Tuesday, October 5, 2010

ದುರಂತದ ದಿನಗಳನ್ನು ಎದುರುಗೊಳ್ಳುವ ಆತಂಕದಲ್ಲಿ...
ನಾರಾಯಣಗೌಡರು


ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಕಡೆಗೂ ಒಬ್ಬ ಸಚಿವರು ದಕ್ಕಿದ್ದಾರೆ. ಎರಡೂವರೆ ವರ್ಷಗಳವರೆಗೆ ಈ ಇಲಾಖೆಗೊಬ್ಬ ಸಚಿವರನ್ನು ನಿಯುಕ್ತಿಗೊಳಿಸಬೇಕು ಎಂಬ ಮನಸ್ಸು ಯಡಿಯೂರಪ್ಪನವರಿಗೆ ಇರಲಿಲ್ಲ. ಈ ಬಾರಿಯ ಸಂಪುಟ ವಿಸ್ತರಣೆಗೂ ಮುನ್ನ ಈ ಬಗ್ಗೆ ಹೇಳಿಕೆಯೊಂದನ್ನು ನೀಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೊಬ್ಬ ಸಚಿವರನ್ನು ಕೊಡಿ ಎಂದು ಆಗ್ರಹಿಸಿದ್ದೆ. ನಾನು ಹೋದೆಡೆಯಲ್ಲೆಲ್ಲ ಸಭೆ-ಸಮಾರಂಭಗಳಲ್ಲಿ ಈ ವಿಷಯವನ್ನು ಪ್ರಸ್ತಾಪಿಸುತ್ತಲೇ ಇದ್ದೆ. ಸಂಪುಟ ವಿಸ್ತರಣೆಗೆ ಕೆಲವು ದಿನಗಳಿಗೆ ಮುನ್ನ ತುಮಕೂರಿನ ಸೀತಕಲ್ಲಿನಲ್ಲಿ ನಡೆದ ವೇದಿಕೆಯ ತುಮಕೂರು ಗ್ರಾಮಾಂತರ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಇದೇ ವಿಷಯವನ್ನು ಪ್ರಧಾನವಾಗಿಟ್ಟುಕೊಂಡು ಮಾತನಾಡಿದ್ದೆ. ಪೂಜ್ಯರಾದ ಗೌರಿಶಂಕರ ಸ್ವಾಮೀಜಿ, ಕೊಳದ ಮಠದ ಶಾಂತವೀರ ಸ್ವಾಮೀಜಿ, ಕಾಂಗ್ರೆಸ್-ಬಿಜೆಪಿ-ಜೆಡಿಎಸ್ ಮುಖಂಡರು ಆ ಸಮಾರಂಭದಲ್ಲಿದ್ದರು. ಎಲ್ಲರೂ ಸಹ ನನ್ನ ಮಾತುಗಳಿಗೆ ಸಮ್ಮತಿ ಸೂಚಿಸಿದ್ದರು. ಯಡಿಯೂರಪ್ಪನವರು ಒಳ್ಳೆಯ ಮನಸ್ಸು ಮಾಡಿ ಕಡೆಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸಚಿವರನ್ನು ನೇಮಿಸಿದ್ದಾರೆ. ಅದಕ್ಕಾಗಿ ಅವರಿಗೆ ಧನ್ಯವಾದ ಹೇಳೋಣ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹುಟ್ಟಿಕೊಂಡಿದ್ದೇ ಒಂದು ರೋಮಾಂಚಕ ಕಥೆ. ಕೆಂಗಲ್ ಹನುಮಂತಯ್ಯನವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ನೇರವಾಗಿ ಕಾದಂಬರಿ ಸಾರ್ವಭೌಮ, ಕನ್ನಡದ ಅನನ್ಯ ಹೋರಾಟಗಾರ ಅ.ನ.ಕೃಷ್ಣರಾಯರ ನಿವಾಸಕ್ಕೆ ತೆರಳುತ್ತಾರೆ. ಅನಕೃ ಅವರಿಗೆ “ನಾನೀಗ ಮುಖ್ಯಮಂತ್ರಿ, ನನ್ನಿಂದೇನಾಗಬೇಕು ಹೇಳಿ ಎಂದು ಕೆಂಗಲ್ ಹನುಮಂತಯ್ಯನವರು ವಿನಮ್ರವಾಗಿ ಕೇಳುತ್ತಾರೆ. ಥಟ್ಟನೆ ಅನಕೃ ಹೇಳುತ್ತಾರೆ: “ನಿಮ್ಮಿಂದ ವೈಯಕ್ತಿಕವಾಗಿ ನನಗೆ ಆಗಬೇಕಾದ್ದು ಏನೂ ಇಲ್ಲ. ಆದರೆ ಕನ್ನಡಿಗರಿಗೆ ಆಗಬೇಕಾದ್ದು ಸಾಕಷ್ಟಿದೆ. ಮೊದಲ ‘ಕನ್ನಡ ಮತ್ತು ಸಂಸ್ಕೃತಿ ಎಂಬ ಹೆಸರಲ್ಲಿ ಇಲಾಖೆಯೊಂದನ್ನು ಆರಂಭಿಸಿ. ಇಲಾಖೆಗೊಬ್ಬ ಸಚಿವರನ್ನು ನೇಮಿಸಿ.
ಅನಕೃ ಹೇಳಿದ್ದನ್ನು ಕೆಂಗಲ್ ಅವರು ಅಕ್ಷರಶಃ ಪಾಲಿಸುತ್ತಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೃಷ್ಟಿಯಾಗುತ್ತದೆ. ಅದಕ್ಕೆ ಓರ್ವ ಸಚಿವರನ್ನೂ ನೇಮಿಸಲಾಗುತ್ತದೆ.
ವಿಶೇಷವೆಂದರೆ ಕೆಂಗಲ್ ಅವರ ನಂತರ ಕರ್ನಾಟಕವನ್ನು ಆಳಿದ ಬಹುತೇಕ ಮುಖ್ಯಮಂತ್ರಿಗಳು ‘ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ಗಂಭೀರವಾಗಿಯೇ ಪರಿಗಣಿಸಿದ್ದರು. ಈ ಇಲಾಖೆಗೆ ತಮ್ಮ ಪಕ್ಷಗಳಿಂದ ಆಯ್ಕೆಯಾದ ಸಾಂಸ್ಕೃತಿಕ ವ್ಯಕ್ತಿತ್ವವುಳ್ಳ, ಮೌಲ್ಯವಂತ ಶಾಸಕರನ್ನೇ ಸಚಿವರನ್ನಾಗಿ ನೇಮಿಸುತ್ತಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅತ್ಯಂತ ಮಹತ್ವದ ಇಲಾಖೆಯಾಗಿಯೇ ಇತ್ತು.
ಆದರೆ ಯಾವಾಗ ರಾಜಕಾರಣವೂ ಸಂಪೂರ್ಣ ಮಾರಾಟದ ಸರಕಾಯಿತೋ ಆಗ, ಸಹಜವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಿದ್ದ ಮಹತ್ವವನ್ನು ಕುಗ್ಗಿಸುತ್ತ ಬರಲಾಯಿತು. ‘ಹಣವಿಲ್ಲದ ಇಲಾಖೆ ಎಂಬ ಕಾರಣಕ್ಕೆ ಈ ಇಲಾಖೆಗೆ ಸಚಿವರಾಗುವವರೇ ಇಲ್ಲದಂತಾದರು. ‘ಯಾವುದನ್ನು ಬೇಕಾದರೂ ಕೊಡಿ, ಅದೊಂದನ್ನು ಬಿಟ್ಟು ಎಂದು ಮುಖ್ಯಮಂತ್ರಿಗಳಿಗೆ ಕೇಳಿಕೊಳ್ಳುವ ರಾಜಕಾರಣಿಗಳೂ ಹುಟ್ಟಿಕೊಂಡರು. ಶಾಸಕರಾಗಿ ಗೆದ್ದು ಬರುವ ನಾಯಕಮಣಿಗಳಿಗೆ ಹಣ ಹೊಡೆಯಲು ಮಾರ್ಗವಿರುವ ಖಾತೆಗಳೇ ಬೇಕು. ಅದರಲ್ಲೂ ಲೋಕೋಪಯೋಗಿ, ನೀರಾವರಿ, ಕಂದಾಯ, ಅರಣ್ಯ, ಅಬಕಾರಿ, ಇಂಧನದಂಥ ಖಾತೆಗಳಿಗೆ ಎಲ್ಲಿಲ್ಲದ ಬೇಡಿಕೆ. ಈ ಇಲಾಖೆಗಳಿಗೆ ನಡೆಯುವ ಪೈಪೋಟಿಯನ್ನು ಎದುರಿಸಲು ಮುಖ್ಯಮಂತ್ರಿಗಳೇ ಏಳುಕೆರೆ ನೀರು ಕುಡಿದಿರಬೇಕು. ‘ಬಂಡವಾಳ ಹೂಡಿ ಗೆದ್ದು ಬಂದಿದ್ದೇವೆ, ವಾಪಾಸು ಪಡೆಯಬಾರದೆ? ಎಂಬ ಮನೋಭಾವ ನಮ್ಮ ಸಚಿವರುಗಳದ್ದು. ಹೀಗಾಗಿ ಅವರು ‘ಹಣ ಇರುವ ಖಾತೆಗಳನ್ನೇ ಹುಡುಕುತ್ತಾರೆ, ಜಗಳ ಮಾಡಿ ಗಿಟ್ಟಿಸಿಕೊಳ್ಳುತ್ತಾರೆ.
ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ನಂತರ ‘ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ತಮ್ಮ ಬಳಿಯೇ ಇಟ್ಟುಕೊಂಡರು. ಮುಖ್ಯಮಂತ್ರಿಗಳು ಹೀಗೆ ಹಲವು ಖಾತೆಗಳನ್ನು ತಮ್ಮ ಬಳಿಯೇ ಇಟ್ಟುಕೊಳ್ಳುವುದು ಪರಿಪಾಠ. ಅದರಲ್ಲಿ ತಪ್ಪೇನೂ ಇಲ್ಲ. ಆದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕೆಲಸಗಳಿಗೆ ಕಳೆದ ಎರಡೂವರೆ ವರ್ಷಗಳಲ್ಲಿ ಯಡಿಯೂರಪ್ಪನವರು ಎಷ್ಟು ಸಮಯ ನೀಡಿದ್ದಾರೆ ಎಂಬುದನ್ನು ಅವರು ಬಹಿರಂಗಪಡಿಸುವರೆ? ಅವರು ಹೇಳುವುದೇನು ಬಂತು, ಇಲಾಖೆಯ ಕಡೆ ಓರೆಗಣ್ಣಿನಿಂದಲೂ ನೋಡಿದವರಲ್ಲ ಯಡಿಯೂರಪ್ಪನವರು.
ಹಿರಿಯ ಕಲಾವಿದರು, ಸಾಹಿತಿಗಳು ಆಸ್ಪತ್ರೆಗೆ ದಾಖಲಾದರೆ, ಅದರಲ್ಲೂ ಆಸ್ಪತ್ರೆಯ ಬಿಲ್ ಪಾವತಿ ಮಾಡಲೂ ಅಶಕ್ತರಾದವರು ಸಂಕಷ್ಟಕ್ಕೆ ಸಿಲುಕಿದರೆ ಯಾರನ್ನು ಹುಡುಕಿಕೊಂಡು ಹೋಗುವುದು? ಮುಖ್ಯಮಂತ್ರಿಗಳು ಅಷ್ಟು ಸುಲಭಕ್ಕೆ ಎಲ್ಲರ ಕೈಗೂ ದಕ್ಕುವರೆ? ಯಾವುದೋ ಕನ್ನಡದ ಕಾರ್ಯಕ್ರಮ, ಸಂಘಟಿಸಿದವರಿಗೊಂದು ಆಸೆ. ಸಚಿವರೊಬ್ಬರು ಬಂದು ಕನ್ನಡಿಗರ ಸಮಸ್ಯೆಗಳ ಪರಿಹಾರಕ್ಕೆ ಒಂದು ಭರವಸೆಯನ್ನಾದರೂ ಕೊಟ್ಟು ಹೋಗಲಿ ಎಂದು. ಯಾರನ್ನು ಕರೆಯುವುದು? ಮುಖ್ಯಮಂತ್ರಿಗಳು ಬರುತ್ತಾರೆಯೆ?
ವಿಶ್ವ ಕನ್ನಡ ಸಮ್ಮೇಳನ ನೆನೆಗುದಿಗೆ ಬಿದ್ದಿದೆ. ಬೆಳಗಾವಿಯಲ್ಲಿ ಸಮ್ಮೇಳನ ನಡೆಸುತ್ತೇವೆಂದು ಹೇಳಿ ವರ್ಷಗಳು ಕಳೆದುಹೋದವು. ದುರಂತವೆಂದರೆ ವಿಶ್ವ ಕನ್ನಡ ಸಮ್ಮೇಳನ ನಡೆಸುವ ಉದ್ದೇಶದಿಂದ ಬೆಳಗಾವಿಯಲ್ಲಿ ಎರಡು ವರ್ಷಗಳು ಸತತವಾಗಿ ನಡೆದಿದ್ದ ವಿಧಾನಮಂಡಲ ಅಧಿವೇಶನವನ್ನು ರದ್ದುಪಡಿಸಲಾಯಿತು. (ಅಸಲಿ ಕಾರಣ ಬೇರೆಯೇ ಇತ್ತು. ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆಗಳು ಎದುರಾದ ಹಿನ್ನೆಲೆಯಲ್ಲಿ, ಅಲ್ಲಿ ಭಾರತೀಯ ಜನತಾ ಪಕ್ಷಕ್ಕೆ ತೊಂದರೆಯಾಗದಿರಲಿ ಎಂಬ ಕಾರಣಕ್ಕೆ ಬೆಳಗಾವಿ ಅಧಿವೇಶನ ರದ್ದುಪಡಿಸಲಾಗಿತ್ತು!) ಇತ್ತ ವಿಧಾನಮಂಡಲ ಅಧಿವೇಶನವೂ ಇಲ್ಲ, ಅತ್ತ ವಿಶ್ವ ಕನ್ನಡ ಸಮ್ಮೇಳನವೂ ಇಲ್ಲ. ಹೀಗಿರುವಾಗ ಇದೆಲ್ಲವನ್ನೂ ಯಾರ ಮುಂದೆ ಹೇಳುವುದು? ಮುಖ್ಯಮಂತ್ರಿಗಳು ತಮ್ಮ ಪಕ್ಷದ ಒಳಗಿನ ಸಂಕಟ-ಬಿಕ್ಕಟ್ಟುಗಳನ್ನು ಪರಿಹರಿಸುವುದರಲ್ಲೇ ಸದಾ ಮಗ್ನರಾಗಿರುತ್ತಾರೆ. ಇನ್ನು ನಾಡು-ನುಡಿ ಎದುರಿಸುತ್ತಿರುವ ಬಿಕ್ಕಟ್ಟುಗಳ ಬಗ್ಗೆ ತಲೆಕೆಡಿಸಿಕೊಳ್ಳಲು ಅವರಿಗೆ ಪುರುಸೊತ್ತೆಲ್ಲಿದೆ?
ಅಂತೂ ಇಂತೂ ಯಡಿಯೂರಪ್ಪನವರು ‘ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಮಂತ್ರಿಯೊಬ್ಬರನ್ನು ನೀಡಿದ್ದಾರೆ. ಗೋವಿಂದ ಕಾರಜೋಳ ಅವರು ಅನುಭವಿ ರಾಜಕಾರಣಿ, ಜನತಾ ಪರಿವಾರದಿಂದ ಬಂದವರು. ಕನ್ನಡ ಸಂಸ್ಕೃತಿಯ ಬಗ್ಗೆ ಜ್ಞಾನವುಳ್ಳವರು. ಅವರು ಇಲಾಖೆ ಮುಂದಿರುವ ಕೆಲಸಗಳ ಬಗ್ಗೆ ಗಂಭೀರವಾಗಿರುತ್ತಾರೆ ಮತ್ತು ವೇಗವಾಗಿ ಕ್ರಿಯಾಶೀಲರಾಗುತ್ತಾರೆ ಎಂಬ ಆಶಾಭಾವನೆ ಇಟ್ಟುಕೊಳ್ಳೋಣ.
*****
ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೊಬ್ಬ ಸಚಿವರನ್ನು ನೇಮಿಸಿದ ತಕ್ಷಣ ಯಡಿಯೂರಪ್ಪನವರು ಕನ್ನಡಪರವಾಗಿ ಚಿಂತಿಸುತ್ತಿದ್ದಾರೆ ಎಂದು ಭಾವಿಸುವಂತಿಲ್ಲ. ಯಡಿಯೂರಪ್ಪನವರು ಬದಲಾಗಿ ಬಹಳ ಕಾಲವೇ ಆಗಿ ಹೋಯಿತು. ಅಧಿಕಾರಕ್ಕೆ ಬರುವ ಪೂರ್ವದಲ್ಲಿ, ಬಂದ ಹೊಸತರಲ್ಲಿ ಯಡಿಯೂರಪ್ಪನವರ ಬಾಯಲ್ಲಿ ಕನ್ನಡದ್ದೇ ಜಪ. ಕೈಯಲ್ಲಿ ಕನ್ನಡದ್ದೇ ಬಾವುಟ. ಆದರೆ ಅಧಿಕಾರದ ಕುರ್ಚಿ ಅವರನ್ನು ಬದಲಾಯಿಸುತ್ತಾ ಹೋಯಿತು.
ಯಾವ ರೈತರಿಗಾಗಿ ನೂರಾರು ಕಿ.ಮೀ ಪಾದಯಾತ್ರೆ ಮಾಡಿ, ವಿಧಾನಸೌಧದಲ್ಲಿ ಏಕಾಂಗಿ ಧರಣಿ ನಡೆಸಿದ್ದರೋ, ಯಾವ ರೈತನ ಹೆಸರಿನಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರೋ, ಅದೇ ಯಡಿಯೂರಪ್ಪನವರ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಹಾವೇರಿಯಲ್ಲಿ ಇಬ್ಬರು ರೈತರನ್ನು ಗುಂಡಿಕ್ಕಿ ಕೊಂದಿತು. ಇದೊಂದು ಆಕಸ್ಮಿಕ ಘಟನೆ ಎನ್ನುವಂತೆಯೂ ಇಲ್ಲ. ಪದೇ ಪದೇ ರೈತರ ಮೇಲೆ ಲಾಠಿಚಾರ್ಜ್‌ಗಳು ನಡೆದವು. ‘ರೈತರ ಮೇಲೆ ಹಲ್ಲೆ ಮಾಡಕೂಡದು ಎಂದು ನಮ್ಮ ಪೊಲೀಸರಿಗೆ ಕಟ್ಟುನಿಟ್ಟಾಗಿ ಹೇಳಿದ್ದೇನೆ ಎಂದು ಯಡಿಯೂರಪ್ಪನವರು ಬಾಯಿಮಾತಿನ ಘೋಷಣೆ ಮಾಡುತ್ತ ಬಂದರೆ, ಪೊಲೀಸರು ಸಿಕ್ಕಸಿಕ್ಕಲ್ಲಿ ರೈತರ ಮೇಲೆ ಲಾಠಿ ಬೀಸಿದರು. ಇನ್ನೂ ಒಂದು ಹೆಜ್ಜೆ ಮುಂದಿಟ್ಟು, ರೈತರ ಕೈಗೆ ಕೋಳ ಹಾಕುವ ಕೆಲಸವನ್ನೂ ಯಡಿಯೂರಪ್ಪನವರ ಖಾಕಿ ಸೈನ್ಯ ಮಾಡಿಬಿಟ್ಟಿತು.
ಹೊಗೇನಕಲ್ ವಿಚಾರದಲ್ಲಿ ಯಡಿಯೂರಪ್ಪ ಸರ್ಕಾರ ನಡೆದುಕೊಂಡ ರೀತಿಯಂತೂ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಜತೆ ಅವರು ಮಾಡಿಕೊಂಡ ಒಳ ಒಪ್ಪಂದಗಳಿಗೆ ಸಾಕ್ಷಿಯಂತಿತ್ತು. ಮುಖ್ಯಮಂತ್ರಿ ಗಾದಿಗೇರುವ ಮುನ್ನ ಹೊಗೇನಕಲ್‌ನಲ್ಲಿ ದೋಣಿ ವಿಹಾರ ನಡೆಸಿ, ನಾಡಿನ ಒಂದಿಂಚೂ ಭೂಮಿಯನ್ನು ಕಬಳಿಸಲು ಅವಕಾಶ ನೀಡುವುದಿಲ್ಲ ಎಂದಿದ್ದರು ಯಡಿಯೂರಪ್ಪನವರು. ಆದರೆ ಅಧಿಕಾರ ಬಂದ ನಂತರ ಹೊಗೇನಕಲ್ ಮರೆತೇ ಹೋದರು. ಕರ್ನಾಟಕದ ನೆಲದಲ್ಲಿ ತಮಿಳುನಾಡು ಸರ್ಕಾರ ತನ್ನ ಯೋಜನೆಯ ಕಾಮಗಾರಿಯನ್ನು ಅರ್ಧದಷ್ಟು ಮುಗಿಸಿದ್ದರೂ ಯಡಿಯೂರಪ್ಪನವರು ತುಟಿ ಬಿಚ್ಚುತ್ತಿಲ್ಲ. ‘ಮೊದಲು ಜಂಟಿ ಸರ್ವೆ ನಡೆಯಲಿ. ಯಾವುದು ಯಾರ ಭೂಮಿ ಎಂಬುದು ನಿಷ್ಕರ್ಷೆಯಾಗಲಿ, ನಂತರ ಯೋಜನೆ ಮಾಡಿಕೊಳ್ಳಿ, ಎಂದು ಹೇಳಲು ಯಡಿಯೂರಪ್ಪನವರಿಗೇನು ಕಷ್ಟ? ಇದೇ ವಿಚಾರವನ್ನು ಮುಂದಿಟ್ಟುಕೊಂಡು ಲೆಕ್ಕವಿಲ್ಲದಷ್ಟು ಪ್ರತಿಭಟನೆ ನಡೆಸಿದ್ದೇವೆ. ಚಾಮರಾಜನಗರ ಜಿಲ್ಲೆಯಲ್ಲಿ ಈಗಲೂ ಪ್ರತಿನಿತ್ಯ ಪ್ರತಿಭಟನೆಗಳು ನಡೆಯುತ್ತಿವೆ. ಆದರೂ ಮುಖ್ಯಮಂತ್ರಿಗಳು ತಲೆಕೆಡಿಸಿಕೊಳ್ಳುತ್ತಿಲ್ಲ. ದೋಣಿ ವಿಹಾರ ನಡೆಸಿದಾಗ ಇದ್ದ ವೀರಾವೇಶ ಈಗೆಲ್ಲಿ ಹೋಯಿತು?
ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶವನ್ನೇನೋ ಬಿಜೆಪಿ ಸರ್ಕಾರ ನಡೆಸಿತು. ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಎಂಟು ಲಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತಿದ್ದೇವೆ ಎಂದು ಹೆಮ್ಮೆಯಿಂದ ಹೇಳಿಕೊಂಡರು. ಯಾರಿಗೆ ಈ ಉದ್ಯೋಗ? ಕನ್ನಡಿಗರಿಗಾ, ಪರಭಾಷಿಗರಿಗಾ? ಎಂದರೆ ನಿರಾಣಿಯವರ ಬಳಿ ಉತ್ತರವಿಲ್ಲ. ಬೇರೆ ರಾಜ್ಯ, ದೇಶಗಳಿಂದ ಬಂಡವಾಳ ಹೂಡಲು ಬಂದವರು ಸ್ಥಳೀಯರಿಗೆ ಉದ್ಯೋಗ ಕೊಡುತ್ತಾರಾ? ಕೊಟ್ಟ ಉದಾಹರಣೆಗಳು ಇವೆಯೇ? ಕನ್ನಡಿಗರಿಗೇ ಉದ್ಯೋಗ ಕೊಡಬೇಕು ಎಂದು ಆಯಾ ಸಂಸ್ಥೆಗಳೊಂದಿಗೆ ಮಾಡಿಕೊಂಡ ಒಪ್ಪಂದದಲ್ಲಿ ಷರತ್ತು ವಿಧಿಸಲು ಏನು ತೊಂದರೆ? ಸರೋಜಿನಿ ಮಹಿಷಿ ವರದಿ ಪ್ರಕಾರ ರಾಜ್ಯದಲ್ಲಿ ಬಂಡವಾಳ ಹೂಡುವ ಸಂಸ್ಥೆಗಳು ಕಡ್ಡಾಯವಾಗಿ ಕನ್ನಡಿಗರಿಗೆ ಉದ್ಯೋಗ ನೀಡಬೇಕು. ಆದರೆ ಎಲ್ಲಿದೆ ಸರೋಜಿನಿ ಮಹಿಷಿ ವರದಿ? ಅದರ ಅನುಷ್ಠಾನವಾಗುತ್ತಿಲ್ಲವೇಕೆ?
ಕನ್ನಡಿಗರಿಗೆ ಉದ್ಯೋಗ ನೀಡದ, ಕನ್ನಡಿಗರಿಗೆ ಯಾವ ರೀತಿಯಲ್ಲೂ ನೆರವಾಗದ ಇಂಥ ಸಂಸ್ಥೆಗಳು ಕನ್ನಡ ನಾಡಿನಲ್ಲಿ ಬಂದು ವಹಿವಾಟು ನಡೆಸಲು ಅವಕಾಶ ಯಾಕೆ ನೀಡಬೇಕು? ನಮ್ಮ ರೈತರ ಜಮೀನನ್ನು ಕವಡೆ ಕಾಸು ಕೊಟ್ಟು ಕಿತ್ತುಕೊಂಡು ಬಂಡವಾಳಶಾಹಿಗಳಿಗೇಕೆ ನೀಡಬೇಕು? ರಾಜ್ಯ ಸರ್ಕಾರ ವಿಶೇಷ ಆರ್ಥಿಕ ವಲಯಗಳಿಗಾಗಿ, ದೊಡ್ಡ ದೊಡ್ಡ ರಸ್ತೆಗಳಿಗಾಗಿ, ಟೌನ್‌ಶಿಪ್‌ಗಳಿಗಾಗಿ, ವಿಮಾನ ನಿಲ್ದಾಣಗಳಿಗಾಗಿ ರೈತರ ಜಮೀನಿಗೇ ಕೈಯಿಡುತ್ತಿದೆ. ಏಕಕಾಲಕ್ಕೆ ರೈತರನ್ನೂ, ಕೃಷಿ ಕಾರ್ಮಿಕರನ್ನೂ ದಿವಾಳಿಗಳನ್ನಾಗಿ ಮಾಡುತ್ತಿದೆ. ಇದು ಯಾವ ಸೀಮೆಯ ಅಭಿವೃದ್ಧಿ? ಇಂಥ ಅಭಿವೃದ್ಧಿ ನಮಗೆ ಬೇಕೆ? ಯಡಿಯೂರಪ್ಪನವರಿಗೆ ಇದೆಲ್ಲವೂ ಅರ್ಥವಾಗುವುದಿಲ್ಲವೆ?
ಇವತ್ತಿನ ರಾಜಕೀಯ ವ್ಯವಸ್ಥೆಯೇ ದಿಕ್ಕೆಟ್ಟಿದೆ. ಅಧಿಕಾರಸ್ಥರ ಹಗರಣಗಳು ದಿನಕ್ಕೊಂದು ಬಯಲಾಗುತ್ತಿವೆ. ಮಂತ್ರಿ, ಮುಖ್ಯಮಂತ್ರಿಗಳ ಜತೆಗೆ ಅವರ ಮಕ್ಕಳು ದೊಡ್ಡದೊಡ್ಡ ಹಗರಣಗಳನ್ನು ಸೃಷ್ಟಿಸುತ್ತಿದ್ದಾರೆ. ಕೋಟಿ ಕೋಟಿ ರೂಪಾಯಿ ಜನರ ಹಣವನ್ನು ಲೂಟಿ ಹೊಡೆಯುತ್ತಿದ್ದಾರೆ.
ಇಂಥ ಸಂದರ್ಭದಲ್ಲಿ ಗೋಪಾಲಗೌಡರು ನೆನಪಾಗುತ್ತಾರೆ. ೫೦೦ ರೂಪಾಯಿ ಖರ್ಚಾಗುತ್ತದೆ ಎಂಬ ಕಾರಣಕ್ಕೆ ಚುನಾವಣೆಗೆ ಸ್ಪರ್ಧಿಸಲು ಹಿಂದೇಟು ಹಾಕಿದವರು ಗೋಪಾಲಗೌಡರು. ಸಂಗಾತಿಗೆ ಒತ್ತಡದಿಂದಾಗಿ ಮತದಾರರಿಂದಲೇ ಒಂದೊಂದು ರೂಪಾಯಿ ಸಂಗ್ರಹಿಸಿ ಚುನಾವಣೆಗೆ ನಿಂತು ಆದರ್ಶವನ್ನು ಸೃಷ್ಟಿಸಿದವರು ಅವರು. ಜನರೂ ಗೋಪಾಲಗೌಡರ ಕಿಮ್ಮತ್ತು ಅರಿತವರಾದ್ದರಿಂದ ಅವರನ್ನು ಗೆಲ್ಲಿಸಿದರು. ಗೆದ್ದು ಬಂದು ಗೋಪಾಲಗೌಡರು ನಡೆದುಕೊಂಡ ರೀತಿ, ಹಾಕಿಕೊಟ್ಟ ಮಾರ್ಗ ಇವತ್ತಿನ ರಾಜಕಾರಣಿಗಳಿಗೆ ಆದರ್ಶಪ್ರಾಯವಾಗಬೇಕಿತ್ತು. ವಿಧಾನಸಭೆಯಲ್ಲಿ ಗೋಪಾಲಗೌಡರು ಮಾಡಿರುವ ಭಾಷಣಗಳನ್ನು ನಮ್ಮ ೨೨೪ ಶಾಸಕರಲ್ಲಿ ಎಷ್ಟು ಮಂದಿ ಓದಿ ತಿಳಿದುಕೊಂಡಿದ್ದಾರೆ? ಶಾಸಕರ ಮಾತು ಹಾಗಿರಲಿ, ಯಡಿಯೂರಪ್ಪ ಸಂಪುಟದ ಎಷ್ಟು ಮಂದಿ ಸಚಿವರು ಓದಿರಬಹುದು?
ರಾಜ್ಯ ಇವತ್ತು ಹೊರರಾಜ್ಯಗಳಿಂದ ಬಂದು ಸಾವಿರಾರು ಕೋಟಿ ರೂ. ಲೂಟಿ ಮಾಡುತ್ತಿರುವ ಗಣಿ ಉದ್ಯಮಿಗಳ ಕೈಗೆ, ದೊಡ್ಡ ದೊಡ್ಡ ಬಂಡವಾಳಶಾಹಿ-ಸಾಮ್ರಾಜ್ಯಶಾಹಿ ಶಕ್ತಿಗಳ ಕೈಗೆ ಸಿಲುಕಿದೆ. ಇಂಥವರನ್ನೆಲ್ಲ ಪೋಷಿಸುವ ಕೆಲಸವನ್ನು ಬಿಜೆಪಿ ಸರ್ಕಾರ ವ್ಯವಸ್ಥಿತವಾಗಿ ನಡೆಸುತ್ತ ಬಂದಿದೆ. ಹೀಗಾಗಿ ರೈತ ಹೋರಾಟಗಾರರು, ಕನ್ನಡ ಚಳವಳಿಗಾರರು, ಜನಪರ ಹೋರಾಟಗಾರರು ಸರ್ಕಾರದ ಕಣ್ಣಿಗೆ ಶತ್ರುಗಳಂತೆ ಕಾಣುತ್ತಿದ್ದಾರೆ. ಕನ್ನಡದ ಚಿಂತನೆಗಳನ್ನು ಮರೆತು, ಕನ್ನಡಿಗರ ನೋವು-ನಲಿವಿಗೆ ಸ್ಪಂದಿಸುವ ಸೂಕ್ಷ್ಮತೆಯನ್ನೇ ಸರ್ಕಾರ ಕಳೆದುಕೊಂಡಿದೆ.
ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಬೆಳವಡಿ ಮಲ್ಲಮ್ಮ, ಸಿಂಧೂರ ಲಕ್ಷ್ಮಣರಂಥ ಕನ್ನಡ ಸೇನಾನಿಗಳು ಹುಟ್ಟಿದ ನಾಡು ಬೆಳಗಾವಿ. ಆ ಜಿಲ್ಲೆಯ ಹಲವು ಹಳ್ಳಿಗಳಲ್ಲಿ ಇವತ್ತಿಗೂ ಮಹಾರಾಷ್ಟ್ರ ರಾಜ್ಯದ ನಾಮಫಲಕಗಳನ್ನೇ ಹಾಕಿಕೊಂಡು ಕನ್ನಡಿಗರನ್ನು ಕೆಣಕಲಾಗುತ್ತಿದೆ. ಕನಿಷ್ಠ ಇಂಥ ರಾಜ್ಯದ್ರೋಹದ ಕುಚೇಷ್ಠೆಗಳನ್ನು ತಡೆಯಲಾಗದ ಸರ್ಕಾರ ಕರ್ನಾಟಕದಲ್ಲಿ ಇದ್ದರೆಷ್ಟು ಬಿಟ್ಟರೆಷ್ಟು? ಗಡಿಗಳನ್ನೆಲ್ಲ ಪರರಾಜ್ಯಗಳಿಗೆ ಬಿಟ್ಟುಕೊಟ್ಟು ಯಡಿಯೂರಪ್ಪನವರು ಕಟ್ಟಲು ಬಯಸುವ ನವಕರ್ನಾಟಕವಾದರೂ ಎಂಥದ್ದು? ಮುಂದಿನ ಪೀಳಿಗೆಯ ಕನ್ನಡಿಗರಿಗೆ ಇಲ್ಲಿ ಉಳಿಯುವುದಾದರೂ ಏನು? ಗಡಿಗಳು ಒಂದೊಂದಾಗಿ ಉದುರುತ್ತಿವೆ, ರೈತರ ಜಮೀನು ಕಿತ್ತುಕೊಳ್ಳಲಾಗುತ್ತಿದೆ, ವಿದ್ಯುತ್ ಯೋಜನೆ, ರೆಸಾರ್ಟ್‌ಗಳ ಹೆಸರಲ್ಲೇ ಪಶ್ಚಿಮಘಟ್ಟದ ದಟ್ಟ ಅರಣ್ಯಗಳನ್ನು ಬೋಳು ಮಾಡಲಾಗುತ್ತಿದೆ. ಕೂಲಿ ಕಾರ್ಮಿಕರು ಭಿಕ್ಷುಕರಾಗುವ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಭಿಕ್ಷುಕರನ್ನು ನಿರ್ದಯವಾಗಿ ಊಟ-ಔಷಧಿ ನೀಡದೆ ಕೊಲ್ಲಲಾಗುತ್ತಿದೆ. ಏನು ಉಳಿದೀತು ನಾಡಿನಲ್ಲಿ?
ಎಂಥ ದುರಂತದ ದಿನಗಳನ್ನು ನೋಡಬೇಕಾದೀತು ನಾವು?

ಬಾನಿನಲ್ಲಿ ಲೀನವಾದ ಅಂಧರ ಬಾಳಿನ ಅರುಣೋದಯ: ಪಂ. ಪುಟ್ಟರಾಜ ಗವಾಯಿ
ಕಾವೆಂಶ್ರೀ


ಅಂದು ಸಂಚಾರಿ ವಾಣಿಯಲ್ಲಿ ದಿಢೀರನೆ ಬಂದ ಸುದ್ದಿ. ಗದುಗಿನ ಅಜ್ಜಾ ಹೋದ್ರಂತೆ!! ಎಲ್ಲರಲ್ಲೂ ಆತಂಕ, ದಿಗಿಲು, ಮೌನ. ನಿಧಾನವಾಗಿ ತಿಳಿದದ್ದು ಅಜ್ಜಾ ಚೇತರಿಸ್ಕೊಳತಾ ಇದಾರೆ. ಆಕ್ಸಿಜನ್ ಹಚ್ಚಿದ್ದಾರೆ ಹಾಗೆ... ಹೀಗೆ. ಮಾರನೇ ದಿನ ಅಜ್ಜ ಗುಣಮುಖರಾಗಿದ್ದಾರೆ..ಅವರು ಶತಾಯುಷಿಗಳಾಗಲಿ ಎಂದು ಎಲ್ಲಾ ಅಭಿಮಾನಿಗಳ ಆಸೆ. ಗದುಗಿನ ಜನ ಎಂದಿಗೂ ಸೌಹಾರ್ದಯುತರು, ಸಹೃದಯವಂತರು ಜಾತಿಭೇದಗಳಿಲ್ಲದೇ ಕೋಮುಗಲಭೆಗಳಿಲ್ಲದೇ ಅಜ್ಜಾರು ನೂರುವರ್ಷ ಬದುಕಲಿ ಎಂದು ತಮ್ಮತಮ್ಮ ಸಂಪ್ರದಾಯದಂತೆ ಪೂಜೆ ಪುನಸ್ಕಾರ ನೆರವೇರಿಸಿ ಗದಗನ್ನು ಯಜ್ಞಭೂಮಿಯನ್ನಾಗಿ ಮಾಡಿದರು. ಆದರೆ ವಿಧಿ ಬರಹ ಬೇರೆಯಾಗಿತ್ತು. ಮಧ್ಯಾಹ್ನ ಸುಮಾರು ೧೨ರ ಹೊತ್ತಿಗೆ ಗಾನಯೋಗಿ ಉಸಿರು ಬಾನಿನಲ್ಲಿ ಲೀನವಾಗುತ್ತಿದ್ದಂತೆ ಅವರ ಅಭಿಮಾನಿ ಜನತೆ ಎಲ್ಲೆಲ್ಲಿಂದ ಬಂದು ಸೇರಿತೋ! ಎರಡು ದಿನಗಳ ಕಾಲ ಗದುಗಿನಲ್ಲಿ ಜನತೆಯ ದುಃಖದ ಕಟ್ಟೆಯೊಡೆದಿತ್ತು. ಎಲ್ಲಿ ನೋಡಿದರೂ ಭಕ್ತರ ಮುಗಿಲು ಮುಟ್ಟುವ ಆಕ್ರಂದನ. ಅಷ್ಟೆಲ್ಲಾ ನೋವಿದ್ದರೂ ಯಾವುದೇ ರಾಜಕೀಯ, ಗಲಭೆಗಳಿಲ್ಲದೇ ಮೌನವಾಗಿ, ಶಾಂತಿಯುತವಾಗಿ ‘ಅಜ್ಜಾ ಮತ್ತೊಮ್ಮೆ ಹುಟ್ಟಿ ಬಾ’ ಎಂದು ಕಣ್ಣೀರಿಡುತ್ತಾ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡ ಇಡೀ ಜನಸಮೂಹದ ಅಭಿಮಾನ ನಾಡಿಗೇ ಮಾದರಿಯಾಗಿತ್ತು.
ಸಂಗೀತ-ಸಾಹಿತ್ಯ ಸಾರಸ್ವತ ಲೋಕದಲ್ಲಿ ಜ್ಞಾನಯೋಗಿ ಎನಿಸಿಕೊಂಡ ಡಾ|| ಪಂ.ಪುಟ್ಟರಾಜ ಗವಾಯಿಯವರದ್ದು ವೈವಿಧ್ಯಮಯ ಪ್ರತಿಭೆ. ಇವರು ಉತ್ತರ ಕರ್ನಾಟಕದ ಪ್ರತಿಯೊಬ್ಬರ ಮನದಲ್ಲೂ ಆರಾಧಿಸಲ್ಪಡುತ್ತಿರುವ ವ್ಯಕ್ತಿ. ಅಂಧ ಮಕ್ಕಳಿಗೆ ಆಶ್ರಯ ನೀಡಿ ಜ್ಞಾನದ ಬೆಳಕು ಚೆಲ್ಲಿದ ಯುಗಪುರುಷ. ಅಷ್ಟಲ್ಲದೇ ಹಿಂದುಸ್ಥಾನಿ ಸಂಗೀತಕ್ಕೆ ಹೊಸ ಹೊಸ ಚೀಜುಗಳನ್ನು ರಚಿಸಿ ಶತಮಾನದ ಹರಿಕಾರರೆಂದೇ ಗುರುತಿಸಿಕೊಂಡವರು. ಅವರ ಸಾಧನೆ-ಸಿದ್ಧಿಗಳನ್ನು ಗುರುತಿಸಿ ಭಾರತ ಸರ್ಕಾರ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ಇದು ತಡವಾಗಿಯಾದರೂ ಸಂಗೀತ ಲೋಕಕ್ಕೆ ದೊರೆತ ಮತ್ತೊಂದು ಗರಿ. ಪೂಜ್ಯರನ್ನೇ ಅರಸಿಕೊಂಡು ಬಂದ ಕೊನೆಯ ಪ್ರಶಸ್ತಿ ಧಾರವಾಡದ ನ.ವಜ್ರಕುಮಾರ ಪುರಸ್ಕಾರ.
ಸಿದ್ದಮ್ಮ ಮತ್ತು ರೇವಣ್ಣಯ್ಯ ದಂಪತಿಗಳ ಗರ್ಭದಿಂದ ೩ ಮಾರ್ಚ್ ೧೯೧೪ ರಂದು ಧಾರ ವಾಡ ಜಿಲ್ಲೆಯ ದೇವಗಿರಿಯಲ್ಲಿ ಪುಟ್ಟರಾಜರ ಜನನ. ಆರು ತಿಂಗಳದ ಪುಟ್ಟರಾಜರಿಗೆ ಕಣ್ಣುಬೇನೆ ಎಂಬ ಮಾರಿಯ ಕಾಟ. ಆಗ ತಾಯಿ ಮೂಢನಂಬಿಕೆಗೊಳಗಾಗಿ ದನದ ಮೈಮೇಲಿರುವ ಉಣುಗು(ತೊಣಸಿ) ತಂದು ಮಗ ಪುಟ್ಟರಾಜರ ಕಣ್ಣಿಗೆ ಮುಟ್ಟಿಸಿದಳು. ಅದು ಕಣ್ಣಿನ ಪೊರೆ ಎಳೆಯುತ್ತದೆ ಎಂಬ ಭ್ರಮೆ! ಎರಡು ಕಣ್ಣುಗಳಿಗೂ ಹಿಡಿಸಿದಳು. ಕೊನೆಗೆ ಕಣ್ಣುಗಳು ಕುರುಡಾದವು. ಚಿಂತೆಯಿಂದಲೇ ತಂದೆ ಚಿತೆಯಾದರು. ಸೋದರ ಮಾವ ಶ್ರೀ ಚಂದ್ರಶೇಖರ ಹಿರೇಮಠ ಅವರಿಂದ ಪ್ರಾಥಮಿಕ ಶಿಕ್ಷಣ.
ಎಲ್ಲವೂ ದೈವಲೀಲೆಯೆಂದು ಪರಿಗಣಿಸಿದ ಪುಟ್ಟರಾಜರು ಸಂಗೀತವನ್ನೇ ತಮ್ಮ ಸಾಧನೆಯ ಕ್ಷೇತ್ರವಾಗಿ ಆಯ್ದುಕೊಂಡರು. ಶಿಕ್ಷಣಾಭ್ಯಾಸಕ್ಕಾಗಿ ಪಂ.ಪಂಚಾಕ್ಷರಿ ಗವಾಯಿಗಳನ್ನು ಮೊರೆಹೊಕ್ಕರು. ಬಿಜಾಪೂರ ಜಿಲ್ಲಾ ಶಿವಯೋಗ ಮಂದಿರದಲ್ಲಿ ಸಂಗೀತ ಶಾಲೆಯನ್ನು ನಡೆಸುತ್ತಿದ್ದ ಗಾನಯೋಗಿ ಕೈ. ಪಂಡಿತ್ ಪಂಚಾಕ್ಷರಿ ಗವಾಯಿಗಳ ಕೃಪೆಗೆ ಪಾತ್ರರಾದರು. ಕೇವಲ ಆರು ವರ್ಷದ ಬಾಲಕನಿರುವಾಗಲೇ ಪುಟ್ಟರಾಜರನ್ನು ಗುರು ಪಂಚಾಕ್ಷರಿ ಗವಾಯಿಗಳು ಕರ್ನಾಟಕ-ಹಿಂದುಸ್ಥಾನಿ ಸಂಗೀತದ ಆಚಾರ್ಯ ಪುರುಷರಾಗುವಂತೆ ಅನುಗ್ರಹಿಸಿದರು. ಗುರು-ಶಿಷ್ಯರ ಬಾಂಧವ್ಯ ಅಂಧಕಾರದ ಬಾಳಿಗೆ ಹೊಸಬೆಳಕಾಯಿತು. ಆಗಲೇ ಹಾರ‍್ಮೋನಿಯಂ, ತಬಲ, ಸಿತಾರ್, ವಯೋಲಿನ್, ಸಾರಂಗಿ, ಗಾಯನದಲ್ಲಿ ಉತ್ತರಾದಿ ಮತ್ತು ದಕ್ಷಿಣಾದಿ ಶೈಲಿಯ ಸಂಗೀತ ಪುಟ್ಟರಾಜರಲ್ಲಿ ಪರಿಪಕ್ವಗೊಂಡಿದ್ದವು.
ಗುರುವಿನ ಆಜ್ಞೆಯ ಪ್ರಕಾರ ಗದುಗಿನ ವೀರೇಶ್ವರ ಪುಣ್ಯಾಶ್ರಮವನ್ನು ೧೯೪೪ರಿಂದ ವಹಿಸಿಕೊಂಡು ಅತಿಶಯವಾಗಿ ಅಭಿವೃದ್ಧಿಪಡಿಸುತ್ತಾ ಬಂದಿದ್ದರು. ಅಂಧರಾದರೂ ಶಿಕ್ಷಣ, ಸಂಗೀತ, ಅನ್ನದಾಸೋಹಗಳೆಂಬ ತ್ರಿವಿಧ ದಾಸೋಹಗಳನ್ನು ನಿಜವಾದ ಅರ್ಥದಲ್ಲಿ ಅನುಸರಿಸಿಕೊಂಡು ಬಂದರು. ಇವರ ಬದುಕಿನ ಜ್ಞಾನದ ಮತ್ತೊಂದು ಮುಖವೇ ಸಾಹಿತ್ಯ ಕೃಷಿ. ಸಂಸ್ಕೃತವೆಂದರೆ ಬಲುಪ್ರೀತಿ. ಹಿಂದಿಯೆಂದರೆ ತುಂಬಾ ಖುಷಿ. ಕನ್ನಡದಲ್ಲೂ ಅಷ್ಟೇ ಪ್ರಭುತ್ವ.. ನೂರಾರು ಗ್ರಂಥಗಳನ್ನು, ಶ್ರೀರುದ್ರ, ಪುರಾಣ ನಾಟಕಗಳನ್ನು ತಮ್ಮದೇ ಆದ ಶೈಲಿಯಲ್ಲಿ ಬ್ರೈಲ್ ಲಿಪಿಯ ಮುಖಾಂತರ ಬರೆದಿದ್ದಾರೆ. ಇವರನ್ನು ತ್ರಿಭಾಷಾ ಕವಿ ಎಂದೇ ಗುರುತಿಸುವುದುಂಟು. ಹಿಂದಿಯ ವೇದಾಂತ, ವಿಚಾರ ಸಾಗರ, ವೃತ್ತಿ ಪ್ರಭಾಕರ, ಅಮರಕೋಶ, ವ್ಯಾಕರಣ ಸಿದ್ಧಾಂತ, ನ್ಯಾಯಶಾಸ್ತ್ರದ ತರ್ಕಸಂಗ್ರಹ, ತತ್ವಶಾಸ್ತ್ರ, ಉಪನಿಷತ್‌ಗಳು, ಭಗವದ್ಗೀತೆ-ಬ್ರಹ್ಮಸೂತ್ರ ಹೀಗೆ ಅನೇಕ ಮಹಾಗ್ರಂಥಗಳನ್ನು ಅಭ್ಯಾಸಮಾಡಿಕೊಂಡ ಮಹನೀಯರಿವರು.
ಸಾಹಿತ್ಯ, ಸಂಗೀತ, ಅಧ್ಯಾತ್ಮ ವಿದ್ಯೆಗಳ ತ್ರಿವೇಣಿಸಂಗಮದಿಂದ ಕಲಾಭಿಜ್ಞರಾದ ಪಂ.ಪುಟ್ಟರಾಜರು ಅಕ್ಕಮಹಾದೇವಿ ಪುರಾಣವನ್ನು ಕನ್ನಡ ಭಾಮಿನಿ ಷಟ್ಪದಿಯಲ್ಲಿ, ಗುರುಗೀತೆಯನ್ನು ಸಂಸ್ಕೃತದಲ್ಲಿ, ಹಿಂದಿಯಲ್ಲಿ ಬಸವ ಪುರಾಣವನ್ನು ಬರೆದು ರಾಷ್ಟ್ರೀಯ ಪುರಸ್ಕಾರಕ್ಕೆ ಭಾಜನರಾದರು. ಇವರಿಂದ ರಚಿತವಾದ ಗಾನಸುಧಾ ಭಾಗ ೧ ಮತ್ತು ಭಾಗ ೨ ಸಂಗೀತ ನೃತ್ಯ ಅಕಾಡಮಿ ಪ್ರಶಸ್ತಿ ವಿಜೇತ ಕೃತಿಗಳು. ಕುಮಾರ ವಿಲಾಸಕಾವ್ಯಂ(ಕನ್ನಡ), ಅಷ್ಟಾವರಣ ಕೀರ್ತನ ಮಾಲಿಕೆ, ಶ್ರೀಮತ್ಕುಮಾರಗೀತಾ, ಶಿವಶರಣ ಚನ್ನಯ್ಯನ ಸಂಗೀತನಾಟಕ, ಸಂಸ್ಕೃತದ ಸಿದ್ಧಾಂತ ಶಿಖಾಮಣಿ, ಸಂಗೀತ ಶಾಸ್ತ್ರಜ್ಞಾನ ಮುಂತಾದ ಕೃತಿಗಳು ಶ್ರೇಷ್ಠ ಕೃತಿಗಳ ಪಂಕ್ತಿಯಲ್ಲಿವೆ. ಸಂಸ್ಕೃತದಲ್ಲಿ ಶ್ರೀ ಗುರುಸಿದ್ಧೇಶ್ವರ ಚಂಪೂಕಾವ್ಯವನ್ನು ರಚಿಸಿದ್ದಾರೆ. ಇವರ ಸಂಪಾದಕತ್ವದಲ್ಲಿ ಪಂಚಾಕ್ಷರವಾಣಿ ಮಾಸಪತ್ರಿಕೆ ಪ್ರಕಟವಾಗುತ್ತಿದೆ.
ಜಗಜ್ಯೋತಿ ಬಸವೇಶ್ವರ, ನೆಲ್ಲೂರು ನಂಬಿಯಕ್ಕ, ಸತಿ ಸುಕನ್ಯಾ ಸೇರಿದಂತೆ ೧೯ಕ್ಕೂ ಹೆಚ್ಚು ನಾಟಕಗಳನ್ನು ಬರೆದು ತಮ್ಮ ಆಶ್ರಯದಲ್ಲಿ ಸ್ಥಾಪಿತವಾಗಿರುವ ಶ್ರೀ ಕುಮಾರೇಶ್ವರ ನಾಟ್ಯಸಂಘದಿಂದ ರಂಗಭೂಮಿಗೆ ಹೊಸ ಮೆರಗನ್ನು ನೀಡಿದರು. ಅದೇ ನಾಟ್ಯಸಂಘದಿಂದ ಹೇಮರೆಡ್ಡಿ ಮಲ್ಲಮ್ಮ ನಾಟಕವನ್ನು ೩೭೫ ದಿನಗಳವರೆಗೆ ಸತತವಾಗಿ ಪ್ರತೀದಿನ ಪ್ರದರ್ಶನ ನೀಡಿ ಪ್ರೇಕ್ಷಕರ ಮನ ತಣಿಸಿ ರಂಗಭೂಮಿಯಲ್ಲಿ ಹೊಸ ವಿಕ್ರಮವನ್ನೇ ಸಾಧಿಸಿದರು. ರಂಗಭೂಮಿಯ ಸೂತ್ರಧಾರರಾಗಿ ಸುದೀರ್ಘ ರಂಗ ಸೇವೆ ಸಲ್ಲಿಸಿದ್ದಾರೆ. ಇಲ್ಲಿ ಶಿಸ್ತು ಮತ್ತು ನಿಯತ್ತಿನ ಕಲಾವಿದರು ರೂಪುಗೊಳ್ಳುತ್ತಿದ್ದಾರೆ. ಇಂದಿಗೂ ಪುರುಷರೇ ಸ್ತ್ರೀ ಪಾತ್ರಧಾರಿಯಾಗಿ ಅಭಿನಯಿಸುತ್ತಿರುವುದು ರಂಗಭೂಮಿಯಲ್ಲಿ ಈಗ ಇತಿಹಾಸ.
ಪಂ.ಪುಟ್ಟರಾಜರಿಗೆ ಅಪಾರವಾದ ಶಿಷ್ಯಸಂಪತ್ತು. ಅವರಿಗಿರುವ ಶಿಷ್ಯರನ್ನು ಹೆಸರಿಸುವುದು ತುಂಬಾ ಕಷ್ಟ. ಅವರುಗಳಲ್ಲಿ ಪಂ. ವೆಂಕಟೇಶಕುಮಾರ, ಡಿ.ಕುಮಾರದಾಸ್, ರಘುನಾಥ್ ನಾಕೋಡ್, ಸೋಮನಾಥ ಮರಡೂರ್ ಮುಂತಾದವರು ಪ್ರಮುಖರು. ನಾಡಿನಗಲ ಶಾಲಾಕಾಲೇಜುಗಳಲ್ಲಿ ಸಂಸ್ಥೆಗಳಲ್ಲಿ ಇವರ ಶಿಷ್ಯರುಗಳೆಲ್ಲ ಅಧ್ಯಾಪಕರಾಗಿದ್ದಾರೆ. ರೇಡಿಯೋ-ದೂರದರ್ಶನದಲ್ಲೂ ಕಲಾವಿದರಾಗಿದ್ದಾರೆ.
ಪಂ.ಪುಟ್ಟರಾಜರು ಗಾಯನ ಮತ್ತು ವಾದನಗಳೆರಡರಲ್ಲೂ ಪರಿಣಿತರಿದ್ದರು. ಇವರ ನಾದದ ಮಾಧುರ್ಯಕ್ಕೆ ಒಲಿದುಬಂದ ಪ್ರಶಸ್ತಿ-ಪುರಸ್ಕಾರಗಳು ಹಲವಾರು. ಶ್ರೀನಿಧಿ, ಲಲಿತಕಲಾ ಸಾಮ್ರಾಟ, ಸಂಗೀತ ಚಕ್ರವರ್ತಿ, ನಾಡೋಜ, ಕೇಂದ್ರಸರ್ಕಾರದ ಸಂಗೀತ ನೃತ್ಯ ಅಕಾಡಮಿ ಪ್ರಶಸ್ತಿ, ಕನಕಪುರಂದರ ಪ್ರಶಸ್ತಿ, ರಾಜ್ಯ ಪ್ರಶಸ್ತಿ, ಕಾಳಿದಾಸ ಸಮ್ಮಾನ, ಚೌಡಯ್ಯ ಪ್ರಶಸ್ತಿ, ಬಸವಶ್ರೀ ಪ್ರಶಸ್ತಿ, ಸಂಗೀತ ರತ್ನ, ಸಾಹಿತ್ಯ-ಸಂಗೀತ ಕಲಾಪ್ರವೀಣ, ಅಲ್ಲದೇ ಹಿಂದಿ ಕೃತಿಯಾದ ಬಸವ ಪುರಾಣಕ್ಕೆ ಭಾರತದ ಮೊದಲ ರಾಷ್ಟ್ರಪತಿಯಾದ ಬಾಬುರಾಜೇಂದ್ರ ಪ್ರಸಾದ್‌ರಿಂದ ರಾಷ್ಟ್ರಪತಿ ಗೌರವವೂ ಲಭಿಸಿದೆ. ಅಲ್ಲದೇ ಭಾರತದ ಪ್ರತಿಷ್ಠಿತ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿ ಸಹ ಬಂದಿರುವುದು ಇಡೀ ಸಂಗೀತ ಲೋಕಕ್ಕೇ ಮತ್ತೊಂದು ಹೆಮ್ಮೆಯ ಗರಿಮೂಡಿದಂತಾಗಿದೆ.
ಪುಣ್ಯಾಶ್ರಮದ ಅನ್ನದ ಪಾತ್ರೆ ಅಕ್ಷಯಪಾತ್ರೆ ಇದ್ದಂತೆ. ದಿನನಿತ್ಯ ಸಾವಿರಾರು ವಿದ್ಯಾರ್ಥಿ-ಭಕ್ತ ಸಮುದಾಯ ಪ್ರಸಾದ ಸ್ವೀಕರಿಸುತ್ತಾರೆ. ಇಲ್ಲಿ ಸಾವಿರಾರು ಕುರುಡ ಬಾಲಕರು ಸಂಗೀತಾಭ್ಯಾಸದಲ್ಲಿ ಯಾವ ಕುಂದುಕೊರತೆಗಳಿಲ್ಲದೇ ಜ್ಞಾನಸಂಪಾದನೆ ಮಾಡುತ್ತಿದ್ದಾರೆ. ಕುರುಡರ ಜೊತೆಗೆ ಕಣ್ಣಿದ್ದವರೂ ಇದ್ದಾರೆ. ಅವರೆಲ್ಲರಿಗೂ ಉಚಿತವಾಗಿ ಸಂಗೀತಾಭ್ಯಾಸ, ವಸತಿ, ಅನ್ನ-ವಸ್ತ್ರಗಳ ವಿನಿಯೋಗವಾಗುತ್ತದೆ.
ಪಂ.ಪುಟ್ಟರಾಜ ಗವಾಯಿಗಳವರ ನಿಲುವು ಬಹಳ ಎತ್ತರವಾದದ್ದು. ಯಾವ ಉತ್ಪ್ರೇಕ್ಷೆಗೂ ಕಿವಿಗೊಡದ ಕಾಯಕ ಬದುಕು ಅವರದ್ದಾಗಿತ್ತು. ಅವರು ಸಾವಿರಾರು ಅಂಧ ಮಕ್ಕಳ ಬಾಳಿಗೆ ಸುಪ್ರಭಾತವಾಗಿದ್ದರು.
ಪಂ.ಪುಟ್ಟರಾಜರನ್ನು ಈ ಶತಮಾನದ ನಡೆದಾಡುವ ದೇವರೆಂದೇ ಭಾವಿಸಿರುವ ಭಕ್ತರು ಅವರನ್ನು ಕರೆದು ಸತ್ಕರಿಸಿ, ಪಾದಪೂಜೆ, ತುಲಾಭಾರದ ಕಾರ್ಯಕ್ರಮ ನೆರವೇರಿಸುತ್ತಿದ್ದರು. ತುಲಾಭಾರ ಭಾರತೀಯ ಸಂಸ್ಕೃತಿಯಲ್ಲಿ ಧಾರ್ಮಿಕ ಮಹತಿಯ ಹಾಗೂ ತಾತ್ವಿಕ ಔಚಿತ್ಯವನ್ನು ಒಳಗೊಂಡ ವಿಶಿಷ್ಟ ಸಾಂಕೇತಿಕ ಕ್ರಿಯಾಚರಣೆ. ಒಬ್ಬ ವ್ಯಕ್ತಿ ತನ್ನ ಬದುಕಿನ ಸುಖಶಾಂತಿಗಾಗಿ ತನ್ನ ತೂಕದಷ್ಟು ಚಿನ್ನ, ಬೆಳ್ಳಿ, ದವಸ-ಧಾನ್ಯಗಳನ್ನು ಸಾತ್ವಿಕ ಹಾಗೂ ಅರ್ಹ ವ್ಯಕ್ತಿಗೆ ದಾನರೂಪದಲ್ಲಿ ಕೊಡಮಾಡಿ ಕೃತಾರ್ಥನಾಗುವ ಒಂದು ಧಾರ್ಮಿಕ ಕ್ರಿಯಾಚರಣೆ. ದಾನ ಮಾಡಬೇಕು. ಉದಾರ ಮನೋಭಾವವನ್ನು ವ್ಯಕ್ತಿತ್ವದಲ್ಲಿ ಅಂತರ್ಗತಿಸಿಕೊಳ್ಳಬೇಕು. ಸಮಾಜದ ಋಣ ತೀರಿಸಲು ಅದಕ್ಕೆ ಏನನ್ನಾದರೂ ಸಮರ್ಪಿಸಬೇಕು. ನಿಸ್ವಾರ್ಥಮನೋಭಾವದಿಂದ ಪ್ರೇರಿತವಾದ ಕೊಡುವಿಕೆಯಲ್ಲಿ ಸಂತೋಷವನ್ನೂ ನಿರ್ಮಲ ಆನಂದವನ್ನೂ ಅರಸಬೇಕೆಂದು ಈ ಕ್ರಿಯಾಚರಣೆಯ ಹಿಂದಿನ ಸಂದೇಶವಾಗಿದೆ. ದಾನ ಧರ್ಮದ ಪ್ರವೃತ್ತಿ ಸಮಾಜದಲ್ಲಿ ಹುಲುಸಾಗಿ ಬೆಳೆದು ಬಂದರೆ ಸಮಾಜವು ಸರ್ವಾಂಗೀಣವಾಗಿ ಅಭಿವೃದ್ಧಿ ಹೊಂದಲು ಅವಕಾಶವಾಗುತ್ತದೆ ಎಂಬುದೇ ಈ ಕ್ರಿಯಾಚರಣೆಯ ಹಿಂದೆ ಅಡಗಿದ ಸದುದ್ದೇಶ.
ಧಾರವಾಡದ ಮುರುಘಾಮಠದ ಶ್ರೀ ಮೃತ್ಯುಂಜಯ ಅಪ್ಪಗಳ ಸಾನ್ನಿಧ್ಯದಲ್ಲಿ ನಡೆದದ್ದು ಪ್ರಥಮ ತುಲಾಭಾರ. ಪಂ. ಡಾ. ಪುಟ್ಟರಾಜ ಕವಿ ಗವಾಯಿಗಳವರು ಹಮ್ಮಿಕೊಂಡಿರುವ ಸಾಮಾಜಿಕ ಸೇವೆ ಸಾಮಾನ್ಯವಾದದ್ದಲ್ಲ. ಅದೊಂದು ಜವಾಬ್ದಾರಿ. ಅದನ್ನು ನೀಗಿಸುವುದು ಸುಲಭ ಸಾಧ್ಯವಲ್ಲ. ಅಂದಾಜು ಸಾವಿರಕ್ಕೂ ಮೀರಿ ಗಿನ್ನೆಸ್ ದಾಖಲೆಯೂ ಆಗಿದೆ. ಗುರುಗಳ ಆಜ್ಞೆಯಂತೆ ತುಲಾಭಾರದಿಂದ ಬರುವ ಕಾಣಿಕೆಯನ್ನು ಪುಣ್ಯಾಶ್ರಮದ ಅಂಧ-ಅನಾಥ ಮಕ್ಕಳ ಪೋಷಣೆಗೆ ವಿನಿಯೋಗಿಸಲಾಗುತ್ತದೆ. ಹೀಗೆ ಸಮಾಜಕ್ಕೆ, ನಾಡಿಗೆ, ದೇಶಕ್ಕೆ ಪುಣ್ಯಾಶ್ರಮದ ಕೊಡುಗೆ ಗಣನೀಯವಾದುದು. ಪ್ರತಿಭಾ ಸಂಪನ್ನ ಸಂಗೀತಗಾರರನ್ನು, ಸಂಗೀತಜ್ಞರನ್ನು, ಸಂಗೀತ ಶಿಕ್ಷಕರನ್ನು,ಕೀರ್ತನಕಾರರನ್ನು ನಿರಂತರವಾಗಿ ರೂಪಿಸುತ್ತಲೇ ಇರುವ ಪುಣ್ಯಾಶ್ರಮ ನಮ್ಮ ಸಂಸ್ಕೃತಿಯ ಪೋಷಕ ಶಕ್ತಿಯಾಗಿದೆ.
೧೯೯೮ರಲ್ಲಿ ಕನಕ-ಪುರಂದರ ಪ್ರಶಸ್ತಿ ಬಂದ ಸಂದರ್ಭದಲ್ಲಿ ಗಾನ-ಜ್ಞಾನ ಯೋಗಿ ಜತೆ ಮಾತುಕತೆ..
ಅಧ್ಯಾತ್ಮ-ಮತ-ಧರ್ಮ-ತತ್ವಗಳಿಂದ
ಸಮಾಜಕ್ಕೆ ಕೊಡಬಹುದಾದ ಫಲವೇನು?
ಸಮಾಜದಲ್ಲಿ ಇರಬೇಕಾದ ಜ್ಞಾನ-ಭಕ್ತಿ-ಸದಾಚಾರ-ನೀತಿಗಳು ಇಂದು ಎಲ್ಲೂ ಇಲ್ಲವಾಗುತ್ತಿವೆ. ಅವುಗಳನ್ನು ಉಳಿಸಿಕೊಳ್ಳಬೇಕಾದರೆ ಸುಜ್ಞಾನ, ಸದ್ಭಕ್ತಿ, ಸದಾಚಾರ, ಸತ್ಯತೆ ಇರಬೇಕಾಗುತ್ತದೆ. ಇವುಗಳೆಲ್ಲವೂ ಇರಬೇಕಾದರೆ ಸಮಾಜದಲ್ಲಿ ಅಧ್ಯಾತ್ಮ-ಮತ-ಧರ್ಮ-ತತ್ವಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕಾಗುತ್ತದೆ.
ತಮಗೆ ಹೊಸಹೊಸ ಚೀಜುಗಳ ರಚನೆಗೆ ಪ್ರೇರಣಾಶಕ್ತಿ ಯಾವುದು?
ನನ್ನ ಪ್ರತಿಯೊಂದು ಪ್ರಯೋಗಕ್ಕೂ ಗುರುವೇ ಪ್ರೇರಣಾ ಶಕ್ತಿ. ಹಿಂದೆ ಗುರುಗಳು ಸಂಗೀತ ಕಲಿಸುವ ಭಾರ ಹೊತ್ತುಕೊಂಡು ತಮಗೆ ತಿಳಿದಷ್ಟನ್ನೂ ನನಗೆ ಕಲಿಸಿದರು. ಒಂದೊಂದು ರಾಗದಲ್ಲಿ ಒಂದೊಂದು ಚೀಜುಗಳನ್ನು ಹೇಳಿದರು. ಅವರಲ್ಲಿ ಚೀಜುಗಳ ಸಂಗ್ರಹವಿರಲಿಲ್ಲ. ಹೆಚ್ಚಿನ ಕಲಿಕೆಗಾಗಿ ನನ್ನನ್ನು ರಾಮಕೃಷ್ಣಬುವಾ ವಝೆಯವರ ಬಳಿ ಕಳುಹಿಸಿದರು. ವಿಶಾರದವರೆಗೂ ಕಲಿತೆ ಆದರೆ ಪರೀಕ್ಷೆಗೆ ಕುಳಿತುಕೊಳ್ಳಲಿಲ್ಲವಷ್ಟೆ.
ಗುರು ಕೃಪೆಯಿಂದ ಹೊಸ ಚೀಜುಗಳ ರಚನೆಯಲ್ಲಿ ತೊಡಗಿಕೊಂಡೆ. ನನ್ನ ಮೊದಲ ಚೀಜು ಹಮೀರ್ ರಾಗದ್ದು. ಅದರ ಮೊದಲ ಪ್ರಯೋಗವೂ ಗುಳೇದಗುಡ್ಡದಲ್ಲಿ ನಡೆಯಿತು. ಅಂದು ಗುರುಗಳೇ ನನಗೆ ತಬಲಾಸಾಥ್ ನೀಡಿ ರಂಜಿಸಿದರು. ಹೆದರುತ್ತಾ ಶಿವಸ್ತೋತ್ರದ ಸಾಲನ್ನು ಹಾಡಿದೆ. ಆಗ ಗುರುಗಳು ಹೊಸಚೀಜು ಬಹಳ ಚಂದ ಆಗ್ತಾವೆ. ಹೀಗೆಯೇ ಹೊಸಹೊಸ ಚೀಜುಗಳನ್ನು ರಚನೆ ಮಾಡು. ನಿನಗೆ ಗುರು ಕೃಪೆ ಎಂದಿಗೂ ಇದ್ದೇ ಇದೆ ಅಂತಾ ಹೇಳಿದ್ರು. ಅವರ ಆಶೀರ್ವಾದದಂತೆ ಎಲ್ಲಾ ರಾಗಗಳ ಚೀಜು ರಚಿಸಿದೆ. ಕರ್ನಾಟಕ ರಾಜ್ಯದ ಸಂಗೀತ ಅಕಾಡಮಿ ಆಯ್ಕೆ ಮಾಡಿ ಗೌರವ ಪುರಸ್ಕಾರ ನೀಡಿದೆ. ಆ ಚೀಜುಗಳನ್ನು ಆಕಾಶವಾಣಿ, ದೂರದರ್ಶನ, ಸಂಗೀತ ಕಛೇರಿಗಳಲ್ಲಿ ಹಿರಿ-ಕಿರಿಯ ಗಾಯಕರೆಲ್ಲಾ ಪ್ರಯೋಗಿಸಿ ಮಹತ್ವಪೂರ್ಣ ಸ್ಥಾನಗಳಿಸಿಕೊಟ್ಟಿದ್ದಾರೆ. ಅವರೆಲ್ಲರಿಗೂ ನಾನು ಆಭಾರಿಯಾಗಿದ್ದೇನೆ.
ನಿಮ್ಮ ದೃಷ್ಟಿಯಲ್ಲಿ ಪೂಜೆಯ ಪರಮೋದ್ದೇಶ ಏನು? ಹೇಗೆ?
ನಮ್ಮನ್ನು ಲೋಕಕಲ್ಯಾಣಕ್ಕಾಗಿ ಮುಡುಪಾಗಿಡುವುದು. ಸರ್ವರಿಗೂ ಶಾಂತಿ ಸಿಗುವಂತಾಗಬೇಕು. ಸರ್ವರೂ ಸುಖಿಗಳಾಗಿರಲಿ, ಆರೋಗ್ಯವಂತರಾಗಿರಲಿ, ಯಾರೂ ದುಃಖಿಗಳಾಗುವದು ಬೇಡವೆಂಬ ಭಾವನೆ ನಮ್ಮಲ್ಲಿ ಅಡಕವಾದಲ್ಲಿ ಎಲ್ಲವೂ ಫಲಿಸುತ್ತದೆ.
ತಮ್ಮ ಮೇಲೆ ಗುರು ಹೊರಿಸಿದ ಜವಾಬ್ದಾರಿಗಳೇನು? ಅವುಗಳೆಲ್ಲ ಕಾರ್ಯರೂಪಕ್ಕೆ ಬಂದಿವೆಯೇ?
ಬೀದಿಯಲ್ಲಿ ಹೊಟ್ಟೆಪಾಡಿಗಾಗಿ ಭಿಕ್ಷಾಪಾತ್ರೆ ಹಿಡಿದು ಅಲೆಯಬೇಕಾದ ಅಂಧ ಮಕ್ಕಳಿಗೆ ಆಶ್ರಯ, ಜ್ಞಾನಧಾರೆ, ಸಂಗೀತ ಆರಾಧಕರಿಗೆ ಕಲಾಕೇಂದ್ರ ಮತ್ತು ಧರ್ಮಾಭಿವೃದ್ಧಿ ಇವು ನನ್ನ ಮೇಲೆ ವಹಿಸಿರುವ ಜವಾಬ್ದಾರಿಗಳು.
ಸಮಾಜದಲ್ಲಿ ಮೇಲು-ಕೀಳೆಂಬ ಭೇದ ಭಾವವಿಲ್ಲದೇ ಭಯ, ಗೌರವ, ಸತ್ಯತೆ ಎಲ್ಲಿದೆಯೋ ಅಲ್ಲಿ ಧರ್ಮ ನೆಲೆಸುತ್ತದೆ. ಇಂದು ಅಂಧ ಮಕ್ಕಳಿಗಾಗಿ ಕೇಂದ್ರ ಸರ್ಕಾರದ ಸಹಾಯದಿಂದ ವಸತಿಗೃಹದ ವ್ಯವಸ್ಥೆಯಾಗಿದೆ. ಊಟ ಉಪಚಾರದ ವ್ಯವಸ್ಥೆಯೂ ಇದೆ. ಜ್ಞಾನಧಾರೆಯ ಕೇಂದ್ರವಾಗಿ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಪದವಿಯವರೆಗೂ ಶಿಕ್ಷಣ ಸೌಲಭ್ಯವಿದೆ. ಉತ್ತರ ಕರ್ನಾಟಕದಲ್ಲಿಯೇ ಪ್ರಪ್ರಥಮವಾಗಿ ಪದವಿ ಕಾಲೇಜು ಆರಂಭಗೊಂಡು ಹಲವಾರು ವರ್ಷಗಳೇ ಸಂದಿವೆ.
ಆತ್ಮವನ್ನು ಅತ್ಯುನ್ನತ ಸ್ಥಿತಿಗೆ ಕೊಂಡೊಯ್ಯುವ ಸರ್ವಶ್ರೇಷ್ಠ ಕಲೆ ಯಾವುದು? ಯಾವ ದೃಷ್ಟಿಯಲ್ಲಿ?
ಸರ್ವಶ್ರೇಷ್ಠ ಕಲೆ ಸಂಗೀತ. ಹಾಡುವ ಪದಗಳೆಲ್ಲಾ ಶೃಂಗಾರ ಪದಗಳಾಗಬಾರದು. ತತ್ವಪದಗಳಾಗಿರಬೇಕು. ಮೀರಾಬಾಯಿ ಭಜನ್, ಕನಕದಾಸ, ಪುರಂದರ ದಾಸರ ಪದಗಳೆಲ್ಲ ಮನಸ್ಸಿನಲ್ಲಿ ಅತೀ ಆನಂದ ತಂದುಕೊಡುತ್ತವೆ. ಭಗವದ್ಭಕ್ತಿ ಬೆಳೆಯುತ್ತದೆ. ಸರ್ಪಭೂಷಣ ಶಿವಯೋಗಿ, ಬಸವಣ್ಣನ ವಚನಗಳೆಲ್ಲ ಆತ್ಮಶಾಂತಿಯನ್ನು ನೀಡುತ್ತವೆ.

ಕನ್ನಡ ನಾಡಿನ ಸ್ವಾಭಿಮಾನಿ ಕಿಡಿ: ಸಂಗೊಳ್ಳಿರಾಯಣ್ಣ


ನ.ನಾಗೇಶ್


ಕ್ರಾಂತಿಕಾರಿ ಸ್ವತಂತ್ರ ಹೋರಾಟಗಾರ ಭಗತ್‌ಸಿಂಗ್ ಅವರನ್ನು ಬ್ರಿಟಿಷ್ ಸರ್ಕಾರ ಗಲ್ಲಿಗೇರಿಸಿದ್ದು ೧೯೩೧ರಲ್ಲಿ. ಆದರೆ, ಸರಿಯಾಗಿ ನೂರು ವರ್ಷಗಳ ಹಿಂದೆಯೇ ಸಂಗೊಳ್ಳಿ ರಾಯಣ್ಣನನ್ನು ಅದೇ ಬ್ರಿಟಿಷ್ ಸರ್ಕಾರ ನೇಣಿಗೇರಿಸಿತ್ತು. ಸತ್ತ ನಂತರ ಇದೇ ನಾಡಿನಲ್ಲಿ ಹುಟ್ಟಿ ಬ್ರಿಟಿಷ್‌ರ ವಿರುದ್ಧ ಹೋರಾಡುವುದು ನನ್ನ ಅಂತಿಮ ಆಸೆ ಎಂದು ರಾಯಣ್ಣ ಹೇಳಿಕೊಂಡಿದ್ದ. ರಾಯಣ್ಣ ಬ್ರಿಟಿಷರ ವಿರುದ್ಧ ಮೊದಲು ಬಂಡೆದ್ದ ಕಿತ್ತೂರು ಹೋರಾಟಗಾರರ ಪ್ರತಿನಿಧಿ. ಸ್ವಾಭಿಮಾನದ, ನಾಡ ಪ್ರೇಮದ ಹೋರಾಟಕ್ಕೆ ರಾಯಣ್ಣನಿಗೆ ರಾಯಣ್ಣನೇ ಸಾಟಿ. ಆರು ಕೋಟಿ ಕನ್ನಡಿಗರು ಹೆಮ್ಮೆಯಿಂದ ಅಭಿಮಾನ ಪಡುವ ಆದರ್ಶ ನಾಯಕ ರಾಯಣ್ಣ.
ರಾಯಣ್ಣ ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನಲ್ಲಿರುವ ಗಣೇಶವಾಡಿ ಗ್ರಾಮ. ಇದು ರಾಯಣ್ಣನ ತಾಯಿ ಕೆಂಚವ್ವನ ತವರೂರು. ಸಂಗೊಳ್ಳಿಯ ಓಲೇಕಾರ ದೊಡ್ಡ ಭರಮಪ್ಪ ರಾಯಣ್ಣನ ತಂದೆ. ಈತನ ತಾತ ರಾಘಪ್ಪ ವೀರಪ್ಪ ದೇಸಾಯಿ ‘ಸಾವಿರ ಒಂಟೆ ಸರದಾರ ಎಂದೇ ಬಿರುದಾಂಕಿತರಾದವರು. ಸಹಜವಾಗಿಯೇ ರಾಯಣ್ಣನಲ್ಲೂ ಶೌರ್ಯ, ಸಾಹಸೀ ಪ್ರವೃತ್ತಿ ರಕ್ತಗತವಾಗಿಯೇ ಹರಿದು ಬಂದವು.
ಚಿಕ್ಕಂದಿನಿಂದಲೇ ಕುಸ್ತಿ, ಕತ್ತಿ ವರಸೆ ಇನ್ನಿತರ ಯುದ್ಧ ಕೌಶಲಗಳನ್ನು ಕಲಿಯುತ್ತಾ ಹೋದ ರಾಯಣ್ಣನಲ್ಲಿ ಸಮರ ಸೇನಾನಿಗೆ ಅಗತ್ಯವಿದ್ದ ಸಮರಕಲೆಗಳು, ಪೌರುಷ, ಸ್ವಾಭಿಮಾನ ಜತೆಜತೆಯಲ್ಲಿಯೇ ಬೆಳೆದು ಬಂದವು.
ಬ್ರಿಟಿಷ್ ಸಾಮ್ರಾಜ್ಯ ಶಾಹಿ ವಿರುದ್ಧ ದಂಗೆಯೆದ್ದಿದ್ದ ಕಿತ್ತೂರಿನಲ್ಲಿ ‘ಬ್ರಿಟೀಷರೇ ನಾಡು ಬಿಟ್ಟು ತೊಲಗಿ ಎಂಬ ರಣ ಘೋಷದ್ದೇ ಅನುರಣನ ತುಂಬಿಕೊಂಡಿತ್ತು. ಚೆನ್ನಮ್ಮನ ಬೆನ್ನ ಹಿಂದೆ ಕೆಚ್ಚೆದೆಯ ಕಲಿಗಳ ಪಡೆಯೇ ಸಮರ ಸಜ್ಜುಗೊಂಡಿತ್ತು. ಆಗಿನ್ನೂ ರಾಯಣ್ಣನಿಗೆ ೨೯ರ ಹರೆಯ. ಮನೆಗೊಬ್ಬನಂತೆ ಐದು ಸಹಸ್ರಕ್ಕೂ ಮಿಗಿಲಾದ ಕೆಚ್ಚೆದೆಯ ಕಲಿಗಳು ಸಮರ ಸೇನೆಯಲ್ಲಿ ಸಂಗಮಗೊಂಡು ಕತ್ತಿ ಹಿರಿಯುತ್ತಿದ್ದರು. ಈ ವೀರ ಸೈನಿಕರಲ್ಲಿ ರಾಯಣ್ಣನೂ ಒಬ್ಬ. ಈತ ಯೋಧ ಮಾತ್ರ ಆಗಿರದೆ ರೈತನೂ ಆಗಿದ್ದ. ಸಂಗೊಳ್ಳಿ ಎಂಬ ಗ್ರಾಮದ ಕಾವಲುಗಾರನೂ ಹೌದು.
ಕಿತ್ತೂರು ಶ್ರೀಮಂತವಾಗಿತ್ತು. ಇಲ್ಲಿ ದವಸ-ಧಾನ್ಯ ಸೇರಿದಂತೆ ಪ್ರತಿಯೊಂದು ಸಮೃದ್ಧವಾಗಿದ್ದವು. ಸಹಜವಾಗಿಯೇ ಬ್ರಿಟೀಷರ ಕಣ್ಣ ಇತ್ತ ನೆಟ್ಟಿತ್ತು. ಕಪ್ಪ ಕೊಡಿರೆಂಬ ಅನುಜ್ಞೆಯೂ ಹೊರಟಿತು. ಪ್ರತಿಯಾಗಿ ಚೆನ್ನಮ್ಮ ಹೆಬ್ಬುಲಿಯಂತೆ ಆರ್ಭಟಿಸಿ ಸಮರದ ಎಚ್ಚರಿಕೆ ಗಂಟೆ ಬಾರಿಸಿದಳು. ಬ್ರಿಟಿಷ್ ಅಧಿಕಾರಿ ಥ್ಯಾಕರೆ ದಂಡಿನೊಂದಿಗೆ ಕಿತ್ತೂರಿನ ಮೇಲೆ ದಾಳಿಯಿಟ್ಟ. ಪರಂಗಿಗಳ ದೌರ್ಜನ್ಯಕ್ಕೆ ಸೆಡ್ಡು ಹೊಡೆದು ಸಮರ ನಡೆಸಿದ ಕಿತ್ತೂರಿನ ಕಲಿ ರಾಯಣ್ಣ ಥ್ಯಾಕರೆಯನ್ನು ಬಲಿತೆಗೆದುಕೊಂಡು ಸಾಹಸಿಯಾಗಿ ಹೊರಹೊಮ್ಮಿದ. ವಿಜಯ ಪತಾಕೆಯನ್ನು ಹಾರಿಸಿದ.
ಆದರೆ ಬ್ರಿಟಿಷರು ಇಷ್ಟಕ್ಕೇ ಸುಮ್ಮನಾಗಲಿಲ್ಲ. ಮತ್ತೊಮ್ಮೆ ದಂಡೆತ್ತಿ ಬಂದರು. ತಮ್ಮ ಕುತಂತ್ರ ನೀತಿಯಿಂದಾಗಿ, ನಾಡ ದ್ರೋಹಿಗಳ ಸಹಾಯದಿಂದಾಗಿ ಜಯ ಸಾಧಿಸಿ ಸೈನಿಕರನ್ನೆಲ್ಲಾ ಬಂಧಿಸಿ ಧಾರವಾಡದ ಸೆರೆಮನೆಗೆ ತಳ್ಳಿದರು. ಆಗ ೧೮೨೬ರ ಸಮಯ. ಕಿತ್ತೂರಿನ ರಾಣಿ ಚೆನ್ನಮ್ಮ ಬೈಲಹೊಂಗಲದ ಸೆರೆಯಾಳಾದಳು. ಬ್ರಿಟಿಷರು ಬಂಧಿತ ಕಿತ್ತೂರಿನ ಸೈನಿಕರಿಗೆಲ್ಲ ಸಾರ್ವತ್ರಿಕ ಕ್ಷಮೆ ನೀಡಿ ಬಂಧ ಮುಕ್ತಗೊಳಿಸಿ ಎಚ್ಚರಿಕೆಯ ಸಂದೇಶವನ್ನು ನೀಡಿದ್ದರು.
ಸ್ವಗ್ರಾಮಕ್ಕೆ ಮರಳಿದ ರಾಯಣ್ಣ ನಾಡಿನ ಜನರ ಮೇಲೆ ಪರಂಗಿಗಳ ದೌರ್ಜನ್ಯ ಕಂಡು ಕುದ್ದು ಹೋಗುತ್ತಿದ್ದ. ಬಡಜನವರ ಮೇಲೆ ಭೂಕಂದಾಯ ಹೇರಿ ಅಮಾನವೀಯವಾಗಿ ವಸೂಲಿ ಮಾಡುತ್ತಿದ್ದ ಬ್ರಿಟೀಷರ ದಬ್ಬಾಳಿಕೆ, ಭೂ ಕಬಳಿಕೆ, ಜಮೀನ್ದಾರಿಕೆಯ ಅಮಲು, ಜನತೆಯನ್ನು ಹಣಿಯಲು ರೂಪಿಸುತ್ತಿದ್ದ ಷಡ್ಯಂತ್ರ, ಖದೀಮತನದಿಂದ ರಾಯಣ್ಣನಲ್ಲಿನ ಹೋರಾಟಗಾರ, ಕ್ರಾಂತಿಕಾರನನ್ನು ಬಡಿದೆಬ್ಬಿಸಿ ಹೋರಾಟದ ಅಖಾಡಕ್ಕೆ ಇಳಿಯಲು ಪ್ರೇರೇಪಿಸಿದವು.
ಬೈಲಹೊಂಗಲದಲ್ಲಿ ಸೆರೆಯಾಳಾಗಿದ್ದ ರಾಣಿ ಚೆನ್ನಮ್ಮನನ್ನು ಸಂತನಂತೆ ವೇಷ ಮರೆಸಿಕೊಂಡು ಹೋಗಿ ಮಾತುಕತೆ ನಡೆಸಿದ ಮೇಲಂತೂ ನಾಡಿನ ದುರ್ಗತಿ, ಪರಂಗಿಗಳ ದಬ್ಬಾಳಿಕೆ, ಚೆನ್ನಮ್ಮನ ಕೆಚ್ಚುತನದ ಅರಿವಾಗಿ ರಾಯಣ್ಣನಲ್ಲಿ ಹೋರಾಡುವ ಕಿಚ್ಚು ಹತ್ತಿಕೊಂಡಿತು. ಕಿತ್ತೂರನ್ನು ಆವರಿಸಿಕೊಂಡಿದ್ದ ಸಾಮ್ರಾಜ್ಯ ಶಾಹಿಗಳನ್ನು ಅಳಿಸಿ, ಜನಪರ ಆಡಳಿತ ಸ್ಥಾಪಿಸಲು ಪಣ ತೊಟ್ಟು ಕಂಕಣ ಬದ್ಧನಾದ. ರಾಣಿ ಚೆನ್ನಮ್ಮನನ್ನು ಬಂಧ ಮುಕ್ತಗೊಳಿಸಿ ಸ್ವತಂತ್ರ, ಸ್ವಾಭಿಮಾನದ ಪತಾಕೆ ಹಾರಿಸಲು ರಣ ಕಹಳೆ ಮೊಳಗಿಸಿದ.
ಬಿಚ್ಚುಗತ್ತಿ ಚನ್ನಬಸವಣ್ಣ, ಗುರಿಕಾರ ಬಾಳಣ್ಣ, ವಡ್ಡರ ಎಲ್ಲಣ್ಣ...ಹೀಗೆ ವಿವಿಧ ಸಮುದಾಯದ ಅಪ್ರತಿಮ ಕ್ರಾಂತಿಕಾರರನ್ನು ಸಜ್ಜುಗೊಳಿಸಿ ಬಿಳಿತೊಗಲಿನವರ ವಿರುದ್ಧ ಸಮರ ಸಾರಿದ.
ಬಿಡಿ ಗ್ರಾಮದಲ್ಲಿದ್ದ ಸರ್ಕಾರಿ ಕಛೇರಿಗೆ ಬೆಂಕಿ ಹಚ್ಚುವ ಮೂಲಕ ಹೋರಾಟದ ಮೊದಲ ಕಿಡಿ ಹಾರಿಸಿದ ರಾಯಣ್ಣನೊಂದಿಗೆ ಆಗ ನೂರೇ ನೂರು ಜನರ ಸ್ವಾಭಿಮಾನಿ ಪಡೆಯಿತ್ತು. ಬರ ಬರುತ್ತಾ ರಾಯಣ್ಣನ ಪಡೆ ದೊಡ್ಡದಾಗುತ್ತಾ ಹೋಯಿತು. ನೂರು ಸಾವಿರವಾಯಿತು. ಸಾವಿರಗಳು ದ್ವಿಗುಣಗೊಳ್ಳುತ್ತಾ ಹೋರಾಟದ ಸಾಗರ ಬೃಹದಾಕಾರ ಬೆಳೆಯುತ್ತಾ ಹೋಯಿತು.
ಬಡವರು, ನೊಂದವರು, ಸ್ವಾಭಿಮಾನಿಗಳು, ಸ್ವಾತಂತ್ರ್ಯ ಅಪೇಕ್ಷಿಗಳು ರಾಯಣ್ಣನ ಜತೆಗೂಡಿದರು. ಹೋರಾಟಕ್ಕೆ ಹಣ ಸೇರಿದಂತೆ ಏನೆಲ್ಲಾ ಸಹಾಯ ಬೇಕಿತ್ತೋ ಎಲ್ಲವನ್ನೂ ಒದಗಿಸಿದರು. ರಾಯಣ್ಣನ ಹೋರಾಟ ಜನಪರ ಹೋರಾಟವಾಗಿ ಪರಿವರ್ತಿತವಾಯಿತು. ಸಾಮಾನ್ಯ ಜನರಲ್ಲೂ ರಾಯಣ್ಣ ಸ್ವಾತಂತ್ರ್ಯದ ಕಿಚ್ಚು ಹಚ್ಚಿದ. ಸ್ವಾಭಿಮಾನದ ದೀಪ ಬೆಳಗಿಸಿದ. ಶಸ್ತ್ರ ಸಜ್ಜಿತರನ್ನಾಗಿಸಿ ಹೋರಾಟದ ರಣಭೂಮಿಗೆ ಧುಮುಕಿಸಿದ ಅಪ್ಪಟ ನಾಡ ಪ್ರೇಮಿ ರಾಯಣ್ಣ.
ಬೆಳಗಾವಿ, ಧಾರವಾಡ, ಉತ್ತರಕನ್ನಡ ಜಿಲ್ಲೆಗಳನ್ನೂ ಒಳಗೊಂಡ ಕಿತ್ತೂರಿನ ವಿಮುಕ್ತಿಗೆ ರಾಯಣ್ಣ ದೊಡ್ಡದೊಂದು ಸಂಘರ್ಷವನ್ನೆ ನಡೆಸಿದ. ಅಷ್ಟೇ ಅಲ್ಲ. ಬಡಜನರ, ದಮನಿತರ ಪರವಾಗಿ ನಿಂತು, ಕುಟಿಲ ನೀತಿಗಳಿಂದ ಜನತೆಯನ್ನು ಹಿಂಸಿಸುತ್ತಿದ್ದ ಬ್ರಿಟಿಷರನ್ನು ಕಾಲಕಾಲಕ್ಕೆ ಸದೆಬಡಿಯುತ್ತಲೇ ಬಂದ.
ಹೋರಾಟದ ಹೆಸರಿನಲ್ಲಿ ಎಂದೂ ರಾಯಣ್ಣ ಶೋಷಣೆ ಮಾಡುವುದನ್ನು ಸಹಿಸುತ್ತಿರಲಿಲ್ಲ. ಎಂದಿಗೂ ಕೊಳ್ಳೆ ಹೊಡೆಯಲಿಲ್ಲ. ಸರ್ಕಾರಿ ಚಾಕರಿಯನ್ನು ಧಿಕ್ಕರಿಸಿ ಹೋರಾಟಕ್ಕೆ ಅಣಿಯಾದ. ತನ್ನಂತೆಯೇ ವೀರ ಯುವ ಪಡೆಯನ್ನು ಹುರಿಗೊಳಿಸಿದ. ಶಿಸ್ತು ಚೌಕಟ್ಟು ವಿಧಿಸಿದ. ನಾನಾ ಯುದ್ಧ ತಂತ್ರಗಳನ್ನು ಪರಿಚಯಿಸಿದ. ನಿಜ ಅರ್ಥದಲ್ಲಿ ಓರ್ವ ಸಮರ್ಥ ಜನನಾಯಕನಾಗಿ ರಾಯಣ್ಣ ಹೊರ ಹೊಮ್ಮಿದ.
ಹೋರಾಟದ ಸಂದರ್ಭದಲ್ಲಿಯೇ ಕಿತ್ತೂರಿನ ರಾಣಿ ಚೆನ್ನಮ್ಮ ಅಸುನೀಗಿದಳು. ಮತ್ತದೇ ಸಂತನ ವೇಷ ತೊಟ್ಟು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಸ್ವಾತಂತ್ರ್ಯ ಪ್ರಾಪ್ತಿಯ ದೀಕ್ಷೆ ತೊಟ್ಟ ರಾಯಣ್ಣ ರಾಜ ನಿಷ್ಠ ಮಾತ್ರವಲ್ಲದೇ ಪ್ರಜಾ ನಿಷ್ಠನಾಗಿ, ಧ್ಯೇಯ ನಿಷ್ಠನಾಗಿ ಕನ್ನಡ ನಾಡಿನ ಸ್ಫೂರ್ತಿಯ ಸೆಲೆಯಾಗಿ ಹೊರಹೊಮ್ಮಿದ.
ಸಹಜವಾಗಿಯೇ ಪರಂಗಿಗಳು ರಾಯಣ್ಣನನ್ನು ಸದೆಬಡಿಯಲು ಮುಂದಾದರು. ಇನ್ನಿಲ್ಲದ ಹರಸಾಹಸ ನಡೆಸಿದರು. ಆದರೆ ಸಾಮಾನ್ಯ ಜನರಾರು ಇದಕ್ಕೆ ಬಗ್ಗದೇ ರಾಯಣ್ಣನ ಬೆನ್ನ ಹಿಂದೆ ನಿಂತು ಹೋರಾಟಕ್ಕೆ ಇಂಬು ನೀಡುತ್ತಿದ್ದರು. ಇದು ರಾಯಣ್ಣನಿಗಿದ್ದ ಜನಾನುರಾಗದ ದ್ಯೋತಕ.
ಆದರೆ ಕಾಲ ಕಳೆದಂತೆ ದುಷ್ಟ ಬುದ್ದಿಗಳು ತನ್ನ ಚಾಲಾಕು ತೋರಿಸತೊಡಗಿದರು. ಪರಂಗಿಗಳ ಆಮಿಷಕ್ಕೆ ಬಲಿಯಾಗಿ ನಾಡದ್ರೋಹವೆಸಗಲು ಮುಂದಾದರು. ಹೆಜ್ಜೆಗೆ ಹೆಜ್ಜೆ ಹಾಕುವುದಾಗಿ ಹೇಳಿ ಯುದ್ಧದ ಸಂದರ್ಭದಲ್ಲಿ ಪಲಾಯನಗೈದು ರಾಯಣ್ಣನ ಬಂಧನಕ್ಕೆ ಕಾರಣಕರ್ತರಾದರು. ರಾಯಣ್ಣನೊಂದಿಗೆ ಈತನ ಧೀರ ಪಡೆಯ ವೀರರು ಸೆರೆಸಿಕ್ಕರು.
ಕಡೆಗೆ ವಿಚಾರಣೆಯ ನಾಟಕ ನಡೆದು ೧೮೩೧ ಜನವರಿ ೨೬ರಂದು ರಾಯಣ್ಣನನ್ನು ಆತನ ಆಶೆಯಂತೆಯೇ ನಂದಗಡದಲ್ಲಿ ನೇಣಿಗೇರಿಸಲಾಯಿತು. ಈತನೊಂದಿಗೆ ರಾಯಣ್ಣ ಧನಗರ, ಬಾಳನಾಯಿಕ, ಬಸಲಿಂಗಪ್ಪ, ರುದ್ರನಾಯಕ, ಕರಬಸಪ್ಪ, ಎಳಮಯ್ಯ, ಅಪ್ಪೂನಿ, ಭೀಮ, ರಾಣೋಜಿ ಕೊಂಡ, ಕೋನೇರಿ, ಕೆಂಚಪ್ಪ, ನ್ಯಾಮಣ್ಣ, ಅಪ್ಪಾಜಿ ನಾಯಕ ಎಂಬ ಧೀರರು ನೇಣಿಗೆ ಕೊರಳೊಡ್ಡಿದರು. ಆಗಸ್ಟ್ ೧೫ ರಾಯಣ್ಣ ಹುಟ್ಟಿದ ದಿನವಾದರೆ, ಜನವರಿ ೨೬ ರಾಯಣ್ಣ ಗಲ್ಲಿಗೇರಿದ ದಿನ. ೧೧೯ ವರ್ಷಗಳ ಬಳಿಕ ಅದೇ ದಿನದಂದು ಭಾರತ ಗಣರಾಜ್ಯವಾಯಿತು. ಬ್ರಿಟಿಷರು ಭಾರತ ಬಿಟ್ಟು ತೊಲಗಿದ್ದು ಆಗಸ್ಟ್ ೧೫. ರಾಯಣ್ಣನ ಜನ್ಮದಿನವೂ ಅದೇ. ಇದು ನಿಜಕ್ಕೂ ಕಾಕತಾಳೀಯ.
ಸಂಗೊಳ್ಳಿ ರಾಯಣ್ಣನ ಬಲಿದಾನವಾಗಿ ಸರಿಯಾಗಿ ೧೭೯ ವರ್ಷಗಳೇ ಸಂದಿವೆ. ರಾಯಣ್ಣನ ಕೆಚ್ಚೆದೆಯ ಹೋರಾಟ, ಸ್ವಾಭಿಮಾನ, ಸಂಘಟನೆ, ಆದರ್ಶ ಇವೆಲ್ಲವೂ ಇಂದಿನ ಕನ್ನಡಿಗರಿಗೆ ಅಕ್ಷರಶ: ಸ್ಫೂರ್ತಿದಾಯಕವಾದುದು.
ಇಷ್ಟು ಸುಧೀರ್ಘ ವರ್ಷಗಳ ಬಳಿಕ ಕೊನೆಗೂ ಬೆಂಗಳೂರಿನ ದೇವರಾಜ ವೃತ್ತದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಮುಕ್ತಿ ದೊರೆತಿರುವುದು ಸಂತಸ. ಪ್ರತಿಮೆಯ ಅನಾವರಣದ ಜತೆ ಜತೆಗೆ ಆತನ ಹೋರಾಟ, ಆದರ್ಶ, ತ್ಯಾಗ, ಬಲಿದಾನ ನೆನಪಿಸಿಕೊಂಡು ಸ್ವಾಭಿಮಾನಿ ಕನ್ನಡ ನಾಡಿನ ನಿರ್ಮಾಣಕ್ಕೆ ಕನ್ನಡದ ಕೈಗಳು ಮುಂದಾಗಬೇಕಿದೆ.

ಸುತ್ತಲು ಕವಿಯುವ ಕತ್ತಲೆಯೊಳಗೆ ಪ್ರೀತಿಯ ಹಣತೆಯ ಹಚ್ಚೋಣ...

ಸಂದರ್ಶನ: ಪ.ಬ.ಜ್ಞಾನೇಂದ್ರ ಕುಮಾರ್, ಭಾನುಮತಿ ಚಿತ್ರಗಳು: ಶರಣ್ ಶಹಾಪುರಎದೆತುಂಬಿ ಹಾಡುವ ಕವಿ ಡಾ.ಜಿ.ಎಸ್. ಶಿವರುದ್ರಪ್ಪನವರು ಗೋವಿಂದ ಪೈ, ಕುವೆಂಪು ಅವರ ನಂತರ ಅರ್ಹವಾಗಿ ರಾಷ್ಟ್ರಕವಿಯಾದವರು. ಅವರ ಕಾವ್ಯದ ಮೂಲ ಗುಣ ಪ್ರೀತಿ.ತಮ್ಮ ಕಾವ್ಯದಂತೆಯೇ ಬದುಕುತ್ತಿರುವ ಜಿಎಸ್‌ಎಸ್ ನವೋದಯ-ನವ್ಯ ಕಾಲಘಟ್ಟದಲ್ಲಿ ತೆರೆದುಕೊಂಡ ದೈತ್ಯ ಪ್ರತಿಭೆ. ಬರೆದಿದ್ದಷ್ಟೆ ಅಲ್ಲದೆ, ಸಾಹಿತ್ಯದ ಅಭಿರುಚಿಯುಳ್ಳವರನ್ನು ಗುರುತಿಸಿ, ಸಹೃದಯ ಮನಸ್ಸಿನಿಂದ ಹರಸಿ ಬರವಣಿಗೆಗೆ ತೊಡಗಿಸಿದವರು; ತನ್ಮೂಲಕ ಸಮಕಾಲೀನ ಸಾಹಿತ್ಯ ಸಂದರ್ಭವನ್ನು ರೂಪಿಸಿದವರು. ಜಿಎಸ್‌ಎಸ್ ಕನ್ನಡಿಗರ ಹೆಮ್ಮೆ. ಹಾಗಾಗಿಯೇ ಅವರಿಗೆ ಎಲ್ಲರ ಒಲುಮೆ. ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರು ‘ನಲ್ನುಡಿಯ ಈ ತಿಂಗಳ ಮಾತುಕತೆಯ ಅತಿಥಿ.
ಅವರು ಪ್ರೀತಿಯಿಂದ ನೀಡಿದ ಈ ಸಂದರ್ಶನಕ್ಕೆ ನಾವು ಧನ್ಯರು. -ಸಂ

ನಲ್ನುಡಿ: ಕನ್ನಡ ಸಾಹಿತ್ಯದ ಇವತ್ತಿನ ಸ್ಥಿತಿಗತಿ ಏನು? ವಿಶೇಷವಾಗಿ ಕನ್ನಡ ಕಾವ್ಯ ಪರಂಪರೆಯ ಬೆಳವಣಿಗೆ ಕುರಿತಂತೆ ನಿಮ್ಮ ಅಭಿಪ್ರಾಯ?
ಜಿ.ಎಸ್.ಎಸ್: ನಾನು ಕನ್ನಡ ಸಾಹಿತ್ಯವನ್ನು ಪ್ರವೇಶಿಸಿದ್ದೆ ನವೋದಯದ ಉತ್ಕರ್ಷ ಕಾಲದಲ್ಲಿ. ಅನಂತರ ಬಂದ ಪ್ರಗತಿಶೀಲ, ನವ್ಯ, ದಲಿತ-ಬಂಡಾಯ ಚಳವಳಿಗಳ ಕಾಲದಲ್ಲೂ ಅವುಗಳಿಗೆ ನನ್ನನ್ನು ಒಪ್ಪಿಸಿಕೊಳ್ಳದೆ, ಅವುಗಳಿಂದ ನನ್ನ ಸೃಜನಶೀಲತೆಗೆ ಅಗತ್ಯವಾದ ಮೌಲಿಕಾಂಶಗಳನ್ನು ಸ್ವೀಕರಿಸುತ್ತ ಬೆಳೆದವನು ನಾನು. ಈ ಎಲ್ಲ ಚಳವಳಿಗಳನ್ನೂ ಹಾದು, ಈಗ ಯಾವ ಚಳವಳಿಗಳೂ ಇಲ್ಲದ, ಆದರೆ ಬಹಳಷ್ಟು ಹೊಸ ಬರಹಗಾರರು ಹಿಂದಿಗಿಂತ ವಿಭಿನ್ನವೂ ವಿಶಿಷ್ಟವೂ ಆಗಿ ಬರೆಯುತ್ತ ಕನ್ನಡ ಪರಂಪರೆಯ ಚಲನಶೀಲತೆಯನ್ನು ಮುಂದುವರಿಸುತ್ತ ಹೊಸತನ್ನು ಹುಡುಕುತ್ತಿರುವ ಕಾಲದ ನಡುವೆ ನಿಂತ ನನಗೆ ಕನ್ನಡ ಸಾಹಿತ್ಯದ ಪರಿಸ್ಥಿತಿಯ ಬಗ್ಗೆ ನಿರಾಸೆ ಪಡುವ ಕಾರಣವಿಲ್ಲ ಎಂದೇ ತೋರುತ್ತದೆ.

ನಲ್ನುಡಿ: ಬದಲಾದ ಕಾಲಘಟ್ಟದಲ್ಲಿ ಹೊಸ ಬರಹಗಾರರ ಎದುರಿಗಿರುವ
ಸವಾಲುಗಳೇನು? ಬೇರೆ ಬೇರೆ ಕ್ಷೇತ್ರಗಳ ಪ್ರತಿಭೆಗಳು ಇವತ್ತು ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿವೆ. ಇವರ ಮೇಲಿನ ಜವಾಬ್ದಾರಿಗಳೇನು?

ಜಿ.ಎಸ್.ಎಸ್: ಹಿಂದಿನ ಸಾಹಿತ್ಯ ಚಳವಳಿಗಳ ಕಾಲದಲ್ಲಿದ್ದಂತೆ, ಇಂದು ಸಾಹಿತ್ಯದ ದಿಕ್ಕನ್ನೇ ಬದಲಾಯಿಸುವಂಥ ಮಹತ್ ಪ್ರತಿಭೆಗಳಿಲ್ಲವೆಂಬುದು ನಿಜವಾದರೂ, ಈವರೆಗಿನ ಚಳವಳಿ ಸಂದರ್ಭದಲ್ಲಿ ಬರೆಯುತ್ತಿದ್ದ ಕೆಲವು ಮುಖ್ಯ ಲೇಖಕರ ಜೊತೆಗೆ, ಬದುಕಿನ ವಿವಿಧ ಸ್ತರಗಳಿಂದ ಬಂದ ಹೊಸಬರೂ ಕೂಡಿಕೊಂಡು ಈ ಹೊತ್ತಿನ ಸಾಹಿತ್ಯ ನಿರ್ಮಿತಿಗೆ ತೊಡಗಿದ್ದಾರೆ. ನವೋದಯ, ಪ್ರಗತಿಶೀಲ ಕಾಲಗಳಲ್ಲಿ ಶಿಷ್ಟ ವರ್ಗದ ಬರಹಗಾರರೆ ಮಿಗಿಲಾಗಿದ್ದಾರೆ ಎಂಬಂತೆ ತೋರಿದರೂ, ದಲಿತ-ಬಂಡಾಯ ಚಳವಳಿಯ ಕಾಲಕ್ಕೆ ಅಪರಿಚಿತವಾದ ಅನುಭವ ಪ್ರಪಂಚಗಳನ್ನು ತೆರೆದ ಸಮಾಜದ ಕೆಳ ಸ್ತರದ ಅನೇಕ ಬರಹಗಾರರು ಬಂದರೆಂಬುದು ವಾಸ್ತವದ ಸಂಗತಿಯಾಗಿದೆ. ಈ ಹಿನ್ನೆಲೆಯಿಂದ ನೋಡಿದರೆ ಈ ಹೊತ್ತಿನ ಬಹುತೇಕ ಬರಹಗಾರರು ಪತ್ರಿಕಾ ಪ್ರಪಂಚದಿಂದ ಮತ್ತು ವಿಜ್ಞಾನ ಕ್ಷೇತ್ರಗಳಿಂದ ಬಂದವರಾಗಿದ್ದಾರೆ. ಅದರಲ್ಲೂ ಅರ್ಧದಷ್ಟು ಬರಹಗಾರರು ವಿದೇಶಗಳಲ್ಲಿರುವ ಇಲ್ಲವೆ ಭಾರತದಲ್ಲಿರುವ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ದುಡಿಯುವವರಾಗಿದ್ದಾರೆ. ಇವರಿಂದ ಕನ್ನಡಕ್ಕೆ ಹೊಸ ಸಂವೇದನೆಗಳು ಲಭ್ಯವಾಗಬಹುದೆಂಬುದು ನಿಜವಾದರೂ, ಸಾಹಿತ್ಯವು ತನ್ನ ನಿಜವಾದ ಗುಣಗಳನ್ನು ಕಳೆದುಕೊಂಡು ಸರಕು ಸಂಸ್ಕೃತಿಯ ಒಂದು ಭಾಗವಾಗುವ ಅಪಾಯವಿದೆ. ಹಾಗಾಗದಂತೆ ಈ ಬರಹಗಾರರು ಎಚ್ಚರವಹಿಸುವರೆಂದು ಆಶಿಸೋಣ. ಈ ನಡುವೆ ಗ್ರಾಮೀಣ ನೆಲೆಗಳಿಂದ ಬಂದ ಕೆಲವು ಲೇಖಕರು ತಮ್ಮ ಅನುಭವಗಳನ್ನು ತಮ್ಮ ಪ್ರಾದೇಶಿಕತೆಯಲ್ಲಿ ಕಟ್ಟಿಕೊಡುವ ಕ್ರಮವು ಅನನ್ಯವಾಗಿದೆ. ಸಾಹಿತ್ಯ ವಿಮರ್ಶೆ ಮತ್ತು ವೈಚಾರಿಕ ಬರೆಹಗಳು ಪ್ರಕಟಿಸುತ್ತಿರುವ ಸಾಂಸ್ಕೃತಿಕ ಆಯಾಮಗಳು ಬೆರಗುಗೊಳಿಸುವಂತಿವೆ.

ನಲ್ನುಡಿ: ನೀವು ಗದ್ಯ ಬರವಣಿಗೆಯಲ್ಲೂ ಎತ್ತರಕ್ಕೆ ನಿಂತವರಾದರೂ ಕಾವ್ಯ ನಿಮ್ಮ ಪ್ರಧಾನ, ಆಸಕ್ತಿಯ ಕ್ಷೇತ್ರ. ಇವತ್ತು ಬರೆಯುತ್ತಿರುವ ಕವಿಗಳಿಗೆ ನೀವು ಹೇಳುವ ಮಾತುಗಳೇನು?
ಜಿ.ಎಸ್.ಎಸ್: ಹೊಸ ತಲೆಮಾರಿನ ಲೇಖಕರು ಸಾಹಿತ್ಯದ ಹಲವು ಪ್ರಕಾರಗಳಲ್ಲಿ ತೊಡಗಿಕೊಂಡಿದ್ದರೂ ಹೆಚ್ಚಿನವರು ಕಾವ್ಯ ನಿರ್ಮಿತಿಯನ್ನು ಇಷ್ಟಪಡುತ್ತಾರೆ. ಹೀಗಾಗಿ ಇಂದಿಗೂ ಕಾವ್ಯ ತನ್ನ ಆಕರ್ಷಣೆಯನ್ನು ಕಳೆದುಕೊಂಡಿಲ್ಲ. ಆದರೆ ಬಹುತೇಕ ರಚನೆಗಳು ಕಾವ್ಯವಾಗದೆ ಕೇವಲ ಪದ್ಯವಾಗುವುದರಲ್ಲಿ ಪರ್ಯವಸಾನವಾಗುತ್ತವೆ. ಕವಿತೆಯ ಬಂಧದ ವಿಚಾರದಲ್ಲಿ ತೋರುವ ನಿರ್ಲಕ್ಷ್ಯ ಮತ್ತು ಕಾವ್ಯ ಪರಂಪರೆಯ ಬಗ್ಗೆ ಅವಜ್ಞೆ ಈ ಹೊತ್ತಿನ ಬಹುತೇಕ ಕವಿಗಳ ಮನೋಧರ್ಮವಾಗಿದೆ.
ಸಾಹಿತ್ಯದ ವಾತಾವರಣವೇನೋ ಚೇತೋಹಾರಿಯಾಗಿದೆ. ಪುಸ್ತಕ ಸಂಸ್ಕೃತಿಯ ಚಟುವಟಿಕೆಗಳು ಅತ್ಯಂತ ಉತ್ಸಾಹದಿಂದ ನಡೆದಿದೆ. ಕನ್ನಡದಲ್ಲಿ ವರ್ಷವೊಂದಕ್ಕೆ ಸುಮಾರು ಮೂರು ಸಾವಿರ ಪುಸ್ತಕಗಳು ಪ್ರಕಟವಾಗುತ್ತವೆ ಎಂದು ಹೇಳಲಾಗಿದೆ. ಪುಸ್ತಕೋತ್ಸವ, ಪುಸ್ತಕ ಬಿಡುಗಡೆಯ ಕಾರ್ಯಕ್ರಮಗಳು ಪ್ರಕಾಶಕ ಮತ್ತು ಮುದ್ರಕರಿಗೆ ಪ್ರಶಸ್ತಿ ಪ್ರದಾನ-ಇವು ಪುಸ್ತಕ ಪ್ರೀತಿಯ ದ್ಯೋತಕಗಳಾಗಿವೆ.
ಸ್ವಾತಂತ್ರ್ಯಪೂರ್ವದಲ್ಲಿ ಇದ್ದಂತಹ ಮಾರ್ಗದರ್ಶಕರು, ದೊಡ್ಡ-ದೊಡ್ಡ ಗುರಿಗಳು ಇಂದಿನ ಯುವಕರ ಮುಂದಿಲ್ಲ. ನಮಗೆಲ್ಲ ಕುವೆಂಪು, ತಿ.ನಂ.ಶ್ರೀಕಂಠಯ್ಯ ಅವರಂತಹ ಸ್ಕಾಲರ್‌ಗಳು ಗುರುಗಳಾಗಿರುತ್ತಿದ್ದರು. ಈಗ ಅಂಥ ಮಾರ್ಗದರ್ಶಕರ ಸಂಖ್ಯೆ ವಿರಳ.

ನಲ್ನುಡಿ: ಬೆಂಗಳೂರು ವಿಶ್ವವಿದ್ಯಾಲಯ ‘ಜ್ಞಾನಭಾರತಿಯನ್ನು ಅದರಲ್ಲೂ ವಿಶೇಷವಾಗಿ ಕನ್ನಡ ವಿಭಾಗವನ್ನು ಕಟ್ಟಿ ಬೆಳೆಸಿದವರು ನೀವು. ಅದನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸುವ ಕನಸು ಕಟ್ಟಿದವರು ನೀವು. ಅವತ್ತಿನ ನೆನಪುಗಳನ್ನು ಹೇಳುತ್ತೀರಾ? ಈಗಿನ ‘ಜ್ಞಾನಭಾರತಿಗೆ ಮಂಕು ಕವಿದಂತೆ ಅನಿಸುತ್ತಿದೆ. ಬೆಂಗಳೂರು ವಿಶ್ವವಿದ್ಯಾಲಯವನ್ನು ಶ್ರೇಷ್ಠ ದರ್ಜೆಗೆ ಏರಿಸುವುದಕ್ಕೆ ಇರುವ ದಾರಿಗಳೇನು?
ಜಿ.ಎಸ್.ಎಸ್: ನಾನು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಬಂದದ್ದು ೧೯೬೬ರಲ್ಲಿ. ಅನಂತರ ೧೯೭೦ರಿಂದ ೧೯೮೬ರವರೆಗೆ ನಿರಂತರವಾಗಿ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕನಾಗಿ ಸೇವೆ ಸಲ್ಲಿಸಿದೆ. ಆಗ ಮುಂಚೂಣಿಯಲ್ಲಿದ್ದ ವಿಶ್ವವಿದ್ಯಾಲಯಗಳೆಂದರೆ, ಮೈಸೂರು ವಿಶ್ವವಿದ್ಯಾಲಯ ಮತ್ತು ‘ಕರ್ನಾಟಕ ವಿಶ್ವವಿದ್ಯಾಲಯ, ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ ಮುಖ್ಯವಾಗಿ ಪ್ರಾಚೀನ ಸಾಹಿತ್ಯ ಸಂಪಾದನೆ ಜಾನಪದ ಹಾಗೂ ವಿಶ್ವಕೋಶಗಳ ಪ್ರಕಟಣೆಗಳನ್ನು ಕೈಗೆತ್ತಿಕೊಂಡರೆ, ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠವು ಸಮಗ್ರ ವಚನ ವಾಙ್ಮಯದ ಸಂಪಾದನೆ ಪ್ರಕಟಣೆಗಳನ್ನು ಕೈಗೆತ್ತಿಕೊಂಡಿತು. ಈ ಎರಡೂ ತುಂಬ ಮಹತ್ವದ ಕಾರ್ಯಗಳೇ. ಇದಕ್ಕೆ ಪೂರಕವಾಗಿ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರವನ್ನು ನಾನು ಸಾಹಿತ್ಯ ವಿಮರ್ಶೆಯ ಯೋಜನೆಗಳ ಕೇಂದ್ರವನ್ನಾಗಿ ಸಜ್ಜುಗೊಳಿಸಿದೆ. ಮೊದಲನೆಯದು ವರ್ಷಕ್ಕೆ ಒಂದರಂತೆ ಹದಿನಾರು ವರ್ಷಗಳ ಕಾಲ ಏರ್ಪಡಿಸಿದ ವಿಚಾರ ಸಂಕಿರಣಗಳು, ಈ ವಿಚಾರ ಸಂಕಿರಣಗಳ ವೇದಿಕೆಯ ಮೇಲೆ ಅಂದು ವಿವಿಧ ಸಾಹಿತ್ಯ ಚಳವಳಿಗೆ ಸೇರಿದ ಸಾಹಿತಿಗಳನ್ನು ಚರ್ಚೆಯ ಕಾರಣಗಳಿಂದ ಮುಖಾಮುಖಿಯನ್ನಾಗಿ ಮಾಡಿದ್ದು, ಈ ಸಂಕಿರಣಗಳ ವಿಶೇಷತೆಯಾಗಿದೆ. ವಿ.ಕೃ.ಗೋಕಾಕ್, ದ.ರಾ.ಬೇಂದ್ರೆ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಗೋಪಾಲಕೃಷ್ಣ ಅಡಿಗ, ಶಿವರಾಮ ಕಾರಂತ, ಕೀರ್ತಿನಾಥ ಕುರ್ತುಕೋಟಿ, ಜಿ.ಪಿ.ರಾಜರತ್ನಂ, ವಿ.ಸೀತಾರಾಮಯ್ಯ, ಯು.ಆರ್.ಅನಂತಮೂರ್ತಿ, ಡಿ.ಆರ್.ನಾಗರಾಜ, ಚದುರಂಗ, ನಿರಂಜನ, ಶ್ರೀರಂಗ, ಗಿರಡ್ಡಿ ಗೊವಿಂದರಾಜ, ಸುಜನಾ, ಡಾ.ಎಲ್.ಬಸವರಾಜ, ಬರಗೂರು ರಾಮಚಂದ್ರಪ್ಪ ಈ ಮೊದಲಾದ ಸಾಹಿತಿಗಳು ಈ ವಿಚಾರ ಸಂಕಿರಣಗಳಲ್ಲಿ ಪಾಲುಗೊಂಡರೆಂಬುದನ್ನು ನೆನೆದರೆ, ಅವುಗಳ ಮಹತ್ವವೇನೆಂಬುದು ವೇದ್ಯವಾಗುತ್ತದೆ. ಮುಖ್ಯವಾದ ಮಾತೆಂದರೆ ಭಿನ್ನವಿದ್ದೂ ಬರೆಯಬಹುದು ಎಂಬುದನ್ನು ದೃಢಪಡಿಸಿದ್ದು. ಈ ಸಂಕಿರಣಗಳ ಚರ್ಚೆಯ ವಿಷಯ ಪ್ರಾಚೀನ ಸಾಹಿತ್ಯದಿಂದ ಮೊದಲುಗೊಂಡು ಆಧುನಿಕ ಸಮಕಾಲೀನ ಸಾಹಿತ್ಯದವರೆಗೆ ವಿವಿಧ ವಿಷಯಗಳನ್ನು ಕುರಿತು. ವಿಶೇಷದ ಸಂಗತಿಯೆಂದರೆ, ಇವು ಬರೀ, ಚರ್ಚೆಗಳಾಗಿ ಪರ್ಯವಸಾನವಾಗಿಲ್ಲ. ಪ್ರತಿಯೊಂದು ದಾಖಲಾಗಿ ಮುದ್ರಿತವಾಗಿವೆ.
ಮತ್ತೆ ಮೂರು ಯೋಜನೆಗಳ ಬಗ್ಗೆ ನಾನು ಹೇಳಬೇಕು. ಒಂದು ಸಾಮಾನ್ಯನಿಗೆ ಸಾಹಿತ್ಯ ಚರಿತ್ರೆಯ ಹತ್ತು ಸಂಪುಟಗಳು, ಎರಡು ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆಯ ಆರು ಬೃಹತ್ ಸಂಪುಟಗಳು, ಮೂರು, ಆಯಾ ವರ್ಷ ಕನ್ನಡದಲ್ಲಿ ಪ್ರಕಟವಾದ ಪುಸ್ತಕಗಳ ದಾಖಲಾತಿ ಮತ್ತು ವಿಮರ್ಶೆಯನ್ನೊಳಗೊಂಡ ಸಾಹಿತ್ಯ ವಾರ್ಷಿಕ ಎಂಬ ಹೆಸರಿನ ಹದಿನಾಲ್ಕು ಸಂಪುಟಗಳು, ಇವುಗಳಲ್ಲಿ ಸಾಹಿತ್ಯವಾರ್ಷಿಕ ಕನ್ನಡ ಅಧ್ಯಯನ ಕೇಂದ್ರದ ಅಧ್ಯಾಪಕರೆಲ್ಲರ ಸಹಕಾರದ ಸಂಕೇತವಾಗಿದೆ.
ಈ ಎಲ್ಲ ಯೋಜನೆಗಳ ಕಾರಣದಿಂದ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರಕ್ಕೆ ತುಂಬ ಒಳ್ಳೆಯ ಹೆಸರು ಬಂದಿತು. ಉದ್ದಕ್ಕೂ ಪ್ರೋತ್ಸಾಹಿಸಿದ ಮಾನ್ಯಕುಲಪತಿಗಳ ಮತ್ತು ಪ್ರೀತಿಯಿಂದ ಸಹಕರಿಸಿದ ಸಹೋದ್ಯೋಗಿಗಳ ನಿರಂತರ ಬೆಂಬಲದಿಂದ ನಾನು ಒಂದಷ್ಟು ಒಳ್ಳೆಯ ಕೆಲಸ ಮಾಡಲು ಸಾಧ್ಯವಾಯಿತು. ಈ ಯೋಜನೆಗಳನ್ನು ಅನಂತರ ಬಂದವರು ಯಾಕೆ ಮುಂದುವರಿಸಲು ಸಾಧ್ಯವಾಗಲಿಲ್ಲ ಎಂಬ ಪ್ರಶ್ನೆಗೆ ನನ್ನಲ್ಲಿ ಉತ್ತರವಿಲ್ಲ.

ನಲ್ನುಡಿ: ‘ರಾಷ್ಟ್ರಕವಿ ಎನ್ನುವುದು ಕೇವಲ ಪ್ರಶಸ್ತಿಯಲ್ಲ, ಬಿರುದಲ್ಲ. ಇಡೀ ನಾಡು ಹೆಮ್ಮೆಪಡುವ ಸಾಂಸ್ಕೃತಿಕ ದಿಗ್ಗಜರಿಗೆ ಹೃದಯತುಂಬಿ ನೀಡುವ ಅತ್ಯುನ್ನತ ಗೌರವ. ರಾಷ್ಟ್ರಕವಿಯಾಗಿ ಘೋಷಣೆಯಾದಾಗ ತಮಗೆ ಅನ್ನಿಸಿದ್ದೇನು?
ಜಿ.ಎಸ್.ಎಸ್: ರಾಷ್ಟ್ರಕವಿ ಪ್ರಶಸ್ತಿಯನ್ನು ಕರ್ನಾಟಕ ಸರ್ಕಾರವು ನಾಲ್ಕು ವರ್ಷಗಳ ಹಿಂದೆ ನನಗೆ ಪ್ರದಾನ ಮಾಡಿದಾಗ ನನಗೆ ಸಹಜವಾಗಿಯೇ ಸಂತೋಷವಾಯಿತು. ಹಾಗೆ ನೋಡಿದರೆ ಪ್ರಶಸ್ತಿಗಳು ನನಗೆ ಹೊಸತೇನಲ್ಲ. ಶ್ರೇಷ್ಠ ಸಂಶೋಧಕರಾದ ಮಂಜೇಶ್ವರ ಗೋವಿಂದ ಪೈ ಅವರಿಗೆ ಮೊದಲು ಸಂದ, ಅನಂತರ ನನ್ನ ಪ್ರಿಯ ಗುರುವೂ, ಮಹತ್ವದ ಕವಿಯೂ ಆದ ಕುವೆಂಪು ಅವರಿಗೆ ಅನಂತರ ಸಂದ, ಆ ಕಾರಣಗಳಿಂದ ಮಹತ್ವದ್ದೆನಿಸುವ ರಾಷ್ಟ್ರಕವಿ ಪ್ರಶಸ್ತಿ ನನಗೂ ಬಂತೆಂಬುದು ನನಗೆ ಸಂತೋಷವನ್ನು ತಂದಿದೆ.
ಸುಮಾರು ಆರು ದಶಕಗಳ ಕಾಲ ನಾನು ಒಬ್ಬ ಕವಿಯಾಗಿ ಹಾಗೂ ವಿಮರ್ಶಕನಾಗಿ ಅಲ್ಪ-ಸ್ವಲ್ಪ ಕೆಲಸ ಮಾಡಿದ್ದೇನೆ. ಕನ್ನಡ ಜನ ತುಂಬ ಪ್ರೀತಿಯಿಂದ ನನ್ನನ್ನು ಒಪ್ಪಿಕೊಂಡಿದ್ದಾರೆ. ಒಂದು ರೀತಿಯಲ್ಲಿ ನಾನು ನನ್ನ ಸಮಾಜಕ್ಕೆ ಕೊಟ್ಟಿದ್ದಕ್ಕಿಂತ ಅದರಿಂದ ಪಡೆದದ್ದೇ ಹೆಚ್ಚೇನೋ.
ಸುತ್ತಲೂ ಕವಿಯುವ ಕತ್ತಲೆಯೊಳಗೆ ಪ್ರೀತಿಯ ಹಣತೆಯ ಹಚ್ಚೋಣ-ಎನ್ನುವುದೇ ನನ್ನ ಸಾಹಿತ್ಯದ ಉದ್ದೇಶ. ಮನುಷ್ಯರ ನಡುವಣ ಅಡ್ಡಗೋಡೆಗಳನ್ನು ಕೆಡವುತ್ತ, ಹೃದಯ ಹೃದಯಗಳ ನಡುವೆ ಪ್ರೀತಿಯ ಸೇತುವೆ ಕಟ್ಟುತ್ತ, ಮಾನವೀಯ ಬಾಂಧವ್ಯಗಳನ್ನು ವಿಸ್ತರಿಸುವುದು ಹೇಗೆ ಎನ್ನುವುದು ನನ್ನ ಸಾಹಿತ್ಯಕ್ಕೆ ಇರುವ ಸಾಮಾಜಿಕ ಜವಾಬ್ದಾರಿಯ ಲಕ್ಷಣವಾಗಿದೆ.

ನಲ್ನುಡಿ: ಇವತ್ತಿನ ಜಾಗತೀಕರಣದ ಕುರಿತು ಹೇಳಿ. ಇಂಗ್ಲಿಷ್ ನಮ್ಮನ್ನು ಆವರಿಸಿಕೊಳ್ಳುತ್ತಿದೆ. ಶಿಕ್ಷಣದ ಮೂಲೋದ್ದೇಶವೇ ಮರೆಯಾಗುತ್ತಿದೆ. ಯಾವುದು ನಿಜವಾದ ಶಿಕ್ಷಣ?
ಜಿ.ಎಸ್.ಎಸ್: ಜಾಗತೀಕರಣ ಏಕಮುಖಿ ಸಂಸ್ಕೃತಿಯನ್ನು ಹೇರುತ್ತಿದ್ದು, ನವವಸಾಹತುಶಾಹಿ ಪ್ರವೃತ್ತಿಯಿಂದಾಗಿ ದೇಶೀಯವಾದ ಕಲೆ-ಸಂಸ್ಕೃತಿ ಇತ್ಯಾದಿಗಳಿಗೆ ಮಾರಕ ಆಗ್ತಾ ಇದೆ.
ಒಂದು ಬಗೆಯಲ್ಲಿ ಅಮೆರಿಕೀಕರಣಕ್ಕೆ ಒಳಪಡಿಸ್ತಾ ಇದೆ. ಮಾಹಿತಿ ತಂತ್ರಜ್ಞಾನದ ಸಂದರ್ಭದಲ್ಲಿ ಇಂಗ್ಲಿಷ್ ಭಾಷೆಯನ್ನು ಮತ್ತೆ ಎಲ್ಲರೂ ಕಲಿಯುವಂತಹ ಒಂದು ಒತ್ತಡವನ್ನು ಅದು ನಿರ್ಮಾಣ ಮಾಡುತ್ತಿದೆ.
ನಿಜವಾದ ಶಿಕ್ಷಣ ಎಂದರೆ ಮಾಹಿತಿ-ತಂತ್ರಜ್ಞಾನ ಶಿಕ್ಷಣವಷ್ಟೇ ಅನ್ನುವಂತಹ ಭ್ರಮೆಯನ್ನು ಹುಟ್ಟುಹಾಕಿ ಇಂಗ್ಲಿಷ್ ಭಾಷೆಯನ್ನು ಕಲಿಯುವ ಒತ್ತಡ ನಿರ್ಮಾಣ ಮಾಡಿದೆ. ಅಲ್ಲದೆ, ಹಳ್ಳಿ-ಹಳ್ಳಿಗಳಲ್ಲಿ ಇಂಗ್ಲೀಷ್ ಮಾಧ್ಯಮದ ಬೇಡಿಕೆ ವ್ಯಾಪಕವಾಗತೊಡಗಿದ್ದು, ಇಂಗ್ಲಿಷ್ ಕಲಿಯದಿದ್ದರೆ ಉದ್ಯೋಗದ ಅವಕಾಶಗಳಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣ ಮಾಡಿರುವ ಕಾರಣದಿಂದಾಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳು ಕನ್ನಡ ಮಾಧ್ಯಮ ಶಾಲೆಗಳಿಗೆ ಸಮಾನಾಂತರವಾಗಿ ಬೆಳೆಯುತ್ತಿವೆ.
ಈ ಹೊತ್ತಿನ ನಮ್ಮ ಶಿಕ್ಷಣವು ಈ ದಿನದ ತರುಣರಲ್ಲಿ; ನಿಜವಾದ ವೈಜ್ಞಾನಿಕ ಮನೋಧರ್ಮವನ್ನಾಗಲೀ ಪರಂಪರೆಯ ಪ್ರಜ್ಞೆಯನ್ನಾಗಲೀ, ಮೌಲ್ಯ ನಿಷ್ಠೆಯನ್ನಾಗಲೀ ಪ್ರಚೋದಿಸುವಷ್ಟು ನವೀಕರಣಗೊಂಡಿಲ್ಲ. ಶಿಕ್ಷಣ ಕ್ರಮದಲ್ಲಿ ತಾರತಮ್ಯಗಳನ್ನು ಹುಟ್ಟಿಹಾಕುವ ಮತ್ತು ಶಿಕ್ಷಣವನ್ನು ವ್ಯಾಪಾರೀಕರಣಗೊಳಿಸುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿರುವುದು ನಿಜಕ್ಕೂ ವಿಷಾದಕರ.
ಲೋಹಿಯಾ ಪ್ರಕಾರ ಅಸಮಾನತೆಯನ್ನು ನಿರಂತರವಾಗಿ ನೆಲೆಗೊಳಿಸುವ ಸಾಧನ ಎಂದರೆ, ಇಂಗ್ಲಿಷ್ ಶಿಕ್ಷಣ, ಜಾತಿಪದ್ಧತಿ ಮತ್ತು ಆಸ್ತಿವ್ಯವಸ್ಥೆ.

ನಲ್ನುಡಿ: ಕನ್ನಡ ಬದುಕಿನ ಭಾಷೆಯಾಗುತ್ತಿಲ್ಲ, ಇಂಗ್ಲಿಷ್ ಸರ್ವವ್ಯಾಪಿಯಾಗಿ ಬೆಳೆಯುತ್ತಿದೆ. ಕನ್ನಡ ಸಂಸ್ಕೃತಿಗೆ
ಇದರಿಂದ ಬಹುದೊಡ್ಡ ಪೆಟ್ಟು. ಈ ಸಂದರ್ಭದಲ್ಲಿ ರಾಷ್ಟ್ರಕವಿಯಾಗಿ, ಕನ್ನಡವನ್ನು ಅನ್ನದ ಭಾಷೆಯನ್ನಾಗಿ ಬೆಳೆಸುವ ಕುರಿತು ನೀವು ನೀಡುವ ಸಲಹೆಗಳೇನು?

ಜಿ.ಎಸ್.ಎಸ್: ಕನ್ನಡ ಕಲಿಕೆಯಿಂದ ಏನೂ ಪ್ರಯೋಜನವಿಲ್ಲ ಎಂಬ ಭಾವನೆಯನ್ನು ಸಮಾಜದಲ್ಲಿ/ಸಾರ್ವಜನಿಕವಾಗಿ ಪ್ರಚಲಿತಗೊಳಿಸುವ ಪ್ರವೃತ್ತಿ ನಿಜಕ್ಕೂ ಅತ್ಯಂತ ಅಪಾಯಕಾರಿಯಾದದ್ದು. ಕನ್ನಡದ ಬಗ್ಗೆ ಕೀಳರಿಮೆಯನ್ನು ಹುಟ್ಟಿಸುವ ಇಂಗ್ಲಿಷ್ ಬಗ್ಗೆ ಎಚ್ಚರಿಕೆ ವಹಿಸಬೇಕು.
ಆಳುವ ಸರ್ಕಾರಗಳು ಸಾಧ್ಯವಾದಷ್ಟು ಪ್ರಮಾಣದಲ್ಲಿ ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ತೆರೆಯಲು ಅವಕಾಶ ನೀಡಬಾರದು. ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದವರಿಗೆ ಉದ್ಯೋಗ ನೀಡುವ ಸಂದರ್ಭಗಳಲ್ಲಿ ವಿಶಿಷ್ಠ ಆದ್ಯತೆ ನೀಡುವಂತಾಗಬೇಕಿದೆ. (ಈ ಪೈಕಿ ಕೆಲವುಗಳನ್ನು ಸರ್ಕಾರ ಅನುಸರಿಸುತ್ತಿದೆ)
ಉನ್ನತ ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಪಡೆಯುವಲ್ಲಿ ಕನ್ನಡಿಗರ ಪ್ರವೇಶ ಹೆಚ್ಚಾಗಬೇಕಿದೆ. ಸಮಾನ ಸೌಲಭ್ಯವುಳ್ಳ ಮಾತೃಭಾಷಾ ಮಾಧ್ಯಮದ ಶಿಕ್ಷಣ ಸೌಲಭ್ಯವನ್ನು ಅಂದರೆ, ಏಕರೂಪದ ಮಾತೃಭಾಷಾ ಶಿಕ್ಷಣ ಸೌಲಭ್ಯ ಕಲ್ಪಿಸುವ ಕಡೆ ಹೆಚ್ಚಿನ ಗಮನ ಹರಿಸಬೇಕಾಗಿದೆ. ಕಳೆದ ಎರಡು ವರ್ಷಗಳ ಹಿಂದೆ ಸರ್ಕಾರ ೧ನೇ ತರಗತಿಯಿಂದ ೪ನೇ ತರಗತಿಯವರಗೆ ಇಂಗ್ಲಿಷ್ ಭಾಷಾ ಶಿಕ್ಷಣವನ್ನು ಕನ್ನಡದ ಜೊತೆಗೆ ಕಡ್ಡಾಯವಾಗಿ ಕಲಿಸುವ ಆದೇಶವನ್ನು ಹೊರಡಿಸಿದೆ. ಆದರೆ, ಈ ಶಿಕ್ಷಣ ಕ್ರಮದ ಪರಿಣಾಮಗಳೇನು ಎನ್ನುವುದರ ಬಗ್ಗೆ ಸರ್ಕಾರ ಪರಿಶೀಲಿಸಿರುವುದು ಕಂಡು ಬಂದಿಲ್ಲ.

ನಲ್ನುಡಿ: ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಸ್ಥಾನ ಪಡೆಯಬೇಕು ಎಂಬುದು ಕನ್ನಡಿಗರ ಆಸೆ. ಆದರೆ ಕನ್ನಡಿಗರ ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ. ಕನ್ನಡಿಗರು ಎದುರಿಸುತ್ತಿರುವ ಪ್ರಮುಖ ಸವಾಲುಗಳು ಯಾವುವು?
ಜಿ.ಎಸ್.ಎಸ್: ಕನ್ನಡದ ಅಭಿವೃದ್ಧಿಗಾಗಿ ಕರ್ನಾಟಕದಲ್ಲಿ ಇರುವಷ್ಟು ಸಂಸ್ಥೆಗಳು ಭಾರತದ ವಿವಿಧ ರಾಜ್ಯಗಳಲ್ಲಿ ಅಲ್ಲಲ್ಲಿನ ಭಾಷೆಯ ಅಭಿವೃದ್ಧಿಗಾಗಿ ಇರುವಂತೆ ತೋರುವುದಿಲ್ಲ. ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಈ ಕೆಲವನ್ನು ಹೆಸರಿಸಬಹುದು. ಇವುಗಳೂ ಮತ್ತು ವಿವಿಧ ಅಕಾಡೆಮಿಗಳೂ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವಾತಾವರಣವನ್ನು ಅತ್ಯಂತ ಕ್ರಿಯಾಶೀಲವನ್ನಾಗಿ ಉಳಿಸಿವೆ. ಆದರೂ ಕನ್ನಡವು ಕರ್ನಾಟಕದ ಸಮಗ್ರ ಬದುಕಿನಲ್ಲಿ ಪಡೆದುಕೊಳ್ಳಬೇಕಾದ ಸಾರ್ವಭೌಮ ಸ್ಥಾನವನ್ನು ಪಡೆದುಕೊಂಡಿದೆ ಎಂದು ಹೇಳಲು ಬರುವುದಿಲ್ಲ. ಆಡಳಿತದಲ್ಲಿ ಕನ್ನಡ ಮಾಧ್ಯಮವು ಬಹುಮಟ್ಟಿಗೆ ವಿವಿಧ ಹಂತಗಳಲ್ಲಿ ಜಾರಿಗೆ ಬಂದಿರುವುದು ನಿಜವಾದರೂ ಅದು ಇನ್ನೂ ಗಣಕೀಕೃತವಾಗಬೇಕಾಗಿದೆ. ಶಿಕ್ಷಣದಲ್ಲಿ ಕನ್ನಡ ಮಾಧ್ಯಮವನ್ನು ಜಾರಿಗೆ ತರಲು ಸಾಧ್ಯವಾಗದೆ ಇಂಗ್ಲಿಷ್ ಮಾಧ್ಯಮದ ಸ್ಪರ್ಧೆಯನ್ನು ಎದುರಿಸಬೇಕಾಗಿದೆ. ಸಾರ್ವಜನಿಕ ವ್ಯವಹಾರದ ಭಾಷೆಯಾಗಿ ಕೂಡ ಕನ್ನಡದ ಬಳಕೆ ಎಲ್ಲರಿಂದಲೂ ಅಂಗೀಕೃತವಾಗಿದೆ ಎಂದು ಹೇಳಲು ಬರುವಂತಿಲ್ಲ. ಕನ್ನಡವನ್ನು ಕಲಿಯದೆ ಕೂಡ ಅನ್ಯಭಾಷಿಕರು ಕರ್ನಾಟಕದಲ್ಲಿ ನಿರಾಂತಕವಾಗಿ ಬದುಕಬಹುದು. ಇದರ ಜತೆಗೆ ಜಲ ಸಮಸ್ಯೆ, ಗಡಿ ವಿವಾದ, ಕನ್ನಡಿಗರಿಗೆ ಕನ್ನಡ ನಾಡಿನಲ್ಲಿ ನ್ಯಾಯವಾಗಿ ದೊರಕಬೇಕಾದ ಉದ್ಯೋಗ ಸಮಸ್ಯೆ ಇತ್ಯಾದಿ ಸಮಸ್ಯೆಗಳೂ ಇವೆ.

ನಲ್ನುಡಿ: ಶಿಕ್ಷಣದ ಕನ್ನಡದ ಸ್ಥಿತಿಗತಿಯೇನು? ಇಂಗ್ಲಿಷ್ ಭಾಷಾ ಶಿಕ್ಷಣದ ಪರಿಣಾಮಗಳೇನು? ಪ್ರಾಥಮಿಕ ಶಾಲಾ ಶಿಕ್ಷಣದಲ್ಲಿ ಕನ್ನಡ ಭಾಷಾ ಮಾಧ್ಯಮ ಕಡ್ಡಾಯವಾಗುವ ಮೊದಲೇ ಒಂದನೆಯ ತರಗತಿಯಿಂದಲೇ ಇಂಗ್ಲಿಷ್ ಕಲಿಸುವ ಸರ್ಕಾರದ ನಿರ್ಧಾರದ ಕುರಿತು ತಮ್ಮ ಅಭಿಪ್ರಾಯ?
ಜಿ.ಎಸ್.ಎಸ್: ಇವುಗಳಲ್ಲಿ ಮುಖ್ಯವಾದದ್ದು ಪ್ರಾಥಮಿಕ ಶಾಲಾ ಶಿಕ್ಷಣದಲ್ಲಿ ಕನ್ನಡದ ಸ್ಥಾನವನ್ನು ಕುರಿತದ್ದು. ಪ್ರತಿಯೊಂದು ದೇಶದಲ್ಲಿಯೂ ಅಲ್ಲಲ್ಲಿನ ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆ, ಪ್ರಾಥಮಿಕ ಶಾಲಾ ಶಿಕ್ಷಣದ ಮಾಧ್ಯಮವಾಗಿರಬೇಕು-ಎಂದು ಜಗತ್ತಿನ ಶಿಕ್ಷಣ ತಜ್ಞರು ಅಭಿಪ್ರಾಯಪಡುತ್ತಾರೆ. ನಮ್ಮಲ್ಲಿ ವಸಾಹತುಶಾಹೀಕಾರಣದಿಂದ ಇಂಗ್ಲಿಷ್, ಆಳುವವರ ಭಾಷೆಯಾಗಿ ಈ ದೇಶದ ಬದುಕನ್ನು ನಿಯಂತ್ರಿಸಿದ ಕಾರಣದಿಂದ ಮೊದಲಿನಿಂದಲೂ ನಮ್ಮ ದೇಶದ ಶಿಕ್ಷಣ ಕ್ರಮದಲ್ಲಿ
ಒಂದು ಸ್ಥಾನವನ್ನು ಪಡೆದುಕೊಂಡಿತು. ಸ್ವಾತಂತ್ರ್ಯಪೂರ್ವದ ಕಾಲದಲ್ಲಿ ಇಂಗ್ಲೀಷ್ ನಮ್ಮ ಶಿಕ್ಷಣದಲ್ಲಿ ಪ್ರಥಮ ಭಾಷೆಯಾದದ್ದು ಹೀಗೆ. ಆದರೂ ಒಂದನೆ ತರಗತಿಯಿಂದ ಹತ್ತನೆ ತರಗತಿಯವರೆಗೂ ಕನ್ನಡ ಮಾಧ್ಯಮದಲ್ಲಿ ಶಿಕ್ಷಣವನ್ನು ಪಡೆದುಕೊಳ್ಳಲು ಯಾವ ಅಡ್ಡಿಯೂ ಇರಲಿಲ್ಲ.
ಈ ದೇಶಕ್ಕೆ ೧೯೪೭ರಲ್ಲಿ ಸ್ವಾತಂತ್ರ್ಯ ಬಂತು. ೧೯೫೬ರಲ್ಲಿ ಬ್ರಿಟಿಷರ ಆಡಳಿತ ಕಾಲದಲ್ಲಿ ಹರಿದು ಹಂಚಿ ಹೋಗಿದ್ದ ಕನ್ನಡ ನಾಡು ಏಕೀಕೃತವಾಯಿತು. ಹೀಗೆ ಏಕೀಕೃತವಾಗಿ ಅನಂತರ ಕರ್ನಾಟಕ ಎಂದು ಘೋಷಿತವಾದ ನಾಡಿನ ಶಿಕ್ಷಣ ಕ್ರಮದಲ್ಲಿ ಇನ್ನು ಮುಂದೆ ಇಂಗ್ಲಿಷಿನ ಸ್ಥಾನವಿರಬೇಕು ಎಂಬುದನ್ನು ಕುರಿತು ಚರ್ಚೆ ಪ್ರಾರಂಭವಾಯಿತು. ಕವಿ ಕುವೆಂಪು ಅವರು ನಮಗೆ ಬೇಕಾದ ಇಂಗ್ಲಿಷ್ ಎಂಬ ಲೇಖನದಲ್ಲಿ ಇನ್ನು ಮುಂದೆ ಇಂಗ್ಲಿಷ್ ಹಲವರು ಕಲಿಯುವ ಭಾಷೆ ಅಲ್ಲ; ಕೆಲವರು ಕಲಿಯಲೇ ಬೇಕಾದ ಭಾಷೆ ಎಂದು ಹೇಳುತ್ತಾರೆ. ಹಾಗೆಯೇ ದೇಶಭಾಷೆಗೆ ಪ್ರಥಮ ಸ್ಥಾನ ದೊರೆಯಬೇಕು ಮತ್ತು ಅದು ಶಿಕ್ಷಣ ಮಾಧ್ಯಮದ ಭಾಷೆಯಾಗಬೇಕು ಎನ್ನುವುದನ್ನು ಸೂಚಿಸಲು ಮರೆಯುವುದಿಲ್ಲ.
ದುರದೃಷ್ಟವಶಾತ್ ಒಂದು ಕಡೆ ಸರಳ ಸಾಧಾರಣದ ಕನ್ನಡ ಮಾಧ್ಯಮದ ಶಾಲೆಗಳು ಮತ್ತೊಂದು ಕಡೆ ಸಮಸ್ತ ಸೌಲಭ್ಯ ಮತ್ತು ಆಕರ್ಷಣೆಗಳಿಂದ ಕೂಡಿದ ಇಂಗ್ಲಿಷ್ ಮಾಧ್ಯಮ ಶಾಲೆಗಳು ತಲೆಯೆತ್ತಿ ಶಿಕ್ಷಣ ಕ್ಷೇತ್ರವು ಸಮಾಜದಲ್ಲಿ ತರತಮಗಳನ್ನು ಹುಟ್ಟು ಹಾಕಿದ್ದಲ್ಲದೆ ಇಂಗ್ಲಿಷ್ ಮಾಧ್ಯಮದ ಬಗ್ಗೆ ಸಾರ್ವಜನಿಕರಲ್ಲಿ ವಿಲಕ್ಷಣ ವ್ಯಾಮೋಹವನ್ನು ಉಂಟು ಮಾಡುವ ವಿದ್ಯಮಾನಗಳು ಸಂಭವಿಸಿದವು. ಇದಕ್ಕೆ ಪೂರಕವಾಗಿ ಜಾಗತೀಕರಣದ ಪರಿಣಾಮವಾಗಿ ಕನ್ನಡದ ನೆಲದ ಮೇಲೆ ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಬಹುರಾಷ್ಟ್ರೀಯ ಕಂಪನಿಗಳು ಸ್ಥಾಪಿತವಾಗಿ ಇಂಗ್ಲಿಷ್ ಬಲ್ಲ ಸಾವಿರಾರು ಉದ್ಯೋಗಾರ್ಥಿಗಳಿಗೆ ಕಾಮಧೇನುವಿನಂತೆ ವರ್ತಿಸಿದ್ದನ್ನು ಕಂಡಮೇಲೆ, ನಗರದವರೆನ್ನದೆ ಗ್ರಾಮೀಣ ಪರಿಸರದವರೆನ್ನದೆ ಎಲ್ಲರಲ್ಲೂ ಇಂಗ್ಲಿಷ್ ಕಲಿಕೆಯಿಂದ ಮಾತ್ರವೆ ನಮ್ಮ ಮುಕ್ತಿ ಎಂದು ಅನ್ನಿಸಿದ್ದರೆ ಆಶ್ಚರ್ಯವೇನಲ್ಲ. ಈ ಹೊಸ ಇಂಗ್ಲಿಷ್ ಗೀಳಿನಿಂದ ಪೀಡಿತವಾದ ಪರಿಸರವನ್ನು ಇಂಗ್ಲಿಷ್ ಮಾಧ್ಯಮದ ಶಾಲೆಗಳು ತಮ್ಮ ಪ್ರಯೋಜನಕ್ಕೆ ಚೆನ್ನಾಗಿಯೇ ಬಳಸಿಕೊಂಡವು. ತಮ್ಮ ಮಕ್ಕಳಿಗೆ ಇಂಗ್ಲಿಷನ್ನು ಒಂದನೆ ತರಗತಿಯಿಂದಲೆ ಕಲಿಸಬೇಕೆಂಬ ಚಿಂತನೆಯು ಮಕ್ಕಳ ಪೋಷಕರಲ್ಲಿ ಮೂಡಿದ್ದು ಬಹುಶಃ ಈ ಹಂತದಲ್ಲಿಯೇ ಎಂದು ತೋರುತ್ತದೆ. ಇಂಗ್ಲಿಷ್ ಈಗಾಗಲೇ ಸರ್ಕಾರದ ಒಪ್ಪಿತ ನೀತಿಯಂತೆ ಶಾಲಾ ಶಿಕ್ಷಣದಲ್ಲಿ ಐದನೇ ತರಗತಿಯಿಂದ ಜಾರಿಯಲ್ಲಿದೆ. ಈಗಾಗಲೇ ಪ್ರಸ್ತಾಪಿಸಿದಂತೆ, ಇಂಗ್ಲಿಷ್ ಕಲಿಕೆಯ ಬಗ್ಗೆ ಹೆಚ್ಚುತ್ತಿರುವ ಆಸಕ್ತಿ ಹಾಗೂ ಪರಿಸರದ ಒತ್ತಡಗಳನ್ನು ಗಮನಿಸಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು, ಈಗಾಗಲೆ ಐದನೆ ತರಗತಿಯಿಂದ ಇರುವ ಇಂಗ್ಲಿಷ್ ಭಾಷಾ ಕಲಿಕೆಯನ್ನು ಮೂರರಿಂದಲೇ ಒಂದು ಐಚ್ಛಿಕ ಭಾಷೆಯನ್ನಾಗಿ ಜಾರಿಗೊಳಿಸಬಹುದೆಂದೂ ಹಾಗೆಯೆ ಒಂದರಿಂದ ಏಳನೇ ತರಗತಿಯವರೆಗೆ ಮಾತೃಭಾಷಾ ಮಾಧ್ಯಮವಿರತಕ್ಕದ್ದೆಂದೂ ಅದಕ್ಕಾಗಿ ಈಗಾಗಲೇ ಸುಪ್ರೀಂ ಕೋರ್ಟ್ ಮಾತೃಭಾಷೆಯೆ ಪ್ರಾಥಮಿಕ ಶಾಲಾ ಶಿಕ್ಷಣದ ಭಾಷೆಯಾಗಿರಬೇಕೆಂದು ನೀಡಿದ ತೀರ್ಪಿನ ಮೇಲೆ ರಾಜ್ಯದ ಉಚ್ಛ ನ್ಯಾಯಾಲಯ ನೀಡಿರುವ ತಡೆಯಾಜ್ಞೆಯನ್ನು ತೆರವುಗೊಳಿಸಿ, ಸರ್ಕಾರಿ ಮತ್ತು ಸರ್ಕಾರೇತರ ಶಾಲೆಗಳಲ್ಲಿ ಕನ್ನಡ ಮಾಧ್ಯಮವನ್ನು ಜಾರಿಗೆ ತರುವುದರ ಮೂಲಕ ಶಿಕ್ಷಣದಲ್ಲಿ ಸಮಾನತೆಗಾಗಿ ಮಾತೃಭಾಷಾ ಮಾಧ್ಯಮ ಎಂಬ ನೀತಿಯನ್ನು ಸಮರ್ಥಿಸಬೇಕೆಂದು ಶಿಫಾರಸು ಮಾಡಿದರು.
ವಾಸ್ತವವಾಗಿ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಾದ್ದದ್ದು ಸುಪ್ರೀಂ ಕೋರ್ಟಿನ ತೀರ್ಪನ್ನು ಮತ್ತು ಅದರದೆ ಅಧಿಕೃತ ಅಂಗವಾದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಲಹೆ ಮತ್ತು ಶಿಫಾರಸ್ಸುಗಳನ್ನು ಆದರೆ ಸರ್ಕಾರವು ಅದನ್ನು ಬದಿಗೆ ತಳ್ಳಿ ಒಂದು ಬಗೆಯ ಕ್ಷಿಪ್ರಕಾರ್ಯಾಚರಣೆಯಂತೆ ತೋರುವ ರೀತಿಯಲ್ಲಿ ಪ್ರಾಥಮಿಕ ಒಂದನೆ ತರಗತಿಯಿಂದಲೆ ಇಂಗ್ಲಿಷನ್ನು ಕಡ್ಡಾಯವಾಗಿ ಕಲಿಸಬೇಕೆಂಬ ಆಜ್ಞೆಯನ್ನು ಹೊರಡಿಸಿತು.
ಇದುವರೆಗಿನ ಕನ್ನಡಪರ ಹೋರಾಟ ನಿರೀಕ್ಷಿಸಿದ್ದು ಪ್ರಾಥಮಿಕ ಶಾಲಾ ಶಿಕ್ಷಣದ ಹಂತದಲ್ಲಾದರೂ ಮಾತೃಭಾಷಾ ಶಿಕ್ಷಣವನ್ನು ಕಾರ್ಯಗತಗೊಳಿಸುವುದರ ಮೂಲಕ ಶಿಕ್ಷಣದಲ್ಲಿ
ಒಂದು ಸಮಾನತೆಯನ್ನು ತಂದು, ಕನ್ನಡಕ್ಕೆ ನ್ಯಾಯವಾದ ಸ್ಥಾನವನ್ನು ಕಲ್ಪಿಸಬಹುದು ಎಂದು. ಆದರೆ ಇದಾವುದನ್ನೂ ಗಣನೆಗೆ ತೆಗೆದುಕೊಳ್ಳದೆ ಕರ್ನಾಟಕ ಸರ್ಕಾರವು ದಿಢೀರನೆ ನಲವತ್ತೈದು ಸಾವಿರ ಕನ್ನಡ ಮಾಧ್ಯಮದ ಶಾಲೆಗಳಲ್ಲಿ ಒಂದನೆ ತರಗತಿಯಿಂದಲೆ ಇಂಗ್ಲಿಷನ್ನು ಕಡ್ಡಾಯವಾಗಿ ಕಲಿಯಬೇಕೆಂದು ಹೊರಡಿಸಿದ ಆಜ್ಞೆಯು ಅತ್ಯಂತ ಅವ್ಯವಹಾರಿಕವೂ ಅವೈಜ್ಞಾನಿಕವೂ ಆಗಿದೆ. ಈ ಭಾಷಾನೀತಿಯು ಭಾಷಾತಜ್ಞ, ಶಾಸ್ತ್ರಜ್ಞರ, ಮನೋವಿಜ್ಞಾನಿಗಳ ಮತ್ತು ಶಿಕ್ಷಣ ತಜ್ಞರ ಪರಿಣತ ಸಮಿತಿಯ ಪರಿಶೀಲನೆಗೆ ಈಗಲೂ ಒಳಪಡುವುದು ಅಗತ್ಯವಾಗಿದೆ.
ಆದರೆ ಸಮಾನತೆಗಾಗಿ ಏಕರೂಪದ ಶಿಕ್ಷಣದ ಮಾತೃಭಾಷಾ ಮಾಧ್ಯಮ-ಎಂಬುದು ಕನ್ನಡ ಮಾಧ್ಯಮದ ಪರವಾಗಿ ಹೋರಾಡುವುದರ ಮಂತ್ರವಾಗಿದೆ. ಹಾಗೆ ನೋಡಿದರೆ ಒಂದರಿಂದ ಹತ್ತನೆ ತರಗತಿಯವರೆಗಾದರೂ ಮಕ್ಕಳಿಗೆ ಅವರ ಮಾತೃಭಾಷೆಯಲ್ಲಿಯೇ ಶಿಕ್ಷಣ ದೊರೆಯುವಂತಾಗಬೇಕು. ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ಉದ್ಯೋಗಗಳಲ್ಲಿ ಆದ್ಯತೆಯನ್ನು ಕಲ್ಪಿಸುವಂತಾಗಬೇಕು.

ನಲ್ನುಡಿ: ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ದೊರೆತಿದೆ. ಇದು ಕನ್ನಡ ಭಾಷೆಯ ಬೆಳವಣಿಗೆಗೆ ಪೂರಕವಾಗುವ ಆಶಾವಾದವಿದೆಯೇ?
ಜಿ.ಎಸ್.ಎಸ್: ಎರಡು ವರ್ಷಗಳ ಹಿಂದೆ ಕೇಂದ್ರ ಸರ್ಕಾರವು ಕನ್ನಡವನ್ನು ಶಾಸ್ತ್ರೀಯ ಭಾಷೆಯನ್ನಾಗಿ ಘೋಷಿಸಿತು. ಖಂಡಿತವಾಗಿಯೂ ಕನ್ನಡಕ್ಕೆ ಇದು ಪ್ರತಿಷ್ಠೆಯ ವಿಷಯ. ಈ ಕಾರಣದಿಂದ ಬರುವ ಅನುದಾನದಿಂದ ಕನ್ನಡ ಅಧ್ಯಯನ ಮತ್ತು ಸಂಶೋಧನೆಗೆ ವಿಪುಲ ಅವಕಾಶಗಳು ದೊರೆಯುತ್ತವೆ. ವಿವಿಧ ಸಂಸ್ಥೆಗಳು ಶಾಸ್ತ್ರೀಯ ಭಾಷೆಯ ಕಾರಣದಿಂದ ಬರುವ ಅನುದಾನವನ್ನು ಬಳಸಿಕೊಳ್ಳಲು ಯೋಜನೆಗಳನ್ನು ರೂಪಿಸುತ್ತಿವೆ. ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನ-ಮಾನಗಳು ದೊರೆತ ಸಂಭ್ರಮದಲ್ಲಿ, ಕನ್ನಡದ ಮನಸ್ಸು, ಕನ್ನಡದ ಅದೆಷ್ಟೋ ಸಮಸ್ಯೆಗಳ ಬಗ್ಗೆ ಪ್ರತಿಕ್ರಿಯಿಸಲಾರದ ಒಂದು ಬಗೆಯ ಮಂಪರಿನಲ್ಲಿ ಮಲಗಿದೆಯೋ ಏನೋ!

ನಲ್ನುಡಿ: ನ್ಯಾಯಾಲಯವೊಂದರ ತೀರ್ಪನ್ನು ಇಡೀ ದೇಶವೇ ಆತಂಕದಿಂದ ಎದುರಿಸಬೇಕಾದ, ಪೊಲೀಸು, ಸೈನ್ಯ ಇತ್ಯಾದಿಗಳನ್ನು ನಿಯೋಜಿಸಿ ನಾಗರಿಕರನ್ನು ರಕ್ಷಿಸುವಂಥ ಸಂದರ್ಭ ಇದೀಗ ಸೃಷ್ಟಿಯಾಗಿದೆ. ಈ ಕುರಿತು ಏನನ್ನು ಹೇಳಬಯಸುತ್ತೀರಿ?
ಜಿ.ಎಸ್.ಎಸ್: ಧರ್ಮಶ್ರದ್ಧೆ ಎನ್ನುವುದು ಕರ್ನಾಟಕದಲ್ಲಿ ಉತ್ತಮಾಂಶಗಳ ಕೊಡು ಪಡೆಗಳ ಕ್ರಮವಾಗಿದೆಯೇ ಹೊರತು ವೈಯಕ್ತಿಕ ಸಂಬಂಧಗಳ ಅಡ್ಡಗೋಡೆಯಾಗಿಲ್ಲ. ದೇವರಾಗಲಿ, ಧರ್ಮವಾಗಲಿ, ದೇವಸ್ಥಾನವಾಗಲಿ ಇರುವುದು ಮನುಷ್ಯರಿಗಾಗಿ, ಮನುಷ್ಯರಿಂದ. ಯಾವುದೇ ಒಂದು ಧರ್ಮ ತನ್ನ ಸಮುದಾಯದ ಶ್ರೇಯಸ್ಸನ್ನು ಸಾಧಿಸಬೇಕಾದರೆ ಮೊದಲು ಅದು ತನ್ನ ಸಮಾಜದ ಎಲ್ಲರೂ ಸಮಾನರೆಂದು ಪರಿಗಣಿಸುವುದು ಆ ಧರ್ಮಕ್ಕೆ ಇರುವ ಸಾಮಾಜಿಕ ಜವಾಬ್ದಾರಿಗಳಲ್ಲಿ ಮೊದಲನೆಯದು. ಆ ನಿಟ್ಟಿನಲ್ಲಿ ಈಗ ಎಲ್ಲರೂ ಯೋಚಿಸಬೇಕಿದೆ.

ನಲ್ನುಡಿ: ನಲ್ನುಡಿಯ ಓದುಗರೊಂದಿಗೆ ಈ ಸಂದರ್ಭದಲ್ಲಿ ನೀವು ಹೇಳಲೇಬೇಕೆನಿಸುವ ಮಾತುಗಳೇನು?
ಜಿ.ಎಸ್.ಎಸ್: ಯಾವ ಯುವಕರಿಂದ ಹೊಸ ಉತ್ಸಾಹಪೂರ್ಣವಾದ ಜಗತ್ತು ನಿರ್ಮಾಣವಾಗಬೇಕಿದೆಯೋ ಆ ಜಗತ್ತು ಈಗ, ಅದರೊಳಗಿನ ಅತೃಪ್ತಿಗಳಿಂದ, ಅಸ್ವಸ್ಥತೆಗಳಿಂದ ಅಲ್ಲೋಲ ಕಲ್ಲೋಲವಾಗಿದೆಯಲ್ಲ ಯಾಕೆ? ಎಂಬುದು ನಿಜಕ್ಕೂ ಯಕ್ಷ ಪ್ರಶ್ನೆ. ಯಾಕೆಂದರೆ ಯುವ ಮನಸ್ಸು ಯಾವಾಗಲೂ ತನ್ನ ಕಾಲದ ಅಗತ್ಯಗಳಿಗೆ ತೀವ್ರವಾಗಿ ಸ್ಪಂದಿಸುವಂತದ್ದು. ಸರಿಯಾದ ಮಾರ್ಗದರ್ಶನ ದೊರೆತರೆ ಅದು ಸುಸಂಘಟಿತವಾಗಿ, ಕ್ರಿಯಾಶೀಲವಾಗಬಹುದು. ಸ್ವಾತಂತ್ರ್ಯಪೂರ್ವದ ರಾಷ್ಟ್ರೀಯ ಆಂದೋಲನದ ಸಂದರ್ಭದಲ್ಲಿ ಇಡೀ ದೇಶದ ಯುವಶಕ್ತಿ ಹೋರಾಟಕ್ಕೆ ಧುಮುಕಿದ್ದರಿಂದಲೇ ಅದು ಯಶಸ್ವಿಯಾಯಿತು ಎಂಬುದನ್ನು ಮರೆಯುವಂತಿಲ್ಲ. ಆದರೆ ಸ್ವಾತಂತ್ರ್ಯೋತ್ತರ ಪರಿಸ್ಥಿತಿಯಲ್ಲಿ ನಮ್ಮ ಯುವಶಕ್ತಿಗೆ ಸ್ವತಂತ್ರ್ಯ ಪೂರ್ವದಲ್ಲಿದ್ದಂಥ ಮಾರ್ಗದರ್ಶಕ ತತ್ವಗಳಾಗಲೀ, ನಿರ್ದಿಷ್ಠವಾದ ಗುರಿಯಾಗಲಿ, ನಿಜವಾದ ಮೌಲ್ಯ ಪ್ರಜ್ಞೆಯಿಂದ ಗಟ್ಟಿಗೊಳ್ಳಬಹುದಾದ ವ್ಯಕ್ತಿತ್ವವಾಗಲಿ ಇಲ್ಲದಿರುವುದು ಈ ಅಸ್ವಸ್ಥ ಪರಿಸ್ಥಿತಿಗೆ ಬಹು ಮುಖ್ಯವಾದ ಕಾರಣವಾಗಿದೆ ಅನಿಸುತ್ತದೆ.
ನಮ್ಮ ಯುವಜನಾಂಗದ ರುಚಿ, ಅಭಿರುಚಿಗಳನ್ನು ನಮ್ಮ ದೇಶದ ದೃಶ್ಯಮಾಧ್ಯಮಗಳಾದ ಚಲನಚಿತ್ರ, ದೂರದರ್ಶನಾದಿಗಳು ನಿಯಂತ್ರಿಸುತ್ತಿವೆ. ಯುವ ಜನಾಂಗದ ವೈಚಾರಿಕತೆಯನ್ನು ಈ ದೇಶದ ಧಾರ್ಮಿಕ ಸಂಸ್ಥೆಗಳು, ನಮ್ಮ ಯುವ ಜನಾಂಗದ ಮೌಲ್ಯ ಪ್ರಜ್ಞೆಯನ್ನು ಈ ದೇಶದ ರಾಜಕಾರಣವೂ ನಿಯಂತ್ರಿಸುತ್ತಿವೆ. ಈ ಮೂರರ ಪ್ರಭಾವದಿಂದ ಕಲುಷಿತಗೊಂಡ ಯುವ ಮನಸ್ಸುಗಳನ್ನು ತಿದ್ದಿ ಅವುಗಳನ್ನು ಸಮಾಜದ ಶ್ರೇಯಸ್ಸಿಗಾಗಿ ಬಳಸುವುದು ಹೇಗೆ ಎಂಬುದೇ ಇವತ್ತಿನ ಬಹುದೊಡ್ಡ ಸವಾಲಾಗಿದೆ.

ಭಾರತಕ್ಕೆ ಬೇಕಾಗಿರುವ ಭಾಷಾನೀತಿ

ಆನಂದ್, ಬನವಾಸಿ ಬಳಗ


ಸೆಪ್ಟೆಂಬರ್ ಎಂದ ಕೂಡಲೇ ಹಿಂದಿ ದಿನಾಚರಣೆ ನೆನಪಾಗುತ್ತದೆ. ಈ ಹಿಂದೆಲ್ಲಾ ಸೆಪ್ಟೆಂಬರ್ ೧೪ನ್ನು ಭಾರತದ ಕೇಂದ್ರಸರ್ಕಾರಿ ಕಛೇರಿಗಳ ತುಂಬಾ ಹಿಂದೀ ದಿನವನ್ನಾಗಿ ಆಚರಿಸಲಾಗುತ್ತಿತ್ತು. ಭಾರತ ಕೇಂದ್ರಸರ್ಕಾರದ ಭಾಷಾನೀತಿಗಳಿಂದಾಗಿಯೂ, ಬೊಕ್ಕಸದ ನೆರವಿನಿಂದಾಗಿಯೂ ಇತ್ತೀಚಿಗೆ ಈ ದಿನಾಚರಣೆಯು - ಹಿಂದಿ ಸಪ್ತಾಹ, ಹಿಂದೀ ಪಕ್ಷಾಚರಣೆಯಾಗಿದ್ದು, ಮುಂಬರುವ ದಿನಗಳಲ್ಲಿ ಹಿಂದೀ ಮಾಸಾಚರಣೆ, ವರ್ಷಾಚರಣೆಗಳಾಗಿ ಬದಲಾದರೂ ಅಚ್ಚರಿಯಿಲ್ಲ. ಭಾರತದ ಕೇಂದ್ರಸರ್ಕಾರವೇನೋ ಹಿಂದಿಯನ್ನು ಇಡೀ ಭಾರತದ ಮೂಲೆಮೂಲೆಗೆ ಮುಟ್ಟಿಸುವ ರಣೋತ್ಸಾಹದಲ್ಲಿದೆ. ನಮಗೆ ಹಿಂದಿ ಬೇಕೋ? ಬೇಡವೋ? ಕನ್ನಡಿಗರ ಬದುಕಲ್ಲಿ ಹಿಂದೀ ಎನ್ನುವ ನಮ್ಮದಲ್ಲದ ನುಡಿಯನ್ನು ಭಾರತ ಸರ್ಕಾರ ನುಗ್ಗಿಸುವುದು ಸರಿಯೇ? ಬಹುಭಾಷಿಕ ಸಮುದಾಯಗಳು ಸೇರಿ ಆಗಿರುವ ಭಾರತಂತಹ ದೇಶದಲ್ಲಿ ಎಂಥಾ ವ್ಯವಸ್ಥೆ ಇರಬೇಕು? ಇಂತಹ ವಿಷಯಗಳ ಬಗ್ಗೆ ವಿಶ್ವಸಂಸ್ಥೆಯು ಎಂತಹ ನಿಲುವನ್ನು ಹೊಂದಿದೆ? ಎಂದು ನೋಡಿದಾಗ, ಭಾರತದ ಸದರಿ ಭಾಷಾನೀತಿಯ ತಪ್ಪುಒಪ್ಪುಗಳು ಮನದಟ್ಟಾಗುತ್ತವೆ.
ವಿಶ್ವಸಂಸ್ಥೆಯು ಭಾಷೆಗೆ ನೀಡಿರುವ ಮಹತ್ವ
ವಿಶ್ವಸಂಸ್ಥೆಯು ವಿಶೇಷವಾಗಿ ಗಮನ ಹರಿಸಿರುವ ಕ್ಷೇತ್ರಗಳಲ್ಲಿ ಪ್ರಮುಖವಾದ ಒಂದು ಕ್ಷೇತ್ರ ಮಾನವ ಹಕ್ಕುಗಳು. ಇದರೊಳಗೇ ಭಾಷಾ ಸಮುದಾಯದ ಹಕ್ಕುಗಳನ್ನು ಅಡಕಗೊಳಿಸಿದ್ದಾರೆ. ಇದರ ಮೂಲ ಉದ್ದೇಶ ಪ್ರಪಂಚದ ಎಲ್ಲಾ ಭಾಷಿಕ ಸಮುದಾಯಗಳೂ ಕೂಡಾ ಉಳಿಯಬೇಕು. ಪ್ರತಿಯೊಂದು ಸಮುದಾಯವೂ ಕೂಡಾ ಮನುಕುಲದ ಪ್ರಗತಿಯಲ್ಲಿ ತಾನೂ ಭಾಗವಾಗಿರುವುದರ ಜೊತೆಯಲ್ಲೇ, ಇದಕ್ಕಾಗಿ ಕೊಡುಗೆ ನೀಡುತ್ತಾ ತನ್ನನ್ನು ತೊಡಗಿಸಿಕೊಳ್ಳಬೇಕು. ಇಂತಹ ಪಾಲುದಾರಿಕೆ ಸಾಧ್ಯವಾಗುವುದು ಪ್ರತಿಯೊಂದು ಸಮುದಾಯದ ಭಾಷೆ ಉಳಿದಾಗ, ಬೆಳೆದಾಗ ಮಾತ್ರಾ. ಕೆಲವು ಸಮುದಾಯಗಳ ಭಾಷೆಗಳು ಹಲವಾರು ಕಾರಣಗಳಿಂದಾಗಿ ಇಂದು ಆತಂಕ ಎದುರಿಸುತ್ತಿದೆ. ಹಾಗಾಗಿ ಇಂತಹ ಆತಂಕಗಳನ್ನು ನಿವಾರಿಸುವ ನಿಟ್ಟಿನಲ್ಲಿ, ಒಟ್ಟಾರೆ ಮನುಕುಲದ ಅಭಿವೃದ್ಧಿಯ ದೃಷ್ಟಿಯಿಂದ ಈ ಭಾಷಾಹಕ್ಕುಗಳನ್ನು ಗುರುತಿಸಿ ಘೋಷಿಸಲಾಗಿದೆ. ಇದು ಇಡೀ ಜಗತ್ತಿಗೆ ಅನ್ವಯಿಸುವಂತದ್ದು. ಭಾರತದೇಶದಲ್ಲಿ ಇದೀಗ ಅನುಸರಿಸಲಾಗುತ್ತಿರುವ ಭಾಷಾನೀತಿಯು, ಹೇಗೆ ಇಂತಹ ಒಂದು ಸದುದ್ದೇಶಕ್ಕೆ ವಿರುದ್ಧವಾಗಿದೆ ಎಂಬುದನ್ನು ಈ ಹಿಂದೀ ಉತ್ಸವಗಳ ಸಂದರ್ಭದಲ್ಲಿ ತಿಳಿದುಕೊಳ್ಳೋಣ. ವಿಶ್ವಸಂಸ್ಥೆಯ ಅಂಗ ಸಂಸ್ಥೆಗಳಲ್ಲೊಂದಾದ UಓಇSಅಔ, ಜಗತ್ತಿನ ಭಾಷಾ ಸಮುದಾಯಗಳ ಕುರಿತು ಹೊರಡಿಸಿರೋ ಬಾರ್ಸಿಲೋನಾ ಭಾಷಾಹಕ್ಕುಗಳ ಘೋಷಣೆಯಲ್ಲಿ ಪ್ರತಿಯೊಂದು ಭಾಷಾ ಸಮುದಾಯದ ಹಕ್ಕುಗಳ ಬಗ್ಗೆ ಹೀಗೆ ಹೇಳಿದೆ.
ಭಾಷಾ ಹಕ್ಕು ಘೋಷಣೆಯ ಉದ್ದೇಶ
ಯುನೆಸ್ಕೋ ಹೊರತಂದಿರುವ ಈ ಭಾಷಾಹಕ್ಕುಗಳು: ಬಾರ್ಸಿಲೋನಾ ಘೋಷಣೆಯ ಉದ್ದೇಶಗಳು ಇಂತಿವೆ
ಸ್ವಯಂ ಆಡಳಿತದ ಕೊರತೆ, ಜನಸಂಖ್ಯೆಯ ಕೊರತೆ, ಸಮುದಾಯದ ಕೆಲಭಾಗ ಅಥವಾ ಇಡೀ ಸಮುದಾಯವೇ ಚದರಿ ಹೋಗಿರುವುದು, ಬಲಹೀನ ಆರ್ಥಿಕಮಟ್ಟ, ಸುಧಾರಿಸಿಲ್ಲದ ಭಾಷಾಮಟ್ಟ, ಬಲಶಾಲಿ ಸಮೂಹದ ನಂಬಿಕೆ/ ಸಂಸ್ಕೃತಿಗಳಿಗೆ ಮುಖಾಮುಖಿಯಾಗಿರುವಿಕೆಗಳು ಒಂದು ಭಾಷಾ ಸಮುದಾಯದ ಉಳಿವಿಗೆ ಎದುರಾಗಿರುವ ಆತಂಕಗಳಾಗಿದ್ದು ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ಆಯಾಮಗಳ ಗುರಿಗಳನ್ನು ಪರಿಗಣನೆಗೆ ತೆಗೆದುಕೊಳ್ಳದೆ ಸವಾಲುಗಳನ್ನೆದುರಿಸುವುದು ಅಸಾಧ್ಯವೆನ್ನುವ ಪರಿಸ್ಥಿತಿ ಉಂಟಾಗಿದೆ.
ರಾಜಕೀಯ ಗುರಿಗಳು: ಏಳಿಗೆಯ ದಿಕ್ಕಿನೆಡೆಗಿನ ಪ್ರಗತಿಯ ಪಯಣದಲ್ಲಿ ಎಲ್ಲಾ ಸಮುದಾಯಗಳೂ ಒಂದಾಗಿ ಸಾಗಲು ಪೂರಕವಾಗುವಂತಹ, ಭಾಷಾ ವೈವಿಧ್ಯಗೆ ಧಕ್ಕೆ ತರದಂತಹ ವ್ಯವಸ್ಥೆಯನ್ನು ರೂಪಿಸುವುದು.
ಸಾಂಸ್ಕೃತಿಕ ಗುರಿಗಳು: ಪ್ರಗತಿಯ ಹಾದಿಯಲ್ಲಿ ಜಗತ್ತಿನಾದ್ಯಂತ ಸಂಪರ್ಕ ಸಂವಹನ ಸಾಧಿಸಲು ಪೂರಕವಾಗಿರುವ, ಪ್ರತಿಯೊಂದು ಭಾಷಾ ಸಮುದಾಯವೂ, ವ್ಯಕ್ತಿಯೂ, ಜನಗಳೂ ಪಾಲುಗೊಳ್ಳಲು ಅನುಕೂಲಕರವಾದ ವ್ಯವಸ್ಥೆಯನ್ನು ರೂಪಿಸುವುದು.
ಆರ್ಥಿಕ ಗುರಿಗಳು: ಪ್ರಗತಿಗೆ ಪೂರಕವಾಗುವಂತಹ, ಎಲ್ಲಾ ಭಾಷಿಕ ಸಮುದಾಯಗಳ ಸರ್ವತೋಮುಖ ಏಳಿಗೆಗೆ, ಪರಿಸರಕ್ಕೆ, ಸಂಸ್ಕೃತಿಗೆ ಪೂರಕವಾಗುವಂತೆ ಪ್ರತಿಯೊಂದು ಭಾಷಾ ಸಮೂಹವೂ ತೊಡಗಿಸಿಕೊಳ್ಳಲು ಸಾಧ್ಯವಾಗುವಂತಹ ಮಾದರಿಯನ್ನು ರೂಪಿಸುವುದು. ಈ ಮೂರು ಗುರಿಗಳ ಕಾರಣದಿಂದಾಗಿ ಇಲ್ಲಿ ಯಾವೊಂದು ರಾಷ್ಟ್ರವನ್ನಾಗಲೀ, ರಾಜಕೀಯ ಸಾರ್ವಭೌಮತ್ವವನ್ನಾಗಲೀ ಮಾನದಂಡವಾಗಿ ಪರಿಗಣಿಸದೆ ಭಾಷಿಕ ಸಮುದಾಯವನ್ನು ಪರಿಗಣಿಸಿ, ಸಮುದಾಯಗಳ ಭಾಷಿಕ ಹಕ್ಕಿನ ಬಗ್ಗೆ ಪ್ರತಿಪಾದಿಸಲಾಗಿದೆ. ಇಡೀ ಮನುಕುಲ ತನ್ನ ಭಾಷಾವೈವಿಧ್ಯತೆ ಮತ್ತು ಸಾಂಸ್ಕೃತಿಕ ವೈವಿಧ್ಯತೆಗಳನ್ನು ಉಳಿಸಿಕೊಂಡು ಸೌಹಾರ್ದಯುತವಾದ ಸಹಬಾಳ್ವೆಯನ್ನು ನಡೆಸುತ್ತಾ, ಇಡೀ ಮನುಕುಲವು ಏಳಿಗೆಯತ್ತ ಸಾಗಲು ಇದು ಅತ್ಯಗತ್ಯವೆಂದು ಭಾವಿಸಲಾಗಿದೆ.
ಇದರಲ್ಲಿರೋ ಮಹತ್ವದ ಅಂಶಗಳು
ವೈಯುಕ್ತಿಕ ಮಟ್ಟದಲ್ಲಿ ವ್ಯಕ್ತಿಯೊಬ್ಬನಿಗೆ ತನ್ನತನವನ್ನು ಉಳಿಸಿಕೊಳ್ಳಲು ಇರುವ ಹಕ್ಕುಗಳ ಬಗ್ಗೆ ತಿಳಿಸುತ್ತಾ, ತಾನಿರುವ ನೆಲದ ಮುಖ್ಯವಾಹಿನಿಗೆ ಪೂರಕವಾಗಿರಬೇಕೆಂಬ ಸಣ್ಣ ಎಚ್ಚರಿಕೆಯನ್ನೂ ಇದು ನೀಡುತ್ತದೆ. ಇದರೊಟ್ಟಿಗೆ ಒಂದು ಭಾಷಾ ಸಮುದಾಯಕ್ಕೆ ತನ್ನದೇ ನೆಲದಲ್ಲಿ ಇರುವ ಹಕ್ಕುಗಳ ಬಗ್ಗೆ ತಿಳಿಸಲಾಗಿದೆ. ಅಂದರೆ ಕರ್ನಾಟಕದಲ್ಲಿ ಕನ್ನಡಿಗರಿಗೆ ಕನ್ನಡವನ್ನು ಎಷ್ಟರಮಟ್ಟಿಗೆ ಬಳಸುವ ಹಕ್ಕು ಇದೆ ಎಂಬುದನ್ನು ಇದು ತಿಳಿಸಿಕೊಡುತ್ತದೆ. ಇಡೀ ವರದಿಯು ಇಂಗ್ಲೀಷಿನಲ್ಲಿ hಣಣಠಿ://ತಿತಿತಿ.uಟಿesಛಿo.oಡಿg/ಛಿಠಿಠಿ/uಞ/ಜeಛಿಟಚಿಡಿಚಿಣioಟಿs/ಟiಟಿguisಣiಛಿ.ಠಿಜಜಿ ಕೊಂಡಿಯಲ್ಲಿ ಸಿಗುತ್ತದೆ. ಈ ವರದಿಯ ಪ್ರಮುಖವಾದ ಕೆಲವು ಮಾಹಿತಿಗಳನ್ನು ಈ ಕೆಳಗೆ ಕೊಟ್ಟಿದ್ದೇವೆ.
ಪರಿಚ್ಛೇದ ೮.೨: ಪ್ರತಿಯೊಂದು ಭಾಷಾ ಸಮುದಾಯಕ್ಕೂ ತನ್ನ ನುಡಿಯನ್ನು ಮುಂದಿನ ಪೀಳಿಗೆಗೆ ದಾಟಿಸಲು ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳುವ ಹಕ್ಕು ಇರುತ್ತದೆ.
ಪರಿಚ್ಛೇದ ೧೧: ಎಲ್ಲಾ ಭಾಷಾ ಸಮುದಾಯಗಳಿಗೂ ಈ ಘೋಷಣೆಯ ಪ್ರತಿಯೊಂದು ಹಕ್ಕನ್ನೂ ಸಾಧಿಸಿಕೊಳ್ಳುವ ಅಧಿಕಾರವಿರುತ್ತದೆ.
ಪರಿಚ್ಛೇದ ೧೪: ಈ ಹಕ್ಕುಗಳನ್ನು ತನ್ನ ವ್ಯಾಪ್ತಿಯ ಪ್ರದೇಶದಲ್ಲಿನ ನುಡಿಯ ಸ್ವಾಭಾವಿಕವಾದ ಹಕ್ಕುಗಳಿಗೆ ಧಕ್ಕೆ ತರುವಂತೆ ಅರ್ಥೈಸಲಾಗದು.
ಪರಿಚ್ಛೇದ ೧೬: ಎಲ್ಲಾ ಭಾಷಿಕ ಸಮುದಾಯಕ್ಕೂ ತನ್ನ ಪರಿಧಿಯೊಳಗಿನ ಎಲ್ಲಾ ಸ್ಥಳೀಯ ಹಾಗೂ ಕೇಂದ್ರಗಳ ಸಾರ್ವಜನಿಕ ಕಛೇರಿಯಲ್ಲಿ ತನ್ನದೇ ನುಡಿಯಲ್ಲಿ ಸೇವೆಯನ್ನು ಪಡೆಯುವ ಹಕ್ಕಿರುತ್ತದೆ.
ಪರಿಚ್ಛೇದ ೧೮: ಎಲ್ಲಾ ಭಾಷಾ ಸಮುದಾಯಗಳಿಗೂ ತಮ್ಮದೇ ನುಡಿಯಲ್ಲಿ ನೆಲದ ಕಾನೂನು, ನೀತಿ ನಿಯಮಗಳನ್ನು ಆಯಾಪ್ರದೇಶದ ಭಾಷೆಯಲ್ಲೇ ದೊರಕಿಸಿಕೊಡಬೇಕು.
ಪರಿಚ್ಛೇದ ೨೨: ಎಲ್ಲಾ ಭಾಷಾ ಸಮುದಾಯಗಳಿಗೆ ಪ್ರಮಾಣಪತ್ರಗಳನ್ನು ನೋಟರಿಯಿಂದಾಗಲೀ, ಇನ್ಯಾವುದೇ ಅಧಿಕೃತ ಸಂಸ್ಥೆಗಳಿಂದ ಪಡೆಯುವಾಗಲಾಗಲೀ, ಆಯಾಪ್ರದೇಶದ ಭಾಷೆಯಲ್ಲಿ ಪಡೆಯುವ ಹಕ್ಕಿರುತ್ತದೆ. ಇದನ್ನು ಮಾನ್ಯ ಮಾಡದೇ ಇರುವ ಹಾಗಿಲ್ಲ.
ಪರಿಚ್ಛೇದ ೨೪: ಪ್ರತಿಯೊಂದು ಭಾಷಾ ಸಮುದಾಯಕ್ಕೂ ತನ್ನ ನಾಡಿನ ಕಲಿಕೆಯ ವ್ಯವಸ್ಥೆಯಲ್ಲಿ ಯಾವ ಹಂತದವರೆಗೂ ತಾಯ್ನುಡಿಯಿರಬೇಕೆಂದು ನಿರ್ಣಯಿಸುವ ಹಕ್ಕಿರುತ್ತದೆ.
ಪರಿಚ್ಛೇದ ೨೮: ತನ್ನ ನೆಲದ ಇತಿಹಾಸ, ಸಂಸ್ಕೃತಿಗಳನ್ನು ಕಲಿಕೆಯಲ್ಲಿ ತಮಗೆ ಬೇಕಾದ ಪ್ರಮಾಣದಲ್ಲಿ ಅಳವಡಿಸುವ ಹಕ್ಕು ಪ್ರತಿಯೊಂದು ಭಾಷಾ ಸಮೂಹಕ್ಕೂ ಇರುತ್ತದೆ.
ಪರಿಚ್ಛೇದ ೩೨: ಪ್ರತಿಯೊಂದು ಭಾಷಾ ಸಮುದಾಯಕ್ಕೂ ತನ್ನ ನೆಲದ, ಊರಿನ, ಜಾಗದ ಹೆಸರನ್ನು ತನಗೆ ಬೇಕಾದಂತೆ ಉಚ್ಚರಿಸುವ, ಬಳಸುವ ಹಾಗೂ ಬದಲಾಯಿಸುವ ಅಧಿಕಾರವಿರುತ್ತದೆ.
ಪರಿಚ್ಛೇದ ೩೫: ಪ್ರತಿಯೊಂದು ಭಾಷಾ ಸಮುದಾಯಕ್ಕೂ ತನ್ನ ನೆಲದಲ್ಲಿನ ಮಾಧ್ಯಮಗಳಲ್ಲಿ ಆ ನೆಲದ ಭಾಷೆ ಯಾವ ಪ್ರಮಾಣದಲ್ಲಿರಬೇಕು ಎಂದು ನಿರ್ಣಯಿಸಿಕೊಳ್ಳುವ ಹಕ್ಕಿರುತ್ತದೆ.
ಪರಿಚ್ಛೇದ ೪೫: ಪ್ರತಿಯೊಂದು ಭಾಷಾ ಸಮುದಾಯಕ್ಕೂ ತನ್ನ ನೆಲದಲ್ಲಿ ಗ್ರಂಥಾಲಯ, ಚಲನಚಿತ್ರ, ರಂಗಭೂಮಿ, ಮ್ಯೂಸಿಯಂಗಳೂ ಸೇರಿದಂತೆ ಎಲ್ಲಾ ತೆರನಾದ ಸಾಂಸ್ಕೃತಿಕ ಪ್ರಾಕಾರಗಳಲ್ಲಿ ಆ ನೆಲದ ಭಾಷೆಗಿರಬೇಕಾದ ಪ್ರಮುಖವಾದ ಸ್ಥಾನವನ್ನು (ಸಾರ್ವಭೌಮತ್ವವನ್ನು) ಕಾಪಾಡಿಕೊಳ್ಳುವ ಹಕ್ಕಿರುತ್ತದೆ.
ಪರಿಚ್ಛೇದ ೪೮.೧: ಪ್ರತಿಯೊಂದು ಭಾಷಾ ಸಮುದಾಯಕ್ಕೂ ತನ್ನ ನೆಲದಲ್ಲಿ, ತನ್ನ ನುಡಿಯಲ್ಲೇ ಎಲ್ಲಾ ತೆರನಾದ ಗ್ರಾಹಕ ಸೇವೆಯನ್ನು ಪಡೆಯುವ ಹಕ್ಕಿರುತ್ತದೆ. ಬ್ಯಾಂಕಿಂಗ್, ಇನ್ಶುರೆನ್ಸ್, ಸರಕು, ಸಾಮಾನು ಸರಂಜಾಮುಗಳು ಇತ್ಯಾದಿ ಎಲ್ಲವನ್ನೂ ಆ ಪ್ರದೇಶದ ಭಾಷೆಯಲ್ಲಿ ಪಡೆದುಕೊಳ್ಳುವ ಹಕ್ಕಿರುತ್ತದೆ.
ಪರಿಚ್ಛೇದ ೪೮.೨: ಯಾವುದೇ ಸಂಸ್ಥೆ ಆಂತರಿಕವಾಗಿ ಹೊಂದಿರುವ ಅಥವಾ ಹೊಂದಿಲ್ಲದ, ಯಾವುದೇ ಕಾನೂನು ಈ ಚೌಕಟ್ಟನ್ನು ಮೀರಲಾಗುವುದಿಲ್ಲ.
ಪರಿಚ್ಛೇದ ೫೧: ಪ್ರತಿಯೊಂದು ಭಾಷಿಕ ಸಮುದಾಯಕ್ಕೂ ತನ್ನ ನೆಲದಲ್ಲಿನ ಎಲ್ಲಾ ವ್ಯಾಪಾರಿ ವಹಿವಾಟಿನ ಜಾಹೀರಾತುಗಳು, ಸೈನ್‌ಬೋರ್ಡುಗಳು ಇತ್ಯಾದಿಗಳಲ್ಲಿ ಆ ನೆಲದ ಭಾಷೆಗೆ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುವ ಹಕ್ಕಿರುತ್ತದೆ.
ಎಷ್ಟೊಂದು ವಿಸ್ತಾರವಾಗಿ ನಮ್ಮ ಹಕ್ಕುಗಳ ಬಗ್ಗೆ UಓಇSಅಔ ವಿಶ್ವಸಂಸ್ಥೆಯ ಎಲ್ಲಾ ದೇಶಗಳಿಗೂ ಅನ್ವಯವಾಗುವಂತೆ, ಭಾಷಾ ಸಮುದಾಯಗಳ ಹಕ್ಕಿಗೆ ಸಂಬಂಧಿಸಿದಂತೆ ಘೋಷಣೆ ಹೊರಡಿಸಿದೆಯಲ್ಲವೇ? ಆದರೆ ಭಾರತದೇಶವು ತನ್ನ ನೆಲದಲ್ಲಿ ಎಂತಹ ಭಾಷಾನೀತಿಯನ್ನು ಅಳವಡಿಸಿಕೊಂಡಿದೆ? ಭಾರತದ ಸಂವಿಧಾನ, ಸಂಸತ್ತು, ಆಡಳಿತ ವ್ಯವಸ್ಥೆ ಈ ನಾಡಿನಲ್ಲಿರುವ ಭಾಷಾ ವೈವಿಧ್ಯತೆಯನ್ನು ಉಳಿಸಿಕೊಳ್ಳಲು ಅಗತ್ಯವಿರುವ ನಿಯಮಾವಳಿಗಳನ್ನು ಹೊಂದಿವೆಯೇ? ಬಹುಭಾಷಿಕ ಭಾರತದ ವೈವಿಧ್ಯತೆಯನ್ನು, ಭಾರತದೇಶವು ಶಾಪವೆಂದು ಪರಿಗಣಿಸಿದೆಯೇ? ಎಂಬುದನ್ನೆಲ್ಲಾ ಅರಿಯಲು ಭಾರತ ಸರ್ಕಾರದ ಭಾಷಾನೀತಿಯ ಬಗ್ಗೆ ಕಣ್ಣು ಹಾಯಿಸೋಣ.
ಭಾರತದ ಭಾಷಾನೀತಿ
ವಿಶ್ವಸಂಸ್ಥೆಯು ಜಗತ್ತಿನ ನಾನಾ ಭಾಷಾ ಸಮುದಾಯಗಳ ಭಾಷಿಕ ಹಕ್ಕನ್ನು ಉಳಿಸಿಕೊಳ್ಳುವುದರ ಬಗ್ಗೆ ಹೊಂದಿರುವ ನಿಲುವು, ತೋರಿಸಿರುವ ಕಾಳಜಿಗಳ ಬಗ್ಗೆ ನೋಡಿದೆವು. ವಿಶ್ವಸಂಸ್ಥೆಯ ಸದಸ್ಯತ್ವ ಹೊಂದಿರೋ ಭಾರತದಲ್ಲಿ ಪರಿಸ್ಥಿತಿ ಹೀಗೆಯೇ ಇದೆಯಾ ಎಂದು ನೋಡೋಣ. ಭಾರತ ದೇಶ ಅನೇಕ ಭಾಷಾ ಜನಾಂಗಗಳಿರುವ ನಾನಾ ಸಂಸ್ಕೃತಿಗಳ, ಆಚರಣೆಗಳ, ನಂಬಿಕೆಗಳ ಒಂದು ದೊಡ್ಡ ದೇಶ. ರಾಜಕೀಯವಾಗಿ ೧೯೪೭ರಲ್ಲಿ ಸ್ವಾತಂತ್ರ್ಯ ದಕ್ಕಿಸಿಕೊಂಡ ಸಂದರ್ಭದಲ್ಲಿ ನಮ್ಮೆದುರು ಇದ್ದ ಮುಖ್ಯವಾದ ಸವಾಲುಗಳು ಈ ವೈವಿಧ್ಯತೆಗಳ ನಾಡನ್ನು ಹೇಗೆ ಆಳಿಕೊಳ್ಳೋದು? ಹೇಗೆ ಒಗ್ಗಟ್ಟಿನಲ್ಲಿಟ್ಟುಕೊಳ್ಳೋದು?... ಇತ್ಯಾದಿಗಳು.
ಮೊದಲ ಹೆಜ್ಜೆಯಲ್ಲೇ ಎಡವಿದ ಭಾರತ
ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಮೊದಲೇ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಅಧಿವೇಶನಗಳಲ್ಲಿ ಸ್ವಾತಂತ್ರ್ಯದ ನಂತರದ ಭಾರತದ ಸ್ವರೂಪದ ಬಗ್ಗೆ ಚರ್ಚಿಸಿದ್ದರು. ಆಗಲೇ ಹಿಂದಿಯನ್ನು ಭಾರತದ ರಾಷ್ಟ್ರಭಾಷೆಯಾಗಿ ಹೊಂದುವ ಬಗ್ಗೆ ಚರ್ಚೆಯಾಯಿತು. ಸ್ವಾತಂತ್ರ್ಯದ ನಂತರ ಅಂತಹ ಪ್ರಯತ್ನಗಳೂ ನಡೆದವು. ಹಿಂದಿಯೇತರ ಪ್ರದೇಶಗಳ ವಿರೋಧದ ಕಾರಣದಿಂದಾಗಿ ಅದು ಫಲಿಸಲಿಲ್ಲ. ಶ್ರೀ.ಧುಲೇಕರ್ ಎಂಬ ಒಬ್ಬ ಸಂಸದರಂತೂ ಹಿಂದಿ ಬಾರದವರು ಭಾರತದಲ್ಲಿರಲು ನಾಲಾಯಕ್ಕು ಎಂಬ ಹೇಳಿಕೆ ನೀಡಿದ್ದರು. ಅದಕ್ಕೆ ಉತ್ತರವಾಗಿ ಶ್ರೀ.ಕೃಷ್ಣಮಾಚಾರಿಯವರು ನಿಮಗೆ ಒಡೆದಿರುವ ಹಿಂದೀ ಭಾರತ ಬೇಕೆ? ಅಥವಾ ಇಡೀ ಭಾರತ ಬೇಕೇ? ಎಂದು ಖಾರವಾಗಿ ಪ್ರತಿಕ್ರಿಯಿಸಿ, ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿಸಿದರೆ ಭಾರತ ಒಡೆದು ಹೋದೀತು ಎಂಬ ಎಚ್ಚರಿಕೆ ನೀಡಿದ್ದರು. ಮೂರು ವರ್ಷಗಳ ತೀವ್ರವಾದ ಚರ್ಚೆಯ ನಂತರ ೧೯೫೦ರಲ್ಲಿ ಭಾರತದ ಸಂವಿಧಾನವು ರೂಪುಗೊಂಡು ಜಾರಿಯಾಯಿತು.
ಸಂವಿಧಾನ ನೀಡಿರುವ ಹಿಂದಿಪ್ರಚಾರದ ಪರವಾನಗಿ
ಸದರಿ ಸಂವಿಧಾನದಲ್ಲಿ ಹಿಂದಿಯನ್ನು ರಾಷ್ಟ್ರಭಾಷೆಯೆಂದು ಘೋಷಿಸಲಿಲ್ಲವಾದರೂ ಭಾರತಕ್ಕೆ ರಾಜ್‌ಭಾಷಾ ಎಂಬ ಹೊಸ ಪಟ್ಟವನ್ನು ಕಟ್ಟಿ ಅದನ್ನು ಭಾರತದ ಕೇಂದ್ರಸರ್ಕಾರದ ಅಧಿಕೃತ ಸಂಪರ್ಕ ಭಾಷೆಯನ್ನಾಗಿಸಿ, ಜೊತೆಗೆ ೧೫ ವರ್ಷಗಳ ಕಾಲಕ್ಕಾಗಿ ಇಂಗ್ಲೀಷನ್ನು ಸೇರಿಸಿ ಘೋಷಿಸಲಾಯಿತು. ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿ ಮಾಡದಂತೆ ತಡೆಯಲು ಯತ್ನಿಸಿದ ಹಿಂದಿಯೇತರ ನಾಡಿನವರಿಗೆ ಭಾರತೀಯ ಸಂವಿಧಾನದಲ್ಲಿ ರಾಷ್ಟ್ರಭಾಷೆ ಎಂಬ ಪದದ ಬಳಕೆ ಆಗಿಲ್ಲದಿರುವುದು ಸಮಾಧಾನ ತಂದಿತು. ಆದರೆ ಸಂವಿಧಾನದ ೩೫೧ನೇ ಕಲಮಿನಲ್ಲಿ ಹಿಂದಿಯ ಪ್ರಸಾರವನ್ನು ಮಾಡುವುದು ಕೇಂದ್ರದ ಕರ್ತವ್ಯವೆಂದು ಬರೆಯಲಾಗಿರುವುದು, ಒಟ್ಟಾರೆ ಭಾರತದೇಶದ ಭಾಷಾನೀತಿಗೆ ಹಿಡಿದ ಕನ್ನಡಿಯಾಗಿದ್ದು, ವಾಸ್ತವವಾಗಿ ಅಂದಿನಿಂದಲೇ ಹಿಂದೀ ಭಾಷೆಯನ್ನು ಭಾರತದ ಮನೆಮನೆಗಳಲ್ಲಿ ಪ್ರತಿಷ್ಠಾಪಿಸುವ ಕ್ರಮಕ್ಕೆ ಭಾರತದ ಕೇಂದ್ರಸರ್ಕಾರವೇ ಮುನ್ನುಡಿ ಹಾಡಿತು. ಹೀಗಾಗಿ ಆ ಸಮಾಧಾನವೆಂಬುದು ಹಿಂದೀಭಾಷೆಗೆ ರಾಷ್ಟ್ರಭಾಷೆ ಎಂಬ ಹೆಸರು ದಕ್ಕಿಲ್ಲ ಎಂಬುದಕ್ಕೇ ಮಾತ್ರಾ ಸೀಮಿತವಾಯಿತು.
ಸಂವಿಧಾನದ ಪುಟಗಳಲ್ಲಿ ಭಾರತದಲ್ಲಿ ಹಿಂದಿಯ ಬಳಕೆಯನ್ನು ಕ್ರಮೇಣ ಹೆಚ್ಚಿಸಲು ಭಾರತವು ಬದ್ಧವಾಗಿರುತ್ತದೆ (ಆರ್ಟಿಕಲ್ ೩೫೧) ಎಂದು ಬರೆಯಲಾಯಿತು. ಭಾರತದಲ್ಲಿ ಹಿಂದಿಯನ್ನು ಏಕೈಕ ಅಧಿಕೃತ ಭಾಷೆಯನ್ನಾಗಿಸುವ ಗುರಿಯಿಂದ, ಹಿಂದಿಯನ್ನು ಪಸರಿಸಲು ಐದು ವರ್ಷಗಳಲ್ಲಿ ಒಂದು ಇಲಾಖೆಯನ್ನು ತೆಗೆಯಬೇಕು ಮತ್ತು ಕ್ರಮೇಣ ಇಂಗ್ಲಿಷ್ ಬಳಕೆಗೆ ಕಡಿವಾಣ ಹಾಕಲು ಶ್ರಮಿಸಬೇಕು (ಆರ್ಟಿಕಲ್ ೩೪೪) ಎನ್ನಲಾಯಿತು. ರಾಜ್ಯ ರಾಜ್ಯಗಳ ನಡುವೆ, ರಾಜ್ಯ ಕೇಂದ್ರಸರ್ಕಾರಗಳ ನಡುವಿನ ಎಲ್ಲಾ ವಹಿವಾಟುಗಳು ಹಿಂದಿ/ ಇಂಗ್ಲೀಷಿನಲ್ಲಿ ಮಾತ್ರವೇ ಇರತಕ್ಕದು (ಆರ್ಟಿಕಲ್ ೩೪೫) ಎಂದೆಲ್ಲಾ ಬರೆಯಲಾಯಿತು.
ಹಿಂದಿ ಹರಡುವಿಕೆಯ ಯೋಜನೆಗಳು
ಸಾಧ್ಯವಾದಾಗಲೆಲ್ಲಾ ಹಿಂದಿಯ ಸಾರ್ವಭೌಮತ್ವ ಸ್ಥಾಪಿಸಲು ಪ್ರಯತ್ನಗಳು ನಡೆದವು. ಭಾಷಾ ಸಮಿತಿಯನ್ನು ನೇಮಿಸಿ ೧೯೬೩ರಲ್ಲಿ ಅಧಿಕೃತ ಭಾಷಾ ಸ್ಥಾನದಿಂದ ಇಂಗ್ಲಿಷನ್ನು ಕಿತ್ತೆಸೆದು, ಹಿಂದಿಯೊಂದನ್ನೇ ಉಳಿಸಿಕೊಳ್ಳುವ ಪ್ರಯತ್ನಗಳು ನಡೆದವು. ತಮಿಳುನಾಡಿನಲ್ಲಿ ಪ್ರತಿರೋಧ ಹುಟ್ಟಿಕೊಂಡಾಗ, ೧೯೬೫ರಲ್ಲಿ ಇಂಗ್ಲೀಷನ್ನೂ ಅದೇ ಸ್ಥಾನದಲ್ಲಿ ಮುಂದುವರೆಸುವ ಒಂದು ತಿದ್ದುಪಡಿಯನ್ನು ತರಲಾಯಿತು. ಆದರೇನು? ಯಾವುದೇ ಇತರ ಭಾರತೀಯ ಭಾಷೆಗಿಲ್ಲದ ಸೌಕರ್ಯ ಹಿಂದಿ ಪ್ರಚಾರಕ್ಕೆ ನೀಡಲಾಯಿತು. ಸಾರ್ವಜನಿಕರ ತೆರಿಗೆಯ ಹಣದಿಂದ ನೂರಾರು ಕೋಟಿ ರೂಪಾಯಿಗಳನ್ನು ಕೇವಲ ಹಿಂದೀ ಪ್ರಚಾರಕ್ಕಾಗಿ ಬಳಸಲಾಗುತ್ತಿದೆ. ಮತ್ತೊಂದು ಕಡೆ ಭಾರತದ ತುಂಬೆಲ್ಲಾ ಹಿಂದೀ ಪ್ರಚಾರ ಸಭೆಗಳನ್ನು ಆರಂಭಿಸಲಾಯಿತು. ವಿಶ್ವಾಸ, ಉತ್ತೇಜನ ಮತ್ತು ಒಲಿಸುವಿಕೆಯ ಮೂಲಕ ಹಿಂದಿಯನ್ನು ಹರಡಬೇಕೆಂಬುದು ಭಾರತ ದೇಶದ ನೀತಿಯಾಯಿತು.
ಡಿಪಾರ್ಟ್‌ಮೆಂಟ್ ಆಫ್ ಅಫಿಷಿಯಲ್ ಲಾಂಗ್ವೇಜ್
ಇಂತಹ ಗುರಿ ಈಡೇರಿಕೆಗಾಗಿಯೇ ಡಿಪಾರ್ಟ್‌ಮೆಂಟ್ ಆಫ್ ಅಫಿಷಿಯಲ್ ಲಾಂಗ್ವೇಜ್ ಅನ್ನೋ ಇಲಾಖೆಯನ್ನು ತೆರೆಯಲಾಯಿತು. ಅದರ ಮೂಲಕ ಕೇಂದ್ರಸರ್ಕಾರಿ/ ಕೇಂದ್ರದ ಅಧೀನದ ಕಛೇರಿಗಳಲ್ಲಿ ಹಿಂದಿಯನ್ನು ಅನುಷ್ಠಾನಗೊಳಿಸಲು ರೂಪುರೇಶೆಗಳನ್ನು ರೂಪಿಸಿ ಭಾರತದ ಅಧಿಕೃತ ಸಂಪರ್ಕ ಭಾಷಾ ಕಾಯ್ದೆಯನ್ನು ರೂಪಿಸಲಾಯ್ತು. ೧೯೭೬ರಲ್ಲಿ ಜಾರಿಗೆ ತರಲಾದ ಭಾರತದ ಅಫಿಷಿಯಲ್ ಲಾಂಗ್ವೇಜ್ ರೂಲ್ಸ್‌ನ ನಿಯಮಾವಳಿಗಳಂತೂ ಹಿಂದಿಯನ್ನು ಪ್ರತಿಷ್ಠಾಪಿಸುವ ಕೆಲಸಕ್ಕೆ ಮತ್ತಷ್ಟು ವೇಗ ತಂದುಕೊಡುವಂತಿದ್ದವು. ಈ ಕಾನೂನು ಜಾರಿಯಲ್ಲಿಯೂ ತಾರತಮ್ಯ ಎದ್ದು ಕಾಣುವಂತಿತ್ತು. ಏಕೆಂದರೆ ಈ ಕಾಯ್ದೆ ತಮಿಳುನಾಡಿಗೆ ಅನ್ವಯವಾಗುವುದಿಲ್ಲ ಎಂದು ಮೊದಲ ಪ್ಯಾರಾದಲ್ಲೇ ಬರೆಯಲಾಗಿದೆ. ದೇಶದ ಯಾವುದೇ ಮೂಲೆಯ ಕೇಂದ್ರಸರ್ಕಾರಿ ಕಛೇರಿಯಲ್ಲೂ ಹಿಂದಿಯಲ್ಲಿ ಬರೆಯಲಾದ ಪತ್ರಕ್ಕೆ ಹಿಂದಿಯಲ್ಲೇ ಉತ್ತರ ನೀಡಬೇಕು ಎಂದು ಇದರಲ್ಲಿರುವುದು ಹಿಂದೀ ಸಾಮ್ರಾಜ್ಯಶಾಹಿಯ ಮನಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ
ಹಿಂದಿಯೊಂದಕ್ಕೆ ಮಾತ್ರಾ ಮಾನ್ಯತೆ
ಒಟ್ಟಾರೆ ಭಾರತದ ಭಾಷಾನೀತಿಯು ಸ್ಪಷ್ಟವಾಗಿ ಹಿಂದಿಯೆನ್ನುವ ಒಂದು ಭಾಷೆಗೆ ಮಾತ್ರಾ ಪ್ರೋತ್ಸಾಹ ಕೊಡುವಂತಿದೆ. ಈ ಪ್ರೋತ್ಸಾಹ, ಹಿಂದಿ ಭಾಷಿಕ ಪ್ರದೇಶಗಳಿಗೆ ಮಾತ್ರಾ ಸೀಮಿತವಾಗಿದ್ದಿದ್ದರೆ ನಮ್ಮ ನುಡಿಗೂ ಹೀಗೆ ಪ್ರೋತ್ಸಾಹ ಕೊಡಿ ಅನ್ನಬಹುದಿತ್ತು. ಆದರೆ ಭಾರತ ಸರ್ಕಾರದ ಈ ಕ್ರಮಗಳು ಹಿಂದಿಯನ್ನು ನಮ್ಮ ನಾಡೊಳಗೆ ಪ್ರತಿಷ್ಠಾಪಿಸಲು ನೀಡುತ್ತಿರುವ ಪ್ರೋತ್ಸಾಹವಾಗಿದೆ. ತಾರತಮ್ಯದ ಭಾಷಾನೀತಿ, ವಿಶ್ವಸಂಸ್ಥೆಯ ಭಾಷಾನೀತಿಗೆ ವಿರುದ್ಧವಾಗಿರುವಂತೆ ಎದ್ದು ಕಾಣುತ್ತಿದೆ. ಹಾಗಾದರೆ ಭಾರತದ ಭಾಷಾನೀತಿ ಹೇಗಿರಬೇಕು ಎಂದರೆ...
ಭಾರತಕ್ಕೊಪ್ಪೋ ಭಾಷಾನೀತಿ
ಅನೇಕ ವೈವಿಧ್ಯತೆಗಳನ್ನು ಹೊಂದಿರುವ ಭಾರತವನ್ನು ಅವುಗಳ ವೈವಿಧ್ಯತೆ/ ಅನನ್ಯತೆಗಳನ್ನು ಉಳಿಸಿಕೊಳ್ಳಲು ಪೂರಕವಾಗುವಂತೆ ನಮ್ಮ ಭಾಷಾನೀತಿ ಇರಬೇಕಾಗಿದೆ. ವಿಶ್ವಸಂಸ್ಥೆಯು ಘೋಷಿಸಿರುವ ಭಾಷಾ ಹಕ್ಕುಗಳು ಭಾರತದ ಪ್ರತಿಯೊಂದು ಭಾಷಾ ಸಮುದಾಯಕ್ಕೆ ದೊರಕಿಸಿಕೊಡುವಂತಹ ಭಾಷಾನೀತಿ ರೂಪುಗೊಳ್ಳಬೇಕಾಗಿದೆ. ಭಾರತದ ಪ್ರತಿಯೊಂದು ಭಾಷೆಗೂ ರಾಜ್‌ಭಾಷೆಯ ಪಟ್ಟ ಸಿಗಲಿ. ರಾಜ್ಯರಾಜ್ಯಗಳ ನಡುವಿನ ವಹಿವಾಟು ಆಯಾ ರಾಜ್ಯಗಳ ನುಡಿಗಳಲ್ಲಾಗಲಿ. ಪ್ರತಿರಾಜ್ಯಕ್ಕೂ ತನ್ನ ನುಡಿಯಲ್ಲಿ ತನ್ನ ಆಡಳಿತ, ಶಿಕ್ಷಣ, ಬದುಕುಗಳನ್ನು ಕಟ್ಟಿಕೊಳ್ಳಲು ಪೂರಕವಾಗುವಂತಹ ಭಾಷಾನೀತಿ ಭಾರತದ್ದಾಗಲಿ. ಹೀಗೆ ಪ್ರತಿಯೊಂದು ಪ್ರದೇಶದಲ್ಲೂ ಆಯಾ ಪ್ರದೇಶದ ಭಾಷೆಗೆ ಸಾರ್ವಭೌಮತ್ವವನ್ನು ನಿಜವಾಗಿಯೂ ತಂದುಕೊಡಬಲ್ಲಂತೆ ಭಾರತದ ಭಾಷಾನೀತಿಯನ್ನು ಮರು ರೂಪಿಸಬೇಕಾಗಿದೆ. ಒಟ್ಟಾರೆ ಎಂಟನೇ ಪರಿಚ್ಛೇದದಲ್ಲಿರುವ ಎಲ್ಲಾ ಭಾಷೆಗಳಿಗೂ ಸಮಾನ ಸ್ಥಾನಮಾನ ನೀಡಬೇಕಾಗಿದೆ.
ಪ್ರಗತಿಯ ಪಯಣದಲ್ಲಿ ಪ್ರತಿಯೊಂದು ಭಾಷಾ ಸಮುದಾಯವೂ, ವ್ಯಕ್ತಿಯೂ, ಜನಗಳೂ ಪಾಲುಗೊಳ್ಳಲು ಅನುಕೂಲಕರವಾದ, ಪೂರಕವಾಗುವಂತಹ, ಭಾಷಾ ವೈವಿಧ್ಯಗೆ ಧಕ್ಕೆ ತರದಂತಹ, ಸಂಪರ್ಕ ಸಂವಹನ ಸಾಧಿಸಲು ಪೂರಕವಾಗಿರುವ, ಎಲ್ಲಾ ಭಾಷಿಕ ಸಮುದಾಯಗಳ ಸರ್ವತೋಮುಖ ಏಳಿಗೆಗೆ, ಪರಿಸರಕ್ಕೆ, ಸಂಸ್ಕೃತಿಗೆ ಪೂರಕವಾಗುವಂತೆ ಪ್ರತಿಯೊಂದು ಭಾಷಾ ಸಮೂಹವೂ ತೊಡಗಿಸಿಕೊಳ್ಳಲು ಸಾಧ್ಯವಾಗುವಂತಹ ಭಾಷನೀತಿಯನ್ನು ರೂಪಿಸಲಿ.
ಕೊನೆಹನಿ: ಇಂತಹ ಭಾಷಾನೀತಿಯನ್ನು ರೂಪಿಸಲು ಭಾರತ ದೇಶದಲ್ಲಿ ಸಂವಿಧಾನಕ್ಕೆ ಅಗತ್ಯವಿರುವ ತಿದ್ದುಪಡಿ ಮಾಡುವುದರಲ್ಲಿ ತಪ್ಪೇನೂ ಇಲ್ಲ.

ಕರ್ನಾಟಕದಲ್ಲಿ ಗಾಂಧೀಜಿಯವರ ಸ್ವಾರಸ್ಯ-ಪ್ರಸಂಗ


ಸಂಗನಾಳಮಠ ಯು.ಎನ್.

ಕರ್ನಾಟಕಕ್ಕೆ ಗಾಂಧೀಜಿಯವರು ಹನ್ನೆರಡು ಸಲ ಭೇಟಿಕೊಟ್ಟರು. ಆ ದಿನಗಳಲ್ಲಿ ಗಾಂಧೀಜಿಯವರ ರಸ ಪ್ರಸಂಗಗಳನ್ನು ಮೆಲುಕು ಹಾಕಿ ಗಾಂಧೀಜಿಯವರನ್ನು ಸ್ಮರಿಸೋಣ.
ಗಾಂಧಿಯವರ ಪ್ರಥಮ ಭೇಟಿ ೧೯೧೫ರ ಮೇ ೧೮ ಬೆಂಗಳೂರಿಗೆ ಬಂದರು. ಕಾಠೆವಾಡಿ ಅಂಗಿ, ಧೋತರ ಪೇಟಾ ತೊಟ್ಟಿದ್ದ ಗಾಂಧಿಯವರೊಂದಿಗೆ, ಕೆಂಪು ಅಂಚಿನ ಬಿಳಿ ಸೀರೆ ಉಟ್ಟ ಪತ್ನಿ ಕಸ್ತೂರಬಾ ಇದ್ದರು. ಒಂದು ಕೈಯಲ್ಲಿ ಒಂದು ನೀರಿನ ಹೂಜಿ ಹಿಡಿದುಕೊಂಡು ರೈಲಿನಿಂದ ಇಳಿದರು.
ವಿದ್ಯಾರ್ಥಿಗಳು ಸಾರೋಟನ್ನು ನಾವೇ ಎಳೆಯುತ್ತೇವೆ ಎಂದಾಗ ನರವಾಹನರಾಗಲು ಒಪ್ಪದೇ ಗಾಂಧಿ ನಡೆದೇ ಬಿಡಾರಕ್ಕೆ ಮೆರವಣಿಗೆಯೊಂದಿಗೆ ಹೋದರು. ಬಿಡಾರ ಇದ್ದದ್ದು ಆನಂದರಾವ್ ಸರ್ಕಲ್ ಹತ್ತಿರ ಶೇಷಾದ್ರಿ ರಸ್ತೆಯಲ್ಲಿದ್ದ ಹೊಸ ಬಂಗಲೆ ಬಿ.ಕೆ.ಶ್ರೀನಿವಾಸ್ ಅಯ್ಯಂಗಾರ್ ಅವರದು. ಅವರ ಊಟ ಶೇಂಗಾಬೀಜ, ಹಣ್ಣುಗಳು. ಈಗಿನ ಆರ್ಟ್ಸ್ ಸೈನ್ಸ್ ಕಾಲೇಜ್ ಸಭಾಭವನದಲ್ಲಿ ಸಾರ್ವಜನಿಕ ಸಭೆ. ಗಾಂಧಿ ಗೋಖಲೆಯವರ ಭಾವಚಿತ್ರ ಅನಾವರಣ ಮಾಡಿದರು. ಈ ಚಿತ್ರ ಈಗ ಗೋಖಲೆ ಸಾರ್ವಜನಿಕ ಸಂಸ್ಥೆಯಲ್ಲಿದೆ.
ನಂತರ ಸಂಜೆ ಲಾಲ್‌ಬಾಗಿನ ಗಾಜಿನ ಮನೆಯಲ್ಲಿ ಸಾರ್ವಜನಿಕ ಸಭೆ. ಅಲ್ಲಿ ಗಾಂಧೀಜಿ ಮಾತನಾಡಿದರು.
ಎರಡನೆಯ ಭೇಟಿ ೧೯೨೪ರಲ್ಲಿ ಬೆಳಗಾಂ ಕಾಂಗ್ರೆಸ್ ಅಧಿವೇಶನ. ಪ್ರಸಿದ್ಧ ಆಸ್ಥಾನ ವಿದ್ವಾಂಸ ವೀಣೆ ಶೇಷಣ್ಣನವರು ಗಾಂಧಿಯವರ ಎದುರಿಗೆ ಕಾಲು ಘಂಟೆ ಕಾಪಿ ರಾಗ ನುಡಿಸಿದರು. ಗಾಂಧೀಜಿ ಆನಂದದಿಂದ ಏಕಚಿತ್ತರಾಗಿ ಆಲಿಸಿದರು. ಸಂಗೀತದ ಸಮಯ ಮುಗಿಯಿತು. ಗಾಂಧಿ ಅಂದು ಮೌನ. ಒಂದು ಚೀಟಿ ಬರೆದು ಕಾರ್ಯದರ್ಶಿ ಮಹಾದೇವ ದೇಸಾಯಿಗೆ ಕೊಟ್ಟರು. ’ಸಂಗೀತ ಮುಂದುವರಿಯಲಿ’ ಎಂದಷ್ಟೇ ಇದ್ದಿತು. ಮಹದೇವ ಅವರು ಈಗ ನಿಮಗೆ ಮೀಟಿಂಗ್ ಇದೆ ಎಂದಾಗ ಗಾಂಧಿ ಮತ್ತೆ ಬರೆದರು. meeಣiಟಿg ಛಿಚಿಟಿ ತಿಚಿಟಿಣ ಮತ್ತೆ ಕಾಲು ಘಂಟೆ ಸಂಗೀತ. ಆ ಮೇಲೆ ಇನ್ನೊಂದು ಚೀಟಿ ಬರದರು. "ಅವರಿಗೆ ತಿಳಿಸು. ಮನಸ್ಸಿಗೆ ಬಹಳ ಶಾಂತಿ ಕೊಟ್ಟಿದ್ದಾರೆ" ಶೇಷಣ್ಣನವರ ಸಂತೋಷಕ್ಕೆ ಪಾರವೇ ಇಲ್ಲ.
೧೯೨೭ರಲ್ಲಿ ಗಾಂಧೀಜಿ ಬೆಂಗಳೂರಿನ ಟಾಟಾ ವಿಜ್ಞಾನ ಮಂದಿರಕ್ಕೆ ಭೇಟಿ ಕೊಟ್ಟಾಗ, ವಿಜ್ಞಾನಿಗಳಿಗೆ ಹೇಳಿದರು- "ವಿಜ್ಞಾನಿಗಳ ಪ್ರಯೋಗ ಶಾಲೆ ಸೈತಾನನ ವರ್ಕ್‌ಶಾಪ್ ಎಂದು ರಾಜಾಜಿ ಹಾಸ್ಯ ಮಾಡುತ್ತಾರೆ. ನಿಮ್ಮ ಸಂಶೋಧನೆಗಳು ಬಡವರ ಯೋಗಕ್ಷೇಮವನ್ನೇ ಗುರಿಯಾಗಿ ಹೊಂದಿರದಿದ್ದರೆ ನಿಮ್ಮ ಪ್ರಯೋಗಶಾಲೆ ಸೈತಾನನ ಕರ್ಮಾಗಾರವೇ ಸರಿ’.
೧೯೨೭ ಆಗಸ್ಟ್ ೨೭ ಬೆಂಗಳೂರಿನ ದೇಶಿ ವಿದ್ಯಾಶಾಲೆಯಲ್ಲಿ ವ್ಯಾಯಾಮ ಘಟಕ ಉದ್ಘಾಟಿಸಿದರು. ಈ ಸಮಾರಂಭದಲ್ಲಿ ಶ್ರೀಮತಿ ತಿರುಮಲೆ ರಾಜಮ್ಮನವರು ಗಾಂಧೀಜಿಗೆ ಪ್ರಿಯವಾದ ’ವೈಷ್ಣವ ಜನತೋ’ ಗೀತೆಯನ್ನು ’ಮಾಯಾಮಾಳವಗೌಳ’ ರಾಗದಲ್ಲಿ ಹಾಡಿದರು. ಗಾಂಧಿ ಸಂತೋಷ ಹೊಂದಿದರು. ಮರುದಿನ ಗಾಂಧಿ ಮೌನ. ಆದರೆ ರಾಜಮ್ಮನವರಿಗೆ ತಮ್ಮ ಬೀಡಾರಕ್ಕೆ ಬಂದು ಹಾಡಲು ಹೇಳಿದರು. ಮರುದಿನ ರಾಜಮ್ಮನವರು ಬಂದಾಗ ಹರೀಂದ್ರನಾಥ ಚಟ್ಟೋಪಾಧ್ಯಾಯರು ತಮ್ಮ ಪತ್ನಿ ಕಮಲಾದೇವಿಯೊಡನೆ ಬಂದಿದ್ದರು. ಕೈಯಲ್ಲಿ ತಂಬೂರಿ.
ರಾಜಮ್ಮನವರು ಹಾಡಿದರು. ನಂತರ ಹರೀಂದ್ರನಾಥರು ಹಾಡಿದರು. ಪುನಃ ರಾಜಮ್ಮನವರು ವೈಷ್ಣವಜನತೋ ಶ್ರೀರಾಗದಲ್ಲಿ ಹಾಡಿದರು. ಮತ್ತೆ ಹರೀಂದ್ರನಾಥರು. ಗಾಂಧಿ ಮುಖದಲ್ಲಿ ಸಂತೃಪ್ತಿ. ಗಾಂಧೀಜಿ ಒಂದು ಚೀಟಿಯಲ್ಲಿ ಈ ರೀತಿ ಬರೆದು ಕಮಲಾದೇವಿಗೆ ಕೊಟ್ಟರು "ಇಬ್ಬರು ನಿಪುಣರು ಕಲಾ ಕೌಶಲ್ಯ ತೋರಿಸಿದ್ದಾರೆ. ಪತಿ (ಹರೀಂದ್ರನಾಥ)ಯ ಕೌಶಲ್ಯ ಕಂಡು ಸತಿ ಹಿಗ್ಗುತ್ತಿದ್ದಾಳೆ ಸತಿ (ರಾಜಮ್ಮ)ಯ ಕೌಶಲ್ಯ ಕಂಡು ಪತಿ (ತಿತಾಶರ್ಮ) ಹಿಗ್ಗುತ್ತಿದ್ದಾರೆ".
ಗಾಂಧೀಜಿ ನಂದಿ ಬೆಟ್ಟದ ಮೇಲೆ ವಿಶ್ರಾಂತಿ ಹೊಂದುತ್ತಿದ್ದಾಗ ಸರ್ ಸಿವಿ ರಾಮನ್ ಅವರು ಸ್ವಿಝರ್‌ಲೆಂಡಿನ ಪ್ರೊ||ರಹಂ ಅವರನ್ನು ಭೇಟಿ ಮಾಡಿಸಿ ಹೇಳಿದರು. "ಇವರು ಒಂದು ಕೀಟವನ್ನು ಕಂಡು ಹಿಡಿದಿದ್ದಾರೆ.
ಅದು ೧೨ ವರ್ಷ ನಿರಾಹಾರ ಇರಬಹುದು. ಮುಂದಿನ ಸಂಶೋಧನೆಗಾಗಿ ಭಾರತಕ್ಕೆ ಬಂದಿದ್ದಾರೆ" ಆಗ ಗಾಂಧೀಜಿ "ಅದರ ರಹಸ್ಯವನ್ನು ಕಂಡುಹಿಡಿದರೆ ನನಗೆ ತಿಳಿಸಿ".
೧೯೨೭ ಗಾಂಧೀಜಿ ಕುಮಾರಕೃಪದಲ್ಲಿ ತಂಗಿದ್ದರು. ಆಗ ಖಾದಿ ವಸ್ತುಪ್ರದರ್ಶನ ಏರ್ಪಡಿಸಬೇಕೆಂದು ರಾಜಾಜಿ ಅಪೇಕ್ಷಿಸಿದರು.
೩.೭.೨೭ ರಂದು ಉದ್ಘಾಟನಾ ಭಾಷಣ ಮಾಡುತ್ತಾ-".... ಭಾರತದ ಮಿಲಿಯನ್ ಗಟ್ಟಲೆ ಅರೆಉಂಡ ಮೂಕ ಜನರ ಸ್ವಪ್ರೇರಿತ ಪ್ರತಿನಿಧಿ ಆಗಿ ನಾನು ನಿಮ್ಮ ಮುಂದೆ ನಿಂತಿದ್ದೇನೆ. ಆ ಜನರನ್ನೇ ದಿ| ದೇಶಬಂಧು ಚಿತ್ತರಂಜನದಾಸರು ’ದರಿದ್ರನಾರಾಯಣ’ ಎಂದು ಕರೆದಿದ್ದಾರೆ. ನೀವು ಕೊಳ್ಳುವ ಖಾದಿಗೆ ಬೆಂಬಲವಾಗಿ ನೀವು ಕೊಡುವ ಬಿಡಿಗಾಸು ನೀವು ಮಿಲಯಗಟ್ಟಲೆ ಇರುವ ಬಡಜನರಿಗೆ ತೋರಿಸಿದ ಸ್ಪಷ್ಟ ಸಹಾನುಭೂತಿ"
೧೯೩೪ರಲ್ಲಿ ಗಾಂಧೀಜಿ ಖಾದಿ ಪ್ರಚಾರಕ್ಕೆ ಕೊಡಗಿಗೆ ಬಂದಿದ್ದರು. ಬಹಿರಂಗ ಸಭೆಯಲ್ಲಿ ಗೌರಮ್ಮ ತನ್ನ ಪತಿಯ ಒಪ್ಪಿಗೆಯಿಂದ ತನ್ನ ಒಡವೆಯನ್ನು ಖಾದಿ ನಿಧಿಗೆ ಅರ್ಪಿಸಿದರು. ಆಗ ಸ್ಫೂರ್ತಿಯಿಂದ ಮತ್ತೊಬ್ಬ ಮಹಿಳೆ ತನ್ನ ಬಂಗಾರದ ಬಳೆಯನ್ನು ಕೊಟ್ಟಳು. ಅವಳ ಗಂಡ ಅಲ್ಲಿಯೇ ನಿಂತಿದ್ದನು. ಆಗ ಗಾಂಧೀಜಿ ಕೇಳಿದರು. ನಿಮ್ಮ ಹೆಂಡತಿಗೆ ಬಳೆ ಕೊಡಲು ಒಪ್ಪಿಗೆ ಕೊಟ್ಟಿರುವಿರಾ? ಆಗ ಅವಳ ಗಂಡ ’ಅನುಮತಿ ಕೊಟ್ಟಿರುವೆ. ಇಷ್ಟಾಗಿ ಒಡವೆ ಅವಳದಲ್ಲವೇ?’ ಗಾಂಧೀಜಿ ’ಎಲ್ಲ ಗಂಡಂದಿರೂ ಇಷ್ಟು ವಿವೇಚನೆಯಿಂದ ನಡೆಯುವುದಿಲ್ಲ ನಿಮ್ಮ ವಯಸ್ಸು ಎಷ್ಟು?’ ಎಂದಾಗ ಮೂವತ್ತು ಎಂದನು. ಆಗ ಗಾಂಧೀಜಿ "ನಿಮ್ಮ ವಯಸ್ಸಿನಲ್ಲಿ ನಾನು ಇಷ್ಟು ವಿವೇಕದಿಂದ ನಡೆದುಕೊಳ್ಳಲಿಲ್ಲ. ನನಗೆ ವಿವೇಕ ಕಲಿಸಿದವಳು ನನ್ನ ಹೆಂಡತಿ".
ಗಾಂಧೀಜಿ ನಂದಿ ಬೆಟ್ಟದಲ್ಲಿದ್ದಾಗ ಬಾಲಿಕಾ ಪಾಠಶಾಲೆಯ ಹುಡುಗಿಯರು ಗಾಂಧೀಜಿ ದರ್ಶನಕ್ಕೆ ಬಂದರು. ಪ್ರಾಚಾರ್ಯರು ಗಾಂಧೀಜಿಗೆ ಹುಡುಗಿಯರು ನೂಲುವುದನ್ನು ಕಲಿತಿದ್ದಾರೆ ಎಂದರು.
ಮಕ್ಕಳು ಹಾಡಿದರು. ನಂತರ ಗಾಂಧೀಜಿ ಮಕ್ಕಳಿಗೆ ಕೇಳಿದರು ’ಖಾದಿ ಎಂದರೆ ಏನು?’ ಅದೇನು ಪಕ್ಷಿಯೇ ಆಟದ ವಸ್ತುವೇ? ಮಕ್ಕಳು ನಕ್ಕು ಒಂದೊಂದಾಗಿ ಉತ್ತರಿಸಿದರು.
-ಅದು ಒಂದು ಬಟ್ಟೆ
ಗಾಂಧಿ- ಎಂಥ ಬಟ್ಟೆ?
-ಒರಟು ಬಟ್ಟೆ
ಗಾಂಧಿ-ಆ ಬಟ್ಟೆ ಯಾಕೆ ಉಡಬೇಕು?
-ಬಾಳಿಕೆ ಬರುತ್ತದೆ
ಗಾಂಧಿ- ಅದು ಸರಿಯಾದ ಕಾರಣವಲ್ಲ
-ಆ ಬಟ್ಟೆ ಒಗೆದರೆ ಬೆಳ್ಳಗೆ ಆಗುತ್ತದೆ.
ಗಾಂಧೀಜಿ- ಈ ಖಾದಿ ನೂಲುವವರು ಬಡವರು. ಆ ಜನರಿಗೆ ಓದು-ಬರಹವಿಲ್ಲ. ಹೊಟ್ಟೆ ತುಂಬ ಹಿಟ್ಟಿಲ್ಲ, ಹಾಲಿಲ್ಲ. ಇವರು ಖಾದಿ ನೂಲುತ್ತಾರೆ. ಇದರಿಂದ ಅವರಿಗೆ ಎರಡಾಣೆ ಸಿಗುತ್ತದೆ. ಅದೇ ಅವರಿಗೆ ಭಾಗ್ಯ. ಆ ಎರಡಾಣೆಗೆ ಉಪ್ಪು, ಮೆಣಸಿನಕಾಯಿ, ಹಾಲು, ಹಣ್ಣು ಯಾವುದು ಬೇಕು ಅದನ್ನು ಕೊಳ್ಳುತ್ತಾರೆ. ಗೊತ್ತಾಯಿತೇ ಖಾದಿ ಏಕೆ ಕೊಳ್ಳಬೇಕೆಂದು".ಮಕ್ಕಳಿಗೆ ಆಶ್ಚರ್ಯವಾಯಿತು.
ಗಾಂಧೀಜಿ ಒಮ್ಮೆ ಶಿವಮೊಗ್ಗಕ್ಕೆ ಬಂದಿದ್ದರು. ಅವರ ಕಾರ್ಯಕಲಾಪದ ನಂತರ ಜತೆಯಲ್ಲಿದ್ದವರು ಸಮೀಪದಲ್ಲಿದ್ದ ’ಜೋಗಜಲಪಾತ’ದ ಬಗ್ಗೆ ವಿವರಿಸುತ್ತ ಇಂಥ ದೊಡ್ಡ ಜಲಪಾತ ನೀವು ನೋಡಿರುವುದಿಲ್ಲ ಎಂದರು. ಆಗ ಅವರನ್ನು ಮಧ್ಯದಲ್ಲಿಯೇ ತಡೆದು" ಇದಕ್ಕಿಂತ ದೊಡ್ಡ ಅದ್ಭುತ ಜಲಪಾತ ನೋಡಿದ್ದೇನೆ. ನೀವೂ ನೋಡಿರುವಿರಿ. ಅದರ ಮುಂದೆ ಜೋಗದ ಜಲಪಾತ ಎಲ್ಲಿಯದು?" ಆಗ ಅವರು ಪೆಚ್ಚಾಗಿ ನಾವು ನೋಡಿರುವ ಆ ಜಲಪಾತ ಯಾವುದು? ಎಂದು ಪ್ರಶ್ನಿಸಿದಾಗ ಬಾಪೂ ಉತ್ತರಿಸಿದರು "ಆಕಾಶದಿಂದ ಸುರಿಯುವ ಧಾರಕಾರ ಮಳೆ"

ಕಲಿಕೆಯ ಪ್ರಕ್ರಿಯೆ

ಡಾ||ಎಚ್.ಡಿ.ಚಂದ್ರಪ್ಪಗೌಡ

ಎಳೆಯರು ಇಲ್ಲವೆ ವಯಸ್ಕರೆ ಆಗಿರಲಿ ಯಾವುದೇ ಒಂದು ವಿಷಯವನ್ನು ಮೊದಲು ಹೇಗೆ ಕಲಿತು ಕೊಳ್ಳುತ್ತಾರೆ ಎಂಬ ಮೂಲಭೂತ ಪ್ರಕ್ರಿಯೆಯತ್ತ ಗಮನ ಹರಿಸುವುದು ಉಚಿತವೆನಿಸುತ್ತದೆ. ಮಾನವ ಶಿಶು ಜನಿಸಿದಾಕ್ಷಣ ಕಣ್ಣುಬಿಟ್ಟ ಒಡನೆಯೇ ತನ್ನ ಸುತ್ತಲೂ ಆವರಿಸಿಕೊಂಡಿರುವ ಬೆಳಕಿನತ್ತ ಗಮನಹರಿಸುತ್ತದೆ. ಹಾಗೆಯೇ ಆಗಾಗ್ಗೆ ಕೇಳಿ ಬರುವ ಸದ್ದುಗದ್ದಲದ ಅರಿವು ಉಂಟಾಗುತ್ತದೆ. ಮೊದಲಿಗೆ ಅಂತಹ ಬೆಳಕು, ಶಬ್ದಗಳಿಗೆ ಸ್ವಾಭಾವಿಕ ಹಾಗೂ ಸ್ವಯಂಪ್ರೇರಿತವಾಗಿ ಪ್ರತಿಕ್ರಿಯಿಸುತ್ತದೆ. ಅನಂತರ ಹೊರಗಿನ ವಾತಾವರಣದಿಂದ ರಕ್ಷಣೆ ನೀಡುವ ಹಾಲುಣಿಸುವ ಮಾತೆಯತ್ತ ಆಕರ್ಷಿತವಾಗುತ್ತದೆ. ಮಾತೆ ತನ್ನ ಸ್ತನಗಳಿಗೆ ಶಿಶುವಿನ ಸ್ಪರ್ಶ ಮಾಡಿದಾಗ ಬಾಯಿ ತೆರೆದು ಮೊಲೆಗೆ ಬಾಯಿ ಹಾಕಿ ಹಾಲು ಚೀಪಲಾರಂಭಿಸುತ್ತದೆ. ಮುಂದಿನ ದಿನಗಳಲ್ಲಿ ಹತ್ತಿರ ಸುಳಿದಾಡುವ ತಾಯಿ, ತಂದೆ ಮತ್ತಿತರರು ಮಾತಾಡಿಕೊಳ್ಳುತ್ತಿರುವುದನ್ನು ತನ್ನದೇ ರೀತಿಯಲ್ಲಿ ಅರ್ಥೈಸಿಕೊಳ್ಳುತ್ತದೆ. ದಿನ ಕಳೆದಂತೆ ಅವರನನ್ನುಸರಿಸುವ ಪ್ರಯತ್ನ ಮಾಡಬಹುದು. ಇನ್ನು ಅದರ ಬೆಳವಣಿಗೆ ಮುಂದುವರಿದಂತೆಲ್ಲಾ ಅದು ಮನೆಯ ಒಂದು ವ್ಯಕ್ತಿಯಾಗಿ ಬಿಡುತ್ತದೆ. ಅದು ಮತ್ತಷ್ಟು ಮುಂದುವರಿದಂತೆಲ್ಲಾ ಅದು ಮನೆಯವರಾಡುವ ಮಾತುಗಳನ್ನನುಸರಿಸಿ ಮಾತೃಭಾಷೆಯಲ್ಲಿ ತೊದಲ್ನುಡಿ ಪುನರುಚ್ಚರಿಸುವ ಪ್ರಯತ್ನ ಮಾಡುತ್ತದೆ. ಮನೆಯಲ್ಲಿನ ಇತರ ಮಕ್ಕಳು ಓದಿ, ಬರೆಯುವ ಆಟ, ಊಟ, ಓಟ ಮುಂತಾದ ಶಬ್ದಗಳನ್ನು ನಿರಾಯಾಸವಾಗಿ ಅರ್ಥಮಾಡಿಕೊಳ್ಳುತ್ತದೆ.
ಮುಂದಿನ ಎರಡು-ಮೂರು ವರ್ಷಗಳಲ್ಲಿ ಮಗುವನ್ನು ಶಿಶುವಿಹಾರ/ನರ್ಸರಿಗಳಿಗೆ ಸೇರಿಸಬಹುದು. ಮೊದಲೇ ಅಪರಿಚಿತ ಪರಿಸರವಿರುವ ಶಾಲೆಯಲ್ಲಿ ಪುಟ್ಟ ಕಂದಮ್ಮಗಳಿಗೆ ಅಕ್ಷರಾಭ್ಯಾಸ ಮಾಡುವ ಪ್ರಯತ್ನಗಳು ಆರಂಭವಾಗುತ್ತದೆ. ಜನ್ಮದತ್ತವಾಗಿರುವ ಮಾತೃಭಾಷೆಯ ಅ,ಆ,ಇ,ಈ ಕಲಿಸುವ ಬದಲು ತನಗೆ ಪರಿಚಯವಿರದ ಇಂಗ್ಲೀಷಿನ ಎ ಬಿ ಸಿ ಡಿಗಳನ್ನು ಒತ್ತಾಯಪೂರ್ವಕವಾಗಿ ಕಲಿಸುವ ಪ್ರಯತ್ನ ಮಾಡಲಾಗುತ್ತದೆ. ಅರ್ಥವಾಗದಿದ್ದರೂ ಹೇಳಿದ್ದನ್ನೇ ಪುನರುಚ್ಚರಿಸುವ ಗಿಣಿಗಳಂತೆ ಬಾಯಿಪಾಠ ಮಾಡಿಸಲಾಗುತ್ತದೆ. ದಿನಕಳೆದಂತೆ ಕ್ಯಾಟ್, ರ‍್ಯಾಟ್, ಡಾಗ್‌ಗಳಂಥ ಪ್ರಾಣಿಗಳ ಹೆಸರುಗಳನ್ನು ಪುನರುಚ್ಚರಿಸುವ ಪ್ರಯತ್ನ ಮುಂದುವರಿಯುತ್ತದೆ. ಅದನ್ನೇ ಮಾತೃಭಾಷೆಯಲ್ಲಿ ಬೆಕ್ಕು, ಇಲಿ, ನಾಯಿಯೆಂದು ಹೇಳಿಕೊಡುವಂತಾದರೆ ಪುಟ್ಟ ಕಂದಮ್ಮ ದಿನನಿತ್ಯ ನೋಡುವ ಪ್ರಾಣಿಗಳನ್ನು ನೆನಪಿನಲ್ಲಿಡಲು ಸುಲಭವಾಗುವುದಿಲ್ಲವೆ? ಅದೇ ರೀತಿ ಸರಳ ಹಾಗೂ ಸುಲಭವಾಗಿ ಅರ್ಥವಾಗುವ ಕನ್ನಡದ ಶಿಶುಪ್ರಾಸಗಳು ಯಥೇಚ್ಛವಾಗಿದ್ದರೂ ಬಣ್ಣದ ತಗಡಿನ ತುತ್ತೂರಿ, ನಾಯಿಮರಿ ನಾಯಿಮರಿ ತಿಂಡಿಬೇಕೆ, ತೀರ್ಥಬೇಕೆ? ಬದಲಿಗೆ ಇಂಗ್ಲೀಷಿನ ಹಿಕೋರಿ ಹಿಕೋರಿ ಡಾಕ್. ಓಲ್ಡ್ ಮದರ್ ಹಬ್ಬರ್ಡ್ ಎಂಬ ರೈಮ್‌ಗಳಿಗೆ ಅದೇಕೆ ಅಷ್ಟು ವ್ಯಾಮೋಹವೆಂಬುದು ಅರ್ಥವಾಗುತ್ತಿಲ್ಲ. ಮಾತೆಯೊಬ್ಬಳು ರಾತ್ರಿಯ ಚಂದಿರನನ್ನು ತನ್ನ ಮಗುವಿಗೆ ತೋರಿಸಿ ಅಲ್ಲಿ ನೋಡು ಮೂನು ಎನ್ನುವುದನ್ನು ನೋಡಿದವರಿಗೆ ಏನೆನಿಸಬೇಡ? ಇದರಿಂದ ಸಹಜವಾಗಿ ಕಲಿಯುವ ಪ್ರಕ್ರಿಯೆಯನ್ನು ತಿರುವು ಮುರುವು ಮಾಡಿದಂತಾಗುವುದಿಲ್ಲವೆ? ಇಂತಹ ಅಭ್ಯಾಸವನ್ನು ಮಾಡುತ್ತಿರುವುದರಿಂದ ಮಗುವಿನ ಸ್ವಾಭಾವಿಕ ಕಲಿಕೆಯ ಪ್ರಕ್ರಿಯೆಗೆ ಸ್ವಲ್ಪಮಟ್ಟಿನ ಅಡಚಣೆ ಉಂಟಾಗುತ್ತದೆ. ಅಂದರೆ ಭಾಷೆ ಇಲ್ಲವೇ ಹೊಸ ವಿಚಾರವನ್ನು ಕಲಿಯುವಾಗ ಅದು ಮನಸ್ಸಿನಲ್ಲಿ (ಮೆದುಳಿನಲ್ಲಿ) ಅವನ ಅರಿವಿಗೆ ಬರದೆ ತಂತಾನೆ ಅವನ ಮಾತೃಭಾಷೆಯಲ್ಲಿ ಅಚ್ಚೊತ್ತಾಗುತ್ತದೆ. ಮುಂದೆ ಉದ್ದೇಶಿತ ಭಾಷೆಯಲ್ಲಿ (ಇಂಗ್ಲಿಷ್, ಹಿಂದಿ ಇತ್ಯಾದಿ) ಅರ್ಥೈಸುವಲ್ಲಿ ಒಂದು ರೀತಿಯ ಕಸರತ್ತು ಜರುಗಬೇಕಾಗುತ್ತದೆ. ಅದನ್ನು ಕಲಿಕೆಯ ಕಸರತ್ತು ಎನ್ನಬಹುದು. ಆ ಪ್ರಕ್ರಿಯೆ ಮೆದುಳಿನಲ್ಲಿ ಜರುಗುವಾಗ ಸ್ವಲ್ಪ ಶ್ರಮ ಹಾಗೂ ಶಕ್ತಿಯೂ ವ್ಯಯವಾಗುತ್ತದೆ.
ಅಮೆರಿಕಾದಲ್ಲಿ ಇತ್ತೀಚೆಗೆ ಜರುಗಿದ ಸಂಶೋಧನಾ ಫಲಿತಾಂಶ ಇಲ್ಲಿ ಗಮನಾರ್ಹ. ಅಲ್ಲಿ ಇಂಗ್ಲೀಷ್ ಮಾತೃ ಭಾಷೆಯವರು ಬಹುಸಂಖ್ಯಾತರಾಗಿದ್ದಾರೆ. ಅವರಲ್ಲದೆ ಪ್ರಪಂಚದ ವಿವಿಧ ದೇಶಗಳಿಂದ (ಉದಾಹರಣೆಗೆ: ಭಾರತ, ಚೀನಾ, ಜಪಾನು, ಆಫ್ರಿಕಾಗಳಿಂದ) ವಲಸೆ ಬಂದು ನೆಲಸಿದವರೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಹಾಗೆ ವಲಸೆ ಬಂದವರ ಮಕ್ಕಳಿಗೆ ಇಂಗ್ಲಿಷನ್ನು ಅಗತ್ಯವಾಗಿ ಕಲಿಸಬೇಕಾಗುತ್ತದೆ. ನೇರವಾಗಿ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತವರಿಗೂ, ಅವರವರ ಮಾತೃಭಾಷಾ (ಹಿಂದಿ, ತಮಿಳು, ಚೀಣೀ...) ಮಾಧ್ಯಮಗಳಲ್ಲಿ ಕಲಿತವರಿಗೂ ಸಂವೈದ್ಯವಾದ ವ್ಯತ್ಯಾಸವನ್ನು ಗುರುತಿಸಲು ಸಾಧ್ಯವಾಯಿತಂತೆ. ಅದೆಂದರೆ ಮಾತೃಭಾಷಾ ಮಾಧ್ಯಮದಿಂದ ಇಂಗ್ಲಿಷ್ ಕಲಿತವರೂ ಮುಂದೆ ಇಂಗ್ಲಿಷಿನಲ್ಲಿ ಪ್ರಭುತ್ವ ಪಡೆಯುವಲ್ಲಿ ಇತರರಿಗಿಂತ ಮುಂದಿರುವುದೇ ಸಾಬೀತಾಗಿದೆಯಂತೆ. ಅದರಿಂದ ಹೊರದೇಶಗಳಿಂದ ವಲಸೆ ಬಂದಿರುವವವರು ತಮ್ಮ ಮಕ್ಕಳಿಗೆ ಅವರ ಮಾತೃಭಾಷಾ ಮಾಧ್ಯಮದಿಂದಲೇ ಇಂಗ್ಲೀಷ್ ಕಲಿಸುವುದಕ್ಕೆ ಖಾಸಗಿಯಾಗಿ ಕಲಿಸುವ ಏರ್ಪಾಡು ಮಾಡುತ್ತಿದ್ದಾರಂತೆ. ಇದರಿಂದ ನಮ್ಮ ದೇಶದಲ್ಲಿ ಮಾತೃಭಾಷೆಯ ಬದಲಿಗೆ ಇಂಗ್ಲಿಷಿನಂತಹ ಪರಭಾಷೆ ಮಾಧ್ಯಮದಲ್ಲಿ ಕಲಿಕೆಯನ್ನು ಆರಂಭಿಸುತ್ತಿರುವುದರ ಉದ್ದೇಶವೇನೆಂಬುದು ನಿಗೂಢವೆ ಸರಿ. ಮಾತೃಭಾಷೆಯ ಮಾಧ್ಯಮದ ಮೂಲಕವೇ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸಬೇಕೆಂಬ ಹಲವು ಭಾಷಾ ಪರಿಣತರು, ಮನೋವಿಜ್ಞಾನಿಗಳು, ರವೀಂದ್ರನಾಥ ಟ್ಯಾಗೋರ್, ಮಹಾತ್ಮಾ ಗಾಂಧಿಜೀಯವರಂಥ ದಾರ್ಶನಿಕರು ಹೇಳುವುದರಲ್ಲಿ ಸತ್ಯವಿದೆಯೆಂದೆನ್ನಬೇಕಾಗುತ್ತದೆ. ಆದುದರಿಂದ ನಮ್ಮ ದೇಶದಲ್ಲಿ ಇನ್ನೂ ಇಂಗ್ಲೀಷಿನಂತಹ ಪರಭಾಷೆಯಿಂದ ವ್ಯಾಪಕವಾಗಿ ಜರುಗುತ್ತಿರುವ ಈ ಪದ್ಧತಿಯನ್ನು ಸರ್ಕಾರ ಮತ್ತು ಜನಸಮುದಾಯದವರು ಮರುಪರಿಶೀಲನೆ ಮಾಡಬೇಕಾದ ಪರಿಸ್ಥಿತಿ ಸನ್ನಿಹಿತವಾಗಿದೆಯೆನ್ನಬಹುದು.
ಬೀದರ್ ಉರ್ದು ಶಾಲೆಯ ನಿದರ್ಶನ
ಮೊದಲಿನಿಂದಲೂ ಮಾತೃಭಾಷಾ ಮಾಧ್ಯಮ ಮೂಲಕ ಕಲಿಕೆಯನ್ನು ಆರಂಭಿಸುವ ಅನುಕೂಲತೆಯನ್ನು ಪ್ರಸ್ತಾಪಿಸಿರುವುದು ಕೇವಲ ತಾತ್ವಿಕವಾದುದು; ಕಾರ್ಯಸಾಧುವಾದುದಲ್ಲ ಎಂದೆನಿಸಲೂಬಹುದು. ಅದು ಹೇಗೆ ಕಾರ್ಯಸಾಧುವೆಂಬುದನ್ನು ಸೂಚಿಸಲು ನಮ್ಮ ಕನ್ನಡನಾಡಿನ ಬೀದರ್‌ನಲ್ಲಿ ಜರುಗುತ್ತಿರುವ ಒಂದು ಪ್ರಾತ್ಯಕ್ಷಿಕೆಯನ್ನು ಉದಾಹರಿಸುವುದು ಸೂಕ್ತವೆನಿಸುತ್ತದೆ.
ಕರ್ನಾಟಕದ ಉತ್ತರದ ತುದಿಯಲ್ಲಿರುವ ಬೀದರ್‌ನಲ್ಲಿ ೧೯೯೧ರಲ್ಲಿ ಷಾಹೀನ್ ಸ್ಕೂಲ್ ಎಂಬ ಅಲ್ಪಸಂಖ್ಯಾತರ ಉರ್ದು ಭಾಷೆಯ ಶಾಲೆಯೊಂದು ಪ್ರಾರಂಭವಾಯಿತು. ಪ್ರಾಥಮಿಕ ಒಂದನೇ ತರಗತಿಯಿಂದಲೇ ವಿಜ್ಞಾನದ ವಿಷಯಗಳೂ ಸೇರಿದಂತೆ ಇತರ ಎಲ್ಲಾ ವಿಷಯಗಳನ್ನು ಉರ್ದು ಭಾಷಾ ಮಾಧ್ಯಮದಲ್ಲೇ ಬೋಧಿಸುತ್ತಿರುವುದು ಅದರ ವಿಶೇಷತೆ; ಜೊತೆಯಲ್ಲಿ ಇಂಗ್ಲೀಷನ್ನು ಒಂದು ಪಠ್ಯದ ವಿಷಯವಾಗಿ-ಮಾಧ್ಯಮವಾಗಿ ಅಲ್ಲಿ-ಕಲಿಸುತ್ತಿರುವುದು ಆ ಶಾಲೆಯ ಇನ್ನೂ ಒಂದು ವೈಶಿಷ್ಟ್ಯ!
ಪದವಿ ಪೂರ್ವ ಹಂತದವರೆಗೂ ಈ ರೀತಿಯ ಕಲಿಕೆ ಮುಂದುವರಿಯಿತು. ಕಳೆದ ವರ್ಷ ಪದವಿ ಪೂರ್ವ ಪರೀಕ್ಷೆಗೆ ಕುಳಿತ ೧೭೩ ವಿದ್ಯಾರ್ಥಿಗಳಲ್ಲಿ ಶೇ.೭೦ರಷ್ಟು ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದರು. ಮುಂದೆ ವೃತ್ತಿಪರ ಕಲಿಕೆಗಾಗಿ ಸಿ.ಇ.ಟಿ.ಪರೀಕ್ಷೆಗೆ ಕುಳಿತ ಸುಮಾರು ಅರ್ಧದಷ್ಟು ವಿದ್ಯಾರ್ಥಿಗಳು ಮೆಡಿಕಲ್ ಮತ್ತು ಇಂಜಿನಿಯರಿಂಗ್ ಕೋರ್ಸುಗಳಿಗೆ ಸೇರುವ ಅರ್ಹತೆ ಪಡೆದುಕೊಂಡಿದ್ದರು. ಇಂತಹ ಅಚ್ಚರಿಯ ಫಲಿತಾಂಶ ಉರ್ದು ಮಾಧ್ಯಮದಲ್ಲಿ ಕಲಿತವರಿಂದ ಎಂದರೆ ನಂಬಲಸಾಧ್ಯವೆ! ಅಂತಹ ಉತ್ತಮ ಫಲಿತಾಂಶ ಸಾಧ್ಯವಾದುದಾದರೂ ಹೇಗೆ? ಅವರಿಗೆಲ್ಲಾ ಹತ್ತನೆ ತರಗತಿಯ ಪರೀಕ್ಷೆಗಳು ಮುಗಿದ ತಕ್ಷಣ ೪೦ ದಿನಗಳ ಕಾಲ ಹಿಂದಿನ ವರ್ಷಗಳಲ್ಲಿ ಉರ್ದುವಿನಲ್ಲಿ ಕಲಿತವರಿಗೆಲ್ಲಾ ಒಂದು ರೀತಿಯ ಸಂಯೋಜಿತ ಉಪನ್ಯಾಸಮಾಲೆಯನ್ನು ಏರ್ಪಡಿಸುತ್ತಾರಂತೆ. ಅದರಿಂದಾಗಿ ಅವರೆಲ್ಲಾ ಮುಂದಿನ ತರಗತಿಗಳಲ್ಲಿ (ಪದವಿ ಪೂರ್ವ) ವಿಜ್ಞಾನದ ವಿಷಯಗಳೂ ಸೇರಿದಂತೆ ಎಲ್ಲಾ ವಿಚಾರಗಳನ್ನು ಇಂಗ್ಲಿಷಿನಲ್ಲಿ ಪುನರವಲೋಕನ ಮಾಡಿಕೊಳ್ಳಲು ಸಾಧ್ಯವಾಗುತ್ತದಂತೆ. ಇದರಿಂದ ಉರ್ದುವಿನಲ್ಲಿ ಕಲಿತ ವಿಷಯಗಳನ್ನು ಇಂಗ್ಲಿಷಿಗೆ ಸುಲಭವಾಗಿ ಸಾಗಣೆ ಮಾಡಿದಂತಾಗುತ್ತದೆ. ಅಂದರೆ ಈ ಶಾಲೆಯಲ್ಲಿ ಇಂಗ್ಲೀಷ್ ಬೋಧನೆಗೆ ಹೆಚ್ಚಿನ ಒತ್ತು ಕೊಡುವ ಬದಲು ಗಂಭೀರವಾದ ಶೈಕ್ಷಣಿಕ ವಿಷಯಗಳಿಗೆ ಮೊದಲ ಪ್ರಾಶಸ್ತ್ಯ ಕೊಟ್ಟು, ಜೊತೆ ಜೊತೆಯಲ್ಲೇ ಇಂಗ್ಲೀಷ್ ಕಲಿಕೆಗೂ ಅವಕಾಶ ಮಾಡಿಕೊಡುತ್ತಿದ್ದರು.
ಮೊದಲಿನಿಂದಲೂ ಇಂಗ್ಲೀಷ್ ಮಾಧ್ಯಮದಲ್ಲಿ ಕಲಿಯದವರು ಮುಂದೆ ವೈಜ್ಞಾನಿಕ ವಿಷಯಗಳನ್ನು ಅಭ್ಯಾಸ ಮಾಡುವುದು ಕಷ್ಟವಾಗುತ್ತದೆಂದು ವಾದಿಸುವವರೂ ಇದ್ದಾರೆ. ಹಾಗೆ ವಿಜ್ಞಾನದ ಪಾರಿಭಾಷಿಕ ಪದಗಳನ್ನು ಅರ್ಥಮಾಡಿಕೊಳ್ಳುವುದೂ ಸುಲಭವಲ್ಲ ಎನ್ನುವವರಿಗೂ ಬರವಿಲ್ಲ.
ವೈದ್ಯಕೀಯ, ಇಂಜಿನಿಯರಿಂಗ್, ಮಾಹಿತಿ ತಂತ್ರಜ್ಞಾನದ ಮುಂತಾದ ಶಾಖೆಗಳಲ್ಲಿ ಮುಂದುವರಿದ ಕಲಿಕೆಗೆ ಇಂಗ್ಲೀಷ್ ಮಾಧ್ಯಮ ಅತ್ಯಾವಶ್ಯಕವೆಂಬ ನಂಬಿಕೆಯೂ ಪ್ರಚಲಿತವಿದೆ. ಹಾಗೆ ನೋಡಿದರೆ ಇಂಗ್ಲಿಷಿನಲ್ಲಿ ಪ್ರಚಲಿತವಿರುವ ಪಾರಿಭಾಷಿಕ ಪದಗಳು ಮೂಲತಃ ಇಂಗ್ಲಿಷಿನವಲ್ಲ, ಬಹುಪಾಲು ಪುರಾತನ ಲ್ಯಾಟಿನ್ ಗ್ರೀಕ್‌ನಂಥ ಭಾಷೆಗಳವು. ಅವುಗಳನ್ನು ಕನ್ನಡದಲ್ಲಿ ವಿವರಿಸಿ ಅವು ಇದ್ದ ಹಾಗೆ ಬಳಸಬಹುದು; ಮತ್ತೆ ಕೆಲವನ್ನು ಕನ್ನಡದೊಡನೆ ಸೇರಿಸಿ ಪರಿವರ್ತನೆ ಮಾಡಿಕೊಳ್ಳಲು ಸಾಧ್ಯವಿದೆ.
ಕನ್ನಡವೂ ಸೇರಿದಂತೆ ವೈಜ್ಞಾನಿಕ ವಿಷಯಗಳನ್ನು ದೇಶೀಯ ಭಾಷೆಗಳಲ್ಲಿ ಸಮರ್ಥವಾಗಿ ಬರೆದು ಪ್ರಖ್ಯಾತಿ ಪಡೆದವರೂ ಬಹಳಷ್ಟು ಜನರು ನಮ್ಮಲ್ಲಿದ್ದಾರೆ. ಕನ್ನಡದಲ್ಲಿ ವೈದ್ಯಕೀಯವೂ ಸೇರಿದಂತೆ ಈಗಾಗಲೇ ನೂರಾರು ಲೇಖಕರು ಪ್ರತಿವರ್ಷ ಸಾವಿರಾರು ಜನಪ್ರಿಯ ಲೇಖನಗಳನ್ನು ಹಾಗೂ ನೂರಾರು ಪುಸ್ತಕಗಳನ್ನು ಪ್ರಕಟಿಸುತ್ತಿದ್ದಾರೆ. ಅವುಗಳಲ್ಲಿ ಅನೇಕ ಕೃತಿಗಳಿಗೆ ಸ್ಥಳೀಯ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರಗಳು ಲಭಿಸುತ್ತಿವೆ.
ಪ್ರಪಂಚದಾದ್ಯಂತ ವೈಜ್ಞಾನಿಕ ಸಾಧನೆಗಳಲ್ಲಿ ಪ್ರಸ್ತುತ ಮುಂಚೂಣಿಯಲ್ಲಿರುವುದು ಇಂಗ್ಲೀಷ್ ಮಾತೃಭಾಷೆಯಾಗಿರುವ ಅಮೆರಿಕಾ, ಇಂಗ್ಲೆಂಡುಗಳಂಥ ರಾಷ್ಟ್ರಗಳು ಎಂಬ ಭಾವನೆಯಿದೆಯಷ್ಟೆ. ಕಳೆದ ಶತಮಾನದಲ್ಲಿ ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ತೀವ್ರ ಪೈಪೋಟಿ ನಡೆಯುತ್ತಿತ್ತು. ಮೊಟ್ಟಮೊದಲು ಬಾಹ್ಯಾಕಾಶಕ್ಕೆ ಕೃತಕ ಉಪಗ್ರಹ ಸ್ಪುಟ್ನಿಕ್ ಅನ್ನು ೧೯೫೭ರಲ್ಲಿ ಹಾರಿಸಿದವರು ಇಂಗ್ಲೀಷ್ ಮಾತೃಭಾಷೆಯಲ್ಲದ ರಷ್ಯನ್ನರು. ಅದೇ ರೀತಿ ಮೊದಲ ಯಶಸ್ವೀ ಚಂದ್ರಯಾನ ಮಾಡಿದವರೂ ಅವರೇ (೧೯೫೯). ಅವರ ಭಾಷೆ ರಷ್ಯನ್; ಇಂಗ್ಲೀಷ್ ಅಲ್ಲ ಎಂಬುದು ಗಮನಾರ್ಹ. ಈಗಲೂ ವೈಜ್ಞಾನಿಕ ಸಂಶೋಧನೆಗಳಲ್ಲಿ ಜರ್ಮನಿ, ಜಪಾನು, ಕೊರಿಯಾದಂತಹ ಇಂಗ್ಲಿಷ್ ಅಲ್ಲದವರು ಮುಂದಿದ್ದಾರೆ. ಭಾರತವೂ ಆ ದಿಸೆಯಲ್ಲಿ ದಾಪುಗಾಲು ಹಾಕುತ್ತಿದ್ದು, ಮೂರು ತಿಂಗಳುಗಳ ಹಿಂದೆ ಚಂದ್ರಯಾನ-೧ನ್ನು ಹಾರಿಸಿದ ಗರಿಮೆ ನಮ್ಮದಾಗಿದೆಯಷ್ಟೆ. ಚಂದಿರನ ಅಂಗಳದಲ್ಲಿ ನಮ್ಮ ಉಪಗ್ರಹ ಈಗಲೂ ಪರಿಭ್ರಮಿಸುತ್ತಿದೆ. ನಮ್ಮಲ್ಲೂ ಬಾಹ್ಯಾಕಾಶ ವಿಜ್ಞಾನ ಸಾಕಷ್ಟು ಮುಂದುವರಿಯುತ್ತಿದ್ದು ಆ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಿರುವ ಮಾತೃಭಾಷೆ ಭಾರತದ ಮೂಲದವೆ. ಅದರಲ್ಲೂ ಕನ್ನಡಿಗರಾದ ನಮ್ಮ ವಿಜ್ಞಾನಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರಲ್ಲಿ ಬಹುಪಾಲು ಮಂದಿ ಕನ್ನಡ ಮಾಧ್ಯಮದಲ್ಲೇ ಕಲಿತವರೆಂದು ಹೆಮ್ಮೆಯಿಂದ ಹೇಳುತ್ತಾರೆ. ಅದೇ ರೀತಿ ಐ.ಟಿ.-ಬಿ.ಟಿ. ಕ್ಷೇತ್ರದಲ್ಲೂ ಕನ್ನಡಿಗರೇ ಇದ್ದು ನಮ್ಮ ರಾಜಧಾನಿ ಬೆಂಗಳೂರು ಇಂಡಿಯಾದ ಸಿಲಿಕಾನ್ ಸಿಟಿ ಎಂದು ವಿಶ್ವದೆಲ್ಲೆಡೆ ಗುರುತಿಸಲ್ಪಟ್ಟಿದೆ.
ಮಾತೃಭಾಷಾ ಮಾಧ್ಯಮದಲ್ಲಿ ಕಲಿಯುವುದರ ಬಗೆಗೆ ಅತಿ ಹೆಚ್ಚಿನ ಅಭಿಮಾನವಿರುವುದರ ರಹಸ್ಯವೇನೆಂಬುದಂತೂ ಅರ್ಥವಾಗುತ್ತಿಲ್ಲ.
ಸರ್ಕಾರಿ ಶಾಲೆಗಳಲ್ಲಿ ಸುಧಾರಣೆ ಈಗಿನ ಅವಶ್ಯಕತೆ
ನಮ್ಮ ಜನರು ಇಂಗ್ಲೀಷ್ ಮಾಧ್ಯಮದ ಶಾಲೆಗಳಿಗೆ ತಮ್ಮ ಮಕ್ಕಳನ್ನು ದಾಖಲು ಮಾಡಲು ಬೇರೆ ಕೆಲವು ಕಾರಣಗಳಿವೆ. ಅವುಗಳಲ್ಲಿ ಇಂಗ್ಲೀಷನ್ನು ಪ್ರಧಾನವಾಗಿ ಕಲಿಸುವುದರಿಂದ ಮುಂದೆ ಉದ್ಯೋಗದ ಅವಕಾಶ ಅಪರಿಮಿತವಾಗಿರುತ್ತದೆಂಬು
ದೊಂದು. ಅದು ಮೇಲ್ನೋಟಕ್ಕೆ ಸ್ವಲ್ಪ ಮಟ್ಟಿಗೆ ಸರಿಯೆನಿಸಬಹುದಾದರೂ ನಮ್ಮ ನಾಡಿನ ಸುಮಾರು ಐದು ಕೋಟಿ ಜನರ ಮಕ್ಕಳಲ್ಲಿ ಶೇಕಡಾವಾರು ಅದೆಷ್ಟು ಮಕ್ಕಳು ವಿಜ್ಞಾನಿಗಳು, ಐ.ಟಿ.-ಬಿ.ಟಿ., ವೈದ್ಯರು, ಇಂಜಿನಿಯರಿಂಗ್ ಮುಂತಾದ ಕ್ಷೇತ್ರಗಳಲ್ಲಿ ಪರಿಣತಿ ಪಡೆಯಲು ಸಾಧ್ಯವಾಗಬಹುದೆಂಬುದನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಅದು ಹೆಚ್ಚೆಂದರೆ ಶೇ.೫-೧೦ರಷ್ಟು ಮಕ್ಕಳಿಗೆ ಸಾಧ್ಯವೆಂದುಕೊಳ್ಳಬಹುದೇನೋ? ಇನ್ನುಳಿದವರು ಸಾಮಾನ್ಯ ಮಟ್ಟದ ಕೆಲಸಕಾರ್ಯಗಳಲ್ಲಿ ತೊಡಗಿಕೊಳ್ಳುವುದು ಅನಿವಾರ್ಯವಾಗುತ್ತದೆ. ಆ ಸಲುವಾಗಿ ಕನ್ನಡನಾಡಿನ ಎಲ್ಲಾ ಮಕ್ಕಳೂ ಆರಂಭದ ಹಂತದಿಂದಲೇ ಇಂಗ್ಲೀಷ್ ಮಾಧ್ಯಮದಲ್ಲೇ ವಿದ್ಯಾಭ್ಯಾಸ ಮಾಡಬೇಕೆಂದು ಯಾವ ನ್ಯಾಯ? ಅಂದರೆ ಇಂಗ್ಲಿಷ್ ಅನ್ನೂ ಸಂಪೂರ್ಣವಾಗಿ ನಿಷೇಧಿಸಬೇಕೆಂದು ಹೇಳುವುದೂ ಸರಿಯಲ್ಲ. ಯಾರು ಯಾರಿಗೆ ಎಷ್ಟರಮಟ್ಟಿನ ಇಂಗ್ಲಿಷು ಬೇಕೆಂಬುದನ್ನು ಇಲ್ಲಿ ಗಮನದಲ್ಲಿರಿಸಬೇಕಾಗುತ್ತದೆ.
ಆ ದಿಸೆಯಲ್ಲಿ ಒಂದು ಸ್ಪಷ್ಟವಾದ ಕಲಿಕಾ ಕಾರ್ಯನೀತಿಯನ್ನು ರೂಪಿಸುವುದು ಅಗತ್ಯ. ಆ ಸಲುವಾಗಿ ಮಕ್ಕಳಿಗೆ ಒಂದನೇ ತರಗತಿಯಿಂದಲೇ ಕನ್ನಡ ಮಾಧ್ಯಮದಲ್ಲೇ ಕಲಿಕೆಯನ್ನು ಆರಂಭಿಸಿ, ಹತ್ತನೆ ತರಗತಿಯವರೆಗೆ ಮುಂದುವರಿಸುವುದು; ಇಂಗ್ಲಿಷನ್ನು ಒಂದನೇ ತರಗತಿಯಿಂದ
ಒಂದು ಪಠ್ಯ ವಿಷಯವಾಗಿ ಬೀದರ್ ಮಾದರಿಯಂತೆ ಕಲಿಸುವ ಏರ್ಪಾಡು ಮಾಡುವುದು. ಅಂತಹವರು ಹತ್ತನೇ ತರಗತಿಯನ್ನು ಮುಗಿಸುವಷ್ಟರಲ್ಲಿ ಇಂಗ್ಲೀಷಿನಲ್ಲಿ ಬರೆಯಲು, ಮಾತನಾಡಲು ಸಾಕಷ್ಟು ಪರಿಣತಿಯನ್ನು ಪಡೆದುಕೊಳ್ಳುವುದರಲ್ಲಿ ಸಂದೇಹವಿಲ್ಲ. ಎಲ್ಲರಿಗೂ ಹತ್ತನೇ ತರಗತಿಯವರೆಗೆ ಮುಂದುವರಿಯಲು ಅಸಾಧ್ಯವಾದರೂ, ಅಷ್ಟೋ ಇಷ್ಟೊ ಇಂಗ್ಲೀಷಿನ ಪರಿಚಯವಾಗಿರುತ್ತದೆ.
ಇತ್ತೀಚಿನ ವರ್ಷಗಳಲ್ಲಿ ಇಂಗ್ಲೀಷಿನ ಬಗೆಗೆ ಅತಿಯಾದ ವ್ಯಾಮೋಹದಿಂದ ಖಾಸಗಿಯಾಗಿ ಸ್ಥಾಪನೆಯಾಗಿ ಇಂಗ್ಲೀಷ್ ಮಾಧ್ಯಮದಲ್ಲಿ ಕಲಿಸುವ ಕಾನ್ವೆಂಟುಗಳಿಗೆ ಸೇರಲು ಮುಗಿಬೀಳುತ್ತಿದ್ದಾರೆ. ಅವುಗಳು ಇಂಗ್ಲಿಷ್ ಕಲಿಸುವುದರ ಜೊತೆಗೆ ಉತ್ತಮ ಬೋಧಕರು, ಸಿಬ್ಬಂದಿವರ್ಗ, ಕಟ್ಟಡ ಹಾಗೂ ಮತ್ತಿತರ ಸೌಕರ್ಯ ಹೊಂದಿರುತ್ತದೆ. ಅವೀಗ ಪೇಟೆ ಪಟ್ಟಣಗಳೇ ಅಲ್ಲದೆ ಹಳ್ಳಿ ಹಳ್ಳಿಗಳಲ್ಲೂ ತಲೆಯೆತ್ತುತ್ತಿರುವುದನ್ನು ನೋಡಬಹುದಾಗಿದೆ. ಬಡಬಗ್ಗರು ಆರ್ಥಿಕವಾಗಿ ದುರ್ಬಲವಾಗಿದ್ದರೂ ಸಾಲ ಸೋಲ ಮಾಡಿಯಾದರೂ ತಮ್ಮ ಮಕ್ಕಳನ್ನು ಅವುಗಳಿಗೆ ಸೇರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದ್ದರಿಂದ ಸರ್ಕಾರಿ ಶಾಲೆಗಳಲ್ಲಿ ಈಗಿರುವ ನ್ಯೂನತೆಗಳನ್ನು ಸರಿಪಡಿಸಿ ಅವುಗಳ ಸ್ಥಿತಿಗತಿಗಳಲ್ಲಿ ಬಹಳಷ್ಟು ಸುಧಾರಣೆಗಳನ್ನು ತರುವಲ್ಲಿ ತುರ್ತಾಗಿ ಗಮನ ಹರಿಸಬೇಕು. ಇದಾಗಲೇ ಸರ್ಕಾರ ಬಿಸಿಯೂಟ, ಬೈಸಿಕಲ್‌ಗಳ ಕೊಡುಗೆಗಳು ಕರ್ನಾಟಕದಲ್ಲಿ ವಿದ್ಯಾರ್ಥಿಗಳಿಗೆ ಬಹಳಷ್ಟು ಸಹಾಯ ಮಾಡಿವೆ. ಅದೇ ರೀತಿಯಲ್ಲಿ ಇಂತಹ ಯೋಜನೆ ಹಂತ ಹಂತವಾಗಿಯಾದರೂ ಜಾರಿಗೆ ಬಂದರೆ ಕನ್ನಡ ನಾಡು ನುಡಿಯ ಉಳಿವಿಗೆ ಮಹದುಪಕಾರ ಮಾಡಿದಂತಾಗುತ್ತದೆಂಬುದು ನನ್ನ ಆಶಯ.
ಪಶ್ಚಿಮ ಘಟ್ಟ ಬೆಳೆಸಿ-ಕರ್ನಾಟಕ ಉಳಿಸಿ
ಇತ್ತೀಚಿನ ದಶಕಗಳಲ್ಲಿ ನಮ್ಮ ನಾಡಿನಾದ್ಯಂತ ಪರಿಸರ ನಾಶ ಕುರಿತು ಆಂದೋಲನಗಳು ಜರುಗುತ್ತಿರುವುದು ದಿನನಿತ್ಯದ ಸುದ್ದಿಯಾಗುತ್ತಿದೆ. ಉತ್ತರದ ಹಿಮಾಲಯದಿಂದ ಹಿಡಿದು ದಕ್ಷಿಣದ ಪಶ್ಚಿಮ ಘಟ್ಟ ಶ್ರೇಣಿಗಳು ಅನಾದಿಯಿಂದಲೂ ನಮ್ಮ ನಾಡಿನ ಜೀವನದಿಗಳು ಉಗಮಿಸುವ ತಾಣಗಳಾಗಿವೆ. ನಮ್ಮ ಪಶ್ಚಿಮ ಘಟ್ಟಗಳು ಪ್ರತಿವರ್ಷ ಜೂನ್‌ನಿಂದ ಸೆಪ್ಟೆಂಬರ್ ತಿಂಗಳವರೆಗೆ ಧಾರಕಾರವಾಗಿ ಸುರಿಸುವ ಮುಂಗಾರು ಮಳೆಯಿಂದಲೇ ನಾವೆಲ್ಲಾ ಬದುಕಲು ಸಾಧ್ಯವಾಗುತ್ತಿರುವುದು. ಮುಂಗಾರು ಮಳೆ ಹಾಗೂ ನಮ್ಮ ದೇಶದ ಉದ್ದಗಲದಲ್ಲೆಲ್ಲಾ ಹರಡಿರುವ ರೈಲ್ವೆ ಸಂಪರ್ಕ ಜಾಲ ನಮ್ಮ ಜೀವನಾಡಿಯಾಗಿವೆ. ಎರಡು ವರ್ಷಗಳ ಹಿಂದೆ ಇಂಗ್ಲೆಂಡಿನ ಬಿ.ಬಿ.ಸಿ. ಟಿ.ವಿ.ಯವರು ಮಾನಸೂನ್ ರೈಲ್ವೆ ಎಂಬ ಸಾಕ್ಷ್ಯ ಚಿತ್ರವನ್ನು ನಿರ್ಮಿಸಿದ್ದರೆಂದರೆ ಪಶ್ಚಿಮ ಘಟ್ಟದ ಪ್ರಾಮುಖ್ಯತೆಯ ಅರಿವಾಗಬಹುದು. ಅಲ್ಲಿಂದ ಉಗಮಿಸಿ ಹರಿಯುವ ಕಾಳಿ, ಶರಾವತಿ, ತುಂಗಾ-ಭದ್ರಾ, ವಾರಾಹಿ, ಹೇಮಾವತಿ, ಕಾವೇರಿ, ಕಪಿಲಾ ನದಿಗಳು ಕರ್ನಾಟಕದ ಜೀವನಾಡಿಗಳಾಗಿರುವುವು. ಅಲ್ಲಿಯ ವೃಕ್ಷ ಸಂಪತ್ತು, ಖನಿಜ ಸಂಪತ್ತು, ಜೀವವೈವಿಧ್ಯದ ವನ್ಯಜೀವಿಗಳು ಮುಂತಾದವುಗಳ ಪಾತ್ರ ಬಹುಶಃ ನಮಗೆ ಅಷ್ಟಾಗಿ ಅರಿವಾಗಿರಲಿಲ್ಲವೆಂದರೆ ಅತ್ಯುಕ್ತಿಯಲ್ಲ.
ಆದರೆ ಇತ್ತೀಚಿನ ಅರ್ಧ ಮುಕ್ಕಾಲು ಶತಮಾನಗಳಿಂದ ಹೆಚ್ಚುತ್ತಿರುವ ಜನಸಂಖ್ಯೆ, ಕೈಗಾರಿಕಾ ಸ್ಥಾವರ ಮತ್ತಿತರ ಅವಶ್ಯಕತೆಗಳಿಗಾಗಿ ನೂರಾರು ಅಣೆಕಟ್ಟುಗಳನ್ನು ನಿರ್ಮಿಸಿ ವಿದ್ಯುಚ್ಛಕ್ತಿಯ ಸಲುವಾಗಿ ಸಾವಿರಾರು ಎಕರೆ ಅರಣ್ಯನಾಶ ಮಾಡಿದೆವು. ಹಾಗೆ ಅಪಾರ ವಿಸ್ತಾರವಾದ ಭೂ ಪ್ರದೇಶ ಮುಳುಗಡೆಯಾಯಿತು. ಲಕ್ಷಾಂತರ ಜನ ನಿರಾಶ್ರಿತರಾದರು. ಇಂತಹ ಪರಿಸರ ನಾಶದಿಂದ ಕ್ಲುಪ್ತ ಕಾಲದಲ್ಲಿ ಸುರಿಯುತ್ತಿದ್ದ ಮುಂಗಾರು ಮಳೆಯ ಆಗಮನ ಯರ್ರಾಬಿರ್ರಿಯಾಯಿತು. ಅನಾವೃಷ್ಟಿಯಿಂದ ಬರಗಾಲ ಅಣಿಕಿಸತೊಡಗಿದೆ. ವಿದ್ಯುಚ್ಛಕ್ತಿ ಉತ್ಪಾದನೆಯಾಗದೆ ಕೈಗಾರಿಕಾ ಕ್ಷೇತ್ರ ನಲುಗುವಂತಾಗಿದೆ.
ಖನಿಜಗಳನ್ನು ಹೊರತೆಗೆಯಲು ಪಶ್ಚಿಮ ಘಟ್ಟದಲ್ಲಿ ಗಣಿಗಾರಿಕೆ ಮಿತಿಮೀರಿ ಜರುಗಿತು. ನಾಡಿನ ಸರ್ವೋಚ್ಛ ನ್ಯಾಯಾಲಯವೆ ಕುದುರೆಮುಖದ ಗಣಿಗಾರಿಕೆಯನ್ನು ಮುಚ್ಚುವ ಆದೇಶ ನೀಡುವಂತಾಯಿತು ಎಂದರೆ ಪರಿಸರನಾಶದಿಂದಾಗುತ್ತಿರುವುದು ಅಂದಾಜಾಗಬಹುದು. ಯಾವುದೇ ಕಾರ್ಯವಿನಾಶದ ಅಥವಾ ಉತ್ಪನ್ನಕ್ಕೆ ಸಂಬಂಧಿಸಿದ್ದಾಗಲೀ ಅದಕ್ಕೆಲ್ಲಾ ಮಿತಿಯೆಂಬುದಿದ್ದೇ ಇರುತ್ತದೆ. ಇದೀಗ ಪಶ್ಚಿಮ ಘಟ್ಟದ ವಿನಾಶ ನಾನಾ ಕಾರಣಗಳಿಂದ ಮಿತಿ ಮೀರುತ್ತದೆಯೆಂದರೆ ಅತ್ಯುಕ್ತಿಯಲ್ಲ. ಸುಮಾರು ೧೯೮೫-೮೬ರ ಸಮಯದಲ್ಲಿ ಇಡೀ ಪಶ್ಚಿಮ ಘಟ್ಟದ ಉದ್ದಗಲದಲ್ಲಿ ಸಾಮೂಹಿಕವಾಗಿ ಜರುಗಿದ ಪಶ್ಚಿಮ ಘಟ್ಟ ಉಳಿಸಿ ಆಂದೋಲನ ಜರುಗಿದ್ದು ಕೆಲವರಿಗಾದರೂ ನೆನಪಿರಬಹುದು. ಆ ಸಮಯದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಸ್ಥಾಪನೆಯಾದ ಜಿಲ್ಲಾ ಪರಿಸರ ಸಂರಕ್ಷಣಾ ವೇದಿಕೆಯ ಅಧ್ಯಕ್ಷ ನಾನಾಗಿದ್ದೆ. ಆ ಸಮಯದಲ್ಲಿ ಸ್ಥಾಪನೆಯಾದ ಪರಿಸರ ಘಟ್ಟ ಉಳಿಸಿ ಆಂದೋಲನದಲ್ಲಿ ಸಕ್ರಿಯವಾಗಿ ಭಾಗವಹಿಸಿ ಕಾಲ್ನಡಿಗೆ ಜಾಥಾದಲ್ಲೂ ಇದ್ದೆ. ಅದರಿಂದಾದ ಅನುಭವದಿಂದ ಇನ್ನು ಮುಂದಾದರೂ ಪಶ್ಚಿಮ ಘಟ್ಟಕ್ಕೆ ಯಾವ ಕಾರಣದಿಂದಾಗಲಿ ಹಾನಿಯಾಗದಂತೆ ವರ್ತಿಸುವುದು ಸರ್ಕಾರಗಳು ಹಾಗೂ ಜನಸಮುದಾಯದ ಆದ್ಯಕರ್ತವ್ಯವಾಗಬೇಕು ಎನ್ನುತ್ತೇನೆ. ಅದರಿಂದ ಪಶ್ಚಿಮ ಘಟ್ಟ ಬೆಳೆಸಿ-ಕರ್ನಾಟಕ ಅಲ್ಲ, ಇಡೀ ದಕ್ಷಿಣ ಭಾರತ ಉಳಿಸಿ ಎಂಬುದು ಎಲ್ಲರ ಕರ್ತವ್ಯವಾಗಿದೆ.

ಅಂದಿನ ಕನ್ನಡಿಗರ ರಸಿಕತೆ ಮೀಸೆ

ಪ್ರೊ.ವಸಂತಕುಷ್ಟಗಿ
ಎಂಐಜಿ ೨೬, ಆದರ್ಶನಗರ, ಮೊದಲ ಹಂತ ಗುಲ್ಬರ್ಗ-೫೮೫೧೦೫ಕನ್ನಡನಾಡು ರಸಿಕತೆಯ ನೆಲೆವೀಡು-ಸುಸಂಸ್ಕೃತ ಜೀವನದ ರಸಘಟ್ಟವೇ ರಸಿಕತೆಯ ಅಂತರಂಗ. ಅದು ನಿತ್ಯ ಜೀವನದ ವಿವಿಧ ರೀತಿನೀತಿಗಳಲ್ಲಿ ಅಭಿವ್ಯಕ್ತವಾಗುತ್ತದೆ. ಒಂದೇ ಮಾತಿನಲ್ಲಿ ಹೇಳಬೇಕಾದರೆ, ಯಾವನು ಜೀವನದಲ್ಲಿ ಕಹಿ-ಸಿಹಿಗಳನ್ನು ನುಂಗಿ ನೆಮ್ಮದಿಯ ಬಾಳನ್ನು ಮಾಡುತ್ತಾನೆಯೋ ಅವನೇ ರಸಿಕ. ಆ ನೆಮ್ಮದಿಯು ಸೊಗಸುತನದಿಂದಲೇ ಬರುವುದು ಸಹಜ. ಆ ಸೊಗಸೇ ರಸಿಕತೆ. ಅಂತೆಯೇ ರಸಿಕನಾಡಿನ ಮಾತು ಶಶಿಯುದಿಸಿ ಬಂದಂತೆ. ಅಂತಹ ಸೊಗಸು ಒಬ್ಬ ವ್ಯಕ್ತಿಯ ನಡೆ, ನುಡಿ, ರೀತಿ, ಆಹಾರ, ವಿಹಾರ, ಪೋಷಾಕು, ಅಲಂಕಾರ ಇತ್ಯಾದಿಗಳಲ್ಲಿ ಹಾಸು ಹೊಕ್ಕಾದರೆ ಮಾತ್ರ ಸಾಧ್ಯ. ಈ ಒರೆಗಲ್ಲಿಗೆ ಕನ್ನಡಿಗರನ್ನು ಉಜ್ಜಿ ನೋಡಿದಾಗ ಅವರೆಲ್ಲ ರಸಿಕಚಕ್ರಿಗಳಾಗಿಯೇ ಕಾಣುತ್ತಾರೆ. ಬಹುಶಃ ಇದನ್ನು ಅನುಭವಿಸಿದ ರಸಿಕ ಕವಿ ಆದಿಪಂಪನ,
“ಚಾಗದ ಭೋಗದಕ್ಕರದ ಗೇಯದ ಗೊಟ್ಟೆಯಲಂಪಿನಿಂಪುಗ,
ಳ್ಗಾಗರವಾದ ಮಾನಸರೆ ಮಾನಸರ್......................”||
ಎಂದು ವೀರ ಅರ್ಜುನನ ಮುಖದಿಂದ ವರ್ಣಿಸಿರುವುದನ್ನು ನೆನೆಸಿಕೊಂಡರೆ ಆ ಸೊಗಸೆಲ್ಲ ಆಗಿನ ಕನ್ನಡಿಗರ ಸೊಗಸೆಂದೇ ನಿವೇದ್ಯವಾದೀತು.
ಈ ಸಂದರ್ಭದಲ್ಲಿ “ವೀರ” ಎಂಬ ಪದವು ಬಳಕೆಯಾಯಿತಲ್ಲವೆ? ಈ ವೀರತನವೂ ಕೂಡ ಸೊಗಸುಗಾರಿಕೆಯ ಲಕ್ಷಣ. ಅರ್ಥಾತ್ ರಸಿಕತೆಯ ಲಕ್ಷಣ. ಈ ಇದು ಎದ್ದು ಕಾಣಬೇಕಾದರೆ, ಗಂಡಸಾದವನು ಮೀಸೆಯನ್ನು ಹೊತ್ತಿರಲೇಬೇಕಾಗುತ್ತದೆ. ಅಂದಿನ ಕಾಲದಲ್ಲಂತೂ ಗಂಡಸರೆಲ್ಲ ಮೀಸೆ ಹೊತ್ತವರೇ ಆಗಿರುತ್ತಿದ್ದರು. ಮೀಸೆಯಿಲ್ಲದ ಗಂಡಸೇನಾದರೂ ಇದ್ದಿದ್ದರೆ ಅವನು ಹೇಡಿಯೇ ಆಗಿರುತ್ತಿದ್ದ. ನಪುಂಸಕನೇ ಆಗಿರುತ್ತಿದ್ದ. ಅಕಸ್ಮಾತ್ ಮೀಸೆ ಬೋಳಿಸುವ ಶಿಕ್ಷೆಯೇನಾದರೂ ವಿಧಿಯಾಗಿ ಬಂತೆಂದರೆ ಸಾಕು. ಅದು, ಆ ಗಂಡಿನ ಸೋಲಿನ ಪರಮಾವಧಿಯೇ ಆಗಿರುತ್ತಿತ್ತು. ಏಕೆಂದರೆ ಮೀಸೆಯು ಗಂಡಸಿಗೆ ಪೌರುಷದ ಲಕ್ಷಣವಾಗಿತ್ತು.
ಪೌರುಷದ ಲಕ್ಷಣವಾದ ಈ ಮೀಸೆಯಲ್ಲಿ ಕಲ್ಲಿಮೀಸೆ, ಹುರಿಹಾಕಿದ ಮೀಸೆ, ಉದ್ದಮೀಸೆ, ತೀಡಿದ ಮೀಸೆ, ಅರ್ಧಮೀಸೆ, ಗಿರ್ದಾಮೀಸೆ, ಖರಾರಿ ಮೀಸೆ, ಅರ್ಜುನ ಮೀಸೆ, ಕರ್ಣಮೀಸೆ, ದುರ್ಯೋಧನ ಮೀಸೆ, ನಿಂಬೆಹಣ್ಣನ್ನು ಖಡಿ ನಿಲ್ಲಿಸುವ ಮೀಸೆ, ರಾಜಮೀಸೆ, ಇತ್ಯಾದಿ ಅನೇಕ ಪರಿಭೇದಗಳಿವೆ. ಪುರಾತನ ಕಾಲದ ಶಿಲ್ಪಗಳನ್ನು ನೋಡುವುದರಿಂದ, ರೇಖಾಚಿತ್ರಗಳನ್ನು ವರ್ಣಚಿತ್ರಗಳ್ನು ನೋಡುವುದರಿಂದ ಈ ಮಾತಿನ ಬಗ್ಗೆ ಸತ್ಯ ಸಾಕ್ಷಿ ದೊರೆಯುತ್ತದೆ. ಮತ್ತು ಮೀಸೆಯ ಮಹತ್ವವಾದರೂ ಏನಿರಬಹುದೆಂಬ ದಿಸೆಯಲ್ಲಿ ‘ಹುಡುಕು’ ಪ್ರಾರಂಭವಾಗುತ್ತದೆ. ಅಂತಹ ಸಂದರ್ಭದಲ್ಲಿ ‘ಮೀಸೆ’ಯು ಅಭಿಮಾನದ ಧ್ವನಿಸಂಕೇತವಾಗಿ ಕಾಣುತ್ತದೆ. ಹೀಗಿರುವುದರಿಂದಲೇ ಮೀಸೆಯು ಪೌರುಷದ ವಿಶಿಷ್ಟ ಲಕ್ಷಣವಾಗಿ ಬಿಡುತ್ತದೆ. ಈ ಪೌರುಷವು ಬದುಕಿನ ಸಾರಸರ್ವಸ್ವವೆಂಬುದನ್ನು ಎಂದಿಗೂ ಮರೆಯಕೂಡದು.
ಕನ್ನಡ ಕವಿಗಳು ಕನ್ನಡಿಗರ ಪೌರುಷವು ಅಭಿವ್ಯಕ್ತವಾಗುವ ಕಥೆಗಳಲ್ಲೆಲ್ಲ ಮೀಸೆಯ ವರ್ಣನೆಯನ್ನು ಅನಾಯಾಸವಾಗಿ ಮಾಡಿದ್ದಾರೆ. ಕನ್ನಡದ ಆದಿಕವಿ ರಸಿಕ ಪಂಪನು ತನ್ನ “ವಿಕ್ರಮಾರ್ಜುನ ವಿಜಯ”ದಲ್ಲಿ ದ್ರೋಣನು ದ್ರುಪದನಲ್ಲಿಗೆ ಬಂದು ಸಹಾಯ ಕೇಳಿದಾಗಿನ ಸನ್ನಿವೇಶದಲ್ಲಿ ಮೀಸೆಗೆ ನೀಡಿದ ಧ್ವನಿ ರಮ್ಯತೆ ನೋಡಿ. ದ್ರೋಣದ್ರುಪದರು ಬಾಲ್ಯಸ್ನೇಹಿತರು. ಆ ಸ್ನೇಹವನ್ನೇ ನೆನೆಸಿಕೊಂಡು ದ್ರೋಣನು ದ್ರುಪದನ ಆಸ್ಥಾನಕ್ಕೆ ಬಂದು ಸಹಾಯ ಕೇಳಿದರೆ, ದ್ರುಪದನು ಅಪರಿಚಿತನಂತೆ ವರ್ತಿಸಿದನು. ಆಗ ದ್ರೋಣನ ಮುಖದಿಂದ,
......................................................ಸಭಾ
ವಳಯದೊಳೆನ್ನನೇಮಿಸಿದ ನಿನ್ನನನಾಕುಳವೆನ್ನ ಚಟ್ಟರಿಂ
ತಳವೆಳಗಾಗೆ ಕಟ್ಟಿಸದೆ ಮಾಣ್ದೊಡೆ ಕೆಮ್ಮನೆ ಮೀಸೆಮೊತ್ತೆನೇ!”
ಎಂಬ ಮಾತುಗಳು ಹುರಿದು ಅಸ್ಫೋಟಿಸಿದಾಗ, ಆ ದ್ರೋಣನು ಕನ್ನಡ ಮೀಸೆವೊತ್ತ ಗಂಡುಗಲಿಯಾಗಿ ಬಿಡುತ್ತಾನೆ.
ಇದೇ ರಸಿಕನ ಕವಿತಾಚಕ್ರಿ ಪಂಪನು, ಅರ್ಜುನನ ಯೌವನೋದಯವನ್ನು “ಪೊಸ ಜವ್ವನದ ಮುಂಬಣ್ಣದಂತೆ ಕರ್ಪಂ ಕೈಕೊಂಡು ಕತ್ತುರಿಯಲ್ ಬರೆದಂತಪ್ಪ ವಿಕ್ರಾಂತತುಂಗನ ಮೀಸೆಗಳ್” ಎಂದು ವರ್ಣಿಸಿ ಅಲ್ಲಿ ಪೌರುಷವು ಚಿಗುರೊಡೆಯಿತೆಂದು ಮೀಸೆಯನ್ನು ಸಾಂಕೇತಿಸಿದ್ದಾನೆ.
ಶಕ್ತಿ ಕವಿರನ್ನನ “ಸಾಹಸಭೀಮ ವಿಜಯ”ದಲ್ಲಿ, ಶಲ್ಯನ ವಧೆಯ ನಂತರ ಎಲ್ಲಿಯುಂ ಅರಸಿಯುಂ ದುರ್ಯೋಧನನ ರೂಪು ಕಾಣದೆ ಇದ್ದಾಗ, ಬರುವ ಭೀಮನ ಚಿತ್ರದಲ್ಲಿಯೂ ಮೀಸೆಗೆ ಔಚಿತ್ಯಪೂರ್ಣ ಸ್ಥಾನವಿದೆ ನೋಡಿ;
ತತ್ ಫಣಿರಾಜಕೇತನನ ಲಲಾಟ ಶಿಲಾಪಟ್ಟಮಂ ತನ್ನ
ಮಣಿಮಯ ಮಕುಟಮಂ ತನ್ನ ಗದಾಪ್ರಹರಣದಿಂದುರುಳಿಚಿ
ಪುಡಿಯೊಳ್ ಪೊರಳ್ಚಲುಂ ಆ ಸುಯೋಧನನ ರುಧಿರಧಾರಾಪೂರದಿಂ
ತನ್ನ ಧಗಧ(ಗಾ)ಯ ಮಾನ ವಿಪುಳಕೋಪಪಾವಕ ಶಿಖಾಕಲಾಪ
ಮನಾಣಿಸಲುಂ ಪಡೆಯದಡಹಡಿಸಿ ಭೀಮಸೇನಂ ಕಿಡಿಕಿಡಿವೋಗಿ
ಮೀಸೆಯಂ ಕಡಿದು”

“ಮೀಣಿದ ಪಡೆವನ ಪಟ್ಟಂ
ಪಾಣಿಸುವೆನೊ ಮುನ್ನಯಮರರುಂಡಮೈತಮನೇಂ
ಕಾಣಿಸುವೆನೊ ಖಚರರನಡ-
ರ್ದೇಣಿಸುವೆನೊ ಮೇರುಗಿರಿಯ ತುಲ ತುದಿಯಂ!!”
ಇತ್ಯಾದಿಯಾಗಿ ಭೀಮಸೇನನು ಪ್ರಳಯಕಲ್ಪ ಸಂಕಲ್ಪವನ್ನು ಗೈಯ್ಯುವ ಮೀಸೆಯಲ್ಲಿ ಅಭಿಮಾನದ ಸೊಗಸು ರಸಿಕತೆಯಾಗಿವಿಜೃಂಭಿಸಿದೆ.
ವಚನಕಾರರು ಗಂಡಸನ್ನು ಗುರುತಿಸುವಾಗ “ಗಡ್ಡ ಮೀಸೆ ಬಂದರೆ ಗಂಡೆಂಬರು” ಎಂದು ಮೀಸೆಯನ್ನು ಹೆಸರಿಸಿಯೇ ಗುರುತಿಸಿದ್ದಾರೆ. ಹರಿದಾಸರಲ್ಲಿ ಕೂಡ ಬದುಕನ್ನು ಅರ್ಥೈಸುವಾಗ ಇಂತಹದ್ದನ್ನು ಕಾಣಬಹುದಾಗಿದೆ.
ಜನಪರ ಕವಿ ಕುಮಾರವ್ಯಾಸನಂತೂ, “ಮೀಸೆಯೇಕಿದು ಸುಡಲಿ ಸುಭಟರ ವೇಶವೇಕಿದು ಧರ್ಮವಧುಗಳು ಹೇಸರೇ...ಎಂದು ಹೇಳಿ ಮೀಸೆಯ ಮಹತ್ವವನ್ನು ಗಗನಕ್ಕೆ ಏರಿಸಿದ್ದಾನೆ. ಅದೇ ಕುಮಾರವ್ಯಾಸನು ವಿರಾಟಪರ್ವದ ಗೋಗ್ರಹಣದ ಸಂದರ್ಭದಲ್ಲಿ ಮೇಳದ ಲಲನೆಯರ ಒಡ್ಡೋಲಗದಲ್ಲಿ ಉತ್ತರಕುಮಾರನನ್ನು,
“ಕೆಲಬಲನ ನೋಡಿದನು ಮೀಸೆಯ
ನಲುಗಿದನು ತನ್ನಿದಿರ ಮೇಳದ
ಲಲನೆಯರ ಮೊಗ ನೋಡುತುತ್ತರ ಬಿರುದು ಕೆದಣಿದನು.....”
ಎಂದು ಚಿತ್ರಿಸಿ, ಉತ್ತರನನ್ನು ಲಲನೆಯರ ಮಧ್ಯದಲ್ಲಿ, ಪೌರುಷದ ಸಂಕೇತವಾದ ಮೀಸೆಯ ಮುಖಾಂತರ ವೀರಾಧಿವೀರನನ್ನಾಗಿ ಮಾಡಿಬಿಟ್ಟಿದ್ದಾನೆ.
ಸಾಂಗತ್ಯದ ರಸಿಕ ಕವಿ ರತ್ನಾಕರವರ್ಣಿಯಂತೂ, ಭರತೇಶವೈಭವದಲ್ಲಿ ಮೀಸೆಯನ್ನು ಬಳಸಿ ಅದಕ್ಕೆ ಹೊಸ ಮೆರುಗು ತಂದಿದ್ದಾನೆ. ಭರತೇಶನು ದಿಗ್ವಿಜಯಕ್ಕೆ ಹೊರಟಾಗ ಅವನ ಮಗ ಅರ್ಕಕೀರ್ತಿಯು ಭರತೇಶನು ತೊಡೆಯ ಮೇಲೆ ಕುಳಿತು,
“ಮೀಸೆಯ ತಿದ್ದುವ ಗಲ್ಲವ ತಡಹಿವಿ
ಲಾಸದಿ ನಗುವನಾ ತರಳಾ||
ಆ ಸುಕುಮಾರನ ಮೊಳವಲ್ಲ ಕಂಡಣ್ಣ
ಲೇಸು ಲೇಸೆಂಬನಾ ತಂದೆ”
ಎಂದು ರತ್ನಾಕರವರ್ಣಿಯು ನೀಡಿದ ಚಿತ್ರಣದಲ್ಲಿ ಆ ಎಳೆಮಗು ಮುಂದೆ ಮೀಸೆ ಹೊತ್ತ ಗಂಡನಾಗಿಯೇ ಬೆಳೆಯುತ್ತಾನೆಂಬುದರ ಮೊಳವನ್ನು ಕಾಣಬಹುದಾಗಿದೆ. ಹೀಗೆ ಇದೊಂದು ಅಪರೂಪದ ಬಾಲ ಲೀಲೆಯ ವರ್ಣನೆ. ಕನ್ನಡ ಸಾಹಿತ್ಯದಲ್ಲಿ ಚಿರಸ್ಥಾಯಿಯಾಗಿ ನಿಲ್ಲುವ ಭಾಗ. ಇದಕ್ಕೆ ಕಾರಣ, ಆ ಮಗು ಮೀಸೆಯನ್ನು ತಿದ್ದಿದ ರೀತಿ ಎಂಬುದೇ ಮುಖ್ಯ.
ನಂದಳಿಕೆ ನಾರಾಯಣಪ್ಪನ ಸಹಸ್ರಕಂಡ ರಾವಣನು ಯುದ್ಧಕ್ಕೆ ಹೊರಡುವಾಗಿನ ರಸಿಕ ಚಿತ್ರದಲ್ಲಿಯೂ ಮೀಸೆ ಹಾರಿಹೋಗಿಲ್ಲ. ಆ ರಸವತ್ತಾದ ಭಾಗವು ಇಂತಿದೆ;
“ಇಂತು ಬಂತಿದಲೆಯಂ ಚಲ್ಲಣಮನಿಟ್ಟು, ದಟ್ಟೆಯಂ ಬಿಗಿದು
ಸೂಸಕಂ ತೊಟ್ಟು, ಸಾಲೊಳ್ ಮುಕುಟಗಳನಳವಡಿಸಿ
ಕೈ ಪಡಿಯಂ ಕೊಂಡು, ಕತ್ತುರಿಯ ಬೊಟ್ಟಿಟ್ಟು, ಮೀಸೆಯಂ
ತಿರ್ದಿ ಪುರಿಗೆಯ್ದು, ಸೊಬಗಿಂಗೆ ನಸುನಕ್ಕು, ಅಣುದಂಬುಲಮಂ
ಸವಿದು....”
ಎಂದು ಚಿತ್ರಿಸಿದ ಈ ಮುದ್ದಣ ರಾವಣನ ಮುದ್ದುತನದ ಸೊಬಗು, ‘ತಿರ್ದಿಪುರಿಗೆಯ್ದ’ ಮೀಸೆಯಲ್ಲಿಯೇ ಎಂದಾಗ ಈ ಸಹಸ್ರಕಂಠದ ರಾವಣ, ಕನ್ನಡದ ರಸಿಕ ರಾವಣನಾಗಿಯೇ ಕಂಗೊಳಿಸಿ ಬಿಡುತ್ತಾನೆ.
ಈ ಮೀಸೆಯ ರಸಿಕತೆಯು ಕೇವಲ ಪುರಾಣ ವ್ಯಕ್ತಿಗಳ, ರಾಜರು ಮಹಾರಾಜರ ಸೊತ್ತಲ್ಲ. ಅದು ಸಾದಾ ಶ್ರೀಸಾಮಾನ್ಯರೆಲ್ಲರ ಸೊತ್ತೂ ಹೌದು. ಹಾಗಾದರೆ ಸಾಮಾನ್ಯ ಬೇಡನಲ್ಲಿರುವ ನಮ್ಮ ನಾಡಿನ ರಸಿಕತೆಯನ್ನು ಆಸ್ವಾದಿಸಲೇಬೇಕು. ಆ ವರ್ಣನೆಯ ಪದ್ಯವು ಇಂತಿದೆ:
“ಸುಲಿಪಲೆ, ಕೊಂಕಿರ್ದಪುರ್ಬು, ಅಂಬುದನಿಭತನು, ಕೆಂಗಣ್ಗಳ್, ಒಳ್ಮೀಸೆಚೆಲ್ವಾಗೆ, ಲಸನ್ಮತ್ತೇಭಮುಕ್ತಾಭರಣಮೆನೆಯೆ, ಕೂರ್ಪಾಸಮಂ ತೊಟ್ಟು, ಕಟ್ಟುತ್ತೆ ಲತಾಸಂದೋಹದಿಂದ ಕೇಶಮನಮರೆ, ಧನುರ್ಭಾಣಮಂ ತಾಳ್ದು, ಕೆರ್ಪಂ ನಲದಿಂ ಮೆಟ್ಟುತ್ತೆ, ಕೂನಾಯ್ಮರಸು ಶಬರರೊಂದಾಗಿ ಬಂದಂ ಪುಳಿಂದಂ||”
ಎಂಬಲ್ಲಿ ರಸಿಕತೆಯು ಇರುವುದೇ ಒಳ್ಮೀಸೆಯ ಚೆಲುವಿನಲ್ಲಿ.
ಜಾನಪದ ಸಾಹಿತ್ಯದ ವೀರಗೀತೆಗಳಲ್ಲಿಯಂತೂ ಮೀಸೆಗಿರುವ ಭಾಗ್ಯವು ಅಸದಳ. ಆ ಭಾಗ್ಯದ ಧ್ವನಿಯು ತುಂಬ ಆಸ್ವಾದಕರ. ಇದಕ್ಕಾಗಿ ಸಿಂಧೂರ ಲಕ್ಷ್ಮಣನ ಲಾವಣಿಯಲ್ಲಿಯ ಕೆಲವು ಸಾಲುಗಳನ್ನು ನೋಡಿದರೆ ಸಾಕು. ಅಲ್ಲಿ ತೃಪ್ತಿ, ಅಲ್ಲಿ ರಾಷ್ಟ್ರಾಭಿಮಾನದ, ಸ್ವಾಭಿಮಾನದ ಉರ್ಕು ಕೂಡ. ಇಗೋ ನೋಡಿ.
“ಕತ್ತಿ ಬಂದೂಕ ಬರ್ಚಿ ತಗೊಂಡಾರು|
ಕುದುರಿಬಾಲ ಕೊಯ್ದಾರು!
ಒಬ್ಬ ಸಿಪಾಯ್ನ ಎಬ್ಬಿಸಿ ಮೀಸಿ ಬೋಳಿಸ್ಯಾರು!
ಹಡಬಡಿಸಿ ಎದ್ದು ನೋಡೂದರಾಗ!
ಓಡಿಹೋಗ್ಯಾರು ಫರಾರು ಆಗ್ಯಾರು!
ಎಂಬ ಸಾಲುಗಳಲ್ಲಿ ಮೀಸೆಗಿರುವ ಗೌರವ ಸ್ಥಾನ ಅರಿವಾಗುತ್ತದೆ. ಮೀಸೆಗೆ ಮಣ್ಣಾಗಲಾರದ ಗೌರವಸ್ಥಾನ, ಗೌರಿಶಂಕರ.
ಇಂಥ ರಸಿಕತನದ ಮೀಸೆಯ ಪ್ರಾಚೀನತೆಯನ್ನು ಕುರಿತು ತಿಳಿದುಕೊಂಡಂತೆ, ಕಳೆದೆರಡು ಶತಮಾನಗಳ ಇತಿಹಾಸದ ಪುಟಗಳನ್ನು ಓದತೊಡಗಿದರೆ, ಆ ಸಂದರ್ಭದ ಕೆಲವು ದಶಕಗಳಲ್ಲಿ ಮೀಸೆಯನ್ನು ಬೋಳಿಸಿಕೊಳ್ಳುವುದರಲ್ಲಿಯೇ ರಸಿಕತೆಯನ್ನು ಕಂಡಿರುವುದು ವಿಧಿತವಾಗುತ್ತದೆ. ಹೀಗಾದುದು, ಆ ಕಾಲದಲ್ಲಿಯ ನಮ್ಮ ಗುಲಾಮೀತನವನ್ನು ಪ್ರತಿನಿಧಿಸುತ್ತದೆಯೆಂದು ಅರ್ಥಮಾಡಬೇಕಾಗುತ್ತದೆ. ಆದರೆ ಸ್ವಾತಂತ್ರ್ಯದ ಅನಂತರ ಇತ್ತೀಚಿನ ದಶಕಗಳನ್ನು ಹೆಂಗಸರ ರಸಿಕತೆಯಾದ ಕುಡಿನೋಟವು ಯುವಕರನ್ನು ಓಲೈಸುವುದು ಕಡಿಮೆಯಾದುದರಿಂದ, ಮತ್ತೆ ನಾನಾ ತರಹದ ಕುಡಿಮೀಸೆಗಳು ಯುವಕರಲ್ಲಿ ಕಾಣತೊಡಗಿ ಪೌರುಷವು ಮೆರಗು ಪಡೆಯುತ್ತಿರುವುದು ಹೆಮ್ಮೆಯ ಮಾತು. ಆದರೆ ಆ ಎಲ್ಲರಲ್ಲಿ ಕನ್ನಡತನವು ಹುರುಪುಗೊಳ್ಳಬೇಕಾಗಿದೆ. ಹುರಿಗೊಳ್ಳಬೇಕಾಗಿದೆ. ಆದ್ದರಿಂದ ಹುಲಿಯ ಮೀಸೆಗಳನ್ನು ಅಲುಗಾಡಿಸಿದ ಪುಲಕೇಶಿಯನ್ನು ಓದಿ ಸ್ಫೂರ್ತಿಯನ್ನು ಪಡೆಯಬೇಕಾಗಿದೆ. ವಿಜಯನಗರ ಕೃಷ್ಣದೇವರಾಯ, ಸುರಪುರದ ರಾಜಾವೆಂಕಟಪ್ಪ ನಾಯಕರಂತಹರ ಭಾವಚಿತ್ರಗಳಲ್ಲಿಯ ಮೀಸೆಗಳನ್ನು ಕಂಡು ನಮ್ಮ ಮೀಸೆಗಳನ್ನು ಹುರುಪಿನಿಂದ ಹುರಿಗೊಳಿಸಿ ಕುಣಿಯಬೇಕಾಗಿದೆ. ಇದರಿಂದಾಗಿಯಾದರೂ ಕನ್ನಡಿಗರ ರಸಿಕತೆಯಲ್ಲಿಯ ಕೃತ್ರಿಮತೆಯು ದೂರವಾಗಬಹುದೆಂದು ವಿಶ್ವಾಸಿಬಹುದು. ಇಲ್ಲದಿದ್ದರೆ ಹೆಂಗಸರೂ ಬೇಸತ್ತು ಮೀಸೆಯನ್ನು ಹೊತ್ತಾರು!