Tuesday, October 5, 2010

ಕಲಿಕೆಯ ಪ್ರಕ್ರಿಯೆ

ಡಾ||ಎಚ್.ಡಿ.ಚಂದ್ರಪ್ಪಗೌಡ

ಎಳೆಯರು ಇಲ್ಲವೆ ವಯಸ್ಕರೆ ಆಗಿರಲಿ ಯಾವುದೇ ಒಂದು ವಿಷಯವನ್ನು ಮೊದಲು ಹೇಗೆ ಕಲಿತು ಕೊಳ್ಳುತ್ತಾರೆ ಎಂಬ ಮೂಲಭೂತ ಪ್ರಕ್ರಿಯೆಯತ್ತ ಗಮನ ಹರಿಸುವುದು ಉಚಿತವೆನಿಸುತ್ತದೆ. ಮಾನವ ಶಿಶು ಜನಿಸಿದಾಕ್ಷಣ ಕಣ್ಣುಬಿಟ್ಟ ಒಡನೆಯೇ ತನ್ನ ಸುತ್ತಲೂ ಆವರಿಸಿಕೊಂಡಿರುವ ಬೆಳಕಿನತ್ತ ಗಮನಹರಿಸುತ್ತದೆ. ಹಾಗೆಯೇ ಆಗಾಗ್ಗೆ ಕೇಳಿ ಬರುವ ಸದ್ದುಗದ್ದಲದ ಅರಿವು ಉಂಟಾಗುತ್ತದೆ. ಮೊದಲಿಗೆ ಅಂತಹ ಬೆಳಕು, ಶಬ್ದಗಳಿಗೆ ಸ್ವಾಭಾವಿಕ ಹಾಗೂ ಸ್ವಯಂಪ್ರೇರಿತವಾಗಿ ಪ್ರತಿಕ್ರಿಯಿಸುತ್ತದೆ. ಅನಂತರ ಹೊರಗಿನ ವಾತಾವರಣದಿಂದ ರಕ್ಷಣೆ ನೀಡುವ ಹಾಲುಣಿಸುವ ಮಾತೆಯತ್ತ ಆಕರ್ಷಿತವಾಗುತ್ತದೆ. ಮಾತೆ ತನ್ನ ಸ್ತನಗಳಿಗೆ ಶಿಶುವಿನ ಸ್ಪರ್ಶ ಮಾಡಿದಾಗ ಬಾಯಿ ತೆರೆದು ಮೊಲೆಗೆ ಬಾಯಿ ಹಾಕಿ ಹಾಲು ಚೀಪಲಾರಂಭಿಸುತ್ತದೆ. ಮುಂದಿನ ದಿನಗಳಲ್ಲಿ ಹತ್ತಿರ ಸುಳಿದಾಡುವ ತಾಯಿ, ತಂದೆ ಮತ್ತಿತರರು ಮಾತಾಡಿಕೊಳ್ಳುತ್ತಿರುವುದನ್ನು ತನ್ನದೇ ರೀತಿಯಲ್ಲಿ ಅರ್ಥೈಸಿಕೊಳ್ಳುತ್ತದೆ. ದಿನ ಕಳೆದಂತೆ ಅವರನನ್ನುಸರಿಸುವ ಪ್ರಯತ್ನ ಮಾಡಬಹುದು. ಇನ್ನು ಅದರ ಬೆಳವಣಿಗೆ ಮುಂದುವರಿದಂತೆಲ್ಲಾ ಅದು ಮನೆಯ ಒಂದು ವ್ಯಕ್ತಿಯಾಗಿ ಬಿಡುತ್ತದೆ. ಅದು ಮತ್ತಷ್ಟು ಮುಂದುವರಿದಂತೆಲ್ಲಾ ಅದು ಮನೆಯವರಾಡುವ ಮಾತುಗಳನ್ನನುಸರಿಸಿ ಮಾತೃಭಾಷೆಯಲ್ಲಿ ತೊದಲ್ನುಡಿ ಪುನರುಚ್ಚರಿಸುವ ಪ್ರಯತ್ನ ಮಾಡುತ್ತದೆ. ಮನೆಯಲ್ಲಿನ ಇತರ ಮಕ್ಕಳು ಓದಿ, ಬರೆಯುವ ಆಟ, ಊಟ, ಓಟ ಮುಂತಾದ ಶಬ್ದಗಳನ್ನು ನಿರಾಯಾಸವಾಗಿ ಅರ್ಥಮಾಡಿಕೊಳ್ಳುತ್ತದೆ.
ಮುಂದಿನ ಎರಡು-ಮೂರು ವರ್ಷಗಳಲ್ಲಿ ಮಗುವನ್ನು ಶಿಶುವಿಹಾರ/ನರ್ಸರಿಗಳಿಗೆ ಸೇರಿಸಬಹುದು. ಮೊದಲೇ ಅಪರಿಚಿತ ಪರಿಸರವಿರುವ ಶಾಲೆಯಲ್ಲಿ ಪುಟ್ಟ ಕಂದಮ್ಮಗಳಿಗೆ ಅಕ್ಷರಾಭ್ಯಾಸ ಮಾಡುವ ಪ್ರಯತ್ನಗಳು ಆರಂಭವಾಗುತ್ತದೆ. ಜನ್ಮದತ್ತವಾಗಿರುವ ಮಾತೃಭಾಷೆಯ ಅ,ಆ,ಇ,ಈ ಕಲಿಸುವ ಬದಲು ತನಗೆ ಪರಿಚಯವಿರದ ಇಂಗ್ಲೀಷಿನ ಎ ಬಿ ಸಿ ಡಿಗಳನ್ನು ಒತ್ತಾಯಪೂರ್ವಕವಾಗಿ ಕಲಿಸುವ ಪ್ರಯತ್ನ ಮಾಡಲಾಗುತ್ತದೆ. ಅರ್ಥವಾಗದಿದ್ದರೂ ಹೇಳಿದ್ದನ್ನೇ ಪುನರುಚ್ಚರಿಸುವ ಗಿಣಿಗಳಂತೆ ಬಾಯಿಪಾಠ ಮಾಡಿಸಲಾಗುತ್ತದೆ. ದಿನಕಳೆದಂತೆ ಕ್ಯಾಟ್, ರ‍್ಯಾಟ್, ಡಾಗ್‌ಗಳಂಥ ಪ್ರಾಣಿಗಳ ಹೆಸರುಗಳನ್ನು ಪುನರುಚ್ಚರಿಸುವ ಪ್ರಯತ್ನ ಮುಂದುವರಿಯುತ್ತದೆ. ಅದನ್ನೇ ಮಾತೃಭಾಷೆಯಲ್ಲಿ ಬೆಕ್ಕು, ಇಲಿ, ನಾಯಿಯೆಂದು ಹೇಳಿಕೊಡುವಂತಾದರೆ ಪುಟ್ಟ ಕಂದಮ್ಮ ದಿನನಿತ್ಯ ನೋಡುವ ಪ್ರಾಣಿಗಳನ್ನು ನೆನಪಿನಲ್ಲಿಡಲು ಸುಲಭವಾಗುವುದಿಲ್ಲವೆ? ಅದೇ ರೀತಿ ಸರಳ ಹಾಗೂ ಸುಲಭವಾಗಿ ಅರ್ಥವಾಗುವ ಕನ್ನಡದ ಶಿಶುಪ್ರಾಸಗಳು ಯಥೇಚ್ಛವಾಗಿದ್ದರೂ ಬಣ್ಣದ ತಗಡಿನ ತುತ್ತೂರಿ, ನಾಯಿಮರಿ ನಾಯಿಮರಿ ತಿಂಡಿಬೇಕೆ, ತೀರ್ಥಬೇಕೆ? ಬದಲಿಗೆ ಇಂಗ್ಲೀಷಿನ ಹಿಕೋರಿ ಹಿಕೋರಿ ಡಾಕ್. ಓಲ್ಡ್ ಮದರ್ ಹಬ್ಬರ್ಡ್ ಎಂಬ ರೈಮ್‌ಗಳಿಗೆ ಅದೇಕೆ ಅಷ್ಟು ವ್ಯಾಮೋಹವೆಂಬುದು ಅರ್ಥವಾಗುತ್ತಿಲ್ಲ. ಮಾತೆಯೊಬ್ಬಳು ರಾತ್ರಿಯ ಚಂದಿರನನ್ನು ತನ್ನ ಮಗುವಿಗೆ ತೋರಿಸಿ ಅಲ್ಲಿ ನೋಡು ಮೂನು ಎನ್ನುವುದನ್ನು ನೋಡಿದವರಿಗೆ ಏನೆನಿಸಬೇಡ? ಇದರಿಂದ ಸಹಜವಾಗಿ ಕಲಿಯುವ ಪ್ರಕ್ರಿಯೆಯನ್ನು ತಿರುವು ಮುರುವು ಮಾಡಿದಂತಾಗುವುದಿಲ್ಲವೆ? ಇಂತಹ ಅಭ್ಯಾಸವನ್ನು ಮಾಡುತ್ತಿರುವುದರಿಂದ ಮಗುವಿನ ಸ್ವಾಭಾವಿಕ ಕಲಿಕೆಯ ಪ್ರಕ್ರಿಯೆಗೆ ಸ್ವಲ್ಪಮಟ್ಟಿನ ಅಡಚಣೆ ಉಂಟಾಗುತ್ತದೆ. ಅಂದರೆ ಭಾಷೆ ಇಲ್ಲವೇ ಹೊಸ ವಿಚಾರವನ್ನು ಕಲಿಯುವಾಗ ಅದು ಮನಸ್ಸಿನಲ್ಲಿ (ಮೆದುಳಿನಲ್ಲಿ) ಅವನ ಅರಿವಿಗೆ ಬರದೆ ತಂತಾನೆ ಅವನ ಮಾತೃಭಾಷೆಯಲ್ಲಿ ಅಚ್ಚೊತ್ತಾಗುತ್ತದೆ. ಮುಂದೆ ಉದ್ದೇಶಿತ ಭಾಷೆಯಲ್ಲಿ (ಇಂಗ್ಲಿಷ್, ಹಿಂದಿ ಇತ್ಯಾದಿ) ಅರ್ಥೈಸುವಲ್ಲಿ ಒಂದು ರೀತಿಯ ಕಸರತ್ತು ಜರುಗಬೇಕಾಗುತ್ತದೆ. ಅದನ್ನು ಕಲಿಕೆಯ ಕಸರತ್ತು ಎನ್ನಬಹುದು. ಆ ಪ್ರಕ್ರಿಯೆ ಮೆದುಳಿನಲ್ಲಿ ಜರುಗುವಾಗ ಸ್ವಲ್ಪ ಶ್ರಮ ಹಾಗೂ ಶಕ್ತಿಯೂ ವ್ಯಯವಾಗುತ್ತದೆ.
ಅಮೆರಿಕಾದಲ್ಲಿ ಇತ್ತೀಚೆಗೆ ಜರುಗಿದ ಸಂಶೋಧನಾ ಫಲಿತಾಂಶ ಇಲ್ಲಿ ಗಮನಾರ್ಹ. ಅಲ್ಲಿ ಇಂಗ್ಲೀಷ್ ಮಾತೃ ಭಾಷೆಯವರು ಬಹುಸಂಖ್ಯಾತರಾಗಿದ್ದಾರೆ. ಅವರಲ್ಲದೆ ಪ್ರಪಂಚದ ವಿವಿಧ ದೇಶಗಳಿಂದ (ಉದಾಹರಣೆಗೆ: ಭಾರತ, ಚೀನಾ, ಜಪಾನು, ಆಫ್ರಿಕಾಗಳಿಂದ) ವಲಸೆ ಬಂದು ನೆಲಸಿದವರೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಹಾಗೆ ವಲಸೆ ಬಂದವರ ಮಕ್ಕಳಿಗೆ ಇಂಗ್ಲಿಷನ್ನು ಅಗತ್ಯವಾಗಿ ಕಲಿಸಬೇಕಾಗುತ್ತದೆ. ನೇರವಾಗಿ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತವರಿಗೂ, ಅವರವರ ಮಾತೃಭಾಷಾ (ಹಿಂದಿ, ತಮಿಳು, ಚೀಣೀ...) ಮಾಧ್ಯಮಗಳಲ್ಲಿ ಕಲಿತವರಿಗೂ ಸಂವೈದ್ಯವಾದ ವ್ಯತ್ಯಾಸವನ್ನು ಗುರುತಿಸಲು ಸಾಧ್ಯವಾಯಿತಂತೆ. ಅದೆಂದರೆ ಮಾತೃಭಾಷಾ ಮಾಧ್ಯಮದಿಂದ ಇಂಗ್ಲಿಷ್ ಕಲಿತವರೂ ಮುಂದೆ ಇಂಗ್ಲಿಷಿನಲ್ಲಿ ಪ್ರಭುತ್ವ ಪಡೆಯುವಲ್ಲಿ ಇತರರಿಗಿಂತ ಮುಂದಿರುವುದೇ ಸಾಬೀತಾಗಿದೆಯಂತೆ. ಅದರಿಂದ ಹೊರದೇಶಗಳಿಂದ ವಲಸೆ ಬಂದಿರುವವವರು ತಮ್ಮ ಮಕ್ಕಳಿಗೆ ಅವರ ಮಾತೃಭಾಷಾ ಮಾಧ್ಯಮದಿಂದಲೇ ಇಂಗ್ಲೀಷ್ ಕಲಿಸುವುದಕ್ಕೆ ಖಾಸಗಿಯಾಗಿ ಕಲಿಸುವ ಏರ್ಪಾಡು ಮಾಡುತ್ತಿದ್ದಾರಂತೆ. ಇದರಿಂದ ನಮ್ಮ ದೇಶದಲ್ಲಿ ಮಾತೃಭಾಷೆಯ ಬದಲಿಗೆ ಇಂಗ್ಲಿಷಿನಂತಹ ಪರಭಾಷೆ ಮಾಧ್ಯಮದಲ್ಲಿ ಕಲಿಕೆಯನ್ನು ಆರಂಭಿಸುತ್ತಿರುವುದರ ಉದ್ದೇಶವೇನೆಂಬುದು ನಿಗೂಢವೆ ಸರಿ. ಮಾತೃಭಾಷೆಯ ಮಾಧ್ಯಮದ ಮೂಲಕವೇ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸಬೇಕೆಂಬ ಹಲವು ಭಾಷಾ ಪರಿಣತರು, ಮನೋವಿಜ್ಞಾನಿಗಳು, ರವೀಂದ್ರನಾಥ ಟ್ಯಾಗೋರ್, ಮಹಾತ್ಮಾ ಗಾಂಧಿಜೀಯವರಂಥ ದಾರ್ಶನಿಕರು ಹೇಳುವುದರಲ್ಲಿ ಸತ್ಯವಿದೆಯೆಂದೆನ್ನಬೇಕಾಗುತ್ತದೆ. ಆದುದರಿಂದ ನಮ್ಮ ದೇಶದಲ್ಲಿ ಇನ್ನೂ ಇಂಗ್ಲೀಷಿನಂತಹ ಪರಭಾಷೆಯಿಂದ ವ್ಯಾಪಕವಾಗಿ ಜರುಗುತ್ತಿರುವ ಈ ಪದ್ಧತಿಯನ್ನು ಸರ್ಕಾರ ಮತ್ತು ಜನಸಮುದಾಯದವರು ಮರುಪರಿಶೀಲನೆ ಮಾಡಬೇಕಾದ ಪರಿಸ್ಥಿತಿ ಸನ್ನಿಹಿತವಾಗಿದೆಯೆನ್ನಬಹುದು.
ಬೀದರ್ ಉರ್ದು ಶಾಲೆಯ ನಿದರ್ಶನ
ಮೊದಲಿನಿಂದಲೂ ಮಾತೃಭಾಷಾ ಮಾಧ್ಯಮ ಮೂಲಕ ಕಲಿಕೆಯನ್ನು ಆರಂಭಿಸುವ ಅನುಕೂಲತೆಯನ್ನು ಪ್ರಸ್ತಾಪಿಸಿರುವುದು ಕೇವಲ ತಾತ್ವಿಕವಾದುದು; ಕಾರ್ಯಸಾಧುವಾದುದಲ್ಲ ಎಂದೆನಿಸಲೂಬಹುದು. ಅದು ಹೇಗೆ ಕಾರ್ಯಸಾಧುವೆಂಬುದನ್ನು ಸೂಚಿಸಲು ನಮ್ಮ ಕನ್ನಡನಾಡಿನ ಬೀದರ್‌ನಲ್ಲಿ ಜರುಗುತ್ತಿರುವ ಒಂದು ಪ್ರಾತ್ಯಕ್ಷಿಕೆಯನ್ನು ಉದಾಹರಿಸುವುದು ಸೂಕ್ತವೆನಿಸುತ್ತದೆ.
ಕರ್ನಾಟಕದ ಉತ್ತರದ ತುದಿಯಲ್ಲಿರುವ ಬೀದರ್‌ನಲ್ಲಿ ೧೯೯೧ರಲ್ಲಿ ಷಾಹೀನ್ ಸ್ಕೂಲ್ ಎಂಬ ಅಲ್ಪಸಂಖ್ಯಾತರ ಉರ್ದು ಭಾಷೆಯ ಶಾಲೆಯೊಂದು ಪ್ರಾರಂಭವಾಯಿತು. ಪ್ರಾಥಮಿಕ ಒಂದನೇ ತರಗತಿಯಿಂದಲೇ ವಿಜ್ಞಾನದ ವಿಷಯಗಳೂ ಸೇರಿದಂತೆ ಇತರ ಎಲ್ಲಾ ವಿಷಯಗಳನ್ನು ಉರ್ದು ಭಾಷಾ ಮಾಧ್ಯಮದಲ್ಲೇ ಬೋಧಿಸುತ್ತಿರುವುದು ಅದರ ವಿಶೇಷತೆ; ಜೊತೆಯಲ್ಲಿ ಇಂಗ್ಲೀಷನ್ನು ಒಂದು ಪಠ್ಯದ ವಿಷಯವಾಗಿ-ಮಾಧ್ಯಮವಾಗಿ ಅಲ್ಲಿ-ಕಲಿಸುತ್ತಿರುವುದು ಆ ಶಾಲೆಯ ಇನ್ನೂ ಒಂದು ವೈಶಿಷ್ಟ್ಯ!
ಪದವಿ ಪೂರ್ವ ಹಂತದವರೆಗೂ ಈ ರೀತಿಯ ಕಲಿಕೆ ಮುಂದುವರಿಯಿತು. ಕಳೆದ ವರ್ಷ ಪದವಿ ಪೂರ್ವ ಪರೀಕ್ಷೆಗೆ ಕುಳಿತ ೧೭೩ ವಿದ್ಯಾರ್ಥಿಗಳಲ್ಲಿ ಶೇ.೭೦ರಷ್ಟು ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದರು. ಮುಂದೆ ವೃತ್ತಿಪರ ಕಲಿಕೆಗಾಗಿ ಸಿ.ಇ.ಟಿ.ಪರೀಕ್ಷೆಗೆ ಕುಳಿತ ಸುಮಾರು ಅರ್ಧದಷ್ಟು ವಿದ್ಯಾರ್ಥಿಗಳು ಮೆಡಿಕಲ್ ಮತ್ತು ಇಂಜಿನಿಯರಿಂಗ್ ಕೋರ್ಸುಗಳಿಗೆ ಸೇರುವ ಅರ್ಹತೆ ಪಡೆದುಕೊಂಡಿದ್ದರು. ಇಂತಹ ಅಚ್ಚರಿಯ ಫಲಿತಾಂಶ ಉರ್ದು ಮಾಧ್ಯಮದಲ್ಲಿ ಕಲಿತವರಿಂದ ಎಂದರೆ ನಂಬಲಸಾಧ್ಯವೆ! ಅಂತಹ ಉತ್ತಮ ಫಲಿತಾಂಶ ಸಾಧ್ಯವಾದುದಾದರೂ ಹೇಗೆ? ಅವರಿಗೆಲ್ಲಾ ಹತ್ತನೆ ತರಗತಿಯ ಪರೀಕ್ಷೆಗಳು ಮುಗಿದ ತಕ್ಷಣ ೪೦ ದಿನಗಳ ಕಾಲ ಹಿಂದಿನ ವರ್ಷಗಳಲ್ಲಿ ಉರ್ದುವಿನಲ್ಲಿ ಕಲಿತವರಿಗೆಲ್ಲಾ ಒಂದು ರೀತಿಯ ಸಂಯೋಜಿತ ಉಪನ್ಯಾಸಮಾಲೆಯನ್ನು ಏರ್ಪಡಿಸುತ್ತಾರಂತೆ. ಅದರಿಂದಾಗಿ ಅವರೆಲ್ಲಾ ಮುಂದಿನ ತರಗತಿಗಳಲ್ಲಿ (ಪದವಿ ಪೂರ್ವ) ವಿಜ್ಞಾನದ ವಿಷಯಗಳೂ ಸೇರಿದಂತೆ ಎಲ್ಲಾ ವಿಚಾರಗಳನ್ನು ಇಂಗ್ಲಿಷಿನಲ್ಲಿ ಪುನರವಲೋಕನ ಮಾಡಿಕೊಳ್ಳಲು ಸಾಧ್ಯವಾಗುತ್ತದಂತೆ. ಇದರಿಂದ ಉರ್ದುವಿನಲ್ಲಿ ಕಲಿತ ವಿಷಯಗಳನ್ನು ಇಂಗ್ಲಿಷಿಗೆ ಸುಲಭವಾಗಿ ಸಾಗಣೆ ಮಾಡಿದಂತಾಗುತ್ತದೆ. ಅಂದರೆ ಈ ಶಾಲೆಯಲ್ಲಿ ಇಂಗ್ಲೀಷ್ ಬೋಧನೆಗೆ ಹೆಚ್ಚಿನ ಒತ್ತು ಕೊಡುವ ಬದಲು ಗಂಭೀರವಾದ ಶೈಕ್ಷಣಿಕ ವಿಷಯಗಳಿಗೆ ಮೊದಲ ಪ್ರಾಶಸ್ತ್ಯ ಕೊಟ್ಟು, ಜೊತೆ ಜೊತೆಯಲ್ಲೇ ಇಂಗ್ಲೀಷ್ ಕಲಿಕೆಗೂ ಅವಕಾಶ ಮಾಡಿಕೊಡುತ್ತಿದ್ದರು.
ಮೊದಲಿನಿಂದಲೂ ಇಂಗ್ಲೀಷ್ ಮಾಧ್ಯಮದಲ್ಲಿ ಕಲಿಯದವರು ಮುಂದೆ ವೈಜ್ಞಾನಿಕ ವಿಷಯಗಳನ್ನು ಅಭ್ಯಾಸ ಮಾಡುವುದು ಕಷ್ಟವಾಗುತ್ತದೆಂದು ವಾದಿಸುವವರೂ ಇದ್ದಾರೆ. ಹಾಗೆ ವಿಜ್ಞಾನದ ಪಾರಿಭಾಷಿಕ ಪದಗಳನ್ನು ಅರ್ಥಮಾಡಿಕೊಳ್ಳುವುದೂ ಸುಲಭವಲ್ಲ ಎನ್ನುವವರಿಗೂ ಬರವಿಲ್ಲ.
ವೈದ್ಯಕೀಯ, ಇಂಜಿನಿಯರಿಂಗ್, ಮಾಹಿತಿ ತಂತ್ರಜ್ಞಾನದ ಮುಂತಾದ ಶಾಖೆಗಳಲ್ಲಿ ಮುಂದುವರಿದ ಕಲಿಕೆಗೆ ಇಂಗ್ಲೀಷ್ ಮಾಧ್ಯಮ ಅತ್ಯಾವಶ್ಯಕವೆಂಬ ನಂಬಿಕೆಯೂ ಪ್ರಚಲಿತವಿದೆ. ಹಾಗೆ ನೋಡಿದರೆ ಇಂಗ್ಲಿಷಿನಲ್ಲಿ ಪ್ರಚಲಿತವಿರುವ ಪಾರಿಭಾಷಿಕ ಪದಗಳು ಮೂಲತಃ ಇಂಗ್ಲಿಷಿನವಲ್ಲ, ಬಹುಪಾಲು ಪುರಾತನ ಲ್ಯಾಟಿನ್ ಗ್ರೀಕ್‌ನಂಥ ಭಾಷೆಗಳವು. ಅವುಗಳನ್ನು ಕನ್ನಡದಲ್ಲಿ ವಿವರಿಸಿ ಅವು ಇದ್ದ ಹಾಗೆ ಬಳಸಬಹುದು; ಮತ್ತೆ ಕೆಲವನ್ನು ಕನ್ನಡದೊಡನೆ ಸೇರಿಸಿ ಪರಿವರ್ತನೆ ಮಾಡಿಕೊಳ್ಳಲು ಸಾಧ್ಯವಿದೆ.
ಕನ್ನಡವೂ ಸೇರಿದಂತೆ ವೈಜ್ಞಾನಿಕ ವಿಷಯಗಳನ್ನು ದೇಶೀಯ ಭಾಷೆಗಳಲ್ಲಿ ಸಮರ್ಥವಾಗಿ ಬರೆದು ಪ್ರಖ್ಯಾತಿ ಪಡೆದವರೂ ಬಹಳಷ್ಟು ಜನರು ನಮ್ಮಲ್ಲಿದ್ದಾರೆ. ಕನ್ನಡದಲ್ಲಿ ವೈದ್ಯಕೀಯವೂ ಸೇರಿದಂತೆ ಈಗಾಗಲೇ ನೂರಾರು ಲೇಖಕರು ಪ್ರತಿವರ್ಷ ಸಾವಿರಾರು ಜನಪ್ರಿಯ ಲೇಖನಗಳನ್ನು ಹಾಗೂ ನೂರಾರು ಪುಸ್ತಕಗಳನ್ನು ಪ್ರಕಟಿಸುತ್ತಿದ್ದಾರೆ. ಅವುಗಳಲ್ಲಿ ಅನೇಕ ಕೃತಿಗಳಿಗೆ ಸ್ಥಳೀಯ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರಗಳು ಲಭಿಸುತ್ತಿವೆ.
ಪ್ರಪಂಚದಾದ್ಯಂತ ವೈಜ್ಞಾನಿಕ ಸಾಧನೆಗಳಲ್ಲಿ ಪ್ರಸ್ತುತ ಮುಂಚೂಣಿಯಲ್ಲಿರುವುದು ಇಂಗ್ಲೀಷ್ ಮಾತೃಭಾಷೆಯಾಗಿರುವ ಅಮೆರಿಕಾ, ಇಂಗ್ಲೆಂಡುಗಳಂಥ ರಾಷ್ಟ್ರಗಳು ಎಂಬ ಭಾವನೆಯಿದೆಯಷ್ಟೆ. ಕಳೆದ ಶತಮಾನದಲ್ಲಿ ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ತೀವ್ರ ಪೈಪೋಟಿ ನಡೆಯುತ್ತಿತ್ತು. ಮೊಟ್ಟಮೊದಲು ಬಾಹ್ಯಾಕಾಶಕ್ಕೆ ಕೃತಕ ಉಪಗ್ರಹ ಸ್ಪುಟ್ನಿಕ್ ಅನ್ನು ೧೯೫೭ರಲ್ಲಿ ಹಾರಿಸಿದವರು ಇಂಗ್ಲೀಷ್ ಮಾತೃಭಾಷೆಯಲ್ಲದ ರಷ್ಯನ್ನರು. ಅದೇ ರೀತಿ ಮೊದಲ ಯಶಸ್ವೀ ಚಂದ್ರಯಾನ ಮಾಡಿದವರೂ ಅವರೇ (೧೯೫೯). ಅವರ ಭಾಷೆ ರಷ್ಯನ್; ಇಂಗ್ಲೀಷ್ ಅಲ್ಲ ಎಂಬುದು ಗಮನಾರ್ಹ. ಈಗಲೂ ವೈಜ್ಞಾನಿಕ ಸಂಶೋಧನೆಗಳಲ್ಲಿ ಜರ್ಮನಿ, ಜಪಾನು, ಕೊರಿಯಾದಂತಹ ಇಂಗ್ಲಿಷ್ ಅಲ್ಲದವರು ಮುಂದಿದ್ದಾರೆ. ಭಾರತವೂ ಆ ದಿಸೆಯಲ್ಲಿ ದಾಪುಗಾಲು ಹಾಕುತ್ತಿದ್ದು, ಮೂರು ತಿಂಗಳುಗಳ ಹಿಂದೆ ಚಂದ್ರಯಾನ-೧ನ್ನು ಹಾರಿಸಿದ ಗರಿಮೆ ನಮ್ಮದಾಗಿದೆಯಷ್ಟೆ. ಚಂದಿರನ ಅಂಗಳದಲ್ಲಿ ನಮ್ಮ ಉಪಗ್ರಹ ಈಗಲೂ ಪರಿಭ್ರಮಿಸುತ್ತಿದೆ. ನಮ್ಮಲ್ಲೂ ಬಾಹ್ಯಾಕಾಶ ವಿಜ್ಞಾನ ಸಾಕಷ್ಟು ಮುಂದುವರಿಯುತ್ತಿದ್ದು ಆ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಿರುವ ಮಾತೃಭಾಷೆ ಭಾರತದ ಮೂಲದವೆ. ಅದರಲ್ಲೂ ಕನ್ನಡಿಗರಾದ ನಮ್ಮ ವಿಜ್ಞಾನಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರಲ್ಲಿ ಬಹುಪಾಲು ಮಂದಿ ಕನ್ನಡ ಮಾಧ್ಯಮದಲ್ಲೇ ಕಲಿತವರೆಂದು ಹೆಮ್ಮೆಯಿಂದ ಹೇಳುತ್ತಾರೆ. ಅದೇ ರೀತಿ ಐ.ಟಿ.-ಬಿ.ಟಿ. ಕ್ಷೇತ್ರದಲ್ಲೂ ಕನ್ನಡಿಗರೇ ಇದ್ದು ನಮ್ಮ ರಾಜಧಾನಿ ಬೆಂಗಳೂರು ಇಂಡಿಯಾದ ಸಿಲಿಕಾನ್ ಸಿಟಿ ಎಂದು ವಿಶ್ವದೆಲ್ಲೆಡೆ ಗುರುತಿಸಲ್ಪಟ್ಟಿದೆ.
ಮಾತೃಭಾಷಾ ಮಾಧ್ಯಮದಲ್ಲಿ ಕಲಿಯುವುದರ ಬಗೆಗೆ ಅತಿ ಹೆಚ್ಚಿನ ಅಭಿಮಾನವಿರುವುದರ ರಹಸ್ಯವೇನೆಂಬುದಂತೂ ಅರ್ಥವಾಗುತ್ತಿಲ್ಲ.
ಸರ್ಕಾರಿ ಶಾಲೆಗಳಲ್ಲಿ ಸುಧಾರಣೆ ಈಗಿನ ಅವಶ್ಯಕತೆ
ನಮ್ಮ ಜನರು ಇಂಗ್ಲೀಷ್ ಮಾಧ್ಯಮದ ಶಾಲೆಗಳಿಗೆ ತಮ್ಮ ಮಕ್ಕಳನ್ನು ದಾಖಲು ಮಾಡಲು ಬೇರೆ ಕೆಲವು ಕಾರಣಗಳಿವೆ. ಅವುಗಳಲ್ಲಿ ಇಂಗ್ಲೀಷನ್ನು ಪ್ರಧಾನವಾಗಿ ಕಲಿಸುವುದರಿಂದ ಮುಂದೆ ಉದ್ಯೋಗದ ಅವಕಾಶ ಅಪರಿಮಿತವಾಗಿರುತ್ತದೆಂಬು
ದೊಂದು. ಅದು ಮೇಲ್ನೋಟಕ್ಕೆ ಸ್ವಲ್ಪ ಮಟ್ಟಿಗೆ ಸರಿಯೆನಿಸಬಹುದಾದರೂ ನಮ್ಮ ನಾಡಿನ ಸುಮಾರು ಐದು ಕೋಟಿ ಜನರ ಮಕ್ಕಳಲ್ಲಿ ಶೇಕಡಾವಾರು ಅದೆಷ್ಟು ಮಕ್ಕಳು ವಿಜ್ಞಾನಿಗಳು, ಐ.ಟಿ.-ಬಿ.ಟಿ., ವೈದ್ಯರು, ಇಂಜಿನಿಯರಿಂಗ್ ಮುಂತಾದ ಕ್ಷೇತ್ರಗಳಲ್ಲಿ ಪರಿಣತಿ ಪಡೆಯಲು ಸಾಧ್ಯವಾಗಬಹುದೆಂಬುದನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಅದು ಹೆಚ್ಚೆಂದರೆ ಶೇ.೫-೧೦ರಷ್ಟು ಮಕ್ಕಳಿಗೆ ಸಾಧ್ಯವೆಂದುಕೊಳ್ಳಬಹುದೇನೋ? ಇನ್ನುಳಿದವರು ಸಾಮಾನ್ಯ ಮಟ್ಟದ ಕೆಲಸಕಾರ್ಯಗಳಲ್ಲಿ ತೊಡಗಿಕೊಳ್ಳುವುದು ಅನಿವಾರ್ಯವಾಗುತ್ತದೆ. ಆ ಸಲುವಾಗಿ ಕನ್ನಡನಾಡಿನ ಎಲ್ಲಾ ಮಕ್ಕಳೂ ಆರಂಭದ ಹಂತದಿಂದಲೇ ಇಂಗ್ಲೀಷ್ ಮಾಧ್ಯಮದಲ್ಲೇ ವಿದ್ಯಾಭ್ಯಾಸ ಮಾಡಬೇಕೆಂದು ಯಾವ ನ್ಯಾಯ? ಅಂದರೆ ಇಂಗ್ಲಿಷ್ ಅನ್ನೂ ಸಂಪೂರ್ಣವಾಗಿ ನಿಷೇಧಿಸಬೇಕೆಂದು ಹೇಳುವುದೂ ಸರಿಯಲ್ಲ. ಯಾರು ಯಾರಿಗೆ ಎಷ್ಟರಮಟ್ಟಿನ ಇಂಗ್ಲಿಷು ಬೇಕೆಂಬುದನ್ನು ಇಲ್ಲಿ ಗಮನದಲ್ಲಿರಿಸಬೇಕಾಗುತ್ತದೆ.
ಆ ದಿಸೆಯಲ್ಲಿ ಒಂದು ಸ್ಪಷ್ಟವಾದ ಕಲಿಕಾ ಕಾರ್ಯನೀತಿಯನ್ನು ರೂಪಿಸುವುದು ಅಗತ್ಯ. ಆ ಸಲುವಾಗಿ ಮಕ್ಕಳಿಗೆ ಒಂದನೇ ತರಗತಿಯಿಂದಲೇ ಕನ್ನಡ ಮಾಧ್ಯಮದಲ್ಲೇ ಕಲಿಕೆಯನ್ನು ಆರಂಭಿಸಿ, ಹತ್ತನೆ ತರಗತಿಯವರೆಗೆ ಮುಂದುವರಿಸುವುದು; ಇಂಗ್ಲಿಷನ್ನು ಒಂದನೇ ತರಗತಿಯಿಂದ
ಒಂದು ಪಠ್ಯ ವಿಷಯವಾಗಿ ಬೀದರ್ ಮಾದರಿಯಂತೆ ಕಲಿಸುವ ಏರ್ಪಾಡು ಮಾಡುವುದು. ಅಂತಹವರು ಹತ್ತನೇ ತರಗತಿಯನ್ನು ಮುಗಿಸುವಷ್ಟರಲ್ಲಿ ಇಂಗ್ಲೀಷಿನಲ್ಲಿ ಬರೆಯಲು, ಮಾತನಾಡಲು ಸಾಕಷ್ಟು ಪರಿಣತಿಯನ್ನು ಪಡೆದುಕೊಳ್ಳುವುದರಲ್ಲಿ ಸಂದೇಹವಿಲ್ಲ. ಎಲ್ಲರಿಗೂ ಹತ್ತನೇ ತರಗತಿಯವರೆಗೆ ಮುಂದುವರಿಯಲು ಅಸಾಧ್ಯವಾದರೂ, ಅಷ್ಟೋ ಇಷ್ಟೊ ಇಂಗ್ಲೀಷಿನ ಪರಿಚಯವಾಗಿರುತ್ತದೆ.
ಇತ್ತೀಚಿನ ವರ್ಷಗಳಲ್ಲಿ ಇಂಗ್ಲೀಷಿನ ಬಗೆಗೆ ಅತಿಯಾದ ವ್ಯಾಮೋಹದಿಂದ ಖಾಸಗಿಯಾಗಿ ಸ್ಥಾಪನೆಯಾಗಿ ಇಂಗ್ಲೀಷ್ ಮಾಧ್ಯಮದಲ್ಲಿ ಕಲಿಸುವ ಕಾನ್ವೆಂಟುಗಳಿಗೆ ಸೇರಲು ಮುಗಿಬೀಳುತ್ತಿದ್ದಾರೆ. ಅವುಗಳು ಇಂಗ್ಲಿಷ್ ಕಲಿಸುವುದರ ಜೊತೆಗೆ ಉತ್ತಮ ಬೋಧಕರು, ಸಿಬ್ಬಂದಿವರ್ಗ, ಕಟ್ಟಡ ಹಾಗೂ ಮತ್ತಿತರ ಸೌಕರ್ಯ ಹೊಂದಿರುತ್ತದೆ. ಅವೀಗ ಪೇಟೆ ಪಟ್ಟಣಗಳೇ ಅಲ್ಲದೆ ಹಳ್ಳಿ ಹಳ್ಳಿಗಳಲ್ಲೂ ತಲೆಯೆತ್ತುತ್ತಿರುವುದನ್ನು ನೋಡಬಹುದಾಗಿದೆ. ಬಡಬಗ್ಗರು ಆರ್ಥಿಕವಾಗಿ ದುರ್ಬಲವಾಗಿದ್ದರೂ ಸಾಲ ಸೋಲ ಮಾಡಿಯಾದರೂ ತಮ್ಮ ಮಕ್ಕಳನ್ನು ಅವುಗಳಿಗೆ ಸೇರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದ್ದರಿಂದ ಸರ್ಕಾರಿ ಶಾಲೆಗಳಲ್ಲಿ ಈಗಿರುವ ನ್ಯೂನತೆಗಳನ್ನು ಸರಿಪಡಿಸಿ ಅವುಗಳ ಸ್ಥಿತಿಗತಿಗಳಲ್ಲಿ ಬಹಳಷ್ಟು ಸುಧಾರಣೆಗಳನ್ನು ತರುವಲ್ಲಿ ತುರ್ತಾಗಿ ಗಮನ ಹರಿಸಬೇಕು. ಇದಾಗಲೇ ಸರ್ಕಾರ ಬಿಸಿಯೂಟ, ಬೈಸಿಕಲ್‌ಗಳ ಕೊಡುಗೆಗಳು ಕರ್ನಾಟಕದಲ್ಲಿ ವಿದ್ಯಾರ್ಥಿಗಳಿಗೆ ಬಹಳಷ್ಟು ಸಹಾಯ ಮಾಡಿವೆ. ಅದೇ ರೀತಿಯಲ್ಲಿ ಇಂತಹ ಯೋಜನೆ ಹಂತ ಹಂತವಾಗಿಯಾದರೂ ಜಾರಿಗೆ ಬಂದರೆ ಕನ್ನಡ ನಾಡು ನುಡಿಯ ಉಳಿವಿಗೆ ಮಹದುಪಕಾರ ಮಾಡಿದಂತಾಗುತ್ತದೆಂಬುದು ನನ್ನ ಆಶಯ.
ಪಶ್ಚಿಮ ಘಟ್ಟ ಬೆಳೆಸಿ-ಕರ್ನಾಟಕ ಉಳಿಸಿ
ಇತ್ತೀಚಿನ ದಶಕಗಳಲ್ಲಿ ನಮ್ಮ ನಾಡಿನಾದ್ಯಂತ ಪರಿಸರ ನಾಶ ಕುರಿತು ಆಂದೋಲನಗಳು ಜರುಗುತ್ತಿರುವುದು ದಿನನಿತ್ಯದ ಸುದ್ದಿಯಾಗುತ್ತಿದೆ. ಉತ್ತರದ ಹಿಮಾಲಯದಿಂದ ಹಿಡಿದು ದಕ್ಷಿಣದ ಪಶ್ಚಿಮ ಘಟ್ಟ ಶ್ರೇಣಿಗಳು ಅನಾದಿಯಿಂದಲೂ ನಮ್ಮ ನಾಡಿನ ಜೀವನದಿಗಳು ಉಗಮಿಸುವ ತಾಣಗಳಾಗಿವೆ. ನಮ್ಮ ಪಶ್ಚಿಮ ಘಟ್ಟಗಳು ಪ್ರತಿವರ್ಷ ಜೂನ್‌ನಿಂದ ಸೆಪ್ಟೆಂಬರ್ ತಿಂಗಳವರೆಗೆ ಧಾರಕಾರವಾಗಿ ಸುರಿಸುವ ಮುಂಗಾರು ಮಳೆಯಿಂದಲೇ ನಾವೆಲ್ಲಾ ಬದುಕಲು ಸಾಧ್ಯವಾಗುತ್ತಿರುವುದು. ಮುಂಗಾರು ಮಳೆ ಹಾಗೂ ನಮ್ಮ ದೇಶದ ಉದ್ದಗಲದಲ್ಲೆಲ್ಲಾ ಹರಡಿರುವ ರೈಲ್ವೆ ಸಂಪರ್ಕ ಜಾಲ ನಮ್ಮ ಜೀವನಾಡಿಯಾಗಿವೆ. ಎರಡು ವರ್ಷಗಳ ಹಿಂದೆ ಇಂಗ್ಲೆಂಡಿನ ಬಿ.ಬಿ.ಸಿ. ಟಿ.ವಿ.ಯವರು ಮಾನಸೂನ್ ರೈಲ್ವೆ ಎಂಬ ಸಾಕ್ಷ್ಯ ಚಿತ್ರವನ್ನು ನಿರ್ಮಿಸಿದ್ದರೆಂದರೆ ಪಶ್ಚಿಮ ಘಟ್ಟದ ಪ್ರಾಮುಖ್ಯತೆಯ ಅರಿವಾಗಬಹುದು. ಅಲ್ಲಿಂದ ಉಗಮಿಸಿ ಹರಿಯುವ ಕಾಳಿ, ಶರಾವತಿ, ತುಂಗಾ-ಭದ್ರಾ, ವಾರಾಹಿ, ಹೇಮಾವತಿ, ಕಾವೇರಿ, ಕಪಿಲಾ ನದಿಗಳು ಕರ್ನಾಟಕದ ಜೀವನಾಡಿಗಳಾಗಿರುವುವು. ಅಲ್ಲಿಯ ವೃಕ್ಷ ಸಂಪತ್ತು, ಖನಿಜ ಸಂಪತ್ತು, ಜೀವವೈವಿಧ್ಯದ ವನ್ಯಜೀವಿಗಳು ಮುಂತಾದವುಗಳ ಪಾತ್ರ ಬಹುಶಃ ನಮಗೆ ಅಷ್ಟಾಗಿ ಅರಿವಾಗಿರಲಿಲ್ಲವೆಂದರೆ ಅತ್ಯುಕ್ತಿಯಲ್ಲ.
ಆದರೆ ಇತ್ತೀಚಿನ ಅರ್ಧ ಮುಕ್ಕಾಲು ಶತಮಾನಗಳಿಂದ ಹೆಚ್ಚುತ್ತಿರುವ ಜನಸಂಖ್ಯೆ, ಕೈಗಾರಿಕಾ ಸ್ಥಾವರ ಮತ್ತಿತರ ಅವಶ್ಯಕತೆಗಳಿಗಾಗಿ ನೂರಾರು ಅಣೆಕಟ್ಟುಗಳನ್ನು ನಿರ್ಮಿಸಿ ವಿದ್ಯುಚ್ಛಕ್ತಿಯ ಸಲುವಾಗಿ ಸಾವಿರಾರು ಎಕರೆ ಅರಣ್ಯನಾಶ ಮಾಡಿದೆವು. ಹಾಗೆ ಅಪಾರ ವಿಸ್ತಾರವಾದ ಭೂ ಪ್ರದೇಶ ಮುಳುಗಡೆಯಾಯಿತು. ಲಕ್ಷಾಂತರ ಜನ ನಿರಾಶ್ರಿತರಾದರು. ಇಂತಹ ಪರಿಸರ ನಾಶದಿಂದ ಕ್ಲುಪ್ತ ಕಾಲದಲ್ಲಿ ಸುರಿಯುತ್ತಿದ್ದ ಮುಂಗಾರು ಮಳೆಯ ಆಗಮನ ಯರ್ರಾಬಿರ್ರಿಯಾಯಿತು. ಅನಾವೃಷ್ಟಿಯಿಂದ ಬರಗಾಲ ಅಣಿಕಿಸತೊಡಗಿದೆ. ವಿದ್ಯುಚ್ಛಕ್ತಿ ಉತ್ಪಾದನೆಯಾಗದೆ ಕೈಗಾರಿಕಾ ಕ್ಷೇತ್ರ ನಲುಗುವಂತಾಗಿದೆ.
ಖನಿಜಗಳನ್ನು ಹೊರತೆಗೆಯಲು ಪಶ್ಚಿಮ ಘಟ್ಟದಲ್ಲಿ ಗಣಿಗಾರಿಕೆ ಮಿತಿಮೀರಿ ಜರುಗಿತು. ನಾಡಿನ ಸರ್ವೋಚ್ಛ ನ್ಯಾಯಾಲಯವೆ ಕುದುರೆಮುಖದ ಗಣಿಗಾರಿಕೆಯನ್ನು ಮುಚ್ಚುವ ಆದೇಶ ನೀಡುವಂತಾಯಿತು ಎಂದರೆ ಪರಿಸರನಾಶದಿಂದಾಗುತ್ತಿರುವುದು ಅಂದಾಜಾಗಬಹುದು. ಯಾವುದೇ ಕಾರ್ಯವಿನಾಶದ ಅಥವಾ ಉತ್ಪನ್ನಕ್ಕೆ ಸಂಬಂಧಿಸಿದ್ದಾಗಲೀ ಅದಕ್ಕೆಲ್ಲಾ ಮಿತಿಯೆಂಬುದಿದ್ದೇ ಇರುತ್ತದೆ. ಇದೀಗ ಪಶ್ಚಿಮ ಘಟ್ಟದ ವಿನಾಶ ನಾನಾ ಕಾರಣಗಳಿಂದ ಮಿತಿ ಮೀರುತ್ತದೆಯೆಂದರೆ ಅತ್ಯುಕ್ತಿಯಲ್ಲ. ಸುಮಾರು ೧೯೮೫-೮೬ರ ಸಮಯದಲ್ಲಿ ಇಡೀ ಪಶ್ಚಿಮ ಘಟ್ಟದ ಉದ್ದಗಲದಲ್ಲಿ ಸಾಮೂಹಿಕವಾಗಿ ಜರುಗಿದ ಪಶ್ಚಿಮ ಘಟ್ಟ ಉಳಿಸಿ ಆಂದೋಲನ ಜರುಗಿದ್ದು ಕೆಲವರಿಗಾದರೂ ನೆನಪಿರಬಹುದು. ಆ ಸಮಯದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಸ್ಥಾಪನೆಯಾದ ಜಿಲ್ಲಾ ಪರಿಸರ ಸಂರಕ್ಷಣಾ ವೇದಿಕೆಯ ಅಧ್ಯಕ್ಷ ನಾನಾಗಿದ್ದೆ. ಆ ಸಮಯದಲ್ಲಿ ಸ್ಥಾಪನೆಯಾದ ಪರಿಸರ ಘಟ್ಟ ಉಳಿಸಿ ಆಂದೋಲನದಲ್ಲಿ ಸಕ್ರಿಯವಾಗಿ ಭಾಗವಹಿಸಿ ಕಾಲ್ನಡಿಗೆ ಜಾಥಾದಲ್ಲೂ ಇದ್ದೆ. ಅದರಿಂದಾದ ಅನುಭವದಿಂದ ಇನ್ನು ಮುಂದಾದರೂ ಪಶ್ಚಿಮ ಘಟ್ಟಕ್ಕೆ ಯಾವ ಕಾರಣದಿಂದಾಗಲಿ ಹಾನಿಯಾಗದಂತೆ ವರ್ತಿಸುವುದು ಸರ್ಕಾರಗಳು ಹಾಗೂ ಜನಸಮುದಾಯದ ಆದ್ಯಕರ್ತವ್ಯವಾಗಬೇಕು ಎನ್ನುತ್ತೇನೆ. ಅದರಿಂದ ಪಶ್ಚಿಮ ಘಟ್ಟ ಬೆಳೆಸಿ-ಕರ್ನಾಟಕ ಅಲ್ಲ, ಇಡೀ ದಕ್ಷಿಣ ಭಾರತ ಉಳಿಸಿ ಎಂಬುದು ಎಲ್ಲರ ಕರ್ತವ್ಯವಾಗಿದೆ.

No comments:

Post a Comment