Friday, July 22, 2011

ಕಲಾಲೋಕಕ್ಕೆ ರೆಕ್ಕೆ-ಪುಕ್ಕ ಕಟ್ಟಿಕೊಟ್ಟ ಹುಸೇನ್



ಎಮ್. ಎಫ್. ಹುಸೇನ್ ಒಬ್ಬ ಅಪ್ಪಟ ಕಲಾವಿದ. ಇಂದು ನಮ್ಮೊಂದಿಗಿಲ್ಲ ಎಂದೆನ್ನಲು ನನಗೆ ಮನಸ್ಸಿಲ್ಲ. ಕಲಾವಿದನಿಗೆ ಎಂದೂ ಸಾವಿರುವುದಿಲ್ಲ. ಅವರು ಬಿಟ್ಟುಹೋದ ಕಲಾಕೃತಿಗಳು ನಮ್ಮೊಂದಿಗಿವೆ. ಅವು ನಮ್ಮೊಂದಿಗೆ ನಿರಂತರ ಸಂವಹನ ನಡೆಸುತ್ತಲೇ ಇರುತ್ತವೆ. ಹೀಗಾಗಿ ಕಲಾವಿದನಿಗೆ ಸಾವೆಲ್ಲಿಯದು! ದೈಹಿಕವಾದ ಒಂದು ಸಣ್ಣ ಅಗಲಿಕೆಯಷ್ಟೆ.
ಹುಸೇನ್ ಎಂದ ಕೂಡಲೇ ಎಲ್ಲರ ಕಣ್ಣೂ ಅವರ ವಿವಾದಗಳತ್ತಲೇ ಹೊರಳುತ್ತವೆ. ಸ್ವಲ್ಪ ಹೆಚ್ಚೇ ಎನಿಸುವಷ್ಟು ಸುದ್ದಿ ಮಾಡುವ ಚಪಲ ಹುಸೇನರದ್ದು. ಜೊತೆಗೆ ಅವರ ಅಪಾರವಾದ sಸೌಂದರ್ಯೋಪಾಸನಾ ಗುಣ, ಚಲನಶೀಲ ಮನೋಭಾವಗಳು ಸಾಥ್ ನೀಡಿವೆ. ಹಾಗೆ ನೋಡಿದರೆ ಕಲೆ ಇರುವುದೇ ಪ್ರದರ್ಶಕ್ಕಾಗಿ, ಆ ಕಲೆಯನ್ನು ಜನರ ಬಳಿ ಕೊಂಡೊಯ್ಯಲು ಸುದ್ದಿ ಬೇಕೇಬೇಕು. ಆದರೆ ಸುದ್ದಿಯಾಗಬಹುದಾದ ವಿಷಯಗಳ ಬೆನ್ನತ್ತಿ ವಿವಾದಗಳನ್ನು ಮೇಲೆಳೆದುಕೊಂಡರು. ಆ ಮೂಲಕ ವಿಶ್ವ ಮಾರುಕಟ್ಟೆಯಲ್ಲಿ ತಮ್ಮ ಕಲಾಕೃತಿಗಳ ಬೆಲೆ ಹೆಚ್ಚಿಸಿಕೊಂಡರು. ಇನ್ನಿತರ ಭಾರತೀಯ ಕಲಾವಿದರಿಗೂ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಎಲ್ಲಿಲ್ಲದ ಬೇಡಿಕೆ ತಂದುಕೊಟ್ಟರು.
ಎತ್ತರದ ನಿಲುವಿನ ಆಕರ್ಷಕ ಬಣ್ಣದ ಹುಸೇನ್ ರನ್ನು ನಾನು ಮೊದಲು ನೋಡಿದ್ದು ೧೯೯೩ರಲ್ಲಿ. ನಾನಾಗ ಲಂಕೇಶ್ ಪತ್ರಿಕೆಯ ಕಲಾವಿದನಾಗಿ ಕೆಲಸ ಮಾಡುತ್ತಿದ್ದೆ. ಹಿರಿಯ ಕಲಾವಿದರಾದ ವಾಸುದೇವ್, ಆರ್.ಎಂ. ಹಡಪದ್, ಶಿಣೈ, ಪ.ಸ.ಕುಮಾರ್, ಚಿ.ಸು.ಕೃಷ್ಣಶೆಟ್ಟಿ, ಜೆ.ಎಂ.ಎಸ್.ಮಣಿ, ಜಿ.ವೈ. ಹುಬ್ಳೀಕರ್, ಚಂದ್ರನಾಥ್, ಅ.ಲ.ನರಸಿಂಹನ್, ಮರಿಶಾಮಾಚಾರ್, ಎಂ.ಬಿ ಪಾಟೀಲ್, ಗುಜ್ಜಾರ್, ಎಂ.ಎಸ್.ಮೂರ್ತಿ ಮುಂತಾದವರೆಲ್ಲ ಸೇರಿ "ಕಲಾಮೇಳ-೪" ನ್ನು ಬೆಂಗಳೂರಿನ ವೆಂಕಟಪ್ಪ ಆರ್ಟ್ ಗ್ಯಾಲರಿ ಆವರಣದಲ್ಲಿ ಆಯೋಜಿಸಿದ್ದರು.
ಆ ’ಕಲಾಮೇಳ’ದ ಉದ್ಘಾಟನೆಗೆ ಹುಸೇನ್‌ರನ್ನು ಆಹ್ವಾನಿಸಲಾಗಿತ್ತು. ಕಲಾಮೇಳದಲ್ಲಿ ನಾನು ಭಾಗವಹಿಸುವುದಕ್ಕಿಂತ ಹೆಚ್ಚಾಗಿ ಹುಸೇನ್‌ರನ್ನು ನೋಡುವ ಹಂಬಲದಿಂದಾಗಿ, ಅವರು ಹೇಗೆ ಚಿತ್ರ ಬರೆಯುತ್ತಾರೆ, ಹೇಗೆ ಪೇಯಿಂಟ್ ಮಾಡುತ್ತಾರೆ, ಹೇಗೆ ಕಲಾಕೃತಿಗಳನ್ನು ರಚಿಸುತ್ತಾರೆ ಎಂದು ಖುದ್ದಾಗಿ ನೋಡುವ ಅಪಾರ ಕುತೂಹಲದಿಂದ ದೂರದ ಸವಣೂರಿನಿಂದ ಬಂದಿದ್ದೆ.
ಕಲೆಯೆಂದರೆ ಅದು ನಾಲ್ಕು ಗೋಡೆಯ ಮಧ್ಯೆ ಹುಟ್ಟುವಂಥದು ಎಂಬ ಮನೋಭಾವವಿದ್ದ ಸಂದರ್ಭದಲ್ಲಿ ಭಾರತದಾದ್ಯಂತ ಬರಿಗಾಲಲ್ಲಿ ಸಂಚರಿಸಿ ಅಲ್ಲಲ್ಲಿ ಕಲಾಕೃತಿಗಳನ್ನು ನಿರ್ಮಿಸಿ -ಪ್ರದರ್ಶಿಸಿದ ಹುಸೇನ್ ಬರಿಗಾಲ ಕಲಾವಿದರಾಗಿ ಕಲಾಲೋಕದಿಂದ ಭಿನ್ನರಾಗಿ ನಿಂತವರು. ಅವರ ’ಕುದುರೆ’ಸಿರೀಸ್ ಜಗತ್ತಿನಾದ್ಯಂತ ಪ್ರದರ್ಶಿಸಲ್ಪಟ್ಟಿತ್ತು. ಅತ್ಯಂತ ಕಡಿಮೆ ಬಣ್ಣ ಬಳಸಿ ನಿರ್ಮಿಸಿದ ಮದರ್ ಥೆರೆಸಾ ಕಲಾಕೃತಿ ಸಹೃದಯಿಗಳನ್ನು ಸೆಳೆದಿತ್ತು. ಇರಲಿ, ಇದೆಲ್ಲ ಎಲ್ಲರಿಗೂ ಗೊತ್ತಿರುವಂಥದ್ದೇ.
ಅಂಥ ಬರಿಗಾಲ ಕಲಾವಿದ ಹುಸೇನ್ ಆ ಕಲಾಮೇಳ ಉದ್ಘಾಟನೆಯನ್ನು ಪೇಂಟಿಂಗ್ ಮಾಡುವ ಮೂಲಕ ಉದ್ಘಾಟಿಸುತ್ತಾರೆ ಎಂದು ಪ್ರಚಾರವಾಗಿತ್ತು. ಉದ್ಘಾಟನಾ ಸ್ಥಳಕ್ಕೆ ಇನ್ನೇನು ಹುಸೇನ್ ಬಂದರು. ಬಂದರು ಅನ್ನುವಾಗಲೇ ಎಲ್ಲ ಕಲಾವಿದರೂ ಮೊದಲೇ ಈಸಲ್ ಮೇಲೆ ಮೊದಲೇ ಹೆದೆಏರಿಸಿ ನಿಲ್ಲಿಸಲಾಗಿದ್ದ ಕ್ಯಾನವಾಸಿನ ಸುತ್ತ ನೆರೆದರು. ಹುಸೇನ್‌ರನ್ನು ಆ ಬರಿಗಾಲ ಕಲಾವಿದ ಫಕೀರನನ್ನು ನೋಡಲು ತುದಿಗಾಲಮೇಲೆ ನಿಂತಿದ್ದ ನಾನೂ ಓಡಿ ಎಲ್ಲರ ನಡುವೆ ತೂರಿಕೊಂಡು ಎಲ್ಲರಿಗೂ ಮುಂದೆ ಕ್ಯಾನವಾಸು ಸಂಪೂರ್ಣ ಕಾಣುವಂತೆ ನಿಂತುಕೊಂಡೆ. ಬೆಳಿಗ್ಗೆ ೧೧ಗಂಟೆಗೆ ಉದ್ಘಾಟನಾ ಸಮಯ ಎಂದಿದ್ದರೂ ೧೦-೩೦ಕ್ಕೇ ಈ ’ಬಂದರು-ಬಂದರು’ ಎನ್ನುವ ಪ್ರಹಸನ ಶುರುವಾಗಿತ್ತು. ಅದಕ್ಕೆ ನಾವೆಲ್ಲ ಅಂದರೆ ಕೆಲ ಯುವ ಕಲಾವಿದರು ಬಲಿಯಾಗಿದ್ದೆವು. ಅಂತೂ ಹುಸೇನ್ ಬಂದರು ಎಂದಾಗ ಜಾಗ ಬಿಟ್ಟು ಕದಲದೆ ನಿಂತಲ್ಲಿಂದಲೇ ಗೋಣೆತ್ತರಿಸಿ ನೋಡಿದೆವು! ಹುಸೇನ್ ಪಟಪಟನೆ ವೇದಿಕೆಯತ್ತ ಬರತೊಡಗಿದರು. ಆ ಎತ್ತರದ ನಿಲುವಿನ ಆಸಾಮಿ ನೀಲಿಜೀನ್ಸ್ ತೊಟ್ಟು ಮೇಲೊಂದು ಪುಟ್ಟ ಅದೇಬಣ್ಣದ ಜಾಕೀಟು ಹಾಕಿಕೊಂಡು ದುಬಾರಿ ಶೂಸ್ ಏರಿಸಿಕೊಂಡು ಕಾಲೇಜು ಹುಡುಗನಂತೆ ಬಂದರು!! ಬಂದು ಕ್ಯಾನವಾಸ್ ಹತ್ತಿರ ನಿಂತೇಬಿಟ್ಟರು. ಸ್ವಲ್ಪ ಅವಸರದಲ್ಲಿದ್ದಂತೆ ಕಂಡುಬಂದರು ಹುಸೇನ್, ಸಂಘಟಕರು ಕಲಾಮೇಳದ ಕುರಿತು ಎರಡು ಮಾತನಾಡಿ ಚಿತ್ರ ಬರೆಯುವುದರೊಂದಿಗೆ ಉದ್ಘಾಟಿಸಲು ಕೋರಿ ಕುಂಚವೊಂದನ್ನು ಹಿಡಿದು ಹುಸೇನ್ ಕೈಗೆ ಕೊಟ್ಟರು.
ಕುಂಚ ತೆಗೆದುಕೊಂಡ ಹುಸೇನ್ ಸಾಹೇಬರು ಕ್ಯಾನವಾಸ್‌ನ್ನು ದೀರ್ಘವಾಗಿ ನೋಡಿ, ನೆರೆದ ಕಲಾವಿದರನ್ನೊಮ್ಮೆ ಸುಮ್ಮನೆ ದಿಟ್ಟಿಸಿ ಕೈಲಿದ್ದ ಕುಂಚ ನೋಡಿಕೊಂಡರು. ಅರೆಕ್ಷಣದಲ್ಲಿ ಸಂಘಟಕರು ಕೊಟ್ಟ ಕುಂಚವನ್ನು ಬದಿಗಿರಿಸಿ ಬೇರೆ ಕುಂಚಕ್ಕೆ ತಡಕಾಡಿದರು. ಯಾವುದೇ ಕಲಾವಿದನಿಗೆ ಅವನದೇ ಆದ-ನಿಶ್ಚಿತ ಸೈಜಿನ, ನಿಶ್ಚಿತ ಆಕಾರದ ಕುಂಚವೊಂದಿರುತ್ತದೆ. ಅಂಥ ಕುಂಚ ಸಿಕ್ಕಾಗಲೇ ಸಮಾಧಾನ! ಯಾವುದೇ ಬರಹಗಾರನಿಗೂ ಅಷ್ಟೆ ಅವನದೇ ಆದ ನಿಶ್ಚಿತ ಲೇಖನಿಯೊಂದಿರುತ್ತದೆ, ಅದಿದ್ದಾಗ ಅವನ ಬರೆಯುವ ಮೂಡೇ ಬೇರೆ. ಇದೀಗ ಯೂಸ್ ಅಂಡ್ ಥ್ರೋ ಪೆನ್ನುಗಳು ಬಂದು ಆ ನಿಷ್ಟೆಗೆ ಭಂಗ ಬಂದಿದೆಯೆನಿಸುತ್ತಿದೆ. ಇರಲಿ, ಈ ಕಲಾವಿದ ಹುಸೇನ ಸಾಹೇಬರ ಕುಂಚದ ತಡಕಾಟ ನೋಡಿ ಹೌಹಾರಿದ ಸಂಘಟಕರು ಬೇರೊಂದು ಬ್ರಶ್ ಸೆಟ್ ತಂದು -ಇಡೀ ಸೆಟ್ ಅವರ ಮುಂದೆ ಹಿಡಿದರು.
ಇಲ್ಲಿ ಒಂದು ವಿಷಯ ಹೇಳಬೇಕು, ಕಲಾವಿದರಿಗಾಗಿಯೇ ಕುಂಚ ತಯಾರಿಸುವ ಕಂಪೆನಿಗಳಿವೆ. ಅದರಲ್ಲಿ ’ಹುಸೇನ್ರಿಗಾಗಿಯೇ ಕುಂಚ ತಯಾರಿಸುವ ಕಂಪನಿಯೊಂದಿದೆ, ಆ ಬ್ರಶ್‌ನ್ನು ಮಾತ್ರ ಹುಸೇನ್ ಬಳಸುತ್ತಾರೆ, ತನ್ನ ಆಳೆತ್ತರದ ಕುಂಚ ಬಳಸುವುದರಲ್ಲೂ ಹುಸೇನ್ ನಿಸ್ಸೀಮರು! ಎಂದು ಎಲ್ಲೋ ಓದಿದ/ಕೇಳಿದ ನೆನಪು!
ದೊಡ್ಡ ಕಲಾವಿದರೊಬ್ಬರು ದೆಹಲಿಯ ಪ್ರತಿಷ್ಟಿತ ಅಂಗಡಿಯೊಂದರಲ್ಲಿ ಪ್ರದರ್ಶನಕ್ಕೆ ಇಟ್ಟ ಕುಂಚವೊಂದನ್ನು ನೋಡಿ ಅದರ ರೇಟೆಷ್ಟು ಅಂತ ಕೇಳಿದರೆ, ಏ ಆಪಕಾ ನಹೀಂ ಹೈ, ಹುಸೇನ್ ಕಾ ಬ್ರಶ್ ಹೈ ಎಂದರಂತೆ! ಅಷ್ಟೇ ಅಲ್ಲ ಮುಟ್ಟಲೂ ಕೊಡಲಿಲ್ಲಂತೆ!! ಇವೆಲ್ಲ ಕತೆಯೋ-ದಂತಕತೆಗಳೋ ಗೊತ್ತಿಲ್ಲ. ಒಟ್ಟಾರೆ ಈ ಅಸಾಧಾರಣರ ಸುತ್ತ ಇಂಥ ಇಮೇಜು ಅದು ಹೇಗೋ ಬೆಳೆದುಬಿಟ್ಟಿರುತ್ತದೆ. ನಾವೆಲ್ಲ ಇಷ್ಟಗಲ ಕಣ್ಣರಳಿಸಿ ನೋಡಿದ್ದೇಬಂತು. ಆ ಬ್ರಷ್‌ಗಳಲ್ಲಿ ಒಂದನ್ನು ಅಂತೂ ಇಂತೂ ಆಯ್ದುಕೊಂಡು ಕ್ಯಾನವಾಸನ್ನು ಇನ್ನೊಮ್ಮೆ ನಿರುಕಿಸಿ ಬಣ್ಣದ ಪ್ಯಾಲಟ್‌ನತ್ತ ಹೊರಳಿದರು. ಅದರಲ್ಲಿ ಅದಾಗಲೇ ಬಣ್ಣಗಳನ್ನು ಟ್ಯೂಬಿನಿಂದ ಹಾಕಿ ಇಡಲಾಗಿತ್ತು. ಅದೂ ಹುಸೇನರಿಗೆ ಸಾಕಾಗಲಿಲ್ಲ. ಯಾಕೆಂದರೆ ಒಂದು ಕೆ.ಜಿ, ಐದು ಕೆ.ಜಿ. ಬಣ್ಣದ ಟಿನ್ ಅಥವಾ ಬಾಕ್ಸನ್ನು ಬಳಸುವಂಥವರವರು. ಅದೂ ಅಲ್ಲದೇ ಇರುವ ಬಣ್ಣಗಳನ್ನು ಬಳಸದೆ ಬಣ್ಣದ ಆಯ್ಕೆಯಲ್ಲಿ ಸಂಪೂರ್ಣ ಸ್ವಾತಂತ್ರ್ಯ ಬಯಸುವಂಥವರು. ಹೀಗಾಗಿ ಇಲ್ಲಿರುವ ಟ್ಯೂಬಿನ ಸೆಟ್‌ನ್ನು ಬಿಟ್ಟು ಬಾಕ್ಸ್‌ಗಾಗಿ ಹುಡುಕಾಡತೊಡಗಿದರು. ಅಲ್ಲಿದ್ದ ಹಿರಿಯ ಕಲಾವಿದ ಶೆಣೈ ಆರು ಬಣ್ಣವಿದ್ದ ಬಾಕ್ಸ್ ನ್ನು ತಂದು ಮುಂದಿಟ್ಟು ಬಿರಟೆಯನ್ನು ಬಿಚ್ಚತೊಡಗಿದರು. ಅಲ್ಲಿದ್ದವರಲ್ಲಿ ಹುಸೇನ್‌ರ ಸಖ್ಯ ಹೆಚ್ಚಾಗಿದ್ದುದು ಶೆಣೈರೊಂದಿಗೆ. ತನಗೆ ಬೇಕಾದ ಸಾಂದ್ರತೆಯುಳ್ಳ ಬಣ್ಣ ಕಂಡಾಗ ಹುಸೇನ್ ಮುಖಕಮಲವರಳಿತು. ಶೆಣೈ ಕಡೆಗೊಮ್ಮೆ ಸ್ನೇಹದ ನಗೆಬೀರಿ ಕುಂಚವನ್ನೆತ್ತಿ ನನಗೆ ಅತ್ಯಂತ ಪ್ರಿಯವಾದ ಕೆಂಪುವರ್ಣದಲ್ಲದ್ದಿದರು..
ಇಲ್ಲಿ ಒಂದು ಮಾತನ್ನು ನಾನು ಹೇಳಬೇಕು; ನಾನು ಆವರೆಗೆ ಇನ್ನೊಬ್ಬ ಕಲಾವಿದ ಪೇಂಟ್ ಮಾಡಿದ್ದನ್ನು ನೋಡಿರಲೇ ಇಲ್ಲ. ಮನಸ್ಸಿನಲ್ಲಿ ಅದಮ್ಯ ಕುತೂಹಲ. ಬರಿಗಾಲ ಕಲಾವಿದ ಹೊಳೆಹೊಳೆವ ರೀಬಾಕ್ ಶೂ ಹಾಕಿಕೊಂಡು, ಗರಿಗರಿ ನೀಲಿ ಜೀನ್ಸ್ ಧರಿಸಿಕೊಂಡಿದ್ದ ಕಲಾವಿದ ಹುಸೇನ್ ಕುಂಚವನ್ನೆತ್ತಿದರು..ಅರರೆ ಬಣ್ಣ ಇನ್ನೂ ಕುಂಚದಲ್ಲಿ ಸೋರುತ್ತಿದೆ ಅನ್ನುವಾಗಲೇ ಬ್ರಷ್‌ನ್ನು ಕ್ಯಾನವಾಸಿಗೆ ತಗುಲಿಸಿಯೇಬಿಟ್ಟರು! ನೋಡನೋಡುತ್ತಿದ್ದಂತೆ ಆ ಸೋರುವ ಕೆಂಪುವರ್ಣದಲ್ಲಿಯೇ ಎಂ.ಎಫ್.ಹುಸೇನ್ ಎಂದು ಇಂಗ್ಲೀಷಿನಲ್ಲಿ ಬರೆದುಬಿಟ್ಟರು.. ನನಗೋ ಗಲಿಬಿಲಿ-ಕಳವಳ ಒಟೊಟ್ಟಿಗೇ ಉಂಟಾದವು. ಬೇರೆ ಕಲಾವಿದರು ಚಿತ್ರ ಅಥವಾ ಪೇಂಟಿಂಗ್ ಮಾಡುವ ಪರಿ ನಿರೀಕ್ಷಿಸುವ ಸಂಭ್ರಮದೊಂದಿಗೆ ಇನ್ನಷ್ಟು ಮುಂದೆಸರಿದು ನಿಂತಿದ್ದೆ.
ಬರೀ ಎಂ.ಎಫ್. ಹುಸೇನ್ ಎಂದು ಸೈನ್ ಮಾಡಿಕೊಟ್ಟರೂ ಸಾಕು ಸೇಲಾಗುತ್ತದೆ ಎಂದು ಕೇಳಿದ್ದೆ. ಅದನ್ನು ಇಲ್ಲೇ ಪ್ರಯೋಗ ಮಾಡಬೇಕಾ? ಒಂದು ಯಾವುದಾದರೂ ಹಕ್ಕಿಯ ಚಿತ್ರ ಬರೆದರೂ ಸಾಕಿತ್ತು ಎಂದುಕೊಳ್ಳುವಾಗಲೇ ಹುಸೇನ್ ಅದೇ ಬ್ರಷ್‌ನ್ನು ಕೆಂಪುವರ್ಣವನ್ನು ಕೊಂಚವೂ ಒರೆಸದೆ ಕಪ್ಪುಬಣ್ಣದಲ್ಲದ್ದಿ ಎತ್ತಿಕೊಂಡರು. ಸ್ವಲ್ಪವೂ ಆಚೀಚೆ ಕಡೆಗೆ ನೋಡದೆ ಸೋರುವ ಬಣ್ಣದೊಂದಿಗೆ ಬ್ರಷ್‌ನ್ನು ಕ್ಯಾನವಾಸಿಗೂರಿದರು! ಅದಾಗಲೇ ಕೆಂಪುವರ್ಣ ಕ್ಯಾನವಾಸಿನಲ್ಲಿ ಅಕ್ಷರದೊಂದಿಗೆ ಅಲ್ಲಲ್ಲಿ ಜೋರುಬಿಟ್ಟಿತ್ತು. ಆ ಮೊದಲು ಬರೆದಿದ್ದ ಎಂ.ಎಫ್. ಹುಸೇನ್ ಕೆಳಗೇ ಮತ್ತೆ ಎಂ.ಎಫ್. ಹುಸೇನ್ ಎಂದು ನಿಧಾನವಾಗಿ ಕಪ್ಪು ವರ್ಣದಲ್ಲಿ ಬಣ್ಣ ಸೋರಿಸುತ್ತ ಬರೆದರು!! ಇದೇನಿದು ಹುಸೇನರ ಹುಡುಗಾಟಿಕೆ ಎಂದುಕೊಂಡೆ. ಎರಡು ಹೆಜ್ಜೆ ಹಿಂದಕ್ಕೆ ಬಂದು ಕ್ಯಾನವಾಸನ್ನು ನೋಡಿದ ಹುಸೇನ್ ತುಂಬು ಆತ್ಮವಿಶ್ವಾಸದಿಂದ ಹಸಿರುವರ್ಣವನ್ನೆತ್ತಿಕೊಂಡರು. ಕೆಂಪು ವರ್ಣದಲ್ಲೊಂದು, ಕಪ್ಪು ವರ್ಣದಲ್ಲೊಂದು ಎರಡನ್ನೂ ಸಮಾನ ಅಂತರದಲ್ಲಿ ಸಮಾನ ಗಾತ್ರದಲ್ಲಿ ಸಹಿ ಮಾಡಿದ್ದ ಹುಸೇನ್ ಈಗೇನು ಮಾಡುತ್ತಾರೆ ಎಂದು ನೋಡಿದರೆ, ಅಷ್ಟೇ ಸಮಾನ ಅಂತರ-ಗಾತ್ರದಲ್ಲಿ ಆ ಕಪ್ಪು ಸಹಿಯ ಕೆಳಗೆ ಹಸಿರು ವರ್ಣದಲ್ಲಿ ಎಂ.ಎಫ್. ಹುಸೇನ್ ಎಂದು ಬರೆದು ಕುಂಚವನ್ನು ಕೆಳಗಿಟ್ಟರು. ಸಭಿಕರತ್ತ ಸಂಘಟಕರತ್ತ ಒಮ್ಮೆ ನೋಡಿ ಕೈಬೀಸಿ ಅಲ್ಲಿಂದ ಹೊರಟರು.
ನನಗದೇನೋ ಆಗ ಖಾಲಿ ಖಾಲಿ ಅನುಭವ. ಕ್ಯಾನಸಿನ ಕಡೆಗೆ ನೋಡಿದೆ. ಇಷ್ಟು ದೊಡ್ಡ ಕಲಾವಿದ ನಮಗೇನು ಹೇಳಿದ ಎಂದು ಮತ್ತೆ ಮತ್ತೆ ನೋಡಿದೆ
ಎಂ.ಎಫ್. ಹುಸೇನ್
ಎಂ.ಎಫ್. ಹುಸೇನ್
ಎಂ.ಎಫ್. ಹುಸೇನ್
ಕೆಂಪು-ಕಪ್ಪು-ಹಸಿರು ವರ್ಣ.. ಎಲ್ಲ ಸೋರಿದಂತೆ ಇದೆಲ್ಲ ಬರೀ ಹತ್ತು ನಿಮಿಷದ ಉದ್ಘಾಟನೆ!!! ಬರೀ ಸಹಿ ಮಾಡಿ ಹೋಗಿಬಿಟ್ಟರಾಯಿತೇ? ಈ ಉದ್ಘಾಟಕರು ಯಾಕಾದರೂ ಇಷ್ಟು ಕಡಿಮೆ ಸಮಯವನ್ನಿಟ್ಟುಕೊಂಡು ಬರುತ್ತಾರೋ ಎಂದು ಗೊಣಗುತ್ತ ಆ ಕಡೆಗೆ ನೋಡಿದರೆ ಹುಡುಗಿಯರು ಹುಸೇನ್ ಹೆಗಲಮೇಲೆ ನಿಲುಕದಿದ್ದರೂ ಕೈಯಿಟ್ಟು ಫೋಟೋ ತೆಗೆಸಿಕೊಳ್ಳುತ್ತಿದ್ದಾರೆ!
ಆಹಾ! ಇಂಥ ಶೋಕಿಗೇನೂ ಕಮ್ಮಿಯಿಲ್ಲ. ಅದೇ ಸಮಯದಲ್ಲಿ ನೀಟಾದ ಒಂದು ಕಲಾಕೃತಿ ನಿರ್ಮಿಸಿದ್ದರೆ! ಎಂದು ಮತ್ತೆ ಕ್ಯಾನವಾಸಿನತ್ತ ತಿರುಗುವುದಕ್ಕೂ, ಮತಾಂಧರು ಬಾಬರಿ ಮಸೀದಿಯನ್ನು ಅದೇ ಕೆಲ ತಿಂಗಳ ಹಿಂದೆ ಧ್ವಂಸಗೊಳಿಸಿದ್ದುದು ನೆನಪಾಗುವುದಕ್ಕೂ ಸರಿಯಾಯ್ತು.
ಕ್ಯಾನವಾಸು ಕಲಾಕೃತಿಯಾಗಿ ಜೀವತಳೆಯತೋಡಗಿತ್ತು..!

ಪುಂಡಲೀಕ ಕಲ್ಲಿಗನೂರ

ಶರಣ ಮಾರ್ಗ (ರೂಪಕ)


ಮಹಾಂತಪ್ಪ: ನಮ್ಮ ಈ ಹಳ್ಳಿಗೆ ನಮ್ಮನ್ನು ಸಂತೈಸಲು ಬಂದ ಮತೆ ಮೈತ್ರಾದೇವಿ ಅವರಿಗೆ ಶರಣು ಶರಣಾರ್ಥಿ. ಕಲ್ಲಹಳ್ಳಿಯ ಮಹಾಜನರೇ ತಮಗೆಲ್ಲ ಶರಣು ಶರಣಾರ್ಥಿ. ನಮ್ಮ ಹಳ್ಳಿಗೆ ಇಂದು ಸಂತಪುರದ ಬಸವಾಶ್ರಯದ ಮತೆ ಮೈತ್ರಾದೇವಿಯವರು ದಯಮಡಿಸ್ದಿದು ನಮ್ಮ ಸುದೈವ. ನಾಡಿನ ಜನರೆಲ್ಲ ಕಲ್ಲಹಳ್ಳಿಯ ದುರಂತಗಳ ಬಗ್ಗೆ ಮತನಾಡುತ್ತಿದ್ದಾರೆ. ದುಃಖ, ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಈ ನಮ್ಮ ಹಳ್ಳಿಯಲ್ಲಿ ೧೭ ಮಂದಿ ರೈತರು ಆತ್ಮಹತ್ಯೆ ಮಡಿಕೊಂಡಿದ್ದಾರೆ. ೮ ವರದಕ್ಷಿಣೆ ಸಾವುಗಳಾಗಿವೆ. ಮಕ್ಕಳಿದ್ದೂದೂ ಮೂವರು ವೃದ್ಧರು ನಿರ್ಗತಿಕರಾಗಿ ಸತ್ತಿದ್ದಾರೆ. ಅನೇಕ ಅನಾಥ ಮಕ್ಕಳು ಮತ್ತು ಹೆಣ್ಣುಮಕ್ಕಳು ಕಣ್ಣೀರು ಹರಿಸುತ್ತ ಬದುಕು ಸಾಗಿಸುತ್ತಿದ್ದಾರೆ. ನಮ್ಮ ನೆಮ್ಮದಿಯ ಬದುಕು ಇತ್ತೀಚಿನ ವರ್ಷಗಳಲ್ಲಿ ಹದಗೆಡುತ್ತ ಹೋಗುತ್ತಿದೆ. ಇದಕ್ಕೆಲ್ಲ ಪರಿಹಾರ ಹುಡುಕಲೇ ಬೇಕಾಗಿದೆ. ಮತೆ ಮೈತ್ರಾದೇವಿಯವರು ನಮ್ಮ ಹಳ್ಳಿಗೆ ಬರಿ ಪ್ರವಚನಕ್ಕಾಗಿ ಬಂದಿಲ್ಲ. ನಮ್ಮ ಕಷ್ಟ ಸುಖಗಳನ್ನು ಹಂಚಿಕೊಳ್ಳಲು ಬಂದಿದ್ದಾರೆ.ಇಂದು ಅವರ ಪ್ರವಚನ ನಮ್ಮ ಜೊತೆಗಿನ ಮತುಕತೆಯೊಂದಿಗೇ ಮುಂದುವರಿಯುತ್ತದೆ. ಬಸವಣ್ಣನವರ ಕಾಯಕ ತತ್ವದ ಮಹತ್ವವನ್ನು ತಿಳಿಸುವುದರ ಮೂಲಕ ಅವರು ನಮ್ಮ ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ.
ಮೈತ್ರಾದೇವಿ: ಕಲ್ಯಾಣವೆಂಬ ಪ್ರಣತೆಯಲ್ಲಿ ಭಕ್ತಿರಸವೆಂಬ ತೈಲವನೆರೆದು,
ಆಚಾರವೆಂಬ ಬತ್ತಿಗೆ ಬಸವಣ್ಣನೆಂಬ ಜ್ಯೋತಿಯ ಮುಟ್ಟಿಸಲು,
ತೊಳಗಿ ಬೆಳಗುತ್ತ್ದಿದಿತಯ ಶಿವನ ಪ್ರಕಾಶ!
ಬೆಳಗಿನೊಳಗೆ ಒಪ್ಪುತ್ತಿದ್ದರಯ ಅಸಂಖ್ಯಾತ ಭಕ್ತಗಣಂಗಳು.
ಶಿವಭಕ್ತರಿದ್ದ ಕ್ಷೇತ್ರವೇ ಅವಿಮುಕ್ತಕ್ಷೇತ್ರವೆಂಬುದು ಹುಸಿಯೆ?
ಶಿವಭಕ್ತರಿದ್ದ ದೇಶ ಪಾವನೆವೆಂಬುದು ಹುಸಿಯೆ?
ಗುಹೇಶ್ವರಲಿಂಗದಲ್ಲಿ ಎನ್ನ ಪರಮರಾಧ್ಯ ಸಂಗನಬಸವಣ್ಣನ
ಕಂಡು ಬದುಕಿದೆನು ಕಾಣಾ ಸಿದ್ಧರಾಮಯ.
ಸಕಲ ಶರಣ, ಸಂತರನ್ನು, ವಿಶ್ವದ ದಾರ್ಶನಿಕರನ್ನು ಮನದಲ್ಲಿ ನೆನದು ಶರಣು ಶರಣಾರ್ಥಿ. ಕಲ್ಲಹಳ್ಳಿಯ ತಂದೆತಾಯಿಗಳಿಗೆ, ಅಣ್ಣತಮ್ಮಂದಿರಿಗೆ ಶರಣು ಶರಣಾರ್ಥಿ. ಈ ಹಳ್ಳಿಯ ದುಃಖ ಸಮಸ್ತ ಮನವ ಕುಲದ ದುಃಖ ಎಂದು ಭಾವಿಸಿ ಇಲ್ಲಿಗೆ ಬಂದಿದ್ದೇನೆ. ಜೀವನದಲ್ಲಿ ಜುಗುಪ್ಸೆ ಹೊಂದಿದವರನ್ನು ಬಸವಾಶ್ರಯಕ್ಕೆ ಕರೆದೊಯ್ಯಲು ಬಂದಿದ್ದೇನೆ. ಹೆಣ್ಣಿರಲಿ, ಗಂಡಿರಲಿ, ಅನಾಥ ಮಕ್ಕಳಿರಲಿ ಯರು ಜೀವನದಲ್ಲಿ ನಂಬಿಕೆ ಕಳೆದುಕೊಂಡಿರುವಿರೊ ಅವರಿಗೆಲ್ಲ ಬಸವಾಶ್ರಯದಲ್ಲಿ ಸ್ಥಾನವಿದೆ. ಬಸವಾಶ್ರಯವು ಬಸವಳಿದವರಿಗಾಗಿ ಇದೆ. ಶಿವಸ್ವರೂಪಿಗಳೇ, ಶರಣರು ಬದುಕನ್ನು ಶಿವನ ಕೃಪೆಯೆಂದು ಸ್ವೀಕರಿಸಿದ್ದಾರೆ. ಕಾಯಕದ ಮೂಲಕ ಈ ಜಗತ್ತನ್ನು ಹೆಚ್ಚು ಹೆಚ್ಚು ಸುಂದರಗೊಳಿಸುವ ರಹಸ್ಯವನ್ನು ತಿಳಿಸಿದ್ದಾರೆ. ಈ ಭೂಲೋಕವೆಂಬುದು ಶಿವನ ಆನಂದಭವನ ಎಂದು ಸಾರಿದ್ದಾರೆ. ಕೈಲಾಸವೆಂಬುದು ಈ ಭೂಮಿಯ ಮೇಲಿನ ಒಣಭೂಮಿ ಎಂದು ತಿಳಿಸಿದ್ದಾರೆ. ಈ ಪೃಥ್ವಿ ಎಂಬುದು ದೇವರ ಸುಂದರ ಸೃಷ್ಟಿಯಗಿದೆ. ಇಲ್ಲಿ ನದಿಗಳು ಹರಿಯುತ್ತಿವೆ. ಸಮುದ್ರ ಉಕ್ಕೇರುತ್ತಿದೆ, ಸೂರ್ಯನ ಪ್ರಕಾಶವಿದೆ, ಚಂದ್ರನ ಬೆಳದಿಂಗಳಿದೆ, ಹಾಡುವ ಹಕ್ಕಿಗಳಿವೆ, ಫಲ ಕೊಡುವ ಮರಗಳಿವೆ, ಬೆಳೆ ಕೊಡುವ ಭೂಮಿ ಇದೆ. ಈ ಭೂಮಿಯ ಮೇಲೆ ಎಲ್ಲ ಇದೆ. ಆದರೆ ಸಕಲ ಜೀವಾತ್ಮರಿಗೆ ಲೇಸನೇ ಬಯಸುವ ಮನುಷ್ಯತ್ವದ ಕೊರತೆಯದಾಗ ಸಮುದ್ರವೂ ಮಲಿನವಾಗುತ್ತದೆ, ಗಾಳಿ ದುರ್ನಾತವನ್ನು ಹೊತ್ತು ತರುತ್ತದೆ. ನದಿಗಳು ಬರಡಾಗುತ್ತವೆ. ಕಾಡುಗಳು ಮಯವಾಗುತ್ತವೆ. ಮಳೆ ಇಲ್ಲವಾಗುತ್ತದೆ. ಇಲ್ಲವೆ ಎಲ್ಲವನ್ನೂ ಕೊಚ್ಚಿಕೊಂಡು ಹೋಗುವ ಹಾಗೆ ಬರುತ್ತದೆ. ಆಗ ಹಣಕ್ಕಾಗಿ ಮಕ್ಕಳನ್ನೂ ಮರುವ ಪರಿಸ್ಥಿತಿ ನಿಮಣವಾಗುತ್ತದೆ. ಮನುಷ್ಯ ಮನುಷ್ಯರ ಮಧ್ಯೆ ಕಂದಕ ನಿಮಣವಾಗಿ ಪ್ರತಿಯೊಬ್ಬರೂ ಒಂಟಿತನವನ್ನು ಅನುಭವಿಸಬೇಕಾಗುತ್ತದೆ. ಸಮಜವೆಂಬುದು ನಿಷ್ಕ್ರಿಯವಾದಾಗ ಜನರು ಅನಾಥಪ್ರಜ್ಞೆಯಿಂದ ಬಳಲುತ್ತಾರೆ. ನಮಗೆ ಯರೂ ಇಲ್ಲ, ನಮ್ಮಿಂದ ಏನನ್ನೂ ಮಡಲು ಸಾಧ್ಯವಿಲ್ಲ ಎಂಬ ನಿರ್ಧಾರಕ್ಕೆ ಬರುತ್ತಾರೆ. ಸಾವು ಮತ್ರ ಎಲ್ಲ ಸಮಸ್ಯೆಗಳನ್ನು ಬಗೆಹರಿಸುತ್ತದೆ ಎಂಬ ಹತಾಶ ಭಾವ ಮೂಡಿದಾಗ ಆತ್ಮಹತ್ಯೆ ಮಡಿಕೊಳ್ಳುತ್ತಾರೆ. ಪ್ರಸಾದ ಕಾಯವನ್ನು ಕೆಡಿಸಲಾಗದು ಎಂದು ಬಸವಣ್ಣನವರು ಹೇಳಿದ್ದಾರೆ. ದೇವರ ಕೃಪೆಯಿಂದ ನಾವು ಮನುಷ್ಯರಾಗಿ ಜನ್ಮತಾಳಿದ್ದೇವೆ. ಈ ಶರೀರ ಪರೋಪಕಾರಕ್ಕಾಗಿ ಇದೆ ಎಂಬುದನ್ನು ನಾವು ಮರೆಯಬಾರದು. ಕಾಯಕದಲ್ಲಿ ನಿರತರಾಗಬೇಕು. ಕಾಯಕದಿಂದ ಬಂದದ್ದನ್ನು ಶಿವನ ಸಂಪತ್ತೆಂದು ಸ್ವೀಕರಿಸಬೇಕು. ದಾಸೋಹಂ ಭಾವದ ಮೂಲಕ ಕಷ್ಟದಲ್ಲಿದ್ದವರಿಗೆ ಸಹಾಯ ಮಡಬೇಕು. ಎಲ್ಲ ಅಹಂಭಾವದಿಂದ ಹೊರಬಂದು ನೆರೆಯವರ ಬಗ್ಗೆ ಕಾಳಜಿ ವಹಿಸುವುದರ ಮೂಲಕ ಬದುಕಿನ ಮಹತ್ವವನ್ನು ಅರಿಯಬೇಕು. ಅಂದಾಗ ಮತ್ರ ಆತ್ಮಹತ್ಯೆಗಳನ್ನು ತಡೆಯಲು ಸಾಧ್ಯ. ಜಗತ್ತಿನ ಎಡೆ ಆತ್ಮಹತ್ಯೆಗಳು ಸಂಭವಿಸುತ್ತಿವೆ. ಏಕೆಂದರೆ ಎಡೆ ಸಮಜ ಶಿಥಿಲವಾಗುತ್ತಿದೆ. ಮನುಷ್ಯ ಮನುಷ್ಯರ ಮಧ್ಯೆ ಕಾಳಜಿ, ಅಂತಃಕರಣದ ಕೊರತೆಯಗುತ್ತಿದೆ. ನಾವು ಮತ್ತೆ ಸಾಮಜಿಕ ವ್ಯಕ್ತಿತ್ವವುಳ್ಳ ಮನುಷ್ಯರಾಗುವುದರ ಮೂಲಕ ಈ ಜಗತ್ತನ್ನು ರಕ್ಷಿಸಲು ಸಾಧ್ಯ. ಇಲ್ಲದಿದ್ದರೆ ನಾವು ವಿನಾಶದ ಅಂಚಿಗೆ ಹೋಗುವುದರಲ್ಲಿ ಸಂಶಯವಿಲ್ಲ. ಈ ಹಿನ್ನೆಲೆಯಲ್ಲಿ ನಾನು ನಿಮ್ಮ ಭಾವನೆಗಳನ್ನು ಅರಿಯಲು ಬಂದಿದ್ದೇನೆ. ನೀವು ನಿಮ್ಮ ವಿಚಾರಗಳನ್ನು ಮುಕ್ತವಾಗಿ ವ್ಯಕ್ತಪಡಿಸಿರಿ. ಎಲ್ಲ ಆತಂಕಗಳಿಂದ ಹೊರಬರುವ ಮರ್ಗವನ್ನು ಕಂಡುಕೊಳ್ಳೋಣ.
ಮೋನಪ್ಪ: ತಾಯಿ ತಮ್ಮ ಮತುಗಳು ನಮ್ಮ ಮನಸ್ಸಿಗೆ ತಂಪೆರೆದವು. ತಾವು ಸುಂದರವಾಗಿ ವಚನ ಹಾಡಿದಿರಿ. ಅದರ ಅರ್ಥವನ್ನು ವಿವರಿಸಿದರೆ ನಮಗೆಲ್ಲ ಹೆಚ್ಚಿನ ಆನಂದವಾಗುತ್ತದೆ.
ಮೈತ್ರಾದೇವಿ: ವ್ಯೋಮಮೂರುತಿ ಅಲ್ಲಮಪ್ರಭುಗಳ ವಚನವಿದು. ಯವುದೇ ಊರಿನ ಜನ ಲೋಕಕಲ್ಯಾಣದ ಪ್ರಜ್ಞೆ ಹೊಂದಿದಾಗ ಆ ಊರೇ ಕಲ್ಯಾಣವಾಗುತ್ತದೆ. ಅದನ್ನು ಪ್ರಣತೆಯನ್ನಾಗಿಸಿ ಸರ್ವಸಮತ್ವವೆಂಬ ಭಕ್ತಿಯ ತೈಲವನ್ನು ಆ ಪ್ರಣತೆಯಲ್ಲಿ ಹಾಕಬೇಕು. ಅಂದರೆ ಎಲ್ಲರೂ ಭೇದಭಾವವಿಲ್ಲದೆ ಒಂದಾಗಿ ಒಬ್ಬರ ಕಷ್ಟವನ್ನು ಇನ್ನೊಬ್ಬರು ಪರಿಹರಿಸುತ್ತ ಬದುಕಿದಾಗ ಭಕ್ತಿರಸವೆಂಬ ತೈಲ ನಿಮಣವಾಗುತ್ತದೆ. ಇದೇ ಸಮತಾಭಾವ. ಈ ಸಮತಾಭಾವದ ತೈಲದಲ್ಲಿ ಸದಾಚಾರವೆಂಬ ಬತ್ತಿಯನ್ನಿಟ್ಟು ಬಸವತತ್ತ್ವವೆಂಬ ಅರಿವಿನ ಜ್ಯೋತಿಯನ್ನು ಮುಟ್ಟಿಸಲು ಶಿವನ ಪ್ರಕಾಶ ಬೆಳಗುವುದು. ಮಂಗಳಕರವಾದುದಕ್ಕೆ ಶಿವ ಎನ್ನುತ್ತಾರೆ. ಈ ಮಂಗಳಕರವಾದುದು ಸತ್ಯ ಮತ್ತು ಸೌಂದರ್ಯದ ಜೊತೆ ಇರುತ್ತದೆ. ಹೀಗೆ ಬದುಕು ಸತ್ಯದಿಂದ, ಜೀವನಸೌಂದರ್ಯದಿಂದ ಮತ್ತು ಮಂಗಳಕರವಾದ ಮನೋಭಾವದಿಂದ ಕೂಡಿರಬೇಕು. ಆಗ ಮೇಲುಕೀಳಿಲ್ಲದ, ಹಿಂಸೆ ಇಲ್ಲದ ಮತ್ತು ಸುಲಿಗೆ ಇಲ್ಲದ ಸಮಜ ನಿಮಣವಾಗುತ್ತದೆ. ಇದು ಸುಸಂಸ್ಕೃತ ಸಮಜ. ಇಂಥ ಸಮಜದಲ್ಲಿ ಜನಸಮುದಾಯವೆಲ್ಲ ಮಹೋನ್ನತ ಮನವರಾಗಿರುತ್ತಾರೆ. ಅವರೇ ಭಕ್ತಗಣ. ಇಂಥ ಒಳ್ಳೆಯ ಜನರಿರುವ ಯವುದೇ ಹಳ್ಳಿಯೇ ಶಿವನ ಕ್ಷೇತ್ರವಾಗುತ್ತದೆ. ಇಂಥವರು ಇರುವ ದೇಶ ಪವಿತ್ರ ದೇಶವಾಗಿರುತ್ತದೆ. ಇಂಥ ಸುಂದರ ಬದುಕಿನ ರೂಪು ರೇಷೆಗಳನ್ನು ಸಿದ್ಧಪಡಿಸಿದ ಅಣ್ಣ ಬಸವಣ್ಣನವರು ದೇವರಲ್ಲಿ ಒಂದಾಗಿ ಬದುಕಿದರು. ಇಂಥ ಪರಮರಾಧ್ಯ ಬಸವಣ್ಣನವರನ್ನು ಗುಹೇಶ್ವರಲಿಂಗದಲ್ಲಿ ಕಂಡು ಜೀವನ ಸಾರ್ಥಕವಾಯಿತು ಎಂದು ಅಲ್ಲಮಪ್ರಭುಗಳು ಸಿದ್ಧರಾಮರಿಗೆ ತಿಳಿಸಿದ ವಚನವಿದು.
ಗೌರಜ್ಜಿ: ತಾಯಿ ಮೈತ್ರಾದೇವಿ. ಎಷ್ಟು ಸುಂದರವಾಗಿ ಈ ವಚನದ ಒಳಗುಟ್ಟನ್ನು ಬಿಡಿಸಿಟ್ಟರಿ. ನನ್ನ ಉರಿಯುವ ಮನಸ್ಸಿಗೆ ಒಂದಿಷ್ಟು ನೆಮ್ಮದಿ ಸಿಗುವ ಹಾಗೆ ಮಡಿದಿರಿ.
ಮೈತ್ರಾದೇವಿ: ಯವ ಸಮಸ್ಯೆಯಿಂದಾಗಿ ಬಳಲುತ್ತಿರುವಿ ತಾಯಿ? ಎಷ್ಟೊಂದು ವಯಸ್ಸಾಗಿದೆ ನಿನಗೆ. ಎಷ್ಟೇ ದೈಹಿಕ ಸಮಸ್ಯೆಗಳಿದ್ದರೂ ಮನಸಿಕ ನೆಮ್ಮದಿಯಿಂದ ಬದುಕಬೇಕಾದ ದಿನಗಳಿವು.
ಗೌರಜ್ಜಿ: ಏನು ಹೇಳಲಿ ತಾಯಿ. ನನ್ನ ಮಗಳು ಶಾಂತವ್ವ ಹೆಣ್ಣು ಹಡೆದು ಶಿವನ ಪಾದ ಸೇರಿದಳು. ಮಗಳ ಕಳೆದುಕೊಂಡು ವರ್ಷ ತುಂಬಿರಲಿಲ್ಲ. ಅಳಿಯ ಇನ್ನೊಂದು ಮದುವೆಯದ. ಮೊಮ್ಮಗಳು ಸತ್ಯವ್ವಳನ್ನು ಕಣ್ಣಾಗ ಕಣ್ಣಿಟ್ಟು ಜೋಪಾನ ಮಡುತ್ತ ಬೆಳೆಸಿದೆ. ಮೈನೆರೆದು ಎರಡು ವರ್ಷ ಆಗಿರಲಿಲ್ಲ, ಹೊಳೆಯಚೆಗಿನ ಮಂಗಳಗಟ್ಟಿಯ ಹಳಿಮನಿ ಕೆಂಚಪ್ಪನ ಮಗನಿಗೆ ಮದುವಿ ಮಡಿ ಕೊಟ್ಟೆ. ಏನೂ ಬ್ಯಾಡ ಮದವಿ ಮಡಿ ಕೊಡ್ರಿ ಸಾಕು ಎಂದವರು ಮದವಿಯಗಿ ಆರೇ ತಿಂಗಳಿಗೆ ವರದಕ್ಷಿಣೆಗಾಗಿ ಸತಾಯಿಸಲಾಕ ಸುರು ಮಡಿದ್ರು. ಮೊಮ್ಮಗಳು ಎ ನುಂಗಿಕೊಂಡು ಬದುಕಿದ್ಲು. ನಂತ್ರ ಎರಡು ವರ್ಷದ ಮಲ ಬ್ಯಾರೆಯವರಿಂದ ಗೊತ್ತಾಯ್ತು. ನಾ ಸತ್ತ ಮಲ ನನ್ನ ಮೂರು ಎಕ್ರೆ ಹೊಲಾ ನಿಮಗ ಸಿಗತದ ಅಂತ ಅವರ ಮನಿ ತಕಾ ಹೋಗಿ ಹೇಳಿದ್ರೂ ಕೇಳಲಿಲ್ಲ. ನೀ ಈಗ ಹೊಲಾ ಮರಿ ಹಣ ಕೊಡು. ನಮ್ಮನ್ಯಾಗ ಬಂದು ಅದು ಇದು ಕೆಲ್ಸಾ ಮಡ್ತಾ ಬಿದ್ದಿರು ಎಂದು ಹೀಯಳಿಸಿದ್ರು. ಮುಂದ ಮೂರೇ ದಿನದಾಗ ಮೊಮ್ಮಗಳು ಹೆಣಾ ಆಗಿ ಮನಿಗಿ ಬಂದ್ಳು. ಏನ್ ಕೇಳತೆವ್ವಾ ನನ್ನ ಕತಿ.
ಮೈತ್ರಾದೇವಿ: ‘ಸತಿಪತಿಗಳೊಂದಾದ ಭಕ್ತಿ ಹಿತವಪ್ಪುದು ಶಿವಂಗೆ’ ಎಂದು ದಾಸಿಮಯ್ಯನವರು ಹೇಳಿದ್ದಾರೆ. ಶರಣಧರ್ಮ ಕುಟುಂಬ ಧರ್ಮವಾಗಿದೆ. ನಮ್ಮ ಪುರುಷರು ಎಲ್ಲಿಯ ವರೆಗೆ ಹೆಣ್ಣುಮಕ್ಕಳನ್ನು ಸಮನರೆಂದು ಭಾವಿಸುವುದಿಲ್ಲವೊ, ಎಲ್ಲಿಯವರೆಗೆ ಸತ್ಯಶುದ್ಧ ಕಾಯಕದಿಂದ ಬಂದದ್ದರಿಂದ ಮತ್ರ ಬದುಕುತ್ತ ಬೇರೆಯವರ ಸೇವೆ ಮಡುವ ಮನಸ್ಸನ್ನು ಹೊಂದುವುದಿಲ್ಲವೊ, ಅಲ್ಲಿಯವರೆಗೆ ಈ ವರದಕ್ಷಿಣೆ ಪಿಡುಗು ನಮ್ಮ ಹೆಣ್ಣುಮಕ್ಕಳಿಗೆ ಹಿಂಸೆ ಕೊಡುತ್ತಲೇ ಇರುತ್ತದೆ. ಬಸವಧರ್ಮ ಅಂದರೆ ಶರಣಧರ್ಮ ಕಾಯಕಜೀವಿಗಳ ಧರ್ಮವಾಗಿದೆ. ಇದು ವಿಶ್ವಮನ್ಯವಾದ ಸ್ತ್ರೀವಾದಿ ಧರ್ಮವೂ ಆಗಿದೆ. ಜೀವಾತ್ಮರೆಲ್ಲರೂ ಸತಿ ಎಂದೂ ಪರಮತ್ಮ ಮತ್ರ ಪತಿ ಎಂದು ಬಸವಣ್ಣನವರು ತಿಳಿಸಿದ್ದಾರೆ. ಹೆಣ್ಣಿರಲಿ, ಗಂಡಿರಲಿ ಜೀವಾತ್ಮರೆಲ್ಲರೂ ಸತಿ ಎಂದು ಹೇಳಿದಾಗ ಅವರೆಲ್ಲ ಸಮನರಾದಂತಾಯಿತು. ಒಬ್ಬನೇ ದೇವರಲ್ಲಿ ನಂಬಿಕೆ ಇಟ್ಟು ಈ ಸಮಭಾವ ತಾಳಿ, ಕಾಯಕ ಮಡುತ್ತ, ಬಂದದ್ದನ್ನು ಪರಮತ್ಮನ ಪ್ರಸಾದವೆಂದು ಸ್ವೀಕರಿಸಿ ದಾಸೋಹ ಮಡುತ್ತ ಸ್ವಾವಲಂಬಿಯಗಿ ಬದುಕುವುದನ್ನು ಕಲಿತಾಗ ಮತ್ರ ನಿಜವಾದ ಮನವ ಸಮಜ ನಿಮಣವಾಗುವುದು. ಅಂಥ ಸಮಜದಲ್ಲಿ ಹೆಣ್ಣಿನ ಶೋಷಣೆ ಇರುವುದಿಲ್ಲ. ಯವುದೇ ಕಾಯಕಜೀವಿಗಳ ಶೋಷಣೆಯೂ ಇರುವುದಿಲ್ಲ. ತಾಯಿ ನಿನಗೆ ಬಸವಾಶ್ರಯದಲ್ಲಿ ಸದಾ ಆಶ್ರಯವಿದೆ. ಸಂತಪುರವೇನೂ ದೂರದ ಊರಲ್ಲ. ನಿನಗೆ ಇಲ್ಲಿ ಬೇಸರವಾದರೆ ನಮ್ಮ ಜೊತೆಯ ಇರಬಹುದು. ನಿನ್ನ ಹಳ್ಳಿಯನ್ನು ಬಿಟ್ಟು ಬರುವ ಮನಸ್ಸಿಲ್ಲದಿದ್ದರೆ ಬೇಕೆನಿಸಿದಾಗ ಬಂದು ನಮ್ಮ ಶರಣಸಂಕುಲದ ಜೊತೆ ಹಾಯಗಿ ಇದ್ದು ಹೋಗಬಹುದು. ನಾನು ನಿನ್ನ ಕುಲಗೋತ್ರಗಳನ್ನು ಕೇಳುವುದಿಲ್ಲ. ಜಾತಿ ಸಂಕರವಾದ ಬಳಿಕ ಕುಲವನರಸುವರೇ ಎಂದು ಬಸವಣ್ಣನವರು ತಿಳಿಸಿದ್ದಾರೆ. ಬಸವಾಶ್ರಯದಲ್ಲಿ ಜಾತಿಗೆ ಎಳ್ಳುಕಾಳಿನಷ್ಟೂ ಬೆಲೆ ಇಲ್ಲ. ಅಲ್ಲಿ ಮೇಲ್ಜಾತಿಯವರು ಎಂದು ತಿಳಿದುಕೊಂಡವರು ತಮ್ಮ ಅಹಂ ಅನ್ನು ಕಳೆದುಕೊಂಡು ಬಂದಿದ್ದಾರೆ. ಕೆಳಜಾತಿಯವರು ಎಂದು ತಿಳಿದುಕೊಂಡವರು ತಮ್ಮಲ್ಲಿದ್ದ ಕೀಳರಿಮೆಯನ್ನು ಕಳೆದುಕೊಂಡು ಬಂದಿದ್ದಾರೆ. ಅಲ್ಲಿ ಯರೂ ಹೆಚ್ಚಿನವರಿಲ್ಲ, ಯರೂ ಕಡಿಮೆಯವರಲ್ಲ. ಎಲ್ಲರೂ ಶರಣಸಂಕುಲದವರು. ನೂರಾರು ಎಕರೆ ಜಮೀನುಳ್ಳ ಬಸವಾಶ್ರಯದಲ್ಲಿ ಜನ ತಮಗೆ ಇಷ್ಟವುಳ್ಳ ಕೆಲಸ ಕಾರ್ಯಗಳಲ್ಲಿ ತೊಡಗಿ ಸುಂದರ ಸಮಜವನ್ನು ನಿರ್ಮಿಸಿದ್ದಾರೆ. ಕೆಲವರು ಬೆಳೆ ಬೆಳೆದು ರೈತರಾದರೆ, ಕೆಲವರು ಹಣ್ಣು ಕೊಡುವ ಮರಗಳನ್ನು ಬೆಳದು ತೋಟಗಾರರಾಗಿದ್ದಾರೆ. ಕೆಲವರು ಗೋವುಗಳನ್ನು ಸಾಕುತ್ತ ಗೋಪಾಲರಾಗಿದ್ದಾರೆ. ಮಡಕೆ ಮಡುತ್ತ ಕುಂಬಾರರಾಗಿದ್ದಾರೆ, ಕೃಷಿ ಉಪಕರಣಗಳನ್ನು ತಯರಿಸುತ್ತ ಕಮ್ಮಾರರಾಗಿದ್ದಾರೆ. ಬಟ್ಟೆ ನೇಯುತ್ತ ನೇಕಾರರಾಗಿದ್ದಾರೆ. ಮಕ್ಕಳಿಗೆ ಪಾಠ ಹೇಳುತ್ತ ಶಿಕ್ಷಕರಾಗಿದ್ದಾರೆ. ವಚನಗಳನ್ನು ಹಾಡುತ್ತ ಹಾಡುಗಾರರಾಗಿದ್ದಾರೆ. ಅಲ್ಲಿ ಕಸಗುಡಿಸುವ ಸತ್ಯಕ್ಕಗಳು ಇದ್ದಾರೆ. ಪ್ರಸಾದ ವ್ಯವಸ್ಥೆ ಮಡುವ ನೀಲಕ್ಕಗಳಿದ್ದಾರೆ. ಪ್ರತಿಯೊಬ್ಬರೂ ತಮಗಿಷ್ಟವಾದ ಕಾಯಕ ಮಡುತ್ತ, ದಾಸೋಹದಲ್ಲಿ ಪ್ರಸಾದ ಸ್ವೀಕರಿಸುತ್ತ ಸಮೂಹ ಬದುಕಿನಲ್ಲಿ ಆನಂದದಿಂದ ಇದ್ದಾರೆ. ಬಸವಾಶ್ರಯವು ಸ್ವಯಂ ಪರಿಪೂರ್ಣವಾದ ಸಮಜವನ್ನು ನಿರ್ಮಿಸಿದೆ. ಅಲ್ಲಿಯೂ ಮದುವೆಗಳು ನಡೆಯುತ್ತವೆ. ಆದರೆ ಅವು ವರದಕ್ಷಿಣೆ ಇಲ್ಲದ ಸಾಮೂಹಿಕ ಮದುವೆಗಳಾಗಿವೆ. ಬಸವಾಶ್ರಯದಲ್ಲಿ ಜಾತಿಗಳು ನಿರ್ನಾಮವಾದ ಕಾರಣ ಮದುವೆ ಆಗಬಯಸುವ ಹೆಣ್ಣು ಗಂಡು ಪರಸ್ಪರ ಇಷ್ಟಪಟ್ಟು ಸ್ವಯಂ ಪ್ರೇರಣೆಯಿಂದ ಮದುವೆಗಾಗಿ ಒಂದಾಗಿ ಮುಂದೆ ಬಂದರೆ ಮದುವೆ ಮಡಲಾಗುವುದು. ಅಥವಾ ಹಿರಿಯರು ಹೇಳಿದ ಹಾಗೆ ಮದುವೆಯಗಬೇಕೆನ್ನುವವರಿಗೆ ಅದೇ ರೀತಿ ವ್ಯವಸ್ಥೆ ಮಡಲಾಗುತ್ತದೆ. ಅದೇನೇ ಇದ್ದರೂ ಜಾತಿ, ವರದಕ್ಷಿಣೆ ಹಾಗೂ ದುಂದುವೆಚ್ಚಕ್ಕೆ ಅಲ್ಲಿ ಬೆಲೆ ಇಲ್ಲ.
ಶಿವಕುಮರ: ಅಮ್ಮನವರೆ, ಇದು ತಮ್ಮ ಬಸವಾಶ್ರಯದಲ್ಲಿನ ಆದರ್ಶ ಸಮಜದ ವ್ಯವಸ್ಥೆ. ಈ ಬಗ್ಗೆ ನಮಗೆ ಹೆಮ್ಮೆ ಎನಿಸುತ್ತದೆ. ಆದರೆ ಈ ಹದಗೆಟ್ಟ ಸಮಜದಲ್ಲಿ ಹೆಣ್ಣುಮಕ್ಕಳನ್ನು ವರದಕ್ಷಿಣೆ ಸಾವಿನಂಥ ಅನಿಷ್ಟಗಳಿಂದ ರಕ್ಷಿಸುವ ಮರ್ಗ ಯವುದು?
ಮೈತ್ರಾದೇವಿ: ಅಣ್ಣಾ ಅವರೆ, ನಮ್ಮ ಸಮಜ ಹೇಗಿರಬೇಕು ಎಂಬುದಕ್ಕೆ ಬಸವಾಶ್ರಯ ಒಂದು ಮದರಿ ಮತ್ರ. ನಮ್ಮ ಸಮಜದ ಪಾರಂಪರಿಕ ಭಾವನಾ ಪ್ರಪಂಚ ಇದರ ಹಿಂದೆ ಇದೆ. ಶರಣರು ಇಂಥ ಭಾವಲೋಕದ ಎಳೆಗಳೊಂದಿಗೆ ಹೊಸ ಬದುಕನ್ನು ನೇಯ್ದರು. ನಮ್ಮ ಜನರು ಉಂಡು ಸಂತಸ ಪಟ್ಟುದಕ್ಕಿಂತಲೂ ಹೆಚ್ಚು ಉಣಿಸಿ ಸಂತಸಪಟ್ಟಿದ್ದಾರೆ. ತೊಟ್ಟು ಸಂತಸ ಪಟ್ಟುದಕ್ಕಿಂತಲೂ ಹೆಚ್ಚು ತೊಡಿಸಿ ಸಂತೋಷಪಟ್ಟಿದ್ದಾರೆ. ಎದುರಿಗೆ ಬಂದವರ ಆರೋಗ್ಯ ವಿಚಾರಿಸುವ ಮತ್ತು ಊಟ ಆಯಿತೆ ಎಂದು ಕೇಳುವ ಪರಂಪರೆ ನಮ್ಮದು. ನಿಮ್ಮ ಊಟ ಆಗಿರದಿದ್ದರೆ ಊಟ ಮಡಿಸುವ ನೈತಿಕ ಹೊಣೆ ನನ್ನದು ಎಂಬುದು ಆ ಕೇಳುವ ಭಾವದಲ್ಲಿರುತ್ತದೆ. ಇದೇ ದಾಸೋಹಭಾವ. ಹಿಂದಿನ ಕಾಲದಲ್ಲಿ ಬಡವರ ಮಕ್ಕಳ ಮದುವೆಗಾಗಿ ಇಡೀ ಊರೇ ಸಹಾಯಹಸ್ತ ಚಾಚುತ್ತಿತ್ತು. ಹಳ್ಳಿಗಳಲ್ಲಿ ಶ್ರೀಮಂತರು ತಮ್ಮ ಮಕ್ಕಳ ಮದುವೆ ಮಡುವದರ ಜೊತೆ ಹಳ್ಳಿಯ ಬಡವರ ಮಕ್ಕಳ ಮದುವೆಯನ್ನೂ ಮಡುತ್ತಿದ್ದರು. ಈ ಪದ್ಧತಿ ಅಲ್ಲಲ್ಲಿ ಇನ್ನೂ ಉಳಿದಿದೆ. ಕಾಯಕಜೀವಿಗಳಲ್ಲಿ ವರದಕ್ಷಿಣೆಯ ಬದಲು ವಧುದಕ್ಷಿಣೆ ಜಾರಿಯಲ್ಲಿತ್ತು. ವಧುವಿನ ಪಾಲಕರಿಗೆ ಹಣಕೊಟ್ಟು ಮದುವೆ ಮಡಿಕೊಳ್ಳಬೇಕಿತ್ತು. ಈಗ ಕಾಲ ಬದಲಾಗಿದೆ. ಆದರೆ ಬದಲಾದ ಕಾಲದಲ್ಲಿ ನಿಜಪ್ರಗತಿ ಎಂಬುದು ಇಲ್ಲ. ಮನವ ಜನಾಂಗ ಮುನ್ನಡೆ ಸಾಧಿಸಬೇಕೇ ಹೊರತಾಗಿ ಹಿನ್ನಡೆ ಸಾಧಿಸಬಾರದು. ಇಂಥ ಹಿನ್ನಡೆಯಿಂದ ಸಮಜ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತ ಹೋಗುವುದು. ಆಗ ಅತ್ಯಾಧುನಿಕವಾದ ಅನಾಗರಿಕ ಸಮಜ ನಿಮಣವಾಗುವುದು. ದೊಡ್ಡ ದೊಡ್ಡ ನಗರಗಳಲ್ಲಿ ಭಾರೀ ಬಂಗಲೆಯ ಜನ ಹತ್ತಾರು ವರ್ಷ ಒಂದೇ ಕಡೆ ವಾಸಿಸುತ್ತಿದ್ದರೂ ನೆರೆಯವರ ಮುಖ ನೋಡಿರುವುದಿಲ್ಲ. ಅತ್ಯಾಧುನಿಕ ಅನಾಗರಿಕ ಸಮಜದ ಮುನ್ಸೂಚನೆ ಇದು. ನಾವು ಎಲ್ಲರೀತಿಯ ಶೋಷಣೆ ಮತ್ತು ಅನ್ಯಾಯಗಳಿಂದ ಮುಕ್ತವಾದ ಸಮಜದ ನಿಮಣ ಮಡಬೇಕಿದೆ. ಸಮಜವೇ ದೈವವಾಗಿ ಜನಸಮುದಾಯವನ್ನು ರಕ್ಷಿಸಬೇಕಿದೆ. ಪ್ರತಿಯೊಬ್ಬ ಮನುಷ್ಯ ಎಚ್ಚೆತ್ತಾಗ ಸಾಮಜಿಕ ವ್ಯಕ್ತಿತ್ವವುಳ್ಳ ಮನುಷ್ಯನಾಗುತ್ತಾನೆ. ಇಲ್ಲದಿದ್ದರೆ ಆತ ಅರ್ಧ ಸತ್ತ ಮನುಷ್ಯ. ನೀವೆಲ್ಲ ಸಾಮಜಿಕ ಪ್ರಜ್ಞೆಯ ಪರಿಪೂರ್ಣ ಮನುಷ್ಯರಾದಾಗ ಸಮಜವು ಎಲ್ಲ ರೀತಿಯ ಅನ್ಯಾಯಗಳಿಂದ ಮುಕ್ತವಾಗುತ್ತದೆ. ಇಂಥ ಮುಕ್ತ ಸಮಜವನ್ನು ಶರಣರು ಬಯಸಿದ್ದರು. ಸ್ವತಂತ್ರ ಧೀರರು ಮತ್ರ ಇಂಥ ಸಮಜವನ್ನು ನಿರ್ಮಿಸಬಲ್ಲರು. ಅಂತೆಯೆ ಬಸವಣ್ಣನವರು ‘ಕೂಡಲಸಂಗನ ಶರಣರು ಸ್ವತಂತ್ರ ಧೀರರು’ ಎಂದು ಕರೆದಿದ್ದಾರೆ.
ಗುರುಬಸವ: ತಾಯಿ ಮೈತ್ರಾದೇವಿಯವರೇ ನನ್ನ ದಲಿತ ಮಿತ್ರ ಕರಿಯಣ್ಣ ಚಹಾದ ಅಂಗಡಿಯಲ್ಲಿ ಕುಳಿತು ಚಹಾ ಕೇಳಿದ್ದಕ್ಕಾಗಿ
ಸವರ್ಣೀಯರೆಂದುಕೊಳ್ಳುವವರು ಹೊಡೆದು ಕೊಂದರು. ಈ ಜಾತಿಯ ಅಹಂನಿಂದ ಹೊರಬರುವುದು ಹೇಗೆ?
ಮೈತ್ರಾದೇವಿ: ಬಡಹಾರುವನೇಸು ಭಕ್ತನಾದಡೆಯೂ ನೇಣಿನ ಹಂಗ ಬಿಡ!
ಮಲೆಗಾರನೇಸು ಭಕ್ತನಾದಡೆಯೂ ಬಾವಿಯ ಬೊಮ್ಮನ ಹಂಗ ಬಿಡ!
ಬಣಜಿಗನೇಸು ಭಕ್ತನಾದಡೆಯೂ ಒಟ್ಟಿಲ ಬೆನಕನ ಹಂಗ ಬಿಡ!
ಕಂಚುಗಾರನೇಸು ಭಕ್ತನಾದಡೆಯೂ ಕಾಳಿಕಾದೇವಿಯ ಹಂಗ ಬಿಡ!
ನಾನಾ ಹಂಗಿನವನಲ್ಲ, ನಿಮ್ಮ ಶರಣರ ಹಂಗಿನವನಯ
ಕೂಡಲಸಂಗಮದೇವಾ.
ಎಂದು ಬಸವಣ್ಣನವರು ಹೇಳಿದ್ದಾರೆ. ಬಸವಣ್ಣನವರದು ಹೊಸ ಸಮಜ, ಹೊಸ ಜೀವನವಿಧಾನ. ಹೊಸ ಮನವನ ಸೃಷ್ಟಿ ಮಡುವುದು ಬಸವಣ್ಣನವರ ಉದೇಶವಾಗಿತ್ತು. ಹಳೆಯ ಮನಸ್ಸಿನೊಂದಿಗೆ ಹೊಸ ಮನವನ ಸೃಷ್ಟಿಯಗದು. ತಲೆಯಲ್ಲಿ ಮನು ತತ್ತ್ವ, ನಾಲಗೆಯ ಮೇಲೆ ಬಸವ ತತ್ತ್ವ ಇದ್ದರೆ ಇದೇ ಪರಿಸ್ಥಿತಿಯಗುವುದು. ಬಸವಣ್ಣನವರೂ ಈ ಸಮಸ್ಯೆಯನ್ನು ಗುರುತಿಸಿದ್ದಾರೆ ಎಂಬುದಕ್ಕೆ ಈ ವಚನವೇ ಸಾಕ್ಷಿ. ‘ನಾನಾ ಹಂಗಿನವನಲ್ಲ, ನಿಮ್ಮ ಶರಣರ ಹಂಗಿನವನಯ ಎಂದು ಬಸವಣ್ಣನವರು ಹೇಳಿದ್ದು ಎಷ್ಟೊಂದು ಅರ್ಥಗರ್ಭಿತವಾಗಿದೆ. ಶರಣರ ಹಂಗಿನವನೆಂದರೆ ಜಾತಿ, ಮತ, ಪಂಥ, ವರ್ಣ, ಕುಲ, ಅಧಿಕಾರ ಮತ್ತು ಧನಮದಗಳಿಂದ ಹೊರತಾದವನು. ಹಳೆಯ ಅಮನವೀಯ ಸಂಪ್ರದಾಯಗಳನ್ನು ತಿರಸ್ಕರಿಸಿ ಹೊಸ ಮನವೀಯ ವ್ಯವಸ್ಥೆಯನ್ನು ಪುರಸ್ಕರಿಸುವವನು ಶರಣ ಎಂದು ಕರೆಯಿಸಿಕೊಳ್ಳುತ್ತಾನೆ.
ಅಪ್ಪನು ನಮ್ಮ ಮದಾರ ಚೆನ್ನಯ್ಯ,
ಬೊಪ್ಪನು ನಮ್ಮ ಡೋಹರ ಕಕ್ಕಯ್ಯ,
ಚಿಕ್ಕಯ್ಯ ನಮ್ಮಯ್ಯ ಕಾಣಯ್ಯ,
ಅಣ್ಣನು ನಮ್ಮ ಕಿನ್ನರಿ ಬೊಮ್ಮಯ್ಯ
ಎನ್ನನೇತಕ್ಕರಿಯರಿ ಕೂಡಲಸಂಗಯ.
ಎಂದು ಬಸವಣ್ಣನವರು ಹೇಳಿದ್ದಾರೆ. ಜಾತಿ ವ್ಯವಸ್ಥೆಯ ಸಮಜದಲ್ಲಿ ಕೀಳು ಎನಿಸಿಕೊಂಡ ಮದಾರರು, ಡೋಹರರು ಮುಂತಾದವರು ಬಸವ ಸಮಜದಲ್ಲಿ ಸಮನ ಸ್ಥಾನವನ್ನು ಹೊಂದಿದ್ದಾರೆ. ಬಸವಣ್ಣನವರು ಇಂಥವರ ಅನುಭವವನ್ನೂ ತಮ್ಮದಾಗಿಸಿಕೊಂಡಿದ್ದರಿಂದಲೇ ವಿನಯಪೂರ್ವಕವಾಗಿ ಅಪ್ಪ, ಬೊಪ್ಪ ಎಂದು ಕರೆದಿದ್ದಾರೆ. ಶರಣರ ಹಾಗೆ ವ್ಯಕ್ತಿತ್ವ ವಿಕಸನ ಹೊಂದುವ ಬಯಕೆಯುಳ್ಳವರು ಎಲ್ಲ ಅನಿಷ್ಟಗಳಿಂದ ಹೊರಬಂದು ನಿಜಮನವರಾಗುತ್ತಾರೆ. ಅಂಥವರು ಇದ್ದಲ್ಲಿ ಅಸ್ಪೃಶ್ಯತೆ ಇರುವುದಿಲ್ಲ. ಜಾತೀಯತೆ ಇರುವುದಿಲ್ಲ. ನಿಮ್ಮ ಹಳ್ಳಿ ಇಂಥ ನಿಜಮನವರಿಂದ ತುಂಬಿದಾಗ ನೀವು ಹೇಳಿದಂಥ ದುರಂತ ಸಂಭವಿಸುವುದಿಲ್ಲ.
ಗಿರಿಮಲ್ಲ: ಅಮ್ಮನವರೆ ತಮ್ಮ ವಿಚಾರಗಳು ಅತ್ಯಂತ ಉನ್ನತ ಮಟ್ಟದವುಗಳಾಗಿವೆ. ಮನುಷ್ಯರೆಲ್ಲ ಈ ಸತ್ಯವನ್ನು ಅರಿತಾಗ ಮನುಷ್ಯ ನಿರ್ಮಿತ ದುಃಖದಿಂದ ಪಾರಾಗುವರು.
ಮೈತ್ರಾದೇವಿ: ಶಿವಸ್ವರೂಪಿಗಳೇ ಈ ವಿಚಾರಗಳೆಲ್ಲ ಶರಣರ ವಿಚಾರಗಳೇ ಆಗಿವೆ. ಅವರ ವಚನಗಳಿಂದ ಕಲಿತದ್ದನ್ನು ನಾನಿಲ್ಲಿ ಹೇಳುತ್ತಿರುವೆ. ಶರಣರು ವರ್ಗಭೇದ, ವರ್ಣಭೇದ, ಜಾತಿಭೇದ, ಕುಲಭೇದ ಮತ್ತು ಲಿಂಗಭೇದಗಳಿಲ್ಲದ ಅತ್ಯಾಧುನಿಕವಾದ ಸಮಜವನ್ನು ೧೨ನೇ ಶತಮನದ ಕಟ್ಟಲು ಹೆಣಗಿದರು. ಬಸವಣ್ಣನವರು ಕಾಯಕವನ್ನು ಒಂದು ಸಿದ್ಧಾಂತವಾಗಿಸಿ ಸತ್ಯಶುದ್ಧ ಕಾಯಕಜೀವಿಗಳು ನಿಜವಾದ ದಾರ್ಶನಿಕರು ಎಂಬುದನ್ನು ಸಾಧಿಸಿ ತೋರಿಸಿದರು. ಆಯ್ದಕ್ಕಿ ಲಕ್ಕಮ್ಮ, ಸ್ಮಶಾನ ಕಾಯುವ ಕಾಳವ್ವೆ, ಕಸ ಗುಡಿಸುವ ಸತ್ಯಕ್ಕ, ಒಕ್ಕಲಿಗ ಮುದ್ದಣ್ಣ, ಸಮಗಾರ ಹರಳಯ್ಯ, ಮದಾರ ಚೆನ್ನಯ್ಯ, ಡೋಹರ ಕಕ್ಕಯ್ಯ ಹೀಗೆ ಎಲ್ಲ ಕಾಯಕಜೀವಿಗಳು ಸತ್ಯಶುದ್ಧ ಕಾಯಕದೊಂದಿಗೆ ಎಲ್ಲರಿಗೆ ಮದರಿಯಗಿ ಬದುಕಿದರು. ದುಡಿಯುವ ವರ್ಗ ಉನ್ನತ ಸಂಸ್ಕೃತಿ ಮತ್ತು ಸಮೃದ್ಧ ಸಮಜವನ್ನು ನಿರ್ಮಿಸಬಲ್ಲುದು ಎಂಬುದನ್ನು ವಿಶ್ವದಲ್ಲಿ ಮೊದಲ ಬಾರಿಗೆ ಸಾಧಿಸಿ ತೋರಿಸಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ. ಮನವರನ್ನು ಎಲ್ಲ ದುಃಖಗಳಿಂದ ಬಿಡುಗಡೆಗೊಳಿಸುವುದೇ ಶರಣಧರ್ಮವಾದ ಬಸವಧರ್ಮದ ಮುಖ್ಯ ಗುರಿಯಗಿದೆ. ಈ ಗುರಿಯ ಕಡೆಗೆ ನಾವು ಎದೆಗುಂದದೆ ಮುನ್ನಡೆದಾಗ ಮತ್ರ ಶರಣ ಸಮಜದ ಅಂದರೆ ಸರ್ವಸಮತ್ವದ ಸಮಜ ನಿಮಣ ಮಡಲು ಸಾಧ್ಯ.
ಸಂಗಮೇಶ: ಕಾಯಕಜೀವಿಗಳು ಇದೇ ನೆಲದಲ್ಲಿ ಇಷ್ಟೊಂದು ಸಮೃದ್ಧ ಸಮಜ ನಿಮಣ ಮಡಿದ ದಾಖಲೆ ಇರುವಾಗ ರೈತರೇಕೆ ಆತ್ಮಹತ್ಯೆ ಮಡಿಕೊಳ್ಳುತ್ತಾರೆ ತಾಯಿ?
ಮೈತ್ರಾದೇವಿ: ಇದರ ಉತ್ತರದ ಶರಣ ತತ್ತ್ವ ಅಡಗಿದೆ. ಈ ದೇಶದಲ್ಲಿ ರೈತಾಪಿ ಜನರೆಂದೂ ಶ್ರೀಮಂತರಾಗಿದ್ದಿಲ್ಲ. ಆದರೆ ಶ್ರೀಮಂತ ಮನಸ್ಥಿತಿಯಿಂದ ಕೂಡಿದ ಬದುಕನ್ನು ಬದುಕಿದವರು. ಹೀಗಾಗಿ ಅವರು ಶ್ರೀಮಂತರಾಗುವುದಕ್ಕೆ ಇಷ್ಟಪಡುತ್ತಿರಲಿಲ್ಲ. ತಮ್ಮಲ್ಲಿರುವ ಹೆಚ್ಚಿನದನ್ನು ಸಮಜಕ್ಕೆ ಸೇವಾಭಾವದಿಂದ ಅರ್ಪಿಸುತ್ತಿದ್ದರು. ತಮ್ಮ ಊರು, ತಮ್ಮ ಸಮಜ ಸಮೃದ್ಧವಾಗಿರಬೇಕೆಂದು ಬಯಸುತ್ತಿದ್ದರು. ಬಡವರ ಈ ದಯಗುಣವೇ ಬಸವಧರ್ಮದ ಮೂಲವಾಗಿದೆ. ನಮ್ಮ ಶರಣಬಸವೇಶ್ವರರು ಇಂಥ ಬಡ ರೈತಾಪಿ ಜನರ ಪ್ರತಿನಿಧಿ. ಅವರು ತಮ್ಮ ಕಾಯಕ ನಿಷ್ಠೆಯ ಮೂಲಕ ಮಹಾದಾಸೋಹಿ ಎನಿಸಿದರು. ಶರಣಬಸವೇಶ್ವರರು ಬಸವಣ್ಣನವರನ್ನು ತಮ್ಮ ಹೃದಯದಲ್ಲಿಟ್ಟುಕೊಂಡರು. ರೈತಾಪಿ ಜನ ಶರಣಬಸವೇಶ್ವರರನ್ನು ತಮ್ಮ ಹೃದಯದಲ್ಲಿಟ್ಟುಕೊಂಡಿದ್ದಾರೆ. ಬಸವಧರ್ಮ ಅಮರ ಎಂಬುದಕ್ಕೆ ರೈತಾಪಿ ಜನರು ಮತ್ತು ಇತರ ಕಾಯಕಜೀವಿಗಳು ಸಾಕ್ಷಿಯಗಿದ್ದಾರೆ. ಹಿಂದಿನ ರೈತರು ಸಾಲದ ಶೂಲಕ್ಕೆ ಕೊರಳು ಕೊಡದೆ ಬಡತನವನ್ನೇ ಶ್ರೀಮಂತಗೊಳಿಸಿದ್ದರು. ಅವರ ಬೇಕು ಬೇಡಗಳು ಅವರ ಹಿಡಿತದಲ್ಲಿದ್ದವು. ಅವರು ಹೆಚ್ಚಿನದಕ್ಕೆ ಆಸೆ ಪಡಲಿಲ್ಲ. ಆದರೆ ಆಧುನಿಕ ವ್ಯವಸ್ಥೆ ನಮ್ಮ ರೈತರ ಬದುಕನ್ನು ಹದಗೆಡಿಸುತ್ತಿದೆ. ಅವರಲ್ಲಿ ಹೊಸ ಹೊಸ ಭ್ರಮೆಗಳನ್ನು ಹುಟ್ಟಿಸುತ್ತಿದೆ. ‘ಹೆಚ್ಚು ಉತ್ಪನ್ನ, ಹೆಚ್ಚು ಲಾಭ’. ‘ವಾಣಿಜ್ಯ ಬೆಳೆ, ಶ್ರೀಮಂತಿಕೆಗೆ ಮರ್ಗ, ಮುಂತಾದ ಭ್ರಮೆಗಳಿಂದಾಗಿ ರೈತ ಸಾಲದ ಬಲೆಗೆ ಬೀಳುತ್ತಿದ್ದಾನೆ. ಆತ ತನ್ನದೇ ಆದ ಕೃಷಿ ಉಪಕರಣಗಳನ್ನು ಕೈ ಬಿಟ್ಟು ಆಧುನಿಕ ಕೃಷಿ ಉಪಕರಣಗಳಿಗೆ ಜೋತು ಬಿದ್ದಿದ್ದಾನೆ. ಎತ್ತುಗಳ ಬದಲಿಗೆ ಟ್ರ್ಯಾಕ್ಟರ್ ಖರೀದಿಸುತ್ತಿದ್ದಾನೆ. ಅದಕ್ಕಾಗಿ ಡೀಸಲ್ ಖರೀದಿಸುತ್ತಿದ್ದಾನೆ. ಎತ್ತುಗಳು ತಿನ್ನುವ ಹುಲ್ಲಿನ ಬೆಲೆ ಮತ್ತು ಡೀಸಲ್ ಬೆಲೆಯಲ್ಲಿ ಭಾರಿ ಅಂತರವಿದೆ. ಎತ್ತು ಸೆಗಣಿ ಕೊಡುತ್ತದೆ. ಟ್ರ್ಯಾಕ್ಟರ್ ಏನು ಕೊಡುತ್ತದೆ? ವಾಯು ಮಲಿನ್ಯ ಮಡುತ್ತದೆ. ವ್ಯವಸಾಯದಲ್ಲಿ ಹೆಚ್ಚು ಖರ್ಚು, ಹೆಚ್ಚು ಸಾಲ, ಹೆಚ್ಚು ಸಮಸ್ಯೆ, ಕಡಿಮೆ ಲಾಭ, ಕೊನೆಗೆ ಆತ್ಮಹತ್ಯೆ ಎಂಬುದು ಆಧುನಿಕ ಕೃಷಿನೀತಿಯಗಿದೆ.
ಶಿವಮ್ಮ: ನಮ್ಮ ರೈತರು ಆತ್ಮಹತ್ಯೆ ಮಡಿಕೊಳ್ಳು ವುದನ್ನು ಹೇಗೆ ತಡೆಯಬೇಕು ತಾಯಿ?
ಮೈತ್ರಾದೇವಿ: ‘ಹಾಸಿಗೆ ಇದ್ದಷ್ಟು ಕಾಲು ಚಾಚು’ ಎಂಬ ಗಾದೆ ಮತು ಇದೆಯಲ್ಲ. ನಮ್ಮ ರೈತಾಪಿ ಜನ ಇದನ್ನು ಚಾಚೂ ತಪ್ಪದೆ ಪಾಲಿಸಬೇಕು. ಆಧುನಿಕ ಸಮಜ ರೈತರಿಗೆ ಹೊಸ ಹೊಸ ಆಸೆಗಳನ್ನು ಹಚ್ಚುತ್ತಿದೆ. ಆಸೆಯೆಂಬುದು ಅರಸಿಂಗಲ್ಲದೆ ಶಿವಭಕ್ತರಿಗುಂಟೇ ಅಯ ಎಂದು ಆಯ್ಕಕ್ಕಿ ಲಕ್ಕಮ್ಮನವರು ಹೇಳಿದ್ದನ್ನು ಮರೆಯಬಾರದು. ಎಲ್ಲಕ್ಕೂ ಹೆಚ್ಚಾಗಿ ಇಡೀ ಹಳ್ಳಿ ಒಂದು ಕುಟುಂಬದಂತೆ ಇರಬೇಕು. ಹಳ್ಳಿಯೇ ಮಹಾಮನೆಯಗಬೇಕು. ಒಬ್ಬರ ನೋವನ್ನು ಇನ್ನೊಬ್ಬರು ಅರಿತುಕೊಂಡು ಧೈರ್ಯ ತುಂಬಬೇಕು. ಹಳ್ಳಿಗರು ಯವುದೇ ದುಶ್ಚಟಗಳಿಗೆ ಒಳಗಾಗದೆ ಪರಂಪರೆಯಗಿ ಬಂದ ಸರಳ ಸಹಜ ಬದುಕಿಗೇ ಅಂಟಿಕೊಳ್ಳಬೇಕು. ಹಳ್ಳಿಯ ಭಾವನಾ ಪ್ರಪಂಚಕ್ಕೆ ಧಕ್ಕೆಯಗದಂತೆ ನೋಡಿಕೊಳ್ಳಬೇಕು. ಎಂಥ ಕಷ್ಟದಲ್ಲೂ ನಮ್ಮ ಹಸ್ತ ಸಹಾಯ ಹಸ್ತವೇ ಆಗಿರಬೇಕು. ಆಗ ರೈತರ ಆತ್ಮಹತ್ಯೆಗಳಾಗುವುದಿಲ್ಲ. ರೈತರು ಆತ್ಮಹತ್ಯೆ ಮಡಿಕೊಳ್ಳುತ್ತಿರುವುದು ಸಾಲಕ್ಕೆ ಅಂಜುವುದರಿಂದ ಮತ್ರ ಅಲ್ಲ. ಅವರು ಚಿಂತಾಕ್ರಾಂತರಾದಾಗ ಅವರನ್ನು ಸಂತೈಸುವ ಮತ್ತು ಧೈರ್ಯ ತುಂಬುವ ಆತ್ಮೀಯರು ಇಲ್ಲದ ಕಾರಣ ಅವರು ಆತ್ಮಹತ್ಯೆ ಮಡಿಕೊಳ್ಳುತ್ತಿದ್ದಾರೆ. ಶರಣ ಮರ್ಗವನ್ನು ಅರಿತು ನಡೆಯುವ ಯರೂ ಆತ್ಮಹತ್ಯೆ ಮಡಿಕೊಳ್ಳುವುದಿಲ್ಲ. ಮರಣವೇ ಮಹಾನವಮಿ ಎನ್ನುತ್ತ ಮರಣಕ್ಕೆ ಅಂಜುವುದೂ ಇಲ್ಲ.
ಸೋಮಣ್ಣ: ತಾಯಿ ತಾವು ಹೇಳಿದ ವಿಚಾರಗಳನ್ನು ನಾವೆಂದೂ ಮರೆಯುವುದಿಲ್ಲ. ಕೂಡಿ ಬದುಕುತ್ತ ಸುಖ ದುಃಖ ಹಂಚಿಕೊಳ್ಳುವೆವು.
ಮೈತ್ರಾದೇವಿ: ತಾವೆಲ್ಲ ಶರಣರು ತೋರಿಸಿದ ದಾರಿಯಲ್ಲಿ ಮುನ್ನಡೆಯುತ್ತ ಹೊಸ ಸಮಜದ ಕನಸು ಕಂಡರೆ ನನ್ನ ಮನಸ್ಸಿಗೆ ಸಿಗುವ ನೆಮ್ಮದಿಯನ್ನು ವರ್ಣಿಸಲಿಕ್ಕಾಗದು. ನಾವು ಹೊಸ ಸಮಜ ನಿರ್ಮಿಸಲು ದೊಡ್ಡ ದೊಡ್ಡ ಯಂತ್ರಗಳು ಬೇಕಿಲ್ಲ. ಅತ್ಯಾಧುನಿಕ ಮನರಂಜನೆಯ ಸಾಧನಗಳು ಬೇಕಿಲ್ಲ. ನಮ್ಮ ಕೋಟ್ಯಂತರ ಜನರ ಕೈಗಳಿಗೆ ಕೆಲಸ ಬೇಕು. ಅವರ ಸರಳ ಬದುಕಿಗೆ ಬೇಕಾದ ವಸ್ತುಗಳ ಪೂರೈಕೆಯಗಬೇಕು. ಮನಸಿಕ ನೆಮ್ಮದಿ ಎನ್ನುವುದು ಕೋಟ್ಯಂತರ ರೂಪಾಯಿಗಳಿಗಿಂತ ಶ್ರೇಷ್ಠವಾದುದು. ಅದನ್ನು ಯವುದೇ ಅಂತರರಾಷ್ಟ್ರೀಯ ಮರುಕಟ್ಟೆಯಲ್ಲಿ ಖರೀದಿಸಲಿಕ್ಕಾಗದು ಎಂಬುದನ್ನು ನಮ್ಮ ಜನ ಅರಿಯಬೇಕು. ಕಾಶ್ಮೀರದ ಮೋಳಿಗೆ ಮರಯ್ಯನವರು ಅರಸೊತ್ತಿಗೆಯನ್ನು ಬಿಟ್ಟು ಕಲ್ಯಾಣದಲ್ಲಿ ಕಟ್ಟಿಗೆ ಮರುವ ಕಾಯಕದಲ್ಲಿ ನೆಮ್ಮದಿ ಪಡೆದರು. ಸತ್ಯಕ್ಕ ಕಸಗುಡಿಸುವ ದಾರಿಯಲ್ಲಿ ಹೊನ್ನ ವಸ್ತ್ರ ಬಿದ್ದಿದ್ದರೂ ಮುಟ್ಟಲಿಲ್ಲ. ಐಹಿಕ ವಸ್ತುಗಳೇ ನಮ್ಮ ನೆಮ್ಮದಿಯ ಮೂಲ ಎಂಬುದನ್ನು ಶರಣರು ತಿರಸ್ಕರಿಸುತ್ತ ಈ ಬದುಕನ್ನು ಪ್ರೀತಿಸಿದ್ದು ವಿಶ್ವದ ಇತಿಹಾಸದ ಅನುಪಮವಾಗಿದೆ.
ತಂದೆ ನೀನು ತಾಯಿ ನೀನು, ಬಂಧು ನೀನು ಬಳಗ ನೀನು.
ನೀನಲ್ಲದೆ ಮತ್ತಾರೂ ಇಲ್ಲಯ,
ಕೂಡಲಸಂಗಮದೇವಾ
ಹಾಲಲದ್ದು, ನೀರಲದ್ದು ನಿಮ್ಮ ಧರ್ಮ.
ಎಂದು ಬಸವಣ್ಣನವರು ಹೇಳುವಲ್ಲಿ ಎಷ್ಟೊಂದು ಅರ್ಥವಿದೆ. ಅವರು ತಂದೆಯಲ್ಲಿ, ತಾಯಿಯಲ್ಲಿ, ಬಂಧು ಬಳಗದಲ್ಲಿ, ಅಷ್ಟೇ ಅಲ್ಲ ಎಲ್ಲರಲ್ಲೂ ದೇವರನ್ನು ಕಂಡರು. ಅವರಿಗೆ ಸರ್ವರೂ ದೇವಸ್ವರೂಪರೇ ಆಗಿದ್ದರು. ಇಂಥ ಮನಸ್ಸು ಸುಲಿಗೆಯ ವಿರೋಧಿಯಗಿರುತ್ತದೆ. ಎಲ್ಲರ ನೋವಿಗೆ ಸ್ಪಂದಿಸುತ್ತದೆ. ಇಡೀ ಪೃಥ್ವಿಯನ್ನೇ ಮಹಾಮನೆಯಗಿಸುತ್ತದೆ. ನಾವು ಹೀಗೆ ಜನರನ್ನು ಪ್ರೀತಿಸಬೇಕು. ನಮ್ಮೊಳಗೆ ಜನ ಸಮೂಹವಾಗಬೇಕು. ‘ಲೋಕವೇ ತಾನಾದ ಬಳಿಕ ಏಕಾಂತದ ಹಂಗೇಕಯ ಎಂದು ಅಕ್ಕ ಮಹಾದೇವಿ ಹೇಳಿದ್ದಾರೆ. ನಾವೆ ಲೋಕವೇ ಆದಾಗ ಯರು ಹೊರಗಿನವರಲ್ಲ ಯರೂ ಒಳಗಿನವರಲ್ಲ ಎಲ್ಲರೂ ನಮ್ಮವರು ಎಂಬ ಭಾವ ಮೂಡುವುದು.
ಸರ್ವರಿಗೂ ಶರಣು ಶರಣಾರ್ಥಿ. ಈಗ ನಾವು ಬಸವಣ್ಣನವರನ್ನು ಸ್ಮರಿಸೋಣ.

ರಂಜಾನ್ ದರ್ಗಾ
ನಿರ್ದೇಶಕ, ವಚನ ಅಧ್ಯಯನ ಕೇಂದ್ರ ಬಸವ ಸೇವಾ ಪ್ರತಿಷ್ಠಾನ, ಶರಣ ಉದ್ಯಾನ, ಶರಣ ನಗರ, ಬೀದರ -೫೮೫೪೦೧
ಮೊಬೈಲ್: ೯೨೪೨೪೭೦೩೮೪

ಜಾನಪದ: ಒಂದಿಷ್ಟು ವಿಚಾರಗಳು


ಮನುಷ್ಯ ಕಂಡುಕೊಂಡ ಭಾಷೆ ಅವನ ಸಂಸ್ಕೃತಿಯ ಶೋಧಗಳಲ್ಲಿ ಬಹುದೊಡ್ಡ ಕೊಡುಗೆಯಾಗಿದೆ. ಹೀಗೆ ಭಾಷೆಯ ಮೂಲಕ ಮತ್ತೆ ಮತ್ತೆ ಶೋಧಿಸಿಕೊಂಡಿದ್ದು ಜನಪದ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಕಟ್ಟುವ ಕೆಲಸ. ಭಾಷೆ ಹೊರ ಹೊಮ್ಮಿದ ತಕ್ಷಣ ಮೊದಲು ಸೃಷ್ಟಿಯಾದದ್ದು ಭಾವನೆಗಳ ಸಮ್ಮಿಲನ ನಂತರ ಹಾಡು, ಕಥೆ, ಗಾದೆ, ಒಗಟು, ಉಡುಪು ಹೀಗೆ ಬಾಯಿಂದ ಬಾಯಿಗೆ ಹರಿದಾಡುತ್ತಾ ಜನಪದ ಸಾಹಿತ್ಯ ನಿರ್ಮಾಣವಾಗತೊಡಗಿತು. ಮನುಷ್ಯನ ಹುಟ್ಟಿನೊಂದಿಗೆ ಅಂಟಿಕೊಂಡಿರುವ ಜನಪದ ಸಂಬಂಧವು ಹೆಚ್ಚು ಸಾಂಸ್ಕೃತಿಕವಾಗುತ್ತಾ ಸಾಗಿರುವಂಥದ್ದು. ಒಂದು ಕಾಲದಲ್ಲಿನ ಮೌಖಿಕ ಪರಂಪರೆಯು ಗಾಢವಾಗುತ್ತಾ ಉಳಿದುಕೊಂಡಿರುವ ಜನಪದವು ಇಂದು ಲಿಖಿತ ಮಾಹಿತಿಗೆ ಒಳಪಡುತ್ತಾ ಸಾಗಿದೆ. ಎಷ್ಟೆಷ್ಟು ಇಂದು ನಾವು ಲಿಖಿತದೆಡೆಗೆ ಸಂಗ್ರಹಿಸಿ-ದಾಖಲಿಸುತ್ತಿರುವೆವೋ ಅಷ್ಟಷ್ಟು ಅದು ಮೌಖಿಕತೆಯಿಂದ ದೂರವಾಗುತ್ತಿದೆ. ಹಿಡಿದಿಡುವ, ಬಂಧಿಸುವ (ಅಕ್ಷರ ಪರಂಪರೆ) ಅಂದರೆ ಬರಹದ ರೂಪಕ್ಕಿಳಿಸುವ ಹಾಗೂ ತಂತ್ರಜ್ಞಾನದ ಮೂಲಕ ದಾಖಲಿಸುವ ಪ್ರಕ್ರಿಯೆ ಹೆಚ್ಚಾದಂತೆ, ಸಹಜವಾಗಿ ನೆನಪಿಟ್ಟುಕೊಳ್ಳುವ, ಉರು ಹೊಡೆಯುವ ಕ್ರಿಯೆಗಳು ಕಡಿಮೆಯಾಗುತ್ತಿವೆಯೇನೋ...
ಕೆಲವೊಮ್ಮೆ ಆಧುನಿಕ ಮಾಹಿತಿ-ತಂತ್ರಜ್ಞಾನದ ಜೊತೆಗೆ ನಾವು ಹೆಜ್ಜೆ ಹಾಕದಿದ್ದರೆ ಅಂದರೆ ಜಾನಪದ ಸಾಹಿತ್ಯವನ್ನು ಹಿಡಿದಿಡುವ ಚೌಕಟ್ಟಿಗೆ ನಾವು ಒಳಪಡಿಸದಿದ್ದರೆ, ಈಗಿರುವಷ್ಟು ಜಾನಪದ ಸಾಹಿತ್ಯ ಮುಂದೆ ಇನ್ನಷ್ಟು ಕಣ್ಮರೆಯಾಬಹುದೇನೋ.... ಇದು ಅನಿವಾರ್ಯವಾದರೂ ಸಾಂದರ್ಭಿಕವಾದ ಆಶಯಗಳು-ಅಭಿಪ್ರಾಯಗಳು ಇದಕ್ಕೆ ಪೂರಕವಾಗಿ ಕೆಲಸ ಮಾಡುತ್ತವೆ.
ಜಾನಪದ ಕುಕ್ಷಿಯೊಳಗೆ ಸೇರದ ಯಾವ ವಿಷಯವಿಲ್ಲ. ಅದರದೇ ಆದ ಒಂದು ಲೋಕ ಸೃಷ್ಟಿಗೊಂಡಿರುವಂಥದ್ದು. ಅಲ್ಲಿ ತನ್ನದೇ ಧಾಟಿ, ಲಯ, ರೀತಿ-ನೀತಿ, ಆಕರ್ಷಣೆ, ಕೀರ್ತಿ, ಯಶಸ್ಸು, ನಂಬಿಕೆ ಮೊದಲಾದ ನೂರಾರು ಯೋಚನೆಗಳು ಪೂರಕವಾಗಿರುತ್ತವೆ. ಈವರೆಗೆ ಸಂಗ್ರಹಿಸಿರುವ ಜಾನಪದದ ವಸ್ತು ವಿಷಯಗಳು ಅಗಾಧವಾಗಿದ್ದರೂ ಇನ್ನೂ ಶೋಧಿಸುವ-ಸಂಶೋಧಿಸುವ ಮಹತ್ವದ ಕೆಲಸ ನಡೆಯಬೇಕಿದೆ. ಐತಿಹಾಸಿಕ, ಪುರಾಣ, ಪುರಾತತ್ವ, ಶಾಸನ, ಹಸ್ತಪ್ರತಿ ಮೊದಲಾದವುಗಳ ಸಂಶೋಧನೆಯಷ್ಟೇ ಮಹತ್ವವಾದದ್ದು ಮೌಖಿಕ ಪರಂಪರೆಯುಳ್ಳ ಜಾನಪದ ಎಂಬುದನ್ನು ಅತ್ಯಂತ ವಸ್ತುನಿಷ್ಟವಾಗಿ ಹೇಳಬಹುದು.
ಬಹುಶಃ ಜಾನಪದದಷ್ಟು ವಿಶಾಲ, ವ್ಯಾಪಕ, ನಿರಾಳವಾದುದು ಬೇರೆ ಯಾವುದಿಲ್ಲ. ಬೀಜದಲ್ಲಿ ವೃಕ್ಷ ಅಡಗಿರುವಂತೆ ಜಾನಪದದಲ್ಲಿ ಏನೆಲ್ಲಾ ಅಡಗಿದೆ. ಹೀಗಾಗಿ ಜಾನಪದಕ್ಕೆ ಆದಿ-ಅಂತ್ಯವಿಲ್ಲವೆಂದು ಹೇಳಬಹುದು. ಇದು ಎಲ್ಲ ಕಲೆ-ಸಾಹಿತ್ಯಕ್ಕೆ ತಾಯಿಬೇರು ಮತ್ತು ಗುರುಸ್ಥಾನವನ್ನು ಹೊಂದಿರುವಂಥದ್ದು. ಆದಿ ಮಾನವನ ಅಥವಾ ಮಾನವ ಸೃಷ್ಟಿಯಾದಂದಿನಿಂದ ಜಾನಪದವು ಆರಂಭಗೊಂಡಿರುವ ಮಾತು ಸತ್ಯವಾದುದೆ. ನಂತರ ನಾಗರಿಕತೆ ಬೆಳೆದಂತೆಲ್ಲ ಅದಕ್ಕೆ ಜಾನಪದವು ಆರಾಧ್ಯ ದೇವರಾಗಿಯೇ ಬೆಳೆಯುತ್ತಲಿದೆ. ಅಂದರೆ ನೆಲದೊಳಗೆ ಬೀಜ ಬಿತ್ತನೆಯ ನಂತರ ಅದು ಮಣ್ಣೊಳಗಿನ ಸಾರ ಹೀರಿಕೊಂಡು ಸಂಸ್ಕಾರ ಪಡೆದು ಸಸಿಯಾಗಿ, ಗಿಡವಾಗಿ, ಮರವಾಗಿ ಬೆಳೆದು ನಿಂತು ಮತ್ತೆ ತನ್ನೊಡಲಿನಿಂದ ಮತ್ತೊಂದು ಬೀಜದ ನಿರ್ಮಾಣಕ್ಕೆ ಕಾರಣವಾಗುತ್ತದೆ. ಅದೇ ರೀತಿ ಜಾನಪದವು ಹೊಸತನಕ್ಕೆ ತನ್ನ ಆಯಾಮಗಳೊಡನೆ ಹೊಸ ಹೊಸ ಅರ್ಥಗಳನ್ನು ಕೊಡುತ್ತಾ ತುತ್ತ ತುದಿಗೇರಿ ಮತ್ತೆ ಮೂಲ ಸ್ಥಾನಕ್ಕೆ ಮರಳುತ್ತದೆ. ಒಂದೆಡೆ ವಿಕಾಸದ ಪ್ರಕ್ರಿಯೆಯ ಮೂಲಕ ಮತ್ತೊಂದೆಡೆಯಲ್ಲಿ ಮುಕ್ತಾಯದ ಸ್ಥಿತಿಗೆ ಮುಖ ಮಾಡಿರುತ್ತದೆ.
"ಜಾನಪದದ ವ್ಯಾಪ್ತಿಯೊಳಗೆ ಸೇರದ ಜಾಗತಿಕ ಸಂಗತಿಗಳೇ ಇಲ್ಲ. ಕಣ್ಣಿಗೆ ಕಾಣುವ, ಕಿವಿಗೆ ಕೇಳುವ, ಮನಸ್ಸಿಗೆ ಸ್ಪಂದಿಸುವ, ಭಾವನೆಗಳಿಗೆ ಅಭಿವ್ಯಕ್ತಿಸುವ, ಒಟ್ಟು ಸಂಗತಿಗಳ ಮೊತ್ತವನ್ನು ಜಾನಪದ ಸಂಸ್ಕೃತಿಯೆಂದು ಕರೆಯುತ್ತೇವೆ". ಇಂತಹ ಒಂದು ಅಭಿವ್ಯಕ್ತಿ ಸಾಮಾನ್ಯ ಜನರಿಂದ ನಿರ್ಮಾಣಗೊಂಡಿದ್ದು. ಅಂದರೆ ಸಾಮಾನ್ಯ ವರ್ಗ ಈ ಭೂಮಿಯ ಮೇಲೆ ಇರುವವರೆಗೂ ಅಥವಾ ಸೃಷ್ಟಿ ಇರುವವರೆಗೂ ಒಂದಲ್ಲ ಒಂದು ರೀತಿಯಲ್ಲಿ (ಹಾಡು, ಕಥೆ, ಕಲೆ ಇತ್ಯಾದಿಗಳ ಮೂಲ) ಇದು ಪ್ರಕೃತಿಯಂತೆ ತಾನೇತಾನಾಗಿ ಬೆಳೆಯುಂಥಾದ್ದು. ಪ್ರತಿಯೊಂದರ ಮೂಲ ಸಂಸ್ಕೃತಿಯ ಬೇರನ್ನು ಗುರುತಿಸಬೇಕಾದರೆ ಎಲ್ಲರೂ ಜಾನಪದಕ್ಕೆ ಶರಣು ಹೋಗಲೇಬೇಕು. ಆಧುನಿಕತೆಯನ್ನು ಅರಿಯಬೇಕಾದರೆ, ವಿಶಿಷ್ಟಗೊಳಿಸಬೇಕಾದರೆ ಅದಕ್ಕೆ ಹೊಸ ತಿರುವು ನೀಡಬೇಕಾದರೆ ಜಾನಪದದ ಸಹಾಯ ಪಡೆಯಬೇಕು.
* * *
ಜಾನಪದ ಸಾಹಿತ್ಯವು ಸಮೂಹ ದೃಷ್ಟಿಯಾಗಿದ್ದು, ಕೆಲವೊಮ್ಮೆ ಏಕ ವ್ಯಕ್ತಿಯ ಅನುಭವವು ಮಾತಿನ ಮೂಲಕ ಹೊರ ಹೊಮ್ಮಿದಾಗ ಅಂದರೆ ಭಾವನಾಪೂರ್ವಕವಾಗಿ ಹೊರ ಹೊಮ್ಮಿದಾಗ ಹೊಸ ಆಲೋಚನೆ ಬರಬಹುದು. ’ಜನಪದವು’ ಎಂದಿಗೂ ಮರಣ ಹೊಂದದೇ ತನ್ನ ಜೀವಂತಿಕೆಯ ಅವಸ್ಥೆಯಿಂದಲೇ ಮತ್ತೆ ಮತ್ತೆ ಭಿನ್ನರೂಪಗಳನ್ನು ಪಡೆಯುತ್ತದೆ. ಬೇಂದ್ರೆಯವರ ಕಾವ್ಯದಂತೆ "ನಿದ್ದೆಗೊಮ್ಮೆ ನಿತ್ಯ ಮರಣ, ಎದ್ದ ಸಲ ನವೀನ ಜನನ" ಎಂಬುದನ್ನು ಈ ಜನಪದಕ್ಕೂ ಅರ್ಥೈಸಿಕೊಳ್ಳಬಹುದು. ಪ್ರತಿಬಾರಿಯೂ ಪ್ರಯೋಗತೆಯ ಸಂದರ್ಭದಲ್ಲಿ ಕಾಲ, ಸ್ಥಳ, ಸಮಯ, ಪ್ರಾದೇಶಿಕತೆಯ ನೆಲೆಗಳಲ್ಲಿ ವಿಶಿಷ್ಟ ಹಾಗೂ ವಿಶೇಷವಾಗಿ ಈ ಜನಪದವು ಕಾಣಿಸಿಕೊಳ್ಳುತ್ತದೆ. ಜನಪದವು ಯಾವುದೇ ಉದ್ದೇಶಪೂರ್ವಕವಾಗಿ ಹುಟ್ಟಿದ್ದಲ್ಲ, ಓಲೈಸುವುದಕ್ಕೆ ಹೊರ ಹೊಮ್ಮಿದ್ದಲ್ಲ. ಜಾನಪದವನ್ನು ಕುರಿತಂತೆ ಕವಿರಾಜಮಾರ್ಗಕಾರ ಮನದುಂಬಿ ಮಾತಾಡಿದ್ದಾನೆ.
ಪದನರಿದು ನುಡಿಯಲುಂ ನುಡಿ
ದುದನರಿದಾರಯಲು ಮಾರ್ಪರಾ ನಾಡವರ್ಗಳ್
ಚುದುರರ್ ನಿಜದಾ ಕುರಿತೋ
ದದೆಯುಂ ಕಾವ್ಯ ಪ್ರಯೋಗ ಪರಿಣತಿ ಮತಿಗಳ್
ತನ್ನ ಕಾಲದ ಜನರ ಮನಸ್ಥಿತಿ-ಗತಿಗಳ ಬಗ್ಗೆ, ಅವರಲ್ಲಿದ್ದ ಕಾವ್ಯ ಪ್ರಯೋಗತೆಯ ಬಗ್ಗೆ ಕವಿರಾಜಮಾರ್ಗಕಾರ ಅಭಿಮಾನದಿಂದ ಹೇಳಿದ್ದಾನೆ. ಅಂದರೆ ಅಕ್ಷರಜ್ಞಾನವಿಲ್ಲದೇ ತಮ್ಮದೇ ಸಾಂಸ್ಕೃತಿಕ ನೆಲೆಯಲ್ಲಿ ಬುದ್ಧಿಪೂರ್ವಕವಾಗಿ ಆಚಾರ-ವಿಚಾರಗಳ ಮೂಲಕ ಕಾವ್ಯ ಕಟ್ಟಬಲ್ಲ ಶಕ್ತಿ ನಮ್ಮ ಜನಪದರಿಗೆ ಇದೆ. ಅಕ್ಷರ ಬಲ್ಲ ವಿದ್ಯಾವಂತರ ಸಾಹಿತ್ಯ ಸೃಷ್ಟಿಯೇ ಅಪ್ಪಟ ಸತ್ಯ ಸಂಗತಿಯಲ್ಲ. ಅದೇ ರೀತಿ ನಿರಕ್ಷರಿಗಳ ಸೃಷ್ಟಿಯ ಸಾಹಿತ್ಯವೂ ಸಹ ಅಪ್ಪಟ ಸುಳ್ಳಿನ ಸಂಗತಿಯಲ್ಲ. ವಾಸ್ತವಾಂಶದ ಆಚಾರ-ವಿಚಾರ ಅರಿವು ಅವರವರ ಭಾವನೆಗಳಿಗೆ ಬಿಟ್ಟದ್ದು.
ಕೆಲವರ ಪ್ರಕಾರ ಭಾರತೀಯ ಸಂಸ್ಕೃತಿಯೆಂದರೆ ಅದು ವೈದಿಕ ಸಂಸ್ಕೃತಿ ಎಂದಷ್ಟೇ ಭಾವಿಸಿಕೊಂಡಿದ್ದಾರೆ. ಅದರಾಚೆಗೆ ಬಹು ವಿಸ್ತಾರವಾಗಿ ತನ್ನ ಶಕ್ತಿ-ಸಾಮಾರ್ಥ್ಯಗಳನ್ನು ಗುರುತಿಸಿಕೊಂಡು ಅಗಾಧವಾಗಿರುವುದು ಈ ಜನಪದ ಸಂಸ್ಕೃತಿಯೂ ಸಹ. ಸಂಸ್ಕೃತಿಯೆಂಬುದು ಬಹು ಅಮೂಲ್ಯವಾದದ್ದು ಅದು ಕೇವಲ ಗ್ರಂಥಸ್ಥ ರಚನೆಯಾಗಿರಬೇಕಿಲ್ಲ. ವಾಚಿಕ ಪರಂಪರೆಯಲ್ಲೂ ಅದನ್ನು ತೂಕಬದ್ಧವಾಗಿ ಅನ್ವಯಿಸಬಹುದು. ಈ ವಾಚಿಕ ಪರಂಪರೆಯನ್ನು ಅರ್ಥೈಸಿಕೊಳ್ಳಲಾರದ ಮತ್ತು ಗ್ರಂಥಸ್ಥ ಸಂಸ್ಕೃತಿಯೇ ಶ್ರೇಷ್ಠವೆಂದೂ ಅದು ಸಾಮಾನ್ಯರು ಅವಲೋಕಿಸಲು ಅಸಾಧ್ಯವೆಂದೂ ಅಂದರೆ ಕವಿರಾಜಮಾನರ್ಗಕಾರನಿಗೆ ತದ್ವಿರುದ್ಧವಾಗಿ ಜನಪದ ಸಾಹಿತ್ಯವನ್ನು ಕುರಿತು ಕೆಲ ವಿದ್ಯಾವಂತರು/ಪಂಡಿತರು ಅದನ್ನು ’ನಿರಕ್ಷರ ಕುಕ್ಷಿಗಳ ಸಾಹಿತ್ಯವೆಂದು ಹೀಗಳೆದದ್ದುಂಟು. ಈ ಸಂದರ್ಭದಲ್ಲಿ ಮಧುರನ ಪದ್ಯವೊಂದು ನೆನಪಾಗುತ್ತದೆ:
ಪಂಡಿತರುಂ ವಿವಿಧ ಕಳಾ
ಮಂಡಿತರುಂ ಕೇಳತಕ್ಕ ಕೃತಿಯಂ ಕ್ಷಿತಿಯೊಳ್
ಕಂಡರ್ ಕೇಳ್ವೊಡೆ ಗೊರವರ
ದುಂಡಿಚೆಯೇ ಬೀದಿವರೆಯೇ ಬೀರನ ಕಥೆಯೇ
(ಧರ್ಮನಾಥಪುರಾಣ)
ಎಂದು ಮಧುರ ಪ್ರಶ್ನಿಸಿದ್ದಾನೆ. ಮಾರ್ಗ ಕವಿಯಾದ ಈತ ದೇಶಿಯತೆಯನ್ನು ತನಗೆ ತಾನೇ ತಿಳಿಯದೇ ಹೀಯ್ಯಾಳಿಸಿದ್ದಾನೆ. ಅಂದರೆ ಮಾರ್ಗದ ಮಹತ್ವದ ಬಗ್ಗೆ ಹೇಳುವುದರ ಮೂಲಕ ದೇಸಿಯತೆಯೆಂಬುದು ಕೇವಲ, ಅಲ್ಪ, ಸಾಮಾನ್ಯ, ತೀರ, ಸಹಜ ವ್ಯಾಮೋಹದ ಭರದಲ್ಲಿ ಜನಪದವನ್ನು ತೆಗಳಿರುವುದರಲ್ಲಿ ತನಗೆ ತಾನೇ ಎಡವಿದ್ದಾನೆ. (ಆಕಾಶಕ್ಕೆ ಉಗುಳಿದರೆ ಅದು ಮತ್ತೆ ಮುಖದ ಮೇಲೆಯೇ ಬೀಳುತ್ತದೆಯಲ್ಲವೇ!?) ಯಾವುದೇ ಉತ್ತಮ ಸಾಹಿತ್ಯವಿರಲಿ, ಅದಕ್ಕೆ ಅದರದೇ ನೆಲೆ ಬೆಲೆಗಳಿರುತ್ತವೆ. ಅತ್ಯಂತ ವಿಶಿಷ್ಟ ಮಾನ-ಸನ್ಮಾನಗಳೂ ಒಳಗೊಂಡಿರುತ್ತವೆ. ಇದಕ್ಕೆ ಜನಪದವೂ ಹೊರತಲ್ಲವೆಂಬುದನ್ನು ಮರೆಯಬಾರದು.
ಜನಪದ ಸಾಹಿತ್ಯವು ಈ ನೆಲಕ್ಕೆ ಈ ಬದುಕಿಗೆ ನೇರವಾಗಿ ಸಂಬಂಧಿಸಿದ್ದಾಗಿದೆ. ಅದರಲ್ಲಿನ ಸುಖ-ದುಃಖಗಳಾಗಲಿ, ಅರಿವು-ಆಚಾರಗಳಾಗಲಿ, ನಂಬಿಕೆ-ಸಂಪ್ರದಾಯಗಳಾಗಲಿ, ಜನಸಾಮಾನ್ಯರ ತಿಳಿವಳಿಕೆಯ ಪ್ರಭಾವಗಳಾಗಿವೆ. ದೈನಂದಿನ ಬದುಕು, ಹಾಡು-ಪಾಡುಗಳನ್ನು ಮಾನವೀಯ ಸಂಬಂಧಗಳನ್ನು, ಪಶು-ಪಕ್ಷಿ, ಮರ-ಗಿಡ, ಬಳ್ಳಿ-ಬೆಳೆಗಳ ಕುರಿತು ಸಮೃದ್ಧವಾಗಿ ಅವಿನಾಭಾವದ ಮೂಲಕ ಲೀಲಾಜಾಲವಾಗಿ ಅಭಿವ್ಯಕ್ತಿಸಿದ ಸಾಹಿತ್ಯ ಇದಾಗಿದೆ. ಜೀವಪರವಾದುದನ್ನು ಒಪ್ಪಿಕೊಂಡು, ಇಲ್ಲದುದನ್ನು ಒಪ್ಪಿಕೊಳ್ಳದೇ ಬದುಕುವ ಸಂತೃಪ್ತಿ, ಅಂದರೆ ಇದ್ದುದರಲ್ಲಿಯೇ ಅನುಸರಿಸುವ ಜಾಯಮಾನ ಹಾಗೂ ಪ್ರೀತಿ-ವಿಶ್ವಾಸಗಳು ಇಲ್ಲಿ ಯಥೇಚ್ಛವಾಗಿದೆ. ಈಚಿನ ದಿನಮಾನಗಳಲ್ಲಿ ಅಕ್ಷರಸ್ಥ ಪರಂಪರೆಯಿಂದ ವಂಚನೆಗೀಡಾದುದರ ಪರಿಣಾಮವಾಗಿ ಜನಪದ ಸಂಸ್ಕೃತಿಯನ್ನು ಅದರದೇ ಆದ ನೆಲೆ-ಬೆಲೆಯಲ್ಲಿ ಮತ್ತೆ ಕಾಪಾಡುವ ಮನೋವೃತ್ತಿ ನಮ್ಮದಾಗಬೇಕಿದೆ.
ಈ ನಾಡಿನ ಸಂಸ್ಕೃತಿಯೂ ಯಾವ ವಲಯಕ್ಕೂ ಸೈ ಎನಿಸಿಕೊಳ್ಳುವ ಸರಳತೆಯ ಅಡಿಪಾಯ ಜಾನಪದದ ಮೇಲೆ ನಿಂತಿದೆ. ಜೀವನೋಪಾಯಕ್ಕಾಗಿ ಸರಳತೆಯ ಅಡಿಪಾಯ ಜಾನಪದದ ಮೇಲೆ ನಿಂತಿದೆ. ಜೀವನೋಪಾಯಕ್ಕಾಗಿ ಮೂಲ ಕಸುಬು ಕೃಷಿ ಮತ್ತು ಪಶುಪಾಲನೆಯಲ್ಲಿರುವ ಅನನ್ಯ ಸಂಬಂಧ ನಿಜಕ್ಕೂ ಅನುಪಮವಾದುದು. ಜಾನಪದದ ನಡೆ-ನುಡಿಗಳಲ್ಲಿ ಸದಾಕಾಲ ಪಾರದರ್ಶಕತೆಯಿರುವುದರಿಂದ ಅಲ್ಲಿ ಕವಿ ಕೃತಿಗಳ ಮಧ್ಯೆ ಅಂತರ ಕಡಿಮೆ. ಅಲ್ಲದೆ ಕೃತಕತೆ ಕಿಂಚಿತ್ತೂ ಇರುವುದಿಲ್ಲ. ಆದರೆ ಶಿಷ್ಟ ಪದರಿನಲ್ಲಿ ತಾರತಮ್ಯಗಳೇ ಅಧಿಕ. ಈ ಕಾರಣಗಳಿಂದ ಜನಪದರ ಬದುಕು ಇಲ್ಲಿ ಕೇವಲ (ಶಿಷ್ಟರಲ್ಲಿ) ಆಯ್ದುಕೊಂಡ ಬದುಕು ನಾಟಕೀಯ ಸಾಲಂಕೃತ ರಚನೆಯಾಗಿ ಹರಳುಗಟ್ಟುತ್ತದೆಯಷ್ಟೇ. ಜನಪದರು ತುಂಬು ಜೀವನವನ್ನೂ ತಾವರಿತುಕೊಂಡ ಅನುಭವಗಳನ್ನು ಮೌಖಿಕ ರಚನಾ ಸಾಹಿತ್ಯ ರಚನಾ ಶಿಲ್ಪದಲ್ಲಿ ಮುಗಿಸುತ್ತಾರೆ ಹಾಗೆಯೇ ಮುಂದುವರೆಸಿರುತ್ತಾರೆ. ಹೀಗಾಗಿ ಒಂದು ಬಗೆಯ ಅನಾವರಣದ ಸ್ಥಿತಿಯಲ್ಲಿಯೇ ಜನಪದರ ಆಶಯಗಳು ಸಾಹಿತ್ಯದಲ್ಲಿ ತಲೆಯೆತ್ತುತ್ತವೆ. ಅಂದರೆ ಸೌಂದರ್ಯಕ್ಕಿಂತ ಸಂದೇಶ, ಬಾಹ್ಯವೇಶಕ್ಕಿಂತ ಭಾವಕೋಶಕ್ಕೆ ಪ್ರಾಧಾನ್ಯತೆ ಹೆಚ್ಚು ಕಂಡುಬರುತ್ತದೆ.
ಜನಪದರು ತಮ್ಮ ಪರಿಮಿತವಾದ ಪರಿಕರಗಳಲ್ಲಿ ನಾಲಗೆಯ ಮೂಲಕ ತಕ್ಷಣ ಹುಟ್ಟುವ ಆಲೋಚನೆಗಳನ್ನು ತಕ್ಷಣ ಹೊರಹಾಕುತ್ತಾರೆ. ಶಿಷ್ಟರ ರೀತಿ-ನೀತಿಯಂತೆ ಬಹುವಾಗಿ ಯೋಚಿಸಿ ಕಾಲಹರಣದ ಪ್ರಕ್ರಿಯೆ ಮೇಲು-ಕೀಳು ಇತ್ಯಾದಿ ಮುಖಗಳು ಪ್ರಧಾನವಾಗಿ ಅಕ್ಷರ ಅವತಾರದ ಮೂಲಕ ಮೂಡಿಸಲಾಗುತ್ತದೆ. ಅಂದರೆ ಮುಚ್ಚಿದ ಬದುಕಿನ ಸೂಕ್ಷ್ಮಗಳನ್ನು ಅಭಿವ್ಯಕ್ತಿಸಿ ಅಸಹ್ಯಪಡಿಸಿದ್ದಲ್ಲದೆ ಆ ರೀತಿಯಿಂದ ಇತರರ ಮನಸ್ಸು ಅಲ್ಲೋಲ ಕಲ್ಲೋಲವಾಗಿಸಬಹುದು. ಆದರೆ ಜನಪದರಲ್ಲಿ ತಎರೆದ ಬದುಕಿನ ಸೂಕ್ಷ್ಮತೆಗಳಿದ್ದಾಗ್ಯೂ ಅವುಗಳನ್ನು ಮುಚ್ಚಿಡುತ್ತಾ ಅನಾವಶ್ಯಕ ರಂಪಾಟಗೊಳಿಸದೇ ತಮ್ಮ ಅನುಭವಕ್ಕೆ ಬಂದಿದ್ದರೂ ತಾಳ್ಮೆಯ ಸಂವೇದನೆಯ ಮೂಲಕ ಆದಷ್ಟು ಮುಚ್ಚಿಡಲು ಯತ್ನಿಸುವುದುಂಟು.
ಶಿಷ್ಟ ಅಥವಾ ಮಾರ್ಗಕಾರರು ತಮ್ಮ ಸಾಹಿತ್ಯದಲ್ಲಿ ಜೀವನ ಸಮಗ್ರತೆಗಾಗಿಯೇ ಅಥವಾ ಒತ್ತಾಯದಿಂದಲೋ, ಒತ್ತಡದಿಂದಲೋ ಅಷ್ಟಾದಶ ವರ್ಣನೆಗಳನ್ನು ತುರುಕಿದರು. ಹೀಗೆ ತಮಗೆ ತಾವೇ ಬಂಧನಕ್ಕೆ ಒಳಗಾಗಿ ವರ್ಣನೆಗಳಿಗೆ ಸೋತು ಅರ್ಥವಿಲ್ಲದೆ ಗ್ರಂಥಭಾರವಾಗಿಸಿದ್ದುಂಟು. ಆದರೆ ಇದಕ್ಕೆ ವಿರುದ್ಧವಾಗಿ ಜನಪದರು ಯಾವುದೇ ವಿಚಾರವನ್ನು ಒತ್ತಡಗಳಿಲ್ಲದೇ ಸಹಜವಾಗಿ ಪ್ರತಿಕ್ರಿಯಿಸುತ್ತಾ ಅದನ್ನು ಎಲ್ಲರೂ ತಲೆದೂಗುವಂತೆ ವರ್ಣಿಸುತ್ತಾ ಬಂದಿರುವಂಥದ್ದಾಗಿದೆ.
ಜನಪದರ ಜೀವನವೇ ಪ್ರಯೋಗಶೀಲವಾದುದು. ಅವರು ಏಕಕಾಲದಲ್ಲಿ ಅನೇಕ ಚಿಂತನೆಗಳ ಜೊತೆಗೆ ಒಡನಾಡಿ ಸೂಕ್ತವೆನಿಸಿದ್ದನ್ನು ಆಯ್ದುಕೊಳ್ಳುತ್ತಾರೆ. ಇಂತಹ ಸಂದರ್ಭದಲ್ಲಿ ಅವರ ಕ್ರಿಯಾ ಚಟುವಟಿಕೆಗಳು ಅವಸರದ್ದಾಗಿರುವುದಿಲ್ಲ. ’ಪ್ರತ್ಯಕ್ಷ ಮತ್ತು ಪರೋಕ್ಷ ಅಥವಾ ಪ್ರಮಾಣ’ ಎಂಬ ನಿಯಮಗಳೆಲ್ಲ ಬಹಳ ಅರ್ಥವತ್ತಾಗಿ ತೀರ್ಮಾನಗೊಳ್ಳುವಂಥದ್ದು. ಈಚೆಗೆ ಯಾಂತ್ರಿಕ ಜಗತ್ತಿನ ಪರಿಣಾಮವಾಗಿ ಮತ್ತು ಈ ವಿಜ್ಞಾನ ಚಿಂತನೆಯಲ್ಲಿ ಜನಪದರ ಬದುಕು ಕಾರಣಾಂತರಗಳಿಂದ ಅಯೋಮಯವಾಗುತ್ತಿರುವುದು.
ನಮ್ಮ ಪಾರಂಪರಿಕ ಜ್ಞಾನ ಮತ್ತು ಅನುಭವಗಳು ಪ್ರಯೋಗದಿಂದ ಪ್ರಾಪ್ತವಾಗುವುದುಂಟು. ಹಾಗೆಯೇ ಅನುಭವವೆಂಬುದು ಗ್ರಹಿಕೆಯಿಂದ, ಅನುಸರಣೆಯಿಂದ ಸಿದ್ಧವಾಗುತ್ತಿದೆ. ಇದಕ್ಕೆ ನಮ್ಮ ಜಾನಪದವೂ ಅಥವಾ ಜನಪದರೂ ಹೊರತಲ್ಲ. "ಆಹಾರ ಮತ್ತು ಔಷಧ ಪದ್ಧತಿಗಳು ಅನುಭವದಿಂದ ಸಿದ್ಧವಾದವು ಎಂದಾಗ ಅವು ನಿರಂತರ ಪ್ರಯೋಗಾತ್ಮಕದಿಂದ ಬಳಕೆಗೆ ಬಂದಿವೆ. ಜನಪದ ವಸತಿ, ಉಡುಪು, ಪಾತ್ರೆ, ವ್ಯವಸಾಯ, ಉಪಕರಣಗಳು, ಮಳೆ, ಭೂಮಿ, ವಾತಾವರಣ, ಸಂರಕ್ಷಣೆ, ಬೇಟೆ ಪರೀಕ್ಷೆ, ಪರಿವರ್ತನೆ, ಪ್ರಾಣಿ ಪಳಗಿಸುವಿಕೆ, ಸಸ್ಯ-ಇವೆಲ್ಲಾ ಜನಪದ ವಿಜ್ಞಾನದ ಪರಿಮಿತಿಯಲ್ಲಿ ಸೇರಿರುವುದಲ್ಲದೆ, ನಿರಂತರ ಪ್ರಯೋಗದಿಂದ ಒಪ್ಪಿತವಾದವುಗಳು". ಹರಿಯುವ ನೀರಿಗೆ ಅಣೆಕಟ್ಟು ನಿರ್ಮಿಸಿ ಅದನ್ನು ವಿವಿಧ ಉದ್ದೇಶಗಳಿಗೆ ಬಳಕೆ ಮಾಡುವಂತೆ, ವಾತಾವರಣದಲ್ಲಿ ಸಹಜವಾಗಿ ಅರಿವಿನಿಂದ ಅನುಭವಕ್ಕೆ ಬರುವ ವಿಚಾರಗಳನ್ನು ಜನಪದ ಸಂಸ್ಕೃತಿಯ ಮೂಲಕ ಪ್ರವಹಿಸುವಂತೆ ಅದು ನೋಡಿಕೊಳ್ಳುವುದು.
ವಿಜ್ಞಾನ ಬೆಳೆಬೆಳೆದಂತೆ ಅದರ ಜ್ಞಾನದ ಹರವು, ಜಾತಿ, ವರ್ಗ, ಪಂಗಡ, ಧರ್ಮರಹಿತವಾಗಿ ಎಲ್ಲರಿಗೂ ಅದು ತಲುಪುವಂತಾಯಿತು. ಇದರ ಮೂಲೋದ್ದೇಶ ಆಧುನಿಕತೆಯ ಮಂತ್ರವಾಗಿರಬಹುದು. ಹೊಸ ಶೋಧನೆಯ ಪ್ರಭುತ್ವವಾಗಿರಬಹುದು. ಆದರೆ ಅದರ ಆವಿಷ್ಕಾರವು ಮುನ್ನಡೆದಂತೆ, ಕುಶಲಕರ್ಮಿಗಳ ರಚನಾತ್ಮಕ ಮನಸ್ಸುಗಳಿಗೆ ಬೆಲೆ ಕಡಿಮೆಯಾಗುತ್ತಾ ಸಾಗಿದ್ದು, ಬಹುಜನರ ಸೃಜನಶೀಲತೆಯ ಚೌಕಟ್ಟನ್ನು ಆಧುನಿಕತೆಯ ಹೆಸರಿನಲ್ಲಿ ತಟಸ್ಥಗೊಳಿಸಿದ್ದು. ಸ್ಥಳೀಯ ಕೈಗಾರಿಕೆ, ಉತ್ಪಾದನೆ, ಕಾರ್ಮಿಕವರ್ಗ ಮತ್ತು ಮಾರುಕಟ್ಟೆಗಳೆಲ್ಲಾ ಜಾಗತಿಕರಣದ ಹಿನ್ನೆಲೆಯಲ್ಲಿ ಮೂಲೆಗುಂಪಾಗತೊಡಗಿವೆ. ಹಾಗೆಯೇ ವಸಾಹತೀಕರಣ ಉದಾರೀಕರಣದ ಧೋರಣೆಗಳಲ್ಲಿ ನಮ್ಮತನದ ಜ್ಞಾನಕ್ಕೆ ಸ್ಪಂದನೆ ಕಡಿಮೆಯಾಗುತ್ತಿದೆ. ಜಾನಪದದ ತಳಪಾಯಕ್ಕೆ ಜಾಗತೀಕರಣವು ಹೇಗೆ ನುಗ್ಗುತ್ತಿದೆ ಎಂದರೆ ಆಸೆ-ಆಮಿಷಗಳನ್ನು ತೋರುವುದರ ಮೂಲಕ, ಮನಸ್ಸನ್ನು ಛಿದ್ರಗೊಳಿಸಿ ಸಂಮ್ಮೋಹನಗೊಳಿಸುವುದರ ಮೂಲಕ ಉದಾಹರಣೆಗೆ ಹಳ್ಳಿಯ ಜನರಲ್ಲಿ ತಮಗೆ ಬೇಡವಾದ ವಸ್ತುಗಳನ್ನು ಸಂಗ್ರಹಿಸಿಡುವ ಮನೋಭಾವವಿರುವುದುಂಟು. ಇದನ್ನರಿತ ನಗರ ಪ್ರದೇಶದ ಜನರು ಅವರಿಗೆ ಕೊಬ್ಬರಿ ಮಿಠಾಯಿಯ ಹೊಸ ರುಚಿಯನ್ನು ತೋರಿಸಿ ಆ ಹಳೆಯ ವಸ್ತುಗಳನ್ನು ದಕ್ಕಿಸಿಕೊಳ್ಳುತ್ತಾರೆ. ನಂತರ ಸ್ವಲ್ಪ ಉಪಯುಕ್ತವೆನ್ನಬಹುದಾದ ವಸ್ತುಗಳಿಗೂ ಹೆಚ್ಚು ಮಿಠಾಯಿಯನ್ನು ಕೊಡುವುದರ ಮೂಲಕ ಅವುಗಳನ್ನೂ ಲಪಟಾಯಿಸುವುದುಂಟು. ಹಳ್ಳಿಗರಿಂದ ಪಡೆದುಕೊಂಡ ಕಚ್ಛಾ ವಸ್ತುಗಳಿಗೆ ಬಹು ಬುದ್ಧಿವಂತಿಕೆಯಿಂದ ನಾನಾ ರೀತಿಯ ಆಕಾರಗೊಳಿಸಿ, ರೂಪ ನೀಡಿ, ಬಣ್ಣ ಹಚ್ಚಿ ಮತ್ತೆ ಅದೇ ಹಳ್ಳಿಗರಿಗೆ ಹಣಕ್ಕೆ ಮಾರಾಟ ಮಾಡುತ್ತಾರೆ. ಇದು ಸಣ್ಣ ಪ್ರಮಾಣದಲ್ಲಿ ಸ್ಥಳೀಯವಾಗಿ ಕಂಡು ಬಂದರೆ ಈ ರೀತಿ ಕೆಲ ಅಭಿವೃದ್ಧಿ ಹೊಂದಿದ ದೇಶಗಳು ಅಭಿವೃದ್ಧಿ ಹೊಂದುತ್ತಿರುವ ಅಥವಾ ಅಧಿಕ ಸಂಪತ್ತಿನ ದೇಶಗಳಾಗಿರುವ ಪ್ರದೇಶದಲ್ಲಿ ನಾನಾ ವಿಧದ ಕಾರ್ಖಾನೆಗಳನ್ನು ಸ್ಥಾಪಿಸುತ್ತವೆ.
ನಮ್ಮಲ್ಲಿರುವ ಅಗಾಧವಾದ ಪ್ರಾಕೃತಿಕ ಸಂಪತ್ತಿಗೆ ಮುಂದುವರೆದ ರಾಷ್ಟ್ರಗಳು ತಮ್ಮ ಆಸೆಯ ಕಂಗಳನ್ನು ತೆರೆದಿಟ್ಟಿದ್ದಾರೆ. ಉದ್ಯೋಗ ಮತ್ತು ಹಣದ ಬಲೆಯ ಬೀಸಿ ನಮ್ಮ ಸಂಪತ್ತನ್ನು ನಮ್ಮಲ್ಲೇ ಕರಗಿಸಿ ಅದರಲ್ಲಿನ ಕೇವಲ ಇಪ್ಪತ್ತು ಭಾಗವನ್ನು ನಮ್ಮವರಿಗೆ ಕೊಟ್ಟಂತೆ ಮಾಡಿ, ಇನ್ನುಳಿದ ಎಂಭತ್ತು ಭಾಗವನ್ನು ತಮ್ಮ ಐಷರಾಮಿ ಭೋಗಕ್ಕಾಗಿ ಬಳಸಿಕೊಳ್ಳುತ್ತೇವೆ. ಇದರಿಂದ ಸ್ಥಳೀಯ ಜನಪದರ ಬದುಕು ದಿನದಿನಕ್ಕೂ ಕಂಗಾಲಾಗಿರುವುದುಂಟು ಅಲ್ಲದೆ ಅವರ ನೆಲ-ಜಲಕ್ಕೂ ತೀರಾ ಸಂಚಕಾರ ಬಂದೊದಗಿದೆ.
ಜಾಗತೀಕರಣದ ವೈಪರೀತ್ಯದಿಂದ ಜನಪದರ ಜೀವನ ಇಂದು ನಿಜಕ್ಕೂ ನೆಲಕಚ್ಚಿದೆ. ಈಗ ಏನಿದ್ದರೂ ಮೊದಲು ಮನುಷ್ಯನೆನಸಿಕೊಳ್ಳಬೇಕಾದರೆ ಆಚಾರ-ವಿಚಾರ, ನಂಬಿಕೆ, ಪ್ರೀತಿ ಮೊದಲಾದವುಗಳು ಬೇಡವಾಗಿದೆ. ಕೇವಲ ಹಣದ ಗಳಿಕೆಯೊಂದೇ ವಿಪರೀತವಾಗತೊಡಗಿದೆ. ಈ ಒಂದೇ ತತ್ವ ಎಲ್ಲರಲ್ಲೂ ಭೂತದಂತೆ ಆವರಿಸಿಕೊಂಡಿರುವುದರಿಂದ ಜನರಲ್ಲಿ ಮಾನವೀಯ ಮೌಲ್ಯಗಳು ಕಣ್ಮರೆಯಾಗಿವೆ. ಕಣ್ಣಿಗೆ ಕಾಣುವ (ಮರ, ಗಿಡ, ಕಲ್ಲು, ಮಣ್ಣು ಇತ್ಯಾದಿ) ನೈಸರ್ಗಿಕ ಸಂಪತ್ತನ್ನು ಎಷ್ಟು ಸಾಧ್ಯವೋ ಅಷ್ಟು ಕೊಳ್ಳೆ ಹೊಡೆದು ಉದ್ಯಮಿಯಾಗುವುದೇ ದೊಡ್ಡ (ದಡ್ಡ) ತನವಾಗಿರುವುದು ಒಂದು ಹಂತದಲ್ಲಿ ಸಹಜತೆಯತ್ತ ಸಾಗಿದೆ.
ಅದೇ ರೀತಿ ಜನಪದ ಸಾಹಿತ್ಯವು ಜಾಗತೀಕರಣದ ಸಂದರ್ಭದಲ್ಲಿ ಅನೇಕ ಸಮಸ್ಯೆಗಳ ಸುಳಿಯಲ್ಲಿದೆ. ಇಂದು ಐದಾರು ವರುಷದ ಮಕ್ಕಳಲ್ಲಿ ಕಂಪ್ಯೂಟರ್ ಜ್ಞಾನ ಹೆಚ್ಚಾಗುತ್ತಿರುವ ಮತ್ತು ಆ ಮೂಲಕ ಅದರ ಮುಂದೆ ದಿನಪೂರ್ತಿ ಕೂತು ವೈವಿಧ್ಯಮಯವಾದ ಆಟಗಳನ್ನು ಆಡುವುದರಿಂದ ಜಾನಪದದ ವಿಷಯಗಳನ್ನು ಅವರಿಗೆ ತಿಳಿಸಿಕೊಡುವುದು ಸಾಧ್ಯವಾಗುತ್ತಿಲ್ಲ. ಪ್ರತಿ ಮನೆಗಳಲ್ಲಿ ಆಚರಣೆಗೊಳ್ಳುವ (ದೀಪಾವಳಿ, ಯುಗಾದಿ, ದಸರಾ, ಹೋಳಿ ಹುಣ್ಣಿಮೆ ಮೊದಲಾದವು) ಹಬ್ಬಗಳ ಜನಪದ ಸಂಸ್ಕೃತಿಯ ಮಹತ್ವ ಇಂದಿನ ಪೀಳಿಗೆಯವರಿಗೆ ಗೊತ್ತಿಲ್ಲ. ಇದರ ಮಹತ್ವ ತಿಳಿಸಿಕೊಡುವ ಇಂದಿನ ಹಿರಿಯರಾದವರಿಗೂ ಸರಿಯಾದ ಮನವರಿಕೆಯಿಲ್ಲ. ಅವಿಭಕ್ತ ಕುಟುಂಬಗಳೆಲ್ಲಾ ವಿಭಕ್ತಿ ಕುಟುಂಬಗಳಾಗಿರುವಾಗ, ಹೇಗಾದರೂ ಮಾಡಿ ದಉಡಿಮೆ (ಹಣಗಳಿಸುವ)ಯೊಂದೇ ಮುಖ್ಯ ಆಲೋಚನೆಯಲ್ಲಿರುವಾಗ, ತಮ್ಮ ಮಕ್ಕಳು ಕೇವಲ ಬಿಳಿ ಕಾಲರಿನ, ತಂಪು ವಾತಾವರಣದಲ್ಲಿನ ಉದ್ಯೋಗಿಗಳಾಗಿ ಬದುಕಬೇಕೆನ್ನುವಾಗ, ಮಾಧ್ಯಮಗಳ ಸಂಸ್ಕೃತಿ ದಿನದಿನಕ್ಕೂ ಆವರಿಸುತ್ತಿರುವಾಗ ಜನಪದದ ಆಚಾರ-ವಿಚಾರಗಳನ್ನು ಅರಿತುಕೊಳ್ಳುವ ಮನೋಭಿಲಾಷೆ ಇಂದು ಯಾರಲ್ಲೂ ಕಂಡುಬರುತ್ತಿಲ್ಲ.
ಹಿಂದೆ ಅವಿಭಕ್ತ ಕುಟುಂಬಗಳಲ್ಲಿ ಹಿರಿಯರಾದವರು ಕಿರಿಯರಿಗೆ ಪ್ರತಿಯೊಂದು ವಿಷಯದಲ್ಲೂ ಹೇಳುವ-ಕೇಳುವ ಸಂದರ್ಭಗಳಿದ್ದವು. ಅಲ್ಲದೆ ಹಿರಿಯರಿಗೆ ಗೌರವಭಾವನೆ ನೀಡುವುದು ಹೆಚ್ಚಾಗಿತ್ತು. ಸೌಜನ್ಯ, ಭಯ-ಭಕ್ತಿ, ನಯ-ವಿನಯಗಳನ್ನು ತೂಗಿಸಿಕೊಂಡು ಹೋಗುವ ಗುಣಾತ್ಮಕ ಅಂಶಗಳು ಕಿರಿಯರಲ್ಲಿ ಮನೆ ಮಾಡಿಕೊಂಡಿದ್ದವು. ಮನೆ ತುಂಬ ಬಂಧು-ಬಳಗವಿದ್ದಾಗ ಸಹಜವಾಗಿ ಎಲ್ಲರಲ್ಲೂ ಅಂಜಿಕೆ-ಮರ್ಯಾದೆಗಳಿರುತ್ತಿದ್ದವು. ಅನಾವಶ್ಯಕವಾಗಿ ಮನೆಯಲ್ಲಿ ಯಾರೂ ಸಹ ಗಟ್ಟಿಧ್ವನಿಯಲ್ಲಿ ಮಾತುಗಳನ್ನಾಡುತ್ತಿದ್ದಿಲ್ಲ. ಏನಾದರೂ ಅಕಸ್ಮಾತ್ತಾಗಿ ಸಲ್ಲದು ಮಾತಾಡಿದರೆ ಯಾರಾದರು ಕೇಳಿಸಿಕೊಂಡಾರೆಂಬ ಅಥವಾ ಅನ್ಯಥಾ ಭಾವಿಸಿಕೊಂಡಾರೆಂಬ ಅಳಕು ಜನಪದರನ್ನು ಎಚ್ಚರಿಸುತ್ತಿತ್ತು. ಆದರೆ ಇಂದಿನ ಪರಿಸ್ಥಿತಿ ತೀರ ಭಿನ್ನವಾಗಿ ಅಯೋಮಯವಾಗಿದೆ. ವಿಭಕ್ತಿ ಕುಟುಂಬಗಳಲ್ಲಿ ಕೇವಲ ತಂದೆ-ತಾಯಿ ಎರಡು ಮಕ್ಕಳ ಜೀವನ ಅಷ್ಟೇ. ಚಿಕ್ಕಪ್ಪ-ಚಿಕ್ಕಮ್ಮ, ದೊಡ್ಡಪ್ಪ-ದೊಡ್ಡಮ್ಮ, ಮಾವ-ಅತ್ತೆ, ತಾತ-ಅಮ್ಮ, ಅಕ್ಕ-ತಂಗಿ ಎಂಬ ಸಂಬೋಧನೆಗಳೆಲ್ಲಾ ಮಾಯವಾಗಿ ಎಲ್ಲರಲ್ಲೂ ಅಂಕಲ್-ಆಂಟಿ ಎಂಬ ಆಧುನಿಕ ಸಂಸ್ಕೃತಿ ಮೈದಾಳಿದೆ. ಎಲ್ಲರನ್ನೂ ಒಂದೇ ದೃಷ್ಟಿಯಿಂದ ನೋಡುವುದರಿಂದ ಹಿರಿಯರು-ಕಿರಿಯರೆಂಬ ಭಾವನೆ ಇಂದಿನ ಮಕ್ಕಳಲ್ಲಿ ಮೂಡಿ ಬರುತ್ತಿಲ್ಲ.
ಒಟ್ಟಾರೆ ವಿಜ್ಞಾನ-ತಂತ್ರಜ್ಞಾನದ ಹಾದಿಯಲ್ಲಿ ಹಾಗೂ ಅಭಿವೃದ್ಧಿ ಎಂಬ ಮಂತ್ರೋಚ್ಛಾರಣೆಯಲ್ಲಿಯೂ ನಾವಿಂದು ಜನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಾಗಿದೆ.


ಡಾ.ರಾಜಶೇಖರ ಜಮದಂಡಿ
ಸಾಹಿತಿ-ಚಿಂತಕ
ಚಾಮರಾಜನಗರ-೫೭೧ ೩೧೩
ದೂ: ೯೪೪೮೪೪೧೪೭೧

ಅನನ್ಯ ಕಲಾಕೃತಿ ಮೂಡಬೇಕಾದರೆ ಅಸಾಧ್ಯ ಪರಿಶ್ರಮ ಬೇಕೇ ಬೇಕು

ಡಾ.ದೊಡ್ಡರಂಗೇಗೌಡ



ಸಂದರ್ಶನ: ಭಾನುಮತಿ ಚಿತ್ರಗಳು: ಶರಣ್ ಶಹಾಪುರ

ವಿಧಾನ ಪರಿಷತ್ ಸದಸ್ಯರಾಗಿದ್ದೀರಿ. ಕನ್ನಡ ನಾಡು-ಭಾಷೆ ಎದುರಿಸುತ್ತಿರುವ ಸಮಸ್ಯೆಗಳ ಕುರಿತಂತೆ ಧ್ವನಿ ಎತ್ತಲು, ಸರ್ಕಾರದ ಕಣ್ಣು ತೆರೆಸಲು ಇದು ಸದವಕಾಶ. ಇದನ್ನು ಹೇಗೆ ಬಳಸಿಕೊಳ್ಳುತ್ತಿದ್ದೀರಿ?
ಒಬ್ಬ ವಿಧಾನ ಪರಿಷತ್ತಿನ ಸದಸ್ಯನಾಗಿ... ಕನ್ನಡದ ಸಮಸ್ಯೆಗಳು ತಲೆಯೆತ್ತಿದಾಗೆಲ್ಲಾ ವಿಧಾನ ಪರಿಷತ್ತಿನಲ್ಲಿ ಕಲಾಪದ ಸಂದರ್ಭದಲ್ಲಿ ದೊಡ್ಡ ದನಿ ಎತ್ತಿ ಪ್ರಸ್ತಾಪಿಸುತ್ತೇನೆ. ಇದಕ್ಕೆ ಸಂಬಂಧಿಸಿದ ಮಂತ್ರಿಗಳ ಬಳಿಯೂ ಮಾತಾಡುತ್ತೇನೆ. ಕನ್ನಡಿಗರಾಗಿ ನಾವು ಮಾಡಬೇಕಾದ ಕಾರ್ಯಗಳು ಅನಂತವಾಗಿವೆ. ಸಮಯ ಕೂಡಿ ಬಂದಾಗ ಸನ್ಮಾನ್ಯ ಮುಖ್ಯ ಮಂತ್ರಿಗಳ ಬಳಿಯೂ ವಿಷಯ ಚರ್ಚಿಸುತ್ತೇನೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೊಡನೆ ಕೂಲಂಕಷವಾಗಿ ಇಂಥ ವಿಷಯಗಳು ಬಂದಾಗ ನಾವು ಏನೇನು ಮಾಡಬಹುದು ಎಂದೆಲ್ಲಾ ಆಲೋಚಿಸಿ ಕ್ರಿಯಾಶೀಲರಾಗಿದ್ದೇವೆ. ಅವರೂ ಸಕ್ರಿಯವಾಗಿ ಸ್ಪಂದಿಸುತ್ತಾರೆ. ನಾನು ಎಲ್ಲೇ ಉಪನ್ಯಾಸಗಳಿಗೆ ಹೋಗಲಿ, ಎಲ್ಲೇ ವಿಚಾರ ಸಂಕಿರಣಗಳಲ್ಲಿ ಪಾಲ್ಗೊಳ್ಳಲಿ, ಸಭೆ ಸಮಾರಂಭಗಳಲ್ಲಿ ಪಾಲ್ಗೊಂಡ ಎಡೆಯಲ್ಲೆಲ್ಲಾ ೧೯೬೫ರಿಂದಲೂ ಕನ್ನಡದ ಸಮಸ್ಯೆಗಳನ್ನು ಬಹಿರಂಗವಾಗಿ ಚರ್ಚಿಸಿ, ಜನರನ್ನು ಇತ್ಯಾತ್ಮಕ ಹಾದಿಯಲ್ಲಿ ಚಿಂತಿಸಿ ಕಾರ್ಯೋನ್ಮುಖರಾಗುವಂತೆ ಮಾಡುತ್ತಾ ಬಂದಿದ್ದೇನೆ. ಕನ್ನಡ ಚಳವಳಿಯ ಎಲ್ಲ ಹೋರಾಟಗಳಲ್ಲೂ ನಾನಿದ್ದೇನೆ, ಇರುತ್ತೇನೆ. ಯಾವತ್ತೂ ಕನ್ನಡದ ಕೆಲಸಗಳಿಗೆ ನಾ ಹಿಂದೆ ಬಿದ್ದಿಲ್ಲ!

ಜಾನಪದ ನಿಮ್ಮ ಆಸಕ್ತಿಯ ಕ್ಷೇತ್ರ. ಜಾನಪದ ಕ್ಷೇತ್ರದಲ್ಲೇ ನಿಮ್ಮ ಪಿಎಚ್‌ಡಿ ಅಧ್ಯಯನವನ್ನೂ ಮಾಡಿದ್ದೀರಿ. ಈ ಕ್ಷೇತ್ರದಲ್ಲಿ ಆಗಬೇಕಾದ ಕೆಲಸಗಳು ಯಾವುವು?
ಜಾನಪದ-ನನ್ನ ಆಸಕ್ತ ವಿಷಯ; ಹೃದಯಾಂತರಾಳದಿಂದ ಜಾನಪದವನ್ನು ಆರಾಧಿಸಿದವನು ನಾನು; ಹಳ್ಳಿ ಹಳ್ಳಿ ಸುತ್ತಿ ೧೯೭೦ರಿಂದಲೂ ಜಾನಪದ ಗೀತೆಗಳನ್ನು ಸಂಗ್ರಹಿಸಿದ್ದೇನೆ. ಈ ನಾಲ್ಕು ದಶಕಗಳ ಕಾಲವೂ ಜಾನಪದದ ಬಗೆಗೆ ಲೇಖನಗಳನ್ನು ಬರೆಯುತ್ತಾ ಬಂದಿದ್ದೇನೆ. ಆ ಎಲ್ಲ ಲೇಖನಗಳಲ್ಲಿ ಕೆಲವನ್ನು ಜೀವಂತ ಜಾನಪದ ಎಂದು ಪುಸ್ತಕ ರೂಪದಲ್ಲೂ ಪ್ರಕಟಿಸಿದ್ದೇನೆ. ಸಾವಿರಾರು ಭಾಷಣಗಳನ್ನು (ನಾಡಿನಾದ್ಯಂತ) ಮಾಡಿದ್ದೇನೆ. ಅಮೇರಿಕಾದ ಸಂಘ ಸಂಸ್ಥೆಗಳಲ್ಲೂ ನಾನು ಉಪನ್ಯಾಸಗಳನ್ನು ನೀಡಿದ್ದೇನೆ. (ಉದಾ-ಪಂಪ ಕನ್ನಡ ಕೂಟ. ಡೆಟ್ರಾಯಿಟ್. ಅಮೆರಿಕಾ: ಶ್ರೀ ವಿದ್ಯಾರಣ್ಯ ಕನ್ನಡ ಕೂಟ. ಇಲಿನಾಯ್; ಒಟ್ಟು ಹದಿನಾರು ಕಡೆ ನಾನು ನನ್ನ ಹೆಂಡತಿ ಕನ್ನಡ ಜಾನಪದ ಸಂಪದದ ಬಗ್ಗೆ ಪ್ರೌಢ ಉಪನ್ಯಾಸಗಳನ್ನು ನೀಡಿದ್ದೇವೆ. ಆಸ್ಟ್ರೇಲಿಯಾ ಬಾನುಲಿಯಲ್ಲೂ ಎರಡು ಬಾರಿ ಸುದೀರ್ಘವಾಗಿ ಮಾತಾಡಿದ್ದೇನೆ. ಅದು ವಿಶ್ವಾದ್ಯಂತ ಪ್ರಸಾರವಾಗಿದೆ. ವಿಶ್ವ ಕನ್ನಡ ಸಮ್ಮೇಳನ ಶುಭ ಸಂದರ್ಭಗಳಲ್ಲಿ ವಿಶೇಷ ಲೇಖನಗಳನ್ನು ನಾನೂ, ನನ್ನ ಸಂಗಾತಿ ಡಾ.ಕೆ.ರಾಜೇಶ್ವರಿ ಗೌಡ ಬರೆದಿದ್ದೇವೆ. ಅವೆಲ್ಲಾ ಪ್ರಕಟವಾಗಿದೆ. ನನ್ನ ಪಿಎಚ್‌ಡಿ ಅಧ್ಯಯನದ ವಿಷಯ: ಕನ್ನಡ ನವೋದಯ ಕಾವ್ಯ. ಒಂದು ಸಮಗ್ರ ಅಧ್ಯಯನ (೧೯೦೩ ರಿಂದ ೨೦೦೩ರವರೆಗೆ) ಜಾನಪದ ಗೀತೆಗಳ, ಕಥೆಗಳ, ಒಗಟುಗಳ, ಗಾದೆಗಳ, ಲಾವಣಿಗಳ ಸಂಚಯ ಇನ್ನೂ ಆಗಬೇಕಾಗಿದೆ. ಆಗಿರುವುದು ಆಂಶಿಕ. ಬೆಟ್ಟದಷ್ಟು ಬೆಳೆ ಇದೆ. ಸಂಗ್ರಹ ಆಗಲೇ ಬೇಕು. ವರ್ಗೀಕರಣ ಆಗಬೇಕು. ಕೃತಿಗಳ ರೂಪದಲ್ಲಿ ಸಚಿತ್ರವಾಗಿ ದಾಖಲಾಗಬೇಕು. ಹಳಬರೆಲ್ಲಾ ಕಾಲನ ಕ್ರೂರ ದವಡೆಗೆ ಸಿಲುಕಿ ಇಲ್ಲವಾಗುತ್ತಿದ್ದಾರೆ. ಅಂಥವರ ಬಲಿ ಜಾನಪದ ಗೀತೆ ನಿಧಿಯೇ ಇದೆ. ಅದು ಅನಾವರಣ ಆಗಬೇಕಾದ ಅನಿವಾರ್ಯತೆ ಇದೆ.
ಜಾನಪದ ಕಲೆಗಳು ಅಗಣಿತ. ಎಲ್ಲವೂ ವ್ಯವಸ್ಥಿತವಾಗಿ ದಾಖಲೀಕರಣ (ಆoಛಿumeಣಚಿಣioಟಿ) ಆಗಲೇಬೇಕಾಗಿದೆ. ಆಗಿರುವ ಕೆಲಸ ಏನೇನೂ ಸಾಲದು (ಈ ಕಾರ್ಯ ಎಷ್ಟು ಮಾಡಿದರೂ ಮುಗಿಯದು!) ಸೋಮನ ಕುಣಿತ, ಪಟದ ಕುಣಿತ, ಹಲಗೆ ಕುಣಿತ, ಬೀಸು ಕಂಸಾಳೆ, ಕೋಲಾಟ, ಸೋಬಾನೆ ಪದಗಳು ಇತ್ಯಾದಿ ಇತ್ಯಾದಿ ಎಲ್ಲವೂ ಚಿತ್ರೀಕರಣ ಆಗಬೇಕು. ಯಕ್ಷಗಾನ, ಕೋಲ, ನಾಗಮಂಡಲ ಮುಂತಾಗಿ ಪ್ರತಿಯೊಂದು ಜಾನಪದೀಯ ಕಲೆಯೂ ದೃಶ್ಯ ಮಾಧ್ಯಮದಲ್ಲೇ ದಾಖಲಾಗಬೇಕು.

ಜಾನಪದ ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ಘೋಷಣೆಯಾಗಿದೆ. ಈ ವಿಶ್ವವಿದ್ಯಾಲಯದ ಮೂಲಕ ಏನನ್ನು ಸಾಧಿಸಬಹುದು? ಈ ವಿಶ್ಯವಿದ್ಯಾಲಯದ ರೂಪುರೇಷೆಗಳು ಹೇಗಿರಬೇಕು ಎಂದು ಬಯಸುತ್ತೀರಿ?
ಜಾನಪದ ವಿಶ್ವವಿದ್ಯಾಲಯ ಆಗಬೇಕೆಂದು ವಿಧಾನ ಪರಿಷತ್ತಿನಲ್ಲೂ ಬೇರೆ ಬೇರೆ ಸಂಘ ಸಂಸ್ಥೆಗಳಲ್ಲೂ ಕೋಲಾರದ ಆದಿಮ ಮುಂತಾದ ಸಂಸ್ಥೆಯ ಉತ್ಸವಗಳಲ್ಲೂ ವಿವರವಾಗಿ ಉಪನ್ಯಾಸಗಳನ್ನೂ ನೀಡಿದ್ದೇನೆ. ಕರ್ನಾಟಕ ರಾಜ್ಯ ಸರ್ಕಾರ ಸಕ್ರಿಯವಾಗಿ ಸ್ಪಂದಿಸಿದೆ. ಹಾವೇರಿ ಜಿಲ್ಲೆಯ ಶಿಗ್ಗಾವಿ ಬಳಿ ಗೋಟಗೊಡಿ ಪಕ್ಕವೇ ವಿಸ್ತಾರ ಭೂಮಿಯಲ್ಲಿ ಜಾನಪದ ವಿಶ್ವವಿದ್ಯಾಲಯದ ಪ್ರಾರಂಭದ ಎಲ್ಲ ಪ್ರಕ್ರಿಯೆಗಳು ಸಾಂಗೋಪಾಂಗವಾಗಿ ನಡೆಯುತ್ತಿವೆ. ಜಾನಪದ ಮಹಾನ್ ಸಾಗರದಂತೆ; ವಿಶಾಲವಾದ ಅಂಬರದಂತೆ; ಬೃಹತ್ ಹಿಮಾಲಯದಂತೆ. ಅಗಣಿತ ವಿಭಾಗಗಳನ್ನು ಪ್ರಾರಂಭಿಸಬಹುದು. ಸಮರ್ಪಕವಾಗಿ ಸಮಗ್ರ ಅಧ್ಯಯನಕ್ಕೆ ಅನುವು ಮಾಡಿಕೊಡಬಹುದು.
೧) ಶ್ರವ್ಯ ಕಲೆಗಳು
೨) ದೃಶ್ಯ ಕಲೆಗಳು
೩) ಪ್ರದರ್ಶಕ ಕಲೆಗಳು
೪) ಕೃಷಿ ಸಂಬಂಧಿತ ಜಾನಪದ
೫) ವೃತ್ತಿಮೂಲ ಜಾನಪದ
ಈ ಎಲ್ಲ ವಿಭಾಗಗಳನ್ನೂ ಪ್ರಾರಂಭಿಸಿ ಈ ಮಣ್ಣಿನ ಸೊಗಡಿಗೆ ಅನುಗುಣವಾಗಿ, ಇಲ್ಲಿನ ಕನ್ನಡ ಸಂಸ್ಕೃತಿಯ ಹಿನ್ನೆಲೆಯಲ್ಲಿ ನಮ್ಮ ಜಾಯಮಾನಕ್ಕೆ ಸಂಬಂಧಿಸಿದಂತೆ ಶಾಸ್ತ್ರೀಯ ಅಧ್ಯಯನಕ್ಕೆ ಮೊದಲು ಕಾರ್ಯಕರ್ತರನ್ನು ತಯಾರು ಮಾಡಬೇಕು. ಆನಂತರ ಪಂಡಿತ ಪದವೀಧರರನ್ನು ತಜ್ಞರನ್ನು ಸಂಶೋಧಕರನ್ನು ತಯಾರು ಮಾಡಬೇಕು. ತಜ್ಞ ಜಾನಪದ ಪಡೆಯನ್ನೇ ಕಟ್ಟಬೇಕು. ಸಂಶೋಧನೆ ಪ್ರಕಟಣೆಗೆ ಕಲಿಕೆಗೆ-ಎಲ್ಲಕ್ಕೂ ಪ್ರಶಿಕ್ಷಣ ನೀಡುತ್ತಾ ತಾಲೀಮು ಮುಖಾಂತರ ಅಳಿಯುತ್ತಿರುವ ಜಾನಪದೀಯ ಸಾಹಿತ್ಯ/ ಸಂಗೀತ/ ನಾಟಕ/ ಶಿಲ್ಪ/ ನರ್ತನ/ ವೈದ್ಯ/ ಆಚಾರ/ ವಿಚಾರ/ ಜಾತ್ರೆ/ ಉತ್ಸವ/ ಹಬ್ಬ/ ಹರಿದಿನ ಹೀಗೆ ಅನಂತಮುಖಿ ಜಾನಪದದ ವೈಜ್ಞಾನಿಕ ಅಧ್ಯಯನ ವ್ಯವಸ್ಥಿತವಾಗಿ ಸಾಗುವಂತೆ ಜಾನಪದ ವಿಶ್ವವಿದ್ಯಾಲಯ ನಿರಂತರವಾಗಿ ಕಾರ್ಯೋನ್ಮುಖವಾಗಿ ಬಿಡುವಿರದೆ ದುಡಿಮೆ ಬೇಕಾಗಿರುತ್ತದೆ. ನಮ್ಮ ಜಾನಪದೀಯ ಸಂಸ್ಕೃತಿಯನ್ನು ಆಮೂಲಾಗ್ರವಾಗಿ ವಿಶ್ವವಿದ್ಯಾಲಯಗಳು ಕಟ್ಟಿಕೊಡಲು ಪ್ರೇರಕ/ಪೂರಕ-ಆಕರತಾಣಗಳಾಗಬೇಕಾಗಿದೆ.

ಕನ್ನಡ ಕಾವ್ಯ ಕ್ಷೇತ್ರದಲ್ಲಿ ಕೃಷಿ ಮಾಡಿದ್ದೀರಿ. ನಿಮ್ಮ ಕೃತಿಗಳಿಗೆ ಸರಿಯಾದ ಮಾನ್ಯತೆ ದಕ್ಕಿಲ್ಲ ಎಂಬ ಹಳಹಳಿಕೆ ನಿಮಗಿದೆ. ಈ ಬಗ್ಗೆ ಇತ್ತೀಚಿಗೆ ಬಹಿರಂಗ ಸಭೆಯೊಂದರಲ್ಲಿ ಮಾತನಾಡಿದ್ದೀರಿ. ಇದು ಯಾಕೆ?
೧೯೬೧ರಿಂದಲೂ ಸಕ್ರಿಯವಾಗಿ ಸಾಹಿತ್ಯದಲ್ಲಿ ನಾನು ನನ್ನ ಇಡೀ ಬದುಕನ್ನೇ ತೊಡಗಿಸಿಕೊಂಡಿದ್ದೇನೆ. ಇದುವರೆಗೆ ೯೦ ಕೃತಿಗಳನ್ನು ಪ್ರಕಟಿಸಿದ್ದೇನೆ. ಸಾಹಿತ್ಯ ಕ್ಷೇತ್ರದಲ್ಲಿ ವಿಪರೀತ ರಾಜಕೀಯವಿದೆ. ಜಾತೀಯತೆ ಇದೆ. ಅದೆಲ್ಲಾ ಹೇಗಿದೆ ಎಂದರೆ-ಕೆರೆಯ ಒಳಗೆ ದಡದಲ್ಲಿ ಇರುವ ಉಸುಕಿನಂತೆ! ಮೇಲ್ನೋಟಕ್ಕೆ ನೀರಂತೆ ಕಂಡರೂ ಕಾಲಿಟ್ಟರೆ ಆಗ ಗೊತ್ತಾಗುತ್ತದೆ ಅದು ಕೆಸರಿನ ಹೊಂಡ ಎಂದು! ಅಲ್ಲಿ ಸಿಲುಕಿಕೊಂಡರೆ ಮುಗಿಯಿತು ಕಥೆ! ಹೀಗಾಗಿ ಶೂದ್ರ ಸಾಹಿತಿಗಳನ್ನು ತುಳಿಯುವವರೇ ಹೆಚ್ಚು! ಇವರನ್ನು ದಲಿತರೂ ಸೇರಿಸಿಕೊಳ್ಳುವುದಿಲ್ಲ. ಹೀಗಾಗಿ ಬುದ್ಧಿ ಜೀವಿಗಳ ಪಾಲಿಗೆ ಶೂದ್ರರು-ಅಸ್ಪೃಶ್ಯರು! ಸಾಹಿತಿಗಳ ಪಾಡು-ಅಸಂಘಟಿತ ಕಾರ್ಮಿಕರ ಹಾಗೇ!
ನಾನೂ ಎಲ್ಲವನ್ನೂ ಈ ನಾಲ್ಕೂವರೆ ದಶಕಗಳ ಕಾಲ ಸಹಿಸಿಕೊಂಡು ಬಂದೆ. ಇನ್ನೂ ಎಷ್ಟು ದಿನ ಹೀಗೆ ನರಸತ್ತ ಬದುಕನ್ನು ಬಾಳುವುದು ಎಂದು ಜ್ವಾಲಾಮುಖಿಯಾದೆ! ಸಮಾಜದ ಅರ್ಬುದ ರೋಗಗಳಿಗೆ ಮದ್ದು ಮಾಡುವಾಗ ಕೇವಲ ಬರಹದಲ್ಲಿ ಸಿಡಿದೆದ್ದಿದೆ. ಈಗ ಅಂಥ ವಿಷವ್ಯೂಹದ ಬಗೆಗೇನೆ ವ್ಯಗ್ರನಾಗಿದ್ದೇನೆ. ವ್ಯಾಘ್ರನಾಗಿದ್ದೇನೆ. ವ್ಯಾಘ್ರನಾಗಿ ಘರ್ಜಿಸಿದರೂ ಏನೂ ಪ್ರಯೋಜನವಿಲ್ಲ!

ಕನ್ನಡ ಸಿನಿಮಾ ಕ್ಷೇತ್ರದಲ್ಲೂ ದುಡಿದಿದ್ದೀರಿ. ನೂರಾರು ಚಿತ್ರಗೀತೆಗಳನ್ನು ಬರೆದಿದ್ದೀರಿ. ಚಿತ್ರರಂಗದ ನಿಮ್ಮ ಸಾಧನೆ ತೃಪ್ತಿ ತಂದಿದೆಯೇ? ಇತ್ತೀಚಿನ ದಿನಗಳಲ್ಲಿ ಚಿತ್ರರಂಗದಿಂದ ನೀವು ದೂರವೇ ಇದ್ದೀರಿ, ಇದಕ್ಕೇನು ಕಾರಣ? ಚಿತ್ರಗೀತೆಗಳನ್ನು ಕನ್ನಡ ಸಾಹಿತ್ಯ ಕ್ಷೇತ್ರ ಗಂಭೀರವಾಗಿ ಪರಿಗಣಿಸದೇ ಇರಲು ಕಾರಣವೇನು?
೧೯೭೫ ರಿಂದಲೂ ಕನ್ನಡ ಚಲನ ಚಿತ್ರಗಳಿಗೆ ನಾನು ಹಾಡುಗಳನ್ನು ಬರೆಯುತ್ತಾ ಬಂದಿದ್ದೇನೆ. ಇದುವರೆಗೆ ಕನಿಷ್ಠ ೩೦೦೦ ಗೀತೆಗಳನ್ನು ರಚಿಸಿ ಕೊಟ್ಟಿದ್ದೇನೆ. ಹತ್ತು-ಹದಿನೈದು ಚಿತ್ರಗಳಿಗೆ ಸಂಭಾಷಣೆಯನ್ನೂ ಬರೆದಿದ್ದೇನೆ. ಚಿತ್ರಕಥೆಗಳನ್ನು ಹೆಣೆದು ಕೊಟ್ಟಿದ್ದೇನೆ. ಏಳು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಎರಡು ಧ್ವನಿಸುರುಳಿಗಳಿಗೆ ಹಾಗೂ ಸಾಂದ್ರಿಕೆಗಳಿಗೆ ಸಂಗೀತ ನೀಡಿದ್ದೇನೆ. ಹನ್ನೊಂದು ಧ್ವನಿ ಸುರುಳಿಗಳಲ್ಲಿ ಸ್ವತಃ ಹಾಡಿದ್ದೇನೆ.
ತೃಪ್ತಿ ಕಂಡ ದಿನ ಸೃಜನಶೀಲತೆ ನಿಂತು ಹೋಗುತ್ತದೆ. ಜನುಮದ ಜೋಡಿ ಚಿತ್ರದ ನಂತರ ಯಾರೂ ನನ್ನ ಹಾಡು ಬರೆಯಲು ಕರೆದಿಲ್ಲ. ನಿರ್ಮಾಪಕರಾಗಲೀ/ನಿರ್ದೇಶಕರಾಗಲಿ ಕರೆದರೆ ಹೋಗುತ್ತೇನೆ. ಕರೆಯದೆ ಇದ್ದ ಕಡೆ ನಾನಾಗಿ ನಾನು ಹೋಗಿ ಯಾಚಿಸುವುದು ನನ್ನ ಪ್ರವೃತ್ತಿಯಲ್ಲಿಲ್ಲ!
ಹಳೆಯ ಸಂಸ್ಥೆಗಳು ಸ್ಥಗಿತವಾಗಿವೆ. ಹಿರಿಯ ಸಂಗೀತ ನಿರ್ದೇಶಕರು ಮೌನವಾಗಿದ್ದಾರೆ. ಅನುಭವೀ ನಿರ್ದೇಶಕ ಮೌನವಾಗಿದ್ದಾರೆ. ಅನುಭವೀ ನಿರ್ದೇಶಕರು ಮನೆಯಲ್ಲಿ ಕೆಲಸವಿಲ್ಲದೇ ಕೂತಿದ್ದಾರೆ. ಹೊಸಬರು ಅಗಣಿತ ಹುಟ್ಟಿಕೊಳ್ಳುತ್ತಿದ್ದಾರೆ. ಹೀಗಾಗಿ ಕಾಲಕ್ಕೆ ತಕ್ಕಂತೆ-ನಾನೂ ಸಹ ಹಿಂದೆ ಸರಿದಿದ್ದೇನೆ. (ನಿವೃತ್ತನಾಗಿದ್ದೇನೆ).
ಸಾಹಿತ್ಯ, ಸಂಗೀತ, ಕಲೆ, ಪತ್ರಿಕೋದ್ಯಮ, ಶಿಕ್ಷಣ-ರಾಜಕೀಯ.... ಎಲ್ಲ ಕ್ಷೇತ್ರಗಳಲ್ಲೂ ಗುಂಪುಗಾರಿಕೆ ಇದೆ. ಓಡುವ ಶಕ್ತಿ ಇದ್ದವರು ಓಡುತ್ತಾರೆ. ನೋಡುವ ಗುಣ ಇರುವವನು ಸುಮ್ಮನೇನೆ ನೋಡುತ್ತಾ ಕೂಡುತ್ತಾರೆ! ಈಗ ನಾನು ಓಡುವ ಮೂಡಿನಲ್ಲೂ ಇಲ್ಲ. ಓಡುವ ಶಕ್ತಿಯೂ ಇಲ್ಲ. ರಾಜಕೀಯ ಮಾಡಿ ಗೊತ್ತಿಲ್ಲ. ಲಾಬಿ ಇದ್ದರೆ ಬೆಳಕಿಗೆ ಬಂದ ಗುಲಾಬಿ! ಇಲ್ಲ ಅಂದರೆ ಹತಾಶನಾಗಿ ವ್ಯಕ್ತಿ ಆದಾನು ಶರಾಬಿ! ನಾನು ಅಲ್ಲೂ ಇಲ್ಲ; ಇಲ್ಲೂ ಇಲ್ಲ. ಎಲ್ಲೂ ಇಲ್ಲ...! ವಿಶ್ರಾಂತ ಸಂತ ನಾನು ಎಂದರೆ ನಂಬಿ!
ಚಿತ್ರರಂಗಕ್ಕೆ ಈಗ ಸಾಹಿತ್ಯ ಬೇಕಿಲ್ಲ. ಸಂಗೀತವೂ ಬೇಕಾಗಿಲ್ಲ! ಕಾಪಿ ಮಾಡೋದಕ್ಕೆ ಪ್ರತಿಭೆ ಯಾಕೆ ಬೇಕು; ಈಗೆಲ್ಲಾ ಕಾಪಿ-ಕ್ಯಾಟ್ಸ್! ಸೃಜನಶೀಲತೆಯೂ ಇಲ್ಲ... ಸ್ವಾಭಿಮಾನವೂ ಇಲ್ಲ. ಕದಿಯುವ ಕವಿಗಳು; ಹಿಗ್ಗಾಮುಗ್ಗಾ ಕದಿಯುವ ಸಂಗೀತಗಾರರು; ದುಡ್ಡು ದುಡಿಯ ಹೊರಟವರ ದೊಡ್ಡ ದೊಡ್ಡ ದಂಡು! ಹಿಂಡು! ಹಿಂಡು. ಹಣದ ಹಿಂದೆ ದೌಡು! ಗುಣ-ನಾಯಿಪಾಡು. ಸ್ವಂತಿಕೆ ಶೂನ್ಯ. ಚಮಚಾಗಿರಿ ಮಾನ್ಯ. ನಿರ್ಮಾಪಕನ ದೌರ್ಬಲ್ಯಗಳ ನೋಡಿಕೊಂಡು ಟ್ರ್ಯಾಪ್ ಮಾಡುವವನೇ ಈಗ ನಿರ್ದೇಶಕ, ಹೀರೋ-ಹೀರೋಯಿನ್,
ಅವನ ಮಕ್ಕಳು ಮರಿಗೆ ಬರೆಯದಿರುವುದೇ ಲೇಸು ಸ್ವಂತಿಕೆ ಇದ್ದರೆ ಸ್ವೋಪಜ್ಞತೆ ವಿಜಗೀಷು! ಏನನ್ನೂ ಮಾಡಲಾಗದವರು ಚಿತ್ರರಂಗದಲ್ಲೂ ಮಾಡಬಹುದು ಸಮೃದ್ಧ ತೇಲ್‌ಮಾಲೀಷು ಬಿಲೋದಿ ಬೆಲ್ಟ್ ಬರೆದರೆ ಸಾಕು ಕಾಸು-ಸಲೀಸು! ಶ್ರೇಷ್ಠತೆ-ಎಂದರೆ ಅದೇನದು? ಅಂತಾರೆ. ಅದಕ್ಕೆ ಹೀಗೆ ಬರುತ್ತಾರೆ.... ಬಂದವರು ಹಾಗೇ.... ಹೋಗುತ್ತಾರೆ. ಗುಣಮಟ್ಟವಿಲ್ಲ. ಹಣ ಘಟ್ಟವೆಲ್ಲಾ! ಹುಸಿ ಹುಸಿ ಪಟ್ಟವೆಲ್ಲಾ!
ಎಲ್ಲಿ ಕಾಮಾಲೆ ಕಣ್ಣುಗಳು, ಅಲ್ಲಿ ಅರುಚಿ ಹುಣ್ಣುಗಳು ಎಲ್ಲೆಲ್ಲಿ ವಸೀಲಿ ಬಾಜಿಗಳು, ಅಲ್ಲಲ್ಲಿ ಪಡಪೋಸಿ ಡಾಲುಗಳು ಕನ್ನಡದಲ್ಲಿ ನೂರಾರು ಒಳ್ಳೆಯ ಕಥೆ, ಕಾದಂಬರಿಗಳಿವೆ, ಕೃತಿಗಳಿವೆ, ಸಾವಿರಾರು ಶ್ರೇಷ್ಠ ಗೀತೆಗಳಿವೆ. ನಿರ್ಮಾಪಕರೇ ನಿರ್ದೇಶಕರೇ ಕಣ್ತೆರೆದು ನೋಡಿ; ತಿಪ್ಪೆಗಳ ಮೇಲೆ ಬೆಳೆವ ಅಣಬೆಗಳಂತೆ ಚಿತ್ರಗಳು ಹುಟ್ಟಿಕೊಂಡರೆ ಅವುಗಳಿಗೆ ಶತಸಿದ್ಧ ಸಾವು!

ಕನ್ನಡ ಸಿನಿಮಾ ಕ್ಷೇತ್ರ ಮೊದಲಿನಂತಿಲ್ಲ. ಸದಭಿರುಚಿಯ ಸಿನಿಮಾಗಳು ಕಡಿಮೆ ಸಂಖ್ಯೆಯಲ್ಲಿ ನಿರ್ಮಾಣವಾಗುತ್ತಿದೆ. ರೀಮೇಕ್ ಚಿತ್ರಗಳಿಗೆ ನಿರ್ಮಾಪಕರು ಮಣೆ ಹಾಕುತ್ತಿದ್ದಾರೆ. ಯಾಕೆ ಕನ್ನಡ ಚಿತ್ರರಂಗ ನಮ್ಮದೇ ಆದ ಚಿತ್ರಗಳನ್ನು ಕೊಡಲು ವಿಫಲವಾಗುತ್ತಿದೆ?
ಯಾರಿಗೂ ಬೇಕಾಗಿಲ್ಲ... ಅತ್ಯುತ್ತಮ ಕಲಾಕೃತಿ ನಿರ್ಮಾಣ! ಈಗ ಎಲ್ಲೆಲ್ಲೂ ರಿಯಲ್ ಎಸ್ಟೇಟ್ ದಂಧೆ! ಹಡಬಿಟ್ಟಿ ಬಂದ ದುಡ್ಡು ತಂದು ಚಿತ್ರರಂಗಕ್ಕೆ ಸುರಿ...! ಬ್ಲಾಕ್ ಮನಿಯನ್ನು ವೈಟ್ ಮಾಡು...
ಕಲಾ ನೈಪುಣ್ಯ ಬೇಕಿಲ್ಲ. ಸಂಸ್ಕಾರ ಬೇಕಿಲ್ಲ. ಅಭಿರುಚಿ ಬೇಕಾಗೇ ಇಲ್ಲ. ತಾಲೀಮು ಮೊದಲೇ ಇಲ್ಲ. ರಂಗಭೂಮಿ ಅನುಭವ ಇಲ್ಲವೇ ಇಲ್ಲ.
ದುಡ್ಡಿದ್ದವನೇ ಹೆಡ್ಡು!
ಪ್ರತಿಭಾವಂತ ಈಗ ಗೊಡ್ಡ.
ಚಿತ್ರರಂಗ ಸಂಪೂರ್ಣವಾಗಿ ಪಡ್ಡೆ
ಹುಡುಗರ ಷೆಡ್ಡು!
ತಂತ್ರಜ್ಞ ಹಿಂದೆ ಸರಿದು ಗುಲ್ಡು
ಹಿರಿಯ ಕಲಾವಿದ ಆಗಿನ ಕಾಲಕ್ಕೆ ಗೋಲ್ಡು! ಈಗೇನಿದ್ದರೂ ಹಿಡಿದುಕೊಂಡಿರಬೇಕು ಹಳೇ ಷೀಲ್ಡು! ಗಬ್ಬೆದ್ದು ಹೋಗಿದೆ ಕನ್ನಡ ಫಿಲಂ-ಫೀಲ್ಡು!
ರೀ ಮೇಕ್-ಮಾಡೋದು ಸುಲಭ.
ರಾತ್ರಿಯೆಲ್ಲಾ-ಸಿನಿಮಾ ನೋಡು. ಬೇರೆ ಬೇರೆ ಭಾಷೆಯದು ಡಬ್ಬಿಂಗ್ ಮಾಡು. ಶ್ರಮ ಬೇಕಿಲ್ಲ. ಹುಡುಕ ಬೇಕಾಗಿಲ್ಲ ಸ್ಕ್ರಿಪ್ಟು! ಕೊಡಬೇಕಾಗಿಲ್ಲ-ಒಳ್ಳೆಯ ಸಿನಿಮಾ ಗಿಫ್ಟ್! ಸ್ವ-ಮೇಕ್ ಶ್ರಮಜೀವಿಗಳ ಕೆಲಸ. ರೀ-ಮೇಕ್ ಜಾಣರ ಜಿಪುಣರ ಸಾಹಸ.
ಅನನ್ಯ ಕಲಾಕೃತಿ ಮೂಡಬೇಕಾದರೆ ಅಸಾಧ್ಯ ಪರಿಶ್ರಮ ಬೇಕೇ ಬೇಕು. ಅಪೂರ್ವ ದುಡಿಮೆ ಮುಖ್ಯ. ಅದ್ವಿತೀಯ ಆಲೋಚನೆ ಮುಖ್ಯ. ಅಪ್ರತಿಮ ಕೈಂಕರ್ಯ ಇದ್ದರೆ ಮಾತ್ರ ಅತ್ಯುತ್ತಮ ಕಲಾ ಕೃತಿಯ ಅನುಸಂಧಾನ.

ಈಗಿನವರೆಗೆ ಇದೆಯೇ ಅಂಥ ಹುಡುಕಾಟದ ಅಸೀಮ ವ್ಯವಧಾನ?
some-ಖಾನ; ಸಂ-ಗಾನ; ಸಂ-ಗಾನ ಬಜಾನ; ಸಂ-ಸಂ ಖಂಡ, ತುಂಡು, ಬಾಟ್ಲಿ ರೌಂಡು ಇಷ್ಟರಲ್ಲೇ ಪರ‍್ಯವಸಾನ ಎರಡು ಲೌಸೀನ್; ಏಳು ಫೈಟ್, ನಾಲ್ಕು ಹಾಡು, ಒಂದು ಐಟಂ, ಒಂದು ರೇಪು, ಹತ್ತು ರೊಪ್, ರೆಡಿ ಕನ್ನಡ ಸಿನಿಮಾ ಸೊಂಪು!

ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಆಳುವ ಸರ್ಕಾರದ ಒಂದೊಂದೇ ಹಗರಣಗಳು ಹೊರಬರುತ್ತಲೇ ಇವೆ. ಇಡೀ ರಾಜಕೀಯ ಕ್ಷೇತ್ರವೇ ಹೊಲಸೆದ್ದು ಹೋಗಿದೆ. ಇಂಥ ಸನ್ನಿವೇಶದಲ್ಲಿ ಸಾಹಿತಿ-ಕಲಾವಿದರ ನಿಲುವು ಏನಾಗಿರಬೇಕು? ಯಾಕೆ ನಮ್ಮ ಈ ವಲಯ ಈ ಕಠಿಣ ಸಂದರ್ಭದಲ್ಲಿ ಸರಿಯಾದ ಪ್ರತಿಕ್ರಿಯೆಯನ್ನು ನೀಡುತ್ತಿಲ್ಲ?
ಭ್ರಷ್ಟಾಚಾರ ಈಗ ವಿಶ್ವವ್ಯಾಪಿ. ಎಲ್ಲಿಲ್ಲ ಭ್ರಷ್ಟಾಚಾರ ನೀವೇ ಹೇಳಿ! ಹಗರಣಗಳಿಲ್ಲದ ಬದುಕಿಲ್ಲ. ರಾಜಕೀಯ ಇಲ್ಲ. ಇಂದು ಮೀಡಿಯಾ ಢಾಳಾಗಿದೆ. ಅದು ಎಲ್ಲಕ್ಕಿಂತ ಹೆಚ್ಚು ಹಾಳಾಗಿದೆ. ಯಾರನ್ನು ಮೇಲೆತ್ತಬೇಕು... ಹೇಳಿ... ಯಾರನ್ನು ಪಾತಾಳಕ್ಕೆ ತುಳಿಬೇಕು. ಸ್ವಲ್ಪ ಈ ಕಡೆ ಒಂದಿಷ್ಟು ತಳ್ಳಿ!
ಸರ್ವಾಂತರ್ಯಾಮಿ ದೇವರ ಹಾಗೆ ಭ್ರಷ್ಟಾಚಾರ ವಿಶ್ವಮುಖಿ! ಕೆಲವರಿಗೆ ಅದು ಬದುಕೋ ದಾರಿ. ಭ್ರಷ್ಟಾಚಾರ ತೊಲಗ ಬೇಕು ಎಂದು ಹೇಳುವುದು ಸುಲಭ. ಭ್ರಷ್ಟರಾಗದೆ ನಿಯತ್ತಿಂದ ನಡೆಯೋದು ಕಷ್ಟ. ಎಲ್‌ಕೆಜಿ ಮಗುವಿಗೆ ಸೀಟು ಹುಡುಕೋಕೆ ಹೊರಟಾಗಿನಿಂದಲೂ ವ್ಯಕ್ತಿ ಸತ್ತಾಗ ವಿದ್ಯುತ್ ಚಿತಾಗಾರಕ್ಕೆ ಹೆಣ ತಳ್ಳುವ ತನಕ ಎಲ್ಲೆಲ್ಲೂ ಲಂಚ... ಲಂಚ.... ಲಂಚ.... ಸಂಥಿಂಗ್ ಇಲ್ಲ ಅಂದರೆ ಲೈಫ್ ಕೇಸ್ ನಥಿಂಗ್!
ಸಾಹಿತಿ ಶಂಖ ಹೊಡೆದು ಕೊಂಡರೂನು
ಕಲಾವಿದ ಮೈ-ಕೈ ಪರಚಿಕೊಂಡರೂನು
ಬುದ್ಧಿಜೀವಿ ಬೆತ್ತಲೇ ನಿಂತುಕೊಂಡರೂನು
ಲೋಕ್‌ಪಾಲ ಲಂಗು-ಲಗಾಮು ಹಿಡಿದುಕೊಂಡರೂನು ಈ ಜಗತ್ತಿನ ಭ್ರಷ್ಟಾಚಾರ ನಿಲ್ಲುವುದಿಲ್ಲ. ಅದೊಂದು ಅರ್ಬುದ ರೋಗ! ಆಕ್ಟೋಪಸ್ ಅದರ ಲಾಗ! ತೆರೆದ ಮನಸ್ಸಿಗೆ ಇರುವುದಿಲ್ಲ ಬೀಗ ಮುಚ್ಚಿದ ಬದುಕಿಗೆ ಕಪಟ ನಾಟಕದ ನೂರೆಂಟು ರಾಗ.

ಹೈಕಮಾಂಡ್ ಗುಲಾಮಗಿರಿಗೆ ಸಿಲುಕಿರುವ ರಾಷ್ಟ್ರೀಯ ಪಕ್ಷಗಳು ಹೆಜ್ಜೆಹೆಜ್ಜೆಗೂ ಕರ್ನಾಟಕದ ಹಿತಾಸಕ್ತಿಗಳನ್ನು ಬದಿಗೆ ಸರಿಸುತ್ತಿವೆ. ಧ್ವನಿಯಿಲ್ಲದ ಸಂಸದರು ರಾಜ್ಯದ ನೆಲ-ಜಲ-ಅಭಿವೃದ್ಧಿಯ ಕುರಿತಂತೆ ಮಾತನಾಡದೇ ಕುಳಿತಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯದಲ್ಲೂ ಒಂದು ಪ್ರಾದೇಶಿಕ ರಾಜಕೀಯ ಶಕ್ತಿ ಹುಟ್ಟುವ ಅನಿವಾರ್ಯತೆ ಇದೆ ಎಂದು ನಿಮಗೆ ಅನ್ನಿಸುವುದಿಲ್ಲವೆ?
ಪ್ರಾದೇಶಿಕ ಪಕ್ಷದ ಆವಿಷ್ಕಾರಕ್ಕೆ ನಾಡಿನ ರಾಜಕೀಯ ಸಮಯ ಸನ್ನಿಹಿತವಾಗಿದ್ದರೂ ಅದರಿಂದ ಯಾವುದೇ ಪ್ರಯೋಜನ ಆಗುವುದಿಲ್ಲ. ರಾಷ್ಟ್ರೀಯ ಪಕ್ಷವಾದರೆ ಮಾತ್ರ ರಾಷ್ಟ್ರದ ರಾಜಕಾರಣಕ್ಕೆ ಒಂದು ಸಮಾಜಮುಖಿ ಸ್ವರೂಪ ಸಾಧ್ಯವಾಗಬಹುದು. ಇಂದಿನ ಅಗತ್ಯಕ್ಕೆ ಪ್ರಾದೇಶಿಕ ಪಕ್ಷ ಬಹುಮುಖಿ ಆಯಾಮ ನೀಡಲಾಗುವುದಿಲ್ಲ.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇತ್ತೀಚಿಗೆ ಒಂದು ವರದಿಯನ್ನು ರಾಜ್ಯ ಸರ್ಕಾರಕ್ಕೆ ನೀಡಿದೆ. ಈ ವರದಿಯ ಅಂಶಗಳನ್ನು ಸರ್ಕಾರ ಜಾರಿಗೊಳಿಸುವ ನಂಬಿಕೆ ನಿಮಗಿದೆಯೇ?
ಎಲ್ಲ ವರದಿಗಳೂ ನೆನೆಗುದಿಗೆ ಬೀಳುವುದೇ ಅವುಗಳ ಪ್ರಭಾವೀ ಪರಿಧಿ! ಆ ಪರಿಧಿಯಿಂದ ಹೊರ ಬರಲು ಕಾಯಬೇಕು ಅದೂ ತನ್ನ ಸರದಿ!
ರಾಜ್ಯವನ್ನು ಕಾಡುತ್ತಿರುವ ಸಮಸ್ಯೆಗಳ ಪೈಕಿ ಬಹಳ ಮುಖ್ಯವಾದವು ಮತ್ತು ಕೂಡಲೇ ಉತ್ತರ ಕಂಡುಕೊಳ್ಳಬೇಕಾದ ಸಮಸ್ಯೆಗಳು ಯಾವುವು? ಇವುಗಳನ್ನು ಬಗೆಹರಿಸುವುದು ಹೇಗೆ?
೧) ಭ್ರಷ್ಟಾಚಾರ
೨) ಜಾತೀಯತೆ ನಿರ್ನಾಮ
೩) ಖಾಸಗೀ ಮಾಲೀಕತ್ವಗಳ ಕಬಂಧ ಬಾಹುಗಳು
೪) ಶಿಕ್ಷಣದ ರಾಷ್ಟ್ರೀಕರಣ
೫) ನದಿಗಳ ಜೋಡಣೆ
೬) ಯುವಶಕ್ತಿ ಸಂಚಯದ ಅನಿವಾರ್ಯತೆ
೭) ಹೆಣ್ಣಿಗೆ ಸಮಾಜದಲ್ಲಿ ಸರಿಸಮಾನತೆ
೮) ದೇಸೀ ಉತ್ಪಾದನೆಗಳು
೯) ಬಹುಮುಖಿ ಸಮಾಜದಲ್ಲಿ ಸಾಮಾಜಿಕ ನ್ಯಾಯ
೧೦) ಕನ್ನಡಕ್ಕೆ ಆದ್ಯತೆ, ಪ್ರಾಶಸ್ತ್ಯ.

ಮನುಷ್ಯ ಕುಲಂ ತಾನೊಂದೇ ವಲಂ ಎಂದಿದ್ದರು ಪಂಪ. ಅದು ನಮ್ಮ ಬಹು ಇಷ್ಟದ ಸಾಲು. ಆದರಿವತ್ತು ಜಾತಿ ವ್ಯವಸ್ಥೆ ಭೀಕರವಾಗಿ ಸಮಾಜವನ್ನು ಕಾಡುತ್ತಿದೆ. ಪರಿಹಾರ ಎಲ್ಲಿದೆ?
ಅಂತರ ಜಾತೀಯ ವಿವಾಹಗಳೊಂದೇ ಇದಕ್ಕೆ ಶಾಶ್ವತ ಪರಿಹಾರ. ಅಂಥ ಕಾರ್ಯ ಆಗಬೇಕು.

ಶಿಕ್ಷಣ, ಸಾಹಿತ್ಯ, ಸುಗಮ ಸಂಗೀತ, ಚಲನಚಿತ್ರ ಹೀಗೆ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದೀರಿ. ನಿಮಗೆ ಆತ್ಮತೃಪ್ತಿ ಕೊಟ್ಟ ಕ್ಷೇತ್ರ ಯಾವುದು?
ಶಿಕ್ಷಣ, ಸಾಹಿತ್ಯ, ಸಂಗೀತ, ಕಲೆ-ಎಲ್ಲವೂ ಒಂದಕ್ಕೊಂದು ಪೂರಕ. ಅನ್ವೇಷಣೆಗೆ ಪ್ರೇರಕ. ನೆಮ್ಮದಿ ಕಂಡುಕೊಳ್ಳಲು ಸಾರ್ಥಕ.

ಸಾಂಸ್ಕೃತಿಕ ಬದುಕಿನಲ್ಲಿ ಹಲವು ದಶಕಗಳನ್ನು ಕ್ರಮಿಸಿದ ನಂತರ ಹಿಂದಿರುಗಿ ನೋಡಿದಾಗ ಏನನ್ನು ನೆನಪಿಸಿಕೊಳ್ಳಲು ಬಯಸುತ್ತೀರಿ? ಸಾಗಿ ಬಂದ ಹಾದಿಯ ಕುರಿತು ನಿಮಗೆ ಹೆಮ್ಮೆ, ಆತ್ಮತೃಪ್ತಿ ಇದೆಯೇ?
ನಡೆಯುವವನು ಎಡವುತ್ತಾನೆ. ನಿನ್ನೆ ಇಂದಿಗೆ ನಾಂದಿ ಹಾಡುತ್ತಾನೆ. ಇಂದು ನಾಳೆಗೆ ನಾಂದಿ ಹಾಡುತ್ತದೆ. ನಿನ್ನೆಯಿಂದ ಇಂದಿನ ಪಾಠವಿದೆ. ಇಂದಿನಿಂದ ನಾಳೆಗೆ ಮುನ್ನೋಟವಿದೆ.

ಈ ಸಂದರ್ಭದಲ್ಲಿ ಕರವೇ ನಲ್ನುಡಿ ಓದುಗರೊಂದಿಗೆ ಹಂಚಿಕೊಳ್ಳಲು ಬಯಸುವ ಮಾತುಗಳೇನು?
ಕನ್ನಡಿಗರಿಗೆ ಕನ್ನಡದಿಂದಲೇ ಸಕಲ ಶ್ರೇಯಸ್ಸು. ಕನ್ನಡ, ಕರ್ನಾಟಕ, ಮಾನವೀಯತೆ ಮರೆತರೆ ಶೂನ್ಯತೆಯೊಂದೇ ಆಯಸ್ಸು! ಪ್ರೀತಿ, ಕರುಣೆ, ವಿಶ್ವಾಸ ಇದ್ದರೆ ಜೀವನ ಸಾಗಿಸೋ ಹುಮ್ಮಸ್ಸು. ಇಂದು ಬಹಳಷ್ಟು ಯುವ ಪ್ರತಿಭೆಗಳು ನಿಚ್ಚಳವಾಗಿ ತಮ್ಮ ವರ್ಚಸ್ಸನ್ನು ತೋರುತ್ತಿವೆ. ಹಿಂದೆಂದಿಗಿಂತಲೂ ಈಗ ಸುಗಮ ಸಂಗೀತಕ್ಕೆ ಕನ್ನಡ ನಾಡಿನಲ್ಲಿ ಹೊಸ ಪ್ರವಾಹಿತ್ವ ಬಂದಿದೆ. ಈ ಭರತ ಇಳಿತವಾಗದಂತೆ ನೋಡಿಕೊಳ್ಳಬೇಕು ನಮ್ಮ ಜನ. ಪ್ರೇರಣೆ ನೀಡಬೇಕು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿ ಗಣ!
ಈಗಲೂ ಕಾಲ ಮಿಂಚಿಲ್ಲ.... ಯುವ ಸಂಗೀತಗಾರರು, ಸ್ವರ ಸಂಯೋಜಕರು, ನೂತನ ಪ್ರಸ್ತಾರದ ಕಡೆ ಸೃಜನಶೀಲರಾದರೆ ವಿನೂತನ ಕಾಣ್ಕೆ ಉಗಮವಾದೀತು. ಇರಬೇಕು ಎಂದೆಂದೂ ಪ್ರತಿಯೊಬ್ಬರಲ್ಲೂ ಪ್ರಯತ್ನ. ಅಧ್ಯಯನ, ಅಭಿರುಚಿ ಇದ್ದಾಗ ಮಾತ್ರ ಯಶಸ್ಸಿನ ಸಾಧನ ಸೋಪಾನ!

ಕರ್ನಾಟಕ ರತ್ನ ಪ್ರಶಸ್ತಿಯ ಪ್ರತಿಭೆಯಲ್ಲಿ ದೇಜಗೌ


“ದೇಜಗೌ ಅವರಿಗೆ
ಕನ್ನಡವೇ ಕಾಯಕ
ಕನ್ನಡವೇ ಕೈಲಾಸ”
-ಡಾ. ಚನ್ನವೀರ ಕಣವಿ

ಇಂದಿನ ಮಾನವ ಜಗತ್ತಿನ ಮೇರುಸದೃಶ ಮಾರ್ಗದರ್ಶಕರ ಮುಂಚೂಣಿಯಲ್ಲಿರುವವರಲ್ಲಿ ಡಾ.ದೇಜಗೌ ಪ್ರಮುಖರು. ಗುರು ಪರಂಪರೆಯಲ್ಲಿ ಆದರ್ಶ ಗುರುವಾಗಿ ಅಗ್ರಸ್ಥಾನ. ವಿಶ್ವಕವಿ ಕುವೆಂಪು ಅವರ ಪರಮಾಪ್ತ ಶಿಷ್ಯರಾಗಿ, ಕನ್ನಡವೇ ಬದುಕಾಗಿ, ಬದುಕೆಲ್ಲ ಕನ್ನಡವಾಗಿರುವ ಹಿರಿಯ ಚೇತನ, ಕನ್ನಡದ ಮಹರ್ಷಿ. ಅವರಿಗೆ ಪ್ರತಿಷ್ಠಿತ "ಕರ್ನಾಟಕ ರತ್ನ ಪ್ರಶಸ್ತಿ"ಯ ಹೊನ್ನಗರಿ.
ದೇಜಗೌ ಎಂಬ ತ್ರ್ಯಕ್ಷರಿ ಸಮಸ್ತ ಕನ್ನಡಿಗರ ಗಾಯತ್ರಿ ಮಂತ್ರ. ’ಕನ್ನಡ’ ಎನ್ನುವುದು ನೆಲ, ಜಲ, ಭಾಷೆ, ಸಂಸ್ಕೃತಿ, ಬದುಕು ಹೀಗೆ ಸರ್ವಸ್ವವನ್ನು ಒಳಗೊಳ್ಳುವಂಥದು. ಹೀಗೆ ಸರ‍್ವಾಂಗೀಣವಾಗಿ ನಾಡು-ನುಡಿಯ ಬದುಕನ್ನು ಕಟ್ಟಿಕೊಟ್ಟವರು ದೇಜಗೌ. ಕನ್ನಡದ ವೀರಸೇನಾನಿಯಾಗಿ, ಸಾಂಸ್ಕೃತಿಕ ರಾಯಭಾರಿಯಾಗಿ ಇಪ್ಪತ್ತು ಹಾಗೂ ಇಪ್ಪತ್ತೊಂದನೆಯ ಶತಮಾನದಲ್ಲಿ ನಾಡವರನ್ನು ಮುನ್ನಡೆಸುತ್ತಿರುವ ಕನ್ನಡದ ಸ್ವಾಭಿಮಾನಿ ದೇಜಗೌ.
ಶ್ರೀ ರಾಮಕೃಷ್ಣ ಪರಮಹಂಸ ಹಾಗೂ ಸ್ವಾಮಿ ವಿವೇಕಾನಂದ ಅನನ್ಯ ಗುರು-ಶಿಷ್ಯ ಸಂಬಂಧದಂತೆ, ’ಯುಗದ ಕವಿ ಜಗದ ಕವಿ’ ಕುವೆಂಪು ಹಾಗೂ ನಾಡೋಜ ದೇಜಗೌ ಅವರ ನಡುವಣ ಗುರು-ಶಿಷ್ಯ ಸಂಬಂಧ. ನಿತ್ಯ ನಿರಂತರವೂ ಶ್ರೀ ಗುರು ಕುವೆಂಪು ಧ್ಯಾನದಲ್ಲಿ ಅಂತರಂಗದಲ್ಲಿ ತನ್ಮಯರಾಗಿರುವ ದೇಜಗೌ ಅವರ ಪಾಲಿಗೆ ಕುವೆಂಪು ಅವರೇ ಸರ್ವಸ್ವ. ಕುವೆಂಪು ಅವರ ಪರಮಾಪ್ತ ಶಿಷ್ಯರಾಗಿ ಶ್ರೀ ಗುರುವಿನ ಅಂತರಂಗವನ್ನು ಗೆದ್ದ ದೇಜಗೌ ಬದುಕು ಧನ್ಯ. "ನನ್ನ ದೇಜಗೌ ಸಂಬಂಧವನ್ನು ಯಾವ ಪದಗಳಿಂದ ವರ್ಣಿಸಬಹುದೋ ನನಗೆ ಅರಿಯದು. ಮಾತುಗಳಿಗೇನು? ಬೇಕಾದಷ್ಟಿವೆ. ಮಾತಿಗೆ ಮೀರಿದ್ದನ್ನು ಹೇಳುವಾಗ ಮಾತಿಲ್ಲದಿರುವುದು ಲೇಸು... ಶ್ರೀ ಸ್ವಾಮಿ ಸಿದ್ಧೇಶ್ವರಾನಂದರು ನನ್ನ ಆಧ್ಯಾತ್ಮಿಕ ಗುರುಗಳು. ಶ್ರೀ ಜವರೇಗೌಡರು ನನ್ನ ಮಾರ್ಗದರ್ಶಕರು" ಎಂದಿದ್ದಾರೆ ಕುವೆಂಪು ಅವರು.
"ಪ್ರೊ||ದೇ.ಜವರೇಗೌಡ" ಎಂದರೆ ಸುಲಭಕ್ಕೆ ಎಲ್ಲರಿಗೂ ಅರ್ಥವಾಗದಿರಬಹುದು. "ದೇಜಗೌ" ಎಂದರೆ ಸಾಕು ಇವರು ಗೊತ್ತಿಲ್ಲದವರೇ ಇಲ್ಲವೆನ್ನಬಹುದು. "ದೇಜಗೌ" ಎಂಬ ಮೂರಕ್ಷರ ಮಾತ್ರದಿಂದಲೇ ಪ್ರಸಿದ್ಧರಾಗಿರುವ ಕನ್ನಡ ಸಾರಸ್ವತ ಲೋಕದ ಮೇರುಪರ್ವ ದೇ.ಜವರೇಗೌಡರು ಸಾಹಿತ್ಯದಲೆಂತೋ ಹಾಗೆಯೇ ಕನ್ನಡಪರ ಹೋರಾಟದಲ್ಲೂ ಮಹಾಪರ್ವವೇ! ಹೋರಾಟಕ್ಕೆ ನಿಂತರೆ ಜಪ್ಪಯ್ಯ ಎಂದರೂ ಜಗ್ಗರು. ಒಂದು ರೀತಿಯಲ್ಲಿ ಕನ್ನಡದ ಹೆಬ್ಬಂಡೆ. ಹೋರಾಟದಿಂದಲೇ ಹತ್ತು ಹಲವು ಫಲಗಳನ್ನು ಕನ್ನಡಕ್ಕೆ ದಕ್ಕಿಸಿಕೊಟ್ಟ ಕರುನಾಡಿನ ಸಿರಿಫಸಲಿನವರು. "ಹೋರಾಟದ ಬದುಕು" ದೇಜಗೌರ ಆತ್ಮ ಕಥನದ ಹೆಸರೂ ಹೌದು. ಇವರು ನಡೆದು ಬಂದ ಹಾದಿಗೆ ಅನ್ವರ್ಥವಿದು. ನಿಜಕ್ಕೂ ಇವರು ಕನ್ನಡದ ಉಸಿರು.
"ಕನ್ನಡಕ್ಕೆ ಕುತ್ತು ಬಂತೆಂದರೆ ನನ್ನಿಂದ ಸಹಿಸಲಾಗದು. ನನ್ನ ಮೈಮೇಲೆ ಉಗ್ರನರಸಿಂಹನೇ ಬಂದಂತಾಗುತ್ತದೆ. ಕನ್ನಡದ ಹಗೆ-ನನಗೆ ಹಗೆ" ಎನ್ನುವ ದೇಜಗೌ ಕನ್ನಡ ನಾಡು ನುಡಿ ವಿಚಾರದಲ್ಲಿ ಸ್ವಾಭಿಮಾನದ ಶಿಖರ. ಇಲ್ಲಿ ಯಾವ ಮುಲಾಜು ಗಿಲಾಜು, ರಾಜಿ ಗೀಜಿ, ಮರ್ಜಿ ಗಿರ್ಜಿಗಳಿಲ್ಲ. ಕನ್ನಡಕ್ಕಷ್ಟೇ ದೇಜಗೌ. ಮಾತು ಮಾತ್ರ ದೊಣ್ಣೆ ಆದರೆ ಹೃದಯ ಮೃದು ಬೆಣ್ಣೆ. ಕನ್ನಡವೆಂದರೆ ಬಹುಬೇಗ ಕರಗಿಬಿಡುವ ಕನ್ನಡದ ಕರುಣಾಳಿವರು ಕನ್ನಡಕಟ್ಟಾಳು.
ರಸಋಷಿ ಕವಿ ಕುವೆಂಪು ಅವರ ಪರಮಾಪ್ತ ಶಿಷ್ಯರಾದ ದೇಜಗೌ ತಮ್ಮ ಗುರು ಕುವೆಂಪು ಅವರನ್ನು ಒಪ್ಪಿಕೊಂಡಂತೆ ಮತ್ತಾರನ್ನೂ ಒಪ್ಪಿಕೊಳ್ಳಲಿಲ್ಲ. ದೈವವನ್ನೂ ಕೂಡ. ಇವರಿಗೆ ಗುರು ಕುವೆಂಪು ಒಂದು ಕಣ್ಣಾದರೆ ಕನ್ನಡ ಇನ್ನೊಂದು ಕಣ್ಣಾಗಿತ್ತು. ಇವರ ಮಾತೃಭಾಷೆ ಪ್ರೀತಿಗೆ, ಗುರುಭಕ್ತಿಗೆ ಕಡಲೇಳೂ ಸಾಟಿಯಿಲ್ಲ. ದೇಜಗೌ ಮಾತಿನಲ್ಲೇ ಹೇಳುವುದಾದರೆ "ಜೀವನ ನನಗೆ ಕೊಡಬೇಕಾದ್ದೆಲ್ಲವನ್ನೂ ಕೊಟ್ಟಿದೆ. ಆ ಬಗ್ಗೆ ಅತೃಪ್ತಿ ಇಲ್ಲ. ಆದರೆ ಇಲ್ಲಿಯವರಗೆ ನಾನು ಏನನ್ನಾದರೂ ಒಳ್ಳೆಯದನ್ನು ಮಾಡಿದ್ದರೆ, ಸಾಧಿಸಿದ್ದರೆ, ಅದು ಕೇವಲ ಗುರುಕೃಪೆಯಿಂದ ಮಾತ್ರ. ನನ್ನದು ಎನ್ನುವುದು ಏನು ಇಲ್ಲ. ಎಲ್ಲವೂ ನನ್ನ ಗುರು ಕುವೆಂಪುರವರ ದಿವ್ಯ ಚೈತನ್ಯ ಬಲದಿಂದಲೇ ಆಗಿರುವುದು" ಎಂದು ಎಲ್ಲವನ್ನೂ ಗುರು ಕೃಪಾಶೀರ್ವಾದವೆನ್ನುವ ದೇಜಗೌ ತಮ್ಮ ರಕ್ತದ ಕಣಕಣದಲ್ಲೂ ಗುರು ಕುವೆಂಪುರವರನ್ನೇ ತುಂಬಿಕೊಂಡವರು.
"ಕನ್ನಡವೆಂಬತ್ರಕ್ಷರಿಯೇ ನನಗೆ ಗಾಯತ್ರಿಮಂತ್ರ. ಕನ್ನಡವೇ ನನ್ನ ತಾಯಿ-ತಂದೆ, ಅದೇ ನನ್ನ ಬಂಧು-ಬಳಗ, ಅದೇ ನನ್ನ ಜಾತಿ-ಧರ್ಮ, ಅದೇ ನನ್ನ ಗತಿ-ಮತಿ. ನನಗಾಗಿ ನಾನೇನನ್ನೂ ಸಾಧಿಸಬೇಕಾದ್ದಿಲ್ಲ. ಕನ್ನಡದ ಗೆಲುವಿಗಾಗಿ ಎಂತಹ ಅವಮಾನವನ್ನಾದರೂ ಸಹಿಸಿಯೇನು. ಕನ್ನಡ ಬಾವುಟ ರಕ್ಷಣೆಗೆ ನನ್ನ ಪ್ರಾಣ ಕೊಟ್ಟೇನು. ಮುಂದಿನ ಪೀಳಿಗೆ ಈ ಬಾವುಟವನ್ನೇರಿಸಿ ಹಾರಿಸಬೇಕಿದೆ" ಎನ್ನುವ ದೇಜಗೌ, ಗುರು ಕುವೆಂಪುರವರಿಂದಲೇ ಕನ್ನಡ ದೀಕ್ಷೆ ಪಡೆದವರು. ಗುರು ಕುವೆಂಪು ಹೇಳಿದಂತೆ ಕನ್ನಡಕ್ಕಾಗಿ ಕೈಯೆತ್ತಿ ಕಲ್ಪವೃಕ್ಷವಾಗಿದ್ದಾರೆ. ಕನ್ನಡಕ್ಕಾಗಿ ಕೊರಳೆತ್ತಿ ಪಾಂಚಜನ್ಯವೇ ಆಗಿದ್ದಾರೆ. ಇಳಿವಯಸ್ಸಿನಲ್ಲೂ ದಣಿವಿಲ್ಲದೆ ಕನ್ನಡ ಡಿಂಡಿಮವನ್ನು ಇಂದಿಗೂ ಬಾರಿಸುತ್ತಲೇ ಇದ್ದಾರೆ.
ಶಾಂತಿಪ್ರಿಯ ದೇಜಗೌ ಅವರು ಕನ್ನಡ ಚಳವಳಿಗೆ ಹೋರಾಟಕ್ಕೆ ಒಂದು ಘನತೆ ತಂದುಕೊಟ್ಟವರು. ಶಾಂತಿದೂತ ಮಹಾತ್ಮ ಗಾಂಧೀಜಿಯಿಂದ ಪ್ರಭಾವಿತರಾದ ಇವರು ಕನ್ನಡಕ್ಕಾಗಿ ನಡೆಸಿದ ಉಪವಾಸ ಸತ್ಯಾಗ್ರಹಗಳು ದಾಖಲಾರ್ಹ. ಅದರಲ್ಲೂ ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನ ದೊರಕಿಸಿಕೊಡಲು ಹಠವಿಡಿದು ವಿವಿಧ ಹಂತಗಳಲ್ಲಿ ಇವರು ನಿರಂತರವಾಗಿ ನಡೆಸಿದ ಉಪವಾಸ ಸತ್ಯಾಗ್ರಹ ಅತ್ಯಂತ ಪ್ರಮುಖವಾದುದು. ಇಂದು ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನದ ಗೌರವ ದೊರೆತಿರುವುದಕ್ಕೆ ದೇಜಗೌ ಬಹುಮುಖ್ಯರೆಂಬುದು ಉತ್ಪ್ರೇಕ್ಷೆಯ ಮಾತಲ್ಲ. ಹಾಗೆಯೇ ಇಂಗ್ಲೀಷ್ ಭಾಷೆಯಲ್ಲಿ ಮಾತ್ರ ನಡೆಯುತ್ತಿದ್ದ ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಪರೀಕ್ಷೆಗಳಲ್ಲಿ ಕನ್ನಡವನ್ನೂ ಅಳವಡಿಸುವಂತೆ ಮಾಡಿದ್ದು ಇವರ ಉಪವಾಸ ಸತ್ಯಾಗ್ರಹ ಫಲಶೃತಿಗಳಲ್ಲೊಂದು. ಇಂಥ ಅನೇಕ ಕನ್ನಡಪರ ಕೈಂಕರ್ಯಗಳು ಇವರ ಹೋರಾಟಗಳಿಂದಲೇ ಆಗಿವೆ. ಯಾವುದೇ ಆಸ್ತಿಪಾಸ್ತಿಗೆ ಹಾನಿಯಾಗದಂತೆ, ಸಮಾಜದ ಶಾಂತಿ ಕದಡದಂತೆ ಅಹಿಂಸಾ ಮಾರ್ಗದಲ್ಲೇ ತಮ್ಮ ಗುರಿ ಸಾಧಿಸುವುದು ಇವರ ಹೋರಾಟದ ವೈಶಿಷ್ಟ್ಯ.
ಇದೆಲ್ಲಾ ಇವರಿಗೆ ಸಾಧ್ಯವಾದದ್ದು ರಾಷ್ಟ್ರಪಿತ ಗಾಂಧೀಜಿ ಅವರ ಪ್ರಭಾವದಿಂದಲೇ. "ಹೋರಾಟ, ಉಪವಾಸ, ಸತ್ಯಾಗ್ರಹ ಇವುಗಳೆಲ್ಲ ಗಾಂಧಿಮಂತ್ರಗಳು. ಇವುಗಳನ್ನೇ ಹೋರಾಟಗಾರರು ಅಳವಡಿಸಿಕೊಳ್ಳಬೇಕಾಗಿರುವುದು. ನಾನೂ ಅವುಗಳನ್ನೇ ಅಳವಡಿಸಿಕೊಂಡದ್ದು. ನನ್ನ ಗುರು ಕುವೆಂಪು ಅವರಷ್ಟು ಗಾಂಧೀಜಿಯವರನ್ನು ಆರಾಧಿಸಿದವರು ಬಹಳ ಇಲ್ಲ ಎನ್ನುವ ದೇಜಗೌ, ಬಾಲ್ಯದಲ್ಲೇ ಗಾಂಧೀಜಿಯವರನ್ನು ಬಹಳ ಹತ್ತಿರದಿಂದ ಕಂಡು ಅವರ ಮಾತುಗಳನ್ನು ಆಲಿಸಿ ಅಂದಿನಿಂದಲೇ ಖಾದಿ ಧರಿಸಿ ಗಾಂಧಿತತ್ವದೆಡೆ ಆಕರ್ಷಿತರಾದರು. ಈಗಲೂ ಅವರು ಹಾಗೆಯೇ ಇದ್ದಾರೆ. ಅಪ್ಪಟ ಖಾದಿಧಾರಿಯಾಗಿ ಗಾಂಧಿತತ್ವಗಳ ತಂಪು ನೆರಳಲ್ಲಿ ಕನ್ನಡದ ಗಾಂಧಿಯೇ ಆಗಿದ್ದಾರೆ.
ದೇಜಗೌ ಅವರು ಗಾಂಧೀಜಿಯವರನ್ನು ದರ್ಶನ ಮಾಡಿ ಸ್ಪರ್ಶಿಸಿದ್ದಾದರೂ ಹೇಗೆ ಗೊತ್ತೇ? ಒಮ್ಮೆ ಚನ್ನಪಟ್ಟಣಕ್ಕೆ ಬಂದಿದ್ದ ಗಾಂಧೀಜಿ ಭಾಷಣಕ್ಕೆಂದು ವೇದಿಕೆಗೆ ಬರುವಾಗ ಸಾಲುಗಟ್ಟಿ ನಿಂತಿದ್ದ ವಿದ್ಯಾರ್ಥಿಗಳ ಪೈಕಿ ಬಾಲಕ ದೇಜಗೌ ಒಬ್ಬರಾಗಿದ್ದರು. ಗಾಂಧೀಜಿ ಬಾಲಕ ದೇಜಗೌರ ಸಮೀಪದಲ್ಲೇ ನಿಂತಿದ್ದರಿಂದ ಅವರು ಹೊದ್ದುಕೊಂಡಿದ್ದ ಶಾಲನ್ನು ಮುಟ್ಟಿ ನೋಡುವ ಸುವರ್ಣಾವಕಾಶ ಇವರದ್ದಾಗಿತ್ತು. "ಗಾಂಧೀಜಿ ಹೊದ್ದಿದ್ದ ಶಾಲಿನ ತುದಿಯನ್ನು ಮುಟ್ಟಿ ಅರೆಕ್ಷಣ ಹಿಡಿದಾಗ ಎಂಥದೋ ಮಿಂಚು ಸೋಕಿದ ಅನುಭವ ನನಗೆ! ನಿಜಕ್ಕೂ ಆ ದಿನವನ್ನು ನಾನು ಎಂದೂ ಮರೆಯುವಂತಿಲ್ಲ." ಎಂದು ಈಗಲೂ ದೇಜಗೌ ಅವರು ಆ ಅವಿಸ್ಮರಣೀಯ ಘಟನೆಯನ್ನು ನೆನೆದು ರೋಮಾಂಚಿತರಾಗುವುದುಂಟು.
ವಯಸ್ಸಾಯಿತೆಂದು ಇವರ ಎದೆಯಲ್ಲಿ ಹೋರಾಟದ ನದಿ ಬತ್ತಿಲ್ಲ. ಈಗಲೂ ಸಹ ಹದಿಹರೆಯದ ಯುವಕರನ್ನೂ ನಾಚಿಸುವಂತೆ ಉಕ್ಕಿ ಭೋರ್ಗರೆಯುತ್ತಿದೆ. ಬದುಕಿನುದ್ದಕ್ಕೂ ಹೋರಾಡುತ್ತಲೇ ಬಂದ ದೇಜಗೌ ’ಹೋರಾಟದ ಬದುಕಿ’ನಲ್ಲೇ ಬದುಕಿನ ಅನ್ವೇಷಣೆ ನಡೆಸಿದ್ದಾರೆ. ತಮ್ಮ ಸಾಧನೆ-ಸಿದ್ಧಿಗಳ ಅಮೃತಫಲವನ್ನು ಜನಕೋಟಿಗೆ ಜ್ಞಾನದಾಸೋಹ ಮಾಡಿದ್ದಾರೆ.
’ನನ್ನ ಬಾಳೇ ಒಂದು ಪವಾಡ’ ಎನ್ನುತ್ತಾರೆ ದೇಜಗೌ. ಬಡತನದ ಬಸಿರಿನಲ್ಲಿ ಬೆಳಕಿನತ್ತ ಸಾಗಿಬಂದವರು. ಗೊತ್ತುಗುರಿಯಿಲ್ಲದ ಪಯಣದಲ್ಲಿ ಶ್ರೀ ಗುರು ಕೃಪೆಯಿಂದ ಗುರಿಯತ್ತ ಮುನ್ನಡೆದವರು. ಕಿರುಕುಳದ ದವಡೆಯಿಂದ ಪಾರಾಗಿ, ವಿಜಯದುಂದುಭಿ ಮೊಳಗಿಸಿದವರು. ಕನ್ನಡದ ಗರಡಿಯಲ್ಲಿ ಎದುರೀಸಿನ ಪಯಣಿಗರಾಗಿ, ಶ್ರೀ ಗುರುವಿನ ಆದೇಶ ಪರಿಪಾಲಿಸುತ್ತ ಕನ್ನಡದ ಕಂಕಣ ಕಟ್ಟಿಕೊಂಡು ನಾಡು-ನುಡಿಗೆ ತಮ್ಮನ್ನು ಅರ್ಪಿಸಿಕೊಂಡಿರುವವರು ದೇಜಗೌ. ತೆರೆದ ಮನ, ಪರಿಶುದ್ಧ ಅಂತಃಕರಣ, ಮೃದು ಹೃದಯ, ಹೆಂಗರುಳಿನ ಮಾತೃವಾತ್ಸಲ್ಯ ಇವೆಲ್ಲವೂ ದೇಜಗೌ ವ್ಯಕ್ತಿತ್ವಕ್ಕೆ ಭೂಷಣಪ್ರಾಯವಾದ ಗುಣಾಂಶಗಳು. ಕುವೆಂಪು ಅವರ ’ವಿಶ್ವಮಾನವ ಸಂದೇಶ’ವನ್ನು ಲೋಕಕ್ಕೆ ಬಿತ್ತರಿಸುವ ಕೈಂಕರ್ಯದಲ್ಲಿ ನಿತ್ಯಕಾಯಕನಿರತರು. ಜಾತ್ಯತೀತ ಮನೋಧರ್ಮದ ಮಹಾನ್ ಮಾನವತಾವಾದಿ ಅವರು.
ಲೋಕವೇ ನಿಬ್ಬೆರಗುಪಡುವಂಥ ಅದ್ವಿತೀಯ ಸಾಧನೆ ದೇಜಗೌ ಅವರದು. ಅದ್ವಿತೀಯ ಪ್ರತಿಭೆ ಹಾಗೂ ಅಪ್ರತಿಮ ಪಾಂಡಿತ್ಯಗಳ ಸಂಗಮವಾಗಿರುವ ಕನ್ನಡ ಸಾರಸ್ವತ ಹಾಗೂ ಸಾಂಸ್ಕೃತಿಕ ಲೋಕದ ದಿಗ್ಗಜ. ದೇಜಗೌ ಎಂದರೆ ಜಂಗಮ ವಿಶ್ವಕೋಶ ಎಂದೇ ಅರ್ಥ.
ನಮ್ಮ ಸಾರಸ್ವತ ಲೋಕದಲ್ಲಿ, ಬಹುತೇಕ ಎಲ್ಲ ಪ್ರಕಾರಗಳಲ್ಲಿಯೂ ಸಮೃದ್ಧ ಕೃಷಿ ಮಾಡಿದವರು ದೇಜಗೌ. ಪ್ರವಾಸ ಸಾಹಿತ್ಯ, ಜೀವನ ಚರಿತ್ರೆ, ಆತ್ಮಕಥೆ, ಗ್ರಂಥ ಸಂಪಾದನೆ, ಕವಿತೆಗಳು, ಜನಪದ ಸಾಹಿತ್ಯ, ಪ್ರಬಂಧ, ಹರಟೆ, ಅಂಕಣ, ಮುನ್ನುಡಿ, ಸಂಪಾದಕೀಯ, ಭಾಷಣಗಳು, ದಿನಚರಿ, ವಚನಗಳು, ಚುಟುಕುಗಳು, ನಾಟಕಗಳು, ಅನುವಾದಿತ ಕೃತಿಗಳು, ಐತಿಹಾಸಿಕ ಕಾದಂಬರಿಗಳು, ಶಿಶುಸಾಹಿತ್ಯ, ಶಿಕ್ಷಣ ಸಾಹಿತ್ಯ, ಕನ್ನಡ ನಾಡು-ನುಡಿಗೆ ಸಂಬಂಧಿಸಿದ ಕೃತಿಗಳು, ಇಂಗ್ಲೀಷ್ ಭಾಷೆಯಲ್ಲಿ ರಚಿತಗೊಂಡಿರುವ ಕೃತಿಗಳು ಇತ್ಯಾದಿ. ವಿಶ್ವಕವಿ ಕುವೆಂಪು ಅವರ ವ್ಯಕ್ತಿತ್ವ-ಸಾಧನೆ-ಸಿದ್ಧಿಗಳ ಹಿನ್ನೆಲೆಯಲ್ಲಿ ಕುವೆಂಪು ಸಾಹಿತ್ಯವನ್ನು ಕುರಿತಂತೆ ಅಗಾಧವಾಗಿ, ಮೌಲಿಕವಾಗಿ ಅತಿಹೆಚ್ಚು ಬರವಣಿಗೆ ಮಾಡಿದವರು ದೇಜಗೌ ಅವರಂತೆ ಮತ್ತೊಬ್ಬರಿಲ್ಲ.
ಯಾವುದೇ ಪ್ರಕಾರದ ಕೃತಿಗಳಾಗಲಿ, ಎಲ್ಲದರಲ್ಲೂ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿರುವುದು ದೇಜಗೌ ಅವರ ವೈಶಿಷ್ಟ್ಯ. ದೇಜಗೌ ಕೇವಲ ಗದ್ಯ ಸಾಹಿತಿಯಲ್ಲ. ಕಥೆ, ಕವಿತೆ, ವಚನ, ಚುಟುಕುಗಳು, ನಾಟಕಗಳ ಮೂಲಕ ಸೃಜನಶೀಲ ಸಾಹಿತ್ಯಕ್ಕೆ ಅವರದು ಗಮನಾರ್ಹ ಕೊಡುಗೆ. ವಿದ್ಯೆಯ ಅಧಿದೇವತೆಯ ಭಂಡಾರ ಶ್ರೀಮಂತಗೊಳಿಸಿದ ಮಹಾನ್ ಲೇಖಕ.
ಆಡಳಿತ ರಂಗದಲ್ಲಿ ದೇಜಗೌ ಯಶಸ್ವಿಯಾಗಿ ನಿರ್ವಹಿಸಿದ ಜವಾಬ್ದಾರಿ ಸ್ಥಾನಗಳ ಹೊಣೆಗಾರಿಕೆ ದಾಖಲಿಸುವಂಥದು. ಸುಮಾರು ಮೂವತ್ತಕ್ಕೂ ಹೆಚ್ಚಿನ ವಿವಿಧ ಹುದ್ದೆಗಳನ್ನು ಅಲಂಕರಿಸಿ ದಕ್ಷತೆ, ಪ್ರಾಮಾಣಿಕತೆ ಹಾಗೂ ಕರ್ತವ್ಯನಿಷ್ಠೆಯಿಂದ ನಿಜವಾದ ಅರ್ಥದಲ್ಲಿ ಶುದ್ಧಕಾಯಕ ಮಾಡಿದವರು.
ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಯಾಗಿ ಅವರ ಸಾಧನೆ ಅದ್ವಿತೀಯ. ಇಪ್ಪತ್ನಾಲ್ಕು ವಿಭಾಗಗಳನ್ನು ನಲವತ್ತೆಂಟು ವಿಭಾಗಗಳಿಗೆ ಹೆಚ್ಚಿಸಿ, ಜ್ಞಾನದಿಗಂತವನ್ನು ವಿಸ್ತರಿಸಿದ ಹಿರಿಮೆ ಅವರದು. ಕನ್ನಡದ ಸರ್ವತೋಮುಖ ಪ್ರಗತಿಗೆ ಅವರು ರೂಪಿಸಿದ ದೂರದೃಷ್ಟಿಯ, ಪ್ರಗತಿಪರ ಯೋಜನೆಗಳು ಅಸಂಖ್ಯಾತ. ಕನ್ನಡ ಅಧ್ಯಯನ ಸಂಸ್ಥೆ, ಕನ್ನಡ ವಿಶ್ವಕೋಶ, ಜಾನಪದ ಮತ್ತು ವಸ್ತುಸಂಗ್ರಹಾಲಯ ಇವೇ ಮೊದಲಾದವು ದೇಜಗೌ ಮಹತ್ಸಾಧನೆಯ ಹೆಗ್ಗುರುತುಗಳಾಗಿವೆ.
ಶ್ರೀ ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ಶ್ರೀಮಾತೆ ಶಾರದಾದೇವಿ, ಬುದ್ಧ, ಬಸವ, ಗಾಂಧೀ, ಅಂಬೇಡ್ಕರ್, ಕುವೆಂಪು, ಟಾಲ್‌ಸ್ಟಾಯ್ ಇವರೇ ಮೊದಲಾಗಿ ಮಾನವ ಜಗತ್ತಿನ ಮೇರುಚೇತನಗಳ ಗಾಢ ಪ್ರಭಾವದಿಂದ ದೇಜಗೌ ಅವರ ಮಹೋನ್ನತ ವ್ಯಕ್ತಿತ್ವ ವಿಕಸನಗೊಂಡಿದೆ. ನೂರರ ಹೊಸ್ತಿಲಿನತ್ತ ಸಾಗಿರುವ ಅವರಲ್ಲಿ ಪರಿಪಕ್ವವಾದ ದಾರ್ಶನಿಕ ದೃಷ್ಟಿ ಮನಗಾಣಬಹುದು. ಕುಟೀರವಾಸಿ ದೇಜಗೌ ಅವರದು ತಪಸ್ವಿಯ ಬದುಕು. ನಮ್ಮ ಸಾರಸ್ವತ ಹಾಗೂ ಸಾಂಸ್ಕೃತಿಕ ಲೋಕದ ಮಹಾತಪಸ್ವಿ. ಲೋಕೋದ್ಧಾರ ಬಯಸುವ ಹೃದಯವಂತ.
ಜುಲೈ ೬, ೧೯೯೯ರ ಪವಿತ್ರ ದಿನದಂದು ಬೆಂಗಳೂರು ಜಿಲ್ಲೆ ಚೆನ್ನಪಟ್ಟಣದ ಚಕ್ಕೆರೆ ಗ್ರಾಮದಲ್ಲಿ ದೇವೇಗೌಡ-ಚೆನ್ನಮ್ಮ ಪುಣ್ಯದಂಪತಿಗಳ ಸುಪುತ್ರರಾಗಿ ದೇಜಗೌ ಕಡುಬಡತನದ ರೈತ ಕುಟುಂಬದಲ್ಲಿ ಜನಿಸಿದವರು. ಬವಣೆ ಬದುಕಿನಲ್ಲಿ ನೊಂದು ಬೆಂದು ಅಪರಂಜಿಯಾದವರು. ಅವರ ಹೋರಾಟದ ಬದುಕು ಪ್ರಶ್ನೆ-ವಿಸ್ಮಯಗಳ ಸರಮಾಲೆ.
ನಿರ್ಲಿಪ್ತ ಬದುಕಿನ ದೇಜಗೌ ಪದವಿ, ಅಂತಸ್ತು, ಸ್ಥಾನಮಾನ, ಪ್ರಶಸ್ತಿ, ಪುರಸ್ಕಾರ, ಸನ್ಮಾನ ಯಾವುದನ್ನೂ ಬಯಸಿದವರಲ್ಲ. ಜನಪ್ರೀತಿಯೇ ಸಾಗರವಾಗಿ, ಜನಕೋಟಿ ಹೃದಯಾಂತಃಕರಣದಿಂದ ಅವರ ಮೇಲಿನ ಅಪ್ಪಟ ಪ್ರೀತಿಯಿಂದ ದೇಶ ವಿದೇಶದ ಉದ್ದಗಲಕ್ಕೂ ಅವರನ್ನು ಗೌರವಿಸಿದೆ. ಅವರನ್ನು ಅರಸಿ ಬಂದ ಗೌರವ ಪುರಸ್ಕಾರಗಳು ಅಸಂಖ್ಯಾತ.
ಡಾ.ಡಿ.ಎಲ್.ನರಸಿಂಹಾಚಾರ್ಯ ಅವರು ಎಂದೋ ನುಡಿದಿರುವಂತೆ "ಅಮೆರಿಕಾದ ಮಹಾಧ್ಯಕ್ಷರಲ್ಲಿ ಒಬ್ಬನಾದ ಅಬ್ರಹಾಂ ಲಿಂಕನ್ನನ ಕುರಿತು; ಅವನು ಮರದ ಗುಡಿಸಿಲಿನಿಂದ ಶ್ವೇತಭವನಕ್ಕೆ ಏರಿದನೆಂದು ಹೇಳುವುದುಂಟು ದೇಜಗೌರಲ್ಲಿ ಲಿಂಕನ್‌ನ ನಿದರ್ಶನವನ್ನು ಕಾಣಬಹುದು. ಅವರು ಸೃಜನಶೀಲ ಲೇಖಕ. ಸ್ವತಂತ್ರ ಬರಹಗಾರ. ಉತ್ತಮ ಭಾಷಾಂತರಕಾರ. ಅವರದು ಸಮೃದ್ಧ ಸಾಹಿತ್ಯ ಬರವಣಿಗೆ. ಅಷ್ಟೇ ಉತ್ತಮ ಆಡಳಿತಗಾರ. ಅವರು ಕನ್ನಡ ನಾಡಿನ ಹೆಮ್ಮೆಯ ಆಸ್ತಿ".
ದೇಜಗೌ ಅವರನ್ನು ಅಲಂಕರಿಸಿರುವ ಪ್ರಮುಖ ಪ್ರಶಸ್ತಿ ಪುರಸ್ಕಾರಗಳು: ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ತಿರುವಾಂಕೂರಿನ ದ್ರಾವಿಡ ಭಾಷಾ ವಿಜ್ಞಾನ ಸಂಸ್ಥೆಯ ಸೀನಿಯರ್ ಫೆಲೋ ಗೌರವ, ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಮೈಸೂರು ವಿ.ವಿ.ಯ ಗೌರವ ಡಾಕ್ಟರೇಟ್, ಹಂಪಿ ವಿ.ವಿ.ಯ ನಾಡೋಜ ಪುರಸ್ಕಾರ, ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ, ಅಲ್ಲಮಶ್ರೀ ಪ್ರಶಸ್ತಿ, ಬಸವಶ್ರೀ ಪ್ರಶಸ್ತಿ, ಪಂಪ ಪ್ರಶಸ್ತಿ, ಚಿದಾನಂದ ಪ್ರಶಸ್ತಿ, ಜೀಶಂಪ ಜಾನಪದ ಪ್ರಶಸ್ತಿ, ಅನಕೃ ಪ್ರಶಸ್ತಿ, ಕುವೆಂಪು ಸಾಹಿತ್ಯ ಪ್ರಶಸ್ತಿ, ಲಕ್ಕೇಗೌಡ ಶೈಕ್ಷಣಿಕ ಪ್ರಶಸ್ತಿ, ಕಾಯಕ ಪ್ರಶಸ್ತಿ, ಜ್ಞಾನಪೀಠ ಪ್ರಶಸ್ತಿಯ ಮೊತ್ತಕ್ಕಿಂತಲೂ ಅಧಿಕವಾಗಿರುವ ಐದು ಲಕ್ಷ ಒಂದು ರೂಪಾಯಿಗಳ ಗೌರವದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಆಯೋಜಿಸಿ ಕನ್ನಡ ಸಾಹಿತ್ಯ ಪರಿಷತ್ ನೀಡಿರುವ ನೃಪತುಂಗ ಸಾಹಿತ್ಯ ಪ್ರಶಸ್ತಿ, ೪೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಸೇರಿದಂತೆ ನೂರಾರು ಪ್ರಶಸ್ತಿ ಪುರಸ್ಕಾರಗಳ ಗೌರವಾಭರಣಗಳು ದೇಜಗೌ ಅವರ ಸಾಧನೆಯ ಕೊರಳನ್ನು ಅಲಂಕರಿಸಿವೆ. ಇದೀಗ ಇವೆಲ್ಲಕ್ಕೂ ರತ್ನಪ್ರಾಯವಾಗಿ ಕರ್ನಾಟಕದ ಸರ್ಕಾರದ ಅತ್ಯುನ್ನತ ಗೌರವವಾದ "ಕರ್ನಾಟಕ ರತ್ನ" ಪ್ರಶಸ್ತಿ ಇವರನ್ನು ಅರಸಿಕೊಂಡು ಬಂದಿದೆ. ಹಾಗೆಯೇ ಅಂತಃಕರಣ, ದೇಜಗೌ ವ್ಯಕ್ತಿತ್ವ ಮತ್ತು ಸಾಹಿತ್ಯ, ರಸಷಷ್ಟಿ, ಎಪ್ಪತ್ತರ ಹೊಸ್ತಿಲಲ್ಲಿ, ಅಮೃತವರ್ಷ, ಪುಸ್ತಕ ಪ್ರಪಂಚ, ಕಾಯಕ ವಿಭೂತಿ... ಮುಂತಾದ ಹತ್ತು ಅಭಿನಂದನಾ ಗ್ರಂಥಗಳಿಂದ ಇವರು ಅಭಿನಂದಿತರಾಗಿದ್ದಾರೆ.
ದೇಜಗೌ ಅವರನ್ನು ಕುರಿತು ರಚಿತವಾಗಿರುವ ಕೃತಿಗಳು: ಕನ್ನಡ ಕಣ್ಮಣಿ, ಕರ್ಮಯೋಗಿ, ಕನ್ನಡ ಸೇನಾನಿ, ಕುಲಪತಿಯ ಸಾಧನೆಗಳು, ಗುಡಿಸಲಿನಿಂದ ಗಂಗೋತ್ರಿಗೆ, ದೇಜಗೌ-೭೫, ಕನ್ನಡದೀಪ.... ಮುಂತಾದವು.
ದೇಜಗೌ ಸ್ಥಾಪಿಸಿರುವ ಸಂಸ್ಥೆಗಳು: ಶ್ರೀ ಕುವೆಂಪು ವಿದ್ಯಾವರ್ಧಕ ಟ್ರಸ್ಟ್, ಶ್ರೀ ಕುವೆಂಪು ವಿದ್ಯಾಪರಿಷತ್, ಭಾರತೀಯ ಸ್ಥಳನಾಮ ಸಂಸ್ಥೆ, ಭಾಷಾಂತರ ಪರಿಷತ್ತು, ಕನ್ನಡ ಅಧ್ಯಯನ ಸಂಸ್ಥೆ, ಹಿರಿಯ ನಾಗರೀಕ ಸಭಾ, ಕನ್ನಡ ಅಧ್ಯಾಪಕ ಪರಿಷತ್ತು, ಕೆ.ವಿ.ಶಂಕರಗೌಡ ಸಾಂಸ್ಕೃತಿಕ ಪ್ರತಿಷ್ಠಾನ, ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ... ಮೊದಲಾದವು.
ದೇಜಗೌ ಪ್ರವಾಸ ಮಾಡಿರುವ ದೇಶಗಳು: ಅಮೆರಿಕಾ, ಆಫ್ರಿಕಾ, ಆಸ್ಟ್ರೇಲಿಯಾ, ಜಪಾನ್, ಜರ್ಮನಿ, ಸ್ವಿಟ್ಜರ್‌ಲ್ಯಾಂಡ್, ಇಟಲಿ, ಇಸ್ರೇಲ್, ಐರ‍್ಲೆಂಡ್, ಕೀನ್ಯಾ, ಗ್ರೇಟ್ ಬ್ರಿಟನ್, ಘಾನಾ, ನೈಜಿರೀಯಾ, ಫ್ರಾನ್ಸ್, ಶ್ರೀಲಂಕಾ, ಸಿಂಗಪುರ, ಕೆನಡಾ.... ಮೊದಲಾದವು.
ದೇಜಗೌ ಮಾರ್ಗದರ್ಶನದಲ್ಲಿ ಪಿ.ಹೆಚ್.ಡಿ.ಪದವಿ ಪಡೆದವರು: ಡಾ.ಹೆಚ್.ಜಿ.ಲಕ್ಕಪ್ಪಗೌಡ, ಡಾ.ವಿ.ಎಸ್.ವೇಣುಗೋಪಾಲರಾವ್, ಡಾ.ಜಿ.ಶಂ.ಪರಮಶಿವಯ್ಯ, ಡಾ.ಬಿ.ನಂ.ಚಂದ್ರಯ್ಯ, ಡಾ.ಡಿ.ಕೆ.ರಾಜೇಂದ್ರ, ಡಾ.ಟಿ.ಎನ್.ಶಂಕರನಾರಾಯಣ, ಡಾ.ಎ.ಆರ್.ಮಂಜುನಾಥ್..... ಮೊದಲಾದವರು.

ಬನ್ನೂರು ಕೆ.ರಾಜು, ಸಾಹಿತಿ-ಪತ್ರಕರ್ತ

ಕೆಂಪೇಗೌಡರು ಕಟ್ಟಿದ ಪೇಟೆ, ದೇಗುಲಗಳು....

ಬೆಂಗಳೂರು ಕೆಂಪೇಗೌಡ-ಭಾಗ ೨

ಪ್ರೊ. ಡಿ.ಲಿಂಗಯ್ಯ, ಮೊ: ೯೯೦೨೪೬೮೯೯

ಬೆಂಗಳೂರು ಸ್ಥಳನಾಮದ ಬಗೆಗೆ
ಬೆಂಗಳೂರು ಎಂಬ ಸ್ಥಳನಾಮದ ಬಗೆಗೆ ನೂರಾರು ವರ್ಷಗಳಿಂದ ಸಾಕಷ್ಟು ಚರ್ಚೆ ನಡೆದಿದೆ. ಆದರೆ ಒಮ್ಮತಕ್ಕೆ ಬರಲಾಗಿಲ್ಲ. ಊರಿನ ನಿಷ್ಪತ್ತಿ ಹುಡುಕಾಟದ ಜಾಡು ಹೀಗಿದೆ:
ಬೆಂದ ಕಾಡೂರು> ಬೆಂಗಳೂರು
ಬೆಂಗಾವಲಾಳ್ಗಳ> ಬೆಂಗಳೂರು
ಬೆಂದ ಕಾಳೂರು> ಬೆಂಗಳೂರು
ಬೆಂಗಳು ಊರು> ಬೆಂಗಳೂರು
ಬೆಂಗಡೆ ಊರು> ಬೆಂಗಳೂರು
ಬೆಂಗುಳ (ಬೆಳ್+ಕುಳ)ಊರು> ಬೆಂಗಳೂರು
ಬೇಳೆ ಕಾಳೂರು> ಬೆಂಗಳೂರು
ವೆಂಗಟನ ಊರು> ಬೆಂಗಳೂರು
ವೆಣ್ಗಳೂರು> ಬೆಂಗಳೂರು (೧೨೪೭ರ ಮಡಿವಾಳ ಶಾಸನ ಪ್ರಕಾರ)
ಬೇಂಗಲ್ (ಎತ್ತರ ಸ್ಥಳದಲ್ಲಿರುವ) ಊರು> ಬೆಂಗಳೂರು
ಬೆಂಪಳೂರು> ಬೆಂಗಳೂರು (ಬಿಳಿಯ ಕೆರೆಯ ಊರು)
ಬೆಣಚು ಕಲ್ಲೂರು> ಬೆಂಗಳೂರು
ಪೆಂಗಳ್+ಊರು> ಬೆಂಗಳೂರು
ಅಲೆಮಾರಿಯಾಗಿದ್ದ ಆದಿಮಾನವ ಕೃಷಿ ಕಾಯಕಕ್ಕೆ ತೊಡಗಿದ ಮೇಲೆ, ಅಲೆಮಾರಿತನ ಬಿಟ್ಟು ಒಂದೆಡೆ ನಿಂತು ನೆಲೆಕಟ್ಟಿಕೊಳ್ಳುವ ಸಂದರ್ಭದಲ್ಲಿ ಕಾಡು ಕಡಿದು ಅಥವಾ ಸುಟ್ಟು ಭೂಮಿಯನ್ನು ಬಳಸಿಕೊಂಡಿರುವುದಕ್ಕೆ ಪ್ರಾಚೀನ ಕಾಲದಿಂದ ಜಗತ್ತಿನಾದ್ಯಂತ ಉದಾಹರಣೆಗಳು ದೊರೆಯುತ್ತವೆ.
ಫಿನ್ಲೆಂಡ್ ದೇಶದ ರಾಷ್ಟ್ರೀಯ ಜನಪದ ಮಹಾಕಾವ್ಯ ಕಲೆವಾಲ. ಅದರಲ್ಲಿ ಆದಿಮಾನವ ಅಗಾಧವಾದ ಕಾಡು ನಿವಾರಸಿಲು ಅಗ್ನಿಯ ಸಹಾಯ ಪಡೆದು ಕಾಡನ್ನು ಸುಟ್ಟು ವಾಸಕ್ಕೆ ಮತ್ತು ಕೃಷಿಗೆ ಭೂಮಿಯನ್ನು ಹದಮಾಡಿಕೊಂಡ ಉದಾಹರಣೆಯಿದೆ.
ನಮ್ಮ ಮಹಾಭಾರತ ಮಹಾಕಾವ್ಯದಲ್ಲಿ ಪಾಂಡವರಿಗಾಗಿ ಇಂದ್ರಪ್ರಸ್ಥ ನಗರವನ್ನು ನಿರ್ಮಿಸುವ ಸಂದರ್ಭದಲ್ಲಿ ಖಾಂಡವ ದಹನ ಪ್ರಸಂಗ ಪ್ರಸ್ತಾಪವಾಗಿದೆ.
ಹಳ್ಳಿಗಳ ಹುಟ್ಟಿನ ಇತಿಹಾಸ ಕೇಳಿದಾಗ ಹಳ್ಳಿಯ ಹಿರಿಯರು ಸಾಮಾನ್ಯವಾಗಿ ಹೀಗೆ ಹೇಳುತ್ತಾರೆ: ನೀರು ನೆರಳು ಹುಡುಕಿಕೊಂಡು ಹೀಗೇ ಬಂದೋ. ಇದು ತಕ್ಕ ಸ್ಥಳ ಅನ್ನಿಸಿತು. ತರಗು ಗುಡಿಸಿ ನೆಲೆ ಕಟ್ಟಿಕೊಂಡೋ; ಗಿಡ ಮರ ಕಡಿದು ಜಾಗ ಮಾಡಿಕೊಂಡೋ; ಮಾಮೇರಿ ಬೆಳೆದಿದ್ದ ಗಿಡ ಮರ ಸುಟ್ಟು ಊರು ಕಟ್ಟಿದೋ. ಹಳ್ಳಿ ಬೆಳೆದು ದೊಡ್ಡದಾಯಿತು.
ನಮ್ಮ ಬುಡಕಟ್ಟು ಜನಾಂಗದವರು ಕಾಡಿನಲ್ಲಿ ಸಿಗುವ ಆಹಾರ ಪದಾರ್ಥಗಳ ಜೊತೆಗೆ ಅಲ್ಪಸ್ವಲ್ಪ ಕೃಷಿ ಮಾಡಲು ಕಾಡು ಕಡಿದು ಅಥವಾ ಸುಟ್ಟು ಭೂಮಿಯನ್ನು ಕೃಷಿಗೆ ಮತ್ತು ವಾಸಕ್ಕೆ ಹದಮಾಡಿಕೊಳ್ಳುವುದುಂಟು. ಮನುಷ್ಯನ ಬದುಕಿಗೆ ಇದು ಅನಿವಾರ್ಯ. ಇವರೆಲ್ಲ ಕಾಡು ನಾಶಮಾಡುವ ಪರಿಸರ ವಿರೋಧಿಗಳಲ್ಲ. ಬದುಕಿನ ಅನಿವಾರ್ಯತೆಗೆ ಕಾಡನ್ನು ಬಳಸಿಕೊಳ್ಳುವ ವಿಧಾನ ಅಷ್ಟೆ.
ಈ ಹಿನ್ನೆಲೆಯಲ್ಲಿ ಪರಿಭಾವಿಸಿದರೆ ಕೆಂಪೇಗೌಡನ ಹಿಂದಾಗಲೀ ಅವನ ಕಾಲದಲ್ಲಾಗಲೀ ಊರು ಕಟ್ಟಲು, ನಗರ ಸ್ಥಾಪಿಸಲು ಸ್ವಲ್ಪ ಕಾಡು ಸುಟ್ಟಿದ್ದರೆ ಅಸಂಭವವೇನೂ ಅಲ್ಲ. ಆದ್ದರಿಂದ ಬೆಂದ ಕಾಡೂರಿನಿಂದ ಬೆಂಗಳೂರು ಆಗಿದೆ ಎಂದು ನಂಬುವುದು ಹೆಚ್ಚು ಸೂಕ್ತವಾಗಿದೆ. ಅದರ ನಿಷ್ಪತ್ತಿಯನ್ನು ಹೀಗೆ ಗುರುತಿಸಬಹುದು.
ಬೆಂದ+ಕಾಡು+ಊರು>ಬೆಂದಕಾಡೂರು>ಬೆಂಗಾಡೂರು>ಬೆಂಗಡೂರು>ಬೆಂಗಳೂರು.
ಯಲಹಂಕ ನಾಡಿನ ಪ್ರಭುಗಳ ಇತಿಹಾಸದಲ್ಲಿ ಒಂದಕ್ಕಿಂತ ಹೆಚ್ಚು ’ಬೆಂಗಳೂರು’ಗಳು ಪ್ರಸ್ತಾಪವಾಗದೆ. ಅವು ಹೀಗಿವೆ: ಒಂದು: ಹೊಯ್ಸಳ ರಾಜರ ಕಾಲದ ’ಮಹಾ ಯಲಹಂಕ ನಾಡು" ನಾಡಪ್ರಭು ದೇಚಿ ದೇವರಸ ಅಥವಾ ಅವನಿಗಿಂತಲೂ ಹಿಂದೆ ಇದ್ದ ನಾಡಪ್ರಭುಗಳ ಕಾಲದ ಬೆಂಗಳೂರು. ಅದರ ನಿರ್ದಿಷ್ಟ ಸ್ಥಳ ಗೊತ್ತಿಲ್ಲ. ಎರಡು: ಒಂಬತ್ತನೇ ಶತಮಾನದ ಬೇಗೂರು ಶಾಸನದ ಬೆಂಗಳೂರು. ಅಂದರೆ ಒಂಭತ್ತನೇ ಶತಮಾನಕ್ಕೂ ಹಿಂದೆ ಬೆಂಗಳೂರು ಎಂಬ ಊರು ಇತ್ತು. ಮೂರು: ಹನ್ನೊಂದನೇ ಶತಮಾನದ ಹೊಯ್ಸಳ ದೊರೆ ವೀರಬಲ್ಲಾಳನ ಹೆಸರಿನೊಂದಿಗೆ ತಳಕುಹಾಕಿಕೊಂಡಿರುವ ಬೆಂದಕಾಳೂರಿನ ಬೆಂಗಳೂರು. ನಾಲ್ಕು: ಕೆಂಪನಾಚೇಗೌಡನ ಹೆಂಡತಿ ಲಿಂಗಾಂಬೆಯ ಹುಟ್ಟಿದ ಸ್ಥಳವೆಂದು ಹೇಳುವ ಬೆಂಗಳೂರು (ಹಳೆಯ ಬೆಂಗಳೂರು). ಶಾಸನದ ಒಕ್ಕಣೆಯಲ್ಲಿ ಕೆಂಪನಾಚೇಗೌಡನ ಹೆಸರಿನೊಡನೆ ಅಂಟಿಕೊಂಡಿರುವ ಬೆಂಗಳೂರು. ಇವು ಯಾವುವೂ ಈಗ ಅಸ್ತಿತ್ವದಲ್ಲಿಲ್ಲ. ಸಂಪೂರ್ಣವಾಗಿ ನಾಶಮಾಡುವಂತಹ ಭಯಂಕರ ಯುದ್ಧವೂ ನಡೆದ ಸಾಕ್ಷಿಯಿಲ್ಲ. ಇವು ಬೇರೆ ಬೇರೆ ಊರುಗಳು. ಒಂದೇ ಊರಂತೂ ಅಲ್ಲ. (ಇವೆಲ್ಲವೂ ಒಂದೇ ಊರಿನ ಹೆಸರು ಎಂದು ವಾದಿಸಲೂ ಸಾಧ್ಯವಿದೆ. ಆದರೆ ಅದಕ್ಕೂ ಬಲವಾದ ಕಾರಣವಿಲ್ಲ.)
ಕರ್ನಾಟಕದಲ್ಲಿ ಒಂದೇ ಹೆಸರಿನ ಒಂದಕ್ಕಿಂತ ಹೆಚ್ಚು ಊರುಗಳಿರುವ ಉದಾಹರಣೆಗಳಿವೆ. ಆದರೆ ಮೂರು ನಾಲ್ಕು ಅಥವಾ ಐದಾರು ಮೈಲಿಗಳ ಅಂತರದಲ್ಲಿ ಒಂದೇ ಹೆಸರಿನ ಒಂದಕ್ಕಿಂತ ಹೆಚ್ಚು ಊರುಗಳಿರುವುದು ಆಶ್ಚರ್ಯವಾಗಿದೆ. ಒಂಬತ್ತನೇ ಶತಮಾನದಿಂದ ಹದಿನಾರನೇ ಶತಮಾನದವರೆಗೆ ಇದ್ದಿರಬಹುದಾದ ಬೆಂಗಳೂರು(ಗಳು) ಅಸ್ತಿತ್ವದಲ್ಲಿ ಇಲ್ಲವಾದರೂ ’ಬೆಂಗಳೂರು’ ಎಂಬ ಹೆಸರು ಒಂದಲ್ಲ ಒಂದು ರೂಪದಲ್ಲಿ ಉಳಿದುಕೊಂಡು ಬಂದಿದೆ.
ಇವೆಲ್ಲಕ್ಕಿಂತ ಭಿನ್ನವಾದದ್ದು ’ರಾಜಧಾನಿ ಬೆಂಗಳೂರು’. ಹಿರಿಯ ಕೆಂಪೇಗೌಡನ ಹೆಸರಿನೊಡನೆ ಸೇರಿಕೊಂಡಿರುವ ಊರು. ಪುಟ್ಟ ಹಳ್ಳಿಯಾಗಿದ್ದ ಬೆಂಗಳೂರನ್ನು ರಾಜಧಾನಿಯನ್ನಾಗಿ ಕಟ್ಟಿ, ಬ್ರಾಹ್ಮಣ ಪುರೋಹಿತರ ಹಿತವಚನಕ್ಕೋ ವಿಜಯನಗರ ಅರಸರ ಗೌರವಕ್ಕೋ ’ದೇವರಾಯ ಪಟ್ಟಣ’ವೆಂದು ನಾಮಕರಣ ಮಾಡಿದರೂ ಹಿಂದಿನ ಹೆಸರನ್ನೇ ಉಳಿಸಿಕೊಂಡ ಬೆಂಗಳೂರು. ಹಿರಿಯ ಕೆಂಪೇಗೌಡನ ಬೆಂಗಳೂರು, ಯಲಹಂಕ ನಾಡಿನ ಬೆಂಗಳೂರು, ಒಂದು ನೂರು ವರ್ಷ (೧೫೩೭-೧೬೩೮) ಯಲಹಂಕ ನಾಡಪ್ರಭುಗಳಿಂದ ಆಳಿಸಿಕೊಂಡ ಬೆಂಗಳೂರು. ಬೆಂಗಳೂರು ನಗರ ಸಂಸ್ಥಾಪಕ ಹಿರಿಯ ಕೆಂಪೇಗೌಡ ಅವನ ಮಕ್ಕಳಾದ ಗಿಡ್ಡೇಗೌಡ ಮತ್ತು ಇಮ್ಮಡಿ ಕೆಂಪೇಗೌಡ ಅದ್ಧೂರಿಯಾಗಿ ಆಳಿದ ಬೆಂಗಳೂರು. ಹುಟ್ಟಿನಿಂದಲೇ ಬೆಂಗಳೂರು ಸಾಂಸ್ಕೃತಿಕ ಬೆಂಗಳೂರಾಗಿ ಬೆಳೆದದ್ದು ವಿಶೇಷ.
ಹಿರಿಯ ಕೆಂಪೇಗೌಡ ಸ್ಥಾಪಿಸಿ ಆಳಿದ ರಾಜಧಾನಿ ಬೆಂಗಳೂರು ದೇವಾಲಯಗಳ ಊರು; ಕೆರೆಗಳ ಊರು; ಕಲ್ಯಾಣಿಗಳ ಊರು; ಉದ್ಯಾನಗಳ ಊರು; ಹಲವು ಕಸುಬುದಾರರ ಊರು; ಹಲವು ಜಾತಿಗಳವರ ಊರು; ಹಬ್ಬ ಹರಿದಿನ ಜಾತ್ರೆ ಪರಿಭಾಷೆಗಳ ಊರು; ಒಟ್ಟಾರೆ ಸಾಂಸ್ಕೃತಿಕ ತವರೂರು.
ಬೆಂಗಳೂರು ಕೋಟೆ-ಪೇಟೆ ನಿರ್ಮಾಣ
ಹಿರಿಯ ಕೆಂಪೇಗೌಡ ಶಾಲಿವಾಹನ ಶಕ ವರ್ಷ ೧೪೫೯ರ ಹೇವಿಳಂಬಿ ಸಂವತ್ಸರದ ಮಾಘ ಶುದ್ಧ ತ್ರಯೋದಶಿ ಶುಕ್ರವಾರದಂದು (ಪ್ರ.ವ.೧೪-೧-೧೫೩೮) ಬೆಂಗಳೂರು ಕೋಟೆ ಮತ್ತು ಪೇಟೆಗಳ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಿದನು. ಅದು ನಾಲ್ಕು ಮೈಲಿ ಸುತ್ತಳತೆಯ, ನಾಲ್ಕು ಬತೇರಿಯ, ಒಂಬತ್ತು (ನಾಲ್ಕು ಪ್ರಧಾನ ಮತ್ತು ಐದು ಸಾಮಾನ್ಯ) ದ್ವಾರಗಳ ಅಂಡಾಕಾರದ ಕೋಟೆ. ಹದಮಾಡಿದ ಮಣ್ಣಿನ ಹೆಂಟೆಗಳಿಂದ ನಿರ್ಮಿಸಿದ್ದು. ಒಳ ಹಾಗೂ ಹೊರಭಾಗದಲ್ಲಿ ದಿಂಡುಗಲ್ಲಿನ ಒತ್ತಾಸೆ. ಆ ಕಾಲಕ್ಕೆ ಅದು ಬಯಲು ಸೀಮೆಯ ದೊಡ್ಡ ಕೋಟೆ. ಅರಮನೆ ಆವರಣಕ್ಕೆ ಹೊಂದಿಕೊಂಡಂತೆ ಚಿಕ್ಕಪೇಟೆ ಮತ್ತು ದೊಡ್ಡಪೇಟೆ ಎಂಬ ಎರಡು ಪೇಟೆಗಳು. ಈಗಿನ ಚಿಕ್ಕಪೇಟೆ ವೃತ್ತದ ಬಲಿ ಅರಮನೆ. ಅದರ ಸುತ್ತಮುತ್ತ ಭೈರವೇಶ್ವರ, ಶ್ರೀ ವೆಂಕಟರಮಣ, ಸೋಮೇಶ್ವರ, ಶ್ರೀ ರಂಗನಾಥ, ಕಾಳಾಂಬಾ, ಕೋದಂಡಸ್ವಾಮಿ ದೇವಾಲಯಗಳು. ರಾಜ ಮನೆತನದ ಮನೆ, ಅಗತ್ಯ ಸೈನಿಕರ ಮನೆ, ಅಂಗಡಿ ಮುಂಗಟ್ಟು ಪೇಟೆ ಮೊದಲಾದವು. ಬೆಂಗಳೂರು ಕೋಟೆಯ ಒಳಗಿನ ದೇವಾಲಯಗಳು ಹೀಗಿವೆ:
ಧರ್ಮರಾಯ ಸ್ವಾಮಿ, ಕಾಳಮ್ಮ, ಆಂಜನೇಯಸ್ವಾಮಿ, ಚೌಡೇಶ್ವರಿ, ವೆಂಕಟೇಶ್ವರ (ವೆಂಕಟರಮಣಸ್ವಾಮಿ), ನರಸಿಂಹಸ್ವಾಮಿ, ಚೆನ್ನಿಗರಾಯಸ್ವಾಮಿ, ಕೇಶವಸ್ವಾಮಿ, ರಂಗನಾಥ, ಶ್ರೀಕೃಷ್ಣ, ಕಾಶಿವಿಶ್ವೇಶ್ವರ, ಬಸವೇಶ್ವರ, ಹಿರಿಯ ಕೆಂಪೇಗೌಡ ಕಟ್ಟಿಸಿದ ಕೋಟೆಯ ಒಂಬತ್ತು ಬಾಗಿಲುಗಳು ಹೀಗಿದ್ದವು: ೧) ಪೂರ್ವಕ್ಕೆ ಹಲಸೂರು ಹೆಬ್ಬಾಗಿಲು. ೨) ಉತ್ತರಕ್ಕೆ ಯಶವಂತಪುರ ಉಪದ್ವಾರ (ದೆಹಲಿದ್ವಾರ, ಈಗಿನ ಉಪ್ಪಾರ ಪೇಟೆ ಪೊಲೀಸ್ ಠಾಣೆ). ೩) ಪಶ್ಚಿಮಕ್ಕೆ ಸೊಂಡೆಕೊಪ್ಪ ಹೆಬ್ಬಾಗಿಲು (ಈಗಿನ ರೈಲ್ವೆ ಮೇಲುಸೇತುವೆ ಬಳಿ). ೪) ಕೆಂಗೇರಿ ಉಪದ್ವಾರ (ಮೈಸೂರು ದ್ವಾರ). ೫) ಕಾನಕಾನಹಳ್ಳಿ ಉಪದ್ವಾರ (ಈಗಿನ ಕೆಂಪೇಗೌಡ ವೈದ್ಯಕೀಯ ಮಹಾವಿದ್ಯಾಲಯ ಬಳಿ). ೬) ದಕ್ಷಿಣಕ್ಕೆ ಆನೇಕಲ್ ಹಿಬ್ಬಾಗಿಲು (ಈಗಿನ ಕಲಾಸಿಪಾಳ್ಯ ಪೊಲೀಸ್ ಠಾಣೆ ಹಿಂಭಾಗ). ೭) ಯಲಹಂಕ ಹೆಬ್ಬಾಗಿಲು. ೮) ಸಜ್ಜಾಪುರ ಉಪದ್ವಾರ ಮತ್ತು ೯) ವರ್ತೂರು ಉಪದ್ವಾರ.
ಕೋಟೆಯ ಒಳಗಡೆ, ಪೂರ್ವ ಪಶ್ಚಿಮ ಹಾಗೂ ಉತ್ತರ ದಕ್ಷಿಣಕ್ಕೆ ಹರಿದ ನಾಲ್ಕು ಮುಖ್ಯ ರಸ್ತೆಗಳು. ಎರಡೂ ಕೂಡುವ ಸ್ಥಳದಲ್ಲಿ (ಚಿಕ್ಕಪೇಟೆ ವೃತ್ತ) ಅರಮನೆ. ಒಳಹೊರಭಾಗದಲ್ಲಿ ಮುಖ್ಯ ಪೇಟೆಗಳು. ಉದಾಹರಣೆಗೆ: ಒಕ್ಕಲಿಗರಪೇಟೆ,. ಕುರುಬರಪೇಟೆ, ಮನವಾರ್ತೆಪೇಟೆ, ತಿಗಳರಪೇಟೆ, ಗಾಣಿಗರ ಪೇಟೆ, ಕುಂಬಾರಪೇಟೆ, ನಗರ್ತರಪೇಟೆ, ಸುಣ್ಣಕಲ್ ಪೇಟೆ, ಬ್ರಾಹ್ಮಣರಪೇಟೆ, ಮಂಡಿಪೇಟೆ, ದೊಡ್ಡಪೇಟೆ, ಬಳ್ಳಾಪುರಪೇಟೆ (ಮುತ್ಯಾಲಪೇಟೆ), ಸಂತೆಪೇಟೆ, ಚಿಕ್ಕಪೇಟೆ, ಬಳೇಪೇಟೆ, ಅರಳೆಪೇಟೆ, ಅಕ್ಕಿಪೇಟೆ, ರಾಗಿಪೇಟೆ, ಹಳೆತರಗುಪೇಟೆ, ಹೊಸತರಗುಪೇಟೆ, ಇತ್ಯಾದಿ. ಕೆಂಪೇಗೌಡನ ಕಾಲದಲ್ಲಿ ಎಲ್ಲಾ ಜಾತಿಯ ಜನರ ವಸತಿಗೂ ಪ್ರತ್ಯೇಕ ಪೇಟೆಗಳಿದ್ದವು. ಈಗಿನ ಟಿ.ಆರ್.ಮಿಲ್ಲಿನ ಮುಂಭಾಗ (ಚಾಮರಾಜಪೇಟೆ)ವನ್ನು ಗೌಡರಪೇಟೆ ಎಂದು ಕರೆಯುತ್ತಿದ್ದರು. ಈಗ ಹೆಸರು ಬದಲಾಗಿದೆ. ಗೌಡರ ಪೇಟೆಗೆ ಹೊಂದಿಕೊಂಡಂತೆ ಕುರುಬರಪೇಟೆ ಇತ್ತು. ಈಗ ಅದಿಲ್ಲ. ಕೆಂಪೇಗೌಡನ ಕಾಲದಲ್ಲಿ ದೊಡ್ಡಪೇಟೆ ಇತ್ತು. ಈಗ ಅದು ಅವಿನ್ಯೂ ರಸ್ತೆಯಾಗಿದೆ. ಹಳೆಯ ಹೆಸರುಗಳನ್ನು ಉಳಿಸಿಕೊಳ್ಳದೆ ನಮ್ಮ ಜನ ಚರಿತ್ರೆಯನ್ನು ಹಾಳು ಮಾಡಿದ್ದಾರೆ. ಕೆಂಪೇಗೌಡ ಕಲ್ಪಿಸಿದ ಹಲವು ಪೇಟೆಗಳು ನಿರ್ಧಿಷ್ಟ ಜಾತಿ ಪಂಗಡಗಳಿಗೆ ಸಂಬಂಧಿಸಿದವಾಗಿದ್ದವು. ವೃತ್ತಿ ಹಿನ್ನೆಲೆಯ ಆ ವ್ಯವಸ್ಥೆ ಕೆಂಪೇಗೌಡನ ಆಡಳಿತ ಕಾಲಕ್ಕೆ ಸರಿಯಾಗಿಯೇ ಇತ್ತು. ಆಯಾ ಪಂಗಡಕ್ಕೆ ಸಂಬಂಧಿಸಿದ ದೇವಾಲಯಗಳು ಆಯಾ ಪ್ರದೇಶದಲ್ಲೇ ಇವೆ. ಆಗ ಅವು ಧರ್ಮಸಮನ್ವಯಕ್ಕೆ, ಜಾತಿ ಸಮನ್ವಯಕ್ಕೆ ಹೆಸರಾಗಿದ್ದವು. ಯಾವ ಘರ್ಷಣೆಗಳೂ ಇರುತ್ತಿರಲಿಲ್ಲ. ಎಲ್ಲಾ ವೃತ್ತಿಗಳಿಗೂ ವೃತ್ತಿಗಳವರಿಗೂ ಸಮಾನ ಗೌರವ, ಸಮಾನ ಸ್ಥಾನಮಾನ ಇದ್ದ ಕಾಲ ಅದು.
ಹಿರಿಯ ಕೆಂಪೇಗೌಡ ಹೆಸರಿಸಿದ ಪೇಟೆಗಳಲ್ಲಿ ಕೆಲವು ವೃತ್ತಿಗಳಿಗೆ ಸಂಬಂಧಿಸಿದವು; ಮತ್ತೆ ಕೆಲವು ಜಾತಿಗೆ ಸಂಬಂಧಿಸಿದವು. ಉದಾಹರಣೆಗೆ:
ಬಳೇಪೇಟೆ (ಬಣಜಿಗರ ಪೇಟೆ)-ಹರಿಶಿನ ಕುಂಕುಮ ಬಳೆ ಮೊದಲಾದ ಮಂಗಳ ಪದಾರ್ಥಗಳನ್ನು ಮಾರುವ ಸ್ಥಳ. ಅರಳೇ ಪೇಟೆ (ನೇಕಾರರ ಬೀದಿ)-ಹತ್ತಿ ರೇಷ್ಮೆ, ಬಟ್ಟೆ, ನೂಲು ವ್ಯಾಪಾರದ ಸ್ಥಳ. ನಗರ್ತರ ಪೇಟೆ-ಚಿನ್ನ, ಬೆಳ್ಳಿ ವ್ಯಾಪಾರಗಾರರ ಸ್ಥಳ. ಮುತ್ಯಾಲ ಪೇಟೆ (ಮುತ್ತಿನ ಪೇಟೆ, ಕೋಮಟಿ ಪೇಟೆ)-ಮುತ್ತು, ರತ್ನ ವ್ಯಾಪಾರದ ಸ್ಥಳ. ಅಕ್ಕಿಪೇಟೆ-ಅಕ್ಕಿಮಂಡಿ, ಅಕ್ಕಿ ದೊರೆಯುವ ಸ್ಥಳ. ರಾಗಿಪೇಟೆ-ರಾಗಿ ಮಂಡಿ. ತಿಗಳರ ಪೇಟೆ-ಹೂ, ಹಣ್ಣು, ತರಕಾರಿ ಮೊದಲಾದವುಗಳ ಮಾರಾಟಗಾರರ ಸ್ಥಳ ಸ್ವಕುಲಸಾಲಿ ಪೇಟೆ-ಮರಾಠಿ ನೇಯ್ಗೆಯವರ ಸ್ಥಳ. ಉಪ್ಪಾರಪೇಟೆ-ಉಪ್ಪು ತಯಾರಿಸಿ ಮಾರುವವರ ಪೇಟೆ. ಮಾಮೂಲು ಪೇಟೆ-ಎಲ್ಲಾ ಅಗತ್ಯ ವಸ್ತುಗಳು ಒಂದೇ ಕಡೆ ದೊರೆಯುವ ಪೇಟೆ. ಮನೆವಾರ್ತೆ ಪೇಟೆ-ಸಂಸಾರಿಗಳ ವಾಸಸ್ಥಳ. ದೊಡ್ಡಪೇಟೆ-ಸಗಟು ವ್ಯಾಪಾರ ಕೇಂದ್ರ. ಚಿಕ್ಕಪೇಟೆ-ಚಿಲ್ಲರೆ ವ್ಯಾಪಾರ ಕೇಂದ್ರ. ಮಾರವಾಡಿಪೇಟೆ-ಮಾರವಾಡಿ ಜನರ ವಾಸ ಮತ್ತು ವ್ಯವಹಾರದ ಸ್ಥಳ. ತರಗುಪೇಟೆ (ಹಳೆ ತರಗು ಪೇಟೆ, ಹೊಸ ತರಗು ಪೇಟೆ)-ಬಾಳೆ ಎಲೆ, ಊಟದ ಎಲೆ, ದೊನ್ನೆ ಮಾರಾಟದ ಸ್ಥಳ. ಪಟ್ನೂಲು ಪೇಟೆ (ಹಳೆ ಪಟ್ಟೆನೂಲು ಪೇಟೆ, ಹೊಸ ಪಟ್ಟೆನೂಲು ಪೇಟೆ)- ರೇಷ್ಮೆದಾರದ ಮಾರಾಟ ಕೇಂದ್ರ. ಹುರಿಯೋ ಪೇಟೆ-ಕಡಲೆಪುರಿ, ಕಡಲೆ ಮಾರಾಟ ಕೇಂದ್ರ, ಮರಾಠಿ ದರ್ಜಿ ಪೇಟೆ, ಸೌರಾಷ್ಟ್ರ ದರ್ಜಿ ಪೇಟೆ. ಸುಣ್ಣಕಲ್ಲು ಪೇಟೆ-ಸುಣ್ಣ, ಸುಣ್ಣಕಲ್ಲು ಮಾರಾಟದ ಸ್ಥಳ. ಹೊರಪೇಟೆ-ಬೆಂಗಳೂರು ಕೋಟೆಯ ಹೊರಗಡೆಯಿದ್ದ ಪೇಟೆ.
ಕೆಲವು ಪೇಟೆಗಳು ವಾಸಕ್ಕೆ ಮೀಸಲಾಗಿದ್ದವು. ಉದಾಹರಣೆಗೆ: ಗೊಲ್ಲರಪೇಟೆ, ಕುಂಬಾರಪೇಟೆ, ಗಾಣಿಗರ ಪೇಟೆ, ಹೂವಾಡಿಗರ ಪೇಟೆ, ಮೇದರ ಪೇಟೆ, ಸಣ್ಣ ಕಂಬಳಿ ಕುರುಬರ ಪೇಟೆ, ಕುಂಚಿಟಿಗರ ಪೇಟೆ, ಕಲ್ಲಾರ ಪೇಟೆ, ತಿಗಳರ ಪೇಟೆ, ತೆಲುಗು ಪೇಟೆ, ಖತ್ರಿ ಪೇಟೆ, ಮಲ್ದಾರ ಪೇಟೆ, ಗುಡುಮಯ್ಯ ಪೇಟೆ, ಬಳ್ಳಾಪುರ ಪೇಟೆ, ಜೋರಿಪೇಟೆ.
ಬೆಂಗಳೂರು ಕೋಟೆಯೊಳಗಿನ ಅರಮನೆಯಲ್ಲಿ ಒಡ್ಡೋಲಗದ ಚಾವಡಿಯಿತ್ತು. ಅಲ್ಲೇ ಕೆಂಪೇಗೌಡನ ದರ್ಬಾರು ನಡೆಯುತ್ತಿತ್ತು. ಅಲ್ಲಿ ಆಗಾಗ ನ್ಯಾಯ ತೀರ್ಮಾನದ ಸಭೆ ಸೇರುತ್ತಿತ್ತು. ಕೋಟೆಯ ಒಳಗೆ ಉನ್ನತ ಅಧಿಕಾರಿಗಳ ಅಧೀನದಲಿ ಬೊಕ್ಕಸ, ಠಾಣೆ, ಗೋವು, ಸುಂಕದ ಚಾವಡಿಗಳಿದ್ದವು. ವಿಶೇಷ ನ್ಯಾಯ ವಿಚಾರಣೆಗೆ, ಜನರ ಕುಂದುಕೊರತೆ ಪರಿಶೀಲನೆಗಳಿಗೆ, ವಿಶೇಷ ಮಂತ್ರಾಲೋಚನೆಗೆ ಶಿವಗಂಗೆ ಬೆಟ್ಟದ ತಪ್ಪಲಿನಲ್ಲಿದ್ದ ’ಕೆಂಪೇಗೌಡ ಹಜಾರ’ ಬಳಕೆಯಾಗುತ್ತಿತ್ತು. ಗೋ ರಕ್ಷಣೆ, ಸ್ತ್ರೀ ರಕ್ಷಣೆ, ಬ್ರಾಹ್ಮಣ ರಕ್ಷಣೆ, ಶಿಷ್ಟ ರಕ್ಷಣೆಗೆ ಹೆಚ್ಚು ಗಮನ ಕೊಡಲಾಗುತ್ತಿತ್ತು. ಬಲಿಷ್ಠ ಯುವಕರನ್ನು ರಾಜ್ಯ ರಕ್ಷಣೆ, ಕೋಟೆ ರಕ್ಷಣೆ, ಯುದ್ಧಗಳಿಗೆ ಬಳಸಿಕೊಳ್ಳಲಾಗುತ್ತಿತ್ತು. ಕೆಂಪೇಗೌಡನದು ಅಚ್ಚುಕಟ್ಟಾದ ಆಡಳಿತ ವ್ಯವಸ್ಥೆ.
ಕೆಂಪೇಗೌಡ ಕೋಟೆಯ ಒಳಗಿನ ಬೀದಿಗಳಿಗೆ ಆಕರ್ಶಕವಾದ, ದೈವಭಕ್ತಿಗೆ ಇಂಬಾದ ಹೆಸರುಗಳನ್ನು ಇಟ್ಟಿದ್ದನು. ಉದಾಹರಣೆಗೆ: ಸೂರ್ಯ ಬೀದಿ (ಈಗಿನ ಅವೆನ್ಯೂ ರಸ್ತೆ) ಮತ್ತು ಚಂದ್ರ ಬೀದಿ(ಈಗಿನ ಬಿವಿಕೆ ಅಯ್ಯಂಗಾರ್ ರಸ್ತೆ). ಕೆಂಪೇಗೌಡ ನಿರ್ಮಿಸಿದ ನಾಲ್ಕು ಬತೇರಿ, ಒಂಬತ್ತು ದ್ವಾರಗಳ ಕೋಟೆ ರಕ್ಷಣಾತ್ಮಕವಾದದ್ದು. ವ್ಯಾಪಾರಿಗಳಿಗೆ, ವಿವಿಧ ಕಸಬುದಾರರಿಗೆ, ನಗರ ರಾಜಧಾನಿ ಆಡಳಿತಕ್ಕೆ, ನಗರವಾಸಿಗಳಿಗೆ ರಕ್ಷಣೆ ನೀಡುವುದೇ ಅದರ ನಿರ್ಮಾಣದ ಮೂಲೋದ್ದೇಶ. ಅಂದಿನ ವ್ಯಾಪಾರಿಗಳ, ವ್ಯವಹಾರಿಕ ಮಧ್ಯವರ್ತಿಗಳ ಕೇಂದ್ರವಾಗಿತ್ತು. ವಿವಿಧ ನಗರಗಳ ಸಂಪರ್ಕ ಸಾಧನವಾಗಿತ್ತು.
ಯಲಹಂಕ ನಾಡಪ್ರಭುಗಳಲ್ಲಿ ಅತ್ಯಂತ ಜನಪ್ರಿಯನಾದ ಹಿರಿಯ ಕೆಂಪೇಗೌಡನ ಬಗೆಗೆ ಅನೇಕ ಐತಹ್ಯಗಳು ಹುಟ್ಟಿಕೊಂಡಿವೆ. ಬೆಂಗಳೂರು ಕೋಟೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಹೃದಯವಿದ್ರಾವಕ ಕಟ್ಟುಕಥೆಯೊಂದು ಪ್ರಸಿದ್ಧವಾಗಿದೆ. ಅದು ಹೀಗಿದೆ:
ಹಿರಿಯ ಕೆಂಪೇಗೌಡ ಬೆಂಗಳೂರು ಕೋಟೆಯನ್ನು ಕಟ್ಟಿಸುವಾಗ, ಕೋಟೆಯ ಮುಖ್ಯಬಾಗಿಲು (ಆನೆಬಾಗಿಲು) ನಿಲ್ಲುತ್ತಿರಲಿಲ್ಲ. ಬೆಳಗ್ಗೆಯಿಂದ ಕಟ್ಟಿದ್ದು ಸಂಜೆಗೆ ಬಿದ್ದುಹೋಗುತ್ತಿತ್ತು. ಮಾನವ ರಕ್ತಪಿಪಾಸಿ ಮಹಾಭೂತ ಹೊಕ್ಕಿದ್ದು ಕಾರಣವೆಂದು ಜ್ಯೋತಿಷಿಗಳ ನಂಬಿಕೆ. ಗರ್ಭಿಣಿ ಸ್ತ್ರೀಯನ್ನು ಬಲಿಕೊಟ್ಟರೆ ಬಾಗಿಲು ನಿಲ್ಲುವುದೆಂದು ಶಾಸ್ತ್ರ ಕೇಳಿಬಂತು. ನಾಡಪ್ರಭು ಕೆಂಪೇಗೌಡನಿಗೆ ಚಿಂತೆಯಾಯಿತು. ಇದನ್ನು ಅರಿತ ಕೆಂಪೇಗೌಡನ ಸೊಸೆ ಲಕ್ಷ್ಮೀದೇವಿ ಸ್ವಯಿಚ್ಛೆಯಿಂದ, ರಾಜ್ಯದ ಸಲುವಾಗಿ ಕೋಟೆಯ ಬಾಗಿಲ ಬಳಿ ಆತ್ಮಾರ್ಪಣೆ ಮಾಡಿಕೊಂಡಳು. ಕೋರಮಂಗಲದಲ್ಲಿ ಅವಳ ಸಮಾಧಿಯನ್ನು ಮಾಡಲಾಯಿತು. ಆಕೆ ಕುಲದೇವತೆಯಂತೆ ಪೂಜೆಗೆ ಅರ್ಹಳಾದಳು.
ಈ ಪ್ರಸಂಗ ಸತ್ಯಕ್ಕೆ ದೂರವಾಗಿದೆ. ಯಾಕೆಂದರೆ ಬೆಂಗಳೂರು ಕೋಟೆ ನಿರ್ಮಾಣವಾಗುವ ಕಾಲಕ್ಕೆ (೧೫೩೮) ಹಿರಿಯ ಕೆಂಪೇಗೌಡನಿಗೆ ಮದುವೆ ವಯಸ್ಸಿನ ಮಕ್ಕಳಿರಲಿಲ್ಲ. ಆಗ ಅವನ ಮೊದಲ ಮಗನ ವಯಸ್ಸು ಕೇವಲ ಆರು ವರ್ಷ. ಅಂಥ ಬಾಲಕನಿಗೆ ಮದುವೆ ಮಾಡಲು ಸಾಧ್ಯವೇ? ಅವನ ಹೆಂಡತಿ ಗರ್ಭಿಣಿಯಾಗಲು ಸಾಧ್ಯವೇ? ಕೆಂಪೇಗೌಡನ ಕಾಲದಲ್ಲಿ ಅರಮನೆಗೆ ಸಂಬಂಧಿಸಿದ ಸ್ಮಶಾನ ಇದ್ದದ್ದು ಈಗಿನ ಚಾಮರಾಜಪೇಟೆ ಸಂತಮೇರಿ ಆಸ್ಪತ್ರೆ ಹಾಗೂ ಸೀತಾಪತಿ ಅಗ್ರಹಾರದ ನಡುವೆ. ಸುಮಾರು ನಾಲ್ಕು ಎಕರೆ ಪ್ರದೇಶದ್ದು. ಬೆಂಗಳೂರು ನಗರದ ಸಾರ್ವಜನಿಕರಿಗಾಗಿ ಈಗಿನ ಶಂಕರಮಠದ ಪಕ್ಕದಲ್ಲಿ, ಎಂಟು ಎಕರೆ ವಿಸ್ತೀರ್ಣದಲ್ಲಿ ಸ್ಮಶಾನವಿತ್ತು. ಈ ಸ್ಥಳಗಳಲ್ಲಿ ಲಕ್ಷ್ಮೀದೇವಿ ಸಂಸ್ಕಾರ ಮಾಡದೆ ಕೋರಮಂಗಲದಲ್ಲಿ ಏಕೆ ಸಮಾಧಿ ಮಾಡಲಾಯಿತು? ಅದು ಅವಳ ತಂದೆಯ ಊರಾಗಿತ್ತು ಎಂದು ಸಮಜಾಯಿಷಿ ಹೇಳಬಹುದು. ಹೆಣ್ಣು ಲಗ್ನವಾದ ಮೇಲೆ ಗಂಡನ ಮನೆಯ ಲೆಕ್ಕಕ್ಕೆ ಬರುತ್ತಾಳೆಯೇ ಹೊರತು, ತಂದೆಯ ಮನೆಗಲ್ಲ. ಒಟ್ಟಿನಲ್ಲಿ ಕೋಟೆಗೆ ಬಲಿಯಾದವಳು ನಾಡಪ್ರಭು ಕೆಂಪೇಗೌಡನ ಸ್ವಂತ ಸೊಸೆಯಂತೂ ಅಲ್ಲ.
ಸಂದರ್ಭ, ಸ್ಥಳ ಯಾವುದೇ ಆಗಲಿ, ವ್ಯಕ್ತಿ ಯಾರೇ ಆಗಲಿ ಆತ್ಮಾಹುತಿಯಾದ ಕಡೆ ಸ್ಮಾರಕವಾದರೆ ಸಾಂಕೇತಿಕವಾಗಿರುತ್ತದೆ; ಸಂಸ್ಮರಣೆಗೆ ಅರ್ಹವಾಗಿರುತ್ತದೆ. ಅದು ಬಿಟ್ಟು ಬೇರೆ ಜಾಗದಲ್ಲಾದರೆ ಅರ್ಥಹೀನವಾಗುತ್ತದೆ. ಭಾರತದಲ್ಲಿ ಕೊಲೆಯಾದ ಗಾಂಧೀಜಿಯ ಸ್ಮಾರಕ ಅಮೆರಿಕದಲ್ಲಿದೆ ಎಂದರೆ ನಂಬಬೇಕೆ?
ಕೋಟೆಯ ಹೆಬ್ಬಾಗಿಲು ನಿಲ್ಲುದುದಕ್ಕೆ ಗರ್ಭಿಣಿ ಸ್ತ್ರೀಯ ಬಲಿಕೊಡಬೇಕೆಂಬ ಕಥೆಗೆ ಬೇರೆಯಾದ ಬಾಯ್ದೆರೆ ಹೇಳಿಕೆಯೊಂದು ರೂಢಿಯಲ್ಲಿದೆ. ಕೆಂಪೇಗೌಡನ ಹಿತಶತ್ರುಗಳು, ಅವನ ಮನಸ್ಸನ್ನು ಜರ್ಝರಿತಗೊಳಿಸಬೇಕೆಂದು, ಕುತಂತ್ರದಿಂದ ಜ್ಯೋತಿಷಿಗಳಿಗೆ ಆಮಿಷವೊಡ್ಡಿ, ಗರ್ಭಿಣಿ ಬಲಿಕೊಡಬೇಕೆಂದು ಸುಳ್ಳು ಸುದ್ದಿ ಹರಡಿಸಿದರಂತೆ. ಕೋಟೆ ಬಾಗಿಲು ನಿಲ್ಲದಿದ್ದರೂ ಪರವಾಗಿಲ್ಲ, ಅಮಾನುಷವಾದ ಸ್ತ್ರೀ ಹತ್ಯೆಗೆ ತಾನು ಒಪ್ಪುವುದಿಲ್ಲವೆಂದು ಕೆಂಪೇಗೌಡ ನಿಷ್ಠುರವಾಗಿ ಹೇಳಿದನಂತೆ. ಆದರೂ ಅವನ ಕೊರಗು ನಿಲ್ಲಲಿಲ್ಲ. ರಾಜನ ಒಳತೋಟಿಯನ್ನು ಕೇಳಿ, ರಾಜ್ಯ ಹಿತಕ್ಕಾಗಿ ನಾಡಭಕ್ತೆ ಸ್ತ್ರೀಯೊಬ್ಬಳು ಬಲಿಯಾದಳಂತೆ. ಈ ಐತಿಹ್ಯದ ಪ್ರಕಾರವಾಗಿಯೂ ಬಲಿಯಾದವಳು ಕೆಂಪೇಗೌಡನ ಸೊಸೆಯಲ್ಲವೆಂಬುದು ವೇದ್ಯವಾಗುತ್ತದೆ.
ಆದರೆ ಹಿಂದೆ ಕೋಟೆ, ಕೆರೆಗಳಿಗೆ ಬಲಿಕೊಡುತ್ತಿದ್ದುದು ಉಂಟು. ಬೆಂಗಳೂರು ಕೋಟೆಯ ಬಾಗಿಲು ನಿಲ್ಲುತ್ತಿರಲಿಲ್ಲ ಎಂಬ ಸುದ್ದಿಯನ್ನು, ಅದಕ್ಕೆ ಗರ್ಭಿಣಿ ಸ್ತ್ರೀಯ ಬಲಿಕೊಡಬೇಕು ಎಂಬ ಕಣಿಯನ್ನು ಕೇಳಿ, ಬೆಂಗಳೂರಿಗೆ, ನಾಡಪ್ರಭುವಿಗೆ ಒಳ್ಳೆಯದಾಗಲಿ ಎಂಬ ತೀರ್ಮಾನಕ್ಕೆ ಬಂದು, ಆವೇಶದಲ್ಲಿ, ಆದರ್ಶದ ಅನುಕರಣೆಯಲ್ಲಿ ಯಾರೋ ಗರ್ಭಿಣಿ ಹೆಂಗಸು (ಆಕೆ ಅರಮನೆಗೆ ಸೇರಿದ ದೂರದ ಸಂಬಂಧಿ ಎಂದೂ ಹೇಳುವುದುಂಟು). ಸ್ವಯಿಚ್ಛೆಯಿಂದ ಬಲಿಯಾಗಿರಬಹುದು. ನಾಡಿಗಾಗಿ ಬಲಿಯಾದ ಆಕೆಯ ಬಗೆಗೆ ನಾಡಪ್ರಭುವಿಗೆ ಗೌರವ ಉಂಟಾಗಿ ಪೂಜಾರ್ಹಳೆಂದು ಭಾವಿಸಿರಬಹುದು.
ಈ ಕರುಣಾಪೂರಿತ ಕಥೆಗೆ ಈವರೆಗೆ ಲಭ್ಯವಾಗಿರುವ ಬಖೈರುಗಳಲ್ಲಿ, ಶಾಸನಗಳಲ್ಲಿ ಆಧಾರವಿಲ್ಲ. ಆದರೆ ಜನಪದ ಗಾಯಕರು, ಸೃಜನಶೀಲ ಲೇಖಕರು ತಮ್ಮ ಹಾಡು ಕಥೆ ಕಾದಂಬರಿ ನಾಟಕಗಳಲ್ಲಿ ರೋಚಕವಾಗಿ ಬರೆದಿದ್ದಾರೆ. ನಾಡಪ್ರಭುಗಳ ಮೊದಲ ಕೆಲಸ ರಕ್ಷಣೆಗಾಗಿ ಕೋಟೆ ಕಟ್ಟುವುದು. ಆಕ್ರಮಣಗಳು sಸಾಮಾನ್ಯವಾಗಿದ್ದ ಹಿಂದಿನ ಕಾಲದಲ್ಲಿ, ಸುರಕ್ಷಿತವಾದ ಕೋಟೆಯಿಲ್ಲದೆ ಆಡಳಿತ ನಡೆಸುವುದಕ್ಕಾಗುತ್ತಿರಲಿಲ್ಲ. ಬಯಲು ನಾಡಿನಲ್ಲಂತೂ ಭದ್ರವಾದ ಕೋಟೆಯಿಲ್ಲದಿದ್ದರೆ, ಸುಲಭವಾಗಿ ಶತ್ರುಗಳ ದಾಳಿಗೆ ತುತ್ತಾಗುವ ಭಯವಿತ್ತು. ಬೆಂಗಳೂರು ನಗರ ನಿರ್ಮಾಣವಾಗುತ್ತಿದ್ದಂತೆಯೇ ಹಿರಿಯ ಕೆಂಪೇಗೌಡ ಭದ್ರವಾದ ಕೋಟೆಯನ್ನು ಕಟ್ಟಿಸಿದ. ಕೆಂಪೇಗೌಡನಿಗೂ ಅವನ ಅನಂತದವರಿಗೂ ಕೋಟೆ ರಕ್ಷಣೆ ನೀಡಿತು. ಕೋಟೆಗೆ ಸ್ಥಳೀಯ ಕಲ್ಲುಗಳನ್ನು ಬಳಸಿದೆ.
ಕೆಂಪೇಗೌಡ ಕಟ್ಟಿಸಿದ ಕೋಟೆಗೆ ಯಾವ ವ್ಯತ್ಯಾಸವನ್ನೂ ಮಾಡದೆ, ಹೈದರಾಲಿ ಕಾಲದಲ್ಲಿ ಸುತ್ತಲೂ ಶಿಥಿಲವಾಗಿದ್ದ ಕಡೆ ಮತ್ತೆ ದಿಂಡು ಕಲ್ಲಿನ ರಕ್ಷಣೆಯನ್ನು ಮಾಡಲಾಯಿತು. (ಕ್ರಿ.ಶ.೧೭೫೯). ಬಯಲು ಸೀಮೆಯ ಕೋಟೆ ಸುರಕ್ಷಿತವಲ್ಲವೆಂದು ಟಿಪ್ಪುಸುಲ್ತಾನ ಕೋಟೆಯ ಬಹುಭಾಗವನ್ನು ದ್ವಂಸಮಾಡಿಸಿದ. ಟಿಪ್ಪುಸುಲ್ತಾನನ ಅರಮನೆಯ ಮುಂದೆ ನಿಂತರೆ, ಅದರ ಮಹಡಿಯಲ್ಲಿ ಕುಳಿತರೆ, ಎದುರಿಗೆ ಬೆಂಗಳೂರು ಕೋಟೆ ಕಾಣುತ್ತಿತ್ತು. ಅದು ಟಿಪ್ಪು ಸುಲ್ತಾನನಿಗೆ ಸಹನೆಯಾಗಲಿಲ್ಲ. ತನ್ನ ಅರಮನೆಯ ಮುಂದೆ ವಿಶಾಲ ಬಯಲಿರಲಿ, ಎದುರಿಗೆ ಏನೂ ಅಡ್ಡಿಯಿರದಿರಲಿ ಎಂದು ಟಿಪ್ಪುಸುಲ್ತಾನ ಬೆಂಗಳೂರು ಕೋಟೆಯನ್ನು ನಾಶಮಾಡಿದ ಎಂದೂ ಹೇಳುವುದುಂಟು. ಮುಂದೆ ಯದುವಂಶದವರ ಕಾಲದಲ್ಲಿ ಕೋಟೆಯನ್ನು ಮತ್ತೆ ಹಿಂದೆ ಇದ್ದಂತೆ ದುರಸ್ಥಿ ಮಾಡಿಸಲಾಯಿತು. (ಹಿರಿಯ ಕೆಂಪೇಗೌಡ ಬೆಂಗಳೂರು ಕೋಟೆಯನ್ನು ಕಟ್ಟಿಸಲಿಲ್ಲವೆಂದು ಹೇಳುವ ಕೆಲವರ ವಿತಂಡವಾದ ಸತ್ಯಕ್ಕೆ ದೂರವಾಗಿದೆ. ೧೫೩೮ರಲ್ಲಿ ಬೆಂಗಳೂರು ಕೋಟೆಯ ಕೆಲಸ ನಡೆಯುತ್ತಿದ್ದುದಕ್ಕೆ ವಿದೇಶಿ ಪ್ರವಾಸಿಗರ ಕಥನದಲ್ಲಿಯೂ ಸೂಚನೆಗಳಿವೆ).
ಕೆಂಪೇಗೌಡ ಬೆಂಗಳೂರು ಕೋಟೆಯನ್ನು ನಿರ್ಮಿಸಿದ ಸಂದರ್ಭದಲ್ಲಿ ವಿಜಯನಗರದ ಅರಸ ಅಚ್ಚುತರಾಯ ಹನ್ನೆರಡು ಹೋಬಳಿಗಳ ಆದಾಯವನ್ನು ಬಳುವಳಿಯಾಗಿ ನೀಡಿದ. ಅವು ಹೀಗಿವೆ: ೧) ಕಸಬಾ ಹಳೆ ಬೆಂಗಳೂರು. ೨. ವರ್ತೂರು ಹೋಬಳಿ ೩. ಯಲಹಂಕನಾಡು ೪. ಬೇಗೂರು ಹೋಬಳಿ ೫. ಹಲಸೂರು ಹೋಬಳಿ ೬. ತೆಂಗರ (ಕೆಂಗೇರಿ) ಹೋಬಳಿ ೭. ತಲಘಟ್ಟಪುರ ಹೋಬಳಿ ೮. ಜಿಗಣಿ ಹೋಬಳಿ ೯. ಕುಂಬಳಗೋಡು ಹೋಬಳಿ ೧೦. ಕನ್ನೇಲ್ಲಿ ಹೋಬಳಿ ೧೧. ಬಾಣಾವರ ಹೋಬಳಿ ಮತ್ತು ೧೨. ಹೆಸರುಘಟ್ಟ ಹೋಬಳಿ. ಈ ಹನ್ನೆರಡು ಹೋಬಳಿಗಳಿಂದ ಮೂವತ್ತು ಸಾವಿರ ಪಗೋಡಗಳ ಕಂದಾಯ ಬರುತ್ತಿತ್ತು. ಈ ಪ್ರದೇಶಗಳು ಈಗಾಗಲೇ ಕೆಂಪೇಗೌಡನ ಆಳ್ವಿಕೆಗೆ ಒಳಪಟ್ಟಿದ್ದು. ಇವುಗಳನ್ನು ಉತ್ಪತ್ತಿಯನ್ನು ಪೂರ್ತಿಯಾಗಿ ರಾಜಧಾನಿ ಕೋಟೆ ಪೇಟೆ ನಿರ್ಮಾಣಕ್ಕೆ ಬಳಸಿಕೊಳ್ಳಲು ಬಿಟ್ಟುಕೊಟ್ಟಿದ್ದು ವಿಶೇಷ. ಇವುಗಳ ಆದಾಯದಲ್ಲಿ ಚಕ್ರವರ್ತಿಗೆ ವಾರ್ಷಿಕ ಕಪ್ಪಕಾಣಿಕೆ ಕೊಡಬೇಕಾಗಿರಲಿಲ್ಲ. ಕೆಂಪೇಗೌಡ ಹೊಸ ಬೆಂಗಳೂರು ರಾಜಧಾನಿಯನ್ನು ನಿರ್ಮಿಸಿದ ಮೇಲೆ ’ಯಲಹಂಕ ನಾಡಪ್ರಭು’ (ಯಲಹಂಕ ರಾಜ್ಯದ ಅಧಿಪತಿ) ಎಂಬ ಬಿರುದನ್ನು ಧರಿಸಿದನು. ವಿಜಯನಗರದ ಅರಸು ಅಚ್ಚುತರಾಯನೂ ಹಲವು ಬಿರುದು ಬಾವಲಿಗಳನ್ನಿತ್ತು ಸಂತೋಷಪಡಿಸಿದನು.
ಬೆಂಗಳೂರು ನಗರ ನಿರ್ಮಾಣದಲ್ಲಿ ಮಿಶ್ರವಾಸ್ತು ಶೈಲಿಯನ್ನು ಕಾಣಬಹುದು. ವಿಜಯನಗರ ವಾಸ್ತು ಶೈಲಿಯ ಜೊತೆಗೆ ಬಹಮನಿ ಸಾಮ್ರಾಜ್ಯದ ಬೀದರ್ ನಗರ ವಾಸ್ತು ಶೈಲಿಯ ಅಂಶಗಳೂ ಇವೆಯೆಂದು ಸಂಶೋಧಕರು ಗುರುತಿಸಿದ್ದಾರೆ. ಕೋಟೆ ಪೇಟೆ
ಹಜಾರ ನಿರ್ಮಾಣದಲ್ಲಿ ಅಧಿಕ ಸಾಮ್ಯಗಳಿರುವುದು ಈ ಅಭಿಪ್ರಾಯಕ್ಕೆ ಕಾರಣವಾಗಿದೆ.

ನೀಗಿಕೊಂಡ ಹಳೆಮನೆ


ನಾನು ಮೈಸೂರಿಗೆ ೧೯೮೩ರಲ್ಲಿ ಎಂ.ಎ.ವ್ಯಾಸಂಗಕ್ಕೆ ಸೇರಿದ ಮೊದಲ ದಿನಗಳಲ್ಲಿ ಪರಿಚಯವಾದ ಹಿರಿಯ ಮಿತ್ರರಲ್ಲಿ ಹಳೆಮನೆಯೂ ಒಬ್ಬರು. ಬೊಕ್ಕತಲೆ ಎದೆಯವರೆಗಿನ ಉದ್ದನೆಯ ಗಡ್ಡ, ಕೈಲಿ ಸಿಗರೇಟ್, ನಮ್ಮೆದುರಿಗಿನ ಕಾರ್ಲ್‌ಮಾರ್ಕ್ಸ್ ಅವರಾಗಿದ್ದರು. ಕನ್ನಡ ರಂಗಭೂಮಿ ಬ್ರೆಷ್ಟ್ ಎನ್ನುತ್ತಿದ್ದ ಕಾಲಕ್ಕೆ ಬ್ರೆಕ್ಟ್ ಎನ್ನುವ ಖಾಚಿತ್ಯ ಹೆಸರನ್ನು ನೀಡಿದ ಕೀರ್ತಿ ಅವರದು. ಬರ್ಟೋಲ್ಡ್ ಬ್ರೆಕ್ಟ್‌ನನ್ನು ಸಮರ್ಥವಾಗಿ ಜೀರ್ಣಿಸಿಕೊಂಡು ಕನ್ನಡಕ್ಕೆ ’ಹೈದರ್, ’ಚಿಕ್ಕದೇವಭೂಪ’ ಮುಂತಾದ ನಾಟಕಗಳನ್ನು ರಚಿಸಿದ ಅವರು ಅನುವಾದಕರಾಗಿ ಬ್ರೆಕ್ಟ್‌ನ ’ಮದರ್ ಕರೇಜ್, ’ಧರ್ಮಪುರದ ದೇವದಾಸಿ’ ಮುಂತಾದ ನಾಟಕಗಳನ್ನು ಕನ್ನಡಕ್ಕೆ ತಂದರು. ಆ ಕಾಲಕ್ಕೆ ಅವರ ಹೈದರ್, ಚಿಕ್ಕದೇವಭೂಪ ತುಂಬಾ ಚರ್ಚೆಯ ಕೇಂದ್ರವಾಗಿದ್ದ ನಾಟಕಗಳು. ’ನೀಲಿ ತಾರೆ’ ಅವರ ರಂಗಗೀತೆಗಳ ಸಿ.ಡಿ. ಗೆಳೆಯ ಜನ್ನಿ ಸಂಗೀತ ನಿರ್ದೇಶನದಲ್ಲಿ ಹಳೆಮನೆ ಬರೆದ ರಂಗಗೀತೆಗಳನ್ನು ಒಂದೆಡೆ ಸಂಕಲಿಸಿದ್ದಾರೆ. ಇದು ಪುಸ್ತಕವಾಗಿಯೂ ಪ್ರಕಟವಾಗಿದೆ.
ಹಾಲುಕೋಣ ಎಂಬ ಪುಟ್ಟ ಹಳ್ಳಿಯಲ್ಲಿ ಸಾಮಾನ್ಯ ಕುಟುಂಬದಲ್ಲಿ ಜನಿಸಿ, ತಿಪಟೂರಿನ ಕಲ್ಪತರು ಕಾಲೇಜಿನಲ್ಲಿ ಬಿ.ಎ.ವ್ಯಾಸಾಂಗ ಮುಗಿಸಿ ತಮಿಳುನಾಡಿನ ಅಣ್ಣಾಮಲೈ ವಿಶ್ವವಿದ್ಯಾಲಯದಲ್ಲಿ ಭಾಷಾ ವಿಜ್ಞಾನದಲ್ಲಿ ಎಂ.ಎ.ಮುಗಿಸಿದ ಹಳೆಮನೆ ಕೆಲಸಕ್ಕೆ ಸೇರಿದ್ದು ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದಲ್ಲಿ ಮಾನಸ ಗಂಗೋತ್ರಿಯಲ್ಲೇ ಇದ್ದ ಹಳೆ ಮನೆ ನಮಗೆ ಕ್ಯಾಂಟೀನಲ್ಲಿ ಸಿಗುತ್ತಿದ್ದ ರೆಗ್ಯುಲರ್ ಗೆಳೆಯರಾದರು. ಅವರು ಹೆಚ್ಚು ಹತ್ತಿರವಾದದ್ದೂ ೯೦ರ ದಶಕದಲ್ಲಿ. ತುಂಬಾ ಸೆಕ್ಯುಲರ್ ಆದ ಮನುಷ್ಯ. ಮಾರ್ಕ್ಸ್‌ನ ತಲೆ, ಗಾಂಧಿ ಮನಸ್ಸು, ಲೋಹಿಯಾ ವೈಚಾರಿಕತೆ, ಅಂಬೇಡ್ಕರ್‌ರ ಮುಂಗಾಣ್ಕೆ ಎಲ್ಲವನ್ನೂ ಜೀರ್ಣಿಸಿಕೊಂಡಿದ್ದ ವ್ಯಕ್ತಿಯಾಗಿದ್ದರು. ಅವರು ಕನ್ನಡೇತರರು ಇಂಗ್ಲೀಷ್ ಮೂಲಕ ಕನ್ನಡ ಕಲಿಯುವ ಪ್ರಾಯೋಗಿಕ ಕೃತಿಯನ್ನು ಬಹುಹಿಂದೆಯೇ ಸಿದ್ಧಪಡಿಸಿದ್ದರು. ಭಾಷಾವಿಜ್ಞಾನಿಯಾಗಿ ಅವರು ಮಾಡಿದ ಮಹತ್ವದ ಕೆಲಸ. ರಾಜ್ಯ ಸಂಪನ್ಮೂಲ ಕೇಂದ್ರದ ನಿರ್ದೇಶಕರಾಗಿ ಕೆಲಸ ಮಾಡಿದ ಅವರು ’ಭಾಷೆ’ ಎಂಬ ನವಸಾಕ್ಷಕರಿಗೆ ಒಂದು ಚಿಕ್ಕ ಕೃತಿ ಬರೆದಿದ್ದಾರೆ. ಭಾಷೆಯ ಬಗ್ಗೆ ಸಂಕ್ಷಿಪ್ತವಾಗಿ, ಆಪ್ತವಾಗಿ ರಚಿಸಿದ ಮತ್ತೊಂದು ಪುಸ್ತಕ ಕನ್ನಡದಲ್ಲಿಲ್ಲ. ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ವಿವಿಧ ಭಾಷೆಗಳ ಮೂಲಕ ಕನ್ನಡ ಕಲಿಯಲು ಮೂಲ ಪಠ್ಯವನ್ನು ಹಳೆಮನೆ ಬರೆದಿದ್ದಾರೆ. ಅದನ್ನು ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿದೆ. ನಂತರ ಅವರು ಭಾರತದ ಸಾಕ್ಷರತಾ ಮಿಷನ್ನಿನ ನಿರ್ದೇಶಕರಾಗಿ ಮಹತ್ವದ ಕೆಲಸ ಮಾಡಿದ್ದಾರೆ. ನನ್ನ ಜೂನಿಯರ್ ಆಗಿ ಅವರು ಕನ್ನಡ ಎಂ.ಎ.,ಯನ್ನು ರ‍್ಯಾಂಕ್‌ಗಳ ಮೂಲಕ ಪಡೆದವರು. ಸಾಮಾನ್ಯ ಪ್ರಜೆಯ ವಿದ್ಯಾಭ್ಯಾಸದ ಬಗ್ಗೆ ಹೆಚ್ಚೂ ಕಾಳಜಿಯುಳ್ಳ ಅವರು ಫಾರ‍್ಮಲ್‌ಗಿಂತ ನಾನ್‌ಫಾರ‍್ಮಲ್ ಎಜುಕೇಷನ್ ಬಗ್ಗೆ ಆಸಕ್ತರಾಗಿದ್ದರು. ಈ ದೇಶ, ಭಾಷೆ, ಸಂಸ್ಕೃತಿ ಎಲ್ಲವನ್ನೂ ಸರಿಯಾಗಿ ತಿಳಿದು ಅದಕ್ಕೆ ತಕ್ಕ ಕಾರ್ಯಕ್ರಮಗಳನ್ನು ರೂಪಿಸುವ ಶಕ್ತಿ ಇದ್ದ ಹಳೆಮನೆ ಅIIಐ (ಅeಟಿಣಡಿಚಿಟ Iಟಿsಣiಣuಣe oಜಿ Iಟಿಜiಚಿಟಿ ಐಚಿಟಿguಚಿges) ಭಾರತೀಯ ಭಾಷಾ ಸಂಸ್ಥಾನ್‌ನಿಂದ ರೂಪಿಸಿದ. ಭಾಷಾ ಮಂದಾಕಿನಿ, ಕರ್ನಾಟಕ ಕುರಿತು ವಿಜುಯಲ್ ಎನ್‌ಸೈಕ್ಲೋಪಿಡಿಯಾದ ಕಾರ್ಯಕ್ರಮಗಳು ಮಹತ್ವದವು. ವಿಡಿಯೊ ಚಿತ್ರಗಳ ಮೂಲಕ ಕನ್ನಡೇತರರಿಗಾಗಿ ಕನ್ನಡ ಸಂಸ್ಕೃತಿಯನ್ನು ತೋರುವ ಮಹತ್ವದ ಕಾರ್ಯ ಇದಾಗಿದೆ.
ಹಳೆಮನೆ ಒಬ್ಬ ಭಾಷಾ ವಿಜ್ಞಾನಿಯಾಗಿದ್ದು ಇವುಗಳ ಜೊತೆ ಮಾಡಿದ ಮಹತ್ವದ ಕೆಲಸವೆಂದರೆ ಕನ್ನಡ ಶಾಸ್ತ್ರೀಯ ಭಾಷೆಯ ಸ್ಥಾನಮಾನಕ್ಕೆ ನೀಡಿದ ವರದಿ. ಕನ್ನಡದಷ್ಟೇ ಪ್ರಾಚೀನತೆಯಿರುವ ತೆಲುಗಿಗೂ ಆ ಸ್ಥಾನ ದೊರೆಯಬೇಕೆಂದು ಹಕ್ಕೋತ್ತಾಯ ಮಾಡಿದವರು ಇವರೆ. ಒಂದು ಭಾಷೆಯ ಪ್ರಾಚೀನತೆಯನ್ನು ನಿಗದಿ ಮಾಡುವ ಮಾನದಂಡಗಳು ಹಾಗೂ ವಿವಿಧ ಆಕರಗಳನ್ನು ಸಾಕ್ಷಿಯಾಗಿ ನೀಡುವಲ್ಲಿ ಹಳೆಮನೆಯವರ ಪಾತ್ರ ದೊಡ್ಡದು.
ಇವೆಲ್ಲಕ್ಕಿಂತ ಭಿನ್ನವಾಗಿ ಅವರೊಬ್ಬ ನಾಟಕಕಾರ, ರಂಗಚಿಂತಕ, ಅನೇಕ ಶಿಸ್ತುಗಳ ಸಾಕಾರವಾಗಿದ್ದ ಹಳೆಮನೆ ಹೈದರ್, ಚಿಕದೇವಭೂಪ, ತಸ್ಕರ ಪುರಾಣದಂಥ ನಾಟಕಗಳ ಕರ್ತೃ. ಅನೇಕ ಬೀದಿನಾಟಕಗಳನ್ನು ಬರೆದಿದ್ದಾರೆ. ಮೈಸೂರಿನಲ್ಲಿ ಸಮುದಾಯದ ಚಟುವಟಿಕೆಗಳಿಗೆ ಅವರೇ ಆಧಾರವಾಗಿದ್ದರು. ರಂಗ ಚಿಂತನೆಗೆ ಹೆಚ್ಚಿನ ಮಹತ್ವ ನೀಡಿದ್ದ ಅವರು ತಮ್ಮ ಭಾಷಣ, ಬರಹಗಳಲ್ಲಿ ರಂಗಭೂಮಿ ಕುರಿತ ಅನೇಕ ವಿಷಯಗಳನ್ನು ಚರ್ಚಿಸಿದ್ದಾರೆ. ಬಹುರೂಪಿ ನಾಟಕೋತ್ಸವಕ್ಕೆ ಅವರು ಸಂಪಾದಿಸಿದ ’ಬಹುರೂಪಿ’ ಸಂಕಲನ ಮಹತ್ವದ್ದು. ತಮ್ಮ ಸುತ್ತಲನ್ನೂ ಅನೇಕ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸುವ ಶಕ್ತಿ ಕೂಡ ಅವರಿಗಿತ್ತು.
ಸರ್ಕಾರ ಅವರನ್ನು ರಂಗಾಯಣದ ನಿರ್ದೇಶಕರನ್ನಾಗಿ ಮಾಡಿತ್ತು. ಮೀನಾ ಮೇಷ ಎಲ್ಲ ಎಣಿಸಿ. ಅವರ ಬಲ ಎಷ್ಟಿತ್ತೆಂದರೆ ಸರ್ಕಾರದ ವಿರುದ್ದ ಆಶಯವನ್ನುಳ್ಳವರೆಂಬ ಕಾರಣ ನೀಡಿ, ಕಾಲ ತಳ್ಳಿ ಕೊನೆಗೆ ಅವರನ್ನೇ ರಂಗಾಯಣಕ್ಕೆ ನೇಮಿಸಬೇಕಾದ ಅನಿವಾರ್ಯ ಸೃಷ್ಟಿಯಾಗುವಂತಾಯಿತು. ಅಂದರೆ ಹಳೆಮನೆ ಸೈದ್ಧಾಂತಿಕವಾಗಿ ಖಾಚಿತ್ಯತೆಯಿದ್ದ ಮನುಷ್ಯ. ಅವರ ಎಡಪಂಥೀಯ ನಿಲುವು ಮತ್ತೊಬ್ಬರು ಗೌರವಿಸುವಂತೆಯೇ ಇತ್ತು.
ರಂಗಾಯಣವನ್ನು ಗುಲಬರ್ಗಾ, ಶಿವಮೊಗ್ಗಗಳಲ್ಲೂ ರೂಪಿಸಬೇಕು ಎಂಬುದು ಹಳೆಮನೆ ಕನಸು. ಅದಕ್ಕಾಗಿ ಅವರು ಶಿವಮೊಗ್ಗ ಸಮಾರಂಭ ಮುಗಿಸಿ ಮೈಸೂರಿಗೆ ತಲುಪಿ ಮನೆಯಲ್ಲಿ ತೀರಿಕೊಂಡರು. ಹೃದಯಾಘಾತ ಅವರ ಅವಿರತ ಶ್ರಮದ ನಡುವೆ ಬಂದ ಅಂತಿಮ ಕಾಲನ ಕರೆಯಾಗಿತ್ತು. ಸಾಕ್ಷರತ ಮಿಷನ್ನಿನ ನಿರ್ದೇಶಕರಾಗಿದ್ದಾಗ ಆಕ್ಸಿಡೆಂಟಾಗಿ ಬಚಾವಾಗಿದ್ದ ಹಳೆಮನೆ ಹೃದಯಾಘಾತದಿಂದ ಬಚಾವಾಗಲಿಕ್ಕಾಗಲಿಲ್ಲ. ತಮ್ಮ ವೈಯುಕ್ತಿ ಬದುಕನ್ನು ರೂಪಿಸಿಕೊಳ್ಳುವುದೇ ಒಂದು ಕಾಲಕ್ಕೆ ದೊಡ್ಡ ಸವಾಲಾಗಿದ್ದ ಹಳೆಮನೆ ನಿರಂತರ ಹೋರಾಟದ ವ್ಯಕ್ತಿಯಾಗಿದ್ದರು. ಅವರೊಬ್ಬ ಫೆರೊಷಿಯಸ್ ರೀಡರ್ ಮತ್ತು ರೈಟರ್. ’ಆಂದೋಲನ’ ಪತ್ರಿಕೆಗೆ ಹತ್ತಾರು ವರ್ಷ ಅವರು ಪ್ರತಿವಾರ ಕಾಲಂ ಬರೆದರು. ಅಲ್ಲಿ ಸಮಕಾಲೀನ ಸಾವಿರಾರು ಸಮಸ್ಯೆಗಳನ್ನು ಕುರಿತು ಬರೆದರು. ಯಾವುದೇ ಸಮಸ್ಯೆಗೆ ಹಳೆಮನೆ ಏನೆನ್ನುತ್ತಾರೆ ನೋಡೋಣ ಎನ್ನುವಷ್ಟರ ಮಟ್ಟಿಗಿತ್ತು ಅವರ ಅಭಿಪ್ರಾಯ. ತುಂಬ ಖಚಿತವೂ, ಮಾನವೀಯವೂ ಆದ ನಿಲುವಿನ ಜೊತೆಗಿರುತ್ತಿದ್ದ ಅವರು ಎಲ್ಲರಿಗೂ ಪ್ರಿಯರಾಗಿದ್ದರು. ನೋಡಲು ಸಿಟ್ಟಿನ ಮನುಷ್ಯನೇನೋ ಎಂಬ ಅನುಮಾನ ಕಾಡಿದರೂ ಆಂತರ್ಯದಲ್ಲಿ ತುಂಬಾ ಸಭ್ಯತೆಯ ವ್ಯಕ್ತಿ ಅವರಾಗಿದ್ದರು.
ಭಾಷೆ, ಸಾಹಿತ್ಯ, ಸಂಸ್ಕೃತಿ, ರಂಗಭೂಮಿ, ಸಾಮಾಜಿಕ ಹೋರಾಟ ಹೀಗೆ ನಾನಾ ಬಗೆಯಲ್ಲಿದ್ದ ಅವರ ವ್ಯಕ್ತಿತ್ವ ಹೇಗೆ ಸಂಕೀರ್ಣವೊ ನಿಯಂತ್ರಣರಹಿತ ಸಿಗರೇಟು, ಕುಡಿತಗಳು ಅವರನ್ನು ನೀಗಿಕೊಳ್ಳುವಂತೆ ಮಾಡಿದವು. ಅವೆರಡೂ ಅವರ ಚಿಂತನೆ ಮತ್ತು ಕ್ರಿಯಾಶೀಲತೆಗಳ ಸಂಗಾತಿಗಳೇ ಆಗಿದ್ದವು. ಪ್ರತಿ ಚುನಾವಣೆಗಳು ಬಂದಾಗ ಕರ್ನಾಟಕದಲ್ಲಿ ಯಾವ ರಾಜಕೀಯ ಪಕ್ಷಗಳ ಬಗ್ಗೆ ಸಾಮಾನ್ಯರ ಒಲವು ಏನೇನಿದೆ ಎಂಬ ಚುನಾವಣಾಪೂರ್ವ ಸಮೀಕ್ಷೆಯನ್ನೂ ಕೂಡ ಭಾರತ ಚುನಾವಣಾ ಆಯೋಗಕ್ಕೆ, ಕರ್ನಾಟಕ ಚುನಾವಣಾ ಆಯೋಗಕ್ಕೆ ವರದಿ ಮಾಡುತ್ತಿದ್ದರು.
ಗೆಳೆಯರೂ ಗುರುವೂ ಆಗಿದ್ದ ಅವರಿಂದ ನಾನು ರಂಗಭೂಮಿಯನ್ನು ಕಲಿತಂತೆ ಭಾಷಾವಿಜ್ಞಾನದ ಕ್ಲಿಷ್ಟ ಸಿದ್ಧಾಂತಗಳನ್ನೂ ಕಲಿತಿದ್ದೇನೆ. ದೊಡ್ಡ ಗುರು ಅಲ್ಲಮನ ಭಾಷಾ ವಿಜ್ಞಾನವನ್ನು ದರ್ಶನ ಮಾಡಿಸಿದವರೇ ಅವರು. ಕವಿರಾಜ ಮಾರ್ಗದ ಭಾಷಾ ಶಾಸ್ತ್ರವನ್ನು ಅರ್ಥೈಸಿದಂತೆಯೇ ಸಸೂರ್, ಡೆರಿಡಾರನ್ನೂ ಪರಿಚಯಿಸಿದ್ದಾರೆ. ಹಳೆಮನೆ ಹೊಸಮನೆಗೆ ಹೋದರು. ಆದರೆ ಅನೇಕ ವಿಷಯಗಳಲ್ಲಿ ತುಂಬಾ ನಿಷ್ಠುರವಾಗಿಯೇ ಇದ್ದ ಅವರು ಅಮಾನವೀಯವಾದದ್ದನ್ನು ಕಂಡಾಗ ಜಾತಿ, ಮತ, ಚಿಲ್ಲರೆ ರಾಜಕೀಯದ ವಿಷಯ ಬಂದಾಗ ವ್ಯಗ್ರವಾಗಿ ಬಿಡುತ್ತಿದ್ದರು. ಓದದ ಬರೆಯದ ಕನ್ನಡ ಮೇಷ್ಟ್ರುಗಳ ಬಗ್ಗೆ ಅವರಿಗೆ ಅಪಾರ ಸಿಟ್ಟಿತ್ತು. ಅನೇಕ ಮೀಟಿಂಗ್‌ಗಳಲ್ಲಿ, ಸಭೆ, ವಿಚಾರ ಸಂಕಿರಣಗಳಲ್ಲಿ ತಮ್ಮ ಸ್ಪಷ್ಟ ನಿಲುವುಗಳಿಗೆ ಅವರು ಹೆಸರಾಗಿದ್ದರು. ವಿಶೇಷಣಗಳಲ್ಲಿ ಹೂತು ಹೋಗದ ಅವರ ವ್ಯಕ್ತಿತ್ವ ಒಬ್ಬ ಸಾಮಾನ್ಯ ಹಳ್ಳಿಗನದಾಗಿತ್ತು. ಹಾಲುಕೋಣದಿಂದ ಹೊರಟು ಹಾಲುಕೊಣ ತಲುಪಿದ ಹಳೆಮನೆ ಮೈಸೂರಿನ ಮನೆಮಾತಾಗಿದ್ದ ವ್ಯಕ್ತಿ. ರಾಜ್ಯಾದ್ಯಂತ ಒಂದು ಹೊಸತನಕ್ಕೆ ತಹತಹಿಸುತ್ತಿದ್ದ ವ್ಯಕ್ತಿ. ಉತ್ತಮ ಬದುಕನ್ನು ಜನಜೀವನದಲ್ಲಿ ಕಾಣಬೇಕೆಂಬ ತವಕವಿದ್ದ ವ್ಯಕ್ತಿ.
ರಂಗಭೂಮಿಯೂ ಸೇರಿದಂತೆ ಅನೇಕ ಶಿಸ್ತುಗಳಲ್ಲಿ ಪರಿಣತಿ ಇದ್ದ ಹಳೆಮನೆ ಸಾಫ್ಟ್‌ವೇರ್ ಡಿಸೈನ್ನಲ್ಲೂ ನಿಷ್ಣಾತರಾಗಿದ್ದರು. ಜನಮಾಧ್ಯಮಗಳ ಸಂಗಾತಿ ಅವರಾಗಿದ್ದರು. ಸೃಜನಶೀಲತೆ ಮತ್ತು ಸಾಮಾಜಿಕ ಚಿಂತನೆ ಅವರ ಬದುಕಾಗಿತ್ತು. ಅನೇಕ ವಿಷಯಗಳಲ್ಲಿ ನನ್ನ ಮೇಲೆ ಸಿಟ್ಟು, ಪ್ರೀತಿ ಎರಡನ್ನೂ ಇಟ್ಟುಕೊಂಡಿದ್ದ ಹಳೆಮನೆ ಮೂರುದಶಕಗಳ ಸ್ನೇಹದಲ್ಲಿ ಕಲಿಸಿದ ಜನಪರತೆಯ ಪಾಠಗಳು ಅನಂತವಾದವು. ’ನೀಗಿಕೊಂಡ ಸಂಥ’ ಕನ್ನಡದ ಪ್ರಸಿದ್ಧ ನಾಟಕಗಳಲ್ಲೊಂದು. ಕಿ.ರಂ.ನಾಗರಾಜರ ಈ ನಾಟಕವನ್ನು ನಾಗಾಭರಣ ಅಭಿನಯಿಸುತ್ತಾರೆ. ಇನ್ನಷ್ಟು ದಿವಸ ನಮ್ಮ ಜೊತೆ ಇರಬಹುದಿದ್ದ ಹಳೆಮನೆ ತಮ್ಮ ಕನಸುಗಾರಿಕೆ ಮತ್ತು ಅವಿರತ ದುಡಿಮೆಯ ನಡುವೆ ತಮ್ಮನ್ನು ತಾವೇ ನೀಗಿಸಿಕೊಂಡರೆನಿಸುತ್ತದೆ. ನನ್ನ ಮೇಜಿನ ಮೇಲಿನ ಅವರು ಸಂಪಾದಿಸುತ್ತಿದ್ದ ’ಅರಹು ಕುರುಹು’ ಪತ್ರಿಕೆ, ಟೀಪು ಕುರಿತ ಲಾವಣಿ, ಧರ್ಮಪುರದ ದೇವದಾಸಿ ಮದರ್ ಕರೇಜ್ ನಾಟಕಗಳ ಬ್ರೋಚರ್, ಹಳೆಮನೆ-ಬ್ರೆಕ್ಟ್ ಎಂಬ ನನ್ನ ಲೇಖನ ಎಲ್ಲವೂ ನೆನಪೂ ಹೌದು; ದುಃಖವೂ ಹೌದು.

ನಿವೃತ್ತಿ ವಯೋಮಿತಿ ಏರಿಕೆ ನಿವೃತ್ತಿ ವಯೋಮಿತಿ ಏರಿಕೆ ಯುವ ಜನಾಂಗಕ್ಕೆ ನೇಣು ಕುಣಿಕೆ


ಯುಜಿಸಿ ವೇತನ ಪಡೆಯುತ್ತಿರುವ ಅಧ್ಯಾಪಕರುಗಳ ವಯೋಮಿತಿಯನ್ನು ಏರಿಸುವ ಕ್ರಮ ಸೂಕ್ತವೇ? ಎಂಬ ಚರ್ಚೆ ಚಾಲ್ತಿಯಲ್ಲಿದೆ. ಯುಜಿಸಿ ಪ್ರಸ್ತುತ ಕ್ರಮವನ್ನು ಜಾರಿಗೆ ತಂದಲ್ಲಿ ಅನೇಕಾನೇಕ ಸಮಸ್ಯೆಗಳು ಎದುರಾಗುತ್ತವೆ. ಕೇಂದ್ರ ಸರ್ಕಾರ ನೇಮಿಸಿದ ಸಮಿತಿಯ ಅಧ್ಯಕ್ಷರಾಗಿದ್ದ ಪ್ರೊ.ಛೆಡ್ಡಾರವರು ಶಿಕ್ಷಣ ತಜ್ಞರಾಗಿ ಹೆಸರಾಗಿದ್ದವರು. ಸೇವೆಯಲ್ಲಿದ್ದವರನ್ನೇ ಮುಂದುವರೆಸುವಂತೆ ಮಾಡಿರುವ ಶಿಫಾರಸ್ಸು ಅವೈಜ್ಞಾನಿಕವಾದುದು. ತಮ್ಮ ಶಿಫಾರಸ್ಸಿಗೆ ಅವರು ನೀಡುತ್ತಿರುವ ಕಾರಣ-ಅನುಭವೀ ಅಧ್ಯಾಪಕರುಗಳ ಕೊರತೆಯನ್ನು ತುಂಬಿಕೊಳ್ಳುವುದು ಹಾಗೂ ಈಗ ಅಲಭ್ಯವಾಗಿರುವ ಇಂಥವರನ್ನು ಮುಂದುವರೆಸುವುದು ಇದರ ಹಿಂದಿನ ಉದ್ದೇಶ. ಆದರೆ, ಈ ಅನುಭವೀ ಅಧ್ಯಾಪಕರುಗಳೇ ತಾನೇ ಇಷ್ಟು ದಿನ ಯುವಕರಿಗೆ ಬೋಧಿಸಿರುವುದು. ಅವರಿಂದ ಶಿಕ್ಷಣ ಪಡೆದ ಯುವ ಸಮುದಾಯ ಅವರ ಅನುಭವದ ಕಾರಣಕ್ಕಾಗಿ ನಿರುದ್ಯೋಗಿಗಳಾಗಿ ಪರಿತಪಿಸುವಂತಾಗಬಾರದಲ್ಲ. ಈ ಬಗೆಯ ಕನಿಷ್ಠ ವಿವೇಕವನ್ನು ಈ ಸಮಿತಿಯು ಹೊಂದಿಲ್ಲ. ಈ ಶಿಫಾರಸ್ಸಿನ ಕೆಲವು ದುಷ್ಪರಿಣಾಮಗಳೆಂದರೆ:
ನಿರುದ್ಯೋಗದ ಪ್ರಮಾಣ ಹೆಚ್ಚುತ್ತದೆ
ನಿವೃತ್ತಿ ವಯೋಮಿತಿ ಏರಿಕೆಯ ನೇರ ಫಲಾನುಭವಿಗಳೆಂದರೆ, ಯುವ ಜನಾಂಗ. ಜನಸಂಖ್ಯಾ ಸ್ಪೋಟ, ನಿರಂತರ ಬೆಲೆ ಏರಿಕೆ, ನಿರುದ್ಯೋಗದ ಸಮಸ್ಯೆ ಮುಂತಾದ ಕಾರಣಗಳಿಂದಾಗಿ ಈಚಿನ ದಿನಗಳಲ್ಲಿ ಉನ್ನತ ವಿದ್ಯಾಭ್ಯಾಸದತ್ತ ಯುವ ಜನಾಂಗ ವಿಮುಖವಾಗಿದೆ. ಇಂತಹ ಸಂದರ್ಭದಲ್ಲಿ ಯುವ ಜನಾಂಗಕ್ಕೆ ಸೂಕ್ತ ಮಾರ್ಗದರ್ಶನ ಮಾಡಿ, ತಕ್ಕ ಸ್ಥಳಾವಕಾಶವನ್ನು ಒದಗಿಸಿ ಕೊಡಬೇಕಾಗಿರುವ ಹಿರಿಯರು ಈಗ ಏನು ಮಾಡಬೇಕೆಂದು ತಮ್ಮನ್ನು ತಾವೇ ಪ್ರಶ್ನಿಸಿಕೊಂಡು ಆತ್ಮಸಾಕ್ಷಿಗೆ ತಕ್ಕಂತೆ ವರ್ತಿಸಬೇಕಾಗಿದೆ. ಇಷ್ಟು ವರ್ಷಗಳ ಕಾಲ ಸರ್ಕಾರಿ ಸೇವೆಯಲ್ಲಿದ್ದು, ವೇತನ ಪಡೆದು ಸೇವೆ ಸಲ್ಲಿಸಿರುವವರು. ಇನ್ನಾದರೂ ಯುವ ಜನಾಂಗಕ್ಕೆ ಅವಕಾಶ ಮಾಡಿಕೊಡಬೇಕು.
ಶಿಕ್ಷಣದ ಗುಣಮಟ್ಟ ಕುಸಿಯುತ್ತದೆ
ಈಚಿನ ದಿನಗಳಲ್ಲಿ ಪ್ರಪಂಚ ಕಂಡು, ಕೇಳರಿಯದಷ್ಟು ಕ್ಷಿಪ್ರವಾಗಿ ಬದಲಾಗುತ್ತಿದೆ. ವಿಜ್ಞಾನ, ತಂತ್ರಜ್ಞಾನ, ಮಾಹಿತಿಯ ಅನೇಕ ಆಯಾಮಗಳು ಕ್ಷಣಕ್ಷಣಕ್ಕೆ ಅವಸ್ಥಾಂತರಗೊಳ್ಳುತ್ತಿವೆ. ಈ ಹಿಂದಿನ ತಲೆಮಾರಿನ ಅಧ್ಯಾಪಕರುಗಳು ಈ ನಾಗಾಲೋಟಕ್ಕೆ ಒಂದಿಸಬಲ್ಲರೇ? ದಿನಗಳೆದಂತೆ ದೈಹಿಕವಾಗಿ, ಮಾನಸಿಕವಾಗಿ ವಯೋಸಹಜವಾದ ಮುಪ್ಪಿನ ಕಾರಣದಿಂದಾಗಿ ಅವರ ಚೈತನ್ಯ ಕುಗ್ಗಿರುತ್ತದೆ. ಹಲ್ಲು ಹೋಗಿ, ಬೆನ್ನು ಬಾಗಿ, ಕಣ್ಣು ಕಿವಿಗಳೆರಡೂ ತಮ್ಮ ಶಕ್ತಿಯನ್ನು ಕಳೆದುಕೊಂಡಿರುತ್ತವೆ. ಇಂತಹ ವಯೋಮಾನದವರು ೨೧ನೇ ಶತಮಾನದ ಜಾಗತಿಕ ವಿದ್ಯಮಾನಗಳಿಗೆ ಯುವ ಜನಾಂಗವನ್ನು ಮುಖಾಮುಖಿಯಾಗಿಸಲು, ಅದರಲ್ಲಿ ತಮ್ಮ ಅಸ್ಥಿತ್ವವನ್ನು ಉಳಿಸಿಕೊಳ್ಳುವಂತೆ ಪ್ರೇರೇಪಿಸಲು ಸಾಧ್ಯವಾಗುತ್ತಿದೆಯೇ? ಅವರ ಅನಿವಾರ್ಯತೆ ಇದ್ದಲ್ಲಿ, ಅವರನ್ನು ’ಅತಿಥಿ ಉಪನ್ಯಾಸಕ’ರಾಗಿ ಬಳಸಿಕೊಳ್ಳಬಹುದು.
ಸಾಂಪ್ರದಾಯಿಕ ಶಿಕ್ಷಣ ಪದ್ಧತಿಯ ಮುಂದುವರಿಕೆ
ಇಷ್ಟು ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಹಿರಿಯ ಅಧ್ಯಾಪಕರುಗಳು ಓದಿದ, ಬೋಧಿಸಿದ ಶಿಕ್ಷಣ ಪದ್ಧತಿ ಸಾಂಪ್ರದಾಯಿ. ಪ್ರಸ್ತುತ ಸನ್ನಿವೇಶದಲ್ಲಿ ಜ್ಞಾನಾರ್ಜನೆ ಭಿನ್ನ ಆಯಾಮಗಳನ್ನು ಪಡೆಯುತ್ತಿದೆ. ಬಹುಶಾಸ್ತ್ರೀಯ ಜ್ಞಾನದ ಅವಶ್ಯಕತೆ ಇಂದು ಅಗತ್ಯವಾಗಿದೆ. ಆದರೆ, ಈ ಹಿರಿಯ ಅಧ್ಯಾಪಕರುಗಳ ವಯೋಸಹಜ ಅನಾಸಕ್ತಿಯ ಕಾರಣದಿಂದಾಗಿ ಈ ಬಗೆಯ ಜ್ಞಾನ ಶಿಸ್ತುಗಳನ್ನು ಮೈಗೂಡಿಸಿಕೊಳ್ಳುವುದು ಕಷ್ಟ ಸಾಧ್ಯ. ಹಾಗೂ ಈ ಕಾರಣದಿಂದಾಗಿಯೇ ಅವರು ಸಾಂಪ್ರದಾಯಿಕ ಶಿಕ್ಷಣ ವ್ಯವಸ್ಥೆಯನ್ನು ಮುಂದುವರೆಸುತ್ತಾರೆ. ಅದರ ಪರಿಣಾಮದಿಂದಾಗಿಯ ವಿದ್ಯಾರ್ಥಿಗಳ ದಕ್ಷತೆಯು ಈಚಿನ ದಿನಗಳಲ್ಲಿ ಕಡಿಮೆಯಾಗುತ್ತಿದೆ. ಕೇವಲ ಪರೀಕ್ಷಾ ಸಮಯದಲ್ಲಿ ಮಾತ್ರ ವಿದ್ಯಾರ್ಥಿಗಳ ಜ್ಞಾನ ವ್ಯಕ್ತವಾಗುತ್ತಿದೆಯೋ ಹೊರತು ಅದು ಜೀವನದಲ್ಲಿ ಅಳಪಡುತ್ತಿಲ್ಲ. ಆದ್ದರಿಂದ ಇದಕ್ಕೆ ದಕ್ಷವಾದ, ಯುವ, ಉತ್ಸಾಹಿ ಅಧ್ಯಾಪಕರುಗಳು ಅಗತ್ಯವಲ್ಲವೇ?
ಜೀವಾವಧಿ ವೃತ್ತಿಯೇ?
ಕರ್ನಾಟಕದವರ ಸರಾಸರಿ ಜೀವಿತಾವಧಿ ೬೪ ವರ್ಷಗಳು. ಹೀಗಿರುವಾಗ ನಿವೃತ್ತಿ ವಯೋಮಿತಿ ೬೫ ವರ್ಷಗಳು ಹೀಗಿರುವಾಗ ನಿವೃತ್ತಿ ವಯೋಮಿತಿ ೬೫ ವರ್ಷವೇಕೇ? ಸರ್ಕಾರಗಳು ಜೀವಾವಧಿ ವೃತ್ತಿಗಳನ್ನು ನೀಡಬೇಕೇ? ಅಥವಾ ಯುವ ಜನಾಂಗಕ್ಕೆ ಅವಕಾಶ ಕಲ್ಪಿಸಿಕೊಡಬೇಕೇ? ಈ ಪ್ರಶ್ನೆಗಳಿಗೆ ಸರಳವಾದ ಉತ್ತರವೂ, ನಿವೃತ್ತಿ ವಯೋಮಿತಿ ಏರಿಕೆಯು ಅವೈಜ್ಞಾನಿಕವೆಂಬುದನ್ನು ಸಾಬೀತು ಮಾಡುತ್ತದೆ.
ಸರ್ಕಾರಗಳು, ಈ ಬಗೆಯ ಶಿಫಾರಸ್ಸುಗಳನ್ನು ಜಾರಿಗೆ ತರುವಾಗ ಅದರ ಸಾಧಕ-ಬಾಧಕಗಳನ್ನು ಚರ್ಚಿಸಿ ಸೂಕ್ತವಾಗಿ ತಿದ್ದುಪಡಿಗಳನ್ನು ಜಾರಿಗೆ ತರುವುದನ್ನು ಇನ್ನಾದರೂ ರೂಪಿಸಿಕೊಳ್ಳಬೇಕು.
ಅಧ್ಯಾಪಕರುಗಳೇ ಈ ನಿಯಮದ ವಿರುದ್ಧವಿದ್ದಾರೆ
ಪ್ರಸ್ತುತ ಯುಜಿಸಿ ವೇತನ ಪಡೆಯುತ್ತಿರುವ ಹಾಗೂ ಸಾಮಾನ್ಯ ನೌಕರರೂ ಕೂಡ ೫೮-೬೦ ವರ್ಷಕ್ಕೆ ವಯೋಮಿತಿ ಏರಿಸಿದಾಗಲೇ ಅಸಮಾಧಾನಗೊಂಡಿದ್ದರು. ನಾನು ವೈಯಕ್ತಿಕವಾಗಿ ಭೇಟಿ ಮಾಡಿದ ಶಿಕ್ಷಣ, ಸಾರಿಗೆ, ಬೋಧಕ, ಬೋಧಕೇತರ, ಬ್ಯಾಂಕ್, ಯುಜಿಸಿ ವೇತನ ಪಡೆಯುತ್ತಿರುವ ಪದವಿ ಹಾಗೂ ಸ್ನಾತಕೋತ್ತರ ವಿಶ್ವವಿದ್ಯಾಲಯದ ವಿವಿಧ ವಿಬಾಗದ ಅಧ್ಯಾಪಕರುಗಳು, ಸಿಬ್ಬಂದಿಗಳನ್ನು ಈ ಬಗ್ಗೆ ವಿಚಾರಿಸಿದಾಗ ಕೂಡ ಈ ನಿಯಮದ ವಿರುದ್ಧವೇ ಎಲ್ಲರ ಅಭಿಪ್ರಾಯಗಳಿವೆ. ಆದರೆ, ಈ ನಿಯಮ ಜಾರಿಗೆ ಬರುತ್ತಿರುವುದು ಯಾರಿಗಾಗಿ, ಯಾಕಾಗಿ? ಎಂಬ ಪ್ರಶ್ನೆಗಳು ರಾಜಕಾರಣಕ್ಕೆ ತಳುಕು ಹಾಕಿಕೊಳ್ಳುತ್ತವೆ. ಈ ಬಗೆಯ ಕ್ಷುದ್ರ, ಕ್ಷುಲ್ಲಕ ರಾಜಕಾರಣದಿಂದ ಏನನ್ನೂ ಸಾಧಿಸಲು ಸಾಧ್ಯವಾಗದು ಎಂಬಂಶವನ್ನು ರಾಜಕಾರಣಿಗಳು ಅರ್ಥಮಾಡಿಕೊಳ್ಳಬೇಕು.
ನೆರೆಯ ರಾಜ್ಯ ಕೇರಳದಲ್ಲಿ ನಿವೃತ್ತಿ ವಯೋಮಿತಿ ೫೫ ವರ್ಷಗಳಾಗಿರುವಾಗ, ಕರ್ನಾಟಕದಲ್ಲಿ ೬೫ ವರ್ಷಗಳಾಗುವುದು ಸರಿಯೇ? ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಎಲ್ಲರೂ ಸಮಾನರು ಎಂಬ ತತ್ವವನ್ನು ಸಂವಿಧಾನ ಹೇಳುತ್ತಿದ್ದರೆ, ರಾಜಕಾರಣಿಗಳು, ಅವರು ನೇಮಿಸುವ ಸಮಿತಿಗಳು, ನ್ಯಾಯಾಲಯಗಳು, ನೀತಿ ನಿರೂಪಕರು, ಶಿಕ್ಷಣ ತಜ್ಞರು ಅದನ್ನು ಉಲ್ಲಂಘಿಸುತ್ತಿವೆ. ನಿವೃತ್ತಿ ವಯೋಮಿತಿಯನ್ನು ಯುಜಿಸಿ ವೇತನ ಪಡೆಯುತ್ತಿರುವವರಿಗೆ ಮಾತ್ರ ಏರಿಸುವುದು ಅವೈಜ್ಞಾನಿಕ. ಈ ರೀತಿಯ ಶಿಫಾರಸ್ಸುಗಳು ಬೇರೆ ಇಲಾಖೆಗಳ ನೌಕರರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ. ಮುಂದುವರೆದು ಆ ಇಲಾಖೆಗಳ ನೌಕರರೂ ಕೂಡ ನಿವೃತ್ತಿ ವಯೋಮಿತಿಯನ್ನು ಏರಿಸುವಂತೆ ಒತ್ತಾಯಿಸಬಹುದು. ಆಗ ಅದಕ್ಕೂ ಒಂದು ಸಮಿತಿ ರಚಿಸಿ, ಅವರಿಗೂ ವಯೋಮಿತಿ ಏರಿಸುವಂತೆ ಸಮಿತಿ ಶಿಫಾರಸ್ಸು ಮಾಡಬಹುದು. ಹಾಗಾದಲ್ಲಿ ಯುವ ಜನಾಂಗಕ್ಕೆ ಆತ್ಮಹತ್ಯೆಯ ಬದುಕಲು ಸುಗಮವಾದ ದಾರಿಯೆಂದು-ಈ ಎಲ್ಲ ಅಧಿಕಾರಿವರ್ಗ ಹಾಗೂ ಹಿರಿಯ ಜನಾಂಗ-ನಿರ್ದೇಶಿಸಿದಂತಾಗುತ್ತದೆ.
ಅರ್ಹ ಯುವ ವಿದ್ಯಾವಂತ ಪ್ರತಿಭಾವಂತ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗವಕಾಶವನ್ನು ಒದಗಿಸಬೇಕಾದ ಸರ್ಕಾರಗಳು ಈ ಬಗೆಯ ತೀರ್ಮಾನಗಳನ್ನು ಪರಿಶೀಲಿಸುವುದು ಅವಶ್ಯಕ.
ಸತ್ತರೂ ನೆಲ ಬಿಡನೆಂಬ ಆಸೆಯಿಂದ ನೆಲವನ್ನಪ್ಪಿಕೊಂಡ ಪ್ರಾಣ ಬಿಡುವ ದುರ್ಯೋಧನನಂತೆ, ಪಾತ್ರ ಮುಗಿದರೂ ರಂಗ ಬಿಡಿದ ಚಿರಯೌವನಿಗರಂತೆ ನಟಿಸುವ ಮೂಲಕ ಯುವ ಜನಾಂಗದ ಮನಸ್ಸನ್ನು ಕ್ಷೋಭಿಗೀಡು ಮಾಡಬೇಡ. ಅವರ ಕಣ್ಣಿಗೆ ನಿಮ್ಮ ಈ ಹುಚ್ಚುತನಗಳು ಅಸಹ್ಯವಾಗಿಯೇ ಕಾಣುತ್ತದೆ.
ಒಂದು ವೇಳೆ ಆರನೇ ವೇತನ ಆಯೋಗದ ಸಂಬಳ ಪಡೆಯದಿದ್ದರೆ, ನೀವು ವೃತ್ತಿಯಲ್ಲಿ ಮುಂದುವರೆಯ ಬಯಸುತ್ತಿದ್ದೀರಾ? ಈ ಪ್ರಶ್ನೆಯನ್ನು ಸಮಾಧಾನ ಚಿತ್ತದಿಂದ ಕೇಳಿಕೊಂಡು ನಂತರ ನಿರ್ಧಾರಕ್ಕೆ ಬನ್ನಿ.
ಪ್ರಸ್ತುತ ನಿರುದ್ಯೋಗಿಗಳಾಗಿರುವ ಉದ್ಯೋಗವಕಾಶ ನೀಡುವ ಮನಸ್ಸು ಮಾಡಿ. ನಿವೃತ್ತಿಯಂಚಿನಲ್ಲಿರುವ ಹಿರಿಯ ಅಧ್ಯಾಪಕರುಗಳಿಗೆ ಒಬ್ಬೊಬ್ಬರಿಗೆ ನೀಡುತ್ತಿರುವ ವೇತನದಲ್ಲಿ, ಹೊಸಬರಿಗೆ ನಾಲ್ಕು ಜನರಿಗೆ ಅವಕಾಶ ಕೊಡಬಹುದು. ಈ ಮೂಲಕ ಏಕಕಾಲಕ್ಕೆ ನಿರುದ್ಯೋಗದ ಸಮಸ್ಯೆ ಬಗೆಹರಿಯುವುದಲ್ಲದೆ ಸರ್ಕಾರ್ ಬೊಕ್ಕಸಕ್ಕೆ ಆರ್ಥಿಕ ಹೊರೆಯೂ ಕಡಿಮೆಯಾಗುತ್ತದೆ.
ಹೀಗೆ ಉದ್ಯೋಗವಕಾಶವನ್ನು ಹೆಚ್ಚಿಸುವ ಪ್ರಕ್ರಿಯೆ ಸಾಮಾಜಿಕ ನ್ಯಾಯದ ದೃಷ್ಟಿಯಿಂದಲೂ ಸಮರ್ಥನೀಯವಾಗುತ್ತದೆ. ಈಗಾಗಲೇ ವೃತ್ತಿಯಲ್ಲಿರುವವರಿಗೆ ವೃತ್ತಿ ಭದ್ರತೆಗಿಂತಲೂ ಹೊಸ ಯುವ ಉದ್ಯೋಗಕಾಂಕ್ಷಿಗಳಿಗೆ ಅದು ಅತ್ಯಗತ್ಯವಾದುದಾಗಿದೆ. ವಯೋಮಿತಿ ಏರಿಕೆಯಿಂದಾಗಿ ಸಾಮಾಜಿಕ ನ್ಯಾಯದ ತಕ್ಕಡಿಯೂ ವ್ಯತ್ಯಸ್ಥಗೊಳ್ಳುತ್ತದೆ. ವೃತ್ತಿ ನಿರತರಿಗೆ ಉದ್ಯೋಗ ಹಾಗೂ ತಕ್ಕಡಿಯೂ ವ್ಯತ್ಯಸ್ಥಗೊಳ್ಳುತ್ತದೆ. ವೃತ್ತಿ ನಿರತರಿಗೆ ಉದ್ಯೋಗ ಹಾಗೂ ಆರ್ಥಿಕ ಭದ್ರತೆ ಲಭಿಸುವ ಕಾರಣದಿಂದಾಗಿ ಅನೇಕ ಸಾಮಾಜಿಕ, ಆರ್ಥಿಕ ಸಮಸ್ಯೆಗಳು ಉದ್ಭವಿಸುತ್ತವೆ. ಉಳ್ಳವರು ಮತ್ತು ಇಲ್ಲದವರು ನಡುವಿನ ಕಂದಕ ಮತ್ತಷ್ಟು ಹೆಚ್ಚಿನ ಸಾಮಾಜಿಕ ಸ್ವಾಸ್ಥ್ಯವು ಕೆಡುತ್ತದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಿವೃತ್ತಿ ವಯೋಮಿತಿಯನ್ನು ಏರಿಸುವ ಕ್ರಮವನ್ನು ದೂರಾಲೋಚನೆಯಿಂದ ಸೂಕ್ಷ್ಮವಾಗಿ ಅವಲೋಕಿಸಿ ಈಗ ಆಗಬಹುದಾದ ಅನ್ಯಾಯವನ್ನು ಸರಿಪಡಿಸಬೇಕಾಗಿದೆ.
ಈ ಬಗೆಯ ನಿಯಮಗಳನ್ನು ಜಾರಿಗೆ ತರುವಾಗ ಜನಾಭಿಪ್ರಾಯ ಸಂಗ್ರಹಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಗತ್ಯವಾದುದು. ಆದರೆ ಈ ವಿಷಯದಲ್ಲಿ ಯುಜಿಸಿ, ಸರ್ಕಾರಗಳು, ಶಿಕ್ಷಣ ತಜ್ಞರುಗಳು, ನೀತಿ ನಿರೂಪಕರು, ಮಂತ್ರಿಗಳು ಹಾಗೂ ನ್ಯಾಯಾಲಯಗಳು ವರ್ತಿಸುತ್ತಿರುವ ಕ್ರಮ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗೆಗೆ ಸಂದೇಹಕ್ಕೆ ಎಡೆಮಾಡಿಕೊಡುತ್ತಿವೆ.
ದಯಮಾಡಿ ನಾಡಿನ ನೀತಿ ನಿರೂಪಕರು, ನ್ಯಾಯಮೂರ್ತಿಗಳು, ಶಿಕ್ಷಣ ತಜ್ಞರು, ಪ್ರಜ್ಞಾವಂತರು, ವಿಚಾರವಂತರು ಹಾಗೂ ಹಿರಿಯ, ಕಿರಿಯ ಅಧ್ಯಾಪಕರುಗಳು ಈ ದಿಸೆಯಲ್ಲಿ ಸೂಕ್ತವಾಗಿ ಕಾರ್ಯ ನಿರ್ವಹಿಸಿ ಪ್ರತಿಕ್ರಿಯಿಸಿ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಪೂರಕವಾಗಿ ವಾತಾವರಣ ನಿರ್ಮಾಣ ಮಾಡಿಕೊಡಬೇಕೆಂದು ಈ ವ್ಯವಸ್ಥೆಯನ್ನು ಎಚ್ಚರಗೊಳಿಸಬೇಕಾಗಿದೆ. ಹಿರಿಯರಿಗೆ ’ಜೀವಾವಧಿ ವೃತ್ತಿ’ ಲಭಿಸಿ, ಯುವಕರಿಗೆ ’ಮರಣ ದಂಡನೆ’ ಸಿಗಬಾರದಲ್ಲವೇ?

ಪ್ರದೀಪ್ ಮಾಲ್ಗುಡಿ

ನಿತ್ಯ ನಿರಂಜನ ಅಲ್ಲಮ ಪ್ರಭುದೇವರು


೧೨ನೇ ಶತಮಾನ ಅದು ಭಕ್ತಿ ಬೆಳಗಿನ ಕಾಲ. ಕಲ್ಯಾಣ ರಾಜ್ಯದಲ್ಲಿ ಸಾವಿರಾರು ಶರಣರು ಉದಯಿಸಿದ ಕಾಲ. ಮನಸ್ಸಿನಲ್ಲಿ ಭಕ್ತಿ. ಮಾತಿನಲ್ಲಿ ಜ್ಯೋತಿರ್ಲಿಂಗ, ಕೈಯಲ್ಲಿ ಕಾಯಕ, ರಾಜ್ಯದಲ್ಲಿ ಸಮೃದ್ಧಿ-ಬಸವಣ್ಣ ಭಕ್ತಿಯ ಭಂಡಾರಿ. ಅಲ್ಲಮ ಇವರ ಮಧ್ಯದ ಜ್ಞಾನ-ಚಂದ್ರಮ. ಮಾಯೆ ಮುಟ್ಟದ ಕಾಯ, ಮೋಹ ಸೋಂಕದ ಮನಸ್ಸು, ಕರುಣೆ ತುಂಬಿದ ಹೃದಯ, ಮರೆವೆಯನರಿಯದ ಮತಿ, ದೇಹ ದೇವಾಲಯ, ಜೀವದೇವ, ಹಠದಲ್ಲಿ ಹಠಯೋಗಿ ಮಂತ್ರದಲ್ಲಿ ಪ್ರಣವಸಿದ್ಧ, ಧ್ಯಾನದಲ್ಲಿ ಅನಿಮಿಷ, ಲಿಂಗ-ಮಾರ್ಗದಲ್ಲಿ ಶಿವಯೋಗಿ ಕಣ್ಣಿನಲ್ಲಿ ಕಾಂತಿ, ನಡೆಯಲ್ಲಿ ನಿಶ್ಚಿಂತ, ಅಲ್ಲಮ ಸಾಧಿಸದ ಯೋಗವಿಲ್ಲ. ಪ್ರಸನ್ನತೆಯೇ ಮೂರ್ತಿವೆತ್ತ ಮಹಂತ. ನಿತ್ಯ ಪರಿವ್ರಾಜಕ, ದೇಶ, ದೇಶಾಂತರ ಸುತ್ತಿದ, ಜನಮನದ ಕಾಳಿಕೆ ಕಳೆದ, ಸಾಧಕರಿಗೆ ಸತ್ಯದ ಮಾರ್ಗತೋರಿದ. ತಪಸ್ವಿಗಳ ಅಹಂಕಾರದ ಮದವಳಿದ, ಜ್ಞಾನದ ಮಹಿಮೆಯನ್ನು ಎಲ್ಲೆಲ್ಲೂ ಸಾರಿದ. ಘನಕ್ಕೆ ಘನಮಹಿಮ, ನಿತ್ಯ ನಿರಂಜನ ಜ್ಯೋತಿಯಾಗಿ ಬೆಳಗಿದ ಅನುಪಮ ಚರಿತ ಅಲ್ಲಮಪ್ರಭು.
ಅಲ್ಲಮ ಪ್ರಭುವಿನ ವಚನಗಳು ಅನುಭಾವದ ರತ್ನಗಣಿಗಳು. ಮೊಗೆದಷ್ಟೂ ಆಳ, ಆಳಕ್ಕೆ ಆಳ, ವಿಸ್ತಾರಕ್ಕೆ ವಿಸ್ತಾರ, ಎತ್ತರಕ್ಕೆ ಎತ್ತರ. ಮಾತಿಗೆ ಮೀರಿದ ಅನುಭೂತಿ, ಅದಕ್ಕೆ ತಕ್ಕ ಭಾಷೆ, ಶಬ್ಧಗಳಲ್ಲಿ ಸೊಬಗು ಅಭಿವ್ಯಕ್ತಿಯಲ್ಲಿ ಅಲಂಕಾರ, ಸೂಚ್ಯವಾದ ಸುಂದರ ರೂಪಕಗಳು, ಬೆಡಗು ಬಿನ್ನಾಣ, ತತ್ವಾನುಭವದ ರಸಯಾತ್ರೆ ಅಲ್ಲಮರ ವಚನಗಳನ್ನು ಹಾಡಿ ದಣಿದವರಿಲ್ಲ. ಬಸವಣ್ಣನವರದು ಭಕ್ತಿಮಾರ್ಗ. ಅಲ್ಲಮರದು ಅರಿವಿನ ಮಾರ್ಗ. ಅನುಭಾವದರಿವಿನಲ್ಲಿ ಲೋಕ ಕಲ್ಯಾಣವನ್ನು ಕಂಡವರು ಅಲ್ಲಮ ಪ್ರಭುದೇವರು. ತಮ್ಮ ಆತ್ಮೋದ್ಧಾರದ ಜೊತೆಗೆ ವ್ಯಕ್ತಿಶುದ್ಧಿಯ ಮೂಲಕ ಸಮಾಜಶುದ್ಧಿಗೆ ತೊಡಗಿದ ಅವರು ತನು, ಮನ ಶುದ್ಧಿಗೂ ಆದ್ಯತೆ ನೀಡಿದರು ಅಸ್ಪೃಶ್ಯತೆಯನ್ನು ವಿರೋಧಿಸಿದರು. ಸರ್ವಸಮಾನತೆಯ, ಸ್ವಾವಲಂಬನೆಯ ಬದುಕಿಗೆ ಸತ್ಯಶುದ್ಧ ಕಾಯಕ ಮತ್ತು ದಾಸೋಹ ಜಾರಿಗೊಳಿಸಿದರು. ಸರ್ವರಿಗೆ ಸಮಪಾಲು, ಸರ್ವರಿಗೆ ಸಮಬಾಳು, ವರ್ಣಭೇದ, ಲಿಂಗ ಭೇದ ಸಲ್ಲದು ಎಂದರು.
ಅಲ್ಲಮ ಪ್ರಭು ಆಧ್ಯಾತ್ಮ ಜಗತ್ತಿನ ವಿಸ್ಮಯ, ಸಾಧನೆಯ ದೃಷ್ಟಿಯಿಂದ, ದೇಶ, ಕಾಲಗಳನ್ನು ಮೀರಿ ವಿಶ್ವದ ಮಹಾನ್ ವಿಭೂತಿಗಳ ಸಾಲಿನಲ್ಲಿ ನಿಲ್ಲಬಲ್ಲ ಮಹಾನುಭಾವಿ. ಶರಣ ದರ್ಶನದ ಪ್ರಕಾರ ಮನುಷ್ಯ ಸಾಧಿಸಬಹುದಾದ ಆಧ್ಯಾತ್ಮಿಕ ಜಗತ್ತಿನ ಅತ್ಯಂತ ಉನ್ನತಿಯನ್ನು ಸಾಧಿಸಿದ ಮಹಾಂತ. ಅಲ್ಲಮನನ್ನು ಅರಿಯಲು ಆತನ ವಚನಗಳೇ ಆಧಾರ. ಅವರ ವಚನಾಂಕಿತ "ಗುಹೇಶ್ವರ". ಇದುವರೆಗೆ ಪ್ರಕಟವಾಗಿರುವ ವಚನಗಳು ೧೬೪೫ ಮಾತ್ರ. ಅಲ್ಲಮ ಪ್ರಭುವಿನ ವಚನಗಳು ಬರಿಯ ಶಬ್ದ ಜಾಲಗಳಲ್ಲ. ಅವು ವಿಶ್ವ ಚೈತನ್ಯದ ಕಿಡಿಗಳು ಎಂದಿದ್ದಾರೆ ಡಾ.ದೇ.ಜವರೇಗೌಡರು. ಅವರ ವಚನಗಳಲ್ಲಿ ಅಡಗಿರುವ ಅನುಭಾವದ ಎತ್ತರ ಅರಿಯುವುದು ಕಷ್ಟಸಾಧ್ಯ. ಅವರ ವಚನಗಳಲ್ಲಿ ಅಭಿವ್ಯಕ್ತವಾಗಿರುವ ವೈಚಾರಿಕ ನಿಲುವು ಎಲ್ಲ ಕಾಲ, ದೇಶಗಳಲ್ಲಿಯೂ ಸಲ್ಲಬಹುದಾದಷ್ಟು ವ್ಯಾಪಕವಾದದ್ದು. ಇಂದಿನ ವೈಜ್ಞಾನಿಕ ಯುಗದಲ್ಲಿಯೂ ಆತನ ಸ್ವತಂತ್ರ ವಿಚಾರ ಶಕ್ತಿ ವಿಸ್ಮಯ ಹುಟ್ಟಿಸುತ್ತದೆ. ಈ ಕಾರಣಕ್ಕೆ ಅಲ್ಲಮ ಪ್ರಭು ಎಲ್ಲ ವಿಚಾರವಂತರಿಗೂ ಪ್ರಿಯನಾಗಿದ್ದಾನೆ. ನಾ. ಮೊಗಸಾಲೆ ಅವರಂತ ವೈದ್ಯರಿಗೂ ನನ್ನಂತ ಒಬ್ಬ ವ್ಯಾಪಾರಿಗೂ ಆದರ್ಶನಾಗಿದ್ದಾನೆ.
ಕರ್ನಾಟಕದ ಆಧ್ಯಾತ್ಮಿಕ ಜಗತ್ತಿನಲ್ಲಿ ವೈರಾಗ್ಯನಿಧಿ, ಅನುಪಮಚರಿತ ಅಲ್ಲಮಪ್ರಭುವಿನದು ಬಹುದೊಡ್ಡ ಹೆಸರು. ಆತನ ಅನುಭಾವದ ಎತ್ತರಕ್ಕೆ ಏರಿದವರು ಬಹಳ ವಿರಳ. ಅಲ್ಲಮಪ್ರಭು ದೇವರ ಆಧ್ಯಾತ್ಮಿಕ ಜ್ಞಾನ, ಅನುಭಾವ, ವಿರಾಗ ಜೀವನ, ಮನುಕುಲದ ಆದರ್ಶ. ೮೫೦ ವರ್ಷಗಳ ನಂತರವೂ ಅಲ್ಲಮರ ವ್ಯಕ್ತಿತ್ವ, ಅಧ್ಯಾತ್ಮಿಕ ತತ್ವಗಳು ಮಾನವ ಕುಲಕ್ಕೆ ಮಾರ್ಗದರ್ಶಿಯಾಗಿವೆ "ಜ್ಞಾನದ ಬಲದಿಂದ ಅಜ್ಞಾನದ ಕೇಡು" ನೋಡಾ ಎಂಬ ಪ್ರಭುದೇವರ ಮಾತು ಸಾರ್ವಕಾಲಿಕ ಸತ್ಯವಾಗಿದೆ...
೧೨ನೇ ಶತಮಾನ ಭಾರತದ ಇತಿಹಾಸದಲ್ಲಿ ಧಾರ್ಮಿಕ ಸುವರ್ಣಕಾಲ. ಕರ್ನಾಟಕದ ಮಟ್ಟಿಗೆ ವಿಚಾರಕ್ರಾಂತಿಗೆ, ತನ್ಮೂಲಕ ಸಾಮಾಜಿಕ, ಸಾಹಿತ್ಯಿಕ ಕ್ರಾಂತಿ ವಿಜೃಂಭಿಸಿದ ಕಾಲ. ಕನ್ನಡನಾಡಿನ ಕೇಂದ್ರ ಕಲ್ಯಾಣದಲ್ಲಿ ರಾಜ್ಯವಾಳುತ್ತಿದ್ದ ಬಿಜ್ಜಳ ರಾಜನ ಮಂತ್ರಿಯಾಗಿ ದೇಶವನ್ನು ಸುಭಿಕ್ಷದೆಡೆಗೆ ಕೊಂಡೊಯ್ದ ಭಗವಾನ್ ಬಸವೇಶ್ವರರು ಕ್ರಾಂತಿಯ ಕೇಂದ್ರ ಬಿಂದು. ಈ ಕ್ರಾಂತಿ ದೀಪಕ್ಕೆ ತಾತ್ವಿಕ ನೆಲಗಟ್ಟನ್ನು ನೀಡಿ ಬೆಳಗಿಸಿದವರು ಅನುಪಮ ಚರಿತ ಅಲ್ಲಮಪ್ರಭುದೇವರು. ಬಸವಣ್ಣನವರು ಪ್ರತಿಪಾದಿಸಿದ ಸತ್ಯಶುದ್ಧ ಕಾಯಕ, ದಾಸೋಹಗಳು ಕಲ್ಯಾಣ ರಾಜ್ಯದ ಕೀರ್ತಿಯನ್ನು ನಾಡಿನಾದ್ಯಂತ ಬಿತ್ತರಿಸಿದವು. ಕಲ್ಯಾಣ ರಾಜ್ಯದಲ್ಲಿ ಆರ್ಥಿಕ ಕ್ರಾಂತಿಗೆ ಕಾರಣವಾಯಿತು. ಮೇಲುವರ್ಗದ, ಪುರೋಹಿತಶಾಹಿಗಳ ಸ್ವತ್ತಾಗಿದ್ದ ದೇವರು, ದೇವಾಲಯಗಳನ್ನು ಜನ ಸಾಮಾನ್ಯರ ಬಳಿಗೆ ತಂದು, ಇಷ್ಟ ಲಿಂಗಧಾರಣಿ ಮೂಲಕ ದೇಹವನ್ನೇ ದೇವಾಲಯವನ್ನಾಗಿಸಿದವರು ಭಗವಾನ್ ಬಸವೇಶ್ವರರು.
ತಾವೇ ಏರಬಹುದಾಗಿದ್ದ ಶೂನ್ಯಪೀಠವನ್ನು, ಕೆಳವರ್ಗದಿಂದ ಬಂದ ಮದ್ದಳೆಕಾಯಕದ ಅಲ್ಲಮಪ್ರಭು ದೇವರನ್ನು ಪೀಠಾಧ್ಯಕ್ಷರನ್ನಾಗಿಸಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ. ವೈರಾಗ್ಯಮೂರ್ತಿ ಅಲ್ಲಮಪ್ರಭು ದೇವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆ ಶಿಕಾರಿಪುರ (ತಾ.) ಬಳ್ಳಿಗಾವಿ. ತಂದೆ ನಿರಂಹಕಾರಿ, ತಾಯಿ ಸುಜ್ಞಾನಿ. ಕೆಲವು ಚರಿತ್ರಕಾರರು ಅಲ್ಲಮಪ್ರಭು ಹುಟ್ಟಿದ ಊರು ’ಬನವಾಸಿ’ ಎಂದೂ ಹೇಳಿದ್ದಾರೆ. ಭಾರತೀಯ ಪರಂಪರಾಗತ ಪದ್ಧತಿಯಂತೆ ಅಲ್ಲಮ ಪ್ರಭುವನ್ನೂ ಅವತಾರ ಪುರುಷರನನ್ನಾಗಿ ಚಿತ್ರಿಸಿದ್ದಾರೆ. ಬಳ್ಳಿಗಾವಿಯ ಘಟಿಕಾಸ್ಥಾನದಲ್ಲಿ ವಿದ್ಯೆ ಪಡೆದ ಅಲ್ಲಮಪ್ರಭು ಮದ್ದಳೆ ನುಡಿಸುವ ಕಾಯಕ ಕೈಗೊಳ್ಳುತ್ತಾನೆ. ಬಳ್ಳಿಗಾವಿಯ ಕೇದಾರೇಶ್ವರ ದೇವಾಲಯದ ರಂಗ ಮಂಟಪದಲ್ಲಿ ನೃತ್ಯ ಮಾಡುತ್ತಿದ್ದ ಮಾಯಾದೇವಿಗೆ ಮದ್ದಳೆ ನುಡಿಸುತ್ತಿದ್ದ ಅಲ್ಲಮ ಆಕೆಯ ಪ್ರೇಮಭಿಕ್ಷೆಯನ್ನು ನಿರಾಕರಿಸುತ್ತಾನೆ. ವಿರಾಗ ಜೀವನದತ್ತ ಒಲವು ಹೊಂದಿದ್ದ ಅಲ್ಲಮ ಮಾಯೆಯನ್ನು, ಬಳ್ಳಿಗಾವಿಯನ್ನು ತೊರೆದು ಜಂಗಮವಾಗಿ ದೇಶದ ತುಂಬ ಸಂಚರಿಸುತ್ತಾ, ಹಿಮಾಲಯದಲ್ಲಿ ಮಹಾಮಹಿಮರ ಸಂದರ್ಶನ ಪಡೆದು ಶಿವಯೋಗಿಯಾಗಿ ಅಂತರಂಗದ ಸಾಧನೆಯಲ್ಲಿ ತೊಡಗುತ್ತಾರೆ. "ತನುವ ತೊಂಟವ ಮಾಡಿ, ಮನವ ಗುದ್ದಲಿಯ ಮಾಡಿ, ಅಗೆದು ಕಳೆದನಯ್ಯಾ ಭ್ರಾಂತಿಯ ಬೇರ, ಒಡೆದು ಸಂಸಾರದ ಹೆಂಟೆಯ ಬಗಿದು ಬಿತ್ತಿದೆನಯ್ಯಾ ಬ್ರಹ್ಮಬೀಜವ, ಅಖಂಡ ಮಂಡಲವೆಂಬ ಬಾವಿ, ಪವನವೇ ರಾಟಾಳ, ಸುಷುಮ್ನನಾಲದಿಂದ ಉದಕವ ತಿದ್ದಿ ಬಸವಗಳೈವರು ಹಸಗೆಡಿಸಿಹವೆಂದು ಸಮತೆ ಸೈರಣೆಯೆಂಬ ಬೇಲಿಯ ನಿಕ್ಕಿ, ಆವಾಗಳೂ ಈ ತೋಟದಲ್ಲಿ ಜಾಗರವಿದ್ದ ಸಸಿಯ ಸಲಹಿದೆನು ಕಾಣಾ ಗುಹೇಶ್ವರಾ!" ಎಂದಿದ್ದಾರೆ ಅಲ್ಲಮ ಪ್ರಭುದೇವರು.
ಶಿವಮೊಗ್ಗ, ಬನವಾಸಿ-ಉಡುಪಿ-ಮಂಗಳೂರು ಭಾಗದಲ್ಲಿ ಪ್ರಭು ಎಂಬ ಹೆಸರು ಮತ್ತು ಮನೆತನದ ಹೆಸರುಗಳು ಇಂದಿಗೂ ಬಳಕೆಯಲ್ಲಿವೆ. ಕರ್ನಾಟಕದ ಮಧ್ಯಕಾಲಿನ ಇತಿಹಾಸದಲ್ಲಿಯೂ ಇಂಥಹ ಮನೆತನದ ಹೆಸರುಗಳು ಪ್ರಸಿದ್ಧವಾಗಿದ್ದವು. ಕಾರಣ "ಅಲ್ಲಮಪ್ರಭು" ಎಂಬುದು ಅಲ್ಲಮ ಪ್ರಭುದೇವಶ್ಚ ಎಂಬ ಪ್ರಯೋಗವನ್ನು ಇಲ್ಲಿ ಗಮನಿಸಬಹುದಾಗಿದೆ ಎಂದಿದ್ದಾರೆ. ಡಾ.ವೃಷಭೇಂದ್ರ ಸ್ವಾಮಿ ಅವರು ಹರಿಹರ ಕವಿ "ಅಲ್ಲಮ್ಮ "ಅಲ್ಲಮ್ಮಯ್ಯ "ಅಲ್ಲಮದೇವ" ಎಂದು ತನ್ನ ರಗಳೆಯಲ್ಲಿ ಬಳಸಿದ್ದಾನೆ. ಸಿದ್ಧರಾಮ ಚಾರಿತ್ರ, ಬಸವಪುರಾಣಗಳಲ್ಲಿ ಅಲ್ಲಮ, ಅಲ್ಲಮ ಪ್ರಭು ಎಂಬ ಪ್ರಯೋಗಗಳಿವೆ. ಪ್ರಭುಲಿಂಗ ಲೀಲೆಯಲ್ಲಿ ಅಲ್ಲಮ, ಅಲ್ಲಮಪ್ರಭು, ಪ್ರಭು ಮುಂತಾಗಿ ಉಲ್ಲೇಖವಾಗಿವೆ. "ಅಲ್ಲಮ" ಶಬ್ದವನ್ನೇ ಮೂಲವನ್ನಾಗಿಟ್ಟುಕೊಂಡು ಅಲ್ಲಮದೇವ, ಅಲ್ಲಮಪ್ರಭು, ಅಲ್ಲಮಯ್ಯ, ಮುಂತಾಗಿ ರೂಢಿಯಲ್ಲಿ ಬಂದಿವೆ ಎನ್ನುತ್ತಾರೆ ಶ್ರೀ ಕಪಟರಾಳ ಕೃಷ್ಣರಾಯರು. ಇಸ್ಲಾಂನ ಅಲ್ಲಾಃ ಮತ್ತು ಟಿಬೆಟ್ ಗುರು ಲಾಮಾ ಮತ್ತು ಅಲ್ಲಮಕ್ಕೂ ಸಂಬಂಧವಿರಬಹುದೇ ಎನ್ನುತ್ತಾರೆ ಡಾ.ಎಲ್ ಬಸವರಾಜು ಅವರು. ನಾಗಮಂಗಲದ ಒಂದು ಶಾಸನದಲ್ಲಿ ಅಲ್ಲಾಳನಾಥ ವಿಗ್ರಹ ಮಾಡಿಸಿದ ಉಲ್ಲೇಖವಿದೆ. ಕ್ರಿ.ಶ.೧೦೯೧ರ ಶಾಸನದಲ್ಲಿ ಅಲ್ಲಮೇಶ್ವರದೇವ" ಎಂಬ ಹೆಸರಿದೆ ಅಲ್ಲದೆ ಪ್ರಾಚೀನ ಕಾವ್ಯಗಳಲ್ಲಿ ಅಲ್ಲಮರಸನ್, ಅಲ್ಲಾಲೇಶ್ವರ, ಅಲ್ಲಾಹುಲಿದೇವನ್ ಎಂಬ ಉಲ್ಲೇಖಗಳೂ ಇವೆ.
ಶಿವಮೊಗ್ಗ ಜಿಲ್ಲೆ ಶಿಕಾರಿಪುರ (ತಾ) ಬಳ್ಳಿಗಾವಿನಾಡು-ಬನವಾಸಿ ೧೨೦೦೦ದ ಉಪರಾಜಧಾನಿ. ಇಲ್ಲಿರುವ "ಗೋಗಾವಿ" ಅಲ್ಲಮಪ್ರಭುವಿನ ಜನ್ಮಸ್ಥಳ ಎಂದಿದ್ದಾರೆ ಶಿರಾಳ ಕೊಪ್ಪದ ಸಂಶೋಧಕರೂ, ನನ್ನ ಮಾಧ್ಯಮಿಕ ಶಾಲೆ ಉಪಧ್ಯಾಯರೂ ಆಗಿದ್ದ ಎಸ್.ಭೀಮಪ್ಪನವರು. ಹೊಸವೊಳಲು ಗ್ರಾಮದಲ್ಲಿನ ಪ್ರಭುಲಿಂಗದೇವರ ಮಂದಿರವನ್ನು ನಗರದ ಜನ ಜೀರ್ಣೋದ್ಧಾರ ಮಾಡಿಸಿ ದತ್ತಿ ಬಿಟ್ಟ ಉಲ್ಲೇಖ ಕ್ರಿ.ಶ.೧೧೫೮ರ ಶಾಸನದಲ್ಲಿದೆ ಎಂದು ಖ್ಯಾತ ವಿದ್ವಾಂಸ ಡಾ.ಪಿ.ಬಿ.ದೇಸಾಯಿ ದಾಖಲಿಸಿದ್ದಾರೆ. ಬಳ್ಳಿಗಾವಿ ತ್ರಿಪುರಾಂತಕೇಶ್ವರ ದೇವಾಲಯದ ಹಿಂದಿರುವ ಹೊಂಡದ ಪಕ್ಕದ ಕಲ್ಲು ಮಂಟಪ ಇರುವ ಸ್ಥಳವೇ ಅಲ್ಲಮರ ಜನ್ಮಸ್ಥಳವೆಂದು ಸ್ಥಳೀಯರು ಪರಂಪರೆಯಿಂದ ನಂಬಿಕೊಂಡು ಬಂದಿದ್ದಾರೆ. ಈಗ ಅಲ್ಲಿ ಒಂದು ವಿರಕ್ತ ಮಠ ಇರುವುದು ಈ ನಂಬಿಕೆಗೆ ಸಾಕ್ಷಿಯಾಗಿದೆ. ಬಳ್ಳಿಗಾವಿಯಲ್ಲಿರುವ ಕೇದಾರೇಶ್ವರ ದೇವಾಲಯದ ಆವರಣದಲ್ಲಿ ಪ್ರಾಚೀನ ವಿಶ್ವವಿದ್ಯಾಲಯ ಕೋಡಿಮಠವಿದ್ದಿತು. ಇಲ್ಲಿಯೇ ಅಲ್ಲಮನ ಬಾಲ್ಯ ವಿದ್ಯಾಭ್ಯಾಸ ನಡೆಯಿತೆಂದೂ ಪಕ್ಕದಲ್ಲಿರುವ ಚಿಕ್ಕದೇವಾಲಯವನ್ನು ನಗರೇಶ್ವರ ದೇವಾಲಯ ಎಂದೂ ಕರೆಯುತ್ತಾರೆ. ಇಲ್ಲಿರುವ ೩ ಗರ್ಭ ಗೃಹಗಳಲ್ಲಿ ಮಧ್ಯದಲ್ಲಿ ಪ್ರಭುಲಿಂಗ ಎಡಭಾಗದಲ್ಲಿ ಬ್ರಹ್ಮಲಿಂಗ ಬಲಭಾಗದಲ್ಲಿ ವೀರಭದ್ರ ವಿಗ್ರಹಗಳಿವೆ. ಇಲ್ಲಿ ನಡೆಯುವ ಜಾತ್ರೆಯಲ್ಲಿ "ಪ್ರಥಮ ಕಲ್ಯಾಣದ ಪ್ರಭುದೇವ ಉಘೇ, ಉಘೇ" ಎಂದು ಇಂದಿಗೂ ಘೋಷಿಸುತ್ತಾರೆ. ಬಳ್ಳಿಗಾವಿಯಿಂದ ೨ ಕಿ.ಮೀ. ದೂರದಲ್ಲಿ ಗೊಗ್ಗೇಶ್ವರ ದೇವಾಲಯ, ಗೊಗ್ಗಯ್ಯನ ಹೊಂಡ, ಅನಿಮಿಷ ದೇವರ ಗದ್ದುಗೆ ಇವೆ. ಹತ್ತಿರದಲ್ಲೇ ಗೊಗ್ಗಯ್ಯ ಶರಣನ ಸಮಾಧಿ ಇದೆ. ಅನಿಮಿಷಾರಣ್ಯ ಪತ್ರೆ ವನವಿದೆ. ಸಮೀಪದ ಶಿವಪುರದಲ್ಲಿ ಪತ್ರೆ ವನದ ಮಧ್ಯೆ ಅಲ್ಲಮರ ಗದ್ದುಗೆಯೂ ಇದೆ. ಅಲ್ಲಮರ ಮೊದಲು ಅನಿಮಿಷರಿಂದ ಲಿಂಗದೀಕ್ಷೆ ಪಡೆದು, ಅನುಷ್ಠಾನ ಮಾಡಿದ ಸ್ಥಳ ಸ್ಮಾರಕವಾಗಿರಬಹುದು.
"ಕಲ್ಯಾಣವೆಂಬ ಪ್ರಣತೆಯಲ್ಲಿ, ಭಕ್ತಿ ರಸವೆಂಬ ತೈಲವನೆರೆದು, ಆಚಾರವೆಂಬ ಬತ್ತಿಯಲ್ಲಿ ಬಸವಣ್ಣನೆಂಬ ಜ್ಯೋತಿಯ ಮುಟ್ಟಿಸಲು ತೊಳಗಿ ಬೆಳಗುತ್ತಿರ್ದುದಯ್ಯಾ ಶಿವನ ಪ್ರಕಾಶ ಆ ಬೆಳಗಿನೊಳಗೊಪ್ಪುತ್ತಿರ್ದರಯ್ಯಾ ಅಸಂಖ್ಯಾತ ಭಕ್ತ ಮಹಾಗಣಂಗಳು" ಎಂದಿದ್ದಾರೆ ಅಲ್ಲಮಪ್ರಭು ದೇವರು. ಬಸವಣ್ಣನವರ ಬದುಕಿನ ಪ್ರಧಾನ ಆಶಯವನ್ನು ಅವರ ಒಂದು ವಚನಗಳಲ್ಲಿ ಕಾಣಬಹುದು. ಮಾನವನು ತನ್ನ ಬದುಕಿನಲ್ಲಿ ಅನುಸರಿಸಬೇಕಾದ ಸಪ್ತ ಶೀಲಗಳನ್ನು ಕುರಿತು, "ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ. ಇದೇ ನಮ್ಮ ಕೂಡಲ ಸಂಗಮದೇವನೊಲಿಸುವ ಪರಿ" ಎಂದಿದ್ದಾರೆ. ಸರಳವಾದ ಪದಗಳಲ್ಲಿ ಜೀವನ ಸೂತ್ರಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ತಿಳಿಸಿದ್ದಾರೆ. ಆದರೆ ಬದುಕಿನಲ್ಲಿ ಅನುಸರಿಸಲೇಬೇಕಾದ ಈ ಸಪ್ತ ಸೂತ್ರಗಳನ್ನು ನಾವು ಅನುಸರಿಸುತ್ತಿದ್ದೇವೆಯೇ? ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಾಗಿದೆ. ಸಪ್ತ ಸೂತ್ರಗಳು ಅಂದಿನ ಬದುಕಿನ ಅವಿಭಾಜ್ಯ ಅಂಗಗಳಾಗಿ ಜನಜೀವನವನ್ನು ಸಮೃದ್ಧಗೊಳಿಸಿರುವ ಸತ್ಯ ನಮ್ಮ ಮುಂದಿದೆ. ಈ ಕುರಿತು ಚಿಂತನೆ ನಡೆಯಬೇಕಾಗಿದೆ. ನಮ್ಮ ಧರ್ಮಾಧಿಕಾರಿಗಳು, ರಾಜಕೀಯ ಮುತ್ಸದ್ಧಿಗಳು ಮೌಲ್ಯಗಳನ್ನು, ಜೀವನ ಪ್ರೀತಿಯನ್ನು ರಾಷ್ಟ್ರಪ್ರೇಮವನ್ನು, ಭಾಷಾ ಪ್ರೇಮವನ್ನು ಉದ್ದೀಪನಗೊಳಿಸುವ ಕಾರ್ಯವನ್ನು ಆದ್ಯತೆಯ ಮೇಲೆ ಕೈಗೊಳ್ಳಬೇಕಾಗಿದೆ. ಸತ್ಯ ಶುದ್ಧ ಕಾಯಕ ಮತ್ತು ದಾಸೋಹಗಳಿಂದ ದೇಶದಲ್ಲಿ ಸಮೃದ್ಧಿ ಸಾಧ್ಯ. ಕಾರ್ಲ್‌ಮಾರ್ಕ್ಸ್‌ನ ಆರ್ಥಿಕ ಸಿದ್ಧಾಂತವೂ ಇದನ್ನೇ ಸೂತ್ರವಾಗಿ ಪ್ರತಿಪಾದಿಸುತ್ತದೆ. ಪ್ರತಿಯೊಬ್ಬರೂ ದುಡಿದು ಉಣ್ಣಬೇಕು, ಸತ್ಯಮಾರ್ಗದಲ್ಲಿ ನಡೆಯಬೇಕು. ಗಳಿಸಿದ್ದರಲ್ಲಿ ಹೆಚ್ಚಾದುದನ್ನು ಮಕ್ಕಳಿಗೆ, ವಯಸ್ಸಾದವರಿಗೆ, ರೋಗಿಗಳಿಗೆ ಸಹಾಯ ಮಾಡಲು ಬಳಸಬೇಕು. ಸಪ್ತ ಸೂತ್ರಗಳ ಪ್ರಾಮಾಣಿಕ ಅನುಷ್ಠಾನದಿಂದ ಸಾಮಾಜಿಕ ಬಡತನ ತೊಲಗುತ್ತದೆ. ಸಮೃದ್ಧಿಯಿಂದ ಶಾಂತಿ, ಶಾಂತಿಯಿಂದ ಆಧ್ಯಾತ್ಮಿಕ ಉನ್ನತಿ, ಕಲೆ, ಸಾಹಿತ್ಯ, ಸಂಗೀತ ನೃತ್ಯಕಲೆ, ಶಿಲ್ಪಕಲೆಗಳು ಅರಳುತ್ತವೆ. ಶರಣರು ದೇವರನ್ನು ದೇವಾಲಯಗಳನ್ನು ನಿರಾಕರಿಸಲಿಲ್ಲ, ನಾಶ ಮಾಡಲಿಲ್ಲ ಬದಲಾಗಿ ಎಲ್ಲರಿಗೂ ಪ್ರವೇಶವಿಲ್ಲದ ದೇವಾಲಯಗಳಿಗೆ ಪರ್ಯಾಯವಾಗಿ ಶಿವನ ಕುರುಹಾದ ಇಷ್ಟಲಿಂಗವನ್ನು ದೇಹದ ಮೇಲೆ ಧರಿಸಿ ದೇಹವನ್ನೇ ದೇವಾಲಯವನ್ನಾಗಿಸುವ ದಾರಿ ತೋರಿದರು. ನಿನ್ನ ಹಸಿವನ್ನು ನೀನೇ ಉಂಡು ನೀಗಿಸಿಕೊಳ್ಳಬೇಕು, ನಿನ್ನರತಿ ಸುಖವನ್ನು ನೀನೇ ಅನುಭವಿಸಬೇಕು. ನಿನ್ನ ಆಧ್ಯಾತ್ಮಿಕ ಹಸಿವನ್ನು ನೀನೇ ನೀಗಿಸಿಕೊಳ್ಳಬೇಕು ನಿನ್ನ ಅಂತರಂಗವನ್ನು ಪ್ರವೇಶಿಸಿ, ನಿನ್ನಿಷ್ಟಲಿಂಗವನ್ನು ನೀನೇ ಪೂಜಿಸಬೇಕು. ನಿನ್ನ ಪರವಾಗಿ ಬೇರೆಯವರು ಈ ಮೂರು ಕೆಲಸಗಳನ್ನು ಮಾಡುವುದು ಸಲ್ಲದು ಎಂದರು. ದೇವರು ಮತ್ತು ನಿನ್ನ ಮಧ್ಯೆ ಪುರೋಹಿತರೆಂಬ ದಲ್ಲಾಳಿಗಳು ಬೇಡ ಎಂದರು. ಬಸವಣ್ಣ ಮತಾಂತರಿಯಲ್ಲ ಮನಾಂತರಿ ಎಂಬ ಡಾ.ನಾ.ಮೊಗಸಾಲೆ ಅವರ ಮಾತು ಉಲ್ಲೇಖನಾರ್ಹವಾಗಿದೆ.
ಅಲ್ಲಮಪ್ರಭು, ಹಠಯೋಗ, ಲಯಯೋಗ, ರಾಜಯೋಗ ಸಾಧಕರಾಗಿ, ಶಿವಯೋಗದ ಸಿದ್ಧಿಯನ್ನು ಪಡೆಯುತ್ತಾರೆ. ಬಳ್ಳಿಗಾವಿ ಸಮೀಪದ ಅನಿಮಿಷಾರಣ್ಯದಲ್ಲಿ ಶಿವಯೋಗ ನಿರತರಾಗಿದ್ದ ಅನಿಮಿಷ ಗುರುಗಳಿಂದ ಲಿಂಗದೀಕ್ಷೆಯನ್ನು ಪಡೆಯುತ್ತಾರೆ. ಪರಿವ್ರಾಜಕರಾಗಿ ನಾಡಿನಲ್ಲೆಲ್ಲ ಸಂಚರಿಸುತ್ತಾ ಗೊಗ್ಗಯ್ಯ, ಮುಕ್ತಾಯಕ್ಕ, ಸಿದ್ಧರಾಮ, ಗೋರಕನಾಥ ಮುಂತಾದವರಿಗೆ ಶಿವಯೋಗ ಸಾಧನೆಯ ಮಾರ್ಗ ತೋರುತ್ತಾರೆ. ಅಹಂಕಾರವನ್ನು ಜಯಿಸಿದ ಅಲ್ಲಮ ಪ್ರಭುದೇವರು "ನಾನೆಂಬ ಅಹಂಕಾರದಲ್ಲಿ ನಾನುಂಡೆನಾದರೆ ನನಗದೇ ಭಂಗ, ಸ್ತುತಿನಿಂದೆಗೆನೊಂದೆನಾದರೆ, ಅಂಗೈಯಲ್ಲಿರ್ಪ ಗುಹೇಶ್ವರ ಲಿಂಗಕ್ಕೆ ದೂರ" ಎಂದಿದ್ದಾರೆ. "ಕಾಮವನ್ನು ಸುಟ್ಟವನೇ ಯೋಗಿ, ಕಾಮನ ಬಲೆಗೆ ಬಿದ್ದವನೇ ಭೋಗಿ" ಎನ್ನುವ ಅಲ್ಲಮಪ್ರಭು, ಕಾಮನನ್ನು ಗೆದ್ದರೆ ಮಾಯೆಯನ್ನು ಗೆದ್ದಂತೆಯೇ ಸರಿ ಎನ್ನುತ್ತಾರೆ. ಗುಹೇಶ್ವರ ಲಿಂಗದ ವಿರಹದಲ್ಲಿ ಬೆಂದವರ ಮರಳಿ ಸುಡಲುಂಟೆ ಮರುಳೇ? ಎಂದಿದ್ದಾರೆ. ಅಲ್ಲಮ ಪ್ರಭುವಿನ ಅನುಭಾವ ಜ್ಞಾನ ಪೂರ್ಣವಾದದ್ದು. ಆತ ಯ್ಯೋಮ ಮೂರ್ತಿ, ಪರಿಪೂರ್ಣ ಅನುಭಾವಿ. ಕಾಮವನ್ನು ಗೆದ್ದವನು ಭಕ್ತ. ಗುರು ಕರುಣೆಯಿಂದ ದೇಹ ಶುದ್ಧ, ತನು ಶುದ್ಧ. ಇಷ್ಟಲಿಂಗ ಅನುಷ್ಠಾನದಿಂದ ಪ್ರಾಣಲಿಂಗ, ಭಾವಲಿಂಗದ ಅರಿವು. ಗುರುಲಿಂಗ ಜಂಗಮದಿಂದ ಐಕ್ಯ ಸ್ಥಳವನ್ನು ಸಾಧಿಸಬೇಕು "ಅನುಭಾವದಿಂದ ಹುಟ್ಟಿತ್ತು ಲಿಂಗ, ಅನುಭಾವದಿಂದ ಹುಟ್ಟಿತ್ತು ಜಂಗಮ, ಅನುಭಾವದಿಂದ ಹುಟ್ಟಿತ್ತು ಪ್ರಸಾದ, ಅನುಭಾವದನುವಿನಲ್ಲಿ ಗುಹೇಶ್ವರಲಿಂಗ ಅನುಪಮ ಸುಖಿ" ಎಂದಿದ್ದಾರೆ. "ನಾನೆಂಬುದು ಅಜ್ಞಾನ, ನೀನೆಂಬುದು ಮಾಯೆ, ನಾನೆನ್ನದೆ, ನೀನೆನ್ನದೆ ಬೇಕೆನ್ನದೆ, ಬೇಡವೆನ್ನದೆ, ಅಹುದೆನ್ನದೆ, ಅಲ್ಲವೆನ್ನದೆ, ತನ್ನ ತಾ ತಿಳಿದು ತಾನನ್ಯವಲ್ಲವೆಂದರಿತು ವ್ಯವಹರಿಸುವುದೇ ನಿರ್ಲಿಪ್ತತೆ. ಅದು ಪರಮ ಸುಖದ ಬೀಡು, ಅದೇ ಲಿಂಗಾನಂದ ಮುಕ್ತಿ" ಲಿಂಗ ದೇವನಲ್ಲಿ ನಿಷ್ಠೆ ಉಳ್ಳ ಭಕ್ತ ಐಕ್ಯಸ್ಥಳ ತಲುಪಿದಾಗ ಪರಮಾನಂದ. ಅಲ್ಲಿಂದ ಮುಂದೆ ಪುನರ್‌ಜನ್ಮ ಇಲ್ಲ ಎನ್ನುತ್ತಾರೆ. ಆತ್ಮ ದೇಹದಲ್ಲಿದ್ದರೂ ಅದಕ್ಕೆ ಅಂಟಿಕೊಳ್ಳದಿರುವುದೇ ಶಿವಯೋಗ. ಬಯಲಿನಲ್ಲಿ ಬಯಲಾಗುವುದನ್ನು ಸಾಧಿಸಿದ ಅಲ್ಲಮಪ್ರಭು ಬಯಲದೇಹಿಯಾದ, ಬಯಲ ಜೀವನ, ಬಯಲ ಭಾವನೇ, ಆತನಲ್ಲಿ ಅಳವಟ್ಟವು ಬಯಲಿನೊಳಗೆ ಬಯಲಾಗುವ ರಹಸ್ಯವನ್ನು ಅರಿತು, ಭೋದಿಸಿದ ಪ್ರಭುದೇವರು ತತ್ವ ಪ್ರಸಾರ ಮಾಡುತ್ತಾ ಜಂಗಮವಾಗಿ ಸುಳಿದಾಡಿದರು.
"ಅರಿದೆನೆಂಬುದು ತಾ ಬಯಲು, ಅರಿಯೆನೆಂಬುದು ತಾ ಬಯಲು, ಅರಿವಿನ ಕುರುಹಿನ, ಮರಹಿನೊಳಗೆ ಗುಹೇಶ್ವರನೆಂಬುದು ತಾ ಬಯಲು" ಇಂತಹ ಚಿಕ್ಕ ಪದಗಳನ್ನು ಬಳಸಿ, ಅಧ್ಯಾತ್ಮದ ಉನ್ನತ ಹಂತವನ್ನು ಪರಿಣಾಮಕಾರಿಯಾಗಿ ತಿಳಿಸುವುದು ಅಲ್ಲಮಪ್ರಭುವಿನ ವಿಶಿಷ್ಟತೆ. ನಾವಾಡುವ ಮಾತು ಹೇಗಿರಬೇಕು? ಅಲ್ಲಮ ಪ್ರಭು ನುಡಿದು ಸೂತಕಿಗಳಲ್ಲ, ಭಾವಶುದ್ಧಿಯಿಂದ ನುಡಿದುದೇ ವಚನ. ಶರಣರು ವಚನಕಾರರು, ಕವಿಗಳಲ್ಲ ಪಂಡಿತರಲ್ಲ ಅವರ ಮನದಾಳದ ಭಾವನೆಗಳು ಹರಳುಗಟ್ಟಿದಾಗ ಮೂಡಿದ ಉದ್ಗಾರಗಳೇ ವಚನಗಳಾಗಿ ಕನ್ನಡ ಭಾಷೆಯನ್ನು ಶ್ರೀಮಂತವಾಗಿಸಿವೆ ಎನ್ನುತ್ತಾರೆ ಫ.ಗು.ಹಳಕಟ್ಟಿಯವರು.

ಜಯದೇವಪ್ಪ ಜೈನಕೇರಿ
ನಂ.೮೭, ಶಾಂತಲಾ, ಕುವೆಂಪು ರಸ್ತೆ, ಶಿವಮೊಗ್ಗ-೫೭೭ ೨೦೧
ಮೊಬೈಲ್: ೯೮೮೬೩ ೭೬೭೯೫