Saturday, August 13, 2011

ವಚನಕಾರ್ತಿಯರ ಧ್ವನಿಗಳು


ಸಮಾನವಾದ ಸಾತ್ವಿಕ ಪ್ರೇರಣೆ ಹೊಂದಿದ. ಸಂಕಲ್ಪ ಹೊಂದಿದ ಶರಣ ಸಮುದಾಯದಿಂದ, ಜನತೆಗೆ ಹತ್ತಿರವಾದ ದೇಶಿ ಭಾಷೆಯಲ್ಲಿ ಸೃಷ್ಟಿಯಾದದ್ದು ವಚನ ಸಾಹಿತ್ಯ. ಈ ಸಾಹಿತ್ಯ ಮೂಡಿ ಬಂದ ಕಾಲ ಬದಲಾವಣೆಯ ಕಾಲ ಎನ್ನುವುದಕ್ಕಿಂತ ಪರಿವರ್ತನೆಯ ಕಾಲ ಎನ್ನಬಹುದು. ಧಾರ್ಮಿಕ, ಆರ್ಥಿಕ, ಸಾಮಾಜಿಕ, ರಾಜಕೀಯ ರಂಗಗಳಲ್ಲಿ ಬದಲಾವಣೆ ಆದವು. ಪರಂಪರಾನುಗತವಾಗಿ ಬಂದಿದ್ದ ಜಾತಿ-ಮತ, ವರ್ಣ-ವೃತ್ತಿ ಭೇದಗಳಂಥ ಭಾಷೆಗಳನ್ನು ಕಿತ್ತೊಗೆದು ಐಕ್ಯತೆಯನ್ನು ಸ್ಥಾಪಿಸಲು ಶರಣರು ಪ್ರಯತ್ನಿಸಿದರು. ಅವರಲ್ಲಿ ಸ್ತ್ರೀಯು ಸಹ ಸಮಾನ ಅವಕಾಶ ಹೊಂದಿದಳು. ತನ್ನನ್ನು ಸುತ್ತಿಕೊಂಡಿದ್ದ ಸಂಕೋಲೆಗಳಿಂದ ಮುಕ್ತವಾಗಿ ಹೊರಬಂದಳು. ತನ್ನ ವೈಚಾರಿಕ ಶಕ್ತಿಯಿಂದ ಬೆಳೆಯಲು ಪ್ರಯತ್ನಿಸಿದಳು. ಏಕಕಾಲಕ್ಕೆ ಪುರುಷಾಧಿಪತ್ಯ ಮತ್ತು ಪುರೋಹಿತಶಾಹಿಯನ್ನು ವಿರೋಧಿಸಿದಳು. ಸುಮಾರು ೩೫ ಜನ ವಚನಕಾರ್ತಿಯರು ಸು.೧೩೫೦ ವಚನಗಳನ್ನು ರಚಿಸಿದ್ದರೆ. ಇದರಲ್ಲಿ ಶೂದ್ರಾತಿಶೂದ್ರ ವಚನಕಾರ್ತಿಯರೂ ಇದ್ದಾರೆ. ಅಕ್ಕಮಹಾದೇವಿ, ಮುಕ್ತಾಯಕ್ಕ, ಆಯ್ದಕ್ಕಿ ಲಕ್ಕಮ್ಮ, ನೀಲಾಂಬಿಕೆ, ಗಂಗಾಂಬಿಕೆ ದಲಿತ ವಚನಕಾರ್ತಿಯರಾದ ಕಾಳವ್ವ, ಕೇತಲದೇವಿ, ಕಾಮಮ್ಮ, ರೆಮ್ಮವ್ವೆ, ಲಿಂಗಮ್ಮ, ಗೋಗವ್ವೆ ಪ್ರಮುಖರು.
ಅನುಭವ ಮಂಟಪದಲ್ಲಿ ಸ್ತ್ರೀಯರಿಗೆ ಪುರುಷನೊಂದಿಗೆ ಸಮಾನ ನೆಲೆಯಲ್ಲಿ ಪ್ರವೇಶ ಇದ್ದಿತಲ್ಲದೇ, ಅನುಭಾವ ಗೋಷ್ಠಿಯಲ್ಲಿ ವಾದ ಮಂಡನೆಗೆ ಅವಕಾಶ ನೀಡಲಾಗಿತ್ತು. ತಮ್ಮ ವಚನಗಳ ಮುಖಾಂತರ ಕೆಲವರು ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಅನುಭವಿಸಿದರು. ಸಂಪ್ರದಾಯ ಬಂಧನವಾಗಿದ್ದ ಸ್ತ್ರೀ ಪುರುಷನಂತೆ ಸ್ವತಂತ್ರವಾಗಿ ದೇವರನ್ನು ಪೂಜಿಸಬಲ್ಲಳು, ಧರ್ಮ ಗ್ರಂಥವನ್ನು ಓದಬಲ್ಲಳು, ಮೋಕ್ಷ ಪಡೆಯಬಲ್ಲಳು, ಪುರುಷನಂತೆ ದೀಕ್ಷೆ ಹೊಂದುವ ಅಧಿಕಾರ ಇದೆ ಎಂದು ಬಸವಣ್ಣನವರು ಸಾರಿದರು. ಉಪನಯನ ಸಂದರ್ಭದಲ್ಲಿ ತನ್ನ ಅಕ್ಕನಿಗೆ ಇಲ್ಲದ ಜನಿವಾರ ನನಗೂ ಬೇಡ ಎಂದು ಉಪನಯನ ಸಂಸ್ಕಾರವನ್ನೇ ಧಿಕ್ಕರಿಸಿದ ಬಸವಣ್ಣ ಮೊದಲ ಮಹಿಳಾವಾದಿ. ಮಹಿಳೆಯ ಕೈಗೆ ಇಷ್ಟಲಿಂಗ ಕೊಟ್ಟು ಅಧ್ಯಾತ್ಮ ಚಟುವಟಿಕೆಯಲ್ಲಿ ತೊಡಗುವಂತೆ ಮಾಡಿದರು. ವಚನಕಾರ್ತಿಯರು ತಮ್ಮ ವಚನಗಳ ಮೂಲಕ ಜ್ಞಾನದಾಸೋಹ ನೀಡಿದರು.
ವಚನಕಾರ್ತಿಯರ ಕೆಲವು ವಿಚಾರಗಳನ್ನು ಅವರ ವಚನಗಳ ಮುಖಾಂತರ ನೋಡಬಹುದು.
ಕಾಯಕ:- ವಚನಕಾರ್ತಿಯರು ಕಾಯಕ ತತ್ವದ ಮೂಲಕ ಆರ್ಥಿಕ ಸ್ವಾತಂತ್ರ್ಯ ಅನುಭವಿಸಿದರು. ಆಯ್ದಕ್ಕಿ ಲಕ್ಕಮ್ಮ ಕಾಯಕ ತತ್ವದಂತೆ ಅಕ್ಕಿ ಆಯ್ದು ತಂದು ಜೀವನ ಸಾಗಿಸುತ್ತಾಳೆ. ’ಆವ ಕಾಯಕ ಮಾಡಿದೊಡೆ ಒಂದೇ ಕಾಯಕ’ ಎಂದು ಗಂಗಮ್ಮ ಹೇಳಿದಂತೆ ಕಾಯಕದಲ್ಲಿ ಮೇಲು-ಕೀಳಿಲ್ಲ. ಗಂಗೇಶ ಮಸಣಯ್ಯನ ಪುಣ್ಯಸ್ತ್ರೀ ಅಕ್ಕಮ್ಮ "ಖಂಡಿತ ಕಾಯಕದ ವ್ರತಾಂಗಿಯ ಮಾಡಿದ ಇರವೆಂತಂದಡೆ ಕೃತ್ಯದ ನೇಮವೆ ಸುಯಿಧಾನವೆ ಅಚ್ಚೊತ್ತಿದಂತೆ ತಂದು ಒಡೆಯರು ಭಕ್ತರು ತನ್ನ ಮಡದಿ ಮಕ್ಕಳ ಸಹಿತ ಒಡಗೂಡಿ ಎಡೆಮಾಡಿ ಗಡಿಗೆ ಭಾಜನದಲ್ಲಿ ಮತ್ತೊಂದೆಡೆಗೆ ಈಡಿಲ್ಲದಂತೆ" ಭಕ್ತಿ-ಶ್ರದ್ಧೆಯಿಂದ ಕಾಯಕ ಮಾಡಿ ಬಂದ ಆದಾಯವನ್ನು ಸದ್ವಿನಿಯೋಗ ಮಾಡುವ ಪರಿಯನ್ನು ಅಕ್ಕಮ್ಮ ಹೇಳಿದ್ದಾಳೆ. ಅದೇ ರೀತಿ ಲಕ್ಕಮ್ಮನ ಪತಿ ಮಾರಯ್ಯ ಪ್ರತಿ ದಿನ ತರುವುದಕ್ಕಿಂತ ಹೆಚ್ಚು ಅಕ್ಕಿ ತಂದಾಗ ’ನಮಗೆ ಎಂದಿನಂದವೆ ಸಾಕು ಮತ್ತೆ ಕೊಂಡು ಹೋಗಿ ಅಲ್ಲಿಯೇ ಸುರಿ’ ಎಂದು ಪತಿಗೆ ಹೇಳುತ್ತಾಳೆ. ಈ ತತ್ವದ ಹಿನ್ನೆಲೆ ಅಸಂಗ್ರಹ. ಅಂದಿನ ಕಾಯಕ ಅಂದಿಗೆ ಬೇಕಾದಷ್ಟು ಅದರಲ್ಲಿ ಕೆಲಭಾಗ ಗುರು-ಲಿಂಗ-ಜಂಗಮಕ್ಕೆ ವಿನಿಯೋಗವಾಗಬೇಕು. ಕಾಳವ್ವೆ. ಕನ್ನಡಿಕಾಯಕ ರೇವಮ್ಮೆ, ಕೊಟ್ಟಣದ ಸೋಮಮ್ಮ ಇವರೆಲ್ಲ ಕಾಯಕ ಶರಣೆಯರು.
"ಎಮ್ಮತಾಯಿ ನಿಂಬಿಯವ್ವೆ ನೀರನೆರೆದುಂಬುವಳು.
ಎಮ್ಮಕ್ಕ ಕಂಚಿಯಲ್ಲಿ ಬಾಣಸವೆ ಮಾಡುವಳು" ಎಂಬ ವಚನದಲ್ಲಿ ಆತ್ಮಗೌರವದ ಕಾಯಕ ಮಹತ್ವ ಕಂಡುಬರುವುದು.
ಸ್ತ್ರೀ ಪುರುಷ ಭೇದ:- ಸ್ತ್ರೀ ವಚನಕಾರರು ತಮ್ಮನ್ನು ತಾವು ಮೊದಲು ಗುರುತಿಸಿಕೊಂಡರು. ಇದು ಅವರು ಮಾಡಿದ ಮೊದಲ ಕ್ರಾಂತಿ. ಸಮಾನತೆಯ ವಾದವನ್ನು ಎತ್ತಿಹಿಡಿದರು. "ಮೊಲೆ ಮೂಡಿ ಇದ್ದದ್ದೆ ಹೆಣ್ಣೆಂದು ಪ್ರಮಾಣಿಸಲಿಲ್ಲ. ಮೀಸೆ ಕಠಾರವಿದ್ದಡೆ ಗಂಡೆಂದು ಪ್ರಮಾಣಿಸಲಿಲ್ಲ ಅದು ಜಗದ ಹಾಗೆ ಬಲ್ಲವರ ನೀತಿಯಲ್ಲ ಎಂದು ಸತ್ಯಕ್ಕ ’ಕೂಟಕ್ಕೆ ಸತಿ-ಪತಿ ಎಂಬ ನಾಮವಲ್ಲದೆ ಅರಿವಿಂಗೆ ಬೇರೊಡಲುಂಟೇ’ ಎಂದು ಆಯ್ದಕ್ಕಿ ಲಕ್ಕಮ್ಮ, "ನಿಮ್ಮ ಭಕ್ತಿ ಸೂತ್ರದಿಂದ ಎನ್ನ ಸ್ತ್ರೀತ್ವ ನಿಮ್ಮ ಪಾಠದಲ್ಲಿ ಅಡಗಿತ್ತು ಎನಗೆ ಬೇಧ ಮಾತಿಲ್ಲ ಎಂದು ಮೋಶಿಗೆಯ ಮಹಾದೇವಿ, ಭಕ್ತಿಜ್ಞಾನ ಆಧ್ಯಾತ್ಮ ವಷಿಯಗಳ ಬಗ್ಗೆ ಸ್ತ್ರೀಪುರುಷರೆಂಬ ಭೇದ ಅರ್ಥಹೀನ ಎಂದರು. ಗಣೇಶ ಮಸಣಯ್ಯನ ನಿಜಪತ್ನಿ ಹೆಣ್ಣನ್ನು ಹೀನಾಯವಾಗಿ ಕಾಣುವವರಿಗೆ
"ಹೊನ್ನು ಬಿಟ್ಟು ಲಿಂಗವನೊಲಿಸಬೇಕೆಂಬರು
ಹೊನ್ನಿಂಗೆಯೂ ಲಿಂಗಕ್ಕೆಯೂ ವಿರುದ್ಧವೇ?
ಮಣ್ಣಬಿಟ್ಟು ಲಿಂಗವನೊಲಿಸಬೇಕೆಂಬರು
ಮಣ್ಣಿಂಗೂ ಲಿಂಗಕ್ಕೂ ವಿರುದ್ಧವೇ?
ಹೆಣ್ಣ ಬಿಟ್ಟು ಲಿಂಗವನೊಲಿಸಬೇಕೆಂಬರು
ಹೆಣ್ಣಿಂಗೆಯೂ ಲಿಂಗಕ್ಕೆಯೂ ವಿರುದ್ಧವೇ?
ಹೆಣ್ಣನ್ನು ಸಂಸಾರವನ್ನು ಬಿಟ್ಟರೆ ಮುಕ್ತಿ ಸಾಧ್ಯ ಅನ್ನುವುದು ಮೂರ್ಖತನ. ಧಾರ್ಮಿಕ ವಿಧಿವಿಧಾನಗಳಲ್ಲಿ ಹೆಣ್ಣಿಗೂ ಸಮಪಾಲು ಇದೆ. ದೇವರಿಗೆ ವಿರುದ್ಧವಲ್ಲದ ಅವಳು ಮನುಷ್ಯರಿಗೆ ಹೇಗೆ ವಿರುದ್ಧಳಾಗುವಳು? ಈ ಸಾಮಾಜಿಕ ಅಸಮಾನತೆಯನ್ನು ಪ್ರಶ್ನಿಸುತ್ತಾಳೆ.
ಸ್ತ್ರೀವಾದ
ಅಕ್ಕಮಹಾದೇವಿ ಸ್ತ್ರೀಪರ ಹೋರಾಟಕ್ಕೆ ನಾಂದಿ ಹಾಕಿದಳು. ಭದ್ರಬುನಾದಿ ಹಾಕಿದಳು. ತನ್ನ ಸ್ವಾತಂತ್ರ್ಯಕ್ಕೆ ಧಕ್ಕೆ ತಂದ ಗಂಡ ಕೌಶಿಕನನ್ನೇ ಧಿಕ್ಕರಿಸಿ, ಸಮಾಜಮುಖಿಯಾದ ಶರಣ ಸಮುದಾಯ ಸೇರುತ್ತಾಳೆ. ಅವಳ ಬದುಕೇ ಬಂಡಾಯ. ಸಮಾಜದ ಕಟ್ಟಳೆ ಮೀರಿ ಬದುಕಿದಳು. ಶರಣೆಯರ ವಚನ ಕ್ರಾಂತಿ ಸ್ತ್ರೀ ಸ್ವಾತಂತ್ರ್ಯದ ಪ್ರಥಮ ಚಳವಳಿ ಎನ್ನಬಹುದು. ಅಕ್ಕ ಮನೆ ಬಿಟ್ಟು ಹೊರಡುವಾಗ ತಂದೆ-ತಾಯಿ ಮನೆಗೆ ಹಿಂದಿರುಗಿ ಬಾ ಎಂದಾಗ-
ಮನ-ಮನ ತಾರ್ಕಣೆಗೊಂಡು ಅನುಭವಿಸಲು
ನೆನಹೆ ಘನವಹುದಲ್ಲದೆ ಅದು ಹವಣದಲ್ಲಿ ನಿಲುವದೇ ನಿನ್ನ ತಾಯಿ ತವರನೊಲ್ಲೆ ಹೋಗಾ?’ ಎಂದು ಅಧೀನತೆಯನ್ನೂ ನಿರಾಕರಿಸಿದ ದಿಟ್ಟ ಸ್ತ್ರೀ ಅಕ್ಕ ಯಾವುದಕ್ಕೂ ಚಿಂತಿಸದೇ-
ಹಸಿವಾದೊಡೆ ಭಿಕ್ಷಾನ್ನಗಳುಂಟು ತೃಷೆಯಾದೊಡೆ ಕೆರೆಭಾವಿಗಳುಂಟು, ಶಯನಕೆ ಹಾಳು ದೇಗುಲಗಳುಂಟು ಆತ್ಮ ಸಂಗಾತಕ್ಕೆ ಚೆನ್ನ ಮಲ್ಲಿಕಾರ್ಜುನನುಂಟು’ ಎನ್ನುತ್ತಾಳೆ. ರಾಜತ್ವವನ್ನು ಐಹಿತ ಸುಖಭೋಗಗಳನ್ನು ತ್ಯಜಿಸಿ ಹೊರಡುತ್ತಾಳೆ. ಪುರುಷ ಪ್ರಧಾನ ಮೌಲ್ಯಗಳನ್ನು ತಿರಸ್ಕರಿಸಿದ್ದಾಳೆ.
ಶರಣೆ ಗೊಗೆವ್ವೆ ಪುರುಷ ಪ್ರಧಾನ ವ್ಯವಸ್ಥೆಗೆ ಈ ರೀತಿ ಸವಾಲು ಹಾಕುತ್ತಾಳೆ.
"ಗಂಡು ಮೋಹಿಸಿ ಹೆಣ್ಣ ಹಿಡಿದಡೆ
ಅದು ಒಬ್ಬರ ಒಡವೆ ಎಂದರಿಯಬೇಕು
ಹೆಣ್ಣು ಮೋಹಿಸಿ ಗಂಡ ಹಿಡಿದಡೆ
ಉತ್ತರವಾವುದೆಂದರಿಯಬೇಕು
ಈ ಎರಡರ ಉಭಯವ ಕಳೆದು ಸುಖಿ ತಾನಾಗಬಲ್ಲದೆ ನಾಸ್ತಿನಾಥನು ಪರಿಪೂರ್ಣನೆಂಬೆ."
ಗಂಡು ಹೆಣ್ಣನ್ನು ಮೋಹಿಸಿದಾಗ ಹೆಣ್ಣು ಆತನ ಒಡವೆ. ಆದರೆ ಹೆಣ್ಣು ಗಂಡನ್ನು ಮೋಹಿಸಿದಾಗ ಅವನು ಅವಳ ಒಡವೆಯೇ ಎಂದು ಪ್ರಶ್ನಿಸುತ್ತಾಳೆ. ಈ ಪ್ರಶ್ನೆ ಒಡೆತನ ಜಿಜ್ಞಾಸೆಯ ಮೌಲ್ಯದ ಪ್ರಶ್ನೆ. ಈ ಪ್ರಶ್ನೆಗೆ ಉತ್ತರ ಪಡೆಯಲು ಅಸಮರ್ಥವಾಗಿದೆ ಸಮಾಜ.
ಉರಿಲಿಂಗಪೆದ್ದಿಗಳ ನಿಜ ಸ್ತ್ರೀ ಕಾಳವ್ವೆ ಸ್ತ್ರೀ ವಾದದ ಮೊದಲ ಕಾಳು. ಜಾತಿ ಭೇದವ ಕಿತ್ತು ಶೂದ್ರ ಸ್ತ್ರೀ ಶಿವಶರಣೆಯಾದದ್ದು ಒಂದು ಸಾಧನೆ. ಆಯ್ದಕ್ಕಿ ಲಕ್ಕಮ್ಮ ಪತಿ ತಪ್ಪು ಮಾಡಿದಾಗ ತಿದ್ದಿ ಹೇಳಿದಳು. "ಆಸೆ ಎಂಬುದು ಅರಸಿಂಗಲ್ಲದೆ, ಶಿವಭಕ್ತರಿಗುಂಟೆ ಅಯ್ಯಾ? ಈಸಕ್ಕಿಯಾಸೆ ನಿಮಗೇಕೆ ಈಶ್ವರನೊಪ್ಪ ಎಂದು ಕಾಯಕದ ಮಹತ್ವ ಹೇಳಿದಳು. ಅನೇಕ ವಚನಕಾರ‍್ತಿಯರು, ಜಾತಿ, ಧರ್ಮ ಹೆಣ್ಣು ಗಂಡು ತಾರತಮ್ಯಗಳನ್ನು ಖಂಡಿಸಿ, ತಾವು ಅನುಭವಿಸಿದ ನೋವು ದೌರ್ಜನ್ಯಗಳನ್ನು ಮೆಟ್ಟಿ ನಿಂತು ಆತ್ಮಬಲದಿಂದ ಬಯಲನ್ನು ಸಾಧಿಸಿದರು.
ಜಾತಿ ವ್ಯವಸ್ಥೆ
ಕಾಳವ್ವೆ ಜಾತಿ ವ್ಯವಸ್ಥೆಯ ಬಗ್ಗೆ ಹೇಳುತ್ತ, "ಕುರಿಕೋಳಿ ತಿರಿಮೀನು ತಿಂಬವರಿಗೆಲ್ಲ ಕುಲಜರೆಂಬವರು ಶಿವಗೆ ಪಂಚಾಮೃತವೆ ಕರೆವ ಪಶುವ ತಿಂಬ ಮಾದಿಗ ಕೀಳು ಎಂಬುವರು. ಅವರೆಂತು ಕೀಳು ಜಾತಿಯಾದರೂ ಜಾತಿಗಳು ನೀವೇಕೆ ಕೀಳಾಗಿರೋ ಬ್ರಾಹ್ಮಣನುಂಡುದು ಪುಲ್ಲಿಗೆ ಶೋಭಿತವಾಗಿ ನಾಯಿ ನೆಕ್ಕಿ ಹೋಯಿತು. ಮಾದಿಗರುಂಡುದು ಪುಲ್ಲಿಗೆ ಬ್ರಾಹ್ಮಣಂಗೆ ಶೋಭಿತವಾಯಿತು. ಅದೆಂತೆಂದಡೆ ಸಿದ್ಧಲಿಕೆಯಾಯಿತು ಸಗ್ಗಳೆಯಾಯಿತು. ಸಿದ್ಧಲಿಕೆಯ ತುಪ್ಪವನು ಸಗ್ಗಳೆಯ ನೀರನು ಶುದ್ಧವೆಂದು ಕುಡಿವ ಬುದ್ಧಿಗೇಡಿ ವಿಪ್ರರಿಗೆ ನಾಯಕನರಕ ತಪ್ಪದಯ್ಯಾ
ಇಲ್ಲಿ ಮೇಲ್ವರ್ಗದವರಿಂದ ತನ್ನ ಜನಕ್ಕೆ ಆದ ಅನ್ಯಾಯವನ್ನೂ ನೇರವಾಗಿ ಪ್ರತಿಬಿಂಬಿಸುತ್ತಾಳೆ. ಶರಣೆ ಬೊಂತಾದೇವಿಯ ಮಾತುಗಳನ್ನು ಕೇಳಿ
"ಊರ ಒಳಗಣ ಬಯಲು ಊರ ಹೊರಗಣ ಬಯಲೆಂದುಂಟೆ?
ಊರೊಳಗೆ ಬ್ರಾಹ್ಮಣ ಬಯಲು ಊರ ಹೊರಗೆ ಹೊಲೆ ಬಯಲೆಂದುಂಟೇ?
ಎಲ್ಲಿ ನೋಡಿದಡೆ ಬಯಲೊಂದೇ"
ಎಂದು ಪ್ರಶ್ನಿಸಿ ಬಯಲಿಗೆ ಇಲ್ಲದ ಜಾತಿ ಬಯಲಾಗುವ ಮನುಷ್ಯನಿಗೆ ಹೇಗೆ ಬಂದಿತು ಎಂದು ಪ್ರಶ್ನಿಸುವಳು. ಕದಿರೆಯ ರೆಮ್ಮವ್ವೆ ಕೂಡ
"ನಾ ತಿರುಗುವ ರಾಟೆಯ ಕುಲಜಾತಿ ಕೇಳಿರಣ್ಣಾ?" ಎಂದು ಸಹ ಪ್ರಶ್ನಿಸುವಳು.
ಡಾಂಭಿಕತೆ:- ಅಕ್ಕಮ್ಮ ಶರಣೆ ಉದರ ಪೋಷಣೆಗೆ ವೇಷ ಹಾಕುವವರನ್ನು ಕುರಿತು "ವೇಷ ಎಲ್ಲಿಯದು? ಸೂಳೆಯಲ್ಲಿ ಡೊಂಬನಲ್ಲಿ ಬೈರೂಪನಲ್ಲಿರದೆ? ವೇಷವ ತೋರಿ ಒಡಲ ಹೊರೆವ, ದಾಸಿ ವೇಶಿಯ ಮಕ್ಕಳಿಗೆ ನಿಜಭಕ್ತಿ ಎಲ್ಲಿಯದೋ? ಅಡಾರವೇ ಪ್ರಾಣವಾದ ರಾಮೇಶ್ವರ ಲಿಂಗದಲ್ಲಿ?" ಎಂದು ಢಂಬಾಚಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅದೇ ರೀತಿ ಹೊರವೇಷದ ಸ್ವಾಮಿಯನ್ನು ಕಂಡು
’ಬತ್ತಲೆ ಇದ್ದವರೆಲ್ಲ ಕತ್ತೆಯ ಮರಿಗಳು
ತಲೆ ಬೋಳಾದವರೆಲ್ಲ ಮುಂಡೆಯ ಮಕ್ಕಳು
ತಲೆ ಜಡೆಗಟ್ಟಿದವರೆಲ್ಲ ಹೊಲೆಯರ ಸಂತಾನ
ಆವ ಪ್ರಕಾರವಾದಡೇನು ಅರಿವೆ ಮುಖ್ಯವಲ್ಲ
ಆಚಾರವೇ ಪ್ರಾಣವಾದ ರಾಮೇಶ್ವರಲಿಂಗದಲ್ಲಿ
ಆಚಾರ ಮುಖ್ಯ ಹೊರತು ಬಾಹ್ಯ ಆವರಣವಲ್ಲ ಎನ್ನುತ್ತಾಳೆ.
ಇನ್ನೊಬ್ಬ ಶರಣೆ ಗುಡ್ಡಕ್ಕ ’ತನು ಬತ್ತಲೆಯಾದಡೇನು ಮನ ಬತ್ತಲೆಯಾಗದನ್ನಕ್ಕ’ ಎಂದು ಅಕ್ಕಮ್ಮ ’ಜಗವ ಮೆಚ್ಚಬೇಕೆಂಬ ಶೀಲವ ನಾನರಿಯೆ’ ಎಂದು, ರಾಯಮ್ಮ ’ದೇಶದೇಶವ ತಿರುಗಿ ಮಾತುಗಳ ಕಲಿತು ಗ್ರಾಸಕ್ಕೆ ತಿರುಗುವ ದಾಸಿವೇಸಿಯ ಮಕ್ಕಳ ವಿರಕ್ತರೆಂಬೆನೇ" ಎಂದು ಹೇಳುತ್ತಾಳೆ. ಹೀಗೆ ಉದರಕ್ಕಾಗಿ ವೇಷ ಧರಿಸಿದವರನ್ನು ನಂಬಲಿಲ್ಲ. ಅಮುಗೆ ರಾಯಮ್ಮ, ಕಾವಿಯ ಹಿಂದಿರುವ ಅನೈತಿಕ ಕಾರ್ಯ ಮಾಡುವವರ ಕುರಿತು"
ಕಾವಿ ಕಾಷಾಂಬರವ ಹೊಯ್ದ ಕಾಮವಿಕಾರಕ್ಕೆ ತಿರುಗುವ
ಕರ್ಮಿಗಳ ಮುಖವ ನೋಡಲಾಗದು
ಜಂಗಮವಾಗಿ ಜಗದಿಚ್ಛೆಯ ನುಡಿವ
ಜಂಗುಳಿಗಳ ಮುಖವ ನೋಡಲಾಗದು
ಲಿಂಗೈಕ್ಯರೆನಿಸಿಕೊಂಡು ಅಂಗ ವಿಕಾರಕ್ಕೆ ತಿರುಗುವ
ಲಿಂಗದ್ರೋಹಿಗಳ ಮುಖವ ನೋಡಲಾಗದು
ಕಾಣಾ ಅಮುಗೇಶ್ವರ ಲಿಂಗವೆ"- ಎನ್ನುತ್ತಾರೆ.
ವ್ರತಭಷ್ಟರಿಂದ ವ್ರತಹೀನರಿಂದ ಸಾಮಾಜಿಕ ಧಾರ್ಮಿಕ ವಾತಾವರಣ ಹದಗೆಡುತ್ತದೆ ಅಂಥ ಕಂಟಕರನ್ನು ನಾಶ ಮಾಡುವೆ ಎಂದು ಕಾಲಕಣ್ಣಿಯ ಕಾಮಮ್ಮ ಈ ರೀತಿ ಹೇಳುತ್ತಾಳೆ.
ಎನ್ನ ಕರಣಂಗಳ ಲಿಂಗದಲಿ ಕಟ್ಟುವೆ
ಗುರು-ಲಿಂಗ-ಜಂಗಮದ ಕಾಲಕಟ್ಟುವೆ
ವ್ರತಭ್ರಷ್ಟನಿಟ್ಟೊರೆಸುವೆ ಸುಟ್ಟು ತುರುತುರುನೆ
ತೂರುವೆ ನಿರ್ಭೀತಿ ನಿಜಲಿಂಗದಲ್ಲಿ ಎಂದಿದ್ದಾಳೆ
ಹಾಗೆ ಕಾಲಕೂಟಯ್ಯಗಳ ನಿಜಸ್ತ್ರೀ ರೇಚವ್ವೆ
ಬಂಜೆಯಾವಿಂಗೆ ಕ್ಷೀರವುಂಟೆ
ವ್ರತಹೀನರ ಬೆರೆಯಲುಂಟೆ
ನೀ ಬೆರೆದಡೂ ಬೆರೆ ನಾನೊಲ್ಲೆ
ನಾ ಶಾಂತೇಶ್ವರ ಎಂದರೆ
ಕೇತಲದೇವಿ-ಹದ ಮಣ್ಣಲ್ಲದೆ ಮಡಿಕೆಯಾಗಲಾರದು ವ್ರತಹೀನರ ಬೆರೆಯಲಾಗದು; ವ್ರತಹೀನನ ನೆರೆಯ ನರಕವಲ್ಲದೆ ಮುಕ್ತಿಯಿಲ್ಲ ಎಂದು ಕಾಳವ್ವೆ
"ಕೈ ತಪ್ಪಿ ಕೆತ್ತಲು ಕಾಲಿಗೆ ಮೂಲ
ಮಾತ ತಪ್ಪಿ ನುಡಿಯಲು ಬಾಯಿಗೆ ಮೂಲ
ವ್ರತಹೀನನ ನೆರೆಯಲು ನರಕಕ್ಕೆ ಮೂಲ" ಎನ್ನುತ್ತಾಳೆ ಮಸಣಮ್ಮ. ಹಾಗೆ ಸೂಳೆ ಸಂಕವ್ವ ಕೂಡ.
"ಒತ್ತೆಯ ಹಿಡಿದು ಮತ್ತೊತ್ತೆಯ ಹಿಡಿಯೆ
ಹಿಡಿದಡೆ ಬತ್ತಲೆ ನಿಲಿಸಿ ಕೊಲುವರಯ್ಯ
ವ್ರತಹೀನನೆ ಬೆರೆದಡೆ ಕಾವ ಕತ್ತಿಯಲ್ಲ
ಕಿವಿ ಮೂಗ ಕೊಯ್ಯರಯ್ಯಾ ಎಂದಿದ್ದಾಳೆ.
ವ್ರತಹೀನ ಎಂದರೆ ನೀತಿವಿಹೀನ. ಬಹಿಷ್ಕೃತಳಾದ ವೇಶ್ಯೆಯು ಸಹ ದುಡ್ಡಿಗಾಗಿ ಹಂಬಲಿಸದೇ ತಮ್ಮ ವೃತ್ತಿ-ನಿಷ್ಠೆ ಹೊಂದಿದ್ದಳು. ಅವಳಿಗೂ ಸಮಾಜದ ಕಾಳಜಿ ಇದ್ದು ವ್ರತಹೀನನನ್ನು ಖಂಡಿಸುತ್ತಾಳೆ.
ಪೂಜೆ
ಪೂಜೆಯ ಬಗ್ಗೆ ಸತ್ಯಕ್ಕ-
"ಅರ್ಚನೆ ಪೂಜನೆ ನೇಮವಲ್ಲ ಮಂತ್ರ ತಂತ್ರ ನೇಮವಲ್ಲ ಧೂಪದೀಪಾರತಿ ನೇಮವಲ್ಲ. ಪರಧನ ಪರಸ್ತ್ರೀ ಪರದೈವಂಗಳಿಗೆ ಎರಗದಿಪ್ಪುದೇ ನೇಮ" ಎನ್ನುತ್ತ ಬಾಹ್ಯಾಂಡಬರ ಪೂಜೆಯನ್ನು ಖಂಡಿಸಿದರು. ಇಲ್ಲಿ ಎರಗದಿರುವುದು ಎಂದರೆ ಮೇಲೆ ಬೀಳದಿರುವುದು, ಪರದೈವಕ್ಕೆ ಎರಗದಿರುವುದು ಎಂದರೆ ನಮಸ್ಕರಿಸದಿರುವುದು. ಒಂದೇ ಶಬ್ದ ಎರಡು ಅರ್ಥದಲ್ಲಿ ಉಪಯೋಗಿಸಿದೆ ಪೂಜೆ ಆತ್ಮವಿಕಾಸಕ್ಕೆ ಸಾಧನೆ ಅದು ಸಿದ್ಧಿಯಲ್ಲ ಎಂಬುದನ್ನು ಅಕ್ಕಮ್ಮ_ "ವ್ರತವೆಂಬುದೇನು ಲಿಂಗ ಎಂಬುದಕ್ಕೆ ನಿಚ್ಚಣಿಕೆ ವ್ರತವೆಂಬುದೇನು ಇಂದ್ರಿಯಂಗಳ ಸಂದು ಮುರಿವ ಕುಲಕಠಾರ" ಎಂದಿದ್ದಾಳೆ.
ವ್ರತದ ಮಹತ್ವವನ್ನು ಹೇಳುತ್ತ ಮೂಢ ಸಂಪ್ರದಾಯಗಳನ್ನು ಖಂಡಿಸಿದರು.
ದಲಿತ ವಚನಕಾರ‍್ತಿಯರು
ಮೊದಲ ದಲಿತ ವಚನಕಾರ‍್ತಿ ಉರಿಲಿಂಗ ಪೆದ್ದಿಯ ಪತ್ನಿ ಕಾಳವ್ವೆ. ಇವಳ ೧೩ ವಚನಗಳು ದೊರೆತಿದ್ದು ಭಕ್ತನ ಬಗ್ಗೆ ಈ ರೀತಿ ಹೇಳುತ್ತಾಳೆ.
ಭಕ್ತರ ಕುಲವೆತ್ತಿ ನಿಂದಿಸುವಾಗ ಭಕ್ತನೇ?
ತೂಬುರದ ಕೊಳ್ಳಿಯಂತೆ ಉರಿವಾತ ಭಕ್ತನೇ? ಎಂದು ಪ್ರಶ್ನಿಸಿದಳು. ತನ್ನ ಒಂದು ವಚನದಲ್ಲಿ
’ನಿಂದಯಾ ಶಿವಭಕ್ತನಾರಿ ಕೋಟಿ ಜನ್ಮನಿ ಸೂಖರ:
ಸತ್ತ ಜನ್ಮನೀ ಭವೇತ್ ಕುಷ್ಠಿದಾಸೀ ಗರ್ಭೇಷಿ ಜಾಯಿತೇ’ (ಜಾತಿಯ ಹೆಸರಿನಿಂದ ಶಿವಭಕ್ತ ನಿಂದಿಸಿದರೆ ಕೋಟಿ ಜನ್ಮದಲ್ಲಿ ಹಂದಿಯಾಗುವರು. ಕುಷ್ಠರೋಗಿ ದಾಸಿ ಗರ್ಭದಿಂದ ಜನಿಸುವರು.
ಕಾಳವ್ವೆ ಸಂಸ್ಕೃತವನ್ನು ಅಭ್ಯಾಸ ಮಾಡಿರುವರು.
ಕುಂಬಾರ ಗುಂಡಯ್ಯನ ಪತ್ನಿ ಕೇತಲದೇವಿಯ ಒಂದು ವಚನ ಲಭ್ಯವಿದೆ. ಅದು ವ್ರತಹೀನರ ವಿಚಾರದ ಬಗ್ಗೆ
"ಹದಮಣ್ಣಲ್ಲದೆ ಮಡಕೆಯಾಗಲಾರದು
ವ್ರತಹೀನನ ಬೆರೆಯಲಾಗದು
ಬೆರೆದಡೆ ನರಕ ತಪ್ಪದು
ನಾನೊಲ್ಲೆ ಬಲ್ಲೆನಾಗಿ ಕುಂಬೇಶ್ವರ" ಎಂದಿದ್ದಾಳೆ.
ತೊನ್ನು ರೋಗ ಪೀಡಿತೆ ಹೊಲತಿಯಾದ ಗುಡವ್ವೆ ಒಂದು ಸಲ ಅಗ್ರಹಾರದಲ್ಲಿ ಹೋಗುತ್ತಿರುವಾಗ ಬ್ರಾಹ್ಮಣರ ನಿಂದನೆಗೆ ಒಳಗಾಗಿ ದೂರ ಹೋಗು ಮೈಗೆಟ್ಟ ಹೊಲತಿ’ ಎಂದಾಗ, ಶಿವನನ್ನು ಸಾಕ್ಷಾತ್ಕರಿಸಿಕೊಂಡು ತನ್ನ ರೋಗ ನಿವಾರಣೆ ಮಾಡಿಕೊಂಡು ಕಾಲಿಡುವೆನೆಂದು ಪ್ರತಿಜ್ಞೆ ಮಾಡುವಳು ಎಂಬ ಪ್ರಸ್ತಾಪ ಬಸವಪುರಾಣ (ಭೀಮಕವಿ) ದಲ್ಲಿ ಬರುತ್ತದೆ. ಅಂತರಂಗ ಶುದ್ಧಿ ಇಲ್ಲದ ತೋರಿಕೆ ವ್ರತಾಚರಣೆ ಮೂಲಕ ಮೇಲು ಜಾತಿ ಎನಿಸಿಕೊಂಡವರ ಕುರಿತು
’ತನು ಬೆತ್ತಲಾದಡೇನು ಮನ ಬೆತ್ತಲೆಯಾಗದನ್ನಕ್ಕ
ವ್ರತವಿದ್ದಡೆಯು ವ್ರತಹೀನರಾದ ಬಳಿಕ
ನೆರೆದಡೆ ನರಕವಯ್ಯ ನಿಂಬೇಶ್ವರ’ ಎನ್ನುತ್ತಾಳೆ
ಕೊರವಂಜಿಯ ಶಿವಶರಣೆ ಕಾಲಕಣ್ಣಿಯ ಕಾಮಮ್ಮ ಸಹ ವ್ರತಭ್ರಷ್ಟರನ್ನು ಖಂಡಿಸುವ ರೀತಿ, ಕದಿರೆ ರೆಮ್ಮವ್ವೆ ತನ್ನ ಜಾತಿಯ ಬಗ್ಗೆ ಸವಾಲು ಹಾಕಿರುವುದನ್ನು ಈಗಾಗಲೇ ಪ್ರಸ್ತಾಪಿಸಿದೆ. ಹಾಗೆ ಗೊಗ್ಗವ್ವೆಯ ಆರು ವಚನಗಳು ಲಭ್ಯವಿದ್ದು ಭಕ್ತಿಗೆ ಲಿಂಗತಾರತಮ್ಯ ಇಲ್ಲ ಎಂಬುದನ್ನು ಸ್ತ್ರೀ ಸಮಾನತೆಯಲ್ಲಿ ಪ್ರಸ್ತಾಪಿಸಿದೆ.
ಕಸಗುಡಿಸುವ ಸತ್ಯಕ್ಕ ಶರಭುಜಕ್ಕೇಶ್ವರ ಅಂಕಿತದೊಂದಿಗೆ ೨೯ ವಚನಗಳನ್ನೂ ರಚಿಸಿದ್ದಾರೆ.
ತನ್ನ ಕಾಯಕದ ಮೂಲಕ ಶಿವನಿಷ್ಠ ಪ್ರತಿಪಾದಿಸಿದಳು ತಾನು ನಂಬಿರುವ ಶಿವನನ್ನೇ ನಿಷ್ಠುರವಾಗಿ ಈ ರೀತಿ ಪ್ರಶ್ನಿಸುವಳು.
ಏಕೆನ್ನ ಬಾರದ ಭಯಗಳಲ್ಲಿ ಭರಿಸಿದೆ
ಏಕೆನ್ನ ಘೋರ ಸಂಸಾರದಲ್ಲಿರಿಸಿದೆ
ಏಕೆನಗೆ ಕರುಣಿಸಲ್ಲೊಲ್ಲದೆ ಕಾಡಿಹೆ?
ಏಕೆ ಹೇಳಾ ನನ್ನ ಲಿಂಗವೇ? ನಾನು ಮಾಡಿದ ತಪ್ಪೇನು?
ಹಡಪದ ಅಪ್ಪಣ್ಣನ ಪತ್ನಿ ಲಿಂಗಮ್ಮ ತನ್ನ ಜೀವನದ ಅನುಭವಗಳನ್ನೇ ವಚನಗಳಲ್ಲಿ ಪ್ರತಿಪಾದಿಸಿದ್ದಾಳೆ. "ಕನಿಷ್ಠದಲ್ಲಿ ಹುಟ್ಟಿದೆ ಉತ್ತಮದಲ್ಲಿ ಬೆಳೆದೆ ಸತ್ಯಶರಣರ ಪಾದ ಹಿಡಿದೆ" ಎಂದಿದ್ದಾಳೆ. ಇನ್ನೊಂದು ವಚನದಲ್ಲಿ
"ತನ್ನ ತಾನರಿಯದೇ ಅನ್ಯರ ಭೋಧೆಯ ಹೇಳುವವರ ಬಾಳುವೆ
ಕುರುಡ ಕನ್ನಡಿಯ ಹಿಡಿದಂತೆ
ತನ್ನ ಒಳಗೆ ಮೆರೆದು ಇದಿರಿಂಗೆ ಬೋಧೆಯ ಹೇಳಿ
ಉದರವ ಹೊರೆವ ಚದುರರೆಲ್ಲರೂ ಹಿರಿಯರೇ? ಅಲ್ಲಲ್ಲ ಎಂದು ಕಠಿಣವಾಗಿ ಹೇಳಿದ್ದಾಳೆ.
ವಚನಕಾರ‍್ತಿಯರಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಪ್ರತಿಭಟನೆಯು, ಅವರ ವಚನಗಳಲ್ಲಿ ಕಂಡುಬರುತ್ತದೆ.
ಹೆಣ್ಣಿನ ವ್ಯಕ್ತಿತ್ವಕ್ಕೆ ಘನತೆ ತಂದು ವೈದಿಕ ಆಶಯಗಳನ್ನು ನಿರಾಕರಿಸಿದ್ದು, ’ಮಾಯೆ’ ಕುರಿತು ವ್ಯಾಖ್ಯಾನಮಾಡಿದ್ದು ಅಕ್ಕನ ವಿಶೇಷ; ತನ್ನ ಚಿಂತನೆಗಳ ಮೂಲಕ ಧರ್ಮಲಿಂಗ ಆಚಾರ ವ್ಯವಸ್ಥೆ ಮೀರಿ ನಿಂತ ಅಮುಗೆ ರಾಯಮ್ಮ; ವ್ರತಾಚರಣೆಯಲ್ಲಿನ ದೋಷ ಖಂಡಿಸುವ ಅಕ್ಕಮ್ಮ; ಕಾಯಕ ಪ್ರೀತಿಸಿ, ಆತ್ಮವಿಶ್ವಾಸ ಪ್ರಾಮಾಣಿಕತೆ ಮೆರೆಸಿದ ಸತ್ಯಕ್ಕ; ವೈದಿಕರ ಆಚರಣೆಗಳನ್ನು ಖಂಡಿಸಿದ ಕಾಳವ್ವೆ; ಅರಿಷಡ್ವರ್ಗ ಗೆದ್ದು ಶರಣತ್ವ ಪಡೆವ ಬಗೆಯನ್ನು ಹೇಳಿದ ಲಿಂಗಮ್ಮ; ಮಡಿಮುಟ್ಟು ಮೈಲಿಗೆ ಮುಂತಾದ ವಿಷಯಗಳನ್ನು ದೂರವಿಟ್ಟು ತಾತ್ವಿಕ ನೆಲೆಯ ಮೂಲಕ ಹೆಣ್ಣಿನ ನೈಜ ಅಸ್ತಿತ್ವವನ್ನು ಪ್ರಕಟಿಸಿದ ಬಸವಣ್ನನ ಪತ್ನಿ ನೀಲಾಂಬಿಕೆ; ವೈಚಾರಿಕ, ಬೌದ್ಧಿಕ ಸಂವಾದದ, ಅನುಭಾವಜ್ಞಾನ ತಾತ್ವಿಕ ವಚನಗಳ ಮುಕ್ತಾಯಕ್ಕ ಇವರೆಲ್ಲ ವೈಚಾರಿಕ ಪ್ರಜ್ಞೆ ಹೊಂದಿದ ವಚನಕಾರ‍್ತಿಯರು ಸಮಾನತೆ, ಸೋದರತೆ, ಆವರಣದಲ್ಲಿ ಪ್ರಶ್ನಿಸುವ ಮನೋಭಾವ, ಚಿಂತನೆಗಳಿಂದ ಕೂಡಿದ ವಚನಗಳು. ವಚನಕಾರ‍್ತಿಯರ ಅಂದಿನ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ.

ಯು.ಎನ್.ಸಂಗನಾಳಮಠ
ವಿಶ್ರಾಂತ ಉಪನ್ಯಾಸಕರು-ಲೇಖಕರು, "ಜ್ಯೋತಿರ್ಲಿಂಗ", ೧ನೇ ತಿರುವು, ಹೈಸ್ಕೂಲ್ ಬಡಾವಣೆ, ಶಿವಮೊಗ್ಗ ರಸ್ತೆ,
ಹೊನ್ನಾಳಿ- ೫೭೭ ೨೧೭, ದಾವಣಗೆರೆ ಜಿಲ್ಲೆ.

ಜಾತ್ಯತೀತ ಸಮಾಜ ಕಟ್ಟಿದ ಕೆಂಪೇಗೌಡರುಬೆಂಗಳೂರು ಕೆಂಪೇಗೌಡ-ಭಾಗ 3

ಪ್ರೊ. ಡಿ.ಲಿಂಗಯ್ಯ, ಮೊ: ೯೯೦೨೪೬೮೯೯


ಕೆಂಪೇಗೌಡ ತನ್ನ ಪೂರ್ವಿಕರಂತೆ ಮಹಾ ದೈವಭಕ್ತ. ನಾಡಿನಲ್ಲೆಲ್ಲಾ ದೈವಭಕ್ತಿ ಹರಡುವಂತೆ ನೋಡಿಕೊಂಡ. ಶೈವ, ವೈಷ್ಣವ ಎಂಬ ಭೇದಭಾವವಿಲ್ಲದೆ ದೇವಾಲಯಗಳನ್ನು ನಿರ್ಮಿಸಿದನು. ಜೀರ್ಣೋದ್ಧಾರ ಮಾಡಿಸಿದನು. ದೇವಾಲಯಗಳಿಗೆ, ಅರ್ಚಕರಿಗೆ ಫಲವತ್ತಾದ ಭೂಮಿಯನ್ನೂ ಕೊಡುಗೆಯಾಗಿ ನೀಡಿದನು. ದೇವಾಲಯ ಮೇಲ್ವಿಚಾರಣೆಯ ಇಲಾಖೆಯೇ ಇತ್ತು. ಇಲಾಖೆಯ ಅಧಿಕಾರಿಗಳು ಆಗಾಗ ದೇವಾಲಯಗಳಿಗೆ ಭೇಟಿ ನೀಡಿ ಧಾರ್ಮಿಕ ಕಾರ್ಯಗಳು ತಪ್ಪದೆ ನಿಷ್ಠೆಯಿಂದ ನಡೆಯುವಂತೆ ನೋಡಿಕೊಳ್ಳುತ್ತಿದ್ದರು. ಕೆಂಪೇಗೌಡನೂ ಆಗಾಗ ದೇವಾಲಯಗಳನ್ನು ಸಂದರ್ಶಿಸುತ್ತಿದ್ದನು. ಹೆಂಡತಿ ಮಕ್ಕಳು ಪರಿವಾರದವರೊಡನೆ ಆಗಾಗ ದೇವಾಲಯಗಳಿಗೆ ಹೋಗಿ ಪೂಜೆ ಮಾಡಿಸಿಕೊಂಡು ಬರುತ್ತಿದ್ದನು. ಅವನ ದೈವಭಕ್ತಿ ಮನೆಮಾತಾಗಿತ್ತು. ಬೆಂಗಳೂರು ದೇವಾಲಯಗಳ ಊರು ಎಂದು ಹೆಸರಾಯಿತು.
ಬೆಂಗಳೂರು ನಗರ ನಿರ್ಮಾಪಕ ಕೆಂಪೇಗೌಡ ಹೊಸರಾಜಧಾನಿಗೆ ವಿವಿಧ ಕಸಬಿನವರನ್ನು ಆಹ್ವಾನಿಸಿ ಅವರಿಗೆ ಸಕಲ ಸೌಕರ್ಯಗಳನ್ನು ಕಲ್ಪಿಸಿಕೊಟ್ಟ. ಆಯಾ ಜಾತಿಯ ಕಸಬಿನ ಜನರು ತಂತಮ್ಮ ದೇವತೆಗಳಿಗೆ ದೇವಾಲಯ ನಿರ್ಮಿಸಿಕೊಳ್ಳಲು ಅವಕಾಶ ನೀಡಿದ. ಅವರ ಕೋರಿಕೆಯಂತೆ ದೇವಾಲಯ ನಿರ್ಮಾಣ ಮಾಡಿಸಿ ಪೂಜೆ ಪುರಸ್ಕಾರ, ಹಬ್ಬ ಜಾತ್ರೆ ನಡೆಯಲು ಪ್ರೋತ್ಸಾಹಿಸಿದ. ಬೇಕಾದಷ್ಟು ದಾನ ಧರ್ಮ ದತ್ತಿಗಳನ್ನು ಭೂಮಿಯ ರೂಪದಲ್ಲಿ, ಧನದ ರೂಪದಲ್ಲಿ ಇತ್ತು ಬೆಂಬಲಿಸಿದ.
ಕೆಂಪೇಗೌಡ ಬೆಂಗಳೂರು ಕೋಟೆಯ ಒಳಗಷ್ಟೇ ಅಲ್ಲ ಹೊರಗೂ ಕೆಲವೂ ದೇವಾಲಯಗಳನ್ನು ನಿರ್ಮಿಸಿದ, ಹಲವು ದೇವಾಲಯಗಳ ಜೀರ್ಣೋದ್ಧಾರ ಮಾಡಿಸಿದ. ಉದಾಹರಣೆಗೆ: ಕೋಟೆ ಆಂಜನೇಯ, ಶ್ರೀ ವಿನಾಯಕ ಸ್ವಾಮಿ, ಚಿಕ್ಕ ಬಸವಣ್ಣ (ಈಗ ಬೆಳ್ಳಿ ಬಸವಣ್ಣ, ಮಕ್ಕಳ ಬಸವಣ್ಣ), ದೊಡ್ಡ ಬಸವಣ್ಣ, ದೊಡ್ಡ ಆಂಜನೇಯ, ಗವಿಗಂಗಾಧರೇಶ್ವರ, ಮಲ್ಲಿಕಾರ್ಜುನ, ಮಾವಳ್ಳಿ ಮಾರಮ್ಮ, ದೊಡ್ಡ ಮಾವಳ್ಳಿಯ ಬಿಸಿಲು ಮಾರಮ್ಮ, ಈಗಿನ ವಿಶ್ವೇಶ್ವರ ಪುರದ ಹುತ್ತದ ಆಂಜನೇಯ, ಗವೀಪುರದ ಬಂಡೆ ಮಾಂಕಾಳಿ ಮೊದಲಾದವು.
ಬರಗ ಮುದ್ದೇನಹಳ್ಳಿಯ ಎಣ್ಣೆ ವ್ಯಾಪಾರಿಗಳು ಬೇವಿನ ಮರದ ತಾಳಿನಲ್ಲಿ ದೇವತೆಯೊಂದನ್ನು ಸ್ಥಾಪಿಸಿ ಪೂಜಿಸುತ್ತಿದ್ದರು. ವ್ಯಾಪಾರಕ್ಕೆ ಹೋಗುವ ಮೊದಲು ಪೂಜೆ ಸಲ್ಲಿಸುತ್ತಿದ್ದರು. ಹಾಗೆ ಮಾಡಿದರೆ ಅಧಿಕ ಮಟ್ಟದಲ್ಲಿ ವ್ಯಾಪಾರವಾಗುವುದೆಂದು ನಂಬಿಕೆ. ಜೊತೆಗೆ ಜನರಿಗೆ ತಗಲುವ ಸೋಂಕು ರೋಗ ನಿವಾರಣೆಗೂ ಆ ದೇವತೆ ಅನುಗ್ರಹಿಸುವಳೆಂದು ಭಾವಿಸಿದರು. ಬೆಂಗಳೂರು ರಾಜಧಾನಿ ನಿರ್ಮಾಣವಾಗುತ್ತಿದ್ದ ಸಂದರ್ಭದಲ್ಲಿ ತಾವು ಪೂಜಿಸುತ್ತಿರುವ ದೇವತೆಗೆ ಗುಡಿ ಕಟ್ಟಿಸಿಕೊಡಬೇಕೆಂದು ವರ್ತಕರು ಕೆಂಪೇಗೌಡನನ್ನು ಪ್ರಾರ್ಥಿಸಿದರು. ನಾಡಪ್ರಭು ಕೆಂಪೇಗೌಡ ಆ ವಿಷಯವನ್ನು ಗಂಭೀರವಾಗಿ ಪರಿಶೀಲಿಸಿದನು. ಜ್ಯೋತಿಷಿಗಳೊಡನೆ, ದೈವಭಕ್ತ ಹಿರಿಯರೊಡನೆ ಸಮಾಲೋಚಿಸಿದನು. ಸೂಕ್ತ ಸ್ಥಳವನ್ನು ಆಯ್ಕೆಮಾಡಿದನು. ಬೇವಿನ ಮರದ ತಾಳಿನಲ್ಲಿದ್ದ ದೇವತೆಯನ್ನು ಶಾಸ್ತ್ರೋಕ್ತವಾಗಿ ಸ್ಥಳಾಂತರಿಸಿ ದೇವಾಲಯವನ್ನು ನಿರ್ಮಿಸಿ, ಸುತ್ತಮುತ್ತಲ ವಿಶಾಲ ಪ್ರದೇಶವನ್ನು ದೇವಾಲಯಕ್ಕೆ ಕೊಡುಗೆಯಾಗಿ ನೀಡಿ ಪೂಜೆ ಹಬ್ಬ ಜಾತ್ರೆ ನಡೆಯಲು ಕಾರಣನಾದನು. ಅದೇ ಅಣ್ಣಮ್ಮ ದೇವತೆ. ಅಂದಿನಿಂದ ಅಣ್ಣಮ್ಮದೇವಿಯ ಪೂಜೆ ನಡೆಯುತ್ತಿದೆ. ಅಣ್ಣಮ್ಮ ಈಗಲೂ ಬೆಂಗಳೂರು ನಗರ ದೇವತೆಯಾಗಿದ್ದಾಳೆ. ಮೂಲ ಜನಾಂಗದವರೇ ಈಗಲೂ ಪೂಜಾರಿಗಳಾಗಿದ್ದಾರೆ. ಅಣ್ಣಮ್ಮನಿಗೆ ಶಿಷ್ಟರು ಅಂಜುಜಮ್ಮ, ಅಂಬುಜಮ್ಮದೇವಿ ಎಂದು ನಾಮಕರಣ ಮಾಡಿದರು. ಆದರೆ ಆ ಹೆಸರು ನಿಲ್ಲಲಿಲ್ಲ. ಕೆಲವರು ಅಣ್ಣಮ್ಮದೇವಿ ’ಬೆಂಗಳೂರು ಮಾರಮ್ಮ ಎನ್ನುತ್ತಾರೆ.
ಬೆಂಗಳೂರು ಕೆಂಪೇಗೌಡನ ಕಾಲದಲ್ಲಿ ಪ್ರಾರಂಭವಾದ ಅನೇಕ ಧಾರ್ಮಿಕ ಉತ್ಸವಗಳು ಈಗಲೂ ನಡೆಯುತ್ತಿವೆ. ಅವುಗಳಲ್ಲಿ ಧರ್ಮರಾಯಸ್ವಾಮಿ (ದ್ರೌಪದಿ) ಕರಗ ’ಬೆಂಗಳೂರು ಕರಗ’ವೆಂದು ಲೋಕ ಪ್ರಸಿದ್ಧವಾಗಿದೆ. ದೊಡ್ಡ ಬಸವಣ್ಣನ ಕಡಲೆಕಾಯಿ ಪರಿಷೆ ಪ್ರಾರಂಭದ ದಿನಗಳಂತೆ ಇಂದೂ ಕಳೆಗುಂದದೆ ನಡೆಯುತ್ತಿದೆ.
ಯಲಹಂಕ ನಾಡಿನ ಇತರ ನಾಡಪ್ರಭುಗಳಂತೆ ರಾಜ ಕೆಂಪೇಗೌಡನೂ ಜಾತಿ ಮತಗಳ ತಾರತಮ್ಯ ಗಮನಿಸದೆ, ಧಾರ್ಮಿಕ ವಿಷಯದಲ್ಲಿ ಎಲ್ಲರಿಗೂ ಸಮಾನ ಅವಕಾಶ ನೀಡಿದ. ನಿಮ್ಮ ವರ್ಗದವರು ತಮಗೆ ಇಷ್ಟಬಂದ ದೇವರನ್ನು ಸ್ಥಾಪಿಸಿ ಪೂಜಿಸುವುದಕ್ಕೆ ಅಡ್ಡಿಯಿರಲಿಲ್ಲ. ಬೆಂಗಳೂರು ನಗರ್ತಪೇಟೆಯ ಗಂಗಮ್ಮನ ದೇವಾಲಯ ನಿರ್ಮಾಣ ಇದಕ್ಕೆ ಸಾಕ್ಷಿಯಾಗಿದೆ. ಬೆಂಗಳೂರಿನಲ್ಲಿ ಸಮಾಜದ ಸಾಮಾನ್ಯ ವರ್ಗದವರೂ ದೇವಾಲಯ ನಿರ್ಮಿಸಿಕೊಂಡಿರುವುದನ್ನು ಕಾಣಬಹುದು. ಉದಾಹರಣೆಗೆ: ದಾಸರು, ತೋಟಗಾರರು, ಗಾಜಲವರು (ಬಳೆಗಾರರು), ಕೆರೆ ಅಗೆಯುವವರು, ಭಿಕ್ಷುಕರು ಇತ್ಯಾದಿ. ಯಲಹಂಕ ನಾಡಪ್ರಭು ಕೆಂಪೇಗೌಡನ ಧಾರ್ಮಿಕ ಔದಾರ್ಯ, ಜಾತಿ ಮತ ಸಹಿಷ್ಣತೆ ಅನನ್ಯವಾದದ್ದು.
ಈಗಿನ ಹಲಸೂರು ಪ್ರದೇಶ ಹಿಂದೆ ದಟ್ಟ ಕಾಡಾಗಿತ್ತು. ಅಲ್ಲಿ ಋಷಿಯೊಬ್ಬ ಆಶ್ರಮ ಕಟ್ಟಿಕೊಂಡು ಈಶ್ವರನನ್ನು ಧ್ಯಾನಿಸಿ ತಪಸ್ಸು ಮಾಡುತ್ತಿದ್ದನು. ಒಮ್ಮೆ ಯಲಹಂಕ ರಾಜ್ಯದ ರಾಜ ಕೆಂಪೇಗೌಡನು ಬೇಟೆಗೆಂದು ಪರಿವಾರದೊಡನೆ ಹೋಗಿದ್ದು ಆಯಾಸದಿಂದ ಮರವೊಂದರ ಕೆಳಗೆ ಮಲಗಿದನು. ಆಗ ಅವನಿಗೆ ಕನಸೊಂದು ಬಿತ್ತು. ಕನಸ್ಸಿನಲ್ಲಿ ಹಿಂದೆ ಋಷಿಯೊಬ್ಬ ಪೂಜಿಸುತ್ತಿದ್ದ ಸೋಮೇಶ್ವರನು ಮರಳಿನಲ್ಲಿ ಹೂತುಹೋಗಿರುವುದನ್ನು ತಿಳಿಸಿದನು. ಪಕ್ಕದ ಕೆರೆಯ ಏರಿಯ ಬಳಿ ಏಳು ಹಿತ್ತಾಳೆ ಕೊಪ್ಪರಿಗೆ ನಿಧಿ ಇರುವುದಾಗಿಯೂ ಅದನ್ನು ಪಡೆದು ತನಗೆ ದೇವಾಲಯ ಕಟ್ಟಿಸಿ, ಪೂಜೆ ಉತ್ಸವಕ್ಕೆ ವ್ಯವಸ್ಥೆ ಮಾಡಿದರೆ ನಿನ್ನ ಅಧಿಕಾರ, ಶಕ್ತಿ, ಕೀರ್ತಿ ವೃದ್ಧಿಸುವುದೆಂದೂ ಹೇಳಿ ಮಾಯವಾದನು.
ಕನಸಿನಿಂದ ಆಶ್ಚರ್ಯಗೊಂಡ ಕೆಂಪೇಗೌಡ ಕುತೂಹಲಕ್ಕಾಗಿ ಆ ಸ್ಥಳದಲ್ಲಿ ಅಗೆಸಿದಾಗ ಶಿವಲಿಂಗ ದೊರೆಯಿತು. ಕೆರೆಯ ಏರಿಯ ಹತ್ತಿರ ಏಳು ಹಿತ್ತಾಳೆ ಕೊಪ್ಪರಿಗೆಗಳ ತುಂಬ ನಾಣ್ಯಗಳು ದೊರಕಿದವು. ಆ ನಿಧಿಯಿಂದ, ಅದೇ ಸ್ಥಳದಲ್ಲಿ, ನಿಪುಣ ವಾಸ್ತುಶಿಲ್ಪಿಗಳನ್ನು ಕರೆಸಿ, ಅಲ್ಲಿ ಏಳು ಪ್ರಾಕಾರದ ದೊಡ್ಡ ದೇವಾಲಯವನ್ನು ಕಟ್ಟಿಸಿದ. ಶಾಸ್ತ್ರೋಕ್ತವಾಗಿ ಪೂಜೆ ಉತ್ಸವಗಳಿಗೆ ವ್ಯವಸ್ಥೆ ಮಾಡಿದ. ಅದಕ್ಕಾಗಿ ದಾನ ದತ್ತಿಗಳನ್ನು ನೀಡಿದ. ಅಲ್ಲಿ ಒಂದು ಊರನ್ನು ಕಟ್ಟಿಸಿ ’ಹಲಸೂರು’ ಎಂದು ನಾಮಕರಣ ಮಾಡಿದ. ಹಲಸಿನ ಮರಗಳು ವಿಶೇಷವಾಗಿದ್ದುದರಿಂದ ಹಾಗೆ ಹೆಸರಿಡಲು ಕಾರಣವಾಯಿತು. ಕೆಂಪೇಗೌಡ ನಿತ್ಯವೂ ಹಲಸೂರಿಗೆ ಹೋಗಿ ಸೋಮೇಶ್ವರನಿಗೆ ಪೂಜೆ ಸಲ್ಲಿಸಿ ಬರುತ್ತಿದ್ದ. ಹಲಸೂರನ್ನು ಮೂವತ್ತುಮೂರು ಹಳ್ಳಿಗಳ ಕಸಬೆಯನ್ನಾಗಿ ಮಾಡಿ, ಪ್ರತಿ ಹಳ್ಳಿಯವರೂ ತಾವು ಬೆಳೆದ ಫಸಲಿನಲ್ಲಿ ಖಂಡುಗವೊಂದಕ್ಕೆ ಒಂದು ಕೊಳಗ ದೇವಾದಾಯ ಕೊಡುವಂತೆ ಆದೇಶ ಹೊರಡಿಸಿದ. ಹಲಸೂರು ಸೋಮೇಶ್ವರ ಪ್ರಸಿದ್ಧ ದೇವರಾಯಿತು. ಇದು ಪ್ರಾಚೀನ ಬಖೈರಿಯಲ್ಲಿ ದಾಖಲಾಗಿದೆ. ’ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆದವರಂತೆ ಕಾಣಿರೋ’ ಎಂಬಂತೆ ಕೆಂಪೇಗೌಡನು ಸಿಕ್ಕಿದ ನಿಧಿಯನ್ನು ದೇವಾಲಯ ನಿರ್ಮಾಣಕ್ಕೆ ಖರ್ಚುಮಾಡಿ ಕೀರ್ತಿ ಗಳಿಸಿದ. ಇತ್ತೀಚೆಗೆ ’ಹಲಸೂರು’ ಎಂಬ ಸಸ್ಯವಾಚಕ ಹೆಸರನ್ನು ತಪ್ಪಾಗಿ ಗ್ರಹಿಸಿ ’ಅಲಸೂರು’ ಎಂದು ಕರೆಯಲಾಗಿದೆ.
ಶಿವಗಂಗೆ
ಕೆಂಪೇಗೌಡ ಪ್ರ.ವ.೧೫೫೦ ರಲ್ಲಿ ಶಿವಗಂಗೆಯನ್ನು ವಶಪಡಿಸಿಕೊಂಡನು. ಶಿವಗಂಗೆಯಲ್ಲಿ ಗಂಗಾಧರೇಶ್ವರಸ್ವಾಮಿ, ಹೊನ್ನಾದೇವಿ ದೇವಾಲಯಗಳ ಜೀರ್ಣೋದ್ಧಾರ ಮಾಡಿಸಿದನು. ಅಲ್ಲಿ ವಿಶಾಲವಾದ ಸಭಾಮಂಟಪ ಕಟ್ಟಿಸಿದನು. ಕೆಲವು ಗುಡಿಗೋಪುರ, ಅನ್ನಛತ್ರಗಳನ್ನು ಕಟ್ಟಿಸಿದನು. ಅಧಿಕವಾಗಿ ದಾನ ದತ್ತಿ ನೀಡಿದನು. ಶಿವಗಂಗೆ ’ದಕ್ಷಿಣ ಕಾಶಿ’ ಎನ್ನುವಂತೆ ಅಭಿವೃದ್ಧಿ ಪಡಿಸಿದನು.
ಕಣಾದ ಎಂಬ ಋಷಿ ಏಕಪಾದದಲ್ಲಿ ನಿಂತು ನೀರಿಗಾಗಿ ತಪಸ್ಸು ಮಾಡಿದ. ಅವನ ತಪೋಶಕ್ತಿಯಿಂದ ಶಿವನ ಜಟೆಯಲ್ಲಿದ್ದ ನೀರು ಭೂಮಿಗೆ ಹರಿದು ಬಂತು. ಅದನ್ನು ಕಂಡ ಮುನಿಗಳು ’ಶಿವಗಂಗಾ’ ಎಂದರು. ಅದೇ ಶಿವಗಂಗೆ ಕ್ಷೇತ್ರ ಎಂದು ಸ್ಥಳ ಪುರಾಣ ಹೇಳುತ್ತದೆ. ಶಿವಗಂಗೆ ನೆಲಮಂಗಲ ತಾಲೂಕಿನಲ್ಲಿದೆ. ಶಂಖಾಕೃತಿಯ ಬೆಟ್ಟ. ಸಮುದ್ರಮಟ್ಟದಿಂದ ೪೫೫೯ ಅಡಿಗಳ ಎತ್ತರದಲ್ಲಿದೆ. ಅದರ ಆಕಾರ ನಯನ ಮನೋಹರ. ಪೂರ್ವದಿಂದ ಬಸವ, ಪಶ್ಚಿಮದಿಂದ ಗಣೇಶ, ಉತ್ತರದಿಂದ ಶಿವಲಿಂಗ, ದಕ್ಷಿಣದಿಂದ ಸರ್ಪದ ಆಕಾರದಲ್ಲಿ ಕಾಣುತ್ತದೆ. ಅದು ಪ್ರಾಚೀನ ಶಿಲಾಸೃಷ್ಟಿ. ಶಿವಗಂಗೆ ದಕ್ಷಿಣ ಕಾಶಿ ಎಂದು ಹೆಸರಾಗಿದೆ.
ಬೆಂಗಳೂರು ಕೆಂಪೇಗೌಡ ಶಿವಗಂಗೆ ಕ್ಷೇತ್ರವನ್ನು ಧಾರ್ಮಿಕ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸಿದ. ಕಡಿದಾದ, ಎತ್ತರವಾದ ಬೆಟ್ಟಕ್ಕೆ ಸಲೀಸಾಗಿ ಹತ್ತಲು ಕಲ್ಲಿನ ಮೆಟ್ಟಿಲುಗಳನ್ನು ಅಳವಡಿಸಿದ. ದೇವಾಲಯದ ಹಜಾರಗಳನ್ನು ನಿರ್ಮಿಸಿದ. ಧಾರ್ಮಿಕ ಕಾರ್ಯಕ್ರಮಗಳಿಗೆ ಅನುಕೂಲವಾಗಲು ಹಲವು ದಾನದತ್ತಿಗಳನ್ನು ನೀಡಿದ. ಆ ಬಗೆಗೆ ಶಾಸನಗಳನ್ನು ಕೆತ್ತಿಸಿದ. ಆ ಪ್ರದೇಶದಲ್ಲಿ ಬೀಳುವ ಮಳೆನೀರನ್ನು ಸಂಗ್ರಹಿಸಿ ಮರುಬಳಕೆ ಮಾಡುವ ತಂತ್ರಜ್ಞಾನವನ್ನು ವ್ಯವಸ್ಥೆಗೊಳಿಸಿದ. ಅದು ಪವಿತ್ರ ಶೈವಕ್ಷೇತ್ರವಾಗುವಂತೆ ಶ್ರಮಿಸಿದ. ಅದು ಈಗ ಧಾರ್ಮಿಕ, ಐತಿಹಾಸಿಕ, ಸಾಂಸ್ಕೃತಿಕ ಸಂಗಮತಾಣವಾಗಿ ಹೆಸರಾಗಿದೆ.
ಹಿರಿಯ ಕೆಂಪೇಗೌಡ ಸುಮಾರು ೧೫೫೦ ರ ಹೊತ್ತಿಗೆ ಶಿವಗಂಗೆಯನ್ನು ವಶಪಡಿಸಿಕೊಂಡು ಅದನ್ನು ನಾನಾ ರೀತಿಯಲ್ಲಿ ಅಭಿವೃದ್ಧಿಪಡಿಸಿದ. ಅಷ್ಟುಹೊತ್ತಿಗಾಗಲೇ ಶಿವಗಂಗೆ ದಕ್ಷಿಣ ಕಾಶಿಯೆಂದು ಹೆಸರಾಗಿತ್ತು. ಕಡಿದಾದ ಬೆಟ್ಟವನ್ನು ಕಾಲುಹಾದಿಯಲ್ಲಿ ಹತ್ತುವುದಕ್ಕೆ ಕಷ್ಟವೆಂದರಿತು ಕಲ್ಲಿನ ಮೆಟ್ಟಿಲುಗಳನ್ನು ಕೆತ್ತಿಸಿದ. ಊರಿನ ನಡುಬೀದಿಯಿಂದಲೇ ಪ್ರಾರಂಭವಾಗುವಂತೆ ಮೆಟ್ಟಿಲುಗಳನ್ನು ಅದ್ದಿಸಿದ. ಕಾಶಿಗೆ ಇರಬಹುದಾದಷ್ಟು ಮೈಲಿಗಳ ದೂರದಷ್ಟು ಸಂಖ್ಯೆಯ ಮೆಟ್ಟಿಲುಗಳು ಶಿವಗಂಗೆ ಬೆಟ್ಟಕ್ಕಿವೆ ಎನ್ನುತ್ತಾರೆ. ಅಲ್ಲಿದ್ದ ಗಂಗಾಧರೇಶ್ವರ, ಸ್ವರ್ಣಾಂಬೆ ದೇವಾಲಯಗಳನ್ನು ವಿಸ್ತರಿಸಿ ಜೀರ್ಣೋದ್ಧಾರ ಮಾಡಿಸಿದ. ಗರ್ಭಗೃಹ, ಯಾಗಶಾಲೆ, ಕಲ್ಯಾಣ ಮಂಟಪ, ಪಡಸಾಲೆಗಳನ್ನು ಕಲಾತ್ಮಕಗೊಳಿಸಿದ. ಅಲ್ಲಿ ಕೆಂಪೇಗೌಡ ಹಜಾರವೊಂದನ್ನು ಗೇಯಿಸಿದ. ದೇವತಾಕಾರ್ಯಗಳು ನಿರ್ವಿಘ್ನವಾಗಿ ನಡೆಯಲು ದತ್ತಿಗಳನ್ನು ನೀಡಿದ. ರಮ್ಯ ಪ್ರಕೃತಿ ತಾಣವಾದ ಶಿವಗಂಗೆ ಕೆಂಪೇಗೌಡನ ನೆಚ್ಚಿನ ನೆಲೆಯಾಯಿತು.
ಶಿವಗಂಗೆಯನ್ನು ಪವಿತ್ರ ಕ್ಷೇತ್ರವನ್ನಾಗಿ, ಧಾರ್ಮಿಕ ಕೇಂದ್ರವನ್ನಾಗಿ ಮಾಡುವಲ್ಲಿ ಕೆಂಪೇಗೌಡ ನಾಡಪ್ರಭುವಾಗಿ ರಾಜಾದಾಯದಿಂದ ಹಣ ಖರ್ಚು ಮಾಡಿದುದಲ್ಲದೆ, ಸ್ಥಳೀಯರೂ ಅದರಲ್ಲಿ ಪಾಲ್ಗೊಳ್ಳುವಂತೆ ಹುರಿದುಂಬಿಸಿದ್ದು ವಿಶೇಷ. ಜನಸಾಮಾನ್ಯರಿಗೆ ಈ ಸ್ಥಳ ನಮ್ಮದು, ಇದರಲ್ಲಿ ನಮ್ಮ ಪಾಲೂ ಇದೆ. ಇದನ್ನು ವ್ಯವಸ್ಥಿತವಾಗಿ ರಕ್ಷಿಸಿಕೊಳ್ಳಬೇಕಾದದ್ದು ತಮ್ಮ ಕರ್ತವ್ಯ ಎಂಬ ಅರಿವಾಗುವಂತೆ ಮಾಡಿದ್ದು ಹೆಚ್ಚುಗಾರಿಕೆ. ದೈವಭಕ್ತಿ ವ್ಯಕ್ತಿನಿಷ್ಠವಾದದ್ದು, ಅದನ್ನು ಸಾರ್ವತ್ರಿಕಗೊಳಿಸಿದ್ದು ಕೆಂಪೇಗೌಡನ ಜಾಣ್ಮೆ.
ಹಿರಿಯ ಕೆಂಪೇಗೌಡ, ತನಗೆ ಪುತ್ರ ಪೌತ್ರ ಪರಂಪರೆಯ ಅಭಿವೃದ್ಧಿಯಾಗಲೆಂದೂ ತನ್ನ ಮಾತಾಪಿತೃಗಳಿಗೆ ಮೋಕ್ಷ ಸಿಗಲೆಂದೂ ಶಿವಗಂಗೆಯ ಗಂಗಾಧರ ದೇವಾಲಯದ ನಂದಿ ಮಂಟಪದ ಪಶ್ಚಿಮ ಭಾಗದ ಗಂಟೆಯನ್ನು ಸಮರ್ಪಿಸಿದನು. (ಶಾಲಿವಾಹನ ಶಕ ೧೫೧೦ನೆಯ ಸರ್ವಧಾರೀನಾಮ ಸಂವತ್ಸರ ಚೈತ್ರ ಶುದ್ಧ ೧೦ ಮೇಷ ಸಂಕ್ರಾಂತಿ ದಿನ) [ಪ್ರ.ವ.೨೮-೩-೧೫೮೮]. ಕೆಂಪೇಗೌಡ ಶಿವಗಂಗೆಯ ಗಂಗಾಧರೇಶ್ವರ ದೇವಾಲಯದ ನವರಂಗದ ಸಿಂಹದ್ವಾರವನ್ನು ನಿರ್ಮಿಸಿದನು (೧೬ನೇ ಶತಮಾನ). ಈ ಬಾಗಿಲುವಾಡದ ಕೆಳಗಡೆ ಕೆಂಪೇಗೌಡ ಅವನ ಪತ್ನಿಪುತ್ರ ಪುತ್ರಿಯರ ಉಬ್ಬು ಶಿಲೆಗಳಿವೆ. ಶಿವಗಂಗೆ ಬೆಟ್ಟದ ಬುಡದಲ್ಲಿ ರಾಯಗೋಪುರ (ಕೆಂಪೇಗೌಡ ಗೋಪುರ) ಮತ್ತು ಬೆಟ್ಟದ ಮೇಲೆ ’ಕೆಂಪೇಗೌಡ ಹಜಾರ’ ನಿರ್ಮಾಣವಾಗಿದೆ.
ಕೆಂಪೇಗೌಡನ ಪ್ರೀತಿಯ ತಾಣಗಳಲ್ಲಿ ಶಿವಗಂಗೆಯು ಒಂದು. ಅಲ್ಲೇ ನಾಡಿನ ಖಜಾನೆಯು ಇತ್ತು. ಹಾಗಾಗಿ ಅಲ್ಲಿ ಬಲವಾದ ಕಾವಲು ಪಡೆ ರಕ್ಷಣೆಕೊಡುತ್ತಿತ್ತು. ಕೆಂಪೇಗೌಡನ ಏಳಿಗೆಯನ್ನು ಸಹಿಸದ ಶತ್ರುಗಳು ಇತ್ತ ಕಣ್ಣು ಹಾಯಿಸದಂತೆ ನಿಗಾವಹಿಸಿದ್ದನು. ಖಜಾನೆಯ ಉಸ್ತುವಾರಿಯನ್ನು ಕೆಂಪೇಗೌಡನ ಸಹೋದರ ಬಸವೇಗೌಡ ನೋಡಿಕೊಳ್ಳುತ್ತಿದ್ದನು. ಮಾಗಡಿ ಸಮೀಪದ ಸಾವನದುರ್ಗ-(ಸಾಮಂತನ ದುರ್ಗ)ವೂ ಕೆಂಪೇಗೌಡನ ಆಳ್ವಿಕೆಗೆ ಒಳಪಟ್ಟಿತ್ತು. ಅಲ್ಲಿ ನಾಡಪ್ರಭುವಿನ ಶಿಲಾಪ್ರತಿಮೆಯಿದೆ.
ಕೆಂಪೇಗೌಡ ಶಿವಗಂಗೆಯನ್ನು ವಶಪಡಿಸಿಕೊಂಡ ಕಾಲದಲ್ಲೇ ಮಾಗಡಿಯನ್ನು ಸ್ವಾಧೀನಪಡಿಸಿಕೊಂಡು ಅಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡನು. ಮಾಗಡಿ ಕೋಟೆಯನ್ನು ಭದ್ರಪಡಿಸಿದುದಲ್ಲದೆ ಅಲ್ಲಿ ರಾಮೇಶ್ವರ, ಸೋಮೇಶ್ವರ ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಿಸಿದನು. ಮಾಗಡಿ ನೈಋತ್ಯದ ಕೆಂಪಸಾಗರ ಗ್ರಾಮದಲ್ಲಿ ವೀರಶೈವ ಮಠದ ನವರಂಗದ ಕಂಬದ ಮೇಲೆ, ಮಡಕೆಯಿಂದ ಹೊರಬರುತ್ತಿರುವ ಶಿವಲಿಂಗವಿದೆ. ಅದರ ಮುಂದುಗಡೆ ಕೆಂಪೇಗೌಡ ತನ್ನ ಪ್ರಕೃತಿಯನ್ನು ಕೆತ್ತಿಸಿದ. ಇದನ್ನು ಸುರಭಾಂಡೇಶ್ವರ ಎಂದು ಕರೆಯುತ್ತಾರೆ.
ಒಮ್ಮೆ ಮಾಗಡಿ ಪ್ರದೇಶದಲ್ಲಿ ಬರಗಾಲ ಕಾಲಿಟ್ಟಿತು. ನೀರಿಗೆ ತೊಂದರೆಯಾಯಿತು. ಬದುಕು ದುಸ್ತರವಾಯಿತು. ಪ್ರಜೆಗಳಿಗೆ ಒದಗಿ ಬಂದ ದುಸ್ಥಿತಿಗೆ ನಾಡಪ್ರಭು ಕೆಂಪೇಗೌಡ ಮಮ್ಮಲ ಮರುಗಿದನು. ಕೆಂಪೇಗೌಡ ಪ್ರಜೆಗಳ ಅಸಹಾಯಕತೆಯನ್ನು ಕಣ್ಣಾರೆ ಕಂಡು ಮಮ್ಮಲ ಮರುಗಿದನು. ಅರಮನೆಯ ನಿರ್ವಹಣೆಗಾಗಿ ಮೀಸಲಿಟ್ಟಿದ್ದ ಧನ ಧಾನ್ಯವನ್ನು ತೆಗೆಯಿಸಿ ಬರಗಾಲದ ಈ ಸಂತ್ರಸ್ತರಿಗೆ ಹಂಚಿಸಿದನು. ಸಾವು ನೋವು ಕಡಿಮೆಯಾಯಿತು. ಅದು ತಾತ್ಕಾಲಿಕ ವ್ಯವಸ್ಥೆ. ಬರಗಾಲ ಮುಂದುವರಿದರೆ ಗತಿಯೇನು? ಪರಿಹಾರವೇನು? ಪ್ರದೇಶದಲ್ಲಿ ಸುತ್ತಾಡಿ ಪರಿಸ್ಥಿತಿಯ ತಾಪವನ್ನು ಗ್ರಹಿಸಿದ. ಒಂದೆರಡು ದಿನ ದೇವರ ಮುಂದೆ ಧ್ಯಾನಸ್ಥನಾಗಿ ಮಳೆಗಾಗಿ ಪ್ರಾರ್ಥಿಸಿದ. ಯಾವ ಮಾಯವೋ ಎನೋ ಧಾರಕಾರವಾಗಿ ಮಳೆ ಸುರಿಯಿತು. ಬರಗಾಲದಿಂದ ತತ್ತರಿಸಿದ್ದ ಜನರು ಮೂಕವಿಸ್ಮಿತರಾದರು, ಸಂತೋಷಗೊಂಡರು. ನಾಡಪ್ರಭುಗಳ ಪೂಜೆ ಪ್ರಾರ್ಥನೆಯಿಂದ ಮಳೆ ಬಂತೆಂದು ಭಾವಿಸಿದರು. ಕೆಂಪೇಗೌಡನ ದೈವಭಕ್ತಿಯನ್ನು ಕೊಂಡಾಡಿದರು. ಅಲ್ಲಿದ್ದ ಋಷಿಯೊಬ್ಬ ಆನಂದದಿಂದ ಜನರ ಸಮಕ್ಷಮದಲ್ಲಿ ರಾಜನನ್ನು ಹೊಗಳಿ, ಸತ್ಕರಿಸಿ, ’ಮಹಾಗಡಿ ಕೆಂಪೇಗೌಡ’ ಎಂದು ಬಿರುದಿತ್ತು ಸನ್ಮಾನಿಸಿದರು. ಆ ಕಾರಣದಿಂದ ’ಮಾಕುಟೆ ಮಾಗಣಿ’ ಪ್ರದೇಶಕ್ಕೆ ’ಮಾಗಡಿ’ ಎಂದು ಹೆಸರಾಯಿತೆಂದು ಹೇಳುತ್ತಾರೆ.
ಗವಿಗಂಗಾಧರೇಶ್ವರ
ಶಿವಭಕ್ತನಾದ ರಾಜ ಕೆಂಪೇಗೌಡ ಪ್ರತಿನಿತ್ಯ ಶಿವಗಂಗೆಯ ದೇವಾಲಯದಿಂದ ತೀರ್ಥಪ್ರಸಾದ ತರಿಸಿಕೊಂಡು ಸೇವಿಸಿ ಅನಂತರ ಊಟ ಮಾಡುವುದು ಪದ್ಧತಿ. ಅದಕ್ಕೆ ಭಂಗ ಬಂದರೆ ದೇಹತ್ಯಾಗ ಮಾಡುವುದಾಗಿ ಅವನ ಪ್ರತಿಜ್ಞೆ, ಒಮ್ಮೆ ಭಾರಿ ಮಳೆ ಬಿರುಗಾಳಿಯಿಂದ ತೀರ್ಥಪ್ರಸಾದ ಬರುವುದಕ್ಕೆ ಅಡ್ಡಿಯಾಯಿತು. ರಾಜನಿಗೆ ವ್ಯಾಕುಲವಾಯಿತು. ತನ್ನ ಮಾತಿನಂತೆ ಪ್ರಾಣಕಳೆದುಕೊಳ್ಳಲು ನಿರ್ಧರಿಸಿದ. ಅಂದು ರಾತ್ರಿ ಕನಸಿನಲ್ಲಿ ದೇವರು ಕಾಣಿಸಿಕೊಂಡು "ನಿನ್ನ ಕೋಟೆಯ ವನಪ್ರದೇಶದ ಗವಿಯಲ್ಲಿ ನೆಲೆಸಿದ್ದೇನೆ. ಅಲ್ಲಿಗೆ ಹೋಗಿ ಶಾಸ್ತ್ರೋಕ್ತವಾಗಿ ಪೂಜಿಸಲು ವ್ಯವಸ್ಥೆ ಮಾಡು. ನಿತ್ಯವೂ ನನ್ನ ತೀರ್ಥ ಪ್ರಸಾದ ಹತ್ತಿರದಲ್ಲೇ ದೊರಕುತ್ತದೆ. ಅಲ್ಲಿ ದೇವಾಲಯವನ್ನೂ ಪುರವನ್ನೂ ಕಟ್ಟಿಸು." ಎಂದನು.
ಕೆಂಪೇಗೌಡ ಆಪ್ತರನ್ನೂ ಪುರೋಹಿತರನ್ನೂ ಕೂಡಿಕೊಂಡು ದೇವರು ಹೇಳಿದ ಪ್ರದೇಶದ ಗವಿಯನ್ನು ಹುಡುಕಿದಾಗ ಗಂಗಾಧರನ ವಿಗ್ರಹವಿರುವುದು ತಿಳಿಯಿತು. ಅದು ಪ್ರಾಚೀನ ಕಾಲದಲ್ಲಿ ಋಷಿಯೊಬ್ಬ ಸ್ಥಾಪಿಸಿದ ದೇವರು. ಅಪರೂಪದ ಶಿವಲಿಂಗ. ಅದು ನೆಲದ ಒಳಗಿದ್ದ ಗುಹೆ ಪ್ರದೇಶ. ಕೆಂಪೇಗೌಡ ಸಂತೋಷದಿಂದ ಶಿವಪೂಜೆ ಮಾಡಿಸಿ ತೀರ್ಥ ಪ್ರಸಾದ ಸೇವಿಸಿದ. ಅಲ್ಲಿ ದೇವಾಲಯವನ್ನೂ ಕಟ್ಟಿಸಿದ. ಅದು ಗವಿಗಂಗಾಧರೇಶ್ವರ ದೇವಾಲಯವೆಂದು ಹೆಸರಾಯಿತು. ಗುಡಿಯ ಆವರಣದಲ್ಲಿ ಕೋಡುಕಲ್ಲಿನ ಕಂಬಗಳಲ್ಲಿ ತ್ರಿಶೂಲ, ಶಿವನಬಾಣ, ಡಮರುಗ ಮತ್ತು ಶಿವನ ಗದೆಯನ್ನು ಕಡೆಸಿದ. ದೇವಾಲಯದ ನಿರ್ವಹಣೆಗೆ ಗವಿಪುರದ ಭೂಮಿಯನ್ನು ದಾನ ಮಾಡಿದ. ಈ ನಿರ್ಮಾಣ ಕಾರ್ಯ ಪ್ರ.ವ.೧೫೬೪ ರಿಂದ ೧೫೬೯ರ ಅವಧಿಯಲ್ಲಿ ನಡೆಯಿತೆಂದು ಹೇಳುತ್ತಾರೆ.
ದೇವಾಲಯದ ಸುತ್ತ ಊರನ್ನು ನಿರ್ಮಿಸಿದ. ಅದು ಗವಿಪುರ ಅಥವಾ ಗಂಗಾಧರ ಪುರವೆಂದು ಹೆಸರಾಯಿತು. ಈ ಪ್ರದೇಶದ ಮೂಲಕ ಹರಿಯುವ ವೃಷಭಾವತಿ ನದಿಯ ನೀರಿನ ಶೇಖರಣೆಗಾಗಿ ಕುಲದೇವತೆಯ ಹೆಸರಿನಲ್ಲಿ ಕೆಂಪಾಂಬುಧಿ ಕೆರೆಯನ್ನು ಕಟ್ಟಿಸಿದ. ಪ್ರ.ವ.೧೮೦೦ರ ಒಖೈರಿನಲ್ಲಿ ಇದರ ಪ್ರಸ್ತಾಪವಿದೆ.
ಬೆಂಗಳೂರು ಗವಿಗಂಗಾಧರೇಶ್ವರ ದೇವಾಲಯದಲ್ಲಿ ಹಲವು ಅದ್ಭುತಗಳಿವೆ. ವಿನೂತನ ವಾಸ್ತು ವಿಸ್ಮಯಗಳಿವೆ. ಗುಹೆಯಲ್ಲಿರುವ ಈಶ್ವರ ಹಾಗೂ ನಂದಿ ಉದ್ಭವಮೂರ್ತಿಗಳು ಎನ್ನುತ್ತಾರೆ. ಈಶ್ವರನ ಲಾಂಛನಗಳಾದ ಸೂರ್ಯಪಾನ, ಚಂದ್ರಪಾನ, ಈಶ್ವರನ ಆಯುಧಗಳಾದ ತ್ರಿಶೂಲ, ಢಮರು ಏಕಶಿಲೆಯಲ್ಲಿ ನಿರ್ಮಾಣವಾಗಿದೆ. ಮಕರ ಸಂಕ್ರಾಂತಿಗೂ ಈ ದೇವಾಲಯದ ದೇವರಿಗೂ ವಿಶೇಷ ನಂಟು. ಸೂರ್ಯ ಮಕರ ಸಂಕ್ರಾಂತಿಯಂದು ಪಂಥ ಬದಲಿಸಿ ಉತ್ತರಾಯಣ ಪ್ರವೇಶಿಸುವ ಸಂದರ್ಭದಲ್ಲಿ, ಪಶ್ಚಿಮದಲ್ಲಿ ಮುಳುಗುವಾಗ, ಗವಿಪುರದ ಗುಹೆಯೊಳಗೆ ದಕ್ಷಿಣಾಭಿಮುಖ ಈಶ್ವರ ಲಿಂಗದ ಪಾದಸ್ಪರ್ಶಿಸಿ ಸೂರ್ಯ ಕಿರಣ ಸಾಗುವುದು ಕುತೂಹಲಕರ. ಆ ದೃಶ್ಯ ದರ್ಶನ ಪರಮಪವಿತ್ರವೆಂಬ ನಂಬಿಕೆಯಿದೆ.
ಸಾಮಾನ್ಯವಾಗಿ ಈಶ್ವರ ಲಿಂಗವನ್ನು ಪೂರ್ವ, ಪಶ್ಚಿಮ, ಉತ್ತರ ಮುಖವಾಗಿ ಪ್ರತಿಷ್ಠಾಪಿಸುವುದು ರೂಢಿ. ಆದರೆ ಇಲ್ಲಿ ಈಶ್ವರ ಲಿಂಗ ದಕ್ಷಿಣಾಭಿಮುಖವಾಗಿದೆ. ಪಾರ್ವತಿ ಪ್ರತಿಮೆ ಎಡಭಾಗಕ್ಕೆ ಬದಲಾಗಿ ಬಲಭಾಗದಲ್ಲಿದೆ. ಈ ಪ್ರದೇಶದಲ್ಲಿ, ಬೆಂಗಳೂರು ಕೆಂಪೇಗೌಡನ ಕಾಲದಲ್ಲಿ ರೂಪುಗೊಂಡಿರುವ ವಾಸ್ತು ಸೂಕ್ಷ್ಮಗಳು ಬೆರಗುಗೊಳಿಸುತ್ತವೆ.
ಮಕರ ಸಂಕ್ರಾಂತಿಯಂದು ಸಂಜೆ ದೇವಾಲಯದಲ್ಲಿ ಸಂಭವಿಸುವ ಸೂರ್ಯನಮನ ಪ್ರಾಕೃತಿಕ ಘಟನೆ ಆವರ್ಣನೀಯ. ಅಂದು ಸಂಜೆ ಸೂರ್ಯಕಿರಣಗಳು ಸೂರ್ಯದ್ವಾರದ ಮೂಲಕ ಪ್ರವೇಶಿಸುತ್ತವೆ. ಪ್ರವೇಶದ್ವಾರವನ್ನು ಹಾದು ಆದ್ಯದ್ವಾರದ ಮೂಲಕ ಸಾಗುತ್ತವೆ. ಈಶ್ವರಲಿಂಗದ ಮುಂಭಾಗದಲ್ಲಿ ಶೃಂಗದ ಮಧ್ಯೆ ಕೆಡೆದಿರುವ ನಂದಿ ಬಸವನ ಕೊಂಬುಗಳ ನಡುವೆ ಚಲಿಸಿ ಈಶ್ವರ ಲಿಂಗವನ್ನು ಕಿರಣಗಳು ಸ್ಪರ್ಶಿಸುತ್ತವೆ. ಕೆಲವು ನಿಮಿಷಗಳ ಈ ಅನುಪಮ ದೃಶ್ಯವನ್ನು ಅಸಂಖ್ಯಾತ ಭಕ್ತರು ದರ್ಶಿಸಿ ಪುನೀತರಾಗುತ್ತಾರೆ.
ಗವಿಗಂಗಾಧರನ ಪುರಾಣ ತ್ರೇತಾಯುಗದವರೆಗೂ ಹಬ್ಬಿದೆ. ತ್ರೇತಾಯುಗದಲ್ಲಿ ಗೌತಮ ಮತ್ತು ಭಾರಧ್ವಾಜ ಮುನಿಗಳು ಬೆಳಗಿನ ಪೂಜೆಯನ್ನು ಕಾಶಿಯಲ್ಲಿ, ಮಧ್ಯಾಹ್ನದ ಪೂಜೆಯನ್ನು ಗವಿಗಂಗಾಧರ ಗುಡಿಯಲ್ಲಿ, ಸಂಜೆಯ ಗುಹೆಯಲ್ಲಿ ಗುಹಾಂತರ ಮಾರ್ಗವಿದೆ. ಅದು ಶಿವಗಂಗೆ ಹಾಗೂ ಕಾಶಿಯವರೆಗೆ ಇದೆ ಎನ್ನುತ್ತಾರೆ. ದಕ್ಷಿಣಾಭಿಮುಖ ಈಶ್ವರಲಿಂಗದ ಪೂಜೆ ಸರ್ವಶ್ರೇಷ್ಠ ಎಂಬ ಧಾರ್ಮಿಕ ಹಿನ್ನೆಲೆಯಲ್ಲಿ ಪುರಾಣದ ಸರಮಾಲೆಯೇ ಹುಟ್ಟಿಕೊಂಡಿದೆ. ಇಂಥ ಪುರಾಣ ಪ್ರಸಿದ್ಧ ದೇವರ ಪುನರ್ ಶೋಧ, ದೇವಾಲಯ ನಿರ್ಮಾಣ, ಅಭಿವೃದ್ಧಿ ಕಾರ್ಯ, ಪೂಜೆ ಪುರಸ್ಕಾರ ನಿರ್ವಹಣೆಯ ವ್ಯವಸ್ಥೆಯ ಬೆಂಗಳೂರು ಕೆಂಪೇಗೌಡ ಆದ್ಯತೆ ನೀಡಿ ದೈವಭಕ್ತನೆನಿಸಿದ.
ದೊಡ್ಡ ಬಸವಣ್ಣನ ದೇವಾಲಯ ಹಾಗೂ ಗವಿಗಂಗಾಧರ ದೇವಾಲಯದ ನಡುವೆ ಕಾಡು ಇತ್ತಂತೆ. ಅಲ್ಲಿ ಎಷ್ಟೋ ಶೈವ ಸನ್ಯಾಸಿಗಳು, ಋಷಿಗಳು ತಪಸ್ಸು ಮಾಡುತ್ತಿದ್ದರಂತೆ. ಮಧ್ಯರಾತ್ರಿಯ ಹೊತ್ತು ಋಷಿಗಳು ವೇದ ಮಂತ್ರಗಳನ್ನು ಹೇಳಿಕೊಂಡು ಚಲಿಸುತ್ತಿದ್ದರಂತೆ ಪರಸ್ಥಳದಿಂದ ಬಂದವರು ಈ ಮಂತ್ರ ಘೋಷವನ್ನು ಕೇಳಿರುವುದಾಗಿ ಹೇಳುವುದುಂಟು. ಆದರೆ ಋಷಿಗಳನ್ನು ಸುಲಭವಾಗಿ ನೋಡಲು ಆಗುತ್ತಿರಲಿಲ್ಲ. ಧ್ವನಿ ಮಾತ್ರ ಕೇಳುತ್ತಿತ್ತಂತೆ. ವ್ಯಕ್ತಿಗಳು ಕಾಣುತ್ತಿರಲಿಲ್ಲವಂತೆ. ಮಧ್ಯರಾತ್ರಿಯಲ್ಲಿ ಧೈರ್ಯದಿಂದ ಪರೀಕ್ಷಿಸಲು ಜನ ಹೆದರುತ್ತಿದ್ದರಂತೆ. ಬೆಂಗಳೂರು ದೊಡ್ಡಬಸವಣ್ಣನ ದೇವಾಲಯಕ್ಕೂ ಗವಿಗಂಗಾಧರ ದೇವಾಲಯಕ್ಕೂ ನಡುವೆ ಸುರಂಗ ಮಾರ್ಗವಿತ್ತೆಂದೂ ಅದನ್ನು ಬೆಂಗಳೂರು ಕೆಂಪೇಗೌಡ ನಿರ್ಮಿಸಿದನೆಂದು ಹೇಳುತ್ತಾರೆ. ಗವಿಗಂಗಾಧರ ದೇವಾಲಯಕ್ಕೂ ಶಿವಗಂಗೆ ಬೆಟ್ಟಕ್ಕೂ ಮಾಗಡಿ ರಸ್ತೆಗೆ ಹೊಂದಿಕೊಂಡಂತೆ ಸುರಂಗ ಮಾರ್ಗ ಇತ್ತಂತೆ. ಈ ಗುಪ್ತಮಾರ್ಗವನ್ನು ಸೈನಿಕರು ಬಳಸುತ್ತಿದ್ದರಂತೆ. ದೊಡ್ಡ ಬಸವಣ್ಣನ ದೇವಾಲಯದ ಹಿಂಬದಿಯಲ್ಲಿ ಒಂದು ಕಲ್ಲಿನ ಚಕ್ರದ ಗುರುತಿದೆ. ಇಲ್ಲಿ ಕೆಂಪೇಗೌಡ ಬಚ್ಚಿಟ್ಟಿರುವ ನಿಧಿಯಿದೆಯೆಂದು ಸ್ಥಳೀಯರು ಹೇಳುತ್ತಾರೆ.
ದೊಡ್ಡ ಬಸವಣ್ಣ
ಕೆಂಪೇಗೌಡ ಗವಿಗಂಗಾಧರೇಶ್ವರ ದೇವಾಲಯ ಕಟ್ಟಿಸಿದ ಮೇಲೆ, ಒಂದು ದಿನ ಕನಸಿನಲ್ಲಿ ಬಸವಣ್ಣ ಕಾಣಿಸಿಕೊಂಡು, ತಾನು ಗವಿಗಂಗಾಧರೇಶ್ವರನ ಬಳಿ ಇರಲು ಬಯಸುವುದಾಗಿಯೂ ನನಗಾಗಿ ದೊಡ್ಡ ದೇವಸ್ಥಾನವನ್ನು ಕಟ್ಟಿಸಬೇಕೆಂದೂ ತಿಳಿಸಿದನು. ಅದರಂತೆ ಕೆಂಪೇಗೌಡನು ದೊಡ್ಡ ಬಸವಣ್ಣನ ಮೂರ್ತಿಯನ್ನು ಕೆತ್ತಿಸಿ ಶುಭಮುಹೂರ್ತದಲ್ಲಿ ಪ್ರತಿಷ್ಠಾಪಿಸಿದನು. ಅದಕ್ಕೆ ದೊಡ್ಡ ದೇವಾಲಯವನ್ನೂ ಕಟ್ಟಿಸಿದನು. ಪೂಜೆ ಉತ್ಸವಕ್ಕೆ ಶಾಸ್ತ್ರೋಕ್ತವಾಗಿ ವ್ಯವಸ್ಥೆ ಮಾಡಿದನು. ಈ ವಿಷಯ ಪ್ರ.ವ.೧೮೦೦ರ ಬಖೈರಿನಲ್ಲಿ ಉಲ್ಲೇಖವಾಗಿದೆ.
ಹಿರಿಯ ಕೆಂಪೇಗೌಡನಿಗೂ ಬೆಂಗಳೂರು ದೊಡ್ಡ ಬಸವಣ್ಣ ಸ್ಥಾಪನೆಗೂ ಸಂಬಂಧಿಸಿದಂತೆ ನಾನಾ ರೀತಿಯ ಐತಿಹ್ಯಗಳು ಹುಟ್ಟಿಕೊಂಡಿವೆ. ಹಿರಿಯ ಕೆಂಪೇಗೌಡ ವಿಜಯನಗರದ ವಿಚಾರಣೆಯಿಂದ ಹಿಂದಿರುಗಿದ ಮೇಲೆ ಪ್ರ.ವ.ಸುಮಾರು ೧೫೬೫ರಲ್ಲಿ ನಗರ ಪರಿವೀಕ್ಷಣೆಗಾಗಿ ಬಸವನ ಗುಡಿ ಪ್ರದೇಶಕ್ಕೆ ಬಂದನಂತೆ. ಅಲ್ಲೊಂದು ಬಂಡೆ ಸಾಕ್ಷಾತ್ ಬಸವಣ್ಣನಂತೆ ಕಂಡಿತಂತೆ. ಅದರಲ್ಲಿ ಬಸವಣ್ಣನ ವಿಗ್ರಹವನ್ನು ಕೆತ್ತಿಸಿ ಪೂಜೆಗೆ ಅವಕಾಶ ಕಲ್ಪಿಸಿದನಂತೆ. ಆ ಬೃಹತ್ ನಂದಿವಿಗ್ರಹ ಸುಪ್ರಸಿದ್ಧವಾಗಿದೆ. ಅದಕ್ಕೆ ಸಂಬಂಧಿಸಿದಂತೆ ಕೆಲವು ಜನಪದ ಕಥೆಗಳು ಹುಟ್ಟಿಕೊಂಡಿವೆ.
ಹಿಂದೆ ಅದು ಕಡಲೆಕಾಯಿ ಬೆಳೆಯುವ ಪ್ರದೇಶವಾಗಿತ್ತು. ಪ್ರತಿರಾತ್ರಿ ಒಂದು ಬಸವ ಬಂದು ರೈತರು ಬೆಳೆದ ಫಸಲನ್ನು ತಿಂದು ನಷ್ಟಮಾಡುತ್ತಿತ್ತು. ರೈತರು ರಾಜ ಕೆಂಪೇಗೌಡನಿಗೆ ದೂರುಕೊಟ್ಟು ತಮ್ಮ ಕಷ್ಟವನ್ನು ಪರಿಹರಿಸಬೇಕೆಂದು ಪ್ರಾರ್ಥಿಸಿಕೊಂಡರು. ಆಗ ಕೆಂಪೇಗೌಡ ಬಸವನ ವಿಗ್ರಹವನ್ನು ಕೆತ್ತಿಸಿ ಕಡಲೆಕಾಯಿಯನ್ನು ನೇವೈದ್ಯಕ್ಕೆ ಇಟ್ಟು ಪೂಜೆಸಲ್ಲಿಸಿದ. ಆ ನಂತರ ಬಸವ ಬಂದು ಬೆಳೆ ತಿಂದು ನಷ್ಟ ಮಾಡುವುದು ತಪ್ಪಿತು ಎಂಬುದೊಂದು ಕಥೆ.
ಬೃಹತ್ ನಂದಿವಿಗ್ರಹ ದಿನದಿನಕ್ಕೆ ಬೆಳೆಯುತ್ತಿತ್ತಂತೆ. ಇದರಿಂದ ಗಾಬರಿಗೊಂಡ ಅರ್ಚಕರು ಕೆಂಪೇಗೌಡನಲ್ಲಿ ವಿಷಯ ಪ್ರಸ್ತಾಪಿಸಿದರು. ಕೆಂಪೇಗೌಡ ಬಂದು ವಿಶೇಷ ಪೂಜೆ ಸಲ್ಲಿಸಿ ಇನ್ನು ಮುಂದೆ ಬೆಳೆಯಬಾರದು ಎಂದು ಪ್ರಾರ್ಥಿಸಿಕೊಂಡ. ಬಸವನ ಬೆಳವಣಿಗೆ ನಿಂತಿತು. ಇದು ಮತ್ತೊಂದು ಕಥೆ.
ದೊಡ್ಡ ಬಸವಣ್ಣನ ತೃಪ್ತಿಗಾಗಿ ಪ್ರತಿವರ್ಷವೂ ಕಡಲೆಕಾಯಿ ಪರಿಷೆ ನಡೆಯಲು ಕೆಂಪೇಗೌಡ ಏರ್ಪಾಡು ಮಾಡಿದ. ಹಬ್ಬದಂತೆ ಅದು ಈಗಲೂ ನಡೆಯುತ್ತಿದೆ. ಕಡಲೆಕಾಯಿ ಬೆಳೆಯುವ ರೈತರಿಗೆ, ಮಾರಾಟಗಾರರಿಗೆ ಮಾರುಕಟ್ಟೆಯೂ ಲಭ್ಯವಾಗಿದೆ.
ದೊಡ್ಡ ಬಸವಣ್ಣನ ದೇವಾಲಯದ ಮುಂದೆ ಎತ್ತರವಾದ ಕಲ್ಲಿನ ಕಂಬವಿದೆ. ಆ ಕಂಬದ ಮೇಲೆ ಗಡ್ಡದ ವ್ಯಕ್ತಿಯ ಚಿತ್ರವಿದೆ. ಅದು ಹಿರಿಯ ಕೆಂಪೇಗೌಡನ ಚಿತ್ರವೆಂದು ಸ್ಥಳದ ಹಿರಿಯರು ಹೇಳುತ್ತಾರೆ.
ದೊಡ್ಡ ಬಸವನ ಗುಡಿಯ ಮುಂದೆ ಕಣ್ಣಪ್ಪನ ಆಲಯವಿದೆ. ಇದನ್ನು ಹಿರಿಯ ಕೆಂಪೇಗೌಡನ ಕಾಲದ ಕೋಟೆ ಗೋಪುರದ ಕಾವಲುಗಾರ ಗುಜ್ಜಲಿ ಓಬನಾಯ್ಕ ನಿರ್ಮಿಸಿದನಂತೆ.
ಕೆಂಪೇಗೌಡನ ವಂಶಸ್ಥರು ಬೆಂಗಳೂರು ಗವಿಗಂಗಾಧರೇಶ್ವರ ದೇವಾಲಯದಿಂದ ಶಿವಗಂಗೆ ಬೆಟ್ಟದವರೆಗೆ ಸುರಂಗಮಾಡಿ, ಸ್ವರಕ್ಷಣೆ ಮಾಡಿಕೊಂಡು, ಸಮರ್ಥವಾಗಿ ರಾಜ್ಯಭಾರ ಮಾಡಿದರೆಂದು ಗುರುಸಿದ್ಧ ನಂಜೇಶನ ಕುಕುದ್ಗಿರಿ ಮಹಾತ್ಮೆ ಷಟ್ಪದಿ ಕಾವ್ಯದಲ್ಲಿ ಹೇಳಿದೆ.
ಕೆಂಪೇಗೌಡನ ಪೂರ್ವಿಕರು ಕಾಲಭೈರೇಶ್ವರನ ಆರಾಧಕರು. ಉಗ್ರ ಪೂಜಾಪದ್ಧತಿಯ ನಂಬಿಕಸ್ಥರು. ವಿಚಾರಮತಿ ಕೆಂಪೇಗೌಡನಿಗೆ ಭೈರವ ಮತ್ತು ಈಶ್ವರ ಎರಡೂ ಒಂದೇ ಎನ್ನುವುದು ಮನವರಿಕೆಯಾಯಿತು. ತಾಮಸ ಆರಾಧನೆಯಿಂದ ಅವನ ಮನಸ್ಸು ಸಾತ್ವಿಕ ಆರಾಧನೆಯತ್ತ ಒಲಿಯಿತು. ಅಂದಿನಿಂದ ಅವನು ಈಶ್ವರನ ಪೂಜೆಗೆ ತೊಡಗಿದ. ಹಣೆಯ ಮೇಲೆ ವಿಭೂತಿಧರಿಸಲು ಪ್ರಾರಂಭಿಸಿದ.ಹೆಂಡತಿ ಮಕ್ಕಳು ಸೋದರರು ಬಂಧುಗಳು ಅರಮನೆಯ ಪರಿವಾರದವರು ಪ್ರಜೆಗಳು ರಾಜನನ್ನು ಅನುಸರಿಸಿದರು. ರಾಜ ಕೆಂಪೇಗೌಡನನ್ನು ಶಿವಭಕ್ತ ಎಂದೇ ಪ್ರಜೆಗಳು ಭಾವಿಸಿದ್ದರು.
(ಮುಂದುವರೆಯುವುದು)

ವೀರವನಿತೆ ಝಾನ್ಸಿರಾಣಿ ಲಕ್ಷ್ಮೀಬಾಯಿ


ಭಾರತ ಇತಿಹಾಸದಲ್ಲಿ ವೀರ ವನಿತೆಯರು ಬೆರಳೆಣಿಕೆಯಷ್ಟಿದ್ದರೂ ತಮ್ಮದೇ ಅನನ್ಯತೆಯ ರಾಷ್ಟ್ರಪ್ರೇಮ, ಸಾಹಸದಲ್ಲಿ ಕೆಚ್ಚೆದೆಯಿಂದ ಬಲಿದಾನಗೈದು ದೇಶವೇ ಹೆಮ್ಮೆ ಪಡುವಂತಹ ದಿಟ್ಟತನ ಮೆರೆದಿದ್ದಾರೆ. ಅಂಥವರ ಸಾಲಿನಲ್ಲಿ ಝಾನ್ಸಿಯ ರಾಣಿ ಲಕ್ಷ್ಮೀಬಾಯಿ ಅನುಪಮ ಧೀರ ಮಹಿಳಾಮಣಿ.
ಮಹಾರಾಷ್ಟ್ರದ ಎರಡನೆಯ ಪೇಶ್ವೆ ಬಾಜಿರಾಯ್ ಕೊನೆಯವನಾಗಿ ಆ ನಾಡನ್ನು ಆಳಿದವನು. ೧೮೧೮ರಲ್ಲಿ ಇಂಗ್ಲೀಷರು ಈತನನ್ನು ಪೇಶ್ವೆಯ ಪದವಿಯಿಂದ ಕಿತ್ತು ಹಾಕಿ ವರ್ಷಕ್ಕೆ ಎಂಟು ಪಕ್ಷ ರೂಪಾಯಿ ಉಂಬಳಿ ನೀಡಿ, ಗ್ರಾಮವೊಂದನ್ನು ಜಹಗೀರಾಗಿ ಇತ್ತರು.
ಈತನ ತಮ್ಮ ಚಿಮಾಜಿ ಅಪ್ಪಾ ಕಾಶಿಗೆ ಹೋಗುವಾಗ ಚಿಮಾಜಿ ಧೋರೋಪಂತ ಎಂಬ ಸಹಾಯಕನನ್ನು ಸಂಸಾರ ಸಹಿತ ಜತೆಗೆ ಕರೆದೊಯ್ದರು. ಈ ಧೋರೋಪಂತನ ಪತ್ನಿ ಭಾಗೀರಥಿಬಾಯಿ ೧೮೩೫ರ ನವೆಂಬರ್ ೧೯ರಂದು. ಒಂದು ಸುಂದರ ಹೆಣ್ಣುಮಗುವಿಗೆ ಜನ್ಮವಿತ್ತಳು. ಮಗುವಿಗೆ ಮನೂಬಾಯಿ ಎಂದು ಹೆಸರಿಟ್ಟರು. ಮಗುವಿಗೆ ನಾಲ್ಕು ವರ್ಷ ತುಂಬುವ ವೇಳೆಗೆ ಬಾಗೀರಥಿಬಾಯಿ ಮರಣ ಹೊಂದಿದಳು. ಚಿಮಾಜಿ ಅಪ್ಪಾ ಕೂಡ ಸ್ವರ್ಗಸ್ಥನಾದ. ಧೋರೋಪಂತನ ಅಸಹಾಯಕ ಸ್ಥಿತಿಯಲ್ಲಿ ಬಾಜೀರಾಯ ಆತನನ್ನು ಹಿಂದಿರುಗಿ ಬಿಡೋರಿಗೆ ಕರೆಸಿಕೊಂಡ.
ಬಾಜಿರಾಯನಿಗೆ ಮಕ್ಕಳಿರದ ಕಾರಣ ನಾನಾ ದೊಂಡೊಪಂತ್ ಎಂಬ ಬಾಲಕನನ್ನು ದತ್ತು ಪಡೆದ. ನಾನು ತಮ್ಮಂದಿರೊಡನೆ ಬೆಳೆಯುತ್ತಿರಲು ಮನೂಬಾಯಿ ಸಹ ಅವರೊಡನೆ ಬೆಳೆದಳು. ಶಿಕ್ಷಣದ ಜೊತೆಗೆ ಯುದ್ಧ, ವಿದ್ಯೆ, ಕುಸ್ತಿ, ಕತ್ತಿವರಸೆ, ಕುದುರೆ ಸವಾರಿ, ಬಂದೂಕಿನ ಗುರಿ ಸಾಧಿಸುವುದನ್ನು ಎಲ್ಲರೂ ಒಟ್ಟಿಗೆ ಕಲಿತರು.
ಮನೂಭಾಯಿ ಛಲಗಾತಿ, ಬುದ್ಧಿವಂತೆ, ಕುದುರೆ ಸವಾರಿ ಅವಳ ಪ್ರೀತಿಯ ಹವ್ಯಾಸ. ಗುರುಗಳು ಯುದ್ಧ ಕಲೆಯ ಜೊತೆಗೆ ಎರಡೂ ಕೈಗಳಲ್ಲಿ ಕತ್ತಿ ಹಿಡಿದು ಹೋರಾಡುವುದನ್ನು ಕಲಿಸಿದರು. ವೀರವನಿತೆಯಾಗಿ ರೂಪುಗೊಂಡ ದಿಟ್ಟ ಹುಡುಗಿ. ಚೆಲುವೆ, ಸಂಸ್ಕೃತ, ಹಿಂದಿ ಭಾಷೆಗಳಲ್ಲಿ ಪರಿಣತಿ ಪಡೆದಳು. ವೀರಶೂರ ಶಿವಾಜಿ, ರಾಣಾ ಪ್ರತಾಪ ಸಿಂಹ, ಅರ್ಜುನ, ಭೀಮ, ಮುಂತಾದ ಪೌರಾಣಿಕ ವೀರರ ಕಥೆಗಳನ್ನು ಓದಿ ಸ್ಪೂರ್ತಿ ಪಡೆದಳು.
ಹನ್ನೆರಡರ ಬಾಲೆಗೆ ವಿವಾಹ ಮಾಡುವ ಚಿಂತೆ ಧೋರೋಪಂತನಿಗೆ ಹೆಚ್ಚಿತ್ತು. ಬ್ರಾಹ್ಮಣ ಹೆಣ್ಣು ಮಕ್ಕಳಿಗೆ ಹನ್ನೆರಡು ತುಂಬುವ ವೇಳೆಗೆ ವಿವಾಹ ಮಾಡದಿದ್ದರೆ ಬಹಿಷ್ಕಾರ ಹಾಕುತ್ತಿದ್ದ ವ್ಯವಸ್ಥೆಯಿತ್ತು. ಇದೇ ವೇಳೆಗೆ ಝಾನ್ಸಿಯಿಂದ ದೀಕ್ಷಿತಶಾಸ್ತ್ರ ಎಂಬ ಬ್ರಾಹ್ಮಣ ಜ್ಯೋತಿಷ್ಯ ಬಿಡೋರಿಗೆ ಬಂದರು. ಮನುವಿನ ಜಾತಕ ನೋಡಿ ಈಕೆಗೆ ಮಹಾರಾಣಿಯಾಗುವ ಯೋಗವಿದೆ ಎಂದು ಭವಿಷ್ಯ ನುಡಿದರು. ಅವರು ಝಾನ್ಸಿಯ ರಾಜ ಗಂಗಾಧರರಾವ್‌ಗೆ ಮೊದಲ ಪತ್ನಿ ತೀರಿಕೊಂಡ ಕಾರಣ ಮರುಮದುವೆಗೆ ಕನ್ಯೆ ನೋಡಲು ಬಂದಿದ್ದ ವಿಷಯವನ್ನು ಏಕಾಂತದಲ್ಲಿ ಬಾಜಿರಾಯ ಹಾಗೂ ಧೋರೋಪಂತರಿಗೆ ತಿಳಿಸಿ, ಮನುವಿನ ಹೆಸರು ಪ್ರಸ್ತಾಪಿಸಲು ಅನುಮತಿ ಪಡೆದು ಹಿಂದಿರುಗಿ ಝಾನ್ಸಿಗೆ ಬಂದು ವಿಷಯ ತಿಳಿಸಿದರು. ಪರಿಣಾಮ ಹದಿಮೂರರ ಬಾಲೆ ಝಾನ್ಸಿಯ ನಲವತ್ತೇಳು ವರ್ಷದ ಗಂಗಾಧರರಾವ್‌ನ ಪತ್ನಿಯೇ ’ಲಕ್ಷ್ಮೀಬಾಯಿ’ ಎಂಬ ಹೆಸರು ಪಡೆದಳು.
ಝಾನ್ಸಿ ಸಂಸ್ಥಾನವು ಬುಂದೇಲ್‌ಖಂಡ ಎಂಬ ಹೆಸರಿನ ಪ್ರದೇಶಗಳಿಂದ ಕೂಡಿ ಝಾನ್ಸಿ ರಾಜಧಾನಿಯಾಗಿತ್ತು. ಝಾನ್ಸಿ ಸಿಂಹಾಸನಕ್ಕಾಗಿ ವಿವಾದ ಉಂಟಾದಾಗ ಇಂಗ್ಲೀಷರು ನವಾಬ ಆಲಿಗೆ ದೊಡ್ಡ ಜಹಗೀರು ನೀಡಿ ಸಮಾಧಾನ ಪಡಿಸಿ ಗಂಗಾಧರರಾಯನಿಗೆ ಝಾನ್ಸಿ ರಾಜ್ಯ ದೊರಕಿಸಿ ಕೊಟ್ಟ ಫಲವಾಗಿ ಮೂರು ಲಕ್ಷ ರೂಪಾಯಿ, ಒಂದಷ್ಟು ಜಮೀನು ಪಡೆದು ಝಾನ್ಸಿಯಲ್ಲಿ ತಮ್ಮ ಸೈನ್ಯ ಇರಿಸಿದ್ದರು. ಲಕ್ಷ್ಮೀಬಾಯಿ ರಾಣಿಯಾದ ಮೇಲೆ ಕೋಟೆಯೊಳಗೆ ಸ್ತ್ರೀಸೈನ್ಯ ಕಟ್ಟಿದಳು. ಆನೆ, ಕುದುರೆಗಳ ಸಂಗ್ರಹ ಮಾಡಿ ಸೇನಾಬಲ ಹೆಚ್ಚಿಸಿಕೊಂಡು ಸಶಕ್ತರಾಗಿ ರಾಜ್ಯ ನಡೆಸಿದರು. ಲಕ್ಷ್ಮೀಯ ಹದಿನಾರನೇ ವಯಸ್ಸಿಗೆ ಪುತ್ರನನ್ನು ಪಡೆದರೂ ಅಕಾಲ ಮರಣಕ್ಕಾಗಿ ಪುತ್ರಶೋಕ ಅನುಭವಿಸಬೇಕಾಯಿತು. ಗಂಗಾಧರರಾವ್ ಶೋಕಗ್ರಸ್ತನಾಗಿ ಅನಾರೋಗ್ಯ ಹೊಂದಲು ಬಂಧುಗಳ ಪುತ್ರ ಆನಂದರಾವ್ ಎಂಬ ಬಾಲಕನನ್ನು ದತ್ತು ಪಡೆಯಲು ಇಚ್ಚಿಸಿ ೧೮೫೩ರಲ್ಲಿ ದತ್ತು ಸ್ವೀಕಾರ ಮಾಡಿ ’ದಾಮೋದರರಾವ್ ಎಂದು ಹೆಸರಿಟ್ಟರು. ಈಸ್ಟ್ ಇಂಡಿಯಾ ಕಂಪೆನಿಗೆ ಪತ್ರ ಬರೆದು ದತ್ತು ವಿಷಯ ತಿಳಿಸಿ ತನ್ನ ಸಾವಿನ ನಂತರ ಲಕ್ಷ್ಮೀಬಾಯಿ ರಾಜ್ಯಕ್ಕೆ ಪಾಲಕಳಾಗಿ, ದಾಮೋದರರಾಯನು ದೊಡ್ಡವನಾದಾಗ ರಾಜನಾಗಲು ವ್ಯವಸ್ಥೆ ಮಾಡಬೇಕೆಂದು ಪ್ರಾರ್ಥಿಸಿದ್ದನು. ಉತ್ತರ ಬರುವ ವೇಳೆಗೆ ಇಹಲೋಕ ತ್ಯಜಿಸಿದ್ದನು.
ಆ ವೇಳೆಗಾಗಲೇ ಈಸ್ಟ್ ಇಂಡಿಯಾ ಕಂಪೆನಿ ಭಾರತದ ಹಲವಾರು ರಾಜ್ಯಗಳನ್ನು ಮೋಸದಿಂದ ತನ್ನ ವಶಪಡಿಸಿಕೊಂಡು ರಾಜ್ಯ ವಿಸ್ತರಿಸಿ ಮತ ಪ್ರಚಾರ ಮಾಡತೊಡಗಿತ್ತು. ಇಂಗ್ಲೀಷರ ವರ್ತನೆಯಿಂದ ಅಲ್ಲಿನ ಜನರು ರೋಸಿಹೋಗಿದ್ದರು. ಮಹಾರಾಷ್ಟ್ರದ ನಾನಾ ಢೋಂಢೋಪಂತ, ಆತನ ಸ್ನೇಹಿತ ತಾಂತ್ಯಾಟೋಪ್ ಸಹ ಇಂಗ್ಲೀಷರ ವಿರುದ್ಧ ಬಂಡೇಳಲು ಹವಣಿಸಿದ್ದರು. ಬ್ರಿಟಿಷರ ಪ್ರಧಾನ ಅಧಿಕಾರಿ ಡಾಲ್‌ಹೌಸಿ ಕೈಕೆಳಗಿನ ಅಧಿಕಾರಿಯ ಕುಟುಬುದ್ಧಿಯಿಂದ ಮನವಿ ಪತ್ರವನ್ನು ತಿರಸ್ಕರಿಸಿ ರಾಣಿ ಲಕ್ಷ್ಮೀಬಾಯಿ ಕೋಟೆ ಹೊರಗೆ ಅರಮನೆಯಲ್ಲಿರಬೇಕು. ಇಂಗ್ಲೀಷರು ಐದು ಸಾವಿರ ರಾಜಧನ ಕೊಡುವುದನ್ನು ಪಡೆದು ರಾಜ್ಯವನ್ನು ಬ್ರಿಟಿಷರಿಗೆ ಒಪ್ಪಿಸಬೇಕು ಎಂದು ಆದೇಶ ಉತ್ತರ ಕಳುಹಿಸಿ ತಡಮಾಡದೆ ವಶಪಡಿಸಿಕೊಂಡು ಇಂಗ್ಲೀಷರ ಅಧೀನದಲ್ಲಿದೆ ಎಂದು ಘೋಷಿಸುತ್ತಾನೆ.
ಸ್ವಾತಂತ್ರ್ಯ ಕಳೆದುಕೊಂಡ ರಾಣಿ ಕೋಟೆಯ ಹೊರಗೆ ಉಳಿಯಬೇಕಾಯಿತು. ಇಂಗ್ಲೀಷರ ಅಧಿಕಾರದಲ್ಲಿ ಕೋರ್ಟುಗಳು, ಜಮೀನುಗಳನ್ನು ವಶಪಡಿಸಿಕೊಳ್ಳುವುದು. ಗೋಹತ್ಯೆ ಆರಂಭವಾಗಿ ಜನರು ಉಸಿರು ಕಟ್ಟುವ ವಾತಾವರಣದ ಹಿಂಸೆಗೆ ಒಳಗಾದರು. ರಾಣಿಯ ಮೊರೆ ಹೋದರು. ರಾಣಿ ಅವಸರ ಮಾಡದೆ ಸೈನ್ಯಬಲ ಹೆಚ್ಚಿಸಿಕೊಂಡು ಎದುರುಬೀಳೋಣ. ಅಲ್ಲಿಯವರೆಗೆ ತಾಳ್ಮೆಯಿಂದಿರಿ ಎಂದು ಸಮಾಧಾನ ಪಡಿಸಿದಳು. ರಾಣಿಯ ಪರವಾಗಿ ಹೋರಾಡಲು ರಜಪೂತ ವೀರರು, ಬೆಂಬಲ ಸೂಚಿಸಿದರು. ರಾಣಿ ಸ್ತ್ರೀ ಸೈನ್ಯ ಜಮಾಯಿಸಿ ತರಬೇತಿ ನೀಡತೊಡಗಿದರು. ಹೆಂಗಸರಿಗೆ ಕತ್ತಿವರಸೆ, ಕುದುರೆಸವಾರಿ, ಬಂದೂಕು ಪ್ರಯೋಗ ಕಲಿಸಿದರು. ತನ್ನ ಪೋಷಾಕನ್ನು ವೀರಯೋಧರಂತೆ ತರಿಸಿ ತಲೆಗೆ ಉಕ್ಕಾನ ಶಿರಸ್ತ್ರಾಣ, ಕುಪ್ಪಸದ ಮೇಲೆ ಬಿಗಿ ಕವಚ, ಪೈಜಾಮ ಧರಿಸಿ, ಸೊಂಟಕ್ಕೆ ಬಿಗಿಯಾದ ಪಟ್ಟಿ ಎರಡೂ ಪಕ್ಕಗಳಲ್ಲಿ ಪಿಸ್ತೂಲುಗಳನ್ನು ಸಿಕ್ಕಿಸಿ, ಸೊಂಟದ ಎಡ-ಬಲಗಳಲ್ಲಿ ಎರಡು ಕತ್ತಿಗಳನ್ನು ನೇತು ಹಾಕಿಕೊಂಡು ಕುದುರೆ ಏರಿ ವೇಗವಾಗಿ ಓಡಿಸುತ್ತಾ ಎರಡೂ ಕೈಗಳಲ್ಲಿ ಭಲ್ಲೆ, ಕತ್ತಿಗಳನ್ನು ಹಿಡಿದು ವಿವಿಧ ರೀತಿ ಖಡ್ಗಚಾಲನೆ ಮಾಡುವ ಪರಿಣತಿ ಸಾಧಿಸಿದ್ದಳು. ಇಂಗ್ಲೀಷರ ಬಳಿ ಗುಪ್ತಚಾರರನ್ನು ಅಲ್ಲಿಗೆ ಕಳುಹಿಸಿ ಕೋಟೆಯೊಳಗಿನ ವಿದ್ಯಮಾನಗಳನ್ನು ತಿಳಿದುಕೊಳ್ಳುತ್ತಿದ್ದರು.
ರಾಣಿಗೆ ಕಾಶಿಗೆ ಹೋಗಲು ಬ್ರಿಟಿಷರು ಅನುಮತಿ ನೀಡಲಿಲ್ಲ. ದತ್ತು ಪುತ್ರ ದಾಮೋದರನಿಗೆ ಏಳನೇ ವರ್ಷಕ್ಕೆ ಉಪನಯನ ಮಾಡಲು ಆರು ಲಕ್ಷ ರೂ.ಗಳಲ್ಲಿ ಒಂದು ಲಕ್ಷ ರೂ.ಗಳನ್ನು ಖರ್ಚಿಗಾಗಿ ಕೊಡಲು ಡಾಲ್ ಹೌಸ್‌ಗೆ ರಾಣಿ ಮನವಿ ಕಳುಹಿಸಿದಾಗ, ಝಾನ್ಸಿಯ ನಾಲ್ವರು ಪ್ರತಿಷ್ಠಿತರು ಜಾಮೀನು ನೀಡಬೇಕೆಂದು ಷರತ್ತು ಇಟ್ಟಿದ್ದರು. ರಾಣಿ ಸಿಟ್ಟಾದರೂ ವಿಧಿಯಿಲ್ಲದೆ ಅದರಂತೆ ಹಣ ಪಡೆಯಬೇಕಾಯಿತು. ಉಪನಯನದ ನೆಪದಲ್ಲಿ ಪ್ರಮುಖ ನಾಯಕರೊಂದಿಗೆ ಸಮಾಲೋಚಿಸಿದರು. ಸಂತಾನವಿಲ್ಲದ ಸಂಸ್ಥಾನಗಳನ್ನು ಆಡಳಿತಕ್ಕೆ ವಿಲೀನಗೊಳಿಸಿಕೊಳ್ಳುವ ಬ್ರಿಟಿಷರ ಬಗ್ಗೆ ಹಲವು ಸಂಸ್ಥಾನಗಳು ಅಸಮಾಧಾನ, ಬಂದೂಕುಗಳಿಗೆ ಹಸುವಿನ, ಹಂದಿಯ ಮಾಂಸದ ಕೊಬ್ಬನ್ನು ಸವರಿ ಅದನ್ನು ಬಾಯಿಂದ ಕಚ್ಚಿ ತೆಗೆದು ಉಪಯೋಗಿಸುವ ಬಲವಂತದ ರೀತಿ ಹಿಂದೂ ಸಿಪಾಯಿಗಳಿಗೆ ಮತಭ್ರಷ್ಠರನ್ನಾಗಿಸುವ ತಂತ್ರವೆಂದು ಹಿಂದು, ಮುಸ್ಲಿಂ ಸಿಪಾಯಿಗಳು ರೊಚ್ಚಿಗೆದ್ದರು.
೧೮೫೭ರಲ್ಲಿ ಇಂಗ್ಲೀಷರ ವಿರುದ್ಧ ಪ್ರತಿಭಟನೆ ನಡೆಸಿ ಸೈನ್ಯದ ತುಕಡಿಗಳಲ್ಲಿ ತಾವಾಗಿಯೇ ದಂಗೆಗೆ ಜನರೊಡನೆ ಸೇರಿ ಬ್ರಿಟಿಷರನ್ನು ದೇಶದಿಂದ ಹೊಡೆದಟ್ಟಲು, ಸ್ವರಾಜ್ಯ ಸ್ಥಾಪಿಸಲು ಸಮರ ಸಾರಿದರು. ೧೮೫೭ ಜೂನ್ ೪ರಂದು ಝಾನ್ಸಿಯಲ್ಲಿ ಸಿಪಾಯಿ ದಂಗೆ ಪ್ರತಿಭಟನೆ ಆರಂಭವಾಯಿತು. ಕೋಟೆಯ ಖಜಾನೆ ಸಿಪಾಯಿಗಳ ವಶದಲ್ಲಿತ್ತು. ಇಂಗ್ಲೀಷ್ ಅಧಿಕಾರಿಗಳು ಕೊಲ್ಲಲ್ಪಟ್ಟರು. ಇಂಗ್ಲೀಷರು ತಲೆಮರೆಸಿಕೊಳ್ಳಲು ವಿಧಿಯಿಲ್ಲದೆ ಸಿಕ್ಕಿದೆಡೆ ಓಡಿದರೂ ಬಿಡದೆ ಗುಂಡು ಮಳೆಗೆರೆದರು. ರಾಣಿಯ ನೆರವು ಕೋರಲು ಬ್ರಿಟಿಷರು ಯತ್ನಿಸಿದರೂ ಆಕ್ರಮಣಕಾರರು ಅವಕಾಶ ನೀಡಲಿಲ್ಲ. ಕಡೆಗೆ ಬ್ರಿಟಿಷರ ಹೆಂಗಸರು, ಮಕ್ಕಳಿಗೆ ರಾಣಿ ಮಾನವೀಯ ದೃಷ್ಟಿಯಿಂದ ಆಶ್ರಯ ನೀಡಿದ ಉದಾರತೆ ಹಿರಿದು.
ಝಾನ್ಸಿಯಲ್ಲಿದ್ದ ಎಲ್ಲಾ ಇಂಗ್ಲೀಷ್ ಅಧಿಕಾರಿಗಳು ಕೊಲ್ಲಲ್ಪಟ್ಟರು. ಬ್ರಿಟಿಷರು ರಾಣಿ ಸಹಕರಿಸಲಿಲ್ಲ ಎಂದು ಆಕೆಯಿಂದ ಒತ್ತಾಯಪಡಿಸಿ ಮೂರು ಲಕ್ಷ ರೂಪಾಯಿಗಳನ್ನು ಪಡೆಯಲು ಬೆಲೆಬಾಳುವ ಒಡವೆಗಳನ್ನಿತ್ತಳು. ಝಾನ್ಸಿಯಲ್ಲಿ ಆಂಗ್ಲರ ಆಡಳಿತ ಕೊನೆಗೊಂಡಿತು. ಲಕ್ಷ್ಮೀಬಾಯಿ ತಾನೇ ಅದರ ಪಾಲಕಳೆಂದು ಘೋಷಿಸಿ, ಬ್ರಿಟಿಷರಿಗೆ ತಿಳಿಸಿ ರಾಜ್ಯಭಾರ ಕೈಗೆತ್ತಿಕೊಂಡಳು. ಧೈರ್ಯ ಸಾಹಸದಿಂದ ರಾಜ್ಯ ರಕ್ಷಿಸುತ್ತಾ, ಇಂಗ್ಲೀಷರಿಗೆ ಆ ಬಗ್ಗೆ ತಿಳಿಸಿ ಸ್ನೇಹದಿಂದಲೇ ಇರತೊಡಗಿದಳು. ಸೈನ್ಯಬಲ ಹೆಚ್ಚಿಸಿ ತರಬೇತಿ ವ್ಯವಸ್ಥೆ ಮಾಡಿದಳು.
ಝಾನ್ಸಿ ಕೋಟೆ ಕಬಳಿಸಲು ಶತ್ರುಗಳು ದಾಳಿಗೆ ಸಿದ್ಧರಾದರು. ೧೮೫೭ರ ಜೂನ್ ೧೩ರಂದು ಕಠೋರ. ಕೋಟೆಗೆ ಸದಾಶಿವರಾಯನೆಂಬ ಮರಾಠ ಸಂಸ್ಥಾನಿಕ ಮುತ್ತಿಗೆ ಹಾಕಿ ವಶಪಡಿಸಿಕೊಂಡು ತಾನೇ ಝಾನ್ಸಿಗೆ ಒಡೆಯನೆಂದು ಪ್ರಚಾರ ಮಾಡಿದಾಗ ರಾಣಿ ಸಿಟ್ಟಾದಳು. ಬ್ರಿಟಿಷರ ನೆರವು ನಿರೀಕ್ಷೆ ಸುಳ್ಳಾಯಿತು. ಕಡೆಗೆ ತನ್ನ ಸೈನ್ಯದಿಂದಲೇ ಆಕ್ರಮಣ ನಡೆಸಿ ಸದಾಶಿವರಾಯನನ್ನು ಸದೆಬಡಿದು ಸೆರೆಯಲ್ಲಿಟ್ಟಳು. ಆ ನಂತರ ಓಚಾರ ಸಂಸ್ಥಾನದ ದಂಡನಾಯಕ ಸಥೇಬಾನ್ ಸಮರ ಸಾರಲು ರಾಣಿಯ ಸೈನ್ಯ ಕ್ಷೀಣಿಸಿತ್ತು. ಸೈನಿಕರೂ ಸಲಹೆಗಾರರು ಖಾನನ ಸೈನ್ಯ ಸಂಖ್ಯೆಗೆ ಹೆದರಿ ರಾಣಿಗೆ ಸಲಹೆ ನೀಡಿದರೂ, ಸಥೇಖಾನ್ ಸಂದೇಶದಲ್ಲಿ ’ಜೀವನಕ್ಕೆ ಹಣ ಕೊಡಲು’ ಸೂಚಿಸಿದಾಗ ಹೆಡೆ ತುಳಿದ ಸರ್ಪಿಣಿಯಂತಾದಳು.
ಲಕ್ಷ್ಮೀಬಾಯಿ ಆಪ್ತರನ್ನೂ, ಸೈನಿಕರನ್ನು ಕರೆಸಿ ಧೈರ್ಯ ತುಂಬಿದಳು. ತಾಯ್ನಾಡಿಗಾಗಿ ಕಡೇವರೆಗೂ ಹೋರಾಡಲು ಶಪಥ ತೊಟ್ಟರು. ಹೆಣ್ಣು ಹುಲಿಯಂತೆ ಎರಗಿದ ಲಕ್ಷ್ಮೀಬಾಯಿಯ ಶೌರ್ಯದಿಂದ ಸಥೇಖಾನನ ಸೇನೆ ತತ್ತರಿಸಿ ಹೋಯಿತು. ಖಾನ್ ಪಲಾಯನಗೈದ. ಸೈನ್ಯಬಲ ಎಲ್ಲಾ ದಿಕ್ಕಿನಲ್ಲೂ ಧೈರ್ಯದಿಂದ ಹೋರಾಡಿ ಜಯಗಳಿಸಿದ ರಾಣಿಯ ಸಾಹಸ, ಅವಳಿಗೆ ಪ್ರಜೆಗಳ ಬಗೆಗಿದ್ದ ಗೌರವ ಇಮ್ಮಡಿಸಿ ಉತ್ಸಾಹಗೊಂಡರು. ಸೇನೆಯ ಬಲ ಹೆಚ್ಚತೊಡಗಿತು. ರಾಣಿಯ ದಕ್ಷತೆ, ಎಲ್ಲರ ಮೆಚ್ಚುಗೆಗಳಿಸಿತು.
ಉತ್ತ ಭಾರತದ ರಾಜ್ಯಗಳಲ್ಲಿ ಬ್ರಿಟಿಷರು ಜಗಳವಾಡಿ ಯುದ್ಧಮಾಡಿ ರಾಜ್ಯಗಳನ್ನು ಕಬಳಿಸಿದ್ದರು. ಸರ್ ಹ್ಯೂರೋನ್ ಎಂಬ ಅಧಿಕಾರಿ ಝಾನ್ಸಿಯತ್ತ ಕಣ್ಣು ಹಾಕಿ, ರಾಣಿಗೆ ಬಂದು ಪತ್ರ ಕಳುಹಿಸಿ ’ಯಾವ ಶಸ್ತ್ರಗಳು ಇಲ್ಲದೆ ಬಂದು ಕಾಣಲು’ ತಿಳಿಸಿದ. ರಾಣಿ ಪತ್ರ ಓದಿ ಸಿಡಿದೆದ್ದಳು. ಲಕ್ಷ್ಮೀಬಾಯಿ ರಾಜ್ಯದ ಆತ್ಮೀಯರು ನಂಬಿಕಸ್ತ ಅಧಿಕಾರಿಗಳನ್ನು ಸೇರಿಸಿ ಧೃಢವಾಗಿ "ಏನೇ ಆದರೂ ಝಾನ್ಸಿ ನಮ್ಮದೆ’ ಎಂದು ಬ್ರಿಟಿಷರ ನಾಟಕಕ್ಕೆ ತೆರೆ ಎಳೆಯಲು ಪಣ ತೊಡಬೇಕೆಂದು ಹುರಿದುಂಬಿಸಿದಳು. ’ಪ್ರಾಣವಿರುವವರೆಗೂ ಹೋರಾಡಿ ನಾಡಿನ ಋಣ ತೀರಿಸಲು ಹೇಳಿದ ವೀರರಾಣಿಗೆ ಸೈನಿಕರು, ಜನರು ಜೈಕಾರ ಹಾಕಿದರು. ರಾಣಿ ಕೋಟೆಯನ್ನು ಭದ್ರಪಡಿಸಿದಳು. ಇಡೀ ಸೈನ್ಯಕ್ಕೆ ತಾನೇ ನಾಯಕಳಾಗಿ ಸಾವಿರಾರು ಸ್ತ್ರೀ ಸೈನಿಕರನ್ನು ಸೇರಿಸಿಕೊಂಡರು.
ಇಂಗ್ಲೀಷರು ೧೮೫೮ರ ಮಾರ್ಚ್ ೨೩ರಂದು ಝಾನ್ಸಿಗೆ ಮುತ್ತಿಗೆ ಹಾಕಿದರು. ಇಂಗ್ಲೀಷರು ಫಿರಂಗಿಗಳನ್ನು ಸಿದ್ಧಪಡಿಸಿ ಗುಂಡಿನ ಮಳೆಗೆರೆದಾಗ ಪ್ರತಿಯಾಗಿ ಝಾನ್ಸಿ ಕೋಟೆಯಿಂದ ಗುಂಡಿನ ಸುರಿಮಳೆ ಆಗಿ ಬ್ರಿಟಿಷರ ಸೈನ್ಯ ತತ್ತರಿಸಿತು. ಆದರೆ ಬೆಟ್ಟಗಳ ಸಂಧಿಯಲ್ಲಿ ಶಿಥಿಲವಾಗಿ ಬುರುಜುಗಳು ಮುರಿದು ಬಿದ್ದವು. ಝಾನ್ಸಿ ಸೈನಿಕ ಇಂಗ್ಲೀಷರ ಮತಿಗೆ ಮರುಳಾಗಿ ಒಳಹೋಗುವ ದಾರಿ ತಿಳಿಸಿಬಿಟ್ಟ. ಇದರಿಂದ ಅಸಂಖ್ಯಾತ ಫಿರಂಗಿಗಳನ್ನು ಹಾರಿಸಿದಾಗ ಸೈನಿಕರು ಗಾಯಗೊಂಡರು. ಮಾರ್ಚ್ ೩೧ರವರೆಗೆ ನಡೆದ ಹೋರಾಟದಲ್ಲಿ ರಾಣಿಯ ಬಹುಪಾಲು ಪಣಕ್ರಮಗಳು ಹಾನಿಗೀಡಾದರು. ಲಕ್ಷ್ಮೀಬಾಯಿ ಧೈರ್ಯಗೆಡದೆ ಎರಡೂ ಕೈಗಳಲ್ಲಿ ಕತ್ತಿ ಝಳಪಿಸುತ್ತ ಶತ್ರುಗಳ ರುಂಡಗಳನ್ನು ಚೆಂಡಾಡಿದಳು. ಹದಿನೆಂಟು ದಿನಗಳ ಯುದ್ಧದಲ್ಲಿ ಝಾನ್ಸಿ ನಗರದ ಸೈನ್ಯಬಲ ಕುಗ್ಗಿತು. ತಾಂತ್ಯಾಟೋಪಿಯ ನೆರವು ದೊರೆತು ಬ್ರಿಟಿಷರು ಅವರನ್ನು ಸೆರೆ ಹಿಡಿದಾಗ ರಾಣಿ ಧೈರ್ಯಗೆಡದೆ ಸೈನಿಕರಿಗೆ ಹುರುಪು ತುಂಬಿದಳು. ಹ್ಯೂರೋಸನ ರಣತಂತ್ರ ಫಲಿಸಿತ್ತು. ಕೋಟೆ ಗೋಡೆಗಳು ಕುಸರು ಕೋಟೆಯ ಒಂದು ಭಾಗವನ್ನು ವಶಪಡಿಸಿಕೊಂಡರು. ವಿಷಯ ತಿಳಿದ ರಾಣಿ ಸಿಂಹಿಣಿಯಂತೆ ವೈರಿಗಳನ್ನು ಕೊಚ್ಚಿಹಾಕುತ್ತಾ ಯುದ್ಧ ಮುನ್ನಡೆಸಿದಳು. ಆದರೆ ಬ್ರಿಟಿಷರ ಸೈನ್ಯ ವ್ಯವಸ್ಥೆ ಕಂಡು ರಾಣಿ ಯುದ್ಧ ಮಾಡುವುದು ಪ್ರಮಾದಕರವೆಂದು ಹಿಂದಿರುಗಿದಾಗ ಬ್ರಿಟಿಷ್ ಸೈನ್ಯ ಉತ್ಸಾಹದಿಂದ ಒಳನುಗ್ಗಿ ಬೆಂಕಿ ಹಚ್ಚಿ ಆನಂದ ಪಟ್ಟಿತು. ಅರಮನೆ ವೈರಿಗಳ ವಶವಾಯಿತು. ರಾಣಿಗೆ ಪ್ರಜೆಗಳ ಅಸಹಾಯಕತೆ ಕಂಡು ಕರುಳು ಕಿತ್ತು ಬಂದಂತಾಯಿತು. ತನ್ನ ಅಧಿಕಾರಿಗಳಿಗೆ ಓಡಿ ಹೋಗಿ ಪ್ರಾಣ ಉಳಿಸಿಕೊಳ್ಳಲು ಹೇಳಿದಳು. ಆಕೆಯನ್ನು ಬಿಟ್ಟು ಹೋಗಲು ಅವರು ಹಿಂಜರಿದರು. ಪೇಶ್ವೆ ಸೇನೆಯೊಂದಿಗೆ ಸೇರಿಕೊಳ್ಳಲು ಒಪ್ಪಿದರು. ರಾಣಿ ಪುರುಷ ವೇಷಧರಿಸಿ, ಬಾಲಕ ದಾಮೋದರನನ್ನು ಬೆನ್ನಿಗೆ ಕಟ್ಟಿಕೊಂಡು ಕತ್ತಲ ರಾತ್ರಿಯಲ್ಲಿ ಕುದುರೆಯೇರಿ ಪಾರಾದಳು. ಝಾನ್ಸಿ ಕೋಟೆ ಬ್ರಿಟಿಷರ ವಶವಾಯಿತು.
ರಾಣಿ ಖಾಂತೇರಾ ಗ್ರಾಮ ತಲುಪಿದಾಗ ಥ್ಯಾಕರೆ ಎದುರಾದ. ಅವಳ ಬಳಿ ಆಯುಧವಿರಲಿಲ್ಲ. ಆದರೂ ಆತ ತಕ್ಷಣ ಕತ್ತಿಯನ್ನು ಎಳೆದು ಬೀಸಲು ಅಲ್ಲಿನ ವಾಯುವೇಗದಿಂದ ಪಾರಾದಳು. ಪೇಶ್ವೆಯು ಸ್ಥಳಕ್ಕೆ ಬಂದು ರಾಣಿಗೆ ಸಮಾಧಾನ ಪಡಿಸಿದನು. ಆದರೆ ಝಾನ್ಸಿಗೆ ಮುತ್ತಿಗೆ ಹಾಕಲು ನಿಶ್ಚಯವಾದಾಗ ಸಹಕರಿಸಿದ. ಎಷ್ಟೇ ಹೋರಾಡಿದರೂ ಬ್ರಿಟಿಷರನ್ನು ಗೆಲ್ಲಲಾಗಲಿಲ್ಲ. ರಾಣಿ ಮಗನನ್ನು ಕಟ್ಟಿಕೊಂಡು ಯುದ್ಧರಂಗಕ್ಕೆ ಧುಮುಕಿದರು. ಅವಳ ಧೈರ್ಯ ಸಾಹಸದಿಂದ ತಾಂತ್ಯಾ, ಪೇಶ್ವೆ, ನವಾಬ, ಗ್ವಾಲಿಯರ್‌ನ ರಾಜರೊಡನೆ ಸೇರಿ ಹೋರಾಟದ ಸಿದ್ಧತೆ ನಡೆಸಿದಳು. ಗ್ವಾಲಿಯರ್‌ನ ರಾಜ ಇಂಗ್ಲೀಷರ ಪರವಾಗಿದ್ದು ಸಹಕರಿಸಲಿಲ್ಲ. ಯುದ್ಧ ಅನಿವಾರ್ಯವಾಗಿ ಲಕ್ಷ್ಮೀಬಾಯಿ ಹಾಗೂ ಅವಳ ಸಂಗಡಿಗರು ಹೋರಾಡಿ ಗ್ವಾಲಿಯರ್ ಕೋಟೆ ವಶಪಡಿಸಿಕೊಂಡರು. ಆದರೆ ಹ್ಯೂರೋಸ್ ಗ್ವಾಲಿಯರ್ ಕೋಟೆಗೆ ಮುತ್ತಿಗೆ ಹಾಕಲು ಸಿದ್ಧನಾದ ಬಗ್ಗೆ ತಿಳಿದು ಯುದ್ಧ ಸಿದ್ಧತೆ ನಡೆಸಿದಳು.
೧೮೫೮ರ ಜೂನ್ ತಿಂಗಳ ೧೮ರಂದು ವೀರಯೋಧನ ವೇಷ ಧರಿಸಿ ಉತ್ತಮ ಕುದುರೆ ಏರಿ ಆಪ್ತರೊಡನೆ ಹೊರಟಾಗ ’ದಾಮೋದರನನ್ನು ರಕ್ಷಿಸುವ ಹೋಣೆ ನಿಮ್ಮದು. ಅವನನ್ನು ನಿಮ್ಮ ಬೆನ್ನಿಗೆ ಕಟ್ಟಿಕೊಳ್ಳಿ. ಪ್ರತಿಯೊಬ್ಬರೂ ನಿಮ್ಮನ್ನು ನೀವೇ ರಕ್ಷಿಸಿಕೊಳ್ಳಿ, ವಿದೇಶಿಯರು ನನ್ನ ಶವವನ್ನು ಮುಟ್ಟಕೂಡದು." ಎಂದು ಹೇಳಿ ಯುದ್ಧರಂಗಕ್ಕೆ ಹೊರಟಳು. ಹ್ಯೂರೋಸನ ತುಕಡಿ ಫಿರಂಗಿಗಳ ಗುಂಡು ಭೋರ್ಗರೆಯಿತು. ರಾಣಿ ಅಡ್ಡಬಂದವರನ್ನು ಚೆಂಡಾಡುತ್ತಾ ಒಳನುಗ್ಗಿದಳು. ಇಂಗ್ಲೀಷರು ರಾಣಿಯ ಆಪ್ತ ರಕ್ಷಕರನ್ನು ಕೊಂದರು. ಸೈನಿಕನು ಗುರಿಯಿಟ್ಟ ಕತ್ತಿ ರಾಣಿಯ ಹೊಟ್ಟೆಗೆ ಚುಚ್ಚಿತು. ರಾಣಿ ಯುದ್ಧ ನಿಲ್ಲಿಸದೆ ಮನ್ನಡೆದರೂ ಅವಳ ತೊಡೆಗೆ ಬಿದ್ದ ಗುಂಡಿನಿಂದ ಕುದುರೆ ಬೆಚ್ಚಿ ನೆಗೆದಾಗ ರಾಣಿ ಜಾರಿ ಬಿದ್ದಳು. ವೈರಿಗಳು ದಾಳಿ ನಡೆಸಿದರು. ಆಗ ಅವಳ ಆಪ್ತರು ಅಲ್ಲಿಗೆ ಬಂದು ರಾಣಿಯನ್ನು ಒಯ್ದು ಮಲಗಿಸಿ ಗಂಗಾಜಲ ಕುಡಿಸಿದರು. ’ಹರ ಹರ ಮಹಾದೇವ’ ಎಂದು ನೀರು ಕುಡಿದು ಭಗವನ್ನಾಮ ಸ್ಮರಿಸುತ್ತಾ ಪ್ರಾಣ ತ್ಯಜಿಸಿದಳು. ಹ್ಯೂರೋಸ್ ಸಹ ಬಂದು ಅವಳಿಗೆ ಗೌರವ ಸೂಚಿಸಿ ಹೋದನು. ಅಂದು ೧೮೫೮ರ ಜೂನ್ ೧೮ರಂದು ಲಕ್ಷ್ಮೀಬಾಯಿಗೆ ೨೨ ವರ್ಷ ಏಳು ತಿಂಗಳು.
ಚಿಕ್ಕವಯಸ್ಸಿಗೆ ಅಸಾಧಾರಣ ಧೈರ್ಯದಿಂದ ಸಾರ್ವಜನಿಕ ಜೀವನಕ್ಕೆ ಕಾಲಿರಿಸಿದ ಲಕ್ಷ್ಮೀಬಾಯಿ ಹದಿಮೂರು ವರ್ಷದಲ್ಲಿ ೪೭ರ ಗಂಡನೊಡನೆ ಐದು ವರ್ಷ ಬಾಳ್ವೆ ನಡೆಸಿದಳು. ಹದಿಮೂರನೇ ವಯಸ್ಸಿನಿಂದ ಇಪ್ಪತ್ತೆರಡರ ಒಳಗೆ ಒಂಭತ್ತು ವರ್ಷ ನಿರಂತರ ಬಾಳ ಹೋರಾಟದಲ್ಲಿ ಹೆಂಡತಿಯಾಗಿ, ತಾಯಿಯಾಗಿ, ರಾಣಿಯಾಗಿ, ಸಾವಿರಾರು ಪ್ರಜೆಗಳ ತಾಯಿಯಾದಳು. ಪುರುಷ ಆಡಳಿತಗಾರರಿಗೆ ಮಾದರಿಯಾದಳು. ೧೮-೨೦ರ ವಯಸ್ಸಿನ ಹುಡುಗಿಯ ಪ್ರಬುದ್ಧತೆಯ ಯುದ್ಧ, ಆಡಳಿತ, ಸಣ್ಣ ರಾಜ್ಯದ ರಾಣಿಯಾಗಿ ರಾಷ್ಟ್ರಕ್ಕೆ ಗೌರವ ತರುವ ಸ್ವಾತಂತ್ರ್ಯ ಪ್ರೇಮ ಎಂದೆಂದಿಗೂ ಭಾರತೀಯರಿಗೆ ಸ್ಪೂರ್ತಿದಾಯಕ.
ಡಾ.ಕೆ.ಎಸ್.ರತ್ನಮ್ಮ
೨೮೮೪, ಕೋರ್ಟ್ ಹಿಂಭಾಗ
ಪಂಪಾಪತಿ ರಸ್ತೆ, ೨ನೇ ಕ್ರಾಸ್,
ಸರಸ್ವತಿಪುರಂ, ಮೈಸೂರು-೯
ದೂ: ೨೫೪೫೧೦೯-೦೮೨೧

ಪರಂಪರೆಯೊಡನೆ ಕುವೆಂಪು ಮುಖಾಮುಖಿ


ಪರಂಪರೆಯ ಬಗೆಗಿನ ಬಹುತೇಕರ ಮಾತು ಮತ್ತು ಗ್ರಹಿಕೆಗಳೆಲ್ಲವು ಹಳಹಳಿಕೆಯ ಸ್ವರೂಪ ಪಡೆದಿರುವುದೇ ಹೆಚ್ಚು. ಆದರೆ ಆ ಬಗೆಯ ಹಳಹಳಿಕೆಗಳಿಂದ ಪರಂಪರೆಯ ಮುಖಾಮುಖಿಗಿಂತ ಅವುಗಳನ್ನು ಒಪ್ಪಿತ ಅಥವಾ ಹೇರಿಕೆಯ ಸಲುವಾಗಿ ಮಂಡಿಸುವುದು ಕೂಡ ಪರಂಪರೆಯಾಗಿರುತ್ತದೆ. ಈ ಬಗೆಯ ಪರಂಪರೆಯ ಗ್ರಹಿಕೆಗಿಂತ ಭಿನ್ನ ಪರಿಭಾವನೆಯನ್ನು ಕುವೆಂಪು ಸಂದರ್ಭದಲ್ಲಿ ಚರ್ಚಿಸಬೇಕಾದ ಅನಿವಾರ್ಯತೆಯನ್ನು ಕುವೆಂಪುರ ಕೃತಿಗಳು ರೂಪಿಸಿವೆ. ಆದರೆ ಪರಂಪರೆಯ ಬಗೆಗೆ ಹೊಸ ದೃಷ್ಟಿಕೋನವೊಂದನ್ನು ನೀಡುವುದೆ ಕುವೆಂಪುರವರ ಚಿಂತನೆಗಳ ವೈಶಿಷ್ಟ್ಯವಾಗಿದೆ.
ಪರಂಪರೆಯೆಂಬುದನ್ನು ಉದಾತ್ತೀಕರಿಸುವ ನೆಲೆಯಲ್ಲಿ ಅನೇಕ ಬಗೆಯ ಮಿತಿಗಳಿವೆ. ಈ ಪರಂಪರೆಯ ರೂಪಣೆಯು ಬಹುತೇಕ ಕಡೆಗಳಲ್ಲಿ ಏಕಾಕಾರದ, ಏಕೀಕೃತ ರೂಪಣೆಯಾಗಿರುವುದೆ ಎದ್ದು ಕಾಣುತ್ತದೆ. ಅದಕ್ಕೆ ಕಾರಣವೆಂದರೆ ಪರಂಪರೆಯ ನಿರ್ಮಾತೃಗಳು ಏಕವರ್ಣ, ವರ್ಗದವರು ಎಂಬ ಧೋರಣೆ. ಅವುಗಳ ರೂಪಣೆಯಲ್ಲು ಇಂತಹ ಏಕವರ್ಣ, ವರ್ಗದವರೆ ಮುಂದಿರುವುದರಿಂದ ಅಂತಹ ಹೇರಿಕೆಗಳನ್ನು ಪ್ರಶ್ನಿಸುವುದು ಪರಂಪರೆಯ ಗ್ರಹಿಕೆಯಲ್ಲಿ ಮಹತ್ವದ ತಿರುವಾಗುತ್ತದೆ.
ಸಾಹಿತ್ಯ, ಕಲೆ, ಪುರಾಣ, ಸಂಪ್ರದಾಯ, ಆಚರಣೆ, ಸಂಸ್ಕೃತಿ ಮುಂತಾದವುಗಳನ್ನು ಪರಂಪರೆಯ ಸಂದರ್ಭದಲ್ಲಿ ಚರ್ಚಿಸಲಾಗುತ್ತದೆ. ಆದರೆ ಇಲ್ಲಿ ಅಲಕ್ಷಿತ ವರ್ಗದವರ ಧ್ವನಿಯೆ ಇಲ್ಲದಿರುವುದು ಇದರ ಒಂದು ಕೊರತೆಯಾಗಿ ಹಾಗೂ ಪುರೋಹಿತಶಾಹಿ ನಿರ್ಮಿತ ಸಂಕಥನವು ಇವುಗಳನ್ನು ಯಶಸ್ವಿಯಾಗಿ ಅಂಚಿಗೆ ತಳ್ಳುವಲ್ಲಿ ನಡೆಸಿದ ಕ್ರಿಯಾಚರಣೆಗಳ ಚರ್ಚೆಯು ಮುಖ್ಯವಾಗುತ್ತದೆ.
ಈ ಬಗೆಯ ಸಾಂಸ್ಕೃತಿಕ ಎಚ್ಚರವನ್ನು ಸದಾ ತಮ್ಮ ಮಾತು, ಕೃತಿಗಳಲ್ಲಿ, ನಡೆಯಲ್ಲಿ ಪ್ರತಿಪಾದಿಸುತ್ತ ಬಂದ ಕುವೆಂಪುರವರು ಪರಂಪರೆಯನ್ನು ಭಿನ್ನವಾಗಿ ಪರಿಭಾವಿಸುತ್ತಾರೆ. ಕಾವ್ಯ, ಕತೆ, ಕಾದಂಬರಿ, ನಾಟಕ, ವಿಮರ್ಶೆ, ಭಾಷಣಗಳಲ್ಲದೆ ತಮ್ಮ ನಡೆಯಲ್ಲೂ ಈ ಬಗೆಯ ವೈಚಾರಿಕ ಎಚ್ಚರವನ್ನು ಪ್ರತಿಪಾದಿಸಿದ್ದರಿಂದಲೆ ಕುವೆಂಪುರವರನ್ನು ಕನ್ನಡ ಪರಂಪರೆಯಲ್ಲಿ ಚರ್ಚಿಸಲೇಬೇಕಾದ ಅನಿವಾರ್ಯತೆ ಇದೆ.
ಕುವೆಂಪುರವರು ಬರಹವನ್ನು ಆರಂಭಿಸಿದಾಗಿನ ಸಂದರ್ಭದ ಬಗ್ಗೆ ಪೂರ್ಣಚಂದ್ರ ತೇಜಸ್ವಿಯವರು ಹೇಳುವಂತೆ "ಕುವೆಂಪು ಕನ್ನಡ ಸಾಹಿತ್ಯದಲ್ಲಿ ಪ್ರಮುಖ ಎಂದೆನ್ನಿಸಿಕೊಂಡ ಮೊದಲ ಶೂದ್ರ. ಭಾರತೀಯ ಸಂಪ್ರದಾಯದ ಆವರಣದಲ್ಲಿ ಶೂದ್ರನಿಗೆ ಅಕ್ಷರ ಜ್ಞಾನದ ಅಧಿಕಾರವೂ ಇರಲಿಲ್ಲ; ಗ್ರಂಥಾಧ್ಯಯನದ ಅಧಿಕಾರವೂ ಇರಲಿಲ್ಲ. ಅಂಥ ಸನ್ನಿವೇಶದಲ್ಲಿ ಶೂದ್ರನಿಗೆ ಬರೆಯುವುದೇ ಪ್ರತಿಭಟನೆ. ಅದೇ ಸಂಪ್ರದಾಯ ಮತ್ತು ಪರಂಪರೆಯ ವಿರುದ್ಧ ಮೊದಲ ಕ್ರಾಂತಿ ಕಹಳೆ".೧ ಈ ಬಗೆಯ ಕ್ರಾಂತಿಕಾರಕತೆಯನ್ನು ಪರಂಪರೆಯೊಡನೆ ಮುಖಾಮುಖಿಯಾಗುತ್ತ; ಕನ್ನಡ ಅರಿವಿನ, ಪ್ರಜ್ಞೆಯ ವಿಸ್ತರಣೆಯ ಕೆಲಸವನ್ನು ಕುವೆಂಪು ಯಶಸ್ವಿಯಾಗಿ ಮುಂದುವರಿಸಿದ್ದಾರೆ.
ಪರಂಪರೆಯಿಂದ ಬಂದ ಮಹಾಕಾವ್ಯ, ಪುರಾಣ, ಪ್ರತಿಮೆ, ಭಾಷೆ, ಲೋಕ ಗ್ರಹಿಕೆಗಳೆಲ್ಲವನ್ನು ಆತ್ಯಂತಿಕವಾಗಿ ಅರಗಿಸಿಕೊಂಡು ಅದರ ಮಿತಿಗಳನ್ನು ಮೀರುವ ಕುವೆಂಪುರವರ ಕ್ರಮ ಅನನ್ಯವಾದುದು. ರಾಮಾಯಣ, ಮಹಾಭಾರತಗಳ ಪ್ರಸಂಗ, ಪಾತ್ರ, ಉಪಕಥೆಗಳನ್ನಾಧರಿಸಿದ ವಸ್ತುಗಳನ್ನು ಅಭಿವ್ಯಕ್ತಿಗೆ ಒಗ್ಗಿಸಿಕೊಂಡು ಪರಂಪರಾಗತ ಅಪಗ್ರಹಿಕೆಯನ್ನು ತಿದ್ದುವ, ಪ್ರಶ್ನಿಸುವ ಮೂಲಕ ಹೊಸದೊಂದು ಲೋಕದರ್ಶನವನ್ನು, ವಿಶಾಲ ದೃಷ್ಟಿಕೋನವನ್ನು ತಮ್ಮ ಕೃತಿಗಳಲ್ಲಿ ಅವರು ಮಂಡಿಸಿದ್ದಾರೆ.
’ಶ್ರೀ ರಾಮಾಯಣ ದರ್ಶನಂ’ನಲ್ಲಿ ರಾಮಾಯಣದ ಕಥಾವಸ್ತುವಿನಲ್ಲಿ ನಿಲುಕದ ಅನೇಕ ಹೊಸದೃಷ್ಟಿ, ಪೂರ್ಣದೃಷ್ಟಿಗಳತ್ತ, ವಸ್ತು, ಪಾತ್ರ ನಿರ್ವಹಣೆಯಲ್ಲಿ ತಮ್ಮ ಪರಂಪರೆಯೊಡನೆ ಅನುಸಂಧಾನ ನಡೆಸಿದ್ದಾರೆ. ರಾಮಾಯಣವು ಮೂಲತಃ ಬಳಕೆಯಾಗುತ್ತಿದ್ದ ಪರಿಭಾಷೆಗಿಂತ ಭಿನ್ನವಾದ ಪರಿಭಾವನೆಯನ್ನು ‘ಶ್ರೀ ರಾಮಾಯಣ ದರ್ಶನಂ’ನಲ್ಲಿ ಕಾಣಬಹುದು. ರಾಮಾಯಣವು ಈಚಿನ ದಿನಗಳಲ್ಲಿ ’ರಾಮ’ ಪ್ರತೀಕವನ್ನು ಮೂಲಭೂತವಾದಿಗಳು ಪರಿವರ್ತಿಸಿರುವ ಸಂದರ್ಭಕ್ಕೆ ಭಿನ್ನವಾಗಿ ಕುವೆಂಪುರರ ಕೃತಿಯಲ್ಲಿ ಎಲ್ಲ ಪಾತ್ರಗಳನ್ನು ಪರಿವರ್ತನ ಶೀಲವಾಗಿ ಸೃಜಿಸಲಾಗಿದೆ. ಕೈಕೆಯ ಮೇಲಿನ ಪ್ರೇಮದ ಮಂಥರೆ, ಲಕ್ಷ್ಮಣನಿಗಾಗಿ ಕಾಯುವ ಊರ್ಮಿಳೆ, ರಾಮನಲ್ಲಿ ಐಕ್ಯವಾಗುವ ರಾವಣ ಇವುಗಳಲ್ಲದೆ ಕಾವ್ಯದ ಅನೇಕ ಅಂಶಗಳಲ್ಲೂ ಈ ಬಗೆಯ ಪರಂಪರೆಯನ್ನು ಅರಗಿಸಿಕೊಂಡು ಹೊಸದೊಂದಕ್ಕೆ ತುಡಿಯುವುದನ್ನು ಕಾಣಬಹುದು. ಸುಜನಾರವರ ಪ್ರಕಾರ "ಶ್ರೀ ರಾಮಾಯಣ ದರ್ಶನದ ಪಾತ್ರಗಳೆಲ್ಲವೂ ಆಗುವುದರತ್ತ ಧಾವಿಸಿವೆ. ಆ ಪುರೋಭಿಗಮನ ಒಂದೊಂದು ಪಾತ್ರದಲ್ಲಿ ಒಂದೊಂದು ರೀತಿಯಾಗಿ ನಡೆದಿದೆ. ಮಂಥರೆಯಂಥವಳಲ್ಲಿ ಹಾಗೆಂದು ತಿಳಿಯದೆಯೇ ಆ ಸಾಧನೆ ನಡೆಯುತ್ತದೆ. ಧಾನ್ಯ ಮಾಲಿಯಂಥವರಲ್ಲಿ ಮೊದಲು ಮಲಗಿದ್ದ ಯಾತ್ರೆ ಆಮೇಲೆ, ಸೀತೆಯಲ್ಲಿ ಊರ್ಧ್ವ ಚೇತನವನ್ನು ಕಂಡ ಮೇಲೆ, ಮತ್ತೆ ಜಾಗ್ರತವಾಗಿ ಸಾಗತೊಡಗುತ್ತದೆ. ರಾವಣನಲ್ಲಿ ಆ ಮುನ್ನಡೆ ಚಕ್ರವ್ಯೂಹ ಸುತ್ತುತ್ತಾ ನಡೆಯುತ್ತದೆ. ಒಂದರ್ಥದಲ್ಲಿ ಈ ಕೃತಿಯಲ್ಲಿ ಎಲ್ಲ ಪಾತ್ರಗಳೂ ಆಗುವುದರತ್ತ ದಬ್ಬಲ್ಪಟ್ಟಿವೆಯೊ ಎಂಬಂತೆ ಸಾಗಿವೆ. ಹಾಗೂ ಕವಿಯಾದರೂ ಕೊಂಚ ಎಚ್ಚತ್ತೆ ಈ ಕೆಲಸ ಮಾಡಿಸಿದ್ದಾರೆ ಎನ್ನಿಸುತ್ತದೆ".೨ ಈ ಭಾಗದ ಕೊನೆಯ ಅಭಿಪ್ರಾಯವು ಮುಖ್ಯವಾಗಿ ಕುವೆಂಪುರವರು ಪರಂಪರೆಯ ಮುಖಾಮುಖಿಯಲ್ಲಿ ವಹಿಸುವ ಎಚ್ಚರದತ್ತ ನೀಡಿರುವ ಗಮನವನ್ನು ಹೇಳುತ್ತಿದೆ.
ಕುವೆಂಪುರವರ ಕೃತಿಗಳ ಸಮಗ್ರತೆಯ ತತ್ವದ ಬಗ್ಗೆ ಅರ್ಥಪೂರ್ಣವಾದ ಒಳನೋಟಗಳನ್ನು ನೀಡಿರುವ ಸುಜನಾರವರೆ ಹೇಳುವಂತೆ "ತೀವ್ರ ವಿಚಾರವಾದಿಯಾದರೂ ಅಧ್ಯಾತ್ಮವಾದಿಯೂ ಆದ ಕವಿ ಕುವೆಂಪು ಅವರ ನಾನಾ ಪ್ರಕಾರದ ಕಾವ್ಯಗಳನ್ನು ಸರಳ ತತ್ತ್ವಕ್ಕೆ ಒಳಪಡಿಸುವುದು ಕಷ್ಟ. ಕೇವಲ ವಿಚಾರವಾದಿಯಂತೆ ಭೌತವಾದಿಯಲ್ಲದ, ಆತ್ಮವಾದಿಯಾದ ಈ ಕವಿ ನಿರಂಕುಶಮತಿಯಾಗುವ ಕರೆ ನೀಡುವುದು ಆತ್ಮಶ್ರೀಗಾಗಿಯೆ ವಿನಾ ಸ್ವಾರ್ಥ ರುಚಿಗಳ ಪೂರೈಕೆಗಾಗಿಯಲ್ಲ. ಸಂಪ್ರದಾಯಗಳ ಮೇಲೆ ಗದಾಪ್ರಹಾರ ಮಾಡುವಂತಹ ಕವಿ ಸನಾತನತೆಯನ್ನು ವಿನೂತನವಾಗಿಸುವಲ್ಲಿ ಶ್ರದ್ಧೆಯನ್ನು ತೋರುತ್ತಾರೆ. ಸಕಾಲಿಕ ಆವೇಶಗಳಿಗೆ ಮಿಡಿದರೂ ಅವರ ತುಡಿತವೆಲ್ಲ ಅಕಾಲಿಕ ಚಿರಕಾಲಿಕವಾದುದರ ಬಗೆಗೆ. ಒಂದು ಹಿಡಿತಕ್ಕೆ, ತೆಕ್ಕೆಗೆ ಒದಗಿ ಬಾರದ ಭಾರತೀಯ ತತ್ತ್ವ ಲೋಕದಂತೆಯೆ ಕವಿ ಕುವೆಂಪು ಕಾವ್ಯದ ತಾತ್ತ್ವಿಕ ಹಿನ್ನೆಲೆ ಕೂಡ ವಿಲಕ್ಷಣವಾಗಿ, ಮೋಹಕವಾಗಿಯೂ ದಿಗ್ಭ್ರಾಮಕವಾಗಿ ಕಂಡು ಬರುತ್ತದೆ."೩ ಈ ಮಾತುಗಳು ಕುವೆಂಪುರವರ ಗ್ರಹಿಕೆಯ ಮೇಲಿರುವ ಅನಂತ ಮಿತಿ ಮತ್ತು ಸಾಧ್ಯತೆಗಳೆರಡನ್ನು ಮಂಡಿಸುತ್ತವೆ.
ಅವರ ನಾಟಕಗಳು ಪುರಾಣದ ಅನೇಕ ಪಾತ್ರ, ಪ್ರಸಂಗಗಳನ್ನು ಮರು ರೂಪಿಸಬಯಸುತ್ತವೆ. ಬೆರಳ್‌ಗೆ ಕೊರಳ್, ಶೂದ್ರ ತಪಸ್ವಿ, ಜಲಗಾರ ಮೊದಲಾದ ನಾಟಕಗಳು ಭಾರತೀಯ ಪರಂಪರೆಯೊಡನೆ ಮುಖಾಮುಖಿ ನಡೆಸಿದರೆ, ಬಿರುಗಾಳಿ, ರಕ್ತಾಕ್ಷಿ ನಾಟಕಗಳು ಇಂಗ್ಲಿಷ್ ಸಾಹಿತ್ಯ ಪರಂಪರೆಯೊಡನೆ ನಡೆಸಿದ ಅನುಸಂಧಾನದ ಫಲಿತಗಳು. ಕನ್ನಡ ಪರಂಪರೆಯಲ್ಲಿ ಪಂಪ, ಬಸವ, ಹರಿಹರ, ಕುಮಾರವ್ಯಾಸ ಮೊದಲಾದವರ ಪರಂಪರೆಯ ಅರ್ಥಪೂರ್ಣ ಮುಂದುವರಿಕೆಯಾಗಿ ಈ ಕೃತಿಗಳು ಕನ್ನಡದ ಮುಖ್ಯ ಕೃತಿಗಳಾಗಿವೆ. ಬೆರಳ್‌ಗೆ ಕೊರಳ್ ನಾಟಕವು ಮಹಾಭಾರತದ ಏಕಲವ್ಯ-ದ್ರೋಣ ಪಾತ್ರಗಳ ಮೂಲಕ ನಡೆಸಿದ ಮುಖಾಮುಖಿ ಈ ಹಿಂದಿನ ಮಿತಿಯನ್ನು ಮೀರುವ ಪ್ರಯತ್ನವಾಗಿದೆ. ಸಂಸ್ಕೃತಿ-ವಿಕೃತಿಗಳ ನಡುವಿನ ನಾಗರಿಕ-ಅನಾಗರಿಕ ಪರಿಕಲ್ಪನೆಗಳ ಮೂಲಕ ನಾಡು-ಕಾಡು ಸಂಸ್ಕೃತಿಗಳಲ್ಲಿನ ಜೀವ ವಿರೋಧಿ ಹಾಗೂ ಜೀವಪರ ನಿಲುವುಗಳನ್ನು ಮಂಡಿಸುತ್ತದೆ. ಶೂದ್ರ ತಪಸ್ವಿ ನಾಟಕವು ಜ್ಞಾನಾಧಿಕಾರದ ಪ್ರಶ್ನೆಯೊಡನೆ ಜಾತಿ ಸಂಕಥನದ ಮೇಲೆ ಪ್ರಶ್ನೆ ಎತ್ತುತ್ತದೆ. ಬ್ರಾಹ್ಮಣ-ರಾಮ ಪಾತ್ರಧಾರಿಗಳು ಆಡುವ ಮಾತುಗಳಲ್ಲಿನ ವ್ಯಂಗ್ಯವು ಇಡೀ ನಾಟಕದ ತುಂಬ ಭಿನ್ನ ಧ್ವನಿಯಾಗಿ ಪರಸ್ಪರರ ಮಿತಿಗಳನ್ನು ಮಂಡಿಸುತ್ತ ’ಶಂಬೂಕ’ನ ತಪಸ್ಸನ್ನು ಮಾನ್ಯ ಮಾಡುತ್ತದೆ. ಈ ನಾಟಕವು ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಮುಖ್ಯ ವಾಗ್ವಾದಗಳ ಸೃಷ್ಟಿಗೆ ಕಾರಣವಾಗಿರುವುದು ವಿಶೇಷವಾಗಿದೆ.
ಕತೆಗಳಲ್ಲಿ ಅಲಕ್ಷಿತರ ಬಗೆಗಿನ ಗ್ರಹಿಕೆ ಪ್ರಧಾನವಾಗಿದೆ. ’ಸಾಲದ ಮಗು’ ಕತೆ ಗೌಡನ ಅಮಾನವೀಯತೆ ಹಾಗೂ ಬಡತನದ ಅಸಹಾಯಕತೆಗಳನ್ನು ಧ್ವನಿಸುತ್ತದೆ. "ಅಂತೂ ಮುನ್ನೂರು ರೂಪಾಯಿ ಮನೆಗೆ ಬಂತು! ಎಂದು ನಿಡುಸುಯ್ದರು."೪ ಈ ಮಾತುಗಳು ಗೌಡನ ಅಮಾನವೀಯತೆಯು ಸಾಲದ ಮಗುವಿನ ಸಾವಿನ ಸಂದರ್ಭದಲ್ಲಿಯೂ ಅವನ ಸಾವಿಗಾಗಿ ಮರುಗದಿರುವುದನ್ನು, ಇಡೀ ಕತೆಯನ್ನು ಸಂಕೇತಿಸುತ್ತದೆ. ’ಧನ್ವಂತರಿಯ ಚಿಕಿತ್ಸೆ ಕತೆಯಲ್ಲಿ ವಿಶ್ವಾಮಿತ್ರ, ಪರಶುರಾಮರು ಹರಸಾಹಸ ಪಟ್ಟು ಕಂಡುಹಿಡಿದು ರೈತನ ಸಮಸ್ಯೆಗಳನ್ನು ಪರಿಹರಿಸಲು ’ಧನ್ವಂತರಿಯ’ ಮೊರೆ ಹೋಗುವುದು ಪ್ರಸ್ತುತವೂ ರೈತನ ಮೇಲೆ ಇರುವ ಜಗದ ಭಾರವನ್ನು ಇಳಿಸಬೇಕಾದ ಅಗತ್ಯತೆಯೆಡೆಗೆ ಗಮನ ಸೆಳೆಯುತ್ತದೆ.
"ರೈತನ ಎದೆಯ ಮೇಲೆ ಸಮಸ್ತ ಚಕ್ರಾಧಿಪತ್ಯವೂ ಮಹಾಪರ್ವತಾಕಾರವಾಗಿ ನಿಂತಿತ್ತು. ಋಷಿಗಳು ನೋಡಿಕೊಂಡು ಬಂದಿದ್ದ ಆ ಮುಖ್ಯ ಪಟ್ಟಣ ಅದರ ನೆತ್ತಿಯಲ್ಲಿ ರಾಜಿಸುತ್ತಿದೆ! ಅಲ್ಲಿಯ ದೇವಾಲಯಗಳೂ ವಿದ್ಯಾನಿಲಯಗಳೂ ಕ್ರೀಡಾಮಂದಿರಗಳೂ ಪ್ರಮೋದ ವನಗಳೂ ಕರ್ಮ ಸೌಧಗಳೂ ಕಾರ್ಖಾನೆಗಳೂ ರಾಜಪ್ರಸಾದಗಳೂ ತಮ್ಮ ಭಾರವನ್ನೆಲ್ಲಾ ರೈತನ ಎದೆಯ ಮೇಲೆ ಹಾಕಿ, ಸಂಸ್ಕೃತಿ ಮತ್ತು ನಾಗರಿಕತೆ ಎಂಬ ಕೀರ್ತಿಯಿಂದ ಮೆರೆಯುತ್ತಿವೆ!"೫ ಈ ಬಗೆಯಲ್ಲಿ ಇಡೀ ಕತೆಯಲ್ಲಿ ರೈತನ ಮೇಲಿನ ಭಾರವನ್ನು ಕಡಿಮೆ ಮಾಡಬೇಕೆಂಬ ಆಶಯವಿದೆ. ’ಯಾರೂ ಅರಿಯದ ವೀರ’ ಕತೆಯ ’ಲಿಂಗ’ನು ಋಣ ಸಂದಾಯಾರ್ಥವಾಗಿ ಸುಬ್ಬಣ್ಣಗೌಡರನ್ನು ಉಳಿಸಲು ಪ್ರಾಣಾಪಾಯವಿದ್ದಾಗಲೂ ದೋಣಿಯಿಂದ ಹಾರುವಲ್ಲಿನ ಬಡವನೋರ್ವನ ಕೃತಜ್ಞತೆ ಅರ್ಪಿಸುವ ಗುಣಕ್ಕೆ ಮಾದರಿಯಾಗಿದೆ. "ಕುವೆಂಪು ಅವರ ಉತ್ತಮ ಕಥನ ಕೌಶಲಕ್ಕೆ ಕಾರಣವಾದ ಕಥೆಗಳಲ್ಲಿ ’ಮೀನಾಕ್ಷಿಯ ಮನೇ ಮೇಷ್ಟರು’ ಕಥೆಯೂ ಒಂದು. ಹಿಂದಿನ ಆದರ್ಶ ಸಾಧನೆಯಲ್ಲಿ ಕಾಣಿಸಿಕೊಂಡಿದ್ದ ಹಾಸ್ಯವು ಇಲ್ಲಿ ಬದುಕಿನ ಗಹನತೆ ಮತ್ತು ವಾಸ್ತವವನ್ನು ಅರಿಯಲು ಮತ್ತೊಮ್ಮೆ ಪರಿಣಾಮಕಾರಿಯಾಗಿ ಮೂಡಿಬಂದಿದೆ".೬ ಕಥನ, ಶೈಲಿ, ವಸ್ತು, ತಂತ್ರಗಳಿಂದಲೂ ಅವರ ಕತೆಗಳು ವಿಶಿಷ್ಟ ಪ್ರಯೋಗಗಳಾಗಿವೆ.
ಕುವೆಂಪುರವರ ಕಾವ್ಯವು ಸಮಕಾಲೀನ ಕವಿಗಳಲ್ಲಿ ಸಮಾನವಾದ ಪ್ರಕೃತಿಪ್ರೇಮ, ಅಧ್ಯಾತ್ಮ, ದೇಶ, ಭಾಷಾಪ್ರೇಮ, ಸಾಮಾಜಿಕ ಆಶಯಗಳನ್ನು ಸಮಕಾಲೀನರಿಗಿಂತ ಭಿನ್ನವಾಗಿ ಧ್ವನಿಸುತ್ತವೆ. ಬೇಂದ್ರೆ, ಪು.ತಿ.ನ.ರಂತೆಯೆ ಸಮಕಾಲೀನ ಪ್ರಭಾವ, ಪ್ರೇರಣೆ, ಅನುಸಂಧಾನಗಳ ಫಲಿತವಾಗಿ ಕಾವ್ಯವು ವಿಶಿಷ್ಟವಾಗಿದೆ. ’ಬಾ ಫಾಲ್ಗುಣ ರವಿದರ್ಶನಕೆ’ ಎಂಬ ಕವನವು ಅವರ ವಿಶಿಷ್ಟ ಪ್ರಕೃತಿ ದರ್ಶನಕ್ಕೆ ಒಂದು ಉದಾಹರಣೆಯಾಗಿದೆ. "ಕುವೆಂಪು ಪ್ರಕೃತಿ ದರ್ಶನದ ಪ್ರಾಥಮಿಕ ನೆಲೆ ದೈವೀ ಪರಿವರ್ತನೆ. ಪ್ರಕೃತಿ ಎನ್ನುವುದು ಕುವೆಂಪುವಿಗೆ ಪರಮನಾರಾಧನೆ. ಪ್ರಕೃತಿಯ ಚೆಲುವೆಲ್ಲವೂ ದೈವದ ಸಾಕ್ಷಾತ್ಕಾರವೇ, ಅಂತಿಮ ಹಂತದಲ್ಲಿ ಪ್ರಕೃತಿ ಸೌಂದರ್ಯ ಮತ್ತು ದೈವಗಳೆರಡರ ನಡುವೆ ಭಿನ್ನತೆಯನ್ನು ಕಾಣುವುದಿಲ್ಲ ಕುವೆಂಪು. ಇಂದ್ರಿಯಗಮ್ಯ ಅನುಭವವನ್ನು ದಾಟಿ ದೈವೀ ಅನುಭವದ ಕಡೆಗೆ ಕುವೆಂಪು ನಡೆಯುತ್ತಾರೆ. ಕೆಲವೊಮ್ಮೆ ಸಾಂಪ್ರದಾಯಿಕ ಧಾರ್ಮಿಕ ಪರಿಭಾಷೆಯಲ್ಲೇ ಅನುಭವದ ಮಂಡನೆ ನಡೆದರೂ, ಒಟ್ಟಾರೆಯಾಗಿ ಆ ಅನುಭವ ಅದಕ್ಕಿಂತ ಸಾಕಷ್ಟು ಭಿನ್ನವಾದದ್ದು. ಕೆಲವೊಮ್ಮೆಯಂತು ನೇರವಾಗಿ ದೈವೀ ಅನುಭವದ ಪರಿಭಾಷೆಯಲ್ಲಿ ಕವನ ಪ್ರಾರಂಭವಾಗುತ್ತದೆ. ಅಲ್ಲೇ ಕೊನೆಯಾಗುತ್ತದೆ. ಕುವೆಂಪು ಅವರ ಪ್ರಸಿದ್ಧ ಕವನಗಳಲ್ಲೊಂದಾದ ’ಬಾ ಫಾಲ್ಗುಣ ರವಿ ದರ್ಶನಕೆ’ ಕವನವನ್ನೇ ಈ ಮಾತಿಗೆ ಆಧಾರವಾಗಿ ವಿವರಿಸಬಹುದು. ಇಡೀ ಕವನ ಸುಂದರವಾದ ಪೂಜಾವಿಧಿಯನ್ನು ಒಳಗೊಂಡಿದೆ.... ಇಲ್ಲಿ ಉಳಿದ ಧಾರ್ಮಿಕ ಅನುಭವಗಳಲ್ಲಿ ಆದಂತೆ (ಅದರಲ್ಲಿಯೂ ಮುಖ್ಯವಾಗಿ ಭಾರತೀಯ ಧರ್ಮಗಳಲ್ಲಿ ಆದಂತೆ) ಇಂದ್ರಿಯಗಳ ನಿರಾಕರಣೆ ನಡೆದಿಲ್ಲ. ಇಂದ್ರಿಯಗಮ್ಯ ಅನುಭವಗಳನ್ನು ಕುರಿತಂತೆ ಅಪಾರ ಶ್ರದ್ಧೆ, ಪ್ರೀತಿ ಇದ್ದೂ, ಅದನ್ನು ದಾಟಿ ಹೋಗಬಯಸುವ ನಿಲುವನ್ನು ಕಾಣುತ್ತೇವೆ"೭ ಎಂಬ ಡಿ.ಆರ್.ನಾಗರಾಜ್‌ರವರ ಅಭಿಪ್ರಾಯವು ಸಮಂಜಸವಾಗಿದೆ. ಅಲ್ಲದೆ ಕುಂಕುಮ, ಶಿವ ಮಂದಿರ, ನಂದನ, ಮುಕ್ತಿ, ಸರ್ವಾತ್ಮ, ಆರಾಧನೆ, ಸಾಧನೆ, ಅನುಭವ ಮೊದಲಾದ ಪದಗಳಿಗೆ ಇದ್ದ ಪಾರಂಪರಿಕ ಅರ್ಥಗಳಿಗಿಂತ ಭಿನ್ನವಾದ ನಿರ್ವಚನವನ್ನು ಇಂತಹ ಅನೇಕ ಕವನಗಳಲ್ಲಿ ಕಾಣಬಹುದು. ವೈಜ್ಞಾನಿಕತೆ, ವೈಚಾರಿಕತೆ, ಭಾಷಾಭಿಮಾನ, ದೇಶಾಭಿಮಾನ, ಪುರೋಹಿತ ಶಾಹಿ ದಬ್ಬಾಳಿಕೆಯ ಬಿಡುಗಡೆಯ ಹಂಬಲಗಳನ್ನು ವ್ಯಕ್ತಪಡಿಸುವ ಕವನಗಳು, ಅನಿಕೇತನ, ವಿಶ್ವಾತ್ಮಕ ಪ್ರಜ್ಞೆಯತ್ತ ದಾರಿತೋರುವ ದರ್ಶನಾತ್ಮಕ ಕವನಗಳಲ್ಲೂ ಈ ಬಗೆಯ ಭಿನ್ನ ಅನುಸಂಧಾನವನ್ನು ಕಾಣಬಹುದು.
"ಸಾಮಾಜಿಕ ಹಾಗೂ ಧಾರ್ಮಿಕ ಜಡಾವಸ್ಥೆಗಳಿಗೆ ಅತ್ಯಂತ ತೀವ್ರವಾದ ಪ್ರತಿರೋಧದ ಸ್ವರೂಪ ಕುವೆಂಪು ಅವರ ಸಾಹಿತ್ಯದಲ್ಲಿ ದಟ್ಟವಾಗಿ ಕಾಣುತ್ತದೆ. ಶೂದ್ರನೊಬ್ಬ ಗ್ರಂಥಾಧ್ಯಯನ, ಬರವಣಿಗೆಯಲ್ಲಿ ತೊಡಗಿದ ಐತಿಹಾಸಿಕ ಪ್ರಕ್ರಿಯೆಗೆ ಅನೇಕ ಜವಾಬ್ದಾರಿಗಳು ಆ ಕಾಲದಲ್ಲಿ ಮೂಡಿದುದು ಮಹತ್ವವೆನ್ನಬಹುದು. ಸಾಂಸ್ಕೃತಿಕ ಸಂಘರ್ಷದಿಂದ ರೂಪಿತಗೊಂಡ ಸಂವೇದನೆಯೊಂದು ಪ್ರತಿಕ್ರಿಯಿಸಿದ ಮಾದರಿಗಳು ಕುವೆಂಪು ಅವರ ಕೃತಿಗಳಲ್ಲಿ ಕ್ರಿಯಾಶೀಲವಾಗುವುದನ್ನು ಕಾಣುತ್ತೇವೆ. ಈ ಬಗೆಯ ಕ್ರಿಯಾಶೀಲ ಶೂದ್ರ ಸಂವೇದನೆ, ಒಂದು ಸಂಸ್ಕೃತಿಯ ವಿಶ್ವ ತತ್ವಗಳನ್ನು ತಿರುಚಿ ಬರೆದ, ತಿರುಚಿದ್ದನ್ನೇ ಸತ್ಯಗಳೆಂದು ನಂಬಿಸಿದ ವ್ಯವಸ್ಥೆಯ ಬಗೆಗಿನ ಆಕ್ರೋಶವು ಇಂಥ ಸಾಂಸ್ಕೃತಿಕ ಸಂಘರ್ಷದಿಂದ ಉಂಟಾದದ್ದೆಂದು ಕುವೆಂಪು ಸಾಹಿತ್ಯ ಸಮರ್ಥಿಸುತ್ತದೆ. ಅನಿಷ್ಟಕಾರಕ ಆಚಾರ ವಿಚಾರಗಳನ್ನು ಒಂದು ಸಂಸ್ಕೃತಿಯ ಮನೋಭೂಮಿಕೆಯಲ್ಲಿ ಬಿತ್ತಿದ ಮೇಲ್ವರ್ಗದ ಕುತಂತ್ರಗಳನ್ನು ಪ್ರಶ್ನಿಸುವುದರೊಂದಿಗೆ, ಅದರಿಂದ ಹೊರಬರುವಂತೆ ಎಚ್ಚರಿಸುವ ಹೊಣೆಗಾರಿಕೆಗೆ ಕುವೆಂಪು ಎದುರಾದದ್ದು ಈ ಕಾಲಮಾನದ ಮಹತ್ವದ ಘಟ್ಟ. ’ಕ್ರಾಂತಿಕಾಳಿ’ಯಂಥ ಕವಿತೆಗಳಲ್ಲಿ ಇಂಥ ಧೋರಣೆ ಮುಖ್ಯ ಆಯಾಮವಾಗಿ ಪ್ರಕಟಗೊಂಡಿದೆ. ಕವಿಯ ಕರ್ತವ್ಯ ಹಾಗೂ ದೃಷ್ಟಿ-ಧೋರಣೆಗಳ ಧ್ವನಿ ಇಂಥ ಕವಿತೆಗಳಲ್ಲಿ ವ್ಯಕ್ತವಾಗಿದೆ”.೮ ಈ ಬಗೆಯ ವಿಶಿಷ್ಟ ನಿಲುವೆ ಪರಂಪರೆಯ ಚರ್ಚೆಯಲ್ಲಿ ಕುವೆಂಪುರವರ ಸಾಹಿತ್ಯದ ಚರ್ಚೆಯನ್ನು ಅನಿವಾರ್ಯವಾಗಿಸುವುದು.
ಕುವೆಂಪುರವರ ಕಾದಂಬರಿಗಳು ಎರಡೂ ಮಹಾಕಥನಗಳು. ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು ಕಾದಂಬರಿಗಳೆರಡನ್ನೂ ಹಾಗೆ ಕರೆಯಬಹುದಾದ ಗಾತ್ರ, ವಿಸ್ತಾರ, ನೋಟ ಕ್ರಮ, ಚಿಂತನಾಕ್ರಮ, ಪ್ರಾದೇಶಿಕ ಆಯಾಮಗಳ ಮೂಲಕ ವಿಶ್ವಾತ್ಮಕ ಒಳನೋಟಗಳತ್ತ ಚಲಿಸುವ ಕಾರಣಗಳಿಂದ ಕನ್ನಡದ ಪ್ರಾದೇಶಿಕ ಕಕ್ಷೆಯೊಂದು ಜೀರ್ಣಿಸಿಕೊಳ್ಳಬಹುದಾದ ವಿಶ್ವಾತ್ಮಕತೆಗಳ ರೂಪಕಗಳು. ಕುವೆಂಪುರವರ ವಿಶ್ವಮಾನವ ಸಂದೇಶದ ಮೂಲವನ್ನು ಅವರ ಸಾಹಿತ್ಯ ಪ್ರಕಾರಗಳಲ್ಲೆಲ್ಲ ಹುಡುಕಿ ತೆಗೆಯುವ ಸಾಧ್ಯತೆಗಳಿವೆ.
"ಇಲ್ಲಿ
ಯಾವುದಕ್ಕೂ ಮೊದಲಿಲ್ಲ;
ಯವುದಕ್ಕೂ ತುದಿಯಿಲ್ಲ;
ಯಾವುದೂ ಎಲ್ಲಿಯೂ ನಿಲ್ಲುವುದೂ ಇಲ್ಲ;
ಕೊನೆಮುಟ್ಟುವುದೂ ಇಲ್ಲ!"೯
(ಎಂಬ ಅವರ ’ಮಲೆಗಳಲ್ಲಿ ಮದುಮಗಳು’) ಕಾದಂಬರಿಯ ಮಾತುಗಳಂತೆಯೇ ಅವರ ಕೃತಿಗಳ ಬಗ್ಗೆ ಚರ್ಚೆಯನ್ನು ಬೆಳೆಸಬಹುದಾದಷ್ಟು ಹುಲುಸಾದ; ಅಷ್ಟೇ ಅರ್ಥಪೂರ್ಣವೂ, ಮಹತ್ವಪೂರ್ಣವೂ ಪ್ರಸ್ತುತವೂ ಎನಿಸುವಂತ ನಿತ್ಯ ನೂತನತೆಯನ್ನು ಒಳಗೊಂಡಿರುವುದು ಪರಂಪರೆಯ ಕೊಂಡಿಯನ್ನು ಅದರ ಮಿತಿಯರಿತು ಹೊಸ ಆಯಾಮಗಳಿಗೆ ಬೆಸೆಯುವ ಸೂಕ್ಷ್ಮಕ್ರಮಗಳಿಂದ. ಇದು ಕುವೆಂಪು ಮತ್ತು ಪರಂಪರೆಗಿರುವ ಸಾಮ್ಯತೆ ಮತ್ತು ಭಿನ್ನತೆಯನ್ನು ಅರಿಯುವ ಪ್ರಯತ್ನ.
ಟಿಪ್ಪಣಿಗಳು
ಸಂ: ಜಿ.ಎಸ್.ಶಿವರುದ್ರಪ್ಪ, ಶ್ರೀ ಕುವೆಂಪು, ಪೂರ್ಣಚಂದ್ರ ತೇಜಸ್ವಿ, ಪರಂಪರೆ ಮತ್ತು ಕುವೆಂಪು, ಪ್ರಸಾರಾಂಗ ಬೆಂಗಳೂರು ವಿ.ವಿ.೧೯೯೧, ಪು.೩.
ಅದೇ. ಸುಜನಾ, ಶ್ರೀ ಕುವೆಂಪು ಕೃತಿಗಳ ತಾತ್ವಿಕ ಹಿನ್ನೆಲೆ, ಪು.೫೫
ಅದೇ ಪು.೨೧
ಕುವೆಂಪು, ಕುವೆಂಪು ಅವರ ಕಥೆಗಳು, ಸಾಲದ ಮಗು, ಉದಯ ರವಿ ಪ್ರಕಾಶನ ೨೦೦೨, ಪು.೧೬
ಅದೇ ಪು.೬೭
ಡಾ.ಉದ್ದಂಡಯ್ಯ, ಕುವೆಂಪು ಕಥನ, ಅಧ್ಯಯನ ಮಂಡಲ, ಬೆಂಗಳೂರು-೨೦೦೪, ಪು.೧೧೨
ಡಾ.ಡಿ.ಆರ್.ನಾಗರಾಜ್, ಶಕ್ತಿ ಶಾರದೆಯ ಮೇಳ, ಅಕ್ಷರ ಪ್ರಕಾಶನ, ಹೆಗ್ಗೋಡು ೨೦೦೨, ಪು.೮೭, ೮೮.
ಕೆ.ಸಿ.ಶಿವಾರೆಡ್ಡಿ, ಕನ್ನಡದ ಹಾಡು ಪಾಡು, ಅಧ್ಯಯನ ಮಂಡಲ, ಬೆಂಗಳೂರು, ೨೦೦೩, ಪು.೧೧೬, ೧೧೭.
ಕುವೆಂಪು, ಮಲೆಗಳಲ್ಲಿ ಮದುಮಗಳು, ಓದುಗರಿಗೆ, ಉದಯರವಿ ಪ್ರಕಾಶನ, ಮೈಸೂರು, ೧೯೯೨.

ಪ್ರದೀಪ್ ಮಾಲ್ಗುಡಿ

ರಂಗನೀತಿ ಬದಲಾಗಬೇಕು


ವಿಧಾನಸೌಧದಲ್ಲಿ ದಿನವೂ ಹೊಸಹೊಸ ನಾಟಕದ ಕತೆಗಳು, ಪಾತ್ರಗಳು, ನಿರ್ದೇಶಕರು ಹುಟ್ಟುತ್ತಿರುವುದರಿಂದ ನಿಜವಾಗಿ ಬಣ್ಣ ಹಚ್ಚಿಕೊಂಡು ನಾಟಕ ಆಡುವವರೇ ಡಲ್ಲಾಗಿದ್ದಾರೆ. ಕರ್ನಾಟಕ ರಾಜ್ಯವೆಂದರೆ ಅದು ಕೇವಲ ರಾಜಕಾರಣ ಎಂದು ಮಾಧ್ಯಮದವರು ತಿಳಿದಿದ್ದಾರೆ. ದಿನನಿತ್ಯದ ನ್ಯೂಸ್ ಎಂದರೆ ರಾಜಕಾರಣದಲ್ಲಿ ಏನೇನಾಗ್ತಿದೆ ಎಂಬುದನ್ನು ತೋರುವುದೇ ಆಗಿದೆ. ಹಾಗೆಯೇ ರಂಗಭೂಮಿ ಎಂದರೆ ಕೇವಲ ಬೆಂಗಳೂರಿನಲ್ಲಿ ನಡೆಯುವುದಷ್ಟೇ ರಂಗಭೂಮಿ ಎಂದಾಗಿದೆ. ಈ ವಿಷಯವಾಗಿ ಬೆಂಗಳೂರಿನಿಂದ ಹೊರಗಿರುವವರೆಲ್ಲ ನಿರಂತರವಾಗಿ ಆಕ್ಷೇಪಿಸುತ್ತಲೇ ಇರುತ್ತಾರೆ. ಮೈಸೂರು ಎಂದರೆ ರಂಗಾಯಣ. ಅದನ್ನು ಗುಲ್ಬರ್ಗ, ಧಾರವಾಡ, ಶಿವಮೊಗ್ಗಕ್ಕೆ ವಿಸ್ತರಿಸಬೇಕೆಂದಿದ್ದ ಲಿಂಗದೇವರು ಹಳೆಮನೆ ಕೆಲಸ ಮಾಡುತ್ತಲೇ ಮುಗಿದು ಹೋದರು. ಈಗ ರಂಗಾಯಣಕ್ಕೆ ಯಾರು? ಎಂಬುದೇ ರಾಜ್ಯದ ರಂಗಸುದ್ದಿ. ಅನೇಕರು ಪೈಪೋಟಿ ನಡೆಸುತ್ತಲೇ ಇದ್ದರು. ಅಷ್ಟು ಹೊತ್ತಿಗೆ ವಿಧಾನಸೌಧವೇ ರಂಗಭೂಮಿಯಾಗಿದೆ.
ಸರ್ಕಾರ ಪ್ರೌಢಶಾಲೆಗಳಲ್ಲಿ ಭಗವದ್ಗೀತಾ ರಂಗಪ್ರಯೋಗಕ್ಕೆ ಪ್ಲಾಟ್ ರೆಡಿ ಮಾಡಿದೆ. ಅದರ ಬದಲು ಅಲ್ಲೊಂದು ನಾಟಕ ಕಲಿಸುವ ಮೇಷ್ಟ್ರನ್ನು ನೇಮಕ ಮಾಡಿದರೆ, ಒಂದಷ್ಟು ಹಾಡು ಹಾಡುವ, ನಟನೆ ಮಾಡುವ ಪ್ರತಿಭೆಯು ಚಿಕ್ಕ ಮಕ್ಕಳಲ್ಲಿ ನಿಜವಾದ ಮನುಷ್ಯನನ್ನು ಅನಾರವಣಗೊಳಿಸಲು ಸಾಧ್ಯ. ಸ್ವಾತಂತ್ರ್ಯ ಬಂದಾಗಿನಿಂದ ಕರ್ನಾಟಕ ಸರ್ಕಾರ ಒಂದು ಸಾರಿ ನಾಲ್ಕು ಮತ್ತೊಂದು ಸಾರಿ ಇಪ್ಪತ್ತು ನಾಟಕದ ಮೇಷ್ಟ್ರುಗಳನ್ನು ನೇಮಕ ಮಾಡಿದ್ದನ್ನು ಬಿಟ್ಟರೆ ರಂಗಭೂಮಿಗೂ ತನಗೂ ಸಂಬಂಧವೇ ಇಲ್ಲದಂತೆ ಶಿಕ್ಷಣ ವ್ಯವಸ್ಥೆ ನಿರ್ಮಾಣಗೊಂಡಿದೆ. ಸಾವಿರಾರು ಪದವಿ ಕಾಲೇಜುಗಳಲ್ಲಿ, ಪಿಯು ಕಾಲೇಜುಗಳಲ್ಲಿ ತರಗತಿಗಳ ಪಾಠದ ಭಾರವಿದೆಯೇ ಹೊರತು ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ಯೋಗ್ಯವಾದಂಥ ಸಾಂಸ್ಕೃತಿಕ ಕಾರ್ಯಕ್ರಮಗಳು ಇಲ್ಲದಿರುವುದು ಸಾಂಸ್ಕೃತಿಕ ದುರಂತವೇ ಸರಿ. ರಂಗಮುಖೇನ ಶಿಕ್ಷಣ ಎಂಬುದು ಒಂದು ದೊಡ್ಡ ಪರಿಕಲ್ಪನೆ. ಶಿಕ್ಷಣಕ್ಕೆ ಅದು ತೀರಾ ಅಗತ್ಯ. ಆದರೂ ನಾವೇಕೆ ಚಿಂತಿಸುತ್ತಿಲ್ಲ. ನಮಗೆ ರಂಗನೀತಿ ಸ್ಪಷ್ಟ ಇಲ್ಲ. ರಂಗಭೂಮಿಯನ್ನು ಶಿಕ್ಷಣದ ಒಂದು ಭಾಗವಾಗಿ ಮಾಡಿದಾಗ ಸಾವಿರಾರು ಪ್ರತಿಭೆಗಳು ಹೊಸಶಕ್ತಿ ಪಡೆಯಲು ಸಾಧ್ಯ. ಆದರೆ ನಮಗೆ ಶಕ್ತಿಯುತವಾದ, ಮೌಲ್ಯಯುತವಾದ ಶಿಕ್ಷಣದ ಚಿಂತನೆಯ ಕೊರತೆ ಇರುವುದರಿಂದ ನಮಗೆ ರಂಗಭೂಮಿ, ನಾಟಕ ವರ್ಜ್ಯ. ಅದು ಕೆಲಸಕ್ಕೆ ಬಾರದವರ ಕೆಲಸವಾಗಿ ಕುಳಿತಿದೆ. ನಮ್ಮ ನಡುವಿನ ರಂಗಪ್ರತಿಭೆಗಳ ಮಾತನ್ನೂ ನಾವು ಕೇಳುತ್ತಿಲ್ಲ. ಶಿಕ್ಷಣವೆಂದರೆ ಕೆಲಸಕ್ಕೆ ಯೋಗ್ಯವಾದುದಲ್ಲ ಎಂದಾದರೆ, ಅಂಥ ಶಿಕ್ಷಣದಿಂದ ನಮಗೇನು ಪ್ರಯೋಜನ? ಯುವ ಮನಸ್ಸುಗಳನ್ನು ನಾವು ಹೇಗೆ ನಿರ್ಮಾಣ ಮಾಡಬೇಕು? ಮರು ಪ್ರಜಾಪ್ರಭುತ್ವದ ಸಶಕ್ತ ಪ್ರಜೆಗಳಾಗಬೇಕೊ ಅಥವಾ ನಿಶ್ಯಕ್ತ ಪ್ರಜೆಗಳಾಗಬೇಕೊ ಎಂಬ ಚಿಂತನೆಗಳು ಇಂದು ಮುಖ್ಯ. ರಂಗಭೂಮಿಯಿಂದ ಕಲಿತ ವಿದ್ಯಾರ್ಥಿಗೂ, ಕೇವಲ ಪುಸ್ತಕದಿಂದ ಕಲಿತ ವಿದ್ಯಾರ್ಥಿಗೂ ತುಂಬಾ ವ್ಯತ್ಯಾಸವನ್ನು ನಮ್ಮ ಜೀವನದಲ್ಲೇ ಕಂಡಿದ್ದೇವೆ.
ರಂಗಭೂಮಿ ಒಂದು ಬಹುಶಿಸ್ತೀಯ ಅಧ್ಯಯನ ಕ್ಷೇತ್ರ. ಅಲ್ಲಿ ಅನೇಕ ವಿಷಯಗಳನ್ನು ಕಲಿಯಬೇಕಾಗುತ್ತದೆ. ಅದು ಅಂತಿಮವಾಗಿ ಮನುಷ್ಯನನ್ನೇ ಒಂದು ಸಂಪನ್ಮೂಲವನ್ನಾಗಿಸುತ್ತದೆ. ಆದರೆ ಇತರ ವಿಷಯಗಳನ್ನು ಕೇವಲ ಬೋಧನೆ ಮತ್ತು ಓದಿನಿಂದ ಕಲಿತದ್ದು ಆತನ ಜೀವನಕ್ಕೆ ನಿಷ್ಪ್ರಯೋಜಕವಾಗುತ್ತದೆ. ಡಾಕಾ ವಿಶ್ವವಿದ್ಯಾಲಯದ ಎಕನಾಮಿಕ್ಸ್ ಪ್ರೊಫೆಸರ್ ಮಹಮದ್ ಯೂನಿಸ್‌ಗೆ ಬಾಂಗ್ಲಾ ಬರಗಾಲಕ್ಕೆ ತಾನು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಓದಿ ಬಂದದ್ದು, ಪ್ರಯೋಜನಕ್ಕೆ ಬರುವುದಿಲ್ಲ. ಆತ ರಾಜೀನಾಮೆ ನೀಡಿ ಬಾಂಗ್ಲಾದಲ್ಲಿ ಮಹಿಳಾಬ್ಯಾಂಕ್ ಮಾಡುತ್ತಾನೆ. ಇಂದು ಸ್ತ್ರಿಶಕ್ತಿ ಕೇಂದ್ರಗಳ ಪಿತಾಮಹ ಆತನೆ. ಆತನ ಪ್ರಯೋಗ ಜಗತ್ತಿಗೆ ಮಾದರಿ. ಆತನಿಗೆ ನೊಬೆಲ್ ಪ್ರಶಸ್ತಿ ಕೂಡ ಬಂತು. ನಾವು ಕಲಿತ ವಿದ್ಯೆ ನಮ್ಮ ಮುಂದಿನ ಜೀವನಕ್ಕೆ ಪ್ರಯೋಜನ ಆಗದಿದ್ದರೆ ಏನು ಪ್ರಯೋಜನ? ಈಗ ನಮ್ಮ ಶಿಕ್ಷಣ ಪ್ರಯೋಜನವಾಗದ ಅನೇಕ ವಿಷಯ ಕಲಿಸುತ್ತಿದೆ. ಪ್ರಯೋಜನವಾಗುವುದನ್ನು ಕಲಿಸಲು ಮನಸ್ಸು ಮಾಡುತ್ತಿಲ್ಲ. ಅದರಲ್ಲಿ ರಂಗಭೂಮಿ ಮೂಲಕ ಕಲಿಸಬಹುದಾದಂಥ ಅನೇಕ ವಿಷಯಗಳಿವೆ. ಸ್ವತಃ ರಂಗಭೂಮಿ ಮಾನವ ಸಂಪನ್ಮೂಲಗಳ ಮುಖ್ಯ ಕೇಂದ್ರ. ಆದರೂ ಅದನ್ನು ನಾವು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಸೋತಿದ್ದೇವೆ. ರಂಗಭೂಮಿ ಕಲಿಸುವ ಶಾಲೆಗಳಿವೆ. ನೀನಾಸಂ, ಶಿವಸಂಚಾರ, ರಂಗಅಧ್ಯಯನ ಕೇಂದ್ರ ಮುಂತಾದವು. ರಂಗಾಯಣ ಮತ್ತು ಎನ್‌ಎಸ್‌ಡಿಗಳೂ ಈ ವ್ಯಾಪ್ತಿಗೆ ಬರುತ್ತವೆ. ಕೆಲವು ಶಾಲೆಗಳಿಗೆ ನಾಟಕದ ಮೇಷ್ಟ್ರುಗಳಿದ್ದರೆ, ಹೈಸ್ಕೂಲು ಹಂತದಲ್ಲಿ ಮಾತ್ರ. ಪಿಯುಸಿ, ಪದವಿ ತರಗತಿಗಳಿಗೆ ನಾಟಕ ಕಲೆ ವಿಷಯವನ್ನು ಕಲಿಸುವ ಯತ್ನ ತುಂಬಾ ತುರ್ತಾಗಿ ಆಗಬೇಕಾಗಿದೆ. ಬೆಂಗಳೂರಿನ ಕೆಲವು ಕಾಲೇಜುಗಳ ಸಾಂಸ್ಕೃತಿಕ ಪ್ರತಿಷ್ಠೆಯೆಂದರೆ, ಆಯಾ ವರ್ಷ ಅವು ಆಡುವ ನಾಟಕಗಳು. ಲಕ್ಷಾಂತರ ರೂ. ಬಜೆಟ್ ನೀಡುವ ಅಂಥ ಕಾಲೇಜುಗಳಿಗೆ ಬೆಂಗಳೂರಿನ ಕಾಲೇಜು ರಂಗಭೂಮಿಯ ಪ್ರಶಸ್ತಿಯ ಕಿರೀಟದ ಗರಿಗಳಾಗಿವೆ. ನಿರ್ದೇಶಕ ಜೀವನ್‌ರಾಂ ಸುಳ್ಯ ಮೂಡಬಿದರೆಯ ಆಳ್ವಾಸ್ ಕಾಲೇಜಿಗೆ ನಾಟಕ ಮತ್ತು ಪ್ರದರ್ಶಕ ಕಲೆಗಳಿಂದಾಗಿ ರಾಷ್ಟ್ರೀಯ ಪುರಸ್ಕಾರಕ್ಕೆ ಕಾರಣರಾಗಿದ್ದಾರೆ. ಒಂದು ಕಾಲೇಜು ಸಾಂಸ್ಕೃತಿಕವಾಗಿ ಹೇಗೆ ಜೀವಂತ ಇರಬೇಕೆಂಬುದಕ್ಕೆ ಸಾಕ್ಷಿಯಾಗಿದೆ. ರ‍್ಯಾಂಕುಗಳ ಪಟ್ಟಿ ಒಂದು ಕಾಲೇಜಿಗೆ ಹೆಚ್ಚಿನ ಅಡ್ಮಿಷನ್, ಕ್ಯಾಪಿಟೇಷನ್ ತರಬಹುದು. ಆದರೆ ಒಂದು ಕಾಲೇಜಿನ ಸಾಂಸ್ಕೃತಿಕ ಕಾರ‍್ಯಕ್ರಮ ಆ ಕಾಲೇಜಿನ ಪ್ರತಿಷ್ಠೆಯನ್ನು ಅಜರಾಮರಗೊಳಿಸುತ್ತದೆ.
ಆದ್ದರಿಂದ ರಂಗನೀತಿ ಎಂಬುದು ಸರ್ಕಾರ ಮಾಡಿ ಆದೇಶ ಹೊರಡಸುವಂಥದ್ದಲ್ಲ. ಆಯಾ ಕಾಲೇಜು, ಶಿಕ್ಷಣ ಸಂಸ್ಥೆಗಳಿಗಿರಬೇಕಾದ ಕನಿಷ್ಠ ವಿವೇಕ. ಕಾಲೇಜಿಗೆ ಕೀರ್ತಿ ತಂದವರಲ್ಲಿ ರ‍್ಯಾಂಕ್, ಸ್ಪೋರ್ಟ್, ಎನ್‌ಸಿಸಿ, ಎನ್‌ಎಸ್‌ಎಸ್ ಇದ್ದಂತೆಯೇ ನಾಟಕ ಮುಂತಾದ ಪ್ರದರ್ಶಕ ಕಲೆಗಳೂ ಮುಖ್ಯ. ಸಾಂಸ್ಕೃತಿಕವಾಗಿ ಮೃತವಾಗಿರುವ ಕಾಲೇಜು ಎಂಥ ದೊಡ್ಡ ಬಿಲ್ಡಿಂಗ್, ಲೈಬ್ರರಿ, ಉದ್ಯಾನವನ ಹೊಂದಿದ್ದರೇನು ಪ್ರಯೋಜನ? ಅಲ್ಲಿ ವಿದ್ಯಾರ್ಥಿಗಳೆಂಬ ದೊಡ್ಡ ಬಕೆಟ್‌ಗಳು ಸೃಷ್ಟಿಯಾಗುತ್ತಿರುತ್ತಾರೆಯೇ, ಹೊರತು ಚಿಂತನಶೀಲರಾದ, ಜೀವನಮುಖಿಗಳಾದ ಮಾನವೀಯ ವಿದ್ಯಾರ್ಥಿಗಳು ಸೃಷ್ಟಿಯಾಗಲು ಸಾಧ್ಯವಿಲ್ಲ. ಈ ಮಾತು ಜಿಲ್ಲೆಗೊಂದು, ತಾಲ್ಲೂಕಿಗೊಂದು, ವಿಷಯಕ್ಕೊಂದು ಸೃಷ್ಟಿಯಾಗುತ್ತಿರುವ ವಿಶ್ವವಿದ್ಯಾಲಯಗಳಿಗೂ ಅನ್ವಯಿಸುತ್ತದೆ. ಶಿಕ್ಷಣ ನೀರುಮಜ್ಜಿಗೆ ಕಾರ‍್ಯಕ್ರಮ ಆಗಬಾರದು. ಸಶಕ್ತ ವಿದ್ಯಾರ್ಥಿಗಳು ಮಾತ್ರವೇ ಮುಂದೆ ಸಶಕ್ತ ಅಧ್ಯಾಪಕ, ಆಡಳಿತಗಾರ, ಕಲಾವಿದ, ರಾಜಕಾರಣಿ ಆಗಬಲ್ಲರು. ರಂಗನೀತಿ ಎಂಬುದು ನಮ್ಮ ಪರಿಸರವನ್ನು ಹೆಚ್ಚು ಮಾನವೀಯಗೊಳಿಸಲಿಕ್ಕೆ ನಾವೇ ರೂಪಿಸಿಕೊಳ್ಳುವ ಶಿಕ್ಷಣ ನೀತಿ ಆದಾಗ ಶಿಕ್ಷಣಕ್ಕೂ ಬಲ. ಮಾನವ ಸಂಪನ್ಮೂಲಕ್ಕೂ ಬಲ. ಇಲ್ಲದಿದ್ದರೆ ಶುಷ್ಕ ವಿಚಾರಗಳನ್ನು ಕಲಿಯುತ್ತ, ಕಲಿತದ್ದಕ್ಕೂ, ಬದುಕಿಗೂ ಸಂಬಂಧವೇ ಇಲ್ಲದೇ ಶಿಕ್ಷಣ ದುರಂತದತ್ತ ಯುವಜನರನ್ನು ತಳ್ಳುವ ಸಾಮಾಗ್ರಿಯಾಗಿಬಿಡುತ್ತದೆ.

ಡಾ.ರಾಜಪ್ಪ ದಳವಾಯಿ

ಪವಿತ್ರ ಮಾಸ ರಂಜಾನ್ ವಿಶೇಷತೆಗಳು


ಪವಿತ್ರ ರಂಜಾನ್ ತಿಂಗಳಲ್ಲಿ ೩೦ ದಿನಗಳ ಉಪವಾಸ (ರಂಜಾನ್ ಅರಬ್ಬಿ ತಿಂಗಳುಗಳ ಹೆಸರುಗಳಲ್ಲಿ ಒಂದು) ವಿರುವುದು ಕಡ್ಡಾಯ. ಅದಕ್ಕೆ ಬಡವ, ಶ್ರೀಮಂತ, ಹೆಣ್ಣು, ಗಂಡು ಎಂಬ ಬೇಧವಿಲ್ಲ. ಏಳು ವರ್ಷದ ಮಕ್ಕಳಿಗೂ ಉಪವಾಸ ಕಡ್ಡಾಯ. ಈ ತಿಂಗಳಲ್ಲಿ ಒಂದು ಪುಣ್ಯ ಮಾಡಿದರೆ ೭೦ ಪುಣ್ಯಗಳ ಮತ್ತು ಒಂದು ಪೈಸೆ ದಾನ ಮಾಡಿದರೆ ಎಪ್ಪತ್ತು ಪೈಸೆಗಳಷ್ಟು ಪ್ರತಿಫಲ ಸಿಗುತ್ತದೆಂಬ ಸಂದೇಶ ಪವಿತ್ರ ಕುರಾನಿನಲ್ಲಿದೆ.
ರಂಜಾನ್ ರಾತ್ರಿಗಳಲ್ಲಿ ಜಾಗರಣೆ ಮುಖಾಂತರ ಪ್ರಾರ್ಥಿಸಿದರೆ ದೇವರು ನಮ್ಮ ಪಾಪ ಕರ್ಮಗಳನ್ನು ಕ್ಷಮಿಸುತ್ತಾನೆ. ಭಕ್ತರು ಆ ಹತ್ತು ರಾತ್ರಿಗಳಲ್ಲಿ ಮನಸಾರೆ ದೇವರನ್ನು ಸ್ಮರಿಸಿದರೆ ಆ ಒಂದು ರಾತ್ರಿಯ ಪುಣ್ಯದ ಫಲವಾಗಿ ಸಾವಿರ ವರ್ಷ ರಾತ್ರಿಗಳ ಪುಣ್ಯವನ್ನು ಧಾರೆ ಎರೆಯುತ್ತಾನೆ. ಮನುಷ್ಯನು ತಾನು ಸಂಪಾದಿಸಿರುವ ಸಂಪಾದನೆಯಲ್ಲಿ ಸ್ವಲ್ಪ ಭಾಗ ಸ್ವಂತದವರಿಗೂ, ಬಡವರಿಗೂ ದಾನ ಮಾಡಬೇಕೆಂಬ ನಿಯಮವಿದೆ. ಇದು ದೇವಾಜ್ಞೆಗಳಲ್ಲೇ ಬಹುಮುಖ್ಯವಾದ ಆಜ್ಞೆ ಎಂದೇ ನಂಬಲಾಗಿದೆ.
ಕುರ್‌ಆನಿನಲ್ಲಿ ಮನುಷ್ಯನ ಜೀವನವನ್ನು ೫ ಭಾಗಗಳಾಗಿ ವಿಂಗಡಿಸಲಾಗಿದೆ.
ಮೊದಲನೆಯ ಭಾಗ
ಪ್ರಪಂಚದ ಮೊಟ್ಟ ಮೊದಲನೇ ಮಾನವರಾದಂಥ (ಆದಮ್ ಅಲೈಹಿಸ್ಸಲಾಂ) ಹೀಗೆ ಹೇಳುತ್ತಾರೆ;
‘ಆದಮ್ ಎಂಬ ಹೆಸರಿನಿಂದ ವಿಚಲಿತರಾಗುವಂತಹ ದೇಹವನ್ನು ಮಣ್ಣಿನಿಂದ ಮಾಡಿ ಪ್ರಾಣಿಪಕ್ಷಿ, ಜೀವಜಂತುಗಳ, ಯಕ್ಷ ಮಾನವರ ಆತ್ಮಗಳನ್ನು ಒಂದು ಉನ್ನತವಾದ ಸಮಯ ಮತ್ತು ಜಾಗದಲ್ಲಿ ಸೇರಿಸಿ ಪ್ರಪಂಚವನ್ನು sಸೃಷ್ಟಿಸುತ್ತೇನೆ ಮತ್ತು ಈ ಮಣ್ಣಿಗೆ ಜೀವ ತುಂಬುತ್ತೇನೆ. ನನ್ನ ಅಪ್ಪಣೆಯಂತೆ ನೀವೆಲ್ಲ ಈ ಮಣ್ಣಿನ ದೇಹಕ್ಕೆ ಸಾಷ್ಟಾಂಗವೆರಗಿರಿ’ ಎಂದು ಹೇಳಿದಾಗ ಯಕ್ಷಗಳ ಸರದಾರ (ಭೂತ) ‘ಹೇ ದೇವ, ನಾನು ನಿನ್ನ ಶ್ರೇಷ್ಠ ಭಕ್ತರಲ್ಲಿ ಒಬ್ಬನಾಗಿದ್ದು, ಈ ಮಣ್ಣಿನ ಮೂರ್ತಿಗೆ ಸಾಷ್ಟಾಂಗ ಮಾಡುವುದಿಲ್ಲ ಎಂದು ಹೇಳಿದಾಗ ದೇವರು ಆ ಸರದಾರನನ್ನು ದಿಟ್ಟಿಸಿ ನೋಡಿ ಆ ಮಣ್ಣಿನ ಮೂರ್ತಿಯ ಮೇಲೆ ಉಗಿಯುತ್ತಾನೆ. (ಆ ಭಾಗವೆ ನಮ್ಮ ಹೊಕ್ಕಳು)
ನಾನು ಈ ಮೂರ್ತಿಗೆ ಸಾಷ್ಟಾಂಗವೆರಗಲಾರೆ, ಅದರ ಫಲವಾಗಿ ನೀನು ಯಾವ ಮಾನವ ಕುಲಕ್ಕೆ ಜೀವ ತುಂಬಿ ನಿನ್ನ ಮಾರ್ಗದ ಅನುಕರಣೆ ಮಾಡುವೆಯೋ ಅದೇ ಮಾನವನಿಗೆ ಹಿಂದಿನಿಂದಲೂ ಮುಂದಿನಿಂದಲೂ, ಮನಸ್ಸಿನಿಂದಲೂ ನಾನು ದುನ್ಮಾರ್ಗದ ಶಿಕ್ಷಣ ಕೊಡುತ್ತೇನೆ. ಯಾರು ಗೆಲ್ಲುವರೋ ನೋಡುವ ಎಂದು ಹೇಳುತ್ತಾನೆ.
ಹೀಗೆ ದೇವರು ತನ್ನ ಭಕ್ತರ, ಅನುಯಾಯಿಗಳ, ಯಕ್ಷಗಳ, ಪ್ರಾಣಿಪಕ್ಷಿಗಳ ಪ್ರಪಂಚದ ಎಲ್ಲಾ ಜೀವಜಂತುಗಳ ಭಕ್ತಿಯನ್ನು ಅಪೇಕ್ಷಿಸುತ್ತಾನೆಯೇ ಹೊರತು ಬೇರೇನು ಅಲ್ಲ. ಸಕಲ ಜೀವ ಜಂತುಗಳನ್ನು ತನ್ನ ಮಹಿಮೆಯಿಂದಲೇ ಪೊರೆಯುತ್ತಿದ್ದಾನೆ.
ಎರಡನೇ ಜೀವನ: (ತಾಯಿಯ ಹೊಟ್ಟೆಯಲ್ಲಿ ಮಗುವಿನ ಸ್ಥಿತಿ)
ನಿಜ ಕುರ್‌ಆನಿನ ಒಂದು ವಾಕ್ಯ ಹೇಳುತ್ತದೆ. ಹಸು ತಿನ್ನುವುದು ಹುಲ್ಲು, ಅದು ಮಲ, ಮೂತ್ರವಾಗಿಯೂ ಹೊರ ಹೊಮ್ಮುತ್ತದೆ ಹಾಗು ಒಂದು ಸಣ್ಣ ನರದ ಮೂಲಕ ನನ್ನ ನಿದರ್ಶನಗಳಲ್ಲೊಂದು ಸ್ವಾದಿಷ್ಟವಾದ, ಸುವಾಸನೆಯುಳ್ಳ ಹಾಲನ್ನು ಕೊಡುತ್ತದೆ.
ಅದೇ ರೀತಿ ತಾಯಿಯ ಹೊಟ್ಟೆಯ ಪದರದ ಒಳಗೆ ಮತ್ತೊಂದು ಪದರವಿಟ್ಟು ಬರಿ ಒಂದು ತೊಟ್ಟು ವೀರ್ಯದ ಕಣದಿಂದ ಒಂದು ಮಗುವನ್ನು ಸೃಷ್ಟಿಸುತ್ತೇನೆ, ಆ ಮಗುವಿಗೆ ಆಹಾರದ ವ್ಯವಸ್ಥೆ ಮಾಡಿದ್ದೇನೆ ನಂತರ ತಾಯಿಯ ದೇಹದಿಂದ ಹಾಲು ಉತ್ಪತ್ತಿಯಾಗುವಂತೆ ಮಾಡಿ ಆ ಮಗುವಿಗೆ ಉಣಿಸುತ್ತೇನೆ. ಇದೂ ಸಹ ನನ್ನ ನಿದರ್ಶನಗಳಲ್ಲೊಂದು. ಅಲ್ಲದೆ ಎಂದೂ ಆ ತಾಯಿಗೆ ಒಳ್ಳೆ ಸ್ಥಾನಮಾನ ಕೊಟ್ಟು ಅವಳ ಪಾದಗಳ ಕೆಳಗೆ ಸ್ವರ್ಗವನ್ನು ಇಟ್ಟಿದ್ದೇನೆ ಎಂದು ಹೇಳುತ್ತಾನೆ. ತಾಯಿ ಮಕ್ಕಳನ್ನು ಆರೈಕೆ ಮಾಡಿದಂತೆ ಮಕ್ಕಳು ದೊಡ್ಡವರಾಗಿ ಅವರನ್ನೂ ಆರೈಕೆ ಮಾಡಬೇಕು. ಆಗ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂದರ್ಥ.
ಮೂರನೇ ಜೀವನ: (ಇಹಲೋಕದ ಜೀವನ)
ಈ ಜೀವನ ಅತ್ಯಂತ ಮಹತ್ವ ಪೂರ್ಣ. ಮಾನವನಿಗೆ ಕೇಳಲಿಕ್ಕೆ ಕಿವಿ, ಮಾತಾಡುವುದಕ್ಕೆ ನಾಲಿಗೆ, ಭಯದೊಂದಿಗೂ ನಿರೀಕ್ಷೆಯೊಂದಿಗೂ ಆಕಾಶದಿಂದ ಮಿಂಚಿನ ಹೊಳಪನ್ನು ತೋರಿಸುವುದು. ಆಕಾಶದಿಂದ ನೀರನ್ನು ಸುರಿಸುವುದು, ಸತ್ತು ಬರಡಾಗಿರುವ ಭೂಮಿಯಲ್ಲಿ ಮತ್ತೆ ಜೀವ ತುಂಬುವುದು. ಆಕಾಶ ಭೂಮಿ ನನ್ನ ಅಪ್ಪಣೆಯಿಂದ ಸ್ಥಾಪನೆಯಾಗಿದೆ.
ಇದೂ ಸಹ ನನ್ನ ನಿದರ್ಶನಗಳಲ್ಲೊಂದು ಎಂದು ಹೇಳುತ್ತ, ಸೃಷ್ಟಿಯ ಆರಂಭ ಮತ್ತು ಅಂತ್ಯ ನನ್ನ ಕೈಯಲ್ಲಿದೆ. ಪ್ರಕೃತಿಯಲ್ಲಿ ಆಗುಹೋಗುವ ನಾವು ಈ ಭೂಮಿಯನ್ನು ಹಾಳುಗೆಡವಿದ್ದೀವಿ. ನನ್ನನ್ನು ಸ್ಮರಿಸಿರಿ. ನಿಸರ್ಗ ಪ್ರಕೃತಿಗಳಲ್ಲಿರುವ ವಸ್ತುಗಳು ನಿರ್ಮಿಸಿದವ ನಾನು, ನಾನಿದರ ಒಡೆಯ ನನಗೆ ಸಾಷ್ಟಾಂಗ ವೆರಗಿರಿ ಎಂದು ಕುರ್‌ಆನಿನ ಮೂಲಕ ಸಾರುತ್ತಾನೆ.
ಹೆಣ್ಣಿಗೆ ಸ್ಥಾನಮಾನ ತಾನಾಗಿ ಸಿಗುವ ಹಾಗೆ ಮಾಡಿದ್ದೇನೆ. ಹೆಣ್ಣು ವ್ಯಭಿಚಾರಿಯಾಗಿಯೂ, ದುರ್ನಡತೆಯುಳ್ಳವಳಾಗಿಯೂ, ಅಶ್ಲೀಲವಾಗಿಯೂ, ನಡೆದುಕೊಳ್ಳುತ್ತಾಳೆ. ಪಾಪ ಕಾರ್ಯಗಳು ಹೆಣ್ಣಿನಿಂದಲೇ ಹೆಚ್ಚಾಗುತ್ತದೆ. ಓ ಹೆಣ್ಣೇ ನೀನು ಸಭ್ಯಸ್ಥಳಾಗು ನಿನ್ನಿಂದ ಪಾಪಕಾರ್ಯಗಳು ಹೆಚ್ಚಾಗಿ ನಡೆಯುತ್ತದೆ. ನೀನು ಸಭ್ಯಸ್ಥಳಾದರೆ ನಿನ್ನ ಪಾದಗಳಲ್ಲಿ ನಾನು ಸ್ವರ್ಗ ಪ್ರಾಪ್ತಿಸಿದ್ದೇನೆ. ನೀನು ಸ್ವರ್ಗದಲ್ಲಿ ಜಾಗ ಕೊಡಿಸು. ನರಕದಲ್ಲಿ ತಳ್ಳಬೇಡ ಎಂದು ಎಚ್ಚರಿಸಿದ್ದಾನೆ.
ಬಡವನಿಗೂ ಧನಿಕನಿಗೂ ಒಂದೇ ನ್ಯಾಯ. ಮನುಷ್ಯರು ಎಲ್ಲರೂ ಸಮಾನರು ಒಂದೇ ಸಾಲಿನಲ್ಲಿ ನಿಂತು ಪ್ರಾರ್ಥಿಸಬೇಕು. ಸತ್ತ ಮೇಲೆ ಒಂದು ಜಾಗದಲ್ಲಿ ಮಣ್ಣು ಮಾಡಬೇಕು. ಎಷ್ಟೇ ಸಂಪತ್ತಿದ್ದರೂ ದರ್ಪ, ದುರಹಂಕಾರ ಮಾಡಬಾರದು. ದರ್ಪದ ನಡೆ ದುರಹಂಕಾರ ನಾನು ಹೊತ್ತು ಮಲಗುವ ಕಂಬಳಿ. ನನ್ನ ಕಂಬಳಿಯನ್ನು ಯಾರು ಎಳೆಯದಿರಿ.
ಬೆಳಗ್ಗೆ, ಮಧ್ಯಾಹ್ನ, ಸಾಯಂಕಾಲ, ರಾತ್ರಿಗಳಲ್ಲಿ ದೇವರ ಗುಣಗಾನ ಮಾಡುವುದರಿಂದ ತಪ್ಪುಗಳು ನಿಮ್ಮ ಹತ್ತಿರ ಸುಳಿಯುವುದಿಲ್ಲ. ಏಳು ವರ್ಷದ ನಂತರ ಮಕ್ಕಳು ನಮಾಜ್ ಅನ್ನು ಪ್ರತಿದಿನ ಕರ್ತವ್ಯಪೂರ್ಣವಾಗಿ ಮಾಡಬೇಕು ಎಂದು ಘೋಷಿಸುತ್ತಾನೆ.
ದಾನ, ಧರ್ಮ ದೇವರು ಆಜ್ಞೆಯಿತ್ತ ಕರ್ತವ್ಯಗಳಲ್ಲಿ ಮತ್ತೊಂದು. ತಮ್ಮಲ್ಲಿರುವ ಸಂಪತ್ತುಗಳೆವನ್ನು ದಾನಧರ್ಮ ಮಾಡಿರಿ ಅಥವಾ ಕನಿಷ್ಟ ದಾನಧರ್ಮ ಆದರೂ ಮಾಡಲೇ ಬೇಕು ಎನ್ನುತ್ತಾನೆ.
ಮರಳುಗಾಡಿನಲ್ಲಿ ಕಾಣಿಸುವಂತಹ ಪ್ರಾಣಿ ಒಂಟೆ. ನೀರಿಲ್ಲದ ಮರಳುಗಾಡಿನಲ್ಲಿ ಒಂಟೆ ತನ್ನ ಬೆನ್ನಿನಲ್ಲಿ ನೀರನ್ನಿಟ್ಟುಕೊಳ್ಳುವ ವ್ಯವಸ್ಥೆ ಮಾಡಿದವನಾರು? ಓ ಯಕ್ಷಗಳೇ ಮತ್ತು ಮಾನವರೇ, ನನ್ನ ಯಾವ ಯಾವ ಚಮತ್ಕಾರಗಳನ್ನು ಸುಳ್ಳಾಗಿಸುವಿರಿ ಎಂದು ಪ್ರಶ್ನಿಸುತ್ತಾನೆ.
ಉಪವಾಸಗಳನ್ನು ಕಡ್ಡಾಯಗೊಳಿಸಿದ್ದಾನೆ. ಇದರಿಂದ ರೋಗುರುಜಿನಗಳು ಸಹ ದೂರವಿರುತ್ತದೆ. ೧೦-೧೦ ದಿನಗಳ ೩ ಭಾಗಗಳಾಗಿ ಕೊನೆಯ ಹತ್ತು ದಿನದ ಭಾಗದಲ್ಲಿ ಒಂದು ರಾತ್ರಿಯನ್ನು ಅಭೂತಪೂರ್ವ ರಾತ್ರಿಯಾಗಿ ಮಾಡಿದ್ದೇನೆ. ಆ ರಾತ್ರಿಯನ್ನು ಹುಡುಕಿ ನನ್ನನ್ನು ಜಪಿಸಿ, ನನ್ನ ಮಹಿಮೆಯನ್ನು ಕೊಂಡಾಡಿ, ನಾನು ಅನುಗ್ರಹಿಸುವುದನ್ನು ಸ್ಮರಿಸಿ ಕೃತಜ್ಞರಾಗಿ. ಈ ರಾತ್ರಿಯ ಅನುಕಂಪತೆಯನ್ನು ನಾನು ನನ್ನ ಆಪ್ತ ಭಕ್ತರ ಮೇಲೆ ಪ್ರಾಪ್ತಿಸುತ್ತೇನೆ ಅದರ ಮಹಿಮೆ ನಿಮಗೆ ಸಾವಿರ ತಿಂಗಳವರೆಗೂ ಪುಣ್ಯ ಪ್ರಾಪ್ತಿಸುತ್ತೇನೆ. ಇದು ನನ್ನ ವಾಗ್ದಾನ ಎಂದು ಹೇಳಿದ್ದಾನೆ.
ನಾಲ್ಕನೇ ಜೀವನ: (ಸಾವು ಸಾವಿನ ಮನೆ)
ಮನುಷ್ಯ ಹುಟ್ಟುವುದಕ್ಕೆ ಮುಂಚೆ ಹುಟ್ಟಲಿಕ್ಕಾಗಿ ಪೂಜೆ ಪುನಸ್ಕಾರಗಳು, ದಾನಧರ್ಮ, ಹರಕೆಗಳನ್ನು ಮಾಡಲಾಗುತ್ತದೆ. ಮಗುವಿನ ಬರುವಿಕೆ ಅಳುವಿನಿಂದಲೇ ಶುರುವಾಗುತ್ತದೆ. ಕಾರಣ ಆ ಮಗುವಿಗೆ ಈ ಪ್ರಪಂಚದ ಜೀವನ ಬೇಡವಾಗಿರುತ್ತದೆ. ಆಗ ಜನಗಳು ಆ ಮಗುವಿಗೆ ಜೇನು-ಖರ್ಜೂರದ ಸಿಹಿಯನ್ನು ನಾಲಗೆಗೆ ತೋರಿಸಿ ಇಲ್ಲಿ ಸಿಹಿ ಸಿಗುತ್ತದೆ ಎಂದು ಬಾಯಿಮುಚ್ಚಿಸಿ ಬರಮಾಡಿಕೊಳ್ಳುತ್ತಾರೆ. ದೊಡ್ಡವನಾಗಿ ಅದು ಮಹಾನ್ ವ್ಯಕ್ತಿಯೂ ಆಗಬಹುದು, ಮಹಾನ್ ಮಾತೆಯೂ ಆಗಬಹುದು. ರಾಜನೂ ಆಗಬಹುದು ಅಥವ ಕ್ರೂರಿಯೂ ಆಗಬಹುದು. ಆದರೆ ರಾಜನಾದರೂ ಸರಿಯೇ ಸತ್ತ ನಂತರ ಅದು ಶವವೇ. ಅವನನ್ನು ದೇವಚರರು ಕರೆದುಕೊಂಡು ಹೋಗುವಾಗ ದೇಶದ್ರೋಹದಿಂದ ಸಂಪಾದನೆ ಮಾಡಿದ್ದಂತಹುದೆಲ್ಲ ಅವನಿಗೆ ನೋಡಿ ನಗುತ್ತದೆ.
ನಂತರ ಎಲ್ಲವನ್ನು ಬಿಟ್ಟು ಶವವನ್ನು ಹೊತ್ತು ಸ್ಮಶಾನದ ಕಡೆಗೆ ಪ್ರಯಾಣಿಸುತ್ತಾರೆ. ಹೆಂಡತಿ-ಮಕ್ಕಳು, ತಾಯಿ-ತಂದೆಯರು ಅಳುತ್ತ ಬೀಳ್ಕೊಡುತ್ತಾರೆ. ಆಗ ಆ ಮನುಷ್ಯ ನಾನು ಬಂದಾಗ ಈ ಜನ ನಕ್ಕವರು ಅಕಸ್ಮಾತ್ ಆಗ ಆಳುತ್ತಿದ್ದಿದ್ದರೆ ನಾವು ಭೂಲೋಕದಲ್ಲಿ ತಪ್ಪುಗಳನ್ನು ಮಾಡುತ್ತಿರಲಿಲ್ಲ ಎಂದು ಬೇಸರ ಪಡುತ್ತಾನೆ.
ನಂತರ ಮಣ್ಣಿನಲ್ಲಿ ಸೇರಿಸಿ ಬಂಧು-ಬಾಂಧವರೆಲ್ಲ ವಾಪಸ್ಸಾಗುತ್ತಾರೆ. ಅಲ್ಲಿ ಉಳಿಯುವುದು ಆ ಶವ ಮತ್ತು ಅವನ ಪಾಪಪುಣ್ಯಗಳು ಮಾತ್ರ. ದೇವಚರರು ತಕ್ಕಡಿ ಸಮೇತ ಅಲ್ಲಿಗೆ ಧಾವಿಸುತ್ತಾರೆ.
ಐದನೇ ಮತ್ತು ಕೊನೆಯ ಜೀವನ ನಿರ್ಣಾಯಕ ದಿನ
ಆ ದಿನ ಮಹಾದುರಂತ ಅಗುತ್ತದೆ. ಭೂಮಿಯ ಆಕಾರ ಬೇರೆಯ ತರವಾಗುತ್ತದೆ. ಸೂರ್ಯ ತಲೆಯ ಮೇಲೆ ಬಂದಿರುತ್ತಾನೆ. ಗತಿಸಿ ಹೋದಂತಹವರೆಲ್ಲರನ್ನೂ ಜೀವಂತಗೊಳಿಸಿ ಬಿಟ್ಟಿರುತ್ತಾರೆ. ಆ ದಿನ ಜನರು ಚದುರಿದ ಹಾಳೆಗಳಂತಾಗುವರು. ಪರ್ವತಗಳು ಬಣ್ಣಬಣ್ಣದ ಉಣ್ಣೆಯಂತಾಗಿ ಬಿಡುವುದು. ಗತಿಸಿಹೋದಂತಹ ೧,೨೪,೦೦೦ ಪ್ರವಾದಿಗಳು, ಧರ್ಮಪ್ರಚಾರಕರುಗಳು, ಧರ್ಮಗುರುಗಳು ಕಾಣುವರು. ದೇವರ ಸನ್ನಿಧಿಯಲ್ಲಿ ದೇವರ ದರ್ಶನಕ್ಕಾಗಿ ಎದುರು ನೋಡುವರು. ಕುರ್‌ಆನ್‌ನಿನ ಪ್ರಕಾರ ಅಂದೇ ಆ ದಿನದಲ್ಲೇ ದೇವರನ್ನು ನೋಡಬಹುದು. ಅಲ್ಲಿಯವರೆಗೂ ದೇವರು ಯಾರಿಗೂ ಕಾಣಸಿಗುವುದಿಲ್ಲವೆನ್ನುತ್ತದೆ.
ದೇವರು ಆ ದಿನ ಗತಿಸಿ ಹೋದವರ ಆತ್ಮಗಳಲ್ಲಿ ಜೀವತುಂಬಿ ಪಾಪ-ಪುಣ್ಯಗಳ ಗಣನೆಯನ್ನು ತೋರುತ್ತಾನೆ. ಸನ್ಮಾರ್ಗದಡೆಗೆ ಹೋಗುತ್ತಿದ್ದವರನ್ನು ಸ್ವರ್ಗದತ್ತಲೂ, ದುಮಾರ್ಗದೆಡೆಗೆ ನಡೆಯುತ್ತಿದ್ದವರನ್ನು ನರಕದೆಡೆಗೂ ಕಳುಹಿಸುತ್ತಾನೆ. ಆದುದರಿಂದ ಮುಸ್ಲಿಂ ಬಾಂಧವರು ನಮಾಜ್ ಉಪವಾಸ, ದಾನಧರ್ಮ, ಹಜ್ ಎಂಬ ಕರ್ತವ್ಯಗಳನ್ನು ಮಾಡುತ್ತಿರುತ್ತಾರೆ.

ಮಾಸ್ತಿ ಜಾಕಿರ್ ಅಲಿಖಾನ್
ಉಪಾಧ್ಯಕ್ಷ, ಕರವೇ ಬೆಂಗಳೂರು ನಗರ ಜಿಲ್ಲೆ

ಕೆಚ್ಚೆದೆಯ ಹೋರಾಟಗಾರ ಎ.ಎಸ್.ನಾಗರಾಜು


ಗೋಕಾಕ್ ಚಳವಳಿಯ ಮೂಲಕ ಕನ್ನಡ ಪರ ಹೋರಾಟಕ್ಕೆ ಕಾಲಿಟ್ಟ ಎ.ಎಸ್.ನಾಗರಾಜು ಕರ್ನಾಟಕ ರಕ್ಷಣಾ ವೇದಿಕೆಯ ಹಲವು ಮಹತ್ವಪೂರ್ಣ ಹೋರಾಟಗಳಲ್ಲಿ ಸಕ್ರಿಯರಾಗುವ ಮೂಲಕ ಸಂಘಟನೆಗೆ ಬಲ ತುಂಬಿದವರು.
ಬೆಂಗಳೂರಿನಲ್ಲಿ ವಾಸವಾಗಿರುವ ನಾಗರಾಜು ಮೂಲತಃ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಅಗಳಿಬೈಲು ಗ್ರಾಮದವರು. ಎ.ಎನ್.ಶಂಕರಪ್ಪಗೌಡ ಹಾಗೂ ಗಿರಿಜಮ್ಮ ದಂಪತಿಗಳ ಪುತ್ರನಾಗಿ ೧೦೬೪ ನವೆಂಬರ್ ೧೯ರಂದು ಜನಿಸಿದ ನಾಗರಾಜು ಎಸ್‌ಎಸ್‌ಎಲ್‌ಸಿ ವರೆಗೆ ವ್ಯಾಸಂಗ ಪೂರೈಸಿದವರು. ಅಪ್ಪಟ ಮಲೆನಾಡಿನ ವಾತಾವರಣದಲ್ಲಿ ಬೆಳೆದ ನಾಗರಾಜು ತೀರ್ಥಹಳ್ಳಿಯಲ್ಲಿದ್ದಾಗಲೇ ಕನ್ನಡ ಪರವಾದ ಸಾಕಷ್ಟು ಹೋರಾಟಗಳಲ್ಲಿ ತೊಡಗಿಸಿಕೊಂಡರು. ಮೊದಲಿಗೆ ಡಾ.ರಾಜ್‌ಕುಮಾರ್ ಅಭಿಮಾನಿ ಸಂಘಟನೆಯಲ್ಲಿ ಸಕ್ರಿಯರಾಗುವ ಮೂಲಕ ಕನ್ನಡ ಕಂಪನ್ನು ಪಸರಿಸಿದವರು. ಆ ನಂತರ ರಾಜಧಾನಿ ಬೆಂಗಳೂರಿಗೆ ಆಗಮಿಸಿ ಬದುಕು ಕಟ್ಟಿಕೊಂಡವರು.
ಅಗ್ರಹಾರ ದಾಸರಹಳ್ಳಿಯಲ್ಲಿ ಆರಂಭದಲ್ಲಿ ಪುಟ್ಟ ಉದ್ಯೋಗ ಮಾಡಿಕೊಂಡಿದ್ದ ನಾಗರಾಜು ಅವರದ್ದು ಸದಾ ಕನ್ನಡಕ್ಕೆ ತುಡಿಯುವ ಮನಸ್ಸು. ಈ ಕಾರಣಕ್ಕಾಗೇ ಅವರು ಮೇರುನಟ ಡಾ.ರಾಜ್ ನೇತೃತ್ವದಲ್ಲಿ ನಡೆದ ಗೋಕಾಕ್ ಚಳುವಳಿಯಲ್ಲಿ ಸಕ್ರಿಯರಾದರು. ರಾಜ್‌ರ ಮೇರು ವ್ಯಕ್ತಿತ್ವ, ಭಾಷೆ ಕನ್ನಡದ ಮೇಲಿನ ಅವರ ಅತೀವ ಬದ್ಧತೆಗೆ ಮಾರುಹೋದ ನಾಗರಾಜು ನಿಧಾನವಾಗಿ ಕನ್ನಡಪರ ಹೋರಾಟಗಳತ್ತ ತೊಡಗಿಸಿಕೊಂಡವರು.
ಕರವೇಯತ್ತ...
ಈ ನಡುವೆಯೇ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಯಾಗಿ ಸೇರ್ಪಡೆಗೊಂಡ ನಾಗರಾಜು ಅಲ್ಲಿನ ಹಲವು ಹೋರಾಟಗಳಲ್ಲಿ ಮಹತ್ವದ ಪಾತ್ರ ವಹಿಸುವ ಮೂಲಕ ಗುರುತಿಸಿಕೊಂಡರು. ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರ ಆತ್ಮೀಯ ಒಡನಾಡಿಯಾದ ನಾಗರಾಜು ಬಹುಬೇಗ ಸಮರ್ಥ ಹೋರಾಟಗಾರರಾಗಿ ರೂಪುಗೊಂಡರು. ಅವರಲ್ಲಿನ ಹೋರಾಟದ ತೀವ್ರತೆ, ಸಂಘಟನಾ ಚಾತುರ‍್ಯ ಗಮನಿಸಿದ ಗೌಡರು ಕರವೇ ಗಾಂಧಿನಗರ ಘಟಕ ಅಧ್ಯಕ್ಷರನ್ನಾಗಿ ನೇಮಿಸಿದರು.
ಸಾಕಷ್ಟು ಪರಿಶ್ರಮ ವಹಿಸಿ ಗಾಂಧಿನಗರ ಘಟಕಕ್ಕೆ ಮೂರ್ತರೂಪ ನೀಡಿದ ನಾಗರಾಜು ಅವರ ಸಂಘಟನೆ ವೈಖರಿ ಗಮನಿಸಿದ ನಾರಾಯಣಗೌಡರು ಬೆಂಗಳೂರು ನಗರ ಘಟಕದ ಪ್ರಧಾನ ಕಾರ‍್ಯದರ್ಶಿಯಾಗಿ ನಂತರ ರಾಜ್ಯ ಕಾರ‍್ಯದರ್ಶಿಯಾಗಿ ನೇಮಿಸಿದರು.
ಕೆಚ್ಚೆದೆಯ ಕನ್ನಡಿಗ...
ಹೀಗೆ ನಾಗರಾಜು ಗೌಡರು ನೀಡಿದ ಎಲ್ಲಾ ಜವಾಬ್ದಾರಿಯನ್ನು ಅತ್ಯಂತ ಮುತುವರ್ಜಿಯಿಂದ ನಿರ್ವಹಿಸುವ ಮೂಲಕ ಕರವೇ ವ್ಯಾಪ್ತಿ ಮತ್ತಷ್ಟು ವಿಸ್ತಾರಕ್ಕೆ ಕಾರಣರಾದರು. ಹೀಗೆ ಸಂಘಟನೆಯಲ್ಲಿ ಮಾತ್ರವಲ್ಲದೇ ಹೋರಾಟಗಳಲ್ಲೂ ತಮ್ಮದೇ ಆದ ಛಾಪು ಮೂಡಿಸಿದವರು ನಾಗರಾಜು. ಎತ್ತರದ ಧ್ವನಿ, ದೊಡ್ಡ ಶರೀರ, ಸದಾ ಹಸನ್ಮುಖಿ, ಮನಸ್ಸು ಮಾತ್ರ ಕೋಮಲ. ಇಂಥ ನಾಗರಾಜು ನಾರಾಯಣಗೌಡರೊಂದಿಗೆ ಹೋರಾಟಕ್ಕೆ ಧುಮುಕಿದರೆ ಅದಕ್ಕೊಂದು ಅಂತಿಮ ರೂಪು ನೀಡದೆ ವಿರಮಿಸುವವರೇ ಅಲ್ಲ. ಛಲ ಮತ್ತು ದೃಢತೆಯ ಸಂಕೇತದಂತಿರುವ ನಾಗರಾಜು ಕರವೇ ಹಮ್ಮಿಕೊಳ್ಳುವ ಎಲ್ಲಾ ಹೋರಾಟಗಳಲ್ಲೂ ಮುಂಚೂಣಿಯಲ್ಲಿರುತ್ತಾರೆ.
ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಕರವೇಯ ಐತಿಹಾಸಿಕ ಹೋರಾಟದಲ್ಲಿ ನಾಗರಾಜು ಅವರ ಪಾತ್ರ ಮಹತ್ತರವಾದದ್ದು. ಕಾವೇರಿ ನದಿ ನೀರಿನ ಸಂಬಂಧ ನಡೆದ ರಾಜ್ಯವ್ಯಾಪಿ ಹೋರಾಟದಲ್ಲಿ ಗೌಡರೊಂದಿಗೆ ಜೈಲು ವಾಸ ಅನುಭವಿಸಿದರು. ಈ ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕನ್ನಡ ವಿರೋಧಿ ಧೋರಣೆ ಖಂಡಿಸಿ ಅವರ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸುವ ಮೂಲಕ ಕನ್ನಡಿಗರ ಸಾರ್ವಭೌಮತೆಯನ್ನು ಎತ್ತಿಹಿಡಿದವರು.
ಕರವೇ ಹಮ್ಮಿಕೊಂಡ ಹೋರಾಟಗಳು ಲೆಕ್ಕಕ್ಕಿಲ್ಲ. ಪ್ರತೀ ಹೋರಾಟವೂ ಕೂಡ ಕರವೇ ಪಾಲಿಗೆ ಐತಿಹಾಸಿಕ ಘಟನೆಗಳೆ. ಮಳೆ, ಬಿಸಿಲೆನ್ನದೆ ನಡೆಸುವ ಧರಣಿ, ಪೊಲೀಸರ ಲಾಠಿ ಏಟು, ಜೈಲು ವಾಸ, ಜನಪ್ರತಿನಿಧಿಗಳ ದೂಷಣೆ...ಇವೆಲ್ಲವನ್ನೂ ಸಹಿಸಿಕೊಳ್ಳಬೇಕಾಗದ ಅನಿವಾರ‍್ಯತೆ ಪ್ರತೀ ಹೋರಾಟಗಾರನದ್ದು. ಇಂಥ ಅನಿವಾರ‍್ಯತೆಗಳನ್ನು ಕರವೇಯ ಪ್ರತೀ ಕಾರ‍್ಯಕರ್ತನೂ ಎದುರಿಸಿದ್ದಾನೆ. ಪ್ರತೀ ನಾಯಕನೂ ಅನುಭವಿಸಿದ್ದಾನೆ. ನಾಗರಾಜು ಕೂಡ ಅಂಥದ್ದೇ ಸಾಲಿಗೆ ಸೇರಿದವರು. ಅಷ್ಟಾದರೂ ಅವರ ಕನ್ನಡದ ಕೆಚ್ಚು ಕಡಿಮೆಯಾಗಿಲ್ಲ, ಹೋರಾಟದಿಂದ ವಿಮುಖರಾದವರಲ್ಲ. ನಾಗರಾಜು ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು ೫೦ ಮೊಕದ್ದಮೆಗಳು ದಾಖಲಾಗಿದ್ದವು. ಈ ಪೈಕಿ ೧೨ ಮೊಕದ್ದಮೆಗಳು ಬಾಕಿ ಇವೆ. ಪ್ರತೀ ಹೋರಾಟಗಾರ ಅನುಭವಿಸುವ ತುಮುಲ, ಮಾನಸಿಕ ಹಿಂಸೆಯನ್ನು ನಾಗರಾಜು ಕೂಡ ಅನುಭವಿಸಿದ್ದಾರೆ. ಪೊಲೀಸ್ ಠಾಣೆ, ನ್ಯಾಯಾಲಯಕ್ಕೆ ಅಲೆದೂ ಅಲೆದೂ ಅಲೆದು ಹೈರಾಣಾಗಿದ್ದರೂ ಕರವೇ ಮೇಲಿನ ಇವರ ಅದಮ್ಯ ನಿಷ್ಠೆ, ನಾರಾಯಣಗೌಡರ ಮೇಲಿನ ಇವರ ಅಭಿಮಾನ ಕಡಿಮೆಯಾಗಿಲ್ಲ.
ಬಡವರ ಬಂಧು...
ನಾಗರಾಜು ತಮ್ಮನ್ನು ತಾವು ಕನ್ನಡ ಪರ ಹೋರಾಟಕ್ಕಷ್ಟೇ ಸೀಮಿತಗೊಳಿಸಿಕೊಂಡವರಲ್ಲ. ಇವರದ್ದು ಸದಾ ಬಡವರ, ನೊಂದವರ, ತುಳಿತಕ್ಕೊಳಗಾದವರಿಗೆ ತುಡಿಯುವ ಮನಸ್ಸು. ಬೆಂಗಳೂರಿನ ಅಗ್ರಹಾರ ದಾಸರಹಳ್ಳಿಯಲ್ಲಿ ನೆಲಸಿರುವ ಇವರು ಆ ಭಾಗದ ಬಡವರ, ದುರ್ಬಲರ ಸಂಕಷ್ಟಗಳಿಗೆ ಸ್ಪಂದಿಸುತ್ತಲೇ ಬಂದವರು. ಜನಸಾಮಾನ್ಯರಿಗೆ ಸರ್ಕಾರದಿಂದ ನ್ಯಾಯಯುತವಾಗಿ ಸಿಗಬೇಕಾದ ಸೌಲಭ್ಯಗಳನ್ನು ದೊರಕಿಸಿಕೊಡುವಲ್ಲಿ ಶ್ರಮಿಸುತ್ತಲೇ ಇದ್ದಾರೆ.
ನೂರಾರು ಅರ್ಹ ಫಲಾನುಭವಿಗಳಿಗೆ ಪಡಿತರ ಚೀಟಿ, ವೃದ್ಧಾಪ್ಯವೇತನ, ವಿಧವಾ ವೇತನ, ಅಂಗವಿಕಲರ ವೇತನ ಕೊಡಿಸುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿರುವ ನಾಗರಾಜು ಅವೆಲ್ಲವನ್ನೂ ತೆರೆಮರೆಯಲ್ಲಿದ್ದುಕೊಂಡೇ ಮಾಡಿದವರು. ಗಾರ್ಮೆಂಟ್ ಉದ್ಯೋಗಿಗಳ ನೆರವಿಗೆ ಹೋರಾಟ ರೂಪಿಸಿದ್ದಲ್ಲದೆ, ಹೋಟೆಲ್ ಕಾರ್ಮಿಕರ ಹಕ್ಕುಗಳಿಗೆ ದಶಕಗಳಿಂದ ಹೋರಾಡುತ್ತಲೇ ಬಂದ ನಾಗರಾಜು ಭಿನ್ನವಾಗಿ ನಿಲ್ಲುತ್ತಾರೆ.
ನಾಗರಾಜು ಅವರ ಸಮಾಜಮುಖಿ ಚಿಂತನೆ ಮತ್ತು ಜನಮುಖಿ ಕಾರ‍್ಯಗಳನ್ನು ಗಮನಿಸಿದ ನಾರಾಯಣಗೌಡರು ಕಳೆದ ಬಿಬಿಎಂಪಿ ಚುನಾವಣೆಯಲ್ಲಿ ಅಗ್ರಹಾರ ದಾಸರಹಳ್ಳಿ ವಾರ್ಡ್‌ನಿಂದ ಕರವೇ ಬೆಂಬಲಿತ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿಸಿದ್ದರು.
ಕರವೇಯಂಥ ಬೃಹತ್ ಆಲದ ಮರದಲ್ಲಿ ಎ.ಎಸ್.ನಾಗರಾಜು ಅವರಂಥ ಅದೆಷ್ಟೋ ಬಿಳಲುಗಳಿವೆ. ಪ್ರತಿಯೊಬ್ಬರದ್ದೂ ಒಂದೊಂದು ದಂತಕಥೆ. ಪ್ರತೀ ಹೋರಾಟಗಾರನದ್ದೂ ಒಂದೊಂದು ಯಶೋಗಾಥೆ...ಇಂಥ ಬಿಳಲುಗಳ ಸಂಖ್ಯೆ ಇನ್ನಷ್ಟು ಹೆಚ್ಚಲಿ, ಕರವೇ ಮತ್ತಷ್ಟು ಬೆಳೆಯಲಿ...