Friday, May 7, 2010

ಹೊಸ ಕನಸುಗಳತ್ತ...






ಒಂದು ಕೊರತೆ ನೀಗಿದೆ.
ಕರ್ನಾಟಕದ ಇತಿಹಾಸದಲ್ಲಿ ಅತಿದೊಡ್ಡ, ಕ್ರಿಯಾಶೀಲ, ರಾಜೀರಹಿತ ಬದ್ಧತೆಗಳ ಸಂಘಟನೆ ಕರ್ನಾಟಕ ರಕ್ಷಣಾ ವೇದಿಕೆ. ವೇದಿಕೆಯ ಗೊತ್ತು ಗುರಿ, ನೀತಿ ನಿಲುವುಗಳನ್ನು ಸ್ಪಷ್ಟವಾಗಿ ಬಿಂಬಿಸುವ ಮುಖವಾಣಿ ಪತ್ರಿಕೆಯೊಂದರ ಕೊರತೆ ಇತ್ತು. ಅದು ಈಗ ನೀಗಿದೆ.
ಮೊದಲ ಸಂಚಿಕೆ ಓದಿದ್ದೀರಿ. ಹೇಗನ್ನಿಸಿತು? ತಪ್ಪದೇ ಹೇಳಿ.
ಇಂಥದ್ದೊಂದು ಪತ್ರಿಕೆಯನ್ನು ಆರಂಭಿಸುತ್ತಿದ್ದೇವೆ ಎಂದು ಕನ್ನಡದ ಸಾರಸ್ವತ ಲೋಕದ ಪ್ರತಿಭಾನ್ವಿತರಿಗೆ, ಬುದ್ಧಿಜೀವಿಗಳಿಗೆ, ಸಮಾಜಶಾಸ್ತ್ರಜ್ಞರಿಗೆ, ಎಲ್ಲ ಕ್ಷೇತ್ರಗಳ ಗಣ್ಯರಿಗೆ ಪತ್ರ ಬರೆದು ತಿಳಿಸಿದಾಗ, ಬಂದ ಪ್ರತಿಕ್ರಿಯೆ ಹೃದಯಸ್ಪರ್ಶಿಯಾಗಿತ್ತು. ಕರ್ನಾಟಕ ರಕ್ಷಣಾ ವೇದಿಕೆ ಕಳೆದ ಹತ್ತು ವರ್ಷಗಳಿಂದ ನಾಡು-ನುಡಿ ರಕ್ಷಣೆಯ ವಿಷಯದಲ್ಲಿ ತೋರಿದ ಅಸಾಮಾನ್ಯ ಬದ್ಧತೆಗೆ ಇದು ದಕ್ಕಿದ ಉಡುಗೊರೆ ಎಂದೇ ನಾವು ಭಾವಿಸಿದ್ದೇವೆ.
ಮೊದಲ ಸಂಚಿಕೆಗೇ ಕನ್ನಡ ಸಾಹಿತ್ಯ ಲೋಕದ ದಿಗ್ಗಜರಾದ ಡಾ.ಯು.ಆರ್.ಅನಂತಮೂರ್ತಿ, ಪ್ರೊ.ಬರಗೂರು ರಾಮಚಂದ್ರಪ್ಪ, ಪ್ರೊ.ಚಂದ್ರಶೇಖರ ಪಾಟೀಲ, ಡಾ.ದೇ.ಜವರೇಗೌಡ, ಡಾ.ಕಮಲಾ ಹಂಪನಾ ಸೇರಿದಂತೆ ಪ್ರಮುಖರು ತಮ್ಮ ಬರೆಹಗಳನ್ನು ನೀಡಿದ್ದಾರೆ. ಈ ಎಲ್ಲರಿಗೂ ನಮ್ಮ ಕೃತಜ್ಞತೆಗಳು.
ಕನ್ನಡ ಚಳವಳಿ, ಇತಿಹಾಸ, ಸಾಹಿತ್ಯ, ಸಿನಿಮಾ ಸೇರಿದಂತೆ ಕನ್ನಡಕ್ಕೆ ಸಂಬಂಧಿಸಿದ ಎಲ್ಲ ವಿಭಾಗಗಳ ಕುರಿತೂ ಅರ್ಥಪೂರ್ಣ ಚರ್ಚೆ, ಸಂವಾದಗಳು ಈ ಪತ್ರಿಕೆಯಲ್ಲಿ ನಡೆಯಬೇಕು ಎಂಬುದು ನಮ್ಮ ಆಶಯ. ಈ ನಿಟ್ಟಿನಲ್ಲಿ ಮತ್ತೊಮ್ಮೆ ಸಾರಸ್ವತ ಲೋಕದ ಎಲ್ಲರನ್ನು ನಲ್ನುಡಿಯ ಅಂತರಂಗಕ್ಕೆ ವಿನಮ್ರವಾಗಿ ಸ್ವಾಗತಿಸುತ್ತೇವೆ. ಕರ್ನಾಟಕ ರಕ್ಷಣಾ ವೇದಿಕೆ ಕಳೆದ ಹತ್ತು ವರ್ಷಗಳಲ್ಲಿ ನಿರಂತರ ಹೋರಾಟಗಳ ಮೂಲಕವೇ ಜನಮನ ಗೆದ್ದಿದೆ. ಕನ್ನಡದ ಹಿತಾಸಕ್ತಿಗೆ, ಸಾರ್ವಭೌಮತೆಗೆ, ಅಸ್ತಿತ್ವಕ್ಕೆ ಧಕ್ಕೆ ಬಂದಾಗಲೆಲ್ಲ ಕರವೇ ಸಮರವೀರರು ನಾಡಿನ ಉದ್ದಗಲಕ್ಕೂ ಹೋರಾಟದ ರಣಕಹಳೆಯನ್ನು ಮೊಳಗಿಸಿದ್ದಾರೆ. ಯುದ್ಧೋಪಾದಿಯಲ್ಲಿ ಚಳವಳಿಯನ್ನು ಸಂಘಟಿಸಿದ ಟಿ.ಎ.ನಾರಾಯಣಗೌಡರು, ಕನ್ನಡತನದ ವಿರೋಧಿಗಳಿಗೆ ಸಿಂಹಸ್ವಪ್ನವಾಗಿದ್ದಾರೆ. ಕರವೇ ಬಳಗಕ್ಕೆ ಪತ್ರಿಕೆ ಚೈತನ್ಯವಾಹಕವಾಗಿ ಕಾರ್ಯನಿರ್ವಹಿಸಲಿದೆ. ನಲ್ನುಡಿಯೂ ಸಹ ಕರವೇ ಹೋರಾಟದ ಭಾಗವಾಗಿಯೇ ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ.
ಕನ್ನಡಿಗರ ಮನೆಮನೆಗೂ ಈ ಪತ್ರಿಕೆಯನ್ನು ತಲುಪಿಸುವ ಗುರಿ ನಮ್ಮದು. ತನ್ಮೂಲಕ ಕನ್ನಡಿಗರು ಒಗ್ಗೂಡುವ, ಹಕ್ಕುಗಳಿಗಾಗಿ ಹೋರಾಡುವ, ಕನ್ನಡವೇ ಸಾರ್ವಭೌಮವಾಗಿರುವ ಹೊಸ ಕನ್ನಡನಾಡು ನಿರ್ಮಿಸುವ ತವಕ ನಮ್ಮದು. ಈ ಹೊಸ ಕನಸುಗಳ ದಾರಿಗುಂಟ ನೀವು ನಮ್ಮೊಂದಿಗಿರಿ ಎಂದು ವಿನಯಪೂರ್ವಕವಾಗಿ ಕೋರುತ್ತೇವೆ.

ಪ.ಬ.ಜ್ಞಾನೇಂದ್ರಕುಮಾರ್

ಗುರುವಿನ ಗುರು, ಮುನ್ನಡೆಸುವವರು ಯಾರು?




ಅದು 1991 ಕಾವೇರಿ ನದಿ ನೀರಿಗಾಗಿ ನಡೆಯುತ್ತಿದ್ದ ಹೋರಾಟ ಗಂಭೀರ ಸ್ವರೂಪ ಪಡೆದಿತ್ತು. ದಿನದಿಂದ ದಿನಕ್ಕೆ ಬೆಳೆಯುತ್ತಿದ್ದ ಚಳವಳಿ ರಾಜ್ಯಾದಾದ್ಯಂತ ಕಾವು ಸೃಷ್ಟಿಸಿತ್ತು. ಅದು ಬೆಂಗಳೂರಿನ ಸದಾಶಿವನಗರದ ಬಂಗಲೆಯನ್ನೂ ಸುತ್ತುವರೆದಿತ್ತು. ಹಾಗಾಗಿ ಕನ್ನಡದ ಮೇರು ನಟ ಡಾ.ರಾಜ್್ಕುಮಾರ್್ ಅವರ ಮೇಲೂ ಕಾವೇರಿ ನದಿ ನೀರಿನ ಸಿಂಚನವಾಗಿತ್ತು. ಸಂದರ್ಭ ಬಂದಾಗಲೆಲ್ಲಾ ಪಂಚೆ ಎತ್ತಿ ಕಟ್ಟಿ ನಿಂತು ನೆರೆದಿದ್ದವರನ್ನು ಹುರಿದುಂಬಿಸುತ್ತಿದ್ದ ರಾಜ್. ಅಂದು ಕೂಡ ಮೈಕೊಡವಿ ನಿಂತರು. ಅಷ್ಟರಲ್ಲಿ ಬೆಂಗಳೂರು ಬಂದ್್ಗೆ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದವು. ನಾಳೆ ಬಂದ್ ಎನ್ನುವಂತಿರುವಾಗ, ರಾಜ್ ಬಾಯಿಬಿಟ್ಟರು. 'ಅಗತ್ಯ ಬಿದ್ದರೆ, ನಾನು ಬೀದಿಗಿಳಿಯುತ್ತೇನೆ' ಎನ್ನುವ ಅವರ ಮಾತು ಸಂಜೆ ಪತ್ರಿಕೆಯೊಂದರ ಹೆಡ್್ಲೈನ್ ಆಗಿ ಕಾಣಿಸಿಕೊಂಡಿತ್ತು. ಸೈನ್ಯಾಧಿಕಾರಿಯ ಸೂಚನೆಗಾಗಿ ಕಾದು ಕುಳಿತ್ತಿದ್ದ ಸೈನಿಕರಂತೆ ತುದಿಗಾಲಲ್ಲಿ ಕಾಯುತ್ತಿದ್ದ ಕೋಟ್ಯಾಂತರ ಅಭಿಮಾನಿಗಳ ಆಕ್ರೋಶಕ್ಕೆ ಆನೆ ಬಲ ಬಂದಂತಾಯಿತು. ಮುಂದಿನ ನಾಲ್ಕು ದಿನ ಕರ್ನಾಟಕ ರಾಜ್ಯ. ಅದರಲ್ಲೂ ಬೆಂಗಳೂರು ರಣರಂಗವಾಗಿ ಮಾರ್ಪಟ್ಟಿತು. ರಾಜ್ ಕುಮಾರ್ ಅವರ ಪ್ರಭಾವಳಿ ಹಾಗಿತ್ತು.
ಸಿನಿಮಾ ನಟರಾಗಿ ಕಾಲಿರಿಸಿದರೂ ಕಾಲಂತರದಲ್ಲಿ ಇಡೀ ನಾಡಿಗೆ ನಾಯಕರಾಗಿ ಬೆಳೆದ ಅವರ ಬೆಳವಣಿಗೆಯೇ ಅಚ್ಚರಿ ಮೂಡಿಸುತ್ತದೆ. ರಾಜಕೀಯ ನಾಯಕರ ಕಿತ್ತಾಟಗಳಲ್ಲಿ ಹಂಚಿ ಹೋಗಿದ್ದ ಜನರಿಗೊಬ್ಬ ಸರ್ವಾನುಮತದ ನಾಯಕ ಬೇಕಾಗಿತ್ತು. ಜಾತಿಯ ಜಂಜಾಟದ ನಡುವೆ ಕರಗಿ ಹೋಗಿದ್ದ ಕನ್ನಡಿಗರಿಗೊಬ್ಬ ದಳಪತಿಯ ಅವಶ್ಯಕತೆಯಿತ್ತು. ಧರ್ಮದ ಹೆಸರಿನಲ್ಲಿ ದಾರಿ ದಪ್ಪಿದ ಯುವಕರಿಗೂ ಕಣ್ಮಣಿ ಬೇಕಾಗಿತ್ತು. ಅವರೆಲ್ಲರ ಪ್ರತಿನಿಧಿಯಾಗಿ ರಾಜ್ ಮೆರೆದಿದ್ದು ಈಗ ಇತಿಹಾಸ. ಅಂತಹ ಇತಿಹಾಸದ ಪುಟಗಳಲ್ಲಿ ೧೯೯೧ರ ಘಟನೆಗಳೂ ಕರಗಿ ಹೋಗಿವೆ. ಆದರೆ, ರಾಜ್ ನೀಡಿದ ಹೇಳಿಕೆ ಮಾತ್ರ ಇಂದಿಗೂ ಪ್ರತಿಧ್ವನಿಸುತ್ತಿದೆ. ನಾನೂ ಕೂಡ ಬೀದಿಗಿಳಿಯುತ್ತೇನೆ.
ರಾಜ್‌ಕುಮಾರ್ ಅವರಿಗಿದ್ದ ಜನಬೆಂಬಲ ಮೊದಲು ಬೆಳಕಿಗೆ ಬಂದದ್ದು ಗೋಕಾಕ್ ಚಳವಳಿಯಲ್ಲಿ. ರಾಜ್ ಆಗಿನ್ನು ಚೆನ್ನೈನಲ್ಲೇ ನೆಲೆಸಿದ್ದರು. ಇತ್ತ ಬೆಂಗಳೂರಿನಲ್ಲಿ ದಿನೇದಿನೇ ಹೋರಾಟದ ರೂಪುರೇಷೆಗಳು ಸಿದ್ಧಗೊಳ್ಳತೊಡಗಿದವು. ಕೇವಲ ಬೆರಳಣಿಕೆಯ ಹೋರಾಟಗಾರರು ಮತ್ತು ಸಾಹಿತಿಗಳು ಸೇರಿ ಹುಟ್ಟಿಹಾಕಿದ ಸಮರಕ್ಕೆ ನಿಜವಾದ ಕಾವು ಬಂದಿದ್ದು ರಾಜ್ ಆಗಮನದಿಂದ. ಸಾಹಿತಿಗಳ ಪ್ರೀತಿಯ ಒತ್ತಾಯಕ್ಕೆ ಮಣಿದ ರಾಜ್ ಗೋಕಾಕ್ ಚಳವಳಿಗೆ ಧುಮುಕಿದರು. ರಾಜ್ಯದ ಮೂಲೆ ಮೂಲೆಗೂ ಸಂಚರಿಸಿ ಕನ್ನಡಿಗರ ಎದೆಯಲ್ಲಿ ಹುದುಗಿದ್ದ ಹೋರಾಟದ ಕಿಡಿಯನ್ನು ಬಡಿದೆಬ್ಬಿಸಿದರು.
ರಾಜ್ ಹೋದೆಡೆಯಲ್ಲೆಲ್ಲಾ ಸೇರುತ್ತಿದ್ದ ಜನಸಾಗರವನ್ನು ನೋಡಿ ಅಂದಿನ ಸರ್ಕಾರವೇ ಬೆಚ್ಚಿ ಬಿದ್ದಿತ್ತು. ಆ ನಂತರ ಸರ್ಕಾರವೇ ಬದಲಾಯಿತು. ರಾಜ್ ಮುಂದಿನ ಮುಖ್ಯಮಂತ್ರಿ ಎಂಬಂತೆ ಬಿಂಬಿಸಲ್ಪಟ್ಟರು. ಅದನ್ನು ಕೇಳಿದ ಕೇಂದ್ರ ಸರ್ಕಾರದ ದೊರೆಸ್ವಾಮಿಗಳು ನಡುಗಿ ಹೋದರು. ರಾಜ್‌ರನ್ನು ರಾಜಿ ಮಾಡಿಸುವ ಹುನ್ನಾರಗಳು ನಡೆದವು. ರಾಜ್ ರಾಜಿಯೂ ಮಾಡಿಕೊಳ್ಳಲಿಲ್ಲ. ರಾಜನಾಗುವ ಆಸೆಯನ್ನು ಅಂಟಿಸಿಕೊಳ್ಳಲಿಲ್ಲ. ಆದರೂ, ಅವರ ಕನ್ನಡಿಗರ ಮನೆ ದೇವರಾದರು. ಹೃದಯ ಸಿಂಹಾಸನಧೀರರಾದರು. ಅದು ಅವರಿಗೆ ದಕ್ಕಿದ್ದಾದರೂ ಹೇಗೆ? ನಗುಮುಖದ ರಾಜ್, ಮುಗ್ದಮನಸ್ಸಿನ ರಾಜ್ ಆ ಎತ್ತರಕ್ಕೆ ಏರಿದ್ದಾದರೂ ಹೇಗೆ?

ಅದು ಮುಳ್ಳಿನ ಹಾದಿ
ಸಾಮಾನ್ಯ ಹಳ್ಳಿಯಿಂದ ಬಂದ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜ್ ಓದಿದ್ದು ಮೂರೇ ಕ್ಲಾಸು. ಆದರೆ ಅವರ ಬಾಲ್ಯ ಮಾತ್ರ ಫಸ್ಟ್‌ಕ್ಲಾಸು. ಬಡತನದ ದಿನಗಳನ್ನು ಅವರು ಹೇಳಿಕೊಂಡು ಆನಂದಪಡುತ್ತಿದ್ದರು. ಅವರ ಜೀವನ ಪ್ರೀತಿಗೆ ಅನೇಕ ಘಟನೆಗಳು ಸಾಕ್ಷಿಯಾಗಿವೆ. ತಂದೆಯಿಂದ ಬಳವಳಿಯಾಗಿ ಪಡೆದ ನಟನೆ ಮತ್ತು ಗಾಯನವನ್ನು ಶ್ರದ್ಧಾ-ಭಕ್ತಿಯಿಂದ ಮುಂದುವರೆಸಿದರು. ಬಾಲನಟನಾಗಿಯೇ ಕಾಲಿರಿಸಿದ ಮುತ್ತುರಾಜ್ ನಟನೆಯನ್ನು ಉದರ ಪೋಷಣೆಯಾಗಿ ನೆಚ್ಚಿಕೊಂಡರು.
ಸಿನಿಮಾ ಆಗಿನ್ನೂ ಕಣ್ಣುಬಿಡುತ್ತಿದ್ದ ಕಾಲ. ಎಲ್ಲರಂತೆ ನಮ್ಮ ಮುತ್ತುವಿಗೂ ಹೀರೋ ಆಗುವ ಆಸೆ. ಒಂದೆರಡು ಸಲ ಅದು ಬಾಗಿಲ ತನಕ ಬಂದು ವಾಪಸ್ಸು ಹೋಗಿತ್ತು. ಆದರೆ ಅದೊಂದು ದಿನ ಬೇಡರ ಕಣ್ಣಪ್ಪನಾಗುವ ಮೂಲಕ ಕನ್ನಡಿಗರ ಹೃದಯದ ನಾಡಿ ಮಿಡಿತ ಹಿಡಿಯುವ ಕೆಲಸಕ್ಕಿಳಿದರು. ಮೊದಲ ಚಿತ್ರ ಹೆಸರು ತಂದುಕೊಟ್ಟರೂ ಅದೃಷ್ಟವಿನ್ನು ದೂರವೇ ಇತ್ತು. ಆಗಿನ ಮೂರು ಕೋಟಿ ಕನ್ನಡಿಗರಿಗೊಬ್ಬ ಆರಾಧ್ಯದೈವ ಬೇಕಿತ್ತು ಎಂಬ ಸತ್ಯ ಅರಿತಿದ್ದ ತಾಯಿ ಭುವನೇಶ್ವರಿ, ರಾಜ್‌ಕುಮಾರ್ ಅವರ ಪ್ರತಿಭೆಯನ್ನು ಕಂಡು ಕೈ ಹಿಡಿದು ನಡೆಸಿದಳು. ರಾಜ್ ಅದೇ ಶ್ರದ್ಧೆ ಮತ್ತು ಭಕ್ತಿಯಿಂದ ಒಂದೊಂದೇ ಮೆಟ್ಟಿಲು ಏರತೊಡಗಿದರು.

ಮನೆ ಮಾತಾದ ಮುತ್ತು
ಭಕ್ತಿ ಪ್ರಧಾನ ಚಿತ್ರದ ಮೂಲಕ ಕಾಲಿರಿಸಿದ್ದರಿಂದ ಧಾರ್ಮಿಕ ಮನಸ್ಸುಗಳಿಗೆ ಹತ್ತಿರವಾದರು. ಹಳ್ಳಿ ಹೈದನಾಗಿ ಗ್ರಾಮೀಣ ಜನರ ಮನೆ ಮಾತಾದರು. ಆದರೆ ಯಾವಾಗ ರಣಧೀರ ಕಂಠೀರವನಾಗಿ ಘರ್ಜಿಸಿದರೋ, ಇಮ್ಮಡಿ ಪುಲಕೇಶಿಯಾಗಿ ಮಿಂಚಿದರೋ ನೋಡಿ, ಅಲ್ಲಿಂದ ರಾಜ್‌ಗೆ ಬೇರೆ ರೀತಿಯ ಸ್ಥಾನ ದೊರೆಯಿತು. ಇತಿಹಾಸ ಪುರುಷರನ್ನು ರಾಜ್ ಅವರಲ್ಲೇ ಕಾಣುವ ಪ್ರಯತ್ನಗಳು ನಡೆದವು. ಇದ್ದರೆ ಹೀಗಿರಬೇಕೆಂದು ಆದರ್ಶ ಪಾತ್ರಗಳೇ ತಾವಾಗಿ ಮೆರೆದಾಗಲಂತೂ ಕನ್ನಡದ ಜನ ರಾಜ್ ಅವರನ್ನು ತಮ್ಮ ಮನೆಯ ಸದಸ್ಯ ಎಂಬಂತೆ ಪ್ರೀತಿಸತೊಡಗಿದರು.
ಕೆಂಪೇಗೌಡ ರಸ್ತೆಯ ಕಿಡಿ:
ಇಡೀ ಕನ್ನಡ ಚಿತ್ರರಂಗವೇ ಮದರಾಸಿನಲ್ಲಿ ಬೀಡುಬಿಟ್ಟಿದ್ದ ಕಾಲವದು. ಹಾಗಾಗಿ ತಮಿಳು ಸಿನಿಮಾಗಳು ರಾಜಾರೋಷವಾಗಿ ಕೆಂಪೇಗೌಡ ರಸ್ತೆಯಲ್ಲಿ ತೆರೆ ಕಾಣುತ್ತಿದ್ದವು. ಅದೊಂದು ದಿನ ರಾಜ್ ಮತ್ತು ಎಂಜಿಆರ್ ನಟಿಸಿದ ಚಿತ್ರಗಳು ತೆರೆ ಕಂಡಿದ್ದವು. ಅವರವರ ಅಭಿಮಾನಿಗಳು ತಮ್ಮ ತಮ್ಮ ಆರಾಧ್ಯ ದೈವಗಳ ಕಟೌಟ್ ಮತ್ತು ಸ್ಟಾರ್‌ಗಳ ಹೊತ್ತು ಮೆರವಣಿಗೆ ಹೊರಟರು. ಅದೊಂದು ಕೆಟ್ಟ ಘಳಿಗೆಯಲ್ಲಿ ಎರಡೂ ಪಂಗಡಗಳು ಎದುರಾದವು. ಅಷ್ಟರಲ್ಲಿ ಅಲ್ಲೇ ಗುಂಪಿನಲ್ಲಿದ್ದ ಎಂಜಿಆರ್ ಅಭಿಮಾನಿಯೊಬ್ಬ ರಾಜ್ ಅಭಿಮಾನಿಗಳನ್ನು ಹೊಲಸು ರೀತಿಯಲ್ಲಿ ಕೆಣಕ್ಕಿದ್ದಾನೆ. ಬಿಡುವುದುಂಟೇ..! ಅಟ್ಟಾಡಿಸಿಕೊಂಡು ಬಡಿದು ಕನ್ನಡಿಗರ ಕೀರ್ತಿ ಪತಾಕೆಯನ್ನು ಎತ್ತರಕ್ಕೆ ಹಾರಿಸಿದ ಆ ಸಂದರ್ಭ ಮುಂದೊಂದು ದಿನ ದೊಡ್ಡ ಮಟ್ಟದ ಸಂಘರ್ಷಕ್ಕೆ ಕಾರಣವಾಗಲಿದೆ ಎಂದು ಯಾರೂ ಊಹಿಸಿರಲಿಲ್ಲ.
ಅದೇನೇ ಆಗಲಿ, ಆ ಮೂಲಕ ಕನ್ನಡತನ, ಅದರಲ್ಲೂ ಸಿನಿಮಾ ಅಭಿಮಾನಿಗಳಲ್ಲಿ ತಾಯಿ ಭಾಷೆಯ ಬಗ್ಗೆ ಪ್ರೀತಿ ಮೂಡಿದ್ದನ್ನಂತೂ ತಳ್ಳಿ ಹಾಕುವಂತಿಲ್ಲ. ಹಾಗೇ ಆರಂಭಗೊಂಡ ಗಲಾಟೆ ಮುಂದೊಂದು ದಿನ ಕೆಂಪೇಗೌಡ ರಸ್ತೆಯಲ್ಲಿ ತಮಿಳು ಚಿತ್ರಗಳು ತೆರೆ ಕಾಣಲೇಬಾರದೆಂಬ ಹೊಸ ನಿಯಮಕ್ಕೆ ಕಾರಣವಾಗಿದ್ದಂತೂ ಹೌದು.
ಅದರಿಂದ ಎರಡು ರೀತಿಯ ಬೆಳವಣಿಗೆಗಳಾದವು. ರಾಜ್ ಅಭಿಮಾನಿಗಳು ಸಂಘಟಿತರಾದರು. ಸಂಘಟಿತರಾದವರೆಲ್ಲಾ ಕನ್ನಡದ ಮೇಲಿನ ಅಭಿಮಾನದಿಂದ ಸೇರುತ್ತಿದ್ದರು. ರಾಜ್ ಮತ್ತು ಕನ್ನಡ ಎರಡೂ ಒಂದೇ ಎಂಬಂತೆ ಬಿಂಬಿಸಲ್ಪಡುತ್ತಿದ್ದವು. ಅದು ರಾಜ್‌ಗೆ ಸುಲಭವಾಗಿ ದಕ್ಕಿದ್ದಲ್ಲ. ಮೊದಲೇ ಹೇಳಿದಂತೆ ಹಳ್ಳಿ ಹೈದನಾಗಿ, ಜೇಮ್ಸ್‌ಬಾಂಡ್ ಆಗಿ, ಭಕ್ತಿರಸದ ಮಹಾನ್ ಭಕ್ತನಾಗಿ, ಪುಲಕೇಶಿಯಾಗಿ, ರಣಧೀರನಾಗಿ ಶ್ರೀ ಕೃಷ್ಣದೇವರಾಯನಾಗಿ, ಮಯೂರನಾಗಿ ನಟಿಸುವುದೆಂದರೆ ಅದು ಊಹಿಸಿಕೊಳ್ಳುವಷ್ಟು ಸುಲಭದ ಮಾತಾಗಿರಲಿಲ್ಲ. ರಾಜ್ ಅದಕ್ಕಾಗಿ ಎಷ್ಟು ಅದೃಷ್ಟ ಮಾಡಿದ್ದರೋ ಏನೋ? ಗೊತ್ತಿಲ್ಲ. ಆದರೆ ತಪಸ್ಸು ಮಾಡಿದಂತೂ ಹೌದು.
ಕೆಲಸವನ್ನೇ ಪೂಜಿಸುತ್ತಿದ್ದ ರಾಜ್, ಪ್ರತಿ ಪಾತ್ರಕ್ಕೂ ನ್ಯಾಯ ಒದಗಿಸುವತ್ತ ಗಮನ ನೀಡುತ್ತಿದ್ದರು. ಹಣದ ಹಿಂದೆ ಬೀಳದೆ ಗುಣವನ್ನು ಬೆಳೆಸಿಕೊಂಡರು. ಆ ಮೂಲಕ ಬೇರೆಯವರಿಗೂ ಹಂಚಿದರು. ಈ ಎಲ್ಲಾ ಕಾರಣಗಳಿಂದಲೇ ರಾಜ್‌ಕುಮಾರ್ ದಿನದಿಂದ ದಿನಕ್ಕೆ ಎತ್ತರೆತ್ತರಕ್ಕೆ ಬೆಳೆಯುತ್ತಾ ಹೋದರು. ಆರಂಭದಲ್ಲಿ ಕಾಲೆಳೆದವರೂ ಅನಂತರ ಹೊಗಳುವಷ್ಟು ಹಾದಿ ಸವೆಸಿದ ರಾಜ್, ಮತ್ತೆ ತಿರುಗಿ ನೋಡಲೇ ಇಲ್ಲ.
ಗೋಕಾಕ್ ಎಂಬ ಮಹಾನ್ ಚಳವಳಿ:
ಪರಭಾಷೆಯ ಆಕ್ರಮಣಕ್ಕೆ ಕಡಿವಾಣ ಹಾಕಲು ಮತ್ತು ಪರಭಾಷಿಗರ ಉಪಟಳವನ್ನು ಹತ್ತಿಕ್ಕಲು ವೇದಿಕೆ ಬೇಕಿದ್ದ ಕಾಲವದು. ಬೆರಳೆಣಿಕೆಯ ಸಾಹಿತಿಗಳು ಮತ್ತು ಸಂಘಟಕರು ಸೇರಿ ಹುಟ್ಟು ಹಾಕಿದ ಗೋಕಾಕ್ ಚಳವಳಿಗೆ ಅದಾಗಲೇ ಸಾಹಿತಿಗಳು, ಬುದ್ಧಿಜೀವಿಗಳು ಚಾಲನೆ ನೀಡಿದ್ದರು. ಹೇಗಾದರೂ ಮಾಡಿ ದೊಡ್ಡ ಮಟ್ಟದ ಸಂಚಲನ ಸೃಷ್ಠಿಸಿ ಹೋರಾಟದಲ್ಲಿ ಜಯ ಸಾಧಿಸಲೇಬೇಕೆಂದು ನಿರ್ಧರಿಸಿದ್ದ ಚಳಿವಳಿಗಾರರಿಗೆ ರಾಜ್ ಹೆಸರು ನೆನಪಾಯಿತು. ಅವರು ತಡಮಾಡಲಿಲ್ಲ. ಚೆನ್ನೈನಲ್ಲಿದ್ದ ರಾಜ್‌ರನ್ನು ನೇರವಾಗಿ ಹೋರಾಟದ ಅಂಗಳಕ್ಕೆ ಕರೆದು ತಂದರು. ತಣ್ಣಗಿದ್ದ ಚಳವಳಿ ರಾಜ್ ಆಗಮನದಿಂದ ಬೃಹತ್ತಾಗಿ ಬೆಳೆಯತೊಡಗಿತು. ರಾಜ್ ಕೂಡ ಅದೇ ಹುರುಪಿನಲ್ಲಿ ರಾಜ್ಯದ ಮೂಲೆಮೂಲೆಗಳು ಹೋಗಿ ಬಂದರು. ಹೋದೆಡೆಯಲೆಲ್ಲಾ ಅದ್ಭುತ ಸ್ವಾಗತ ಕೋರುತ್ತಿದ್ದ ಜನ ನಿಮ್ಮೊಂದಿಗೆ ನಾವಿದ್ದೇವೆ ಎಂದು ಕೂಗಿ ಬೆಂಬಲಿಸುತ್ತಿದ್ದರು. ಅಂದು ರಾಜ್ ಜೊತೆಗೆ ಇಡೀ ಚಿತ್ರೋದ್ಯಮವೇ ಹಿಂಬಾಲಿಸಿತ್ತು ಎಂಬುದನ್ನು ಮರೆಯುವಂತಿಲ್ಲ.
ಸಾವಿರಾರು ಸಂಘಗಳು:
ಸಾಹಿತಿಗಳ ಮಾತಿಗೆ ಮಣಿದ ರಾಜ್ ಹೋರಾಟಕ್ಕೆ ಧುಮುಕ್ಕಿದ್ದೇನೋ ನಿಜ. ಆದರೆ ರಾಜ್‌ಗೆ ತಮ್ಮ ಶಕ್ತಿಯ ಬಗ್ಗೆ ಅರಿವಿತ್ತೆ...? ಎಂಬ ಪ್ರಶ್ನೆಗೆ ಉತ್ತರ ಹುಡುಕುವುದು ಕಷ್ಟ. ಆದರೆ, ತಮಗೇ ಅರಿವಿಲ್ಲದೆ ರಾಜ್, ಬೃಹತ್ ಸಂಘಟನೆಯ ಹುಟ್ಟಿಗೆ ಕಾರಣಕರ್ತರಾದರು. ರಾಜ್‌ಕುಮಾರ್ ಅಭಿಮಾನಿ ಸಂಘ ಹುಟ್ಟಿಕೊಂಡಿದ್ದಷ್ಟೇ ಅಲ್ಲ. ರಾಜ್ಯದ ಮೂಲೆ ಮೂಲೆಯಲ್ಲಿ ಶಾಖೆಗಳು ಬಾಗಿಲು ತೆರೆದವು. ಅಭಿಮಾನಿಗಳು ತಾಯಿ ನೆಲದ ಋಣ ತೀರಿಸುವ ಸಲುವಾಗಿ ಟೊಂಕ ಕಟ್ಟಿ ನಿಂತರು. ನೋಡನೋಡುತ್ತಲೇ ಸಾವಿರಾರು ಕನ್ನಡ ಕಲಿಗಳು ಹುಟ್ಟಿಕೊಂಡರು.
ಯಾವುದೇ ಭಾಷೆಯಲ್ಲೂ ಇಲ್ಲ
ಸಿನಿಮಾ ಮತ್ತು ತಾಯಿ ಭಾಷೆಯನ್ನು ಒಟ್ಟಿಗೆ ಬೆಳೆಸಿದ ಉದಾಹರಣೆಗಳೂ ಬೇರೆ ಎಲ್ಲೂ ಕಾಣಸಿಗುವುದಿಲ್ಲ. ಎಂಜಿಆರ್, ಎನ್‌ಟಿಆರ್ ಅವರುಗಳು ಮುಖ್ಯಮಂತ್ರಿಯಾಗಿ ಅಧಿಕಾರ ಪಡೆದರೆಂಬುದು ನಿಜವಾದರೂ, ನಿಸ್ವಾರ್ಥವಾಗಿ ರಾಜ್ಯವನ್ನು ಪ್ರೀತಿಸಿದ ಎತ್ತರಕ್ಕೆ ಅವರ‍್ಯಾರು ಬೆಳೆಯಲಿಲ್ಲ ಎಂಬುದು ಅಷ್ಟೇ ಸತ್ಯ. ಅಷ್ಟೇ ಅಲ್ಲ ಎಷ್ಟೇ ಜನಪ್ರಿಯತೆಯಿದ್ದಾಗಲೂ, ಏನೇ ಬೇಡಿಕೆ ಇದ್ದರೂ ಪರಭಾಷೆಯ ಆಹ್ವಾನವನ್ನು ನಿರಾಕರಿಸಿದ ಮಹಾನ್ ಯೋಗಿ ರಾಜ್.

ಒತ್ತಾಯದ ಮೇರೆಗೆ...
ನಟನೆಯಿಂದ ದೂರ ಸರಿದ ರಾಜ್ ಅವರನ್ನು ಅಭಿಮಾನಿಗಳು ಹೋರಾಟದ ಮೂಲಕ ಕರೆತರಬೇಕಾಯಿತು. ಇನ್ನು ಸಾಕು ಎಂದು ಮನೆಯಲ್ಲಿದ್ದ ರಾಜ್, ಅಭಿಮಾನಿಗಳ ಪ್ರೀತಿಗೆ ಮಣಿದು ಮತ್ತೆ ಬಣ್ಣ ಹಚ್ಚಿದರು. ಜೀವನ ಚೈತ್ರ ಬಿಡುಗಡೆಯಾದಾಗ ಅಭಿಮಾನಿಗಳ ಸಂಭ್ರಮ ಹೇಳತೀರದು. ಹಾಗೆ ಬೆರತು ಹೋಗಿದ್ದ ರಾಜ್ ವೀರಪ್ಪನ್‌ನಿಂದ ಅಪಹರಣಕ್ಕೊಳಗಾದಾಗಲಂತೂ ಅಭಿಮಾನಿಗಳು ಚಡಪಡಿಸಿ ಹೋದರು. ೧೦೩ದಿನ ರಾಜ್ ಜೊತೆಗೆ ಅಭಿಮಾನಿಗಳು ಕಣ್ಣುಮುಚ್ಚಲಿಲ್ಲ. ಕಡೆಗೊಂದು ದಿನ ತಮ್ಮ ಕರ್ತವ್ಯ ಮುಗಿಸಿ ಎದ್ದು ಹೋದ ರಾಜ್ ತಮ್ಮ ವೃತ್ತಿ ಮತ್ತು ತಾಯಿ ನೆಲದ ಋಣ ತೀರಿಸಿದ ಸಂತೃಪ್ತಿಯಲ್ಲಿ ಅಭಿಮಾನಿಗಳನ್ನು ತೊರೆದರು.

ಅರಸನಿಲ್ಲದ ನಾಡಲ್ಲಿ....
ರಾಜ್ ಇಹಲೋಕ ತ್ಯಜಿಸಿ ನಾಲ್ಕು ವರ್ಷಗಳು ಕಳೆದಿವೆ. ಈ ನಡುವೆ ಕನ್ನಡ ಚಿತ್ರರಂಗ ಬಾಗಿಲು ಮುಚ್ಚುವ ಬಗ್ಗೆ ಊಹಾಪೋಹವೆದ್ದಿದೆ. ಸುಭಿಕ್ಷವಾಗಿದ್ದ ಸಿನಿಮಾರಂಗ ಹೀಗೇಕಾಯಿತು. ರಾಜ್ ಕಟ್ಟಿ ಬೆಳೆಸಿದ ಚಿತ್ರರಂಗವನ್ನು ಉಳಿಸಿಕೊಳ್ಳುವಲ್ಲಿ ಏಕೆ ವಿಫಲತೆ ಕಾಣುತ್ತಿದೆ? ಎಂಬ ಪ್ರಶ್ನೆ ಗಾಂಧಿನಗರದಲ್ಲಿ ಅನಾಥವಾಗಿ ಬಿದ್ದಿದೆ. ರಾಜ್ ಹೋದ ಮೇಲೆ ಅವರ ಸ್ಥಾನ ವಿಷ್ಣು ತುಂಬುತ್ತಾರಾ? ಎಂಬ ಮಾತು ಏಳುತ್ತಿರುವಾಗಲೇ ಅವರು ಹೊರಟು ಹೋದರು. ಇನ್ನು ಅಂಬಿ, ಅತ್ತ ರಾಜಕೀಯ ಮತ್ತು ಸಿನಿಮಾ ಎರಡರಲ್ಲೂ ಇರುವುದರಿಂದ ನಾಯಕರಾಗುವುದು ಕಷ್ಟ. ರಾಜ್‌ಗಿದ್ದ ಹಿಡಿತ ರಾಜ್ ಜತೆಯಲ್ಲೇ ಕೊನೆಯಾಗಿದ್ದು ಮಾತ್ರ ದುರಂತವೇ ಸರಿ.
ನಂತರದ ತಲೆಮಾರಿನ ನಟರು ತಮ್ಮ ಸಿನಿಮಾಗಳನ್ನೇ ನೆಟ್ಟಗೆ ಮಾಡಲಾಗುತ್ತಿಲ್ಲ. ಅಂತಹುದರಲ್ಲಿ ಚಿತ್ರರಂಗವನ್ನು ಮುನ್ನಡೆಸುವ ಮಾತಂತೂ ದೂರವೇ. ಕಾಸು ಮಾಡೋದಷ್ಟೇ ಕಾಯಕ ಎಂಬತ್ತಾಗಿರುವ ಇವರುಗಳ ಬಳಿ ಯಾರು ನಮ್ಮ ನಾಯಕ ಎಂಬ ಪ್ರಶ್ನೆಗೆ ಉತ್ತರ ಹುಡುಕುವುದು ಕಷ್ಟಸಾಧ್ಯ.
ಸ್ವಾರಸ್ಯವಿಲ್ಲದ ಸಿನಿಮಾಗಳು....ಇಲ್ಲಿ ಮಚ್ಚು ಮಾತ್ರ ಮಾತನಾಡುತ್ತವೆ:
ನಮ್ಮ ಸಂಸಾರ, ನಂದಗೋಕುಲ, ಬಂಗಾರದ ಮನುಷ್ಯ, ಶಂಕರ್‌ಗುರು, ಜೀವನ ಚೈತ್ರದಂತಹ ಸಿನಿಮಾ ಮಾಡದಿದ್ದರೂ, ಕನಿಷ್ಠ ಈ ನಾಡಿನ ಸೊಗಡನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಾದರೂ ಯೋಚಿಸಬೇಡವೇ. ಸಮಾಜ ಹುಟ್ಟಿಕೊಂಡಾಗಲೇ ಅದರ ಜತೆಗೆ ಕೊಳಕು ಸೇರಿಕೊಳ್ಳುತ್ತದೆ. ಅದು ರಾಜ್‌ಕುಮಾರ್ ಕಾಲದಲ್ಲೂ ಇತ್ತು. ಆದರೆ, ಈವತ್ತೇನಾಗಿದೆಯೋ ನೋಡಿ. ಮಾತೆತ್ತಿದ್ದರೆ ಎಲ್ಲಾ ಹೀರೋಗಳು ಮಚ್ಚು ಹಿಡಿಯುತ್ತಾರೆ. ರಕ್ತ ಹರಿಸುತ್ತಾರೆ. ದ್ವೇಷದ ಚಿತ್ರ ನೋಡುವವರು ಪ್ರೀತಿಯನ್ನು ಕಲಿಯುವುದಾದರೂ ಹೇಗೆ? ಇನ್ನು ಸಹಬಾಳ್ವೆಯಂತೂ ದೂರದ ಮಾತು. ರಾಜ್ ತಮ್ಮ ಕೊನೆಯ ದಿನಗಳಲ್ಲೂ ಒಡಹುಟ್ಟಿದವರು ರೀತಿಯ ಮನೆ ಉಳಿಸುವ, ಆ ಮೂಲಕ ನಾಡು ಕಟ್ಟುವ ಚಿತ್ರಗಳನ್ನಷ್ಟೇ ಮಾಡಿದರು ಎಂಬುದನ್ನು ಗಮನಿಸಬೇಕು.
ನಿರ್ದೇಶಕರ ಪೈಕಿ ಇಂಗ್ಲಿಷ್ ಚಿತ್ರಗಳಿಂದ ಕದ್ದವರು ಮೇಲ್ಪಂಕ್ತಿಯಲ್ಲಿದ್ದಾರೆ. ಆದರೆ ಅವರ ಸ್ಟಾರ್‌ಗಿರಿಯ ಯೋಗದ ಜೊತೆಗೆ ಸವಾಲೆನಿಸುವ ಚಿತ್ರ ಕೂಡುವ ಇರಾದೆ ಇಲ್ಲ. ಕೆಲವರು ರೀಮಿಕ್ಸ್‌ನಲ್ಲಿ ಬ್ಯುಸಿ. ಮತ್ತೆ ಕೆಲವರು ರಿಮೇಕ್‌ನಲ್ಲಿ. ಅವರಿಗೆ ಉದ್ಯಮ ಕಾಸು ಕೊಡುವ ಯಂತ್ರವಾಗಿ ಮಾತ್ರ ಕಾಣುತ್ತಿದೆ. ಅದಕ್ಕೆ ನಿರ್ಮಾಪಕರ ಕೊಡುಗೆಯೂ ದೊಡ್ಡ ಮಟ್ಟದಲ್ಲಿದೆ.
ರಾಜ್‌ಕುಮಾರ್ ಕೂಡ ಇವರಂತೆಯೇ ಯೋಚನೆ ಮಾಡಿದ್ದರೆ ಚಿತ್ರರಂಗ ಈ ಮಟ್ಟಕ್ಕೆ ಬೆಳೆಯುತ್ತಿತ್ತೇ..? ಕನ್ನಡದ ಕಹಳೆ ಮೊಳಗುತ್ತಿತ್ತೆ. ಹೌದು, ಬದಲಾದ ಕಾಲಕ್ಕೆ ಒಂದಷ್ಟು ಬದಲಾವಣೆ ಬೇಕೆಂಬುದೇನೋ ನಿಜ. ಆದರೆ, ಭವಿಷ್ಯವನ್ನೇ ಮರೆತರೆ ಹೇಗೆ, ಮಚ್ಚು-ಮಳೆ ಎಂಬ ಸಿದ್ಧ ಸೂತ್ರದಿಂದ ಹೊರಬಂದು ಮಾನವೀಯ ಮೌಲ್ಯಗಳ ಜೊತೆಗೆ, ಭಾಂದವ್ಯದ ಬೆಸುಗೆ ಬೆರೆಸಿ ಸಾಮಾಜಿಕ ಕಳಕಳಿಯನ್ನು ತುಂಬುವ ಕೆಲಸ ಸಿನಿಮಾದವರಿಂದ ಆಗಬೇಕಿದೆ. ಸಿನಿಮಾ ಮಾಧ್ಯಮದಷ್ಟು ಪ್ರಭಾವಶಾಲಿ ಮಾಧ್ಯಮ ಮತ್ತೊಂದಿಲ್ಲ. ಅದನ್ನು ಮರೆತು ನಡೆದರೆ ಮುಂದೊಂದು ದಿನ ಈ ಹೋರೋಯಿಸಂ ಮತ್ತು ಸಿನಿಮಾ ಎರಡನ್ನು ಜನ ದೂರವಿಟ್ಟರೆ ಆಶ್ಚರ್ಯವಿಲ್ಲ.
ನಾವು ಏನನ್ನು ಬಿತ್ತುತ್ತೇವೋ ಅದನ್ನೇ ಬೆಳೆಯುತ್ತೇವೆ. ಅಂದು ನೆಟ್ಟ ಗಿಡದ ಹಣ್ಣು ತಿನ್ನುತ್ತಿರುವ ಫಲಾನುಭವಿಗಳೇ ನಾಳೆಯ ಬಗ್ಗೆಯೂ ಒಂದಷ್ಟು ಚಿಂತಿಸಿ. ನೀವೂ ಸ್ವಲ್ಪ ಆರೋಗ್ಯಕರ ಗಿಡಗಳನ್ನು ನೆಡಿ. ಅವು ಹೆಮ್ಮರವಾಗಿ ಮುಂದಿನ ಪೀಳಿಗೆಗೆ ಆರೋಗ್ಯದ ಹಣ್ಣು ನೀಡಿ ಉತ್ತಮ ಸಮಾಜ ನಿರ್ಮಿಸುವಲ್ಲಿ ಇಂದೇ ಕಾಯೋನ್ಮುಖರಾಗಿ ರಾಜ್ ಹಾಕಿ ಕೊಟ್ಟ ಹಾದಿಯಲ್ಲಿ ಹೆಜ್ಜೆ ಹಾಕಿ.

- ಯತಿರಾಜ್ ಕೆ.

ಮಹಾತಾತ್ವಿಕ ಪ್ರೊ.ನಂಜುಂಡಸ್ವಾಮಿ




ಪ್ರೊ. ನಂಜುಂಡಸ್ವಾಮಿ ನನಗೆ ಪರಿಚಯವಾದದ್ದು 60ರ ದಶಕದಲ್ಲಿ 1966ನೇ ಇಸವಿಯಲ್ಲಿ ನಾನು ಇಂಗ್ಲೆಂಡಿನಿಂದ ಹಿಂದಕ್ಕೆ ಬಂದು ಕೆಲ ಕಾಲದವರೆಗೆ, ಮೈಸೂರಿನ ಸರಸ್ವತಿಪುರಂನ ಏಳನೇ ಮೈನ್ ನಲ್ಲಿ ವಾಸಿಸುತ್ತಿದ್ದೆ. ಆಗ ಯಾವಾಗಲೂ ನಮ್ಮ ಮನೆಯಲ್ಲಿ ಬಿ.ಎಸ್.ಆಚಾರ್ ಎನ್ನುವ ಒಬ್ಬ ಗೆಳೆಯ ಇರುತ್ತಿದ್ದರು. ಯಾವುದೋ ಒಂದು ಕಾಲದಲ್ಲಿ ನನ್ನಅಜ್ಜಯ್ಯನಿಗೆ ಪ್ರಿಯನಾಗಿದ್ದ ಪರೋಪಕಾರಿ ಹುಡುಗನೆಂದು ನನ್ನ ಅಮ್ಮ ಇವರ ಬಗ್ಗೆ ಹೇಳಿದ್ದರು. ಗತಿಸಿದ ಆಚಾರ್ ಈಗಲೂ ನನ್ನ ಕಣ್ಣಿಗೆ ಕಾಣುವಂತೆ ಇದ್ದಾರೆ. ಅವರದು ಹೊಳೆಯುವ ಬೋಳುತಲೆ, ಮಿಂಚುವ ತುಂಟು ಕಣ್ಣುಗಳು, ಕುಳ್ಳ ಶರೀರ, ಪುಟಿಯುವ ಚಂಡಿನಂತೆ ಅವರಚಲನೆ. ಅವರ ಬಗ್ಗೆ ಈಗ ನಾನು ಮಾತನಾಡುತ್ತಿರುವುದು ಕೃತಕವೆನಿಸುತ್ತದೆ. ಆಚಾರ್ ಬಗ್ಗೆ ಎಂದೂ ನಾನು ಬಹುವಚನವನ್ನು ಬಳಸಿದ್ದಿಲ್ಲ; ಅಷ್ಟು ಆತ್ಮೀಯ ಗೆಳೆಯ ಗತಕಾಲದ ನನ್ನ ಅಜ್ಜಯ್ಯನ ಬಗ್ಗೆ ಮಾತಾಡಬಲ್ಲವನಾಗಿದ್ದ ಚಿರ ಯುವಕ.
ಆಚಾರ್ ಬಗ್ಗೆ ಏಕವಚನದಲ್ಲೇ ಮುಂದುವರೆಯುವೆ. ಕೃಷ್ಣನಿಗೆ ಚಕ್ರವಿದ್ದಂತೆ ಆಚಾರ್ ಗೆ ಕ್ಯಾಮರಾ. ಆಚಾರ್ ತನ್ನ ಚಿಕ್ಕ ವಯಸ್ಸಿನಿಂದ ತನ್ನ ಕ್ಯಾಮರಾ, ತನ್ನ ಅಚ್ಚುಕಟ್ಟಾದ ಬರವಣಿಗೆ, ತನ್ನ ಬಿದ್ದು ಬಿದ್ದು ನಗುವ ಗಹಗಹ, ತನ್ನ ಔದಾರ್ಯ ಇವುಗಳಿಂದ ಸರ್ವಜನಪ್ರಿಯನಾಗಿದ್ದ ಆರ್.ಕೆ.ನಾರಾಯಣ್್ರಿಗೂ ಈತ ಬಹಳ ಹತ್ತಿರದವ. ನಾರಾಯಣ್್ಗೆ ಟೈಪ್ ಮಾಡಿಕೊಡುವುದರಿಂದ ಹಿಡಿದು, ಅವರು ಹೇಳಿದ್ದನ್ನೆಲ್ಲಾ ಟಿಪ್ಪಣಿ ಮಾಡಿಕೊಳ್ಳುತ್ತಿದ್ದ. ಆಚಾರ್, ನಾರಾಯಣ್್ರ ಹಳೆಯ ಕಾಲದ ಕೃಷಣತೆಯನ್ನು ನನ್ನೆದುರು ಹಳಿದು ಗೊಣಗಿ, ಉಳಿದವರ ಎದುರು ನಾರಾಯಣರನ್ನು ಕೊಂಡಾಡುತ್ತಿದ್ದ. ನಂಜುಂಡಸ್ವಾಮಿಯ ಮೇಲೆ ಬರೆಯಲೆಂದು ಹೊರಟವನ್ನು ಆಚಾರ್್ನನ್ನು ಅಖ್ಯಾನಿಸಲು ಪ್ರಾರಂಭಿಸಿಬಿಟ್ಟಿದ್ದೇನೆ.
ಇದಕ್ಕೊಂದು ಕಾರಣವಿದೆ. ನಂಜುಂಡಸ್ವಾಮಿಯನ್ನು ನನ್ನ ಮನೆಗೆ ಕರೆತಂದದ್ದು, ಆಮೇಲೆ ನಮ್ಮಿಬ್ಬರನ್ನು ಸಂಜೆ ಮೆಟ್ರೋಪೋಲಿಗೆ ಕರೆದುಕೊಂಡು ಹೋಗುತ್ತಿದ್ದದ್ದು ಆಚಾರಿ. ನಮಗೆಲ್ಲಾ ವಯಸ್ಸಾಗಿದೆ ಎನ್ನುವುದೇ ಜ್ಞಾಪಕಕ್ಕೆ ಬರಗೊಡದಂತೆ ಆಚಾರ್ ಸೃಷ್ಟಿಸುತ್ತಿದ್ದ ಹಡೆತನ, ಪೋಲಿವಾತಾವರಣದಲ್ಲಿ ಸದಾ ಗಂಭೀರ ಮುಖಮುದ್ರೆಯ ನಂಜುಂಡಸ್ವಾಮಿ ನೆನಪಾಗುತ್ತಾರೆ. ಆಚಾರ್ ನಮ್ಮಲ್ಲಿ ಎಷ್ಟು ಖುಷಿ ತರುತ್ತಿದ್ದನೋ, ಅಷ್ಟೇ ನನ್ನ ಮತ್ತು ನಂಜುಂಡಸ್ವಾಮಿಯ ಗಂಭೀರವಾದ ಚರ್ಚೆಗಳಿಗೆ ಔದಾರ್ಯದ ಅವಕಾಶ ಮಾಡಿಕೊಡುವುದಲ್ಲದೆ, ತಾನೂ ತನ್ಮಯನಾಗಿರುತ್ತಿದ್ದ. ನಮ್ಮ ಮಾತುಗಳನ್ನು ತನ್ನ ಮಾತುಗಳಲ್ಲಿ ಹೆಣೆದು ನಮ್ಮೆದುರಿಗಿಟ್ಟು ನಮ್ಮನ್ನು ವೃದ್ಧಿಸುತ್ತಾ ಸುಖ ಕೊಡುತ್ತಿದ್ದ.
ಜರ್ಮನಿಯಿಂದ ಅದೇ ತಾನೇ ಬಂದವರೆಂದು ನಂಜುಂಡಸ್ವಾಮಿ ನನಗೆ ಗುರುತಾದದ್ದು. ಪ್ರಾರಂಭದಲ್ಲಿ ಶ್ರೀಮಲ್ಲಾರಾಧ್ಯರ ಬಗ್ಗೆಯೂ, ಶ್ರೀಜಯಚಾಮರಾಜೇಂದ್ರ ಒಡೆಯರ ಬಗ್ಗೆಯೂ ಯಾವುದೋ ಆಸಕ್ತಿ ಇದ್ದವರಂತೆ ಕಂಡಿದ್ದ ನಂಜುಂಡಸ್ವಾಮಿಯನ್ನು ನಾನು ಆಚಾರ್ ನನ್ನು ಹಚ್ಚಿಕೊಂಡಷ್ಟು ಹಚ್ಚಿಕೊಂಡಿರಲಿಲ್ಲ. ಆಗ ನಂಜುಂಡಸ್ವಾಮಿ ಯಾವುದೋ ಒಂದು ದೊಡ್ಡ ಗ್ರಂಥದ ತಯಾರಿಯಲ್ಲಿ ಇದ್ದರೆಂಬ ನೆನಪು. ಇದೊಂದು ಉದ್ಗಂಥವಾಗಿ ಬರುತ್ತದೆಂದು ಆಚಾರ್ ಹಾರಾಡುತ್ತಿದ್ದ.
ನಂಜುಂಡಸ್ವಾಮಿ ಹೆಚ್ಚು ಮಾತನಾಡುತ್ತಿರಲಿಲ್ಲ. ಆದರೆ ತನ್ನ ಸುತ್ತಲಿನ ಎಲ್ಲ ಮಾತುಗಳನ್ನು, ಎಲ್ಲ ಇಂಗಿತಗಳೂ ತಿಳಿಯುವಂತೆ ಕೇಳಿಸಿಕೊಳ್ಳಬಲ್ಲವರಾಗಿದ್ದರು. ಅವರೆಷ್ಟು ತೆಳ್ಳಗೆ, ಚೂಪಾಗಿ ಕಾಣುತ್ತಿದ್ದರೆಂದರೆ, ಅವರು ನಮಗೆ ನೆನಪು ಮಾಡಬಹುದಾಗಿದ್ದ ವ್ಯಕ್ತಿ ವಿನೋಬ ಮಾತ್ರ- ಆಕಾರದಲ್ಲಿ, ಆದರೆ ಅವರ ಜೀವನ ಶೈಲಿಯಲ್ಲಿ ಅಲ್ಲ. ನಂಜುಂಡಸ್ವಾಮಿ, ಕುವೆಂಪುರವರು ಸೂಚಿಸಿದ ಹೆಸರಿನ್ನಿಟ್ಟು ಮಾನವ ಎನ್ನುವ ಪತ್ರಿಕೆಯನ್ನು ಪ್ರಾರಂಭಿಸಿದಾಗ, ನಮ್ಮ ಎಲ್ಲ ಗೆಳೆಯರು ಅವರನ್ನು ಬಡಕಲು ಮಾನವ ಎಂದೇ ಕರೆಯುತ್ತಿದ್ದದ್ದು.
ನಾವೆಲ್ಲರೂ ಬೆಳೆಯುತ್ತಿದ್ದ, ನಮ್ಮ ವಿಶಿಷ್ಟ ರೀತಿಗಳಲ್ಲಿ ದೃಢವಾಗುತ್ತಿದ್ದ, ಹಾಗೆಯೇ ಅನೇಕ ಗೊಂದಲಗಳಲ್ಲಿ ವಿಚಾರ ಮಾಡುತ್ತಿದ್ದ ಕಾಲ ಅದು; ಆ ದಿನಗಳಲ್ಲೇ ತೇಜಸ್ವಿ, ಕಡಿದಾಳ್ ಶಾಮಣ್ಣ, ಲಂಕೇಶ್ ಆಗೀಗ ಒಟ್ಟಾಗಿ ಸೇರುತ್ತಿದ್ದೆವು. ಮಾರ್ಕ್ಸ್ ವಾದ, ಲೋಹಿಯಾ, ಜಿಡ್ಡುಕೃಷ್ಣಮೂರ್ತಿ (ಹೆಚ್ಚಾಗಿ ತೇಜಸ್ವಿ ಜೊತೆ) -ಹೀಗೆ ಹಲವು ವಿಷಯಗಳ ಬಗ್ಗೆ ನಾವು ಹರಟುತ್ತಿದ್ದೆವು.
ಮುಂಚಿನಿಂದಲೂ ನಂಜುಂಡಸ್ವಾಮಿ ತತ್ಪರನಾಗಿ ತನ್ನ ಕೆಲಸದಲ್ಲಿ ತೊಡಗಿದ್ದ ವ್ಯಕ್ತಿ. ಲೋಹಿಯಾರವರು ಪ್ರತಿಪಾದಿಸುತ್ತಿದ್ದ ಸಮಾಜವಾದಿ ಸಿದ್ಧಾಂತ ನಮ್ಮೆಲ್ಲರನ್ನೂ ಆಕರ್ಷಿಸಿತ್ತು. ರಾಜಕೀಯದಲ್ಲಿ ಶೂದ್ರರೇ ಮುಂದಾಳುಗಳಾಗಿರಬೇಕು, ಸಾರ್ವಜನಿಕ ವ್ಯವಹಾರದಲ್ಲಿ ಇಂಗ್ಲಿಷನ್ನು ಕೈಬಿಡಬೇಕು; ಹೆಂಗಸರು ಸ್ವತಂತ್ರರಾಗಬೇಕು, ಆರ್ಥಿಕ ವ್ಯವಸ್ಥೆ ವಿಕೇಂದ್ರೀಕೃತವಾಗಬೇಕು, ರಾಜ್ಯವ್ಯವಸ್ಥೆ ಚತುಸ್ತಂಭ ವ್ಯವಸ್ಥೆ ಆಗಬೇಕು -ಇತ್ಯಾದಿ ವಿಚಾರಗಳು ಎಲ್ಲರಿಗೂ ಪ್ರಿಯವಾಗಿದ್ದವು. ಆದರೆ ಇದರ ಪ್ರತಿಪಾದನೆಯಲ್ಲಿ ನಂಜುಂಡಸ್ವಾಮಿ ತೋರುತ್ತಿದ್ದ ಕಠೋರವಾದ ಉಗ್ರತೆ ಉಳಿದವರಲ್ಲಿ ಇರಲಿಲ್ಲ.
ನಂಜುಂಡಸ್ವಾಮಿಯವರ ಬ್ರಾಹ್ಮಣ ವಿರೋಧಿ ಆಂದೋಲನ ಅಕ್ಷರಶಃ ಬ್ರಾಹ್ಮಣ ವಿರೋಧಿಯಾಗುತ್ತಿದೆಯೆಂದು ನಮ್ಮಲ್ಲಿ ಹಲವರಿಗೆ ಗುಮಾನಿಯಾಗತೊಡಗಿತು. ಕರ್ನಾಟಕದ ಆಗಿನ ಕಾಲದ ಒಬ್ಬ ಅತ್ಯುತ್ತಮ ಚಿಂತಕರಾಗಿದ್ದವರು ಎಸ್. ವೆಂಕಟರಾಂ. ಇವರು ನಂಜುಂಡಸ್ವಾಮಿಯ ವಿರೋಧಿಯಾದರು. ಬೆಂಗಳೂರಿನ ಆಫೀಸ್ ವೊಂದರಲ್ಲಿ ಬಾಡಿಗೆ ಕೊಡಲು, ಟೆಲಿಫೋನ್ ಬಿಲ್ ಕಟ್ಟಲು ಪ್ರತಿ ತಿಂಗಳೂ ಪರದಾಡುತ್ತಾ, ಪಕ್ಷದ ಕೆಲಸ ಮಾಡಿಕೊಂಡು ಹೋಗುವ ವೆಂಕಟರಾಂರನ್ನು ನಂಜುಂಡಸ್ವಾಮಿ ಶಾನುಭೋಗ ಎಂದು ಗೇಲಿ ಮಾಡುವುದು ಗೋಪಾಲಗೌಡರಿಗಾಗಲೀ, ಜೆ.ಹೆಚ್. ಪಟೇಲರಿಗಾಗಲೀ ಸರಿ ಕಾಣುತ್ತಿರಲಿಲ್ಲ. ಆದರೆ ಜರ್ಮನಿಯಲ್ಲಿ ಓದಿ ಬಂದು, ಪಕ್ಷದ ಪ್ರಣಾಳಿಕೆಯನ್ನು ತೀವ್ರವಾಗಿ ನಂಬುವ ನಂಜುಂಡಸ್ವಾಮಿಯವರನ್ನು ತಿರಸ್ಕರಿಸುವುದೂ ಇವರಿಗೆ ಸಾಧ್ಯವಿರಲಿಲ್ಲ.
ಪಕ್ಷದ ನಾಯಕರಿಗೆ ನಂಜುಂಡಸ್ವಾಮಿ ಒಂದು ದೊಡ್ಡ ಸಮಸ್ಯೆಯಾಗಲು ಕಾರಣ, ಪ್ರತಿಭಾವಂತರಾದ ಯುವಲೇಖಕರೆಲ್ಲರೂ ನಂಜುಂಡಸ್ವಾಮಿಗೆ ಹತ್ತಿರದವರಾದದ್ದು. ಬ್ರಿಟಿಷ್ ಶಿಲಾಪ್ರತಿಮೆಗಳನ್ನು ಮೈಸೂರಿನಲ್ಲೂ ಬೆಂಗಳೂರಿನಲ್ಲೂ ಕಿತ್ತು ಹಾಕಬೇಕೆಂಬ ಚಳುವಳಿ, ಅಶೋಕ ಹೋಟೆಲ್‌ನಲ್ಲಿ ಕಾಫಿ-ತಿಂಡಿಯನ್ನು ಉಳಿದೆಲ್ಲ ಹೋಟೆಲ್ ಗಳಂತೆ ಕಡಿಮೆ ದರದಲ್ಲಿ ಮಾರಬೇಕೆಂಬ ಚಳುವಳಿ, ಸಮಾಜವಾದಿ ಬಳಗದ ಗೌರವಾನ್ವಿತರನ್ನು ಗೊಂದಲಕ್ಕೆ ಈಡುಮಾಡುವಷ್ಟು ಬೀದಿಗಿಳಿಯಿತು. ಹೀಗೆ ಬೀದಿಗಿಳಿಯಬೇಕು ಎಂಬುದನ್ನೇ ಲೋಹಿಯಾ ಬಯಸಿದ್ದು ಎನ್ನುವ ಸತ್ಯ ನಂಜುಂಡಸ್ವಾಮಿಯ ಬೆಂಬಲಕ್ಕೆ ಇತ್ತು. ಇನ್ನೊಂದು ಕಾಲದಲ್ಲಿ ಮೈಸೂರಿನ ಮಹಾರಾಜರ ದಸರಾ ಮೆರವಣಿಗೆಯನ್ನು ವಿರೋಧಿಸಿ, ಕಪ್ಪು ಬಾವುಟ ತೋರಿಸುತ್ತಿದ್ದ ಶಾಂತವೇರಿ ಗೋಪಾಲಗೌಡ ಮತ್ತು ಜೆ.ಹೆಚ್. ಪಟೇಲರು ಕೂಡ ವ್ಯವಸ್ಥೆಯ ಜೊತೆ ರಾಜಿ ಮಾಡಿಕೊಳ್ಳುತ್ತಿದ್ದಾರೆ ಎಂದು ಟೀಕಿಸುವುದು ಸಾಧ್ಯವಾಗುವಂತೆ ನಂಜುಂಡಸ್ವಾಮಿ ತಮ್ಮ ಉಗ್ರಕಾರ್ಯಕ್ರಮಗಳನ್ನು ಯೋಜಿಸತೊಡಗಿದರು. ಅವರ ಹಿಂದೆ ಒಂದು ದೊಡ್ಡ ಯುವಜನಪಡೆಯೇ ಇತ್ತು.
ಶಾಂತವೇರಿ ಗೋಪಾಲಗೌಡರು, ಜೆ.ಹೆಚ್. ಪಟೇಲರು ಮತ್ತು ಎಸ್. ವೆಂಕಟರಾಂ -ಈ ಮೂವರಿಗೂ ನಂಜುಂಡಸ್ವಾಮಿಯವರ ಕಾರ್ಯಕ್ರಮಗಳಿಗಿಂತ ಹೆಚ್ಚಾಗಿ ಅವರ ದುಡುಕಿನ ನಿಷ್ಠುರದ ಮಾತು ಅಸಹನೀಯವಾಗತೊಡಗಿತು. ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಹೊಸ ಮಾತನ್ನು ಆಡಲು ತೊಡಗಿದ್ದ ಲಂಕೇಶ್ ಮತ್ತು ತೇಜಸ್ವಿಯವರೂ ನಂಜುಂಡಸ್ವಾಮಿಯ ಬೆಂಬಲಿಗರಾಗಿದ್ದರು. ಆದರೆ ಅವರು ಯಾರೋ ಒಬ್ಬನನ್ನು ನಾಯಕನೆಂದು ಒಪ್ಪಿಕೊಂಡು ಹಿಂಬಾಲಿಸುವ ಜನರಾಗಿರಲಿಲ್ಲ. ಹೀಗಾಗಿ ನಂಜುಂಡಸ್ವಾಮಿಯ ಒಳ ಬಳಗದಲ್ಲೂ ಹಲವು ಭಿನ್ನಾಭಿಪ್ರಾಯಗಳು ಇದ್ದವು. ಹಿನ್ನೋಟದಲ್ಲಿ ನಾನು ಇದನ್ನು ಹೇಳಬಲ್ಲೆ: ಈ ಜಗಳಗಳಲ್ಲಿ ಕಪಟವಾಗಲಿ, ಕಾರಸ್ಥಾನವಾಗಲಿ ಇರಲಿಲ್ಲ. ನಾವು ಇದ್ದದ್ದು ಕೆಲವೇ ಕೆಲವು ಜನರಾದರೂ ನಮ್ಮ ನಡುವಿನ ಚರ್ಚೆಗಳು ನಾವೊಂದು ದೊಡ್ಡ ಚಳುವಳಿ ಎಂದು ಭಾವಿಸಿಕೊಂಡಂತೆ ಎಲ್ಲರಿಗೂ ತೋರುತ್ತಿತ್ತು. ನಾವಂತೂ ಈ ಪ್ರಪಂಚವನ್ನು ಸದ್ಯದಲ್ಲೇ ಬದಲಾಯಿಸಬಲ್ಲ ಜನ ನಾವು ಎಂದು ಕೊಂಡವರಂತೆ ವರ್ತಿಸುತ್ತಿದ್ದೆವು. ಈ ಮಾತುಗಳನ್ನು ನಾನು ವ್ಯಂಗ್ಯದಲ್ಲಾಗಲಿ, ಅಪಹಾಸ್ಯದಲ್ಲಾಗಲಿ ಹೇಳುತ್ತಿಲ್ಲ. ಈ ನಮ್ಮ ಹುಚ್ಚುತನ ಆ ಕಾಲದ ಕರ್ನಾಟಕದ ಎಷ್ಟೋ ವಿಚಾರಗಳನ್ನು ಹುಟ್ಟುಹಾಕುವ ಸಾಧ್ಯತೆಯನ್ನು ಪಡೆದಿತ್ತು.
ವೆಂಕಟರಾವ್ ಹೇಳಿದೊಂದು ಮಾತು ಇಲ್ಲಿ ನೆನಪಾಗುತ್ತದೆ: ಭಾರತದ ಕಮ್ಯುನಿಸ್ಟರು ನಿಜದಲ್ಲಿ ಸೋಶಿಯಲ್ ಡೆಮೊಕ್ರಾಟರು; ಆದರೆ ತಮ್ಮನ್ನು ತಾವು ಕ್ರಾಂತಿಕಾರರೆಂದು ಭ್ರಮಿಸಿಕೊಂಡಿದ್ದಾರೆ. ಭಾರತದ ಲೋಹಿಯಾವಾದಿಗಳು ನಿಜದಲ್ಲಿ ಆನಾರ್ಕಸ್ಟರು; ಆದರೆ ತಮ್ಮನ್ನು ತಾವು ಸೋಶಿಯಲ್ ಡೆಮೊಕ್ರಾಟರು ಎಂದುಕೊಂಡಿದ್ದಾರೆ. ತಮ್ಮ ನಿಜ ತಿಳಿದು ಇಬ್ಬರೂ ವರ್ತಿಸಿದ್ದಾದರೆ ನಮ್ಮ ರಾಜಕೀಯ ಇನ್ನಷ್ಟು ಸ್ಪಷ್ಟನೆ ಪಡೆಯಬಹುದಾಗಿತ್ತು.
ಈ ನಮ್ಮ ಆಂದೋಲನದಲ್ಲಿ ಮುಖ್ಯವಾಗುತ್ತಾ ಹೋದ
ಇನ್ನೊಬ್ಬರೆಂದರೆ ಮೈಸೂರಿನ ಗೆಳೆಯ ರಾಮದಾಸ್. ನಂಬಿಕೆಯ ಉಗ್ರ ಪ್ರತಿಪಾದನೆಯಲ್ಲಿ ನಂಜುಂಡಸ್ವಾಮಿಯವರಿಗಿಂತ ಇವರೇನೂ ಕಮ್ಮಿಯಿಲ್ಲ. ಬೂಟಾಟಿಕೆಯ ಹಲವು ವಿದ್ಯಾವಂತರ ನಡುವೆ ಇವರೆಲ್ಲಾ ಅಪ್ಪಟವೆನ್ನಿಸಿಕೊಂಡಿದ್ದರು; ಯಾವುದಕ್ಕೂ ಹೆದರದವರಾಗಿದ್ದರು. ಕೊಂಚ ಅತಿರೇಕದ ಅವಿವೇಕಿಗಳೂ ಆಗಿದ್ದರು.
ನಾನೀಗ ವರ್ಣಿಸುತ್ತಿರುವುದು ನಂಜುಂಡಸ್ವಾಮಿ ರೈತಸಂಘವನ್ನು ಕಟ್ಟುವುದಕ್ಕಿಂತ ಕೊಂಚ ಹಿಂದಿನ ಕಾಲ; ಮೈಸೂರಿನಲ್ಲಿ ನಡೆದ ಲೇಖಕರ ಒಕ್ಕೂಟದ ಸಭೆ ಮತ್ತು ಸ್ವಲ್ಪ ಕಾಲದ ನಂತರದ ಜಾತಿ ವಿನಾಶ ಸಮ್ಮೇಳನ ನನ್ನ ನೆನಪಿಗೆ ಈ ಕಾಲದ ಮೂಡನ್ನು ವಿವರಿಸಲು ನೆನಪಾಗುತ್ತದೆ.
ಬರಹಗಾರರ ಒಕ್ಕೂಟ ಮೈಸೂರಿನಲ್ಲಿ ಸೇರಿದ್ದಾಗ ನನ್ನನ್ನು ಹುಟ್ಟಿನಲ್ಲಿ ಬ್ರಾಹ್ಮಣನೆಂಬ ಕಾರಣಕ್ಕಾಗಿ ಆಮಂತ್ರಿಸಲಿಲ್ಲವೆಂದು ಆಲನಹಳ್ಳಿ ಕೃಷ್ಣ ಪ್ರತಿಭಟಿಸಿದ್ದರು. ಕೃಷ್ಣನೂ ನಂಜುಂಡಸ್ವಾಮಿಯವರ ಗುಂಪಿನವನೇ. ನನ್ನ ಜೊತೆ ಸತತವಾದ ಪ್ರೀತಿ ಮತ್ತು ಜಗಳದಲ್ಲಿ ತೊಡಗಿರುತ್ತಿದ್ದ ಲಂಕೇಶರು ಒಂದು ರಾತ್ರಿ ಗತಿಸಿದ ಗೆಳೆಯ ರಾಜಶೇಖರ್ ಎಂಬೊಬ್ಬರ ಸ್ಕೂಟರ್ ನಲ್ಲಿ ಸೀದಾ ಏಳನೆ ಮೈನಿನ ನನ್ನ ಸರಸ್ವತೀಪುರಂ ಮನೆಗೆ ಬಂದರು. ಅವರು ತೀವ್ರತೆಯಲ್ಲೂ ಆತಂಕದಲ್ಲೂ ನನ್ನೊಡನೆ ಆಡಿದ ಮಾತು ನನಗೆ ನೆನಪಿದೆ: ಅನಂತಮೂರ್ತಿ, ನಾವೆಲ್ಲಾ ಒಟ್ಟಾಗಿ ಎಲ್ಲ ಬ್ರಾಹ್ಮಣರನ್ನೂ ಕಟುವಾಗಿ ವಿರೋಧಿಸುವುದಕ್ಕೆ ಹೊರಟಿದ್ದೇವೆ. ಈ ಅತಿರೇಕದಲ್ಲಿ ನಾವು ತಪ್ಪುಗಳನ್ನು ಮಾಡಬಹುದು. ಆದರೆ, ಇದರಿಂದ ಬೇಸರಪಟ್ಟು ನೀವು ಮಾತ್ರ ಬ್ರಾಹ್ಮಣವಾದಿಯಾಗಕೂಡದು. ನೀವು ತಾಳಿಕೊಂಡು ಇದ್ದರೆ ಮುಂದೆಲ್ಲಾ ಸರಿ ಹೋಗುತ್ತದೆ. ಈ ವಿರೋಧ ಒಂದು ಚಾರಿತ್ರಿಕ ಅಗತ್ಯ. ಆಗ ನಾನು ಲಂಕೇಶರಿಗೆ ಹೀಗೆ ಹೇಳಿದೆ: ಈ ನಮ್ಮ ಜಾತಿ ವ್ಯವಸ್ಥೆಯಲ್ಲಿ ನೂರಕ್ಕೆ ನೂರು ಜಾತಿವಾದಿಗಳಾಗಲು ಅರ್ಹತೆಯಿರೋದು ದಲಿತರಿಗೆ. ಹಾಗೆಯೇ ನೂರಕ್ಕೆ ನೂರು ಜಾತಿವಾದಿಯಾಗಲು ಅರ್ಹತೆಯಿರದವನು ಬ್ರಾಹ್ಮಣ. ಗೌಡರಿಗೆ, ಕುರುಬರಿಗೆ, ಲಿಂಗಾಯತರಿಗೆ ಶೇಕಡ ಎಪ್ಪತ್ತೋ, ಅರವತ್ತೋ, ಐವತ್ತೋ ಅಧಿಕಾರ ಇರಬಹುದು. ಹೀಗಿರುವಾಗ ನಾನು ಯಾಕೆ ದಾರಿಯನ್ನು ತಪ್ಪಲಿ? ನೀವು ನಿಮಗೇ ಕೇಳಿಕೊಳ್ಳಬೇಕಾದ ಆತಂಕದ ಪ್ರಶ್ನೆಗಳು ಇವೆ.
ಸುಮಾರು ೧೯೬೭ರಲ್ಲಿ ಎಂದು ನೆನಪಾಗುತ್ತದೆ; ಗತಿಸಿದ ಶಿವರಾಮ್ ಐತಾಳರಿಗೆ ಉತ್ತರವಾಗಿ ಸಾಹಿತ್ಯದಲ್ಲಿ ಬ್ರಾಹ್ಮಣ ಮತ್ತು ಶೂದ್ರ ಎಂಬ ಲೇಖನವನ್ನು ಬರೆದ ನಾನು ಈ ಬಗ್ಗೆ ದೃಢನಾಗಿದ್ದೆ. ಜಾತಿಯ ಹೊರಗೆ ಮದುವೆಯೂ ಆಗಿದ್ದೆ. ನಾನು ಪ್ರೀತಿಸುವವರಲ್ಲಿ ಯಾವತ್ತಿನಿಂದಲೂ, ನನ್ನ ಪ್ರೈಮರಿಸ್ಕೂಲ್ ದಿನಗಳಿಂದಲೂ, ಎಲ್ಲ ಜಾತಿಯವರೂ ಇದ್ದರು. ನಾನು ಮೈಸೂರಿನಲ್ಲಿ ಆನರ್ಸ್ ಓದಿದ್ದು, ಎಲ್ಲ ಜಾತಿಯ ವಿದ್ಯಾರ್ಥಿಗಳಿದ್ದ ಉಚಿತ ಹಾಸ್ಟಲ್ ಆದ ಸಾರ್ವಜನಿಕ ವಿದ್ಯಾರ್ಥಿನಿಲಯದಲ್ಲಿ.
ನಂಜುಂಡಸ್ವಾಮಿ ತಾತ್ತ್ವಿಕವಾಗಿ ಆಳವಾಗಿ ಯೋಜಿಸುತ್ತಿದ್ದ ಧೀಮಂತ. ಆದರೆ, ಹೋರಾಟದ ಧೈರ್ಯ ಇರುವ ಒಂದು ಬಳಗವನ್ನು ಕಟ್ಟಿಕೊಳ್ಳಲಿಕ್ಕಾಗಿ ತತ್ತ್ವಗಳನ್ನು ಸರಳಗೊಳಿಸಿಕೊಂಡಾದರೂ ಕ್ರಿಯೆಯಲ್ಲಿ ಅನುಷ್ಠಾನಕ್ಕೆ ತರಬೇಕೆಂಬ ನಿರ್ಧಾರದ ವ್ಯಕ್ತಿ. ಹೀಗೆ ಮಾಡುವಾಗ ಸತ್ಯ ಬಹುಮುಖಿ ಎನ್ನುವುದನ್ನು ಮರೆತು, ಏಕೋದ್ದೇಶದ ಸಂಕಲ್ಪದಲ್ಲಿ ಕೆಲಸ ಮಾಡುತ್ತಿರಬೇಕಾಗುತ್ತದೆ. ಈ ತರಹದ ಮನಸ್ಸಿನ ನಂಜುಂಡಸ್ವಾಮಿಗೆ, ಸತ್ಯದ ಎಲ್ಲ ಮುಖಗಳನ್ನು ನೋಡಿ ಕಲಿಯಬೇಕೆಂದಿದ್ದ ನಾನು ಒಬ್ಬ ಗೊಂದಲದ ವ್ಯಕ್ತಿಯಾಗಿಯೇ ಸಹಜವಾಗಿ ಕಂಡಿದ್ದೆ. ಮುಂದಿನ ದಿನಗಳಲ್ಲಿ ತೇಜಸ್ವಿ, ಲಂಕೇಶ್ ಅವರಿಗೂ ನಂಜುಂಡಸ್ವಾಮಿ ಹಾಗೇ ಕಂಡಿರಬಹುದು. ಲೇಖಕರಾದ ನಮಗೆ ಮಾತ್ರವಲ್ಲ, ಸರಳ ಸಜ್ಜನಿಕೆಯ, ಆಳವಾದ ಶ್ರದ್ಧೆಯ ಕಡಿದಾಳ್ ಶಾಮಣ್ಣನವರಿಗೂ ಹಾಗೆ ಕಂಡಿರಬಹುದೇನೊ?
ಇನ್ನೊಂದು ಘಟನೆ ನೆನಪಾಗುತ್ತದೆ: ನಂಜುಂಡಸ್ವಾಮಿ ಮತ್ತು ಅವರ ಮಿತ್ರರು ಮೈಸೂರಿನಲ್ಲಿ ಜಾತಿವಿನಾಶ ಸಮ್ಮೇಳನವನ್ನು ಹಾವನೂರರ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ್ದರು. ಹಾವನೂರು ಇನ್ನೂ ತನ್ನ ವರದಿಯನ್ನು ಪ್ರಕಟಿಸಿರಲಿಲ್ಲ. ಅವತ್ತು ನಾನು ಕೊಂಚ ಜ್ವರಪೀಡಿತನಾಗಿದ್ದುದರಿಂದ ಆಡಬೇಕಾಗಿದ್ದ ಮಾತನ್ನು ಅಪರೂಪಕ್ಕೆ ಬರೆದುಕೊಂಡು ಓದಿದ್ದೆ. ಮಧ್ಯಮವರ್ಗದ ಭೂಮಾಲೀಕ ಜಾತಿಗಳು ಮಾಡುವ ಜಾತಿವಿನಾಶ ಎಂದರೆ ಬ್ರಾಹ್ಮಣರನ್ನು ಅಧಿಕಾರದಿಂದ ಕೆಳಗಿಳಿಸಿ, ಅವರ ಜಾಗದಲ್ಲಿ ತಾವು ಬಂದು ಕೂತು, ಉಳಿದ ಸಣ್ಣಪುಟ್ಟ ಜಾತಿಗಳ ಮೇಲೆ ದಬ್ಬಾಳಿಕೆ ಮಾಡುವುದು ಈವರೆಗೆ ನಡೆಯುತ್ತಾ ಬಂದ ವಿದ್ಯಮಾನ -ಇತ್ಯಾದಿ ನನ್ನ ವಿಚಾರವಾಗಿತ್ತು. ಈಗ ನಾನು ಸರಳಗೊಳಿಸುತ್ತಿರುವ ವಿಚಾರವನ್ನು ಇನ್ನಷ್ಟು ದಟ್ಟವಾಗಿ ಯೋಚಿಸಿ ನಾನು ಬರೆದದ್ದು ಪ್ರಕಟವಾಗಿದೆ. ನಾನು ಮಾತನಾಡುತ್ತಿದ್ದಾಗ ನಂಜುಂಡಸ್ವಾಮಿಯವರಿಗೆ ಸಿಟ್ಟುಬಂದಿರಬೇಕು. ನನ್ನ ಮಾತನ್ನು ನಿಲ್ಲಿಸುವಂತೆ ಅಧ್ಯಕ್ಷರಾದ ಹಾವನೂರರಿಗೆ ಕೋರಿ ಒಂದು ಚೀಟಿ ಕಳಿಸಿದರು. ಆ ಚೀಟಿಯನ್ನು ಹಾವನೂರರು ನನಗೆ ತೋರಿಸಿ ನಗುತ್ತ, ನೀವು ಮುಂದುವರೆಯಿರಿ ಎಂದರು. ದೇವರಾಜ ಅರಸರ ಕಾಲದಲ್ಲಿ ಎಲ್ಲ ಹಿಂದುಳಿದ ಜಾತಿಗಳ ಸಬಲೀಕರಣಕ್ಕೆ ಕಾರಣವಾದ ವರದಿಯನ್ನು ಬರೆದ ಹಾವನೂರರಿಗೆ ನನ್ನ ಮಾತುಗಳು ಇಷ್ಟವಾಗಿರಬಹುದು ಎಂದುಕೊಂಡಿದ್ದೇನೆ.
* * *
ನನಗೆ ನೆನಪಾಗುವುದನ್ನೆಲ್ಲ ಇಲ್ಲಿ ಬರೆಯಲಾರೆ. ನಂಜುಂಡಸ್ವಾಮಿ ಈ ಬಗೆಯ ಜಗಳಗಳಲ್ಲಿ ಜಾಣತನದ ಅಲ್ಪರಾಗಿ ವರ್ತಿಸುತ್ತಿರಲಿಲ್ಲ. ತನ್ನ ಉದ್ದೇಶ ಸಾಧನೆಗೆ ಬೇಕಾದ ಮಾರ್ಗವನ್ನು ತತ್ಪರರಾಗಿ ಕಂಡುಕೊಳ್ಳಬೇಕೆನ್ನುವ ನೈಜ ಕ್ರಾಂತಿಕಾರಕತೆ ಅವರಲ್ಲಿತ್ತು. ನನ್ನ ಜೀವನದಲ್ಲಿ ಉದ್ದಕ್ಕೂ ನಾನು ಏನೇ ಯೋಚಿಸಲಿ, ಅದಕ್ಕೆ ನಂಜುಂಡಸ್ವಾಮಿ ಹೇಗೆ ಪ್ರತಿಕ್ರಿಯಿಸುತ್ತಾರೆಂಬ ಕುತೂಹಲ ನನ್ನಲ್ಲಿ ಉಳಿದೇ ಇತ್ತು. ನಂಜುಂಡಸ್ವಾಮಿಯವರ ಮಹತ್ವದ ಸಾಧನೆಯೆಂದರೆ ಜಾಗತೀಕರಣದ ವಿರುದ್ಧ ಅವರು ಮಾಡಿದ ಹೋರಾಟ ಮತ್ತು ಅವರು ಕಟ್ಟಿದ ರೈತಸಂಘ. ಇಡೀ ಭಾರತದ ಮುಂಚೂಣಿಯಲ್ಲಿದ್ದ ರೈತ ನಾಯಕರಲ್ಲಿ ನಂಜುಂಡಸ್ವಾಮಿಯೂ ಒಬ್ಬರು. ಆದರೆ ಒಂದು ಚಳುವಳಿಯಾಗಿ ರೈತಸಂಘ ಎಲ್ಲ ಪಕ್ಷಗಳಲ್ಲಿ ಹುಟ್ಟಿಸಿದ್ದ ದಿಗಿಲು, ಆತ್ಮಪರೀಕ್ಷೆ- ಇವು ರೈತಸಂಘ ನೇರವಾಗಿ ಚುನಾವಣೆಗೆ ಇಳಿದಾಗ ಉಳಿಯಲಿಲ್ಲ. ಇದೊಂದು ನಂಜುಂಡಸ್ವಾಮಿಯವರು ಮಾಡಿದ ತಪ್ಪೆಂದು ನಮ್ಮಲ್ಲಿ ಕೆಲವರು ತಿಳಿದಿದ್ದೆವು.
ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಾವು ತಿಳಿಯಬೇಕಾದ ಒಂದು ಗುಟ್ಟಿದೆ. ಅಮೆರಿಕಾದಲ್ಲಿ ಮಾರ್ಟಿನ್ ಲೂಥರ್ ಕಿಂಗ್ ಕರಿಯರ ಪರವಾಗಿ ಚಳವಳಿ ನಡೆಸಿದ್ದಾಗ, ಅಲ್ಲಿನ ಮುಖ್ಯ ಪಕ್ಷಗಳಾದ ರಿಪಬ್ಲಿಕನ್ನರು ಹಾಗೂ ಡೆಮಾಕ್ರಾಟರು ಮಾರ್ಟಿನ್ ಲೂಥರ್ ಕಿಂಗರ ಧ್ಯೇಯೋದ್ದೇಶಗಳಿಗೆ ಸ್ಪಂದಿಸಲೇಬೇಕಾಗಿ ಬಂದಿತು. ಯಾರೇ ಅಧಿಕಾರಕ್ಕೆ ಬರಲಿ, ಒಂದಿಷ್ಟು ಕಿಂಗ್ ಹೇಳಿದ್ದನ್ನು ಆಚರಣೆಗೆ ತರಬೇಕಾಗಿ ಬಂದಿತು. ಒಮ್ಮೆ ಅಮೆರಿಕಾದ ಪ್ರೆಸಿಡೆಂಟರಾಗಿದ್ದ ಜಾನ್ಸನ್ನರು -ಅವರು ಸಂಪ್ರದಾಯವಾದಿಗಳಿಗೆ ಪ್ರಿಯರಾದವರು- ಮಾರ್ಟಿನ್ ಲೂಥರ್ ಕಿಂಗರನ್ನು ಚರ್ಚೆಗೆ ಆಹ್ವಾನಿಸಿ, ರಹಸ್ಯವಾಗಿ ಒಂದು ಮಾತನ್ನು ಹೇಳಿದರಂತೆ -ಪುಷ್ ಮಿ ಮಾರ್ಟಿನ್, ಪುಷ್ ಮಿ (ನನ್ನ ಮೇಲೆ ಇನ್ನಷ್ಟು ಒತ್ತಾಯ ತರುವಂತೆ ಚಳುವಳಿ ಮಾಡು ಮಾರ್ಟಿನ್). ನಂಜುಂಡಸ್ವಾಮಿಯವರ ರೈತ ಚಳುವಳಿಯಲ್ಲಿ ಹೀಗೆ ಎಲ್ಲ ಪಕ್ಷದ ಮೇಲೂ ಒತ್ತಾಯ ತರಬಲ್ಲ ಶಕ್ತಿ ಇತ್ತು; ಆದರೆ ರೈತ ಸಂಘವೇ ಚುನಾವಣೆಗೆ ನಿಂತು ಅಲ್ಲೋ ಇಲ್ಲೋ ಗೆದ್ದು ಬಂದಾಗ ಈ ಶಕ್ತಿ ಉಳಿಯಲಿಲ್ಲ. ಒಂದು ಆಂದೋಲನಕ್ಕೆ ಇರುವ ಅಸಾಮಾನ್ಯವಾದ ವೈಚಾರಿಕ ಆಯಾಮ, ಅದೊಂದು ರಾಜಕೀಯ ಪಕ್ಷವಾದಾಗ ಉಳಿಯುವುದು ಕಷ್ಟ. ಆದ್ದರಿಂದಲೇ ಸ್ವಾತಂತ್ರ್ಯ ಬಂದ ನಂತರ ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸಬೇಕೆಂದು ಗಾಂಧೀಜಿ ಹೇಳಿದ್ದಿರಬಹುದು.
ನಂಜುಂಡಸ್ವಾಮಿಯನ್ನು ಟೀಕಿಸಬೇಕೆಂದು ನಮ್ಮೆಲ್ಲರಿಗೂ ಅವರ ಬದುಕಿನುದ್ದಕ್ಕೂ ಅನ್ನಿಸಿದ್ದಿದೆ. ಏಕೋದ್ದೇಶದ ಅವರ ದೃಢ ವಿಶ್ವಾಸ ಮತ್ತು ಕ್ರಿಯಾಶೀಲತೆಯಲ್ಲಿ ನಾವು ಲೇಖಕರು ಸಾಮಾನ್ಯವಾಗಿ ಗೌರವಿಸುವ ಮತ್ತು ಆಚರಿಸುವ ಸಂಕೀರ್ಣತೆ ನಮಗೆ ಕಾಣಿಸುತ್ತಿರಲಿಲ್ಲ. ಆದರೆ, ಕರ್ನಾಟಕದ ರಾಜಕೀಯದಲ್ಲಿ ನಾನು ಕಂಡ ಮಹಾತಾತ್ವಿಕರೆಂದರೆ ಶಾಂತವೇರಿ ಗೋಪಾಲಗೌಡರು ಮತ್ತು ಎಂ.ಡಿ. ನಂಜುಂಡಸ್ವಾಮಿ. ಆದರೆ ಇವರಿಬ್ಬರೂ ಜಗಳವಾಡದೆ ಒಂದು ಕೋಣೆಯಲ್ಲಿ ಒಟ್ಟಾಗಿ ಒಂದು ಗಂಟೆ ಕೂತಿರುವುದು ಸಾಧ್ಯವಿರಲಿಲ್ಲ. ಭಾವುಕನಾಗಿ ನಾನು ಯಾವತ್ತೂ ಗೋಪಾಲಗೌಡರ ಪರವಾಗಿಯೇ ಸ್ಪಂದಿಸುತ್ತಿದ್ದವನು.
ಇನ್ನೊಂದು ಸತ್ಯವಿದೆ: ಈ ಇಬ್ಬರ ವೈಚಾರಿಕತೆ ಮತ್ತು ಸಂಕಲ್ಪದ ದೃಢತೆ ಕೂಡಿ ಕೆಲಸ ಮಾಡಿದ್ದಾದರೆ ನಮ್ಮ ಪ್ರಪಂಚ ಕೊಂಚ ಬದಲಾಗಬಲ್ಲ ಭರವಸೆ ತುಂಬುತ್ತದೆ. ನಂಜುಂಡಸ್ವಾಮಿಯವರು ತನ್ನ ಅನುಯಾಯಿಗಳ ಜೊತೆ ಪ್ರಜಾಸತ್ತಾತ್ಮಕ ವಿನಯದಲ್ಲಿ ನಡೆದುಕೊಳ್ಳುತ್ತಿರಲಿಲ್ಲವೆಂಬ ಅಪವಾದವಿದೆ. ಆದರೆ ಭ್ರಷ್ಟತೆ ಮತ್ತು ಜಾಗತೀಕರಣದ ಭ್ರಮೆಗಳ ವಿರುದ್ಧ ಅಹಿಂಸಾತ್ಮಕವಾಗಿ ಹೋರಾಡುವವರು ನಂಜುಂಡಸ್ವಾಮಿಯಂತೆ ಕಟುವಾಗಿ ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದು ಅಗತ್ಯವೇನೊ ಎಂದು ಕೆಲವೊಮ್ಮೆ ಅನ್ನಿಸುತ್ತದೆ. ಇಲ್ಲಿನ ಕೆಸರಿನಲ್ಲಿ ಏನನ್ನಾದರೂ ಊರುವಂತೆ ಭದ್ರವಾಗಿ ನಿಲ್ಲಿಸುವುದು ಕಷ್ಟವೆಂದು ಲೋಹಿಯಾ ಹೇಳಿದ್ದು ನೆನಪಾಗುತ್ತದೆ.
ಕುಪ್ಪಳಿಸಿ ನಗುತ್ತಿದ್ದ ನನ್ನ ಇನ್ನೊಬ್ಬ ಗೆಳೆಯ ಆಚಾರಿ ಜೊತೆ ತುಂಬ ಗೆಲುವಿನಲ್ಲಿ, ಆದರೆ ಗಂಭೀರವಾಗಿ ನಂಜುಂಡಸ್ವಾಮಿ ಇರಬಲ್ಲವರಾಗಿದ್ದರು ಎಂಬುದೂ ಅವರನ್ನು ಸರಳಗೊಳಿಸದಂತೆ ನೋಡಲು ನನಗೆ ಸಹಾಯವಾಗಿದೆ.

ಡಾ.ಯು.ಆರ್.ಅನಂತಮೂರ್ತಿ

ಕನ್ನಡದ ಬೆಳವಣಿಗೆಯ ಹೊಸ ಸಾಧ್ಯತೆಗಳು





ಭಾಷೆ ಎನ್ನುವುದು ಇಬ್ಬರ ನಡುವಿನ ವಿಚಾರ ವಿನಿಮಯ ಎಂದರಷ್ಟೇ ಆದೀತೆ? ಪಶು ಪಕ್ಷಿಗಳಿಗೂ ತಮ್ಮದೇ ಆದ ಭಾಷೆ ಇದೆ ಎನ್ನುವುದಾದರೆ, ಮನುಷ್ಯರಿಗೆ ಇರುವುದು ಯಾವ ಭಾಷೆ, ಎಂಥ ಭಾಷೆ, ಭಾಷೆಯ ಸೌಂದರ್ಯವೇನು? ಪಶುಪಕ್ಷಿಗಳ ಭಾಷೆಗೂ ಮನುಷ್ಯ ಭಾಷೆ ಏನಾದರೂ ಮಹತ್ವ ಇದೆಯಾ? ಎಂದು ನಮ್ಮ ಹತ್ತು ವರ್ಷದ ಮೊಮ್ಮಗಳು ನನ್ನನ್ನೂ ಮೇಲಿಂದ ಮೇಲೆ ಕೆಣಕುತ್ತಲೇ ಇರುತ್ತಾಳೆ. ಅವಳಿಗೆ ನನ್ನಿಂದ ಏನೆಲ್ಲ ಸಾಧ್ಯವೋ ಅವಳ ವಿಚಾರಕ್ಕೆ ತಕ್ಕ ಮಟ್ಟಿಗೆ ಅನುಮಾನ ಪರಿಹರಿಸುವಲ್ಲಿ ಯಶಸ್ವಿಯಾಗಿದ್ದೇನೆ. ಆದರೆ ಇಂದು ಸಾರ್ವಜನಿಕವಾಗಿ ಮೀಸೆ ಮೂಡದ ಹಾಗೂ ಮೀಸೆ ಮೂಡಿದ ಮಕ್ಕಳ ಏನೆಲ್ಲಾ ದೃಷ್ಟಿಕೋನದ ಪ್ರಶ್ನೆಗಳಿಗೆ ಉತ್ತರಿಸುವುದು ಬಹಳ ಕಷ್ಟಸಾಧ್ಯವೆಂದು ಅರಿತರೂ ಅವರು ಪ್ರಶ್ನಿಸುವುದು ಕನ್ನಡದಲ್ಲಿಯೆ, ನಾನು ಉತ್ತರಿಸುವುದು ಕನ್ನಡ ಭಾಷೆಯಲ್ಲಿಯೇ ಎನ್ನುವುದು ಒಂದು ಸಂತೋಷದ ಸಂಗತಿ.
ಕರ್ನಾಟಕಕ್ಕೆ ರಾಜ್ಯ ಮನ್ನಣೆ ದೊರೆತು ಐದು ದಶಕಗಳು ಸಂದಿವೆ. ಇದೇ ಸಂದರ್ಭ ಸುವರ್ಣ ಕರ್ನಾಟಕ ವರ್ಷಾಚರಣೆಯ ವರ್ಷವೂ ಕಳೆದಿದೆ. ಆದರೆ ಕನ್ನಡಿಗರಿಗೆ ಆಗಿದೆಯೇ ಹರ್ಷ? ಯಾವುದಕ್ಕೂ ಈ ನಾಡಿನ ಪ್ರತಿಯೊಬ್ಬ ಕನ್ನಡಿಗ ತನ್ನ ಹೃದಯ ಮುಟ್ಟಿ ಪ್ರಶ್ನಿಸಿಕೊಳ್ಳಬೇಕಾದ ವರ್ಷ. ನಮ್ಮ ನಾಡು ಕನ್ನಡವೇ? ನಮ್ಮ ನುಡಿಯು ಕನ್ನಡವೇ? ನಮ್ಮ ಕಲೆ, ಸಾಹಿತ್ಯ, ಸಂಸ್ಕೃತಿ ಕನ್ನಡಮಯವಾಗಿ ಉಳಿದಿದೆಯೇ? ನಾನು ಐದುವರೆ ಕೋಟಿ ಕನ್ನಡಿಗರು ಈ ನಾಡಿನ ಸಂತತಿ ಹಾಗೂ ವಾರಸುದಾರರು. ಮನದಾಳದಲ್ಲಿ ಏನೆಲ್ಲ ವಿಚಾರಗಳ ತಾಕಲಾಟ ಸಮಸ್ಯೆಗಳು ಬಿಚ್ಚಿದಾಗ ಪೀಕಲಾಟ. ನಾಡಿನ ಜಲ, ನೆಲ, ಭಾಷೆ ಬುನಾದಿ ಎಲ್ಲ ಮಗ್ಗಲುಗಳ ಪ್ರಾಮಾಣಿಕ ಹುಡುಕಾಟ ಮಾಡಬೇಕಾಗಿರುವುದು ಅನಿವಾರ್ಯದ ಅವಶ್ಯಕತೆಯೂ ಹೌದು. ಕಳೆದ ಐದು ದಶಕಗಳಲ್ಲಿ ನಾವು ಸಾಧಿಸಿ ದ್ದಾದರೂ ಏನು? ನಮ್ಮ ಹಿರಿಯರು ಕನ್ನಡ ನಾಡು-ನುಡಿ, ನೆಲ-ಜಲ ಅಭಿವೃದ್ಧಿ ಕುರಿತಾಗಿ ಅವರುಗಳು ಇರಿಸಿಕೊಂಡಿದ್ದ ಕನಸುಗಳೇನು? ಅವುಗಳಿಗೆ ನಾವು ಪ್ರಮಾಣಿಕವಾಗಿ ಅವರ ವಾರಸುದಾರರಾದ ನಾವು ಸ್ಪಂದಿಸಿದ್ದೇವೆಯೇ? ನಮ್ಮ ಐವತ್ತು ವರ್ಷಗಳ ಗತ ಇತಿಹಾಸವನ್ನು ನಾವು ಯಾರು ತಿಳಿದಿಲ್ಲವೋ ಅಂಥವರಿಂದ ಹೊಸ ಇತಿಹಾಸ ರಚಿಸುವುದೂ ಸಾಧ್ಯವಿಲ್ಲ ಎನ್ನುವುದು ಅಷ್ಟೇ ಸತ್ಯ.
ಆದರೂ ನಮ್ಮ ಇಂದಿನ ಪೀಳಿಗೆಗೆ ನಮ್ಮ ನಾಡಿನ ಇತಿಹಾಸವನ್ನು ಪುನಃ ನೆನಪಿಸಿಕೊಡುವುದು ನಮ್ಮೆಲ್ಲರ ಕರ್ತವ್ಯವೆಂದೇ ತಿಳಿದು ಈ ಹಿನ್ನೆಲೆಯಲ್ಲಿ ಇಂದಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯಗಳು ಸಂಕೀರ್ಣ ಕಾಲಘಟ್ಟದಲ್ಲಿವೆ ಎಲ್ಲ ಬಗೆಯ ಚಳುವಳಿಗಳು ಸ್ಥಗಿತಗೊಂಡಿವೆ. ಯಾವುದೇ ಒಂದು ಅನ್ಯಾಯ, ಅಸಮಾನತೆಯ ವಿರುದ್ಧವಾಗಿ ಧ್ವನಿಯೆತ್ತಿದರೆ ಅದರ ವಿರುದ್ಧವಾಗಿ ದೊಡ್ಡದಾದ ಕಿರುಚಾಟ ಮಾಡಿ ಸತ್ಯದ ಧ್ವನಿಯನ್ನು ಅಡಗಿಸುವ ರಾಕ್ಷಸೀ ಪ್ರವೃತ್ತಿಗಳು ರಾಜಕೀಯದಲ್ಲಿ ಬೆಳೆಯುತ್ತಿರುವ ವಿಚಿತ್ರವಾದ ಪರಿಸ್ಥಿತಿ. ಹೀಗಾಗಿ ಯಾವುದಕ್ಕೂ ಒಂದು ಸಾಂಘಿಕ ಧ್ವನಿಯೆಂಬುದೇ ಇಲ್ಲವಾಗಿದೆ. ಅದು ಕನ್ನಡಪರ ಚಳುವಳಿಯೇ ಆಗಿರಬಹುದು. ಚಳುವಳಿಗಾರರು ನಿರಾಸಕ್ತಿಯಿಂದ ನೋಡುವ ಪ್ರವೃತ್ತಿಯಿಂದಾಗಿ ರಾಜಕೀಯ ಲಾಭಕ್ಕಾಗಿ ಡೊಂಕು ಬಾಲದ ನಾಯಕರು ರಾಜಕೀಯ ಮಯಗೊಳಿಸಿ ತಿಪ್ಪೆ ಸಾರಿಸಿ ಬಿಡುತ್ತಾರೆ. ಇಂತಹ ಅತಂತ್ರ ಸ್ಥಿತಿಯಲ್ಲಿ ಹೊಸ ಆಲೋಚನೆಯ ಹೊಸ ಮನಸ್ಸುಗಳು ಕೂಡಿ ಸಾಂಘಿಕವಾಗಿ ಧ್ವನಿ ಎತ್ತುವ ಯುವಪಡೆ ಕನ್ನಡಕ್ಕೆ ಖಂಡಿತವಾಗಿಯೂ ಬೇಕಾಗಿದೆ. ಕನ್ನಡ ಹರಿತ ಮಾತುಗಳು ವೈಚಾರಿಕ ಆಲೋಚನೆಯ ಪ್ರಗತಿಪರ ವಿಚಾರಧಾರೆಯ ಕನ್ನಡಿಗರ ಸೈನ್ಯ ಪಡೆಯು ನಿರ್ಮಾಣಗೊಂಡು ಕಾರ್ಯಪ್ರವೃತ್ತಿಯಾದಾಗ ರಾಜಧಾನಿಯಲ್ಲಿಯೇ ಇರುವ ತೆಲುಗು, ತಮಿಳು, ಮಲೆಯಾಳಿ, ಆಂಗ್ಲಭಾಷೆ ಜನರಿಂದ ನಡೆಯುವ ಕನ್ನಡ ಭಾಷೆಯ ಮೇಲೆ ಆಗುವ ಸವಾರಿ ಕಡಿಮೆಯಾಗಬಹುದು. ಶೇ.೮೦ ಹೊಂದಿದ ಇತರ ಭಾಷಿಕರ ನಡುವೆ ಶೇ.೨೦ ಜನ ಕನ್ನಡಿಗರು ಏನು ಮಾಡಲು ಸಾಧ್ಯ?
ತಮಿಳಿನ ಮಾಸ್ತಿ ಕನ್ನಡದ ಆಸ್ತಿಯಾದರು. ಮರಾಠಿ ಮೂಲದ ಬೇಂದ್ರೆ ಕನ್ನಡದ ರಸಋಷಿಯಾದರು. ಆಂಗ್ಲಭಾಷೆಯ ಕಿಟಲ್ ಈ ನಾಡಿಗೆ ನಿಘಂಟು ಕೊಟ್ಟರು. ಇಲ್ಲಿಯೇ ಹುಟ್ಟಿ ಇಲ್ಲಿಯೇ ಬೆಳೆದು ಇಲ್ಲಿಯೇ ಗಂಧಗಾಳಿ ಉಸಿರಾಡುತ್ತಿರುವ ಇತರ ಭಾಷಿಕರಿಗೆ ಕೃತಜ್ಞತೆ ಇರಬೇಕಲ್ಲ? ಸಿರಿಗನ್ನಡಂ ಗೆಲ್ಗೆ ಎನ್ನುವವರು ಇಲ್ಲದೇ ಇರುವಾಗ ಕನ್ನಡ ತಾನೇ ಹೇಗೆ ಬೆಳೆದೀತು. ಪ್ರಾಂತೀಯ ಸ್ವಾಯತ್ತತೆಯ ಮೂಲಕ ಇತರ ರಾಜ್ಯಗಳಲ್ಲಿರುವಂತೆ ನಮ್ಮಲ್ಲಿಯೂ ವಿಲಕ್ಷಣ ಜಾಗೃತಿ ಕಂಡು ಬರುತ್ತಿದೆ. ರಾಜ್ಯದ ಪ್ರತಿಯೊಂದು ಊರುಗಳಲ್ಲಿ, ಗ್ರಾಮಗಳಲ್ಲಿ ಕರ್ನಾಟಕ ಸಂಘಗಳು ಹುಟ್ಟಿ ನಾಡದೇವಿಯ ಈ ನಾಡ ಹಬ್ಬವನ್ನು ಆಚರಿಸುವ ಹತ್ತು ದಿನಗಳ ಕಾಲ ಕನ್ನಡ ಕಟ್ಟುವ ಕಾರ್ಯವಾಗಬೇಕಾಗಿದೆ. ನಾಡಿನ ಅಭಿವೃದ್ಧಿ ಕಾರ್ಯಗಳಲ್ಲಿ ಸಮತೋಲನ ಬೆಳವಣಿಗೆ ಕಾಣಬೇಕಾಗಿದೆ. ರಾಜ್ಯದ ಏಕತೆ ಏಳಿಗೆಯಿಂದ ಕನ್ನಡ ಭಾಷೆಯ ಬೆಳವಣಿಗೆ ಸಾಧ್ಯವೆಂಬುದನ್ನು ಮನಗಾಣಬೇಕಾಗಿದೆ. ಕನ್ನಡಿಗರ ಸಾಂಸ್ಕೃತಿಕ ಬಾಂಧವ್ಯವನ್ನೂ ಬೆಸೆಯುವ ದೃಷ್ಟಿಯಿಂದ ಬೆಂಗಳೂರಿನ ಕರ್ನಾಟಕ ಸಾಹಿತ್ಯ ಪರಿಷತ್ತು ಆಪೇಕ್ಷಣಿಯವಾದ ಕೆಲಸ ಮಾಡುತ್ತಿದೆ. ಹೈಸ್ಕೂಲು, ಕಾಲೇಜುಗಳಲ್ಲಿ ಕರ್ನಾಟಕ ಸಂಘಗಳಿಂದ ತುಂಬಬೇಕಿದೆ. ಕನ್ನಡದ ಕಾರ್ಯಕರ್ತರು, ಕನ್ನಡ ಕಾವಲು ಸಮಿತಿ ಕನ್ನಡ ಪ್ರಾಧಿಕಾರದ ಹುಟ್ಟಿಕೊಂಡಿದ್ದರ ಪರಿಣಾಮವಾಗಿ ವಿಧಾನಸೌಧದಲ್ಲಿ ಕನ್ನಡ ಉಳಿಯಲು ಅನುಕೂಲವಾಗಿದೆ.
ಶಿಕ್ಷಣದ ನೀತಿಯನ್ನು ಅಂತರಾಷ್ಟ್ರೀಯ ಕಂಪನಿಗಳೇ ನಿರ್ಧರಿಸು ತ್ತಿರುವುದರಿಂದ ಎಲ್ಲರಿಗೂ ಕಡ್ಡಾಯ ಶಿಕ್ಷಣದಲ್ಲಿ ಸಡಲಿಕೆ ಉಂಟಾಗಿದೆ. ಉಳ್ಳವರಿಗೆ ಮಾತ್ರವೇ ವಿದ್ಯಾಭ್ಯಾಸ ಹೊರತು ಸಾಮಾನ್ಯನಿಗಲ್ಲ ಎನ್ನುವ ಸಾರ್ವಜನಿಕ ಅಭಿಪ್ರಾಯ ಮೂಡುತ್ತಿದೆ. ಖಾಸಗಿ ಸಂಸ್ಥೆಗಳಲ್ಲಿ ಬುದಿ ಮತ್ತು ಸೌಂದರ್ಯಕ್ಕೆ ಹೆಚ್ಚು ಪ್ರಾಶಸ್ತ್ಯವಿದೆಯೇ ಹೊರತು ಸಾಮಾಜಿಕ ನ್ಯಾಯಕ್ಕಿಲ್ಲ. ಜಾಗತೀಕರಣದ ಪ್ರವೇಶದಿಂದ ಭಾಷೆ, ಸಂಸ್ಕೃತಿ ಮನುಷ್ಯ ಸಂಬಂಧಗಳಲ್ಲಿ ಹೊಸ ಬಿರುಕು ಕಾಣಿಸಿಕೊಂಡಿವೆ. ಗ್ರಾಮೀಣ ಮಹಿಳೆಯರಂತೂ ಗ್ರಾಮ್ಯ ಸೊಗಡಿನ ಭಾಷೆಯನ್ನು ಮಾತನಾಡುವುದೇ ಹೀನಾಯವೆಂದು ತಿಳಿದುಕೊಳ್ಳುತ್ತಿರುವುದು ಭಾಷೆಯ ನಾಶಕ್ಕೆ ಕಾರಣವಾಗಬಹುದು. ಒಂದು ಭಾಷೆಯ ನಾಶ ಒಂದು ಸಂಸ್ಕೃತಿ ಸತ್ತಂತೆ ಎಂಬ ಜಾಗತಿಕ ಸತ್ಯವನ್ನು ನಾವು ಅರಿತಷ್ಟೂ ಒಳ್ಳೆಯದು. ೧೮೮೨ರ ಹಂಟರ್ ಆಯೋಗದಿಂದ ಸ್ವಾತಂತ್ರ್ಯಾ ನಂತರದ ೧೯೮೬ ಹೊಸ ಶಿಕ್ಷಣ ನೀತಿಯವರೆಗೂ ಗಮನಿಸಿದಾಗ ಎಲ್ಲವೂ ಬ್ರಿಟಿಷ್‌ಮಯ ಖಾಸಗೀಕರಣ, ಜಾಗತೀಕರಣಗಳ ಒತ್ತಡದಿಂದ ಶ್ರೀಸಾಮಾನ್ಯನು ಶಿಕ್ಷಣ ವರ್ತುಲದಿಂದ ಹೊರಗೆ ಉಳಿಯಲಿದ್ದಾನೆ. ನಮ್ಮ ಸಂವಿಧಾನದ ೪೫ನೇ ವಿಧಿಯು ಶ್ರೀಸಾಮಾನ್ಯರಿಗೆ ಶಿಕ್ಷಣವನ್ನೂ ದೊರಕಿಸುವುದೇ ಪ್ರಜಾತಾಂತ್ರಿಕಸಾರ ಎನ್ನುತ್ತದೆ. ೧೪ ವರ್ಷ ವಿದ್ಯಾರ್ಥಿಗಳಿಗೆ ತುಂಬುವವರೆಗೆ ಉಚಿತ ಹಾಗೂ ಕಡ್ಡಾಯವಾಗಿ ಶಿಕ್ಷಣ ಎನ್ನುತ್ತದೆ ಸರಕಾರ. ಹಾಗಾದರೆ ೪೫ನೇ ವಿಧಿಗೆ ದೊರೆತ ಮಾನ್ಯತೆ ಎಲ್ಲಿ?
ಬಂಡವಾಳಶಾಹಿ ಶಿಕ್ಷಣ ನೀತಿಯಲ್ಲಿ ಬೌದ್ಧಿಕ ಕೀಳರಿಮೆಗೆ ಒಳಪಡಿಸಿ, ಊಳಿಗಮಾನ್ಯ ಮಂದಿಯನ್ನು ಆಧುನಿಕ ಶಿಕ್ಷಣಕ್ಕೆ ಹೊಂದಿಸುವುದು ಒಂದು ನೀತಿಯಾಗಿದೆ. ಇಂಥ ವಸಾಹತುಶಾಹಿ ನೀತಿಯಿಂದ ೬ರಿಂದ ೧೪ ವರ್ಷದ ಸುಮಾರು ೧೦ ಕೋಟಿ ಮಕ್ಕಳು ಪ್ರಾಥಮಿಕ ಶಾಲಾ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಜಾಗತೀಕರಣದ ನೆಪದಲ್ಲಿ ಸರ್ಕಾರದ ಶಿಕ್ಷಣ ನೀಡಿ ಪ್ರಾಥಮಿಕದಿಂದ ಉನ್ನತ ಶಿಕ್ಷಣದವರೆಗೂ ತನ್ನ ಕರಿ ನೆರಳನ್ನೂ ಹರಡುತ್ತಿದೆ. ಇಲ್ಲಿ ಹಣವೇ ಪ್ರಾಮುಖ್ಯ. ಇಂದು ಕೇಂದ್ರ ಸರ್ಕಾರದ ಶಿಕ್ಷಣ ಮಸೂದೆಗೆ ಯಾರು ೧೦ ಕೋಟಿ ಕಾಣಿಕೆ ಕೊಡುತ್ತಾರೆಯೋ ಅವರು ಖಾಸಗಿ ವಿಶ್ವವಿದ್ಯಾಲಯ ಸ್ಥಾಪಿಸಲು ಅನುಮತಿಕೊಡುವ ವಿಚಾರ ಒಂದು ಅಂದಾಜಿನ ಪ್ರಕಾರ ಈ ದೇಶದ ೧೧೦ ಕೋಟಿ ಜನತೆಗೆ ೬.೫೦ ದಶಲಕ್ಷ ವಿದ್ಯಾರ್ಥಿಗಳು ಮಾತ್ರ ಶಿಕ್ಷಣ ಪಡೆಯಲು ಸಾಧ್ಯ ಎನ್ನುವ ಇಂಥ ಆತಂಕಕಾರಿ ಸಂಗತಿ ಬೇಕೆ? ಇಂಥ ಶಿಕ್ಷಣ ನೀತಿಯಿಂದಾಗಿ ಬಡವರು ಅದರಲ್ಲಿಯೂ ವಿಶೇಷವಾಗಿ ಗ್ರಾಮೀಣ ಮಹಿಳೆಯರು ಇಂಥ ದುಬಾರಿ ಶಿಕ್ಷಣದಿಂದ ಶಿಕ್ಷೆ ಅನುಭವಿಸುವಂತೆ ಆಗುತ್ತದೆ. ಇಂದಿನ ಶಿಕ್ಷಣ ಹಳ್ಳಿ ಅಥವಾ ಪಟ್ಟಣ ಪ್ರದೇಶಗಳಲ್ಲಿ ಪ್ರಾಮಾಣಿಕವಾಗಿ ಬದುಕ ಬಯಸುವ ಜನರ ಆಶೋತ್ತರಗಳಿಗೆ ಅನುಗುಣವಾಗಿ ತಿದ್ದಬೇಕಾಗಿದೆ. ಇಲ್ಲವಾದಲ್ಲಿ ನಮ್ಮಲ್ಲಿರುವ ಜಾತಿ, ಜನಾಂಗ, ಭಾಷೆ, ಪ್ರಾಂತ್ಯದ ಹಿನ್ನೆಲೆಯಲ್ಲಿ ದ್ವೇಷಗಳು ಹುಟ್ಟಿಕೊಂಡು ಜಾಗತಿಕ ಗ್ರಾಮದ ಕಡೆ ವಾಲುವ ಮುನ್ನ ಈ ಹಿನ್ನೆಲೆಯಲ್ಲಿ ಸರಕಾರವು ಶಿಕ್ಷಣ ನೀತಿಯನ್ನು ರೂಪಿಸಿ ರಾಜ್ಯ, ಭಾಷೆ, ಕಲೆ, ಸಾಹಿತ್ಯ, ಸಂಸ್ಕೃತಿಗಳಿಗೆ ಅನುಗುಣವಾಗಿ ನಾಡು ನುಡಿಯನ್ನು ಕಟ್ಟಿಕೊಡಬೇಕಾಗಿದೆ.
ಇದೇ ರೀತಿ ಕರ್ನಾಟಕ ಗಡಿಯಾಚೆಗೆ ಇರುವ ಕನ್ನಡಿಗರ ಬಗೆಗೆ, ಗಡಿನಾಡವರ ಭಾಷೆಯ ಕಾಳಜಿ ಇರಬೇಕು. ಆದರೆ ಅದರ ಅಭಾವ ಕರ್ನಾಟಕದಲ್ಲಿ ಕಾಣಿಸಿಕೊಂಡಿದ್ದು ಬಹು ದೊಡ್ಡದುರಂತ. ಗಡಿ ನಾಡಿನಲ್ಲಿ ಹೊರನಾಡಿನಲ್ಲಿ ಕನ್ನಡ ಸಂಸ್ಕೃತಿ ಉಳಿಸಿ ಬೆಳೆಸುವ ಕಾರ್ಯ ಕನ್ನಡ ಪುಸ್ತಕಗಳ ಪ್ರಕಟಣೆ ಹಾಗೂ ಗ್ರಂಥಾಲಯಗಳ ಬೆಳವಣಿಗೆ, ಸಮಕಾಲೀನ ಸಾಹಿತ್ಯ ಕ್ಷೇತ್ರ, ಸಾಹಿತ್ಯ ಕೃತಿಗಳಿಗೆ ಪ್ರಶಸ್ತಿ, ಕನ್ನಡ ವಿಮರ್ಶೆಯ ಸ್ಥಿತಿ, ಗತಿ, ಮಕ್ಕಳ ಸಾಹಿತ್ಯ ಆಡಳಿತದಲ್ಲಿ ಕನ್ನಡ, ಕನ್ನಡದ ಸಮಸ್ಯೆಗಳು, ಕನ್ನಡಪರ ಹೋರಾಟ, ಗೋಕಾಕ, ಮಹಿಷಿ, ಬರಗೂರ ಇವರೆಲ್ಲರ ವರದಿಗಳ ಜಾರಿ, ಲೋಕಸೇವಾ ಆಯೋಗದಲ್ಲಿ ಕನ್ನಡ, ಕನ್ನಡ ಪುಸ್ತಕಗಳ ಸಗಟು ಖರೀದಿ, ವೃತ್ತಿ ಶಿಕ್ಷಣದಲ್ಲಿ ಕನ್ನಡ ಕಡ್ಡಾಯ ಹಾಗೂ ಅಭಿವೃದ್ಧಿ ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ಹೀಗೆ ಇನ್ನೂ ಹತ್ತು ಹಲವಾರು ಸಂಗತಿಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಎಲ್ಲದ್ದಕ್ಕೂ ಎಂದು ಸುಖಾಂತ್ಯ?
ನಮ್ಮ ನಾಡು-ನುಡಿಯ ಬಗ್ಗೆ ಅಭಿಮಾನವನ್ನು ಬಡಿದೆಬ್ಬಿಸುವ ಸಾಮೂಹಿಕ ಪ್ರಯತ್ನವನ್ನೇ ನಾವು ಕನ್ನಡ ಚಳವಳಿ ಎಂದು ಕರೆದದ್ದು. ಕನ್ನಡಿಗರು ಸಮರ್ಥರಾದರೆ ಕನ್ನಡ ಭಾಷೆ ಸಾಮರ್ಥ್ಯ ಪಡೆಯುತ್ತದೆ. ನಾಡು ಪ್ರಗತಿಯತ್ತ ಸಾಗುತ್ತದೆ. ಹೀಗಾಗಿ ಪ್ರತಿಯೊಬ್ಬ ಕನ್ನಡಿಗ ತನ್ನ ವೈಯಕ್ತಿಕ ಸಾರ್ವಭೌಮ ಮಾನವನ್ನೂ ಹೆಚ್ಚಿಸಿಕೊಂಡು ಅದನ್ನು ನಾಡು ನುಡಿಗಳ ಮೇಲ್ಮೆಗಾಗಿ ಧಾರೆಯೆರೆಯಬೇಕು. ಸ್ವಾಭಿಮಾನವಿಲ್ಲದ ಬಾಳು ವ್ಯರ್ಥ. ನಿದ್ರಾವಸ್ಥೆಯಲ್ಲಿರುವ ಕನ್ನಡಿಗರಿಗೆ ಕನ್ನಡದ ಜೀವ ತುಂಬುತ್ತದೆಯೋ ಅಂದೇ ಕನ್ನಡನಾಡು ನುಡಿ, ನೆಲ-ಜಲ, ಕಲೆ-ಸಾಹಿತ್ಯ, ಸಂಸ್ಕೃತಿ ಧನ್ಯ, ಪ್ರಪಂಚದಲ್ಲಿ ಮಾನ್ಯ.

ಮಲ್ಲಿಕಾರ್ಜುನ ವಿ. ಬನ್ನಿ
ಮಾಜಿ ಶಾಸಕರು, ಗುಳೇದಗುಡ್ಡ, ಬಾಗಲಕೋಟೆ ಜಿಲ್ಲೆ

ನಾಡು ನುಡಿಯ ಪ್ರೀತಿ ಮತ್ತು ಅಭಿಮಾನ




ಮನುಷ್ಯ ತನ್ನ ಜೀವಪ್ರೀತಿಗಾಗಿ ಅಥವಾ ಜೀವನೋಲ್ಲಾಸಕ್ಕಾಗಿ ಸಹಜವಾಗಿಯೇ ತುಡಿಯುತ್ತಾನೆ. ಹಾಗೆಯೇ ಅಸ್ಮಿತೆಗಾಗಿಯೂ ಕಾತರಿಸುತ್ತಾನೆ. ಬದುಕಿನ ವೈವಿಧ್ಯತೆಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಅವುಗಳೊಂದಿಗೆ ವಿಸ್ತ್ರೃತಗೊಳ್ಳುವ ತಹತಹಿಕೆಗೂ ಅವನು ತೆರೆದುಕೊಳ್ಳುವ ರೀತಿ ಅಗಾಧವೇ. ಈ ಅಗಾಧತೆಯೊಳಗೆ ಒಡಮೂಡುವ ನಾಡು-ನುಡಿಯ ಬಗೆಗಿನ ಒಲವು, ಅಭಿಮಾನಗಳು ಕೂಡ ಅನನ್ಯವೆನಿಸುತ್ತವೆ. ವೈಯಕ್ತಿಕ ಪ್ರತಿಭೆ ಮನುಷ್ಯನನ್ನು ಗಾಢಗೊಳಿಸುವ ಸರಿಮಿಗಿಲಾಗಿ ನಾಡು-ನುಡಿಗಳು ಅವನನ್ನು ಪ್ರಗಲ್ಭವಾಗಿ ಗುರುತಿಸಿಕೊಳ್ಳುವಂತೆ ಮಾಡುತ್ತವೆ. ಕುಟುಂಬ, ಕುಟುಂಬದ ಸದಸ್ಯರು, ಸಂಬಂಧಿಗಳು, ಸ್ನೇಹಿತರು, ನೆರೆಯವರು ಮನುಷ್ಯನ ಜೀವಪ್ರೀತಿಯನ್ನು ಉತ್ಕಟವಾಗಿಸುವಂತೆ ನಾಡು-ನುಡಿಗಳ ಸಂಬಂಧ ಅವನನ್ನು ಊರ್ಧ್ವಗೊಳಿಸಬಲ್ಲವು. ನಾನು ಕನ್ನಡಿಗ, ನಾನು ಭಾರತೀಯ ಅಂದುಕೊಳ್ಳುವಾಗಿನ ವ್ಯಾಪಕತೆ ಮನುಷ್ಯ ಬದುಕಿಗೆ ಹೊಸ ಆಯಾಮ ತಂದುಕೊಡಬಲ್ಲವು.
ಈ ಪ್ರಜ್ಞೆಯಿಂದಲೇ ಕವಿಗಳು ನಾಡು-ನುಡಿ ಕುರಿತು ಮೈದುಂಬಿ ಹಾಡಿಕೊಂಡಿದ್ದಾರೆ. ಕನ್ನಡ ಭಾಷೆಯನ್ನು ಕಲ್ಲುಸಕ್ಕರೆ, ಕಸ್ತೂರಿ, ಹಾಲುಜೇನು, ಸುಲಿದ ಬಾಳೆಯ ಹಣ್ಣು, ಸಿಗುರು ತೆಗೆದ ಕಬ್ಬು, ತುಳಸಿ, ಮಲ್ಲಿಗೆ ಎಂದೆಲ್ಲಾ ಕರೆದು ಆಸ್ವಾದಿಸಿ, ಆನಂದಿಸಿದ್ದಾರೆ. ಕರ್ನಾಟಕವನ್ನು ಚಿನ್ನದನಾಡು, ಗಂಧದ ಬೀಡು ಎಂದು ಹಾಡಿ ಕುಣಿದು ತಣಿದಿದ್ದಾರೆ. ನಾಡು-ನುಡಿಗಳ ವೈಭವವನ್ನು ಕಣ್ತುಂಬಿಕೊಂಡು ಅದನ್ನು ಅಕ್ಷರಗಳಲ್ಲಿ ದಾಖಲಿಸುವ ಆಸ್ಥೆ ತೋರಿದ್ದಾರೆ. ಹರಿದು ಹಂಚಿ ಹೋದ ಕನ್ನಡನಾಡನ್ನು ಏಕೀಕರಣಗೊಳಿಸುವಲ್ಲಿ ಕೆಚ್ಚು ಮೆರೆದಿದ್ದಾರೆ. ಅಖಂಡ ಕರ್ನಾಟಕದ ಬದುಕನ್ನು, ಸಂಸ್ಕೃತಿಯನ್ನು, ದೇಶೀಯತೆಯನ್ನು ಸಂಗೀತ, ಕಲೆ, ಸಾಹಿತ್ಯಗಳ ವಿಶಿಷ್ಟ ಪರಂಪರೆಯನ್ನು ಉಳಿಸಿಕೊಳ್ಳುವ ಸಾಂದ್ರತೆಯನ್ನು ಅಭಿವ್ಯಕ್ತಿಸಿದ್ದಾರೆ. ಇದೆಲ್ಲವೂ ಆ ಮಹನೀಯರಿಗೆ ಇರುವ ನಾಡು-ನುಡಿಗಳ ಮೇಲಿನ ಪ್ರೀತಿ, ಅಭಿಮಾನದ ಉತ್ಕೃಷ್ಟತೆಯನ್ನು ಮನಗಾಣಿಸಿಕೊಡುತ್ತದೆ.
ಆದರೆ ಪ್ರಸ್ತುತ ದಿನಮಾನಗಳಲ್ಲಿ ನಾಡು-ನುಡಿ ಎದುರಿಸುತ್ತಿರುವ ಸಮಸ್ಯೆಗಳು ಅವುಗಳ ಅಸ್ತಿತ್ವದ ಬೇರುಗಳನ್ನೇ ಅಲ್ಲಾಡಿಸುವ ಸ್ಥಿತಿಯಲ್ಲಿ ಉಲ್ಭಣಗೊಳ್ಳುತ್ತಿರುವುದು ವಿಷಾದನೀಯ ಸಂಗತಿಗಳೆನಿಸಿದೆ. ನಮ್ಮ ನೆರೆಯ ರಾಜ್ಯಗಳು ತಮ್ಮ ಅಸ್ಮಿತೆಯನ್ನು ಇನ್ನೂ ಇಲ್ಲಿಯ ತನಕವೂ ಗಾಢವಾಗಿಸಿಕೊಂಡಿರುವುದು ನಮ್ಮ ಕಣ್ಣು ಕುಕ್ಕಿಸುತ್ತದೆ. ಭಾಷೆ-ಗಡಿ, ನೆಲ-ಜಲಗಳ ಮೇಲಿನ ತಮ್ಮ ಹಕ್ಕಿಗಾಗಿ ಅವರು ಹೋರಾಡುವ ರೀತಿ ಬೆರಗು ಹುಟ್ಟಿಸುತ್ತದೆ. ಅವರ ಧಾರ್ಷ್ಯತನ ತಮ್ಮ ಅಸ್ತಿತ್ವವನ್ನು ಇಂಚಿಂಚು ಒತ್ತುವರಿ ಮಾಡಿಕೊಳ್ಳುವಾಗ ಕೈಕಾಲು, ಎದೆ ಕಂಪಿಸಿ, ಒಳಮೂಲೆಗಳಲ್ಲಿ ಉಳಿದಿರಬಹುದಾದ ತಾಕತ್ತನ್ನು ಕ್ರೋಧವನ್ನಾಗಿ ಕ್ರೂಢೀಕರಿಸಿ, ಧಿಕ್ಕಾರ ಕೂಗಿ, ಅಬ್ಬರಿಸುವಾಗ ಬಡತನ ಸಿಟ್ಟು ರಟ್ಟೆಗೆ ಬಾರದ ಹೀನಾವ್ಯಸ್ಥೆಯನ್ನು ತಾಳುತ್ತದೆ. ಇದು ನಮ್ಮ ಔದಾರ್ಯದ ಧಾರಾಳತನದ ಫಲವೋ? ದೌರ್ಬಲ್ಯದ ಫಲಶ್ರುತಿಯೇ? ಎಂಬ ಪ್ರಶ್ನೆಗಳು ಕಾಡಿ ಬೆಚ್ಚಿ ಬೀಳಿಸುತ್ತದೆ. ಇದಕ್ಕೆ ಹೊಣೆಗಾರರು ಯಾರು?
ನಮ್ಮನ್ನಾಳುವ ಸರಕಾರಗಳು ಸಂವಿಧಾನ ಬದ್ಧವಾದರೂ ಅವು ಕನ್ನಡ ಸರಕಾರಗಳು. ಶಾಸನ ಪ್ರಭುಗಳು ಕನ್ನಡಿಗರೇ, ನಾಡು-ನುಡಿಗಳ ಇತಿಹಾಸ, ವೈಭವಗಳ ಬಗ್ಗೆ ಅವರಿಗೆ ಅರಿವೂ ಇದೆ. ಅದಕ್ಕೆಂದೆ ಉತ್ಸವಗಳು ಜರುಗುತ್ತವೆ. ಸಮ್ಮೇಳನಗಳು ನಡೆಯುತ್ತದೆ. ನಮ್ಮ ಪ್ರಭುಗಳು ಇದಕ್ಕೆಲ್ಲಾ ರಾಜ್ಯದ ಬೊಕ್ಕಸದಿಂದ ಹಣವೊದಗಿಸಿ ಸಂತೋಷಪಡುತ್ತಾರೆ. ಜನಜಾತ್ರೆಯಾಗಿ ನೆರೆದು, ಉಘೇ ಉಘೇ ಎಂದು ಬೀಗಿ ಹಿಂತಿರುಗಿ ನಿತ್ಯದ ಬದುಕಿಗೆ ತೊಡಗಿಸಿಕೊಳ್ಳುತ್ತಾರೆ.
ನಿರಾತಂಕವೆನ್ನುವಂತೆ ಗುಡ್ಡ-ಬೆಟ್ಟ, ಕಾಡು-ಅದಿರು, ನೆಲ-ಜಲ ನಾಜೂಕಾಗಿ ಅನ್ಯರ ಪಾಲಿಗೆ ದಕ್ಕುತ್ತಲೇ ಹೋಗುತ್ತದೆ ಸ್ವಾರ್ಥಿಗಳ ಮೇಲಾಟಕ್ಕೆ ನಾಡಿನ ಸಂಪತ್ತು ಕರಗುತ್ತಾ ಸಾಗುತ್ತದೆ. ಇದರ ನಡುವೆ ಭಾಷೆಯ ಪ್ರಭುತ್ವ ಕ್ಷೀಣಿಸುತ್ತದೆ. ದೇಶೀಯ ಸರಕುಗಳು ಕಳಾಹೀನಗೊಂಡು ವಿದೇಶಿ ವಸ್ತುಗಳು ವಿಜೃಂಭಿಸುತ್ತವೆ. ಮಾರ್ಕೆಟ್ ವ್ಯವಸ್ಥೆಯ ಸೂಕ್ಷ್ಮತೆಯಲ್ಲಿ ಅನ್ಯಸಂಸ್ಕೃತಿ, ಭಾಷೆ, ಕಲೆ ಸಂವಹನಗೊಂಡು ನಿಜದ ನೆಲೆ ಕುರೂಪಗೊಳ್ಳುತ್ತದೆ. ಇದರ ರೂಕ್ಷತೆಗಳ ಬಗ್ಗೆ ಆತಂಕಿತರಾದಂತೆ ವಿಶ್ವವಿದ್ಯಾಲಯಗಳ ಕೆಲವು ಪ್ರಾಧ್ಯಾಪಕರು ಸಾವಿರಾರು ಪುಟಗಳ ನೂರಾರು ಪುಸ್ತಕ ಬರೆದು ಗ್ರಂಥಾಲಯ ಭರ್ತಿಮಾಡುತ್ತಾರೆ. ಕಳವಳ ಧಾಟಿಯ ಭಾಷಣ ಬಿಗಿಯುತ್ತಾರೆ. ಕಾವಲು ಸಮಿತಿ, ಅಭಿವೃದ್ಧಿ ಪ್ರಾಧಿಕಾರ ಏಕೆ ಎಂದು ಪ್ರಶ್ನಿಸುತ್ತಲೇ ಅಧ್ಯಕ್ಷರಾಗಲೋ, ಸದಸ್ಯರಾಗಲೋ ಲಾಭಿಗೆ ತೊಡಗುತ್ತಾರೆ. ಕನ್ನಡಿಗರ ಬದುಕಿನ ಜಾನ್ನತ್ಯಕ್ಕಾಗಿ ಆಯೋಗಗಳು ನೇಮಕವಾಗಿ, ಅವು ನೀಡಿದ ವರದಿಗಳು ಅನುಷ್ಠಾನಕ್ಕೆ ಬರದೆ ಮೂಲೆ ಸೇರಿ ಬಿಕ್ಕಳಿಸುತ್ತವೆ.
ಕನ್ನಡ ನಾಡಿಗೆ ಕನ್ನಡವೇ ಆಸ್ತಿ; ಅನ್ಯಥಾ ಶರಣಂ ನಾಸ್ತಿ ಎಂದರು ಹಿರಿಯರು. ಕನ್ನಡಕ್ಕಾಗಿ ಕೈಯೆತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಎಂದು ಅಭಿಮಾನ ತುಂಬಿ ಹೇಳಿದರು. ಇಂಥ ಘೋಷಣೆಯ ಫಲವನ್ನು ಕೆಲವರು ಮಾತ್ರ ಉಂಡರು. ಜತೆಗೆ ತಮಗೆ ಬೇಕಾದವರಿಗೆ ಉಣಿಸಿದರು. ಬಡಕನ್ನಡಿಗರು ಮಾತ್ರ ಕನ್ನಡವನ್ನು ತಮ್ಮ ಪ್ರಾಣದ ಉಸಿರಾಗಿ ಪ್ರೀತಿಸುತ್ತಲೇ ಅದನ್ನು ತಮ್ಮ ಪರಿಧಿಯಲ್ಲಿ ಉಳಿಸಿಕೊಂಡು ಕನ್ನಡಂ ಕತ್ತುರಿಯಲ್ತ; ಕನ್ನಡ ಭಾಷೆ ಕನ್ನಡಿಗನ ಭಾಗ್ಯ, ಸಿರಿಗನ್ನಡಂ ಬಾಳ್ಗೆ ಎಂಬ ಹೆಮ್ಮಾತುಗಳನ್ನು ಹೃದಯದಿಂದ ಸ್ಪುರಿಸಿದರು. ಆದರೆ ಆರ್ಥಿಕವಾಗಿ, ಸಾಮಾಜಿಕವಾಗಿ, ಔದ್ಯೋಗಿಕವಾಗಿ ಸಮರ್ಥರೆನಿಸಲಿಲ್ಲ. ಹಿರಿಯರು ಕಂಡ ಕನಸು ನನಸಾಗಲಿಲ್ಲ.
ಕನ್ನಡ ನಾಡು-ನುಡಿಗಳಿಗೆ ಸಾವಿಲ್ಲ ಎಂಬುದು ಕೇವಲ ಭಾವನಾತ್ಮಕ ವಿಚಾರ. ವಾಸ್ತವ ಮಾತ್ರ ಭಿನ್ನವಾಗಿಯೇ ಇದೆ. ಪ್ರತಿಯೊಬ್ಬ ಕನ್ನಡಿಗ ತನ್ನ ಎದೆಯಾಳದ ಪ್ರೀತಿ, ಅಭಿಮಾನಗಳನ್ನು ಕ್ರಿಯಾಶೀಲವಾಗಿಸದಿದ್ದರೆ ದುರಂತವೊಂದು ಅವನೆದುರೇ ಜರುಗಿ ಹೋಗು ಅಪಾಯವಿದೆ. ಜಾಗತೀಕರಣದಿಂದ ದೇಶೀಯ ಭಾಷೆಗಳು ತಮ್ಮ ಅಸ್ತಿತ್ವ ಕಳೆದುಕೊಳ್ಳುವ ದುಃಸ್ಥಿತಿಗೆ ಬಂದಿದೆ. ಕೊಳ್ಳಬಾಕ ವಿರಾಟ ಸಂಸ್ಕೃತಿ ನಮ್ಮ ಜನರ ಬದುಕು ಆವರಿಸಿಕೊಳ್ಳುತ್ತದೆ. ಇಂಥ ಸಂದರ್ಭದಲ್ಲಿ ಕನ್ನಡಿಗ ಮೈತುಂಬ ಕಣ್ಣಾಗಿರಬೇಕಾಗಿದೆ.
ವಿದೇಶಿ ಐಟಿ ಬಿಂದಾಸಾಗಿ ಬೆಂಗಳೂರು ಪ್ರವೇಶಿಸಿದೆ. ನಾಡು-ನುಡಿಗಳಿಗೆ ಧಕ್ಕೆ ಬರತೊಡಗಿದೆ. ಇಂಗ್ಲಿಷ್ ತನ್ನ ಪ್ರಭುತ್ವ ವರ್ಧಿಸಿಕೊಳ್ಳುತ್ತಿದೆ. ಪ್ರತಿ ವರ್ಷ ರಾಜ್ಯೋತ್ಸವ ಅಬ್ಬರ, ಭರಾಟೆ ಕೇಳಿಸುತ್ತದೆ. ಮತ್ತೆ ವರ್ಷಪೂರ್ತಿ ಅದಕ್ಕೆ ಕುಂಭಕರ್ಣನಿದ್ದೆ ಕೆಲವರಿಗಂತೂ ಸುಗ್ಗಿಕಾಲ. ಸುಲಭವಾಗಿ ಚಂದಾ ಎತ್ತಿ ಬದುಕನ್ನು ಚಂದ ಮಾಡಿಕೊಳ್ಳುವ ಸುವರ್ಣಾವಕಾಶ. ಕೆಲವರು ಕನ್ನಡದ ಹೆಸರನ್ನು ವ್ಯವಹಾರದ ವಸ್ತುವನ್ನು ಮಾಡಿಕೊಂಡು ಆರಾಮಾಗಿ ಬದುಕುವವರೂ ಇದ್ದಾರೆ.
ಕನ್ನಡದ ಕೆಲಸವೆಂದರೆ ಬರಿ ಹೊಟ್ಟೆ ಹೊರೆಯುವುದಲ್ಲ. ಕನ್ನಡದ ಬಗೆಗಿನ ಅರಿವಿನ ಶ್ರದ್ಧೆ. ಬರೀ ಹಣ ಉದುರಿಸುತ್ತಾ ಹೋಗುವುದರಿಂದ ಕನ್ನಡದ ಪ್ರಗತಿ ಆಗುವುದಿಲ್ಲ. ಅದು ಆಡಳಿತ ಭಾಷೆಯಾಗಿ ತನ್ನ ವೈಭವವನ್ನು ತೋರಬೇಕು. ಮಾತೃಭಾಷೆಯ ಮಾಧ್ಯಮದಲ್ಲಿ ಕಲಿತವರಿಗೆ ಉದ್ಯೋಗವಕಾಶ ದೃಢವಾಗಬೇಕು. ಕನ್ನಡ ನೆಲ-ಜಲದ ಸಂಪತ್ತು ಕನ್ನಡಿಗರ ಪಾಲಾಬೇಕು. ಹೀಗಾಗಿ ಬಿಡಲೆಂದು ದಿಢೀರನೆ ಫಲವಂತಿಕೆ ಕಾಣಲು ಯಾವುದೇ ಮಂತ್ರದಂಡವಿಲ್ಲ. ಅದಕ್ಕೆ ಒಡಲಾಳದ ಪ್ರೀತಿ, ಅಭಿಮಾನ ಬೇಕು. ಪ್ರತಿಯೊಬ್ಬ ಕನ್ನಡಿಗನ ರಕ್ತದಲ್ಲೂ ಅದು ಮೇಳೈಸಬೇಕು. ಗೋವಿಂದ ಪೈಗಳು ಹೇಳುವಂತೆ ತನು ಕನ್ನಡ, ಮನ ಕನ್ನಡ, ಧನ ಕನ್ನಡ ವೆನಿಸಬೇಕು. ಚೆನ್ನವೀರಕಣವಿ ಅವರು ಹೇಳುವಂತೆ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎನ್ನುವ ಹಂಬಲಕ್ಕೆ ಪ್ರಾಮಾಣಿಕವಾದ ಇಂಬು ಸಿಗಬೇಕು. ಕನ್ನಡಿಗರು ಮನಸು ಮಾಡಿದರೆ ಅಸಾಧ್ಯವೆನ್ನುವುದು ಯಾವುದಿದೆ?
ಕವಿರಾಜ ಮಾರ್ಗದಲ್ಲಿ ಕನ್ನಡಿಗರನ್ನು, ಸುಭಟರ್ಕಳ್, ಕವಿಗಳ್, ಸುಶಿಪ್ರಭುಗಳ್, ಚೆಲ್ಪರ್ಕಳ್, ಅಭಿಜನರ್ಕಳ್, ಗುಣಿಗಳ್| ಅಭಿಮಾನಿಗಳ್ ಅತ್ಯುಗ್ರರ್| ಗಭೀರಚಿತ್ತರ್, ವಿವೇಕಿಗಳ್ ನಾಡವರ್ಗಳ್ ಎಂದು ಬಣ್ಣಿಸಲಾಗಿದೆ. ಅಂಥ ಅಂಥಸತ್ವವನ್ನು ಇವತ್ತಿನ ಕನ್ನಡಿಗರಲ್ಲಿ ಕಾಣಬೇಕಾಗಿದೆ. ಜೀವಗುಣ ಕಳೆದುಕೊಳ್ಳುತ್ತಿರುವ ನಾಡು-ನುಡಿಗಳ ರಕ್ಷಣೆಗೆ ಅವರು ಕಂಕಣಬದ್ಧರಾಗಬೇಕಾಗಿದೆ.
ನಾನು ಕನ್ನಡಿಗನು, ಕರ್ನಾಟಕವು ನನ್ನದು ಎಂಬ ಸದ್ವಿಚಾರ ತರಂಗಗಳಿಂದ ಯಾವನ ಹೃದಯವು ಅತ್ಯಾನಂದದಿಂದ ಪುಲಕಿತಗೊಳ್ಳುವುದಿಲ್ಲವೋ ಕನ್ನಡ ತಾಯಿಗೆ ಈಗ ಬಂದೊದಗಿರುವ ವಿಷಮ ಸ್ಥಿತಿಯಲ್ಲಿ ಯಾವಾತನ ಹೃದಯವು ತಲ್ಲಣಿಸುವುದಿಲ್ಲವೋ ಅದು ಹೃದಯವಲ್ಲ, ಕಲ್ಲಿನ ಬಂಡೆ, ದೇಹವಲ್ಲ, ಮೋಟು ಮರ ಎನ್ನುವ ಆಲೂರ ವೆಂಕಟರಾಯರ ಈ ಮಾತು ಇವತ್ತು ತೀರಾ ಪ್ರಸ್ತುತವೆನಿಸುತ್ತದೆ. ಸಮೃದ್ಧ ಕರ್ನಾಟಕದ ಚಿಂತನೆಗೆ ಇದು ತೀರಾ ಅಗತ್ಯದ್ದೂ ಆಗಿದೆ.

ಪ್ರೊ. ಅಬ್ಬಾಸ್ ಮೇಲಿನಮನಿ
ಆಸ್ಮಾ ಪ್ರಕಾಶನ
ಪ್ರಧಾನ ಅಂಚೆ ಕಚೇರಿ ಹಿಂಭಾಗ
ದುರ್ಗಾವಿಹಾರ ಹತ್ತಿರ
ಬಾಗಲಕೋಟ-೫೮೭೧೦೧
ಮೊ: ೯೪೪೯೭೧೩೭೩೫

ಶರಣರ ಸಮಾಜಮುಖಿ ಚಿಂತನೆ ಒಂದು ಅವಲೋಕನ




‘ಸಮಾಜ ಮತ್ತು ಧರ್ಮಗಳಿಗೆ ಪೂರಕವಾದ ಪರಸ್ಪರ ಸಂಬಂಧವಿದೆ. ಇವು ಒಂದೇ ನಾಣ್ಯದ ಎರಡು ಮುಖಗಳು. ಧರ್ಮ ಸಮಾಜದ ಒಂದು ಭಾಗವಾಗಿ ಒಂದು ಸಮುದಾಯ ಅನುಸರಿಸಿಕೊಂಡು ಬರುವ ಧಾರ್ಮಿಕ ಆಚರಣೆಗಳನ್ನು ಒಳಗೊಂಡರೆ; ಸಮಾಜವು ಇಂತಹ ಅನೇಕ ಧಾರ್ಮಿಕ ಆಚರಣೆಗಳನ್ನು ಆಚರಿಸುವ ಹಲವು ಧರ್ಮಗಳನ್ನು ಒಳಗೊಂಡಿರುತ್ತದೆ. ‘ಧರ್ಮಕ್ಕಿಂತ ‘ಸಮಾಜ ವ್ಯಾಪಕವಾದುದು. ಧರ್ಮ ಒಂದು ನಿರ್ಧಿಷ್ಟ ಸಮುದಾಯಕ್ಕೆ ಸೀಮಿತಗೊಂಡರೆ ಸಮಾಜ ಇಂತಹ ಹಲವಾರು ಸಮುದಾಯಗಳನ್ನು ಗರ್ಭೀಕರಿಸಿಕೊಂಡು ಮುಂದೆ ಸಾಗುತ್ತದೆ. ‘ಧರ್ಮಕ್ಕೆ ಕಟ್ಟಳೆಗಳಿದ್ದರೆ ‘ಸಮಾಜಕ್ಕೆ ಯಾವ ಕಟ್ಟಳೆಗಳಿರುವುದಿಲ್ಲ; ಅವುಗಳನ್ನು ಮೀರಿ ಅದು ಬೆಳೆಯುತ್ತವೆ.
ಬಸವಾದಿ ಶರಣರ ಚಿಂತನೆಗಳು ಸಮಾಜಮುಖಿಯಾದವುಗಳೇ ಹೊರತು ಧರ್ಮಮುಖಿಯಲ್ಲ. ಒಂದು ವೇಳೆ ಅವು ಧರ್ಮಮುಖಿಯೇ ಆಗಿದ್ದರೆ ಅನುಭವ ಮಂಟಪದಲ್ಲಿ ನಡೆಸುವ ಚರ್ಚೆಗಳಲ್ಲಿ ಎಲ್ಲರೂ ಸಮಾನವಾಗಿ ಭಾಗವಹಿಸುತ್ತಿರಲಿಲ್ಲ; ಸಾಮೂಹಿಕ ಚರ್ಚೆಗೆ ಆಸ್ಪದವಿರುತ್ತಿರುಲಿಲ್ಲ. ಬಸವಾದಿ ಶರಣರದು ಸಮಾಜಮುಖಿ ಚಿಂತನವಾದುದರಿಂದಲೇ ಡೋಹರ, ಮಡಿವಾಳ, ಮಾದಾರ, ಕಮ್ಮಾರ, ಕುಂಬಾರ ಎಲ್ಲಾ ಜಾತಿಯ ಜನಸಮುದಾಯ ಒಂದೆಡೆ ಸೇರಿದುದು. ಸಮಾನತೆಯ ಪ್ರತೀಕವಾಗಿಯೇ ಯಾವ ಭೇದವನ್ನನುಸರಿಸದೆ ಇಷ್ಟಲಿಂಗವನ್ನು ಕೊಟ್ಟು ಪೂಜಾ ಸ್ವತಂತ್ರ್ಯವನ್ನು ನೀಡಿದರು ಶರಣರು.
ಧರ್ಮ ಮನುಷ್ಯನನ್ನು ಎತ್ತಿ ಹಿಡಿಯುತ್ತದೆ ಎಂದೆಲ್ಲಾ ಹೇಳಲಾಗುತ್ತಿದ್ದರೂ ಧಾರ್ಮಿಕ ಆಚರಣೆಗಳು ಧೀರ್ಘಗೊಂಡು ಮುಂದೆ ಶುಷ್ಕ ಆಚರಣೆ; ಮತ್ತು ಸಂಪ್ರದಾಯಗಳಾಗುವ ಅಪಾಯವಿದೆ ಎಂಬುದು ಶರಣರಿಗೆ ಗೊತ್ತಿತ್ತು. ಇದಲ್ಲದೇ ಧರ್ಮದ ಮೂಲಕ ಹುಟ್ಟಿಕೊಳ್ಳಬಹುದಾದ ಮತ್ತು ಹುಟ್ಟಿದ ಸ್ಥಾವರ ಪೂಜೆ ಕರ್ಮಠವನ್ನು ಪ್ರೇರೇಪಿಸುವ ಅರಿವು ಶರಣರಿಗಿರುವುದರಿಂದಲೇ ಅವರು ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎಂದು ಹೇಳಿದರು.
ಧರ್ಮಮುಖಿ ಚಿಂತನೆಗೆ ನಿರ್ದಿಷ್ಟ ಸಂಗತಿಗಳಿವೆ. ಎಲ್ಲರೂ ಹೀಗೆಯೇ ಇರಬೇಕು, ಇಂತಹದ್ದನ್ನೇ ಉಪಾಸಿಸಬೇಕು, ಹೀಗೆ ಮಾಡಬೇಕು ಎಂದು ಕಟ್ಟಳೆಗಳಿರುತ್ತವೆ. ಆದರೆ ಶರಣರ ಸಮಾಜಮುಖಿ ಚಿಂತನೆಯಲ್ಲಿ ಹಾಗಿಲ್ಲ. ಬಸವಾದಿ ಶರಣರ ದೇವರ ಕಲ್ಪನೆಯೇ ಬೇರೆಯಿದೆ. ಕ್ರಿಯಾಹೀನ ಮನು ಸಂಸ್ಕೃತಿಯ ಜಡದೇವನಲ್ಲ. ಸಕಲ ಚರಾಚರ ಜೀವಕೋಟಿಗೆ ಮೂಲಧಾರನಾದ ಸರ್ವಶಕ್ತ್ತ; ಆದಿ ಅನಾದಿಗಳಲಿಲ್ಲದಂದು ಇದ್ದೂ ಇಲ್ಲದಂತಿರುವ ಅನುಪಮ ಚೈತನ್ಯ ಬಸವಾದಿ ಶರಣರ ದೇವ! ಮಡಿಕೆ ಮೊರ ದೈವವಲ್ಲ; ಪ್ರಸಂಗ ಬಂದರೆ ಮಾರಿ ಉಂಬುವ ಕಂಚು ಹಿತ್ತಾಳೆಗಳ ದೈವವೂ ಅಲ್ಲ. ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ನೆಲೆಸಿರುವ ಅಂತರಾತ್ಮ ಈ ಭಗವಂತ! ಕೇವಲ ಲಿಂಗಾಯಿತರಷ್ಟೇ ಉಪಾಸಿಸುವ ಭಗವಂತನಲ್ಲ ಅರುವಿನ ಗುರು ತೋರಿದ ಹಾದಿಯಲ್ಲಿ ಸಾಗುವ ಸಾಮಾನ್ಯರೂ ಉಪಾಸನೆ ಮಾಡುವಂತಹ ಭಗವಂತ ಆತನೆಂಬ ನಿಲುವು ಶರಣರದು.
ಜನಮುಖಿ, ಸಮಾಜಮುಖಿ ಚಿಂತನೆ ಶರಣರದು ಆಗಿರುವುದರಿಂದಲೇ ದೇಹ ದೇಗುಲದಲ್ಲಿ ಅವರು ಪರಮಾತ್ಮನನ್ನು ಕಂಡರು. ದೇಹಧಾರಿಗಳೆಲ್ಲರೂ ಶಿವನನ್ನು ಕಾಣುವ ಉಪಾಸಿಸುವ ವಿಶಿಷ್ಟ ಪರಿಕಲ್ಪನೆ ಶರಣರಲ್ಲಿರುವುದರಿಂದಲೇ ಅವರ ಚಿಂತನೆಗಳು ಸಮಾಜಮುಖಿಯಾಗುತ್ತವೆ; ಸರ್ವಮಾನ್ಯವಾಗುತ್ತವೆ.
ಶರಣರು ಹೇಳುವ ಗುರು-ಲಿಂಗ-ಜಂಗಮದ ಪರಿಕಲ್ಪನೆಯೇ ವಿಶಿಷ್ಟವಾದುದು. ಗುರು ಕಣ್ಣಿಗೆ ಕಾಣುವ ದೇಹಧಾರಿ ಗುರುವಲ್ಲ. ಅಂತರಂಗದಲ್ಲಿ ಅರಿವು ಮೂಡಿಸಬಲ್ಲ ಜ್ಞಾನ ಮತ್ತು ಅದನ್ನು ತಿಳಿಸಿಕೊಡುವ ಯಾವುದೋ ಸಾಧನ; ವ್ಯಕ್ತಿಯೂ ಆಗಿರಬಹುದು. ಜ್ಞಾನವನ್ನು ಕರುಣಿಸಿದ ಗುರುಗಳನ್ನು ವಚನಕಾರರು ನೆನೆಯುತ್ತಾರೆ. ಅವರಿಗೆ ನಮೋ..ನಮೋ ಎನ್ನುತ್ತಾರೆ. ಲೋಕವನ್ನು ಕಡೆಗಣಿಸದೆ ಲೋಕದೊಳಗೆಯೇ ಮುಳುಗದೆ ಲೋಕದಲ್ಲಿ ಬಾಳುವ ಬಗೆಯನ್ನು ಇಲ್ಲಿಯ ಗುರು ತೋರಿಸಿಕೊಡುತ್ತಾನೆ. ಜ್ಞಾನ ಮೂಲವಾದ ಚಿಂತನವನ್ನು ನಂಬಿದ ಶರಣರು ಗುರುವಿನಲ್ಲಿ ಜಾತಿಯನ್ನು ಅರಸಲಿಲ್ಲ. ಊರಿಂಗೆ ದಾರಿ ಯಾರು ತೋರಿದಡೇನು? ಕನ್ನಡಿ ಯಾರದಾದರೇನು? ಪ್ರತಿಬಿಂಬ ತೋರಿದಡೆ ಸಾಕಲ್ಲ ಎಂದು ಹೇಳುತ್ತಾರೆ. ವ್ಯಾಸ, ಕಬ್ಬಿಲರ ಕುಲವನ್ನರಸದೆ ಅವರ ಜ್ಞಾನವನ್ನರಿತು ಅವರನ್ನು ಗುರುವೆಂದು ಮನ್ನಿಸಲಾಗಿದೆ. ಶೂನ್ಯ ಪೀಠವನ್ನೇರಿದ ಅನುಭವ ಮಂಟಪದ ರುವಾರಿ ಅಲ್ಲಮ ಪ್ರಭು ಅಸಾಮಾನ್ಯ ಅರುವಿನ ಗುರು! ಬಸವಾದಿ ಶರಣರ ಗುರು ಅರಿವು!
ಶರಣರ ಲಿಂಗದ ಪರಿಕಲ್ಪನೆಯೂ ಬೇರೆಯೇ ಇದೆ. ಸೃಷ್ಟಿನಿಯಮಕನಾದ ಭಗವಂತ ಲಿಂಗದಲ್ಲಿಯೇ ಸಮಾವೇಶಗೊಂಡಿದ್ದಾನೆ. ಲಿಂಗದಲ್ಲಿಯೇ ಸರ್ವಜಗತ್ತು ಲೀನಗೊಂಡಿದೆ. ಅಗಮ್ಯ-ಅಗೋಚರವಾದ ಅದ್ಭುತ ಶಾಂತಿ-ಪ್ರಭೆ, ಚೈತನ್ಯ ಇಷ್ಟಲಿಂಗದಲ್ಲಿ ಸಮಾವಿಷ್ಟವಾಗಿದೆ. ಪರಮಾತ್ಮನ ಕಳೆ ಇಷ್ಟಲಿಂಗದಲ್ಲಿದ್ದು ಅದು ಭಕ್ತನ ತನು-ಮನ ಶುದ್ಧಗೊಳಿಸಲು ಸಹಕಾರಿಯಾಗುತ್ತದೆ. ಮನುಷ್ಯ ಆಣವ, ಕಾರ್ಮಿಕ, ಮತ್ತು ಮಾಯಾ ಮಲಗಳಿಂದ ಬಂಧಿತ ನಾಗಿರುವುದರಿಂದ ಪರಮಾತ್ಮನನ್ನು ಕಾಣಬೇಕೆಂಬ ಬಯಕೆಗೆ ಮಾಯೆ ಮುಸುಕಿದೆ. ಮಾಯೆಯನ್ನು ಸರಿಸಿ ನಿಜದ ನಿಲುವನ್ನು ತೋರುವವ ಗುರು. ಈ ಗುರು ಕರುಣಿಸಿದ ಇಷ್ಟಲಿಂಗ ಉಪಾಸನೆಯಿಂದ ಭಕ್ತ ಹಂತ-ಹಂತವಾಗಿ ಅನುಭಾವದ ಮೆಟ್ಟಿಲೇರುತ್ತ ಸದ್ಗತಿಯನ್ನು ಕಾಣುತ್ತಾನೆಂಬ ನಂಬಿಕೆ ಶರಣರಲ್ಲಿದೆ. ಗುರು ಕರುಣಿಸಿದ ಲಿಂಗದಿಂದ ಲಿಂಗಾಂಗ ಸಾಮರಸ್ಯವನ್ನು ಹೊಂದುತ್ತಾರೆ.
ಶರಣರಲ್ಲಿ ಜಂಗಮವೆಂದರೆ ಸಮಾಜವೆಂಬರ್ಥವಿದೆ. ಬಸವಣ್ಣನ ಜಂಗಮ ಪರಿಕಲ್ಪನೆಯಂತೂ ಅದ್ಭುತ! ಸಮಾಜ ಸೇವೆಯೇ ಅವನ ಜಂಗಮ ಸೇವೆ. ಜಂಗಮ ಸೇವೆಯ ಹಿನ್ನೆಲೆಯಲ್ಲಿಯೇ ದಾಸೋಹದ ಪರಿಕಲ್ಪನೆ ಮೂಡಿಬಂದದ್ದು. ಸೀರೆಯೊಳಗೊಂದೆಳೆ ಹೊನ್ನಿನ್ನೊಳಗೊಂದೊರೆ ಕೂಡ ಇಟ್ಟುಕೊಳ್ಳದೆ ಎಲ್ಲವನ್ನೂ ಜಂಗಮಕ್ಕೆ ಅರ್ಪಿಸಿದ ಜಂಗಮ ಪ್ರೇಮಿ! ಬಸವಣ್ಣನ ಮನೆಗೆ ಕಳ್ಳಬಂದದ್ದು; ಆತ ಕಳ್ಳನಲ್ಲ ನಮ್ಮ ಕೂಡಲ ಸಂಗಮನಾಥ ಬಂದದ್ದೆಂದು ಭಾವಿಸಿ ಮಡದಿಯ ಮೈಮೇಲೆ ಇರುವ ಆಭರಣವನ್ನೂ ಜಂಗಮಕ್ಕೆ ನೀಡಿದ ಮಹಾನುಭಾವ. ಸಂಪತ್ತು ಕೂಡಿಟ್ಟರೆ ಅದರಿಂದ ಹಾನಿಯೇ ಹೊರತು ನಾಡು ಸುಭಿಕ್ಷವಾಗುವುದಿಲ್ಲವೆಂಬುದು ಬಸವಣ್ಣನವರಿಗೆ ಗೊತ್ತು. ಕೂಡಿಟ್ಟ ಅಲ್ಪ-ಸ್ವಲ್ಪ ಸಂಪತ್ತೂ ಕೂಡ ಸಮಾಜದ ಸದ್ಬಳಕೆಗೆ ಸಲ್ಲಬೇಕು. ಸಂಪತ್ತು (ಚಲಾವಣೆಗೆ) ದುಡಿತಕ್ಕೆ ಬಂದರೆ ಅದರ ಸದುಪಯೋಗದಿಂದ ಅಭಿವೃದ್ಧಿ-ಸಂಪತ್ತು ಅವಶ್ಯವಿದ್ದು ಅದನ್ನು ಸತ್ಪಾತ್ರಕ್ಕೆ ಬಳಸಬೇಕು. ಆದ್ದರಿಂದ ‘ಬಿಚ್ಚಿಕೊಡು ಆಭರಣ ಎಂದು ಬಸವ ಮಡದಿಯ ಮೈಮೇಲಿನ ಆಭರಣವನ್ನು ಲೋಕಕಲ್ಯಾಣಕ್ಕಾಗಿ ಬಿಚ್ಚಿಸಿದ್ದಾನೆ. ಜಂಗಮಕ್ಕೆ (ಸಮಾಜಕ್ಕೆ) ಕೊಟ್ಟಿದ್ದಾನೆ.
ಹೀಗೆ ಬಸವಾದಿ ಶರಣರು ಸಮಾಜವನ್ನು ಚಲನಶೀಲದತ್ತ ಕೊಂಡೊಯ್ದಿದ್ದಾರೆ. ಜಡಗೊಂಡದ್ದನ್ನು ಜಂಗಮಗೊಳಿಸಿ ನಾಡನ್ನು ಸುಭಿಕ್ಷು ಮಾಡುವಂತೆ ಪ್ರಯತ್ನಿಸಿದ್ದಾರೆ. ದುಡಿಯುವ ಜನತೆಯಿಂದ ಮಾತ್ರ ಸಮಾಜ ಪ್ರಗತಿ ಹೊಂದ ಬಲ್ಲುದೆಂಬುದನ್ನು ಸಾರುತ್ತ ಸಮಾಜಮುಖಿ ಚಿಂತನಗೈದು ಸಮಾಜ ವೈದ್ಯರೆನಿಸಿದ್ದು ಐತಿಹಾಸಿಕ ಸತ್ಯ!

ಡಾ.ಎಂ.ಬಿ.ಹೂಗಾರ
ಕಾಗವಾಡ

ಕರ್ನಾಟಕ ಮಹಾರಾಷ್ಟ್ರ ಅನುಬಂಧ



ಡಾ.ಪಾಟೀಲ ಪುಟ್ಟಪ್ಪನವರು ಒಂದು ಪ್ರಸಂಗವನ್ನು ಈ ರೀತಿ ನೆನಪಿಸಿಕೊಳ್ಳುತ್ತಾರೆ ನಾನು ಲಂಡನ್ನಿನಲ್ಲಿ ಸರ್ ಮಾರ್ಟಿಮರ್ ವ್ಹೀಲರರ ಉಪನ್ಯಾಸಕ್ಕೆ ಹೋಗಿದ್ದೆ. ಸರ್ ಮೌರ್ಟಿಮರ್‌ರು ಅವಿಭಾಜ್ಯ ಭಾರತದ ಪ್ರಾಚ್ಯವಸ್ತು ಇಲಾಖೆಯ ಮಹಾನಿರ್ದೇಶಕರಾಗಿದ್ದರು. ಭಾರತದ ವಿಭಜನೆ ಆದ ಮೇಲೆ ಅವರು ಪಾಕಿಸ್ತಾನದ ಪ್ರಾಚ್ಯವಸ್ತು ಇಲಾಖೆಯ ಮಹಾನಿರ್ದೇಶಕರಾಗಿ ಹೋದರು. ಅವರು ತಮ್ಮ ಉಪನ್ಯಾಸದಲ್ಲಿ ಮೊಹೆಂಜೊದಾರೋ-ಹರಪ್ಪಾ ಪ್ರದೇಶದಲ್ಲಿ ಪಾಕಿಸ್ತಾನದ ಇನ್ನುಳಿದ ಪ್ರದೇಶಗಳಲ್ಲಿ ಉತ್ಖನನ ಮಾಡಲು ಪಾಕಿಸ್ತಾನ ಸಿದ್ಧವಿಲ್ಲ. ಕೆಳಗೆ ಅಗೆದಂತೆ ಅದಕ್ಕೆ ಪಾಕಿಸ್ತಾನದ ಬೇರುಗಳು ಕಾಣದೇ ಭಾರತದ ಬೇರುಗಳೇ ಕಾಣುತ್ತವೆ ಎಂದು ಅವರು ಹೇಳಿದ್ದರು. ಪಾಕಿಸ್ತಾನಕ್ಕೆ ತನ್ನ ನೆಲವನ್ನು ಅಗೆಯುವುದಕ್ಕೆ ಆಸಕ್ತಿ ಹೇಗೆ ಇಲ್ಲವೋ ಹಾಗೆ ಮಹಾರಾಷ್ಟ್ರಕ್ಕೆ ಆಸಕ್ತಿ ಇಲ್ಲ. ಅಲ್ಲಿ ಅದಕ್ಕೆ ಮರಾಠಿ ಬೇರುಗಳು ಕಾಣದೇ ಕನ್ನಡ ಬೇರುಗಳೇ ಕಾಣುತ್ತವೆ ಎನ್ನುತ್ತಾರೆ ಡಾ.ಪಾಪು.
ಹದಿನಾಲ್ಕನೆಯ ಶತಮಾನದವರೆಗೆ ಮಹಾರಾಷ್ಟ್ರಕ್ಕೆ ಸ್ವಂತ ಚರಿತ್ರೆ ಇಲ್ಲ. ಕ್ರಿಸ್ತಶಕ ಆದಿಯಿಂದ ಅಳಿದ ಚಕ್ರವರ್ತಿಗಳು, ಕನ್ನಡದ ದೊರೆಗಳು, ಶಾತವಾಹನರು, ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣ ಚಾಲುಕ್ಯರು, ಶಿಲಾಹಾರರು, ದೇವಗಿರಿ ಯಾದವರು. (ದೇವಗಿರಿ ಈಗಿನ ಚಾರುಗಾಬಾದ್ ಜಿಲ್ಲೆಯ ದೌಲತಾಬಾದ್) ಮುಂಬೈ ಪಕ್ಕದ ಎಲಿಫೆsಂಟಾ ಗುಹೆಗಳನ್ನು ಎಲ್ಲೋರಾದ ಪ್ರಸಿದ್ಧ ಕೈಲಾಸ ದೇವಾಲಯವನ್ನು ನಿರ್ಮಿಸಿದವರು ರಾಷ್ಟ್ರಕೂಟ ದೊರೆಗಳು. ದೇವಗಿರಿ ಯಾದವರು ಮೂಲತಃ ಕನ್ನಡಿಗರು. ಕವಿರಾಜ ಮಾರ್ಗದಲ್ಲಿ ನೃಪತುಂಗ ಕವಿ ಕಾವೇರಿಯಿಂದ ಗೋದಾವರಿವರೆಗೆ ಎಂಬ ವಾಸ್ತವಿಕ ನುಡಿಗಳನ್ನು ಹೇಳಿದ್ದಾನೆ. ಅದು ಕನ್ನಡದ ಮೇರೆ ಆಗಿತ್ತು.
ನಾಗಪುರದ ಹೋಲಿಯ ಎಂಬ ವರ್ಗದ ಜನ ಕನ್ನಡ ಮಾತನಾಡುತ್ತಿರುವುದನ್ನು ನೂರು ವರ್ಷಗಳ ಹಿಂದೆ ಗ್ರಿಯರ್ಸನ್ ದಾಖಲಿಸಿದ್ದಾನೆ. ಮುಂಬೈ ಮೂಲ ನಿವಾಸಿಗಳಾದ ಕೋಳಿ ಮೀನುಗಾರ ಜನಾಂಗದ ಆಡು ಭಾಷೆ ಕನ್ನಡ. ಮುಂಬೈ ದ್ವೀಪಗಳನ್ನು ಆಳುತ್ತಿದ ಪೋರ್ಚುಗೀಸ್ ದೊರೆ ತನ್ನ ಮಗಳನ್ನು ಇಂಗ್ಲೆಂಡಿನ ರಾಜಕುಮಾರನಿಗೆ ಮದುವೆ ಮಾಡಿಕೊಟ್ಟು ಆ ದ್ವೀಪಗಳನ್ನು ಅಳಿಯನಿಗೆ ಬಳುವಳಿಯಾಗಿ ನೀಡಿದ. ಬ್ರಿಟಿಷ್ ಸರಕಾರ ೧೬೭೦ರಲ್ಲಿ ಆ ದ್ವೀಪಗಳಿಗೆ ರಚಿಸಲಾದ ಕಾನೂನುಗಳನ್ನು ಪೋರ್ಚುಗೀಸ್ ಮತ್ತು ಕೆನರೀಸ್ ಭಾಷೆಗೆ (ಅಂದರೆ ಹಿಂದೆ ಆಳುತ್ತಿದ್ದವರ ಮತ್ತು ಈಗ ನಿವಾಸಿಗಳಾಗಿರುವವರ) ಅನುವಾದ ಮಾಡಲಾಗಿತ್ತು. ಇದು ಖಿhe ಖise oಜಿ ಃombಚಿಥಿ-ಂ ಡಿeಣಡಿoಡಿಠಿeಛಿಣ ೧೯೦೨ರಲ್ಲಿ ಪ್ರಸಿದ್ಧವಾಗಿದೆ. ಕೋಳಿ ಜನಾಂಗದ ಆರಾಧ್ಯ ದೈವ ಮುಂಡಾದೇವಿ ನೆಲಸಿರುವ ಸ್ಥಳ ಮಲಾರ್ ಹಿಲ್ಸ್ ಕರ್ನಾಟಕದ ಮಲೆಬಾರ್ (ಗುಡ್ಡಗಾಡು ನಿವಾಸಿಗಳು) ಜನಾಂಗ ಅಲ್ಲಿ ನೆಲೆಸಿದ್ದರಿಂದ ಆ ಹೆಸರು ಬಂದಿತು. ಅಲ್ಲಿರುವ ಬಂಡೆಗಳ ಸಂದಿನಲ್ಲಿರುವ ಒಂದು ನೀರಿನ ಗುಂಡಿಗೆ ಶ್ರೀ ಗುಂಡಿ(ಊoಟಥಿ ಠಿiಣ) ಎನ್ನುತ್ತಾರೆ. ಕ್ರಿ.ಶ ೧೮೧೮ರಲ್ಲಿ ಮೌಂಟ್ ಸ್ಟುವರ್ಟ್ ಎಲ್ಫಿನ್‌ಸ್ಟನ್‌ನು ಗವರ್ನರ ಆಗಿ ಅಧಿಕಾರ ವಹಿಸಿಕೊಳ್ಳಲು ಮುಂಬೈಗೆ ಬಂದಾಗ ಅಲ್ಲಿನ ನಾಗರಿಕರು ಒಪ್ಪಿಸಿದ ಸನ್ಮಾನ ಪತ್ರ ಸಹ ಕನ್ನಡದಲ್ಲಿತ್ತು. (ಚಿದಂಬರ ಕುಲಕರ್ಣಿ ಬರೆದ (Sಣuಜies iಟಿ hisಣoಡಿಥಿ ೧೯೭೪), ಮುಂಬೈ ಉಪನಗರವಾದ ಡೊಂಬಿವಳ್ಳಿ ಕನ್ನಡದ ಡೊಂಬಿವಳ್ಳಿ ಲೋನಾವಳ ಸಹ ಲೋಣವಳ್ಳಿ ದಕ್ಷಿಣ ಮಹಾರಾಷ್ಟ್ರದ ಸಿಂಧು ದುರ್ಗ, ಕೊಲ್ಲಾಪುರ, ಸಾಂಗ್ಲಿ, ಸತಾರಾ, ಉಸ್ಮಾನಾಬಾದ್, ಸೊಲ್ಲಾಪುರ, ಲಾತೂರ್, ನಾಂದೇಡ ಜಿಲ್ಲೆಗಳ ಹಿಂದಿನ ಶಾಸನಗಳಲ್ಲಿ ಸಂಪೂರ್ಣ ಕನ್ನಡವೇ ಆಗಿದ್ದು, ಅಲ್ಲಿ ಇನ್ನೂ ಸಾಕಷ್ಟು ಕನ್ನಡಿಗರು ಇದ್ದಾರೆ.
ಮಹಾರಾಷ್ಟ್ರದಲ್ಲಿ ಸ್ಥಾಪಿಸಿರುವ ಎರಡು ಕೆಳವರ್ಗದ ಜನಾಂಗ ಎಂದರೆ ಮಹಾರ್ ಮತ್ತು ಧನಗಾರ್. ಮಹಾರರು, ದಲಿತರು, ಅಸ್ಪೃಶ್ಯರು, (ಡಾ. ಅಂಬೇಡ್ಕರ್ ಈ ಜನಾಂಗಕ್ಕೆ ಸೇರಿದವರು) ಮಹಾರ್ ಎಂಬುದು ಕನ್ನಡದ ಮಾದಾರ್ ಎಂಬುದರ ಮರಾಠಿ ಪರಿಷ್ಕೃತ ರೂಪ. ಮಾದಾರ-ಮಾಧಾರ್ ಆಗಿ ಧಕಾರ ಮುಂದೆ ಹಕಾರವಾಗಿ ಮಹಾರ್ ಆಗಿದೆ. ಹಾಗೆ ಧನಗಾರ ಎಂದರೆ ಪಶುಪಾಲನೆ ವೃತ್ತಿಮವರು. ದನಗಾರ್ ಇದೂ ಸಹ ಧನಗಾರ್ ಆಗಿದೆ. ಎಷ್ಟೋ ಪದಗಳು ಅಲ್ಪ ಪ್ರಾಣ ಮರಾಠಿಯಲ್ಲಿ ಮಹಾಪ್ರಾಣವಾಗಿವೆ. ಇಂದೋರಿನ ಹೋಳ್ಕರ್ ರಾಜಮನೆತನದವರು ಮದುವೆ ದಿನ ಕನ್ನಡ ಸೋಬಾನೆ ಪದಗಳನ್ನು ಹಾಡುತ್ತಾರೆ.
ಮಹಾರಾಷ್ಟ್ರದ ಸಂಶೋಧಕ ರಾಜವಾಡೆ ಹೇಳುವ ಪ್ರಕಾರ ಆ ರಾಜ್ಯದ ನೂರಕ್ಕೆ ಐವತ್ತರಷ್ಟು ಹಳ್ಳಿ ಪಟ್ಟಣಗಳ ಹೆಸರು ಕನ್ನಡ ಆಗಿವೆ. ರತ್ನಗಿರಿ, ರಾಯಗಡ, ಸಿಂಧುದುರ್ಗ, ನಾಸಿಕ, ಜಲಗಾಂವ್, ಅಮರಾವತಿ, ನಾಗಪುರ, ಸಾಂಗ್ಲಿ, ಸೊಲ್ಲಾಪುರ, ಬಸ್ಮಾನಾಬಾದ್ ನಾಂದೇಡ ಜಿಲ್ಲೆಗಳವರೆಗೆ ಎಲ್ಲಾ ಕಡೆಗೂ ಅಚ್ಚ ಕನ್ನಡದ ಸ್ಥಳ ನಾಮಗಳು ಅಥವಾ ಕನ್ನಡ ಪದಗಳಿರುವ ಸ್ಥಳ ನಾಮ ದೊರಕುತ್ತವೆ. ನಾಸಿಕ ಜಿಲ್ಲೆಯ ಭಗೂರ್, ಕೋಮಾರ್, ಮಲೆಗಾಂವ, ನುಪೂರ್, ಪುಣೆ ಜಿಲ್ಲೆಯ ಸಿರೂರ್, ಜತೂರ್, ಮಳಾವರಿ, ಔರಂಗಾಬಾದ್ ಜಿಲ್ಲೆಯ ಅಂತೂರ್, ರತ್ನಗಿರಿ ಜಿಲ್ಲೆಯ ನರೂರ್, ಕೂಡಲ್, ಕೋಗಳೆ ದೂಲಿಯ ಜಿಲ್ಲೆಯ ನೀರಗುಡಿ, ಮಾಳೆಗಾಂವ್, ವಾರ್ಧಾ ಜಿಲ್ಲೆಯ ಜೋಗ್, ನಾಗಪುರ ಜಿಲ್ಲೆಯ ಸಿರಸಿ, ಮಾಳೆಗಾಂವ್ ಕೆಲವು ಉದಾಹರಣೆ ಅಲ್ಲದೆ ಕಲ್ಮಡ, ಅಕ್ಕಲಕೊಪ್ಪ ದೇವಿಕೊಪ್ಪ, ಉಳವಿ ದೋಣಿ ಮೊಸಳೆ, ನೀರ್ಗುಂಡಿ, ಕಳಸ ಸಂಗಮ, ಬ್ರಹ್ಮನಾಳ, ಕುರಡಿವಾಡಿ ಫಾಣಗಾಪುರ ಮೂಲ ಹೆಸರಿನ ಊರುಗಳಿವೆ.
ಕನ್ನಡದ ಅಣ್ಣ, ತಾಯಿ, ಅಕ್ಕ ಇವುಗಳನ್ನು ಮರಾಠಿಗರು ನೇರವಾಗಿ ಬಳಕೆಯಲ್ಲಿ ಇಟ್ಟುಕೊಂಡಿದ್ದಾರೆ. ಅಣ್ಣಾ ಸಾಹೇಬ, ಗೋಧೂ ತಾಯಿ ಎಂಬ ಹೆಸರುಗಳಿವೆ. ಬೇಚೌರಿಮ ಖಂಡೋಬ, ಕೊಲ್ಲಾಪುರದ ಲಕ್ಷ್ಮಿ ತುಳಜಾ ಭವಾನಿ, ಫಂಡರಾಪುರದ ವಿಠ್ಠಲ ಈ ನಾಲ್ಕು ಮೂಲತಃ ಕನ್ನಡ ದೇವತೆಗಳು. ಖಂಡೋಜ ಕನ್ನಡ ದೇವತೆಗಳೂ, ಕಂಡೋಬ ಕರ್ನಾಟಕದ ಮೈಲಾರ, ಮೈಲಾರನ ಹೆಂಡತಿ ಮಾಶಬ್ಬೆ (ಮರಾಠಿಯಲ್ಲಿ ಮೌಲಾಸಾ) ಮಹಾರಾಷ್ಟ್ರದಲ್ಲಿ ಮೈಲಾರನ ಭಕ್ತರು ಇದ್ದಾರೆ. ಕೊಲ್ಲಾಪುರ, ಫಂಡರಾಪುರ ಅಚ್ಚಗನ್ನಡ ಪ್ರದೇಶವಾಗಿರುತ್ತದೆ. ಒಂದು ಕಾಲಕ್ಕೆ ಎರಡೂ ರಾಜ್ಯಗಳ ಭಾಷೆ ಕನ್ನಡವೇ ಆಗಿತ್ತೆಂದು ಲೋಕಮಾನ್ಯ ತಿಲಕರು ಸ್ವಾತಂತ್ರ್ಯ ಪೂರ್ವದಲ್ಲಿಯೇ ಬೆಳಗಾವಿ ಗುರ್ಲಹೊಸೂರಿನಲ್ಲಿ ಹೇಳಿದ್ದರು.
ಮರಾಠಿ ಭಾಷೆಯ ಸ್ವತಂತ್ರ ಅಸ್ತಿತ್ವ ರೂಪುಗೊಳ್ಳುತ್ತಿದ್ದ ಕಾಲದಲ್ಲಿ ಕನ್ನಡ ಸಾಹಿತ್ಯದ ಸುವರ್ಣ ಕಾಲ ನಡೆಯುತ್ತಿತ್ತು. ಕರ್ನಾಟಕದ ಹಾಸನ ಜಿಲ್ಲೆಯ ಶ್ರವಣಬೆಳಗೊಳದ ಗೊಮ್ಮಟೇಶ್ವರ ಮೂರ್ತಿಯ ಪದತಲದಲ್ಲಿ ಶ್ರೀ ಚಾವುಂಡರಾಯೇ ತಿರವಿಯಲೇ ಮತ್ತು ಗಂಗರಾಜೇ ಸುತ್ತಾಲೆ ಕರವಿಯಲೇ ಎಂಬ ವಾಕ್ಯಗಳಿರುತ್ತವೆ. (ಕ್ರಿ.ಶ. ೯೮೩) ಚಾವುಂಡರಾಯನೇ ಈ ವಾಕ್ಯವನ್ನು ಕೆತ್ತಿಸಿರುವನೆಂದು ವಿದ್ವ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಮರಾಠಿಯ ತೀವ್ರ ಬೆಳವಣಿಗೆಗೆ ಕಾರಣರಾದವರು ದೇವಗಿರಿ ಯಾದವರು.
ಮರಾಠಿ- ಕನ್ನಡ ಭಾಷೆಗಳು ಹತ್ತಿರವಾದವುಗಳು. ಫಂಡರಾಪುರದ ಆದಿದೈವ ವಿಠ್ಠಲ ಅಥವಾ ವಿಠೋಬನನ್ನು ಸಂತ ಜ್ಞಾನೇಶ್ವರರು ಕಾನಡಿದೈವ ಎಂದಿದ್ದಾರೆ. ಜ್ಞಾನೇಶ್ವರನ ಕೆಲವು ಅಭಂಗಗಳು ಕನ್ನಡದಲ್ಲಿವೆ.
ಉದಾ:-ಅಕ್ಕಾ ನೀ ಕೇಳೆ ಚಿಕ್ಕನಾ ಮಾತು
ಕಾರಲೆವನಿಗೆ ಮರುಳಾದೆನೆ
ಪುಂಡಲೀಕನೆ ಬಂದಾ
ರಖುಮಾದೇವಿ ವರ ವಿಠ್ಠಲನೆ ||

ವಿಠ್ಠಲನ ರಾತ್ರಿ ವೇಳೆಯ ಕೊನೆಯ ಪೂಜೆ ಸಮಯದಲ್ಲಿ ಕನ್ನಡ ಸ್ತೋತ್ರಗಳನ್ನು ಹೇಳಲಾಗುತ್ತದೆ. ಫಂಡರಾಪುರದ ಹಳೆಯ ಹೆಸರು ಪಂಡರಗೆ ಎಂಬುದು ಕನ್ನಡ ಪದ.
ತೌಲನಿಕ ಸಾಹಿತ್ಯಕ್ಕೆ ಕನ್ನಡ-ಮರಾಠಿಗಳು ಪೂರಕವಾಗಿವೆ. ಕುಮಾರವ್ಯಾಸ ಹಾಗೂ ಮುತ್ತೇಶ್ವರರನ್ನು, ಪುರಂದರದಾಸ ಮತ್ತು ಏಕನಾಥರನ್ನು, ಜ್ಞಾನೇಶ್ವರ-ಪುರಂದರದಾಸರನ್ನು ಅಧ್ಯಯನ ಮಾಡಬಹುದು. ಕಾಂಟ್ಯಾಂಚ ಆಣಿವರ ಎಂಬ ಜ್ಞಾನೇಶ್ವರರ ರಚನೆ ಪುರಂದರದಾಸರಿಗೆ ಮುತ್ತಿನ ಕೊನೆಯ ಮೇಲೆ ಎಂಬ ಪದ ಕಟ್ಟಲು ಸ್ಫೂರ್ತಿಯಾಯಿತೇ ಎಂಬುದು ಚರ್ಚಿಸಬೇಕಾದ ವಿಷಯ. ೮೦೦ ವರ್ಷಗಳ ಹಿಂದೆ ಮಹಾರಾಷ್ಟ್ರದಲ್ಲಿ ನಾಥ ಪಂಥವೂ, ಕರ್ನಾಟಕದಲ್ಲಿ ವೀರಶೈವ ಪಂಥವೂ ಧಾರ್ಮಿಕ ವಿಚಾರಗಳನ್ನು ಪ್ರಭಾವಿಸಿ ಸಾಹಿತ್ಯಕ್ಕೆ ವಿಶೇಷ ರೂಪ ಬರುವಂತೆ ಮಾಡಿದವು. ವಚನ ಸಾಹಿತ್ಯ, ದಾಸ ಸಾಹಿತ್ಯ, ಮಹಾನುಭಾವ, ಪಂಥವಾರಕರಿ ಪಂಥ ಇವೆಲ್ಲ ಇದರ ಫಲವಾಗಿದೆ. ದಲಿತ ಸಾಹಿತ್ಯ ಮೂಲಗಳು ಕನ್ನಡಕ್ಕೆ ಮರಾಠಿಯಿಂದಲೇ ಬಂದವುಗಳಾಗಿವೆ. ಪಂಡಿತ ಅವಳಿಕಾರರು ಕರ್ನಾಟಕ ಮತ್ತು ಮರಾಠಿ ಸಾಹಿತ್ಯ ವಿಳಂಬ ಬೃಹತ್ ಗ್ರಂಥವನ್ನು ಬರೆದು ಡಾ. ಪಾಟೀಲ ಎಸ್.ಪಿ.ಕನ್ನಡಕ್ಕೆ ಅನುವಾದಿಸಿದ್ದಾರೆ.
ಕನ್ನಡ ಶರಣ ಸಾಹಿತ್ಯದ ಪ್ರಭಾವ ಮರಾಠಿಯಲ್ಲಿಯೂ ಕಾಣಿಸಿಕೊಂಡಿದೆ. ಇದಕ್ಕೆ ಕಾರಣರು ಶಾಂತಲಿಂಗ ಶಿವಯೋಗಿ, ಮನ್ಮಥ ಶಿವಲಿಂಗ ಮತ್ತು ಮೂಡಲಗಿ ಸ್ವಾಮಿ. ೧೪ನೇ ಶತಮಾನದಲ್ಲಿ ಶಾಂತಲಿಂಗ ಸ್ವಾಮಿಗಳು ಚೆನ್ನಬಸವಣ್ಣನ ಶರಣ ಹಸುಗೆ ಗ್ರಂಥವನ್ನು, ನಿಜಗುಣ ಶಿವಯೋಗಿಗಳ ವಿವೇಕ ಚಿಂತಾಮಣಿಯನ್ನು, ವೀರಶೈವ ತತ್ವ ಜ್ಞಾನವನ್ನು ಮರಾಠಿಗೆ ಅನುವಾದಿಸಿದರು. ಏಕನಾಥರ ಸಮಕಾಲೀನವಾದ ಮನ್ಮಥ ಶಿವಲಿಂಗರು ಪರಮರಹಸ್ಯ ಅನುಭವಾನಂದ ಸ್ವಯಂ ಪ್ರಕಾಶ ಕೃತಿಗಳನ್ನು ರಚಿಸಿದರು. ಮಹಾರಾಷ್ಟ್ರದ ವೀರಶೈವರಲ್ಲಿ ಶಿವಭಜನೆಯ ಪರಂಪರೆಯನ್ನು ಇವರು ಆರಂಭಿಸಿದರು. ತತ್ವವನ್ನು ಕಾವ್ಯವಾಗಿಸುವ ವಿಶೇಷ ಶಕ್ತಿಯನ್ನು ಅವರು ಹೊಂದಿದ್ದರು. ಮೂಡಲಿಗಿಯ ಸ್ವಾಮಿಗಳು ಶ್ರೀ ಶಂಕರಾಚಾರ್ಯ ಪರಂಪರೆಯವರು. ಅವರಲ್ಲಿ ರಾಮ, ದತ್ತಾತ್ರೇಯ, ವಿಠ್ಠಲರ ಉಪಾಸನೆಗಳಿವೆ. ವೀರಶೈವ ಪರಂಪರೆಯೊಡನೆಯೂ ಸಂಬಂಧ ಹೊಂದಿದ್ದರು. ಬಸವೇಶ್ವರ, ಜ್ಞಾನೇಶ್ವರ ಎಂಬ ತುಲನಾತ್ಮಕವಾದ ಪುಸ್ತಿಕೆಯನ್ನು ಮರಾಠಿ ವಿದ್ವಾಂಸರಾದ ಮೆಣಸೆ ರಚಿಸಿದ್ದಾರೆ. ಮೆಣಸೆ ವಾರಕರಿ ಪಂಥದವರು, ಸೇವಾದಲದ ಸೇವೆ, ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗಿ, ನಂತರ ಸಮಾಜವಾದಿ ಬಸವ ಕಲ್ಯಾಣದಲ್ಲಿ ವಾಸ. ನಾಲ್ಕು ದಶಕಗಳ ಕಾಲ ಸುತ ಚಳವಳಿಯ ಸೆಳೆತ. ಇದರ ಫಲ ಈ ಪುಸ್ತಿಕೆ. ೧೯೯೭ರಲ್ಲಿ ಪುಣೆ ವಿಶ್ವವಿದ್ಯಾಲಯದಿಂದ ಪುರಸ್ಕೃತ ಹೊಂದಿದ ಈ ಪ್ರತಿಯನ್ನು ೧೯೯೮ರಲ್ಲಿ ಚಂದ್ರಕಾಂತ ಪೋಳೆ ಅವರಿಂದ ಅನುವಾದಿತವಾಗಿ ನವಕರ್ನಾಟಕ ಪ್ರಕಾಶನದಿಂದ ಪ್ರಕಟವಾಗಿದೆ.
ಧಾರವಾಡದ ಖ್ಯಾತ ಸಂಶೋಧಕರು ಮತ್ತು ವಿದ್ವಾಂಸರಾದ ಶಂ.ಬಾ.ಜೋಷಿಯವರಿಂದ, ದ.ರಾ.ಬೇಂದ್ರೆ, ರಂ.ಕಾ.ಲೋಕಾಪುರ ಮೂಲ ಕನ್ನಡ ವಿದ್ವ್ವಾಂಸರ ಮರಾಠಿ ಲೇಖನಗಳೊಂದಿಗೆ ಮರಾಠಿಯ ಹೆಸರಾಂತರಾದ ಪು.ಲ.ದೇಶಪಾಂಡೆ, ಗಂಗಾಧರ ಗಾಡಗೀಶ, ಸೇತು ಮಾಧವರಾವ ಪಗಡಿ, ದುರ್ಗಾ ಭಾಗವತ ಮುಂತಾದವರು ಮಹಾರಾಷ್ಟ್ರ-ಕರ್ನಾಟಕ ಸಾಂಸ್ಕೃತಿಕ ಸಂಬಂಧಗಳ ಬಗ್ಗೆ ಅನೇಕ ಲೇಖನಗಳನ್ನು ಬರೆದಿದ್ದಾರೆ. ಡಾ.ಅ.ರಾ.ತೋರೋ ಅವರು ಇಂಥಹ ೨೧ ಲೇಖನಗಳುಳ್ಳ ಕೃತಿಯನ್ನು ಮಹಾರಾಷ್ಟ್ರ-ಕರ್ನಾಟಕ ಸಾಂಸ್ಕೃತಿಕ ಅನುಬಂಧ ಸಂಪಾದಿಸಿದ್ದಾರೆ. ೨೦೦೨ರಲ್ಲಿ ಪುಣೆಯ ಪ್ರತಿಮಾ ಪ್ರಕಾಶನದಿಂದ ಪ್ರಕಾಶಿತವಾಗಿದೆ.
ಇನ್ನೊಂದು ಮಹತ್ವದ ವಿಷಯವನ್ನು ಪ್ರಸ್ತಾಪಿಸಬೇಕಾಗಿದೆ. ಮಹಾರಾಷ್ಟ್ರದ ಪ್ರಸಿದ್ಧ ಮತ್ತು ನಿಷ್ಠರು ಸಂಶೋಧಕರಾದ ಡಾ.ರಾಮಚಂದ್ರ ಚಿಂತಾಮಣಿ ಡೇರೆ ಅವರು, ಮಹಾರಾಷ್ಟ್ರ ಕರ್ನಾಟಕ ಆಂಧ್ರಗಳಲ್ಲಿ ತಿರುಗಾಡಿ ಅನೇಕ ಶಿಲಾಶಾಸನ, ತಾಮ್ರಪಟ, ಕನ್ನಡ, ಮರಾಠಿ, ಸಂಸ್ಕೃತ, ಕಾವೂವಾದಿ ಅನೇಕ ಸ್ಥಳಗಳಿಗೆ ಭೇಟಿ ಕೊಟ್ಟು, ಜನರನ್ನು ವಿದ್ವಾಂಸರನ್ನು ಸಂದರ್ಶಿಸಿ ಜನಪದ ತಾವೂ ಸಂಗ್ರಹಿಸಿ-ಶಿವಾಜಿ ಮೂಲ ಪುರುಷರು ಕನ್ನಡಿಗರು ಎಂದು ಖಂಡಿತವಾಗಿ ಹೇಳಿದ್ದಾರೆ. ಅವರ ಕೃತಿಯನ್ನು ಸರಜೂ ಕಾಟ್ಕರ್ ಅನುವಾದಿಸಿದ್ದಾರೆ. ಆ ಕೃತಿಯ ಪ್ರಕಾರ-ಶಿವಾಜಿ ಮಹಾರಾಜರ ಮೂಲ ಪುರುಷ ಗದಗ ಜಿಲ್ಲೆ ಶಿರಹಟ್ಟಿ ತಾಲೂಕು ಲಕ್ಷ್ಮೇಶ್ವರದ ಹತ್ತಿರ ಸರಟೂರು ಗ್ರಾಮದವರು. ಗೊಲ್ಲ ಸಮಾಜದವರು. ಅಲ್ಲಿಯ ಗವಳಿರಾಜನಾದ ಬಳಿಯಪ್ಪನು, ಬರಗಾಲ ಬಿದ್ದುದಕ್ಕಾಗಿ ತನ್ನ ಪರಿವಾರ ಸಮೇತ ಸತಾರ ಜಿಲ್ಲೆಯ ಶಿಖರ ಸಿಂಗಾಪುರದಲ್ಲಿ ತನ್ನ ಮನೆತನದ ಕುಲದೈವವಾದ ಶ್ರೀಶೈಲ ಮಲ್ಲಿಕಾರ್ಜುನನ ಪ್ರತಿರೂಪವಾಗಿ ಶಂಭು ಮಹಾದೇವ ಗುಡಿ ಕಟ್ಟಿಸುತ್ತಾನೆ.
ಇತರ ಅಂಶಗಳು ಈ ರೀತಿ ಇವೆ.......
ಸರಟೂರು ಗ್ರಾಮದಲ್ಲಿದ್ದಾಗ ಪುಲಗೆರೆಯ ಸೋಮನಾಥ ಆರಾಧ್ಯ ದೈವ.
ಶಿವಾಜಿ ಮಹಾರಾಜರ ಮನೆತನದ ಗುರು ಜಂಗಮರಾದ ಶಾಂತವೀರ ಸ್ವಾಮಿಗಳು. ಅವರ ಮನದೇವರು ಶ್ರೀಶೈಲ ಮಲ್ಲಿಕಾರ್ಜುನ.
ಶಿವಾಜಿ ಮಹಾರಾಜರು ವಿಭೂತಿಧಾರಿಗಳಾಗಿ ಸಹಸ್ರ ರುದ್ರಾಕ್ಷಿ ಧರಿಸಿ ಶ್ರೀಶೈಲ ಮಲ್ಲಿಕಾರ್ಜುನನ್ನು ಆರಾಧಿಸುವ ಚಿತ್ರವಿದೆ.
ಮಹಾರಾಜರು ವಿಜಯನಗರದ ಪತನದ ಬಗ್ಗೆ ಖಿನ್ನರಾಗಿದ್ದರು. ದಕ್ಷಿಣ ದಿಗ್ವಿಜಯ ಮುಗಿಸಿಕೊಂಡು ಬರುವಾಗ ಹಂಪಿಯಲ್ಲಿ ವಾಸ ಮಾಡಿ ಶ್ರೀ ವಿರೂಪಾಕ್ಷನನ್ನು ಅನನ್ಯವಾಗಿ ಪೂಜೆ ಮಾಡಿದ್ದರು.
ಹಂಪಿಯ ಪರಿಸರದ ಆನೆಗುಂದಿ ಕಂಪ್ಲಿ ವಾಸವಾಗಿದ್ದು ಮನೆಯಲ್ಲಿ ಉದ್ಯಾನವನ್ನು ನಿರ್ಮಿಸಿದ್ದರು. ಈ ಭಾಗ ಬಿಟ್ಟು ಕೊಡು ಎಂದು ಆದಿಲ್‌ಶಾಹಿಗೆ ೯-೭-೧೬೫೭ರಲ್ಲಿ ಪತ್ರ ಬರೆದ ದಾಖಲೆ ಇದೆ.
ಶಿವಾಜಿ ಮಹಾರಾಜರು ಧಾರವಾಡ ಜಿಲ್ಲೆ ನವಲಗುಂದ ತಾಲೂಕು ಭದ್ರಾಪುರ ಗ್ರಾಮದ ಹನುಮಂತ ದೇವರ ಪೂಜೆಗಾಗಿ ಹಣ ಕೊಟ್ಟ ದಾಖಲೆ ಇದೆ. ನಂತರ ರಾಜಾರಾಂ, ಶಾಹು ಮಹಾರಾಜ ದೇವಸ್ಥಾನಕ್ಕೆ ವರ್ಷಾಸನವನ್ನು ಮಂಜೂರು ಮಾಡಿದ್ದಾರೆ.
ವಿಜಯನಗರ ರಾಜ ಶ್ರೀರಂಗರಾಮ ತೀರಿದಾಗ ಅವನ ರಾಣಿಗೆ ಆನೆಗುಂದಿ, ಗಂಗಾವತಿ, ಕಂಪ್ಲಿ ಕಮಲಾಪುರ ದರೋಜಿ ಹೊಸೂರು ಊರುಗಳನ್ನು ಶಾಶ್ವತವಾಗಿ ಸ್ವಾಧೀನಕ್ಕೆ ಒಪ್ಪಿಸಿದ. ದಾನಪತ್ರ ೧೬೫೭ರಲ್ಲಿ ಮಹಾರಾಜರಿಂದ ಮಾಡಲಾಗಿದೆ.
ಶ್ರೀ ಶೈಲ ಮಲ್ಲಿಕಾರ್ಜುನ ಗೋಪುರವನ್ನು ನಿರ್ಮಿಸಿದರು.
ಶಿವಾಜಿಯ ಅಜ್ಜ ಮೌಲೋಜಿರಾವ್ ಬೆಂಗಳೂರು ಪ್ರಾಂತದ ರಾಜ್ಯಪಾಲರಾಗಿದ್ದು, ಮಲ್ಲಿಕಾರ್ಜುನ ದೇವಾಲಯ ಕಟ್ಟಿಸಿದರು. ಅದುವೆ ಈಗಿನ ಮಲ್ಲೇಶ್ವರ.
ಶಿವಾಜಿ ತಂದೆ ಶರಾಜಿಯ ಸಮಾಧಿ ಶಿವಮೊಗ್ಗ ಜಿಲ್ಲೆ ಚನ್ನಗಿರಿ ತಾ|| ಹೊದಿಗೆರೆಯಲ್ಲಿದೆ.
ಶಂಗಣಾಪುರ ಶಂಭು ಮಹಾದೇವ ಗುಡಿ ಔರಂಗಜೇಬನ ದಂಡನಾಯಕ ಅಫಜಲ್ ಖಾನ್ ಹಾಳು ಮಾಡಿದಾಗ ಕೊಲ್ಲಾಪುರದ ಶಾಹು ಮಹಾರಾಜರು ಜೀರ್ಣೋದ್ಧಾರ ಮಾಡುವರು.
ಶಿವಾಜಿ ಮಗ ಸಂಭಾಜಿ ಮತ್ತು ಅವರ ಮಕ್ಕಳು ಬರೆಯಿಸಿದ ಶಿಲಾ ಶಾಸನಗಳು ಕರ್ನಾಟಕದಲ್ಲಿವೆ.
ಡೇರೆ ಅವರ ಪ್ರಕಾರ ಕರ್ನಾಟಕದಲ್ಲಿ ಇವರ ಮನೆತನ ಕರ್ನಾಟಕ ಹೊಯ್ಸಳ ಅವಳಿ ವರ್ಗ, ಶಿವಾಜಿಯದು ಭೋಸ್ಲೆ (ಪೊಯ್ಸಳ) ಮನೆತನ.
ಪುಸ್ತಕೋದ್ಯಮದಲ್ಲಿ ಪ್ರಸಿದ್ಧರಾದ ಬಿ.ಜಿ.ಸಂಕೇಶ್ವರ ಶಿವಾಜಿ ಮಹಾರಾಜರ ಚರಿತ್ರೆಯನ್ನು ಬರೆದಿದ್ದಾರೆ.
೧೮೩೦ರಲ್ಲಿ ಕನ್ನಡ ಭಾಷೆಯ ಧಾರವಾಡ ಪ್ರಾಂತ್ಯ ಮುಂಬೈ ರಾಜ್ಯದಲ್ಲಿ ವಿಲೀನವಾಯಿತು. ಆಗ ಕನ್ನಡ ಭಾಷೆಗೆ ಹೊಡೆತ ಬಿದ್ದಿತು. ಮರಾಠಿಗಳ ಪ್ರಾಬಲ್ಯ ಅಧಿಕವಾಯಿತು. ತೊತ್ತಿಗಿಂತಲೂ ಅಧಿಕವಾಯಿತು. ಅದು ಮತ್ತೆ ತಲೆ ಎತ್ತಬಾರದೆಂದು ಮರಾಠಿಗರು ಹವಣಿಸಿದರೂ ಅವರು ತೋರಿದ ಆಮಿಷಕ್ಕೆ ಕನ್ನಡದ ವಿದ್ಯಾವಂತರು ಮರಾಠಿಗೆ ಮಾರು ಹೋದರು. ಕನ್ನಡದ ಮನೆತನ ಮರಾಠಿಮಯವಾದವು. ೧೮೨೫-೧೮೫೦ರ ಅವಧಿಯಲ್ಲಿ ಧಾರವಾಡ ಪ್ರಾಂತ್ಯದಲ್ಲಿ ೧೧೬ ಕನ್ನಡ ಶಾಲೆಯಿದ್ದರೆ ೧೪೬ ಮರಾಠಿ ಶಾಲೆಗಳಿದ್ದವು. ೧೮೬೦ರಲ್ಲಿ ಧಾರವಾಡ ವಿದ್ಯಾಧಿಕಾರಿಯಾಗಿದ್ದ ವಿಲಿಯಂ ರಸೆಲ್ ತನ್ನ ವಿಭಾಗದಲ್ಲಿ ಒಂದೂ ಸರಕಾರಿ ಕನ್ನಡ ಶಾಲೆಗಳಿಲ್ಲ ಎಂದು ವರದಿ ಮಾಡಿದ್ದನು. ಕನ್ನಡ ಶಾಲೆಗಳು ಅಯ್ಯನವರ, ಗಾವಂತಿ ಶಾಲೆಗಳಾಗಿದ್ದವು.
ಕನ್ನಡದಲ್ಲಿ ಕಾದಂಬರಿ ಪ್ರಕಾರವನ್ನು ಜನಪ್ರಿಯಗೊಳಿಸಿದ ಗಳಗನಾಥ ಮತ್ತು ಅವರ ಸಮಕಾಲೀನರು ಆಗ ಹೆಚ್ಚು ಪ್ರಚಲಿತವಿದ್ದ ಮರಾಠಿ ಭೂಮಿಷ್ಠ ಕನ್ನಡವನ್ನು ಬಳಸಿ ಅಭಿಮಾನಿಗಳ ಹೃದಯ ಗೆದ್ದರು. ಗಳಗನಾಥರು ಮರಾಠಿಯಲ್ಲಿ ಪ್ರಸಿದ್ಧರಾಗಿದ್ದ ಹರಿನಾರಾಯಣ ಆಪ್ಟೆಯವರ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದರು. ಧಾರವಾಡದಲ್ಲಿ ಗಜಾನನ ಉತ್ಸವದ ಸಮಯದಲ್ಲಿ ಮರಾಠಿ ಹಾಡುಗಳನ್ನು ಹಾಡುತ್ತಿದ್ದರು. ಆಲೂರ ವೆಂಕಟರಾಯರು ಗಜಾನನ ಸ್ತವನ ಕನ್ನಡ ಗೀತೆಗಳನ್ನು ಬರೆದು ಪ್ರಕಟಿಸಿ ಹಾಡಿಸಿದರು. ನನ್ನ ಅಜ್ಜ ನಂದೀಶಂ (ಬಿಬಿ ಬೂದಿಹಾಳಮಠ) ಮರಾಠಿಯಿಂದ ವೇಣೂ (೧೯೧೮) ಮತ್ತು ಮನೋಹರ (೧೯೨೬) ಎಂಬ ಎರಡು ಕಾದಂಬರಿಗಳನ್ನು ಅನುವಾದಿಸಿದ್ದರು. ನಮ್ಮ ಕಾಲದಲ್ಲಿ ಬೇಂದ್ರೆಯವರು ಇವೆರಡೂ ಸಾಹಿತ್ಯವನ್ನು ಬೆಸೆದ ಮಹಾಶಿಲ್ಪಿಯಾಗಿದ್ದರು. ಕನ್ನಡಿಗರಾಗಿದ್ದ ವಿ.ಶಾಂತಾರಾಂ (ವಣಕುದುರೆ ಶಾಂತಾರಾಮ) ಮಿಂಚಿದ್ದು, ಮರಾಠಿ ಚಿತ್ರರಂಗದಲ್ಲಿ ಅಲ್ಲ, ಹಿಂದಿಯಲ್ಲಿ.
ಒಬ್ಬ ಮರಾಠಿ ಪ್ರಾಧ್ಯಾಪಕ ಕನ್ನಡದಲ್ಲಿ ಪುಸ್ತಕ ರಚಿಸಿ ಮಾರಾಟ ಮಾಡಿದರು. ಶ್ರೀಪಾದ ಭಿಡೆ ೧೯೧೯ರಲ್ಲಿ ನಾಗಪುರದಲ್ಲಿ ಜನಿಸಿ ಮರಾಠಿ ಮಾತೃ ಭಾಷೆ ಆದರೂ, ಮನೆ ಮಂದಿಗೆಲ್ಲ ಕನ್ನಡಕಲಿಸಿ, ವಿಜಾಪುರದ ಸಂಗಮ ಬಸವೇಶ್ವರ ಮಹಾ ವಿದ್ಯಾಲಯದಲ್ಲಿ ೪೦ ವರ್ಷ ಕನ್ನಡ ಪ್ರಧ್ಯಾಪಕರಾಗಿ ಸೇವೆಸಲ್ಲಿಸಿ ನಿವೃತ್ತರಾಗಿ ೨೦೦೫ರಲ್ಲಿ ಬೆಂಗಳೂರಿನಲ್ಲಿ ನಿಧನರಾದರು. ಸ್ವತಃ ಮರಾಠಿ ನಾಟಕಗಳಲ್ಲಿ ಆಸಕ್ತಿ ಹೊಂದಿದ್ದ ಅವರು ಮರಾಠಿ ನಾಟಕಗಳನ್ನು ರಚಿಸಿ ರಂಗಭೂಮಿಯಲ್ಲಿ ಆಡಿದರು. ಮರಾಠಿ ಸಾಹಿತ್ಯದಲ್ಲಿ ಚಿರಪರಿಚಿತರಾಗಿದ್ದರು. ಗಿರೀಶ್ ಕಾರ್ನಾಡರ ಯಯಾತಿ, ಕೈಲಾಸಂ ಅವರ ಕೀಚಕಗಳನ್ನು ಮರಾಠಿಗೆ ಅನುವಾದಿಸಿದ್ದಾರೆ. ನಿವೃತ್ತಿ ನಂತರ ಮನೆಯಲ್ಲಿ ತಮ್ಮ ಪತ್ನಿ ಶ್ರೀಮತಿ ಶಾಂತಾ ಅವರ ಸಹಕಾರದೊಂದಿಗೆ ಶ್ರೀರಂಗ ಪುಸ್ತಕ ಮಾಧ್ಯಮ ತೆರೆದು ಗಡಿ ಪ್ರದೇಶಗಳ ಕಾಲೇಜು, ಶಾಲೆಗಳಲ್ಲಿ ಕನ್ನಡದ ಪುಸ್ತಕ ಹೊತ್ತು ಮಾರಾಟ ಮಾಡಿದರು. ಇದು ಇಪ್ಪತ್ತೈದು ವರ್ಷಗಳ ಹಿಂದಿ ಕಥೆ, ಈಗ ಕನ್ನಡ ಪುಸ್ತಕಗಳು ಸುಳಿಯುವುದಿಲ್ಲ ಎನ್ನುತ್ತಾರೆ ಅಲ್ಲಮ ಜನರು. ೧೯೮೯ ಏಪ್ರಿಲ್ ತಿಂಗಳಲ್ಲಿ ಪುಣೆಯಲ್ಲಿ ಮರಾಠಿ ಕನ್ನಡ ಸ್ನೇಹವರ್ಧನ ಕೇಂದ್ರ ಸ್ಥಾಪನೆ ಆಗಿ ಭಾಷಾ ಸಾಹಿತ್ಯ, ಸಂಗೀತ ಕಲೆ ಅನುವಾದ ಮುಖಾಂತರ ಕನ್ನಡ ಮರಾಠಿ ಸಂಬಂಧವನ್ನು ವೃದ್ಧಿಸುವ ಉದ್ದೇಶ ಹೊಂದಿತ್ತು. ಕನ್ನಡ ಪುಸ್ತಕ ಮಾರಾಟ ಮತ್ತು ಕನ್ನಡ ಸ್ತ್ರೀ ಸಾಹಿತ್ಯದ ಬಗ್ಗೆ ಸಕಾಳ ದೈನಿಕದಲ್ಲಿ ಲೇಖನಗಳನ್ನು ಬರೆದಿದ್ದಾರೆ. ಅವರು ರಚಿಸಿದ ರಾಮಾಯಣ ಶಾಪ ಮತ್ತು ವರ (೧೯೮೭) ಮಹಾಭಾರತದಲ್ಲಿ ವರಗಳು ಮಹಾಭಾರತದಲ್ಲಿ ಅಲಕ್ಷಿತ ಕಥೆಗಳು. ರಾಮಾಯಣ-ಮಹಾಭಾರತ ಹೊಸ ಹಲಹು, ಮಹಾಭಾರತದಲ್ಲಿ ರಾಮಾಯಣದಲ್ಲಿ ಆತ್ಮಹತ್ಯೆ ಈ ಗ್ರಂಥಗಳು ಕನ್ನಡದಲ್ಲಿ ಅನುವಾದಿತವಾಗಿವೆ.
೧೯೯೧ರಲ್ಲಿ ಕರ್ನಾಟಕ ಮರಾಠಿ ಸಾಹಿತ್ಯ ಪರಿಷತ್ತಿನ ಪ್ರಥಮ ಸಾಹಿತ್ಯ ಸಮ್ಮೇಳನ ಗದುಗಿನಲ್ಲಿ ಜರುಗಿದಾಗ ಶ್ರೀ ಭಿಡೆ ಅವರು ಮುಂಬೈ ಕಾಲೇಜುಗಳಲ್ಲಿ ಕನ್ನಡ ಶಿಕ್ಷಣಕ್ಕೆ ಒದಗುತ್ತಿರುವ ಅನ್ಯಾಯಗಳನ್ನು ಕಟುವಾಗಿ ಮಂಡಿಸಿದರು. ಕರ್ನಾಟಕದಲ್ಲಿ ಮರಾಠಿ ವಿಭಾಗದ ಪ್ರಾಧ್ಯಾಪಕ ನಿವೃತ್ತನಾದರೂ ಸಹ ಹಿಂದಿನಿಂದ ನಡೆದು ಬಂದ ಮರಾಠಿ ವಿಭಾಗಗಳಲ್ಲಿ ಕೇವಲ ಒಂದೆರಡು ವಿದ್ಯಾರ್ಥಿಗಳಿದ್ದರೂ ವಿಭಾಗ ಮುಂದುವರಿದಾಗ ಮಹಾರಾಷ್ಟ್ರದಲ್ಲಿ ಕನ್ನಡಕ್ಕೆ ಮಲತಾಯಿ ಧೋರಣೆ ಏಕೆ? ಎಂದು ಪ್ರಶ್ನಿಸಿದ ದಿಟ್ಟತನ ತೋರಿದರು. ಹೀಗೆ ಮರಾಠಿ ಪ್ರಾಧ್ಯಾಪಕನೊಬ್ಬ ಕನ್ನಡ ಭಾಷೆ ಸಾಹಿತ್ಯಕ್ಕೆ ನೀಡಿದ ಸೇವೆ ತೋರಿದ ಒಲುಮೆ ಅಪೂರ್ವ ಅಪಾರ.
ಈ ರೀತಿ ಕನ್ನಡ ಮರಾಠಿ ಬಗ್ಗೆ ಸಾಹಿತ್ಯ ಸಂಸ್ಕೃತಿಗಳ ಸಂಬಂಧ ಪ್ರಾಚೀನ ಮತ್ತು ಹತ್ತಿರವಾದದ್ದು, ಇಷ್ಟಾದರೂ ಬೆಳಗಾವಿ ನನ್ನದು ಎನ್ನುವ ಮಹಾರಾಷ್ಟ್ರದವರ ಧೋರಣೆ ಕನ್ನಡಿಗರಿಗೆ ಸವಾಲಾಗಿದೆ. ಇತಿಹಾಸ ಭಾಷೆ ಅರಿವು ಇಟ್ಟುಕೊಂಡು ಕನ್ನಡಿಗರಲ್ಲಿ ಮರಾಠಿಗರಲ್ಲಿ ಸಾಮರಸ್ಯ ಬೆಳೆಯಬೇಕಾಗಿದೆ. ನಾವೆಲ್ಲ ಸಂಸ್ಕೃತಿವಂತರು ಎಂದು ತಿಳಿದು ಕನ್ನಡಿಗರ ತಾಳ್ಮೆಯನ್ನು ಪರೀಕ್ಷಿಸುವುದಕ್ಕೆ ಹೋಗಬಾರದು.

ಪ್ರೊ.ಸಂಗನಾಳಮಠ ಯು.ಎನ್.
ಉಪನ್ಯಾಸಕರು-ಲೇಖಕರು, ದಾವಣಗೆರೆ

ಹೊಗೇನಕಲ್‌ನಲ್ಲಿ ತಮಿಳು ಹೊಗೆ




ಹೊಗೇನಕಲ್ ಪ್ರದೇಶ ಕರ್ನಾಟಕದ್ದು. ಈ ಪ್ರದೇಶದಲ್ಲಿ ತಮಿಳುನಾಡು ಕ್ಯಾತೆಯನ್ನು ಬಿಜೆಪಿ ಖಂಡಿಸುತ್ತದೆ. ಬಿಜೆಪಿ ಸರ್ಕಾರ ಬಂದರೆ ಯಾವುದೇ ಕಾರಣಕ್ಕೂ ಕರ್ನಾಟಕದ ಒಂದಿಂಚು ನೆಲವನ್ನೂ, ರಾಜ್ಯದ ಪಾಲಿನ ಒಂದಿಷ್ಟು ನೀರನ್ನು ಅನ್ಯರ ಪಾಲಾಗಲು ಬಿಡುವುದಿಲ್ಲ. ಈವರೆಗೆ ಆಳಿದ ಕಾಂಗ್ರೆಸ್ ಹಾಗೂ ಜನತಾದಳ ಸರ್ಕಾರಗಳು ರಾಜ್ಯದ ಬಗ್ಗೆ ಕಾಳಜಿಯನ್ನೇ ವಹಿಸಿಲ್ಲ. ಇದರಿಂದ ರಾಜ್ಯಕ್ಕೆ ತೀವ್ರ ಅನ್ಯಾಯವಾಗಿದೆ
ಹೀಗೆ ಅಬ್ಬರಿಸಿದ್ದರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ. ಸರಿಯಾಗಿ ಎರಡು ವರ್ಷದ ಹಿಂದೆ ಇದು ನಡೆದಿದ್ದು. ತಮಿಳುನಾಡಿನ ಮುಖ್ಯಮಂತ್ರಿ ಕರುಣಾನಿಧಿ ಅವರು ಹೊಗೇನಕಲ್ ಯೋಜನೆಗೆ ಶಿಲಾನ್ಯಾಸ ಮಾಡಲು ಬರುತ್ತಾರೆಂಬ ಸುದ್ದಿಯ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದ ಕಾಲ. ಅಧಿಕಾರ ಹಸ್ತಾಂತರಿಸುವುದಾಗಿ ಹೇಳಿ ಕೈಕೊಟ್ಟಿದ್ದ ಕುಮಾರಸ್ವಾಮಿಯಿಂದಾದ ವಿಶ್ವಾಸದ್ರೋಹ ಮುಂದಿಟ್ಟುಕೊಂಡು ಹಾಲಿ ಮುಖ್ಯಮಂತ್ರಿ, ಆಗ ವಾರದ ಮುಖ್ಯಮಂತ್ರಿಯಾಗಿ ಮಾಜಿಯಾಗಿ ಅಧಿಕಾರಕ್ಕಾಗಿ ಪರದಾಡುತ್ತಿದ್ದ ಯಡಿಯೂರಪ್ಪ ಹೀಗೆ ಗುಡುಗಿದ್ದರು.
ಅದೂ ಚಾಮರಾಜನಗರಕ್ಕೆ ಹೊಂದಿಕೊಂಡಂತಿರುವ ಹೊಗೇನಕಲ್ ಪ್ರದೇಶಕ್ಕೆ ತೆರಳಿ ಅಲ್ಲಿಯೇ ಮಾಧ್ಯಮದವರ ಬಳಿ ಮಾತನಾಡಿದ್ದರು. ಹೊಗೇನಕಲ್‌ನ ನೀರಿನ ಪ್ರದೇಶದಲ್ಲಿ ಉಕ್ಕಡದ ಮೇಲೆ ಕುಳಿತು ಓಡಾಡಿ ಕರ್ನಾಟಕದ ಪ್ರದೇಶವನ್ನು ಉಳಿಸುವ ಪಣ ತೊಟ್ಟಿದ್ದರು. ತಾವು ಮಾತ್ರ ಕರ್ನಾಟಕದ ಪಾಲನ್ನು ಉಳಿಸುವ ಧೀರರು ಎಂದು ಫೋಸು ಕೊಟ್ಟಿದ್ದರು.
ಅದೆಲ್ಲಾ ಆಗಿ ಈಗ್ಗೆ ಎರಡು ವರ್ಷ. ೨೦೦೮ರ ಮೇ ನಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಬಹುಮತದಿಂದ ಆರಿಸಿ ಬಂತು. ಯಡಿಯೂರಪ್ಪ ಮುಖ್ಯಮಂತ್ರಿಯೂ ಆದರು. ಅವರ ಜತೆಗಿದ್ದ ಈಶ್ವರಪ್ಪ ಒಂದುವರ್ಷ ಇಂಧನ ಸಚಿವರೂ ಆಗಿದ್ದರು. ಆದರೆ ಈ ಇಬ್ಬರೂ ಈ ಬಗ್ಗೆ ಚಕಾರವೆತ್ತಲೇ ಇಲ್ಲ. ತಾವಾಯ್ತು ತಮ್ಮ ಪಾಡಾಯಿತು ಎಂದು ಹಾಗೆ ಇದ್ದು ಬಿಟ್ಟರು. ಹೊಗೇನಕಲ್‌ನಲ್ಲಿ ಗುಡುಗಿದ ಶಬ್ದವಷ್ಟೇ ಕರ್ನಾಟಕದ ಜನತೆಗೆ ಕೇಳಲು ಸಿಕ್ಕಿತು. ಅದು ಬಿಟ್ಟರೆ ಮತ್ತೇನೂ ಆಗಲೇ ಇಲ್ಲ. ಹೊಗೇನಕಲ್ ಕೂಡ.
ಕಾಲ ಎಲ್ಲವನ್ನೂ ಮರೆಸುತ್ತದೆಯಂತೆ. ಕರ್ನಾಟಕದ ಸಜ್ಜನರೂ ಕೂಡ ಯಡಿಯೂರಪ್ಪ-ಈಶ್ವರಪ್ಪ ಗುಡುಗಿದ್ದನ್ನೂ ಮರೆತರು. ಹೀಗೆ ಅಧಿಕಾರ ಮಾಡಿದರೆ ಮುಂದಿನ ಚುನಾವಣೆ ಹೊತ್ತಿಗೆ ಕರ್ನಾಟಕದ ಜನ ಯಡಿಯೂರಪ್ಪನವರನ್ನು, ಬಿಜೆಪಿಯವರನ್ನು ಮರೆಯುವ ದಿನ ದೂರವಿಲ್ಲ. ಅದನ್ನು ಬಿಜೆಪಿ ನೆನಪಿಟ್ಟುಕೊಳ್ಳಬೇಕು.

ಏನಿದು ಹೊಗೇನಕಲ್?
ಕಳಸಾಬಂಡೂರಿ, ಮಹದಾಯಿ ನೀರಿನಲ್ಲಿ ಕರ್ನಾಟಕದ ಪಾಲಿನ ಬಗ್ಗೆ ತಲೆ ಕೆಡಿಸಿಕೊಳ್ಳದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಕಾರ್ಯಸಾಧುವಲ್ಲದ ದಂಡಾವತಿ ಯೋಜನೆ ಬಗ್ಗೆ ಸಿಕ್ಕಾಪಟ್ಟೆ ಚಿಂತೆ ಮಾಡುತ್ತಿದೆ. ಅದಕ್ಕೇ ಹೇಳೋದು ಅದಲ್ಲ ಕಣೋ ದಾಸಯ್ಯ ಅಂದ್ರೆ ಗುಡಿ ಮುಂದೆ ಹೋಗಿ ಟಿಂಗ್ ಅಂದಿದ್ನಂತೆ ಎಂದು.
ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರ ಮೇಲಿನ ದ್ವೇಷಕ್ಕೆ ಸೊರಬ ಅಥವಾ ಶಿವಮೊಗ್ಗ ಜಿಲ್ಲೆಗೆ ಪ್ರಯೋಜನವಾಗದ ಅಥವಾ ಸ್ವತಃ ಯಡಿಯೂರಪ್ಪನವರ ಸ್ವಕ್ಷೇತ್ರ ಶಿಕಾರಿಪುರಕ್ಕೂ ಲಾಭ ತಾರದ ದಂಡಾವತಿ ಯೋಜನೆ ಬಗ್ಗೆ ಯಡಿಯೂರಪ್ಪ, ಅವರ ಸಂಪುಟದ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ತೀವ್ರ ಉತ್ಸುಕರಾಗಿದ್ದಾರೆ. ಆದರೆ ಕರ್ನಾಟಕದ ಸ್ವಾಭಿಮಾನವನ್ನು ಪದೇ ಪದೇ ಕೆಣಕುತ್ತಿರುವ ಹೊಗೇನಕಲ್ ಯೋಜನೆ ಬಗ್ಗೆ ಸ್ಮಶಾನ ಮೌನ ತಾಳಿದ್ದಾರೆ. ಇದನ್ನು ನಾಡಿನ ದುರ್ವಿಧಿಯೆನ್ನಬೇಕೋ? ತಮಿಳುನಾಡು ಪಾಲಿನ ಸುಯೋಗ ಎನ್ನಬೇಕೋ ಗೊತ್ತಿಲ್ಲ.
ಹೊಗೇನಕಲ್ ತಮಿಳುನಾಡು ಹಾಗೂ ಕರ್ನಾಟಕದ ಗಡಿಭಾಗದಲ್ಲಿರುವ ಪ್ರದೇಶ. ಇಲ್ಲೊಂದು ಸುಂದರ ಜಲಪಾತ ಹಾಗೂ ನಡುಗಡ್ಡೆಯಿದೆ. ಇಲ್ಲಿಂದ ಧರ್ಮಪುರಿ ಹಾಗೂ ಕೃಷ್ಣಗಿರಿ ಜಿಲ್ಲೆಗೆ ಕುಡಿಯುವ ನೀರು ಒದಗಿಸಲು ತಮಿಳು ನಾಡು ಸರ್ಕಾರ ೧೯೯೮ರಲ್ಲೇ ಮುಂದಾಯಿತು. ಆಗ ಮುಖ್ಯಮಂತ್ರಿಯಾಗಿದ್ದ ಜೆ.ಎಚ್. ಪಟೇಲರು ೧.೪ ಟಿ.ಎಂ.ಸಿ. ನೀರನ್ನು ಕುಡಿಯುವ ನೀರಿಗಾಗಿ ಬಳಸಲು ಒಪ್ಪಿಗೆ ನೀಡಿ ಒಪ್ಪಂದವನ್ನೂ ಮಾಡಿಕೊಂಡಿದ್ದರು.
೨೦೦೭ರಲ್ಲಿ ಮತ್ತೆ ಈ ಯೋಜನೆಗೆ ಮರುರೂಪುಕೊಟ್ಟ ತಮಿಳುನಾಡು ಸರ್ಕಾರ ಯೋಜನೆಯನ್ನು ಇನ್ನಷ್ಟು ವಿಸ್ತರಿಸಲು ಮುಂದಾಯಿತು. ಆಗ ಕರ್ನಾಟಕದ ವಿವಿಧ ಕನ್ನಡ ಪರ ಸಂಘಟನೆಗಳು, ಸರ್ಕಾರ ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದವು. ಆಗ ಯೋಜನೆಯ ಪ್ರಸ್ತಾಪವನ್ನು ನೆನೆಗುದಿಗೆ ಬಿಟ್ಟ ತಮಿಳುನಾಡು ಸರ್ಕಾರ ಯೋಜನೆಯನ್ನು ಮರೆಯುವಂತೆ ಮಾಡಿತು.

ತೆರೆಮರೆಯಲ್ಲಿ
ಆದರೆ ತಮಿಳುನಾಡು ಸರ್ಕಾರ ಸುಮ್ಮನೇ ಕೂರಲಿಲ್ಲ. ಕೇಂದ್ರದಲ್ಲಿ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ ಪಾಲು ಪಡೆದ ಡಿಎಂಕೆ ಪಕ್ಷ ತನ್ನ ಪ್ರಾಬಲ್ಯವನ್ನು ಬಳಸಿ ಯೋಜನೆ ಅನುಷ್ಠಾನಕ್ಕೆ ಮುಂದಾಯಿತು. ಕಾವೇರಿ ನದಿಪಾತ್ರದಲ್ಲಿ ಯಾವುದೇ ಹೊಸ ಯೋಜನೆಯನ್ನು ಅನುಷ್ಠಾನಗೊಳಿಸಬೇಕಾದರೂ ಕಾವೇರಿ ನ್ಯಾಯಾಧಿಕರಣದ ಅನುಮೋದನೆ ಪಡೆಯಬೇಕಾಗಿತ್ತು. ಅದರ ಗೋಜಿಗೆ ಹೋದರೆ ಕರ್ನಾಟಕ ಸರ್ಕಾರ ಹಾಗೂ ನ್ಯಾಯಾಧಿಕರಣದ ತಕರಾರನ್ನು ಎದುರಿಸುವುದು ಕಷ್ಟವೆಂದರಿತ ತಮಿಳುನಾಡು ಸರ್ಕಾರ ಆ ಪ್ರಕ್ರಿಯೆಯನ್ನು ಮಾಡಲೇ ಇಲ್ಲ.
ಸದರಿ ಯೋಜನೆಗೆ ಮರುರೂಪ ಕೊಟ್ಟು ಅನುಷ್ಠಾನ ಮಾಡಲು ಮುಂದಾಯಿತು. ಕರ್ನಾಟಕದ ಆಗಿನ ಮುಖ್ಯಮಂತ್ರಿ ಜೆ.ಎಚ್. ಪಟೇಲರ ಜತೆ ಮಾಡಿಕೊಂಡ ಒಪ್ಪಂದ ಅನ್ವಯ ಧರ್ಮಪುರಿ ಹಾಗೂ ಕೃಷ್ಣಗಿರಿ ಜಿಲ್ಲೆಗೆ ಕುಡಿಯುವ ನೀರು ಒದಗಿಸಲು ೧.೪ ಟಿ.ಎಂ.ಸಿ. ನೀರನ್ನು ಬಳಸಿಕೊಳ್ಳಲು ತಮಿಳುನಾಡಿಗೆ ಅವಕಾಶವಿತ್ತು.
ಆದರೆ ಆ ಒಪ್ಪಂದವನ್ನು ಮುರಿದ ತಮಿಳುನಾಡು ಸರ್ಕಾರ ಧರ್ಮಪುರಿ, ಕೃಷ್ಣಗಿರಿಗೆ ಕುಡಿಯುವ ನೀರಲ್ಲದೇ ಹೊಸೂರು ಜಿಲ್ಲೆ, ಪಾಳಕ್ಕಾರ್, ಮರಂಡಳ್ಳಿ, ರಾಯಕೋಟೈ ಹಾಗೂ ಪೆನ್ನಾಗರಂಗೆ ನೀರು ಒದಗಿಸುವ ಯೋಜನೆಯನ್ನು ಜತೆ ಸೇರಿಸಿಕೊಂಡಿತು. ಅಲ್ಲಿಗೆ ೧.೪ ಟಿ.ಎಂ.ಸಿ. ನೀರಿನ ಬದಲಾಗಿ ೨.೧ ಟಿ.ಎಂ.ಸಿ. ನೀರನ್ನು ಬಳಸಿಕೊಳ್ಳುವ ಸಂಚು ರೂಪಿಸಿತು. ಅದಕ್ಕಾಗಿ ೧೫೦೦ ಕೋಟಿ ರೂ.ಗಳ ವೆಚ್ಚವನ್ನು ನಿಗದಿ ಮಾಡಿತು. ಈ ಮೊತ್ತದಲ್ಲಿ ೪೦೦ ಕೋಟಿ ರೂ. ಏಷಿಯನ್ ಡೆವಲಪ್‌ಮೆಂಟ್ ಬ್ಯಾಂಕ್‌ನ ಸಾಲದ ರೂಪದಲ್ಲಿತ್ತು.
ಆದರೆ ಏಷಿಯನ್ ಡೆವಲಪ್‌ಮೆಂಟ್ ಬ್ಯಾಂಕ್‌ನಿಂದ ಪಡೆಯುವ ಸಾಲಕ್ಕೆ ಕೇಂದ್ರ ಸರ್ಕಾರ ಗ್ಯಾರಂಟಿ ಹಾಕಬೇಕಿತ್ತು. ಅದನ್ನು ಮಾಡದಿದ್ದರೆ ಜಪಾನ್ ಬ್ಯಾಂಕ್‌ನಿಂದ ಸಾಲ ಲಭ್ಯವಾಗುತ್ತಿರಲಿಲ್ಲ. ಕೇಂದ್ರದಲ್ಲಿ ಸಚಿವರಾಗಿರುವ ಕರುಣಾನಿಧಿ ಪುತ್ರ ಅಳಗಿರಿ, ಕನಿಮೋಳಿ ಸೇರಿದಂತೆ ತಮಿಳುನಾಡು ಸಂಸದರೆಲ್ಲರೂ ಕೇಂದ್ರದ ಮೇಲೆ ಒತ್ತಡ ತಂದು ಜಪಾನ್ ಸಾಲಕ್ಕೆ ಕೇಂದ್ರ ಗ್ಯಾರಂಟಿ ಹಾಕುವಂತೆ ಮಾಡಿದರು. ತಮಿಳು ಸಂಸದರು ಎಲ್ಲವನ್ನೂ ರಾಜ್ಯದ ಪರ ಕಾಳಜಿಯಿಂದ ನಡೆಸಿಕೊಟ್ಟರು.
ಇಷ್ಟರಮೇಲೆ ಹೊಗೇನಕಲ್‌ನಲ್ಲಿ ನೀರಾವರಿ ಯೋಜನೆ ಅನುಷ್ಠಾನ ಮಾಡುವುದೊಂದು ಬಾಕಿಯಿತ್ತು. ಈಗಾಗಲೇ ಈ ಕಾಮಗಾರಿಗೆ ಎಲ್ಲಾ ಸಿದ್ಧತೆ ಮಾಡಿಕೊಂಡಿರುವ ತಮಿಳುನಾಡು ಸರ್ಕಾರ ದಿನಾಂಕವನ್ನು ನಿಗದಿ ಮಾಡಿಲ್ಲ. ತಮಿಳುನಾಡು ಉಪಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಇತ್ತೀಚೆಗೆ ಮಾಧ್ಯಮದವರ ಜತೆ ಮಾತನಾಡುತ್ತಾ, ಹೊಗೇನಕಲ್ ತಮಿಳುನಾಡಿಗೆ ಸೇರಿದ್ದು, ಅಲ್ಲಿ ನೀರಾವರಿ ಯೋಜನೆ ರೂಪಿಸಲು ಯಾರು ತಕರಾರು ಮಾಡುವ ಪ್ರಶ್ನೆಯೇ ಇಲ್ಲ. ರಾಜ್ಯದ ನೀರಿನ ಪಾಲನ್ನು ಸಮರ್ಪಕವಾಗಿ ಬಳಸಿಕೊಂಡು ಧರ್ಮಪುರಿ ಹಾಗೂ ಕೃಷ್ಣಂ ಜಿಲ್ಲೆಗೆ ನೀರುಣಿಸಲಾಗುವುದು. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಘೋಷಿಸಿದ್ದಾರೆ.
ಅಲ್ಲಿಗೆ ಹೊಗೇನಕಲ್‌ನಲ್ಲಿ ತಮಿಳುನಾಡು ಸರ್ಕಾರ ಯೋಜನೆ ಜಾರಿಗೊಳಿಸುವುದು ನಿಶ್ಚಿತವಾಗಿದೆ. ಅಲ್ಲದೇ ಈ ಪ್ರದೇಶವನ್ನು ಅದು ತಮ್ಮದು ಎಂದು ನಿರ್ಧರಿಸಿಬಿಟ್ಟಿದೆ.

ಪ್ರವಾಸೋದ್ಯಮ
ಇಷ್ಟರಮಧ್ಯೆಯೇ ಹೊಗೇನಕಲ್‌ನ ಜಲಪಾತ, ಸುಂದರ ಅರಣ್ಯ ಪ್ರದೇಶದಲ್ಲಿ ತಮಿಳುನಾಡಿನ ಪ್ರವಾಸೋದ್ಯಮ ಇಲಾಖೆ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಮುಂದಾಗಿದೆ.
ತಮಿಳುನಾಡು ಪ್ರವಾಸೋದ್ಯಮ ಇಲಾಖೆ ಪ್ರಕಟಿಸಿದ ಪ್ರವಾಸೋದ್ಯಮ ಇಲಾಖೆಯ ಕೈಪಿಡಿಯಲ್ಲಿ ಹೊಗೇನಕಲ್‌ನ್ನು ಒಂದು ಪ್ರವಾಸಿ ತಾಣವಾಗಿ ಘೋಷಿಸಲಾಗಿದೆ. ಅಲ್ಲಿನ ಆಕರ್ಷಕ ಜಲಪಾತದ ಚಿತ್ರವನ್ನು ಬ್ರೋಚರ್‌ನಲ್ಲಿ ಮುದ್ರಿಸಲಾಗಿದೆ. ಜಲಪಾತದ ಕೆಳಭಾಗದ ನಡುಗಡ್ಡೆಯಲ್ಲಿ ದೋಣಿ ವಿಹಾರ, ವಾಸಿಸಲು ಆಕರ್ಷಕ ಲಾಡ್ಜಿಂಗ್, ಅರಣ್ಯ ಪ್ರದೇಶ ಸುತ್ತಲು ಅವಕಾಶವಿರುವ ಪ್ಯಾಕೇಜ್ನ್ನು ರೂಪಿಸಿದೆ. ಅಲ್ಲಿ ಕಟ್ಟಡಗಳನ್ನು ಈಗಾಗಲೇ ಕಟ್ಟಿರುವ ತಮಿಳುನಾಡು ಪ್ರವಾಸೋದ್ಯಮ ಇಲಾಖೆ ಅಲ್ಲಿ ಆದ್ಯತೆ ಮೇರೆಗೆ ಅಭಿವೃದ್ಧಿ ಮಾಡುತ್ತಿದೆ.
ಕರ್ನಾಟಕಕ್ಕೆ ಸೇರುವ ಪ್ರದೇಶದಲ್ಲಿ ಸೇತುವೆಯೊಂದನ್ನು ತಮಿಳುನಾಡು ಸರ್ಕಾರ ನಿರ್ಮಿಸಿದೆ. ಅಲ್ಲಿ ಓಡಾಡುವ ವಾಹನಗಳಿಂದ ನಿಗದಿತ ಶುಲ್ಕವನ್ನು ವಸೂಲು ಮಾಡುತ್ತಿದೆ. ಆದರೆ ಅದರ ಚಿಕ್ಕಾಸು ಕರ್ನಾಟಕಕ್ಕೆ ದೊರೆಯುತ್ತಿಲ್ಲ.

ಹಾಗಿದ್ದರೆ ಹೊಗೇನಕಲ್ ಪ್ರದೇಶ ತಮಿಳುನಾಡಿಗೆ ಸೇರಿದ್ದೇ ಎಂಬ ಪ್ರಶ್ನೆಗೆ ಖಡಾಖಂಡಿತವಾಗಿಯೂ ಇಲ್ಲ ಎಂಬುದೇ ಉತ್ತರ. ಈ ಜಾಗ ಯಾರದ್ದೆಂಬುದು ಇನ್ನೂ ಇತ್ಯರ್ಥವಾಗಬೇಕಾದ ಸಂಗತಿಯಾಗಿದೆ. ಸತ್ಯ ಮರೆಯಾಗಿರುವಾಗ ಈ ಜಾಗವನ್ನು ತಮ್ಮದೆಂದು ಪ್ರತಿಪಾದಿಸಿ, ಅಲ್ಲಿ ಬೇಕಾಬಿಟ್ಟಿ ಕಾಮಗಾರಿ ಮಾಡುವುದು ತಮಿಳುನಾಡಿನ ಆಕ್ರಮಣಕಾರಿ ದುರ್ವರ್ತನೆಗೆ ಸಾಕ್ಷಿ.
ಹೊಗೇನಕಲ್ ವ್ಯಾಪ್ತಿಯಲ್ಲಿ ೬೫ ಕಿ.ಮೀ. ದೂರ ಕರ್ನಾಟಕ ಹಾಗೂ ತಮಿಳುನಾಡಿನ ಗಡಿಭಾಗವಿದೆ. ಇಲ್ಲಿ ಯಾವ ಪ್ರದೇಶ ಕರ್ನಾಟಕದ್ದು, ಯಾವ ಭಾಗ ತಮಿಳುನಾಡಿನದ್ದು ಎಂಬುದು ಇನ್ನೂ ಗೊಂದಲವಿದೆ. ಯಾಕೆಂದರೆ ಬಹುತೇಕ ಭಾಗ ಅರಣ್ಯಪ್ರದೇಶವಾಗಿದ್ದು, ಆಸುಪಾಸು ವಾಸಿಸುವ ಜನ ಕನ್ನಡ-ತಮಿಳು ಎರಡನ್ನೂ ಬಲ್ಲವರಾಗಿದ್ದಾರೆ. ಗಡಿ ತಂಟೆ ವಿವಾದ ಭುಗಿಲೇಳಬೇಕಾದರೆ ಅದನ್ನು ಪ್ರತಿಪಾದಿಸಲು ಬೇಕಾದ ಯಾವುದೇ ಒಂದು ಭಾಷೆಗೆ ಸೇರಿದ ಸಮುದಾಯ ಈ ಗಡಿಭಾಗದುದ್ದಕ್ಕೂ ಇಲ್ಲ. ಇಲ್ಲದಿದ್ದರೆ ಇಷ್ಟೊತ್ತಿಗೆ ಇದು ಮತ್ತೊಂದು ಬೆಳಗಾವಿ, ಕಾಸರಗೋಡು ವಿವಾದದಂತಾಗುತ್ತಿತ್ತು.
ಭಾಷಾವಾರು ಪ್ರಾಂತ್ಯ ವಿಂಗಡಣೆ ಸಮಯದಲ್ಲೂ ಈ ಭಾಗ ಯಾರಿಗೆ ಸೇರಿದ್ದೆಂಬುದು ಕರಾರುವಾಕ್ಕಾಗಿ ನಿಷ್ಕರ್ಷೆಯಾಗಿಲ್ಲ. ಆದರೆ ಈವರೆಗೆ ಎಲ್ಲರೂ ಸಮ್ಮತಿಸಿರುವ ಬ್ರಿಟಿಷರ ಕಾಲದ ಭೂನಕಾಶೆಯನ್ನೇ ಈಗ ಸದ್ಯಕ್ಕಿರುವ ನಂಬಲಾರ್ಹ ದಾಖಲಾತಿ ಎಂದು ಹೇಳಲಾಗಿದೆ.
ಬ್ರಿಟಿಷ್ ಅಧಿಕಾರಿಗಳು ಆ ಕಾಲದಲ್ಲೇ ಕಾಡು ಮೇಡು ಸುತ್ತಾಡಿ, ದಟ್ಟ ಅರಣ್ಯಗಳಲ್ಲಿ ನಿರ್ಭಯವಾಗಿ ಸಂಚರಿಸಿ, ಇಂಚಿಂಚೂ ಭಾಗವನ್ನು ಅಳತೆ ಮಾಡಿದ್ದರು. ಯಾವ ಗುಡ್ಡ, ಯಾವ ನದಿ, ಯಾವ ಹಳ್ಳ, ಯಾವ ಬೆಟ್ಟ ಎಲ್ಲಿ ಬರುತ್ತದೆ. ಅದರ ಹೆಸರೇನು, ಅದು ಯಾವ ದಿಕ್ಕಿಗೆ ಇದೆ ಎಂಬುದನ್ನು ಗುರುತಿಸಿಕೊಂಡು ಕರಾರುವಕ್ ನಕ್ಷೆ ತಯಾರಿಸಿದ್ದರು. ಅಲ್ಲದೇ ತಾವು ಗುರುತಿಸಿದ ಗಡಿ ಭಾಗದಲ್ಲಿ ಬಾಂದ್‌ಗಳನ್ನು ನೆಟ್ಟಿದ್ದರು. ಅವೇ ಈಗಲೂ ಎಲ್ಲಾ ರಾಜ್ಯಗಳ ಗಡಿ ನಿಷ್ಕರ್ಷೆಗೆ ಆಧಾರ.
ಈ ನಕಾಶೆಯನ್ವಯ ಹೊಗೇನಕಲ್ ಪ್ರದೇಶ ಕರ್ನಾಟಕಕ್ಕೆ ಸೇರಿದ್ದೆಂದು ತಜ್ಞರು ಪ್ರತಿಪಾದಿಸುತ್ತಿದ್ದಾರೆ. ಆದರೆ ತಮಿಳುನಾಡು ಸರ್ಕಾರ ಇದನ್ನು ಸುತರಾಂ ಒಪ್ಪುತ್ತಿಲ್ಲ. ಈ ಭಾಗ ತಮ್ಮದೇ ಎಂದು ಅದು ಹಠಕ್ಕೆ ಕೂತಿದೆ.
ಇರುವ ದಾಖಲೆಯನ್ನು ಒಪ್ಪುವುದಿಲ್ಲವೆಂದ ಮೇಲೆ ಹೊಸ ಸಮೀಕ್ಷೆ ಮಾಡಲಾದರೂ ಕೇಂದ್ರಸರ್ಕಾರವನ್ನು ತಮಿಳುನಾಡು ಸರ್ಕಾರ ಒತ್ತಾಯಿಸಬೇಕು. ತಮಿಳುನಾಡಿಗಾದರೂ ಲಾಭವಾಗಿದೆ. ಅದಕ್ಕೆ ಸಮೀಕ್ಷೆ ಬೇಕಿಲ್ಲ. ಆದರೆ ನಮ್ಮ ರಾಜ್ಯದ ನಮ್ಮನ್ನು ಆಳುವ ಪ್ರಭೃತಿಗಳಿಗೆ ಏನಾಗಿದೆ. ಕಿಂಚಿತ್ತೂ ರಾಜ್ಯದ ಪರ ಕಾಳಜಿಯಿಲ್ಲದಂತೆ ವರ್ತಿಸುತ್ತಿರುವ ಸರ್ಕಾರಕ್ಕಂತೂ ನಾಚಿಕೆಯೇ ಇಲ್ಲವಾಗಿದೆ.
ತಮಿಳುನಾಡು ಅಕ್ರಮ ಕಾಮಗಾರಿ ಮಾಡುತ್ತಿದೆ ಎಂದು ಗೊತ್ತಾದ ಮೇಲಾದರೂ ರಾಜ್ಯ ಸರ್ಕಾರವು ಕೇಂದ್ರದ ಮೇಲೆ ಹಾಗೂ ಕಾವೇರಿ ನ್ಯಾಯಾಧೀಕರಣದ ಮೇಲೆ ಒತ್ತಡ ತರಬೇಕಿತ್ತು. ಆ ಕೆಲಸವನ್ನು ಇವತ್ತಿಗೂ ಮಾಡಿಲ್ಲ. ಕಾನೂನು ಸಚಿವ ಸುರೇಶಕುಮಾರ್‌ಗಾಗಲಿ, ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಅವರಿಗಾಗಲಿ ಇದು ಬೇಕಾಗಿಲ್ಲ. ರಾಜ್ಯದ ಬಗ್ಗೆ ಗಟ್ಟಿಧ್ವನಿಯಲ್ಲಿ ಮಾತನಾಡುವ ಮುಖ್ಯಮಂತ್ರಿ ಯಡಿಯೂರಪ್ಪನವರಾದರೂ ಇದರ ಬಗ್ಗೆ ಮಾತನಾಡಬೇಕಿತ್ತು. ಅವರು ರಾಜ್ಯದ ಅಭಿವೃದ್ಧಿಯಲ್ಲಿ ತನ್ಮಯರಾಗಿರುವುದರಿಂದ ಅವರಿಗೆ ಪುರುಸೊತ್ತಿಲ್ಲ.
ಇದು ಸದ್ಯದ ವಾಸ್ತವ. ಇನ್ನಾದರೂ ರಾಜ್ಯ ಸರ್ಕಾರ ಹೊಗೇನಕಲ್‌ನಲ್ಲಿ ತಮಿಳುನಾಡು ಸರ್ಕಾರ ನಡೆಸುತ್ತಿರುವ ಕಾಮಗಾರಿಯನ್ನು ನಿಲ್ಲಿಸಲು ಕೇಂದ್ರದ ಮೇಲೆ ಒತ್ತಡ ಹೇರಬೇಕು. ಆಗಾಗ ರಾಜ್ಯದ ಕಾಂಗ್ರೆಸ್-ಜೆಡಿ ಎಸ್ ನಾಯಕರನ್ನು ತರಾಟೆಗೆ ತೆಗೆದುಕೊಳ್ಳಲು ತಮ್ಮ ಸಮಯವನ್ನು ವ್ಯಯಿಸುತ್ತಿರುವ ಕರ್ನಾಟಕದ ದೆಹಲಿ ಪ್ರತಿನಿಧಿ, ಸಚಿವ ಸ್ಥಾನಮಾನ ಹೊಂದಿರುವ ಧನಂಜಯಕುಮಾರ್ ಈಗಲಾದರೂ ತಮ್ಮ ಗೈರತ್ತು ತೋರಬೇಕು. ಕೈಯಲ್ಲಿ ಎಲೆಹಿಡಿದು ಆಟವಾಡುವುದನ್ನು ನಿಲ್ಲಿಸಿ, ದಾಖಲೆಗಳನ್ನು ಕೈಯಲ್ಲಿ ಹಿಡಿದು ದೆಹಲಿಯಲ್ಲಿ ಓಡಾಡಬೇಕು.
ಯುವಕರನ್ನು ಗೆಲ್ಲಿಸಿ, ದೆಹಲಿಯಲ್ಲಿ ರಾಜ್ಯದ ಧ್ವನಿ ಮೊಳಗಿಸುವೆ ಎಂದು ಲೋಕಸಭೆ ಚುನಾವಣೆಯಲ್ಲಿ ಯಡಿಯೂರಪ್ಪ ರಾಜ್ಯದ ಜನರ ಮುಂದೆ ಅಲವತ್ತು ಕೊಂಡಿದ್ದರು. ಶಿವಮೊಗ್ಗದಿಂದ ಅವರ ಮಗ ಬಿ.ವೈ.ರಾಘವೇಂದ್ರ, ಚಿತ್ರದುರ್ಗದಿಂದ ಜನಾರ್ದನಸ್ವಾಮಿ, ಮಂಗಳೂರಿನಿಂದ ನಳಿನಕುಮಾರ ಕಟೀಲು, ಗದಗದಿಂದ ಶಿವಕುಮಾರ ಉದಾಸಿ, ಬಾಗಲಕೋಟೆಯಿಂದ ಸುರೇಶ ಕತ್ತಿ, ಬಳ್ಳಾರಿಯಿಂದ ಶಾಂತ, ಬೆಂಗಳೂರು ಕೇಂದ್ರದಿಂದ ಪಿ.ಸಿ. ಮೋಹನ್ ಹೀಗೆ ಹತ್ತಾರು ಮಂದಿ ಯುವ ಸಂಸದರನ್ನೇ ಬಿಜೆಪಿಯಿಂದ ಜನ ಆರಿಸಿದ್ದರು. ಆದರೆ ಅವರೆಲ್ಲಾ ಎಲ್ಲಿ ಹೋದರು? ಯುವಪಡೆಯೂ ಅವರ ಪಕ್ಷದ ಮಹಾನ್ ನಾಯಕ ಶ್ರೀಮಾನ್ ವಾಜಪೇಯಿಯವರಂತೆ ಮಲಗಿದರೆ?
ಅವರೆಲ್ಲಾ ಹೋಗಲಿ. ಉತ್ತಮ ಸಂಸದೀಯ ಪಟುಗಳೆಂದು, ರಾಜ್ಯದ ಹಿತ ಕಾಪಾಡುವುದು ತಮ್ಮಿಂದ ಮಾತ್ರ ಸಾಧ್ಯವೆಂದು ಬೊಬ್ಬಿರಿಯುವ ಅನಂತಕುಮಾರ್, ಡಿ.ವಿ. ಸದಾನಂದಗೌಡ, ಡಿ.ಬಿ. ಚಂದ್ರೇಗೌಡ ಇಂತಹ ನಾಯಕರಿಗೆಲ್ಲಾ ಏನಾಗಿದೆ. ಇವರಾದರೂ ಕರ್ನಾಟಕದ ಪರವಾಗಿ ಧ್ವನಿಯೆತ್ತಬೇಡವೆ? ರಾಜ್ಯ ಸರ್ಕಾರ ಬಲಿಷ್ಠವಾಗಿರುವಾಗ ಎಲ್ಲಾ ಸಂಸದರನ್ನೂ ಒಗ್ಗೂಡಿಸಿ ಹೊಗೇನಕಲ್‌ನಲ್ಲಿ ಕರ್ನಾಟಕದ ಅಸ್ತಿತ್ವವನ್ನು ಸ್ಥಾಪಿಸುವುದು ಯಾಕೆ ಸಾಧ್ಯವಾಗದು?

ಕಾಂಗ್ರೆಸ್-ಜೆಡಿಎಸ್ ಕತೆ
ಕಾಂಗ್ರೆಸ್ ಕತೆ ಕೂಡ ಇದಕ್ಕಿಂತ ಭಿನ್ನವಾಗಿಲ್ಲ. ನಾಲ್ಕು ಜನ ಪ್ರಭಾವಿ ಸಚಿವರು ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದಾರೆ. ಅದರಲ್ಲೂ ಕಾನೂನು ಮತ್ತು ವಿದೇಶಾಂಗ ಖಾತೆ ಹಿಂದೆ ಕರ್ನಾಟಕದಲ್ಲಿ ಮುಖ್ಯಮಂತ್ರಿಗಳಾಗಿದ್ದ ವೀರಪ್ಪ ಮೊಯಿಲಿ ಹಾಗೂ ಎಸ್.ಎಂ. ಕೃಷ್ಣ ಅವರ ಬಳಿಯೇ ಇದೆ. ಕೃಷ್ಣ ಅವರಂತೂ ವಿದೇಶ ಸುತ್ತಾಟದಲ್ಲೆ ಬ್ಯುಸಿಯಾಗಿದ್ದಾರೆ.
ಆದರೆ ಮೊಯಿಲಿ ಸಾಹೇಬರ ಕೈಯಲ್ಲಿ ಎಲ್ಲವೂ ಇದೆ. ಕಾನೂನು ಖಾತೆಯೇ ಅವರ ಬಳಿ ಇರುವುದರಿಂದ ಅವರು ಏನು ಬೇಕಾದರೂ ಮಾಡಬಲ್ಲರು. ಆ ಇಚ್ಛಾಶಕ್ತಿಯನ್ನು ಮೊಯಿಲಿ ತೋರಬೇಕು.
ಇನ್ನು ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್, ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದಾರೆ. ಸಂಸತ್‌ನಲ್ಲಿ ರಾಜ್ಯದ ಪರವಾಗಿ ಧ್ವನಿ ಎತ್ತುವ ಗೈರತ್ತು ಇಲ್ಲವೆಂದ ಮೇಲೆ ಇವರು ಸಂಸದರಾಗಿ, ಸಚಿವರಾಗಿ ಇದ್ದರೆಷ್ಟು ಬಿಟ್ಟರೆಷ್ಟು ಎಂದು ಜನ ಕೇಳಬೇಕಾಗಿದೆ.
ಜೆಡಿಎಸ್ ಪಾಳೆಯ ಕೂಡ ಕಡಿಮೆಯೇನಿಲ್ಲ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಚಿವ ಚೆಲುವರಾಯಸ್ವಾಮಿ ರಾಜ್ಯವನ್ನು ಪ್ರತಿನಿಧಿಸುತ್ತಿದ್ದಾರೆ. ಸಂಸದರೆಂದರೆ ಕರ್ನಾಟಕದಲ್ಲಿ ರಾಜಕಾರಣ ಮಾಡುವುದು, ತಮ್ಮ ಪಕ್ಷವನ್ನು ತಳಮಟ್ಟದಲ್ಲಿ ಬೆಳೆಸುವುದು ಎಂದು ಇವರು ನಂಬಿಕೊಂಡಂತಿದೆ. ದೇವೇಗೌಡರ ಮಾತನ್ನು ಕೇಂದ್ರ ಸರ್ಕಾರ ತೆಗೆದು ಹಾಕುವುದಿಲ್ಲ. ರಾಜ್ಯದ ರಾಜಕಾರಣದಲ್ಲಿ ಹುಳಿ ಹಿಂಡಿ, ಕೌಟುಂಬಿಕ ರಾಜಕಾರಣ ಮಾಡುವ ಬದಲಿಗೆ ರಾಜ್ಯದ ಹಿತವನ್ನು ದೆಹಲಿಯಲ್ಲಾದರೂ ಕಾಪಾಡುವ ಜಾಣ್ಮೆ, ಕಾಳಜಿಯನ್ನು ಗೌಡರು ತೋರಬೇಕಿದೆ.
ಇದೆಲ್ಲವೂ ಹೌದು. ಇಂತಹ ಸಲಹೆಗಳನ್ನೆಲ್ಲಾ ತಮಿಳುನಾಡು ಸಂಸದರಿಗೆ ಹೇಳಿದ್ದರೆ ಖಂಡಿತಾ ಮಾಡುತ್ತಿದ್ದರು. ಏಕೆಂದರೆ ಅವರು ಯಾರೂ ಹೇಳದೆಯೇ ಮಾಡಿದ್ದಾರೆ. ಹೇಳಿದ್ದರೆ ಇನ್ನೂ ಎಷ್ಟು ಚೆನ್ನಾಗಿ ಮಾಡುತ್ತಿದ್ದರು. ರಾಜ್ಯದ ಜನ ಚಾಟಿ ಅಥವಾ ಬಾರುಕೋಲು ಕೈಗೆತ್ತಿಕೊಳ್ಳದೇ ರಾಜಕಾರಣಿಗಳಿಗೆ ಬುದ್ದಿ ಬರುವುದಿಲ್ಲ. ಯಾಕೆಂದರೆ ಎಮ್ಮೆ ಚರ್ಮ ಯಾವಾಗಲೂ ದಪ್ಪ ನೋಡಿ. ಏನು ಮಾಡುವುದು. ಎಲ್ಲಾ ನಮ್ಮ ಹಣೆಬರೆಹ. ಯಾರೋ ಕನ್ನಡಿಗರ ಮೇಲೆ, ಕರ್ನಾಟಕದ ಮೇಲೆ ಗೀಚಿ ಹೋಗಿ ಬಿಟ್ಟಿದ್ದಾರೆ... ಅದನ್ನು ಅಳಿಸುವುದು ಯಾರು?

ಸೌಹಾರ್ದ ಎಲ್ಲಿ?
ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಅನಾವರಣ ಮಾಡಲು ಯಡಿಯೂರಪ್ಪ ಆರೇಳು ತಿಂಗಳ ಹಿಂದೆ ಮುಂದಾಗಿದ್ದರು. ೧೯೯೨ರಲ್ಲಿ ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ಸಿದ್ಧಗೊಂಡು ಸ್ವಾಭಿಮಾನಿ ಕನ್ನಡಿಗರ ಪ್ರತಿಭಟನೆ ಕಾರಣಕ್ಕೆ ನಿಂತು ಹೋಗಿದ್ದ ತಿರುವಳ್ಳುವರ್ ಪ್ರತಿಮೆ ಅನಾವರಣಕ್ಕೆ ಯಡಿಯೂರಪ್ಪ ಮುಂದಾಗಿದ್ದಾಗ ಬಹುತೇಕ ಸಂಘಟನೆಗಳು ವಿರೋಧಿಸಿದ್ದವು. ಕರ್ನಾಟಕ ರಕ್ಷಣಾ ವೇದಿಕೆ, ವಾಟಾಳ್ ನಾಗರಾಜ್ ಎಲ್ಲರೂ ಪ್ರತಿಭಟನೆ ನಡೆಸಿ, ಕಾರ್ಯಕ್ರಮ ನಡೆಯಗೊಡುವುದಿಲ್ಲವೆಂದು ಪಟ್ಟು ಹಿಡಿದಿದ್ದರು. ಆದರೆ ಅವರನ್ನೆಲ್ಲಾ ಬಂಧಿಸಿ ಮೊಕದ್ದಮೆ ದಾಖಲಿಸಿದ ರಾಜ್ಯ ಸರ್ಕಾರ ತಿರುವಳ್ಳುವರ್ ಪ್ರತಿಮೆಯನ್ನು ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಅವರಿಂದಲೇ ಅನಾವರಣ ಮಾಡಿಸಿತ್ತು. ಇದಕ್ಕೂ ಮೊದಲೇ ತಮಿಳುನಾಡಿನಲ್ಲಿ ಯಡಿಯೂರಪ್ಪನವರು ಸರ್ವಜ್ಞ ಪ್ರತಿಮೆ ಅನಾವರಣ ಮಾಡಿದ್ದರು.
ಆಗ ಮುಖ್ಯಮಂತ್ರಿ ಯಡಿಯೂರಪ್ಪನವರು ಎರಡೂ ರಾಜ್ಯದ ಮಧ್ಯೆ ಸೌಹಾರ್ದ ಸಂಬಂಧಕ್ಕೆ, ಬಹಳ ವರ್ಷಗಳ ವ್ಯಾಜ್ಯ ಬಗೆಹರಿಸಿಕೊಳ್ಳುವುದಕ್ಕೆ, ಶಾಂತಿ-ಸಹಬಾಳ್ವೆಗೆ ತಿರುವಳ್ಳುವರ್ ಪ್ರತಿಮೆ ಅನಾವರಣ ದಾರಿ ಮಾಡಕೊಡಲಿದೆ ಎಂದಿದ್ದರು. ಕರುಣಾನಿಧಿ-ಯಡಿಯೂರಪ್ಪನವರು ಒಟ್ಟಿಗೆ ಉಂಡು ಕೈತೊಳೆದಿದ್ದರು. ಈಗ ಆ ಸೌಹಾರ್ದ, ವ್ಯಾಜ್ಯ ಪರಿಹಾರದ ತರ್ಕ ಎಲ್ಲಿ ಹೋಗಿದೆ ಎಂಬ ಪ್ರಶ್ನೆಗೆ ಯಡಿಯೂರಪ್ಪನವರೇ ಉತ್ತರಿಸಬೇಕು. ಈಗಲಾದರೂ ತಿರುವಳ್ಳುವರ್ ಪ್ರತಿಮೆ ಅನಾವರಣದ ಪ್ರಸಂಗವನ್ನು ಕರುಣಾನಿಧಿಗೆ ನೆನಪಿಸಿ, ಹೊಗೇನಕಲ್‌ನಲ್ಲಿ ರಾಜ್ಯಕ್ಕೆ ಅನ್ಯಾಯವಾಗದಂತೆ ಯಡಿಯೂರಪ್ಪ ನೋಡಿ ಕೊಳ್ಳ ಬೇಕು.

ಚಾರುದತ್ತ

Thursday, May 6, 2010

ಕನ್ನಡಕ್ಕೆ ಕೈ ಎತ್ತಿ: ಜೈಲೆ ಗತಿ



ಅಂತೂ ಇಂತೂ ಸಾಬೀತಾಯಿತು. ಕನ್ನಡಕ್ಕಾಗಿ ಕೈ ಎತ್ತುವುದು, ಕನ್ನಡಮ್ಮನ ನೆರವಿಗೆ ಧಾವಿಸುವುದು ಕನ್ನಡಿಗರ ರಕ್ಷಣೆ ಮಾಡುವುದು, ಕನ್ನಡದ ಗಡಿ ಕಾಪಾಡುವುದು ಈಗ ಕೊಲೆ, ಸುಲಿಗೆ, ದರೋಡೆ, ಗಡಿ ಒತ್ತುವರಿ ಅಪರಾಧಗಳಿಗಿಂತ ಹೇಯ ಕೃತ್ಯ.
ಕನ್ನಡಕ್ಕೆ ಕಷ್ಟ ಬಂದಾಗ ಬೀದಿಗಿಳಿಯಬೇಡಿ, ಕನ್ನಡಕ್ಕೆ ಜೈ ಎನ್ನಬೇಡಿ, ಲಾಠಿ ಏಟು ತಿನ್ನಬೇಡಿ, ಬೂಟಿನಡಿ ಸಿಲುಕಬೇಡಿ, ಬೆಂಗಳೂರಿನ ಬೀದಿಗಳಲ್ಲಿ ಕನ್ನಡ ಮರೆಯಾದರೆ ಏನಾಯಿತು? ಬೋರ್ಡುಗಳಲ್ಲಿ ಇಂಗ್ಲಿಷ್, ಹಿಂದಿ ಮೆರೆದರೇನಾಯಿತು? ಗಡಿಗಳನ್ನು ಯಾರೋ ಒತ್ತರಿಸಿಕೊಂಡರೇನಾಯಿತು, ಕೃಷ್ಣೆ ಹರಿದರೇನಾಯಿತು, ಕಾವೇರಿ ಬರಿದಾದರೇನಾಯಿತು? ಆಗೋದೆಲ್ಲಾ ಆಗಲಿ ಎಂದು ಸುಮ್ಮನೆ ಮನೆಯಲ್ಲಿರಿ-ಅಧಿಕಾರಕ್ಕೆ ಬಂದ ೨೦ ತಿಂಗಳುಗಳಲ್ಲಿ ಯಡಿಯೂರಪ್ಪ ಸರಕಾರ ಕನ್ನಡಿಗರಿಗೆ ನೀಡಿರುವ ಸಂದೇಶ ಇದು.
ಕನ್ನಡ, ಕರ್ನಾಟಕ, ರೈತರು ಎಂದುಕೊಂಡು ಅಧಿಕಾರಕ್ಕೆ ಬಂದ ಯಡಿಯೂರಪ್ಪ ಅವರು ಗಡಿ ಒತ್ತುವರಿ ಮಾಡಿಕೊಂಡವರ ಮೇಲಿದ್ದ ಕೇಸು ಹಿಂತೆಗೆದುಕೊಂಡರು, ಎದುರಾಳಿಗಳ ಮನೆಗೆ ನುಗ್ಗಿ ದಾಂಧಲೆ ಎಬ್ಬಿಸಿದವರ ಮೇಲಿದ್ದ ಪ್ರಕರಣಗಳನ್ನು ಹಿಂತೆಗೆದುಕೊಂಡರು, ಕನ್ನಡ? ಉಹುಂ, ಕನ್ನಡಕ್ಕಾಗಿ ಹೋರಾಡಿದವರ ಮೇಲಿದ್ದ ಪ್ರಕರಣಗಳನ್ನು ಮಾತ್ರ ಮರೆತರು. ಎರಡು ವರ್ಷಗಳಲ್ಲಿ ಯಡಿಯೂರಪ್ಪ ಸರ್ಕಾರ ಈಗಾಗಲೇ ಹಲವರ ಮೇಲೆ ನ್ಯಾಯಾಲಯದಲ್ಲಿದ್ದ ಸುಮಾರು ೬೫ಕ್ಕೂ ಹೆಚ್ಚು ಪ್ರಕರಣಗಳನ್ನು ಹಿಂದಕ್ಕೆ ಪಡೆದಿದೆ. ಗದ್ದಲ ಏನೇ ನಡೆದರೂ ಅದು ಕನ್ನಡ ಹೋರಾಟಗಾರರ ಮೇಲಿನ ಪ್ರಕರಣಗಳನ್ನು ತೆಗೆಯಲಿಲ್ಲ. ಕನ್ನಡಾಭಿಮಾನಿಗಳು ಜೈಲಿನಲ್ಲಿದ್ದರೇ ಒಳ್ಳೆಯದು, ಕೋರ್ಟಿಗೆ ಅಲೆಯುತ್ತಿದ್ದರೆ ಮತ್ತೂ ಒಳ್ಳೆಯದು ಎನ್ನುವುದು ಯಡಿಯೂರಪ್ಪ ಅವರ ಲೆಕ್ಕಾಚಾರ ಇದ್ದಂತಿದೆ.
ಹೋರಾಟಗಾರರ ಮೇಲಿನ ಪ್ರಕರಣಗಳನ್ನು ಹಿಂತೆಗೆದುಕೊಳ್ಳುವುದು ಹೊಸದೇನೂ ಅಲ್ಲ, ನಾಡು-ನುಡಿಗಾಗಿ ಹೋರಾಡಿದವರ ವಿರುದ್ಧ ಯಾವ ಸರಕಾರವೂ ಹೆಚ್ಚು ದ್ವೇಷ ಸಾಧಿಸಿಲ್ಲ, ನಿಜಲಿಂಗಪ್ಪ ಅವರಿಂದ ಹಿಡಿದು ಕುಮಾರಸ್ವಾಮಿ ಅವರವರೆಗೂ ಎಲ್ಲ ಮುಖ್ಯಮಂತ್ರಿಗಳೂ ಕನ್ನಡ ಹೋರಾಟಗಾರರ ಮೇಲಿನ ಕೇಸುಗಳನ್ನು ಕೈಬಿಟ್ಟಿದ್ದಾರೆ. ಹೋರಾಡಿದ್ದು ಕನ್ನಡದ ರಕ್ಷಣೆಗಾಗಿಯಲ್ಲವೇ, ಒಳ್ಳೆಯದಾಗಲಿ ಬಿಡಿ, ದ್ವೇಷ ಸಾಧಿಸುವುದೇಕೆ? ಎಂದು ಹೇಳಿದ್ದಾರೆ.
ಆದರೆ, ಉಹುಂ ಒಬ್ಬರು ಯಡಿಯೂರಪ್ಪ ಅವರಿಗೆ ಮಾತ್ರ ಈ ಕರುಣೆ ಇಲ್ಲ.
ನ್ಯಾಯಾಲಯದಲ್ಲಿರುವ ಯಾವುದೇ ಪ್ರಕರಣಗಳನ್ನು ಹಿಂತೆಗೆದುಕೊಳ್ಳಲು ಸರ್ಕಾರಕ್ಕೊಂದು ವಿಶೇಷ ಅಧಿಕಾರವಿದೆ. ಸಿಆರ್‌ಪಿಸಿ ಸೆಕ್ಷನ್ ೩೨೧ರ ಅಡಿ ಸರಕಾರವು ಯಾವುದೇ ಪ್ರಕರಣವನ್ನು ಹಿಂತೆಗೆದುಕೊಳ್ಳಲು ಶಿಫಾರಸು ಮಾಡಬಹುದು. ಸರಕಾರಿ ಅಭಿಯೋಜಕರು ಸರಕಾರದ ನಿರ್ಧಾರವನ್ನು ಅದರ ದಾಖಲೆಗಳನ್ನು ಸಂಬಂಧಿಸಿದ ನ್ಯಾಯಾಲಯಗಳಿಗೆ ಸಲ್ಲಿಸಿದ ಬಳಿಕ ನ್ಯಾಯಾಧೀಶರು ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ. ಸಾಮಾನ್ಯವಾಗಿ ದೋಷಾರೋಪ ಪಟ್ಟಿ ಸಲ್ಲಿಸಿರುವ ಸಾಕ್ಷಿಗಳ ಹೇಳಿಕೆ ದಾಖಲಿಸಿರುವ ಪ್ರಕರಣಗಳನ್ನು ಕೈಬಿಡುವುದಿಲ್ಲ. ಇದರ ರಕ್ಷಣೆ ಪಡೆದು ಸರಕಾರಗಳು ಕನ್ನಡ, ರೈತಪರ ಹೋರಾಟಗಾರರಿಗೆ ಅವರ ಕಾನೂನು ಜಂಜಡದಿಂದ ಮುಕ್ತಿ ನೀಡುತ್ತಿದ್ದವು. ದುರಂತ ನೋಡಿ, ಇಂಥದೊಂದು ಅಧಿಕಾರವನ್ನು ಯಡಿಯೂರಪ್ಪ ಸರಕಾರ ಕಳೆದ ೨೦ತಿಂಗಳುಗಳಲ್ಲಿ ಭರ್ಜರಿಯಾಗಿ ದುರುಪಯೋಗಪಡಿಸಿಕೊಂಡಿದೆ.
ಯಡಿಯೂರಪ್ಪನವರ ಸಚಿವ ಸಂಪುಟ ಕಳೆದ ಫೆಬ್ರವರಿಯಲ್ಲಿ ಒಂದು ಸಭೆ ನಡೆಸಿತು, ಅಂದು ಅದು ಕೈಗೊಂಡ ಐತಿಹಾಸಿಕ ನಿರ್ಧಾರ ಎಂದರೆ, ೧೬ ಪ್ರಕರಣಗಳನ್ನು ಹಿಂದಕ್ಕೆ ತೆಗೆದುಕೊಂಡದ್ದು, ಅದ್ಯಾವ ಹೋರಾಟಗಾರರ ಮೇಲಿದ್ದವು ೧೬ ಪ್ರಕರಣಗಳು? ಬಳ್ಳಾರಿಯಲ್ಲಿ ಮತ್ತೊಂದು ಬಿಹಾರ ಸೃಷ್ಟಿಮಾಡಿ, ರಾಜ್ಯವನ್ನೇ ದಾರಿ ತಪ್ಪಿಸುತ್ತಿರುವ, ಗಣಿಗಾರಿಕೆಯ ಆಸೆಯಿಂದ ಗಡಿಯನ್ನೇ ಒತ್ತುವರಿ ಮಾಡಿಕೊಂಡಿರುವ ರೆಡ್ಡಿ ಸಹೋದರರು ಮತ್ತು ಶ್ರೀರಾಮುಲು ಅವರ ಮೇಲಿದ್ದವು ಈ ಕೇಸುಗಳು. ಈ ಮೂವರು ರಾಜ್ಯ ಸರ್ಕಾರದಲ್ಲಿ ಸಚಿವರು. ಅಂದರೆ, ಈ ನಿರ್ಧಾರ ಕೈಗೊಂಡಾಗ ಈ ಮೂವರು ಸಭೆಯಲ್ಲಿದ್ದರು. ಅಂದರೆ, ಸರಕಾರದ ನಿರ್ಧಾರ ಪಕ್ಷಪಾತದಿಂದ, ಸ್ವಾರ್ಥದಿಂದ ಕೂಡಿತ್ತಲ್ಲದೆ ಅಧಿಕಾರದ ದುರ್ಬಳಕೆಯೂ ಆಗಿತ್ತು. ಇವರ ಮೇಲಿದ್ದದೇನು ಧರಣಿ, ಮುಷ್ಕರದ ಪ್ರಕರಣಗಳೆ? ಅಷ್ಟಕ್ಕೂ ಇಂತಹ ಧರಣಿ ಮುಷ್ಕರ ನಡೆಸಲು ಅವರೇನು ಕನ್ನಡ ಹೋರಾಟಗಾರರೆ? ರೈತ ಹೋರಾಟಗಾರರೆ? ಏನೂ ಇಲ್ಲ, ಅವರ ಮೇಲಿದ್ದದ್ದು ಕೊಲೆ ಬೆದರಿಕೆಯ, ರಾಜ್ಯದ ಗಡಿಯನ್ನೇ ಒತ್ತುವರಿ ಮಾಡಿದ ಪ್ರಕರಣಗಳು. ರಾಜ್ಯದ ಗಡಿಯ ಒತ್ತುವರಿ ಎಂದರೆ ಸುಮ್ಮನೇನಾ ಅದು ರಾಜ್ಯದ ವಿರುದ್ಧ ಮಾಡಿದ ಪಿತೂರಿ. ಆದರೆ, ಸರ್ಕಾರ ರಾಜ್ಯದ ಗಡಿ ಒತ್ತುವರಿ ಮಾಡಿದ ಆರೋಪ ಹೊತ್ತವರಿಗೆ ಸ್ವಾತಂತ್ರ್ಯ ನೀಡಿತು. ಇದರರ್ಥ ಏನು? ಕನ್ನಡಾಭಿಮಾನಕ್ಕಿಂತ ರಾಜ್ಯದ ವಿರುದ್ಧ ಪಿತೂರಿ ಮಾಡುವುದೇ ಒಳ್ಳೆಯ ಕೆಲಸ ಎಂದಲ್ಲವೇ?. ಕುರ್ಚಿ ಉಳಿಸಿಕೊಂಡರೆ ಸಾಕು ಎಂದು ರೆಡ್ಡಿಗಳ ಎಲ್ಲ ಷರತ್ತುಗಳಿಗೂ ಒಪ್ಪಿರುವ ಯಡಿಯೂರಪ್ಪ ಅವರಿಗೆ ಅದ್ಯಾವ ಕನ್ನಡ, ಅದಿನ್ಯಾವ ಗಡಿ ಹೇಳಿ.
ಕನ್ನಡ ಹೋರಾಟಗಾರರೇನು ಡಾಕುಗಳಾ? ಇವರು ಮಾಡಿದ್ದೇನು, ದರೋಡೆ, ಅತ್ಯಾಚಾರ, ಕೊಲೆ, ಸುಲಿಗೆಯೇ? ಆದರೂ ಬಿಜೆಪಿ ಸರಕಾರಕ್ಕೆ ಈ ಬಗ್ಗೆ ಕಾಳಜಿ ಇಲ್ಲ. ಹಿಂಸೆ ತಪ್ಪು, ಪ್ರತಿಭಟನೆಯ ಹೆಸರಿನಲ್ಲಿ ದ್ವೇಷ ಸಾಧನೆ ಮತ್ತೂ ತಪ್ಪು ಆದರೆ, ಇದಕ್ಕಿಂತ ಹೆಚ್ಚು ತಪ್ಪು ಮಾಡಿದವರನ್ನು ಬಿಟ್ಟು ಕನ್ನಡ ಹೋರಾಟಗಾರರನ್ನು ಸತಾಯಿಸುತ್ತಿದ್ದಾರಲ್ಲ. ಇದು ಯಡಿಯೂರಪ್ಪ ಅವರಿಗೆ ಕನ್ನಡದ ಬಗ್ಗೆ ಕಾಳಜಿ, ಅಭಿಮಾನ ಇದೆಯೇ ಎನ್ನುವ ಅನುಮಾನ ಹುಟ್ಟಿಸಿದೆ. ಬಿಜೆಪಿ ಸರಕಾರಕ್ಕೆ ಕನ್ನಡಕ್ಕಿಂತ ರೆಡ್ಡಿಗಳೇ ಎಷ್ಟು ಮುಖ್ಯವಾಗಿದ್ದಾರೆ ಎಂದರೆ ರೆಡ್ಡಿ ಆಗ್ರಹಕ್ಕೆ ಮಣಿಯುವ ಭರದಲ್ಲಿ ಅದು ಚುನಾವಣಾ ಆಯೋಗದ ವ್ಯಾಪ್ತಿಗೆ ಬರುವ ಪ್ರಕರಣಕ್ಕೂ ಕೈ ಹಾಕಿತು. ಲೋಕಸಭೆ ಚುನಾವಣೆ ಸಮಯದಲ್ಲಿ ಶ್ರೀರಾಮುಲು ಮತ್ತು ಅವರ ಬೆಂಬಲಿಗರೆಲ್ಲಾ ಸೇರಿಕೊಂಡು ಕಾಂಗ್ರೆಸ್‌ನ ರಾಜ್ಯಸಭೆ ಸದಸ್ಯ ಅನಿಲ್ ಲಾಡ್ ಮನೆಗೆ ನುಗ್ಗಿ ದಾಂಧಲೆ ಎಬ್ಬಿಸಿದ್ದು ಗೊತ್ತಿದೆಯಲ್ಲ. ಈ ಬಗ್ಗೆ ಬಳ್ಳಾರಿಯ ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಈ ಪ್ರಕರಣವನ್ನೂ ಸರಕಾರ ಹಿಂದಕ್ಕೆ ಪಡೆಯಿತು. ಇಂತಹ ಪ್ರಕರಣ ಹಿಂತೆಗೆದುಕೊಳ್ಳುವ ಅಧಿಕಾರವೇ ಸರಕಾರಕ್ಕಿಲ್ಲ ಎನ್ನುತ್ತಿದ್ದಾರೆ ಕಾನೂನು ತಜ್ಞರು.
ಕರ್ನಾಟಕ, ಆಂಧ್ರ ಗಡಿಯಲ್ಲಿದ್ದ ಸುಗ್ಗಲಮ್ಮ ದೇವಾಲಯವನ್ನು ಉರುಳಿಸಿ ಗಡಿ ಒತ್ತುವರಿ ಮಾಡಿದ ಆರೋಪ ರೆಡ್ಡಿಗಳ ಮೇಲಿದೆಯಲ್ಲ. ಈ ಪ್ರಕರಣವನ್ನೂ ಸರಕಾರ ಹಿಂದಕ್ಕೆ ಪಡೆಯಿತು. ಈ ಪ್ರಕರಣದಲ್ಲಿ ರೆಡ್ಡಿಗಳ ಮೇಲೆ ಇದ್ದದ್ದು ರಾಜ್ಯದ ಗಡಿ ಒತ್ತುವರಿ ಮಾಡಿದ ಆರೋಪ. ಇದರಿಂದ ಇವರೇನಾದರೂ ರಾಜ್ಯದ ಒಳ್ಳೆಯದಕ್ಕೆ ಸೇವೆ ಮಾಡಿದ್ದರೆ, ತ್ಯಾಗ ಮಾಡಿದ್ದರೆ, ಕನ್ನಡಮ್ಮನಿಗೆ ಇವರಿಂದ ಉಪಕಾರವಾಯಿತೇ? ಇಲ್ಲ, ರೆಡ್ಡಿಗಳ ದುರಾಸೆಯಿಂದ, ಅಪ್ಪಟ ವ್ಯಾವಹಾರಿಕ ಉದ್ದೇಶದಿಂದ ಈ ಒತ್ತುವರಿ ನಡೆದಿದೆ. ರೆಡ್ಡಿಗಳದು ನಿಜಕ್ಕೂ ಇದರಲ್ಲಿ ತಪ್ಪಿಲ್ಲವಾದರೆ ಅದನ್ನು ನ್ಯಾಯಾಲಯಗಳಲ್ಲಿ ರುಜುವಾತುಪಡಿಸಬಹುದಿತ್ತು, ತಮ್ಮ ಮೇಲೆ ಸುಳ್ಳು ಆರೋಪ ಮಾಡಿದವರ ವಿರುದ್ಧ ಸೆಣಸಲು ಅವರಿಗೇನು ಹಣವಿಲ್ಲವೆ? ಜನರಿಲ್ಲವೆ? ಎಲ್ಲವೂ ಇದೆ ಆದರೆ ಸರಕಾರಕ್ಕೆ ಮಾತ್ರ ಬುದ್ಧಿ ಇರಲಿಲ್ಲ.
ಸರಕಾರದ ಈ ನಾಚಿಕೆಗೇಡಿನ ಕ್ರಮವನ್ನು ಸಮರ್ಥಿಸಿಕೊಳ್ಳಲು ಎಂದಿನಂತೆ ಫೀಲ್ಡಿಗಿಳಿದ್ದದ್ದು ಗೃಹ ಸಚಿವ ಡಾ.ವಿ.ಎಸ್.ಆಚಾರ್ಯ, ಅವರು ಎಂದಿನಂತೆ ಸರಕಾರದ ಈ ಕ್ರಮಕ್ಕೆ ಒಂದು ತಮಾಷೆಯ ಸಮರ್ಥನೆ ಕೊಟ್ಟರು. ಅದೇನೆಂದರೆ, ೨೦೦೧ರಿಂದ ಈಚೆಗೆ ಸರಕಾರಗಳು ಸುಮಾರು ೯೫೫ ಪ್ರಕರಣಗಳನ್ನು ಹಿಂದಕ್ಕೆ ತೆಗೆದುಕೊಂಡಿವೆ. ಧರ್ಮಸಿಂಗ್ ಅಧಿಕಾರಾವಧಿಯಲ್ಲಿ ೪೨೩, ಕುಮಾರಸ್ವಾಮಿ ಅವರ ಅಧಿಕಾರವಾಧಿಯಲ್ಲಿ ೨೯೪ ಪ್ರಕರಣಗಳನ್ನು ಹಿಂತೆಗೆದುಕೊಳ್ಳಲಾಗಿದೆ. ನಾವು ಹಿಂತೆಗೆದುಕೊಂಡದ್ದು ಕೇವಲ ೬೫ ಪ್ರಕರಣಗಳನ್ನು ಎಂದರು. ಇಷ್ಟೆಲ್ಲಾ ಮಾತನಾಡಿದ ಆಚಾರ್ಯರು ಯಾವ್ಯಾವ ಸರಕಾರ ಯಾರ‍್ಯಾರ ವಿರುದ್ಧ ಪ್ರಕರಣಗಳನ್ನು ಹಿಂತೆಗೆದುಕೊಂಡಿತು ಎನ್ನುವ ವಿವರಗಳನ್ನು ಕೊಟ್ಟಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು. ಹಿಂದಿನ ಸರಕಾರಗಳು ರಾಜಕಾರಣಿಗಳ ಮೇಲಿನ ವೈಯಕ್ತಿಕ ಪ್ರಕರಣಗಳಿಗಿಂತ ಹೆಚ್ಚಾಗಿ ರೈತರು, ವಿದ್ಯಾರ್ಥಿಗಳು, ಕನ್ನಡಪರ ಹೋರಾಟಗಾರರ ಮೇಲಿನ ಪ್ರಕರಣಗಳನ್ನು ಹಿಂತೆಗೆದುಕೊಂಡಿವೆ. ಈ ಪ್ರಕಣಗಳೇ ನೂರಾರು ಸಂಖ್ಯೆಯಲ್ಲಿವೆ ಎನ್ನುವ ಸತ್ಯವಾದರೂ ಅವರಿಗೆ ತಿಳಿಯುತ್ತಿತ್ತು.
ಯಡಿಯೂರಪ್ಪನವರದು ಆರೋಪಗಳಿಗೆ, ಟೀಕೆಗಳಿಗೆ ಹೆದರುವ ಸರಕಾರವಲ್ಲ ಬಿಡಿ. ಹೀಗೆ ರೆಡ್ಡಿಗಳ ಮೇಲಿನ ಕೇಸುಗಳನ್ನು ಕಿತ್ತೆಸೆಯುವ ನಿರ್ಧಾರ ಕೈಗೊಂಡ ಬಳಿಕ ಅದು ಮತ್ತೊಂದು ನಿರ್ಧಾರ ಕೈಗೊಂಡಿತು, ಈ ಬಾರಿ ಬಜರಂಗದಳದ ಕಾರ್ಯಕರ್ತರ ಮೇಲಿದ್ದ ಪ್ರಕರಣಗಳನ್ನು ಹಿಂತೆಗೆದುಕೊಂಡಿತು. ಇಷ್ಟೇ ಅಲ್ಲ ಎಬಿವಿಪಿ ಕಾರ್ಯಕರ್ತರ ಮೇಲಿದ್ದ ಕೇಸುಗಳಿಗೂ ಇದೇ ಗತಿಯಾಯಿತು. ಕನ್ನಡ ಹೋರಾಟಗಾರರು ಈ ಬಾರಿಯಾದರೂ ನೆನಪಾದರೆ, ಊಹುಂ. ಈ ನಿರ್ಧಾರಗಳನ್ನು ತೆಗೆದುಕೊಂಡು ಎರಡು ತಿಂಗಳುಗಳಾದರೂ ಇದುವರೆಗೂ ಯಡಿಯೂರಪ್ಪ ಅವರಿಗೆ ಕನ್ನಡ ಹೋರಾಟಗಾರರ ಕಷ್ಟಗಳ ನೆನಪಾಗಿಲ್ಲ.
ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರ ಮೇಲೆ ರಾಜ್ಯಾದ್ಯಂತ ಸುಮಾರು ೧೦೩೬ ಪ್ರಕರಣಗಳು ದಾಖಲಾಗಿವೆ. ವಾಟಾಳ್ ನಾಗರಾಜ್ ಅವರ ಮೇಲೆ ಸುಮಾರು ೧೬ ಪ್ರಕರಣಗಳಿವೆ. ಇದು ಅಂದಾಜು. ಏಕೆಂದರೆ, ದಾಖಲಾದ ಕೇಸುಗಳ ಸಂಖ್ಯೆ ಖುದ್ದು ವೇದಿಕೆ ಅಧ್ಯಕ್ಷ ನಾರಾಯಣಗೌಡರಿಗೇ ಗೊತ್ತಿಲ್ಲ. ವಾಟಾಳ್ ನಾಗರಾಜ್ ಅವರಿಗೆ ಕೇಳಿದರೆ ಅವರೂ ಇನ್ನೂ ಇರಬೇಕೇನೋ ಗೊತ್ತಿಲ್ಲ ಎನ್ನುತ್ತಾರೆ. ಏಕೆಂದರೆ, ಅವರ ವಿರುದ್ಧ ಸಮನ್ಸ್‌ಗಳು ಬಂದಾಗಲೇ ನಮ್ಮ ಮೇಲೊಂದು ಈ ರೀತಿಯ ಪ್ರಕರಣ ಇದೆ ಎಂದು ತಿಳಿಯುವುದು. ಯಾವುದೋ ಊರಿನ ಯಾವುದೋ ಠಾಣೆಯಲ್ಲಿ ಯಾರಿಗೂ ತಿಳಿಯದಂತೆ ಎಫ್‌ಐಆರ್ ದಾಖಲಾಗಿಬಿಡುತ್ತದೆ. ಇದು ಕೋರ್ಟಿಗೆ ಹೋದಾಗಲೇ ಹೋರಾಟಗಾರರಿಗೆ ಸಂದೇಶ ರವಾನೆಯಾಗುವುದು. ಈ ಪ್ರಕರಣಗಳ ಪ್ರಥಮ ಮಾಹಿತಿ ವರದಿ ಮತ್ತು ಕೆಲವು ಪ್ರಕರಣಗಳ ಆರೋಪ ಪಟ್ಟಿ ಓದಬೇಕು. ಅವುಗಳಲ್ಲಿಯೇ ಹೋರಾಟ ಬೋರ್ಡುಗಳೇ ಕಂಡರೆ, ಯಾವುದೋ ಹೋಟೆಲ್‌ನ ಪಾರ್ಟಿಯಲ್ಲಿ ಇಂಗ್ಲಿಷ್, ಹಿಂದಿ ಹಾಡುಗಳೇ ಕೇಳಿದರೆ, ನಾವು ನೀವೆಲ್ಲಾ ಅಂದುಕೊಳ್ಳುತ್ತೇವೆ, ಇವರಿಗೆಲ್ಲಾ ಬುದ್ದಿ ಕಲಿಸೋಕೆ ಯಾವೋನೂ ಇಲ್ವಾ? ಲಕ್ಷಾಂತರ ಕನ್ನಡಿಗರು ಇಂತಹ ಪ್ರಶ್ನೆಗಳನ್ನು ಕೇಳುವಾಗ ಕೇವಲ ನೂರರು ಸಂಖ್ಯೆಯ ಕನ್ನಡಿಗರು ಈ ಅನ್ಯಾಯಗಳನ್ನು ಸರಿಪಡಿಸಲು ಬೀದಿಗಿಳಿಯುತ್ತಾರೆ.
ಹೋರಾಟ, ಪ್ರತಿಭಟನೆ ಎಂದ ಮೇಲೆ ಅಲ್ಲೆಲ್ಲಾ ಮಗುವಿಗೆ ಜೋಗುಳ ಹಾಡಿ ಕನ್ನಡಮ್ಮನ ರಕ್ಷಣೆ ಸಾಧ್ಯವೆ ಬಿಸಿಲು, ಮಳೆ ಲೆಕ್ಕಿಸದೆ ಬೀದಿಗೆ ಬರಬೇಕು, ಪೊಲೀಸರು ಒದ್ದರೆ ಒದೆಸಿಕೊಳ್ಳಬೇಕು, ಲಾಠಿ ಬೀಸಿದರೆ ಹೊಡೆಸಿಕೊಳ್ಳಬೇಕು, ಹಿಡಿದು ಜೈಲಿಗಟ್ಟಿ ಕೇಸು ಜಡಿಸಿದರೆ ಮುಂದೆ ಒಂದಷ್ಟು ವರ್ಷ, ಮನೆ ಮಾರಿಕೊಂಡು, ಜಮೀನು ಅಡವಿಟ್ಟುಕೊಂಡು, ಹೆಂಡತಿ-ಮಕ್ಕಳನ್ನು ಬಿಟ್ಟು, ನೆಮ್ಮದಿ ಕಳೆದುಕೊಂಡು ಕೋರ್ಟಿಗೆ ಅಲೆಯಬೇಕು. ಕಲ್ಲು ತೂರಿದ್ದಾಗಿದೆ, ಬೈದದ್ದಾಗಿದೆ, ಹೊಡೆದಾಟಗಳಾಗಿವೆ ನಿಜ. ಆದರೆ, ರೆಡ್ಡಿ ಸೋದರರ ಮೇಲಿದ್ದ ಗಡಿ ಒತ್ತುವರಿ ಪ್ರಕರಣವನ್ನೇ ಕೈ ಬಿಟ್ಟ ಮೇಲೆ, ಕನ್ನಡಿಗರದ್ಯಾವ ದೊಡ್ಡ ಅಪರಾಧ ಹೇಳಿ? ಅಷ್ಟಕ್ಕೂ ನಮ್ಮ ಕನ್ನಡ ಹೋರಾಟಗಾರರು ಶಿವಸೇನೆಯ ಕಾರ್ಯಕರ್ತರಷ್ಟು ಭಾಷಾಂಧರಂತೂ ಅಲ್ಲವಲ್ಲ.

ಇದ್ದರೂ ಸರಿ ಇಲ್ಲದಿದ್ದರೂ ಸರಿ
ಬರೀ ಬೀದಿಗಿಳಿದು ಹೋರಾಟ ನಡೆಸಿದ, ಕಲ್ಲು ತೂರಿದ, ಬೈದ ಪ್ರಕರಣಗಳಷ್ಟೇ ಹೋರಾಟಗಾರರ ವಿರುದ್ಧ ಬೀಳುತ್ತವಾ? ಇಲ್ಲ, ಒಂದು ಬಾರಿ ಹೋರಾಟ ಶುರುವಿಟ್ಟುಕೊಂಡರೆ, ಇದ್ದರೂ ಇಲ್ಲದಿದ್ದರೂ ಕೇಸುಗಳ ಪ್ರವಾಹ ಹರಿಯುತ್ತೆ. ಕನ್ನಡದ ಹೋರಾಟದ ತಮಾಷೆಗಳು ಗೊತ್ತಾ? ಕನ್ನಡ ರಕ್ಷಣಾ ವೇದಿಕೆಯ ನಾರಾಯಣಗೌಡ ಮತ್ತು ಮಾಜಿ ಶಾಸಕ ವಾಟಾಳ್ ನಾಗರಾಜ್ ಇಬ್ಬರದೂ ಕನ್ನಡದ ಹೋರಾಟದಲ್ಲಿ ದೊಡ್ಡ ಹೆಸರು.
ಆದರೆ, ಇಬ್ಬರೂ ಒಟ್ಟಿಗೆ ಸೇರಿ ಹೋರಾಟ ನಡೆಸಿದ ಉದಾಹರಣೆ ಇಲ್ಲ. ಪೊಲೀಸರು ಮಾತ್ರ ಇವರಿಬ್ಬರ ಮೇಲೂ ಒಟ್ಟಿಗೆ ಕೇಸುಗಳನ್ನು ಜಡಿದು ಕುಳಿತಿದ್ದಾರೆ. ರೈಲ್ವೆ ಪೊಲೀಸರಿಗಂತೂ ಇವರಿಬ್ಬರೂ ಅವಳಿಗಳಂತೆ ಕಾಣಿಸುತ್ತಾರೆ. ಅಲ್ಲಿ ಕೇಸು ಬಿದ್ದರೆ ಇಬ್ಬರ ಮೇಲೂ ಬಿತ್ತು ಎಂದೇ ಅರ್ಥ.
ಇನ್ನು ಸಂಬಂಧ ಇಲ್ಲದಿದ್ದರೂ ಕೇಸು ಹಾಕಿಸಿಕೊಳ್ಳುವ ಭಾಗ್ಯ ನೋಡಿ, ತಿರುವಳ್ಳುವರ್ ಪ್ರತಿಮೆಯನ್ನು ಬೆಂಗಳೂರಿನಲ್ಲಿ ನಿಲ್ಲಿಸೇ ತೀರುವುದಾಗಿ ಯಡಿಯೂರಪ್ಪ ಅವರು ಘೋಷಿಸುತ್ತಿದ್ದಂತೆ ನಾರಾಯಣಗೌಡರು ಇದನ್ನು ವಿರೋಧಿಸಿದರು. ಬಳಿಕ ಒಂದು ದಿನ ಅವರು ರಾಮನಗರದಲ್ಲಿ ಭಾಷಣ ಮಾಡುತ್ತಿದ್ದರು. ಆದರೆ, ಅಲ್ಲಿ ದೂರದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ನಾರಾಯಣಗೌಡರ ವಿರುದ್ಧ ಅದೇ ದಿನ ಒಂದು ಪ್ರಕರಣ ದಾಖಲಾಯಿತು. ಇಷ್ಟೇ ಅಲ್ಲ. ಹೋರಾಟಗಾರರ ಉಗ್ರತ್ವ ಬಿಡಿಸಲು ಪೊಲೀಸರ ಬಳಿ ಹಲವು ತಂತ್ರಗಳಿವೆ. ಸ್ವಲ್ಪ ಯಾರಾದರೂ ಸ್ವಲ್ಪ ಚಟುವಟಿಕೆಯಿಂದ ಓಡಾಡಿಕೊಂಡಿರುವುದು ಕಾಣಿಸಿದರೆ ನಿನ್ನ ಹೆಸರೇನಪ್ಪ ಎಂದು ಕೇಳುತ್ತಾರೆ. ಹೆಸರು ಹೇಳಿದ ಮೇಲೆ ಅವನೇ ಆರೋಪಿ ನಂ.೧; ಪ್ರಕರಣ ದಾಖಲಾದ ಮೇಲೆ ಆತ ತಪ್ಪದೇ ಕೋರ್ಟಿಗೆ ಅಲೆಯಬೇಕು.
ಧರಣಿ, ಪ್ರತಿಭಟನೆ ಮಾಡಿದ ಬಳಿಕವೂ ಪೊಲೀಸರು ಕನ್ನಡ ಹೋರಾಟಗಾರರ ಬೆನ್ನು ತಟ್ಟಿ ಇದೆಲ್ಲಾ ಸಾಕು ಇನ್ನು ಸುಮ್ಮನೆ ಹೋಗಿ ಎಂದು ಹೇಳಿ ಬಿಡುವುದು ಹೋಗಿ ದಶಕಗಳಾಯಿತು. ಮೊದಲೆಲ್ಲಾ ಪೊಲೀಸರು ಇಷ್ಟೆಲ್ಲಾ ಕ್ರೂರಿಗಳಾಗಿ ವರ್ತಿಸುತ್ತಿರಲಿಲ್ಲ. ವಾಟಾಳ್ ನಾಗರಾಜ್, ಪ್ರಭಾಕರ ರೆಡ್ಡಿ, ನಾರಾಯಣಕುಮಾರ್ ಅವರಿಂದ ಹಿಡಿದು ಈಗಿನ ನಾರಾಯಣಗೌಡರವರೆಗೂ ಕನ್ನಡಕ್ಕಾಗಿ ಒದೆಸಿಕೊಂಡವರು, ಹೊಡೆಸಿಕೊಂಡವರಿಗೆ, ಕೇಸು ಹಾಕಿಕೊಂಡವರಿಗೆ ಲೆಕ್ಕವಿಲ್ಲ. ಆದರೆ, ಮುಂದೆ ಹೀಗೆ ಬಿಡುವುದು ಹಾಳಾಗಿ ಹೋಗಲಿ. ಪ್ರತಿಭಟನಾಕಾರರ ಮೇಲೆ, ಶಾಂತಿಗೆ ಭಂಗ ತಂದ, ನಿಷೇದಾಜ್ಞೆ ಉಲ್ಲಂಘಿಸಿದ, ಗುಂಪು ಕಟ್ಟಿದ ಪ್ರಕರಣಗಳನ್ನು ದಾಖಲಾಗತೊಡಗಿದವು. ಇದಕ್ಕೆಲ್ಲಾ ಐಪಿಸಿ ೧೪೩ರಿಂದ ೧೪೯, ೩೨೩, ೧೪೯ ಬಳಸುತ್ತಿದ್ದರು. ಕರ್ನಾಟಕ ರಕ್ಷಣಾ ವೇದಿಕೆ ಪ್ರವೇಶವಾದ ಮೇಲೆ ಕನ್ನಡ ಹೋರಾಟದ ದಿಕ್ಕೇ ಬದಲಾಯಿತು. ಹೋರಾಟ ಉಗ್ರವಾಗತೊಡಗಿದಾಗ ಯಾವುದಕ್ಕೂ ಜಗ್ಗದವರನ್ನು ಹೆದರಿಸಲು ಪೊಲೀಸರು ಹೊಸ ಅಸ್ತ್ರ ಕಂಡುಹಿಡಿದರು. ಸರಿ ಐಪಿಸಿ ೫೦೬, ೫೦೬ಬಿ, ೩೦೭, ೪೩೬ ಅಡಿ ರ ಅಡಿ ಪ್ರಕರಣಗಳು ದಾಖಲಾಗತೊಡಗಿದವು.
ಐಪಿಸಿ ೫೦೬ ಬಿ ಎಂದರೆ ಇನ್ನೂ ಯಾರಿಗೂ ಅರ್ಥವಾಗದ ಕಾನೂನು. ಒಂದು ಬಾರಿ ೫೦೬, ೫೦೬ಬಿ ಬಂದು ಕುಳಿತರೆ ಅದೇನು ಜಾಮೀನು ನೀಡಬಹುದಾದ ಪ್ರಕರಣವೇ ಇಲ್ಲ, ಜಾಮೀನು ಪಡೆದು ಬಿಡುಗಡೆ ಮಾಡಲಾಗದ ಪ್ರಕರಣವೇ ಎನ್ನುವ ಗೊಂದಲ ಎಲ್ಲಾ ರಾಜ್ಯಗಳಲ್ಲೂ ಇದೆ. ಈ ಪ್ರಕರಣಗಳಲ್ಲಿ ದೂರು ಕೊಟ್ಟವರೇ ಬಂದು ಪ್ರಕರಣ ಹಿಂತೆಗೆದುಕೊಂಡ ಬಳಿಕವೇ ಜಾಮೀನು ದೊರೆಯುತ್ತದೆ. ಜಾಮೀನು ಸಿಕ್ಕಲಿಲ್ಲ ಎಂದರೆ ಹೋರಾಟಗಾರರು ಜೈಲು ಸೇರಿ ಅಲ್ಲಿ ದಿನಗಟ್ಟಲೇ ಕೊಳೆಯಬೇಕು. ಕೊಳೆಯಲಿ ಎನ್ನುವುದು ಪೊಲೀಸರ ಮತ್ತು ಸರಕಾರದ ಉದ್ದೇಶ.

ಜೈಲು ತುಂಬಿದ್ದರೆ ಗೆದ್ದರು
೫೦೬ ಹಾಕಿದರೆ ಜೈಲು ಗ್ಯಾರಂಟಿ ಅಲ್ಲವೇ, ಸರಿ ಪೊಲೀಸರು ೫೦೬ ಹಾಕಿಕೊಂಡು ಜೈಲಿಗೆ ಸೇರಿಸಿಯೇ ಬಿಡಬೇಕು ಎಂದು ನಿರ್ಧರಿಸಿ ಹೋಗುವಾಗ, ಪರಪ್ಪನ ಅಗ್ರಹಾರ ಜೈಲು ತುಂಬಿದೆ. ಈ ಹೋರಾಟಗಾರರಿಗೆಲ್ಲಾ ಅಲ್ಲಿ ಜಾಗವಿಲ್ಲ ಎನ್ನುವ ಸಂದೇಶ ಪೊಲೀಸ್ ಠಾಣೆಗೆ ಸೇರುತ್ತದೆ. ತಕ್ಷಣವೇ ಪೊಲೀಸರ ದಾಖಲೆಗಳಲ್ಲಿ ಕನ್ನಡ ಹೋರಾಟಗಾರರ ಅಪರಾಧ ಕಡಿಮೆಯಾಗುತ್ತದೆ. ಹಠ ಹಿಡಿದು ೫೦೬ ಹೇರಲು ಹೊರಟವರೇ ಅದನ್ನು ಕೈ ಬಿಟ್ಟು ಜಾಮೀನು ಪಡೆದು ಮನೆಗೆ ಹೋಗಿ ಎಂದು ದುಂಬಾಲು ಬೀಳುತ್ತಾರೆ. ಪೊಲೀಸರ ರೋಷ, ಆವೇಶ ಕೆಲವು ಬಾರಿ ಯಾವ ಪರಿ ಇರುತ್ತದೆ ಎಂದರೆ, ಇಲ್ಲದ ಐಪಿಸಿಗಳ ಹೆಸರಲ್ಲೂ ಎಫ್‌ಐಆರ್ ಬರೆದು ನಂತರ ತಪ್ಪಿನ ಅರಿವಾಗಿ ತಿದ್ದಿಕೊಂಡ ಉದಾಹರಣೆಗಳೂ ಇವೆ.

ಆಗ ಹೋಗಿ ಬನ್ನಿ
ಮೊದಲೆಲ್ಲಾ ಕನ್ನಡ ಹೋರಾಟ ಎಂದರೆ ಇಷ್ಟೊಂದು ಅಪಾಯಕಾರಿಯಾಗಿರಲಿಲ್ಲ. ಧರಣಿ ಪ್ರತಿಭಟನೆ ನಡೆದರೆ, ಬಂಧಿಸಿರುವುದಾಗಿ ಹೇಳಿ ಸ್ವಲ್ಪ ದೂರ ಕರೆದುಕೊಂಡು ಹೋಗಿ, ಒಳ್ಳೆಯ ಕೆಲಸ ಮಾಡಿದ್ದೀರಾ ಹೋಗ್ರಪ್ಪಾ ಇನ್ನು ಸಾಕು ಎಂದು ಸಾಗಿ ಹಾಕುತ್ತಿದ್ದ ಪೊಲೀಸ್ ಅಧಿಕಾರಿಗಳೇ ಹೆಚ್ಚು. ಇದರಲ್ಲಿ ಕನ್ನಡ ಹೋರಾಟಗಾರರು ಇಂದಿಗೂ ನೆನೆಯುವುದು ಬೆಂಗಳೂರು ಪೊಲೀಸ್ ಕಮಿಷನರ್ ಆಗಿದ್ದ ಗುರುಡಾಚಾರ್ ಅವರನ್ನು. ಆದರೆ, ಈಗ ಏನಾಗಿದೆ ಎಂದರೆ, ಪರಭಾಷೆಯವರಿಗಿಂತ ಪೊಲೀಸರೇ ಕನ್ನಡ ಹೋರಾಟಗಾರರ ಮೊದಲ ಶತ್ರುಗಳಾಗಿದ್ದಾರೆ. ದೊಡ್ಡವರು ಹೇಳಿದ್ದಾರೆ. ಕೇಸು ಹಾಕಲೇ ಬೇಕು ಎಂದು ಎಲ್ಲದರ ಜತೆಗೆ ಇನ್ನೊಂದು ಎಂದು ಅಗತ್ಯ ಇರಲಿ ಬಿಡಲಿ ೫೦೬, ೫೦೬ಬಿ ಜಡಿದು ಕಳಿಸುತ್ತಾರೆ.

ದುಡ್ಡು ದುಡ್ಡು ದುಡ್ಡು
ಅವತ್ತು ಬೆಂಗಳೂರಿನಲ್ಲಿ ತಿರುವಳ್ಳರ್ ಪ್ರತಿಮೆ ಸ್ಥಾಪನೆಗೆ ಸರಕಾರ ಮುಂದಾದಾಗ ಅದನ್ನು ಪ್ರತಿಭಟಿಸಿ ಕರವೇ ಕಾರ್ಯಕರ್ತರು ಜೈಲು ಸೇರಿದರಲ್ಲ. ಹೀಗೆ ಜೈಲು ಸೇರಿದವರ ಸಂತೆ ೬೦೦ಕ್ಕೂ ಹೆಚ್ಚು ಸುಮಾರು ೧ವಾರಗಳ ಕಾಲ ಇವರನ್ನೆಲ್ಲ ಜೈಲಿಗೆ ಕಳುಹಿಸಲಾಯಿತು. ಬಳಿಕ ತಲಾ ನಾಲ್ಕು ಸಾವಿರ ರೂ. ಕೊಟ್ಟು ಜಾಮೀನು ಪಡೆಯಬಹುದೆಂದು ನ್ಯಾಯಾಧೀಶರು ಹೇಳಿದರು. ಸುಮಾರು ೩-೪ದಿನಗಳ ಕಾಲ ೬೦೦ಜನರಿಗೂ ತಲಾ ನಾಲ್ಕು ಸಾವಿರ ಎಂದರೆ ಸುಮಾರು ೨೪ಲಕ್ಷ ರೂಪಾಯಿ ಹೊಂದಿಸಿ ಜಾಮೀನು ಪಡೆದು ಜೈಲಿನಿಂದ ಹೊರಬಂದರು ಕಾರ್ಯಕರ್ತರು. ಹೀಗೆ ಸುಮ್ಮನೆ ಹಿಡಿದುಕೊಂಡು ಹೋಗಿ ೪ಸಾವಿರ ಇಟ್ಟು ಜಾಮೀನು ಪಡೆಯಿರಿ ಎಂದದ್ದು ಇದೇ ಮೊದಲಲ್ಲ. ಇಂತಹ ಪ್ರಕರಣಗಳು ಹಲವು ನಡೆದಿವೆ. ಹಲವು ಬಾರಿ ಜಾಮೀನಿನ ದಾಖಲೆಗಳನ್ನು, ಪತ್ನಿಯ ಒಡವೆಗಳನ್ನು ಅಡವಿಟ್ಟು ಜಾಮೀನು ಪಡೆಯಲಾಗಿದೆ.
ಇದು ಬರೀ ಹೋರಾಟ ನಡೆಸಿದವರಿಗೆ ಆಗುವ ಅನುಭವವಲ್ಲ. ಒಂದು ಬಾರಿ ಏನಾಯಿತೆಂದರೆ, ಕರವೇ ಕಾರ್ಯಕರ್ತರೆಲ್ಲಾ ಮೆಜೆಸ್ಟಿಕ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದರು, ಕೊನೆಗೆ ಪ್ರತಿ ಬಾರಿ ಆಗುವುದೇ ಆಯಿತು. ಇವರು ಕಲ್ಲು ಹೊಡೆದರು ಪೊಲೀಸರು ಹಿಡಿದು ಬಂಧಿಸಿ ಜೈಲಿಗೆ ಕಳಿಸಿದರು. ಅಲ್ಲಿ ಹೋದರೆ ಕರವೇ ನಾಯಕರಿಗೆ ಪರಿಚಯ ಇಲ್ಲದ ಹಲವರನ್ನು ಈ ಪ್ರತಿಭಟನೆಯ ಹೆಸರಿನಲ್ಲಿ ಪೊಲೀಸ್ ಠಾಣೆಯಲ್ಲಿ ಬಂಧಿಸಿ ಕೂರಿಸಲಾಗಿತ್ತು.
ನೀವ್ಯಾರ್ರಿ ಎಂದರೆ, ನಾವು ಸುಮ್ಮನೆ ರಸ್ತೆಯಲ್ಲಿ ಹೋಗುತ್ತಿದ್ದೆವು, ನಿಮ್ಮನ್ನು ಹಿಡಿದಾಗ ನಮ್ಮನ್ನೂ ಹಿಡಿದು ತಂದರು ಎಂದು ಗೋಳಾಡಿದರು. ತಮ್ಮ ಕಾರ್ಯಕರ್ತರಿಗಿಂತ ಮೊದಲು ಹೀಗೆ ಬಂದ ಅಮಾಯಕರಿಗೆ ಜಾಮೀನು ಕೊಡಿಸಿ ಹೊರಗೆ ಕಳಿಸಿದ ಉದಾಹರಣೆಗಳಿವೆ. ಕನ್ನಡ ಹೋರಾಟಗಾರರ ಮೇಲಿರುವ ಆರೋಪಗಳೂ ರುಜುವಾತಾದರೆ ಪ್ರತಿಯೊಬ್ಬರು ಕನಿಷ್ಟ ಆರು ತಿಂಗಳುಗಳಿಂದ ೧೦ವರ್ಷ ಜೈಲು ಸೇರಲಿದ್ದಾರೆ. ನಾರಾಯಣಗೌಡರಿಗೂ ಇದು ಅನ್ವಯಿಸುತ್ತದೆ.

ಕೋರ್ಟುಗಳೇ ವಾಸಿ
ಪೊಲೀಸರಿಗಿಂತ, ಯಡಿಯೂರಪ್ಪನವರಿಗಿಂತ ಕೋರ್ಟುಗಳೇ ವಾಸಿ ಎನ್ನುವುದು ಕನ್ನಡ ಹೋರಾಟಗಾರರ ಅನುಭವಾಮೃತ. ಇದೇನ್ರಿ ಯಾವಾಗ್ಲು ಕೋರ್ಟ್‌ನಲ್ಲೇ ಇರ‍್ತೀರಾ? ಹೆಂಡತಿ ಮಕ್ಕಳ ಕತೆಯೇನು? ಮಾಡಿದ್ದು ಕನ್ನಡ ಪರ ಹೋರಾಟ; ಆದ್ರೂ ಇಷ್ಟು ಕೇಸುಗಳಾ ಎಂದು ಹಲವು ನ್ಯಾಯಾಧೀಶರೇ ಕನ್ನಡ ಹೋರಾಟಗಾರರ ಬಗ್ಗೆ ಕಾಳಜಿ ತೋರಿಸಿದ ಉದಾಹರಣೆಗಳಿವೆ.
ಕೆಲವು ನ್ಯಾಯಾಧೀಶರೇ ಇಂತಹ ಕೇಸುಗಳನ್ನು ಮುಂದುವರೆಸುವುದರಲ್ಲಿ ಅರ್ಥವಿಲ್ಲ ಎಂದು ಪ್ರಕರಣಗಳನ್ನು ಕೈಬಿಟ್ಟಿದ್ದಾರೆ. ಆದರೆ, ಯಡಿಯೂರಪ್ಪ? ಉಹುಂ, ಅವರು ಈಗ ಬಿಟ್ಟರೆ ಮುಂದೆ ಸಿಕ್ಕ ಎಂದು ಹೋರಾಟಗಾರರ ಮೂಗು ಹಿಡಿಯಲು ಹೊರಟಿದ್ದಾರೆ. ಒಂದೆರಡು ಅವಧಿಗೆ ಸರಕಾರಗಳು ಹೀಗೆ ಇದ್ದರೆ ಯಾರೊಬ್ಬರು ಹೋರಾಟಕ್ಕೆ ಬೀದಿಗಿಳಿಯುವುದಿಲ್ಲ. ಕನ್ನಡಿಗರ ಕಷ್ಟವನ್ನು ಆ ಭುವನೇಶ್ವರಿಯೇ ಕೇಳುವಂತಿಲ್ಲ.

- ಅಶೋಕ್ ರಾಮ್ ಡಿ.ಆರ್.
(ಕೃಪೆ. ವಿಜಯಕರ್ನಾಟಕ)

ದಕ್ಕದ ಶಾಸ್ತ್ರೀಯ ಸ್ಥಾನ-ಸಿಗದ ಮಾನ



`ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ' ಎಂದು ಸಾವಿರ ವರ್ಷಗಳ ಹಿಂದೆ ಪಂಪ ಗಟ್ಟಿಧ್ವನಿಯಲ್ಲಿ ಘೋಷಿಸಿದ್ದರೂ ನಮ್ಮನ್ನಾಳುವ ಸರ್ಕಾರಕ್ಕೆ ಯಾರೂ ಅಂಕುಶವಿಡದಿದ್ದರೂ ಕನ್ನಡ ದೇಶವನ್ನು ನೆನೆಯುವ, ಅದನ್ನು ಒನಪು ಮಾಡುವ ಇಚ್ಛಾಶಕ್ತಿ ಬಂದಿಲ್ಲ.
ಇದು ದುರಂತವಲ್ಲದೇ ಮತ್ತೇನಲ್ಲ. ಕೇಂದ್ರ ಸರ್ಕಾರ ನಿರಂತರವಾಗಿ ತಮಿಳು ಭಾಷೆಗೆ, ತಮಿಳು ನಾಡಿಗೆ ಅಗ್ರಸ್ಥಾನ ಕೊಡುತ್ತಲೇ ಬಂದಿದ್ದರೂ ನಾವು ಆರಿಸಿದ ಸರ್ಕಾರದ ಪ್ರತಿನಿಧಿಗಳು ಪಕ್ಕಾ ಹೇತಲಾಂಡಿಗಳಾಗಿವರ್ತಿಸುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಕೇಳಿಸುವ ನಮ್ಮ ರಾಜಕಾರಣಿಗಳ ಗುಡುಗು ಅವರು ಸಂಸತ್‌ಗೆ ಆಯ್ಕೆಯಾಗಿ ಹೋದ ಮೇಲೆ ಬೋರ್ಗರೆವ ಮಳೆ ಸುರಿಸಿ ಕನ್ನಡ ನೆಲವನ್ನು ತಂಪಾಗಿಸುವುದು ಹೋಗಲಿ, ತುಂತುರು ಹನಿಗಳ ಸಿಂಚನವನ್ನು ಮಾಡುವುದಿಲ್ಲ. ನರಸತ್ತ ನರಿಗಳಾದರೂ ಕನಿಷ್ಠ ಊಳಿಡುತ್ತವೆ. ಆದರೆ ರಾಜ್ಯದಿಂದ ಆಯ್ಕೆಯಾಗಿ ಹೋದ ಸಂಸದರ ಉಬ್ಬಸ ದ ಏದುಸಿರು ಕೂಡ ಕೇಳಿಸದು.
ಕನ್ನಡ ಅಭಿಜಾತ ಭಾಷೆ(ಶಾಸ್ತ್ರೀಯ ಭಾಷೆ) ಎಂದು ಅಧಿಕೃತವಾಗಿ ಘೋಷಿಸಿ ಎರಡು ವರ್ಷಗಳೇ ಸಮೀಪಿಸುತ್ತಿದ್ದರೂ ಇನ್ನೂ ಅದರ ಯಾವುದೇ ಲಾಭ ಕನ್ನಡ ಭಾಷೆಗೆ ಸಿಕ್ಕಿಲ್ಲ. ಇತ್ತೀಚೆಗೆ ಕೇಂದ್ರ ಕಾನೂನು ಸಚಿವ ಎಂ. ವೀರಪ್ಪ ಮೊಯಿಲಿ ಅವರು ಮನಸ್ಸು ಮಾಡಿ ಬಂಧನದಲ್ಲಿದ್ದ ಸ್ಥಾನಮಾನವನ್ನು ಕೊಡಿಸುವ ಯತ್ನ ಮಾಡಿದ್ದಾರಾದರೂ ಅಧಿಕೃತವಾಗಿ ಶಾಸ್ತ್ರೀಯ ಸ್ಥಾನದ ಪೀಠ-ಕಿರೀಟಗಳು ಕನ್ನಡಕ್ಕೆ ದಕ್ಕಿಲ್ಲ.
ನಾವು ಆರಿಸಿ ಕಳಿಸಿದ ಜನಪ್ರತಿ ನಿಧಿಗಳಲ್ಲಿ ಸ್ವಾಭಿಮಾನ, ಇಚ್ಛಾಶಕ್ತಿ, ಕ್ರಿಯಾಶಕ್ತಿ, ಕನ್ನಡದ ಬಗೆಗೆ ಕಾಳಜಿ ಇಲ್ಲದಿರುವುದರಿಂದಲೇ ಇಂತಹದೊಂದು ದುರ್ಗತಿ ಕನ್ನಡಕ್ಕೆ ಬಂದಿದೆ. ಅಭಿವೃದ್ಧಿ ಮಂತ್ರವನ್ನು ಪಠಿಸುತ್ತಾ ಉಗುಳನ್ನು ನಾಡಿನ ಜನರ ಮೇಲೆಲ್ಲಾ ಸಿಂಪಡಿಸುತ್ತಿರುವ ಕರ್ನಾಟಕ ಸರ್ಕಾರ ಕೂಡ ಕನ್ನಡದ ಬಗ್ಗೆ ತೋರಿಸಿರುವ ಕಾಳಜಿ ಅಷ್ಟಕ್ಕಷ್ಟೆ. ಕನ್ನಡ ಸಾಹಿತ್ಯ ಪರಿಷತ್ತಿಗೆ, ಸಾಹಿತ್ಯ ಸಮ್ಮೇಳನಗಳಿಗೆ, ವಿವಿಧ ಅಕಾಡೆಮಿಗಳಿಗೆ ಹಣ ಕೊಡುವುದೇ ಕನ್ನಡದ ಮಟ್ಟಿಗೆ ಸಾರ್ಥಕ ಕೆಲಸ ಎಂದು ಯಡಿಯೂರಪ್ಪ ಭಾವಿಸಿದಂತಿದೆ. ಮಠಗಳಿಗೆ ಕೊಟ್ಟಂತೆ ಕೊಡುಗೈ ದಾನವನ್ನು ಕನ್ನಡಕ್ಕೆ ಕೊಟ್ಟರೆ ಕನ್ನಡ ಉದ್ಧಾರವಾಗುತ್ತದೆ ಎಂಬ ಅರೆ ತಿಳಿವಳಿಕೆಯಿಂದಾಚೆಗೆ ಸರ್ಕಾರ ಹೊರಬರದಿರುವುದರ ದ್ಯೋತಕ ಇದು. ಸರ್ಕಾರ ಇದರಿಂದ ಹೊರಬಂದು ಕನ್ನಡ ಕಟ್ಟುವ, ಸಂಸ್ಕೃತಿಯ ಬೇರುಗಳಿಗೆ ನೀರು-ಗೊಬ್ಬರ ಹಾಕಿ ಪೋಷಿಸುವ, ಕನ್ನಡ ಕೈಂಕರ್ಯಕ್ಕೆ ದುಡಿಯುವವರ ಮನದಾಳದ ಇಂಗಿತಗಳನ್ನು ಅರ್ಥ ಮಾಡಿಕೊಂಡು ಅದನ್ನು ಕಾರ್ಯರೂಪಕ್ಕೆ ಇಳಿಸುವ ಸಂಕಲ್ಪ ತೊಡದಿದ್ದರೆ ಕನ್ನಡ ಉದ್ಧಾರವೆಂಬುದು ಖರ್ಚು ಮಾಡಿದ ಹಣದ ಬಾಬತ್ತಿನ ಒಟ್ಟು ಮೊತ್ತವಾಗುತ್ತದೆ ವಿನಾ ಕನ್ನಡವೆಂಬುದು ಕಸದ ಬುಟ್ಟಿಯಲ್ಲಿ ಸೇರಿಕೊಂಡು ಬಿಡುತ್ತದೆ. ಆಳುವವರಿಗೆ ಇದು ಅರ್ಥವಾಗಬೇಕಷ್ಟೆ.

ಏನೀ ಸ್ಥಾನ
ಭಾಷಿಕ ಚರಿತ್ರೆಯಲ್ಲಿ ಪ್ರಾಚೀನತೆ, ಸಾಹಿತ್ಯ ಪಠ್ಯಗಳ ಮೌಲಿಕ ಪರಂಪರೆ, ವೈಶಿಷ್ಟ್ಯಪೂರ್ಣ ಅಸ್ಮಿತೆ ಹೊಂದಿದ ಭಾಷೆಗೆ ಕೇಂದ್ರ ಸರ್ಕಾರ ಶಾಸ್ತ್ರೀಯ ಸ್ಥಾನಮಾನ ಕೊಡುತ್ತಿದೆ.
೨೦೦೪ರಲ್ಲಿ ಸಂಸ್ಕೃತಕ್ಕೆ ಹಾಗೂ ಅದರ ಜತೆಗೆ ತಮಿಳನ್ನು ಶಾಸ್ತ್ರೀಯ ಭಾಷೆಯೆಂದು ಕೇಂದ್ರ ಸರ್ಕಾರ ಘೋಷಿಸಿತು. ತಮಿಳಿನಷ್ಟೇ ಪುರಾತನವಾದ, ಲಿಖಿತ-ಅಲಿಖಿತ ಸಾಹಿತ್ಯ ಸಮೃದ್ಧಿಯನ್ನು ಹೊಂದಿದ, ದೇಶದಲ್ಲೇ ಅತಿ ಹೆಚ್ಚು eನಪೀಠ ಪ್ರಶಸ್ತಿಗಳನ್ನು ಪಡೆದಿರುವ ಕನ್ನಡ ಭಾಷೆಗೆ ಕೇಂದ್ರ ಸರ್ಕಾರ ಈ ಮಾನ್ಯತೆಯನ್ನು ನೀಡಲೇ ಇಲ್ಲ.
ಕನ್ನಡಕ್ಕೂ ಶಾಸ್ತ್ರೀಯ ಭಾಷೆಯ ಸ್ಥಾನಮಾನ ನೀಡಬೇಕೆಂಬ ಕೂಗು ಆಗ ಕೇಳಿ ಬಂತು. ಕೇಂದ್ರ ಸರ್ಕಾರವೇನೋ ಕನ್ನಡಕ್ಕೂ ಕೊಡಲು ಮುಂದಾಯಿತು. ಆದರೆ ತಮಿಳಿನ ಕೆಲ ರಾಜಕಾರಣಿಗಳು ಇದಕ್ಕೆ ಅಡ್ಡಗಾಲು ಹಾಕಿ, ತಮ್ಮ ಲಾಬಿ ನಡೆಸಿದರು. ಅದರ ಫಲವಾಗಿ ೧೫೦೦ ವರ್ಷಕ್ಕೂ ಹಿಂದಿನ ಭಾಷೆಗೆ ಕೊಡಬಹುದೆಂಬ ನಿಯಮವನ್ನು ತಿದ್ದುಪಡಿ ಮಾಡಿ ೨೦೦೦ ವರ್ಷಗಳ ದಾಖಲಾದ ಸಾಹಿತ್ಯದ ಇತಿಹಾಸವಿರುವ ಭಾಷೆಗೆ ಮಾತ್ರ ಕೊಡಬಹುದೆಂಬ ನಿರ್ಧಾರಕ್ಕೆ ಬಂದಿತು. ೨೦೦೪ರಲ್ಲೇ ಸಿಗಬೇಕಾಗಿದ್ದ ಸ್ಥಾನ ಕೈ ತಪ್ಪಿ ಹೋಗಲು ತಮಿಳಿನ ಕುತಂತ್ರವೇ ಕಾರಣ.
ಕರ್ನಾಟಕ ರಕ್ಷಣಾ ವೇದಿಕೆಯ ಹಕ್ಕೊತ್ತಾಯ, ದೆಹಲಿ ಚಲೋ, ನಿರಂತರ ಪ್ರತಿಭಟನೆಗಳ ಫಲವಾಗಿ ಇಂತಹದೊಂದು ಕನಸು ಸಾಕಾರಗೊಳ್ಳುವ ಕಾಲ ಬಂದಿತು. ೨೦೦೮ರ ಮೇ ನಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಆಗ ಕನ್ನಡಿಗರ ಕೂಗಿಗೆ ಧ್ವನಿಯಾದರು. ಶಾಸ್ತ್ರೀಯ ಸ್ಥಾನ ಕೊಡದಿದ್ದರೆ ದೆಹಲಿಯಲ್ಲಿ ಧರಣಿ ಕೂರುವುದಾಗಿ ಧಮಕಿ ಹಾಕಿದರು. ಹತ್ತಾರು ಕನ್ನಡ ಸಂಘಟನೆಗಳು ರಾಜ್ಯದ ಉದ್ದಗಲಕ್ಕೂ ಪ್ರತಿಭಟನೆ ನಡೆಸಿದವು.
ಇದೆಲ್ಲದರ ಫಲ ರೂಪವಾಗಿ ೨೦೦೮ರ ಅಕ್ಟೋಬರ್ ೩೧ ಅಂದರೆ ಕನ್ನಡ ರಾಜ್ಯೋತ್ಸವದ ಮುನ್ನಾದಿನ ಕೇಂದ್ರ ಸರ್ಕಾರ ಕನ್ನಡವನ್ನು ಶಾಸ್ತ್ರೀಯ ಭಾಷೆಯೆಂದು ಘೋಷಿಸಿತು. ಆದರೆ ಅಧಿಸೂಚನೆ ಕೊನೆಯ ಸಾಲಿನಲ್ಲಿ ಸದರಿ ಅಧಿಸೂಚನೆಯು ಚೆನ್ನೈ ಹೈಕೋರ್ಟ್‌ನಲ್ಲಿರುವ ತಡೆಯಾಜ್ಞೆಯ ತೀರ್ಪನ್ನು ಆಧರಿಸಿರತ್ತದೆ ಎಂದು ಸ್ಪಷ್ಟವಾಗಿ ಹೇಳಿತ್ತು.
ಇದನ್ನು ಅರಿಯದ ಸರ್ಕಾರ, ಕನ್ನಡ ಪರ ಸಂಘಟನೆಗಳು ತಮ್ಮ ಹೋರಾಟಕ್ಕೆ ಜಯ ಸಿಕ್ಕಿಯೇ ಬಿಟ್ಟಿತು ಎಂದು ಸಂಭ್ರಮ ಪಟ್ಟವು. ಸಂಭ್ರಮ ಪಟ್ಟದ್ದೊಂದು ಬಿಟ್ಟರೆ ಈಗಲೂ ಕೇಂದ್ರ ಸರ್ಕಾರದಿಂದ ಯಾವುದೇ ಅನುದಾನ ಕನ್ನಡಕ್ಕೆ ಬಂದಿಲ್ಲ. ಆದರೆ ತಮಿಳು ಭಾಷೆಯು ಈವರೆಗೆ ೧೫ ಕೋಟಿ ರೂ. ಗೂ ಹೆಚ್ಚಿನ ಅನುದಾನವನ್ನು ಶಾಸ್ತ್ರೀಯ ಸ್ಥಾನದ ಹೆಸರಿನಲ್ಲಿ ಪಡೆದು ಬಿಟ್ಟಿದೆ. ನಮ್ಮ ದೌರ್ಭಾಗ್ಯ ಹೇಗಿದೆ ಎಂದರೆ ಈವರೆಗೂ ಒಂದೇ ಒಂದು ಚಿಕ್ಕಾಸು ಕೂಡ ಕನ್ನಡದ ಅಭಿವೃದ್ಧಿಗೆ ಸಿಕ್ಕಿಲ್ಲ.

ಅಡ್ಡಿ ಆತಂಕ
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನದ ಸೌಲಭ್ಯ ಸಿಕ್ಕದೇ ಇರಲು ನೇರ ಕಾರಣ ತಮಿಳುನಾಡಿನ ವಕೀಲ ಗಾಂಧಿ ಎಂಬವ ಸಲ್ಲಿಸಿದ ರಿಟ್ ಅರ್ಜಿ. ಅದರ ಜತೆಗೆಯೇ ಅದರ ಆಳಗಲ ಅರಿತು, ಕ್ರಮ ಕೈಗೊಳ್ಳಬೇಕಾದ ಕೇಂದ್ರ ಸರ್ಕಾರದ ಕನ್ನಡ ವಿರೋಧಿ ಧೋರಣೆ. ಜತೆಗೆ ರಾಜ್ಯ ಸರ್ಕಾರದ ದಿವ್ಯನಿರ್ಲಕ್ಷ್ಯ.
೨೦೦೮ರ ಅಕ್ಟೋಬರ್‌ನಲ್ಲಿ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಘೋಷಿಸಿದ್ದೇ ತಡ ಅದನ್ನು ಪ್ರಶ್ನಿಸಿ ಗಾಂಧಿ ಮತ್ತೊಂದು ರಿಟ್ ಅರ್ಜಿ ಸಲ್ಲಿಸಿದ. ಅದರಲ್ಲಿ ತಡೆಯಾಜ್ಞೆ ಇದ್ದರೂ ಕೇಂದ್ರ ಸರ್ಕಾರವು ಕನ್ನಡ ಮತ್ತು ತೆಲುಗಿಗೆ ಶಾಸ್ತ್ರೀಯ ಸ್ಥಾನ ಕೊಟ್ಟಿದೆ. ಪೂರ್ಣ ಪ್ರಮಾಣದ ತಜ್ಞರ ಸಮಿತಿಯ ಶಿಫಾರಸ್ಸು ಇರಲಿಲ್ಲ. ಮೈಸೂರಿನಲ್ಲಿರುವ ಭಾರತೀಯ ಭಾಷಾ ಸಂಸ್ಥಾನದ ನಿರ್ದೇಶಕರ(ಇವರು ಶಾಸ್ತ್ರೀಯ ಭಾಷೆ ನೀಡಲು ಶಿಫಾರಸ್ಸು ಮಾಡಿದ ಸಮಿತಿಯ ಅಧ್ಯಕ್ಷರೂ ಸಹ) ಮೇಲೆ ಬೆದರಿಕೆ ಹಾಕಲಾಗಿದೆ. ವಿಶ್ರಾಂತ ಕುಲಪತಿ ದೇ. ಜವರೇಗೌಡ ಎಂಬುವರು ಆಮರಣಾಂತ ಉಪವಾಸ ಕೈಗೊಂಡು ಒತ್ತಡ ಹಾಕಿ ಶಿಫಾರಸ್ಸು ಮಾಡಿದ್ದಾರೆ. ಶಿಫಾರಸ್ಸು ಸಮಿತಿಯ ಸಭೆ ಅನುಕ್ರಮವಾಗಿ ನಡೆಯದಿದ್ದರೂ ರಾಜಕೀಯ ಕಾರಣಕ್ಕಾಗಿ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ನೀಡಲಾಗಿದೆ ಎಂದು ಗಾಂಧಿ ಹೇಳಿದ್ದ.
ಕನಿಷ್ಠ ಇದನ್ನು ಪ್ರಶ್ನಿಸಿ, ನ್ಯಾಯಾಲಯದ ಕಡತಗಳನ್ನು ಪರಿಶೀಲಿಸುವ ಗೋಜಿಗೂ ರಾಜ್ಯ ಸರ್ಕಾರ ಹೋಗಲಿಲ್ಲ. ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿ ಸರ್ಕಾರ ಸ್ಥಾಪನೆಯಾದ ಹಿನ್ನೆಲೆಯಲ್ಲಿ ಆಡಳಿತಾರೂಢರು ಸಂಭ್ರಮಿಸಿದರೇ ವಿನಃ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಕೊಡಿಸುವ ಗೊಡವೆಗೆ ಹೋಗಲೇ ಇಲ್ಲ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ವಕೀಲರನ್ನಿಟ್ಟು ಕಾನೂನಾತ್ಮಕ ಹೋರಾಟ ನಡೆಸುವ ಯತ್ನ ಮಾಡಿತಾದರೂ ಅದು ಸಕಾಲ ಹಾಗೂ ಸಮರ್ಪಕವಾಗಿ ನಡೆಯಲೇ ಇಲ್ಲ. ಬೇಕಾಬಿಟ್ಟಿ ವರ್ತನೆ ಸರ್ಕಾರದ ಕಡೆಯಿಂದ ನಡೆಯಿತು.
ಅಷ್ಟರಲ್ಲಿ ಲೋಕಸಭೆ ಚುನಾವಣೆ ಬಂದು ಸರ್ಕಾರ ಅಸ್ತಿತ್ವದಲ್ಲಿ ಇಲ್ಲದೇ ಹೋಗಿದ್ದರಿಂದಾಗಿ ಯಾವ ಪ್ರಕ್ರಿಯೆಯೂ ನಡೆಯಲಿಲ್ಲ. ಚುನಾವಣೆ ನಡೆದು ಕೇಂದ್ರದಲ್ಲಿ ಮತ್ತೆ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದಿತು. ರಾಜ್ಯದ ಪ್ರಭಾವಿ ನಾಯಕರಾದ ಎಸ್.ಎಂ. ಕೃಷ್ಣ, ವೀರಪ್ಪ ಮೊಯಿಲಿ, ಮಲ್ಲಿಕಾರ್ಜುನ ಖರ್ಗೆ ಹಾಗೂ ಕೆ.ಎಚ್. ಮುನಿಯಪ್ಪ ಸಚಿವರಾದರೂ ರಾಜ್ಯಕ್ಕೆ ಆದ ಅನ್ಯಾಯ ಸರಿಪಡಿಸುವ ಗೋಜಿಗೆ ಇವರ‍್ಯಾರು ಹೋಗಲೇ ಇಲ್ಲ.
ಅನ್ಯಾಯದ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ಪದ್ಧತಿಯನ್ನೇ ಇವರು ಮುಂದುವರೆಸಿದರು. ಅತಿ ಹೆಚ್ಚು ಸಂಖ್ಯೆಯಲ್ಲಿ ಅಂದರೆ ೧೯ ಜನರ ಸಂಸದರು ಬಿಜೆಪಿಯಿಂದ ಆರಿಸಿ ಹೋದರೂ ಅವರು ಕೂಡ ಕೇಂದ್ರದ ಮೇಲೆ ಒತ್ತಡ ತರುವ ಕೆಲಸ ಮಾಡಲೇ ಇಲ್ಲ. ಅಧಿಕಾರ ಸಿಕ್ಕಿದರೂ ಕನ್ನಡದ ಕೆಲಸ ಮಾಡಲಾಗದ ಕೇಂದ್ರ ಮಂತ್ರಿಗಳು, ನಮ್ಮ ಸಂಸದರ ಬೇಜವಾಬ್ದಾರಿತನಕ್ಕೆ ಯಾರನ್ನು ಹಳಿಯಬೇಕೋ ಎಂಬುದೂ ಗೊತ್ತಾಗಲಿಲ್ಲ.

ಇಷ್ಟರ ಮಧ್ಯೆ
ಗಾಂಧಿ ಹಾಕಿದ ರಿಟ್‌ನಿಂದಾಗಿ ಶಾಸ್ತ್ರೀಯ ಸ್ಥಾನ ಸಿಕ್ಕಿಲ್ಲವೆಂದು ಎಲ್ಲರೂ ಹೇಳುತ್ತಿದ್ದರು. ಆದರೆ ಅದು ಸತ್ಯವೇ ಎಂಬ ಹುಡುಕಾಟ ನಡೆಸಿ, ನ್ಯಾಯ ಒದಗಿಸುವ ಗೈರತ್ತು ರಾಜ್ಯ ಸರ್ಕಾರವಾಗಲಿ, ಸಂಸದರಾಗಲಿ ತೋರಲೇ ಇಲ್ಲ.
ಗಾಂಧಿ ಸಲ್ಲಿಸಿದ ರಿಟ್ ಶಾಸ್ತ್ರೀಯ ಸ್ಥಾನ ನೀಡಿದ ಕೇಂದ್ರದ ನಿಲುವನ್ನು ಪ್ರಶ್ನಿಸಿದ್ದಾಗಿತ್ತೇ ವಿನಃ ಕನ್ನಡಕ್ಕೆ ಸೌಲಭ್ಯ ಕೊಡುವುದನ್ನು ಪ್ರಶ್ನಿಸಿದ್ದಾಗಿರಲಿಲ್ಲ. ರಾಜ್ಯದ ಅಡ್ವೋಕೇಟ್ ಜನರಲ್ ಆಗಿದ್ದ ಉದಯ ಹೊಳ್ಳ ಅವರಿಗಾಗಲಿ, ಈಗ ಅಡ್ವೋಕೇಟ್ ಜನರಲ್ ಆಗಿರುವ ಅಶೋಕ್ ಹಾರನಹಳ್ಳಿ ಅವರಿಗಾಗಲಿ ಹೊಳಯಲೇ ಇಲ್ಲ. ಎಲ್ಲರೂ ಸರ್ಕಾರವನ್ನು ಸುಮ್ಮನೇ ಯಾಮಾರಿಸುತ್ತಾ ಬಂದರು.
ಕನ್ನಡಪರ ಸಂಘಟನೆಗಳ ಒತ್ತಡ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರ ಒತ್ತಡ, ಕನ್ನಡ ಸಾಹಿತಿಗಳ ಹಕ್ಕೊತ್ತಾಯಗಳ ಫಲವಾಗಿ ಕೇಂದ್ರ ಸಂಸ್ಕೃತಿ ಸಚಿವಾಲಯವೇ ಪ್ರಕ್ರಿಯೆಗೆ ಮುಂದಾಯಿತು. ಇದರ ಜತೆಗೆ ಆಂಧ್ರಪ್ರದೇಶದ ಸರ್ಕಾರದ ಹಾಕಿದ ಒತ್ತಡವೂ ಪರೋಕ್ಷವಾಗಿ ಕೆಲಸ ಮಾಡಿತು.
ಹೀಗಾಗಿ ಕೇಂದ್ರ ಸಂಸ್ಕೃತಿ ಸಚಿವಾಲಯವು ಗೃಹ ಸಚಿವಾಲಯಕ್ಕೆ ಪತ್ರ ಬರೆದು ಶಾಸ್ತ್ರೀಯ ಸ್ಥಾನದ ಸೌಲಭ್ಯ ಕೊಡುವ ಬಗ್ಗೆ ಸಲಹೆ ಕೇಳಿತು. ಅದು ಕಾನೂನಾತ್ಮಕ ವಿಷಯವಾಗಿದ್ದರಿಂದ ಗೃಹ ಸಚಿವಾಲಯವು ಕನ್ನಡಿಗರೇ ಆದ ಕಾನೂನು ಸಚಿವ ಎಂ. ವೀರಪ್ಪ ಮೊಯಿಲಿ ಅವರ ಕಚೇರಿಗೆ ಕಡತವನ್ನು ರವಾನಿಸಿತು.
ತಮ್ಮ ಕಚೇರಿಗೆ ತಲುಪಿದ್ದ ಕಡತವನ್ನು ಗಮನಿಸದೇ ಅದಕ್ಕೆ ತಕ್ಕ ಶಿಫಾರಸ್ಸನ್ನು ಮಾಡದ ವೀರಪ್ಪ ಮೊಯಿಲಿ ಅವರು ರಾಜ್ಯದ ಬಿಜೆಪಿ ಸರ್ಕಾರದ ನಿಷ್ಕ್ರಿಯತೆ ಫಲವಾಗಿ ಶಾಸ್ತ್ರೀಯ ಸ್ಥಾನ ಸಿಕ್ಕಿಲ್ಲ. ಕೇಂದ್ರದ ತಪ್ಪಿಲ್ಲವೆಂಬ ಬಾಂಬ್‌ನ್ನು ಸಿಡಿಸಿದರು.
ಆಗ ಚುರುಕಾದ ರಾಜ್ಯ ಸರ್ಕಾರ ನಿವೃತ್ತ ನ್ಯಾಯಮೂರ್ತಿ, ರಾಜ್ಯಸಭಾ ಸದಸ್ಯ ಎಂ. ರಾಮಾಜೋಯಿಸ್ ಅವರ ಮೊರೆ ಹೋಯಿತು. ಕಾನೂನು ತಜ್ಞರಾದ ಎಂ. ರಾಮಾಜೋಯಿಸ್ ಕಡತವನ್ನು ಪರಿಶೀಲಿಸಿದಾಗ ಗಾಂಧಿ ಹಾಕಿದ ರಿಟ್‌ನಲ್ಲಿ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನದ ಸೌಲತ್ತು ಕೊಡಲು ಅಭ್ಯಂತರವೇ ಇಲ್ಲವೆಂಬ ಸತ್ಯ ಬಯಲಾಯಿತು. ಈ ಸತ್ಯ ಗೊತ್ತಾಗುವಷ್ಟರಲ್ಲಿ ಒಂದೂವರೆ ವರ್ಷವೇ ಕಳೆದು ಹೋಗಿತ್ತು. ರಾಜ್ಯ ಸರ್ಕಾರ ಕೂಡ ಮೊಯಿಲಿಯವರ ವಿರುದ್ಧ ಪ್ರತ್ಯಾಸ್ತ್ರ ಬಳಸಲು ಸಜ್ಜಾಯಿತಲ್ಲದೇ ಕಡತದ ಜಾಡನ್ನು ಹಿಡಿದು ಹೊರಟಿತು. ಸದರಿ ಕಡತವು ಮೊಯ್ಲಿಯವರ ಕಚೇರಿಯಲ್ಲೇ ಕೊಳೆಯುತ್ತಿದ್ದನ್ನು ಪತ್ತೆ ಹಚ್ಚಿದ ರಾಜ್ಯ ಸರ್ಕಾರದ ಕೈಗಳು ಅದನ್ನು ಮಾಧ್ಯಮಗಳ ಮುಂದೆ ಅರುಹಿ ಸುದ್ದಿ ಪ್ರಕಟವಾಗುವಂತೆ ವ್ಯವಸ್ಥೆ ಮಾಡಿದರು.
ಈ ಮಾಹಿತಿ ವೀರಪ್ಪ ಮೊಯಿಲಿ ಕಚೇರಿಯನ್ನೂ ತಲುಪಿತು. ಆಗುವ ಯಡವಟ್ಟುಗಳನ್ನು ಸೂಕ್ಷ್ಮವಾಗಿ ಗಮನಿಸಿದ ಬುದ್ದಿವಂತ ಮೊಯಿಲಿಯವರು ರಾಜ್ಯಸರ್ಕಾರ ಪ್ಲಾಂಟ್ ಮಾಡಿದ ಸುದ್ದಿ ಪ್ರಕಟಣೆಗೆ ಹೋಗುವ ಮೊದಲೇ ತಮ್ಮ ಕಚೇರಿಯಿಂದ ಕಡತವನ್ನು ಕಳಿಸಿ, ಶಾಸ್ತ್ರೀಯ ಸ್ಥಾನದ ಸೌಲಭ್ಯ ನೀಡಲು ಯಾವುದೇ ಅಡೆ ತಡೆಯಿಲ್ಲ.
ಕೇಂದ್ರ ಸರ್ಕಾರ ಹಾಗೂ ಕಾನೂನು ಸಚಿವಾಲಯ ಎಲ್ಲವನ್ನೂ ಬಗೆಹರಿಸಿದೆ. ಕನ್ನಡಕ್ಕೆ ಸೂಕ್ತ ಸ್ಥಾನಮಾನ ಸಿಗಲಿದೆ ಎಂದು ಎಲ್ಲಾ ಪತ್ರಿಕಾ ಕಚೇರಿಗಳು ಆರು ಪುಟಗಳ ಪತ್ರಿಕಾ ಹೇಳಿಕೆಯನ್ನು ಫ್ಯಾಕ್ಸ್ ಮಾಡಿದರು.
ಹಾಗಿದ್ದೂ: ಇಷ್ಟೆಲ್ಲಾ ಆದರೂ ಇನ್ನೂ ಕೂಡ ಯಾವುದೇ ಉತ್ತರ ಕೇಂದ್ರದಿಂದ ಈವರೆಗೂ ಬಂದಿಲ್ಲ. ರಾಜ್ಯ ಸರ್ಕಾರ ಕ್ರಿಯಾಯೋಜನೆ ಹಾಗೂ ಪ್ರಸ್ತಾವನೆ ಸಲ್ಲಿಸಿದರೆ ಕೇಂದ್ರ ಕೊಡಲಿದೆ ಎಂದು ಸಂಸ್ಕೃತಿ ಸಚಿವಾಲಯ ಹೇಳುತ್ತಿದೆ.
ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೇಳುವ ಪ್ರಕಾರ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಜತೆಗೆ ಕಾರ್ಯ ಕ್ರಮ ಅನುಷ್ಠಾನಕ್ಕಾಗಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಅತ್ಯುನ್ನತ ಸಮಿತಿ ಹಾಗೂ ಇಲಾಖೆಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಕಾರ್ಯಕಾರಿ ಸಮಿತಿ ರಚಿಸಲಾಗಿದೆ. ಸಂಶೋಧನಾ ಒಕ್ಕೂಟವನ್ನು ಸ್ಥಾಪಿಸಿ ಆಸಕ್ತ ಸಂಶೋಧಕರನ್ನು ಪ್ರೇರೇಪಿಸಿದೆ. ರಾಜ್ಯದ ಎಲ್ಲಾ ವಿ.ವಿ.ಗಳ ಕನ್ನಡ ಅಧ್ಯಯನ ವಿಭಾಗಕ್ಕೆ ತಲಾ ೨ ಕೋಟಿ ರೂ.ಗಳನ್ನು ಸರ್ಕಾರ ನೀಡಿದೆ ಎಂದು ಸಂಸ್ಕೃತಿ ಇಲಾಖೆ ಮೂಲಗಳು ಹೇಳುತ್ತವೆ. ಶಾಸ್ತ್ರೀಯ ಸ್ಥಾನದ ನಿಯಮದ ಪ್ರಕಾರ ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರ ಯಾವುದೇ ಅನುದಾನ ಕೊಡುವುದಿಲ್ಲ.
ಮೈಸೂರಿನಲ್ಲಿರುವ ಭಾರತೀಯ ಭಾಷಾ ಸಂಸ್ಥಾನಕ್ಕೆ ಅನುದಾನ ಒದಗಿಸುತ್ತದೆ. ಅದೇ ಕ್ರಿಯಾಯೋಜನೆ ರೂಪಿಸಿ, ಪ್ರಸ್ತಾವನೆ ಸಲ್ಲಿಸಬೇಕು. ಅದನ್ನೂ ಸಂಸ್ಥಾನದ ನಿರ್ದೇಶಕರು ಮಾಡಿದ್ದಾರೆ. ಅಲ್ಲದೇ ದೇಶದ ಬೇರೆ ಬೇರೆ ವಿ.ವಿ.ಗಳಲ್ಲಿ ಕನ್ನಡ ಅಧ್ಯಯನ ಪೀಠ ಸ್ಥಾಪಿಸಲು ಕೇಂದ್ರ ಸರ್ಕಾರ ನೆರವು ನೀಡಲಿದೆ. ಕನ್ನಡದ ಪ್ರಾಚೀನ ಸಾಹಿತ್ಯದ ಸಂಶೋಧನೆ ಹಾಗೂ ಅಧ್ಯಯನ ಮಾಡುವವರಿಗೆ ಕೇಂದ್ರ ಸರ್ಕಾರ ಅನುದಾನ ನೀಡಲಿದೆ.
ಆದರೆ ಈವರೆಗೂ ಇದ್ಯಾವುದೂ ಆಗಿಲ್ಲ. ಕೇಂದ್ರ-ರಾಜ್ಯ ಸರ್ಕಾರಗಳಿರುವ ಕನ್ನಡದ ಬಗೆಗಿನ ಅಸಡ್ಡೆಯಿಂದಾಗಿ ಶಾಸ್ತ್ರೀಯ ಸ್ಥಾನ ದಕ್ಕಿದ್ದರೂ ಸಿಗಬೇಕಾದ ಮಾನ ಇನ್ನೂ ದೊರೆತಿಲ್ಲ.
- ಖುಷಿ

ಉದ್ಯಮ ಉದ್ಯೋಗ ಮತ್ತು ಕನ್ನಡ





ಕನ್ನಡವನ್ನು ಕೇವಲ ಅಭಿಮಾನದ ಪ್ರಶ್ನೆಯಾಗಿ ನೋಡಿದರೆ ಸಾಲದು. ನನ್ನ ದೃಷ್ಟಿಯಿಂದ ಕನ್ನಡವನ್ನು ಅನ್ನದ ಪ್ರಶ್ನೆಯಾಗಿ ಪರಿಗಣಿಸಬೇಕು. ಉದ್ಯೋಗ ಮತ್ತು ಕನ್ನಡಕ್ಕೆ ಸಂಬಂಧವಿರಬೇಕು. ಆಗ ಕನ್ನಡಿಗರೂ ಉಳಿಯುತ್ತಾರೆ. ಕನ್ನಡವೂ ಉಳಿಯುತ್ತದೆ.

ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ
ಜಾಗತೀಕರಣ, ಆರ್ಥಿಕ ಉದಾರೀಕರಣ ಮುಂತಾದ ಹೆಸರುಗಳ ಮೂಲಕ ನಮ್ಮ ದೇಶದ ಮಿಶ್ರ ಆರ್ಥಿಕ ಪದ್ಧತಿಯನ್ನು ಮೂಲೆಗುಂಪು ಮಾಡಿ ಮುಕ್ತ ಆರ್ಥಿಕ ಪದ್ಧತಿಯನ್ನು ಜಾರಿಗೊಳಿಸಲಾಗುತ್ತಿದೆ. ಇದರ ಫಲವಾಗಿ ಸಂಪೂರ್ಣ ಬಂಡವಾಳ ತೊಡಗಿಸಿ ಸರ್ವಸ್ವಾತಂತ್ರ್ಯವನ್ನು ಪಡೆಯುವ ಬಹುರಾಷ್ಟ್ರೀಯ ಕಂಪನಿಗಳು ನಮ್ಮ ದೇಶದೊಳಕ್ಕೆ ದಾಳಿಯಿಟ್ಟು ಸಂವಿಧಾನಾತ್ಮಕ ಸಾರ್ವಭೌಮತ್ವಕ್ಕೆ ಧಕ್ಕೆ ತರುತ್ತಿವೆ. ಸಂವಿಧಾನದ ಪ್ರಕಾರ ಜನರಿಂದ ಆಯ್ಕೆಯಾದ ಸರ್ಕಾರವು ರೂಪಿಸುವ ನೀತಿ-ನಿಯಮಗಳನ್ನು ಸಮಾಜದ ವಿವಿಧ ವಲಯಗಳು ಅನುಸರಿಸಬೇಕಾಗುತ್ತದೆ. ಆದರೆ ಬಹುರಾಷ್ಟ್ರೀಯ ಕಂಪನಿಗಳಿಗೆ ಅವರದೇ ನೀತಿ ನಿಯಮಗಳಿವೆ. ಸರ್ಕಾರದ ನಿಯಂತ್ರಣ ಇರಬಾರದು ಎಂಬುದೇ ಅರ್ಥಿಕ ಉದಾರೀಕರಣದ ಮೂಲ ನೀತಿ. ಆದ್ದರಿಂದ ಬಹುರಾಷ್ಟ್ರೀಯ ಕಂಪನಿಗಳು ಸರ್ಕಾರದ ನಿಯಂತ್ರಣಕ್ಕೆ ಒಳಗಾಗುವ ಬದಲು ಸರ್ಕಾರವನ್ನೇ ನಿಯಂತ್ರಿಸುವಷ್ಟು ಬಲಾಢ್ಯವಾ ಗಿವೆ. ವಿಶೇಷವಾಗಿ ಉದ್ಯೋಗದ ವಿಷಯದಲ್ಲಿ ರಾಜ್ಯ ಸರ್ಕಾರ ಅಷ್ಟೇ ಅಲ್ಲ ಕೇಂದ್ರ ಸರ್ಕಾರದ ನೀತಿ ನಿಯಮಗಳು ಸಹ ಈ ಕಂಪನಿಗಳಿಗೆ ಅನ್ವಯಿಸುವುದಿಲ್ಲ. ಬಹುರಾಷ್ಟ್ರೀಯ ಕಂಪನಿಗಳಲ್ಲಿ ಸ್ಥಳೀಯ ಕನ್ನಡಿಗರಿಗೆ ಉದ್ಯೋಗ ಕೊಡಬೇಕೆಂಬ ನಿಯಮವಿಲ್ಲ. ಅವರು ತಾವಾಗಿ ಕೊಡುವುದೂ ಇಲ್ಲ. ಮೀಸಲಾತಿ ನೀತಿ ಅವರಿಗೆ ಬೇಕಾಗಿಲ್ಲ.
ಇಲ್ಲಿ ಡಾ.ಸರೋಜಿನಿ ಮಹಿಷಿ ಸಮಿತಿಯ ವರದಿಯನ್ನು ಪ್ರಸ್ತಾಪ ಮಾಡುವುದು ಉಚಿತವಾದುದು. ಸಾರ್ವಜನಿಕ ಮತ್ತು ಖಾಸಗಿ ಉದ್ದಿಮೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಿಕೆಯಲ್ಲಿ ಆದ್ಯತೆಯಿರಬೇಕೆಂಬ ನೀತಿಯ ನೆಲೆಯಲ್ಲಿ ಖಚಿತ ಶಿಫಾರಸ್ಸುಗಳನ್ನು ಮಾಡಿದ ಈ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ಅಭಿನಂದನಾರ್ಹರು. ೪-೮-೧೯೮೩ರ ಆದೇಶದಲ್ಲಿ ಪ್ರಕಾರ ‘ವಾಣಿಜ್ಯ ಬ್ಯಾಂಕುಗಳನ್ನು ಒಳಗೊಂಡಂತೆ ಕೇಂದ್ರ ಸರ್ಕಾರದ ಸಾರ್ವಜನಿಕ ಉದ್ದಿಮೆಗಳಲ್ಲಿ ಕರ್ನಾಟಕದ ಜನರ ಉದ್ಯೋಗದ ಪರಿಸ್ಥಿತಿಯನ್ನು ಪರಿಶೀಲಿಸುವ ಸಲುವಾಗಿ’ ಈ ಸಮಿತಿಯನ್ನು ರಚಿಸಲಾಯಿತು. ಅದೇ ಸಂಖ್ಯೆಯ ದಿನಾಂಕ ೨೮-೬-೧೯೮೫ರ ಆದೇಶದಲ್ಲಿ ಈ ಸಮಿತಿಯ ವ್ಯಾಪ್ತಿಗೆ ಖಾಸಗಿ ಉದ್ಯಮಗಳನ್ನೂ ಸೇರಿಸಲಾಯಿತು. ಈ ಸಮಿತಿಯು ಅಭಿಪ್ರಾಯಪಟ್ಟಂತೆ ಸರ್ಕಾರವು “ಕನ್ನಡಿಗರೆಂದರೆ ಅವರಿಗೆ ಕನ್ನಡದಲ್ಲಿ ಮಾತನಾಡಲು, ಓದಲು ಮತ್ತು ಬರೆಯಲು ಬರಬೇಕು-ಎಂದರೆ ಅವರಿಗೆ ವ್ಯವಾಹಾರಿಕ ಕನ್ನಡ ಜ್ಞಾನ ಇರಬೇಕು.” ಎಂದು ದಿನಾಂಕ ೨-೨-೧೯೮೫ರ ಆದೇಶ ಸಂಖ್ಯೆ ಡಿಪಿಎಆರ್ ೩೭ ಎಸ್‌ಎಲ್‌ಸಿ ೮೪-ಇದರಲ್ಲಿ ಸ್ಪಷ್ಟ ಪಡಿಸಿತು. ಡಾ.ಸರೋಜಿನಿ ಮಹಿಷಿ ಸಮಿತಿಯು ದಿನಾಂಕ ೩೦-೧೨-೧೯೮೯ರಂದು ತನ್ನ ಅಂತಿಮ ವರದಿಯನ್ನು ಸಲ್ಲಿಸಿತು. ಈ ಸಮಿತಿಯ ಶಿಫಾರಸ್ಸುಗಳ ಪರಿಶೀಲನೆ ಮತ್ತು ಅನುಷ್ಠಾನಕ್ಕಾಗಿ ‘ಕನ್ನಡಿಗರ ಉದ್ಯೋಗ ಸಮಿತಿ’ಯನ್ನು ಸಂಸದರಾದ ಡಾ.ವಿ.ವೆಂಕಟೇಶ್ ಅವರ ನೇತೃತ್ವದಲ್ಲಿ ರಚಿಸಲಾಯಿತು. ಒಟ್ಟಾರೆ, ಈ ಎರಡೂ ಸಮಿತಿಗಳ ಶಿಫಾರಸ್ಸುಗಳನ್ನು ಆಧರಿಸಿ ಅನುಷ್ಠಾನಕ್ಕಾಗಿ ವಿವಿಧ ಇಲಾಖೆಗಳಿಗೆ ಜವಾಬ್ದಾರಿಯನ್ನು ವಹಿಸಲಾಯಿತು. (ಸಂಖ್ಯೆ-ಸಿಆಸುಇ ೯ ಎಸ್‌ಎಲ್‌ಸಿ ೯೦ ದಿನಾಂಕ ೨೯-೧೧-೧೯೯೦) ಅನುಷ್ಠಾನದ ಮೇಲ್ವಿಚಾರಣೆಗೆ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಯಿತು.
ಸರೋಜಿನಿ ಮಹಿಷಿ ವರದಿಯು ಒಟ್ಟು ೫೮ ಶಿಫಾರಸುಗಳನ್ನು ಒಳಗೊಂಡಿದೆ. ೧೨ಶಿಫಾರಸುಗಳನ್ನು ರಾಜ್ಯ ಸರ್ಕಾರವು ತನಗೆ ಒಪ್ಪುವ ಅವಕಾಶ ಇಲ್ಲವೆಂದು ತಿಳಿಸಿ ಕೈಬಿಟ್ಟಿದೆ. (ಶಿಫಾರಸುಗಳ ಸಂಖ್ಯೆ ೨೨, ೨೭, ೩೨, ೩೭, ೩೮, ೩೯, ೪೭, ೫೧, ೫೨, ೫೪, ೫೫ ಮತ್ತು ೫೬) ಉಳಿದ ಶಿಫಾರಸುಗಳ ಅನುಷ್ಠಾನಕ್ಕೆ ಕ್ರಮ ಕೈಗೊಂಡಿದೆ. ದಿನಾಂಕ ೨೩-೧೧-೧೯೯೦ರ ಆದೇಶ ಸಂಖ್ಯೆ- ಸಿಆಸುಇ ೯ ಎಸ್‌ಎಲ್‌ಸಿ ೯೦- ಇದರಲ್ಲಿ ಡಾ.ಸರೋಜಿನಿ ಮಹಿಷಿ ಸಮಿತಿಯ ಶಿಫಾರಸುಗಳನ್ನು ಒಪ್ಪಿಕೊಂಡು ಅನುಷ್ಠಾನಕ್ಕೆ ಸೂಚಿಸಲಾಗಿದೆ. ಇದರ ಅನ್ವಯ ದಿನಾಂಕ ೧೮-೧-೧೯೯೧ರಂದು ಹೊರಟ ಆದೇಶವು (ಸಂಖ್ಯೆ ಸಿಆಸುಇ(ಸಾಕಾಮ) ೧೯೯ ಎಂಇಎ ೯೦) ಹೀಗೆ ಸೂಚಿಸುತ್ತದೆ. “ರಾಜ್ಯ ಸಾರ್ವಜನಿಕ ಉದ್ದಿಮೆಗಳಲ್ಲಿ ಎಲ್ಲಾ ಹಂತಗಳಲ್ಲಿ ಶೇ.೧೦೦ರಷ್ಟು ಕನ್ನಡಿಗರನ್ನು ನೇಮಕಾತಿ ಮಾಡಿಕೊಳ್ಳಬೇಕು. ವಿಶೇಷ ಪರಿಣತಿ ಬೇಕಾಗಿರುವ ಗ್ರೂಪ್ ‘ಎ’ ಮತ್ತು ‘ಬಿ’ ಹುದ್ದೆಗಳಿಗೆ ನೇಮಕಾತಿ ಮಾಡುವಾಗ ರಾಜ್ಯ ಸರ್ಕಾರದ ಅನುಮತಿಯನ್ನು ಪಡೆದು ಆನಂತರ ಮಾತ್ರ ಈ ನಿರ್ಬಂಧದಿಂದ ವಿನಾಯಿತಿಯನ್ನು ನೀಡಬಹುದು” ಜೊತೆಗೆ ಕನ್ನಡ ಭಾಷಾಜ್ಞಾನವಿರಬೇಕೆಂಬ ನಿಯಮವನ್ನು ರೂಪಿಸಲು ಸಂಬಂಧಪಟ್ಟವರಿಗೆ ಈ ಆದೇಶವು ಸೂಚಿಸುತ್ತದೆ. ದಿನಾಂಕ ೧೮-೧-೧೯೯೧ರಂದು ಹೊರಡಿಸಿದ ಆದೇಶ ಸಂಖ್ಯೆ ಸಿಐ ೪೫ ಐಎಪಿ ೯೦-ಇದರಲ್ಲಿ “ಕೇಂದ್ರ ಸಾರ್ವಜನಿಕ ಉದ್ದಿಮೆಗಳನ್ನು ಸ್ಥಾಪಿಸಲು ನೆಲ, ಜಲ, ವಿದ್ಯುತ್‌ಚ್ಛಕ್ತಿ ಮುಂತಾದವುಗಳನ್ನು ನೀಡುವಾಗ ಸದರಿ ಕೇಂದ್ರ ಸಾರ್ವಜನಿಕ ಉದ್ದಿಮೆಗಳಲ್ಲಿ ಗ್ರೂಪ್ ‘ಸಿ’ ಮತ್ತು ‘ಡಿ’ ಹುದ್ದೆಗಳಿಗೆ ಶೇ.೧೦೦ರಷ್ಟು ಮತ್ತು ‘ಬಿ’ ಹುದ್ದೆಗಳಿಗೆ ಶೇ.೮೦ರಷ್ಟು ಕಡಿಮೆ ಇಲ್ಲದಂತೆ ಮತ್ತು ಗ್ರೂಪ್ ‘ಎ’ ಹುದ್ದೆಗಳಿಗೆ ಶೇ.೬೫ರಷ್ಟು ಕನ್ನಡಿಗರನ್ನು ನೇಮಿಸಿಕೊಳ್ಳಬೇಕೆಂಬ ಷರತ್ತನ್ನು ಹಾಕಬೇಕು” ಎಂದು ತಿಳಿಸಲಾಗಿದೆ. ಸರ್ಕಾರದ ಯಾವುದೇ ಸಹಾಯವನ್ನು ಪಡೆಯುವ ಖಾಸಗಿ ಉದ್ದಿಮೆಗಳಿಗೂ ಇದು ಅನ್ವಯಿಸುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಜೊತೆಗೆ ಮಹಾರಾಷ್ಟ್ರದಲ್ಲಿ ಇರುವ ಪದ್ಧತಿಯಂತೆ ನಿಗದಿಪಡಿಸಿದ ಪ್ರಮಾಣದಲ್ಲಿ ಉದ್ಯೋಗಾವಕಾಶವನ್ನು ಒದಗಿಸುವ ಬಗ್ಗೆ ಪ್ರತಿ ವರ್ಷ ಘೋಷಣೆ ಪ್ರಪತ್ರ (ಡಿಕ್ಲರೇಷನ್) ಪಡೆಯಬೇಕೆಂದು ಈ ಆದೇಶದಲ್ಲಿ ಸೂಚಿಸಲಾಗಿದೆ.
ರಾಜ್ಯದ ಸಾರ್ವಜನಿಕ ಉದ್ದಿಮೆ ಮತ್ತು ಸರ್ಕಾರದ ಸಹಾಯ ಪಡೆಯುವ ರಾಜ್ಯದ ಖಾಸಗಿ ಉದ್ದಿಮೆಗಳಲ್ಲಿ ಸರ್ಕಾರದ ಆದೇಶಗಳ ಅನುಷ್ಠಾನವಾಗುತ್ತಿರುವ ಬಗ್ಗೆ ಕಾಲಕಾಲಕ್ಕೆ ಪರಿಶೀಲನೆಗಳು ನಡೆಯುತ್ತಿವೆ. ಪರಿಶೀಲನೆ ಆಧಾರಿತ ವರದಿಗಳ ಪ್ರಕಾರ ಸಾಕಷ್ಟು ಪ್ರಮಾಣದ ಪ್ರಗತಿಯಾಗಿದೆ. ರಾಜ್ಯ ಸರ್ಕಾರದ ವ್ಯಾಪ್ತಿಯ ಉದ್ದಿಮೆಗಳ ಮಟ್ಟಿಗೆ ಅನುಷ್ಠಾನದ ಪ್ರಗತಿಯನ್ನು ಖಂಡಿತ ನಂಬಬಹುದಾಗಿದೆ. ಆದರೆ, ಕೇಂದ್ರೋದ್ಯಮಗಳ ಬಗ್ಗೆ ಇದೇ ಮಾತುಗಳನ್ನು ಹೇಳುವಂತಿಲ್ಲ. ಕೇಂದ್ರ ಸರ್ಕಾರದ ಉದ್ದಿಮೆಗಳು ತಮ್ಮ ಉದ್ಯೋಗ ನೀತಿ ನಿಯಮಾವಳಿಗಳನ್ನು ಕೇಂದ್ರ ಸರ್ಕಾರದಿಂದ ಪಡೆಯುತ್ತವೆ. ಅದರಂತೆ ನಡೆದುಕೊಳ್ಳುತ್ತವೆ. ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರಕ್ಕೆ ಷರತ್ತುಗಳನ್ನು ವಿಧಿಸುವಷ್ಟು ಸ್ವಾಯತ್ತವಾಗಿವೆಯೇ? ಈ ಪ್ರಶ್ನೆ ನನಗೆ ಮುಖ್ಯವೆನಿಸುತ್ತದೆ. ಜೊತೆಗೆ, ಕೇಂದ್ರ ಸರ್ಕಾರದ ಅಧೀನದಲ್ಲಿರುವ ಉದ್ದಿಮೆ ಅಥವಾ ಕಚೇರಿಗಳಲ್ಲಿ ನಡೆಯುವ ನೇಮಕಾತಿಗೆ ನಿಯಮಗಳನ್ನು ರೂಪಿಸುವುದು ಕೇಂದ್ರ ಸರ್ಕಾರವೇ ಹೊರತು ರಾಜ್ಯ ಸರ್ಕಾರವಲ್ಲ ಎಂಬುದನ್ನು ನಾವಿಲ್ಲಿ ಮರೆಯಬಾರದು. ಒಕ್ಕೂಟ ವ್ಯವಸ್ಥೆಯನ್ನು ಸಂವಿಧಾನಾತ್ಮಕವಾಗಿ ಒಪ್ಪಿಕೊಂಡಿದ್ದರೂ ಆಡಳಿತಾತ್ಮಕವಾಗಿ ಕೇಂದ್ರ ಸರ್ಕಾರದ ನೇಮಕಾತಿಗಳಿಗೆ ಷರತ್ತುಗಳನ್ನು ವಿಧಿಸುವ ಅಧಿಕಾರ ವ್ಯಾಪ್ತಿ ರಾಜ್ಯ ಸರ್ಕಾರಕ್ಕೆ ಇದೆಯೇ ಎಂಬ ಬಗ್ಗೆ ಯೋಚಿಸಬೇಕು. ‘ಸರೋಜಿನಿ ಮಹಿಷಿ ವರದಿಯು ಜಾರಿಗೆ ಬರಲಿ’ ಎಂದು ಈಗಲೂ ಒತ್ತಾಯಿಸುವವರು ಅನೇಕ ಅಂಶಗಳು ಜಾರಿಯಾಗಿರುವುದನ್ನು ಒಳಗೊಂಡಂತೆ ರಾಜ್ಯ ಸರ್ಕಾರದ ಇತಿಮಿತಿಗಳನ್ನು ಗಮನಿಸಿ ಒತ್ತಾಯದ ಸ್ವರೂಪವನ್ನು ನಿರ್ಧರಿಸಿಕೊಳ್ಳಬೇಕು.
ಬಹುರಾಷ್ಟ್ರೀಯ ಕಂಪನಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಧಿಕಾರ ವ್ಯಾಪ್ತಿಯನ್ನು ಮೀರಿದ ಸ್ವಾತಂತ್ರ್ಯವನ್ನು ಅನುಭವಿಸುತ್ತಿರುವ ಇಂದಿನ ಸಂದರ್ಭದಲ್ಲಿ ನಾವು ಒತ್ತಾಯ ಮಾಡಬೇಕಾದ್ದು ಯಾವುದಕ್ಕೆ, ಯಾರನ್ನು ಎಂಬ ವಿಷಯಗಳ ಬಗ್ಗೆ ಸ್ಪಷ್ಟ ನಿಲುವು ತಾಳಬೇಕಾಗಿದೆ. ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕನ್ನಡಿಗರಿಗೆ ಆದ್ಯತೆಯ ಮೇಲೆ ಉದ್ಯೋಗ ಸಿಗಬೇಕು. ಇದು ರಾಜ್ಯ ಸರ್ಕಾರದ ನೀತಿಯಾಗಬೇಕು. ಕೇಂದ್ರ ಸರ್ಕಾರವು ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ಕೊಡುವುದನ್ನು ಪುರಸ್ಕರಿಸಬೇಕು. ರಾಜ್ಯ ಸರ್ಕಾರಗಳು ಬಹುರಾಷ್ಟ್ರೀಯ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಳ್ಳುವಾಗ ಸ್ಥಳೀಯರ ಪರವಾಗಿ ಷರತ್ತುಗಳನ್ನು ವಿಧಿಸಲು ಸಾಧ್ಯವಾಗಬೇಕು. ಬಹುರಾಷ್ಟ್ರೀಯ ಕಂಪನಿಗಳು ಬರದೇ ಹೋದರೆ ರಾಜ್ಯದ ಅವನತಿಯಾಗುತ್ತದೆ ಎಂಬ ಹುಸಿ ಅಳಲನ್ನು ಕಿತ್ತೊಗೆದು ರಾಜ್ಯ ಸರ್ಕಾರವು ದಿಟ್ಟವಾಗಿ ನಡೆದುಕೊಳ್ಳಬೇಕಾಗುತ್ತದೆ. ಈಗ ಬಹುರಾಷ್ಟ್ರೀಯ ಕಂಪನಿಗಳನ್ನು ಮಣಿಸುವ ಹೋರಾಟಗಳು ತೀವ್ರವಾಗಬೇಕು. ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಗರಿಷ್ಠ ಆದ್ಯತೆಯನ್ನು ಕೇಳಿದರೆ ಅಷ್ಟೇ ಸಾಲದು. ಈ ಕಂಪನಿಗಳ ಉದ್ದಿಮೆಗಳಲ್ಲಿರುವ ಉದ್ಯೋಗದ ಸ್ವರೂಪ ಮತ್ತು ವಿವಿಧ ಹುದ್ದೆಗಳ ಮಾಹಿತಿಗಳನ್ನು ಅಧ್ಯಯನ ಮಾಡಿ, ಅದಕ್ಕೆ ತಕ್ಕಂತೆ ಕನ್ನಡಿಗರನ್ನು ಸಿದ್ಧಗೊಳಿಸುವ ಕೆಲಸವನ್ನು ಮಾಡಬೇಕು. ಸೂಕ್ತ ತರಬೇತಿ ನೀಡಬೇಕು.
ಬಹುರಾಷ್ಟ್ರೀಯ ಕಂಪನಿಗಳ ವ್ಯಾಪ್ತಿ, ಕೇಂದ್ರ-ರಾಜ್ಯ ಸರ್ಕಾರಗಳ ಸಂವಿಧಾನಾತ್ಮಕ ಅಧಿಕಾರ, ಈ ಕಂಪನಿಗಳ ಉದ್ಯೋಗಾವಕಾಶಗಳ ಸಂಪೂರ್ಣ ಮಾಹಿತಿ, ಅವುಗಳಿಗೆ ಬೇಕಾದ ವಿದ್ಯಾರ್ಹತೆ, ಅದಕ್ಕಾಗಿ ಕನ್ನಡಿಗರನ್ನು ಸಜ್ಜುಗೊಳಿಸುವ ವಿಧಾನ, ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ಮತ್ತು ಸಾಮಾಜಿಕ ಮೀಸಲಾತಿ ಇಂತಹ ಎಲ್ಲಾ ವಿಷಯಗಳನ್ನು ಮೂರ‍್ನಾಲ್ಕು ತಿಂಗಳುಗಳಲ್ಲಿ ಅಧ್ಯಯನ ನಡೆಸಿ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ದೊರಕಿಸಿ ಕೊಡುವ ಮಾರ್ಗೋಪಾಯಗಳನ್ನು ಸೂಚಿಸುವ ಶಾಸನಬದ್ಧ ಆಯೋಗ ಒಂದರ ಅಗತ್ಯವಿದೆ. ಕನ್ನಡಿಗರಿಗೆ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಆದ್ಯತೆಯ ಮೇಲೆ ಉದ್ಯೋಗ ಮತ್ತು ಸಾಮಾಜಿಕ ನ್ಯಾಯ-ಇದು ನಮ್ಮ ನೀತಿ ಮತ್ತು ಹೋರಾಟ.

ಕನ್ನಡ ಮಾಧ್ಯಮದವರಿಗೆ ಉದ್ಯೋಗ ಮೀಸಲಾತಿ
ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿರುವ ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರದ ನೇಮಕಾತಿಗಳಲ್ಲಿ ಆದ್ಯತೆ ನೀಡಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ೨೦೦೧ರ ಆರಂಭದಿಂದಲೇ ಒತ್ತಾಯಿಸುತ್ತಾ ಬಂದ ಫಲವಾಗಿ ಎಸ್.ಎಂ.ಕೃಷ್ಣಾ ಅವರ ನೇತೃತ್ವದ ಸರ್ಕಾರವು ಶೇ.೫ರಷ್ಟು ಮೀಸಲಾತಿಗೆ ಅವಕಾಶ ಕಲ್ಪಿಸಿ ಮಂತ್ರಿ ಮಂಡಲದ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡಿತು. ಆನಂತರ ಗೆಜೆಟ್ ಪ್ರಕಟಣೆಯಂತಹ ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಮುಗಿಸಿ ಆದೇಶ ಹೊರಡಿಸಿತು.
(ಆದೇಶ ಸಂಖ್ಯೆ ಡಿಪಿಎಆರ್ ೭೧ ಎಸ್‌ಆರ್‌ಆರ್ ೨೦೦೧ದಿನಾಂಕ ೨೪-೧೦-೨೦೦೨).
ಈ ಮುಂಚೆ ವೃತ್ತಿ ಶಿಕ್ಷಣ ಪ್ರವೇಶದಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಶೇ.೫ರಷ್ಟು ಮೀಸಲಾತಿ ನೀಡಿದ್ದನ್ನು ಇಲ್ಲಿ ನೆನೆಯಬಹುದು. ಭಾಷೆಯ ಆಧಾರದ ಮೇಲೆ ಯಾವುದೇ ರೀತಿಯ ಮೀಸಲಾತಿ ಮತ್ತು ಆಯ್ಕೆಯಲ್ಲಿ ಅಧಿಕೃತ ಆದ್ಯತೆ ಕೊಡುವ ಆದೇಶಗಳು ದೇಶದ ಯಾವುದೇ ರಾಜ್ಯದಲ್ಲೂ ಇಲ್ಲ ಎಂಬುದನ್ನು ಗಮನಿಸಬೇಕು.
ಕನ್ನಡ ಮಾಧ್ಯಮ ವ್ಯಾಸಂಗಿಗಳಲ್ಲಿ ಆತ್ಮವಿಶ್ವಾಸ ಮೂಡಿಸುವ ಕ್ರಮವಾಗಿ ಈ ಮಾದರಿಯ ಮೀಸಲಾತಿಗೆ ತನ್ನದೇ ಮಹತ್ವವಿದೆ. ಕಾನೂನಿನ ಚೌಕಟ್ಟಿನಲ್ಲಿ ಊರ್ಜಿತವಾಗುವುದನ್ನು ಗಮನದಲ್ಲಿಟ್ಟುಕೊಂಡೇ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ಬಗ್ಗೆ ಸರ್ಕಾರವನ್ನು ಒತ್ತಾಯಿಸಬಹುದು. ಜೊತೆಗೆ ಈ ಮೀಸಲಾತಿಯನ್ನು ರಾಜ್ಯ ಸರ್ಕಾರದ ನೇಮಕಾತಿಗಲ್ಲದೆ ಖಾಸಗಿ ಉದ್ದಿಮೆಗಳಿಗೂ ವಿಸ್ತರಿಸುವಂತೆ ಕೇಳಬೇಕು.

‘ಸಿ’ ದರ್ಜೆ ನೌಕರರು ಮತ್ತು ಕನ್ನಡ
ರಾಜ್ಯ ಸರ್ಕಾರವು ತನ್ನ ಆದೇಶ ಕ್ರಮಾಂಕ: ಡಿಪಿಎಆರ್ ೪೧ ಪಿಓಎಲ್ ೮೩ ದಿನಾಂಕ ೧೬-೭-೧೯೮೫ ಇದರಲ್ಲಿ ಸಿ ದರ್ಜೆ ನೌಕರರು ತಮ್ಮ ಹುದ್ದೆಗಳಿಗೆ ಆಯ್ಕೆಯಾದ ನಂತರ, ನೇಮಕಾತಿಗೆ ಮುಂಚೆ ಸರ್ಕಾರವು ಗೊತ್ತುಪಡಿಸಿದ ಕನ್ನಡ ಭಾಷಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಬೇಕಾಗುತ್ತದೆ. ಹೇಗಿದ್ದರೂ ಹುದ್ದೆಗೆ ಆಯ್ಕೆಯಾಗಿರುವುದರಿಂದ, ಆನಂತರ ನಡೆಸುವ ಭಾಷಾ ಪರೀಕ್ಷೆಯು ತನ್ನ ಬಿಗಿ ಮತ್ತು ಮಹತ್ವವನ್ನು ಕಳೆದುಕೊಳ್ಳುತ್ತದೆ. ಆದ್ದರಿಂದ ನಿರ್ಧಿಷ್ಠ ಕನ್ನಡ ಭಾಷಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದವರು ಮಾತ್ರವೇ ಸಿ ದರ್ಜೆ ನೌಕರಿಗೆ ಅರ್ಜಿ ಹಾಕಲು ಅರ್ಹರೆಂದು ಹೊಸ ಆದೇಶ ಹೊರಡಬೇಕು. ‘ಸಿ’ ದರ್ಜೆ ನೌಕರರು ಸಾಮಾನ್ಯವಾಗಿ ಕಚೇರಿ ಸಹಾಯಕರು, ಹೆಚ್ಚೆಂದರೆ ಶಾಖಾಧಿಕಾರಿಗಳ ಹಂತದವರು, ಇವರಿಗೆ ಕನ್ನಡ ಭಾಷಾ ಪರೀಕ್ಷೆಯ ಬಗ್ಗೆ ಪೂರ್ವ ಷರತ್ತು ವಿಧಿಸುವುದು ಸೂಕ್ತ. ಈ ಹಂತದ ನೌಕರರಿಗೆ ಕನ್ನಡ ಬಾರದೇ ಇದ್ದರೆ, ಕನ್ನಡವು ಆಡಳಿತ ಭಾಷೆ ಎಂಬುದಕ್ಕೆ ಏನರ್ಥ?
ಆದ್ದರಿಂದ ಅರ್ಜಿ ಹಾಕುವುದಕ್ಕೆ ಒಂದು ಅರ್ಹತೆಯಾಗಿ ಕನ್ನಡ ಭಾಷಾ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕೆಂಬ ಷರತ್ತನ್ನು ಸೇರಿಸಬೇಕು.

ಕರ್ನಾಟಕದಲ್ಲಿ ಕೆಲಸ ಮತ್ತು ಕನ್ನಡ
ಕರ್ನಾಟಕದ ಸರ್ಕಾರಿ ಹಾಗೂ ಖಾಸಗಿ ಕಚೇರಿ, ಉದ್ದಿಮೆ-ಹೀಗೆ ಯಾವುದೇ ಅಧಿಕೃತ ಸಂಸ್ಥೆಗಳಲ್ಲಿ ಕೆಲಸಕ್ಕೆ ಸೇರಲು ಕನ್ನಡವನ್ನು ಒಂದು ಭಾಷೆಯಾಗಿ ಕಲಿತಿರುವುದು ಕಡ್ಡಾಯವಾಗಬೇಕು. ಕನ್ನಡವನ್ನು ಓದಲು, ಕನ್ನಡದಲ್ಲಿ ಬರೆಯಲು-ಮಾತಾಡಲು ಅರ್ಹರಾದವರು ಮಾತ್ರ ಕರ್ನಾಟಕದಲ್ಲಿ ಕೆಲಸಕ್ಕೆ ಸೇರಲು ಸಾಧ್ಯವಾಗಬೇಕು. ಕನ್ನಡ ಭಾಷಾ ಜ್ಞಾನದ ಬಗ್ಗೆ ನಿರ್ಧಿಷ್ಟ ಮಾರ್ಗಸೂಚಿಯನ್ನು ಸಿದ್ಧಗೊಳಿಸಿ ಅದಕ್ಕೆ ಎಲ್ಲರೂ ಬದ್ಧವಾಗುವಂತೆ ಮಾಡಬೇಕು.
ಕರ್ನಾಟಕದಲ್ಲಿ ಕನ್ನಡ ಭಾಷೆಯಿಲ್ಲದೆ ಶಿಕ್ಷಣ ಪೂರೈಸಲಾಗದು ಮತ್ತು ಕನ್ನಡ ಭಾಷಾಜ್ಞಾನವಿಲ್ಲದೆ ಕೆಲಸ ಸಿಗದು, ಇದು ನಮ್ಮ ನೀತಿಯಾಗಬೇಕು. ಇದು ಬೇರೆ ಭಾಷೆಗಳ ವಿರೋಧವಲ್ಲ.; ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಭಾಷೆಗೆ ಸಲ್ಲಬೇಕಾದ ಸೂಕ್ತ ಸ್ಥಾನ.

ಕೇಂದ್ರೋದ್ಯಮಗಳಲ್ಲಿ ಸ್ಥಳೀಯರಿಗೆ ಉದ್ಯೋಗ
ಕರ್ನಾಟಕದಲ್ಲಿ ಸ್ಥಾಪಿತವಾಗಿರುವ ಮತ್ತು ಆಗಲಿರುವ ಕೇಂದ್ರೋದ್ಯಮ ಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವುದು ಆದ್ಯತೆಯಾಗಬೇಕು. ಮೊದಲು ಕನ್ನಡಿಗರಿಗೆ-ಅಂದರೆ ಕರ್ನಾಟಕವಾಸಿಗಳಾಗಿದ್ದು ಕನ್ನಡ ಬಲ್ಲವರಿಗೆ-ಉದ್ಯೋಗ ಆನಂತರ ಅಗತ್ಯವಿದ್ದರೆ ಉಳಿದವರನ್ನು ಪರಿಗಣಿಸುವುದು. ಇದು ರೈಲ್ವೆ, ರಕ್ಷಣಾ ಇಲಾಖೆ-ಇತ್ಯಾದಿ ಎಲ್ಲಕ್ಕೂ ಅನ್ವಯವಾಗಬೇಕು.
ನಿಜ: ಇದು ರಾಜ್ಯ ಸರ್ಕಾರದ ಸಂಪೂರ್ಣ ವ್ಯಾಪ್ತಿಗೆ ಬರುವುದಿಲ್ಲ. ಈ ಬಗ್ಗೆ ಹಿಂದೆ ಪ್ರಸ್ತಾಪಿಸಲಾಗಿದೆ. ಸದ್ಯದ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ಕೊಡುವ ಬಗ್ಗೆ ರಾಷ್ಟ್ರೀಯ ನೀತಿಯನ್ನು ರೂಪಿಸಬೇಕು. ಒಕ್ಕೂಟ ವ್ಯವಸ್ಥೆಯು ಅರ್ಥಪೂರ್ಣವಾಗಬೇಕಾದರೆ ಆಯಾ ರಾಜ್ಯಗಳಲ್ಲಿ ವಾಸಿಸುವ, ಆಯಾ ರಾಜ್ಯದ ಭಾಷೆಯನ್ನು ಕಲಿತಿರುವವರಿಗೆ ಆದ್ಯತೆ ನೀಡಬೇಕು. ರಾಜ್ಯ ಸರ್ಕಾರಗಳು, ರಾಜ್ಯಗಳನ್ನು ಪ್ರತಿನಿಧಿಸುವ ಸಂಸದರು, ಭಾಷಾ ಹೋರಾಟಗಾರರು, ಚಿಂತಕರು ‘ರಾಷ್ಟ್ರೀಯ ನೀತಿ’ಯ ಅಗತ್ಯವನ್ನು ಪ್ರತಿಪಾದಿಸಬೇಕು.

ಕೇಂದ್ರ ಸರ್ಕಾರದ ರಾಜ್ಯಶಾಖೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ
ಕೇಂದ್ರೋದ್ಯಮದ ಬಗ್ಗೆ ಪ್ರಸ್ತಾಪಿಸಿದ ಅಂಶಗಳನ್ನೇ ಇಲ್ಲಿಯೂ ಗಮನಿಸಬೇಕು. ಕೇಂದ್ರ ಸರ್ಕಾರದ ವಿವಿಧ ಶಾಖಾ ಕಚೇರಿಗಳು ಎಲ್ಲ ರಾಜ್ಯಗಳಲ್ಲಿಯೂ ಇರುತ್ತವೆ. ಈ ಕಚೇರಿಗಳಲ್ಲಿ ಕಡೇ ಪಕ್ಷ ‘ಸಿ’ ಮತ್ತು ‘ಡಿ’ ದರ್ಜೆಯ ಹುದ್ದೆಗಳು ಆಯಾ ರಾಜ್ಯದವರಿಗೇ ಮೀಸಲಾಗಬೇಕು.
ರಾಷ್ಟ್ರೀಯ ಭಾವೈಕ್ಯತೆಯಿಂದ ಆಯಾ ರಾಜ್ಯದವರಿಗೆ ಉದ್ಯೋಗದಲ್ಲಿ ಆದ್ಯತೆ ಕೊಡಬೇಕೆಂದು ‘ರಾಷ್ಟ್ರೀಯ ಸಮಗ್ರತಾ ಆಯೋಗ’ವು ೧೯೬೮ರಲ್ಲೇ ಪ್ರತಿಪಾದಿಸಿದೆ. ಹೀಗೆ ಆಯಾ ರಾಜ್ಯದವರಿಗೆ ಉದ್ಯೋಗದಲ್ಲಿ ಆದ್ಯತೆ ನೀಡದಿದ್ದರೆ ಮುಂದೊಂದು ದಿನ ಪ್ರತ್ಯೇಕತಾ ಭಾವವು ಬೆಳೆಯಬಹುದೆಂಬ ಎಚ್ಚರಿಕೆಯನ್ನೂ ಕೊಟ್ಟಿದೆ. ಸದರಿ ಆಯೋಗದ ವರದಿಯು ಸಾಕಷ್ಟು ಬೆಳೆಯಬಹುದೆಂಬ ಬಳಿಕವೇ ‘ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ’ಯೆಂಬ ನೀತಿಗೆ ಸಮ್ಮತಿ ಸೂಚಿಸಿದೆಯೆಂಬುದನ್ನು ಮರೆಯಬಾರದು. ಈಗ ತಲೆದೋರುತ್ತಿರುವ ಪ್ರತ್ಯೇಕತಾ ಚಳವಳಿಗಳಿಗೆ ಇರುವ ಅನೇಕ ಕಾರಣಗಳಲ್ಲಿ ಸ್ಥಳೀಯರಿಗೆ ಉದ್ಯೋಗ-ಉದ್ಯಮಗಳಲ್ಲಿ ಆದ್ಯತೆ ಸಿಗದೆ ಇರುವುದೂ ಒಂದು ಮುಖ್ಯಾಂಶವಾಗಿದೆ.
ಆದ್ದರಿಂದ, ಉದ್ಯೋಗದಲ್ಲಿ ಸ್ಥಳೀಯರಿಗೆ ಆದ್ಯತೆ ನೀಡುವುದು ಒಂದು ರಾಷ್ಟ್ರೀಯ ನೀತಿಯಗಬೇಕು.
ಕೇಂದ್ರೋದ್ಯಮ ಕಚೇರಿ, ಕಂಪನಿಗಳಲ್ಲಿ ‘ಕನ್ನಡ ಘಟಕ’ ಸ್ಥಾಪನೆ
ರಾಜ್ಯದಲ್ಲಿರುವ ಎಲ್ಲ ಕೇಂದ್ರೋದ್ಯಮ, ಕೇಂದ್ರ ಸರ್ಕಾರದ ಕಚೇರಿ, ಬಹುರಾಷ್ಟ್ರೀಯ ಕಂಪನಿಗಳಲ್ಲಿ ‘ಕನ್ನಡ ಘಟಕ’ ಸ್ಥಾಪನೆಯಾಗಬೇಕು. ಕನ್ನಡ ಘಟಕವು ರಾಜ್ಯದೊಳಗಿನ ವ್ಯವಹಾರಗಳನ್ನು ಕನ್ನಡದಲ್ಲೇ ನಡೆಸುವುದಕ್ಕೆ ತನ್ನ ಸಂಸ್ಥೆಗಳಿಗೆ ಸಹಾಯಕವಾಗಿ ಕೆಲಸ ಮಾಡಬೇಕು. ನೌಕರಿಗೆ ಕೊಡುವ ಸೂಚನೆಗಳು, ಸರ್ಕಾರಕ್ಕೆ ಸಲ್ಲಿಸುವ ಪತ್ರಗಳು, ಸಾರ್ವಜನಿಕ ಪತ್ರ ವ್ಯವಹಾರ-ಇತ್ಯಾದಿಗಳೆಲ್ಲ ಕನ್ನಡದಲ್ಲಿ ನಡೆಯಬೇಕು. ಆಂತರಿಕ ಆಡಳಿತಕ್ಕೆ ಕೇಂದ್ರ ಸರ್ಕಾರದ ಕಚೇರಿ, ಬಹುರಾಷ್ಟ್ರೀಯ ಕಂಪನಿಗಳಿಗೂ ಜನರಿಗೂ ಸಂಪರ್ಕ ಕೇಂದ್ರವಾಗಿ ‘ಕನ್ನಡ ಘಟಕ’ವು ಅಧಿಕೃತ ಅಂಗವಾಗಿ ಕೆಲಸ ಮಾಡುವಂತಿರಬೇಕು. ಅದು ಇನ್ನೊಂದು ಸ್ವಯಂರಚಿತ ಕನ್ನಡ ಸಂಘವಾಗಬಾರದು.
ಹಾಗೆ ನೋಡಿದರೆ ಆಯಾ ರಾಜ್ಯಭಾಷೆಯ ಘಟಕಗಳನ್ನು ಸ್ಥಾಪಿಸುವುದು ‘ರಾಷ್ಟ್ರೀಯ ನೀತಿ’ಯಾಗಬೇಕು.
(ನಾನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿದ್ದಾಗ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಆಯಾ ಸಂಸ್ಥೆಗಳ ಕನ್ನಡ ಸಂಘಟನೆಗಳ ಸಂಯುಕ್ತ ಒತ್ತಾಯದಿಂದ ಎಚ್.ಎ.ಎಲ್. ಮತ್ತು ಬಿ.ಇ.ಎಲ್.ಗಳಲ್ಲಿ ಸಾಂಸ್ಕೃತಿಕ ಉದ್ದೇಶದ ‘ಕನ್ನಡ ಘಟಕ’ಗಳು ಸ್ಥಾಪನೆಗೊಂಡಿವೆ.)

ಬ್ಯಾಂಕುಗಳು ಮತ್ತು ಕನ್ನಡ
ಯಾವುದೇ ಬ್ಯಾಂಕು ಸಾರ್ವಜನಿಕ ಜೊತೆ ನಿರಂತರ ಸಂಪರ್ಕದಲ್ಲಿರುತ್ತದೆ. ಆದರೆ ಅನೇಕ ಬ್ಯಾಂಕುಗಳು ವಿವಿಧ ನಮೂನೆಗಳನ್ನು ಕನ್ನಡದಲ್ಲಿ ಕೊಡುವುದಿಲ್ಲ. ರಾಷ್ಟ್ರೀಕೃತ ಬ್ಯಾಂಕುಗಳು ಕನ್ನಡವನ್ನು ಸಾರ್ವಜನಿಕ ಸಂಪರ್ಕದ ಅಧಿಕೃತ ಭಾಷೆಯನ್ನಾಗಿ ಅಳವಡಿಸಿಕೊಳ್ಳಬೇಕು.
ಈಗ ಕೇಂದ್ರ ಸರ್ಕಾರದ ಆದೇಶದ ಪ್ರಕಾರ (೧೯೭೬ರ ಅಧಿಕೃತ ಭಾಷಾ ನಿಯಮದ ೧೧ನೇ ಅಂಶಕ್ಕನುಗುಣವಾಗಿ) ನಾಮಫಲಕ, ಲೆಟರ್‌ಹೆಡ್, ಮೊಹರು ಮುಂತಾದವುಗಳಲ್ಲಿ ಕನ್ನಡವನ್ನು ಬಳಸಬೇಕು. ಇದು ಕೇಂದ್ರ ಸರ್ಕಾರದ ಎಲ್ಲ ಕಚೇರಿಗಳು, ಉದ್ದಿಮೆಗಳು, ರಾಷ್ಟ್ರೀಕೃತ ಬ್ಯಾಂಕುಗಳಿಗೆ ಅನ್ವಯಿಸುತ್ತದೆ. ಇದಿಷ್ಟೇ ಸಾಲದು. ಪ್ರಾದೇಶಿಕ ಭಾಷೆಗಳು ಅಧಿಕೃತವಾಗಿ ಸಾರ್ವಜನಿಕ ವ್ಯವಹಾರದ, ಸಂಪರ್ಕದ ಸಾಧನಗಳಾಗಬೇಕು.

ಸಾರ್ವಜನಿಕ ಉದ್ದಿಮೆಗಳ ಪುನಶ್ಚೇತನ
ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ (ಸರ್ಕಾರಗಳ ನೇತೃತ್ವದ) ಸಾರ್ವಜನಿಕ ಉದ್ದಿಮೆಗಳನ್ನು ಉಳಿಸುವ ಹೋರಾಟವನ್ನು ನಡೆಸಬೇಕು; ಈ ಸಂಬಂಧದಲ್ಲಿ ನಡೆಯುವ ಹೋರಾಟಗಳಿಗೆ ಬೆಂಬಲವಾಗಿ ನಿಲ್ಲಬೇಕು. ಈಗಾಗಲೇ ಸಾರ್ವಜನಿಕ ಉದ್ದಿಮೆಯಾದ, ಹೆಮ್ಮೆಯ ಎನ್.ಜಿ.ಇ.ಎಫ್.ಅನ್ನು ಕಳೆದುಕೊಂಡದ್ದಾಗಿದೆ. ಮತ್ತಷ್ಟು ಸಾರ್ವಜನಿಕ ಉದ್ದಿಮೆಗಳು ನಷ್ಟದಲ್ಲಿವೆಯೆಂಬ ನೆಪದ ಮೂಲಕ ಮುಚ್ಚಿಹೋಗುವ ಆತಂಕದಲ್ಲಿವೆ. ಸರಿಯಾದ ಆಡಳಿತದ ಮೂಲಕ ಲಾಭಗಳಿಕೆಯತ್ತ ಹೋಗಲು ಸಾಧ್ಯವೆಂಬುದಕ್ಕೆ ಬಿ.ಎಂ.ಟಿ.ಸಿ.ಯು ಒಂದು ಉದಾಹರಣೆಯಾಗಿದೆ. ಆಯಾ ಉದ್ದಿಮೆಗಳ ಆಡಳಿತ ವರ್ಗ ಮತ್ತು ಕಾರ್ಮಿಕ ವರ್ಗ ಒಟ್ಟಾಗಿ ಸಾರ್ವಜನಿಕ ಉದ್ದಿಮೆ ಮತ್ತು ಸಂಸ್ಥೆಗಳ (ಉದಾ: ಕರ್ನಾಟಕ ರಾಜ್ಯಸಾರಿಗೆ ಸಂಸ್ಥೆ) ಪುನಶ್ಚೇತನಕ್ಕೆ ಪೂರಕವಾಗಿ ಕ್ರಿಯಾಶೀಲವಾಗಬೇಕು. ಕಾರ್ಮಿಕ ಸಂಘಟನೆಗಳಷ್ಟೇ ಅಲ್ಲ. ಕನ್ನಡಪರ ಸಂಘಟನೆಗಳು ಈ ಅಂಶವನ್ನು ಆದ್ಯತೆಗಳಲ್ಲೊಂದಾಗಿ ಸ್ವೀಕರಿಸಬೇಕು. ಸಾರ್ವಜನಿಕ ಉದ್ದಿಮೆ ಹಾಗೂ ಸಂಸ್ಥೆಗಳನ್ನು ಮುಚ್ಚುವ, ಮಾರುವ, ಖಾಸಗೀಕರಣಗೊಳಿಸುವ ಸರ್ಕಾರದ ಯಾವುದೇ ಕ್ರಮಗಳನ್ನು ವಿರೋಧಿಸಬೇಕು.

ಉದ್ಯೋಗ ವಿನಿಮಯ ಕಚೇರಿ
ಉದ್ಯೋಗ ವಿನಿಮಯ ಕಚೇರಿಯಲ್ಲಿ ವಿದ್ಯಾವಂತ ನಿರುದ್ಯೋಗಿಗಳು ನೋಂದಾಯಿಸುವುದು ಒಂದು ಸಾಮಾನ್ಯ ಪದ್ಧತಿಯಾಗಿತ್ತು. ಈಗ ಹಾಗಿಲ್ಲ. ಉದ್ಯೋಗದ ಆಯ್ಕೆ ವಿಧಾನಗಳಲ್ಲಾದ ವ್ಯತ್ಯಾಸಗಳು ಇದಕ್ಕೆ ಒಂದು ಮುಖ್ಯ ಕಾರಣ. ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ಸಿಗಬೇಕಾದರೆ (ಕಡೇ ಪಕ್ಷ) ಸಿ ಮತ್ತು ಡಿ ಹುದ್ದೆಗಳ ಆಯ್ಕೆಗೆ ಉದ್ಯೋಗ ವಿನಿಮಯ ಕಚೇರಿಯಿಂದ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ತರಿಸಿಕೊಳ್ಳುವುದು ಕಡ್ಡಾಯವಾದರೆ ಉತ್ತಮ. ಯಾಕೆಂದರೆ ಸ್ಥಳೀಯ ವಾಸಿಗಳು ಮಾತ್ರ ಉದ್ಯೋಗವಿನಿಮಯ ಕಚೇರಿಯಲ್ಲಿ ನೋಂದಣಿಯಾಗುತ್ತಾರೆ.
ಈಗ ಒಂದೆರಡು ಕಾರ್ಖಾನೆಗಳು ಮಾತ್ರ ಉದ್ಯೋಗ ವಿನಿಮಯ ಕಚೇರಿಯಿಂದ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ತರಿಸಿಕೊಳ್ಳುತ್ತವೆಯೆಂದು ಹೇಳಲಾಗುತ್ತಿದೆ. ಕರ್ನಾಟಕದ ಯಾವುದೇ ಉದ್ಯಮ- ಅದು ಖಾಸಗಿಯಾಗಿರಲಿ ಬಹುರಾಷ್ಟ್ರೀಯ ಕಂಪನಿಯಾಗಿರಲಿ, ಕೇಂದ್ರೋದ್ಯಮ ಅಥವಾ ರಾಜ್ಯೋದ್ಯಮವಾಗಿರಲಿ-ಉದ್ಯೋಗ ವಿನಿಮಯ ಕಚೇರಿಯಿಂದ ಅರ್ಹರ ಪಟ್ಟಿ ಪಡೆಯುವುದು ಕಡ್ಡಾಯವಾದರೆ ಈ ಕಚೇರಿಗೂ ಮಹತ್ವ ಬರುತ್ತದೆ. ಸ್ಥಳೀಯರಿಗೂ ಅವಕಾಶವಾಗುತ್ತದೆ.

ಅವಿದ್ಯಾವಂತ ನಿರುದ್ಯೋಗಿಗಳ ಸಮಸ್ಯೆ
ಉದ್ಯೋಗದ ವಿಷಯ ಬಂದಾಗ ಕನ್ನಡಪರ ವ್ಯಕ್ತಿ ಮತ್ತು ಸಂಘಟನೆಗಳು ಸಾಮಾನ್ಯವಾಗಿ ವಿದ್ಯಾವಂತ ನಿರುದ್ಯೋಗಿಗಳ ನೆಲೆಯಲ್ಲಿ ನಿಂತು ನಮ್ಮ ವಿಚಾರಗಳನ್ನು ಮಂಡಿಸುವುದು ಸಾಮಾನ್ಯ. ಆದರೆ ಅಸಂಖ್ಯಾತ ಅವಿದ್ಯಾವಂತ ನಿರುದ್ಯೋಗಿ ಕನ್ನಡಿಗರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವುದು ಕನ್ನಡಪರ ಚಿಂತನೆಗೆ ಹೊಸ ಆಯಾಮವನ್ನು ನೀಡುತ್ತದೆ. ಇದು ಅಗತ್ಯ. ಸಾಮಾಜಿಕವಾಗಿ, ಆರ್ಥಿಕವಾಗಿ ತುಳಿತಕ್ಕೊ ಳಗಾಗುತ್ತಿರುವ ಅಸಂಖ್ಯಾತ ಅವಿದ್ಯಾವಂತ ಮತ್ತು ಅರೆವಿದ್ಯಾ ವಂತ ನಿರುದ್ಯೋಗಿ ಗಳಿಗೆ ಹೊಟ್ಟೆ ಬಟ್ಟೆಗಾಗುವಷ್ಟು ಕೆಲಸ ಕೊಡುವುದು ಸರ್ಕಾರದ ಜವಾಬ್ದಾರಿಯಾಗಬೇಕು. ಇದಕ್ಕನುಗುಣವಾಗಿ ಯೋಜನೆ ಗಳನ್ನು ರೂಪಿಸುವಂತೆ ಕನ್ನಡಪರ ಚಿಂತಕರು, ಕ್ರಿಯಾಶೀಲರು, ಸಂಘಟನೆಗಳು ಒತ್ತಾಯತರಬೇಕು.
ಕರ್ನಾಟಕವೆಂದರೆ ಎಲ್ಲ ಜನವರ್ಗಗಳ ಒಕ್ಕೂಟ, ಈ ನೆಲೆಯಲ್ಲಿ ವಿದ್ಯಾವಂತರು, ಅವಿದ್ಯಾವಂತರು, ಅರೆ ವಿದ್ಯಾವಂತರು (ಮಹಿಳೆ ಮಕ್ಕಳನ್ನು ಒಳಗೊಂಡಂತೆ)-ಎಲ್ಲರಿಗೂ ಮೂಲಭೂತ ಅಗತ್ಯಗಳು ಲಭ್ಯವಾಗಬೇಕು.

ರಾಷ್ಟ್ರೀಯ ನೀತಿ
ಭಾಷಾವಾರು ಪ್ರಾಂತ್ಯಗಳ ರಚನೆಯ ನಂತರವೂ ಭಾಷೆ, ಸಂಸ್ಕೃತಿ ಮತ್ತು ಉದ್ಯೋಗಾವಕಾಶಗಳಿಗೆ ಸಂಬಂಧಿಸಿದಂತೆ ಮುಂದುವರಿಯುತ್ತ ಬಂದ ಅಸಮತೋಲನದ ಫಲವಾಗಿ ನಮ್ಮ ರಾಷ್ಟ್ರದ ವಿವಿಧ ಭಾಗಗಳಲ್ಲಿ ಪ್ರತ್ಯೇಕವಾದಿ ಚಳವಳಿಗಳು ಹುಟ್ಟತೊಡಗಿದವು. ಇಂತಹ ಚಳವಳಿಗೆ ಬೇರೆ ಕೆಲವು ಕಾರಣಗಳು ಇರಬಹುದು.
ಆದರೆ ವಿವಿಧ ಭಾಷೆಗಳು, ಸಂಸ್ಕೃತಿಗಳು ಮತ್ತು ಸ್ಥಳೀಯರಿಗೆ ಉದ್ಯೋಗಾವಕಾಶಗಳು ಸಮಾನತೆಯ ಆಧಾರದಲ್ಲಿ ತಮ್ಮ ಪಾಲನ್ನು ಪಡೆಯಲು ಸಾಧ್ಯವಾಗದೆ ಇದ್ದದ್ದು ಪ್ರತ್ಯೇಕತಾಭಾವನೆಗೆ ಕಾರಣವಾದ ಒಂದು ಪ್ರಮುಖ ಅಂಶವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ರಾಷ್ಟ್ರೀಯ ಸಮಗ್ರತೆಗೆ ಪೂರಕವಾಗುವಂತೆ ಪ್ರಾದೇಶಿಕ ಅಗತ್ಯಗಳನ್ನು ಪೂರೈಸುವ ರಾಷ್ಟ್ರೀಯ ನೀತಿಯನ್ನು ರೂಪಿಸಬೇಕಾಗಿದೆ.
ರಾಷ್ಟ್ರೀಯ ನೀತಿಯು ಕೆಳಕಂಡ ಅಂಶಗಳನ್ನು ಒಳಗೊಳ್ಳಬೇಕಾಗುತ್ತದೆ.
೧. ರಾಷ್ಟ್ರದ ಖಾಸಗಿ ಮತ್ತು ಸಾರ್ವಜನಿಕ ಉದ್ದಿಮೆಗಳಲ್ಲಿ ಆಯಾ ರಾಜ್ಯದ ಸ್ಥಳೀಯರಿಗೆ ಸಾಮಾಜಿಕ ಮೀಸಲಾತಿಯನ್ನು ಒಳಗೊಂಡಂತೆ ಆದ್ಯತೆಯ ಮೇಲೆ ಉದ್ಯೋಗ ನೀಡಬೇಕು. ವಿವಿಧ ಬಹುರಾಷ್ಟ್ರೀಯ ಕಂಪನಿಗಳಿಗೂ ಇದು ಅನ್ವಯಿಸುವಂತಾಗಬೇಕು. ವಿವಿಧ ರಾಜ್ಯಗಳಲ್ಲಿರುವ ಕೇಂದ್ರ ಸರ್ಕಾರದ ಕಛೇರಿಗಳಲ್ಲಿ ಕಡೇ ಪಕ್ಷ ‘ಸಿ’ ಮತ್ತು ‘ಡಿ’ ಹುದ್ದೆಗಳನ್ನು ಸಂಪೂರ್ಣವಾಗಿ ಸ್ಥಳೀಯರಿಗೆ ನೀಡಬೇಕು. ಈ ನೀತಿಗೆ ಪೂರಕವಾಗುವಂತೆ ೧೯೬೮ನೇ ಜೂನ್‌ನಲ್ಲಿ ರಾಷ್ಟ್ರೀಯ ಸಮಗ್ರತಾ ಮಂಡಳಿಯು ಮಾಡಿರುವ ಶಿಫಾರಸ್ಸನ್ನು ಉಲ್ಲೇಖಿಸಬಯಸುತ್ತೇನೆ. ಅದು ಹೀಗಿದೆ:
೧೧೧. Regional and Economic Imbalanced and Emloyment Opportunities to the local Population:
“The Committe in this connection takes note of the existence of discontent in the States arising from the inadequate share of the local people in employment opportunities in both private and public sectors. the constitution recognizes one common citienship and it is vital for indian unity that this should be respected and preserved. At the same time, in order that aduate employment opportunities are avaiable to local and they do not suffer from a sense of injustice, where qualified local persons are available from among the people of the state, they should be given major share of the employment and employers should be requested to give effect to this objective, as a matter of policy’’
೨. ನಮ್ಮ ದೇಶದ ಯಾವುದೇ ಭಾಷೆ ಮತ್ತು ಸಂಸ್ಕೃತಿಯನ್ನು ಶ್ರೇಷ್ಠ ಅಥವಾ ಕನಿಷ್ಠ ಎಂದು ಪರಿಭಾವಿಸಬಾರದು. ಕೆಲವು ಭಾಷೆಗಳಿಗೆ ವಿಶೇಷ ಸವಲತ್ತು ನೀಡುವುದರ ಮೂಲಕ ಇತರೆ ಭಾಷೆಗಳನ್ನು ಕಡೆಗಣಿಸಬಾರದು. ಆದ್ದರಿಂದ ನಮ್ಮ ದೇಶದ ಭಾಷೆ ಮತ್ತು ಸಂಸ್ಕೃತಿಗಳೆಲ್ಲ ಸಮಾನವೆಂಬ ನೀತಿಯನ್ನು ಘೋಷಿಸಿ ಆಯಾ ಭಾಷೆ-ಸಂಸ್ಕೃತಿಗಳ ವಿಕಾಸಕ್ಕೆ, ಅಗತ್ಯಕ್ಕನುಗುಣವಾಗಿ, ಸಮಾನತೆಯ ತತ್ವವನ್ನಾಧರಿಸಿ ಸಹಾಯ ಸವಲತ್ತುಗಳನ್ನು ಒದಗಿಸಬೇಕು.
೩. ಯಾವುದೇ ರಾಜ್ಯದಲ್ಲಿರುವ ಕೇಂದ್ರ ಸರ್ಕಾರದ ಕಛೇರಿಗಳಲ್ಲಿ ಹಿಂದಿಗೆ ಕೊಡುವ ಸ್ಥಾನಮಾನವನ್ನೇ ರಾಜ್ಯಭಾಷೆಗೂ ಕೊಡಬೇಕು. ಹಿಂದಿಯ ಅಭಿವೃದ್ಧಿಗಾಗಿ ಸಂವಿಧಾನದಲ್ಲಿ ೩೪೪ ಮತ್ತು ೩೫೧ನೇ ವಿಧಿಯ ಮೂಲಕ ನೀಡಿರುವ ಸವಲತ್ತುಗಳನ್ನು ಎಲ್ಲ ರಾಜ್ಯಭಾಷೆಗೂ ಅನ್ವಯಿಸಬೇಕು. ಅಂದರೆ ಸಂವಿಧಾನದ ಈ ವಿಧಿಗಳ ಪ್ರಕಾರ, ಹಿಂದಿಗೆ ಇರುವಂತೆ ಸಂಸದೀಯ ಸಮಿತಿಯ ರಚನೆ, ಅನುಷ್ಠಾನ, ಪರಿಶೀಲನೆ, ಸವಲತ್ತುಗಳ ಆದ್ಯತೆಗಳು ರಾಜ್ಯಭಾಷೆಗಳಿಗೂ ಲಭ್ಯವಾಗಬೇಕು.
ಆಗ ಈ ದೇಶದ ಎಲ್ಲ ಭಾಷೆಗಳೂ ಸಮಾನವೆಂದು ಪರಿಗಣಿಸಿದಂತಾಗುತ್ತದೆ.
೪. ಪ್ರಾಥಮಿಕ ಶಿಕ್ಷಣದಲ್ಲಿ ಆಯಾ ರಾಜ್ಯಭಾಷೆ ಅಥವಾ ಮಕ್ಕಳ ಮಾತೃಭಾಷೆಯೇ ಮಾಧ್ಯಮವಾಗಿರಬೇಕೆಂಬ ಅಂಶವನ್ನು ಸಂವಿಧಾನದಲ್ಲೇ ಅಳವಡಿಸಬೇಕು. ಸಂವಿಧಾನದ ೩೫೦ ಎ ಮತ್ತು ೩೫೦ ಬಿ ವಿಧಿಗಳ ಮೂಲಕ ಎಲ್ಲ ರಾಜ್ಯಗಳ ಭಾಷಾ ಅಲ್ಪಸಂಖ್ಯಾತರಿಗೆ ಪ್ರಾಥಮಿಕ ಶಿಕ್ಷಣದಲ್ಲಿ ನೀಡಿರುವ ರಕ್ಷಣೆಯನ್ನು ಭಾಷಾ ಬಹುಸಂಖ್ಯಾತರ ಮಾತೃಭಾಷೆಗಳಿಗೆ ವಿಸ್ತರಿಸಿ ಒಟ್ಟಾರೆ ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷಾ ಶಿಕ್ಷಣವನ್ನು ಕಡ್ಡಾಯಗೊಳಿಸಿದರೆ ಶೈಕ್ಷಣಿಕ ಸಮಾನತೆಯ ಮುಖ್ಯಾಂಶವೊಂದನ್ನು ಪರಿಪಾಲಿಸಿದಂತಾಗುತ್ತದೆ. ಶ್ರೀಮಂತರಿಗೊಂದು ಶಿಕ್ಷಣ, ಬಡವರಿಗೊಂದು ಶಿಕ್ಷಣ-ಎಂಬ ತಾರತಮ್ಯವನ್ನು ನಿವಾರಿಸಲು ಇದೊಂದು ಸಾಧನವಾಗುತ್ತದೆ.
ಹೀಗೆ ಭಾಷೆ, ಸಂಸ್ಕೃತಿ ಮತ್ತು ಉದ್ಯೋಗಾವಕಾಶಗಳೀಗೆ ಸಂಬಂಧಿಸಿದಂತೆ ಸಮಾನತೆಯ ರಾಷ್ಟ್ರೀಯ ನೀತಿಯೊಂದು ರೂಪುಗೊಳ್ಳಬೇಕು. ನಮ್ಮ ಭಾಷಾ ಚಳವಳಿಗಳಿಗೆ ಇದು ಆದ್ಯತೆಯ ಅಂಶವಾಗಬೇಕು.
- ಪ್ರೊ.ಬರಗೂರು ರಾಮಚಂದ್ರಪ್ಪ

ಹಿಂದಿನ ಬರೆಹಗಳು