
‘ನಾನು
ವಿಶ್ವಮಾತೆಯ ಗರ್ಭ ಕಮಲಜಾತ-ಪರಾಗ-
ಪರಮಾಣು ಕೀರ್ತಿ ನಾನು!
ಭೂಮಿ ತಾಯಿಯ ಮೈಯ ಹಿಡಿಮಣ್ಣ ಗುಡಿಗಟ್ಟಿ
ನಿಂತಂಥ ಮೂರ್ತಿ ನಾನು!
ಭರತ ಮಾತೆಯ ಕೋಟಿ ಕಾರ್ತಿಕೋತ್ಸವದಲ್ಲಿ
ಮಿನುಗುತಿಹ ಜ್ಯೋತಿ ನಾನು!
ಕನ್ನಡದ ತಾಯಿ ತಾವರೆಯ ಪರಿಮಳವುಂಡು
ಬೀರುತಿಹ ಗಾಳಿ ನಾನು!
ನನ್ನ ತಾಯಿಯ ಹಾಲು ನೆತ್ತರವ ಕುಡಿದಂಥ
ಜೀವಂತ ಮಮತೆ ನಾನು!
ಈ ಐದು ಐದೆಯರ ಪಂಚಪ್ರಾಣಗಳಾಗಿ
ಈ ಜೀವ ದೇಹನಿಹನು!
ಹೃದಯಾರವಿಂದದಲ್ಲಿರುವ ನಾರಾಯಣನೆ
ತಾನಾಗಿ ದತ್ತ ನರನು!
ವಿಶ್ವದೊಳನುಡಿಯಾಗಿ ಕನ್ನಡಿಸುತಿಹನುಇಲ್ಲಿ
ಅಂಬಿಕಾತನಯನಿವನು!
-ಅಂಬಿಕಾತನಯದತ್ತ
ಕಾವ್ಯಸಿದ್ಧಿಸುತ್ತದೆ ಎಂಬ ಮಾತಿಗೆ ಬೇಂದ್ರೆಯವರೇ ಸಾಕ್ಷಿ. ಅವರ ಕಾವ್ಯದ ವಿಸ್ತೃತತೆ ಮತ್ತೆ ಮತ್ತೆ ಇದನ್ನು ಸಾಬೀತು ಮಾಡುತ್ತಲೇ ಇರುತ್ತದೆ. ಕವಿತೆಯೊಂದರ ಓದು ಅದು ತೆರೆದುಕೊಳ್ಳುವ ಬಗೆಯಲ್ಲಿಯೇ ಅನನ್ಯವಾಗುತ್ತದೆ. ಇದು ಬೇಂದ್ರೆಯವರಂಥ ಕವಿಗಳಿಗೆ ಮಾತ್ರ ಸಾಧ್ಯ. ಪ್ರತಿ ಪದ್ಯದ ವಸ್ತು ವೈವಿಧ್ಯತೆ ಮತ್ತು ಅದು ಆ ಮೂಲಕ ಚಾಚಿಕೊಳ್ಳುವ ಅರ್ಥಬಾಹುಳ್ಯತೆ ಸ್ಪಷ್ಟವಾಗಬೇಕಾದರೆ ಬೇಂದ್ರೆಯವರನ್ನು ಓದಿಯೇ ಅನುಭವಿಸಬೇಕು.
ಬೇಂದ್ರೆಯಂತಹ ಕವಿಗಳನ್ನು ಓದುವಾಗ ಕವಿಯನ್ನು ವಿಶ್ವ ಸಂಸ್ಕೃತಿಯ ವಕ್ತಾರ ಎನ್ನಬೇಕೆನಿಸುತ್ತದೆ. ಅವರ ಈ ನಾನು ಎಂಬ ಪುಟ್ಟ ಕವಿತೆ ತನ್ನೊಳಗೆ ಕಾಪಿಟ್ಟುಕೊಂಡು ಕೂತ ಅರ್ಥ ಸಾಧ್ಯತೆ ಹೀಗೆ ಅನಿಸುವಂತೆ ಮಾಡುತ್ತದೆ. ನಾನು ಎಂಬ ಪರಿಕಲ್ಪನೆಯ ಅಸ್ತಿತ್ವ, ಅಹಂ, ಸ್ವಾರ್ಥ, ಅನನ್ಯತೆ... ಏನೆಲ್ಲ ನೋಟಕ್ಕೆ ಅನುವು ಮಾಡಿಕೊಡುತ್ತದೆ. ಕುಟುಂಬವೊಂದರ ಸದಸ್ಯನಾಗಿ ಬೆಳೆಯುವ ಕ್ರಿಯೆ ಮುಂದೆ ಸಾಮಾಜಿಕೀಕರಣಗೊಳ್ಳುವ ಚಲನೆಯನ್ನು ಈ ಪದ್ಯ ಸೂಚ್ಯವಾಗಿ ದನಿಸಿದೆ. ನಾನು ಎಂಬ ಅಣುವಿನ ಸ್ವರೂಪ ಮುಂದೆ ಹೇಗೆ ವ್ಯಾಪಕ ವಿಶ್ವಾತ್ಮಕತೆ ಪಡೆಯುವುದೆಂಬುದರ ರೂಪಕವಿದು. ಈ ಕವಿತೆಯ ಗುಣವೇ ಅದರ ಸಾಂದ್ರತೆ. ನಾನು ಎಂಬುದನ್ನು ಸಂಕುಚಿತ, ಕುಬ್ಜತೆ, ಸಣ್ಣತನದಿಂದ ಬಿಡುಗಡೆಗೊಳಿಸುವ ಮಹತ್ವಾಕಾಂಕ್ಷೆ ಕವಿಯದು.
ಒಬ್ಬ ಶ್ರೇಷ್ಠ ಕವಿಯನ್ನು ವಿಶ್ವ ಸಂಸ್ಕೃತಿಯ ವಕ್ತಾರ ಎಂದು ಕರೆಯುವುದರ ಜತೆಜತೆಗೆ ಆ ಕವಿಯ ಪ್ರತಿಕವನಗಳೂ ಅವನದೇ ಆದ ತಾತ್ವಿಕ ಟಿಪ್ಪಣಿಗಳ ಮುಂದುವರಿಕೆ ಎನ್ನಬಹುದು. ಕವಿಯ ಪ್ರತಿ ರಚನೆಗಳು ಪ್ರಣಾಳಿಕೆಯೊಂದರ ಸ್ಪಷ್ಟ ಸ್ವರೂಪದೆಡೆಗಿನ ನಡೆಯೇ ಆಗಿರುತ್ತದೆ. ಹಾಗಾಗಿ ಬೇಂದ್ರೆಯವರ ನಾನು ಕವಿತೆ ಅವರ ವಿಶ್ವಾತ್ಮಕ ಚಿಂತನೆಯ ಪರಿಕ್ರಮವೇ ಆಗಿದೆ.
ಈ ಕವಿತೆಯನ್ನು ದಯವಿಟ್ಟು ಗಮನಿಸಿ! ಒಳಮನದಲ್ಲಿ ಓದಿಕೊಂಡು, ಅರ್ಥದ ಜೊತೆ ಮಾತಿಗೆ ಕೂತಾಗ ಅದರ ಅರ್ಥ ಬಿಳಲುಗಳ ಬಾಚುವಿಕೆಗೆ ಮೇರೆಯಿಲ್ಲ! ಕವಿಗೆ ಐವರು ತಾಯಂದಿರು! ಜನ್ಮ ನೀಡಿದಾಕೆ, ಕನ್ನಡ ತಾಯಿ, ಭರತ ಮಾತೆ, ಭೂಮಾತೆ ಮತ್ತು ವಿಶ್ವಮಾತೆ... ಕವನದಲ್ಲಿ ಹೀಗೆ ನನ್ನತನ ಬೆಳೆಯುತ್ತಾ ಹೋಗುವ ಪರಿಯಿದು. ವಿಸ್ತರಿಸಿಕೊಳ್ಳುವ ಜಾಡಿದು. ವಿಶ್ವದ ಅಸಂಖ್ಯ ಜೀವವೈವಿಧ್ಯತೆಯ ಮಧ್ಯೆ ತಾನು ಎಂಬುದು ಪುಟ್ಟ ಕಣವೇ ಎಂದು ಪರಿಭಾವಿಸುತ್ತಲೇ ಈ ಜನ್ಮವನ್ನೂ ಕೀರ್ತಿಯೆಂದು ಕರೆವ ಉದಾತ್ತ ಗುಣ ಇದರ ಮೂಲ. ಜೀವನಿಷ್ಟ ವಾತಾವರಣದಲ್ಲಿ ಪ್ರತಿ ಮನುಷ್ಯನೂ ಒಂದು ಬೆಳಕು, ಪ್ರತಿ ಬದುಕೂ ಒಂದೊಂದು ಕಾರ್ತಿಕೋತ್ಸವ, ಯಾರ ಜೀವವೂ ಕತ್ತಲೆಯಲ್ಲ ಎಂಬ ಮಾತೇ ಜಗದ ಭ್ರಾತೃತ್ವದ ಸಾಂತ್ವನದ ನಯ ನುಡಿಯಾಗಿದೆ. ಕವಿ ತನ್ನನ್ನು ತಾನು ಮಣ್ಣು ಗಾಳಿ ಪರಿಮಳಗಳ ಜೊತೆ ಕಂಡುಕೊಳ್ಳುವ ಬಗೆಯೇ ಇಂತಹ ಚಿಂತನೆಯನ್ನು ಎತ್ತರಿಸಬಲ್ಲುದು. ಇವುಗಳ ಜೊತೆಗಿನ ಸಂಬಂಧ ಕಾಯ್ದುಕೊಳ್ಳುವ ತವಕವೇ ವ್ಯಕ್ತಿತ್ವದ ಘನತೆಯನ್ನು ಸಾಬೀತುಪಡಿಸಬಲ್ಲದು. ಸಾರಬಲ್ಲದು.
ವೈಯಕ್ತಿಕ ಅಭಿವ್ಯಕ್ತಿಯ ಸಾರ್ವತ್ರೀಕರಣಗೊಳ್ಳುವ ಮಹತ್ತು ಬೇಂದ್ರೆಯವರು ಚೆನ್ನಾಗಿ ಬಲ್ಲರು. ವಿಶ್ವಮಾತೆಯ ಗರ್ಭ ಕಮಲ ಜಾತ ಎಂಬ ಕಲ್ಪನೆಯೇ ನೇರವಾಗಿ ತನ್ನನ್ನು ತಾನು ವಿಸ್ತರಿಸಿಕೊಳ್ಳುವ ಜಿಗಿತವಾಗಿಬಿಡುತ್ತದೆ. ಗರ್ಭ, ಪರಾಗ, ಮೈಮಣ್ಣು ಇಂಥ ಪದಗಳ ಮೂಲಕ ಸೃಷ್ಟಿಯ ಸಾರ್ವತ್ರಿಕ ನಿಯಮವನ್ನು ವಿವರಿಸುತ್ತ ಸಾಮಾನ್ಯಿಕರಿಸಿಕೊಳ್ಳುತ್ತಾರೆ. ಹಾಗಾಗಿ ಜೀವ ಪಂಚಭೂತಗಳಿಂದ ಹೊರತಲ್ಲ! ನಾನು ಎಂಬ ಎಳೆತನ ಗಟ್ಟಿಗೊಳ್ಳುವುದೇ ಇಂತಹ ಸಾಂಗತ್ಯದಿಂದ. ಐದು ಐದೆಯರು, ಐದು ತಾಯಂದಿರು, ಪಂಚಭೂತ ಹೀಗೆ ನಂಟು ಬೆಳೆಯುತ್ತಾ ಹೋಗಬಲ್ಲದು. ಈ ಬಗೆಯ ಸರಿದೂಗಿಸುತ್ತಾ ಹೋಗುವ ಕ್ರಿಯೆಯೇ ನಾನು ಎಂಬುದನ್ನು ಸಶಕ್ತಗೊಳಿಸಿಬಿಡುತ್ತದೆ. ಗರ್ಭವೊಂದರಲ್ಲಿ ಅಣುವಾಗಿ, ಬರಿ ಮೂರ್ತಿಯಾಗಿ, ಜೀವಿಯಾಗಿ, ಕೊನೆಗೆ ವಿಶ್ವದ ನುಡಿಯಾಗಿ ಮಾಗುವ ನಡೆ ಇದೆಯಲ್ಲ, ಅದು ಕವಿಯನ್ನು ಗೆಲ್ಲಿಸಿಬಿಡುತ್ತದೆ! ಕವಿತೆಯನ್ನೂ.
ಕೊನೆಗೆ ಈ ಕವಿತೆ ವಿರಮಿಸುವ (?) ಬಗೆಯನ್ನು ನೋಡಿ! ವಿಶ್ವಾತ್ಮಕ ಚಿಂತನೆಯ ಅಭಿವ್ಯಕ್ತಿಗೆ ತಾನು ಹುಡುಕಿಕೊಂಡದ್ದೂ ಮತ್ತೆ ತನ್ನ ನೆಲದ ಭಾಷೆಯನ್ನೆ! ಅದು ಮಾತು ಕಲಿಸಿದ ತಾಯಿ ಭಾಷೆಯ ಅದಮ್ಯ ಪ್ರೀತಿಯ ಸೆಲೆಗೆ ಕರೆದೊಯ್ದು ಬಿಡುತ್ತದೆ. ಕನ್ನಡಿಸುವ ಕಾಳಜಿ ತಹತಹಿಸುತ್ತದೆ. ನೆಲೆಯಿಂದ ನೆಲೆಗೆ ಜಿಗಿಯುವ ಈ ಆಲೋಚನಾ ಕ್ರಮದ ಮಧ್ಯೆ ನಾನು ಎಂಬ ಪರಿಕಲ್ಪನೆ ತನ್ನ ಅರ್ಥದ ಬಾಹುಗಳಲ್ಲಿ ಹೆಗಲುಗಳನ್ನು ಹೆಣೆಯುತ್ತದೆ! ಇದು ಜಗದ ಕವಿಗೆ ಮಾತ್ರ ಒಲಿದ ಸಿದ್ಧಿ. ಮತ್ತೆ ಮತ್ತೆ ಓದಿಸಿಕೊಳ್ಳುವ ಸಾರ್ಥಕತೆ ಇಂತಹ ಕವಿಗೆ ಮಾತ್ರ ಸಾಧ್ಯ.
-ವಾಸುದೇವ ನಾಡಿಗ್
No comments:
Post a Comment