Monday, October 24, 2011

ಮಂಜುನಾಥ ಲತಾಗೆ ‘ಕರವೇ ನಲ್ನುಡಿ ಕಥಾ ಪ್ರಶಸ್ತಿ

‘ಕರವೇ ನಲ್ನುಡಿ ಮಾಸ ಪತ್ರಿಕೆ ಕನ್ನಡ ರಾಜ್ಯೋತ್ಸವ ವಿಶೇಷಾಂಕ ಪ್ರಯುಕ್ತ ಏರ್ಪಡಿಸಿದ್ದ ದ್ವಿತೀಯ ವರ್ಷದ ಕಥಾಸ್ಪರ್ಧೆ-೨೦೧೧ ರಲ್ಲಿ ಮಂಜುನಾಥ ಲತಾ ಅವರ ‘ಮಂಟೇದರನೊಕ್ಕಲು ಲೋಕರೂಢಿಗೊಳಗಾದುದು ಕಥೆಯು ಪ್ರಥಮ ಬಹುಮಾನ ಪಡೆದು ಕೊಂಡಿದೆ.
ಗೌತಮ ಜೋತ್ಸ್ನ ಅವರ ‘ನೀಲಿ ಕಥೆಗೆ ದ್ವಿತೀಯ ಹಾಗೂ ನಾಗಮಂಗಲ ಕೃಷ್ಣಮೂರ್ತಿ ಅವರ ‘ಅಗ್ನಿಕೊಂಡ ಕಥೆ ತೃತೀಯ ಬಹುಮಾನಕ್ಕೆ ಆಯ್ಕೆಯಾಗಿವೆ.
ಪ್ರಥಮ ಬಹುಮಾನ ರೂ.೨೫,೦೦೦, ದ್ವಿತೀಯ ರೂ. ೧೫,೦೦೦ ಹಾಗೂ ತೃತೀಯ ೧೦,೦೦೦ ರೂ. ಹಾಗೂ ಸ್ಮರಣಿಕೆ ಫಲಕಗಳನ್ನು ಒಳಗೊಂಡಿರುತ್ತದೆ.
ಚಿಂತಕ ಹಾಗೂ ಬರಹಗಾರ ಡಾ.ನಟರಾಜ್ ಹುಳಿಯಾರ್ ಅವರ ನೇತೃತ್ವದಲ್ಲಿ ತೀರ್ಪುಗಾರರ ಸಮಿತಿ ಸ್ಪಧೆಗೆ ಬಂದ ಕಥೆಗಳನ್ನು ಪರಿಶೀಲನೆ ನಡೆಸಿ ಫಲಿತಾಂಶ ಪ್ರಕಟಿಸಿದೆ.
ಮೆಚ್ಚುಗೆ ಪಡೆದ ಕಥೆಗಳು:
‘ಬಾಡಿ ಡೊನೇಷನ್ (ಡಾ.ಪ್ರಹ್ಲಾದ ಅಗಸನಕಟ್ಟೆ), ‘ಸ್ವರ್ಗದ ಬಾಗಿಲು ತೆರೆಯುವ ದಿನ (ತೊಡಿರಾನ ಅಬ್ದುಲ್ಲ), ‘ಉರಿವ ಸೂರ‍್ಯನ ಪಾದ (ಅಬ್ಬಾಸ ಮೇಲಿನ ಮನಿ), ಬಿಸಿಲುಗುದುರೆಯ ಬಿಸುಪು ( ಡಾ.ಬಸು ಬೇವಿನ ಗಿಡದ), ಪೆಪ್ಸಿಯ ಡೈರಿಯಿಂದ ಕದ್ದ ಪುಟಗಳು (ಡಾ.ಜಿ.ಎಸ್.ಸತೀಶ್ ಹೊಸಕೆರೆ), ಅಸ್ತಿತ್ವ (ಅನುಬೆಳ್ಳಿ), ನಿರ್ಗಮನ (ಜ್ಯೋತಿ ಬಿ.ಕುಲಕರ್ಣಿ), ಉಣಲೆಂದು ಬಂದ ಸುಖ (ಕಲ್ಲೇಶ್ ಕುಂಬಾರ್), ಮಸಿಪೆನ್ನು (ಬಸವಣ್ಣೆಪ್ಪ ಪ.ಕಂಬಾರ), ಚಡ್ಡಿ ಶಾಮಣ್ಣನೂ, ಹನ್ನೆರಡು ಕತ್ತೆಗಳೂ (ವಿಶ್ವನಾಥ ಪಾಟೀಲ ಗೋನಾಳ), ಅಭಿವೃದ್ಧಿ (ಹನುಮಂತ ಹಾಲಿಗೇರಿ) ಕಥೆಗಳು ತೀರ್ಪುಗಾರರ ಮೆಚ್ಚುಗೆ ಪಡೆದಿವೆ.
ಕಥಾ ಸ್ಪರ್ಧೆಯ ವಿಜೇತರಿಗೆ ಕರವೇ ‘ನಲ್ನುಡಿ ವತಿಯಿಂದ ಬೆಂಗಳೂರಿನಲ್ಲಿ ನಡೆವ ಕಾರ‍್ಯಕ್ರಮದಲ್ಲಿ ಬಹುಮಾನ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಗುವುದು.

Tuesday, October 18, 2011

ಶಿಕ್ಷಣದಲ್ಲಿ ಬದಲಾವಣೆ ಆಗಬೇಕು ಮಾತೃಭಾಷೆಯ ಮೂಲಕ ಶಿಕ್ಷಣ ಜಾರಿಯಾಗಬೇಕುವಿಚಾರವಾದಿ ರಂಗನಾಥ್‌ರವರ ಅಭಿಪ್ರಾಯಗಳು

ಪ್ರಸ್ತುತ ಕರ್ನಾಟಕ ರಾಜಕೀಯ ಕಂಡ ಅನುಭವಿ, ಮುತ್ಸದ್ಧಿ, ಮಿಂಚಿನ ವ್ಯಕ್ತಿತ್ವದ ರಾಜಕಾರಣಿ ರಂಗನಾಥ್ ಅವರು ಪ್ರಬುದ್ಧ ಚಿಂತಕರಾಗಿ, ಸಂತ ಮನಸ್ಸಿನ ಸಾಹಿತ್ಯಾಭ್ಯಾಸಿ ರಾಜಕಾರಣಿಯಾಗಿ ಖ್ಯಾತರಾಗಿದ್ದಾರೆ. ಇವರನ್ನು ಮಾತನಾಡಿಸುವುದೆಂದರೆ ಒಬ್ಬ ಸೂಕ್ಷ್ಮಮತಿ ಹಾಗು ವಿಚಾರವಾದಿಯನ್ನು ಮಾತನಾಡಿಸಿದ ಅನುಭವವಾಗುತ್ತದೆ. ನಾವು ಕೇಳಿದ ಕೆಲವು ಪ್ರಶ್ನೆಗಳಿಗೆ ರಂಗನಾಥ್ ಅವರು ಹೀಗೆ ಉತ್ತರಿಸತೊಡಗಿದರು;
ನಿಮ್ಮ ಜೀವನದಲ್ಲಿ ಎಂದಾದರೂ ನೋವಿನ ಕ್ಷಣಗಳು ಬಂದಿವೆಯೇ?

(ಅವರ ಮಾಗಿದ ಮುಖದಲ್ಲಿ ಮುಗುಳ್ನಗು) ನಾನು ಎಂದೂ ಗೊಳೋ ಅಂಥ ಅಳುತ್ತಾ ಮುಖ ನೆಲಕ್ಕಾಕ್ಕಂಡು ಕೂತವನಲ್ಲ. ನನಗೆ ಉತ್ತಮ ಸ್ನೇಹಿತರ ಗುಂಪಿತ್ತು. ಜಿ.ವಿ ಆಂಜನಪ್ಪ, ಬಿ.ಎಲ್.ಗೌಡ ಮೊದಲಾದವರು ಈಗಲೂ ನನ್ನ ಕಣ್ಣೊಳಗೆ ಮೂಡಿಬರುತ್ತಾರೆ. ಇಷ್ಟಾದರೂ ನಾನು ನೋವು ಅನಭವಿಸಿದ್ದು, ನನ್ನಪ್ಪ ಸತ್ತಾಗ. ನನಗೆ ವಿವೇಕದ ಹಾದಿತೋರಿದ ಅಪ್ಪನ ಸಾವು ತೀರಾ ದುಃಖ ಹುಟ್ಟಿಸಿತು.

ನಿಮಗೆ ರಾಜಕೀಯಕ್ಕೆ ಬರಲು ಪ್ರೇರಣೆ ನೀಡಿದವರು ಯಾರು?
ರಾಜಕೀಯ ನನ್ನ ಜೊತೆ ಜೊತೆಗೇ ಬೆಳೆದುಬಂದ ವೃತ್ತಿ. ಹಳ್ಳಿಗಳಲ್ಲಿ ನಾನು ಚಿಕ್ಕಂದಿನಲ್ಲೇ ರಾಜಕೀಯ ನಾಯಕನಾಗಿ ಗುರುತಿಸಿಕೊಂಡಿದ್ದೆ. ಕೆಂಚಪ್ಪನವರು ನನ್ನ ರಾಜಕೀಯ ಕ್ಷೇತ್ರದ ಕೇಂದ್ರ ಬಿಂದು. ಪ್ರಭಾವ ಎನ್ನುವುದಾದರೆ ಅವರಿಂದಲೇ ಆಗಿದೆ.

ಸ್ವಾತಂತ್ರ್ಯ ಪೂರ್ವದಲ್ಲಿ ನಿಮಗೆ ದೇಶದ ಬಗೆಗಿದ್ದ ಕನಸುಗಳು ಯಾವುವು?
ಎಲ್ಲ ಜನರೂ ಸ್ವತಂತ್ರರಾಗುತ್ತಾರೆ, ಬಡತನ ನಿವಾರಣೆಯಾಗುತ್ತದೆ, ಮೂದಲಿಕೆ ಇಲ್ಲದ ಸ್ವಾತಂತ್ರ್ಯ ಲಭ್ಯವಾಗುತ್ತದೆ. ಜನಕ್ಕೆ ಪ್ರಗತಿಪರ ಮನೋಭಾವ ಬರುತ್ತದೆ. ಅಸ್ಪೃಶ್ಯತೆ ಮಾಯವಾಗುತ್ತದೆ.. ಇಂಥ ಹಲವಾರು ಕನಸುಗಳನ್ನು ಕಂಡಿದ್ದೆವು.

ನಿಮ್ಮ ಕನಸಿನ ಸ್ವಾತಂತ್ರ್ಯ ಸಿಕ್ಕಿದೆಯೇ?
ಸ್ವಾತಂತ್ರ್ಯಾ ನಂತರ ಅಭಿವೃದ್ಧಿಯಾಗಿದೆ. ಸುಮಾರು ಬದಲಾಗಿದೆ. ನಾವು ಕಂಡಾಗಿನ ಅಸ್ಷೃಶ್ಯತೆ ಈಗಿಲ್ಲ. ಬಾವಿಯ ಬಳಿ ಅಸ್ಪೃಶ್ಯತೆ ನೀರಿಗಾಗಿ ಕಾಯಬೇಕಿತ್ತು. ಈಗ ಅಂಥ ಸ್ಥಿತಿ ಕಡಿಮೆಯಾಗಿದೆ. ಆದರೆ ಮನಸ್ಸಿನ ನೋವು ಕಡಿಮೆಯಾಗಿಲ್ಲ.
ವ್ಯಕ್ತಿಯ ಜ್ಞಾನಕ್ಕೆ ಮಾನ್ಯತೆಯಿದೆ. ಆದರೆ ಜಾತಿಯ ನೋವು ಹಾಗೇ ಇದೆ. ಉದಾಹರಣೆಗೆ ಕರ್ಣ ಎಷ್ಟೇ ಸಮರ್ಥನಾಗಿದ್ದರೂ, ಅಂಗಾಧಿ ಪತಿಯಾದರೂ ಆತನನ್ನು ಸೂತಪುತ್ರ ಎನ್ನುವ ನೋವು ತಪ್ಪಿರಲಿಲ್ಲ. ಈಗಲೂ ಅಂಥ ವಾತಾವರಣ ಜೀವಂತವಾಗಿದೆ.
ಸ್ವಾತಂತ್ರ್ಯ ಪೂರ್ವದಲ್ಲಿ ಜನರಿಗೆ ತಮ್ಮ ಹಕ್ಕಿನ ಅರಿವಿತ್ತು. ಈಗ ಅಂಥ ಅರಿವು ಕಡಿಮೆಯಾಗಿದೆ. ತುಳಿತಕ್ಕೊಳಗಾದವನು ಶಕ್ತಿಹೀನನಾಗಿದ್ದಾನೆ. ನಾವು ಸಮಾಜದಲ್ಲಿನ ಜಾತಿಯ ನೋವನ್ನು ಅಳಿಸಿಲ್ಲ. ಅಸ್ಪೃಶ್ಯರೊಳಗೂ ಇಂದು ಪರಸ್ಪರ ಶೋಷಣೆ, ದಬ್ಬಾಳಿಕೆಗಳು ತಲೆಯೆತ್ತುತ್ತಿವೆ. ಶೋಷಣೆಗೊಳಗಾದವರೇ ಶೋಷಣೆ ಮಾಡುವ ಪ್ರಯತ್ನದಲ್ಲಿದ್ದಾರೆ. ನಾವು ನಿಜವಾಗಿಯೂ ಹೋರಾಟಮಾಡಬೇಕಿರುವುದು ಯಾವುದಕ್ಕೆ ಎಂಬ ಅರಿವು ಜನರಿಗೆ ಇಲ್ಲವಾಗುತ್ತಿದೆ.

ಜಾತಿಗಳು ಇತ್ತೀಚೆಗೆ ಹೆಚ್ಚು ಸಂಘಟಿತವಾಗುತ್ತಿವೆ. ಇದಕ್ಕೆ ನಿಮ್ಮ ಅಭಿಪ್ರಾಯವೇನು?
ನೋವಿನ ಬಿಡುಗಡೆಗೆ ಸಂಘಟನೆ ಅಗತ್ಯ. ಅದು ಇನ್ನೊಬ್ಬರಿಗೆ ನೋವುಕೊಡಲು, ದಬ್ಬಾಳಿಕೆ ನಡೆಸಲು ಮುಂದಾಗುವುದಾದರೆ ಕಂಠಕಪ್ರಾಯ.
ಇಂದಿನ ರಾಜಕೀಯದ ವಾತಾವರಣದಲ್ಲಿ ಚುನಾವಣೆಗಳ ಸ್ಥಿತಿಯಲ್ಲಿ ಒಬ್ಬ ಬುದ್ದಿವಂತ ಹಾಗು ಪ್ರಾಮಾಣಿಕ ವ್ಯಕ್ತಿ ಸ್ಪರ್ಧಿಸಿ ಗೆಲ್ಲಬಲ್ಲನೆ?
ಬುದ್ದಿವಂತರಿಗೆ ಅವಕಾಶವಿದೆ. ನಾನು ಆಶಾವಾದಿ.

ನಿಮ್ಮ ರಾಜಕೀಯ ಜೀವನ ತೃಪ್ತಿ ನೀಡಿದೆಯೇ?
ನೀಡಿದೆ. ಸಣ್ಣಪುಟ್ಟ ವೇದನೆಗಳು ಬಂದಿರಬಹುದು. ಅವುಗಳನ್ನು ಒಳಿತಾಗೇ ಬಳಸಿಕೊಂಡಿದ್ದೇನೆ.

ಇಂದು ರಾಜಕಾಣಿಗಳಿರುವ ಮುಖ್ಯ ಸವಾಲುಗಳು ಯಾವುವು?
ಸರ್ವಕಾಲಕ್ಕೂ ಮಾನ್ಯವಾಗಬಲ್ಲ ಮೌಲ್ಯಗಳು ಸಮಾಜದಲ್ಲಿವೆ, ಅವುಗಳನ್ನು ರಾಜಕಾರಣಿಯಾದವನು ಅಳವಡಿಸಿಕೊಳ್ಳವುದರಲ್ಲಿ ಅರ್ಥವಿಲ್ಲ. ರಾಜಕೀಯದಲ್ಲಿದ್ದವನು ಕೇವಲ ಪತ್ರಿಕೆ ಓದಿದರೆ ಸಾಲದು. ಸಾಹಿತ್ಯ ಓದಬೇಕು. ಸಾಹಿತ್ಯ ಪರಿಣಾಮಕಾರಿಯಾದುದು. ರಾಜಕೀಯ ಒಂದು ಶಾಸ್ತ್ರ ಕುಣಿತವಲ್ಲ. ಸಾಹಿತ್ಯದಲ್ಲಿನ ಅನೇಕ ಸೂಕ್ಷ್ಮಗಳು ರಾಜಕಾರಣಿಯಾದವನಿಗೆ ಬೇಕಾಗುತ್ತವೆ. (ಕಾರಂತರ ಚೋಮನ ದುಡಿಯನ್ನು ವಿವರಿಸುತ್ತ ಅಲ್ಲಿನ ಆಸ್ತಿಯ ಹಕ್ಕಿನ ಬಗ್ಗೆ ಮಾತನಾಡಿದರು.) ರಾಜಕಾರಣಿಯಾದವನು ಇಂಥ ಸೂಕ್ಷ್ಮಗಳನ್ನು ಅರಿತು ಅಲ್ಲಿಂದ ಯೋಜನೆಗಳನ್ನು, ಬದಲಾವಣೆಯನ್ನು ಕೈಗೊಳ್ಳಬೇಕಾಗುತ್ತದೆ.

ನಮ್ಮ ಶಿಕ್ಷಣ ಹಾಗೂ ಉದ್ಯೋಗಕ್ಕೆ ಪರಸ್ಪರ ಸಂಬಂಧವಿಲ್ಲ. ಓದುವುದೆಂದರೆ ನಿರುದ್ಯೋಗಿಯಾಗುವುದು ಎಂಬ ಅರ್ಥವಿದೆ. ಇದಕ್ಕೆ ನಿಮ್ಮ ಅಭಿಪ್ರಾವೇನು?
ನಾನು ಮಾರ್ಕ್ಸ್ ಮತ್ತು ಲೆನಿನ್‌ರನ್ನು ಓದಿಕೊಂಡುವನು. ಈಗಲೂ ನನಗದರ ಕಾವಿದೆ. ಆರ್ಥಿಕ ಸಮಸ್ಯೆಯ ನಿವಾರಣೆ ಬಗ್ಗೆ ಜಪಾನ್ ನನಗೆ ಆಪ್ತವಾಗುತ್ತದೆ. ಅಲ್ಲಿ ಪ್ರತಿಯೊಂದು ಮನೆಯೂ ಒಂದು ಕೈಗಾರಿಕಾ ಕೇಂದ್ರವಾಗಿರುತ್ತವೆ. ಆ ದೃಷ್ಟಿಯಲ್ಲಿ ನಮ್ಮ ಸಮಾಜ ಚಲಿಸಬೇಕು. ಜಪಾನ್‌ಗಿರುವ ಕಾಲದ ಪ್ರಜ್ಞೆ, ರಾಷ್ಟ್ರಿಯ ದೃಷ್ಟಿಕೋನ, ತಮ್ಮ ಮಾಲನ್ನು ಮಾರಿಕೊಳ್ಳಲು ತಾವೇ ಸೃಷ್ಟಿಸಿಕೊಳ್ಳುವ ಮಾರುಕಟ್ಟೆ ವ್ಯವಸ್ಥೆ ಇಂಥ ಅಂಶಗಳನ್ನು ಪಾಲಿಸಬೇಕು. ಗಾಂಧೀಜಿಯವರ ಕಲ್ಪನೆಗಳು ಪ್ರಸ್ಥುತವಾಗುತ್ತವೆ. ಅವರ ಚಿಂತನೆಗಳನ್ನು ಅನುಸರಿಸುವುದರಿಂದ ಈ ದೇಶ ಅಭಿವೃದ್ಧಿಯಾಗಬಲ್ಲದು. ಗಾಂಧೀಜಿಯ ತತ್ವಗಳನ್ನು ವೈಜ್ಞಾನಿಕವಾಗಿ ನೋಡುವ ಕ್ರಮ ಅನಿವಾರ‍್ಯ.
ಶಿಕ್ಷಣದಲ್ಲಿ ಬದಲಾವಣೆ ಆಗಬೇಕು. ಮಾತೃಭಾಷೆಯ ಮೂಲಕ ಶಿಕ್ಷಣ ಜಾರಿಯಾಗಬೇಕು. ಮಾತೃಭಾಷೆಯ ಜೊತೆಗೆ ಹಿಂದಿ, ಇಂಗ್ಲಿಷ್‌ಗಳೂ ಬೇಕು. ಕನ್ನಡ ಭಾಷೆ ಪ್ರಾಥಮಿಕವಾಗಿ ದೊರೆಯದಿದ್ದರೆ ಮಕ್ಕಳಿಗೆ ನಮ್ಮ ಸಮಾಜದ ಅರಿವು, ಅನುಭವ ಆಗಲಾರದು. ಅವು ಸಮಾಜದಿಂದ ದೂರಾಗುತ್ತವೆ. ಮಾತೃಭಾಷೆಯನ್ನು ಮೂಲವಾಗಿ ಕಲಿತು ಇಂಗ್ಲೀಷ್‌ನಲ್ಲಿ ಪಾಂಡಿತ್ಯ ಪಡೆದವರು ಅನೇಕರಿದ್ದಾರೆ. (ಬಿ.ಎಂ.ಶ್ರೀ. ಎ.ಎನ್. ಮೂರ್ತಿರಾವ್ ಮೊದಲಾದವರ ಪ್ರಸ್ತಾಪ)

ನಿಮ್ಮ ಮೇಲೆ ಪ್ರಭಾವ ಬೀರಿರುವ ಮಹಾನ್ ವ್ಯಕ್ತಿಗಳು ಯಾರು?
ಅನೇಕರಿದ್ದಾರೆ. ಅವರಲ್ಲಿ, ಬುದ್ಧ, ಬಸವಣ್ಣ, ಅಂಬೇಡ್ಕರ್ ಹಾಗೂ ಗಾಂಧಿ ಮುಖ್ಯರು. ಚಿಕ್ಕಂದಿನಲ್ಲಿ ನಾನು ಕ್ರಾಂತಿಯ ಸ್ವಭಾವ ಹೊಂದಿದ್ದೆ. ಆಗ ಸುಭಾಷ್‌ಚಂದ್ರಬೋಸ್ ನನಗೆ ತುಂಬಾ ಇಷ್ಟವಾಗಿದ್ದರು. ಕ್ರಮೇಣ ಗಾಂಧಿ ನನ್ನೊಳಗಿಳಿದರು.

ಅಂದು ರಾಜಕೀಯಕ್ಕೆ ಬರುತ್ತಿದ್ದವರು ಸೇವೆ ಮಾಡುವುದು ಪುಣ್ಯದ ಕೆಲಸ ಎಂದು ಭಾವಿಸಿದ್ದರು. ಆದರೆ ಇಂದು ಮೂರನೇ ದರ್ಜೆಯಿರಲಿ, ನಾಲ್ಕನೆ ದರ್ಜೆಗಿಂತಲೂ ಕಡೆಯಾದಂಥ ಮಂದಿ ರಾಜಕೀಯವನ್ನು ಒಂದು ಸ್ವಾರ್ಥದ, ಲಾಭದ ಉದ್ಯಮವೆಂದು ಭಾವಿಸಿದ್ದಾರೆ. ರಾಜಕೀಯೋದ್ಯಮಿಗಳೂ ಆಗಿದ್ದಾರೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಸಮಾಜದಲ್ಲಿ ಇಂಥ ಕಾಲ ಬಂದೇ ಬರುತ್ತದೆ. ಅದಕ್ಕೆ ಧೃತಿಗೆಡಬೇಕಿಲ್ಲ. ಏಕೆಂದರೆ ಅದು ಶಾಶ್ವತವಲ್ಲ. ಈ ಕುರಿತು ನನಗೆ ವೇದನೆಯಾಗುತ್ತದೆ. ಆದರೆ ಮುಂದಿನ ದಿನಗಳ ಬಗ್ಗೆ ನನಗೆ ಭರವಸೆಯಿದೆ.
೧೯೪೮ರಲ್ಲಿ ಜ್ಯೋತಿರಾವ್‌ಪುಲೆ ನಮ್ಮಲ್ಲಿಂದು ಸ್ವಾರ್ಥಿಗಳಿದ್ದಾರೆ, ಮುಂದಿನ ದಿನಗಳಲ್ಲಿ ಶೋಷಿತರೂ ಕೂಡ ಸ್ವಾರ್ಥಿಗಳಾಗುತ್ತಾರೆ. ಇಂಥ ಸ್ಥಿತಿಗಳು ಸಮಾಜದಲ್ಲಿ ಸಹಜ ಹಾಗೂ ತಾತ್ಕಾಲಿಕ ಎಂದಿದ್ದರು. ಮುಂದಿನ ದಿನಗಳ ಬಗ್ಗೆ ಅವರೂ ಆಶಾವಾದಿಯಾಗಿದ್ದರು. ಹಾಗೇ ನಾನು ಕೂಡ ಆಶಾವಾದಿ.

ನೀವು ಸಿನಮಾ ನೋಡುವ ಹವ್ಯಾಸ ಹೊಂದಿದ್ದೀರಾ?
(ನಗುತ್ತಾ) ಬಹಳ ಹಿಂದೆ ನೋಡ್ತಿದ್ದೆ. ನನಗೆ ನೆನಪಿರುವಂತೆ ವಸಂತಸೇನೆ, ಬಭ್ರುವಾಹನ ಹಾಗೂ ಗೋಪಾಲಗೌಡ್ರ ಜೊತೆ ಹೋಗಿ ಸಂಸ್ಕಾರ ಚಿತ್ರಗಳನ್ನು ನೋಡಿದ್ದೇನೆ.

ಇಂದಿನ ಯುವ ಸಮುದಾಯಕ್ಕೆ ನೀವು ನೀಡುವ ಸಲಹೆ ಏನು?
ಹೆಚ್ಚು ವಿದ್ಯಾವಂತರಾಗಬೇಕು. ಸಮರ್ಥರಾಗಬೇಕು. ಶಕ್ತಿಶಾಲಿ ಗಳಾಗಬೇಕು. ಸೌಜನ್ಯಶೀಲರಾಗಬೇಕು. ತಮ್ಮ ವಿವೇಚನೆಯನ್ನು ಒರೆಗೆ ಹಚ್ಚಿ ವಿಶಾಲ ಸಹೃದಯತೆ ಹಾಗೂ ಸಂಸ್ಕಾರದ ನಿಜವಾದ ಅರ್ಥವನ್ನು ಪಡೆಯಬೇಕು.

ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ ಸಚಿವರಾಗಿ ಅರ್ಥಪೂರ್ಣ ಸೇವೆಯನ್ನು ಸಲ್ಲಿಸಿದ್ದೀರಿ ಪರಿಸರ ಸಂರಕ್ಷಣೆ ಕುರಿತು ತಾವು ಯಾವ ಕಾರ್ಯಯೋಜನೆಗಳನ್ನು ರೂಪಿಸಿದ್ದೀರಿ?
ಪರಿಸರ ಸಂರಕ್ಷಣೆಗಾಗಿ ನಾನೀಗ ನೀಲ ನಕ್ಷೆಯನ್ನು ತಯಾರಿಸಿದ್ದೇನೆ.
ಪರಿಸರ ಮಾಲಿನ್ಯ ಎಂದೊಡನೆ ಕೇವಲ ನಗರವನ್ನಷ್ಟೇ ಕೇಂದ್ರವಾಗಿಟ್ಟುಕೊಂಡು ಯೋಚಿಸುವುದು ತಪ್ಪಾಗುತ್ತದೆ. ಗ್ರಾಮೀಣ ಮಟ್ಟದಲ್ಲಿಯೂ ಮಾಲಿನ್ಯ ಉಂಟಾಗುತ್ತಿದೆ. ನಮ್ಮ ಯೋಜನೆಗಳು ಹಳ್ಳಿಗಳ ಮೂಲಕ ಆರಂಭವಾಗಬೇಕು. ಆದ್ದರಿಂದ ಹಳ್ಳಿಗಳ ನೈರ್ಮಲ್ಯಕ್ಕೆ ಹೆಚ್ಚು ಒತ್ತುಕೊಟ್ಟು ಪರಿಸರ ಸಂರಕ್ಷಣೆಯನ್ನು ಮಾಡಬೇಕಿದೆ. ಈ ನಿಟ್ಟಿನಲ್ಲಿ ನಾನು ವಿಶೇಷ ಚಟುವಟಿಕೆಗಳನ್ನು ರೂಪಿಸಲು ಕಾರ‍್ಯೋನ್ಮುಖನಾಗಿದ್ದೇನೆ.
ಒಂದೂವರೆ ಘಂಟೆಯ ದೀರ್ಘಸಮಯದ ನಂತರ ರಂಗನಾಥ್ ಎದ್ದು ಕೋಣೆಯತ್ತ ಹೊರಟರು. ಪಕ್ಕದಲ್ಲಿದ್ದ ಬುದ್ಧನ ಪ್ರತಿಮೆಯಲಿ ಅವರ ಶುಭ್ರ ಚಿತ್ರ ಕಾಣುತ್ತಿತ್ತು.

- ನಾಗತಿಹಳ್ಳಿ ರಮೇಶ್

ಜನರ ಬದುಕಿನ ಕತ್ತಲೆಗೆ ಬೆಳಕಾಗಬಲ್ಲ ಕೆ.ಎಚ್. ರಂಗನಾಥ್ಕರ್ನಾಟಕದ ರಾಜಕೀಯ ಇತಿಹಾಸವನ್ನು ಅವಲೋಕಿಸಿದರೆ ಜಾತಿ ಮತ್ತು ಬಂಡವಾಳಶಾಹಿ ಶಕ್ತಿಗಳೇ ರಾಜಕಾರಣದದ ಧಾತು ಧೋರಣೆಗಳಾಗಿವೆ. ಇಂಥ ಪ್ರತಿಕೂಲ ಸಾಮಾಜಿಕ ಸಂದರ್ಭದಲ್ಲಿ ದಮನಕ್ಕೆ ಒಳಗಾದ ಜನರ ಬಗ್ಗೆ ನಿರಂತರವಾಗಿ ಧ್ಯಾನಿಸುತ್ತಾ, ಸ್ಪಂದಿಸುತ್ತಾ ಬಂದಿರುವ ಸ್ಫಟಿಕದಂತಹ ಅಪರೂಪದ ರಾಜಕಾರಣಿ ಕೆ.ಎಚ್. ರಂಗನಾಥ್ ಅವರು. ಇವರ ಬೌದ್ಧಿಕತೆ, ಅನುಭವ, ಸಾಮಾಜಿಕ ಚಿಂತನೆ ವಿಶಿಷ್ಟವಾಗಿವೆ. ಇವರು ಬುದ್ಧ, ಬಸವ, ಗಾಂಧಿ ಹಾಗೂ ಅಂಬೇಡ್ಕರ್‌ರ ತಾತ್ವಿಕತೆಯಿಂದ ಕೂಡಿದ ಸೃಜನಶೀಲ ರಾಜಕಾರಣದ ಮೌನವನ್ನು ಸದಾ ನಾಡಿನ ರಾಜಕೀಯದಲ್ಲಿ ಸೃಷ್ಟಿಸುತ್ತಾ ಬಂದಿದ್ದಾರೆ. ಈ ಮೌನವೇ ಕರ್ನಾಟಕದ ರಾಜಕಾರಣವನ್ನು ಎಚ್ಚರಿಸುವ, ಪ್ರಗತಿಪರಗೊಳಿಸುವ ಶಕ್ತಿಯಾಗಿ ಕೆಲಸ ಮಾಡಿದೆ. ನುಡಿದಂತೆ ನಡೆವ, ಪರಿಶುದ್ಧ ಚಿಂತನೆಯ, ಸರಳ-ಸಜ್ಜನಿಕೆಗೆ, ಪ್ರಾಮಾಣಿಕತೆಗೆ ಅನ್ವರ್ಥರಾದ ಕೆ.ಎಚ್. ರಂಗನಾಥ್ ಅವರು ಹಲವಾರು ಸ್ತರಗಳಲ್ಲಿ ನಾಡಿನ ಜನತೆಯನ್ನು ಕಾಡುವ ಜೀವಚೇತನ. ಇತ್ತೀಚಿನ ರಾಜಕೀಯದ ಸ್ಥಿತಿ ವಿಚಿತ್ರವಾಗಿದೆ. ಪಕ್ಷದಿಂದ ಪಕ್ಷಕ್ಕೆ ಜಿಗಿಯುವ ಚೇಷ್ಟೆ ಅತಿಯಾಗುತ್ತಿದೆ. ರಾಜಕೀಯ ಎನ್ನುವುದು ತಮಗೆ ಬೇಕಾಗಿರುವುದನ್ನು ಲೂಟಿ ಮಾಡುವ ಕ್ಷೇತ್ರವೆಂದು ಹಲವರು ಭಾವಿಸಿರುವಂತಿದೆ. ಜನರ ಜೀವನಕ್ಕೆ ಅವರ ಅಭಿವೃದ್ಧಿಗೆ ಅಗತ್ಯವಾದ ಕಾರ್ಯಯೋಜನೆ ರೂಪಿಸುವ ಕ್ರಿಯಾಶೀಲತೆಯ ನಡಾವಳಿ ಯಾರಿಗೂ ಬೇಕಾಗಿಲ್ಲ. ಯಾರಿಗೂ ಕಾಣುತ್ತಿಲ್ಲ. ಇಂಥ ಸಂದರ್ಭದಲ್ಲಿ ಕ್ರಿಯಾಶೀಲ ಹಾಗೂ ಜೀವಪರವಾದಿಯಾದ ರಾಜಕಾರಣಿ ಕೆ.ಎಚ್. ರಂಗನಾಥ್ ಅವರು ಕಂಡು ಬರುತ್ತಾರೆ.
-ನಾಗತಿಹಳ್ಳಿ ರಮೇಶ್

ಸಂತ ಮನಸ್ಸಿನ ಪ್ರಬುದ್ಧ ಚಿಂತಕ ಹಾಗೂ ಸಾಹಿತ್ಯಾಭ್ಯಾಸಿ ರಾಜಕಾರಣಿಮಾರ್ಕ್ಸ್ ಮತ್ತು ಲೆನಿನ್‌ರನ್ನು ಆಳವಾಗಿ ಅಭ್ಯಾಸಮಾಡಿದ್ದ ರಂಗನಾಥ್‌ರವರಿಗೆ ಸಮಾಜ ಬದಲಾಗಬೇಕೆಂಬ ಉತ್ಕಟ ಕಾಳಜಿಯಿತ್ತು. ಈ ಕಾಳಜೀಯನ್ನೇ ರಾಜಕೀಯ ದೃಷ್ಟಿಯನ್ನಾಗಿಸಿಕೊಂಡರು. ಕರ್ನಾಟಕದ ಏಕೀಕರಣ ಚಳುವಳಿಗೂ ತೊಡಗಿಕೊಂಡರು. ೧೯೪೮ರಿಂದ ೫೨ರವರೆಗೆ ಪ್ರಜಾಸೋಷಿಯಲಿಸ್ಟ್ ಪಾರ್ಟಿಯಲ್ಲಿ ಸಕ್ರಿಯವಾಗಿ ತೊಡಗಿಕೊಂಡರು. ನಂತರ ೧೯೬೯ರ ತನಕ ಅದೇ ಪಾರ್ಟಿಯ ಜನರಲ್ ಸೆಕ್ರೆಟರಿಯಾಗಿ ಕಾರ‍್ಯನಿರ್ವಹಿಸಿದರು. ೧೯೬೯ ರಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಆ ಪಕ್ಷದಲ್ಲಿ ರಾಷ್ಟ್ರದ ಬಗ್ಗೆ ಮಿಡಿಯುವ ಮಹಾನ್ ನಾಯಕರುಗಳಿದ್ದರು ಇಂಥವರ ಬದುಕು ಹಾಗು ಕಾಳಜಿಗಳು ರಂಗನಾಥ್‌ರವರು ಒಬ್ಬ ಶ್ರೇಷ್ಟ ನಾಯಕರಾಗಿ ರೂಪುಗೊಳ್ಳಲು ಪ್ರೇರಕವಾದವು.

ಇಂದು ರಾಜಕೀಯದ ಬಗ್ಗೆ ಜನ ಬೇಸತ್ತಿದ್ದಾರೆ. ರಾಜಕೀಯವೆನ್ನುವುದು ’ಹೇಸಿಗೆಯೊಳಗಿನ ಸಂಪತ್ತನ್ನು ನಾಲಗೆಯಿಂದ ಕಬಳಿಸಲು ಭೃಷ್ಟರು ನಡೆಸುವ ಸ್ಪರ್ಧೆ ಎಂಬ ಮನೋಭಾವ ಜನರಲ್ಲಿ ಬೇರೂರುತ್ತಿದೆ. ನಾಯಕರೆನಿಸಿ ಕೊಂಡವರಿಗೆ ಈ ಮಣ್ಣಿನ ಸಂಕೀರ್ಣತೆಗಳನ್ನು ಅರಿಯುವ ಹಾಗು ಜನರಲ್ಲಿ ಕ್ರಿಯಾಶೀಲತೆಯನ್ನು ರೂಪಿಸುವ ಚೈತನ್ಯ ಇಲ್ಲವಾಗುತ್ತಿದೆ. ರಾಜಕೀಯ ಎನ್ನುವುದು ಜನಸೇವೆಯೆಂದು ಭಾವಿಸದೆ ಅದೊಂದು ಲಾಭಗಳಿಸುವ ಉದ್ಯಮವೆಂದುಕೊಂಡವರೇ ಹೆಚ್ಚು. ಹಣ ಚೆಲ್ಲಿ ಹಣ ಬಾಚುವ ತಂತ್ರವಿದ್ದವನೇ ಶ್ರೇಷ್ಠರಾಜಕಾರಣಿ ಎನಿಸಿಕೊಳ್ಳುತ್ತಿರುವ ಆತಂಕದ ಸಂದರ್ಭದಲ್ಲಿ, ವಂಶಾಡಳಿತವನ್ನು ಧಿಕ್ಕರಿಸಿ ಸರಳವಾಗಿದ್ದು ಸತ್ಯ, ಪ್ರಾಮಾಣಿಕತೆ ಹಾಗೂ ಮನುಷ್ಯರ ಸಂಕಟಗಳನ್ನು ನಿವಾರಿಸುವ ಪ್ರೀತಿಯುಳ್ಳ ಮೇಧಾವಿ ರಾಜಕಾರಣಿಗಳು ಅಪರೂಪ. ಅಂಥವರಲ್ಲಿ ಕೆ.ಹೆಚ್.ರಂಗನಾಥ್ ಅವರು ಪ್ರಮುಖರು.
ರಾಜಕೀಯ ಮನುಷ್ಯನ ರಕ್ತವಿದ್ದಂತೆ. ಅದು ಕಲುಷಿತಗೊಂಡಾಗಿನ ಅಪಾಯ ಭೀಕರವಾದದ್ದೆಂದು ನಂಬಿರುವ ಇವರು; ಇತಿಹಾಸದಲ್ಲಿ ಕಂಡು ಬರುವ ಪ್ರಗತಿಪರ ರಾಜಕಾರಣವನ್ನು ಇಷ್ಟಪಡುವಂತವರು. ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಹಾಗು ಭಕ್ತಿಪಂಥದ ಮಹನೀಯರು ಪ್ರತಿಪಾದಿಸಿದ ರಾಜಕಾರಣ ಜೀವಪರವಾದದ್ದು, ಇಂಥ ರಾಜಕಾರಣದ ಅಗತ್ಯವಿದೆ ಎನ್ನುವ ಇವರು; ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಎದೆಯೊಳಗೆ ವಿಭಿನ್ನವಾದ ರಾಜಕೀಯದ ಗರ್ಭವನ್ನು ಒಂದು ಸಾರ್ವತ್ರಿಕವಾದ ರಾಜಕೀಯದ ಪರಿಕಲ್ಪನೆಯೆಂದು ಅಭಿಪ್ರಾಯಪಡುತ್ತಾರೆ.
ರಾಜಕಾರಣ ಸಭ್ಯರಿಗಲ್ಲವೆಂಬ ಭಾವನೆಯನ್ನು ವಿರೋಧಿಸುವ ಇವರು; ಯುವಕರು ಮಾತ್ರವಲ್ಲದೆ ಎಲ್ಲ ಬುದ್ದಿಜೀವಿಗಳೂ ಜನಸಾಮಾನ್ಯರೊಂದಿಗೆ ಬೆರೆತು, ಅವರೊಳಗೆ ಮಾನವೀಯವಾಗಿ ಗುರುತಿಸಿಕೊಂಡು ಬೆಳೆಯಬೇಕೆನ್ನುತ್ತಾರೆ.
ನಾಯಕನೆನಿಸಿಕೊಳ್ಳಲು ಹಣ, ಗೂಂಡಾಗಿರಿಗಳನ್ನೇ ಆಯುಧವೆಂದು ಭಾವಿಸಿರುವ ಕೆಲವರಿಗೆ; ಬೀದಿ ಬೀದಿ ತಿರುಗುತ್ತಾ ಭಿಕ್ಷೆ ಬೇಡುತ್ತಾ ಮನುಷ್ಯನ ಬದುಕಿನ ನಶ್ವರತೆಯ ಬಗ್ಗೆ ಪದಕಟ್ಟಿ ಹಾಡುವ ಸಂತನೊಬ್ಬ ಜನರ ನಾಯಕನಾಗಬಲ್ಲ ಎಂಬುದನ್ನು ತಿಳಿಸಬೇಕಾಗಿದೆ.
ಪ್ರತಿಯೊಬ್ಬ ರಾಜಕಾರಣಿಯೂ ಸಂತನ ಸರಳತನ ಮತ್ತು ಸಮೂಹ ಏಳ್ಗೆಯ ಮನಸ್ಸನ್ನು ಸೃಷ್ಟಿಸಿಕೊಳ್ಳುವುದು ಅನಿವಾರ್ಯವೆಂದು ಅಭಿಪ್ರಾಯಪಡುತ್ತಾರೆ. ಹಳ್ಳಿಯ ವಾತಾವರಣದಲ್ಲಿ ಕಷ್ಟಪಟ್ಟು ವ್ಯಾಸಂಗಮಾಡಿದ ಇವರು; ರಾಜಕೀಯ ನಾಯಕರಾಗಿ ಸಾವಿರಾರು ಜನರ ಬದುಕಿಗೆ ಬೆಳಕುತೋರಿದ್ದಾರೆ.
ಚಿಕ್ಕಂದಿನಲೇ ಗುರುಹಿರಿಯರ ಸರಳತೆಗೆ, ಸಾಹಿತ್ಯದ ವಿದ್ಯುತ್‌ಶಕ್ತಿಗೆ, ರಾಜಕೀಯದ ಸಾಮಾಜಿಕ ಶಕ್ತಿಗೆ ಹಾಗೂ ಮಾನವೀಯ ಮೌಲ್ಯಗಳಿಗೆ ಆಕರ್ಷಿತರಾದ ಇವರು; ತಮ್ಮ ಬದುಕಿನುದ್ದಕ್ಕೂ ಇಂತಹ ಮೌಲ್ಯಗಳನ್ನು ಅಂತರಂಗದೊಳಗೆ ತುಂಬಿಕೊಳ್ಳಲು ಶ್ರಮಿಸುತ್ತಾ ಬಂದವರು. ವೃತ್ತಿ ಸಂಪನ್ನತೆಯ ಜೊತೆಗೆ ಸಾಹಿತ್ಯಾಭಿರುಚಿಯನ್ನೂ ರೂಢಿಸಿಕೊಂಡಿರುವ ಇವರ ಕಣ್ಣಲ್ಲಿ ಈ ದೇಶದ ದಾರಿದ್ರ್ಯ, ಜಾತಿ, ಧರ್ಮಗಳ ಹೆಸರಿನಲ್ಲಿ ಆಗುತ್ತಿರುವ ಹಿಂಸೆ ಮತ್ತು ರಾಜಕೀಯದ ದುರ್ಬೆಳವಣಿಗೆಯ ಬಗ್ಗೆ ಆತಂಕವಿದೆ. ಅಜ್ಞಾನ, ಅನಕ್ಷರತೆ, ನಿರುದ್ಯೋಗದಂಥ ರೋಗಗಳು ಜನರನ್ನು ಕೊಲ್ಲುತ್ತಿರುವುದರ ಬಗ್ಗೆ ಕಣ್ಣೀರಿದೆ. ಇತ್ತೀಚಿನ ದಿನಗಳಲ್ಲಿ ಯುವಶಕ್ತಿಯನ್ನು ನಿರ್ಲಕ್ಷಿಸಲಾಗುತ್ತಿದೆ. ಯುವಶಕ್ತಿ ಯಾವುದೇ ದೇಶದ ನಾಗರಿಕತೆಯ ಅಭಿವೃದ್ಧಿಯ ಸುಳಿ. ಅದನ್ನು ಚಿವುಟುವುದು ವಿನಾಶಕಾರಿಯಾದದ್ದೆಂದು ನಂಬಿರುವ ಇವರು ಯುವಕರ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ.
ಇಂದಿನ ಯುವಕರ ಸ್ಥಿತಿ ಗಾಳಿಯಲ್ಲಿ ಹಾರಾಡುವ ಮಾವಿನ ಸಸಿಯಂತೆ. ದೊಡ್ಡವರಾದವರು ಅದನ್ನು ಹಿಡಿದು ನೆಲಕ್ಕೊರಬೇಕು, ಒಂದಿಷ್ಟು ನೀರೆರೆಯಬೇಕು ನಂತರ ಅದು ಫಲನೀಡುತ್ತದೆ ಎನ್ನುವ ರಂಗನಾಥ್‌ರವರು ಯುವಕರ ಬದುಕಿನ ಕತ್ತಲೆಗೆ ಬೆಳಕಾಗಬಲ್ಲ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ.
ಅಹಂಕಾರವಿಲ್ಲದ, ಅಧಿಕಾರವನ್ನು ಜನರ ಶೋಷಣೆಯ ಅಸ್ತ್ರವಾಗಿಸಿಕೊಳ್ಳದ ದಯಾಮಯಿ ರಂಗನಾಥ್‌ರವರಿಗೆ ರೈತರ ಬಗ್ಗೆ, ಶೋಷಿತರ ಬಗ್ಗೆ ಅಪಾರ ಕಾಳಜಿ ಇದೆ. ಸಮಾಜದ ಅಭಿವೃದ್ಧಿಗಾಗಿ ಇವರ ತಲೆತುಂಬ ಸಾವಿರಾರು ಯೋಜನೆಗಳಿವೆ.
ಯಾವುದೇ ದೇಶದ ಧರ್ಮ, ಶಿಕ್ಷಣ, ರಾಜಕೀಯಗಳು ಮನುಷ್ಯನ ಸ್ವಾತಂತ್ರ್ಯವನ್ನು ಕಾಪಾಡಲು ಇರಬೇಕಾದಂಥವು. ಇವುಗಳೇ ಜೈಲುಗಳಾದರೆ ಜೀವನ ನಾಶವಾದಂತೆಯೇ ಎನ್ನುವ ಇವರಿಗೆ ಮನುಷ್ಯರ ನೆಮ್ಮದಿಯ ಬಗ್ಗೆ ಕಾಳಜಿ ಇದೆ. ಅನೇಕ ರಾಜಕಾರಣಿಗಳು ಜನರ ನೆಮ್ಮದಿಯನ್ನು ಹಾಳುಮಾಡಿ ಆ ಸ್ಥಿತಿಯಲ್ಲೇ ತಮ್ಮ ನೀಚರಾಜಕೀಯದ ಬೇಳೆಬೇಯಿಸಿಕೊಳ್ಳುತ್ತಾರೆ. ಆದರೆ ರಂಗನಾಥ್‌ರಂಥವರು ಇದಕ್ಕೆ ವಿರುದ್ಧವಾಗಿರುವುದು ಮೆಚ್ಚುವಂಥದ್ದು. ಈ ನಾಡಿನ ಜನರ ಅತಂತ್ರ ಸ್ಥಿತಿಯ ಬಗ್ಗೆ, ಭರವಸೆಗಳನ್ನು ಕಿವಿಯೊಳಗಿಟ್ಟುಕೊಂಡು ಬಾಡಿದ ಜನರ ಕಣ್ಣುಗಳ ಬಗ್ಗೆ ದುಃಖಪಡುವ ಇವರು, ಹಣ ಮತ್ತು ಡಂಭಾಚಾರವಿಲ್ಲದ ಶುದ್ಧರಾಜಕಾರಣಕ್ಕಾಗಿ ಕಾತರಿಸುತ್ತಾರೆ.
ರಾಜಕೀಯವೆನ್ನುವುದು ಒಂದು ಒಳ್ಳೆಯ ಸಾಹಿತ್ಯಕೃತಿ, ಕಲಾ ಕೃತಿಯೊಳಗಿನ ಮಾನವೀಯ ಮೌಲ್ಯದಷ್ಟೇ ಮುಖ್ಯವಾದದ್ದೆಂಬ ಅರಿವು ಮಾಯವಾಗುತ್ತಿದೆ. ಅನೇಕರು ರಾಜಕೀಯವನ್ನು, ಮನುಷ್ಯರ ಕಣ್ಣುಗಳನ್ನು ಕಿತ್ತು ಗೋಲಿಯಾಟವಾಡುವ ಸರ್ವಾಧಿಕಾರದ ಅಮಲೆಂದು ಭಾವಿಸಿರುವ ದುರಂತದಲ್ಲಿ ನಾವು ಬದುಕುತ್ತಿದ್ದೇವೆ. ಜನರ ಮೆದುಳಿನೊಳಗೆ ಜೀವನದ ಬಗ್ಗೆ ಆಸಕ್ತಿ ಹುಟ್ಟಿಸುವ, ಕ್ರೀಯಾಶೀಲತೆಯನ್ನು ಬೆಳೆಸುವ ತಾಕತ್ತು ನಾಯಕರಾದವರಿಗೆ ಇಲ್ಲವಾಗುತ್ತಿದೆ. ಇಂಥ ಸಂಧರ್ಭದಲ್ಲಿ ಸರಳ ಸಜ್ಜನಿಕೆಗಳೊಂದಿಗೆ ಸ್ಪಂದನಾಶೀಲ ಮನೋಭಾವವನ್ನು ಒಳಗೊಂಡಿರುವ ಸಂಭಾವಿತ, ದಕ್ಷ ವ್ಯಕ್ತಿತ್ವದ ಪ್ರಾಮಾಣಿಕ, ಪ್ರಗತಿಪರ ರಾಜಕಾರಣಿಯಾಗಿ ರಂಗನಾಥ್‌ರವರು ಬೆರಗುಗೊಳಿಸುತ್ತಾರೆ.
ಜೀವನದಲ್ಲಿ ಸದಾಸಕ್ತಿ, ಪಾಲಿನ ಕರ್ತವ್ಯ ನಿರ್ವಹಣೆಯಲ್ಲಿ ಪ್ರಾಮಾಣಿಕತೆ ಮತ್ತು ನಿರಂತರವಾದ ಪ್ರಯತ್ನಶೀಲತೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬಾಳಿದ್ದೇ ಆದರೆ, ಯಾವುದೂ ಕಷ್ಟವಲ್ಲ, ಯಾರಿಗೂ ಕಷ್ಟವಲ್ಲ ಎನ್ನುವ ಇವರು ಹಾಗೆಯೇ ಇದ್ದಾರೆ ಸಹ!
ರಂಗನಾಥ್ ಅವರ ಸೂಕ್ಷ್ಮತೆಯ ರಾಜಕೀಯ ಜೀವನ, ವಂಶಾಡಳಿತಕ್ಕೆ ಅನುವುಮಾಡಿಕೊಡದ ಬದ್ಧತೆ, ಸಾಹಿತ್ಯದ ಸಕ್ರಿಯ ಓದು, ಸ್ಪಷ್ಟ ಹಾಗು ಪ್ರಗತಿಪರ ಚಿಂತನೆ, ಅಂತರ್ಮುಖಿಯಾಗಿ ನಡೆಸುವ ಸರ್ವೋದಯ ಆಲೋಚನೆಗಳು, ಮಾನವೀಯತೆಯನ್ನು ಸಾರುವ ನಿಲುವುಗಳು, ಬದುಕಿನ ಸಂಕೀರ್ಣತೆಗಳ ಬಗೆಗಿನ ಆತ್ಮಶೋಧ, ಎಂಥ ಸಂದರ್ಭದಲ್ಲೂ ಭ್ರಷ್ಟಗೊಳ್ಳದ ರಾಜಕೀಯ ಬದ್ಧತೆ, ನಿಷ್ಪಕ್ಷಪಾತ ಆಡಳಿತ ವೈಖರಿ ಹಾಗೂ ಅಪಾರವಾದ ರಾಜಕೀಯ ಅನುಭವಗಳು ಅನೇಕರಿಗೆ ಮಾರ್ಗಸೂಚಿಯಾಗಿದ್ದು ಮಾದರಿಯಾಗಬಲ್ಲವು. ನಮ್ಮ ಯುವ ರಾಜಕಾರಣಿಗಳಿಗೆ ಅನುಕರಣೀಯವಾದಂಥವೂ ಕೂಡ. ಇಂಥ ಪ್ರಬುದ್ಧ ರಾಜಕಾರಣಿಯ ಬದುಕು, ವ್ಯಕ್ತಿತ್ವ ಕಲುಷಿತಗೊಂಡ ರಾಜಕೀಯಕ್ಕೆ ಸಂಜೀವಿನಿಯಾಗಲೆಂದು ಆಶಿಸುತ್ತೇವೆ.

-ನಾಗತಿಹಳ್ಳಿ ರಮೇಶ್

ಪ್ರಗತಿಪರ ಚಿಂತನೆಗಳ ಸಂವೇದನಾಶೀಲ ರಾಜಕಾರಣಿ ಕೆ.ಎಚ್.ರಂಗನಾಥ್ನಮ್ಮ ಸಾಮಾಜಿಕ (ಜಾತೀಯ) ವ್ಯವಸ್ಥೆಯಿಂದ ಹುಟ್ಟಿ ಬೇರುಬಿಟ್ಟಿದ್ದ ಅಸ್ಪೃಶ್ಯತೆ ಸ್ವಾತಂತ್ರ್ಯಾ ನಂತರ ಕಾನೂನಿನ ಪೆಟ್ಟಿಗೆ ಸಿಕ್ಕಿ ಸಾಮಾನ್ಯೀಕರಣವಾಗಿರುವಂತೆ ಕಂಡು ಬರುತ್ತಿದೆ. ಆದರೆ ನೋವಿನ ತಾಪ ಕಡಿಮೆಯಾಗಿಲ್ಲ. ಅಂದರೆ ಅದು ಸಾಮಾಜೀಕರಣವಾಗಿಲ್ಲ, ಅದೇ ತೀರಾ ನೋವಿನ ಸಂಗತಿ ಎಂಬ ಅರಿತನುರಿತ ರಾಜಕಾರಣಿ ಕೆ.ಎಚ್.ರಂಗನಾಥ್ ಅವರ ಅಭಿಪ್ರಾಯ ಅತ್ಯಂತ ಗಮನಾರ್ಹ!


ನಾವು ಇಂದು ಕರೆಯುತ್ತಿರುವ ಹಾಗೂ ಅನುಭವಿಸುತ್ತಿರುವ ಸ್ವಾತಂತ್ರ್ಯಕ್ಕೆ ರಾಜಕೀಯವೇ ಮೂಲ ಕಾರಣವಾಗಿದೆ. ಈ ಹಿನ್ನಲೆಯಲ್ಲಿ ಚರ್ಚಿಸಲು ಹಾಗೂ ಸಂದರ್ಶಿಸಲು ಒಬ್ಬ ಸೂಕ್ಷ್ಮಮತಿ ಹಾಗೂ ಪ್ರಾಮಾಣಿಕ ರಾಜಕಾರಣಿಗಾಗಿ ಹುಡುಕಿದಾಗ, ನಮಗೆ ಕಂಡದ್ದು ’ಕರ್ನಾಟಕ ಜೀವಂತ ರಾಜಕೀಯ ಗ್ರಂಥ’ ಎಂದೇ ಹೆಸರಾದ ಕೆ.ಎಚ್. ರಂಗನಾಥ್.
ಇವರು ಹುಟ್ಟಿದ್ದು ೧೯೨೬ ಅಕ್ಟೋಬರ್ ೨೦ ರಂದು ಹರಿಹರದಲ್ಲಿ. ಇವರ ತಂದೆ, ಸರ್ಕಾರಿ ನೌಕರ ಹಾಗೂ ಮೇಧಾವಿಯಾಗಿದ್ದ ಹರಿಹರಪ್ಪ. ತಾಯಿ ಸಿದ್ಧಮ್ಮ. ಇವರ ಅಜ್ಜ ಸಾಹಿತ್ಯದಲ್ಲಿ ಪಾಂಡಿತ್ಯಗಳಿಸಿದ್ದರು. ವೇದಾಂತ ಮತ್ತಿತರ ಜ್ಞಾನದ ಗಾಢ ಪ್ರಭಾವ ಉಂಟಾಗಿತ್ತು.
ಇವರ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಹೊನ್ನಾಳಿ, ಜಗಳೂರು, ಹರಿಹರ, ಚಿತ್ರದುರ್ಗದಲ್ಲಿ ಆಯಿತು. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಪದವಿ ಹಾಗೂ ಕಾನೂನನ್ನು ಅಧ್ಯಯನ ಮಾಡಿದರು.
ಇವರೊಳಗೆ ರಾಜಕೀಯ, ಹೋರಾಟದ ಭಾವನೆ ಚಿಕ್ಕಂದಿನಲೇ ಬೆಳೆಯಲಾರಂಭಿಸಿತು. ಚಿತ್ರದುರ್ಗದಲ್ಲಿನ ಕುಂಚಿಟಿಗರ ಹಾಸ್ಟೆಲ್‌ನಲ್ಲಿ ಇವರು ಮೆಟ್ರಿಕ್ ವಿದ್ಯಾರ್ಥಿಯಾಗಿದ್ದಾಗ ವಕೀಲರಾದ ಕೆಂಚಪ್ಪನವರ ಗಾಢ ಪ್ರಭಾವಕ್ಕೊಳಗಾದರು. ಕುಂಚಿಟಿಗರ ಹಾಸ್ಟೆಲ್‌ನಲ್ಲಿ ಸರ್ವಜಾತಿಯವರಿಗೂ ಅವಕಾಶವಿತ್ತು. ಈ ಹಾಸ್ಟೆಲ್ ನಡೆಸುತ್ತಿದ್ದವರು ಕೆಂಚಪ್ಪನವರೇ ಆಗಿದ್ದರು. ಆಗ ಎಲ್ಲ ಕಡೆ ಸ್ವಾತಂತ್ರ್ಯದ ಕೂಗು ಕೇಳಿಬರುತ್ತಿತ್ತು. ೧೯೪೦-೪೨ರ ಸಂದರ್ಭದಲ್ಲಿ ಭುಗಿಲೆದ್ದ ’ಕ್ವಿಟ್ ಇಂಡಿಯಾ’ ಚಳವಳಿ ಕೆಂಚಪ್ಪನವರ ಮೂಲಕ ರಂಗನಾಥ್‌ರ ಹಾಸ್ಟೆಲ್‌ಗೂ ಹರಿಯಿತು. ಬಿಸಿರಕ್ತದ ಹಲವಾರು ಯುವಕರು ಈ ಚಳುವಳಿಗೆ ನೆಗೆದರು. ಅದರಲ್ಲಿ ರಂಗನಾಥ್‌ರವರೂ ಇದ್ದರು. ಇದರ ಫಲವಾಗಿ ಜೈಲು ಸೇರಿದರು.
ಸೆರೆವಾಸವನ್ನು ಅನುಭವಿಸಿದ ಇವರ ಅಂತರಂಗತದಲ್ಲಿ ದೇಶದ ಬಗ್ಗೆ ಅಪಾರವಾದ ಗೌರವ ಹಾಗೂ ಕಾಳಜಿಗಳು ಬಲವಾಗತೊಡಗಿದವು. ಸಮಾಜದ ಅಸಮಾನತೆ, ಅಸ್ಪೃಶ್ಯತೆಗಳ ಅನುಭವ ಇವರೊಳಗೆ ಪ್ರಗತಿಪರ ಕ್ರಾಂತಿಯ ಬಲವನ್ನು ಸೃಷ್ಟಿಸಿತು. ಚಿತ್ರದುರ್ಗದಲ್ಲಿ ಆರಂಭವಾದ ಸ್ವಾತಂತ್ರ್ಯಾಂದೋಲನದಲ್ಲಿ ಎಸ್.ನಿಜಲಿಂಗಪ್ಪ, ಭೀಮಪ್ಪನಾಯ್ಕ, ಕೆಂಚಪ್ಪ, ರಾಜಶೇಖರ್ ಹಿರೇಮಠ್, ಬಳ್ಳಾರಿ ಸಿದ್ದಮ್ಮ ಮುಂತಾದ ಧುರೀಣರು ಪಾಲ್ಗೊಂಡಿದ್ದರು. ಇಂಥವರ ಜೊತೆ ಅನುಭವ ಪಡೆಯುವ ಅವಕಾಶ ರಂಗನಾಥ್‌ರವರಿಗೂ ದೊರಕಿತು.
ಇವರ ಬದುಕಿನಲ್ಲಿ ರಾಜಕೀಯದಷ್ಟೇ ಸಹಜವಾಗಿ ಸಾಹಿತ್ಯಾಭ್ಯಾಸವೂ ಬೆಳಯತೊಡಗಿತು. ಆಲಿವರ್‌ಗೋಲ್ಡ್‌ಸ್ಮಿತ್, ವರ್ಡ್ಸ್‌ವರ್ತ್, ಶೇಕ್ಸ್‌ಪಿಯರ್ ಮೊದಲಾದವರ ಬರೆಹಗಳು ಇವರೊಳಗೆ ಪರಿಣಾಮಬೀರಿದವು. ಆಂಗ್ಲಭಾಷೆಯಲ್ಲಿದ್ದ ಹಿಡಿತ ಮತ್ತಷ್ಟು ಗಾಢವಾಯಿತು. ಗೋಲ್ಡ್‌ಸ್ಮಿತ್‌ನ ’ಸಿಟಿ ನೈಟ್ ಪೀಸ್ ಇವರಲ್ಲಿ ಸಮಾಜವಾದದ ಬಗ್ಗೆ ಒಲವುಂಟುಮಾಡಿತು. ಕನ್ನಡದ ಕುವೆಂಪು, ಬೇಂದ್ರೆ, ಅನಕೃ, ಬಸವರಾಜ ಕಟ್ಟೀಮನಿ, ವೆಂಕಣ್ಣಯ್ಯ, ಶಿವರಾಮಕಾರಂತ, ಹಿರೇಮಲ್ಲೂರು ಈಶ್ವರನ್ ಮೊದಲಾದವರ ಬರಹಗಳನ್ನು ಗಂಭೀರವಾಗಿ ಓದುತ್ತಿದ್ದರು. ತ.ರಾ.ಸು. ಇವರ ಗೆಳೆಯರಾಗಿದ್ದರು. ಕೈಲಾಸಂ ನಾಟಕಗಳು ಅದರಲ್ಲೂ ’ಕರ್ಣ , ’ಏಕಲವ್ಯ ಮೊದಲಾದವು ಇವರಿಗೆ ವಿಚಿತ್ರ ರೋಮಾಂಚನ ಉಂಟುಮಾಡಿದ್ದವು. ಜೈಲಿನ ದಿನಗಳಲ್ಲಿ ಓದಿದ ಗಾಂಧೀಜಿಯವರ ’ಯಂಗ್ ಇಂಡಿಯಾ’, ನೆಹರೂ ಅವರ ’ಡಿಸ್ಕವರಿ ಆಫ್ ಇಂಡಿಯಾ’ ಕೃತಿಗಳು ಇವರ ಮೇಲೆ ತೀವ್ರ ಪ್ರಭಾವ ಬೀರಿದವು. ಆತ್ಮಕತೆಗಳ ಬಗ್ಗೆ ಹೆಚ್ಚಿನ ಒಲವುಂಟಾಯಿತು.
ಮಾರ್ಕ್ಸ್ ಮತ್ತು ಲೆನಿನ್‌ರನ್ನು ಆಳವಾಗಿ ಅಭ್ಯಾಸಮಾಡಿದ್ದ ರಂಗನಾಥ್‌ರವರಿಗೆ ಸಮಾಜ ಬದಲಾಗಬೇಕೆಂಬ ಉತ್ಕಟ ಕಾಳಜಿಯಿತ್ತು. ಈ ಕಾಳಜೀಯನ್ನೇ ರಾಜಕೀಯ ದೃಷ್ಟಿಯನ್ನಾಗಿಸಿಕೊಂಡರು. ಕರ್ನಾಟಕದ ಏಕೀಕರಣ ಚಳುವಳಿಗೂ ತೊಡಗಿಕೊಂಡರು. ೧೯೪೮ರಿಂದ ೫೨ರವರೆಗೆ ’ಪ್ರಜಾಸೋಷಿಯಲಿಸ್ಟ್ ಪಾರ್ಟಿಯಲ್ಲಿ ಸಕ್ರಿಯವಾಗಿ ತೊಡಗಿಕೊಂಡರು. ನಂತರ ೧೯೬೯ರ ತನಕ ಅದೇ ಪಾರ್ಟಿಯ ಜನರಲ್ ಸೆಕ್ರೆಟರಿಯಾಗಿ ಕಾರ‍್ಯನಿರ್ವಹಿಸಿದರು. ಈ ಸಂದರ್ಭ ಅವರ ರಾಜಕೀಯದ ಪಯಣವನ್ನು ಹೆಚ್ಚು ಸ್ಪಷ್ಟ ಹಾಗು ಖಚಿತಗೊಳಿಸಿತು. ೧೯೬೯ ರಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಆ ಪಕ್ಷದಲ್ಲಿ ರಾಷ್ಟ್ರದ ಬಗ್ಗೆ ಮಿಡಿಯುವ ಮಹಾನ್ ನಾಯಕರುಗಳಿದ್ದರು ಇಂಥವರ ಬದುಕು ಹಾಗು ಕಾಳಜಿಗಳು ರಂಗನಾಥ್‌ರವರು ಒಬ್ಬ ಶ್ರೇಷ್ಟ ನಾಯಕರಾಗಿ ರೂಪುಗೊಳ್ಳಲು ಪ್ರೇರಕವಾದವು. ೧೯೭೨ ರಿಂದ ೭೪ ರವರೆಗೆ ’ಕರ್ನಾಟಕ ಪ್ರದೇಶ ಕಾಂಗ್ರೆಸ್ನ ಅಧ್ಯಕ್ಷರಾದರು. ಅದಕ್ಕೂ ಮೊದಲು ೧೯೭೧-೭೨ರವರೆಗೆ ಉಪಾಧ್ಯಕ್ಷರಾಗಿದ್ದರು. ಈ ಸಂದರ್ಭದಲ್ಲಿ ದಾಖಲಾರ್ಹ ಸೇವೆ ಸಲ್ಲಿಸಿದರು.
೧೯೬೨ ಇವರ ರಾಜಕೀಯ ಜೀವನದ ಪ್ರಮುಖ ಘಟ್ಟ. ಆಗ ರಾಜ್ಯ ಸಭೆಯ ಸದಸ್ಯರಾದರು. ೧೯೮೪-೮೯ರಲ್ಲಿ ಲೋಕಸಭೆಗೆ ಆಯ್ಕೆಯಾದರು. ದೇವರಾಜ ಅರಸು ಅವರ ಸಾಮಾಜಿಕ ಧೋರಣೆ ಹಾಗೂ ಆಡಳಿತದ ಮಾನವೀಯತೆ ಇವರಿಗೆ ಅತ್ಯಂತ ಪ್ರಿಯವಾಗಿತ್ತು. ದಿನಕಳೆದಂತೆ ಅಂಬೇಡ್ಕರ್, ಲೋಹಿಯಾ, ಗಾಂಧಿ ಮುಂತಾದವರ ಪ್ರಭಾವ ಗಾಢವಾಗತೊಡಗಿತು. ಬುದ್ಧ ಇವರ ಆಲೋಚನೆ ಮತ್ತು ಜೀವನವಿಧಾನವನ್ನು ಆವರಿಸತೊಡಗಿದ. ಸತ್ಯ, ಸರಳ ಹಾಗೂ ಜನಪರ ವ್ಯಕ್ತಿಯಾಗಿ ಕಾರ‍್ಯ ನಿರ್ವಹಿಸುತ್ತಲೇ ಅಂತರ್ಮುಖಿಯಾಗಿ ತನ್ನನ್ನು ತಾನು ವಿಮರ್ಶಿಸಿಕೊಳ್ಳುವುದನ್ನು ರಂಗನಾಥ್ ಅವರು ಸಾಹಿತ್ಯಾಭ್ಯಾಸ ಹಾಗೂ ಮಹಾತ್ಮರ ಪ್ರಭಾವದಿಂದ ಕಲಿತರು. ಹಿಂಸೆಯ ನೆಲೆಯಲ್ಲಿ ಸಮಾಜದ ಬದಲಾವಣೆಯಾಗುವುದೇ ಕ್ರಾಂತಿ ಎಂದು ಕೂಗುವರ ನಡುವೆ, ಪ್ರೀತಿ, ಶಾಂತಿ ಹಾಗು ವ್ಯಕ್ತಿಗತ ಜ್ಞಾನದ ಬಲದಿಂದ ಸಮಾಜ ಬದಲಾವಣೆ ಸಾಧ್ಯ ಎಂದು ನಂಬಿದ ಇವರು ೧೯೭೩ರಲ್ಲಿ ರಾಜ್ಯ ಸಂಪುಟ ದರ್ಜೆಯ ಸಚಿವರಾದರು.
ಸಾರಿಗೆ ಸಚಿವರಾಗಿ, ಸಹಕಾರ ಸಚಿವರಾಗಿ, ಶಿಕ್ಷಣ ಸಚಿವರಾಗಿ, ಕೃಷಿ ಸಚಿವರಾಗಿ, ಅರಣ್ಯ ಸಚಿವರಾಗಿ, ಗೃಹ ಸಚಿವರಾಗಿ, ಸಂಸದೀಯ ವ್ಯವಹಾರಗಳ ಸಚಿವರಾಗಿ, ಲೋಕೋಪಯೋಗಿ ಸಚಿವರಾಗಿ, ೧೯೭೩-೧೯೮೦ ಮತ್ತು ೧೯೯೨-೯೪ ರ ತನಕ ಆಡಳಿತ ನಡೆಸಿದ್ದಾರೆ. ಮಂತ್ರಿಯಾಗಿ ರಂಗನಾಥ್ ಅವರು ಸಲ್ಲಿಸಿದ ಸೇವೆ ಗಣನೀಯವಾದುದು.
೧೯೮೧ ರಿಂದ ೮೩ರ ತನಕ ವಿಧಾನಸಭಾ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದರು. ಇವರು ಯಾವ ಸಂದರ್ಭದಲ್ಲೂ, ರಾಜ ವೈಭವವನ್ನು ಅಪೇಕ್ಷಿಸದೆ, ಗಾಂಧೀಯ ಸರಳತೆಯನ್ನು ರೂಢಿಸಿಕೊಂಡರು. ಯೂರೋಪ್ ಮತ್ತಿತರೆ ರಾಷ್ಟ್ರಗಳಲ್ಲಿ ಪ್ರವಾಸಮಾಡಿ ಅಲ್ಲಿನ ಸಮಾಜ, ಆರ್ಥಿಕತೆ, ಶಿಕ್ಷಣ ಹಾಗೂ ವೈಜ್ಞಾನಿಕತೆಗಳನ್ನು ಗ್ರಹಿಸಿದರು. ಇವರ ವಿದೇಶಿ
ಅನುಭವಗಳು ನಮ್ಮ ರಾಜ್ಯದ ಜನತೆಯ ಆಭಿವೃದ್ಧಿಗಾಗಿ ಉಪಯೋಗವಾಗತೊಡಗಿದವು.

- ನಾಗತಿಹಳ್ಳಿ ರಮೇಶ್