Thursday, May 6, 2010

ಕನ್ನಡಕ್ಕೆ ಕೈ ಎತ್ತಿ: ಜೈಲೆ ಗತಿ



ಅಂತೂ ಇಂತೂ ಸಾಬೀತಾಯಿತು. ಕನ್ನಡಕ್ಕಾಗಿ ಕೈ ಎತ್ತುವುದು, ಕನ್ನಡಮ್ಮನ ನೆರವಿಗೆ ಧಾವಿಸುವುದು ಕನ್ನಡಿಗರ ರಕ್ಷಣೆ ಮಾಡುವುದು, ಕನ್ನಡದ ಗಡಿ ಕಾಪಾಡುವುದು ಈಗ ಕೊಲೆ, ಸುಲಿಗೆ, ದರೋಡೆ, ಗಡಿ ಒತ್ತುವರಿ ಅಪರಾಧಗಳಿಗಿಂತ ಹೇಯ ಕೃತ್ಯ.
ಕನ್ನಡಕ್ಕೆ ಕಷ್ಟ ಬಂದಾಗ ಬೀದಿಗಿಳಿಯಬೇಡಿ, ಕನ್ನಡಕ್ಕೆ ಜೈ ಎನ್ನಬೇಡಿ, ಲಾಠಿ ಏಟು ತಿನ್ನಬೇಡಿ, ಬೂಟಿನಡಿ ಸಿಲುಕಬೇಡಿ, ಬೆಂಗಳೂರಿನ ಬೀದಿಗಳಲ್ಲಿ ಕನ್ನಡ ಮರೆಯಾದರೆ ಏನಾಯಿತು? ಬೋರ್ಡುಗಳಲ್ಲಿ ಇಂಗ್ಲಿಷ್, ಹಿಂದಿ ಮೆರೆದರೇನಾಯಿತು? ಗಡಿಗಳನ್ನು ಯಾರೋ ಒತ್ತರಿಸಿಕೊಂಡರೇನಾಯಿತು, ಕೃಷ್ಣೆ ಹರಿದರೇನಾಯಿತು, ಕಾವೇರಿ ಬರಿದಾದರೇನಾಯಿತು? ಆಗೋದೆಲ್ಲಾ ಆಗಲಿ ಎಂದು ಸುಮ್ಮನೆ ಮನೆಯಲ್ಲಿರಿ-ಅಧಿಕಾರಕ್ಕೆ ಬಂದ ೨೦ ತಿಂಗಳುಗಳಲ್ಲಿ ಯಡಿಯೂರಪ್ಪ ಸರಕಾರ ಕನ್ನಡಿಗರಿಗೆ ನೀಡಿರುವ ಸಂದೇಶ ಇದು.
ಕನ್ನಡ, ಕರ್ನಾಟಕ, ರೈತರು ಎಂದುಕೊಂಡು ಅಧಿಕಾರಕ್ಕೆ ಬಂದ ಯಡಿಯೂರಪ್ಪ ಅವರು ಗಡಿ ಒತ್ತುವರಿ ಮಾಡಿಕೊಂಡವರ ಮೇಲಿದ್ದ ಕೇಸು ಹಿಂತೆಗೆದುಕೊಂಡರು, ಎದುರಾಳಿಗಳ ಮನೆಗೆ ನುಗ್ಗಿ ದಾಂಧಲೆ ಎಬ್ಬಿಸಿದವರ ಮೇಲಿದ್ದ ಪ್ರಕರಣಗಳನ್ನು ಹಿಂತೆಗೆದುಕೊಂಡರು, ಕನ್ನಡ? ಉಹುಂ, ಕನ್ನಡಕ್ಕಾಗಿ ಹೋರಾಡಿದವರ ಮೇಲಿದ್ದ ಪ್ರಕರಣಗಳನ್ನು ಮಾತ್ರ ಮರೆತರು. ಎರಡು ವರ್ಷಗಳಲ್ಲಿ ಯಡಿಯೂರಪ್ಪ ಸರ್ಕಾರ ಈಗಾಗಲೇ ಹಲವರ ಮೇಲೆ ನ್ಯಾಯಾಲಯದಲ್ಲಿದ್ದ ಸುಮಾರು ೬೫ಕ್ಕೂ ಹೆಚ್ಚು ಪ್ರಕರಣಗಳನ್ನು ಹಿಂದಕ್ಕೆ ಪಡೆದಿದೆ. ಗದ್ದಲ ಏನೇ ನಡೆದರೂ ಅದು ಕನ್ನಡ ಹೋರಾಟಗಾರರ ಮೇಲಿನ ಪ್ರಕರಣಗಳನ್ನು ತೆಗೆಯಲಿಲ್ಲ. ಕನ್ನಡಾಭಿಮಾನಿಗಳು ಜೈಲಿನಲ್ಲಿದ್ದರೇ ಒಳ್ಳೆಯದು, ಕೋರ್ಟಿಗೆ ಅಲೆಯುತ್ತಿದ್ದರೆ ಮತ್ತೂ ಒಳ್ಳೆಯದು ಎನ್ನುವುದು ಯಡಿಯೂರಪ್ಪ ಅವರ ಲೆಕ್ಕಾಚಾರ ಇದ್ದಂತಿದೆ.
ಹೋರಾಟಗಾರರ ಮೇಲಿನ ಪ್ರಕರಣಗಳನ್ನು ಹಿಂತೆಗೆದುಕೊಳ್ಳುವುದು ಹೊಸದೇನೂ ಅಲ್ಲ, ನಾಡು-ನುಡಿಗಾಗಿ ಹೋರಾಡಿದವರ ವಿರುದ್ಧ ಯಾವ ಸರಕಾರವೂ ಹೆಚ್ಚು ದ್ವೇಷ ಸಾಧಿಸಿಲ್ಲ, ನಿಜಲಿಂಗಪ್ಪ ಅವರಿಂದ ಹಿಡಿದು ಕುಮಾರಸ್ವಾಮಿ ಅವರವರೆಗೂ ಎಲ್ಲ ಮುಖ್ಯಮಂತ್ರಿಗಳೂ ಕನ್ನಡ ಹೋರಾಟಗಾರರ ಮೇಲಿನ ಕೇಸುಗಳನ್ನು ಕೈಬಿಟ್ಟಿದ್ದಾರೆ. ಹೋರಾಡಿದ್ದು ಕನ್ನಡದ ರಕ್ಷಣೆಗಾಗಿಯಲ್ಲವೇ, ಒಳ್ಳೆಯದಾಗಲಿ ಬಿಡಿ, ದ್ವೇಷ ಸಾಧಿಸುವುದೇಕೆ? ಎಂದು ಹೇಳಿದ್ದಾರೆ.
ಆದರೆ, ಉಹುಂ ಒಬ್ಬರು ಯಡಿಯೂರಪ್ಪ ಅವರಿಗೆ ಮಾತ್ರ ಈ ಕರುಣೆ ಇಲ್ಲ.
ನ್ಯಾಯಾಲಯದಲ್ಲಿರುವ ಯಾವುದೇ ಪ್ರಕರಣಗಳನ್ನು ಹಿಂತೆಗೆದುಕೊಳ್ಳಲು ಸರ್ಕಾರಕ್ಕೊಂದು ವಿಶೇಷ ಅಧಿಕಾರವಿದೆ. ಸಿಆರ್‌ಪಿಸಿ ಸೆಕ್ಷನ್ ೩೨೧ರ ಅಡಿ ಸರಕಾರವು ಯಾವುದೇ ಪ್ರಕರಣವನ್ನು ಹಿಂತೆಗೆದುಕೊಳ್ಳಲು ಶಿಫಾರಸು ಮಾಡಬಹುದು. ಸರಕಾರಿ ಅಭಿಯೋಜಕರು ಸರಕಾರದ ನಿರ್ಧಾರವನ್ನು ಅದರ ದಾಖಲೆಗಳನ್ನು ಸಂಬಂಧಿಸಿದ ನ್ಯಾಯಾಲಯಗಳಿಗೆ ಸಲ್ಲಿಸಿದ ಬಳಿಕ ನ್ಯಾಯಾಧೀಶರು ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ. ಸಾಮಾನ್ಯವಾಗಿ ದೋಷಾರೋಪ ಪಟ್ಟಿ ಸಲ್ಲಿಸಿರುವ ಸಾಕ್ಷಿಗಳ ಹೇಳಿಕೆ ದಾಖಲಿಸಿರುವ ಪ್ರಕರಣಗಳನ್ನು ಕೈಬಿಡುವುದಿಲ್ಲ. ಇದರ ರಕ್ಷಣೆ ಪಡೆದು ಸರಕಾರಗಳು ಕನ್ನಡ, ರೈತಪರ ಹೋರಾಟಗಾರರಿಗೆ ಅವರ ಕಾನೂನು ಜಂಜಡದಿಂದ ಮುಕ್ತಿ ನೀಡುತ್ತಿದ್ದವು. ದುರಂತ ನೋಡಿ, ಇಂಥದೊಂದು ಅಧಿಕಾರವನ್ನು ಯಡಿಯೂರಪ್ಪ ಸರಕಾರ ಕಳೆದ ೨೦ತಿಂಗಳುಗಳಲ್ಲಿ ಭರ್ಜರಿಯಾಗಿ ದುರುಪಯೋಗಪಡಿಸಿಕೊಂಡಿದೆ.
ಯಡಿಯೂರಪ್ಪನವರ ಸಚಿವ ಸಂಪುಟ ಕಳೆದ ಫೆಬ್ರವರಿಯಲ್ಲಿ ಒಂದು ಸಭೆ ನಡೆಸಿತು, ಅಂದು ಅದು ಕೈಗೊಂಡ ಐತಿಹಾಸಿಕ ನಿರ್ಧಾರ ಎಂದರೆ, ೧೬ ಪ್ರಕರಣಗಳನ್ನು ಹಿಂದಕ್ಕೆ ತೆಗೆದುಕೊಂಡದ್ದು, ಅದ್ಯಾವ ಹೋರಾಟಗಾರರ ಮೇಲಿದ್ದವು ೧೬ ಪ್ರಕರಣಗಳು? ಬಳ್ಳಾರಿಯಲ್ಲಿ ಮತ್ತೊಂದು ಬಿಹಾರ ಸೃಷ್ಟಿಮಾಡಿ, ರಾಜ್ಯವನ್ನೇ ದಾರಿ ತಪ್ಪಿಸುತ್ತಿರುವ, ಗಣಿಗಾರಿಕೆಯ ಆಸೆಯಿಂದ ಗಡಿಯನ್ನೇ ಒತ್ತುವರಿ ಮಾಡಿಕೊಂಡಿರುವ ರೆಡ್ಡಿ ಸಹೋದರರು ಮತ್ತು ಶ್ರೀರಾಮುಲು ಅವರ ಮೇಲಿದ್ದವು ಈ ಕೇಸುಗಳು. ಈ ಮೂವರು ರಾಜ್ಯ ಸರ್ಕಾರದಲ್ಲಿ ಸಚಿವರು. ಅಂದರೆ, ಈ ನಿರ್ಧಾರ ಕೈಗೊಂಡಾಗ ಈ ಮೂವರು ಸಭೆಯಲ್ಲಿದ್ದರು. ಅಂದರೆ, ಸರಕಾರದ ನಿರ್ಧಾರ ಪಕ್ಷಪಾತದಿಂದ, ಸ್ವಾರ್ಥದಿಂದ ಕೂಡಿತ್ತಲ್ಲದೆ ಅಧಿಕಾರದ ದುರ್ಬಳಕೆಯೂ ಆಗಿತ್ತು. ಇವರ ಮೇಲಿದ್ದದೇನು ಧರಣಿ, ಮುಷ್ಕರದ ಪ್ರಕರಣಗಳೆ? ಅಷ್ಟಕ್ಕೂ ಇಂತಹ ಧರಣಿ ಮುಷ್ಕರ ನಡೆಸಲು ಅವರೇನು ಕನ್ನಡ ಹೋರಾಟಗಾರರೆ? ರೈತ ಹೋರಾಟಗಾರರೆ? ಏನೂ ಇಲ್ಲ, ಅವರ ಮೇಲಿದ್ದದ್ದು ಕೊಲೆ ಬೆದರಿಕೆಯ, ರಾಜ್ಯದ ಗಡಿಯನ್ನೇ ಒತ್ತುವರಿ ಮಾಡಿದ ಪ್ರಕರಣಗಳು. ರಾಜ್ಯದ ಗಡಿಯ ಒತ್ತುವರಿ ಎಂದರೆ ಸುಮ್ಮನೇನಾ ಅದು ರಾಜ್ಯದ ವಿರುದ್ಧ ಮಾಡಿದ ಪಿತೂರಿ. ಆದರೆ, ಸರ್ಕಾರ ರಾಜ್ಯದ ಗಡಿ ಒತ್ತುವರಿ ಮಾಡಿದ ಆರೋಪ ಹೊತ್ತವರಿಗೆ ಸ್ವಾತಂತ್ರ್ಯ ನೀಡಿತು. ಇದರರ್ಥ ಏನು? ಕನ್ನಡಾಭಿಮಾನಕ್ಕಿಂತ ರಾಜ್ಯದ ವಿರುದ್ಧ ಪಿತೂರಿ ಮಾಡುವುದೇ ಒಳ್ಳೆಯ ಕೆಲಸ ಎಂದಲ್ಲವೇ?. ಕುರ್ಚಿ ಉಳಿಸಿಕೊಂಡರೆ ಸಾಕು ಎಂದು ರೆಡ್ಡಿಗಳ ಎಲ್ಲ ಷರತ್ತುಗಳಿಗೂ ಒಪ್ಪಿರುವ ಯಡಿಯೂರಪ್ಪ ಅವರಿಗೆ ಅದ್ಯಾವ ಕನ್ನಡ, ಅದಿನ್ಯಾವ ಗಡಿ ಹೇಳಿ.
ಕನ್ನಡ ಹೋರಾಟಗಾರರೇನು ಡಾಕುಗಳಾ? ಇವರು ಮಾಡಿದ್ದೇನು, ದರೋಡೆ, ಅತ್ಯಾಚಾರ, ಕೊಲೆ, ಸುಲಿಗೆಯೇ? ಆದರೂ ಬಿಜೆಪಿ ಸರಕಾರಕ್ಕೆ ಈ ಬಗ್ಗೆ ಕಾಳಜಿ ಇಲ್ಲ. ಹಿಂಸೆ ತಪ್ಪು, ಪ್ರತಿಭಟನೆಯ ಹೆಸರಿನಲ್ಲಿ ದ್ವೇಷ ಸಾಧನೆ ಮತ್ತೂ ತಪ್ಪು ಆದರೆ, ಇದಕ್ಕಿಂತ ಹೆಚ್ಚು ತಪ್ಪು ಮಾಡಿದವರನ್ನು ಬಿಟ್ಟು ಕನ್ನಡ ಹೋರಾಟಗಾರರನ್ನು ಸತಾಯಿಸುತ್ತಿದ್ದಾರಲ್ಲ. ಇದು ಯಡಿಯೂರಪ್ಪ ಅವರಿಗೆ ಕನ್ನಡದ ಬಗ್ಗೆ ಕಾಳಜಿ, ಅಭಿಮಾನ ಇದೆಯೇ ಎನ್ನುವ ಅನುಮಾನ ಹುಟ್ಟಿಸಿದೆ. ಬಿಜೆಪಿ ಸರಕಾರಕ್ಕೆ ಕನ್ನಡಕ್ಕಿಂತ ರೆಡ್ಡಿಗಳೇ ಎಷ್ಟು ಮುಖ್ಯವಾಗಿದ್ದಾರೆ ಎಂದರೆ ರೆಡ್ಡಿ ಆಗ್ರಹಕ್ಕೆ ಮಣಿಯುವ ಭರದಲ್ಲಿ ಅದು ಚುನಾವಣಾ ಆಯೋಗದ ವ್ಯಾಪ್ತಿಗೆ ಬರುವ ಪ್ರಕರಣಕ್ಕೂ ಕೈ ಹಾಕಿತು. ಲೋಕಸಭೆ ಚುನಾವಣೆ ಸಮಯದಲ್ಲಿ ಶ್ರೀರಾಮುಲು ಮತ್ತು ಅವರ ಬೆಂಬಲಿಗರೆಲ್ಲಾ ಸೇರಿಕೊಂಡು ಕಾಂಗ್ರೆಸ್‌ನ ರಾಜ್ಯಸಭೆ ಸದಸ್ಯ ಅನಿಲ್ ಲಾಡ್ ಮನೆಗೆ ನುಗ್ಗಿ ದಾಂಧಲೆ ಎಬ್ಬಿಸಿದ್ದು ಗೊತ್ತಿದೆಯಲ್ಲ. ಈ ಬಗ್ಗೆ ಬಳ್ಳಾರಿಯ ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಈ ಪ್ರಕರಣವನ್ನೂ ಸರಕಾರ ಹಿಂದಕ್ಕೆ ಪಡೆಯಿತು. ಇಂತಹ ಪ್ರಕರಣ ಹಿಂತೆಗೆದುಕೊಳ್ಳುವ ಅಧಿಕಾರವೇ ಸರಕಾರಕ್ಕಿಲ್ಲ ಎನ್ನುತ್ತಿದ್ದಾರೆ ಕಾನೂನು ತಜ್ಞರು.
ಕರ್ನಾಟಕ, ಆಂಧ್ರ ಗಡಿಯಲ್ಲಿದ್ದ ಸುಗ್ಗಲಮ್ಮ ದೇವಾಲಯವನ್ನು ಉರುಳಿಸಿ ಗಡಿ ಒತ್ತುವರಿ ಮಾಡಿದ ಆರೋಪ ರೆಡ್ಡಿಗಳ ಮೇಲಿದೆಯಲ್ಲ. ಈ ಪ್ರಕರಣವನ್ನೂ ಸರಕಾರ ಹಿಂದಕ್ಕೆ ಪಡೆಯಿತು. ಈ ಪ್ರಕರಣದಲ್ಲಿ ರೆಡ್ಡಿಗಳ ಮೇಲೆ ಇದ್ದದ್ದು ರಾಜ್ಯದ ಗಡಿ ಒತ್ತುವರಿ ಮಾಡಿದ ಆರೋಪ. ಇದರಿಂದ ಇವರೇನಾದರೂ ರಾಜ್ಯದ ಒಳ್ಳೆಯದಕ್ಕೆ ಸೇವೆ ಮಾಡಿದ್ದರೆ, ತ್ಯಾಗ ಮಾಡಿದ್ದರೆ, ಕನ್ನಡಮ್ಮನಿಗೆ ಇವರಿಂದ ಉಪಕಾರವಾಯಿತೇ? ಇಲ್ಲ, ರೆಡ್ಡಿಗಳ ದುರಾಸೆಯಿಂದ, ಅಪ್ಪಟ ವ್ಯಾವಹಾರಿಕ ಉದ್ದೇಶದಿಂದ ಈ ಒತ್ತುವರಿ ನಡೆದಿದೆ. ರೆಡ್ಡಿಗಳದು ನಿಜಕ್ಕೂ ಇದರಲ್ಲಿ ತಪ್ಪಿಲ್ಲವಾದರೆ ಅದನ್ನು ನ್ಯಾಯಾಲಯಗಳಲ್ಲಿ ರುಜುವಾತುಪಡಿಸಬಹುದಿತ್ತು, ತಮ್ಮ ಮೇಲೆ ಸುಳ್ಳು ಆರೋಪ ಮಾಡಿದವರ ವಿರುದ್ಧ ಸೆಣಸಲು ಅವರಿಗೇನು ಹಣವಿಲ್ಲವೆ? ಜನರಿಲ್ಲವೆ? ಎಲ್ಲವೂ ಇದೆ ಆದರೆ ಸರಕಾರಕ್ಕೆ ಮಾತ್ರ ಬುದ್ಧಿ ಇರಲಿಲ್ಲ.
ಸರಕಾರದ ಈ ನಾಚಿಕೆಗೇಡಿನ ಕ್ರಮವನ್ನು ಸಮರ್ಥಿಸಿಕೊಳ್ಳಲು ಎಂದಿನಂತೆ ಫೀಲ್ಡಿಗಿಳಿದ್ದದ್ದು ಗೃಹ ಸಚಿವ ಡಾ.ವಿ.ಎಸ್.ಆಚಾರ್ಯ, ಅವರು ಎಂದಿನಂತೆ ಸರಕಾರದ ಈ ಕ್ರಮಕ್ಕೆ ಒಂದು ತಮಾಷೆಯ ಸಮರ್ಥನೆ ಕೊಟ್ಟರು. ಅದೇನೆಂದರೆ, ೨೦೦೧ರಿಂದ ಈಚೆಗೆ ಸರಕಾರಗಳು ಸುಮಾರು ೯೫೫ ಪ್ರಕರಣಗಳನ್ನು ಹಿಂದಕ್ಕೆ ತೆಗೆದುಕೊಂಡಿವೆ. ಧರ್ಮಸಿಂಗ್ ಅಧಿಕಾರಾವಧಿಯಲ್ಲಿ ೪೨೩, ಕುಮಾರಸ್ವಾಮಿ ಅವರ ಅಧಿಕಾರವಾಧಿಯಲ್ಲಿ ೨೯೪ ಪ್ರಕರಣಗಳನ್ನು ಹಿಂತೆಗೆದುಕೊಳ್ಳಲಾಗಿದೆ. ನಾವು ಹಿಂತೆಗೆದುಕೊಂಡದ್ದು ಕೇವಲ ೬೫ ಪ್ರಕರಣಗಳನ್ನು ಎಂದರು. ಇಷ್ಟೆಲ್ಲಾ ಮಾತನಾಡಿದ ಆಚಾರ್ಯರು ಯಾವ್ಯಾವ ಸರಕಾರ ಯಾರ‍್ಯಾರ ವಿರುದ್ಧ ಪ್ರಕರಣಗಳನ್ನು ಹಿಂತೆಗೆದುಕೊಂಡಿತು ಎನ್ನುವ ವಿವರಗಳನ್ನು ಕೊಟ್ಟಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು. ಹಿಂದಿನ ಸರಕಾರಗಳು ರಾಜಕಾರಣಿಗಳ ಮೇಲಿನ ವೈಯಕ್ತಿಕ ಪ್ರಕರಣಗಳಿಗಿಂತ ಹೆಚ್ಚಾಗಿ ರೈತರು, ವಿದ್ಯಾರ್ಥಿಗಳು, ಕನ್ನಡಪರ ಹೋರಾಟಗಾರರ ಮೇಲಿನ ಪ್ರಕರಣಗಳನ್ನು ಹಿಂತೆಗೆದುಕೊಂಡಿವೆ. ಈ ಪ್ರಕಣಗಳೇ ನೂರಾರು ಸಂಖ್ಯೆಯಲ್ಲಿವೆ ಎನ್ನುವ ಸತ್ಯವಾದರೂ ಅವರಿಗೆ ತಿಳಿಯುತ್ತಿತ್ತು.
ಯಡಿಯೂರಪ್ಪನವರದು ಆರೋಪಗಳಿಗೆ, ಟೀಕೆಗಳಿಗೆ ಹೆದರುವ ಸರಕಾರವಲ್ಲ ಬಿಡಿ. ಹೀಗೆ ರೆಡ್ಡಿಗಳ ಮೇಲಿನ ಕೇಸುಗಳನ್ನು ಕಿತ್ತೆಸೆಯುವ ನಿರ್ಧಾರ ಕೈಗೊಂಡ ಬಳಿಕ ಅದು ಮತ್ತೊಂದು ನಿರ್ಧಾರ ಕೈಗೊಂಡಿತು, ಈ ಬಾರಿ ಬಜರಂಗದಳದ ಕಾರ್ಯಕರ್ತರ ಮೇಲಿದ್ದ ಪ್ರಕರಣಗಳನ್ನು ಹಿಂತೆಗೆದುಕೊಂಡಿತು. ಇಷ್ಟೇ ಅಲ್ಲ ಎಬಿವಿಪಿ ಕಾರ್ಯಕರ್ತರ ಮೇಲಿದ್ದ ಕೇಸುಗಳಿಗೂ ಇದೇ ಗತಿಯಾಯಿತು. ಕನ್ನಡ ಹೋರಾಟಗಾರರು ಈ ಬಾರಿಯಾದರೂ ನೆನಪಾದರೆ, ಊಹುಂ. ಈ ನಿರ್ಧಾರಗಳನ್ನು ತೆಗೆದುಕೊಂಡು ಎರಡು ತಿಂಗಳುಗಳಾದರೂ ಇದುವರೆಗೂ ಯಡಿಯೂರಪ್ಪ ಅವರಿಗೆ ಕನ್ನಡ ಹೋರಾಟಗಾರರ ಕಷ್ಟಗಳ ನೆನಪಾಗಿಲ್ಲ.
ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರ ಮೇಲೆ ರಾಜ್ಯಾದ್ಯಂತ ಸುಮಾರು ೧೦೩೬ ಪ್ರಕರಣಗಳು ದಾಖಲಾಗಿವೆ. ವಾಟಾಳ್ ನಾಗರಾಜ್ ಅವರ ಮೇಲೆ ಸುಮಾರು ೧೬ ಪ್ರಕರಣಗಳಿವೆ. ಇದು ಅಂದಾಜು. ಏಕೆಂದರೆ, ದಾಖಲಾದ ಕೇಸುಗಳ ಸಂಖ್ಯೆ ಖುದ್ದು ವೇದಿಕೆ ಅಧ್ಯಕ್ಷ ನಾರಾಯಣಗೌಡರಿಗೇ ಗೊತ್ತಿಲ್ಲ. ವಾಟಾಳ್ ನಾಗರಾಜ್ ಅವರಿಗೆ ಕೇಳಿದರೆ ಅವರೂ ಇನ್ನೂ ಇರಬೇಕೇನೋ ಗೊತ್ತಿಲ್ಲ ಎನ್ನುತ್ತಾರೆ. ಏಕೆಂದರೆ, ಅವರ ವಿರುದ್ಧ ಸಮನ್ಸ್‌ಗಳು ಬಂದಾಗಲೇ ನಮ್ಮ ಮೇಲೊಂದು ಈ ರೀತಿಯ ಪ್ರಕರಣ ಇದೆ ಎಂದು ತಿಳಿಯುವುದು. ಯಾವುದೋ ಊರಿನ ಯಾವುದೋ ಠಾಣೆಯಲ್ಲಿ ಯಾರಿಗೂ ತಿಳಿಯದಂತೆ ಎಫ್‌ಐಆರ್ ದಾಖಲಾಗಿಬಿಡುತ್ತದೆ. ಇದು ಕೋರ್ಟಿಗೆ ಹೋದಾಗಲೇ ಹೋರಾಟಗಾರರಿಗೆ ಸಂದೇಶ ರವಾನೆಯಾಗುವುದು. ಈ ಪ್ರಕರಣಗಳ ಪ್ರಥಮ ಮಾಹಿತಿ ವರದಿ ಮತ್ತು ಕೆಲವು ಪ್ರಕರಣಗಳ ಆರೋಪ ಪಟ್ಟಿ ಓದಬೇಕು. ಅವುಗಳಲ್ಲಿಯೇ ಹೋರಾಟ ಬೋರ್ಡುಗಳೇ ಕಂಡರೆ, ಯಾವುದೋ ಹೋಟೆಲ್‌ನ ಪಾರ್ಟಿಯಲ್ಲಿ ಇಂಗ್ಲಿಷ್, ಹಿಂದಿ ಹಾಡುಗಳೇ ಕೇಳಿದರೆ, ನಾವು ನೀವೆಲ್ಲಾ ಅಂದುಕೊಳ್ಳುತ್ತೇವೆ, ಇವರಿಗೆಲ್ಲಾ ಬುದ್ದಿ ಕಲಿಸೋಕೆ ಯಾವೋನೂ ಇಲ್ವಾ? ಲಕ್ಷಾಂತರ ಕನ್ನಡಿಗರು ಇಂತಹ ಪ್ರಶ್ನೆಗಳನ್ನು ಕೇಳುವಾಗ ಕೇವಲ ನೂರರು ಸಂಖ್ಯೆಯ ಕನ್ನಡಿಗರು ಈ ಅನ್ಯಾಯಗಳನ್ನು ಸರಿಪಡಿಸಲು ಬೀದಿಗಿಳಿಯುತ್ತಾರೆ.
ಹೋರಾಟ, ಪ್ರತಿಭಟನೆ ಎಂದ ಮೇಲೆ ಅಲ್ಲೆಲ್ಲಾ ಮಗುವಿಗೆ ಜೋಗುಳ ಹಾಡಿ ಕನ್ನಡಮ್ಮನ ರಕ್ಷಣೆ ಸಾಧ್ಯವೆ ಬಿಸಿಲು, ಮಳೆ ಲೆಕ್ಕಿಸದೆ ಬೀದಿಗೆ ಬರಬೇಕು, ಪೊಲೀಸರು ಒದ್ದರೆ ಒದೆಸಿಕೊಳ್ಳಬೇಕು, ಲಾಠಿ ಬೀಸಿದರೆ ಹೊಡೆಸಿಕೊಳ್ಳಬೇಕು, ಹಿಡಿದು ಜೈಲಿಗಟ್ಟಿ ಕೇಸು ಜಡಿಸಿದರೆ ಮುಂದೆ ಒಂದಷ್ಟು ವರ್ಷ, ಮನೆ ಮಾರಿಕೊಂಡು, ಜಮೀನು ಅಡವಿಟ್ಟುಕೊಂಡು, ಹೆಂಡತಿ-ಮಕ್ಕಳನ್ನು ಬಿಟ್ಟು, ನೆಮ್ಮದಿ ಕಳೆದುಕೊಂಡು ಕೋರ್ಟಿಗೆ ಅಲೆಯಬೇಕು. ಕಲ್ಲು ತೂರಿದ್ದಾಗಿದೆ, ಬೈದದ್ದಾಗಿದೆ, ಹೊಡೆದಾಟಗಳಾಗಿವೆ ನಿಜ. ಆದರೆ, ರೆಡ್ಡಿ ಸೋದರರ ಮೇಲಿದ್ದ ಗಡಿ ಒತ್ತುವರಿ ಪ್ರಕರಣವನ್ನೇ ಕೈ ಬಿಟ್ಟ ಮೇಲೆ, ಕನ್ನಡಿಗರದ್ಯಾವ ದೊಡ್ಡ ಅಪರಾಧ ಹೇಳಿ? ಅಷ್ಟಕ್ಕೂ ನಮ್ಮ ಕನ್ನಡ ಹೋರಾಟಗಾರರು ಶಿವಸೇನೆಯ ಕಾರ್ಯಕರ್ತರಷ್ಟು ಭಾಷಾಂಧರಂತೂ ಅಲ್ಲವಲ್ಲ.

ಇದ್ದರೂ ಸರಿ ಇಲ್ಲದಿದ್ದರೂ ಸರಿ
ಬರೀ ಬೀದಿಗಿಳಿದು ಹೋರಾಟ ನಡೆಸಿದ, ಕಲ್ಲು ತೂರಿದ, ಬೈದ ಪ್ರಕರಣಗಳಷ್ಟೇ ಹೋರಾಟಗಾರರ ವಿರುದ್ಧ ಬೀಳುತ್ತವಾ? ಇಲ್ಲ, ಒಂದು ಬಾರಿ ಹೋರಾಟ ಶುರುವಿಟ್ಟುಕೊಂಡರೆ, ಇದ್ದರೂ ಇಲ್ಲದಿದ್ದರೂ ಕೇಸುಗಳ ಪ್ರವಾಹ ಹರಿಯುತ್ತೆ. ಕನ್ನಡದ ಹೋರಾಟದ ತಮಾಷೆಗಳು ಗೊತ್ತಾ? ಕನ್ನಡ ರಕ್ಷಣಾ ವೇದಿಕೆಯ ನಾರಾಯಣಗೌಡ ಮತ್ತು ಮಾಜಿ ಶಾಸಕ ವಾಟಾಳ್ ನಾಗರಾಜ್ ಇಬ್ಬರದೂ ಕನ್ನಡದ ಹೋರಾಟದಲ್ಲಿ ದೊಡ್ಡ ಹೆಸರು.
ಆದರೆ, ಇಬ್ಬರೂ ಒಟ್ಟಿಗೆ ಸೇರಿ ಹೋರಾಟ ನಡೆಸಿದ ಉದಾಹರಣೆ ಇಲ್ಲ. ಪೊಲೀಸರು ಮಾತ್ರ ಇವರಿಬ್ಬರ ಮೇಲೂ ಒಟ್ಟಿಗೆ ಕೇಸುಗಳನ್ನು ಜಡಿದು ಕುಳಿತಿದ್ದಾರೆ. ರೈಲ್ವೆ ಪೊಲೀಸರಿಗಂತೂ ಇವರಿಬ್ಬರೂ ಅವಳಿಗಳಂತೆ ಕಾಣಿಸುತ್ತಾರೆ. ಅಲ್ಲಿ ಕೇಸು ಬಿದ್ದರೆ ಇಬ್ಬರ ಮೇಲೂ ಬಿತ್ತು ಎಂದೇ ಅರ್ಥ.
ಇನ್ನು ಸಂಬಂಧ ಇಲ್ಲದಿದ್ದರೂ ಕೇಸು ಹಾಕಿಸಿಕೊಳ್ಳುವ ಭಾಗ್ಯ ನೋಡಿ, ತಿರುವಳ್ಳುವರ್ ಪ್ರತಿಮೆಯನ್ನು ಬೆಂಗಳೂರಿನಲ್ಲಿ ನಿಲ್ಲಿಸೇ ತೀರುವುದಾಗಿ ಯಡಿಯೂರಪ್ಪ ಅವರು ಘೋಷಿಸುತ್ತಿದ್ದಂತೆ ನಾರಾಯಣಗೌಡರು ಇದನ್ನು ವಿರೋಧಿಸಿದರು. ಬಳಿಕ ಒಂದು ದಿನ ಅವರು ರಾಮನಗರದಲ್ಲಿ ಭಾಷಣ ಮಾಡುತ್ತಿದ್ದರು. ಆದರೆ, ಅಲ್ಲಿ ದೂರದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ನಾರಾಯಣಗೌಡರ ವಿರುದ್ಧ ಅದೇ ದಿನ ಒಂದು ಪ್ರಕರಣ ದಾಖಲಾಯಿತು. ಇಷ್ಟೇ ಅಲ್ಲ. ಹೋರಾಟಗಾರರ ಉಗ್ರತ್ವ ಬಿಡಿಸಲು ಪೊಲೀಸರ ಬಳಿ ಹಲವು ತಂತ್ರಗಳಿವೆ. ಸ್ವಲ್ಪ ಯಾರಾದರೂ ಸ್ವಲ್ಪ ಚಟುವಟಿಕೆಯಿಂದ ಓಡಾಡಿಕೊಂಡಿರುವುದು ಕಾಣಿಸಿದರೆ ನಿನ್ನ ಹೆಸರೇನಪ್ಪ ಎಂದು ಕೇಳುತ್ತಾರೆ. ಹೆಸರು ಹೇಳಿದ ಮೇಲೆ ಅವನೇ ಆರೋಪಿ ನಂ.೧; ಪ್ರಕರಣ ದಾಖಲಾದ ಮೇಲೆ ಆತ ತಪ್ಪದೇ ಕೋರ್ಟಿಗೆ ಅಲೆಯಬೇಕು.
ಧರಣಿ, ಪ್ರತಿಭಟನೆ ಮಾಡಿದ ಬಳಿಕವೂ ಪೊಲೀಸರು ಕನ್ನಡ ಹೋರಾಟಗಾರರ ಬೆನ್ನು ತಟ್ಟಿ ಇದೆಲ್ಲಾ ಸಾಕು ಇನ್ನು ಸುಮ್ಮನೆ ಹೋಗಿ ಎಂದು ಹೇಳಿ ಬಿಡುವುದು ಹೋಗಿ ದಶಕಗಳಾಯಿತು. ಮೊದಲೆಲ್ಲಾ ಪೊಲೀಸರು ಇಷ್ಟೆಲ್ಲಾ ಕ್ರೂರಿಗಳಾಗಿ ವರ್ತಿಸುತ್ತಿರಲಿಲ್ಲ. ವಾಟಾಳ್ ನಾಗರಾಜ್, ಪ್ರಭಾಕರ ರೆಡ್ಡಿ, ನಾರಾಯಣಕುಮಾರ್ ಅವರಿಂದ ಹಿಡಿದು ಈಗಿನ ನಾರಾಯಣಗೌಡರವರೆಗೂ ಕನ್ನಡಕ್ಕಾಗಿ ಒದೆಸಿಕೊಂಡವರು, ಹೊಡೆಸಿಕೊಂಡವರಿಗೆ, ಕೇಸು ಹಾಕಿಕೊಂಡವರಿಗೆ ಲೆಕ್ಕವಿಲ್ಲ. ಆದರೆ, ಮುಂದೆ ಹೀಗೆ ಬಿಡುವುದು ಹಾಳಾಗಿ ಹೋಗಲಿ. ಪ್ರತಿಭಟನಾಕಾರರ ಮೇಲೆ, ಶಾಂತಿಗೆ ಭಂಗ ತಂದ, ನಿಷೇದಾಜ್ಞೆ ಉಲ್ಲಂಘಿಸಿದ, ಗುಂಪು ಕಟ್ಟಿದ ಪ್ರಕರಣಗಳನ್ನು ದಾಖಲಾಗತೊಡಗಿದವು. ಇದಕ್ಕೆಲ್ಲಾ ಐಪಿಸಿ ೧೪೩ರಿಂದ ೧೪೯, ೩೨೩, ೧೪೯ ಬಳಸುತ್ತಿದ್ದರು. ಕರ್ನಾಟಕ ರಕ್ಷಣಾ ವೇದಿಕೆ ಪ್ರವೇಶವಾದ ಮೇಲೆ ಕನ್ನಡ ಹೋರಾಟದ ದಿಕ್ಕೇ ಬದಲಾಯಿತು. ಹೋರಾಟ ಉಗ್ರವಾಗತೊಡಗಿದಾಗ ಯಾವುದಕ್ಕೂ ಜಗ್ಗದವರನ್ನು ಹೆದರಿಸಲು ಪೊಲೀಸರು ಹೊಸ ಅಸ್ತ್ರ ಕಂಡುಹಿಡಿದರು. ಸರಿ ಐಪಿಸಿ ೫೦೬, ೫೦೬ಬಿ, ೩೦೭, ೪೩೬ ಅಡಿ ರ ಅಡಿ ಪ್ರಕರಣಗಳು ದಾಖಲಾಗತೊಡಗಿದವು.
ಐಪಿಸಿ ೫೦೬ ಬಿ ಎಂದರೆ ಇನ್ನೂ ಯಾರಿಗೂ ಅರ್ಥವಾಗದ ಕಾನೂನು. ಒಂದು ಬಾರಿ ೫೦೬, ೫೦೬ಬಿ ಬಂದು ಕುಳಿತರೆ ಅದೇನು ಜಾಮೀನು ನೀಡಬಹುದಾದ ಪ್ರಕರಣವೇ ಇಲ್ಲ, ಜಾಮೀನು ಪಡೆದು ಬಿಡುಗಡೆ ಮಾಡಲಾಗದ ಪ್ರಕರಣವೇ ಎನ್ನುವ ಗೊಂದಲ ಎಲ್ಲಾ ರಾಜ್ಯಗಳಲ್ಲೂ ಇದೆ. ಈ ಪ್ರಕರಣಗಳಲ್ಲಿ ದೂರು ಕೊಟ್ಟವರೇ ಬಂದು ಪ್ರಕರಣ ಹಿಂತೆಗೆದುಕೊಂಡ ಬಳಿಕವೇ ಜಾಮೀನು ದೊರೆಯುತ್ತದೆ. ಜಾಮೀನು ಸಿಕ್ಕಲಿಲ್ಲ ಎಂದರೆ ಹೋರಾಟಗಾರರು ಜೈಲು ಸೇರಿ ಅಲ್ಲಿ ದಿನಗಟ್ಟಲೇ ಕೊಳೆಯಬೇಕು. ಕೊಳೆಯಲಿ ಎನ್ನುವುದು ಪೊಲೀಸರ ಮತ್ತು ಸರಕಾರದ ಉದ್ದೇಶ.

ಜೈಲು ತುಂಬಿದ್ದರೆ ಗೆದ್ದರು
೫೦೬ ಹಾಕಿದರೆ ಜೈಲು ಗ್ಯಾರಂಟಿ ಅಲ್ಲವೇ, ಸರಿ ಪೊಲೀಸರು ೫೦೬ ಹಾಕಿಕೊಂಡು ಜೈಲಿಗೆ ಸೇರಿಸಿಯೇ ಬಿಡಬೇಕು ಎಂದು ನಿರ್ಧರಿಸಿ ಹೋಗುವಾಗ, ಪರಪ್ಪನ ಅಗ್ರಹಾರ ಜೈಲು ತುಂಬಿದೆ. ಈ ಹೋರಾಟಗಾರರಿಗೆಲ್ಲಾ ಅಲ್ಲಿ ಜಾಗವಿಲ್ಲ ಎನ್ನುವ ಸಂದೇಶ ಪೊಲೀಸ್ ಠಾಣೆಗೆ ಸೇರುತ್ತದೆ. ತಕ್ಷಣವೇ ಪೊಲೀಸರ ದಾಖಲೆಗಳಲ್ಲಿ ಕನ್ನಡ ಹೋರಾಟಗಾರರ ಅಪರಾಧ ಕಡಿಮೆಯಾಗುತ್ತದೆ. ಹಠ ಹಿಡಿದು ೫೦೬ ಹೇರಲು ಹೊರಟವರೇ ಅದನ್ನು ಕೈ ಬಿಟ್ಟು ಜಾಮೀನು ಪಡೆದು ಮನೆಗೆ ಹೋಗಿ ಎಂದು ದುಂಬಾಲು ಬೀಳುತ್ತಾರೆ. ಪೊಲೀಸರ ರೋಷ, ಆವೇಶ ಕೆಲವು ಬಾರಿ ಯಾವ ಪರಿ ಇರುತ್ತದೆ ಎಂದರೆ, ಇಲ್ಲದ ಐಪಿಸಿಗಳ ಹೆಸರಲ್ಲೂ ಎಫ್‌ಐಆರ್ ಬರೆದು ನಂತರ ತಪ್ಪಿನ ಅರಿವಾಗಿ ತಿದ್ದಿಕೊಂಡ ಉದಾಹರಣೆಗಳೂ ಇವೆ.

ಆಗ ಹೋಗಿ ಬನ್ನಿ
ಮೊದಲೆಲ್ಲಾ ಕನ್ನಡ ಹೋರಾಟ ಎಂದರೆ ಇಷ್ಟೊಂದು ಅಪಾಯಕಾರಿಯಾಗಿರಲಿಲ್ಲ. ಧರಣಿ ಪ್ರತಿಭಟನೆ ನಡೆದರೆ, ಬಂಧಿಸಿರುವುದಾಗಿ ಹೇಳಿ ಸ್ವಲ್ಪ ದೂರ ಕರೆದುಕೊಂಡು ಹೋಗಿ, ಒಳ್ಳೆಯ ಕೆಲಸ ಮಾಡಿದ್ದೀರಾ ಹೋಗ್ರಪ್ಪಾ ಇನ್ನು ಸಾಕು ಎಂದು ಸಾಗಿ ಹಾಕುತ್ತಿದ್ದ ಪೊಲೀಸ್ ಅಧಿಕಾರಿಗಳೇ ಹೆಚ್ಚು. ಇದರಲ್ಲಿ ಕನ್ನಡ ಹೋರಾಟಗಾರರು ಇಂದಿಗೂ ನೆನೆಯುವುದು ಬೆಂಗಳೂರು ಪೊಲೀಸ್ ಕಮಿಷನರ್ ಆಗಿದ್ದ ಗುರುಡಾಚಾರ್ ಅವರನ್ನು. ಆದರೆ, ಈಗ ಏನಾಗಿದೆ ಎಂದರೆ, ಪರಭಾಷೆಯವರಿಗಿಂತ ಪೊಲೀಸರೇ ಕನ್ನಡ ಹೋರಾಟಗಾರರ ಮೊದಲ ಶತ್ರುಗಳಾಗಿದ್ದಾರೆ. ದೊಡ್ಡವರು ಹೇಳಿದ್ದಾರೆ. ಕೇಸು ಹಾಕಲೇ ಬೇಕು ಎಂದು ಎಲ್ಲದರ ಜತೆಗೆ ಇನ್ನೊಂದು ಎಂದು ಅಗತ್ಯ ಇರಲಿ ಬಿಡಲಿ ೫೦೬, ೫೦೬ಬಿ ಜಡಿದು ಕಳಿಸುತ್ತಾರೆ.

ದುಡ್ಡು ದುಡ್ಡು ದುಡ್ಡು
ಅವತ್ತು ಬೆಂಗಳೂರಿನಲ್ಲಿ ತಿರುವಳ್ಳರ್ ಪ್ರತಿಮೆ ಸ್ಥಾಪನೆಗೆ ಸರಕಾರ ಮುಂದಾದಾಗ ಅದನ್ನು ಪ್ರತಿಭಟಿಸಿ ಕರವೇ ಕಾರ್ಯಕರ್ತರು ಜೈಲು ಸೇರಿದರಲ್ಲ. ಹೀಗೆ ಜೈಲು ಸೇರಿದವರ ಸಂತೆ ೬೦೦ಕ್ಕೂ ಹೆಚ್ಚು ಸುಮಾರು ೧ವಾರಗಳ ಕಾಲ ಇವರನ್ನೆಲ್ಲ ಜೈಲಿಗೆ ಕಳುಹಿಸಲಾಯಿತು. ಬಳಿಕ ತಲಾ ನಾಲ್ಕು ಸಾವಿರ ರೂ. ಕೊಟ್ಟು ಜಾಮೀನು ಪಡೆಯಬಹುದೆಂದು ನ್ಯಾಯಾಧೀಶರು ಹೇಳಿದರು. ಸುಮಾರು ೩-೪ದಿನಗಳ ಕಾಲ ೬೦೦ಜನರಿಗೂ ತಲಾ ನಾಲ್ಕು ಸಾವಿರ ಎಂದರೆ ಸುಮಾರು ೨೪ಲಕ್ಷ ರೂಪಾಯಿ ಹೊಂದಿಸಿ ಜಾಮೀನು ಪಡೆದು ಜೈಲಿನಿಂದ ಹೊರಬಂದರು ಕಾರ್ಯಕರ್ತರು. ಹೀಗೆ ಸುಮ್ಮನೆ ಹಿಡಿದುಕೊಂಡು ಹೋಗಿ ೪ಸಾವಿರ ಇಟ್ಟು ಜಾಮೀನು ಪಡೆಯಿರಿ ಎಂದದ್ದು ಇದೇ ಮೊದಲಲ್ಲ. ಇಂತಹ ಪ್ರಕರಣಗಳು ಹಲವು ನಡೆದಿವೆ. ಹಲವು ಬಾರಿ ಜಾಮೀನಿನ ದಾಖಲೆಗಳನ್ನು, ಪತ್ನಿಯ ಒಡವೆಗಳನ್ನು ಅಡವಿಟ್ಟು ಜಾಮೀನು ಪಡೆಯಲಾಗಿದೆ.
ಇದು ಬರೀ ಹೋರಾಟ ನಡೆಸಿದವರಿಗೆ ಆಗುವ ಅನುಭವವಲ್ಲ. ಒಂದು ಬಾರಿ ಏನಾಯಿತೆಂದರೆ, ಕರವೇ ಕಾರ್ಯಕರ್ತರೆಲ್ಲಾ ಮೆಜೆಸ್ಟಿಕ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದರು, ಕೊನೆಗೆ ಪ್ರತಿ ಬಾರಿ ಆಗುವುದೇ ಆಯಿತು. ಇವರು ಕಲ್ಲು ಹೊಡೆದರು ಪೊಲೀಸರು ಹಿಡಿದು ಬಂಧಿಸಿ ಜೈಲಿಗೆ ಕಳಿಸಿದರು. ಅಲ್ಲಿ ಹೋದರೆ ಕರವೇ ನಾಯಕರಿಗೆ ಪರಿಚಯ ಇಲ್ಲದ ಹಲವರನ್ನು ಈ ಪ್ರತಿಭಟನೆಯ ಹೆಸರಿನಲ್ಲಿ ಪೊಲೀಸ್ ಠಾಣೆಯಲ್ಲಿ ಬಂಧಿಸಿ ಕೂರಿಸಲಾಗಿತ್ತು.
ನೀವ್ಯಾರ್ರಿ ಎಂದರೆ, ನಾವು ಸುಮ್ಮನೆ ರಸ್ತೆಯಲ್ಲಿ ಹೋಗುತ್ತಿದ್ದೆವು, ನಿಮ್ಮನ್ನು ಹಿಡಿದಾಗ ನಮ್ಮನ್ನೂ ಹಿಡಿದು ತಂದರು ಎಂದು ಗೋಳಾಡಿದರು. ತಮ್ಮ ಕಾರ್ಯಕರ್ತರಿಗಿಂತ ಮೊದಲು ಹೀಗೆ ಬಂದ ಅಮಾಯಕರಿಗೆ ಜಾಮೀನು ಕೊಡಿಸಿ ಹೊರಗೆ ಕಳಿಸಿದ ಉದಾಹರಣೆಗಳಿವೆ. ಕನ್ನಡ ಹೋರಾಟಗಾರರ ಮೇಲಿರುವ ಆರೋಪಗಳೂ ರುಜುವಾತಾದರೆ ಪ್ರತಿಯೊಬ್ಬರು ಕನಿಷ್ಟ ಆರು ತಿಂಗಳುಗಳಿಂದ ೧೦ವರ್ಷ ಜೈಲು ಸೇರಲಿದ್ದಾರೆ. ನಾರಾಯಣಗೌಡರಿಗೂ ಇದು ಅನ್ವಯಿಸುತ್ತದೆ.

ಕೋರ್ಟುಗಳೇ ವಾಸಿ
ಪೊಲೀಸರಿಗಿಂತ, ಯಡಿಯೂರಪ್ಪನವರಿಗಿಂತ ಕೋರ್ಟುಗಳೇ ವಾಸಿ ಎನ್ನುವುದು ಕನ್ನಡ ಹೋರಾಟಗಾರರ ಅನುಭವಾಮೃತ. ಇದೇನ್ರಿ ಯಾವಾಗ್ಲು ಕೋರ್ಟ್‌ನಲ್ಲೇ ಇರ‍್ತೀರಾ? ಹೆಂಡತಿ ಮಕ್ಕಳ ಕತೆಯೇನು? ಮಾಡಿದ್ದು ಕನ್ನಡ ಪರ ಹೋರಾಟ; ಆದ್ರೂ ಇಷ್ಟು ಕೇಸುಗಳಾ ಎಂದು ಹಲವು ನ್ಯಾಯಾಧೀಶರೇ ಕನ್ನಡ ಹೋರಾಟಗಾರರ ಬಗ್ಗೆ ಕಾಳಜಿ ತೋರಿಸಿದ ಉದಾಹರಣೆಗಳಿವೆ.
ಕೆಲವು ನ್ಯಾಯಾಧೀಶರೇ ಇಂತಹ ಕೇಸುಗಳನ್ನು ಮುಂದುವರೆಸುವುದರಲ್ಲಿ ಅರ್ಥವಿಲ್ಲ ಎಂದು ಪ್ರಕರಣಗಳನ್ನು ಕೈಬಿಟ್ಟಿದ್ದಾರೆ. ಆದರೆ, ಯಡಿಯೂರಪ್ಪ? ಉಹುಂ, ಅವರು ಈಗ ಬಿಟ್ಟರೆ ಮುಂದೆ ಸಿಕ್ಕ ಎಂದು ಹೋರಾಟಗಾರರ ಮೂಗು ಹಿಡಿಯಲು ಹೊರಟಿದ್ದಾರೆ. ಒಂದೆರಡು ಅವಧಿಗೆ ಸರಕಾರಗಳು ಹೀಗೆ ಇದ್ದರೆ ಯಾರೊಬ್ಬರು ಹೋರಾಟಕ್ಕೆ ಬೀದಿಗಿಳಿಯುವುದಿಲ್ಲ. ಕನ್ನಡಿಗರ ಕಷ್ಟವನ್ನು ಆ ಭುವನೇಶ್ವರಿಯೇ ಕೇಳುವಂತಿಲ್ಲ.

- ಅಶೋಕ್ ರಾಮ್ ಡಿ.ಆರ್.
(ಕೃಪೆ. ವಿಜಯಕರ್ನಾಟಕ)

No comments:

Post a Comment

ಹಿಂದಿನ ಬರೆಹಗಳು