Tuesday, October 5, 2010

ಅಂದಿನ ಕನ್ನಡಿಗರ ರಸಿಕತೆ ಮೀಸೆ





ಪ್ರೊ.ವಸಂತಕುಷ್ಟಗಿ
ಎಂಐಜಿ ೨೬, ಆದರ್ಶನಗರ, ಮೊದಲ ಹಂತ ಗುಲ್ಬರ್ಗ-೫೮೫೧೦೫



ಕನ್ನಡನಾಡು ರಸಿಕತೆಯ ನೆಲೆವೀಡು-ಸುಸಂಸ್ಕೃತ ಜೀವನದ ರಸಘಟ್ಟವೇ ರಸಿಕತೆಯ ಅಂತರಂಗ. ಅದು ನಿತ್ಯ ಜೀವನದ ವಿವಿಧ ರೀತಿನೀತಿಗಳಲ್ಲಿ ಅಭಿವ್ಯಕ್ತವಾಗುತ್ತದೆ. ಒಂದೇ ಮಾತಿನಲ್ಲಿ ಹೇಳಬೇಕಾದರೆ, ಯಾವನು ಜೀವನದಲ್ಲಿ ಕಹಿ-ಸಿಹಿಗಳನ್ನು ನುಂಗಿ ನೆಮ್ಮದಿಯ ಬಾಳನ್ನು ಮಾಡುತ್ತಾನೆಯೋ ಅವನೇ ರಸಿಕ. ಆ ನೆಮ್ಮದಿಯು ಸೊಗಸುತನದಿಂದಲೇ ಬರುವುದು ಸಹಜ. ಆ ಸೊಗಸೇ ರಸಿಕತೆ. ಅಂತೆಯೇ ರಸಿಕನಾಡಿನ ಮಾತು ಶಶಿಯುದಿಸಿ ಬಂದಂತೆ. ಅಂತಹ ಸೊಗಸು ಒಬ್ಬ ವ್ಯಕ್ತಿಯ ನಡೆ, ನುಡಿ, ರೀತಿ, ಆಹಾರ, ವಿಹಾರ, ಪೋಷಾಕು, ಅಲಂಕಾರ ಇತ್ಯಾದಿಗಳಲ್ಲಿ ಹಾಸು ಹೊಕ್ಕಾದರೆ ಮಾತ್ರ ಸಾಧ್ಯ. ಈ ಒರೆಗಲ್ಲಿಗೆ ಕನ್ನಡಿಗರನ್ನು ಉಜ್ಜಿ ನೋಡಿದಾಗ ಅವರೆಲ್ಲ ರಸಿಕಚಕ್ರಿಗಳಾಗಿಯೇ ಕಾಣುತ್ತಾರೆ. ಬಹುಶಃ ಇದನ್ನು ಅನುಭವಿಸಿದ ರಸಿಕ ಕವಿ ಆದಿಪಂಪನ,
“ಚಾಗದ ಭೋಗದಕ್ಕರದ ಗೇಯದ ಗೊಟ್ಟೆಯಲಂಪಿನಿಂಪುಗ,
ಳ್ಗಾಗರವಾದ ಮಾನಸರೆ ಮಾನಸರ್......................”||
ಎಂದು ವೀರ ಅರ್ಜುನನ ಮುಖದಿಂದ ವರ್ಣಿಸಿರುವುದನ್ನು ನೆನೆಸಿಕೊಂಡರೆ ಆ ಸೊಗಸೆಲ್ಲ ಆಗಿನ ಕನ್ನಡಿಗರ ಸೊಗಸೆಂದೇ ನಿವೇದ್ಯವಾದೀತು.
ಈ ಸಂದರ್ಭದಲ್ಲಿ “ವೀರ” ಎಂಬ ಪದವು ಬಳಕೆಯಾಯಿತಲ್ಲವೆ? ಈ ವೀರತನವೂ ಕೂಡ ಸೊಗಸುಗಾರಿಕೆಯ ಲಕ್ಷಣ. ಅರ್ಥಾತ್ ರಸಿಕತೆಯ ಲಕ್ಷಣ. ಈ ಇದು ಎದ್ದು ಕಾಣಬೇಕಾದರೆ, ಗಂಡಸಾದವನು ಮೀಸೆಯನ್ನು ಹೊತ್ತಿರಲೇಬೇಕಾಗುತ್ತದೆ. ಅಂದಿನ ಕಾಲದಲ್ಲಂತೂ ಗಂಡಸರೆಲ್ಲ ಮೀಸೆ ಹೊತ್ತವರೇ ಆಗಿರುತ್ತಿದ್ದರು. ಮೀಸೆಯಿಲ್ಲದ ಗಂಡಸೇನಾದರೂ ಇದ್ದಿದ್ದರೆ ಅವನು ಹೇಡಿಯೇ ಆಗಿರುತ್ತಿದ್ದ. ನಪುಂಸಕನೇ ಆಗಿರುತ್ತಿದ್ದ. ಅಕಸ್ಮಾತ್ ಮೀಸೆ ಬೋಳಿಸುವ ಶಿಕ್ಷೆಯೇನಾದರೂ ವಿಧಿಯಾಗಿ ಬಂತೆಂದರೆ ಸಾಕು. ಅದು, ಆ ಗಂಡಿನ ಸೋಲಿನ ಪರಮಾವಧಿಯೇ ಆಗಿರುತ್ತಿತ್ತು. ಏಕೆಂದರೆ ಮೀಸೆಯು ಗಂಡಸಿಗೆ ಪೌರುಷದ ಲಕ್ಷಣವಾಗಿತ್ತು.
ಪೌರುಷದ ಲಕ್ಷಣವಾದ ಈ ಮೀಸೆಯಲ್ಲಿ ಕಲ್ಲಿಮೀಸೆ, ಹುರಿಹಾಕಿದ ಮೀಸೆ, ಉದ್ದಮೀಸೆ, ತೀಡಿದ ಮೀಸೆ, ಅರ್ಧಮೀಸೆ, ಗಿರ್ದಾಮೀಸೆ, ಖರಾರಿ ಮೀಸೆ, ಅರ್ಜುನ ಮೀಸೆ, ಕರ್ಣಮೀಸೆ, ದುರ್ಯೋಧನ ಮೀಸೆ, ನಿಂಬೆಹಣ್ಣನ್ನು ಖಡಿ ನಿಲ್ಲಿಸುವ ಮೀಸೆ, ರಾಜಮೀಸೆ, ಇತ್ಯಾದಿ ಅನೇಕ ಪರಿಭೇದಗಳಿವೆ. ಪುರಾತನ ಕಾಲದ ಶಿಲ್ಪಗಳನ್ನು ನೋಡುವುದರಿಂದ, ರೇಖಾಚಿತ್ರಗಳನ್ನು ವರ್ಣಚಿತ್ರಗಳ್ನು ನೋಡುವುದರಿಂದ ಈ ಮಾತಿನ ಬಗ್ಗೆ ಸತ್ಯ ಸಾಕ್ಷಿ ದೊರೆಯುತ್ತದೆ. ಮತ್ತು ಮೀಸೆಯ ಮಹತ್ವವಾದರೂ ಏನಿರಬಹುದೆಂಬ ದಿಸೆಯಲ್ಲಿ ‘ಹುಡುಕು’ ಪ್ರಾರಂಭವಾಗುತ್ತದೆ. ಅಂತಹ ಸಂದರ್ಭದಲ್ಲಿ ‘ಮೀಸೆ’ಯು ಅಭಿಮಾನದ ಧ್ವನಿಸಂಕೇತವಾಗಿ ಕಾಣುತ್ತದೆ. ಹೀಗಿರುವುದರಿಂದಲೇ ಮೀಸೆಯು ಪೌರುಷದ ವಿಶಿಷ್ಟ ಲಕ್ಷಣವಾಗಿ ಬಿಡುತ್ತದೆ. ಈ ಪೌರುಷವು ಬದುಕಿನ ಸಾರಸರ್ವಸ್ವವೆಂಬುದನ್ನು ಎಂದಿಗೂ ಮರೆಯಕೂಡದು.
ಕನ್ನಡ ಕವಿಗಳು ಕನ್ನಡಿಗರ ಪೌರುಷವು ಅಭಿವ್ಯಕ್ತವಾಗುವ ಕಥೆಗಳಲ್ಲೆಲ್ಲ ಮೀಸೆಯ ವರ್ಣನೆಯನ್ನು ಅನಾಯಾಸವಾಗಿ ಮಾಡಿದ್ದಾರೆ. ಕನ್ನಡದ ಆದಿಕವಿ ರಸಿಕ ಪಂಪನು ತನ್ನ “ವಿಕ್ರಮಾರ್ಜುನ ವಿಜಯ”ದಲ್ಲಿ ದ್ರೋಣನು ದ್ರುಪದನಲ್ಲಿಗೆ ಬಂದು ಸಹಾಯ ಕೇಳಿದಾಗಿನ ಸನ್ನಿವೇಶದಲ್ಲಿ ಮೀಸೆಗೆ ನೀಡಿದ ಧ್ವನಿ ರಮ್ಯತೆ ನೋಡಿ. ದ್ರೋಣದ್ರುಪದರು ಬಾಲ್ಯಸ್ನೇಹಿತರು. ಆ ಸ್ನೇಹವನ್ನೇ ನೆನೆಸಿಕೊಂಡು ದ್ರೋಣನು ದ್ರುಪದನ ಆಸ್ಥಾನಕ್ಕೆ ಬಂದು ಸಹಾಯ ಕೇಳಿದರೆ, ದ್ರುಪದನು ಅಪರಿಚಿತನಂತೆ ವರ್ತಿಸಿದನು. ಆಗ ದ್ರೋಣನ ಮುಖದಿಂದ,
......................................................ಸಭಾ
ವಳಯದೊಳೆನ್ನನೇಮಿಸಿದ ನಿನ್ನನನಾಕುಳವೆನ್ನ ಚಟ್ಟರಿಂ
ತಳವೆಳಗಾಗೆ ಕಟ್ಟಿಸದೆ ಮಾಣ್ದೊಡೆ ಕೆಮ್ಮನೆ ಮೀಸೆಮೊತ್ತೆನೇ!”
ಎಂಬ ಮಾತುಗಳು ಹುರಿದು ಅಸ್ಫೋಟಿಸಿದಾಗ, ಆ ದ್ರೋಣನು ಕನ್ನಡ ಮೀಸೆವೊತ್ತ ಗಂಡುಗಲಿಯಾಗಿ ಬಿಡುತ್ತಾನೆ.
ಇದೇ ರಸಿಕನ ಕವಿತಾಚಕ್ರಿ ಪಂಪನು, ಅರ್ಜುನನ ಯೌವನೋದಯವನ್ನು “ಪೊಸ ಜವ್ವನದ ಮುಂಬಣ್ಣದಂತೆ ಕರ್ಪಂ ಕೈಕೊಂಡು ಕತ್ತುರಿಯಲ್ ಬರೆದಂತಪ್ಪ ವಿಕ್ರಾಂತತುಂಗನ ಮೀಸೆಗಳ್” ಎಂದು ವರ್ಣಿಸಿ ಅಲ್ಲಿ ಪೌರುಷವು ಚಿಗುರೊಡೆಯಿತೆಂದು ಮೀಸೆಯನ್ನು ಸಾಂಕೇತಿಸಿದ್ದಾನೆ.
ಶಕ್ತಿ ಕವಿರನ್ನನ “ಸಾಹಸಭೀಮ ವಿಜಯ”ದಲ್ಲಿ, ಶಲ್ಯನ ವಧೆಯ ನಂತರ ಎಲ್ಲಿಯುಂ ಅರಸಿಯುಂ ದುರ್ಯೋಧನನ ರೂಪು ಕಾಣದೆ ಇದ್ದಾಗ, ಬರುವ ಭೀಮನ ಚಿತ್ರದಲ್ಲಿಯೂ ಮೀಸೆಗೆ ಔಚಿತ್ಯಪೂರ್ಣ ಸ್ಥಾನವಿದೆ ನೋಡಿ;
ತತ್ ಫಣಿರಾಜಕೇತನನ ಲಲಾಟ ಶಿಲಾಪಟ್ಟಮಂ ತನ್ನ
ಮಣಿಮಯ ಮಕುಟಮಂ ತನ್ನ ಗದಾಪ್ರಹರಣದಿಂದುರುಳಿಚಿ
ಪುಡಿಯೊಳ್ ಪೊರಳ್ಚಲುಂ ಆ ಸುಯೋಧನನ ರುಧಿರಧಾರಾಪೂರದಿಂ
ತನ್ನ ಧಗಧ(ಗಾ)ಯ ಮಾನ ವಿಪುಳಕೋಪಪಾವಕ ಶಿಖಾಕಲಾಪ
ಮನಾಣಿಸಲುಂ ಪಡೆಯದಡಹಡಿಸಿ ಭೀಮಸೇನಂ ಕಿಡಿಕಿಡಿವೋಗಿ
ಮೀಸೆಯಂ ಕಡಿದು”

“ಮೀಣಿದ ಪಡೆವನ ಪಟ್ಟಂ
ಪಾಣಿಸುವೆನೊ ಮುನ್ನಯಮರರುಂಡಮೈತಮನೇಂ
ಕಾಣಿಸುವೆನೊ ಖಚರರನಡ-
ರ್ದೇಣಿಸುವೆನೊ ಮೇರುಗಿರಿಯ ತುಲ ತುದಿಯಂ!!”
ಇತ್ಯಾದಿಯಾಗಿ ಭೀಮಸೇನನು ಪ್ರಳಯಕಲ್ಪ ಸಂಕಲ್ಪವನ್ನು ಗೈಯ್ಯುವ ಮೀಸೆಯಲ್ಲಿ ಅಭಿಮಾನದ ಸೊಗಸು ರಸಿಕತೆಯಾಗಿವಿಜೃಂಭಿಸಿದೆ.
ವಚನಕಾರರು ಗಂಡಸನ್ನು ಗುರುತಿಸುವಾಗ “ಗಡ್ಡ ಮೀಸೆ ಬಂದರೆ ಗಂಡೆಂಬರು” ಎಂದು ಮೀಸೆಯನ್ನು ಹೆಸರಿಸಿಯೇ ಗುರುತಿಸಿದ್ದಾರೆ. ಹರಿದಾಸರಲ್ಲಿ ಕೂಡ ಬದುಕನ್ನು ಅರ್ಥೈಸುವಾಗ ಇಂತಹದ್ದನ್ನು ಕಾಣಬಹುದಾಗಿದೆ.
ಜನಪರ ಕವಿ ಕುಮಾರವ್ಯಾಸನಂತೂ, “ಮೀಸೆಯೇಕಿದು ಸುಡಲಿ ಸುಭಟರ ವೇಶವೇಕಿದು ಧರ್ಮವಧುಗಳು ಹೇಸರೇ...ಎಂದು ಹೇಳಿ ಮೀಸೆಯ ಮಹತ್ವವನ್ನು ಗಗನಕ್ಕೆ ಏರಿಸಿದ್ದಾನೆ. ಅದೇ ಕುಮಾರವ್ಯಾಸನು ವಿರಾಟಪರ್ವದ ಗೋಗ್ರಹಣದ ಸಂದರ್ಭದಲ್ಲಿ ಮೇಳದ ಲಲನೆಯರ ಒಡ್ಡೋಲಗದಲ್ಲಿ ಉತ್ತರಕುಮಾರನನ್ನು,
“ಕೆಲಬಲನ ನೋಡಿದನು ಮೀಸೆಯ
ನಲುಗಿದನು ತನ್ನಿದಿರ ಮೇಳದ
ಲಲನೆಯರ ಮೊಗ ನೋಡುತುತ್ತರ ಬಿರುದು ಕೆದಣಿದನು.....”
ಎಂದು ಚಿತ್ರಿಸಿ, ಉತ್ತರನನ್ನು ಲಲನೆಯರ ಮಧ್ಯದಲ್ಲಿ, ಪೌರುಷದ ಸಂಕೇತವಾದ ಮೀಸೆಯ ಮುಖಾಂತರ ವೀರಾಧಿವೀರನನ್ನಾಗಿ ಮಾಡಿಬಿಟ್ಟಿದ್ದಾನೆ.
ಸಾಂಗತ್ಯದ ರಸಿಕ ಕವಿ ರತ್ನಾಕರವರ್ಣಿಯಂತೂ, ಭರತೇಶವೈಭವದಲ್ಲಿ ಮೀಸೆಯನ್ನು ಬಳಸಿ ಅದಕ್ಕೆ ಹೊಸ ಮೆರುಗು ತಂದಿದ್ದಾನೆ. ಭರತೇಶನು ದಿಗ್ವಿಜಯಕ್ಕೆ ಹೊರಟಾಗ ಅವನ ಮಗ ಅರ್ಕಕೀರ್ತಿಯು ಭರತೇಶನು ತೊಡೆಯ ಮೇಲೆ ಕುಳಿತು,
“ಮೀಸೆಯ ತಿದ್ದುವ ಗಲ್ಲವ ತಡಹಿವಿ
ಲಾಸದಿ ನಗುವನಾ ತರಳಾ||
ಆ ಸುಕುಮಾರನ ಮೊಳವಲ್ಲ ಕಂಡಣ್ಣ
ಲೇಸು ಲೇಸೆಂಬನಾ ತಂದೆ”
ಎಂದು ರತ್ನಾಕರವರ್ಣಿಯು ನೀಡಿದ ಚಿತ್ರಣದಲ್ಲಿ ಆ ಎಳೆಮಗು ಮುಂದೆ ಮೀಸೆ ಹೊತ್ತ ಗಂಡನಾಗಿಯೇ ಬೆಳೆಯುತ್ತಾನೆಂಬುದರ ಮೊಳವನ್ನು ಕಾಣಬಹುದಾಗಿದೆ. ಹೀಗೆ ಇದೊಂದು ಅಪರೂಪದ ಬಾಲ ಲೀಲೆಯ ವರ್ಣನೆ. ಕನ್ನಡ ಸಾಹಿತ್ಯದಲ್ಲಿ ಚಿರಸ್ಥಾಯಿಯಾಗಿ ನಿಲ್ಲುವ ಭಾಗ. ಇದಕ್ಕೆ ಕಾರಣ, ಆ ಮಗು ಮೀಸೆಯನ್ನು ತಿದ್ದಿದ ರೀತಿ ಎಂಬುದೇ ಮುಖ್ಯ.
ನಂದಳಿಕೆ ನಾರಾಯಣಪ್ಪನ ಸಹಸ್ರಕಂಡ ರಾವಣನು ಯುದ್ಧಕ್ಕೆ ಹೊರಡುವಾಗಿನ ರಸಿಕ ಚಿತ್ರದಲ್ಲಿಯೂ ಮೀಸೆ ಹಾರಿಹೋಗಿಲ್ಲ. ಆ ರಸವತ್ತಾದ ಭಾಗವು ಇಂತಿದೆ;
“ಇಂತು ಬಂತಿದಲೆಯಂ ಚಲ್ಲಣಮನಿಟ್ಟು, ದಟ್ಟೆಯಂ ಬಿಗಿದು
ಸೂಸಕಂ ತೊಟ್ಟು, ಸಾಲೊಳ್ ಮುಕುಟಗಳನಳವಡಿಸಿ
ಕೈ ಪಡಿಯಂ ಕೊಂಡು, ಕತ್ತುರಿಯ ಬೊಟ್ಟಿಟ್ಟು, ಮೀಸೆಯಂ
ತಿರ್ದಿ ಪುರಿಗೆಯ್ದು, ಸೊಬಗಿಂಗೆ ನಸುನಕ್ಕು, ಅಣುದಂಬುಲಮಂ
ಸವಿದು....”
ಎಂದು ಚಿತ್ರಿಸಿದ ಈ ಮುದ್ದಣ ರಾವಣನ ಮುದ್ದುತನದ ಸೊಬಗು, ‘ತಿರ್ದಿಪುರಿಗೆಯ್ದ’ ಮೀಸೆಯಲ್ಲಿಯೇ ಎಂದಾಗ ಈ ಸಹಸ್ರಕಂಠದ ರಾವಣ, ಕನ್ನಡದ ರಸಿಕ ರಾವಣನಾಗಿಯೇ ಕಂಗೊಳಿಸಿ ಬಿಡುತ್ತಾನೆ.
ಈ ಮೀಸೆಯ ರಸಿಕತೆಯು ಕೇವಲ ಪುರಾಣ ವ್ಯಕ್ತಿಗಳ, ರಾಜರು ಮಹಾರಾಜರ ಸೊತ್ತಲ್ಲ. ಅದು ಸಾದಾ ಶ್ರೀಸಾಮಾನ್ಯರೆಲ್ಲರ ಸೊತ್ತೂ ಹೌದು. ಹಾಗಾದರೆ ಸಾಮಾನ್ಯ ಬೇಡನಲ್ಲಿರುವ ನಮ್ಮ ನಾಡಿನ ರಸಿಕತೆಯನ್ನು ಆಸ್ವಾದಿಸಲೇಬೇಕು. ಆ ವರ್ಣನೆಯ ಪದ್ಯವು ಇಂತಿದೆ:
“ಸುಲಿಪಲೆ, ಕೊಂಕಿರ್ದಪುರ್ಬು, ಅಂಬುದನಿಭತನು, ಕೆಂಗಣ್ಗಳ್, ಒಳ್ಮೀಸೆಚೆಲ್ವಾಗೆ, ಲಸನ್ಮತ್ತೇಭಮುಕ್ತಾಭರಣಮೆನೆಯೆ, ಕೂರ್ಪಾಸಮಂ ತೊಟ್ಟು, ಕಟ್ಟುತ್ತೆ ಲತಾಸಂದೋಹದಿಂದ ಕೇಶಮನಮರೆ, ಧನುರ್ಭಾಣಮಂ ತಾಳ್ದು, ಕೆರ್ಪಂ ನಲದಿಂ ಮೆಟ್ಟುತ್ತೆ, ಕೂನಾಯ್ಮರಸು ಶಬರರೊಂದಾಗಿ ಬಂದಂ ಪುಳಿಂದಂ||”
ಎಂಬಲ್ಲಿ ರಸಿಕತೆಯು ಇರುವುದೇ ಒಳ್ಮೀಸೆಯ ಚೆಲುವಿನಲ್ಲಿ.
ಜಾನಪದ ಸಾಹಿತ್ಯದ ವೀರಗೀತೆಗಳಲ್ಲಿಯಂತೂ ಮೀಸೆಗಿರುವ ಭಾಗ್ಯವು ಅಸದಳ. ಆ ಭಾಗ್ಯದ ಧ್ವನಿಯು ತುಂಬ ಆಸ್ವಾದಕರ. ಇದಕ್ಕಾಗಿ ಸಿಂಧೂರ ಲಕ್ಷ್ಮಣನ ಲಾವಣಿಯಲ್ಲಿಯ ಕೆಲವು ಸಾಲುಗಳನ್ನು ನೋಡಿದರೆ ಸಾಕು. ಅಲ್ಲಿ ತೃಪ್ತಿ, ಅಲ್ಲಿ ರಾಷ್ಟ್ರಾಭಿಮಾನದ, ಸ್ವಾಭಿಮಾನದ ಉರ್ಕು ಕೂಡ. ಇಗೋ ನೋಡಿ.
“ಕತ್ತಿ ಬಂದೂಕ ಬರ್ಚಿ ತಗೊಂಡಾರು|
ಕುದುರಿಬಾಲ ಕೊಯ್ದಾರು!
ಒಬ್ಬ ಸಿಪಾಯ್ನ ಎಬ್ಬಿಸಿ ಮೀಸಿ ಬೋಳಿಸ್ಯಾರು!
ಹಡಬಡಿಸಿ ಎದ್ದು ನೋಡೂದರಾಗ!
ಓಡಿಹೋಗ್ಯಾರು ಫರಾರು ಆಗ್ಯಾರು!
ಎಂಬ ಸಾಲುಗಳಲ್ಲಿ ಮೀಸೆಗಿರುವ ಗೌರವ ಸ್ಥಾನ ಅರಿವಾಗುತ್ತದೆ. ಮೀಸೆಗೆ ಮಣ್ಣಾಗಲಾರದ ಗೌರವಸ್ಥಾನ, ಗೌರಿಶಂಕರ.
ಇಂಥ ರಸಿಕತನದ ಮೀಸೆಯ ಪ್ರಾಚೀನತೆಯನ್ನು ಕುರಿತು ತಿಳಿದುಕೊಂಡಂತೆ, ಕಳೆದೆರಡು ಶತಮಾನಗಳ ಇತಿಹಾಸದ ಪುಟಗಳನ್ನು ಓದತೊಡಗಿದರೆ, ಆ ಸಂದರ್ಭದ ಕೆಲವು ದಶಕಗಳಲ್ಲಿ ಮೀಸೆಯನ್ನು ಬೋಳಿಸಿಕೊಳ್ಳುವುದರಲ್ಲಿಯೇ ರಸಿಕತೆಯನ್ನು ಕಂಡಿರುವುದು ವಿಧಿತವಾಗುತ್ತದೆ. ಹೀಗಾದುದು, ಆ ಕಾಲದಲ್ಲಿಯ ನಮ್ಮ ಗುಲಾಮೀತನವನ್ನು ಪ್ರತಿನಿಧಿಸುತ್ತದೆಯೆಂದು ಅರ್ಥಮಾಡಬೇಕಾಗುತ್ತದೆ. ಆದರೆ ಸ್ವಾತಂತ್ರ್ಯದ ಅನಂತರ ಇತ್ತೀಚಿನ ದಶಕಗಳನ್ನು ಹೆಂಗಸರ ರಸಿಕತೆಯಾದ ಕುಡಿನೋಟವು ಯುವಕರನ್ನು ಓಲೈಸುವುದು ಕಡಿಮೆಯಾದುದರಿಂದ, ಮತ್ತೆ ನಾನಾ ತರಹದ ಕುಡಿಮೀಸೆಗಳು ಯುವಕರಲ್ಲಿ ಕಾಣತೊಡಗಿ ಪೌರುಷವು ಮೆರಗು ಪಡೆಯುತ್ತಿರುವುದು ಹೆಮ್ಮೆಯ ಮಾತು. ಆದರೆ ಆ ಎಲ್ಲರಲ್ಲಿ ಕನ್ನಡತನವು ಹುರುಪುಗೊಳ್ಳಬೇಕಾಗಿದೆ. ಹುರಿಗೊಳ್ಳಬೇಕಾಗಿದೆ. ಆದ್ದರಿಂದ ಹುಲಿಯ ಮೀಸೆಗಳನ್ನು ಅಲುಗಾಡಿಸಿದ ಪುಲಕೇಶಿಯನ್ನು ಓದಿ ಸ್ಫೂರ್ತಿಯನ್ನು ಪಡೆಯಬೇಕಾಗಿದೆ. ವಿಜಯನಗರ ಕೃಷ್ಣದೇವರಾಯ, ಸುರಪುರದ ರಾಜಾವೆಂಕಟಪ್ಪ ನಾಯಕರಂತಹರ ಭಾವಚಿತ್ರಗಳಲ್ಲಿಯ ಮೀಸೆಗಳನ್ನು ಕಂಡು ನಮ್ಮ ಮೀಸೆಗಳನ್ನು ಹುರುಪಿನಿಂದ ಹುರಿಗೊಳಿಸಿ ಕುಣಿಯಬೇಕಾಗಿದೆ. ಇದರಿಂದಾಗಿಯಾದರೂ ಕನ್ನಡಿಗರ ರಸಿಕತೆಯಲ್ಲಿಯ ಕೃತ್ರಿಮತೆಯು ದೂರವಾಗಬಹುದೆಂದು ವಿಶ್ವಾಸಿಬಹುದು. ಇಲ್ಲದಿದ್ದರೆ ಹೆಂಗಸರೂ ಬೇಸತ್ತು ಮೀಸೆಯನ್ನು ಹೊತ್ತಾರು!

No comments:

Post a Comment