Tuesday, March 15, 2011

ಮಾನವತಾವಾದಿ ಸರ್ವಜ್ಞ



"ಅವನ ಜಾತಿ ಮಾನವ, ಅವನ ಮತ ದೇವ ಮತ, ಅವನ ಕಾಲ ಸರ್ವಕಾಲ" ಸರ್ವಜ್ಞನ ಬಗ್ಗೆ ಕವಿವರ ಡಾ||ಬೇಂದ್ರೆಯವರ ಅಭಿಪ್ರಾಯ. ಈ ಮಾತು ಅಂತಿಮ ಸತ್ಯ.
ಜನತೆಯ ಕವಿ ಸರ್ವಜ್ಞ ಒಬ್ಬ ಸಂತ ಮತ್ತು ಪರಿವಾಜಕ. ಸಾಹಿತ್ಯ-ಸಂಸ್ಕೃತಿ ದೃಷ್ಟಿಯಿಂದ ಒಂದು ರತ್ನ. ತನ್ನ ಚಿಕಿತ್ಸಕ ದೃಷ್ಟಿಯಿಂದ ಮಾನವ ಜೀವನದ ಒಳ ಹೊರಗನ್ನು ವಿಶ್ಲೇಷಿಸಿದ. ಅವನ ಮಾತುಗಳು ಜನಮನವನ್ನು ನೇರವಾಗಿ ತಟ್ಟಿದವು. ತಟ್ಟಿ ಎಚ್ಚರಿಸಿದವು. ತನ್ನ ಆಳವಾದ ಅನುಭವಗಳನ್ನು ತ್ರಿಪದಿಗಳ ಮುಖಾಂತರ ಹೊರಹೊಮ್ಮಿಸಿದನು. ಸರ್ವಜ್ಞನಿಗೆ ಸಮಾಜದ ಹಾಗೂ ಭಯ ಇರಲಿಲ್ಲ. ಅದರಿಂದಲೇ ಕಂಡದ್ದನ್ನೂ ಕಂಡ ಹಾಗೆ ಹೇಳಿದನು. ಮುಚ್ಚಿ ಹೇಳುವುದರಲ್ಲಿ ಅವನಿಗೆ ಆಸಕ್ತಿ ಇರಲಿಲ್ಲ.
ಸರ್ವಜ್ಞನ ಕಾಲ, ಜೀವನದ ಬಗ್ಗೆ ನಿಖರವಾದ ಮಾಹಿತಿಗಳು ಲಭ್ಯವಾಗಿಲ್ಲ. ಬಹಳ ಶ್ರಮಪಟ್ಟು ಸರ್ವಜ್ಞನ ವಚನಗಳನ್ನು ಸಂಪಾದಿಸಿದ ಉತ್ತಂಗಿ ಚನ್ನಪ್ಪನವರು ಈತನ ಕಾಲ ಸು.೧೬ನೇ ಶತಮಾನ ಎಂದಿದ್ದಾರೆ. ಇದರ ಬಗ್ಗೆ ವಿದ್ವಾಂಸರ ಅಭಿಪ್ರಾಯಗಳು ವ್ಯತಿರಿಕ್ತವಾಗಿದೆ. ಕರ್ನಾಟಕ ಕವಿ ಚರಿತೆಕಾರರು ಈತನ ಕಾಲವನ್ನು ೧೭೦೦ ಇದ್ದಿರಬಹುದು ಎಂದಿದ್ದಾರೆ.
ಅವನ ತ್ರಿಪದಿಗಳನ್ನು ಆಧರಿಸಿ ೧೩೪೭ರಿಂದ ೧೭೬೦ರ ಅವಧಿ ಎಂದು ಕೆಲವು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ. ಶಿವಶರಣರನ್ನು ವಿನೀತ ಭಾವದಿಂದ ಸೇರಿಸಿದ್ದರಿಂದ ೧೩ನೇ ಶತಮಾನದಲ್ಲಿದ್ದನೆಂದೂ, ೧೪೫೦ರಲ್ಲಿ ಬಾಳಿದ ತೆಲುಗು ಕವಿ ವೇಮನನ ಸಮಕಾಲೀನನೆಂದೂ, ಅಭಿಪ್ರಾಯ ಪಡುತ್ತಾರೆ. ೧೬೦೦ರಲ್ಲಿದ್ದ ಸಿದ್ಧ ವೀರಣಾಚಾರ್ಯರು ಸರ್ವಜ್ಞ ವಚನಗಳ ಪ್ರಸ್ತುತ ಮಾಡಿರುವುದರಿಂದ ಅವರಿಗಿಂತ ಹಿಂದಿನವರು ಎನ್ನುತ್ತಾರೆ.
೧೫೭೫ರಲ್ಲಿ ಮೃತ್ಯು ಹೊಂದಿದ ಕಬೀರನ ಪ್ರಭಾವ ಸರ್ವಜ್ಞನ ಮೇಲೆ ಆಗಿದೆ ಎಂದು ಕೆಲವರ ಅಭಿಪ್ರಾಯ. ಸರ್ವಜ್ಞನ ಮೇಲೆ ಆಗಿದೆ ಎಂದು ಕೆಲವರ ಅಭಿಪ್ರಾಯ. ಕಿಟೆಲ್ ಅವರ ಪ್ರಕಾರ ೧೮೦೦. ಏಕೆಂದರೆ ಉಗಿಬಂಡಿ ತಂತಿ ಪ್ರಸ್ತಾಪ ಇರುವುದರಿಂದ ೧೭೯೭ ಎನ್ನುತ್ತಾರೆ. ತುಮಕೂರು ಜಿಲ್ಲೆ ಮಧುಗಿರಿ ತಾಲೂಕು ಬಿಜ್ಜಾವರ (ಈಗ ಗ್ರಾಮ)ದ ರಾಣಿ ಚೆನ್ನಮ್ಮನಿಗೆ (ಇಮ್ಮಡಿ ಚಿಕ್ಕ ಭೂಪಾಲನ ಪಟ್ಟದ ರಾಣಿ)ಗೆ ಪ್ಲವಂಗ ಸಂವತ್ಸರದ ಮಾಘಶುದ್ಧ ೧೫ರಲ್ಲಿ ಚಿಕ್ಕನಾಯಕನಹಳ್ಳಿ ಲಿಂಗಪ್ಪ ಕವಿಯು ಸರ್ವಜ್ಞನ ವಚನಗಳನ್ನು ಪ್ರತಿ ಮಾಡಿಕೊಟ್ಟನು ಎಂಬ ವಿಷಯ ಮಲ್ಲಿಕಾರ್ಜುನ ಕವಿ ಬರೆದ ಇಮ್ಮಡಿ ಚಿಕ್ಕಭೂಪಾಲ ಸಾಂಗತ್ಯ ಕೃತಿಯಲ್ಲಿ ಉಲ್ಲೇಖವಾಗಿದೆ. ಸಿದ್ಧಾಪುರ ಶಾಸನದ ಕಾಲದ ಪ್ರಕಾರ ಭೂಪಾಲನ ಕಡೆಯ ಕಾಲ ಕ್ರಿ.ಶ.೧೫೯೪ ಅಥವಾ ೧೬೦೪. ಪ್ಲವಂಗ ಸಂವತ್ಸರದ ಮಾಘ ಶುದ್ಧ ೧೫ ಎಂದರೆ ೨೧-೦೧. ೧೬೦೮ (ಗುರುವಾರ) ಸಿದ್ಧವೀರಣ್ಣ ಚಾರ್ಯರರಿಗಿಂತ ಹಿಂದೆ ಇದ್ದ ಹಸ್ತಪ್ರತಿ ಇದು. ಹೀಗಾಗಿ ಸರ್ವಜ್ಞನ ಕಾಲವನ್ನು ೧೫೫೦-೧೫೭೦ರ ಮಧ್ಯ ಎಂದು ಗುರುತಿಸಿ ಹಾಗೆ ೧೬ನೇ ಶತಮಾನದ ಪೂರ್ವಾರ್ಧ ಎನ್ನಬಹುದು.
ಜೀವನ
ಸರ್ವಜ್ಞನ ಜೀವನ ಸಹಕಾಲದಂತೆ ನಿಗೂಢವಾಗಿದೆ. ಈ ವಿಷಯದಲ್ಲಿ ಪೌರಾಣಿಕ ಹಿನ್ನಲೆ ಮತ್ತು ಜನಜನಿತವಾದ ಕಥೆ ಎರಡನ್ನು ಲಭ್ಯವಿರುವ ವಚನಗಳ ಪ್ರಕಾರ ಮೊದಲು ಪರಾವಿಮರ್ಶಿಸುವುದು ಸೂಕ್ತ. ಸರ್ವಜ್ಞ ತನ್ನ ಜನ್ಮಾಂತರದ ವಿಚಾರವನ್ನು ಈ ರೀತಿ ಹೇಳಿದ್ದಾನೆ.
ಮುನ್ನನಾ ಪೂರ್ವದಲಿ ಪನ್ನಗಧರ ನಾಳು
ಎನ್ನಯಾ ಪೆಸರು ಪುಷ್ಪದತ್ತನು ಎಂದು
ಎನ್ನಿಪರುದಯದಿ ಸರ್ವಜ್ಞ||
ಅಂದಿನಾ ಪುಷ್ಪದತ್ತ ಬಂದ ವರರುಚಿಯಾಗಿ
ಮುಂದೆ ತಾ ಸರ್ವಜ್ಞನೆಂದೆನಿಸಿ
ನಿಂದವನು ನಾನೇ ಸರ್ವಜ್ಞ||

ಈ ವಚನಗಳ ಆಧಾರದಿಂದ ಪರಶಿವನ ಆಸ್ಥಾನದಲ್ಲಿದ್ದ ಪುಷ್ಪದತ್ತ ಎಂಬ ಗಣೇಶ್ವರ ವರರುಚಿಯಾಗಿ ಜನ್ಮತಾಳಿ ಸರ್ವಜ್ಞನಾದನೆಂದು ಹೇಳುತ್ತಾನೆ. (ಮೇಲಿನ ಎರಡು ವಚನ ಸೇರ್ಪಡೆ ಎಂದು ಕೆಲವರ ವಿಚಾರ)
ಜನಜನಿತವಾದ ಕಥೆಯ ಪ್ರಕಾರ ಧಾರವಾಡ ಜಿಲ್ಲೆಯ ಮಾಸೂರು (ಹಿರೇಕೆರೂರು ತಾಲೂಕು) ಗ್ರಾಮದಲ್ಲಿದ್ದ ಬಸವರಸ ಎಂಬ ಶೈವ ಬ್ರಾಹ್ಮಣನು ತನ್ನ ಪತ್ನಿ ಅಕ್ಕಮಲ್ಲಮ್ಮ ಮಕ್ಕಳಿಲ್ಲದೇ ದುಃಖಿಸುತ್ತಿರಲು, ಬಸವರಸ ಪುತ್ರಾಪೇಕ್ಷೆಯಿಂದ ಕಾಶಿ ವಿಶ್ವನಾಥನ ಸನ್ನಿಧಿಗೆ ಹೋಗಿ ಅನುಗ್ರಹಿತನಾಗಿ ಊರಿಗೆ ಬರುವಾಗ ವಿಪರೀತವಾದ ಮಳೆಗೆ ಸಿಲುಕಿ ದಾರಿಯಲ್ಲಿದ್ದ ಅಬಲೂರಿನ ಕುಂಬಾರನ ಮನೆಯಲ್ಲಿ ವಾಸ್ತವ್ಯ ಮಾಡಿದಾಗ, ಕರ್ಮ-ಧರ್ಮ ಸಂಯೋಗದಿಂದ ಆ ಮನೆಯಲ್ಲಿ ’ಮಾಳಿ’ ಎಂಬ ಸ್ತ್ರೀಯೊಂದಿಗೆ ಕೂಡಿದ.
ತಂದೆ ಹಾರುವ ಮಲ್ಲ ತಾಯಿ ಕುಂಬಾರ ಮಾಳಿ
ಇಂದು ಶೇಖರನ ವರದಿಂದ ಜನಿಸಿದವಗೆ
ಕಂದನೆಂದಾರು ಸರ್ವಜ್ಞ
ತಂದೆ ಮಲ್ಲನು ಅಲ್ಲ ತಾಯಿ ಮಾಳಿಯದಲ್ಲ
ಚಂದ್ರಶೇಖರನ ವರದಿಂದ ಪುಟ್ಟಿದಾ
ಕಂದ ತಾನೆಂದ ಸರ್ವಜ್ಞ
ತಾ ಎಂದೆನಲ್ಲದೆ ತಾಯಿ ನಾನೆಂದೆನೇ?
ತಾಯಿ ನಾನೆಂದು ನುಡಿದೇನು ಪರಸ್ತ್ರೀಯ
ತಾಯಿ ಎಂದೆಂನೆ ಸರ್ವಜ್ಞ

ಈ ಮೂರು ವಚನಗಳು ಸರ್ವಜ್ಞನು ಶಿವನ ಪ್ರಸಾದದಿಂದ ಹುಟ್ಟಿದವನು. ಆತನ ಜನನಕ್ಕೆ ನಿಮಿತ್ತ ಮಾತ್ರರು ಬಸವರಸ ಮತ್ತು ಮಾಳಿ ಲೋಕಮಾತೆಯಾದ ಪಾರ್ವತಿ ತನಗೆ ತಾಯಿ ಎಂದೂ, ಮಾಳಿ ಜನ್ಮಕೊಟ್ಟದ್ದಕ್ಕಾಗಿ ತಾಯಿ ಎಂದು ಕರೆಯುವುದಿಲ್ಲ. ಒಂದು ವೇಳೆ ಹೀಗೆ ಕರೆಯುವುದಾದರೆ ಪರಸ್ತ್ರೀಯರೆಲ್ಲರೂ ತನಗೆ ತಾಯಿ ಎಂದು ಹೇಳಿದನು.
ನೂಕಿದವರವ ರಾಗ ಕೂಕಟಿಯವನನು
ಲೋಕದೊಳಗೆಲ್ಲ ಕಡುವನುಡಿವ್ರತ
ಏಕವಾಗಿಹೆನು ಸರ್ವಜ್ಞ
ಡಾ|| ಜಿ.ಎಸ್.ಶಿವರುದ್ರಪ್ಪನವರು ’ಕುಂಬಾರ ಮಾಳಿಯಲ್ಲಿ ದ್ವಿಜೋತ್ತಮನೊಬ್ಬನಿಗೆ ಹುಟ್ಟದವನು ಸರ್ವಜ್ಞನೆಂಬ ಕಥೆಯಲ್ಲಿ ಈ ದೇಶದ ಪ್ರತಿಭೆ ಎಲ್ಲವೂ ಪ್ರತಿಷ್ಠಿತ ವರ್ಣದ ಬೀಜದ ಬೆಳೆಸು ಎಂಬ ಪರಂಪರಾಗತವಾದ ವರ್ಣಪ್ರತಿಷ್ಠೆಯ ಪ್ರಕ್ಷೇಪ ಯಾಕಾಗಿರಬಾರದು?" ಎನ್ನುತ್ತಾರೆ.
ಮೈಸೂರು ಪ್ರಾಚ್ಯ ವಸ್ತು ಸಂಶೋಧನಾಲಯದ ಕೈ ಬರೆಹದ ಪ್ರಕಾರ
ತಂದೆ ಕುಂಬಾರ ಮಲ್ಲ ತಾಯಿ ಮಳಲಾದೇವಿ
ಇಂದು ಶೇಖರನ ವರಪುತ್ರ
ಧರಣಿಗೆ ಬಂದು ಜನಿಸಿದ ಸರ್ವಜ್ಞ.
ಇದರಿಂದ ಸರ್ವಜ್ಞ ಕುಂಬಾರನೆಂದು ಇದಕ್ಕೆ ಆಧಾರವಾಗಿರುವ ಅಬಲೂರಿನಲ್ಲಿರುವ ಬ್ರಹ್ಮೇಶ್ವರ ದೇವಾಲಯ ಕುಂಬಾರರ ಆರಾಧ್ಯದೈವ ಎನ್ನುತ್ತಾರೆ.
ಕೆಳದಿ ಪ್ರಾಚ್ಯವಸ್ತು ಮತ್ತು ಇತಿಹಾಸ ಸಂಶೋಧನಾ ಸಂಸ್ಥೆ ಪ್ರಕಾರ ತಾಳೆಗರಿ ಬುಡದಲ್ಲಿ (೧೮ನೇ ಶತಮಾನ) ತಂದೆ ಶಂಕರಭಟ್ಟ ತಾಯಿ ಕುಂಬಾರಮಲ್ಲಿ ಚಂದ್ರಶೇಖರನ ವರಪುತ್ರ ನಾ ನಿನ್ನ ಕಾಣಯ್ಯ ಸರ್ವಜ್ಞ ಎಂದಿದೆ. ಹೀಗೆ ಜನನದ ಬಗ್ಗೆ ನಿಜವಾದ ಮಾಹಿತಿ ಲಭ್ಯವಾಗಿರುವುದಿಲ್ಲ. ಬೆಳೆಯುತ್ತ ತನ್ನ ಜನ್ಮದ ವಿಷಯವನ್ನು ತಿಳಿದುಕೊಂಡ ಸರ್ವಜ್ಞ ವಿರಕ್ತನಾಗಿ ಮನೆಯನ್ನು ತ್ಯಜಿಸಿರಬೇಕು. ತಂದೆ-ತಾಯಿ ಅಧೀನತೆ ಒಲ್ಲದೇ ಖಂಡಿತವಾಗಿ ಸರ್ವಜ್ಞನನ್ನು ಮನೆ ಬಿಟ್ಟು ಓಡಿಸಿರಬಹುದು. ಸರ್ವಜ್ಞ ಹುಟ್ಟಿನಿಂದ ಪ್ರಾಪ್ತವಾಗುತ್ತಿದ್ದ ಜಾತಿಯನ್ನು ಖಂಡಿಸಿದ.
"ಕರದಿ ಕಪ್ಪರವುಂಟು ಹಿರಿದೊಂದು ನಾಡುಂಟು
ಹರನೆಂಬ ದೈವ ನಮಗುಂಟು ತಿರಿವರಿಂ
ಸಿರಿವಂತರಾರು ಸರ್ವಜ್ಞ"
ಎಂದು ಸಂಸಾರಿಯಾಗಿ ನಿಲ್ಲದೇ ಸಂಸಾರಿಗಳ ಸಮಾಜದ ಉದ್ಧಾರಕ್ಕಾಗಿ ಸದಾ ಸಂಚಾರ ಕೈಗೊಂಡ "ಅಪ್ರತಿಮ ಜಂಗಮ" ಸಂಸಾರಕ್ಕೆ ಅತೀತನಾಗಿ, ವಿಶ್ವವ್ಯಕ್ತಿಯಾಗಿ ಬೆಳೆದು ಜನತೆಯ ಉದ್ಧಾರಕ್ಕಾಗಿ ಜೀವನ ಸವೆಯಿಸಿದ. "ಮಂಡೆ ಬೋಳಿಸಿಕೊಂಡು ತುಂಡುಗಂಬಳಿ ಹೊದೆದು ಹಿಂಡನಗಲಿದ ಗಜದಂತೆ" ಸಮಾಜವನ್ನು ಎದುರಿಸಿದ. ಬಹುಶಃ ಸರ್ವಜ್ಞನ ಜನನ ಪ್ರೇಮ ಪ್ರಕರಣದಿಂದ ಆಗಿರಬಹುದು.
ಯಾರು ಈ ಸರ್ವಜ್ಞ ?
ವರರುಚಿಯೇ ಸರ್ವಜ್ಞನಾದನೆಂದು ಹೇಳಿಕೊಳ್ಳುತ್ತಾನೆ. ಸರ್ವಜ್ಞ ಇದು ಅಂಕಿತವಾದರೆ ಅವನ ಹೆಸರೇನು ಎಂಬ ಪ್ರಶ್ನೆಗೆ ಉತ್ತಂಗಿ ಚನ್ನಪ್ಪನವರು ಎರಡೂ ಒಂದೇ ಎನ್ನುತ್ತಾರೆ. ’ಸರ್ವರೊಳಗೊಂದು ನುಡಿಗಲಿತು ವಿದ್ಯದ ಪರ್ವತವೇ ತಾನಾದ’ ಎನ್ನುವಲ್ಲಿ ಅವನ ನಿರಹಂಕಾರ ವ್ಯಕ್ತವಾಗುವುದು. ಪರಶಿವನ ಅನುಗ್ರಹದಿಂದ ಜನಿಸಿದ್ದರಿಂದ ’ಸರ್ವಜ್ಞ’ ಎಂದು ತನ್ನನ್ನು ತಾನು ಕರೆದುಕೊಂಡಿರಬಹುದು.
ತಂದೆ ಶೈವ ಬ್ರಾಹ್ಮಣ, ತಾಯಿ ವೀರಶೈವ ಕುಂಬಾರತಿ ಆಗಿದ್ದರಿಂದ ಸರ್ವಜ್ಞ ವೀರಶೈವ ಧರ್ಮವನ್ನು ಅನುಸರಿದ್ದನೆಂದು ಅವನ ವಚನಗಳಿಂದ ತಿಳಿದುಬರುತ್ತದೆ. ಷಟ್ಥಲ ಅಷ್ಟಾವರಣ ವೀರಶೈವ ಧರ್ಮಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಅವನ ವಚನಗಳನ್ನು ಕಂಡುಬರುತ್ತವೆ ಎಂಬ ಅಭಿಪ್ರಾಯವನ್ನು ಡಾ|| ತಿಪ್ಪೇರುದ್ರಸ್ವಾಮಿ ಮತ್ತು ಪ್ರೊ|| ಎ.ಆರ್.ಕೃಷ್ಣಶಾಸ್ತ್ರಿಗಳು ಅಭಿಪ್ರಾಯ ಪಡುತ್ತಾರೆ.
ಸರ್ವಜ್ಞ ಸಂಸಾರಿಯಲ್ಲ ವಿರಾಗಿ
ಸುಂದರಾಂಗನೆಂಬುದು ಮುಂದೆ ನಿಂದಿರಲು
ಸೌಂದರ‍್ಯನರಿದ ಜ್ಞಾನಿಯು ಎಲುಬಿನಾ
ಹಂದರವ ಕಾಂಬ ಸರ್ವಜ್ಞ
ಕಚ್ಚೆ ಕೈ ಬಾಯಿಗಳು ಇಚ್ಛೆಯಲಿದ್ದರೆ
ಅಚ್ಯುತನಪ್ಪ ಅಜನಪ್ಪ ಲೋಕದಲಿ
ನಿಶ್ಚಿಂತನಪ್ಪ ಸರ್ವಜ್ಞ
ಎಂದಿದ್ದಾನೆ. ತನ್ನ ವಚನಗಳಲ್ಲಿ ಶೃಂಗಾರದ ಬಗ್ಗೆ ಸಂಭೋಗದ ಬಗ್ಗೆ ವೇಶ್ಯೆಯರ ಬಗ್ಗೆ, ಸ್ತ್ರೀ ಜಾತಿಗಳ ಬಗ್ಗೆ ಬರೆದಿದ್ದಾನೆಂದರೆ ಅನುಭವಿಸಿ ಬರೆದದ್ದಲ್ಲ, ಶಾಸ್ತ್ರಾಭ್ಯಾಸ ಅಥವಾ ಲೋಕಾನುಭವದಿಂದ ಹೇಳಿರುವನು.
ಸರ್ವಜ್ಞನ ತ್ರಿಪದಿಗಳು ಮತ್ತು ಶೈಲಿ
ಸರ್ವಜ್ಞ ಅಲೆಮಾರಿ ಸ್ವಭಾವದವನಾಗಿದ್ದರಿಂದ ಒಂದೆಡೆ ಕುಳಿತು ವಚನಗಳನ್ನು ರಚಿಸದೇ ಲೋಕ ಸಂಚಾರ ಮಾಡುತ್ತ ಅನುಭವ ಹೊಂದುತ್ತ ಅಲ್ಲಲ್ಲಿ ಬಂದ ಭಾವನೆಗಳನ್ನು ಅಲ್ಲಿಯೇ ಅಭಿವ್ಯಕ್ತಿಪಡಿಸುತ್ತ ತನ್ನ ಆಶು ಕವಿತ್ವದಿಂದ ವಚನಗಳನ್ನು ರಚಿಸಿದ. ಸರ್ವಜ್ಞನ ವಚನಗಳು ಹಲವಾರು ಮುದ್ರಣಗಳನ್ನು ಕಂಡರೂ ವಚನಗಳ ನಿಖರತೆಯ ಸಂಖ್ಯೆ ಇನ್ನೂ ತಿಳಿದಿಲ್ಲ. ಸಮಾಜದಲ್ಲಿ ಅನುಭವ ಉಳ್ಳವರು ವಚನ ಮಾದರಿಯಲ್ಲಿಯೇ ತಾವೇ ಬರೆದು ಸೇರಿಸಿರಬಹುದು. ಉತ್ತಂಗಿ ಚನ್ನಪ್ಪನವರು ಸಂಗ್ರಹಿಸಿದಕ್ಕಿಂತ ಹೆಚ್ಚು ವಚನಗಳು ಜನಪ್ರಿಯವಾಗಿವೆ. ಸರ್ವಜ್ಞ ಬರೆದಿಟ್ಟಿದ್ದರೆ ಈ ರೀತಿ ಆಗುತ್ತಿರಲಿಲ್ಲ. ಅವನ ಅಂಕಿತದಲ್ಲಿರುವ ಕೆಲವು ವಚನಗಳು ಅವನದೇ ಶೈಲಿ ಹೊಂದಿರುವುದಿಲ್ಲ. ಅವನ ಭಾಷೆ ಸರಳ, ತನ್ನ ಯೋಚನೆಗಳನ್ನು ರೂಪಕ ಉಪಮೆಗಳಿಂದ ಸಮರ್ಥಿಸಿಕೊಳ್ಳುವನು. ಶಬ್ದಾಲಂಕಾರಗಳು ತ್ರಿಪದಿಯಲ್ಲಿ ಹಾಸುಹೊಕ್ಕಾಗಿವೆ. ದ್ವಿಯಾಕ್ಷರ ಪ್ರಾಸವು ಎಲ್ಲ ತ್ರಿಪದಿಗಳಲ್ಲಿ ಕಂಡುಬರುತ್ತದೆ. ಶೃಂಗಾರ ಹಾಸ್ಯರಸಗಳನ್ನು ಬಳಸಿದ್ದಾನೆ. ಬಸವಣ್ಣನವರ ಪ್ರಭಾವವೂ ಉಂಟಾಗಿದೆ.
ನುಡಿಯಲ್ಲಿ ಎಚ್ಚೆತ್ತು ನಡೆಯ ತಪ್ಪಿದರೆ
ಹಿಡಿದಿರ್ದ ಲಿಂಗ ಹೊಡಮರಳಿ ಕಚ್ಚುವ
ಹೆಡೆನಾಗ ನೋಡಾ ಸರ್ವಜ್ಞ

ಜನಸಾಮಾನ್ಯರು ವಚನಗಳನ್ನು ಪ್ರೀತಿಸಿದ್ದರಿಂದ ಅವು ಜನ-ಜನಿತವಾದವು.
ತ್ರಿಪದಿಗಳ ಗುಣ
ಸು.೧೦ನೇ ಶತಮಾನದಲ್ಲಿ ಶಾಸನಗಳಲ್ಲಿ ಕಂಡುಬಂದ ತಿವದಿ, ತಿವಳಿ, ನಾಮಾಂತರ ಹೊಂದಿ ತ್ರಿಪದಿಯಾಯಿತು. ಇದು ಅಚ್ಚ ಕನ್ನಡ ಛಂದಸ್ಸಿನ ಹಾಡುಗಬ್ಬ. ಈ ಪ್ರಕಾರದಲ್ಲಿ ಜನಪದ ಗೀತೆಗಳು ಇವೆ. ಜೀವನದ ಸಮಸ್ಯೆಗಳ ನೇರವಾದ, ಅಪಾರವಾದ ಅನುಭವ, ಉದಾರವಾದ ಮಾನವೀಯ ಅನುಕಂಪ, ಉನ್ನತವಾದ ಅಧ್ಯಾತ್ಮಿಕ ನಿಲುವು ಇವುಗಳಿಂದ ಮುಪ್ಪರಿಗೊಂಡ ಸರ್ವಜ್ಞನ ವಚನಗಳು ತ್ರಿಪದಿ ರೂಪದಲಿ ಹೊರಹೊಮ್ಮಿದ ಕಾವ್ಯಪ್ರತಿಭೆ ಎಂದಿದ್ದಾರೆ. ಡಾ||ಎಚ್.ತಿಪ್ಪೇರುದ್ರಸ್ವಾಮಿಯವರು, ಡಾ|| ರಂಶ್ರೀ ಮುಗಳಿಯವರು ಸರ್ವಜ್ಞನ ತ್ರಿಪದಿಗಳಲ್ಲಿ ಕಥೆಯಿಲ್ಲ, ವರ್ಣನೆ ಇಲ್ಲ ಆದರೆ ಸಮಗ್ರ ಜೀವನ ಕಥೆ ಜೀವನ ಧರ್ಮ ರೂಪುಗೊಂಡಿದೆ. ಜೀವನ ರಸಕ್ಕೆ ಪೋಷಕವಾಗಿದೆ. ಅವು ನೀತಿ ಬೋಧಕವಲ್ಲ ಅನುಭವ ವೇದ ವಿವೇಕದ ವಾಣಿ ಅವುಗಳಲ್ಲಿದೆ. ಯಾವ ಭಿಡೆ ಮುರವತ್ತುಗಳಿಲ್ಲದೇ ಅವನು ಕಂಡದ್ದನ್ನಾಡಿದ್ದಾನೆ ಅವನ ತ್ರಿಪದಿಗಳ ತ್ರಿವಿಕ್ರಮ ಶಕ್ತಿ ಅಚ್ಚ ಕನ್ನಡದ ಸೊಬಗನ್ನು ಎಷ್ಟು ಹೊಗಳಿದರೂ ಸಾಲದು. ಅವನ ವಚನಗಳು ಜನತೆಯ ಜ್ಞಾನಕೋಶವಾಗಿವೆ. ಸ್ಫೂರ್ತಿವಾಕ್ಯಗಳಾಗಿವೆ. ಸರ್ವಜ್ಞನ ವಚನಗಳು ಕನ್ನಡ ಪ್ರಜ್ಞೆಯ ಪ್ರತೀಕ. ಅವು ಕನ್ನಡಗರಿಗೆ ತಿಳಿವಳಿಕೆ ಕೊಡುವವು.
ಸರ್ವಜ್ಞನ ಕೆಲವು ವಿಚಾರಗಳು
ಪ್ರಕೃತಿ ಸಹಜವಾದ ಕ್ರಿಯೆಗಳ ಮೂಲಕ ಕುಲದ ಭೇದದ ಬಗ್ಗೆ ಸರ್ವಜ್ಞ ಪ್ರಶ್ನಿಸುವನು.
ಎಲುಕೊರಳು ನರತೊಗಲು ಬಿಲರಂಧ್ರ ಮಾಂಸದೊಳು
ಹಲತೆರದ ಮಲವು ಸುರಿದಿರಲು ಕುಲಕ್ಕಿನ್ನು
ಬಲವುಂಟೇ ಹೇಳು ಸರ್ವಜ್ಞ
ಹಸಿವು ತೃಷೆ ನಿದ್ರೆಗಳು ವಿಷಮ ಮೈಥುನ ಬಯಕೆ
ಪಶುಪಕ್ಷಿ ನರಗೆ ಸಮನಿರಲು ಕುಲವೆಂಬ
ಘರ್ಷಣೆ ಎತ್ತಣದು ಸರ್ವಜ್ಞ
ಜಾತಿ ಪರಿಕಲ್ಪನೆಗೆ ಹೊಸ ವ್ಯಾಖ್ಯಾನವನ್ನು ಕೊಡುತ್ತ
ನಡೆವುದೊಂದೆ ಭೂಮಿ ಕುಡಿಯುವುದೊಂದೇ ನೀರು
ಸುಡುವಗ್ನಿಯೊಂದೆ ಇರುತಿರಲು
ಕುಲಗೋತ್ರ ನಡುವೆ ಎತ್ತಣದು ಸರ್ವಜ್ಞ
ಯಾತರ ಹೂವದು ನಾತರದೆ ಸಾಲದೇ
ಜಾತಿ-ಜಾತಿಯೆನಬೇಡ ಶಿವನೊಲಿ
ದಾತನೆ ಜಾತ ಸರ್ವಜ್ಞ
ಸತ್ತದನ ತಿಂಬಾತ ಎತ್ತಣದ ಹೊಲೆಯನು
ಒತ್ತೊತ್ತಿ ಜೀವಿಯ ಕೊರಳಿರಿದು ತಿಂಬಾತ
ಉತ್ತಮ ಹೊಲೆಯ ಸರ್ವಜ್ಞ
ಸರ್ವಜ್ಞ ಆತ್ಮಜ್ಞಾನದ ಬಗ್ಗೆ ಕೆಲವು ಮಾತುಗಳನ್ನು ಹೇಳಿದ್ದಾನೆ. ತಾನಾರೆಂಬುದನ್ನು ತಿಳಿದುಕೊಂಡು ಪರತತ್ವದೊಡನೆ ತನ್ನ ಸಂಬಂಧ ಎಂಥದೆನ್ನುವುದನ್ನು ತಿಳಿದುಕೊಳ್ಳುವುದು ತತ್ವಜ್ಞಾನದ ಗುರಿ.
ಏನಾದೊಡೇನಯ್ಯ ತಾನಾಗದನಕ
ತಾನಾಗಿ ತನ್ನನಾದೊಡೆ ಲೋಕ ತಾ
ನೇನಾದೊಡೆನು ಸರ್ವಜ್ಞ
ತಾನೊಂದನೆಯ್ದಿದೆನು ಏನೊಂದು ಪಿಡಿದಿರನು
ತನ್ನಂತೆ ಪರರ ಕಾಂಬವನು ಜಗವೆಲ್ಲ
ತಾನಾದ ಬಳಿಕ ಸರ್ವಜ್ಞ
ಜಗತ್ತೆಲ್ಲ ತಾನು ಎಂದು ತಿಳಿದುಕೊಂಡು ತನ್ನಂತೆ ಪರರನ್ನು ಕಾಣುವುದೇ ಸರ್ವಜ್ಞನ ಸ್ವಂತ ಸಾಧನೆ.
ದೇವರು-ಧರ್ಮದ ಬಗ್ಗೆ ಸರ್ವಜ್ಞನ ಅಭಿಪ್ರಾಯ ನಿಚ್ಚ್ಚಳವಾದದ್ದು
ಕಾಯ-ಕಮಲವೆ ಸಜ್ಜೆ ಜೀವರತುನವೇ ಲಿಂಗ
ಭಾವ ಪುಷ್ಪದಿ ಶಿವಪೂಜೆ ಮಾಡುವನ
ದೇವನೆಂದೆಂಬೆ ಸರ್ವಜ್ಞ
ಒಬ್ಬನಲ್ಲದೇ ಜಗಕೆ ಇಬ್ಬರುಂಟೇ ಮತ್ತೆ
ಒಬ್ಬ ಸರ್ವಜ್ಞ ಕರ್ತನೀ ಜಗಕ್ಕೆಲ್ಲ
ಒಬ್ಬನೇ ದೈವ ಸರ್ವಜ್ಞ
ಕಲ್ಲಿನಲ್ಲಿ ದೇವರ ಮೂರ್ತಿ ಕಾಣುವ ಬಗ್ಗೆ
ಕಲ್ಲುಗುಂಡಿಗ ಮೇಲೆ ಮಲ್ಲಿಗೆಯ ಅರಳಿಕ್ಕಿ
ನಿಲ್ಲದೆ ಹಣೆಯ ಬಡಿವರ್ಗೆ ಬುಗುಡಿಲ್ಲ
ದಿಲ್ಲ ಕಾಣಯ್ಯ ಸರ್ವಜ್ಞ
ಭಕ್ತ ತನ್ನಲ್ಲಿಯೇ ದೇವನನ್ನು ಕಂಡುಕೊಳ್ಳುವ ಮಟ್ಟಕ್ಕೆ ಬರಬೇಕು
ಸಣ್ಣನೆಯ ಮಳಲೊಳಗೆ ನುಣ್ಣನೆಯ ಶಿಲೆಯೊಳಗೆ
ಬಣ್ಣಿಸುತ ಬರೆದ ಪಟ್ಟಿದೊಳಗೆ ಇರುವಾತ
ತನ್ನೊಳಗೆ ಇರನೆ ಸರ್ವಜ್ಞ
ದೇವರಲ್ಲಿ ಏಕನಿಷ್ಠೆಯ ಬಗ್ಗೆ
ಅಷ್ಠವಿಧದರ್ಚನೆಯ ನೆಷ್ಟು ಮಾಡಿದರೇನು
ನಿಷ್ಠೆ ನೆಲಗೊಳಗೆ ಭಜಿಸುವ ಪೂಜೆಯದು
ನಷ್ಟ ಕಾಣಯ್ಯ ಸರ್ವಜ್ಞ
ಅಹಂಕಾರ ನಿರಸನದಿಂದ ಅಂತರಂಗ ಪರಿಶುದ್ಧತೆ ಸಾಧ್ಯ ಎಂಬುದನ್ನು
ಬೊಮ್ಮ ತಾನೆಂಬುದು ಸುಮ್ಮನೆ ಬಹುದಲ್ಲ
ಹಮ್ಮಿನ ಪಥವನಳಿದರೆ ಪರಬೊಮ್ಮ
ಗಮ್ಮನೆ ಅಕ್ಕು ಸರ್ವಜ್ಞ
ಗುರುವಿನ ಶಕ್ತಿಯ ಮಹತ್ವವನ್ನು
ಹರಗೆ ಕರ ಮುಗಿದೊಡೆ ವರ ನೀಡಲೊಲ್ಲನು
ನರ ರೂಪಧರಿಸಿ ಗುರುವಾಗಿ ಬೋಧಿಪಗೆ
ಸರಿಯೆ ಹರ ಕಾಗೆ ಸರ್ವಜ್ಞ
ಗುರುವಿನ ಉಪದೇಶದಿಂದ ಕಷ್ಟ ಪರಿಹಾರ ಎಂಬುದನ್ನು
ಬೆಳ್ಳುಳ್ಳಿ ಉಸಿಲಂಗೆ ಪೊಳ್ಳಯಿಸಿ ಹರಿದಂತೆ
ಒಳ್ಳೆಯ ಗುರುವಿನುಪದೇಶದಿಂ ಭವದ
ಬಳ್ಳಿ ಹರಿದಿಹುದು ಸರ್ವಜ್ಞ
ಗುರುವಚನುಪದೇಶ ಗುರುವಚನ ಪರಭಕ್ತಿ
ಗುರುವಚನ ಪದವದುವೆ ಗುರುವಚನವೆ
ಪರಮಾರ್ಥವಯ್ಯ ಸರ್ವಜ್ಞ
ಸರ್ವಜ್ಞ ವಚನಕಾರರ ಆದರ್ಶಗಳನ್ನು ಪಾಲಿಸಿದ್ದಾನೆ. ಹಲವು ವಚನಕಾರರ ಪ್ರಭಾವ ಆತನ ಮೇಲಿದೆ. ಹಲವು ವಚನಗಳಲ್ಲಿ ಲಿಂಗ ಪದ್ಧತಿ ಅಷ್ಟಾವರಣ ಇಷ್ಟಲಿಂಗ ಷಟ್‌ಸ್ಥಲಗಳ ಮಹತ್ವವನ್ನು ವಿವೇಚಿಸಿದ್ದಾನೆ. ಲಿಂಗಾಂಗ ಸಾಮರಸ್ಯವೇ ಷಟ್‌ಸ್ಥಲಾಚರಣೆಯ ಗುರಿ ಎನ್ನುವುದನ್ನು
ಷಟ್ಸ್ಥ ಮರ್ಮವನು ಸ್ಫುಟವಾಗಿ ತಾನರಿದು
ದಿಟವಾಗಿ ನಂಬಿ ನಡೆದಿಹರೆ ಇಹದಲ್ಲಿ
ಘಟಿಸುವುದು ಮುಕ್ತಿ ಸರ್ವಜ್ಞ
ಭಕ್ತನ ನಿಷ್ಠಾ ಭಕ್ತಿಯನ್ನು ಕುರಿತು (ಭಾವಶುದ್ಧಿ)
ಒಮ್ಮನದಲ್ಲಿ ಶಿವಪೂಜೆಯ ಗಮ್ಮನೆ ಮಾಡುವುದು
ಇರ್ಮನವಿಡಿದು ಕೆಡಬೇಡ ವಿಧಿವಶವು
ಸುಮ್ಮನೆ ಕೆಡಗು ಸರ್ವಜ್ಞ
ಲಿಂಗಾರ್ಪಿತವಲ್ಲದ ಅನರ್ಪಿತ ವಸ್ತುಗಳನ್ನು ದೂರಿಕರಿಸುವುದೇ ಪ್ರಸಾದ ಸ್ಥಲ
ಲಿಂಗಕ್ಕೆ ತೋರದಲೆ ನುಂಗಿದಡೆ ಏನಹುದು
ಭಂಗಬಂಧನವು ಘನವಹುದು
ಆಲಿಂಗ ಹಿಂಗಿವುದು ಸರ್ವಜ್ಞ
ಪ್ರಾಣಲಿಂಗಿ ಸ್ಥಲದ ಬಗ್ಗೆ
ಅಣುವಾದಿಯೊಳಿರಲು ಹೂಣಿ ಲಿಂಗದಿಮನವ
ಕೇಣವಿಡಿದಿಹನು ವಿರತಿಯಲಿ ದೇಹದಿಹ
ಪ್ರಾಣಲಿಂಗಿಯು ತಾ ಸರ್ವಜ್ಞ
ಲಿಂಗಾಂಗ ಸಾಮರಸ್ಯದ ಬಗ್ಗೆ
ನಾನು ನೀನುಗಳಳಿದು ತಾನು ಲಿಂಗದಿ ಉಳಿದು
ನಾನು ಭ್ರಮೆಗಳ ಹರಿಪಿಂಗಿ ನಿಂದವನ
ತಾನೈಕ್ಯ ನೋಡ ಸರ್ವಜ್ಞ
ಸರ್ವಜ್ಞ ಜೀವ-ಶಿವರ ಐಕ್ಯದ ಸಾರವನ್ನು ಹೇಳಿದ್ದಾನೆ. ಅಲ್ಲಲ್ಲಿ ವ್ಯಂಗ್ಯವಾಗಿ ಸಮಾಜವನ್ನು ಎಚ್ಚರಿಸಿದ್ದಾನೆ
ನೆಲವನ್ನು ಮುಗಿಲನ್ನು ಹೊಲಿವರುಂಟೆದರವ
ಹೊಲಿವರು ಹೊಲಿವರೆನಬೇಕು| ಮೂರ್ಖನಲಿ
ಕಲಹ ಬೇಡವೆಂದ ಸರ್ವಜ್ಞ
ಗವುಡನೊಳು ಹಗೆತನವು ಕಿವುಡನೊಳು ಏಕಾಂತ
ಪ್ರವುಢನೊಳು ಮೂಢನುಪದೇಶ| ಹಸಿದೆದ್ದು
ತವುಡ ತಿಂದಂತೆ ಸರ್ವಜ್ಞ
ಸರ್ವಜ್ಞ ತನ್ನ ಕೆಲವು ವಿಚಾರಗಳನ್ನು ಈ ರೀತಿ ವ್ಯಕ್ತ
ಪಡಿಸಿದ್ದಾನೆ.
ನಿಜವಾದ ತೀರ್ಥವೆಂದರೆ
ಸತ್ಯರ ನುಡಿ ತೀರ್ಥ ನಿತ್ಯರ ನಡೆ ತೀರ್ಥ
ಉತ್ತಮರ ಸಂಗವದು ತೀರ್ಥ ಹರಿವನೀ
ಹೆತ್ತಣದು ತೀರ್ಥ ಸರ್ವಜ್ಞ
ಸ್ವಾರ್ಥಿಗಳ ಬಗ್ಗೆ
ಇಂದು ನಾಳೆಗೆ ಎಂದು ತಂದು ಕೂಡಿಡಬೇಡ
ಬಂದುದನೆ ಕೊಂಡು ಸುಖಿಸುತ ಬೋನೆಯದು
ಬಂದಾಗ ನರಳು ಸರ್ವಜ್ಞ
ಅಹಿಂಸೆ ಬಗ್ಗೆ
ಕೋಲುವ ಧರ್ಮದ ನೊಯ್ದು ಒಲೆಯೊಳಗಿಕ್ಕೂ
ಕೊಲಲಾಗದೆಂಬ ಜೈನರಾ ಮತವೆನ್ನ
ತಲೆಯ ಮೇಲಿರಲಿ ಸರ್ವಜ್ಞ
ಜ್ಞಾನಿಯ ಬಗ್ಗೆ
ತನ್ನ ನೋಡಲು ಎಂದು ಕನ್ನಡಿಯು ಕರೆಯುವುದೇ
ತನ್ನಲ್ಲಿ ಭಾವ ಉದಿಸಿದ ಮಹಾತ್ಮನು
ಕನ್ನಡಿಯು ಜಗಕೆ ಸರ್ವಜ್ಞ
ವಿದ್ವಾಂಸರ ಅಭಿಪ್ರಾಯ
ಬೇಂದ್ರೆಯವರ ಪ್ರಕಾರ ಸರ್ವಜ್ಞನಿಗೆ ವೈಯಕ್ತಿಕ ಹಿತಾಸಕ್ತಿಗಳು ಇರಲಿಲ್ಲ. ಆತನಿಗೆ ಇದ್ದುದು ಸಾಮಾಜಿಕ ಹಿತಾಸಕ್ತಿ, ಅವನ ವಚನಗಳ ಉದ್ದಕ್ಕೂ ಚಿತ್ರಿತವಾಗಿರುವುದು ಸಮಾಜದ ಅತೃಪ್ತ ಜೀವನ. ಅದು ಇದ್ದ ಸ್ಥಿತಿಯನ್ನೂ ಇರಬೇಕಾದ ಸ್ಥಿತಿಯನ್ನೂ ತುಲನೆ ಮಾಡಿ ವಿಶ್ಲೇಷಿಸಿದ್ದು ಮಹತ್ವದ ವಿಚಾರವೆನ್ನಬೇಕು. ದಾರಿತಪ್ಪುತ್ತಿದ್ದ ಸಮಾಜವನ್ನು ಸರಿದಾರಿಗೆ ತಂದು ನೇರ್ಪುಗೊಳಿಸುವುದು ಈ ಎಲ್ಲದರ ಹಿನ್ನೆಲೆಯಾಗಿತ್ತು. ಹೀಗಾಗಿ ಅವನದು ಕಲೆಯಲ್ಲ ಕಲೆಗಿಂತ ಮಿಗಿಲಾದದ್ದು. ಸರ್ವಜ್ಞ ತನ್ನ ಕಾವ್ಯವನ್ನು ಸಾಮಾಜಿಕ ಅಸ್ತ್ರವಾಗಿ ಬಳಸಿದ್ದಾನೆ.
ರಾಷ್ಟ್ರಕವಿ ಡಾ||ಶಿವರುದ್ರಪ್ಪನವರ ಪ್ರಕಾರ "ಸರ್ವಜ್ಞನ ವಚನಗಳು ನೀತಿಕಾವ್ಯದ ಸಮಸ್ತ ಲಕ್ಷಣಗಳನ್ನು ಒಳಗೊಂಡಿವೆ. ಇವುಗಳಿಗೆ ಧರ್ಮಪ್ರಸಾರದ ಉದ್ದೇಶವಿಲ್ಲ. ಅತ್ಯಂತ ನಿರ್ಲಿಪ್ತವಾಗಿ ನಿಂತರೂ ಜೀವನ ಪ್ರೀತಿಯನ್ನು ಕಳೆದುಕೊಳ್ಳುವ ಹಂಗಿಗೂ ಒಳಗಾಗದ ವಿಮರ್ಶಕನ ಕಣ್ಣಿನಿಂದ ಲೋಕವನ್ನು ನೋಡಿದ ವ್ಯಕ್ತಿತ್ವವೊಂದರ ಅನುಭವ ಅಭಿವ್ಯಕ್ತಿಗಳನ್ನು ಇವುಗಳಲ್ಲಿ ಕಾಣಬಹುದು. ಕಾವ್ಯದಲ್ಲಿ ನೀತಿ ತಾನೆ ತಾನಾಗಿ ಎದ್ದು ಕಂಡು, ನೀರಸವಾಗದೇ ತುಂಬ ಆತ್ಮೀಯವಾದ ರೀತಿಯಲ್ಲಿ ಅರಿವಿಗೆ ಬರುತ್ತದೆ."
ಮಲ್ಲೇಪುರಂ ವೆಂಕಟೇಶ್ ಪ್ರಕಾರ "ಸರ್ವಜ್ಞ ಎಂಬ ಹೆಸರು ಕನ್ನಡ ಸಂಸ್ಕೃತಿಯ ಒಂದು ಮುಖ್ಯಭಾಗ. ಆಂಧ್ರದ ವೇಮನ, ತಮಿಳಿನ ತಿರುವಳ್ಳುವರ್, ಕನ್ನಡದ ಸರ್ವಜ್ಞ, ದಕ್ಷಿಣ ಅನುಭಾವ ಸಾಹಿತ್ಯದ ಚರಿತ್ರೆಯ ತ್ರಿಮೂರ್ತಿಗಳು. ಕಳೆದ ೫೦೦ ವರ್ಷಗಳಿಂದ ಸರ್ವಜ್ಞನರ ಮನಸ್ಸನ್ನು ಒಂದೆಡೆ ಕೂಡಿಸುವ ಕೆಲಸ ಮಾಡಿದವನು. ಸರ್ವಜ್ಞ ಓದಿದವರೂ, ಓದದವರೂ; ಕಲಿತವರೂ, ಕಲಿಯದವರೂ ತಿಳಿದವರು, ತಿಳಿಯದವರೂ, ಭೇದಭಾವವಿಲ್ಲದೆ ಎಲ್ಲರ ಮನಸ್ಸಿನ ಆಳದಲ್ಲಿ ಅವನು ಕುಳಿತುಬಿಟ್ಟಿದ್ದಾನೆ" ಸರ್ವಜ್ಞ ಮಾನವತಾವಾದಿ ಮತ್ತು ಕನ್ನಡ ಪ್ರಜ್ಞೆಯ ಪ್ರತೀಕ. ತನ್ನ ಅನುಭವವನ್ನು ಭಾಷೆಯ ಜೊತೆಗೆ ತರುವನು. ಸಾಮಾನ್ಯ ಜೀವನ ಕಥನವೇ ಅವನ ವಚನಗಳ ವಸ್ತುವಾದ್ದರಿಂದ ಸಾಮಾನ್ಯರ ಕನ್ನಡ ಅವನ ವಚನಗಳಲ್ಲಿ ಕಾಣುತ್ತದೆ. ಹೀಗಾಗಿ ಕನ್ನಡ ನಾಡು ನುಡಿ ಪ್ರೇಮವೇ ಮೂರ್ತಿವೆತ್ತಂತಿದೆ.
ಪ್ರೊ.ಸಂಗನಾಳಮಠ ಯು.ಎನ್.
ವಿಶ್ರಾಂತ ಉಪನ್ಯಾಸಕರು.

No comments:

Post a Comment