ನಲ್ಮೆಯ ಕನ್ನಡಿಗರೇ,
ಕರ್ನಾಟಕ ರಕ್ಷಣಾ ವೇದಿಕೆ ರಾಜಕೀಯ ಪಕ್ಷವೊಂದನ್ನು ಹುಟ್ಟುಹಾಕುತ್ತಿರುವ ಸಂದರ್ಭದಲ್ಲೇ ವೇದಿಕೆಯ ಮುಖವಾಣಿಯಾಗಿ ಕರವೇ ನಲ್ನುಡಿ ಮಾಸಿಕ ಪತ್ರಿಕೆ ಹೊರಬರುತ್ತಿದೆ. ವೇದಿಕೆಯ ಗೊತ್ತು-ಗುರಿಗಳನ್ನು ಪ್ರತಿಬಿಂಬಿಸುವ ಪತ್ರಿಕೆಯೊಂದನ್ನು ಹೊರತರಬೇಕು ಎಂಬುದು ನನ್ನ ಬಹುದಿನದ ಕನಸು. ಅದು ಈಗ ನನಸಾಗುತ್ತಿದೆ.
ರಕ್ಷಣಾ ವೇದಿಕೆಯ ಪಾಲಿಗೆ ಇದು ಸಂಕ್ರಮಣದ ಕಾಲ. ನಾವೀಗ ಕನ್ನಡ ರಾಜಕಾರಣದ ಪ್ರಯೋಗಕ್ಕೆ ಕೈ ಹಾಕಿದ್ದೇವೆ. ಮೇಲಿಂದ ಮೇಲೆ ಮಾಧ್ಯಮದವರು, ಬೇರೆ ಬೇರೆ ಕ್ಷೇತ್ರದ ಜನರು ನಿಮಗೆ ರಾಜಕಾರಣ ಬೇಕಿತ್ತೆ? ಎಂದು ಪ್ರಶ್ನಿಸುತ್ತಲೇ ಇದ್ದಾರೆ. ಸಾರ್ವಜನಿಕ ಜೀವನದಲ್ಲಿ ಪ್ರಶ್ನೆಗಳನ್ನು, ಟೀಕೆಗಳನ್ನು ಎದುರಿಸುತ್ತಲೇ ಇರಬೇಕಾಗುತ್ತದೆ. ಪ್ರಶ್ನೆ-ಟೀಕೆಗಳಿಗೆ ಅಂಜುವವನು ನಾನಲ್ಲ. ಹೀಗಾಗಿ ಎಲ್ಲ ರೀತಿಯ ಪ್ರಶ್ನಾವಳಿಗೂ ಒಡ್ಡಿಕೊಂಡು ನನ್ನ ಸಂಘಟನೆಯ ಒಲವು-ನಿಲುವುಗಳನ್ನು ಜನರ ಮುಂದಿಡುತ್ತಲೇ ಬಂದಿದ್ದೇನೆ.
ಇತ್ತೀಚಿನ ದಿನಗಳಲ್ಲಿ ನಾನು ಎದುರಿಸುತ್ತ ಬಂದಿರುವ ಪ್ರಶ್ನೆಗಳಿಗೆ ಮತ್ತೊಮ್ಮೆ ಇಲ್ಲಿ ಪೂರ್ಣ ಸ್ವರೂಪದಲ್ಲಿ ಉತ್ತರ ನೀಡಲು ಬಯಸುತ್ತೇನೆ. ಅದು ಈ ಸಂದರ್ಭದಲ್ಲಿ ಔಚಿತ್ಯಪೂರ್ಣವೂ, ಅನಿವಾರ್ಯವೂ ಆಗಿದೆ ಎಂದು ನಾನು ನಂಬಿದ್ದೇನೆ.
ಕರ್ನಾಟಕ ರಕ್ಷಣಾ ವೇದಿಕೆ ರಾಜಕೀಯ ಪಕ್ಷವಾಗಿ ಪರಿವರ್ತಿತವಾಗಲಿದೆಯೇ?
ಇಲ್ಲ, ಕರ್ನಾಟಕ ರಕ್ಷಣಾ ವೇದಿಕೆ ಯಾವುದೇ ಕಾರಣಕ್ಕೂ ರಾಜಕೀಯ ಪಕ್ಷವಾಗಿ ಪರಿವರ್ತಿತವಾಗದು. ಬದಲಾಗಿ, ಕರ್ನಾಟಕ ರಕ್ಷಣಾ ವೇದಿಕೆ ಹೊಸ ಪ್ರಾದೇಶಿಕ ಪಕ್ಷವೊಂದನ್ನು ಹುಟ್ಟುಹಾಕಲಿದೆ. ಈ ರಾಜಕೀಯ ಪಕ್ಷವನ್ನು ಸದ್ಯದಲ್ಲೇ ಉದ್ಘಾಟಿಸಲಾಗುವುದು. ರಾಜಧಾನಿ ಬೆಂಗಳೂರು, ಕಲ್ಯಾಣ ಕರ್ನಾಟಕದ ಗುಲ್ಬರ್ಗ, ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಬೃಹತ್ ಸಮಾವೇಶಗಳನ್ನು ನಡೆಸುವ ಮೂಲಕ ರಾಜಕೀಯ ಪಕ್ಷವನ್ನು ಅಸ್ತಿತ್ವಕ್ಕೆ ತರಲಾಗುವುದು. ಲಕ್ಷಾಂತರ ಕಾರ್ಯಕರ್ತರ ಸಮ್ಮುಖದಲ್ಲಿ, ಮಾಧ್ಯಮಗಳ ಸಮ್ಮುಖದಲ್ಲಿ ಪಕ್ಷದ ಪ್ರಣಾಳಿಕೆಯೂ ಸೇರಿದಂತೆ ನಮ್ಮ ಉದ್ದೇಶ-ಗುರಿಗಳನ್ನು ಬಹಿರಂಗಪಡಿಸಲಾಗುವುದು.
ಕರ್ನಾಟಕ ರಕ್ಷಣಾ ವೇದಿಕೆ ಮಾತ್ರ ಹೋರಾಟದ ವೇದಿಕೆಯಾಗಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವುದು. ಹೊಸ ಪ್ರಾದೇಶಿಕ ಪಕ್ಷಕ್ಕೆ ಅದು ಮಾತೃಸಂಸ್ಥೆಯ ಸ್ವರೂಪದಲ್ಲಿ ಇರುತ್ತದೆಯೇ ಹೊರತು ಅದೇ ಪ್ರಾದೇಶಿಕ ಪಕ್ಷವಾಗಿ ರೂಪಾಂತರಗೊಳ್ಳದು.
ಪ್ರಾದೇಶಿಕ ಪಕ್ಷದ ಪ್ರಯೋಗಗಳು ಈ ರಾಜ್ಯದಲ್ಲಿ ವಿಫಲವಾಗಿದೆಯಲ್ಲವೆ?
ನಿಜ, ಹಲವು ಪ್ರಯೋಗಗಳು ವಿಫಲವಾಗಿವೆ. ಆದರೆ ಪ್ರತಿಯೊಂದು ಪ್ರಯೋಗವನ್ನೂ ಗಮನಿಸಿದರೆ, ವೈಫಲ್ಯಕ್ಕೆ ಸಾಕಷ್ಟು ಕಾರಣಗಳೂ ಇದ್ದವು. ತಳಮಟ್ಟದ ಸಂಘಟನೆ ಇಲ್ಲದೇ ಇದ್ದದ್ದು ಬಹುಮುಖ್ಯ ಕಾರಣ. ವ್ಯಕ್ತಿಪ್ರತಿಷ್ಠೆಗಾಗಿ ಹುಟ್ಟಿಕೊಂಡ ಸಂಘಟನೆಗಳು ಸಹಜವಾಗಿಯೇ ನೆಲಕಚ್ಚಿದವು. ಹಲವರು ತಾವಿದ್ದ ಪಕ್ಷವನ್ನು ಬಿಟ್ಟು, ಬಂಡಾಯದ ವೇದಿಕೆಯಾಗಿ ಪ್ರಾದೇಶಿಕ ಪಕ್ಷವನ್ನು ಕಟ್ಟಿಕೊಂಡರು. ಆ ನಾಯಕರು ಮತ್ತೆ ತಾವಿದ್ದ ಪಕ್ಷಗಳಿಗೆ ಹಿಂದಿರುಗಿ ಹೋಗಿದ್ದರಿಂದಾಗಿ, ಅವರು ಕಟ್ಟಿದ ಪ್ರಾದೇಶಿಕ ಪಕ್ಷಗಳೂ ನಾಶವಾದವು.
ಕರ್ನಾಟಕ ರಕ್ಷಣಾ ವೇದಿಕೆ ತಳಮಟ್ಟದ ಸಂಘಟನೆಯನ್ನು ಹೊಂದಿರುವ ವಿಶಾಲ ಸಂಘಟನೆ. ರಾಜ್ಯದಲ್ಲಿ ೫೦ ಲಕ್ಷಕ್ಕೂ ಹೆಚ್ಚು ನೋಂದಾಯಿತ ಕಾರ್ಯಕರ್ತರು ನಮ್ಮಲ್ಲಿದ್ದಾರೆ. ಪ್ರತಿ ಜಿಲ್ಲೆ, ಪ್ರತಿ ತಾಲ್ಲೂಕು, ಪ್ರತಿ ಹೋಬಳಿಗಳಲ್ಲೂ ನಮ್ಮ ವೇದಿಕೆಯ ಅಸ್ತಿತ್ವವಿದೆ. ಸಾವಿರಾರು ಗ್ರಾಮಶಾಖೆಗಳನ್ನು ನಾವು ತೆರೆದಿದ್ದೇವೆ. ರಾಷ್ಟ್ರೀಯ ಪಕ್ಷಗಳಿಗೂ ಇರದ ಕಾರ್ಯಕರ್ತರ ಶಕ್ತಿ ನಮ್ಮ ಬಳಿ ಇದೆ. ಹೀಗಾಗಿ ನಾವು ಹುಟ್ಟುಹಾಕುತ್ತಿರುವ ಪ್ರಾದೇಶಿಕ ಪಕ್ಷ ಈ ಹಿಂದೆ ಹುಟ್ಟಿಕೊಂಡು ಅವಸಾನಗೊಂಡ ಪ್ರಾದೇಶಿಕ ಪಕ್ಷಗಳಿಗಿಂತ ಭಿನ್ನವಾಗಿ ಉಳಿಯಲಿದೆ.
ರಾಜಕಾರಣ ಹೊಲಸೆದ್ದು ಹೋಗಿರುವಾಗ ನೀವು ಅಲ್ಲಿಗೆ ಹೋಗುವುದು ಸರಿಯೇ?
ಕರ್ನಾಟಕ ರತ್ನ, ನಾಡೋಜ ದೇ.ಜವರೇಗೌಡರು ಒಂದೆಡೆ ಹೀಗೆ ಹೇಳುತ್ತಾರೆ: ರಾಜಕಾರಣ ಹೀನಾಯವಾದದ್ದಲ್ಲ. ನಾಡಿನ ಆಗುಹೋಗುಗಳೆಲ್ಲ ರಾಜಕಾರಣದ ಆಧಾರದ ಮೇಲೆ ನಿಂತಿರುವುದಂತು ಸರ್ವವೇದ್ಯ. ಎಲ್ಲ ಕಡೆಯೂ ಇರುವಂತೆ ರಾಜಕಾರಣದಲ್ಲಿಯೂ ಉಚ್ಚ ನೀಚ ದರ್ಜೆಗಳಿವೆ. ಅದನ್ನು ಸಾತ್ವಿಕ, ರಾಜಸ ಮತ್ತು ತಾಮಸೆವೆಂದು ಮೂರು ವಿಧವಾಗಿ ವಿಂಗಡಿಸಬಹುದು. ಗಾಂಧೀಜಿ ಸಾತ್ವಿಕ ರಾಜಕಾರಣಿ. ಬಸವೇಶ್ವರರೂ ಅಂಥ ರಾಜಕಾರಣಿಯೆ.
ರಾಜಕೀಯ ಕ್ಷೇತ್ರ ಹಾಳಾಗಿದೆ, ನಿಜ. ಆದರೆ ಉಳಿದ ಕ್ಷೇತ್ರಗಳು ಪವಿತ್ರವಾಗೇನೂ ಉಳಿದಿಲ್ಲ.
ನಾವು ಕಳೆದ ಹತ್ತು ವರ್ಷಗಳಿಂದ ಬೀದಿಯಲ್ಲಿ ನಿಂತು ಹೋರಾಟ ಮಾಡಿದ್ದೇವೆ. ಪೊಲೀಸರ ಲಾಠಿ-ಬೂಟಿನೇಟು ತಿಂದಿದ್ದೇವೆ. ಜೈಲು ಸೇರಿದ್ದೇವೆ. ನಮ್ಮ ವೈಯಕ್ತಿಕ ಬದುಕನ್ನೇ ಕಳೆದುಕೊಂಡಿದ್ದೇವೆ. ಆದರೆ ಶಾಸನವನ್ನು ರೂಪಿಸುವ ಜನರು ತಮಗಿಷ್ಟವಾದುದ್ದನ್ನೇ ಮಾಡುತ್ತಾರೆ. ಹೋರಾಟಗಾರರ ಮೇಲೆ ಪೊಲೀಸರನ್ನು ಛೂ ಬಿಡುತ್ತಾರೆ. ಹೀಗಿರುವಾಗ, ಶಾಸನಸಭೆಗಳಲ್ಲೂ ನಮ್ಮ ಹೋರಾಟವನ್ನು ಮುಂದುವರೆಸುವುದು ಅನಿವಾರ್ಯವಾಗಿದೆ. ಆ ಕಾರಣಕ್ಕಾಗಿ ನಾವು ರಾಜಕಾರಣ ಪ್ರವೇಶಿಸುತ್ತಿದ್ದೇವೆ.
ಆದರೆ ವೈಯಕ್ತಿಕವಾಗಿ ನನಗೆ ರಾಜಕಾರಣದ ಆಸೆಗಳೇನೂ ಇಲ್ಲ. ಅಂಥ ಬಯಕೆಗಳು ಇದ್ದಿದ್ದರೆ ಹಿಂದೆಯೇ ಎಂಎಲ್‌ಎ ಅಥವಾ ಎಂಎಲ್‌ಸಿ ಆಗಬಹುದಿತ್ತು. ರಾಜಕಾರಣ ಮತ್ತು ಹೋರಾಟದ ಜೀವನದ ಪೈಕಿ ನಾನು ಹೋರಾಟದ ಜೀವನವನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ.
ಎಲ್ಲ ರಾಜಕೀಯ ಪಕ್ಷಗಳೂ ಭಾಷಾ ಅಲ್ಪಸಂಖ್ಯಾತರನ್ನು ಓಲೈಸಲು ಯತ್ನಿಸುತ್ತಿವೆ. ಈ ಕಾರಣಕ್ಕಾಗಿ ಕನ್ನಡಿಗರ ಹಿತಾಸಕ್ತಿಯನ್ನು ಬಲಿಕೊಟ್ಟಿವೆ. ಈ ಕಾರಣಕ್ಕಾಗಿ ಕನ್ನಡದ ಕಳಕಳಿಯಿರುವ ಜನನಾಯಕರು ಶಾಸನಸಭೆಗಳಲ್ಲಿ ಇರಬೇಕು ಎಂದು ನಾವು ಹೊಸ ಪ್ರಾದೇಶಿಕ ಪಕ್ಷವನ್ನು ಹುಟ್ಟುಹಾಕುತ್ತಿದ್ದೇವೆ. ಗ್ರಾಮಪಂಚಾಯ್ತಿ, ತಾಲ್ಲೂಕು ಪಂಚಾಯ್ತಿಗಳಿಂದ ಹಿಡಿದು, ವಿಧಾನಸಭೆ-ಲೋಕಸಭೆಗಳಿಗೂ ನಮ್ಮ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರಪಾಲಿಕೆ ಚುನಾವಣೆಯಲ್ಲಿ ನಿಮ್ಮ ಪಾತ್ರವೇನು?
ಸಮಯದ ಅವಕಾಶ ಕಡಿಮೆಯಿದ್ದರಿಂದಾಗಿ, ನಾವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಸ್ಪರ್ಧಿಸುತ್ತಿಲ್ಲ. ಎಲ್ಲ ೧೯೮ ವಾರ್ಡ್‌ಗಳಲ್ಲೂ ಸ್ಪರ್ಧಿಸಬೇಕು ಎಂಬುದು ನಮ್ಮ ಬಯಕೆಯಾಗಿತ್ತು. ಆದರೆ ಕಾಲಾವಕಾಶವಾಗಲಿಲ್ಲ.
ಮಹಾನಗರ ಪಾಲಿಕೆಗೆ ರಾಜಕೀಯ ಪಕ್ಷಗಳಿಂದ ಈಗ ಸ್ಪರ್ಧಿಸುತ್ತಿರುವವರಲ್ಲಿ ಸಾಕಷ್ಟು ಮಂದಿ ರಿಯಲ್ ಎಸ್ಟೇಟ್ ಕುಳಗಳು, ಬೇರೆ ಬೇರೆ ದಂಧೆಗಳನ್ನು ನಡೆಸುವವರು. ಹೀಗಾಗಿ ಕೋಟ್ಯಂತರ ರೂ. ಹಣವನ್ನು ಒಬ್ಬೊಬ್ಬ ಅಭ್ಯರ್ಥಿ ಖರ್ಚು ಮಾಡುತ್ತಿದ್ದಾರೆ. ನಮಗೆ ಹಣಬಲವಿಲ್ಲ. ಕಾರ್ಯಕರ್ತರ ಬಲವೇ ನಮಗೆ ಶ್ರೀರಕ್ಷೆ. ಹೀಗಾಗಿ ರಕ್ಷಣಾ ವೇದಿಕೆಗೆ ಅನುಕೂಲಕರವಾಗಿರುವ ೯ ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸುತ್ತಿದ್ದೇವೆ.
ಕೆಂಪೇಗೌಡರು ಕಟ್ಟಿದ ಬೆಂಗಳೂರು ಇಂದು ಅನ್ಯರ ಪಾಲಾಗುತ್ತಿದೆ. ಪರಭಾಷಿಗರೇ ಎಲ್ಲ ಕ್ಷೇತ್ರಗಳಲ್ಲಿ ವಿಜೃಂಭಿಸುತ್ತಿದ್ದಾರೆ. ಕುಲಕಸುಬುಗಳನ್ನು ನೆಚ್ಚಿಕೊಂಡು ಬದುಕಿದವರು ಇಂದು ಬೀದಿಪಾಲಾಗಿದ್ದಾರೆ. ಅವರನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಕನ್ನಡದ ನೆಲದಲ್ಲಿ ಕನ್ನಡಿಗನೇ ಸಾರ್ವಭೌಮನಾಗಬೇಕು. ಬೆಂಗಳೂರಿನ ಮೂಲನಿವಾಸಿ ಕನ್ನಡಿಗರಿಗೆ ಕನಿಷ್ಠ ಸೂರು ಕಲ್ಪಿಸುವ ವ್ಯವಸ್ಥೆಯಾಗಬೇಕು. ರಾಜ್ಯದ ಬೇರೆ ಊರುಗಳಿಂದ ಉದ್ಯೋಗ ಅರಸಿ ಬರುವವರಿಗೆ ಇಲ್ಲಿ ನೆಲೆ ದೊರೆಯುವಂತಾಗಬೇಕು.
ರಸ್ತೆ, ನೀರು, ಒಳಚರಂಡಿಯಂಥ ಮೂಲಭೂತ ಸೌಕರ್ಯಗಳು ಕನ್ನಡಿಗರು ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿ ಇಲ್ಲ. ಪರಭಾಷಿಕರ ಸಂಖ್ಯಾ ಬಾಹುಳ್ಯವಿರುವ ಕಡೆಯೇ ಹೆಚ್ಚು ಮೂಲಭೂತ ಸೌಕರ್ಯಗಳಿವೆ. ಈ ಅಸಮಾನತೆಯನ್ನು ನಿವಾರಿಸಬೇಕಾಗಿದೆ.
ಎಲ್ಲಕ್ಕಿಂತ ಮಿಗಿಲಾಗಿ ಬೆಂಗಳೂರು ಸಂಪೂರ್ಣ ಕನ್ನಡೀಕರಣವಾಗಬೇಕಿದೆ. ಎಲ್ಲ ಉದ್ಯಮಗಳಲ್ಲೂ ಕನ್ನಡಿಗರಿಗೆ ಶೇ.೧೦೦ರಷ್ಟು ಉದ್ಯೋಗ ದೊರೆಯಬೇಕು. ಎಲ್ಲ ಅಂಗಡಿ-ಮುಂಗಟ್ಟುಗಳ ಮೇಲೂ ಕನ್ನಡ ನಾಮಫಲಕ ಪ್ರಧಾನವಾಗಿ ಕಾಣಿಸಬೇಕು. ಎಲ್ಲ ಜಾಹೀರಾತು ಫಲಕಗಳಲ್ಲೂ ಕನ್ನಡವೇ ಪ್ರಧಾನವಾಗಿರಬೇಕು. ಒಟ್ಟಾರೆಯಾಗಿ ಬೆಂಗಳೂರಿನಲ್ಲಿ ಸಂಪೂರ್ಣ ಕನ್ನಡದ ವಾತಾವರಣ ನೆಲೆಗೊಳ್ಳಬೇಕಾಗಿದೆ; ಕನ್ನಡ ಆಡಲು ಬಾರದವನು ಇಲ್ಲಿ ಬದುಕಲು ಅಸಾಧ್ಯವಾದ ಪರಿಸ್ಥಿತಿಯನ್ನು ಇಲ್ಲಿ ನಿರ್ಮಿಸಬೇಕಾಗಿದೆ.
ಇದಿಷ್ಟು ಈ ಚುನಾವಣಾ ಸಂದರ್ಭದಲ್ಲಿ ನಾನು ಹೇಳಲೇಬೇಕಾಗಿದ್ದ ಮಾತುಗಳು. ಮುಂದೆ ನಿಮ್ಮೊಂದಿಗೆ ಸಾಕಷ್ಟು ಮಾತನಾಡುವುದಿದೆ. ಮುಂದಿನ ಸಂಚಿಕೆಗಳಲ್ಲಿ ಇನ್ನಷ್ಟು ವಿಷಯ ಚರ್ಚಿಸುತ್ತೇನೆ.
ಬೆಂಗಳೂರಿನ ಕನ್ನಡಿಗರಿಗೆ ನನ್ನ ಮನವಿಯಿಷ್ಟೆ: ನನ್ನ ಅಭ್ಯರ್ಥಿಗಳು ಕಳೆದ ಹತ್ತಾರು ವರ್ಷಗಳಿಂದ ನಾಡು-ನುಡಿ ರಕ್ಷಣೆಗಾಗಿ ದುಡಿದವರು. ಲಾಠಿ-ಬೂಟುಗಳ ಏಟು ತಿಂದವರು. ಚಳವಳಿ ನಡೆಸಿ ಜೈಲು ಕಂಡವರು. ಅವರ ನಿಸ್ವಾರ್ಥ ಹೋರಾಟವನ್ನು ಶಾಸನಸಭೆಗಳಲ್ಲೂ ಮುಂದುವರೆಸುವ ನಿಟ್ಟಿನಲ್ಲೇ ಚುನಾವಣೆಯ ಕಣಕ್ಕೆ ಇಳಿಸಿದ್ದೇವೆ. ಅವರನ್ನು ಗೆಲ್ಲಿಸಿ; ಅವರ ಗೆಲುವು ಎಲ್ಲ ಕನ್ನಡಿಗರ ಗೆಲುವು, ಕರ್ನಾಟಕದ ಗೆಲುವು.
ಕಡೆಯದಾಗಿ ಮತ್ತೊಮ್ಮೆ ಹೇಳಬಯಸುತ್ತೇನೆ: ನಾಡು-ನುಡಿಯ ವಿಷಯದಲ್ಲಿ ನಾನು ಎಂದಿಗೂ ಯಾವ ವ್ಯಕ್ತಿ-ಸಂಸ್ಥೆಯೊಂದಿಗೂ ರಾಜಿಯಾಗಲಾರೆ. ನಾಡಿನ ಹಿತರಕ್ಷಣೆಯ ವಿಷಯದಲ್ಲಿ ರಾಜಕಾರಣವನ್ನು ಬಿಟ್ಟೇನು, ಚಳವಳಿಯನ್ನು ಬಿಡಲಾರೆ.
-ಟಿ.ಎ.ನಾರಾಯಣಗೌಡರು
ರಾಜ್ಯಾಧ್ಯಕ್ಷರು
ಕರ್ನಾಟಕ ರಕ್ಷಣಾ ವೇದಿಕೆ