Tuesday, October 18, 2011

ಸಂತ ಮನಸ್ಸಿನ ಪ್ರಬುದ್ಧ ಚಿಂತಕ ಹಾಗೂ ಸಾಹಿತ್ಯಾಭ್ಯಾಸಿ ರಾಜಕಾರಣಿಮಾರ್ಕ್ಸ್ ಮತ್ತು ಲೆನಿನ್‌ರನ್ನು ಆಳವಾಗಿ ಅಭ್ಯಾಸಮಾಡಿದ್ದ ರಂಗನಾಥ್‌ರವರಿಗೆ ಸಮಾಜ ಬದಲಾಗಬೇಕೆಂಬ ಉತ್ಕಟ ಕಾಳಜಿಯಿತ್ತು. ಈ ಕಾಳಜೀಯನ್ನೇ ರಾಜಕೀಯ ದೃಷ್ಟಿಯನ್ನಾಗಿಸಿಕೊಂಡರು. ಕರ್ನಾಟಕದ ಏಕೀಕರಣ ಚಳುವಳಿಗೂ ತೊಡಗಿಕೊಂಡರು. ೧೯೪೮ರಿಂದ ೫೨ರವರೆಗೆ ಪ್ರಜಾಸೋಷಿಯಲಿಸ್ಟ್ ಪಾರ್ಟಿಯಲ್ಲಿ ಸಕ್ರಿಯವಾಗಿ ತೊಡಗಿಕೊಂಡರು. ನಂತರ ೧೯೬೯ರ ತನಕ ಅದೇ ಪಾರ್ಟಿಯ ಜನರಲ್ ಸೆಕ್ರೆಟರಿಯಾಗಿ ಕಾರ‍್ಯನಿರ್ವಹಿಸಿದರು. ೧೯೬೯ ರಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಆ ಪಕ್ಷದಲ್ಲಿ ರಾಷ್ಟ್ರದ ಬಗ್ಗೆ ಮಿಡಿಯುವ ಮಹಾನ್ ನಾಯಕರುಗಳಿದ್ದರು ಇಂಥವರ ಬದುಕು ಹಾಗು ಕಾಳಜಿಗಳು ರಂಗನಾಥ್‌ರವರು ಒಬ್ಬ ಶ್ರೇಷ್ಟ ನಾಯಕರಾಗಿ ರೂಪುಗೊಳ್ಳಲು ಪ್ರೇರಕವಾದವು.

ಇಂದು ರಾಜಕೀಯದ ಬಗ್ಗೆ ಜನ ಬೇಸತ್ತಿದ್ದಾರೆ. ರಾಜಕೀಯವೆನ್ನುವುದು ’ಹೇಸಿಗೆಯೊಳಗಿನ ಸಂಪತ್ತನ್ನು ನಾಲಗೆಯಿಂದ ಕಬಳಿಸಲು ಭೃಷ್ಟರು ನಡೆಸುವ ಸ್ಪರ್ಧೆ ಎಂಬ ಮನೋಭಾವ ಜನರಲ್ಲಿ ಬೇರೂರುತ್ತಿದೆ. ನಾಯಕರೆನಿಸಿ ಕೊಂಡವರಿಗೆ ಈ ಮಣ್ಣಿನ ಸಂಕೀರ್ಣತೆಗಳನ್ನು ಅರಿಯುವ ಹಾಗು ಜನರಲ್ಲಿ ಕ್ರಿಯಾಶೀಲತೆಯನ್ನು ರೂಪಿಸುವ ಚೈತನ್ಯ ಇಲ್ಲವಾಗುತ್ತಿದೆ. ರಾಜಕೀಯ ಎನ್ನುವುದು ಜನಸೇವೆಯೆಂದು ಭಾವಿಸದೆ ಅದೊಂದು ಲಾಭಗಳಿಸುವ ಉದ್ಯಮವೆಂದುಕೊಂಡವರೇ ಹೆಚ್ಚು. ಹಣ ಚೆಲ್ಲಿ ಹಣ ಬಾಚುವ ತಂತ್ರವಿದ್ದವನೇ ಶ್ರೇಷ್ಠರಾಜಕಾರಣಿ ಎನಿಸಿಕೊಳ್ಳುತ್ತಿರುವ ಆತಂಕದ ಸಂದರ್ಭದಲ್ಲಿ, ವಂಶಾಡಳಿತವನ್ನು ಧಿಕ್ಕರಿಸಿ ಸರಳವಾಗಿದ್ದು ಸತ್ಯ, ಪ್ರಾಮಾಣಿಕತೆ ಹಾಗೂ ಮನುಷ್ಯರ ಸಂಕಟಗಳನ್ನು ನಿವಾರಿಸುವ ಪ್ರೀತಿಯುಳ್ಳ ಮೇಧಾವಿ ರಾಜಕಾರಣಿಗಳು ಅಪರೂಪ. ಅಂಥವರಲ್ಲಿ ಕೆ.ಹೆಚ್.ರಂಗನಾಥ್ ಅವರು ಪ್ರಮುಖರು.
ರಾಜಕೀಯ ಮನುಷ್ಯನ ರಕ್ತವಿದ್ದಂತೆ. ಅದು ಕಲುಷಿತಗೊಂಡಾಗಿನ ಅಪಾಯ ಭೀಕರವಾದದ್ದೆಂದು ನಂಬಿರುವ ಇವರು; ಇತಿಹಾಸದಲ್ಲಿ ಕಂಡು ಬರುವ ಪ್ರಗತಿಪರ ರಾಜಕಾರಣವನ್ನು ಇಷ್ಟಪಡುವಂತವರು. ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಹಾಗು ಭಕ್ತಿಪಂಥದ ಮಹನೀಯರು ಪ್ರತಿಪಾದಿಸಿದ ರಾಜಕಾರಣ ಜೀವಪರವಾದದ್ದು, ಇಂಥ ರಾಜಕಾರಣದ ಅಗತ್ಯವಿದೆ ಎನ್ನುವ ಇವರು; ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಎದೆಯೊಳಗೆ ವಿಭಿನ್ನವಾದ ರಾಜಕೀಯದ ಗರ್ಭವನ್ನು ಒಂದು ಸಾರ್ವತ್ರಿಕವಾದ ರಾಜಕೀಯದ ಪರಿಕಲ್ಪನೆಯೆಂದು ಅಭಿಪ್ರಾಯಪಡುತ್ತಾರೆ.
ರಾಜಕಾರಣ ಸಭ್ಯರಿಗಲ್ಲವೆಂಬ ಭಾವನೆಯನ್ನು ವಿರೋಧಿಸುವ ಇವರು; ಯುವಕರು ಮಾತ್ರವಲ್ಲದೆ ಎಲ್ಲ ಬುದ್ದಿಜೀವಿಗಳೂ ಜನಸಾಮಾನ್ಯರೊಂದಿಗೆ ಬೆರೆತು, ಅವರೊಳಗೆ ಮಾನವೀಯವಾಗಿ ಗುರುತಿಸಿಕೊಂಡು ಬೆಳೆಯಬೇಕೆನ್ನುತ್ತಾರೆ.
ನಾಯಕನೆನಿಸಿಕೊಳ್ಳಲು ಹಣ, ಗೂಂಡಾಗಿರಿಗಳನ್ನೇ ಆಯುಧವೆಂದು ಭಾವಿಸಿರುವ ಕೆಲವರಿಗೆ; ಬೀದಿ ಬೀದಿ ತಿರುಗುತ್ತಾ ಭಿಕ್ಷೆ ಬೇಡುತ್ತಾ ಮನುಷ್ಯನ ಬದುಕಿನ ನಶ್ವರತೆಯ ಬಗ್ಗೆ ಪದಕಟ್ಟಿ ಹಾಡುವ ಸಂತನೊಬ್ಬ ಜನರ ನಾಯಕನಾಗಬಲ್ಲ ಎಂಬುದನ್ನು ತಿಳಿಸಬೇಕಾಗಿದೆ.
ಪ್ರತಿಯೊಬ್ಬ ರಾಜಕಾರಣಿಯೂ ಸಂತನ ಸರಳತನ ಮತ್ತು ಸಮೂಹ ಏಳ್ಗೆಯ ಮನಸ್ಸನ್ನು ಸೃಷ್ಟಿಸಿಕೊಳ್ಳುವುದು ಅನಿವಾರ್ಯವೆಂದು ಅಭಿಪ್ರಾಯಪಡುತ್ತಾರೆ. ಹಳ್ಳಿಯ ವಾತಾವರಣದಲ್ಲಿ ಕಷ್ಟಪಟ್ಟು ವ್ಯಾಸಂಗಮಾಡಿದ ಇವರು; ರಾಜಕೀಯ ನಾಯಕರಾಗಿ ಸಾವಿರಾರು ಜನರ ಬದುಕಿಗೆ ಬೆಳಕುತೋರಿದ್ದಾರೆ.
ಚಿಕ್ಕಂದಿನಲೇ ಗುರುಹಿರಿಯರ ಸರಳತೆಗೆ, ಸಾಹಿತ್ಯದ ವಿದ್ಯುತ್‌ಶಕ್ತಿಗೆ, ರಾಜಕೀಯದ ಸಾಮಾಜಿಕ ಶಕ್ತಿಗೆ ಹಾಗೂ ಮಾನವೀಯ ಮೌಲ್ಯಗಳಿಗೆ ಆಕರ್ಷಿತರಾದ ಇವರು; ತಮ್ಮ ಬದುಕಿನುದ್ದಕ್ಕೂ ಇಂತಹ ಮೌಲ್ಯಗಳನ್ನು ಅಂತರಂಗದೊಳಗೆ ತುಂಬಿಕೊಳ್ಳಲು ಶ್ರಮಿಸುತ್ತಾ ಬಂದವರು. ವೃತ್ತಿ ಸಂಪನ್ನತೆಯ ಜೊತೆಗೆ ಸಾಹಿತ್ಯಾಭಿರುಚಿಯನ್ನೂ ರೂಢಿಸಿಕೊಂಡಿರುವ ಇವರ ಕಣ್ಣಲ್ಲಿ ಈ ದೇಶದ ದಾರಿದ್ರ್ಯ, ಜಾತಿ, ಧರ್ಮಗಳ ಹೆಸರಿನಲ್ಲಿ ಆಗುತ್ತಿರುವ ಹಿಂಸೆ ಮತ್ತು ರಾಜಕೀಯದ ದುರ್ಬೆಳವಣಿಗೆಯ ಬಗ್ಗೆ ಆತಂಕವಿದೆ. ಅಜ್ಞಾನ, ಅನಕ್ಷರತೆ, ನಿರುದ್ಯೋಗದಂಥ ರೋಗಗಳು ಜನರನ್ನು ಕೊಲ್ಲುತ್ತಿರುವುದರ ಬಗ್ಗೆ ಕಣ್ಣೀರಿದೆ. ಇತ್ತೀಚಿನ ದಿನಗಳಲ್ಲಿ ಯುವಶಕ್ತಿಯನ್ನು ನಿರ್ಲಕ್ಷಿಸಲಾಗುತ್ತಿದೆ. ಯುವಶಕ್ತಿ ಯಾವುದೇ ದೇಶದ ನಾಗರಿಕತೆಯ ಅಭಿವೃದ್ಧಿಯ ಸುಳಿ. ಅದನ್ನು ಚಿವುಟುವುದು ವಿನಾಶಕಾರಿಯಾದದ್ದೆಂದು ನಂಬಿರುವ ಇವರು ಯುವಕರ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ.
ಇಂದಿನ ಯುವಕರ ಸ್ಥಿತಿ ಗಾಳಿಯಲ್ಲಿ ಹಾರಾಡುವ ಮಾವಿನ ಸಸಿಯಂತೆ. ದೊಡ್ಡವರಾದವರು ಅದನ್ನು ಹಿಡಿದು ನೆಲಕ್ಕೊರಬೇಕು, ಒಂದಿಷ್ಟು ನೀರೆರೆಯಬೇಕು ನಂತರ ಅದು ಫಲನೀಡುತ್ತದೆ ಎನ್ನುವ ರಂಗನಾಥ್‌ರವರು ಯುವಕರ ಬದುಕಿನ ಕತ್ತಲೆಗೆ ಬೆಳಕಾಗಬಲ್ಲ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ.
ಅಹಂಕಾರವಿಲ್ಲದ, ಅಧಿಕಾರವನ್ನು ಜನರ ಶೋಷಣೆಯ ಅಸ್ತ್ರವಾಗಿಸಿಕೊಳ್ಳದ ದಯಾಮಯಿ ರಂಗನಾಥ್‌ರವರಿಗೆ ರೈತರ ಬಗ್ಗೆ, ಶೋಷಿತರ ಬಗ್ಗೆ ಅಪಾರ ಕಾಳಜಿ ಇದೆ. ಸಮಾಜದ ಅಭಿವೃದ್ಧಿಗಾಗಿ ಇವರ ತಲೆತುಂಬ ಸಾವಿರಾರು ಯೋಜನೆಗಳಿವೆ.
ಯಾವುದೇ ದೇಶದ ಧರ್ಮ, ಶಿಕ್ಷಣ, ರಾಜಕೀಯಗಳು ಮನುಷ್ಯನ ಸ್ವಾತಂತ್ರ್ಯವನ್ನು ಕಾಪಾಡಲು ಇರಬೇಕಾದಂಥವು. ಇವುಗಳೇ ಜೈಲುಗಳಾದರೆ ಜೀವನ ನಾಶವಾದಂತೆಯೇ ಎನ್ನುವ ಇವರಿಗೆ ಮನುಷ್ಯರ ನೆಮ್ಮದಿಯ ಬಗ್ಗೆ ಕಾಳಜಿ ಇದೆ. ಅನೇಕ ರಾಜಕಾರಣಿಗಳು ಜನರ ನೆಮ್ಮದಿಯನ್ನು ಹಾಳುಮಾಡಿ ಆ ಸ್ಥಿತಿಯಲ್ಲೇ ತಮ್ಮ ನೀಚರಾಜಕೀಯದ ಬೇಳೆಬೇಯಿಸಿಕೊಳ್ಳುತ್ತಾರೆ. ಆದರೆ ರಂಗನಾಥ್‌ರಂಥವರು ಇದಕ್ಕೆ ವಿರುದ್ಧವಾಗಿರುವುದು ಮೆಚ್ಚುವಂಥದ್ದು. ಈ ನಾಡಿನ ಜನರ ಅತಂತ್ರ ಸ್ಥಿತಿಯ ಬಗ್ಗೆ, ಭರವಸೆಗಳನ್ನು ಕಿವಿಯೊಳಗಿಟ್ಟುಕೊಂಡು ಬಾಡಿದ ಜನರ ಕಣ್ಣುಗಳ ಬಗ್ಗೆ ದುಃಖಪಡುವ ಇವರು, ಹಣ ಮತ್ತು ಡಂಭಾಚಾರವಿಲ್ಲದ ಶುದ್ಧರಾಜಕಾರಣಕ್ಕಾಗಿ ಕಾತರಿಸುತ್ತಾರೆ.
ರಾಜಕೀಯವೆನ್ನುವುದು ಒಂದು ಒಳ್ಳೆಯ ಸಾಹಿತ್ಯಕೃತಿ, ಕಲಾ ಕೃತಿಯೊಳಗಿನ ಮಾನವೀಯ ಮೌಲ್ಯದಷ್ಟೇ ಮುಖ್ಯವಾದದ್ದೆಂಬ ಅರಿವು ಮಾಯವಾಗುತ್ತಿದೆ. ಅನೇಕರು ರಾಜಕೀಯವನ್ನು, ಮನುಷ್ಯರ ಕಣ್ಣುಗಳನ್ನು ಕಿತ್ತು ಗೋಲಿಯಾಟವಾಡುವ ಸರ್ವಾಧಿಕಾರದ ಅಮಲೆಂದು ಭಾವಿಸಿರುವ ದುರಂತದಲ್ಲಿ ನಾವು ಬದುಕುತ್ತಿದ್ದೇವೆ. ಜನರ ಮೆದುಳಿನೊಳಗೆ ಜೀವನದ ಬಗ್ಗೆ ಆಸಕ್ತಿ ಹುಟ್ಟಿಸುವ, ಕ್ರೀಯಾಶೀಲತೆಯನ್ನು ಬೆಳೆಸುವ ತಾಕತ್ತು ನಾಯಕರಾದವರಿಗೆ ಇಲ್ಲವಾಗುತ್ತಿದೆ. ಇಂಥ ಸಂಧರ್ಭದಲ್ಲಿ ಸರಳ ಸಜ್ಜನಿಕೆಗಳೊಂದಿಗೆ ಸ್ಪಂದನಾಶೀಲ ಮನೋಭಾವವನ್ನು ಒಳಗೊಂಡಿರುವ ಸಂಭಾವಿತ, ದಕ್ಷ ವ್ಯಕ್ತಿತ್ವದ ಪ್ರಾಮಾಣಿಕ, ಪ್ರಗತಿಪರ ರಾಜಕಾರಣಿಯಾಗಿ ರಂಗನಾಥ್‌ರವರು ಬೆರಗುಗೊಳಿಸುತ್ತಾರೆ.
ಜೀವನದಲ್ಲಿ ಸದಾಸಕ್ತಿ, ಪಾಲಿನ ಕರ್ತವ್ಯ ನಿರ್ವಹಣೆಯಲ್ಲಿ ಪ್ರಾಮಾಣಿಕತೆ ಮತ್ತು ನಿರಂತರವಾದ ಪ್ರಯತ್ನಶೀಲತೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬಾಳಿದ್ದೇ ಆದರೆ, ಯಾವುದೂ ಕಷ್ಟವಲ್ಲ, ಯಾರಿಗೂ ಕಷ್ಟವಲ್ಲ ಎನ್ನುವ ಇವರು ಹಾಗೆಯೇ ಇದ್ದಾರೆ ಸಹ!
ರಂಗನಾಥ್ ಅವರ ಸೂಕ್ಷ್ಮತೆಯ ರಾಜಕೀಯ ಜೀವನ, ವಂಶಾಡಳಿತಕ್ಕೆ ಅನುವುಮಾಡಿಕೊಡದ ಬದ್ಧತೆ, ಸಾಹಿತ್ಯದ ಸಕ್ರಿಯ ಓದು, ಸ್ಪಷ್ಟ ಹಾಗು ಪ್ರಗತಿಪರ ಚಿಂತನೆ, ಅಂತರ್ಮುಖಿಯಾಗಿ ನಡೆಸುವ ಸರ್ವೋದಯ ಆಲೋಚನೆಗಳು, ಮಾನವೀಯತೆಯನ್ನು ಸಾರುವ ನಿಲುವುಗಳು, ಬದುಕಿನ ಸಂಕೀರ್ಣತೆಗಳ ಬಗೆಗಿನ ಆತ್ಮಶೋಧ, ಎಂಥ ಸಂದರ್ಭದಲ್ಲೂ ಭ್ರಷ್ಟಗೊಳ್ಳದ ರಾಜಕೀಯ ಬದ್ಧತೆ, ನಿಷ್ಪಕ್ಷಪಾತ ಆಡಳಿತ ವೈಖರಿ ಹಾಗೂ ಅಪಾರವಾದ ರಾಜಕೀಯ ಅನುಭವಗಳು ಅನೇಕರಿಗೆ ಮಾರ್ಗಸೂಚಿಯಾಗಿದ್ದು ಮಾದರಿಯಾಗಬಲ್ಲವು. ನಮ್ಮ ಯುವ ರಾಜಕಾರಣಿಗಳಿಗೆ ಅನುಕರಣೀಯವಾದಂಥವೂ ಕೂಡ. ಇಂಥ ಪ್ರಬುದ್ಧ ರಾಜಕಾರಣಿಯ ಬದುಕು, ವ್ಯಕ್ತಿತ್ವ ಕಲುಷಿತಗೊಂಡ ರಾಜಕೀಯಕ್ಕೆ ಸಂಜೀವಿನಿಯಾಗಲೆಂದು ಆಶಿಸುತ್ತೇವೆ.

-ನಾಗತಿಹಳ್ಳಿ ರಮೇಶ್

No comments:

Post a Comment