Wednesday, December 8, 2010

ವಚನಕಾರರು ಅಚ್ಚಕನ್ನಡದ ಬೇಸಾಯಗಾರರು





ತಾಳಮಾನಸರಿಸವನರಿಯೆ, ಓಜೆಬಜಾವಣೆಯ ಲೆಕ್ಕವನರಿಯೆ ಅಮೃತಗಣ ದೇವಗಣವನರಿಯೆ!
ಕೂಡಲ ಸಂಗಮದೇವಾ, ನಿನಗೆ ಕೇಡಿಲ್ಲವಾಗಿ ಆನುವೊಲಿದಂತೆ ಹಾಡುವೆನಯ್ಯ - ಬಸವಣ್ಣ


ಕನ್ನಡ ನಾಡಿನ ಧಾರ್ಮಿಕ, ಸಾಮಾಜಿಕ ಸಂಸ್ಕೃತಿ ಮತ್ತು ಭಾಷೆಯ ಸಂದರ್ಭದ ಪರ್ವಕಾಲವೆಂದರೆ ೧೨ನೇ ಶತಮಾನ. ಸಾಹಿತ್ಯ, ಧರ್ಮ, ಭಾಷೆ, ಬದುಕು ಮುಂತಾಗಿ ಎಲ್ಲ ಕ್ಷೇತ್ರಗಳಲ್ಲಿ ಮಹತ್ತರವಾದುದನ್ನು ಅನ್ವೇಷಿಸಿದ ಕಾಲ. ಈ ಅನ್ವೇಷಣೆಯ ಹಿಂದೆ ಬಹುಪಾಲು ಶ್ರಮಜೀವಿಗಳು, ಹಿಂದುಳಿದವರು, ಅಶ್ಪೃಶ್ಯರು ಇದ್ದದ್ದು ವಿಶೇಷ. ಅಲ್ಲಿ ವಿವಿಧ ಕಾಯಕ ಜೀವಿಗಳಿದ್ದರು. ನೇಯ್ಗೆಯವರು, ಮಡಿವಾಳರು, ಬಣಗಾರರು, ಸೂಜಿ ಕಾಯಕದವರು, ಬೆಸ್ತರು, ವೈದ್ಯರು, ಅಂಬಿಗರು, ಸುಂಕದವರು, ದನಕಾಯುವವರು, ಮುಂತಾದ ಸಮಾಜದ ಎಲ್ಲ ವರ್ಗ, ವರ್ಣದ, ಸ್ಥರಗಳ ಪುರುಷರು ಮತ್ತು ಸ್ತ್ರೀಯರು ಇದ್ದರು. ಬಸವೇಶ್ವರರ ನೇತೃತ್ವದಲ್ಲಿ ನಡೆದ ಶರಣ ಚಳವಳಿಯಲ್ಲಿ ಪಾಲ್ಗೊಂಡು ಸರ್ವಸಮಾನತೆಯ ಸವಿಗಾಳಿಯನ್ನು ಸೇವಿಸಿದರು. ಬದುಕಿನಲ್ಲಿ ಅಧ್ಯಾತ್ಮಿಕ ನೆಮ್ಮದಿಯನ್ನು ಕಂಡುಕೊಂಡರು. ಸತ್ಯ ಶುದ್ದ ಕಾಯಕ, ದಾಸೋಹಗಳು ಶರಣರ ನಿತ್ಯಬದುಕಿನ ಮಂತ್ರಗಳಾದವು.
ಕನ್ನಡ ಭಾಷಾ ಸಾಹಿತ್ಯ ಚರಿತ್ರೆಯಲ್ಲಿಯೂ ೧೨ನೇ ಶತಮಾನ ಒಂದು ಪರ್ವಕಾಲ. ಕನ್ನಡ ಭಾಷೆಯಲ್ಲಿ ಹೊಸ ಸಂವೇದನೆಗಳು, ಹೊಸ ಬಗೆಯ ಅಭಿವ್ಯಕ್ತಿ ಸಾಧ್ಯವಾಯಿತು. ರೂಢಿಗತವಾಗಿದ್ದ ಸಂಸ್ಕೃತ ಮತ್ತು ಹಳಗನ್ನಡ, ಚಂಪೂಕಾವ್ಯಗಳ ಸ್ಥಾನವನ್ನು ಕನ್ನಡ ಆಡುಭಾಷೆ ತನ್ನದಾಗಿಸಿಕೊಂಡಿದ್ದು ವಿಶೇಷ. ದೇವಭಾಷೆಯಾದ ಸಂಸ್ಕೃತಕ್ಕೆ ಬದಲಾಗಿ ಜನ ಸಾಮಾನ್ಯರ ಆಡುಭಾಷೆ ಕನ್ನಡವನ್ನು ದೇವಭಾಷೆಯನ್ನಾಗಿಸಿದ ಕೀರ್ತಿ ವಚನಕಾರರಿಗೆ ಸಲ್ಲುತ್ತದೆ. ಗದ್ಯವೂ ಅಲ್ಲದ ಪದ್ಯವೂ ಅಲ್ಲದ ಲಯಬದ್ದ ಮುಕ್ತ ಛಂದಸ್ಸಿನ ವಚನಗಳು ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದವು. ಕನ್ನಡಭಾಷೆಯ ಆಭಿವ್ಯಕ್ತಿ ಸಾಮರ್ಥ್ಯವೂ ಹೆಚ್ಚಿತು. ಮೂಢನಂಬಿಕೆಗಳನ್ನು ಅಲ್ಲಗಳೆದ ಶರಣರು, ಜನ ಸಾಮಾನ್ಯರಿಗೆ, ಅಕ್ಷರ ಸಂಸ್ಕೃತಿಯಿಂದ ದೂರ ಇದ್ದವರಿಗೆ ಹೊಸ ಧಾರ್ಮಿಕ ತಿಳಿವಳಿಕೆಯನ್ನು ಸರಳವಾಗಿ ಅರ್ಥವಾಗುವ ಭಾಷೆಯಲ್ಲಿ ನೀಡುವ ಪ್ರಯತ್ನದ ಅಂಗವಾಗಿ ನಾಲ್ಕರಿಂದ ಇಪ್ಪತ್ತು ಸಾಲುಗಳ ವಚನಗಳನ್ನು ರಚಿಸಿದರು. ತಮ್ಮ ಮನದ ಭಾವನೆಗಳನ್ನು ಭಕ್ತಿ ಮಾರ್ಗದಲ್ಲಿ ಹೃದಯದಿಂದ-ಹೃದಯಕ್ಕೆ ತಲುಪಿಸುವ ಪ್ರಯತ್ನದಲ್ಲಿ ಬಹುಪಾಲು ಸಫಲರೂ ಆದರು.
ವಚನ ಸಾಹಿತ್ಯ ಅದು ಎರವಲು ಸಾಹಿತ್ಯವಲ್ಲ. ಅದು ಅಚ್ಚ ಕನ್ನಡದ ಸ್ವಯಾರ್ಜಿತ ಸ್ವತ್ತು. ವಚನಕಾರರು ಪಂಡಿತರಲ್ಲ. ಅವರು ಅಚ್ಚ ಕನ್ನಡದ ಬೇಸಾಯಗಾರರು ಎಂದಿದ್ದಾರೆ ವಿದ್ವಾಂಸರಾದ ಎಂ. ಆರ್. ಶ್ರೀನಿವಾಸಮೂರ್ತಿ ಅವರು. ಬಹು ಸಂಖ್ಯಾತ ಅಕ್ಷರ ವಂಚಿತರಿಗೆ, ಅಕ್ಷರ ಲೋಕವನ್ನು ತೆರೆದಿಟ್ಟು, ಅರಿವನ್ನು ಮೂಡಿಸಿ, ಹೊಸ ಧಾರ್ಮಿಕ ಪರಿಕಲ್ಪನೆಯನ್ನು ನೀಡಿದವರು ಬಸವೇಶ್ವರರು. ಬಾಹ್ಯಾಚರಣೆ ಜೊತೆಗೆ ಅಂತರಂಗದ ಶುದ್ಧತೆಗೂ ಆದತೆ ನೀಡಿದವರು ಶರಣರು. ಬಸವಣ್ಣನವರ ಭಕ್ತಿ ಮಾರ್ಗದ ತೆಕ್ಕೆಗೆ ಬಂದು ಇಷ್ಟಲಿಂಗಧಾರಿಗಳಾಗಿ, ಅನುಭಾವಿಗಳಾಗಿ, ತಮ್ಮ ಹೊಸಧಾರ್ಮಿಕ, ಸಾಮಾಜಿಕ ಅನುಭವಗಳನ್ನು ವಚನಗಳ ಮೂಲಕ ಶರಣರು ಅಭಿವ್ಯಕ್ತಿಸಿದರು.
ವಚನ ಸಾಹಿತ್ಯಕ್ಕೆ ತನ್ನದೆ ಆದ ಸೌಂದರ್ಯವಿದೆ, ವೈಭವವಿದೆ, ಅವುಗಳಲ್ಲಿ ಅನುಭವಿದೆ, ಅನುಭಾವವಿದೆ, ಕಾವ್ಯಾಂಶಗಳಿವೆ, ರಸಾಭಿವ್ಯಕ್ತಿ ಇದೆ, ಎಲ್ಲಕ್ಕಿಂತ ಹೆಚ್ಚಾಗಿ ಮಾನವೀಯ ಮೌಲ್ಯಗಳಿವೆ. ವಚನಗಳಲ್ಲಿ ಕೆಲವು ಭಾವಗೀತಾತ್ಮಕವಾಗಿದ್ದರೆ, ಕೆಲವು ನವ್ಯ ಕವನಗಳನ್ನು ಹೋಲುತ್ತವೆ. ವಿಷಯ ವೈವಿಧ್ಯವಿದ್ದರೂ, ಅವುಗಳ ಹಿನೆಲೆಯಲ್ಲಿ ಅಧ್ಯಾತ್ಮಿಕ, ದೈವಿಕ ಮತ್ತು ತಾತ್ತ್ವಿಕ ಚಿಂತನೆಗಳು ಪ್ರಧಾನವಾಗಿವೆ. ಇಹದ ಬದುಕನ್ನು ಹಸನುಗೊಳಿಸುವ ಮಾರ್ಗವಿದೆ. ವಚನಗಳ ಅಭಿವ್ಯಕ್ತಿಯಲ್ಲಿನ ಸೂಕ್ಷ್ಮತೆ, ರೂಪಕ ಪ್ರತಿಮೆಗಳ ಸಮರ್ಥ ಬಳಕೆ, ಆಡು ನುಡಿಯ ಸರಳತೆ, ರಸಕ್ಕೆ ಮಿಗಿಲಾದ ವೈಚಾರಿಕತೆ, ಕಲ್ಪನೆಗೆ ಬದಲಾಗಿ ವಾಸ್ತವಿಕತೆ, ಬದುಕಿನ ವಾಸ್ತವಿಕತೆ ಜೊತೆಗೆ ಆತ್ಮ ಪರವಾದ ನಿವೇದನೆ ಹರಳುಗಟ್ಟಿವೆ. ವಚನಗಳು ಶರಣರ ಸಾಕ್ಷಿ ಪ್ರಜ್ಞೆಯ ಸಂಕೇತಗಳಾಗಿ ರೂಪುಗೊಂಡಿರುವುದು ವಿಶೇಷ.
ವಚನಕಾರರು ವೈಭವಾಪೇಕ್ಷಿಗಳಲ್ಲ. ಸರಳವಾಗಿ, ಪ್ರಾಮಾಣಿಕ ಜೀವನ ನಡೆಸಿದವರು. ಸತ್ಯಶುದ್ಧ ಕಾಯಕ ಜೀವಿಗಳು. ಅವರು ರಚಿಸಿದ ಮನದಾಳದ ಮಾತುಗಳು ಜೀವನಾನುಭವದ ವೈಭವದಿಂದ ಕೂಡಿರುವುದು ವಿಶೇಷ. ಜನರಾಡುವ ಗದ್ಯಕ್ಕೆ ಕಾವ್ಯದ ಮಾಂತ್ರಿಕ ಸ್ಪರ್ಶ ನೀಡಿದವರು ೧೨ನೇ ಶತಮಾನದ ವಚನಕಾರರು. ಜನಸಾಮಾನ್ಯರ ಭಾಷೆಯಲ್ಲಿ ರಚಿತವಾದ ವಚನಗಳು, ಹಿಂದುಳಿದವರ, ಅಕ್ಷರವಂಚಿತರಿಗೆ ಅರಿವನ್ನು ನೀಡಿ, ಅಧ್ಯಾತ್ಮಿಕ ಹಸಿವನ್ನು ಹಿಂಗಿಸಿ, ಸತ್ಪಥದಲ್ಲಿ ಆತ್ಮ ಸಮ್ಮಾನದಿಂದ ಬದುಕುವ ಮಾರ್ಗ ತೋರಿದ್ದು ಇತಿಹಾಸ. ಇಂತಹ ವಿಶಿಷ್ಟ ಶಕ್ತಿಯನ್ನು ಪಡೆದ ವಚನಸಾಹಿತ್ಯದ ವಿಷಯ ವ್ಯಾಪ್ತಿ ಘನವಾದದ್ದು. ವಚನಕಾರರ ಉದ್ದೇಶವೂ ಕಿರಿದರಲ್ಲಿ ಹಿರಿದಾದುದನ್ನು ತಿಳಿಸುವ ಪ್ರಯತ್ನ " ಕರಿಯನ್ನು ಕನ್ನಡಿಯಲ್ಲಿ ತೋರಿದಂತೆ" ವಚನಗಳು ಜನಸಾಮಾನ್ಯರ ಮೇಲೆ ಪ್ರಭಾವ ಬೀರಿವೆ.
ಕನ್ನಡ ಭಾಷಾ ಸಾಹಿತ್ಯವನ್ನು ಸಮೃದ್ದಗೊಳಿಸಿ, ಉನ್ನತಸ್ಥಾನ ದೊರಕಿಸಿದವರು ೧೨ನೇ ಶತಮಾನದ ಶರಣರು. ಅಧ್ಯಾತ್ಮಿಕ ಸಮಾನತೆಯ ಹರಿಕಾರರಾದ ಶರಣರು ತಮ್ಮ ಅಭಿವ್ಯಕ್ತಿ ಮಾಧ್ಯಮವಾಗಿ ಕನ್ನಡ ಆಡುಭಾಷೆಯನ್ನು ಬಳಸಿದರು. ಜನಸಾಮಾನ್ಯರ ಧಾರ್ಮಿಕ, ಅಧ್ಯಾತ್ಮಿಕ ಹಸಿವು ಧರ್ಮದ ಮೇಲಿನ ಮೋಹ ಏಕದೇವೋಪಾಸನೆಯ ನಿಷ್ಠೆ, ಸಾಮಾಜಿಕ ಕಾಳಜಿ, ಸುಧಾರಣೆಯ ಕಳಕಳಿ ಇವೆಲ್ಲವೂ ಸಂಗಮಿಸಿದ ಭಾವಗಳು ವಚನ ಸಾಹಿತ್ಯ ರಚನೆಗೆ ಸ್ಪೂರ್ತಿ ಎನ್ನಬಹುದು. ಅಧ್ಯಾತ್ಮಿಕ ಮಾರ್ಗದಲ್ಲಿ ಶರಣರಿಗಾದ ಅನುಭವಗಳನ್ನು ಅತೀಂದ್ರಿಯ ಅನುಭಾವಗಳನ್ನು ಅರ್ಥಪೂರ್ಣವಾಗಿ ಅಭಿವ್ಯಕ್ತಿಸಲು ಸಮರ್ಥ ಸಾಧನವಾಗಿ ವಚನ ಸಾಹಿತ್ಯ ರೂಪುಗೊಂಡಿದೆ. ವಚನಕಾರರು ಆಡುಭಾಷೆ ಗದ್ಯವನ್ನು ಕಾವ್ಯದ ಮಟ್ಟಕ್ಕೆ ಏರಿಸಿದರು. ವಚನಕಾರರು ತಮ್ಮ ಸಂವೇದನೆಗಳನ್ನು ಅಕ್ಷರಕ್ಕಿಳಿಸುವ ಸಂದರ್ಭದಲ್ಲಿ ಒಂದು ಪದವನ್ನೂ ದುಂದು ಮಾಡದೆ ಇದಕ್ಕಿಂತ ಕಡಿಮೆ ಪದಗಳಲ್ಲಿ ಬರೆಯಲು ಸಾಧ್ಯವೇ ಇಲ್ಲ ಎನ್ನುವ ಬಿಗಿಯಲ್ಲಿ ಸಾಂದ್ರವಾಗಿ ವಚನಗಳನ್ನು ರಚಿಸಿದ್ದಾರೆ. ನಾಲ್ಕಾರು ಸಾಲುಗಳಲ್ಲಿರುವಂತೆ, ದೀರ್ಘ ವಚನಗಳೂ ಈ ಮಾತಿನಿಂದ ಹೊರತಾಗಿಲ್ಲ ಎನ್ನಬಹುದು. ದೈನಂದಿನ ಜೀವನದ ಸಾಧಾರಣ ಸಂದರ್ಭಗಳಲ್ಲಿಯೂ, ಆಡುವವನ ಇಂಗಿತವನ್ನು ಮೀರಿ ಕೇಳುವವನಲ್ಲಿ ಬೇರೇನೊ ಧ್ವನಿಸಿಬಿಡುವ ಭಾಷೆಯು ವಚನರೂಪ ಪಡೆದುಕೊಳ್ಳುವ ಸ್ವರೂಪವನ್ನು ಸ್ವಾರಸ್ಯಕರವಾಗಿ ಮಂಡಿಸುತ್ತಾರೆ. ಭಾಷೆಯ ನೆಲೆಯಲ್ಲಿ ಮಾತ್ರವಲ್ಲದೆ, ಅನುಭವದ ನೆಲೆಯಲ್ಲಿಯೂ ಮೂರ್ತವು, ವಾಚ್ಯವು ಅಮೂರ್ತದ ಅನಿರ್ವಚನೀಯ ಸ್ಥರಗಳನ್ನು ಮುಟ್ಟುವಂತೆ ವಚನಗಳು ರೂಪುಗೊಂಡಿವೆ. ಲೌಕಿಕದಲ್ಲಿದ್ದೂ ಅಲೌಕಿಕ ಅನುಭವವನ್ನು ನಿಡುತ್ತವೆ
ರೂಪ ಸ್ವರೂಪಗಳೆಡರಲ್ಲಿಯೂ ತಮ್ಮದೆ ಆದ ವಿಶಿಷ್ಟತೆಯನ್ನು ಮೆರೆಯುವ ವಚನಗಳು ಬಿಡಿ ಮುಕ್ತಕಗಳಾಗಿ, ಅನುಭವ ಮತ್ತು ಅನುಭಾವಗಳಿಂದ ಮಿರುಗುವ ಅಣಿಮುತ್ತುಗಳಾಗಿ ಕನ್ನಡ ಸಾಹಿತ್ಯದ ವೈಭವದ, ಅರಿವಿನ ಸಂಕೇತಗಳಾಗಿವೆ. ಇಂತಹ ವೈಶಿಷ್ಟ್ಯಪೂರ್ಣ ವಚನಗಳ ಹುಟ್ಟಿಗೆ ೧೨ನೇ ಶತಮಾನದಲ್ಲಿದ್ದ ಸಾಮಾಜಿಕ, ಧಾರ್ಮಿಕ ಅಸಮಾನತೆಗಳು ಕಾರಣವಾಗಿದ್ದವು.
ಸರ್ವಸಮಾನತೆಯ ಸ್ವಾತಂತ್ರ್ಯವನ್ನು ಪಡೆದ ಶರಣರು, ತಮ್ಮ ಪರಮಾನಂದದ ಸವಿಯ ಉದ್ಗಾರಗಳು ನುಡಿಯ ರೂಪು ತಳೆದು ವಚನಗಳಾಗಿ ಮೂಡಿಬಂದವು. ಶರಣರು ತಮ್ಮ ಹೊಸ ಪರಿಸರಕ್ಕೆ ಸ್ಪಂದಿಸಿದರು. ಅಂದಿಗೆ ಆಗಲೇ ಭಾರತದಲ್ಲಿ ಪ್ರವೇಶ ಪಡೆದಿದ್ದ ಕ್ರಿಶ್ಚಿಯನ್ ಮತ್ತು ಮುಸ್ಲಿಂ ಧರ್ಮಗಳ ಪ್ರಭಾವವೂ ಲಿಂಗಾಯತ ಆಚರಣೆಗಳಲ್ಲಿ ಕಂಡುಬರುತ್ತವೆ.

ಜಯದೇವಪ್ಪ ಜೈನಕೇರಿ

No comments:

Post a Comment

ಹಿಂದಿನ ಬರೆಹಗಳು