Friday, July 22, 2011

ಅನನ್ಯ ಕಲಾಕೃತಿ ಮೂಡಬೇಕಾದರೆ ಅಸಾಧ್ಯ ಪರಿಶ್ರಮ ಬೇಕೇ ಬೇಕು

ಡಾ.ದೊಡ್ಡರಂಗೇಗೌಡಸಂದರ್ಶನ: ಭಾನುಮತಿ ಚಿತ್ರಗಳು: ಶರಣ್ ಶಹಾಪುರ

ವಿಧಾನ ಪರಿಷತ್ ಸದಸ್ಯರಾಗಿದ್ದೀರಿ. ಕನ್ನಡ ನಾಡು-ಭಾಷೆ ಎದುರಿಸುತ್ತಿರುವ ಸಮಸ್ಯೆಗಳ ಕುರಿತಂತೆ ಧ್ವನಿ ಎತ್ತಲು, ಸರ್ಕಾರದ ಕಣ್ಣು ತೆರೆಸಲು ಇದು ಸದವಕಾಶ. ಇದನ್ನು ಹೇಗೆ ಬಳಸಿಕೊಳ್ಳುತ್ತಿದ್ದೀರಿ?
ಒಬ್ಬ ವಿಧಾನ ಪರಿಷತ್ತಿನ ಸದಸ್ಯನಾಗಿ... ಕನ್ನಡದ ಸಮಸ್ಯೆಗಳು ತಲೆಯೆತ್ತಿದಾಗೆಲ್ಲಾ ವಿಧಾನ ಪರಿಷತ್ತಿನಲ್ಲಿ ಕಲಾಪದ ಸಂದರ್ಭದಲ್ಲಿ ದೊಡ್ಡ ದನಿ ಎತ್ತಿ ಪ್ರಸ್ತಾಪಿಸುತ್ತೇನೆ. ಇದಕ್ಕೆ ಸಂಬಂಧಿಸಿದ ಮಂತ್ರಿಗಳ ಬಳಿಯೂ ಮಾತಾಡುತ್ತೇನೆ. ಕನ್ನಡಿಗರಾಗಿ ನಾವು ಮಾಡಬೇಕಾದ ಕಾರ್ಯಗಳು ಅನಂತವಾಗಿವೆ. ಸಮಯ ಕೂಡಿ ಬಂದಾಗ ಸನ್ಮಾನ್ಯ ಮುಖ್ಯ ಮಂತ್ರಿಗಳ ಬಳಿಯೂ ವಿಷಯ ಚರ್ಚಿಸುತ್ತೇನೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೊಡನೆ ಕೂಲಂಕಷವಾಗಿ ಇಂಥ ವಿಷಯಗಳು ಬಂದಾಗ ನಾವು ಏನೇನು ಮಾಡಬಹುದು ಎಂದೆಲ್ಲಾ ಆಲೋಚಿಸಿ ಕ್ರಿಯಾಶೀಲರಾಗಿದ್ದೇವೆ. ಅವರೂ ಸಕ್ರಿಯವಾಗಿ ಸ್ಪಂದಿಸುತ್ತಾರೆ. ನಾನು ಎಲ್ಲೇ ಉಪನ್ಯಾಸಗಳಿಗೆ ಹೋಗಲಿ, ಎಲ್ಲೇ ವಿಚಾರ ಸಂಕಿರಣಗಳಲ್ಲಿ ಪಾಲ್ಗೊಳ್ಳಲಿ, ಸಭೆ ಸಮಾರಂಭಗಳಲ್ಲಿ ಪಾಲ್ಗೊಂಡ ಎಡೆಯಲ್ಲೆಲ್ಲಾ ೧೯೬೫ರಿಂದಲೂ ಕನ್ನಡದ ಸಮಸ್ಯೆಗಳನ್ನು ಬಹಿರಂಗವಾಗಿ ಚರ್ಚಿಸಿ, ಜನರನ್ನು ಇತ್ಯಾತ್ಮಕ ಹಾದಿಯಲ್ಲಿ ಚಿಂತಿಸಿ ಕಾರ್ಯೋನ್ಮುಖರಾಗುವಂತೆ ಮಾಡುತ್ತಾ ಬಂದಿದ್ದೇನೆ. ಕನ್ನಡ ಚಳವಳಿಯ ಎಲ್ಲ ಹೋರಾಟಗಳಲ್ಲೂ ನಾನಿದ್ದೇನೆ, ಇರುತ್ತೇನೆ. ಯಾವತ್ತೂ ಕನ್ನಡದ ಕೆಲಸಗಳಿಗೆ ನಾ ಹಿಂದೆ ಬಿದ್ದಿಲ್ಲ!

ಜಾನಪದ ನಿಮ್ಮ ಆಸಕ್ತಿಯ ಕ್ಷೇತ್ರ. ಜಾನಪದ ಕ್ಷೇತ್ರದಲ್ಲೇ ನಿಮ್ಮ ಪಿಎಚ್‌ಡಿ ಅಧ್ಯಯನವನ್ನೂ ಮಾಡಿದ್ದೀರಿ. ಈ ಕ್ಷೇತ್ರದಲ್ಲಿ ಆಗಬೇಕಾದ ಕೆಲಸಗಳು ಯಾವುವು?
ಜಾನಪದ-ನನ್ನ ಆಸಕ್ತ ವಿಷಯ; ಹೃದಯಾಂತರಾಳದಿಂದ ಜಾನಪದವನ್ನು ಆರಾಧಿಸಿದವನು ನಾನು; ಹಳ್ಳಿ ಹಳ್ಳಿ ಸುತ್ತಿ ೧೯೭೦ರಿಂದಲೂ ಜಾನಪದ ಗೀತೆಗಳನ್ನು ಸಂಗ್ರಹಿಸಿದ್ದೇನೆ. ಈ ನಾಲ್ಕು ದಶಕಗಳ ಕಾಲವೂ ಜಾನಪದದ ಬಗೆಗೆ ಲೇಖನಗಳನ್ನು ಬರೆಯುತ್ತಾ ಬಂದಿದ್ದೇನೆ. ಆ ಎಲ್ಲ ಲೇಖನಗಳಲ್ಲಿ ಕೆಲವನ್ನು ಜೀವಂತ ಜಾನಪದ ಎಂದು ಪುಸ್ತಕ ರೂಪದಲ್ಲೂ ಪ್ರಕಟಿಸಿದ್ದೇನೆ. ಸಾವಿರಾರು ಭಾಷಣಗಳನ್ನು (ನಾಡಿನಾದ್ಯಂತ) ಮಾಡಿದ್ದೇನೆ. ಅಮೇರಿಕಾದ ಸಂಘ ಸಂಸ್ಥೆಗಳಲ್ಲೂ ನಾನು ಉಪನ್ಯಾಸಗಳನ್ನು ನೀಡಿದ್ದೇನೆ. (ಉದಾ-ಪಂಪ ಕನ್ನಡ ಕೂಟ. ಡೆಟ್ರಾಯಿಟ್. ಅಮೆರಿಕಾ: ಶ್ರೀ ವಿದ್ಯಾರಣ್ಯ ಕನ್ನಡ ಕೂಟ. ಇಲಿನಾಯ್; ಒಟ್ಟು ಹದಿನಾರು ಕಡೆ ನಾನು ನನ್ನ ಹೆಂಡತಿ ಕನ್ನಡ ಜಾನಪದ ಸಂಪದದ ಬಗ್ಗೆ ಪ್ರೌಢ ಉಪನ್ಯಾಸಗಳನ್ನು ನೀಡಿದ್ದೇವೆ. ಆಸ್ಟ್ರೇಲಿಯಾ ಬಾನುಲಿಯಲ್ಲೂ ಎರಡು ಬಾರಿ ಸುದೀರ್ಘವಾಗಿ ಮಾತಾಡಿದ್ದೇನೆ. ಅದು ವಿಶ್ವಾದ್ಯಂತ ಪ್ರಸಾರವಾಗಿದೆ. ವಿಶ್ವ ಕನ್ನಡ ಸಮ್ಮೇಳನ ಶುಭ ಸಂದರ್ಭಗಳಲ್ಲಿ ವಿಶೇಷ ಲೇಖನಗಳನ್ನು ನಾನೂ, ನನ್ನ ಸಂಗಾತಿ ಡಾ.ಕೆ.ರಾಜೇಶ್ವರಿ ಗೌಡ ಬರೆದಿದ್ದೇವೆ. ಅವೆಲ್ಲಾ ಪ್ರಕಟವಾಗಿದೆ. ನನ್ನ ಪಿಎಚ್‌ಡಿ ಅಧ್ಯಯನದ ವಿಷಯ: ಕನ್ನಡ ನವೋದಯ ಕಾವ್ಯ. ಒಂದು ಸಮಗ್ರ ಅಧ್ಯಯನ (೧೯೦೩ ರಿಂದ ೨೦೦೩ರವರೆಗೆ) ಜಾನಪದ ಗೀತೆಗಳ, ಕಥೆಗಳ, ಒಗಟುಗಳ, ಗಾದೆಗಳ, ಲಾವಣಿಗಳ ಸಂಚಯ ಇನ್ನೂ ಆಗಬೇಕಾಗಿದೆ. ಆಗಿರುವುದು ಆಂಶಿಕ. ಬೆಟ್ಟದಷ್ಟು ಬೆಳೆ ಇದೆ. ಸಂಗ್ರಹ ಆಗಲೇ ಬೇಕು. ವರ್ಗೀಕರಣ ಆಗಬೇಕು. ಕೃತಿಗಳ ರೂಪದಲ್ಲಿ ಸಚಿತ್ರವಾಗಿ ದಾಖಲಾಗಬೇಕು. ಹಳಬರೆಲ್ಲಾ ಕಾಲನ ಕ್ರೂರ ದವಡೆಗೆ ಸಿಲುಕಿ ಇಲ್ಲವಾಗುತ್ತಿದ್ದಾರೆ. ಅಂಥವರ ಬಲಿ ಜಾನಪದ ಗೀತೆ ನಿಧಿಯೇ ಇದೆ. ಅದು ಅನಾವರಣ ಆಗಬೇಕಾದ ಅನಿವಾರ್ಯತೆ ಇದೆ.
ಜಾನಪದ ಕಲೆಗಳು ಅಗಣಿತ. ಎಲ್ಲವೂ ವ್ಯವಸ್ಥಿತವಾಗಿ ದಾಖಲೀಕರಣ (ಆoಛಿumeಣಚಿಣioಟಿ) ಆಗಲೇಬೇಕಾಗಿದೆ. ಆಗಿರುವ ಕೆಲಸ ಏನೇನೂ ಸಾಲದು (ಈ ಕಾರ್ಯ ಎಷ್ಟು ಮಾಡಿದರೂ ಮುಗಿಯದು!) ಸೋಮನ ಕುಣಿತ, ಪಟದ ಕುಣಿತ, ಹಲಗೆ ಕುಣಿತ, ಬೀಸು ಕಂಸಾಳೆ, ಕೋಲಾಟ, ಸೋಬಾನೆ ಪದಗಳು ಇತ್ಯಾದಿ ಇತ್ಯಾದಿ ಎಲ್ಲವೂ ಚಿತ್ರೀಕರಣ ಆಗಬೇಕು. ಯಕ್ಷಗಾನ, ಕೋಲ, ನಾಗಮಂಡಲ ಮುಂತಾಗಿ ಪ್ರತಿಯೊಂದು ಜಾನಪದೀಯ ಕಲೆಯೂ ದೃಶ್ಯ ಮಾಧ್ಯಮದಲ್ಲೇ ದಾಖಲಾಗಬೇಕು.

ಜಾನಪದ ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ಘೋಷಣೆಯಾಗಿದೆ. ಈ ವಿಶ್ವವಿದ್ಯಾಲಯದ ಮೂಲಕ ಏನನ್ನು ಸಾಧಿಸಬಹುದು? ಈ ವಿಶ್ಯವಿದ್ಯಾಲಯದ ರೂಪುರೇಷೆಗಳು ಹೇಗಿರಬೇಕು ಎಂದು ಬಯಸುತ್ತೀರಿ?
ಜಾನಪದ ವಿಶ್ವವಿದ್ಯಾಲಯ ಆಗಬೇಕೆಂದು ವಿಧಾನ ಪರಿಷತ್ತಿನಲ್ಲೂ ಬೇರೆ ಬೇರೆ ಸಂಘ ಸಂಸ್ಥೆಗಳಲ್ಲೂ ಕೋಲಾರದ ಆದಿಮ ಮುಂತಾದ ಸಂಸ್ಥೆಯ ಉತ್ಸವಗಳಲ್ಲೂ ವಿವರವಾಗಿ ಉಪನ್ಯಾಸಗಳನ್ನೂ ನೀಡಿದ್ದೇನೆ. ಕರ್ನಾಟಕ ರಾಜ್ಯ ಸರ್ಕಾರ ಸಕ್ರಿಯವಾಗಿ ಸ್ಪಂದಿಸಿದೆ. ಹಾವೇರಿ ಜಿಲ್ಲೆಯ ಶಿಗ್ಗಾವಿ ಬಳಿ ಗೋಟಗೊಡಿ ಪಕ್ಕವೇ ವಿಸ್ತಾರ ಭೂಮಿಯಲ್ಲಿ ಜಾನಪದ ವಿಶ್ವವಿದ್ಯಾಲಯದ ಪ್ರಾರಂಭದ ಎಲ್ಲ ಪ್ರಕ್ರಿಯೆಗಳು ಸಾಂಗೋಪಾಂಗವಾಗಿ ನಡೆಯುತ್ತಿವೆ. ಜಾನಪದ ಮಹಾನ್ ಸಾಗರದಂತೆ; ವಿಶಾಲವಾದ ಅಂಬರದಂತೆ; ಬೃಹತ್ ಹಿಮಾಲಯದಂತೆ. ಅಗಣಿತ ವಿಭಾಗಗಳನ್ನು ಪ್ರಾರಂಭಿಸಬಹುದು. ಸಮರ್ಪಕವಾಗಿ ಸಮಗ್ರ ಅಧ್ಯಯನಕ್ಕೆ ಅನುವು ಮಾಡಿಕೊಡಬಹುದು.
೧) ಶ್ರವ್ಯ ಕಲೆಗಳು
೨) ದೃಶ್ಯ ಕಲೆಗಳು
೩) ಪ್ರದರ್ಶಕ ಕಲೆಗಳು
೪) ಕೃಷಿ ಸಂಬಂಧಿತ ಜಾನಪದ
೫) ವೃತ್ತಿಮೂಲ ಜಾನಪದ
ಈ ಎಲ್ಲ ವಿಭಾಗಗಳನ್ನೂ ಪ್ರಾರಂಭಿಸಿ ಈ ಮಣ್ಣಿನ ಸೊಗಡಿಗೆ ಅನುಗುಣವಾಗಿ, ಇಲ್ಲಿನ ಕನ್ನಡ ಸಂಸ್ಕೃತಿಯ ಹಿನ್ನೆಲೆಯಲ್ಲಿ ನಮ್ಮ ಜಾಯಮಾನಕ್ಕೆ ಸಂಬಂಧಿಸಿದಂತೆ ಶಾಸ್ತ್ರೀಯ ಅಧ್ಯಯನಕ್ಕೆ ಮೊದಲು ಕಾರ್ಯಕರ್ತರನ್ನು ತಯಾರು ಮಾಡಬೇಕು. ಆನಂತರ ಪಂಡಿತ ಪದವೀಧರರನ್ನು ತಜ್ಞರನ್ನು ಸಂಶೋಧಕರನ್ನು ತಯಾರು ಮಾಡಬೇಕು. ತಜ್ಞ ಜಾನಪದ ಪಡೆಯನ್ನೇ ಕಟ್ಟಬೇಕು. ಸಂಶೋಧನೆ ಪ್ರಕಟಣೆಗೆ ಕಲಿಕೆಗೆ-ಎಲ್ಲಕ್ಕೂ ಪ್ರಶಿಕ್ಷಣ ನೀಡುತ್ತಾ ತಾಲೀಮು ಮುಖಾಂತರ ಅಳಿಯುತ್ತಿರುವ ಜಾನಪದೀಯ ಸಾಹಿತ್ಯ/ ಸಂಗೀತ/ ನಾಟಕ/ ಶಿಲ್ಪ/ ನರ್ತನ/ ವೈದ್ಯ/ ಆಚಾರ/ ವಿಚಾರ/ ಜಾತ್ರೆ/ ಉತ್ಸವ/ ಹಬ್ಬ/ ಹರಿದಿನ ಹೀಗೆ ಅನಂತಮುಖಿ ಜಾನಪದದ ವೈಜ್ಞಾನಿಕ ಅಧ್ಯಯನ ವ್ಯವಸ್ಥಿತವಾಗಿ ಸಾಗುವಂತೆ ಜಾನಪದ ವಿಶ್ವವಿದ್ಯಾಲಯ ನಿರಂತರವಾಗಿ ಕಾರ್ಯೋನ್ಮುಖವಾಗಿ ಬಿಡುವಿರದೆ ದುಡಿಮೆ ಬೇಕಾಗಿರುತ್ತದೆ. ನಮ್ಮ ಜಾನಪದೀಯ ಸಂಸ್ಕೃತಿಯನ್ನು ಆಮೂಲಾಗ್ರವಾಗಿ ವಿಶ್ವವಿದ್ಯಾಲಯಗಳು ಕಟ್ಟಿಕೊಡಲು ಪ್ರೇರಕ/ಪೂರಕ-ಆಕರತಾಣಗಳಾಗಬೇಕಾಗಿದೆ.

ಕನ್ನಡ ಕಾವ್ಯ ಕ್ಷೇತ್ರದಲ್ಲಿ ಕೃಷಿ ಮಾಡಿದ್ದೀರಿ. ನಿಮ್ಮ ಕೃತಿಗಳಿಗೆ ಸರಿಯಾದ ಮಾನ್ಯತೆ ದಕ್ಕಿಲ್ಲ ಎಂಬ ಹಳಹಳಿಕೆ ನಿಮಗಿದೆ. ಈ ಬಗ್ಗೆ ಇತ್ತೀಚಿಗೆ ಬಹಿರಂಗ ಸಭೆಯೊಂದರಲ್ಲಿ ಮಾತನಾಡಿದ್ದೀರಿ. ಇದು ಯಾಕೆ?
೧೯೬೧ರಿಂದಲೂ ಸಕ್ರಿಯವಾಗಿ ಸಾಹಿತ್ಯದಲ್ಲಿ ನಾನು ನನ್ನ ಇಡೀ ಬದುಕನ್ನೇ ತೊಡಗಿಸಿಕೊಂಡಿದ್ದೇನೆ. ಇದುವರೆಗೆ ೯೦ ಕೃತಿಗಳನ್ನು ಪ್ರಕಟಿಸಿದ್ದೇನೆ. ಸಾಹಿತ್ಯ ಕ್ಷೇತ್ರದಲ್ಲಿ ವಿಪರೀತ ರಾಜಕೀಯವಿದೆ. ಜಾತೀಯತೆ ಇದೆ. ಅದೆಲ್ಲಾ ಹೇಗಿದೆ ಎಂದರೆ-ಕೆರೆಯ ಒಳಗೆ ದಡದಲ್ಲಿ ಇರುವ ಉಸುಕಿನಂತೆ! ಮೇಲ್ನೋಟಕ್ಕೆ ನೀರಂತೆ ಕಂಡರೂ ಕಾಲಿಟ್ಟರೆ ಆಗ ಗೊತ್ತಾಗುತ್ತದೆ ಅದು ಕೆಸರಿನ ಹೊಂಡ ಎಂದು! ಅಲ್ಲಿ ಸಿಲುಕಿಕೊಂಡರೆ ಮುಗಿಯಿತು ಕಥೆ! ಹೀಗಾಗಿ ಶೂದ್ರ ಸಾಹಿತಿಗಳನ್ನು ತುಳಿಯುವವರೇ ಹೆಚ್ಚು! ಇವರನ್ನು ದಲಿತರೂ ಸೇರಿಸಿಕೊಳ್ಳುವುದಿಲ್ಲ. ಹೀಗಾಗಿ ಬುದ್ಧಿ ಜೀವಿಗಳ ಪಾಲಿಗೆ ಶೂದ್ರರು-ಅಸ್ಪೃಶ್ಯರು! ಸಾಹಿತಿಗಳ ಪಾಡು-ಅಸಂಘಟಿತ ಕಾರ್ಮಿಕರ ಹಾಗೇ!
ನಾನೂ ಎಲ್ಲವನ್ನೂ ಈ ನಾಲ್ಕೂವರೆ ದಶಕಗಳ ಕಾಲ ಸಹಿಸಿಕೊಂಡು ಬಂದೆ. ಇನ್ನೂ ಎಷ್ಟು ದಿನ ಹೀಗೆ ನರಸತ್ತ ಬದುಕನ್ನು ಬಾಳುವುದು ಎಂದು ಜ್ವಾಲಾಮುಖಿಯಾದೆ! ಸಮಾಜದ ಅರ್ಬುದ ರೋಗಗಳಿಗೆ ಮದ್ದು ಮಾಡುವಾಗ ಕೇವಲ ಬರಹದಲ್ಲಿ ಸಿಡಿದೆದ್ದಿದೆ. ಈಗ ಅಂಥ ವಿಷವ್ಯೂಹದ ಬಗೆಗೇನೆ ವ್ಯಗ್ರನಾಗಿದ್ದೇನೆ. ವ್ಯಾಘ್ರನಾಗಿದ್ದೇನೆ. ವ್ಯಾಘ್ರನಾಗಿ ಘರ್ಜಿಸಿದರೂ ಏನೂ ಪ್ರಯೋಜನವಿಲ್ಲ!

ಕನ್ನಡ ಸಿನಿಮಾ ಕ್ಷೇತ್ರದಲ್ಲೂ ದುಡಿದಿದ್ದೀರಿ. ನೂರಾರು ಚಿತ್ರಗೀತೆಗಳನ್ನು ಬರೆದಿದ್ದೀರಿ. ಚಿತ್ರರಂಗದ ನಿಮ್ಮ ಸಾಧನೆ ತೃಪ್ತಿ ತಂದಿದೆಯೇ? ಇತ್ತೀಚಿನ ದಿನಗಳಲ್ಲಿ ಚಿತ್ರರಂಗದಿಂದ ನೀವು ದೂರವೇ ಇದ್ದೀರಿ, ಇದಕ್ಕೇನು ಕಾರಣ? ಚಿತ್ರಗೀತೆಗಳನ್ನು ಕನ್ನಡ ಸಾಹಿತ್ಯ ಕ್ಷೇತ್ರ ಗಂಭೀರವಾಗಿ ಪರಿಗಣಿಸದೇ ಇರಲು ಕಾರಣವೇನು?
೧೯೭೫ ರಿಂದಲೂ ಕನ್ನಡ ಚಲನ ಚಿತ್ರಗಳಿಗೆ ನಾನು ಹಾಡುಗಳನ್ನು ಬರೆಯುತ್ತಾ ಬಂದಿದ್ದೇನೆ. ಇದುವರೆಗೆ ಕನಿಷ್ಠ ೩೦೦೦ ಗೀತೆಗಳನ್ನು ರಚಿಸಿ ಕೊಟ್ಟಿದ್ದೇನೆ. ಹತ್ತು-ಹದಿನೈದು ಚಿತ್ರಗಳಿಗೆ ಸಂಭಾಷಣೆಯನ್ನೂ ಬರೆದಿದ್ದೇನೆ. ಚಿತ್ರಕಥೆಗಳನ್ನು ಹೆಣೆದು ಕೊಟ್ಟಿದ್ದೇನೆ. ಏಳು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಎರಡು ಧ್ವನಿಸುರುಳಿಗಳಿಗೆ ಹಾಗೂ ಸಾಂದ್ರಿಕೆಗಳಿಗೆ ಸಂಗೀತ ನೀಡಿದ್ದೇನೆ. ಹನ್ನೊಂದು ಧ್ವನಿ ಸುರುಳಿಗಳಲ್ಲಿ ಸ್ವತಃ ಹಾಡಿದ್ದೇನೆ.
ತೃಪ್ತಿ ಕಂಡ ದಿನ ಸೃಜನಶೀಲತೆ ನಿಂತು ಹೋಗುತ್ತದೆ. ಜನುಮದ ಜೋಡಿ ಚಿತ್ರದ ನಂತರ ಯಾರೂ ನನ್ನ ಹಾಡು ಬರೆಯಲು ಕರೆದಿಲ್ಲ. ನಿರ್ಮಾಪಕರಾಗಲೀ/ನಿರ್ದೇಶಕರಾಗಲಿ ಕರೆದರೆ ಹೋಗುತ್ತೇನೆ. ಕರೆಯದೆ ಇದ್ದ ಕಡೆ ನಾನಾಗಿ ನಾನು ಹೋಗಿ ಯಾಚಿಸುವುದು ನನ್ನ ಪ್ರವೃತ್ತಿಯಲ್ಲಿಲ್ಲ!
ಹಳೆಯ ಸಂಸ್ಥೆಗಳು ಸ್ಥಗಿತವಾಗಿವೆ. ಹಿರಿಯ ಸಂಗೀತ ನಿರ್ದೇಶಕರು ಮೌನವಾಗಿದ್ದಾರೆ. ಅನುಭವೀ ನಿರ್ದೇಶಕ ಮೌನವಾಗಿದ್ದಾರೆ. ಅನುಭವೀ ನಿರ್ದೇಶಕರು ಮನೆಯಲ್ಲಿ ಕೆಲಸವಿಲ್ಲದೇ ಕೂತಿದ್ದಾರೆ. ಹೊಸಬರು ಅಗಣಿತ ಹುಟ್ಟಿಕೊಳ್ಳುತ್ತಿದ್ದಾರೆ. ಹೀಗಾಗಿ ಕಾಲಕ್ಕೆ ತಕ್ಕಂತೆ-ನಾನೂ ಸಹ ಹಿಂದೆ ಸರಿದಿದ್ದೇನೆ. (ನಿವೃತ್ತನಾಗಿದ್ದೇನೆ).
ಸಾಹಿತ್ಯ, ಸಂಗೀತ, ಕಲೆ, ಪತ್ರಿಕೋದ್ಯಮ, ಶಿಕ್ಷಣ-ರಾಜಕೀಯ.... ಎಲ್ಲ ಕ್ಷೇತ್ರಗಳಲ್ಲೂ ಗುಂಪುಗಾರಿಕೆ ಇದೆ. ಓಡುವ ಶಕ್ತಿ ಇದ್ದವರು ಓಡುತ್ತಾರೆ. ನೋಡುವ ಗುಣ ಇರುವವನು ಸುಮ್ಮನೇನೆ ನೋಡುತ್ತಾ ಕೂಡುತ್ತಾರೆ! ಈಗ ನಾನು ಓಡುವ ಮೂಡಿನಲ್ಲೂ ಇಲ್ಲ. ಓಡುವ ಶಕ್ತಿಯೂ ಇಲ್ಲ. ರಾಜಕೀಯ ಮಾಡಿ ಗೊತ್ತಿಲ್ಲ. ಲಾಬಿ ಇದ್ದರೆ ಬೆಳಕಿಗೆ ಬಂದ ಗುಲಾಬಿ! ಇಲ್ಲ ಅಂದರೆ ಹತಾಶನಾಗಿ ವ್ಯಕ್ತಿ ಆದಾನು ಶರಾಬಿ! ನಾನು ಅಲ್ಲೂ ಇಲ್ಲ; ಇಲ್ಲೂ ಇಲ್ಲ. ಎಲ್ಲೂ ಇಲ್ಲ...! ವಿಶ್ರಾಂತ ಸಂತ ನಾನು ಎಂದರೆ ನಂಬಿ!
ಚಿತ್ರರಂಗಕ್ಕೆ ಈಗ ಸಾಹಿತ್ಯ ಬೇಕಿಲ್ಲ. ಸಂಗೀತವೂ ಬೇಕಾಗಿಲ್ಲ! ಕಾಪಿ ಮಾಡೋದಕ್ಕೆ ಪ್ರತಿಭೆ ಯಾಕೆ ಬೇಕು; ಈಗೆಲ್ಲಾ ಕಾಪಿ-ಕ್ಯಾಟ್ಸ್! ಸೃಜನಶೀಲತೆಯೂ ಇಲ್ಲ... ಸ್ವಾಭಿಮಾನವೂ ಇಲ್ಲ. ಕದಿಯುವ ಕವಿಗಳು; ಹಿಗ್ಗಾಮುಗ್ಗಾ ಕದಿಯುವ ಸಂಗೀತಗಾರರು; ದುಡ್ಡು ದುಡಿಯ ಹೊರಟವರ ದೊಡ್ಡ ದೊಡ್ಡ ದಂಡು! ಹಿಂಡು! ಹಿಂಡು. ಹಣದ ಹಿಂದೆ ದೌಡು! ಗುಣ-ನಾಯಿಪಾಡು. ಸ್ವಂತಿಕೆ ಶೂನ್ಯ. ಚಮಚಾಗಿರಿ ಮಾನ್ಯ. ನಿರ್ಮಾಪಕನ ದೌರ್ಬಲ್ಯಗಳ ನೋಡಿಕೊಂಡು ಟ್ರ್ಯಾಪ್ ಮಾಡುವವನೇ ಈಗ ನಿರ್ದೇಶಕ, ಹೀರೋ-ಹೀರೋಯಿನ್,
ಅವನ ಮಕ್ಕಳು ಮರಿಗೆ ಬರೆಯದಿರುವುದೇ ಲೇಸು ಸ್ವಂತಿಕೆ ಇದ್ದರೆ ಸ್ವೋಪಜ್ಞತೆ ವಿಜಗೀಷು! ಏನನ್ನೂ ಮಾಡಲಾಗದವರು ಚಿತ್ರರಂಗದಲ್ಲೂ ಮಾಡಬಹುದು ಸಮೃದ್ಧ ತೇಲ್‌ಮಾಲೀಷು ಬಿಲೋದಿ ಬೆಲ್ಟ್ ಬರೆದರೆ ಸಾಕು ಕಾಸು-ಸಲೀಸು! ಶ್ರೇಷ್ಠತೆ-ಎಂದರೆ ಅದೇನದು? ಅಂತಾರೆ. ಅದಕ್ಕೆ ಹೀಗೆ ಬರುತ್ತಾರೆ.... ಬಂದವರು ಹಾಗೇ.... ಹೋಗುತ್ತಾರೆ. ಗುಣಮಟ್ಟವಿಲ್ಲ. ಹಣ ಘಟ್ಟವೆಲ್ಲಾ! ಹುಸಿ ಹುಸಿ ಪಟ್ಟವೆಲ್ಲಾ!
ಎಲ್ಲಿ ಕಾಮಾಲೆ ಕಣ್ಣುಗಳು, ಅಲ್ಲಿ ಅರುಚಿ ಹುಣ್ಣುಗಳು ಎಲ್ಲೆಲ್ಲಿ ವಸೀಲಿ ಬಾಜಿಗಳು, ಅಲ್ಲಲ್ಲಿ ಪಡಪೋಸಿ ಡಾಲುಗಳು ಕನ್ನಡದಲ್ಲಿ ನೂರಾರು ಒಳ್ಳೆಯ ಕಥೆ, ಕಾದಂಬರಿಗಳಿವೆ, ಕೃತಿಗಳಿವೆ, ಸಾವಿರಾರು ಶ್ರೇಷ್ಠ ಗೀತೆಗಳಿವೆ. ನಿರ್ಮಾಪಕರೇ ನಿರ್ದೇಶಕರೇ ಕಣ್ತೆರೆದು ನೋಡಿ; ತಿಪ್ಪೆಗಳ ಮೇಲೆ ಬೆಳೆವ ಅಣಬೆಗಳಂತೆ ಚಿತ್ರಗಳು ಹುಟ್ಟಿಕೊಂಡರೆ ಅವುಗಳಿಗೆ ಶತಸಿದ್ಧ ಸಾವು!

ಕನ್ನಡ ಸಿನಿಮಾ ಕ್ಷೇತ್ರ ಮೊದಲಿನಂತಿಲ್ಲ. ಸದಭಿರುಚಿಯ ಸಿನಿಮಾಗಳು ಕಡಿಮೆ ಸಂಖ್ಯೆಯಲ್ಲಿ ನಿರ್ಮಾಣವಾಗುತ್ತಿದೆ. ರೀಮೇಕ್ ಚಿತ್ರಗಳಿಗೆ ನಿರ್ಮಾಪಕರು ಮಣೆ ಹಾಕುತ್ತಿದ್ದಾರೆ. ಯಾಕೆ ಕನ್ನಡ ಚಿತ್ರರಂಗ ನಮ್ಮದೇ ಆದ ಚಿತ್ರಗಳನ್ನು ಕೊಡಲು ವಿಫಲವಾಗುತ್ತಿದೆ?
ಯಾರಿಗೂ ಬೇಕಾಗಿಲ್ಲ... ಅತ್ಯುತ್ತಮ ಕಲಾಕೃತಿ ನಿರ್ಮಾಣ! ಈಗ ಎಲ್ಲೆಲ್ಲೂ ರಿಯಲ್ ಎಸ್ಟೇಟ್ ದಂಧೆ! ಹಡಬಿಟ್ಟಿ ಬಂದ ದುಡ್ಡು ತಂದು ಚಿತ್ರರಂಗಕ್ಕೆ ಸುರಿ...! ಬ್ಲಾಕ್ ಮನಿಯನ್ನು ವೈಟ್ ಮಾಡು...
ಕಲಾ ನೈಪುಣ್ಯ ಬೇಕಿಲ್ಲ. ಸಂಸ್ಕಾರ ಬೇಕಿಲ್ಲ. ಅಭಿರುಚಿ ಬೇಕಾಗೇ ಇಲ್ಲ. ತಾಲೀಮು ಮೊದಲೇ ಇಲ್ಲ. ರಂಗಭೂಮಿ ಅನುಭವ ಇಲ್ಲವೇ ಇಲ್ಲ.
ದುಡ್ಡಿದ್ದವನೇ ಹೆಡ್ಡು!
ಪ್ರತಿಭಾವಂತ ಈಗ ಗೊಡ್ಡ.
ಚಿತ್ರರಂಗ ಸಂಪೂರ್ಣವಾಗಿ ಪಡ್ಡೆ
ಹುಡುಗರ ಷೆಡ್ಡು!
ತಂತ್ರಜ್ಞ ಹಿಂದೆ ಸರಿದು ಗುಲ್ಡು
ಹಿರಿಯ ಕಲಾವಿದ ಆಗಿನ ಕಾಲಕ್ಕೆ ಗೋಲ್ಡು! ಈಗೇನಿದ್ದರೂ ಹಿಡಿದುಕೊಂಡಿರಬೇಕು ಹಳೇ ಷೀಲ್ಡು! ಗಬ್ಬೆದ್ದು ಹೋಗಿದೆ ಕನ್ನಡ ಫಿಲಂ-ಫೀಲ್ಡು!
ರೀ ಮೇಕ್-ಮಾಡೋದು ಸುಲಭ.
ರಾತ್ರಿಯೆಲ್ಲಾ-ಸಿನಿಮಾ ನೋಡು. ಬೇರೆ ಬೇರೆ ಭಾಷೆಯದು ಡಬ್ಬಿಂಗ್ ಮಾಡು. ಶ್ರಮ ಬೇಕಿಲ್ಲ. ಹುಡುಕ ಬೇಕಾಗಿಲ್ಲ ಸ್ಕ್ರಿಪ್ಟು! ಕೊಡಬೇಕಾಗಿಲ್ಲ-ಒಳ್ಳೆಯ ಸಿನಿಮಾ ಗಿಫ್ಟ್! ಸ್ವ-ಮೇಕ್ ಶ್ರಮಜೀವಿಗಳ ಕೆಲಸ. ರೀ-ಮೇಕ್ ಜಾಣರ ಜಿಪುಣರ ಸಾಹಸ.
ಅನನ್ಯ ಕಲಾಕೃತಿ ಮೂಡಬೇಕಾದರೆ ಅಸಾಧ್ಯ ಪರಿಶ್ರಮ ಬೇಕೇ ಬೇಕು. ಅಪೂರ್ವ ದುಡಿಮೆ ಮುಖ್ಯ. ಅದ್ವಿತೀಯ ಆಲೋಚನೆ ಮುಖ್ಯ. ಅಪ್ರತಿಮ ಕೈಂಕರ್ಯ ಇದ್ದರೆ ಮಾತ್ರ ಅತ್ಯುತ್ತಮ ಕಲಾ ಕೃತಿಯ ಅನುಸಂಧಾನ.

ಈಗಿನವರೆಗೆ ಇದೆಯೇ ಅಂಥ ಹುಡುಕಾಟದ ಅಸೀಮ ವ್ಯವಧಾನ?
some-ಖಾನ; ಸಂ-ಗಾನ; ಸಂ-ಗಾನ ಬಜಾನ; ಸಂ-ಸಂ ಖಂಡ, ತುಂಡು, ಬಾಟ್ಲಿ ರೌಂಡು ಇಷ್ಟರಲ್ಲೇ ಪರ‍್ಯವಸಾನ ಎರಡು ಲೌಸೀನ್; ಏಳು ಫೈಟ್, ನಾಲ್ಕು ಹಾಡು, ಒಂದು ಐಟಂ, ಒಂದು ರೇಪು, ಹತ್ತು ರೊಪ್, ರೆಡಿ ಕನ್ನಡ ಸಿನಿಮಾ ಸೊಂಪು!

ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಆಳುವ ಸರ್ಕಾರದ ಒಂದೊಂದೇ ಹಗರಣಗಳು ಹೊರಬರುತ್ತಲೇ ಇವೆ. ಇಡೀ ರಾಜಕೀಯ ಕ್ಷೇತ್ರವೇ ಹೊಲಸೆದ್ದು ಹೋಗಿದೆ. ಇಂಥ ಸನ್ನಿವೇಶದಲ್ಲಿ ಸಾಹಿತಿ-ಕಲಾವಿದರ ನಿಲುವು ಏನಾಗಿರಬೇಕು? ಯಾಕೆ ನಮ್ಮ ಈ ವಲಯ ಈ ಕಠಿಣ ಸಂದರ್ಭದಲ್ಲಿ ಸರಿಯಾದ ಪ್ರತಿಕ್ರಿಯೆಯನ್ನು ನೀಡುತ್ತಿಲ್ಲ?
ಭ್ರಷ್ಟಾಚಾರ ಈಗ ವಿಶ್ವವ್ಯಾಪಿ. ಎಲ್ಲಿಲ್ಲ ಭ್ರಷ್ಟಾಚಾರ ನೀವೇ ಹೇಳಿ! ಹಗರಣಗಳಿಲ್ಲದ ಬದುಕಿಲ್ಲ. ರಾಜಕೀಯ ಇಲ್ಲ. ಇಂದು ಮೀಡಿಯಾ ಢಾಳಾಗಿದೆ. ಅದು ಎಲ್ಲಕ್ಕಿಂತ ಹೆಚ್ಚು ಹಾಳಾಗಿದೆ. ಯಾರನ್ನು ಮೇಲೆತ್ತಬೇಕು... ಹೇಳಿ... ಯಾರನ್ನು ಪಾತಾಳಕ್ಕೆ ತುಳಿಬೇಕು. ಸ್ವಲ್ಪ ಈ ಕಡೆ ಒಂದಿಷ್ಟು ತಳ್ಳಿ!
ಸರ್ವಾಂತರ್ಯಾಮಿ ದೇವರ ಹಾಗೆ ಭ್ರಷ್ಟಾಚಾರ ವಿಶ್ವಮುಖಿ! ಕೆಲವರಿಗೆ ಅದು ಬದುಕೋ ದಾರಿ. ಭ್ರಷ್ಟಾಚಾರ ತೊಲಗ ಬೇಕು ಎಂದು ಹೇಳುವುದು ಸುಲಭ. ಭ್ರಷ್ಟರಾಗದೆ ನಿಯತ್ತಿಂದ ನಡೆಯೋದು ಕಷ್ಟ. ಎಲ್‌ಕೆಜಿ ಮಗುವಿಗೆ ಸೀಟು ಹುಡುಕೋಕೆ ಹೊರಟಾಗಿನಿಂದಲೂ ವ್ಯಕ್ತಿ ಸತ್ತಾಗ ವಿದ್ಯುತ್ ಚಿತಾಗಾರಕ್ಕೆ ಹೆಣ ತಳ್ಳುವ ತನಕ ಎಲ್ಲೆಲ್ಲೂ ಲಂಚ... ಲಂಚ.... ಲಂಚ.... ಸಂಥಿಂಗ್ ಇಲ್ಲ ಅಂದರೆ ಲೈಫ್ ಕೇಸ್ ನಥಿಂಗ್!
ಸಾಹಿತಿ ಶಂಖ ಹೊಡೆದು ಕೊಂಡರೂನು
ಕಲಾವಿದ ಮೈ-ಕೈ ಪರಚಿಕೊಂಡರೂನು
ಬುದ್ಧಿಜೀವಿ ಬೆತ್ತಲೇ ನಿಂತುಕೊಂಡರೂನು
ಲೋಕ್‌ಪಾಲ ಲಂಗು-ಲಗಾಮು ಹಿಡಿದುಕೊಂಡರೂನು ಈ ಜಗತ್ತಿನ ಭ್ರಷ್ಟಾಚಾರ ನಿಲ್ಲುವುದಿಲ್ಲ. ಅದೊಂದು ಅರ್ಬುದ ರೋಗ! ಆಕ್ಟೋಪಸ್ ಅದರ ಲಾಗ! ತೆರೆದ ಮನಸ್ಸಿಗೆ ಇರುವುದಿಲ್ಲ ಬೀಗ ಮುಚ್ಚಿದ ಬದುಕಿಗೆ ಕಪಟ ನಾಟಕದ ನೂರೆಂಟು ರಾಗ.

ಹೈಕಮಾಂಡ್ ಗುಲಾಮಗಿರಿಗೆ ಸಿಲುಕಿರುವ ರಾಷ್ಟ್ರೀಯ ಪಕ್ಷಗಳು ಹೆಜ್ಜೆಹೆಜ್ಜೆಗೂ ಕರ್ನಾಟಕದ ಹಿತಾಸಕ್ತಿಗಳನ್ನು ಬದಿಗೆ ಸರಿಸುತ್ತಿವೆ. ಧ್ವನಿಯಿಲ್ಲದ ಸಂಸದರು ರಾಜ್ಯದ ನೆಲ-ಜಲ-ಅಭಿವೃದ್ಧಿಯ ಕುರಿತಂತೆ ಮಾತನಾಡದೇ ಕುಳಿತಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯದಲ್ಲೂ ಒಂದು ಪ್ರಾದೇಶಿಕ ರಾಜಕೀಯ ಶಕ್ತಿ ಹುಟ್ಟುವ ಅನಿವಾರ್ಯತೆ ಇದೆ ಎಂದು ನಿಮಗೆ ಅನ್ನಿಸುವುದಿಲ್ಲವೆ?
ಪ್ರಾದೇಶಿಕ ಪಕ್ಷದ ಆವಿಷ್ಕಾರಕ್ಕೆ ನಾಡಿನ ರಾಜಕೀಯ ಸಮಯ ಸನ್ನಿಹಿತವಾಗಿದ್ದರೂ ಅದರಿಂದ ಯಾವುದೇ ಪ್ರಯೋಜನ ಆಗುವುದಿಲ್ಲ. ರಾಷ್ಟ್ರೀಯ ಪಕ್ಷವಾದರೆ ಮಾತ್ರ ರಾಷ್ಟ್ರದ ರಾಜಕಾರಣಕ್ಕೆ ಒಂದು ಸಮಾಜಮುಖಿ ಸ್ವರೂಪ ಸಾಧ್ಯವಾಗಬಹುದು. ಇಂದಿನ ಅಗತ್ಯಕ್ಕೆ ಪ್ರಾದೇಶಿಕ ಪಕ್ಷ ಬಹುಮುಖಿ ಆಯಾಮ ನೀಡಲಾಗುವುದಿಲ್ಲ.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇತ್ತೀಚಿಗೆ ಒಂದು ವರದಿಯನ್ನು ರಾಜ್ಯ ಸರ್ಕಾರಕ್ಕೆ ನೀಡಿದೆ. ಈ ವರದಿಯ ಅಂಶಗಳನ್ನು ಸರ್ಕಾರ ಜಾರಿಗೊಳಿಸುವ ನಂಬಿಕೆ ನಿಮಗಿದೆಯೇ?
ಎಲ್ಲ ವರದಿಗಳೂ ನೆನೆಗುದಿಗೆ ಬೀಳುವುದೇ ಅವುಗಳ ಪ್ರಭಾವೀ ಪರಿಧಿ! ಆ ಪರಿಧಿಯಿಂದ ಹೊರ ಬರಲು ಕಾಯಬೇಕು ಅದೂ ತನ್ನ ಸರದಿ!
ರಾಜ್ಯವನ್ನು ಕಾಡುತ್ತಿರುವ ಸಮಸ್ಯೆಗಳ ಪೈಕಿ ಬಹಳ ಮುಖ್ಯವಾದವು ಮತ್ತು ಕೂಡಲೇ ಉತ್ತರ ಕಂಡುಕೊಳ್ಳಬೇಕಾದ ಸಮಸ್ಯೆಗಳು ಯಾವುವು? ಇವುಗಳನ್ನು ಬಗೆಹರಿಸುವುದು ಹೇಗೆ?
೧) ಭ್ರಷ್ಟಾಚಾರ
೨) ಜಾತೀಯತೆ ನಿರ್ನಾಮ
೩) ಖಾಸಗೀ ಮಾಲೀಕತ್ವಗಳ ಕಬಂಧ ಬಾಹುಗಳು
೪) ಶಿಕ್ಷಣದ ರಾಷ್ಟ್ರೀಕರಣ
೫) ನದಿಗಳ ಜೋಡಣೆ
೬) ಯುವಶಕ್ತಿ ಸಂಚಯದ ಅನಿವಾರ್ಯತೆ
೭) ಹೆಣ್ಣಿಗೆ ಸಮಾಜದಲ್ಲಿ ಸರಿಸಮಾನತೆ
೮) ದೇಸೀ ಉತ್ಪಾದನೆಗಳು
೯) ಬಹುಮುಖಿ ಸಮಾಜದಲ್ಲಿ ಸಾಮಾಜಿಕ ನ್ಯಾಯ
೧೦) ಕನ್ನಡಕ್ಕೆ ಆದ್ಯತೆ, ಪ್ರಾಶಸ್ತ್ಯ.

ಮನುಷ್ಯ ಕುಲಂ ತಾನೊಂದೇ ವಲಂ ಎಂದಿದ್ದರು ಪಂಪ. ಅದು ನಮ್ಮ ಬಹು ಇಷ್ಟದ ಸಾಲು. ಆದರಿವತ್ತು ಜಾತಿ ವ್ಯವಸ್ಥೆ ಭೀಕರವಾಗಿ ಸಮಾಜವನ್ನು ಕಾಡುತ್ತಿದೆ. ಪರಿಹಾರ ಎಲ್ಲಿದೆ?
ಅಂತರ ಜಾತೀಯ ವಿವಾಹಗಳೊಂದೇ ಇದಕ್ಕೆ ಶಾಶ್ವತ ಪರಿಹಾರ. ಅಂಥ ಕಾರ್ಯ ಆಗಬೇಕು.

ಶಿಕ್ಷಣ, ಸಾಹಿತ್ಯ, ಸುಗಮ ಸಂಗೀತ, ಚಲನಚಿತ್ರ ಹೀಗೆ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದೀರಿ. ನಿಮಗೆ ಆತ್ಮತೃಪ್ತಿ ಕೊಟ್ಟ ಕ್ಷೇತ್ರ ಯಾವುದು?
ಶಿಕ್ಷಣ, ಸಾಹಿತ್ಯ, ಸಂಗೀತ, ಕಲೆ-ಎಲ್ಲವೂ ಒಂದಕ್ಕೊಂದು ಪೂರಕ. ಅನ್ವೇಷಣೆಗೆ ಪ್ರೇರಕ. ನೆಮ್ಮದಿ ಕಂಡುಕೊಳ್ಳಲು ಸಾರ್ಥಕ.

ಸಾಂಸ್ಕೃತಿಕ ಬದುಕಿನಲ್ಲಿ ಹಲವು ದಶಕಗಳನ್ನು ಕ್ರಮಿಸಿದ ನಂತರ ಹಿಂದಿರುಗಿ ನೋಡಿದಾಗ ಏನನ್ನು ನೆನಪಿಸಿಕೊಳ್ಳಲು ಬಯಸುತ್ತೀರಿ? ಸಾಗಿ ಬಂದ ಹಾದಿಯ ಕುರಿತು ನಿಮಗೆ ಹೆಮ್ಮೆ, ಆತ್ಮತೃಪ್ತಿ ಇದೆಯೇ?
ನಡೆಯುವವನು ಎಡವುತ್ತಾನೆ. ನಿನ್ನೆ ಇಂದಿಗೆ ನಾಂದಿ ಹಾಡುತ್ತಾನೆ. ಇಂದು ನಾಳೆಗೆ ನಾಂದಿ ಹಾಡುತ್ತದೆ. ನಿನ್ನೆಯಿಂದ ಇಂದಿನ ಪಾಠವಿದೆ. ಇಂದಿನಿಂದ ನಾಳೆಗೆ ಮುನ್ನೋಟವಿದೆ.

ಈ ಸಂದರ್ಭದಲ್ಲಿ ಕರವೇ ನಲ್ನುಡಿ ಓದುಗರೊಂದಿಗೆ ಹಂಚಿಕೊಳ್ಳಲು ಬಯಸುವ ಮಾತುಗಳೇನು?
ಕನ್ನಡಿಗರಿಗೆ ಕನ್ನಡದಿಂದಲೇ ಸಕಲ ಶ್ರೇಯಸ್ಸು. ಕನ್ನಡ, ಕರ್ನಾಟಕ, ಮಾನವೀಯತೆ ಮರೆತರೆ ಶೂನ್ಯತೆಯೊಂದೇ ಆಯಸ್ಸು! ಪ್ರೀತಿ, ಕರುಣೆ, ವಿಶ್ವಾಸ ಇದ್ದರೆ ಜೀವನ ಸಾಗಿಸೋ ಹುಮ್ಮಸ್ಸು. ಇಂದು ಬಹಳಷ್ಟು ಯುವ ಪ್ರತಿಭೆಗಳು ನಿಚ್ಚಳವಾಗಿ ತಮ್ಮ ವರ್ಚಸ್ಸನ್ನು ತೋರುತ್ತಿವೆ. ಹಿಂದೆಂದಿಗಿಂತಲೂ ಈಗ ಸುಗಮ ಸಂಗೀತಕ್ಕೆ ಕನ್ನಡ ನಾಡಿನಲ್ಲಿ ಹೊಸ ಪ್ರವಾಹಿತ್ವ ಬಂದಿದೆ. ಈ ಭರತ ಇಳಿತವಾಗದಂತೆ ನೋಡಿಕೊಳ್ಳಬೇಕು ನಮ್ಮ ಜನ. ಪ್ರೇರಣೆ ನೀಡಬೇಕು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿ ಗಣ!
ಈಗಲೂ ಕಾಲ ಮಿಂಚಿಲ್ಲ.... ಯುವ ಸಂಗೀತಗಾರರು, ಸ್ವರ ಸಂಯೋಜಕರು, ನೂತನ ಪ್ರಸ್ತಾರದ ಕಡೆ ಸೃಜನಶೀಲರಾದರೆ ವಿನೂತನ ಕಾಣ್ಕೆ ಉಗಮವಾದೀತು. ಇರಬೇಕು ಎಂದೆಂದೂ ಪ್ರತಿಯೊಬ್ಬರಲ್ಲೂ ಪ್ರಯತ್ನ. ಅಧ್ಯಯನ, ಅಭಿರುಚಿ ಇದ್ದಾಗ ಮಾತ್ರ ಯಶಸ್ಸಿನ ಸಾಧನ ಸೋಪಾನ!

No comments:

Post a Comment