Tuesday, August 3, 2010

ಸಂಸ್ಕೃತಿ ಹೀನರಾಗಬೇಡಿ


ನಾಡಿನ ತುಂಬೆಲ್ಲ ಈಗ ಅಕ್ರಮ ಗಣಿಗಾರಿಕೆಯದ್ದೇ ಸುದ್ದಿ, ಸದ್ದು. ಆಡಳಿತ ಪಕ್ಷ, ಪ್ರತಿಪಕ್ಷಗಳು ಪರಸ್ಪರ ಕೆಸರು ಎರಚಿಕೊಂಡು ನಡೆಸುತ್ತಿರುವ ಪ್ರಹಸನಗಳು ಸಾರ್ವಜನಿಕರಿಗೆ ಪುಕ್ಕಟ್ಟೆ ಮನರಂಜನೆ ನೀಡುತ್ತಿವೆ.
ಒಬ್ಬರು ತೊಡೆತಟ್ಟುತ್ತಾರೆ, ಮತ್ತೊಬ್ಬರು ತೋಳು ತಟ್ಟುತ್ತಾರೆ. ಅಮ್ಮ, ಅಕ್ಕ ಬೈಗುಳಗಳ ಪ್ರಯೋಗವೂ ಯಥೇಚ್ಛ್ಚವಾಗಿ ಪ್ರಯೋಗವಾಗುತ್ತಿದೆ. ವಿಧಾನಸಭೆಯಲ್ಲೇ ಹೊಡೆದಾಟಕ್ಕೆ ನಿಂತ ಈ ನಾಯಕಮಣಿಗಳು ತಮ್ಮ ಸಂಸ್ಕೃತಿ ಏನೆಂಬುದನ್ನು ತೋರಿಸಿಕೊಂಡಿದ್ದಾರೆ.
ಕಾಂಗ್ರೆಸ್ ಪಕ್ಷದ ಮುಖಂಡರು ತಮ್ಮೆಲ್ಲ ಭಿನ್ನಾಭಿಪ್ರಾಯಗಳನ್ನು ಮರೆತು ಪಾದಯಾತ್ರೆ ಆರಂಭಿಸಿದ್ದಾರೆ. ಜನರೂ ಸಹ ಯಾತ್ರೆಯನ್ನು ಬೆಂಬಲಿಸುತ್ತಿದ್ದಾರೆ. ಇತ್ತ ಬಿಜೆಪಿ ಸಹ ಪಾದಯಾತ್ರೆಗೆ ಪ್ರತಿಯಾಗಿ ಸಮಾವೇಶಗಳನ್ನು ಮಾಡುವ ಯೋಜನೆಯಲ್ಲಿದೆ. ಜೆಡಿಎಸ್ ಸಹ ಬಳ್ಳಾರಿಯೂ ಸೇರಿದಂತೆ ಇಡೀ ರಾಜ್ಯದಲ್ಲಿ ಬಸ್ ಯಾತ್ರೆ ಮಾಡಲು ಹೊರಟು ನಿಂತಿದೆ.
ಎಲ್ಲ ರಾಜಕೀಯ ಪಕ್ಷಗಳೂ ಯಾತ್ರೆ, ಸಮಾವೇಶಗಳಲ್ಲಿ ಮುಳುಗಿಹೋಗಿರುವಾಗ ರಾಜ್ಯದ ಜನತೆ ಸಮಸ್ಯೆಗಳಿಂದ ಕಂಗಾಲಾಗಿ ಹೋಗಿದ್ದಾರೆ. ನೆರೆ ಸಂತ್ರಸ್ತರಿಗೆ ಇನ್ನೂ ಒಂದು ಮನೆಯನ್ನೂ ಕಟ್ಟಿಕೊಡಲು ರಾಜ್ಯ ಸರ್ಕಾರದಿಂದ ಆಗಿಲ್ಲ. ಅದನ್ನು ಪ್ರಶ್ನಿಸಬೇಕಾದ ಪ್ರತಿಪಕ್ಷದವರು ಯಾತ್ರೆಯಲ್ಲಿ ಮೈಮರೆತಿದ್ದಾರೆ.
ರಾಜ್ಯದ ಎಲ್ಲ ಭಾಗಗಳಲ್ಲೂ ಮಳೆ ಹೊಯ್ಯುತ್ತಿದೆ. ನೆರೆಪೀಡಿತ ಪ್ರದೇಶದ ಜನರು ಇನ್ನೂ ತಾತ್ಕಾಲಿಕ ಶೆಡ್‌ಗಳಲ್ಲಿದ್ದಾರೆ. ಅವರೀಗ ಮಳೆಗೆ ಸಿಕ್ಕು ತತ್ತರಿಸುತ್ತಿದ್ದಾರೆ. ಮಳೆ ಆರಂಭಕ್ಕೂ ಮುನ್ನ ಮನೆ ಕಟ್ಟಿಕೊಡುತ್ತೇವೆ ಎಂದು ಸರ್ಕಾರ ಭರವಸೆ ಕೊಟ್ಟಿತ್ತು. ಇದೀಗ ಮಳೆ-ಗಾಳಿಗೆ ಸಿಲುಕಿರುವ ಜನರು ಶೆಡ್‌ಗಳಲ್ಲಿ ಸುರಿಯುವ ಮಳೆಯಲ್ಲಿ ಕೊಳೆತುಹೋಗುವಂತಾಗಿದೆ.
ರಾಜ್ಯದಲ್ಲಿ ಈಗ ನಡೆಯುತ್ತಿರುವ ರಾಜಕೀಯ ಸಂಘರ್ಷದ ಕೇಂದ್ರ ಬಿಂದುವಾಗಿರುವ ರೆಡ್ಡಿ ಸೋದರರು ನೆರೆಹಾವಳಿ ಸಂದರ್ಭದಲ್ಲಿ ಸ್ವಂತ ಖರ್ಚಿನಿಂದಲೇ ಮನೆ ಕಟ್ಟಿಕೊಡುವುದಾಗಿ ಕೊಚ್ಚಿಕೊಂಡಿದ್ದರು. ಆದರೆ ನಾವು ಹಾಗೆ ಹೇಳೇ ಇಲ್ಲ ಎಂದು ಕಂದಾಯ ಸಚಿವ ಕರುಣಾಕರರೆಡ್ಡಿ ಹೇಳುತ್ತಿದ್ದಾರೆ. ಕಡೇ ಪಕ್ಷ ಸರ್ಕಾರದ ದುಡ್ಡಿನಲ್ಲಾದರೂ ಆ ಕೆಲಸ ಮಾಡಿ ಎಂದರೆ ರೆಡ್ಡಿಗಳಿಗೆ ದಿನಕ್ಕೊಂದು ಸಮಾವೇಶ, ಮೀಟಿಂಗು, ಯಾತ್ರೆ ಮಾಡುವ ಬಿಡುವಿರದ ಕೆಲಸಗಳು! ಅವರಲ್ಲಿ ಒಬ್ಬರು ಈಗ ತಲೆ ಬೋಳಿಸಿಕೊಂಡು, ಬರಿಗಾಲಲ್ಲಿ ಓಡಾಡುತ್ತಿದ್ದಾರೆ. ಬೋಳಾಗಿರುವುದು ಶ್ರೀರಾಮುಲು ಅವರ ತಲೆ ಮಾತ್ರವಲ್ಲ, ಇಡೀ ಬಳ್ಳಾರಿಯನ್ನೇ ಕಡಿದು ಬೋಳು ಮಾಡಲಾಗುತ್ತಿದೆ. ರಾಜ್ಯದ ಸಂಪತ್ತು ಲೂಟಿಯಾಗುತ್ತಿದೆ. ಇದೆಲ್ಲದರ ನಡುವೆ ಶ್ರೀರಾಮುಲು ತರಹದ ಸಚಿವರುಗಳು ಬಫೂನರಂತೆ ವರ್ತಿಸುತ್ತಿದ್ದಾರೆ.
ಕಾಂಗ್ರೆಸಿಗರೂ ಏನು ಕಡಿಮೆ ಇಲ್ಲ. ನಿಜ, ಯಾತ್ರೆಯ ಸಂದರ್ಭದಲ್ಲಿ ಹಾಡು-ಹಸೆ-ಕುಣಿತ ಇರುವುದು ಸಹಜ. ಈ ಬಗೆಯ ಸಾಂಸ್ಕೃತಿಕ ಅಭಿರುಚಿಗಳಿರದ ರಾಜಕಾರಣಿಗಳು ನಿಜವಾದ ಅರ್ಥದಲ್ಲಿ ಜನನಾಯಕರಾಗುವುದೂ ಸಹ ಸಾಧ್ಯವಿಲ್ಲ. ಅದೆಲ್ಲವೂ ಸರಿಯೇ. ಆದರೆ ಪಾದಯಾತ್ರೆಯ ಸಂದರ್ಭದಲ್ಲಿ ಹಿರಿಯ ನಾಯಕ ಸಿ.ಎಂ.ಇಬ್ರಾಹಿಂ ಬಳಸುತ್ತಿರುವ ಭಾಷೆ ಅಸಹ್ಯ ಹುಟ್ಟಿಸುವಂತಿದೆ. ಜನರನ್ನು ನಗಿಸಲೆಂದು ಹೀಗೆ ಅಶ್ಲೀಲ ಮಾತುಗಳನ್ನು ಆಡುತ್ತಿದ್ದರೆ ಯಾತ್ರೆಯ ಗಾಂಭೀರ್ಯತೆಯೇ ಹೊರಟುಹೋಗುತ್ತದೆ. ಇದನ್ನು ಕಾಂಗ್ರೆಸ್ ಮುಖಂಡರು ಗಂಭೀರವಾಗಿ ಪರಿಗಣಿಸಬೇಕು.
****
ನಲ್ನುಡಿಯ ನಾಲ್ಕನೇ ಸಂಚಿಕೆ ಇದು. ನಿಮ್ಮಿಂದ ರಾಶಿರಾಶಿ ಪತ್ರಗಳು ಬರುತ್ತಿವೆ. ಈ ಪೈಕಿ ಎಲ್ಲವನ್ನೂ ಪ್ರಕಟಿಸಲಾಗುತ್ತಿಲ್ಲ ಎಂಬ ನೋವು ನಮ್ಮದು. ಆದರೆ ನೀವು ಪತ್ರ ಬರೆಯುವುದನ್ನು ನಿಲ್ಲಿಸಬೇಡಿ, ದಯಮಾಡಿ ಬರೆಯುತ್ತಿರಿ.
ನವೆಂಬರ್ ತಿಂಗಳ ಸಂಚಿಕೆಯನ್ನು ರಾಜ್ಯೋತ್ಸವ ವಿಶೇಷಾಂಕವನ್ನಾಗಿ ರೂಪಿಸುವ ಯೋಜನೆ ನಮ್ಮದು. ಕನಿಷ್ಠ ೩೦೦ ಪುಟಗಳ ಸಂಚಿಕೆ ನಾಡಿನ ಪ್ರತಿಯೊಬ್ಬ ಕನ್ನಡಿಗನ ಮನೆಮನೆಯಲ್ಲಿ ಇರಬೇಕು ಎಂಬ ಆಶೆಯೂ ನಮ್ಮದು. ‘ನಲ್ನುಡಿ’ಯ ಪ್ರತಿ ಸಂಚಿಕೆಯೂ ಸಂಗ್ರಹಯೋಗ್ಯ ಎಂಬುದನ್ನು ತಾವು ಬಲ್ಲಿರಿ. ವಿಶೇಷಾಂಕ ಇನ್ನಷ್ಟು ಸೊಗಸಾಗಿ ರೂಪಿಸುವ ಕನಸು ನಮ್ಮದು.
ಕಳೆದ ಸಂಚಿಕೆಯಲ್ಲೇ ಹೇಳಿದಂತೆ ಚಂದಾದಾರರಿಗೆ ಪತ್ರಿಕೆಯು ಪ್ರತಿ ತಿಂಗಳ ೫ ರಿಂದ ೧೦ರೊಳಗೆ ತಲುಪುತ್ತದೆ. ಒಂದು ವೇಳೆ ತಲುಪದಿದ್ದರೆ ದಯಮಾಡಿ ದೂರವಾಣಿ ಕರೆ ಮಾಡಿ ತಿಳಿಸಿ.
ನಿಮ್ಮ ಎಂದಿನ ಪ್ರೋತ್ಸಾಹವನ್ನು ನಿರೀಕ್ಷಿಸುತ್ತೇವೆ.

- ಕಾರ್ಯನಿರ್ವಾಹಕ ಸಂಪಾದಕರು

No comments:

Post a Comment

ಹಿಂದಿನ ಬರೆಹಗಳು