Wednesday, August 11, 2010
ಇದು ನಡಿಗೆಯ ಕಾಲ
ಖುಷಿ
ನಡೆಯುತ್ತಲೇ ಸಾವಿರಾರು ವರ್ಷಗಳನ್ನು ಕ್ರಮಿಸಿ ಪ್ರಗತಿಯತ್ತ ದಾಪುಗಾಲು ಹಾಕಿದ ಮಾನವ ಸಂಕುಲ ಇದೀಗ ‘ವಿಧ್ವಂಸಕ ಪ್ರಗತಿಯೇ ಬೇಡವೆಂದು ನಡಿಗೆಯನ್ನೇ ಆಶ್ರಯಿಸಿರುವುದು ವಿಪರ್ಯಾಸ. ಮಾನವನ ನಡಿಗೆಯ ಇತಿಹಾಸದ ಜತೆಗೆ ನ್ಯಾಯಕ್ಕಾಗಿ, ಸತ್ಯಕ್ಕಾಗಿ, ಮನುಕುಲದ ಒಳಿತಿಗಾಗಿ ‘ನಿರ್ದಿಷ್ಟ ಉದ್ದಿಶ್ಯವುಳ್ಳ ನಡಿಗೆಗಳು ಜತೆಜತೆಗೆ ನಡಕೊಂಡು ಬಂದಿವೆ. ಕಾಂಗ್ರೆಸ್ ಪಕ್ಷ ಬೆಂಗಳೂರಿನಿಂದ ಬಳ್ಳಾರಿಗೆ ನಡೆಸುತ್ತಿರುವ ‘ನಾಡ ರಕ್ಷಣೆಗೆ ನಡಿಗೆಯ ಮುನ್ನೆಲೆಯಲ್ಲಿ ನಡಿಗೆಯ ಕತೆಯನ್ನು ಅವಲೋಕಿಸುವ ಪುಟ್ಟ ಯತ್ನವಿದು.
ಚೀನಾದಲ್ಲಿ ಆರಂಭಗೊಂಡ ‘ಲಾಂಗ್‌ಮಾರ್ಚ್ ಇವತ್ತಿಗೂ ಸಾರ್ವಕಾಲಿಕ, ಜಾಗತಿಕ ದಾಖಲೆ. ಚೀನಾ ಕ್ರಾಂತಿಯ ಹರಿಕಾರ ಮಾವೋತ್ಸೆ ತುಂಗ್ ಹಾಗೂ ಚೌ ಎನ್ ಲಾಯ್ ನಡೆಸಿದ ಈ ಸುದೀರ್ಘ ಪಯಣ ೩೭೦ ದಿನ ಪರ್ಯಂತ ನಡೆದಿತ್ತು. ಕ್ರಮಿಸಿದ ದೂರ ೧೨,೫೦೦ ಕಿಲೋಮೀಟರ್. ಚೀನಾದಲ್ಲಿ ಸರ್ವಾಧಿಕಾರಿಯಾಗಿದ್ದ ಕುಮಿಂಗ್‌ಟಾಂಗ್ ಪಕ್ಷದ ಚಿಯಾಂಗ್ ಕೈ ಶೇಕ್‌ನ ಆಡಳಿತದ ವಿರುದ್ಧ ಮಾವೋ ನಡೆಸಿದ ಲಾಂಗ್‌ಮಾರ್ಚ್ ಇಡೀ ಚೀನಾವನ್ನು ವ್ಯಾಪಿಸಿತ್ತು. ಚೀನಾ ಕಮ್ಯುನಿಸ್ಟ್ ಪಕ್ಷದ ವಿಮೋಚನಾ ಸೇನೆ ಹಾಗೂ ಚಿಯಾಂಗ್ ಕೈ ಶೇಕ್‌ನ ಬಾಡಿಗೆ ಸೈನಿಕರ ಮಧ್ಯೆ ಯುದ್ಧಕ್ಕೂ ಕಾರಣವಾಗಿ ಅಂತಿಮವಾಗಿ ಸರ್ವಾಧಿಕಾರಿ ಆಡಳಿತ ಕೊನೆಗಾಣಿಸುವಲ್ಲಿ ಲಾಂಗ್‌ಮಾರ್ಚ್ ಯಶಸ್ವಿಯಾಯಿತು. ಇಂದಿಗೂ ಚಾರಿತ್ರಿಕ ದಾಖಲೆಯಾಗಿ ಉಳಿದಿರುವ ಮಹಾನ್‌ಯಾತ್ರೆ ಇದು.
ಭಾರತಕ್ಕೆ ಬಂದರೆ ಮಾಜಿ ಪ್ರಧಾನಿ ಚಂದ್ರಶೇಖರ್ ನೇತೃತ್ವದಲ್ಲಿ ನಡೆದ ಭಾರತಯಾತ್ರೆ ಪ್ರಮುಖವಾದದ್ದು. ೧೯೮೩ರಲ್ಲಿ ಗ್ರಾಮೀಣ ಭಾರತದ ಸ್ಥಿತಿಗತಿ ಅಧ್ಯಯನ ಮಾಡಲು ಇಡೀ ಭಾರತವನ್ನು ಚಂದ್ರಶೇಖರ್ ಸುತ್ತಿದ್ದರು. ಕರ್ನಾಟಕದಲ್ಲೂ ಸುಮಾರು ೧ ತಿಂಗಳು ಚಂದ್ರಶೇಖರ್ ಪಾದಯಾತ್ರೆ ನಡೆಸಿದ್ದರು. ಅಧ್ಯಯನದ ವಿಶಾಲತೆ ಬಿಟ್ಟರೆ ಸಾಮಾಜಿಕ ಆಂದೋಲನ ಅಥವಾ ಚಳವಳಿಯ ವ್ಯಾಪಕತೆ ಇದಕ್ಕಿರಲಿಲ್ಲ.
ಸರ್ಕಾರ ಉರುಳಿಸಿದ ಯಾತ್ರೆ:
‘ರೈತಶಕ್ತಿ ಗುಡುಗಿದರೆ ವಿಧಾನಸೌಧ ನಡುಗುವುದು ಎಂಬ ಮಾತನ್ನು ಅಕ್ಷರಶಃ ಸಾಧ್ಯವಾಗಿಸಿದ್ದು ನರಗುಂದ ನರಮೇಧ ಖಂಡಿಸಿ ನಡೆದ ಬೃಹತ್ ಪಾದಯಾತ್ರೆ. ೧೯೮೨ರಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಗುಂಡೂರಾವ್ ನಟೋರಿಯಸ್ ಆಡಳಿತಕ್ಕೆ ಹೆಸರಾಗಿದ್ದರು. ಆ ಕಾಲದಲ್ಲಿ ಕಂಡ ಗೂಂಡಾಗಿರಿ, ರೈತರ ದಮನ, ಕನ್ನಡ ಚಳವಳಿಗಾರರ ಮೇಲೆ ದಬ್ಬಾಳಿಕೆ ಮತ್ತೆಂದೂ ಕರ್ನಾಟಕ ಕಾಣಲಿಲ್ಲ. ಅರಸು ಸರ್ಕಾರದ ಗೂಂಡಾಗಿರಿಯನ್ನು ಮೀರಿಸುವಷ್ಟು ಗುಂಡೂರಾವ್ ಸರ್ಕಾರ ನಿರಂಕುಶ ಹಾಗೂ ಕ್ರೂರಿಯಾಗಿತ್ತು. ರೈತರಲ್ಲಿ ಜಾಗೃತಿ ಮೂಡಿ, ಹಕ್ಕೊತ್ತಾಯಕ್ಕಾಗಿ ಉಗ್ರ ಹೋರಾಟ ಆರಂಭಿಸಿದ ಮಹತ್ವದ ಕಾಲಘಟ್ಟ. ಆಗಷ್ಟೇ ಹುಟ್ಟಿಕೊಂಡಿದ್ದ ಕರ್ನಾಟಕ ರಾಜ್ಯ ರೈತಸಂಘ ಇನ್ನೂ ಅಂಬೆಗಾಲಿಕ್ಕುವ ಕೂಸು. ಹಳೆ ಮೈಸೂರು ಪ್ರಾಂತ್ಯದಲ್ಲಿ ಒಂದಿಷ್ಟು ನೆಲೆ ಇತ್ತಾದರೂ ಉತ್ತರ ಕರ್ನಾಟಕದಲ್ಲಿ ಅಷ್ಟಾಗಿ ರೈತರ ಚಳವಳಿ ವ್ಯಾಪಿಸಿರಲಿಲ್ಲ.
ಧಾರವಾಡ ಜಿಲ್ಲೆಯ ನರಗುಂದದಲ್ಲಿ ಅಹಿಂಸಾತ್ಮಕ ಚಳವಳಿ ನಡೆಸುತ್ತಿದ್ದ ರೈತರ ಮೇಲೆ ಪೊಲೀಸರು ಲಾಠಿ ಬೀಸಿದರು. ಸಿಟ್ಟಿಗೆದ್ದ ರೈತರು ಕಲ್ಲು ಬೀಸಿದರು. ಗುಂಡೂರಾವ್ ಸರ್ಕಾರ ಮುಖಮೂತಿ ನೋಡದೇ ಗೋಲಿಬಾರ್ ನಡೆಸಿದ್ದರಿಂದಾಗಿ ೨೩ ರೈತರು ಪ್ರಾಣಾರ್ಪಣೆ ಮಾಡಿದರು. ಅಮಾಯಕ ರೈತರ ಬಲಿತೆಗೆದುಕೊಂಡ ಗುಂಡೂರಾವ್ ಸರ್ಕಾರ ಅದಕ್ಕೆ ತಕ್ಕ ಬೆಲೆಯನ್ನೇ ತೆರಬೇಕಾಯಿತು.
ನರಗುಂದದ ನರಮೇಧ ಖಂಡಿಸಿ ರೈತಸಂಘದ ಸಂಸ್ಥಾಪಕರಲ್ಲಿ ಒಬ್ಬರಾದ, ಮಹಾನ್ ರೈತಹೋರಾಟಗಾರ ಪ್ರೊ| ಎಂ.ಡಿ. ನಂಜುಂಡಸ್ವಾಮಿ ಹಾಗೂ ಬಾಬಗೌಡ ಪಾಟೀಲ್ ನೇತೃತ್ವದಲ್ಲಿ ರೂಪುತಳೆದ ರೈತ ಕಾರ್ಮಿಕ ಹೋರಾಟ ಸಮಿತಿ ಬೆಂಗಳೂರಿಗೆ ಪಾದಯಾತ್ರೆ ನಡೆಸಲು ಮುಂದಾಯಿತು. ಕೇವಲ ೨೮ ಜನರಿದ್ದ ಯಾತ್ರೆ ನರಗುಂದದಿಂದ ಹೊರಟಿತು. ೧೦೦-೧೨೫ ಎತ್ತಿನಗಾಡಿಗಳು ಜತೆಗಿದ್ದವು. ಯಾತ್ರೆ ಚಿತ್ರದುರ್ಗ ಬರುವಷ್ಟರಲ್ಲಿ ಜನಸಾಗರವೇ ಯಾತ್ರೆಯೊಂದಿಗೆ ಕೈಜೋಡಿಸಿತ್ತು. ರೊಟ್ಟಿ-ಚಟ್ನಿ ಯಾತ್ರೆ ಎಂದೇ ಹೆಸರಾದ ಈ ಯಾತ್ರೆಯುದ್ದಕ್ಕೂ ರೈತರೇ ರೊಟ್ಟಿ-ಚಟ್ನಿ ಪೂರೈಸಿದ್ದರು. ವಿರೋಧ ಪಕ್ಷವಾಗಿದ್ದ ಜನತಾಪಕ್ಷ ಕೂಡ ಗುಂಡೂರಾವ್‌ರ ಜನವಿರೋಧಿ ಧೋರಣೆ ಖಂಡಿಸಿ ಯಾತ್ರೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿತ್ತು. ಆಗ ಪ್ರತಿಪಕ್ಷ ನಾಯಕರಾಗಿದ್ದ, ಹಾಲಿ ಬಿಜೆಪಿ ಸಂಸದ ಡಿ.ಬಿ. ಚಂದ್ರೇಗೌಡ ಯಾತ್ರೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಬೆಂಗಳೂರಿನವರೆಗೂ ನಡೆದಿದ್ದರು.
ಯಾತ್ರೆ ಬರೋಬ್ಬರಿ ೪೬೪ ಕಿ.ಮೀ. ದೂರ ಕ್ರಮಿಸಿ ಬೆಂಗಳೂರು ತಲುಪಿತ್ತು. ೨೮ ಜನರಿಂದ ಆರಂಭವಾದ ಯಾತ್ರೆ ಬೆಂಗಳೂರು ಸೇರುವಷ್ಟರಲ್ಲಿ ೧ ಲಕ್ಷ ಜನರ ಯಾತ್ರೆಯಾಗಿ ಬೆಳೆದಿತ್ತು. ೧೯೮೨ರಲ್ಲಿ ೧ ಲಕ್ಷ ಜನ ವಿಧಾನಸೌಧದ ಎದುರು ಸೇರಿ ಗುಂಡೂರಾಯರ ಗೂಂಡಾಸರ್ಕಾರದ ಬೆವರು ಇಳಿಸಿದ್ದರು.
ನಂತರ ನಡೆದ ವಿಧಾನಸಭೆ ಚುನಾವಣೆಯಲ್ಲಿ ಜನತಾಪಕ್ಷ-ಕ್ರಾಂತಿರಂಗ ಮೈತ್ರಿಕೂಟ ಭರ್ಜರಿ ವಿಜಯ ಸಾಧಿಸಿತ್ತು. ಕಾಂಗ್ರೆಸ್ ಸರ್ಕಾರ ಪತನವಾಗಿತ್ತು. ಗುಂಡೂರಾಯರಿಗೆ ಜನ ಪಾಠ ಕಲಿಸಿದ್ದರು. ಕರ್ನಾಟಕದಲ್ಲಿ ಮೊತ್ತ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರ ಅಧಿಕಾರಕ್ಕೇರುವ ಮೂಲಕ ಇತಿಹಾಸ ಸೃಷ್ಟಿಸಿದ ಪರಿವರ್ತನೆಗೆ ಪ್ರಮುಖ ಕಾರಣವಾಗಿದ್ದು ನರಗುಂದ ಪಾದಯಾತ್ರೆ. ರೈತರನ್ನು ಬಗ್ಗು ಬಡಿದರೆ ಯಾವ ರಾಜ್ಯವೂ ಉಳಿಯದು ಎಂದು ಆಡಳಿತಾರೂಢರಿಗೆ ಪಾಠ ಕಲಿಸಿದ ಘಟನೆಯೂ ಆಗಿ ಇದು ಚರಿತ್ರೆಯಲ್ಲಿ ದಾಖಲಾಗಿದೆ.
ಗೌಡರ ಯಾತ್ರೆ
ಇದೇ ಗುಂಡೂರಾವ್ ಸರ್ಕಾರದ ಅವಧಿಯಲ್ಲಿ ನಾಗಮಂಗಲದಲ್ಲಿ ಈಗ ಬಿಜೆಪಿಯಲ್ಲಿರುವ ಎಲ್.ಆರ್. ಶಿವರಾಮೇಗೌಡ ಕಾಂಗ್ರೆಸ್‌ನ ಪುಢಾರಿಯಾಗಿದ್ದರು. ಕಾಂಗ್ರೆಸ್ ಸರ್ಕಾರಕ್ಕೆ ಸಿಂಹಸ್ವಪ್ನವಾಗಿದ್ದ ಲಂಕೇಶಪತ್ರಿಕೆಯಲ್ಲಿ ನಿರಂತರವಾಗಿ ಸರ್ಕಾರದ ವಿರುದ್ಧ ವರದಿಗಳು ಬರುತ್ತಿದ್ದವು. ಅಂತಹದೇ ವರದಿಯನ್ನು ಕಂಚನಹಳ್ಳಿ ಗಂಗಾಧರಮೂರ್ತಿ ಲಂಕೇಶ ಪತ್ರಿಕೆಯಲ್ಲಿ ಬರೆದಿದ್ದರು. ಇದರಿಂದ ಸಿಟ್ಟಿಗೆದ್ದ ಶಿವರಾಮರಾಮೇಗೌಡರ ಗುಂಪು ಕಂಚನಹಳ್ಳಿ ಗಂಗಾಧರಮೂರ್ತಿಯನ್ನು ಕೊಲೆ ಮಾಡಿಸಿತ್ತು. ಆಗ ಪ್ರತಿಪಕ್ಷ ನಾಯಕರಲ್ಲಿ ಪ್ರಮುಖರಾಗಿದ್ದ ಈಗಿನ ಮಾಜಿ ಪ್ರಧಾನಿ ದೇವೇಗೌಡರು ನಾಗಮಂಗಲದಿಂದ ಕಂಚನಹಳ್ಳಿವರೆಗೆ ಪಾದಯಾತ್ರೆ ನಡೆಸಿ, ಸರ್ಕಾರಕ್ಕೆ ನಿದ್ದೆಗೆಡಿಸಿದ್ದರು.
ಬಂಗಾರಪ್ಪ ಸಚಿವ ಸಂಪುಟದಲ್ಲಿ ಎಸ್. ರಮೇಶ್ ಸಚಿವರಾಗಿದ್ದರು. ಕುಣಿಗಲ್ ಪ್ರವಾಸಿಮಂದಿರದಲ್ಲಿ ಇಳಿದುಕೊಂಡಿದ್ದ ರಮೇಶ್ ತಮ್ಮ ಪಿಸ್ತೂಲ್‌ನಿಂದ ಗುಂಡು ಹಾರಿಸಿ ಓರ್ವನನ್ನು ಕೊಂದಿದ್ದರು. ಇದನ್ನು ಖಂಡಿಸಿ ದೇವೇಗೌಡರು ಕುಣಿಗಲ್‌ನಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸಿದ್ದರು. ಇದರಿಂದಾಗಿ ರಮೇಶ್ ಸಚಿವ ಸ್ಥಾನ ಕಳೆದುಕೊಳ್ಳುವಂತಾಗಿತ್ತು.
ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ತೆಂಗಿನ ಬೆಳೆಗೆ ತೀವ್ರತರದ ನುಸಿಪೀಡೆ ಕಾಣಿಸಿಕೊಂಡಿತ್ತು. ನುಸಿಪೀಡೆ ಹೋಗಬೇಕಾದರೆ ನೀರಾ ಇಳಿಸಲು ಅನುಮತಿ ನೀಡಬೇಕೆಂದು ರೈತಸಂಘದ ನೇತೃತ್ವದಲ್ಲಿ ನಿರಂತರ ಪ್ರತಿಭಟನೆ ನಡೆದಿತ್ತು. ವಿಠಲೇನಹಳ್ಳಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ರೈತರ ಮೇಲೆ ಗುಂಡು ಹಾರಿಸಿ ಕೊಲೆ ಮಾಡಲಾಗಿತ್ತು. ಎಸ್.ಎಂ. ಕೃಷ್ಣ ಸರ್ಕಾರದ ರೈತವಿರೋಧಿ ಗೂಂಡಾವರ್ತನೆ ಖಂಡಿಸಿ ೪ ದಿನಗಳ ೮೫ ಕಿ.ಮೀ. ಪಾದಯಾತ್ರೆಯನ್ನು ದೇವೇಗೌಡರು ವಿಠಲೇನಹಳ್ಳಿಯಿಂದ ಬೆಂಗಳೂರು ವರೆಗೂ ಕೈಗೊಂಡಿದ್ದರು.
ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗಲೇ ಪಾದಯಾತ್ರೆ ನಡೆಸಿ ಇತಿಹಾಸವನ್ನು ಸೃಷ್ಟಿಸಿದರು. ಅದಕ್ಕೆ ಕಾರಣವಾಗಿದ್ದು ತಮಿಳುನಾಡು ಸರ್ಕಾರ ಕಾವೇರಿ ನೀರಿಗಾಗಿ ಬೇಡಿಕೆ ಇಟ್ಟಿದ್ದು. ಕರ್ನಾಟಕದಲ್ಲಿ ತೀವ್ರ ಬರಗಾಲವಿದ್ದು ನೀರು ಬಿಡಬೇಕೆಂದು ತಮಿಳುನಾಡು ಹಠಕ್ಕೆ ಕುಳಿತಿತ್ತು. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಸ್ತಿತ್ವದಲ್ಲಿತ್ತು. ಅಲ್ಲದೇ ತಮಿಳುನಾಡಿನ ಡಿಎಂಕೆ ಕೇಂದ್ರ ಸರ್ಕಾರದ ಪಾಲುದಾರನಾಗಿತ್ತು. ಕರ್ನಾಟಕ ಸರ್ಕಾರದ ಮಾತನ್ನು ಕೇಳುವ ಸ್ಥಿತಿಯಲ್ಲಿ ಕೇಂದ್ರವಿರಲಿಲ್ಲ. ಅಲ್ಲದೇ ಮಾಜಿ ಪ್ರಧಾನಿಯಾಗಿದ್ದ ದೇವೇಗೌಡರು ಯಾತ್ರೆ ನಡೆಸುವುದಾಗಿ ಎಚ್ಚರಿಸಿದ್ದರು. ಮಂಡ್ಯ, ಮೈಸೂರು, ಬೆಂಗಳೂರುಗಳಲ್ಲಿ ತೀವ್ರತರದ ತಮಿಳುನಾಡು ವಿರೋಧಿ ಹೋರಾಟ ನಡೆದಿತ್ತು. ಹಿಂಸಾತ್ಮಕ ಚಟುವಟಿಕೆಗಳು ನಡೆಯುತ್ತಿದ್ದವು. ಈ ಹಿನ್ನೆಲೆಯಲ್ಲಿ ಎಸ್.ಎಂ. ಕೃಷ್ಣ ಶಾಂತಿಗಾಗಿ ಆಗ್ರಹಿಸಿ ಬೆಂಗಳೂರಿನಿಂದ ಮೈಸೂರಿಗೆ ಯಾತ್ರೆ ಹೊರಟಿದ್ದರು. ಆದರೆ ಯಾತ್ರೆ ಮಂಡ್ಯ ತಲುಪುತ್ತಿದ್ದಂತೆ ಸುಪ್ರೀಂಕೋರ್ಟ್ ತೀರ್ಪು ಬಂದಿದ್ದರಿಂದಾಗಿ ಕೃಷ್ಣ ಯಾತ್ರೆ ಕೈಬಿಟ್ಟಿದ್ದರು.
ನಾಡ ರಕ್ಷಣೆಗೆ ನಡಿಗೆ
ಈ ಎಲ್ಲಾ ಯಾತ್ರೆಗಳ ಚರಿತ್ರೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ‘ನಾಡ ರಕ್ಷಣೆಗೆ ನಡಿಗೆಯನ್ನು ವಿಶ್ಲೇಷಿಸಬೇಕಾಗಿದೆ. ಇದುವರೆಗೆ ನಡೆದ ಬಹುತೇಕ ಎಲ್ಲಾ ಯಾತ್ರೆಗಳು ರೈತರ ಮೇಲಿನ ದೌರ್ಜನ್ಯ ಖಂಡಿಸಿಯೇ ನಡೆದ ಯಾತ್ರೆಗಳಾಗಿವೆ. ಎಸ್.ಎಂ. ಕೃಷ್ಣ ಯಾತ್ರೆ ತಮಿಳುನಾಡಿನ ಕುತಂತ್ರವನ್ನು ಖಂಡಿಸಿ ನಡೆದ ಯಾತ್ರೆಯಾದರೂ ಅವರಿಗೆ ಅಧಿಕಾರ ಉಳಿಸಿಕೊಳ್ಳುವ ಜರೂರತ್ತು ಇತ್ತು. ಅಲ್ಲದೇ ಸ್ವತಃ ಮುಖ್ಯಮಂತ್ರಿಯಾಗಿಯೇ ಅವರು ಯಾತ್ರೆ ನಡೆಸಿದ್ದರಿಂದಾಗಿ ಅದಕ್ಕೆ ಬೇರೆಯದೇ ಆಯಾಮವೂ ಇತ್ತು. ಕಾಂಗ್ರೆಸ್ ಪಕ್ಷ ಈಗ ನಡೆಸುತ್ತಿರುವ ಯಾತ್ರೆ ವಿಶಾಲಾರ್ಥದಲ್ಲಿ ನಾಡ ರಕ್ಷಣೆಯ ಮಹತ್ವದ ಆಶಯವನ್ನು ಹೊಂದಿದೆ. ಅಧಿಕಾರ ವಂಚಿತ ಕಾಂಗ್ರೆಸಿಗರು ತಮ್ಮ ನಿರುದ್ಯೋಗ ಬಾಧೆಯನ್ನು ತೊಡೆಯುವ ಉದ್ದೇಶವೂ ಇದರ ಹಿಂದಿರುವುದನ್ನು ಅಲ್ಲಗಳೆಯಲಾಗದು. ಹಾಗಿದ್ದೂ ನಾಡ ರಕ್ಷಣೆಯ ಮಹದುದ್ದೇಶ ಹೊಂದಿರುವುದರಿಂದ ಈ ಯಾತ್ರೆಯನ್ನು ಸಾಹಿತಿ-ಬುದ್ಧಿಜೀವಿಗಳು ಬೆಂಬಲಿಸುತ್ತಿದ್ದಾರೆ.
ಬಳ್ಳಾರಿ ಸಚಿವರು ‘ಬಳ್ಳಾರಿಗೆ ಬನ್ನಿ ನೋಡ್ಕೋತೀವಿ ಎಂದು ಸವಾಲು ಹಾಕಿದ್ದೇ ಯಾತ್ರೆಗೆ ಕಾರಣವಾದ ಸಂಗತಿಯಾಗಿದೆ. ಹಾಗೆ ಹೇಳಬೇಕೆಂದರೆ ಕಾಂಗ್ರೆಸ್‌ನವರು ಮಾತ್ರವಲ್ಲದೇ ಎಂದೋ ನಾಡಿನ ಜನತೆ ಇಂತಹದೊಂದು ಹೋರಾಟವನ್ನು ಮಾಡಬೇಕಾದ ಅನಿವಾರ್ಯತೆ ಖಂಡಿತಾ ಬಂದೊದಗಿತ್ತು. ಈ ಹಿಂದೆ ಪ್ರಗತಿಪರ ಚಿಂತಕರ ತಂಡವೊಂದು ಬಳ್ಳಾರಿಯೆಡೆಗೆ ಯಾತ್ರೆ ಮಾಡಿ, ಅದರ ಅನಿವಾರ್ಯತೆಯನ್ನು ಒತ್ತಿ ಹೇಳಿತ್ತು. ಕಾಂಗ್ರೆಸ್ ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸುವಂತೆ, ಗಣಿ ಅಕ್ರಮವನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸಿ ಯಾತ್ರೆ ನಡೆಸುತ್ತಿದೆ. ಯಾತ್ರೆ ಹೊರಟಲ್ಲಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಎಲ್ಲೆಲ್ಲೂ ಕಾಂಗ್ರೆಸ್ ನಾಯಕರಿಗೆ ಅದ್ದೂರಿ ಸ್ವಾಗತ ದೊರೆಯುತ್ತಿದೆ. ಬ್ರಿಟಿಷರನ್ನು ಭಾರತದಿಂದ ಒದ್ದೋಡಿಸಿ ಎಂಬ ಮಹತ್ವದ ಕರೆ ನೀಡಿದ ಕ್ವಿಟ್ ಇಂಡಿಯಾ ಚಳವಳಿ ಆರಂಭದ ದಿನವಾದ ಆಗಸ್ಟ್ ೯ರಂದು ಬಳ್ಳಾರಿಯಲ್ಲಿ ಯಾತ್ರೆ ಅಂತಿಮವಾಗಲಿದೆ. ಯಾತ್ರೆಯ ಹಿಂದೆ ಕಾಂಗ್ರೆಸ್ ಅಪೇಕ್ಷೆ, ನಿರೀಕ್ಷೆಗಳು ಏನೇ ಇರಬಹುದು. ನಾಡನ್ನು ರಕ್ಷಿಸುವ ಕಾಳಜಿಯಂತೂ ಇದೆ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ಈ ಸಕಾರಣದಿಂದಾಗಿಯೇ ನಾಡಿನ ಸಾಕ್ಷಿಪ್ರಜ್ಞೆಯಾಗಿರುವ ಸಾಹಿತಿ ಯು.ಆರ್.ಅನಂತಮೂರ್ತಿ, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಇದಕ್ಕೆ ಬೆಂಬಲ ಸೂಚಿಸಿದ್ದಾರೆ. ಅಷ್ಟರಮಟ್ಟಿಗೆ ಯಾತ್ರೆಯ ಸಾರ್ಥಕತೆ ಮಹತ್ವದ್ದು. ಕೇವಲ ಬಳ್ಳಾರಿಯ ರೆಡ್ಡಿ ಸೋದರರನ್ನು ಹದ್ದುಬಸ್ತಿನಲ್ಲಿಡಲು ಈ ಯಾತ್ರೆ ಸೀಮಿತವಾಗಬಾರದು. ಅನಂತಮೂರ್ತಿಯವರು ಯಾವತ್ತೂ ಪ್ರತಿಪಾದಿಸುವಂತೆ ‘ನಮ್ಮ ಗಣಿಸಂಪತ್ತು ಮುಂದಿನ ಪೀಳಿಗೆಗೆ ಯಾವತ್ತೂ ಉಳಿಯಬೇಕು. ನಮಗೆ ಬೇಕಾದ ಕಬ್ಬಿಣ, ಉಕ್ಕು ತಯಾರಿಕೆಗೆ ಬೇಕಾಗುವಷ್ಟು ಮಾತ್ರ ಗಣಿಗಾರಿಕೆ ನಡೆಯಬೇಕು. ಎಲ್ಲಾ ಗಣಿಗಾರಿಕೆಯೂ ಸರ್ಕಾರದ ಉಸ್ತುವಾರಿಯಲ್ಲೇ ನಡೆಯಬೇಕು. ಒಂದಿಂಚು ಅದಿರು ಕೂಡ ರಫ್ತಾಗಬಾರದು ಎಂಬುದು ಕಾಂಗ್ರೆಸ್‌ನ ಧ್ಯೇಯವಾಕ್ಯವಾಗಬೇಕು. ಇದರ ಮಧ್ಯೆಯೇ ಇನ್ನೊಂದು ಸಂಗತಿಯೂ ಇದೆ. ಕರ್ನಾಟಕಕ್ಕೆ ಸೇರಿರುವ ೩೭ ಕಿ.ಮೀ. ಉದ್ದ ಹಾಗೂ ೩ ಕಿ.ಮೀ. ಅಗಲದ ಭೂಮಿ ಆಂಧ್ರಪ್ರದೇಶಕ್ಕೆ ಸೇರಿಹೋಗಿದೆ. ಬ್ರಿಟಿಷರ ಕಾಲದ ಗಡಿರೇಖೆಯನ್ನು ತಿದ್ದಿ ತಮ್ಮ ಗಣಿಗಾರಿಕೆಗೆ ಬಳಸಿಕೊಂಡಿರುವವರು ಜನಾರ್ದನರೆಡ್ಡಿ ಮತ್ತವರ ಸೋದರರು. ರಾಜ್ಯದ ಭೂಮಿಯನ್ನು ಕಾಯಬೇಕಾದ ಕಂದಾಯ ಸಚಿವ ಕರುಣಾಕರರೆಡ್ಡಿಯೇ ಇದರಲ್ಲಿ ಶಾಮೀಲಾಗಿರುವುದರಿಂದ ಬೇಲಿಯೇ ಎದ್ದು ಹೊಲಮೇದಂತಾಗಿದೆ. ಓಬಳಾಪುರಂ ಮೈನಿಂಗ್ ಕಂಪನಿ ಕರ್ನಾಟಕದಲ್ಲಿ ಗಣಿಗಾರಿಕೆ ನಡೆಸುತ್ತಿಲ್ಲವೆಂದು ಪ್ರತಿಪಾದಿಸುತ್ತಿದೆ. ನಮ್ಮ ಅಮೂಲ್ಯ ಗಡಿಭಾಗವನ್ನು ಆಂಧ್ರಕ್ಕೆ ಸೇರಿಸಿಕೊಂಡು ಅಲ್ಲಿ ಗಣಿಗಾರಿಕೆ ನಡೆಸುತ್ತಾ, ಕರ್ನಾಟಕದಲ್ಲಿ ತಮ್ಮ ಗಣಿ ಇಲ್ಲ ಎಂದು ಹೇಳುವ ರೆಡ್ಡಿಗಳ ಮಾತುಗಳು ಪಕ್ಕಾ ವಂಚಕತನದ್ದು. ಹಾಲಿ ಇರುವ ಕಾನೂನಿನಂತೆ ಈ ರೀತಿ ಗಡಿರೇಖೆಯನ್ನು ಬದಲಿಸಿ, ಬಾಂದ್ ಕಲ್ಲುಗಳನ್ನು ಕಿತ್ತು ಹೊಸದಾಗಿ ನೆಟ್ಟಿರುವುದು ದೇಶದ್ರೋಹದ ಅಪರಾಧ. ಈ ಬಗ್ಗೆಯೂ ಕಾಂಗ್ರೆಸ್ ಒತ್ತಾಯಿಸಬೇಕು.ಕೇವಲ ಬೆಳಗಾವಿಯ ಗಡಿಭಾಗವನ್ನು ನಾವು ಉಳಿಸಿಕೊಂಡರಷ್ಟೇ ಸಾಲದು. ಬಳ್ಳಾರಿಯ ಗಡಿಭಾಗವೂ ನಮಗಾಗಿಯೇ ಉಳಿಯಬೇಕು. ಅಲ್ಲಿರುವ ಅಮೂಲ್ಯ ಅದಿರು ನಾಡಿನ ಅಭಿವೃದ್ಧಿಗೆ ಬಳಕೆಯಾಗಬೇಕು.
ಹಾಗಂತ ಗಣಿಗಾರಿಕೆ ಇಂದು ನಿನ್ನೆಯದಲ್ಲ. ಕುದುರೆಮುಖದ ಕಬ್ಬಿಣದ ಅದಿರು ಇಂಗ್ಲೆಂಡ್, ಜಪಾನ್‌ನ ಪಾಲಾಗಿದೆ. ಕೋಲಾರದ ಚಿನ್ನದ ಗಣಿಯು ಬರಿದಾಗಿ ಲಂಡನ್‌ಗೆ ಹೊಳಪು ತಂದಿದೆ. ಈಗ ಬಳ್ಳಾರಿಯ ಅದಿರು ಚೀನಾ, ಜಪಾನ್‌ಗೆ ಹೋಗುತ್ತಲೇ ಇದೆ. ಬ್ರಿಟಿಷರ ಕಾಲದಲ್ಲಿ ಆದ ಲೂಟಿಯ ಬಗ್ಗೆ ನಾವೆಲ್ಲಾ ಈಗಲೂ ಪರಿತಪಿಸುತ್ತಿದ್ದೇವೆ. ಸ್ವಾತಂತ್ರ್ಯ ನಂತರವೂ ಗಣಿಲೂಟಿ ಮುಂದುವರೆದಿರುವುದು ಖಂಡಿತಾ ಕ್ಷಮಾರ್ಹವಲ್ಲ. ಗಣಿ ಸಂಪತ್ತನ್ನು ಉಳಿಸಲು ಕಾಂಗ್ರೆಸ್ ಪಾದಯಾತ್ರೆ ಪಣತೊಡಲಿ. ಅಷ್ಟರಮಟ್ಟಿಗಾದರೂ ಯಾತ್ರೆ ಸಾರ್ಥಕವಾಗಲಿ.
Subscribe to:
Post Comments (Atom)
ಹಿಂದಿನ ಬರೆಹಗಳು
-
▼
2010
(112)
-
▼
August
(16)
- ಯಾವುದು ಮಾದರಿ? ಯಾವುದು ಆದರ್ಶ
- ಇದು ನಡಿಗೆಯ ಕಾಲ
- ಅಕ್ರಮಗಳ ನಾಡಿನಲ್ಲಿ ಮಲದ ದುರ್ವಾಸನೆ
- ಶಂಕರ ಮಹದೇವ ಬಿದರಿಯವರಿಗೊಂದು ಬಹಿರಂಗ ಪತ್ರ
- ಮಹಾರಾಷ್ಟ್ರದ ರಣಹೇಡಿ
- ಹಲ್ಮಿಡಿ ಗ್ರಾಮದ ಪರಿಚಯ
- ಆಚಾರ್ಯರು ಮತ್ತು ಋಷಿಗಳು
- ಸಂತಮಹಂತರ ನೆಲೆವೀಡು ಗುಲ್ಬರ್ಗಾ
- ಸ್ವಾತಂತ್ರ್ಯದ ಅರವತಮೂರು ವರ್ಷ
- ಮಾತನಾಡಿದ್ದು ಸಾಕು; ಕೆಲಸ ಮಾಡಬೇಕು
- ಶಿಕ್ಷಣದಲ್ಲಿ ಕನ್ನಡ ಕಡ್ಡಾಯ; ಒಂದು ಚಿಂತನೆ
- ಕಾಂತಾವರವೆಂಬ ಸುಗ್ರಾಮದಲಿ ಕನ್ನಡದ ಬೆಳಗು...
- ಕನ್ನಡದ ಧೀಮಂತ ನಾಯಕ ಹಾ ಮಾ.ನಾಯಕ್
- ವಿಚಾರ ಕ್ರಾಂತಿಗೆ ಆಹ್ವಾನ
- ಕೊಡವ ರಂಗಭೂಮಿ
- ಸಂಸ್ಕೃತಿ ಹೀನರಾಗಬೇಡಿ
-
▼
August
(16)
No comments:
Post a Comment