Wednesday, August 11, 2010

ಯಾವುದು ಮಾದರಿ? ಯಾವುದು ಆದರ್ಶ
ಟಿ.ಎ.ನಾರಾಯಣಗೌಡ


ಬೆಳಗಾವಿ ಕುರಿತಂತೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಮಾಣ ಪತ್ರ ಸಲ್ಲಿಸಿ, ಮಹಾರಾಷ್ಟ್ರದ ಕಿಡಿಗೇಡಿ ನಾಯಕ ಶಿಖಾಮಣಿಗಳಿಗೆಲ್ಲ ಮುಖಭಂಗವಾದಾಗ ಶಿವಸೇನೆ ಮುಖ್ಯಸ್ಥ ಳಾ ಠಾಕ್ರೆ, ಕನ್ನಡಿಗರ ಮೇಲೆ ಪ್ರತೀಕಾರ ತೆಗೆದುಕೊಳ್ಳುವುದಾಗಿ ಬೆದರಿಕೆ ಹಾಕಿದ. ಆ ಸಂದರ್ಭದಲ್ಲಿ ನಾನು ಬೆಳಗಾವಿಗೆ ಹೋದಾಗ ಅಲ್ಲಿನ ಮಾಧ್ಯಮದವರು ನೂರಾರು ಸಂಖ್ಯೆಯಲ್ಲಿ ಮುತ್ತಿಕೊಂಡಿದ್ದರು.
ಆಗ ಠಾಕ್ರೆ ಬಗ್ಗೆ ನಾನು ಹೇಳಿದ್ದು: “ಆತನೊಬ್ಬ ರಣಹೇಡಿ. ನೆಟ್ಟಗೆ ಕೂರಲು, ನಿಲ್ಲಲು ಆಗದೇ ಇದ್ದರೂ ಈ ತರಹದ ವೀರಾವೇಶದ ಮಾತುಗಳನ್ನು ಆಡುವುದರಲ್ಲಿ ನಿಸ್ಸೀಮ. ಕನ್ನಡಿಗರ ಮೇಲೆ ಪ್ರತೀಕಾರ ತೆಗೆದುಕೊಳ್ಳುವುದಾಗಿ ಹೇಳುವ ಈತ ಕನ್ನಡಿಗರು ಕೊಟ್ಟ ಹಣ, ಅನ್ನದಿಂದಲೇ ಬದುಕುತ್ತಿದ್ದಾನೆ. ಮುಂಬೈನಲ್ಲಿರುವ ಕನ್ನಡ ಉದ್ಯಮಿಗಳಿಂದಲೇ ಇವನು ಹಣ ವಸೂಲಿ ಮಾಡಿ ಪಕ್ಷ ಕಟ್ಟಿಕೊಂಡಿದ್ದು. ಇಂಥ ಮುಖೇಡಿಗಳ ಬೆದರಿಕೆಗಳಿಗೆ ಕನ್ನಡಿಗರು ಬೆದರುವುದಿಲ್ಲ. ಒಂದು ವೇಳೆ ಮಹಾರಾಷ್ಟ್ರದಲ್ಲಿ ನೆಲೆಸಿರುವ ಕನ್ನಡಿಗರ ಮೇಲೆ ದೌರ್ಜನ್ಯವೆಸಗಿದಲ್ಲಿ ಅದಕ್ಕೆ ತಕ್ಕ ಉತ್ತರವನ್ನು ಕರ್ನಾಟಕ ರಕ್ಷಣಾ ವೇದಿಕೆ ನೀಡಬೇಕಾಗುತ್ತದೆ.
ಬೆಳಗಾವಿಯಲ್ಲಿ ದಿಢೀರನೆ ಆಯೋಜಿಸಿದ್ದ ಸಭೆ, ರ‍್ಯಾಲಿಗೆ ಐದು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಬಂದಿದ್ದರು. ಪೊಲೀಸ್ ಅಧಿಕಾರಿಗಳಿಗೆ ಧಾವಂತ. ‘ಗೌಡ್ರೇ ಸಭೆ ಮಾಡಿ, ಮೆರವಣಿಗೆ ಬೇಡ ಎಂದರು. ಮೆರವಣಿಗೆ ಮಾಡಿಯೇ ತೀರುತ್ತೇವೆ ಎಂದಾಗ ಅರ್ಧ ಗಂಟೆ ಸಮಯ ಕೋರಿ ಹಾದಿಯುದ್ದಕ್ಕೂ ಪೊಲೀಸ್ ಸೈನ್ಯವನ್ನು ಕಾವಲಿಗಿರಿಸಿದರು.
ಮೆರವಣಿಗೆ ಯಶಸ್ವಿಯಾಗಿ ನಡೆಯಿತು. ನಾವು ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಠಾಕ್ರೆಯ ಪ್ರತಿಕೃತಿ ಸುಟ್ಟೆವು.
****
‘ಗೌಡ್ರೇ, ನೀವು ಕರ್ನಾಟಕದ ಬಾಳಾ ಠಾಕ್ರೆಯಾಗಬೇಕು ಎಂದು ಬೇರೆ ಬೇರೆ ವಲಯದ ಜನರು, ಗಣ್ಯರು ನನಗೆ ಹೇಳುವುದುಂಟು. ಇತ್ತೀಚಿಗೆ ‘ನೀವು ಕರ್ನಾಟಕದ ರಾಜ್ ಠಾಕ್ರೆಯಾಗಬೇಕು ಎಂದು ಹೇಳುವವರೂ ಇದ್ದಾರೆ. ಇಂಥ ಮಾತುಗಳನ್ನು ಕೇಳಿದಾಗ ಕಿರಿಕಿರಿ ಎನಿಸುತ್ತದೆ.
ಹೀಗೆ ಹೇಳುವವರು ಕರ್ನಾಟಕ ರಕ್ಷಣಾ ವೇದಿಕೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ ಎಂದೇ ನಾನು ಭಾವಿಸುತ್ತೇನೆ.
ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಶಿವಸೇನೆಯ ವಿನ್ಯಾಸದಲ್ಲೇ ಬಹಳ ಸ್ಪಷ್ಟವಾಗಿ ಗುರುತಿಸಬಹುದಾದ ವ್ಯತ್ಯಾಸಗಳಿವೆ.
ಶಿವಸೇನೆಗೆ ಇರುವ ಹಾಗೆ ಕರ್ನಾಟಕ ರಕ್ಷಣಾ ವೇದಿಕೆಗೆ ಕೋಮುವಾದಿ ಅಜೆಂಡಾಗಳು ಇಲ್ಲ. ಅದನ್ನು ಸಾಕಷ್ಟು ಸಂದರ್ಭಗಳಲ್ಲಿ ನಾನು ಸ್ಪಷ್ಟಪಡಿಸಿದ್ದೇನೆ. ರಕ್ಷಣಾ ವೇದಿಕೆ ಹುಟ್ಟಿರುವುದೇ ‘ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ದೇವರು ಎಂಬ ಸಿದ್ಧಾಂತದ ತಳಹದಿಯಲ್ಲಿ. ನಮ್ಮಲ್ಲಿ ಹಿಂದೂಗಳು, ಮುಸ್ಲಿಮರು, ಕ್ರಿಶ್ಚಿಯನ್ನರು ಎಲ್ಲರೂ ಇದ್ದಾರೆ. ಎಲ್ಲರೂ ಸೇರಿಯೇ ನಾವಿಲ್ಲಿ ಕನ್ನಡದ ಕಾಯಕದಲ್ಲಿ ತೊಡಗಿದ್ದೇವೆ.
ಬಹಳ ಮುಖ್ಯವಾಗಿ ಶಿವಸೇನೆ, ಎಂಎನ್‌ಎಸ್‌ಗಳ ಹಾಗೆ ಜನಾಂಗೀಯ ದ್ವೇಷವನ್ನು ಕಾರುವ ಸಂಘಟನೆ ನಮ್ಮದಲ್ಲ. ಒಂದು ಸಮುದಾಯವನ್ನು, ಸಮಾಜವನ್ನು ಗುರಿಯಾಗಿಟ್ಟುಕೊಂಡು ನಾವೆಂದೂ ಹೋರಾಟ ನಡೆಸಿದವರಲ್ಲ. ಆದರೆ ಶಿವಸೇನೆ, ಎಂಎನ್‌ಎಸ್‌ಗಳು ಮಾಡಿಕೊಂಡು ಬಂದಿದ್ದೆಲ್ಲ ಈ ಬಗೆಯ ಜನಾಂಗೀಯ ದ್ವೇಷದ ಗಲಭೆಗಳನ್ನೆ. ಶಿವಸೇನೆ ಆರಂಭದ ದಿನಗಳಲ್ಲಿ ‘ಅಣ್ಣಾ ಲೋಗೋಂ ಕೊ ಭಗಾವೋ ಎಂಬ ಘೋಷಣೆಯಲ್ಲೇ ಗಲಭೆ ಎಬ್ಬಿಸುತ್ತಿತ್ತು. ಅಣ್ಣಾ ಲೋಗ್ ಎಂದರೆ ಮದರಾಸಿಗಳು ಮತ್ತು ಕನ್ನಡಿಗರು ಎಂದರ್ಥ.
ತೀರಾ ಇತ್ತೀಚಿಗೆ ಎಂಎನ್‌ಎಸ್‌ನವರು ಬಿಹಾರಿಗಳು, ಉತ್ತರ ಪ್ರದೇಶದವರನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸಿದರು. ತಮಾಷೆ ಎಂದರೆ ಹೀಗೆ ಶಿವಸೈನಿಕರ ದಾಳಿಗೆ ಗುರಿಯಾದ ಕನ್ನಡಿಗರು, ಮದರಾಸಿಗಳು, ಬಿಹಾರಿಗಳು, ಯುಪಿವಾಲಾಗಳ ಪೈಕಿ ಬಹುತೇಕರು ಸಹಜವಾಗಿ ಹಿಂದುಗಳೇ ಆಗಿದ್ದರು.
ಹಿಂದುತ್ವವಾದಿ ಎಂದು ಹೇಳಿಕೊಳ್ಳುವ ಬಾಳಾ ಠಾಕ್ರೆ ಹೀಗೆ ಹಿಂದೂಗಳಿಗೇ ಕಿರುಕುಳ ಕೊಟ್ಟುಕೊಂಡು ಬಂದವನು. ಅವನ ಹಿಂದುತ್ವವೇ ಪೊಳ್ಳು ಎಂಬುದು ಇದರಿಂದ ಸಾಬೀತಾಗುತ್ತದೆ.
*****
ಮಹಾನ್ ದೇಶಭಕ್ತನ ಹಾಗೆ ತೋರಿಸಿಕೊಳ್ಳುವ ಬಾಳಠಾಕ್ರೆಗೆ ದೇಶಭಕ್ತಿಯ ನಿಜವಾದ ವರಸೆಗಳೇ ಗೊತ್ತಿಲ್ಲ. ಭಾರತವೆಂಬ ದೇಶ ಹತ್ತು ಹಲವು ರಾಜ್ಯಗಳ ಒಕ್ಕೂಟ ಎಂಬುದನ್ನು ಈತ ಇನ್ನೂ ಅರ್ಥ ಮಾಡಿಕೊಂಡಿಲ್ಲ. ಈ ಎಲ್ಲ ರಾಜ್ಯಗಳೂ ಸಹ ಮಹಾರಾಷ್ಟ್ರದ ಹಾಗೆಯೇ ಭಾರತ ಸಂವಿಧಾನದಿಂದ ಮಾನ್ಯತೆ ಪಡೆದವುಗಳು, ಆ ರಾಜ್ಯಗಳಲ್ಲಿ ವಾಸಿಸುವ ಜನರೂ ಸಹ ದೇಶಭಕ್ತರು ಎಂಬುದನ್ನು ಈತ ಮನಗಾಣಬೇಕಿತ್ತು. ಆದರೆ ಅದು ಅವನಿಂದ ಸಾಧ್ಯವಾಗಲಿಲ್ಲ.
ನಿಜವಾದ ಅರ್ಥದಲ್ಲಿ ಹಿಂದುತ್ವವಾದಿಯೂ ಅಲ್ಲದ, ದೇಶಭಕ್ತನೂ ಅಲ್ಲದ ಠಾಕ್ರೆ ಕಡೇ ಪಕ್ಷ ಮರಾಠೀ ಅಸ್ಮಿತೆಗಾದರೂ ಸರಿಯಾದ ನಿಷ್ಠೆಯನ್ನು ಇಟ್ಟುಕೊಂಡವನೇ? ಅದೂ ಇಲ್ಲ. ‘ಅಣ್ಣಾ ಲೋಗೋಂ ಕೊ ಭಗಾವೋ ಎಂಬ ವಿಲಕ್ಷಣ, ಜನಾಂಗೀಯ ದ್ವೇಷದ ಕಾರ್ಯಸೂಚಿಯ ಬದಲು ‘ಮರಾಠೀ ಸಿನಿಮಾ ಬಚಾವೋ ಎಂಬ ರಚನಾತ್ಮಕ ಆಂದೋಲನ ಹಮ್ಮಿಕೊಂಡಿದ್ದರೆ ಕನಿಷ್ಠ ಅಲ್ಲಿ ಮರಾಠಿ ಸಿನಿಮಾಗಳಾದರೂ ಉಳಿಯುತ್ತಿದ್ದವು. ಹಣದ ಆಸೆಗಾಗಿ ಮೈಕಲ್ ಜಾಕ್ಸನ್‌ನನ್ನು ಕರೆಸಿ ಕಾರ್ಯಕ್ರಮ ನಡೆಸಿದ ಠಾಕ್ರೆಗೆ ಮರಾಠಿ ನಿಷ್ಠೆಯೂ ಇಲ್ಲ ಎಂಬುದಕ್ಕೆ ಬೇರೆ ಉದಾಹರಣೆಗಳು ಬೇಕಿಲ್ಲ.
ಕರ್ನಾಟಕ ರಕ್ಷಣಾ ವೇದಿಕೆಯ ಸಿದ್ಧಾಂತಗಳಿಗೂ ಶಿವಸೇನೆಯ ಸಿದ್ಧಾಂತಗಳಿಗೂ ಸಂಬಂಧವೇ ಇಲ್ಲ. ಅಸಲಿಗೆ ಶಿವಸೇನೆಗೊಂದು ಸಿದ್ಧಾಂತವೂ ಇಲ್ಲ.
ನಮ್ಮ ಕಾರ್ಯಕರ್ತರೆಲ್ಲರ ಮನೆಮಾತು ಕನ್ನಡವೇನಲ್ಲ. ತಮಿಳು, ತೆಲುಗು, ಮರಾಠಿ ಮಾತೃಭಾಷೆಯನ್ನಾಗಿ ಉಳ್ಳ ಸಾಕಷ್ಟು ಮಂದಿ ನಮ್ಮಲ್ಲಿದ್ದಾರೆ. ‘ಕನ್ನಡಿಗ ಎಂಬ ಪದವನ್ನು ನಾವು ಶಿವಸೇನೆಯವರ ಹಾಗೆ ಸೀಮಿತ, ಸಂಕುಚಿತ ಅರ್ಥದಲ್ಲಿ ಬಳಸುವುದಿಲ್ಲ. ಕನ್ನಡತನವನ್ನು ಮೈಗೂಡಿಸಿಕೊಂಡು, ಕನ್ನಡ ಸಂಸ್ಕೃತಿಯನ್ನು ಗೌರವಿಸುವ ಎಲ್ಲರೂ ಕನ್ನಡಿಗರೇ. ಕನ್ನಡಿಗನೊಬ್ಬ ಮಹಾರಾಷ್ಟ್ರದಲ್ಲಿದ್ದರೆ ಆತ ಅಲ್ಲಿನ ಸಂಸ್ಕೃತಿಯನ್ನು ಗೌರವಿಸಬೇಕು, ತಮಿಳುನಾಡಿನಲ್ಲಿದ್ದರೆ ಅಲ್ಲಿನ ಜನರೊಂದಿಗೆ ಬೆರೆತು ಬದುಕಬೇಕು ಎಂದೇ ನಾವು ಹೇಳುತ್ತೇವೆ.
*****
‘ಕನ್ನಡಿಗರ ಮೇಲೆ ದಾಳಿ ನಡೆಸಿದರೆ, ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದಾಗ ಬೆಳಗಾವಿಯಲ್ಲಿ ಮರಾಠಿ ಪತ್ರಕರ್ತರೊಬ್ಬರು, ‘ನೀವು ಶಿವಸೈನಿಕರ ಹಾಗೆ ಮರಾಠಿ ಜನರ ಮೇಲೆ ದೌರ್ಜನ್ಯ ಮಾಡುತ್ತೀರಾ ಎಂದು ಕೇಳಿದರು. ‘ಖಂಡಿತ ಇಲ್ಲ, ಬೆಳಗಾವಿಯೂ ಸೇರಿದಂತೆ ಕರ್ನಾಟಕದಲ್ಲಿ ವಾಸಿಸುತ್ತಿರುವ ಸಾಮಾನ್ಯ ಮರಾಠಿ ಜನರು ಕನ್ನಡಿಗರೊಂದಿಗೆ ಕೂಡಿ ಬಾಳುತ್ತಿದ್ದಾರೆ. ನಮ್ಮ ಹೋರಾಟಗಳಲ್ಲೂ ಅವರು ಭಾಗವಹಿಸುತ್ತಾರೆ, ಕನ್ನಡಿಗರಾಗಿ ಬದುಕುತ್ತಿದ್ದಾರೆ. ಶಿವಸೇನೆಯವರು ಹುಚ್ಚಾಟವಾಡಿದರೆ, ನಾವು ಇಲ್ಲಿ ಸಾಮಾನ್ಯ ಮರಾಠಿ ಜನರ ಮೇಲೆ ದೌರ್ಜನ್ಯವೆಸಗುವ ಹುಚ್ಚಾಟವನ್ನು ಮಾಡಲಾರೆವು. ಅದು ನಮ್ಮ ಮಾರ್ಗವೂ ಅಲ್ಲ, ಉದ್ದೇಶವೂ ಅಲ್ಲ. ಆದರೆ ಎರಡೂ ಭಾಷಿಕ ಜನರ ನಡುವೆ ಸಂಘರ್ಷ ಹಚ್ಚುತ್ತಿರುವ ಶಕ್ತಿಗಳನ್ನು ಮಾತ್ರ ಸುಮ್ಮನೆ ಬಿಡಲಾರೆವು. ಹಿಂದೆಯೂ ಈ ಶಕ್ತಿಗಳಿಗೆ ಪಾಠ ಕಲಿಸಿದ್ದೇವೆ. ಅದು ನಿಮಗೂ ಗೊತ್ತಿದೆ. ಮುಂದೆಯೂ ಈ ದುಷ್ಟ ಶಕ್ತಿಗಳನ್ನು ಬಗ್ಗುಬಡಿಯುತ್ತೇವೆ. ಎಂದು ಹೇಳಿದೆ.
ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಹುಯಿಲೆಬ್ಬಿಸುವ ಮಹಾರಾಷ್ಟ್ರ ಏಕೀಕರಣ ಸಮಿತಿ ಮತ್ತು ಶಿವಸೇನೆಯ ಕುರಿತಾಗಿ ಸಾಕಷ್ಟು ಸ್ವಾರಸ್ಯಕರ ಸಂಗತಿಗಳಿವೆ. ಎಂಇಎಸ್‌ನ ಒಳಗಿರುವವರು, ಹೊರಬಂದವರು ಎಲ್ಲರೂ ಸಹ ರಾಜಕೀಯ ಅಧಿಕಾರ-ಹುದ್ದೆಗಳಿಗಾಗಿ ಮರಾಠಿ ಧ್ವಜಗಳನ್ನು ಹಿಡಿದವರು. ಬೆಳಗಾವಿ ಎಂದೆಂದೂ ಮಹಾರಾಷ್ಟ್ರಕ್ಕೆ ಸೇರುವುದಿಲ್ಲ ಎಂಬುದು ಇವರಿಗೆ ಬಹಳ ಸ್ಪಷ್ಟವಾಗಿ ತಿಳಿದಿದೆ. ಮರಾಠಿ ಮಾನೂಸ್ ಹೆಸರಿನಲ್ಲಿ ಮುಗ್ಧ ಮರಾಠಿ ಜನರನ್ನು ದಶಕಗಳಿಂದ ದಿಕ್ಕು ತಪ್ಪಿಸಿಕೊಂಡು ಬಂದವರು ಇವರು.
ಒಮ್ಮೆ ಕಾರವಾರದಲ್ಲಿ ವೇದಿಕೆ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಹೋಗುವ ಮಾರ್ಗದಲ್ಲಿ ಗೋವಾ ವಿಮಾನ ನಿಲ್ದಾಣದಲ್ಲಿ ಮಸಿ ಖ್ಯಾತಿಯ ಬೆಳಗಾವಿ ಮಾಜಿ ಮೇಯರ್ ವಿಜಯ ಮೋರೆ ಕಾಣಿಸಿಕೊಂಡರು. ‘ಗೌಡ್ರೇ, ಹೇಗಿದ್ದೀರಿ ಕುಶಲೋಪರಿ ವಿಚಾರಿಸಿದರು. ‘ಗೌಡ್ರೇ, ನನಗೆ ಎಂಇಎಸ್ ಸಹವಾಸ ಸಾಕಾಗಿ ಹೋಗಿದೆ. ನಾವು ಮಾಡ್ತಾ ಇರೋದು ತಪ್ಪು ಅಂತ ಗೊತ್ತಾಗಿದೆ. ಪಕ್ಷ ಬಿಟ್ಟು ಬಿಡೋಣ ಅಂತಿದ್ದೇನೆ, ಜೆಡಿಎಸ್ ಸೇರಿಕೊಂಡುಬಿಡೋಣ ಅಂತಿದ್ದೀನಿ ಎಂದು ಹೇಳಿದ್ದರು.
ಆ ಕ್ಷಣಕ್ಕೆ ಆತನ ಮಾತುಗಳಲ್ಲಿ ಯಾವುದೇ ಅಪನಂಬಿಕೆ ಹುಟ್ಟಲಿಲ್ಲ. ನಿಜಕ್ಕೂ ಈತನಿಗೆ ಪಶ್ಚಾತ್ತಾಪವಾಗಿರಬಹುದು ಎಂದುಕೊಂಡೆ. ‘ಎಂಇಎಸ್ ಬಿಟ್ಟು ಬೇರೆ ರಾಜಕೀಯ ಪಕ್ಷ ಸೇರುವ ನಿರ್ಧಾರ ಮಾಡಿದ್ದರೆ ನಿಜಕ್ಕೂ ಸಂತೋಷದ ವಿಷಯ. ಒಳ್ಳೆಯದಾಗಲಿ. ಬೇಕಿದ್ದರೆ ಜೆಡಿಎಸ್ ಪಕ್ಷದ ನಾಯಕರ ಜತೆ ನಾನೇ ಮಾತನಾಡುತ್ತೇನೆ. ಎಂದು ಹೇಳಿದ್ದೆ.
ಮೊನ್ನೆ ಸುವರ್ಣ ಟಿವಿಯಲ್ಲಿ ನೇರಪ್ರಸಾರದ ಕಾರ್ಯಕ್ರಮದಲ್ಲಿ ದೂರವಾಣಿ ಮೂಲಕ ಇದೇ ವಿಜಯ ಮೋರೆ ಮಾತನಾಡಿದ್ದನ್ನು ನೀವು ಕೇಳಿರಬಹುದು. ಯಥಾಪ್ರಕಾರ ಅದೇ ‘ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸುವ ಹುಚ್ಚು ವಾದವನ್ನೇ ಈತ ಮಂಡಿಸಿದ.
ಇಂಥವರಿಗೆ ಏನು ಹೇಳುವುದು? ಇವರ ಉದ್ದೇಶವಾದರೂ ಏನು?
******
ನಾವು ಬೆಳಗಾವಿಯಲ್ಲಿ ರ‍್ಯಾಲಿ ನಡೆಸಿದ ಮರುದಿನವೇ ಕನ್ನಡ ಸಂಘಟನೆಯೊಂದರ ಮುಖಂಡರಾದ ಸಯ್ಯದ್ ಮನ್ಸೂರ್ ಹಾಗೂ ಶ್ರೀನಿವಾಸ ತಾಳೂಕರರನ್ನು ಸಂದರ್ಶನಕ್ಕೆ ಕರೆಸಿಕೊಂಡು ಕೊಲ್ಲಾಪುರದಲ್ಲಿ ಇದೇ ಶಿವಸೇನೆ ಗೂಂಡಾಗಳು ಥಳಿಸಿದರು. ಈ ದಾಳಿಯ ನೇತೃತ್ವ ವಹಿಸಿಕೊಂಡಿದ್ದವನು ಶಿವಸೇನೆಯ ಶಾಸಕ. ವ್ಯವಸ್ಥಿತ ಸಂಚು ರೂಪಿಸಿಯೇ ಈ ಹಲ್ಲೆಯನ್ನು ಮಾಡಲಾಗಿತ್ತು.
ಬಾಳ ಠಾಕ್ರೆ ಮತ್ತು ಅವನ ಬೆಂಬಲಿಗರು ಎಂಥ ರಣಹೇಡಿಗಳು ಎಂಬುದಕ್ಕೆ ಇದಕ್ಕಿಂತ ಸ್ಪಷ್ಟ ಉದಾಹರಣೆ ಬೇಕಾಗಿಲ್ಲ. ಹೀಗೆ ಬೆನ್ನಲ್ಲಿ ಇರಿಯುವ ಕಾಯಕವನ್ನು ಅವರು ಮೊದಲಿನಿಂದಲೂ ಮಾಡಿಕೊಂಡೇ ಬಂದಿದ್ದಾರೆ. ಚಾನೆಲ್ ಸಂದರ್ಶನದ ನೆಪವೊಡ್ಡಿ, ಉಪಾಯದಿಂದ ಕರೆಸಿಕೊಂಡು ಥಳಿಸಿ, ಯಾವ ಪುರುಷಾರ್ಥವನ್ನು ಸಾಧಿಸಿದರು? ಬೆನ್ನ ಹಿಂದೆ ಹುಲಿ-ಸಿಂಹದ ಪೋಸ್ಟರುಗಳನ್ನು ಹಾಕಿಕೊಳ್ಳುವ ಠಾಕ್ರೆ ನರಿಯಂತೆ ವರ್ತಿಸುವುದನ್ನು ಯಾಕೆ ಬಿಡುವುದಿಲ್ಲ?
ಬೆಳಗಾವಿಯಲ್ಲೂ ಅಷ್ಟೆ. ಎಂಇಎಸ್ ಮತ್ತು ಶಿವಸೇನೆಯ ಗೂಂಡಾಗಳು ಕನ್ನಡ ಬೋರ್ಡುಗಳನ್ನು ಕಿತ್ತು ಎಸೆದರು, ಕನ್ನಡಿಗರ ಅಂಗಡಿಗಳ ಮೇಲೆ ಕಲ್ಲು ಎಸೆದರು, ಕನ್ನಡ ಬಾವುಟವನ್ನು ಕಿತ್ತು ಮರಾಠಿ ಧ್ವಜ ಏರಿಸಿದರು. ಇದಕ್ಕೆಲ್ಲ ಅವರು ಬಳಸಿಕೊಂಡಿದ್ದು ಬಾಡಿಗೆ ಗೂಂಡಾಗಳನ್ನು! ಎಂಇಎಸ್‌ನಲ್ಲಿ ಈಗ ಉಳಿದುಕೊಂಡಿರುವುದು ಮುಖಂಡರೇ ಹೊರತು, ಕಾರ್ಯಕರ್ತರಲ್ಲ. ಕಾರ್ಯಕರ್ತರೆಲ್ಲ ಈ ಕೊಳಕು ಮನಸ್ಸಿನ ನಾಯಕರಿಂದ ರೋಸಿ ಹೋಗಿ, ತಮ್ಮ ಪಾಡಿಗೆ ತಾವು ಇದ್ದಾರೆ. ಹೀಗಾಗಿ ಮುಖ ಉಳಿಸಿಕೊಳ್ಳಲು ಮಹಾರಾಷ್ಟ್ರದಿಂದ ಬಾಡಿಗೆ ಗೂಂಡಾಗಳನ್ನು ಕರೆಸಿಕೊಂಡ ಈ ಕಪಟಿ ನಾಯಕರುಗಳು ಬೆಳಗಾವಿಯ ಬೀದಿಗಳಲ್ಲಿ ಶೋ ಕೊಟ್ಟು ಹೋದರು. ಬಾಡಿಗೆ ಗೂಂಡಾಗಳನ್ನು ಇಟ್ಟುಕೊಂಡು ಮೆರವಣಿಗೆ ನಡೆಸಿದ ಎಂಇಎಸ್ ತದನಂತರ ಠಾಕ್ರೆ ಭೂತದಹನದ ನೆಪವೊಡ್ಡಿಕೊಂಡು ‘ಬೆಳಗಾವಿ ಬಂದ್ಗೆ ಕರೆ ನೀಡಿತು. ಬಂದ್‌ಗೆ ಕರೆ ನೀಡಿದ ನಾಯಕರುಗಳು ಪೊಲೀಸರು ಬಂಧಿಸಬಹುದೆಂಬ ಭೀತಿಯಿಂದ ಭೂಗತರಾದರು. ಬಂದ್‌ಗೆ ಬೆಳಗಾವಿಯ ಜನರು ಬೆಂಬಲಿಸಲಿಲ್ಲ. ಕನ್ನಡಿಗರು ಹಾಗಿರಲಿ, ಮರಾಠಿ ಜನರೇ ಬೆಂಬಲಿಸಲಿಲ್ಲ. ಇಂಥ ಮುಖೇಡಿಗಳಿಗೆ ಕೊಡಬೇಕಾಗಿದ್ದ ಉತ್ತರವನ್ನು ಬೆಳಗಾವಿಯ ಜನರೇ ನೀಡಿದರು.
*****
ಶಿವಸೇನೆ, ಬಾಳಠಾಕ್ರೆ, ರಾಜ್ ಠಾಕ್ರೆ ಇಂಥವರು ನಮಗೆ ಎಂದಿಗೂ ಮಾದರಿಯಲ್ಲ, ಆದರ್ಶವೂ ಅಲ್ಲ. ಹಾಗೆ ನೋಡಿದರೆ ನಮ್ಮ ಹಿರಿಯರು ಕನ್ನಡದ ಮುಂದಿನ ಪೀಳಿಗೆಗೆ ಮಾದರಿಗಳನ್ನು ಸೃಷ್ಟಿಸಿ ಹೋಗಿದ್ದಾರೆ.
ಪಂಪ, ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಸರ್ವಜ್ಞ, ಕನಕದಾಸರು, ಕುಮಾರವ್ಯಾಸ, ಸಂತ ಶಿಶುನಾಳ ಶರೀಫರು ನಮಗೆ ಆದರ್ಶ. ಟಿಪ್ಪು ಸುಲ್ತಾನ್, ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಒನಕೆ ಓಬ್ಬವ್ವ, ರಾಣಿ ಅಬ್ಬಕ್ಕ, ನಾಡಪ್ರಭು ಕೆಂಪೇಗೌಡರು ನಮ್ಮ ಆದರ್ಶ. ಇಡೀ ಕರ್ನಾಟಕವನ್ನು ವೈಚಾರಿಕವಾಗಿ ಎಚ್ಚರಗೊಳಿಸಿದ ಯುಗ ಪ್ರವರ್ತಕ ರಾಷ್ಟ್ರಕವಿ ಕೆ.ವಿ.ಪುಟ್ಟಪ್ಪನವರು ನಮ್ಮ ಆದರ್ಶ. ಆಧುನಿಕ ಕರ್ನಾಟಕವನ್ನು ನಿರ್ಮಿಸಿದ ಖ್ಯಾತಿಯ ಸಿದ್ಧನಹಳ್ಳಿ ನಿಜಲಿಂಗಪ್ಪನವರು ನಮ್ಮ ಆದರ್ಶ. ಸರ್ವಸಮಾನ ಸಮಾಜದ ಆದರ್ಶವನ್ನು ಮೈಗೂಡಿಸಿಕೊಂಡು ಸಮಾಜವಾದದ ಬೇರುಗಳನ್ನು ಕರ್ನಾಟಕದ ನೆಲದಲ್ಲಿ ಬಿತ್ತಿದ ಶಾಂತವೇರಿ ಗೋಪಾಲಗೌಡರು ನಮಗೆ ಮಾದರಿ. ಸಾಮಾಜಿಕ ನ್ಯಾಯಕ್ಕೆ ಹೊಸ ವ್ಯಾಖ್ಯೆಯನ್ನೇ ಬರೆದು, ಕರ್ನಾಟಕವನ್ನು ಪ್ರಗತಿಪರ ರಾಜ್ಯವನ್ನಾಗಿ ಕಟ್ಟಲು ದುಡಿದ ಡಿ.ದೇವರಾಜ ಅರಸರು ನಮಗೆ ಮಾರ್ಗದರ್ಶಕರು.
ಧರ್ಮಪ್ರಚಾರಕ್ಕಾಗಿ ಬಂದು ಕನ್ನಡ ಕಲಿತು ತಮ್ಮ ಇಡೀ ಜೀವನವನ್ನು ಕನ್ನಡ ನುಡಿಯ ಸೇವೆಗಾಗಿ ಮುಡುಪಾಗಿಟ್ಟ, ಕನ್ನಡ, ಇಂಗ್ಲಿಷ್ ನಿಘಂಟನ್ನು ರಚಿಸಿಕೊಟ್ಟ ರೆವೆರೆಂಡ್ ಫರ್ಡಿನೆಂಡ್ ಕಿಟ್ಟೆಲ್ ಅವರು ನಮಗೆ ನಿಜವಾದ ಆದರ್ಶ.
ಕನ್ನಡದ ಕುಲಪುರೋಹಿತರೆಂದೇ ಕರೆಯಲ್ಪಡುವ ಏಕೀಕರಣ ಹೋರಾಟದ ರುವಾರಿಗಳಲ್ಲೊಬ್ಬರಾದ ಆಲೂರು ವೆಂಕಟರಾಯರು ನಮಗೆ ಮಾದರಿ. ಕನ್ನಡ ಸಿನಿಮಾ ಜಗತ್ತಿನ ಸಾರ್ವಭೌಮ ಕನ್ನಡಿಗರ ಆತ್ಮಸಾಕ್ಷಿ, ಕರ್ನಾಟಕ ರತ್ನ ಡಾ.ರಾಜ್‌ಕುಮಾರ್ ಅವರು ನಮಗೆ ಆದರ್ಶ. ಈ ನೆಲದ ಮಕ್ಕಳ, ಅನ್ನದಾತರ ಪರವಾಗಿ ಹೋರಾಟದ ರಣಕಹಳೆಯನ್ನೇ ಮೊಳಗಿಸಿದ ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರು ನಮಗೆ ಮಾದರಿ. ತಲೆ ಮೇಲೆ ಮಲ ಹೊರುವ ಅನಿಷ್ಠ, ಅಮಾನವೀಯ ಆಚರಣೆಯನ್ನು ಕಿತ್ತೊಗೆದ ನಿಷ್ಠುರವಾದಿ ಬಿ.ಬಸವಲಿಂಗಪ್ಪ ಅವರು, ನಮಗೆ ಮಾದರಿ.
ಸರ್.ಎಂ.ವಿಶ್ವೇಶ್ವರಯ್ಯ, ಬಿ.ಎಂ.ಶ್ರೀಕಂಠಯ್ಯ, ಡಿ.ವಿ.ಗುಂಡಪ್ಪ, ಗೋವಿಂದ ಪೈ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ದ.ರಾ.ಬೇಂದ್ರೆ, ಶಿವರಾಮಕಾರಂತ್, ಟಿ.ಪಿ.ಕೈಲಾಸಂ ಮೊದಲಾದವರು ಹಾಕಿಕೊಟ್ಟ ಹಾದಿಯೇ ನಮಗೆ ಸಾಕು. ಅನ್ನದಾಸೋಹ, ಜ್ಞಾನದಾಸೋಹಗಳನ್ನು ನೀಡುತ್ತಾ ಪವಾಡವನ್ನೇ ಸೃಷ್ಟಿಸಿದ ಸಿದ್ಧಗಂಗಮಠದ ಡಾ.ಶಿವಕುಮಾರ ಸ್ವಾಮೀಜಿ ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿಯ ಬಾಲಗಂಗಾಧರನಾಥ ಸ್ವಾಮೀಜಿ... ಇವರುಗಳು ನಮ್ಮ ಆದರ್ಶ.
ಇನ್ನೂ ಇಂತಹ ನೂರಾರು ಹೆಸರುಗಳನ್ನು ಹೇಳುತ್ತಾ ಹೋಗಬಹುದು. ಸಾವಿರ ಸಾವಿರ ದಾರ್ಶನಿಕರು ತತ್ತ್ವಜ್ಞಾನಿಗಳು ಸಂತರು ಶರಣರು ವಿದ್ವಾಂಸರು ಸಾಹಿತಿಗಳು ಕವಿವರೇಣ್ಯರು ಜನನಾಯಕರು ಹುಟ್ಟಿದ ಮಹಾನ್ ನಾಡಿದು. ನಮಗೆ ಆದರ್ಶಗಳಿಗೆ, ಮಾದರಿಗಳಿಗೆ ಕೊರತೆಯಿಲ್ಲ. ನಾವು ಮತ್ತೊಂದು ನಾಡಿನತ್ತ ಕೈ ಚಾಚುವ ಅಗತ್ಯವೂ ಇಲ್ಲ. ಅದರಲ್ಲೂ ಬಾಳಠಾಕ್ರೆಯಂತಹ ಮುಖೇಡಿ, ವಿಕೃತ ಮನಸ್ಸಿನ ಕೊಳಕು ರಾಜಕಾರಣಿಯನ್ನು ಮಾದರಿಯಾಗಿಟ್ಟುಕೊಳ್ಳುವ ಅಗತ್ಯತೆ ನಮಗೇನು ಇಲ್ಲ.
ನಮ್ಮ ನಾಡಿನ ಜ್ಞಾನಪರಂಪರೆಯಲ್ಲಿ ಇಲ್ಲದ್ದು ಏನು ಇಲ್ಲ. ಅದಕ್ಕಾಗಿಯೇ ನಮ್ಮ ಕರವೇ ನಲ್ನುಡಿಯ ಮೊದಲ ಸಂಚಿಕೆಯ ಮುಖಪುಟ ದಲ್ಲಿ ಕವಿ ಋಷಿ ಸಂತರ ಆದರ್ಶದಲ್ಲಿ ಎಂಬ ತಲೆಬರೆಹವನ್ನು ನೀಡಿದ್ದೆವು. ಆ ಆದರ್ಶದ ಹಾದಿಯಲ್ಲಿ ನಾವು ಸಾಗುತ್ತೇವೆ.

ಇದು ನಡಿಗೆಯ ಕಾಲ
ಖುಷಿ

ನಡೆಯುತ್ತಲೇ ಸಾವಿರಾರು ವರ್ಷಗಳನ್ನು ಕ್ರಮಿಸಿ ಪ್ರಗತಿಯತ್ತ ದಾಪುಗಾಲು ಹಾಕಿದ ಮಾನವ ಸಂಕುಲ ಇದೀಗ ‘ವಿಧ್ವಂಸಕ ಪ್ರಗತಿಯೇ ಬೇಡವೆಂದು ನಡಿಗೆಯನ್ನೇ ಆಶ್ರಯಿಸಿರುವುದು ವಿಪರ್ಯಾಸ. ಮಾನವನ ನಡಿಗೆಯ ಇತಿಹಾಸದ ಜತೆಗೆ ನ್ಯಾಯಕ್ಕಾಗಿ, ಸತ್ಯಕ್ಕಾಗಿ, ಮನುಕುಲದ ಒಳಿತಿಗಾಗಿ ‘ನಿರ್ದಿಷ್ಟ ಉದ್ದಿಶ್ಯವುಳ್ಳ ನಡಿಗೆಗಳು ಜತೆಜತೆಗೆ ನಡಕೊಂಡು ಬಂದಿವೆ. ಕಾಂಗ್ರೆಸ್ ಪಕ್ಷ ಬೆಂಗಳೂರಿನಿಂದ ಬಳ್ಳಾರಿಗೆ ನಡೆಸುತ್ತಿರುವ ‘ನಾಡ ರಕ್ಷಣೆಗೆ ನಡಿಗೆಯ ಮುನ್ನೆಲೆಯಲ್ಲಿ ನಡಿಗೆಯ ಕತೆಯನ್ನು ಅವಲೋಕಿಸುವ ಪುಟ್ಟ ಯತ್ನವಿದು.
ಚೀನಾದಲ್ಲಿ ಆರಂಭಗೊಂಡ ‘ಲಾಂಗ್‌ಮಾರ್ಚ್ ಇವತ್ತಿಗೂ ಸಾರ್ವಕಾಲಿಕ, ಜಾಗತಿಕ ದಾಖಲೆ. ಚೀನಾ ಕ್ರಾಂತಿಯ ಹರಿಕಾರ ಮಾವೋತ್ಸೆ ತುಂಗ್ ಹಾಗೂ ಚೌ ಎನ್ ಲಾಯ್ ನಡೆಸಿದ ಈ ಸುದೀರ್ಘ ಪಯಣ ೩೭೦ ದಿನ ಪರ್ಯಂತ ನಡೆದಿತ್ತು. ಕ್ರಮಿಸಿದ ದೂರ ೧೨,೫೦೦ ಕಿಲೋಮೀಟರ್. ಚೀನಾದಲ್ಲಿ ಸರ್ವಾಧಿಕಾರಿಯಾಗಿದ್ದ ಕುಮಿಂಗ್‌ಟಾಂಗ್ ಪಕ್ಷದ ಚಿಯಾಂಗ್ ಕೈ ಶೇಕ್‌ನ ಆಡಳಿತದ ವಿರುದ್ಧ ಮಾವೋ ನಡೆಸಿದ ಲಾಂಗ್‌ಮಾರ್ಚ್ ಇಡೀ ಚೀನಾವನ್ನು ವ್ಯಾಪಿಸಿತ್ತು. ಚೀನಾ ಕಮ್ಯುನಿಸ್ಟ್ ಪಕ್ಷದ ವಿಮೋಚನಾ ಸೇನೆ ಹಾಗೂ ಚಿಯಾಂಗ್ ಕೈ ಶೇಕ್‌ನ ಬಾಡಿಗೆ ಸೈನಿಕರ ಮಧ್ಯೆ ಯುದ್ಧಕ್ಕೂ ಕಾರಣವಾಗಿ ಅಂತಿಮವಾಗಿ ಸರ್ವಾಧಿಕಾರಿ ಆಡಳಿತ ಕೊನೆಗಾಣಿಸುವಲ್ಲಿ ಲಾಂಗ್‌ಮಾರ್ಚ್ ಯಶಸ್ವಿಯಾಯಿತು. ಇಂದಿಗೂ ಚಾರಿತ್ರಿಕ ದಾಖಲೆಯಾಗಿ ಉಳಿದಿರುವ ಮಹಾನ್‌ಯಾತ್ರೆ ಇದು.
ಭಾರತಕ್ಕೆ ಬಂದರೆ ಮಾಜಿ ಪ್ರಧಾನಿ ಚಂದ್ರಶೇಖರ್ ನೇತೃತ್ವದಲ್ಲಿ ನಡೆದ ಭಾರತಯಾತ್ರೆ ಪ್ರಮುಖವಾದದ್ದು. ೧೯೮೩ರಲ್ಲಿ ಗ್ರಾಮೀಣ ಭಾರತದ ಸ್ಥಿತಿಗತಿ ಅಧ್ಯಯನ ಮಾಡಲು ಇಡೀ ಭಾರತವನ್ನು ಚಂದ್ರಶೇಖರ್ ಸುತ್ತಿದ್ದರು. ಕರ್ನಾಟಕದಲ್ಲೂ ಸುಮಾರು ೧ ತಿಂಗಳು ಚಂದ್ರಶೇಖರ್ ಪಾದಯಾತ್ರೆ ನಡೆಸಿದ್ದರು. ಅಧ್ಯಯನದ ವಿಶಾಲತೆ ಬಿಟ್ಟರೆ ಸಾಮಾಜಿಕ ಆಂದೋಲನ ಅಥವಾ ಚಳವಳಿಯ ವ್ಯಾಪಕತೆ ಇದಕ್ಕಿರಲಿಲ್ಲ.
ಸರ್ಕಾರ ಉರುಳಿಸಿದ ಯಾತ್ರೆ:
‘ರೈತಶಕ್ತಿ ಗುಡುಗಿದರೆ ವಿಧಾನಸೌಧ ನಡುಗುವುದು ಎಂಬ ಮಾತನ್ನು ಅಕ್ಷರಶಃ ಸಾಧ್ಯವಾಗಿಸಿದ್ದು ನರಗುಂದ ನರಮೇಧ ಖಂಡಿಸಿ ನಡೆದ ಬೃಹತ್ ಪಾದಯಾತ್ರೆ. ೧೯೮೨ರಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಗುಂಡೂರಾವ್ ನಟೋರಿಯಸ್ ಆಡಳಿತಕ್ಕೆ ಹೆಸರಾಗಿದ್ದರು. ಆ ಕಾಲದಲ್ಲಿ ಕಂಡ ಗೂಂಡಾಗಿರಿ, ರೈತರ ದಮನ, ಕನ್ನಡ ಚಳವಳಿಗಾರರ ಮೇಲೆ ದಬ್ಬಾಳಿಕೆ ಮತ್ತೆಂದೂ ಕರ್ನಾಟಕ ಕಾಣಲಿಲ್ಲ. ಅರಸು ಸರ್ಕಾರದ ಗೂಂಡಾಗಿರಿಯನ್ನು ಮೀರಿಸುವಷ್ಟು ಗುಂಡೂರಾವ್ ಸರ್ಕಾರ ನಿರಂಕುಶ ಹಾಗೂ ಕ್ರೂರಿಯಾಗಿತ್ತು. ರೈತರಲ್ಲಿ ಜಾಗೃತಿ ಮೂಡಿ, ಹಕ್ಕೊತ್ತಾಯಕ್ಕಾಗಿ ಉಗ್ರ ಹೋರಾಟ ಆರಂಭಿಸಿದ ಮಹತ್ವದ ಕಾಲಘಟ್ಟ. ಆಗಷ್ಟೇ ಹುಟ್ಟಿಕೊಂಡಿದ್ದ ಕರ್ನಾಟಕ ರಾಜ್ಯ ರೈತಸಂಘ ಇನ್ನೂ ಅಂಬೆಗಾಲಿಕ್ಕುವ ಕೂಸು. ಹಳೆ ಮೈಸೂರು ಪ್ರಾಂತ್ಯದಲ್ಲಿ ಒಂದಿಷ್ಟು ನೆಲೆ ಇತ್ತಾದರೂ ಉತ್ತರ ಕರ್ನಾಟಕದಲ್ಲಿ ಅಷ್ಟಾಗಿ ರೈತರ ಚಳವಳಿ ವ್ಯಾಪಿಸಿರಲಿಲ್ಲ.
ಧಾರವಾಡ ಜಿಲ್ಲೆಯ ನರಗುಂದದಲ್ಲಿ ಅಹಿಂಸಾತ್ಮಕ ಚಳವಳಿ ನಡೆಸುತ್ತಿದ್ದ ರೈತರ ಮೇಲೆ ಪೊಲೀಸರು ಲಾಠಿ ಬೀಸಿದರು. ಸಿಟ್ಟಿಗೆದ್ದ ರೈತರು ಕಲ್ಲು ಬೀಸಿದರು. ಗುಂಡೂರಾವ್ ಸರ್ಕಾರ ಮುಖಮೂತಿ ನೋಡದೇ ಗೋಲಿಬಾರ್ ನಡೆಸಿದ್ದರಿಂದಾಗಿ ೨೩ ರೈತರು ಪ್ರಾಣಾರ್ಪಣೆ ಮಾಡಿದರು. ಅಮಾಯಕ ರೈತರ ಬಲಿತೆಗೆದುಕೊಂಡ ಗುಂಡೂರಾವ್ ಸರ್ಕಾರ ಅದಕ್ಕೆ ತಕ್ಕ ಬೆಲೆಯನ್ನೇ ತೆರಬೇಕಾಯಿತು.
ನರಗುಂದದ ನರಮೇಧ ಖಂಡಿಸಿ ರೈತಸಂಘದ ಸಂಸ್ಥಾಪಕರಲ್ಲಿ ಒಬ್ಬರಾದ, ಮಹಾನ್ ರೈತಹೋರಾಟಗಾರ ಪ್ರೊ| ಎಂ.ಡಿ. ನಂಜುಂಡಸ್ವಾಮಿ ಹಾಗೂ ಬಾಬಗೌಡ ಪಾಟೀಲ್ ನೇತೃತ್ವದಲ್ಲಿ ರೂಪುತಳೆದ ರೈತ ಕಾರ್ಮಿಕ ಹೋರಾಟ ಸಮಿತಿ ಬೆಂಗಳೂರಿಗೆ ಪಾದಯಾತ್ರೆ ನಡೆಸಲು ಮುಂದಾಯಿತು. ಕೇವಲ ೨೮ ಜನರಿದ್ದ ಯಾತ್ರೆ ನರಗುಂದದಿಂದ ಹೊರಟಿತು. ೧೦೦-೧೨೫ ಎತ್ತಿನಗಾಡಿಗಳು ಜತೆಗಿದ್ದವು. ಯಾತ್ರೆ ಚಿತ್ರದುರ್ಗ ಬರುವಷ್ಟರಲ್ಲಿ ಜನಸಾಗರವೇ ಯಾತ್ರೆಯೊಂದಿಗೆ ಕೈಜೋಡಿಸಿತ್ತು. ರೊಟ್ಟಿ-ಚಟ್ನಿ ಯಾತ್ರೆ ಎಂದೇ ಹೆಸರಾದ ಈ ಯಾತ್ರೆಯುದ್ದಕ್ಕೂ ರೈತರೇ ರೊಟ್ಟಿ-ಚಟ್ನಿ ಪೂರೈಸಿದ್ದರು. ವಿರೋಧ ಪಕ್ಷವಾಗಿದ್ದ ಜನತಾಪಕ್ಷ ಕೂಡ ಗುಂಡೂರಾವ್‌ರ ಜನವಿರೋಧಿ ಧೋರಣೆ ಖಂಡಿಸಿ ಯಾತ್ರೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿತ್ತು. ಆಗ ಪ್ರತಿಪಕ್ಷ ನಾಯಕರಾಗಿದ್ದ, ಹಾಲಿ ಬಿಜೆಪಿ ಸಂಸದ ಡಿ.ಬಿ. ಚಂದ್ರೇಗೌಡ ಯಾತ್ರೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಬೆಂಗಳೂರಿನವರೆಗೂ ನಡೆದಿದ್ದರು.
ಯಾತ್ರೆ ಬರೋಬ್ಬರಿ ೪೬೪ ಕಿ.ಮೀ. ದೂರ ಕ್ರಮಿಸಿ ಬೆಂಗಳೂರು ತಲುಪಿತ್ತು. ೨೮ ಜನರಿಂದ ಆರಂಭವಾದ ಯಾತ್ರೆ ಬೆಂಗಳೂರು ಸೇರುವಷ್ಟರಲ್ಲಿ ೧ ಲಕ್ಷ ಜನರ ಯಾತ್ರೆಯಾಗಿ ಬೆಳೆದಿತ್ತು. ೧೯೮೨ರಲ್ಲಿ ೧ ಲಕ್ಷ ಜನ ವಿಧಾನಸೌಧದ ಎದುರು ಸೇರಿ ಗುಂಡೂರಾಯರ ಗೂಂಡಾಸರ್ಕಾರದ ಬೆವರು ಇಳಿಸಿದ್ದರು.
ನಂತರ ನಡೆದ ವಿಧಾನಸಭೆ ಚುನಾವಣೆಯಲ್ಲಿ ಜನತಾಪಕ್ಷ-ಕ್ರಾಂತಿರಂಗ ಮೈತ್ರಿಕೂಟ ಭರ್ಜರಿ ವಿಜಯ ಸಾಧಿಸಿತ್ತು. ಕಾಂಗ್ರೆಸ್ ಸರ್ಕಾರ ಪತನವಾಗಿತ್ತು. ಗುಂಡೂರಾಯರಿಗೆ ಜನ ಪಾಠ ಕಲಿಸಿದ್ದರು. ಕರ್ನಾಟಕದಲ್ಲಿ ಮೊತ್ತ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರ ಅಧಿಕಾರಕ್ಕೇರುವ ಮೂಲಕ ಇತಿಹಾಸ ಸೃಷ್ಟಿಸಿದ ಪರಿವರ್ತನೆಗೆ ಪ್ರಮುಖ ಕಾರಣವಾಗಿದ್ದು ನರಗುಂದ ಪಾದಯಾತ್ರೆ. ರೈತರನ್ನು ಬಗ್ಗು ಬಡಿದರೆ ಯಾವ ರಾಜ್ಯವೂ ಉಳಿಯದು ಎಂದು ಆಡಳಿತಾರೂಢರಿಗೆ ಪಾಠ ಕಲಿಸಿದ ಘಟನೆಯೂ ಆಗಿ ಇದು ಚರಿತ್ರೆಯಲ್ಲಿ ದಾಖಲಾಗಿದೆ.
ಗೌಡರ ಯಾತ್ರೆ
ಇದೇ ಗುಂಡೂರಾವ್ ಸರ್ಕಾರದ ಅವಧಿಯಲ್ಲಿ ನಾಗಮಂಗಲದಲ್ಲಿ ಈಗ ಬಿಜೆಪಿಯಲ್ಲಿರುವ ಎಲ್.ಆರ್. ಶಿವರಾಮೇಗೌಡ ಕಾಂಗ್ರೆಸ್‌ನ ಪುಢಾರಿಯಾಗಿದ್ದರು. ಕಾಂಗ್ರೆಸ್ ಸರ್ಕಾರಕ್ಕೆ ಸಿಂಹಸ್ವಪ್ನವಾಗಿದ್ದ ಲಂಕೇಶಪತ್ರಿಕೆಯಲ್ಲಿ ನಿರಂತರವಾಗಿ ಸರ್ಕಾರದ ವಿರುದ್ಧ ವರದಿಗಳು ಬರುತ್ತಿದ್ದವು. ಅಂತಹದೇ ವರದಿಯನ್ನು ಕಂಚನಹಳ್ಳಿ ಗಂಗಾಧರಮೂರ್ತಿ ಲಂಕೇಶ ಪತ್ರಿಕೆಯಲ್ಲಿ ಬರೆದಿದ್ದರು. ಇದರಿಂದ ಸಿಟ್ಟಿಗೆದ್ದ ಶಿವರಾಮರಾಮೇಗೌಡರ ಗುಂಪು ಕಂಚನಹಳ್ಳಿ ಗಂಗಾಧರಮೂರ್ತಿಯನ್ನು ಕೊಲೆ ಮಾಡಿಸಿತ್ತು. ಆಗ ಪ್ರತಿಪಕ್ಷ ನಾಯಕರಲ್ಲಿ ಪ್ರಮುಖರಾಗಿದ್ದ ಈಗಿನ ಮಾಜಿ ಪ್ರಧಾನಿ ದೇವೇಗೌಡರು ನಾಗಮಂಗಲದಿಂದ ಕಂಚನಹಳ್ಳಿವರೆಗೆ ಪಾದಯಾತ್ರೆ ನಡೆಸಿ, ಸರ್ಕಾರಕ್ಕೆ ನಿದ್ದೆಗೆಡಿಸಿದ್ದರು.
ಬಂಗಾರಪ್ಪ ಸಚಿವ ಸಂಪುಟದಲ್ಲಿ ಎಸ್. ರಮೇಶ್ ಸಚಿವರಾಗಿದ್ದರು. ಕುಣಿಗಲ್ ಪ್ರವಾಸಿಮಂದಿರದಲ್ಲಿ ಇಳಿದುಕೊಂಡಿದ್ದ ರಮೇಶ್ ತಮ್ಮ ಪಿಸ್ತೂಲ್‌ನಿಂದ ಗುಂಡು ಹಾರಿಸಿ ಓರ್ವನನ್ನು ಕೊಂದಿದ್ದರು. ಇದನ್ನು ಖಂಡಿಸಿ ದೇವೇಗೌಡರು ಕುಣಿಗಲ್‌ನಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸಿದ್ದರು. ಇದರಿಂದಾಗಿ ರಮೇಶ್ ಸಚಿವ ಸ್ಥಾನ ಕಳೆದುಕೊಳ್ಳುವಂತಾಗಿತ್ತು.
ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ತೆಂಗಿನ ಬೆಳೆಗೆ ತೀವ್ರತರದ ನುಸಿಪೀಡೆ ಕಾಣಿಸಿಕೊಂಡಿತ್ತು. ನುಸಿಪೀಡೆ ಹೋಗಬೇಕಾದರೆ ನೀರಾ ಇಳಿಸಲು ಅನುಮತಿ ನೀಡಬೇಕೆಂದು ರೈತಸಂಘದ ನೇತೃತ್ವದಲ್ಲಿ ನಿರಂತರ ಪ್ರತಿಭಟನೆ ನಡೆದಿತ್ತು. ವಿಠಲೇನಹಳ್ಳಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ರೈತರ ಮೇಲೆ ಗುಂಡು ಹಾರಿಸಿ ಕೊಲೆ ಮಾಡಲಾಗಿತ್ತು. ಎಸ್.ಎಂ. ಕೃಷ್ಣ ಸರ್ಕಾರದ ರೈತವಿರೋಧಿ ಗೂಂಡಾವರ್ತನೆ ಖಂಡಿಸಿ ೪ ದಿನಗಳ ೮೫ ಕಿ.ಮೀ. ಪಾದಯಾತ್ರೆಯನ್ನು ದೇವೇಗೌಡರು ವಿಠಲೇನಹಳ್ಳಿಯಿಂದ ಬೆಂಗಳೂರು ವರೆಗೂ ಕೈಗೊಂಡಿದ್ದರು.
ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗಲೇ ಪಾದಯಾತ್ರೆ ನಡೆಸಿ ಇತಿಹಾಸವನ್ನು ಸೃಷ್ಟಿಸಿದರು. ಅದಕ್ಕೆ ಕಾರಣವಾಗಿದ್ದು ತಮಿಳುನಾಡು ಸರ್ಕಾರ ಕಾವೇರಿ ನೀರಿಗಾಗಿ ಬೇಡಿಕೆ ಇಟ್ಟಿದ್ದು. ಕರ್ನಾಟಕದಲ್ಲಿ ತೀವ್ರ ಬರಗಾಲವಿದ್ದು ನೀರು ಬಿಡಬೇಕೆಂದು ತಮಿಳುನಾಡು ಹಠಕ್ಕೆ ಕುಳಿತಿತ್ತು. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಸ್ತಿತ್ವದಲ್ಲಿತ್ತು. ಅಲ್ಲದೇ ತಮಿಳುನಾಡಿನ ಡಿಎಂಕೆ ಕೇಂದ್ರ ಸರ್ಕಾರದ ಪಾಲುದಾರನಾಗಿತ್ತು. ಕರ್ನಾಟಕ ಸರ್ಕಾರದ ಮಾತನ್ನು ಕೇಳುವ ಸ್ಥಿತಿಯಲ್ಲಿ ಕೇಂದ್ರವಿರಲಿಲ್ಲ. ಅಲ್ಲದೇ ಮಾಜಿ ಪ್ರಧಾನಿಯಾಗಿದ್ದ ದೇವೇಗೌಡರು ಯಾತ್ರೆ ನಡೆಸುವುದಾಗಿ ಎಚ್ಚರಿಸಿದ್ದರು. ಮಂಡ್ಯ, ಮೈಸೂರು, ಬೆಂಗಳೂರುಗಳಲ್ಲಿ ತೀವ್ರತರದ ತಮಿಳುನಾಡು ವಿರೋಧಿ ಹೋರಾಟ ನಡೆದಿತ್ತು. ಹಿಂಸಾತ್ಮಕ ಚಟುವಟಿಕೆಗಳು ನಡೆಯುತ್ತಿದ್ದವು. ಈ ಹಿನ್ನೆಲೆಯಲ್ಲಿ ಎಸ್.ಎಂ. ಕೃಷ್ಣ ಶಾಂತಿಗಾಗಿ ಆಗ್ರಹಿಸಿ ಬೆಂಗಳೂರಿನಿಂದ ಮೈಸೂರಿಗೆ ಯಾತ್ರೆ ಹೊರಟಿದ್ದರು. ಆದರೆ ಯಾತ್ರೆ ಮಂಡ್ಯ ತಲುಪುತ್ತಿದ್ದಂತೆ ಸುಪ್ರೀಂಕೋರ್ಟ್ ತೀರ್ಪು ಬಂದಿದ್ದರಿಂದಾಗಿ ಕೃಷ್ಣ ಯಾತ್ರೆ ಕೈಬಿಟ್ಟಿದ್ದರು.
ನಾಡ ರಕ್ಷಣೆಗೆ ನಡಿಗೆ
ಈ ಎಲ್ಲಾ ಯಾತ್ರೆಗಳ ಚರಿತ್ರೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ‘ನಾಡ ರಕ್ಷಣೆಗೆ ನಡಿಗೆಯನ್ನು ವಿಶ್ಲೇಷಿಸಬೇಕಾಗಿದೆ. ಇದುವರೆಗೆ ನಡೆದ ಬಹುತೇಕ ಎಲ್ಲಾ ಯಾತ್ರೆಗಳು ರೈತರ ಮೇಲಿನ ದೌರ್ಜನ್ಯ ಖಂಡಿಸಿಯೇ ನಡೆದ ಯಾತ್ರೆಗಳಾಗಿವೆ. ಎಸ್.ಎಂ. ಕೃಷ್ಣ ಯಾತ್ರೆ ತಮಿಳುನಾಡಿನ ಕುತಂತ್ರವನ್ನು ಖಂಡಿಸಿ ನಡೆದ ಯಾತ್ರೆಯಾದರೂ ಅವರಿಗೆ ಅಧಿಕಾರ ಉಳಿಸಿಕೊಳ್ಳುವ ಜರೂರತ್ತು ಇತ್ತು. ಅಲ್ಲದೇ ಸ್ವತಃ ಮುಖ್ಯಮಂತ್ರಿಯಾಗಿಯೇ ಅವರು ಯಾತ್ರೆ ನಡೆಸಿದ್ದರಿಂದಾಗಿ ಅದಕ್ಕೆ ಬೇರೆಯದೇ ಆಯಾಮವೂ ಇತ್ತು. ಕಾಂಗ್ರೆಸ್ ಪಕ್ಷ ಈಗ ನಡೆಸುತ್ತಿರುವ ಯಾತ್ರೆ ವಿಶಾಲಾರ್ಥದಲ್ಲಿ ನಾಡ ರಕ್ಷಣೆಯ ಮಹತ್ವದ ಆಶಯವನ್ನು ಹೊಂದಿದೆ. ಅಧಿಕಾರ ವಂಚಿತ ಕಾಂಗ್ರೆಸಿಗರು ತಮ್ಮ ನಿರುದ್ಯೋಗ ಬಾಧೆಯನ್ನು ತೊಡೆಯುವ ಉದ್ದೇಶವೂ ಇದರ ಹಿಂದಿರುವುದನ್ನು ಅಲ್ಲಗಳೆಯಲಾಗದು. ಹಾಗಿದ್ದೂ ನಾಡ ರಕ್ಷಣೆಯ ಮಹದುದ್ದೇಶ ಹೊಂದಿರುವುದರಿಂದ ಈ ಯಾತ್ರೆಯನ್ನು ಸಾಹಿತಿ-ಬುದ್ಧಿಜೀವಿಗಳು ಬೆಂಬಲಿಸುತ್ತಿದ್ದಾರೆ.
ಬಳ್ಳಾರಿ ಸಚಿವರು ‘ಬಳ್ಳಾರಿಗೆ ಬನ್ನಿ ನೋಡ್ಕೋತೀವಿ ಎಂದು ಸವಾಲು ಹಾಕಿದ್ದೇ ಯಾತ್ರೆಗೆ ಕಾರಣವಾದ ಸಂಗತಿಯಾಗಿದೆ. ಹಾಗೆ ಹೇಳಬೇಕೆಂದರೆ ಕಾಂಗ್ರೆಸ್‌ನವರು ಮಾತ್ರವಲ್ಲದೇ ಎಂದೋ ನಾಡಿನ ಜನತೆ ಇಂತಹದೊಂದು ಹೋರಾಟವನ್ನು ಮಾಡಬೇಕಾದ ಅನಿವಾರ್ಯತೆ ಖಂಡಿತಾ ಬಂದೊದಗಿತ್ತು. ಈ ಹಿಂದೆ ಪ್ರಗತಿಪರ ಚಿಂತಕರ ತಂಡವೊಂದು ಬಳ್ಳಾರಿಯೆಡೆಗೆ ಯಾತ್ರೆ ಮಾಡಿ, ಅದರ ಅನಿವಾರ್ಯತೆಯನ್ನು ಒತ್ತಿ ಹೇಳಿತ್ತು. ಕಾಂಗ್ರೆಸ್ ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸುವಂತೆ, ಗಣಿ ಅಕ್ರಮವನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸಿ ಯಾತ್ರೆ ನಡೆಸುತ್ತಿದೆ. ಯಾತ್ರೆ ಹೊರಟಲ್ಲಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಎಲ್ಲೆಲ್ಲೂ ಕಾಂಗ್ರೆಸ್ ನಾಯಕರಿಗೆ ಅದ್ದೂರಿ ಸ್ವಾಗತ ದೊರೆಯುತ್ತಿದೆ. ಬ್ರಿಟಿಷರನ್ನು ಭಾರತದಿಂದ ಒದ್ದೋಡಿಸಿ ಎಂಬ ಮಹತ್ವದ ಕರೆ ನೀಡಿದ ಕ್ವಿಟ್ ಇಂಡಿಯಾ ಚಳವಳಿ ಆರಂಭದ ದಿನವಾದ ಆಗಸ್ಟ್ ೯ರಂದು ಬಳ್ಳಾರಿಯಲ್ಲಿ ಯಾತ್ರೆ ಅಂತಿಮವಾಗಲಿದೆ. ಯಾತ್ರೆಯ ಹಿಂದೆ ಕಾಂಗ್ರೆಸ್ ಅಪೇಕ್ಷೆ, ನಿರೀಕ್ಷೆಗಳು ಏನೇ ಇರಬಹುದು. ನಾಡನ್ನು ರಕ್ಷಿಸುವ ಕಾಳಜಿಯಂತೂ ಇದೆ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ಈ ಸಕಾರಣದಿಂದಾಗಿಯೇ ನಾಡಿನ ಸಾಕ್ಷಿಪ್ರಜ್ಞೆಯಾಗಿರುವ ಸಾಹಿತಿ ಯು.ಆರ್.ಅನಂತಮೂರ್ತಿ, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಇದಕ್ಕೆ ಬೆಂಬಲ ಸೂಚಿಸಿದ್ದಾರೆ. ಅಷ್ಟರಮಟ್ಟಿಗೆ ಯಾತ್ರೆಯ ಸಾರ್ಥಕತೆ ಮಹತ್ವದ್ದು. ಕೇವಲ ಬಳ್ಳಾರಿಯ ರೆಡ್ಡಿ ಸೋದರರನ್ನು ಹದ್ದುಬಸ್ತಿನಲ್ಲಿಡಲು ಈ ಯಾತ್ರೆ ಸೀಮಿತವಾಗಬಾರದು. ಅನಂತಮೂರ್ತಿಯವರು ಯಾವತ್ತೂ ಪ್ರತಿಪಾದಿಸುವಂತೆ ‘ನಮ್ಮ ಗಣಿಸಂಪತ್ತು ಮುಂದಿನ ಪೀಳಿಗೆಗೆ ಯಾವತ್ತೂ ಉಳಿಯಬೇಕು. ನಮಗೆ ಬೇಕಾದ ಕಬ್ಬಿಣ, ಉಕ್ಕು ತಯಾರಿಕೆಗೆ ಬೇಕಾಗುವಷ್ಟು ಮಾತ್ರ ಗಣಿಗಾರಿಕೆ ನಡೆಯಬೇಕು. ಎಲ್ಲಾ ಗಣಿಗಾರಿಕೆಯೂ ಸರ್ಕಾರದ ಉಸ್ತುವಾರಿಯಲ್ಲೇ ನಡೆಯಬೇಕು. ಒಂದಿಂಚು ಅದಿರು ಕೂಡ ರಫ್ತಾಗಬಾರದು ಎಂಬುದು ಕಾಂಗ್ರೆಸ್‌ನ ಧ್ಯೇಯವಾಕ್ಯವಾಗಬೇಕು. ಇದರ ಮಧ್ಯೆಯೇ ಇನ್ನೊಂದು ಸಂಗತಿಯೂ ಇದೆ. ಕರ್ನಾಟಕಕ್ಕೆ ಸೇರಿರುವ ೩೭ ಕಿ.ಮೀ. ಉದ್ದ ಹಾಗೂ ೩ ಕಿ.ಮೀ. ಅಗಲದ ಭೂಮಿ ಆಂಧ್ರಪ್ರದೇಶಕ್ಕೆ ಸೇರಿಹೋಗಿದೆ. ಬ್ರಿಟಿಷರ ಕಾಲದ ಗಡಿರೇಖೆಯನ್ನು ತಿದ್ದಿ ತಮ್ಮ ಗಣಿಗಾರಿಕೆಗೆ ಬಳಸಿಕೊಂಡಿರುವವರು ಜನಾರ್ದನರೆಡ್ಡಿ ಮತ್ತವರ ಸೋದರರು. ರಾಜ್ಯದ ಭೂಮಿಯನ್ನು ಕಾಯಬೇಕಾದ ಕಂದಾಯ ಸಚಿವ ಕರುಣಾಕರರೆಡ್ಡಿಯೇ ಇದರಲ್ಲಿ ಶಾಮೀಲಾಗಿರುವುದರಿಂದ ಬೇಲಿಯೇ ಎದ್ದು ಹೊಲಮೇದಂತಾಗಿದೆ. ಓಬಳಾಪುರಂ ಮೈನಿಂಗ್ ಕಂಪನಿ ಕರ್ನಾಟಕದಲ್ಲಿ ಗಣಿಗಾರಿಕೆ ನಡೆಸುತ್ತಿಲ್ಲವೆಂದು ಪ್ರತಿಪಾದಿಸುತ್ತಿದೆ. ನಮ್ಮ ಅಮೂಲ್ಯ ಗಡಿಭಾಗವನ್ನು ಆಂಧ್ರಕ್ಕೆ ಸೇರಿಸಿಕೊಂಡು ಅಲ್ಲಿ ಗಣಿಗಾರಿಕೆ ನಡೆಸುತ್ತಾ, ಕರ್ನಾಟಕದಲ್ಲಿ ತಮ್ಮ ಗಣಿ ಇಲ್ಲ ಎಂದು ಹೇಳುವ ರೆಡ್ಡಿಗಳ ಮಾತುಗಳು ಪಕ್ಕಾ ವಂಚಕತನದ್ದು. ಹಾಲಿ ಇರುವ ಕಾನೂನಿನಂತೆ ಈ ರೀತಿ ಗಡಿರೇಖೆಯನ್ನು ಬದಲಿಸಿ, ಬಾಂದ್ ಕಲ್ಲುಗಳನ್ನು ಕಿತ್ತು ಹೊಸದಾಗಿ ನೆಟ್ಟಿರುವುದು ದೇಶದ್ರೋಹದ ಅಪರಾಧ. ಈ ಬಗ್ಗೆಯೂ ಕಾಂಗ್ರೆಸ್ ಒತ್ತಾಯಿಸಬೇಕು.ಕೇವಲ ಬೆಳಗಾವಿಯ ಗಡಿಭಾಗವನ್ನು ನಾವು ಉಳಿಸಿಕೊಂಡರಷ್ಟೇ ಸಾಲದು. ಬಳ್ಳಾರಿಯ ಗಡಿಭಾಗವೂ ನಮಗಾಗಿಯೇ ಉಳಿಯಬೇಕು. ಅಲ್ಲಿರುವ ಅಮೂಲ್ಯ ಅದಿರು ನಾಡಿನ ಅಭಿವೃದ್ಧಿಗೆ ಬಳಕೆಯಾಗಬೇಕು.
ಹಾಗಂತ ಗಣಿಗಾರಿಕೆ ಇಂದು ನಿನ್ನೆಯದಲ್ಲ. ಕುದುರೆಮುಖದ ಕಬ್ಬಿಣದ ಅದಿರು ಇಂಗ್ಲೆಂಡ್, ಜಪಾನ್‌ನ ಪಾಲಾಗಿದೆ. ಕೋಲಾರದ ಚಿನ್ನದ ಗಣಿಯು ಬರಿದಾಗಿ ಲಂಡನ್‌ಗೆ ಹೊಳಪು ತಂದಿದೆ. ಈಗ ಬಳ್ಳಾರಿಯ ಅದಿರು ಚೀನಾ, ಜಪಾನ್‌ಗೆ ಹೋಗುತ್ತಲೇ ಇದೆ. ಬ್ರಿಟಿಷರ ಕಾಲದಲ್ಲಿ ಆದ ಲೂಟಿಯ ಬಗ್ಗೆ ನಾವೆಲ್ಲಾ ಈಗಲೂ ಪರಿತಪಿಸುತ್ತಿದ್ದೇವೆ. ಸ್ವಾತಂತ್ರ್ಯ ನಂತರವೂ ಗಣಿಲೂಟಿ ಮುಂದುವರೆದಿರುವುದು ಖಂಡಿತಾ ಕ್ಷಮಾರ್ಹವಲ್ಲ. ಗಣಿ ಸಂಪತ್ತನ್ನು ಉಳಿಸಲು ಕಾಂಗ್ರೆಸ್ ಪಾದಯಾತ್ರೆ ಪಣತೊಡಲಿ. ಅಷ್ಟರಮಟ್ಟಿಗಾದರೂ ಯಾತ್ರೆ ಸಾರ್ಥಕವಾಗಲಿ.

ಅಕ್ರಮಗಳ ನಾಡಿನಲ್ಲಿ ಮಲದ ದುರ್ವಾಸನೆದಿನೇಶ್ ಕುಮಾರ್ ಎಸ್.ಸಿ.


ಹೊಸಪೇಟೆಯಿಂದ ಹಳೆಯ ಗೆಳೆಯನೊಬ್ಬ ಬಂದಿದ್ದ. ಆತ ಅಲ್ಲಿ ಗಣಿ ಕಂಪೆನಿಗಳಿಗೆ ಲಾರಿಗಳನ್ನು ಸರಬರಾಜು ಮಾಡುವುದೂ ಸೇರಿದಂತೆ ಕೆಲವು ಹೊರಗುತ್ತಿಗೆ ಕೆಲಸಗಳನ್ನು ಮಾಡುತ್ತಾನೆ. ಬಂದ ಕೂಡಲೇ ನಾನೊಂದು ಪ್ರೆಸ್‌ಮೀಟ್ ಮಾಡಬೇಕು ಎಂದ. ಗಣಿಗಾರಿಕೆ ಕುರಿತಂತೆ ಮಾತನಾಡಬೇಕು, ಎಲ್ಲರೂ ಬರಿ ಸುಳ್ಳೇ ಹೇಳ್ತಿದ್ದಾರೆ, ಎಲ್ಲರೂ ಕಳ್ಳರು ಎನ್ನುತ್ತಿದ್ದ.
ದೊಡ್ಡ ಹೆಸರಿನ, ದೊಡ್ಡ ಸಂಘಟನೆಯವರು ಪ್ರೆಸ್‌ಮೀಟ್ ಮಾಡಿದರೆ ಸುದ್ದಿಯಾಗುತ್ತದೆ. ನೀನು ಮಾಡಿದರೆ ಪತ್ರಿಕೆಗಳವರು ಪ್ರಿಂಟ್ ಮಾಡ್ತಾರಾ ನೋಡು ಎಂದೆ. ಇತ್ತೀಚಿಗೆ ಪ್ರೆಸ್‌ಕ್ಲಬ್‌ಗೆ ಪತ್ರಿಕೆಗಳವರು ಟ್ರೈನಿಗಳನ್ನು, ಜೂನಿಯರ್‌ಗಳನ್ನು ಕಳಿಸುತ್ತಾರೆ. ಅರ್ಥಾತ್ ಪತ್ರಿಕಾಗೋಷ್ಠಿಗಳ ಬಗ್ಗೆ ಅಷ್ಟಾಗಿ ಯಾರೂ ತಲೆಕೆಡಿಸಿಕೊಳ್ಳೋದಿಲ್ಲ. ನೀನು ಪ್ರೆಸ್‌ಮೀಟ್ ಮಾಡಿದರೂ ಪ್ರಯೋಜನವಾಗೋದಿಲ್ಲ ಎಂದೆ. ಮತ್ತೇನು ಮಾಡೋದು, ಒಂದೆರಡು ಪತ್ರಿಕೆಗಳಿಗೆ ಲೇಖನ ಬರೆದಿದ್ದೆ, ಯಾರೂ ಪ್ರಕಟಿಸಲಿಲ್ಲ ಎಂದು ಹಳಹಳಿಸಿದ.
ಸರಿ ಏನು ಹೇಳಬೇಕು ಅಂತ ಇದ್ದೀಯಾ ಎಂದು ಕೇಳಿದೆ. ‘ಏನಿಲ್ಲ, ಇವರೆಲ್ಲ ಅಕ್ರಮ ಗಣಿಗಾರಿಕೆ ಅಂತಿದ್ದಾರಲ್ಲ, ಅಕ್ರಮ ಎಂಬ ಪದ ಸೇರಿಸೋದೇ ನನಗೆ ಸರಿ ಕಾಣುತ್ತಿಲ್ಲ. ಯಾಕೆಂದರೆ ಇಲ್ಲಿ ನಡೀತಿರೋ ಎಲ್ಲ ಗಣಿಗಾರಿಕೆನೂ ಅಕ್ರಮನೇ. ಯಾವುದೂ ಸಕ್ರಮ ಇಲ್ಲ. ಎಲ್ರೂ ಕಳ್ಳರು. ಬಿಜೆಪಿಯೋರು, ಕಾಂಗ್ರೆಸ್‌ನೋರು, ಜೆಡಿಎಸ್‌ನೋರು ಎಲ್ಲರೂ ಕಳ್ಳರೇ. ಜನಾರ್ದನರೆಡ್ಡಿಗೆ ಅಕ್ರಮ ಯಾವುದು ಸಕ್ರಮ ಯಾವುದು ಅಂತ ಗೊತ್ತೇ ಇಲ್ಲ. ಯಾಕೆಂದರೆ ಅವನು ಅಕ್ರಮವನ್ನೇ ಸಕ್ರಮ ಎಂದುಕೊಂಡಿದ್ದಾನೆ. ಹೀಗೆ ಹೇಳುತ್ತಾ ಹೋದ.
ಸರಿ, ಇದನ್ನೆಲ್ಲ ನೀನು ಬಳ್ಳಾರಿಯಲ್ಲೇ ಪ್ರೆಸ್‌ಮೀಟ್ ಕರೆದು ಹೇಳು, ಅಥವಾ ಒಂದು ತಂಡವನ್ನು ಕಟ್ಟಿಕೊಂಡು ಪ್ರತಿಭಟನೆ ಮಾಡು ಎಂದು ಪುಕ್ಕಟೆ ಸಲಹೆ ನೀಡಿದೆ.
ಅವನು ಗಂಭೀರವಾಗಿ ಹೇಳಿದ: ‘ಹಾಗೇನಾದ್ರೂ ಮಾಡಿದರೆ ನಾನು ಬಳ್ಳಾರಿಯಲ್ಲೇ ಸಮಾಧಿಯಾಗಿಬಿಡುತ್ತೇನೆ, ನನ್ನನ್ನು ಅವರು ಮುಗಿಸಿಬಿಡುತ್ತಾರೆ
*****
ಟಿವಿ, ಪತ್ರಿಕೆಗಳಲ್ಲಿ ‘ಅಕ್ರಮ ಗಣಿಗಾರಿಕೆ ಎಂಬ ಪದಪುಂಜವನ್ನು ಕೇಳಿ, ಓದಿ ಸಾಕಾಗಿ ಹೋಗಿದೆ. ತುಂಬ ಸೂಕ್ಷ್ಮವಾಗಿ ನೋಡುವುದಾದರೆ ಯಾವುದು ಅಕ್ರಮ, ಯಾವುದು ಸಕ್ರಮ ಎಂಬ ಜಿಜ್ಞಾಸೆ ಕಾಡುತ್ತದೆ. ಇವತ್ತಿನ ರಾಜಕಾರಣವೇ ಅಕ್ರಮ. ಅಲ್ಲಿ ಯಾವುದೂ ಈಗ ಸಕ್ರಮವಾಗಿಲ್ಲ. ಅಧಿಕಾರಶಾಹಿಗೆ ‘ಅಕ್ರಮದ ರೋಗ ತಗುಲಿ ದಶಕಗಳೇ ಕಳೆದುಹೋದವು. ಇಡೀ ದೇಶವನ್ನು ಎಲ್ಲ ಆಯಾಮಗಳಲ್ಲೂ ನಿರ್ವಹಿಸುತ್ತಿರುವವರು ರಾಜಕಾರಣಿಗಳು ಮತ್ತು ಅಧಿಕಾರಿಗಳು. ಇವರೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ‘ಅಕ್ರಮಗಳಲ್ಲಿ ಭಾಗಿಯಾದವರೇ.
ಇವತ್ತು ಯಡಿಯೂರಪ್ಪ ಅವರ ಸಂಪುಟದಲ್ಲಿ ಸಭ್ಯ, ಸುಸಂಸ್ಕೃತ ಮಂತ್ರಿಯೊಬ್ಬರಿದ್ದಾರೆ. ನಿಜಕ್ಕೂ ಸೂಕ್ಷ್ಮ ಸಂವೇದನೆಗಳನ್ನು ಇಟ್ಟುಕೊಂಡವರು ಅವರು. ಹಣ ಸಂಗ್ರಹಿಸಿದವರಲ್ಲ, ಆಸ್ತಿ ಕೂಡಿಟ್ಟವರಲ್ಲ. ಕಳೆದ ಚುನಾವಣೆಯಲ್ಲಿ ಅವರು ಗೆಲ್ಲಲು ಬೇಕಾದ ‘ಬಂಡವಾಳ ಹೂಡಿಕೆಗೆ ಅವರ ಬಳಿ ಯಾವ ಮಾರ್ಗವೂ ಇರಲಿಲ್ಲ. ನನಗೆ ಗೊತ್ತಾದ ಮಾಹಿತಿ ಪ್ರಕಾರ ಅವರಿಗೆ ಚುನಾವಣೆ ಖರ್ಚಿಗೆ ಒಂದು ಕೋಟಿ ರೂ. ಹಣ ಬಳ್ಳಾರಿಯಿಂದ ಬಂದಿತ್ತು. ನೋಡನೋಡುತ್ತಿದ್ದಂತೆ ಅವರ ಹಿಂಬಾಲಕರು ಮನೆಮನೆಗೂ ಹಣ ಹಂಚಿದರು. ನಮ್ಮ ‘ಸಭ್ಯ ರಾಜಕಾರಣಿ ಗೆದ್ದು ಬಂದರು.
ಇದಿಷ್ಟನ್ನೂ ಯಾವುದೇ ಕೊಂಕಿಲ್ಲದೆ, ನಂಜಿಲ್ಲದೆ ಹೇಳಿದ್ದೇನೆ. ಅವರು ಬಳ್ಳಾರಿಯ ಹಣ ಬಳಸಿ ಗೆದ್ದದ್ದು ಸರಿನೋ, ತಪ್ಪೋ ಎಂಬ ವಿಶ್ಲೇಷಣೆಯೂ ಅರ್ಥಹೀನ ಆದೀತೇನೋ ಎಂಬ ಅಂಜಿಕೆ ನನ್ನದು. ಹಣ ಯಾವುದಾದರೇನು, ಕನಿಷ್ಠ ಯಡಿಯೂರಪ್ಪ ಸಂಪುಟಕ್ಕೆ ಒಬ್ಬ ಸಭ್ಯ ಮಂತ್ರಿ ಸೇರ್ಪಡೆಯಾಗುವಂತಾಯಿತಲ್ಲ ಎಂದು ಸಮಾಧಾನಪಟ್ಟುಕೊಳ್ಳಬೇಕೆ ಎಂಬ ಜಿಜ್ಞಾಸೆ ನನ್ನದು.
*****
ಕಳೆದ ವಿಧಾನಸಭಾ ಚುನಾವಣೆ ಮತದಾನ ಸಂದರ್ಭದಲ್ಲಿ ಟಿವಿ೯ ಚರ್ಚೆ, ವಿಶ್ಲೇಷಣೆಗೆ ನನ್ನನ್ನು ಕರೆದಿದ್ದರು. ಪ್ಯಾನಲ್‌ನಲ್ಲಿ ನನ್ನೊಂದಿಗೆ ವಿ.ಆರ್.ಸುದರ್ಶನ್, ರಾಮಚಂದ್ರಗೌಡ ಇದ್ದರು. ನಿರ್ವಹಣೆ ಮಾಡುತ್ತಿದ್ದ ರಂಗನಾಥ ಭಾರದ್ವಾಜ್ ಮತದಾರರಿಗೆ ರಾಜಕೀಯ ಪಕ್ಷಗಳು ಒಡ್ಡುತ್ತಿರುವ ಆಮಿಷಗಳ ಬಗ್ಗೆ ಕೇಳಿದರು. ನಾನು ಹೇಳಿದೆ: “ಇವತ್ತು ಭ್ರಷ್ಟಾಚಾರವೂ ಒಂದು ಮೌಲ್ಯವಾಗಿ ಹೋಗಿದೆ. ಹಿಂದೆಲ್ಲ ಲಂಚ ಕೊಡುವುದು, ಸ್ವೀಕರಿಸುವುದು ಎರಡೂ ಅಸಹ್ಯ ಹುಟ್ಟಿಸುವ ವಿಷಯಗಳು ಎಂಬ ಆದರ್ಶವಿತ್ತು. ಆದರೆ ಇವತ್ತು ಲಂಚ ಕೊಡುವುದೂ ಘನತೆಯ ವಿಷಯವಾಗಿದೆ, ಲಂಚ ಪಡೆಯುವುದೂ ಘನತೆಯ ವಿಷಯವಾಗಿದೆ. ಅಧಿಕಾರಿಗಳು ಭ್ರಷ್ಟರಾಗಿದ್ದಾರೆ, ರಾಜಕಾರಣಿಗಳು ಭ್ರಷ್ಟರಾಗಿದ್ದಾರೆ. ಎಲ್ಲವೂ ನಿಜ. ಆದರೆ ನಿಜಕ್ಕೂ ಆತಂಕ ಹುಟ್ಟಿಸುತ್ತಿರುವುದೇನೆಂದರೆ ಜನಸಾಮಾನ್ಯರೂ ಸಹ ಭ್ರಷ್ಟರಾಗಿದ್ದಾರೆ.
ಕಳೆದ ಚುನಾವಣೆಯಲ್ಲಿ ಎಲ್ಲ ಕಡೆ ರಾಜಕಾರಣಿಗಳೇ ಗಾಬರಿ ಬಿದ್ದಿದ್ದರು. ‘ನಮ್ಮನೇಲಿ ಇಷ್ಟು ಓಟು, ಎಷ್ಟು ಕೊಡ್ತೀರಿ ಎಂದು ಜನರೇ ಕೇಳುತ್ತಿದ್ದಾರೆ ಎಂದು ಕೈ ಕೈ ಹಿಸುಕಿಕೊಳ್ಳುತ್ತಿದ್ದರು. ಹಿಂದೆಲ್ಲ ಸ್ಲಂಗಳು, ಕಾಲೋನಿಗಳಲ್ಲಿ ವಾಸಿಸುವ ಕಡುಬಡವರಿಗೆ ಮಾತ್ರ ಹಣ-ಹೆಂಡ ಹಂಚಲಾಗುತ್ತಿತ್ತು. ಈಗ ಮಧ್ಯಮವರ್ಗದವರು ಕೂಡ ಕೈ ಚಾಚುತ್ತಿದ್ದಾರೆ.
*****
ಬಳ್ಳಾರಿ ರೆಡ್ಡಿಗಳ ಬಗ್ಗೆ ಸಾಕಷ್ಟು ಕತೆಗಳು, ದಂತಕತೆಗಳು ಈಗಾಗಲೇ ಚಾಲ್ತಿಯಲ್ಲಿವೆ. ಅವುಗಳಲ್ಲಿ ಸಾಕಷ್ಟು ಕತೆಗಳು ದಂತಕತೆಗಳಾಗಿವೆ, ದಂತಕತೆಗಳು ಕತೆಗಳಾಗಿವೆ. ಎರಡರ ನಡುವೆ ಈಗ ಅಂತರವೇ ಉಳಿದಿಲ್ಲವೆನಿಸುತ್ತದೆ.
ಕುಮಾರಸ್ವಾಮಿ ಸರ್ಕಾರವಿದ್ದ ಕಾಲಕ್ಕೆ ನಮಗೆ, ಪತ್ರಕರ್ತರಿಗೇ ರೆಡ್ಡಿಗಳ ವಿಷಯದಲ್ಲಿ ಸಾಕಷ್ಟು ಕುತೂಹಲವಿತ್ತು. ಒಬ್ಬ ಪತ್ರಕರ್ತರಂತೂ ಬಳ್ಳಾರಿಗೆ ಹೋಗಿ ರೆಡ್ಡಿಗಳ ಹಿಂದೆ ಬಿದ್ದು, ಡಾಕ್ಯುಮೆಂಟರಿ ಥರಹದ ಒಂದು ಕಿರುಚಿತ್ರ ಮಾಡಿಕೊಂಡು ಬಂದಿದ್ದರು.
೨೦೦೨ರ ಹೊತ್ತಿಗೆ ಒಂದು ಬ್ಲೇಡ್ ಕಂಪೆನಿ ಮಾಡಿಕೊಂಡು, ಹೂಡಿಕೆದಾರರಿಗೆ ಹಣ ಕೊಡಲಾಗದೆ ತಲೆಮರೆಸಿಕೊಂಡಿದ್ದ ಜನಾರ್ದನ ರೆಡ್ಡಿ ಕರ್ನಾಟಕ ಮತ್ತು ಆಂಧ್ರಪ್ರದೇಶ ಸರ್ಕಾರಗಳ ಜತೆ ಎರಡು ಸ್ಟೀಲ್ ಪ್ಲಾಂಟ್‌ಗಳನ್ನು ಸ್ಥಾಪಿಸಲು ಮಾಡಿಕೊಂಡಿರುವ ಒಪ್ಪಂದಗಳ ಮೌಲ್ಯವೇ ೫೦,೦೦೦ ಕೋಟಿ ರೂ.ಗಳನ್ನು ದಾಟುತ್ತದೆ.
ಬೇರೆ ಕಡೆ ಹೂಡಲಿರುವ ಹಣ, ಹೂಡದೇ ಹಾಗೇ ಇಟ್ಟುಕೊಳ್ಳುವ ಹಣ, ಈಗಾಗಲೇ ಹೂಡಿರುವ ಹಣ ಎಲ್ಲವನ್ನೂ ಸೇರಿಸಿದರೆ ಜನಾರ್ದನ ರೆಡ್ಡಿಯ ಆದಾಯ ಎಷ್ಟಿರಬಹುದು. ಇಷ್ಟು ಆದಾಯವನ್ನು ಆತ ಹೇಗೆ ಗಳಿಸಲು ಸಾಧ್ಯವಾಯಿತು ಎಂದು ಯೋಚಿಸುವುದೇ ಕಷ್ಟಸಾಧ್ಯ. ಹೀಗೆ ಯೋಚಿಸುತ್ತಾ ಯೋಚಿಸುತ್ತ ಆತನ ಬಗ್ಗೆ ಕೇಳಿಬರುವ ದಂತಕತೆಗಳೆಲ್ಲ ನಿಜವಾಗಿಬಿಡುತ್ತವೆ.
ಕರ್ನಾಟಕದ ಮುಖ್ಯಮಂತ್ರಿ ಬಳ್ಳಾರಿಗೆ ಬಂದು ಇಳಿದರೆ, ಜಿಲ್ಲಾಧಿಕಾರಿ-ಪೊಲೀಸ್ ವರಿಷ್ಠಾಧಿಕಾರಿ ಬಂದು ಅವರನ್ನು ಬರಮಾಡಿಕೊಳ್ಳಲಿಲ್ಲ. ವಿಧಾನಸಭೆಯ ವಿರೋಧಪಕ್ಷದ ನಾಯಕ ಬಳ್ಳಾರಿ ಪ್ರವಾಸಕ್ಕೆಂದು ಬಂದರೆ ಅವರಿಗೆ ಬೆಂಗಾವಲು ಪೊಲೀಸರು ಇರಲಿಲ್ಲ. ಬೆಂಗಳೂರಿನಿಂದ ಹೋಗುವ ಎಲ್ಲ ರಾಜಕಾರಣಿಗಳನ್ನೂ ಗಣಿದಂಧೆಕೋರರ ವಾಹನಗಳು ಹಿಂಬಾಲಿಸುತ್ತವೆ.
ಇದೆಲ್ಲಕ್ಕಿಂತ ಭೀಕರವೆಂದರೆ ಬಳ್ಳಾರಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆದ ಕೊಲೆಗಳು. ಬಯಲಾದ ಕೊಲೆಗಳಿಗಿಂತ ಬಯಲಾಗದ ಕೊಲೆಗಳೇ ಇಲ್ಲಿ ಹೆಚ್ಚು. ಬಳ್ಳಾರಿಯಲ್ಲಿ ‘ಮಿಸ್ಸಿಂಗ್ ಆದವರೆಲ್ಲ ಎಲ್ಲಿಗೆ ಹೋದರು? ಒಂದು ದಂತಕತೆಯು ನಿಜವೆನ್ನುವುದಾದರೆ ದಂಧೆಕೋರರ ವಿರುದ್ಧ ಇರುವವರನ್ನು ಗಣಿಗಳಲ್ಲೇ ಮಣ್ಣು ಮುಚ್ಚಿಬಿಡಲಾಗುತ್ತದೆ!
******
ಈಗ ಹೊಸದೊಂದು ದಂತಕತೆ ಹುಟ್ಟಿಕೊಂಡಿದೆ. ರೆಡ್ಡಿಗಳು ಸುಷ್ಮಾಸ್ವರಾಜ್‌ರನ್ನು ಪ್ರಧಾನ ಮಂತ್ರಿ ಗಾದಿಗೆ ಕುಳ್ಳಿರಿಸಲು ಶಪಥ ಮಾಡಿದ್ದಾರಂತೆ. ಅದಕ್ಕಾಗಿ ೩೫೦೦ ಕೋಟಿ ರೂ.ಗಳನ್ನು ಅವರು ಕಲೆ ಹಾಕಿದ್ದಾರಂತೆ. ಬರುವ ಲೋಕಸಭಾ ಚುನಾವಣೆಯಲ್ಲಿ ಸುಷ್ಮಸ್ವರಾಜ್ ನಿಷ್ಠರಾದ ೩೫೦ ಅಭ್ಯರ್ಥಿಗಳಿಗೆ ತಲಾ ಹತ್ತು ಕೋಟಿ ರೂ.ಗಳನ್ನು ಹಂಚಲಾಗುತ್ತದೆ ಮತ್ತು ಎಲ್ಲ ರೀತಿಯ ಕಸರತ್ತುಗಳನ್ನು ನಡೆಸಿ ಗೆಲ್ಲಿಸಲಾಗುತ್ತದೆ. ಹೀಗಾದಲ್ಲಿ ಸುಷ್ಮಾ ಸ್ವರಾಜ್ ಪ್ರಧಾನಿಯಾಗುವುದು ನಿಶ್ಚಿತ ಎಂಬುದು ದಂತಕತೆ ಹೇಳುವ ನೀತಿಪಾಠ.
ನಿಜವಿರಬಹುದಲ್ಲವೆ? ಹಾಗೆ ನೋಡಿದರೆ ರಾಜಕೀಯವೂ ಸಹ ಈಗೀಗ ಉದ್ದಿಮೆಯಲ್ಲವೆ? ರೆಡ್ಡಿಗಳು ಈಗ ಹೊಸ ಬಂಡವಾಳ ಹೂಡಿಕೆದಾರರು. ಅವರು ಬಳ್ಳಾರಿ ಜನರನ್ನು ಕೊಂಡುಕೊಂಡಿದ್ದಾಯ್ತು, ಗದಗ, ದಾವಣಗೆರೆ, ಹಾವೇರಿ, ಚಿತ್ರದುರ್ಗ, ತುಮಕೂರು ಜಿಲ್ಲೆಗಳಿಗೆ ಕೈ ಇಟ್ಟಿದ್ದಾಯ್ತು. ಆಂಧ್ರದಲ್ಲಿ ವಿಮಾನ ಸುಟ್ಟು ಸತ್ತ ವೈಎಸ್‌ಆರ್ ಪುತ್ರನ ಪರವಾಗಿ ಶೋ ಕೊಟ್ಟಿದ್ದೂ ಆಯ್ತು.
ಈಗ ಅವರ ವಿಶಾಲವಾದ ತೋಳುಗಳು ಇಡೀ ಇಂಡಿಯಾವನ್ನು ಇರುಕಿಸಿಕೊಳ್ಳಲು ಯತ್ನಿಸುತ್ತಿವೆ.
*******
ಕಾಂಗ್ರೆಸ್ಸಿನವರು ಇದೀಗ ಪಾದಯಾತ್ರೆಯ ಬಿರುಸಿನಲ್ಲಿದ್ದಾರೆ. ಹಾಡು-ಹಸೆ-ಕುಣಿತ ಎಲ್ಲವೂ ಜೋರಾಗಿಯೇ ನಡೆದಿದೆ. ಆದರೆ ಅರ್ಥವಾಗದ ವಿಷಯವೆಂದರೆ ಇವರು ಇಷ್ಟು ಕಾಲ ಯಾಕೆ ಸುಮ್ಮನಿದ್ದರು?
ಗಮನಿಸಬೇಕಾದ ವಿಷಯವೆಂದರೆ ರೆಡ್ಡಿಗಳು ಕಾಂಗ್ರೆಸ್ ಜತೆ ಯುದ್ಧ ಹೂಡಿದವರಲ್ಲ. ಕಾಂಗ್ರೆಸ್ ಜತೆ ಗುದ್ದಾಡಿಯೇ ಅವರು ಬಳ್ಳಾರಿಯನ್ನು ಸದ್ದುಗದ್ದಲವಿಲ್ಲದಂತೆ ತಮ್ಮ ಸುಪರ್ದಿಗೆ ತಂದುಕೊಂಡಿದ್ದೇನೋ ನಿಜ. ಆದರೆ ಆ ವಿಷಯದ ಕುರಿತಾಗಿ ಕಾಂಗ್ರೆಸ್‌ನವರು ದುಃಖಪಟ್ಟಿದ್ದನ್ನು ಯಾರೂ ನೋಡಿಲ್ಲ.
ನಿಜವಾಗಿಯೂ ರೆಡ್ಡಿಗಳು ಸಮರ ಸಾರಿದ್ದು ಮೊದಲು ಜೆಡಿಎಸ್‌ನ ಕುಮಾರಸ್ವಾಮಿ ಜತೆ, ನಂತರ ತಮ್ಮದೇ ಪಕ್ಷದ, ತಮ್ಮದೇ ನಾಯಕ ಯಡಿಯೂರಪ್ಪನವರ ಜತೆ.
೧೫೦ ಕೋಟಿ ರೂ. ಲಂಚ ತಿಂದಿದ್ದಾರೆಂದು ಕುಮಾರಸ್ವಾಮಿಯವರನ್ನು ಇನ್ನಿಲ್ಲದಂತೆ ಕಾಡಿದರು ರೆಡ್ಡಿಗಳು. ತಮ್ಮ ಗಣಿಸಾಮ್ರಾಜ್ಯಕ್ಕೆ ಕುಮಾರಸ್ವಾಮಿ ಕೈ ಹಾಕಿದ್ದರಿಂದ ಕೆರಳಿ ಅವರು ಹೀಗೆ ಯುದ್ಧಕ್ಕೆ ಇಳಿದಿದ್ದರು. ನಂತರ ಯಡಿಯೂರಪ್ಪನವರ ಸರದಿ. ಅಲ್ಲೂ ಸಹ ತಮ್ಮ ವ್ಯವಹಾರಗಳ ಉದ್ದೇಶದಿಂದಲೇ ಅವರು ಯಡಿಯೂರಪ್ಪ ಜತೆ ಕದನ ನಡೆಸಿದರು.
ಆಗೆಲ್ಲ ಕಾಂಗ್ರೆಸ್‌ನವರು ಮಗುಮ್ಮಾಗೇ ಇದ್ದರು.
ಆದರೆ ಬಹುಶಃ ಈಗ ಕಾಂಗ್ರೆಸ್ಸಿಗರು ವಾಸ್ತವವನ್ನು ಅರಿತುಕೊಂಡಂತಿದೆ. ರೆಡ್ಡಿಗಳು ಬರಬರುತ್ತಾ ಯಾರ‍್ಯಾರನ್ನು, ಯಾವ ಯಾವ ಪ್ರಮಾಣದಲ್ಲಿ ಕೊಂಡುಕೊಳ್ಳುತ್ತಾರೋ ಎಂಬ ಭೀತಿ ಅವರನ್ನು ಕಾಡುತ್ತಿರುವಂತಿದೆ. ಕರ್ನಾಟಕದ ರಾಜಕಾರಣದಲ್ಲಿ ಸಂಪೂರ್ಣ ಮೂಲೆಗುಂಪಾಗಿ ಹೋಗುವ ಭಯದಲ್ಲಿ ಅವರು ೩೨೦ ಕಿಮೀ ನಡೆಯುತ್ತಿದ್ದಾರೆ.
‘ನಮ್ಮ ಮುಖಂಡರು ಅಕ್ರಮ ಮಾಡಿದ್ರೆ ಜೈಲಿಗೆ ಹೋಗಲಿ, ಸಿಬಿಐ ತನಿಖೆ ನಡೀಲಿ ಎಂದು ಎಲ್ಲರೂ ಧೈರ್ಯ ಪ್ರದರ್ಶಿಸುತ್ತಿದ್ದಾರೆ.
******
ಟಿವಿ ವಾಹಿನಿಯೊಂದರಲ್ಲಿ ಇವತ್ತು ಕಂಡುಬಂದ ಹೆಡ್‌ಲೈನ್: ‘ಪಾದ ಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ ಮುಖಂಡರು ಊಟ ಮಾಡಿದರು! ಊಟಕ್ಕೆ ಉಪ್ಪಿನಕಾಯಿ ಇತ್ತು, ಕೋಸುಂಬರಿ ಇತ್ತು, ಸಂಡಿಗೆ ಇತ್ತು.. ಇತ್ಯಾದಿ.
ಈ ಕ್ಷಣಕ್ಕೆ ಕಾಂಗ್ರೆಸ್ ಪಾದಯಾತ್ರೆ, ರೆಡ್ಡಿಗಳ ಹೂಂಕಾರ, ಯಡಿಯೂರಪ್ಪನವರ ತಂತ್ರ-ಕುತಂತ್ರಗಳು, ಕುಮಾರಸ್ವಾಮಿಯವರ ಗುಟುರು ಎಲ್ಲಕ್ಕಿಂತ ನಿಜಕ್ಕೂ ಸುದ್ದಿಯಾಗಬೇಕಾಗಿದ್ದು ಸವಣೂರಿನ ಭಂಗಿ ಸಮುದಾಯದವರು ತಲೆ ಮೇಲೆ ಮಲ ಸುರಿದುಕೊಂಡು ಮಾಡಿದ ಪ್ರತಿಭಟನೆ.
ಸವಣೂರಿನ ಕಮಾಲ ಬಂಡಿ ಪ್ರದೇಶದಲ್ಲಿ ಪುರಸಭೆಯ ಜಾಗದಲ್ಲಿ ಎಪ್ಪತ್ತು ವರ್ಷಗಳಿಂದ ಗುಡಿಸಲು ಹಾಕಿಕೊಂಡಿದ್ದ ಭಂಗಿ ಸಮುದಾಯದವರು ಒಳಚರಂಡಿ ವ್ಯವಸ್ಥೆಯೇ ಇಲ್ಲದ ಈ ಊರಿನಲ್ಲಿ ಮಲ ಹೊರುವ ಕಾಯಕ ಮಾಡಿಕೊಂಡಿದ್ದರು. ವಾಸವಾಗಿದ್ದ ಜಾಗದಿಂದ ಅವರನ್ನು ಒಕ್ಕಲೆಬ್ಬಿಸಲು ಪುರಸಭೆಯವರು ಕಿರುಕುಳ ನೀಡಿದರು. ಬೇರೆ ನಿರ್ವಾಹವಿಲ್ಲದೆ ಭಂಗಿಗಳು ಸಾರ್ವಜನಿಕವಾಗಿ ತಲೆ ಮೇಲೆ ಮಲ ಸುರಿದುಕೊಂಡು ಪ್ರತಿಭಟಿಸಿದರು.
ಗಣಿ ಗದ್ದಲದ ನಡುವೆ ಕರಗಿ ಹೋದ ಸುದ್ದಿ ಇದು. ಬಸವಲಿಂಗಪ್ಪನವರು ಮಲ ಹೊರುವ ಪದ್ಧತಿ ನಿಷೇಧಕ್ಕೆಂದು ಶತಾಯಗತಾಯ ಹೋರಾಡಿದರು. ದೇವರಾಜ ಅರಸು ಈ ಅಮಾನವೀಯ ಪದ್ಧತಿಯನ್ನು ನಿಷೇಧಿಸಿದ್ದರು. ಆದರೆ ಮಲ ಹೊರುವ ಕಾಯಕ ಎಲ್ಲ ಕಡೆಯೂ ನಡೆಯುತ್ತಿರುವುದಕ್ಕೆ ಉದಾಹರಣೆಗಳು ನೂರಾರು. ಸವಣೂರಿನ ಘಟನೆ ಅವುಗಳಲ್ಲಿ ಒಂದು.
ಇಂಥದ್ದೊಂದು ಘಟನೆಗೆ ಕರ್ನಾಟಕ ಸ್ಪಂದಿಸಿದ ರೀತಿಯೇ ಆಘಾತಕಾರಿಯಾಗಿದೆ. ರಾಜಕೀಯ ಪಕ್ಷಗಳಿಗೆ ಇದೊಂದು ಭೀಕರ ಘಟನೆ ಅನಿಸಲೇ ಇಲ್ಲ. ಸಾಮಾಜಿಕ ಸಂಘಟನೆಗಳೂ ಸಹ ಸುಮ್ಮನಿದ್ದುಬಿಟ್ಟವು. ಮಾನವ ಹಕ್ಕು ಹೋರಾಟಗಾರರು ಸಹ ತಲೆ ಕೆಡಿಸಿಕೊಂಡಂತೆ ಕಾಣಲಿಲ್ಲ.
ಕರ್ನಾಟಕದ ಜನ ಸಂವೇದನಾಶೀಲತೆಯನ್ನೇ ಕಳೆದುಕೊಂಡುಬಿಟ್ಟರೆ?
ಇದೊಂದೇ ಉದಾಹರಣೆಯಲ್ಲ. ಇಂಥವು ನೂರಾರು. ಗುಲ್ಬರ್ಗದಲ್ಲಿ ಜೀವನಪರ್ಯಂತ ಪೌರಕಾರ್ಮಿಕ ನೌಕರಿ ಮಾಡಿಕೊಂಡಿದ್ದವರಿಗೆ ವರ್ಷಗಳಿಂದ ಸಂಬಳವಿಲ್ಲ. ಪ್ರತಿಭಟನೆ ನಡೆಸಿದ ಪೌರಕಾರ್ಮಿಕರಿಗೆ ಪದೇ ಪದೇ ಲಾಠಿ ಏಟು, ಜೈಲು ಶಿಕ್ಷೆ. ಕೇಳುವವರು ಹೇಳುವವರು ಯಾರೂ ಇಲ್ಲ. ಆಟೋ ದರ ಹೆಚ್ಚಳಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರನ್ನು ಪೊಲೀಸರು ದನಕ್ಕೆ ಬಡಿಯುವ ಹಾಗೆ ಬಡಿದರು. ಪೊಲೀಸರ ಏಟಿಗೆ ಮೂರ್ಛೆ ತಪ್ಪಿ ಬಿದ್ದಿದ್ದ ಕಾರ್ಯಕರ್ತನನ್ನು ಬೂಟುಗಾಲಲ್ಲಿ ಒದ್ದರು. ಟಿವಿಗಳಲ್ಲಿ ಅದು ಪ್ರಸಾರವೂ ಆಯಿತು. ಕೊಪ್ಪಳದಲ್ಲಿ ರಸ್ತೆ ಅಗಲೀಕರಣಕ್ಕೆ ಒತ್ತಾಯಿಸುತ್ತಿದ್ದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರ ಕೈಗೆ ಕೊಳ ತೊಡಿಸಿ ಜೈಲಿಗಟ್ಟಲಾಯಿತು.
ಕರ್ನಾಟಕದ ಜನರು ಯಾಕೋ ಮಾತನಾಡುತ್ತಲೇ ಇಲ್ಲ.
ಮಾತನಾಡಬೇಕು ಎಂದುಕೊಳ್ಳುವ ಹೊತ್ತಿಗೆ ಅವರ ಗಂಟಲಲ್ಲಿ ಧ್ವನಿಯೇನಾದರೂ ಉಳಿದಿರಬಹುದೇ ಎಂಬ ಪ್ರಶ್ನೆ ನನ್ನದು.
******
ಇವತ್ತು ನಾವು ಎದುರಿಸುತ್ತಿರುವ ದೊಡ್ಡ ಸಮಸ್ಯೆ ಅನೈತಿಕ ಕೂಡಿಕೆಗಳದ್ದು. ರಾಜಕಾರಣದಲ್ಲಿ ಉದ್ಯಮ ಸೇರಿಕೊಂಡಿದೆ; ಹಾಗೆಯೇ ಉದ್ಯಮದಲ್ಲಿ ರಾಜಕಾರಣ. ರಾಜಕಾರಣದಲ್ಲಿ ಧರ್ಮ-ಜಾತಿ ಸೇರಿಕೊಂಡಿವೆ; ಹಾಗೆಯೇ ಧರ್ಮ-ಜಾತಿಗಳಲ್ಲಿ ರಾಜಕಾರಣ. ಗ್ರಾಮಲೆಕ್ಕಿಗನಿಂದ ಹಿಡಿದು ಅತ್ಯುನ್ನತ ನ್ಯಾಯಾಲಯದ ನ್ಯಾಯಾಧೀಶರವರೆಗೆ ಲಂಚಬಾಕತನ ಆವರಿಸಿಕೊಂಡಿದೆ.
ಹಿಂದೆಲ್ಲ ಉದ್ಯಮಿಗಳು ರಾಜಕಾರಣಿಗಳನ್ನು ಹಣಕೊಟ್ಟು ಕೊಂಡುಕೊಂಡುಬಿಟ್ಟಿರುತ್ತಿದ್ದರು. ತಮಗೆ ಬೇಕಾದ್ದನ್ನು ಮಾಡಿಸಿಕೊಳ್ಳುತ್ತಿದ್ದರು. ಆದರೆ ಜನಾರ್ದನ ರೆಡ್ಡಿಯಂಥವರು ನೇರದಾರಿ ಕಂಡುಕೊಂಡಿದ್ದಾರೆ. ತಾವೇ ನೇರವಾಗಿ ರಾಜಕಾರಣಕ್ಕೆ ಇಳಿದು, ತಾವೂ ಗೆದ್ದು, ಹಣಹೂಡಿ ಶಾಸಕರನ್ನೂ ಗೆಲ್ಲಿಸಿಕೊಂಡು ಮುಖ್ಯಮಂತ್ರಿಗಳ ಜತೆ ಚೌಕಾಶಿ ಮಾಡುತ್ತಾರೆ. ಬಗ್ಗದಿದ್ದರೆ ಬಡಿದು ಬಗ್ಗಿಸುತ್ತಾರೆ.
ಯಡಿಯೂರಪ್ಪರಂಥವರು ಇಂಥದನ್ನೆಲ್ಲ ನೋಡಿ ಸಹಜವಾಗಿ ಹತಾಶರಾಗುತ್ತಾರೆ. ಹಣದ ಕೊಬ್ಬಿನಲ್ಲಿ ಅಲ್ಲವೇ ಅವರು ಮೆರೆಯುತ್ತಿರುವುದು ಎಂದು ಭಾವಿಸಿ, ತಾವೂ ಬಗೆಬಗೆಯ ದಂಧೆಗಳಿಗೆ ತೊಡಗುತ್ತಾರೆ. ಕೋಟಿ ಕೋಟಿ ಹಣ ಸಂಗ್ರಹಕ್ಕೆ ಮುಂದಾಗುತ್ತಾರೆ.
ರಾಜಕಾರಣ ಸೇರಿ ಹೋದ ಕಳ್ಳ ಉದ್ಯಮಿಗಳ ಜತೆ ಪೈಪೋಟಿ ಮಾಡಲಾಗದೆ, ರಾಜಕಾರಣಿಗಳೇ ಕಳ್ಳದಂಧೆಗಳಿಗೆ ಇಳಿಯುತ್ತಾರೆ, ಪೈಪೋಟಿಗೆ ನಿಲ್ಲುತ್ತಾರೆ.
ಇಂಥ ಸಂಘರ್ಷಗಳು ನಡೆಯುವಾಗ ಮಲ ಸುರಿದುಕೊಂಡು ಪ್ರತಿಭಟನೆ ಮಾಡುವ ಭಂಗಿ ಜನರ ನೋವನ್ನು ಅರ್ಥ ಮಾಡಿಕೊಳ್ಳುವವರು ಯಾರಿದ್ದಾರು?
ನ್ಯಾಯಯುತ ಬೇಡಿಕೆಗಳಿಗಾಗಿ ಪ್ರತಿಭಟನೆ ನಡೆಸುವವರನ್ನು ಪೊಲೀಸರು ಹಿಡಿದು ಚಚ್ಚಿ ಕೊಂದರೂ ಕೇಳುವವರು ಯಾರಿದ್ದಾರು?
ಕೆಂಗಲ್, ನಿಜಲಿಂಗಪ್ಪ, ಅರಸು, ಗೋಪಾಲಗೌಡ ಅಂಥವರು ಕಟ್ಟಿದ ನಾಡಿನಲ್ಲಿ ಎಂಥೆಂಥ ಅಸಹ್ಯ ಮುಖಗಳು ಹುಟ್ಟಿಕೊಂಡವು?
*****
ಇದೆಲ್ಲವನ್ನೂ ನೋಡುತ್ತಿದ್ದರೆ, ಈ ನಾಡು ಸದ್ಯದಲ್ಲೇ ನಾವು ನೋಡುತ್ತಿರುವ ಭೀಕರ ದೃಶ್ಯಾವಳಿಗಳಿಗಿಂತ ಭೀಭತ್ಸವಾದ, ಊಹೆಗೆ ನಿಲುಕದ ದುರ್ಘಟನೆಗಳಿಗೆ ಸಾಕ್ಷಿಯಾಗಲಿದೆಯೇನೋ ಎಂಬ ಭೀತಿ ಕಾಡುತ್ತಿದೆ.

ಶಂಕರ ಮಹದೇವ ಬಿದರಿಯವರಿಗೊಂದು ಬಹಿರಂಗ ಪತ್ರ
ದಿನೇಶ್ ಕುಮಾರ್ ಎಸ್.ಸಿ.


ಮಾನ್ಯ ಶ್ರೀ ಶಂಕರ್ ಬಿದರಿಯವರೇ,
ಈ ಎಲ್ಲ ಚಿತ್ರಗಳನ್ನು ನೋಡಿದ ಮೇಲೆ ನಿಮ್ಮ ಜತೆ ಮಾತನಾಡಬೇಕೆನಿಸಿತು. ಅದಕ್ಕೆ ಈ ಪತ್ರ.
ಈ ಚಿತ್ರಗಳು ನಿಜಕ್ಕೂ ಎದೆ ನಡುಗಿಸುವಂತಿದೆ. ನಿಮ್ಮ ಪೊಲೀಸರು ಮನುಷ್ಯರನ್ನು ಹೀಗೆ ಪ್ರಾಣಿಗಳಿಗೆ ಬಡಿಯುವಂತೆ ಹೊಡೆಯುವುದನ್ನು ನೋಡಿದರೆ ಗಾಬರಿಯಾಗುತ್ತದೆ. ಎಲ್ಲೋ ಏನೋ ಸಮಸ್ಯೆ ಇದೆ ಎನಿಸುತ್ತದೆ.
ನೀವು ಕರ್ನಾಟಕದ ದಕ್ಷ ಪೊಲೀಸ್ ಅಧಿಕಾರಿಗಳಲ್ಲಿ ಒಬ್ಬರು. ಅದನ್ನು ನಾವು ಒಪ್ಪುತ್ತೇವೆ. ನಿಮ್ಮ ಸೇವಾವಧಿಯಲ್ಲಿ ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ದೀರಿ. ಅದೂ ಸಹ ನಮಗೆ ಗೊತ್ತಿದೆ. ನೀವು ಬೆಂಗಳೂರು ನಗರಕ್ಕೆ ಆಯುಕ್ತರಾಗಿ ಬಂದ ನಂತರ ಇಲ್ಲಿ ನಿತ್ಯವೂ ನಡೆಯುತ್ತಿದ್ದ ಕೊಲೆಗಳ ಸಂಖ್ಯೆಯೂ ಕಡಿಮೆಯಾಗಿದೆ. ಎಲ್ಲ ಬಗೆಯ ದಂಧೆಕೋರರಿಗೂ ಅಲ್ಪಸ್ವಲ್ಪ ಭೀತಿ ಇದೆ. ನಿಮ್ಮ ಅವಧಿಯಲ್ಲಿ ಬೆಂಗಳೂರಿನಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣವನ್ನೂ ಸಹ ನೀವು ಯಶಸ್ವಿಯಾಗಿ ತನಿಖೆ ನಡೆಸಿ, ಆರೋಪಿಗಳನ್ನು ದಸ್ತಗಿರಿ ಮಾಡಿದ್ದೀರಿ. ರಾತ್ರಿ ಪೂರಾ ಬಾರ್‌ಗಳು, ಪಬ್‌ಗಳು, ಐಶಾರಾಮಿ ಡ್ಯಾನ್ಸ್ ಅಡ್ಡೆಗಳು ನಡೆಯಬೇಕು ಎಂದು ಅದ್ಯಾರೋ ವಿಲಕ್ಷಣ ಮಂತ್ರಿಯೊಬ್ಬ ಹೇಳಿದರೆ ನೀವು ಆತನಿಗೆ ಸೆಡ್ಡು ಹೊಡೆದು, ಅದೆಲ್ಲಾ ಆಗೋದಿಲ್ಲ ಎಂದು ಬೆಂಗಳೂರಿನ ಮಾನ ಕಾಪಾಡಿದಿರಿ.
ಇದೆಲ್ಲವೂ ನಿಜವೇ. ಹೀಗೆ ಇನ್ನೊಂದಷ್ಟು ತಾರೀಫುಗಳನ್ನು ನಿಮಗೆ ಕೊಡಬಹುದು. ಅದಕ್ಕೆ ನೀವು ಅರ್ಹರು; ಅದರಲ್ಲಿ ಎರಡು ಮಾತಿಲ್ಲ.
ಆದರೆ ಈ ಚಿತ್ರಗಳನ್ನೊಮ್ಮೆ ನೋಡಿ. ನಿಮ್ಮ ಪೊಲೀಸರು ನಿರ್ದಯವಾಗಿ ಹೊಡೆಯುತ್ತಿರುವುದು ಕರ್ನಾಟಕ ರಕ್ಷಣಾ ವೇದಿಕೆಯ ಆಟೋ ಚಾಲಕರ ಘಟಕದ ಕಾರ್ಯಕರ್ತರನ್ನು. ಅಂದರೆ, ಅವರೆಲ್ಲ ಆಟೋ ಚಾಲಕರು. ಪೆಟ್ರೋಲು, ಗ್ಯಾಸುಗಳು ದುಬಾರಿಯಾಗಿರುವ ಈ ಕಾಲದಲ್ಲಿ ಆಟೋ ದರವನ್ನು ಏರಿಸಿ ಎಂದು ಕೇಳಿ ಅವರು ಪ್ರತಿಭಟನೆ ನಡೆಸುತ್ತಿದ್ದರು. ಕೆಲ ಹುಡುಗರು ಮೈ ಮೇಲೆ ಸೀಮೆಎಣ್ಣೆ ಸುರಿದುಕೊಂಡಿದ್ದರು.
ಸ್ಥಳದಲ್ಲಿ ನಿಮ್ಮ ಡಿಸಿಪಿ ರಮೇಶ್ ಇದ್ದರು, ಎಸಿಪಿ ಗಚ್ಚಿನಕಟ್ಟಿ, ಇನ್ಸ್‌ಪೆಕ್ಟರ್ ಆನಂದ್ ಇದ್ದರು. ಇನ್ನೂ ಹಲವಾರು ಅಧಿಕಾರಿಗಳು ಇದ್ದರು. ಮಫ್ತಿಯಲ್ಲಿದ್ದ ಪೊಲೀಸರು ಇದ್ದರು. ಎಲ್ಲರೂ ಸೇರಿ ಆಟೋ ಚಾಲಕರನ್ನು ಹೇಗೆ ಬಡಿಯುತ್ತಿದ್ದಾರೆ ನೋಡಿ. ಕೆಲವರ ತಲೆ ಒಡೆದಿದೆ. ಕೈ ಕಾಲು ಮುರಿದುಹೋಗುವಂತೆ ಹೊಡೆಯಲಾಗಿದೆ.
ಶ್ರೀನಿವಾಸ್ ಎಂಬ ಕಾರ್ಯಕರ್ತ ನಿಮ್ಮ ಪೊಲೀಸರ ಏಟು ತಡೆಯಲಾಗದೆ ಕುಸಿದು ಮೂರ್ಛೆ ಹೋಗಿದ್ದಾನೆ, ಆದರೂ ನಿಮ್ಮ ಮಫ್ತಿಯಲ್ಲಿರುವ ಪೊಲೀಸನೊಬ್ಬ ಅರೆಜೀವವಾಗಿ ಬಿದ್ದಿರುವ ಈತನನ್ನು ಹೇಗೆ ಹೊಡೆಯುತ್ತಿದ್ದಾನೆ ನೋಡಿ.
ಯಾಕೆ ಹೀಗಾಗುತ್ತದೆ?
ಗಾಂಧಿನಗರದ ಮಹಾರಾಷ್ಟ್ರ ಬ್ಯಾಂಕ್ ಎದುರು ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾಗಲೂ ನಿಮ್ಮ ಪೊಲೀಸರು ಹೀಗೆಯೇ ಪೌರುಷ ತೋರಿಸಿದ್ದರು. (ಆ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಇನ್ಸ್‌ಪೆಕ್ಟರ್ ಮುದವಿ ಲಂಚ ತಿನ್ನುವಾಗ ಲೋಕಾಯುಕ್ತರ ಕೈಗೆ ಸಿಕ್ಕುಬಿದ್ದು ಸಸ್ಪೆಂಡಾದ, ಆ ವಿಷಯ ಬೇರೆ.)
ಹಾಗೆ ನೋಡಿದರೆ, ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರಿಗೆ ಪೊಲೀಸರ ಏಟು, ಜೈಲು ಯಾವುದೂ ಹೊಸದೇನೂ ಅಲ್ಲ. ಇಂಥ ದೌರ್ಜನ್ಯಗಳನ್ನು ಎದುರಿಸಿ, ಸಹಿಸಿಯೇ ವೇದಿಕೆ ಬೆಳೆಯುತ್ತ ಬಂದಿದೆ. ಪೊಲೀಸರು ಹೊಡೆದಷ್ಟು, ಕೇಸು ಹಾಕಿದಷ್ಟು ವೇದಿಕೆ ಸಬಲಗೊಳ್ಳುತ್ತಲೇ ಬಂದಿದೆ.
ಇಲ್ಲಿ ಹೇಳಲು ಹೊರಟ ವಿಷಯ ಅದಲ್ಲ. ಬೆಂಗಳೂರಿನಲ್ಲಿ ಈ ಹಿಂದೆ ಸಾಕಷ್ಟು ಆಯುಕ್ತರು, ಹಿರಿಯ ಅಧಿಕಾರಿಗಳು ಬಂದು ಹೋಗಿದ್ದಾರೆ. ಕನ್ನಡಪರ ಹೋರಾಟಗಾರರು ಇಂದಿಗೂ ಗರುಡಾಚಾರ್ ಅವರನ್ನು ನೆನಪಿಸಿಕೊಳ್ಳುತ್ತಾರೆ. ಚಳವಳಿಗಾರರನ್ನು ಮಾನವೀಯ ದೃಷ್ಟಿಯಲ್ಲಿ ನೋಡಿದವರು ಅವರು. ಅದರಲ್ಲೂ ಕನ್ನಡ ಚಳವಳಿಗಾರರನ್ನು ಅಭಿಮಾನದಿಂದ ನಡೆಸಿಕೊಂಡವರು ಅವರು.
ಕೆಂಪಯ್ಯನವರು, ಮರಿಸ್ವಾಮಿಯವರು, ಸುಭಾಷ್ ಭರಣಿಯವರು, ಕೆ.ಸಿ. ರಾಮಮೂರ್ತಿ, ನಾರಾಯಣಗೌಡರು, ಬಿಪಿನ್ ಗೋಪಾಲಕೃಷ್ಣ, ಶರಶ್ಚಂದ್ರ ಅವರು ಹೀಗೆ ಹೆಸರುಗಳನ್ನು ಹೇಳುತ್ತ ಹೋಗಬಹುದು. ಚಳವಳಿಗಾರರ ಮೇಲೆ ಹಲ್ಲೆ ನಡೆಸುವುದನ್ನು ಈ ಯಾವ ಅಧಿಕಾರಿಗಳೂ ಒಪ್ಪುತ್ತಿರಲಿಲ್ಲ.
ಕೆಲವು ಅಧಿಕಾರಿಗಳಂತೂ ಚಳವಳಿಗಾರರ ನೈತಿಕ ಸ್ಥೈರ್ಯವನ್ನು ಹೆಚ್ಚಿಸುವ ಕೆಲಸವನ್ನು ಮಾಡುತ್ತಿದ್ದರು. ಇದಕ್ಕೆಲ್ಲ ಸಾಕಷ್ಟು ಉದಾಹರಣೆಗಳನ್ನು ನೀಡಬಹುದು. ಅವು ನಿಮಗೂ ಗೊತ್ತಿರಬಹುದು, ಹೀಗಾಗಿ ಆ ಬಗ್ಗೆ ಹೆಚ್ಚೇನು ಹೇಳಲು ಹೋಗುವುದಿಲ್ಲ. ಮೇಲೆ ಉಲ್ಲೇಖಿಸಿದ ಎಲ್ಲರೂ ಕನ್ನಡದ ಅಧಿಕಾರಿಗಳು. ಬಿಹಾರದಿಂದಲೋ, ಉತ್ತರಪ್ರದೇಶದಿಂದಲೋ ಬಂದ ಐಪಿಎಸ್ ಬಾಬುಗಳಲ್ಲ. ಹೀಗಾಗಿ ಅವರಿಗೆ ಕನ್ನಡಿಗರ ಸಂಕಷ್ಟಗಳು ಗೊತ್ತಿತ್ತು. ಚಳವಳಿಯ ಅನಿವಾರ್ಯತೆಗಳನ್ನು ಅವರು ಅರ್ಥ ಮಾಡಿಕೊಂಡಿದ್ದರು. ಹೀಗಾಗಿ ಅವರು ಕನ್ನಡ ಚಳವಳಿಗಾರರನ್ನು ನಡೆಸಿಕೊಳ್ಳುವ ರೀತಿಯೂ ಹಾಗೇ ಇರುತ್ತಿತ್ತು.
ನೀವೂ ಸಹ ನಾವೆಲ್ಲರೂ ಅಭಿಮಾನ ಪಡುವ ಕನ್ನಡಿಗರೇ ಹೌದು. ೧೨ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿಯನ್ನೇ ಸಾಧಿಸಿದ ಶರಣ ಪರಂಪರೆಯ ಹಿನ್ನೆಲೆಯೂ ನಿಮಗಿದೆ.
ನಿಮಗೆ ಗೊತ್ತಿದೆ, ಶರಣರು ಈ ಸಮಾಜದ ಉಚ್ಚ-ನೀಚ ಪ್ರಭೇದಗಳ ವಿರುದ್ಧ ತಿರುಗಿಬಿದ್ದ ಬಂಡಾಯಗಾರರು. ಆ ಕಾಲಘಟ್ಟದ ನಿಜಾರ್ಥದ ಚಳವಳಿಗಾರರು. ಅವರ ಪ್ರತಿ ನಡೆ-ನುಡಿಯಲ್ಲೂ ಪ್ರತಿಭಟನೆಯ ಧ್ವನಿ ಇತ್ತು. ಹಾಳುಬಿದ್ದು ಹೋದ ವ್ಯವಸ್ಥೆಯನ್ನು ಗುಣಪಡಿಸುವ ಚಿಕಿತ್ಸಾತ್ಮಕ ದೃಷ್ಟಿಕೋನವಿತ್ತು.
ಆದರೆ ದುರದೃಷ್ಟ ನೋಡಿ, ನಿಮ್ಮ ಪೊಲೀಸ್ ಅಧಿಕಾರಿಗಳನ್ನು ತಯಾರು ಮಾಡುವ ಸಂದರ್ಭದಲ್ಲೇ ಚಳವಳಿಗಾರರನ್ನು ಭಯೋತ್ಪಾದಕರಂತೆ ನೋಡಿ ಎಂದು ಹೇಳಿಕೊಟ್ಟಿರುತ್ತಾರೇನೋ? ಹಾಗೆಯೇ ಆಡುತ್ತಾರೆ ಕೆಲವು ಅಧಿಕಾರಿಗಳು.
ಶ್ರೀಮಂತ ಕುಟುಂಬಗಳಿಂದ ಬಂದು ಐಪಿಎಸ್ ಮಾಡಿ ಸ್ಟಾರ್‌ಗಳನ್ನು ಹೆಗಲಿಗೇರಿಸಿಕೊಂಡು ಬಂದು ಕುಳಿತುಕೊಳ್ಳುವ ಅಧಿಕಾರಿಗಳಿಗೆ ತಮ್ಮ ಕೈಯಲ್ಲಿರುವ ಲಾಠಿಯನ್ನು, ಸೊಂಟದಲ್ಲಿರುವ ರಿವಾಲ್ವರನ್ನು ಹೇಗೆ, ಯಾವತ್ತು ಪ್ರಯೋಗಿಸುವುದು ಎಂಬ ಉತ್ಸಾಹ, ಫ್ಯಾಂಟಸಿಗಳಿರುತ್ತದೆಯೇ ಹೊರತು, ಸಮಾಜವನ್ನು ಅರ್ಥ ಮಾಡಿಕೊಳ್ಳುವ, ಅಪರಾಧಗಳ ಎಲ್ಲ ಸ್ವರೂಪಗಳನ್ನು, ಕಾರಣಗಳನ್ನು ಅಧ್ಯಯನ ಮಾಡುವ ಆಸಕ್ತಿಯೇ ಇರುವುದಿಲ್ಲ.
ಈ ಐಪಿಎಸ್‌ಗಳಿಗೆ ಹಸಿವೆಂದರೆ ಗೊತ್ತಿರೋದಿಲ್ಲ. ಹಾಗಾಗಿ ಹಸಿವಿನಿಂದ ಬರುವ ನೋವು, ಯಾತನೆಗಳೂ ಗೊತ್ತಿರುವುದಿಲ್ಲ. ಅವರಿಗೆ ಬಡತನವೆಂಬುದೇ ಗೊತ್ತಿರುವುದಿಲ್ಲ. ಶ್ರೇಣೀಕೃತ ಸಮಾಜದಲ್ಲಿ ಜನರು ಅನುಭವಿಸುವ ಅಪಮಾನ-ಹಿಂಸೆಗಳ ದರ್ಶನವೂ ಅವರಿಗಿರುವುದಿಲ್ಲ.
ನ್ಯಾಯಯುತ ಹಕ್ಕುಗಳಿಗಾಗಿ ಪ್ರತಿಭಟನೆ ನಡೆಸುವವರೆಲ್ಲರೂ ಈ ಅಧಿಕಾರಿಗಳಿಗೆ ಕ್ರಿಮಿನಲ್‌ಗಳ ಹಾಗೆ, ಶಸ್ತ್ರ ಹಿಡಿದ ಬಂಡುಕೋರರ ಹಾಗೆ ಕಾಣುತ್ತಾರೆ. ಯಡಿಯೂರಪ್ಪನವರ ಸರ್ಕಾರ ಬಂದ ಮೇಲೆ ರಾಜ್ಯದ ವಿವಿಧ ಭಾಗಗಳಲ್ಲಿ ವಿಶೇಷವಾಗಿ ಬೆಂಗಳೂರಿನಲ್ಲಿ ನ್ಯಾಯಯುತ, ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ನಡೆದ ಪೊಲೀಸ್ ದೌರ್ಜನ್ಯಗಳು ಲೆಕ್ಕವಿಲ್ಲದಷ್ಟು. ಎಬಿವಿಪಿ ಸಂಘಟನೆಯನ್ನು ಹೊರತುಪಡಿಸಿ ಉಳಿದೆಲ್ಲ ಸಂಘಟನೆಗಳೂ ಈ ದೌರ್ಜನ್ಯಗಳನ್ನು ಅನುಭವಿಸಿವೆ. ರೈತ ಸಂಘಟನೆಗಳ ಮೇಲೆ ದಾಳಿಗಳಾದವು. ಎಡಪಂಥೀಯ ಸಂಘಟನೆಗಳ ಪ್ರತಿಭಟನೆ ವೇಳೆಯೂ ದೌರ್ಜನ್ಯ ನಡೆಯಿತು. ಕರವೇ ಕಾರ್ಯಕರ್ತರ ಮೇಲೂ ನಿಮ್ಮ ಪೊಲೀಸರು ಲಾಠಿ ಬೀಸಿದರು. ಚಳವಳಿಗಾರರು ಪ್ರತಿಭಟನೆಯನ್ನೇ ನಡೆಸದಷ್ಟು ನಿಬಂಧನೆಗಳನ್ನು ಹೇರಿಬಿಟ್ಟಿದ್ದೀರಿ. ಒಂದು ಚಳವಳಿ ನಡೆಸುತ್ತೇವೆಂದು ಅನುಮತಿಗಾಗಿ ನಿಮ್ಮ ಬಳಿ ಬರುವ ಮುಖಂಡರು ಕಾರ್ಯಕರ್ತರು ಠಾಣೆಯಿಂದ, ಠಾಣೆಗೆ ಅಲೆಯುವಂತೆ ಮಾಡಿದ್ದೀರಿ. ನೀವು ಹೇಳುವ ಸಂಖ್ಯೆಯಲ್ಲೇ ಬಂದು ಪ್ರತಿಭಟನೆ ಮಾಡಬೇಕೆಂದು ತಾಕೀತು ಮಾಡುತ್ತೀರಿ.
ಈಗ ಹೇಳಿ, ನಿಮಗ್ಯಾಕೆ ಕನ್ನಡ ಚಳವಳಿಗಾರರ ಮೇಲೆ ಸಿಟ್ಟು? ಈ ಸಿಟ್ಟು ವೈಯಕ್ತಿಕವಾದದ್ದೋ ಅಥವಾ ಬೇರೆ ಉದ್ದೇಶಗಳಿಂದ ಮೂಡಿದ್ದೋ? ಅಥವಾ ಸರ್ಕಾರದ ಸಿಟ್ಟನ್ನೇ ನೀವು ಧ್ವನಿಸುತ್ತಿದ್ದೀರೋ?
ಯಾಕೆ ಸುಳ್ಳು ಕೇಸುಗಳನ್ನು ಹೂಡಲಾಗುತ್ತದೆ. ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರ ಮೇಲೆ ಇಂತಿಂಥದ್ದೇ ಕೇಸು ಹಾಕಿ ಎಂದು ಯಾಕೆ ಎಲ್ಲ ಠಾಣೆಗಳಿಗೂ ಮೌಖಿಕ ಆದೇಶಗಳನ್ನು ನೀಡಲಾಗುತ್ತದೆ? ತಿರುವಳ್ಳುವರ್ ಪ್ರತಿಮೆ ಅನಾವರಣದ ಸಂದರ್ಭದಲ್ಲಿ ಮನೆಯಲ್ಲಿ ಇದ್ದ ಕರವೇ ಕಾರ್ಯಕರ್ತರನ್ನು ಹಿಡಿದು ತಂದು, ಕೊಲೆಬೆದರಿಕೆ, ಗಲಭೆಗೆ ಸಂಚು, ಡಕಾಯಿತಿ ಕೇಸು ಇತ್ಯಾದಿಗಳನ್ನು ಹೇರಲಾಯಿತಲ್ಲ ಯಾಕೆ?
ಇದೆಲ್ಲ ನೋವುಗಳನ್ನು ನಿಮ್ಮ ಮುಂದೆ ಹಂಚಿಕೊಳ್ಳುತ್ತಿರುವಂತೆಯೇ ಕೊಪ್ಪಳದಲ್ಲಿ ರಸ್ತೆ ಅಗಲೀಕರಣಕ್ಕಾಗಿ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ಕರವೇ ಕಾರ್ಯಕರ್ತರಿಗೆ ಕೋಳ ತೊಡಿಸಿ ಜೈಲಿಗಟ್ಟಲಾಗಿದೆ.
ಕರವೇ ಕಾರ್ಯಕರ್ತರ ತಪ್ಪಾದರೂ ಏನು ಹೇಳಿ? ಕರ್ನಾಟಕದಲ್ಲಿ ಭಾಷೆಯ ಉಳಿವಿಗಾಗಿ ಪ್ರತಿಭಟಿಸುವುದೇ ತಪ್ಪೇ? ಈ ನೆಲದ ಮಕ್ಕಳಿಗೆ ಉದ್ಯೋಗ ಕೊಡಿ ಎಂದು ಹೋರಾಡುವುದೇ ತಪ್ಪೇ? ನಮ್ಮ ಗಡಿಯನ್ನು ಉಳಿಸಿ, ಒತ್ತುವರಿಯಾಗದಂತೆ ತಡೆಯಿರಿ ಎಂದು ಕೇಳುವುದೇ ತಪ್ಪೇ? ಈ ನೆಲದ ನೂರಾರು ಸಮಸ್ಯೆಗಳಿಗೆ ಮುಖಾಮುಖಿಯಾಗಿ ಆಡಳಿತದ ಚುಕ್ಕಾಣಿ ಹಿಡಿದಿರುವ ಜನರ ಕಣ್ತೆರೆಸುವಂತೆ ಹೋರಾಡುವುದೇ ತಪ್ಪೇ?
ಬಿದರಿಯವರೇ, ಸದ್ಯಕ್ಕೆ ನಮ್ಮನ್ನು ಕಾಡುತ್ತಿರುವ ಪ್ರಶ್ನೆ ಏನೆಂದರೆ, ನೀವು ಇರುವಾಗಲೇ ಇಂಥದ್ದೆಲ್ಲ ನಡೆಯುತ್ತಿದೆಯಲ್ಲ ಯಾಕೆ ಎಂಬುದು.
ಚಳವಳಿಗಳ ಸಂದರ್ಭದಲ್ಲಿ ಸಣ್ಣಪುಟ್ಟ ಅತಿರೇಕಗಳು ನಡೆಯುವುದು ನಿಜ. ಚಳವಳಿಯ ಗುಣವೇ ಅಂಥದ್ದು. ಪೊಲೀಸ್ ಅಧಿಕಾರಿಗಳ ಸಣ್ಣಪುಟ್ಟ ಮಾತಿಗೂ ಚಳವಳಿಯ ಆವೇಶದಲ್ಲಿರುವ ಪ್ರತಿಭಟನಾಕಾರರು ಕೆರಳುವುದುಂಟು. ಆದರೆ ನಿಮ್ಮ ಅಧಿಕಾರಿಗಳು ಬಳಸುವ ಭಾಷೆಯಾದರೂ ಎಂಥದ್ದು? ಚಳವಳಿಗಾರರನ್ನು ಕೆರಳಿಸಿ ತಪ್ಪು ಮಾಡುವಂತೆ ಮಾಡುವವರೇ ನಿಮ್ಮ ಅಧಿಕಾರಿಗಳು. ನಂತರ ತಪ್ಪನ್ನು ಬೂದುಗಾಜಲ್ಲಿಟ್ಟು ತೋರಿಸಿ ನಂತರದ ದೌರ್ಜನ್ಯದ ಕ್ರಿಯೆಗಳಿಗೆಲ್ಲ ಸಮರ್ಥನೆ ಕೊಟ್ಟುಕೊಳ್ಳುವುದು ಎಷ್ಟು ಸರಿ?
ಯಡಿಯೂರಪ್ಪ ಸರ್ಕಾರ ಮೇಲಿಂದ ಮೇಲೆ ತನ್ನ ಸಂಘಪರಿವಾರದ ಕಾರ್ಯಕರ್ತರ ಮೇಲಿದ್ದ ಪ್ರಕರಣಗಳನ್ನೆಲ್ಲ ವಾಪಾಸು ತೆಗೆದುಕೊಳ್ಳುತ್ತಿದೆ. ಆ ಪ್ರಕರಣಗಳಾದರೂ ಎಂಥದ್ದು? ಕೋಮು ಗಲಭೆ ನಡೆಸಿದ್ದು, ಚರ್ಚ್-ಮಸೀದಿಗಳ ಮೇಲೆ ದಾಳಿ ನಡೆಸಿದ್ದು ಇತ್ಯಾದಿ.
ಈಗ ನೀವು ಒಬ್ಬ ಪೊಲೀಸ್ ಅಧಿಕಾರಿಯಾಗಿ ಹೇಳಿ, ನಮ್ಮ ಮೇಲಿರುವ ಪ್ರಕರಣಗಳು ಸಂಘಪರಿವಾರದವರ ಮೇಲಿದ್ದ ಪ್ರಕರಣಗಳಿಗಿಂತ ಗಂಭೀರವೇ? ಯಾಕೆ ಸರ್ಕಾರ ಮತ್ತು ಪೊಲೀಸ್ ಇಲಾಖೆ ಕರ್ನಾಟಕ ರಕ್ಷಣಾ ವೇದಿಕೆಯ ಹೋರಾಟಗಳನ್ನು ಹತ್ತಿಕ್ಕಲು ಯತ್ನಿಸುತ್ತಿವೆ? ಯಾಕೆ ಮೇಲಿಂದ ಮೇಲೆ ರಾಜ್ಯದ ಉನ್ನತ ಪೊಲೀಸ್ ಅಧಿಕಾರಿಗಳ ಸಭೆಗಳಲ್ಲಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದಾಗ ಜಾಮೀನು ಸಿಗದಂಥ ಕೇಸುಗಳನ್ನೇ ಹಾಕಿ ಎಂದು ನಿರ್ದೇಶನ ನೀಡಲಾಗುತ್ತದೆ?
ಇದೆಲ್ಲದರ ಹಿಂದೆ ಇರಬಹುದಾದ ರಾಜಕೀಯ ಸಂಚುಗಳನ್ನು ಕರ್ನಾಟಕ ರಕ್ಷಣಾ ವೇದಿಕೆ ಎದುರಿಸುತ್ತದೆ. ಇಂಥ ಸವಾಲುಗಳನ್ನು ಮೆಟ್ಟಿ ನಿಲ್ಲುವುದು ಹೇಗೆ ಎಂಬುದು ಕರವೇಗೆ ಗೊತ್ತಿದೆ.
ಆದರೆ ನಿಮ್ಮಂಥ ದಕ್ಷ, ಕನ್ನಡಿಗ ಅಧಿಕಾರಿಯೊಬ್ಬರು ಬೆಂಗಳೂರು ಪೊಲೀಸ್ ಆಯುಕ್ತರಾಗಿರುವಾಗಲೇ ಇದೆಲ್ಲ ನಡೆಯುತ್ತಿದೆಯಲ್ಲ ಎಂಬ ನೋವು ನಮ್ಮದು. ಅಪಾರ್ಥ ಮಾಡಿಕೊಳ್ಳಬೇಡಿ.
ಬಿದರಿ ಸಾಹೇಬರೇ ಒಂದಂತೂ ಸತ್ಯ. ಅಧಿಕಾರ ಯಾರಿಗೂ, ಎಂದಿಗೂ ಶಾಶ್ವತವಲ್ಲ. ಅಧಿಕಾರವಿದ್ದಾಗ ಏನು ಮಾಡಿದರು ಎಂಬುದಷ್ಟೆ ಮುಖ್ಯವಾಗುತ್ತದೆ. ಗರುಡಾಚಾರ್ ಅವರು ನಿವೃತ್ತಿಯಾಗಿ ವರ್ಷಗಳು ಕಳೆದರೂ ಇವತ್ತಿಗೂ ಅವರನ್ನು ಕನ್ನಡ ಹೋರಾಟಗಾರರು ಸ್ಮರಿಸುತ್ತಾರೆ, ಪ್ರೀತಿಸುತ್ತಾರೆ. ಶ್ರೀರಾಮಪುರದ ಗಲಭೆ ಸಂದರ್ಭದಲ್ಲಿ ಕನ್ನಡಿಗರಿಗೆ ತಮಿಳು ಭಾಷಾಂಧರಿಂದ ರಕ್ಷಣೆ ನೀಡಿದ ಸುಭಾಷ್ ಭರಣಿಯವರನ್ನು ಕನ್ನಡ ಹೋರಾಟಗಾರರು ಮರೆಯುವುದು ಹೇಗೆ ಸಾಧ್ಯ? ಇದನ್ನೆಲ್ಲ ನಿಮಗೇಕೆ ಹೇಳಬೇಕಾಯಿತೆಂದರೆ ಕನ್ನಡದ ಅಧಿಕಾರಿಗಳಾದ ನಿಮ್ಮ ವಿರುದ್ಧ ಮಾತನಾಡುವುದು ಕನ್ನಡ ಚಳವಳಿಗಾರರಿಗೆ ಕಷ್ಟದ ವಿಷಯ. ಹಿಂದೆ ಕನ್ನಡೇತರ ಅಧಿಕಾರಿಗಳು ಕನ್ನಡ ಹೋರಾಟಗಾರರ ವಿರುದ್ಧ ನಿಂತಾಗ ಅದನ್ನು ಸರಿಯಾಗಿಯೇ ಎದುರಿಸಲಾಗಿತ್ತು ಎಂಬುದನ್ನು ಮರೆಯುವಂತಿಲ್ಲ. ನಿವೃತ್ತಿಯ ನಂತರವೂ ನಿಮ್ಮನ್ನು ಕನ್ನಡಿಗರು, ಕನ್ನಡ ಹೋರಾಟಗಾರರು ನೆನಪಿಸಿಕೊಳ್ಳುವಂತಾಗಬೇಕು ಎಂಬುದು ನಮ್ಮ ಕಾಳಜಿ. ಇದನ್ನು ಅರ್ಥ ಮಾಡಿಕೊಳ್ಳುತ್ತೀರೆಂಬ ನಂಬುಗೆ ನಮ್ಮದು.
ಬಿದರಿಯವರೇ, ಇದು ನಮ್ಮ ಎರಡನೇ ಸಂವಾದ. ಹಿಂದೆ ಸಂಜೆ ಪತ್ರಿಕೆಯೊಂದರಲ್ಲಿ ಇದ್ದಾಗ, ಕಳೆದ ಬೃಹತ್ ಬೆಂಗಳೂರು ಮಹಾನಗರಪಾಲಿಕೆ ಚುನಾವಣೆಗಳನ್ನು ನಿರ್ವಹಿಸಿದ ರೀತಿಯನ್ನು, ಯಾವುದೇ ರಕ್ತಪಾತವಾಗದಂತೆ ಭದ್ರತೆ ಒದಗಿಸಿದ ಕ್ರಮವನ್ನು ಮೆಚ್ಚಿ ವರದಿಯೊಂದನ್ನು ಬರೆದಿದ್ದೆ. ಆಗ ನೀವು ಅದನ್ನು ಓದಿ, ದೂರವಾಣಿ ಕರೆಯ ಮೂಲಕ ಧನ್ಯವಾದ ಹೇಳುವ ಸೌಜನ್ಯವನ್ನು ತೋರಿದ್ದಿರಿ. ಈ ಪತ್ರವನ್ನೂ ಸಹ ತಾವು ಅದೇ ರೀತಿಯಲ್ಲಿ ಸ್ವೀಕರಿಸುವುದಾಗಿ ಭಾವಿಸಿದ್ದೇನೆ.
ನಿಮ್ಮ ಎಲ್ಲ ಜನಪರವಾದ ನಿಲುವುಗಳನ್ನು ಗೌರವಿಸುತ್ತಲೇ, ಕನ್ನಡಪರರ ವಿರುದ್ಧದ ಧೋರಣೆಯನ್ನು ಖಂಡಿಸುತ್ತ ಈ ಪತ್ರ ಮುಗಿಸುತ್ತೇನೆ.
ಗೌರವಾದರಗಳೊಂದಿಗೆ
ಕನ್ನಡಿಗ

ಮಹಾರಾಷ್ಟ್ರದ ರಣಹೇಡಿ
ನ.ನಾಗೇಶ್

ಇದೊಂದು ಬೆದರುಗೊಂಬೆ!
ಉದ್ದನೆಯದೊಂದು ನಾಮ, ಹೋತದ ಗಡ್ಡ, ಕಣ್ಣಿಗೆ ಬೂತು ಗಾಜು, ಕಾವಿ ನಿಲುವಂಗಿ, ಕೊರಳಲ್ಲಿ ಗೋಲಿ ಗಾತ್ರದ ರುದ್ರಾಕ್ಷಿ, ಬಾಯಲ್ಲಿ ಸದಾ ಹೊಗೆಯುಗುಳುವ ಚುಟ್ಟ...ಥೇಟು ಬೆದರುಗೊಂಬೆಯೇ. ಹಿಂದುತ್ವದ ಹೆಬ್ಬುಲಿ, ಮರಾಠಿಗರ ಕಣ್ಮಣಿ..ಅಂತೆಲ್ಲಾ ಮುಖವಾಡಗಳು. ಇಂತಹ ಬೆದರು ಗೊಂಬೆಗೆ ಹೆದರಲು ಕನ್ನಡದ ಕಲಿಗಳೇನು ಹಸುಳೆಗಳೇ?
ನಿಜ. ಈ ಬೆದರುಗೊಂಬೆಯ ಹೆಸರು ಬಾಳಾ ಠಾಕ್ರೆ. ಶಿವಸೇನೆ ಮುಖ್ಯಸ್ಥ.
ಬೆಳಗಾವಿ ವಿಚಾರದಲ್ಲಿ ಕನ್ನಡಿಗರ ಕೈ ಮೇಲಾಗಿರುವುದನ್ನು ಸಹಿಸದ ಠಾಕ್ರೆ ಅಕ್ಷರಶ; ಅಂಡು ಸುಟ್ಟ ಬೆಂಕಿನಂತಾಡುತ್ತಿದ್ದಾನೆ. ಬೆಳಗಾವಿಯಲ್ಲಿ ಮರಾಠಿಗರ ಮೇಲೆ ದೌರ್ಜನ್ಯ ನಡೆಯುತ್ತಿದ್ದು, ಇದಕ್ಕೆ ಪ್ರತೀಕಾರವಾಗಿ ಮುಂಬಯಿಯಲ್ಲಿ ಕನ್ನಡಿಗರ ಮೇಲೆ ದಾಳಿ ನಡೆಸುವ ಬೆದರಿಕೆಯೊಡ್ಡಿದ್ದಾನೆ.
ಕರ್ನಾಟಕದಲ್ಲಿ ಮರಾಠಿ ಭಾಷಿಗರನ್ನು ಗುರಿ ಮಾಡಲಾಗುತ್ತಿದೆ. ಆದರೆ, ಮಹಾರಾಷ್ಟ್ರ ಮತ್ತು ಮುಂಬಯಿಗಳಲ್ಲಿ ಉಡುಪಿ ಸೇರಿದಂತೆ ಕರ್ನಾಟಕದ ಹಲವು ಭಾಗಗಳ ಕನ್ನಡಿಗರು ನೆಲೆಸಿದ್ದಾರೆ ಎಂಬುದನ್ನು ಮರೆಯದಿರಲಿ. ನಾವು ಎಲ್ಲಾದರೂ ಅವರಂತೆ ಬೀದಿಗಿಳಿದಲ್ಲಿ, ತೀವ್ರ ಸಂಕಷ್ಟ ಎದುರಿಸಬೇಕಾದೀತು ಎಂದೂ ಠಾಕ್ರೆ ಬೊಬ್ಬಿರಿದಿದ್ದಾನೆ.
ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಬಸ್ಸುಗಳು ಬರುತ್ತಿವೆ. ನಾನೆಲ್ಲಾದರೂ ತಾಳ್ಮೆಯನ್ನು ಕಳೆದುಕೊಂಡಲ್ಲಿ ಶಾಂತಿ ಪ್ರಿಯರಾಗಿರುವ ಮರಾಠಿ ಮಾನೂಗಳು ಸುಮ್ಮನಿರಲಾರರು ಅಂತೆಲ್ಲಾ ಕೀರಲುಕೊಂಡಿದ್ದಾನೆ. ಇಷ್ಟಕ್ಕೂ ಈ ಬೆದರುಗೊಂಬೆಯ ಕಿರುಚಾಟಕ್ಕೆ ಕಾರಣವಾದರೂ ಏನು ಎಂದರೆ ಅದೇ ‘ಬೆಳಗಾವಿ.
ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಕೇಂದ್ರ ಸರ್ಕಾರ ಸರ್ವೋಚ್ಛ ನ್ಯಾಯಾಲಕ್ಕೆ ಅಫಿಡವಿಟ್ ಸಲ್ಲಿಸಿದೆ. ಈ ಮೂಲಕ ಮಹಾರಾಷ್ಟ್ರ ಸಲ್ಲಿಸಿದ್ದ ಅರ್ಜಿಯನ್ನು ವಜಾ ಗೊಳಿಸುವಂತೆಯೂ ಮನವಿ ಮಾಡಿದೆ. ಇದು ಈ ಬೆದರುಗೊಂಬೆ ಠಾಕ್ರೆಗೆ ನುಂಗಲಾರದ ತುಪ್ಪವಾಗಿದೆ.
೨೦೦೪ರಲ್ಲಿ ಸರ್ವೋಚ್ಛ ನ್ಯಾಯಾಲಯದ ಮೊರೆ ಹೋಗಿದ್ದ ಮಹಾರಾಷ್ಟ್ರ, ಕರ್ನಾಟಕ ಗಡಿ ಪ್ರದೇಶದಲ್ಲಿನ ಬೆಳಗಾವಿ, ಕಾರವಾರ, ಬೀದರ್ ಮತ್ತು ಗುಲ್ಬರ್ಗಾ ಜಿಲ್ಲೆಗಳಲ್ಲಿನ ೮೧೪ಕ್ಕೂ ಹೆಚ್ಚು ಗ್ರಾಮಗಳು ತನ್ನ ವ್ಯಾಪ್ತಿಗೆ ಬರುತ್ತದೆ. ಇಲ್ಲಿನ ಬಹುತೇಕ ಜನರು ಮರಾಠಿ ಭಾಷಿಕರಾಗಿದ್ದಾರೆ. ಹಾಗಾಗಿ ರಾಜ್ಯದ ಮರು ವಿಂಗಡಣೆ ನಡೆಸಿ ಅವುಗಳನ್ನು ತನಗೆ ನೀಡಬೇಕೆಂದು ಕೇಳಿತ್ತು.
ಮಹಾರಾಷ್ಟ್ರ ಸರಕಾರದ ಪ್ರಕಾರ, ಬಾಂಬೆ ಮತ್ತು ಹೈದರಾಬಾದ್ ರಾಜ್ಯಗಳಿಗೆ ಸೇರಿದ್ದ ಮರಾಠಿ ಪ್ರಾಂತ್ಯಗಳ ಜನತೆಯ ಭಾರೀ ಪ್ರತಿಭಟನೆ ಮತ್ತು ಹರತಾಳದ ನಡುವೆಯೂ ಭಾರತದ ಕೇಂದ್ರ ಸರ್ಕಾರವು ಇವುಗಳನ್ನು ಮೈಸೂರು ರಾಜ್ಯಕ್ಕೆ ಸೇರಿಸಿತ್ತು ಎಂದು ಅಲವತ್ತುಕೊಂಡಿದೆ.
೨೦೦೪ರ ಅರ್ಜಿ ಸರ್ವೋಚ್ಛ ನ್ಯಾಯಾಲಯದಲ್ಲಿರುವಂತೆ ಮಹಾರಾಷ್ಟ್ರ ಮತ್ತೆ ೨೦೦೯ರ ಫೆಬ್ರವರಿಯಲ್ಲಿ ಮತ್ತೊಂದು ಅರ್ಜಿಯನ್ನು ನೀಡಿತ್ತು. ಜವಾಹರ್ ಲಾಲ್ ನೆಹರೂ ಆಡಳಿತದ ಅವಧಿಯಲ್ಲಿ ಕೈಗೊಂಡ ಅಸಾಂವಿಧಾನಿಕ ಕ್ರಮಗಳಿಂದಾಗಿ ಮಹಾರಾಷ್ಟ್ರಕ್ಕೆ ಸೇರಬೇಕಾಗಿದ್ದ ಹಲವು ಪ್ರದೇಶಗಳು ಕರ್ನಾಟಕಕ್ಕೆ ಸೇರಿದವು ಎಂದು ಅದು ವಾದಿಸಿತ್ತು.
ಆಗಿನ ಮೈಸೂರು ರಾಜ್ಯಕ್ಕೆ(ಕರ್ನಾಟಕ) ನಿರ್ದಿಷ್ಟ ಪ್ರದೇಶಗಳನ್ನು ವರ್ಗಾಯಿಸಿರುವುದು ನಿರಂಕುಶ ಪ್ರವೃತ್ತಿಯದ್ದು ಎಂದು ಮಹಾರಾಷ್ಟ್ರ ಹೇಳಿತ್ತು ಎಂದು ಕೇಂದ್ರ ಗೃಹ ಸಚಿವಾಲಯದ ನಿರ್ದೇಶಕ ಡಾ.ಪ್ರವೀಣ್ ಕುಮಾರಿ ಸಿಂಗ್ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.
ಮಹಾರಾಷ್ಟ್ರದ ವಾದವನ್ನು ಒಪ್ಪಲು ಸಾಧ್ಯವಿಲ್ಲ. ಹಾಗಾಗಿ ಅದು ಸಲ್ಲಿಸಿರುವ ಅರ್ಜಿಯನ್ನು ವಜಾಗೊಳಿಸಬೇಕು. ಅಲ್ಲದೆ ಇಂತಹ ದಾವೆಯನ್ನು ಹೂಡಿರುವುದಕ್ಕಾಗಿ ಮಹಾರಾಷ್ಟ್ರ ರಾಜ್ಯದ ಮೇಲೆ ದಂಡವನ್ನೂ ಹೇರಬೇಕು ಎಂದು ಕೇಂದ್ರ ಶಿಫಾರಸು ಮಾಡಿದೆ.
ಯಾವುದೇ ರಾಜ್ಯದ ಪ್ರದೇಶವನ್ನು ಸೇರ್ಪಡೆಗೊಳಿಸಲು ಭಾಷೆಯೂ ಒಂದು ಮಾನದಂಡ ಹೌದು. ಆದರೆ, ಅದೇ ಒಟ್ಟಾರೆ ಮಾನದಂಡವಲ್ಲ. ಕೇವಲ ಭಾಷೆಯನ್ನೇ ಮುಂದಿಟ್ಟುಕೊಂಡು ಆ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಲು ಸಾಧ್ಯವಿಲ್ಲ. ೧೯೫೬ರ ರಾಜ್ಯ ಏಕೀಕರಣ ಕಾಯ್ದೆ ಮತ್ತು ೧೯೬೦ರ ಬಾಂಬೆ ಏಕೀಕರಣ ಕಾಯ್ದೆಗಳನ್ನು ಪರಿಗಣಿಸುವಾಗ ಸಂಸತ್ ಮತ್ತು ಕೇಂದ್ರ ಸರಕಾರ ಅಗತ್ಯ ಅಂಶಗಳನ್ನು ಗಮನಕ್ಕೆ ತೆಗೆದುಕೊಂಡಿತ್ತು ಎಂದು ಕೇಂದ್ರ ಸರ್ವೋಚ್ಛ ನ್ಯಾಯಾಲಯಕ್ಕೆ ತಿಳಿಸಿದೆ.
ಹಾಗಾಗಿ ಮೇಲೆ ಹೇಳಿದ ಪ್ರದೇಶಗಳ ಮೇಲಿನ ವ್ಯಾಪ್ತಿಯು ಕರ್ನಾಟಕದಲ್ಲೇ ಅಬಾಧಿತವಾಗಿ ಮುಂದುವರಿಯಬೇಕು. ಇಲ್ಲಿ ಮಹಾರಾಷ್ಟ್ರಕ್ಕೆ ಯಾವುದೇ ರೀತಿಯ ಅಧಿಕಾರವಿಲ್ಲ. ರಾಜ್ಯ ಮರು ವಿಂಗಡಣೆಯತ್ತ ಗಮನ ಹರಿಸುವ ಅಗತ್ಯವಿಲ್ಲ ಎಂದೂ ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ.
ಬೆಳಗಾವಿ ಕುರಿತಾದ ಈ ಬೆಳವಣಿಗೆ ಬೆದರುಗೊಂಬೆ ಒಡಲಲ್ಲಿ ಬೆಂಕಿ ಹೊತ್ತಿಸಿದೆ. ಇದನ್ನು ತಾಳಲಾರದೆ ಮುದಿ ಜೀವ ತತ್ತರಿಸುತ್ತಿದೆ. ಅಧಿಕಾರಕ್ಕೆ ಹಿಂದುತ್ವವನ್ನು, ಅಸ್ತಿತ್ವಕ್ಕೆ ಮಹಾರಾಷ್ಟ್ರವನ್ನು ಬಗಲಲ್ಲಿರಿಸಿಕೊಂಡು ಪುಂಡಾಟಿಕೆಗೆ, ಲಂಪಟತನಕ್ಕೆ, ಅವಕಾಶವಾದಿತನಕ್ಕೆ ಹೆಸರುವಾಸಿಯಾಗಿರುವ ಮುದಿ ಹುಲಿಯ ಗರ್ಜನೆಗೆ ಹೆದರುವವರಾರೂ ಇಲ್ಲದಂತಾಗಿದೆ.
ಹಿಂದುತ್ವವೇ ಉಸಿರು, ಹಿಂದುತ್ವದ ಉಳಿವೊಂದೇ ಜೀವನದ ಧ್ಯೇಯ ಎಂದೆಲ್ಲಾ ಬಡಬಡಿಸುತ್ತಾ ಹಿಂದೂ ಉದ್ಧಾರಕನಂತೆ ಪೋಷಾಕು ಧರಿಸಿರುವ ಗೋಮುಖ ‘ವ್ಯಾಘ್ರಕ್ಕೆ ನಿಜಕ್ಕೂ ಹಿಂದುತ್ವ ಪರಿಕಲ್ಪನೆಯಾಗಲಿ, ಹಿಂದೂಗಳನ್ನು ಉದ್ದರಿಸಬೇಕೆಂಬ ಹಪಹಪಿಯಾಗಲಿ ಇಲ್ಲ.
‘ವಸುಧೈವ ಕುಟುಂಕಂ ಅಂದರೆ ವಿಶ್ವವೇ ಒಂದು ಕುಟುಂಬ. ಇದು ಹಿಂದುತ್ವದ ಆಶಯ. ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರ....ಹೀಗೆ ಈ ಧ್ಯೇಯ ವಾಕ್ಯಕ್ಕೆ ಗಡಿಗಳ ಎಲ್ಲೆಯಿಲ್ಲ. ಭಾಷೆಗಳ ಗೊಡವೆಯಿಲ್ಲ. ಹಿಂದೂಸ್ತಾನದಲ್ಲಿರುವವರೆಲ್ಲರೂ ಹಿಂದೂಗಳೇ. ಹಾಗಾಗಿ ಕನ್ನಡಿಗರು ಹಿಂದೂಗಳೇ ಎಂಬುದರಲ್ಲಿ ಎರಡು ಮಾತಿಲ್ಲ. ಹಿಂದೂ ರಕ್ಷಕನೆಂದೇ ಹಣೆಪಟ್ಟಿ ಅಂಟಿಸಿಕೊಂಡಿರುವ ಠಾಕ್ರೆಗೆ ಇದು ಗೊತ್ತಿಲ್ಲವೇ? ಇವರುಗಳ ರಕ್ಷಣೆ ಮಾಡಬೇಕಾದುದು ಕರ್ತವ್ಯವಲ್ಲವೇ? ನಿಜವಾದ ಹಿಂದೂತ್ವವನ್ನು ಬಲ್ಲವನಿಗೆ ಇದು ಖಂಡಿತಾ ಅರ್ಥವಾಗುತ್ತದೆ. ಆದರೆ ಠಾಕ್ರೆಯಂತಹ ಬೆದರುಗೊಂಬೆಯಂತಹವರಿಗೆ ಇದು ಗೊತ್ತಾಗುವುದಿಲ್ಲ. ಏಕೆಂದರೆ ಈತ ಹಿಂದೂತ್ವ ಆರಾಧಕನೂ ಅಲ್ಲ; ರಕ್ಷಕನಂತೂ ಮೊದಲೇ ಅಲ್ಲ. ಕೇವಲ ಅವಕಾಶವಾದಿಯಷ್ಟೆ. ಈ ಮಾತು ಆತನ ಬದುಕಿನ ಪುಟಗಳನ್ನೊಮ್ಮೆ ತಿರುವುತ್ತಾ ಹೋದರೆ ಹೆಜ್ಜೆ-ಹೆಜ್ಜೆಗೂ ಇಣುಕುತ್ತವೆ.
ಮೂಲತ: ಕೊಂಕಣಪ್ರದೇಶದ ಸಮಾಜ ಸುಧಾರಕರ ಕುಟುಂಬದಿಂದ ಬಂದ ಈ ಠಾಕ್ರೆ ಒಬ್ಬ ಕೋಮುವಾದಿ. ಇದನ್ನೂ ಮೀರಿ ಒಬ್ಬ ಉನ್ಮತ್ತ ಭಾಷಾಂಧ. ಅನ್ನದ ದಾರಿ ಹುಡುಕುತ್ತಾ ದಾದರ್ ಪ್ರದೇಶಕ್ಕೆ ವಲಸೆ ಬಂದಿದ್ದ ಈತನ ಮುತ್ತಜ್ಜಿ ಸುತ್ತಲಿನ ಮಾಟುಂಗಾ, ಮಾಹಿಮ್, ವರ್ಲಿಗಳಲ್ಲಿ ಮುಂಬಯಿಯ ಮೂಲ ನಿವಾಸಿಗಳಾದ ಕೋಲಿ ಹಾಗೂ ಕ್ರಿಶ್ಚಿಯನ್-ಮುಸ್ಲಿಮರ ಸುಧಾರಣೆಯಲ್ಲಿ ತೊಡಗಿಸಿಕೊಂಡಿದ್ದಾಕೆ.
ದಾದರ್‌ನ ಸುತ್ತಲಿನ ಪ್ರದೇಶದಲ್ಲಿ ಠಾಕ್ರೆ ಕುಟುಂಬದ ಹೆಸರನ್ನು ಜನಪ್ರಿಯಗೊಳಿಸಿದ್ದೇ ಈ ಹಿರಿಯ ಜೀವ. ಈ ಹಿರಿಯ ಜೀವದ ಮೊಮ್ಮಗ ಕೇಶವ ಸೀತಾರಾಮ್ ಠಾಕ್ರೆ. ಈತ ಕೂಡ ಸಮಾಜ ಸುಧಾರಕನಾಗಿದ್ದಂತಹ ಮನುಷ್ಯ. ಸಾಹಿತ್ಯ, ಕಲೆಯಲ್ಲಿ ಆಸಕ್ತಿ ಬೆಳಸಿಕೊಂಡಿದ್ದಾತ. ಮುಂಬೈಯನ್ನು ಬದಿಗಿಟ್ಟು ಮಹಾರಾಷ್ಟ್ರವನ್ನು ಪ್ರತ್ಯೇಕ ರಾಜ್ಯ ಮಾಡಬೇಕೆಂಬ ಹೋರಾಟದಲ್ಲೂ ತೊಡಗಿಸಿಕೊಂಡಿದ್ದ. ಈ ಕೇಶವ ಠಾಕ್ರೆಯ ಮಗನೇ ಬಾಳಾ ಠಾಕ್ರೆ.
ಬಾಳಾ ಠಾಕ್ರೆ ಮುತ್ತಜ್ಜಿ ಹಾಗೂ ತಂದೆಯ ಗುಣಗಳನ್ನು ಮೈಗೂಡಿಸಿಕೊಳ್ಳದೇ ಒಬ್ಬ ಬೀದಿ ಬದಿಯ ಪುಂಡನಾಗಿಯೇ ಬೆಳೆದ. ತಾನೇ ಹೊರಡಿಸುತ್ತಿದ್ದ ‘ಮಾರ್ಮಿಕ್ ಎಂಬ ಹಾಸ್ಯ ಪತ್ರಿಕೆಯನ್ನು ಮರಾಠಿಯೇತರರ ವಿರುದ್ಧ ಮರಾಠಿಗರನ್ನು ಎತ್ತಿಕಟ್ಟಲು ಬಳಸಿಕೊಂಡ. ಆರ್ಥಿಕ, ಶೈಕ್ಷಣಿಕ ಮತ್ತು ಉದ್ಯೋಗದಲ್ಲಿ ಪ್ರಾತಿನಿಧ್ಯ ಇಲ್ಲದೇ ಒದ್ದಾಡುತ್ತಿದ್ದ ಅಮಾಯಕ ಜೀವಗಳ ಮನಸ್ಸುಗಳಲ್ಲಿ ಕರ್ನಾಟಕ, ತಮಿಳುನಾಡು, ಕೇರಳ ರಾಜ್ಯದಿಂದ ಬಂದ ಉದ್ಯಮಶೀಲ ವಲಸಿಗರನ್ನು ಖಳನಾಯಕರಂತೆ ಬಿಂಬಿಸಿ ಭಾಷಾ ಪುಂಡಾಟಿಕೆಗೆ ನಾಂದಿ ಹಾಡಿದ ಕೀರ್ತಿಯೂ ಠಾಕ್ರೆಗೇ ಸಲ್ಲಬೇಕು.
‘ಪುಂಗಿ ಬಜಾವೋ, ಲುಂಗಿ ಉಟಾವೋ ಎಂಬ ಘೋಷಣೆ ಅರವತ್ತರ ದಶಕದ ಕೊನೆಯ ಭಾಗದಲ್ಲಿ ಠಾಕ್ರೆಗೆ ಮರಾಠಿಗರ ಅಪಾರ ಬೆಂಬಲ ತಂದುಕೊಟ್ಟಿತು. ಪರಿಣಾಮವಾಗಿ ೧೯೬೭ರಲ್ಲಿ ಶಿವಸೇನೆ ಚಿಗುರೊಡೆಯಿತು.
ಬರೀಯ ಪುಂಡಾಟಿಕೆಯನ್ನೇ ಕಾಯಕವಾಗಿಸಿಕೊಂಡಿದ್ದ ಶಿವಸೇನೆಗೆ ಅಧಿಕೃತ ರಾಜಕೀಯ ಪಕ್ಷದ ರೂಪ ನೀಡಿದ್ದು ಆ ಕಾಲದ ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಎಸ್.ಕೆ.ಪಾಟೀಲ್. ೧೯೬೭ರ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಭಾರತೀಯ ಕೃಷ್ಣ ಮೆನನ್ ಅವರನ್ನು ಮಣಿಸಲು ಪಾಟೀಲ್ ಠಾಕ್ರೆಯ ಪುಂಡ ಪಡೆಯನ್ನು ಬಳಸಿಕೊಂಡರು. ಈ ಮೂಲಕ ಶಿವಸೇನೆಯ ದಕ್ಷಿಣ ಭಾರತೀಯರನ್ನು ವಿರೋಧಿಸುವ ನಿಲುವಿಗೆ ರಾಜಕೀಯ ವೇದಿಕೆಯೊಂದನ್ನು ಒದಸಿಕೊಟ್ಟರು.
ಆಗಿನ್ನೂ ಮುಂಬೈನಲ್ಲಿ ಮುಖ್ಯವಾಗಿ ಕಾರ್ಮಿಕ ವಲಯದಲ್ಲಿ ಕಮ್ಯುನಿಸ್ಟರು ಬೇರು ಬಿಟ್ಟಿದ್ದರು. ಇದರಿಂದ ಅಭದ್ರತೆಗೀಡಾಗಿದ್ದ ಕಾಂಗ್ರೆಸ್ ಸರ್ಕಾರ ಕಮ್ಯುನಿಸ್ಟ್ ವಿರೋಧಿ ನಿಲುವಿನ ಶಿವಸೇನೆಗೆ ಮುಕ್ತ ಮೈದಾನ ನೀಡಿತು. ಕಮ್ಯುನಿಸ್ಟರ ಸಭೆ, ರ‍್ಯಾಲಿಗಳ ಮೇಲೆ ಶಿವಸೇನೆ ಗೂಂಡಾಗಳು ದಾಳಿ ನಡೆಸುತ್ತಿದ್ದರೆ, ಮತ್ತೊಂದೆಡೆ ಕಾಂಗ್ರೆಸ್ ಕಣ್ಣ್ಮುಚ್ಚಿ ಕೂತಿತ್ತು. ೧೯೬೮ರಲ್ಲಿ ಪ್ರಜಾಸೋಷಲಿಸ್ಟ್ ಪಕ್ಷದ ಜತೆ ಸೇರಿ ಮುಂಬೈ ನಗರಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಶಿವಸೇನೆ ೪೨ ಸ್ಥಾನಗಳನ್ನು ಗೆದ್ದಿತ್ತು. ಮರಾಠಿಗರಲ್ಲಿ ಶಿವಸೇನೆಯನ್ನು ಇನ್ನಷ್ಟು ಜನಪ್ರಿಯಗೊಳಿಸಿದ್ದು, ಬೆಳಗಾವಿ ವಿವಾದ. ಆಗ ನಡೆದ ಹಿಂಸಾಚಾರದ ಸಮಯದಲ್ಲಿಯೂ ಕಾಂಗ್ರೆಸ್ ಮೌನ ವಹಿಸಿತ್ತು. ಯಾವಾಗ ತುರ್ತು ಪರಿಸ್ಥಿತಿ ಸಮಯದಲ್ಲಿ ಶಿವಸೇನೆ ನಿಷೇಧಿಸಬೇಕೆಂಬು ಕೂಗೆಬ್ಬಿತೋ ಆಗ ಗೋಸುಂಬೆ ಠಾಕ್ರೆ ಸಂಜಯಗಾಂಧಿಗೆ ಬೆಂಬಲ ಘೋಷಿಸಿಬಿಟ್ಟ. ಆಗಲೇ ಶಿವಸೇನೆಯಲ್ಲಿ ಬಿರುಕು ಬಿಟ್ಟುಕೊಂಡಿತು. ಠಾಕ್ರೆಯ ಮೇಲೆ ಆತನದೇ ಪಕ್ಷದ ನಿಷ್ಠಾವಂತ ನಾಯಕರು ಭ್ರಷ್ಟಾಚಾರದ ಆರೋಪ ಹೊರಿಸಿ ಹೊರನಡೆದರು.
ಕಾಂಗ್ರೆಸ್‌ನೊಂದಿಗಿನ ಶಿವಸೇನೆಯ ಸಖ್ಯ ಬಹಳ ದಿನ ನಡೆಯಲಿಲ್ಲ. ಕಾಂಗ್ರೆಸ್ ಜತೆಗಿದ್ದು ತನ್ನ ಪಕ್ಷದ ನೆಲೆ ವಿಸ್ತರಿಸಿಕೊಳ್ಳುವುದು ಅಸಾಧ್ಯ ಎಂದು ಠಾಕ್ರೆಯೊಳಗಿನ ರಾಜಕಾರಣಿಗೆ ಅದಾಗಲೇ ಅರಿವಾಗಿತ್ತು. ಆಗ ಠಾಕ್ರೆ ಎತ್ತಿದ ಅವತಾರವೇ ‘ಹಿಂದೂ ರಕ್ಷಕ. ಆರ್‌ಎಸ್‌ಎಸ್‌ನ ಪ್ರಧಾನ ಕಛೇರಿ ನಾಗಪುರದಲ್ಲಿದ್ದರೂ ಮೂಲತ: ದಲಿತ, ಹಿಂದುಳಿದ, ಕೃಷಿಕ ಸಮುದಾಯವನ್ನೊಳಗೊಂಡ ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಕಾಲೂರಲು ಆಗಿರಲೇ ಇಲ್ಲ. ಆದರೆ ಅದು ಕಣ್ಣಿಟ್ಟ ಜಾಗವನ್ನು ಶಿವಸೇನೆ ಆಕ್ರಮಿಸಿಕೊಳ್ಳುತ್ತಿದ್ದುದನ್ನು ಕಂಡ ಬಿಜೆಪಿ ಅದರ ಜತೆಯಲ್ಲಿಯೇ ಸಖ್ಯ ಬೆಳೆಸುವ ನಿರ್ಧಾರ ಕೈಗೊಂಡಿತು. ಎಪ್ಪತ್ತರ ದಶಕದಿಂದಲೂ ಮುಂಬೈ ಮಹಾನಗರ ಪಾಲಿಕೆಯನ್ನು ಕೈಯಲ್ಲಿಟ್ಟುಕೊಂಡಿದ್ದರೂ, ಸಚಿವಾಲಯ ಪ್ರವೇಶಿಸಲು ಶಿವಸೇನೆಗೆ ಸಾಧ್ಯವಾಗಿರಲಿಲ್ಲ. ೧೯೯೫ರಲ್ಲಿ ಬಿಜೆಪಿ ಜತೆಗಿನ ಮೈತ್ರಿ ಆ ಅವಕಾಶವನ್ನು ಒದಗಿಸಿಕೊಟ್ಟಿತು.
ಅಧಿಕಾರ ಮತ್ತು ಸಂಪತ್ತಿನ ಒಂದೊಂದೇ ಮೆಟ್ಟಿಲೇರುತ್ತಾ ಹೋದ ಬಾಳ ಠಾಕ್ರೆ ಶಿವಸೇನೆಯ ಮೂಲ ಉದ್ದೇಶವನ್ನು ಎಂದೋ ಗಾಳಿಗೆ ತೂರಿಬಿಟ್ಟಿದ್ದ. ಶಿವಸೇನೆ ಆರಂಭವಾದಾಗಿನಿಂದಲೂ ಮರಾಠಿ ಮಾನೂಸ್‌ಗಳಿಗೆ ಕೊಟ್ಟಿದ್ದೇನು ಎಂದು ಯಾರಾದರೂ ಕೇಳಿದರೆ ಮುದಿ ಹುಲಿಯ ಬಾಯಲ್ಲಿ ಪದಗಳೇ ಹೊರಬರುವುದಿಲ್ಲ.
ಶಾಲೆಗಳನ್ನಾಗಲಿ, ಉದ್ಯೋಗ ಅವಕಾಶಗಳನ್ನು ದೊರಕಿಸಿಕೊಟ್ಟದ್ದಾಗಲಿ, ಮರಾಠಿ ಸಾಹಿತ್ಯ, ಕಲೆ, ರಂಗಭೂಮಿಗೆ ಠಾಕ್ರೆ ಕೊಟ್ಟ ಬಳುವಳಿಗಳಾಗಲಿ ಏನೂ ಇಲ್ಲ. ಬರೀಯ ಪುಂಡಾಟಿಕೆ, ಗಲಭೆ, ಸ್ವಾರ್ಥಸಾಧನೆ, ಸ್ವಪ್ರತಿಷ್ಠೆಯನ್ನೇ ಮೈಗೂಡಿಸಿಕೊಂಡು ಇವುಗಳನ್ನು ಸಾಧಿಸಲು ಮರಾಠಿ ಮನಸುಗಳನ್ನು ಉಪಯೋಗಿಸಿಕೊಂಡ ಚಾಣಾಕ್ಷ ಠಾಕ್ರೆ.
ಮರಾಠಿಗರ, ಮಹಾರಾಷ್ಟ್ರದ ಪರ ಉದ್ದುದ್ದ ಆವೇಶದ ಮಾತುಗಳನ್ನಾಡುವ ಈ ಬೆದರುಗೊಂಬೆಯಾದರೂ ವೈಯಕ್ತಿಕವಾಗಿ ಭಾಷೆಗೆ ನಿಷ್ಠೆಯಿಂದ ಇದೆಯೇ ಎಂದರೆ ಖಂಡಿತಾ ಇಲ್ಲ.
ಪಾಕಿಸ್ತಾನದಿಂದ ಬಂದ ಕಸಬ್ ಒಂದೆಡೆ ಭಾರತೀಯರನ್ನು ಕೊಂದರೆ ಭಾರತದಲ್ಲೇ ಇರುವ ಠಾಕ್ರೆ ಭಾರತೀಯರನ್ನೇ ನಾಶಮಾಡಲು ಹೊರಟಿದ್ದಾನೆ. ಈತನಿಗೂ ಕಸಬ್‌ಗೂ ವ್ಯತ್ಯಾಸವಿದೆಯೇ ಎಂದು ಸಾರ್ವಜನಿಕರು ಪ್ರಶ್ನಿಸುವಂತಾಗಿದೆ.
ಅತ್ತ ಹಿಂದೂ ರಕ್ಷಕನೂ ಆಗದೆ, ಇತ್ತ ಮರಾಠಿಗರ ಕಣ್ಮಣಿ ಆಗದೆ ತನ್ನ ಇಬ್ಬಗೆ ನೀತಿಯಿಂದ, ಅವಕಾಶವಾದಿತನದಿಂದ, ಮಹಾರಾಷ್ಟ್ರದಲ್ಲಿ ಹಿಡಿತ ಸಾಧಿಸಬೇಕೆಂದು ದುರುದ್ದೇಶದಿಂದ ಬೆಳಗಾವಿಯನ್ನು ಅಸ್ತ್ರವಾಗಿಸಿಕೊಂಡಿರುವ ಠಾಕ್ರೆಯಂತಹ ಮುದಿ ಹುಲಿಯ ಪೊಳ್ಳು ಘರ್ಜನೆಗೆ ಮರಾಠಿ ಮನಸುಗಳು ಪಿಗ್ಗಿಬಿದ್ದಿರುವುದು ನಿಜಕ್ಕೂ ದುರಂತ.
ಈಗ ಈ ಮುದಿ ಜೀವದ ಗರ್ಜನೆಗೆ ಬೆಲೆ ಕೊಡುವವರು ಯಾರೂ ಇಲ್ಲ. ತನ್ನ ಪಕ್ಷದ ಐಕ್ಯವನ್ನೇ ಸಾಧಿಸಲಾಗದ ಈ ಬೆದರುಗೊಂಬೆಗೆ ಮಹಾರಾಷ್ಟ್ರದ ಹಿತ ಕಾಯಲು ಸಾಧ್ಯವೇ. ಭಾಷೆಯೊಂದನ್ನೇ ಮಾನದಂಡವಾಗಿಸಿ ನೆಲವನ್ನು ಬಿಟ್ಟುಕೊಡುವುದಾದರೆ, ಮಹಾರಾಷ್ಟ್ರದಲ್ಲಿ ಕನ್ನಡಿಗರೇ ಹೆಚ್ಚಿರುವ ನೆಲವನ್ನು ಬಿಟ್ಟು ಕೊಡಲು ಇವರು ಸಿದ್ದರೇ? ಇವೆಲ್ಲವೂ ಮೂರ್ಖ, ಹತಾಶ ಮುದಿ ಮನಸಿನ ಪ್ರಲಾಪವಷ್ಟೇ.
‘ಕೇಂದ್ರವು ಮಹಾರಾಷ್ಟ್ರಿಗರಿಗೆ ಅನ್ಯಾಯ ಮಾಡುವ ಧೈರ್ಯ ತೋರಿಸಿದೆ ಎಂದು ಅಲವತ್ತುಕೊಳ್ಳುವ ಬೆದರುಗೊಂಬೆ ಠಾಕ್ರೆಯ ಒಡಲಲ್ಲಿ ಇನ್ನೂ ನೈತಿಕ ತಾಕತ್ತಿದೆಯೇ?
ನ್ಯಾಯವಾಗಿ ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು. ಇದರಲ್ಲಿ ಚರ್ಚೆಗೆ ಅವಕಾಶವೇ ಇಲ್ಲ. ಇದನ್ನು ಕೇಂದ್ರವೂ ಸ್ಪಷ್ಟಪಡಿಸಿದೆ. ಆದರೂ ಠಾಕ್ರೆಯ ಇದಕ್ಕೆ ರಾಜಿಯಾಗಲೊಲ್ಲ. ಆತನಿಗೆ ಸಮಸ್ಯೆ ಪರಿಹಾರವಾಗುವುದು ಬೇಕಿಲ್ಲ. ಸಮಸ್ಯೆಯನ್ನು ಸಾಧ್ಯವಾದಷ್ಟು ಮಟ್ಟಿಗೆ ಜೀವಂತವಾಗಿಸಿ ಆ ಮೂಲಕ ತನ್ನ ಬೇಳೆ, ಅಸ್ತಿತ್ವ ಕಾಯ್ದಕೊಳ್ಳಬೇಕೆಂಬ ಹಪಹಪಿಯಷ್ಟೆ. ಅದಕ್ಕೆಂದೇ ಎಲ್ಲರ ಮೇಲೆ ಚೀರಾಡುತ್ತಾ, ಪ್ರತಿಭಟಿಸುತ್ತಾ, ಸ್ವರವೇ ಹೊರಡಿಸದಷ್ಟು ನಿಶ್ಯಕ್ತಗೊಂಡಿರುವ ಕಂಠದಿಂದ ಬಲವಂತದಿಂದಲೇ ಘರ್ಜಿಸುತ್ತಿದೆ.
ಈ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಏಕೆಂದರೆ ಇದು ಬೆದರುಗೊಂಬೆಯೊಂದರ ಅರಣ್ಯರೋಧನವಷ್ಟೇ.

ಹಲ್ಮಿಡಿ ಗ್ರಾಮದ ಪರಿಚಯ
ಹಲ್ಮಿಡಿ ಒಂದು ಪುಟ್ಟ ಗ್ರಾಮ. ಸುಮಾರು ಮುನ್ನೂರು ಮನೆಗಳು ೧,೨೦೦ ಜನವಸತಿಯುಳ್ಳ ಇನ್ನೂ ನಾಗರಿಕ ಸವಲತ್ತುಗಳು ತಲುಪದೇ ಇರುವ ಗ್ರಾಮ. ಹಾಸನ ಜಿಲ್ಲೆಯ ಉತ್ತರ ತುದಿಯ ಚಿಕ್ಕಮಗಳೂರು ಜಿಲ್ಲೆಯ ಜತೆ ಸೇರುವ ಗಡಿ ಭಾಗದಲ್ಲಿ ಅಂದರೆ ಬೇಲೂರು ತಾಲೂಕಿನ ಉತ್ತರ ಭಾಗದ ಕೊನೆಯಲ್ಲಿ ಈ ಊರು ನೆಲೆಸಿದೆ. ಒಂದೂವರೆ ಸಾವಿರ ವರ್ಷಗಳ ಹಿಂದೆಯೇ ಜನಜೀವನಕ್ಕೆ ಯೋಗ್ಯವಾಗಿ, ಕೆರೆಕಟ್ಟೆಗಳಿಂದ ಕೂಡಿ ವ್ಯವಸಾಯ ಯೋಗ್ಯ ಗದ್ದೆಗಳು ರೂಪುಗೊಂಡು ರಾಜನಿಗೆ ಕಂದಾಯ ಕೊಡುವಷ್ಟು ಮಟ್ಟಿಗೆ ಆಗಲೇ ಈ ಹಳ್ಳಿ ಬೆಳೆದಿತ್ತು.
ಸ್ಥಳನಾಮ
ಶಾಸನದಲ್ಲಿ ಹಲ್ಮಿಡಿಯನ್ನು ‘ಪಲ್ಮಿಡಿ’ಎಂದು ಕರೆಯಲಾಗಿದೆ. ಒಂದೂವರೆ ಸಾವಿರ ವರ್ಷಗಳ ಹಿಂದೆ ಈ ಊರನ್ನು ಹಾಗೆ ಕರೆಯುತ್ತಿದ್ದರು ಎಂಬುದು ಸ್ಪಷ್ಟ. ಆದರೆ ಇಂದಿನ ಕಂದಾಯ ಇಲಾಖೆಯ ದಾಖಲೆಗಳಲ್ಲಿ ಜನಸಾಮಾನ್ಯರ ಬಾಯಲ್ಲೂ ‘ಹನುಮಿಡಿ’ ಎಂಬ ರೂಪವೂ ಬಳಕೆಯಲ್ಲಿದೆ. ಇಂದು ಕೆಲವರು ‘ಹನುಮಿಡಿ’ ಎಂದು ಉಚ್ಚರಿಸಿದ ಮಾತ್ರಕ್ಕೆ ಆ ಊರಿನ ನಿಜವಾದ ಹೆಸರು ಅದೇ ಇರಬೇಕಿಲ್ಲ. ಸ್ಥಳನಾಮವೂ ಪೀಳಿಗೆಯಿಂದ ಪೀಳಿಗೆಗೆ ರೂಪಾಂತರ ಹೊಂದುತ್ತಾ ಬರುತ್ತದೆಂಬುದು ಸ್ಥಳನಾಮಗಳ ಸಮೀಕ್ಷೆಯಿಂದ ಸಿದ್ಧವಾಗಿದೆ. ಒಂದು ಸ್ಥಳದ ಪುರಾತನ ನಾಮರೂಪ ಮತ್ತು ರೂಪಾಂತರಗಳನ್ನು ತಿಳಿಯಲು ಶಾಸನ ಸಾಹಿತ್ಯವೂ ಅಧಿಕೃತ ಸಾಕ್ಷ್ಯವಾಗಿರುತ್ತದೆ. ಹಲ್ಮಿಡಿ ಶಾಸನದಲ್ಲಿ ಊರಿನ ಹೆಸರು ‘ಪಲ್ಮಿಡಿ’ ಎಂದಿದೆ. ಇದರ ನಂತರದಲ್ಲಿ ಹಾಕಲ್ಪಟ್ಟ ಕ್ರಿ.ಶ. ೫೨೦ರ ಕದಂಬರ ೫ನೇ ರಾಜನಾದ ಮುಮ್ಮಡಿ ಕೃಷ್ಣವರ್ಮನ ತಾಮ್ರಶಾಸನದಲ್ಲೂ ‘ಪಲ್ಮಿಡಿ ಗ್ರಾಮ’ ಎಂದೇ ಇದೆ. ಮುಂದೆ ಗಂಗರಾಜರ ಆಡಳಿತಾವಧಿಯಲ್ಲಿ ರಾಚಮಲ್ಲನ ಚಿಕ್ಕಮಗಳೂರು ಶಾಸನ (ಕ್ರಿ.ಶ.೮೯೯) ಮತ್ತು ೨ನೇ ಬೂತುಗನ ಬಪ್ಪವಳ್ಳಿಯ (ಕ್ರಿ.ಶ. ೯೫೯)ಗಳಲ್ಲಿ ‘ಪಲ್ಮಾಡಿ’ ಎಂದು ಕರೆಯಲಾಗಿದೆ.
ವಿಜಯನಗರ ಸಾಮ್ರಾಜ್ಯದ ಆಡಳಿತದಲ್ಲಿ ಕ್ರಿ.ಶ. ೧೫೨೩ರಲ್ಲಿ ಶೃಂಗೇರಿಯ ಬಸದಿಗೆ ಕೊಡುಗೆ ನೀಡಿದ ದೇವಣಸೆಟಿಯ ಊರು ‘ಹಲುಮಿಡಿ’ ಕೃಷ್ಣದೇವರಾಯನ ಆಡಳಿತ ಕಾಲದ ಕ್ರಿ.ಶ. ೧೫೨೪ರ ಬೇಲೂರು ಶಾಸನದ ಎರಡು ಪ್ರತಿಗಳಲ್ಲಿ ‘ಹಲುಮಿಡಿ’ ಎಂಬ ರೂಪ ಕಾಣಸಿಗುತ್ತದೆ.
ಈ ರೀತಿ ಒಂದೂವರೆ ಸಾವಿರ ವರ್ಷಗಳ ಹಿಂದೆ ‘ಪಲ್ಮಿಡಿ’ ಎಂದಿದ್ದ ಹೆಸರು ನಂತರ ಪಲ್ಮಾಡಿ, ಹಲುಮಿಡಿ ಮುಂತಾದ ರೂಪಾಂತರಗಳನ್ನು ಹೊಂದಿ ಜನಸಾಮಾನ್ಯರ ಬಾಯಲ್ಲಿ ‘ಹಲ್ಮಿಡಿ’ಯಾಗಿ ಉಳಿದಿರಬೇಕು. ಆದರೆ ಹನುಮಿಡಿ ಎಂಬ ರೂಪವು ಯಾವ ಶಾಸನದಲ್ಲೂ ದಾಖಲಾಗಿಲ್ಲ. ಬಹುಶಃ ಇಸ್ಲಾಂ ಮತ್ತು ಬ್ರಿಟಿಷ್ ಆಡಳಿತ ಕಾಲದಲ್ಲಿನ ಕಂದಾಯ ಇಲಾಖೆಯ ದಾಖಲೆಗಳಲ್ಲಿ ‘ಹಲುಮಿಡಿ’ಯು ಹನುಮಿಡಿ ಎಂದು ದಾಖಲಾಗತೊಡಗಿ ಕ್ರಮೇಣ ಜನಸಾಮಾನ್ಯರಲ್ಲಿ ಹಲ್ಮಿಡಿ, ಹನುಮಿಡಿ ಈ ಎರಡೂ ರೂಪಗಳು ಬಳಕೆಯಲ್ಲಿ ಉಳಿದವು. ಊರಿನ ಗಡಿಕಲ್ಲಿನಲ್ಲಿಯೂ ಈ ಎರಡು ನಾಮರೂಪಗಳನ್ನು ಕಾಣಬಹುದು. ಮತ್ತೆ ಕೆಲವರು ‘ಹಲ್ಮಿಡಿ’ ಎಂದೂ ಕರೆಯುತ್ತಾರೆ. ಇದೂ ಅಪಭ್ರಂಶಗಳನ್ನೇ ಮುಂದುವರಿಸದೆ ಶಾಸನತಜ್ಞರು ಒಪ್ಪಿ ಬಳಸಿಕೊಂಡು ಬಂದಿರುವ ‘ಹಲ್ಮಿಡಿ’ ನಾಮರೂಪವನ್ನೇ ಈ ಪುಸ್ತಕದಲ್ಲಿಯೂ ಸ್ವೀಕರಿಸಿ ಬಳಸಲಾಗಿದೆ.
ಗ್ರಾಮೀಣ ಜನರಲ್ಲೂ ಈ ಎರಡು ಹೆಸರುಗಳಲ್ಲಿ ಸರಿ ಯಾವುದು ಎಂಬ ಜಿಜ್ಞಾಸೆ ಇತ್ತು. ಹಲ್ಮಿಡಿ ಶಾಸನದ ಪ್ರತಿಕೃತಿ ಮಂಟಪ ನಿರ್ಮಾಣ ಕಾರ್ಯದ ನಿಮಿತ್ತ ಅಲ್ಲಿನ ಶ್ರೀ ಆದರ್ಶ ಯುವಕ ಸಂಘದವರು ನನ್ನಲ್ಲಿ ಚರ್ಚಿಸಿ-ಇನ್ನು ಮುಂದೆ ‘ಹಲ್ಮಿಡಿ’ ನಾಮರೂಪವನ್ನೇ ಸರ್ಕಾರೀ ವ್ಯವಹಾರಗಳಲ್ಲೂ ಬಳಸುವಂತೆ ಸರ್ಕಾರಿ ಕಚೇರಿಗಳಿಗೆ ಮನವಿ ಮಾಡಲು ನಿರ್ಧರಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಕೂಡ ‘ಹಲ್ಮಿಡಿ’ ನಾಮರೂಪವನ್ನೇ ಮಾನ್ಯಮಾಡಿದೆ.
ಭೌಗೋಳಿಕ ಸ್ಥಾನ: ಭೂಗೋಳದಲ್ಲಿ ಹಲ್ಮಿಡಿಯ ಸ್ಥಾನ ೧೩.೨ ಡಿಗ್ರಿ ಉತ್ತರ ಅಕ್ಷಾಂಶ ಮತ್ತು ೭೬.೬೬ ಡಿಗ್ರಿ ಪೂರ್ವ ರೇಖಾಂಶಗಳು ಸಂಧಿಸುವಲ್ಲಿ ಇದೆ. ಈ ಭಾಗವನ್ನು ಇಂದು ನಾವು ಹಾಸನ ಜಿಲ್ಲೆಯ, ಬೇಲೂರು ತಾಲೂಕಿನ ಉತ್ತರ ತುದಿ ಎಂದು ಗುರ್ತಿಸುತ್ತೇವೆ. ಆದರೆ ಪುರಾತನ ಕಾಲದಲ್ಲಿ- ಹಲ್ಮಿಡಿ ಶಾಸನದಲ್ಲಿರುವ ಉಲ್ಲೇಖದಂತೆ ಈ ಭೂಭಾಗವನ್ನು ‘ನರಿದಾವಿಳೆ ನಾಡು’ ಎಂದು ಕರೆಯಲಾಗಿದೆ. ನಂತರದಲ್ಲಿ ಇದು ದಾವಿಳೆ-ದಾವಳಿಗೆ-ದೇವಳಿಗೆ ದೇವಾಳ್ಗೆ ಮುಂತಾಗಿ ರೂಪಭೇದಗಳನ್ನು ಹೊಂದಿರಬೇಕು. ಏಕೆಂದರೆ ಕದಂಬರ ಸಮಕಾಲೀನವಾದ ನೆರೆಯ ಗಂಗ ರಾಜ್ಯದಲ್ಲಿ ಕ್ರಿ.ಶ. ೪೬೦ರ ಮೂರನೇ ಮಾಧವನ ಕಾಲದ ಸಂಸ್ಕೃತ ತಾಮ್ರಶಾಸನದಲ್ಲಿಯೇ ‘ದೇವಳ್ಗೆ’ ವಿಷಯ’ ಎಂಬ ಉಲ್ಲೇಖವಿದೆ.
ಗಂಗರಾಜ ಎರಡನೇ ಬೂತುಗನ ಕ್ರಿ.ಶ. ೯೫೬ರ ಶಾಸನದಲ್ಲಿ ‘ದೇವಳಿಗೆ ಎಪ್ಪತ್ತು’ ಎಂದೂ, ಹೊಯ್ಸಳರ ವಿನಯಾದಿತ್ಯನ ಕಾಲದ ಕ್ರಿ.ಶ. ೧೦೭೪ರ ಶಾಸನದಲ್ಲೂ ‘ದೇವಳಿಗೆ ನಾಡ ಎಳ್ಪತ್ತು’ ಎಂದು ಇರುವ ಉಲ್ಲೇಖನಗಳಿಂದ ಈ ದೇವಳಿಗೆ ಎಂಬ ವಿಭಾಗವು ಎಪ್ಪತ್ತು ಹಳ್ಳಿಗಳ ಸಮುದಾಯವೆಂದು ಊಹಿಸಬಹುದು. ದೇವಳಿಗೆ ನಾಡು ಎಂಬ ಆಡಳಿತ ವಿಭಾಗದ ಉಲ್ಲೇಖನವನ್ನು ವಿಷ್ಣುವರ್ಧನನ ಕ್ರಿ.ಶ. ೧೧೧೭ರ ಬೇಲೂರು ಶಾಸನ ಮತ್ತು ಅವನ ಮೊಮ್ಮಗ ವೀರಬಲ್ಲಾಳನ ಕ್ರಿ.ಶ. ೧೨೦೦ರ ತಾಮ್ರ ಶಾಸನಗಳಲ್ಲಿ ಕಾಣಬಹುದು. ವಿಜಯನಗರದ ಆಡಳಿತ ಕಾಲಕ್ಕೆ ಸೇರಿದ ಕ್ರಿ.ಶ.೧೪೦೪ರ ಅಂಬಳೆಯ ಶಾಸನವು ದೇವಳಿಗೆ ಸೀಮೆಯ ನಿರ್ದಿಷ್ಟ ಸ್ಥಾನ ಸೂಚನೆಯನ್ನು ನೀಡಿದೆ.
“ವೇಲಾಪುರ್ಯಾಃ ಉದಗ್ದಿಶಿ ಕ್ರೋಶದ್ವಯ ಮಿತೇ ದೇಶೇ |
ಸುಖಸಂವಾಸನೋಚಿತೇ ದೇವಳಾಭಿದ ಸೀಮಾಯಾಃ||”
ಎಂಬ ಭಾಗವು ‘ವೇಲಾಪುರ ಅಂದರೆ ಬೇಲೂರು ಪಟ್ಟಣದ ಉತ್ತರ ದಿಕ್ಕಿಗೆ ಎರಡು ಕ್ರೋಶಗಳಷ್ಟು ದೂರದಲ್ಲಿ ಜನವಸತಿಗೆ ಅತ್ಯಂತ ಯೋಗ್ಯವಾದ ದೇವಳ ಎಂಬ ಹೆಸರಿನ ಸೀಮೆಯಲ್ಲಿ...’ ಎಂದರ್ಥ ಕೊಡುತ್ತದೆ. ಹಲ್ಮಿಡಿ ಶಾಸನದ ನರಿದಾವಿಳೆ ನಾಡು ಎಂಬ ವಿಭಾಗದ ಜಾಗವು ಇದೇ ಆಗಿದೆ.
ಈ ದೇವಳಿಗೆ ನಾಡಿನಲ್ಲೇ ಹಲ್ಮಿಡಿ ಗ್ರಾಮವು ಇತ್ತು ಎಂಬುದಕ್ಕೆ ಇನ್ನೊಂದು ಖಚಿತ ಪುರಾವೆಯಾಗಿ ಕೃಷ್ಣದೇವರಾಯನ ಆಳ್ವಿಕೆಯ ಕಾಲದ ಕ್ರಿ.ಶ. ೧೫೨೪ರ ಶಿಲಾಶಾಸನವನ್ನು ಉದಾರಿಸಬಹುದು. ಬೇಲೂರಿನ ದೊಡ್ಡಕೆರೆಯಾದ ವಿಷ್ಣು ಸಮುದ್ರದ ಉತ್ತರ ಭಾಗವನ್ನು ಪುಷ್ಕರಣಿಯಾಗಿ ರೂಪಿಸಿದ ಬಗ್ಗೆ ಹಾಕಿಸಿದ ಈ ಶಾಸನದಲ್ಲಿ ಕೃಷ್ಣದೇವಮಹಾರಾಯರು ನಾಯಕತನಕ್ಕೆ ಪಾಲಿಸಿದ ವಸ್ತಾರೆಯ ಸೀಮೆಗೆ ಸಲ್ಲುವ ದೇವಣಿಗೆಯ ನಾಡೋಗಳಗಣ ನಾರಾಯಣಪುರ ಗ್ರಾಮವೊಂದು ಹಲುಮಿಡಿಯ ಗ್ರಾಮ ೧-ಉಭಯ ಗ್ರಾಮಕ್ಕೆ ಸಲುವ ಗದ್ದೆ, ಬೆದ್ದಲು, ತೋಟತುಡಿಕೆ ಎಂಬ ಸಾಲುಗಳಿಂದ ಹಲ್ಮಿಡಿ ಮತ್ತು ಅದರ ಪಕ್ಕದ ನಾರಾಯಣಪುರ ಗ್ರಾಮಗಳು ದೇವಳಿಗೆ ನಾಡಿಗೆ ಸೇರಿದ್ದವೆಂಬುದು ಖಚಿತವಾಗಿದೆ. ಆದುದರಿಂದ ನರಿದಾವಿಳೆ ನಾಡು ಮತ್ತು ದೇವಳಿಗೆ ನಾಡು ಈ ಎರಡೂ ಸಹ ಒಂದೇ ಎಂದು ಖಚಿತವಾಗಿ ತೀರ್ಮಾನಿಸಬಹುದು.
ಮತ್ತೊಂದು ಕುತೂಹಲಕರ ವಿಷಯವೆಂದರೆ ದೇವಳಿಗೆ ನಾಡನ್ನು ವಸ್ತಾರೆ ಸೀಮೆಗೆ ಸೇರಿದುದೆಂದು ಈ ಬೇಲೂರು ಶಾಸನದಲ್ಲಿ ಹೇಳಲಾಗಿದೆ. ಅಂದರೆ, ವಿಜಯನಗರದ ಆಡಳಿತ ಕಾಲದಲ್ಲಿ ಈ ಭೂಭಾಗವು ವಸ್ತಾರೆ ಸೀಮೆಗೆ ಸೇರಿತ್ತೆಂದು ತಿಳಿಯುತ್ತದೆ. ಆದರೆ ಕದಂಬರ ಕಾಲದ ಕ್ರಿ.ಶ. ೫೨೦ ಸುಮಾರಿನ ಇಮ್ಮಡಿ ಕೃಷ್ಣವರ್ಮನ ತಾಮ್ರಶಾಸನದ ಮೂರನೇ ಪುಟದಲ್ಲಿ ಸೇನ್ದ್ರಕ ವಿಷಯಾಂತರ್ಗತ ಪಲ್ಮಿಡಿ ಗ್ರಾಮೇ... ಎಂದಿದೆ. ಇದಲ್ಲದೆ. ಕ್ರಿ.ಶ. ೪೬೦ರ ಗಂಗವಂಶದ ಮೂರನೇ ಮಾಧವನ ಆಳ್ವಿಕೆಯ ತಾಮ್ರ ಶಾಸನದಲ್ಲಿ ದೇವಾಳ್ಗೆವಿಷಯ ಎಂದಿದೆ. ವಿಷಯ ಎಂಬುದು ಅನೇಕ ಸೀಮೆಗಳನ್ನೊಳಗೊಂಡ ಭೂಭಾಗ ಆದುದರಿಂದ ದೇವಳಿಗೆ ಎಂಬ ಆಡಳಿತ ವಿಭಾಗವು ಒಮ್ಮೆ ಒಂದು ಪ್ರಾಂತ್ಯವಾಗಿತ್ತು. ನಂತರ ಒಮ್ಮೆ ಸೇಂದ್ರಕ ಪ್ರಾಂತ್ಯಕ್ಕೂ ಮತ್ತೊಮ್ಮೆ ವಸ್ತಾರೆ ಪ್ರಾಂತ್ಯಕ್ಕೂ ಸೇರಿದ ಭಾಗವಾಯಿತು ಎಂದು ಊಹಿಸಬಹುದು. ದೇವಳಿಗೆ ನಾಡು ಒಂದೂವರೆ ಸಾವಿರ ವರ್ಷಗಳ ಅವಧಿಯಲ್ಲಿ ಅನೇಕ ಆಡಳಿತಾತ್ಮಕ ಬದಲಾವಣೆಯನ್ನು ಕಂಡಿದೆಯಾದರೂ ಹಲ್ಮಿಡಿ ಗ್ರಾಮವು ಮಾತ್ರ ದೇವಳಿಗೆ ನಾಡಿನಲ್ಲಿಯೇ ಇದೆ.
ಕದಂಬ ರಾಜ್ಯದ ದಕ್ಷಿಣ ತುದಿಯ ಒಂದು ಪ್ರಾಂತ್ಯವಾಗಿದ್ದ ಈ ದೇವಳಿಗೆ ವಿಭಾಗವು ಎಪ್ಪತ್ತು ಹಳ್ಳಿಗಳನ್ನು ಒಳಗೊಂಡಿತ್ತು. ಶಾಸನಗಳು ಇದನ್ನು "ದೇವಾಳ್ಗೆಎಛ್ವಿ(ಳ್ವ)ತ್ತು" ಎಂದೇ ಕೆರೆದಿವೆ. ಹಲ್ಮಿಡಿ, ನಾರಾಯಣಪುರ, ಮುಗುಳುವಳ್ಳಿ, ಸೋಮಶೆಟ್ಟಿಹಳ್ಳಿ, ಮರ್ಲೆ, ಚಿಕ್ಕಮಗಳೂರು, ಬಸವನಹಳ್ಳಿ, ಅಂಬಳೆ, ಹಿರೇಮಗಳೂರು ಮತ್ತು ಇವುಗಳ ಅಕ್ಕಪಕ್ಕದ ಊರುಗಳೇ ಈ ಎಪ್ಪತ್ತು ಹಳ್ಳಿಗಳಾಗಿದ್ದವು ಎಂಬ ಅಂಶವು ಶಾಸನಗಳ ಸೂಕ್ಷ್ಮ ಅಧ್ಯಯನದಿಂದ ತಿಳಿಯುತ್ತದೆ. ಒಟ್ಟಿನಲ್ಲಿ ಇಂದಿನ ಬೇಲೂರು ತಾಲೂಕಿನ ಉತ್ತರಭಾಗ ಮತ್ತು ಚಿಕ್ಕಮಗಳೂರು ತಾಲೂಕಿನ ದಕ್ಷಿಣಭಾಗಗಳು ಸೇರಿ ದೇವಳಿಗೆ ನಾಡು ರೂಪಿತವಾಗಿತ್ತು. ಈ ದೇವಳಿಗೆ ನಾಡೇ ಹಲ್ಮಿಡಿ ಶಾಸನದ ‘ನರಿದಾವಿಳೆ ನಾಡು’ ಎಂದು ಊಹಿಸಬಹುದು.
ಈ ನರಿದಾವಿಳೆ ನಾಡಿನ ದಕ್ಷಿಣ ತುದಿಯಲ್ಲಿ ನಾರಾಯಣಪುರ ಮತ್ತು ಮುಗುಳುವಳ್ಳಿಗಳ ನಡುವೆ ಹಲ್ಮಿಡಿ ಗ್ರಾಮವಿದೆ. ಶಿಲಾಯುಗದ ಕಾಲದಿಂದಲೂ ನೀರಿನಾಸೆಯ ಅಂದರೆ ನದಿ-ಹಳ್ಳಗಳ ತೀರದಲ್ಲಿ ನಾಗರೀಕ ವಸತಿಗಳು ಅರಳುತ್ತಾ ಬಂದಿವೆಯಷ್ಟೇ. ಬೇಲೂರು ತಾಲೂಕಿಗೆ ಯಗಚಿ ನದಿಯು ಜೀವನದಿಯಾಗಿದೆ. ಇದರ ದಡದಲ್ಲಿ ಶಿಲಾಯುಗದ ಕಾಲದಿಂದಲೇ ಜನವಸತಿ ಇದ್ದು ನಾಗರೀಕತೆ ರೂಪುಗೊಳ್ಳುತ್ತಾ ಬಂದಿದೆ. ಈ ಯಗಚೀ ನದಿಗೆ ಸೇರುವ ಹಳ್ಳವಾದ ‘ಬೆನಕನಗಳ್ಳದ ದಡದಲ್ಲಿ ಈ ಹಲ್ಮಿಡಿಗ್ರಾಮ ಹುಟ್ಟಿ ಬೆಳದಿದೆ. ಬಹುಶ: ಬೃಹತ್ ಶಿಲಾಯುಗದ ಅವಧಿಯಿಂದಲೇ ಇಲ್ಲಿ ಜನರು ವಾಸಿಸಲು ಆರಂಭಿಸಿದ್ದು, ಇಲ್ಲಿಗೆ ಒಂದೂವರೆ ಸಾವಿರ ವರ್ಷಗಳಿಗೂ ಮೊದಲೇ ಹಲ್ಮಿಡಿಯು ಒಂದು ಬಲಿಷ್ಠ ಗ್ರಾಮವಾಗಿ ನಿಂತಿತ್ತು. ಕದಂಬರ ಆಳ್ವಿಕೆಯ ಕಾಲದಲ್ಲೇ ಒಂದು ಮಣ್ಣಿನ ಕೋಟೆಯೂ ಇತ್ತೆಂದು ಕಾಣುತ್ತದೆ. ಊರಿನ ಸುತ್ತಲೂ ಆಳವಾದ ಕಂದಕ ತೋಡಿ ಆ ಮಣ್ಣನ್ನು ಒಳ ಅಂಚಿಗೆ ಗೋಡೆಯಂತೆ ಸುರಿದು ಕೋಟೆಯನ್ನು ಕಟ್ಟುವ ಪುರಾತನ ತಂತ್ರವನ್ನು ಇಲ್ಲಿ ಬಳಸಲಾಗಿದೆ.
ಈ ಕೋಟೆಗೆ ಕನಿಷ್ಠ ಎರಡು ದ್ವಾರಗಳಾದರೂ ಇದ್ದವು.
ಒಂದು ಪೂರ್ವಕ್ಕೆ ಇನ್ನೊಂದು ಪಶ್ಚಿಮಕ್ಕೆ. ಇನ್ನೂ ಎರಡು ದ್ವಾರಗಳ ಸಾಧ್ಯತೆಯೂ ಕಂಡುಬರುತ್ತದೆ. ಪೂರ್ವದ ಮಹಾದ್ವಾರವು ಬಹುಶ: ನಂತರದಲ್ಲಿ ಪುನರ್ನವೀಕರಿಸಲ್ಪಟ್ಟಿದ್ದು, ಅದರ ಭಾಗಗಳು ಇಂದೂ ಇವೆ. ಇನ್ನುಳಿದ ದ್ವಾರಗಳು ಪೂರ್ಣವಾಗಿ ನಾಶವಾಗಿವೆ. ಕೋಟೆಯ ಮಣ್ಣು ಕೂಡಾ ಕುಸಿದು, ಕಂದಕವು ಮುಚ್ಚಿಕೊಂಡು. ಗುರುತು ಸಿಕ್ಕದಂತಾಗಿದೆ. ಪ್ರಯತ್ನಿಸಿದರೆ ಕೋಟೆ-ಕಂದಕಗಳನ್ನು ಗುರ್ತಿಸಬಹುದು. ಕೋಟೆಯ ಪಶ್ಚಿಮ ಭಾಗದ ಅವಶೇಷವು ದಿಣ್ಣೆಯಂತಾಗಿದೆ. (ಅಲ್ಲೊಂದೆಡೆ ಒಂದು ಪ್ರತಿಮೆಯೂ ಇದ್ದು ಇಂದು ಅದನ್ನು ‘ಬೊಮ್ಮೇಶ್ವರ’ ಎಂಬ ಹೆಸರಿನಿಂದ ಪೂಜಿಸುತ್ತಾರಾದರೂ ಇದು ಯಾರೋ ರಾಜದಂಪತಿ ಅಥವ ನಾಯಕ ದಂಪತಿಗಳದ್ದಾಗಿರುವಂತಿದೆ)
ಕದಂಬರ ಕಾಲಕ್ಕಾಗಲೇ ವ್ಯವಸ್ಥಿತ ರೂಪವನ್ನು ಹೊಂದಿದ್ದ ಈ ಊರಿಗೆ ಒಳ್ಳೆಯ ಕೆರೆಯೂ, ಆ ಕೆರೆಯ ನೀರಾವರಿಯಿಂದ ಬೆಳೆ ಬೆಳೆಯುವ ಗದ್ದೆಗಳ ಸಮೂಹವೂ ಇತ್ತು ಎಂಬುದು ಹಲ್ಮಿಡಿ ಶಾಸನದಿಂದಲೇ ಸ್ಪಷ್ಟವಾಗಿದೆ. ಈ ಊರು ಆಗಲೇ ಜನರ ಸುಖ ಜೀವನಕ್ಕೆ ಅಗತ್ಯವಾದ ಗ್ರಾಮೀಣ ಸವಲತ್ತುಗಳನ್ನು ಹೊಂದಿದ್ದು ಈ ಸಮೃದ್ಧ ಗ್ರಾಮದಲ್ಲಿ ತೋಟ=ತುಡಿಕೆಗಳಿದ್ದವು. ಅಂತೆಯೇ ಕಂದಾಯ ವಸೂಲಿಯೂ ಆಗುತ್ತಿತ್ತು ಎಂಬುದನ್ನೂ ಅನೇಕ ಶಾಸನಗಳಿಂದ ತಿಳಿಯಬಹುದು. ಅಂತೂ ಹಾಸನ ಜಿಲ್ಲೆಯ ಪುರಾತನ ಜನವಸತಿಗಳಲ್ಲಿ ಹಲ್ಮಿಡಿಗ್ರಾಮವೂ ಒಂದು. ಇದು ಪುಟ್ಟಗ್ರಾಮವಾದರೂ ಈ ನೆಲದಿಂದ ಕನ್ನಡ ನಾಡಿನ ವಾಙ್ಮಯ ಇತಿಹಾಸ, ಭಾಷೆ, ಲಿಪಿ, ಸಂಸ್ಕೃತಿ, ಜನಜೀವನ ಮುಂತಾಗಿ ನಾನಾ ರಂಗಗಳಿಗೆ ಪ್ರಥಮ ಲಿಖಿತ ದಾಖಲೆ ಎನಿಸುವಂತಹ ಶಾಸನವೊಂದು ನಮಗೆ ಉಡುಗೊರೆಯಾಗಿ ದೊರೆತಿದೆ.


ಡಾ.ಶ್ರೀವತ್ಸ ಎಸ್.ವಟಿ

ಆಚಾರ್ಯರು ಮತ್ತು ಋಷಿಗಳು

ಡಾ.ಯು.ಆರ್.ಅನಂತಮೂರ್ತಿ

ದೆಹಲಿ ವಿಶ್ವವಿದ್ಯಾಲಯದ ಕುಲಪತಿಯಾಗಿ ಎದ್ದು ಕಾಣುವಂಥ ಕೆಲಸ ಮಾಡಿರುವ ದೀಪಕ್ ನಯ್ಯರ್ ಇನ್ನು ಎರಡು ವರ್ಷ ಈ ಸ್ಥಾನದಲ್ಲಿರುತ್ತಾರೆ. ಇಂಥ ನಯ್ಯರ್ ನನಗೆ ಫೋನ್ ಮಾಡಿ, ತಮ್ಮ ವಿಶ್ವವಿದ್ಯಾಲಯದ ಘಟಿಕೋತ್ಸವ ಭಾಷಣ ಮಾಡಬೇಕೆಂದು ನನ್ನನ್ನು ಕೇಳಿದಾಗ ನಾನು ಒಂದಿಷ್ಟು ಉಬ್ಬಿಹೋದೆ. ಈ ಹಿಂದೆ ಹಲವರು ಇಲ್ಲಿ ಚಿಂತನಪೂರ್ಣವಾಗಿ ಮತ್ತು ವೈಯಕ್ತಿಕ ಭಾವನೆಗಳೊಂದಿಗೆ ಮಾಡಿರುವ ಘಟಿಕೋತ್ಸವ ಭಾಷಣಗಳನ್ನು ಓದಿದಾಗಲೂ ನನಗೆ ಆಗಿದ್ದು ಇದೇ ಅನುಭವ. ಹೀಗೆ ಇಲ್ಲಿ ಬಂದು ಅಂಥ ಭಾಷಣ ಮಾಡಿರುವವರಲ್ಲಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಒಬ್ಬರು. ಈಗ ರಾಷ್ಟ್ರಪತಿಯಾಗಿರುವ ಅವರು ವಿಜ್ಞಾನದ ಪ್ರತಿಪಾದಕ ಮತ್ತು ಬಹುದೊಡ್ಡ ಕನಸುಗಾರ. ಜತೆಗೆ ನಮ್ಮೆಲ್ಲರ ಗೌರವಕ್ಕೂ, ಪ್ರೀತಿಗೂ ಪಾತ್ರರಾಗಿರುವವರು. ಆಮೇಲೆ ತಮ್ಮ ಧೈರ್ಯ ಮತ್ತು ಸ್ವೋಪಜ್ಞ ಒಳನೋಟಗಳಿಗೆ ಹೆಸರಾಗಿರುವ ಇತಿಹಾಸಜ್ಞೆ ರೋಮಿಲಾ ಥಾಪರ್ ಇಲ್ಲಿ ಮಾತನಾಡಿದ್ದಾರೆ. ಗ್ರಾಮೀಣ ಭಾರತದ ನಿಜವಾದ ಹೀರೋ ಆಗಿರುವ ಶ್ರೀ ವರ್ಗೀಸ್ ಕುರಿಯನ್, ಲಂಡನ್ನಿನ ರಾಯಲ್ ಸೊಸೈಟಿಯ ಫೆಲೋ ಆಗಿರುವ ಡಾ. ಮಷೇಲ್ಕರ್ ಕೂಡ ಇಲ್ಲಿ ಘಟಿಕೋತ್ಸವ ಭಾಷಣ ಮಾಡಿದ್ದಾರೆ. ಏಕಕಾಲಕ್ಕೆ ಔಪಚಾರಿಕವಾಗಿಯೂ ಮತ್ತು ವೈಯಕ್ತಿಕವಾಗಿ ದೃಢವಾಗಿಯೂ ಮಾತನಾಡುವುದು ಸುಲಭವೇನಲ್ಲ. ಹೀಗಾಗಿ ಈ ಹಿಂದೆ ಇಲ್ಲಿ ಬಂದು ಮಾತನಾಡಿದವರೆಲ್ಲ ತಮ್ಮನ್ನು ತಾವು ನೈತಿಕವಾಗಿಯೂ ಬೌದ್ಧಿಕವಾಗಿಯೂ ತೊಡಗಿಸಿಕೊಂಡು ಮಾತನಾಡುವುದೇ ಒಳ್ಳೆಯದೆಂದು ಯೋಚಿಸಿರುವಂತಿದೆ. ನಿಜವಾಗಿಯೂ ಇದು ದೆಹಲಿ ವಿಶ್ವವಿದ್ಯಾಲಯಕ್ಕಿರುವ ಪ್ರಾಮುಖ್ಯಕ್ಕೆ ಸಲ್ಲಿಸಿದ ಗೌರವ.
ನಮ್ಮಲ್ಲಿ ಎರಡು ಪದಗಳಿವೆ, ಒಂದು ಆಚಾರ್ಯ, ಇನ್ನೊಂದು ಋಷಿ. ‘ಆಚಾರ್ಯ ಎಂದರೆ ತಾನು ಆಯ್ಕೆ ಮಾಡಿಕೊಂಡ ಕ್ಷೇತ್ರದಲ್ಲಿ ಪರಿಣತಿ ಗಳಿಸಿದ ವ್ಯಕ್ತಿ. ಇಂಥ ಪರಿಣತಿಯನ್ನು ಗಳಿಸಿ, ನೀವು ‘ಆಚಾರ್ಯರಾಗಲು ಬೇಕಾದ ಪ್ರಾಣವಾಯುವನ್ನು ನಿಮ್ಮ ವಿಶ್ವವಿದ್ಯಾಲಯದಂಥ ಶ್ರೇಷ್ಠ ಸಂಸ್ಥೆಗಳು ಒದಗಿಸುತ್ತವೆ. ಆದರೆ ಒಳ್ಳೆಯ ಸಂಸ್ಥೆಗಳು ನಿಮ್ಮನ್ನು ಕೇವಲ ‘ಆಚಾರ್ಯರನ್ನಾಗಿ ಮಾತ್ರ ಮಾಡುತ್ತವೆ. ಅಂದಮಾತ್ರಕ್ಕೆ ಇದೇನೂ ಸಣ್ಣ ಸಾಧನೆಯಲ್ಲ. ಒಟ್ಟಿನಲ್ಲಿ ಇಂಥ ಕಡೆ ಈ ಜಗತ್ತಿನಲ್ಲಿ ಈಗಾಗಲೇ ಗೊತ್ತಿರುವುದರ ಬಗ್ಗೆ ನೀವೊಂದು ಪ್ರಭುತ್ವ ಸಂಪಾದಿಸಿಕೊಳ್ಳುತ್ತೀರಿ. ಆದರೆ ನಮ್ಮ ಬದುಕು ಮತ್ತು ನಮ್ಮ ಸುತ್ತಲಿನ ಜಗತ್ತು ಒಡ್ಡುವ ಸವಾಲುಗಳು ಹೇಗಿವೆಯೆಂದರೆ, ಈಗಾಗಲೇ ಗೊತ್ತಿರುವುದನ್ನು ಪ್ರಶ್ನಿಸಿ ಅದರಾಚೆಗೂ ಹೋಗುವಂಥ ಕೆಲವು ಕ್ರಿಯಾಶೀಲ ಮನಸ್ಸುಗಳನ್ನು ನಾವು ಸೃಷ್ಟಿಸಬೇಕಾಗದ ಅನಿವಾರ್ಯತೆ ಎದುರಾಗಿಬಿಡುತ್ತದೆ. ಹೀಗೆ ಸೃಷ್ಟಿಯಾಗುವವರೇ ‘ಋಷಿಗಳು. ಹೀಗಾಗಿ ನಮಗೆ ಇಷ್ಟವಾದ ಕ್ಷೇತ್ರಗಳಲ್ಲಿ, ಅದು ವಿಜ್ಞಾನವೇ ಇರಲಿ, ಮಾನವಿಕ ವಿಷಯವೇ ಇರಲಿ ಆಚಾರ್ಯರಾಗಲು ಹೆಣಗುತ್ತಿರುವ ನಮ್ಮೆಲ್ಲರ ಅಂತರಂಗದಲ್ಲಿ ಋಷಿ ಪ್ರಣೀತವಾದ ಹೊಸ ಸಾಹಸಗಳಿಗೂ ಜಾಗವಿರಲಿ ಎಂದು ಪ್ರಾರ್ಥಿಸೋಣ.
ನಾನು ಈಗ ಹೇಳಿದ್ದು ಹಳೆಯ ಕಾಲವನ್ನು ನೆನೆದು ಹಲುಬುತ್ತಿರುವಂಥ/ಹಳಹಳಿಸುತ್ತಿರುವಂಥ ಕ್ಲೀಷೆ ಅನಿಸಬಹುದು. ಆದರೆ, ಭಾರತೀಯ ಭಾಷೆಗಳಲ್ಲಿ ಒಂದಾದ ಕನ್ನಡದ ಲೇಖಕನಾಗಿ ನಮ್ಮ ಬದುಕು ಮತ್ತು ಸಾಧನೆಗೆ ಆಧಾರವಾಗಿದ್ದ ಕೆಲವು ಸರಳ-ಆದರೆ ಅಗಾಧ ವಿಚಾರವುಳ್ಳ-ಕೆಲವು ಚಿಂತನೆಗಳನ್ನು ಮತ್ತೆ ನಾವು ನೆಚ್ಚಿಕೊಳ್ಳಬೇಕಾಗಿದೆ ಎಂದು ನನ್ನೊಳಗೆ ತೀವ್ರವಾಗಿ ಅನಿಸಿದೆ.
ಜಾಗತೀಕರಣದ ಫಲವಾಗಿ ಇಂಥದೊಂದು ದೊಡ್ಡ ಪರಿವರ್ತನೆ ನಮ್ಮ ತರುಣರ ಮನಸ್ಥಿತಿಯಲ್ಲಿ ಸಂಭವಿಸುತ್ತಿದೆ. ಈ ಪರಿವರ್ತನೆ ನನ್ನ ತಲೆಮಾರಿನ ವ್ಯಕ್ತಿಯೊಬ್ಬನಲ್ಲಿ ಭವಿಷ್ಯದ ಆಶಾಕಿರಣದಂತೆ ಕಾಣಬಹುದು. ಹಾಗೆಯೇ ಇದರಿಂದ ನಾವು ಏನೇನೆಲ್ಲಾ ಕಳೆದುಕೊಳ್ಳಲಿದ್ದೇವೆ ಎಂಬ ಆತಂಕವನ್ನು ಹುಟ್ಟಿಸಬಹುದು. ಹೀಗಾಗಿ ನಮ್ಮ ಪೂರ್ವಜರಲ್ಲಿ ಯಾವ್ಯಾವ ಒಳ್ಳೆಯ ಅಂಶಗಳಿದ್ದವು ಎಂಬುದನ್ನು ನಮಗೆ ನಾವೇ ನೆನಪಿಸಿಕೊಳ್ಳುವ ಜರೂರಿದೆ ಎಂಬುದು ನನ್ನ ಭಾವನೆ.
ನಾನು ಒಕ್ಕಲುತನವನ್ನೇ ನೆಚ್ಚಿಕೊಂಡಿದ್ದ ಹಳ್ಳಿಯಲ್ಲಿ ಬೆಳೆದೆ. ನಂತರ ಸಣ್ಣಪುಟ್ಟ ಪಟ್ಟಣಗಳಲ್ಲಿ ಓದುತ್ತ, ಕೊನೆಗೆ ನನ್ನ ಸ್ನಾತಕೋತ್ತರ ಅಧ್ಯಯನಕ್ಕಾಗಿ ಇಂಗ್ಲೆಂಡಿಗೆ ಹೋದೆ. ಬೇರೆಬೇರೆ ಪ್ರದೇಶಗಳಲ್ಲಿ ಬದುಕಿದ ಫಲವಾಗಿ ಸಂಕೀರ್ಣವಾದ ಅನುಭವಗಳನ್ನು ಪಡೆದೆ. ಇಂಥ ಅನುಭವವನ್ನು ಪಡೆಯಲು ಇವತ್ತು ಯುರೋಪಿಯನ್ ಒಬ್ಬನಿಗೆ ಅನೇಕ ಶತಮಾನಗಳು ಬೇಕು. ಯುರೋಪಿನಲ್ಲಿ ಮಧ್ಯಯುಗೀನ ಕೈಗಾರಿಕಾ ಪೂರ್ವ ಮತ್ತು ಕೈಗಾರಿಕಾಯುಗ ಎಂದೆಲ್ಲಾ ಕರೆಯುವ ಅನೇಕ ಶತಮಾನಗಳು ನನ್ನ ಪ್ರಕಾರ ಜತೆಜತೆಯಲ್ಲೇ ಅಸ್ತಿತ್ವದಲ್ಲಿವೆ. ಜತೆಗೆ
ಒಂದು ವೌಲ್ಯ ವ್ಯವಸ್ಥೆಯಾಗಿ ಇವುಗಳ ನಡುವೆ ಪರಸ್ಪರ ತಿಕ್ಕಾಟವೂ ಇದೆ. ಅನೇಕ ಶತಮಾನಗಳ ಈ ಸಹ ಅಸ್ತಿತ್ವವನ್ನು ನಾನು ನನ್ನ ಸಾಹಿತ್ಯದಲ್ಲಿ/ಬರಹಗಳಲ್ಲಿ ಹಿಡಿದಿಡಲು ಯತ್ನಿಸಿದಾಗಲೆಲ್ಲಾ ಅದು ನನಗೆ ನನ್ನೊಂದಿನ ಜಗಳವಾಗಿಯೇ ಕಂಡಿದೆ. ಭಾರತದ ಹಲವು ಲೇಖಕರ ಪಾಲಿಗೆ ಇದು ಸತ್ಯ. ಭಾರತೀಯ ಸಾಹಿತ್ಯ ದಕ್ಕಿಸಿಕೊಂಡಿರುವ ಅದ್ವಿತೀಯತೆ ನಮ್ಮೊಂದಿಗೆ ನಾವೇ ಆಡಿಕೊಳ್ಳುತ್ತಿರುವ ಇಂಥ ಅರ್ಥಪೂರ್ಣ ಜಗಳಗಳ ಫಲ.
ಇದೇನೇ ಇರಲಿ ಒಂದು ಪುರಾತನ ನಾಗರಿಕತೆಯನ್ನು ಆಧುನೀಕರಣಗೊಳಿಸುವ ಪ್ರಕ್ರಿಯೆಯಲ್ಲಿ ಹುಟ್ಟುವ ಸಂಕೀರ್ಣ ವೈರುಧ್ಯಗಳನ್ನು ಪರಿಹರಿಸಿಕೊಳ್ಳಲು/ಗೆಲ್ಲಲು ಯಾವ್ಯಾವ ಚಿಂತನೆಗಳು ನಮಗೆ ಸ್ಫೂರ್ತಿ ಹುಟ್ಟಿಸುತ್ತವೆ, ಸಹಾಯಕವಾಗುತ್ತವೆ ಎಂಬುದನ್ನು ನಾವೀಗ ನೋಡೋಣ.
ನಾನು ದೊಡ್ಡವನಾಗುತ್ತಾ, ಬರಹಗಾರನಾಗುತ್ತಾ ಬರುತ್ತಿದ್ದಂತೆ ನನ್ನನ್ನು ಮೂರು ಒಲವುಗಳು-ನಾನು ಇವನ್ನು ಹಸಿವುಗಳು ಎಂದೇ ಕರೆಯಲು ಇಷ್ಟಪಡುತ್ತೇನೆ. ತೀವ್ರವಾಗಿ ಕಾಡಿದವು. ಈ ಹಸಿವುಗಳನ್ನು ನಾನು ನನ್ನ ಪೂರ್ವಸೂರಿಗಳಿಗೆ ತೋರಿದ ಸ್ಪಂದನ/ಪ್ರತಿಕ್ರಿಯೆ ಎಂದೇ ಗುರುತಿಸುತ್ತೇನೆ. ಏಕೆಂದರೆ ಈ ಹಸಿವುಗಳೇ ನನ್ನ ಪೂರ್ವಸೂರಿಗಳ ಕೃತಿ ಮತ್ತು ಬದುಕುಗಳನ್ನು ಆಯಾಯ ಕಾಲಘಟ್ಟಕ್ಕೆ ತಕ್ಕಂತೆ ರೂಪಿಸಿದ ಅಂಶಗಳಾಗಿವೆ. ಈ ಹಸಿವುಗಳ ಪೈಕಿ ಮೊದಲನೆಯದು, ಸಮಾನತೆಯ ಹಸಿವು. ಎರಡನೆಯದು, ತೀರ ಸಂಕುಚಿತವಾದ ಧಾರ್ಮಿಕ ಆಚರಣೆಗಳನ್ನು ಮೀರಿ, ವಿಶ್ವಾತ್ಮಕವಾದ ಅಧ್ಯಾತ್ಮಿಕ ನೆಲೆಯಲ್ಲಿ ದಿವ್ಯ ಶಕ್ತಿಯನ್ನು ಕಲ್ಪಿಸಿಕೊಳ್ಳುವುದು. ಮೂರನೆಯದೆಂದರೆ, ವಿರೋಧಾಭಾಸದಂತೆ ಕಾಣುವ ಆಧುನಿಕತೆಯ ಹಸಿವು. ವಿರೋಧಾಭಾಸ ಏಕೆಂದರೆ, ಆಧುನಿಕತೆ ಎಂದರೆ ಗಾಂಧೀಜಿ ಹೇಳಿದಂತೆ ಅದು ಇಂಗ್ಲೀಷ್ ವಿದ್ಯಾಭ್ಯಾಸ ಮತ್ತು ಕೆಲವೆಡೆಗಳಲ್ಲಿ ಆಧುನಿಕ ಪಾಶ್ಚತ್ಯ ನಾಗರಿಕತೆಯ ಸೆಳೆತ. ಆದರೆ, ಈ ಸಮಾನತೆಯ ಹಸಿವು ಇಲ್ಲಿ ತಳಹದಿಯಂತೆ ಇದ್ದುದರಿಂದ ಮೂರು ಹಸಿವುಗಳು ತುಂಬಾ ಮೋಹಕವಾಗಿಯೂ ಸೃಜನಶೀಲವಾಗಿಯೂ ಆಗಿಬಿಟ್ಟವು. ಸಮಾನತೆಯ ಹಸಿವಂತೂ ಅನೇಕ ರೂಪಗಳಲ್ಲಿ ಕವಲೊಡೆಯಿತು. ಉದಾಹರಣೆಗೆ ಗಾಂಧೀಜಿ ನಿರ್ವಸಾಹತಿಕರಣಕ್ಕಾಗಿ ನಡೆಸಿದ ಹೋರಾಟ, ಅಸ್ಪೃಶ್ಯತೆಯ ಕಲ್ಪನೆಯಿಂದ ನಾವು ಮುಕ್ತಾರಾಗುವುದು, ಜಾತೀಯ ತಾರತಮ್ಯ ಕೊನೆಗಾಣಿಸುವುದು... ಹೀಗೆ.
ನಮ್ಮ ಪುರಾತನ ಸಂಪ್ರಾದಾಯವನ್ನು ವಿಮರ್ಶೆಯ ಮೂಸೆಗೆ ಒಡ್ಡಿ, ನೋಡಬೇಕು ಎಂದರೆ ಇದೇ ಗಾಂಧೀಜಿ ಅನುಸರಿಸಿದ ಈ ಕ್ರಮ ನಮಗೆ ಹೊಸದೇನೂ ಅಲ್ಲ. ಏಕೆಂದರೆ ಬುದ್ಧನ ಅನಂತರ ಬಂದ ನಮ್ಮ ಕ್ರಿಟಿಕಲ್ ಇನ್‌ಸೈಡರ‍್ಸ್ ಆಗಿದ್ದ ಬಸವಣ್ಣ, ಕಬೀರ್, ಗುರುನಾನಕ್, ಜ್ಞಾನದೇವ, ತುಕರಾಂ ಮತ್ತಿತರ ಸಂತ ಕವಿಗಳು ಮಾಡಿರುವುದು ಇದನ್ನೇ. ಹೀಗಾಗಿ ಬಹುದೊಡ್ಡ ವ್ಯಕ್ತಿಯಾದ ಗಾಂಧೀಜಿಗೆ ಇದು ಭೂತಕಾಲದೊಂದಿಗಿನ ನಮ್ಮ ಸಂಬಂಧವನ್ನು ಸಂಪೂರ್ಣವಾಗಿ ಕಡಿದುಕೊಳ್ಳುತ್ತಿರುವಂತೆ ಇದು ಕಾಣಲಿಲ್ಲ. ಬದಲಿಗೆ ಕಾಲದ ಪರೀಕ್ಷೆಯಲ್ಲಿ ಗೆದ್ದ ನಮ್ಮ ಸಂಪ್ರದಾಯವನ್ನು ಮತ್ತೊಮ್ಮೆ ವಿಮರ್ಶಾತ್ಮಕವಾಗಿ ನೋಡುವುದು ಅವರಿಗೆ ಮುಖ್ಯವೆನಿಸಿತು.
ಸಮಾನತೆಯ ಹಸಿವು ನಮ್ಮಲ್ಲಿ ಸ್ವಾತಂತ್ರ್ಯದ ಹೋರಾಟ ಕಿಚ್ಚು ಹಚ್ಚಿತು ಎನ್ನುವುದೇ ನಿಜ. ಆದರೆ, ಅದು ಕೇವಲ ನಮ್ಮನ್ನು ಮಾತ್ರ ಬ್ರಿಟೀಷರ ಆಡಳಿತದಿಂದ ಮುಕ್ತಗೊಳಿಸುವ ಗುರಿ ಹೊಂದಿರಲಿಲ್ಲ. ಈ ಗುರಿಯ ಜತೆಜತೆಗೇ ಗಾಂಧೀಜಿ ನಂಬಿದಂತೆ ಬ್ರಿಟೀಷರು ನಂಬಿಕೊಂಡಿದ್ದ ಆಧುನಿಕ ನಾಗರಿಕತೆ ಎಂಬ ಭ್ರಮೆಯಿಂದ ಹೊರಬರುವಂತೆ ಮಾಡುವ ಗುರಿಯೂ ಅಲ್ಲಿತ್ತು. ಅಧ್ಯಾತ್ಮಿಕ ಅರಿವಿನ ಹಸಿವು ಚಾಲ್ತಿಯಲ್ಲಿದ್ದ ಧಾರ್ಮಿಕ ಆಚರಣೆಗಳನ್ನು ಮತ್ತು ನಂಬಿಕೆಗಳನ್ನು ವಿಮರ್ಶೆಗೆ ಗುರಿಪಡಿಸಿತು. ಇದರ ಫಲಿತಾಂಶವಾಗಿ ಬಂದ ಪವಿತ್ರ ಎನ್ನುವ ಭಾವನೆ ಕೂಡ ರಾಮಕೃಷ್ಣ ಪರಮಹಂಸ ಅಥವಾ ಅರವಿಂದರು ಅಥವಾ ರಮಣ-ಹೀಗೆ ಯಾವುದೇ ಪಂಥಕ್ಕೆ ಸೇರಿದವರಿಂದ ಒಡಮೂಡಿದ್ದು ಆಗಿತ್ತು. ಹಾಗೆ ನೋಡಿದರೆ ಅನ್ಯ ಎಂಬ ಕಲ್ಪನೆ ಅದ್ವೈತವಾದಿ ರಮಣರಲ್ಲಿ ರೂಪಾಂತರ ಹೊಂದಿಬಿಟ್ಟಿತು. ಒಟ್ಟಿನಲ್ಲಿ ನಮ್ಮ ಕ್ರಿಟಿಕಲ್ ಇನ್‌ಸೈಡರ‍್ಸ್ಗಳು ದಕ್ಕಿಸಿಕೊಂಡಂತೆಯೇ ನಮ್ಮನ್ನು ನಾವು ಆಧುನೀಕರಣಗೊಳಿಸಿಕೊಳ್ಳುವಾಗ ಇಂಗ್ಲೀಷ್ ವಿದ್ಯಾಭ್ಯಾಸ ಮತ್ತು ಇಂಗ್ಲೀಷ್ ಸಾಹಿತ್ಯದಿಂದ ನಮಗೆ ಅಗತ್ಯವಾಗಿ ಏನು ಬೇಕಿತ್ತೋ ಅದನ್ನೇ ಪಡೆದುಕೊಂಡೆವು. ಇಡೀ ಯುರೋಪ್ ಏನೇನು ಕೊಡುತ್ತಿತ್ತೋ ಅದೆಲ್ಲಾ ನಮ್ಮ ಭಾಷೆಗಳಲ್ಲೇ ಸಾಧ್ಯವಾಗುವಂತೆ ನಾವು ಭಾರತೀಯ ಭಾಷೆಯನ್ನು ಮತ್ತೊಮ್ಮೆ ಕಟ್ಟಿದೆವು. ಅಂತಿಮವಾಗಿ ದೈವಿಕ ಪುರುಷರ ಕಣ್ಣುಗಳಲ್ಲೂ ಮತ್ತು ಲೌಕಿಕವಾದ ಈ ಪ್ರಪಂಚದಲ್ಲೂ ನಾವೆಲ್ಲಾ ಸಮಾನರಾಗಿ ಕಾಣುವಂತಾಗಿದ್ದು. ಈ ಮೂರು ಹಸಿವುಗಳಿಂದಲೇ. ಇಲ್ಲಿ ಭಾರತೀಯ ಪ್ರತಿಭೆ/ ಕಲ್ಪನಾ ಶಕ್ತಿಯ ಮೇಲೆಲ್ಲಾ ಪ್ರಭಾವ ಬೀರಿದ್ದು ಮಹಾತ್ಮ ಗಾಂಧೀಜಿ ಮತ್ತು ರವೀಂದ್ರನಾಥ ಟ್ಯಾಗೋರ್. ಇದರಿಂದಾಗಿ ನಮ್ಮ ಎಲ್ಲಾ ಭಾಷೆಗಳಲ್ಲೂ ಸತ್ವಶಾಲಿ ಲೇಖಕರು ಅರಳಿದರಲ್ಲದೆ, ತುಳಿತಕ್ಕೆ ಒಳಗಾದ ಜಾತಿ-ಮತಗಳಿಂದೆಲ್ಲ ಗಟ್ಟಿನಾಯಕರು ಸೃಷ್ಟಿಯಾದರು.
ಆದರೆ, ಈಗ ಈ ಮೂರು ಹಸಿವುಗಳ ನಡುವಿನ ಬೆಸುಗೆಗೆ ಧಕ್ಕೆಯಾಗಿದೆ. ಜಾಗತೀಕರಣಗೊಂಡಿರುವ ಭಾರತದಲ್ಲಿ ಈ ಹಸಿವುಗಳು ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಇದ್ದಷ್ಟು ಸ್ಪಷ್ಟವಾಗಿಲ್ಲ. ಆದರೆ, ಬ್ರಿಟೀಷರಿಂದ ಸ್ವಾತಂತ್ರ್ಯ ಪಡೆದ ಮೇಲೆ ನಾವೆಲ್ಲ-ಅಂದರೆ ಶಿಕ್ಷಿತ ಮೇಲ್ವರ್ಗದವರು-ಹೆಚ್ಚು ಹೆಚ್ಚು ಪಾಶ್ಚಾತ್ಯೀಕರಣಗೊಂಡಿದ್ದೇವೆ. ಅಂದ ಮಾತ್ರಕ್ಕೆ ಈ ಹಸಿವುಗಳು ಹಿಂದೆಲ್ಲಾ ಶುದ್ಧವಾಗಿದ್ದವು ಮತ್ತು ಒಂದರ ಜತೆ ಇನ್ನೊಂದಕ್ಕೆ ವೈರುಧ್ಯವಿರಲಿಲ್ಲ ಎಂಬುದು ನನ್ನ ಮಾತಿನ ಅರ್ಥವಲ್ಲ. ಸ್ವದೇಶಿ ಕಲ್ಪನೆ ಕುರಿತು ಗಾಂಧೀಜಿ ಮತ್ತು ಟ್ಯಾಗೋರ್ ನಡುವೆ ಆಗಲೂ ದೊಡ್ಡ ಚರ್ಚೆ ನಡೆದಿದೆ. ಹಾಗೆಯೇ ಅಸ್ಪೃಶ್ಯರ ಸಬಲೀಕರಣದ ಬಗ್ಗೆ ಗಾಂಧೀಜಿ ಮತ್ತು ಅಂಬೇಡ್ಕರ್ ಮಧ್ಯೆ ಚರ್ಚೆ ಹಾಗೂ ಹೋರಾಟ ಆಗಿದೆ. ಆದರೆ, ಇವೆಲ್ಲಾ ಸೈದ್ಧಾಂತಿಕ ಅತಿರೇಕಗಳನ್ನು ಇಂಥ ಚರ್ಚೆಗಳು ಆಗ ಸರಿಪಡಿಸಿದ್ದು ಮಾತ್ರವಲ್ಲ ಸ್ವದೇಶಿ, ಅಸ್ಪೃಶ್ಯರ ಸಬಲೀಕರಣ ಮುಂತಾದ ಕಲ್ಪನೆಗಳಿಗೆ ಸ್ಪಷ್ಟವಾದ ರೂಪವನ್ನು ಕೊಡಲು ಸಹಾಯಕವಾದವು.
ಇವತ್ತು ನಮ್ಮನ್ನು ಆಳುತ್ತಿರುವವರು ಅಥವಾ ಅಧಿಕಾರಕ್ಕೆ ಬರಲು ಹವಣಿಸುತ್ತಿರುವವರು ಜನಸಮುದಾಯಗಳ ಮಧ್ಯೆ ಸಮಾನತೆಯ ಹಸಿವನ್ನು ತೀರಾ ಭ್ರಮಾತ್ಮಕವಾದ ಜನಪ್ರಿಯ ತಂತ್ರಗಳ/ಕ್ರಮಗಳ ಮೂಲಕ ನೋಡುತ್ತಿದ್ದಾರೆ. ಇನ್ನು ಆಧ್ಯಾತ್ಮಿಕ ಹಸಿವಂತೂ ತನ್ನನ್ನು ತಾನು ತೀರಾ ಜನಪ್ರಿಯವಾಗಿ ತೋರಿಸಿಕೊಳ್ಳುವುದರಿಂದ ಅದು ಧ್ಯಾನಸ್ಥ ಆತ್ಮಪರೀಕ್ಷೆ ಕಾಯುವುದಿಲ್ಲ. ಇದು ಆಧುನಿಕ ಕಾಲದ ಒತ್ತಡಗಳಿಗೆ ತತ್‌ಕ್ಷಣದ/ದಿಢೀರ್ ಪರಿಹಾರವನ್ನು ಬೇಡುತ್ತದೆ; ಇಲ್ಲವೇ ಕೊಡುತ್ತದೆ. ಆಧುನೀಕರಾಗಬೇಕೆಂಬ ಆಸೆಯ ಜತೆಯಲ್ಲೇ ತಳುಕು ಹಾಕಿಕೊಂಡಿರುವ ಇಂಗ್ಲೀಷ್ ಮೇಲಿನ ಪ್ರೀತಿಯು ನಮ್ಮ ದೇಶಭಾಷೆಗಳನ್ನು ನಾವು ನಮ್ಮ ಬೌದ್ಧಿಕ ಅಗತ್ಯಗಳಿಗೆ ಬಳಸಲಾಗದಂತೆ ನಿಧಾನವಾಗಿ ನುಂಗಿ ನೊಣೆಯುತ್ತಿದೆ. ದುಬಾರಿ ಇಂಗ್ಲೀಷ್ ಶಾಲೆಗಳಲ್ಲಿ ಓದುತ್ತಿರುವ ನಮ್ಮ ಶ್ರೀಮಂತರ ಮಕ್ಕಳು ದೇಶದ ಉಳಿದ ಮಕ್ಕಳಿಂದ ದೂರವಾಗುತ್ತಿದ್ದಾರೆ. ಆದರೆ ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಹೀಗಿರಲಿಲ್ಲ. ಅಂದಿನ ಭಾರತ ಜಾತಿಪೀಡಿತವಾಗಿದ್ದರೂ ನನ್ನಂಥವರು ಕೂಡ ಉಳಿದ ಮಕ್ಕಳ ಜತೆಯೇ ಶಾಲೆಗೆ ಹೋಗುತ್ತಿದ್ದೆವು. ನಾವು ಇಂಗ್ಲೀಷನ್ನು ಒಂದು ಭಾಷೆಯಾಗಿ ಕಲಿತೆವು. ಆದರೆ ಬೇರೆ ಬೇರೆ ವಿಷಯಗಳನ್ನೆಲ್ಲ ಅರಗಿಸಿಕೊಳ್ಳಲು ನಮ್ಮ ನಮ್ಮ ಪ್ರಾದೇಶಿಕ ಭಾಷೆಗಳನ್ನೇ ಬಳಸಿಕೊಂಡೆವು. ಆದರೆ ನಮ್ಮ ಶ್ರೀಮಂತರ ಮಕ್ಕಳ ಪೈಕಿ ಹೆಚ್ಚಿನ ಮಕ್ಕಳ ಪಾಲಿಗೆ ಇವತ್ತು ಸಾಂಸ್ಕೃತಿಕ ಶ್ರೀಮಂತಿಕೆಯುಳ್ಳ ಅವರವರ ಮಾತೃಭಾಷೆಗಳು ಕೇವಲ ಅಡುಗೆ ಮನೆಯ ಭಾಷೆಗಳಾಗಿಬಿಟ್ಟಿವೆ. ಇವೆಲ್ಲವನ್ನೂ ನೋಡಿದರೆ ಅನೇಕರು ಭಯಪಡುತ್ತಿರುವಂತೆ (ಮತ್ತು ಅನೇಕರು ಆಶಿಸುತ್ತಿರುವಂತೆ) ಕೆಲವೇ ದಿನಗಳಲ್ಲಿ ನಮ್ಮಲ್ಲಿ ಎರಡು ದೇಶಗಳು ಹುಟ್ಟಿಕೊಳ್ಳಲಿವೆ. ಅವೆಂದರೆ ಒಂದು, ಬಡವರ ಭಾರತ; ಇನ್ನೊಂದು ಸಿರಿವಂತರ ಇಂಡಿಯಾ.
ಸಂಸ್ಕೃತದಲ್ಲಿ ಬರೆದ ಕಾಳಿದಾಸನನ್ನು ಬಿಟ್ಟರೆ, ಇಡೀ ಭಾರತದ ಸಾಹಿತ್ಯ ಪುರುಷ ಎಂದರೆ ರವೀಂದ್ರನಾಥ ಟ್ಯಾಗೋರ್. ತಮಿಳಿನಷ್ಟು ಪ್ರಾಚೀನವೂ ಅಲ್ಲದ, ಹಿಂದಿಯಷ್ಟು ವ್ಯಾಪಕವಾಗಿಯೂ ಇಲ್ಲದ ಬಂಗಾಳಿಯಲ್ಲಿದ್ದು ಇಡೀ ಭಾರತದ ಸಾಹಿತ್ಯ ಪುರುಷರಾದರು ಎನ್ನುವುದು ಕುತೂಹಲದ ಸಂಗತಿ. ಇದರ ಜೊತೆಗೆ ಇಂಗ್ಲೀಷಿನಲ್ಲೂ ಬರೆದಿದ್ದರಿಂದ ಇಡೀ ಜಗತ್ತಿಗೆ ಅವರು ಲಭ್ಯರಾದರು. ಆದರೆ ಅವರ ಹೆಚ್ಚಿನ ಕೃತಿಗಳಲ್ಲಿ ಕಾಣುವ ತುರ್ತು ಮತ್ತು ಪ್ರಸ್ತುತತೆಗಳೆಲ್ಲ ಬಂದಿದ್ದು, ಅವರು ತಮ್ಮ ಮಾತೃಭಾಷೆ ಒದಗಿಸಿದ ಸ್ಥಳೀಯ ಪರಿಸರವನ್ನು ಉದ್ದೇಶಿಸಿ ಮಾತನಾಡಬೇಕಾಗಿ ಬಂದ/ಅದಕ್ಕೆ ಸ್ಪಂದಿಸಬೇಕಾಗಿ ಬಂದ ವಸ್ತುಸ್ಥಿತಿಯಿಂದ. ಗಾಂಧೀಜಿ ಕೂಡ ತಮ್ಮ ಮಾತೃಭಾಷೆಯಾದ ಗುಜರಾತಿಯಲ್ಲೇ ಬರೆದರು. ಜತೆಗೆ ಇಂಗ್ಲೀಷ್ ಮತ್ತು ಹಿಂದಿಯಲ್ಲೂ ಬರೆದರು. ಹಿಂದಿನ ಕಾಲದ ನಮ್ಮ ಗಣ್ಯ ಭಾರತೀಯ ಲೇಖಕರಲ್ಲೆಲ್ಲ ಇದೇ ಸೂತ್ರ ಕಾಣುತ್ತದೆ. ದುರದೃಷ್ಟದ ಸಂಗತಿಯೆಂದರೆ ಸ್ವಾತಂತ್ರ್ಯೋತ್ತರ ಭಾರತದ ನಮ್ಮ ಸಿದ್ಧಾಂತಿಗಳು ಮತ್ತು ವಿದ್ವಾಂಸರೆಲ್ಲ ಬರೀ ಇಂಗ್ಲೀಷಿನಲ್ಲಿ ಬರೆಯುತ್ತಿದ್ದಾರೆ.
ಮಾತೃಭಾಷೆಯಲ್ಲಿ ಬರೆಯಲಾಗದ ಈ ಅಸಾಮರ್ಥ್ಯ ಇಂಥವರ ಬರೆಹಗಳಿಂದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಮತ್ತು ಪ್ರಸ್ತುತತೆಯನ್ನು ಕಸಿದುಕೊಳ್ಳುವುದಿಲ್ಲವೇ ಎಂದು ನನಗೆ ಆಶ್ಚರ್ಯವಾಗುತ್ತದೆ. ಫ್ರೆಂಚ್, ಜರ್ಮನ್ ಮತ್ತು ಇಟಾಲಿಯನ್ ಸಮಾಜಶಾಸ್ತ್ರಜ್ಞರು ಹಾಗೂ ತತ್ವಜ್ಞಾನಿಗಳು ತಮ್ಮ ತಮ್ಮ ಭಾಷೆಯಲ್ಲೇ ಬರೆಯುತ್ತಾ, ಪರಸ್ಪರ ಸಂವಾದ ಮಾಡುತ್ತಾ, ಯುರೋಪಿಯನ್ ಎಂದೇ ಗುರುತಿಸಿಕೊಳ್ಳುತ್ತಿರುವುದು ಸಾಧ್ಯವಾಗುವುದಾದರೆ ಭಾರತೀಯ ಲೇಖಕರಿಗೇಕೆ ಇದು ಸಾಧ್ಯವಾಗುತ್ತಿಲ್ಲ? ನಾವು ಒಂದು ಒಕ್ಕೂಟ ವ್ಯವಸ್ಥೆಗೆ ಸೇರಿದವರು. ಆದರೆ ನಮ್ಮ ಇಂಗ್ಲೀಷ್ ಲೇಖಕರ ಬರಹಗಳಲ್ಲಿ ಭಾರತದ ಸಾಂಸ್ಕೃತಿಕ ಶ್ರೀಮಂತಿಕೆ ದರ್ಶನವಂತೂ ಎಲ್ಲೂ ಕಾಣುತ್ತಿಲ್ಲ.
ಇದಕ್ಕೆ ಕೆಲವು ಅಪವಾದಗಳೂ ಇವೆ ನಿಜ. ಅಂದರೆ ನಮ್ಮ ಸೃಜನಶೀಲ ಲೇಖಕರು ಮತ್ತು ರಾಜಕೀಯ ಕಾರ್ಯಕರ್ತರು ಭಾರತದ ಜನತೆಯೊಂದಿಗೆ ಮಾತುಕತೆಯಾಡುವಾಗ ಭಾರತೀಯ ಭಾಷೆಗಳನ್ನೇ ಬಳಸುತ್ತಿದ್ದಾರೆ. ಇಂಥವರು ಒಮ್ಮೆ ಪ್ರಸಿದ್ಧರಾಗುತ್ತಿದ್ದಂತೆಯೇ ಹಿಂದಿ ಮತ್ತು ಇಂಗ್ಲೀಷ್ ಮೂಲಕವೂ ಜನರಿಗೆ ಲಭ್ಯವಾಗುತ್ತಿದ್ದಾರೆ. ಆದರೆ ಇಂಥ ಅಪವಾದಗಳು ಕೇವಲ ಬೆರಳಣಿಕೆಯಷ್ಟು ಮಾತ್ರ. ಮಾನವಿಕ ವಿಷಯಗಳ ಕ್ಷೇತ್ರಗಳಲ್ಲಿರುವ ಹೆಚ್ಚಿನ ಬುದ್ದಿಜೀವಿಗಳ ವಿಚಾರದಲ್ಲಿ ಈ ಮಾತನ್ನು ಹೇಳಲು ಸಾಧ್ಯವಿಲ್ಲ.
ಇದನ್ನೇನೂ ನಾನು Linguistic Chauvinism(ಅರ್ಥವಿಲ್ಲದ ಭಾಷಿಕ ವ್ಯಾಮೋಹ)ದಿಂದ ಹೇಳುತ್ತಿಲ್ಲ. ನಮ್ಮ ಚಿಂತನೆಗಳಲ್ಲಿ ಗುಣಮಟ್ಟ ಇರಬೇಕು ಎಂಬ ಕಳಕಳಿ ಇದಕ್ಕೆ ಕಾರಣ. ಏಕೆಂದರೆ ನಮ್ಮ ಭಾಷೆಗಳ ಶ್ರೀಮಂತಿಕೆ ಮತ್ತು ಭಾಷೆಗಳ ಸಂರಚನೆಯಲ್ಲೇ/ಮೂಲಬಂಧದಲ್ಲೇ ಇರುವ ವ್ಯಕ್ತಿಗತ ಹಾಗೂ ಸಾಂಸ್ಕೃತಿಕ ಸಾಂಗತ್ಯಗಳು ಕಳೆದುಹೋಗಿವೆ. ಯಾವುದೇ ಒಂದು ಭಾಷೆ ಇದ್ದಕ್ಕಿದ್ದಂತೆ ಸಂವಹನದ ವಾಹಕವಾಗಿ ಬಿಡುವುದಿಲ್ಲ. ಹೀಗಾಗಿ ಇಂದು ಈ ವಿಖ್ಯಾತ ವಿಶ್ವವಿದ್ಯಾಲಯದಿಂದ ಉತ್ತೀರ್ಣರಾಗಿ ಹೊರಹೋಗುತ್ತಿರುವ ತರುಣ ವಿದ್ಯಾರ್ಥಿಗಳು ಈ ಬಗ್ಗೆ ಯೋಚಿಸಬೇಕೆಂದು ನಾನು ಆಶಿಸುತ್ತೇನೆ. ಇದರಿಂದ ನಮ್ಮ ಆಳವಾದ ಚಿಂತನೆಯಲ್ಲಿ ವಿದೇಶಿ ಭಾಷೆಯ ಬಳಕೆ ತೊಡರುಗಾಲಾಗದಂತೆ ನೋಡಿಕೊಳ್ಳಬಹುದು. ಇವತ್ತು ನಾವೆಲ್ಲ ಕೂಪಮಂಡೂಕಗಳಾಗಿ ಬಿಟ್ಟಿದ್ದೇವೆ. ಆದರೆ ಕಪ್ಪೆ ತನ್ನ ಹೊಳಪನ್ನು ಉಳಿಸಿಕೊಳ್ಳಬೇಕೆಂದರೆ ಅದು ಬಾವಿಯಿಂದ ಈಚೆಗೆ ಬಂದು, ಮಣ್ಣಿನ ಮೇಲೆ ಹೊರಳಾಡುವುದೂ ಮುಖ್ಯ. ಮಹಾತ್ಮ ಗಾಂಧೀಜಿ ವಿಶ್ವದ ಎಲ್ಲ ಕಡೆಗಳಿಂದಲೂ ಜ್ಞಾನ ಹರಿದು ಬರಲಿ ಎಂದು ಆಶಿಸಿದ್ದು ನಿಜ. ಆದರೆ ಅಂಥ ಗಾಳಿ ನಮ್ಮನ್ನೆ ಅಲುಗಾಡಿಸಬಾರದು ಎಂಬ ಎಚ್ಚರಿಕೆಯೂ ಅವರಲ್ಲಿತ್ತು.
ನಮ್ಮ ಹಿರಿಯರಲ್ಲಿ ಸ್ಫೂರ್ತಿ ಹುಟ್ಟಿಸಿದ ಮೂರು ಬಗೆಯ ಹಸಿವುಗಳು ಸಮನತೆಯ ಹಸಿವು, ದೈವಿಕತೆಯ ಆಧ್ಯಾತ್ಮಿಕ ಅರಿವು ಮತ್ತು ಆಧುನಿಕತೆಯ ಹಸಿವು ಈಗಲೂ ಅಸ್ತಿತ್ವದಲ್ಲಿವೆ. ಇವು ಮೂರು ಒಟ್ಟಿಗೇ ಇರುವವರೆಗೆ ಮಾತ್ರ ನಮ್ಮ ಒಂದು ಹಂತದ ಬೆಳವಣಿಗೆಗೆ ಪ್ರಮುಖ ಪಾತ್ರ ವಹಿಸಬಲ್ಲವು. ಆದರೆ ಜಾಗತೀಕರಣ ಎಂಬ ಹೆಸರು ಅಂಟಿಸಿಕೊಂಡಿರುವ ಆಧುನಿಕತೆಯ ಹಸಿವು ಮಿಕ್ಕ ಎರಡು ಬಗೆಯ ಹಸಿವುಗಳಿಂದ ದೂರವಾಗುತ್ತಿದ್ದಂತೆಯೇ ನಮ್ಮ ದೇಶದ ಬಹುದೊಡ್ಡ ಪರಂಪರೆಯ ಆಂತರ್ಯದಲ್ಲಿರುವ ಶಕ್ತಿ ಕುಂದಿಬಿಡುತ್ತದೆ.
ಐರೋಪ್ಯ ಮಾದರಿಯ ರಾಷ್ಟ್ರವಲ್ಲ. ನಾವು; ನಾವು ಒಂದು ನಾಗರಿಕತೆ, ಆದರೂ ನಾವು ಆಡಳಿತದ ಅನುಕೂಲಕ್ಕಾಗಿ ಐರೋಪ್ಯ ಮಾದರಿಯ ರಾಷ್ಟ್ರದ ಕಲ್ಪನೆಗಿಂತ ಭಿನ್ನವಾದ ಒಂದು ರಾಷ್ಟ್ರವಾಗುವುದು ಮುಖ್ಯ. ಇಂಥ ರಾಷ್ಟ್ರದ ಆಡಳಿತವೂ ವಿಕೇಂದ್ರಿಕೃತವೂ, ಪ್ರಜಾಸತ್ತಾತ್ಮಕವೂ ಆಗಿರಬೇಕು. ಅನೇಕ ರಾಷ್ಟ್ರಗಳು ರಾಷ್ಟ್ರೀಯವಾದಿ ಕ್ರಮದಲ್ಲಿ ಆಲೋಚಿಸುತ್ತಿರುವುದರಿಂದ ಮತ್ತು ಅದಕ್ಕೆ ತಕ್ಕಂತೆಯೇ ಕೆಲಸ ಮಾಡುವುದರಿಂದ ನಾವು ಕೂಡ ರಾಷ್ಟ್ರವಾಗುವುದರಿಂದ ಪಾರಾಗುವುದು ಸಾಧ್ಯವಿಲ್ಲವೆಂದು ರಾಜಕಾರಣಿಗಳು ತಿಳಿದಿದ್ದಾರೆ. ಆದರೆ ಇಂಥ ರಾಷ್ಟ್ರ ನಿರ್ಮಾಣ ಪ್ರಕ್ರಿಯೆಯಲ್ಲಿ ನಾವು ನಮ್ಮ ಬಹುಸಂಸ್ಕೃತಿಯನ್ನೂ ಹಾಗೆಯೇ ನಮ್ಮ ಸಂಸ್ಕೃತಿಯ ತಳಹದಿಯಾದ ಅದ್ವೈತ ತತ್ತ್ವವನ್ನು ಕೈಬಿಡಬಾರದು. ಇಡೀ ಜಗತ್ತು ಮುಂದೆ ಮುಂದೆ ಹೋಗುತ್ತಿರುವಾಗ ನಾವು ಹಿಂದೆ ಬೀಳಬಾರದು ನಿಜ. ಆದರೆ ಅಭಿವೃದ್ಧಿ ಹೊಂದುವ ಈ ಪ್ರಕ್ರಿಯೆಯಲ್ಲಿ ನಮ್ಮ ಅಸ್ಥಿತ್ವ ಶಕ್ತಿ ಎಲ್ಲಿದೆ ಎಂಬ ದೃಷ್ಟಿಯನ್ನು ನಾವು ಕಳೆದುಕೊಳ್ಳಬಾರದು.
ವೈವಿಧ್ಯತೆಯಲ್ಲಿ ಏಕತೆ ತತ್ವಕ್ಕೆ ಹಿಂದೆ ಅಡಿಪಾಯ ಹಾಕಿದವರು ಕಾಡಿನಲ್ಲಿ ವಾಸಿಸುತ್ತಿದ್ದ ಉಪನಿಷತ್ ಕಾಲದ ದೊಡ್ಡ ದೊಡ್ಡ ಋಷಿಗಳೇ ವಿನಾ ನಮ್ಮ ನಗರಗಳಲ್ಲಿ ವಾಸಿಸುತ್ತಿದ್ದವರಲ್ಲ. ಈ ಋಷಿಗಳು ನಮಗೆಲ್ಲಾ ನಿಷ್ಕಾಮ ಕರ್ಮದಲ್ಲಿ ಬಹುದೊಡ್ಡ ಆನಂದವಿದೆ ಎಂಬ ಪಾಠವನ್ನು ಹೇಳಿಕೊಟ್ಟರು. ತಮ್ಮನ್ನು ತಾವು ವಿಮರ್ಶೆಯ ಕುಲುಮೆಗೆ ಒಡ್ಡಿಕೊಳ್ಳುವವರೇ ನಮ್ಮ ಭವ್ಯ ಪರಂಪರೆಯ ವಾರಸುದಾರರು. ತಮ್ಮ ವಿದ್ಯಾರ್ಥಿಗಳಲ್ಲಿ ಇಂಥ ಆತ್ಮ ವಿಮರ್ಶೆಯ ವಿನಯವನ್ನು ಕಲಿಸುವುದು ಕೂಡ ಯಾವುದೇ ವಿಶ್ವವಿದ್ಯಾಲಯ ಮಾಡಬೇಕಾದ ಕೆಲಸಗಳಲ್ಲಿ ಒಂದು. ನೀವೆಲ್ಲರೂ ಇಂಥ ವಿನಯದಿಂದ ಈ ಜಗತ್ತಿನ ಸವಾಲುಗಳನ್ನು ಎದುರಿಸಿ, ನಿಮಗೆ ಇಷ್ಟವಾದ ಕ್ಷೇತ್ರಗಳಲ್ಲಿ ಆಶ್ಚರ್ಯರಾಗುತ್ತೀರಿ, ಇದೇ ಮುಂದೆ ಋಷಿಗಳು ಹುಟ್ಟಲು ದಾರಿ ಮಾಡಿಕೊಡುತ್ತದೆ ಎನ್ನುವ ಭರವಸೆ ನನ್ನದು.
ನಿಮ್ಮಂಥ ತರುಣರು ಸಮಾನತೆ, ಆಧ್ಯಾತ್ಮಿಕತೆ ಮತ್ತು ಆಧುನಿಕತೆಯ ಹಸಿವುಗಳನ್ನು ಸಮಾನ ಪ್ರೀತಿಯಿಂದ ಬೆಳೆಸಿಕೊಳ್ಳಬೇಕು. ಇಲ್ಲದಿದ್ದರೆ ಯುರೋಪಿನಲ್ಲಿ ಮೂಲಭೂತವಾದ ಹಬ್ಬುತ್ತಿದ್ದ ೧೯೩೦ರ ದಶಕದಲ್ಲಿ ಕವಿ ಡಬ್ಲ್ಯೂ.ಬಿ.ಯೇಟ್ಸ್ ತನ್ನ ಸೆಕೆಂಡ್ ಕಮಿಂಗ್ ಪದ್ಯದಲ್ಲಿ ವ್ಯಕ್ತಪಡಿಸಿದ ಆತಂಕ ನಿಜವೇ ಆಗಿಬಿಡುತ್ತದೆ. ಅಂದರೆ, ಅತ್ಯುತ್ತಮವಾದ (ಒಳ್ಳೆಯದು) ಬೆಲೆ ಕಳೆದುಕೊಂಡಾಗ, ಇಡೀ ಜಗತ್ತಿನಲ್ಲಿ ಕೆಡುಕು ಮೆರೆಯುತ್ತದೆ ಎಂಬುದು ಯೇಟ್ಸ್‌ನ ಭವಿಷ್ಯವಾಗಿದೆ.
The best lack all conviction
While the worst are full of passionate intensity
ಸಿರಿವಂತರಾದ, ಆದರೆ ಸಮಾನತೆ, ಅಧ್ಯಾತ್ಮಿಕತೆ ಮತ್ತು ಆಧುನಿಕತೆಯ ಹಸಿವುಗಳ ಬಗ್ಗೆ ತಲೆ ಕೆಡಿಸಿಕೊಳ್ಳದ ಜನರ ಬಗ್ಗೆ ನಿಮ್ಮಂಥ ವಿದ್ಯಾವಂತರು ಟೀಕಾಕಾರರಾಗಿ ಸ್ಪಂದಿಸಬೇಕು. ಆಗ ಮಾತ್ರ ಭಾರೀ ಗಂಡಾಂತರಗಳು ತಪ್ಪಿ, ಇಡೀ ಭಾರತ ಆರೋಗ್ಯಪೂರ್ವ ಪ್ರಜಾಸತ್ತಾತ್ಮಕ ಮತ್ತು ಭವ್ಯ ನಾಗರಿಕತೆಯಾಗಿ ಅರಳುತ್ತದೆ. ನೀವೆಲ್ಲರೂ ಈ ಕಾಣ್ಕೆಗೆ ನಿಮ್ಮ ಕಾಣಿಕೆ ನೀಡುತ್ತೀರಿ ಎನ್ನುವ ಭರವಸೆ ನನ್ನದು. (೨೦೦೪ರ ಫೆಬ್ರವರಿ ೨೮ರಂದು ದೆಹಲಿ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಮಾಡಿದ ಭಾಷಣದ ಕನ್ನಡ ರೂಪ. ಅನುವಾದ: ಬಿ.ಎಸ್. ಜಯಪ್ರಕಾಶ್ ನಾರಾಯಣ್)

ಸಂತಮಹಂತರ ನೆಲೆವೀಡು ಗುಲ್ಬರ್ಗಾ

ಕರ್ನಾಟಕ ರಾಜ್ಯದ ಗುಲಬರ್ಗಾ ಜಿಲ್ಲೆಯ ಪ್ರಾಚೀನ ಹೆಸರು ಕಲಬುರಿಗಿ. ಗುಲಬರ್ಗಾ ಬಹುಮನಿ ಸುಲ್ತಾನರ ರಾಜಧಾನಿಯಾಗಿತ್ತು. ರಾಜ್ಯಗಳ ಪುನರ್ವಿಂಗಡಣೆ ಆಗುವ ಮುಂಚೆ ಗುಲಬರ್ಗಾ ಇದ್ದ ರಾಜ್ಯ ಹೈದ್ರಾಬಾದ್. ಇಲ್ಲಿ ರಾಷ್ಟ್ರಕೂಟರು ಪ್ರಧಾನ ರಾಜಮನೆತನದವರು. ಜಿಲ್ಲಾ ಆಡಳಿತ ಕೇಂದ್ರ ಗುಲಬರ್ಗಾದ ವಿಸ್ತೀರ್ಣ ೧೬.೨೨೪ ಚ.ಕಿ.ಮೀ. ರಾಜ್ಯದಲ್ಲೇ ಅತಿ ಹೆಚ್ಚು ವಿಸ್ತೀರ್ಣ ಹೊಂದಿರುವ ಜಿಲ್ಲೆ ಇದಾಗಿದೆ.
ಜಿಲ್ಲೆಯ ಒಟ್ಟು ಜನಸಂಖ್ಯೆ ಅಂದಾಜು ೩೧.೨೪.೮೫೮ ಈ ಪೈಕಿ ಪುರುಷರು ೧೫.೯೧.೩೭೯ ಹಾಗೂ ಸ್ತ್ರೀಯರ ಸಂಖ್ಯೆ ೧೫.೩೧.೪೭೯ ಇದ್ದು, ಜನಸಾಂದ್ರತೆ ೧೯೩ರಷ್ಟಿದೆ. ಸುಮಾರು ೪೮ ಹೋಬಳಿಗಳನ್ನು, ೧೦ ತಾಲೂಕುಗಳನ್ನು ಹೊಂದಿರುವ ಗುಲಬರ್ಗಾ ಕಂದಾಯ ವಿಭಾಗವಾಗಿದೆ.
ಸಿಮೆಂಟ್, ವಾಹನ, ಹತ್ತಿ ಈ ಜಿಲ್ಲೆಯ ಪ್ರಮುಖ ಕೈಗಾರಿಕೆಗಳು. ಮ್ಯಾಂಗನೀಸ್ ಖನಿಜ ಸಂಪತ್ತನ್ನು ಹೊಂದಿರುವ ಜಿಲ್ಲೆಯಲ್ಲಿ ಭೀಮಾ, ಕಾಗ್ನ, ಬೆಣ್ಣೆತೋರು, ಮುಳ್ಳುಮಾರಿ ಜಿಲ್ಲೆಯ ಜೀವನಗಳು. ತೊಗರಿ, ಶೇಂಗಾ, ಸೂರ್ಯಕಾಂತಿ, ಕುಸುಬೆ, ನೆಲೆಗಡಲೆಯನ್ನು ಜಿಲ್ಲೆಯಲ್ಲಿ ಬೆಳೆಯಲಾಗುತ್ತದೆ. ಜಿಲ್ಲೆಯ ಪ್ರಸಿದ್ಧವಾದ ಬೆಳೆ ತೊಗರಿ.
ಗುಲಬರ್ಗಾ ರಾಜ್ಯದ ಪ್ರಮುಖ ಐತಿಹಾಸಿಕ ಸ್ಥಳಗಳ ಪೈಕಿ ಒಂದಾಗಿದ್ದು, ಹತ್ತು ಹಲವು ವೈಶಿಷ್ಠ್ಯಗಳನ್ನು ಹೊಂದಿದೆ.
ಗುಲಬರ್ಗಾ
ಕರ್ನಾಟಕದ ಪ್ರಮುಖ ಜಿಲ್ಲಾ ಕೇಂದ್ರ ವಿಭಾಗೀಯ ಕಾರ್ಯಾಲಯವೂ ಇಲ್ಲಿದೆ. ಗುಲ್ಬರ್ಗಾದಲ್ಲಿ ಬಹುಮನಿ ಸುಲ್ತಾನರು ಕ್ರಿ.ಶ.೧೩೪೭ರಲ್ಲಿ ರಾಜಧಾನಿಯಾನ್ನಾಗಿ ಮಾಡಿಕೊಂಡು ಆಳ್ವಿಕೆ ಮಾಡಿದರು. ಇದರ ಮಗದೊಂದು ಹೆಸರು ಕಲಬುರ್ಗಿಯಾಗಿತ್ತು.
ಸೂಫಿಸಂತ ಬಂದೇನವಾಜನ ಘೋರಿ ಮತ್ತು ಶರಣಬಸಪ್ಪನವರ ಸಮಾಧಿಗಳು ಇಲ್ಲಿವೆ. ಇಲ್ಲಿ ಖಲಂದಾರ್ ಮಸೀದಿ ಮತ್ತು ಚಾಂದಬೀಬಿ ಕಟ್ಟಿಸಿದ ಹೀರಾಪುರ್ ಮಸೀದಿ ಮುಂತಾದ ಸ್ಮಾರಕಗಳು ಇವೆ.
ಗಾಣಗಾಪುರ್
ಅಪ್ಜಲ್‌ಪುರ ತಾಲೂಕಿನ ಗಾಣಗಾಪುರ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ. ಇಲ್ಲಿ ದತ್ತಾತ್ರೇಯ ದೇವಾಲಯವಿದೆ. ಗಾಣಗಾಪುರವನ್ನು ಶ್ರೀ ಗುರುಚರಿತ್ರೆಯಲ್ಲಿ ಗಾಣಗಾಭವನ, ಗಂಧರ್ವಭವನ, ಗಂಧರ್ವಪುರ ಎಂದು ಕರೆಯುತ್ತಾರೆ.
ವಡಗೇರಿ
ಇಲ್ಲಿ ಚಾಲುಕ್ಯ ಚಕ್ರವರ್ತಿ ೬ನೇ ವಿಕ್ರಮಾದಿತ್ಯನಿಗೆ ಸಂಬಂಧಿಸಿದ ಶಾಸನವಿದೆ. ಈ ಶಾಸನ ೬ನೇ ವಿಕ್ರಮಾದಿತ್ಯ ಕ್ರಿ.ಶ.೧೦೭೭ರಂದು ಅಧಿಕಾರಕ್ಕೆ ಬಂದಿದ್ದನ್ನು ಮತ್ತು ಆತನು ಕ್ರಿ.ಶ.೧೦೭೬ ಮಾರ್ಚ್ ೨ರಂದು ಚಾಲುಕ್ಯ ವಿಕ್ರಮ ಶಕೆ ಆರಂಭಿಸಿದನೆಂದು ಹೇಳುತ್ತದೆ. ಹೀಗೆ ಇದು ವಡಗೇರಿ ಶಾಸನವೆಂದು ಹೆಸರಾಗಿದೆ.
ಸುರಪುರ
ಸುರಪುರದಲ್ಲಿ ರಾಜಾ ವೆಂಕಟಪ್ಪ ನಾಯಕ ೧೮೫೭ರಲ್ಲಿ ಬ್ರಿಟೀಷರ ವಿರುದ್ಧ ಹೋರಾಡಿದ. ಅವನು ಬ್ರಿಟೀಷರ ರೆಸಿಡೆಂಟ್‌ನನ್ನು ಇಟ್ಟುಕೊಳ್ಳಲು ನಿರಾಕರಿಸಿ ದಂಗೆ ಎದ್ದ. ಮಾಳಖೇಡ ಜಮೀನದಾರ, ನಾನಾ ಸಾಹೇಬ್, ದೇಶಮುಖ್ ಮುಂತಾದ ನಾಯಕರ ಬೆಂಬಲ ಪಡೆದು ಅಲ್ಲಿನ ಬ್ರಿಟೀಷ್ ಅಧಿಕಾರಿ ನ್ಯೂಬೇರಿಯನ್‌ನನ್ನು ಕೊಂದರು. ಈ ಕದನದಲ್ಲಿ ೫೦೦ಮಂದಿ ಮರಣ ಹೊಂದಿದರು. ಕ್ಯಾಪ್ಟನ್ ವಿಂಡ್‌ಹ್ಯಾಮ್ ಕ್ರಿ.ಶ.೧೮೫೮ರಲ್ಲಿ ಸುರಪುರವನ್ನು ಆಕ್ರಮಿಸಿದ. ಕ್ರಿ.ಶ.೧೮೬೧ರಲ್ಲಿ ಇದನ್ನು ಹೈದರಾಬಾದ್ ನಿಜಾಮನಿಗೆ ವಹಿಸಿಕೊಡಲಾಯಿತು. ಹೀಗೆ ವೆಂಕಟಪ್ಪ ನಾಯಕ ಬ್ರಿಟೀಷ್‌ರೊಡನೆ ಕಾದಾಡಿ ಸುರಪುರದಲ್ಲಿ ವೀರಮರಣ ಹೊಂದಿದ.
ಆಳಂದ
ತಾಲೂಕು ಸ್ಥಳವಾಗಿರುವ ಇಲ್ಲಿ ೬ನೇ ವಿಕ್ರಮಾದಿತ್ಯನ ಶಾಸನ ಒಂದಿದೆ. ಚಾಲುಕ್ಯರ ಕಾಲದಲ್ಲಿ ಇದು ಒಂದು ಪ್ರಾಂತ್ಯವಾಗಿತ್ತು. ಇಲ್ಲಿ ಲಾಡ್ಲೆ ಮುಷಾಯಕ್ ದರ್ಗಾ ಇದೆ. ಇದು ೧೫ನೇ ಶತಮಾನದಾಗಿದೆ. ಇದರ ಸಮೀಪ ರಾಘವ ಚೈತನ್ಯರ ಸಮಾಧಿ ಇದೆ. ಇಲ್ಲಿ ರಷಿಯಾದ ಪ್ರವಾಸಿಯೊಬ್ಬ ೧೫ನೇ ಶತಮಾನದಲ್ಲಿ ಬಂದಿದ್ದನೆಂದು ಹೇಳಲಾಗಿದೆ.
ಅಂದೋಲ
ಜೀವರ್ಗಿ ತಾಲೂಕಿನಲ್ಲಿರುವ ಅಂದೋಲದಲ್ಲಿ ಗುಮ್ಮಟ, ಮಸೀದಿ, ಸಂಗಮೇಶ್ವರ ದೇಗುಲ, ಅಟಕೇಶ್ವರ, ಶಾಂತಲಿಂಗೇಶ್ವರ ಮುಂತಾದ ದೇಗುಲಗಳಿವೆ ಮತ್ತು ೨ ಶಾಸನಗಳು ಆದಿಲ್‌ಶಾಹಿಯ ಕಾಲದ ಅವಶೇಷಗಳು ಇಲ್ಲಿವೆ.
ಸನ್ನತಿ
ಇದರ ಮೊದಲ ಹೆಸರು ಸೊಂಧಿ. ಸ್ಥಳೀಯರು ಇದನ್ನು ಸನ್ನತಿ ಎಂದು ಕರೆದರು. ಚಿತ್ತಾಪೂರ ತಾಲೂಕಿನಲ್ಲಿರುವ ಇಲ್ಲಿ ಮೌರ‍್ಯರ ಪ್ರಸಿದ್ಧ ಅರಸ ಅಶೋಕನ ೪ಶಾಸನಗಳು ದೊರೆತಿವೆ ಮತ್ತು ಶಾತವಾಹನ ದೊರೆ ಗೌತಮಿ ಪುತ್ರನಿಗೆ ಸಂಬಂಧಿಸಿದ ಒಂದು ಶಾಸನವಿದೆ. ೧೯೯೦ರಲ್ಲಿ ಇದನ್ನು ಪತ್ತೆ ಹಚ್ಚಲಾಗಿದೆ. ಹೀಗಾಗಿ ಈ ಊರಿಗೆ ಇತಿಹಾಸದಲ್ಲಿ ಮಹತ್ವವಾದ ಸ್ಥಾನ ಲಭಿಸಿದೆ. ಈ ಸನ್ನತಿಯಲ್ಲಿ ಮಧ್ಯ ಶಿಲಾಯುಗ ಮತ್ತು ನವಶಿಲಾಯುಗ ಅವಶೇಷಗಳು ಪತ್ತೆಯಾಗಿವೆ. ಇಲ್ಲಿ ಚಾಲುಕ್ಯರ ಕುಲದೇವತೆ ಸುವಿಖ್ಯಾತ ಚಂದ್ರಲಾಂಬಾ ದೇವಸ್ಥಾನವಿದೆ ಮತ್ತು ಮಾರ್ಕಂಡೇಯ ದೇವಸ್ಥಾನ, ಮಾರ್ತಾಂಡಭೈರವ ಕೊಳ ಹಾಗೂ ವಿಶ್ವಂಭಕ ದಿಕ್ಷೀತರ ಸಮಾಧಿಗಳು ಇಲ್ಲಿವೆ.
ಹುಣಸಗಿ
ಸುರಪುರ ತಾಲೂಕಿನ ಹುಣಸಗಿಯಲ್ಲಿರುವ ನಿವೇಶನವನ್ನು ಪೆದ್ದಯ್ಯಾ ಎನ್ನುವವರು ಶೋಧಿಸಿ ಉತ್ಕನನ ಮಾಡಿದರು. ಇಲ್ಲಿ ೧೯೬೭ರಲ್ಲಿ ಮಾಡಲಾದ ಅನ್ವೇಷಣೆಯ ಫಲವಾಗಿ ೪೫ಕ್ಕೂ ಹೆಚ್ಚು ಅಶ್ಯೂಲ್ಯ ನಿವೇಶನಗಳು ಸಿಕ್ಕಿವೆ. ಹುಣಸಗಿ ಊರೊಂದರ ಬಳಿಯಲ್ಲಿಯೇ ೨೫ ಅಶೂಲ್ಯ ಮಾದರಿ ನಿವೇಶನಗಳು ಪತ್ತೆಯಾಗಿವೆ. ಈ ಹಿಂದೆ ಇಲ್ಲಿನ ಜನರು ಈ ಕೊಳ್ಳದಲ್ಲಿ ಅಲೇಮಾರಿ ಜೀವನ ನಡೆಸುತ್ತಿರಬಹುದೆಂದು ಊಹಿಸಲಾಗಿದೆ.
ಯಡಿಯಾಪುರ
ಇದು ಗುಲಬರ್ಗಾ ಜಿಲ್ಲೆಯ ಬೈಚಬಾಳ ಹಳ್ಳದ ಹತ್ತಿರವಿದೆ. ಈ ನಿವೇಶನವು ಅಶ್ಯೂಲ ಮಾದರಿ ಸಂಸ್ಕೃತಿಗೆ ಮೂಲ ವಸತಿ ಸ್ಥಾನವಾಗಿತ್ತು. ಇಲ್ಲಿ ದೊಡ್ಡ ಚಕ್ರಗಳು, ಕೈಗೊಡಲಿ, ಕತ್ತಿ, ಸೀಳುಗತ್ತಿ, ಮಚ್ಚು, ಚಾಕು ಇತ್ಯಾದಿ ಉಪಕರಣಗಳಿದ್ದವು. ಹಳೆಯ ಶಿಲಾಯುಗಕ್ಕೆ ಸಂಬಂಧಿಸಿದ ಈ ಗ್ರಾಮವನ್ನು ಪೆದ್ದಯ್ಯಾನವರು ಕ್ರಿ.ಶ.೧೯೮೭ರಲ್ಲಿ ಶೋಧಿಸಿದರು.
ಮಳಖೇಡ
ರಾಷ್ಟ್ರಕೂಟರ ರಾಜಧಾನಿಯಾಗಿರುವ ಮಳಖೇಡ ಅಥವಾ ಮಾನ್ಯೆಖೇಟ ಸೇಡಂ ತಾಲೂಕಿನಲ್ಲಿದೆ. ಇದನ್ನು ರಾಷ್ಟ್ರಕೂಟರ ಪ್ರಸಿದ್ಧ ಅರಸನಾದ ಅಮೋಘವರ್ಷ ನೃಪತುಂಗ ನಿರ್ಮಿಸಿದ. ಜೈನರ ಬಸದಿಗಳು, ಕಂಚಿನ ಕಲಾಕೃತಿಗಳು ಇಲ್ಲಿವೆ. ವಿಜಯನಗರ ಸ್ಥಾಪನೆಗೆ ಪ್ರೇರಣೆ ನೀಡಿದ ವಿದ್ಯಾರಣ್ಯರ ಸಮಕಾಲೀನರಾದ ಜಯತೀರ್ಥರು ೧೪ನೇ ಶತಮಾನದಲ್ಲಿ ಇಲ್ಲಿ ವಾಸವಾಗಿದ್ದರು ಮತ್ತು ಪುಷ್ಪದಂತ ಎಂಬ ಕವಿ ಈ ಮಳಖೇಟದಲ್ಲಿದ್ದನು. ಈತ ರಾಷ್ಟ್ರಕೂಟರ ಅರಸ ಎರಡನೇ ಕೃಷ್ಣನ ಕಾಲದಲ್ಲಿದ್ದನು.
ಹೋಳಕುಂದಾ
ಕಲಬುರ್ಗಿಯಿಂದ ೩೦ಕಿ.ಮೀ. ದೂರದಲ್ಲಿದೆ, ಇಲ್ಲಿ ಒಂದು ವಿಶಾಲವಾದ ಕೋಟೆಯಿದೆ. ಈ ಕೋಟೆಯೊಳಗೆ ಏಳು ಗುಂಬಜಗಳ ದೊಡ್ಡ ೧೧ಇದೆ. ಈ ಗ್ರಾಮದ ಪುರಾತನ ಹೆಸರು ಸಹೆನಾಲಾದ ಇತ್ತೆಂದು ಹಿರಿಯರು ಹೇಳುತ್ತಾರೆ. ಕೋಟೆಯೊಳಗೆ ಹಜರತ ಮಶಾಕಸಾಲ್ ರೆಹ ಮುತುಲ್ಲಾಹ್ ಅಲ್ಲಾಹ ಎಂಬ ದರ್ಗಾವಿದೆ ಮತ್ತು ಪ್ರಾರ್ಥನೆ ಸಲ್ಲಿಸಲು ಇಲ್ಲೊಂದು ವಿಶಾಲವಾದ ಜಾಮೀಯಾ ಮಜಿದ್ ಕೂಡ ಇದೆ ಮತ್ತು ಈ ಗುಂಬಜಗಳಲ್ಲಿ ಸಮಾಧಿಗಳಿವೆ. ಅವು ೧೦ ರಿಂದ ೧೬ ಅಡಿ ಉದ್ದ ೫ ಅಡಿ ಅಗಲವಾಗಿವೆ. ಸಾಮಾನ್ಯವಾಗಿ ಯಾವುದೇ ಗೋರಿಗಳು ಇಷ್ಟೊಂದು ದೊಡ್ಡದಾಗಿರುವುದಿಲ್ಲ. ಈ ದೊಡ್ಡ ಸಮಾಧಿಗಳು ನೋಡುಗರನ್ನು ಆಶ್ಚರ್ಯವನ್ನುಂ ಟು ಮಾಡುತ್ತವೆ.
ಜೇವರ್ಗಿ
ತಾಲೂಕು ಸ್ಥಳವಾಗಿರುವ ಜೇವರ್ಗಿ ಗುಲಬರ್ಗಾದಿಂದ ಸುಮಾರು ೪೦ ಕಿ.ಮೀ. ದೂರದಲ್ಲಿದೆ. ಇದು ಜೈನಯಾತ್ರಾರ್ಥಿಗಳಿಗೆ ಪ್ರಸಿದ್ಧ ಕೇಂದ್ರವಾಗಿದೆ. ಭೀಮಾನದಿಯ ದಂಡೆಯ ಮೇಲಿರುವ ಇಲ್ಲಿ ಅನೇಕ ಜೈನರ ಬಸದಿಗಳಿವೆ.
ಜಿಲ್ಲೆಯ ಇತರ ವಿಶೇಷತೆಗಳು
ಚಿಂಚೋಳಿ ಅಭಯಾರಣ್ಯ. ನಾರಾಯಣಪುರ ಅಣೆಕಟ್ಟು (ಕೃಷ್ಣಾನದಿ). ಗುಲ್ಬರ್ಗಾ ವಿಶ್ವವಿದ್ಯಾಲಯ ಈ ಜಿಲ್ಲೆಯಲ್ಲಿದೆ. ಮೊದಲ ಆಕಾಶವಾಣಿ (೧೯೭೭) ಪಡೆದ ಜಿಲ್ಲೆ ಮೊದಲ ದೂರದರ್ಶನ ಕೇಂದ್ರ ಪಡೆದ ಜಿಲ್ಲೆ, ತಿಂಥಣಿ ಮೌನೇಶ್ವರ, ಮತ್ತಿತರ ವಿಶೇಷತೆಗಳನ್ನು ಹೊಂದಿದೆ.

ಸ್ವಾತಂತ್ರ್ಯದ ಅರವತಮೂರು ವರ್ಷ
ನಮ್ಮ ಭಾರತಕ್ಕೆ ಸ್ವಾತಂತ್ರ್ಯ ಬಂದು ಇದೇ ಆಗಸ್ಟ್ ೧೫ಕ್ಕೆ ಅರವತ್ತಮೂರು ವರ್ಷಗಳಾದವು. ಆಗ ನನಗೆ ಇಪ್ಪತ್ತು ವರ್ಷ. ಅಲ್ಲಿ ಇಲ್ಲಿ ಸ್ವಲ್ಪಮಟ್ಟಿಗೆ ಸ್ವಾತಂತ್ರ್ಯದ ಚಳವಳಿಯಲ್ಲಿ ಭಾಗವಹಿಸಿದ ನನಗೆ, ಸ್ವಾತಂತ್ರ್ಯದ ಅರ್ಥವೇನು ಎಂಬುದರ ಅರಿವು ಈಗಲೂ ಇದೆ. ೬೩ ವರ್ಷದ ಹಿಂದೆ ೧೯೪೭ರ ಮಧ್ಯರಾತ್ರಿಯಲ್ಲಿ ದೆಹಲಿಯಲ್ಲಿ ಸ್ವಾತಂತ್ರ್ಯೋತ್ಸವವನ್ನು ಆಚರಿಸಿದಾಗ ರಾತ್ರಿ ಇಡೀ ರೇಡಿಯೋ ಮುಂದೆ ಕುಳಿತು ಅಲ್ಲಿ ನಡೆಯುತ್ತಿದ್ದ ವರದಿಯನ್ನು ಕೇಳಿ ಸಂತೋಷಪಟ್ಟಿದ್ದೆವು. ಆಗ ಈಗಿನಂತೆ ದೂರದರ್ಶನ ಇರಲಿಲ್ಲ. ಕಣ್ಣಿನಿಂದ ದೆಹಲಿ ಕಾರ್ಯಕ್ರಮಗಳನ್ನು ಸಾಗರದಲ್ಲಿ ಕುಳಿತು ನೋಡಲು ಸಾಧ್ಯವಿರಲಿಲ್ಲ. ಆಕಾಶವಾಣಿಯಿಂದ ಪ್ರಸಾರವಾಗುವ ಸುದ್ದಿಯೇ ಕಿವಿಗೆ ಅಪ್ಯಾಯಮಾನ. ಜಗತ್ತಿನ ಸುದ್ದಿಗಳನ್ನು ನಮ್ಮ ಮನೆಯಲ್ಲಿ ಕುಳಿತು ತಿಳಿದುಕೊಳ್ಳುತ್ತಿದ್ದೇವಲ್ಲಾ ಎಂಬ ಸಂತೋಷ. ಸಿ.ರಾಜಗೋಪಾಲಚಾರಿಯವರು ಭಾರತದ ಗೌರ್ನರ್ ಜನರಲ್ ಆಗಿ ಅಧಿಕಾರ ಸ್ವೀಕರಿಸಿದ ಸಂದರ್ಭದ ಸಡಗರ. ಜವಾಹರಲಾಲ್‌ರವರು ಭಾರತದ ಪ್ರಥಮ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭ, ಇವೆಲ್ಲವೂ ಅಂದು ನಮಗೆ ರೋಮಾಂಚನವನ್ನುಂಟುಮಾಡಿತ್ತು. ನಾವೇ ಭಾರತದ ಗೌರ್ನರ್ ಜನರಲ್ ಆದಂತೆ, ನಾವೇ ಭಾರತದ ಪ್ರಧಾನಮಂತ್ರಿ ಆದಂತೆ ಸಂತೋಷ ಸಂಭ್ರಮ, ಆನಂದ. ಎಲ್ಲಿ ನೋಡಿದರೂ ಭಾರತಕ್ಕೆ ಸ್ವಾತಂತ್ರ್ಯ ಬಂದ ಆನಂದ. ಗಾಂಧೀಜಿ ಬಗ್ಗೆ ಜನರ ಭಾವನೆಯಲ್ಲಿ ಸಾಕ್ಷಾತ್ ದೇವರು, ಪವಾಡ ಪುರುಷ. ಎಲ್ಲಿಯೂ ಯುದ್ಧ ನಡೆಯದೆ ಗಾಂಧೀಜಿಯವರ ಪ್ರಭಾವದಿಂದ ಎಷ್ಟೊಂದು ಸುಲಭವಾಗಿ ದೇಶಕ್ಕೆ ಸ್ವಾತಂತ್ರ್ಯ ಲಭಿಸಿತು ಎನ್ನುವ ಹೆಗ್ಗಳಿಕೆ. ಗಾಂಧೀಜಿಯ ಮಾತಿಗೆ ಅವರ ಸಾಧನೆಗೆ ಬ್ರಿಟಿಷರು ಎಷ್ಟೊಂದು ಸುಲಭವಾಗಿ ಶರಣಾಗಿ ಭಾರತದಿಂದ ತಮ್ಮ ದೇಶಕ್ಕೆ ಹೊರಟುಹೋದರು ಎಂಬ ಮಾತು ಎಲ್ಲ ಕಡೆಗಳಿಂದಲೂ ನಡೆಯುವ ಚರ್ಚೆಗಳಾಗಿದ್ದವು. ಅಂದಿನ ದಿನಗಳಲ್ಲಿ ರಾಷ್ಟ್ರದ ಬಗ್ಗೆ ಭಾರತೀಯರಿಗಿದ್ದ ರಾಷ್ಟ್ರ ಪ್ರೇಮವನ್ನು ಯಾವ ಅಳತೆಗೋಲಿನಿಂದಲೂ ಅಳೆಯಲೂ ಸಾಧ್ಯವಿರಲಿಲ್ಲ. ಗಾಂಧೀಜಿಯ ಪ್ರಭಾವವಂತೂ ಬಹಳ ದಟ್ಟವಾಗಿ ಬೀರಿತ್ತು. ಅದರಿಂದ ತಪ್ಪಿಸಿಕೊಳ್ಳಲು ಯಾರಿಂದಲೂ ಸಾಧ್ಯವಿರಲಿಲ್ಲ. ಸತ್ಯ, ನ್ಯಾಯ, ನೀತಿ, ಅಹಿಂಸೆ, ನಿಷ್ಕಾಮ ದುಡಿಮೆ, ಸಮಯ ಪಾಲನೆ, ತ್ಯಾಗಬುದ್ಧಿಯಿಂದ ಗಾಂಧೀಜಿ ಇಡೀ ಭಾರತೀಯರನ್ನು ಸಂಪೂರ್ಣ ಆಕರ್ಷಿಸಿದ್ದರು. ಗಾಂಧೀಜಿಯವರ ಮಾತು ಕೇಳುವುದಕ್ಕಿಂತ ಅವರು ನಮ್ಮೊಡನೆ ಇದ್ದರೆಂಬುದೇ ನಮ್ಮೆಲ್ಲರ ಸೌಭಾಗ್ಯವಾಗಿತ್ತು. ಭಾರತ ಇಬ್ಭಾಗವಾಗಿ ಒಂದು ಭಾಗ ಪಾಕಿಸ್ತಾನವಾಗಿ ರೂಪುಗೊಂಡಾಗ ಭಾರತೀಯರಿಗಾದ ನೋವು ಸಂಕಟ ಹೇಳತೀರದು. ಗಾಂಧೀಜಿ ಕೂಡ ಕೊನೆಯ ಗಳಿಗೆಯಲ್ಲಿ ಈ ಇಬ್ಭಾಗವನ್ನು ಒಪ್ಪಿಕೊಳ್ಳಲೇಬೇಕಾಯಿತು. ಗಾಂಧೀಜಿಯವರಿಗೆ ಈಗ ಈ ಭವ್ಯಭಾರತವನ್ನು ರಾಮರಾಜ್ಯವನ್ನಾಗಿ ಮಾಡಬೇಕೆಂಬುದೇ ಅವರ ನಿತ್ಯದ ಕನಸಾಗಿತ್ತು.
ಈ ೬೩ ವರ್ಷಗಳಲ್ಲಿ ಭಾರತ ಏನೇನು ಕಂಡಿದೆ? ಎಂಥವರನ್ನು ಕಂಡಿದೆ? ಹೇಗೆ ನಡೆದು ಬಂದಿದೆ? ಇದನ್ನು ಮಾತ್ರ ಯಾರೂ ನಂಬಲು ಸಾಧ್ಯವಿಲ್ಲದ ಸಂಗತಿ. ಭಾರತಕ್ಕೆ ಸ್ವಾತಂತ್ರ್ಯ ಬಂದು ಇಪ್ಪತ್ತೈದು ವರ್ಷಗಳ ಕಾಲದ ಭಾಗ ಒಂದಾದರೆ ಅನಂತರದ ೩೮ ವರ್ಷಗಳ ಭಾಗ ಇನ್ನೊಂದು. ಈ ಎರಡು ಭಾಗಗಳಿಗೆ ಒಂದಕ್ಕೊಂದು ಸಾಮ್ಯವಿಲ್ಲ. ಅಜಗಜಾಂತರ ವ್ಯತ್ಯಾಸ. ಭಾರತಕ್ಕೆ ಪ್ರಾರಂಭದ ಸರ್ಕಾರವಾಗಿ ಜವಹರಲಾಲ್ ನೆಹರೂರವರ ಸರ್ಕಾರ ಹತ್ತು ವರ್ಷಗಳು ನಡೆದು ಬಂದ ದಾರಿ ಒಂದಾದರೆ, ಅನಂತರ ಮುಂದಿನ ಹದಿನೈದು ವರ್ಷಗಳ ಆಡಳಿತ ನಡೆಸಿದವರ ರೀತಿಯೇ ಬೇರೆ. ನಂತರದ ವರ್ಷಗಳ ಆಡಳಿತ, ಕೇಂದ್ರ ಹಾಗೂ ರಾಜ್ಯಗಳಲ್ಲಿ ಸಂಪೂರ್ಣವಾಗಿ ವ್ಯತ್ಯಯಗೊಂಡವು. ಸರಿಸುಮಾರು ಇತ್ತೀಚಿನ ಇಪ್ಪತ್ತೈದು ವರ್ಷಗಳಲ್ಲಿ, ಸರ್ಕಾರ ಹಾಗೂ ಜನತೆ ಸರಿ ಸಮಾನವೆಂಬಂತೆ ದಾರಿ ತಪ್ಪಿಸಿದವು. ಸರ್ಕಾರದ ನೀತಿಯಂತೂ ಅಗ್ಗದ ಜನಪ್ರಿಯತೆಗಾಗಿ ಕೈಗೊಂಡ ಯೋಜನೆಗಳಿಂದ ಎಲ್ಲಾ ಪಂಚವಾರ್ಷಿಕ ಯೋಜನೆಗಳೂ ವಿಫಲಗೊಂಡವು. ಸಾಮಾಜಿಕ ಹಾಗೂ ಶಿಕ್ಷಣ ಧೋರಣೆಗಳು, ಆರ್ಥಿಕ ನೀತಿ ಇವುಗಳು ಜನವಿರೋಧಿ ನೀತಿಯಾಗಿ ರೂಪುಗೊಂಡವು. ಭಾರತ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ, ತೆರಿಗೆಯ ಪದ್ಧತಿಗಳು, ಕಪ್ಪು ಹಣಗಳಿಗೆ ಕಾರಣವಾದವು.
ಜವಳಿ ಹಾಗೂ ಸಕ್ಕರೆ ನೀತಿಯಂತೂ ಕೈಗಾರಿಕೋದ್ಯಮಿಗಳಿಗೆ ಲಾಭದಾಯಕವಾಗಿ ಜನಸಾಮಾನ್ಯರನ್ನು ದುಃಸ್ಥಿತಿಗೆ ದೂಡುವಂತಾಯಿತು. ಜವಾಹರಲಾಲ್ ನೆಹರೂರವರ ವಿದೇಶಾಂಗ ಧೋರಣೆ ಅವರ ಆಡಳಿತದ ಕೊನೆಯ ದಿನಗಳಲ್ಲಿ ಸಂಪೂರ್ಣ ವಿಫಲವಾಯಿತು. ಇದರಿಂದ ಆರ್ಥಿಕ ನೀತಿಯ ಮೇಲೂ ದುಷ್ಪರಿಣಾಮ ಬೀರಿತೆಂದು ಆರ್ಥಿಕ ತಜ್ಞರು ಇಂದಿಗೂ ಗೊಣಗಾಡುತ್ತಿದ್ದಾರೆ. ಇತ್ತೀಚಿನ ಸರ್ಕಾರದ ಆಹಾರ ನೀತಿಯಿಂದ ಶ್ರೀ ಸಾಮಾನ್ಯನ ಮೇಲೆ ಗದಾಪ್ರಹಾರವಾಗಿದೆ. ತನ್ನ ದುಡಿಮೆ ಸಾಕಾಗದಷ್ಟು ಆಹಾರ ಧಾನ್ಯಗಳ ಬೆಲೆ ಗಗನಕ್ಕೆ ಹೋಗಿವೆ. ದುಡಿಮೆ ಗೌರವಯುತವಾಗಿ ಜೀವಿಸಲು ಸಾಧ್ಯವಿಲ್ಲದವರು ದಾರಿ ತಪ್ಪುತ್ತಿದ್ದಾರೆ. ಇದರ ಪ್ರೇರಣೆಯಿಂದ, ಕಳವು, ದರೋಡೆ, ಕೊಲೆ, ಸುಲಿಗೆಗಳು ಜಾಸ್ತಿಯಾಗಿವೆ. ಇದರಲ್ಲಿ ಅವಿದ್ಯಾವಂತರು ಮಾತ್ರವಲ್ಲ, ನಿರುದ್ಯೋಗಿಗಳಾದ ಪದವೀಧರರೂ ಜೀವಿಸಲು ಕಷ್ಟವಾಗಿ, ಇಂತಹ ಕೆಟ್ಟ ಕೆಲಸಗಳಿಗೆ ಮನಸ್ಸು ಹಾಯಿಸುವ ಪ್ರಸಂಗಗಳು ಪ್ರಾರಂಭವಾಗಿವೆ. ಇದು ಒಂದು ಮುಖವಾದರೆ, ಇನ್ನೊಂದು ಮುಖ ಇನ್ನೂ ಘೋರವಾದದ್ದು.
ಜನರಿಂದ ಆರಿಸಿ ಹೋದ ನಮ್ಮ ಪ್ರತಿನಿಧಿಗಳಂತೂ ಯಾವ ಕಳ್ಳನಿಗೂ, ದರೋಡೆ ಕೋರನಿಗೂ ಕಮ್ಮಿ ಇಲ್ಲವೆಂಬಂತೆ ವರ್ತಿಸಿದ್ದಾರೆ. ರಾಷ್ಟ್ರದ ಚಿಂತನೆ ಇಲ್ಲದ ಇವರು ತಮ್ಮ ಚಿಂತನೆಯಲ್ಲಿಯೇ ಸದಾ ಕಾಲ ಇದ್ದು, ದೇಶದ ಸಂಪತ್ತನ್ನೆಲ್ಲಾ ಅವಕಾಶ ಸಿಕ್ಕಿದಾಗಲೆಲ್ಲಾ ಕೊಳ್ಳೆ ಹೊಡೆದಿದ್ದಾರೆ. ಅದಕ್ಕೆ ಬೇಕಾದಷ್ಟು ಸಾಕ್ಷ್ಯಾಧಾರಗಳು ಜನತೆಯ ಕಣ್ಣ ಮುಂದೆ ಇವೆ. ವಂಚನೆ, ಮೋಸ, ಅಕ್ರಮ ಸಂಪತ್ತುಗಳನ್ನು ಗಳಿಸಿ ಸಿಕ್ಕಿಸಿಕ್ಕಿದ್ದನ್ನೆಲ್ಲಾ ಮುಕ್ಕಿದ ಮಹಾನುಭಾವರು ಇಂದು ಸೆರೆಮನೆ ಸೇರಿದ್ದಾರೆ. ಅಂದು ಸ್ವಾತಂತ್ರ್ಯಕ್ಕಾಗಿ ಸತ್ಯಾಗ್ರಹ ನಡೆಸಿ ಸೆರೆಮನೆ ಸೇರಿದರೆ, ಇಂದು ಸ್ವಾತಂತ್ರ್ಯ ಪಡೆದ ರಾಷ್ಟ್ರದಲ್ಲಿಯೇ ಅಕ್ರಮವೆಸಗಿ ಸೆರೆಮನೆ ಸೇರುತ್ತಿದ್ದಾರೆ. ಇದರಲ್ಲಿ ಬಹುಪಾಲು ಜನತೆಯಿಂದ ಆರಿಸಲ್ಪಟ್ಟ ಜನತಾ ಪ್ರತಿನಿಧಿಗಳು. ಇದಕ್ಕೆ ಕಾರಣ ನಾವು ಜನಪ್ರತಿನಿಧಿಗಳನ್ನು ಆರಿಸುವ ಕ್ರಮ. ಇದು ಈ ೬೩ ವರ್ಷಗಳಲ್ಲಿ ಸ್ವಾತಂತ್ರ್ಯ ಅನುಭವಿಸಿದ ಫಲ. ಮುಂದಿನ ದಿನಗಳು ಹೇಗೆಂಬುದನ್ನು ಕಾದು ನೋಡಬೇಕಾಗಿದೆ.
ವಿಧಾನಸಭೆ, ಲೋಕಸಭೆಗಳಂತೂ ಬೀದಿಯ ಜಗಳವಾಗಿ, ಉಗ್ರ ರೂಪ ತಾಳುತ್ತಿದೆ. ಜನಪ್ರತಿನಿಧಿಗಳನ್ನು ಆರಿಸಿ ಕಳಿಸಿದ, ಮತದಾರ ನಾಚಿಕೆ ಪಟ್ಟು, ತಲೆ ತಗ್ಗಿಸುವಂತಾಗಿದೆ. ಇದರಿಂದ ಜನಪ್ರತಿನಿಧಿಗಳು ಎಂದು ಹೇಳಿಕೊಳ್ಳುವವರು ಅವರವರ ರಾಜಕೀಯ ಪಕ್ಷಗಳ ಗೌರವ, ಘನತೆಯನ್ನು ಹಾಳುಮಾಡಿ, ತಾವೇ ಮಾಧ್ಯಮಗಳಲ್ಲಿ ಮಿಂಚುತ್ತಿರುವುದನ್ನು ನೋಡಿದರೆ ಅಸಹ್ಯವಾಗುತ್ತಿದೆ. ನಮ್ಮ ರಾಷ್ಟ್ರದ ಮುಂದಿನ ದಿನಗಳು ಏನಾಗಬಹುದೆಂದು ಜನಸಾಮಾನ್ಯರು ಚಿಂತೆ ಪಡುವಂತಾಗಿದೆ.

ಟಿ.ಮಹಾಬಲೇಶ್ವರ ಭಟ್ಟ

Thursday, August 5, 2010

ಮಾತನಾಡಿದ್ದು ಸಾಕು; ಕೆಲಸ ಮಾಡಬೇಕು

ಕಳಸಾ-ಬಂಡೂರಿ ಎಂದೊಡನೆಯೆ ಉತ್ತರ ಕರ್ನಾಟಕದ ಅದರಲ್ಲೂ ಬೆಳಗಾವಿ, ಧಾರವಾಡ, ಗದಗ, ವಿಜಾಪುರ ಜಿಲ್ಲೆಗಳ ಜನರ ಕಿವಿಗಳು ಅಗಲವಾಗುತ್ತವೆ. ಕರ್ನಾಟಕದ ಜನತೆ ತಮ್ಮ ಪಾಲಿನ ನೀರನ್ನು ಬಳಸಿಕೊಳ್ಳಲು ಮೀನಮೇಷ ಎಣಿಸುವಂತಾಗಿರುವ ಈ ಯೋಜನೆ ಧಾರವಾಡ ಜಿಲ್ಲೆಯಲ್ಲಂತೂ ಬೂದಿಮುಚ್ಚಿದ ಕೆಂಡದಂತಿದೆ.
ಕರ್ನಾಟಕದ ಗಡಿಭಾಗದ ಪಶ್ಚಿಮ ಘಟ್ಟ ಪ್ರದೇಶದ ದಟ್ಟ ಕಾನನದಲ್ಲಿ ಉಗಮವಾಗುವ ಕಳಸಾ ಮತ್ತು ಬಂಡೂರಾಗಳು ನದಿಗಳೇನಲ್ಲ. ಮುಂದೆ ಮಹದಾಯಿ (ಗೋವಾದಲ್ಲಿ ಮಾಂಡೋವಿ) ನದಿಗೆ ಸೇರುವ ಹಳ್ಳಗಳು (ನಾಲಾಗಳು). ಮಹದಾಯಿ ನದಿಯೂ ಕರ್ನಾಟಕದಲ್ಲಿ ಉಗಮವಾಗಿ ಗೋವಾದಲ್ಲಿ ಹರಿದು ಅರಬ್ಬಿಸಮುದ್ರ ಸೇರುತ್ತದೆ.
ಮಹದಾಯಿ ನದಿಯಲ್ಲಿ ಸುಮಾರು ೧೮೦-೨೨೦ ಟಿಎಂಸಿಯಷ್ಟು ನೀರಿದೆ. ಇದರಲ್ಲಿ ಕರ್ನಾಟಕ ತನ್ನ ಹಕ್ಕಿನ ೪೫ ಟಿಎಂಸಿ ನೀರನ್ನು ಬಳಸಿಕೊಳ್ಳಬಹುದಾಗಿದೆ. ಆದರೆ, ಮಹದಾಯಿ ಪಶ್ಚಿಮಘಟ್ಟ ಅರಣ್ಯ ಪ್ರದೇಶದಲ್ಲಿ ಹರಿಯುವುದರಿಂದ ಕೇಂದ್ರ ಅರಣ್ಯ ಇಲಾಖೆ ಅನುಮತಿ ಇಲ್ಲದೆ ಯಾವುದೇ ಕಾಮಗಾರಿ ನಡೆಸುವುದು ಕಷ್ಟವಾಗಿದೆ.
ಕಳಸಾ ಮತ್ತು ಬಂಡೂರಿ ನಾಲಾಗಳೂ ಪಶ್ಚಿಮ ಘಟ್ಟ ಪ್ರದೇಶದಲ್ಲಿಯೇ ಜನಿಸುತ್ತವೆ. ಕಳಸಾ ಮೇಲ್ಭಾಗದ ಮಾನ್ ಹತ್ತಿರ ಹುಟ್ಟಿದರೆ, ಬಂಡೂರಿ ಖಾನಾಪುರ ಬಳಿ ಅಮಗಾಂವ ಹತ್ತಿರ ಜನಿಸುತ್ತದೆ,
ಕಳಸಾ ಬಂಡೂರಿ ನೀರನ್ನು ಮಲಪ್ರಭಾ ನದಿಗೆ ಸೇರಿಸುವ ಮೂಲಕ ೭.೫ ಟಿಎಂಸಿಯಷ್ಟು ನೀರನ್ನು ಪಡೆಯುವ ಯೋಜನೆ ಕರ್ನಾಟಕ ಸರಕಾರದ್ದಾಗಿದೆ. ಇದಕ್ಕಾಗಿ ದಶಕಗಳ ಕಾಲ ಹೋರಾಟ ನಡೆದಿದೆ. ಈ ೭.೫ ಟಿಎಂಸಿ ನೀರನ್ನು ಹುಬ್ಬಳ್ಳಿ-ಧಾರವಾಡ ಅವಳಿ ನಗರ ಸೇರಿದಂತೆ ಉತ್ತರ ಕರ್ನಾಟಕದ ಪ್ರಮುಖ ನಗರ, ಪಟ್ಟಣಗಳಿಗೆ ಕುಡಿಯುವ ನೀರೊದಗಿಸುವುದು ರಾಜ್ಯ ಸರಕಾರದ ಉದ್ದೇಶವಾಗಿದೆ,
ಆದರೆ, ಈವರೆಗೆ ಅಧಿಕಾರಕ್ಕೆ ಬಂದಿರುವ ಎಲ್ಲ ಸರಕಾರಗಳು ಮತ್ತು ಆಯ್ಕೆಯಾಗಿ ಹೋಗಿರುವ ಜನಪ್ರತಿನಿಧಿಗಳಿಗೆ ಅಧಿಕಾರ ಗದ್ದುಗೆ ಏರಲು ಕಳಸಾ-ಬಂಡೂರಿ ಯೋಜನೆ ಬೇಕಾಗಿದೆಯೇ ವಿನಃ ಅಧಿಕಾರಕ್ಕೆ ಬಂದೊಡನೆ ಎಲ್ಲರೂ ಜಾಣಮೌನ ತಾಳುವವರೇ ಆಗಿದ್ದಾರೆ,
ಕಳಸಾ-ಬಂಡೂರಿ ಹೋರಾಟದಿಂದಲೇ ಗದ್ದುಗೆ ಏರಿದವರು ಸಾಕಷ್ಟು ಜನರಿದ್ದಾರೆ. ಈಗ ಸಚಿವರಾಗಿರುವ ಜಗದೀಶ ಶೆಟ್ಟರ, ಬಸವರಾಜ ಬೊಮ್ಮಾಯಿ, ಸಂಸದರಾದ ಸುರೇಶ ಅಂಗಡಿ, ಪ್ರಹ್ಲಾದ ಜೋಶಿ, ಶಾಸಕರಾದ ಶಂಕರ ಪಾಟೀಲ ಮುನೇನಕೊಪ್ಪ, ಸಿ.ಸಿ. ಪಾಟೀಲ, ಮಾಜಿಗಳಾದ ಕೆ.ಎನ್. ಗಡ್ಡಿ, ಎಚ್ಕೆ ಪಾಟೀಲ, ಡಾ. ರವಿ ಶಿರಿಯಣ್ಣವರ ಮೊದಲಾದವರೆಲ್ಲ ಒಂದಿಲ್ಲೊಂದು ರೀತಿಯಿಂದ ಕಳಸಾ-ಬಂಡೂರಿ ಹೋರಾಟದಿಂದಲೇ ರಾಜಕೀಯವಾಗಿ ಮೇಲೆ ಬಂದವರಾದರೂ ಹತ್ತಿದ ಬಳಿಕ ಏಣಿಯನ್ನೇ ಒದ್ದಿದ್ದಾರೆ.
ಕಳಸಾ-ಬಂಡೂರಿ ವಿಷಯ ಪ್ರಥಮ ಬಾರಿಗೆ ಬದಾಮಿ ಶಾಸಕ ಹೊರಕೇರಿ ಎಂಬವರ ತಲೆಯಲ್ಲಿ ಮೊಳಕೆಯೊಡೆಯಿತು. ಅವರು ಈ ಕುರಿತುಸಾಕಷ್ಟು ಮಾಹಿತಿ ಸಂಗ್ರಹಿಸಿದರಲ್ಲದೆ ಜನಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು. ಆಗ ಅವರ ಮಾತುಗಳನ್ನು ಯಾರೂ ಗಂಭೀರವಾಗಿ ಪರಿಗಣಿಸಲೇ ಇಲ್ಲ. ನಂತರ ನರಗುಂದದ ವಿಜಯ ಕುಲಕರ್ಣಿ ಎಂಬವರು ಕಳಸಾ-ಬಂಡೂರಿ ಕುರಿತು ಅಧ್ಯಯನ ಮಾಡಿ ಈ ನಾಲೆಗಳನ್ನು ಮಲಪ್ರಭಾ ನದಿಗೆ ಸೇರಿಸುವುದರಿಂದ ಆಗುವ ಪ್ರಯೋಜನಗಳನ್ನು ರೈತರಿಗೆ ತಿಳಿ ಹೇಳಿದರು. ಈ ಹಂತದಲ್ಲಿ ಎನ್.ಎಚ್. ಕೋನರಡ್ಡಿ, ದೇವರಡ್ಡಿ ಮತ್ತು ನ್ಯಾಯವಾದಿ ಬಿ.ವಿ.ಸೋಮಾಪುರ ಕೂಡ ಕೈಜೋಡಿಸಿ ಇದಕ್ಕಾಗಿ ಹೋರಾಟವೊಂದನ್ನು ಹುಟ್ಟುಹಾಕುವ ಕುರಿತು ಚರ್ಚಿಸಿದರು.
ಕಳಸಾ-ಬಂಡೂರಿ ನಾಲಾ ಮಲಪ್ರಭಾ ನದಿ ಜೋಡಣಾ ಹೋರಾಟ ಸಮಿತಿ ಮತ್ತು ರೈತಹಿತರಕ್ಷಣಾ ಸಮಿತಿಯನ್ನು ಹುಟ್ಟುಹಾಕಿ ಹೋರಾಟಕ್ಕೆ ನಾಂದಿ ಹಾಡಲಾಯಿತು. ಈಗಲೂ ಕಳಸಾ-ಬಂಡೂರಿ ಹೋರಾಟ ಎಂದ ಕೂಡಲೇ ನವಲಗುಂದ ಮತ್ತು ನರಗುಂದಗಳಲ್ಲಿ ಸ್ವಯಂಘೋಷಿತ ಬಂದ್ ಆಚರಿಸಲಾಗುತ್ತದೆ. ರೈತರು ಸಹಸ್ರ ಸಂಖ್ಯೆಯಲ್ಲಿ ಬೀದಿಗಿಳಿಯುತ್ತಾರೆ. ಹಸಿರು ಟವೆಲ್ ಹೆಗಲ ಮೇಲೆ ಹಾಕಿ ರೈತ ಹೋರಾಟಕ್ಕಿಳಿದರೆ ಸರಕಾರಗಳೇ ನಡುಗುತ್ತವೆ,
ನರಗುಂದ ಬಂಡಾಯದ ವಿಷಯ ತಿಳಿದವರಂತೂ ಈ ಭಾಗದ ರೈತರು ಬೀದಿಗಿಳಿದರೆ ಸರಕಾರಗಳಿಗೆ ಉಳಿಗಾಲವಿಲ್ಲ ಎಂದೇ ಭಾವಿಸುತ್ತಾರೆ, ಕಳಸಾ-ಬಂಡೂರಿಗಾಗೇ ನಡೆದ ಹೋರಾಟದಲ್ಲಿ ಇಬ್ಬರು ರೈತರು ಹುತಾತ್ಮರಾಗಿರುವುದೂ ಎಲ್ಲರಿಗೂ ತಿಳಿದ ವಿಷಯವೇ ಆಗಿದೆ.
ಇಷ್ಟೆಲ್ಲ ಹೋರಾಟ ಮಾಡಿದರೂ ರೈತರಿಗೆ ನೀಡಿದ ಭರವಸೆಗಳನ್ನು ಯಾವುದೇ ಸರಕಾರಗಳೂ ಈಡೇರಿಸಿಲ್ಲ. ಶಂಕರ ಪಾಟೀಲ ಮುನೇನಕೊಪ್ಪ ಮತ್ತು ಅವರ ರಾಜಕೀಯ ಗುರು ಬಸವರಾಜ ಬೊಮ್ಮಾಯಿ ಅಧಿಕಾರ ಸಿಕ್ಕ ಬಳಿಕ ಮಾಡಿದ ಮೊದಲ ಪ್ರಯತ್ನವೆಂದರೆ ಹೋರಾಟ ಸಮಿತಿಯನ್ನು ಒಡೆದು ಬಲಹೀನಗೊಳಿಸಿದ್ದು. ಇಷ್ಟಾದರೂ ರೈತರ ಹೋರಾಟದ ಕಾವು ಇಂಗಿಲ್ಲ. ಈಗಲೂ ಕಳಸಾ ಬಂಡೂರಿ ಹೆಸರು ಕೇಳಿದೊಡನೆ ಜನತೆ ಬೀದಿಗಿಳಿಯುತ್ತಾರೆ. ಈಗಲೂ ಕಾಲ ಮಿಂಚಿಲ್ಲ ಮುಂದಾದರೂ ಸರಕಾರ ಪ್ರಾಮಾಣಿಕ ಪ್ರಯತ್ನ ಮಾಡಲಿ. ಮಲಪ್ರಭೆಗೆ ಕಳಸಾ ಬಂಡೂರಿ ನೀರು ಹರಿಸುವ ಮೂಲಕ ಉತ್ತರ ಕರ್ನಾಟಕದ ಜನತೆಯ ನೀರಿನ ದಾಹ ತೀರಿಸಲಿ.
ಏನಿದು ಯೋಜನೆ?
ಪಶ್ಚಿಮ ಘಟ್ಟದಲ್ಲಿ ಹುಟ್ಟಿ ಅರಣ್ಯದಲ್ಲೇ ಹರಿದು ಮಹದಾಯಿ ನದಿ ಸೇರುವ ಕಳಸಾ ಮತ್ತು ಬಂಡೂರಿ ನಾಲೆಗಳ ನೀರನ್ನು ಮಲಪ್ರಭಾ ನದಿಗೆ ತಿರುಗಿಸಿ ಉತ್ತರ ಕರ್ನಾಟಕದ ಬಹುತೇಕ ನಗರ, ಪಟ್ಟಣಗಳಿಗೆ ಕುಡಿಯುವ ನೀರೊದಗಿಸುವ ರಾಜ್ಯ ಸರಕಾರದ ಈ ಯೋಜನೆ ಪ್ರಾಮಾಣಿಕ ಅನುಷ್ಠಾನಕ್ಕೆ ಯಾರಲ್ಲೂ ರಾಜಕೀಯ ಇಚ್ಛಾಶಕ್ತಿಯೇ ಇಲ್ಲವಾಗಿದೆ.
ಖಾನಾಪುರ ತಾಲೂಕಿನ ನೇರ್ಸಾ ಬಳಿ ಬಂಡೂರಿ ಮತ್ತು ಮಲಪ್ರಭಾ ಉಗಮವಾಗುವ ಕಣಕುಂಬಿ ಬಳಿ ಕಳಸಾ ನಾಲೆಗಳ ನೀರನ್ನು ಮಲಪ್ರಭಾ ನದಿಗೆ ತಿರುಗಿಸುವುದು ಯೋಜನೆಯ ಮೂಲ ಉದ್ದೇಶವಾಗಿದೆ. ಮುಕ್ಕಾಲು ಭಾಗದಲ್ಲಿ ಕಾಮಗಾರಿ ಕೈಗೊಳ್ಳಲು ಯಾವುದೇ ಅಡ್ಡಿಯಿಲ್ಲ. ಆದರೆ, ಮುಖ್ಯಹಂತದ ಕಾಮಗಾರಿಗೆ ಮಾತ್ರ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಯ ಅನುಮತಿ ಅತ್ಯವಶ್ಯವಾಗಿದೆ.
ಯೋಜನೆಗೆ ಅನುಮತಿ ನೀಡಲೇಬಾರದೆಂದು ಗೋವಾ ಸರಕಾರ ಸುಪ್ರೀಕೋರ್ಟಿನಲ್ಲಿ ಮೊಕದ್ದಮೆ ಹೂಡಿದೆ. ಮಹದಾಯಿ ನದಿ ನೀರಿನ ಒಂದೇಒಂದು ಹನಿಯನ್ನೂ ಬಳಸದೇ ಇರುವ ಈ ಯೋಜನೆಗೆ ಸುಖಾಸುಮ್ಮನೆ ಅಡ್ಡಿಯುಂಟು ಮಾಡುತ್ತಿರುವ ಗೋವಾ ವಾದದಲ್ಲಿ ಹುರುಳಿಲ್ಲವೆಂಬುದು ಕೇಂದ್ರ ಸರಕಾರಕ್ಕೆ ಗೊತ್ತಿರುವ ವಿಚಾರವೇ ಆಗಿದೆ. ಇಷ್ಟಾದರೂ ರಾಜಕೀಯ ಕಾರಣಗಳಿಗಾಗಿ ಕೇಂದ್ರ ಸರಕಾರ ಗೋವಾದ ವಾದದ ನೆಪ ಮುಂದೆ ಹಿಡಿದು ಕರ್ನಾಟಕದ ವಾದವನ್ನು ತಿರಸ್ಕರಿಸುತ್ತಲೇ ಇದೆ.
ಕುಡಿಯುವ ನೀರಿನ ಯೋಜನೆಗೆ ಯಾವುದೇ ಅಡ್ಡಿ ಉಂಟಾಗಲಾರದು ಎಂದು ಸುಪ್ರೀಂ ಕೋರ್ಟ್ ಬೇರೆ ಬೇರೆ ಪ್ರಕರಣಗಳಲ್ಲಿ ಸಾಕಷ್ಟು ಬಾರಿ ತೀರ್ಪು ನೀಡಿಯಾಗಿದೆ. ಹೊಗೇನಕಲ್‌ನಲ್ಲಿ ಕುಡಿಯುವ ನೀರಿನ ಯೋಜನೆಯ ನೆಪ ಹೇಳಿ ಬೇರೆ ಬೇರೆ ಕಾಮಗಾರಿ ನಡೆಸಲು ತಮಿಳುನಾಡಿಗೆ ಅವಕಾಶ ನೀಡುವ ಕೇಂದ್ರ ಸರಕಾರ ಕಳಸಾ-ಬಂಡೂರಿ ವಿಷಯದಲ್ಲಿ ಕರ್ನಾಟಕಕ್ಕೆ ತಾರತಮ್ಯ ಧೋರಣೆ ಅನುಸರಿಸುತ್ತಿದೆ.
ಎಲ್ಲರೂ ಒಂದೆ...
ರಾಜ್ಯದಲ್ಲಿ ಸದ್ಯ ಅಧಿಕಾರದಲ್ಲಿರುವ ಬಿಜೆಪಿ ಹಿಂದೆ ಕೇಂದ್ರದಲ್ಲಿದ್ದ ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರವೇ ಯೋಜನೆಯನ್ನು ಹದಗೆಡಿಸಿದ್ದು ಎಂಬ ಸತ್ಯವನ್ನು ಮುಚ್ಚಿಟ್ಟು, ಯೋಜನೆಯ ಹೆಸರಿನಲ್ಲಿ ಬಿಟ್ಟಿ ಪ್ರಚಾರ ಪಡೆಯುತ್ತಿದೆ. ರೈತರ ಹೆಸರಿನಲ್ಲಿ ಕಣ್ಣೀರು ಸುರಿಸುತ್ತ ರೈತರ ಬೆನ್ನೆಲುಬಾಗಿ ಕಾರ್ಯ ನಿರ್ವಹಿಸುತ್ತೇನೆಂದು ಮಾತಿಗೊಮ್ಮೆ ಪ್ರಮಾಣ ಮಾಡುವ ಮುಖ್ಯಮಂತ್ರಿ ಯಡಿಯೂರಪ್ಪ ಕಳಸಾ-ಬಂಡೂರಿ ವಿಷಯದಲ್ಲಿ ಕಿಂಚಿತ್ತೂ ಕಾಳಜಿ ವಹಿಸದೆ ಇರುವುದು ಮೇಲ್ನೋಟಕ್ಕೇ ಕಾಣುತ್ತದೆ.
ಸದ್ಯ ಜಲ ಸಂಪನ್ಮೂಲ ಸಚಿವರಾಗಿರುವ ಬಸವರಾಜ ಬೊಮ್ಮಾಯಿ ಕೂಡ ಕಳಸಾ-ಬಂಡೂರಿ ಹೋರಾಟದಿಂದಲೇ ರಾಜಕೀಯ ನೆಲೆ ಕಂಡುಕೊಂಡಿದ್ದಾರಾದರೂ ಒಂದಿಂಚೂ ನಾಲಾ ಕುರಿತು ಕೆಲಸ ಮಾಡಲು ಸಾಧ್ಯವಾಗಿಲ್ಲ ಅಥವಾ ಮಾಡಲು ಮನಸ್ಸಿಲ್ಲ. ಬಸವರಾಜ ಬೊಮ್ಮಾಯಿ ತಂದೆ ಎಸ್.ಆರ್. ಬೊಮ್ಮಾಯಿಯವರೇ ಮುಖ್ಯಮಂತ್ರಿಯಾಗಿದ್ದಾಗ ಪ್ರಥಮ ಬಾರಿಗೆ ಕಳಸಾ-ಬಂಡೂರಿ ಯೋಜನೆಗೆ ಚಾಲನೆ ನೀಡಿದ್ದರು. ಅಪ್ಪ ಕಂಡ ಕನಸು ಈಡೇರಿಸುವಲ್ಲಿ ಮಗ ವಿಫಲನಾಗಿದ್ದಾನೆ,
ಇನ್ನು ಐದು ದಶಕಗಳ ಕಾಲ ರಾಜ್ಯವನ್ನಾಳಿದ ಕಾಂಗ್ರೆಸ್ ಪರಿಸ್ಥಿತಿಯೂ ಭಿನ್ನವೇನಲ್ಲ. ಉತ್ತರ ಕರ್ನಾಟಕ ಕುರಿತು ಮೊದಲಿನಿಂದಲೂ ತಾರತಮ್ಯ ಧೋರಣೆ ತಾಳುತ್ತಲೇ ಬಂದಿರುವ ಕಾಂಗ್ರೆಸ್‌ನ ಯಾವುದೇ ಮುಖ್ಯಮಂತ್ರಿಗಳೂ ಯೋಜನೆ ಕುರಿತು ಗಂಭೀರ ಪ್ರಯತ್ನಗಳನ್ನು ಮಾಡಲೇ ಇಲ್ಲ. ಎಚ್.ಕೆ. ಪಾಟೀಲ ಜಲ ಸಂಪನ್ಮೂಲ ಸಚಿವರಾಗಿದ್ದಾಗ ಈ ಕುರಿತು ಕಾಳಜಿ ವಹಿಸಿದರಾದರೂ ಆಗಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ದೂ(ದು)ರಾಲೋಚನೆಯಿಂದ ಎಚ್ಕೆ ಪ್ರಯತ್ನಗಳಿಗೆ ಕಲ್ಲು ಹಾಕಿದರು.
ಜನತಾದಳ ಸರಕಾರಗಳೂ ಇತ್ತ ಕಡೆ ಗಮನ ಹರಿಸಲೇ ಇಲ್ಲ. ರಾಮಕೃಷ್ಣ ಹೆಗಡೆ, ಎಚ್.ಡಿ. ದೇವೇಗೌಡ, ಜೆ.ಎಚ್. ಪಟೇಲ್, ಎಚ್.ಡಿ. ಕುಮಾರಸ್ವಾಮಿ ಮೊದಲಾದವರು ಮುಖ್ಯಮಂತ್ರಿಗಳಾದರೂ ಉತ್ತರ ಕರ್ನಾಟಕ ಜನತೆಯ ದಾಹ ನೀಗಿಸಲಿದ್ದ ಈ ಯೋಜನೆಗೆ ಆದ್ಯತೆ ನೀಡಲೇ ಇಲ್ಲ.
ಕರವೇ ಹೋರಾಟ
ಕಳಸಾ ಬಂಡೂರಿ ಯೋಜನೆಯ ಪ್ರತಿ ಹೋರಾಟದಲ್ಲೂ ಕರ್ನಾಟಕ ರಕ್ಷಣಾ ವೇದಿಕೆ ಪ್ರಾಮಾಣಿಕವಾಗಿ ಸ್ಪಂದಿಸಿದೆ. ನಾಡು-ನುಡಿ, ಪರಂಪರೆ, ಸಂಸ್ಕೃತಿಯ ರಕ್ಷಣೆಗೆ ಸದಾ ಮಿಡಿಯುತ್ತ, ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡುತ್ತಲೇ ಬಂದಿರುವ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡರ ನೇತೃತ್ವದ ಕರವೇ ಧಾರವಾಡ ಜಿಲ್ಲಾ ಘಟಕವಂತೂ ಕಳಸಾ ಬಂಡೂರಿಯನ್ನು ಗಂಭೀರವಾಗಿ ಪರಿಗಣಿಸಿದೆ.
ನೂರಾರು ಕಾರ್ಯಕರ್ತರನ್ನು ಮಲಪ್ರಭಾ ಉಗಮ ಸ್ಥಾನ ಕಣಕುಂಬಿಗೆ ಕರೆದೊಯ್ದು, ಕಳಸಾ-ಬಂಡೂರಿ ಯೋಜನೆಯ ನೈಜ ಸ್ಥಿತಿಯನ್ನು ಅಧ್ಯಯನ ಮಾಡಿದೆ. ನಿಯೋಗ ತೆರಳಿದ ಸಂದರ್ಭದಲ್ಲೇ ಕಾಮಗಾರಿ ನಡೆಸುತ್ತಿದ್ದವರು ಈ ಕಾಮಗಾರಿ ಕಳಸಾ ಬಂಡೂರಿಗೆ ಸಂಬಂಧಿಸಿದ್ದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇಷ್ಟೆಲ್ಲ ಇದ್ದರೂ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಪ್ರತಿಬಾರಿ ಈ ಭಾಗಕ್ಕೆ ಬಂದಾಗ ಕಳಸಾ- ಬಂಡೂರಿಗಾಗಿ ಸರಕಾರ ಕೋಟ್ಯಂತರ ಹಣ ಖರ್ಚು ಮಾಡಿದೆ ಎಂದು ಕಾಗದದ ದಾಖಲೆಗಳನ್ನು ತೋರಿಸಿ ಪ್ರಚಾರ ಪಡೆಯುತ್ತಿದ್ದಾರೆ. ಒಂದೊಮ್ಮೆ ಜನರಿಗೆ ವಾಸ್ತವ ಪರಿಸ್ಥಿತಿಯ ಅರಿವು ಆದಲ್ಲಿ ಬೀದಿಗಿಳಿದು ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವುದಂತೂ ಗ್ಯಾರಂಟಿ.


ರಮೇಶ್ ಬದ್ನೂರ

ಶಿಕ್ಷಣದಲ್ಲಿ ಕನ್ನಡ ಕಡ್ಡಾಯ; ಒಂದು ಚಿಂತನೆ

ಕನ್ನಡವೇ ಕರ್ನಾಟಕದ ಶಿಕ್ಷಣ ಮಾಧ್ಯಮ ಆಗಬೇಕು. ಆಡಳಿತ ಭಾಷೆಯಾಗಬೇಕು-ವಾಲ್ಟರ್ ಈಲಿಯಟ್‌ನ ನುಡಿ. ಮಾತೃಭಾಷೆಯ ಸ್ಥಾನವನ್ನು ಯಾವುದೇ ಭಾಷೆಯು ತುಂಬಲು ಸಾಧ್ಯವಿಲ್ಲ-ಎಂ.ಎಫ್.ಲಾಂಗ್‌ಹಾರ್ನ್.
ಬ್ರಿಟೀಷರಿಂದ ಇಂಗ್ಲೀಷ್ ಭಾಷೆ ಭಾರತಕ್ಕೆ ಕಾಲಿಟ್ಟಿತು. ವೇದ, ಉಪನಿಷತ್ತು, ಸಂಸ್ಕೃತದ ಕಲಿಕೆ ಕಡಿಮೆಯಾಯಿತು. ಇಂಗ್ಲೀಷ್‌ಗೆ ಅಂತರ್‌ರಾಷ್ಟ್ರೀಯ ಭಾಷೆಯ ಸ್ಥಾನ-ಮಾನ ದೊರೆತಿದ್ದರಿಂದ ಇಂಗ್ಲೀಷ್ ಕಲಿಯುವುದು ಅನಿವಾರ್ಯ ಆಯಿತು. ಹೊಸ ಭಾಷೆಯನ್ನು ಹೊಸ ಹುರುಪಿನಿಂದ ಕಲಿತು ನಮ್ಮದಾಗಿಸಿಕೊಂಡ ನಾವು ನಮ್ಮ ಕನ್ನಡ ಭಾಷೆಯನ್ನು ದೂರ ಮಾಡಿದೆವು. ಬ್ರಿಟೀಷರು ಸ್ವಾತಂತ್ರ್ಯ ಕೊಟ್ಟು ಹೋದರೂ ಅವರ ದೇಶದ ಭಾಷೆಯ ಮೇಲಿನ ವ್ಯಾಮೋಹ ಕಡಿಮೆ ಆಗಲಿಲ್ಲ. ಬದಲಾಗಿ ಹೆಚ್ಚಾಯಿತು. ಪರಿಣಾಮ, ಇಂಗ್ಲೀಷ್ ಕಲಿಕೆ ದೇಶದಲ್ಲಿ ಸಾರ್ವತ್ರಿಕ ಭಾಷೆಯಾಯಿತು. ಪರಭಾಷೆ ಕಲಿಯುವ ಭರಾಟೆಯಲ್ಲಿ ಪ್ರಾದೇಶಿಕ ಭಾಷೆಗಳು ಮೂಲೆಗುಂಪಾದವು. ಕನ್ನಡವೇ ಕರ್ನಾಟಕದ ಶಿಕ್ಷಣ ಮಾಧ್ಯಮ ಆಗಬೇಕು ಎಂದ ಈಲಿಯಟ್‌ನ ಮಾತುಗಳಿಗೆ ಬೆಲೆ ಇಲ್ಲವಾಯಿತು.
ಕರ್ನಾಟಕದಲ್ಲಿ ಕನ್ನಡ ಭಾಷೆಯನ್ನು ಉಳಿಸಲು ಈಗ ನಾವು ಇಂದಿನ ಮಕ್ಕಳ ಮೇಲೆ ಬಲವಂತ ಮಾಘಸ್ನಾನ ಮಾಡಿಸಬೇಕಾದ ಪರಿಸ್ಥಿತಿ ಬಂದಿದೆ. ತಲೆಯ ಮೇಲೆ ಕನ್ನಡ ಪುಸ್ತಕಗಳನ್ನು ಹೊತ್ತು ಬೀದಿ ಬೀದಿ ತಿರುಗಿ ಪುಸ್ತಕಗಳನ್ನು ಮಾರಿ ಕನ್ನಡ ಪ್ರಚಾರ ಮಾಡಿದರು ಆಲೂರು ವೆಂಕಟರಾಯರು. ಇಂತಹ ನಾಡಿನಲ್ಲಿ ಈಗ ಕನ್ನಡ ಭಾಷೆ ಸಂಪೂರ್ಣ ಮರೆ ಆಗುವ ಹಂತ ತಲುಪಿದೆ. ನಮ್ಮ ಭಾಷೆಯ ಬಗ್ಗೆ ನಮಗೆ ಒಲವು ಇಲ್ಲದಿರುವುದೇ ಇದಕ್ಕೆಲ್ಲ ಕಾರಣ. ಇಂತಹ ಪರಿಸ್ಥಿತಿಯ ನಿರ್ಮಾಣಕ್ಕೆ ಮುಖ್ಯ ಕಾರಣ ನಮ್ಮನ್ನು ಆಳುವವರು, ಕೇವಲ ಇಂಗ್ಲೀಷ್ ಕಲಿಕೆ ಒಂದರಿಂದನೇ ನಮ್ಮ ಪ್ರಗತಿಯಲ್ಲ ಅನ್ನುವುದನ್ನು ಶಿಕ್ಷಣತಜ್ಞರು, ರಾಜಕಾರಣಿಗಳು ಮನಗಾಣಬೇಕು.
ಶಿಕ್ಷಣ ಪ್ರತಿಯೊಬ್ಬನ ಜನ್ಮಸಿದ್ಧ ಹಕ್ಕು. ೬ ರಿಂದ ೧೪ವರ್ಷದೊಳಗಿನ ಮಕ್ಕಳಿಗೆ ಶಿಕ್ಷಣ ಕಡ್ಡಾಯ ಎಂದು ಕೇಂದ್ರ ಸರ್ಕಾರ ಕಾನೂನು ಮಾಡಿದೆ. ನಾವು ನೀಡುವ ಶಿಕ್ಷಣದಿಂದ ವ್ಯಕ್ತಿಯ ಸವಾಂರ್ಗೀಣ ಬೆಳವಣಿಗೆ ಆಗಬೇಕು. ಆ ಮೂಲಕ ದೇಶ ಪ್ರಗತಿ ಹೊಂದಬೇಕು. ಆಗ ಮಾತ್ರ ನಾವು ಕೊಡುವ ಶಿಕ್ಷಣಕ್ಕೆ ಅರ್ಥ ಬರುತ್ತದೆ. ಆದರೆ, ಈಗ ನಾವು ನೀಡುತ್ತಿರುವ ಶಿಕ್ಷಣದಿಂದ ಆಗುತ್ತಿರುವ ಪ್ರಗತಿಯಾದರೂ ಏನು? ಆಂಗ್ಲ ಭಾಷೆಯಲ್ಲಿ ಇರುವ ವಿಷಯವನ್ನು ಬಾಯಿಪಾಠ ಮಾಡಿ ಅಂಕ ಗಳಿಸುತ್ತಿರುವ ವಿದ್ಯಾರ್ಥಿಗಳೇ ಅಧಿಕ. ಸ್ವತಂತ್ರವಾದ ಆಲೋಚನೆ, ಸಹಜವಾದ ಭಾವನೆಗಳು ಅಭಿವ್ಯಕ್ತಗೊಳ್ಳುವುದು ಮಾತೃಭಾಷೆಯಿಂದ ಮಾತ್ರ ಸಾಧ್ಯ ಎಂಬುದನ್ನು ಮರೆಯಬಾರದು.
ಕನ್ನಡ ಮಾಧ್ಯಮ ಶಿಕ್ಷಣ ಕಡ್ಡಾಯ ಆಗದಿದ್ದರೆ ಬೇಡ. ಒಂದನೆ ತರಗತಿಯಿಂದ ಪಿ.ಯು.ಸಿ.ವರೆಗಿನ ವಿದ್ಯಾರ್ಥಿಗಳು ಕಡ್ಡಾಯವಾಗಿ ಕನ್ನಡವನ್ನು ಒಂದು ವಿಷಯವಾಗಿ ಕಲಿಯಲೇಬೇಕೆಂಬ ನಿಯಮ ಜಾರಿಗೆ ಬರಬೇಕು. ಪ್ರಥಮ ಭಾಷೆಯಾಗಿ ಕನ್ನಡ (೧೦೦ ಅಂಕ), ದ್ವಿತೀಯ ಭಾಷೆಯಾಗಿ ಇಂಗ್ಲೀಷ್ (೧೦೦ ಅಂಕ) ತೃತೀಯ ಭಾಷೆಯಾಗಿ (೫೦ ಅಂಕ) ಸಂಸ್ಕೃತ ಅಥವಾ ಹಿಂದಿಯನ್ನು ಕರ್ನಾಟಕದ ಪ್ರತಿಯೊಬ್ಬ ವಿದ್ಯಾರ್ಥಿಯೂ ಕಲಿಯುವಂತಾಗಬೇಕು. ಈ ರೀತಿ ಪಿ.ಯು.ಸಿ.ವರೆಗೆ ಏಕರೂಪದ ಭಾಷಾ ಕಲಿಕೆಯ ಶಿಕ್ಷಣ ಜಾರಿ ಆಗುವುದರಿಂದ ಪ್ರತಿಯೊಬ್ಬನೂ ಕನ್ನಡವನ್ನೂ ಓದಲು, ಬರೆಯಲು, ಕಲಿಯಲು ಸಾಧ್ಯವಾಗುತ್ತದೆ. ಮೂರು ಭಾಷೆಯಲ್ಲಿಯೂ ವಿದ್ಯಾರ್ಥಿ ಪಾಸಾಗುವುದು ಕಡ್ಡಾಯ ಎಂಬ ನಿಯಮವನ್ನು ಜಾರಿಗೆ ತಂದರೆ ತ್ರಿಭಾಷಾ ಸೂತ್ರ ಜಾರಿ ಆದಂತಾಗಿ ಮೂರು ಭಾಷೆಯನ್ನು ಕಲಿತಂತಾಗುತ್ತದೆ. ಈ ಸೂತ್ರದಿಂದ ಕನ್ನಡ ಭಾಷೆ ಉಳಿಯಲು ಅನುಕೂಲವಾಗುತ್ತದೆ. ಶಿಕ್ಷಣ ತಜ್ಞರು, ಶಿಕ್ಷಣ ಇಲಾಖೆ ಈ ಬಗ್ಗೆ ಯೋಚನೆ ಮಾಡಿ ಕಾರ್ಯಪ್ರವೃತ್ತರಾಗಬೇಕು.
ರಾಜ್ಯ ಶಿಕ್ಷಣ ಇಲಾಖೆ ಈ ನಿಟ್ಟಿನಲ್ಲಿ ಯೋಚಿಸದೆ, ಶಿಕ್ಷಣದ ಬಗ್ಗೆ ಮನಬಂದಂತೆ ನಿಯಮಗಳನ್ನು ರೂಪಿಸುತ್ತಿದೆ. ಶಿಕ್ಷಣ ಸಚಿವರು ಬದಲಾದಂತೆ ಪಠ್ಯಕ್ರಮ ಪ್ರಶ್ನೆಪತ್ರಿಕೆಯ ರೀತಿ... ಹೀಗೆ ಪ್ರತಿಯೊಂದು ಬದಲಾಗುತ್ತಿದೆ. ಈ ಬದಲಾವಣೆಯಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗುವುದಕ್ಕಿಂತ ಶಿಕ್ಷಕರಿಗೆ ಹೊರೆಯಾಗುತ್ತಿದೆ; ಶಿಕ್ಷಣ ಇಲಾಖೆ ಅವ್ಯವಸ್ಥೆಯ ಆಗರವಾಗುತ್ತಿದೆ. ಆದ್ದರಿಂದ ಶಿಕ್ಷಣ ಸಚಿವರು ಬದಲಾದಂತೆ ನಿಯಮಗಳು ಬದಲಾಗಬಾರದು. ವಿದ್ಯಾರ್ಥಿಗಳಿಗೆ ಜ್ಞಾನ ಹೆಚ್ಚಿಸುವಂತಹ, ತಿಳಿವಳಿಕೆ ಮೂಡಿಸುವಂತಹ ಶಿಕ್ಷಣವನ್ನು ನಾವು ನೀಡಬೇಕು. ಇದಕ್ಕೆ ಅನುಕೂಲ ಆಗುವ ನಿಯಮಗಳನ್ನು ರೂಪಿಸುವಲ್ಲಿ, ಅದನ್ನು ಜಾರಿಗೆ ತರುವಲ್ಲಿ ಇರಬಹುದಾದ ಸಾಧಕ-ಬಾಧಕಗಳ ಬಗ್ಗೆ ಶಿಕ್ಷಣ ಇಲಾಖೆಯವರು ಶಿಕ್ಷಕರೊಂದಿಗೆ ಚರ್ಚೆ ನಡೆಸಬೇಕು. ಇದಾವುದೂ ನಿಯಮಿತವಾಗಿ ನಡೆಯುವುದಿಲ್ಲವಾದ್ದರಿಂದ ಬೇಸತ್ತ ಹಲವು ಶಾಲೆಗಳು ರಾಜ್ಯ ಪಠ್ಯವನ್ನು ಕೈ ಬಿಟ್ಟು ಐಸಿಎಸ್‌ಇ ಅಥವಾ ಸಿಬಿಎಸ್‌ಇ ಪಠ್ಯವನ್ನು ಅಳವಡಿಸಿಕೊಂಡಿದೆ. ಇದಕ್ಕೆ ಕಾರಣ, ಐಸಿಎಸ್‌ಇ, ಸಿಬಿಎಸ್‌ಇ ಪಠ್ಯವನ್ನು ಅಳವಡಿಸಿಕೊಂಡರೆ ಕನ್ನಡ ಭಾಷೆ ಕಲಿಯಲೇಬೇಕಾದ ಅಗತ್ಯವಿಲ್ಲ ಮತ್ತು ಈ ಕೌನ್ಸಿಲ್‌ಗಳಲ್ಲಿ ಕೆಲಸಗಳು ಕ್ರಮಬದ್ಧವಾಗಿ ನಡೆಯುತ್ತದೆ. ಇತ್ತೀಚೆಗೆ ತಲೆಎತ್ತುತ್ತಿರುವ ಇಂಟರ್‌ನ್ಯಾಷನಲ್ ಶಾಲೆಗಳಲ್ಲಂತೂ ಕನ್ನಡದ ಗಾಳಿಯೂ ಇಲ್ಲ. ಇಂಗ್ಲೀಷ್ ಹಿಂದಿಯ ಜೊತೆಗೆ ಇಲ್ಲಿ ಕಲಿಯುವ ಇತರ ಭಾಷೆಗಳೆಂದರೆ ಫ್ರೆಂಚ್, ಜರ್ಮನ್ ಇತ್ಯಾದಿ. ಇದೇ ಪರಿಸ್ಥಿತಿ ಮುಂದುವರೆದರೆ, ಇನ್ನೂ ಕೆಲವೇ ವರ್ಷಗಳಲ್ಲಿ ಕನ್ನಡ ಸಂಪೂರ್ಣ ಮರೆಯಾಗುವುದರಲ್ಲಿ ಸಂಶಯವೇ ಇಲ್ಲ. ಕನ್ನಡ ಭಾಷೆಯನ್ನು ಕಲಿಸಲೇಬೇಕಾದ ಅನಿವಾರ್ಯತೆ ಇರುವ ರಾಜ್ಯ ಪಠ್ಯದ ಶಾಲೆಗಳಲ್ಲಿ ಬಿಟ್ಟು ಇನ್ನೆಲ್ಲೂ ಕನ್ನಡದ ಸುಳಿವೂ ಸಿಗುವುದಿಲ್ಲ.
ಇಂತಹ ಶಾಲೆಗಳಲ್ಲಿ ಕನ್ನಡ ಕಲಿಸುತ್ತಿರುವ ರೀತಿಯೋ ದೇವರಿಗೆ ಪ್ರೀತಿ. ಇಂಗ್ಲೀಷ್ ಮೂಲಕ ಕನ್ನಡ ಕಲಿಸುವುದು; ಕನ್ನಡವನ್ನು ಇಂಗ್ಲೀಷ್‌ನಲ್ಲಿ ಬರೆಯುವುದು. ಉದಾ:- ನಾನು ಆಟವನ್ನು ಆಡುತ್ತೇನೆ-ಎಂಬ ವಾಕ್ಯವನ್ನು ಟಿಚಿಟಿu ಚಿಚಿಣಚಿvಚಿಟಿಟಿu ಚಿಚಿಜuಣಣeಟಿe ಎಂದು ವಿದ್ಯಾರ್ಥಿಗಳು ಬರೆಯುತ್ತಾರೆ. ಬಾಯಿಯಲ್ಲಿ ಹೇಳುವುದು ಕನ್ನಡ; ಆದರೆ ಪುಸ್ತಕದಲ್ಲಿ, ಪರೀಕ್ಷೆಯಲ್ಲಿ ಬರೆಯುವುದು ಇಂಗ್ಲೀಷಿನಲ್ಲಿ; ಇದು ಕರ್ನಾಟಕದಲ್ಲಿ ಕನ್ನಡ ಕಲಿಸುವ ಪರಿ. ಇಂತಹ ಶಾಲೆಗಳಿಂದ, ಶಿಕ್ಷಕರಿಂದ ಭಾಷೆ ಉಳಿಯಲು ಸಾಧ್ಯವೇ? ವಿದ್ಯಾರ್ಥಿಗಳು ಭಾಷೆ ಕಲಿಯಲು ಸಾಧ್ಯವೇ? ಅವರಿಗೆ ನಮ್ಮ ಭಾಷೆ ಎಂಬ ಅಭಿಮಾನ ಬರುವುದಾದರೂ ಹೇಗೆ? ಶಿಕ್ಷಣ ಇಲಾಖೆಯ ಅಧಿಕಾರಿಗಳು ಇಂತಹ ಶಾಲೆಗೆ ತನಿಖೆಗೆ ಹೋಗುತ್ತಿಲ್ಲವೆ? ಹೋದರೂ ಗಮನಿಸುತ್ತಿಲ್ಲವೆ? ಈಗಾಗಲೇ ಕರ್ನಾಟಕದಲ್ಲಿ ಕನ್ನಡಿಗರ ಸಂಖ್ಯೆ ಕನ್ನಡ ಭಾಷಿಕರ ಸಂಖ್ಯೆ ಇಳಿಮುಖವಾಗಿದೆ. ಇದೇ ರೀತಿಯ ಶಿಕ್ಷಣ ಮುಂದುವರೆದಲ್ಲಿ ಇನ್ನು ಕೇವಲ ೨೦-೨೫ ವರ್ಷಗಳಲ್ಲಿ ಕನ್ನಡ ಹೇಳ ಹೆಸರಿಲ್ಲವಾಗುವುದರಲ್ಲಿ ಸಂಶಯವೇ ಇಲ್ಲ.
ನನ್ನ ಮಾತೃಭಾಷೆ ಇಂಗ್ಲೀಷ್, ನಮ್ಮ ಮನೆಯಲ್ಲಿ ಯಾವಾಗಲೂ ಎಲ್ಲರೂ ಇಂಗ್ಲೀಷ್ ಮಾತನಾಡುತ್ತೇವೆ.
ವಿದ್ಯಾರ್ಥಿಯೊಬ್ಬನ ಹೆಮ್ಮೆಯ ನುಡಿ. ಹುಟ್ಟಿ ಬೆಳೆದ ನಾಡನ್ನು, ಭಾಷೆಯನ್ನು ಪ್ರೀತಿಸದ ಯುವಜನಾಂಗ ದೇಶವನ್ನು ಪ್ರೀತಿಸುವರೇ? ದೇಶಭಕ್ತಿ ಇರಲು ಸಾಧ್ಯವೆ?
ಪ್ರತಿಯೊಂದು ದೇಶದಲ್ಲಿಯೂ ಆಯಾ ಪ್ರಾದೇಶಿಕ ಭಾಷೆಗೆ ಪ್ರಮುಖ ಸ್ಥಾನ. ಇಂಗ್ಲೆಂಡಿನಲ್ಲಿ ಹುಟ್ಟಿದ ಮಗು ಇಂಗ್ಲೀಷನ್ನು ಕಲಿಯದೆ, ಮುಂದಿನ ಹಂತಕ್ಕೆ ಹೋಗುವುದೇ ಇಲ್ಲ. ಜಪಾನ್, ಜರ್ಮನಿ, ಫ್ರಾನ್ಸ್, ರಷ್ಯಾ ದೇಶಗಳಲ್ಲೆಲ್ಲ ಅಲ್ಲಿಯ ಭಾಷೆಯೇ ಶಿಕ್ಷಣದ ಮಾಧ್ಯಮ. ಇದರಿಂದ ಆ ದೇಶಗಳು ಪ್ರಗತಿ ಹೊಂದಿದೆಯೇ ವಿನಾ ಕುಂಠಿತವಾಗಿಲ್ಲ. ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಗುಜರಾತಿ ಮಾಧ್ಯಮದಲ್ಲಿ ಕಲಿಯದೆ ಇಂಗ್ಲೀಷ್ ಮಾಧ್ಯಮದಲ್ಲಿ ಕಲಿತಿದ್ದಕ್ಕೆ ತಮ್ಮ ಬಾಲ್ಯದ ದಿನಗಳು ವ್ಯರ್ಥವಾಯಿತೆಂದು ಗಾಂಧೀಜಿ ಮರುಗಿದ್ದರು.
ನಮಗೆ ಸ್ವಾತಂತ್ರ್ಯ ಬಂದು ೬೩ ವರ್ಷಗಳಾದರೂ, ಕರ್ನಾಟಕ ರಾಜ್ಯ ರಚನೆಯಾಗಿ ೫೪ವರ್ಷಗಳಾದರೂ ನಮ್ಮ ನಾಡಿನಲ್ಲಿ ಕನ್ನಡಕ್ಕೆ ಒಂದು ಯೋಗ್ಯ ಸ್ಥಾನ ದೊರೆಯದಿರುವುದು ಎಂತಹ ವಿಪರ್ಯಾಸ! ಈ ಬಗ್ಗೆ ಶಿಕ್ಷಣತಜ್ಞರು, ಚಿಂತಕರು, ಬುದ್ದಿಜೀವಿಗಳು, ರಾಜಕಾರಣಿಗಳು, ಚಿಂತನೆ ಮಾಡಬೇಕು. ಶಿಕ್ಷಕರ ಅಭಿಪ್ರಾಯಗಳಿಗೆ, ಅನುಭವಗಳಿಗೆ ಮನ್ನಣೆ ಕೊಡಬೇಕು. ರಾಜ್ಯ ಶಿಕ್ಷಣ ಇಲಾಖೆ ವ್ಯವಸ್ಥಿತವಾಗಿ, ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಕರ್ನಾಟಕದಲ್ಲಿ ಕಲಿಯುವ ಪ್ರತಿಯೊಬ್ಬ ವಿದ್ಯಾರ್ಥಿಯೂ ೧೦೦ ಅಂಕದ ಕನ್ನಡ ಭಾಷಾ ಪತ್ರಿಕೆಯಲ್ಲಿ ಪಾಸಾಗಲೇಬೇಕೆಂಬ ಕಾನೂನು ಜಾರಿಗೆ ತರಬೇಕು. ಐಸಿಎಸ್‌ಇ ಅಥವಾ ಸಿಬಿಎಸ್‌ಇ ಪಠ್ಯವಿರುವ ಶಾಲೆಗಳೂ ಕಡ್ಡಾಯವಾಗಿ ಕನ್ನಡ ಕಲಿಸಲೇಬೇಕೆಂಬ ನಿರ್ಬಂಧ ಹೇರಬೇಕು. ಒಟ್ಟಾರೆ, ಕರ್ನಾಟಕದ ಎಲ್ಲಾ ಶಾಲೆಗಳಲ್ಲಿನ ವಿದ್ಯಾರ್ಥಿಗಳು ೧೦೦ ಅಂಕದ ಕನ್ನಡ ಅಥವಾ ಉದ್ಯೋಗಕ್ಕೆ ಅರ್ಹತೆ ಎಂದು ಕಡ್ಡಾಯ ಮಾಡಬೇಕು.
ಈ ಎಲ್ಲದರ ಬಗ್ಗೆ ರಾಜ್ಯದ ಶಿಕ್ಷಣ ಇಲಾಖೆಯ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಿ ಕನ್ನಡದ ಭಾಷೆ ಉಳಿಯಲು ಸಾಧ್ಯವಾಗುವಂತಹ ಕಾನೂನನ್ನು ಜಾರಿಗೆ ತರಬೇಕು. ಪ್ರಾಥಮಿಕ ಹಂತದಲ್ಲಿಯೇ ಇಂಗ್ಲೀಷ್, ಹಿಂದಿಯ ಜೊತೆಗೆ ಕನ್ನಡ ಭಾಷೆಯ ಬೋಧನೆಯೂ ಕಡ್ಡಾಯವಾಗಬೇಕು.
ಸರ್ಕಾರಿ, ಖಾಸಗೀ ಅಥವಾ ಅನುದಾನಿತ.... ಹೀಗೆ ಯಾವುದೇ ಶಾಲೆಗಳಲ್ಲಾದರೂ ಸರ್ಕಾರವೇ ನಿಗದಿಪಡಿಸಿದ ಒಂದೇ ರೀತಿಯ ಕನ್ನಡ ಪುಸ್ತಕದ ಬೋಧನೆ ಆಗಬೇಕು. ಪುಸ್ತಕಗಳು ಸಮಯಕ್ಕೆ ಸರಿಯಾಗಿ ವಿದ್ಯಾರ್ಥಿಗಳಿಗೆ ಸಿಗುವ ವ್ಯವಸ್ಥೆ ಆಗಬೇಕು. ಇಡೀ ರಾಜ್ಯದ ಮಕ್ಕಳಿಗೆ ಉಚಿತವಾಗಿ ಪುಸ್ತಕಗಳನ್ನು ವಿತರಿಸುತ್ತೇವೆಂದು ರಾಜಕಾರಣಿಗಳು ಪತ್ರಿಕೆಗಳಲ್ಲಿ ಹೇಳಿಕೆಗಳನ್ನು ಕೊಟ್ಟು, ಅದನ್ನು ಮಾಡಲು ಸಾಧ್ಯವಾಗದೆ, ವಿದ್ಯಾರ್ಥಿಗಳಿಗೂ ತೊಂದರೆ ಮಾಡಿ, ತಾವೂ ಸಂಕಷ್ಟಕ್ಕೆ ಸಿಲುಕುವ ಬದಲು ಉಪಯುಕ್ತವಾದ ವಿಚಾರಗಳ ಕಡೆ ಗಮನಕೊಟ್ಟು ಶಿಕ್ಷಣದ ಮಟ್ಟ ಸುಧಾರಿಸುವತ್ತ ಗಮನ ಹರಿಸುವುದು ಉತ್ತಮ.


ಶ್ರೀದೇವಿ ರಾಜನ್

ಕಾಂತಾವರವೆಂಬ ಸುಗ್ರಾಮದಲಿ ಕನ್ನಡದ ಬೆಳಗು...
ದೂರದಲ್ಲೊಂದು ಪುಟ್ಟ ಹಣತೆ. ಎಲ್ಲರೆದೆಯಲಿ ಒಂದೇ ಕನಸಿನ ಪ್ರಣತಿ. ನಾಂದಿಯಲ್ಲಿ ಮಂದ ಬೆಳಕು. ದೀಪದಿಂದ ದೀಪವ ಹೊತ್ತಿಸುತ್ತ ಹೋದಂತೆ ಪ್ರಖರತೆ ಸೆಳಕು.
ಹೌದು. ಇದು ಕನ್ನಡದ ಬೆಳಕು.
ಈ ಬೆಳಕಿನ ಸೆಲೆ ಇರುವುದು ಕಾಡಿನೊಳಗಿನ ಪುಟ್ಟ ಸುಗ್ರಾಮದಲ್ಲಿ. ಈ ಪುಟ್ಟ ಗ್ರಾಮದ ಇರುವಿಕೆಯ ಜಾಡೇ ಒಂದು ಸೋಜಿಗ. ಮೂಡಬಿದ್ರೆ ಮತ್ತು ಕಾರ್ಕಳದ ಸೇತುವಾಗಿರುವ ರಾಜರಸ್ತೆಯಲ್ಲೊಂದು ಪುಟ್ಟ ಪೇಟೆ ಇದಿರುಗೊಳ್ಳುತ್ತೆ ಅದು ಬೆಳುವಾಯಿ. ಅಲ್ಲಿಂದ ಪಡುವಣದತ್ತ ತಿರುಗಿ, ದೂರದ ಪಡುಬಿದ್ರೆಗೆ ಬೆಳ್ಮಣ್ಣು ಮೂಲಕ ಹಾದು ಹೋಗುವ ರಸ್ತೆಯಲ್ಲಿ ಒಂದಷ್ಟು ದೂರ ಹಾದಿ ಸವೆಸಿದರೆ ದೊಡ್ಡದೊಂದು ಬಯಲು, ಆಮೇಲೆ ಏರು, ಮತ್ತೆ ಕಾಡು. ತಿರುವಿನಲ್ಲಿ ತಿರುಗಿ ಕೆಳಗಿಳಿದರೆ ದೇಗುಲದ ಶಿಖರ. ಅದು ಕಾಂತೇಶ್ವರ ಸ್ವಾಮಿಯದು. ದೇವಸ್ಥಾನದ ರಥಬೀದಿಯಲ್ಲಿ ಹಿಂದಿನ ಆಳರಸರ ವಾಡೆಯ ಮಾದರಿಯ ಭವ್ಯ ಭವನ. ಅಲ್ಲೆ ಕಂಗೊಳಿಸುತಿದೆ ಕನ್ನಡ ಬೆಳಕಿನ ಸೆಲೆ.
ಅದೇ ಕಾಂತಾವರ. ಇಲ್ಲಿ ಯಾವ ಸೌಲಭ್ಯಗಳೂ ಇರಲಿಲ್ಲ. ವಿದ್ಯುತ್, ರಸ್ತೆ, ವಾಹನ, ದೂರವಾಣಿ...ಏನೊಂದು ವ್ಯವಸ್ಥೆಯೂ ಇಲ್ಲದ ಕಾಡು. ಇಲ್ಲಿ ವಾಸಿಸಲು ಯಾರೂ ತಾನೇ ಇಚ್ಛೆಪಟ್ಟಾರು? ಇಂತಹದೊಂದು ಹಳ್ಳಿಗೆ ಅದೊಂದು ದಿನ ಆಸ್ಪತ್ರೆ ಮಂಜೂರಾತಿಯ ಭಾಗ್ಯ ದೊರೆಯಿತು. ಯಾರಿಗೂ ಈ ಹಳ್ಳಿ ಬೇಡವಾಗಿತ್ತು. ಎಲ್ಲರೂ ನಾ ಒಲ್ಲೆ; ನಾ ಒಲ್ಲೆ ಎನ್ನುವವರೇ. ಆದರೆ ಅದೊಂದ ಜೀವ ಮಾತ್ರ ‘ನಾ ಇಲ್ಲೆ ಎಂದು ಹಳ್ಳಿಯಲ್ಲಿ ಸ್ಥಾಪಿತಗೊಂಡಿತು. ಆಗ ೧೯೬೫ನೇ ಇಸವಿ.
ಕಾಸರಗೋಡಿನ ಕೋಳ್ಯೂರಿನಿಂದ ಬಂದ ಆ ಜೀವದ ಹಿಂದೆಯೇ ಕಾಂತಾವರದ ಭಾಗ್ಯವೂ ಬಂದಿತು. ಇಪ್ಪತ್ತೊಂದು ವರ್ಷ ವಯಸ್ಸಿನ ಜೀವದಲ್ಲಿ ಅದೆಷ್ಟು ಕನಸುಗಳು; ಕಸುವು ತುಂಬಿದ ಮೈಯಲ್ಲಿ ಬದಲಾವಣೆಯ ಕನಸು ಚಿಗುರಿತ್ತು. ಸಾಧಿಸುವ ಬಯಕೆಯಿತ್ತು. ವೃತ್ತಿಯಲ್ಲಿ ವೈದ್ಯರಾದರೂ, ರೋಗಿಗಳ ಜತೆ ಜತೆಗೆ ಸಮಾಜಕ್ಕೂ ಚಿಕಿತ್ಸೆ ನೀಡಿ, ಹೊಸ ಬೆಳಕು ಹರಿಸಿದ ಜೀವ ಇಂದಿಗೂ ಬೆಳಕನ್ನು ಪಸರಿಸುತ್ತಲೇ ಇದೆ.
ಆ ಕ್ರಾಂತಿಕಾರಿ ಜೀವದ ಹೆಸರೇ ಡಾ.ನಾ.ಮೊಗಸಾಲೆ. ಇವರಲ್ಲಿನ ಸಾಹಿತ್ಯ ಪ್ರೀತಿ, ಕವಿ ಹೃದಯ, ಭಾವಜೀವಿಯ ಸಹಜ ಮುಗ್ಧತೆ ಎಂತಹವರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಡಾ.ನಾ.ಮೊಗಸಾಲೆಯವರು ಕಾಂತಾವರ ಕನ್ನಡ ಸಂಘ ಸ್ಥಾಪಿಸುವ ಮೂಲಕ ಹಚ್ಚಿದ ಕನ್ನಡ ಕಾಯಕದ ಹಣತೆ ಇಂದು ಊರಿಗೆ, ನಾಡಿಗೇ ದಾರಿದೀವಿಗೆಯಾಗಿದೆ.
ಹಳ್ಳಿ ಎಂದರೆ ರೈತ. ಮೊದಲು ರೈತಾಪಿ ಜನರು ಉದ್ಧಾರಗೊಳ್ಳಬೇಕು. ಅದಕ್ಕಾಗಿ ಏನಾದರೂ ಮಾಡಬೇಕು. ಹೀಗೆ ಮನಸಿನ ‘ಮೊಗಸಾಲೆಯಲ್ಲೊಂದು ಬೆಳಕಿಂಡಿ ಹೊತ್ತುತ್ತಲೇ ರೈತಾಪಿ ಜನರಲ್ಲಿ ಸಾಮಾಜಿಕ ಎಚ್ಚರ ಮೂಡಿಸಲು ‘ರೈತ ಯುವಕ ವೃಂದ ತಲೆ ಎತ್ತಿನಿಂತ್ತಿತ್ತು. ಆಗ ೧೯೬೬ನೇ ಇಸವಿ. ಈ ಸಂಘ ವ್ಯವಸ್ಥಿತಗೊಳ್ಳುತ್ತಲೇ ಹತ್ತು ವರ್ಷ ಸವೆದುಹೋಗಿತ್ತು. ಸರಿಯಾಗಿ ಹತ್ತು ವರ್ಷಕ್ಕೆ ಮನದ ಮೊಗಸಾಲೆಯಲ್ಲಿ ಮತ್ತೊಂದು ಕನಸು ಒಡಮೂಡಿತು. ಅದೇ ಕನ್ನಡ ಕಾಯಕದ ಕನಸು. ಕನ್ನಡ ಕೈಂಕರ್ಯಕ್ಕೆ ಏನಾದರೂ ಮಾಡಬೇಕೆಂಬ ಹಪಹಪಿ, ತಳಮಳ ಶುರುವಿಟ್ಟುಕೊಂಡಿತು. ಕನ್ನಡ ಬೆಳಕಿನ ಪ್ರಖರತೆಯನ್ನು ಹೆಚ್ಚು ದಿನ ಸಹಿಸಲು ಮೊಗಸಾಲೆಯವರಿಗೆ ಸಾಧ್ಯವಾಗಲಿಲ್ಲ. ಇದು ಸಾಧುವೂ ಅಲ್ಲ ಅಂದವರೇ ಕಾಯಕಕ್ಕೆ ಮೈಕೊಡವಿ ಎದ್ದು ನಿಂತರು.
ಆಗ ಕಾಂತಾವರದಲ್ಲಿ ಇದ್ದದ್ದು ಎರಡೂವರೆ ಸಾವಿರದಷ್ಟು ಜನ ಮಾತ್ರ. ಇವರಲ್ಲಿ ಅರ್ಧಕ್ಕರ್ಧ ಅನಕ್ಷರಸ್ಥರೇ. ಹಾಗಾಗಿ ನಾ.ಮೊಗಸಾಲೆಯವರು ಅಧ್ಯಾಪಕರನ್ನು ಗುರಿಯಾಗಿಸಿಕೊಂಡರು. ಪಕ್ಕದ ಬೇಲಾಡಿ, ಬೆಳುವಾಯಿ, ಬೋಳ, ಕೆದಿಂಜೆ (ನಂದಳಿಕೆ) ಗ್ರಾಮಗಳಲ್ಲಿನ ಶಾಲೆ, ಮನೆ-ಮನೆಗೂ ತಿರುಗಾಡಿ ಕನ್ನಡದ ಕಿಚ್ಚನ್ನು ಹೊತ್ತಿಸಿದರು. ಮೊದಲಿಗೆ ಸಾಹಿತ್ಯ ಪ್ರೀತಿಗೆ ಕೇಂದ್ರವಾಗಿದ್ದ ಬೇಲಾಡಿ ಶಾಲೆಯನ್ನೇ ಸಂಘದ ಕಛೇರಿಯನ್ನಾಗಿ ಮಾಡಿಕೊಂಡು ಮೊಟ್ಟಮೊದಲ ಪ್ರಣತಿಯನ್ನು ಕನ್ನಡದ ಕಾಳಿದಾಸರೆಂದೇ ಖ್ಯಾತಿವೆತ್ತ ಪ್ರೋ. ಎಸ್.ವಿ.ಪರಮೇಶ್ವರ ಭಟ್ಟರ ಹಸ್ತದಿಂದ ಬೆಳಗಿಸಿದರು.
ಆಗ ಶುರುವಾಯಿತು ನೋಡಿ ಕನ್ನಡ ಕಾಯಕದ ಕನಸು ಕಂಡ ಜಂಗಮನ ಕನ್ನಡ ಸಂಘದ ಸ್ಥಾವರ ಕಟ್ಟುವ ಕಾಯಕ.
ಬೇಲಾಡಿ ಶಾಲೆಯಿಂದಲೇ ಪ್ರತಿ ಎರಡು ತಿಂಗಳಿಗೊಮ್ಮೆ ಪಂಚಗ್ರಾಮಗಳ ಬೇರೆ ಬೇರೆ ಶಾಲೆಗಳಾಚೆ ಸಂಘದ ಸಂಚಾರ, ಅಲ್ಲಿ ಸಾಹಿತ್ಯಾರಾಧನೆ, ವರ್ಷಕ್ಕೊಮ್ಮೆ ಬೇಲಾಡಿಯಲ್ಲಿ ಸಾಹಿತ್ಯದ ಉರವಣಿಗೆ, ಆಯ್ದ ಸಾಹಿತಿ, ಕಲಾವಿದರಿಗೆ ಸಮ್ಮಾನ, ಮೊದಲು ಕನ್ನಡವಾಣಿ ಆಮೇಲೆ ಪ್ರಸ್ತುತ ಎಂಬ ಎರಡು ಅನಿಯತಕಾಲಿಕೆಗಳ ಪ್ರಕಟಣೆಯ ಸಾಹಸ...ಹೀಗೆ ಸಾಗಿತ್ತು ಕನ್ನಡದ ನಂಟು ಬೆಸೆಯುವ ಹೊಸಗೆ.
ಕನ್ನಡ ಸಂಘಕ್ಕೆ ನೆಲೆ ನೀಡಿದ್ದು ಕೆದಿಂಜೆ(ನಂದಳಿಕೆ). ಇದು ವರಕವಿ ಮುದ್ದಣನ ತವರು. ಮುದ್ದಣನ ಹೆಸರು ನಿತ್ಯವಾಗಿಸಲು ಕನ್ನಡ ಸಂಘಕ್ಕೆ ಬಂದ ಹೊಸ ಆಲೋಚನೆ. ಅದಕ್ಕೆಂದೇ ರೂಪಿತವಾದುದು ಮುದ್ದಣ ಕಾವ್ಯ ಪ್ರಶಸ್ತಿ ಸ್ಪರ್ಧೆ. ಬಹುಮಾನಿತರಿಗೆ ಇನ್ನೂರು ರೂಪಾಯಿ ನಗದು, ಹಾರ. ಬಹುಮಾನ ಕನಿಷ್ಟವೆನಿಸಿದರು ಇದರ ಘನತೆ ತೂಕದ್ದೇ. ಈ ಯೋಜನೆಗೆ ಬಂದಿದ್ದು ರಾಜ್ಯಾದ್ಯಂತ ಪ್ರತಿಕ್ರಿಯೆಗಳ ಮಹಾಪೂರ. ದಿನಗಳೆದಂತೆ ಹರಿಕೃಷ್ಣ ಪುನರೂರರಂತಹ ದಾನಿಗಳ ಕೊಡುಗೆಯಿಂದ ಹೆಚ್ಚುತ್ತಾ ಹೋದ ಪ್ರಶಸ್ತಿಯ ಗೌರವ ಸಂಭಾವನೆ ಇದೀಗ ಏಳೂವರೆ ಸಾವಿರ ಮುಟ್ಟಿದೆ.ಈಗಾಗಲೇ ಈ ಪ್ರಶಸ್ತಿಯನ್ನು ನಾಡಿನ ಹೆಸರಾಂತ ಹತ್ತಾರು ಸಾಹಿತಿಗಳು ಮುಡಿಗೇರಿಸಿಕೊಂಡಿದ್ದಾರೆ.
೨೦೦೪ರಲ್ಲಿ ಈ ಯೋಜನೆಗೆ ಬೆಳ್ಳಿ ಹಬ್ಬದ ಸಂಭ್ರಮ. ಬೆಂಗಳೂರಿನ ಸುಪ್ರಸಿದ್ಧ ಪ್ರಕಾಶನ ‘ಸುಮುಖದೊಡನೆ ಒಪ್ಪಂದ. ಆಮೇಲೆ ಪ್ರಶಸ್ತಿ ಪುರಸ್ಕೃತ ಕೃತಿಗೆ ಉಚಿತ ಪ್ರಕಟಣೆಯ ಯೋಗ. ಸಮ್ಮಾನ. ಇದಕ್ಕೆ ಆಸರೆಯಾಗಿ ನಿಂತವರು ಗದಗದ ಹೋಟೆಲ್ ಉದ್ಯಮಿ ಕಾರ್ಕಳ ನಿಟ್ಟೆಯ ನಾರಾಯಣರಾವ್ ಅವರು. ಇದೀಗ ಇದರ ಸಾರಥ್ಯವನ್ನು ಹೊತ್ತಿರುವವರು ಹರಿಕೃಷ್ಣ ಪುನರೂರರು.
ತದನಂತರ ಸಂಘ ಕೈ ಹಚ್ಚಿದ್ದು ಪುಸ್ತಕ ಪ್ರಕಟಣೆಗೆ. ಬಿಡಿ ಪ್ರಕಟಣೆಗಳಲ್ಲೂ ತೊಡಗಿಸಿಕೊಂಡು ಯಶ ಸಾಧಿಸಿದ ಸಂಘ ಹಲವಾರು ಹಿರಿಯ-ಕಿರಿಯ ಸಾಹಿತಿಗಳ ಸಾಹಿತ್ಯವನ್ನು ಪ್ರಕಟಿಸುವ ಮೂಲಕ ಸಾಹಿತ್ಯದ ರಸದೌತಣವನ್ನು ಉಣಬಡಿಸುತ್ತಿದೆ.
‘ನಾಡಿಗೆ ನಮಸ್ಕಾರ ಎಂಬ ಮತ್ತೊಂದು ನೂತನ ಯೋಜನೆ ರೂಪಿಸಿ ತನ್ಮೂಲಕ ನಾಡನ್ನು ಕಟ್ಟಿ ಬೆಳೆಸಿದ ಸಾಧಕರ ಕಿರುಹೊತ್ತಿಗೆಗಳನ್ನು ಹೊರತರುವ ಮೂಲಕ ಗ್ರಂಥಮಾಲೆಯನ್ನೇ ಸಂಘವು ಸ್ಥಾಪಿಸಿದೆ. ‘ಸಾಧಕರಿಗೆ ಸಮ್ಮಾನ, ‘ಸುವರ್ಣ ರಂಗ ಸಮ್ಮಾನ್, ಕಾಂತಾವರ ಪುರಸ್ಕಾರ, ಚೌಟ ಪ್ರತಿಷ್ಠಾನ, ನುಡಿಹಬ್ಬ ...ಇವೆಲ್ಲವೂ ಕಾಂತಾವರ ಕನ್ನಡ ಸಂಘದ ಮನಸಿನ ‘ಮೊಗಸಾಲೆಯ ಕೂಸುಗಳು.
ಮತ್ತೊಂದು ವಿಶೇಷವೆಂದರೆ ಕನ್ನಡ ಭವನ ಎನ್ನುವುದು ಬೆಂಗಳೂರಿನಲ್ಲಿ ಬಿಟ್ಟರೆ ಎರಡನೆಯದು ಅಂತಿದ್ದರೆ ಅದು ಕಾಂತಾವರದಲ್ಲಿ ಮಾತ್ರ. ಕರ್ನಾಟಕ ಏಕೀಕರಣದ ನೇತಾರ ಕೆ.ಬಿ.ಜಿನರಾಜ ಹೆಗ್ಡೆ ಜನ್ಮಶತಮಾನೋತ್ಸದ ಸ್ಮಾರಕ ಎಂದು ಇದಕ್ಕೆ ನಾಮಕರಣವಾಗಿದೆ. ಇಲ್ಲಿಯೇ ಕಾಂತಾವರ ಕನ್ನಡ ಸಂಘದ ಕಚೇರಿಯಿರುವುದು. ಇಲ್ಲಿ ಹೊತ್ತಿಸಿರುವ ಹಣತೆ ಇದೀಗ ಪಂಚಗ್ರಾಮಗಳೂ ಸೇರಿದಂತೆ ನಾಡಿನ ಉದ್ದಗಲಕ್ಕೂ ಬೆಳಕು ಹರಿಯುತಿದೆ.
ಅಮೂರ್ತವಾಗಿ ಸ್ಥಾವರ ಕಂಡ ಸಂಘವೀಗ ಮೂರ್ತರೂಪ ಕಂಡಿದೆ. ಅಧಿಕೃತವಾಗಿ ನೋಂದಣಿಯಾಗಿರುವ ಸಂಘದಲ್ಲೀಗ ಪದಾಧಿಕಾರಿಗಳು, ಕಾರ್ಯಾಧ್ಯಕ್ಷರು, ಮತ್ತಿತರರು ಚುನಾಯಿತರಾಗುತ್ತಾರೆ. ನೂರಾರು ಉತ್ಸಾಹಿ ಸದಸ್ಯರು ಕನ್ನಡದ ಕಾಯಕಕ್ಕೆ ಕೈ ಜೋಡಿಸಿದ್ದಾರೆ. ನೆರವಿನ ಮಹಾಪೂರವೂ ಹರಿದು ಬರುತ್ತಿದೆ. ನಾಡಿನ ದಿಗ್ಗಜರು ಪುಟ್ಟ ಗ್ರಾಮದ ಬೆರಗಿನ ಕೈಂಕರ್ಯಕ್ಕೆ ತಲೆದೂಗಿದ್ದಾರೆ.
ಈಗಾಗಲೇ ಕರ್ನಾಟಕದಾದ್ಯಂತ ಸಾಂಸ್ಕೃತಿಕವಾಗಿ ಬಿಂಬಿಸಿಕೊಂಡಿರುವ ಸಂಘಕ್ಕೆ ಮತ್ತಷ್ಟು ಕನಸುಗಳಿವೆ. ಕಾಂತಾವರದಲ್ಲಿ ವಚನ ಸಾಹಿತ್ಯದ ಅಧ್ಯಯನ, ಸಂಶೋಧನೆ ಮತ್ತು ಪ್ರಚಾರಕ್ಕಾಗಿ ಸಂಸ್ಥೆಯೊಂದನ್ನು ಕಟ್ಟುವ ಹೆಬ್ಬಯಕೆ ಹೊಂದಿದೆ.
ಕರಾವಳಿ ಭಾಗದಲ್ಲಿ ಈ ಅಧ್ಯಯನ ಕೇಂದ್ರವಿದ್ದರೆ ನಾಡಿನ ದೊಡ್ಡ ವಿದ್ವಾಂಸರು ಈ ಕೇಂದ್ರಕ್ಕೆ ಬರುವಂತಾಗುತ್ತದೆ. ಇದು ಹಂಪಿ ಇಲ್ಲವೇ ಮಂಗಳೂರು ವಿವಿಯ ಪಿಎಚ್‌ಡಿ, ಡಿ.ಲಿಟ್, ಎಂ.ಫಿಲ್. ಪದವಿಗಳಿಗೆ ಅಧ್ಯಯನ ಕೇಂದ್ರವಾಗಿರಬೇಕು. ವಿದೇಶಿ ಭಾಷೆಗಳಿಗೂ ವಚನ ಸಾಹಿತ್ಯ ಅನುವಾದಗೊಳ್ಳಬೇಕು. ಇದಕ್ಕಾಗಿ ಅಂತರ್ಜಾಲ ತಾಣವನ್ನು ಕೇಂದ್ರದಲ್ಲಿ ರೂಪಿಸಬೇಕು. ಇಲ್ಲಿ ಆಗಾಗ ಕಮ್ಮಟಗಳು, ಅಧ್ಯಯನ ಶಿಬಿರಗಳು ನಡೆಯಬೇಕು. ಇವೆಲ್ಲವೂ ವ್ಯವಸ್ಥಿತ ರೀತಿಯಲ್ಲಿ ದಾಖಲಾಗಬೇಕೆಂಬ ಸಂಕಲ್ಪ ಸಂಘದ್ದು.
ಇದಕ್ಕಾಗಿ ಆಡಳಿತ ಕೇಂದ್ರಕ್ಕೆ ಕೂಡಲಸಂಗಮ, ಸಭಾ ಭವನಕ್ಕೆ ಅನುಭವ ಮಂಟಪ, ಗ್ರಂಥಾಲಯಕ್ಕೆ ಷಟ್‌ಸ್ಥಲ ಮತ್ತು ಅತಿಥಿ ಗಣ್ಯರ ಆಹಾರ ವ್ಯವಸ್ಥೆಗೆ ದಾಸೋಹ ಎಂಬ ವಿಭಾಗಗಳು ಮಾಡಿ, ವಿವಿಧ ವಚನಕಾರರ ಹೆಸರುಳ್ಳ ಅತಿಥಿ ಕುಟೀರಗಳನ್ನು ಒಳಗೊಂಡ ‘ಅಲ್ಲಮಪ್ರಭು ಅಧ್ಯಯನ ಕೇಂದ್ರ ಸ್ಥಾಪಿಸುವ ಇರಾದೆ ಸಂಘಕ್ಕಿದೆ.
ಕಾಂತಾವರವನ್ನು ಸಂಸ್ಕೃತಿ ತಾಣವಾಗಿಸುವ ಕನಸನ್ನು ಹೊಂದಿರುವ ಡಾ.ನಾ.ಮೊಗಸಾಲೆಯವರಲ್ಲಿ ಇನ್ನೂ ಹತ್ತಾರು ಯೋಜನೆಗಳಿವೆ. ಇವೆಲ್ಲವುಗಳ ಸಾಕಾರಕ್ಕೆ ಈ ಜಂಗಮನ ಅವಿರತ ದುಡಿಮೆ ಅಡ್ಡಿಯಿಲ್ಲದೆ ಸಾಗುತ್ತಲೇ ಇದೆ.
ಕನಸು, ಕಸುವು, ನಿರಂತರ ಪರಿಶ್ರಮ, ಸತ್ಕಾಮದ ಧ್ಯೇಯ ವಿದ್ದರೆ ಏನು ಬೇಕಾದರೂ ಸಾಧಿಸಬಹುದೆಂಬುದಕ್ಕೆ ಕಾಂತಾವರ ಕನ್ನಡ ಸಂಘದ ಯಶೋಗಾಥೆಯೇ ಸಾಕ್ಷಿ. ಇಂತಹ ಸಂಘಗಳು ಇನ್ನಷ್ಟು ಪಸರಿಸಿದರೆ ನಾಡಿನೆಲ್ಲೆಡೆ ಕನ್ನಡ ದೀಪ ಪ್ರಜ್ವಲವಾಗಿ ಬೆಳಗುವುದರಲ್ಲಿ ಸಂದೇಹವಿಲ್ಲ. ಪುಟ್ಟ ದೀವಿಗೆಯಲ್ಲಿ ನಾಡಿನ ದೀವಟಿಗೆ ಬೆಳಗಿಸುವ ಪ್ರಯತ್ನ ಪ್ರತಿಯೊಬ್ಬ ಕನ್ನಡಿಗನಿಂದ ಆಗಬೇಕಷ್ಟೆ.ನ.ನಾಗೇಶ್

ಹಿಂದಿನ ಬರೆಹಗಳು