Friday, July 22, 2011
ನೀಗಿಕೊಂಡ ಹಳೆಮನೆ
ನಾನು ಮೈಸೂರಿಗೆ ೧೯೮೩ರಲ್ಲಿ ಎಂ.ಎ.ವ್ಯಾಸಂಗಕ್ಕೆ ಸೇರಿದ ಮೊದಲ ದಿನಗಳಲ್ಲಿ ಪರಿಚಯವಾದ ಹಿರಿಯ ಮಿತ್ರರಲ್ಲಿ ಹಳೆಮನೆಯೂ ಒಬ್ಬರು. ಬೊಕ್ಕತಲೆ ಎದೆಯವರೆಗಿನ ಉದ್ದನೆಯ ಗಡ್ಡ, ಕೈಲಿ ಸಿಗರೇಟ್, ನಮ್ಮೆದುರಿಗಿನ ಕಾರ್ಲ್‌ಮಾರ್ಕ್ಸ್ ಅವರಾಗಿದ್ದರು. ಕನ್ನಡ ರಂಗಭೂಮಿ ಬ್ರೆಷ್ಟ್ ಎನ್ನುತ್ತಿದ್ದ ಕಾಲಕ್ಕೆ ಬ್ರೆಕ್ಟ್ ಎನ್ನುವ ಖಾಚಿತ್ಯ ಹೆಸರನ್ನು ನೀಡಿದ ಕೀರ್ತಿ ಅವರದು. ಬರ್ಟೋಲ್ಡ್ ಬ್ರೆಕ್ಟ್‌ನನ್ನು ಸಮರ್ಥವಾಗಿ ಜೀರ್ಣಿಸಿಕೊಂಡು ಕನ್ನಡಕ್ಕೆ ’ಹೈದರ್, ’ಚಿಕ್ಕದೇವಭೂಪ’ ಮುಂತಾದ ನಾಟಕಗಳನ್ನು ರಚಿಸಿದ ಅವರು ಅನುವಾದಕರಾಗಿ ಬ್ರೆಕ್ಟ್‌ನ ’ಮದರ್ ಕರೇಜ್, ’ಧರ್ಮಪುರದ ದೇವದಾಸಿ’ ಮುಂತಾದ ನಾಟಕಗಳನ್ನು ಕನ್ನಡಕ್ಕೆ ತಂದರು. ಆ ಕಾಲಕ್ಕೆ ಅವರ ಹೈದರ್, ಚಿಕ್ಕದೇವಭೂಪ ತುಂಬಾ ಚರ್ಚೆಯ ಕೇಂದ್ರವಾಗಿದ್ದ ನಾಟಕಗಳು. ’ನೀಲಿ ತಾರೆ’ ಅವರ ರಂಗಗೀತೆಗಳ ಸಿ.ಡಿ. ಗೆಳೆಯ ಜನ್ನಿ ಸಂಗೀತ ನಿರ್ದೇಶನದಲ್ಲಿ ಹಳೆಮನೆ ಬರೆದ ರಂಗಗೀತೆಗಳನ್ನು ಒಂದೆಡೆ ಸಂಕಲಿಸಿದ್ದಾರೆ. ಇದು ಪುಸ್ತಕವಾಗಿಯೂ ಪ್ರಕಟವಾಗಿದೆ.
ಹಾಲುಕೋಣ ಎಂಬ ಪುಟ್ಟ ಹಳ್ಳಿಯಲ್ಲಿ ಸಾಮಾನ್ಯ ಕುಟುಂಬದಲ್ಲಿ ಜನಿಸಿ, ತಿಪಟೂರಿನ ಕಲ್ಪತರು ಕಾಲೇಜಿನಲ್ಲಿ ಬಿ.ಎ.ವ್ಯಾಸಾಂಗ ಮುಗಿಸಿ ತಮಿಳುನಾಡಿನ ಅಣ್ಣಾಮಲೈ ವಿಶ್ವವಿದ್ಯಾಲಯದಲ್ಲಿ ಭಾಷಾ ವಿಜ್ಞಾನದಲ್ಲಿ ಎಂ.ಎ.ಮುಗಿಸಿದ ಹಳೆಮನೆ ಕೆಲಸಕ್ಕೆ ಸೇರಿದ್ದು ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದಲ್ಲಿ ಮಾನಸ ಗಂಗೋತ್ರಿಯಲ್ಲೇ ಇದ್ದ ಹಳೆ ಮನೆ ನಮಗೆ ಕ್ಯಾಂಟೀನಲ್ಲಿ ಸಿಗುತ್ತಿದ್ದ ರೆಗ್ಯುಲರ್ ಗೆಳೆಯರಾದರು. ಅವರು ಹೆಚ್ಚು ಹತ್ತಿರವಾದದ್ದೂ ೯೦ರ ದಶಕದಲ್ಲಿ. ತುಂಬಾ ಸೆಕ್ಯುಲರ್ ಆದ ಮನುಷ್ಯ. ಮಾರ್ಕ್ಸ್‌ನ ತಲೆ, ಗಾಂಧಿ ಮನಸ್ಸು, ಲೋಹಿಯಾ ವೈಚಾರಿಕತೆ, ಅಂಬೇಡ್ಕರ್‌ರ ಮುಂಗಾಣ್ಕೆ ಎಲ್ಲವನ್ನೂ ಜೀರ್ಣಿಸಿಕೊಂಡಿದ್ದ ವ್ಯಕ್ತಿಯಾಗಿದ್ದರು. ಅವರು ಕನ್ನಡೇತರರು ಇಂಗ್ಲೀಷ್ ಮೂಲಕ ಕನ್ನಡ ಕಲಿಯುವ ಪ್ರಾಯೋಗಿಕ ಕೃತಿಯನ್ನು ಬಹುಹಿಂದೆಯೇ ಸಿದ್ಧಪಡಿಸಿದ್ದರು. ಭಾಷಾವಿಜ್ಞಾನಿಯಾಗಿ ಅವರು ಮಾಡಿದ ಮಹತ್ವದ ಕೆಲಸ. ರಾಜ್ಯ ಸಂಪನ್ಮೂಲ ಕೇಂದ್ರದ ನಿರ್ದೇಶಕರಾಗಿ ಕೆಲಸ ಮಾಡಿದ ಅವರು ’ಭಾಷೆ’ ಎಂಬ ನವಸಾಕ್ಷಕರಿಗೆ ಒಂದು ಚಿಕ್ಕ ಕೃತಿ ಬರೆದಿದ್ದಾರೆ. ಭಾಷೆಯ ಬಗ್ಗೆ ಸಂಕ್ಷಿಪ್ತವಾಗಿ, ಆಪ್ತವಾಗಿ ರಚಿಸಿದ ಮತ್ತೊಂದು ಪುಸ್ತಕ ಕನ್ನಡದಲ್ಲಿಲ್ಲ. ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ವಿವಿಧ ಭಾಷೆಗಳ ಮೂಲಕ ಕನ್ನಡ ಕಲಿಯಲು ಮೂಲ ಪಠ್ಯವನ್ನು ಹಳೆಮನೆ ಬರೆದಿದ್ದಾರೆ. ಅದನ್ನು ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿದೆ. ನಂತರ ಅವರು ಭಾರತದ ಸಾಕ್ಷರತಾ ಮಿಷನ್ನಿನ ನಿರ್ದೇಶಕರಾಗಿ ಮಹತ್ವದ ಕೆಲಸ ಮಾಡಿದ್ದಾರೆ. ನನ್ನ ಜೂನಿಯರ್ ಆಗಿ ಅವರು ಕನ್ನಡ ಎಂ.ಎ.,ಯನ್ನು ರ‍್ಯಾಂಕ್‌ಗಳ ಮೂಲಕ ಪಡೆದವರು. ಸಾಮಾನ್ಯ ಪ್ರಜೆಯ ವಿದ್ಯಾಭ್ಯಾಸದ ಬಗ್ಗೆ ಹೆಚ್ಚೂ ಕಾಳಜಿಯುಳ್ಳ ಅವರು ಫಾರ‍್ಮಲ್‌ಗಿಂತ ನಾನ್‌ಫಾರ‍್ಮಲ್ ಎಜುಕೇಷನ್ ಬಗ್ಗೆ ಆಸಕ್ತರಾಗಿದ್ದರು. ಈ ದೇಶ, ಭಾಷೆ, ಸಂಸ್ಕೃತಿ ಎಲ್ಲವನ್ನೂ ಸರಿಯಾಗಿ ತಿಳಿದು ಅದಕ್ಕೆ ತಕ್ಕ ಕಾರ್ಯಕ್ರಮಗಳನ್ನು ರೂಪಿಸುವ ಶಕ್ತಿ ಇದ್ದ ಹಳೆಮನೆ ಅIIಐ (ಅeಟಿಣಡಿಚಿಟ Iಟಿsಣiಣuಣe oಜಿ Iಟಿಜiಚಿಟಿ ಐಚಿಟಿguಚಿges) ಭಾರತೀಯ ಭಾಷಾ ಸಂಸ್ಥಾನ್‌ನಿಂದ ರೂಪಿಸಿದ. ಭಾಷಾ ಮಂದಾಕಿನಿ, ಕರ್ನಾಟಕ ಕುರಿತು ವಿಜುಯಲ್ ಎನ್‌ಸೈಕ್ಲೋಪಿಡಿಯಾದ ಕಾರ್ಯಕ್ರಮಗಳು ಮಹತ್ವದವು. ವಿಡಿಯೊ ಚಿತ್ರಗಳ ಮೂಲಕ ಕನ್ನಡೇತರರಿಗಾಗಿ ಕನ್ನಡ ಸಂಸ್ಕೃತಿಯನ್ನು ತೋರುವ ಮಹತ್ವದ ಕಾರ್ಯ ಇದಾಗಿದೆ.
ಹಳೆಮನೆ ಒಬ್ಬ ಭಾಷಾ ವಿಜ್ಞಾನಿಯಾಗಿದ್ದು ಇವುಗಳ ಜೊತೆ ಮಾಡಿದ ಮಹತ್ವದ ಕೆಲಸವೆಂದರೆ ಕನ್ನಡ ಶಾಸ್ತ್ರೀಯ ಭಾಷೆಯ ಸ್ಥಾನಮಾನಕ್ಕೆ ನೀಡಿದ ವರದಿ. ಕನ್ನಡದಷ್ಟೇ ಪ್ರಾಚೀನತೆಯಿರುವ ತೆಲುಗಿಗೂ ಆ ಸ್ಥಾನ ದೊರೆಯಬೇಕೆಂದು ಹಕ್ಕೋತ್ತಾಯ ಮಾಡಿದವರು ಇವರೆ. ಒಂದು ಭಾಷೆಯ ಪ್ರಾಚೀನತೆಯನ್ನು ನಿಗದಿ ಮಾಡುವ ಮಾನದಂಡಗಳು ಹಾಗೂ ವಿವಿಧ ಆಕರಗಳನ್ನು ಸಾಕ್ಷಿಯಾಗಿ ನೀಡುವಲ್ಲಿ ಹಳೆಮನೆಯವರ ಪಾತ್ರ ದೊಡ್ಡದು.
ಇವೆಲ್ಲಕ್ಕಿಂತ ಭಿನ್ನವಾಗಿ ಅವರೊಬ್ಬ ನಾಟಕಕಾರ, ರಂಗಚಿಂತಕ, ಅನೇಕ ಶಿಸ್ತುಗಳ ಸಾಕಾರವಾಗಿದ್ದ ಹಳೆಮನೆ ಹೈದರ್, ಚಿಕದೇವಭೂಪ, ತಸ್ಕರ ಪುರಾಣದಂಥ ನಾಟಕಗಳ ಕರ್ತೃ. ಅನೇಕ ಬೀದಿನಾಟಕಗಳನ್ನು ಬರೆದಿದ್ದಾರೆ. ಮೈಸೂರಿನಲ್ಲಿ ಸಮುದಾಯದ ಚಟುವಟಿಕೆಗಳಿಗೆ ಅವರೇ ಆಧಾರವಾಗಿದ್ದರು. ರಂಗ ಚಿಂತನೆಗೆ ಹೆಚ್ಚಿನ ಮಹತ್ವ ನೀಡಿದ್ದ ಅವರು ತಮ್ಮ ಭಾಷಣ, ಬರಹಗಳಲ್ಲಿ ರಂಗಭೂಮಿ ಕುರಿತ ಅನೇಕ ವಿಷಯಗಳನ್ನು ಚರ್ಚಿಸಿದ್ದಾರೆ. ಬಹುರೂಪಿ ನಾಟಕೋತ್ಸವಕ್ಕೆ ಅವರು ಸಂಪಾದಿಸಿದ ’ಬಹುರೂಪಿ’ ಸಂಕಲನ ಮಹತ್ವದ್ದು. ತಮ್ಮ ಸುತ್ತಲನ್ನೂ ಅನೇಕ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸುವ ಶಕ್ತಿ ಕೂಡ ಅವರಿಗಿತ್ತು.
ಸರ್ಕಾರ ಅವರನ್ನು ರಂಗಾಯಣದ ನಿರ್ದೇಶಕರನ್ನಾಗಿ ಮಾಡಿತ್ತು. ಮೀನಾ ಮೇಷ ಎಲ್ಲ ಎಣಿಸಿ. ಅವರ ಬಲ ಎಷ್ಟಿತ್ತೆಂದರೆ ಸರ್ಕಾರದ ವಿರುದ್ದ ಆಶಯವನ್ನುಳ್ಳವರೆಂಬ ಕಾರಣ ನೀಡಿ, ಕಾಲ ತಳ್ಳಿ ಕೊನೆಗೆ ಅವರನ್ನೇ ರಂಗಾಯಣಕ್ಕೆ ನೇಮಿಸಬೇಕಾದ ಅನಿವಾರ್ಯ ಸೃಷ್ಟಿಯಾಗುವಂತಾಯಿತು. ಅಂದರೆ ಹಳೆಮನೆ ಸೈದ್ಧಾಂತಿಕವಾಗಿ ಖಾಚಿತ್ಯತೆಯಿದ್ದ ಮನುಷ್ಯ. ಅವರ ಎಡಪಂಥೀಯ ನಿಲುವು ಮತ್ತೊಬ್ಬರು ಗೌರವಿಸುವಂತೆಯೇ ಇತ್ತು.
ರಂಗಾಯಣವನ್ನು ಗುಲಬರ್ಗಾ, ಶಿವಮೊಗ್ಗಗಳಲ್ಲೂ ರೂಪಿಸಬೇಕು ಎಂಬುದು ಹಳೆಮನೆ ಕನಸು. ಅದಕ್ಕಾಗಿ ಅವರು ಶಿವಮೊಗ್ಗ ಸಮಾರಂಭ ಮುಗಿಸಿ ಮೈಸೂರಿಗೆ ತಲುಪಿ ಮನೆಯಲ್ಲಿ ತೀರಿಕೊಂಡರು. ಹೃದಯಾಘಾತ ಅವರ ಅವಿರತ ಶ್ರಮದ ನಡುವೆ ಬಂದ ಅಂತಿಮ ಕಾಲನ ಕರೆಯಾಗಿತ್ತು. ಸಾಕ್ಷರತ ಮಿಷನ್ನಿನ ನಿರ್ದೇಶಕರಾಗಿದ್ದಾಗ ಆಕ್ಸಿಡೆಂಟಾಗಿ ಬಚಾವಾಗಿದ್ದ ಹಳೆಮನೆ ಹೃದಯಾಘಾತದಿಂದ ಬಚಾವಾಗಲಿಕ್ಕಾಗಲಿಲ್ಲ. ತಮ್ಮ ವೈಯುಕ್ತಿ ಬದುಕನ್ನು ರೂಪಿಸಿಕೊಳ್ಳುವುದೇ ಒಂದು ಕಾಲಕ್ಕೆ ದೊಡ್ಡ ಸವಾಲಾಗಿದ್ದ ಹಳೆಮನೆ ನಿರಂತರ ಹೋರಾಟದ ವ್ಯಕ್ತಿಯಾಗಿದ್ದರು. ಅವರೊಬ್ಬ ಫೆರೊಷಿಯಸ್ ರೀಡರ್ ಮತ್ತು ರೈಟರ್. ’ಆಂದೋಲನ’ ಪತ್ರಿಕೆಗೆ ಹತ್ತಾರು ವರ್ಷ ಅವರು ಪ್ರತಿವಾರ ಕಾಲಂ ಬರೆದರು. ಅಲ್ಲಿ ಸಮಕಾಲೀನ ಸಾವಿರಾರು ಸಮಸ್ಯೆಗಳನ್ನು ಕುರಿತು ಬರೆದರು. ಯಾವುದೇ ಸಮಸ್ಯೆಗೆ ಹಳೆಮನೆ ಏನೆನ್ನುತ್ತಾರೆ ನೋಡೋಣ ಎನ್ನುವಷ್ಟರ ಮಟ್ಟಿಗಿತ್ತು ಅವರ ಅಭಿಪ್ರಾಯ. ತುಂಬ ಖಚಿತವೂ, ಮಾನವೀಯವೂ ಆದ ನಿಲುವಿನ ಜೊತೆಗಿರುತ್ತಿದ್ದ ಅವರು ಎಲ್ಲರಿಗೂ ಪ್ರಿಯರಾಗಿದ್ದರು. ನೋಡಲು ಸಿಟ್ಟಿನ ಮನುಷ್ಯನೇನೋ ಎಂಬ ಅನುಮಾನ ಕಾಡಿದರೂ ಆಂತರ್ಯದಲ್ಲಿ ತುಂಬಾ ಸಭ್ಯತೆಯ ವ್ಯಕ್ತಿ ಅವರಾಗಿದ್ದರು.
ಭಾಷೆ, ಸಾಹಿತ್ಯ, ಸಂಸ್ಕೃತಿ, ರಂಗಭೂಮಿ, ಸಾಮಾಜಿಕ ಹೋರಾಟ ಹೀಗೆ ನಾನಾ ಬಗೆಯಲ್ಲಿದ್ದ ಅವರ ವ್ಯಕ್ತಿತ್ವ ಹೇಗೆ ಸಂಕೀರ್ಣವೊ ನಿಯಂತ್ರಣರಹಿತ ಸಿಗರೇಟು, ಕುಡಿತಗಳು ಅವರನ್ನು ನೀಗಿಕೊಳ್ಳುವಂತೆ ಮಾಡಿದವು. ಅವೆರಡೂ ಅವರ ಚಿಂತನೆ ಮತ್ತು ಕ್ರಿಯಾಶೀಲತೆಗಳ ಸಂಗಾತಿಗಳೇ ಆಗಿದ್ದವು. ಪ್ರತಿ ಚುನಾವಣೆಗಳು ಬಂದಾಗ ಕರ್ನಾಟಕದಲ್ಲಿ ಯಾವ ರಾಜಕೀಯ ಪಕ್ಷಗಳ ಬಗ್ಗೆ ಸಾಮಾನ್ಯರ ಒಲವು ಏನೇನಿದೆ ಎಂಬ ಚುನಾವಣಾಪೂರ್ವ ಸಮೀಕ್ಷೆಯನ್ನೂ ಕೂಡ ಭಾರತ ಚುನಾವಣಾ ಆಯೋಗಕ್ಕೆ, ಕರ್ನಾಟಕ ಚುನಾವಣಾ ಆಯೋಗಕ್ಕೆ ವರದಿ ಮಾಡುತ್ತಿದ್ದರು.
ಗೆಳೆಯರೂ ಗುರುವೂ ಆಗಿದ್ದ ಅವರಿಂದ ನಾನು ರಂಗಭೂಮಿಯನ್ನು ಕಲಿತಂತೆ ಭಾಷಾವಿಜ್ಞಾನದ ಕ್ಲಿಷ್ಟ ಸಿದ್ಧಾಂತಗಳನ್ನೂ ಕಲಿತಿದ್ದೇನೆ. ದೊಡ್ಡ ಗುರು ಅಲ್ಲಮನ ಭಾಷಾ ವಿಜ್ಞಾನವನ್ನು ದರ್ಶನ ಮಾಡಿಸಿದವರೇ ಅವರು. ಕವಿರಾಜ ಮಾರ್ಗದ ಭಾಷಾ ಶಾಸ್ತ್ರವನ್ನು ಅರ್ಥೈಸಿದಂತೆಯೇ ಸಸೂರ್, ಡೆರಿಡಾರನ್ನೂ ಪರಿಚಯಿಸಿದ್ದಾರೆ. ಹಳೆಮನೆ ಹೊಸಮನೆಗೆ ಹೋದರು. ಆದರೆ ಅನೇಕ ವಿಷಯಗಳಲ್ಲಿ ತುಂಬಾ ನಿಷ್ಠುರವಾಗಿಯೇ ಇದ್ದ ಅವರು ಅಮಾನವೀಯವಾದದ್ದನ್ನು ಕಂಡಾಗ ಜಾತಿ, ಮತ, ಚಿಲ್ಲರೆ ರಾಜಕೀಯದ ವಿಷಯ ಬಂದಾಗ ವ್ಯಗ್ರವಾಗಿ ಬಿಡುತ್ತಿದ್ದರು. ಓದದ ಬರೆಯದ ಕನ್ನಡ ಮೇಷ್ಟ್ರುಗಳ ಬಗ್ಗೆ ಅವರಿಗೆ ಅಪಾರ ಸಿಟ್ಟಿತ್ತು. ಅನೇಕ ಮೀಟಿಂಗ್‌ಗಳಲ್ಲಿ, ಸಭೆ, ವಿಚಾರ ಸಂಕಿರಣಗಳಲ್ಲಿ ತಮ್ಮ ಸ್ಪಷ್ಟ ನಿಲುವುಗಳಿಗೆ ಅವರು ಹೆಸರಾಗಿದ್ದರು. ವಿಶೇಷಣಗಳಲ್ಲಿ ಹೂತು ಹೋಗದ ಅವರ ವ್ಯಕ್ತಿತ್ವ ಒಬ್ಬ ಸಾಮಾನ್ಯ ಹಳ್ಳಿಗನದಾಗಿತ್ತು. ಹಾಲುಕೋಣದಿಂದ ಹೊರಟು ಹಾಲುಕೊಣ ತಲುಪಿದ ಹಳೆಮನೆ ಮೈಸೂರಿನ ಮನೆಮಾತಾಗಿದ್ದ ವ್ಯಕ್ತಿ. ರಾಜ್ಯಾದ್ಯಂತ ಒಂದು ಹೊಸತನಕ್ಕೆ ತಹತಹಿಸುತ್ತಿದ್ದ ವ್ಯಕ್ತಿ. ಉತ್ತಮ ಬದುಕನ್ನು ಜನಜೀವನದಲ್ಲಿ ಕಾಣಬೇಕೆಂಬ ತವಕವಿದ್ದ ವ್ಯಕ್ತಿ.
ರಂಗಭೂಮಿಯೂ ಸೇರಿದಂತೆ ಅನೇಕ ಶಿಸ್ತುಗಳಲ್ಲಿ ಪರಿಣತಿ ಇದ್ದ ಹಳೆಮನೆ ಸಾಫ್ಟ್‌ವೇರ್ ಡಿಸೈನ್ನಲ್ಲೂ ನಿಷ್ಣಾತರಾಗಿದ್ದರು. ಜನಮಾಧ್ಯಮಗಳ ಸಂಗಾತಿ ಅವರಾಗಿದ್ದರು. ಸೃಜನಶೀಲತೆ ಮತ್ತು ಸಾಮಾಜಿಕ ಚಿಂತನೆ ಅವರ ಬದುಕಾಗಿತ್ತು. ಅನೇಕ ವಿಷಯಗಳಲ್ಲಿ ನನ್ನ ಮೇಲೆ ಸಿಟ್ಟು, ಪ್ರೀತಿ ಎರಡನ್ನೂ ಇಟ್ಟುಕೊಂಡಿದ್ದ ಹಳೆಮನೆ ಮೂರುದಶಕಗಳ ಸ್ನೇಹದಲ್ಲಿ ಕಲಿಸಿದ ಜನಪರತೆಯ ಪಾಠಗಳು ಅನಂತವಾದವು. ’ನೀಗಿಕೊಂಡ ಸಂಥ’ ಕನ್ನಡದ ಪ್ರಸಿದ್ಧ ನಾಟಕಗಳಲ್ಲೊಂದು. ಕಿ.ರಂ.ನಾಗರಾಜರ ಈ ನಾಟಕವನ್ನು ನಾಗಾಭರಣ ಅಭಿನಯಿಸುತ್ತಾರೆ. ಇನ್ನಷ್ಟು ದಿವಸ ನಮ್ಮ ಜೊತೆ ಇರಬಹುದಿದ್ದ ಹಳೆಮನೆ ತಮ್ಮ ಕನಸುಗಾರಿಕೆ ಮತ್ತು ಅವಿರತ ದುಡಿಮೆಯ ನಡುವೆ ತಮ್ಮನ್ನು ತಾವೇ ನೀಗಿಸಿಕೊಂಡರೆನಿಸುತ್ತದೆ. ನನ್ನ ಮೇಜಿನ ಮೇಲಿನ ಅವರು ಸಂಪಾದಿಸುತ್ತಿದ್ದ ’ಅರಹು ಕುರುಹು’ ಪತ್ರಿಕೆ, ಟೀಪು ಕುರಿತ ಲಾವಣಿ, ಧರ್ಮಪುರದ ದೇವದಾಸಿ ಮದರ್ ಕರೇಜ್ ನಾಟಕಗಳ ಬ್ರೋಚರ್, ಹಳೆಮನೆ-ಬ್ರೆಕ್ಟ್ ಎಂಬ ನನ್ನ ಲೇಖನ ಎಲ್ಲವೂ ನೆನಪೂ ಹೌದು; ದುಃಖವೂ ಹೌದು.
Subscribe to:
Post Comments (Atom)
ಹಿಂದಿನ ಬರೆಹಗಳು
-
▼
2011
(92)
-
▼
July
(11)
- ಕಲಾಲೋಕಕ್ಕೆ ರೆಕ್ಕೆ-ಪುಕ್ಕ ಕಟ್ಟಿಕೊಟ್ಟ ಹುಸೇನ್
- ಶರಣ ಮಾರ್ಗ (ರೂಪಕ)
- ಜಾನಪದ: ಒಂದಿಷ್ಟು ವಿಚಾರಗಳು
- ಅನನ್ಯ ಕಲಾಕೃತಿ ಮೂಡಬೇಕಾದರೆ ಅಸಾಧ್ಯ ಪರಿಶ್ರಮ ಬೇಕೇ ಬೇಕು
- ಕರ್ನಾಟಕ ರತ್ನ ಪ್ರಶಸ್ತಿಯ ಪ್ರತಿಭೆಯಲ್ಲಿ ದೇಜಗೌ
- ಕೆಂಪೇಗೌಡರು ಕಟ್ಟಿದ ಪೇಟೆ, ದೇಗುಲಗಳು....
- ನೀಗಿಕೊಂಡ ಹಳೆಮನೆ
- ನಿವೃತ್ತಿ ವಯೋಮಿತಿ ಏರಿಕೆ ನಿವೃತ್ತಿ ವಯೋಮಿತಿ ಏರಿಕೆ ಯುವ ...
- ನಿತ್ಯ ನಿರಂಜನ ಅಲ್ಲಮ ಪ್ರಭುದೇವರು
- ದೇವದುರ್ಗದ ಈರಣ್ಣ
- ಅತ್ಯುತ್ತಮ ಸಂಘಟನಾಕಾರ ಕೆ.ಟಿ.ರವೀಂದ್ರಕುಮಾರ್
-
▼
July
(11)
No comments:
Post a Comment