Tuesday, March 15, 2011

ದಂಡು ಪ್ರದೇಶದಲ್ಲಿ ಮೊಳಗಿದ ಕನ್ನಡದ ಕೂಗು



ಕನ್ನಡ ಚಳವಳಿಗೆ ಇತಿಹಾಸದಲ್ಲಿ ವಿಶಿಷ್ಠವಾದ ಹೆಸರು ದಿವಂಗತ ಬಸವರಾಜು ಅವರು. ಕನ್ನಡ ಚಳವಳಿಗಾಗಿಯೇ ತಮ್ಮ ಬದುಕನ್ನು ಸಮರ್ಪಿಸಿಕೊಂಡ ಅಪರೂಪದ ಜೀವ. ಕನ್ನಡ ಪಕ್ಷದ ಮೂಲಕ ನಾಡಿನಲ್ಲಿ ಕನ್ನಡದ ಸರ್ಕಾರವೊಂದು ಅಸ್ತಿತ್ವಕ್ಕೆ ಬರಬೇಕೆಂದು ಕನಸು ಕಟ್ಟಿದ್ದವರು ಬಸವರಾಜು.
ವಿಶೇಷವೆಂದರೆ, ಬಸವರಾಜು ಹಣವಂತರೇನು ಆಗಿರಲಿಲ್ಲ. ಸಿವಿಲ್ ಕೋರ್ಟಿನಲ್ಲಿ ನಾಲ್ಕನೇ ದರ್ಜೆ ನೌಕರರಾಗಿದ್ದ ಬಸವರಾಜು ಅವರಿಗೆ ಕನ್ನಡ ಚಳವಳಿಯ ಪ್ರಚಂಡ ಉತ್ಸಾಹವಿತ್ತು. ತನಗೆ ಅನಿಸಿದ್ದನ್ನು ನೇರವಾಗಿ ಯಾರ ಮುಂದಾದರೂ ಮುಲಾಜಿಲ್ಲದೇ ಹೇಳುವ ಎದೆಗಾರಿಕೆ ಇತ್ತು. ಹೀಗಾಗಿ ಬಸವರಾಜು ಅವರಿಗೆ ಎಂಟೆದೆ ಇರಬೇಕು ಎನ್ನುತ್ತಿದ್ದವರೂ ಉಂಟು.
ಯಾವುದೇ ಸಮಾರಂಭದಲ್ಲಿ ಎಷ್ಟೇ ದೊಡ್ಡ ಗಣ್ಯವ್ಯಕ್ತಿಯಾಗಲಿ ಜನವಿರೋಧಿ ಹೇಳಿಕೆಯನ್ನು ನೀಡಿದರೆ ಬಸವರಾಜು ಸಿಡಿಮಿಡಿಗೊಳ್ಳುತ್ತಿದ್ದರು. ಅದನ್ನು ಕೇಳಿಯೂ ಸುಮ್ಮನಿರುವ ಜಾಯಮಾನವೂ ಅವರದಾಗಿರಲಿಲ್ಲ. ನಿಂತ ಜಾಗದಲ್ಲೇ ಪ್ರತಿಭಟಿಸುವ ಧೀಮಂತಿಕೆ ಅವರಿಗಿತ್ತು. ಬಸವರಾಜು ಅವರ ವಾದಸರಣಿ ಇಡೀ ಸಭೆಯಲ್ಲಿ ಗುಡುಗು ಮಿಂಚುಗಳನ್ನು ಸೃಷ್ಟಿಸುತ್ತಿತ್ತು. ನಿಜವಾದ ಸತ್ಯನಿಷ್ಠುರತೆಗೆ ಬಸವರಾಜು ಅತ್ಯುತ್ತಮ ಮಾದರಿಯಾಗಿದ್ದರು.
ಕನ್ನಡಿಗರೇ ಆತಂಕದಿಂದ ಬದುಕುವ ಸ್ಥಿತಿ ನಿರ್ಮಾಣ ಆಗಿರುವ ಬೆಂಗಳೂರಿನ ದಂಡುಪ್ರದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಕನ್ನಡ ಚಳವಳಿಯ ಕೂಗನ್ನು ಮೊಳಗಿಸಿದವರು ಬಸವರಾಜು.
ಹಲಸೂರು, ಜೋಗುಪಾಳ್ಯ, ಬಯ್ಯಪ್ಪನಹಳ್ಳಿ, ಶಿವನಶೆಟ್ಟಿ ಗಾರ್ಡನ್, ಕಾಕ್ಸ್‌ಟೌನ್, ಶಿವಾಜಿನಗರ ಮುಂತಾದ ಕನ್ನಡೇತರರೇ ಹೆಚ್ಚಿರುವ ಭಾಗಗಳಲ್ಲಿ ಕನ್ನಡ ಜಾಗೃತಿ ಸಭೆಗಳನ್ನು ನಿರಂತರವಾಗಿ ನಡೆಸಿಕೊಂಡು ಬಂದ ಬಸವರಾಜು ಎಂದಿಗೂ, ಯಾತಕ್ಕೂ ಅಂಜದ ಧೀರರು.
ಬಯ್ಯಪ್ಪನಹಳ್ಳಿಯಲ್ಲಿ ಕನ್ನಡ ಪಕ್ಷದ ಶಾಖೆಯನ್ನು ಖ್ಯಾತ ಸಾಹಿತಿ ತಾ.ರಾ.ಸುಬ್ಬರಾಯರಿಂದ ಉದ್ಘಾಟನೆ ಮಾಡಿಸಿದ ಬಸವರಾಜು ಈ ಭಾಗದಲ್ಲಿ ದೊಡ್ಡ ಸಂಚಲನವನ್ನು ಮೂಡಿಸಿದ್ದರು. ಆಗ ಬಯ್ಯಪ್ಪನಹಳ್ಳಿ ಶಾಖೆಯ ಅಧ್ಯಕ್ಷರಾಗಿದ್ದವರು ಮು.ಜಯದೇವ್. ನಂತರ ಎಪ್ಪತ್ತರ ದಶಕದಲ್ಲಿ ಶಿವಾಜಿನಗರದ ರಸೆಲ್ ಮಾರ್ಕೆಟ್‌ನಲ್ಲಿ ನಡೆಸಿದ ಕನ್ನಡ ಜಾಗೃತಿ ಸಭೆ ಬಹಳ ಮಹತ್ವಪೂರ್ಣವಾಗಿತ್ತು.
ಖ್ಯಾತ ಪತ್ರಕರ್ತ ಪಿ.ಲಂಕೇಶ್, ಸಾಹಿತಿ ಪೂರ್ಣಚಂದ್ರ ತೇಜಸ್ವಿ, ರೈತ ನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ, ಶಾಸಕ ಕೆ.ಎಚ್.ರಂಗನಾಥ್ ಮುಂತಾದವರನ್ನು ಕರೆಯಿಸಿ ಈ ಸಭೆಯನ್ನು ಏರ್ಪಾಡು ಮಾಡಲಾಗಿತ್ತು. ಈ ಭಾಗದಲ್ಲಿ ನಡೆದ ಮೊದಲ ಕನ್ನಡ ಜಾಗೃತಿ ಸಭೆ ಇದಾಗಿತ್ತು.
ನಾನು ನೋಡಿದ ಹಾಗೆ ಬಸವರಾಜು ಅವರ ಬಳಿ ಒಂದು ಹಳೆಯ ಸೈಕಲ್ ಇತ್ತು. ಕಾರ್ಯಕ್ರಮಗಳನ್ನು ಸಂಘಟಿಸಲು ಅವರು ಬಳಸುತ್ತಿದ್ದುದು ಇದೇ ಸೈಕಲ್ ಅನ್ನು. ತಮ್ಮ ಸೈಕಲ್ ಏರಿ ವಿವಿಧ ಬಡಾವಣೆಗಳಲ್ಲಿ ಸುತ್ತಾಡಿ ಕನ್ನಡ ಸಂಘಟನೆಗಳ ಕಾರ್ಯಕರ್ತರನ್ನು ತಮ್ಮ ಕಾರ್ಯಕ್ರಮಗಳಿಗೆ ಕರೆಯುತ್ತಿದ್ದರು. ಹೀಗೆ ಅವರು ಶ್ರೀರಾಮಪುರಕ್ಕೆ ಬಂದು ನಮ್ಮ ಬಳಗದ ಗೆಳೆಯರನ್ನು ಮಾತನಾಡಿಸುತ್ತಿದ್ದರು. ನನ್ನೊಂದಿಗೆ ಅವರು ಆತ್ಮೀಯವಾಗಿದ್ದರು. ಅದೇ ರೀತಿ ಕನ್ನಡದ ಕ್ರಾಂತಿಕಾರಿ ಹೋರಾಟಗಾರ ದಿವಂಗತ ರೆಹಮಾನ್ ಖಾನ್ ಕೂಡ ಪರಮಾತ್ಮರು. ಹಲವು ಚಳವಳಿಗಳ ಸಂದರ್ಭದಲ್ಲಿ ನಾವು ಮೂವರು ಚರ್ಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದೆವು.
ಅರವತ್ತರ ದಶಕದ ಅಂತ್ಯದ ದಿನಗಳು. ಆಗ ಬೆಂಗಳೂರಿನಲ್ಲಿ ತಮಿಳು ಮೂಲಭೂತವಾದಿಗಳ ಆರ್ಭಟ ಎಲ್ಲೆ ಮೀರಿತ್ತು. ಹಲಸೂರು ಪಲ್ಲಕ್ಕಿ ಉತ್ಸವದಲ್ಲಿ ಒಂದು ಕಡೆ ಎಂ.ಜಿ.ರಾಮಚಂದ್ರನ್ ಮತ್ತೊಂದು ಕಡೆ ಶಿವಾಜಿಗಣೇಶನ್ ಭಾವಚಿತ್ರಗಳನ್ನು ಮೆರವಣಿಗೆ ಮಾಡಲಾಗುತ್ತಿತ್ತು.
ತಮಿಳುವಾದ್ಯಗೋಷ್ಠಿಗಳೇ ಅಲ್ಲಿ ಮೊಳಗುತ್ತಿದ್ದವು. ಹಲಸೂರಿನಲ್ಲಿ ಡಿ.ಎಂ.ಕೆ. ಪಕ್ಷದ ಧ್ವಜಗಳು ಹಾರಾಡುತ್ತಿದ್ದವು. ಕನ್ನಡಿಗರ ಮೇಲೆ ದೌರ್ಜನ್ಯಗಳು ನಡೆಯುತ್ತಿದ್ದವು. ಇದರಿಂದ ನೊಂದಿದ್ದ ಬಸವರಾಜು ಹೋರಾಟವೊಂದನ್ನು ರೂಪಿಸಿದ್ದರು. ಈ ಕುರಿತು ಬಸವರಾಜು ನೇತೃತ್ವದಲ್ಲಿ ರಾಚಯ್ಯ, ದಿ.ರುದ್ರಪ್ಪ, ಮ.ನಾರಾಯಣ, ಬಿ.ಎಚ್.ಶಂಕರನಾರಾಯಣ (ಐ.ಟಿ.ಐ), ಮಂಚಯ್ಯ (ಬಿ.ಇ.ಎಲ್) ಮೊದಲಾದವರು ಸೇರಿ ಸಭೆ ನಡೆಸಿದೆವು. ನಂತರ, ಹಲಸೂರಿನಲ್ಲಿ ನಡೆಯುತ್ತಿದ್ದ ಪಲ್ಲಕ್ಕಿ ಉತ್ಸವಕ್ಕೆ ನುಗ್ಗಿ ತಮಿಳು ವಾದ್ಯಗೋಷ್ಠಿ ನಿಲ್ಲಿಸುವಂತೆ ಪ್ರತಿಭಟಿಸಿದೆವು. ಪೊಲೀಸರು ನಮ್ಮನ್ನು ಬಂಧಿಸಿದರು. ಈ ಪ್ರಕರಣದ ನಂತರ ಈ ಭಾಗದಲ್ಲಿ ಕನ್ನಡ ಕಾರ್ಯಕ್ರಮಗಳು ಆರಂಭವಾದವು. ತಮಿಳು ಮೂಲಭೂತವಾದಿಗಳು ಹಿನ್ನೆಲೆಗೆ ಸರಿದರು.
ದಂಡು ಪ್ರದೇಶದ ಶಿವನಶೆಟ್ಟಿ ಗಾರ್ಡನ್‌ನಲ್ಲಿ ಬಸವರಾಜು ನೇತೃತ್ವದಲ್ಲಿ ಸಂಘಟಿತಗೊಂಡ ಕನ್ನಡ ಪಕ್ಷದ ಜಾಗೃತಿ ಸಭೆ ಐತಿಹಾಸಿಕವಾಗಿತ್ತು. ಆಗ ಕನ್ನಡ ಪಕ್ಷದ ಅಧ್ಯಕ್ಷರಾದ ತ.ರಾ.ಸು. ಅವರ ಅಧ್ಯಕ್ಷತೆಯಲ್ಲಿ ಸಭೆ ಏರ್ಪಡಿಸಲಾಗಿತ್ತು. ಕಾ.ಮು.ಸಂಪಂಗಿರಾಮಯ್ಯ, ದಿ.ಮು.ಗೋವಿಂದರಾಜು ಹಾಗೂ ಬಸವರಾಜು ರೂಪಿಸಿದ ಸಭೆ ಅದು. ನಾವು ಕನ್ನಡ ಚಳವಳಿಗಾರರು ಇದ್ದದ್ದೇ ಇಪ್ಪತ್ತೈದು ಮಂದಿ. ಬಸವರಾಜು ಎಂದಿನಂತೆ ಕ್ರಾಂತಿಕಾರಿ ಭಾಷಣ ಮಾಡಿದರು. ಅದು ಆ ಭಾಗದ ಜನರನ್ನು ತಲುಪಿತ್ತು. ಸಭೆಯ ಸಂದರ್ಭದಲ್ಲಿ ಭಾಷಾಂಧ ತಮಿಳರು ನಮ್ಮ ಮೇಲೆ ಹಲ್ಲೆ ಮಾಡುವ ಸಾಧ್ಯತೆಗಳಿದ್ದರಿಂದ ಪೊಲೀಸರು ಎಲ್ಲ ನಾಯಕರನ್ನು ಬಂಧಿಸಿ ಹಲಸೂರಿನ ಕೆರೆಯ ಬಳಿ ಬಿಟ್ಟು ಹೋದರು.
ಬಸವರಾಜು ಒಳ್ಳೆಯ ಭಾಷಣಕಾರರು. ಬಸವಣ್ಣನವರ ವಿಚಾರಗಳಿಂದ ಪ್ರೇರಿತರಾಗಿದ್ದರು. ಕುವೆಂಪುರವರನ್ನು ಆದರ್ಶವನ್ನಾಗಿ ಸ್ವೀಕರಿಸಿದ್ದರು.
ಶಾಂತವೆರಿ ಗೋಪಾಲಗೌಡರು ಆ ಕಾಲದಲ್ಲಿ ಪ್ರತಿಪಾದಿಸುತ್ತಿದ್ದ ಸಮಾಜವಾದದಿಂದ ಪ್ರೇರಿತರಾಗಿದ್ದರು.
ಗೋಪಾಲಕೃಷ್ಣ ಅಡಿಗರು ಬರೆದ ‘ಕಟ್ಟುವೆವು ನಾವು ಹೊಸ ನಾಡೊಂದನು ರಸದ ಬೀಡೊಂದನು’ ಎಂಬ ಗೀತೆ ಬಸವರಾಜು ಅವರಿಗೆ ಅಚ್ಚುಮೆಚ್ಚಾಗಿತ್ತು. ಆದರೆ, ಅಡಿಗರು ಜನಸಂಘದ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದಾಗ ನೊಂದುಕೊಂಡಿದ್ದರು. ಮಾತ್ರವಲ್ಲ, ಕವಿತೆಯೊಂದನ್ನು ಬರೆದು ತಮ್ಮ ಪ್ರತಿಭಟನೆಯನ್ನು ದಾಖಲಿಸಿದ್ದರು.
ಸಾರಾಯಿ ಅಂಗಡಿಗಳ ವಿರುದ್ಧ ಬಸವರಾಜು ಪ್ರತಿಭಟನೆ ನಡೆಸುತ್ತಿದ್ದರು. ಸಾರಾಯಿ ಮಾರಾಟ ಮತ್ತು ಅದರ ವಿವಿಧ ಪರಿಣಾಮಗಳಿಂದ ಜನಸಾಮಾನ್ಯರು ನೋವು ಅನುಭವಿಸುತ್ತಿರುವುದನ್ನು ಅವರು ಸಹಿಸುತ್ತಿರಲಿಲ್ಲ. ಸಾರಾಯಿ ಅಂಗಡಿಗಳಲ್ಲಿ ಸತ್ತ ಕೊಳೆತ ಮಾಂಸವನ್ನು ಮಾರಲಾಗುತ್ತಿದೆ. ಇದರಿಂದ ದೀನದಲಿತರು, ಕೂಲಿಕಾರ್ಮಿಕರು, ಬಡವರು ಕಾಯಿಲೆಗೆ ಬೀಳುತ್ತಾರೆ ಎಂದು ಅವರು ಸಮಸ್ಯೆಯ ಬೇರೆ ಬೇರೆ ಮುಖಗಳನ್ನು ಪರಿಚಯಿಸಿದ್ದರು. ಕೊಳಚೆ ಪ್ರದೇಶದಲ್ಲೇ ಏಕೆ ಸಾರಾಯಿ ಅಂಗಡಿಗಳನ್ನು ತೆರೆಯುತ್ತೀರಿ? ಶ್ರೀಮಂತರು ವಾಸಿಸುವ ಸದಾಶಿವನಗರ, ಜಯನಗರ, ಬಸವನಗುಡಿ ಮುಂತಾದ ಪ್ರದೇಶಗಳಲ್ಲಿ ಅಂಗಡಿ ತೆರೆಯಿರೆಂದು ಸರ್ಕಾರಕ್ಕೆ ಆಗ್ರಹಿಸುವ ಮೂಲಕ ತಮ್ಮ ಬಡವರ ಪರ ಕಾಳಜಿಯನ್ನು ಮೆರೆದಿದ್ದರು.
ಹೋಟೆಲ್‌ಗಳಲ್ಲಿ ಗಲ್ಲಪಟ್ಟಿಯ ಬಳಿಯೇ ರಾಘವೇಂದ್ರಸ್ವಾಮಿಗಳ ಭಾವಚಿತ್ರದ ಮುಂದೆ ಬೆಳ್ಳಿಯ ದೀಪಕ್ಕೆ ತುಪ್ಪ ಹಾಕಿ ಬೆಳಗಿಸಲಾಗುತ್ತಿತ್ತು. ಇದನ್ನು ಬಸವರಾಜು ವಿರೋಧಿಸಿದ್ದರು. ಹೋಟೆಲ್‌ಗಳಲ್ಲಿ ಪಾತ್ರೆ ತೊಳೆಯುವ ಹುಡುಗರಿಗೆ ಕೈ ಕಾಲುಗಳು ಸೆಲೆತು ಸವೆದುಹೋಗಿದ್ದರೂ ಒಂದು ಮುಲಾಮು (ಆಯಿಂಟ್‌ಮೆಂಟ್) ಕೊಡಿಸದ ಮಾಲೀಕರು ತುಪ್ಪದ ದೀಪ ಹಚ್ಚುವುದೇಕೆ ಎನ್ನುವುದು ಅವರ ಪ್ರಶ್ನೆಯಾಗಿತ್ತು.
ಕನ್ನಡ ಚಳವಳಿಯಲ್ಲಿ ವೈಚಾರಿಕತೆಯನ್ನು ಪ್ರತಿಪಾದಿಸಿದ್ದವರು ಬಸವರಾಜು ಅವರು. ಕನ್ನಡ ಕಾರ್ಯಕರ್ತರು ವಿಚಾರವಂತರಾಗಬೇಕು, ಸಮಾಜಮುಖಿಗಳಾಗಬೇಕು ಎಂಬುದು ಅವರ ಬಯಕೆಯಾಗಿತ್ತು.
ಕನ್ನಡ ಪಕ್ಷವೆಂಬ ಕೋಟೆಯನ್ನು ಕಟ್ಟಿ ಕನ್ನಡವೆಂಬ ಗರ್ಭಗುಡಿಯಲ್ಲಿ ವಿಚಾರವೆಂಬ ಜ್ಯೋತಿಯನ್ನು ಬೆಳಗಿಸಬೇಕು ಎಂದು ಅವರು ಆಗಾಗ ಹೇಳುತ್ತಿದ್ದರು.
ಲಟಕ್‌ಪಟಕ್ ಎನ್ನುವ ಹಳೆಯ ಸೈಕಲ್, ಮಾಸಿದ ಪ್ಯಾಂಟು-ಜುಬ್ಬ, ಕುರುಚಲು ಗಡ್ಡ, ಎಣ್ಣೆ ಕಾಣದ ಕ್ರಾಪು, ಬೆಂಕಿ ಕಾರುವ ಕಣ್ಣುಗಳು... ಇದು ಬಸವರಾಜು ಚಹರೆ. ಅವರಿಗೆ ಸಾಹಿತಿಗಳ ಒಡನಾಟವಿತ್ತು. ಪಿ.ಲಂಕೇಶ್, ಸಿದ್ಧಲಿಂಗಯ್ಯ, ತೇಜಸ್ವಿ, ಡಿ.ಆರ್.ನಾಗರಾಜ್, ಕಾಳೇಗೌಡ ನಾಗವಾರ, ಬರಗೂರು ರಾಮಚಂದ್ರಪ್ಪ ಮುಂತಾದವರ ಜೊತೆ ಆಗಾಗ ಸೇರುತ್ತಿದ್ದರು. ವೈಚಾರಿಕ ವಿಷಯಗಳನ್ನು ಮನನ ಮಾಡಿಕೊಳ್ಳುತ್ತಿದ್ದರು. ಕುವೆಂಪು ಅವರ ‘ಶ್ರೀ ರಾಮಾಯಣದರ್ಶನಂ’ ಅವರಿಗೆ ಬಲುಪ್ರಿಯವಾಗಿತ್ತು. ಯುವಕ-ಯುವತಿಯರು ಈ ಕೃತಿಯನ್ನು ಓದಬೇಕು ಎಂದು ಪ್ರೇರೇಪಿಸುತ್ತಿದ್ದರು.
ಕ್ರಾಂತಿಕಾರಿಗಳು ಸಾಯುತ್ತಾರೆ, ಆದರೆ ಅವರು ನಡೆಸಿದ ಪ್ರತಿಪಾದಿಸಿದ ಕ್ರಾಂತಿ ಸಾಯುವುದಿಲ್ಲ. ಬಸವರಾಜು ಅವರ ಭಾವಚಿತ್ರ ಯಾವ ಪತ್ರಿಕೆಯ ಮುಖಪುಟದಲ್ಲೂ ಎಂದೂ ಕಾಣಿಸಿಕೊಳ್ಳಲಿಲ್ಲ. ಆದರೆ, ಕನ್ನಡ ಹೋರಾಟಗಾರರ ಎದೆಗಳಲ್ಲಿ ಅವರು ಸದಾ ಇರುತ್ತಾರೆ. ಅಸಮಾನತೆ, ಅನ್ಯಾಯಗಳ ವಿರುದ್ಧ ಬುಸುಗುಟ್ಟುವ ಜ್ವಾಲಾಮುಖಿಯಂತಿದ್ದ ಬಸವರಾಜು ಸಿಡಿಯುತ್ತಿದ್ದ ರಭಸಕ್ಕೆ ಅಂದಿನ ಸಾರ್ವಜನಿಕ ಜೀವನದ ವ್ಯಕ್ತಿಗಳು ಕಟ್ಟಿಕೊಂಡಿದ್ದ ಬಣ್ಣದ ತಡಿಕೆಗಳು ಚೂರಾಗುತ್ತಿದ್ದವು.
ಕಡೆಗೊಂದು ದಿನ ಅವರ ಮೃತದೇಹ ರೈಲುಕಂಬಿಗಳ ಮೇಲೆ ದೊರೆಯಿತು. ಅಲ್ಲಿಗೆ ಒಂದು ಕ್ರಾಂತಿಯ ಯುಗ ಮುಕ್ತಾಯಗೊಂಡಿತು.
‘ಮುಕ್ತ’ ಎಂಬ ಪತ್ರಿಕೆಯ ೧೯೭೫ರ ನವೆಂಬರ್ ಸಂಚಿಕೆಯಲ್ಲಿ ಕವಿ ಸಿದ್ಧಲಿಂಗಯ್ಯ ಅವರು ಬಸವರಾಜು ಅವರನ್ನು ನೆನಪಿಸಿಕೊಂಡು ಶ್ರದ್ಧಾಂಜಲಿ ಅರ್ಪಿಸಿದರು. ‘ಕನ್ನಡಪ್ರಭ’ ಸಂಪಾದಕ ಖಾದ್ರಿ ಶಾಮಣ್ಣನವರು ‘ಪ್ರಾಮಾಣಿಕ ಕನ್ನಡ ಚಳವಳಿಗಾರ’ ಎಂಬ ಶೀರ್ಷಿಕೆಯಲ್ಲಿ ಲೇಖನವೊಂದನ್ನು ಬರೆದು ಬಸವರಾಜು ಕುಟುಂಬಕ್ಕೆ ನಿಧಿಯೊಂದನ್ನು ಸಂಗ್ರಹಿಸಿಕೊಟ್ಟರು.
ಬಸವರಾಜು ಅವರು ನಮ್ಮೊಂದಿಗಿಲ್ಲ. ಆದರೆ, ಅವರು ಹೊತ್ತಿಸಿದ ಕ್ರಾಂತಿಯ ಕಿಡಿ ಹಾಗೆಯೇ ಇರುತ್ತದೆ.

ವೆ,ಶ್ರೀನಿವಾಸ್

No comments:

Post a Comment