Thursday, May 6, 2010

ಪೂರ್ಣಚಂದ್ರ ತೇಜಸ್ವಿ



ತೇಜಸ್ವಿ, ಅವರ ಕಾಲೇಜು ದಿನಗಳಿಂದಲೂ ನನಗೆ ಪರಿಚಯ, ನಾನಾಗ ಶಿವಮೊಗ್ಗದಲ್ಲಿ ಮೇಷ್ಟ್ರು, ವಯಸ್ಸು ಇಪ್ಪತ್ತಮೂರೋ, ಇಪ್ಪತ್ತಾನಾಲ್ಕೋ ಇರಬೇಕು. ಕಾಟನ್ ಸೂಟ್ ಹಾಕ್ಕೊಂಡು ಶೋಕಿಯಿಂದ ನಾನು ಕಾಲೇಜಿಗೆ ಹೋಗ್ತಿದ್ದೆ, ಮೈಸೂರಿನ ಶಿಕ್ಷಣ ಒಗ್ಗದೆ (ಅಥವಾ ಅದಕ್ಕೆ ಬಗ್ಗದೆ) ಶಿವಮೊಗ್ಗ ಕಾಲೇಜು ಸೇರಿದ ತೇಜಸ್ವಿಗೆ ಹದಿನೇಳೋ ಹದಿನೆಂಟೋ ವರ್ಷ ವಯಸ್ಸು. ಒಂದು ಸಲ ತೇಜಸ್ವಿ ತನ್ನನ್ನು ಹೊರಗಡೆ ಕರೆದು, ಒಂದು ಮೂಲೆಯಲ್ಲಿ ನಿಲ್ಲಿಸಿ, ‘ಸಾರ್ ಒಂದು ಪ್ರಶ್ನೆ ಕೇಳ್ಬೇಕು’ ಅಂದರು. ‘ಏನು?’ ಅಂತ ಕೇಳಿದ್ದಕ್ಕೆ ‘ನೀವು ಹೇರ್‌ಕಟ್ ಮಾಡ್ಸೋದಕ್ಕೆ ಪ್ರತೀ ತಿಂಗಳು ಬೆಂಗಳೂರಿಗೆ ಹೋಗ್ತಿರಂತೆ, ನಿಜವಾ?’ ಅಂತ ಹುಸಿ ಕೋಪದಲ್ಲೂ ಹಾಸ್ಯದಲ್ಲೂ ಕೇಳಿದ್ದರು. ನಾನು ಖುಷಿ ಪಟ್ಟ್ಟು ನಕ್ಕಿದ್ದೆ. ನನ್ನನ್ನು ಇಷ್ಟಪಟ್ಟಿದ್ದ ತೇಜಸ್ವಿಗೆ ನಾನೊಬ್ಬ ಖಯಾಲಿ ಮನುಷ್ಯ ಎಂದು ಯಾರೋ ತುಂಟರು ಹೇಳಿದ್ದು ಕೇಳಿ ಸಿಟ್ಟು ಬಂದಿತ್ತು; ಅನುಮಾನವೂ ಹುಟ್ಟಿತ್ತು. ಆವತ್ತಿನಿಂದಲೇ ತೇಜಸ್ವಿ ನನ್ನ ಮನಸ್ಸಿನ ಜಗತ್ತಿಗೆ ಹತ್ತಿರವಾಗಿದ್ದು, ಕ್ರಮೇಣ ನಾನು ಯಾವುದೋ ಪುಸ್ತಕ ಓದಿ ಎಂದು ಅಂತ ತೇಜಸ್ವಿಗೆ ಹೇಳಿದರೆ, ಅವರದನ್ನ ಓದಿ ‘ಸಾರ್, ಮಹಾ ಬೋರ್!’ ಅಂತ ಹೇಳುತ್ತ ಇದ್ದರು, ಮುಜುಗರವಿಲ್ಲದೆ. ತಮ್ಮ ಭಾವಾನಾಲೋಕದಲ್ಲಿ ತೇಜಸ್ವಿ ಯಾವತ್ತೂ ಕೃತಕರಾಗಲಿಲ್ಲ. ಒಬ್ಬ ಲೇಖಕನಾದವನು ಆಕರ್ಷಕವಾಗಲೆಂದೋ, ಉದಾತ್ತವಾಗಿ ತೋರಲೆಂದೋ ತನ್ನ ಭಾವನೆಗಳಲ್ಲಿ ಸುಳ್ಳನಾಗಬಾರದು. ಹಾಗಾದಾಗ ಆತನ ಬರವಣಿಗೆಯ ಶೈಲಿಯೂ ಕೃತಕ ಅನಿಸುತ್ತೆ. ತೇಜಸ್ವಿ ತಮ್ಮ ಭಾವನೆಗಳನ್ನು ತನ್ನೊಳಗೇ ತಿಳಿಯುವುದರಲ್ಲೂ, ವ್ಯಕ್ತಪಡಿಸುವುದರಲ್ಲೂ ಅಪ್ಪಟನಾಗಿದ್ದ ಮನುಷ್ಯ. ಅವರ ವಿದ್ಯಾರ್ಥಿ ದಿನಗಳಿಂದ ಅವರು ಸಾಯುವ ತನಕವೂ.
ಅವರ ಜೊತೆಗೆ ಯಾವಾಗಲೂ ಒಂದಿಬ್ಬರು ಸ್ನೇಹಿತರು ಇರುತ್ತ ಇದ್ದರು. ಒಬ್ಬರು ಕಡಿದಾಳ್ ಶಾಮಣ್ಣ, ಇನ್ನೊಬ್ಬರು ಶ್ಯಾಂಸುಂದರ್ ಅಂತ. ಸಂಗೀತವೆಂದರೆ ಹುಚ್ಚರಾಗುವ ಕಡಿದಾಳ್ ಶಾಮಣ್ಣ, ತಮ್ಮ ಹಲ್ಲುಗಳನ್ನೇ ದಂತವಾದ್ಯ ಮಾಡಿ ನಮ್ಮನ್ನು ನಗಿಸಿದರೆ, ಶ್ಯಾಂಸುಂದರ್ ಅಂತೂ ಬಾಯಾರಿದಾಗ ಒಂದು ಕೊಡ ನೀರು ಕುಡಿಯೋ ಮನುಷ್ಯ. ತೇಜಸ್ವಿ ಎಷ್ಟು ವಿಚಿತ್ರ ವ್ಯಕ್ತಿಯೋ ಅವರ ಒಡನಾಡಿಗಳು ಅಷ್ಟೇ ವಿಚಿತ್ರ ವ್ಯಕ್ತಿಗಳು. ತಮ್ಮ ಸ್ನೇಹಿತರನ್ನು ಕಂಡು ನಗುವಂತೆಯೇ ತಮ್ಮ ಪಾತ್ರಗಳನ್ನು ಕಂಡೂ ನಗುವ ಮನುಷ್ಯ ತೇಜಸ್ವಿ.

ಮೈಸೂರಿಗೆ ಬಂದ ನಂತರ-ನಾನಾಗ ಕ್ರಿಶ್ಚಿಯನ್ ಹುಡುಗಿಯನ್ನು ಮದುವೆಯಾಗಿದ್ದೆ-ನನಗೊಂದು ಬಾಡಿಗೆ ಮನೆ ಬೇಕಾಗಿತ್ತು. ಅದೂ ಕಡಿಮೆ ಬೆಲೆಗೆ, ಮಡಿವಂತರು ಇಲ್ಲದ ಜಾಗದಲ್ಲಿ. ತೇಜಸ್ವಿ ತಮ್ಮ ಸಂಬಂಧಿಕರ ಔಟ್‌ಹೌಸ್ ಒಂದರಲ್ಲಿ ಮನೆ ಮಾಡಿಸಿಕೊಟ್ಟರು. ಅಲ್ಲಿಗೆ ಕೆಲವೊಮ್ಮೆ ತೇಜಸ್ವಿ ಬೆಳಿಗ್ಗೆ ಬಂದರೆ ಸಾಯಂಕಾಲದ ತನಕ ಹರಟುತ್ತಿದ್ದೆವು. ಹಾಗೇ ಬೈಸಿಕಲ್ ಮೇಲೆ ಡಬಲ್ ರೈಡ್ ಮಾಡಿಕೊಂಡು ಕಾಫಿ ಹೌಸ್‌ಗೆ ಹೋಗ್ತಿದ್ವಿ. ಈ ಬೈಸಿಕಲ್ ಪ್ರಯಾಣದಲ್ಲೇ ಒಮ್ಮೆ ಅವರು ಸಾವನ್ನು ಎದುರಿಸಿ ಬಂದಿದ್ದರು. ರಾತ್ರಿ ಹೊತ್ತು ಎದುರಿನಿಂದ ಒಂದೇ ಕಣ್ಣು ಮಾಡಿಕೊಂಡು ಒಂದು ಲಾರಿ ಬರುತ್ತ ಇತ್ತು. ಒಂದೇ ಲೈಟ್ ಇರೋದ್ರಿಂದ ತೇಜಸ್ವಿ ಅದು ಬೈಕ್ ಇರಬಹುದು ಅಂದುಕೊಂಡು ಹೋಗ್ತಾ ಇದ್ರು. ಹತ್ತಿರ ಬಂದಾಗ ನೋಡಿದ್ರೆ ಲಾರಿ. ಥಟ್ಟನೆ ಅದು ಹೇಗೋ ಬೈಸಿಕಲ್ ತಿರುಗಿಸಿ ಪಾರಾಗಿ ಬಂದು ಬುದುಕುಳಿದ ವಿಸ್ಮಯವನ್ನು ನಮ್ಮೊಡನೆ ಹಂಚಿಕೊಂಡಿದ್ದರು. ಅವರು ಸತ್ತುಹೋದರು ಅಂತ ತಿಳಿದಾಗ ನನಗೆ ಮೊದಲು ನೆನಪಿಗೆ ಬಂದಿದ್ದು ಈ ಘಟನೆ.

ತೇಜಸ್ವಿ ಎಲ್ಲದಕ್ಕೂ ಸ್ಪಂದಿಸುತ್ತಿದ್ದರು, ನನಗೆ ಲೋಹಿಯಾ ಓದುವ ಹುಚ್ಚು ಹಿಡಿಯಿತು, ಅವರಿಗೂ ಹಿಡಿಯಿತು. ಹಾಗೆಯೇ ಪರಮಹಂಸರ ದಿನಚರಿಗಳನ್ನು ಕಥಿಸುವ ಪುಸ್ತಕ. ನನಗೆ ಕುವೆಂಪು ಕಾದಂಬರಿಗಳೆಂದರೆ ಇಷ್ಟ. ಅವರ ಕಾವ್ಯದ ತಾತ್ವಿಕತೆಯಲ್ಲಿ ನನ್ನಂಥವರಿಗೆ ಆಗ ಅಷ್ಟು ಶ್ರದ್ಧೆ ಇರಲಿಲ್ಲ. ತೇಜಸ್ವಿ ನವ್ಯರೆಂದು ಗುರುತಿಸಿಕೊಂಡವರ ಜೊತೆ ಬೆಳೆದರು. ಅವರು ತಂದೆಯ ಸುತ್ತ ಇದ್ದ ಅಧ್ಯಾತ್ಮಿಕರ ಪ್ರಪಂಚದಿಂದ ತೀರಾ ಪ್ರಭಾವಿತರಾಗಿರಲಿಲ್ಲ. ತಂದೆಯನ್ನು ಹತ್ತಿರದಿಂದ ಬಲ್ಲವರಾದ್ದರಿಂದ ಅವರ ತಂದೆಯ ನಿಜವಾದ ಪ್ರತಿಭೆ ಅವರಿಗೆ ಗೊತ್ತಿತ್ತು. ಅವರ ಅಣ್ಣನ ನೆನಪಿನಲ್ಲಿ ಇದನ್ನು ನಾವು ಗಮನಿಸಬಹುದು.

ತೇಜಸ್ವಿ ಅವರ ‘ಲಿಂಗ ಬಂದ’ ಕಥೆ ಪ್ರಕಟವಾದಾಗ ಅಡಿಗರು ನನ್ನನ್ನು ಕರೆದು ‘ಅನಂತಮೂರ್ತಿ, ನೋಡಿದ್ರಾ? ತೇಜಸ್ವಿ ಇದ್ದಾನಲ್ಲ, ಅದ್ಭುತ ಕಥೆ ಬರ‍್ದಿದ್ದಾನೆ. ಆತ ಸಾಹಿತ್ಯ ಪ್ರಪಂಚಕ್ಕೆ ಹೊಸ ಲೋಕವನ್ನೆ ತರ‍್ತಾನೆ ನೋಡು’ ಅಂದಿದ್ರು.

ಕುವೆಂಪು ಅವರು ವಿಶ್ವವಿದ್ಯಾಲಯದ ಕುಲಪತಿ ಆದಾಗ ತೇಜಸ್ವಿ ವಿದ್ಯಾರ್ಥಿಯಾಗಿದ್ದರು. ಆದರೆ ಅಧಿಕಾರದಲ್ಲಿ ಇದ್ದ ಅಪ್ಪನಿಗೂ ತನಗೂ ಏನೂ ಸಂಬಂಧವಿಲ್ಲ ಎನ್ನುವ ಹಾಗೆ ಸ್ವತಂತ್ರವಾಗಿ ಇದ್ದರು. ವೈಸ್ ಚಾನ್ಸಲರ್‌ಗೆ ಅಂತ ಮೈಸೂರಿನಲ್ಲಿ ಕೊಟ್ಟಿದ್ದ ಮನೆಯಲ್ಲಿ ಕುವೆಂಪು ಇರುತ್ತಲೇ ಇರಲಿಲ್ಲ. ತಮ್ಮ ಸ್ವಂತದ ಮನೆಯಲ್ಲೇ ಇರುತ್ತಿದ್ದರು. ಹಾಗಾಗಿ ಸದಾ ದೊಗಲೆ ಪೈಜಾಮ, ಶರ್ಟು ಹಾಕಿಕೊಳ್ಳುತ್ತಿದ್ದ ತೇಜಸ್ವಿ ಮತ್ತು ಅವರ ಸ್ನೇಹಿತರು ಆ ಮನೆಯಲ್ಲಿ ಬಟ್ಟೆಗಿಟ್ಟೆ ಒಣಗಿ ಹಾಕಿ, ಮಲಗಿ, ಓದಿಕೊಂಡು, ಹರಟೆ ಹೊಡೆಯುತ್ತಾ, ಸಂಗೀತ ಕಲಿಯುತ್ತಾ ಇರುತ್ತಿದ್ದರು.

ಒಳ್ಳೆಯ ಲೇಖಕನಾಗಲು ಇರಬೇಕಾದ ಗುಣಗಳೆಂದರೆ ಜಾತಿ ಮೋಹದಿಂದ, ವರ್ಗ ಮೋಹದಿಂದ, ಅಧಿಕಾರ ಮೋಹದಿಂದ ಮುಕ್ತವಾಗಿರುವುದು. ತೇಜಸ್ವಿ ಇವೆಲ್ಲವುಗಳಿಂದಲೂ ಮುಕ್ತರಾಗಿದ್ದರು. ತೇಜಸ್ವಿ ಆಗಲೇ ಕವಿತೆಗಳನ್ನು ಬರೆಯಲು ಆರಂಭಿಸಿದ್ದರು. ಅವರು ಏನು ಬರೆದರೂ ನಾವು ಓದುತ್ತ ಇದ್ದೆವು. ಅವರೂ ನಾವು ಬರೆದದ್ದನ್ನು ಓದುತ್ತಿದ್ದರು. ನಾನು ‘ಕಾರ್ತಿಕ’ ಕತೆ ಬರೆದಾಗ ಕತೆ ಅಂದರೆ ಹೇಗಿರುತ್ತೆ ಅನ್ನೋ ದೃಷ್ಟಿಯನ್ನೇ ಇದು ಬದಲು ಮಾಡುತ್ತೆ ಅಂತ ಅವರು ನನಗೆ ಹೇಳಿದ್ದರು. ನನಗಿಂತ ಕಿರಿಯರು ಅವರು. ಕೆಲವೊಮ್ಮೆ ನಮ್ಮನ್ನು ಬೆಳೆಸಿದವರಲ್ಲಿ ನಮಗಿಂತ ಕಿರಿಯರೂ ಇರುತ್ತಾರೆ. ಹಾಗಿರುವುದಕ್ಕೆ ಸಾಧ್ಯವಿದ್ದ ಕಾಲ ನಮ್ಮದು. ನನಗೂ ತೇಜಸ್ವಿಗೂ ನಡುವಿನ ಭಿನ್ನಾಭಿಪ್ರಾಯಗಳು, ವಾಗ್ವಾದಗಳು ಅನೇಕ. ಇವೆಲ್ಲವೂ ಕಲಿಯುವ ಕಲಿಸುವ ಸಂಗತಿಗಳಾದುವೇ ಹೊರತು ನಮ್ಮಲ್ಲಿ ಕಹಿ ಹುಟ್ಟಿಸಲಿಲ್ಲ.

ಆಮೇಲೆ ಅವರ ಕಥಾ ಸಂಕಲನ ಹೊರಬಂತು. ನನ್ನ ಪ್ರಕಾರ, ನವ್ಯದ ಅತಿರೇಕದಿಂದ ಕನ್ನಡ ಸಾಹಿತ್ಯವನ್ನು ಬಿಡುಗಡೆ ಮಾಡಿದವರು ತೇಜಸ್ವಿ. ನವ್ಯದ ಸಾಂಕೇತಿಕತೆ ಮತ್ತು ಒಳಮನಸ್ಸಿನ ಪದರುಗಳನ್ನು ಅದು ಬಿಚ್ಚುವ ಕ್ರಮ- ಕ್ರಮೇಣ ಸ್ವಾನುರಕ್ತಿಯ ದಿಕ್ಕಿಗೆ ಹೋಗುತ್ತ ಇರಬಹುದು ಅನ್ನುವ ಅವರ ಆಗಿನ ಭಾವನೆ ಆರೋಗ್ಯಕರ ಭಾವನೆ ಅಂತ ಈಗ ನನಗೆ ಅನ್ನಿಸುತ್ತಿದೆ.
ಆ ಕಾಲದ ಬರವಣಿಗೆಗೆ ಒಂದು ಹೊಸ ದಿಕ್ಕನ್ನು ನಮ್ಮ ನಡುವೆ ಕೊಟ್ಟವರು ತೇಜಸ್ವಿ. ಆ ದಿನಗಳಲ್ಲಿ ನನಗೆ ಮುಖ್ಯವಾದ ಬರಹಗಾರರು ಅಂತ ಅನಿಸುತ್ತಿದ್ದದ್ದು ಲಂಕೇಶ್ ಮತ್ತು ತೇಜಸ್ವಿ. ತೇಜಸ್ವಿ ಒಂದು ನಾಟಕವನ್ನೂ ಬರೆದರು. ‘ವ್ಯಕ್ತಿ ವಿಶಿಷ್ಟ ಸಿದ್ಧಾಂತ’ ಅಂತ ಒಂದು ಪುಸ್ತಕವನ್ನೂ ಬರೆದರು. ಒಟ್ಟಿನಲ್ಲಿ ಅವರು ಹಿಂದೂ ಮತೀಯತೆಯನ್ನು ತಿರಸ್ಕರಿಸಿದರು. ನವೋದಯದ ಕೆಲವರ ಅಪಕ್ವ ಅಧ್ಯಾತ್ಮಿಕತೆಯಿಂದ ದೂರವಾದರು.

ಪರಮಹಂಸರಿಂದ ಪ್ರಭಾವಿತರಾದವರಲ್ಲಿ ನನಗೆ ಕಂಡಂತೆ ಹೆಚ್ಚಿನವರು ಮತೀಯತೆಯಿಂದ ಮುಕ್ತರಾಗಿರುತ್ತಾರೆ. ಕುವೆಂಪು ಮತೀಯತೆಯಿಂದ ಮುಕ್ತರಾಗಿದ್ದರು. ತೇಜಸ್ವಿ ಅದರಿಂದ ಮುಕ್ತರಾದದ್ದು ಮಾತ್ರವಲ್ಲದೆ ಸತತ ಆತ್ಮಾವಲೋಕನದ ನವ್ಯದ ಗೀಳನ್ನು ಬಿಟ್ಟರು. ಬಿಡುವುದಕ್ಕಿಂತ ಮುಂಚೆ ಅದೇ ರೀತಿಯ ಒಂದು ಕಥೆಯನ್ನೂ ಬರೆದಿದ್ದರು. ನವ್ಯದ ಹೊಟ್ಟೆಯೊಳಗಿಂದಲೇ ಬಂದಿರುವಂಥ ವಿರೋಧ ಅದು. ಅದರ ಒಳಗಿನಿಂದ ಬಂದಿರೋದರಿಂದಲೇ ಅದು ಸತ್ವಯುತವಾಗಿತ್ತು. ತೇಜಸ್ವಿ ಬರೆದಿದ್ದರಲ್ಲಿ ಹೊರಗಿನ ದಟ್ಟವಾದ ಪ್ರಪಂಚಕ್ಕೆ ಲೇಖಕನ ಹಂಗಿಲ್ಲದ ಅಭಿವ್ಯಕ್ತಿ ಸಿಕ್ಕಿತ್ತು. ಸೂಕ್ಷ್ಮ ವಿವರಗಳಲ್ಲಿ ಆ ಪ್ರಪಂಚವನ್ನು ಅಡಗಿ ಕಾಣುವಷ್ಟಕ್ಕೇ ಅಲ್ಲಿ ಲೇಖಕ ಇರುವುದು. ಅದು ಏಕಕಾಲಕ್ಕೆ ವಾಸ್ತವಿಕವೂ, ಗ್ರಹಿಕೆಯ ವಿಶಿಷ್ಟತೆಯಿಂದಾಗಿ ಸಾಂಕೇತಿಕವೂ ಆಗಿರುತ್ತಿತ್ತು. ಇನ್ನೊಂದು ಮಹತ್ವದ ವಿಚಾರವೆಂದರೆ ಅವರು ಬರವಣಿಗೆಯನ್ನು ಸಡಿಲಗೊಳಿಸಿದ್ದು. ಹಾಗೆ ಸಡಿಲಗೊಳಿಸಿದ್ದರಿಂದ ಅದು ಹೆಚ್ಚು ವಿಷಯಗಳನ್ನು ಒಳಗೊಳ್ಳುವ ಸಾಧ್ಯತೆ ಹೆಚ್ಚಿತ್ತು. ಇದನ್ನು ಒಂದು ರೀತಿಯಲ್ಲಿ ಆರಾಮಾಗಿ ಬರೆಯುವುದು ಎನ್ನಬಹುದು. ಆರಾಂ ಶೈಲಿಯಲ್ಲಿ ಬರೆದಿದ್ದರಿಂದ ಅದಕ್ಕೆ ಓದಿಸಿಕೊಂಡು ಹೋಗುವ ಗುಣವೂ ಇತ್ತು. ಮತ್ತು ಅದು ಹೊರಪ್ರಪಂಚವನ್ನು ವಿಸ್ಮಯದಿಂದ, ಹಲವೊಮ್ಮೆ ವಿನೋದದಿಂದ ನೋಡುವ ಶಕ್ತಿಯನ್ನೂ ಪಡೆದುಕೊಂಡಿತು.

ತೇಜಸ್ವಿ ಅವರು ಸಣ್ಣ ಕತೆಯನ್ನು ನಿರಾಳಗೊಳಿಸಿದರು. ಆದ್ದರಿಂದ ಅದು ಕೇವಲ ವಿಲಕ್ಷಣವಾದ್ದನ್ನು ವಿಲಕ್ಷಣವಾಗಿ ಮಾತ್ರ ಹೇಳದೆ ನಮ್ಮ ಕಾಲದ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಕಾಣುವಂತೆ ಮಾಡಿತು. ‘ಅಬಚೂರಿನ ಪೋಸ್ಟಾಫೀಸು’ ಕತೆ ಅಂತಹ ಹಲವಾರು ಕತೆಗಳಿಗೆ ಒಂದು ಮಾದರಿ.

ಹಳ್ಳಿಗಳಲ್ಲಿ ಪೋಸ್ಟಾಫೀಸು ಬರೋದು ಸೆಂಟ್ರಲ್ ಗವರ್ನಮೆಂಟ್ ಹಳ್ಳಿಯಲ್ಲಿ ಇದ್ದ ಹಾಗೆ. ಅವರ ಕತೆಗಳಲ್ಲೇ ನನಗೆ ಅತ್ಯಂತ ಪ್ರಿಯವಾದ್ದು ‘ಅವನತಿ’. ಆ ಕತೆಯಲ್ಲಿ ಒಬ್ಬಳು ಪರಮ ಸುಂದರಿ ಬರುತ್ತಾಳೆ. ಆದರೆ ಆ ಹಳ್ಳಿಗರ ಕಣ್ಣಿಗೆ ಅವಳ ಮೊಲೆಗಳು ಕಣ್ಣಿನ ರೋಗವನ್ನು ಗುಣಮಾಡುವಂಥ ಹಾಲನ್ನು ಹೊಂದಿರುವ ಮೊಲೆಗಳು ಮಾತ್ರ! ಇಲ್ಲೊಬ್ಬ ಕಲಾವಿದ ಬರ‍್ತಾನೆ. ಅವನು ಸಣ್ಣಪುಟ್ಟ ರಿಪೇರಿ ಕೆಲಸ ಮಾಡುವ ಬಡಗಿಯಾಗಿರುತ್ತಾನೆ. ನನ್ನ ಪ್ರಕಾರ, ಈ ಕತೆಗೆ ಅಖಿಲ ಭಾರತೀಯ ಮಹತ್ವವಿದೆ. ಆಲ್ ಇಂಡಿಯಾ ಅಂಥಾಲಜಿಯಲ್ಲಿ ‘ಅವನತಿ’ ನಮ್ಮ ಕಾಲದ ಮುಖ್ಯವಾದ ಕತೆ ಆಗಬಹುದು.

ತೇಜಸ್ವಿ ಅವರ ಕಾದಂಬರಿಗಳು ಕೂಡ ಹೀಗೇ ಸುಲಭವಾಗಿ ಓದುವಂತಿರುತ್ತವೆ. ಆದರೆ ಅವರು ಹೇಳಿದ್ದರಲ್ಲಿ ಗಾಢವಾದ ಗುಪ್ತವಾದ ಒಳಪಠ್ಯಗಳಿರುತ್ತವೆ. ನೇರ ಸಾಗುವಂತೆ ಕಾಣುವ ಕಥನದಲ್ಲಿ ಹೀಗೆ ಇಣುಕುವ ಹಲವು ಒಳಪಠ್ಯಗಳು ಇರುವುದರಿಂದಲೇ ಅವರ ಬರವಣಿಗೆಗೆ ಒಂದು ರೀತಿಯ ಗಾಢತೆ, ಗೌಪ್ಯತೆ ಎರಡೂ ಒದಗುತ್ತವೆ.

ಅವರ ಜೊತೆಗೆ ನನ್ನದೊಂದು ತಕರಾರಿತ್ತು. ಅವರ ‘ಕರ್ವಾಲೋ’ ಕಾದಂಬರಿಯಲ್ಲಿ ಒಂದು ಹಾರುವ ಓತಿ ಬರುತ್ತದೆ. ಇದು ಸೃಷ್ಟಿಯ ವಿಕಾಸ ಪಥದಲ್ಲಿ ಇರುವ ಒಂದು ಅದ್ಭುತ ಜೀವಿ. ಅದರ ಜ್ಞಾನ ಇರೋದು ಆ ಜ್ಞಾನದ ಬೆಲೆ ಏನೆಂದರೆ ಏನೂ ತಿಳಿಯದ ಒಬ್ಬ ಹಳ್ಳಿಗನಲ್ಲಿ. ಆದರೆ ಅದನ್ನು ಬಳಸಿಕೊಳ್ಳುವವನು ಒಬ್ಬ ಸೈಂಟಿಸ್ಟ್. ತೇಜಸ್ವಿಗೆ ಸೈನ್ಸ್ ಬಗ್ಗೆ ಎಂಥಾ ನಂಬಿಕೆ ಅಂದರೆ ಅದು ಜನಸಾಮಾನ್ಯನಲ್ಲಿರುವ ಎಲ್ಲಾ ಜ್ಞಾನವನ್ನು ದೋಚುತ್ತೆ ಎಂಬ ಅಪಾಯದ ಕಡೆ ಅವರ ಅರಿವಿಲ್ಲ. ಅಮೆರಿಕಾದವರು ಎಲ್ಲವನ್ನೂ ಗ್ಲೋಬಲೈಸ್ ಮಾಡಿ ದೋಚಿಕೊಂಡು ಹೋದ ಹಾಗೆ ಇದು ಎಂದು ಕಥೆಯನ್ನು ಮೆಚ್ಚಿದ ನನ್ನ ತಕರಾರು. ನನ್ನ ತಕರಾರು ತೇಜಸ್ವಿಗೆ ಗೊತ್ತಿತ್ತು. ಆದರೆ ಬರೆದು ಮುಗಿಸಿಯಾದ ಮೇಲೆ ತಮ್ಮ ಕೃತಿಗಳನ್ನು ತೇಜಸ್ವಿ ಸಮರ್ಥಿಸಿಕೊಳ್ಳುವವರಲ್ಲ.

ತೇಜಸ್ವಿ ಆನೆಯ ಹಾಗೆ ತಮ್ಮ ದಾರಿಯಲ್ಲಿ ತಮಗೆ ಬೇಕಾದ ಹಾಗೆ ನಡೆದುಕೊಂಡು ಹೋಗುವವರಾಗಿ ಇದ್ದರು. ಅದೇ ಅವರ ವಿಶೇಷ. ವಿಮರ್ಶೆ, ಹೊಗಳಿಕೆ, ತೆಗಳಿಕೆ ಯಾವುದಕ್ಕೂ ಒಳಗಾಗದೆ ತಮ್ಮದೇ ಆದ ವಲಯದಲ್ಲಿ ಇದ್ದವರು ಅವರು. ಸಾಹಿತಿಗಳು ಸಾಹಿತಿಗಳ ಜೊತೆ ಮಾತ್ರ ಇರೋದು ಬಹಳ ಅಪಾಯಕಾರಿ ಎಂಬುದನ್ನು ತೇಜಸ್ವಿ ಚೆನ್ನಾಗಿ ಬಲ್ಲರು. ಇದರಲ್ಲವರು ಪ್ರಾಯಶಃ ತಮ್ಮ ತಂದೆಯಿಂದ ಏನನ್ನು ಕಲಿತರೋ, ಕಾರಂತರಿಂದಲೂ ಕಲಿತರು. ಕಾರಂತರಿಗೂ ಅವರ ಮೇಲೆ ಪ್ರೀತಿಯಿತ್ತು. ಕಾರಂತರು ಅವರ ಮನೆಗೂ ಬಂದು ಹೋಗಿದ್ದರು. ನಮ್ಮ ಲೇಖಕರ ಮಧ್ಯೆ ತೇಜಸ್ವಿ ವಿಶಿಷ್ಟವಾಗಿ ಕಾಣಿಸೋದು ಅವರ ‘ಅಡ್ವೆಂಚರ್’ ಪ್ರವೃತ್ತಿಯಿಂದ. ಅವರು ಸಿತಾರ್ ನುಡಿಸಲು ಕಲಿಯತೊಡಗಿದರು, ಫೋಟೋಗ್ರಫಿ, ಚಿತ್ರಕಲೆಯಲ್ಲಿ ಅವರಿಗೆ ಆಸಕ್ತಿಯಿತ್ತು. ಹಕ್ಕಿಯ ಚಿತ್ರವನ್ನು ಸರಿಯಾದ ಆಂಗಲ್‌ನಲ್ಲಿ ತೆಗೆಯಲಿಕ್ಕಾಗಿ ಅವರು ದಿನಗಟ್ಟಲೆ ಧ್ಯಾನಸ್ಥರಾಗುತ್ತಿದ್ದರು. ಹಾಗೆ ಚಿತ್ರ ತೆಗೆದ ನಂತರ ಅವುಗಳಿಗೆ ಹೆಸರನ್ನೂ ಹುಡುಕುತ್ತಿದ್ದರು.

ಇವತ್ತು ಎಲ್ಲ ವಯಸ್ಸಿನವರೂ ಓದಬಲ್ಲ ಪುಸ್ತಕ ಬರೆದ ನನ್ನ ಸಮಕಾಲೀನರು ತೇಜಸ್ವಿ. ಲಂಕೇಶರ ಬರವಣಿಗೆಯಲ್ಲಿ ಲಂಕೇಶರೂ ಇರುತ್ತಾರೆ. ಆದರೆ ತೇಜಸ್ವಿ ಬರವಣಿಗೆಯಲ್ಲಿ ತೇಜಸ್ವಿ ಕೇವಲ ವಿಸ್ಮಯದ ಕಣ್ಣಾಗಿರುತ್ತಾರೆ; ಪಾತ್ರವಾಗಿರೋದಿಲ್ಲ. ಎಲ್ಲವನ್ನೂ ವಿಸ್ಮಯದಿಂದ ನೋಡುವ ಕಣ್ಣಾಗಿ ಇರುತ್ತಾರೆ. ಬಹುಶಃ ಅವರಿಗೆ ಈ ಗುಣ ಬಂದಿರೋದು ಅವರ ಫೋಟೋಗ್ರಫಿಯಿಂದ ಅಂತ ನನ್ನ ಅನಿಸಿಕೆ. ದಾರಿಗಳು ಇಲ್ಲದ ಕಾಡಿನಲ್ಲಿ ಓಡಾಡಿದ ಅವರು ಯಾವ ದಾರಿಗಳನ್ನೂ ನಿರೀಕ್ಷಿಸದೆ ಸಾಹಿತ್ಯದ ಒಳಗೆ ಓಡಾಡಿದರು; ತಾವು ನಡೆದದ್ದನ್ನೇ ದಾರಿ ಮಾಡಿದರು. ಹಾಗಾಗಿಯೇ ಅಕಸ್ಮಾತ್ ಆಗಿ ಕಾಣಬಲ್ಲದ್ದನ್ನೆಲ್ಲ ಅವರು ಕಂಡರು. ಉದ್ದೇಶಪೂರ್ವಕವಾಗಿ ಏನನ್ನೋ ಹೇಳಲೇಬೇಕೆಂದು ಬರೆಯುವ ಸಾಹಿತ್ಯ ದೊಡ್ಡ ಕೃತಿ ಆಗೋದಿಲ್ಲ. ಆದರೆ ಬರವಣಿಗೆಯ ಪ್ರಕ್ರಿಯೆಯಲ್ಲೇ ತನ್ನ ಉದ್ದೇಶವನ್ನು ಹುಟ್ಟಿಸಿಕೊಳ್ಳುತ್ತಾ ಹೋಗುವ ಬರವಣಿಗೆ ತೇಜಸ್ವಿಯವರದ್ದು. ಅವರ ‘ಕಿರಿಗೂರಿನ ಗಯ್ಯಾಳಿ’ಯಂಥ ಕತೆಗಳಲ್ಲಂತೂ ಇಷ್ಟರವರೆಗೂ ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಬರದೇ ಇರುವ ಪಾತ್ರಗಳೆಲ್ಲ ಇವೆ. ಶಾಂತಿನಾಥ ದೇಸಾಯಿ, ಯಶವಂತ ಚಿತ್ತಾಲ, ದೇವನೂರು ಮಹಾದೇವರಂಥವರ ಕತೆಗಳಲ್ಲಿ ಹಳ್ಳಿಗಳಿವೆ, ಪಟ್ಟಣಗಳೂ ಇವೆ. ಆದರೆ ತೇಜಸ್ವಿಯವರ ಕತೆಗಳಲ್ಲಿ ಯಾರಲ್ಲೂ ಇಲ್ಲದ ‘ಮಫ್ಯೂಸಿಲ್’ ಪ್ರದೇಶಗಳಿವೆ. ಅದು ಅವರ ಸಾಹಿತ್ಯದ ವಿಶಿಷ್ಟತೆಗೆ ಬಹಳ ಮುಖ್ಯ ಕಾರಣವಾಯಿತು.
ಏಕೆಂದರೆ ಈ ಮಫ್ಯೂಸಿಲ್ ಲೋಕದ ಜನ ಅನೇಕ ಸಾರಿ ವಿಶೇಷ ಪ್ರತಿಭೆ ಉಳ್ಳವರಾಗಿರುತ್ತಾರೆ. ಆದರೆ ಅವಕಾಶ ವಂಚಿತರಾಗಿರುತ್ತಾರೆ. ಆದ್ದರಿಂದ ಇವರ ಪ್ರತಿಭೆ ಅನೇಕ ರೀತಿಯ ಉಪದ್ವ್ಯಾಪಗಳಲ್ಲೇ ವ್ಯಕ್ತವಾಗುತ್ತವೆ. ಕಳ್ಳತನ, ಕಿಡಿಗೇಡಿತನ, ತುಂಟತನ-ಇವೆಲ್ಲವನ್ನೂ ಅವರು ಹಾಸ್ಯಪ್ರಜ್ಞೆಯಿಂದ ನೋಡುವುದರಿಂದಲೇ ಅವರು ಯಾರನ್ನೂ ಜಡ್ಜ್ ಮಾಡೋಲ್ಲ. ಅದಕ್ಕೇ ಹೇಳಿದ್ದು- ಅವರು ಅವರ ಕಾದಂಬರಿಗಳಲ್ಲಿ ಪಾತ್ರವಾಗಿ ಬರೊಲ್ಲ, ವಿಸ್ಮಯದ ಕಣ್ಣಾಗಿ ಬರುತ್ತಾರೆ ಅಂತ.
ಒಂದು ಸಾರಿ ನಾನು ಅವರ ಮೂಡಿಗೆರೆಯ ಮನೆಗೆ ಹೋದಾಗ, ಮನೆಯ ಹೊರಗೆ ಮರದ ಕೆಳಗೆ ನಿಂತು ತನ್ನ ತೋಟದಲ್ಲಿ ಹರಿಯುವ ಝರಿ ಎಲ್ಲಿ ಹುಟ್ಟಿ, ಎಲ್ಲೆಲ್ಲಿ ಹೇಗೆ ಹರಿದು ಯಾವ್ಯಾವ ರೂಪಗಳನ್ನು ತಾಳುತ್ತೆ ಅನ್ನುವುದನ್ನು ನನಗೆ ವಿವರಿಸುವುದರಲ್ಲೇ ಅವರಿಗೆ ಇಡೀ ಪ್ರಪಂಚದ ವಿಸ್ಮಯವನ್ನು ಹೇಳುವ ಒಂದು ಸಂಗತಿಯಾಗಿತ್ತು.

‘ದೇವರೊಬ್ಬ ಇದ್ದಾನೆ ಅಂತ ತಿಳಿದು ಈ ಪ್ರಪಂಚವನ್ನು ನೋಡೋದು ಎಂಥ ದೊಡ್ಡ ಅನುಭವವೋ ಅದೇ ಅನುಭವ ಈ ಪ್ರಪಂಚದ ವಿಸ್ಮಯವನ್ನು ಸುಮ್ಮನೆ ಕಾಣುವುದರಲ್ಲಿದೆ’ ಅಂತ ಅವರೊಮ್ಮೆ ಹೇಳಿದ ನೆನಪು. ಅಥವಾ ಅವರು ಹೇಳಿದ್ದು ಹೀಗೆ, ‘ವಿಸ್ಮಯದ ಅನುಭವದಲ್ಲಿ ದೇವರು ಇದ್ದಾನೆ ಎಂಬುದೂ ಇಲ್ಲ ಎಂಬುದೂ ಅಪ್ರಕೃತವೆನ್ನಿಸಿಬಿಡುತ್ತದೆ.’ ಸದ್ಯದ ಮತಧರ್ಮಗಳ ವಿವರಣೆಯಲ್ಲಿ ಸಿಕ್ಕುವ ಜಗತ್ತಿನ ಸ್ವರೂಪಕ್ಕೆ ಬದಲಾಗಿ ಯಾವ ವಿವರಣೆಯನ್ನೂ ಆಶ್ರಯಿಸದೆ ಸುಮ್ಮನೆ ಈ ಪ್ರಪಂಚದ ವಿಸ್ಮಯಕ್ಕೆ ಮನಸ್ಸನ್ನು ತೆರೆದುಕೊಳ್ಳಬೇಕೆಂಬ ಅಪೇಕ್ಷೆ ತೇಜಸ್ವಿಯವರಲ್ಲಿ ಬಲವಾಗಿ ಇತ್ತು. ಈ ಗಾಢ ಪ್ರಜ್ಞೆಯಿಂದಾಗಿ ಅವರಿಗೆ ಜಾತಿಮತಗಳು, ಅವರ ಗಲಭೆಗಳು ಅದರ ಹಿಂದಿನ ರಾಜಕೀಯ-ಇವೆಲ್ಲವನ್ನೂ ತಾತ್ಸಾರದಿಂದ ಕಾಣೋದಕ್ಕೆ ಸಾಧ್ಯವಾಯಿತು. ಎಲ್ಲರ ಜೊತೆಗಿದ್ದು, ವಿನೋದಿಯಾಗಿದ್ದು ಅವರು ಏಕಾಂಗಿಯಾಗಿಯೂ ಇದ್ದರು.

ನಮ್ಮಲ್ಲಿ ವಿಸ್ಮಯವನ್ನು ಹುಟ್ಟಿಸುವಂತೆ ಬದುಕಿ ಬರೆದ ಬರಹಗಾರರೊಬ್ಬರು ಈಗ ಬದುಕಿನ ಕ್ಷಣಿಕತೆಯನ್ನು ವಿಸ್ಮಯಗೊಳಿಸುವಂತೆ ತೋರಿ ಕಾಲವಾಗಿದ್ದಾರೆ.

ಡಾ. ಯು.ಆರ್.ಅನಂತಮೂರ್ತಿ

No comments:

Post a Comment

ಹಿಂದಿನ ಬರೆಹಗಳು