Wednesday, December 8, 2010

ನಾನು ಕಂಡ ತೇಜಸ್ವಿ...




ಪೂರ್ಣಚಂದ್ರ ತೇಜಸ್ವಿಯವರ ಮಾಯಾಲೋಕದ ಅನಾವರಣ ಅವರ ಮೊದಲ ಬರಹಗಳೊಂದಿಗೆ ಪ್ರಾರಂಭವಾಗುತ್ತವೆ ಮಲೆನಾಡಿನ ಜನರಿಗೆ ವಿಶಿಷ್ಟವಾದ ಹಾಸ್ಯಪ್ರಜ್ಞೆಯೊಂದಿಗೆ ಇಲ್ಲಿನ ಪಾತ್ರಗಳೆಲ್ಲ ತಮ್ಮೆಲ್ಲ ನೋವು ನಲಿವು, ಸುಖ-ದುಃಖ, ಕೋಪ-ತಾಪಗಳನ್ನು ಹಂಚಿಕೊಳ್ಳುತ್ತವೆ. ತೇಜಸ್ವಿಯವರ ಒಟ್ಟೂ ಕಥಾಲೋಕವನ್ನು, ಅವರ ವ್ಯಕ್ತಿತ್ವದ ಭಾಗವಾಗಿಯೇ ನೋಡುವ ಮಲೆನಾಡಿಗನಾಗಿ ಅವರನ್ನಿಲ್ಲಿ ನೋಡಿದ್ದೇನೆ.
ಅವರ ಕಥೆ ಕಾದಂಬರಿಗಳಲ್ಲೆಲ್ಲ ಬರುವ ಪಾತ್ರಗಳೆಲ್ಲ ನಮ್ಮ ನಡುವೆ ಓಡಾಡುತ್ತಿರುವವರೇ. ಇಲ್ಲಿ ಬರುವ, ಕರಿಯಪ್ಪ, ಬೋಬಣ್ಣ, ಶಾಂತಕುಮಾರ್, ಖಾಸಿಂಸಾಬಿ, ಬಿ.ಎಸ್.ಪಿ. ಹುಡುಗರುಗಳಾಗಲೀ, ಗಾರೆಯವ, ಹಾವುಗೊಲ್ಲರ ಎಂಕ್ಟ, ಚೀಂಕ್ರಮೇಸ್ತ್ರಿಗಳಾಗಲೀ ಇವರೆಲ್ಲರನ್ನೂ ಅವರು ಯಥಾವತ್ತಾಗಿ ನಿಜವ್ಯಕ್ತಿಗಳಾಗಿ ಚಿತ್ರಿಸಿದ್ದಾರೆಂದು ಅರ್ಥವಲ್ಲ. ಅಲ್ಲಿ ಬರುವ ಪಾತ್ರಗಳೆಲ್ಲವೂ ಈ ಜೀವಂತ ವ್ಯಕ್ತಿಗಳನ್ನು ಹೋಲುತ್ತವಷ್ಟೆ. ತೇಜಸ್ವಿಯವರ ಕಥಾಲೋಕದಲ್ಲಿ ಅವರೆಲ್ಲ ಇನ್ನೊಂದು ಆಯಾಮವನ್ನು ಪಡೆದುಕೊಂಡಿದ್ದಾರೆ.
ತೇಜಸ್ವಿಯವರ ಬರಹಗಳು ಅರೆನಗರ ಜೀವನ (ಮೊಫುಸಿಲ್) ಸಂವೇದನೆಗಳನ್ನು ಹೊಂದಿರುವಂತದ್ದಾಗಿದೆಯೆಂದು, ಯು.ಆರ್. ಅನಂತಮೂರ್ತಿವರು ಹೇಳಿದ್ದಾರೆ. ಆದರೆ ಅವರ ಎಲ್ಲ ಬರಹಗಳೂ ಈಗ ಜಾಗತೀಕರಣದ ಪರಿಣಾಮವಾಗಿ ಗ್ರಾಮಾಂತರದ ಎಲ್ಲ ಪ್ರದೇಶಗಳೂ ಕೂಡಾ ಅರೆನಗರ ಪ್ರದೇಶಗಳಾಗಿ ಪರಿವರ್ತಿತವಾಗುತ್ತಿರುವ ಸಂದರ್ಭದ ಕಥಾನಕವೂ ಆಗಿವೆ. ಇಷ್ಟೆಲ್ಲ ಯಾಂತ್ರೀಕರಣದ ನಡುವೆಯೂ ಮೊಬೈಲ್ ಫೋನ್ ಹಿಡಿದು ತಿರುಗುವ, ಬಸವನಕುಣಿಸುವವರು, ರಸ್ತೆಬದಿಯ ಬುಟ್ಟಿಹೆಣೆಯುವವರು ಮುಂತಾದವರಂತೆ, ಇದ್ದಕ್ಕಿದ್ದಂತೆ ರಾತ್ರಿಹೊತ್ತು ಊರಿಗೆಬಂದು ಶಕುನನುಡಿಯವ ಸುಡುಗಾಡುಸಿದ್ಧರಂತೆ. ಅಪರೂಪಕ್ಕೊಮ್ಮೆ ಕಾಣಸಿಗುವ ಗುಬ್ಬಚ್ಚಿ- ನೀರುನಾಯಿಗಳಂತೆ ’ಮಾಯವಾಗದೆ ಉಳಿದುಕೊಂಡಿರುವ ಮಾಯಾಲೋಕದ’ ಕಥಾನಕವೂ ಹೌದು.
ತೇಜಸ್ವಿಯವರ ಸಾಹಿತ್ಯದ ಬಗ್ಗೆ ಇತರರು ಹೇಳಿದಂತೆ ಅಥವಾ ಅವರೇ ಅವರ ಬರಹಗಳಲ್ಲಿ ಉಲ್ಲೇಖಿಸಿರುವ ಹಾಗೆ ಅವರದೊಂದು ವಿಸ್ಮಯದ ಲೋಕ. ನಾವು ಈ ’ವಿಸ್ಮಯ’ ಎಂಬ ಪದವನ್ನು ಭಾರತೀಯ ಸಾಹಿತ್ಯದಲ್ಲಿ ಮುಖ್ಯವಾಗಿ ಬಳಸುವುದು ಮಹಾಭಾರತದ ಬಗ್ಗೆ, ಮಹಾಭಾರತದ ಕಥಾಲೋಕವೂ ವಿಸ್ಮಯದ್ದೇ. ಆ ಬೆರಗಿನ ಲೋಕದೊಳಗೆ ಸೇರಿಕೊಂಡಿರುವ ಉಪಕಥೆಗಳನ್ನಂತೂ ಯಾರು, ಯಾವಾಗ, ಎಲ್ಲಿ, ಮತ್ತು ಹೇಗೆ ಸೇರಿಸಿದರು-ಪ್ರಕ್ಷೇಪಿಸಿದರು ಎನ್ನುವುದೇ ಅಮುಖ್ಯವಾಗುವ ಹಾಗೆ, ಬೆರೆತು. ಮರೆತುಹೋಗುವ ಹಾಗೆ ಸೇರಿಕೊಂಡಿವೆ.
ತೇಜಸ್ವಿಯವರ ಕಥಾಲೋಕಕ್ಕೆ ಎಷ್ಟು ಪಾತ್ರಗಳನ್ನಾದರೂ ಸೇರಿಸಬಹುದು-ಅವರ ವ್ಯಕ್ತಿತ್ವದ ಸುತ್ತ ಆವರಿಸಿಕೊಂಡಿರುವ ಕಥಾಲೋಕಕ್ಕೆ (ಅವರು ಜಲ್ಲಿಗುಡ್ಡೆ ಹತ್ತಿನಿಂತದ್ದು, ಸ್ಕೂಟರಿನ ಹಿಂಬದಿ ಸೀಟನ್ನು ಕಳಚಿಟ್ಟದ್ದು, ಅವರು ಫೋಟೋ ತೆಗೆಯಲೆಂದು ಅಡಗಿ ಕುಳಿತಿದ್ದಲ್ಲಿಗೇ ಬಂದು ಕರೆದವನನ್ನು, ಕೋಲು ಹಿಡಿದು ಅಟ್ಟಾಡಿಸಿದ್ದು ಹೀಗೇ) ಎಷ್ಟು ಉಪಕಥೆಗಳನ್ನಾದರೂ ಸೇರಿಸಬಹುದು, ಯಾವುದನ್ನಾದರೂ ಪ್ರಕ್ಷೇಪಿಸಬಹುದು. ಇದಾವುದರಿಂದಲೂ ಅವರ ಮಾಯಾಲೋಕ ಬದಲಾಗದು.
’ಮುಖ್ಯರ ಮಹಾಭಾರತ ತೆರೆದಿಡುವ ವಿಸ್ಮಯದ ಲೋಕವೊಂದಾದರೆ. ತೇಜಸ್ವಿಯವರು ತೆರೆದಿಟ್ಟಿರುವ ಅಮುಖ್ಯರಾಗಿಯೂ- ಅಮುಖ್ಯರಲ್ಲದವರ ಈ ಆಧುನಿಕ ಭಾರತ ಕಥಾಲೋಕದ ಕೆಲವು ಪಾತ್ರಗಳ ಮೂಲಕವೇ ಅವರನ್ನು ನೋಡಲು ಇಲ್ಲಿ ಪ್ರಯತ್ನಿಸಿದ್ದೇನೆ.
ಕೆ.ವಿ.ಸುಬ್ಬಣ್ಣನವರು ಕುವೆಂಪುರವರ ಬಗ್ಗೆ ಹೇಳುತ್ತಾ ’ಅವರ ಸಾಹಿತ್ಯಕ್ಕಿಂತ ಹೆಚ್ಚಾಗಿ ನಾವರಿಯದ ಒಂದು ಅಗೋಚರ ಸ್ಥರದಲ್ಲಿ ಅವರು, ಇಡೀ ಕರ್ನಾಟಕದ ಸಮಸ್ತ ಜನರರೊಂದಿಗೆ ಸಂವಾದಿಸುತ್ತಾ ಸಾಹಿತ್ಯವನ್ನೇ ಓದದವರ ಮೇಲೂ ಅತ್ಯಂತ ಸೂಕ್ಷವಾದ ಪ್ರಭಾವ ಬೀರಿ ಅವರನ್ನು ರೂಪಿಸುತ್ತಿದ್ದರು’ಎಂದಿದ್ದಾರೆ.
ತೇಜಸ್ವಿಯವರು ಕಥೆಗಾರರಾಗಿ ನೀಡಿದ ಮಾಯಾಲೋಕಕ್ಕಿಂತಲೂ, ವ್ಯಕ್ತಿಯಾಗಿ ನಿರ್ಮಿಸಿದ ಯಾರೂ ಅಮುಖ್ಯರಲ್ಲದ ಮಾಯಾಲೋಕ ಹಿರಿದಾದದ್ದು ಎಂದು ನನ್ನ ಅನಿಸಿಕೆ.
ತೇಜಸ್ವಿಯವರಿಂದು ನಮ್ಮೊಡನಿಲ್ಲ. ಎಪ್ಪತ್ತು ವರ್ಷ ಅಂಥ ವಯಸ್ಸೂ ಅಲ್ಲ. ತೇಜಸ್ವಿ, ಕೆ.ವಿ.ಸುಬ್ಬಣ್ಣ, ಲಂಕೇಶ್ ಅಂಥವರಿದ್ದಾಗ ನಮ್ಮ ಸುತ್ತಲಿನ ಆಗುಹೋಗುಗಳಿಗೆ ಅವರು ಪ್ರತಿಕ್ರಿಯಿಸುತ್ತಿದ್ದ ರೀತಿಯೇ ಅರೋಗ್ಯಪೂರ್ಣ ಮನಸ್ಸುಗಳು ಯೋಚಿಸಬೇಕಾದ ದಿಕ್ಕನ್ನು ಸೂಚಿಸುವಂತಿರುತ್ತಿತ್ತು. ಈಗ ಆ ಜವಾಬ್ದಾರಿಯನ್ನು ನಮಗೆ ನಾವೇ ವಹಿಸಿಕೊಳ್ಳಬೇಕಾಗಿದೆ.
ನಮ್ಮ ನಡುವಿನ ತೇಜಸ್ವಿ
ಎಪ್ಪತ್ತರ ದಶಕದ ಪ್ರಾರಂಭದ ವರ್ಷಗಳು, ನಾನು ಪಿ.ಯು. ವಿದ್ಯಾರ್ಥಿಯಾಗಿದ್ದೆ. ರಜೆಯಲ್ಲಿ, ನಮ್ಮೂರು ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಬೆಳ್ಳೇಕೆರೆಯಿಂದ, ದಕ್ಷಿಣಕನ್ನಡ ಜಿಲ್ಲೆಯ ಸುಳ್ಯದ ಸಮೀಪದಲ್ಲಿರುವ ಬಂಧುಗಳ ಮನೆಗೆ ಹೋದವನು, ಸುಳ್ಯದ ಬಸ್ ನಿಲ್ದಾಣದಲ್ಲಿ ಸುಬ್ರಹ್ಮಣ್ಯದತ್ತ ಹೋಗುವ ಬಸ್ಸಿಗಾಗಿ ಕಾಯುತ್ತ ನಿಂತಿದ್ದೆ. ನಿಲ್ದಾಣದಲ್ಲಿ ಒಬ್ಬರು ವ್ಯಕ್ತಿ ನನ್ನ ಗಮನ ಸೆಳೆದರು. ಕಪ್ಪು ಬಣ್ಣದ ಮೂಲಂಗಿ ಪ್ಯಾಂಟು, ಬಿಳಿ ಬಣ್ಣದ ಚೌಕುಳಿಗಳಿದ್ದ ಅಂಗಿ, ಮೀಸೆಯನ್ನು ಸೇರಿದಂತೆ ಬಾಯಿಯನ್ನು ಸುತ್ತುವರಿದ ಉರುಟಾದ ಗಡ್ಡ, ಕೈಯಲ್ಲೊಂದು ವಿಚಿತ್ರ ಆಕಾರದ ಚೀಲ. ಇವರು ದಕ್ಷಿಣ ಕನ್ನಡ ಜಿಲ್ಲೆಯವರಲ್ಲವೆಂದು ಮೇಲ್ನೋಟಕ್ಕೇ ತಿಳಿಯುವಂತಿತ್ತು.
ನಾನು ನೋಡುತ್ತಿದ್ದಂತೆಯೇ ಒಬ್ಬೊರಾಗಿ ಹಲವು ಜನ ಅವರ ಸುತ್ತ ಸೇರತೊಡಗಿದರು. ಕೆಲವರು ಅವರನ್ನು ಮಾತಾಡಿಸುತ್ತಿದ್ದರು. ಏಳೆಂಟು ಜನರು ಸೇರುತ್ತಿದ್ದಂತೆಯೇ ಅವರ‍್ಯಾರೋ ಸಿನಿಮಾ ನಟರೆಂದು ನನ್ನ ತಲೆಯಲ್ಲಿ ಸುಳಿದುಹೋಯಿತು. ನಾನು ಈಗಾಗಲೇ ನೋಡಿದ, ಮಾತನಾಡಿಸಿದ ಸಿನಿಮಾನಟರ ಪಟ್ಟಿಗೆ ಇನ್ನೂ ಒಬ್ಬರ ಹೆಸರನ್ನು ಸೇರಿಸಿಕೊಂಡು ಬೀಗುವ ಘನ ಉದ್ದೇಶದಿಂದ, ಅವರಿದ್ದಲ್ಲಿಗೆ ಓಡಿದೆ. ನಾನು ಓಡುತ್ತಿರುವುದನ್ನು ನೋಡಿ ಕುತೂಹಲದಿಂದ ಇನ್ನೂ ಕೆಲವರು ಅಲ್ಲಿಗೆ ಜಮಾಯಿಸಿದರು. ಅಲ್ಲಿದ್ದವರು ಏನು ಮಾತನಾಡುತ್ತಿದ್ದಾರೆಂದು ತಿಳಿಯದೆ, ಅಕ್ಕಪಕ್ಕದವರಲ್ಲಿ ವಿಚಾರಿಸುತ್ತಿದ್ದಂತೆ ಮಡಿಕೇರಿಗೆ ಹೋಗುವ ಬಸ್ ಬಂತು. ಆ ವ್ಯಕ್ತಿ ಬಸ್ ಹತ್ತಿದರು. ಆನಂತರ ಗುಂಪು ಕರಗಿತು. ಅಲ್ಲೇ ಇದ್ದ ಸ್ವಲ್ಪ ಹಿರಿಯರಲ್ಲಿ ಅವರ‍್ಯಾರೆಂದು ಕೇಳಿದೆ. "ಕೆ.ವಿ.ಪುಟ್ಟಪ್ಪನವರ ಮಗ ಇಲ್ಲೇ ನೆಂಟರ ಮನೆಗೆ ಬಂದಿದ್ದರಂತೆ" ಎಂದರು.
ಪ್ರಯಾಣ ಮುಂದುವರೆಸಿ ಜಿ.ಎಸ್. ಉಬರಡ್ಕ ಅವರ ಮನೆ ಸೇರಿದೆ. ಆ ಕಾಲದಲ್ಲಿ, ನಮ್ಮೂರು ಬೆಳ್ಳೇಕೆರೆಯಿಂದ ಸುಳ್ಯದ ನಾರ್ಣಕಜೆಯಲ್ಲಿರುವ ಉಬರಡ್ಕ ಅವರ ಮನೆಯನ್ನು ತಲಪಬೇಕಾದರೆ ಬೆಳಗಿನಿಂದ ಸಂಜೆಯ ತನಕದ ಪ್ರಯಾಣ, ಸ್ನಾನ ಊಟಗಳ ನಂತರ ಜಿ.ಎಸ್.ರೊಂದಿಗೆ ಮಾತನಾಡುತ್ತ (ಅವರಾಗಲೇ ಕವನ-ಲೇಖನಗಳನ್ನು ಬರೆಯುತ್ತಿದ್ದರು). "ಇವತ್ತು ಸುಳ್ಯದ ಬಸ್‌ಸ್ಟಾಂಡಿನಲ್ಲಿ ಕುವೆಂಪು ಅವರ ಮಗ ಇದ್ದರು. ಹಲವಾರು ಜನರು ಅವರ ಸುತ್ತ ಸೇರಿದ್ದರು. ನಾನು ಅವರನ್ನು ನೋಡಿ ಯಾರೋ ಸಿನಿಮಾನಟರು ಅಂದುಕೊಂಡೆ" ಎಂದೆ. ಅದಕ್ಕವರು "ಹೋ ತೇಜಸ್ವಿ, ಸಿನಿಮಾ ನಟರಿಗಿಂತ ಹೆಚ್ಚು, ಒಳ್ಳೆಯ ಕಥೆಗಾರ ಈಗ ನಿಮ್ಮೂರಿನ ಹತ್ರವೇ ಇದ್ದಾರೆ" ಎಂದರು. ಸ್ವಲ್ಪ ಹೊತ್ತಿನಲ್ಲಿ ತೇಜಸ್ವಿಯವರ ’ಅಬಚೂರಿನ ಪೋಸ್ಟಾಫೀಸು’ ಪುಸ್ತಕವನ್ನು ತಂದು "ಇಕೊ ಅವರನ್ನು ನೋಡಿಯಾಯ್ತಲ್ಲ, ಈಗ ಓದಿ ನೋಡು" ಎಂದು ಕೊಟ್ಟರು.
ಹೀಗೆ ನನಗೆ ತೇಜಸ್ವಿಯವರ ಪ್ರಥಮ ದರ್ಶನವಾಯಿತು. ಅವರಾಗಲೇ ಮೈಸೂರನ್ನು ಬಿಟ್ಟು ಮೂಡಿಗೆರೆಯ ಬಳಿ ’ಚಿತ್ರಕೂಟ’ದಲ್ಲಿ ಬಂದು ನೆಲೆಸಿದ್ದರು. ಅಬಚೂರಿನ ಪೋಸ್ಟಾಫೀಸು ಓದಿದೆ. ನಮ್ಮದೇ ಪರಿಸರದ ಕಥೆಯಾದ್ದರಿಂದ ಅರ್ಥವಾಗದಿದ್ದರೂ ಖುಷಿಯಾಯಿತು. ಊರಿಗೆ ಹಿಂದಿರುಗುವಾಗ ಜಿ.ಎಸ್.ರಲ್ಲಿ ಲಭ್ಯವಿದ್ದ ತೇಜಸ್ವಿಯವರ ಇನ್ನೂ ಕೆಲವು ಪುಸ್ತಕಗಳನ್ನು ಹಿಡಿದುಕೊಂಡು ಬಂದೆ. ಆಗ ’ಕುಬಿ ಮತ್ತು ಇಯಾಲ’, ’ಡೇರ್ ಡೆವಿಲ್ ಮುಸ್ತಾಫ’, ’ತುಕ್ಕೋಜಿ’ ಮುಂತಾದ ಕಥೆಗಳನ್ನು ಮನೆಯವರೆಲ್ಲ ಓದಿದೆವು.
ಆ ಕಾಲದಲ್ಲಿ ಸಾಮಾನ್ಯವಾಗಿ ಯಾವುದೇ ಹಳ್ಳಿಯ ಪೋಸ್ಟಾಫೀಸುಗಳಲ್ಲಿ ವಿತರಣೆಗೆ ಬರುವ ಪೋಸ್ಟ್ ಮಾಸ್ಟರ್, ಪೋಸ್ಟ್‌ಮ್ಯಾನ್, ಮತ್ತಿತರ ಎಲ್ಲ ಸಿಬ್ಬಂದಿಯವರಿಂದ ದಿನಪತ್ರಿಕೆಗಳಂತೆ ಓದಿಸಿಕೊಂಡು ವಿಳಾಸದಾರರಿಗೆ ತಲಪುತ್ತಿದ್ದುದು, ಎಲ್ಲರಿಗೂ ತಿಳಿದಿದ್ದ ಸಾಮಾನ್ಯ ಸಂಗತಿಯಾಗಿತ್ತು. ಇದು ಹಳ್ಳಿಯಲ್ಲಿದ್ದ ನಮಗೂ ತಿಳಿದೇ ಇದ್ದುದರಿಂದ, ನಾನು ಮತ್ತು ನನ್ನಕ್ಕ ’ಅಬಚೂರಿನ ಪೋಸ್ಟಾಫೀಸು’ ಓದಿದ ನಂತರ
ಯಾವುದೇ ಹಳ್ಳಿಯ ಪೋಸ್ಟಾಫೀಸನ್ನು ಕಂಡರೂ ’ಬೋಬಣ್ಣನ ಮನೆ’ ಎನ್ನುತ್ತಿದ್ದೆವು. ತೇಜಸ್ವಿಯವರ ’ಚಿತ್ರಕೂಟ’
ಮೂಡಿಗೆರೆಯ ಬಳಿಯ ಜನ್ನಾಪುರದ ಪಕ್ಕದ
ಚಂದ್ರಾಪುರ ಎಂಬ ಹಳ್ಳಿಯಲ್ಲಿತ್ತು. ಜನ್ನಾಪುರಕ್ಕೆ ಸಮೀಪದಲ್ಲೇ ಎರಡು ಕಿಲೋಮೀಟರ್ ದೂರದಲ್ಲಿ ಗೋಣೀಬೀಡು ಎಂಬ ಊರು ಇದೆ. ಇದು ತೇಜಸ್ವಿಯವರ ಹಲವು ಕಥೆಗಳಲ್ಲಿ ಬರುವ ಊರು. (ಈ ಊರಿನಲ್ಲಿ ಯು.ಆರ್. ಅನಂತಮೂರ್ತಿಯವರು ಬಾಲ್ಯದಲ್ಲಿ ಶಾಲೆಗೆ ಹೋಗಿದ್ದರಂತೆ, ಅನಂತಮೂರ್ತಿಯವರ ಅಜ್ಜ ಈ ಗೋಣಿಬೀಡಿನ ದೇವಸ್ಥಾನದಲ್ಲಿ ಅರ್ಚಕರಾಗಿದ್ದರಂತೆ). ತೇಜಸ್ವಿಯವರ ಹತ್ತು ಹಲವು ಹವ್ಯಾಸಗಳಿಂದಾಗಿ ಮೂಡಿಗರೆಯ ಸುತ್ತಮುತ್ತಲ ಊರುಗಳಲ್ಲಿ ಹುಚ್ಚು ಹವ್ಯಾಸಿಯೆಂಬ ಖ್ಯಾತಿಯನ್ನು ಆಗಿನ್ನೂ ಗಳಿಸುತ್ತಿದ್ದರಷ್ಟೆ. ಜನರು ಕುತೂಹಲದಿಂದ ಅಲ್ಲಲ್ಲಿ ಅವರ ಬಗ್ಗೆ ಮತ್ತು ಅವರ ಹಲವು ಹವ್ಯಾಸಗಳ ಬಗ್ಗೆ ಮಾತನಾಡುವುದು ಕೇಳಿಬರುತ್ತಿತ್ತು.
ನಾನು ಆಗ ತಾನೇ ಕಾಲೇಜು ಶಿಕ್ಷಣ ಮುಗಿಸಿ ಊರಿಗೆ ಬಂದಿದ್ದೆ. ಬೆಳ್ಳೇಕೆರೆಯ ಸುತ್ತಮುತ್ತ ನಾವೊಂದಷ್ಟು ಜನ ಗೆಳೆಯರು, ರಾತ್ರಿಶಾಲೆ ನಡೆಸುತ್ತಾ, ಜನಸಂಘಟನೆಗಳಲ್ಲಿ ತೊಡಗಿಕೊಳ್ಳಲು ಪ್ರಾರಂಭಿಸಿದ್ದೆವು. ಆ ಸಂದರ್ಭದಲ್ಲಿ ನಾನು ವಿದ್ಯೆ ಕಲಿತ ಹಾನುಬಾಳು ಹೈಸ್ಕೂಲಿನ ವಾರ್ಷಿಕೋತ್ಸವಕ್ಕೆ ತೇಜಸ್ವಿಯವರು ಆಹ್ವಾನಿತರಾಗಿ ಬರಲಿದ್ದಾರೆಂದು ತಿಳಿಯಿತು. ಹಾನುಬಾಳು, ಮೂಡಿಗೆರೆಗೂ ನಮ್ಮೂರು ಬೆಳ್ಳೇಕೆರೆಗೂ ಮಧ್ಯದಲ್ಲಿರುವ ಹೋಬಳಿ ಕೇಂದ್ರ ಸ್ಥಳ. ಆ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ನಾನೂ ಸೇರಿದಂತೆ ನಮ್ಮಲ್ಲಿ ಕೆಲವರ ಸವಾರಿ ಹಾನುಬಾಳಿಗೆ ಹೋಯಿತು. ಅಂದು ತೇಜಸ್ವಿಯವರು ಸಾಹಿತ್ಯ, ಸಾಮಾಜಿಕತೆ, ಇತ್ಯಾದಿಗಳ ಬಗ್ಗೆ ಮಾತಾಡಿದಂತೆ ನೆನಪು. ಆ ವೇಳೆಗಾಗಲೇ ಕರ್ನಾಟಕದಾದ್ಯಂತ ಸಾಹಿತ್ಯವಲಯದಲ್ಲಿ ’ಬ್ರಾಹ್ಮಣ-ಶೂದ್ರ ಚರ್ಚೆ ಜೋರಾಗಿ ನಡೆದಿತ್ತು. ಸಭೆಯಲ್ಲಿದ್ದವರೊಬ್ಬರು ಕುವೆಂಪುರವರ ಸಾಹಿತ್ಯದ ಬಗ್ಗೆ ಕೇಳಿದ ಪ್ರಶ್ನೆ ತೇಜಸ್ವಿಯವರನ್ನು ಸಿಟ್ಟಿಗೆಬ್ಬಿಸಿತು. "ಸಂಸ್ಕೃತ ಜ್ಞಾನವಿಲ್ಲದವರೊಬ್ಬರು ರಾಮಾಯಣ ಬರೆಯೋಕೆ ಹೇಗೆ ಸಾಧ್ಯ ಅಂತೇನೋ ಅವರು ಕೇಳಿದ್ದರು. ಅದಕ್ಕೆ ಉತ್ತರಿಸುತ್ತಾ ಅವರು "ಹೌದ್ರಿ ಶೂದ್ರನೊಬ್ಬ ಸಾಹಿತಿಯಾಗೋದಿರ‍್ಲಿ ಸ್ವಲ್ಪ ಬುದ್ಧಿವಂತ ಅನ್ನಿಸಿಕೊಂಡ್ರೂ ಅವನ ಹುಟ್ಟಿನ ಬಗ್ಗೆ ಅನುಮಾನಪಡೋ ಸಮಾಜ ನಮ್ಮದು, ಹಾಗಾದರೆ ಮೇಲ್ಜಾತಿಯಲ್ಲಿ ಹುಟ್ಟಿದ ದಡ್ಡರ ಬಗ್ಗೆ ಏನನ್ಬೇಕು" ಎಂದು ಗುಡುಗಿದರು. ಆಗ ತಾನೇ ಜೆ.ಪಿ.ಯವರ ಸಂಪೂರ್ಣ ಕ್ರಾಂತಿ, ಹಾಗೂ ಎಡಪಂಥೀಯ ಧೋರಣೆಗಳ ಹುಮ್ಮಸ್ಸಿನಲ್ಲಿದ್ದ ನಮಗೆಲ್ಲ ಅವರ ಮಾತನ್ನು ಕೇಳಿ, ಬತ್ತಳಿಕೆಗೆ ಹೊಸ ಅಸ್ತ್ರವೊಂದು ಸಿಕ್ಕಿದ ಸಂತೋಷವಾಯಿತು. ಆದರೆ ಸಭೆಗೆ ಬಂದಿದ್ದ ಅನೇಕ ಹಿರಿಯರಿಗೆ ತೇಜಸ್ವಿಯವರ ಆ ಮಾತು ಇಷ್ಟವಾಗಲಿಲ್ಲವೆಂದು ನಮಗೆ ನಂತರ ತಿಳಿಯಿತು. "ಏನಾದ್ರೂ ಪುಟ್ಟಪ್ಪನ ಮಗ ಹಂಗ್ ಮಾತಾಡ್ಬಾರ‍್ದಾಗಿತ್ತು" ಎಂದು ಕೆಲವರು ಹೇಳುವುದು ಕೇಳಿಸಿತು.
ಅವರು ಸಾಹಿತ್ಯ, ಸಾಮಾಜಿಕತೆ, ನಮ್ಮ ಪರಿಸರ ಅಂತೆಲ್ಲ ಮಾತಾಡಿದ್ದು ನನ್ನ ತಲೆಯಲ್ಲಿ ಸುತ್ತುತ್ತಲೇ ಇತ್ತು. ಅವರ ಕೆಲವು ಕಥೆಗಳನ್ನೂ ಓದಿಕೊಂಡಿದ್ದೆ. ಆದ್ದರಿಂದ ನಮ್ಮ ಪರಿಸರ ಯಾರು ಬೇಕಾದರೂ ಕಥೆಬರೆಯಲು ಬಹಳ ಸೂಕ್ತವಾದ ಸ್ಥಳ ಎಂಬ ತೀರ್ಮಾನಕ್ಕೆ ಬಂದೆ. ಕಥೆಯೊಂದನ್ನು ಬರೆದು ಸುಧಾ ವಾರಪತ್ರಿಕೆಗೆ ಕಳುಹಿಸಿದೆ. ಅದು ಪ್ರಕಟವಾಗಿಯೇ ಬಿಟ್ಟಿತು.
ಕಥೆಯಲ್ಲಿ ನಮ್ಮೂರಿನ ಕೆಲವರನ್ನು ನನಗೆ ತಿಳಿದ ಮಟ್ಟಿಗೆ ಯಥಾವತ್ತಾಗಿ ಚಿತ್ರಿಸಿದ್ದೆ. ಯಾರ ಮೂಲಕವೋ ಅವರಿಗೆಲ್ಲ ಆ ವಿಚಾರ ತಿಳಿದು ಅದು ಊರಲ್ಲಿ ಗುಸುಗುಸು ಸುದ್ದಿಯಾಯಿತು. ಕುತೂಹಲದಿಂದ ಪತ್ರಿಕೆ ತರಿಸಿಕೊಂಡು ಓದಿದ ಕೆಲವರು "ಪಾಪ ರೈಟ್ರು (ನಮ್ಮಪ್ಪ ಕಾಫಿ ತೋಟವೊಂದರಲ್ಲಿ ರೈಟರ್ ಆಗಿ ಕೆಲಸ ಮಾಡುತ್ತಿದ್ದರು) ಕಷ್ಟಪಟ್ಟು ಮಗನಿಗೆ ವಿದ್ಯೆ ಕಲಿಸಿದರೆ ಇವನು ಹೀಗಾದನಲ್ಲ ಎಂದು ನಮ್ಮಪ್ಪನ ಬಗ್ಗೆ ಮರುಕ ತೋರಿದರು!. ಆ ಕಾಲದಲ್ಲಿ ಕಥೆ, ಸಾಹಿತ್ಯ, ನಾಟಕ ಇತ್ಯಾದಿಗಳ ಹುಚ್ಚು ಹತ್ತಿಸಿಕೊಂಡವರು ಕೆಲಸಕ್ಕೆ ಬಾರದ ನಾಲಾಯಕ್ ಜನರೆಂಬ ಭಾವನೆಯೇ ಹೆಚ್ಚಿನವರಲ್ಲಿ ಇತ್ತು. ನಾನು ಮಾತ್ರ, ನಾನೂ ಒಬ್ಬ ಕಥೆಗಾರ ಎಂದು ನಾನು ಬೀಗುತ್ತ ತಿರುಗಿದೆ.
ತೇಜಸ್ವಿಯವರ ಕಥೆಗಳಂತೆಯೇ ಅವರ ಫೋಟೋಗ್ರಫಿ, ಮೀನುಹಿಡಿಯುವ ಹವ್ಯಾಸಗಳೂ ಪ್ರಚಾರ ಪಡೆಯುತ್ತಿದ್ದಂತೆ, ’ಆಚೆವಾರ ಮದನಾಪುರಕ್ಕೆ ಬಂದಿದ್ರಂತೆ ಮೀನು ಹಿಡಿಯೋಕೆ’, ’ಹೋದವಾರ ಮಾವಿನಹಳ್ಳಿ ಎಣ್ಣೆಹೊಳೇಲಿ(ಹೇಮಾವತಿ ನದಿ) ಮೀನು ಹಿಡೀತಿದ್ದರಂತೆ’, ನಮ್ಮ ಮಾವ ಹೇಳ್ದ. ’ಮೊನ್ನೆ ನಾನೇ ಹೋಗಿದ್ದೆ ’ಅಗನಿ ಬೆಣಗಿನ ಹಳ್ಳದಲ್ಲಿ ಸಕತ್ ಮೀನು ಹಿಡುದ್ರು, ಎಂದು ತೇಜಸ್ವಿಯೆಂದರೆ ವಾರದ ಸಂತೆಗೆ ಬರುವ ಮೀನುವ್ಯಾಪಾರಿಯೆಂಬಂತೆ ವರ್ಣಿಸುವವರು ಹುಟ್ಟಿಕೊಂಡರು. ಹಾಗೇ ’ಹೆಂಗ್ ಮೀನಿಡಿತಾರೆ ಅಂತೀರಿ, ಎಲ್ಲ ಬ್ರಿಟಿಷ್‌ನೋರ ತರನೇ ಮಿಷಿನ್‌ಗಾಣ(ಗಾಳ) ಹಿಡ್ಕೊಂಡ್ ಬಂದಿದ್ರು, ಒಂದೊಂದೇ ಮೀನು ಹಿಡ್ದು ತೂಕ ನೋಡಿ ಸಣ್ಣವುನೆಲ್ಲಾ ವಾಪಸ್ ನೀರಿಗೆ ಬಿಡೋರು, ಅವ್ರಿಗೆ ಯಾವುದು ಬೇಕು ಅದನ್ನ ಮಾತ್ರ ಹಿಡಿಯೋರು, ಅದನ್ನ ನೋಡೋದೆ ಒಂದು ಚಂದ.. ನಂಗೂ ನೋಡಿ .. ನೋಡಿ ಸಾಕಾಯ್ತಪ್ಪ ಎಂದು ರೀಲು ಸುತ್ತುವವರೂ ಇದ್ದರು. ಇವರೆಲ್ಲ ಹೇಳುವ ಜಾಗದಲ್ಲಿ ನಿಜವಾಗಿಯೂ ಮೀನು ಇದೆಯೆ ಅಥವಾ ತೇಜಸ್ವಿಯವರು ಅಲ್ಲಿಗೆ ಬಂದಿದ್ದರೇ ಇಲ್ಲವೇ ಅನ್ನುವುದನ್ನು ಯಾರೂ ವಿಚಾರಿಸುತ್ತಿರಲಿಲ್ಲ. ಎಂಬತ್ತರ ದಶಕದ ಹೊತ್ತಿಗಾಗಲೇ ’ಮೀನು ಹಿಡಿಯುವ ತೇಜಸ್ವಿ ನಮ್ಮೂರ ಸುತ್ತಮುತ್ತ, ಭಾರತದಾದ್ಯಂತ ಸಾವಿರಾರು ಊರುಗಳಲ್ಲಿ ಹೇಳುವ, "ಭೀಮ ಬಕಾಸುರನನ್ನು ಕೊಂದಸ್ಥಳ ಇದೇ" ಎಂದು ರಸವತ್ತಾಗಿ ವರ್ಣಿಸುವ, ಸ್ಥಳಪುರಾಣದಂತೆ ಆಗಿಹೋದರು!.
ಹೀಗಿದ್ದ ಸಂದರ್ಭದಲ್ಲಿ ಮುಂದಿನವಾರ ತೇಜಸ್ವಿಯವರು ಎತ್ತಿನಹಳ್ಳಕ್ಕೆ ಮೀನು ಹಿಡಿಯಲು ಬರುತ್ತಾರೆಂಬ ಸುದ್ದಿ ನಮ್ಮ ಪಕ್ಕದ ಗಾಣದಹೊಳೆಯ ಗೆಳೆಯರಿಂದ ಬಂತು (ಊರಿನ ಹೆಸರು ಮಾತ್ರ ಗಾಣದ ಹೊಳೆ, ಅಲ್ಲಿ ಯಾವುದೇ ಹೊಳೆ ಇಲ್ಲ. ಆ ಊರಿನಲ್ಲಿ ನಾವೊಂದಷ್ಟು ಜನ ಗೆಳೆಯರು ’ಮಿತ್ರ ರೈತ ಯುವಕ ಸಂಘ’ ಎಂಬ ಸಂಘವನ್ನು ಸ್ಥಾಪಿಸಿಕೊಂಡಿದ್ದೆವು). ತೇಜಸ್ವಿಯವರು ಮೀನು ಹಿಡಿಯವ ವೃತ್ತಾಂತ ಆಗಲೇ ಧಾರಾವಾಹಿಯಾಗಿ ನಮ್ಮೂರ ಸುತ್ತ ಸುತ್ತುತ್ತಿದ್ದುದರಿಂದ ಮೀನು ಹಿಡಿಯುವುದನ್ನು ನೋಡಲು ನಾನೂ ಹೊರಟೆ. ಆಗ ಇಂದಿನಂತೆ ಮೊಬೈಲ್‌ಗಳಿರಲಿ ಹಳ್ಳಿಗಳಲ್ಲಿ ಫೋನೇ ಇರಲಿಲ್ಲ. ನಾನು ಸೈಕಲ್ಲೇರಿ ಗಾಣದಹೊಳೆ ತಲಪುವ ವೇಳೆಗೆ ಅವರೆಲ್ಲ ಸೇರಿ ಎತ್ತಿನ ಹಳ್ಳಕ್ಕೆ ಹೊರಟು ಹೋಗಿಯಾಗಿತ್ತು. ಅವರಿವರಲ್ಲಿ ಮೀನು ಹಿಡಿಯಲು ಹೋದವರ ದಿಕ್ಕನ್ನು ವಿಚಾರಿಸುತ್ತಾ ನಾನು ಏಕಾಂಗಿಯಾಗಿ ಐದಾರು ಕಿಲೋಮೀಟರು ಸುತ್ತಾಡಿ ಅವರಿರುವ ಸ್ಥಳವನ್ನು ಪತ್ತೆಮಾಡುವ ವೇಳೆಗೆ ಮಧ್ಯಾಹ್ನವಾಯಿತು. ದಟ್ಟ ಕಾಡಿನ ಮಧ್ಯೆ ಎತ್ತಿನಹಳ್ಳದ ಪುಟ್ಟ ಜಲಪಾತವೊಂದರ ಪಕ್ಕದಲ್ಲಿ ಅವರೆಲ್ಲ ಠಿಕಾಣಿ ಹೂಡಿದ್ದರು. ಕಲ್ಲುಗಳನ್ನು ಜೋಡಿಸಿಟ್ಟು ಮಾಡಿದ ಒಲೆಯಮೇಲೆ ದೊಡ್ಡ ಪಾತ್ರೆಯಲ್ಲಿ ಅನ್ನ ಬೇಯುತ್ತಿತ್ತು. ಅಲ್ಲಿ ಏಳೆಂಟು ಜನರಿದ್ದರು. ತೇಜಸ್ವಿಯವರ ಜೊತೆ ಮೂಡಿಗೆರೆಯಿಂದಲೂ ಒಬ್ಬರು ಬಂದಿದ್ದರು. ಅವರಿಗೆ ಹೆಚ್ಚೇನೂ ಮೀನು ದೊರೆತಂತೆ ಕಾಣಿಸಲಿಲ್ಲ. ತೇಜಸ್ವಿಯವರಾಗಲೇ ಉಳಿದವರಿಗೆ, ಹೊಳೆಯಲ್ಲಿ ಸಿಗುವ ಮೀನುಗಳ ಬಗ್ಗೆ ವಿವರಿಸುತ್ತಿದ್ದರು. ನನಗೆ ಮೀನುಗಳ ಬಗ್ಗೆಯಾಗಲೀ, ಮೀನು ಹಿಡಿಯುವ ಬಗ್ಗೆಯಾಗಲೀ ಏನೂ ಜ್ಞಾನವಿಲ್ಲದ್ದರಿಂದ ಸುಮ್ಮನಿದ್ದೆ. ಅಲ್ಲೇ ಇದ್ದ ನನ್ನ ಗೆಳೆಯನೊಬ್ಬ ತೇಜಸ್ವಿಯವರಿಗೆ ನನ್ನನ್ನು ತೋರಿಸಿ "ಇವ್ನೂ ಕಥೆ ಬರೀತಾನೆ" ಎಂದು ಹೇಳಿದ. ಹೊಳೆಯ ಸದ್ದಿನಲ್ಲಿ ಅವರಿಗೆ ಕೇಳಿಸಿತೋ ಇಲ್ಲವೋ ನನ್ನನ್ನು ನೋಡಿ ನಕ್ಕರು. ಅವರೇನಾದರೂ ಕೇಳಿದರೆ ಏನು ಹೇಳುವುದೆಂದು ತಿಳಿಯದೆ ಮೆಲ್ಲನೆ ಹೊಳೆಯತ್ತ ಜಾರಿಕೊಂಡೆ. ಹೊಳೆಯಲ್ಲಿ ಸಾಕಷ್ಟು ನೀರಿತ್ತು. ಒಂದಿಬ್ಬರು ಈಜುತ್ತಿದ್ದರು. ನಾನೂ ಅವರೊಡನೆ ಸೇರಿ ಈಜತೊಡಗಿದೆ. ದಡದಲ್ಲಿ ತೇಜಸ್ವಿಯವರಿಂದ ಮೀನಿನ ಪಾಠ ಮುಂದುವರಿದಿತ್ತು.
ಊಟಕ್ಕೆ ಕುಳಿತಾಗ ದೊಡ್ಡ ದೊಡ್ಡ ಎಲೆಗಳಲ್ಲಿ ಅನ್ನದ ಗುಡ್ಡೆಯನ್ನು ಪೇರಿಸಿಕೊಂಡು ನಮ್ಮ ಗಾಣದಹೊಳೆಯ ಹುಡುಗರು ಕುಳಿತರು. ಊಟ ಮುಂದುವರಿದಂತೆ ಈ ಅನ್ನದ ಗುಡ್ಡೆಗಳು ಕರಗಿ ಖಾಲಿಯಾಗುತ್ತಿದ್ದ ಪರಿಯನ್ನು ಕಂಡ ತೇಜಸ್ವಿಯವರು "ನಿಮ್ಗೆ ಸಣ್ಣ ಪುಟ್ಟ ಶಿಕಾರಿ ಸಾಕಾಗಲ್ಲ ಕಣ್ರಯ್ಯ ಏನಿದ್ರೂ ಮೂರು ಆನೆ ಹೊಡ್ಕೊಡ್ಬೇಕು ಅಷ್ಟೆ" ಎಂದು ಗಹಗಹಿಸಿ ನಕ್ಕರು.
ನಂತರದ ದಿನಗಳಲ್ಲಿ ಅವರು ಮೀನು ಹಿಡಿಯಲು ಬರುವುದನ್ನು ಕಡಿಮೆಮಾಡಿದರು.
ನಾವು ಹಲವು ಮಂದಿ ಗೆಳೆಯರು ರೈತ ಚಳವಳಿಯಲ್ಲಿ ತೊಡಗಿಕೊಂಡಿದ್ದೆವು. ತಾಲ್ಲೂಕುಕೇಂದ್ರ ಅಥವಾ ಜಿಲ್ಲಾಕೇಂದ್ರಗಳಲ್ಲಿ ರೈತ ಸಂಘ ನಡೆಸುತ್ತಿದ್ದ ಅಭ್ಯಾಸ ಶಿಬಿರಗಳಲ್ಲಿ ಕೆಲವು ಬಾರಿ ತೇಜಸ್ವಿಯವರು ಬಂದು ಮಾತಾಡಿದ್ದುಂಟು. ಆದರೆ ನಮಗ್ಯಾರಿಗೂ ಆಗ ಅವರೊಂದಿಗೆ ಹೆಚ್ಚಿನ ಸಂಪರ್ಕವಾಗಲೀ ಸಲಿಗೆಯಾಗಲೀ ಬೆಳೆಯಲಿಲ್ಲ.
ರೈತಸಂಘದ ಅಭ್ಯಾಸ ಶಿಬಿರಗಳಲ್ಲೂ ಅಷ್ಟೆ ರೈತ ಸಂಘದ ಕಾರ್ಯಕ್ರಮಗಳೂ ಅವರ ವಿಮರ್ಶೆಗೆ ಒಳಗಾಗುತ್ತಿದ್ದವು. ಅದರಲ್ಲೂ ಕಾನೂನುಭಂಗದಂತಹ ಚಳವಳಿಗಳನ್ನು ನೀವು ಕೈಗೆತ್ತಿಕೊಂಡಾಗ ನಿಮ್ಮಲ್ಲಿ ಸ್ಪಷ್ಟತೆ ಮತ್ತು ಸಮರ್ಥ ನಾಯಕತ್ವ ಎರಡೂ ಇಲ್ಲದಿದ್ದರೆ ಖಂಡಿತವಾಗಿಯೂ ಅರಾಜಕತೆಯನ್ನು ಸೃಷ್ಟಿಸುತ್ತೀರಿ, ನಿಮ್ಮ ಉದ್ದೇಶವೂ ಸಾಧ್ಯವಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು. ಆ ಸಂದರ್ಭದಲ್ಲಿ ರೈತ ಸಂಘ ಹಳ್ಳಿಗಳಲಿ, ಸಣ್ಣಪುಟ್ಟ ಜಗಳಗಳ ತೀರ್ಮಾನದಿಂದ ಹಿಡಿದು, ಪ್ರತಿಯೊಂದು ನಿರ್ಧಾರವೂ ಸಂಘದ ನೇತೃತ್ವದಲ್ಲೇ ನಡೆಯುವಂತೆ ಪ್ರಯತ್ನಿಸುತ್ತಿತ್ತು. ಇದರಿಂದ ಕೆಲವು ಕಡೆ ಘರ್ಷಣೆಗಳೂ ಆದವು. ಇನ್ನು ಕೆಲವು ಕಡೆಗಳಲ್ಲಿ ರೈತಸಂಘದ ಹೆಸರಿನಲ್ಲಿ ಕೆಲವರು ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿದರು. ತೇಜಸ್ವಿಯವರು ಅಂದು ಹೇಳಿದ ಮಾತುಗಳು ಮಲೆನಾಡಿನ ಮಟ್ಟಿಗಂತೂ ಬಹಳ ಬೇಗ ನಿಜವಾಗಿಬಿಟ್ಟಿತು.
ಮಲೆನಾಡಿನಲ್ಲಿ ರೈತ ಸಂಘದ ಪ್ರಬಲ ಸಮರ್ಥಕರಾಗಿದ್ದವರೆಲ್ಲ ಹಳ್ಳಿಗಳ ಸಣ್ಣ ರೈತರೇ. ಕಾಫಿ ವಲಯದ ಹೆಚ್ಚಿನ ಪ್ಲಾಂಟರುಗಳೆಲ್ಲ ರೈತ ಸಂಘದ ವಿರೋಧವೇ ಇದ್ದರು. ತೋಟ ಕಾರ್ಮಿಕರಲ್ಲೂ ರೈತಸಂಘದ ಬಗ್ಗೆ ಅಂಥಾ ಒಲವೇನೂ ಇರಲಿಲ್ಲ. ರೈತಸಂಘವೆಂದರೆ ಜಮೀನಿದ್ದವರ ಸಂಘವೆಂದೇ ಅವರು ತಿಳಿದಿದ್ದರು. ಅದಲ್ಲದೆ ರೈತಸಂಘಕ್ಕೆ ಮಲೆನಾಡಿನಲ್ಲಿ ಭೂ ರಹಿತ ಕೂಲಿಕಾರ್ಮಿಕರ- ದಲಿತರ ಬೆಂಬಲ ಕೂಡಾ ಅಷ್ಟಾಗಿ ದೊರಕಲೇ ಇಲ್ಲ. ಇದಕ್ಕೆ ರೈತಸಂಘದ ಸೈದ್ಧಾಂತಿಕ ನೆಲೆಗಟ್ಟಿನ ದೌರ್ಬಲ್ಯವೇ ಕಾರಣವಾಗಿರಬಹುದು. ನಮ್ಮೂರಿನಲ್ಲಿದ್ದಂತಹ ಕೆಲವು ರೈತಸಂಘದ ಶಾಖೆಗಳನ್ನು ಬಿಟ್ಟರೆ ಹೆಚ್ಚಿನ ಕಡೆಗಳಲ್ಲಿ ರೈತಸಂಘದ ಸದಸ್ಯರು ಕೂಲಿ ಕಾರ್ಮಿಕರನ್ನು ತಮ್ಮೊಂದಿಗೆ ಸೇರಿಸಿಕೊಳ್ಳುವುದಿರಲಿ, ಏಕ ಪಕ್ಷೀಯವಾಗಿ ಕೃಷಿಕೂಲಿಯನ್ನು ಇಳಿಸುವಂತಹ ಕ್ರಮಕ್ಕೂ ಮುಂದಾಗಿದ್ದರು. ಇದರೊಂದಿಗೆ ರೈತ ಸಂಘದ ನಗರ - ಹಳ್ಳಿ ವಿಭಜನೆ ಕೂಡಾ ಸ್ಪಷ್ಟತೆಯನ್ನು ಪಡೆದುಕೊಳ್ಳದೆ ನಗರಗಳ ಕೆಳವರ್ಗದ ಜನರ ಬೆಂಬಲ ಕೂಡಾ ರೈತಸಂಘಕ್ಕೆ ಸಿಗದೇ ಹೋಯಿತು. ಕಾಂಗ್ರೆಸ್ ವಿರೋಧಿ ನೆಲೆಯಲ್ಲಿ ರೈತಸಂಘದಲ್ಲಿದ್ದ ಅನೇಕರು ಹೆಗಡೆ ಸರ್ಕಾರದ ಬಗ್ಗೆ ಮೃದು ಧೋರಣೆ ಹೊಂದಿದ್ದರು. ಅಲ್ಲದೆ ಅಂದಿನ ಹೆಗಡೆ ಸರ್ಕಾರ ಕೂಡಾ ರೈತಸಂಘವನ್ನು ಒಂದೆಡೆ ಪೋಲಿಸ್ ಬಲದಿಂದ ತುಳಿಯುತ್ತಾ ಇನ್ನೊಂದೆಡೆ ಓಲೈಸುತ್ತಾ ಜನರಲ್ಲಿ ಗೊಂದಲ ಸೃಷ್ಟಿಸಿ ಬಿಟ್ಟಿತು. ಅದಕ್ಕೆ ಸರಿಯಾಗಿ ಪಂಚಾಯತ್ ಚುನಾವಣೆ ಮಟ್ಟದಲ್ಲಿ ಪ್ರಯತ್ನಿಸದೆ ಏಕಾಏಕಿ ಪಾರ್ಲಿಮೆಂಟಿಗೇ ಅಭ್ಯರ್ಥಿಗಳನ್ನು ಹಾಕುವಂತಹ ಆತುರದ ನಿರ್ಧಾರವನ್ನು ರೈತಸಂಘ ಮಾಡಿತು. ಈ ಎಲ್ಲಾ ಕಾರಣಗಳಿಂದ ಅನೇಕರು ರೈತಸಂಘದಿಂದ ದೂರವಾಗಿ ಅನೇಕ ಪಕ್ಷಗಳಲ್ಲಿ ಹಂಚಿಹೋದರು. ಬಯಲು ಸೀಮೆಯಲ್ಲಿ ರೈತ ಸಂಘ ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡು ಮುಂದುವರಿದರೂ ಮಲೆನಾಡಿನಲ್ಲಿ ನಾಮಾವಶೇಷವಾಗಿಹೋಯಿತು.
* * *
ತೇಜಸ್ವಿಯವರು ಈ ದಾರಿಯಲ್ಲಿ ಅನೇಕ ಬಾರಿ ಓಡಾಡಿದ್ದರೂ ನಮ್ಮೂರು ಬೆಳ್ಳೇಕೆರೆಗೆ (ಬೆಳ್ಳೇಕೆರೆ ಸಕಲೇಶಪುರ-ಮೂಡಿಗೆರೆ ರಸ್ತೆಯಲ್ಲಿ ಹತ್ತು ಕಿ.ಮೀ. ದೂರದಲ್ಲಿರುವ ಹಳ್ಳಿ) ಕಾರ್ಯಕ್ರಮವೊಂದಕ್ಕೆ ಪ್ರಥಮಬಾರಿಗೆ ಬಂದದ್ದು ೧೯೮೮ ರಲ್ಲಿ. ಆ ವೇಳೆಗಾಗಲೇ ಅವರು ’ಚಿತ್ರಕೂಟ’ವನ್ನು ಬಿಟ್ಟು ಮೂಡಿಗೆರೆ ಹ್ಯಾಂಡ್‌ಫೋಸ್ಟ್ ಹತ್ತಿರದ ’ನಿರುತ್ತರ’ದಲ್ಲಿ ನೆಲೆಸಿದ್ದರು. ನಮ್ಮ ಗೆಳೆಯರ ಬಳಗ ಆ ವೇಳೆಗಾಗಲೇ ಸುಮಾರು ಹತ್ತುವರ್ಷಗಳಿಂದ ಹಲವು ಚಳುವಳಿಗಳು, ಹೋರಾಟಗಳು, ಮತ್ತು ಕೆಲವು ವರ್ಷಗಳ ರಂಗ ಚಟುವಟಿಕೆಗಳನ್ನು ನಡೆಸಿದ್ದೆವಾದರೂ, ಆಗಷ್ಟೇ ಪ್ರಥಮ ಬಾರಿಗೆ ಒಂದು ರಂಗ ತರಬೇತಿ ಶಿಬಿರವನ್ನು ನಡೆಸುವ ಯೋಜನೆ ಹಾಕಿದ್ದೆವು. ಶಿಬಿರದ ನಿರ್ದೇಶಕರಾಗಿ ಮಂಡ್ಯ ರಮೇಶ್ ಮತ್ತು ಈಗ ರಂಗಾಯಣದಲ್ಲಿ ನಟರಾಗಿರುವ ಕೃಷ್ಣಕುಮಾರ್ ನಾರ್ಣಕಜೆ ಬರುವವರಿದ್ದರು. ಶಿಬಿರದ ಉದ್ಘಾಟನೆಗೆ ತೇಜಸ್ವಿಯವರನ್ನು ಆಹ್ವಾನಿಸುವುದೆಂದು ತೀರ್ಮಾನವಾಯ್ತು. ಆದರೆ ನಮಗ್ಯಾರಿಗೂ ಅವರಲ್ಲಿ ನೇರವಾಗಿ ಮಾತನಾಡಿ ಆಹ್ವಾನಿಸುವಷ್ಟು ಪರಿಚಯ-ಧೈರ್ಯ ಎರಡೂ ಇರಲಿಲ್ಲ. ಆದ್ದರಿಂದ ತೇಜಸ್ವಿಯವರಿಗೆ ಚೆನ್ನಾಗಿ ಪರಿಚಯವಿರುವ ಮೂಡಿಗೆರೆಯ ರೈತಸಂಘದ ನಮ್ಮ ಗೆಳೆಯರೊಬ್ಬರ ಸಹಾಯವನ್ನು ಕೇಳಿದೆವು.(ನಮ್ಮ ರಂಗತಂಡದ ಹಲವರು ರೈತಸಂಘದಲ್ಲಿದ್ದೆವು.) ಆದರೆ ಆ ಗೆಳೆಯರು
"ತೇಜಸ್ವಿಯವರು ಹೇಳಿದ ಯಾವುದೋ ಕೆಲಸವನ್ನು ಒಪ್ಪಿಕೊಂಡು ಮಾಡದೆ ಈಗ ಅವರ ಎದುರಿಗೆ ಸಿಕ್ಕದೆ ಕದ್ದು ತಿರುಗುತ್ತಿದ್ದೇನೆ ನಾನು ಬರುವುದಿಲ್ಲ ಎಂದರು!.
ಆ ಸಮಯದಲ್ಲಿ ನಮ್ಮ ಬಳಗದ ಗೆಳೆಯ ರಿಚರ‍್ಡ್ ಲೋಬೊ ಬೆಳ್ಳೇಕೆರೆಯಲ್ಲಿ ಮಂಡಲ ಉಪಪ್ರಧಾನರಾಗಿದ್ದರು. ಅವರ ತಂದೆ ಜಾನ್ ಲೋಬೋರವರಿಗೆ ಹಿಂದೆ ಮೂಡಿಗೆರೆಯ ಪಕ್ಕದ ಜನ್ನಾಪುರದಲ್ಲಿ ಕಾಫಿತೋಟವಿದ್ದು ತೇಜಸ್ವಿಯವರ ನೆರೆಯವರಾಗಿದ್ದರು. ಮೂಡಿಗೆರೆಯ ಚರ್ಚಿನ ಪಾದ್ರಿಯೊಬ್ಬರು ಆಗಾಗ ಲೋಬೋರವರ ಮನೆಗೆ ಭೇಟಿ ನೀಡುತ್ತಿದ್ದರಂತೆ. ಆ ಪಾದ್ರಿ ಬಿಳಿಯ ಜುಬ್ಬಾ ಪೈಜಾಮ ಧರಿಸುತ್ತಿದ್ದು ಬರುವಾಗಲೆಲ್ಲ ಮಕ್ಕಳಿಗೆಂದು ಚಾಕಲೇಟ್ ತರುತ್ತಿದ್ದರಂತೆ. ಅವರನ್ನು ಕಂಡೊಡನೆಯೇ ರಿಚರ‍್ಡ್ ಮತ್ತು ಅವರ ಅಣ್ಣ ತಮ್ಮಂದಿರೆಲ್ಲ ಅವರ ಸುತ್ತ ಸೇರುತ್ತಿದ್ದರು.
ಪಕ್ಕದಲ್ಲೇ ತೋಟವನ್ನು ಹೊಂದಿದ್ದ ತೇಜಸ್ವಿಯವರು ಕೂಡಾ ಕೆಲವುಸಾರಿ ಜುಬ್ಬಾ ಪೈಜಾಮ ಧರಿಸುತ್ತಿದ್ದರಂತೆ. ಅದರಿಂದ ತೇಜಸ್ವಿಯವರನ್ನು ’ಇವರೂ ಒಬ್ಬರು ಪಾದ್ರಿಯಿರಬೇಕೆ’ಂದುಕೊಂಡಿದ್ದ ರಿಚರ‍್ಡ್‌ರ ಅಣ್ಣ ತಮ್ಮಂದಿರು (ಆಗ ಇವರೆಲ್ಲ ಶಾಲೆಗೆ ಹೋಗುವ ಹುಡುಗರು)ಚಾಕಲೇಟ್ ಸಿಕ್ಕೀತೆಂಬ ಆಸೆಯಿಂದ
ತೇಜಸ್ವಿಯವರು ಬರುವ ದಾರಿಯಲ್ಲಿ ಕಾದು ನಿಂತು, ಅವರ ಮುಂದೆ ಸುಳಿದಾಡುತ್ತಿದ್ದರಂತೆ!. ಈ ನೆನಪಿನ ಎಳೆಯನ್ನೇ ಹಿಡಿದು ರಿಚರ‍್ಡ್ ಮತ್ತು ನಾನು ಮೂಡಿಗೆರೆಗೆ ತೇಜಸ್ವಿಯವರ ಮನೆಗೆ ಹೋದೆವು. ರಿಚರ‍್ಡ್ ತಮ್ಮ ಪರಿಚಯ ಹೇಳಿಕೊಂಡೊಡನೆ ತೇಜಸ್ವಿಯವರು ಜಾನ್ ಲೋಬೋರವರನ್ನು ನೆನಪಿಸಿಕೊಂಡು ತುಂಬ ಮಾತನಾಡಿದರು ಮನೆಮಂದಿಯ ಬಗ್ಗೆಯೆಲ್ಲ ಮಾತುಕತೆ ಸಾಗಿತು.
ನಾನು ಹೇಗಾದರೂ ಅವರನ್ನು ಮಾತಿಗೆ ಎಳೆಯುವ ಉದ್ದೇಶದಿಂದ ಮಧ್ಯೆ ಬಾಯಿ ಹಾಕಿ "ತೋಟ ಹೇಗಿದೆ ಸಾರ್ ಎಂದೆ.
"ಈಗ ಬರ‍್ತಾ ದಾರೀಲಿ ನೋಡ್ಲಿಲ್ವೇನ್ರಿ, ಗಿಡ ಹಾಕಿ ಎಂಟು ವರ್ಷ ಆಯ್ತು, ಈಗ ನೋಡಿದ್ರೆ ಜಾಡ್ಸಿ ಒದ್ದು ಬಿಡಬೇಕು ಹಂಗಿದೆ!" ಎಂದರು. ನಾನು ತೆಪ್ಪಗಾದೆ. ಲೋಬೋ ಮಾತು ಮುಂದುವರೆಸಿದರು.
"ನೀವೆಲ್ಲ ಹುಡುಗ್ರು ಬೆಳ್ದಿದ್ದೀರಿ ನಾನು ಗುರುತು ಹಿಡಿಯೋಕ್ಕಾಗಲ್ಲ ಸದ ನೀನು ನೆನಪಿಟ್ಕೊಂಡಿದ್ದೀಯಲ್ಲ! ಮತ್ತೆ ಏನ್ ವಿಷ್ಯ ಎಂದರು. ಲೋಬೋ ನನ್ನತ್ತ ನೋಡಿದರು.
ನಾನು ಮೆಲ್ಲನೆ ನಮ್ಮ ರಂಗತರಬೇತಿ ಶಿಬಿರದ ವಿಚಾರವಾಗಿ ಮುದ್ರಿಸಿಕೊಂಡಿದ್ದ ಸಣ್ಣ ಕರಪತ್ರವೊಂದನ್ನು ಅವರಿಗೆ ಕೊಟ್ಟೆ. ಅದನ್ನು ತೆಗೆದುಕೊಂಡು ಸ್ವಲ್ಪ ಹುಬ್ಬುಗಂಟಿಕ್ಕಿ ನನ್ನನ್ನೇ ನೋಡಿದರು. ನೋಡಿದ ರೀತಿ ಚಂದಾ ವಸೂಲಿಗೆ ಬರುವವರನ್ನು ನೋಡಿದಂತಿತ್ತು. ಕೂಡಲೇ ನಾನು ಗಾಬರಿಯಿಂದ "ಇದೊಂದು ಕಾರ್ಯಕ್ರಮ ಮಾಡ್ತಾ ಇದ್ದೀವಿ ನೀವು ಬರ‍್ಬೇಕು"ಎಂದೆ.
ನಿಧಾನವಾಗಿ ಕರಪತ್ರವನ್ನು ಓದಿದರು. ನಿಧಾನವಾಗಿ ಮುಖಚಹರೆ ಬದಲಾಯಿತು.
"ಈ ಕಾಡಲ್ಲಿ ಕೂತ್ಕೊಂಡು ಇದೆಲ್ಲ ಮಾಡೋಕೆ ನಿಮ್ಗೆ ಹೆಂಗ್ ಹೊಳೀತು ಮಾರಾಯ್ರ, ಎಂದ್ ಹೇಳು ಬರ‍್ತೀನಿ" ಎಂದರು.
"ಸಾರ್ ನೀವು ಬರುವ ವ್ಯವಸ್ಥೆ" ಎಂದೆ ಅವಸರದಿಂದ.
"ಎಂಥದ್ದೂ ಬೇಡ ನನ್ ಸ್ಕೂಟರಿದೆ ಬರ‍್ತೀನಿ"
ಕಾರ್ಯಕ್ರಮದ ದಿನಾಂಕ ಸಮಯವನ್ನೆಲ್ಲ ತಿಳಿಸಿದ ರಿಚರ‍್ಡ್ ತೇಜಸ್ವಿಯವರನ್ನು ಕಾರ್ಯಕ್ರಮದ ದಿನ ರಾತ್ರಿ ಊಟಕ್ಕೆ ಅವರಲ್ಲಿಗೆ ಬರುವಂತೆ ಆಹ್ವಾನಿಸಿದರು. ತೇಜಸ್ವಿಯವರನ್ನು ಒಪ್ಪಿಸಿದ ಖುಷಿಯಲ್ಲಿ ಊರಿಗೆ ಬಂದೆವು. ಉದ್ಘಾಟನಾ ಸಮಾರಂಭದ ಸಿದ್ದತೆಗಳು ನಡೆದವು ಮತ್ತು ಅದಕ್ಕೊಂದು ಕರಪತ್ರವೂ ತಯಾರಾಯಿತು.
೧೯೮೮ ನವೆಂಬರ್ ಒಂದರಂದು-ಕನ್ನಡ ರಾಜ್ಯೋತ್ಸವದ ದಿನ ಸಂಜೆ ಐದು ಗಂಟೆಗೆ ರಂಗ ತರಬೇತಿ ಶಿಬಿರದ ಉದ್ಘಾಟನೆಯಾಗಲಿತ್ತು. ನಮ್ಮ ಗೆಳೆಯರ ಬಳಗವೆಲ್ಲ ಉತ್ಸಾಹದಿಂದ ಸೇರಿತ್ತು. ನಿರ್ದೇಶಕರುಗಳಾದ ಮಂಡ್ಯರಮೇಶ್ ಮತ್ತು ಕೃಷ್ಣಕುಮಾರ್ ಹಿಂದಿನ ದಿನವೇ ಬಂದಿದ್ದರು.
ಸಂಜೆ ವೇಳೆಗೆ ಸಕಲೇಶಪುರದಿಂದ ಬಂದ ಕೆಲವರು ಗೆಳೆಯರು "ನಿಮಗೆ ಅಷ್ಟೂ ಬುದ್ದಿ ಬೇಡ್ವಾ? ಅವರಿಗೆ ಇವತ್ತು ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ಇದೆ. ಅವರೇನೋ ಮರ‍್ತು ನಿಮಗೆ ಡೇಟ್ ಕೊಟ್ಟಿದ್ದಾರೆ. ನೀವು ಫೋನ್ ಮಾಡಿ ವಿಚಾರಿಸೋದಲ್ವ?" ಎಂದು ಬೈದರು. ಫೋನ್ ಮಾಡಿ ಕೇಳಲು ಆಗ ನಮ್ಮೂರಲ್ಲಿ ಫೋನೇ ಇರಲಿಲ್ಲ. ದೂರದ ಕೆಲವು ದೊಡ್ಡ ಕಾಫಿ ತೋಟಗಳಲ್ಲಿ ಮಾತ್ರ ಫೋನಿತ್ತು ಅಥವಾ ನಾವೇ ಮೂಡಿಗೆರೆಗೆ ಹೋಗಿ ವಿಚಾರಿಸಬೇಕಿತ್ತು ಆದರೆ ಮೂಡಿಗೆರೆ ಇಲ್ಲಿಂದ ೨೬ ಕಿ ಮೀ ದೂರವಿದೆ.
ತೇಜಸ್ವಿಯವರ ಆಸೆ ಬಿಟ್ಟು ಊರಲ್ಲೇ ಯಾರಾದರೂ ಹಿರಿಯರಿಂದ ಉದ್ಘಾಟನೆ ಮಾಡಿಸುವುದೆಂದು ತೀರ್ಮಾನಿಸಿ ಹಿರಿಯರೊಬ್ಬರನ್ನು ಹುಡುಕಿ ಕಾರ್ಯಕ್ರಮ ಉದ್ಘಾಟನೆಗೆ ಅವರನ್ನು ಒಪ್ಪಿಸಿ ಕರೆತಂದೂ ಆಯ್ತು. ಸಂಜೆ ಐದು ಗಂಟೆಗೆ ಸರಿಯಾಗಿ ತೇಜಸ್ವಿಯವರು ಸ್ಕೂಟರಿನಲ್ಲಿ ಹಾಜರ್! ಜೊತೆಯಲ್ಲಿ ಕೆಂಜಿಗೆ ಪ್ರದೀಪ್ ಕೂಡ ಇದ್ದರು.
"ಸಾರ್ ಬೆಂಗಳೂರಿಗೆ ಹೋಗಲಿಲ್ವೆ?" ಆಶ್ಚರ್ಯ ಮತ್ತು ಸಂತೋಷದಿಂದ ನಾವೆಲ್ಲ ಒಟ್ಟಿಗೆ ಕಿರುಚಿಕೊಂಡೆವು.
"ಯಾರಿಗೆ ಬೇಕು ಮಾರಾಯ್ರ, ಅಲ್ಲಿ ವೇದಿಕೆ ಮೇಲೆ ಕೂರ‍್ಸಿ ವಾಚಾಮಗೋಚರವಾಗಿ ಹೊಗಳೋದು ತಡ್ಕೊಳ್ಳೋಕ್ಕಾಗಲ್ಲ ಇಲ್ಲೇ ಇಷ್ಟ ಆಯ್ತು ಬಂದ್ ಬಿಟ್ಟೆ" ಎಂದರು!
ಶಿಬಿರವನ್ನು ಉದ್ಘಾಟಿಸಿ, ರಂಗಶಿಬಿರದ ಅಗತ್ಯದ ಬಗ್ಗೆ ಹಾಗೂ ಮಲೆನಾಡಿನಲ್ಲಿ ರಂಗ ಚಟುವಟಿಕೆಗಳನ್ನು ನಡೆಸಲು ಇರುವ ಕಷ್ಟಗಳ ಬಗ್ಗೆ ಮಾತಾಡಿದರು ಅಂದು ಮಕ್ಕಳಿಂದ ಒಂದು ನಾಟಕ ಪ್ರದರ್ಶನವಿತ್ತು. ನಾಟಕದ ವಸ್ತುವೂ ಕಾಡು, ಪ್ರಾಣಿಗಳು ಮತ್ತು ಪರಿಸರದ ಬಗ್ಗೆಯೇ ಇತ್ತು. ಮಕ್ಕಳ ಅಭಿನಯವನ್ನು ಮೆಚ್ಚಿಕೊಂಡು ಈ ಕೆಲಸ ಮುಂದುವರಿಸಿ ಮಕ್ಕಳಿಗೆ ಆಸಕ್ತಿ ಮೂಡಿಸೋದು ಬಹಳ ಮುಖ್ಯ ಎಂದು ಹೇಳಿ, ನಮ್ಮೆಲ್ಲರ ಬೆನ್ನು ತಟ್ಟಿ ಹೋದರು.
* * *
೨೦೦೮ ರಲ್ಲಿ ಸಕಲೇಶಪುರದ ರೋಟರಿ ಸಂಸ್ಥೆಯ ಆಶ್ರಯದಲ್ಲಿ ’ತೇಜಸ್ವಿ ನೆನಪು’ ಕಾರ್ಯಕ್ರಮವಿತ್ತು. ತೇಜಸ್ವಿಯವರ ಬಗ್ಗೆ ಮಾತನಾಡಲು ವೇದಿಕೆಯಲ್ಲಿ ಪ್ರದೀಪ್ ಕೆಂಜಿಗೆ ಮತ್ತು ನಾನು ಇದ್ದೆವು. ಮೊದಲು ಮಾತನಾಡಿದ ನಾನು ಈ ಮೇಲಿನ ಘಟನೆಯನ್ನು ನೆನಪಿಸಿಕೊಂಡು ತೇಜಸ್ವಿಯವರ ಬಗ್ಗೆ ಮಾತನಾಡಿದೆ. ನಂತರ ಮಾತನಾಡುವಾಗ ಪ್ರದೀಪ್ ಅಂದು ನಡೆದ ಸಂಗತಿಯನ್ನು ಒಂದು ತಿದ್ದುಪಡಿಯೊಂದಿಗೆ ವಿವರಿಸಿದರು. ಆ ದಿನ ನಾವೆಂದುಕೊಂಡಂತೆ ತೇಜಸ್ವಿಯವರು ಸ್ವೀಕರಿಸಬೇಕಾದ್ದು ರಾಜ್ಯೋತ್ಸವ ಪ್ರಶಸ್ತಿ ಅಲ್ಲ. ಅಂದಿನ ಘಟನೆಯನ್ನು ಪ್ರದೀಪ್ ಅವರ ಮಾತಿನಲ್ಲಿ ಕೇಳಿ.
"ಅಂದು ಸಂಜೆ ನಾಲ್ಕರವೇಳೆಗೆ ತೇಜಸ್ವಿಯವರು ’ಬಾ ಇಲ್ಲೇ ಬೆಳ್ಳೇಕೆರೆಗೆ ಹೋಗಿಬರೋಣ, ಒಂದು ರಂಗ ತರಬೇತಿಶಿಬಿರ ಮಾಡ್ತಾ ಇದ್ದಾರೆ’ ಎಂದರು. ಇಬ್ಬರೂ ಅವರ ಸ್ಕೂಟರಿನಲ್ಲೇ ಹೊರಟೆವು. ದಾರಿಯಲ್ಲಿ ಚಿಟ್ಟನಹಳ್ಳದ (ಹಾನುಬಾಳಿನಿಂದೀಚೆ ಅಗಲಟ್ಟಿ ಗ್ರಾಮದಲ್ಲಿ ಚಿಟ್ಟನ ಹಳ್ಳ ಹರಿಯುತ್ತದೆ) ಹತ್ತಿರ ಬರುವಾಗ ಸ್ಕೂಟರ್ ನಿಲ್ಲಿಸಿ ’ಇಲ್ಲಿ ಎಂಥ ಮೀನಿದೆ ನೋಡೋಣ ಬಾ’ ಎಂದು ಹಳ್ಳದ ಹತ್ತಿರ ಹೋದರು. ನಾನು ಅವರ ಹಿಂದೆಯೇ ಹೋದೆ. ಹಳ್ಳದ ಬಳಿ ಪ್ಯಾಂಟಿನ ಜೇಬಿಗೆ ಕೈ ಹಾಕಿ ಏನನ್ನೋ ತೆಗೆದರು. ಅಷ್ಟರಲ್ಲಿ ಒಂದು ಚೀಟಿ ಅವರ ಜೇಬಿನಿಂದ ಜಾರಿ ಕೆಳಗೆ ಬಿತ್ತು. ಹೆಕ್ಕಿ ಕೊಡೋಣವೆಂದು ತೆಗೆದು ನೋಡಿದೆ. ಅದೊಂದು ವಿಮಾನಯಾನದ ಟಿಕೆಟ್ ಅದೂ ದೆಹಲಿಗೆ. ’ನೋಡಿ ಫ್ಲೈಟ್ ಟಿಕೆಟ್ ಎಂದು ಅವರಿಗೆ ಕೊಟ್ಟೆ. ಅದನ್ನೊಮ್ಮೆ ಬಿಡಿಸಿನೋಡಿ ’ಇದರಮನೆ ಹಾಳಾಯ್ತು’ ಎಂದು ಹೊಳೆಗೆಸೆದರು. ಹೊಳೆಯಲ್ಲಿನ ಮೀನುಗಳನ್ನು ನೋಡಿ ಮತ್ತೆ ಬೆಳ್ಳೇಕೆರೆಯತ್ತ ಹೊರಟೆವು.
ಅವರ ತಬರನ ಕಥೆ ಸಿನಿಮಾ ಆಗಿ ಕಥಾ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ಗಳಿಸಿತ್ತು. ಪ್ರಶಸ್ತಿ ಸ್ವೀಕರಿಸಲು ದೆಹಲಿಗೆ ಹೋಗಲು ಸರ್ಕಾರ ಕಳಿಸಿದ ವಿಮಾನಯಾನದ ಟಿಕೆಟ್ಟಾಗಿತ್ತು ಅದು." ದೆಹಲಿಗೆ ಹೋಗುವುದನ್ನು ಬಿಟ್ಟು ಅಂದು ಅವರು ಬೆಳ್ಳೇಕೆರೆಗೆ ನಮ್ಮ ರಂಗ ಶಿಬಿರದ ಉದ್ಘಾಟನೆಗಾಗಿ ಬಂದಿದ್ದರು !
* * *
ನಮ್ಮ ರಂಗ ತಂಡದ ನಟಿ ಶೋಭಾ, ತೇಜಸ್ವಿಯವರ ಕಾದಂಬರಿ ’ಕರ್ವಾಲೋ’ ದಲ್ಲಿ ಬರುವ "ಬಿರ್ಯಾನಿ ಕರಿಯಪ್ಪನ ಮಗಳು. ನಮ್ಮೂರಿಗೆ ಅಂಗನವಾಡಿಗೋ ಶಿಶುವಿಹಾರಕ್ಕೋ ಟೀಚರಾಗಿ ಬಂದ ಶೋಭಾ ನಮ್ಮ ರಂಗತಂಡದ ಹಿರಿಯ ನಟ ಉಗ್ಗಪ್ಪನನ್ನು ಮದುವೆಯಾಗಿ ಇಲ್ಲೇ ನೆಲೆಸಿದಳು. ತೇಜಸ್ವಿಯವರು ಜನ್ನಾಪುರದ "ಚಿತ್ರಕೂಟ"ದಲ್ಲಿದ್ದಾಗ ಈ ಕರಿಯಪ್ಪನ ಸಂಸಾರವೆಲ್ಲ ಅವರಲ್ಲಿಗೆ ಕೆಲಸಕ್ಕೆ ಹೋಗುತ್ತಿತ್ತಂತೆ. ಆ ಪರಿಚಯದಿಂದ ಈಕೆ ರಂಗ ಶಿಬಿರದ ಉದ್ಘಾಟನೆಗೆಂದು ಬಂದಿದ್ದ ತೇಜಸ್ವಿಯವರನ್ನು ಮಾತಾಡಿಸಿದಳು.
ಮುಂದೆ ಈ ಶೋಭಾ ಮೂಡಿಗೆರೆಗೆ ಹೋದಾಗ ಕೆಲವುಸಾರಿ ತೇಜಸ್ವಿಯವರ ಮನೆಗೆ ಹೋಗಿ ನಮ್ಮ ರಂಗ ವಾರ್ತೆಗಳನ್ನು ಬಿತ್ತರಿಸತೊಡಗಿದಳು. ಈಕೆಯ ಮೂಲಕ ತೇಜಸ್ವಿಯವರಿಗೆ ನಮ್ಮ ರಂಗ ಚಟುವಟಿಕೆಗಳು, ನಮ್ಮ ಜಗಳಗಳೆಲ್ಲ ವರದಿಯಾಗತೊಡಗಿದವು.
"ಬಿರ್ಯಾನಿ ಕರಿಯಪ್ಪ ಮಾಂಸದಡುಗೆಗೆ ಬಹಳ ಪ್ರಸಿದ್ಧ. ಈತನ ಖ್ಯಾತಿ ನಮ್ಮ ಸಕಲೇಶಪುರ-ಮೂಡಿಗೆರೆ ಮಾತ್ರವಲ್ಲ ಕೊಡಗಿನ ಸೋಮವಾರಪೇಟೆ ತಾಲ್ಲೂಕಿನವರೆಗೂ ಹರಡಿದೆ. ೧೯೭೦ ಮತ್ತು ೮೦ರ ದಶಕಗಳಲ್ಲಿ ಯಾವುದೇ ಸಮಾರಂಭದಲ್ಲಿ "ಕರಿಯಪ್ಪ ಗೌಡರ ಅಡಿಗೆ" ಎಂದು ಸುದ್ದಿಯಾದರೆ ಸಾಕು ಊಟಕ್ಕೆ ಹಾಜರಾಗುವವರ ಸಂಖ್ಯೆ ಇಮ್ಮಡಿಯಾಗುತಿತ್ತು! ಈ ಅಡಿಗೆ ಕಲೆ ತಂದೆಯಿಂದ ಮಗಳಿಗೂ ಇಳಿದುಬಂದಿದೆ.
* * *
ರಾಜ್ಯದಲ್ಲಿ ಜಿಲ್ಲಾ ಪಂಚಾಯತ್ ಚುನಾವಣೆ ಘೋಷಣೆಯಾಗಿತ್ತು. ಹಾನುಬಾಳು ಕ್ಷೇತ್ರದಿಂದ (ನಮ್ಮ ಬೆಳ್ಳೇಕೆರೆ ಹಾನುಬಾಳು ಹೋಬಳಿಗೆ ಸೇರಿರುವ ಗ್ರಾಮ) ಆ ಬಾರಿ, ಕಾಂಗ್ರೆಸ್‌ಪಕ್ಷದಲ್ಲಿದ್ದ ಅಪ್ಪಣ್ಣ ಎಂಬವರನ್ನು ಕರೆದುತಂದು ಜನತಾದಳದಿಂದ ಅಭ್ಯರ್ಥಿಯಾಗಿ ನಿಲ್ಲಿಸಿದರು. ಜನತಾದಳಕ್ಕೆ ಅನುಕೂಲವಾದ ವಾತಾವರಣ ಕಂಡುಬರುತ್ತಿದ್ದುದರಿಂದ ಆ ಪಕ್ಷದ ಕಾರ್ಯಕರ್ತರು ಎಲ್ಲಾಕಡೆ ಉತ್ಸಾಹದಿಂದ ಓಡಾಡುತ್ತಿದ್ದರು. ನಮ್ಮ ರಂಗ ತಂಡದ ಸದ್ಯರೆಲ್ಲ ಒಟ್ಟಾಗಿ ಚುನಾವಣೆಗೆ ಮುಂಚೆಯೇ ಅಪ್ಪಣ್ಣನವರಲ್ಲಿ "ನೀವು ಗೆದ್ದರೆ ಈ ಬಾರಿ ನಮ್ಮಲ್ಲಿ ನಡೆಯುವ ನೀನಾಸಂ ತಿರುಗಾಟದ ನಾಟಕಗಳಿಗೆ ನೀವು ಪ್ರಾಯೋಜಕರಾಗಬೇಕು" (ನಾಟಕ ಪ್ರದರ್ಶನವೇರ್ಪಡಿಸಲು ಬೇಕಾದ ಹಣಕ್ಕೆ ನಮ್ಮಲ್ಲಿ ಕೊರತೆ ಇತ್ತು) ಎಂಬ ಶರತ್ತಿನೊಡನೆ ಅವರಿಗೆ ಬೆಂಬಲ ಕೊಟ್ಟಿದ್ದೆವು.! ಕಾಂಗ್ರೆಸ್‌ನವರು "ಜನತಾದಳದ ಅಭ್ಯರ್ಥಿ ಕಾಂಗ್ರೆಸ್ ಅಪ್ಪಣ್ಣ" ಎಂದು ಹಾಸ್ಯ ಮಾಡತೊಡಗಿದರು. ಆ ಚುನಾವಣೆಯ ಸಂದರ್ಭದಲ್ಲಿ ರಾಜ್ಯದಲ್ಲಿ ಜನತಾ ಅಲೆ ಇದ್ದುದರಿಂದ ಅಪ್ಪಣ್ಣ ಚುನಾವಣೆಯಲ್ಲಿ ಗೆದ್ದು ಜಿಲ್ಲಾಪಂಚಾಯತ್ ಸದಸ್ಯರಾದರು.
ನಮ್ಮ ಬಳಗವೆಲ್ಲ ಅಪ್ಪಣ್ಣನವರ ಪರವಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದುದರಿಂದ, ಚುನಾವಣೆ ಮುಗಿಯುವವರೆಗೆ ನಾವು ಯಾವುದೇ ರಂಗ ಚಟುಚಟಿಕೆಗೆ ಇಳಿಯಲಿಲ್ಲ. ಆದರೆ ’ನೀನಾಸಂ ತಿರುಗಾಟ’ವನ್ನು ನಮ್ಮಲ್ಲಿ ಪ್ರದರ್ಶನ ನೀಡಲು ಆಹ್ವಾನಿಸಿದ್ದೆವು. ನಮ್ಮ "ಶರತ್ತಿನ ಅಭ್ಯರ್ಥಿ ಚುನಾವಣೆಯಲ್ಲಿ ಗೆದ್ದಿದ್ದರಾದ್ದರಿಂದ ನಾಟಕಗಳ ಪ್ರಾಯೋಜಕರಾಗಲು ಒಪ್ಪಿಕೊಂಡಿದ್ದರು. ಆದ್ದರಿಂದ ನಾವು ಖರ್ಚುವೆಚ್ಚಗಳ ಬಗೆಗೆ ತಲೆಕೆಡಿಸಿಕೊಳ್ಳದೆ ನಾಟಕ ಪ್ರದರ್ಶನದ ವ್ಯವಸ್ಥೆ ಮಾಡಿದರೆ ಸಾಕಾಗಿತ್ತು. ನಾಟಕ ತಂಡದ ವಸತಿಗೆ ನಮ್ಮೂರ ಶಾಲೆಯಿದ್ದರೆ, ಊಟದ ವ್ಯವಸ್ಥೆಗೆ ಮತ್ತು ಅಡಿಗೆಗೆ ಕರಿಯಪ್ಪ ಗೌಡರನ್ನೇ ಕರೆಸಿದ್ದೆವು.
ಆ ವರ್ಷ. ನೀನಾಸಂ ತಿರುಗಾಟ ’ಕನಕಾಗಮನ’, ’ಆಊರು-ಈಊರು’ ಮತ್ತು ’ಕಿರಗೂರಿನ ಗಯ್ಯಾಳಿಗಳು’ ಎಂಬ ಮೂರು ನಾಟಕಗಳನ್ನು ಪ್ರದರ್ಶನಕ್ಕೆ ಸಿದ್ಧಪಡಿಸಿಕೊಂಡಿತ್ತು. ನಾಟಕಗಳಿಗೆ ಪ್ರಾಯೋಜಕರಿದ್ದುದರಿಂದ ಟಿಕೆಟ್ ಇಟ್ಟಿರಲಿಲ್ಲ. ಆಗಷ್ಟೇ ಚುನಾವಣೆಗಳು ಮುಗಿದ ಹುಮ್ಮಸ್ಸಿನಲ್ಲಿ ಇದ್ದುದರಿಂದ ಸುತ್ತಮುತ್ತ ಹಲವು ಊರುಗಳಿಂದ ನಾಟಕ ನೋಡಲು ತುಂಬಾ ಜನ ಬಂದು ಸೇರಿದ್ದರು. ಮೊದಲನೇ ದಿನವೇ ’ಕಿರಗೂರಿನ ಗಯ್ಯಾಳಿಗಳು’ ನಾಟಕ. ಈ ನಾಟಕದಲ್ಲಿ ಕೆಲವು ಮಾತುಗಳು ದಲಿತರನ್ನು ಅವಹೇಳನ ಮಾಡುವಂತೆ ಇದೆ ಎಂದು ಯಾರೋ ಕೆಲವರು ನಮ್ಮೂರಿನ ದಲಿತ ಹುಡುಗರಿಗೆ ಹೇಳಿದ್ದರಂತೆ. ಅದಕ್ಕೆ ತಾಳೆಯಾಗುವಂತೆ ನಾಟಕದ ಪ್ರಥಮಾರ್ಧದಲ್ಲಿ ದಲಿತರನ್ನು ಬೈಯುವ ಒಂದೆರಡು ಮಾತುಗಳೂ ಇವೆ. ಇದನ್ನು ಕೇಳಿದ ತಕ್ಷಣ ಕೆಲವು ಕಿಡಿಗೇಡಿಗಳು ಆ ಬೈಗುಳ ಮಾತುಗಳನ್ನು ಬೇಕೆಂದೇ ಎಲ್ಲರಿಗೂ ಕೇಳುವಂತೆ ಗಟ್ಟಿಯಾಗಿ ಪುನರುಚ್ಚರಿಸುತ್ತಾ ಕೂತರು. ದಲಿತ ಹುಡುಗರು ರೊಚ್ಚಿಗೆದ್ದರು. ಇನ್ನೇನು ಪ್ರೇಕ್ಷಕರಲ್ಲೇ ಎರಡು ಗುಂಪಾಗಿ ಹೊಡೆದಾಟವಾಗುವ ಲಕ್ಷಣಗಳು ಕಾಣಿಸತೊಡಗಿತು. ಅಷ್ಟರಲ್ಲಿ ನಾಟಕದ ಮಧ್ಯಂತರ ವಿರಾಮ ಬಂತು.
ಆಗ ಕೆಲವರು ದಲಿತ ಹುಡುಗರು "ಈ ನಾಟಕದಿಂದ ನಮಗೆ ಅವಮಾನವಾಗುತ್ತಿದೆ. ಈ ನಾಟಕವನ್ನು ಕೂಡಲೇ ನಿಲ್ಲಿಸಬೇಕೆಂದು" ನಮ್ಮಲ್ಲಿ ಒತ್ತಾಯ ಮಾಡತೊಡಗಿದರು. ಅಲ್ಲೇ ಇದ್ದ ಕೆಲವರು ಮರಿ ರಾಜಕಾರಣಿಗಳಿಗೆ, ನಾಟಕದ ಬಗ್ಗೆ ಏನೇನೂ ಗೊತ್ತಿಲ್ಲದ್ದಿದ್ದರೂ ’ದಲಿತ ವಿರೋಧಿಗಳು’ ಎಂಬ ಹಣೆಪಟ್ಟಿ ತಮಗೂ ಬಂದೀತೆಂಬ ಭಯ ಕಾಡತೊಡಗಿ "ಈ ನಾಟಕ ನಿಲ್ಲಿಸುವುದೇ ಒಳ್ಳೆಯದು, ಸುಮ್ಮನೆ ಗಲಾಟೆ ಯಾಕೆ" ಎಂದೆಲ್ಲ ಹೇಳತೊಡಗಿದರು.
ನಾವೇನಾದರೂ ನಾಟಕವನ್ನು ನಿಲ್ಲಿಸಿದರೆ ದೊಡ್ಡ ರಾದ್ಧಾಂತವೇ ಆಗುತ್ತಿತ್ತು. ನಾಟಕವನ್ನು ನಿಲ್ಲಿಸಿದ ಕೂಡಲೇ ಇತರರು ಗಲಾಟೆ ಮಾಡುವುದಲ್ಲದೆ ದಲಿತರ ಮೇಲೆ ಹೊಡೆದಾಟಕ್ಕೂ ಹೋಗುತ್ತಿದ್ದರು. ಅಲ್ಲದೆ ಮುಂದಿನ ಎರಡು ದಿನಗಳಲ್ಲೂ ನಾಟಕ ಮಾಡಲು ಸಾಧ್ಯವಾಗುತ್ತಿರಲಿಲ್ಲ. ನಾವು ಇದುವರೆಗೆ ನಂಬಿಕೊಂಡು ಬಂದ ಮೌಲ್ಯಗಳನ್ನು ಗಾಳಿಗೆ ತೂರಿದಂತಾಗುವುದಲ್ಲದೆ, ’ನಾಟಕ ದಲಿತ ವಿರೋಧಿಯಾಗಿದೆ’ ಎಂದು ಪ್ರಚಾರವಾಗುತ್ತಿತ್ತು.
ಈ ದಲಿತ ಹುಡುಗರೆಲ್ಲ ನಮ್ಮ ಸುತ್ತಲಿನ ಊರವರೇ. ನಮಗೆಲ್ಲ ಚೆನ್ನಾಗಿ ಪರಿಚಿತರೇ. ಆದರೆ ಯಾರೂ ಹೆಚ್ಚಿನ ವಿದ್ಯಾವಂತರಿರಲಿಲ್ಲ.
ಈ ವೇಳೆಗೆ ನಮ್ಮ ತಾಲ್ಲೂಕಿನಲ್ಲಿ ಬಹುಜನ ಸಮಾಜ ಪಾರ್ಟಿ ಸ್ವಲ್ಪ ಮಟ್ಟಿಗೆ ಪ್ರಚಾರಕ್ಕೆ ಬಂದಿತ್ತು. ಒಂದೆರಡು ಚುನಾವಣೆಗಳಲ್ಲಿ ಬಿ.ಎಸ್.ಪಿ. ಅಭ್ಯರ್ಥಿಗಳು ಸ್ಪರ್ಧಿಸಿಯೂ ಇದ್ದರು. ಈ ಹುಡುಗರಲ್ಲಿ ಕೆಲವರು ಬಿ.ಎಸ್.ಪಿ ಕಾರ್ಯಕರ್ತರೂ ಇದ್ದರು. ನಾವೊಂದೆರಡು ಜನರು ಅವರಲ್ಲಿ ಕೆಲವರನ್ನು ಸ್ವಲ್ಪ ದೂರಕ್ಕೆ ಕರೆದೊಯ್ದು ಹೇಳಿದೆವು.
"ನಿಮ್ಮಲ್ಲಿ ಕೆಲವರು ಬಿ.ಎಸ್.ಪಿ ಕಾರ್ಯಕರ್ತರಿದ್ದೀರ ಹೌದಲ್ಲ
"ಹ್ಞುಂ"
"ಬಿ.ಎಸ್.ಪಿ. ಪೋಸ್ಟರ್‌ಗಳಲ್ಲಿ ಕುವೆಂಪು ಚಿತ್ರ ಇದೆ ಯಾಕೆ?"
"ಅವರು ವಿಚಾರವಾದಿಗಳು ಅದಕ್ಕೆ"
"ಅಂದರೆ ನೀವು ನಂಬಿದ ತತ್ವಕ್ಕೆ ಹೊಂದಿಕೆಯಾಗುವಂತೆ ಅವರ ವಿಚಾರಗಳು ಇದೆ ಅಲ್ವೆ?"
"ಹೌದು, ಆದ್ರೆ ಅದ್ಕೂ ಇದ್ಕೂ ಏನು ಸಂಬಂಧ?"
"ಅದೇ ಹೇಳ್ತೀವಿ, ಈ ನಾಟಕದ ಕಥೆ ಬರೆದವರು ಯಾರು ಗೊತ್ತಾ?"
"ಅದೇ ಹಾಕಿದ್ದೀರಲ್ಲ- ಹ್ಯಾಂಡ್‌ಬಿಲ್ಲಲ್ಲಿ ತೇಜಸ್ವಿ ಅಂತ"
"ಅವರ‍್ಯಾರು ಗೊತ್ತಾ?"
".............."
"ಹೇಳಿ"
"ಕುವೆಂಪು ಮಗ"
"ಸರಿ ಅವರು ನಿಮ್ಮ ವಿರುದ್ಧ ಇದ್ದಾರಾ?"
". . . . . . . . ."
"ತೇಜಸ್ವಿ ಕೂಡಾ ಕುವೆಂಪು ಅವರಷ್ಟೇ ವಿಚಾರವಾದಿಗಳು, ನಿಮಗೆ ಗೊತ್ತಿರಬೇಕಲ್ಲ?"
".........................."

(ಮುಂದುವರೆಯುವುದು)


ಪ್ರಸಾದ್ ರಕ್ಷಿದಿ

ರಂಗಕರ್ಮಿಗಳು, ಬೆಳ್ಳೇಕೆರೆ, ಸಕಲೇಶಪುರ ತಾಲ್ಲೂಕು

1 comment:

  1. tejasvi kuritu enu baredaru chennagirutte. idanthu chendave, chenda.

    ReplyDelete

ಹಿಂದಿನ ಬರೆಹಗಳು