Tuesday, October 5, 2010

ಬಾನಿನಲ್ಲಿ ಲೀನವಾದ ಅಂಧರ ಬಾಳಿನ ಅರುಣೋದಯ: ಪಂ. ಪುಟ್ಟರಾಜ ಗವಾಯಿ




ಕಾವೆಂಶ್ರೀ


ಅಂದು ಸಂಚಾರಿ ವಾಣಿಯಲ್ಲಿ ದಿಢೀರನೆ ಬಂದ ಸುದ್ದಿ. ಗದುಗಿನ ಅಜ್ಜಾ ಹೋದ್ರಂತೆ!! ಎಲ್ಲರಲ್ಲೂ ಆತಂಕ, ದಿಗಿಲು, ಮೌನ. ನಿಧಾನವಾಗಿ ತಿಳಿದದ್ದು ಅಜ್ಜಾ ಚೇತರಿಸ್ಕೊಳತಾ ಇದಾರೆ. ಆಕ್ಸಿಜನ್ ಹಚ್ಚಿದ್ದಾರೆ ಹಾಗೆ... ಹೀಗೆ. ಮಾರನೇ ದಿನ ಅಜ್ಜ ಗುಣಮುಖರಾಗಿದ್ದಾರೆ..ಅವರು ಶತಾಯುಷಿಗಳಾಗಲಿ ಎಂದು ಎಲ್ಲಾ ಅಭಿಮಾನಿಗಳ ಆಸೆ. ಗದುಗಿನ ಜನ ಎಂದಿಗೂ ಸೌಹಾರ್ದಯುತರು, ಸಹೃದಯವಂತರು ಜಾತಿಭೇದಗಳಿಲ್ಲದೇ ಕೋಮುಗಲಭೆಗಳಿಲ್ಲದೇ ಅಜ್ಜಾರು ನೂರುವರ್ಷ ಬದುಕಲಿ ಎಂದು ತಮ್ಮತಮ್ಮ ಸಂಪ್ರದಾಯದಂತೆ ಪೂಜೆ ಪುನಸ್ಕಾರ ನೆರವೇರಿಸಿ ಗದಗನ್ನು ಯಜ್ಞಭೂಮಿಯನ್ನಾಗಿ ಮಾಡಿದರು. ಆದರೆ ವಿಧಿ ಬರಹ ಬೇರೆಯಾಗಿತ್ತು. ಮಧ್ಯಾಹ್ನ ಸುಮಾರು ೧೨ರ ಹೊತ್ತಿಗೆ ಗಾನಯೋಗಿ ಉಸಿರು ಬಾನಿನಲ್ಲಿ ಲೀನವಾಗುತ್ತಿದ್ದಂತೆ ಅವರ ಅಭಿಮಾನಿ ಜನತೆ ಎಲ್ಲೆಲ್ಲಿಂದ ಬಂದು ಸೇರಿತೋ! ಎರಡು ದಿನಗಳ ಕಾಲ ಗದುಗಿನಲ್ಲಿ ಜನತೆಯ ದುಃಖದ ಕಟ್ಟೆಯೊಡೆದಿತ್ತು. ಎಲ್ಲಿ ನೋಡಿದರೂ ಭಕ್ತರ ಮುಗಿಲು ಮುಟ್ಟುವ ಆಕ್ರಂದನ. ಅಷ್ಟೆಲ್ಲಾ ನೋವಿದ್ದರೂ ಯಾವುದೇ ರಾಜಕೀಯ, ಗಲಭೆಗಳಿಲ್ಲದೇ ಮೌನವಾಗಿ, ಶಾಂತಿಯುತವಾಗಿ ‘ಅಜ್ಜಾ ಮತ್ತೊಮ್ಮೆ ಹುಟ್ಟಿ ಬಾ’ ಎಂದು ಕಣ್ಣೀರಿಡುತ್ತಾ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡ ಇಡೀ ಜನಸಮೂಹದ ಅಭಿಮಾನ ನಾಡಿಗೇ ಮಾದರಿಯಾಗಿತ್ತು.
ಸಂಗೀತ-ಸಾಹಿತ್ಯ ಸಾರಸ್ವತ ಲೋಕದಲ್ಲಿ ಜ್ಞಾನಯೋಗಿ ಎನಿಸಿಕೊಂಡ ಡಾ|| ಪಂ.ಪುಟ್ಟರಾಜ ಗವಾಯಿಯವರದ್ದು ವೈವಿಧ್ಯಮಯ ಪ್ರತಿಭೆ. ಇವರು ಉತ್ತರ ಕರ್ನಾಟಕದ ಪ್ರತಿಯೊಬ್ಬರ ಮನದಲ್ಲೂ ಆರಾಧಿಸಲ್ಪಡುತ್ತಿರುವ ವ್ಯಕ್ತಿ. ಅಂಧ ಮಕ್ಕಳಿಗೆ ಆಶ್ರಯ ನೀಡಿ ಜ್ಞಾನದ ಬೆಳಕು ಚೆಲ್ಲಿದ ಯುಗಪುರುಷ. ಅಷ್ಟಲ್ಲದೇ ಹಿಂದುಸ್ಥಾನಿ ಸಂಗೀತಕ್ಕೆ ಹೊಸ ಹೊಸ ಚೀಜುಗಳನ್ನು ರಚಿಸಿ ಶತಮಾನದ ಹರಿಕಾರರೆಂದೇ ಗುರುತಿಸಿಕೊಂಡವರು. ಅವರ ಸಾಧನೆ-ಸಿದ್ಧಿಗಳನ್ನು ಗುರುತಿಸಿ ಭಾರತ ಸರ್ಕಾರ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ಇದು ತಡವಾಗಿಯಾದರೂ ಸಂಗೀತ ಲೋಕಕ್ಕೆ ದೊರೆತ ಮತ್ತೊಂದು ಗರಿ. ಪೂಜ್ಯರನ್ನೇ ಅರಸಿಕೊಂಡು ಬಂದ ಕೊನೆಯ ಪ್ರಶಸ್ತಿ ಧಾರವಾಡದ ನ.ವಜ್ರಕುಮಾರ ಪುರಸ್ಕಾರ.
ಸಿದ್ದಮ್ಮ ಮತ್ತು ರೇವಣ್ಣಯ್ಯ ದಂಪತಿಗಳ ಗರ್ಭದಿಂದ ೩ ಮಾರ್ಚ್ ೧೯೧೪ ರಂದು ಧಾರ ವಾಡ ಜಿಲ್ಲೆಯ ದೇವಗಿರಿಯಲ್ಲಿ ಪುಟ್ಟರಾಜರ ಜನನ. ಆರು ತಿಂಗಳದ ಪುಟ್ಟರಾಜರಿಗೆ ಕಣ್ಣುಬೇನೆ ಎಂಬ ಮಾರಿಯ ಕಾಟ. ಆಗ ತಾಯಿ ಮೂಢನಂಬಿಕೆಗೊಳಗಾಗಿ ದನದ ಮೈಮೇಲಿರುವ ಉಣುಗು(ತೊಣಸಿ) ತಂದು ಮಗ ಪುಟ್ಟರಾಜರ ಕಣ್ಣಿಗೆ ಮುಟ್ಟಿಸಿದಳು. ಅದು ಕಣ್ಣಿನ ಪೊರೆ ಎಳೆಯುತ್ತದೆ ಎಂಬ ಭ್ರಮೆ! ಎರಡು ಕಣ್ಣುಗಳಿಗೂ ಹಿಡಿಸಿದಳು. ಕೊನೆಗೆ ಕಣ್ಣುಗಳು ಕುರುಡಾದವು. ಚಿಂತೆಯಿಂದಲೇ ತಂದೆ ಚಿತೆಯಾದರು. ಸೋದರ ಮಾವ ಶ್ರೀ ಚಂದ್ರಶೇಖರ ಹಿರೇಮಠ ಅವರಿಂದ ಪ್ರಾಥಮಿಕ ಶಿಕ್ಷಣ.
ಎಲ್ಲವೂ ದೈವಲೀಲೆಯೆಂದು ಪರಿಗಣಿಸಿದ ಪುಟ್ಟರಾಜರು ಸಂಗೀತವನ್ನೇ ತಮ್ಮ ಸಾಧನೆಯ ಕ್ಷೇತ್ರವಾಗಿ ಆಯ್ದುಕೊಂಡರು. ಶಿಕ್ಷಣಾಭ್ಯಾಸಕ್ಕಾಗಿ ಪಂ.ಪಂಚಾಕ್ಷರಿ ಗವಾಯಿಗಳನ್ನು ಮೊರೆಹೊಕ್ಕರು. ಬಿಜಾಪೂರ ಜಿಲ್ಲಾ ಶಿವಯೋಗ ಮಂದಿರದಲ್ಲಿ ಸಂಗೀತ ಶಾಲೆಯನ್ನು ನಡೆಸುತ್ತಿದ್ದ ಗಾನಯೋಗಿ ಕೈ. ಪಂಡಿತ್ ಪಂಚಾಕ್ಷರಿ ಗವಾಯಿಗಳ ಕೃಪೆಗೆ ಪಾತ್ರರಾದರು. ಕೇವಲ ಆರು ವರ್ಷದ ಬಾಲಕನಿರುವಾಗಲೇ ಪುಟ್ಟರಾಜರನ್ನು ಗುರು ಪಂಚಾಕ್ಷರಿ ಗವಾಯಿಗಳು ಕರ್ನಾಟಕ-ಹಿಂದುಸ್ಥಾನಿ ಸಂಗೀತದ ಆಚಾರ್ಯ ಪುರುಷರಾಗುವಂತೆ ಅನುಗ್ರಹಿಸಿದರು. ಗುರು-ಶಿಷ್ಯರ ಬಾಂಧವ್ಯ ಅಂಧಕಾರದ ಬಾಳಿಗೆ ಹೊಸಬೆಳಕಾಯಿತು. ಆಗಲೇ ಹಾರ‍್ಮೋನಿಯಂ, ತಬಲ, ಸಿತಾರ್, ವಯೋಲಿನ್, ಸಾರಂಗಿ, ಗಾಯನದಲ್ಲಿ ಉತ್ತರಾದಿ ಮತ್ತು ದಕ್ಷಿಣಾದಿ ಶೈಲಿಯ ಸಂಗೀತ ಪುಟ್ಟರಾಜರಲ್ಲಿ ಪರಿಪಕ್ವಗೊಂಡಿದ್ದವು.
ಗುರುವಿನ ಆಜ್ಞೆಯ ಪ್ರಕಾರ ಗದುಗಿನ ವೀರೇಶ್ವರ ಪುಣ್ಯಾಶ್ರಮವನ್ನು ೧೯೪೪ರಿಂದ ವಹಿಸಿಕೊಂಡು ಅತಿಶಯವಾಗಿ ಅಭಿವೃದ್ಧಿಪಡಿಸುತ್ತಾ ಬಂದಿದ್ದರು. ಅಂಧರಾದರೂ ಶಿಕ್ಷಣ, ಸಂಗೀತ, ಅನ್ನದಾಸೋಹಗಳೆಂಬ ತ್ರಿವಿಧ ದಾಸೋಹಗಳನ್ನು ನಿಜವಾದ ಅರ್ಥದಲ್ಲಿ ಅನುಸರಿಸಿಕೊಂಡು ಬಂದರು. ಇವರ ಬದುಕಿನ ಜ್ಞಾನದ ಮತ್ತೊಂದು ಮುಖವೇ ಸಾಹಿತ್ಯ ಕೃಷಿ. ಸಂಸ್ಕೃತವೆಂದರೆ ಬಲುಪ್ರೀತಿ. ಹಿಂದಿಯೆಂದರೆ ತುಂಬಾ ಖುಷಿ. ಕನ್ನಡದಲ್ಲೂ ಅಷ್ಟೇ ಪ್ರಭುತ್ವ.. ನೂರಾರು ಗ್ರಂಥಗಳನ್ನು, ಶ್ರೀರುದ್ರ, ಪುರಾಣ ನಾಟಕಗಳನ್ನು ತಮ್ಮದೇ ಆದ ಶೈಲಿಯಲ್ಲಿ ಬ್ರೈಲ್ ಲಿಪಿಯ ಮುಖಾಂತರ ಬರೆದಿದ್ದಾರೆ. ಇವರನ್ನು ತ್ರಿಭಾಷಾ ಕವಿ ಎಂದೇ ಗುರುತಿಸುವುದುಂಟು. ಹಿಂದಿಯ ವೇದಾಂತ, ವಿಚಾರ ಸಾಗರ, ವೃತ್ತಿ ಪ್ರಭಾಕರ, ಅಮರಕೋಶ, ವ್ಯಾಕರಣ ಸಿದ್ಧಾಂತ, ನ್ಯಾಯಶಾಸ್ತ್ರದ ತರ್ಕಸಂಗ್ರಹ, ತತ್ವಶಾಸ್ತ್ರ, ಉಪನಿಷತ್‌ಗಳು, ಭಗವದ್ಗೀತೆ-ಬ್ರಹ್ಮಸೂತ್ರ ಹೀಗೆ ಅನೇಕ ಮಹಾಗ್ರಂಥಗಳನ್ನು ಅಭ್ಯಾಸಮಾಡಿಕೊಂಡ ಮಹನೀಯರಿವರು.
ಸಾಹಿತ್ಯ, ಸಂಗೀತ, ಅಧ್ಯಾತ್ಮ ವಿದ್ಯೆಗಳ ತ್ರಿವೇಣಿಸಂಗಮದಿಂದ ಕಲಾಭಿಜ್ಞರಾದ ಪಂ.ಪುಟ್ಟರಾಜರು ಅಕ್ಕಮಹಾದೇವಿ ಪುರಾಣವನ್ನು ಕನ್ನಡ ಭಾಮಿನಿ ಷಟ್ಪದಿಯಲ್ಲಿ, ಗುರುಗೀತೆಯನ್ನು ಸಂಸ್ಕೃತದಲ್ಲಿ, ಹಿಂದಿಯಲ್ಲಿ ಬಸವ ಪುರಾಣವನ್ನು ಬರೆದು ರಾಷ್ಟ್ರೀಯ ಪುರಸ್ಕಾರಕ್ಕೆ ಭಾಜನರಾದರು. ಇವರಿಂದ ರಚಿತವಾದ ಗಾನಸುಧಾ ಭಾಗ ೧ ಮತ್ತು ಭಾಗ ೨ ಸಂಗೀತ ನೃತ್ಯ ಅಕಾಡಮಿ ಪ್ರಶಸ್ತಿ ವಿಜೇತ ಕೃತಿಗಳು. ಕುಮಾರ ವಿಲಾಸಕಾವ್ಯಂ(ಕನ್ನಡ), ಅಷ್ಟಾವರಣ ಕೀರ್ತನ ಮಾಲಿಕೆ, ಶ್ರೀಮತ್ಕುಮಾರಗೀತಾ, ಶಿವಶರಣ ಚನ್ನಯ್ಯನ ಸಂಗೀತನಾಟಕ, ಸಂಸ್ಕೃತದ ಸಿದ್ಧಾಂತ ಶಿಖಾಮಣಿ, ಸಂಗೀತ ಶಾಸ್ತ್ರಜ್ಞಾನ ಮುಂತಾದ ಕೃತಿಗಳು ಶ್ರೇಷ್ಠ ಕೃತಿಗಳ ಪಂಕ್ತಿಯಲ್ಲಿವೆ. ಸಂಸ್ಕೃತದಲ್ಲಿ ಶ್ರೀ ಗುರುಸಿದ್ಧೇಶ್ವರ ಚಂಪೂಕಾವ್ಯವನ್ನು ರಚಿಸಿದ್ದಾರೆ. ಇವರ ಸಂಪಾದಕತ್ವದಲ್ಲಿ ಪಂಚಾಕ್ಷರವಾಣಿ ಮಾಸಪತ್ರಿಕೆ ಪ್ರಕಟವಾಗುತ್ತಿದೆ.
ಜಗಜ್ಯೋತಿ ಬಸವೇಶ್ವರ, ನೆಲ್ಲೂರು ನಂಬಿಯಕ್ಕ, ಸತಿ ಸುಕನ್ಯಾ ಸೇರಿದಂತೆ ೧೯ಕ್ಕೂ ಹೆಚ್ಚು ನಾಟಕಗಳನ್ನು ಬರೆದು ತಮ್ಮ ಆಶ್ರಯದಲ್ಲಿ ಸ್ಥಾಪಿತವಾಗಿರುವ ಶ್ರೀ ಕುಮಾರೇಶ್ವರ ನಾಟ್ಯಸಂಘದಿಂದ ರಂಗಭೂಮಿಗೆ ಹೊಸ ಮೆರಗನ್ನು ನೀಡಿದರು. ಅದೇ ನಾಟ್ಯಸಂಘದಿಂದ ಹೇಮರೆಡ್ಡಿ ಮಲ್ಲಮ್ಮ ನಾಟಕವನ್ನು ೩೭೫ ದಿನಗಳವರೆಗೆ ಸತತವಾಗಿ ಪ್ರತೀದಿನ ಪ್ರದರ್ಶನ ನೀಡಿ ಪ್ರೇಕ್ಷಕರ ಮನ ತಣಿಸಿ ರಂಗಭೂಮಿಯಲ್ಲಿ ಹೊಸ ವಿಕ್ರಮವನ್ನೇ ಸಾಧಿಸಿದರು. ರಂಗಭೂಮಿಯ ಸೂತ್ರಧಾರರಾಗಿ ಸುದೀರ್ಘ ರಂಗ ಸೇವೆ ಸಲ್ಲಿಸಿದ್ದಾರೆ. ಇಲ್ಲಿ ಶಿಸ್ತು ಮತ್ತು ನಿಯತ್ತಿನ ಕಲಾವಿದರು ರೂಪುಗೊಳ್ಳುತ್ತಿದ್ದಾರೆ. ಇಂದಿಗೂ ಪುರುಷರೇ ಸ್ತ್ರೀ ಪಾತ್ರಧಾರಿಯಾಗಿ ಅಭಿನಯಿಸುತ್ತಿರುವುದು ರಂಗಭೂಮಿಯಲ್ಲಿ ಈಗ ಇತಿಹಾಸ.
ಪಂ.ಪುಟ್ಟರಾಜರಿಗೆ ಅಪಾರವಾದ ಶಿಷ್ಯಸಂಪತ್ತು. ಅವರಿಗಿರುವ ಶಿಷ್ಯರನ್ನು ಹೆಸರಿಸುವುದು ತುಂಬಾ ಕಷ್ಟ. ಅವರುಗಳಲ್ಲಿ ಪಂ. ವೆಂಕಟೇಶಕುಮಾರ, ಡಿ.ಕುಮಾರದಾಸ್, ರಘುನಾಥ್ ನಾಕೋಡ್, ಸೋಮನಾಥ ಮರಡೂರ್ ಮುಂತಾದವರು ಪ್ರಮುಖರು. ನಾಡಿನಗಲ ಶಾಲಾಕಾಲೇಜುಗಳಲ್ಲಿ ಸಂಸ್ಥೆಗಳಲ್ಲಿ ಇವರ ಶಿಷ್ಯರುಗಳೆಲ್ಲ ಅಧ್ಯಾಪಕರಾಗಿದ್ದಾರೆ. ರೇಡಿಯೋ-ದೂರದರ್ಶನದಲ್ಲೂ ಕಲಾವಿದರಾಗಿದ್ದಾರೆ.
ಪಂ.ಪುಟ್ಟರಾಜರು ಗಾಯನ ಮತ್ತು ವಾದನಗಳೆರಡರಲ್ಲೂ ಪರಿಣಿತರಿದ್ದರು. ಇವರ ನಾದದ ಮಾಧುರ್ಯಕ್ಕೆ ಒಲಿದುಬಂದ ಪ್ರಶಸ್ತಿ-ಪುರಸ್ಕಾರಗಳು ಹಲವಾರು. ಶ್ರೀನಿಧಿ, ಲಲಿತಕಲಾ ಸಾಮ್ರಾಟ, ಸಂಗೀತ ಚಕ್ರವರ್ತಿ, ನಾಡೋಜ, ಕೇಂದ್ರಸರ್ಕಾರದ ಸಂಗೀತ ನೃತ್ಯ ಅಕಾಡಮಿ ಪ್ರಶಸ್ತಿ, ಕನಕಪುರಂದರ ಪ್ರಶಸ್ತಿ, ರಾಜ್ಯ ಪ್ರಶಸ್ತಿ, ಕಾಳಿದಾಸ ಸಮ್ಮಾನ, ಚೌಡಯ್ಯ ಪ್ರಶಸ್ತಿ, ಬಸವಶ್ರೀ ಪ್ರಶಸ್ತಿ, ಸಂಗೀತ ರತ್ನ, ಸಾಹಿತ್ಯ-ಸಂಗೀತ ಕಲಾಪ್ರವೀಣ, ಅಲ್ಲದೇ ಹಿಂದಿ ಕೃತಿಯಾದ ಬಸವ ಪುರಾಣಕ್ಕೆ ಭಾರತದ ಮೊದಲ ರಾಷ್ಟ್ರಪತಿಯಾದ ಬಾಬುರಾಜೇಂದ್ರ ಪ್ರಸಾದ್‌ರಿಂದ ರಾಷ್ಟ್ರಪತಿ ಗೌರವವೂ ಲಭಿಸಿದೆ. ಅಲ್ಲದೇ ಭಾರತದ ಪ್ರತಿಷ್ಠಿತ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿ ಸಹ ಬಂದಿರುವುದು ಇಡೀ ಸಂಗೀತ ಲೋಕಕ್ಕೇ ಮತ್ತೊಂದು ಹೆಮ್ಮೆಯ ಗರಿಮೂಡಿದಂತಾಗಿದೆ.
ಪುಣ್ಯಾಶ್ರಮದ ಅನ್ನದ ಪಾತ್ರೆ ಅಕ್ಷಯಪಾತ್ರೆ ಇದ್ದಂತೆ. ದಿನನಿತ್ಯ ಸಾವಿರಾರು ವಿದ್ಯಾರ್ಥಿ-ಭಕ್ತ ಸಮುದಾಯ ಪ್ರಸಾದ ಸ್ವೀಕರಿಸುತ್ತಾರೆ. ಇಲ್ಲಿ ಸಾವಿರಾರು ಕುರುಡ ಬಾಲಕರು ಸಂಗೀತಾಭ್ಯಾಸದಲ್ಲಿ ಯಾವ ಕುಂದುಕೊರತೆಗಳಿಲ್ಲದೇ ಜ್ಞಾನಸಂಪಾದನೆ ಮಾಡುತ್ತಿದ್ದಾರೆ. ಕುರುಡರ ಜೊತೆಗೆ ಕಣ್ಣಿದ್ದವರೂ ಇದ್ದಾರೆ. ಅವರೆಲ್ಲರಿಗೂ ಉಚಿತವಾಗಿ ಸಂಗೀತಾಭ್ಯಾಸ, ವಸತಿ, ಅನ್ನ-ವಸ್ತ್ರಗಳ ವಿನಿಯೋಗವಾಗುತ್ತದೆ.
ಪಂ.ಪುಟ್ಟರಾಜ ಗವಾಯಿಗಳವರ ನಿಲುವು ಬಹಳ ಎತ್ತರವಾದದ್ದು. ಯಾವ ಉತ್ಪ್ರೇಕ್ಷೆಗೂ ಕಿವಿಗೊಡದ ಕಾಯಕ ಬದುಕು ಅವರದ್ದಾಗಿತ್ತು. ಅವರು ಸಾವಿರಾರು ಅಂಧ ಮಕ್ಕಳ ಬಾಳಿಗೆ ಸುಪ್ರಭಾತವಾಗಿದ್ದರು.
ಪಂ.ಪುಟ್ಟರಾಜರನ್ನು ಈ ಶತಮಾನದ ನಡೆದಾಡುವ ದೇವರೆಂದೇ ಭಾವಿಸಿರುವ ಭಕ್ತರು ಅವರನ್ನು ಕರೆದು ಸತ್ಕರಿಸಿ, ಪಾದಪೂಜೆ, ತುಲಾಭಾರದ ಕಾರ್ಯಕ್ರಮ ನೆರವೇರಿಸುತ್ತಿದ್ದರು. ತುಲಾಭಾರ ಭಾರತೀಯ ಸಂಸ್ಕೃತಿಯಲ್ಲಿ ಧಾರ್ಮಿಕ ಮಹತಿಯ ಹಾಗೂ ತಾತ್ವಿಕ ಔಚಿತ್ಯವನ್ನು ಒಳಗೊಂಡ ವಿಶಿಷ್ಟ ಸಾಂಕೇತಿಕ ಕ್ರಿಯಾಚರಣೆ. ಒಬ್ಬ ವ್ಯಕ್ತಿ ತನ್ನ ಬದುಕಿನ ಸುಖಶಾಂತಿಗಾಗಿ ತನ್ನ ತೂಕದಷ್ಟು ಚಿನ್ನ, ಬೆಳ್ಳಿ, ದವಸ-ಧಾನ್ಯಗಳನ್ನು ಸಾತ್ವಿಕ ಹಾಗೂ ಅರ್ಹ ವ್ಯಕ್ತಿಗೆ ದಾನರೂಪದಲ್ಲಿ ಕೊಡಮಾಡಿ ಕೃತಾರ್ಥನಾಗುವ ಒಂದು ಧಾರ್ಮಿಕ ಕ್ರಿಯಾಚರಣೆ. ದಾನ ಮಾಡಬೇಕು. ಉದಾರ ಮನೋಭಾವವನ್ನು ವ್ಯಕ್ತಿತ್ವದಲ್ಲಿ ಅಂತರ್ಗತಿಸಿಕೊಳ್ಳಬೇಕು. ಸಮಾಜದ ಋಣ ತೀರಿಸಲು ಅದಕ್ಕೆ ಏನನ್ನಾದರೂ ಸಮರ್ಪಿಸಬೇಕು. ನಿಸ್ವಾರ್ಥಮನೋಭಾವದಿಂದ ಪ್ರೇರಿತವಾದ ಕೊಡುವಿಕೆಯಲ್ಲಿ ಸಂತೋಷವನ್ನೂ ನಿರ್ಮಲ ಆನಂದವನ್ನೂ ಅರಸಬೇಕೆಂದು ಈ ಕ್ರಿಯಾಚರಣೆಯ ಹಿಂದಿನ ಸಂದೇಶವಾಗಿದೆ. ದಾನ ಧರ್ಮದ ಪ್ರವೃತ್ತಿ ಸಮಾಜದಲ್ಲಿ ಹುಲುಸಾಗಿ ಬೆಳೆದು ಬಂದರೆ ಸಮಾಜವು ಸರ್ವಾಂಗೀಣವಾಗಿ ಅಭಿವೃದ್ಧಿ ಹೊಂದಲು ಅವಕಾಶವಾಗುತ್ತದೆ ಎಂಬುದೇ ಈ ಕ್ರಿಯಾಚರಣೆಯ ಹಿಂದೆ ಅಡಗಿದ ಸದುದ್ದೇಶ.
ಧಾರವಾಡದ ಮುರುಘಾಮಠದ ಶ್ರೀ ಮೃತ್ಯುಂಜಯ ಅಪ್ಪಗಳ ಸಾನ್ನಿಧ್ಯದಲ್ಲಿ ನಡೆದದ್ದು ಪ್ರಥಮ ತುಲಾಭಾರ. ಪಂ. ಡಾ. ಪುಟ್ಟರಾಜ ಕವಿ ಗವಾಯಿಗಳವರು ಹಮ್ಮಿಕೊಂಡಿರುವ ಸಾಮಾಜಿಕ ಸೇವೆ ಸಾಮಾನ್ಯವಾದದ್ದಲ್ಲ. ಅದೊಂದು ಜವಾಬ್ದಾರಿ. ಅದನ್ನು ನೀಗಿಸುವುದು ಸುಲಭ ಸಾಧ್ಯವಲ್ಲ. ಅಂದಾಜು ಸಾವಿರಕ್ಕೂ ಮೀರಿ ಗಿನ್ನೆಸ್ ದಾಖಲೆಯೂ ಆಗಿದೆ. ಗುರುಗಳ ಆಜ್ಞೆಯಂತೆ ತುಲಾಭಾರದಿಂದ ಬರುವ ಕಾಣಿಕೆಯನ್ನು ಪುಣ್ಯಾಶ್ರಮದ ಅಂಧ-ಅನಾಥ ಮಕ್ಕಳ ಪೋಷಣೆಗೆ ವಿನಿಯೋಗಿಸಲಾಗುತ್ತದೆ. ಹೀಗೆ ಸಮಾಜಕ್ಕೆ, ನಾಡಿಗೆ, ದೇಶಕ್ಕೆ ಪುಣ್ಯಾಶ್ರಮದ ಕೊಡುಗೆ ಗಣನೀಯವಾದುದು. ಪ್ರತಿಭಾ ಸಂಪನ್ನ ಸಂಗೀತಗಾರರನ್ನು, ಸಂಗೀತಜ್ಞರನ್ನು, ಸಂಗೀತ ಶಿಕ್ಷಕರನ್ನು,ಕೀರ್ತನಕಾರರನ್ನು ನಿರಂತರವಾಗಿ ರೂಪಿಸುತ್ತಲೇ ಇರುವ ಪುಣ್ಯಾಶ್ರಮ ನಮ್ಮ ಸಂಸ್ಕೃತಿಯ ಪೋಷಕ ಶಕ್ತಿಯಾಗಿದೆ.
೧೯೯೮ರಲ್ಲಿ ಕನಕ-ಪುರಂದರ ಪ್ರಶಸ್ತಿ ಬಂದ ಸಂದರ್ಭದಲ್ಲಿ ಗಾನ-ಜ್ಞಾನ ಯೋಗಿ ಜತೆ ಮಾತುಕತೆ..
ಅಧ್ಯಾತ್ಮ-ಮತ-ಧರ್ಮ-ತತ್ವಗಳಿಂದ
ಸಮಾಜಕ್ಕೆ ಕೊಡಬಹುದಾದ ಫಲವೇನು?
ಸಮಾಜದಲ್ಲಿ ಇರಬೇಕಾದ ಜ್ಞಾನ-ಭಕ್ತಿ-ಸದಾಚಾರ-ನೀತಿಗಳು ಇಂದು ಎಲ್ಲೂ ಇಲ್ಲವಾಗುತ್ತಿವೆ. ಅವುಗಳನ್ನು ಉಳಿಸಿಕೊಳ್ಳಬೇಕಾದರೆ ಸುಜ್ಞಾನ, ಸದ್ಭಕ್ತಿ, ಸದಾಚಾರ, ಸತ್ಯತೆ ಇರಬೇಕಾಗುತ್ತದೆ. ಇವುಗಳೆಲ್ಲವೂ ಇರಬೇಕಾದರೆ ಸಮಾಜದಲ್ಲಿ ಅಧ್ಯಾತ್ಮ-ಮತ-ಧರ್ಮ-ತತ್ವಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕಾಗುತ್ತದೆ.
ತಮಗೆ ಹೊಸಹೊಸ ಚೀಜುಗಳ ರಚನೆಗೆ ಪ್ರೇರಣಾಶಕ್ತಿ ಯಾವುದು?
ನನ್ನ ಪ್ರತಿಯೊಂದು ಪ್ರಯೋಗಕ್ಕೂ ಗುರುವೇ ಪ್ರೇರಣಾ ಶಕ್ತಿ. ಹಿಂದೆ ಗುರುಗಳು ಸಂಗೀತ ಕಲಿಸುವ ಭಾರ ಹೊತ್ತುಕೊಂಡು ತಮಗೆ ತಿಳಿದಷ್ಟನ್ನೂ ನನಗೆ ಕಲಿಸಿದರು. ಒಂದೊಂದು ರಾಗದಲ್ಲಿ ಒಂದೊಂದು ಚೀಜುಗಳನ್ನು ಹೇಳಿದರು. ಅವರಲ್ಲಿ ಚೀಜುಗಳ ಸಂಗ್ರಹವಿರಲಿಲ್ಲ. ಹೆಚ್ಚಿನ ಕಲಿಕೆಗಾಗಿ ನನ್ನನ್ನು ರಾಮಕೃಷ್ಣಬುವಾ ವಝೆಯವರ ಬಳಿ ಕಳುಹಿಸಿದರು. ವಿಶಾರದವರೆಗೂ ಕಲಿತೆ ಆದರೆ ಪರೀಕ್ಷೆಗೆ ಕುಳಿತುಕೊಳ್ಳಲಿಲ್ಲವಷ್ಟೆ.
ಗುರು ಕೃಪೆಯಿಂದ ಹೊಸ ಚೀಜುಗಳ ರಚನೆಯಲ್ಲಿ ತೊಡಗಿಕೊಂಡೆ. ನನ್ನ ಮೊದಲ ಚೀಜು ಹಮೀರ್ ರಾಗದ್ದು. ಅದರ ಮೊದಲ ಪ್ರಯೋಗವೂ ಗುಳೇದಗುಡ್ಡದಲ್ಲಿ ನಡೆಯಿತು. ಅಂದು ಗುರುಗಳೇ ನನಗೆ ತಬಲಾಸಾಥ್ ನೀಡಿ ರಂಜಿಸಿದರು. ಹೆದರುತ್ತಾ ಶಿವಸ್ತೋತ್ರದ ಸಾಲನ್ನು ಹಾಡಿದೆ. ಆಗ ಗುರುಗಳು ಹೊಸಚೀಜು ಬಹಳ ಚಂದ ಆಗ್ತಾವೆ. ಹೀಗೆಯೇ ಹೊಸಹೊಸ ಚೀಜುಗಳನ್ನು ರಚನೆ ಮಾಡು. ನಿನಗೆ ಗುರು ಕೃಪೆ ಎಂದಿಗೂ ಇದ್ದೇ ಇದೆ ಅಂತಾ ಹೇಳಿದ್ರು. ಅವರ ಆಶೀರ್ವಾದದಂತೆ ಎಲ್ಲಾ ರಾಗಗಳ ಚೀಜು ರಚಿಸಿದೆ. ಕರ್ನಾಟಕ ರಾಜ್ಯದ ಸಂಗೀತ ಅಕಾಡಮಿ ಆಯ್ಕೆ ಮಾಡಿ ಗೌರವ ಪುರಸ್ಕಾರ ನೀಡಿದೆ. ಆ ಚೀಜುಗಳನ್ನು ಆಕಾಶವಾಣಿ, ದೂರದರ್ಶನ, ಸಂಗೀತ ಕಛೇರಿಗಳಲ್ಲಿ ಹಿರಿ-ಕಿರಿಯ ಗಾಯಕರೆಲ್ಲಾ ಪ್ರಯೋಗಿಸಿ ಮಹತ್ವಪೂರ್ಣ ಸ್ಥಾನಗಳಿಸಿಕೊಟ್ಟಿದ್ದಾರೆ. ಅವರೆಲ್ಲರಿಗೂ ನಾನು ಆಭಾರಿಯಾಗಿದ್ದೇನೆ.
ನಿಮ್ಮ ದೃಷ್ಟಿಯಲ್ಲಿ ಪೂಜೆಯ ಪರಮೋದ್ದೇಶ ಏನು? ಹೇಗೆ?
ನಮ್ಮನ್ನು ಲೋಕಕಲ್ಯಾಣಕ್ಕಾಗಿ ಮುಡುಪಾಗಿಡುವುದು. ಸರ್ವರಿಗೂ ಶಾಂತಿ ಸಿಗುವಂತಾಗಬೇಕು. ಸರ್ವರೂ ಸುಖಿಗಳಾಗಿರಲಿ, ಆರೋಗ್ಯವಂತರಾಗಿರಲಿ, ಯಾರೂ ದುಃಖಿಗಳಾಗುವದು ಬೇಡವೆಂಬ ಭಾವನೆ ನಮ್ಮಲ್ಲಿ ಅಡಕವಾದಲ್ಲಿ ಎಲ್ಲವೂ ಫಲಿಸುತ್ತದೆ.
ತಮ್ಮ ಮೇಲೆ ಗುರು ಹೊರಿಸಿದ ಜವಾಬ್ದಾರಿಗಳೇನು? ಅವುಗಳೆಲ್ಲ ಕಾರ್ಯರೂಪಕ್ಕೆ ಬಂದಿವೆಯೇ?
ಬೀದಿಯಲ್ಲಿ ಹೊಟ್ಟೆಪಾಡಿಗಾಗಿ ಭಿಕ್ಷಾಪಾತ್ರೆ ಹಿಡಿದು ಅಲೆಯಬೇಕಾದ ಅಂಧ ಮಕ್ಕಳಿಗೆ ಆಶ್ರಯ, ಜ್ಞಾನಧಾರೆ, ಸಂಗೀತ ಆರಾಧಕರಿಗೆ ಕಲಾಕೇಂದ್ರ ಮತ್ತು ಧರ್ಮಾಭಿವೃದ್ಧಿ ಇವು ನನ್ನ ಮೇಲೆ ವಹಿಸಿರುವ ಜವಾಬ್ದಾರಿಗಳು.
ಸಮಾಜದಲ್ಲಿ ಮೇಲು-ಕೀಳೆಂಬ ಭೇದ ಭಾವವಿಲ್ಲದೇ ಭಯ, ಗೌರವ, ಸತ್ಯತೆ ಎಲ್ಲಿದೆಯೋ ಅಲ್ಲಿ ಧರ್ಮ ನೆಲೆಸುತ್ತದೆ. ಇಂದು ಅಂಧ ಮಕ್ಕಳಿಗಾಗಿ ಕೇಂದ್ರ ಸರ್ಕಾರದ ಸಹಾಯದಿಂದ ವಸತಿಗೃಹದ ವ್ಯವಸ್ಥೆಯಾಗಿದೆ. ಊಟ ಉಪಚಾರದ ವ್ಯವಸ್ಥೆಯೂ ಇದೆ. ಜ್ಞಾನಧಾರೆಯ ಕೇಂದ್ರವಾಗಿ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಪದವಿಯವರೆಗೂ ಶಿಕ್ಷಣ ಸೌಲಭ್ಯವಿದೆ. ಉತ್ತರ ಕರ್ನಾಟಕದಲ್ಲಿಯೇ ಪ್ರಪ್ರಥಮವಾಗಿ ಪದವಿ ಕಾಲೇಜು ಆರಂಭಗೊಂಡು ಹಲವಾರು ವರ್ಷಗಳೇ ಸಂದಿವೆ.
ಆತ್ಮವನ್ನು ಅತ್ಯುನ್ನತ ಸ್ಥಿತಿಗೆ ಕೊಂಡೊಯ್ಯುವ ಸರ್ವಶ್ರೇಷ್ಠ ಕಲೆ ಯಾವುದು? ಯಾವ ದೃಷ್ಟಿಯಲ್ಲಿ?
ಸರ್ವಶ್ರೇಷ್ಠ ಕಲೆ ಸಂಗೀತ. ಹಾಡುವ ಪದಗಳೆಲ್ಲಾ ಶೃಂಗಾರ ಪದಗಳಾಗಬಾರದು. ತತ್ವಪದಗಳಾಗಿರಬೇಕು. ಮೀರಾಬಾಯಿ ಭಜನ್, ಕನಕದಾಸ, ಪುರಂದರ ದಾಸರ ಪದಗಳೆಲ್ಲ ಮನಸ್ಸಿನಲ್ಲಿ ಅತೀ ಆನಂದ ತಂದುಕೊಡುತ್ತವೆ. ಭಗವದ್ಭಕ್ತಿ ಬೆಳೆಯುತ್ತದೆ. ಸರ್ಪಭೂಷಣ ಶಿವಯೋಗಿ, ಬಸವಣ್ಣನ ವಚನಗಳೆಲ್ಲ ಆತ್ಮಶಾಂತಿಯನ್ನು ನೀಡುತ್ತವೆ.

No comments:

Post a Comment