿಚಾರ ಪೂರ್ಣ ಚರ್ಚೆಗಳಿಲ್ಲ, ಮತ್ತೊಂದು ಸಾಹಿತ್ಯ ಪ್ರಕಾರಕ್ಕೆ ಆಸ್ಪದ ನೀಡಿಲ್ಲ ...ಹೀಗೆ ಅಪಸವ್ಯಗಳದೇ ದೊಡ್ಡ ಸದ್ದು. ಇದನ್ನೆಲ್ಲ ಗಮನಿಸಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ನಲ್ಲೂರು ಪ್ರಸಾದ್ ಅವರು, ಈ ಬಾರಿ ಇಂತಹ ಯಾವುದೇ ಗೊಂದಲಗಳಿಗೆ ಆಸ್ಪದ ಕೊಡದೆ, ಅಚ್ಚುಕಟ್ಟಾಗಿ, ಮಾದರಿ ರೂಪದಲ್ಲಿ ಸಮ್ಮೇಳನವನ್ನು ಆಯೋಜಿಸುತ್ತಿದ್ದಾರೆ.
ಒಂದು ಸಮ್ಮೇಳನವನ್ನು ಯಶಸ್ವಿಗೊಳಿಸುವುದು ಸುಲಭದ ಮಾತಲ್ಲ. ಯಶಸ್ಸಿನ ಬೆನ್ನ ಹಿಂದೆ ನೂರಾರು, ಸಾವಿರಾರು ಕೈಗಳ ಅವಿರತ ದುಡಿಮೆ ಬೇಕಾಗುತ್ತದೆ. ಪ್ರತಿಯೊಂದನ್ನು ಅಚ್ಚುಕಟ್ಟಾಗಿ ಅಣಿಗೊಳಿಸಬೇಕಾದ ಸೂಕ್ಷ್ಮತೆಯ ಅಗತ್ಯವಿರುತ್ತದೆ. ಸೂಕ್ತ ವ್ಯಕ್ತಿಗಳಿಗೆ ಅರ್ಹ ಜವಾಬ್ದಾರಿಗಳನ್ನು ನೀಡಬೇಕಾಗುತ್ತದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಟ್ಟಿಗೆ ಹೆಜ್ಜೆ ಇಟ್ಟು ಯಶಸ್ಸಿನ ಹಾದಿಯಲ್ಲಿ ಪಯಣಿಸಬೇಕಾಗುತ್ತದೆ. ಹಲವು ಮನಸ್ಸುಗಳನ್ನು ಒಂದಾಗಿಸಿ ಕನ್ನಡ ಕಟ್ಟುವ ಕಾಯಕಕ್ಕೆ ಕನ್ನಡದ ತಂಡವನ್ನೇ ಕಟ್ಟಬೇಕಾಗುತ್ತದೆ.
ಇದೆಲ್ಲದರ ಅರಿವಿರುವ ಡಾ.ನಲ್ಲೂರು ಪ್ರಸಾದ್ ಅವರು, ಈ ಎಲ್ಲಾ ಕಾರ್ಯವನ್ನು ಅತ್ಯಂತ ಎಚ್ಚರಿಕೆಯಿಂದಲೇ ಮಾಡಿದ್ದಾರೆ. ಬೆಂಗಳೂರಿನಲ್ಲಿ ನೆಲೆ ಕಂಡುಕೊಂಡಿರುವ ಸಂಸ್ಥೆಗಳು, ಕನ್ನಡ ಕಾಯಕದಲ್ಲಿ ತೊಡಗಿಸಿಕೊಂಡಿರುವ ಕನ್ನಡ ಪರ ಸಂಘಟನೆಗಳು, ಸೇವಾ ಸಂಸ್ಥೆಗಳು ಎಲ್ಲವನ್ನೂ ಒಂದೆಡೆ ಕಲೆ ಹಾಕಿ ಕಾರ್ಯಕ್ರಮದ ಸ್ವರೂಪ ವಿವರಿಸಿ, ಅರ್ಥಪೂರ್ಣ ಆಚರಣೆಗೆ ಏನೆಲ್ಲ ಆಗಬೇಕೋ ಎಲ್ಲವನ್ನೂ ಕೇಳಿ, ಬೆಂಗಳೂರಿನಲ್ಲಿ ಕನ್ನಡದ ವಾತಾವರಣ ಸೃಷ್ಟಿಸಲು ಶ್ರಮಿಸಿದ್ದಾರೆ.
ಕನ್ನಡ ತಾಯಿಯ ನುಡಿ ತೇರಿಗೆ ನಿಘಂಟು ತಜ್ಞ ಪ್ರೋ.ಜಿ.ವೆಂಕಟಸುಬ್ಬಯ್ಯ ಅವರಂತಹ ಘನ ಪಾಂಡಿತ್ಯದ, ಹಿರಿ ಜೀವವನ್ನು ಸಾರಥಿಯನ್ನಾಗಿಸಿದ್ದು ಸಮ್ಮೇಳನದ ಮೊದಲ ಯಶಸ್ಸು ಎಂದೇ ಹೇಳಬೇಕಾಗುತ್ತದೆ. ವೆಂಕಟಸುಬ್ಬಯ್ಯನವರಿಗೆ ಕನ್ನಡ ಭಾಷೆ, ನೆಲ, ಜಲ, ವಿಚಾರಗಳ ಕುರಿತಂತೆ ‘ಇದಂ ಮಿತ್ಥಂ’ ಎಂದು ಮಾತನಾಡುವ ಎದೆಗಾರಿಕೆ ಇದೆ. ಹಿರಿಯ ಜೀವಕ್ಕೆ ಕನ್ನಡದ ಕುರಿತಾದ ಅವರಷ್ಟೇ ಹಿರಿಯದಾದ ಕನಸುಗಳಿವೆ. ಅವುಗಳನ್ನು ನನಸಾಗಿಸುವ ಉತ್ಸಾಹ, ಹುಮ್ಮಸ್ಸು ಇಳಿ ವಯಸ್ಸಿನ ಮನಸ್ಸಿನಲ್ಲಿ ಈಗಲೂ ಇದೆ. ಸಮ್ಮೇಳನಾಧ್ಯಕ್ಷರಾಗಿ ಇವರ ಆಯ್ಕೆಯನ್ನು ಎಲ್ಲರೂ ತಕರಾರಿಲ್ಲದೇ ಒಪ್ಪಿಕೊಂಡಿದ್ದಾರೆ.
ಸಾರೋಟಕೆ ಸಾಟಿಯುಂಟೆ
ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ವಿಶಿಷ್ಠ ಮಾದರಿಯ ರಥವನ್ನು ವಿನ್ಯಾಸಗೊಳಿಸಲಾಗಿದೆ. ೧೫ ಅಡಿ ಎತ್ತರ, ೧೫ ಅಡಿ ಉದ್ದದ ರಥದಲ್ಲಿ ಸಮ್ಮೇಳನಾಧ್ಯಕ್ಷರು, ಅವರ ಪತ್ನಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ಉರವಣಿಗೆ ನಡೆಯಲಿದೆ. ರಥದ ಮುಂಭಾಗ ಸಾರಥಿ, ಮೇಲ್ಭಾಗ ಛತ್ರಿ, ಕನ್ನಡ ಧ್ವಜ, ಜೊತೆಗೆ ಆಕರ್ಷಕ ಚಿತ್ರಕಲೆಯನೊಳಗೊಂಡ, ಚಿನ್ನದ ಬಣ್ಣ ಲೇಪಿತ ವಿಶಿಷ್ಠ ಸಾರೋಟ ಈ ಬಾರಿ ಸಮ್ಮೇಳನದ ಹಲವು ವಿಶೇಷಗಳಲ್ಲಿ ಪ್ರಮುಖವಾದುದಾಗಿದೆ.
ಸಮ್ಮೇಳನದ ಮೆರವಣಿಗೆಯ ಸಾರಥ್ಯವನ್ನು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಟಿ.ಎ.ನಾರಾಯಣಗೌಡರಿಗೆ ವಹಿಸಲಾಗಿದೆ. ಈ ಬಾರಿಯ ಸಮ್ಮೇಳನವನ್ನು ಅತ್ಯಂತ ವಿಶಿಷ್ಠವಾಗಿ, ವೈಭವೋಪೇತವಾಗಿ ನೆರವೇರಿಸಲು ನಿರ್ಧರಿಸಿ ಈ ಮಹತ್ತರ ಕಾರ್ಯವನ್ನು ನಾರಾಯಣಗೌಡರು ವಹಿಸಿಕೊಂಡಿದ್ದಾರೆ. ನಾರಾಯಣ ಗೌಡರ ಉಸ್ತುವಾರಿಕೆ ಅಂದ ಮೇಲೆ ಅಲ್ಲೊಂದು ವಿಶೇಷತೆ ಇರಲೇಬೇಕು. ವೈಭವದ ಭರದಲ್ಲಿ ಅರ್ಥ ಕಳೆದುಕೊಳ್ಳದಂತೆ, ಶಿಸ್ತಿನ ಎಲ್ಲೆ ಮೀರದಂತೆ ನೋಡಿದವರು ಮೆಚ್ಚಿ ಸೈ ಎನ್ನುವಂತೆ, ತಾಯಿಯಂತ ಅಕ್ಕರೆಯಿಂದ, ಪ್ರೀತಿಯಿಂದ ಕೊಟ್ಟ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಛಾತಿ ಅವರಲ್ಲಿದೆ. ಹಾಗಾಗಿಯೇ ಇಂತಹದ್ದೊಂದು ಜವಾಬ್ದಾರಿಯನ್ನು ನಾರಾಯಣಗೌಡರು ವಹಿಸಿಕೊಂಡರು.
ಇದೊಂದು ಕಲಾವಿದನೊಬ್ಬನ ಕನಸಿನ ಕೂಸು. ರಥದ ಮುಂಭಾಗ ನಾಲ್ಕು ಕುದುರೆಗಳು, ಅಕ್ಕ ಪಕ್ಕ ಪರಿಷತ್ತಿನ ಲಾಂಛನ ಹೊತ್ತು ಸಾಗುವ ಸೈನಿಕ ವೇಷಧಾರಿಗಳು, ೭೭ನೇ ಸಾಹಿತ್ಯ ಸಮ್ಮೇಳನವಾದ್ದರಿಂದ ಮುಂಭಾಗ ಪೂರ್ಣ ಕುಂಭ ಕಳಸ ಹೊತ್ತ ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಕಾರ್ಯಕರ್ತರು, ೭೭ ಮಂದಿ ಕನ್ನಡ ಧ್ವಜ ಹಿಡಿದ ಕರವೇಯ ಕಟ್ಟಾಳುಗಳು ಸಾಗುತ್ತಾರೆ. ಸಾರೋಟದ ಮುಂದೆ ಭುವನೇಶ್ವರಿ ತಾಯಿ ರಥ. ಅದರಲ್ಲಿ ಗೋವಿನ ಹಾಡಿನ ದೃಶ್ಯಾವಳಿ. ಮುಂದೆ ಹತ್ತು ಮಂದಿ ಅಶ್ವದಳ, ಆನೆ, ಒಂಟೆ. ಕೆಂಪೇಗೌಡ, ನಾಲ್ವಡಿ ಕೃಷ್ಣರಾಜ ಒಡೆಯರ್, ಜ್ಞಾನ ಪೀಠ ಪುರಸ್ಕೃತರ ಪ್ರತಿಕೃತಿಗಳ ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಸಾಗಲಿವೆ. ೩೦ ನಾದಸ್ವರ ಕಲಾವಿದರು ಮೆರಣಿಗೆಗೆ ಸಾಥ್ ನೀಡಲಿದ್ದಾರೆ.
ನಂದಿಕೋಲು, ಚಿಟ್ಟಿ ಮೇಳ, ಯಕ್ಷಗಾನ, ವೀರಗಾಸೆ, ಗೊರವನಕುಣಿತ, ಬೇಡರ ಕುಣಿತ, ಕೊರವಂಜಿ, ಪೂಜಾ ಕುಣಿತ, ಕಂಸಾಳೆ, ಕೀಲುಕುದುರೆ, ಹುಲಿ ವೇಷ, ಕರಗ, ಜಗಲಿಗೆ ಕುಣಿತ, ಧಾಟಿ ಕುಣಿತ, ಕೋಲಾಟ, ಕರಡಿ ಮಜಲು, ಪುರವಂತಿಕೆ ಕುಣಿತ, ಹಗಲು ವೇಷ, ಹಾಲಕ್ಕಿ, ಸುಗ್ಗಿ ಕುಣಿತ ಹೀಗೆ ನಗರದ ಜನರಿಗೆ ಪರಿಚಯವಿಲ್ಲದ ೪೦ಕ್ಕೂ ಹೆಚ್ಚು ಜಾನಪದ ಪ್ರಾಕಾರಗಳ ಕಲಾವಿದರು ಮೆರವಣಿಗೆ ವಿಶೇಷ ಆಕರ್ಷಣೆಯಾಗಿದ್ದಾರೆ. ಅಷ್ಟೇ ಅಲ್ಲದೆ ವಿವಿಧ ಇಲಾಖೆಯಿಂದ ಸ್ತಬ್ಧಚಿತ್ರಗಳು ಸೇರ್ಪಡೆಗೊಳ್ಳಲಿವೆ.
ಪಾಲಿಕೆಯ ಮುಂದಿನ ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡುವುದರೊಂದಿಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಆರಂಭಗೊಳ್ಳುತ್ತದೆ. ಜೆ.ಸಿ.ರಸ್ತೆ, ಮಿನರ್ವ ವೃತ್ತ, ಕೊಂಡಜ್ಜಿ ಬಸಪ್ಪ ವೃತ್ತ, ಮಕ್ಕಳ ಕೂಟದ ಮೂಲಕ ನ್ಯಾಷನಲ್ ಕಾಲೇಜು ಮೈದಾನ ತಲುಪಿಕೊಳ್ಳಲಿದೆ.
ಮೆರವಣಿಗೆ ಕಲ್ಪನೆಯೇ ರಸಭರಿತವಾಗಿದೆ. ಇನ್ನು ಕಣ್ಣಾರೆ ಇದನ್ನು ಕಂಡರೆ ಜನ್ಮ ಸಾರ್ಥಕವಾದಂತೆ. ಇಂತಹ ಅಪರೂಪದ ಮೆರವಣಿಗೆಯ ಹಿಂದೆ ಕರ್ನಾಟಕ ರಕ್ಷಣಾ ವೇದಿಕೆಯ ಸಾವಿರಾರು ಕಾರ್ಯಕರ್ತರ ಅಹರ್ನಿಶಿ ದುಡಿತವಿದೆ.
ಕನ್ನಡ ಸಾಹಿತ್ಯ ಭವನದ ಕನಸು
೭೭ನೇ ಸಾಹಿತ್ಯ ಸಮ್ಮೇಳನದ ಸವಿ ನೆನಪಿಗಾಗಿ ನಗರದ ಹೊರವಲಯದಲ್ಲಿ ಸುಮಾರು ೧೦ ಎಕರೆಯಷ್ಟು ವಿಸ್ತಾರ ಪ್ರದೇಶದಲ್ಲಿ ಕನ್ನಡ ಸಾಹಿತ್ಯ ಭವನವನ್ನು ನಿರ್ಮಿಸುವ ಕನಸನ್ನು ಕನ್ನಡ ಸಾಹಿತ್ಯ ಪರಿಷತ್ತು ಹೊಂದಿದೆ. ಇಲ್ಲಿ ಕನ್ನಡ ಸಾಹಿತ್ಯ, ಇತಿಹಾಸ, ಕಲೆ, ಸಂಶೋಧನೆಗಳು ನಡೆಯುವ ಕಾರ್ಯಸ್ಥಾನವಾಗಬೇಕೆಂಬ ಮಹತ್ತರ ಉದ್ದೇಶವಿದೆ.
ಈ ಕನಸಿನ ಸಾಕಾರಕ್ಕೆ ಲಕ್ಷಾಂತರ ಮನಸ್ಸುಗಳು ಹಾತೊರೆಯುತ್ತಿವೆ.
ವಿಭಿನ್ನ ಮಂಟಪಗಳು,
ವಿಚಾರ ಪೂರ್ಣ ಗೋಷ್ಠಿಗಳು
ನಾಡಪ್ರಭು ಕೆಂಪೇಗೌಡ ಮಹಾ ಮಂಟಪದಲ್ಲಿ ಸಮ್ಮೇಳನ ನಡೆಯಲಿದೆ. ಪ್ರಧಾನ ವೇದಿಕೆಗೆ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಎಂದು ಹೆಸರಿಸಲಾಗಿದೆ. ಸರ್. ಮಿರ್ಜಾ ಇಸ್ಮಾಯಿಲ್, ಎಸ್.ಎಂ.ವಿಶ್ವೇಶ್ವರಯ್ಯ, ಮಾರ್ಕ್ ಕಬ್ಬನ್, ಕೆಂಗಲ್ ಹನುಮಂತಯ್ಯ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಸರ್. ಪುಟ್ಟಣಚೆಟ್ಟಿ, ಆರ್.ಕಲ್ಯಾಣಮ್ಮ, ಅ.ನ.ಕೃಷ್ಣರಾಯ, ಮ.ರಾಮಮೂರ್ತಿ, ಗುಬ್ಬಿ ವೀರಣ್ಣ, ತೋಟದಪ್ಪ, ದೊಡ್ಡಣ್ಣ ಶೆಟ್ಟಿ, ಸಜ್ಜನರಾವ್, ಟಿ.ಪಿ.ಕೈಲಾಸಂ, ಡಾ.ರಾಜ್‌ಕುಮಾರ್‌ರಂತಹ ಸಾರಸ್ವತ ದಿಗ್ಗಜರು, ರಂಗಕರ್ಮಿ, ಧರ್ಮದರ್ಶಿ, ಅಪ್ರತಿಮ ಹೋರಾಟಗಾರರ ಹೆಸರುಗಳನ್ನು ಮಹಾದ್ವಾರಗಳಿಗೆ ನಾಮಕರಣ ಮಾಡಲಾಗಿದೆ.
ಬೆಂಗಳೂರು, ದೇಸಿ ಸಂಸ್ಕೃತಿ, ಮಹಿಳೆ, ರಂಗಭೂಮಿ, ಕನ್ನಡ ಪ್ರಜ್ಞೆ, ಹಾಸ್ಯ ಸಂವೇದನೆ ಸೇರಿದಂತೆ ಅನೇಕ ಗಂಭೀರ ವಿಚಾರಗಳ ಕುರಿತಂತೆ ಪಾಂಡಿತ್ಯಪೂರ್ಣ ಗೋಷ್ಠಿಗಳು, ಚರ್ಚೆಗಳು ನಡೆಯಲಿದ್ದು, ಸಾಹಿತ್ಯಾಸಕ್ತರನ್ನು, ಜನ ಸಮುದಾಯವನ್ನು ಚಿಂತನೆಗೆ ಹಚ್ಚುವ ಜೊತೆ ಜೊತೆಗೆ ಕನ್ನಡದ ಕಾಯಕಕ್ಕೆ ಧುಮುಕು ಪ್ರೇರಣೆಯನ್ನು ನೀಡಬಲ್ಲದಾಗಿದೆ.
ವಸತಿ, ಊಟ ಎಲ್ಲವೂ ಅಚ್ಚುಕಟ್ಟು
ಸಾಹಿತ್ಯ ಸಮ್ಮೇಳನವೆಂದರೆ ಅದೊಂದು ಅಕ್ಷರ ಜಾತ್ರೆ. ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸುವ ಸಾಹಿತ್ಯಾಭಿಮಾನಿಗಳಿಗೆ ಅದೊಂದು ಸಾಹಿತ್ಯದ ರಸದೂಟ. ಪ್ರತಿ ಸಮ್ಮೇಳನದಲ್ಲಿ ಸಾಹಿತ್ಯದ ಸವಿಯ ಜೊತೆಗೆ ಸಮ್ಮೇಳನ ನಡೆಯುವ ಪ್ರದೇಶದ ವಿಶೇಷ ಖಾದ್ಯಗಳನ್ನು ಸವಿಯುವ ಅವಕಾಶ. ಆದರೆ ಈ ಬಾರಿಯ ಸಾಹಿತ್ಯ ಸಮ್ಮೇಳನ ಹಿಂದಿನವುಗಳಿಗಿಂತ ಭಿನ್ನ.
ಬೆಂಗಳೂರಿನಲ್ಲಿ ನಾಲ್ಕು ದಶಕಗಳ ನಂತರ ನಡೆಯುತ್ತಿರುವ ಈ ಸಮ್ಮೇಳನದಲ್ಲಿ ಉಟೋಪಚಾರದ ಆತಿಥ್ಯಕ್ಕಿಂತ ಸಾಹಿತ್ಯಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಆದ್ದರಿಂದ ಈ ಬಾರಿ ಭಾರಿ ಭೋಜನದ ಬದಲಿಗೆ ಸರಳ ಉಟೋಪಚಾರಕ್ಕೆ ನಿರ್ಧರಿಸಿದೆ.
ಮೂರು ದಿನಗಳ ಕಾಲ ನಡೆಯುವ ಸಾಹಿತ್ಯ ಸಮ್ಮೇಳನದಲ್ಲಿ ಒಟ್ಟು ಮೂರು ಲಕ್ಷ ಪ್ರತಿನಿಧಿಗಳಿಗೆ ಉಟೋಪಚಾರ ನೀಡಲು ತಯಾರಿ ನಡೆದಿದೆ. ಅಡಿಗಾಸ್ ಇದರ ಜವಾಬ್ದಾರಿ ಹೊತ್ತಿದೆ. ಮಕ್ಕಳ ಕೂಟದ ಬಳಿ ಇರುವ ಹಳೆ ಕೋಟೆ ಆವರಣವನ್ನು ಉಟೋಪಚಾರಕ್ಕೆ ವಿನಿಯೋಗಿಸಲಾಗುತ್ತಿದೆ. ಸಾಹಿತಿಗಳು, ಗಣ್ಯರ ಉಟೋಪಚಾರಕ್ಕೆ ಮಹಿಳಾ ಸೇವಾ ಸಮಾಜವನ್ನು ನಿಗದಿಪಡಿಸಿಕೊಳ್ಳಲಾಗಿದೆ.
ವಸತಿಗಾಗಿ ಶಾಲೆಗಳ ಮೊರೆಹೋಗಲಾಗಿದ್ದು, ಎಲ್ಲವನ್ನೂ ಅಚ್ಚುಕಟ್ಟಿನಿಂದ ನಿರ್ವಹಿಸಲಾಗಿದೆ.
ಈ ಬಾರಿ ಕಿಟ್‌ಗೆ ಬದಲಾಗಿ ಬಟ್ಟೆಯ ಚೀಲ ನೀಡಲಾಗುತ್ತಿದೆ. ಸುಸಜ್ಜಿತ ಮಾಧ್ಯಮ ಕೇಂದ್ರ, ಪುಸ್ತಕ ಮಳಿಗೆಗಳು, ಆಸನಗಳ ವ್ಯವಸ್ಥೆ ಎಲ್ಲವೂ, ಎಲ್ಲದರಲ್ಲೂ ಪರಿಪೂರ್ಣ ವ್ಯವಸ್ಥೆ ಮಾಡಲಾಗಿದೆ. ಪರಿಚಾರಕರು, ಸ್ವಯಂಸೇವಕರು ಸಾಹಿತ್ಯಾಸಕ್ತರಿಗೆ ಅಪ್ಯಾಯತೆಯ ಸ್ವಾಗತಕ್ಕೆ ಸಜ್ಜಾಗಿದ್ದಾರೆ.
ಸಮ್ಮೇಳನದ ಯಶಸ್ಸಿಗೆ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರೂ ಆದ, ಗೃಹ ಸಚಿವ ಆರ್. ಅಶೋಕ, ಕಸಾಪ ಅಧ್ಯಕ್ಷ ನಲ್ಲೂರು ಪ್ರಸಾದ್, ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರು, ವಿಧಾನಪರಿಷತ್ ಸದಸ್ಯ ಅಶ್ವತ್‌ನಾರಾಯಣ, ಮಹಾನಗರ ಪಾಲಿಕೆ ಮಹಾಪೌರ ಎಸ್.ಕೆ.ನಟರಾಜ್, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಸದಾಶಿವ, ಕಸಾಪದ ಕಾರ್ಯಕಾರಿ ಸಮಿತಿ ಸದಸ್ಯ, ಸಂಘಟನೆಗಳ ಪ್ರತಿನಿಧಿ ಹಾಗೂ ಕರವೇಯ ಖಜಾಂಜಿ ಸತೀಶ್‌ಗೌಡ ಸೇರಿದಂತೆ ಅನೇಕರ ಪರಿಶ್ರಮವಿದೆ.
ಮತ್ತೇನು. ಕನ್ನಡ ಹಬ್ಬಕ್ಕೆ ಸಜ್ಜಾಗಿ. ಅಪರೂಪದ, ಹಲವು ವಿಶೇಷಗಳ ಸಮ್ಮೇಳನಕ್ಕೆ ಸಾಕ್ಷೀಭೂತರಾಗಿ.

ಕನ್ನಡ ಮತ್ತು ಸಾಹಿತ್ಯ ಸಮ್ಮೇಳನ


ಕರ್ನಾಟಕದ ಮೂಲ ಮನಸ್ಸುಗಳನ್ನು ಒಂದುಗೂಡಿಸಿ ಭಾಷಾವಾರು ಕನ್ನಡ ಪ್ರಾಂತವನ್ನು ಕಟ್ಟುವ ಪ್ರೇರಣೆಯ ಹಿಂದೆ ಇದ್ದದ್ದು ಕನ್ನಡ ಚಳವಳಿ. ಸುತ್ತಲಿನ ಪ್ರಾಂತಗಳಲ್ಲಿ ಹರಡಿದ್ದ ಕನ್ನಡ ಕುಲಕೋಟಿಗಳನ್ನು ಒಂದು ರಾಜ್ಯದ ಚೌಕಟ್ಟಿನೊಳಗೆ ತರಲು ಪ್ರೇರೇಪಿಸಿದ್ದು ಕನ್ನಡ ಏಕೀಕರಣ ಚಳವಳಿ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಭಾಷಾವಾರು ರಾಜ್ಯಗಳ ಕಲ್ಪನೆ ಸಹ ಉಂಟಾಯಿತು. ನಮ್ಮ ನಾಡಗೀತೆ ಕುವೆಂಪು ಅವರ "ಜಯ ಭಾರತ ಜನನಿಯ ತನುಜಾತೆ" ಈ ಪದ್ಯ ೧೯೨೮ರಲ್ಲಿ ರಚಿತವಾದದ್ದು. ಭಾರತ ಮಾತೆಯ ದೇಹದಿಂದ ಹುಟ್ಟಿದವಳು ಈ ಕರ್ನಾಟಕ ಮಾತೆ. ಎಂಥ ಅದ್ಭುತ ಕಲ್ಪನೆ. ಭಾವನಾತ್ಮಕವಾಗಿ ಭಾರತವೂ ಮಾತೆ, ಕರ್ನಾಟಕವೂ ಆ ದೇಶದ ಭಾಗ. ಈ ಕರ್ನಾಟಕ ಸರ್ವಜನಾಂಗದ ಶಾಂತಿಯ ತೋಟ ಎಂದಿದ್ದಾರೆ. ಇದು ’ಏಕೀಕರಣ’ದ ನೆಲೆಯಲ್ಲಿ ಎಲ್ಲರೂ ಒಂದಾಗಬೇಕು ಎಂಬ ಸಂದೇಶವನ್ನು ಸಾರಿ ಹೇಳುತ್ತದೆ. ಕುವೆಂಪು ತಮ್ಮ ಇನ್ನೊಂದು ಕವಿತೆಯಲ್ಲಿ ’ಸತ್ತಂತಿಹರನು ಬಡಿದೆಚ್ಚರಿಸು; ಕಚ್ಚಾಡುವವರನು ಕೂಡಿಸಿ ಒಲಿಸು; ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು; ಒಟ್ಟಿಗೆ ಬಾಳುವ ತೆರದಲಿ ಹರಸು!’ ಎಂದು ಆಗಲೇ ಎಚ್ಚರಿಸಿದ್ದು ಈಗಲೂ ಎಚ್ಚರಿಕೆಯ ಸೂತ್ರವಾಗಿದೆ. ಅಂದಿನಿಂದಲೂ ಈಗಿನವರೆಗೂ ನೆಲ, ಜಲ, ಭಾಷೆಗಾಗಿ ಹೋರಾಟ ಮಾಡಿ ಉಳಿಸಿಕೊಳ್ಳಬೇಕಾಗಿದೆ.
ಕೃತಿಗಳ ಪ್ರಕಟಣೆ, ಸಾಹಿತ್ಯ ಪರೀಕ್ಷೆಗಳು, ಕಮ್ಮಟಗಳು, ಶಿಬಿರಗಳು, ಶಾಲೆಗಾಗಿ ಸಾಹಿತ್ಯ, ವಿಚಾರ ಮಂಥನಗಳು; ಗ್ರಾಮೀಣ ಸಾಹಿತ್ಯ ಯೋಜನೆ, ಇವುಗಳ ಜೊತೆಗೆ ವರ್ಷಕ್ಕೊಮ್ಮೆ ಸಾಹಿತ್ಯ ಸಮ್ಮೇಳನ ತಾಲೂಕು-ಜಿಲ್ಲೆ ಸಾಹಿತ್ಯ ಸಮ್ಮೇಳನಗಳು. ಇವೆಲ್ಲ ಕನ್ನಡ ಸಾಹಿತ್ಯ ಪರಿಷತ್ತಿನ ವಿವಿಧ ಮುಖಗಳು. ಮತ್ತೆ ಸಾಹಿತ್ಯ ಸಮ್ಮೇಳನ ಬಂದಿದೆ! ಸಾಹಿತ್ಯ ಸಮ್ಮೇಳನ ಎಂದರೆ ನೆನಪಿಗೆ ಬರುವುದು ವೇದಿಕೆ ಕಾರ್ಯಕ್ರಮಗಳು, ಸಮನಾಂತರ ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳು, ಊಟ-ತಿಂಡಿ ವ್ಯವಸ್ಥೆ, ರಾಜಕಾರಣಿಗಳ ವೈಭವೀಕರಣ, ಗೋಷ್ಠಿಗಳಲ್ಲಿ ಸಭಾಸದರ ಕೊರತೆ, ಸಮಯ ತಪ್ಪಿ ನಡೆಯುವ ಹಲವು ಕಾರ್ಯಕ್ರಮಗಳು, ಸಮ್ಮೇಳನ ಸಂಚಿಕೆಯ ಸಾಂಕೇತಿಕ ಬಿಡುಗಡೆ (ಪೂರ್ತಿ ಸಂಚಿಕೆ ಇನ್ನಾವಾಗಲೋ) ಪುಸ್ತಕ ಪ್ರದರ್ಶನ; ಸಮಯಾಭಾವ ಒತ್ತಡದಿಂದ ಯಾವ ವಿಷಯದ ಬಗ್ಗೆ ದೃಢತೆ ಇಲ್ಲದ ಭಾಷಣಗಳು ಕೊನೆಗೆ ನಿರ್ಣಯಗಳ ಮಂಡನೆ, ಅನುಷ್ಠಾನದ ಬಗ್ಗೆ ಕೇಳಬೇಡಿ. ಇವು ಸಾಹಿತ್ಯ ಸಮ್ಮೇಳನದ ಮುಖ್ಯ ಅಂಶಗಳು.
ಇನ್ನೂ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಬಗ್ಗೆ ಹಿಂದೆ ಸಾಹಿತ್ಯ ಸಮ್ಮೇಳನಾಧ್ಯಕ್ಷರಿಗೆ ವಿಶೇಷ ಗೌರವ ಇದ್ದಿತು. ಅವರ ನೇತೃತ್ವದಲ್ಲಿ ಕನ್ನಡ ಕೆಲಸಗಳು ನಡೆಯುತ್ತಿದ್ದವು. ಅವರನ್ನು ನಾಡಿನೆಲ್ಲೆಡೆ ಕರೆಸಿ ವಿಚಾರ ಸಂಕಿರಣ ನಡೆಸುತ್ತಿದ್ದರು. ಕನ್ನಡದ ಯಾವುದೇ ಸಮಸ್ಯೆಗಳಿಗೆ ಸಲಹೆ ಸೂಚನೆ ಹೊಂದುತ್ತಿದ್ದರು.
***
ಸಮ್ಮೇಳನ ಹೇಗಿರಬೇಕು?
* ಸಾಹಿತ್ಯದ ಹಲವು ವಿಚಾರಾಸ್ಪದ ವಿಷಯಗಳ ಮೇಲೆ ಪ್ರಾಧಾನ್ಯತೆ ಕೊಟ್ಟು ಪ್ರಚಲಿತ ರಾಜಕೀಯ ಸಾಮಾಜಿಕ ಸಾಂಸ್ಕೃತಿಕ ವಿಷಯಗಳ ಬಗ್ಗೆ ಗೋಷ್ಠಿಗಳು ನಡೆಯಬೇಕು.
* ಗಂಭೀರ ಸಾಹಿತ್ಯ ವಿಷಯಗಳು ಆಸಕ್ತರಿಗೆ ಮೀಸಲಾಗಿರುವಂತೆ ಸಮಾನಾಂತರ ವೇದಿಕೆಗಳಲ್ಲಿ, ಸಾಂಸ್ಕೃತಿಕ ಚಟುವಟಿಕೆಗಳು, ಗೀತ-ಸಂಗೀತ-ಕವಿಗೋಷ್ಠಿಗಳು ಪ್ರಧಾನ ವೇದಿಕೆಯಲ್ಲಿ ನಡೆಯಬೇಕು.
* ಭಾಷಣಕಾರರಿಗೆ ಸಮಯ ನಿರ್ಬಂಧ ಇರಬೇಕು.
* ಪ್ರಾಜ್ಞರಿಗೆ ಅವಕಾಶ ಕೊಡಬೇಕು.
* ಆಳ್ವಾಸ್ ನುಡಿಸಿರಿಯಲ್ಲಿ ಸಾಹಿತಿಗಳಿಗೆ ಮಾತ್ರ ಅವಕಾಶವಿರುವಂತೆ ಮತ್ತು ಮಹಾರಾಷ್ಟ್ರದಲ್ಲಿ ರಾಜಕಾರಣಿಗಳು ಸಾಮಾನ್ಯ ಪ್ರೇಕ್ಷಕರಂತೆ ಆಗಬೇಕು.
* ಸಾಹಿತಿ-ರಾಜನೀತಿಜ್ಞ ಅವಕಾಶ ಕೊಡಲಿ.
* ಸ್ಮರಣ ಸಂಚಿಕೆಗಳು ಸಮ್ಮೇಳನ ಮುಗಿದ ತಿಂಗಳೊಳಗಾಗಿ ಪರಿಪೂರ್ಣವಾಗಿ ಪ್ರಕಟವಾಗಿ ಸಾಮಾನ್ಯ ಓದುಗರಿಗೆ ನಿಲುಕುವ ಅತ್ಯಲ್ಪ ಬೆಲೆಯಲ್ಲಿ ಬಿಡುಗಡೆ ಆಗಬೇಕು.
* ಸಮ್ಮೇಳನ ನಡೆಯುವ ಪ್ರದೇಶದ ಬಗ್ಗೆ ಪರಿಪೂರ್ಣ ಮಾಹಿತಿಯುಳ್ಳ ಗ್ರಂಥ ಬಿಡುಗಡೆ ಆಗಬೇಕು. ಈಗಾಗಲೇ ಕೆಲ ಸಮ್ಮೇಳನಗಳಲ್ಲಿ ಈ ಕಾರ್ಯ ಆಗಿದೆ.
* ಸಮ್ಮೇಳನಕ್ಕೆ ಮುನ್ನ, ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಿ, ಅವುಗಳನ್ನು ಸಮಿತಿ ಮುಂದೆ ಇಟ್ಟು ವಿಮರ್ಶಿಸಿ, ಸಮಿತಿ ವಿಷಯಗಳನ್ನು ಸೇರಿಸಿ ಮತ್ತು ಸಮ್ಮೇಳನದಲ್ಲಿ ಬರುವ ಸೂಚನೆಗಳನ್ನು ಆಧರಿಸಿ ನಿರ್ಣಯಗಳನ್ನು ಸ್ವೀಕರಿಸಿ ಮಂಡಿಸಬೇಕು. ಆಯಾ ಸಮ್ಮೇಳನಾಧ್ಯಕ್ಷರ ಮಾರ್ಗದರ್ಶನದಲ್ಲಿ, ಜಿಲ್ಲಾ ತಾಲೂಕು ಘಟಕಗಳ ಸಹಾಯ ಸಹಕಾರದೊಂದಿಗೆ ಇತರ ಸಮಿತಿಗಳೊಂದಿಗೆ ನಿರ್ಣಯಗಳನ್ನು ಅನುಷ್ಠಾನ ಮಾಡಬೇಕು.
***
ಮಾತೃಭಾಷೆ ಶಿಕ್ಷಣ ಮಾಧ್ಯಮಕ್ಕೆ; ಆಡಳಿತದಲ್ಲಿ ಕನ್ನಡ ಅಂಕಿಗಳ ಬಳಕೆಗೆ; ಪ್ರಮುಖ ಊರಿನ ಹೆಸರುಗಳ ಕನ್ನಡೀಕರಣ ಬಗ್ಗೆ; ಮಹಾಜನ ವರದಿ ಮತ್ತು ಸರೋಜಿನಿ ಮಹಿಷಿ ವರದಿಗಳ ಜಾರಿಗೆ, ಗಡಿನಾಡು ಶಿಕ್ಷಣ ನಿರ್ದೇಶನಾಲಯದ ಸ್ಥಾಪನೆ ಬಗ್ಗೆ; ಜಾನಪದ-ರಂಗಭೂಮಿ-ಸಾಂಸ್ಕೃತಿಕ ಕಲೆಗಳ ಉಳಿವಿಗಾಗಿ ಒತ್ತಾಯಿಸುವುದು ಅವಶ್ಯವಾಗಿದೆ.
***
ಕೇವಲ ’ಕಲ್ಯಾಣ ಕರ್ನಾಟಕ’, ’ಕಿತ್ತೂರ ಕರ್ನಾಟಕ’ ಎಂದು ಮರುನಾಮಕರಣ ಮಾಡಿ ಶಬ್ದಗಳಲ್ಲಿ ವೈಭವ ಮಾಡುವುದು ಬೇಡ, ಅಲ್ಲಿ ಜನರ ಮೂಲಭೂತ ಅವಶ್ಯಕತೆಗಳ ಜೊತೆಗೆ ಪ್ರಬಲ ಸಮಸ್ಯೆಗಳಾಗುವ ಶೌಚಾಲಯ, ಸಂತ್ರಸ್ತರಿಗೆ ಆಶ್ರಯ, ಸಾಂಕ್ರಾಮಿಕ ರೋಗದ ತಡೆಗಟ್ಟುವಿಕೆ, ಸಾರಿಗೆ ವ್ಯವಸ್ಥೆ ಇವೆಲ್ಲವುಗಳ ಬಗ್ಗೆ ಆದ್ಯ ಗಮನ ಕೊಟ್ಟಾಗ ಆ ಹೆಸರಿನ ಸಾರ್ಥಕತೆ ಆಗುವುದು.
***
ಈ ಸಲ ರಾಜಧಾನಿ ಬೆಂಗಳೂರಿನಲ್ಲಿ ೪೦ ವರ್ಷಗಳ ಬಳಿಕ ಸಮ್ಮೇಳನ ನಡೆಯುತ್ತಲಿದೆ. ಇಂಗ್ಲೀಷ್, ತಮಿಳು, ತೆಲುಗು, ಮಲೆಯಾಳಂಮಯವಾಗುತ್ತಿರುವ; ಆಂಗ್ಲ ಶಿಕ್ಷಣ ಮಾಧ್ಯಮ ಶಾಲೆಗಳಿಂದ ತುಂಬಿರುವ; ಕನ್ನಡ ಚಲನಚಿತ್ರಗಳು, ಪತ್ರಿಕೆಗಳು ಮಾಯವಾಗುತ್ತಿರುವ, ಐಟಿ ಬಿಟಿ ಮಯವಾಗುತ್ತಿರುವ; ವಲಸಿಗರೇ, ಹೆಚ್ಚಾಗುತ್ತಿರುವ; ಕನ್ನಡಿಗರಿಗೆ ಉದ್ಯೋಗ ಶೂನ್ಯವಾಗುತ್ತಿರುವ; ಕಂಗ್ಲಿಷ್ ಭಾಷೆಯ ಎಫ್‌ಎಮ್ ಮತ್ತು ಯುವ ಸಂಸ್ಕೃತಿ ಹೊಂದಿರುವ ಬೆಂಗಳೂರು ಈ ಸಮ್ಮೇಳನವನ್ನು ಹೇಗೆ ಸ್ವಾಗತಿಸುತ್ತದೆ?
* ’ಕನ್ನಡ ನಿನ್ನೆ ಮತ್ತು ಇಂದು’ ಎಂಬ ವೈಚಾರಿಕ ಗೋಷ್ಠಿ ಏರ್ಪಾಡಾಗಬೇಕು. ವಿಶೇಷವಾಗಿ ಯುವಜನತೆ, ಶಾಲೆ ಕಾಲೇಜು ವಿದ್ಯಾರ್ಥಿಗಳು ಇದರಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು.
* ಕನ್ನಡ ಪುಸ್ತಕ ಮಳಿಗೆಗಳಲ್ಲಿ ಶೇ.೫೦ರಷ್ಟು ರಿಯಾಯಿತಿ ದರದಲ್ಲಿ ಪುಸ್ತಕಗಳು ಮಾರಾಟವಾಗಬೇಕು.
* ಕನ್ನಡದಲ್ಲಿ ಪ್ರಕಟವಾಗುವ ಎಲ್ಲ ದೈನಿಕ, ಸಾಪ್ತಾಹಿಕ, ಪಾಕ್ಷಿಕ, ಮಾಸಿಕ, ದ್ವೈಮಾಸಿಕ, ತ್ರೈಮಾಸಿಕ ಪತ್ರಿಕೆಗಳ ಪ್ರದರ್ಶನ ಏರ್ಪಾಡಾಗಬೇಕು. ಇದರಿಂದ ಕನ್ನಡಿಗರಿಗೆ ತಮ್ಮ ಭಾಷೆಯ ಪತ್ರಿಕೆಗಳ ಬಗ್ಗೆ ಪರಿಜ್ಞಾನ ಉಂಟಾಗುವುದು. ಪತ್ರಿಕೆಗಳ ಗುಣ ಮಟ್ಟ ನೋಡಿ ಹೊಸ ಚಂದಾದಾರರಾಗಬಹುದು. ಹೊಸ ಓದುಗರು ಪತ್ರಿಕೆಗೆ ದೊರೆಯುವುದು.
* ಹಿಂದಿನ ಸಾಹಿತ್ಯ ಸಮ್ಮೇಳನದ ವಿಶೇಷಾಂಕಗಳನ್ನು (ಸ್ಮರಣ ಸಂಚಿಕೆ) ಶೇ.೫೦ ರಿಯಾಯಿತಿ ದರದಲ್ಲಿ ಲಭಿಸುಂತೆ ಮಾಡಬೇಕು.
****
ಶೇ.೩೦ ರಷ್ಟು ಮಾತ್ರ ಕನ್ನಡಿಗರಿರುವ, ಇಂಗ್ಲಿಷ್ ವ್ಯಾಮೋಹದ ಹುಟ್ಟು ಹೊಳೆಯಲ್ಲಿ ’ಕನ್ನಡತನವೇ’ ಕೊಚ್ಚಿ ಹೋಗುತ್ತಿರುವ ಬೆಂಗಳೂರಿನಲ್ಲಿ ಈ ಸಮ್ಮೇಳನ ಭಾಷಾ ದೃಷ್ಟಿಯಿಂದ ಅವರ ಬೆಳವಣಿಗೆ ದೃಷ್ಟಿಯಿಂದ ಬಹಳ ಮಹತ್ವ ಎನಿಸಿದೆ. ಭಾಷಾ ಮಲಿನತೆ ನಿವಾರಿಸಿ ಭಾಷಾ ಶುದ್ಧತೆ ಹರಿಸುವ ಮುಖೇನ ಕನ್ನಡ ಬಳಕೆಯ ಹೊಣೆ ಈ ಸಮ್ಮೇಳನಕ್ಕೆ ಇದೆ. ಇದಕ್ಕೆ ಗರಿ ಇಟ್ಟಂತೆ ಪದಜೀವಿ, ನಿಘಂಟುಕಾರ, ಶಬ್ದಬ್ರಹ್ಮ ಪ್ರೊ.ಜಿ.ವೆಂಕಟಸುಬ್ಬಯ್ಯ ಸಾರಥ್ಯ ಕಳಶಪ್ರಾಯ.ಅವರಲ್ಲಿ ಈ ಎಲ್ಲ ಸಮ್ಮೇಳನಗಳಿಗೂ ಮಾರ್ಗೋಪಾಯಗಳಿವೆ ಅವರು ಸಾಹಿತ್ಯ ಪರಿಷತ್ತಿಗಿಂತಲೂ ಹಿರಿಯರಾಗಿದ್ದರೂ, ಚಿಂತನೆಯಲ್ಲಿ ಚಿಗುರು. ನಿರಂತರ ಅಧ್ಯಯನ, ಶಿಸ್ತು ಸಂಶೋಧನೆ, ದೈಹಿಕ ಮಾನಸಿಕ ಸಾಮರ್ಥ್ಯದಿಂದ ೯೭ ವಸಂತಗಳನು ದಾಟಿದರೂ "ಜ್ಞಾನದ ಬೆಳಕು". ಬೆಂಗಳೂರು ಕನ್ನಡತನ ಕಳದುಕೊಳ್ಳಬಾರದು. ಇನ್ನಾದರೂ ಬೆಂಗಳೂರಿಗರು ಜಾಗೃತರಾಗಬೇಕು. ಬೆಂಗಳೂರು ಬರೀ ವಲಸಿಗರ ನಗರವಾಗದೇ ಕನ್ನಡದ ಸಾಂಸ್ಕೃತಿಕ ಕೇಂದ್ರ ಆಗಬೇಕು ಎನ್ನುವ ಹಿರಿದಾದ ಆಶಯ ಹೊಂದಿದ್ದಾರೆ. ಈ ಅಧ್ಯಕ್ಷ ಸ್ಥಾನ ಹೊಣೆಗಾರಿಕೆ ಹೆಚ್ಚಿದೆ ಎಂದಿದ್ದಾರೆ. ಕನ್ನಡದ ಶಬ್ದ ಸಂಪತ್ತನ್ನು ಹೆಚ್ಚಿಸಿದಂತೆ ’ಭಾಷಾ ಸಂಪತ್ತ’ನ್ನು ವೃದ್ಧಿಸಲು ಹೊಸ ಆಯಾಮಗಳನ್ನು ಸೂಚಿಸಲಿ ಎಂಬುದು ಕನ್ನಡಿಗರೆಲ್ಲರ ಹಾರೈಕೆ.
ಕೊನೆ ಸಿಡಿ:- "ವಿಶ್ವದ ಆರು ಸಾವಿರ ಪ್ರಖರ ಭಾಷೆಗಳಲ್ಲಿ ೨೫ನೇ ಸ್ಥಾನದಲ್ಲಿರುವ ಕನ್ನಡ ಅತ್ಯಂತ ಸತ್ವಯುತವಾಗಿದೆ. ಹೀಗಾಗಿ ’ಕನ್ನಡ ಸಾಯುತ್ತಿದೆ’ ಎಂಬ ಮಾತನ್ನು ಯಾರೂ ಆಡಬೇಡಿ. -ಪ್ರೊ.ಜಿ.ವಿ.

ಯು.ಎನ್.ಸಂಗನಾಳಮಠ
ಉಪನ್ಯಾಸಕರು, ಲೇಖರು.

ನಿರೀಕ್ಷಿಸದೇ ಬಂದ ಭಾಗ್ಯವಿದು



ಸಂದರ್ಶನ: ಕಾವೆಂಶ್ರೀ

ಜೀವಿ ಕನ್ನಡದ ಆಸ್ತಿ. ಕನ್ನಡ ಶಬ್ದ ದ್ರವ್ಯದ ದೃಷ್ಟಾರ. ಕನ್ನಡವೇ ಉಸಿರು. ಶಬ್ದ ಮಾಣಿಕ್ಯದ ಸಂಶೋಧನೆ, ಹುಡುಕಾಟವೇ ಜೀವನದ ಕಾಯಕ. ಇಗೋ ಕನ್ನಡದ ಮೂಲಕ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದವರು. ಇವರು ಕನ್ನಡದ ನಡೆದಾಡುವ ಶಬ್ದ ಕೋಶ. ಅವರಿಗೀಗ ೯೮ರ ಇಳಿವಯಸ್ಸು. ಕನ್ನಡ ಸಾಹಿತ್ಯ ಪರಿಷತ್‌ಗಿಂತಲೂ ಒಂದು ವರ್ಷ ದೊಡ್ಡವರು. ಗದುಗಿನ ಕಲಾಚೇತನ ಸಾಂಸ್ಕೃತಿಕ ಅಕಾಡಮಿಯು ನೀಡಿರುವ ಅಂಕಣಶ್ರೀ ಗೆ ಭಾಜನರಾಗಿರುವ ನಿಘಂಟುತಜ್ಞ, ವಿದ್ವಾಂಸ, ಸಂಶೋಧಕ ಹೀಗೆ ಬಹುಮುಖಿಯಾಗಿರುವ ಕನ್ನಡ ಶಬ್ದದ್ರವ್ಯದ ಜೀವಿಗೆ ೭೭ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ನುಡಿತೇರಿನ ಪೀಠವನ್ನೇರುವ ಸೌಭಾಗ್ಯ.
ಒಂದು ದಶಕದ ಹಿಂದಿನಿಂದಲೂ ಜೀವಿಯವರ ಹೆಸರು ಅಧ್ಯಕ್ಷಗಿರಿಗೆ ಕೇಳಿಬಂದರೂ ಜಾತಿ, ಲಾಬಿ, ಇನ್ನಿತರ ವಿಚಾರಗಳಿಂದಾಗಿ ಜೀವಿಯವರನ್ನು ದೂರ ಸರಿಸಿಬಿಡುತ್ತಿದ್ದರು. ಆದರೆ ಈ ಬಾರಿ ಅಂತಹ ಪ್ರಶ್ನೆಗಳು ಉದ್ಭವಿಸದೇ ಜೀವಿ ಹೆಸರನ್ನು ಎಲ್ಲರೂ ಅನುಮೋದಿಸಿದ್ದರಿಂದ ನುಡಿತೇರಿನ ಪೀಠವೇರುವ ಭಾಗ್ಯ ಜೀವಿಯವರ ಪಾಲಿನದಾಯಿತು.
ಇಗೋ ಕನ್ನಡ ಎನ್ನುವ ಸಾಪ್ತಾಹಿಕ ಅಂಕಣವೊಂದನ್ನು ಸತತ ಹತ್ತುವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೆಯೊಂದರಲ್ಲಿ ಬರೆದ ಪ್ರೊ|| ಜಿ. ವೆಂಕಟಸುಬ್ಬಯ್ಯನವರ ಕಾರ್ಯವ್ಯಾಪ್ತಿ ಬಹುದೊಡ್ಡದು. ಶಿಕ್ಷಣ, ಸಂಶೋಧನೆ, ಅನುವಾದ, ವಿಮರ್ಶೆ ಮತ್ತು ನಿಘಂಟುಗಳ ನಿರ್ಮಾಣ......ಹೀಗೆ. ಸುಮಾರು ೧೯೭೩ರಿಂದ ೧೯೯೨ರವರೆಗೆ ಕನ್ನಡ-ಕನ್ನಡ ಬೃಹತ್ ಕೋಶದ ಪ್ರಧಾನ ಸಂಪಾದಕರಾಗಿ ಅವರು ಕೆಲಸ ನಿರ್ವಹಿಸಿದ್ದಾರೆ. ೨೦೦೦ ಪುಟಗಳ ನಿಘಂಟು ಸಿದ್ಧವಾಗಿದೆ. ಸಂಶೋಧನೆ, ವಿಮರ್ಶೆ, ಅನುವಾದ, ಗ್ರಂಥಸಂಪಾದನೆಯಲ್ಲಿ ೬೫ಕ್ಕೂ ಹೆಚ್ಚು ಗ್ರಂಥ ರಚನೆ ಮಾಡಿದ್ದಾರೆ. ೧೯೩೯ರಿಂದ ಕನ್ನಡ ಉಪನ್ಯಾಸಕರಾಗಿ, ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ, ಬೋಧನಾ ವರ್ಗಗಳ ವಿಶೇಷ ಪ್ರಾಧ್ಯಾಪಕರಾಗಿ, ಸಂದರ್ಶಕರಾಗಿ, ಮೈಸೂರು-ಬೆಂಗಳೂರು ವಿಶ್ವವಿದ್ಯಾಲಯದ ಅಕಾಡಮಿಕ್ ಕೌನ್ಸಿಲ್ ಸದಸ್ಯರಾಗಿ ಜೀವಿ ಅವರು ಸಲ್ಲಿಸಿದ ಸೇವೆ ಅನುಪಮ. ಸಾಹಿತ್ಯ ಕ್ಷೇತ್ರದಲ್ಲೂ ಕನ್ನಡ ಸಾಹಿತ್ಯ ಪರುಷತ್ತಿನ ಅಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ, ಕನ್ನಡ ನುಡಿಯ ಸಂಪಾದಕರಾಗಿ, ಕನ್ನಡ-ಕನ್ನಡ ವಿಶ್ವಕೋಶದ ಪ್ರಧಾನ ಸಂಪಾದಕರಾಗಿ, ಬಹುಭಾಷಾ ನಿಘಂಟಿನ ಸಲಹೆಗಾರರಾಗಿ, ತೆಲಗು ಅಕಾಡಮಿಯ ಶಬ್ದಸಾಗರದ ಸಮಾಲೋಚನ ಸಮಿತಿಯ ಅಧ್ಯಕ್ಷರಾಗಿ ಕೆಲಸ ನಿರ್ವಹಿಸುತ್ತಾ ಬಂದಿದ್ದಾರೆ.
ಕನ್ನಡ ಸಾಹಿತ್ಯದ ಜೀವಿಯವರೊಂದಿಗೆ ಕರವೇ ನಲ್ನುಡಿಗಾಗಿ ನಡೆಸಿದ ಮಾತುಕತೆಯ ಆಯ್ದ ಭಾಗ
ನುಡಿತೇರಿನ ಪೀಠವನ್ನೇರುವ ಭಾಗ್ಯ ನಿಮ್ಮದಾದಾಗ?
ನಿರೀಕ್ಷಿಸದೇ ಬಂದ ಭಾಗ್ಯವಿದು. ಅಧ್ಯಕ್ಷ ಪೀಠವನ್ನು ಪ್ರೀತಿಯಿಂದ ಸ್ವೀಕರಿಸುತ್ತಿದ್ದೇನೆ. ಸಂತೋಷ-ಖುಷಿಗಳೆರಡೂ ಮನತುಂಬಿ ಬಂದಿದೆ. ನನ್ನ ಎಲ್ಲಾ ಸಾಧನೆಗಳ ಹಿಂದೆ ಮಡದಿ ಲಕ್ಷ್ಮೀಯ ಪಾತ್ರ ದೊಡ್ಡದು. ನಿಮ್ಮೆಲ್ಲರ ಸಹಕಾರಕ್ಕೆ ಋಣಿ.
ಅತಂತ್ರ ಸ್ಥಿತಿ ಅನುಭವಿಸುತ್ತಿರುವ ಕನ್ನಡ ಭಾಷೆಯ ಬಗ್ಗೆ ನಿಮ್ಮ ವಿಚಾರವೇನು?
ಮೊದಲು ಯಾಕೆ ಹೀಗಾಯ್ತು ಅಂತ ಯೋಚನೆ ಮಾಡ್ಬೇಕು. ೫೦ ವರ್ಷದ ಹಿಂದೆ ಈ ಸ್ಥಿತಿ ಇರಲಿಲ್ಲ. ಕನ್ನಡ ಮಾತ್ನಾಡೋರು, ಬರೆಯೋರು ಯಾವುದೇ ಒಂದು ವ್ಯಾಕರಣ ಬದ್ಧತೆ, ಶುಭ್ರತೆ, ಸಂಸ್ಕೃತಿ ಎಲ್ಲವನ್ನೂ ಗಮನಿಸ್ತಾ ಇದ್ರು. ಯಾರು ಸಿದ್ಧತೆ ಇಲ್ದೆ ಇರುವಾಗ ಬರೆಯೋಕೆ ಶುರು ಮಾಡ್ತಾರೋ ಆವಾಗ ಭಾಷೆಯ ಪ್ರಭಾವ ಕಡಿಮೆಯಾಗ್ತದೆ. ನಾನು ಇಲ್ಲಿ ಎಲ್ಲರನ್ನೂ ಬೈತಾ ಇಲ್ಲ. ಎಲ್ಲವನ್ನೂ ಚೆನ್ನಾಗಿ ಅಭ್ಯಾಸ ಮಾಡಿ, ಚೆನ್ನಾಗಿ ಬರೆಯೋರು ಸಾಕಷ್ಟು ಜನ ನಮ್ಮಲ್ಲಿ ಇದ್ದಾರೆ. ಬಹುಶಃ ಭಾರತ ದೇಶದಲ್ಲಿಯೇ ಆಗ್ದೇ ಇರೋವಷ್ಟು ಸಂಸ್ಕೃತ ಸಾಹಿತ್ಯ ರಚನೆ ನಮ್ಮಲ್ಲಿ ಆಗಿದೆ. ಬಂಗಾಲದಲ್ಲೂ ಕೂಡ ಅಷ್ಟಿಲ್ಲ. ನಮಗನಿಸುತ್ತೆ ಮರಾಠಿ ಭಾಷೆ, ಕನ್ನಡ ಭಾಷೆ, ತಮಿಳು ಭಾಷೆ ಬೆಳೆದಿರುವಷ್ಟು ಇತರೆ ಭಾಷೆ ಬೆಳೆಯಲೇ ಇಲ್ಲ. ಹಿಂದಿಯಲ್ಲಿ ಬೇಕಾದಷ್ಟು ಸವಲತ್ತುಗಳಿವೆ. ಸರ್ಕಾರದ ಸವಲತ್ತಿನಿಂದ ಬೆಳವಣಿಗೆ ಹೆಚ್ಚಾಗಿದೆ. ಗೌರವವೂ ಹೆಚ್ಚಾಗಿದೆ. ಕನ್ನಡದಲ್ಲಿ ಇವೆಲ್ಲ ಕಡಿಮೆಯಾಗಿದೆ.
ಬಿ.ಎಂ.ಶ್ರೀಯವರ ಬರವಣಿಗೆಯ ನಂತರ ೨೦-೩೦ ವರ್ಷ ಕನ್ನಡ ಬರವಣಿಗೆ ತುಂಬಾ ಚೆನ್ನಾಗಿ ಆಯ್ತು. ನವೋದಯ ಕಾಲದಲ್ಲಿ ಬಂದಂತಹವು ಇಂದಿಗೂ ಕೂಡ ಅಚ್ಚುಕಟ್ಟಾಗಿವೆ. ನವ್ಯ ಕಾಲದಲ್ಲಿ ಕನ್ನಡಕ್ಕೆ ಇನ್ನಷ್ಟು ವೈವಿಧ್ಯ ತಂದುಕೊಟ್ಟರು. ಅಂದ್ರೆ ಹೊಸಹೊಸ ಶಬ್ದಗಳನ್ನು ತುಂಬುವುದು, ಹಳೆ ಶಬ್ದಗಳ ರೀತಿಯಲ್ಲಿ ಬದಲಾವಣೆ ಮಾಡುವುದು ಇತ್ಯಾದಿ. ಅಡಿಗರ ಮೂಲಕ ನಮ್ಮ ಭಾಷೆಗೆ ನಾವೀನ್ಯವೇನೋ ಬಂತು. ಆದರೆ ನವ್ಯವನ್ನು ಆರಿಸಿಕೊಂಡ ರೀತಿ ಎಲ್ಲರನ್ನೂ ಮುಟ್ಟುವಂಥ ರೀತಿಯಾಗಿರಲಿಲ್ಲ. ಆದರೆ ನವೋದಯ ಬಂದರೂ ಕೂಡ ಅದಕ್ಕೆ ಪೋಷಕವಾದಂತಹ, ವಿರುದ್ಧವಲ್ಲದ ಒಂದು ಆಂದೋಲನ ನಡೆಯಿತು. ಅದೇ ಪ್ರಗತಿಪರ ಚಳುವಳಿ. ಆಗ ಜನಸಾಮಾನ್ಯರ ಭಾಷೆ ಉಪಯೋಗ ಮಾಡಿಕೊಂಡರು. ನಮ್ಮ ಕನ್ನಡ ಕಾದಂಬರಿಯಲ್ಲಿ ಸಂಭಾಷಣೆಗಳಲ್ಲೆಲ್ಲ ಆ ಭಾಷೆಯ ಉಪಯೋಗ ಮಾಡಿಕೊಂಡ್ರು. ದಲಿತರ ಉದ್ಧಾರಕ್ಕೋಸ್ಕರವಾಗಿ ಆಂದೋಲನ ಆಯಿತು. ಆದ್ರೆ ಸಾಹಿತ್ಯದಲ್ಲಿ ದಲಿತರ ಉದ್ಧಾರ ಎನ್ನುವುದು ದಲಿತರ ಭಾಷೆಯ ಉದ್ಧಾರವಲ್ಲ. ಕಾರಂತರು ಚೋಮನದುಡಿಯನ್ನು ಬರೆದ್ರೆ ಅಲ್ಲಿ ಚೋಮನ ಉದ್ದಾರ ಆಗ್ಬೇಕಂತ ಅವರ ದೃಷ್ಟಿ ಇತ್ತು. ಚೋಮನ ಭಾಷೆ ಗಮನಕ್ಕೆ ಬರಲಿಲ್ಲ. ಚೋಮ ಸಮಾಜದಲ್ಲಿ ಯೋಗ್ಯನಾಗಿ ಬದುಕಬೇಕು ಅನ್ನೋ ಆಸೆಯಿಂದ ಬರೆದದ್ದು. ಆದ್ರೆ ಅವನು ಹಾಗೆ ಬದುಕಲು ಆಗಲೇ ಇಲ್ಲ. ಆ ಕಾದಂಬರಿಯ ಕೊನೆಯಲ್ಲಿ ದುರಂತ ಆಗುತ್ತೆ. ಆಮೇಲೆ ದಲಿತರೇ ಬರೆಯೋಕೆ ಪ್ರಾರಂಭ ಮಾಡಿದ್ರು. ಆಗ ಸಾಹಿತ್ಯದಲ್ಲಿ ಕ್ರೋಧ, ಉದ್ವೇಗ, ರೋಷ ಎಲ್ಲಾ ತುಂಬಿಕೊಂಡಿತು. ಭಾಷೆ ಸ್ವಲ್ಪ ನೀರಾಯಿತು. ಈಗ ಅವರೂ ಬದಲಾಗಿದ್ದಾರೆ.
ನಮ್ಮ ಮಾಧ್ಯಮಗಳು ಆಕಾಶವಾಣಿ, ದೂರದರ್ಶನ, ಪತ್ರಿಕೆಗಳು ಎಲ್ಲವೂ ಸೇರಿ ಭಾಷೆಯನ್ನು ಇನ್ನಷ್ಟು ನೀರಾಗಿ ಮಾಡುತ್ತಿವೆ. ಕಾರಣವೇನೆಂದರೆ ಅವರಿಗೆ ಯಾವ ಪದ ಸರಿ, ಯಾವ ಪದ ತಪ್ಪು ಅನ್ನುವುದು ಗೊತ್ತಿರುವುದಿಲ್ಲ. ಭಾಷೆಯನ್ನು ಬೆಳೆಸುವ ಮಾರ್ಗದಲ್ಲಿ ತಪ್ಪುಗಳಿಗೆ ಅವಕಾಶ ಮಾಡ್ತಾ ಇದ್ದಾರೆ. ಉದಾಹರಣೆಗೆ ಆಧುನೀಕರಣ ಅನ್ನುವ ಪದ ಪದವೇ ಆಗೊಲ್ಲ. ಅಚ್ಚುಕಟ್ಟಾದಂಥ ಪದ "ಸೃಜನಶೀಲ" ನಿಜವಾಗಿ ವ್ಯಾಕರಣಬದ್ಧ ಪದ ಅಲ್ಲವೇ ಅಲ್ಲ. ಸೃಜನಶೀಲ ಅನ್ನೋದನ್ನು ಸೃಷ್ಟಿಶೀಲ ಅನ್ನಬಹುದು. ಆಧುನೀಕರಣವನ್ನು ಆಧುನಿಕಗೊಳಿಸು ಅಂತಾ ಮಾಡಬಹುದಲ್ಲವೇ! ಯಾರೋ ನಾಲ್ಕು ಜನ "ಈಕರಣ" ಸೇರಿಸಿಕೊಂಡು "ಸಬಲೀಕರಣ", ’ಅಗಲೀಕರಣ’ ಗಳು ನುಸುಳಿವೆ. ನಾವು ಸರಿಯಾಗಿ ವ್ಯಾಕರಣ ಅಭ್ಯಾಸ ಮಾಡಬೇಕು. ಪ್ರೌಢಶಾಲೆಯಲ್ಲೂ ಅಚ್ಚುಕಟ್ಟಾದಂತಹ ಅಧ್ಯಾಪಕರು ಇರಬೇಕು. ಪ್ರತಿಯೊಂದು ಪತ್ರಿಕೆಯಲ್ಲೂ ಕೂಡ ತನ್ನ ತಪ್ಪನ್ನು ಕಂಡುಹಿಡಿದು ತೋರಿಸತಕ್ಕಂಥ ಒಬ್ಬ ವಿದ್ವಾಂಸನನ್ನು
ಇಟ್ಟುಕೊಳ್ಳಬೇಕಾಗುತ್ತದೆ. ಆಗ ತಪ್ಪು ತಿದ್ದಿಕೊಳ್ಳಲು ಸಾಧ್ಯ.
ಕ್ರಿಯಾಪದ ಇಲ್ಲದೆ ವಾಕ್ಯರಚನೆ ಮಾಡುತ್ತಿರುವ ಕುರಿತು ನಿಮ್ಮ ಅನಿಸಿಕೆ ಏನು ?
ಸಿದ್ಧವನಹಳ್ಳಿ ಕೃಷ್ಣಶರ್ಮ ಬರೆದಾಗ ಈ ಶೈಲಿ ಒಂದುರೀತಿ ಪ್ರಾರಂಭವಾಯ್ತು. ಅವರು ಕ್ರಿಯಾಪದವಿಲ್ಲದೆ ವಾಕ್ಯ ಮಾಡಿಕೊಂಡು ಹೋದ್ರು. ಬುದ್ಧಿವಂತರು ತಮ್ಮದೇ ಆದ ಒಂದು ಮಾರ್ಗವಿಟ್ಟುಕೊಂಡು ಬರೀತಾರೆ. ಅದೇ ಎಲ್ಲರೂ ಹಾಗೇ ಮಾಡ್ತೀವಿ ಅಂತಾ ಹೋದ್ರೆ ಆಗೋದಿಲ್ಲ. ಈ ವಿಷಯದಲ್ಲಿ ವರ್ತಮಾನ ಪತ್ರಿಕೆಗಳು ಕೂಡ ಬಹಳ ಎಚ್ಚರಿಕೆಯಿಂದ ಇರ‍್ಬೇಕು.
ಕನ್ನಡ ನಿಘಂಟು ಕ್ಷೇತ್ರವನ್ನು ಅಭಿವೃದ್ಧಿಪಡಿಸುತ್ತಿರುವ ಹಿನ್ನೆಲೆಯಲ್ಲಿ ತಮ್ಮ ಅನುಭವಗಳು?
ನಿಘಂಟು ಕ್ಷೇತ್ರ ತುಂಬಾ ವ್ಯಾಪಕವಾದದ್ದು. ನನ್ನ ನಿಘಂಟಿನ ಬಗ್ಗೆ ನನ್ನ ಅಭಿಪ್ರಾಯವೇನೆಂದರೆ ಇಪ್ಪತ್ತು ವರ್ಷ ಕೆಲಸ ಮಾಡಿದ ನನಗೆ ಇವತ್ತೂ ಆ ನಿಘಂಟನ್ನು ನೋಡಿದ್ರೆ ಅದರಲ್ಲಿ ಅನೇಕ ತಪ್ಪುಗಳು ಕಂಡುಬರುತ್ತವೆ. ಅದನ್ನು ತಿದ್ದಬೇಕು ಅಂತ ನನಗನ್ನಿಸುತ್ತದೆ. ನಿಘಂಟಿಗೋಸ್ಕರ ಒಂದು ಶಾಶ್ವತವಾದ ಇಲಾಖೆ ಇರಬೇಕು. ಅದು ಆಗದೇ ಹೋದರೆ ನಮ್ಮ ತಪ್ಪನ್ನು ತಿದ್ದುತ್ತಾ ಹೋಗಬೇಕು. ಆಕ್ಸಫರ್ಡ್ ವಿಶ್ವವಿದ್ಯಾಲಯದ ನಿಘಂಟು ಈಗ ೧೫೦ನೇ ವರ್ಷ ದಾಟಿದೆ. ಅದಕ್ಕೆ ದೊಡ್ಡ ಕಛೇರಿ ಇದೆ. ಒಟ್ಟು ಪ್ರಪಂಚದಲ್ಲಿ ಸುಮಾರು ೬೦೦ ಜನ ಅದಕ್ಕೆ ಸಹಾಯ ಮಾಡುತ್ತಿದ್ದಾರೆ. ಕಛೇರಿಯೊಳಗೆ ಸುಮಾರು ೧೨೦ ಎಡಿಟರ‍್ಸ್ ಇದ್ದಾರೆ.
ನಮ್ಮಲ್ಲಿ ನಿಘಂಟು ಕ್ಷೇತ್ರಕ್ಕೆ ಬರೋರು ಯಾರಿದ್ದಾರೆ! ಅದಕ್ಕೆ ದುಡ್ಡು ಇಲ್ಲ, ಗೌರವ ಇಲ್ಲ. ಆ ಕಡೆ ಯಾರೂ ತಿರುಗಿ ನೋಡೋದಿಲ್ಲ. ನನ್ನಂಥೋರು ಇರ‍್ಬೇಕು ಅಷ್ಟೇ! ಈಗ ಆಗಿರುವ ಕೆಲಸ ಒಂದೊಂದು ಶತಮಾನದಲ್ಲಿ ಆಗುವ ಬೆಳವಣಿಗೆ. ಹೀಗೊಬ್ರು ಹೇಳ್ತಾ ಇದ್ರು- "ನೀನು ಬದುಕಿರುವಾಗ ನಿಘಂಟನ್ನು ಮುಗಿಸಿದ್ರೆ ನೀನೇ ಪುಣ್ಯವಂತ." ಸರ್ಕಾರ, ಜನ ಈ ಕಡೆ ಗಮನ ಕೊಟ್ಟು ಶಾಶ್ವತವಾದ ನಿಘಂಟು ಕಛೇರಿ, ಸರಿಯಾದ ವಿದ್ವಾಂಸರನ್ನು ತಂದು ಹಾಕಿದ್ರೆ ಒಳ್ಳೆ ಸೊಗಸಾದ ಸಾಧನೆ ಮಾಡಬಹುದು.
ಕನ್ನಡ ಪಠ್ಯಪುಸ್ತಕಗಳ ರಚನೆಯಲ್ಲಿ ಯಾವ ಮಾರ್ಗ ಕಂಡುಕೊಂಡರೆ ಯಶಸ್ವಿಯಾಗಲು ಸಾಧ್ಯ?
ಕನ್ನಡ ಪಠ್ಯಪುಸ್ತಕ ಈ ಮಟ್ಟಕ್ಕೆ ಅವನತಿ ಹೊಂದಲು ಕಾರಣವೇನೆಂದರೆ ಪಾಠ ಮಾಡದೇ ಇರುವವರನ್ನು, ತಿಳುವಳಿಕೆ ಇಲ್ಲದಿದ್ದವರನ್ನು ಪಠ್ಯಪುಸ್ತಕ ಸಮಿತಿಗೆ ಆಯ್ಕೆ ಮಾಡುತ್ತಾರೆ. ಸಮಿತಿಯನ್ನು ಮಾಡುವಾಗ ಅವರಿಗೆ ಪಠ್ಯಪುಸ್ತಕ ಚೆನ್ನಾಗಿರಬೇಕು ಅನ್ನೋ ದೃಷ್ಟಿ ಇರುವುದಿಲ್ಲ. ಕರ್ನಾಟಕದ ಯಾವ ಜಿಲ್ಲೆಯ, ಯಾವ ಜಾತಿಯ ಜನ ಅಲ್ಲಿ ಇರ‍್ಬೇಕು, ಯಾವ ಕಛೇರಿಗೆ ಶಿಕ್ಷಣ ಕ್ಷೇತ್ರದವರು ಎಷ್ಟಿರಬೇಕು, ಬಾಕಿಯವರು ಎಷ್ಟಿರಬೇಕು ಅಂತಾ ಪಠ್ಯಪುಸ್ತಕಕ್ಕೆ ಸಂಬಂಧಪಡದೇ ಇದ್ದ ಮಾಪನಗಳನ್ನು ಹುಡುಕಿ ಸಮಿತಿ ಮಾಡುತ್ತಾರೆ. ಪಠ್ಯಪುಸ್ತಕವನ್ನು ಪಾಠ ಹೇಳುವವರೇ ಮಾಡಬೇಕು. ಪಠ್ಯಪುಸ್ತಕಕ್ಕೆಂದೇ ಲೇಖನಗಳನ್ನು ಬರೆಸಬಾರದು. ಹಿಂದಿನವರು ಬರೆದ ಲೇಖನಗಳನ್ನು ಆರಿಸಬೇಕು. ಪಠ್ಯಪುಸ್ತಕಗಳನ್ನು ತಿದ್ದುವವರು ಒಂದು ಶಬ್ದವನ್ನೂ ಸರಿಯಾಗಿ ಓದಿರುವುದಿಲ್ಲ.

ಸಾಹಿತ್ಯ ಜೀವನದಲ್ಲಿ ತಾವು ಕಂಡ ತೃಪ್ತಿಯ ಕ್ಷಣ ಯಾವುದು?
ನಾನು ಸೃಷ್ಟಿಶೀಲ ಕಥೆ ಬರೆದಿಲ್ಲ. ಸಾಹಿತ್ಯ ಬರೆದಿಲ್ಲ. ಪ್ರಾರಂಭ ಮಾಡಿದ್ದು ಸಾಹಿತ್ಯ ವಿಮರ್ಶಕನಾಗಿ, ಸಾಹಿತ್ಯ ಚರಿತ್ರೆಯನ್ನು ಬರೆದವನು. ನಿಘಂಟು ಕ್ಷೇತ್ರಕ್ಕೆ ಹೋದಾಗ ೪೦ ವರ್ಷ. ಬಿ.ಎಡ್.ಕಾಲೇಜಿನಲ್ಲಿ ಶಿಕ್ಷಕರಿಗೆ ೧೦ ವರ್ಷ ಪಾಠ ಮಾಡಿದ್ದೀನಿ. ಪ್ರೈಮರಿ ತರಗತಿಯಿಂದ ಎಂ.ಎ.ವರೆಗೆ ಪಾಠ ಮಾಡಿದ್ದೀನಿ. ಪ್ರಿನ್ಸಿಪಾಲ್ ಆಗಿ ನಿವೃತ್ತನಾಗಿದ್ದೀನಿ. ಬೋಧನಾ ಸಮಯದಲ್ಲಿ ಪಟ್ಟಂಥ ಸಂತೋಷ, ತೃಪ್ತಿ ನನಗೆ ಮತ್ತೆಲ್ಲೂ ಸಿಕ್ಕಿಲ್ಲ. ಬರವಣಿಗೆ, ಸಂಶೋಧನೆ ಅವೆಲ್ಲಾ ನಿಘಂಟಿನೊಳಗೆ ಸೇರಿಹೋಗಿವೆ. ೨೦ ವರ್ಷ ಮಾಡಿದ ಸಂಶೋಧನೆಯಲ್ಲಿ ಏನ್ ಮಾಡಿದ್ರಿ ಅಂತಾ ನನ್ನ ಯಾರಾದ್ರೂ ಕೇಳಿದ್ರೆ ನಿಘಂಟು ಮಾಡಿದ್ದೇನೆ ಅನ್ನುತ್ತೇನೆ.
ಇಂದಿನ ಕನ್ನಡ ಪತ್ರಿಕಾ ಕ್ಷೇತ್ರದಲ್ಲಿ ಅಂಕಣ ಬರೆಹಗಳಿಗೆ ದೊರೆಯುತ್ತಿರುವ ಮನ್ನಣೆ ಮತ್ತು ಭವಿಷ್ಯ ಹೇಗಿದೆ?
ಈಗ ವೃತ್ತಪತ್ರಿಕೆಗಳು ರಾಜಕೀಯಕ್ಕೆ ಹೆಚ್ಚಿನ ಪ್ರಾಧಾನ್ಯತೆ ಕೊಡುತ್ತಿವೆ. ಅಂಕಣ ಬರೆಹ ರಾಜಕೀಯಕ್ಕೆ ಸೇರಿದ್ದಲ್ಲ. ಇದಕ್ಕೆ ವಿಶಿಷ್ಟವಾದ ಸ್ಥಾನವಿದೆ. ಇದು ಬೇರೆಬೇರೆ ವಿಚಾರಗಳಿಗೆ, ಸಂಸ್ಕೃತಿಗೆ, ಭಾಷೆಗೆ, ವಿಮರ್ಶೆಗೆ ಸಂಬಂಧಿಸಿದ್ದಾಗಿರುತ್ತದೆ. ಅವುಗಳ ಬೆಲೆ ಎಂದೆಂದಿಗೂ ಕಮ್ಮಿಯಾಗುವದಿಲ್ಲ. ಉದಾಹರಣೆಗೆ ಎಚ್ಚೆಸ್ಕೆಯವರ ಅಂಕಣ ಬರೆಹ. ಈಚೆಗೆ ಅಂಕಣ ಬರೆಹ ಸ್ವಲ್ಪ ಕಡಿಮೆ ಆಗ್ತಾ ಇದೆ. ಕೆಲವು ಪತ್ರಿಕೆಗಳಲ್ಲಿ ಒಂದೊಂದು ವಾರ ಇಂಥಾದ್ದೇ ಬರಬೇಕೆಂದು ವಿಷಯ ಇಟ್ಕೊಂಡಿದ್ದಾರೆ. ಬೇರೆಬೇರೆ ವಿದ್ವಾಂಸರು ಇದಕ್ಕೆ ಬರೆಯುತ್ತಾರೆ. ಹೊಸದಾಗಿರುವ ಪುಸ್ತಕಗಳ ಪರಿಚಯಕ್ಕಾಗಿ ಕೆಲವು ಅಂಕಣಗಳಿವೆ. ಇಂಥಾದ್ದು ಹೆಚ್ಚಬೇಕು. ಅಂಕಣ ಬರಹವನ್ನು ತುಂಬಾ ಅಚ್ಚುಕಟ್ಟು ಮಾಡಬೇಕು. ಹಾ.ಮಾ.ನಾ.
ಬರೆಯುತ್ತಿದ್ದ ಅಂಕಣ ಜ್ಞಾಪಿಸಿಕೊಂಡರೆ ಅವರು ಎಷ್ಟು ಅಭ್ಯಾಸ ಮಾಡುತ್ತಾ ಇದ್ರು ಅಂತ ಗೊತ್ತಾಗುತ್ತದೆ. ಅಂಕಣ ಬರೆಹ ಅಷ್ಟು ಸುಲಭ ಅಲ್ಲ.

ವಿಳಾಸ : ಕಾವೆಂಶ್ರೀ ನೇಸರ ಉಪಾಹಾರ
ತೋಂಟದಾರ್ಯ ರಥಬೀದಿ ಗದಗ - ೫೮೨೧೦೧
ಸಂಚಾರಿ : ೯೪೪೮೪೩೬೪೬೬

ನಡೆದಾಡುವ ನಿಘಂಟು ಶಬ್ದರ್ಷಿ ಪ್ರೊ. ಜಿ.ವೆಂಕಟಸುಬ್ಬಯ್ಯ



ಬನ್ನೂರು ಕೆ. ರಾಜು
ಸಾವಿರದ ಒಂಭೈನೂರ ಅರವತ್ತರ ದಶಕದ ಸಮಯ. ಸಾಹಿತಿಗಳ ಮಾತೃಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ ಬಹಳ ಕಷ್ಟದ ಪರಿಸ್ಥಿತಿಯಲ್ಲಿದ್ದ ಕಾಲವದು. ಪರಿಷತ್‌ನ ಆರ್ಥಿಕ ಪರಿಸ್ಥಿತಿ ಬಹಳ ಹೀನಾಯ ಸ್ಥಿತಿಯಲ್ಲಿತ್ತು. ಪರಿಷತ್‌ನಲ್ಲಿದ್ದ ನೌಕರರಿಗೆ ಕನಿಷ್ಟ ಸಂಬಳ ನೀಡುವುದಕ್ಕೂ ಆಗದಂತಹ ದುರ್ಗತಿ. ಆಗ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಪೀಠದಲ್ಲಿ ಕುಳಿತು ಅದರ ಚುಕ್ಕಾಣಿ ಹಿಡಿದಿದ್ದ ವ್ಯಕ್ತಿಗೆ ಪರಿಷತ್‌ನ ಇಂತಹ ಪರಿಸ್ಥಿತಿ ಕಂಡು ಸಹಿಸಲಾಗಲಿಲ್ಲ. ಆಳುವ ಸರ್ಕಾರದತ್ತ ಇವರ ಕೋಪ ಬಿಡುಬೀಸಾಗಿ ನುಗ್ಗಿತು. ಅದೊಂದುರೀತಿ ಸಾತ್ವಿಕಸಿಟ್ಟು. ಆ ಕ್ಷಣವೇ ಮನವಿಯೊಂದನ್ನು ಗೀಚಿ ಕೈಲಿಡಿದುಕೊಂಡು ವಿಧಾನಸೌಧದತ್ತ ದಾಪುಗಾಲಿಟ್ಟು ನಡೆದೇ ಬಿಟ್ಟರು. ಹೀಗೆ ಹೋದವರು ಬರಿಗೈಲಿ ಬರಲಿಲ್ಲ. ಆಗಿನ ಅರ್ಥ ಸಚಿವರ ಮುಂದೆ ಆರ್ಭಟಿಸಿ ಯಾರ ಸ್ವಂತಕ್ಕೂ ನಾವು ಸರ್ಕಾರದಿಂದ ಹಣ ಕೇಳುತ್ತಿಲ್ಲ, ಕನ್ನಡದ ಕೆಲಸಕ್ಕೆ, ಸರಸ್ವತಿ ಸೇವೆಗೆ ಹಣ ಕೇಳುತ್ತಿದ್ದೇವೆ ಎಂದು ಪಟ್ಟುಹಿಡಿದು ಆ ಗಳಿಗೆಯಲ್ಲೇ ಸಾಹಿತ್ಯ ಪರಿಷತ್‌ಗೆ ಬೇಕಿದ್ದ ಹಣವನ್ನು ಮಂಜೂರು ಮಾಡಿಸಿಕೊಂಡು ಬಂದಿದ್ದರು. ಆಗ ಇಡೀ ಕನ್ನಡ ಸಾರಸ್ವತ ಲೋಕವೇ ಸಾಹಿತ್ಯ ಪರಿಷತ್‌ನ ಅಧ್ಯಕ್ಷರ ಕಾರ್ಯ ವೈಖರಿಗೆ ಶಹಭಾಶ್ ಎಂದಿತ್ತು.
ಅಂದು ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಸ್ಥಾನದಲ್ಲಿದ್ದುಕೊಂಡು ಇಂಥ ಶಹಭಾಶ್‌ಗಿರಿ ಪಡೆದಿದ್ದವರು ಬೇರಾರೂ ಅಲ್ಲ. ಇಂದಿಗೂ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮ ಪ್ರಕಾಂಡ ಪಾಂಡಿತ್ಯದಿಂದ ಮಿರಮಿರನೆ ಮಿಂಚುತ್ತಿರುವ ವಿದ್ವತ್ತಿನ ಗುಪ್ತನಿಧಿ, ಶಬ್ದಗಾರುಡಿಗ ಪ್ರೊ|| ಜಿ. ವೆಂಕಟಸುಬ್ಬಯ್ಯ. ಕನ್ನಡಕ್ಕಾಗಿ ಮೊದಲಿನಿಂದಲೂ ಮುನ್ನುಗ್ಗುವ ಜಾಯಮಾನ ಇವರದು. ನೋಡಲಿಕ್ಕೆ ಇವರು ಟಿ.ಪಿ. ಕೈಲಾಸಂ, ಗೋಪಾಲಕೃಷ್ಣ ಅಡಿಗ, ಎಲ್.ಎಸ್. ಶೇಷಗಿರಿರಾಯರಂತೆ ಅಷ್ಟೇನೂ ಎತ್ತರವಿಲ್ಲದ ಕುಳ್ಳನೆಯ ವ್ಯಕ್ತಿಯಾದರೂ ಸಹ ಸಾಧನೆಯಲ್ಲಿ ವಾಮನನನ್ನೂ ಮೀರಿಸಿದ ಎತ್ತರ, ಸಾಹಿತ್ಯದಲ್ಲಿ ತ್ರಿವಿಕ್ರಮ ಸಾಹಸಿ.

ಚಿಕ್ಕದಾಗಿ ಜಿ.ವಿ ಎಂದೇ ಆಪ್ತರಾಗಿರುವ ಇವರು ಶಿಕ್ಷಣ, ಸಂಶೋಧನೆ, ಅನುವಾದ, ವಿಮರ್ಶೆಯ ವಿಷಯಗಳಲ್ಲಿ ಅದ್ಭುತ ಸಾಧನೆ ಮಾಡಿದ್ದರೂ ಸಹ ನಿಘಂಟು ನಿರ್ಮಾಣದಲ್ಲಿ ಇವರ ಸಾಧನೆಯೊಂದು ಹಿಮಾಲಯವೇ ಸರಿ. ಅಷ್ಟರಮಟ್ಟಿಗೆ ಇವರು ನಿಘಂಟಿನ ದೊಡ್ಡಗಂಟನ್ನೇ ಕನ್ನಡಕ್ಕೆ ನೀಡಿ ಕನ್ನಡದ ಸಿರಿವಂತಿಕೆಯನ್ನು ಹೆಚ್ಚಿಸಿದ್ದಾರೆ. ಇವರ ಇಂಗ್ಲೀಷ್-ಕನ್ನಡ ನಿಘಂಟು ಮತ್ತು ಕನ್ನಡ-ಕನ್ನಡ ಕ್ಲಿಷ್ಟ ಪದಕೋಶ ಇವೆರಡೂ ಅಮೂಲ್ಯ ಗ್ರಂಥಗಳಾಗಿದ್ದು ಇವನ್ನು ದೂರದ ಅಮೆರಿಕದಲ್ಲಿರುವ ಬೆಂಗಳೂರಿನ ಕೆ.ಟಿ. ಚಂದ್ರಶೇಖರ್ ಅವರ ಪುತ್ರ ಶೇಷಾದ್ರಿ ವಾಸು ಅವರ ಬರೆಹ ಅಂತರ್ಜಾಲದಲ್ಲಿ ಸೇರಿಸಲಾಗಿದ್ದು ಬರೆಹ ತಂತ್ರಾಂಶದಲ್ಲಿ ಭಾರತೀಯ ಭಾಷೆಗಳಲ್ಲೆಲ್ಲಾ ಇದರ ಪ್ರಯೋಜನವನ್ನು ಪಡೆಯಬಹುದಾಗಿದೆ. ಜೊತೆಗೆ ಕಣ್ಣು ಕಾಣದ ಅಂಧರಿಗೆ ಅನುಕೂಲವಾಗಲೆಂದು ಬ್ರೈಲ್ ಲಿಪಿಯನ್ನೂ ಕೂಡ ಈ ಬರೆಹ ತಂತ್ರಾಂಶದಲ್ಲಿ ಸೇರಿಸಿರುವುದರಿಂದ ಲಕ್ಷಾಂತರ ಮಂದಿಗೆ ಇದರ ಉಪಯೋಗವಾಗುತ್ತಿದೆ. ಇಂಗ್ಲೀಷ್-ಕನ್ನಡ ನಿಘಂಟು ಹಾಗೂ ಕನ್ನಡ-ಕನ್ನಡ ಕ್ಲಿಷ್ಟ ಪದಕೋಶ ಇವೆರಡು ಗ್ರಂಥಗಳೇ ಸಾಕು ವೆಂಕಟಸುಬ್ಬಯ್ಯನವರ ಅಕ್ಷರಪಾಂಡಿತ್ಯವನ್ನು ಜಗತ್ತಿಗೆ ಸಾರಲು.
ಕನ್ನಡ ಭಾಷೆಯನ್ನೇ ಬದುಕಾಗಿಸಿಕೊಂಡು, ಕನ್ನಡ ಪದಗಳನ್ನೇ ಉಸಿರಾಗಿಸಿಕೊಂಡು ಕನ್ನಡ ಕಟ್ಟುವ ಕೈಂಕರ್ಯದಲ್ಲಿ ಅಕ್ಷರಶಃ ಪದಕಲ್ಪವೃಕ್ಷವೇ ಆಗಿರುವ ಇಂಥ ಅಕ್ಷರಬ್ರಹ್ಮ ಜಿ. ವೆಂಕಟಸುಬ್ಬಯ್ಯ ಅವರನ್ನು ನಾಡಿಗೆ ನೀಡಿದ್ದು ಪು.ತಿ.ನ, ಕೆ.ಎಸ್.ನ, ಬಿ.ಎಂ.ಶ್ರೀ, ಎಂ.ಆರ್.ಶ್ರೀ, ತ್ರಿವೇಣಿ, ವಾಣಿ, ಎ.ಎನ್.ಮೂರ್ತಿರಾಯರು, ಎಚ್.ಎಲ್.ನಾಗೇಗೌಡರಂಥ ಸಾಹಿತ್ಯದಿಗ್ಗಜರು ಜನ್ಮವೆತ್ತಿದ ಮಂಡ್ಯದ ಮಣ್ಣೆಂಬುದೇ ಒಂದು ವಿಶೇಷ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಗಂಜಾಂ ಗ್ರಾಮ ಇವರ ಮೂಲ ಸ್ಥಳ. ಕನ್ನಡ ಮತ್ತು ಸಂಸ್ಕೃತ ಪಂಡಿತರಾದ ಶಿಕ್ಷಕ ಗಂಜಾಂ ತಿಮ್ಮಣ್ಣಯ್ಯ ಇವರ ತಂದೆ. ತಾಯಿ ಸುಬ್ಬಮ್ಮ ಈ ದಂಪತಿಗಳ ಜೇಷ್ಠಪುತ್ರರಾಗಿ ಇವರು ಸಾವಿರದ ಒಂಭೈನೂರ ಹದಿಮೂರರ ಆಗಸ್ಟ್ ಇಪ್ಪತ್ಮೂರರಂದು ತಾಯಿಯ ಊರಾದ ಇದೇ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಕೈಗೋನಹಳ್ಳಿಯಲ್ಲಿ ಜನಿಸಿದರು. ಆರು ಮಂದಿ ಸಹೋದರರು, ಓರ್ವ ಸಹೋದರಿ ಇವರ ಒಡಹುಟ್ಟಿದವರು. ಅರಮನೆಯ ವಿದ್ವಾಂಸರೂ ಆಗಿದ್ದ ಇವರ ತಂದೆ ಗಂಜಾಂ ತಿಮ್ಮಣ್ಣಯ್ಯ ಆ ಕಾಲದಲ್ಲೇ ಪತ್ರಕರ್ತರೂ ಆಗಿ ಪುರಾಣ ಕಥಾವಳಿ ಎಂಬ ಮಾಸಪತ್ರಿಕೆಯನ್ನು ನಡೆಸುತ್ತಿದ್ದರು. ಸ್ವತಃ ಸಾಹಿತಿಯೂ ಆಗಿದ್ದ ಅವರು ಶಿವಮಹಾಪುರಾಣ ಮತ್ತು ವಿಷ್ಣುಪುರಾಣ ಮುಂತಾದ ಪುರಾಣಗಳನ್ನು ಅಚ್ಚುಕಟ್ಟಾಗಿ ಅನುವಾದ ಮಾಡಿ ಪ್ರಕಟಿಸಿದ್ದರು. ವೆಂಕಟಸುಬ್ಬಯ್ಯನವರು ಇಂಥವರ ಮಗನೆಂದರೆ ಕೇಳಬೇಕೆ? ಜೊತೆಗೆ ಮೂಲತಃ ಇವರು ಸಂಸ್ಕೃತ ಮತ್ತು ಕನ್ನಡದಲ್ಲಿ ವಿದ್ವಾಂಸರಾಗಿದ್ದ ವೇದೋಪನಿಷತ್ತುಗಳ ಪಾರಂಗತ ಮನೆತನದಿಂದ ಬಂದವರು. ಹಾಗಾಗಿ ಬಾಲ್ಯದಿಂದಲೂ ಬಹುಬುದ್ಧಿವಂತರೇ ಆಗಿದ್ದ ಇವರು ದಿನಕಳೆದು ಬೆಳೆದಂತೆ ಜ್ಞಾನಭಂಡಾರವನ್ನು ಅಗಾಧವಾಗಿ ಬೆಳೆಸಿಕೊಂಡು ೧೯೩೭ ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ. ಪದವಿಯನ್ನು ಸುವರ್ಣ ಪದಕ ಸಹಿತ ಹೊನ್ನಶೆಟ್ಟಿ ಬಹುಮಾನದೊಡನೆ ಪಡೆದಿದ್ದರು. ಆ ನಂತರ ೧೯೩೮ ರಲ್ಲಿ ಬಿ.ಟಿ. ಮಾಡಿ ಶಿಕ್ಷಣ, ಸಂಶೋಧನೆ, ಅನುವಾದ, ವಿಮರ್ಶೆ ಮತ್ತು ನಿಘಂಟು ನಿರ್ಮಾಣ ಕಾರ್ಯಗಳತ್ತ ತಮ್ಮ ಲೇಖನಿಯನ್ನು ಹರಿಯಬಿಟ್ಟರು. ೧೯೩೯ ರಲ್ಲಿ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಉಪನ್ಯಾಸಕರಾಗಿ ನೇಮಕಗೊಂಡ ಇವರು ನಂತರ ಬೆಂಗಳೂರಿನ ವಿಜಯ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ, ಪ್ರಿನ್ಸಿಪಾಲರಾಗಿ ಸೇವೆ ಸಲ್ಲಿಸಿ ನಾಲ್ಕು ದಶಕಗಳ ಸುದೀರ್ಘ ಕಾಲದವರೆಗೆ ವಿದ್ಯಾರ್ಥಿಗಳ ಜ್ಞಾನಪರಿಧಿ ಹೆಚ್ಚಿಸಲು ಶ್ರಮಿಸಿ ೧೯೭೩ ರಲ್ಲಿ ನಿವೃತ್ತರಾದರು. ಈ ಅವಧಿಯಲ್ಲಿ ಶಿಕ್ಷಣ ಸೇವೆಯ ಜೊತೆ ಜೊತೆಗೆ ಇವರ ಸಾಹಿತ್ಯ ಸೇವೆಯೂ ನಿರಂತರವಾಗಿ ಹರಿದು ಬಂದು ಇವರಿಂದ ಹಲವಾರು ಮಹತ್ವದ ಕೃತಿಗಳು ಸೃಷ್ಟಿಯಾದವು.
ವೆಂಕಟಸುಬ್ಬಯ್ಯನವರು ಸೃಜನಶೀಲ ಸಾಹಿತ್ಯಕ್ಕಿಂತ ಸೃಜನೇತರ ಸಾಹಿತ್ಯದಲ್ಲಿ ಹೆಚ್ಚು ಒಲವು ಹೊಂದಿದ್ದು ಇದನ್ನು ಅವರ ಬರೆಹಗಳಲ್ಲಿ ಕಾಣಬಹುದಾಗಿದೆ. ಹಾಗಾಗಿ ಇವರ ಲೇಖನಿಯಿಂದ ಅರಳಿದ ಸಾಹಿತ್ಯ ಕುಸುಮಗಳಲ್ಲಿ ಹೆಚ್ಚಿನವು ಸೃಜನೇತರ ಕೃತಿಗಳೇ ಆಗಿವೆ. ನಯನಸೇನ, ಅನುಕಲ್ಪನೆ, ನಳಚಂಪು, ಅಕ್ರೂರ ಚರಿತ್ರೆ, ಲಿಂಡನ್ ಜಾನ್ಸನ್ ಕಥೆ, ಸಂಯುಕ್ತ ಸಂಸ್ಥಾನ ಪರಿಚಯ, ಶಂಕರಾಚಾರ್ಯ, ಕಬೀರ್, ಇದು ನಮ್ಮ ಭಾರತ, ಸರಳಾದಾಸ್, ರತ್ನಾಕರವರ್ಣಿ, ದಾಸಸಾಹಿತ್ಯ, ವಚನಸಾಹಿತ್ಯ, ಶಾಸನ ಸಾಹಿತ್ಯ, ಷಡಕ್ಷರ ದೇವ, ಸರ್ವಜ್ಞ, ಕನ್ನಡ-ಕನ್ನಡ ಇಂಗ್ಲೀಷ್ ನಿಘಂಟು, ಕನ್ನಡ-ಕನ್ನಡ ಕ್ಲಿಷ್ಟ ಪದಕೋಶ, ಇಂಗ್ಲೀಷ್-ಕನ್ನಡ ನಿಘಂಟು, ಹೊಯ್ಸಳ ಕರ್ನಾಟಕ ರಜತೋತ್ಸವ ಸಂಪುಟ, ಮುದ್ದಣ ಭಂಡಾರ ಭಾಗ-೧, ಮುದ್ದಣ ಭಂಡಾರ ಭಾಗ-೨, ಕಾವ್ಯಲಹರಿ, ಕನ್ನಡ ಸಾಹಿತ್ಯ ಬೆಳೆದು ಬಂದ ದಾರಿ, ಕನ್ನಡವನ್ನು ಉಳಿಸಿ ಬೆಳೆಸಿದವರು, ಪ್ರೊ|| ಟಿ.ಎಸ್. ವೆಂಕಣ್ಣಯ್ಯನವರು, ಕವಿ ಜನ್ನ, ಡಿ.ವಿ.ಗುಂಡಪ್ಪನವರು, ಕನ್ನಡದ ನಾಯಕಮಣಿಗಳು, ಕರ್ಣಕರ್ಣಾಮೃತ, ನಾಗರಸನ ಭಗವದ್ಗೀತೆ, ತಮಿಳು ಕತೆಗಳು, ಇಗೋ ಕನ್ನಡ-೧, ಇಗೋ ಕನ್ನಡ-೨, ಮುದ್ದಣ ಪದಪ್ರಯೋಗಕೋಶ, ಎರವಲು ಪದಕೋಶ, ಕುಮಾರವ್ಯಾಸನ ಅಂತರಂಗ ಮುಂತಾದವು ಇವರ ಪ್ರಮುಖ ಕೃತಿಗಳು. ಇವರ ಇಗೋ ಕನ್ನಡ ಅಂಕಣವಂತೂ ನಾಡಿನ ಮನೆಮಾತು.
ಕೇವಲ ಸಾಹಿತ್ಯ ರಚನೆಗಷ್ಟೇ ಇವರು ತಮ್ಮನ್ನು ಸೀಮಿತಗೊಳಿಸಿಕೊಂಡವರಲ್ಲ. ಇವರದು ಸಮಾಜಮುಖಿ ವ್ಯಕ್ತಿತ್ವ ಮತ್ತು ಬಹುಮುಖಿ ಸಾಧನೆ. ಹಾಗಾಗಿ ವೆಂಕಟಸುಬ್ಬಯ್ಯನವರ ಹೆಸರು ಹಲವಾರು ಕ್ಷೇತ್ರಗಳಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಮೈಸೂರು ಮತ್ತು ಬೆಂಗಳೂರು ವಿಶ್ವವಿದ್ಯಾಲಯಗಳ ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ, ಕನ್ನಡ ಪರೀಕ್ಷಾ ಮಂಡಳಿಯ ಅಧ್ಯಕ್ಷರಾಗಿ ಕೆಲಸ ಮಾಡಿರುವ ಇವರ ಶೈಕ್ಷಣಿಕ ಸಾಧನೆ ಏನೂ ಕಮ್ಮಿಯಲ್ಲ. ೧೯೭೩ ರಿಂದ ೧೯೯೨ ರವರೆಗೆ ಕನ್ನಡ ಕನ್ನಡ ಬೃಹತ್ ಕೋಶದ ಪ್ರಧಾನ ಸಂಪಾದಕರಾಗಿ ಈ ದಿಶೆಯಲ್ಲಿ ಏಳು ಬೃಹತ್ ಸಂಪುಟಗಳನ್ನು ಹೊರತಂದ ಹೆಗ್ಗಳಿಕೆ ಇವರದು. ೧೯೬೪-೧೯೬೯ ರ ಅವಧಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದ ಇವರು ಇದಕ್ಕೂ ಮುನ್ನ ಸಾಹಿತ್ಯ ಪರಿಷತ್‌ನ ಕಾರ್ಯದರ್ಶಿಯಾಗಿಯೂ ಹಲವಾರು ವರ್ಷಗಳು ಪರಿಷತ್‌ನ ಅಭಿವೃದ್ಧಿಗಾಗಿ ಅಹರ್ನಿಶಿ ದುಡಿದಿದ್ದರು. ಕನ್ನಡ ನುಡಿ ಪತ್ರಿಕೆಯ ಸಂಪಾದಕರಾಗಿ, ಕನ್ನಡ-ಕನ್ನಡ ಕೋಶದ ಸಮಿತಿಯ ಅಧ್ಯಕ್ಷರು ಮತ್ತು ಪ್ರಧಾನ ಸಂಪಾದಕರಾಗಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ, ಅಖಿಲ ಭಾರತ ನಿಘಂಟುಕಾರರ ಸಂಘದ ಉಪಾಧ್ಯಕ್ಷರಾಗಿ, ಕೇಂದ್ರ ಸರ್ಕಾರದ ಭಾರತೀಯ ಭಾಷಾ ಸಮಿತಿಯ ಕನ್ನಡ ಪ್ರತಿನಿಧಿಗಳಾಗಿ, ಕನ್ನಡ ಭಾಷೆ, ನಿಘಂಟು ರಚನೆಯ ಹಲವಾರು ಸಮಿತಿಗಳ ವಿವಿಧ ಪ್ರಮುಖ ಸ್ಥಾನಗಳಲ್ಲಿ ಕುಳಿತು ಕನ್ನಡಕ್ಕಾಗಿ ದುಡಿದಿರುವ ಇವರ ಪ್ರಾಮಾಣಿಕ ಕನ್ನಡ ಕಾಯಕ ನಿಜಕ್ಕೂ ನಾಡು ಮೆಚ್ಚುವಂತಾದ್ದು.
ನಿಘಂಟು ಸಾರ್ವಭೌಮ, ಸಂಚಾರಿಜೀವಂತಪದಕೋಶ, ಭಾಷಾವಿಜ್ಞಾನ ಪ್ರವೀಣ, ಪದಗಳಕಣಜ, ನಿಘಂಟು ನಿಸ್ಸೀಮ, ಶಬ್ಧರ್ಷಿ, ಪದಜೀವಿ, ಪದಗುರು, ನಡೆದಾಡುವ ನಿಘಂಟು, ಶಬ್ದಸಂಜೀವಿನಿ, ಶಬ್ದಬ್ರಹ್ಮ, ಶಬ್ದಸಾಗರ, ಶಬ್ದಸಹಾಯವಾಣಿ, ಶಬ್ದಗಾರುಡಿಗ, ಶಬ್ದಶಿಲ್ಪಿ, ಚಲಿಸುವ ಜ್ಞಾನಭಂಡಾರ, ಕನ್ನಡದ ಕಿಟ್ಟಲ್..... ಹೀಗೆ ಹಲವಾರು ಬಿರುದುಗಳ ಮಳೆಯಲ್ಲಿ ಮಿಂದಿರುವ ಶತಕದ ಅಂಚಿನಲ್ಲಿರುವ ಸಾಹಿತ್ಯಭೀಷ್ಮ ಪ್ರೊ|| ಜಿ. ವೆಂಕಟಸುಬ್ಬಯ್ಯನವರ ಸಾಧನೆಯ ತೂಕಕ್ಕೆ ಯಾವ ಬಿರುದುಗಳೂ ಭಾರವೆನಿಸದು.
ಇವರ ಮುದ್ದಣ ಭಂಡಾರ ಗ್ರಂಥಕ್ಕೆ ೧೯೮೭ ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಇವರ ಸಾಹಿತ್ಯ ಸಾಧನೆಗಾಗಿ ೧೯೯೧ ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ೧೯೯೨ ರಲ್ಲಿ ಮಾಂಟ್ರಿಯಲ್ ಕೆನಡದಲ್ಲಿ ನಡೆದ ಕನ್ನಡ ಸಮ್ಮೇಳನದ ಗೌರವ ಆತಿಥ್ಯ, ೧೯೯೭ ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ೧೯೯೮ ರಲ್ಲಿ ಶಂಬಾ ಪ್ರಶಸ್ತಿ, ೧೯೯೯ ರಲ್ಲಿ ಸೇಡಿಯಾಪು ಪ್ರಶಸ್ತಿ, ಅದೇ ವರ್ಷ ಶಿವರಾಮ ಕಾರಂತ ಪ್ರಶಸ್ತಿ, ೨೦೦೦ ದಲ್ಲಿ ಕರ್ನಾಟಕ ಪತ್ರಿಕಾ ಅಕಾಡೆಮಿಯ ವಿಶೇಷ ಪ್ರಶಸ್ತಿ, ೨೦೦೧ ರಲ್ಲಿ ವನಮಾಲಿ ಪ್ರಶಸ್ತಿ, ೨೦೦೩ ರಲ್ಲಿ ಮುದ್ದಣ ಪುರಸ್ಕಾರ, ೨೦೦೫ ರಲ್ಲಿ ಮಾಸ್ತಿ ಪ್ರಶಸ್ತಿ, ನಾಡೋಜ ಪ್ರಶಸ್ತಿ, ೨೦೦೭ ರಲ್ಲಿ ಮೂಡುಬಿದರೆಯ ಪ್ರತಿಷ್ಠಿತ ಆಳ್ವಾಸ್ ನುಡಿಸಿರಿಯ ಅಧ್ಯಕ್ಷತೆಯ ಗೌರವ, ೨೦೦೮ ರಲ್ಲಿ ಪ್ರತಿಷ್ಠಿತ ಅನಕೃ ನಿರ್ಮಾಣ್ ಸ್ವರ್ಣ ಪ್ರಶಸ್ತಿ, ೨೦೦೯ ರಲ್ಲಿ ಕರ್ನಾಟಕ ವಿಜ್ಞಾನ ಪರಿಷತ್ತಿನ ರಜತೋತ್ಸವ ಪ್ರಶಸ್ತಿ, ೨೦೧೦ ರಲ್ಲಿ ಗೋಕಾಕ್ ವಾಙ್ಮಯ ಟ್ರಸ್ಟ್‌ನ ವಿ.ಕೃ. ಗೋಕಾಕ್ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ-ಪುರಸ್ಕಾರ, ಗೌರವ-ಸನ್ಮಾನಗಳಿಗೆ ಇವರು ಭಾಜನರಾಗಿದ್ದಾರೆ. ಅಂತೆಯೇ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ|| ವೀರೇಂದ್ರ ಹೆಗ್ಗಡೆಯವರ ಪ್ರಾಯೋಜಕತ್ವದಲ್ಲಿ ಜಿ.ವಿ.ಯವರನ್ನು ಕುರಿತು ನಿರ್ದೇಶಕ ಸುಚೇಂದ್ರ ಪ್ರಸಾದ್, ಸಾಕ್ಷ್ಯಚಿತ್ರ (೨೦೧೦) ತೆಗೆದಿರುವುದು ಇವರಿಗೆ ಸಂದ ದೊಡ್ಡ ಗೌರವವೇ ಆಗಿದೆ. ಈಗ ಇವೆಲ್ಲಕ್ಕೂ ಕಳಶಪ್ರಾಯವಾಗಿ ಕನ್ನಡ ಸಾಹಿತ್ಯ ಪರಿಷತ್ತು ೭೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪೀಠವನ್ನು ಪ್ರೊ|| ಜಿ. ವೆಂಕಟಸುಬ್ಬಯ್ಯ ಅವರಿಗೆ ನೀಡಿ ಗೌರವಿಸಿದೆ.

ನಿಜಾಮರ ಆಡಳಿತದಲ್ಲಿ ಕನ್ನಡಕ್ಕೆ ಹೋರಾಡಿದವರು


ಒಂದು ಕಾಲದಲ್ಲಿ ನೃಪತುಂಗನಾಳಿದ ಸಾಮ್ರಾಜ್ಯ ಹತ್ತೊಂಭತ್ತನೆಯ ಶತಮಾನದಲ್ಲಿ ಹೈದರಾಬಾದ್ ನಿಜಾಮರ ಆಡಳಿತಕ್ಕೆ ಒಳಪಟ್ಟಿದ್ದು ಚರಿತ್ರೆಯ ದುರಂತ. ಕ್ರಿ.ಶ.೧೮೦೦ರಲ್ಲಿ ನಿಜಾಮನಿಗೂ ಹಾಗೂ ಬ್ರಿಟಿಷರಿಗೂ ಆದ ಒಪ್ಪಂದದಂತೆ, ರಾಯಚೂರು, ಗುಲಬರ್ಗಾ ಹಾಗೂ ಬೀದರ್ ಜಿಲ್ಲೆಗಳು ನಿಜಾಮನಿಗೆ ಲಭಿಸಿದವು. ಶೋಚನೀಯ ಸಂಗತಿ ಎಂದರೆ ಆದಿಲ್‌ಷಾಹಿ ನಿಜಾಂ ಹಾಗೂ ಪೇಶ್ವೆಯವರ ಆಡಳಿತಾವಧಿಗಳಲ್ಲಿ ಫಾರ್ಸಿ, ಉರ್ದು ಮತ್ತು ಮರಾಠಿ ಭಾಷೆಗಳ ದರ್ಪದಿಂದಾಗಿ ಕನ್ನಡ ಭಾಷೆಗೆ ಹೀನ ದಿಶೆ ಉಂಟಾಯಿತು. ಏಕೆಂದರೆ ಈ ಅವಧಿಯಲ್ಲಿ ಕನ್ನಡ ಕೇವಲ ಮನೆಯೊಳಗೆ ಮಾತ್ರ ಮಾತನಾಡುವ ಭಾಷೆಯಾಯಿತು. ಈ ಸಂಕಷ್ಟ ಸಮಯದಲ್ಲಿ ಭಾಷೆಯನ್ನು ಉಳಿಸಿ ಬೆಳೆಸಿದವರೆಂದರೆ ಶ್ರೀಸಾಮಾನ್ಯರು. ಹೀಗೆ ಕನ್ನಡ ಭಾಷೆಯನ್ನು ಸಶಕ್ತವಾಗಿ ಬೆಳೆಸಿಕೊಂಡು ಬಂದ ಕೀರ್ತಿ ಅಲ್ಲಿನ ಗ್ರಾಮೀಣ ಜನತೆಗೆ ಸಲ್ಲಬೇಕು. ಅಂದಿನ ಹಲವಾರು ಗಣ್ಯರು. ಸಂಘ-ಸಂಸ್ಥೆಗಳ ಪಾತ್ರ ಅಪಾರ. ಹೀಗಾಗಿ ನಾವು ಸ್ಮರಿಸಲೇ ಬೇಕಾದ ಮಹನೀಯರೆಂದೆ, ಪಂಡಿತ ತಾರಾನಾಥರು, ಪೂಜ್ಯ ದೊಡ್ಡಪ್ಪಅಪ್ಪ, ಬಾಲ್ಕಿಯ ಚೆನ್ನಬಸವ ಪಟ್ಟದೇವರು, ಉದ್ಗೀರ್ ಸಂಗ್ರಾಮಪ್ಪ, ಹೆರೂರು ಮಾಸ್ತರ, ಪ್ರಭುರಾವ್ ಕಂಬಳಿವಾಲೆ ಹಾಗೂ ಮಾನ್ಷಿ ನರಸಿಂಗರಾವ್ ಮುಂತಾದವರು. ಪ್ರಸ್ತುತ ಲೇಖನ ಕನ್ನಡ ಭಾಷೆಯ ಉಳಿವಿಗಾಗಿ ತಮ್ಮ ಜೀವನವನ್ನೇ ಧಾರೆ ಎರೆದ ಬೀದರಿನ ಪ್ರಭುರಾವ್ ಕಂಬಳಿವಾಲೆಯವರನ್ನು ಕುರಿತ್ತದ್ದಾಗಿದೆ.
ಈಗ ಮಹಾರಾಷ್ಟ್ರದಲ್ಲಿರುವ ಲಾತೂರು ಜಿಲ್ಲೆಯ ಉದ್ಗೀರ್‌ನಲ್ಲಿ ಪ್ರಭುರಾವ್ ಅವರು ಜನಿಸಿದರು. ಅವರು ಸಾಮಾನ್ಯ ಕುಟುಂಬದವರು. ಅವರ ವಿದ್ಯಾಭ್ಯಾಸ ಉರ್ದು ಹಾಗೂ ಮರಾಠಿಯಲ್ಲಿಯಾದರೂ ಅವರು ಪ್ರೀತಿಸಿದ್ದು ಕನ್ನಡವನ್ನೇ. ಪ್ರಚಾರ ಮಾಡಿದ್ದು ಕನ್ನಡವನ್ನೇ. ವೃತ್ತಿಯಲ್ಲಿ ವಕೀಲರಾಗಿದ್ದರೂ ಪ್ರವೃತ್ತಿಯಲ್ಲಿ ಅವರು ಮಾಡಿದ್ದು ಕನ್ನಡ ಕಾರ್ಯಗಳನ್ನೇ. ೧೯೨೬ರಿಂದ ೧೯೩೪ರವರೆಗೂ ಅವರು ಉದ್ಗೀರದಲ್ಲಿ ಸಮಾಜದ ಕಾರ್ಯಕರ್ತರಾಗಿ ಮಕ್ಕಳಿಗೆ ಕನ್ನಡ ಕಲಿಸುವ ಕಾರ್ಯಕರ್ತರಾಗಿ ಸೇವೆ ಮಾಡಿದರು. ಅಂದಿನ ದಿನಗಳಲ್ಲಿಯೇ ಅ.ನ.ಕೃ. ಜಯದೇವಿ ಲಿಗಾಡೆ ಮುಂತಾದವರನ್ನು ಉದ್ಗೀರಿಗೆ ಕರೆಯಿಸಿ ಕನ್ನಡದಲ್ಲಿ ವಚನ ಸಪ್ತಾಹ ನಡೆಸಿದರು. ೧೯೩೫ರಲ್ಲಿಯೇ ಉದ್ಗೀರ್, ಲಾತೂರು ಮುಂತಾದ ಪ್ರದೇಶಗಳಲ್ಲಿ ಹರ್ಡೇಕರ್ ಮಂಜಪ್ಪ, ಬ್ಯಾರಿಷ್ಪರ್ ಎಂ.ಎನ್.ಸರದಾರ ಮುಂತಾದವರನ್ನು ಕರೆಯಿಸಿ ಕನ್ನಡದ ಕಾರ್ಯ ಮಾಡಿದರು. ೧೯೫೨ರಲ್ಲಿ ಸಾರ್ವಜನಿಕ ಗಣಪತಿ ಉತ್ಸವವನ್ನು ಮಾಡಿದರು. ಇದಕ್ಕೆ ಅವರು ಮಾನ್ಷಿನರ ಸಿಂಗರಾವ್ ಅವರನ್ನು ಕರೆಯಿಸಿದ್ದರು. ಆದರೆ ಮರಾಠಿಗರು, ಬೀದರ್‌ನಲ್ಲಿ ಉಪನ್ಯಾಸಕ್ಕೆ ಅಡ್ಡಿಮಾಡಿದರು. ಬೀದರನಂತಹ ಅಚ್ಚಗನ್ನಡ ಪ್ರದೇಶದಲ್ಲಿ ಮರಾಠಿಗರು ವಿರೋಧಿಸಿದ ಈ ಘಟನೆ ಅವರ ಬದುಕನ್ನೇ ಬದಲಾಯಿಸಿತು. ಏಕೆಂದರೆ ಅವರು ಉದ್ಗೀರಲ್ಲಿನ ತಮ್ಮ ವಕೀಲ ವೃತ್ತಿಯನ್ನೇ ತೊರೆದು ಬೀದರಿಗೆ ಬಂದು ಕನ್ನಡದ ಜಾಗೃತಿಗಾಗಿ ತಮ್ಮ ಬದುಕನ್ನೇ ಮುಡುಪಿಟ್ಟರು. ಹೀಗೆ ಬೀದರಿಗೆ ಬಂದು ೧೯೫೩ರಲ್ಲಿ ಕನ್ನಡಿಗರ ಸಭೆಯೊಂದನ್ನು ಕರೆದು ಕನ್ನಡದ ಏಳಿಗೆಗಾಗಿ "ಬೀದರ ಜಿಲ್ಲಾ ಕನ್ನಡ ಶಿಕ್ಷಣ ಸಮಿತಿ"ಯನ್ನು ಸ್ಥಾಪಿಸಿದರು. ಬೀದರ ಜಿಲ್ಲೆಯಲ್ಲಿ ಕನ್ನಡ ಶಾಲೆಗಳ ಸ್ಥಾಪನೆ, ಕನ್ನಡ ಭಾಷಾ ಪ್ರಚಾರ, ನಾಡಹಬ್ಬ ಆಚರಣೆ, ಸಾಹಿತಿಗಳ ಹಾಗೂ ವಿದ್ವಾಂಸರ ಉಪನ್ಯಾಸ ಕಾರ್ಯಗಳೇ ಈ ಸಮಿತಿಯ ಗುರಿಯಾಗಿತ್ತು. ಅವರ ಈ ಕಾರ್ಯದಲ್ಲಿ ಸರ್ವ ಶ್ರೀ ಕೆ.ಎಸ್.ರಾಜಾ, ಆರ್.ಆರ್.ದಿಗ್ಗಾವಿ, ಭೀಮಶೇನರಾವ್ ತಾಳೀಕೋಟೆ ಮುಂತಾದವರ ಸಹಕಾರದಿಂದ ನಾಡಹಬ್ಬ ಕಾರ್ಯಕ್ರಮ ನಡೆಸಿದರು. ಈ ಕಾರ್ಯಕ್ರಮಕ್ಕೆ ಕೇಂದ್ರದಲ್ಲಿ ಉಪಗೃಹ ಮಂತ್ರಿಗಳಾದ ಬಿ.ಎನ್.ದಾತಾರರನ್ನು ಕರೆಯಿಸಿದ್ದರು.
ಈ ಕಾರ್ಯಕ್ರಮಕ್ಕೆ ಅಣ್ಣಾರಾವ್ ಗಣಮುಖಿ, ಸಿದ್ಧಯ್ಯ ಪುರಾಣಿಕ, ವಿ.ಬಿ.ನಾಯಕ, ಬಿ.ಶಿವಮೂರ್ತಿ ಸ್ವಾಮಿಗಳು ಬಂದು ಭಾಷಣ ಮಾಡಿದರು. ಈ ನಾಡಹಬ್ಬದ ಕಾರ್ಯಕ್ರಮಕ್ಕೆ ಸುಮಾರು ಹತ್ತು ಸಾವಿರ ಜನ ಜಮಾಯಿಸಿದ್ದರು. ೧೯೫೪ರಲ್ಲಿ ನಡೆದ ನಾಡಹಬ್ಬಕ್ಕೆ ಕೋಳೂರು ಮಲ್ಲಪ್ಪ, ಜಯದೇವಿ ತಾಯಿ ಲಿಗಾಡೆಯವರು, ೧೯೫೫ರಲ್ಲಿ ನಡೆದ ಮೂರನೇ ನಾಡಹಬ್ಬಕ್ಕೆ ಅ.ನ.ಕೃ., ಶಿವರಾಮಕಾರಂತರು ಆಗಮಿಸಿದ್ದರು. ಈ ಕಾರ್ಯಕ್ರಮಗಳಿಂದಾಗಿ ಜನರಲ್ಲಿ ಕನ್ನಡದ ಬಗೆಗೆ ಅಭಿಮಾನ ಮೂಡಿತು. ನಾಡಹಬ್ಬ ಹಾಗೂ ಕನ್ನಡ ಶಾಲೆಗಳ ಸ್ಥಾಪನೆಯೊಂದಿಗೆ ೧೯೫೫ರಲ್ಲಿ ಗೋದಾವರಿ ನದಿ ತೀರದಲ್ಲಿ ಮೊದಲ ಬಾರಿಗೆ ನಾಂದೇಡ ಜಿಲ್ಲೆಯ ದೇಗಲೂರು ಎಂಬ ಪಟ್ಟಣದಲ್ಲಿ ಕನ್ನಡ ಸಮ್ಮೇಳನ ನಡೆಸಿದರು. ಕುತೂಹಲದ ಸಂಗತಿಯೆಂದರೆ ದೇಗಲೂರಿನ ಮರಾಠಿಗರ ಮನಗೆಲ್ಲಲು ಸಮ್ಮೇಳನ ಮೊದಲ ದಿನ ಎಲ್ಲಾ ಕಾರ್ಯಕ್ರಮಗಳನ್ನು ಹಿಂದಿ ಭಾಷೆಯಲ್ಲಿಯೇ ನಡೆಸಿದರು. ಎರಡನೆಯ ದಿನದಂದು ಸಿದ್ಧಯ್ಯ ಪುರಾಣಿಕ ಹಾಗೂ ಮಾನ್ಷಿನರ ಸಿಂಗರಾವ್ ಅವರು ಕನ್ನಡದಲ್ಲಿಯೇ ಮಾತನಾಡಿದ್ದನ್ನು ಮರಾಠಿಗರು ಮನಸಾರೆ ಒಪ್ಪಿದರು. ಇದು ಪ್ರಭುರಾಯರ ಸಾಧನೆಯಿಂದ ಮಾತ್ರ ಸಾಧ್ಯವಾಯಿತು. ಗೋದಾವರೀ ತೀರದಲ್ಲಿ ಕನ್ನಡ ಕಾರ್ಯಕ್ರಮ ನಡೆಸಿದ್ದು ಒಂದು ಐತಿಹಾಸಿಕ ದಾಖಲೆ ಎಂದೇ ಹೇಳಬೇಕು ಏಕೆಂದರೆ ಈ ಕಾರ್ಯಕ್ಕೆಂದೇ ಪ್ರಭುರಾವ್ ಅವರು ಮೂರು ತಿಂಗಳು ಮುಂಚೆ ಹೋಗಿ ಜನರ ಮನ ಒಲಿಸಿ ಚಂದಾ ಕೂಡಿಸಿ ಈ ಸಮ್ಮೇಳನ ಮಾಡಿದ್ದು ಸಾಮಾನ್ಯ ವಿಷಯವಲ್ಲ.
ಪ್ರಭುರಾವ್ ಅವರು ಬೀದರ ಜಿಲ್ಲೆಯ ಭಾತಮ್ರಾ ಎಂಬ ಹಳ್ಳಿಯಲ್ಲಿ ೧೯೫೪ರಲ್ಲಿಯೇ ಹೈದರಾಬಾದ್ ಪ್ರದೇಶದ ಕನ್ನಡ ಸಾಹಿತ್ಯ ಪರಿಷತ್ತಿನ ಐದನೆಯ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿದ್ದರು. ಸೋಜಿಗದ ಸಂಗತಿ ಎಂದರೆ ನಾಲ್ಕು ಅಥವಾ ಐದು ಸಾವಿರ ಜನಸಂಖ್ಯೆ ಇದ್ದ ಹಳ್ಳಿಯಲ್ಲಿ ಈ ಸಮ್ಮೇಳನಕ್ಕೆಂದೇ ಹೊರಗಿನಿಂದ ಬಂದ ಸುಮಾರು ಹತ್ತು ಹದಿನೈದು ಸಾವಿರ ಮಂದಿಗೆ ಅಲ್ಲಿನ ಕನ್ನಡಾಭಿಮಾನಿಗಳು ಊಟ ಉಪಚಾರ ಮಾಡಿ ಮೂರು ದಿನ ಸಮ್ಮೇಳನ ಮಾಡಿದರು. ಈ ಸಮ್ಮೇಳನ ಉದ್ಘಾಟನೆಯನ್ನು ಡಾ|ಪದ್ಮನಾಭ ಪುರಾಣೀಕರು ನೆರವೇರಿಸಿದ್ದರು. ಈ ಸಮ್ಮೇಳನದ ಅಂಗವಾಗಿ ಪಂಚಭಾಷಾ ಕವಿ ಸಮ್ಮೇಳನ ಒಂದನ್ನು ಏರ್ಪಡಿಸಲಾಗಿತ್ತು. ಅದರಂತೆ ೧೯೬೦ರಲ್ಲಿ ೪೧ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನೂ ಇವರೇ ಡಾ||ಡಿ.ಎಲ್.ನರಸಿಂಹಾಚಾರ್ಯರ ಅಧ್ಯಕ್ಷತೆಯಲ್ಲಿ ನಡೆಸಿದರು. ಬೀದರಿನಂಥ ಗಡಿ ಪ್ರದೇಶದಲ್ಲಿ ಮರಾಠಿ, ಉರ್ದು, ತೆಲುಗು ಭಾಷೆಗಳ ದಬ್ಬಾಳಿಕೆಗೆ ಗುರಿಯಾದ ಪ್ರದೇಶದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಡೆಸಿದ್ದು ಇವರ ಶ್ರದ್ಧೆ ಹಾಗೂ ಸಾಮರ್ಥ್ಯಕ್ಕೆ ಸಾಕ್ಷಿ. ಮೆಚ್ಚಲೇಬೇಕಾದ ವಿಷಯ ಎಂದರೆ ಬೀದರ ಭಾಗದಲ್ಲಿ ನಾಡಹಬ್ಬ. ಕನ್ನಡ ಶಾಲೆಗಳೊಂದಿಗೆ ಬೀದರ ಜಿಲ್ಲೆಯಲ್ಲಿ ಪ್ರಥಮ ದರ್ಜೆಯ ಪದವಿ ಕಾಲೇಜ್ ಆದ ಭೂಮರೆಡ್ಡಿ ಕಾಲೇಜನ್ನು ಸ್ಥಾಪಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಹೀಗೆ ಕನ್ನಡ ಪುನರುತ್ಥಾನದ ಪ್ರಮುಖರೆಂದರೆ ಪ್ರಭುರಾವ್ ಕಂಬಳಿವಾಲೇ.

ಪ್ರೊ.ಎಂ.ಧ್ರುವನಾರಾಯಣ
೧೦/೨ ೧೩ಎ ಕ್ರಾಸ್,
೨ನೇ ಬ್ಲಾಕ್, ಜಯನಗರ, ಬೆಂಗಳೂರು-೧೧
ದೂ: ೨೬೫೬೧೬೦೮

ನೆನಪುಗಳ ಬಿಚ್ಚಿಟ್ಟ ನಾಡೋಜ



ಸಂದರ್ಶನ: ಆಶಾ ಶಂಕರೇಗೌಡ

ನಲವತ್ತು ವರ್ಷಗಳ ನಂತರ ಮತ್ತೆ ಒದಗಿದೆ ಉದ್ಯಾನನಗರಿಗೆ ಭಾರತಾಂಬೆಯ ಹಿರಿಮಗಳ್ ಕನ್ನಡಾಂಬೆಯ ಹಬ್ಬದ ಸಿರಿ ಆಚರಿಸುವ ಭಾಗ್ಯ, ೭೭ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮನೆಮಗಳ ಮದುವೆಗೆ ಅಣಿಯಾಗುವಂತೆ ಮನೆಮನವನ್ನೆಲ್ಲ ಸಿಂಗರಿಸುವ ಭರಾಟೆಯಲ್ಲಿ ತೊಡಗಿದೆ ಬೆಂಗಳೂರು. ಅರಿಶಿನ ಕೆಂಪುವರ್ಣಗಳ ಸಂಗಮದ ಕನ್ನಡಮ್ಮನ ಧ್ವಜ ಎಲ್ಲೆಲ್ಲು ರಾರಾಜಿಸುತ್ತಿದೆ. ಇಂತಹ ಸಮಯದಲ್ಲಿ ತಾವು ಅಧ್ಯಕ್ಷರಾಗಿದ್ದ ಸಮ್ಮೇಳನದ ಹಳೆಯ ನೆನಪನ್ನು ಮೆಲುಕುಹಾಕುವಂತೆ ನಾಡೋಜ ದೇಜಗೌ ಅವರನ್ನು ಕೋರಿದೆವು. ಸ್ವಲ್ಪ ಅನಾರೋಗ್ಯವಿದ್ದರೂ ಮಂದಸ್ಮಿತರಾಗಿ ಎದ್ದು ಕುಳಿತು ಉತ್ಸಾಹ ತುಂಬಿದ ಕಂಗಳಿಂದ, ಮತ್ತೊಬ್ಬ ನಾಡೋಜ ಜಿ.ನಾರಾಯಣ್ ಕನ್ನಡ ಸಾಹಿತ್ಯ ಪರಿಷತನ್ನು ಬೆಳಕಿಗೆ ತಂದ ಮಹಾಚೇತನ. ಈ ಸಂದರ್ಭದಲ್ಲಿ ಅವರು ಸ್ಮರಣೀಯರು ಎಂದು ತಮ್ಮ ಮಾತು ಶುರುವಿಟ್ಟರು.
ಕ.ಸಾ.ಪ ಬಿ.ಎಂ.ಶ್ರೀ ಮತ್ತು ಎಂ.ಆರ್.ಶ್ರೀನಿವಾಸಮೂರ್ತಿಯವರ ಕಾಲದಲ್ಲಿ ಚೆನ್ನಾಗಿತ್ತು. ಆದರೆ ನಮ್ಮವರಲ್ಲಿ ಸಾಹಿತ್ಯ ಅಭಿರುಚಿ ಹುಟ್ಟಿಸಿ ಕನ್ನಡ ಸಾಹಿತ್ಯದ ಕಂಪು ಜನರಿಗೆ ತಲುಪುವಂತೆ ಮಾಡಿ ಕನ್ನಡ ಸಾಹಿತ್ಯ ಪರಿಷತ್ತನ್ನು ಆಲದಮರದಂತೆ ಬೃಹದಾಕಾರವಾಗಿ ಬೆಳೆಸಿ ಸಾಂಸ್ಕೃತಿಕ ನಗರಿ, ಸಾಹಿತ್ಯ ನಗರಿ ಸೇರಿದಂತೆ ಮೂವತ್ತು ಜಿಲ್ಲೆಗಳಲ್ಲಿ ಅದರ ಬೇರೂರುವಂತೆ ಭದ್ರಬುನಾದಿ ಹಾಕಿಕೊಟ್ಟವರು ಜಿ.ನಾರಾಯಣ್‌ರವರು. ಆ ಕಾಲದಲ್ಲಿ ಸರ್ಕಾರ ಸೇರಿದಂತೆ ಎಲ್ಲರಿಂದಲೂ ಕನ್ನಡ ಸಾಹಿತ್ಯ ಪರಿಷತ್ ಬೆಳವಣಿಗೆಗಾಗಿ ಉತ್ತಮ ಸಹಕಾರ ನೀಡಿದ್ದನ್ನು ಸದ್ವಿನಿಯೋಗ ಪಡಿಸಿಕೊಂಡು ತಮ್ಮ ಯೋಜನೆಗಳನ್ನು ಅನುಷ್ಠಾನ ತರುವಲ್ಲಿ ಯಶಸ್ವಿಯಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಕಲಾಕೃತಿಗೆ ಒಂದು ರೂಪವಿತ್ತವರು ನಾಡೋಜ ಜಿ.ನಾರಾಯಣ್‌ರವರು.
ಬಯಸದೇ ಬಂದ ಭಾಗ್ಯ
ನಾನು ಯಾವುದನ್ನು ಬಯಸಿ ಹೋಗಲಿಲ್ಲ. ಎಲ್ಲವು ಅರಸಿ ಬಂದವು ಹಾಗೆಯೇ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದ ನಾರಾಯಣ್ ಅದೊಂದು ದಿನ ಹಾರ ಹಾಕಿ ನನ್ನನ್ನು ಬರಮಾಡಿಕೊಂಡರು ಏಕೆ ಎಂದಾಗ ನಿಮ್ಮನ್ನು ಈ ಬಾರಿಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದರು. ನನ್ನಲ್ಲಿ ಆನಂದಾಶ್ಚರ‍್ಯಗಳು ಒಟ್ಟಿಗೆ ಘಟಿಸಿದವು. ಬಯಸದೇ ಬಂದ ಭಾಗ್ಯ ಅದಾಗಿತ್ತು. ತತ್‌ಕ್ಷಣ ನನ್ನ ಗುರುಗಳಾದ ಎಸ್.ವಿ.ರಂಗಣ್ಣನವರ ನಂತರ ನನ್ನ ಪಾಲಾಗಬೇಕಿತ್ತು ಅದು ಎಂದೆನಿಸದಿರಲಿಲ್ಲ. ಮೆರವಣಿಗೆಯ ಮುನ್ನ ನನ್ನ ಗುರುಗಳು ಬಂದು ನನ್ನನ್ನು ಹರಸಿ ಆಶೀರ್ವದಿಸಿದ್ದು ಅವರ ಹಿರಿಮೆಗೆ ಒಂದು ಸಾಕ್ಷಿ.
ಮೆರವಣಿಗೆ (ಮದುಮಗನ ದಿಬ್ಬಣ!)

ಸಾಹಿತ್ಯ ಸೌರಭದ ಆ ಮೆರವಣಿಗೆ ಸೆಂಟ್ರಲ್ ಕಾಲೇಜಿನಿಂದ ಹೊರಡುವಾಗ ಸಾರೋಟಿನಲ್ಲಿ ಮದುಮಗನಂತೆ ರಾರಾಜಿಸುತ್ತಿದ್ದೆ. ದಾರಿಯುದ್ದಕ್ಕೂ ಜನಜಾತ್ರೆಯಂತೆ ನಿಂತಿತ್ತು. ಹಾರ ತುರಾಯಿಗಳ ಮೇಳ ನಡೆಯುತ್ತಲೇ ಇತ್ತು. ಮೆರವಣಿಗೆ ಸಾಗುತ್ತಿದ್ದಂತೆ ಚಾಮರಾಜಪೇಟೆಯ ಬಳಿ ಬಂದಾಗ, ಅಲ್ಲಿನ ಪಡಸಾಲೆಯ ಮೇಲೆ ನಿಂತು ಈ ಸವಾರಿಯನ್ನು ವೀಕ್ಷಿಸುತ್ತಿದ್ದ ಬೇಂದ್ರೆಯವರನ್ನು ಕಂಡು ಮನದಲ್ಲಿ ಸಾರ್ಥಕ ಭಾವ ಮೂಡಿತು. ಮೆರವಣಿಗೆಯನ್ನು ವೀಕ್ಷಿಸುತ್ತಿದ್ದ ಜನ ದಿಬ್ಬಣವೇನೋ ವೈಭವೋಪೇತವಾಗಿದೆ ಆದರೆ ಮದುಮಗನಿಗೆ ವಯಸ್ಸಾದಂತೆ ಕಾಣುತ್ತದೆ ಎಂದು ೫೧ರ ಪ್ರಾಯದ ಬಗ್ಗೆ ತಮ್ಮಲ್ಲೇ ಮಾತನಾಡಿಕೊಳ್ಳುತ್ತಿದ್ದುದನ್ನು ಮರುದಿನ ಪತ್ರಿಕೆಗಳು ವರದಿ ಮಾಡಿದ್ದವು.
ಫೋರ್ಟ್‌ಹೈಸ್ಕೂಲಿನ ಮೈದಾನದಲ್ಲಿ ಮೂರು ದಿನಗಳ ಕಾಲ ವಿಜೃಂಭಣೆಯಿಂದ ನಡೆದ ಸಮಾರಂಭದಲ್ಲಿ ವೇದಿಕೆಯ ಉಸ್ತುವಾರಿಯನ್ನು ಅ.ನ.ಕೃಷ್ಣರಾಯರು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು. ಅವರು ಆಗ ಕೇಂದ್ರ ಸಾಹಿತ್ಯ ಅಕಾಡೆಮಿಯ ಉಪಾಧ್ಯಕ್ಷರಾಗಿದ್ದರು. ಅವರು ತಮ್ಮ ಭಾಷಣದಲ್ಲಿ ದೇಜಗೌ ನಮ್ಮ ಇಂದಿನ ಕನ್ನಡದ ನಾಯಕರು ಎಂದು ಸಂಭೋದಿಸಿದ್ದರು.
ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅಂದಿನ ಮುಖ್ಯಮಂತ್ರಿಗಳಾದ ವೀರೇಂದ್ರಪಾಟೀಲರು ತಮ್ಮ ಉದ್ಘಾಟನಾ ಭಾಷಣದಲ್ಲಿ ಕನ್ನಡದ ವಿಷಯದಲ್ಲಿ ನಾವು ದೇಜಗೌರವರ ಮಾತನ್ನು ಕೇಳಬೇಕಿತ್ತು ಎಂದರು. ನಗರಸಭೆಯಲ್ಲಿ ತಮಿಳರ ಆಯ್ಕೆ ಬಗ್ಗೆ ಕುಲಪತಿಯಾಗಿದ್ದ ನಾನು ತೀಕ್ಷ್ಣವಾಗಿ ಮಾತನಾಡಿದ್ದರ ಪರಿಣಾಮ ತೀವ್ರವಾದ ಚರ್ಚೆಗೆ ಗ್ರಾಸವಾಗಿತ್ತು. ಆದರೆ ಆ ವಿಷಯವನ್ನು ಮುಖ್ಯಮಂತ್ರಿಗಳು ವೇದಿಕೆಯಲ್ಲಿ ಸಮರ್ಥಿಸಿಕೊಂಡಿದ್ದು ಅವಿಸ್ಮರಣೀಯ. ೧ ರಿಂದ ೨ ಕೋಟಿ ರೂ.ಗಳ ವೆಚ್ಚದೊಂದಿಗೆ ಹಮ್ಮಿಕೊಂಡಿದ್ದ ಅದ್ದೂರಿ ಸಮ್ಮೇಳನದಲ್ಲಿ ಮುಗಳಿ ಹಾಗೂ ಹಿರಿಯ ಸಾಹಿತಿಗಳು, ಎಲ್ಲಾ ಕ್ಷೇತ್ರದ ದಿಗ್ಗಜರು ಹಾಜರಿದ್ದ ಸಮಾರಂಭವು ನನ್ನ ಪಾಲಿಗೆ ಒಂದು ಐತಿಹಾಸಿಕ ದಿನ. ಈ ಸಮ್ಮೇಳನದಲ್ಲಿ ಅನೇಕ ನಿರ್ಣಯಗಳನ್ನು ತೆಗೆದುಕೊಂಡಿತು. ಆದರೆ ಯಾವುದನ್ನು ಸರ್ಕಾರವು ಪರಿಗಣಿಸಲಿಲ್ಲ. ಅಂದಿನ ಸಮ್ಮೇಳನಕ್ಕೂ ಇಂದಿನ ಸಮ್ಮೇಳನದ ಸ್ವರೂಪ ವಿನ್ಯಾಸದಲ್ಲಿ ಅಜಗಜಾಂತರ. ಕಾಲಕ್ಕೆ ತಕ್ಕಂತೆ ಸಮ್ಮೇಳನಗಳು ದರ್ಬಾರಿನಂತೆ ನಡೆಯುತ್ತವೆ. ಈ ಬಾರಿ ಬದ್ಧತೆಯುಳ್ಳ ಕರವೇಯ ನಾರಾಯಣಗೌಡರು ಇನ್ನಿತರರು ಜವಾಬ್ದಾರಿ ಹೊತ್ತಿದ್ದಾರೆ.
ಸಮ್ಮೇಳನವು ವಿಜೃಂಭಣೆಯಿಂದ ನಡೆಯುತ್ತದೆ. ಸಾಹಿತ್ಯ ಪರಿಷತ್ತಿನ ವ್ಯಾಪ್ತಿ ವಿಸ್ತಾರವಾಗಿದೆ. ಜನರು ಸಾಗರೋಪಾದಿಯಲ್ಲಿ ಸೇರುತ್ತಾರೆ. ಅಗಾಧ ಆರ್ಥಿಕ ಸಂಪತ್ತಿನ ವಿನಿಯೋಗವಾಗುತ್ತಿದೆ. ನೆಲ, ಜಲ, ಭಾಷೆ, ಸಾಹಿತ್ಯ, ಸಂಸ್ಕೃತಿ, ಕಾವ್ಯ, ಕವಿಗಳ ಸಂಪತ್ತಿನಿಂದ ಆಗರ್ಭ ಶ್ರೀಮಂತಳಾಗಿರುವ ತಾಯಿ ಭುವನೇಶ್ವರಿಯ ಈ ಉತ್ಸವವು ಎಲ್ಲರನ್ನು ಮೈಮರೆಸುವಂತೆ ಮಾಡುತ್ತದೆ. ಸಾಹಿತ್ಯಲೋಕದಲ್ಲಿ ಸಂಚಲನ ಮೂಡಿಸುತ್ತದೆ. ಈ ಮಾಗಿದ ವಯಸ್ಸಲ್ಲಿ ಆ ರಸಕ್ಷಣಗಳನ್ನು ಸವಿಯುವಾಸೆಯೂ ನನಗಿದೆ.
ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ
ಸಮಾರಂಭದಲ್ಲಿ ಪ್ರತಿಯೊಬ್ಬರ ಭಾಷಣಗಳನ್ನು ಅಚ್ಚಾಕಿಸಬೇಕು. ಅಲ್ಲಿರುವ ವಿಷಯವೆಲ್ಲ ಕನ್ನಡದ ಬಗ್ಗೆ ಇರುವುದರಿಂದ ಅವುಗಳ ಸ್ಥೂಲವಾದ ಚರ್ಚೆ ನಡೆಸಿ ವಿಸ್ತೃತವಾದ ಫಲಿತಾಂಶವನ್ನು ಸರ್ಕಾರಕ್ಕೆ ತಲುಪಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ.
ಯಾವುದೇ ಸರ್ಕಾರಗಳು ಕನ್ನಡವನ್ನು ನಿರ್ಲಕ್ಷಿಸಿಲ್ಲ. ಎಷ್ಟು ಹಣ ಬೇಕಾದರೂ ಬಿಡುಗಡೆ ಮಾಡುತ್ತವೆ.
ಆದರೆ ಸ್ಥಾನಮಾನ ಕಲ್ಪಿಸಿಕೊಡುವಲ್ಲಿ ನಿರರ್ಥಕವಾಗಿದೆ. ಕನ್ನಡವು ಸರ್ವಮಾಧ್ಯಮವಾಗಿ, ಸರೋಜಿನಿ ಮಹಿಷಿ ವರದಿ ಜಾರಿಗೆ ಬಂದು ಕನ್ನಡ ಮಾಧ್ಯಮದವರಿಗೆ ಉದ್ಯೋಗ ನೀಡಿದಾಗ ಮಾತ್ರ ಕರ್ನಾಟಕ ಕನ್ನಡಮಯವಾಗುತ್ತದೆ.
ಪಾಲಿಸುವುದಾದರೆ ಮಾತ್ರ ನಿರ್ಣಯಗಳನ್ನು ತೆಗೆದುಕೊಳ್ಳಿ ಇಲ್ಲದಿದ್ದರೆ ಖಂಡಿತ ಬೇಡ.
ನಾರಾಯಣಗೌಡರು ಮನಸ್ಸು ಮಾಡಿದರೆ ಈ ಕೆಲಸವನ್ನು ಸಾಧಿಸಬಹುದು. ಕನ್ನಡ ಸಾಹಿತ್ಯ ಪರಿಷತ್ತಿಗೆ ಇದರ ಬಗ್ಗೆ ಹೆಚ್ಚಿನ ಹೊಣೆಗಾರಿಕೆ ಇದೆ, ಪರಿಷತ್ತು ಇರುವುದೇಕೆ? ಮಾತನಾಡಿ ಅದನ್ನು ದೊರಕಿಸುವ ಪ್ರಯತ್ನ ಮಾಡಲಿ. ಕನ್ನಡಿಗರ ಒಕ್ಕೊರಲಿನ ಕೂಗು ಎಲ್ಲರನ್ನು ಮುಟ್ಟಲಿ ಎಂದು ಭಾವುಕರಾದ ಆ ಹಿರಿಜೀವ ಅಂದಿನ ನೆನಪನ್ನು ಮೆಲ್ಲುತ್ತ ಮುಂದಿನ ಉತ್ಸವದ ನಿರೀಕ್ಷೆಯೊಂದಿಗೆ ಮಾತು ಮುಗಿಸಿದರು.
ಸಾಹಿತ್ಯ ಲೋಕದ ಶಿಖರ ಸದೃಶ ಶಕ್ತಿಯು ನಮ್ಮೊಂದಿಗೆ ಇರುವುದೆ ಹೆಮ್ಮೆ. ತನ್ನ ಗುರು ರಸಋಷಿ ಕುವೆಂಪುರವರನ್ನು ಆರಾಧಿಸುವ ಈ ಕನ್ನಡ ಸುತನ ಹೆಬ್ಬಯಕೆ ಈಡೇರುವಂತಾಗಲಿ. ಇದು ಎಲ್ಲರ ಚಿತ್ತ.

ಸಾಧಿಸಿರುವ ಕಾರ್ಯಗಳ ಬಗ್ಗೆ ಹೆಮ್ಮೆ ಮತ್ತು ತೃಪ್ತಿ

ಜಾನಪದ ವಿದ್ವಾಂಸ, ಸಾಹಿತಿ, ಬಹುಮುಖ ಪ್ರತಿಭೆ ಡಾ.ನಲ್ಲೂರು ಪ್ರಸಾದ್ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು. ಅವರ ಸಾರಥ್ಯದಲ್ಲಿ ಮೂರನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಈ ಶುಭ ಸಂದರ್ಭದಲ್ಲಿ ‘ನಲ್ನುಡಿಯೊಂದಿಗೆ ತಮ್ಮ ಹಾಗೂ ಪರಿಷತ್ತಿನ ನಂಟು, ಸಮ್ಮೇಳನದ ಮಾಹಿತಿ ಇತ್ಯಾದಿಗಳನ್ನು ಹಂಚಿಕೊಂಡಿದ್ದಾರೆ.



ನಿಮ್ಮ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ನಡುವಿನ ಸಂಬಂಧ ರೂಪುಗೊಂಡ ಬಗೆ ಹೇಗೆ?
ಕನ್ನಡ ಸಾಹಿತ್ಯ ಪರಿಷತ್ತು ಮತ್ತು ನನ್ನ ನಡುವಿನ ಸಂಬಂಧ ಮೂರು ದಶಕಗಳಿಗೂ ಮೀರಿದ ಸಂಬಂಧ. ನಾನು ಬೆಂಗಳೂರಿಗೆ ಬರುವುದಕ್ಕಿಂತ ಮೊದಲಿನಿಂದಲೂ ಕನ್ನಡ ಸಾಹಿತ್ಯ ಪರಿಷತ್ತಿನ ಸಮಾರಂಭಗಳಲ್ಲಿ, ಸಮ್ಮೇಳನಗಳಲ್ಲಿ ಭಾಗವಹಿಸುತ್ತಾ ಮತ್ತು ಅತ್ಯಂತ ಆಸಕ್ತಿಯಿಂದ, ಕುತೂಹಲದಿಂದ ಗಮನಿಸುತ್ತಾ ಬಂದಂಥವನು.
ಬೆಂಗಳೂರಿನಲ್ಲಿ ಅಧ್ಯಾಪಕ ವೃತ್ತಿಯನ್ನು ಆರಂಭಿಸಿದ ನಂತರ ನಮ್ಮ ಕಾಲೇಜಿಗೆ ಸಮೀಪದಲ್ಲಿಯೇ ಇದ್ದಂತಹ ಕನ್ನಡ ಸಾಹಿತ್ಯ ಪರಿಷತ್ತಿಗೆ ಪ್ರತಿ ದಿನವೂ ತಪ್ಪದೇ ಭೇಟಿ ಕೊಡುತ್ತಿದ್ದೆ. ಕಾಲೇಜಿನಲ್ಲಿ ಪಾಠ ಪ್ರವಚನಗಳನ್ನು ಪೂರ್ಣಗೊಳಿಸಿದ ನಂತರ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾಂಗಣದಲ್ಲೇ ನನ್ನ ಬದುಕಿನ ಹೆಚ್ಚು ಪಾಲನ್ನು ಕಳೆದಿದ್ದೇನೆ. ಅಲ್ಲಿಯೇ ಇದ್ದ ಕಲ್ಲು ಬೆಂಚಿನ ಮೇಲೆ ಕುಳಿತು, ನನ್ನ ನಾಲ್ಕೈದು ಸದಭಿರುಚಿಯ ಗೆಳೆಯರು, ಸಾಹಿತ್ಯಾಸಕ್ತರೆಲ್ಲರೂ ಸೇರಿ ಸಾಹಿತ್ಯದ ಸಂಗತಿಗಳು, ಪರಿಷತ್ತಿನ ಕುರಿತಾದ ವಿಷಯಗಳನ್ನು ಚರ್ಚಿಸುತ್ತಾ ಕಾಲ ಕಳೆಯುತ್ತಿದ್ದೆವು.
ತದನಂತರ ಹಂಪನಾ ಅಧ್ಯಕ್ಷರಾದಾಗ ಅವರ ಪರಿಚಯವಾಗಿ, ಪರಿಷತ್ತಿನಲ್ಲಿ ನಡೆಯುವ ಜಾನಪದ ತರಗತಿಗಳಿಗೆ ಗೌರಪ್ರಾಧ್ಯಾಪಕನಾಗಿ ಕರ್ತವ್ಯ ನಿರ್ವಹಿಸಲು ನನ್ನನ್ನು ಪ್ರೋತ್ಸಾಹಿಸಿದರು. ಇದರಿಂದ ನನಗೆ ಪರಿಷತ್ತಿನ ಒಳಭಾಗಕ್ಕೆ ಪ್ರವೇಶ ದೊರೆತಂತಾಯಿತು. ಆ ಕಾಲದಲ್ಲಿ ಜಾನಪದ ತರಗತಿಗಳೆಂದರೆ ಬಹಳ ಅದ್ದೂರಿಯಾಗಿ ಸಂಭ್ರಮಿಸುವಂತಹ ರೀತಿಯಲ್ಲಿರುತ್ತಿದ್ದವು. ಪಾಠ ಪ್ರವಚನಗಳಷ್ಟೇ ಅಲ್ಲದೇ ಪ್ರಾಯೋಗಿಕವಾಗಿ ಕರಪಾಲ ಮೇಳ, ಸೋಬಾನೆ ಪದ, ಕುಣಿತ ಇತ್ಯಾದಿಗಳ ತರಬೇತಿಯನ್ನು ನೀಡುತ್ತಿದ್ದೆ. ಅಪ್ಪಗೆರೆ ತಿಮ್ಮರಾಜು ಅವರೆಂಥ ಜಾನಪದ ಕಲಾವಿದರನ್ನು, ದೊಡ್ಡಹುಲ್ಲೂರು ರುಕ್ಕೋಜಿರಾವ್, ಪತ್ರಕರ್ತ ಶಮಂತ ಹೀಗೆ ಸುಮಾರು ಹದಿನೈದು ಇಪ್ಪತ್ತು ಜನ ಪ್ರತಿಭಾವಂತರನ್ನು ಗುರುತಿಸಿ ಪ್ರೋತ್ಸಾಹಿಸುವುದಕ್ಕೆ ಹಾಗೂ ಇದರೊಂದಿಗೆ ಸಂಪೂರ್ಣವಾಗಿ ನನ್ನನ್ನು ತೊಡಗಿಸಿಕೊಳ್ಳುವುದಕ್ಕೆ ಸಾಧ್ಯವಾಯಿತು. ಹೀಗಾಗಿ ಪರಿಷತ್ತು ಮತ್ತು ನನ್ನ ನಡುವಣ ಸಂಬಂಧ ಆ ಮೂಲಕ ಹೆಚ್ಚುತ್ತಾ ಹೋಯಿತು.
ಹಂಪನಾ ಅವರ ಕಾಲದಲ್ಲೇ ’ಬೆಳ್ಳಿ ಬಿಟ್ಟ ಬಳ್ಳಿ ಮಾಲೆ’ಯೊಳಗಡೆ ನನ್ನ ಒಂದು ಪುಸ್ತಕವನ್ನು ಪ್ರಕಟಿಸಿದರು. ನಾನು ಬರೆದಂತಹ ’ನಲ್ಲೂರು ದೊರೆಕಾಳಿ’ ಎನ್ನುವ ಗ್ರಾಮದೇವತೆಯನ್ನು ಕುರಿತಾದ ಆ ಪುಸ್ತಕ ನಾಡಿನ ತುಂಬೆಲ್ಲ ಪ್ರಸಿದ್ಧವಾಯಿತು ಮತ್ತು ನನಗೆ ಖ್ಯಾತಿಯನ್ನು ತಂದುಕೊಟ್ಟಿತು.
ಆ ನಂತರ ಜಿ.ಎಸ್.ಸಿದ್ಧಲಿಂಗಯ್ಯನವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸಮಯದಲ್ಲಿ "ಕನ್ನಡ ನುಡಿ"ಯ ಸಂಪಾದಕನಾಗಿ ಮತ್ತೆ ಪರಿಷತ್ತಿನ ಒಳಾಂಗಣಕ್ಕೆ ಪ್ರವೇಶವನ್ನು ಪಡೆದೆ. ಮುಂದೆ ಹರಿಕೃಷ್ಣಪುನರೂರವರ ಅಧ್ಯಕ್ಷತೆಯಲ್ಲಿ ನನ್ನನ್ನು ಕೋಶಾಧ್ಯಕ್ಷನನ್ನಾಗಿ ನೇಮಿಸಿ ಆಡಳಿತಾತ್ಮಕ ವ್ಯವಸ್ಥೆಯಲ್ಲಿ ಪಾಲ್ಗೊಳ್ಳುವ ಸದಾವಕಾಶವನ್ನು ಕಲ್ಪಿಸಿದರು. ಹೀಗಾಗಿ ಪರಿಷತ್ತಿನ ಸಣ್ಣ ಸಣ್ಣ ವಿಚಾರದಿಂದ ಹಿಡಿದು ದೊಡ್ಡ ದೊಡ್ಡ ವಿಷಯಗಳನ್ನು ಅರ್ಥಮಾಡಿಕೊಳ್ಳುವುದಕ್ಕೆ ಅನುವಾಯಿತು. ೩-೪ ದಶಕಗಳ ಸಂಬಂಧ ಮತ್ತು ಸಂಪರ್ಕದಿಂದ ಪರಿಷತ್ತು ಹೇಗಿದೆ? ಹೇಗಿರಬೇಕು? ಹೇಗೆ ಕಟ್ಟಬೇಕು? ಇನ್ನು ಮುಂತಾದವುಗಳನ್ನು ಗ್ರಹಿಸುವ ದಿಕ್ಕಿನಲ್ಲಿ ಪ್ರಾಥಮಿಕವಾದ ಪರಿಜ್ಞಾನ ಮೂಡಲು ಅವಕಾಶ ದಕ್ಕಿತು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ೨ ವರ್ಷಗಳನ್ನು ಪೂರೈಸಿದ್ದೀರಿ ಈ ಅವಧಿಯಲ್ಲಿ ನಿಮ್ಮ ಸಾಧನೆಗಳೇನು? ಮತ್ತು ತಮ್ಮ ಮುಂದಿನ ಯೋಜನೆಗಳೇನು?
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿ ಒಂದಷ್ಟು ಕಾಲ ಆರಾಮಾಗಿ ಇದ್ದು ಹೋಗಬೇಕು ಎನ್ನುವ ದೃಷ್ಟಿಯಿಂದ ಬಂದವನಲ್ಲ ನಾನು. ಅತ್ಯಂತ ಪ್ರಾಮಾಣಿಕವಾಗಿ ಹೇಳುತ್ತೇನೆ. ಪರಿಷತ್ತೇ ನನ್ನ ಕಾರ್ಯಕ್ಷೇತ್ರ. ಅದರ ನೋವು-ನಲಿವುಗಳನ್ನು ನಾನು ಚೆನ್ನಾಗಿ ಬಲ್ಲೆ. ಪರಿಷತ್ತನ್ನು ಅತ್ಯಂತ ಔನ್ನತ್ಯಕ್ಕೆ ತೆಗೆದುಕೊಂಡು ಹೋಗಬೇಕೆನ್ನುವ ಕನಸು ಕಟ್ಟಿಕೊಂಡೇ ಹೆಜ್ಜೆ ಇರಿಸಿದವನು ನಾನು. ಆ ಕಾರಣದಿಂದಲೇ ಸಮಾನ ಮನಸ್ಕರೊಡನೆ ಸಮಾಲೋಚಿಸಿ ಯಾವುದು ಕಾರ್ಯಸಾಧುವೋ? ಅಚ್ಚುಕಟ್ಟಾಗಿ ಪರಿಷತ್ತನ್ನು ಕಟ್ಟಲು ಯಾವ ಯಾವ ಸ್ವರೂಪಗಳ ಅಗತ್ಯವಿದೆಯೋ ಅವೆಲ್ಲವನ್ನೂ ಆಮೂಲಾಗ್ರವಾಗಿ ಚಿಂತಿಸಿ ಆ ನಂತರದಲ್ಲಿಯೇ ನಾನು ೧೦ ಅಂಶಗಳ ಪ್ರಣಾಳಿಕೆಯನ್ನು ನೀಡಿದ್ದು. ಚುನಾವಣೆಗೆ ಹೋಗುವ ಸಂದರ್ಭದಲ್ಲೂ ಪರಿಷತ್ತಿನ ಹಣಕಾಸಿನ ಪರಿಸ್ಥಿತಿಯ ಅರಿವು ಸ್ಪಷ್ಟವಾಗಿ ಇದ್ದಿದ್ದರಿಂದ ಆರ್ಥಿಕವಾಗಿ ಗಟ್ಟಿ ಅಡಿಪಾಯವಿಲ್ಲದೆ ಅಭಿವೃದ್ಧಿ ಮಾಡುವುದಾದರೂ ಹೇಗೆ ಎನ್ನುವ ಆತಂಕ ನನ್ನನ್ನು ಕಾಡುತ್ತಲೇ ಇತ್ತು. ನನ್ನ ಸ್ನೇಹಿತ ಪ್ರೊ.ಚಂದ್ರಪ್ಪ, ನಿಮ್ಮಲ್ಲಿ ಇಚ್ಛಾಶಕ್ತಿ ಇದೆ. ನೀವು ಸಾಧಿಸುತ್ತೀರಿ ಎಂದು ಹೇಳುತ್ತಾ ನನ್ನಲ್ಲಿ ಉತ್ಸಾಹವನ್ನು ತುಂಬುತ್ತಿದ್ದ ದಿನಗಳವು. ಈ ನಾಡಿನ ಜನರ ಪ್ರೀತಿ ವಿಶ್ವಾಸ ಅಭಿಮಾನದಿಂದ ಚುನಾವಣೆಯಲ್ಲಿ ಗೆಲುವನ್ನು ಸಾಧಿಸಿದೆ.
ಈಗ ೨ ವರ್ಷಗಳು ಕಳೆದು ಮೂರನೇ ವರ್ಷಕ್ಕೆ ಪ್ರವೇಶ ಮಾಡುತ್ತಿದ್ದೇನೆ. ಹಿಂತಿರುಗಿ ನೋಡಿದರೆ ಬಹಳ ಸಂತೋಷ ಮತ್ತು ಹೆಮ್ಮೆ ಇದೆ. ಕಾರಣ ೧೦ ಅಂಶಗಳ ಪ್ರಣಾಳಿಕೆಯಲ್ಲಿ ಕೊಟ್ಟ ಅಷ್ಟನ್ನೂ ಅತ್ಯದ್ಭುತವೆನ್ನುವ ರೀತಿಯಲ್ಲಿ ನೆರವೇರಿಸಿದ್ದೇನೆ ಎನ್ನುವ ಆತ್ಮತೃಪ್ತಿ.
ಪ್ರಮುಖವಾಗಿ, ಜಿಲ್ಲಾ ಘಟಕಗಳು ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗಿದೆ. ಪ್ರತೀ ಜಿಲ್ಲೆಗೂ ೫ ಲಕ್ಷ ರೂಪಾಯಿಗಳ ಹಣಕಾಸಿನ ನೆರವು ಲಭ್ಯವಾಗುತ್ತಿದೆ. ಮತ್ತು ಅಲ್ಲಿನವರೇ ನಾಲ್ಕು ಪುಸ್ತಕಗಳನ್ನು ಹೊರತರಬೇಕೆಂದು ಹೇಳಿದ್ದೇನೆ. ಹಳ್ಳಿಗರು ತಮ್ಮ ಹಳ್ಳಿಗಳಲ್ಲಿಯೇ ಸಮ್ಮೇಳನವನ್ನು ಆಚರಿಸಲು ಅನುವು ಮಾಡಿಕೊಟ್ಟು ಅವರಲ್ಲಿ ಸಾಹಿತ್ಯದ ಬಗ್ಗೆ ಅಭಿರುಚಿ ಮೂಡಿಸುವ ಯೋಜನೆಯನ್ನು ಜಾರಿಗೆ ತಂದಿದ್ದೇನೆ. "ಕನ್ನಡ ನುಡಿ" ಪತ್ರಿಕೆಗೆ ಹೊಸ ಸ್ವರೂಪ ನೀಡಿದ್ದೇವೆ.
ಪರಿಷತ್ತು ಬರೀ ಬೆಂಗಳೂರಿಗರ ಸ್ವತ್ತಲ್ಲ. ಅದು ನಾಡಿನ ಎಲ್ಲ ಜನಸಾಮಾನ್ಯರ ಸ್ವತ್ತಾಗಿರುವುದರಿಂದ ಪರಿಷತ್ತನ್ನು ಸರ್ವರೂ ಪ್ರೀತಿಸುವ ಹಾಗೆ ಮಾಡುವ ಕನಸು ನನ್ನದಾಗಿತ್ತು. ಅದೂ ಕೂಡ ನನಸಾಗಿದೆ.
ಪುಸ್ತಕ ಪ್ರಕಟಣೆಗೆ ಸಂಬಂಧಪಟ್ಟ ಹಾಗೆ ಗುಣಮಟ್ಟ ಕಾಯ್ದಕೊಳ್ಳುವುದು ಸಾಧ್ಯವಾಗುತ್ತಿದೆ. ಈ ೨ ವರ್ಷದ ಅವಧಿಯಲ್ಲಿ ಪರಿಷತ್ತಿನಿಂದ ಪ್ರಕಟಣೆಗೊಂಡ ಪುಸ್ತಕಗಳನ್ನು ಬಾಹ್ಯ ಮತ್ತು ಆಂತರಿಕ ಸೌಂದರ್ಯದ ದೃಷ್ಟಿಯಿಂದ ನೋಡುವುದಾದರೆ ಯಾವುದೇ ಖಾಸಗಿ ಪ್ರಕಾಶಕರು ಪ್ರಕಟಿಸುವ ಪುಸ್ತಕಗಳಿಗೆ ಸವಾಲೊಡ್ಡುವ ತೆರದಲ್ಲಿ ಇರುವುದನ್ನು ನೀವು ಗಮನಿಸಬಹುದು. ಬಹಳಷ್ಟು ಮಂದಿ ನಿಮ್ಮ ಪುಸ್ತಕಗಳು ಹೊರಗಿನಿಂದ ಮತ್ತು ಒಳಗಿನ ಹೂರಣದಿಂದ ಬಹಳ ಸೊಗಸಾಗಿ ಮೂಡಿ ಬರುತ್ತಿವೆ ಎಂದು ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. ದಿನದಿಂದ ದಿನಕ್ಕೆ ಪರಿಷತ್ತಿಗೆ ಆದಾಯವೂ ಸಂದಾಯವಾಗುತ್ತಿದೆ. ಮತ್ತೊಂದು ಗಮನಿಸಲೇಬೇಕಾದ ವಿಚಾರವೆಂದರೆ ಬಂದ ಆದಾಯವನ್ನೆಲ್ಲಾ ತಿಂದು ಹಾಕುವ ಕೆಲಸ ಇಲ್ಲಿ ನಡೆಯುವುದಿಲ್ಲ. ಹಿಂದೆ ಪರಿಷತ್ತಿನಿಂದ ಪ್ರಕಟಣೆಗೊಂಡ ಪುಸ್ತಕಗಳಲ್ಲಿ ನೂರು ರೂಪಾಯಿ ಆದಾಯ ಗಳಿಸಿದರೆ ಎಲ್ಲವನ್ನೂ geಟಿeಡಿಚಿಟ ಚಿಛಿಛಿouಟಿಣಗೆ ಹಾಕಿ ಖರ್ಚುವೆಚ್ಚವೆಂದು ಬಿಡುತ್ತಿದ್ದರು. ಆದರೆ ಈಗ ಪ್ರತಿ ನೂರು ರೂಪಾಯಿಗಳಲ್ಲಿ ೭೦ ರೂಪಾಯಿಗಳನ್ನು ಪರಿಷತ್ತಿಗಾಗಿ ತೆಗೆದಿಟ್ಟು, ಉಳಿದ ೩೦ ರೂ.ಗಳನ್ನು ಖರ್ಚುವೆಚ್ಚಕ್ಕಾಗಿ ಮೀಸಲಿಡುವ ವ್ಯವಸ್ಥೆಯಾಗಿದೆ. ಹಾಗೆ ಮಾಡದಿದ್ದ ಪಕ್ಷದಲ್ಲಿ ಪರಿಷತ್ತನ್ನು ಕಟ್ಟುವುದಕ್ಕೆ ಸಾಧ್ಯವಿಲ್ಲವೆಂಬ ಸ್ಪಷ್ಟ ಅರಿವು ನನಗಿದೆ.
ಬಹಳ ಕಾಲದಿಂದಲೂ ತಡೆ ಹಿಡಿದಿದ್ದ ಸಂಶೋಧನಾ ಕೇಂದ್ರ ನನ್ನ ಅವಧಿಯಲ್ಲಿ ಚಾಲನೆಗೊಂಡಿದೆ. ಕುವೆಂಪು ಸಭಾಂಗಣದ ಉದ್ಘಾಟನೆಯಾಗಿದೆ. ಜಾನಪದ ತರಗತಿಗಳು, ಶಾಸನ ಶಾಸ್ತ್ರ ತರಗತಿಗಳು ನಡೆಯುತ್ತಿವೆ. ಎಂಫಿಲ್ ಮತ್ತು ಪಿ.ಎಚ್.ಡಿ.ಗೆ ಸಂಬಂಧಪಟ್ಟ ಹಾಗೆ ಹಂಪಿ ವಿಶ್ವವಿದ್ಯಾಲಯದ ಜೊತೆಗೆ ಚರ್ಚಿಸಿ ಅನುಮತಿಯನ್ನು ಕೋರಿದ್ದೇನೆ ಅದೀಗ ಪರಿಶೀಲನೆಯ ಹಂತದಲ್ಲಿದೆ.
ಎಲ್ಲಕ್ಕಿಂತ ಮುಖ್ಯವಾಗಿ, ೪೦ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದಂತಹ ನಿಘಂಟು ಮರುಮುದ್ರಣ ಯೋಜನೆಗೆ ಚಾಲನೆಯನ್ನು ನೀಡಿ, ಸರ್ಕಾರದಿಂದ ೧ ಕೋಟಿ ಅನುದಾನವನ್ನು ತಂದು ನಿಘಂಟುಗಳನ್ನು ಪ್ರಕಟಿಸಿದ್ದೇವೆ. ಇಂದು ಅದು ಎಲ್ಲ ವಿದ್ವಾಂಸರ ಕೈ ಸೇರುವಂತಾಗಿದೆ. ಇದು ಕೂಡ ಮಹತ್ವದ ಸಾಧನೆ ಎಂತಲೇ ನಾನು ಭಾವಿಸಿಕೊಂಡಿದ್ದೇನೆ.
ಸರ್ಕಾರವನ್ನು ಒತ್ತಾಯಿಸಿ ಹೋರಾಟ ಮಾಡಿ ಹಿಂದೆಂದೂ ಇಲ್ಲದಷ್ಟು ಮಟ್ಟದಲ್ಲಿ ದಾಖಲೆ ಎನ್ನುವ ಹಾಗೆ ೩ ಕೋಟಿ ೪೫ ಲಕ್ಷ ರೂ.ಗಳನ್ನು ಒಂದೇ ಚೆಕ್‌ನಲ್ಲಿ ಪರಿಷತ್ತಿನ ಅಭಿವೃದ್ಧಿಗಾಗಿ ತಂದಿದ್ದೇನೆ. ಹೀಗಾಗಿ ಮೊದಲಿನ ಸ್ಥಿತಿಗೆ ಹೋಲಿಸಿದರೆ ಪರಿಷತ್ತು ಆರ್ಥಿಕವಾಗಿ ಸ್ವಲ್ಪ ಸುಧಾರಿಸಿದೆ ಎನ್ನಬಹುದು.
ನಾನು ಬಂದ ಸಂದರ್ಭದಲ್ಲಿ ೬೦ ಸಾವಿರವಿದ್ದ ಸದಸ್ಯರ ಸಂಖ್ಯೆ ೧ ಲಕ್ಷ ೨೦ ಸಾವಿರಕ್ಕೆ ಏರಿದೆ. ದತ್ತಿ ನಿಧಿ ಸಂಗ್ರಹವೂ ದುಪ್ಪಟ್ಟಾಗಿದೆ. ಬಹುಶಃ ಇದೂ ಕೂಡ ಒಂದು ದಾಖಲೆ ಇರಬಹುದು. ಪರಿಷತ್ತು ಕನ್ನಡಿಗರ ಹಿತಾಸಕ್ತಿಯನ್ನು ಕಾಪಾಡುವ ಸಂಸ್ಥೆ ಮತ್ತು ಕನ್ನಡದ ಕೆಲಸಗಳು ಸಾಗುತ್ತಿವೆ ಎನ್ನುವ ಕಾರಣಕ್ಕೆ ನಾಡಿನ ಜನತೆ ಪರಿಷತ್ತಿನ ಕಡೆ ಮುಖ ಮಾಡುವಂತಾಗಿದೆ. ಇನ್ನೂ ಮಾಡಬೇಕಾದದ್ದು ಬಹಳಷ್ಟಿದೆ. ಅಚ್ಚುಕೂಟದ ಅಭಿವೃದ್ಧಿಯಾಗಬೇಕಾಗಿದೆ ಇತ್ಯಾದಿ ಇತ್ಯಾದಿ...
೩ ವರ್ಷದಲ್ಲಿ ಮಾಡಬೇಕಾದ ಕೆಲಸಗಳನ್ನು ೨ ವರ್ಷದಲ್ಲಿಯೇ ಪೂರ್ಣಗೊಳಿಸಿದ್ದೇನೆ. ಸಾಧಿಸಬೇಕಾದದ್ದು ಬಹಳಷ್ಟಿದೆ. ಆದರೆ ಸಾಧಿಸಿರುವ ಕಾರ್ಯಗಳ ಬಗ್ಗೆ ಹೆಮ್ಮೆ ಮತ್ತು ತೃಪ್ತಿ ಇದೆ.
ಬೆಂಗಳೂರಿಗೆ ೪೦ ವರ್ಷಗಳ ನಂತರ ಸಮ್ಮೇಳನವನ್ನು ತಂದಿದ್ದೇನೆ. ಇದಲ್ಲದೆ ಇನ್ನೆರಡು ಕಾರ್ಯಕ್ರಮಗಳಿವೆ. ಶ್ರವಣಬೆಳಗೊಳದಲ್ಲಿ ಪ್ರಾಚ್ಯ ಸಾಹಿತ್ಯ ಸಮಾವೇಶ- ಕೂಡಲ ಸಂಗಮದಲ್ಲಿ ವಿಶ್ವ ವಚನ ಸಾಹಿತ್ಯ ಸಮ್ಮೇಳನ.
ಇಷ್ಟನ್ನೂ ಸಮರ್ಥವಾಗಿ ಪೂರೈಸಿದ್ದಾದರೆ ಇಲ್ಲಿಗೆ ಬಂದದ್ದಕ್ಕೆ, ಅಧ್ಯಕ್ಷನಾಗಿದ್ದಕ್ಕೆ ಸಾರ್ಥಕ.
೨ ವರ್ಷದ ಅವಧಿಯಲ್ಲಿ ಹಗಲು ರಾತ್ರಿಯೆನ್ನದೆ ದುಡಿದಿದ್ದೇನೆ. ಮನೆ, ಮಡದಿ, ಮಕ್ಕಳು ಎಲ್ಲರನ್ನು ಮರೆತೇ ಪರಿಷತ್ತಿನ ಕೆಲಸಗಳಿಂದಾಗಿ ನಿಷ್ಠೆಯಿಂದ ಶ್ರಮಿಸಿದ್ದೇನೆ, ಸಾರ್ಥಕವೆನಿಸಿದೆ. ಸಮಾಧಾನ ತಂದಿದೆ. ಇನ್ನೂ ಹೆಚ್ಚಿನ ಮಟ್ಟದಲ್ಲಿ ಮುಂದುವರೆಸಿಕೊಂಡು ಹೋಗಬೇಕೆನ್ನುವ ಪ್ರಾಮಾಣಿಕ ಆಕಾಂಕ್ಷೆ ಇದೆ.
ಮೂಲತಃ ನೀವೊಬ್ಬ ಕವಿ, ಜೊತೆಗೆ ಅಧ್ಯಾಪಕರೂ ಸಂಶೋಧಕರು ಆಗಿದ್ದೀರಿ. ಈ ಅಧ್ಯಕ್ಷಗಾದಿಗೆ ಬಂದ ನಂತರದಲ್ಲಿ ನಿಮ್ಮ ಸೃಜನಶೀಲತೆಗೆ ಧಕ್ಕೆ ಉಂಟಾಗಿದೆ ಎನಿಸುವುದಿಲ್ಲವೆ?
ನನ್ನೊಳಗಿನ ಕವಿ ಜೀವಂತವಾಗಿಯೇ ಇದ್ದಾನೆ. ಆದರೆ ಸದ್ಯಕ್ಕೆ ಮಲಗಿದ್ದಾನೆ ಅಷ್ಟೆ. ಸೃಜನಶೀಲತೆಯ ದೃಷ್ಟಿಯಿಂದ ನೋಡಿದಾಗ ನನಗೆ ಇದು ರೀತಿಯ bಟಚಿಛಿಞ ಠಿeಡಿioಜ ಏನೋ ಎಂದು ಕೆಲವು ಬಾರಿ ಅನಿಸುತ್ತದೆ. ಬಹಳ ಬೇಸರವೂ ಆಗುವುದುಂಟು. ನನ್ನ ಕೆಲವು ಮಿತ್ರರು, ಸಾಹಿತಿಗಳು, ನಲ್ಲೂರೊಳಗಡೆ ಕವಿ ನಲ್ಲೂರು ಇದ್ದೇ ಇರ‍್ತಾನೆ. ಈಗ ಆಡಳಿತಗಾರ ನಲ್ಲೂರು ಮೇಲೆದ್ದು ನಿಂತಿದ್ದಾನೆ. ಒದಗಿ ಬಂದಿರುವ ಪಾತ್ರಕ್ಕೆ ನ್ಯಾಯ ಸಲ್ಲಿಸುತ್ತಿದ್ದೀರಿ. ಖಂಡಿತವಾಗಿಯೂ ಕವಿ ಮತ್ತು ಸಂಶೋಧಕ ನಲ್ಲೂರು ಜಾಗೃತವಾಗಿ ಇರುತ್ತಾನೆ ಎನ್ನುತ್ತಾ ಸ್ಥೈರ್ಯ ತುಂಬುತ್ತಿದ್ದಾರೆ.
ನನಗೆ ಒಂದು ಸಮಾಧಾನವೆಂದರೆ ನನ್ನೊಬ್ಬನ ಬೆಳವಣಿಗೆಗಿಂತ ಸಾವಿರಾರು ಹುಡುಗರಿಗೆ, ಬರಹಗಾರರಿಗೆ ಸ್ಫೂರ್ತಿ ತುಂಬುವಂಥ ಅವಕಾಶಗಳನ್ನು ಕಲ್ಪಿಸಿಕೊಡುವಂಥ ಕೆಲಸಗಳನ್ನು ಮಾಡಿದ್ದೇನೆ. ಆ ಸಾಧನೆ ಸಾಕು. ಏಕೆಂದರೆ ಅದೂ ಕೂಡ ಕನ್ನಡದ ಕೆಲಸವೇ. ನನಗೆ ವೈಯಕ್ತಿಕವಾಗಿ ಲಾಭವಾಗದೆ ಹೋದರೂ ಕನ್ನಡಕ್ಕೆ ಆದ ಲಾಭವನ್ನು ನನಗಾದ ಲಾಭವೆಂದೇ ಭಾವಿಸುತ್ತೇನೆ.
ಈ ಅಧಿಕಾರದಿಂದ ಹೊರ ಬಂದ ನಂತರ ಸಾಕಷ್ಟು ಅನುಭವಗಳು ಜೊತೆಗಿರುತ್ತವೆ. ಎಂದಿನಂತೆ ಸೃಜನಶೀಲತೆ ಮುಂದುವರೆಯುತ್ತವೆ ಎನ್ನುವ ಭರವಸೆ ಇದೆ.
ಬೆಂಗಳೂರಿನಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಕಾರಣವೇನು? ಇವತ್ತಿನ ಸಂದರ್ಭಕ್ಕೆ ಇದರ ಸಾಂಸ್ಕೃತಿಕ ಮಹತ್ವವೇನು?
ಸ್ವತಃ ನನಗೇ ಬೆಂಗಳೂರಿನಲ್ಲಿ ಸಮ್ಮೇಳನ ಅತ್ಯಂತ ಅವಶ್ಯ ಮತ್ತು ಅನಿವಾರ್ಯ ಎನಿಸಿದೆ. ಏಕೆಂದರೆ ನಾನು ಬೆಂಗಳೂರಿಗೆ ಸುಮಾರು ೩೦ ವರ್ಷದ ಹಿಂದೆ ಬಂದು ನೆಲೆಸಿದವನು. ಆಗ ಇದ್ದಂತಹ ಬೆಂಗಳೂರಿಗೂ ಇಂದು ಇರುವ ನಮ್ಮ ಬೆಂಗಳೂರಿಗೂ ನಂಬಲಸಾಧ್ಯವೆನ್ನುವಷ್ಟರ ಮಟ್ಟಿಗಿನ ಬದಲಾವಣೆಗಳಾಗಿವೆ. ಭೌತಿಕವಾದ ಬದಲಾವಣೆಗಳು ಬಿಡಿ. ಆದರೆ ಎಲ್ಲೋ ಒಂದು ಕಡೆ ನಮ್ಮ ಸಂಸ್ಕೃತಿಯ ಬೇರುಗಳು ಪಲ್ಲಟವಾಗುತ್ತಿವೆ ಎಂಬ ಭಯ ತೀವ್ರವಾಗಿ ನನ್ನನ್ನು ಭಾದಿಸುತ್ತಿದೆ. ಕನ್ನಡತನ ಸ್ವಲ್ಪ ಮಾಸಿ ಹೋಗುತ್ತಿದೆಯೇನೋ ಅನ್ನುವ ಹಾಗಿದೆ. ಅದು ಸ್ಪಷ್ಟವಾಗಿಯೂ ಕಾಣುತ್ತಿಲ್ಲ. ಕನ್ನಡತನ ಇಲ್ಲವೇ ಇಲ್ಲ ಎಂದು ಹೇಳಲು ಆಗುತ್ತಿಲ್ಲ. ನಮಗೇ ಗೊತ್ತಿಲ್ಲದ ಹಾಗೆ ಒಂದು ಸಣ್ಣ ಎಳೆ ಏಟು ಕೊಡುತ್ತಿದೆ.
ಒಂದು ಬೃಹತ್ ನಗರದ ಬೆಳವಣಿಗೆಯನ್ನು ಕಾಣುವಾಗ ಇದೆಲ್ಲವೂ ಸಾಮಾನ್ಯ. ಚಲನಶೀಲತೆ ಎನ್ನುವುದು ಅಲ್ಪ ಸ್ವಲ್ಪ ಬದಲಾವಣೆಯನ್ನು ತರುತ್ತದೆ ನಿಜ. ಬದಲಾಗಲೇಬಾರದು ಎಂತಲೂ ಅಲ್ಲ. ಆದರೆ ಆ ಬದಲಾವಣೆಯಾಗುವ ಸಂದರ್ಭದಲ್ಲೂ ನಮ್ಮ iಜeಟಿಣiಣiಥಿ ಯನ್ನು ಕಳೆದುಕೊಳ್ಳಬಾರದು. ಬದಲಾವಣೆ ಅನಿವಾರ್ಯವಾದರೂ ನಮ್ಮ ನೆಲದ ವಿಚಾರ, ಭಾಷೆಯ ವಿಚಾರ, ನಮ್ಮ ಸಂಸ್ಕೃತಿಯ ವಿಚಾರದಲ್ಲಿ ಗಾಢವಾದ ಎಚ್ಚರಿಕೆ ಇರಲೇಬೇಕು. ಅಸ್ತಿತ್ವವನ್ನು ಅಸ್ಮಿತೆಯನ್ನು ಕಳೆದುಕೊಳ್ಳುತ್ತೇವೆ ಎಂದಾದರೆ ಬಹುಶಃ ನಾವೂ ಇರುವುದಿಲ್ಲ, ನಮ್ಮತನಕ್ಕೂ ಉಳಿಗಾಲವಿಲ್ಲ. ಹಾಗಾಗಿ ಒಂದು ಜಾಗೃತಿಯನ್ನು ಉಂಟು ಮಾಡಲಿಕ್ಕೆ ಕನ್ನಡಿಗರಲ್ಲಿ ಎಚ್ಚರದ ಪ್ರಜ್ಞೆಯನ್ನು ಮಾಡಿಸಲಿಕ್ಕೆ ಸಮ್ಮೇಳನ ಸಹಕಾರಿಯಾಗಲಿದೆ.

ನಿಮ್ಮ ಸಾಹಿತ್ಯ ವಲಯದಲ್ಲಿಯೇ ಸಾಹಿತ್ಯ ಸಮ್ಮೇಳನಗಳನ್ನು ಜಾತ್ರೆ, ಪರಿಶೆ ಎಂದೆಲ್ಲಾ ಹೇಳುವುದಿದೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು?
ವಾಸ್ತವದಲ್ಲಿ ಸಮ್ಮೇಳನಗಳು ಅನೇಕರ ವ್ಯಂಗ್ಯಕ್ಕೆ ತುತ್ತಾಗಿರುವುದು ನಿಜ. ಸಮ್ಮೇಳನವನ್ನು ಜಾತ್ರೆ, ಪರಿಶೆ ಎನ್ನುವ ಎಲ್ಲ ವ್ಯಂಗ್ಯಕಾರರನ್ನು ನಾವು ಸ್ವಾಗತಿಸೋಣ.
ಕನ್ನಡದ ಸಾಹಿತ್ಯ ಸಮ್ಮೇಳನವೆನ್ನುವುದು ನಿಜವಾದ ಕನ್ನಡದ ಪರಿಶೆ, ಕನ್ನಡದ ಜಾತ್ರೆ. ಜಾತ್ರೆಗೆ ಪರಿಶೆಗೆ ಜನರನ್ನು ಒಗ್ಗೂಡಿಸುವ ಶಕ್ತಿ ಇದ್ದೇ ಇರುತ್ತದೆ ಅಲ್ಲವೇ? ಒಂದು ಭಾಷೆಯ ಹೆಸರಿನಲ್ಲಿ ೧ ಲಕ್ಷ, ೨ ಲಕ್ಷ ಜನರು ಸೇರುತ್ತಾರೆಂದರೆ ನಾವೇನು ಜನರನ್ನು ಲಾರಿಯಲ್ಲಿ ತುಂಬಿಕೊಂಡು ಬರುವುದಿಲ್ಲವಲ್ಲ. ಊಟ ಕೊಡುತ್ತೇವೆ, ಸೀರೆ ಬಟ್ಟೆ ಕೊಡುತ್ತೇವೆ ಬನ್ನಿ ಎನ್ನುವ ಆಮಿಷವನ್ನು ಒಡ್ಡುವುದಿಲ್ಲವಲ್ಲ. ಕನ್ನಡಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಅಂತಹ ಶಕ್ತಿ ಒಂದು ಇದೆ. ಕನ್ನಡ ಕಾಮಧೇನುವಿನ ಅಮೃತದ ಸವಿಗಾಗಿ ಜನ ಬಂದು ಸೇರುತ್ತಾರೆ. ಮಹಾವಿದ್ವಾಂಸರು, ಪ್ರಖಾಂಡ ಪಂಡಿತರು ಬರುವ ಹಾಗೆ ತಡೀಯಪ್ಪ ಹೇಂಗೆ ನಡೀತಾದೆ ನೋಡೋಣ ಅಂತ ಒಬ್ಬ ಶ್ರೀ ಸಾಮಾನ್ಯನು ಬಂದು ಕುಳಿತುಕೊಳ್ಳುತ್ತಾನೆ.
ಸರಿ ಸುಮಾರು ೪೦ ವರ್ಷಗಳ ನಂತರ ಬೆಂಗಳೂರಿನಲ್ಲಿ ಸಾಹಿತ್ಯ ಸಮ್ಮೇಳನ ಜರುಗುತ್ತಿದೆ ಇದರ ಯಶಸ್ಸಿಗೆ ರೂಪುರೇಷೆಗಳೇನು?
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬೆಂಗಳೂರಿಗೆ ತರುವುದಷ್ಟೇ ಬಹಳ ಶ್ರಮ ವಹಿಸಿದ್ದೇನೆ. ಅತ್ಯಂತ ಅದ್ದೂರಿಯಾಗಿ ಆಚರಣೆ ಮಾಡುವುದಕ್ಕೇ ಅಲ್ಲದೆ ಅರ್ಥಪೂರ್ಣವಾಗಿ ಆಚರಿಸಬೇಕೆನ್ನುವ ಕನಸಿದೆ. ಆ ನಿಟ್ಟಿನಲ್ಲಿ ಯೋಜನೆಗಳು ರೂಪುಗೊಳ್ಳುತ್ತಿವೆ.
ಬೆಂಗಳೂರಿನ ಜನ ಸಂಭ್ರಮಿಸಬೇಕು ಇಲ್ಲದಿದ್ದರೆ ಬಹಳ ಕಷ್ಟ. ಬೇರೆ ಜಿಲ್ಲೆಗಳಲ್ಲಾದರೆ ಜನರು ಸ್ಪಂದಿಸುವ ರೀತಿಯೇ ಬೇರೆ. ಇದು ನಮ್ಮ ಜಿಲ್ಲೆಗೆ ಸಂದಂತಹ ಗೌರವ ಸದಾವಕಾಶ ಎಂದು ಭಾವಿಸಿ ಹಳ್ಳಿಯವರು, ಪೇಟೆಯವರೆಲ್ಲರೂ ಹೋರಾಟ ಮಾಡುತ್ತಾರೆ. ಒಂದಾಗುತ್ತಾರೆ. ಆದರೆ ಬೆಂಗಳೂರಿನ ಸಮಸ್ಯೆಯೆಂದರೆ ಮೆಜೆಸ್ಟಿಕ್‌ನಲ್ಲಿ ಮಾಡಿದರೆ ಶಿವಾಜಿನಗರದವರಿಗೆ ಗೊತ್ತಿರುವುದಿಲ್ಲ. ಬಸವನಗುಡಿಯಲ್ಲಿ ನಡೆದರೆ ಹಲಸೂರಿನವರಿಗೆ ಅದರ ಗಂಧವೇ ಇರುವುದಿಲ್ಲ.
ಈ ಸಮಸ್ಯೆಯ ನಿವಾರಣೆಗಾಗಿಯೇ ೧೫ ದಿವಸಗಳ ಮುಂಚಿತವಾಗಿಯೇ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಒಟ್ಟಾಗಿ ಎಲ್ಲಾ ವಿಧಾನಸಭಾ ಕ್ಷೇತ್ರದ ಘಟಕಗಳಲ್ಲೂ "ನುಡಿತೇರು" ಎನ್ನುವಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಎಲ್ಲಾ ಭಾಗಗಳಲ್ಲೂ ಕಾರ್ಯಕ್ರಮವನ್ನು ನಡೆಸುವ ಮೂಲಕ ಸಮ್ಮೇಳನದ ಬಗ್ಗೆ ಆಸಕ್ತಿಯನ್ನು ಮೂಡಿಸಿ, ಸಮರ್ಪಕ ಮಾಹಿತಿಗಳನ್ನು ನೀಡುವ ಕುರಿತಾಗಿ ಆಲೋಚಿಸಿ ಯೋಜಿಸಿದ್ದೇವೆ. "ನುಡಿತೇರು" ಕೊನೆಯ ದಿವಸ ಮಹಾನಗರ ಪಾಲಿಕೆಯ ಬಳಿಗೆ ಬಂದು ಸೇರುತ್ತದೆ. ಇದರಿಂದಾಗಿ ಸಾಹಿತ್ಯ ಸಮ್ಮೇಳನದ ವಿಚಾರ ಬೆಂಗಳೂರಿನ ತುಂಬೆಲ್ಲಾ ಹರಡುವ, ಮನೆಮಾತಾಗುವ ಸಾಧ್ಯತೆಗಳು ಹೆಚ್ಚಾಗಲಿವೆ.
ಒಟ್ಟಾರೆ ಒಂದು ದಾಖಲೆ ಆಗುವ ರೀತಿಯಲ್ಲಿ ಸಮ್ಮೇಳನ ನಡೆಯಬೇಕು ಎನ್ನುವ ಕನಸು ನನ್ನದು. ಬೆಂಗಳೂರಿನ ಜನತೆ ಸ್ಪಂದಿಸಬೇಕು. ಎಲ್ಲ ರೀತಿಯ ನೆರವನ್ನೂ ನೀಡಬೇಕು. ಅಧಿಕಾರಿಗಳು, ನೌಕರರು, ಜನಪ್ರತಿನಿಧಿಗಳು ಪ್ರತಿಯೊಬ್ಬರು ಸ್ಪಂದಿಸಿದರೆ ಈ ಕಾರ್ಯಕ್ರಮ ಯಶಸ್ವಿಯಾಗುತ್ತದೆ. ಅದರಲ್ಲಿಯೂ ಸರ್ಕಾರದ ಸಹಕಾರ ಬಹಳ ಮುಖ್ಯ.
ವಾಸ್ತವ ಬೇರೆ, ಆದರ್ಶ ಬೇರೆ. ಮಾತನಾಡುವವರು ಒಂದು ಕಡೆ ಇರ‍್ತಾರೆ. ಮಾಡುವವರು ಒಂದು ಕಡೆ ಇರ‍್ತಾರೆ. ಮಾತನಾಡುವ, ಮಾಡುವ ಮನಸ್ಸುಗಳು ಮಿಲಾಕತ್ ಆದ್ರೇನೆ ಸಮ್ಮೇಳನ ಯಶಸ್ವಿಯಾಗೋದು. ಆಡಳಿತ ಯಂತ್ರ ಕೈಜೋಡಿಸಬೇಕು. ಶ್ರೀ ಸಾಮಾನ್ಯನೂ ಕೈ ಜೋಡಿಸಬೇಕು. ಪರಿಷತ್ತಿನ ಜೊತೆಗೆ ಎಲ್ಲರೂ ಕೈ ಜೋಡಿಸಿದರೆ ಮಾತ್ರವೇ ಸಮ್ಮೇಳನ ಯಶಸ್ವಿಯಾಗುತ್ತದೆಯೇ ವಿನಃ ಪರಿಷತ್ತೊಂದೇ ಸಮ್ಮೇಳನವನ್ನು ಯಶಸ್ವಿಯಾಗಿಸುತ್ತದೆ ಎನ್ನುವ ಯಾವ ಭ್ರಮೆಗಳು ನನಗಿಲ್ಲ. ಆ ಕಾರಣಕ್ಕಾಗಿಯೇ ಯಾರನ್ನೂ ನಿರಾಕರಣೆ ಮಾಡುವುದಿಲ್ಲ. ಎಲ್ಲರನ್ನೂ ಕೂಡಿಸಿಕೊಂಡೇ ಕನ್ನಡದ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುತ್ತೇವೆ.
ಸಮ್ಮೇಳನದ ವಿಶೇಷತೆಗಳೇನು? ಹಳೆಯ ಸಂಪ್ರದಾಯಗಳನ್ನೇ ಪಾಲಿಸುವಿರಾ? ಇಂದಿನ ಸ್ಥಿತಿಗತಿಗಳಿಗೆ ತಕ್ಕ ಹಾಗೆ ಮಾರ್ಪಾಟುಗಳಾಗುವ ಸಾಧ್ಯತೆಗಳಿವೆಯೇ?
ವೈವಿಧ್ಯಮಯವಾದ ಗೋಷ್ಠಿಗಳನ್ನು ಆಯೋಜಿಸಿದ್ದೇವೆ. ಪ್ರಧಾನ ವೇದಿಕೆಯ ಜೊತೆಗೆ ಇದ್ದೂ ೨ ಕಡೆಗಳಲ್ಲಿ ಸಮಾನಾಂತರ ವೇದಿಕೆಗಳನ್ನು ಕಲ್ಪಿಸಿದ್ದೇವೆ. ಬೆಂಗಳೂರನ್ನೇ ಕುರಿತಾದ semiಟಿoಡಿ ಇರುತ್ತದೆ. ಒಂದು ಹಿಂದಿನ ಬೆಂಗಳೂರು ಬೆಂಗಳೂರಿನ ಇತಿಹಾಸ ಮತ್ತು ಗತದ ಬೆಂಗಳೂರಿನ ಸ್ವರೂಪ ಹೇಗಿತ್ತು ಎಂಬುದರ ಕುರಿತಾದದ್ದು. ಮತ್ತೊಂದು ವರ್ತಮಾನದ ಬೆಂಗಳೂರು ಹಾಗೂ ನಾಳಿನ ಬೆಂಗಳೂರನ್ನು ಕುರಿತಾದದ್ದು. ನಮ್ಮ ಕನಸಿನ ಬೆಂಗಳೂರು ಹೇಗಿರಬೇಕು ಈ ವಿಚಾರವಾಗಿ ಸಾಹಿತಿಗಳಷ್ಟೇ ಅಲ್ಲದೇ ಬೇರೆ ಬೇರೆ ಕ್ಷೇತ್ರದ ಪರಿಣಿತರು ಕೂಡ ತಮ್ಮ ತಮ್ಮ ವಿಚಾರಧಾರೆಗಳನ್ನು ಮಂಡಿಸುತ್ತಾರೆ. ಇವತ್ತಿನ ಸಮಕಾಲೀನ ಸಮಸ್ಯೆಯಾಗಿರುವ ಮಾನವ ಹಕ್ಕುಗಳು, ಮಾಹಿತಿ ಹಕ್ಕುಗಳು, ಮಹಿಳೆ ಮತ್ತು ಮಕ್ಕಳ ಬಗೆಗಿನ ಗೋಷ್ಠಿಗಳನ್ನು ಆಯೋಜಿಸಲಾಗಿದೆ. ನೆಲದ ಮೇಲಿನ ಆಪ್ತತೆ ಕ್ಷೀಣಿಸುತ್ತಿದೆ. ಭೂಮಿಯ ಜೊತೆಗಿನ ಸಂಬಂಧ ಕಡಿಮೆಯಾಗುತ್ತಿದೆ. ಇದು ಬಹಳ ಅಪಾಯಕಾರಿ. ಭೂಮಿಯ ಕಡೆಗೆ ಪ್ರೀತಿಯುಂಟು ಮಾಡುವ ನಿಟ್ಟಿನಲ್ಲಿ ವಿಚಾರಗೋಷ್ಠಿಗಳು, ರೈತರ ಸಮಸ್ಯೆಗಳು, ನಗರದತ್ತ ಗ್ರಾಮೀಣರ ಚಿತ್ತ ಸಾಹಿತ್ಯದ ವಿಚಾರಗಳು, ಕಾನೂನು ಮತ್ತು ಕನ್ನಡ, ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ ಕವಿಗೋಷ್ಠಿಗಳು ಹೀಗೆ ಪ್ರಧಾನವಾದ ಸಾಹಿತ್ಯಕ್ಕೆ ಸಂಬಂಧಪಟ್ಟ ಗೋಷ್ಠಿಗಳ ಜೊತೆಗೆ ಹೊಸತನವನ್ನು ನೀಡಬೇಕೆನ್ನುವ ದೃಷ್ಟಿಯಿಂದ ಹೊಸ ವಿಚಾರಗೋಷ್ಠಿಗಳು ರೂಪುಗೊಂಡಿವೆ.
ಇನ್ನು ನಾಡು ನುಡಿಗೆ ದುಡಿದಂತಹ ಕೆಲವು ಮಹನೀಯರನ್ನು ಗೌರವಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಯುವ ಕವಿಗಳು, ಬರಹಗಾರರು, ಸಾಹಿತಿಗಳಿಗೆ ಸಾಕಷ್ಟು ಅವಕಾಶಗಳನ್ನು ಕಲ್ಪಿಸಿಕೊಟ್ಟಿದ್ದೇವೆ.
ಹೊಸ ಚಿಗುರು ಹಳೆ ಬೇರುಗಳನ್ನು ಸಮ್ಮಿಶ್ರಗೊಳಿಸಿ, ಎಲ್ಲಾ ವಿಷಯಗಳನ್ನು ಒಳಗೊಂಡ ಹಾಗೆ ಪರಿಷತ್ತು ವೈಶಿಷ್ಟ್ಯಪೂರ್ಣವಾದ ಸಮ್ಮೇಳನದ ಆಚರಣೆಗೆ ಸಜ್ಜಾಗುತ್ತಿದೆ.
ವಿಚಾರಗೋಷ್ಠಿಗಳನ್ನು ಪ್ರಧಾನ ವೇದಿಕೆಯಿಂದ ದೂರದ ವೇದಿಕೆಗಳಲ್ಲಿ ಆಯೋಜಿಸುವುದರಿಂದ ಹೆಚ್ಚು ಜನ ಬರುವುದು ಸಾಧ್ಯವಾಗುವುದಿಲ್ಲವೆನ್ನುವ ಅಭಿಪ್ರಾಯ ಸಾಹಿತಿಗಳಲ್ಲೇ ಇದೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಈಗ ನೋಡಿ, ಒಂದು ಬಹಳ ವೈಚಾರಿಕವಾದ ಸಂಗತಿ ಚರ್ಚೆಯಾಗುತ್ತಿದೆ ಎಂದ ಮಾತ್ರಕ್ಕೆ ಎಲ್ಲರಿಗೂ ಆಸಕ್ತಿ ಇರಲೇಬೇಕೆಂದೇನು ಇಲ್ಲವಲ್ಲ. ಎಲ್ಲರಿಗೂ ಎಲ್ಲಾ ವಿಷಯಗಳಲ್ಲೂ ಅಭಿರುಚಿ ಆಸಕ್ತಿ ಇರುತ್ತದೆ ಎನ್ನುವ ಭ್ರಮೆಗಳು ಬೇಡ ಮತ್ತು ಎಲ್ಲಾ ಕಡೆಗೆ ಎಲ್ಲಾ ಜನರು ಬರುವುದು ಸಾಧ್ಯವಿಲ್ಲ. ಈಗ ನನ್ನನ್ನೇ ತೆಗೆದುಕೊಳ್ಳಿ, ನನ್ನ ಆಸಕ್ತಿಗಳು ಕಾವ್ಯ, ಜಾನಪದ ಸಾಹಿತ್ಯ ಇತ್ಯಾದಿ. ಇದನ್ನುಳಿದು ಬೇರೆ ವಿಷಯಗಳಲ್ಲಿಯೂ ಅಷ್ಟೇ ಗಂಭೀರವಾಗಿ ಕುಳಿತುಕೊಳ್ಳುತ್ತೇನೆ ಎಂಬ ನಂಬಿಕೆ ನನಗಿಲ್ಲ. ಚಿತ್ರದುರ್ಗದಲ್ಲಿ ನಡೆದಂತಹ ಸಮ್ಮೇಳನದಲ್ಲಿ ಸಣ್ಣ ಸಣ್ಣ ವೇದಿಕೆಗಳಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ಜನ ಜಮಾಯಿಸುತ್ತಿದುದನ್ನು ನಾನೇ ಪ್ರತ್ಯಕ್ಷ ಕಂಡಿದ್ದೇನೆ. ಹೀಗಾಗಿ ಎಷ್ಟೇ ದೂರವಿದ್ದರೂ ತಮಗೆ ಆಸಕ್ತಿ ಇರುವ ವಿಚಾರಗಳನ್ನು ಅರಿಯುವುದಕ್ಕೆ ಜನ ಬಂದೇ ಬರುತ್ತಾರೆ.
ಪ್ರತಿ ಸಮ್ಮೇಳನದಲ್ಲಿ ತೆಗೆದುಕೊಳ್ಳುವ ನಿರ್ಣಯಗಳು ಕಾರ್ಯಗತವಾಗದೆ ಕಾಗದಗಳಲ್ಲೇ ಭದ್ರವಾಗಿ ನೆಲೆಯೂರಿ ನಿಂತಿರುವುದು ತಮಗೂ ತಿಳಿದಿದೆ. ಈ ನಿಟ್ಟಿನಲ್ಲಿ ಈ ಬಾರಿಯ ಸಮ್ಮೇಳನದಲ್ಲಿ ಹೊಸ ಸಂಪ್ರದಾಯವನ್ನು ಹುಟ್ಟು ಹಾಕುವ ಆಲೋಚನೆ ಇದೆಯೇ?
ನಿರ್ಣಯಗಳ ಬಗ್ಗೆ ಮಾತನಾಡುವುದು ಬೇಡವೆನಿಸುತ್ತಿದೆ. ಕಾರಣ ನಿರ್ಣಯಗಳನ್ನು ತೆಗೆದುಕೊಳ್ಳುವುದು ಪರಿಷತ್ತು. ಕಾರ್ಯರೂಪಕ್ಕೆ ತರಬೇಕಿರುವುದು ಸರ್ಕಾರ.
ಸ್ವಾತಂತ್ರ್ಯಪೂರ್ವದಿಂದಲೂ ಸಾವಿರಾರು ನಿರ್ಣಯಗಳನ್ನು ಸಮ್ಮೇಳನ ತೆಗೆದುಕೊಂಡಿದೆ. ಅವುಗಳಲ್ಲಿ ಯಾವುದೋ ನಾಲ್ಕೈದು ಈಡೇರಿರುವುದು ಬಿಟ್ಟರೆ ಉಳಿದವು ಇದ್ದಲ್ಲಿಯೇ ಇದ್ದಾವೆ. ಅದಕ್ಕಾಗಿಯೇ ನಾವು ಚಂಪಾರವರ ಅಧ್ಯಕ್ಷತೆಯಲ್ಲಿ ನಿರ್ಣಯ ಅನುಷ್ಠಾನ ಸಮಿತಿಯ ರಚನೆ ಮಾಡಿ ಸರ್ಕಾರಕ್ಕೆ ಎಲ್ಲವನ್ನು ತಲುಪಿಸಿದ್ದೇವೆ. ಮಧ್ಯ ಮಧ್ಯ ಸರ್ಕಾರವನ್ನು ವಿಚಾರಿಸಿದಾಗ, ಆ ಸಮಯದಲ್ಲಿ ಒಂದಿಷ್ಟು ಉತ್ತರವನ್ನು ಕಳುಹಿಸುತ್ತಾರೆ ಅಷ್ಟೆ.
ಆದ್ದರಿಂದ ನಿರ್ಣಯಗಳನ್ನು ತೆಗೆದುಕೊಳ್ಳಬೇಕೋ ತೆಗೆದುಕೊಂಡಿರುವ ನಿರ್ಣಯಗಳ ಅನುಷ್ಠಾನಕ್ಕಾಗಿ ಪ್ರಯತ್ನಿಸಬೇಕೋ ಅಥವಾ ಹೊಸ ಸಂಪ್ರದಾಯವನ್ನು ಹುಟ್ಟು ಹಾಕಬೇಕಾಗುತ್ತದೆಯೋ? ಒಟ್ಟಿನಲ್ಲಿ ಈ ಎಲ್ಲ ವಿಚಾರವಾಗಿ ಚಿಂತಿಸಿ, ಎಲ್ಲರೊಂದಿಗೆ ಚರ್ಚಿಸಿ ತೀರ್ಮಾನವನ್ನು ತೆಗೆದುಕೊಳ್ಳುತ್ತೇನೆ.
ಚಂಪಾರವರು ಅಧ್ಯಕ್ಷರಾಗಿದ್ದ ಕಾಲದಲ್ಲಿ ಮಾತೃಭಾಷಾ ಶಿಕ್ಷಣ ಜಾರಿ ಕುರಿತಾದ ವಿಚಾರದಲ್ಲಿ ತೀವ್ರವಾದ ಚಳವಳಿಯನ್ನು ಮಾಡಿದರು. ಸಾಹಿತ್ಯ ಪರಿಷತ್ತು ಒಮ್ಮೊಮ್ಮೆ ಕನ್ನಡ ಭಾಷೆಯ, ಕನ್ನಡ ಜನತೆಯ ಹಿತಾಸಕ್ತಿಯನ್ನು ಕಡೆಗಣಿಸುವ ಸರ್ಕಾರಗಳ ವಿರುದ್ಧ ಹೋರಾಟಗಳನ್ನು ಮಾಡಿದ್ದು ಇದೆ. ನಿಮ್ಮ ನಿಲವು?
ಹೋರಾಟವೆಂದರೆ, ಕೇವಲ ಚಳವಳಿ ಮಾತ್ರವಲ್ಲ. ಶಾಸ್ತ್ರೀಯ ಭಾಷೆಯ ಸ್ಥಾನಮಾನಕ್ಕೆ ಸಂಬಂಧಪಟ್ಟಂತೆ ನಾನು ಕೂಡ ಹೋರಾಟವನ್ನು ಮಾಡಿದ್ದೇನೆ. issue bಚಿseಜ ಆದಂತಹ ಒಂದು ಹೋರಾಟ ಅದು.
ಪರಿಷತ್ತು ಬರೀ ಚಳವಳಿಯ ನೆಲೆಯೊಳಗೆ ನಿಲ್ಲುವುದು ಸಾಧ್ಯವಿಲ್ಲ. ಅದಕ್ಕೆ ಬೇರೆ ಬೇರೆಯಾದ ದಿಕ್ಕುಗಳೂ ಇವೆ. ಬಹಳ ಪ್ರಧಾನವಾದ ಸಂದರ್ಭದಲ್ಲಿ ಚಳವಳಿಗೂ ತನ್ನನ್ನು ತಾನು ಅರ್ಪಿಸಿಕೊಳ್ಳುತ್ತದೆ ಮತ್ತು ಕನ್ನಡಪರ ಕೆಲಸವನ್ನು ಬೇರೆ ಬೇರೆ ದಿಕ್ಕಿನಿಂದಲೂ ಮಾಡುತ್ತಾ ಹೋಗುತ್ತದೆ. ಈಗ ನಾವು, ಪುಸ್ತಕ ಪ್ರಕಟಣೆ, ಗೋಷ್ಠಿಗಳು, ಉಪನ್ಯಾಸಗಳು, ಸಾಹಿತ್ಯ ಸಮ್ಮೇಳನಗಳು ಇವೆಲ್ಲವನ್ನು ಸಮರ್ಥವಾಗಿ ನೆರವೇರಿಸಿದ್ದೇವೆ. ಇವೆಲ್ಲವೂ ಕನ್ನಡದ ಪ್ರೀತಿಯ ಕೆಲಸಗಳೇ ಅಲ್ಲವೇ? ಶಾಸ್ತ್ರೀಯ ಭಾಷೆಯ ಸ್ಥಾನಮಾನದ ಹೋರಾಟದ ವಿಚಾರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಅತ್ಯದ್ಭುತವೆನ್ನುವ ರೀತಿಯಲ್ಲಿ ತೊಡಗಿಸಿಕೊಂಡಿದ್ದನ್ನು ಜನತೆ ಗಮನಿಸಿದೆ. ನಾನು ಕೂಡ ನಾಡಿನ ತುಂಬ ಹೋರಾಟಕ್ಕಿಳಿಯುತ್ತೇನೆ ಎಂಬ ಘೋಷಣೆಯನ್ನು ಮಾಡಿದೆ ಮತ್ತು ಅದು ಅತ್ಯಂತ ದೊಡ್ಡ ಪ್ರಮಾಣದಲ್ಲಿ ಪ್ರಾರಂಭವಾಯಿತು. ಇದು ಕೂಡ ಕಡಿಮೆ ಸಾಧನೆಯೇನಲ್ಲವಲ್ಲ. ಆ ನಂತರದ ದಿನಗಳಲ್ಲಿ ಶಾಸ್ತ್ರೀಯ ಭಾಷೆಯ ಸ್ಥಾನಮಾನ ದೊರೆತದ್ದು ತಮಗೆಲ್ಲರಿಗೂ ತಿಳಿದಿರುವ ವಿಚಾರವೇ.
ಸರ್ಕಾರ ಕನ್ನಡ ವಿಶ್ವವಿದ್ಯಾಲಯಕ್ಕೆ ಸೇರಿದ ಸ್ವತ್ತನ್ನು ಪರಭಾಷೆ ಮಾಡಲು ಹೊರಟಾಗ ಸರ್ಕಾರದ ವಿರುದ್ಧ ಕನ್ನಡ ಸಾಹಿತ್ಯ ಪರಿಷತ್ತು ಉಗ್ರವಾದ ಪ್ರತಿಭಟನೆಯನ್ನು ಮಾಡಿತ್ತು.
ಇನ್ನು ಭಾಷೆಗೆ ಸಂಬಂಧಪಟ್ಟ ಚಳವಳಿಯನ್ನು ಮಾಡುವ ಹಾಗಿಲ್ಲವಲ್ಲ ಹೇಗೆ ಮಾಡ್ತಿರಿ? ಅದು ಕೋರ್ಟಿನಲ್ಲಿದೆಯಲ್ಲಾ. ನಾನು ಮತ್ತು ಅನಂತಮೂರ್ತಿಯವರು ಸುಪ್ರೀಂ ಕೋರ್ಟ್‌ನಲ್ಲಿ ಪಾರ್ಟಿಗಳಾಗಿದ್ದೇವೆ. ಹಾಗಾಗಿ ಪರಿಷತ್ತು ಸಂದರ್ಭಾನುಸಾರ ಚಳವಳಿ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಭಾಗಿಯಾಗುತ್ತಿರುತ್ತದೆ. ನನ್ನ ಅಧಿಕಾರಾವಧಿಯಲ್ಲೂ ಕನ್ನಡ ನಾಡು, ನುಡಿ, ಸಂಸ್ಕೃತಿಯ ಹಿತವನ್ನು ಕಾಪಾಡುವ ವಿಚಾರಗಳನ್ನು ಅಧಿಕಾರಸ್ಥರಿಗೆ ಮನದಟ್ಟು ಮಾಡುವ ಕಾರ್ಯವನ್ನು ಮಾಡುತ್ತಿದ್ದೇನೆ.
ಬೆಂಗಳೂರಿಗೆ ಅನ್ಯಭಾಷಿಕರ ಅನಿಯಂತ್ರಿತ ವಲಸೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕನ್ನಡ ನಾಡಿನಿಂದ ಎಲ್ಲ ಸೌಲಭ್ಯಗಳನ್ನು ಪಡೆಯುತ್ತಿದ್ದರೂ ಕನ್ನಡವನ್ನು ಕಲಿಯಬೇಕು, ಗೌರವಿಸಬೇಕು ಎಂಬ ಮನೋಭಾವವೇ ಇಲ್ಲದೆ ತಮ್ಮ ಭಾಷೆ ಸಂಸ್ಕೃತಿಯನ್ನು ಕನ್ನಡಿಗರ ಮೇಲೆ ಹೇರುವ ಪ್ರಯತ್ನಗಳಾಗುತ್ತಿವೆ. ಬೆಂಗಳೂರನ್ನು ಕನ್ನಡೀಕರಣಗೊಳಿಸುವ ದಿಕ್ಕಿನಲ್ಲಿ ಸಮ್ಮೇಳನದ ಪಾತ್ರವೇನು?
ಅನ್ಯಭಾಷಿಕರ ವಲಸಿಗರ ಸಮಸ್ಯೆ ಬೆಳವಣಿಗೆ ಕಂಡುಕೊಳ್ಳುತ್ತಿರುವ ಎಲ್ಲ ನಗರಗಳ ಸಮಸ್ಯೆಯೂ ಹೌದು. ಈಗ ನಮ್ಮವರು ಬಾಂಬೆಯಲ್ಲಿ ಲಕ್ಷಾಂತರ ಮಂದಿ ಇಲ್ಲವೇ? ಜೀವನೋಪಾಯಕ್ಕಾಗಿ ಯಾರು ಎಲ್ಲಿಗೆ ಬೇಕಾದರೂ ಹೋಗಬಹುದು ಅದು ಅನಿವಾರ್ಯ ಮತ್ತು ಸಹಜ ಕೂಡ. ನೀವು ಎಲ್ಲಿಯವರಾದರೂ ಆಗಿರಿ ಇಲ್ಲಿಗೆ ಬಂದ ನಂತರ ಕನ್ನಡದಲ್ಲಿ ನಿಮ್ಮ ಎಲ್ಲಾ ಕಾರ್ಯ ಚಟುವಟಿಕೆಗಳು ನಡೆಯಬೇಕು ಎನ್ನುವುದು ನಮ್ಮ ಆಶಯ.
ಇಲ್ಲಿಯ ಆಡಳಿತ ಕನ್ನಡದ್ದು. ಕನ್ನಡದಲ್ಲಿಯೇ ಸ್ಪಂದಿಸಬೇಕು. ಅದಕ್ಕೆ ಏನು ಮಾಡಬೇಕು? ಕನ್ನಡದ ಆಡಳಿತ ಬಿಗಿಯಾದರೆ ಸಹಜವಾಗಿ ಇಲ್ಲಿಗೆ ಬಂದವರೂ ಸಹ ನಮ್ಮ ಮಾತನ್ನು ಕೇಳುತ್ತಾರೆ. ಉದಾಹರಣೆಯಾಗಿ, ಮಹಾನಗರ ಪಾಲಿಕೆ ಕಛೇರಿಗೆ ಸಿಬ್ಬಂದಿ ಇದು ನಮಗೆ ಗೊತ್ತಾಗುವುದಿಲ್ಲ ಕನ್ನಡದಲ್ಲಿ ಬರೆದುಕೊಂಡು ಬನ್ನಿ ಎಂದು ಹೇಳಿದರೆ ಅವರಿಗೆ ಬರದಿದ್ದರೂ, ಬೇರೆಯವರ ಹತ್ತಿರವಾದರೂ ಬರೆಯಿಸಿಕೊಂಡು ಬರುತ್ತಾರೆ. ಹೀಗಾಗಿ ರಾಜಕೀಯ ಇಚ್ಛಾಶಕ್ತಿ ಮತ್ತು ಶ್ರೀ ಸಾಮಾನ್ಯನ ಪ್ರೀತಿ ಇವೆರಡರ ಅಗತ್ಯವೂ ಇದೆ.
ಎಲ್ಲರ ಅಂತರಂಗದಲ್ಲೂ ಕನ್ನಡದ ಬಗ್ಗೆ ಜಾಗೃತಿ ಉಂಟು ಮಾಡುವುದೇ ಸಮ್ಮೇಳನದ ಉದ್ದೇಶ. ಇದರಿಂದ ಪ್ರೇರೇಪಿತರಾದ ಜನ ಕನ್ನಡ ಬಳಸುವ, ಕನ್ನಡ ಸಂಸ್ಕೃತಿಯನ್ನು ಉಳಿಸುವ ಪ್ರಯತ್ನವನ್ನು ಕೈಗೊಂಡು ಕನ್ನಡದ ವಾತಾವರಣವನ್ನು ನಿರ್ಮಾಣ ಮಾಡುವ ದಿಕ್ಕಿನಲ್ಲಿ ಹೊರಡುತ್ತಾರೆ.
ಹಬ್ಬದಂತೆ ಉತ್ಸವದಂತೆ ಸಂಭ್ರಮಿಸುವ ವಾತಾವರಣ ನಿರ್ಮಾಣ ಮಾಡಿ, ಅದರಿಂದ ಕನ್ನಡತನದ ನಿರ್ಮಾಣ ಮಾಡುವುದೇ ಸಮ್ಮೇಳನದ ಧ್ಯೇಯ. ಒಂದು ಸಮಾರಂಭದಲ್ಲಿ ಎಚ್.ವಿಶ್ವನಾಥ್ ಹೇಳ್ತಾ ಇದ್ದರು. ನಾವೆಲ್ಲಾ ಇಂದು ನಾಯಕರಾಗಿ ನಿಂತು ಭಾಷಣ ಮಾಡುತ್ತಿರುವುದಕ್ಕೆ ಪ್ರೇರಣೆ ಸಾಹಿತ್ಯ ಸಮ್ಮೇಳನ. ಈ ಸಮ್ಮೇಳನಗಳಿಂದಲೇ ನಮಗೆ ಕನ್ನಡದ ಬಗ್ಗೆ ವಿಶ್ವಾಸ ಮೂಡಿ, ಕನ್ನಡ ಸಂಘಗಳನ್ನು ಸ್ಥಾಪಿಸಿ ಹಾಗೇನೇ ರಾಜಕೀಯ ರಂಗದಲ್ಲೂ ಭಾಷಣಗಳನ್ನು ಮಾಡುತ್ತಲೇ ರಾಜಕಾರಣಿಯೇ ಆದೊ ಅಂತ. ಹೀಗೆ ಸಾವಿರಾರು ಜನರಿಗೆ ಈ ಸಮ್ಮೇಳನಗಳು ಪ್ರೇರಣೆಯನ್ನು ನೀಡಿವೆ. ವೈಯಕ್ತಿಕವಾಗಿ ನನಗೂ ಕೂಡ ಸಾಹಿತ್ಯದ ಬಗ್ಗೆ ಆಸಕ್ತಿ ಬೆಳೆಯುವುದಕ್ಕೆ ಮತ್ತು ಇವತ್ತಿನ ಈ ಹಂತವನ್ನು ತಲುಪುವುದಕ್ಕೆ ಸಾಹಿತ್ಯ ಸಮ್ಮೇಳನಗಳೇ ಸ್ಫೂರ್ತಿ. ಹಾಗಾಗಿ ಹೊರಗಿನಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿರುವಂಥವರಿಗೂ ಕನ್ನಡದ ಮೇಲೆ ಪ್ರೀತಿಯನ್ನುಂಟು ಮಾಡುವ ದಿಕ್ಕಿನಲ್ಲಿ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಲಿದೆ.
ಬೆಂಗಳೂರಿನಲ್ಲಿ ಕನ್ನಡ ಭಾಷೆಗೆ ಮಾನ್ಯತೆಯೇ ಇಲ್ಲವಾಗುತ್ತಿದೆ ಜಾಹೀರಾತುಗಳಲ್ಲಿ, ನಾಮ ಫಲಕಗಳಲ್ಲಿ ಆಂಗ್ಲ ಭಾಷೆ ವಿಜೃಂಭಿಸುತ್ತಿದೆ. ದಶಕಗಳ ಕಾಲದಿಂದ ಕನ್ನಡ ಪರ ಸಂಘಟನೆಗಳು ಹೋರಾಟವನ್ನು ನಡೆಸುತ್ತಲೇ ಬಂದಿವೆ. ಇದಕ್ಕೆಲ್ಲ ಸರ್ಕಾರದ ಅವಜ್ಞೆ ಕಾರಣ ಅನಿಸುವುದಿಲ್ಲವೇ? ಕನಿಷ್ಠ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಈ ಹೊತ್ತಿನಲ್ಲಾದರೂ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸರ್ಕಾರ ಎಚ್ಚೆತ್ತುಕೊಳ್ಳುವ ಹಾಗೆ ಕಾರ್ಯನಿರ್ವಹಿಸಲು ಸಾಧ್ಯವಿದೆಯೇ?
ನಾನು ಈಗಾಗಲೇ ಸರ್ಕಾರದ ಜೊತೆಗೆ, ಬೆಂಗಳೂರು ಮಹಾನಗರ ಪಾಲಿಕೆಯ ಜೊತೆಗೆ ಚರ್ಚಿಸಿ ಎಲ್ಲಾ ಕಡೆಗಳಲ್ಲಿಯೂ ಕನ್ನಡದ ಫಲಕಗಳೇ ಇರುವಂತಾಗಬೇಕೆನ್ನುವ ನಿಟ್ಟಿನಲ್ಲಿ ಪ್ರಯತ್ನ ಮಾಡಿದ್ದೇನೆ.
ಪರಿಷತ್ತನ್ನು ಜನಮುಖಿಯಾಗಿಸಬೇಕೆಂಬ ಹೆಬ್ಬಯಕೆಯಿಂದ ಬಂದವರು ನೀವು. ಸಾಹಿತ್ಯ ಸಮ್ಮೇಳನವನ್ನು ನಾಡಿನ ಮೂಲೆ ಮೂಲೆಗೂ ತಲುಪಿಸುವಲ್ಲಿ ನಿಮ್ಮ ಯೋಜನೆಗಳೇನು?
ಎಲ್ಲ ವಾಹಿನಿಗಳಿಗೂ ನೇರ ಪ್ರಸಾರ ಮಾಡುವಂಥ ಅವಕಾಶವನ್ನು ನೀಡುತ್ತೇವೆ. ಎಲ್ಲರಿಗೂ ಸ್ವಾತಂತ್ರ್ಯ ಉಂಟು. ಈಗಾಗಲೇ ಬೆಂಗಳೂರು ದೂರದರ್ಶನದ ನಿರ್ದೇಶಕರು ನಮ್ಮ ಜೊತೆ ಮಾತನಾಡಿ ನೇರಪ್ರಸಾರ ಮಾಡಲು ಒಪ್ಪಿದ್ದಾರೆ.
ಕನ್ನಡದ ಈ ಕೆಲಸವನ್ನು ಮನೆ ಮನೆಗೆ ತಲುಪಿಸುವ ಕೆಲಸ ಮಾಧ್ಯಮ ಮಿತ್ರರದ್ದು. ನಾನೀರುವಾಗಲೇ ಮಾಧ್ಯಮ ಮಿತ್ರರ ಜೊತೆಯಲ್ಲಿ ಮಾತನಾಡಿ ಅವರ ಸಂಪೂರ್ಣ ಸಹಕಾರವನ್ನು ಕೋರಿದ್ದೇನೆ. ಕಳೆದ ಬಾರಿ ಗದಗ್‌ನಲ್ಲಿ ನಡೆದ ಸಮ್ಮೇಳನದಲ್ಲಿ ಮಾಧ್ಯಮ ಮಿತ್ರರು ನೀಡಿದಂತಹ ಬೆಂಬಲ ಮತ್ತು ಅವರು ತೆಗೆದುಕೊಂಡ ತೀರ್ಮಾನಗಳು ನನಗೆ ಬಹಳ ಸಂತೋಷ ತಂದಿದೆ. ಅವರ ಮೇಲೆ ಭರವಸೆಯೂ ಮೂಡಿದೆ. ಕಳೆದ ಬಾರಿ ಸಮ್ಮೇಳನದಲ್ಲಿ ಸಣ್ಣಪುಟ್ಟ ವ್ಯತ್ಯಯಗಳನ್ನು ಉಂಟು ಮಾಡಬೇಕೆಂದು ಬಂದಿದ್ದವರಿಗೆ ಬುದ್ದಿ ಕಲಿಸಿದವರೇ ಮಾಧ್ಯಮ ಮಿತ್ರರು (ತಮ್ಮ ಜೇಬುಗಳನ್ನು ತಾವೇ ಕತ್ತರಿಸಿಕೊಂಡು ಸಮ್ಮೇಳನದಲ್ಲಿ ಜೇಬುಗಳ್ಳತನ ಎಂದು ಉಯಿಲೆಬ್ಬಿಸಿದವರನ್ನು ಹಿಡಿದು ನಿಮ್ಮ ಜೇಬುಗಳನ್ನೇ ನೀವು ಕಾಯ್ದುಕೊಳ್ಳದಿದ್ದ ಮೇಲೆ ಕನ್ನಡವನ್ನು ಏನ್ರಯ್ಯ ಕಾಯ್ತೀರಿ ಎಂದೆನ್ನುವ ಬುದ್ದಿಮಾತುಗಳನ್ನು, ಎಚ್ಚರಿಕೆಯನ್ನು ಹೇಳಿದವರು ಮಾಧ್ಯಮ ಮಿತ್ರರೇ) ಅವರ ಸಹಕಾರ ಶ್ಲಾಘನೀಯ.
ಈ ಬಾರಿಯೂ ಪತ್ರಿಕಾ ಮತ್ತು ವಿದ್ಯುನ್ಮಾನ ಮಾಧ್ಯಮ ಗೆಳೆಯರು ಸಮ್ಮೇಳನದ ಮಹತ್ವದ ಸಂಗತಿಗಳನ್ನು ಸದುದ್ದೇಶಗಳನ್ನು ಜನರ ಮನೆ-ಮನಗಳಿಗೆ ತಲುಪಿಸುವಲ್ಲಿ ಒಮ್ಮತದ ಸಹಕಾರವನ್ನು, ನೆರವನ್ನು ನೀಡುತ್ತಿದ್ದಾರೆಂಬ ವಿಶ್ವಾಸ ನನಗಿದೆ.
ನಾಡಿನ ಜನತೆಗೆ ಸಮ್ಮೇಳನದ ಮುಖಾಂತರ ಯಾವ ಸಂದೇಶವನ್ನು ನೀಡಲು ಬಯಸುತ್ತೀರಿ?
ಸಂದೇಶ ಎನ್ನುವುದಕ್ಕಿಂತ ಹೆಚ್ಚಾಗಿ ಕನ್ನಡತನವನ್ನು ಕಾಪಿಟ್ಟುಕೊಳ್ಳುವ ದಿಕ್ಕಿನಲ್ಲಿ ಈ ಸಮ್ಮೇಳನ ಒಂದು ಪ್ರೇರಣೆಯನ್ನು ನೀಡಬೇಕು. ಬೆಂಗಳೂರಿಗೆ ಸಮ್ಮೇಳನ ಬಂದಿರುವುದರಿಂದ ಕನ್ನಡಕ್ಕೇ ಒಳ್ಳೆಯದೇನೋ ಆಗಬಹುದು ಎಂಬ ಭಾವ ಕನ್ನಡಿಗರಲ್ಲಿ ಮೂಡಿದೆ. ಇದೂ ಕೂಡ ಬಹಳ ಒಳ್ಳೆಯ ಬೆಳವಣಿಗೆಯೇ.
ಕುವೆಂಪುರವರು ಹೇಳಿದ ಹಾಗೆ "ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು" ಕನ್ನಡ ಬಹಳ ಮುಖ್ಯ. ಎಲ್ಲರ ಎದೆಯಲ್ಲೂ ಕನ್ನಡತನವನ್ನು ತುಂಬುವ ಪ್ರೇರಕ ಶಕ್ತಿಯನ್ನು ಈ ಸಮ್ಮೇಳನ ತುಂಬಬೇಕು ಎನ್ನುವ ಆಶಯ ನನ್ನದು. ಅದು ಖಂಡಿತವಾಗಿಯೂ ಈಡೇರುತ್ತದೆ.
ನಲ್ನುಡಿಯ ಓದುಗ ಬಳಗದೊಂದಿಗೆ ನಿಮ್ಮ ಮಾತುಗಳು?
’ಕರವೇ ನಲ್ನುಡಿ’ ನನಗೆ ಬಹಳ ಇಷ್ಟವಾದಂಥ ಒಂದು ಪತ್ರಿಕೆ. ಕನ್ನಡ ಭಾಷೆ ಸಂಸ್ಕೃತಿ, ನೆಲ, ಜಲದ ಬಗ್ಗೆ ಬದ್ಧತೆಯುಳ್ಳ ಒಂದು ವಿಶಿಷ್ಟವಾದ ಪತ್ರಿಕೆ. ನಾಡು ನುಡಿಯ ವಿಚಾರದಲ್ಲಿ ಕಾಳಜಿ ಹೊಂದಿರುವ ಮನಸ್ಸುಗಳೇ ಈ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿವೆ ಎಂಬುದೇ ಬಹಳ ಮುಖ್ಯವಾದ ಅಂಶ. ಲಾಭಕ್ಕಾಗಿಯೋ, ಸ್ವಾರ್ಥಕ್ಕಾಗಿಯೋ ಮಾಡುತ್ತಿರುವುದಲ್ಲ. ಸಂಪೂರ್ಣವಾಗಿ ಕನ್ನಡದ ಬೆಳವಣಿಗೆಗಾಗಿ ತನ್ನನ್ನು ತೊಡಗಿಸಿಕೊಂಡಿರುವ ಪತ್ರಿಕೆ ಇದು.
ಈ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಬಂಧ ’ನಲ್ನುಡಿ’ ಪತ್ರಿಕೆಯೊಂದಿಗೆ ಬಹಳ ಮಧುರವಾಗಿಯೇ ಇದೆ.
’ನಲ್ನುಡಿ’ ಪತ್ರಿಕೆಯ ಲಕ್ಷಾಂತರ ಓದುಗ ಬಂಧುಗಳಲ್ಲಿ ಈ ಮೂಲಕ ನನ್ನ ಮನವಿಯೇನೆಂದರೆ, ನೀವೆಲ್ಲರೂ ಕೂಡ ಪರಿಷತ್ತಿನ ಈ ಸಮ್ಮೇಳನಕ್ಕೆ ’ನಲ್ನುಡಿ’ಯಿಂದಲೇ ಹರಸಿ, ಹಾರೈಸಿ ಯಶಸ್ವಿಗೊಳಿಸಿ, ಸಮ್ಮೇಳನದ ಯಶಸ್ಸಿಗೆ ’ನಲ್ನುಡಿ’ಯೂ ಕಾರಣವಾಗಬೇಕು.
’ನಲ್ನುಡಿ’ಯ ಓದುಗರು ಶುಭವನ್ನು ಹೊತ್ತು ತರಬೇಕು.

ಕನ್ನಡ ಭಾರತರತ್ನ ಪಂಡಿತ್ ಭೀಮಸೇನ ಜೋಶಿ




ಡಾ.ನಾಗರಾಜರಾವ್ ಹವಾಲ್ದಾರ್

ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ, ಸಂಗೀತ-ಸಾಹಿತ್ಯ ಸಾಂಸ್ಕೃತಿಕ ಲೋಕದಲ್ಲಿ ಕನ್ನಡಿಗರ ಕೊಡುಗೆ ಅಂದು-ಇಂದು-ಎಂದೆಂದೂ ಮುಂಚೂಣಿಯಲ್ಲಿದೆ. ವಚನಕಾರರು-ಹರಿದಾಸರು ನೀಡಿದ ಅಮೋಘ ಸಾಹಿತ್ಯವನ್ನು ಜನಮನ-ಮನೆಗೆ ತಲುಪಿಸಿದವರು. ನಮ್ಮ ಕಲಾವಿದರಾದ ಪಂ|| ಭೀಮಸೇನ ಜೋಶಿ, ಪಂ|| ಮಲ್ಲಿಕಾರ್ಜುನ ಮನ್ಸೂರ್, ಆರ್.ಕೆ.ಶ್ರೀಕಂಠನ್ (ಇವರಿಗೆ ಈ ಸಾಲಿನ ಪದ್ಮಭೂಷಣ ಗೌರವ ಸಂದಿದೆ) ಮುಂತಾದವರು.
ಕಲೆ ಮತ್ತು ಕಲಾವಿದ ಎಲ್ಲಾ ಗಡಿಗಳನ್ನು ಮೀರಿದವರು. ಗದಗ ತಾಲ್ಲೂಕಿನ ರೋಣದಲ್ಲಿ ಜನಿಸಿದ ಪಂ. ಭೀಮಸೇನ ಜೋಶಿ ಕಲಿಕೆಯ ದಿನಗಳ ನಂತರ ನೆಲೆಸಿದ್ದು ಪುಣೆಯಲ್ಲಿ. ಒಮ್ಮೆ ಪಂ.ರಾಜೀವ ತಾರಾನಾಥ (ಮತ್ತೊಬ್ಬ ಕನ್ನಡದ ಸರೋದ್ ವಾದಕ) ಪುಣೆಗೆ ಹೋಗಿದ್ದರು. ಜೋಶಿಯವರ ಮನೆಗೆ ಪೋನಾಯಿಸಿ, ‘ನೀವು ಇದ್ದೀರ? ನಿಮ್ಮ ಭೇಟಿಗೆ ಬರಬಹುದೆ..?’ ಅಂದರಂತೆ. ‘ಅದಕ್ಕೇನ್ರೀ, ಬಂದೆಬಿಡ್ರಿ, ಕನ್ನಡದ ಬಗ್ಗೆ, ಸಂಗೀತದ ಬಗ್ಗೆ ಚರ್ಚೆ ಮಾಡೋಣ, ಊಟ ಮಾಡಿ ಸಂಜೆ ಮುಂದ ಹೋಗೀರಂತೆ’ ಅಂದರು ಭೀಮಸೇನ್‌ಜೀ. ಟ್ಯಾಕ್ಸಿ ಡ್ರೈವರ್‌ಗೆ ಭೀಮಸೇನ ಜೋಶಿಯವರ ಮನೆ ಅಡ್ರಸ್ ಕೊಡಲಿಕ್ಕೆ ಹೋದರೆ, ‘ನನಗೆ ಅವರ ಮನೆ ಗೊತ್ತದರೀ, ಕರಕೊಂಡು ಹೋಗ್ತೀನಿ’ ಅಂದರು. ಪಂಡಿತಜೀ ಅವರ ಮನೆ ಬಂತು. ರಾಜೀವ್ ಅವರು ಟ್ಯಾಕ್ಸಿ ದುಡ್ಡು ಕೊಡಲಿಕ್ಕೆ ಹೋದರೆ... ಅವನಿಗೆ ಸಿಟ್ಟೆ ಬಂದುಬಿಡ್ತು. ‘ಏನ್ರೀ ನಮ್ಮ ಭೀಮಸೇನ ಜೋಶಿ ಮನೆಗೆ, ನಾನು ನಿಮ್ಮನ್ನು ಕರೆದುಕೊಂಡು ಬಂದರೆ, ನನಗೇ ದುಡ್ಡು ಕೊಡ್ತೀರೇನ್ರೀ... ನೀವೊಬ್ಬರೇನಾ ದುಡ್ಡು ಕಂಡಿರೋದು?’ ಅಂತ ಹೇಳಿ ದುಡ್ಡು ಇಸಗೊಳ್ಳದೇ ಹೋದ ಟ್ಯಾಕ್ಸಿ ಡ್ರೈವರ್. ಇದು ನಮ್ಮ ಕನ್ನಡದ ಭೀಮಣ್ಣನ, ಪಂಡಿತಜೀ ಅವರ ಸಂಗೀತ ಹಾಗೂ ವ್ಯಕ್ತಿತ್ವದ ಒಂದು ಚಿಕ್ಕ ಝಲಕ್.
ಜೋಶಿಯವರ ಗುರುಗಳಾದ ಪಂ. ಸವಾಯಿ ಗಂಧರ್ವರೂ ಮೂಲತಃ ಹುಬ್ಬಳ್ಳಿ ತಾಲ್ಲೂಕಿನ ಕುಂದಗೋಳದವರಾಗಿದ್ದರೂ, ಕೆಲಕಾಲ ಪುಣೆಯಲ್ಲೇ ನೆಲೆಸಿದ್ದರು. ಹಿಂದೂಸ್ತಾನಿ ಸಂಗೀತ, ಮರಾಠೀ ರಂಗಸಂಗೀತದಲ್ಲೂ ಅವರು ದೊಡ್ಡ ಹೆಸರಾಗಿದ್ದರು. ಕನ್ನಡಿಗರ ನಿಸ್ವಾರ್ಥ ಔದಾರ್ಯವೋ ಅಥವಾ ಅಭಿಮಾನ ಶೂನ್ಯತೆಯೋ, ಹಲವಾರು ಕಲಾವಿದರ ಜೀವನದ ಆರಂಭದ ದಿನಗಳಲ್ಲಿ ನಾವು ಅವರನ್ನು ಗಮನಿಸುವುದೇ ಇಲ್ಲ, ಪೋಷಿಸುವುದಿಲ್ಲ. ಬೆಳಗಾವಿ ಜಿಲ್ಲೆಯ ಶಿವಪುತ್ರಯ್ಯ ಕೊಂಕಾಳಿಮಠ ನಂತರದ ವಿಶ್ವ ವಿಖ್ಯಾತ ಪಂ.ಕುಮಾರಗಂಧರ್ವ ನೆಲೆಸಿದ್ದು ಮಧ್ಯಪ್ರದೇಶದ ‘ದೇವಾಸ್’ ನಗರದಲ್ಲಿ ಪಂ. ಜೋಶಿಯವರು ಪುಣೆಯಲ್ಲಿ ನೆಲೆಸಿ, ಮರಾಠಿ ಭಕ್ತಿ ಸಂಗೀತದ ಸಂಕೇತ ಹಾಗೂ ಆದ್ಯ ಪುರುಷರಾಗಿದ್ದು, ಕನ್ನಡಿಗರು ಹೆಮ್ಮೆ ಪಡುವ ವಿಷಯವೇ. ಅವರು ಹಾಡಿದ ಮರಾಠಿ ಅಭಂಗ (ತುಕಾರಾಮ, ನಾಮದೇವ ಮುಂತಾದವರ ಭಕ್ತಿ ರಚನೆಗಳು) ಇಂದಿಗೂ-ಎಂದೆಂದಿಗೂ ಜನಪ್ರಿಯ. ನೀವು ಮಹಾರಾಷ್ಟ್ರದ ಯಾವುದೇ ದೇವಸ್ಥಾನದಲ್ಲಿ ಕಾಲಿರಿಸಿದರೂ ಮೊದಲು ಕೇಳುವುದು ಭೀಮಸೇನರ ದನಿ; ನಂತರ ಘಂಟೆ ಜಾಗಟೆಯ ಸದ್ದು. ಪಂಡಿತಜೀಯವರು ಕನ್ನಡದವರೆಂದು ಗೊತ್ತಿದ್ದರೂ ‘ಏ ಮೂಝಾ ಜೋಶಿ ಆಹೇ.." ಇವರು ನಮ್ಮವರು ಎಂದು ಮಹಾರಾಷ್ಟ್ರದ ಸಂಗೀತ ಪ್ರೇಮಿಗಳು ಅವರನ್ನು ಅಪ್ಪಿಕೊಳ್ಳುತ್ತಾರೆ, ಒಪ್ಪಿಕೊಳ್ಳುತ್ತಾರೆ.
ಕನ್ನಡದ ದಾಸರ ಪದಗಳನ್ನು, ಅವರ ಸಂದೇಶವನ್ನು ಜಗತ್ತಿಗೆ ಸಾರಿದ ಕೀರ್ತಿ ಸಹ ಪಂ|| ಜೋಶಿಯವರಿಗೆ ಸಲ್ಲಬೇಕು. ಶುದ್ಧ ಶಾಸ್ತ್ರೀಯ ಸಂಗೀತದ ವಲಯದಲ್ಲಿ ಅವರಿಗೆ ಎಷ್ಟು ಗೌರವಿತ್ತೋ, ಅಷ್ಟೇ ಪ್ರೀತಿ-ಅಭಿಮಾನ ಅವರ ‘ದಾಸವಾಣಿ’ಗೂ ಇತ್ತು. ಭಕ್ತಿ ಸಮರ್ಪಣಾ ಭಾವದ ಸಾಕಾರ ಮೂರ್ತಿಯಾಗುತ್ತಿದ್ದರು ಪಂಡಿತಜೀ. ಒಂದು ಇಡೀ ಸಂಗೀತ ಕಾರ್ಯಕ್ರಮ, ೪ ಗಂಟೆಯಷ್ಟು ಬರೀ ‘ದಾಸವಾಣಿ’ಯನ್ನು ದೇಶ-ಹೊರದೇಶದಲ್ಲೂ ಹಾಡಿದ ಮೊದಲ ಕನ್ನಡಿಗ ಪಂ.ಜೋಶಿಯವರು. ‘ಕರುಣಿಸೋ ರಂಗಾ..’ ಅಂದರೆ ರಂಗ ಬರಲೇಬೇಕು. ಅವರು ಹಾಡಿದ ಭಾಗ್ಯದ ಲಕ್ಷ್ಮೀ ಬಾರಮ್ಮಾ ಮಕ್ಕಳಿಂದ, ಹಿರಿಯರವರೆಗೆ ಎಲ್ಲರ ಮನ ಗೆದ್ದಿತ್ತು. ಪುರಂದರ-ಕನಕದಾಸರ ಸಾಹಿತ್ಯದ ಪುನರುತ್ಥಾನಕ್ಕೆ ಕೆಲನಾಯಕರು ಬರೀ ಮಾತನಾಡಿದರೆ, ಕರ್ನಾಟಕದಿಂದ ಹೊರಗುಳಿದಿದ್ದರೂ, ಪಂಡಿತ ಜೀಯವರು ತಮ್ಮ ಕನ್ನಡಾಭಿಮಾನವನ್ನು, ಸಾಹಿತ್ಯ ಪ್ರೇಮವನ್ನು ಮುಂದುವರೆಸಿದ್ದರು. ಶುದ್ಧ ಶಾಸ್ತ್ರೀಯ ಸಂಗೀತ ಪದ್ಧತಿಯಲ್ಲೇ ಜೋಶಿಯವರು ಹಾಡಲೆಂದೇ ವರಕವಿ ಬೇಂದ್ರೆಯವರು ಕನ್ನಡದಲ್ಲೇ ಶಾಸ್ತ್ರೀಯ ಸಂಗೀತಕ್ಕೆ ಗೀತೆ ರಚನೆ ಮಾಡಿದರು. ಇದು ಬೇಂದ್ರೆ, ಜೋಶಿಯವರು ಕನ್ನಡಮ್ಮನಿಗೆ-ಸಂಗೀತಕ್ಕೆ ಅಮೋಘ ಕೊಡುಗೆ.
ಜೋಶಿಯವರೆಂದರೆ ನಮಗೆ ಯಮನ್-ದರಬಾರಿ-ತೋಡಿ ಮುಂತಾದ ರಾಗಗಳ ಸಾಕಾರ ಮೂರ್ತಿಯೆಂದೆನಿಸುತ್ತದೆ. ಆದರೆ ಅವರು ಹಾಡಿದ ಕುವೆಂಪುರವರ ನಾನೇ ವೇಣೆ ನೀನೆ ತಂತಿ, ಬೇಂದ್ರೆಯವರ ಉತ್ತರಧ್ರುವದಿಂ ದಕ್ಷಿಣ ಧ್ರುವಕ್ಕೂ, ಹುಯಿಲಗೋಳ ನಾರಾಯಣರಾಯರ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಗೀತೆಗಳ ಧ್ವನಿಮುದ್ರಿಕೆಗಳು ಯಾವುದೇ ಸುಗಮಸಂಗೀತಗಾರನಿಗೆ ಮಾರ್ಗದರ್ಶಿಯಂತಿವೆ. ಸ್ಪಷ್ಟ ಉಚ್ಚಾರ, ನಿಖರವಾದ ಪದಚ್ಛೇದ, ವಾದ್ಯಗಳ ಅಬ್ಬರವಿಲ್ಲದೇ ಕೇವಲ ದನಿ-ಸಾಹಿತ್ಯದ ಸುಂದರ ಸಮ್ಮೇಳನ ಈ ಗೀತೆಗಳ ಸೌಂದರ್ಯ ಹಾಗೂ ಅರ್ಥವನ್ನು ಇಮ್ಮಡಿಗೊಳಿಸುತ್ತವೆ.
ಸಿನಿಮಾ ಹಾಗೂ ಹಿನ್ನೆಲೆ ಗಾಯನದ ಕ್ಷೇತ್ರದಲ್ಲೂ ಜೋಶಿಯವರು ಅಮೂಲ್ಯ ಸೇವೆ ಸಲ್ಲಿಸಿದ್ದಾರೆ. ಸಂಧ್ಯಾರಾಗ ಚಿತ್ರದ ‘ನಂಬಿದೆ ನಿನ್ನ ನಾದ ದೇವತೆಯೇ’ ಹಾಗೂ ಕನ್ನಡತಿ ತಾಯೇ ಬಾ, ಎಂತಹಾ ಕನ್ನಡಿಗನಿಗೂ ಹೆಮ್ಮೆ. ಉತ್ಸಾಹದ ಚಿಲುಮೆಯಾಗುವಂತ ಹಾಡುಗಳು. ಮತ್ತೆ ಹಲವಾರು ದಶಕಗಳ ನಂತರ ಪಂಡಿತಜೀಯವರು ಭಾಗ್ಯದ ಲಕ್ಷ್ಮೀ ಬಾರಮ್ಮ ಹಾಡಿನ ಮೂಲಕ ಚಲನಚಿತ್ರ ಸಂಗೀತ ಪ್ರೇಮಿಗಳ ಹೃದಯವನ್ನು ಗೆದ್ದರು. ಪಂಡಿತ್‌ಜೀಯವರು ಸಾಕಷ್ಟು ಹಿಂದಿ ಚಿತ್ರಗೀತೆಗಳಿಗೆ ದನಿಯಾಗಿದ್ದರು. ಆನ್ ಕಹಿ ಚಿತ್ರಗೀತೆಗೆ ಶ್ರೇಷ್ಠ ಹಿನ್ನೆಲೆಗಾಯಕ ಪ್ರಶಸ್ತಿಯೂ ಲಭಿಸಿತ್ತು. ಒಮ್ಮೆ ಗುರುಗಳನ್ನು ನಾ ಕೇಳಿದೆ. ‘ನೀವ್ಯಾಕೆ ಹೆಚ್ಚು ಸಿನಿಮಾಕ್ಕೆ ಹಾಡಲಿಲ್ಲ?’ ಅಂತ. ‘ನಾವು ಹಾಡುವಂತಹ ಹಾಡು, ಹೆಚ್ಚು ಇರ‍್ತಿರಲಿಲ್ಲ’ ಅಂತ ಚಿಕ್ಕ ಉತ್ತರದಲ್ಲೇ ಸಂಭಾಷಣೆ ಮುಗಿಸಿಬಿಟ್ರು.
ಪಂಡಿತಜೀಯವರ ಶಿಷ್ಯ, ಮಾಧವಗುಡಿಯವರ ಶಿಷ್ಯನಾಗಿ, ಭೀಮಸೇನರ ಆಶೀರ್ವಾದದಿಂದ ಸಂಗೀತ ಪ್ರಪಂಚದ ವಿಧೇಯ ವಿದ್ಯಾರ್ಥಿಯಾಗಿ, ಈ ಪರಂಪರೆಯಲ್ಲೇ ನಾನು ಮುಂದುವರೆದಿದ್ದೇನೆ. ಹಲವಾರು ಬಾರಿ ಜೋಶಿಯವರ ಜೊತೆ ಕೊಲ್ಕತ್ತಾ, ಚೆನ್ನೈ, ಮುಂಬಯಿ, ದೆಹಲಿ, ಬೆಂಗಳೂರು ಮುಂತಾದ ಕಡೆ ತಂಬೂರಿ, ಸಹಗಾಯನಕ್ಕೆ ಕುಳಿತಿದ್ದೇನೆ. ಅವರ ಸಂಗೀತ ದೇವ ಭಾಷೆ, ವಿಶ್ವಭಾಷೆಯಾಗಿದ್ದರೂ, ಅವರ ಮಾತೃಭಾಷೆ ಕನ್ನಡವೇ ಆಗಿರುತ್ತಿತ್ತು. ಕನ್ನಡಿಗರು ಇಲ್ಲದ ಸಭೆಯಲ್ಲೂ ಕನ್ನಡದ ದಾಸರ ಪದಗಳನ್ನು ಹಾಡ್ತಿದ್ರು. ವೇದಿಕೆಯ ಮೇಲೆ ನಮ್ಮೊಡನೆ ಕನ್ನಡದಲ್ಲೇ ಮಾತಾಡ್ತಿದ್ರು. ಆ ಗಂಭೀರ ಮುಖಭಾವ, ವ್ಯಕ್ತಿತ್ವ, ಧ್ವನಿ, ಸಂಗೀತ, ಅವರ ವಿಶ್ವಮಾನವ ಪ್ರೀತಿ ಎಂದೆಂದಿಗೂ ನಿರಂತರ, ಅಜರಾಮರ. ‘ಏನಪ್ಪಾ ನಾಗರಾಜ ಹೆಂಗಿದ್ದೀರಿ..?’ ಅಂತ ಅವರು ಇಂದೂ ಕೇಳಿದ್ಹಾಂಗ ಅನಿಸ್ತದೆ. ಅವರು ತಮ್ಮ ಹಾಡಿನ ಮೂಲಕ, ಶಿಷ್ಯರ ಮೂಲಕ ಎಂದೆಂದೂ ನಮ್ಮೊಡನೆ ಇದ್ದಾರ, ಇರತಾರ.ಪಂಡಿತಜೀಯವರ ೯೦ ವರ್ಷದ ಸಾರ್ಥಕ ಬದುಕು, ಸಂಗೀತದ ಪಯಣವನ್ನು ಕೇವಲ ಕೆಲವು ಪುಟಗಳಲ್ಲಿ, ಸಾಲುಗಳಲ್ಲಿ ಏನಂತ ಬರೆಯೋದು? ಎಷ್ಟಂತಾ ಬರೆಯೋದು...?
ಆದರೂ ‘ಭೀಮಣ್ಣ ಮತ್ತೊಮ್ಮೆ ಹುಟ್ಟಿ ಬಾ..." ಅಂತ ನಾವೆಲ್ಲಾ ಹಾಡ್ತಾ ಇರೋಣ.

ಯಾಕೆ ಮೂಕನಾದ್ಯೋ ಗುರುವೆ...

ನಮ್ಮ ಕಾಲದ ತಾನಸೇನ... ಈ ಭೀಮಸೇನ...




ದಿಟ

ನಿನ್ನ ವಯಸ್ಸೆಷ್ಟು?
ಹನ್ನೆರಡು
ಎಲ್ಲಿಂದ ಬಂದಿ?
ಗದಗಿನಿಂದ
ಗದಗ? ಎಲ್ಲಿದೆ ಅದು?
ಕರ್ನಾಟಕದಲ್ಲಿ..
ಕರ್ನಾಟಕದಿಂದ ಜಲಂಧರ ತನಕ ಬಂದ್ಯಾ? ಅಷ್ಟು ಹಾಡಿನ ಹುಚ್ಚು ಇದ್ಯಾ? ನಿನ್ನ ತಂದೆ ತಾಯಿ ಹೆಂಗ್ ಕಳಿಸಿದ್ರು?
ಓಡಿ ಬಂದೇನಿ...
ಹೀಗೆ ದೂರದ ಜಲಂಧರನಲ್ಲಿ ನಿಂತು ಮಾತಾಡುತ್ತಿದ್ದಾತನ ಹೆಸರು ಭೀಮ ಸೇನ ಜೋಶಿ. ಸಂಗೀತ ಕೇಳಿದರೆ ಸಾಕು ಮೋಡಿಗೊಳಗಾದವನಂತೆ ಸ್ವರದ ಜಾಡು ಹಿಡಿದು ಹೊರಟು ಬಿಡುತ್ತಿದ್ದ ಭೀಮಸೇನ ಹುಟ್ಟುತ್ತಲೇ ಸ್ವರಗಳೊಂದಿಗೆ ಧರೆಗೆ ಬಂದರೇನೊ!
ಗದಗದ ಕೀರ್ತನಕಾರರ ಕುಟುಂಬದಲ್ಲಿ ಜನಿಸಿದ ಅವರಿಗೆ ಮಾತು ಬರುವ ಹೊತ್ತಿಗೆ ಸರೆಗಮ ಕೂಡ ಗೊತ್ತಾಗಿತ್ತು. ತಾಯಿ ಹಾಡುವ ಭಜನೆಗಳಲ್ಲಿ, ದೇವಸ್ಥಾನದಲ್ಲಿ ಹಾಡುತ್ತಿದ್ದ ಭಕ್ತಿಗೀತೆಗಳಲ್ಲಿ, ಮಸೀದಿಯಿಂದ ಕೇಳುತ್ತಿದ್ದ ಪ್ರಾರ್ಥನೆಯಲ್ಲಿನ ಸ್ವರ-ತಾಳಗಳಿಗೆ ಭೀಮಣ್ಣ ಮೈಯೆಲ್ಲಾ ಕಿವಿಯಾಗಿಸಿಕೊಳ್ಳುತ್ತಿದ್ದ. ಗದಗದ ಕ್ಯಾಸೆಟ್ ಅಂಗಡಿಯ ಪಕ್ಕ ಉಸ್ತಾದ್ ಅಬ್ದುಲ್ ಕರೀಂ ಖಾನ್‌ರ ಬಸಂತ್ ರಾಗದ ರೆಕಾರ್ಡಿಂಗ್ ಕೇಳುತ್ತಿದ್ದ. ಈ ಕರೀಂ ಖಾನ್ ಬೇರಾರು ಅಲ್ಲ, ಮುಂದೆ ಭೀಮಸೇನರು ಮಿಂಚಲಿದ್ದ ಕಿರಾಣಾ ಘರಾಣಾದ ಜನಕರು.
ಹೀಗೆ ತನ್ನ ಸುತ್ತಲಿನ ಸಂಗೀತವನ್ನು ತನ್ನ ಉಸಿರಾಗಿಸಿಕೊಂಡ ಬೆಳೆದ ಭೀಮಸೇನ ತಾನು ಸಂಗೀತ ಲೋಕದಲ್ಲಿ ಏನು ಮಾಡುತ್ತೇನೆಂದು ಊಹಿಸಿರಲಿಲ್ಲ. ಆದರೆ ಆಗುವುದು ಬಹಳಿತ್ತು..
ಊರ ತೊರೆದು ಸ್ವರವ ಹಿಡಿದು..
ಅಮ್ಮ ಊಟಕ್ಕೆ ಹೆಚ್ಚು ತುಪ್ಪ ಹಾಕಲಿಲ್ಲವೆಂದು ಸಿಟ್ಟಿನಿಂದ ಮನೆ ತೊರೆದ ಭೀಮಸೇನ ಎರಡು ವರ್ಷ ಕಾಲ ಅಲೆದಾಡಿದ. ಹಾಗೇ ಮನೆ ಬಿಟ್ಟ ಮೇಲೆ ಸಂಗೀತ ಕಲಿಯಲು ಮೊದಲು ಕಾಲಿಟ್ಟಿದ್ದು ಬಿಜಾಪುರದಲ್ಲಿ. ಅಲ್ಲಿಂದ ಪುಣೆಗೆ. ಅಲ್ಲಿಂದ ಗ್ವಾಲಿಯರ್‌ಗೆ. ಅಲ್ಲಿ ಮಾಧವ ಸಂಗೀತ ವಿದ್ಯಾಲಯದಲ್ಲಿ ಗುರುವಿನ ದರ್ಶನವಾಯಿತು. ಸಿಂದಿಯಾ ದರ್ಬಾರಿನ ಪ್ರಸಿದ್ಧ ಸಂಗೀತಗಾರ ಉಸ್ತಾದ್ ಹಫೀಜ್ ಅಲಿ ಖಾನ್ ಭೀಮಸೇನನಿಗೆ ಆಶ್ರಯವಿತ್ತರು. ಮಾರ್ವಾ ಮತ್ತು ಪುರಿಯಾ ರಾಗಗಳ ಮೊದಲ ಪಾಠವಾಯಿತು.
ಗ್ವಾಲಿಯರ್‌ನಿಂದ ಭೀಮಣ್ಣನ ಪಯಣ ಕೊಲ್ಕತಾಕ್ಕೆ. ಅಲ್ಲಿ ಈ ಬಾಲಕನನ್ನು ನೋಡಿ ಮೆಚ್ಚಿದ ಗಾಯಕ ಪಹರಿ ಸನ್ಯಾಲ್ ತಮ್ಮಲ್ಲಿ ಕೆಲಸಕ್ಕಿಟ್ಟುಕೊಂಡರು. ಕೊಲ್ಕತಾದಲ್ಲೂ ತುಂಬಾ ಕಾಲ ಇರಲಿಲ್ಲ. ಅಲ್ಲಿಂದ ಗುರುವಿನ ಹುಡುಕಾಟದಲ್ಲಿ ಜೋಶಿ ಪಂಜಾಬಿನ ಜಲಂಧರ್‌ಗೆ ತೆರಳಿದರು. ಅಲ್ಲಿ ಗಾಯಕ ವಿನಾಯಕರಾವ್ ಬುವಾ ಪಟವರ್ಧನ್ ಅವರು ಮತ್ತೊಬ್ಬ ಗುರುವಿನ ಹೆಸರು ಸೂಚಿಸಿದರು. ಆ ಗುರುವೇ ಧಾರವಾಡದ ಕುಂದಗೋಳದ ರಾಮಬಾವು ಕುಂದಗೋಳಕರ್. ಜೋಶಿ ಸೀದಾ ಅಲ್ಲಿಂದ ಗದಗಿನ ಮನೆಗೆ ಮರಳಿದರು. ಅಲ್ಲಿ ತಂದೆಯನ್ನು ಒತ್ತಾಯಿಸಿ ರಾಮಬಾವು ಅಲಿಯಾಸ್ ಸವಾಯಿ ಗಂಧರ್ವರಲ್ಲಿ ಸಂಗೀತಾಭ್ಯಾಸಕ್ಕೆ ಸೇರಿಕೊಂಡರು.
ಗಂಧರ್ವ ಲೋಕದಲ್ಲಿ..
೧೯೩೬ರಿಂದ ನಾಲ್ಕು ವರ್ಷ ಜೋಶಿಯವರು ಸವಾಯಿ ಗಂಧರ್ವರ ಮನೆಯಲ್ಲಿದ್ದುಕೊಂಡು ಸಂಗೀತಾಭ್ಯಾಸ ಮಾಡಿದರು. ಅಲ್ಲೇ ಖಯಾಲ್‌ಗಳ ಪರಿಣತಿ ಗಿಟ್ಟಿಸಿದರು.
೧೯೪೬ರಲ್ಲಿ ಅವರ ಗುರು ಸವಾಯಿ ಗಂಧರ್ವ ಅಲಿಯಾಸ್ ರಾಮಬಾವು ಕುಂದಗೋಳಕರ್ ಅವರ ಷಷ್ಟಿಪೂರ್ತಿ ಸಮಾರಂಭ ಜರುಗಿತು. ಅದರ ಅಂಗವಾಗಿ ಏರ್ಪಡಿಸಿದ್ದ ಸಂಗೀತ ಗೋಷ್ಠಿಯೇ ಜೋಶಿಯವರ ಮೊದಲ ಸಾರ್ವಜನಿಕ ಸಂಗೀತ ಕಛೇರಿ. ೨೪ರ ತರುಣ ಭೀಮಣ್ಣ ಯಾವ ಅಂಜಿಕೆಯೂ ಇಲ್ಲದೆ ಅದ್ಭುತವಾಗಿ ಹಾಡಿದರು.
ಇದಾಗಿ ಕೆಲವು ದಿನಗಳಲ್ಲಿ ಸವಾಯಿ ಗಂಧರ್ವರಿಂದ ದೂರವಾದರು. ಉತ್ತರ ಹಿಂದುಸ್ತಾನಿ ಸಂಗೀತ ಸುಧೆಯ ರುಚಿ ಕಂಡಿದ್ದ ಭೀಮಸೇನ ಜೋಶಿಗೆ ಕೇವಲ ತಮ್ಮ ಘರಾಣಾದಲ್ಲೇ ಹೊರಳಾಡುವುದು ಬೇಕಿರಲಿಲ್ಲ. ಕೇಸರಿಬಾಯಿ ಕೇರ್ಕರ್, ಬೇಗಂ ಅಖ್ತರ್, ಉಸ್ತಾದ್ ಮುಷ್ತಾಖ್ ಹುಸೇನ್, ಉಸ್ತಾದ್ ಅಮೀರ್ ಖಾನ್ ಸಾಹೇಬ್ ಮುಂತಾದವರ ಗಾಯನ ಕೇಳಿ ಪುಳಕಗೊಂಡಿದ್ದ ಅವರು ತಾವೂ ಅದರ ಜಾಡಿಗೆ ಬಿದ್ದರು. ಕ್ರಮೇಣ ಹೊಸ ಪ್ರಯೋಗಗಳೊಂದಿಗೆ ಅವರೆಲ್ಲರನ್ನೂ ಮೀರಿಸಿ ತಮ್ಮದೇ ಛಾಪು ಒತ್ತಿದರು. ಆದರೂ ಕಿರಾಣಾ ಘರಾಣಾದಿಂದ ದೂರ ಹೋಗಲಿಲ್ಲ. ಕರೀಮ್‌ಖಾನ್‌ರ ಗಾಯನ ಕೇಳುತ್ತಾ ಬೆಳೆದ ಭೀಮಸೇನ ಕಿರಾಣಾ ಘರಾಣಾದ ಅಪ್ರತಿಮ ಗಾಯಕ ಎನಿಸಿಕೊಂಡರು.
ಸಂಗೀತ ಅವರನ್ನು ಸರಸ್ವತಿಯಂತೆ ಆವರಿಸಿಕೊಂಡಿತು. ರಾಗದ ವರವಂತೂ ಅಭಿಜಾತ ಸಂಗೀತಗಾರನಂತೆ ಯಾವತ್ತೋ ಅವರಿಗೆ ಒಲಿದಿತ್ತು. ಪುಣೆಯ ಸಂಗೀತ ಕಛೇರಿಯ ನಂತರ ದೇಶದ ಮೂಲೆ ಮೂಲೆಗಳಿಂದ ಕರೆ ಬರತೊಡಗಿತು. ವಿದೇಶಗಳಿಂದಲೂ ಅವರಿಗೆ ಆಹ್ವಾನ ಬಂತು. ಭೀಮಸೇನ.. ನಮ್ಮ ಕಾಲದ ತಾನಸೇನರಾದರು. ಆ ತಾನಸೇನ ಹಾಡಿ ದೀಪ ಹಚ್ಚಿದ. ಈ ಭೀಮ ಸೇನ ಎಲ್ಲರ ಎದೆಯೊಳಗೆ ಸ್ವರದೀಪವನ್ನು ಹಚ್ಚಿದ.
ಧೀರ ಗಂಭೀರ..
ಖ್ಯಾತ ಸಿತಾರ್ ವಾದಕ, ಪಂಡಿತ್ ರವಿಶಂಕರ್ ತಮ್ಮ ಆತ್ಮಚರಿತ್ರೆ ‘ರಾಗ-ಅನುರಾಗ’ದಲ್ಲಿ ಪಂಡಿತ್ ಭೀಮಸೇನರ ವ್ಯಕ್ತಿತ್ವದ ಬಗ್ಗೆ ಹೇಳಿದ್ದಾರೆ:
“ಧೀರ, ಗಂಭೀರ, ಮುಕ್ತ ಕಂಠದ ಬಗ್ಗೆ ಮಾತಾಡುವಾಗ ಭೀಮಸೇನ ಜೋಶಿಯವರ ಉಲ್ಲೇಖ ಮಾಡಲೇಬೇಕು. ಗಂಭೀರವಾದರೂ ಅವರ ಕಂಠದಲ್ಲಿ ಮಧುರತೆ ಇದೆ. ಈ ಯುಗದಲ್ಲಿ ‘ಮುಕ್ತ’ ಕಂಠ ಎಂದರೆ ಭೀಮಸೇನರದ್ದೆ ಎಂದು ನೀವು ಧೈರ‍್ಯದಿಂದ ಹೇಳಬಹುದು. ಅವರ ಶೈಲಿ ಎಲ್ಲರಿಗಿಂತ ಭಿನ್ನ. ಅವರ ಗಾನ ಗುಣಗಳು ಅನೇಕ. ಉಸಿರು ಹಿಡಿಯುವ ಕ್ಷಮತೆ, ಧೃತ ತಾನದ ಮೇಲೆ ಅಧಿಕಾರ, ಸ್ವರಗಳನ್ನು ಕರೆಯುತ್ತಿದ್ದಾರೊ ಎನ್ನುವ ಅವಿರ್ಭಾವ ಜೊತೆಗೆ ಸುಂದರವಾದ ಮುಖ, ಅನೇಕ ವರ್ಷಗಳಿಂದ ಜನಪ್ರಿಯತೆಯ ಶಿಖರದ ಮೇಲಿದ್ದಾರೆ ಭೀಮಸೇನ. ಅನೇಕ ಶ್ರೇಷ್ಠ ಹಿರಿಯ ಗಾಯಕರು ಆಗಿ ಹೋದರೂ ಇಂದು ಭೀಮಸೇನ ರಸಿಕರಿಗೆ ಅನಿವಾರ್ಯವಾಗಿದ್ದಾರೆ”.
ಒಬ್ಬ ಸಂಗೀತ ದಿಗ್ಗಜ, ಮತ್ತೊಬ್ಬ ದಿಗ್ಗಜನ ಬಗ್ಗೆ ಹೇಳಿದ ಮಾತುಗಳಿವು.
ಈ ಮಟ್ಟಿಗೆ ಭೀಮಸೇನ ಸಂಗೀತ ಪ್ರೇಮಿಗಳ ಪಾಲಿಗೆ ಆರಾಧ್ಯ ದೈವವಾಗಲು ಕಾರಣ ಕೇವಲ ಅವರ ಗಾಯನವಷ್ಟೇ ಅಲ್ಲ ಅವರ ಸ್ವಭಾವ ಕಾರಣವೂ ಆಯಿತು. ಯಾವುದೇ ನಾಟಕೀಯತೆ, ಆಡಂಬರವಿಲ್ಲದ ಅವರ ಸರಳ ಜೀವನ ಭೀಮಸೇನ ಸಂಗೀತದಷ್ಟೇ ಮೋಡಿ ಮಾಡಿತು. ಯಾರಲ್ಲೂ ಏನನ್ನೂ ಬೇಡದ, ಎಂದಿಗೂ ಸಂಯೋಜಕರನ್ನು ಕಾಡದ, ಒಳಗೊಂದು, ಹೊರಗೊಂದು ಸ್ವಭಾವವೇ ಭೀಮಸೇನರದ್ದಾಗಿರಲಿಲ್ಲ. ಈ ಗುಣ ಭೀಮಸೇನರ ಅಭಿಮಾನಿಗಳ ಮನಸೂರೆಗೊಂಡಿತು.
ಮನವರಿತು ಹಾಡುವ ಗಾಯಕ
ಜೋಶಿ ದೊಡ್ಡ ಶಕ್ತಿ ಇದು. ತನ್ನ ಎದುರುಗಿನ ಶ್ರೋತೃಗಳ ಮನಸ್ಸು ಆರಿತು ಹಾಡಬಲ್ಲವರಾಗಿದ್ದರು ಭೀಮಸೇನರು. ಅವರೊಳಗೊಬ್ಬ ಮನಃಶಾಸ್ತ್ರಜ್ಞ ನಿದ್ದ. ತನ್ನ ಎದುರು ಕೂತ ಕೇಳುಗರಿಗೆ ಏನು ಹಾಡಬೇಕು? ಏನು ಹಾಡಿದರೆ ಅವರ ಮನ ತಣಿಯುತ್ತದೆ ಎಂದು ಅರಿಯುವ ಕಲೆ ಅವರಿಗೆ ಸಿದ್ಧಸಿತ್ತು. ಒಂದು ಉದಾಹರಣೆ ಕೊಡುವುದಾದರೆ ಪೈಠಣದಲ್ಲೊಂದು ಕಾರ್ಯಕ್ರಮ ಏರ್ಪಾಡಾಗಿತ್ತು. ಅಲ್ಲಿ ನೆರೆದವರ ಸಂಖ್ಯೆ ೩೦೦೦೦! ಐದು ನಿಮಿಷ ನೆರೆದವರನ್ನು ಗಮನಿಸಿದ ಜೋಷಿ ‘ಅಭಂಗವಾಣಿ’ ಹಾಡಿದರು. ಒಮ್ಮೆ ಕರತಾಡನ. ಜೋಶಿ ಅವರ ಗಾಯನ ಸಹಸ್ರಾರು ಮಂದಿಯನ್ನು ಒಮ್ಮೇಲೆ ಸಮ್ಮೋಹಗೊಳಿಸಿಬಿಟ್ಟಿತ್ತು.
ಮರೆಯಲಾಗದ ಹಾಡುಗಳು..
“ಮಿಲೆ ಸುರ್ ಮೇರಾ ತುಮ್ಹಾರಾ..” ಗೀತೆಯನ್ನು ದೇಶದ ಏಕತೆಯನ್ನು ಎತ್ತಿ ಹಿಡಿಯುವುದಕ್ಕೆಂದು ನಿರ್ಮಿಸಲಾಯಿತು. ಈ ಗೀತೆ ಆರಂಭವಾಗುತ್ತಿದುದೇ ಭೀಮಸೇನ ಜೋಶಿ ಅವರಿಂದ. ಇಂಥ ಇನ್ನು ಅನೇಕ ಗೀತೆಗಳೊಂದಿಗೆ ಭೀಮಸೇನರು ನಮ್ಮೊಂದಿಗೆ ಎಂದೆಂದಿಗೂ ಉಳಿಯುವಂತಾಗಿದೆ. ಸಂಧ್ಯಾರಾಗ ಚಿತ್ರದಲ್ಲಿ ಹಾಡಿದ ನಂಬಿದೆ ‘ನಿನ್ನ ನಾದ ದೇವತೆ..’, ಶಂಕರ್‌ನಾಗ್ ನಿರ್ದೇಶನದ ನೋಡಿ ಸ್ವಾಮಿ ನಾವಿರೋದು ಹೀಗೆ ಚಿತ್ರದಲ್ಲಿ ಹಾಡಿದ ‘ಭಾಗ್ಯದ ಲಕ್ಷ್ಮಿ ಬಾರಮ್ಮ...’ ಗೀತೆಗಳನ್ನು ನಾವು ಮರೆಯಲು ಸಾಧ್ಯವೇ ಇಲ್ಲ.
ಅಲ್ಲದೆ ‘ಯಾಕೆ ಮೂಕನಾದೆ...’, ‘ಕರುಣಿಸೋ ರಂಗ...’, ‘ಕೈಲಾಸವಾಸ..ಗೌರೀಶ ಈಶ..’ ಕೀರ್ತನೆಗಳು, ಭಕ್ತಿಗೀತೆಗಳು.. ಜೋಶಿ ಅವರ ನೆನಪಿನೊಂದಿಗೆ ದೇವರಿಗೆ ಪ್ರಾರ್ಥನೆ ಸಲ್ಲುತ್ತದೆ.
ಭಾರತರತ್ನ ಪಡೆದ ೨ನೇ ಕನ್ನಡಿಗ
ಸರ್ ಎಂ.ವಿಶ್ವೇಶ್ವರಯ್ಯನಂತರ ಭಾರತರತ್ನ ಗೌರವಕ್ಕೆ ಪಾತ್ರರಾದ ೨ನೇ ಕನ್ನಡಿಗ ಭೀಮಸೇನ ಜೋಶಿ. ೨೦೦೮ರಲ್ಲಿ ಈ ಗೌರವ ಸಂದಿತು. ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಈ ಗೌರವಕ್ಕೆ ಪಾತ್ರದ ನಾಲ್ಕನೆಯವರು ಜೋಶಿ. ಎಂ.ಎಸ್.ಸುಬ್ಬಲಕ್ಷ್ಮಿ, ಪಂಡಿತ್‌ರವಿ ಶಂಕರ್, ಉಸ್ತಾದ್ ಬಿಸ್ಮಿಲ್ಲಾಖಾನ್ ಮೊದಲ ಮೂವರು. ಪ್ರಶಸ್ತಿ ಪ್ರಕಟಗೊಂಡಾಗ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಹಾಡುವುದನ್ನು ನಿಲ್ಲಿಸಿ ಬಹಳ ದಿನಗಳೇ ಆಗಿದ್ದವು.
ಇಬ್ಬರು ಹೆಂಡಿರು, ಏಳು ಮಕ್ಕಳು
ಜೋಶಿಯವರಿಗೆ ಇಬ್ಬರು ಹೆಂಡಿರು. ಮೊದಲ ಪತ್ನಿ ಸುನಂದಾ ಕಟ್ಟಿ. ಇನ್ನೊಬ್ಬರು ವತ್ಸಲಾಬಾಯಿ. ಸಂಗೀತಾಭ್ಯಾಸದ ವೇಳೆ ಮನೆಯವರ ಒತ್ತಾಯಕ್ಕೆ ಜೋಶಿ ತಮ್ಮ ಸೋದರ ಮಾವನ ಮಗಳಾದ ಸುನಂದಾ ಅವರನ್ನು ವಿವಾಹವಾದರು.
ಇದಾಗಿ ಕೆಲವೇ ದಿನಗಳಲ್ಲಿ ಪರಿಚಯವಾದ ವತ್ಸಲಾರ ಪ್ರೀತಿಯಲ್ಲಿ ಬಿದ್ದರು. ಈ ಮದುವೆಗೆ ಮನೆಯವರ, ಆಪ್ತರ ವಿರೋಧವಿತ್ತು. ಆದರೂ ಅದಾವುದನ್ನು ತಲೆ ಕೆಡಿಸಿಕೊಳ್ಳದೇ ವತ್ಸಲಾರನ್ನು ವರಿಸಿದರು.
ಸುನಂದಾ ಜೋಶಿ ಅವರ ನಾಲ್ಕು ಮಕ್ಕಳಿಗೆ ಜನ್ಮವಿತ್ತರು. ವತ್ಸಲಾ ಅವರು ಮೂರು ಮಕ್ಕಳಿಗೆ ಜನ್ಮ ನೀಡಿದರು. ಸುನಂದಾ ೧೯೯೧ರಲ್ಲಿ, ವತ್ಸಲಾ ೨೦೦೪ರಲ್ಲಿ ನಿಧನರಾದರು.

ಗಾನಲೋಕದ ಭೀಮಸೇನ



ಉಲ್ಲಾಸ

‘ಅವರು ಅದ್ಭುತ ಸಂಗೀತಗಾರ. ಸಂಗೀತ ಕಾರ‍್ಯಕ್ರಮಕ್ಕೆ ವ್ಯವಸ್ಥಾಪಕರು ಆಟೋದಲ್ಲಿ ಕರೆದೊಯ್ದರೂ ಬೇಸರ ಪಟ್ಟುಕೊಳ್ಳದ ಸರಳತೆ ಅವರದು. ಯಾರ ಹತ್ತಿರ ಒಳ್ಳೆಯ ಸಂಗೀತವಿದೆಯೋ ಅವರ ಸೇವೆ ಮಾಡಿ ತಮ್ಮ ಸಂಗೀತವಾಗಿಸಿಕೊಂಡವರು. ಹೀಗಾಗಿ ಭೀಮಸೇನ ಜೋಶಿ ಅವರದು ಭೀಮಸೇನ ಜೋಶಿ ಘರಾನಾ...’
-ಹೀಗೆಂದು ಪಂಡಿತ ಭೀಮಸೇನ ಜೋಶಿ ಅವರನ್ನು ಕುರಿತಂತೆ ಹೆಮ್ಮೆಯಿಂದ ಹೇಳಿದವರು ಹಿರಿಯ ಸಂಗೀತಗಾರ ಪಂಡಿತ್ ವಿನಾಯಕ ತೊರವಿ.
ಇದು ಅಕ್ಷರಶಃ ಸತ್ಯವೂ ಹೌದು. ಭೀಮಸೇನರ ಸರಳತೆ, ಸಂಗೀತವನ್ನು ಸಿದ್ಧಿಸಿಕೊಳ್ಳುವಲ್ಲಿನ ಅವರ ಬದ್ಧತೆ ಆ ಪರಿಯದ್ದು.
ಪಂಡಿತ್ ಭೀಮಸೇನ ಜೋಶಿ ಭಾರತೀಯ ಸಂಗೀತ ಕಂಡ ಅನನ್ಯ ಗಾಯಕ, ಅಪರೂಪದ ಸಾಧಕ. ಅವರದ್ದು ಮನಸು ತಟ್ಟುವ ಗಾಯನ. ಸಂಗೀತ ಮತ್ತು ಬದುಕನ್ನು ಒಂದೇ ಬಗೆಯಲ್ಲಿ ಕಂಡ ಭೀಮಸೇನ ಅಕ್ಷರಶಃ ಹಿಂದೂಸ್ತಾನಿ ಸಂಗೀತದ ಭೀಮಸೇನರೇ ಆಗಿದ್ದರು ಎಂದರೆ ಅತಿಶಯೋಕ್ತಿ ಅಲ್ಲ.
‘ಕರ್ನಾಟಕದ ಹೆಮ್ಮೆ ಗದಗ ಜಿಲ್ಲೆಯ ರೋಣ ಭೀಮಸೇನರ ಹುಟ್ಟೂರು. ೧೯೨೨ರ ಫೆಬ್ರವರಿ ೪ರಂದು ಜನಿಸಿದ ಭೀಮಸೇನ ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ ಸವಾಯಿ ಗಂಧರ್ವರ ಬಳಿ ಸಂಗೀತಾಭ್ಯಾಸ ಮಾಡಿದವರು. ಆದರೆ ಅವರು ತಮ್ಮ ಕರ್ಮಭೂಮಿಯನ್ನಾಗಿ ಆರಿಸಿಕೊಂಡಿದ್ದು ಮಹಾರಾಷ್ಟ್ರ್ರದ ಸಾಂಸ್ಕೃತಿಕ ನಗರಿ ಪುಣೆಯನ್ನು.
ಗದಗ ಜಿಲ್ಲೆಯ ಸಾಮಾನ್ಯ ಭೀಮಸೇನ ಸಂಗೀತದ ಮೂಲಕ ರಾಜ್ಯ ಮತ್ತು ದೇಶ ವಿದೇಶಗಳ ಸೀಮೋಲ್ಲಂಘನ ಮಾಡಿ ‘ಪಂಡಿತ ಭೀಮಸೇನ ಜೋಶಿ’ ಆದ ಸಂಗತಿ ಸಾಮಾನ್ಯವಾದ ಸಂಗತಿಯಲ್ಲ.
ಗದುಗಿನ ಭೂಸದ ಅಂಗಡಿಯೊಂದರ ಗ್ರಾಮಾಫೋನ್ ಮೂಲಕ ಬಿತ್ತರವಾಗುತ್ತಿದ್ದ ಉಸ್ತಾದ್ ಅಬ್ದುಲ್ ಕರೀಂ ಖಾನರ ಸಂಗೀತ ಕೇಳಿ ಮೈಮರೆಯುತ್ತಿದ್ದ ಹುಡುಗ ನೋಡನೋಡುತ್ತ್ತಿದ್ದಂತೆಯೇ ಹಿಮಾಲಯದಷ್ಟೇ ಎತ್ತರಕ್ಕೆ ಬೆಳೆದದ್ದು ನಿಜಕ್ಕೂ ಒಂದು ದಂತಕಥೆ!
ಬಹುಶಃ ಅನೇಕರಿಗೆ ತಿಳಿದಿರಲಿಕ್ಕಿಲ್ಲ. ಭೀಮಸೇನರು ಜಗತ್ತಿನ ೨೩ ದೇಶಗಳ ೬೭ ನಗರಗಳಲ್ಲಿ ಸಂಗೀತ ಕಾರ‍್ಯಕ್ರಮ ನೀಡಿದ್ದಾರೆ. ದೇಶದ ಬಹುತೇಕ ಕಲಾವಿದರು ತಮ್ಮ ಸಂಗೀತ ಪ್ರವಾಸ ಆರಂಭಿಸುವುದು ಯುರೋಪ್ ಅಥವಾ ಅಮೆರಿಕ ಖಂಡಗಳ ದೇಶಗಳಿಗೆ. ವಿಶೇಷವೆಂದರೆ ಭೀಮಸೇನರು ತಮ್ಮ ಗಾಯನ ಪ್ರವಾಸ ಆರಂಭಿಸಿದ್ದು ೧೯೬೪ರಲ್ಲಿ, ಅದೂ ಅಪಘಾನಿಸ್ತಾನದಿಂದ!
ಅವರದ್ದು ಗಂಡುಸ್ವರ...
ಭೀಮಸೇನ ಜೋಷಿ ಸ್ವರವೆತ್ತಿ ಹಾಡತೊಡಗಿದರೆಂದರೆ ಅಲ್ಲಿ ನಿಜಕ್ಕೂ ಗಂಧರ್ವ ಲೋಕವೇ ಸೃಷ್ಟಿಯಾಗುತ್ತಿತ್ತು. ಬಿಳಿಯ ದೊಗಳೆ ಪೈಜಾಮಾ, ನೆಹರೂ ಅಂಗಿ ಧರಿಸಿ ವೇದಿಕೆ ಏರಿದರೆಂದರೆ ಅಲ್ಲಿ ನೀರವ ಮೌನ. ಕ್ಷಣಕ್ಕೇ ನಿಧಾನವಾಗಿ ಅವರ ಕಂಚಿನ ಕಂಠ ಮೊರೆಯಿತೆಂದರೆ ನೆರೆದ ಮನಸ್ಸುಗಳು ಸಮ್ಮೋಹನಕ್ಕೆ ಒಳಗಾಗುತ್ತಿದ್ದವು. ಇಡೀ ಜನಸ್ತೋಮವೇ ಭಾವಪರವಶವಾಗುತ್ತಿತ್ತು.
ಪಂಡಿತ ಭೀಮಸೇನ ಜೋಶಿ ಅವರು ಸೃಷ್ಟಿಸುತ್ತ್ತಿದ್ದ ಗಂಧರ್ವ ನಗರಿಯ ಪರಿಯೇ ಆ ರೀತಿ ಇರುತ್ತಿತ್ತು. ಹಿಂದೂಸ್ಥಾನ ಸಂಗೀತ ಲೋಕದಲ್ಲಿ ಯಾರಲ್ಲೂ ಇಲ್ಲದ ಅಪ್ರತಿಮ ಸಂಪೂರ್ಣ ‘ಪುರುಷಕಂಠ’ ಅವರದ್ದಾಗಿತ್ತು ಎಂದು ಹಿಂದೂಸ್ಥಾನಿ ಕ್ಷೇತ್ರದ ದಿಗ್ಗಜರುಗಳೇ ಹೇಳುತ್ತಾರೆ.
ಈ ಗಂಡುಸ್ವರವೇ ಭೀಮಸೇನರಿಗೆ ಕೀರ್ತಿ ಮತ್ತು ಯಶಸ್ಸು ಎರಡನ್ನೂ ಮೊಗೆಮೊಗೆದು ಕಟ್ಟಿಕೊಟ್ಟಿದ್ದು!
ಭೀಮಸೇನರನ್ನು ಸಂಗೀತ ಕ್ಷೇತ್ರದಲ್ಲಿ ಬಹು ಎತ್ತರಕ್ಕೆ ಏರಿಸಿದ್ದು ಅವರ ಕಲಿಯುವಿಕೆಯ ಹಂಬಲ ಮತ್ತು ಸ್ವೀಕಾರ ಗುಣದಿಂದ. ಸವಾಯಿ ಗಂಧರ್ವರ ಬಳಿ ಗುರು ಶಿಷ್ಯ ಪರಂಪರೆಯಡಿ ಬರೋಬ್ಬರಿ ನಾಲ್ಕು ವರ್ಷ ಸಂಗೀತ ಕಲಿತರು.
ಸವಾಯಿ ಗಂಧರ್ವರ ಬಳಿ ನಾಲ್ಕು ವರ್ಷ ಸಂಗೀತ ಕಲಿತರೂ ಸವಾಯಿ ಗಂಧರ್ವರ ಶೈಲಿಗಿಂತ ಇವರದ್ದು ತೀರಾ ಭಿನ್ನ. ಇವರ ಗಾಯನವೇನಿದ್ದರೂ ಸವಾಯಿ ಗಂಧರ್ವರ ಗುರು ಉಸ್ತಾದ್ ಅಬ್ದುಲ್ ಕರೀಂ ಖಾನರ ಗಾಯನಕ್ಕೆ ಹೆಚ್ಚು ಹತ್ತಿರವಾಗಿತ್ತು. ಯಾಕೆಂದರೆ, ಬಾಲ್ಯದಲ್ಲಿ ಅಬ್ದುಲ್ ಕರೀಂ ಖಾನರ ಗಾಯನ ಭೀಮಸೇನರ ಮೇಲೆ ಬಹುಮಟ್ಟಿಗೆ ಪ್ರಭಾವ ಬೀರಿತ್ತು.
ಪ್ರಯೋಗಶೀಲ...
ಬಹುಶಃ ಸಂಗೀತ ಕ್ಷೇತ್ರದಲ್ಲಿ ಭೀಮಸೇನರಷ್ಟು ಪ್ರಯೋಗಶೀಲರು ಮತ್ಯಾರೂ ಇರಲಿಕ್ಕಿಲ್ಲ. ಇನ್ನೇನು ಸಿದ್ಧಿಸಿತು ಎನ್ನುವಾಗ ಅವರು ಮತ್ತೊಂದು ಸಿದ್ಧಿಯ ಕಡೆ ಹೆಜ್ಜೆ ಹಾಕುತ್ತಿದ್ದರು...ಅಲ್ಲೂ ಸಿಕ್ಕಷ್ಟನ್ನು ಮೊಗೆದು ಮತ್ತೆ ಇನ್ನೊಂದರ ಹುಡುಕಾಟ...ಹೀಗೆ ಇದ್ದಷ್ಟೂ ದಿನ ಹುಡುಕಾಟ ಮತ್ತು ಸಿದ್ಧಿಯ ಕಡೆ ತುಡಿದ ಜೀವ ಭೀಮಸೇನರದ್ದು.
ಸವಾಯಿ ಗಂಧರ್ವರ ಬಳಿ ಭೀಮಸೇನರು ಕಿರಾಣಾ ಘರಾಣಾದ ಶಾಸ್ತ್ರ ಶುದ್ಧ ಹಾಗೂ ಕಾರುಣ್ಯ ಸಂಗೀತ ಕಲಿಯಲು ಅವಕಾಶ ದೊರೆತರೂ ಅವರು ಮತ್ತೂ ಭಿನ್ನತೆಯ ಹಾದಿ ಹಿಡಿದರು. ಭೀಮಸೇನರ ವಿಶೇಷತೆ ಎಂದರೆ, ಜೈಪುರ- ಅತ್ರೌಲಿ, ಗ್ವಾಲೇರ್, ಆಗ್ರಾ ಘರಾಣೆಗಳಿಂದ ಅತ್ತುತ್ತಮ ಸ್ವರಗಳನ್ನು ಅಳವಡಿಸಿಕೊಂಡದ್ದು.
ಭೀಮಸೇನರ ಮತ್ತೊಂದು ವಿಶೇಷತೆ ಅಂದ್ರೆ ಅವರು ಯಾರಲ್ಲಿಯೂ ಹೆಚ್ಚು ಕಲಿಯಲಿಲ್ಲ. ಆದರೆ ಸಂಗೀತ ಗೀಳನ್ನು ಮನಪೂರ ಹಚ್ಚಿಕೊಂಡರು. ಈ ಸಂಬಂಧ ಹುಡುಕಾಟ ನಡೆಸಿದರು...ಸುತ್ತಿದರು....ಹೀಗೆ ಎಲ್ಲೆಲ್ಲಿ ಸುತ್ತಿದರೋ ಅಲ್ಲಲ್ಲಿ ಆಯಾ ಘರಾಣಿಗಳ ದೊಡ್ಡ ದೊಡ್ಡ ಬುವಾಜಿಗಳಿಂದ ವಿವಿಧ ಘರಾಣೆಗಳ ವೈಶಿಷ್ಟಗಳನ್ನು ಕಲಿತರು ಮತ್ತು ಅವೆಲ್ಲವನ್ನೂ ತಮ್ಮ ಸ್ವರ ಧರ್ಮಕ್ಕೆ ತಕ್ಕಂತೆ ಅಳವಡಿಸಿಕೊಂಡರು.
ಸಂತನಂತೆ...
ಇಂಥ ಅಮೋಘ ಕಂಠಸಿರಿಯ ಅಪರೂಪದ ಹಾಡುಗಾರನಿಗೆ ಯಶಸ್ಸು ಯಾವತ್ತಿಗೂ ತಲೆತಿರುಗಿಸಲಿಲ್ಲ. ಅಕ್ಷರಶಃ ಅವರು ಸಂತನಂತೆಯೇ ಬದುಕಿದವರು. ಭೀಮಸೇನರು ದೇಶದ ಮೊದಲ ಸಾಲಿನ ಗಾಯಕರಾದಾಗಲೂ ಸಂಗೀತ ಕಛೇರಿಗಳಿಗೆ ಹೋಗುವಾಗ ತಮಗೆ ಕಾರು ಬೇಕು, ಉಳಿದುಕೊಳ್ಳಲು ದೊಡ್ಡ ಹೋಟೆಲ್‌ಗಳೇ ಬೇಕು ಎಂದು ರಚ್ಚೆ ಹಿಡಿದು ಕೂತವರಲ್ಲ. ಅನ್ನ, ಸಾರು, ಚಟ್ನಿ ತಿಂದು ತಿಂದು ಚಾಪೆ ಮೇಲೇ ಮಲಗುತ್ತಿದ್ದರು. ಇವರು ಪಾಲ್ಗೊಳ್ಳುವ ಸಂಗೀತ ಕಛೇರಿಗಳಲ್ಲಿ ನೀಡುವ ಹಣಕಾಸಿನ ವಿಚಾರದಲ್ಲೂ ಎಲ್ಲೂ ತಂಟೆ ತಕರಾರು ಮಾಡಿಕೊಂಡವರಲ್ಲ. ಬಹುಮುಖ್ಯವಾಗಿ ಸಭೆಯಲ್ಲಿ ಲಕ್ಷ ಜನರಿರಲಿ, ಬೆರಳೆಣಿಕೆಯಷ್ಟು ಶೋತೃಗಳಿರಲಿ ಯಾವುದೇ ಕಾರಣಕ್ಕೂ ಭೀಮಸೇನರ ಸಂಗೀತ ಶೈಲಿಯಲ್ಲಿ ಭಿನ್ನತೆ ಕಾಣುತ್ತಿರಲಿಲ್ಲ.
ಸಿನಿಮಾ ನಂಟು
ಭೀಮಸೇನ ಜೋಶಿ ಹಲವು ಚಲನಚಿತ್ರಗಳಲ್ಲೂ ತಮ್ಮ ಸಂಗೀತಸುಧೆ ಹರಿಸಿದ್ದಾರೆ. ಅವರು ಹಾಡಿರುವ ಹಿಂದಿ ಚಲನಚಿತ್ರಗೀತೆ, ಕನ್ನಡ ಸಿನಿಮಾ ಮತ್ತು ಮರಾಠಿ ಹಾಡುಗಳು ಇವತ್ತಿಗೂ ಮನೆ ಮಾತು.
ಶಂಕರ್‌ನಾಗ್ ನಿರ್ದೇಶನದ ‘ನೋಡಿ ಸ್ವಾಮಿ ನಾವಿರೋದೆ ಹೀಗೆ’ ಚಿತ್ರದ ‘ಭಾಗ್ಯದ ಲಕ್ಷ್ಮೀ ಬಾರಮ್ಮಾ ಎಂಬ ಪುರಂದರ ದಾಸರ ಹಾಡು ‘ಬಿಭಾಸ್ ರಾಗದಲ್ಲಿದೆ. ಡಾ.ರಾಜ್ ಅಭಿನಯದ ಸಂಧ್ಯಾರಾಗ ಚಿತ್ರದ ‘ನಂಬಿದೆ ನಿನ್ನ ನಾದ ದೇವತೆಯೇ...’ ಗೀತೆ ‘ಪೂರ್ಯ ಕಲ್ಯಾಣ್ ರಾಗದಲ್ಲಿ ಹಾಡಿದ್ದರು.
ಭೀಮಸೇನರಲ್ಲಿ ವಿಶಿಷ್ಟ್ಯವೆನಿಸುವ ಹಾಡುಗಾರಿಕೆ ಸಾಮರ್ಥ್ಯವಿತ್ತು. ಬಹುಶಃ ಅದು ದೇವರು ಕೊಟ್ಟ ಕೊಡುಗೆಯೇ ಇರಬೇಕು. ವಿಲಂಬಿತ್ ಕಾಲದಲ್ಲಿ ಹಾಡುವಾಗ ಉಸಿರಿನ ನಿಯಂತ್ರಣ ಕಷ್ಟಸಾಧ್ಯ. ಅದು ಎಲ್ಲಾ ಗಾಯಕರಿಗೂ ಸುಲುಭವಾಗಿ ಸಿದ್ಧಿಸುವಂಥದ್ದಲ್ಲ. ಆದರೆ ಭೀಮಸೇನರು ಅದಕ್ಕೆ ಹೊರತಾಗಿದ್ದರು. ವಿಲಂಬಿತ್‌ನ ಒಂದು ಆವರ್ತವನ್ನು ಒಂದೇ ಉಸಿರಿನಲ್ಲಿ ಹಾಡುತ್ತಿದ್ದರು. ಅವರ ಉಸಿರು ನಿಯಂತ್ರಣ ಸಾಮರ್ಥ್ಯ ಅಚ್ಚರಿ ಮೂಡಿಸುವಂತಿತ್ತು.
ಕೊನೆಯ ಗಾಯನ
ಭೀಮಸೇನರು ಕರ್ನಾಟಕದಲ್ಲಿ ಕೊನೆಯ ಬಾರಿ ಹಾಡಿದ್ದು ೨೦೦೪ರ ಮೈಸೂರು ದಸರಾ ಮಹೋತ್ಸವದಲ್ಲಿ. ಆ ನಂತರ ಅವರ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರು ಮತ್ತೆ ಹಾಡಲಾಗಲಿಲ್ಲ.
ಕೇವಲ ಹಾಡುಗಾರಿಕೆಗಷ್ಟೇ ತಮ್ಮನ್ನು ಸೀಮಿತಗೊಳಿಸಿಕೊಳ್ಳದ ಭೀಮಸೇನ್ ಜೋಶಿ ಪುಣೆಯಲ್ಲಿ ಸವಾಯಿ ಗಂಧರ್ವರ ಪುಣ್ಯಸ್ಮರಣೆ ಅಂಗವಾಗಿ ಸಂಗೀತೋತ್ಸವವನ್ನೂ ಆಯೋಜಿಸುತ್ತಿದ್ದರು. ಆ ಮೂಲಕ ಲಕ್ಷಾಂತರ ಶ್ರೋತೃಗಳಿಗೆ ಸಂಗೀತದ ರಸದೌತಣ ನೀಡುತ್ತಿದ್ದರು. ಇಂಥದೊಂದು ಕಾರ‍್ಯಕ್ರಮದಿಂದಾಗಿ ಪ್ರವರ್ಧಮಾನಕ್ಕೆ ಬರುವ ಸಂಗೀತಗಾರರಿಗೆ ಒಂದು ಅಪೂರ್ವ ಅವಕಾಶ ಸಿಕ್ಕಂತಾಗಿತ್ತು. ಶಾಸ್ತ್ರೀಯ ಕಲೆಗಳಿಗೆ ಗ್ರಹಣ ಹಿಡಿದಂತಿರುವ ಈ ಸಂದರ್ಭದಲ್ಲಿ ಭೀಮಸೇನರು ಭಾರತೀಯ ಸಂಸ್ಕೃತಿಯ ಹರಿಕಾರನಂತೆ ಕೆಲಸ ಮಾಡಿ ಸೈ ಅಂತ ಅನ್ನಿಸಿಕೊಂಡವರು.
ಎಲ್ಲವೂ ಸರಿಯಾಗಿದ್ದರೆ ಇದೇ ಫೆಬ್ರವರಿ ೪ಕ್ಕೆ ಪಂಡಿತ್ ಭೀಮಸೇನ ಜೋಶಿ ೯೦ನೇ ವರ್ಷಕ್ಕೆ ಕಾಲಿಡುತ್ತಿದ್ದರು. ಆದರೆ ವಿಧಿಯ ಲೆಕ್ಕಾಚಾರವೇ ಬೇರೆ ಇತ್ತಲ್ಲಾ? ಕೊನೆಗೂ ಹಿಂದೂಸ್ಥಾನಿ ಸಂಗೀತ ಕ್ಷೇತ್ರದ ಭೀಮಸೇನ ಮೌನಕ್ಕೆ ಶರಣಾಗಿದ್ದಾರೆ...ಹಾಡು ಮುಗಿಸಿದ ಹಕ್ಕಿ ಬಾನಿನತ್ತ ಹಾರಿದೆ ಶಾಶ್ವತ. ಇನ್ನು ಉಳಿದಿರುವುದು ಮಾತ್ರ ಭೀಮಸೇನರ ಹಾಡುಗಳಷ್ಟೇ...

ಕರ್ನಾಟಕ ಏಕೀಕರಣದಲ್ಲಿ ಕರ್ನಾಟಕ ಸಂಘಗಳ ಪಾತ್ರ



ಜಯದೇವಪ್ಪ ಜೈನಕೇರಿ

ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸ ಹೊಂದಿರುವ ಕನ್ನಡ ಭಾಷೆ, ಕರ್ನಾಟಕ ರಾಜ್ಯ, ಸಾಂಸ್ಕೃತಿಕವಾಗಿ ಅಖಂಡವಾದದ್ದು. ಆದರೆ ರಾಜಕೀಯವಾಗಿ ಅನೇಕ ಏರಿಳಿತಗಳನ್ನು ಕಂಡಿದೆ. ಭಾರತದ ಇತಿಹಾಸದೊಂದಿಗೆ ಅನೇಕ ರಾಜರ, ಆಳ್ವಿಕೆಗೆ ಒಳಪಟ್ಟರೂ ಸಂಸ್ಕೃತಿ ಮತ್ತು ಭಾಷೆ ಮೂಲಕ ತನ್ನ ಅಸ್ಮಿತೆಯನ್ನು ಇಂದಿಗೂ ಕಾಪಾಡಿಕೊಂಡು ಬಂದಿದೆ. ಉತ್ತರದಲ್ಲಿ ಬಹುಮನಿ ಸುಲ್ತಾನರು, ದಕ್ಷಿಣದಲ್ಲಿ ವಿಜಯನಗರ ರಾಜ್ಯ ಸ್ಥಾಪನೆಗೊಂಡಾಗ ಸ್ವಲ್ಪ ಮಟ್ಟಿಗೆ ವಿಭಿನ್ನತೆ ಕಾಣಿಸಿದರೂ ವಿಜಯನಗರ ಪತನಾನಂತರ ಕನ್ನಡ ನಾಡು ಅನೇಕ ಪಾಳೆಪಟ್ಟುಗಳಾಯಿತು. ಟಿಪ್ಪುವಿನ ಕಾಲದಲ್ಲಿ ಈ ತುಂಡರಸರ ಪ್ರಾಬಲ್ಯ ಕಡಿಮೆಯಾಗಿದ್ದು ಕಂಡುಬರುತ್ತದೆ. ನಂತರ ಬಂದ ಬ್ರ್ರಿಟಿಷರು ತಮ್ಮ ಆಡಳಿತದ ಅನುಕೂಲಕ್ಕಾಗಿ, ಕನ್ನಡನಾಡನ್ನು ೨೨ ಭಾಗಗಳನ್ನಾಗಿಸಿದರು. ರಾಜಕೀಯವಾಗಿ ಈ ಎಲ್ಲ ದೌರ್ಜನ್ಯಗಳನ್ನು, ಎದುರಿಸಿಯೂ ಕನ್ನಡ ಭಾಷೆ ತನ್ನತನವನ್ನು ಉಳಿಸಿಕೊಂಡು ಬಂದಿತು.
ಭಾರತದ ಸಂದರ್ಭದಲ್ಲಿ ಭಾಷಾವಾರು ಪ್ರಾಂತ್ಯರಚನೆ ಚಳವಳಿ ೧೮೫೦ ರಿಂದಲೇ ಕಂಡು ಬರುತ್ತದೆ, ೧೮೭೪ರಿಂದ ಬಂಗಾಳ, ಅಸ್ಸಾಂ, ೧೮೭೬ರಿಂದ ಒರಿಸ್ಸಾದಲ್ಲಿ, ಭಾಷಾಚಳವಳಿಗಳು ಆರಂಭವಾದವು. ಕರ್ನಾಟಕದಲ್ಲಿ ೧೮೫೬ರಲ್ಲಿಯೇ ಕರ್ನಾಟಕದ ಏಕೀಕರಣ ಚಳವಳಿಗೆ ಚಾಲನೆ ನೀಡಿದವರು ಚನ್ನಬಸಪ್ಪನವರು. ಧಾರವಾಡವನ್ನು ಕೇಂದ್ರವನ್ನಾಗಿ, ಉತ್ತರ ಕನ್ನಡ, ಬೆಳಗಾವಿ, ಬಿಜಾಪುರ ಜಿಲ್ಲೆಗಳಲ್ಲಿ ಏಕೀಕರಣ ಚಳವಳಿ ಪ್ರಾರಂಭವಾಯಿತು. ೧೮೯೦ರಲ್ಲಿ ಧಾರವಾಡದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಸ್ಥಾಪನೆಯೊಂದಿಗೆ ಏಕೀಕರಣ ಚಳುವಳಿಗೆ ಸಂಘಟನಾತ್ಮಕ ಬೆಂಬಲ ದೊರಕಿತು. ಬೆನಗಲ್ ರಾಮರಾಯರು ಆಲೂರು ವೆಂಕಟರಾಯರು ಕರ್ನಾಟಕ ಏಕೀಕರಣ ಕುರಿತು ಉಪನ್ಯಾಸಗಳು ಲೇಖನಗಳ ಮೂಲಕ ಜನ ಜಾಗೃತಿ ಮೂಡಿಸುವ ಪ್ರಯತ್ನ ನಡೆಸಿದರು. ೧೮೯೮ ರಲ್ಲಿ ಲೋಕಮಾನ್ಯ ಬಾಲಗಂಗಾಧರ ತಿಲಕರು ರಾಯಲ್ ಕಮಿಷನ್ ಮುಂಬೆ ಭಾಷಾವಾರು ಪ್ರಾಂತ್ಯ ರಚನೆಯ ಅಗತ್ಯತೆಯನ್ನು ಮಂಡಿಸಿದರು.
೧೯೧೫ ರಲ್ಲಿ ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ರಚನೆಯೊಂದಿಗೆ ದಕ್ಷಿಣ ಕರ್ನಾಟಕದಲ್ಲಿಯೂ ಏಕೀಕರಣ ಚಳವಳಿಗೆ ಚಾಲನೆ ದೊರಕಿತು. ಕನ್ನಡ ಮಾತಾಡುವ ಎಲ್ಲಾ ಪ್ರಾಂತ್ಯಗಳ ಸದಸ್ಯರನ್ನು ಹೊಂದುವ ಮೂಲಕ ಅಖಂಡ ಕರ್ನಾಟಕದ ಕಲ್ಪನೆಗೆ ದಾರಿಯಾಯಿತು. ಕರ್ನಾಟಕ ಏಕೀಕರಣ ಚಳವಳಿಗೆ ಸಾಂಸ್ಕೃತಿಕ ಸ್ವರೂಪ ಬಂದಿತು. ಕನ್ನಡ ಸಾಹಿತ್ಯ ಪರಿಷತ್ತಿನ ಮೊಟ್ಟ ಮೊದಲ ಸಮ್ಮೇಳನದಲ್ಲಿಯೇ ಕರ್ನಾಟಕ ಪ್ರಾಂತ್ಯ ರಚನೆಗೆ ಬಲವಾದ ಒತ್ತಾಯ ಕಂಡುಬಂದಿತು. ಎಲ್ಲರ ಗುರಿ ಏಕೀಕರಣದತ್ತ ಹರಿಯುವಂತಾಯಿತು. ೧೯೧೭ರಲ್ಲಿ ಈ ಉದ್ದೇಶ ಸಾಧನೆಗೆ ಕರ್ನಾಟಕ ಸಭೆ ಸ್ಥಾಪನೆಯಾಯಿತು. ಕರ್ನಾಟಕ ಪ್ರಾಂತ್ಯ ರಚನೆಗೆ ಅಂದಿನ ಬ್ರಿಟಿಷ್ ಭಾರತದ ಕಾರ್ಯದರ್ಶಿ ಮಾಂಟಿಗ್ಯೂ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಕರ್ನಾಟಕ ವಿದ್ಯಾವರ್ಧಕ ಸಂಘ (೧೮೯೦) :
ಕಳೆದ ೧೧೯ ವರ್ಷಗಳಿಂದ ಕನ್ನಡ-ಕನ್ನಡಿಗ-ಕರ್ನಾಟಕ ನಾಡಿನ ಸರ್ವತೋಮುಖ ಉನ್ನತಿಗಾಗಿ ಶ್ರಮಿಸುತ್ತಾ ಬಂದಿರುವ ಇಂದಿಗೂ ಕ್ರಿಯಾಶೀಲವಾಗಿರುವ ಸಂಸ್ಥೆ ಕರ್ನಾಟಕ ವಿದ್ಯಾವರ್ಧಕ ಸಂಘ ಇದು ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳನ್ನು ನಿರಂತರವಾಗಿ ನಡೆಸುತ್ತಾ ಬಂದಿದೆ. ಕವಿ-ಸಾಹಿತಿ, ಕಲಾವಿದರನ್ನು ಬೆಳೆಸುತ್ತಾ ಬಂದಿದೆ. ನಾಡಿನಾದ್ಯಂತ, ಹೊರನಾಡುಗಳಲ್ಲಿಯೂ ಕನ್ನಡ ಡಿಂಡಿಮವನ್ನು ವಿಸ್ತಾರಗೊಳಿಸಿರುವ ಸಂಘ, ಗ್ರಂಥ ಪ್ರಕಟನೆಯಲ್ಲಿಯೂ ತೊಡಗಿದೆ. ಸುಮಾರು ೧೦೦ ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದೆ. ಧಾರವಾಡದ ಕೇಂದ್ರ ಸ್ಥಳದಲ್ಲಿರುವ ಸಂಘದ ಸಭಾಭವನಗಳು, ಕಛೇರಿ, ಗ್ರಂಥಾಲಯ ಎಲ್ಲರ ಗಮನ ಸೆಳೆದಿದೆ. ರಾಜ್ಯ ಸರ್ಕಾರದ ಅನುದಾನ ಹೊಂದಿರುವ, ತನ್ನದೆ ಆದ ಸ್ವಂತ ಭವನ, ವಾಣಿಜ್ಯ ಸಂಕೀರ್ಣ ಹೊಂದಿರುವ ಸಂಸ್ಥೆಯಾಗಿದೆ. ಕರ್ನಾಟಕ ವಿದ್ಯಾವರ್ಧಕ ಸಂಘವು ರಾಜ್ಯದಲ್ಲಿ ಮಾತ್ರವಲ್ಲದೆ ರಾಷ್ಟ್ರದಲ್ಲೇ ಘನತೆವೆತ್ತ ಸಂಸ್ಥೆಯಾಗಿದೆ. ಅತ್ಯಂತ ಹಿರಿದಾದ ಈ ಸಾಹಿತ್ಯಕ ಸಂಸ್ಥೆ, ಸ್ವಾತಂತ್ರ್ಯ ಚಳವಳಿ, ಕರ್ನಾಟಕ ಏಕೀಕರಣ ಚಳವಳಿ, ಗೋಕಾಕ್ ಚಳವಳಿ, ಸಂದರ್ಭಗಳಲ್ಲಿ ನಿರ್ಣಾಯಕ ಪಾತ್ರವಹಿಸಿದೆ. ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆಯಾಗಲು, ಧಾರವಾಡ ಆಕಾಶವಾಣಿ ನಿಲಯ, ಕರ್ನಾಟಕ ವಿಶ್ವವಿದ್ಯಾನಿಲಯ ಸ್ಥಾಪನೆಗೊಳ್ಳಲು ಪ್ರೇರಣೆಯಾಗಿ ದುಡಿದಿದೆ. ನಾಡಿನ ಹೊರನಾಡಿನ ಸಂಘ ಸಂಸ್ಥೆಗಳಿಗೆ ಮಾದರಿಯೆನಿಸಿದೆ, ಸ್ಪೂರ್ತಿ ನೀಡಿದೆ. ನಾಡಿನ ಹೊರನಾಡಿನ ಕನ್ನಡ ಸಂಸ್ಥೆಗಳಿರುವಲ್ಲ್ಲಿಗೇ ಹೋಗಿ ಸಂಯುಕ್ತ ಆಶ್ರ್ರಯದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಕನ್ನಡ ಕಟ್ಟುವ ಕೆಲಸದಲ್ಲಿ ಮುಂಚೂಣಿಯಲ್ಲಿದೆ.
ಶ್ರೀ ರಾ.ಲ.ದೇಶಪಾಂಡೆ ಅಧ್ಯಕ್ಷರಾಗಿ ಆರಂಭವಾದ ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಸ್ತುತ ಅಧ್ಯಕ್ಷರಾಗಿ ನಾಲ್ಕು ದಶಕಗಳಿಂದ ನಾಡೋಜ ಪಾಟೀಲ ಪುಟ್ಟಪ್ಪನವರು, ಉಪಾಧ್ಯಕ್ಷರಾಗಿ ಶ್ರೀ. ಎಂ.ಎಂ.ಹೂಲಿ ವಕೀಲರು ಹುಬ್ಬಳ್ಳಿ, ಗೌರವ ಕಾರ್ಯದರ್ಶಿಯಾಗಿ ಪ್ರೊ. ಬಿ.ವಿ. ಗುಂಜೆಟ್ಟಿ ಅವರು ಸಂಘವನ್ನು ಮುನ್ನಡೆಸುತ್ತಿದ್ದಾರೆ.
೧೯೧೮ ರಲ್ಲಿ ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಮೊದಲ ಕರ್ನಾಟಕ ಸಂಘದ ಸ್ಥಾಪನೆಯಾಯಿತು. ನಂತರ ಮೈಸೂರು ಮಹಾರಾಜಾ ಕಾಲೇಜಿನಲ್ಲಿ ಕರ್ನಾಟಕ ಸಂಘ ಸ್ಥಾಪನೆಯಯಿತು. ಇದರಿಂದಾಗಿ ನಾಡು ನುಡಿಗಳ ಸೇವೆಗೆ ಚಾಲನೆ ದೊರೆಯಿತು. ನಂತರದಲ್ಲಿ ಒಂದು ಚಳವಳಿಯೋಪಾದಿಯಲ್ಲಿ ಹಳೆ ಮೈಸೂರಿನ ಎಲ್ಲ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಕರ್ನಾಟಕ ಸಂಘಗಳು ಸ್ಥಾಪನೆಯಾದವು. ಕನ್ನಡ ಸಾಹಿತ್ಯ ಪರಿಷತ್ತು ಅಂದಿನ ನಾಲ್ವಡಿ ಕೃಷ್ಣರಾಜ ಒಡೆಯರಿಂದ ಸ್ಥಾಪನೆಯಾಗಿ ರಾಜ ಪೋಷಿತವಾಗಿದ್ದರಿಂದಾಗಿ, ಜನ ಸಾಮಾನ್ಯರು ಮತ್ತು ವಿದ್ಯಾರ್ಥಿಗಳು, ಸಾರ್ವಜನಿಕರ ದೇಣಿಗೆಯಿಂದ ಮತ್ತು ತಮ್ಮದೇ ಆದ ಸಂಪನ್ಮೂಲಗಳಿಂದ ಕನ್ನಡ ಭಾಷಾ ಚಳವಳಿ ಮತ್ತು ಕರ್ನಟಕ ಏಕೀಕರಣ ಚಳವಳಿಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಲು ಕರ್ನಾಟಕ ಸಂಘಗಳು ವೇದಿಕೆಗಳಾದವು. ಅಂದಿನ ಖ್ಯಾತ ಸಾಹಿತಿಗಳ, ಭಾಷಾ ವಿದ್ವಾಂಸರ ಬೆಂಬಲವೂ ಕರ್ನಾಟಕ ಸಂಘಗಳಿಗೆ ದೊರಕಿತು.
ಭಾರತದ ಸ್ವಾತಂತ್ರ್ಯ ಚಳವಳಿಯ ಜೊತೆಗೆ ಕರ್ನಾಟಕ ಏಕೀಕರಣ ಚಳವಳಿಯೂ ೧೯೨೦ರಲ್ಲಿ ನಾಗಪುರ ಕಾಂಗ್ರೆಸ್ ಅಧಿವೇಶನದ ಮುಖ್ಯ ವಿಷಯಗಳಾದವು. ಕಡಪ ರಾಘವೇಂದ್ರರಾಯರ ನೇತ್ರತ್ವದಲ್ಲಿ ಕನ್ನಡನಾಡಿನ ಎಲ್ಲ ಪ್ರಾಂತ್ಯಗಳಿಂದ ೮೦ ಪ್ರತಿನಿಧಿಗಳು ಭಾಗವಹಿಸಿದ್ದು ವಿಶೇಷ. ೧೯೨೪ ರಲ್ಲಿ ಮಹಾತ್ಮಾ ಗಾಂಧಿಯವರ ಅಧ್ಯಕ್ಷತೆಯಲ್ಲಿ ನಡೆದ ಬೆಳಗಾವಿ ಕಾಂಗ್ರೆಸ್ ಅಧಿವೇಶದಲ್ಲಿ ಚರ್ಚಿತವಾಗಿ ಕರ್ನಾಟಕ ಏಕೀಕರಣ ಸಭಾ ಅಸ್ತಿತ್ವಕ್ಕೆ ಬಂದಿತು. ಕರ್ನಾಟಕ ಪ್ರಾಂತೀಯ ಕಾಂಗ್ರೆಸ್ ಕಮಿಟಿ ಸಹ ಏಕೀಕರಣ ಚಳವಳಿ ನೇತೃತ್ವ ವಹಿಸಿತು. ನಂತರದಲ್ಲಿ ಚಳವಳಿ ತೀವ್ರರೂಪ ಪಡೆಯಿತು. ೧೯೩೬ ರಿಂದ ೪೦ ರವರೆಗೆ ಅಖಿಲ ಕರ್ನಾಟಕ ಏಕೀಕರಣ ಸಮ್ಮೇಳನಗಳನ್ನು ಬೆಳಗಾವಿ, ಧಾರವಾಡ ಮತ್ತು ಸೊಲ್ಲಾಪುರಗಳಲ್ಲಿ ನೆಡೆಸಿ ಜನಜಾಗೃತಿ ಮೂಡಿಸುವ ಪ್ರಯತ್ನ ನಡೆಯಿತು. ೧೯೩೬ ರಲ್ಲಿ ಸಿಂಧ್ ಮತ್ತು ಒರಿಸ್ಸಾ ಪ್ರಾಂತ್ಯ ರಚನೆಯೊಂದಿಗೆ, ದಕ್ಷಿಣದಲ್ಲಿ ಆಂಧ್ರ, ಕೇರಳ, ಕರ್ನಾಟಕಗಳಲ್ಲಿ ಭಾಷಾವಾರು ಪ್ರಾಂತ್ಯ ಚಳವಳಿಗೆ ಹೆಚ್ಚಿನ ಬೆಂಬಲ ದೊರಕಿತು. ಮುಂಬಯಿ ಮತ್ತು ಮದ್ರಾಸ್ ಶಾಸನ ಸಭೆಗಳಲ್ಲಿ ಕಾಂಗ್ರೆಸ್ ಬಹುಮತ ಪಡೆಯಿತು. ಈ ಎರಡೂ ಕಡೆ ಭಾಷಾವಾರು ಪ್ರಾಂತ್ಯ ರಚನೆಗೆ ಗೊತ್ತುವಳಿಯನ್ನು ಕಾಂಗ್ರೆಸ್ ಅಂಗೀಕರಿಸಿತು.
ಕಾಂಗ್ರೆಸ್‌ನ ಈ ಕರೆಗೆ ವಿವಿಧ ಭಾಗಗಳಲ್ಲಿ ಹಂಚಿಹೋಗಿದ್ದ ಕನ್ನಡಿಗರು ತೀವ್ರವಾಗಿ ಸ್ಪಂದಿಸಿದರು. ರಾಜಕೀಯವಾಗಿ ಮಾತ್ರವಲ್ಲದೆ ಧಾರ್ಮಿಕ ಮುಖಂಡರು ಸಾಹಿತಿಗಳು, ಕಲಾವಿದರು ಕರ್ನಾಟಕ ಏಕೀಕರಣದ ಕನಸು ಕಂಡರು. ಸಾಮಾನ್ಯರು, ಕೃಷಿಕರು, ಕಾರ್ಮಿಕರು ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯಿಸಿದರು. ಕವಿಗಳು ಕವನಗಳ ಮೂಲಕ ಜನತೆಯಲ್ಲಿ ಸ್ಪೂರ್ತಿ ತುಂಬಿದರು. ಡಾ.ಡಿ.ಎಸ್. ಕರ್ಕಿ ಅವರ "ಹಚ್ಚೇವು ಕನ್ನಡದ ದೀಪ ಸಿರಿನುಡಿಯ ದೀಪ" ಜನಪ್ರಿಯವಾಯಿತು. ಹುಯಿಲುಗೋಳ ನಾರಾಯಣರಾಯರ "ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು", ಗೀತೆಯಂತೂ ಪ್ರತಿಯೊಬ್ಬ ಕನ್ನಡಿಗರ ಮಂತ್ರವಾಯಿತು. ರಾಷ್ಟ್ರಕವಿ ಕುವೆಂಪು ಅವರ "ಬಾರಿಸು ಕನ್ನಡ ಡಿಂಡಿಮವ" ಕವನ ಕನ್ನಡ ಭಾಷಿಕರ ಸ್ಪೂರ್ತಿಯ ಚಿಲುಮೆಯಾಯಿತು. ನೂರಾರು ಕವಿಗಳು, ಸಾಹಿತಿಗಳು ಕನ್ನಡ ಏಕೀಕರಣದ ಕನಸನ್ನು ನನಸಾಗಿಸುವ ಕವನಗಳನ್ನು ರಚಿಸಿ ವೇದಿಕೆಗಳಲ್ಲಿ ವಾಚಿಸಿದರು.
ಈ ಎಲ್ಲ ಕಾರ್ಯಗಳಿಗೆ ವೇದಿಕೆಯಾಗಿದ್ದು ೧೮೯೦ ರಲ್ಲಿ ಆರಂಭವಾದ ಕರ್ನಾಟಕ ವಿದ್ಯಾವರ್ಧಕ ಸಂಘ ೧೯೧೪-೧೫ ರಲ್ಲಿ ಆರಂಭವಾದ ಕನ್ನಡ ಸಾಹಿತ್ಯ ಪರಿಷತ್ತು. ೧೯೧೬ ರಲ್ಲಿ ಕನಸಿನ "ಕರ್ನಾಟಕ" ಹೆಸರನ್ನು ಹೊತ್ತು ಕನ್ನಡ ನಾಡಿನ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ, ತಾಲ್ಲೂಕ ಕೇಂದ್ರಗಳಲ್ಲಿ, ಗ್ರಾಮ ಮಟ್ಟದಲ್ಲಿ ಆರಂಭವಾದ ಕರ್ನಾಟಕ ಸಂಘಗಳಲ್ಲಿ ೧೯೧೮ ರಲ್ಲಿ ಪ್ರಾರಂಭವಾದ ಬೆಂಗಳೂರು ಸೆಂಟ್ರಲ್ ಕಾಲೇಜು ಕರ್ನಾಟಕ ಸಂಘವೇ ದಾಖಲೆಗಳ ಪ್ರಕಾರ ಮೊದಲನೆಯದು ಎಂದು ಗುರುತಿಸಲಾಗಿದೆ. ಇದರಿಂದ ಸ್ಪೂರ್ತಿಗೊಂಡ ಅನೇಕ ಕರ್ನಾಟಕ ಸಂಘಗಳು ನಾಡಿನಾದ್ಯಂತ ಜನತೆಯನ್ನು ಏಕೀಕರಣಕ್ಕೆ ಮಾನಸಿಕವಾಗಿ ಸಿದ್ಧಗೊಳಿಸುವುದರಲ್ಲಿ ಮಹತ್ವದ ಪಾತ್ರವಹಿಸಿದವು. ಸ್ವಾತಂತ್ರ್ಯಾಂದೋಲನದ ಜೊತೆ ಜೊತೆಗೆ ಕರ್ನಾಟಕ ಏಕೀಕರಣಕ್ಕೂ ರಾಜಕೀಯವಾಗಿ ಪ್ರಾಮುಖ್ಯತೆ ದೊರೆಯಿತು.
ಕನ್ನಡ ಸಾಹಿತ್ಯ ಪರಿಷತ್ತು :
ಮೈಸೂರು ಮಹಾರಾಜರ ದೂರದೃಷ್ಟಿಯ ಫಲವಾಗಿ ಸ್ಥಾಪಿತವಾದ ಕರ್ನಾಟಕ ಸಾಹಿತ್ಯ ಪರಿಷತ್ತು ದಿನಾಂಕ : ೦೩-೦೫-೧೯೧೫ ರಂದು ಬೆಂಗಳೂರಲ್ಲಿ ಆರಂಭವಾಯಿತು. "ಕಂಠೀರವ ನರಸಿಂಹರಾಜ ಒಡೆಯರ್ ಸ್ಥಾಪಕ ಅಧ್ಯಕ್ಷರಾಗಿದ್ದರು. ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ರಾಜಮಂತ್ರ ಪ್ರವೀಣ ಶ್ರೀ ಹೆಚ್.ವಿ. ನಂಜುಂಡಯ್ಯನವರನ್ನು ಆರಿಸಲಾಯಿತು. ಆರಂಭದಲ್ಲಿ ರಾಜರು ಮಂತ್ರಿಗಳು ಅಧಿಕಾರಿಗಳು ಸಮಾಜದ ಮೇಲ್ವರ್ಗದವರು ಮಾತ್ರ ಪದಾಧಿಕಾರಿಗಳೂ, ಸದಸ್ಯರು ಆಗಿದ್ದರಿಂದ ಜನ ಸಾಮಾನ್ಯರು ದೂರವೇ ಉಳಿದಿದ್ದರು. ಕಾಲಧರ್ಮಕ್ಕನುಗುಣವಾಗಿ ಪ್ರಸಿದ್ಧ ವಿದ್ವಾಂಸರು, ಸಾಹಿತಿಗಳು, ಸಂಶೋಧಕರು ಸದಸ್ಯರಾದರು. ಮೈಸೂರು ರಾಜ್ಯದ ಆರ್ಥಿಕ ಸಾಂಸ್ಕೃತಿಕ ಅಭಿವೃದ್ಧಿಗಾಗಿ ಸ್ಥಾಪಿತವಾದ ಸಂಸ್ಥೆ ಕ್ರಮೇಣ ಕನ್ನಡ ಭಾಷೆ ಮತ್ತು ಕನ್ನಡ ಸಾಹಿತ್ಯದ ಸರ್ವತೋಮುಖ ಬೆಳವಣಿಗೆ, ಕನ್ನಡದ ಸ್ಥಾನಮಾನ ಹಾಗೂ ಕನ್ನಡ ಏಕೀಕರಣಕ್ಕಾಗಿ ಜನಜಾಗೃತಿ ಮೂಡಿಸಿ, ಮಹತ್ಕಾರ್ಯಗಳನ್ನು ಸಾಧಿಸುವ ಉದ್ದೇಶಹೊಂದಿತ್ತು. ಹಳೆ ಮೈಸೂರು ಪ್ರಾಂತ್ಯದಲ್ಲಿ ಕನ್ನಡ ವಾತಾವರಣ ನಿರ್ಮಿಸುವ ಸಲುವಾಗಿ ಕನ್ನಡ ಶಾಲೆಗಳನ್ನು ಪ್ರಾರಂಭಿಸಲು ಆಳುವ ಸರ್ಕಾರದ ಮೇಲೆ ಒತ್ತಡ ತರಲಾಯಿತು. ಶಾಲೆಗಳ ಸ್ಥಾಪನೆಯೊಂದಿಗೆ ಕನ್ನಡ ಭಾಷೆಯ ಹುಟ್ಟು ಪ್ರಾಚೀನತೆ ಕುರಿತು ಜಿಜ್ಞಾಸೆ, ಚರ್ಚೆಗಳು ಆರಂಭವಾದವು ವಿಚಾರ ಸಂಕಿರಣಗಳು ನಡೆದವು. ಪ್ರಾಚೀನ ಗ್ರಂಥಗಳ ಪರಿಷ್ಕರಣ, ಅನುವಾದ, ಟೀಕುಗಳು, ಪ್ರಕಟವಾದವು. ನಾಡುನುಡಿಯ ಕುರಿತು ಜನ ಸಾಮಾನ್ಯರೂ ಅಭಿಮಾನ ತಾಳುವಂತಹ ಪರಿಸ್ಥಿತಿ ನಿರ್ಮಾಣವಾಯು. ಕನ್ನಡ ಮಾತನಾಡುವ ಅರ್ಧಕ್ಕಿಂತ ಹೆಚ್ಚು ಕನ್ನಡಿಗರು ಮೈಸೂರು ಸಂಸ್ಥಾನದಿಂದ ಹೊರಗಿದ್ದಾರೆಂಬ ತಿಳಿವಳಿಕೆ ಮೂಡಿಬಂದಿತು. ವಿದ್ವಾಂಸರ ನೆಲೆಯಲ್ಲಿ, ಸಾಹಿತಿಗಳ ಮನದಲ್ಲಿಯೂ ಏಕೀಕರಣದತ್ತ ಒಲವು ಆರಂಭವಾಯಿತು. ಅನ್ಯಭಾಷೆಗಳಲ್ಲಿ ಉಂಟಾಗಿರುವ ಎಚ್ಚರವನ್ನು ಅರಿಯುವಂತಾಯಿತು. ಸಂಸ್ಕೃತದ ಹಲವಾರು ಗ್ರಂಥಗಳನ್ನು ಕನ್ನಡಕ್ಕೆ ತರುವ ಪ್ರಯತ್ನಕ್ಕೆ ರಾಜಕೀಯವಾಗಿ, ಆರ್ಥಿಕವಾಗಿ ಬೆಂಬಲ ದೊರೆಯಿತು. ಇಂಗ್ಲಿಷ್ ಭಾಷೆಯಲ್ಲಿರುವ ಅಪಾರ ಸಾಹಿತ್ಯ ರಾಶಿ ಕನ್ನಡಕ್ಕೆ ಭಾಷಾಂತರಗೊಂಡಿತು. ಶೇಕ್ಸ್‌ಪಿಯರ್‌ನ ನಾಟಕಗಳನ್ನು, ಆಂಗ್ಲ ಪ್ರಸಿದ್ಧ ಕವಿಗಳ ಗೀತೆಗಳನ್ನು ಕನ್ನಡಕ್ಕೆ ತಂದ ಕೀರ್ತಿ ೧೯೨೦-೩೦ ರ ದಶಕದ ನಮ್ಮ ಕವಿಗಳಿಗೆ ಸಲ್ಲುತ್ತದೆ. ಈ ಎಲ್ಲ ಘಟನಾವಳಿಗಳ ಹಿಂದೆ ಕನ್ನಡ ಭಾಷಿಕರನ್ನು ಒಂದೆಡೆ ತರುವ, ರಾಜಕೀಯವಾಗಿ ಕರ್ನಾಟಕ ಏಕೀಕರಣ ಸಾಧಿಸುವ ಉದ್ದೇಶವಿದ್ದುದು ಸ್ಟಷ್ಟ. ಆರಂಭದ ಕಾಲದಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್ತು ಜನಸಾಮಾನ್ಯರ ಬಳಿಗೆ ಬಾರದೆ ರಾಜರ. ಅಧಿಕಾರಿಗಳ, ವಿದ್ವಾಂಸರ ಸೊತ್ತಾಗಿದ್ದರಿಂದಾಗಿ ಜನ ಸಾಮಾನ್ಯರಿಂದ ಅಲ್ಲಲ್ಲಿ ಸ್ಥಳೀಯವಾಗಿ "ಕನ್ನಡ ಸಂಘಗಳು" "ಕರ್ನಾಟಕ ಸಂಘಗಳು" ತಮ್ಮದೇ ಆದ ಮಿತಿಯಲ್ಲಿ ಸ್ಥಳೀಯರ ನೆರವಿನಿಂದ ಕನ್ನಡ ಭಾಷೆ ಮತ್ತು ಕರ್ನಾಟಕ ಏಕೀಕರಣಕ್ಕಾಗಿ ಕರ್ನಾಟಕ ಸಂಘಗಳನ್ನು ಸ್ಥಾಪಿಸಿ ತನ್ಮೂಲಕ ಜನ ಸಾಮಾನ್ಯರಲ್ಲಿ ಕನ್ನಡ ಪ್ರೀತಿಯನ್ನು ಉದ್ಧೀಪನಗೊಳಿಸುವ ಪ್ರಾಮಾಣಿಕ ಪ್ರಯತ್ನದಲ್ಲಿ ತೊಡಗಿದ್ದ ಉಲ್ಲೇಖಗಳು ಕಂಡುಬರುತ್ತವೆ.
ಬಳ್ಳಾರಿ ವಿದ್ಯಾವಧಕ ಸಂಘ :
೧೯೦೯ ರಲ್ಲಿ ನಡೆದ ೫ನೇ ಅಖಿಲ ಭಾರತ ವೀರಶೈವ ಸಮ್ಮೇಳನದಲ್ಲಿ ತೀರ್ಮಾನವಾದಂತೆ ಪೂಜ್ಯ ಹಾನಗಲ್ ಕುಮಾರ ಸ್ವಾಮಿಗಳ ಮಾರ್ಗದರ್ಶನದಲ್ಲಿ ಬಳ್ಳಾರಿಯಲ್ಲಿ "ಮದರಾಸು ವೀರಶೈವ ವಿಧ್ಯಾವರ್ದಕ ಸಂಘ" ೭-೩-೧೯೧೮ ರಲ್ಲಿ ಸ್ಥಾಪಿತವಾಯಿತು. ಅಧ್ಯಕ್ಷರಾಗಿ ಶ್ರೀ ಕೌತಳಿ ವೀರಭದ್ರಪ್ಪ ಆಯ್ಕೆ ಆದರು. ೧೯೩೩ ರಲ್ಲಿ ಸಂಘದ ಹೆಸರನ್ನು "ವೀರಶೈವ ವಿದ್ಯಾವಧಕ ಸಂಘ" ವೆಂದು ಮರು ನಾಮಕರಣ ಮಾಡಲಾಯಿತು. ೧೯೨೪ ರಲ್ಲಿ ಸಂಘವು ಮೊದಲ ಪ್ರಾಥಮಿಕ ಶಾಲೆ ಪ್ರಾರಂಭಿಸಿತು. ಕರ್ನಾಟಕ ಏಕೀಕರಣ ಚಳವಳಿಗೆ ಚಾಲನೆ ನೀಡಿ ಸಭೆಗಳನ್ನು ನಡೆಸಿತು. ೧೯೩೫ ರಲ್ಲಿ ವೀರಶೈವ ಕಾಲೇಜು ಆರಂಭವಾಯಿತು. ಪ್ರೌಢ ಶಾಲೆಯನ್ನೂ ಆರಂಭಿಸಲಾಯಿತು. ೧೯೨೮ ರಲ್ಲಿ ಕಡಪ ರಾಘವೇಂದ್ರರಾವ್ ಬಳ್ಳಾರಿ ಜಿಲ್ಲೆಯನ್ನು ಕರ್ನಾಟಕಕ್ಕೆ ಸೇರಿಸುವ ಚಳವಳಿಗೆ ನಾಂದಿ ಹಾಡಿದರು. ಅನಂತರ ಏಕೀಕರಣ ಚಳವಳಿ ಬಳ್ಳಾರಿ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ತೀವ್ರಗೊಂಡಿತು. ವೈ. ನಾಗೇಶ ಶಾಸ್ತ್ರಿ, ಅಳವಂಡಿ ಶಿವಮೂರ್ತಿ, ಚಂದ್ರಶೇಖರ ಶಾಸ್ತ್ರಿ, ಅಲ್ಲಂ ಸುಮಂಗಲಮ್ಮ, ಉತ್ತಂಗಿ ಚನ್ನಪ್ಪ, ಕೋ.ಚೆ. ಜಂತಕಲ್ ಗಾದಿಲಿಂಗಪ್ಪ ಮುಂತಾದವರು ಏಕೀಕರಣ ಚಳವಳಿಯ ಮೂಂಚೂಣಿ ನಾಯಕರು, "ಬಳ್ಳಾರಿ ಕರ್ನಾಟಕದ ಗಡಿನಾಡಲ್ಲ, ನಡುನಾಡು, ಅಚ್ಚ ಕನ್ನಡನಾಡು ಬಳ್ಳಾರಿ ಜಿಲ್ಲೆಯ ತರುಣರೇ ಕನ್ನಡ ಸಂಸ್ಕೃತಿಯನ್ನು ಕಾಪಾಡಲು ನಡುಕಟ್ಟೆ ನಿಲ್ಲಿರಿ" ಎಂಬ ಸಿಂಹಗರ್ಜನೆಯನ್ನು ಮುದುವೀಡು ಕೃಷ್ಣರಾಯರು ಮೊಳಗಿಸಿದ್ದು, ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘದಲ್ಲೇ ಎನ್ನುವುದು ವಿಶೇಷ. ೧೪-೧-೧೯೩೫ ರಲ್ಲಿ ವೈ. ನಾಗೇಶ ಶಾಸ್ತ್ರಿಗಳ ನೇತೃತ್ವದಲ್ಲಿ ಬಳ್ಳಾರಿಯಲ್ಲಿ "ಕರ್ನಾಟಕ ಸಂಘ" ಪ್ರಾರಂಭವಾಯಿತು. ಅಧ್ಯಕ್ಷರಾಗಿ ವೈ ಮಹಾಬಲೇಶ್ವರಪ್ಪ, ಕಾರ್ಯದರ್ಶಿಯಾಗಿ ಸದಾಶಿವಯ್ಯನವರು ಆಯ್ಕೆ ಆದರು. ಏಕೀಕರಣ ಚಳವಳಿಗೆ ಆಶ್ರಯ ನೀಡಿದರು. ವೀರಶೈವ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಬಳ್ಳಾರಿ ಜಿಲ್ಲಾ ಕನ್ನಡ ಕಲಾ ಪರಿಷತ್ ಸ್ಥಾಪನೆಯೊಂದಿಗೆ ಚಳುವಳಿ ತೀವ್ರಗೊಂಡಿತು. ಬಳ್ಳಾರಿ ಜಿಲ್ಲಾದ್ಯಾಂತ ವಿ.ವಿ. ಸಂಘದ ಶಾಲೆಗಳಲ್ಲಿ ಕನ್ನಡದ ಕಾರ್ಯಕ್ರಮಗಳನ್ನು ನಡೆಸಿ ಜನ ಜಾಗೃತಿ ಮೂಡಿಸಿದರು. ಏಕೀಕರಣ ಚಳವಳಿಯ ಫಲವಾಗಿ ೧೯೫೩ ರಲಿಯ್ಲೇ ಕರ್ನಾಟಕಕ್ಕೆ ಸೇರ್ಪಡೆಗೊಂಡ ಮೊದಲ ಜಿಲ್ಲೆ ಬಳ್ಳಾರಿ ಎಂಬ ಕೀರ್ತಿಗೆ ಪಾತ್ರವಾಯಿತು. ಕರ್ನಾಟಕ ಏಕೀಕರಣ ಚಳವಳಿಯಲ್ಲಿ ವೀರಶೈವ ವಿದ್ಯಾವರ್ಧಕ ಸಂಘದ ಪಾತ್ರ ಮಹತ್ವದ್ದು ಎನ್ನಬಹುದು.
ರಾಯಚೂರು ಕರ್ನಾಟಕ ಸಂಘ :
೮೧ ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ರಾಯಚೂರಿನ ಕರ್ನಾಟಕ ಸಂಘ ಸಾಹಿತ್ಯಕ, ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವಾಗಿ ಜನ ಜೀವನದ ಅವಿಭಾಜ್ಯ ಅಂಗವಾಗಿ ನಾಡು-ನುಡಿಯ ಸೇವೆಯಲ್ಲಿ ತೊಡಗಿದೆ. ರಾಷ್ಟ್ರಿಯ ಜಾಗೃತಿ ಮೂಡಿಸುತ್ತಾ ಸ್ವಾತಂತ್ರ್ಯ ಚಳವಳಿ ಮತ್ತು ಕರ್ನಾಟಕ ಏಕೀಕರಣ ಚಳವಳಿಗಳಲ್ಲಿ ಮಹತ್ತರವಾದ ಸೇವೆ ಸಲ್ಲಿಸಿದೆ. ೧೯೨೮ ರ ರಾಮನವಮಿಯಂದು ಶ್ರೀ ವೀರಣ್ಣ ಮಾಸ್ತರು, ಜಗನ್ನಾಥರಾವ್ ಫಡ್ನಾವೀಸ್, ಡಿ. ಮಾಣಿಕರಾವ್, ರಾ.ಗು. ಜೋಶಿ, ಮುಂತಾದ ತರುಣರು ಸೇರಿ ಕರ್ನಾಟಕ ತರುಣ ಸಂಘವನ್ನು ಸ್ಥಾಪಿಸಿದರು. ಮಾಧ್ವರಾವ್ ಮೊದಲ ಅಧ್ಯಕ್ಷರಾಗಿ, ವೀರಣ್ಣ ಮಾಸ್ತರ ಕಾರ್ಯದರ್ಶಿಗಳಾಗಿ ಆಯ್ಕೆ ಆದರು. ಮುಂದೆ ತರುಣ ಸಂಘವನ್ನು ಕರ್ನಾಟಕ ಸಂಘ (ರಿ) ಎಂದು ಹೆಸರಿಸಲಾಯಿತು. ಸಾಹಿತ್ಯ, ಕವಿಗೋಷ್ಠಿ ನಾಟಕಗಳನ್ನು ಏರ್ಪಡಿಸಿ, ಉರ್ದುಮಯವಾಗಿದ್ದ ರಾಯಚೂರಿನಲ್ಲಿ ಕನ್ನಡದ ಕಂಪನ್ನು ಹರಡುವ ಕಾರ್ಯದಲ್ಲಿ ತೊಡಗಿತು. ಆರಂಭದಲ್ಲಿ ಸಂಘ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ೧೯೩೪ ರಲ್ಲಿ ಪಂಜೆಮಂಗೇಶರಾಯರ ಅಧ್ಯಕ್ಷತೆಯಲ್ಲಿ ನಡೆದ ೨೦ ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ರಾಯಚೂರಿನಲ್ಲಿ ಯಶಸ್ವಿಯಾಗಿ ನಡೆಸಿದ ಕೀರ್ತಿ ಕರ್ನಾಟಕದ ಸಂಘಕ್ಕೆ ಸಲ್ಲುತ್ತದೆ. ೧೯೫೫ ರಲ್ಲಿ ಶ್ರೀ ಆದ್ಯರಂಗಾಚಾರ್ಯರ ಅಧ್ಯಕ್ಷತೆಯಲ್ಲಿ ನಡೆದ ೩೮ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಂಘದ ಹಿಂದಿನ ವಿಶಾಲವಾದ ಬಯಲಿನಲ್ಲಿದ್ದ ಗುಬ್ಬಿ ವೀರಣ್ಣನವರ ನಾಟಕ ಮಂದಿರದಲ್ಲಿಯೇ ನಡೆಸಿತು. ಹೈದ್ರಾಬಾದ್ ಸಂಸ್ಥಾನದ ಮಂತ್ರಿಗಳಾಗಿದ್ದ ಸರ್‌ಮಿರ್ಜಾ ಇಸ್ಮಾಯಿಲ್ ಅವರು ೧೯೪೬ ರಲ್ಲಿ ಸಂಘದ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿದರು. ೧೯೫೩ರ ಹೊತ್ತಿಗೆ ರಾಯಚೂರು ಕರ್ನಾಟಕ ಸಂಘದ ಭವನ ಸಿದ್ಧವಾಯಿತು. ಮುದುವೀಡು ಕೃಷ್ಣರಾಯರು, ಗರೂಡ ಸದಾಶಿವರಾಯರು, ಆಲೂರು ವೆಂಕಟರಾಯರು, ಬಿ.ಎಂ. ಶ್ರೀ, ಡಿ.ವಿ. ಗುಂಡಪ್ಪನವರು, ದ.ರಾ. ಬೇಂದ್ರೆ, ಜಿ.ಪಿ. ರಾಜರತ್ನಂ ಮುಂತಾದ ಖ್ಯಾತಸಾಹಿತಿಗಳ, ವಿದ್ವಾಂಸರ ಉಪನ್ಯಾಸಗಳನ್ನು ಏರ್ಪಡಿಸಿ, ಕನ್ನಡದ ಕಹಳೆಯನ್ನು ಮೊಳಗಿಸಲಾಯಿತು. ತಮ್ಮ ಸರಳ-ಸಜ್ಜನಿಕೆಗೆಯಿಂದ ಪ್ರತಿಭೆಯಿಂದ ಜನಮನ ಗೆದ್ದ ಬಿ.ಎಂ. ಶ್ರೀಕಂಠಯ್ಯನವರು ಕನ್ನಡನಾಡಿನಾದ್ಯಂತ, ಹೊರನಾಡುಗಳಲ್ಲಿಯೂ ಸಂಚರಿಸಿ ಕರ್ನಾಟಕ ಏಕೀಕರಣದ ರೂವಾರಿ ಎನಿಸಿದ್ದಾರೆ. ಅಲ್ಲಲ್ಲಿ ಕರ್ನಾಟಕ ಸಂಘಗಳನ್ನು ಸ್ಥಾಪಿಸಿ ಹಿಂದೆ ಇದ್ದ ಕನ್ನಡ ಸಂಸ್ಥೆಗಳಿಗೆ ಪುನರ್‌ಚೇತನ ನೀಡಿ, ಕನ್ನಡ ಸಾಹಿತ್ಯ ಪರಿಷತ್‌ನ ಅಂಗಸಂಸ್ಥೆಗಳನ್ನಾಗಿ ಮಾಡಿಕೊಂಡು ಕನ್ನಡ ಪ್ರಜ್ಞೆಯನ್ನು ಮೂಡಿಸಿದರು. ತನ್ಮೂಲಕ ಕರ್ನಾಟಕ ಏಕೀಕರಣಕ್ಕೆ ಜನಮಾನಸವನ್ನು ಅಣಿಗೊಳಿಸಿದರು. ಇಂದಿಗೂ ಕರ್ನಾಟಕ ಸಂಘ ರಾಯಚೂರು ನಗರದ, ಜಿಲ್ಲೆಯ ಹೆಮ್ಮೆಯ ಸಾಂಸ್ಕೃತಿಕ ಕೇಂದ್ರವಾಗಿದೆ.
ರಾಯಚೂರು ಕರ್ನಾಟಕ ಸಂಘ ಏಕೀಕರಣ ಚಳುವಳಿ ಜೊತೆಗೆ ಹೈದರಾಬಾದ್ ವಿಮುಕ್ತಿ ಚಳವಳಿಕಾರರಿಗೂ ಆಶ್ರಯ ನೀಡಿದೆ. ಸಾಹಿತ್ಯದ ಜೊತೆಗೆ ಸಂಗೀತ, ನೃತ್ಯ, ನಾಟಕಗಳಿಗೂ ಪ್ರೋತ್ಸಾಹಿಸಿದೆ. ನಾಟಕ ಪ್ರದರ್ಶನಕ್ಕಾಗಿ ಬಯಲುರಂಗ ಮಂದಿರವನ್ನು ನಿರ್ಮಿಸಿದೆ. ಸುಮಾರು ಹತ್ತು ಸಾವಿರ ಪುಸ್ತಕಗಳ ಗ್ರಂಥ ಭಂಡಾರವನ್ನು ಹೊಂದಿದೆ. ೧೯೬೨ ರಲ್ಲಿ ಸಂಘದ ಬೆಳ್ಳಿ ಹಬ್ಬವನ್ನು ಆಚರಿಸಿ ಸ್ಮರಣ ಸಂಚಿಕೆ ಪ್ರಕಟಿಸಿ, ರಾಯಚೂರು ನಗರದ, ಜಿಲ್ಲೆಯ ಹೆಮ್ಮೆಯ ಸಾಂಸ್ಕೃತಿಕ ಕೇಂದ್ರವಾಯಿತು. ೧೯೫೭ ರಲ್ಲಿ ಕೇಂದ್ರ ಗೃಹ ಸಚಿವ ಶ್ರೀ ಬಳಗವಂತರಾವ್ ದಾತಾರ ಕರ್ನಾಟಕ ಸಂಘದ ಕಟ್ಟಡವನ್ನು ಉದ್ಘಾಟಿಸಿದರು. ಪ್ರಸ್ತುತ ರಾಯಚೂರು ಕರ್ನಾಟಕ ಸಂಘದ ಅಧ್ಯಕ್ಷರಾಗಿ ಶ್ರೀ ನರಸಣ್ಣ ಕೆ. ಕುಲಕರ್ಣಿ, ಶ್ರೀಗಟ್ಟು ಶ್ರೀನಿವಾಸ್ ಗೌರವಕಾರ್ಯದರ್ಶಿಯಾಗಿ ಸಂಘವನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸಿದ್ದಾರೆ.
ಶಿವಮೊಗ್ಗ ಕರ್ನಾಟಕ ಸಂಘ :
೧೯೩೦ ರ ನವರಾತ್ರಿ ಸಮಯದಲ್ಲಿ ಮೈಸೂರಿನಲ್ಲಿ ನಡೆದ ೧೬ನೇ ಕರ್ನಾಟಕ ಸಾಹಿತ್ಯ ಪರಿಷತ್, (ಕನ್ನಡ ಸಾಹಿತ್ಯ ಪರಿಷತ್‌ನ ಮೊದಲ ಹೆಸರು) ನ ಸಮ್ಮೇಳನದಲ್ಲಿ ಭಾಗವಹಿಸಿ ಕನ್ನಡ ಜನಮನ ಗೆದ್ದ ಧಾರವಾಡದ ಪ್ರಸಿದ್ಧ ಕವಿ ಡಾ.ದ.ರಾ.ಬೇಂದ್ರೆ ಅವರನ್ನು ಡಾ. ಮಾಸ್ತಿಯವರು ಶಿವಮೊಗ್ಗಕ್ಕೆ ಕರೆತಂದು ಬೇಂದ್ರೆಯವರ ಕಾವ್ಯವಾಚನ ಏರ್ಪಡಿಸಿದರು. ಆಗ ಈ ಈರ್ವರು ಮಹನೀಯರೂ ಶಿವಮೊಗ್ಗದಲ್ಲಿ "ಕರ್ನಾಟಕ ಸಂಘದ" ಅವಶ್ಯಕತೆಯನ್ನು ಕನ್ನಡದ ಅಭಿಮಾನಿಗಳಲ್ಲಿ ಮೂಡಿಸಿದರು. ಶ್ರೀ ದೇಶಪಾಂಡೆ ಗುರುರಾವ್, ಸೀತಾರಾಮ್.ಎ. ಕೂಡಲಿ ಚಿದಂಬರಂ, ಭೂಪಾಳಂ ಪುಟ್ಟನಂಜಪ್ಪ ಮುಂತಾದವರು ಪ್ರೇರಿತರಾಗಿ ೮.೧೧.೧೯೩೦ ರಂದು, ಅಂದಿನ ಯುವಕವಿ ಶ್ರೀ ಕೆ.ವಿ. ಪುಟ್ಟಪ್ಪನವರಿಂದ ಸರ್ಕಾರಿ ಪ್ರೌಢಶಾಲೆಯಲ್ಲಿ ಉದ್ಘಾಟನಾ ಸಮಾರಂಭ ನೆರವೇರಿತು. ಶ್ರೀ ಪುಟ್ಟಪ್ಪನವರು ಭಾಷಣದಲ್ಲಿ ಸಾಹಿತ್ಯ ಸಂಸ್ಕೃತಿ, ಕಲೆ, ನಾಟಕ, ಸಂಗೀತಗಳಿಗೆ ಪ್ರೋತ್ಸಾಹ ನೀಡಲು ಸೂಚಿಸಿದರು. ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರಲು ಶ್ರೀ ಕುಕ್ಕೆ ಸುಬ್ರಹ್ಮಣ್ಯ ಶಾಸ್ತ್ರಿಗಳು ಅಧ್ಯಕ್ಷರಾಗಿ, ಶ್ರೀ ಡಿ. ಗುರುರಾವ್ ಪ್ರಥಮ ಕಾರ್ಯದರ್ಶಿಯಾಗಿ ಕಾರ್ಯಕಾರಿ ಸಮಿತಿ ರೂಪಿತವಾಯಿತು. ಕನ್ನಡ ನಾಡಿನ ಶ್ರೇಷ್ಠ ವಿದ್ವಾಂಸರನ್ನು ಶಿವಮೊಗ್ಗಕ್ಕೆ ಬರಮಾಡಿಕೊಂಡು ಉಪನ್ಯಾಸಗಳನ್ನು ಕವಿತಾವಾಚನ, ಕಾವ್ಯವಾಚನ, ಗಮಕವಾಚನ, ಸಂಗೀತಗೋಷ್ಠಿ, ನಾಟಕ, ಮುಂತಾದವುಗಳನ್ನು ಏರ್ಪಡಿಸುವುದು. ಗ್ರಂಥ ಪ್ರಕಟನೆ, ಗ್ರಂಥ ಭಂಡಾರ ಸ್ಥಾಪನೆ, ಕರ್ನಾಟಕ ಏಕೀಕರಣ ಕುರಿತು ವಿಚಾರ ವಿನಿಮಯ ಮಾಡಲಾಯಿತು. ಕನ್ನq, ಜೈನ ಸಾಹಿತ್ಯ , ವಚನ ಸಾಹಿತ್ಯ ಕುರಿತು ಉಪನ್ಯಾಸಮಾಲೆಗಳನ್ನು ಏರ್ಪಡಿಸಲಾಯಿತು. ಆರಂಭದಲ್ಲಿ ಕೆಲಕಾಲ ಜಿಲ್ಲಾಧಿಕಾರಿಗಳು ಗೌರವ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು, ನಗರ ಸಭೆಯ ಒಂದು ಕೊಠಡಿಯಲ್ಲಿ ಸಂಘದ ಕಚೇರಿ ನಡೆಯುತ್ತಿತ್ತು. ಅಲ್ಲಿ ಸ್ಥಳ ಸಾಲದ್ದರಿಂದ ೧೯೩೬ ರಲ್ಲಿ ನಗರ ಸಭೆಯಿಂದ ಈಗಿರುವ ಸ್ಥಳವನ್ನು ಕರ್ನಾಟಕ ಸಂಘಕ್ಕಾಗಿ ಪಡೆಯಲಾಯಿತು. ಅಡಿಕೆ ಮಂಡಿ ವರ್ತಕರೂ, ಸಾಹಿತ್ಯಾಭಿಮಾನಿಗಳೂ ಆಗಿದ್ದ ಶ್ರೀ ಹಸೂಡಿ ವೆಂಕಟಶಾಸ್ತ್ರಿಗಳ ಉದಾರ ಕೊಡುಗೆಯಿಂದ ಈಗಿರುವ ಸಭಾಭವನವನ್ನು ನಿರ್ಮಿಸಲಾಯಿತು. ಕನ್ನಡದ ಕಣ್ವ ಬಿ.ಎಂ. ಶ್ರೀ ಅವರು ೧೯೪೨ ರಲ್ಲಿ ಭವನದ ಶಂಕು ಸ್ಥಾಪನೆ ನೆರವೇರಿಸಿದರು. ೧೧.೨.೧೯೪೩ ರಂದು ಅಂದಿನ ಮೈಸೂರು ಅರಸು ಶ್ರೀ ಜಯ ಚಾಮರಾಜೇಂದ್ರ ಒಡೆಯರು ಭವನದ ಆರಂಭೋತ್ಸವ ನೆರವೇರಿಸಿದರು. ಕನ್ನಡ ಸಾರಸ್ವತ ಲೋಕಕ್ಕೆ, ಸಾಂಸ್ಕೃತಿಕ ಹಿರಿಮೆಗೆ, ಕರ್ನಾಟಕ ಸಂಘದ ಕೊಡುಗೆ ಅಪಾರವಾದದ್ದು. ೧೯೪೩ ರಲ್ಲಿ ಶಿವಮೊಗ್ಗದಲ್ಲಿ ಡಾ.ದ.ರಾ.ಬೇಂದ್ರೆ ಅವರ ಅಧ್ಯಕ್ಷತೆಯಲ್ಲಿ ನೆಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ಣ ಜವಾಬ್ದಾರಿಯನ್ನು ಕರ್ನಾಟಕ ಸಂಘವೇ ಹೊತ್ತು ಯಶಸ್ವಿಯಾಗಿ ನಡೆಸಿಕೊಟ್ಟಿದೆ. ೧೯೭೬ ರಲ್ಲಿ ಶ್ರೀ ಎಸ್.ವಿ. ರಂಗಣ್ಣನವರ ಅಧ್ಯಕ್ಷತೆಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನವೂ ಶಿವಮೊಗ್ಗ ಕರ್ನಾಟಕ ಸಂಘದ ಹಿಂದಿನ ಮೈದಾನದಲ್ಲಿ ನೆಡೆಸಿಕೊಟ್ಟ ಹೆಗ್ಗಳಿಕೆ ಸಂಘದ್ದು. ಸಂಘದ ರಜತ ಮಹೋತ್ಸವ, ಸುವರ್ಣ ಮಹೋತ್ಸವ, ವಜ್ರ ಮಹೋತ್ಸವಗಳನ್ನು ಆಚರಿಸಲಾಗಿದೆ. ಹಸೂಡಿ ವೆಂಕಟಶಾಸ್ತ್ರಿಗಳ ಹೆಸರನ್ನು ಹೊತ್ತ ಸಭಾಭವನದ ೬೦ ವರ್ಷದ ನೆನಪಿನ ಸಂಪುಟ ಪ್ರಕಟವಾಗಿದೆ. ಕರ್ನಾಟಕ ಸಂಘವು ಕರ್ನಾಟಕದ ಹೆಸರಾಂತ ಸಾಹಿತಿಗಳ ಸುಮಾರು ೨೬ ಮೌಲಿಕ ಗ್ರಂಥಗಳನ್ನು ಪ್ರಕಟಿಸಿದೆ. ಕನಾಟಕ ಸಂಘ ಶಿವಮೊಗ್ಗ ಕರ್ನಾಟಕ ಏಕೀಕರಣಕ್ಕೆ ಶ್ರಮಿಸಿರುವುದನ್ನು ಗುರುತಿಸಿ ೨೦೦೬ ನೇ ಸಾಲಿನಲ್ಲಿ ಕರ್ನಾಟಕ ಏಕೀಕರಣವಾಗಿ ೫೦ ವರ್ಷ ತುಂಬಿದ ಸಂದರ್ಭದಲ್ಲಿ "ಕರ್ನಾಟಕ ಏಕೀಕರಣ ಪ್ರಶಸ್ತಿ" ಮತ್ತು ಬಂಗಾರದ ಪದಕ ನೀಡಿ ಗೌರವಿಸಿದೆ. ಕರ್ನಾಟಕ ಸಂಘದ ಆರಂಭದ ವರ್ಷಗಳಲ್ಲಿ ಜಿಲ್ಲೆಯಾದ್ಯಂತ ಸಂಚರಿಸಿ, ಉಪನ್ಯಾಸಗಳನ್ನು ಏರ್ಪಡಿಸಿ ಏಕೀಕರಣಕ್ಕೆ ಜನರನ್ನು ಸಜ್ಜುಗೊಳಿಸಿತು. ಸ್ಪೂರ್ತಿಗೊಂಡ ಕನ್ನಡಾಭಿಮಾನಿಗಳು, ಸಾಗರ, ಶಿರಾಳಕೊಪ್ಪ, ಶಿಕಾರಿಪುರ, ಆನವಟ್ಟಿ, ಸೊರಬ, ಹೊನ್ನಾಳಿ, ಕುಂಸಿ, ತೀರ್ಥಹಳ್ಳಿ ಮುಂತಾದ ಸ್ಥಳಗಳಲ್ಲಿ ಕರ್ನಾಟಕ ಸಂಘಗಳನ್ನು ಸ್ಥಾಪಿಸಿದ ಉಲ್ಲೇಖಗಳು ಕಂಡುಬರುತ್ತವೆ. ೧೯೫೬ ರಲ್ಲಿ ಕರ್ನಾಟಕ ಏಕೀಕರಣವಾದ ನಂತರ ಶಿವಮೊಗ್ಗ ಕರ್ನಾಟಕ ಸಂಘದ ಬಹುಮುಖಿ ಸೇವೆಯಲ್ಲಿ ತೊಡಗಿದೆ, ಆರ್ಥಿಕವಾಗಿ ಸ್ವಾಯತ್ತ ಸಂಸ್ಥೆಯಾಗಿದೆ. ಪ್ರಸ್ತುತ ಶ್ರೀಮತಿ ವಿಜಯ ಶ್ರೀಧರ್ ಅವರು ಅಧ್ಯಕ್ಷರಾಗಿ, ಶ್ರೀ ಹೆಚ್.ಡಿ. ಉದಯಶಂಕರ ಶಾಸ್ತ್ರಿ ಅವರು ಗೌರವ ಕಾರ್ಯದರ್ಶಿಗಳಾಗಿ ಶಿವಮೊಗ್ಗ ಕರ್ನಾಟಕ ಸಂಘವನ್ನು ಮುನ್ನಡೆಸಿದ್ದಾರೆ.
ಮಂಡ್ಯ ಕರ್ನಾಟಕ ಸಂಘ :
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ವರ್ಷವೇ ಪ್ರಾರಂಭವಾದ ಮಂಡ್ಯ ಕರ್ನಾಟಕ ಸಂಘಕ್ಕೀಗ ೬೦ ವರ್ಷ, ವಜ್ರಮಹೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಸಂಘ, ಸಂಕ್ಷಿಪ್ತ ಮೌಖಿಕ ಇತಿಹಾಸವನ್ನು ಮಾತ್ರ ಉಳಿಸಿಕೊಂಡಿದೆ. ಸ್ವಂತ ಕಟ್ಟಡ ಹೊಂದಿರುವ ಕರ್ನಾಟಕದ ಕೆಲವೇ ಸಂಘಗಳಲ್ಲಿ ಮಂಡ್ಯ ಕರ್ನಾಟಕ ಸಂಘವೂ ಒಂದು. ಸ್ವಾತಂತ್ರ್ಯ ಪೂರ್ವದಲ್ಲಿಯೇ ಸ್ವಾತಂತ್ರ್ಯಕ್ಕಾಗಿ ಮತ್ತು ಏಕೀಕರಣಕ್ಕಾಗಿ ಹೊರಾಡಿದ ಇಂಡುವಾಳು ಹೆಚ್. ಹೊನ್ನಯ್ಯ ಎಂ. ಮಹಾಬಲರಾವ್, ಶಿಂಗ್ಲಾಚಾರ್ ಮುಂತಾದವರ ದೂರದೃಷ್ಟಿಯ ಫಲವಾಗಿ ಜನ್ಮತಳೆದ ಸಂಸ್ಥೆ "ಮಂಡ್ಯ ಕರ್ನಾಟಕ ಸಂಘ". ಜಿಲ್ಲೆಯ, ಸಾಹಿತ್ಯ ಸಂಸ್ಕೃತಿ, ಕಲೆ ಸಂಗೀತ, ನಾಟಕ, ಭಾಷೆಗಳ ಅಭಿವೃದ್ಧಿಗಾಗಿ ಹೋರಾಟ ನೆಡೆಸಿದ ಪ್ರಾತಿನಿಧಿಕ ಸಂಸ್ಥೆಯಾಗಿದೆ. ಆ ಕಾಲದ ರಾಜಕೀಯ ಧುರೀಣರಾದ ದಿ. ಎಂ.ಬಿ. ಬೋರೇಗೌಡ, ಕೆ.ವಿ. ಶಂಕರಗೌಡ, ಕೆ. ಶಿಂಗಾರಿಗೌಡ ಬಿ.ಪಿ. ನಾಗರಾಜಮೂರ್ತಿ ಪಿ.ಎನ್. ಜವರಪ್ಪ ಗೌಡ ಮುಂತಾದವರು ಕರ್ನಾಟಕ ಸಂಘದ ಪದಾಧಿಕಾರಿಗಳಾಗಿ ಸಂಘವನ್ನು ಮುನ್ನಡೆಸಿದ್ದಾರೆ.
ಭಾರತದ ಸ್ವಾತಂತ್ರ್ಯದೊಂದಿಗೆ, ಮೈಸೂರು ಚಲೋ ಚಳುವಳಿ ಮತ್ತು ನಂತರದ ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಸಂಘದ ಸದಸ್ಯರು ಪ್ರತ್ಯಕ್ಷವಾಗಿ ಪಾಲ್ಗೊಂಡು ಅನೇಕರು ಜೈಲು ಸೇರಿದರು. ಕರ್ನಾಟಕ ಸಂಘದ ವೇದಿಕೆ ಮೂಲಕ ಸ್ಪೂರ್ತಿಪಡೆದು ಏಕೀಕರಣಕ್ಕೆ ಬೆಂಬಲ ನೀಡಿದ್ದಾರೆ. ೧೯೫೪ ರಲ್ಲಿ ಕುವೆಂಪುರವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಾಗ ಅವರನ್ನು ಮಂಡ್ಯಕ್ಕೆ ಆಹ್ವಾನಿಸಿ ಗೌರವಿಸಲಾಯಿತು. "ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ" ಗೀತೆಯನ್ನು ವಾಚಿಸುವ ಮೂಲಕ ಹಳೆ ಮೈಸೂರಿನಲ್ಲಿ ಕರ್ನಾಟಕ ಏಕೀಕರಣದತ್ತ ಜನಾಭಿಪ್ರಾಯವನ್ನು ರೂಪಿಸಿದರು. ಡಾ ಮಾಸ್ತಿ, ಜಿ.ಪಿ. ರಾಜರತ್ನಂ, ಎಸ್.ವಿ. ಪರಮೇಶ್ವರ ಭಟ್ಟರು. ಡಾ.ಡಿ.ವಿ. ಗುಂಡಪ್ಪನವರು, ಡಾ ಶಿವರಾಮ ಕಾರಂತರು, ಡಾ ಹಾ ಮಾ ನಾಯಕ, ಡಾ ದೇಜಗೌ ಮುಂತಾದ ಖ್ಯಾತ ಸಾಹಿತಿಗಳು ಮಂಡ್ಯ ಕರ್ನಾಟಕ ಸಂಘದ ವೇದಿಕೆ ಮೂಲಕ ಕನ್ನಡ ಭಾಷೆಯ ಗೌರವವನ್ನು ಎತ್ತಿಹಿಡಿದು ಕರ್ನಾಟಕ ಏಕೀಕರಣಕ್ಕೆ ಹೋರಾಡಿದ್ದಾರೆ. ಖ್ಯಾತ ವಿದ್ಯಾಂಸರಾದ ಡಾ.ಜಿ. ವೆಂಕಟ ಸುಬ್ಬಯ್ಯ ನವರು ಮಂಡ್ಯ ಕರ್ನಾಟಕ ಸಂಘದ ಕಾರ್ಯದರ್ಶಿಗಳಾಗಿ ಕೆಲಕಾಲ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಅಧ್ಯಕ್ಷರಾಗಿ ಪ್ರೊ.ಬಿ ಜಯಪ್ರಕಾಶಗೌಡ ಕಾರ್ಯದರ್ಶಿಯಾಗಿ ಶ್ರೀ ಮಲ್ಲರಾಧ್ಯಪ್ರಸನ್ನ ಕರ್ನಾಟಕ ಸಂಘವನ್ನು ಸಕ್ರಿಯವಾಗಿ ಮುನ್ನಡೆಸಿದ್ದಾರೆ.
ಕರ್ನಾಟಕ ಸಂಘ ಅಂಕೋಲ :
೧೯೫೦ ರ ದಶಕದ ಆರಂಭದಲ್ಲಿ ಮುಂಬೈ ಪ್ರಾಂತ್ಯಕ್ಕೆ ಸೇರಿದ್ದ ಅಂಕೋಲದಲ್ಲಿ ಕರ್ನಾಟಕ ಏಕೀಕರಣರ ಚಳವಳಿಗೆ ಚಾಲನೆ ನೀಡಿದವರು ಹಿರಿಯ ಕವಿ ದಿನಕರ ದೇಸಾಯಿ ಅವರು. ಮುಂಬೈ ಸರಕಾರದಲ್ಲಿ ಉಪಸಚಿವರಾಗಿದ್ದ ಅಂಕೋಲೆಯ ಕವಿ ಸ,ಪ, ಗಾಂವಕಾರ ಅವರು ಸ್ಥಾಪಕ ಅಧ್ಯಕ್ಷರಾಗಿ ಸಂಘ ಸ್ಥಾಪಿತವಾಯಿತು. ಹರಿದು ಹಂಚಿ ಹೋಗಿದ್ದ ಕನ್ನಡ ಪ್ರದೇಶಗಳನ್ನು ಒಟ್ಟಾಗಿಸಿ ಒಂದು ಆಡಳಿತದಡಿ ತರಬೇಕೆಂಬ ಹಿರಿಯರ ಕನಸನ್ನು ಸಾಕಾರಗೊಳಿಸಲು, ಕನ್ನಡ ಸಾಹಿತ್ಯ, ಕಲೆ, ಸಂಸ್ಕೃತಿಗಳನ್ನು ಅಭಿವ್ಯಕ್ತಿಸಲು ಒಂದು ವೇದಿಕೆಯನ್ನು ಹುಟ್ಟು ಹಾಕಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿದ್ದ ಶ್ರೀ.ಎಂ.ಆರ್. ಶ್ರೀನಿವಾಸಮೂರ್ತಿ ಅವರು ಅಂಕೋಲೆಗೆ ಬಂದಾಗ ಕರ್ನಾಟಕ ಸಂಘ ಸ್ಥಾಪನೆಗೆ ಎಲ್ಲ ರೀತಿಯ ಸಹಕಾರ ನೀಡುವ ಭರವಸೆ ನೀಡಿದರು. ೧೯೫೨ ರಲ್ಲಿ ಖ್ಯಾತ ಸಾಹಿತಿಗಳಾದ ಶ್ರೀ ತೀ.ನಂ ಶ್ರೀಕಂಠಯ್ಯವರಿಂದ ಸಂಘದ ಉದ್ಘಾಟನೆ ನಡೆಯಿತು. ಕನ್ನಡ ನಾಡಹಬ್ಬ, ವಸಂತ ಸಾಹಿತ್ಯೋತ್ಸವಗಳನ್ನು ನಡೆಸಿ, ಕನ್ನಡ ಸಾಹಿತ್ಯ ಕಲೆ, ಸಂಸ್ಕೃತಿಗಳ ಕುರಿತು ಪ್ರೀತಿ ಹೆಚ್ಚುವಂತೆ ಮಾಡಿದರು. ಶ್ರೀ ಯು. ರಾಜಗೋಪಾಲಚಾರ್ ಅವರು, ಗೌರವ ಕಾರ್ಯದರ್ಶಿಗಳಾಗಿ ಸಂಘವನ್ನು ಮುನ್ನಡೆಸಿದರು. ೧೯೫೨ರಿಂದಲೂ ಉತ್ತರ ಕನ್ನಡ ಜಿಲ್ಲೆಯ ಸಾಹಿತ್ಯಕ್ಕೆ, ಜೀವ ತುಂಬುವ ಕಾರ್ಯದಲ್ಲಿ ತೊಡಗಿದೆ.
ಕನ್ನಡ ನಾಡಿನ ಕವಿ, ಸಾಹಿತಿ ಕಲಾವಿದರನ್ನು ಅಂಕೋಲಕ್ಕೆ ಅಹ್ವಾನಿಸಿ, ಉಪನ್ಯಾಸಗಳನ್ನು, ನಾಟಕ, ಕವಿಗೋಷ್ಠಿ ಏರ್ಪಡಿಸಿ ಕರ್ನಾಟಕ ಏಕೀಕರಣಕ್ಕೆ ಒತ್ತು ನೀಡಿದರು. ೧೯೫೬ ರಲ್ಲಿ ಏಕೀಕರಣವಾದ ನಂತರವೂ ಕ್ರಿಯಾಶೀಲವಾಗಿ ಕನ್ನಡ ಕೈಂಕರ್ಯದಲ್ಲಿ ಅಂಕೋಲ ಕರ್ನಾಟಕ ಸಂಘ ತೊಡಗಿದೆ. ೧೯೭೮ ರಲ್ಲಿ ಬೆಳ್ಳಿಹಬ್ಬ ಆಚರಿಸಿತು. ೨೦೦೩ರಲ್ಲಿ ಸಂಘದ ಚಿನ್ನದ ಹಬ್ಬ ನೆರವೇರಿತು. ಈ ಸಂದರ್ಭದಲ್ಲಿ "ಚಿನ್ನದತೇರು" ಸ್ಮರಣ ಸಂಚಿಕೆ ಪ್ರಕಟಿಸಿದೆ. ಗೋಕಾಕ್ ವರದಿ ಜಾರಿಗೆ ಬರಲಿ ಚಳವಳಿಯನ್ನು ೧೯೮೨ ರಲ್ಲಿ ನಡೆಸಿತು. ಪುಸ್ತಕ ಮೇಳಗಳನ್ನು ಸಂಘಟಸಿ ಜನಸಾಮಾನ್ಯರಲ್ಲಿ ಪುಸ್ತಕ ಪ್ರೀತಿಯನ್ನು ಹುಟ್ಟುಹಾಕಿದೆ. ಕನ್ನಡ ರಂಗಭೂಮಿಗೂ ಅನುಪಮ ಸೇವೆ ಸಂದಿದೆ. ಪ್ರಸ್ತುತ ಅಂಕೋಲ ಕರ್ನಾಟಕ ಸಂಘದ ಅಧ್ಯಕ್ಷರಾಗಿ ಶ್ರೀ ವಿಷ್ಣು ನಾಯಕ ಗೌರವ ಕಾರ್ಯದರ್ಶಿಯಾಗಿ ಬಾಲಚಂದ್ರನಾಯಕ, ಮಾಜಿ ಅಧ್ಯಕ್ಷರಾಗಿ ಮಹೋತ್ಸವ ಸಮಿತಿ ಸದಸ್ಯರಾಗಿ ಶ್ರೀ ಮೊಹನ ಹಬ್ಬು ಕನ್ನಡ ತಾಯಿಯ ಸೇವೆಯನ್ನು ಮುನ್ನಡೆಸಿದ್ದಾರೆ.
ಮುಂಬೈ ಕರ್ನಾಟಕ ಸಂಘ :
ಬದುಕನ್ನು ಅರಸಿ ಮುಂಬಯಿಗೆ ಹೋದ ಬಹುಪಾಲು ಕನ್ನಡಿಗರು ಕನ್ನಡ ಭಾಷೆ, ಸಂಸ್ಕೃತಿಯನ್ನೂ ತಮ್ಮೊಂದಿಗೆ ಕೊಂಡ್ಯೊಯ್ದಿದ್ದಾರೆ. ದೂರದ ದೆಹಲಿ, ಕಲ್ಕತ್ತಾ, ಪಕ್ಕದ ಚನ್ನೆ, ಮುಂಬಯಿಗಳಲ್ಲಿ ಕರ್ನಾಟಕ ಸಂಘಗಳನ್ನು ಸ್ಥಾಪಿಸಿ, ಕನ್ನಡ ಸಂಸ್ಕೃತಿಯ ರಾಯಭಾರಿಗಳಾಗಿದ್ದಾರೆ. ಮುಂಬಯಿ ಮಹಾನಗರ ಒಂದರಲ್ಲಿಯೇ ನೂರಕ್ಕೂ ಹೆಚ್ಚು ಕನ್ನಡ ಸಂಘಗಳಿವೆ, ಹಲವು ಕರ್ನಾಟಕ ಸಂಘಗಳೂ ಇವೆ. ಅವಕಾಶವಾದಲೆಲ್ಲ ಕನ್ನಡ ರಾತ್ರಿ ಶಾಲೆಗಳನ್ನು ಆರಂಭಿಸಿ ಕನ್ನಡ ಕಟ್ಟಿದ್ದಾರೆ. ಆರಂಭದಲ್ಲಿಯೇ ಮುಂಬಯಿಗರ ನಾಲಿಗೆರುಚಿಯನ್ನು ಗೆದ್ದ ಕನ್ನಡಿಗರು, ಹೋಟೆಲ್ ಆರಂಭಿಸಿದರು. ಕೆಲಸಕ್ಕೆ ತಮ್ಮ ನಂಬಿಗೆಯ ಯುವಕರನ್ನು ಕರ್ನಾಟಕದಿಂದಲೇ ಬರಮಾಡಿಕೊಂಡರು. ಇಂದು ಸುಮಾರು ೧೦ ಲಕ್ಷಕ್ಕಿಂತಲೂ ಹೆಚ್ಚು ಕನ್ನಡಿಗರು ಮುಂಬಯಿಯಲ್ಲಿದ್ದಾರೆಂದು ತಿಳಿದುಬರುತ್ತದೆ. ವಾಣಿಜ್ಯ ಉದ್ಯಮಗಳಲ್ಲಿಯೂ ಕನ್ನಡಿಗರು ೩ನೇ ಸ್ಥಾನದಲ್ಲಿದ್ದಾರೆ. ಹೋಟೇಲ್ ಉದ್ಯಮ, ಟ್ಯಾಕ್ಸಿ ಉದ್ಯಮಗಳಲ್ಲಿ ಕನ್ನಡಿಗರದೇ ಸಿಂಹಪಾಲು. ೬೦೦೦ ಕ್ಕೂ ಹೆಚ್ಚು ಹೋಟೆಲ್‌ಗಳ ಒಡೆಯರು ಕನ್ನಡಿಗರು. ತಮ್ಮ ಜೀವಂತಿಕೆಗೆ ಸಾಕ್ಷಿಯಾಗಿ ಕನ್ನಡ ಸಂಘಗಳನ್ನು ಕಟ್ಟಿಕೊಂಡಿದ್ದಾರೆ.
ಇವುಗಳಲ್ಲಿ ಈ ವರ್ಷ ಅಮೃತಮಹೋತ್ಸವ ಆಚರಿಸಿದ ಕರ್ನಾಟಕ ಸಂಘವೆಂದರೆ ಮಾತುಂಗದಲ್ಲಿರುವ ಸರ್.ಎಂ.ವಿ. ಸ್ಮಾರಕ ರಂಗಮಂದಿರ. ಸ್ವಂತ ಕಟ್ಟಡ, ಅಪೂರ್ವ ಗ್ರಂಥಾಲಯ, ೮೦೦ ಆಸನಗಳ ವಾತಾನುಕೂಲಿ ಸಭಾಭವನ ಹೊಂದಿದೆ. ಅಲ್ಲದೆ ಮೈಸೂರು ಅಸೋಸಿಯೇಷನ್, ಬಿಲ್ಲವರ ಸಂಘ, ಮೊಗವೀರ ಸಂಘ ಮುಂತಾದ ನೂರಾರು ಕನ್ನಡ ಸಂಘಗಳು ಶೈಕ್ಷಣಿಕವಾಗಿ ಸೇವೆ ಸಲ್ಲಿಸುತ್ತಾ ಕನ್ನಡ ಭಾಷೆಯನ್ನು ಹೊರನಾಡಿನಲ್ಲಿಯೂ ಜೀವಂತವಾಗಿರಿಸಿವೆ. ಮುಂದಿನ ಪೀಳಿಗೆಗೆ ಕನ್ನಡ ಭಾಷೆ, ಸಂಸ್ಕೃತಿಯನ್ನು ದಾಟಿಸುತ್ತಿವೆ. ೧೯೩೩ ರಲ್ಲಿ ಗಿರ್‌ಗಾಂವ್‌ನ ಸಂಜಯ್ ಸಮರದ ಚಿಕ್ಕಕೋಣೆಯಲ್ಲಿ ಪ್ರಾರಂಭವಾದ ಕರ್ನಾಟಕ ಸಂಘವು ಈಗಿರುವ ಮಾತುಂಗಾ ಸರ್.ಎಂ.ವಿ. ಸ್ಮಾರಕ ಭವನಕ್ಕೆ ನಡೆದು ಬಂದ ದಾರಿ ರೋಚಕವಾದದ್ದು. ಮುಂಬಯಿಯಲ್ಲಿ ನಡೆದ ನಾಲ್ಕು ಸಾಹಿತ್ಯ ಸಮ್ಮೇಳನಗಳನ್ನೂ ಯಶಸ್ವಿಯಾಗಿ ನಡೆಸಿದ ಕೀರ್ತಿ ಸಂಘಕ್ಕೆ ಸಲ್ಲುತ್ತದೆ. ಸ್ವಾತಂತ್ರ್ಯ ಪೂರ್ವದಿಂದಲೂ ಕನ್ನಡ ಅಸ್ಮಿತೆಯನ್ನು ಗಟ್ಟಿಗೊಳಿಸುತ್ತಾ ಕಾಲಕಾಲಕ್ಕೆ ಮುಂಬಯಿ ಕನ್ನಡಿಗರ ಜೊತೆ ಸ್ಪಂದಿಸುತ್ತಾ ವೈವಿಧ್ಯಮಯ ಕನ್ನಡ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ. ಕರ್ನಾಟಕ ಏಕೀಕರಣ ಚಳವಳಿಗೆ, ಮುಂಬೈ ರಾಜ್ಯದಲ್ಲಿ ಸೇರಿ ಹೋಗಿದ್ದ ಕನ್ನಡ ಪ್ರದೇಶಗಳನ್ನು ಕರ್ನಾಟಕದಲ್ಲಿ ವಿಲೀನಗೊಳಿಸುವ ಪ್ರಕ್ರಿಯೆಯಲ್ಲಿ ಗಮನಾರ್ಹ ಸೇವೆಸಲ್ಲಿಸಿದೆ. ಏಕೀಕರಣದ ನಂತರವೂ ಕನ್ನಡನಾಡು ನುಡಿಯನ್ನು ಹೊರ ನಾಡಿನಲ್ಲಿ ಅದರಲ್ಲಿಯೂ ಭಾರತದ ಆರ್ಥಿಕ ರಾಜಧಾನಿ ಮುಂಬಯಿಯಲ್ಲಿ ಜೀವಂತವಾಗಿರಿಸಿರುವ ಸಂಸ್ಥೆಗಳಲ್ಲಿ ಅಗ್ರಸ್ಥಾನದಲ್ಲಿದೆ ಮುಂಬಯಿ ಕರ್ನಾಟಕ ಸಂಘ. ಪ್ರಸ್ತುತ ಶ್ರೀ ಎಂ.ಎಂ. ಕೋರಿ ಅವರು ಅಧ್ಯಕ್ಷರಾಗಿ, ಶ್ರೀ ಓಂದಾಸ್ ಕಣ್ಣಂಗಾರ್ ಗೌರವ ಕಾರ್ಯದರ್ಶಿಯಾಗಿ ಮುಂಬಯಿ ಕನ್ನಡಿಗರ ಹೆಮ್ಮೆಯ ಪ್ರತೀಕವನ್ನಾಗಿ ಮುಂಬಾಯಿ ಕರ್ನಾಟಕ ಸಂಘವನ್ನು ಮುನ್ನಡೆಸಿದ್ದಾರೆ. ಭಾರತದ ಸ್ವಾತಂತ್ರ್ಯ ಚಳುವಳಿಗೆ, ಕರ್ನಾಟಕ ಏಕೀಕರಣ ಚಳುವಳಿಗೆ ಮುಂಬೈ ಕನ್ನಡ ಸಂಘಗಳು ಮತ್ತು ಕರ್ನಾಟಕ ಸಂಘಗಳ ಕೊಡುಗೆ ಅಪಾರವಾದದ್ದು.
ಹೊರನಾಡಿನಲ್ಲಿರುವ ಕರ್ನಾಟಕ ಸಂಘಗಳು:
ಮುಂಬೈ, ಚೆನ್ನೈ, ಮಧುರೈ, ಹೈದ್ರಾಬಾದ್, ಸೇಲಂ, ದೆಹಲಿ, ವಾರಣಾಸಿ, ಪಣಜಿ, ಭೋಪಾಲ್, ಬರೋಡಾ, ಲಖನೌ, ಪುಣೆ, ಕಾಸರಗೋಡು, ಚೆಂಬೂರು, ಪನವೇಲ, ಗೋರೆಗಾಂವ್, ನಾರ್‌ಘರ್, ಕಲ್ಯಾಣ್, ಭಾಂಡುಪ್ ಮುಂತಾದ ಕಡೆ ಕರ್ನಾಟಕ ಸಂಘಗಳು ಕರ್ನಾಟಕ ಏಕೀಕರಣ ಚಳವಳಿಗೆ ಪೂರ್ವದಲ್ಲಿ ಸ್ಥಾಪಿತವಾಗಿ ಇಂದಿಗೂ ಕಾರ್ಯಶೀಲವಾಗಿವೆ.
ಕನ್ನಡನಾಡಿನಲ್ಲಿ ಸ್ಥಾಪಿತವಾದ ಕರ್ನಾಟಕ ಸಂಘಗಳು:
ಮೈಸೂರು, ತಿಪಟೂರು, ರಾಯಚೂರು, ಮಂಡ್ಯ, ಪುತ್ತೂರು, ರಾಣಿಬೆನ್ನೂರು, ಅರಸೀಕೆರೆ, ಬೀರೂರು, ಅಂಕೋಲೆ ದಾಂಡೇಲಿ, ಶಿವಮೊಗ್ಗ ಮುಂತಾದ ಸ್ಥಳಗಳಲ್ಲಿ ಕರ್ನಾಟಕ ಸಂಘಗಳು ಸ್ಥಾಪಿತವಾಗಿವೆ. ಕನ್ನಡ ನಾಡಿನಾದ್ಯಂತ ಮತ್ತು ಹೊರನಾಡುಗಳ ನೂರಾರು ಜಿಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಕರ್ನಾಟಕ ಸಂಘಗಳು ಏಕೀಕರಣ ಪೂರ್ವದಲ್ಲೇ ಸ್ಥಾಪಿಸಲ್ಪಟ್ಟು ಕರ್ನಾಟಕ ಏಕೀಕರಣ ಚಳವಳಿಗೆ ಪೂರಕವಾಗಿ ಸ್ಪಂದಿಸಿವೆ. ಎಲ್ಲ ಕರ್ನಾಟಕ ಸಂಘಗಳನ್ನು ಪರಿಚಯಿಸಬೇಕೆಂಬ ಮಹದಾಸೆಯಿಂದ ವಿಳಾಸ ತಿಳಿದ ಕೆಲವು ಸಂಘಗಳಿಗೆ ಪತ್ರ ಬರೆದು ವಿನಂತಿಸಿದೆ. ಮಾಹಿತಿಗಳು ಲಭ್ಯವಾದ ಕೆಲವು ಕರ್ನಾಟಕದ ಸಂಘಗಳನ್ನು ಮಾತ್ರ ಇಲ್ಲಿ ಉಲ್ಲೇಖಿಸಿದ್ದೇನೆ. ಏಕೀಕರಣ ಪೂರ್ವದಲ್ಲಿ ಸ್ಥಾಪಿತವಾಗಿ, ಇಂದಿಗೂ ಕ್ರಿಯಾ ಶೀಲವಾಗಿರುವ ಕರ್ನಾಟಕ ಸಂಘಗಳ ಕುರಿತು ತಮಗೆ ತಿಳಿದ ಪರಿಚಯಾತ್ಮಕ ವರದಿಯನ್ನು ಓದುಗರು ನೀಡಿದರೆ ಮುಂದಿನ ಲೇಖನದಲ್ಲಿ ಸೇರಿಸುವ ಪ್ರಯತ್ನ ಮಾಡುತ್ತೇನೆ ಪ್ರಸ್ತುತ ನನ್ನ ಮನವಿಗೆ ಸ್ಪಂದಿಸಿ, ತಕ್ಷಣ ಉತ್ತರಿಸಿದ ರಾಯಚೂರಿನ ಗೌರವ ಕಾರ್ಯದರ್ಶಿ ಶ್ರೀಗಟ್ಟು ಶ್ರೀನಿವಾಸ್, ಮಂಡ್ಯದ ಪ್ರೊ|| ಜಯಪ್ರಕಾಶ್ ಗೌಡ ಮತ್ತು ಅಂಕೋಲಾ ಕರ್ನಾಟಕ ಸಂಘದ ಶ್ರೀ ಮೋಹನ ಹಬ್ಬು, ಧಾರವಾಡ ವಿದ್ಯಾವರ್ಧಕ ಸಂಘದ ಉಪಧ್ಯಕ್ಷರಾದ ಶ್ರೀ ಎಂ.ಎಂ. ಹೂಲಿ ಅವರಿಗೆ ಕೃತಜ್ಞತೆಗಳು.
ಆಕರಗಳು
೧. ನಿಜಲಿಂಗಪ್ಪ ಎಸ್.: "ಕರ್ನಾಟಕದ ಪರಂಪರೆ" ಸಂಪುಟ ೨, ೧೯೯೨ ಪ್ರ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು
೨. ಜಯದೇವಪ್ಪ ಜೈನಕೇರಿ : ಸಂ ಅಮೃತ ವರ್ಷ-೭೫, ೨೦೦೫ ಪ್ರ ಕರ್ನಾಟಕ ಸಂಘ (ರಿ) ಶಿವಮೊಗ್ಗ, ವರದಿ ೧೯೩೦ ರಿಂದ ೩೬ ಪುಟ ೨೯೮-೩೭೯
೩. ಪ್ರೊ.ಬಿ.ವಿ.ಗುಂಜೆಟ್ಟೆ : ಸಂ. ಸ್ನೇಹ ಸೌರಭ ೨೦೦೪ ಪ್ರ: ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ
೪. ವಿ.ಜೆ. ನಾಯಕ: ಸಂ. ಚಿನ್ನದ ಗೆರೆ ೨೦೦೪ ಪ್ರ. ಕರ್ನಾಟಕ ಸಂಘ, ಅಂಕೋಲಾ.
೫. ಗಟ್ಟು ಶ್ರೀನಿವಾಸ್ : ಗೌರವ ಕಾರ್ಯದರ್ಶಿ ರಾಯಚೂರು ಕರ್ನಾಟಕ ಸಂಘ
೬. ಪ್ರೊ.ಜಯಪ್ರಕಾಶ ಗೌಡ : ಸಂ. ಅಭಿವೃಕ್ತಿ ಸಂ ೧, ೨೦೦೮ ಕರ್ನಾಟಕ ಸಂಘ, ಮಂಡ್ಯ.
೭. ಟಿ.ಹೆಚ್.ಎಂ.ಬಸವರಾಜ : ಸಂ. ಡಾ.ವಿದ್ಯಾಶಂಕರ ಸ್ವಪ್ನಲೋಕ ಮಾಸಿಕ ಫೆಬ್ರವರಿ ೨೦೦೯
೮. ಸೀತಾರಾಮಯ್ಯ ಎಂ.ವಿ : ಸಂ. ಕೌಸ್ತುಭ ೧೯೯೭ ಪ್ರ ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು.
೯. ಶ್ರೀನಿವಾಸ ಜೋಕಟ್ಟೆ : ಸಂ. ಸ್ನೇಹ ಸಂಬಂಧ ಡಿಸೆಂಬರ್ ೨೦೦೮, ಕರ್ನಾಟಕ ಸಂಘ ಮುಂಬೈ. ನಂ : ೮೭ ಶಾಂತಲಾ, ಕುವೆಂಪು ರಸ್ತೆ, ಜಯದೇವಪ್ಪ ಜೈನಕೇರಿ ಶಿವಮೊಗ್ಗ -೫೭೭ ೨೦೧ ಮೊ : ೯೮೮೬೩೭೬೭೯೫

ಹಿಂದಿನ ಬರೆಹಗಳು