Wednesday, August 11, 2010

ಸ್ವಾತಂತ್ರ್ಯದ ಅರವತಮೂರು ವರ್ಷ
ನಮ್ಮ ಭಾರತಕ್ಕೆ ಸ್ವಾತಂತ್ರ್ಯ ಬಂದು ಇದೇ ಆಗಸ್ಟ್ ೧೫ಕ್ಕೆ ಅರವತ್ತಮೂರು ವರ್ಷಗಳಾದವು. ಆಗ ನನಗೆ ಇಪ್ಪತ್ತು ವರ್ಷ. ಅಲ್ಲಿ ಇಲ್ಲಿ ಸ್ವಲ್ಪಮಟ್ಟಿಗೆ ಸ್ವಾತಂತ್ರ್ಯದ ಚಳವಳಿಯಲ್ಲಿ ಭಾಗವಹಿಸಿದ ನನಗೆ, ಸ್ವಾತಂತ್ರ್ಯದ ಅರ್ಥವೇನು ಎಂಬುದರ ಅರಿವು ಈಗಲೂ ಇದೆ. ೬೩ ವರ್ಷದ ಹಿಂದೆ ೧೯೪೭ರ ಮಧ್ಯರಾತ್ರಿಯಲ್ಲಿ ದೆಹಲಿಯಲ್ಲಿ ಸ್ವಾತಂತ್ರ್ಯೋತ್ಸವವನ್ನು ಆಚರಿಸಿದಾಗ ರಾತ್ರಿ ಇಡೀ ರೇಡಿಯೋ ಮುಂದೆ ಕುಳಿತು ಅಲ್ಲಿ ನಡೆಯುತ್ತಿದ್ದ ವರದಿಯನ್ನು ಕೇಳಿ ಸಂತೋಷಪಟ್ಟಿದ್ದೆವು. ಆಗ ಈಗಿನಂತೆ ದೂರದರ್ಶನ ಇರಲಿಲ್ಲ. ಕಣ್ಣಿನಿಂದ ದೆಹಲಿ ಕಾರ್ಯಕ್ರಮಗಳನ್ನು ಸಾಗರದಲ್ಲಿ ಕುಳಿತು ನೋಡಲು ಸಾಧ್ಯವಿರಲಿಲ್ಲ. ಆಕಾಶವಾಣಿಯಿಂದ ಪ್ರಸಾರವಾಗುವ ಸುದ್ದಿಯೇ ಕಿವಿಗೆ ಅಪ್ಯಾಯಮಾನ. ಜಗತ್ತಿನ ಸುದ್ದಿಗಳನ್ನು ನಮ್ಮ ಮನೆಯಲ್ಲಿ ಕುಳಿತು ತಿಳಿದುಕೊಳ್ಳುತ್ತಿದ್ದೇವಲ್ಲಾ ಎಂಬ ಸಂತೋಷ. ಸಿ.ರಾಜಗೋಪಾಲಚಾರಿಯವರು ಭಾರತದ ಗೌರ್ನರ್ ಜನರಲ್ ಆಗಿ ಅಧಿಕಾರ ಸ್ವೀಕರಿಸಿದ ಸಂದರ್ಭದ ಸಡಗರ. ಜವಾಹರಲಾಲ್‌ರವರು ಭಾರತದ ಪ್ರಥಮ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭ, ಇವೆಲ್ಲವೂ ಅಂದು ನಮಗೆ ರೋಮಾಂಚನವನ್ನುಂಟುಮಾಡಿತ್ತು. ನಾವೇ ಭಾರತದ ಗೌರ್ನರ್ ಜನರಲ್ ಆದಂತೆ, ನಾವೇ ಭಾರತದ ಪ್ರಧಾನಮಂತ್ರಿ ಆದಂತೆ ಸಂತೋಷ ಸಂಭ್ರಮ, ಆನಂದ. ಎಲ್ಲಿ ನೋಡಿದರೂ ಭಾರತಕ್ಕೆ ಸ್ವಾತಂತ್ರ್ಯ ಬಂದ ಆನಂದ. ಗಾಂಧೀಜಿ ಬಗ್ಗೆ ಜನರ ಭಾವನೆಯಲ್ಲಿ ಸಾಕ್ಷಾತ್ ದೇವರು, ಪವಾಡ ಪುರುಷ. ಎಲ್ಲಿಯೂ ಯುದ್ಧ ನಡೆಯದೆ ಗಾಂಧೀಜಿಯವರ ಪ್ರಭಾವದಿಂದ ಎಷ್ಟೊಂದು ಸುಲಭವಾಗಿ ದೇಶಕ್ಕೆ ಸ್ವಾತಂತ್ರ್ಯ ಲಭಿಸಿತು ಎನ್ನುವ ಹೆಗ್ಗಳಿಕೆ. ಗಾಂಧೀಜಿಯ ಮಾತಿಗೆ ಅವರ ಸಾಧನೆಗೆ ಬ್ರಿಟಿಷರು ಎಷ್ಟೊಂದು ಸುಲಭವಾಗಿ ಶರಣಾಗಿ ಭಾರತದಿಂದ ತಮ್ಮ ದೇಶಕ್ಕೆ ಹೊರಟುಹೋದರು ಎಂಬ ಮಾತು ಎಲ್ಲ ಕಡೆಗಳಿಂದಲೂ ನಡೆಯುವ ಚರ್ಚೆಗಳಾಗಿದ್ದವು. ಅಂದಿನ ದಿನಗಳಲ್ಲಿ ರಾಷ್ಟ್ರದ ಬಗ್ಗೆ ಭಾರತೀಯರಿಗಿದ್ದ ರಾಷ್ಟ್ರ ಪ್ರೇಮವನ್ನು ಯಾವ ಅಳತೆಗೋಲಿನಿಂದಲೂ ಅಳೆಯಲೂ ಸಾಧ್ಯವಿರಲಿಲ್ಲ. ಗಾಂಧೀಜಿಯ ಪ್ರಭಾವವಂತೂ ಬಹಳ ದಟ್ಟವಾಗಿ ಬೀರಿತ್ತು. ಅದರಿಂದ ತಪ್ಪಿಸಿಕೊಳ್ಳಲು ಯಾರಿಂದಲೂ ಸಾಧ್ಯವಿರಲಿಲ್ಲ. ಸತ್ಯ, ನ್ಯಾಯ, ನೀತಿ, ಅಹಿಂಸೆ, ನಿಷ್ಕಾಮ ದುಡಿಮೆ, ಸಮಯ ಪಾಲನೆ, ತ್ಯಾಗಬುದ್ಧಿಯಿಂದ ಗಾಂಧೀಜಿ ಇಡೀ ಭಾರತೀಯರನ್ನು ಸಂಪೂರ್ಣ ಆಕರ್ಷಿಸಿದ್ದರು. ಗಾಂಧೀಜಿಯವರ ಮಾತು ಕೇಳುವುದಕ್ಕಿಂತ ಅವರು ನಮ್ಮೊಡನೆ ಇದ್ದರೆಂಬುದೇ ನಮ್ಮೆಲ್ಲರ ಸೌಭಾಗ್ಯವಾಗಿತ್ತು. ಭಾರತ ಇಬ್ಭಾಗವಾಗಿ ಒಂದು ಭಾಗ ಪಾಕಿಸ್ತಾನವಾಗಿ ರೂಪುಗೊಂಡಾಗ ಭಾರತೀಯರಿಗಾದ ನೋವು ಸಂಕಟ ಹೇಳತೀರದು. ಗಾಂಧೀಜಿ ಕೂಡ ಕೊನೆಯ ಗಳಿಗೆಯಲ್ಲಿ ಈ ಇಬ್ಭಾಗವನ್ನು ಒಪ್ಪಿಕೊಳ್ಳಲೇಬೇಕಾಯಿತು. ಗಾಂಧೀಜಿಯವರಿಗೆ ಈಗ ಈ ಭವ್ಯಭಾರತವನ್ನು ರಾಮರಾಜ್ಯವನ್ನಾಗಿ ಮಾಡಬೇಕೆಂಬುದೇ ಅವರ ನಿತ್ಯದ ಕನಸಾಗಿತ್ತು.
ಈ ೬೩ ವರ್ಷಗಳಲ್ಲಿ ಭಾರತ ಏನೇನು ಕಂಡಿದೆ? ಎಂಥವರನ್ನು ಕಂಡಿದೆ? ಹೇಗೆ ನಡೆದು ಬಂದಿದೆ? ಇದನ್ನು ಮಾತ್ರ ಯಾರೂ ನಂಬಲು ಸಾಧ್ಯವಿಲ್ಲದ ಸಂಗತಿ. ಭಾರತಕ್ಕೆ ಸ್ವಾತಂತ್ರ್ಯ ಬಂದು ಇಪ್ಪತ್ತೈದು ವರ್ಷಗಳ ಕಾಲದ ಭಾಗ ಒಂದಾದರೆ ಅನಂತರದ ೩೮ ವರ್ಷಗಳ ಭಾಗ ಇನ್ನೊಂದು. ಈ ಎರಡು ಭಾಗಗಳಿಗೆ ಒಂದಕ್ಕೊಂದು ಸಾಮ್ಯವಿಲ್ಲ. ಅಜಗಜಾಂತರ ವ್ಯತ್ಯಾಸ. ಭಾರತಕ್ಕೆ ಪ್ರಾರಂಭದ ಸರ್ಕಾರವಾಗಿ ಜವಹರಲಾಲ್ ನೆಹರೂರವರ ಸರ್ಕಾರ ಹತ್ತು ವರ್ಷಗಳು ನಡೆದು ಬಂದ ದಾರಿ ಒಂದಾದರೆ, ಅನಂತರ ಮುಂದಿನ ಹದಿನೈದು ವರ್ಷಗಳ ಆಡಳಿತ ನಡೆಸಿದವರ ರೀತಿಯೇ ಬೇರೆ. ನಂತರದ ವರ್ಷಗಳ ಆಡಳಿತ, ಕೇಂದ್ರ ಹಾಗೂ ರಾಜ್ಯಗಳಲ್ಲಿ ಸಂಪೂರ್ಣವಾಗಿ ವ್ಯತ್ಯಯಗೊಂಡವು. ಸರಿಸುಮಾರು ಇತ್ತೀಚಿನ ಇಪ್ಪತ್ತೈದು ವರ್ಷಗಳಲ್ಲಿ, ಸರ್ಕಾರ ಹಾಗೂ ಜನತೆ ಸರಿ ಸಮಾನವೆಂಬಂತೆ ದಾರಿ ತಪ್ಪಿಸಿದವು. ಸರ್ಕಾರದ ನೀತಿಯಂತೂ ಅಗ್ಗದ ಜನಪ್ರಿಯತೆಗಾಗಿ ಕೈಗೊಂಡ ಯೋಜನೆಗಳಿಂದ ಎಲ್ಲಾ ಪಂಚವಾರ್ಷಿಕ ಯೋಜನೆಗಳೂ ವಿಫಲಗೊಂಡವು. ಸಾಮಾಜಿಕ ಹಾಗೂ ಶಿಕ್ಷಣ ಧೋರಣೆಗಳು, ಆರ್ಥಿಕ ನೀತಿ ಇವುಗಳು ಜನವಿರೋಧಿ ನೀತಿಯಾಗಿ ರೂಪುಗೊಂಡವು. ಭಾರತ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ, ತೆರಿಗೆಯ ಪದ್ಧತಿಗಳು, ಕಪ್ಪು ಹಣಗಳಿಗೆ ಕಾರಣವಾದವು.
ಜವಳಿ ಹಾಗೂ ಸಕ್ಕರೆ ನೀತಿಯಂತೂ ಕೈಗಾರಿಕೋದ್ಯಮಿಗಳಿಗೆ ಲಾಭದಾಯಕವಾಗಿ ಜನಸಾಮಾನ್ಯರನ್ನು ದುಃಸ್ಥಿತಿಗೆ ದೂಡುವಂತಾಯಿತು. ಜವಾಹರಲಾಲ್ ನೆಹರೂರವರ ವಿದೇಶಾಂಗ ಧೋರಣೆ ಅವರ ಆಡಳಿತದ ಕೊನೆಯ ದಿನಗಳಲ್ಲಿ ಸಂಪೂರ್ಣ ವಿಫಲವಾಯಿತು. ಇದರಿಂದ ಆರ್ಥಿಕ ನೀತಿಯ ಮೇಲೂ ದುಷ್ಪರಿಣಾಮ ಬೀರಿತೆಂದು ಆರ್ಥಿಕ ತಜ್ಞರು ಇಂದಿಗೂ ಗೊಣಗಾಡುತ್ತಿದ್ದಾರೆ. ಇತ್ತೀಚಿನ ಸರ್ಕಾರದ ಆಹಾರ ನೀತಿಯಿಂದ ಶ್ರೀ ಸಾಮಾನ್ಯನ ಮೇಲೆ ಗದಾಪ್ರಹಾರವಾಗಿದೆ. ತನ್ನ ದುಡಿಮೆ ಸಾಕಾಗದಷ್ಟು ಆಹಾರ ಧಾನ್ಯಗಳ ಬೆಲೆ ಗಗನಕ್ಕೆ ಹೋಗಿವೆ. ದುಡಿಮೆ ಗೌರವಯುತವಾಗಿ ಜೀವಿಸಲು ಸಾಧ್ಯವಿಲ್ಲದವರು ದಾರಿ ತಪ್ಪುತ್ತಿದ್ದಾರೆ. ಇದರ ಪ್ರೇರಣೆಯಿಂದ, ಕಳವು, ದರೋಡೆ, ಕೊಲೆ, ಸುಲಿಗೆಗಳು ಜಾಸ್ತಿಯಾಗಿವೆ. ಇದರಲ್ಲಿ ಅವಿದ್ಯಾವಂತರು ಮಾತ್ರವಲ್ಲ, ನಿರುದ್ಯೋಗಿಗಳಾದ ಪದವೀಧರರೂ ಜೀವಿಸಲು ಕಷ್ಟವಾಗಿ, ಇಂತಹ ಕೆಟ್ಟ ಕೆಲಸಗಳಿಗೆ ಮನಸ್ಸು ಹಾಯಿಸುವ ಪ್ರಸಂಗಗಳು ಪ್ರಾರಂಭವಾಗಿವೆ. ಇದು ಒಂದು ಮುಖವಾದರೆ, ಇನ್ನೊಂದು ಮುಖ ಇನ್ನೂ ಘೋರವಾದದ್ದು.
ಜನರಿಂದ ಆರಿಸಿ ಹೋದ ನಮ್ಮ ಪ್ರತಿನಿಧಿಗಳಂತೂ ಯಾವ ಕಳ್ಳನಿಗೂ, ದರೋಡೆ ಕೋರನಿಗೂ ಕಮ್ಮಿ ಇಲ್ಲವೆಂಬಂತೆ ವರ್ತಿಸಿದ್ದಾರೆ. ರಾಷ್ಟ್ರದ ಚಿಂತನೆ ಇಲ್ಲದ ಇವರು ತಮ್ಮ ಚಿಂತನೆಯಲ್ಲಿಯೇ ಸದಾ ಕಾಲ ಇದ್ದು, ದೇಶದ ಸಂಪತ್ತನ್ನೆಲ್ಲಾ ಅವಕಾಶ ಸಿಕ್ಕಿದಾಗಲೆಲ್ಲಾ ಕೊಳ್ಳೆ ಹೊಡೆದಿದ್ದಾರೆ. ಅದಕ್ಕೆ ಬೇಕಾದಷ್ಟು ಸಾಕ್ಷ್ಯಾಧಾರಗಳು ಜನತೆಯ ಕಣ್ಣ ಮುಂದೆ ಇವೆ. ವಂಚನೆ, ಮೋಸ, ಅಕ್ರಮ ಸಂಪತ್ತುಗಳನ್ನು ಗಳಿಸಿ ಸಿಕ್ಕಿಸಿಕ್ಕಿದ್ದನ್ನೆಲ್ಲಾ ಮುಕ್ಕಿದ ಮಹಾನುಭಾವರು ಇಂದು ಸೆರೆಮನೆ ಸೇರಿದ್ದಾರೆ. ಅಂದು ಸ್ವಾತಂತ್ರ್ಯಕ್ಕಾಗಿ ಸತ್ಯಾಗ್ರಹ ನಡೆಸಿ ಸೆರೆಮನೆ ಸೇರಿದರೆ, ಇಂದು ಸ್ವಾತಂತ್ರ್ಯ ಪಡೆದ ರಾಷ್ಟ್ರದಲ್ಲಿಯೇ ಅಕ್ರಮವೆಸಗಿ ಸೆರೆಮನೆ ಸೇರುತ್ತಿದ್ದಾರೆ. ಇದರಲ್ಲಿ ಬಹುಪಾಲು ಜನತೆಯಿಂದ ಆರಿಸಲ್ಪಟ್ಟ ಜನತಾ ಪ್ರತಿನಿಧಿಗಳು. ಇದಕ್ಕೆ ಕಾರಣ ನಾವು ಜನಪ್ರತಿನಿಧಿಗಳನ್ನು ಆರಿಸುವ ಕ್ರಮ. ಇದು ಈ ೬೩ ವರ್ಷಗಳಲ್ಲಿ ಸ್ವಾತಂತ್ರ್ಯ ಅನುಭವಿಸಿದ ಫಲ. ಮುಂದಿನ ದಿನಗಳು ಹೇಗೆಂಬುದನ್ನು ಕಾದು ನೋಡಬೇಕಾಗಿದೆ.
ವಿಧಾನಸಭೆ, ಲೋಕಸಭೆಗಳಂತೂ ಬೀದಿಯ ಜಗಳವಾಗಿ, ಉಗ್ರ ರೂಪ ತಾಳುತ್ತಿದೆ. ಜನಪ್ರತಿನಿಧಿಗಳನ್ನು ಆರಿಸಿ ಕಳಿಸಿದ, ಮತದಾರ ನಾಚಿಕೆ ಪಟ್ಟು, ತಲೆ ತಗ್ಗಿಸುವಂತಾಗಿದೆ. ಇದರಿಂದ ಜನಪ್ರತಿನಿಧಿಗಳು ಎಂದು ಹೇಳಿಕೊಳ್ಳುವವರು ಅವರವರ ರಾಜಕೀಯ ಪಕ್ಷಗಳ ಗೌರವ, ಘನತೆಯನ್ನು ಹಾಳುಮಾಡಿ, ತಾವೇ ಮಾಧ್ಯಮಗಳಲ್ಲಿ ಮಿಂಚುತ್ತಿರುವುದನ್ನು ನೋಡಿದರೆ ಅಸಹ್ಯವಾಗುತ್ತಿದೆ. ನಮ್ಮ ರಾಷ್ಟ್ರದ ಮುಂದಿನ ದಿನಗಳು ಏನಾಗಬಹುದೆಂದು ಜನಸಾಮಾನ್ಯರು ಚಿಂತೆ ಪಡುವಂತಾಗಿದೆ.

ಟಿ.ಮಹಾಬಲೇಶ್ವರ ಭಟ್ಟ

No comments:

Post a Comment

ಹಿಂದಿನ ಬರೆಹಗಳು