Sunday, September 26, 2010

ನಲ್ನುಡಿ ಕಥಾಸ್ಪರ್ಧೆ-೨೦೧೦

ಕರ್ನಾಟಕ ರಕ್ಷಣಾ ವೇದಿಕೆಯ ಮುಖವಾಣಿ ‘ಕರವೇ ನಲ್ನುಡಿ ಮಾಸಪತ್ರಿಕೆ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ವಿಶೇಷಾಂಕವನ್ನು ಹೊರತರುತ್ತಿದ್ದು, ಕಥಾ ಸ್ಪರ್ಧೆಯನ್ನು ಏರ್ಪಡಿಸಿದ್ದು, ಕಥೆಗಾರರಿಂದ ಕಥೆಗಳನ್ನು ಆಹ್ವಾನಿಸಲಾಗಿದೆ.

ಹಾಳೆಯ ಒಂದೇ ಮಗ್ಗುಲಲ್ಲಿ ಸ್ಫುಟವಾಗಿ ಬರೆದ ಕಥೆಗಳನ್ನು ಸಂಪಾದಕರು, ನಲ್ನುಡಿ ಕಥಾಸ್ಪರ್ಧೆ-೨೦೧೦, ಕರವೇ ನಲ್ನುಡಿ ಮಾಸಪತ್ರಿಕೆ, ಕನಸು ಕ್ರಿಯೇಷನ್ಸ್, ನಂ.೬/೨, ಶಿವಾನಂದ ವೃತ್ತ, ಕುಮಾರಕೃಪ ರಸ್ತೆ, ಬೆಂಗಳೂರು-೧ ಈ ವಿಳಾಸಕ್ಕೆ ಕಳುಹಿಸಲು ಕೋರುತ್ತೇವೆ. ಇ-ಮೇಲ್ ಮೂಲಕ ಕಥೆಗಳನ್ನು ಕಳುಹಿಸಿದರೂ ಆದೀತು. ಇ-ಮೇಲ್ ವಿಳಾಸ: karavenalnudi@gmail.com ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ. ಕಥೆಗಳನ್ನು ಕಳುಹಿಸಲು ಕಡೆಯ ದಿನಾಂಕ ಅಕ್ಟೋಬರ್ ೨೦.

ಪ್ರಥಮ ಬಹುಮಾನ ೨೫,೦೦೦ ರೂ., ದ್ವಿತೀಯ ಬಹುಮಾನ ೧೫,೦೦೦ ರೂ., ತೃತೀಯ ಬಹುಮಾನ ೧೦,೦೦೦ ರೂ. ಕನ್ನಡದ ಶ್ರೇಷ್ಠ ವಿಮರ್ಶಕರ ತಂಡವೊಂದು ಕಥಾಸ್ಪರ್ಧೆಯ ತೀರ್ಪು ನೀಡಲಿದ್ದು, ತೀರ್ಪುಗಾರರ ನಿರ್ಧಾರವೇ ಅಂತಿಮವಾಗಿರುತ್ತದೆ. ಮೆಚ್ಚುಗೆ ಪಡೆದ ಕಥೆಗಳನ್ನು ‘ನಲ್ನುಡಿ ಮಾಸಿಕದಲ್ಲಿ ಪ್ರಕಟಿಸಲಾಗುವುದು. ಹೆಚ್ಚಿನ ಮಾಹಿತಿಗೆ ೦೮೦-೨೨೩೪ ೧೭೯೨ ದೂರವಾಣಿ ಸಂಪರ್ಕಿಸಬಹುದು.

Thursday, September 9, 2010

ಮುಕ್ಕಣ್ಣ, ಮುನೇಶ್ವರ ಸಂತೈಸುವ ಅವ್ವ...
ಕಿ.ರಂ. ನಾಗರಾಜರ ನೆನಪು ಕೊರೆಯುತ್ತಲೇ ಇದೆ. ಬಿಟ್ಟು-ಬಿಡದೆ ಸುರಿಯುವ ಸೋನೆಮಳೆಯಂತೆ. ಶೃತಿಬದ್ಧವಾದ ಮಂದ್ರಸ್ಥಾಯಿಯ ಅವರ ನಿರರ್ಗಳ ಮಾತಿನ ಗುಂಗಿನಿಂದ ಹೊರಬರಲಾಗದ ನರಳುವ ಸ್ಥಿತಿಯಲ್ಲಿ ನನ್ನಂತೆ ಹಲವು ಗೆಳೆಯರು ಕಿ.ರಂ.ಸಂಗದ ಸಹವಾಸದಲ್ಲಿ ನರಳುತ್ತಿರಬಹುದು.
ಗುರು ಪರಂಪರೆಯನ್ನು ಮುಂದುವರೆಸುತ್ತ, ಶಿಷ್ಯ ಪರಂಪರೆಯನ್ನು ಬೆಳೆಸುತ್ತ ನಡೆದ ಕಿ.ರಂ. ‘ಮಾತಿನ ಮಾಧ್ಯಮದ ಮೂಲಕ ಕಾವ್ಯವನ್ನು ಜೀವಂತವಾಗಿಟ್ಟವರು. ಹಾಗೆಯೇ ಸಮಾಜಮುಖಿ ಚಿಂತನೆಗಳ ಮಾರ್ಗದಲ್ಲಿ ನಡೆದವರು. ಅವರ ಅಗಲಿಕೆಯ ನಂತರದಲ್ಲಿ ಕನ್ನಡ ಮತ್ತು ಆಂಗ್ಲ ಮಾಧ್ಯಮಗಳಲ್ಲಿ ಪ್ರಕಟಗೊಂಡ ಕಿ.ರಂ. ಕುರಿತ ಬರಹಗಳನ್ನು ಗಮನಿಸಿದರೆ ಸಾಹಿತ್ಯ, ಸಾಂಸ್ಕೃತಿಕ ಹಾಗೂ ಸಾಮಾಜಿಕ ವಲಯದಲ್ಲಿ ಹಬ್ಬಿದ್ದ ಅವರ ಗಾಢ ಪ್ರಭಾವದ ಅನುಭವವಾಗದೇ ಇರದು.
ಕಿ.ರಂ.ನಾಗರಾಜರ ಪ್ರಭಾವಳಿಯಲ್ಲಿ ಸಿಲುಕಿದ್ದವರಿಗೆಲ್ಲ ಅವರ ದಿಢೀರ್ ನಿರ್ಗಮನ ಒಂದು ರೀತಿಯ ಆತಂಕದಿಂದ ಕೂಡಿದ ‘ಅನಾಥಪ್ರಜ್ಞೆಯನ್ನು ಸೃಷ್ಠಿಸಿದ್ದು ಸುಳ್ಳಲ್ಲ.
ಮೊನ್ನೆ ಕಿ.ರಂ. ಹೇಳಿದ ಮಾತುಗಳು ನೆನಪಾದವು. ರಾಜ್ಯ ಸರ್ಕಾರ ‘ಸಾರಾಯಿ ನಿಷೇಧ ಮಾಡಿದ ತೀರ್ಮಾನಕ್ಕೆ ಎಲ್ಲಕಡೆಯಿಂದಲೂ ಬೆಂಬಲ ವ್ಯಕ್ತವಾಗುತ್ತಿದ್ದರೆ ಅಂದು ಕಿ.ರಂ. ಸಾಹೇಬರು ಖಿನ್ನತೆಯಲ್ಲಿದ್ದರು. ‘ಪ್ರೆಸ್‌ಕ್ಲಬ್ನಲ್ಲಿ ಸಂಜೆಯ ಪಾನಕೂಟ ರಂಗೇರುತ್ತಿದ್ದಂತೆ ತಾರಕ ಸ್ಥಿತಿಗೇರಿದ್ದ ಕಿ.ರಂ. ಸರ್ಕಾರಕ್ಕೆ ಶಾಪಹಾಕತೊಡಗಿದರು.
ಸಾರಾಯಿ ನಿಷೇಧದಿಂದಾಗುವ ಅನಾಹುತಗಳು, ಬಡತನ ರೇಖೆಗಿಂಥ ಕೆಳಗಿನ ಜನರು ಎದುರಿಸಬಹುದಾದ ಆರ್ಥಿಕ ಸಂಕಷ್ಟಗಳ ಮುಂದಾಲೋಚನೆ ಅವರನ್ನು ಆತಂಕಕ್ಕೆ ದೂಡಿದಂತಿತ್ತು.
ಪ್ರತಿನಿತ್ಯ ಕುಡಿತದ ಅಭ್ಯಾಸವನ್ನಿಟ್ಟುಕೊಂಡ ಬಡಕುಡುಕರ ಬಗೆಗೆನ ಕಿ.ರಂ. ಕಾಳಜಿ ತೋರಿದ್ದರು. ಸಾರಾಯಿ ಕುಡಿಯುವ ಜನ ದುಡಿಯುವ ಹಣದಲ್ಲಿ ಇನ್ನೂ ಮುಂದೆ ಬಣ್ಣದ ಸಾರಾಯಿ (ಚೀಪ್ ಲಿಕ್ಕರ್)ಗಾಗಿ ಹೆಚ್ಚುವರಿ ಹಣವನ್ನು ಪ್ರತಿನಿತ್ಯದ ತೆರಿಗೆಯಂತೆ ತೆರಬೇಕಾಗಿ ಬರಬಹುದು. ಅಲ್ಲದೆ ಅವರು ಇನ್ನಷ್ಟು ಬಡತನದಲ್ಲಿ ಬಿದ್ದು ‘ಆಹಾರಕೊರತೆಯ ಹಾಹಾಕಾರಕ್ಕೆ ಬಲಿಯಾಗುತ್ತಾರೆಂಬ ಆತಂಕದಿಂದಲೇ ಕಿ.ರಂ. ತಮ್ಮ ಬಲಗೈ ಬೆರಳುಗಳನ್ನು ತೀವ್ರವಾಗಿ ಉಜ್ಜಿಕೊಳ್ಳುತ್ತಿದ್ದರು.
ಮುಂದೆ ಕಿ.ರಂ.ಹೇಳಿದಂತೆಯೇ ಅವಘಡಗಳು ಸಂಭವಿಸಿದಾಗ ನಮಗೆಲ್ಲ ಅಚ್ಚರಿ; ಕಳ್ಳಭಟ್ಟಿ ದುರಂತದಲ್ಲಿ ಹಲವರು ಅಸುನೀಗಿದರು. ಹತ್ತಾರು ರೂಪಾಯಿಗಳಲ್ಲಿ ತಮ್ಮ ಕಾಯಕ ಮುಗಿಸಿಕೊಳ್ಳುತ್ತಿದ್ದ ಸಾರಾಯಿ ಪಾನಿಗರು ನೂರಾರು ರೂಪಾಯಿ ತೆರಬೇಕಾಗಿ ಬಂದದ್ದು ಮತ್ತೊಂದು ದುರಂತ. ದುಡಿದ ಕೂಲಿಯ ಮುಕ್ಕಾಲು ಪಾಲು ಬಣ್ಣದ ಶೀಷೆಗಳ ಪಾಲಾಯಿತು. ಸಾರಾಯಿಯ ನಿಶೆಯ ಹಂತವನ್ನು ತಲುಪಲು ಮತ್ತಷ್ಟು ಮದ್ಯವನ್ನು ಸುರುವಿಕೊಳ್ಳುವ ಪರಿಸ್ಥಿತಿಗೆ ಹೊಂದಿಕೊಳ್ಳಲಾಗದೆ ಅನಿವಾರ್ಯತೆಗೆ ಒಳಗಾದರು. ಹೆಂಡ-ಸಾರಾಯಿ ಸಹವಾಸದಿಂದ ಎರಡು ಹೊತ್ತು ಹೊಟ್ಟೆ ತುಂಬಾ ಉಣ್ಣುತ್ತಿದ್ದ ಕುಟುಂಬಗಳು ಮತ್ತಷ್ಟು ಜರ್ಜರಿತಗೊಂಡಿದ್ದು ಕಣ್ಣಿಗೆ ಕಟ್ಟುವ ವಾಸ್ತವ.
ಇದೇ ಕಿ.ರಂ.ಸಾಹೇಬರು ಚಿತ್ರದುರ್ಗದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ನಂತರ ಅಲ್ಲೇ ಠಿಕಾಣಿ ಹೂಡಿದರು. ಎಂದಿನಂತೆ ಸಂಜೆ ಹೊತ್ತಿಗೆ ಪಾರ್ಟಿ ರಂಗೇರಿತು. ಸಾರಾಯಿ ನಿಷೇಧದ ಗುಂಗಿನಲ್ಲೇ ಇದ್ದ ಕಿ.ರಂ. ‘ನನಗೀಗಲೇ ಬೇಕೇ ಬೇಕು ಎಂದು ಹಠಕ್ಕೆ ಬಿದ್ದರು. ಶಿಷ್ಯ ಪಟಾಲಂ ಅಲ್ಲಿ-ಇಲ್ಲಿ ಹುಡುಕಿ ತಡಕಿ ಒಂದಷ್ಟು ‘ಸಾರಾಯಿ ಪ್ಯಾಕೆಟ್ಗಳನ್ನು ತಂದು ಮುಂದಿಟ್ಟರು. ಒಂದರ ಹಿಂದೆ ಒಂದರಂತೆ ಪಕ್ಕ ಗ್ರಾಮೀಣ ಶೈಲಿಯಲ್ಲಿ ಸುರುವಿಕೊಂಡು ಕಿ.ರಂ.ಹತ್ತೇ ನಿಮಿಷಕ್ಕೆ ನಿದ್ರೆಗೆ ಜಾರಿದರು. ಮೇಷ್ಟ್ರು ಎಷ್ಟೇ ಕರೆದ್ರು ಮಾತಾಡ್ತಾ ಇಲ್ಲ ಶಿಷ್ಯ ಪಟಾಲಂಗೆ ಆತಂಕ. ಆದರೆ ಅಂತದ್ದೇನೂ ಸಂಭವಿಸಲಿಲ್ಲ.
ಸರಕಾರ ಸಾರಾಯಿ ನಿಷೇಧ ಮಾಡಿದ್ದು-ಮತ್ತೆಂದು ಅದು ಸಿಗುವುದಿಲ್ಲವಲ್ಲ ಎಂಬ ಆತಂಕಕ್ಕೆ ಒಳಗಾಗಿದ್ದು, ಅದರ
ಜತೆಜತೆಗೆ ಸಾಮಾಜಿಕ ಚಿಂತನೆ-ವೋಟ್‌ಬ್ಯಾಂಕ್ ರಾಜಕೀಯ, ವಗೈರೆ ವಿಚಾರಧಾರೆಗಳು ಹರಿಯುತ್ತಲೇ ಇತ್ತು. ಆದರೆ ಎಲ್ಲ ಸಾಹಿತಿಗಳು ಸಾರಾಯಿ ನಿಷೇಧವನ್ನು ಸ್ವಾಗತಿಸುತ್ತಿರುವಾಗ ಕಿ.ರಂ.ಮಾತ್ರ ಸಾರ್ವಜನಿಕವಾಗಿ ಅಭಿಪ್ರಾಯ ವ್ಯಕ್ತಪಡಿಸಲಾಗದಿದ್ದರೂ ಪಾನಗೋಷ್ಠಿ ಸಂದರ್ಭದಲ್ಲಿ ಸಾರಾಯಿಯ ನೆನಪಂತೂ ಅವರನ್ನು ಕಾಡುತ್ತಲೇ ಇತ್ತು.
ಕಿ.ರಂ.ಅಗಲಿಕೆಯ ಕೆಲವೇ ದಿನಗಳ ಮುನ್ನ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದ ಹಿನ್ನೆಲೆಯಲ್ಲಿ ಅಭಿನಂದನಾ ಸಮಾರಂಭವೊಂದು ನಡೆಯಿತು. ಅಭಿನಂದನಾ ಭಾಷಣದ ಕೊನೆಯಲ್ಲಿ ಯು.ಆರ್.ಅನಂತಮೂರ್ತಿಯವರು ಹಾಗೂ ಮುಕ್ತ ಸೀತಾರಾಂ-ಕಿ.ರಂ.ನಾಗರಾಜ್‌ರ ಮಿತಿಯಿಲ್ಲದ ಕುಡಿತದ ಕುರಿತು ಬಹಿರಂಗವಾಗಿಯೇ ಪ್ರಸ್ತಾಪಿಸಿದ್ದು, ಅಲ್ಲಿ ಸೇರಿದ್ದ ಕಿ.ರಂ.ಸ್ನೇಹಿತರಿಗೆ-ಅಭಿಮಾನಿಗಳಿಗೆಲ್ಲ ಮುಜುಗುರಕ್ಕೀಡು ಮಾಡಿತು. ಸ್ವತಃ ಕಿ.ರಂ. ಪಂಪ-ಕುಮಾರವ್ಯಾಸನಿಂದ ಮೊದಲ್ಗೊಂಡು ಸುರಪಾನದ ರಸಾನುಭವಗಳನ್ನು ಕಾವ್ಯದ ಮೂಲಕ ಉತ್ತರಿಸಿ ವೇದಿಕೆಯಲ್ಲೇ ತಿರುಗೇಟು ನೀಡಿದ್ದು ನಮಗೆಲ್ಲ ಅತೀವ ಖುಷಿ ನೀಡಿತ್ತು.
ಅಭಿನಂದನಾ ಸಮಾರಂಭದಲ್ಲಿ ಕುಡಿತದ ವಿಷಯವನ್ನು ಪ್ರಸ್ತಾಪಿಸಿದ್ದ ಸೀತಾರಾಂ ಮುಖ ಬಿಳುಚಿಕೊಂಡಿತ್ತು.
ಬಡಪೆಟ್ಟಿಗೆ ಬಗ್ಗದ ಕಿ.ರಂ. ಜಟಾಧಾರಿ ಮುಕ್ಕಣ್ಣನಂತೆ, ಮುನೇಶ್ವರನಂತೆ, ಜಂಗಮನಂತೆ, ಸಂತೈಸುವ ಅವ್ವನಂತೆ ಕಂಡದ್ದುಂಟು.
ಜನರಲ್ ಹಾಸ್ಟೆಲ್‌ನಲ್ಲಿ ರಾತ್ರಿಯೆಲ್ಲ ಕುಡಿದು ಸ್ನೇಹಿತರೊಂದಿಗೆ ಜಗಳಕ್ಕೆ ಬಿದ್ದು ಎದ್ದುಹೋದ ಕಿ.ರಂ. ಮತ್ತೆ ಬೆಳಗಿದ ಜಾವಕ್ಕೆ ಕದಬಡಿದು ನನ್ನ ಚಪ್ಪಲಿ ಬಿಟ್ಟು ಹೋಗಿದ್ದೆ ಕಣ್ರಿ ಎಂದು ಏನಾದ್ರೂ ಉಳಿಸಿದ್ದೀರಾ ಅನ್ನುತ್ತಿದ್ದರು.
ಪ್ರತಿ ತಿಂಗಳ ಎರಡನೇ ಶನಿವಾರ ಪ್ರೆಸ್‌ಕ್ಲಬ್ನಲ್ಲಿ ನಡೆಯುತ್ತಿದ್ದ ಪಾನಗೋಷ್ಠಿ-ಕಾವ್ಯಗೋಷ್ಠಿಯಾಗಿ ಮಾರ್ಪಾಡಾಗುತ್ತಿತ್ತು. ಮುರ‍್ನಾಲ್ಕು ದಿವಸದ ಮುಂಚೆ ಕನ್ನಡ ಪುಸ್ತಕ ಪ್ರಾಧಿಕಾರದ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಂದ ಕಿ.ರಂ. ಎದುರಿಗೆ ಕುಳಿತಿದ್ದ ಕವಿ ಸಿದ್ಧಲಿಂಗಯ್ಯನವರಿಗೆ ನೀವು ದೀರ್ಘಕಾವ್ಯವೊಂದನ್ನು ಬರೆಯಬೇಕು ಎಂದು ಒತ್ತಾಯಿಸುತ್ತಿದ್ದರು. ಕಿ.ರಂ. ಮಾತಿನಲ್ಲಿ ಬರುವ ನುಡಿಗಟ್ಟುಗಳು ಹಾಗೂ ಅಪರೂಪದ ಪದಗಳನ್ನೆಲ್ಲ ರಿಫೀಲ್ ಮಾಡಿಸಿಕೊಂಡು ವಕೀಲರಾದ ಸಿ.ಎ.ಹನುಮಂತರಾಯರು ತಮ್ಮ ‘ವಗೈರೆಗೆ ಸೇರಿಸಿಕೊಳ್ಳುತ್ತಿದ್ದರು.
ನನ್ನ ಮುಖ ಕಂಡ ತಕ್ಷಣ ರಾಜಧಾನಿಗೆ ಹೋಗಿದ್ರಾ ಎಂದು ಮುಗುಳ್ನಗುತ್ತಿದ್ದರು. ಅವರ ಪ್ರಕಾರ ರಾಜಧಾನಿ ಅಂದ್ರೆ ಹಾಸನ-ಹೊಳೆನರಸೀಪುರ!
ಇತ್ತೀಚೆಗೆ ಕೆಲವು ಸಲ ಹಾಸನದ ತಮಗಿಷ್ಟವಾದ ರಸ್ತೆಗಳಲ್ಲೆಲ್ಲ ಓಡಾಡಿ-ಸಿಗ್ನಲ್‌ಗಳಲ್ಲಿ ನಿಂತು ಸಿಗರೇಟ್ ಸೇದಿ ಬಂದಿದ್ದರು. ಅವರ ಪಾಲಿನ ಹಾಸನದ ಆಸ್ತಿಯನ್ನು ವೈದಿಕ ಭವನ ನಿರ್ಮಾಣಕ್ಕೆ ನೀಡಿದ್ದರು. ಆದರೆ ಎಲ್ಲೂ ಈ ವಿಷಯ ಬಹಿರಂಗವಾಗದಂತೆ ನೋಡಿಕೊಂಡರು.
ಸಾರ್ ಎಲ್ಲರೂ ನಿಮ್ಮನ್ನ ಕಿ.ರಂ. ಅಂತ ಕರೀತಾರೆ. ಅದು ನಿಮ್ಮ ಊರು-ತಂದೆಯ ಹೆಸರಾಯ್ತು. ಯಾರೂ ಕೂಡ ನಾಗರಾಜ ಅನ್ನೋದಿಲ್ಲ. ನಿಮ್ಮ ಹೆಸರು ಉಳಿಬೇಕು ಅಂದ್ರೆ ಬೃಹತ್ ಗ್ರಂಥವೊಂದನ್ನು ಬರೀಲೇಬೇಕು ಎಂದು ಹಲವು ಸಲ ರೇಗಿಸುತ್ತಿದ್ದೆ.
‘ಒಂದ್ ಕೆಲ್ಸ ಮಾಡ್ರೀ ನೀವು ಬೃಹತ್‌ಗ್ರಂಥ ಬರೀರಿ. ನಾನು ಮುನ್ನುಡಿ ಬರೆದು ನಾಗ್ರಾಜ್ ಅಂತ ಸಹಿ ಮಾಡ್ತೀನಿ ಎನ್ನುತ್ತಿದ್ದರು.
ಕೊನೆಯ ಸಲ ಭೇಟಿಯಾದಾಗ ಎಲ್ಲ ಹಳೆಯ ಸ್ನೇಹಿತರನ್ನು ವಿಚಾರಿಸಿಕೊಂಡು ‘ಮದ್ಯರಾತ್ರಿಯಲ್ಲಿ ಮಡಿಕೇರಿಯಲ್ಲಿ ಗೆಳೆಯ ಯಸಳೂರು ಉದಯಕುಮಾರ್‌ನಿಂದ ಬೇಂದ್ರೆಯ ‘ಗಾಯತ್ರಿ ಸೂಕ್ತವನ್ನು ಮೊಬೈಲ್‌ನಲ್ಲಿ ಹಾಡಿಸಿ ಮುದಗೊಂಡಿದ್ದರು.
ಈ ಮಾತನ್ನಂತೂ ಮರೆಯುವಂತೆಯೇ ಇಲ್ಲ. ಬನಶಂಕರಿಯ ಚಿತಾಗಾರದ ಮುಂದೆ ಸೇರಿದ್ದ ಸಾವಿರಾರು ಜನರ ನಡುವೆ ಇಲ್ಲಿ ಕಿ.ರಂ. ಮಕ್ಕಳು ಯಾರು? ಎಂದು ಯಾರೋ ಕೇಳಿದರು. ಯಾರನ್ನು ತೋರಿಸುವುದು? ಅಲ್ಲಿದ್ದ ಎಲ್ಲರ ಕಣ್ಣುಗಳೂ ಮಂಜಾಗಿದ್ದವು.

ವೈ.ಜಿ.ಅಶೋಕ್ ಕುಮಾರ್

ಕುವೆಂಪು ಕಣ್ಣಲ್ಲಿ ಕನ್ನಡ, ಕರ್ನಾಟಕ

ದ್ವಾರನಕುಂಟೆ ಪಾತಣ್ಣ

ವಿಶ್ವಮಾನವ ತತ್ವದ ಪ್ರತಿಪಾದಕರೂ, ಪ್ರಕೃತಿಯ ಆರಾಧಕರೂ ಆಗಿರುವ ಕುವೆಂಪುರವರು ಜಗದ ಕವಿಯೂ ಹೌದು, ಯುಗದ ಕವಿಯೂ ಹೌದು. ಅವರಲ್ಲಿ ಸರ್ವೋದಯ ಸಮನ್ವಯ ಹಾಗೂ ಬದುಕಿನ ಶ್ರದ್ಧೆ ಪೂರ್ಣದೃಷ್ಠಿ, ಇವೆಲ್ಲಾ ಮೇಳೈಸಿದೆ. ಅವರ ವ್ಯಕ್ತಿತ್ವ ಕರ್ನಾಟಕದ ಬಗೆಗಿನ ಉತ್ಕಟವಾದ ಅಭಿಮಾನ ಮತ್ತು ಬದ್ಧತೆಗೆ ಹಿಡಿದ ಕನ್ನಡಿ ಆಗಿತ್ತು.
ಹದಿನೆಂಟರ ಹರೆಯದ ಪುಟ್ಟಪ್ಪನವರು ತಮ್ಮ ಸ್ನೇಹಿತರ ಮತ್ತು ಉಪಾಧ್ಯಾಯರುಗಳ ಒತ್ತಾಯದ ಮೇರೆಗೆ ೧೯೨೨ರಲ್ಲಿ ಬಿಗಿನರ‍್ಸ್ ಮ್ಯೂಸ್ ಎಂಬ ಕವನ ಸಂಕಲನವನ್ನು ಹೊರತಂದರು. ಕುವೆಂಪು ಸಾಹಿತ್ಯಕ ಬದುಕಿನಲ್ಲಿ ಅನಿರೀಕ್ಷಿತ ತಿರುವು ಪಡೆದ ಅಪರೂಪದ ಪ್ರಸಂಗ ಜರುಗಿತು. ಸುಪ್ರಸಿದ್ಧ ಐರಿಶ್ ಕವಿ ಜೇಮ್ಸ್.ಹೆಚ್.ಕಸಿನ್ಸ್‌ರವರು ಮೈಸೂರು ವಿಶ್ವವಿದ್ಯಾನಿಲಯಕ್ಕೆ ವಿಶೇಷ ಉಪನ್ಯಾಸ ನೀಡಲು ಬಂದಿದ್ದರು. ಆಗ ಪ್ರೊ.ಎಂ.ಹೆಚ್.ಕೃಷ್ಣಯ್ಯಂಗಾರ್‌ರವರ ಸಲಹೆ ಮೇರೆಗೆ ಐರಿಶ್ ಕವಿಯನ್ನು ಭೇಟಿ ಮಾಡಿ ತಮ್ಮ ಇಂಗ್ಲೀಷ್ ಕವನ ಸಂಕಲನವನ್ನು ಅವರಿಗೆ ತೋರಿಸಿ ಅವರಿಂದ ಅಭಿಪ್ರಾಯ ಕೋರಿದರು. ಆಗ ಐರಿಶ್ ಕವಿ ಕುವೆಂಪುರವರು ಬರೆದ ಕವನವನ್ನು ಮೆಚ್ಚಿಕೊಂಡರು. ಕುವೆಂಪುರವರನ್ನು ಕುರಿತು ಅವರಾಡಿದ ಮಾತು-
ಇಂಗ್ಲೀಷ್‌ನಲ್ಲಿ ಪದ್ಯ ಬರೆಯಲು ಆಂಗ್ಲರಿದ್ದಾರೆ ನೀನು ಇಂಗ್ಲಿಷ್ನಲ್ಲಿ ಎಷ್ಟೇ ಉತ್ತಮವಾಗಿ ಪದ್ಯ ಬರೆದರೂ ಆಂಗ್ಲರ ದೃಷ್ಟಿಯಲ್ಲಿ ಅದು ಅಧಮ ಪದ್ಯವೇ ಸರಿ. ಕನ್ನಡದಲ್ಲಿ ಉತ್ತಮವಾದ ಬರವಣಿಗೆ ಇದ್ದರೆ ಅದನ್ನು ಬೇರೆ ಭಾಷೆಗೆ ತಿರುಗಿಸಿಕೊಳ್ಳಬಹುದು ಆಗ ನಿನ್ನ ಹತ್ತಿರಕ್ಕೆ ಆಂಗ್ಲರೇ ಬಂದಾರು, ರಷ್ಯನ್ನರೇ ಬಂದಾರು. ನಿನಗೆ ತಿಳಿದ ಭಾಷೆಯಲ್ಲೇ ಬರೆ. ನೀನು ನೋಡಿದರೆ ಅಡಿಯಿಂದ ಮುಡಿಯವರೆಗೆ ಸ್ವದೇಶಿ. ನಿನ್ನ ಬರವಣಿಗೆ ಮಾತ್ರ ವಿದೇಶಿ ಎಂದರು. ಕಸಿನ್ನರ ಮಾತು ತಕ್ಷಣಕ್ಕೆ ರುಚಿಸದೆ ಹೋದರು ಕನ್ನಡದಲ್ಲೇ ಬರೆದರೆ ಓದುವರ‍್ಯಾರು ಎಂದು ಪ್ರಶ್ನಿಸಿದಾಗ ಐರಿಸ್ ಕವಿಯು ಪ್ರತಿಯಾಗಿ ಭಾಷೆ ತಾನಾಗಿ ಬೆಳೆಯುವುದಿಲ್ಲ. ನಿನ್ನಂತಹ ಸಮರ್ಥರು ಭಾಷೆಯನ್ನು ಬೆಳೆಸಬೇಕು. ರವೀಂದ್ರರು ಬಂಗಾಳಿಯಲ್ಲಿ ಬರೆಯುವುದಕ್ಕೆ ಮೊದಲು ಆ ಭಾಷೆ ಯಾರಿಗೂ ತಿಳಿದಿರಲಿಲ್ಲ. ರವೀಂದ್ರರು ಆ ಭಾಷೆಗೆ ಜೀವ ತುಂಬಿದರು. ಆ ಭಾಷೆಗೆ ಶಕ್ತಿ ಬಂತು. ರವೀಂದ್ರರ ಕೃತಿಗಳು ವಿಶ್ವವಿಖ್ಯಾತವಾದವು. ನೀನು ಸಹ ಹಾಗೆ ಕನ್ನಡ ಭಾಷೆಯನ್ನು ಬೆಳೆಸಬೇಕು. ಉತ್ತಮ ಸೃಜನ ಶೀಲ ಸಾಹಿತ್ಯ ಯಾರಿಗೂ ಪರಭಾಷೆಯಲ್ಲಿ ಸಾಧ್ಯವಿಲ್ಲ ಎಂದು ಪುಟ್ಟಪ್ಪನವರಿಗೆ ಮನವರಿಕೆ ಮಾಡಿಕೊಟ್ಟರು.
ಕನ್ನಡ ಎನೆ ಕುಣಿದಾಡುವುದೆನ್ನೆದೆ,
ಕನ್ನಡ ಎನೆ ಕಿವಿ ನಿಮಿರುವುದು.
ಕಾಮನಬಿಲ್ಲನು ಕಾಣುವ ಕವಿಯೊಲು
ತೆಕ್ಕನೆ ಮೈಮರೆಯುವುದು
ಎಂದು ಮನ ತುಂಬಿ ಹಾಡಿದನು.
ಕರ್ನಾಟಕ ಏಕೀಕರಣ ಹೋರಾಟದ ಜೊತೆಜೊತೆಗೆ ಸ್ವಾತಂತ್ರ್ಯ ಸಂಗ್ರಾಮವೂ ತುಂಬಾ ತೀವ್ರಗತಿಯಲ್ಲಿರುವ ಸಂದರ್ಭದಲ್ಲಿ, ಹುಯಿಲುಗೋಳ ನಾರಾಯಣರಾಯರು ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಬರೆದ ಸಮಯದಲ್ಲೇ ಕುವೆಂಪುರವರು ೧೯೩೦ರಲ್ಲಿ ಭಾರತ ಜನನಿಯ ತನುಜಾತೆ ಬರೆದರು.
ಜಯ ಭಾರತ ಜನನಿಯ ತನುಜಾತೆ
ಜಯಹೇ ಕರ್ನಾಟಕ ಮಾತೆ!
ಜಯಸುಂದರ ನದಿ ವನಗಳ ನಾಡೆ,
ಜಯ ಹೇ ರಸಋಷಿಗಳ ಬೀಡೆ!
ಭೂದೇವಿಯ ಮುಕುಟದ ನವಮಣಿಯೆ,
ಗಂಧದ ಹೊನ್ನಿನ ಗಣಿಯೆ;
ಹೀಗೆ ಕರ್ನಾಟಕಾಂತರ್ಗತವಾಗಿ ಭಾರತವನ್ನು ನೋಡುವಾಗ ಅಖಿಲ ಭಾರತ ವ್ಯಾಪ್ತಿಯ ಸಂಸ್ಕೃತಿಯ ಪರಂಪರೆಗಳ ಪ್ರತೀಕಗಳನ್ನು ಅದರ ಒಡಲಲ್ಲಿ ಗುರುತಿಸಬಹುದು. ಕನ್ನಡ ಪ್ರೇಮ ಭಾರತ ಪ್ರೇಮಕ್ಕೆ ವಿರುದ್ಧವಲ್ಲ. ಒಂದರ ಹಿತ ಮತ್ತೊಂದರ ಹಿತದಲ್ಲಿದೆ. ಒಂದನ್ನು ಪ್ರೀತಿಸುವವರು ಮತ್ತೊಂದನ್ನು ಪ್ರೀತಿಸುತ್ತಾರೆ. ಇದು ರಾಜ್ಯ ಗೀತವೂ ಹೌದು. ರಾಷ್ಟ್ರಗೀತೆಯೂ ಹೌದು. ದಿ ೭.೧.೨೦೦೪ರಂದು ಕರ್ನಾಟಕ ಸರ್ಕಾರವು ನಾಡಗೀತೆಯಾಗಿ ಘೋಷಿಸಿದೆ. ಈ ಹಾಡನ್ನು ಹಾಡುವಾಗ ಎಲ್ಲರೂ ಎದ್ದು ನಿಂತು ನಾಡಗೀತೆಗೆ ಗೌರವವನ್ನು ನೀಡಬೇಕೆಂದು ಆದೇಶಿಸಲಾಗಿದೆ. ಜೊತೆಗೆ ಎಲ್ಲಾ ಶಾಲೆಗಳಲ್ಲಿ ನಾಡಗೀತೆಯನ್ನು ದೈನಂದಿನ ಚಟುವಟಿಕೆಗಳ ಆರಂಭವಾಗುವ ಮುನ್ನ ಹಾಗೂ ಎಲ್ಲಾ ಸಾಂಸ್ಕೃತಿಕ ಸಾಹಿತ್ಯಿಕ ಇತರೆ ಅಧಿಕೃತ ಕಾರ್ಯಕ್ರಮಗಳಲ್ಲಿ ಹಾಡುವಂತೆ ನಿರ್ದೇಶಿಸಲಾಗಿದೆ. ಶಂಕರ-ಮಾಧ್ವ ಪದಗಳನ್ನು ನಾಡಗೀತೆಯಿಂದ ತೆಗೆಯಬೇಕೆಂದು ಈಗಲೂ ಹಲವರ ಒತ್ತಾಯವಿದೆ. ನಾಡಗೀತೆಯನ್ನು ಕಾಲ ಮಿತಿಯಲ್ಲಿ ಹಾಡಬೇಕು, ಅದಕ್ಕಾಗಿ ಸರ್ಕಾರ ಸಮಿತಿಯೊಂದನ್ನು ರಚಿಸಿದೆ, ಅದರ ವರದಿ ಆಧರಿಸಿ ನಾಡಗೀತೆಯನ್ನು ಅನುಷ್ಠಾನ ಮಾಡಬೇಕಾಗಿದೆ.
ಕನ್ನಡ ನಾಡಿನ ಅತ್ಯಗತ್ಯ ಶ್ರೇಯೋಭಿವೃದ್ಧಿಗೆ ಪ್ರಾಥಮಿಕ ಶಿಕ್ಷಣದಲ್ಲಿ, ಕನ್ನಡ ಮಾದ್ಯಮವಾಗಬೇಕು. ಅದರ ಮೂಲಕ ಕನ್ನಡ ಭಾಷೆ, ಕನ್ನಡ ಮಕ್ಕಳ ಭವಿಷ್ಯ ಉತ್ತಮವಾಗಬೇಕೆಂದು ಹಗಲಿರುಳು ಹಂಬಲಿಸಿದರು. ಕನ್ನಡ ಜಾಗೃತಿ ನಿರೀಕ್ಷಿಸಿದ ಮಟ್ಟದಲ್ಲಿ ಆಗುತ್ತಿಲ್ಲ ಎಂಬ ವಾಸ್ತವಾಂಶವನ್ನು ಕುವೆಂಪು ಕಂಡುಕೊಂಡರು. ಒಂದು ರೀತಿಯ ನಿರಾಸೆ ಕಾರ್ಮೋಡ ನಾಡಿನಾದ್ಯಂತ ಕವಿದಿತ್ತು. ಆ ಹಿನ್ನೆಲೆಯಲ್ಲಿ ಒಂದು ಅರಿಕೆ ಸ್ವರೂಪದ ಕವನವೇ ಕನ್ನಡಮ್ಮನ ಹರಕೆ.
ಕನ್ನಡಕೆ ಹೋರಾಡು ಕನ್ನಡದ ಕಂದಾ;
ಕನ್ನಡವ ಕಾಪಾಡು ನನ್ನ ಆನಂದಾ!
ಜೋಗುಳದ ಹರಕೆಯಿದು ಮರೆಯಿದಿರು ಚಿನ್ನಾ;
ಮರೆತೆಯಾದರೆ ಅಯ್ಯೋ ಮರೆತಂತೆ ನನ್ನ!

ತಾಯಿಯ ಹಾಲಿನ ಸವಿ, ಕನ್ನಡದಿಂದ ಸಿದ್ಧಿಸುವ ಸಿದ್ದಿ ಯಾವುದು ಎನ್ನುವುದನ್ನು ಮುಂದಿನ ಸಾಲಿನಲ್ಲಿ ಮನವರಿಕೆ ಮಾಡಿಕೊಡುತ್ತಾರೆ.
ಮೊಲೆಯ ಹಾಲೆಂತಂತೆ ಸವಿಜೇನು ಬಾಯ್ಗೆ;
ತಾಯಿಯಪ್ಪುಗೆಯಂತೆ ಬಲು ಸೊಗಸು ಮೆಯ್ಗೆ;
ಗುರುವಿನೊಳ್ನುಡಿಯಂತೆ ಶ್ರೇಯಸ್ಸು ಬಾಳ್ಗೆ;
ತಾಯ್ನುಡಿಗೆ ದುಡಿದು ಮಡಿ ಇಹಪರಗಳೇಳ್ಗೆ!

ಮೊಲೆಯ ಹಾಲಿನಂತೆ ಸವಿ ಜೇನು, ತಾಯಿ ಅಪ್ಪುಗೆಯಂತೆ ಸೊಗಸು, ಗುರುವಿನ ಒಳ್ಳೆಯ ಮಾತಿನಂತೆ ಶ್ರೇಯಸ್ಸು, ಈ ನಾಡಿಗಾಗಿ ದುಡಿದು ಮಡಿದಲ್ಲಿ ಇಹಪರಗಳ ಏಳಿಗೆ ಎಂದು ಕುವೆಂಪು ಕೊಂಡಾಡಿದ್ದಾರೆ.
ಏಕೀಕರಣಕ್ಕೆ ಹತ್ತು ಹಲವು ಸಾಧಕ-ಭಾದಕಗಳು, ಆತಂಕಗಳು, ಎದುರಾದಾಗ ಕುವೆಂಪು ಅಂತಹ ಕವಿ ಹೀಗೆ ನುಡಿಯುತ್ತಾರೆ.
ಎಲ್ಲಾದರು ಇರು; ಎಂತಾದರು ಇರು;
ಎಂದೆಂದಿಗು ನೀ ಕನ್ನಡವಾಗಿರು
ನೀ ಮೆಟ್ಟುವ ನೆಲ ಅದೆ ಕರ್ನಾಟಕ;
ನೀನೇರುವ ಮಲೆ-ಸಹ್ಯಾದ್ರಿ
ನೀ ಮುಟ್ಟುವ ಮರ-ಶ್ರೀಗಂಧದ ಮರ;
ನೀ ಕುಡಿಯುವ ನೀರ್-ಕಾವೇರಿ.

ಎಂಬ ವಿಶಾಲ ಮನೋಭಾವನೆಯಲ್ಲಿ ಸಮಾಧಾನವನ್ನು ತಾಳುತ್ತಾರೆ.
ಭಾರತಕ್ಕೆ ಸ್ವಾತಂತ್ರ್ಯ ಬಂದರೂ ಅದು ಕರ್ನಾಟಕ ಪಾಲಿಗೆ ಸಂತೋಷವಾದರೂ, ಕರ್ನಾಟಕ ಪ್ರಾಂತ್ಯವು ರೂಪಗೊಳ್ಳದೆ ಆ ಸಂತೋಷ ಪೂರ್ಣಗೊಳ್ಳುವಂತಿರಲಿಲ್ಲ. ಆಗ ಅಧಿಕಾರದಲ್ಲಿದ್ದ ಕೆ.ಸಿ.ರೆಡ್ಡಿ ಜವಾಬ್ದಾರಿ ಸರ್ಕಾರ ಅಧಿಕಾರದಲ್ಲಿತ್ತು. ಕುವೆಂಪುರವರು ಬಹಿರಂಗವಾಗಿ ಏಕೀಕರಣವನ್ನು ಬೆಂಬಲಿಸಿ ಅನೇಕ ಬಹಿರಂಗ ವೇದಿಕೆಗಳಿಂದ ಸರ್ಕಾರವನ್ನು ಕಟುವಾಗಿ ಟೀಕಿಸಿ ಭಾಷಣ ಮಾಡಿದ್ದರು. ಕುವೆಂಪುರವರಿಗೆ ವಿದ್ಯಾ ಇಲಾಖೆಯ ಮೂಲಕ ಶಿಸ್ತು ಕ್ರಮ ಏಕೆ ಕೈಗೊಳ್ಳಬಾರದು, ಎಂಬುದಕ್ಕೆ ಸಮಾಜಾಯಿಷಿ ಕೊಡಬೇಕೆಂದು ಕಾರಣ ಕೇಳಿ ನೊಟೀಸು ಕೊಡಲಾಗಿತ್ತು. ಅದಕ್ಕೆ ಉತ್ತರವಾಗಿಯೋ ಏನೋ ಎಂಬಂತೆ ಅಖಂಡ ಕರ್ನಾಟಕ ಕವಿತೆಯನ್ನು ಬರೆದರು. ಅದೊಂದು ಸಾಹಿತ್ಯ ರೂಪದ ಅಣು ಬಾಂಬು. ಅಠಾರಾ ಕಛೇರಿಯ ಬುನಾದಿಯನ್ನು ಅಲ್ಲಾಡಿಸಿತು. ಕರ್ನಾಟಕವು ನಿತ್ಯವಾದುದೆಂದು ಅದು ಆಗಲೇ ಕನ್ನಡಿಗ ಮನಸ್ಸಿನಲ್ಲಿ ರೂಪುಗೊಂಡಿದೆಯೆಂದು ಹೇಳಿದ್ದರು.
ಅಖಂಡ ಕರ್ನಾಟಕ
ಅಲ್ತೊ ನಮ್ಮ ನಾಲ್ಕು ದಿನದ ರಾಜಕೀಯದ ನಾಟಕ!
ನೃಪತುಂಗನೆ ಚಕ್ರವರ್ತಿ!
ಪಂಪನಲ್ಲಿ ಮುಖ್ಯಮಂತ್ರಿ!
ರನ್ನ ಜನ್ನ ನಾಗವರ್ಮ
ರಾಘವಾಂಕ ಹರಿಹರ
ಬಸವೇಶ್ವರ ನಾರಣಪ್ಪ
ಸರ್ವಜ್ಞ ಷಡಕ್ಷರ;
ಸರಸ್ವತಿಯೆ ರಚಸಿದೊಂದು
ನಿತ್ಯ ಸಚಿವ ಮಂಡಲ
ತನಗೆ ರುಚಿರ ಕುಂಡಲ!

ಮೈಸೂರು ಪ್ರಜಾಪ್ರತಿನಿಧಿ ಸಭೆ (ನವೆಂಬರ್ ೧೯೪೯) ಏಕೀಕರಣಕ್ಕೆ ಇದು ಸಕಾಲವಲ್ಲ ಎಂಬ ನಿರ್ಣಯವನ್ನು ಅಂಗೀಕರಿಸಿತು. ಭಾಷಾವಾರು ಪ್ರಾಂತ್ಯ ರಚನೆಯನ್ನು ಮುಂದೂಡಿದ್ದನ್ನು ದಕ್ಷಿಣ ಭಾರತದವರು ಖಂಡಿಸಿದರು. ಮುಂದೆ ಜೆ.ವಿ.ಪಿ (ಜವಹರಲಾಲ್ ನೆಹರು, ವಲ್ಲಭಭಾಯಿ ಪಟೇಲ್, ಪಟ್ಟಾಭಿ ಸೀತರಾಮಯ್ಯ) ಸಮಿತಿಯ ವರದಿಯನ್ನು ಧಿಕ್ಕರಿಸಿ ಹೋರಾಟವನ್ನು ತೀವ್ರಗೊಳಿಸುತ್ತಾರೆ. ಆಗ ಕುವೆಂಪುರವರು ಕನ್ನಡಿಗ ದಿಟ್ಟ ಸಂಕಲ್ಪ ಮಾಡದೆ ಹೊರತು ಈ ಕಾರ್ಯ ಕೈಗೊಡುವುದಿಲ್ಲವೆಂದು ಭಾವಿಸಿ ಕರ್ನಾಟಕ ಜನತೆಗೆ ಕರ್ನಾಟಕ ಮಂತ್ರ ದೀಕ್ಷೆ ಕವನದ ಮೂಲಕ ನಿವೇಧಿಸಿಕೊಳ್ಳುತ್ತಾರೆ.
ದೀಕ್ಷೆಯ ತೊಡು ಇಂದೇ;
ಕಂಕಣ ಕಟ್ಟಿಂದೇ!
ಕನ್ನಡ ನಾಡೊಂದೇ;
ಇನ್ನೆಂದೂ ತಾನೊಂದೆ!
ಕನ್ನಡ ಜನರೆಲ್ಲರ ಮೇಲಾಣೆ
ಕನ್ನಡ ನಾಡೊಂದಾಗದೆ ಮಾಣೆ
ತೊಡು ದೀಕ್ಷೆಯ! ಇಡು ರಕ್ಷೆಯ
ಕಂಕಣ ಕಟ್ಟಿಂದೇ!

ಶಂಕರಗೌಡ ಪಾಟೀಲ ೧೯೫೩ರಲ್ಲಿ ಹುಬ್ಬಳ್ಳಿ ಬಳಿ ಏಕೀಕರಣ ಜಾರಿಯಾಗಬೇಕೆಂದು ಅಮರಣ ಉಪವಾಸ ಹೂಡಿದರು. ಸಾವಿರಾರು ಜನರು ಕೆ.ಪಿ.ಸಿ.ಸಿ. ಸಭೆಯನ್ನು ನಡೆಯದಂತೆ ಪ್ರತಿಭಟನೆ ಮಾಡಿದರು. ಹಿಂಸಾಚಾರವೂ ಆಯಿತು. ಆಗ ಅಣ್ಣೂ ಗುರೂಜಿ ಶಾಂತನಾಥ ಇರಗಳೆ, ವಾಲಿ ಚೆನ್ನಪ್ಪ, ಚಿನ್ನಯ ಸ್ವಾಮಿ, ಓಂಕಾರ ಮಠ, ವೀರಭದ್ರಪ್ಪ, ಶಂಕರಗೌಡ ಇನಾಂದಾರ, ಮುಂತಾದವರು ಶಾಸನ ಸಭೆ, ಪಾರ್ಲಿಮೆಂಟ್ ಸದಸ್ಯತ್ವಗೆ ರಾಜೀನಾಮೆ ನೀಡಲು ಮುಂದಾದರು. ಇದೇ ಕಾಲಕ್ಕೆ ಮೈಸೂರಿನ ಕಡಿದಾಳ್ ಮಂಜಪ್ಪ, ಟಿ.ಚನ್ನಯ್ಯ, ಹೆಚ್.ಕೆ.ವೀರಣ್ಣಗೌಡ ಮುಂತಾದ ನಾಯಕರು ಏಕೀಕರಣವನ್ನು ವಿರೋಧಿಸಿದರು. ಡಿ.ವಿ.ಗುಂಡಪ್ಪ ನಾಲ್ಕು ಕರ್ನಾಟಕವಾಗಬೇಕೆಂದರು. ಆದರೆ ಕೆಂಗಲ್ ಹನುಮಂತಯ್ಯ ಮಾತ್ರ ಏಕೀಕರಣಕ್ಕೆ ಬೆಂಬಲಿಸಿದರಲ್ಲದೆ, ಗಟ್ಟಿ ಧ್ವನಿಯಲ್ಲಿ ಪ್ರತಿಪಾದಿಸಿದರು. ಆಗ ಕುವೆಂಪುರವರು ಕಚ್ಚಾಡುವ ಈ ನಾಯಕ ಮಣಿಗಳನ್ನು ಬೇಸತ್ತು ಮನನೊಂದು ಅವರಿಗಾಗಿಯೇ ಕನ್ನಡ ಡಿಂಡಿಮ ನಗಾರಿಯನ್ನು ಬಾರಿಸಿದರು, ಅವರ ಡಮರುಗ ನಿನಾದ ಇಲ್ಲಿದೆ.
ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ!
ಸತ್ತಂತಿಹರನು ಬಡಿದೆಚ್ಚರಿಸು;
ಕಚ್ಚಾಡುವರನು ಕೂಡಿಸಿ ಒಲಿಸು
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು
ಒಟ್ಟಿಗೆ ಬಾಳುವ ತೆರದಲಿ ಹರಸು!
ಕ್ಷಯಿಸೆ ಶಿವೇತರ ಕೃತಿಕೃತಿಯಲ್ಲಿ
ಮೂಡಲಿ ಮಂಗಳ ಮತಿಮತಿಯಲ್ಲಿ;
ಕವಿಋಷಿ ಸಂತರ ಆದರ್ಶದಲಿ
ಸರ್ವೋದಯವಾಗಲಿ ಸರ್ವರಲಿ!

ಎಂದು ಹಾಡಿನ ಮೂಲಕ ಕಚ್ಚಾಡುವರಿಗೆ ಸಂದೇಶವನ್ನು ನೀಡುವ ಮೂಲಕ ಏಕೀಕರಣದ ಅಗತ್ಯವನ್ನು ಸಮರ್ಥವಾಗಿ ಪ್ರತಿಪಾದಿಸಿದರು.
ಆಂಧ್ರದ ಗಾಂಧಿವಾದಿಯೆಂದೇ ಹೆಸರುವಾಸಿಯಾಗಿದ್ದ ಪೊಟ್ಟಿಶ್ರೀರಾಮುಲು ಅಮರಣಾಂತ ಉಪವಾಸ ನಂತರ ಪ್ರಾಣತ್ಯಾಗ ಫಲವಾಗಿ ೧೯೫೩ ಅಕ್ಟೋಬರ್ ೧ರಂದು ಆಂಧ್ರ ರಾಜ್ಯ ಅಸ್ತಿತ್ವಕ್ಕೆ ಬಂತು. ಬಳ್ಳಾರಿ ಜಿಲ್ಲೆಯ ಕೆಲವು ಪ್ರದೇಶಗಳನ್ನು ಬಿಟ್ಟು ಮೈಸೂರು ಪ್ರಾಂತ್ಯದಲ್ಲಿ ವಿಲೀನಗೊಂಡ ದಿನ ಕುವೆಂಪುರವರಿಗೆ ಇನ್ನಿಲ್ಲದ ಸಂತೋಷದ ಸಂಗಾತಿಯಾಗಿತ್ತು. ಬಳ್ಳಾರಿ ಪಟ್ಟಣ ಮೈಸೂರಿಗೆ ಸೇರ್ಪಡೆಗಿಂತ ಹಂಪಿ ಕ್ಷೇತ್ರವನ್ನು ಉಳಿಸಿಕೊಂಡಿದ್ದು ತುಂಬಾ ಸಂತೋಷದ ದಿನವಾಯ್ತು. ಇನ್ನು ಕರ್ನಾಟಕ ಏಕೀಕರಣ ದೂರವಿಲ್ಲವೆಂದು ಘೋಷಿಸಿದರು. ತರುವಾಯ ೧೯೫೬ ನವೆಂಬರ್ ೧ರಂದು ಕರ್ನಾಟಕ ಏಕೀಕರಣವಾದಗಲಂತೂ ಅವರ ಆನಂದ, ಸಂತೋಷಕ್ಕೆ ಪಾರವೇ ಇರಲಿಲ್ಲ. ಕನ್ನಡಿಗರ ಪಾಲಿಗೆ ಕರ್ನಾಟಕ (ಮೈಸೂರು) ರಾಜ್ಯೋದಯ ಸುದಿನದ ಸಂಗತಿಯಾಗಿತ್ತು. ರಾಜ್ಯೋತ್ಸವ ಬಂದ ಹಿನ್ನೆಲೆಯಲ್ಲಿ ಕುವೆಂಪುರವರ ‘ಕರ್ನಾಟಕ ರಾಜ್ಯೋದಯ ಶ್ರೀಗೀತೆಯನ್ನು ರಚಿಸಿದರು.
ಬರಿಯ ಚದರ ಮೈಲಿಗಳಲ್ತು ಕರ್ನಾಟಕ ದೇಶ ವಿಸ್ತೀರ್ಣಂ!
ನೆನೆ, ನೆನೆ ಮನೋಮಯದ ಸಂಸ್ಕೃತಿಯ ಕೋಶ ವಿಸ್ತೀರ್ಣಂ
ಮರೆಯದಿರು ಚದರ ಸಂವತ್ಸರದ ಶತಮಾನಗಳ ಕಾಲ ವಿಸ್ತೀರ್ಣಂ
ಪ್ರಾಣಮಯ ಭಾವಪ್ರದೇಶ ವಿಸ್ತೀರ್ಣಂ;

ಕರ್ನಾಟಕ ಏಕೀಕರಣ ನಂತರ ಮಹಾಜನ ವರದಿ ಜಾರಿಯಾಗಬೇಕು. ಕನ್ನಡ ಚಿತ್ರಗಳು ಕಡ್ಡಾಯವಾಗಿ ಎಲ್ಲಾ ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗಬೇಕು. ಆಡಳಿತ ಕನ್ನಡ ಭಾಷೆಯಾಗಬೇಕು. ಕೇಂದ್ರ ಉದ್ದಿಮೆ ಮತ್ತು ಇಲಾಖೆಗಳಲ್ಲಿ ಕನ್ನಡ ಕನ್ನಡಿಗರಿಗೆ ಉದ್ಯೋಗ ಕೊಡಬೇಕು. ಕಾಸರಗೋಡು, ಸೊಲ್ಲಾಪುರ, ಕೃಷ್ಣಗಿರಿ, ಊಟಿ, ತಾಳವಾಡಿ, ಆದಿವಾನಿ, ರಾಯದುರ್ಗ ಮುಂತಾದವು ನಮ್ಮ ರಾಜ್ಯಕ್ಕೆ ಸೇರಿಸಬೇಕು ಮತ್ತು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಬೇಕೆಂದು ಕನ್ನಡ ಹೋರಾಟಗಾರರು ಬೇಡಿಕೆಯನ್ನು ಮುಂದಿಟ್ಟುಕೊಂಡು-ಸಭೆ ಸಮಾರಂಭ ಮಾಡಿ ಪ್ರತಿಭಟನೆಗಳನ್ನು ಮಾಡುತ್ತಿದ್ದರು.
ಅದೇ ಕಾಲಕ್ಕೆ ಕುವೆಂಪು ಕರ್ನಾಟಕ ಎಂಬ ಹೆಸರು ಅತ್ಯಂತ ಸಮಂಜಸವೂ, ಉಚಿತವೂ ಆಗಿರುವುದನ್ನು ಮನಗಂಡು ತುಂಬಾ ಭಾವುಕತೆಯಿಂದ ಆಡಿದ ಮಾತುಗಳು ಹೀಗಿವೆ
ಕರ್ನಾಟಕ ಎಂಬುದೇನು ಹೆಸರೆ ಬರಿಯ ಮಣ್ಣಿಗೆ?
ಮಂತ್ರ ಕಣಾ! ಶಕ್ತಿ ಕಣಾ!
ತಾಯಿ ಕಣಾ! ದೇವಿ ಕಣಾ!
ಬೆಂಕಿ ಕಣಾ! ಸಿಡಿಲು ಕಣಾ!
ಕಾವ ಕೊಲುವ ಒಲವ ಬಲವ
ಪಡೆದ ಚಲದ ಚಂಡಿಕಣಾ!
ಋಷಿಯ ಕಾಣ್ಬಕಣ್ಣಿಗೆ!

ಕರ್ನಾಟಕವು ಮೃತ ರಾಷ್ಟ್ರವಲ್ಲ ಅದು ಜೀವಂತ ರಾಷ್ಟ್ರ. ಕರ್ನಾಟಕ ಎಂಬ ಹೆಸರು ಇದು ನೆನ್ನೆಯದಲ್ಲ ಶತಮಾನಗಳಾಚೆಯಿಂದ ತನ್ನ ಹೆಸರಿನ ಸಾರ್ಥಕ್ಯ ಹಾಗೂ ಪರಂಪರೆಯನ್ನು ಕಾಯ್ದುಕೊಂಡು ಬಂದಿದೆ. ಕರ್ ಮತ್ತು ನಾಡು ಕರ್ನಾಟಕ ಆಯ್ತು. ಅಂದರೆ ಕರಿಯ ಮಣ್ಣಿನ ನಾಡು, ಎತ್ತರದ ನಾಡು ಎಂಬ ಅರ್ಥವನ್ನು ಮೂಡಿತೆಂದು ಹೇಳುತ್ತಾರೆ. ಕವಿ ಕುವೆಂಪು ಅವರು ತಮ್ಮ ಸಾಹಿತ್ಯ ಪ್ರಚಾರ ಭಾಷಣ ಮಾಲೆ ಎಂಬ ಪುಸ್ತಕದಲ್ಲಿ ಕನ್ನಡ ನಾಡನ್ನು ಉದ್ದೇಶಿಸಿ ಹೀಗೆ ಕವನ ರಚಿಸಿದ್ದಾರೆ.
ಕನಸು ನನಸಾಗುತ್ತದೆ ಏಕೈಕ ಕರ್ನಾಟಕ
ಕಣ್ ನಟ್ಟು ಬಯಸಿ ಕಾಣ್ ದಿಕ್ಕು ತಟಧ್ವಜಪಟ

ಏಕೀಕರಣವಾಯ್ತು ಏಕೀಕೃತ ರಾಜ್ಯಕ್ಕೆ ಕರ್ನಾಟಕವೆಂದು ನಾಮಕರಣವೂ ಆಯ್ತು. ಇದರಿಂದ ಕುವೆಂಪು ತೃಪ್ತರಾಗಲಿಲ್ಲ. ಶಿಕ್ಷಣದಲ್ಲಿ ಕನ್ನಡ ಮಾಧ್ಯಮವಾಗಬೇಕು. ಆಡಳಿತದಲ್ಲಿ ಕನ್ನಡ ಜಾರಿಯಾಗಬೇಕು. ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ ಕೊಡಬೇಕು ಇಂಗ್ಲಿಷ್ ಎಂಬ ಮಹಾಕಂಟಕ ದೂರವಾಗಬೇಕು. ಜೊತೆಗೆ ಕನ್ನಡ ಭಾಷೆಯ ಮೇಲೆ ಭಾರತ ಸರ್ಕಾರವು ತ್ರಿಭಾಷ ಸೂತ್ರದ ಯುಕ್ತಿಯ ಅಡಿಯಲ್ಲಿ ಅನ್ಯಭಾಷೆಗಳನ್ನು ಹೇರುತಿದ್ದುದ್ದನ್ನು ತೀವ್ರವಾಗಿ ಟೀಕಿಸುತ್ತಾರೆ. ಈ ಟೀಕೆಯಲ್ಲಿ ದೈನ್ಯಾವಸ್ಥೆಗೆ ಮುಟ್ಟುತ್ತಿರುವ ಕನ್ನಡದ ವಾಸ್ತವ ಮತ್ತು ಅದರ ಉಳಿವಿನ ಮೂಲಕ ತಮ್ಮ ಅನನ್ಯತೆಯನ್ನು ಕಾಪಾಡಿಕೊಳ್ಳಬೇಕೆಂಬ ಆಶಯ ಸಮರ್ಥವಾಗಿ ವ್ಯಕ್ತವಾಗಿದೆ. ೧೯೩೫ರಲ್ಲೇ ಇಂಗ್ಲೀಷ್ ಭಾಷೆಯನ್ನು ಕನ್ನಡದ ಕಂದಮ್ಮಗಳ ಮೇಲೆ ಬಲತ್ಕಾರವಾಗಿ ಹೇರುವುದನ್ನು ಮನಗಂಡಿದ್ದ ಕುವೆಂಪು ಸಂಭವಿಸಬಹುದಾದ ಅಪಾಯವನ್ನು ತೊಡೆದು ಹಾಕುವ ನಿಟ್ಟಿನಿಂದ ತನ್ನ ವ್ಯಥೆಯನ್ನು ವ್ಯಕ್ತಪಡಿಸಿದ್ದರು.
ಸಾಯುತ್ತಿದೆ ನಿನ್ನ ನುಡಿ ಓ ಕನ್ನಡದ ಕಂದರಿರಾ
ಹೊರನುಡಿಯ ಹೊರೆಯಿಂದ ಕುಸಿದು ಕುಗ್ಗಿ
ಎಂದು ಎಚ್ಚರಿಸುವ ಕವಿ
ರಾಜನುಡಿಯೆಂದೊಂದು, ರಾಷ್ಟ್ರ ನುಡಿಯೆಂದೊಂದು
ದೇವ ನುಡಿಯೆಂದೊಂದು ಹತ್ತಿ ಜಗ್ಗಿ
ನಿರಿನಿಟಲು ನಿಟಿಲೆಂದು ಮುದಿಮೊಳೆ ಮುರಿಯುತಿದೆ
ಕನ್ನಡಮ್ಮನ ಬೆನ್ನು ಬಳುಕಿ ಬಗ್ಗಿ!

ಇಂಗ್ಲಿಷ್ ಹೆಮ್ಮಾರಿಯ ಜೊತೆಗೆ ಹಿಂದಿಯ ಹೇರಿಕೆಯ ವಿರುದ್ಧ ಕನ್ನಡಿಗರು ದನಿ ಎತ್ತಬೇಕೆಂದು ಕರೆಕೊಡುತ್ತಾರೆ. ಕುವೆಂಪುರವರು ಕನ್ನಡದ ನೆತ್ತಿಯ ಮೇಲೆ ನೃತ್ಯಮಾಡುವುದನ್ನು ವಿರೋಧಿಸಿ ಇದೇ ಕವನದಲ್ಲಿ ಕವಿ
ಉತ್ತರದ ಕಾಶಿಯಲ್ಲಿ ಕತ್ತೆಮಿಂದೈತರಲು
ದಕ್ಷಿಣದ ದೇಶಕದು ಕುದುರೆಯಹುದೆ?
ತಾಯಿತ್ತು ಮೊಲೆಹಾಲೆ ನಿಮ್ಮ ಮೈಗಾಗದಿರೆ
ಹೊತ್ತ ಹೊರೆ ಬಲಕಾರಿ ನೆತ್ತರಹುದೆ?

ಪರಭಾಷೆಯ ಮೂಲಕ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸುವುದು ವಿಷವುಣಿಸಿದಂತೆ, ಬುದ್ಧಿಶಕ್ತಿಯನ್ನೆಲ್ಲಾ ಕುಂಠಿತಗೊಳಿಸುವ ಮಾರಕವೆಂದು ಕವಿಯ ಆಶಯ ಅದಕ್ಕಾಗಿಯೇ
ಪಾರು ಮಾಡೆಮ್ಮ ನೀ ಇಂಗ್ಲೀಷಿನಿಂದ
ಪೂತನಿಯ ಅಸುವೀಂಟ ಕೊಂದ ಗೋವಿಂದ!

ಇಂಗ್ಲಿಷ್‌ನ ವಿಷವನ್ನು ಕನ್ನಡದ ಮಕ್ಕಳಿಗೆ ಕುಡಿಸುವ ಘೋರ ದುರಂತವೆನ್ನುತ್ತಾರೆ.
ಹಿಂದಿ ಕಲಿಯದಿದ್ದರೆ ಹೊರ ರಾಜ್ಯದಲ್ಲಿ ನೌಕರಿ ಹೇಗೆ ಸಿಗುತ್ತದೆ? ಇಂಗ್ಲಿಷ್ ಕಲಿಯದಿದ್ದರೆ ವಿದೇಶಗಳಿಗೆ ರಾಯಭಾರಿಗಳಾಗಿ ಹೋಗುವುದು ಹೇಗೆ ಸಾಧ್ಯ? ಎಂದು ಇಂಗ್ಲಿಷ್, ಹಿಂದಿಯ ಪಟ್ಟಭದ್ರ ಹಿತಾಸಕ್ತರು ಅದರ ಅವಶ್ಯಕತೆಗಳ ಕುರಿತು ವಾದಿಸುವ ಸಂದರ್ಭದಲ್ಲಿ ಕುವೆಂಪು ಈ ರೀತಿ ಉತ್ತರಿಸುತ್ತಾರೆ.
ಮುಂದೆ ಇಂಗ್ಲೆಂಡಿನಲ್ಲಿ ನೀ ರಾಯಭಾರಿ?
ಬೇಡವೆಂಬುವರಾರು?
ಹೊಡೆ ಬಿರಿಯೆ ಕುಡಿಯೊ ಇಂಗ್ಲಿಷಿನ ಹೆಂಡ ಹೀರಿ!
ನನ್ನ ಮೇಲೇತಕ್ಕೆ ಮಾಡುವೆ ಬಲಾತ್ಕಾರ ಸವಾರಿ?
ನೀನು ಅಂತರಾಷ್ಟ್ರೀಯ ಕೀರ್ತಿಯಂ ಪೊತ್ತುಗರ್ಜಿಸುವ
ಜಗತ್ ಪ್ರಸಿದ್ಧ ಹುಲಿಯೆ?

ಕನ್ನಡದ ಸ್ಥಾನವನ್ನು ಇಂಗ್ಲಿಷ್ ಅತಿಕ್ರಮಿಸಿಕೊಂಡಾಗ, ಇಂಗ್ಲಿಷ್‌ಗಿರುವಷ್ಟು ಭರವಸೆ ಭವಿಷ್ಯದಲ್ಲಿ ಅದಕ್ಕಿರುವ ಭದ್ರತೆ ಮತ್ತು ಅದಕ್ಕಿರುವ ನಂಬಿಕೆಯನ್ನು ಮನಗಂಡ ಕವಿಯು ರಾಜ್ಯಭಾಷೆಯಾದ ಕನ್ನಡಕ್ಕೆ ಅಂತಹ ಯಾವ ಪೋಷಿಸುವ ಸ್ಥಿತಿಯಲ್ಲಿಲ್ಲದ ಅಸಹಾಯಕತೆಯನ್ನು ಪ್ರದರ್ಶಿಸುವ ಸ್ಥಿತಿಗೆ ದೂಡಲ್ಪಟ್ಟಿದ್ದು, ಇಂತಹ ದಮನೀಯ ಸ್ಥಿತಿಗೆ ಆಡಳಿತಗಾರರು, ಕನ್ನಡ ಜನರೇ ಕಾರಣವೆಂದು ನೊಂದಿದ್ದರು. ಈ ಹಿನ್ನಲೆಯಲ್ಲಿ
ಕತ್ತಿ ಪರದೇಶಿಯಾದರೆ ಮಾತ್ರ ನೋವೆ?
ನಮ್ಮವರೇ ಹದಹಾಕಿ ತಿವಿದರದು ಹೂವೆ;
ಎಂಬ ವ್ಯಂಗ್ಯಪೂರಿತ ಮಾತನ್ನು ನುಡಿದಿದ್ದರು. ಎಂದೆಂದಿಗೂ ಮರೆಯದೆ ಕನ್ನಡಿಗರು ಮೆಲುಕಾಕುತ್ತಾ ತಂತಮ್ಮ ಆತ್ಮ ಶೋಧನೆ ಮಾಡಿಕೊಳ್ಳುವ ಅಗತ್ಯ ಮತ್ತು ಅನಿವಾರ್ಯತೆ ಹಿಂದೆಂದಿಗಿಂತ ಇಂದಿದೆ ಎಂದೆಷ್ಟೆ ಹೇಳಬಹುದಾಗಿದೆ.
ಕನ್ನಡಕ್ಕಾಗಿ ಕೈಯೆತ್ತು; ನಿನ್ನ ಕೈ ಕಲ್ಪವೃಕ್ಷವಾಗುತ್ತದೆ!
ಕನ್ನಡಕ್ಕಾಗಿ ಕೊರಳೆತ್ತು; ಅಲ್ಲಿ ಪಾಂಚಜನ್ಯ ಮೂಡುತ್ತದೆ!
ಕನ್ನಡಕ್ಕಾಗಿ ಕಿರುಬೆರಳೆತ್ತಿದರೂ ಸಾಕು
ಇಂದು ಅದೇ ಗೋವರ್ಧನ
ಗಿರಿಧಾರೆಯಾಗುತ್ತದೆ.......
ಕನ್ನಡದ ಮಕ್ಕಳಿಗೆ ಕನ್ನಡದ ಬಗ್ಗೆ, ಕನ್ನಡ ಕಿಚ್ಚನ್ನು ಹೋರಾಟದ ಮನೋಭಾವವನ್ನು ಬೆಳೆಸಲು ಕನ್ನಡ ದೀಕ್ಷೆ ತೊಡಲು ಕರೆ ನೀಡುತ್ತಾರೆ.
ಕನ್ನಡ ನಾಡು-ನುಡಿಗೆ ಕುಂದುಂಟಾದಾಗ, ನಾಡ ರಕ್ಷಣೆಗಾಗಿ ಬೀದಿಗಿಳಿದು ಪ್ರತಿಭಟನೆಯ ಮೂಲಕ ನಾಡ ಪ್ರಭುಗಳನ್ನು ಎಚ್ಚರಿಸುವ ಸಂದರ್ಭದಲ್ಲಿ ಚಳವಳಿಗಾರರು ಕಲ್ಲು ಹೊಡೆಯುವವರು ಎಂದು ಮೂದಲಿಸುತ್ತಿದ್ದವರಿಗೆ ಕುವೆಂಪು....
ಕಲ್ಲೊ ಸೊಲ್ಲೋ, ಅದು ಕನ್ನಡಕ್ಕೆ ಅನಿವಾರ್ಯ
ಅಂದಿದ್ದು ಚಳವಳಿಗಾರರಿಗೆ ಧೈರ್ಯ ಮತ್ತು ಸ್ಪೂರ್ತಿ ತುಂಬಿತ್ತು.
ಕನ್ನಡಕ್ಕೆ ಪ್ರಪಂಚದಲ್ಲಿ ಎಲ್ಲಾದರೂ ಮಾನ್ಯ ಸ್ಥಾನ ದೊರೆಯಬೇಕಾದರೆ ಅದು ಇಲ್ಲೆ, ಕರ್ನಾಟಕದಲ್ಲೇ. ಇನ್ನೆಲ್ಲಿಯೂ ಅಲ್ಲ. ಪ್ರಪಂಚದಲ್ಲಿ ಸಹಸ್ರಾರು, ರಾಜ್ಯಶಾಸ್ತ್ರ ಪ್ರಾಧ್ಯಾಪಕರು ಇದ್ದಾರೆ. ನಾವಿಲ್ಲಿ ಅವರುಗಳಿಗೆ ಅಷ್ಟು ಎಡೆ ಕೊಡದಿದ್ದರೂ ಅದರಿಂದ ಅವರಿಗಾಗಲಿ ಶಾಸ್ತ್ರಗಳಿಗಾಗಲಿ ಏನೊಂದು ನಷ್ಟ ಆಗುವುದಿಲ್ಲ. ಅವರಿಗೆ ಉಳಿದ ಜಗತ್ತು ಇದ್ದೇ ಇದೆ...
ನೀವು ಇಲ್ಲಿ ಕನ್ನಡಕ್ಕೆ ಕನ್ನಡದವರಿಗೆ ಎಡೆ ಕೊಡದಿದ್ದರೆ, ಸ್ಥಾನಮಾನ ಕೊಡದಿದ್ದರೆ ಜಗತ್ತಿನ ಮತ್ಯಾವ ಭಾಗವೂ ಕನ್ನಡದ ಕೈ ಹಿಡಿಯುವುದಿಲ್ಲ. ನೀವು ಕೈ ಬಿಟ್ಟರೆ ಅದಕ್ಕೆ ಸಮುದ್ರವೇ ಗತಿ (ಸಮಗ್ರ ಗದ್ಯ ಸಂ೧, ಪು ೭೧೧) ಎಂದು ಪ್ರಥಮ ವಿಶ್ವ ಕನ್ನಡ ಸಮ್ಮೇಳನ ಉದ್ಘಾಟನಾ ಸಮಾರಂಭದಲ್ಲಿ ಕುವೆಂಪುರವರು ನೀಡಿದ ಕರೆ ಮಹತ್ವ ಪೂರ್ಣವಾದದ್ದು.
ಹೀಗೆ ತಮ್ಮ ಬದುಕಿನುದ್ದಕ್ಕೂ ಕನ್ನಡ ನಾಡಿನ ಜನರ ಕಲ್ಯಾಣಕ್ಕಾಗಿ ಹಾತೊರೆದ ಕವಿ, ಕುವೆಂಪು, ಕನ್ನಡ-ಕರ್ನಾಟಕದ ನೆಲೆಯಲ್ಲಿ ತಾವೂ ಬೆಳೆದು ಇತರರನ್ನೂ ಬೆಳೆಯಿಸಿದರು. ತಮ್ಮ ಸಮಕಾಲೀನ ಅನೇಕ ಕವಿಗಳು ಮಾಡದಿದ್ದು ಅನೇಕ ಕನ್ನಡ ಪರ, ಕರ್ನಾಟಕ ಪರ ಕೆಲಸವನ್ನು ತುಂಬಾ ಧೈರ್ಯ ಸಾಹಸ, ಎಂತಹ ಅಡೆ ತಡೆ ಬಂದರೂ, ಕುಗ್ಗದೆ ಕೈಗೊಂಡರು. ಬೇರೆಯವರಿಗೆ ಆಧಾರ ಸ್ತಂಭವಾಗಿ ನಿಂತರು. ಇಂತಹ ಅಸಾಧಾರಣ ದೈತ್ಯ ಪ್ರತಿಭೆ, ಬಹುಶಃ ರಾಷ್ಟ್ರದಲ್ಲೇ ಭಾರತೀಯ ಭಾಷೆಗಳಲ್ಲಿ ಇಲ್ಲ. ಅತೀ ಹೆಚ್ಚು ಪ್ರಶಸ್ತಿ ಪುರಸ್ಕಾರ ಪಡೆದ ಕನ್ನಡದ ಧೀಮಂತ ಕವಿ ಕುವೆಂಪು. ಕುವೆಂಪು ಅವರಲ್ಲಿ ಕನ್ನಡ ಅರಿವನ್ನು ಮೂಡಿಸಿ ಕನ್ನಡಕ್ಕೆ ಕುವೆಂಪು ಅವರನ್ನು ಕೊಟ್ಟ ಕೀರ್ತಿ ಐರಿಶ್ ಕವಿ ಜೇಮ್ಸ್ ಕಸಿನ್ಸ್ ಅವರಿಗೆ ಸಲ್ಲುತ್ತದೆ. ಅಂತಹ ಕುವೆಂಪು ಅವರೇ ಕನ್ನಡದ ಬಗೆಗಿನ ತನ್ನ ಅಳಲನ್ನು ಈ ರೀತಿ ವ್ಯಕ್ತ ಪಡಿಸಿದ್ದಾರೆ.
ನಾನು ಅವಧೂತನಾಗಿ ಹೋಗುವುದಿಲ್ಲ. ಕನ್ನಡವು ತನ್ನ ಸ್ಥಾನವನ್ನು ಅಧಿಕೃತವಾಗಿ ಪಡೆಯುವ ತನಕ ನನ್ನ ಪ್ರಾಣವಿರುವ ತನಕ ಕನ್ನಡಕ್ಕಾಗಿ ದುಡಿಯುವುದು, ಕನ್ನಡಕ್ಕಾಗಿ ದುಡಿಯಲು ವ್ಯಕ್ತಿಗಳನ್ನು ಪ್ರಚೋದಿಸುವುದು, ಅದಕ್ಕಾಗಿ ಭಗವಂತನಲ್ಲಿ ಮೊರೆಯಿಡುವುದು ಮಾಡುತ್ತೇನೆ. ನನ್ನೆಲ್ಲಾ ತಪಶಕ್ತಿಯನ್ನು ಅಥವಾ ಪ್ರಾರ್ಥನಾ ಶಕ್ತಿಯನ್ನು ಕನ್ನಡ ಸೇವೆಗಾಗಿ ಮೀಸಲಿಡುತ್ತೇನೆ. ಎಂದು ಹೇಳುತ್ತಾರೆ. ಕುವೆಂಪು ಕನ್ನಡದ ಪ್ರೀತಿ ಪ್ರಶ್ನಾತೀತವಾದದ್ದು. ಅವರಲ್ಲಿನ ಕನ್ನಡ ನಿಷ್ಠೆ ಕನ್ನಡದ ಸ್ಥಾನಮಾನಕ್ಕಾಗಿ ಅವರು ನಡೆಸಿದ ಹೋರಾಟ ನೀಡಿದ ನಾಯಕತ್ವ ಬಹುದೊಡ್ಡದು.

ಅಪರೂಪದ ಕನ್ನಡ ಸಂಪನ್ನ ಐ.ಎ.ಎಸ್. ಪಂಜಾಬಿ ಅಧಿಕಾರಿ ಚಿರಂಜೀವಿಸಿಂಗ್
ಆಡಳಿತ ಭಾಷೆ ಕನ್ನಡವಾಗಬೇಕು ಎಂಬ ಕೂಗು ಎಷ್ಟೋ ವರುಷಗಳಿಂದ ಕೇಳುತ್ತಲೇ ಇದ್ದೇವೆ. ಸರ್ಕಾರ ಕೂಡಾ ಎಷ್ಟೋ ರೀತಿ ಪ್ರಯತ್ನ ನಡೆಸಿದಾಗ್ಯೂ ಸಮಸ್ಯೆ ಬಗೆಹರಿದಿಲ್ಲ. ಸಚಿವಾಲಯದಲ್ಲೇ ಕನ್ನಡ ಭಾಷೆಯ ಉಪಯೋಗವಾಗುತ್ತಿಲ್ಲ ಎಂಬ ದೂರನ್ನು ಕೇಳುತ್ತಲೇ ಇದ್ದೇವೆ. ಐ.ಎ.ಎಸ್ ಮತ್ತು ಕೆ.ಎ.ಎಸ್ ಅಧಿಕಾರಿಗಳಂತೂ ಕನ್ನಡ ಭಾಷೆ ತಮಗೆ ಗೊತ್ತೆ ಇಲ್ಲವೋ ಎಂಬಂತೆ ಇಂಗ್ಲೀಷ್‌ನಲ್ಲೇ ವ್ಯವಹರಿಸುತ್ತಾರೆ. ಅವರು ಕನ್ನಡದ ಬಗ್ಗೆ ಕಾಳಜಿ ತೋರಿಸುವರೆಂಬ ನಂಬಿಕೆ ಯಾರಿಗೂ ಇಲ್ಲ.
ಇಂತಹ ಸಂದರ್ಭದಲ್ಲಿ ನಾವು ಕರ್ನಾಟಕ ಸರ್ಕಾರದಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಾಗಿ ನಿವೃತ್ತರಾದ ಪಂಜಾಬಿ ಅಧಿಕಾರಿ ಚಿರಂಜೀವಿ ಸಿಂಗ್‌ರವರನ್ನು ಖಂಡಿತ ನೆನೆಯಬೇಕು. ಅವರು ಸಿಖ್ ಆದಾಗ್ಯೂ ಕನ್ನಡದ ಬಗ್ಗೆ ಅವರು ತಳೆದಿದ್ದ ಅಭಿಮಾನವನ್ನು ಎಂದಿಗೂ ಮರೆಯಲಾಗುವುದಿಲ್ಲ. ನಾನು ಸಚಿವಾಲಯದಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯಲ್ಲಿ ಅಧೀನ ಕಾರ್ಯದರ್ಶಿಯಾಗಿದ್ದಾಗ, ಅವರು ನಮ್ಮ ಇಲಾಖೆಗೆ ಕಾರ್ಯದರ್ಶಿಯಾಗಿ ಬಂದರು. ಅವರು ಸಿಖ್ ಆದ್ದರಿಂದ ಕನ್ನಡದಲ್ಲಿ ವ್ಯವಹರಿಸಲು ಕಷ್ಟವಾಗಬಹುದೆಂಬ ಅಭಿಪ್ರಾಯ ಎಲ್ಲರಲ್ಲಿಯೂ ಇತ್ತು. ಆದರೆ, ಆಶ್ಚರ್ಯದ ಸಂಗತಿ ಎಂದರೆ ಅವರು ಸ್ಚಚ್ಛವಾಗಿ ಕನ್ನಡದಲ್ಲೇ ಮಾತನಾಡುತ್ತಿದ್ದರು. ಕನ್ನಡ ದೇಶದಲ್ಲೇ ಹುಟ್ಟಿ ಬೆಳೆದ ಎಷ್ಟೋ ಜನರಿಗೆ ಅವರಷ್ಟು ಸ್ಪಷ್ಟವಾಗಿ ಕನ್ನಡದಲ್ಲೇ ಮಾತನಾಡಲು ಬರುವುದಿಲ್ಲ. ಇಂಗ್ಲೀಷ್, ಹಿಂದೀ ಬೆರಸಿ ಅಧ್ವಾನವಾಗಿ ಮಾತನಾಡುತ್ತಾರೆ. ಐಎಎಸ್ ಅಧಿಕಾರಿಗಳಂತೂ ಇಂಗ್ಲೆಂಡಿನಿಂದ ಬಂದವರಂತೆಯೇ ವ್ಯವಹರಿಸುತ್ತಾರೆ.
ಮಾತನಾಡುವುದು ಅಷ್ಟೇ ಅಲ್ಲ; ಕಚೇರಿ ಕಡತಗಳೆಲ್ಲ ಕನ್ನಡದಲ್ಲೇ ಬರೆಯುತ್ತಿದ್ದರು. ಅವರ ಅಕ್ಷರವಂತೂ ಮುತ್ತು ಪೋಣಿಸಿದಷ್ಟು ಅಂದವಾಗಿ ಇರುತ್ತಿತ್ತು. ನಮ್ಮಂತಹ ಅಪ್ಪಟ ಕನ್ನಡಿಗರಿಗೇ ಅಷ್ಟು ಅಂದವಾಗಿ ಬರೆಯಲು ಸಾಧ್ಯವಿಲ್ಲ. ಕಾಗುಣಿತ ಒತ್ತಕ್ಷರಗಳ ತಪ್ಪು ಸಿಗುತ್ತಿರಲಿಲ್ಲ. ಅವರ ಬರವಣಿಗೆ ನೋಡಿ ನಾವೆಲ್ಲ ನಾಚುವಂತಾಗುತ್ತಿತ್ತು.
ಕಡತದಲ್ಲಿ ಯಾವುದರ ಬಗ್ಗೆಯಾದರೂ ಏನಾದರೂ ಅಭಿಪ್ರಾಯವನ್ನು ಕನ್ನಡದಲ್ಲಿ ವ್ಯಕ್ತಪಡಿಸಬೇಕಾದಾಗ, ನಮ್ಮನ್ನು ಕರೆದು, ಅವರು ಉಪಯೋಗಿಸುತ್ತಿರುವ ಪದ ಸರಿಯಾಗಿದೆಯೇ ಅದರಿಂದ ಅರ್ಥಕ್ಕೆ ಕುಂದು ಬರುವುದಿಲ್ಲವೇ ಎಂದು ಕೇಳಿ ಅನುಮಾನ ಬಗೆಹರಿಸಿಕೊಳ್ಳುತ್ತಿದ್ದರು. ಜೊತೆಯಲ್ಲಿ ಇಂಗ್ಲಿಷ್, ಕನ್ನಡ ಡಿಕ್ಷನರಿಯನ್ನು ಇಟ್ಟುಕೊಂಡು ಅದರ ಉಪಯೋಗ ಮಾಡಿಕೊಳ್ಳುತ್ತಿದ್ದರು. ಅವರ ಬರವಣಿಗೆ ಶೈಲಿ ನೋಡಿದ ಮೇಲೆ ನಾವು ಹೇಳುತ್ತಿದ್ದೆವು, "ನೀವು ಸರಿಯಾಗಿಯೇ ಬರೆಯುತ್ತೀರಿ. ನಮ್ಮ ಅಭಿಪ್ರಾಯ ಕೇಳುವ ಅಗತ್ಯವಿಲ್ಲ ಎಂದು. ಅವರು ಒಪ್ಪುತ್ತಿರಲಿಲ್ಲ. "ನಾನು ಎಷ್ಟಾದರೂ ಪಂಜಾಬಿ. ನಿಮ್ಮಷ್ಟು ಕನ್ನಡ ನನಗೆ ಗೊತ್ತಿಲ್ಲ ಎನ್ನುತ್ತಿದ್ದರು.
ನಾನು ವಿಧಾನಸೌಧದಲ್ಲಿ ಬೇರೆ ಬೇರೆ ಹುದ್ದೆಗಳಲ್ಲಿ, ಬೇರೆ ಬೇರೆ ಇಲಾಖೆಗಳಲ್ಲಿ ಕೆಲಸ ಮಾಡಿದ್ದರಿಂದ, ಸಾಕಷ್ಟು ಐ.ಎ.ಎಸ್. ಅಧಿಕಾರಿಗಳ ಪರಿಚಯವಿತ್ತು. ವಿದ್ಯಾ ಸಂಪನ್ನರು, ದಕ್ಷತೆಯಿಂದ ಆಡಳಿತ ನಡೆಸುವವರು ಆದಂತಹ ಎಷ್ಟೋ ಅಧಿಕಾರಿಗಳು ಅಲ್ಲಿದ್ದಿರಬಹುದು. ಆದರೆ ಇವರಷ್ಟು ಕನ್ನಡದ ಬಗ್ಗೆ ಕಾಳಜಿಯುಳ್ಳ, ಮೆಲು ಮಾತಿನ, ವಿನಯ ಸಂಪನ್ನ ಅಧಿಕಾರಿಗಳು ಮಾತ್ರ ತುಂಬಾ ವಿರಳ. ಸದಾ ಹಸನ್ಮುಖಿ. ಯಾರಾದರೂ ಹಿರಿಯರು ಬಂದರೆ, ಅವರನ್ನು ಸ್ವಾಗತಿಸಿ, ಕೂಡಿಸಿ, ಅವರೊಡನೆ ಮಾತನಾಡುವ ರೀತಿಯನ್ನು ನೋಡಿ ತುಂಬಾ ಸಂತೋಷವಾಗುತ್ತಿತ್ತು.
ಅರ್ಥಶಾಸ್ತ್ರ, ಭೂಗೋಳದಲ್ಲಿ ಪದವಿ, ಇಂಗ್ಲೀಷ್‌ನಲ್ಲಿ ಸ್ನಾತಕೋತ್ತರ ಪದವಿ, ಜರ್ಮನಿಗೆ ಹೋಗಿ ಪಿ.ಎಚ್.ಡಿ ಮಾಡಿ, ಐ.ಎ.ಎಸ್ ಅಧಿಕಾರಿಯಾಗಿ ಕರ್ನಾಟಕಕ್ಕೆ ಬಂದವರು ಚಿರಂಜೀವಿಸಿಂಗ್. ಅವರು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಜರ್ಮನ್ ಬೋಧಿಸುತ್ತಿದ್ದರು. ಪಂಜಾಬಿ, ಫ್ರೆಂಚ್, ಕನ್ನಡ ಮತ್ತು ಇಂಗ್ಲೀಷ್‌ನಲ್ಲಿ ಓದು ಬರಹ ಮಾಡಬಲ್ಲರು. ಯುನೆಸ್ಕೋ ರಾಯಭಾರಿಯಾಗಿ ಫ್ರಾನ್ಸ್‌ನಲ್ಲಿ ಕಾಯಕ ನಿರ್ವಹಿಸುತ್ತಿದ್ದರು. ಇಷ್ಟು ವಿದ್ವತ್ ಪಡೆದ ವ್ಯಕ್ತಿ ಅಷ್ಟು ಸರಳ, ಸಜ್ಜನಿಕೆಯಿಂದ ಇರುವುದು ತುಂಬಾ ಅಪರೂಪ.
ಕನ್ನಡ ಸಂಸ್ಕೃತಿ ಇಲಾಖೆಯವರು ಏರ್ಪಡಿಸಿದ್ದ ’ಮನೆಯಂಗಳ’ ಕಾರ್ಯಕ್ರಮದಲ್ಲಿ ಚಿರಂಜೀವಿಸಿಂಗ್ ಅವರ ಸಂವಾದ ಕಾರ್ಯಕ್ರಮ ನಡೆಯಿತು. ಅಲ್ಲಿ ಅವರು ತಾವೇ ರಚಿಸಿದ ಪಂಜಾಬ್ ಕವಿತೆಯನ್ನು ಓದಿ, ಅದರ ಭಾವಾರ್ಥವನ್ನು ಕನ್ನಡದಲ್ಲಿ ವಿವರಿಸಿದರು. ತುಂಬಾ ಸೊಗಸಾಗಿತ್ತು. ಅದನ್ನು ಸುಮತೀಂದ್ರ ನಾಡಿಗರವರು ಕನ್ನಡಕ್ಕೆ ಅನುವಾದ ಮಾಡುವುದಾಗಿ ಹೇಳಿದರು. ಅವರೊಬ್ಬ ಬರಹಗಾರರೂ, ಕವಿಗಳೂ ಆಗಿದ್ದಾರೆಂಬ ವಿಷಯ ತಿಳಿದು ತುಂಬಾ ಹೆಮ್ಮೆ ಎನಿಸಿತು. ಒಮ್ಮೆ ಒಂದು ಕವಿಗೋಷ್ಠಿಯಲ್ಲಿ ಬೇಂದ್ರೆಯವರ ಪದ್ಯವನ್ನು ಅವರು ಓದಿದ್ದನ್ನು ಕೇಳಿ ಸಂತೋಷಪಟ್ಟೆ.
ನಿವೃತ್ತರಾದ ಮೇಲೆ ಅವರು ಅನೇಕ ಕನ್ನಡ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವುದನ್ನು ನೋಡಿದ್ದೇನೆ. ನಿರರ್ಗಳವಾಗಿ ಕನ್ನಡದಲ್ಲಿ ಮಾತನಾಡುತ್ತಾರೆ. ನಮ್ಮ ಕನ್ನಡ ಕವಿಗಳೊಡನೆ ಹಾಗೂ ಸಾಹಿತಿಗಳೊಡನೆ ಮಧುರ ಬಾಂಧವ್ಯ ಹೊಂದಿದ್ದಾರೆ. ಅವರು ಮಂಡ್ಯದಲ್ಲಿದ್ದಾಗ ಅವರ ತಂದೆ ಅಲ್ಲಿಗೆ ಬಂದಿದ್ದರಂತೆ. ಅಲ್ಲೇ ಅವರು ಕೊನೆಯುಸಿರು ಎಳೆದರಂತೆ. ಅವರ ಸಂಸ್ಕಾರವನ್ನು ಮಂಡ್ಯದಲ್ಲೇ ಮಾಡಿ, ಕಾವೇರಿಯಲ್ಲಿ ಅಸ್ತಿ ವಿಸರ್ಜನೆ ಮಾಡಿದರಂತೆ. ಈ ಘಟನೆಯನ್ನು ’ಮನೆಯಂಗಳ’ ಕಾರ್ಯಕ್ರಮದಲ್ಲಿ ಹಂಚಿಕೊಂಡು "ನನಗೂ ಕರ್ನಾಟಕಕ್ಕೂ ಪೂರ್ವಜನ್ಮದ ಸಂಬಂಧವಿದೆ" ಎಂದರು.
ಇಂತಹ ಕನ್ನಡದ ಬಗ್ಗೆ ಕಾಳಜಿಯುಳ್ಳ ಕನ್ನಡ ಸಂಪನ್ನ ಪಂಜಾಬಿ ಅಧಿಕಾರಿಯನ್ನು ಪಡೆದ ಕನ್ನಡನಾಡು ತುಂಬಾ ಧನ್ಯವಾಗಿದೆ. ಅವರಂತೆ ಬೇರೆ ದೇಶಗಳಿಂದ ಬಂದು ಇಲ್ಲಿ ನೆಲಸಿರುವ ಜನಗಳು ಕನ್ನಡದ ಬಗ್ಗೆ ಬಾಂಧವ್ಯ ಬೆಳೆಸಿಕೊಂಡರೆ ಎಷ್ಟು ಚೆನ್ನಾಗಿರುತ್ತದೆ! ನಾವು ಯಾವ ದೇಶದಲ್ಲಿರುತ್ತೇವೋ ಆ ದೇಶಕ್ಕೆ ಹೊಂದಿಕೊಂಡು, ಅವರಂತೆ ಇರಬೇಕಾದದ್ದು ನಮ್ಮ ಕರ್ತವ್ಯ. ಅವರ ಭಾಷೆಯನ್ನು ದೇಶವನ್ನು, ಮರೆಯಬೇಕಾಗಿಲ್ಲ. "ಃe ಚಿ ಖomಚಿಟಿ ತಿhiಟe ಥಿou ಚಿಡಿe iಟಿ ಖome" ಅನ್ನುತ್ತಾರಲ್ಲ ಹಾಗೆ, ನಡೆದುಕೊಂಡರೆ, ಯಾವ ಸಮಸ್ಯೆಯೂ ಇರುವುದಿಲ್ಲ.