Friday, July 22, 2011
ಕಲಾಲೋಕಕ್ಕೆ ರೆಕ್ಕೆ-ಪುಕ್ಕ ಕಟ್ಟಿಕೊಟ್ಟ ಹುಸೇನ್
ಎಮ್. ಎಫ್. ಹುಸೇನ್ ಒಬ್ಬ ಅಪ್ಪಟ ಕಲಾವಿದ. ಇಂದು ನಮ್ಮೊಂದಿಗಿಲ್ಲ ಎಂದೆನ್ನಲು ನನಗೆ ಮನಸ್ಸಿಲ್ಲ. ಕಲಾವಿದನಿಗೆ ಎಂದೂ ಸಾವಿರುವುದಿಲ್ಲ. ಅವರು ಬಿಟ್ಟುಹೋದ ಕಲಾಕೃತಿಗಳು ನಮ್ಮೊಂದಿಗಿವೆ. ಅವು ನಮ್ಮೊಂದಿಗೆ ನಿರಂತರ ಸಂವಹನ ನಡೆಸುತ್ತಲೇ ಇರುತ್ತವೆ. ಹೀಗಾಗಿ ಕಲಾವಿದನಿಗೆ ಸಾವೆಲ್ಲಿಯದು! ದೈಹಿಕವಾದ ಒಂದು ಸಣ್ಣ ಅಗಲಿಕೆಯಷ್ಟೆ.
ಹುಸೇನ್ ಎಂದ ಕೂಡಲೇ ಎಲ್ಲರ ಕಣ್ಣೂ ಅವರ ವಿವಾದಗಳತ್ತಲೇ ಹೊರಳುತ್ತವೆ. ಸ್ವಲ್ಪ ಹೆಚ್ಚೇ ಎನಿಸುವಷ್ಟು ಸುದ್ದಿ ಮಾಡುವ ಚಪಲ ಹುಸೇನರದ್ದು. ಜೊತೆಗೆ ಅವರ ಅಪಾರವಾದ sಸೌಂದರ್ಯೋಪಾಸನಾ ಗುಣ, ಚಲನಶೀಲ ಮನೋಭಾವಗಳು ಸಾಥ್ ನೀಡಿವೆ. ಹಾಗೆ ನೋಡಿದರೆ ಕಲೆ ಇರುವುದೇ ಪ್ರದರ್ಶಕ್ಕಾಗಿ, ಆ ಕಲೆಯನ್ನು ಜನರ ಬಳಿ ಕೊಂಡೊಯ್ಯಲು ಸುದ್ದಿ ಬೇಕೇಬೇಕು. ಆದರೆ ಸುದ್ದಿಯಾಗಬಹುದಾದ ವಿಷಯಗಳ ಬೆನ್ನತ್ತಿ ವಿವಾದಗಳನ್ನು ಮೇಲೆಳೆದುಕೊಂಡರು. ಆ ಮೂಲಕ ವಿಶ್ವ ಮಾರುಕಟ್ಟೆಯಲ್ಲಿ ತಮ್ಮ ಕಲಾಕೃತಿಗಳ ಬೆಲೆ ಹೆಚ್ಚಿಸಿಕೊಂಡರು. ಇನ್ನಿತರ ಭಾರತೀಯ ಕಲಾವಿದರಿಗೂ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಎಲ್ಲಿಲ್ಲದ ಬೇಡಿಕೆ ತಂದುಕೊಟ್ಟರು.
ಎತ್ತರದ ನಿಲುವಿನ ಆಕರ್ಷಕ ಬಣ್ಣದ ಹುಸೇನ್ ರನ್ನು ನಾನು ಮೊದಲು ನೋಡಿದ್ದು ೧೯೯೩ರಲ್ಲಿ. ನಾನಾಗ ಲಂಕೇಶ್ ಪತ್ರಿಕೆಯ ಕಲಾವಿದನಾಗಿ ಕೆಲಸ ಮಾಡುತ್ತಿದ್ದೆ. ಹಿರಿಯ ಕಲಾವಿದರಾದ ವಾಸುದೇವ್, ಆರ್.ಎಂ. ಹಡಪದ್, ಶಿಣೈ, ಪ.ಸ.ಕುಮಾರ್, ಚಿ.ಸು.ಕೃಷ್ಣಶೆಟ್ಟಿ, ಜೆ.ಎಂ.ಎಸ್.ಮಣಿ, ಜಿ.ವೈ. ಹುಬ್ಳೀಕರ್, ಚಂದ್ರನಾಥ್, ಅ.ಲ.ನರಸಿಂಹನ್, ಮರಿಶಾಮಾಚಾರ್, ಎಂ.ಬಿ ಪಾಟೀಲ್, ಗುಜ್ಜಾರ್, ಎಂ.ಎಸ್.ಮೂರ್ತಿ ಮುಂತಾದವರೆಲ್ಲ ಸೇರಿ "ಕಲಾಮೇಳ-೪" ನ್ನು ಬೆಂಗಳೂರಿನ ವೆಂಕಟಪ್ಪ ಆರ್ಟ್ ಗ್ಯಾಲರಿ ಆವರಣದಲ್ಲಿ ಆಯೋಜಿಸಿದ್ದರು.
ಆ ’ಕಲಾಮೇಳ’ದ ಉದ್ಘಾಟನೆಗೆ ಹುಸೇನ್‌ರನ್ನು ಆಹ್ವಾನಿಸಲಾಗಿತ್ತು. ಕಲಾಮೇಳದಲ್ಲಿ ನಾನು ಭಾಗವಹಿಸುವುದಕ್ಕಿಂತ ಹೆಚ್ಚಾಗಿ ಹುಸೇನ್‌ರನ್ನು ನೋಡುವ ಹಂಬಲದಿಂದಾಗಿ, ಅವರು ಹೇಗೆ ಚಿತ್ರ ಬರೆಯುತ್ತಾರೆ, ಹೇಗೆ ಪೇಯಿಂಟ್ ಮಾಡುತ್ತಾರೆ, ಹೇಗೆ ಕಲಾಕೃತಿಗಳನ್ನು ರಚಿಸುತ್ತಾರೆ ಎಂದು ಖುದ್ದಾಗಿ ನೋಡುವ ಅಪಾರ ಕುತೂಹಲದಿಂದ ದೂರದ ಸವಣೂರಿನಿಂದ ಬಂದಿದ್ದೆ.
ಕಲೆಯೆಂದರೆ ಅದು ನಾಲ್ಕು ಗೋಡೆಯ ಮಧ್ಯೆ ಹುಟ್ಟುವಂಥದು ಎಂಬ ಮನೋಭಾವವಿದ್ದ ಸಂದರ್ಭದಲ್ಲಿ ಭಾರತದಾದ್ಯಂತ ಬರಿಗಾಲಲ್ಲಿ ಸಂಚರಿಸಿ ಅಲ್ಲಲ್ಲಿ ಕಲಾಕೃತಿಗಳನ್ನು ನಿರ್ಮಿಸಿ -ಪ್ರದರ್ಶಿಸಿದ ಹುಸೇನ್ ಬರಿಗಾಲ ಕಲಾವಿದರಾಗಿ ಕಲಾಲೋಕದಿಂದ ಭಿನ್ನರಾಗಿ ನಿಂತವರು. ಅವರ ’ಕುದುರೆ’ಸಿರೀಸ್ ಜಗತ್ತಿನಾದ್ಯಂತ ಪ್ರದರ್ಶಿಸಲ್ಪಟ್ಟಿತ್ತು. ಅತ್ಯಂತ ಕಡಿಮೆ ಬಣ್ಣ ಬಳಸಿ ನಿರ್ಮಿಸಿದ ಮದರ್ ಥೆರೆಸಾ ಕಲಾಕೃತಿ ಸಹೃದಯಿಗಳನ್ನು ಸೆಳೆದಿತ್ತು. ಇರಲಿ, ಇದೆಲ್ಲ ಎಲ್ಲರಿಗೂ ಗೊತ್ತಿರುವಂಥದ್ದೇ.
ಅಂಥ ಬರಿಗಾಲ ಕಲಾವಿದ ಹುಸೇನ್ ಆ ಕಲಾಮೇಳ ಉದ್ಘಾಟನೆಯನ್ನು ಪೇಂಟಿಂಗ್ ಮಾಡುವ ಮೂಲಕ ಉದ್ಘಾಟಿಸುತ್ತಾರೆ ಎಂದು ಪ್ರಚಾರವಾಗಿತ್ತು. ಉದ್ಘಾಟನಾ ಸ್ಥಳಕ್ಕೆ ಇನ್ನೇನು ಹುಸೇನ್ ಬಂದರು. ಬಂದರು ಅನ್ನುವಾಗಲೇ ಎಲ್ಲ ಕಲಾವಿದರೂ ಮೊದಲೇ ಈಸಲ್ ಮೇಲೆ ಮೊದಲೇ ಹೆದೆಏರಿಸಿ ನಿಲ್ಲಿಸಲಾಗಿದ್ದ ಕ್ಯಾನವಾಸಿನ ಸುತ್ತ ನೆರೆದರು. ಹುಸೇನ್‌ರನ್ನು ಆ ಬರಿಗಾಲ ಕಲಾವಿದ ಫಕೀರನನ್ನು ನೋಡಲು ತುದಿಗಾಲಮೇಲೆ ನಿಂತಿದ್ದ ನಾನೂ ಓಡಿ ಎಲ್ಲರ ನಡುವೆ ತೂರಿಕೊಂಡು ಎಲ್ಲರಿಗೂ ಮುಂದೆ ಕ್ಯಾನವಾಸು ಸಂಪೂರ್ಣ ಕಾಣುವಂತೆ ನಿಂತುಕೊಂಡೆ. ಬೆಳಿಗ್ಗೆ ೧೧ಗಂಟೆಗೆ ಉದ್ಘಾಟನಾ ಸಮಯ ಎಂದಿದ್ದರೂ ೧೦-೩೦ಕ್ಕೇ ಈ ’ಬಂದರು-ಬಂದರು’ ಎನ್ನುವ ಪ್ರಹಸನ ಶುರುವಾಗಿತ್ತು. ಅದಕ್ಕೆ ನಾವೆಲ್ಲ ಅಂದರೆ ಕೆಲ ಯುವ ಕಲಾವಿದರು ಬಲಿಯಾಗಿದ್ದೆವು. ಅಂತೂ ಹುಸೇನ್ ಬಂದರು ಎಂದಾಗ ಜಾಗ ಬಿಟ್ಟು ಕದಲದೆ ನಿಂತಲ್ಲಿಂದಲೇ ಗೋಣೆತ್ತರಿಸಿ ನೋಡಿದೆವು! ಹುಸೇನ್ ಪಟಪಟನೆ ವೇದಿಕೆಯತ್ತ ಬರತೊಡಗಿದರು. ಆ ಎತ್ತರದ ನಿಲುವಿನ ಆಸಾಮಿ ನೀಲಿಜೀನ್ಸ್ ತೊಟ್ಟು ಮೇಲೊಂದು ಪುಟ್ಟ ಅದೇಬಣ್ಣದ ಜಾಕೀಟು ಹಾಕಿಕೊಂಡು ದುಬಾರಿ ಶೂಸ್ ಏರಿಸಿಕೊಂಡು ಕಾಲೇಜು ಹುಡುಗನಂತೆ ಬಂದರು!! ಬಂದು ಕ್ಯಾನವಾಸ್ ಹತ್ತಿರ ನಿಂತೇಬಿಟ್ಟರು. ಸ್ವಲ್ಪ ಅವಸರದಲ್ಲಿದ್ದಂತೆ ಕಂಡುಬಂದರು ಹುಸೇನ್, ಸಂಘಟಕರು ಕಲಾಮೇಳದ ಕುರಿತು ಎರಡು ಮಾತನಾಡಿ ಚಿತ್ರ ಬರೆಯುವುದರೊಂದಿಗೆ ಉದ್ಘಾಟಿಸಲು ಕೋರಿ ಕುಂಚವೊಂದನ್ನು ಹಿಡಿದು ಹುಸೇನ್ ಕೈಗೆ ಕೊಟ್ಟರು.
ಕುಂಚ ತೆಗೆದುಕೊಂಡ ಹುಸೇನ್ ಸಾಹೇಬರು ಕ್ಯಾನವಾಸ್‌ನ್ನು ದೀರ್ಘವಾಗಿ ನೋಡಿ, ನೆರೆದ ಕಲಾವಿದರನ್ನೊಮ್ಮೆ ಸುಮ್ಮನೆ ದಿಟ್ಟಿಸಿ ಕೈಲಿದ್ದ ಕುಂಚ ನೋಡಿಕೊಂಡರು. ಅರೆಕ್ಷಣದಲ್ಲಿ ಸಂಘಟಕರು ಕೊಟ್ಟ ಕುಂಚವನ್ನು ಬದಿಗಿರಿಸಿ ಬೇರೆ ಕುಂಚಕ್ಕೆ ತಡಕಾಡಿದರು. ಯಾವುದೇ ಕಲಾವಿದನಿಗೆ ಅವನದೇ ಆದ-ನಿಶ್ಚಿತ ಸೈಜಿನ, ನಿಶ್ಚಿತ ಆಕಾರದ ಕುಂಚವೊಂದಿರುತ್ತದೆ. ಅಂಥ ಕುಂಚ ಸಿಕ್ಕಾಗಲೇ ಸಮಾಧಾನ! ಯಾವುದೇ ಬರಹಗಾರನಿಗೂ ಅಷ್ಟೆ ಅವನದೇ ಆದ ನಿಶ್ಚಿತ ಲೇಖನಿಯೊಂದಿರುತ್ತದೆ, ಅದಿದ್ದಾಗ ಅವನ ಬರೆಯುವ ಮೂಡೇ ಬೇರೆ. ಇದೀಗ ಯೂಸ್ ಅಂಡ್ ಥ್ರೋ ಪೆನ್ನುಗಳು ಬಂದು ಆ ನಿಷ್ಟೆಗೆ ಭಂಗ ಬಂದಿದೆಯೆನಿಸುತ್ತಿದೆ. ಇರಲಿ, ಈ ಕಲಾವಿದ ಹುಸೇನ ಸಾಹೇಬರ ಕುಂಚದ ತಡಕಾಟ ನೋಡಿ ಹೌಹಾರಿದ ಸಂಘಟಕರು ಬೇರೊಂದು ಬ್ರಶ್ ಸೆಟ್ ತಂದು -ಇಡೀ ಸೆಟ್ ಅವರ ಮುಂದೆ ಹಿಡಿದರು.
ಇಲ್ಲಿ ಒಂದು ವಿಷಯ ಹೇಳಬೇಕು, ಕಲಾವಿದರಿಗಾಗಿಯೇ ಕುಂಚ ತಯಾರಿಸುವ ಕಂಪೆನಿಗಳಿವೆ. ಅದರಲ್ಲಿ ’ಹುಸೇನ್ರಿಗಾಗಿಯೇ ಕುಂಚ ತಯಾರಿಸುವ ಕಂಪನಿಯೊಂದಿದೆ, ಆ ಬ್ರಶ್‌ನ್ನು ಮಾತ್ರ ಹುಸೇನ್ ಬಳಸುತ್ತಾರೆ, ತನ್ನ ಆಳೆತ್ತರದ ಕುಂಚ ಬಳಸುವುದರಲ್ಲೂ ಹುಸೇನ್ ನಿಸ್ಸೀಮರು! ಎಂದು ಎಲ್ಲೋ ಓದಿದ/ಕೇಳಿದ ನೆನಪು!
ದೊಡ್ಡ ಕಲಾವಿದರೊಬ್ಬರು ದೆಹಲಿಯ ಪ್ರತಿಷ್ಟಿತ ಅಂಗಡಿಯೊಂದರಲ್ಲಿ ಪ್ರದರ್ಶನಕ್ಕೆ ಇಟ್ಟ ಕುಂಚವೊಂದನ್ನು ನೋಡಿ ಅದರ ರೇಟೆಷ್ಟು ಅಂತ ಕೇಳಿದರೆ, ಏ ಆಪಕಾ ನಹೀಂ ಹೈ, ಹುಸೇನ್ ಕಾ ಬ್ರಶ್ ಹೈ ಎಂದರಂತೆ! ಅಷ್ಟೇ ಅಲ್ಲ ಮುಟ್ಟಲೂ ಕೊಡಲಿಲ್ಲಂತೆ!! ಇವೆಲ್ಲ ಕತೆಯೋ-ದಂತಕತೆಗಳೋ ಗೊತ್ತಿಲ್ಲ. ಒಟ್ಟಾರೆ ಈ ಅಸಾಧಾರಣರ ಸುತ್ತ ಇಂಥ ಇಮೇಜು ಅದು ಹೇಗೋ ಬೆಳೆದುಬಿಟ್ಟಿರುತ್ತದೆ. ನಾವೆಲ್ಲ ಇಷ್ಟಗಲ ಕಣ್ಣರಳಿಸಿ ನೋಡಿದ್ದೇಬಂತು. ಆ ಬ್ರಷ್‌ಗಳಲ್ಲಿ ಒಂದನ್ನು ಅಂತೂ ಇಂತೂ ಆಯ್ದುಕೊಂಡು ಕ್ಯಾನವಾಸನ್ನು ಇನ್ನೊಮ್ಮೆ ನಿರುಕಿಸಿ ಬಣ್ಣದ ಪ್ಯಾಲಟ್‌ನತ್ತ ಹೊರಳಿದರು. ಅದರಲ್ಲಿ ಅದಾಗಲೇ ಬಣ್ಣಗಳನ್ನು ಟ್ಯೂಬಿನಿಂದ ಹಾಕಿ ಇಡಲಾಗಿತ್ತು. ಅದೂ ಹುಸೇನರಿಗೆ ಸಾಕಾಗಲಿಲ್ಲ. ಯಾಕೆಂದರೆ ಒಂದು ಕೆ.ಜಿ, ಐದು ಕೆ.ಜಿ. ಬಣ್ಣದ ಟಿನ್ ಅಥವಾ ಬಾಕ್ಸನ್ನು ಬಳಸುವಂಥವರವರು. ಅದೂ ಅಲ್ಲದೇ ಇರುವ ಬಣ್ಣಗಳನ್ನು ಬಳಸದೆ ಬಣ್ಣದ ಆಯ್ಕೆಯಲ್ಲಿ ಸಂಪೂರ್ಣ ಸ್ವಾತಂತ್ರ್ಯ ಬಯಸುವಂಥವರು. ಹೀಗಾಗಿ ಇಲ್ಲಿರುವ ಟ್ಯೂಬಿನ ಸೆಟ್‌ನ್ನು ಬಿಟ್ಟು ಬಾಕ್ಸ್‌ಗಾಗಿ ಹುಡುಕಾಡತೊಡಗಿದರು. ಅಲ್ಲಿದ್ದ ಹಿರಿಯ ಕಲಾವಿದ ಶೆಣೈ ಆರು ಬಣ್ಣವಿದ್ದ ಬಾಕ್ಸ್ ನ್ನು ತಂದು ಮುಂದಿಟ್ಟು ಬಿರಟೆಯನ್ನು ಬಿಚ್ಚತೊಡಗಿದರು. ಅಲ್ಲಿದ್ದವರಲ್ಲಿ ಹುಸೇನ್‌ರ ಸಖ್ಯ ಹೆಚ್ಚಾಗಿದ್ದುದು ಶೆಣೈರೊಂದಿಗೆ. ತನಗೆ ಬೇಕಾದ ಸಾಂದ್ರತೆಯುಳ್ಳ ಬಣ್ಣ ಕಂಡಾಗ ಹುಸೇನ್ ಮುಖಕಮಲವರಳಿತು. ಶೆಣೈ ಕಡೆಗೊಮ್ಮೆ ಸ್ನೇಹದ ನಗೆಬೀರಿ ಕುಂಚವನ್ನೆತ್ತಿ ನನಗೆ ಅತ್ಯಂತ ಪ್ರಿಯವಾದ ಕೆಂಪುವರ್ಣದಲ್ಲದ್ದಿದರು..
ಇಲ್ಲಿ ಒಂದು ಮಾತನ್ನು ನಾನು ಹೇಳಬೇಕು; ನಾನು ಆವರೆಗೆ ಇನ್ನೊಬ್ಬ ಕಲಾವಿದ ಪೇಂಟ್ ಮಾಡಿದ್ದನ್ನು ನೋಡಿರಲೇ ಇಲ್ಲ. ಮನಸ್ಸಿನಲ್ಲಿ ಅದಮ್ಯ ಕುತೂಹಲ. ಬರಿಗಾಲ ಕಲಾವಿದ ಹೊಳೆಹೊಳೆವ ರೀಬಾಕ್ ಶೂ ಹಾಕಿಕೊಂಡು, ಗರಿಗರಿ ನೀಲಿ ಜೀನ್ಸ್ ಧರಿಸಿಕೊಂಡಿದ್ದ ಕಲಾವಿದ ಹುಸೇನ್ ಕುಂಚವನ್ನೆತ್ತಿದರು..ಅರರೆ ಬಣ್ಣ ಇನ್ನೂ ಕುಂಚದಲ್ಲಿ ಸೋರುತ್ತಿದೆ ಅನ್ನುವಾಗಲೇ ಬ್ರಷ್‌ನ್ನು ಕ್ಯಾನವಾಸಿಗೆ ತಗುಲಿಸಿಯೇಬಿಟ್ಟರು! ನೋಡನೋಡುತ್ತಿದ್ದಂತೆ ಆ ಸೋರುವ ಕೆಂಪುವರ್ಣದಲ್ಲಿಯೇ ಎಂ.ಎಫ್.ಹುಸೇನ್ ಎಂದು ಇಂಗ್ಲೀಷಿನಲ್ಲಿ ಬರೆದುಬಿಟ್ಟರು.. ನನಗೋ ಗಲಿಬಿಲಿ-ಕಳವಳ ಒಟೊಟ್ಟಿಗೇ ಉಂಟಾದವು. ಬೇರೆ ಕಲಾವಿದರು ಚಿತ್ರ ಅಥವಾ ಪೇಂಟಿಂಗ್ ಮಾಡುವ ಪರಿ ನಿರೀಕ್ಷಿಸುವ ಸಂಭ್ರಮದೊಂದಿಗೆ ಇನ್ನಷ್ಟು ಮುಂದೆಸರಿದು ನಿಂತಿದ್ದೆ.
ಬರೀ ಎಂ.ಎಫ್. ಹುಸೇನ್ ಎಂದು ಸೈನ್ ಮಾಡಿಕೊಟ್ಟರೂ ಸಾಕು ಸೇಲಾಗುತ್ತದೆ ಎಂದು ಕೇಳಿದ್ದೆ. ಅದನ್ನು ಇಲ್ಲೇ ಪ್ರಯೋಗ ಮಾಡಬೇಕಾ? ಒಂದು ಯಾವುದಾದರೂ ಹಕ್ಕಿಯ ಚಿತ್ರ ಬರೆದರೂ ಸಾಕಿತ್ತು ಎಂದುಕೊಳ್ಳುವಾಗಲೇ ಹುಸೇನ್ ಅದೇ ಬ್ರಷ್‌ನ್ನು ಕೆಂಪುವರ್ಣವನ್ನು ಕೊಂಚವೂ ಒರೆಸದೆ ಕಪ್ಪುಬಣ್ಣದಲ್ಲದ್ದಿ ಎತ್ತಿಕೊಂಡರು. ಸ್ವಲ್ಪವೂ ಆಚೀಚೆ ಕಡೆಗೆ ನೋಡದೆ ಸೋರುವ ಬಣ್ಣದೊಂದಿಗೆ ಬ್ರಷ್‌ನ್ನು ಕ್ಯಾನವಾಸಿಗೂರಿದರು! ಅದಾಗಲೇ ಕೆಂಪುವರ್ಣ ಕ್ಯಾನವಾಸಿನಲ್ಲಿ ಅಕ್ಷರದೊಂದಿಗೆ ಅಲ್ಲಲ್ಲಿ ಜೋರುಬಿಟ್ಟಿತ್ತು. ಆ ಮೊದಲು ಬರೆದಿದ್ದ ಎಂ.ಎಫ್. ಹುಸೇನ್ ಕೆಳಗೇ ಮತ್ತೆ ಎಂ.ಎಫ್. ಹುಸೇನ್ ಎಂದು ನಿಧಾನವಾಗಿ ಕಪ್ಪು ವರ್ಣದಲ್ಲಿ ಬಣ್ಣ ಸೋರಿಸುತ್ತ ಬರೆದರು!! ಇದೇನಿದು ಹುಸೇನರ ಹುಡುಗಾಟಿಕೆ ಎಂದುಕೊಂಡೆ. ಎರಡು ಹೆಜ್ಜೆ ಹಿಂದಕ್ಕೆ ಬಂದು ಕ್ಯಾನವಾಸನ್ನು ನೋಡಿದ ಹುಸೇನ್ ತುಂಬು ಆತ್ಮವಿಶ್ವಾಸದಿಂದ ಹಸಿರುವರ್ಣವನ್ನೆತ್ತಿಕೊಂಡರು. ಕೆಂಪು ವರ್ಣದಲ್ಲೊಂದು, ಕಪ್ಪು ವರ್ಣದಲ್ಲೊಂದು ಎರಡನ್ನೂ ಸಮಾನ ಅಂತರದಲ್ಲಿ ಸಮಾನ ಗಾತ್ರದಲ್ಲಿ ಸಹಿ ಮಾಡಿದ್ದ ಹುಸೇನ್ ಈಗೇನು ಮಾಡುತ್ತಾರೆ ಎಂದು ನೋಡಿದರೆ, ಅಷ್ಟೇ ಸಮಾನ ಅಂತರ-ಗಾತ್ರದಲ್ಲಿ ಆ ಕಪ್ಪು ಸಹಿಯ ಕೆಳಗೆ ಹಸಿರು ವರ್ಣದಲ್ಲಿ ಎಂ.ಎಫ್. ಹುಸೇನ್ ಎಂದು ಬರೆದು ಕುಂಚವನ್ನು ಕೆಳಗಿಟ್ಟರು. ಸಭಿಕರತ್ತ ಸಂಘಟಕರತ್ತ ಒಮ್ಮೆ ನೋಡಿ ಕೈಬೀಸಿ ಅಲ್ಲಿಂದ ಹೊರಟರು.
ನನಗದೇನೋ ಆಗ ಖಾಲಿ ಖಾಲಿ ಅನುಭವ. ಕ್ಯಾನಸಿನ ಕಡೆಗೆ ನೋಡಿದೆ. ಇಷ್ಟು ದೊಡ್ಡ ಕಲಾವಿದ ನಮಗೇನು ಹೇಳಿದ ಎಂದು ಮತ್ತೆ ಮತ್ತೆ ನೋಡಿದೆ
ಎಂ.ಎಫ್. ಹುಸೇನ್
ಎಂ.ಎಫ್. ಹುಸೇನ್
ಎಂ.ಎಫ್. ಹುಸೇನ್
ಕೆಂಪು-ಕಪ್ಪು-ಹಸಿರು ವರ್ಣ.. ಎಲ್ಲ ಸೋರಿದಂತೆ ಇದೆಲ್ಲ ಬರೀ ಹತ್ತು ನಿಮಿಷದ ಉದ್ಘಾಟನೆ!!! ಬರೀ ಸಹಿ ಮಾಡಿ ಹೋಗಿಬಿಟ್ಟರಾಯಿತೇ? ಈ ಉದ್ಘಾಟಕರು ಯಾಕಾದರೂ ಇಷ್ಟು ಕಡಿಮೆ ಸಮಯವನ್ನಿಟ್ಟುಕೊಂಡು ಬರುತ್ತಾರೋ ಎಂದು ಗೊಣಗುತ್ತ ಆ ಕಡೆಗೆ ನೋಡಿದರೆ ಹುಡುಗಿಯರು ಹುಸೇನ್ ಹೆಗಲಮೇಲೆ ನಿಲುಕದಿದ್ದರೂ ಕೈಯಿಟ್ಟು ಫೋಟೋ ತೆಗೆಸಿಕೊಳ್ಳುತ್ತಿದ್ದಾರೆ!
ಆಹಾ! ಇಂಥ ಶೋಕಿಗೇನೂ ಕಮ್ಮಿಯಿಲ್ಲ. ಅದೇ ಸಮಯದಲ್ಲಿ ನೀಟಾದ ಒಂದು ಕಲಾಕೃತಿ ನಿರ್ಮಿಸಿದ್ದರೆ! ಎಂದು ಮತ್ತೆ ಕ್ಯಾನವಾಸಿನತ್ತ ತಿರುಗುವುದಕ್ಕೂ, ಮತಾಂಧರು ಬಾಬರಿ ಮಸೀದಿಯನ್ನು ಅದೇ ಕೆಲ ತಿಂಗಳ ಹಿಂದೆ ಧ್ವಂಸಗೊಳಿಸಿದ್ದುದು ನೆನಪಾಗುವುದಕ್ಕೂ ಸರಿಯಾಯ್ತು.
ಕ್ಯಾನವಾಸು ಕಲಾಕೃತಿಯಾಗಿ ಜೀವತಳೆಯತೋಡಗಿತ್ತು..!
ಪುಂಡಲೀಕ ಕಲ್ಲಿಗನೂರ
Subscribe to:
Post Comments (Atom)
ಹಿಂದಿನ ಬರೆಹಗಳು
-
▼
2011
(92)
-
▼
July
(11)
- ಕಲಾಲೋಕಕ್ಕೆ ರೆಕ್ಕೆ-ಪುಕ್ಕ ಕಟ್ಟಿಕೊಟ್ಟ ಹುಸೇನ್
- ಶರಣ ಮಾರ್ಗ (ರೂಪಕ)
- ಜಾನಪದ: ಒಂದಿಷ್ಟು ವಿಚಾರಗಳು
- ಅನನ್ಯ ಕಲಾಕೃತಿ ಮೂಡಬೇಕಾದರೆ ಅಸಾಧ್ಯ ಪರಿಶ್ರಮ ಬೇಕೇ ಬೇಕು
- ಕರ್ನಾಟಕ ರತ್ನ ಪ್ರಶಸ್ತಿಯ ಪ್ರತಿಭೆಯಲ್ಲಿ ದೇಜಗೌ
- ಕೆಂಪೇಗೌಡರು ಕಟ್ಟಿದ ಪೇಟೆ, ದೇಗುಲಗಳು....
- ನೀಗಿಕೊಂಡ ಹಳೆಮನೆ
- ನಿವೃತ್ತಿ ವಯೋಮಿತಿ ಏರಿಕೆ ನಿವೃತ್ತಿ ವಯೋಮಿತಿ ಏರಿಕೆ ಯುವ ...
- ನಿತ್ಯ ನಿರಂಜನ ಅಲ್ಲಮ ಪ್ರಭುದೇವರು
- ದೇವದುರ್ಗದ ಈರಣ್ಣ
- ಅತ್ಯುತ್ತಮ ಸಂಘಟನಾಕಾರ ಕೆ.ಟಿ.ರವೀಂದ್ರಕುಮಾರ್
-
▼
July
(11)
No comments:
Post a Comment