Friday, July 22, 2011

ಜಾನಪದ: ಒಂದಿಷ್ಟು ವಿಚಾರಗಳು


ಮನುಷ್ಯ ಕಂಡುಕೊಂಡ ಭಾಷೆ ಅವನ ಸಂಸ್ಕೃತಿಯ ಶೋಧಗಳಲ್ಲಿ ಬಹುದೊಡ್ಡ ಕೊಡುಗೆಯಾಗಿದೆ. ಹೀಗೆ ಭಾಷೆಯ ಮೂಲಕ ಮತ್ತೆ ಮತ್ತೆ ಶೋಧಿಸಿಕೊಂಡಿದ್ದು ಜನಪದ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಕಟ್ಟುವ ಕೆಲಸ. ಭಾಷೆ ಹೊರ ಹೊಮ್ಮಿದ ತಕ್ಷಣ ಮೊದಲು ಸೃಷ್ಟಿಯಾದದ್ದು ಭಾವನೆಗಳ ಸಮ್ಮಿಲನ ನಂತರ ಹಾಡು, ಕಥೆ, ಗಾದೆ, ಒಗಟು, ಉಡುಪು ಹೀಗೆ ಬಾಯಿಂದ ಬಾಯಿಗೆ ಹರಿದಾಡುತ್ತಾ ಜನಪದ ಸಾಹಿತ್ಯ ನಿರ್ಮಾಣವಾಗತೊಡಗಿತು. ಮನುಷ್ಯನ ಹುಟ್ಟಿನೊಂದಿಗೆ ಅಂಟಿಕೊಂಡಿರುವ ಜನಪದ ಸಂಬಂಧವು ಹೆಚ್ಚು ಸಾಂಸ್ಕೃತಿಕವಾಗುತ್ತಾ ಸಾಗಿರುವಂಥದ್ದು. ಒಂದು ಕಾಲದಲ್ಲಿನ ಮೌಖಿಕ ಪರಂಪರೆಯು ಗಾಢವಾಗುತ್ತಾ ಉಳಿದುಕೊಂಡಿರುವ ಜನಪದವು ಇಂದು ಲಿಖಿತ ಮಾಹಿತಿಗೆ ಒಳಪಡುತ್ತಾ ಸಾಗಿದೆ. ಎಷ್ಟೆಷ್ಟು ಇಂದು ನಾವು ಲಿಖಿತದೆಡೆಗೆ ಸಂಗ್ರಹಿಸಿ-ದಾಖಲಿಸುತ್ತಿರುವೆವೋ ಅಷ್ಟಷ್ಟು ಅದು ಮೌಖಿಕತೆಯಿಂದ ದೂರವಾಗುತ್ತಿದೆ. ಹಿಡಿದಿಡುವ, ಬಂಧಿಸುವ (ಅಕ್ಷರ ಪರಂಪರೆ) ಅಂದರೆ ಬರಹದ ರೂಪಕ್ಕಿಳಿಸುವ ಹಾಗೂ ತಂತ್ರಜ್ಞಾನದ ಮೂಲಕ ದಾಖಲಿಸುವ ಪ್ರಕ್ರಿಯೆ ಹೆಚ್ಚಾದಂತೆ, ಸಹಜವಾಗಿ ನೆನಪಿಟ್ಟುಕೊಳ್ಳುವ, ಉರು ಹೊಡೆಯುವ ಕ್ರಿಯೆಗಳು ಕಡಿಮೆಯಾಗುತ್ತಿವೆಯೇನೋ...
ಕೆಲವೊಮ್ಮೆ ಆಧುನಿಕ ಮಾಹಿತಿ-ತಂತ್ರಜ್ಞಾನದ ಜೊತೆಗೆ ನಾವು ಹೆಜ್ಜೆ ಹಾಕದಿದ್ದರೆ ಅಂದರೆ ಜಾನಪದ ಸಾಹಿತ್ಯವನ್ನು ಹಿಡಿದಿಡುವ ಚೌಕಟ್ಟಿಗೆ ನಾವು ಒಳಪಡಿಸದಿದ್ದರೆ, ಈಗಿರುವಷ್ಟು ಜಾನಪದ ಸಾಹಿತ್ಯ ಮುಂದೆ ಇನ್ನಷ್ಟು ಕಣ್ಮರೆಯಾಬಹುದೇನೋ.... ಇದು ಅನಿವಾರ್ಯವಾದರೂ ಸಾಂದರ್ಭಿಕವಾದ ಆಶಯಗಳು-ಅಭಿಪ್ರಾಯಗಳು ಇದಕ್ಕೆ ಪೂರಕವಾಗಿ ಕೆಲಸ ಮಾಡುತ್ತವೆ.
ಜಾನಪದ ಕುಕ್ಷಿಯೊಳಗೆ ಸೇರದ ಯಾವ ವಿಷಯವಿಲ್ಲ. ಅದರದೇ ಆದ ಒಂದು ಲೋಕ ಸೃಷ್ಟಿಗೊಂಡಿರುವಂಥದ್ದು. ಅಲ್ಲಿ ತನ್ನದೇ ಧಾಟಿ, ಲಯ, ರೀತಿ-ನೀತಿ, ಆಕರ್ಷಣೆ, ಕೀರ್ತಿ, ಯಶಸ್ಸು, ನಂಬಿಕೆ ಮೊದಲಾದ ನೂರಾರು ಯೋಚನೆಗಳು ಪೂರಕವಾಗಿರುತ್ತವೆ. ಈವರೆಗೆ ಸಂಗ್ರಹಿಸಿರುವ ಜಾನಪದದ ವಸ್ತು ವಿಷಯಗಳು ಅಗಾಧವಾಗಿದ್ದರೂ ಇನ್ನೂ ಶೋಧಿಸುವ-ಸಂಶೋಧಿಸುವ ಮಹತ್ವದ ಕೆಲಸ ನಡೆಯಬೇಕಿದೆ. ಐತಿಹಾಸಿಕ, ಪುರಾಣ, ಪುರಾತತ್ವ, ಶಾಸನ, ಹಸ್ತಪ್ರತಿ ಮೊದಲಾದವುಗಳ ಸಂಶೋಧನೆಯಷ್ಟೇ ಮಹತ್ವವಾದದ್ದು ಮೌಖಿಕ ಪರಂಪರೆಯುಳ್ಳ ಜಾನಪದ ಎಂಬುದನ್ನು ಅತ್ಯಂತ ವಸ್ತುನಿಷ್ಟವಾಗಿ ಹೇಳಬಹುದು.
ಬಹುಶಃ ಜಾನಪದದಷ್ಟು ವಿಶಾಲ, ವ್ಯಾಪಕ, ನಿರಾಳವಾದುದು ಬೇರೆ ಯಾವುದಿಲ್ಲ. ಬೀಜದಲ್ಲಿ ವೃಕ್ಷ ಅಡಗಿರುವಂತೆ ಜಾನಪದದಲ್ಲಿ ಏನೆಲ್ಲಾ ಅಡಗಿದೆ. ಹೀಗಾಗಿ ಜಾನಪದಕ್ಕೆ ಆದಿ-ಅಂತ್ಯವಿಲ್ಲವೆಂದು ಹೇಳಬಹುದು. ಇದು ಎಲ್ಲ ಕಲೆ-ಸಾಹಿತ್ಯಕ್ಕೆ ತಾಯಿಬೇರು ಮತ್ತು ಗುರುಸ್ಥಾನವನ್ನು ಹೊಂದಿರುವಂಥದ್ದು. ಆದಿ ಮಾನವನ ಅಥವಾ ಮಾನವ ಸೃಷ್ಟಿಯಾದಂದಿನಿಂದ ಜಾನಪದವು ಆರಂಭಗೊಂಡಿರುವ ಮಾತು ಸತ್ಯವಾದುದೆ. ನಂತರ ನಾಗರಿಕತೆ ಬೆಳೆದಂತೆಲ್ಲ ಅದಕ್ಕೆ ಜಾನಪದವು ಆರಾಧ್ಯ ದೇವರಾಗಿಯೇ ಬೆಳೆಯುತ್ತಲಿದೆ. ಅಂದರೆ ನೆಲದೊಳಗೆ ಬೀಜ ಬಿತ್ತನೆಯ ನಂತರ ಅದು ಮಣ್ಣೊಳಗಿನ ಸಾರ ಹೀರಿಕೊಂಡು ಸಂಸ್ಕಾರ ಪಡೆದು ಸಸಿಯಾಗಿ, ಗಿಡವಾಗಿ, ಮರವಾಗಿ ಬೆಳೆದು ನಿಂತು ಮತ್ತೆ ತನ್ನೊಡಲಿನಿಂದ ಮತ್ತೊಂದು ಬೀಜದ ನಿರ್ಮಾಣಕ್ಕೆ ಕಾರಣವಾಗುತ್ತದೆ. ಅದೇ ರೀತಿ ಜಾನಪದವು ಹೊಸತನಕ್ಕೆ ತನ್ನ ಆಯಾಮಗಳೊಡನೆ ಹೊಸ ಹೊಸ ಅರ್ಥಗಳನ್ನು ಕೊಡುತ್ತಾ ತುತ್ತ ತುದಿಗೇರಿ ಮತ್ತೆ ಮೂಲ ಸ್ಥಾನಕ್ಕೆ ಮರಳುತ್ತದೆ. ಒಂದೆಡೆ ವಿಕಾಸದ ಪ್ರಕ್ರಿಯೆಯ ಮೂಲಕ ಮತ್ತೊಂದೆಡೆಯಲ್ಲಿ ಮುಕ್ತಾಯದ ಸ್ಥಿತಿಗೆ ಮುಖ ಮಾಡಿರುತ್ತದೆ.
"ಜಾನಪದದ ವ್ಯಾಪ್ತಿಯೊಳಗೆ ಸೇರದ ಜಾಗತಿಕ ಸಂಗತಿಗಳೇ ಇಲ್ಲ. ಕಣ್ಣಿಗೆ ಕಾಣುವ, ಕಿವಿಗೆ ಕೇಳುವ, ಮನಸ್ಸಿಗೆ ಸ್ಪಂದಿಸುವ, ಭಾವನೆಗಳಿಗೆ ಅಭಿವ್ಯಕ್ತಿಸುವ, ಒಟ್ಟು ಸಂಗತಿಗಳ ಮೊತ್ತವನ್ನು ಜಾನಪದ ಸಂಸ್ಕೃತಿಯೆಂದು ಕರೆಯುತ್ತೇವೆ". ಇಂತಹ ಒಂದು ಅಭಿವ್ಯಕ್ತಿ ಸಾಮಾನ್ಯ ಜನರಿಂದ ನಿರ್ಮಾಣಗೊಂಡಿದ್ದು. ಅಂದರೆ ಸಾಮಾನ್ಯ ವರ್ಗ ಈ ಭೂಮಿಯ ಮೇಲೆ ಇರುವವರೆಗೂ ಅಥವಾ ಸೃಷ್ಟಿ ಇರುವವರೆಗೂ ಒಂದಲ್ಲ ಒಂದು ರೀತಿಯಲ್ಲಿ (ಹಾಡು, ಕಥೆ, ಕಲೆ ಇತ್ಯಾದಿಗಳ ಮೂಲ) ಇದು ಪ್ರಕೃತಿಯಂತೆ ತಾನೇತಾನಾಗಿ ಬೆಳೆಯುಂಥಾದ್ದು. ಪ್ರತಿಯೊಂದರ ಮೂಲ ಸಂಸ್ಕೃತಿಯ ಬೇರನ್ನು ಗುರುತಿಸಬೇಕಾದರೆ ಎಲ್ಲರೂ ಜಾನಪದಕ್ಕೆ ಶರಣು ಹೋಗಲೇಬೇಕು. ಆಧುನಿಕತೆಯನ್ನು ಅರಿಯಬೇಕಾದರೆ, ವಿಶಿಷ್ಟಗೊಳಿಸಬೇಕಾದರೆ ಅದಕ್ಕೆ ಹೊಸ ತಿರುವು ನೀಡಬೇಕಾದರೆ ಜಾನಪದದ ಸಹಾಯ ಪಡೆಯಬೇಕು.
* * *
ಜಾನಪದ ಸಾಹಿತ್ಯವು ಸಮೂಹ ದೃಷ್ಟಿಯಾಗಿದ್ದು, ಕೆಲವೊಮ್ಮೆ ಏಕ ವ್ಯಕ್ತಿಯ ಅನುಭವವು ಮಾತಿನ ಮೂಲಕ ಹೊರ ಹೊಮ್ಮಿದಾಗ ಅಂದರೆ ಭಾವನಾಪೂರ್ವಕವಾಗಿ ಹೊರ ಹೊಮ್ಮಿದಾಗ ಹೊಸ ಆಲೋಚನೆ ಬರಬಹುದು. ’ಜನಪದವು’ ಎಂದಿಗೂ ಮರಣ ಹೊಂದದೇ ತನ್ನ ಜೀವಂತಿಕೆಯ ಅವಸ್ಥೆಯಿಂದಲೇ ಮತ್ತೆ ಮತ್ತೆ ಭಿನ್ನರೂಪಗಳನ್ನು ಪಡೆಯುತ್ತದೆ. ಬೇಂದ್ರೆಯವರ ಕಾವ್ಯದಂತೆ "ನಿದ್ದೆಗೊಮ್ಮೆ ನಿತ್ಯ ಮರಣ, ಎದ್ದ ಸಲ ನವೀನ ಜನನ" ಎಂಬುದನ್ನು ಈ ಜನಪದಕ್ಕೂ ಅರ್ಥೈಸಿಕೊಳ್ಳಬಹುದು. ಪ್ರತಿಬಾರಿಯೂ ಪ್ರಯೋಗತೆಯ ಸಂದರ್ಭದಲ್ಲಿ ಕಾಲ, ಸ್ಥಳ, ಸಮಯ, ಪ್ರಾದೇಶಿಕತೆಯ ನೆಲೆಗಳಲ್ಲಿ ವಿಶಿಷ್ಟ ಹಾಗೂ ವಿಶೇಷವಾಗಿ ಈ ಜನಪದವು ಕಾಣಿಸಿಕೊಳ್ಳುತ್ತದೆ. ಜನಪದವು ಯಾವುದೇ ಉದ್ದೇಶಪೂರ್ವಕವಾಗಿ ಹುಟ್ಟಿದ್ದಲ್ಲ, ಓಲೈಸುವುದಕ್ಕೆ ಹೊರ ಹೊಮ್ಮಿದ್ದಲ್ಲ. ಜಾನಪದವನ್ನು ಕುರಿತಂತೆ ಕವಿರಾಜಮಾರ್ಗಕಾರ ಮನದುಂಬಿ ಮಾತಾಡಿದ್ದಾನೆ.
ಪದನರಿದು ನುಡಿಯಲುಂ ನುಡಿ
ದುದನರಿದಾರಯಲು ಮಾರ್ಪರಾ ನಾಡವರ್ಗಳ್
ಚುದುರರ್ ನಿಜದಾ ಕುರಿತೋ
ದದೆಯುಂ ಕಾವ್ಯ ಪ್ರಯೋಗ ಪರಿಣತಿ ಮತಿಗಳ್
ತನ್ನ ಕಾಲದ ಜನರ ಮನಸ್ಥಿತಿ-ಗತಿಗಳ ಬಗ್ಗೆ, ಅವರಲ್ಲಿದ್ದ ಕಾವ್ಯ ಪ್ರಯೋಗತೆಯ ಬಗ್ಗೆ ಕವಿರಾಜಮಾರ್ಗಕಾರ ಅಭಿಮಾನದಿಂದ ಹೇಳಿದ್ದಾನೆ. ಅಂದರೆ ಅಕ್ಷರಜ್ಞಾನವಿಲ್ಲದೇ ತಮ್ಮದೇ ಸಾಂಸ್ಕೃತಿಕ ನೆಲೆಯಲ್ಲಿ ಬುದ್ಧಿಪೂರ್ವಕವಾಗಿ ಆಚಾರ-ವಿಚಾರಗಳ ಮೂಲಕ ಕಾವ್ಯ ಕಟ್ಟಬಲ್ಲ ಶಕ್ತಿ ನಮ್ಮ ಜನಪದರಿಗೆ ಇದೆ. ಅಕ್ಷರ ಬಲ್ಲ ವಿದ್ಯಾವಂತರ ಸಾಹಿತ್ಯ ಸೃಷ್ಟಿಯೇ ಅಪ್ಪಟ ಸತ್ಯ ಸಂಗತಿಯಲ್ಲ. ಅದೇ ರೀತಿ ನಿರಕ್ಷರಿಗಳ ಸೃಷ್ಟಿಯ ಸಾಹಿತ್ಯವೂ ಸಹ ಅಪ್ಪಟ ಸುಳ್ಳಿನ ಸಂಗತಿಯಲ್ಲ. ವಾಸ್ತವಾಂಶದ ಆಚಾರ-ವಿಚಾರ ಅರಿವು ಅವರವರ ಭಾವನೆಗಳಿಗೆ ಬಿಟ್ಟದ್ದು.
ಕೆಲವರ ಪ್ರಕಾರ ಭಾರತೀಯ ಸಂಸ್ಕೃತಿಯೆಂದರೆ ಅದು ವೈದಿಕ ಸಂಸ್ಕೃತಿ ಎಂದಷ್ಟೇ ಭಾವಿಸಿಕೊಂಡಿದ್ದಾರೆ. ಅದರಾಚೆಗೆ ಬಹು ವಿಸ್ತಾರವಾಗಿ ತನ್ನ ಶಕ್ತಿ-ಸಾಮಾರ್ಥ್ಯಗಳನ್ನು ಗುರುತಿಸಿಕೊಂಡು ಅಗಾಧವಾಗಿರುವುದು ಈ ಜನಪದ ಸಂಸ್ಕೃತಿಯೂ ಸಹ. ಸಂಸ್ಕೃತಿಯೆಂಬುದು ಬಹು ಅಮೂಲ್ಯವಾದದ್ದು ಅದು ಕೇವಲ ಗ್ರಂಥಸ್ಥ ರಚನೆಯಾಗಿರಬೇಕಿಲ್ಲ. ವಾಚಿಕ ಪರಂಪರೆಯಲ್ಲೂ ಅದನ್ನು ತೂಕಬದ್ಧವಾಗಿ ಅನ್ವಯಿಸಬಹುದು. ಈ ವಾಚಿಕ ಪರಂಪರೆಯನ್ನು ಅರ್ಥೈಸಿಕೊಳ್ಳಲಾರದ ಮತ್ತು ಗ್ರಂಥಸ್ಥ ಸಂಸ್ಕೃತಿಯೇ ಶ್ರೇಷ್ಠವೆಂದೂ ಅದು ಸಾಮಾನ್ಯರು ಅವಲೋಕಿಸಲು ಅಸಾಧ್ಯವೆಂದೂ ಅಂದರೆ ಕವಿರಾಜಮಾನರ್ಗಕಾರನಿಗೆ ತದ್ವಿರುದ್ಧವಾಗಿ ಜನಪದ ಸಾಹಿತ್ಯವನ್ನು ಕುರಿತು ಕೆಲ ವಿದ್ಯಾವಂತರು/ಪಂಡಿತರು ಅದನ್ನು ’ನಿರಕ್ಷರ ಕುಕ್ಷಿಗಳ ಸಾಹಿತ್ಯವೆಂದು ಹೀಗಳೆದದ್ದುಂಟು. ಈ ಸಂದರ್ಭದಲ್ಲಿ ಮಧುರನ ಪದ್ಯವೊಂದು ನೆನಪಾಗುತ್ತದೆ:
ಪಂಡಿತರುಂ ವಿವಿಧ ಕಳಾ
ಮಂಡಿತರುಂ ಕೇಳತಕ್ಕ ಕೃತಿಯಂ ಕ್ಷಿತಿಯೊಳ್
ಕಂಡರ್ ಕೇಳ್ವೊಡೆ ಗೊರವರ
ದುಂಡಿಚೆಯೇ ಬೀದಿವರೆಯೇ ಬೀರನ ಕಥೆಯೇ
(ಧರ್ಮನಾಥಪುರಾಣ)
ಎಂದು ಮಧುರ ಪ್ರಶ್ನಿಸಿದ್ದಾನೆ. ಮಾರ್ಗ ಕವಿಯಾದ ಈತ ದೇಶಿಯತೆಯನ್ನು ತನಗೆ ತಾನೇ ತಿಳಿಯದೇ ಹೀಯ್ಯಾಳಿಸಿದ್ದಾನೆ. ಅಂದರೆ ಮಾರ್ಗದ ಮಹತ್ವದ ಬಗ್ಗೆ ಹೇಳುವುದರ ಮೂಲಕ ದೇಸಿಯತೆಯೆಂಬುದು ಕೇವಲ, ಅಲ್ಪ, ಸಾಮಾನ್ಯ, ತೀರ, ಸಹಜ ವ್ಯಾಮೋಹದ ಭರದಲ್ಲಿ ಜನಪದವನ್ನು ತೆಗಳಿರುವುದರಲ್ಲಿ ತನಗೆ ತಾನೇ ಎಡವಿದ್ದಾನೆ. (ಆಕಾಶಕ್ಕೆ ಉಗುಳಿದರೆ ಅದು ಮತ್ತೆ ಮುಖದ ಮೇಲೆಯೇ ಬೀಳುತ್ತದೆಯಲ್ಲವೇ!?) ಯಾವುದೇ ಉತ್ತಮ ಸಾಹಿತ್ಯವಿರಲಿ, ಅದಕ್ಕೆ ಅದರದೇ ನೆಲೆ ಬೆಲೆಗಳಿರುತ್ತವೆ. ಅತ್ಯಂತ ವಿಶಿಷ್ಟ ಮಾನ-ಸನ್ಮಾನಗಳೂ ಒಳಗೊಂಡಿರುತ್ತವೆ. ಇದಕ್ಕೆ ಜನಪದವೂ ಹೊರತಲ್ಲವೆಂಬುದನ್ನು ಮರೆಯಬಾರದು.
ಜನಪದ ಸಾಹಿತ್ಯವು ಈ ನೆಲಕ್ಕೆ ಈ ಬದುಕಿಗೆ ನೇರವಾಗಿ ಸಂಬಂಧಿಸಿದ್ದಾಗಿದೆ. ಅದರಲ್ಲಿನ ಸುಖ-ದುಃಖಗಳಾಗಲಿ, ಅರಿವು-ಆಚಾರಗಳಾಗಲಿ, ನಂಬಿಕೆ-ಸಂಪ್ರದಾಯಗಳಾಗಲಿ, ಜನಸಾಮಾನ್ಯರ ತಿಳಿವಳಿಕೆಯ ಪ್ರಭಾವಗಳಾಗಿವೆ. ದೈನಂದಿನ ಬದುಕು, ಹಾಡು-ಪಾಡುಗಳನ್ನು ಮಾನವೀಯ ಸಂಬಂಧಗಳನ್ನು, ಪಶು-ಪಕ್ಷಿ, ಮರ-ಗಿಡ, ಬಳ್ಳಿ-ಬೆಳೆಗಳ ಕುರಿತು ಸಮೃದ್ಧವಾಗಿ ಅವಿನಾಭಾವದ ಮೂಲಕ ಲೀಲಾಜಾಲವಾಗಿ ಅಭಿವ್ಯಕ್ತಿಸಿದ ಸಾಹಿತ್ಯ ಇದಾಗಿದೆ. ಜೀವಪರವಾದುದನ್ನು ಒಪ್ಪಿಕೊಂಡು, ಇಲ್ಲದುದನ್ನು ಒಪ್ಪಿಕೊಳ್ಳದೇ ಬದುಕುವ ಸಂತೃಪ್ತಿ, ಅಂದರೆ ಇದ್ದುದರಲ್ಲಿಯೇ ಅನುಸರಿಸುವ ಜಾಯಮಾನ ಹಾಗೂ ಪ್ರೀತಿ-ವಿಶ್ವಾಸಗಳು ಇಲ್ಲಿ ಯಥೇಚ್ಛವಾಗಿದೆ. ಈಚಿನ ದಿನಮಾನಗಳಲ್ಲಿ ಅಕ್ಷರಸ್ಥ ಪರಂಪರೆಯಿಂದ ವಂಚನೆಗೀಡಾದುದರ ಪರಿಣಾಮವಾಗಿ ಜನಪದ ಸಂಸ್ಕೃತಿಯನ್ನು ಅದರದೇ ಆದ ನೆಲೆ-ಬೆಲೆಯಲ್ಲಿ ಮತ್ತೆ ಕಾಪಾಡುವ ಮನೋವೃತ್ತಿ ನಮ್ಮದಾಗಬೇಕಿದೆ.
ಈ ನಾಡಿನ ಸಂಸ್ಕೃತಿಯೂ ಯಾವ ವಲಯಕ್ಕೂ ಸೈ ಎನಿಸಿಕೊಳ್ಳುವ ಸರಳತೆಯ ಅಡಿಪಾಯ ಜಾನಪದದ ಮೇಲೆ ನಿಂತಿದೆ. ಜೀವನೋಪಾಯಕ್ಕಾಗಿ ಸರಳತೆಯ ಅಡಿಪಾಯ ಜಾನಪದದ ಮೇಲೆ ನಿಂತಿದೆ. ಜೀವನೋಪಾಯಕ್ಕಾಗಿ ಮೂಲ ಕಸುಬು ಕೃಷಿ ಮತ್ತು ಪಶುಪಾಲನೆಯಲ್ಲಿರುವ ಅನನ್ಯ ಸಂಬಂಧ ನಿಜಕ್ಕೂ ಅನುಪಮವಾದುದು. ಜಾನಪದದ ನಡೆ-ನುಡಿಗಳಲ್ಲಿ ಸದಾಕಾಲ ಪಾರದರ್ಶಕತೆಯಿರುವುದರಿಂದ ಅಲ್ಲಿ ಕವಿ ಕೃತಿಗಳ ಮಧ್ಯೆ ಅಂತರ ಕಡಿಮೆ. ಅಲ್ಲದೆ ಕೃತಕತೆ ಕಿಂಚಿತ್ತೂ ಇರುವುದಿಲ್ಲ. ಆದರೆ ಶಿಷ್ಟ ಪದರಿನಲ್ಲಿ ತಾರತಮ್ಯಗಳೇ ಅಧಿಕ. ಈ ಕಾರಣಗಳಿಂದ ಜನಪದರ ಬದುಕು ಇಲ್ಲಿ ಕೇವಲ (ಶಿಷ್ಟರಲ್ಲಿ) ಆಯ್ದುಕೊಂಡ ಬದುಕು ನಾಟಕೀಯ ಸಾಲಂಕೃತ ರಚನೆಯಾಗಿ ಹರಳುಗಟ್ಟುತ್ತದೆಯಷ್ಟೇ. ಜನಪದರು ತುಂಬು ಜೀವನವನ್ನೂ ತಾವರಿತುಕೊಂಡ ಅನುಭವಗಳನ್ನು ಮೌಖಿಕ ರಚನಾ ಸಾಹಿತ್ಯ ರಚನಾ ಶಿಲ್ಪದಲ್ಲಿ ಮುಗಿಸುತ್ತಾರೆ ಹಾಗೆಯೇ ಮುಂದುವರೆಸಿರುತ್ತಾರೆ. ಹೀಗಾಗಿ ಒಂದು ಬಗೆಯ ಅನಾವರಣದ ಸ್ಥಿತಿಯಲ್ಲಿಯೇ ಜನಪದರ ಆಶಯಗಳು ಸಾಹಿತ್ಯದಲ್ಲಿ ತಲೆಯೆತ್ತುತ್ತವೆ. ಅಂದರೆ ಸೌಂದರ್ಯಕ್ಕಿಂತ ಸಂದೇಶ, ಬಾಹ್ಯವೇಶಕ್ಕಿಂತ ಭಾವಕೋಶಕ್ಕೆ ಪ್ರಾಧಾನ್ಯತೆ ಹೆಚ್ಚು ಕಂಡುಬರುತ್ತದೆ.
ಜನಪದರು ತಮ್ಮ ಪರಿಮಿತವಾದ ಪರಿಕರಗಳಲ್ಲಿ ನಾಲಗೆಯ ಮೂಲಕ ತಕ್ಷಣ ಹುಟ್ಟುವ ಆಲೋಚನೆಗಳನ್ನು ತಕ್ಷಣ ಹೊರಹಾಕುತ್ತಾರೆ. ಶಿಷ್ಟರ ರೀತಿ-ನೀತಿಯಂತೆ ಬಹುವಾಗಿ ಯೋಚಿಸಿ ಕಾಲಹರಣದ ಪ್ರಕ್ರಿಯೆ ಮೇಲು-ಕೀಳು ಇತ್ಯಾದಿ ಮುಖಗಳು ಪ್ರಧಾನವಾಗಿ ಅಕ್ಷರ ಅವತಾರದ ಮೂಲಕ ಮೂಡಿಸಲಾಗುತ್ತದೆ. ಅಂದರೆ ಮುಚ್ಚಿದ ಬದುಕಿನ ಸೂಕ್ಷ್ಮಗಳನ್ನು ಅಭಿವ್ಯಕ್ತಿಸಿ ಅಸಹ್ಯಪಡಿಸಿದ್ದಲ್ಲದೆ ಆ ರೀತಿಯಿಂದ ಇತರರ ಮನಸ್ಸು ಅಲ್ಲೋಲ ಕಲ್ಲೋಲವಾಗಿಸಬಹುದು. ಆದರೆ ಜನಪದರಲ್ಲಿ ತಎರೆದ ಬದುಕಿನ ಸೂಕ್ಷ್ಮತೆಗಳಿದ್ದಾಗ್ಯೂ ಅವುಗಳನ್ನು ಮುಚ್ಚಿಡುತ್ತಾ ಅನಾವಶ್ಯಕ ರಂಪಾಟಗೊಳಿಸದೇ ತಮ್ಮ ಅನುಭವಕ್ಕೆ ಬಂದಿದ್ದರೂ ತಾಳ್ಮೆಯ ಸಂವೇದನೆಯ ಮೂಲಕ ಆದಷ್ಟು ಮುಚ್ಚಿಡಲು ಯತ್ನಿಸುವುದುಂಟು.
ಶಿಷ್ಟ ಅಥವಾ ಮಾರ್ಗಕಾರರು ತಮ್ಮ ಸಾಹಿತ್ಯದಲ್ಲಿ ಜೀವನ ಸಮಗ್ರತೆಗಾಗಿಯೇ ಅಥವಾ ಒತ್ತಾಯದಿಂದಲೋ, ಒತ್ತಡದಿಂದಲೋ ಅಷ್ಟಾದಶ ವರ್ಣನೆಗಳನ್ನು ತುರುಕಿದರು. ಹೀಗೆ ತಮಗೆ ತಾವೇ ಬಂಧನಕ್ಕೆ ಒಳಗಾಗಿ ವರ್ಣನೆಗಳಿಗೆ ಸೋತು ಅರ್ಥವಿಲ್ಲದೆ ಗ್ರಂಥಭಾರವಾಗಿಸಿದ್ದುಂಟು. ಆದರೆ ಇದಕ್ಕೆ ವಿರುದ್ಧವಾಗಿ ಜನಪದರು ಯಾವುದೇ ವಿಚಾರವನ್ನು ಒತ್ತಡಗಳಿಲ್ಲದೇ ಸಹಜವಾಗಿ ಪ್ರತಿಕ್ರಿಯಿಸುತ್ತಾ ಅದನ್ನು ಎಲ್ಲರೂ ತಲೆದೂಗುವಂತೆ ವರ್ಣಿಸುತ್ತಾ ಬಂದಿರುವಂಥದ್ದಾಗಿದೆ.
ಜನಪದರ ಜೀವನವೇ ಪ್ರಯೋಗಶೀಲವಾದುದು. ಅವರು ಏಕಕಾಲದಲ್ಲಿ ಅನೇಕ ಚಿಂತನೆಗಳ ಜೊತೆಗೆ ಒಡನಾಡಿ ಸೂಕ್ತವೆನಿಸಿದ್ದನ್ನು ಆಯ್ದುಕೊಳ್ಳುತ್ತಾರೆ. ಇಂತಹ ಸಂದರ್ಭದಲ್ಲಿ ಅವರ ಕ್ರಿಯಾ ಚಟುವಟಿಕೆಗಳು ಅವಸರದ್ದಾಗಿರುವುದಿಲ್ಲ. ’ಪ್ರತ್ಯಕ್ಷ ಮತ್ತು ಪರೋಕ್ಷ ಅಥವಾ ಪ್ರಮಾಣ’ ಎಂಬ ನಿಯಮಗಳೆಲ್ಲ ಬಹಳ ಅರ್ಥವತ್ತಾಗಿ ತೀರ್ಮಾನಗೊಳ್ಳುವಂಥದ್ದು. ಈಚೆಗೆ ಯಾಂತ್ರಿಕ ಜಗತ್ತಿನ ಪರಿಣಾಮವಾಗಿ ಮತ್ತು ಈ ವಿಜ್ಞಾನ ಚಿಂತನೆಯಲ್ಲಿ ಜನಪದರ ಬದುಕು ಕಾರಣಾಂತರಗಳಿಂದ ಅಯೋಮಯವಾಗುತ್ತಿರುವುದು.
ನಮ್ಮ ಪಾರಂಪರಿಕ ಜ್ಞಾನ ಮತ್ತು ಅನುಭವಗಳು ಪ್ರಯೋಗದಿಂದ ಪ್ರಾಪ್ತವಾಗುವುದುಂಟು. ಹಾಗೆಯೇ ಅನುಭವವೆಂಬುದು ಗ್ರಹಿಕೆಯಿಂದ, ಅನುಸರಣೆಯಿಂದ ಸಿದ್ಧವಾಗುತ್ತಿದೆ. ಇದಕ್ಕೆ ನಮ್ಮ ಜಾನಪದವೂ ಅಥವಾ ಜನಪದರೂ ಹೊರತಲ್ಲ. "ಆಹಾರ ಮತ್ತು ಔಷಧ ಪದ್ಧತಿಗಳು ಅನುಭವದಿಂದ ಸಿದ್ಧವಾದವು ಎಂದಾಗ ಅವು ನಿರಂತರ ಪ್ರಯೋಗಾತ್ಮಕದಿಂದ ಬಳಕೆಗೆ ಬಂದಿವೆ. ಜನಪದ ವಸತಿ, ಉಡುಪು, ಪಾತ್ರೆ, ವ್ಯವಸಾಯ, ಉಪಕರಣಗಳು, ಮಳೆ, ಭೂಮಿ, ವಾತಾವರಣ, ಸಂರಕ್ಷಣೆ, ಬೇಟೆ ಪರೀಕ್ಷೆ, ಪರಿವರ್ತನೆ, ಪ್ರಾಣಿ ಪಳಗಿಸುವಿಕೆ, ಸಸ್ಯ-ಇವೆಲ್ಲಾ ಜನಪದ ವಿಜ್ಞಾನದ ಪರಿಮಿತಿಯಲ್ಲಿ ಸೇರಿರುವುದಲ್ಲದೆ, ನಿರಂತರ ಪ್ರಯೋಗದಿಂದ ಒಪ್ಪಿತವಾದವುಗಳು". ಹರಿಯುವ ನೀರಿಗೆ ಅಣೆಕಟ್ಟು ನಿರ್ಮಿಸಿ ಅದನ್ನು ವಿವಿಧ ಉದ್ದೇಶಗಳಿಗೆ ಬಳಕೆ ಮಾಡುವಂತೆ, ವಾತಾವರಣದಲ್ಲಿ ಸಹಜವಾಗಿ ಅರಿವಿನಿಂದ ಅನುಭವಕ್ಕೆ ಬರುವ ವಿಚಾರಗಳನ್ನು ಜನಪದ ಸಂಸ್ಕೃತಿಯ ಮೂಲಕ ಪ್ರವಹಿಸುವಂತೆ ಅದು ನೋಡಿಕೊಳ್ಳುವುದು.
ವಿಜ್ಞಾನ ಬೆಳೆಬೆಳೆದಂತೆ ಅದರ ಜ್ಞಾನದ ಹರವು, ಜಾತಿ, ವರ್ಗ, ಪಂಗಡ, ಧರ್ಮರಹಿತವಾಗಿ ಎಲ್ಲರಿಗೂ ಅದು ತಲುಪುವಂತಾಯಿತು. ಇದರ ಮೂಲೋದ್ದೇಶ ಆಧುನಿಕತೆಯ ಮಂತ್ರವಾಗಿರಬಹುದು. ಹೊಸ ಶೋಧನೆಯ ಪ್ರಭುತ್ವವಾಗಿರಬಹುದು. ಆದರೆ ಅದರ ಆವಿಷ್ಕಾರವು ಮುನ್ನಡೆದಂತೆ, ಕುಶಲಕರ್ಮಿಗಳ ರಚನಾತ್ಮಕ ಮನಸ್ಸುಗಳಿಗೆ ಬೆಲೆ ಕಡಿಮೆಯಾಗುತ್ತಾ ಸಾಗಿದ್ದು, ಬಹುಜನರ ಸೃಜನಶೀಲತೆಯ ಚೌಕಟ್ಟನ್ನು ಆಧುನಿಕತೆಯ ಹೆಸರಿನಲ್ಲಿ ತಟಸ್ಥಗೊಳಿಸಿದ್ದು. ಸ್ಥಳೀಯ ಕೈಗಾರಿಕೆ, ಉತ್ಪಾದನೆ, ಕಾರ್ಮಿಕವರ್ಗ ಮತ್ತು ಮಾರುಕಟ್ಟೆಗಳೆಲ್ಲಾ ಜಾಗತಿಕರಣದ ಹಿನ್ನೆಲೆಯಲ್ಲಿ ಮೂಲೆಗುಂಪಾಗತೊಡಗಿವೆ. ಹಾಗೆಯೇ ವಸಾಹತೀಕರಣ ಉದಾರೀಕರಣದ ಧೋರಣೆಗಳಲ್ಲಿ ನಮ್ಮತನದ ಜ್ಞಾನಕ್ಕೆ ಸ್ಪಂದನೆ ಕಡಿಮೆಯಾಗುತ್ತಿದೆ. ಜಾನಪದದ ತಳಪಾಯಕ್ಕೆ ಜಾಗತೀಕರಣವು ಹೇಗೆ ನುಗ್ಗುತ್ತಿದೆ ಎಂದರೆ ಆಸೆ-ಆಮಿಷಗಳನ್ನು ತೋರುವುದರ ಮೂಲಕ, ಮನಸ್ಸನ್ನು ಛಿದ್ರಗೊಳಿಸಿ ಸಂಮ್ಮೋಹನಗೊಳಿಸುವುದರ ಮೂಲಕ ಉದಾಹರಣೆಗೆ ಹಳ್ಳಿಯ ಜನರಲ್ಲಿ ತಮಗೆ ಬೇಡವಾದ ವಸ್ತುಗಳನ್ನು ಸಂಗ್ರಹಿಸಿಡುವ ಮನೋಭಾವವಿರುವುದುಂಟು. ಇದನ್ನರಿತ ನಗರ ಪ್ರದೇಶದ ಜನರು ಅವರಿಗೆ ಕೊಬ್ಬರಿ ಮಿಠಾಯಿಯ ಹೊಸ ರುಚಿಯನ್ನು ತೋರಿಸಿ ಆ ಹಳೆಯ ವಸ್ತುಗಳನ್ನು ದಕ್ಕಿಸಿಕೊಳ್ಳುತ್ತಾರೆ. ನಂತರ ಸ್ವಲ್ಪ ಉಪಯುಕ್ತವೆನ್ನಬಹುದಾದ ವಸ್ತುಗಳಿಗೂ ಹೆಚ್ಚು ಮಿಠಾಯಿಯನ್ನು ಕೊಡುವುದರ ಮೂಲಕ ಅವುಗಳನ್ನೂ ಲಪಟಾಯಿಸುವುದುಂಟು. ಹಳ್ಳಿಗರಿಂದ ಪಡೆದುಕೊಂಡ ಕಚ್ಛಾ ವಸ್ತುಗಳಿಗೆ ಬಹು ಬುದ್ಧಿವಂತಿಕೆಯಿಂದ ನಾನಾ ರೀತಿಯ ಆಕಾರಗೊಳಿಸಿ, ರೂಪ ನೀಡಿ, ಬಣ್ಣ ಹಚ್ಚಿ ಮತ್ತೆ ಅದೇ ಹಳ್ಳಿಗರಿಗೆ ಹಣಕ್ಕೆ ಮಾರಾಟ ಮಾಡುತ್ತಾರೆ. ಇದು ಸಣ್ಣ ಪ್ರಮಾಣದಲ್ಲಿ ಸ್ಥಳೀಯವಾಗಿ ಕಂಡು ಬಂದರೆ ಈ ರೀತಿ ಕೆಲ ಅಭಿವೃದ್ಧಿ ಹೊಂದಿದ ದೇಶಗಳು ಅಭಿವೃದ್ಧಿ ಹೊಂದುತ್ತಿರುವ ಅಥವಾ ಅಧಿಕ ಸಂಪತ್ತಿನ ದೇಶಗಳಾಗಿರುವ ಪ್ರದೇಶದಲ್ಲಿ ನಾನಾ ವಿಧದ ಕಾರ್ಖಾನೆಗಳನ್ನು ಸ್ಥಾಪಿಸುತ್ತವೆ.
ನಮ್ಮಲ್ಲಿರುವ ಅಗಾಧವಾದ ಪ್ರಾಕೃತಿಕ ಸಂಪತ್ತಿಗೆ ಮುಂದುವರೆದ ರಾಷ್ಟ್ರಗಳು ತಮ್ಮ ಆಸೆಯ ಕಂಗಳನ್ನು ತೆರೆದಿಟ್ಟಿದ್ದಾರೆ. ಉದ್ಯೋಗ ಮತ್ತು ಹಣದ ಬಲೆಯ ಬೀಸಿ ನಮ್ಮ ಸಂಪತ್ತನ್ನು ನಮ್ಮಲ್ಲೇ ಕರಗಿಸಿ ಅದರಲ್ಲಿನ ಕೇವಲ ಇಪ್ಪತ್ತು ಭಾಗವನ್ನು ನಮ್ಮವರಿಗೆ ಕೊಟ್ಟಂತೆ ಮಾಡಿ, ಇನ್ನುಳಿದ ಎಂಭತ್ತು ಭಾಗವನ್ನು ತಮ್ಮ ಐಷರಾಮಿ ಭೋಗಕ್ಕಾಗಿ ಬಳಸಿಕೊಳ್ಳುತ್ತೇವೆ. ಇದರಿಂದ ಸ್ಥಳೀಯ ಜನಪದರ ಬದುಕು ದಿನದಿನಕ್ಕೂ ಕಂಗಾಲಾಗಿರುವುದುಂಟು ಅಲ್ಲದೆ ಅವರ ನೆಲ-ಜಲಕ್ಕೂ ತೀರಾ ಸಂಚಕಾರ ಬಂದೊದಗಿದೆ.
ಜಾಗತೀಕರಣದ ವೈಪರೀತ್ಯದಿಂದ ಜನಪದರ ಜೀವನ ಇಂದು ನಿಜಕ್ಕೂ ನೆಲಕಚ್ಚಿದೆ. ಈಗ ಏನಿದ್ದರೂ ಮೊದಲು ಮನುಷ್ಯನೆನಸಿಕೊಳ್ಳಬೇಕಾದರೆ ಆಚಾರ-ವಿಚಾರ, ನಂಬಿಕೆ, ಪ್ರೀತಿ ಮೊದಲಾದವುಗಳು ಬೇಡವಾಗಿದೆ. ಕೇವಲ ಹಣದ ಗಳಿಕೆಯೊಂದೇ ವಿಪರೀತವಾಗತೊಡಗಿದೆ. ಈ ಒಂದೇ ತತ್ವ ಎಲ್ಲರಲ್ಲೂ ಭೂತದಂತೆ ಆವರಿಸಿಕೊಂಡಿರುವುದರಿಂದ ಜನರಲ್ಲಿ ಮಾನವೀಯ ಮೌಲ್ಯಗಳು ಕಣ್ಮರೆಯಾಗಿವೆ. ಕಣ್ಣಿಗೆ ಕಾಣುವ (ಮರ, ಗಿಡ, ಕಲ್ಲು, ಮಣ್ಣು ಇತ್ಯಾದಿ) ನೈಸರ್ಗಿಕ ಸಂಪತ್ತನ್ನು ಎಷ್ಟು ಸಾಧ್ಯವೋ ಅಷ್ಟು ಕೊಳ್ಳೆ ಹೊಡೆದು ಉದ್ಯಮಿಯಾಗುವುದೇ ದೊಡ್ಡ (ದಡ್ಡ) ತನವಾಗಿರುವುದು ಒಂದು ಹಂತದಲ್ಲಿ ಸಹಜತೆಯತ್ತ ಸಾಗಿದೆ.
ಅದೇ ರೀತಿ ಜನಪದ ಸಾಹಿತ್ಯವು ಜಾಗತೀಕರಣದ ಸಂದರ್ಭದಲ್ಲಿ ಅನೇಕ ಸಮಸ್ಯೆಗಳ ಸುಳಿಯಲ್ಲಿದೆ. ಇಂದು ಐದಾರು ವರುಷದ ಮಕ್ಕಳಲ್ಲಿ ಕಂಪ್ಯೂಟರ್ ಜ್ಞಾನ ಹೆಚ್ಚಾಗುತ್ತಿರುವ ಮತ್ತು ಆ ಮೂಲಕ ಅದರ ಮುಂದೆ ದಿನಪೂರ್ತಿ ಕೂತು ವೈವಿಧ್ಯಮಯವಾದ ಆಟಗಳನ್ನು ಆಡುವುದರಿಂದ ಜಾನಪದದ ವಿಷಯಗಳನ್ನು ಅವರಿಗೆ ತಿಳಿಸಿಕೊಡುವುದು ಸಾಧ್ಯವಾಗುತ್ತಿಲ್ಲ. ಪ್ರತಿ ಮನೆಗಳಲ್ಲಿ ಆಚರಣೆಗೊಳ್ಳುವ (ದೀಪಾವಳಿ, ಯುಗಾದಿ, ದಸರಾ, ಹೋಳಿ ಹುಣ್ಣಿಮೆ ಮೊದಲಾದವು) ಹಬ್ಬಗಳ ಜನಪದ ಸಂಸ್ಕೃತಿಯ ಮಹತ್ವ ಇಂದಿನ ಪೀಳಿಗೆಯವರಿಗೆ ಗೊತ್ತಿಲ್ಲ. ಇದರ ಮಹತ್ವ ತಿಳಿಸಿಕೊಡುವ ಇಂದಿನ ಹಿರಿಯರಾದವರಿಗೂ ಸರಿಯಾದ ಮನವರಿಕೆಯಿಲ್ಲ. ಅವಿಭಕ್ತ ಕುಟುಂಬಗಳೆಲ್ಲಾ ವಿಭಕ್ತಿ ಕುಟುಂಬಗಳಾಗಿರುವಾಗ, ಹೇಗಾದರೂ ಮಾಡಿ ದಉಡಿಮೆ (ಹಣಗಳಿಸುವ)ಯೊಂದೇ ಮುಖ್ಯ ಆಲೋಚನೆಯಲ್ಲಿರುವಾಗ, ತಮ್ಮ ಮಕ್ಕಳು ಕೇವಲ ಬಿಳಿ ಕಾಲರಿನ, ತಂಪು ವಾತಾವರಣದಲ್ಲಿನ ಉದ್ಯೋಗಿಗಳಾಗಿ ಬದುಕಬೇಕೆನ್ನುವಾಗ, ಮಾಧ್ಯಮಗಳ ಸಂಸ್ಕೃತಿ ದಿನದಿನಕ್ಕೂ ಆವರಿಸುತ್ತಿರುವಾಗ ಜನಪದದ ಆಚಾರ-ವಿಚಾರಗಳನ್ನು ಅರಿತುಕೊಳ್ಳುವ ಮನೋಭಿಲಾಷೆ ಇಂದು ಯಾರಲ್ಲೂ ಕಂಡುಬರುತ್ತಿಲ್ಲ.
ಹಿಂದೆ ಅವಿಭಕ್ತ ಕುಟುಂಬಗಳಲ್ಲಿ ಹಿರಿಯರಾದವರು ಕಿರಿಯರಿಗೆ ಪ್ರತಿಯೊಂದು ವಿಷಯದಲ್ಲೂ ಹೇಳುವ-ಕೇಳುವ ಸಂದರ್ಭಗಳಿದ್ದವು. ಅಲ್ಲದೆ ಹಿರಿಯರಿಗೆ ಗೌರವಭಾವನೆ ನೀಡುವುದು ಹೆಚ್ಚಾಗಿತ್ತು. ಸೌಜನ್ಯ, ಭಯ-ಭಕ್ತಿ, ನಯ-ವಿನಯಗಳನ್ನು ತೂಗಿಸಿಕೊಂಡು ಹೋಗುವ ಗುಣಾತ್ಮಕ ಅಂಶಗಳು ಕಿರಿಯರಲ್ಲಿ ಮನೆ ಮಾಡಿಕೊಂಡಿದ್ದವು. ಮನೆ ತುಂಬ ಬಂಧು-ಬಳಗವಿದ್ದಾಗ ಸಹಜವಾಗಿ ಎಲ್ಲರಲ್ಲೂ ಅಂಜಿಕೆ-ಮರ್ಯಾದೆಗಳಿರುತ್ತಿದ್ದವು. ಅನಾವಶ್ಯಕವಾಗಿ ಮನೆಯಲ್ಲಿ ಯಾರೂ ಸಹ ಗಟ್ಟಿಧ್ವನಿಯಲ್ಲಿ ಮಾತುಗಳನ್ನಾಡುತ್ತಿದ್ದಿಲ್ಲ. ಏನಾದರೂ ಅಕಸ್ಮಾತ್ತಾಗಿ ಸಲ್ಲದು ಮಾತಾಡಿದರೆ ಯಾರಾದರು ಕೇಳಿಸಿಕೊಂಡಾರೆಂಬ ಅಥವಾ ಅನ್ಯಥಾ ಭಾವಿಸಿಕೊಂಡಾರೆಂಬ ಅಳಕು ಜನಪದರನ್ನು ಎಚ್ಚರಿಸುತ್ತಿತ್ತು. ಆದರೆ ಇಂದಿನ ಪರಿಸ್ಥಿತಿ ತೀರ ಭಿನ್ನವಾಗಿ ಅಯೋಮಯವಾಗಿದೆ. ವಿಭಕ್ತಿ ಕುಟುಂಬಗಳಲ್ಲಿ ಕೇವಲ ತಂದೆ-ತಾಯಿ ಎರಡು ಮಕ್ಕಳ ಜೀವನ ಅಷ್ಟೇ. ಚಿಕ್ಕಪ್ಪ-ಚಿಕ್ಕಮ್ಮ, ದೊಡ್ಡಪ್ಪ-ದೊಡ್ಡಮ್ಮ, ಮಾವ-ಅತ್ತೆ, ತಾತ-ಅಮ್ಮ, ಅಕ್ಕ-ತಂಗಿ ಎಂಬ ಸಂಬೋಧನೆಗಳೆಲ್ಲಾ ಮಾಯವಾಗಿ ಎಲ್ಲರಲ್ಲೂ ಅಂಕಲ್-ಆಂಟಿ ಎಂಬ ಆಧುನಿಕ ಸಂಸ್ಕೃತಿ ಮೈದಾಳಿದೆ. ಎಲ್ಲರನ್ನೂ ಒಂದೇ ದೃಷ್ಟಿಯಿಂದ ನೋಡುವುದರಿಂದ ಹಿರಿಯರು-ಕಿರಿಯರೆಂಬ ಭಾವನೆ ಇಂದಿನ ಮಕ್ಕಳಲ್ಲಿ ಮೂಡಿ ಬರುತ್ತಿಲ್ಲ.
ಒಟ್ಟಾರೆ ವಿಜ್ಞಾನ-ತಂತ್ರಜ್ಞಾನದ ಹಾದಿಯಲ್ಲಿ ಹಾಗೂ ಅಭಿವೃದ್ಧಿ ಎಂಬ ಮಂತ್ರೋಚ್ಛಾರಣೆಯಲ್ಲಿಯೂ ನಾವಿಂದು ಜನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಾಗಿದೆ.


ಡಾ.ರಾಜಶೇಖರ ಜಮದಂಡಿ
ಸಾಹಿತಿ-ಚಿಂತಕ
ಚಾಮರಾಜನಗರ-೫೭೧ ೩೧೩
ದೂ: ೯೪೪೮೪೪೧೪೭೧

No comments:

Post a Comment