Wednesday, August 11, 2010

ಅಕ್ರಮಗಳ ನಾಡಿನಲ್ಲಿ ಮಲದ ದುರ್ವಾಸನೆದಿನೇಶ್ ಕುಮಾರ್ ಎಸ್.ಸಿ.


ಹೊಸಪೇಟೆಯಿಂದ ಹಳೆಯ ಗೆಳೆಯನೊಬ್ಬ ಬಂದಿದ್ದ. ಆತ ಅಲ್ಲಿ ಗಣಿ ಕಂಪೆನಿಗಳಿಗೆ ಲಾರಿಗಳನ್ನು ಸರಬರಾಜು ಮಾಡುವುದೂ ಸೇರಿದಂತೆ ಕೆಲವು ಹೊರಗುತ್ತಿಗೆ ಕೆಲಸಗಳನ್ನು ಮಾಡುತ್ತಾನೆ. ಬಂದ ಕೂಡಲೇ ನಾನೊಂದು ಪ್ರೆಸ್‌ಮೀಟ್ ಮಾಡಬೇಕು ಎಂದ. ಗಣಿಗಾರಿಕೆ ಕುರಿತಂತೆ ಮಾತನಾಡಬೇಕು, ಎಲ್ಲರೂ ಬರಿ ಸುಳ್ಳೇ ಹೇಳ್ತಿದ್ದಾರೆ, ಎಲ್ಲರೂ ಕಳ್ಳರು ಎನ್ನುತ್ತಿದ್ದ.
ದೊಡ್ಡ ಹೆಸರಿನ, ದೊಡ್ಡ ಸಂಘಟನೆಯವರು ಪ್ರೆಸ್‌ಮೀಟ್ ಮಾಡಿದರೆ ಸುದ್ದಿಯಾಗುತ್ತದೆ. ನೀನು ಮಾಡಿದರೆ ಪತ್ರಿಕೆಗಳವರು ಪ್ರಿಂಟ್ ಮಾಡ್ತಾರಾ ನೋಡು ಎಂದೆ. ಇತ್ತೀಚಿಗೆ ಪ್ರೆಸ್‌ಕ್ಲಬ್‌ಗೆ ಪತ್ರಿಕೆಗಳವರು ಟ್ರೈನಿಗಳನ್ನು, ಜೂನಿಯರ್‌ಗಳನ್ನು ಕಳಿಸುತ್ತಾರೆ. ಅರ್ಥಾತ್ ಪತ್ರಿಕಾಗೋಷ್ಠಿಗಳ ಬಗ್ಗೆ ಅಷ್ಟಾಗಿ ಯಾರೂ ತಲೆಕೆಡಿಸಿಕೊಳ್ಳೋದಿಲ್ಲ. ನೀನು ಪ್ರೆಸ್‌ಮೀಟ್ ಮಾಡಿದರೂ ಪ್ರಯೋಜನವಾಗೋದಿಲ್ಲ ಎಂದೆ. ಮತ್ತೇನು ಮಾಡೋದು, ಒಂದೆರಡು ಪತ್ರಿಕೆಗಳಿಗೆ ಲೇಖನ ಬರೆದಿದ್ದೆ, ಯಾರೂ ಪ್ರಕಟಿಸಲಿಲ್ಲ ಎಂದು ಹಳಹಳಿಸಿದ.
ಸರಿ ಏನು ಹೇಳಬೇಕು ಅಂತ ಇದ್ದೀಯಾ ಎಂದು ಕೇಳಿದೆ. ‘ಏನಿಲ್ಲ, ಇವರೆಲ್ಲ ಅಕ್ರಮ ಗಣಿಗಾರಿಕೆ ಅಂತಿದ್ದಾರಲ್ಲ, ಅಕ್ರಮ ಎಂಬ ಪದ ಸೇರಿಸೋದೇ ನನಗೆ ಸರಿ ಕಾಣುತ್ತಿಲ್ಲ. ಯಾಕೆಂದರೆ ಇಲ್ಲಿ ನಡೀತಿರೋ ಎಲ್ಲ ಗಣಿಗಾರಿಕೆನೂ ಅಕ್ರಮನೇ. ಯಾವುದೂ ಸಕ್ರಮ ಇಲ್ಲ. ಎಲ್ರೂ ಕಳ್ಳರು. ಬಿಜೆಪಿಯೋರು, ಕಾಂಗ್ರೆಸ್‌ನೋರು, ಜೆಡಿಎಸ್‌ನೋರು ಎಲ್ಲರೂ ಕಳ್ಳರೇ. ಜನಾರ್ದನರೆಡ್ಡಿಗೆ ಅಕ್ರಮ ಯಾವುದು ಸಕ್ರಮ ಯಾವುದು ಅಂತ ಗೊತ್ತೇ ಇಲ್ಲ. ಯಾಕೆಂದರೆ ಅವನು ಅಕ್ರಮವನ್ನೇ ಸಕ್ರಮ ಎಂದುಕೊಂಡಿದ್ದಾನೆ. ಹೀಗೆ ಹೇಳುತ್ತಾ ಹೋದ.
ಸರಿ, ಇದನ್ನೆಲ್ಲ ನೀನು ಬಳ್ಳಾರಿಯಲ್ಲೇ ಪ್ರೆಸ್‌ಮೀಟ್ ಕರೆದು ಹೇಳು, ಅಥವಾ ಒಂದು ತಂಡವನ್ನು ಕಟ್ಟಿಕೊಂಡು ಪ್ರತಿಭಟನೆ ಮಾಡು ಎಂದು ಪುಕ್ಕಟೆ ಸಲಹೆ ನೀಡಿದೆ.
ಅವನು ಗಂಭೀರವಾಗಿ ಹೇಳಿದ: ‘ಹಾಗೇನಾದ್ರೂ ಮಾಡಿದರೆ ನಾನು ಬಳ್ಳಾರಿಯಲ್ಲೇ ಸಮಾಧಿಯಾಗಿಬಿಡುತ್ತೇನೆ, ನನ್ನನ್ನು ಅವರು ಮುಗಿಸಿಬಿಡುತ್ತಾರೆ
*****
ಟಿವಿ, ಪತ್ರಿಕೆಗಳಲ್ಲಿ ‘ಅಕ್ರಮ ಗಣಿಗಾರಿಕೆ ಎಂಬ ಪದಪುಂಜವನ್ನು ಕೇಳಿ, ಓದಿ ಸಾಕಾಗಿ ಹೋಗಿದೆ. ತುಂಬ ಸೂಕ್ಷ್ಮವಾಗಿ ನೋಡುವುದಾದರೆ ಯಾವುದು ಅಕ್ರಮ, ಯಾವುದು ಸಕ್ರಮ ಎಂಬ ಜಿಜ್ಞಾಸೆ ಕಾಡುತ್ತದೆ. ಇವತ್ತಿನ ರಾಜಕಾರಣವೇ ಅಕ್ರಮ. ಅಲ್ಲಿ ಯಾವುದೂ ಈಗ ಸಕ್ರಮವಾಗಿಲ್ಲ. ಅಧಿಕಾರಶಾಹಿಗೆ ‘ಅಕ್ರಮದ ರೋಗ ತಗುಲಿ ದಶಕಗಳೇ ಕಳೆದುಹೋದವು. ಇಡೀ ದೇಶವನ್ನು ಎಲ್ಲ ಆಯಾಮಗಳಲ್ಲೂ ನಿರ್ವಹಿಸುತ್ತಿರುವವರು ರಾಜಕಾರಣಿಗಳು ಮತ್ತು ಅಧಿಕಾರಿಗಳು. ಇವರೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ‘ಅಕ್ರಮಗಳಲ್ಲಿ ಭಾಗಿಯಾದವರೇ.
ಇವತ್ತು ಯಡಿಯೂರಪ್ಪ ಅವರ ಸಂಪುಟದಲ್ಲಿ ಸಭ್ಯ, ಸುಸಂಸ್ಕೃತ ಮಂತ್ರಿಯೊಬ್ಬರಿದ್ದಾರೆ. ನಿಜಕ್ಕೂ ಸೂಕ್ಷ್ಮ ಸಂವೇದನೆಗಳನ್ನು ಇಟ್ಟುಕೊಂಡವರು ಅವರು. ಹಣ ಸಂಗ್ರಹಿಸಿದವರಲ್ಲ, ಆಸ್ತಿ ಕೂಡಿಟ್ಟವರಲ್ಲ. ಕಳೆದ ಚುನಾವಣೆಯಲ್ಲಿ ಅವರು ಗೆಲ್ಲಲು ಬೇಕಾದ ‘ಬಂಡವಾಳ ಹೂಡಿಕೆಗೆ ಅವರ ಬಳಿ ಯಾವ ಮಾರ್ಗವೂ ಇರಲಿಲ್ಲ. ನನಗೆ ಗೊತ್ತಾದ ಮಾಹಿತಿ ಪ್ರಕಾರ ಅವರಿಗೆ ಚುನಾವಣೆ ಖರ್ಚಿಗೆ ಒಂದು ಕೋಟಿ ರೂ. ಹಣ ಬಳ್ಳಾರಿಯಿಂದ ಬಂದಿತ್ತು. ನೋಡನೋಡುತ್ತಿದ್ದಂತೆ ಅವರ ಹಿಂಬಾಲಕರು ಮನೆಮನೆಗೂ ಹಣ ಹಂಚಿದರು. ನಮ್ಮ ‘ಸಭ್ಯ ರಾಜಕಾರಣಿ ಗೆದ್ದು ಬಂದರು.
ಇದಿಷ್ಟನ್ನೂ ಯಾವುದೇ ಕೊಂಕಿಲ್ಲದೆ, ನಂಜಿಲ್ಲದೆ ಹೇಳಿದ್ದೇನೆ. ಅವರು ಬಳ್ಳಾರಿಯ ಹಣ ಬಳಸಿ ಗೆದ್ದದ್ದು ಸರಿನೋ, ತಪ್ಪೋ ಎಂಬ ವಿಶ್ಲೇಷಣೆಯೂ ಅರ್ಥಹೀನ ಆದೀತೇನೋ ಎಂಬ ಅಂಜಿಕೆ ನನ್ನದು. ಹಣ ಯಾವುದಾದರೇನು, ಕನಿಷ್ಠ ಯಡಿಯೂರಪ್ಪ ಸಂಪುಟಕ್ಕೆ ಒಬ್ಬ ಸಭ್ಯ ಮಂತ್ರಿ ಸೇರ್ಪಡೆಯಾಗುವಂತಾಯಿತಲ್ಲ ಎಂದು ಸಮಾಧಾನಪಟ್ಟುಕೊಳ್ಳಬೇಕೆ ಎಂಬ ಜಿಜ್ಞಾಸೆ ನನ್ನದು.
*****
ಕಳೆದ ವಿಧಾನಸಭಾ ಚುನಾವಣೆ ಮತದಾನ ಸಂದರ್ಭದಲ್ಲಿ ಟಿವಿ೯ ಚರ್ಚೆ, ವಿಶ್ಲೇಷಣೆಗೆ ನನ್ನನ್ನು ಕರೆದಿದ್ದರು. ಪ್ಯಾನಲ್‌ನಲ್ಲಿ ನನ್ನೊಂದಿಗೆ ವಿ.ಆರ್.ಸುದರ್ಶನ್, ರಾಮಚಂದ್ರಗೌಡ ಇದ್ದರು. ನಿರ್ವಹಣೆ ಮಾಡುತ್ತಿದ್ದ ರಂಗನಾಥ ಭಾರದ್ವಾಜ್ ಮತದಾರರಿಗೆ ರಾಜಕೀಯ ಪಕ್ಷಗಳು ಒಡ್ಡುತ್ತಿರುವ ಆಮಿಷಗಳ ಬಗ್ಗೆ ಕೇಳಿದರು. ನಾನು ಹೇಳಿದೆ: “ಇವತ್ತು ಭ್ರಷ್ಟಾಚಾರವೂ ಒಂದು ಮೌಲ್ಯವಾಗಿ ಹೋಗಿದೆ. ಹಿಂದೆಲ್ಲ ಲಂಚ ಕೊಡುವುದು, ಸ್ವೀಕರಿಸುವುದು ಎರಡೂ ಅಸಹ್ಯ ಹುಟ್ಟಿಸುವ ವಿಷಯಗಳು ಎಂಬ ಆದರ್ಶವಿತ್ತು. ಆದರೆ ಇವತ್ತು ಲಂಚ ಕೊಡುವುದೂ ಘನತೆಯ ವಿಷಯವಾಗಿದೆ, ಲಂಚ ಪಡೆಯುವುದೂ ಘನತೆಯ ವಿಷಯವಾಗಿದೆ. ಅಧಿಕಾರಿಗಳು ಭ್ರಷ್ಟರಾಗಿದ್ದಾರೆ, ರಾಜಕಾರಣಿಗಳು ಭ್ರಷ್ಟರಾಗಿದ್ದಾರೆ. ಎಲ್ಲವೂ ನಿಜ. ಆದರೆ ನಿಜಕ್ಕೂ ಆತಂಕ ಹುಟ್ಟಿಸುತ್ತಿರುವುದೇನೆಂದರೆ ಜನಸಾಮಾನ್ಯರೂ ಸಹ ಭ್ರಷ್ಟರಾಗಿದ್ದಾರೆ.
ಕಳೆದ ಚುನಾವಣೆಯಲ್ಲಿ ಎಲ್ಲ ಕಡೆ ರಾಜಕಾರಣಿಗಳೇ ಗಾಬರಿ ಬಿದ್ದಿದ್ದರು. ‘ನಮ್ಮನೇಲಿ ಇಷ್ಟು ಓಟು, ಎಷ್ಟು ಕೊಡ್ತೀರಿ ಎಂದು ಜನರೇ ಕೇಳುತ್ತಿದ್ದಾರೆ ಎಂದು ಕೈ ಕೈ ಹಿಸುಕಿಕೊಳ್ಳುತ್ತಿದ್ದರು. ಹಿಂದೆಲ್ಲ ಸ್ಲಂಗಳು, ಕಾಲೋನಿಗಳಲ್ಲಿ ವಾಸಿಸುವ ಕಡುಬಡವರಿಗೆ ಮಾತ್ರ ಹಣ-ಹೆಂಡ ಹಂಚಲಾಗುತ್ತಿತ್ತು. ಈಗ ಮಧ್ಯಮವರ್ಗದವರು ಕೂಡ ಕೈ ಚಾಚುತ್ತಿದ್ದಾರೆ.
*****
ಬಳ್ಳಾರಿ ರೆಡ್ಡಿಗಳ ಬಗ್ಗೆ ಸಾಕಷ್ಟು ಕತೆಗಳು, ದಂತಕತೆಗಳು ಈಗಾಗಲೇ ಚಾಲ್ತಿಯಲ್ಲಿವೆ. ಅವುಗಳಲ್ಲಿ ಸಾಕಷ್ಟು ಕತೆಗಳು ದಂತಕತೆಗಳಾಗಿವೆ, ದಂತಕತೆಗಳು ಕತೆಗಳಾಗಿವೆ. ಎರಡರ ನಡುವೆ ಈಗ ಅಂತರವೇ ಉಳಿದಿಲ್ಲವೆನಿಸುತ್ತದೆ.
ಕುಮಾರಸ್ವಾಮಿ ಸರ್ಕಾರವಿದ್ದ ಕಾಲಕ್ಕೆ ನಮಗೆ, ಪತ್ರಕರ್ತರಿಗೇ ರೆಡ್ಡಿಗಳ ವಿಷಯದಲ್ಲಿ ಸಾಕಷ್ಟು ಕುತೂಹಲವಿತ್ತು. ಒಬ್ಬ ಪತ್ರಕರ್ತರಂತೂ ಬಳ್ಳಾರಿಗೆ ಹೋಗಿ ರೆಡ್ಡಿಗಳ ಹಿಂದೆ ಬಿದ್ದು, ಡಾಕ್ಯುಮೆಂಟರಿ ಥರಹದ ಒಂದು ಕಿರುಚಿತ್ರ ಮಾಡಿಕೊಂಡು ಬಂದಿದ್ದರು.
೨೦೦೨ರ ಹೊತ್ತಿಗೆ ಒಂದು ಬ್ಲೇಡ್ ಕಂಪೆನಿ ಮಾಡಿಕೊಂಡು, ಹೂಡಿಕೆದಾರರಿಗೆ ಹಣ ಕೊಡಲಾಗದೆ ತಲೆಮರೆಸಿಕೊಂಡಿದ್ದ ಜನಾರ್ದನ ರೆಡ್ಡಿ ಕರ್ನಾಟಕ ಮತ್ತು ಆಂಧ್ರಪ್ರದೇಶ ಸರ್ಕಾರಗಳ ಜತೆ ಎರಡು ಸ್ಟೀಲ್ ಪ್ಲಾಂಟ್‌ಗಳನ್ನು ಸ್ಥಾಪಿಸಲು ಮಾಡಿಕೊಂಡಿರುವ ಒಪ್ಪಂದಗಳ ಮೌಲ್ಯವೇ ೫೦,೦೦೦ ಕೋಟಿ ರೂ.ಗಳನ್ನು ದಾಟುತ್ತದೆ.
ಬೇರೆ ಕಡೆ ಹೂಡಲಿರುವ ಹಣ, ಹೂಡದೇ ಹಾಗೇ ಇಟ್ಟುಕೊಳ್ಳುವ ಹಣ, ಈಗಾಗಲೇ ಹೂಡಿರುವ ಹಣ ಎಲ್ಲವನ್ನೂ ಸೇರಿಸಿದರೆ ಜನಾರ್ದನ ರೆಡ್ಡಿಯ ಆದಾಯ ಎಷ್ಟಿರಬಹುದು. ಇಷ್ಟು ಆದಾಯವನ್ನು ಆತ ಹೇಗೆ ಗಳಿಸಲು ಸಾಧ್ಯವಾಯಿತು ಎಂದು ಯೋಚಿಸುವುದೇ ಕಷ್ಟಸಾಧ್ಯ. ಹೀಗೆ ಯೋಚಿಸುತ್ತಾ ಯೋಚಿಸುತ್ತ ಆತನ ಬಗ್ಗೆ ಕೇಳಿಬರುವ ದಂತಕತೆಗಳೆಲ್ಲ ನಿಜವಾಗಿಬಿಡುತ್ತವೆ.
ಕರ್ನಾಟಕದ ಮುಖ್ಯಮಂತ್ರಿ ಬಳ್ಳಾರಿಗೆ ಬಂದು ಇಳಿದರೆ, ಜಿಲ್ಲಾಧಿಕಾರಿ-ಪೊಲೀಸ್ ವರಿಷ್ಠಾಧಿಕಾರಿ ಬಂದು ಅವರನ್ನು ಬರಮಾಡಿಕೊಳ್ಳಲಿಲ್ಲ. ವಿಧಾನಸಭೆಯ ವಿರೋಧಪಕ್ಷದ ನಾಯಕ ಬಳ್ಳಾರಿ ಪ್ರವಾಸಕ್ಕೆಂದು ಬಂದರೆ ಅವರಿಗೆ ಬೆಂಗಾವಲು ಪೊಲೀಸರು ಇರಲಿಲ್ಲ. ಬೆಂಗಳೂರಿನಿಂದ ಹೋಗುವ ಎಲ್ಲ ರಾಜಕಾರಣಿಗಳನ್ನೂ ಗಣಿದಂಧೆಕೋರರ ವಾಹನಗಳು ಹಿಂಬಾಲಿಸುತ್ತವೆ.
ಇದೆಲ್ಲಕ್ಕಿಂತ ಭೀಕರವೆಂದರೆ ಬಳ್ಳಾರಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆದ ಕೊಲೆಗಳು. ಬಯಲಾದ ಕೊಲೆಗಳಿಗಿಂತ ಬಯಲಾಗದ ಕೊಲೆಗಳೇ ಇಲ್ಲಿ ಹೆಚ್ಚು. ಬಳ್ಳಾರಿಯಲ್ಲಿ ‘ಮಿಸ್ಸಿಂಗ್ ಆದವರೆಲ್ಲ ಎಲ್ಲಿಗೆ ಹೋದರು? ಒಂದು ದಂತಕತೆಯು ನಿಜವೆನ್ನುವುದಾದರೆ ದಂಧೆಕೋರರ ವಿರುದ್ಧ ಇರುವವರನ್ನು ಗಣಿಗಳಲ್ಲೇ ಮಣ್ಣು ಮುಚ್ಚಿಬಿಡಲಾಗುತ್ತದೆ!
******
ಈಗ ಹೊಸದೊಂದು ದಂತಕತೆ ಹುಟ್ಟಿಕೊಂಡಿದೆ. ರೆಡ್ಡಿಗಳು ಸುಷ್ಮಾಸ್ವರಾಜ್‌ರನ್ನು ಪ್ರಧಾನ ಮಂತ್ರಿ ಗಾದಿಗೆ ಕುಳ್ಳಿರಿಸಲು ಶಪಥ ಮಾಡಿದ್ದಾರಂತೆ. ಅದಕ್ಕಾಗಿ ೩೫೦೦ ಕೋಟಿ ರೂ.ಗಳನ್ನು ಅವರು ಕಲೆ ಹಾಕಿದ್ದಾರಂತೆ. ಬರುವ ಲೋಕಸಭಾ ಚುನಾವಣೆಯಲ್ಲಿ ಸುಷ್ಮಸ್ವರಾಜ್ ನಿಷ್ಠರಾದ ೩೫೦ ಅಭ್ಯರ್ಥಿಗಳಿಗೆ ತಲಾ ಹತ್ತು ಕೋಟಿ ರೂ.ಗಳನ್ನು ಹಂಚಲಾಗುತ್ತದೆ ಮತ್ತು ಎಲ್ಲ ರೀತಿಯ ಕಸರತ್ತುಗಳನ್ನು ನಡೆಸಿ ಗೆಲ್ಲಿಸಲಾಗುತ್ತದೆ. ಹೀಗಾದಲ್ಲಿ ಸುಷ್ಮಾ ಸ್ವರಾಜ್ ಪ್ರಧಾನಿಯಾಗುವುದು ನಿಶ್ಚಿತ ಎಂಬುದು ದಂತಕತೆ ಹೇಳುವ ನೀತಿಪಾಠ.
ನಿಜವಿರಬಹುದಲ್ಲವೆ? ಹಾಗೆ ನೋಡಿದರೆ ರಾಜಕೀಯವೂ ಸಹ ಈಗೀಗ ಉದ್ದಿಮೆಯಲ್ಲವೆ? ರೆಡ್ಡಿಗಳು ಈಗ ಹೊಸ ಬಂಡವಾಳ ಹೂಡಿಕೆದಾರರು. ಅವರು ಬಳ್ಳಾರಿ ಜನರನ್ನು ಕೊಂಡುಕೊಂಡಿದ್ದಾಯ್ತು, ಗದಗ, ದಾವಣಗೆರೆ, ಹಾವೇರಿ, ಚಿತ್ರದುರ್ಗ, ತುಮಕೂರು ಜಿಲ್ಲೆಗಳಿಗೆ ಕೈ ಇಟ್ಟಿದ್ದಾಯ್ತು. ಆಂಧ್ರದಲ್ಲಿ ವಿಮಾನ ಸುಟ್ಟು ಸತ್ತ ವೈಎಸ್‌ಆರ್ ಪುತ್ರನ ಪರವಾಗಿ ಶೋ ಕೊಟ್ಟಿದ್ದೂ ಆಯ್ತು.
ಈಗ ಅವರ ವಿಶಾಲವಾದ ತೋಳುಗಳು ಇಡೀ ಇಂಡಿಯಾವನ್ನು ಇರುಕಿಸಿಕೊಳ್ಳಲು ಯತ್ನಿಸುತ್ತಿವೆ.
*******
ಕಾಂಗ್ರೆಸ್ಸಿನವರು ಇದೀಗ ಪಾದಯಾತ್ರೆಯ ಬಿರುಸಿನಲ್ಲಿದ್ದಾರೆ. ಹಾಡು-ಹಸೆ-ಕುಣಿತ ಎಲ್ಲವೂ ಜೋರಾಗಿಯೇ ನಡೆದಿದೆ. ಆದರೆ ಅರ್ಥವಾಗದ ವಿಷಯವೆಂದರೆ ಇವರು ಇಷ್ಟು ಕಾಲ ಯಾಕೆ ಸುಮ್ಮನಿದ್ದರು?
ಗಮನಿಸಬೇಕಾದ ವಿಷಯವೆಂದರೆ ರೆಡ್ಡಿಗಳು ಕಾಂಗ್ರೆಸ್ ಜತೆ ಯುದ್ಧ ಹೂಡಿದವರಲ್ಲ. ಕಾಂಗ್ರೆಸ್ ಜತೆ ಗುದ್ದಾಡಿಯೇ ಅವರು ಬಳ್ಳಾರಿಯನ್ನು ಸದ್ದುಗದ್ದಲವಿಲ್ಲದಂತೆ ತಮ್ಮ ಸುಪರ್ದಿಗೆ ತಂದುಕೊಂಡಿದ್ದೇನೋ ನಿಜ. ಆದರೆ ಆ ವಿಷಯದ ಕುರಿತಾಗಿ ಕಾಂಗ್ರೆಸ್‌ನವರು ದುಃಖಪಟ್ಟಿದ್ದನ್ನು ಯಾರೂ ನೋಡಿಲ್ಲ.
ನಿಜವಾಗಿಯೂ ರೆಡ್ಡಿಗಳು ಸಮರ ಸಾರಿದ್ದು ಮೊದಲು ಜೆಡಿಎಸ್‌ನ ಕುಮಾರಸ್ವಾಮಿ ಜತೆ, ನಂತರ ತಮ್ಮದೇ ಪಕ್ಷದ, ತಮ್ಮದೇ ನಾಯಕ ಯಡಿಯೂರಪ್ಪನವರ ಜತೆ.
೧೫೦ ಕೋಟಿ ರೂ. ಲಂಚ ತಿಂದಿದ್ದಾರೆಂದು ಕುಮಾರಸ್ವಾಮಿಯವರನ್ನು ಇನ್ನಿಲ್ಲದಂತೆ ಕಾಡಿದರು ರೆಡ್ಡಿಗಳು. ತಮ್ಮ ಗಣಿಸಾಮ್ರಾಜ್ಯಕ್ಕೆ ಕುಮಾರಸ್ವಾಮಿ ಕೈ ಹಾಕಿದ್ದರಿಂದ ಕೆರಳಿ ಅವರು ಹೀಗೆ ಯುದ್ಧಕ್ಕೆ ಇಳಿದಿದ್ದರು. ನಂತರ ಯಡಿಯೂರಪ್ಪನವರ ಸರದಿ. ಅಲ್ಲೂ ಸಹ ತಮ್ಮ ವ್ಯವಹಾರಗಳ ಉದ್ದೇಶದಿಂದಲೇ ಅವರು ಯಡಿಯೂರಪ್ಪ ಜತೆ ಕದನ ನಡೆಸಿದರು.
ಆಗೆಲ್ಲ ಕಾಂಗ್ರೆಸ್‌ನವರು ಮಗುಮ್ಮಾಗೇ ಇದ್ದರು.
ಆದರೆ ಬಹುಶಃ ಈಗ ಕಾಂಗ್ರೆಸ್ಸಿಗರು ವಾಸ್ತವವನ್ನು ಅರಿತುಕೊಂಡಂತಿದೆ. ರೆಡ್ಡಿಗಳು ಬರಬರುತ್ತಾ ಯಾರ‍್ಯಾರನ್ನು, ಯಾವ ಯಾವ ಪ್ರಮಾಣದಲ್ಲಿ ಕೊಂಡುಕೊಳ್ಳುತ್ತಾರೋ ಎಂಬ ಭೀತಿ ಅವರನ್ನು ಕಾಡುತ್ತಿರುವಂತಿದೆ. ಕರ್ನಾಟಕದ ರಾಜಕಾರಣದಲ್ಲಿ ಸಂಪೂರ್ಣ ಮೂಲೆಗುಂಪಾಗಿ ಹೋಗುವ ಭಯದಲ್ಲಿ ಅವರು ೩೨೦ ಕಿಮೀ ನಡೆಯುತ್ತಿದ್ದಾರೆ.
‘ನಮ್ಮ ಮುಖಂಡರು ಅಕ್ರಮ ಮಾಡಿದ್ರೆ ಜೈಲಿಗೆ ಹೋಗಲಿ, ಸಿಬಿಐ ತನಿಖೆ ನಡೀಲಿ ಎಂದು ಎಲ್ಲರೂ ಧೈರ್ಯ ಪ್ರದರ್ಶಿಸುತ್ತಿದ್ದಾರೆ.
******
ಟಿವಿ ವಾಹಿನಿಯೊಂದರಲ್ಲಿ ಇವತ್ತು ಕಂಡುಬಂದ ಹೆಡ್‌ಲೈನ್: ‘ಪಾದ ಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ ಮುಖಂಡರು ಊಟ ಮಾಡಿದರು! ಊಟಕ್ಕೆ ಉಪ್ಪಿನಕಾಯಿ ಇತ್ತು, ಕೋಸುಂಬರಿ ಇತ್ತು, ಸಂಡಿಗೆ ಇತ್ತು.. ಇತ್ಯಾದಿ.
ಈ ಕ್ಷಣಕ್ಕೆ ಕಾಂಗ್ರೆಸ್ ಪಾದಯಾತ್ರೆ, ರೆಡ್ಡಿಗಳ ಹೂಂಕಾರ, ಯಡಿಯೂರಪ್ಪನವರ ತಂತ್ರ-ಕುತಂತ್ರಗಳು, ಕುಮಾರಸ್ವಾಮಿಯವರ ಗುಟುರು ಎಲ್ಲಕ್ಕಿಂತ ನಿಜಕ್ಕೂ ಸುದ್ದಿಯಾಗಬೇಕಾಗಿದ್ದು ಸವಣೂರಿನ ಭಂಗಿ ಸಮುದಾಯದವರು ತಲೆ ಮೇಲೆ ಮಲ ಸುರಿದುಕೊಂಡು ಮಾಡಿದ ಪ್ರತಿಭಟನೆ.
ಸವಣೂರಿನ ಕಮಾಲ ಬಂಡಿ ಪ್ರದೇಶದಲ್ಲಿ ಪುರಸಭೆಯ ಜಾಗದಲ್ಲಿ ಎಪ್ಪತ್ತು ವರ್ಷಗಳಿಂದ ಗುಡಿಸಲು ಹಾಕಿಕೊಂಡಿದ್ದ ಭಂಗಿ ಸಮುದಾಯದವರು ಒಳಚರಂಡಿ ವ್ಯವಸ್ಥೆಯೇ ಇಲ್ಲದ ಈ ಊರಿನಲ್ಲಿ ಮಲ ಹೊರುವ ಕಾಯಕ ಮಾಡಿಕೊಂಡಿದ್ದರು. ವಾಸವಾಗಿದ್ದ ಜಾಗದಿಂದ ಅವರನ್ನು ಒಕ್ಕಲೆಬ್ಬಿಸಲು ಪುರಸಭೆಯವರು ಕಿರುಕುಳ ನೀಡಿದರು. ಬೇರೆ ನಿರ್ವಾಹವಿಲ್ಲದೆ ಭಂಗಿಗಳು ಸಾರ್ವಜನಿಕವಾಗಿ ತಲೆ ಮೇಲೆ ಮಲ ಸುರಿದುಕೊಂಡು ಪ್ರತಿಭಟಿಸಿದರು.
ಗಣಿ ಗದ್ದಲದ ನಡುವೆ ಕರಗಿ ಹೋದ ಸುದ್ದಿ ಇದು. ಬಸವಲಿಂಗಪ್ಪನವರು ಮಲ ಹೊರುವ ಪದ್ಧತಿ ನಿಷೇಧಕ್ಕೆಂದು ಶತಾಯಗತಾಯ ಹೋರಾಡಿದರು. ದೇವರಾಜ ಅರಸು ಈ ಅಮಾನವೀಯ ಪದ್ಧತಿಯನ್ನು ನಿಷೇಧಿಸಿದ್ದರು. ಆದರೆ ಮಲ ಹೊರುವ ಕಾಯಕ ಎಲ್ಲ ಕಡೆಯೂ ನಡೆಯುತ್ತಿರುವುದಕ್ಕೆ ಉದಾಹರಣೆಗಳು ನೂರಾರು. ಸವಣೂರಿನ ಘಟನೆ ಅವುಗಳಲ್ಲಿ ಒಂದು.
ಇಂಥದ್ದೊಂದು ಘಟನೆಗೆ ಕರ್ನಾಟಕ ಸ್ಪಂದಿಸಿದ ರೀತಿಯೇ ಆಘಾತಕಾರಿಯಾಗಿದೆ. ರಾಜಕೀಯ ಪಕ್ಷಗಳಿಗೆ ಇದೊಂದು ಭೀಕರ ಘಟನೆ ಅನಿಸಲೇ ಇಲ್ಲ. ಸಾಮಾಜಿಕ ಸಂಘಟನೆಗಳೂ ಸಹ ಸುಮ್ಮನಿದ್ದುಬಿಟ್ಟವು. ಮಾನವ ಹಕ್ಕು ಹೋರಾಟಗಾರರು ಸಹ ತಲೆ ಕೆಡಿಸಿಕೊಂಡಂತೆ ಕಾಣಲಿಲ್ಲ.
ಕರ್ನಾಟಕದ ಜನ ಸಂವೇದನಾಶೀಲತೆಯನ್ನೇ ಕಳೆದುಕೊಂಡುಬಿಟ್ಟರೆ?
ಇದೊಂದೇ ಉದಾಹರಣೆಯಲ್ಲ. ಇಂಥವು ನೂರಾರು. ಗುಲ್ಬರ್ಗದಲ್ಲಿ ಜೀವನಪರ್ಯಂತ ಪೌರಕಾರ್ಮಿಕ ನೌಕರಿ ಮಾಡಿಕೊಂಡಿದ್ದವರಿಗೆ ವರ್ಷಗಳಿಂದ ಸಂಬಳವಿಲ್ಲ. ಪ್ರತಿಭಟನೆ ನಡೆಸಿದ ಪೌರಕಾರ್ಮಿಕರಿಗೆ ಪದೇ ಪದೇ ಲಾಠಿ ಏಟು, ಜೈಲು ಶಿಕ್ಷೆ. ಕೇಳುವವರು ಹೇಳುವವರು ಯಾರೂ ಇಲ್ಲ. ಆಟೋ ದರ ಹೆಚ್ಚಳಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರನ್ನು ಪೊಲೀಸರು ದನಕ್ಕೆ ಬಡಿಯುವ ಹಾಗೆ ಬಡಿದರು. ಪೊಲೀಸರ ಏಟಿಗೆ ಮೂರ್ಛೆ ತಪ್ಪಿ ಬಿದ್ದಿದ್ದ ಕಾರ್ಯಕರ್ತನನ್ನು ಬೂಟುಗಾಲಲ್ಲಿ ಒದ್ದರು. ಟಿವಿಗಳಲ್ಲಿ ಅದು ಪ್ರಸಾರವೂ ಆಯಿತು. ಕೊಪ್ಪಳದಲ್ಲಿ ರಸ್ತೆ ಅಗಲೀಕರಣಕ್ಕೆ ಒತ್ತಾಯಿಸುತ್ತಿದ್ದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರ ಕೈಗೆ ಕೊಳ ತೊಡಿಸಿ ಜೈಲಿಗಟ್ಟಲಾಯಿತು.
ಕರ್ನಾಟಕದ ಜನರು ಯಾಕೋ ಮಾತನಾಡುತ್ತಲೇ ಇಲ್ಲ.
ಮಾತನಾಡಬೇಕು ಎಂದುಕೊಳ್ಳುವ ಹೊತ್ತಿಗೆ ಅವರ ಗಂಟಲಲ್ಲಿ ಧ್ವನಿಯೇನಾದರೂ ಉಳಿದಿರಬಹುದೇ ಎಂಬ ಪ್ರಶ್ನೆ ನನ್ನದು.
******
ಇವತ್ತು ನಾವು ಎದುರಿಸುತ್ತಿರುವ ದೊಡ್ಡ ಸಮಸ್ಯೆ ಅನೈತಿಕ ಕೂಡಿಕೆಗಳದ್ದು. ರಾಜಕಾರಣದಲ್ಲಿ ಉದ್ಯಮ ಸೇರಿಕೊಂಡಿದೆ; ಹಾಗೆಯೇ ಉದ್ಯಮದಲ್ಲಿ ರಾಜಕಾರಣ. ರಾಜಕಾರಣದಲ್ಲಿ ಧರ್ಮ-ಜಾತಿ ಸೇರಿಕೊಂಡಿವೆ; ಹಾಗೆಯೇ ಧರ್ಮ-ಜಾತಿಗಳಲ್ಲಿ ರಾಜಕಾರಣ. ಗ್ರಾಮಲೆಕ್ಕಿಗನಿಂದ ಹಿಡಿದು ಅತ್ಯುನ್ನತ ನ್ಯಾಯಾಲಯದ ನ್ಯಾಯಾಧೀಶರವರೆಗೆ ಲಂಚಬಾಕತನ ಆವರಿಸಿಕೊಂಡಿದೆ.
ಹಿಂದೆಲ್ಲ ಉದ್ಯಮಿಗಳು ರಾಜಕಾರಣಿಗಳನ್ನು ಹಣಕೊಟ್ಟು ಕೊಂಡುಕೊಂಡುಬಿಟ್ಟಿರುತ್ತಿದ್ದರು. ತಮಗೆ ಬೇಕಾದ್ದನ್ನು ಮಾಡಿಸಿಕೊಳ್ಳುತ್ತಿದ್ದರು. ಆದರೆ ಜನಾರ್ದನ ರೆಡ್ಡಿಯಂಥವರು ನೇರದಾರಿ ಕಂಡುಕೊಂಡಿದ್ದಾರೆ. ತಾವೇ ನೇರವಾಗಿ ರಾಜಕಾರಣಕ್ಕೆ ಇಳಿದು, ತಾವೂ ಗೆದ್ದು, ಹಣಹೂಡಿ ಶಾಸಕರನ್ನೂ ಗೆಲ್ಲಿಸಿಕೊಂಡು ಮುಖ್ಯಮಂತ್ರಿಗಳ ಜತೆ ಚೌಕಾಶಿ ಮಾಡುತ್ತಾರೆ. ಬಗ್ಗದಿದ್ದರೆ ಬಡಿದು ಬಗ್ಗಿಸುತ್ತಾರೆ.
ಯಡಿಯೂರಪ್ಪರಂಥವರು ಇಂಥದನ್ನೆಲ್ಲ ನೋಡಿ ಸಹಜವಾಗಿ ಹತಾಶರಾಗುತ್ತಾರೆ. ಹಣದ ಕೊಬ್ಬಿನಲ್ಲಿ ಅಲ್ಲವೇ ಅವರು ಮೆರೆಯುತ್ತಿರುವುದು ಎಂದು ಭಾವಿಸಿ, ತಾವೂ ಬಗೆಬಗೆಯ ದಂಧೆಗಳಿಗೆ ತೊಡಗುತ್ತಾರೆ. ಕೋಟಿ ಕೋಟಿ ಹಣ ಸಂಗ್ರಹಕ್ಕೆ ಮುಂದಾಗುತ್ತಾರೆ.
ರಾಜಕಾರಣ ಸೇರಿ ಹೋದ ಕಳ್ಳ ಉದ್ಯಮಿಗಳ ಜತೆ ಪೈಪೋಟಿ ಮಾಡಲಾಗದೆ, ರಾಜಕಾರಣಿಗಳೇ ಕಳ್ಳದಂಧೆಗಳಿಗೆ ಇಳಿಯುತ್ತಾರೆ, ಪೈಪೋಟಿಗೆ ನಿಲ್ಲುತ್ತಾರೆ.
ಇಂಥ ಸಂಘರ್ಷಗಳು ನಡೆಯುವಾಗ ಮಲ ಸುರಿದುಕೊಂಡು ಪ್ರತಿಭಟನೆ ಮಾಡುವ ಭಂಗಿ ಜನರ ನೋವನ್ನು ಅರ್ಥ ಮಾಡಿಕೊಳ್ಳುವವರು ಯಾರಿದ್ದಾರು?
ನ್ಯಾಯಯುತ ಬೇಡಿಕೆಗಳಿಗಾಗಿ ಪ್ರತಿಭಟನೆ ನಡೆಸುವವರನ್ನು ಪೊಲೀಸರು ಹಿಡಿದು ಚಚ್ಚಿ ಕೊಂದರೂ ಕೇಳುವವರು ಯಾರಿದ್ದಾರು?
ಕೆಂಗಲ್, ನಿಜಲಿಂಗಪ್ಪ, ಅರಸು, ಗೋಪಾಲಗೌಡ ಅಂಥವರು ಕಟ್ಟಿದ ನಾಡಿನಲ್ಲಿ ಎಂಥೆಂಥ ಅಸಹ್ಯ ಮುಖಗಳು ಹುಟ್ಟಿಕೊಂಡವು?
*****
ಇದೆಲ್ಲವನ್ನೂ ನೋಡುತ್ತಿದ್ದರೆ, ಈ ನಾಡು ಸದ್ಯದಲ್ಲೇ ನಾವು ನೋಡುತ್ತಿರುವ ಭೀಕರ ದೃಶ್ಯಾವಳಿಗಳಿಗಿಂತ ಭೀಭತ್ಸವಾದ, ಊಹೆಗೆ ನಿಲುಕದ ದುರ್ಘಟನೆಗಳಿಗೆ ಸಾಕ್ಷಿಯಾಗಲಿದೆಯೇನೋ ಎಂಬ ಭೀತಿ ಕಾಡುತ್ತಿದೆ.

No comments:

Post a Comment

ಹಿಂದಿನ ಬರೆಹಗಳು