Sunday, December 5, 2010

ನಲ್ನುಡಿ ಕಥಾ ಸ್ಪರ್ಧೆ ವಿಜೇತರಿಗೆ ಸತ್ಕಾರ,ಅಭಿನಂದನೆ




ಅಲ್ಲಿ ‘ಶುದ್ಧ ಕನ್ನಡಿಗರ’ ಕಕ್ಕುಲತೆ ಇತ್ತು, ಜಾನಪದ ಜಗತ್ತಿನ ಬೆರಗಿತ್ತು...ಅದಮ್ಯ ಕನ್ನಡ ಪ್ರೇಮ ಮೇಳೈಸುತ್ತಿತ್ತು...ಎಲ್ಲೆಲ್ಲೂ ಕನ್ನಡ ಕನ್ನಡ ಮತ್ತು ಕನ್ನಡ...
ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿರುವ ಸವಾಯಿ ಗಂಧರ್ವ ಕಲಾಕ್ಷೇತ್ರದಲ್ಲಿ ಅಕ್ಷರಶಃ ಕನ್ನಡದ ಹಬ್ಬ. ನ.೨೪ ರಂದು ಕರ್ನಾಟಕ ರಕ್ಷಣಾ ವೇದಿಕೆ ಧಾರವಾಡ ಜಿಲ್ಲಾ ಘಟಕ ವತಿಯಿಂದ ಏರ್ಪಡಿಸಲಾಗಿದ್ದ ರಾಜ್ಯೋತ್ಸವ ಸಮಾರಂಭ ಹಾಗೂ ಕರವೇ ನಲ್ನುಡಿ ಕಥಾ ಸ್ಪರ್ಧೆ ವಿಜೇತರಿಗೆ ಪ್ರಶಸ್ತಿ ವಿತರಣೆ, ಸತ್ಕಾರ ಸಮಾರಂಭದಲ್ಲಿ ಕನ್ನಡದ್ದೇ ಕಲರವ.
ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ್ ಬದ್ನೂರ, ತಾಲೂಕ ಅಧ್ಯಕ್ಷ ಅಮೃತ್ ಇಜಾರಿ, ಕರವೇ ಪದಾಧಿಕಾರಿಗಳು ಹಾಗೂ ಕಾರ‍್ಯಕರ್ತರು ಅತ್ಯಂತ ಅಚ್ಚುಕಚ್ಚಾಗಿ ಸಮಾರಂಭ ವ್ಯವಸ್ಥೆಗೊಳಿಸಿದ್ದರು. ಸಮಾರಂಭಕ್ಕೂ ಮುನ್ನ ಹುಬ್ಬಳ್ಳಿಯ ಚನ್ನಮ್ಮ ವೃತ್ತದಿಂದ ಮೆರವಣಿಗೆ ಏರ್ಪಡಿಸಲಾಗಿತ್ತು. ಜಾನಪದ ನೃತ್ಯ ಕಲಾವಿದರು ಮೆರವಣಿಗೆಯುದ್ದಕ್ಕೂ ವಿವಿಧ ಜಾನಪದ ಕಲಾಪ್ರಕಾರಗಳನ್ನು ಪ್ರಸ್ತುತಪಡಿಸಿ ಮೆರವಣಿಗೆಗೆ ರಂಗು ಮೂಡಿಸಿದರು.
ಬರೋಬ್ಬರಿ ೫ ಸಾವಿರಕ್ಕೂ ಹೆಚ್ಚು ಕನ್ನಡ ಕಾರ‍್ಯಕರ್ತರು ಪಾಲ್ಗೊಂಡಿದ್ದ ಮೆರವಣಿಗೆ ನಗರವಿಡೀ ಸಂಚಲನ ಮೂಡಿಸಿತ್ತು. ಎಲ್ಲೆಲ್ಲೂ ಕನ್ನಡದ ಬಾವುಟ...ಕನ್ನಡದ ಶಾಲು...ಕನ್ನಡದ ಜಯಘೋಷ...ಹುಬ್ಬಳ್ಳಿ ನಗರವಿಡೀ ಕನ್ನಡಮಯವಾಗಿದ್ದು ಅಂದಿನ ವಿಶೇಷ.
ದಿನವಿಡೀ ಹುಬ್ಬಳ್ಳಿ ನಗರ ಮತ್ತು ಸವಾಯಿ ಗಂಧರ್ವ ಕಲಾಕ್ಷೇತ್ರದಲ್ಲಿ ಕರವೇ ಕಾರ‍್ಯಕರ್ತರ ಓಡಾಟವೋ ಓಡಾಟ. ಬಂದಿದ್ದ ಅತಿಥಿಗಳನ್ನು ಆಹ್ವಾನಿಸುವ, ಅವರಿಗೆ ಉಳಿದುಕೊಳ್ಳಲು ವ್ಯವಸ್ಥೆಗೊಳಿಸುವ, ಊಟ-ತಿಂಡಿ ಕಲ್ಪಿಸುವ ಧಾವಂತ.
ಭಾಷೆಯ ವಿಸ್ತಾರತೆ ಅನಿವಾರ‍್ಯ
ಸಂಜೆ ೫ ಗಂಟೆ ನಡೆದ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿದ್ದವರು ಧಾರವಾಡ ಮುರುಘಾಮಠದ ಮ.ನಿ.ಪ್ರ. ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಪತ್ರಕರ್ತ ಹಾಗೂ ಸಾಹಿತಿ ನಾಡೋಜ ಪಾಟೀಲ ಪುಟ್ಟಪ್ಪ , ಕನ್ನಡ ಭಾಷೆಯ ಉಳಿವಿಗೆ ಪ್ರತಿಯೊಬ್ಬ ಕನ್ನಡಿಗನೂ ಕಂಕಣ ತೊಡಬೇಕು. ನಾಡು ಉಳಿದರೆ ಮಾತ್ರ ನಾವುಗಳು ಉಳಿಯಲು ಸಾಧ್ಯ ಎಂದು ಭಾಷೆಯ ವಿಸ್ತಾರತೆ ಮತ್ತು ಅಸ್ತಿತ್ವದ ಅನಿವಾರ‍್ಯತೆ ಕುರಿತು ಮಾರ್ಮಿಕವಾಗಿ ಮಾತನಾಡಿದರು.
ಬಹುಮಾನ ವಿತರಣೆ
ನಲ್ನುಡಿ ಕಥಾಸ್ಫರ್ಧೆ-೨೦೧೦ರ ಪ್ರಥಮ ಬಹುಮಾನ ಪಡೆದ ಸಂಧ್ಯಾ ಹೊನಗುಂಟಿಕರ್ ಅವರಿಗೆ ೨೫ ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಫಲಕ ನೀಡಿ ಪುರಸ್ಕರಿಸಲಾಯಿತು. ದ್ವಿತೀಯ ಬಹುಮಾನ ಪಡೆದ ಅಬ್ಬಾಸ್ ಮೇಲಿನಮನಿ ಅವರಿಗೆ ೧೫.೦೦೦ ರೂ. ನಗದು, ತೃತೀಯ ಬಹುಮಾನ ಪಡೆದ ಶಂಕರರಾವ್ ಉಭಾಳೆ ಅವರಿಗೆ ೧೦ ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಫಲಕ ನೀಡಿ ಪುರಸ್ಕರಿಸಲಾಯಿತು.
ಕಥಾ ಸ್ಪರ್ಧೆಯ ತೀರ್ಪುಗಾರರ ಮೆಚ್ಚುಗೆ ಗಳಿಸಿದ ೧೧ ಮಂದಿ ಪೈಕಿ ಡಾ.ಸೋಮಣ್ಣ ಹೊಂಗಳ್ಳಿ, ಡಾ.ಆನಂದ ಋಗ್ವೇದಿ, ಭವ್ಯಾ ಎಚ್.ಸಿ., ವೈ.ಮಂಜುಳಾ, ಹಣಮಂತ ಹಾಲಿಗೆರಿ, ಬಿ.ಟಿ.ರುಹುಲ್ಲಾ ಸಾಹೇಬ್, ಕಲ್ಲೇಶ್ ಕುಂಬಾರ್, ವಿಶ್ವನಾಥ ಪಾಟೀಲ ಗೋನಾಳ ಅವರಿಗೆ ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರು ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಾರಾಯಣಗೌಡರು, ಕನ್ನಡ ಕಥಾ ಕ್ಷೇತ್ರ ಶ್ರೀಮಂತವಾಗಿದೆ. ಹೊಸ ಹೊಸ ತಲ್ಲಣಗಳನ್ನು, ಗ್ರಹಿಕೆಗಳನ್ನು ಒಳಗೊಂಡ ಕಥೆಗಾರರು ರೂಪುಗೊಳ್ಳುತ್ತಲೇ ಇದ್ದಾರೆ. ಕರವೇ ನಲ್ನುಡಿ ರಾಜ್ಯೋತ್ಸವ ಅಂಗವಾಗಿ ಏರ್ಪಡಿಸಿದ್ದ ಕಥಾ ಸ್ಪರ್ಧೆಯೇ ಇದಕ್ಕೆ ಸಾಕ್ಷಿ ಎಂದರು.
ಕಥಾ ಸ್ಪರ್ಧೆಗೆ ಸಾವಿರಕ್ಕೂ ಹೆಚ್ಚು ಕಥೆಗಾರರು ಪಾಲ್ಗೊಂಡಿದ್ದರು. ಇದು ನಿಜಕ್ಕೂ ಹೆಮ್ಮೆ ಪಡುವ ವಿಚಾರ. ನಮ್ಮ ಕಥಾ ಕ್ಷೇತ್ರ ದಿನದಿನಕ್ಕೂ ವಿಸ್ತಾರಗೊಳ್ಳುತ್ತಲೇ ಇದೆ. ಹೊಸ ಅನುಭವಗಳನ್ನು ಮೂಡಿಸುವ ಕಥೆಗಾರರು ನಮ್ಮಲ್ಲಿ ಹೇರಳವಾಗಿದ್ದಾರೆ. ಇಂಥವರನ್ನು ಗುರುತಿಸುವ ಕೆಲಸ ಆಗಬೇಕು. ಪ್ರಭಾವಿ ಮಾಧ್ಯಮವೇ ಆಗಿರುವ ಕನ್ನಡ ಚಿತ್ರರಂಗ ಇಂಥ ಕಥೆಗಾರರತ್ತ ಕಣ್ಣು ಹಾಯಿಸಬೇಕು. ಸದಾ ಅನ್ಯಭಾಷೆಯ ಚಿತ್ರಗಳನ್ನು ನೋಡಿ ಅಲ್ಲಿಂದ ಕತೆಗಳನ್ನು ಕದಿಯುವ ಅಥವಾ ಅದನ್ನೇ ರೀಮೇಕ್ ಮಾಡುವ ವ್ಯವಸ್ಥೆಗೆ ತಿಲಾಂಜಲಿ ಹೇಳಿ ನಮ್ಮಲ್ಲೇ ಇರುವ ಅತ್ಯುತ್ತಮ ಕತೆಗಳನ್ನು ಆಯ್ಕೆ ಮಾಡಿಕೊಂಡು ಅವುಗಳನ್ನು ಚಿತ್ರಗಳನ್ನಾಗಿಸುವ ಮನಸ್ಸು ಮಾಡಬೇಕು ಎಂದು ಹೇಳಿದರು.
ಹುಬ್ಬಳ್ಳಿಯಲ್ಲೇ ಏಕೆ?
ಕಾರ್ಯಕ್ರಮವನ್ನು ಹುಬ್ಬಳ್ಳಿಯಲ್ಲೇ ಏಕೆ ಆಯೋಜಿಸಲಾಯಿತು ಎಂಬುದಕ್ಕೆ ಸ್ಪಷ್ಟನೆಯನ್ನು ಪ್ರಾಸ್ತಾವಿಕವಾಗಿ ಮಾತನಾಡಿದ ‘ಕರವೇ ನಲ್ನುಡಿ’ ಸಂಪಾದಕ ದಿನೇಶ್ ಕುಮಾರ್ ಎಸ್.ಸಿ. ನೀಡಿದರು. ‘ನಲ್ನುಡಿ ಬಿಡುಗಡೆ ಸಮಾರಂಭದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಯು.ಆರ್.ಅನಂತಮೂರ್ತಿ ಮಾತನಾಡುತ್ತ ಪ್ರತಿ ಗ್ರಾಮದಲ್ಲಿ ಭಾರತದ ಕೇಂದ್ರ ಇದೆ ಎಂದಿದ್ದರು. ಈ ಮಾತುಗಳನ್ನು ಕರ್ನಾಟಕದ ಮಟ್ಟಿಗೆ ಅನ್ವಯಿಸಿ ಹೇಳುವುದಾದರೆ ಪ್ರತಿ ಗ್ರಾಮದಲ್ಲೂ ಕರ್ನಾಟಕದ ಕೇಂದ್ರವಿದೆ. ಬೆಂಗಳೂರಿನ ಸುತ್ತಲೇ ಗಿರಕಿ ಹೊಡೆಯುವುದರಲ್ಲಿ ಅರ್ಥವಿಲ್ಲ. ಹೀಗಾಗಿ ಹುಬ್ಬಳ್ಳಿಗೆ ಬಂದಿದ್ದೇವೆ.
ಕಥಾಸ್ಪರ್ಧೆಗೆ ಹೆಚ್ಚು ಸ್ಪಂದನೆ ದೊರೆತಿದ್ದು ಉತ್ತರ ಕರ್ನಾಟಕದಿಂದ. ಅದರಲ್ಲೂ ವಿಶೇಷವಾಗಿ ಕಲ್ಯಾಣ ಕರ್ನಾಟಕದಿಂದ. ಅತಿ ಹೆಚ್ಚು ಶಕ್ತಿಯುತವಾದ ಕಥೆಗಳು ಬಂದಿದ್ದೂ ಈ ಭಾಗದಿಂದಲೇ. ಅತಿ ಹೆಚ್ಚು ಬಹುಮಾನಗಳೂ ಸಹ ಈ ಭಾಗಕ್ಕೇ ಸಂದಿದೆ. ಹೀಗಾಗಿ ಇಲ್ಲಿ ಕಾರ್ಯಕ್ರಮ ನಡೆಸುವುದು ಅರ್ಥಪೂರ್ಣವೆನಿಸಿತು.
ಎಲ್ಲಕ್ಕೂ ಮಿಗಿಲಾಗಿ ಕರ್ನಾಟಕ ರಕ್ಷಣಾ ವೇದಿಕೆ ಉತ್ತರ ಕರ್ನಾಟಕ ಭಾಗಕ್ಕೆ ಹೆಚ್ಚು ಆದ್ಯತೆ ನೀಡುತ್ತಲೇ ಬಂದಿದೆ. ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರಿಗೆ ಹುಬ್ಬಳ್ಳಿ ಅತ್ಯಂತ ಪ್ರೀತಿಯ ನಗರ. ಹೀಗಾಗಿ ಈ ಕಾರ್ಯಕ್ರಮ ಇಲ್ಲಿ ನಡೆದಿದೆ ಎಂದು ದಿನೇಶ್ ವಿವರಿಸಿದರು.
ಕಥೆಗಳನ್ನು ಕೇಳಿಸಿ...
‘ನಾವೆಲ್ಲಾ ಅಜ್ಜಿಯಂದಿರ ಕಥೆ ಕೇಳಿ ಬೆಳೆದವರು. ಈಗ ಕಥೆ ಹೇಳಲು ಅಜ್ಜಿಯರಿಲ್ಲ. ಕೇಳುವ ವ್ಯವಧಾನವೂ ಮಕ್ಕಳಲಿಲ್ಲ. ಕಥೆ ಹೇಳುವ, ಮತ್ತು ಅದನ್ನು ಕೇಳುವ ಪರಿಸರ ಬೆಳೆಯಬೇಕು, ಕಥೆ ಹೇಳುವ ಮತ್ತು ಕೇಳುವ ಸ್ಪರ್ಧೆಗಳು ಏರ್ಪಡುವಂತಾಗಬೇಕು. ದಯಮಾಡಿ ನಾರಾಯಣಗೌಡರು ಕಥೆ ಹೇಳುವವರನ್ನು ಮತ್ತು ಕೇಳುವವರನ್ನು ಒಂದೇ ವೇದಿಕೆಯಡಿ ತರುವಂತಾಗಲಿ’ ಎಂದು ಪ್ರಥಮ ಬಹುಮಾನ ಪಡೆದ ಸಂಧ್ಯಾ ಹೊನಗುಂಟಿಕರ್ ಅಭಿಪ್ರಾಯಿಸಿದರು.
ಇದಕ್ಕೂ ಮುನ್ನ ರಂಗಭೂಮಿ ಕಲಾವಿದೆ ಸುಮಂಗಲಾ ಹೊಸಪೇಟೆ, ಗೋವಿಂದ ಮಣ್ಣೂರು, ಜಾನಪದ ಕಲಾವಿದ ವಸಂತ ರಣ್ಣನವರ್, ವೈದ್ಯಕೀಯ ತಜ್ಞ, ಪದ್ಮಶ್ರೀ ಪುರಸ್ಕೃತ ಆರ್.ಬಿ.ಪಾಟೀಲ್ ಅವರನ್ನು ಸತ್ಕರಿಸಲಾಯಿತು. ಇದೇ ಸಂದರ್ಭದಲ್ಲಿ ೫೦ ಕ್ಕೂ ಹೆಚ್ಚು ಅಂಗವಿಕಲ ಮಕ್ಕಳಿಗೆ ಉಚಿತವಾಗಿ ತ್ರಿಚಕ್ರ ಬೈಸಿಕಲ್ ವಿತರಿಸಲಾಯಿತು.
ಸಮಾರಂಭದಲ್ಲಿ ಜೆಡಿಎಸ್ ರಾಜ್ಯ ಪ್ರಧಾನ ಕಾರ‍್ಯದರ್ಶಿ ಎನ್.ಎಚ್.ಕೋನರೆಡ್ಡಿ, ಮಾಜಿ ಶಾಸಕ ಜಿ.ಎಸ್.ಶಿವಳ್ಳಿ, ಧಾರವಾಡ ಹೈಕೋರ್ಟ್ ಸಂಚಾರಿ ಪೀಠದ ವಕೀಲರ ಸಂಘದ ಅಧ್ಯಕ್ಷ ಆರ್.ಡಿ.ದೇಸಾಯಿ, ಕ್ರೈಸ್ತ ಧರ್ಮ ಗುರು ಫಾದರ್ ರೋಟರಿಸ್, ಮುಸ್ಲಿಂ ಧರ್ಮಗುರು ಮೌಲಾನ ಖಿಬ್ಲ, ಜೆಡಿಎಸ್ ಮುಖಂಡ ಸುಧಾಕರ್ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು, ಸಮಾರಂಭಕ್ಕೆ ಮೆರುಗು ತಂದರು.

No comments:

Post a Comment

ಹಿಂದಿನ ಬರೆಹಗಳು