Thursday, May 6, 2010

ಉದ್ಯಮ ಉದ್ಯೋಗ ಮತ್ತು ಕನ್ನಡ





ಕನ್ನಡವನ್ನು ಕೇವಲ ಅಭಿಮಾನದ ಪ್ರಶ್ನೆಯಾಗಿ ನೋಡಿದರೆ ಸಾಲದು. ನನ್ನ ದೃಷ್ಟಿಯಿಂದ ಕನ್ನಡವನ್ನು ಅನ್ನದ ಪ್ರಶ್ನೆಯಾಗಿ ಪರಿಗಣಿಸಬೇಕು. ಉದ್ಯೋಗ ಮತ್ತು ಕನ್ನಡಕ್ಕೆ ಸಂಬಂಧವಿರಬೇಕು. ಆಗ ಕನ್ನಡಿಗರೂ ಉಳಿಯುತ್ತಾರೆ. ಕನ್ನಡವೂ ಉಳಿಯುತ್ತದೆ.

ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ
ಜಾಗತೀಕರಣ, ಆರ್ಥಿಕ ಉದಾರೀಕರಣ ಮುಂತಾದ ಹೆಸರುಗಳ ಮೂಲಕ ನಮ್ಮ ದೇಶದ ಮಿಶ್ರ ಆರ್ಥಿಕ ಪದ್ಧತಿಯನ್ನು ಮೂಲೆಗುಂಪು ಮಾಡಿ ಮುಕ್ತ ಆರ್ಥಿಕ ಪದ್ಧತಿಯನ್ನು ಜಾರಿಗೊಳಿಸಲಾಗುತ್ತಿದೆ. ಇದರ ಫಲವಾಗಿ ಸಂಪೂರ್ಣ ಬಂಡವಾಳ ತೊಡಗಿಸಿ ಸರ್ವಸ್ವಾತಂತ್ರ್ಯವನ್ನು ಪಡೆಯುವ ಬಹುರಾಷ್ಟ್ರೀಯ ಕಂಪನಿಗಳು ನಮ್ಮ ದೇಶದೊಳಕ್ಕೆ ದಾಳಿಯಿಟ್ಟು ಸಂವಿಧಾನಾತ್ಮಕ ಸಾರ್ವಭೌಮತ್ವಕ್ಕೆ ಧಕ್ಕೆ ತರುತ್ತಿವೆ. ಸಂವಿಧಾನದ ಪ್ರಕಾರ ಜನರಿಂದ ಆಯ್ಕೆಯಾದ ಸರ್ಕಾರವು ರೂಪಿಸುವ ನೀತಿ-ನಿಯಮಗಳನ್ನು ಸಮಾಜದ ವಿವಿಧ ವಲಯಗಳು ಅನುಸರಿಸಬೇಕಾಗುತ್ತದೆ. ಆದರೆ ಬಹುರಾಷ್ಟ್ರೀಯ ಕಂಪನಿಗಳಿಗೆ ಅವರದೇ ನೀತಿ ನಿಯಮಗಳಿವೆ. ಸರ್ಕಾರದ ನಿಯಂತ್ರಣ ಇರಬಾರದು ಎಂಬುದೇ ಅರ್ಥಿಕ ಉದಾರೀಕರಣದ ಮೂಲ ನೀತಿ. ಆದ್ದರಿಂದ ಬಹುರಾಷ್ಟ್ರೀಯ ಕಂಪನಿಗಳು ಸರ್ಕಾರದ ನಿಯಂತ್ರಣಕ್ಕೆ ಒಳಗಾಗುವ ಬದಲು ಸರ್ಕಾರವನ್ನೇ ನಿಯಂತ್ರಿಸುವಷ್ಟು ಬಲಾಢ್ಯವಾ ಗಿವೆ. ವಿಶೇಷವಾಗಿ ಉದ್ಯೋಗದ ವಿಷಯದಲ್ಲಿ ರಾಜ್ಯ ಸರ್ಕಾರ ಅಷ್ಟೇ ಅಲ್ಲ ಕೇಂದ್ರ ಸರ್ಕಾರದ ನೀತಿ ನಿಯಮಗಳು ಸಹ ಈ ಕಂಪನಿಗಳಿಗೆ ಅನ್ವಯಿಸುವುದಿಲ್ಲ. ಬಹುರಾಷ್ಟ್ರೀಯ ಕಂಪನಿಗಳಲ್ಲಿ ಸ್ಥಳೀಯ ಕನ್ನಡಿಗರಿಗೆ ಉದ್ಯೋಗ ಕೊಡಬೇಕೆಂಬ ನಿಯಮವಿಲ್ಲ. ಅವರು ತಾವಾಗಿ ಕೊಡುವುದೂ ಇಲ್ಲ. ಮೀಸಲಾತಿ ನೀತಿ ಅವರಿಗೆ ಬೇಕಾಗಿಲ್ಲ.
ಇಲ್ಲಿ ಡಾ.ಸರೋಜಿನಿ ಮಹಿಷಿ ಸಮಿತಿಯ ವರದಿಯನ್ನು ಪ್ರಸ್ತಾಪ ಮಾಡುವುದು ಉಚಿತವಾದುದು. ಸಾರ್ವಜನಿಕ ಮತ್ತು ಖಾಸಗಿ ಉದ್ದಿಮೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಿಕೆಯಲ್ಲಿ ಆದ್ಯತೆಯಿರಬೇಕೆಂಬ ನೀತಿಯ ನೆಲೆಯಲ್ಲಿ ಖಚಿತ ಶಿಫಾರಸ್ಸುಗಳನ್ನು ಮಾಡಿದ ಈ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ಅಭಿನಂದನಾರ್ಹರು. ೪-೮-೧೯೮೩ರ ಆದೇಶದಲ್ಲಿ ಪ್ರಕಾರ ‘ವಾಣಿಜ್ಯ ಬ್ಯಾಂಕುಗಳನ್ನು ಒಳಗೊಂಡಂತೆ ಕೇಂದ್ರ ಸರ್ಕಾರದ ಸಾರ್ವಜನಿಕ ಉದ್ದಿಮೆಗಳಲ್ಲಿ ಕರ್ನಾಟಕದ ಜನರ ಉದ್ಯೋಗದ ಪರಿಸ್ಥಿತಿಯನ್ನು ಪರಿಶೀಲಿಸುವ ಸಲುವಾಗಿ’ ಈ ಸಮಿತಿಯನ್ನು ರಚಿಸಲಾಯಿತು. ಅದೇ ಸಂಖ್ಯೆಯ ದಿನಾಂಕ ೨೮-೬-೧೯೮೫ರ ಆದೇಶದಲ್ಲಿ ಈ ಸಮಿತಿಯ ವ್ಯಾಪ್ತಿಗೆ ಖಾಸಗಿ ಉದ್ಯಮಗಳನ್ನೂ ಸೇರಿಸಲಾಯಿತು. ಈ ಸಮಿತಿಯು ಅಭಿಪ್ರಾಯಪಟ್ಟಂತೆ ಸರ್ಕಾರವು “ಕನ್ನಡಿಗರೆಂದರೆ ಅವರಿಗೆ ಕನ್ನಡದಲ್ಲಿ ಮಾತನಾಡಲು, ಓದಲು ಮತ್ತು ಬರೆಯಲು ಬರಬೇಕು-ಎಂದರೆ ಅವರಿಗೆ ವ್ಯವಾಹಾರಿಕ ಕನ್ನಡ ಜ್ಞಾನ ಇರಬೇಕು.” ಎಂದು ದಿನಾಂಕ ೨-೨-೧೯೮೫ರ ಆದೇಶ ಸಂಖ್ಯೆ ಡಿಪಿಎಆರ್ ೩೭ ಎಸ್‌ಎಲ್‌ಸಿ ೮೪-ಇದರಲ್ಲಿ ಸ್ಪಷ್ಟ ಪಡಿಸಿತು. ಡಾ.ಸರೋಜಿನಿ ಮಹಿಷಿ ಸಮಿತಿಯು ದಿನಾಂಕ ೩೦-೧೨-೧೯೮೯ರಂದು ತನ್ನ ಅಂತಿಮ ವರದಿಯನ್ನು ಸಲ್ಲಿಸಿತು. ಈ ಸಮಿತಿಯ ಶಿಫಾರಸ್ಸುಗಳ ಪರಿಶೀಲನೆ ಮತ್ತು ಅನುಷ್ಠಾನಕ್ಕಾಗಿ ‘ಕನ್ನಡಿಗರ ಉದ್ಯೋಗ ಸಮಿತಿ’ಯನ್ನು ಸಂಸದರಾದ ಡಾ.ವಿ.ವೆಂಕಟೇಶ್ ಅವರ ನೇತೃತ್ವದಲ್ಲಿ ರಚಿಸಲಾಯಿತು. ಒಟ್ಟಾರೆ, ಈ ಎರಡೂ ಸಮಿತಿಗಳ ಶಿಫಾರಸ್ಸುಗಳನ್ನು ಆಧರಿಸಿ ಅನುಷ್ಠಾನಕ್ಕಾಗಿ ವಿವಿಧ ಇಲಾಖೆಗಳಿಗೆ ಜವಾಬ್ದಾರಿಯನ್ನು ವಹಿಸಲಾಯಿತು. (ಸಂಖ್ಯೆ-ಸಿಆಸುಇ ೯ ಎಸ್‌ಎಲ್‌ಸಿ ೯೦ ದಿನಾಂಕ ೨೯-೧೧-೧೯೯೦) ಅನುಷ್ಠಾನದ ಮೇಲ್ವಿಚಾರಣೆಗೆ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಯಿತು.
ಸರೋಜಿನಿ ಮಹಿಷಿ ವರದಿಯು ಒಟ್ಟು ೫೮ ಶಿಫಾರಸುಗಳನ್ನು ಒಳಗೊಂಡಿದೆ. ೧೨ಶಿಫಾರಸುಗಳನ್ನು ರಾಜ್ಯ ಸರ್ಕಾರವು ತನಗೆ ಒಪ್ಪುವ ಅವಕಾಶ ಇಲ್ಲವೆಂದು ತಿಳಿಸಿ ಕೈಬಿಟ್ಟಿದೆ. (ಶಿಫಾರಸುಗಳ ಸಂಖ್ಯೆ ೨೨, ೨೭, ೩೨, ೩೭, ೩೮, ೩೯, ೪೭, ೫೧, ೫೨, ೫೪, ೫೫ ಮತ್ತು ೫೬) ಉಳಿದ ಶಿಫಾರಸುಗಳ ಅನುಷ್ಠಾನಕ್ಕೆ ಕ್ರಮ ಕೈಗೊಂಡಿದೆ. ದಿನಾಂಕ ೨೩-೧೧-೧೯೯೦ರ ಆದೇಶ ಸಂಖ್ಯೆ- ಸಿಆಸುಇ ೯ ಎಸ್‌ಎಲ್‌ಸಿ ೯೦- ಇದರಲ್ಲಿ ಡಾ.ಸರೋಜಿನಿ ಮಹಿಷಿ ಸಮಿತಿಯ ಶಿಫಾರಸುಗಳನ್ನು ಒಪ್ಪಿಕೊಂಡು ಅನುಷ್ಠಾನಕ್ಕೆ ಸೂಚಿಸಲಾಗಿದೆ. ಇದರ ಅನ್ವಯ ದಿನಾಂಕ ೧೮-೧-೧೯೯೧ರಂದು ಹೊರಟ ಆದೇಶವು (ಸಂಖ್ಯೆ ಸಿಆಸುಇ(ಸಾಕಾಮ) ೧೯೯ ಎಂಇಎ ೯೦) ಹೀಗೆ ಸೂಚಿಸುತ್ತದೆ. “ರಾಜ್ಯ ಸಾರ್ವಜನಿಕ ಉದ್ದಿಮೆಗಳಲ್ಲಿ ಎಲ್ಲಾ ಹಂತಗಳಲ್ಲಿ ಶೇ.೧೦೦ರಷ್ಟು ಕನ್ನಡಿಗರನ್ನು ನೇಮಕಾತಿ ಮಾಡಿಕೊಳ್ಳಬೇಕು. ವಿಶೇಷ ಪರಿಣತಿ ಬೇಕಾಗಿರುವ ಗ್ರೂಪ್ ‘ಎ’ ಮತ್ತು ‘ಬಿ’ ಹುದ್ದೆಗಳಿಗೆ ನೇಮಕಾತಿ ಮಾಡುವಾಗ ರಾಜ್ಯ ಸರ್ಕಾರದ ಅನುಮತಿಯನ್ನು ಪಡೆದು ಆನಂತರ ಮಾತ್ರ ಈ ನಿರ್ಬಂಧದಿಂದ ವಿನಾಯಿತಿಯನ್ನು ನೀಡಬಹುದು” ಜೊತೆಗೆ ಕನ್ನಡ ಭಾಷಾಜ್ಞಾನವಿರಬೇಕೆಂಬ ನಿಯಮವನ್ನು ರೂಪಿಸಲು ಸಂಬಂಧಪಟ್ಟವರಿಗೆ ಈ ಆದೇಶವು ಸೂಚಿಸುತ್ತದೆ. ದಿನಾಂಕ ೧೮-೧-೧೯೯೧ರಂದು ಹೊರಡಿಸಿದ ಆದೇಶ ಸಂಖ್ಯೆ ಸಿಐ ೪೫ ಐಎಪಿ ೯೦-ಇದರಲ್ಲಿ “ಕೇಂದ್ರ ಸಾರ್ವಜನಿಕ ಉದ್ದಿಮೆಗಳನ್ನು ಸ್ಥಾಪಿಸಲು ನೆಲ, ಜಲ, ವಿದ್ಯುತ್‌ಚ್ಛಕ್ತಿ ಮುಂತಾದವುಗಳನ್ನು ನೀಡುವಾಗ ಸದರಿ ಕೇಂದ್ರ ಸಾರ್ವಜನಿಕ ಉದ್ದಿಮೆಗಳಲ್ಲಿ ಗ್ರೂಪ್ ‘ಸಿ’ ಮತ್ತು ‘ಡಿ’ ಹುದ್ದೆಗಳಿಗೆ ಶೇ.೧೦೦ರಷ್ಟು ಮತ್ತು ‘ಬಿ’ ಹುದ್ದೆಗಳಿಗೆ ಶೇ.೮೦ರಷ್ಟು ಕಡಿಮೆ ಇಲ್ಲದಂತೆ ಮತ್ತು ಗ್ರೂಪ್ ‘ಎ’ ಹುದ್ದೆಗಳಿಗೆ ಶೇ.೬೫ರಷ್ಟು ಕನ್ನಡಿಗರನ್ನು ನೇಮಿಸಿಕೊಳ್ಳಬೇಕೆಂಬ ಷರತ್ತನ್ನು ಹಾಕಬೇಕು” ಎಂದು ತಿಳಿಸಲಾಗಿದೆ. ಸರ್ಕಾರದ ಯಾವುದೇ ಸಹಾಯವನ್ನು ಪಡೆಯುವ ಖಾಸಗಿ ಉದ್ದಿಮೆಗಳಿಗೂ ಇದು ಅನ್ವಯಿಸುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಜೊತೆಗೆ ಮಹಾರಾಷ್ಟ್ರದಲ್ಲಿ ಇರುವ ಪದ್ಧತಿಯಂತೆ ನಿಗದಿಪಡಿಸಿದ ಪ್ರಮಾಣದಲ್ಲಿ ಉದ್ಯೋಗಾವಕಾಶವನ್ನು ಒದಗಿಸುವ ಬಗ್ಗೆ ಪ್ರತಿ ವರ್ಷ ಘೋಷಣೆ ಪ್ರಪತ್ರ (ಡಿಕ್ಲರೇಷನ್) ಪಡೆಯಬೇಕೆಂದು ಈ ಆದೇಶದಲ್ಲಿ ಸೂಚಿಸಲಾಗಿದೆ.
ರಾಜ್ಯದ ಸಾರ್ವಜನಿಕ ಉದ್ದಿಮೆ ಮತ್ತು ಸರ್ಕಾರದ ಸಹಾಯ ಪಡೆಯುವ ರಾಜ್ಯದ ಖಾಸಗಿ ಉದ್ದಿಮೆಗಳಲ್ಲಿ ಸರ್ಕಾರದ ಆದೇಶಗಳ ಅನುಷ್ಠಾನವಾಗುತ್ತಿರುವ ಬಗ್ಗೆ ಕಾಲಕಾಲಕ್ಕೆ ಪರಿಶೀಲನೆಗಳು ನಡೆಯುತ್ತಿವೆ. ಪರಿಶೀಲನೆ ಆಧಾರಿತ ವರದಿಗಳ ಪ್ರಕಾರ ಸಾಕಷ್ಟು ಪ್ರಮಾಣದ ಪ್ರಗತಿಯಾಗಿದೆ. ರಾಜ್ಯ ಸರ್ಕಾರದ ವ್ಯಾಪ್ತಿಯ ಉದ್ದಿಮೆಗಳ ಮಟ್ಟಿಗೆ ಅನುಷ್ಠಾನದ ಪ್ರಗತಿಯನ್ನು ಖಂಡಿತ ನಂಬಬಹುದಾಗಿದೆ. ಆದರೆ, ಕೇಂದ್ರೋದ್ಯಮಗಳ ಬಗ್ಗೆ ಇದೇ ಮಾತುಗಳನ್ನು ಹೇಳುವಂತಿಲ್ಲ. ಕೇಂದ್ರ ಸರ್ಕಾರದ ಉದ್ದಿಮೆಗಳು ತಮ್ಮ ಉದ್ಯೋಗ ನೀತಿ ನಿಯಮಾವಳಿಗಳನ್ನು ಕೇಂದ್ರ ಸರ್ಕಾರದಿಂದ ಪಡೆಯುತ್ತವೆ. ಅದರಂತೆ ನಡೆದುಕೊಳ್ಳುತ್ತವೆ. ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರಕ್ಕೆ ಷರತ್ತುಗಳನ್ನು ವಿಧಿಸುವಷ್ಟು ಸ್ವಾಯತ್ತವಾಗಿವೆಯೇ? ಈ ಪ್ರಶ್ನೆ ನನಗೆ ಮುಖ್ಯವೆನಿಸುತ್ತದೆ. ಜೊತೆಗೆ, ಕೇಂದ್ರ ಸರ್ಕಾರದ ಅಧೀನದಲ್ಲಿರುವ ಉದ್ದಿಮೆ ಅಥವಾ ಕಚೇರಿಗಳಲ್ಲಿ ನಡೆಯುವ ನೇಮಕಾತಿಗೆ ನಿಯಮಗಳನ್ನು ರೂಪಿಸುವುದು ಕೇಂದ್ರ ಸರ್ಕಾರವೇ ಹೊರತು ರಾಜ್ಯ ಸರ್ಕಾರವಲ್ಲ ಎಂಬುದನ್ನು ನಾವಿಲ್ಲಿ ಮರೆಯಬಾರದು. ಒಕ್ಕೂಟ ವ್ಯವಸ್ಥೆಯನ್ನು ಸಂವಿಧಾನಾತ್ಮಕವಾಗಿ ಒಪ್ಪಿಕೊಂಡಿದ್ದರೂ ಆಡಳಿತಾತ್ಮಕವಾಗಿ ಕೇಂದ್ರ ಸರ್ಕಾರದ ನೇಮಕಾತಿಗಳಿಗೆ ಷರತ್ತುಗಳನ್ನು ವಿಧಿಸುವ ಅಧಿಕಾರ ವ್ಯಾಪ್ತಿ ರಾಜ್ಯ ಸರ್ಕಾರಕ್ಕೆ ಇದೆಯೇ ಎಂಬ ಬಗ್ಗೆ ಯೋಚಿಸಬೇಕು. ‘ಸರೋಜಿನಿ ಮಹಿಷಿ ವರದಿಯು ಜಾರಿಗೆ ಬರಲಿ’ ಎಂದು ಈಗಲೂ ಒತ್ತಾಯಿಸುವವರು ಅನೇಕ ಅಂಶಗಳು ಜಾರಿಯಾಗಿರುವುದನ್ನು ಒಳಗೊಂಡಂತೆ ರಾಜ್ಯ ಸರ್ಕಾರದ ಇತಿಮಿತಿಗಳನ್ನು ಗಮನಿಸಿ ಒತ್ತಾಯದ ಸ್ವರೂಪವನ್ನು ನಿರ್ಧರಿಸಿಕೊಳ್ಳಬೇಕು.
ಬಹುರಾಷ್ಟ್ರೀಯ ಕಂಪನಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಧಿಕಾರ ವ್ಯಾಪ್ತಿಯನ್ನು ಮೀರಿದ ಸ್ವಾತಂತ್ರ್ಯವನ್ನು ಅನುಭವಿಸುತ್ತಿರುವ ಇಂದಿನ ಸಂದರ್ಭದಲ್ಲಿ ನಾವು ಒತ್ತಾಯ ಮಾಡಬೇಕಾದ್ದು ಯಾವುದಕ್ಕೆ, ಯಾರನ್ನು ಎಂಬ ವಿಷಯಗಳ ಬಗ್ಗೆ ಸ್ಪಷ್ಟ ನಿಲುವು ತಾಳಬೇಕಾಗಿದೆ. ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕನ್ನಡಿಗರಿಗೆ ಆದ್ಯತೆಯ ಮೇಲೆ ಉದ್ಯೋಗ ಸಿಗಬೇಕು. ಇದು ರಾಜ್ಯ ಸರ್ಕಾರದ ನೀತಿಯಾಗಬೇಕು. ಕೇಂದ್ರ ಸರ್ಕಾರವು ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ಕೊಡುವುದನ್ನು ಪುರಸ್ಕರಿಸಬೇಕು. ರಾಜ್ಯ ಸರ್ಕಾರಗಳು ಬಹುರಾಷ್ಟ್ರೀಯ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಳ್ಳುವಾಗ ಸ್ಥಳೀಯರ ಪರವಾಗಿ ಷರತ್ತುಗಳನ್ನು ವಿಧಿಸಲು ಸಾಧ್ಯವಾಗಬೇಕು. ಬಹುರಾಷ್ಟ್ರೀಯ ಕಂಪನಿಗಳು ಬರದೇ ಹೋದರೆ ರಾಜ್ಯದ ಅವನತಿಯಾಗುತ್ತದೆ ಎಂಬ ಹುಸಿ ಅಳಲನ್ನು ಕಿತ್ತೊಗೆದು ರಾಜ್ಯ ಸರ್ಕಾರವು ದಿಟ್ಟವಾಗಿ ನಡೆದುಕೊಳ್ಳಬೇಕಾಗುತ್ತದೆ. ಈಗ ಬಹುರಾಷ್ಟ್ರೀಯ ಕಂಪನಿಗಳನ್ನು ಮಣಿಸುವ ಹೋರಾಟಗಳು ತೀವ್ರವಾಗಬೇಕು. ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಗರಿಷ್ಠ ಆದ್ಯತೆಯನ್ನು ಕೇಳಿದರೆ ಅಷ್ಟೇ ಸಾಲದು. ಈ ಕಂಪನಿಗಳ ಉದ್ದಿಮೆಗಳಲ್ಲಿರುವ ಉದ್ಯೋಗದ ಸ್ವರೂಪ ಮತ್ತು ವಿವಿಧ ಹುದ್ದೆಗಳ ಮಾಹಿತಿಗಳನ್ನು ಅಧ್ಯಯನ ಮಾಡಿ, ಅದಕ್ಕೆ ತಕ್ಕಂತೆ ಕನ್ನಡಿಗರನ್ನು ಸಿದ್ಧಗೊಳಿಸುವ ಕೆಲಸವನ್ನು ಮಾಡಬೇಕು. ಸೂಕ್ತ ತರಬೇತಿ ನೀಡಬೇಕು.
ಬಹುರಾಷ್ಟ್ರೀಯ ಕಂಪನಿಗಳ ವ್ಯಾಪ್ತಿ, ಕೇಂದ್ರ-ರಾಜ್ಯ ಸರ್ಕಾರಗಳ ಸಂವಿಧಾನಾತ್ಮಕ ಅಧಿಕಾರ, ಈ ಕಂಪನಿಗಳ ಉದ್ಯೋಗಾವಕಾಶಗಳ ಸಂಪೂರ್ಣ ಮಾಹಿತಿ, ಅವುಗಳಿಗೆ ಬೇಕಾದ ವಿದ್ಯಾರ್ಹತೆ, ಅದಕ್ಕಾಗಿ ಕನ್ನಡಿಗರನ್ನು ಸಜ್ಜುಗೊಳಿಸುವ ವಿಧಾನ, ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ಮತ್ತು ಸಾಮಾಜಿಕ ಮೀಸಲಾತಿ ಇಂತಹ ಎಲ್ಲಾ ವಿಷಯಗಳನ್ನು ಮೂರ‍್ನಾಲ್ಕು ತಿಂಗಳುಗಳಲ್ಲಿ ಅಧ್ಯಯನ ನಡೆಸಿ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ದೊರಕಿಸಿ ಕೊಡುವ ಮಾರ್ಗೋಪಾಯಗಳನ್ನು ಸೂಚಿಸುವ ಶಾಸನಬದ್ಧ ಆಯೋಗ ಒಂದರ ಅಗತ್ಯವಿದೆ. ಕನ್ನಡಿಗರಿಗೆ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಆದ್ಯತೆಯ ಮೇಲೆ ಉದ್ಯೋಗ ಮತ್ತು ಸಾಮಾಜಿಕ ನ್ಯಾಯ-ಇದು ನಮ್ಮ ನೀತಿ ಮತ್ತು ಹೋರಾಟ.

ಕನ್ನಡ ಮಾಧ್ಯಮದವರಿಗೆ ಉದ್ಯೋಗ ಮೀಸಲಾತಿ
ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿರುವ ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರದ ನೇಮಕಾತಿಗಳಲ್ಲಿ ಆದ್ಯತೆ ನೀಡಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ೨೦೦೧ರ ಆರಂಭದಿಂದಲೇ ಒತ್ತಾಯಿಸುತ್ತಾ ಬಂದ ಫಲವಾಗಿ ಎಸ್.ಎಂ.ಕೃಷ್ಣಾ ಅವರ ನೇತೃತ್ವದ ಸರ್ಕಾರವು ಶೇ.೫ರಷ್ಟು ಮೀಸಲಾತಿಗೆ ಅವಕಾಶ ಕಲ್ಪಿಸಿ ಮಂತ್ರಿ ಮಂಡಲದ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡಿತು. ಆನಂತರ ಗೆಜೆಟ್ ಪ್ರಕಟಣೆಯಂತಹ ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಮುಗಿಸಿ ಆದೇಶ ಹೊರಡಿಸಿತು.
(ಆದೇಶ ಸಂಖ್ಯೆ ಡಿಪಿಎಆರ್ ೭೧ ಎಸ್‌ಆರ್‌ಆರ್ ೨೦೦೧ದಿನಾಂಕ ೨೪-೧೦-೨೦೦೨).
ಈ ಮುಂಚೆ ವೃತ್ತಿ ಶಿಕ್ಷಣ ಪ್ರವೇಶದಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಶೇ.೫ರಷ್ಟು ಮೀಸಲಾತಿ ನೀಡಿದ್ದನ್ನು ಇಲ್ಲಿ ನೆನೆಯಬಹುದು. ಭಾಷೆಯ ಆಧಾರದ ಮೇಲೆ ಯಾವುದೇ ರೀತಿಯ ಮೀಸಲಾತಿ ಮತ್ತು ಆಯ್ಕೆಯಲ್ಲಿ ಅಧಿಕೃತ ಆದ್ಯತೆ ಕೊಡುವ ಆದೇಶಗಳು ದೇಶದ ಯಾವುದೇ ರಾಜ್ಯದಲ್ಲೂ ಇಲ್ಲ ಎಂಬುದನ್ನು ಗಮನಿಸಬೇಕು.
ಕನ್ನಡ ಮಾಧ್ಯಮ ವ್ಯಾಸಂಗಿಗಳಲ್ಲಿ ಆತ್ಮವಿಶ್ವಾಸ ಮೂಡಿಸುವ ಕ್ರಮವಾಗಿ ಈ ಮಾದರಿಯ ಮೀಸಲಾತಿಗೆ ತನ್ನದೇ ಮಹತ್ವವಿದೆ. ಕಾನೂನಿನ ಚೌಕಟ್ಟಿನಲ್ಲಿ ಊರ್ಜಿತವಾಗುವುದನ್ನು ಗಮನದಲ್ಲಿಟ್ಟುಕೊಂಡೇ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ಬಗ್ಗೆ ಸರ್ಕಾರವನ್ನು ಒತ್ತಾಯಿಸಬಹುದು. ಜೊತೆಗೆ ಈ ಮೀಸಲಾತಿಯನ್ನು ರಾಜ್ಯ ಸರ್ಕಾರದ ನೇಮಕಾತಿಗಲ್ಲದೆ ಖಾಸಗಿ ಉದ್ದಿಮೆಗಳಿಗೂ ವಿಸ್ತರಿಸುವಂತೆ ಕೇಳಬೇಕು.

‘ಸಿ’ ದರ್ಜೆ ನೌಕರರು ಮತ್ತು ಕನ್ನಡ
ರಾಜ್ಯ ಸರ್ಕಾರವು ತನ್ನ ಆದೇಶ ಕ್ರಮಾಂಕ: ಡಿಪಿಎಆರ್ ೪೧ ಪಿಓಎಲ್ ೮೩ ದಿನಾಂಕ ೧೬-೭-೧೯೮೫ ಇದರಲ್ಲಿ ಸಿ ದರ್ಜೆ ನೌಕರರು ತಮ್ಮ ಹುದ್ದೆಗಳಿಗೆ ಆಯ್ಕೆಯಾದ ನಂತರ, ನೇಮಕಾತಿಗೆ ಮುಂಚೆ ಸರ್ಕಾರವು ಗೊತ್ತುಪಡಿಸಿದ ಕನ್ನಡ ಭಾಷಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಬೇಕಾಗುತ್ತದೆ. ಹೇಗಿದ್ದರೂ ಹುದ್ದೆಗೆ ಆಯ್ಕೆಯಾಗಿರುವುದರಿಂದ, ಆನಂತರ ನಡೆಸುವ ಭಾಷಾ ಪರೀಕ್ಷೆಯು ತನ್ನ ಬಿಗಿ ಮತ್ತು ಮಹತ್ವವನ್ನು ಕಳೆದುಕೊಳ್ಳುತ್ತದೆ. ಆದ್ದರಿಂದ ನಿರ್ಧಿಷ್ಠ ಕನ್ನಡ ಭಾಷಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದವರು ಮಾತ್ರವೇ ಸಿ ದರ್ಜೆ ನೌಕರಿಗೆ ಅರ್ಜಿ ಹಾಕಲು ಅರ್ಹರೆಂದು ಹೊಸ ಆದೇಶ ಹೊರಡಬೇಕು. ‘ಸಿ’ ದರ್ಜೆ ನೌಕರರು ಸಾಮಾನ್ಯವಾಗಿ ಕಚೇರಿ ಸಹಾಯಕರು, ಹೆಚ್ಚೆಂದರೆ ಶಾಖಾಧಿಕಾರಿಗಳ ಹಂತದವರು, ಇವರಿಗೆ ಕನ್ನಡ ಭಾಷಾ ಪರೀಕ್ಷೆಯ ಬಗ್ಗೆ ಪೂರ್ವ ಷರತ್ತು ವಿಧಿಸುವುದು ಸೂಕ್ತ. ಈ ಹಂತದ ನೌಕರರಿಗೆ ಕನ್ನಡ ಬಾರದೇ ಇದ್ದರೆ, ಕನ್ನಡವು ಆಡಳಿತ ಭಾಷೆ ಎಂಬುದಕ್ಕೆ ಏನರ್ಥ?
ಆದ್ದರಿಂದ ಅರ್ಜಿ ಹಾಕುವುದಕ್ಕೆ ಒಂದು ಅರ್ಹತೆಯಾಗಿ ಕನ್ನಡ ಭಾಷಾ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕೆಂಬ ಷರತ್ತನ್ನು ಸೇರಿಸಬೇಕು.

ಕರ್ನಾಟಕದಲ್ಲಿ ಕೆಲಸ ಮತ್ತು ಕನ್ನಡ
ಕರ್ನಾಟಕದ ಸರ್ಕಾರಿ ಹಾಗೂ ಖಾಸಗಿ ಕಚೇರಿ, ಉದ್ದಿಮೆ-ಹೀಗೆ ಯಾವುದೇ ಅಧಿಕೃತ ಸಂಸ್ಥೆಗಳಲ್ಲಿ ಕೆಲಸಕ್ಕೆ ಸೇರಲು ಕನ್ನಡವನ್ನು ಒಂದು ಭಾಷೆಯಾಗಿ ಕಲಿತಿರುವುದು ಕಡ್ಡಾಯವಾಗಬೇಕು. ಕನ್ನಡವನ್ನು ಓದಲು, ಕನ್ನಡದಲ್ಲಿ ಬರೆಯಲು-ಮಾತಾಡಲು ಅರ್ಹರಾದವರು ಮಾತ್ರ ಕರ್ನಾಟಕದಲ್ಲಿ ಕೆಲಸಕ್ಕೆ ಸೇರಲು ಸಾಧ್ಯವಾಗಬೇಕು. ಕನ್ನಡ ಭಾಷಾ ಜ್ಞಾನದ ಬಗ್ಗೆ ನಿರ್ಧಿಷ್ಟ ಮಾರ್ಗಸೂಚಿಯನ್ನು ಸಿದ್ಧಗೊಳಿಸಿ ಅದಕ್ಕೆ ಎಲ್ಲರೂ ಬದ್ಧವಾಗುವಂತೆ ಮಾಡಬೇಕು.
ಕರ್ನಾಟಕದಲ್ಲಿ ಕನ್ನಡ ಭಾಷೆಯಿಲ್ಲದೆ ಶಿಕ್ಷಣ ಪೂರೈಸಲಾಗದು ಮತ್ತು ಕನ್ನಡ ಭಾಷಾಜ್ಞಾನವಿಲ್ಲದೆ ಕೆಲಸ ಸಿಗದು, ಇದು ನಮ್ಮ ನೀತಿಯಾಗಬೇಕು. ಇದು ಬೇರೆ ಭಾಷೆಗಳ ವಿರೋಧವಲ್ಲ.; ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಭಾಷೆಗೆ ಸಲ್ಲಬೇಕಾದ ಸೂಕ್ತ ಸ್ಥಾನ.

ಕೇಂದ್ರೋದ್ಯಮಗಳಲ್ಲಿ ಸ್ಥಳೀಯರಿಗೆ ಉದ್ಯೋಗ
ಕರ್ನಾಟಕದಲ್ಲಿ ಸ್ಥಾಪಿತವಾಗಿರುವ ಮತ್ತು ಆಗಲಿರುವ ಕೇಂದ್ರೋದ್ಯಮ ಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವುದು ಆದ್ಯತೆಯಾಗಬೇಕು. ಮೊದಲು ಕನ್ನಡಿಗರಿಗೆ-ಅಂದರೆ ಕರ್ನಾಟಕವಾಸಿಗಳಾಗಿದ್ದು ಕನ್ನಡ ಬಲ್ಲವರಿಗೆ-ಉದ್ಯೋಗ ಆನಂತರ ಅಗತ್ಯವಿದ್ದರೆ ಉಳಿದವರನ್ನು ಪರಿಗಣಿಸುವುದು. ಇದು ರೈಲ್ವೆ, ರಕ್ಷಣಾ ಇಲಾಖೆ-ಇತ್ಯಾದಿ ಎಲ್ಲಕ್ಕೂ ಅನ್ವಯವಾಗಬೇಕು.
ನಿಜ: ಇದು ರಾಜ್ಯ ಸರ್ಕಾರದ ಸಂಪೂರ್ಣ ವ್ಯಾಪ್ತಿಗೆ ಬರುವುದಿಲ್ಲ. ಈ ಬಗ್ಗೆ ಹಿಂದೆ ಪ್ರಸ್ತಾಪಿಸಲಾಗಿದೆ. ಸದ್ಯದ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ಕೊಡುವ ಬಗ್ಗೆ ರಾಷ್ಟ್ರೀಯ ನೀತಿಯನ್ನು ರೂಪಿಸಬೇಕು. ಒಕ್ಕೂಟ ವ್ಯವಸ್ಥೆಯು ಅರ್ಥಪೂರ್ಣವಾಗಬೇಕಾದರೆ ಆಯಾ ರಾಜ್ಯಗಳಲ್ಲಿ ವಾಸಿಸುವ, ಆಯಾ ರಾಜ್ಯದ ಭಾಷೆಯನ್ನು ಕಲಿತಿರುವವರಿಗೆ ಆದ್ಯತೆ ನೀಡಬೇಕು. ರಾಜ್ಯ ಸರ್ಕಾರಗಳು, ರಾಜ್ಯಗಳನ್ನು ಪ್ರತಿನಿಧಿಸುವ ಸಂಸದರು, ಭಾಷಾ ಹೋರಾಟಗಾರರು, ಚಿಂತಕರು ‘ರಾಷ್ಟ್ರೀಯ ನೀತಿ’ಯ ಅಗತ್ಯವನ್ನು ಪ್ರತಿಪಾದಿಸಬೇಕು.

ಕೇಂದ್ರ ಸರ್ಕಾರದ ರಾಜ್ಯಶಾಖೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ
ಕೇಂದ್ರೋದ್ಯಮದ ಬಗ್ಗೆ ಪ್ರಸ್ತಾಪಿಸಿದ ಅಂಶಗಳನ್ನೇ ಇಲ್ಲಿಯೂ ಗಮನಿಸಬೇಕು. ಕೇಂದ್ರ ಸರ್ಕಾರದ ವಿವಿಧ ಶಾಖಾ ಕಚೇರಿಗಳು ಎಲ್ಲ ರಾಜ್ಯಗಳಲ್ಲಿಯೂ ಇರುತ್ತವೆ. ಈ ಕಚೇರಿಗಳಲ್ಲಿ ಕಡೇ ಪಕ್ಷ ‘ಸಿ’ ಮತ್ತು ‘ಡಿ’ ದರ್ಜೆಯ ಹುದ್ದೆಗಳು ಆಯಾ ರಾಜ್ಯದವರಿಗೇ ಮೀಸಲಾಗಬೇಕು.
ರಾಷ್ಟ್ರೀಯ ಭಾವೈಕ್ಯತೆಯಿಂದ ಆಯಾ ರಾಜ್ಯದವರಿಗೆ ಉದ್ಯೋಗದಲ್ಲಿ ಆದ್ಯತೆ ಕೊಡಬೇಕೆಂದು ‘ರಾಷ್ಟ್ರೀಯ ಸಮಗ್ರತಾ ಆಯೋಗ’ವು ೧೯೬೮ರಲ್ಲೇ ಪ್ರತಿಪಾದಿಸಿದೆ. ಹೀಗೆ ಆಯಾ ರಾಜ್ಯದವರಿಗೆ ಉದ್ಯೋಗದಲ್ಲಿ ಆದ್ಯತೆ ನೀಡದಿದ್ದರೆ ಮುಂದೊಂದು ದಿನ ಪ್ರತ್ಯೇಕತಾ ಭಾವವು ಬೆಳೆಯಬಹುದೆಂಬ ಎಚ್ಚರಿಕೆಯನ್ನೂ ಕೊಟ್ಟಿದೆ. ಸದರಿ ಆಯೋಗದ ವರದಿಯು ಸಾಕಷ್ಟು ಬೆಳೆಯಬಹುದೆಂಬ ಬಳಿಕವೇ ‘ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ’ಯೆಂಬ ನೀತಿಗೆ ಸಮ್ಮತಿ ಸೂಚಿಸಿದೆಯೆಂಬುದನ್ನು ಮರೆಯಬಾರದು. ಈಗ ತಲೆದೋರುತ್ತಿರುವ ಪ್ರತ್ಯೇಕತಾ ಚಳವಳಿಗಳಿಗೆ ಇರುವ ಅನೇಕ ಕಾರಣಗಳಲ್ಲಿ ಸ್ಥಳೀಯರಿಗೆ ಉದ್ಯೋಗ-ಉದ್ಯಮಗಳಲ್ಲಿ ಆದ್ಯತೆ ಸಿಗದೆ ಇರುವುದೂ ಒಂದು ಮುಖ್ಯಾಂಶವಾಗಿದೆ.
ಆದ್ದರಿಂದ, ಉದ್ಯೋಗದಲ್ಲಿ ಸ್ಥಳೀಯರಿಗೆ ಆದ್ಯತೆ ನೀಡುವುದು ಒಂದು ರಾಷ್ಟ್ರೀಯ ನೀತಿಯಗಬೇಕು.
ಕೇಂದ್ರೋದ್ಯಮ ಕಚೇರಿ, ಕಂಪನಿಗಳಲ್ಲಿ ‘ಕನ್ನಡ ಘಟಕ’ ಸ್ಥಾಪನೆ
ರಾಜ್ಯದಲ್ಲಿರುವ ಎಲ್ಲ ಕೇಂದ್ರೋದ್ಯಮ, ಕೇಂದ್ರ ಸರ್ಕಾರದ ಕಚೇರಿ, ಬಹುರಾಷ್ಟ್ರೀಯ ಕಂಪನಿಗಳಲ್ಲಿ ‘ಕನ್ನಡ ಘಟಕ’ ಸ್ಥಾಪನೆಯಾಗಬೇಕು. ಕನ್ನಡ ಘಟಕವು ರಾಜ್ಯದೊಳಗಿನ ವ್ಯವಹಾರಗಳನ್ನು ಕನ್ನಡದಲ್ಲೇ ನಡೆಸುವುದಕ್ಕೆ ತನ್ನ ಸಂಸ್ಥೆಗಳಿಗೆ ಸಹಾಯಕವಾಗಿ ಕೆಲಸ ಮಾಡಬೇಕು. ನೌಕರಿಗೆ ಕೊಡುವ ಸೂಚನೆಗಳು, ಸರ್ಕಾರಕ್ಕೆ ಸಲ್ಲಿಸುವ ಪತ್ರಗಳು, ಸಾರ್ವಜನಿಕ ಪತ್ರ ವ್ಯವಹಾರ-ಇತ್ಯಾದಿಗಳೆಲ್ಲ ಕನ್ನಡದಲ್ಲಿ ನಡೆಯಬೇಕು. ಆಂತರಿಕ ಆಡಳಿತಕ್ಕೆ ಕೇಂದ್ರ ಸರ್ಕಾರದ ಕಚೇರಿ, ಬಹುರಾಷ್ಟ್ರೀಯ ಕಂಪನಿಗಳಿಗೂ ಜನರಿಗೂ ಸಂಪರ್ಕ ಕೇಂದ್ರವಾಗಿ ‘ಕನ್ನಡ ಘಟಕ’ವು ಅಧಿಕೃತ ಅಂಗವಾಗಿ ಕೆಲಸ ಮಾಡುವಂತಿರಬೇಕು. ಅದು ಇನ್ನೊಂದು ಸ್ವಯಂರಚಿತ ಕನ್ನಡ ಸಂಘವಾಗಬಾರದು.
ಹಾಗೆ ನೋಡಿದರೆ ಆಯಾ ರಾಜ್ಯಭಾಷೆಯ ಘಟಕಗಳನ್ನು ಸ್ಥಾಪಿಸುವುದು ‘ರಾಷ್ಟ್ರೀಯ ನೀತಿ’ಯಾಗಬೇಕು.
(ನಾನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿದ್ದಾಗ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಆಯಾ ಸಂಸ್ಥೆಗಳ ಕನ್ನಡ ಸಂಘಟನೆಗಳ ಸಂಯುಕ್ತ ಒತ್ತಾಯದಿಂದ ಎಚ್.ಎ.ಎಲ್. ಮತ್ತು ಬಿ.ಇ.ಎಲ್.ಗಳಲ್ಲಿ ಸಾಂಸ್ಕೃತಿಕ ಉದ್ದೇಶದ ‘ಕನ್ನಡ ಘಟಕ’ಗಳು ಸ್ಥಾಪನೆಗೊಂಡಿವೆ.)

ಬ್ಯಾಂಕುಗಳು ಮತ್ತು ಕನ್ನಡ
ಯಾವುದೇ ಬ್ಯಾಂಕು ಸಾರ್ವಜನಿಕ ಜೊತೆ ನಿರಂತರ ಸಂಪರ್ಕದಲ್ಲಿರುತ್ತದೆ. ಆದರೆ ಅನೇಕ ಬ್ಯಾಂಕುಗಳು ವಿವಿಧ ನಮೂನೆಗಳನ್ನು ಕನ್ನಡದಲ್ಲಿ ಕೊಡುವುದಿಲ್ಲ. ರಾಷ್ಟ್ರೀಕೃತ ಬ್ಯಾಂಕುಗಳು ಕನ್ನಡವನ್ನು ಸಾರ್ವಜನಿಕ ಸಂಪರ್ಕದ ಅಧಿಕೃತ ಭಾಷೆಯನ್ನಾಗಿ ಅಳವಡಿಸಿಕೊಳ್ಳಬೇಕು.
ಈಗ ಕೇಂದ್ರ ಸರ್ಕಾರದ ಆದೇಶದ ಪ್ರಕಾರ (೧೯೭೬ರ ಅಧಿಕೃತ ಭಾಷಾ ನಿಯಮದ ೧೧ನೇ ಅಂಶಕ್ಕನುಗುಣವಾಗಿ) ನಾಮಫಲಕ, ಲೆಟರ್‌ಹೆಡ್, ಮೊಹರು ಮುಂತಾದವುಗಳಲ್ಲಿ ಕನ್ನಡವನ್ನು ಬಳಸಬೇಕು. ಇದು ಕೇಂದ್ರ ಸರ್ಕಾರದ ಎಲ್ಲ ಕಚೇರಿಗಳು, ಉದ್ದಿಮೆಗಳು, ರಾಷ್ಟ್ರೀಕೃತ ಬ್ಯಾಂಕುಗಳಿಗೆ ಅನ್ವಯಿಸುತ್ತದೆ. ಇದಿಷ್ಟೇ ಸಾಲದು. ಪ್ರಾದೇಶಿಕ ಭಾಷೆಗಳು ಅಧಿಕೃತವಾಗಿ ಸಾರ್ವಜನಿಕ ವ್ಯವಹಾರದ, ಸಂಪರ್ಕದ ಸಾಧನಗಳಾಗಬೇಕು.

ಸಾರ್ವಜನಿಕ ಉದ್ದಿಮೆಗಳ ಪುನಶ್ಚೇತನ
ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ (ಸರ್ಕಾರಗಳ ನೇತೃತ್ವದ) ಸಾರ್ವಜನಿಕ ಉದ್ದಿಮೆಗಳನ್ನು ಉಳಿಸುವ ಹೋರಾಟವನ್ನು ನಡೆಸಬೇಕು; ಈ ಸಂಬಂಧದಲ್ಲಿ ನಡೆಯುವ ಹೋರಾಟಗಳಿಗೆ ಬೆಂಬಲವಾಗಿ ನಿಲ್ಲಬೇಕು. ಈಗಾಗಲೇ ಸಾರ್ವಜನಿಕ ಉದ್ದಿಮೆಯಾದ, ಹೆಮ್ಮೆಯ ಎನ್.ಜಿ.ಇ.ಎಫ್.ಅನ್ನು ಕಳೆದುಕೊಂಡದ್ದಾಗಿದೆ. ಮತ್ತಷ್ಟು ಸಾರ್ವಜನಿಕ ಉದ್ದಿಮೆಗಳು ನಷ್ಟದಲ್ಲಿವೆಯೆಂಬ ನೆಪದ ಮೂಲಕ ಮುಚ್ಚಿಹೋಗುವ ಆತಂಕದಲ್ಲಿವೆ. ಸರಿಯಾದ ಆಡಳಿತದ ಮೂಲಕ ಲಾಭಗಳಿಕೆಯತ್ತ ಹೋಗಲು ಸಾಧ್ಯವೆಂಬುದಕ್ಕೆ ಬಿ.ಎಂ.ಟಿ.ಸಿ.ಯು ಒಂದು ಉದಾಹರಣೆಯಾಗಿದೆ. ಆಯಾ ಉದ್ದಿಮೆಗಳ ಆಡಳಿತ ವರ್ಗ ಮತ್ತು ಕಾರ್ಮಿಕ ವರ್ಗ ಒಟ್ಟಾಗಿ ಸಾರ್ವಜನಿಕ ಉದ್ದಿಮೆ ಮತ್ತು ಸಂಸ್ಥೆಗಳ (ಉದಾ: ಕರ್ನಾಟಕ ರಾಜ್ಯಸಾರಿಗೆ ಸಂಸ್ಥೆ) ಪುನಶ್ಚೇತನಕ್ಕೆ ಪೂರಕವಾಗಿ ಕ್ರಿಯಾಶೀಲವಾಗಬೇಕು. ಕಾರ್ಮಿಕ ಸಂಘಟನೆಗಳಷ್ಟೇ ಅಲ್ಲ. ಕನ್ನಡಪರ ಸಂಘಟನೆಗಳು ಈ ಅಂಶವನ್ನು ಆದ್ಯತೆಗಳಲ್ಲೊಂದಾಗಿ ಸ್ವೀಕರಿಸಬೇಕು. ಸಾರ್ವಜನಿಕ ಉದ್ದಿಮೆ ಹಾಗೂ ಸಂಸ್ಥೆಗಳನ್ನು ಮುಚ್ಚುವ, ಮಾರುವ, ಖಾಸಗೀಕರಣಗೊಳಿಸುವ ಸರ್ಕಾರದ ಯಾವುದೇ ಕ್ರಮಗಳನ್ನು ವಿರೋಧಿಸಬೇಕು.

ಉದ್ಯೋಗ ವಿನಿಮಯ ಕಚೇರಿ
ಉದ್ಯೋಗ ವಿನಿಮಯ ಕಚೇರಿಯಲ್ಲಿ ವಿದ್ಯಾವಂತ ನಿರುದ್ಯೋಗಿಗಳು ನೋಂದಾಯಿಸುವುದು ಒಂದು ಸಾಮಾನ್ಯ ಪದ್ಧತಿಯಾಗಿತ್ತು. ಈಗ ಹಾಗಿಲ್ಲ. ಉದ್ಯೋಗದ ಆಯ್ಕೆ ವಿಧಾನಗಳಲ್ಲಾದ ವ್ಯತ್ಯಾಸಗಳು ಇದಕ್ಕೆ ಒಂದು ಮುಖ್ಯ ಕಾರಣ. ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ಸಿಗಬೇಕಾದರೆ (ಕಡೇ ಪಕ್ಷ) ಸಿ ಮತ್ತು ಡಿ ಹುದ್ದೆಗಳ ಆಯ್ಕೆಗೆ ಉದ್ಯೋಗ ವಿನಿಮಯ ಕಚೇರಿಯಿಂದ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ತರಿಸಿಕೊಳ್ಳುವುದು ಕಡ್ಡಾಯವಾದರೆ ಉತ್ತಮ. ಯಾಕೆಂದರೆ ಸ್ಥಳೀಯ ವಾಸಿಗಳು ಮಾತ್ರ ಉದ್ಯೋಗವಿನಿಮಯ ಕಚೇರಿಯಲ್ಲಿ ನೋಂದಣಿಯಾಗುತ್ತಾರೆ.
ಈಗ ಒಂದೆರಡು ಕಾರ್ಖಾನೆಗಳು ಮಾತ್ರ ಉದ್ಯೋಗ ವಿನಿಮಯ ಕಚೇರಿಯಿಂದ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ತರಿಸಿಕೊಳ್ಳುತ್ತವೆಯೆಂದು ಹೇಳಲಾಗುತ್ತಿದೆ. ಕರ್ನಾಟಕದ ಯಾವುದೇ ಉದ್ಯಮ- ಅದು ಖಾಸಗಿಯಾಗಿರಲಿ ಬಹುರಾಷ್ಟ್ರೀಯ ಕಂಪನಿಯಾಗಿರಲಿ, ಕೇಂದ್ರೋದ್ಯಮ ಅಥವಾ ರಾಜ್ಯೋದ್ಯಮವಾಗಿರಲಿ-ಉದ್ಯೋಗ ವಿನಿಮಯ ಕಚೇರಿಯಿಂದ ಅರ್ಹರ ಪಟ್ಟಿ ಪಡೆಯುವುದು ಕಡ್ಡಾಯವಾದರೆ ಈ ಕಚೇರಿಗೂ ಮಹತ್ವ ಬರುತ್ತದೆ. ಸ್ಥಳೀಯರಿಗೂ ಅವಕಾಶವಾಗುತ್ತದೆ.

ಅವಿದ್ಯಾವಂತ ನಿರುದ್ಯೋಗಿಗಳ ಸಮಸ್ಯೆ
ಉದ್ಯೋಗದ ವಿಷಯ ಬಂದಾಗ ಕನ್ನಡಪರ ವ್ಯಕ್ತಿ ಮತ್ತು ಸಂಘಟನೆಗಳು ಸಾಮಾನ್ಯವಾಗಿ ವಿದ್ಯಾವಂತ ನಿರುದ್ಯೋಗಿಗಳ ನೆಲೆಯಲ್ಲಿ ನಿಂತು ನಮ್ಮ ವಿಚಾರಗಳನ್ನು ಮಂಡಿಸುವುದು ಸಾಮಾನ್ಯ. ಆದರೆ ಅಸಂಖ್ಯಾತ ಅವಿದ್ಯಾವಂತ ನಿರುದ್ಯೋಗಿ ಕನ್ನಡಿಗರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವುದು ಕನ್ನಡಪರ ಚಿಂತನೆಗೆ ಹೊಸ ಆಯಾಮವನ್ನು ನೀಡುತ್ತದೆ. ಇದು ಅಗತ್ಯ. ಸಾಮಾಜಿಕವಾಗಿ, ಆರ್ಥಿಕವಾಗಿ ತುಳಿತಕ್ಕೊ ಳಗಾಗುತ್ತಿರುವ ಅಸಂಖ್ಯಾತ ಅವಿದ್ಯಾವಂತ ಮತ್ತು ಅರೆವಿದ್ಯಾ ವಂತ ನಿರುದ್ಯೋಗಿ ಗಳಿಗೆ ಹೊಟ್ಟೆ ಬಟ್ಟೆಗಾಗುವಷ್ಟು ಕೆಲಸ ಕೊಡುವುದು ಸರ್ಕಾರದ ಜವಾಬ್ದಾರಿಯಾಗಬೇಕು. ಇದಕ್ಕನುಗುಣವಾಗಿ ಯೋಜನೆ ಗಳನ್ನು ರೂಪಿಸುವಂತೆ ಕನ್ನಡಪರ ಚಿಂತಕರು, ಕ್ರಿಯಾಶೀಲರು, ಸಂಘಟನೆಗಳು ಒತ್ತಾಯತರಬೇಕು.
ಕರ್ನಾಟಕವೆಂದರೆ ಎಲ್ಲ ಜನವರ್ಗಗಳ ಒಕ್ಕೂಟ, ಈ ನೆಲೆಯಲ್ಲಿ ವಿದ್ಯಾವಂತರು, ಅವಿದ್ಯಾವಂತರು, ಅರೆ ವಿದ್ಯಾವಂತರು (ಮಹಿಳೆ ಮಕ್ಕಳನ್ನು ಒಳಗೊಂಡಂತೆ)-ಎಲ್ಲರಿಗೂ ಮೂಲಭೂತ ಅಗತ್ಯಗಳು ಲಭ್ಯವಾಗಬೇಕು.

ರಾಷ್ಟ್ರೀಯ ನೀತಿ
ಭಾಷಾವಾರು ಪ್ರಾಂತ್ಯಗಳ ರಚನೆಯ ನಂತರವೂ ಭಾಷೆ, ಸಂಸ್ಕೃತಿ ಮತ್ತು ಉದ್ಯೋಗಾವಕಾಶಗಳಿಗೆ ಸಂಬಂಧಿಸಿದಂತೆ ಮುಂದುವರಿಯುತ್ತ ಬಂದ ಅಸಮತೋಲನದ ಫಲವಾಗಿ ನಮ್ಮ ರಾಷ್ಟ್ರದ ವಿವಿಧ ಭಾಗಗಳಲ್ಲಿ ಪ್ರತ್ಯೇಕವಾದಿ ಚಳವಳಿಗಳು ಹುಟ್ಟತೊಡಗಿದವು. ಇಂತಹ ಚಳವಳಿಗೆ ಬೇರೆ ಕೆಲವು ಕಾರಣಗಳು ಇರಬಹುದು.
ಆದರೆ ವಿವಿಧ ಭಾಷೆಗಳು, ಸಂಸ್ಕೃತಿಗಳು ಮತ್ತು ಸ್ಥಳೀಯರಿಗೆ ಉದ್ಯೋಗಾವಕಾಶಗಳು ಸಮಾನತೆಯ ಆಧಾರದಲ್ಲಿ ತಮ್ಮ ಪಾಲನ್ನು ಪಡೆಯಲು ಸಾಧ್ಯವಾಗದೆ ಇದ್ದದ್ದು ಪ್ರತ್ಯೇಕತಾಭಾವನೆಗೆ ಕಾರಣವಾದ ಒಂದು ಪ್ರಮುಖ ಅಂಶವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ರಾಷ್ಟ್ರೀಯ ಸಮಗ್ರತೆಗೆ ಪೂರಕವಾಗುವಂತೆ ಪ್ರಾದೇಶಿಕ ಅಗತ್ಯಗಳನ್ನು ಪೂರೈಸುವ ರಾಷ್ಟ್ರೀಯ ನೀತಿಯನ್ನು ರೂಪಿಸಬೇಕಾಗಿದೆ.
ರಾಷ್ಟ್ರೀಯ ನೀತಿಯು ಕೆಳಕಂಡ ಅಂಶಗಳನ್ನು ಒಳಗೊಳ್ಳಬೇಕಾಗುತ್ತದೆ.
೧. ರಾಷ್ಟ್ರದ ಖಾಸಗಿ ಮತ್ತು ಸಾರ್ವಜನಿಕ ಉದ್ದಿಮೆಗಳಲ್ಲಿ ಆಯಾ ರಾಜ್ಯದ ಸ್ಥಳೀಯರಿಗೆ ಸಾಮಾಜಿಕ ಮೀಸಲಾತಿಯನ್ನು ಒಳಗೊಂಡಂತೆ ಆದ್ಯತೆಯ ಮೇಲೆ ಉದ್ಯೋಗ ನೀಡಬೇಕು. ವಿವಿಧ ಬಹುರಾಷ್ಟ್ರೀಯ ಕಂಪನಿಗಳಿಗೂ ಇದು ಅನ್ವಯಿಸುವಂತಾಗಬೇಕು. ವಿವಿಧ ರಾಜ್ಯಗಳಲ್ಲಿರುವ ಕೇಂದ್ರ ಸರ್ಕಾರದ ಕಛೇರಿಗಳಲ್ಲಿ ಕಡೇ ಪಕ್ಷ ‘ಸಿ’ ಮತ್ತು ‘ಡಿ’ ಹುದ್ದೆಗಳನ್ನು ಸಂಪೂರ್ಣವಾಗಿ ಸ್ಥಳೀಯರಿಗೆ ನೀಡಬೇಕು. ಈ ನೀತಿಗೆ ಪೂರಕವಾಗುವಂತೆ ೧೯೬೮ನೇ ಜೂನ್‌ನಲ್ಲಿ ರಾಷ್ಟ್ರೀಯ ಸಮಗ್ರತಾ ಮಂಡಳಿಯು ಮಾಡಿರುವ ಶಿಫಾರಸ್ಸನ್ನು ಉಲ್ಲೇಖಿಸಬಯಸುತ್ತೇನೆ. ಅದು ಹೀಗಿದೆ:
೧೧೧. Regional and Economic Imbalanced and Emloyment Opportunities to the local Population:
“The Committe in this connection takes note of the existence of discontent in the States arising from the inadequate share of the local people in employment opportunities in both private and public sectors. the constitution recognizes one common citienship and it is vital for indian unity that this should be respected and preserved. At the same time, in order that aduate employment opportunities are avaiable to local and they do not suffer from a sense of injustice, where qualified local persons are available from among the people of the state, they should be given major share of the employment and employers should be requested to give effect to this objective, as a matter of policy’’
೨. ನಮ್ಮ ದೇಶದ ಯಾವುದೇ ಭಾಷೆ ಮತ್ತು ಸಂಸ್ಕೃತಿಯನ್ನು ಶ್ರೇಷ್ಠ ಅಥವಾ ಕನಿಷ್ಠ ಎಂದು ಪರಿಭಾವಿಸಬಾರದು. ಕೆಲವು ಭಾಷೆಗಳಿಗೆ ವಿಶೇಷ ಸವಲತ್ತು ನೀಡುವುದರ ಮೂಲಕ ಇತರೆ ಭಾಷೆಗಳನ್ನು ಕಡೆಗಣಿಸಬಾರದು. ಆದ್ದರಿಂದ ನಮ್ಮ ದೇಶದ ಭಾಷೆ ಮತ್ತು ಸಂಸ್ಕೃತಿಗಳೆಲ್ಲ ಸಮಾನವೆಂಬ ನೀತಿಯನ್ನು ಘೋಷಿಸಿ ಆಯಾ ಭಾಷೆ-ಸಂಸ್ಕೃತಿಗಳ ವಿಕಾಸಕ್ಕೆ, ಅಗತ್ಯಕ್ಕನುಗುಣವಾಗಿ, ಸಮಾನತೆಯ ತತ್ವವನ್ನಾಧರಿಸಿ ಸಹಾಯ ಸವಲತ್ತುಗಳನ್ನು ಒದಗಿಸಬೇಕು.
೩. ಯಾವುದೇ ರಾಜ್ಯದಲ್ಲಿರುವ ಕೇಂದ್ರ ಸರ್ಕಾರದ ಕಛೇರಿಗಳಲ್ಲಿ ಹಿಂದಿಗೆ ಕೊಡುವ ಸ್ಥಾನಮಾನವನ್ನೇ ರಾಜ್ಯಭಾಷೆಗೂ ಕೊಡಬೇಕು. ಹಿಂದಿಯ ಅಭಿವೃದ್ಧಿಗಾಗಿ ಸಂವಿಧಾನದಲ್ಲಿ ೩೪೪ ಮತ್ತು ೩೫೧ನೇ ವಿಧಿಯ ಮೂಲಕ ನೀಡಿರುವ ಸವಲತ್ತುಗಳನ್ನು ಎಲ್ಲ ರಾಜ್ಯಭಾಷೆಗೂ ಅನ್ವಯಿಸಬೇಕು. ಅಂದರೆ ಸಂವಿಧಾನದ ಈ ವಿಧಿಗಳ ಪ್ರಕಾರ, ಹಿಂದಿಗೆ ಇರುವಂತೆ ಸಂಸದೀಯ ಸಮಿತಿಯ ರಚನೆ, ಅನುಷ್ಠಾನ, ಪರಿಶೀಲನೆ, ಸವಲತ್ತುಗಳ ಆದ್ಯತೆಗಳು ರಾಜ್ಯಭಾಷೆಗಳಿಗೂ ಲಭ್ಯವಾಗಬೇಕು.
ಆಗ ಈ ದೇಶದ ಎಲ್ಲ ಭಾಷೆಗಳೂ ಸಮಾನವೆಂದು ಪರಿಗಣಿಸಿದಂತಾಗುತ್ತದೆ.
೪. ಪ್ರಾಥಮಿಕ ಶಿಕ್ಷಣದಲ್ಲಿ ಆಯಾ ರಾಜ್ಯಭಾಷೆ ಅಥವಾ ಮಕ್ಕಳ ಮಾತೃಭಾಷೆಯೇ ಮಾಧ್ಯಮವಾಗಿರಬೇಕೆಂಬ ಅಂಶವನ್ನು ಸಂವಿಧಾನದಲ್ಲೇ ಅಳವಡಿಸಬೇಕು. ಸಂವಿಧಾನದ ೩೫೦ ಎ ಮತ್ತು ೩೫೦ ಬಿ ವಿಧಿಗಳ ಮೂಲಕ ಎಲ್ಲ ರಾಜ್ಯಗಳ ಭಾಷಾ ಅಲ್ಪಸಂಖ್ಯಾತರಿಗೆ ಪ್ರಾಥಮಿಕ ಶಿಕ್ಷಣದಲ್ಲಿ ನೀಡಿರುವ ರಕ್ಷಣೆಯನ್ನು ಭಾಷಾ ಬಹುಸಂಖ್ಯಾತರ ಮಾತೃಭಾಷೆಗಳಿಗೆ ವಿಸ್ತರಿಸಿ ಒಟ್ಟಾರೆ ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷಾ ಶಿಕ್ಷಣವನ್ನು ಕಡ್ಡಾಯಗೊಳಿಸಿದರೆ ಶೈಕ್ಷಣಿಕ ಸಮಾನತೆಯ ಮುಖ್ಯಾಂಶವೊಂದನ್ನು ಪರಿಪಾಲಿಸಿದಂತಾಗುತ್ತದೆ. ಶ್ರೀಮಂತರಿಗೊಂದು ಶಿಕ್ಷಣ, ಬಡವರಿಗೊಂದು ಶಿಕ್ಷಣ-ಎಂಬ ತಾರತಮ್ಯವನ್ನು ನಿವಾರಿಸಲು ಇದೊಂದು ಸಾಧನವಾಗುತ್ತದೆ.
ಹೀಗೆ ಭಾಷೆ, ಸಂಸ್ಕೃತಿ ಮತ್ತು ಉದ್ಯೋಗಾವಕಾಶಗಳೀಗೆ ಸಂಬಂಧಿಸಿದಂತೆ ಸಮಾನತೆಯ ರಾಷ್ಟ್ರೀಯ ನೀತಿಯೊಂದು ರೂಪುಗೊಳ್ಳಬೇಕು. ನಮ್ಮ ಭಾಷಾ ಚಳವಳಿಗಳಿಗೆ ಇದು ಆದ್ಯತೆಯ ಅಂಶವಾಗಬೇಕು.
- ಪ್ರೊ.ಬರಗೂರು ರಾಮಚಂದ್ರಪ್ಪ

No comments:

Post a Comment

ಹಿಂದಿನ ಬರೆಹಗಳು