Thursday, September 9, 2010

ಮುಕ್ಕಣ್ಣ, ಮುನೇಶ್ವರ ಸಂತೈಸುವ ಅವ್ವ...
ಕಿ.ರಂ. ನಾಗರಾಜರ ನೆನಪು ಕೊರೆಯುತ್ತಲೇ ಇದೆ. ಬಿಟ್ಟು-ಬಿಡದೆ ಸುರಿಯುವ ಸೋನೆಮಳೆಯಂತೆ. ಶೃತಿಬದ್ಧವಾದ ಮಂದ್ರಸ್ಥಾಯಿಯ ಅವರ ನಿರರ್ಗಳ ಮಾತಿನ ಗುಂಗಿನಿಂದ ಹೊರಬರಲಾಗದ ನರಳುವ ಸ್ಥಿತಿಯಲ್ಲಿ ನನ್ನಂತೆ ಹಲವು ಗೆಳೆಯರು ಕಿ.ರಂ.ಸಂಗದ ಸಹವಾಸದಲ್ಲಿ ನರಳುತ್ತಿರಬಹುದು.
ಗುರು ಪರಂಪರೆಯನ್ನು ಮುಂದುವರೆಸುತ್ತ, ಶಿಷ್ಯ ಪರಂಪರೆಯನ್ನು ಬೆಳೆಸುತ್ತ ನಡೆದ ಕಿ.ರಂ. ‘ಮಾತಿನ ಮಾಧ್ಯಮದ ಮೂಲಕ ಕಾವ್ಯವನ್ನು ಜೀವಂತವಾಗಿಟ್ಟವರು. ಹಾಗೆಯೇ ಸಮಾಜಮುಖಿ ಚಿಂತನೆಗಳ ಮಾರ್ಗದಲ್ಲಿ ನಡೆದವರು. ಅವರ ಅಗಲಿಕೆಯ ನಂತರದಲ್ಲಿ ಕನ್ನಡ ಮತ್ತು ಆಂಗ್ಲ ಮಾಧ್ಯಮಗಳಲ್ಲಿ ಪ್ರಕಟಗೊಂಡ ಕಿ.ರಂ. ಕುರಿತ ಬರಹಗಳನ್ನು ಗಮನಿಸಿದರೆ ಸಾಹಿತ್ಯ, ಸಾಂಸ್ಕೃತಿಕ ಹಾಗೂ ಸಾಮಾಜಿಕ ವಲಯದಲ್ಲಿ ಹಬ್ಬಿದ್ದ ಅವರ ಗಾಢ ಪ್ರಭಾವದ ಅನುಭವವಾಗದೇ ಇರದು.
ಕಿ.ರಂ.ನಾಗರಾಜರ ಪ್ರಭಾವಳಿಯಲ್ಲಿ ಸಿಲುಕಿದ್ದವರಿಗೆಲ್ಲ ಅವರ ದಿಢೀರ್ ನಿರ್ಗಮನ ಒಂದು ರೀತಿಯ ಆತಂಕದಿಂದ ಕೂಡಿದ ‘ಅನಾಥಪ್ರಜ್ಞೆಯನ್ನು ಸೃಷ್ಠಿಸಿದ್ದು ಸುಳ್ಳಲ್ಲ.
ಮೊನ್ನೆ ಕಿ.ರಂ. ಹೇಳಿದ ಮಾತುಗಳು ನೆನಪಾದವು. ರಾಜ್ಯ ಸರ್ಕಾರ ‘ಸಾರಾಯಿ ನಿಷೇಧ ಮಾಡಿದ ತೀರ್ಮಾನಕ್ಕೆ ಎಲ್ಲಕಡೆಯಿಂದಲೂ ಬೆಂಬಲ ವ್ಯಕ್ತವಾಗುತ್ತಿದ್ದರೆ ಅಂದು ಕಿ.ರಂ. ಸಾಹೇಬರು ಖಿನ್ನತೆಯಲ್ಲಿದ್ದರು. ‘ಪ್ರೆಸ್‌ಕ್ಲಬ್ನಲ್ಲಿ ಸಂಜೆಯ ಪಾನಕೂಟ ರಂಗೇರುತ್ತಿದ್ದಂತೆ ತಾರಕ ಸ್ಥಿತಿಗೇರಿದ್ದ ಕಿ.ರಂ. ಸರ್ಕಾರಕ್ಕೆ ಶಾಪಹಾಕತೊಡಗಿದರು.
ಸಾರಾಯಿ ನಿಷೇಧದಿಂದಾಗುವ ಅನಾಹುತಗಳು, ಬಡತನ ರೇಖೆಗಿಂಥ ಕೆಳಗಿನ ಜನರು ಎದುರಿಸಬಹುದಾದ ಆರ್ಥಿಕ ಸಂಕಷ್ಟಗಳ ಮುಂದಾಲೋಚನೆ ಅವರನ್ನು ಆತಂಕಕ್ಕೆ ದೂಡಿದಂತಿತ್ತು.
ಪ್ರತಿನಿತ್ಯ ಕುಡಿತದ ಅಭ್ಯಾಸವನ್ನಿಟ್ಟುಕೊಂಡ ಬಡಕುಡುಕರ ಬಗೆಗೆನ ಕಿ.ರಂ. ಕಾಳಜಿ ತೋರಿದ್ದರು. ಸಾರಾಯಿ ಕುಡಿಯುವ ಜನ ದುಡಿಯುವ ಹಣದಲ್ಲಿ ಇನ್ನೂ ಮುಂದೆ ಬಣ್ಣದ ಸಾರಾಯಿ (ಚೀಪ್ ಲಿಕ್ಕರ್)ಗಾಗಿ ಹೆಚ್ಚುವರಿ ಹಣವನ್ನು ಪ್ರತಿನಿತ್ಯದ ತೆರಿಗೆಯಂತೆ ತೆರಬೇಕಾಗಿ ಬರಬಹುದು. ಅಲ್ಲದೆ ಅವರು ಇನ್ನಷ್ಟು ಬಡತನದಲ್ಲಿ ಬಿದ್ದು ‘ಆಹಾರಕೊರತೆಯ ಹಾಹಾಕಾರಕ್ಕೆ ಬಲಿಯಾಗುತ್ತಾರೆಂಬ ಆತಂಕದಿಂದಲೇ ಕಿ.ರಂ. ತಮ್ಮ ಬಲಗೈ ಬೆರಳುಗಳನ್ನು ತೀವ್ರವಾಗಿ ಉಜ್ಜಿಕೊಳ್ಳುತ್ತಿದ್ದರು.
ಮುಂದೆ ಕಿ.ರಂ.ಹೇಳಿದಂತೆಯೇ ಅವಘಡಗಳು ಸಂಭವಿಸಿದಾಗ ನಮಗೆಲ್ಲ ಅಚ್ಚರಿ; ಕಳ್ಳಭಟ್ಟಿ ದುರಂತದಲ್ಲಿ ಹಲವರು ಅಸುನೀಗಿದರು. ಹತ್ತಾರು ರೂಪಾಯಿಗಳಲ್ಲಿ ತಮ್ಮ ಕಾಯಕ ಮುಗಿಸಿಕೊಳ್ಳುತ್ತಿದ್ದ ಸಾರಾಯಿ ಪಾನಿಗರು ನೂರಾರು ರೂಪಾಯಿ ತೆರಬೇಕಾಗಿ ಬಂದದ್ದು ಮತ್ತೊಂದು ದುರಂತ. ದುಡಿದ ಕೂಲಿಯ ಮುಕ್ಕಾಲು ಪಾಲು ಬಣ್ಣದ ಶೀಷೆಗಳ ಪಾಲಾಯಿತು. ಸಾರಾಯಿಯ ನಿಶೆಯ ಹಂತವನ್ನು ತಲುಪಲು ಮತ್ತಷ್ಟು ಮದ್ಯವನ್ನು ಸುರುವಿಕೊಳ್ಳುವ ಪರಿಸ್ಥಿತಿಗೆ ಹೊಂದಿಕೊಳ್ಳಲಾಗದೆ ಅನಿವಾರ್ಯತೆಗೆ ಒಳಗಾದರು. ಹೆಂಡ-ಸಾರಾಯಿ ಸಹವಾಸದಿಂದ ಎರಡು ಹೊತ್ತು ಹೊಟ್ಟೆ ತುಂಬಾ ಉಣ್ಣುತ್ತಿದ್ದ ಕುಟುಂಬಗಳು ಮತ್ತಷ್ಟು ಜರ್ಜರಿತಗೊಂಡಿದ್ದು ಕಣ್ಣಿಗೆ ಕಟ್ಟುವ ವಾಸ್ತವ.
ಇದೇ ಕಿ.ರಂ.ಸಾಹೇಬರು ಚಿತ್ರದುರ್ಗದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ನಂತರ ಅಲ್ಲೇ ಠಿಕಾಣಿ ಹೂಡಿದರು. ಎಂದಿನಂತೆ ಸಂಜೆ ಹೊತ್ತಿಗೆ ಪಾರ್ಟಿ ರಂಗೇರಿತು. ಸಾರಾಯಿ ನಿಷೇಧದ ಗುಂಗಿನಲ್ಲೇ ಇದ್ದ ಕಿ.ರಂ. ‘ನನಗೀಗಲೇ ಬೇಕೇ ಬೇಕು ಎಂದು ಹಠಕ್ಕೆ ಬಿದ್ದರು. ಶಿಷ್ಯ ಪಟಾಲಂ ಅಲ್ಲಿ-ಇಲ್ಲಿ ಹುಡುಕಿ ತಡಕಿ ಒಂದಷ್ಟು ‘ಸಾರಾಯಿ ಪ್ಯಾಕೆಟ್ಗಳನ್ನು ತಂದು ಮುಂದಿಟ್ಟರು. ಒಂದರ ಹಿಂದೆ ಒಂದರಂತೆ ಪಕ್ಕ ಗ್ರಾಮೀಣ ಶೈಲಿಯಲ್ಲಿ ಸುರುವಿಕೊಂಡು ಕಿ.ರಂ.ಹತ್ತೇ ನಿಮಿಷಕ್ಕೆ ನಿದ್ರೆಗೆ ಜಾರಿದರು. ಮೇಷ್ಟ್ರು ಎಷ್ಟೇ ಕರೆದ್ರು ಮಾತಾಡ್ತಾ ಇಲ್ಲ ಶಿಷ್ಯ ಪಟಾಲಂಗೆ ಆತಂಕ. ಆದರೆ ಅಂತದ್ದೇನೂ ಸಂಭವಿಸಲಿಲ್ಲ.
ಸರಕಾರ ಸಾರಾಯಿ ನಿಷೇಧ ಮಾಡಿದ್ದು-ಮತ್ತೆಂದು ಅದು ಸಿಗುವುದಿಲ್ಲವಲ್ಲ ಎಂಬ ಆತಂಕಕ್ಕೆ ಒಳಗಾಗಿದ್ದು, ಅದರ
ಜತೆಜತೆಗೆ ಸಾಮಾಜಿಕ ಚಿಂತನೆ-ವೋಟ್‌ಬ್ಯಾಂಕ್ ರಾಜಕೀಯ, ವಗೈರೆ ವಿಚಾರಧಾರೆಗಳು ಹರಿಯುತ್ತಲೇ ಇತ್ತು. ಆದರೆ ಎಲ್ಲ ಸಾಹಿತಿಗಳು ಸಾರಾಯಿ ನಿಷೇಧವನ್ನು ಸ್ವಾಗತಿಸುತ್ತಿರುವಾಗ ಕಿ.ರಂ.ಮಾತ್ರ ಸಾರ್ವಜನಿಕವಾಗಿ ಅಭಿಪ್ರಾಯ ವ್ಯಕ್ತಪಡಿಸಲಾಗದಿದ್ದರೂ ಪಾನಗೋಷ್ಠಿ ಸಂದರ್ಭದಲ್ಲಿ ಸಾರಾಯಿಯ ನೆನಪಂತೂ ಅವರನ್ನು ಕಾಡುತ್ತಲೇ ಇತ್ತು.
ಕಿ.ರಂ.ಅಗಲಿಕೆಯ ಕೆಲವೇ ದಿನಗಳ ಮುನ್ನ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದ ಹಿನ್ನೆಲೆಯಲ್ಲಿ ಅಭಿನಂದನಾ ಸಮಾರಂಭವೊಂದು ನಡೆಯಿತು. ಅಭಿನಂದನಾ ಭಾಷಣದ ಕೊನೆಯಲ್ಲಿ ಯು.ಆರ್.ಅನಂತಮೂರ್ತಿಯವರು ಹಾಗೂ ಮುಕ್ತ ಸೀತಾರಾಂ-ಕಿ.ರಂ.ನಾಗರಾಜ್‌ರ ಮಿತಿಯಿಲ್ಲದ ಕುಡಿತದ ಕುರಿತು ಬಹಿರಂಗವಾಗಿಯೇ ಪ್ರಸ್ತಾಪಿಸಿದ್ದು, ಅಲ್ಲಿ ಸೇರಿದ್ದ ಕಿ.ರಂ.ಸ್ನೇಹಿತರಿಗೆ-ಅಭಿಮಾನಿಗಳಿಗೆಲ್ಲ ಮುಜುಗುರಕ್ಕೀಡು ಮಾಡಿತು. ಸ್ವತಃ ಕಿ.ರಂ. ಪಂಪ-ಕುಮಾರವ್ಯಾಸನಿಂದ ಮೊದಲ್ಗೊಂಡು ಸುರಪಾನದ ರಸಾನುಭವಗಳನ್ನು ಕಾವ್ಯದ ಮೂಲಕ ಉತ್ತರಿಸಿ ವೇದಿಕೆಯಲ್ಲೇ ತಿರುಗೇಟು ನೀಡಿದ್ದು ನಮಗೆಲ್ಲ ಅತೀವ ಖುಷಿ ನೀಡಿತ್ತು.
ಅಭಿನಂದನಾ ಸಮಾರಂಭದಲ್ಲಿ ಕುಡಿತದ ವಿಷಯವನ್ನು ಪ್ರಸ್ತಾಪಿಸಿದ್ದ ಸೀತಾರಾಂ ಮುಖ ಬಿಳುಚಿಕೊಂಡಿತ್ತು.
ಬಡಪೆಟ್ಟಿಗೆ ಬಗ್ಗದ ಕಿ.ರಂ. ಜಟಾಧಾರಿ ಮುಕ್ಕಣ್ಣನಂತೆ, ಮುನೇಶ್ವರನಂತೆ, ಜಂಗಮನಂತೆ, ಸಂತೈಸುವ ಅವ್ವನಂತೆ ಕಂಡದ್ದುಂಟು.
ಜನರಲ್ ಹಾಸ್ಟೆಲ್‌ನಲ್ಲಿ ರಾತ್ರಿಯೆಲ್ಲ ಕುಡಿದು ಸ್ನೇಹಿತರೊಂದಿಗೆ ಜಗಳಕ್ಕೆ ಬಿದ್ದು ಎದ್ದುಹೋದ ಕಿ.ರಂ. ಮತ್ತೆ ಬೆಳಗಿದ ಜಾವಕ್ಕೆ ಕದಬಡಿದು ನನ್ನ ಚಪ್ಪಲಿ ಬಿಟ್ಟು ಹೋಗಿದ್ದೆ ಕಣ್ರಿ ಎಂದು ಏನಾದ್ರೂ ಉಳಿಸಿದ್ದೀರಾ ಅನ್ನುತ್ತಿದ್ದರು.
ಪ್ರತಿ ತಿಂಗಳ ಎರಡನೇ ಶನಿವಾರ ಪ್ರೆಸ್‌ಕ್ಲಬ್ನಲ್ಲಿ ನಡೆಯುತ್ತಿದ್ದ ಪಾನಗೋಷ್ಠಿ-ಕಾವ್ಯಗೋಷ್ಠಿಯಾಗಿ ಮಾರ್ಪಾಡಾಗುತ್ತಿತ್ತು. ಮುರ‍್ನಾಲ್ಕು ದಿವಸದ ಮುಂಚೆ ಕನ್ನಡ ಪುಸ್ತಕ ಪ್ರಾಧಿಕಾರದ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಂದ ಕಿ.ರಂ. ಎದುರಿಗೆ ಕುಳಿತಿದ್ದ ಕವಿ ಸಿದ್ಧಲಿಂಗಯ್ಯನವರಿಗೆ ನೀವು ದೀರ್ಘಕಾವ್ಯವೊಂದನ್ನು ಬರೆಯಬೇಕು ಎಂದು ಒತ್ತಾಯಿಸುತ್ತಿದ್ದರು. ಕಿ.ರಂ. ಮಾತಿನಲ್ಲಿ ಬರುವ ನುಡಿಗಟ್ಟುಗಳು ಹಾಗೂ ಅಪರೂಪದ ಪದಗಳನ್ನೆಲ್ಲ ರಿಫೀಲ್ ಮಾಡಿಸಿಕೊಂಡು ವಕೀಲರಾದ ಸಿ.ಎ.ಹನುಮಂತರಾಯರು ತಮ್ಮ ‘ವಗೈರೆಗೆ ಸೇರಿಸಿಕೊಳ್ಳುತ್ತಿದ್ದರು.
ನನ್ನ ಮುಖ ಕಂಡ ತಕ್ಷಣ ರಾಜಧಾನಿಗೆ ಹೋಗಿದ್ರಾ ಎಂದು ಮುಗುಳ್ನಗುತ್ತಿದ್ದರು. ಅವರ ಪ್ರಕಾರ ರಾಜಧಾನಿ ಅಂದ್ರೆ ಹಾಸನ-ಹೊಳೆನರಸೀಪುರ!
ಇತ್ತೀಚೆಗೆ ಕೆಲವು ಸಲ ಹಾಸನದ ತಮಗಿಷ್ಟವಾದ ರಸ್ತೆಗಳಲ್ಲೆಲ್ಲ ಓಡಾಡಿ-ಸಿಗ್ನಲ್‌ಗಳಲ್ಲಿ ನಿಂತು ಸಿಗರೇಟ್ ಸೇದಿ ಬಂದಿದ್ದರು. ಅವರ ಪಾಲಿನ ಹಾಸನದ ಆಸ್ತಿಯನ್ನು ವೈದಿಕ ಭವನ ನಿರ್ಮಾಣಕ್ಕೆ ನೀಡಿದ್ದರು. ಆದರೆ ಎಲ್ಲೂ ಈ ವಿಷಯ ಬಹಿರಂಗವಾಗದಂತೆ ನೋಡಿಕೊಂಡರು.
ಸಾರ್ ಎಲ್ಲರೂ ನಿಮ್ಮನ್ನ ಕಿ.ರಂ. ಅಂತ ಕರೀತಾರೆ. ಅದು ನಿಮ್ಮ ಊರು-ತಂದೆಯ ಹೆಸರಾಯ್ತು. ಯಾರೂ ಕೂಡ ನಾಗರಾಜ ಅನ್ನೋದಿಲ್ಲ. ನಿಮ್ಮ ಹೆಸರು ಉಳಿಬೇಕು ಅಂದ್ರೆ ಬೃಹತ್ ಗ್ರಂಥವೊಂದನ್ನು ಬರೀಲೇಬೇಕು ಎಂದು ಹಲವು ಸಲ ರೇಗಿಸುತ್ತಿದ್ದೆ.
‘ಒಂದ್ ಕೆಲ್ಸ ಮಾಡ್ರೀ ನೀವು ಬೃಹತ್‌ಗ್ರಂಥ ಬರೀರಿ. ನಾನು ಮುನ್ನುಡಿ ಬರೆದು ನಾಗ್ರಾಜ್ ಅಂತ ಸಹಿ ಮಾಡ್ತೀನಿ ಎನ್ನುತ್ತಿದ್ದರು.
ಕೊನೆಯ ಸಲ ಭೇಟಿಯಾದಾಗ ಎಲ್ಲ ಹಳೆಯ ಸ್ನೇಹಿತರನ್ನು ವಿಚಾರಿಸಿಕೊಂಡು ‘ಮದ್ಯರಾತ್ರಿಯಲ್ಲಿ ಮಡಿಕೇರಿಯಲ್ಲಿ ಗೆಳೆಯ ಯಸಳೂರು ಉದಯಕುಮಾರ್‌ನಿಂದ ಬೇಂದ್ರೆಯ ‘ಗಾಯತ್ರಿ ಸೂಕ್ತವನ್ನು ಮೊಬೈಲ್‌ನಲ್ಲಿ ಹಾಡಿಸಿ ಮುದಗೊಂಡಿದ್ದರು.
ಈ ಮಾತನ್ನಂತೂ ಮರೆಯುವಂತೆಯೇ ಇಲ್ಲ. ಬನಶಂಕರಿಯ ಚಿತಾಗಾರದ ಮುಂದೆ ಸೇರಿದ್ದ ಸಾವಿರಾರು ಜನರ ನಡುವೆ ಇಲ್ಲಿ ಕಿ.ರಂ. ಮಕ್ಕಳು ಯಾರು? ಎಂದು ಯಾರೋ ಕೇಳಿದರು. ಯಾರನ್ನು ತೋರಿಸುವುದು? ಅಲ್ಲಿದ್ದ ಎಲ್ಲರ ಕಣ್ಣುಗಳೂ ಮಂಜಾಗಿದ್ದವು.

ವೈ.ಜಿ.ಅಶೋಕ್ ಕುಮಾರ್

No comments:

Post a Comment