ದೇವರ ಗುಡ್ಡದ ಶಾಸನದ ಒಂದು ಅಧ್ಯಯನ
ದೇವದುರ್ಗ ನಗರವು ತಾಲೂಕು ಕೇಂದ್ರವಾಗಿದ್ದು, ರಾಯಚೂರು ಜಿಲ್ಲಾಕೇಂದ್ರದಿಂದ ವಾಯುವ್ಯ ದಿಕ್ಕಿನಲ್ಲಿ ಸುಮಾರು ೬೫ ಕಿ.ಮೀ. ದೂರದಲ್ಲಿದೆ. ಇದು ನನ್ನ ಹುಟ್ಟೂರು. ನಾನು ಚಿಕ್ಕವನಾಗಿದ್ದನಿಂದಲೂ ಇಲ್ಲಿರುವ ಹಲವಾರು ಕಟ್ಟಡಗಳನ್ನು, ಗುಡಿಗಳನ್ನು, ಬಾವಿಗಳನ್ನು ಕುತೂಹಲಿಯಾಗಿ ನೋಡಿ, ಇತಿಹಾಸ ತಿಳಿಯಲು ಪ್ರಯತ್ನಿಸಿದ್ದೆ; ಆದರೆ ಫಲಕಾರಿಯಾಗಲಿಲ್ಲ. ೧೯೯೯ರ ಇತಿಹಾಸ ದರ್ಶನದಲ್ಲಿ ಪ್ರಕಟವಾದ ಸಂಪ್ರಬಂಧದಲ್ಲಿ, ಚಂದನಕೆರೆ ಗ್ರಾಮವು ದೇವದುರ್ಗ ನಗರಕ್ಕಿಂತಲೂ ಪುರಾತನವಾದದ್ದು ಎಂದು ಪುರಾತತ್ವ ಆಧಾರಗಳಿಂದ ಬರೆದಿದ್ದೆ. ಆಗ ರಾಯಚೂರು ಜಿಲ್ಲೆಯ ಶಾಸನಗಳು ಪ್ರಕಟವಾಗಿರಲಿಲ್ಲ. ೨೦೦೩ರಲ್ಲಿ ಅಧ್ಯಯನದಿಂದ ದೇವದುರ್ಗದ ಇತಿಹಾಸ ತಿಳಿಯುವಂತಾಯಿತು. ಇದು ಒಂದು ರೀತಿಯಿಂದ ನನಗೆ ವೈಯಕ್ತಿಕವಾಗಿ ತುಂಬಾ ಸಂತಸ ನೀಡಿದ ಸಂಶೋಧನೆ ಮತ್ತು ಅಧ್ಯಯನ. ಈ ಶಾಸನವನ್ನು ಮತ್ತು ಶಾಸನದಲ್ಲಿ ಉಲ್ಲೇಖಗೊಂಡಿರುವ ಸ್ಮಾರಕಗಳನ್ನು ಮುಂದೆ ಚರ್ಚಿಸುತ್ತೇನೆ.
ಈ ಶಾಸನವು ನಗರದ ಪೂರ್ವ ದಿಕ್ಕಿನಲ್ಲಿರುವ ಈರಣ್ಣ ದೇವರ ಗುಡ್ಡದ ಶಿಖರದ ಮೇಲಿದೆ. ಈ ಶಿಖರವು ನೆಲಮಟ್ಟದಿಂದ ಸುಮಾರು ೩೦೦ ಮೀ. ಎತ್ತರದಲ್ಲಿದೆ. ಈ ಗುಡ್ಡದ ಮೇಲಿರುವ ಶಾಸನದವರೆಗೂ ಪೂರ್ವ ದಿಕ್ಕಿನಿಂದ ಅಂದರೆ ಗೌರಂಪೇಟೆಯಿಂದಲೂ ಮತ್ತು ಪಶ್ಚಿಮ ದಿಕ್ಕಿನಿಂದಲೂ ಅಂದರೆ ದೇವದುರ್ಗದಿಂದಲೂ ಹತ್ತಲು ಅನುಕೂಲವಾಗುವಂತೆ ಗುಂಡುಗಳನ್ನು ಮೆಟ್ಟಲುಗಳಂತೆ ಜೋಡಿಸಲಾಗಿದೆ. ಸ್ವಲ್ಪ ಕಷ್ಟವಾದರೂ ಶಿಖರದವರೆಗೆ ಹತ್ತಬಹುದಾಗಿದೆ.
ಅಪರೂಪದ ಚಿತ್ರ-ಶಾಸನ
ಈ ಶಾಸನವನ್ನು ಕೆತ್ತಲು ಒಂದು ಮಟ್ಟಿಗೆ ನಿಂತಿರುವ ಗುಂಡನ್ನು ಆರಿಸಲಾಗಿದೆ. ಇದರ ಎತ್ತರ ೯ಮೀ ಇದೆ. ಈ ಗುಂಡಿನ ತುದಿಯಲ್ಲಿ ಇರುವ ಒಂದು ನೈಸರ್ಗಿಕವಾಗಿ ನಿರ್ಮಾಣಗೊಂಡಿರುವ ಮುಂಚಾಚನ್ನು ಕೃತಕವಾಗಿ ಮಾರ್ಪಡಿಸಿ, ಈ ಮುಂಚಾಚಿನ ಅಡಿಯಲ್ಲಿ ಕಲ್ಲನ್ನು ಸಮತಳವಾಗುವಂತೆ ಕೆತ್ತಿ, ಇಂಥ ಸಪಾಟಗೊಂಡ ಭಾಗದ ಮೇಲೆ ಶಾಸನ ಮತ್ತು ಉಬ್ಬುಶಿಲ್ಪಗಳನ್ನು ಕೆತ್ತಲಾಗಿದೆ. ಈ ಕಾರಣಗಳಿಂದಾಗಿ ಮಾನವನ ಕೈಗಳಿಂದಲೂ ನೈಸರ್ಗಿಕ ಹೊಡೆತಗಳಿಂದಲೂ ಈ ಶಾಸನ ಸುರಕ್ಷಿತವಾಗಿದೆ. ಉಬ್ಬುಶಿಲ್ಪಗಳು ಮತ್ತು ಶಾಸನದ ಅಕ್ಷರಗಳು ಇಂದಿಗೂ ಸ್ಫುಟವಾಗಿ ಕಾಣುತ್ತವೆ. ಈ ಶಾಸನ ಮತ್ತು ಉಬ್ಬುಶಿಲ್ಪಗಳನ್ನು ಕೆತ್ತಲು ಅನುಕೂಲವಾಗಲೆಂದು ಮುಂಚಾಚಿನಲ್ಲಿ ಎರಡು ಕಬ್ಬಿಣದ ಉಂಗುರಗಳನ್ನು ಹೊಡೆಯಲಾಗಿದೆ. ಈ ಉಂಗುರಗಳಿಗೆ ಹಗ್ಗಗಳನ್ನು ಸಿಕ್ಕಿಸಿ ಬಹುಶಃ ತೊಟ್ಟಿಲು ಅಥವಾ ತೂಗುಮಣೆಗಳನ್ನು ನೇತುಹಾಕಿ ಶಾಸನವನ್ನು ಕೆತ್ತಿರುವುದು ನೋಡಿದರೆ ಗೊತ್ತಾಗುತ್ತದೆ.
ಈ ಶಾಸನವನ್ನು ಎರಡು ಭಾಗಗಳಲ್ಲಿ ಕೆತ್ತಲಾಗಿದೆ. ಶಾಸನದ ಎಡಭಾಗದಲ್ಲಿ ಶಾಸನವನ್ನು ಕೆತ್ತಲಾಗಿದ್ದರೆ ಬಲಭಾಗದಲ್ಲಿ ಅರ್ಥಪೂರ್ಣ ಹಾಗೂ ಕಲಾತ್ಮಕ ಉಬ್ಬು ಶಿಲ್ಪಗಳನ್ನು ಕೆತ್ತಲಾಗಿದೆ. ಈ ಶಾಸನದಲ್ಲಿ ನಾರದನು ಕೃಷ್ಣನಿಗೆ ಈ ಶಾಸನದ ನಾಯಕನಾದ ಕೇಸವಯ್ಯಗೌಡನ ಬಗ್ಗೆ, ಕಟ್ಟಿಸಿದ ರಚನೆಗಳ ಬಗ್ಗೆ ಹೇಳುತ್ತಾನೆ. ಅಂದರೆ ಕೇಸವಯ್ಯ ಗೌಡನನ್ನು ಒಬ್ಬ ಪೌರಾಣಿಕ ಪುರುಷನಂತೆ ಚಿತ್ರಿಸಲು ಪ್ರಯತ್ನಿಸಲಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಲೋಕಸಂಚಾರಿ ನಾರದ ಮುನಿಯನ್ನು ನವಿಲಿನ ಮೇಲೆ ಕುಳಿತಂತೆ ಉಬ್ಬುಶಿಲ್ಪವನ್ನು ಕೆತ್ತಲಾಗಿದೆ. ಈ ಉಬ್ಬುಶಿಲ್ಪವಲ್ಲದೆ ಷಣ್ಮುಖ, ಹನುಮಂತ, ನಂದಿವಾಹನರಾದ ಶಿವಪಾರ್ವತಿ, ಹರಿಹರ ಶಿಲ್ಪ, ಮತ್ಸ್ಯಕನ್ನೆಯರು ಇತ್ಯಾದಿ ಶಿಲ್ಪಗಳನ್ನು ಮತ್ತು ಹಣ್ಣಿನ ಗಿಡಗಳನ್ನು ಕೆತ್ತಲಾಗಿದೆ. ಈ ಶಿಲೆಯು ದಪ್ಪ ಹರಳುಗಳ ಸೀಣಿ ಕಲ್ಲಾಗಿದ್ದರೂ ಶಿಲ್ಪಿಯು ತನ್ನ ಕೈಚಳಕದಿಂದ ಕಲಾತ್ಮಕ ಉಬ್ಬು ಶಿಲ್ಪಗಳನ್ನು ಸುಂದರವಾಗಿ ಬಿಡಿಸಿದ್ದಾನೆ. ಒಂದೊಂದು ಉಬ್ಬುಶಿಲ್ಪವನ್ನು ಬಣ್ಣಿಸುವುದು ಮತ್ತು ಲೇಖನದಲ್ಲಿ ಚರ್ಚಿಸುವುದು ಸಾಧ್ಯವಾಗುವುದಿಲ್ಲ. ಆದ್ದರಿಂದ ಈ ಶಾಸನವು ಒಂದು ಕಲಾತ್ಮಕ ಚಿತ್ರ-ಶಿಲ್ಪ ಶಾಸನವಾಗಿದೆ ಎಂದು ಹೇಳಿದರೆ ಸದ್ಯಕ್ಕೆ ಸಾಕು ಎನಿಸುತ್ತದೆ.
ಶಾಸನದ ಪಾಠದ ಚರ್ಚೆ
ಈ ಶಾಸನದಲ್ಲಿ ಉಲ್ಲೇಖಗೊಂಡಿರುವ ಚಾರಿತ್ರಿಕ ಅಂಶಗಳನ್ನು ಮತ್ತು ರಚನೆಗಳನ್ನು ಮುಂದಿನಂತೆ ಚರ್ಚಿಸಲಾಗಿದೆ.
ಈ ಶಾಸನದ ಕಾಲ (ಶಾಲಿವಾಹನ ಶಕೆ ೧೬೧೨, ೦೮-೧೬೯೦ ಬುಧವಾರವಾಗುತ್ತದೆ. ಈ ಶಾಸನದಲ್ಲಿ ಅರಕೇರಿಯ ಬಸವಯ್ಯಗೌಡನು ದೇವದುರ್ಗವನ್ನು ಕ್ರಿ.ಶ.೧೬೭೭ರಲ್ಲಿ ನಿರ್ಮಿಸಿದನೆಂದು ಉಲ್ಲೇಖಿತವಾಗಿದೆ. ಈ ಕೇಸವಯ್ಯಗೌಡನ ತಂದೆಯ ಹೆಸರು ತಿಮ್ಮಣ್ಣಗೌಡ ಮತ್ತು ತಂದೆಯ ಹೆಸರು (ಅಂದರೆ ತಾತ) ಹೇಮಣ್ಣಗೌಡನೆಂದು ತಿಳಿದುಬರುತ್ತದೆ. ಈ ಕೇಸವಯ್ಯಗೌಡನ (ಈತನನ್ನು ಕಾಸಲಯ್ಯ, ಚಿಕ್ಕ ಕಾಸಲೇಂದ್ರ, ಕೇಸವೈಯಗೌಡ ಎಂದೂ ಹೆಸರಿಸಲಾಗಿದೆ) ಇಬ್ಬರು ಹೆಂಡಂದಿರ ಹೆಸರುಗಳು ಲಕ್ಷ್ಮವ್ವ ಮತ್ತು ವೆಂಕಮ್ಮ (ವೆಂಕವ್ವ) ಎಂದು ತಿಳಿದು ಬಂದರೆ, ಏಳು ಗಂಡು ಮಕ್ಕಳ ಹೆಸರುಗಳು (ಗವುಡಪ್ಪ, ನಾರಾಯಣ್, ವಾಸುದೇವ, ಹರೀಶ್ವರ, ಕಮಲಧರ, ವೊಂಕಾರ, ಚಿಕ್ಕಕಮಲಧರ) ಮತ್ತು ಎಂಟು ಹೆಣ್ಣು ಮಕ್ಕಳು (ವೀರವ್ವ, ತಿಮ್ಮಂವ್ವ, ಕಾನಾವ್ವ, ಕೃಷ್ಣಂಮ, ಸಕ್ಕರ‍್ಯೆವ್ವ, ವರದವ್ವ, ಮಂಗಮ್ಮ, ವೆಂಕಮ್ಮ) ಇದ್ದರೆಂದು ತಿಳಿದು ಬರುತ್ತದೆ. ಅಂದರೆ ಕಾಸಲಯ್ಯನು ತುಂಬು ಸಂಸಾರಿ ಪಾಳೇಗಾರನಾಗಿದ್ದ ಎಂದು ಸ್ಪಷ್ಟವಾಗುತ್ತದೆ. ಈ ಕಾಸಲಯ್ಯನ ವಂಶಸ್ಥರು ಈಗಲೂ ಅರಕೇರಿಯಲ್ಲಿದ್ದಾರೆ. ನಾನು ಕ್ಷೇತ್ರಕಾರ್ಯದಲ್ಲಿ ಈಗಿರುವ ವಂಶಿಕರ ಸಹಾಯದಿಂದ ಕ್ರಿ.ಶ.೧೮೦೦ರಿಂದ ಈ ವಂಶವೃಕ್ಷವನ್ನು ಸಂಗ್ರಹಿಸಿದ್ದೇವೆ.
ಈ ಕೇಸಲಯ್ಯಗೌಡನು ಚಂದನಕೆರೆಯ ಸರದೇಸಯ ಮತ್ತು ಮಾಮಲೆದಾರನಾಗಿದ್ದನು ಮತ್ತು ಸುರಪುರ ಸಂಸ್ಥಾನಕ್ಕೆ ಸೇರಿದ ದೊರೆಯಾಗಿದ್ದನು ಎಂದು ತಿಳಿದು ಬರುತ್ತದೆ. ಅಂದರೆ ಚಂದನೆಕೆರೆಯು ದೇವದುರ್ಗಕ್ಕಿಂತಲೂ ಹಳೆಯ ಸ್ಥಳವಾಗಿತ್ತೆಂಬ ನನ್ನ ಹಿಂದಿನ ಊಹೆಗೆ ಇಲ್ಲಿ ಶಾಸನಾಧಾರ ಸಿಕ್ಕಂತಾಯ್ತು.
ಕಾಸಲಯ್ಯಗೌಡನು ನಳನಾಮ ಸಂವತ್ಸರದಲ್ಲಿ (ಕ್ರಿ.ಶ.೧೬೭೭) ದೇವದುರ್ಗವನ್ನು ನಿರ್ಮಿಸಿದನು. ದೇವದುರ್ಗದ ಕೆರೆ, ಪೂರ್ವದ ತಟಾಕ, ರಾಜಗೃಹವನ್ನು ಕಟ್ಟಿಸಿದನೆಂದು ಈ ಶಾಸನದಲ್ಲಿ ಹೇಳಲಾಗಿದೆ. ದೇವದುರ್ಗಕ್ಕೆ ಹುಗ್ಗಿಯ ಔತಣವನ್ನು ನೀಡಿದನು. ಅದಕ್ಕೆ ಕಾರಣವೆಂದರೆ, ಅವನು ಶ್ರೀಗೋವರ್ಧನ ಗೋಪಾಲಕೃಷ್ಣನ ಗುಡಿಯ ನಿರ್ಮಾಣ ಮಾಡಿದ್ದಾಗಿದೆ. ಪೇಟೆ ಹುಟ್ಟಿಸಿ ಸಂತೆ ನೆರೆಸಿದ ಮತ್ತು ಮೂಡಣ ತಟಾಕದ ಹಿಂದೆ ವುಪನಂ ನಿರ್ಮಿಸಿದನೆಂದು ಬಣ್ಣಿಸಲಾಗಿದೆ. ಈ ಶಾಸನದಲ್ಲಿ. ಕೆರೆ ಬಾವಿ ಡೊಣೆಗಳನ್ನು ಕಟ್ಟಿಸಿ ಸಲ್ಲಲಿತ ಉಪಜಲದ ಸಾಧನ ಸೌಕರ್ಯಗಳನ್ನು ನಿರ್ಮಿಸಿದನು ಎಂಬುದನ್ನು ಗಮನಿಸಿದರೆ, ಈ ಗೌಡನಿಗೆ ಜನಹಿತ ಕಾರ್ಯಗಳ ಬಗ್ಗೆ, ಕಳಕಳಿ ಇತ್ತೆಂಬುದು ವ್ಯಕ್ತವಾಗುತ್ತದೆ. ಈ ಶಾಸನದಲ್ಲಿ ಉಲ್ಲೇಖಗೊಂಡ ರಚನೆಗಳನ್ನಲ್ಲದೆ ಪರೋಕ್ಷವಾಗಿ ಸಂಬಂಧಿತ ಬೇರೆ ರಚನೆಗಳನ್ನು ನಾನು ಗುರ್ತಿಸಿದ್ದೇನೆ. ಈ ಎಲ್ಲಾ ಪುರಾತತ್ವ ಅವಶೇಷಗಳನ್ನು ಅಥವಾ ಸ್ಮಾರಕಗಳನ್ನು ಈ ಲೇಖನದಲ್ಲಿ ವಿವರವಾಗಿ ಚರ್ಚಿಸಲು ಸಾಧ್ಯವಾಗದು. ಕೇವಲ ಸ್ಥಳ ನಿರ್ದೇಶನಗಳನ್ನು ಮಾತ್ರ ಚಿತ್ರಗಳೊಂದಿಗೆ ಇಲ್ಲಿ ನೀಡುತ್ತೇನೆ. ಅದೊಂದು ಇನ್ನೂ ದೊಡ್ಡದಾಗಿ ಬಹುಶಃ ಚಿಕ್ಕ ಪುಸ್ತಕಕ್ಕೆ ಹೊಂದುವ ಸಾಮಾಗ್ರಿ ಇದು.
ಕೆರೆಗಳು
ಈ ಶಾಸನದಲ್ಲಿ ಕೇಸಯ್ಯಗೌಡನ ದೇವದುರ್ಗದ ಕೆರೆ ಮತ್ತು ಮೂಡಣ ತಟಾಕ ನಿರ್ಮಿಸಿದನು ಎಂಬ ಉಲ್ಲೇಖ ಇದೆ. ದೇವದುರ್ಗದ ಪಶ್ಚಿಮಕ್ಕೆ ಊರಿಗೆ ಹೊಂದಿಕೊಂಡೇ ಒಂದು ಕೆರೆ, ಸುಮಾರು ೨೦ ವರ್ಷಗಳ ಹಿಂದಿನವರೆಗೂ ಇತ್ತು. ಈಗ ಈ ಕೆರೆಯ ಒಡ್ಡನ್ನು ಒಡೆದದ್ದರಿಂದ ಕೆರೆಯಂಗಳವು ಪ್ಲಾಟುಗಳಾಗಿ ಮಾರ್ಪಟ್ಟಿದೆ. ಈ ಕೆರೆಗೆ ಬೆನಕನ ಕೆರೆ ಎಂದು ಕರೆಯಲಾಗುತ್ತಿತ್ತು. ಬೆನಕನಕೆರೆಯ ಒಡೆತನ ಈ ಊರಿನ ಈಡಿಗರ ಒಂದು ಪ್ರಸಿದ್ಧ ಮನೆತನಕ್ಕೆ ಸೇರಿತ್ತು. ಈ ಮನೆತನಕ್ಕೆ ಈ ಒಡೆತನ ಹೇಗೆ ವರ್ಗವಾಯಿತೆಂಬುದು ತಿಳಿಯದು. ಆದರೆ ಇದೇ ಕೆರೆಯೇ ಕೇಸವಯ್ಯ ಕಟ್ಟಿಸಿದ ದೇವದುರ್ಗದ ಕೆರೆ. ಮೂಡಣ ತಟಾಕ ಎಂದರೆ ಊರಿಗೆ ಪೂರ್ವದಿಕ್ಕಿನಲ್ಲಿರುವ ತಿಮ್ಮಪ್ಪನ ಕೆರೆ. ಕೇಸವಯ್ಯನ ತಂದೆಯ ಹೆಸರಿನಿಂದ ಈ ಕೆರೆಗೆ ಈ ಹೆಸರು ಬಂದಿರಬೇಕು. ಈ ಕೆರೆ ಇಂದಿಗೂ ಇದೆ. ಆದರೆ ಸಂಗ್ರಹ ಸಾಮರ್ಥ್ಯ ಕುಂದಿದೆ. ಇಂದಿಗೂ ಈ ಕೆರೆಯಿಂದ ಸುಮಾರು ೨೦ ಎಕರೆ ಭೂಮಿ ನೀರುಣ್ಣುತ್ತದೆ.
ಗೋಪಾಲಸ್ವಾಮಿ ಗುಡಿ
ಈ ಶಾಸನದ ೭ನೆಯ ಸಾಲಿನಲ್ಲಿ ಗೋವರ್ಧನ ’ಗೋಪಾಲಕೃಷ್ಣನ ಪ್ರತಿಷ್ಠೆ’ ಮಾಡಿಸಿದ ಉಲ್ಲೇಖ ಇದೆ. ಈ ಗುಡಿಯು ಈಗಲೂ ಸುಸ್ಥಿತಿಯಲ್ಲಿದೆ. ತಿಮ್ಮಪ್ಪನ ಕೆರೆಯ ಒಡ್ಡಿ ಕೆಳಹರಿವಿನಲ್ಲಿದೆ. ಈ ಗುಡಿಯನ್ನು ದಪ್ಪ ಹರಳುಗಳ ಸೀಣಿಕಲ್ಲಿನ ಒಂದು ಸಮತಳವಿಲ್ಲದ ಗುಂಡಿನ ಮೇಲೆ ಕಟ್ಟಲಾಗಿದೆ. ಈ ಗುಡಿಯಲ್ಲಿ ಕೇವಲ ಒಂದು ಚಿಕ್ಕ ಗರ್ಭಗುಡಿ ಮಾತ್ರ ಇದೆ. ಗರ್ಭಗುಡಿಯ ಮೇಲೆಯೇ ವಿಜಯನಗರ ಶೈಲಿಯನ್ನು ಅನುಕರಿಸಿ ಒಂದು ವಿಮಾನವನ್ನು ಕಟ್ಟಲಾಗಿದೆ. ಗರ್ಭಗುಡಿಯೊಳಗೆ ಗುಂಡಿನ ಮೇಲೆಯೇ ಕೃಷ್ಣ, ರುಕ್ಮಿಣಿ ಮತ್ತು ಸತ್ಯಭಾಮೆಯ ಉಬ್ಬುಶಿಲ್ಪಗಳನ್ನು ಕೆತ್ತಲಾಗಿದೆ. ಪಕ್ಕದಲ್ಲಿಯೇ ಗೋಪಿಕಾ ಸ್ತ್ರೀಯರ ಮತ್ತು ಗೋವುಗಳ ಉಬ್ಬುಶಿಲ್ಪಗಳನ್ನು ಕೆತ್ತಲಾಗಿದೆ. ಉಬ್ಬುಶಿಲ್ಪಗಳು ಕಲಾತ್ಮಕವಾಗಿಲ್ಲ. ಇದನ್ನು ಜನರು ಕೇವಲ ಗೋಪಾಲಸ್ವಾಮಿ ಗುಡಿ ಎಂದು ಕರೆಯುತ್ತಾರೆ. ಈ ಗುಡಿಯ ಪೂಜಾರಿಗಳು ಸಾಳೇರ (ಪದ್ಮಸಾಲಿ) ಜಾತಿಗೆ ಸೇರಿದ ಪೂಜಾರಿಗಳಾಗಿರುವುದು ವಿಶೇಷ. ಈ ಗುಡಿಯ ಸಮೀಪದಲ್ಲಿರುವ ಮತ್ತು ಊರೊಳಗೆ ಇರುವ ಬ್ರಾಹ್ಮಣರು ಪೂಜೆ ಸಲ್ಲಿಸಲು ಇಲ್ಲಿಗೆ ಬರುವುದಿಲ್ಲ. ಗರ್ಭಗುಡಿಯಲ್ಲಿ ಸರ್ಪವನ್ನು ಸಂಕೇತಿಸಬಹುದು. ಕೃಷ್ಣನು ಗೋಪಿಕಾ ಸ್ತ್ರೀಯರ ವಸ್ತ್ರಾಪಹರಣದ ಉಬ್ಬುಚಿತ್ರಣವನ್ನು ಕೆತ್ತಲಾಗಿದೆ. ಈ ಎಲ್ಲ ಶಿಲ್ಪಗಳಿಗೆ ಎಣ್ಣೆ ಬಳಿದಿರುವುದರಿಂದ ಯಾವ ಕಲಾತ್ಮಕತೆಯೂ ಉಳಿದಿಲ್ಲ ಗರ್ಭಗುಡಿಯಲ್ಲಿ ಒಂದು ಕೃಷ್ಣ, ರುಕ್ಮಿಣಿ, ಸತ್ಯಭಾಮೆ ಇರುವ ಕಂಚಿನ ಸುಂದರ ಶಿಲ್ಪವಿದೆ. ಈ ಕಂಚಿನ ಶಿಲ್ಪದ ಎತ್ತರ ೧೨ ಇಂಚು ಮತ್ತು ಅಗಲ ೬ ಇಂಚು ಇದೆ. ಪ್ರಭಾವಳಿಯ ಮಧ್ಯದಲ್ಲಿ ಕೃಷ್ಣ, ರುಕ್ಮಿಣಿ ಮತ್ತು ಸತ್ಯಭಾಮೆಯರ ಶಿಲ್ಪವನ್ನು ಎರಕ ಹೊಯ್ದು ಕಟ್ಟಲಾಗಿದೆ. ಇದೊಂದು ಸುಂದರ ಕಲಾಕೃತಿ. ಇದನ್ನು ಕಾಣಿಕೆಯಾಗಿ ಮಾಡಿಸಿಕೊಟ್ಟವರ ಹೆಸರನ್ನು ಹಿಂಬದಿಯಲ್ಲಿ "ಧರ್ಮಗೌಡಾ ಬಸನಗೌಡ ಕೊಪ್ಪದ, ಇಲಕಲ್ ಜಿ|| ಬಿಜಾಪುರ" ಎಂದು ಸ್ಪಷ್ಟವಾಗಿ ಕೆತ್ತಲಾಗಿದೆ. ದಿನಾಂಕ ಇತ್ಯಾದಿ ವಿವರಗಳಿಲ್ಲ. ಇದು ಉತ್ಸವಮೂರ್ತಿ. ಈ ಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟು ದಸರೆಯ ಹಬ್ಬದಂದು (ವಿಜಯದಶಮಿ) ಊರಿನ ಪ್ರಮುಖ ಬೀದಿಯಲ್ಲಿ ಮೆರವಣಿಗೆಯಲ್ಲಿ ಬನ್ನಿಮಂಟಪದವರೆಗೆ ಒಯ್ಯಲಾಗುತ್ತದೆ. ಈ ಸಂಪ್ರದಾಯ ಹಲವಾರು ದಶಕಗಳಿಂದಲೂ ನಡೆದುಕೊಂಡು ಬಂದಿರುವುದರಿಂದ ಈ ಉತ್ಸವಮೂರ್ತಿಯ ಕಾಲವನ್ನು ೧೭-೧೮ನೆಯ ಶತಮಾನವೆಂದು ಹೇಳಬಹುದಾಗಿದೆ.
ಕೇಸವಯ್ಯನ ಉಬ್ಬುಶಿಲ್ಪಗಳು ಮತ್ತು ಮೆರವಣಿಗೆ
ಈ ದೇವಾಲಯದ ಅಡಿಯಲ್ಲಿರುವ ಸೀಣಿಕಲ್ಲಿನ ಗುಂಡಿನ ಸುತ್ತಲೂ ಹಲವಾರು ಬಗೆಯ ಉಬ್ಬುಶಿಲ್ಪಗಳನ್ನು ಕೆತ್ತಲಾಗಿದೆ. ಇವುಗಳಲ್ಲಿ ರಾಮಾಯಣ ಮಹಾಭಾರತದ ಕತೆಗಳನ್ನು ಚಿತ್ರಿಸುವ ಉಬ್ಬುಶಿಲ್ಪಗಳಿವೆ. ಐತಿಹಾಸಿಕ ಕೆಲವು ಉಬ್ಬುಶಿಲ್ಪಗಳು ಮುಖ್ಯವೆನಿಸುತ್ತವೆ. ಪಲ್ಲಕ್ಕಿಯೊಳಗೆ ದೊರೆಯೊಬ್ಬ ಸುಖಾಸೀನನಾಗಿ ಕುಳಿತಿದ್ದು, ಪಲ್ಲಕ್ಕಿಯನ್ನು ಮುಂದೆ ನಾಲ್ಕು ಬೋಯಿಗಳು ಹಿಂದೆ ಎರಡು ಬೋಯಿಗಳು ಹೊತ್ತುಕೊಂಡು ಮೆರವಣಿಗೆಯಲ್ಲಿ ಹೊರಟಿರುವ ನೋಟಗಳು ಗಮನಸೆಳೆಯುತ್ತವೆ. ಇಂಥ ಹಲವು ಉಬ್ಬುಶಿಲ್ಪಗಳನ್ನು ಮೇಲಿನ ಸಾಲಿನಲ್ಲಿ ಕೆತ್ತಲಾಗಿದೆ. ಮೆರವಣಿಗೆಯಲ್ಲಿ ಶಸ್ತ್ರಧಾರಿ ಸೈನಿಕರನ್ನು ಮೇಲಿನಿಂದ ಕೆಳಕ್ಕೆ ಎರಡನೆಯ ಸಾಲಿನಲ್ಲಿ ಮತ್ತು ಮೂರನೆಯ ಸಾಲಿನಲ್ಲಿ ಕುದುರೆ ಸವಾರರು ಮೆರವಣಿಗೆಯಲ್ಲಿ ಹೊರಟಿದ್ದಾರೆ. ಈ ಶಿಲ್ಪಗಳ ವಿವರವಾದ ಸೂಕ್ಷ್ಮ ಅಧ್ಯಯನದಿಂದ ಆ ಕಾಲದ ಉಡುಪು ತೊಡಪುಗಳನ್ನು, ಶಸ್ತ್ರಗಳನ್ನು ಗುರ್ತಿಸಬಹುದಾಗಿದೆ. ಇದು ಮುಂದಿನ ಅಧ್ಯಯನದ ವಸ್ತುವಾಗುತ್ತದೆಂದು ಹೇಳಿ ಗೋಪಾಲಸ್ವಾಮಿಗುಡಿಯ ವಿವರಣೆಯನ್ನು ಮುಗಿಸುತ್ತೇನೆ.
ನಿಜಂಪೇಟೆ
ಈ ಶಾಸನದಲ್ಲಿ ಮೂಡ ತಟಾಕದ ಹಿಂದೆ ಹೂಬನವನ್ನು ಮತ್ತು ಮೆರೆವ ಬಜಾರವನ್ನು ಮತ್ತು "ಪೇಟೆ"ಯನ್ನು ನಿರ್ಮಿಸಿದವನು ಈ ಗೌಡನೆಂದು ಹೇಳಲಾಗಿದೆ. ಈ ಮಾತು, ಹಿಂದೆ ತಿಮ್ಮಪ್ಪನ ಕೆರೆಯ ಹಿನ್ನೀರನ್ನು ದಾಟಿ ಸುಮಾರು ಒಂದು ಮೈಲಿ ದೂರದಲ್ಲಿದ್ದ ನಿಜಂಪೇಟೆಗೆ ಅನ್ವಯಿಸುತ್ತದೆ. ೧೯೫೦-೬೦ರ ದಶಕದಲ್ಲಿ ಇಲ್ಲಿ ಮನೆಗಳಿದ್ದವು, ಜನವಸತಿ ಇತ್ತು. ಹಿಂದೆ ಇದ್ದ ಹುಣಿಸೆಮರದ ತೋಟ ಈಗಲೂ ಇದೆ. ಆದರೆ ಈಗ ಮನೆಗಳಿಲ್ಲ, ಹೂದೋಟಗಳಿಲ್ಲ. ಈ ನಿವೇಶನಗಳೆಲ್ಲಾ ಉಳುಮೆಗೊಳಪಟ್ಟ ಹೊಲಗಳಾಗಿವೆ.
ಸಕ್ಕರೆಂಬಾವಿ
ಈ ನಿಜಂಪೇಟೆಯ ನಿವೇಶನ ಮತ್ತು ತಿಮ್ಮಪ್ಪನ ಕೆರೆಯ ಮಧ್ಯದಲ್ಲಿ ಒಂದು ದೊಡ್ಡ ಅಳತೆಯ (ಬಹುಶಃ ೫೦ ಅಡಿ ಉದ್ದ ೩೦ ಅಡಿ ಅಗಲ) ಬಾವಿ ಇದೆ. ತೀರ ಇತ್ತೀಚಿನವರೆಗೆ ಅಂದರೆ ೧೯೬೦-೭೦ರ ದಶಕದವರೆಗೆ ಈ ಬಾವಿಯು ಸುಸ್ಥಿತಿಯಲ್ಲಿತ್ತು. ಆಗ ಸ್ವಲ್ಪ ಮಟ್ಟಿಗೆ ಏತ ನೀರಾವರಿಯ ಸೌಲಭ್ಯ ಈ ಬಾವಿಯ ಮೊಟ್ಟೆಗಳಿಂದಾಗುತ್ತಿತ್ತು. ಆಗ ಇದು ಊರಿನ ಬಾಲಕರು ಈಜಾಡುವ ಬಾವಿಯಾಗಿತ್ತು. ಈ ಬಾವಿಯ ಹೆಸರು ಸಕ್ಕರೆಂಬಾವಿ. ಕೇಸವಯ್ಯನ ಹೆಣ್ಣುಮಕ್ಕಳಲ್ಲಿ ಒಬ್ಬಳ ಹೆಸರು ಸಕ್ಕರೆವ್ವ ಎಂಬುದನ್ನು ನೆನೆದರೆ, ಬಹುಶಃ ಈ ಕೋಸವಯ್ಯಗೌಡನಿಗೆ ಅತ್ಯಂತ ಪ್ರೀತಿಯ ಮಗಳಾದ ಸಕ್ಕರೆವ್ವನ ಹೆಸರನ್ನು ಈ ಬಾವಿಗೆ ಇಟ್ಟಿರಬಹುದು.
ಕಾಸಬಾವಿ
ತಿಮ್ಮಪ್ಪನಕೆರೆಯ ಒಡ್ಡಿನ ದಕ್ಷಿಣದ ಕೊನೆಯಲ್ಲಿ ಕಾಸಬಾವಿ ಇದೆ. ಇದು ೧೯೫೦-೫೫ರವರೆಗೆ ಹೊಕ್ಕು ತುಂಬುವ ಬಾವಿಯಾಗಿತ್ತು. ಇದು ಜನಪ್ರಿಯ ಸಿಹಿನೀರಿನ ಬಾವಿ. ಆದರೆ ೧೯೬೦ರ ಸುಮಾರಿಗೆ ಈ ಹೊಕ್ಕು ತುಂಬುವ ಬಾವಿಯನ್ನು ಗಿರಕಿಗಳನ್ನು ಹಾಕಿ ಚಿಕ್ಕ ಸೇದುವ ಬಾವಿಯನ್ನಾಗಿ ಪರಿವರ್ತಿಸಲಾಯಿತು. ಈ ಬಾವಿಯ ದಕ್ಷಿಣ ದಿಕ್ಕಿನಲ್ಲಿ ಸುಂದರ ಕಮಾನುಗಳುಳ್ಳ ಮಂಟಪವನ್ನು ಕಟ್ಟಲಾಗಿತ್ತು. ಇಂದಿಗೂ ಈ ಮಂಟಪದ ಪಳೆಯುಳಿಕೆಯನ್ನು ನೋಡಬಹುದು.
ಕೇಸವಯ್ಯಗೌಡನು ಸಂತೆಯಂ ನೆರಸಿದನೆಂದು ಶಾಸನದಲ್ಲಿ ಹೇಳಲಾಗಿದೆ. ಇಂದಿಗೂ ಪ್ರತಿ ಶನಿವಾರ ಇಂದಿನ ತಹಸೀಲ ಕಚೇರಿಯ ಹಿಂಭಾಗದ ಮೈದಾನದಲ್ಲಿ ಸಂತೆ ಸೇರುತ್ತದೆ. ೧೯೬೦ರ ದಶಕದವರೆಗೂ ಸಂತೆಯು ದೊಡ್ಡಪ್ರಮಾಣದಲ್ಲಿ ನೆರೆದು ದೊಡ್ಡ ಗುಡಾರಗಳನ್ನು ಹಾಕಿ ವ್ಯಾಪಾರಸ್ಥರು ಮಾರಾಟ ಮಾಡುತ್ತಿದ್ದರು. ರೈತರು ಜೋಳ, ಸಜ್ಜೆ ಇತ್ಯಾದಿ ತಾವು ಬೆಳೆದ ಧಾನ್ಯಗಳನ್ನು ನೇರವಾಗಿ ಜನರಿಗೂ ಸಗಟು ಖರೀದಿದಾರರಿಗೂ ಮಾರುತ್ತಿದ್ದರು. ಈಗ ಮೈದಾನದಲ್ಲಿ ಮಿನಿ ವಿಧಾನಸೌಧದ ನಿರ್ಮಾಣ ಆರಂಭವಾಗಿದೆ. ತುಂಬಾ ಬೆಳೆದುನಿಂತ ನೆರಳನ್ನು ನೀಡುವ ಮರಗಳನ್ನು ಕಡಿಯಲಾಗಿದೆ. ಇದು ಅತ್ಯಂದ ದುರ್ದೈವದ ಸಂಗತಿ.
ಈ ಸಂತೆಯ ಮೈದಾನದ ಒಂದು ಕೊನೆಯಲ್ಲಿ ಒಂದು ಸುಂದರ ಕಾವಲುಗೋಪುರವಿದೆ ಎಂದು ೧೯೯೯ರಲ್ಲಿ ನಾನು ವಿವರಿಸಿದ್ದೆ. ಇದರ ಕಾಲವನ್ನು ೧೭-೧೮ನೆಯ ಶತಮಾನವೆಂದು ಅದರ ವಾಸ್ತುಶೈಲಿಯನ್ನಾಧರಿಸಿ ಊಹಿಸಿದ್ದೆ. ಈಗ ಈ ಕಮಾನನ್ನು ಕ್ರಿ.ಶ.೧೬೭೭ರಲ್ಲಿ ದೇವದುರ್ಗಾದ ಸಂತೆಯ ಕಾವಲಿಗಾಗಿ ಕಟ್ಟಿಸಿರಬಹುದೆಂದು ಹೇಳಿದರೆ ಸರಿಯಾದೀತು. ಆದರೆ ಈ ಸುಂದರ ಕಾವಲು ಗೋಪುರವನ್ನು ವಿಕೃತಗೊಳಿಸುತ್ತಿರುವ ಕೈಗಳಿಗೆ ತಡೆಯೊಡ್ಡುವ ಸಾಮರ್ಥ್ಯ ಸರ್ಕಾರಕ್ಕೆ ಇಲ್ಲವಲ್ಲ ಎಂಬ ವ್ಯಥೆ ನನ್ನನ್ನು ಇಂದಿಗೂ ಕಾಡುತ್ತಲಿದೆ.
ರಾಜಗೃಹ ಅರ್ಥಾತ್ ದರ್ಬಾರ್
ಈ ಕಾಸಲೇಂದ್ರನು ನಿರ್ಮಿಸಿದ ರಾಜಗೃಹವು ಸುಂದರವಾದ ಹುಲಿಮುಖದ ಮುಗಿಲಟ್ಟಣೆಯಿಂದ ಶೋಭಿಸುತ್ತಿತ್ತು ಎಂದು ಶಾಸನದಲ್ಲಿ ಬಣ್ಣಿಸಲ್ಪಟ್ಟ ಕಟ್ಟಡವು ಜನರ ಬಾಯಲ್ಲೀಗ ’ದರ್ಬಾರ’ ಎಂದು ಕರೆಯಲ್ಪಡುತ್ತದೆ. ಬಹಳಷ್ಟು ಭಾಗ ಭಗ್ನಗೊಂಡರೂ ಬಾಲ್ಕನಿಗಳು ಇಂದಿಗೂ ನಯನಮನೋಹರವಾಗಿದೆ. ದರ್ಬಾರದ ಒಳಭಾಗದ ಬಹುಭಾಗ ಬಿದ್ದು ಹೋಗಿದ್ದರೂ, ಅಂದಿನ ದೊರೆಗಳು ನಡೆಸುತ್ತಿದ್ದ ದರ್ಬಾರ ಹಾಲ್ ತನ್ನ ಗತವೈಭವವನ್ನು ಸುಂದರ ಸಮಪ್ರಮಾಣದ ಕಮಾನುಗಳ ಮೂಲಕ ಹೇಳುತ್ತದೆ.
ಮಲ್ಲೇದೇವರ ಗುಡ್ಡ ಮತ್ತು ಕೇಸಲಯ್ಯನ ಸಮಾಧಿ
ಈ ಶಾಸನದ ೧೩ನೆಯ ಸಾಲಿನಲ್ಲಿ ಚಿಕ್ಕ ಕಾಸಲೇಂದ್ರನು ಗಿರಿತ್ರಯ ದುರ್ಗಗಳನ್ನು ರಚಿಸಿದನೆಂದು ಹೇಳುತ್ತದೆ. ಇದೇ ಶಾಸನದಲ್ಲಿ ದೇವದುರ್ಗವಲ್ಲದೆ ಮಲ್ಲೇದೇವರ ದುರ್ಗವನ್ನು ಕಟ್ಟಿಸಿದನೆಂದು ಹೇಳಲಾಗಿದೆ. ಮಲ್ಲೇದೇವರದುರ್ಗದ ಹೆಸರು ಈಗ ಮಲ್ಲೇದೇವರ ಗುಡ್ಡವೆಂದು ಮಾರ್ಪಾಟಾಗಿದೆ. ಇದೊಂದು ಈಗ ತೀರ ಸಣ್ಣಹಳ್ಳಿ: ಬಹುಶಃ ಒಂದು ಸಾವಿರ ಜನಸಂಖ್ಯೆ ಇರಬಹುದು. ದೇವದುರ್ಗದಿಂದ ಸಿರವಾರಕ್ಕೆ ಹೋಗುವ ರಸ್ತೆಯ ಬಲಕ್ಕೆ ಅರಕೇರಿ ಗ್ರಾಮ ದಾಟಿದ ನಂತರ ಸುಮಾರು ೬ ಕಿ.ಮೀ. ಅಂತರದಲ್ಲಿ ಈ ಹಳ್ಳಿ ಇದೆ. ಈ ಹಳ್ಳಿಯ ಪಶ್ಚಿಮಕ್ಕೆ ಒಂದು ಸಣ್ಣ ದಿಣ್ಣೆ ಇದೆ. ಇದೊಂದು ಕಣಶಿಲೆಯ ಬಂಡೆಗಳಿಂದ ಕೂಡಿದ ಚಿಕ್ಕಗುಡ್ಡ. ನೆಲಮಟ್ಟದಿಂದ ಬಹುಶಃ ೩೦-೪೦ ಮೀ. ಎತ್ತರವಿರಬಹುದು. ಕೊನೆಯಲ್ಲಿ ಕೋಟೆ ಗೋಡೆಯ ಅವಶೇಷಗಳು ಮಾತ್ರ ನೋಡಲು ಸಿಗುತ್ತವೆ. ಊರು ಮತ್ತು ಕೋಟೆ ಗೋಡೆಯ ಮಧೆ ಜಟ್ಟೆಪ್ಪನ ಗುಡಿ ಮತ್ತು ತಾಯಮ್ಮನ ಕಟ್ಟೆಗಳಿವೆ. ಇವುಗಳು ಜಾನಪದ ದೇವತೆಗಳ ಕಲ್ಲು ಮತ್ತು ಕಟ್ಟೆಗಳು. ಯಾವಾಗಲೋ ಒಂದು ಸಲ ಯಾರೋ ಪೂಜೆ ಮಾಡುತ್ತಾರೆ. ಐತಿಹಾಸಿಕವಾಗಲೀ ವಾಸ್ತುಶೈಲಿಯ ದೃಷ್ಟಿಯಿಂದಾಗಲೀ ಯಾವ ಮಹತ್ವವನ್ನು ಈ ಕಟ್ಟಡಗಳು ಹೊಂದಿಲ್ಲ. ಆದರೆ ಈ ಕೋಟೆಗೋಡೆಯ ಅವಶೇಷಗಳಿಂದ ಇನ್ನೂ ಪಶ್ಚಿಮಕ್ಕೆ ಸುಮಾರು ೩೦-೪೦ ಅಡಿ ಅಂತರದಲ್ಲಿ ಒಂದು ಕಟ್ಟೆ ಗಮನ ಸೆಳೆಯುತ್ತದೆ. ಸುಮಾರು ೫ ಮೀ. ಮತ್ತು ೩ಮೀ. ಉದ್ದಗಲಗಳ ಈ ಕಟ್ಟೆಯ ಮಧ್ಯೆ ಒಂದು ಬೇವಿನ ಮರ ಬೆಳೆದು ನಿಂತಿದೆ. ಈ ಕಟ್ಟೆಯ ಎತ್ತರ ಸುಮಾರು ೧ ಮೀ. ಸುತ್ತಲೂ ಒರಟುಕಲ್ಲಿನ ಚಪ್ಪಡಿಗಳನ್ನು ಜೋಡಿಸಲಾಗಿದೆ. ಈ ಚಪ್ಪಡಿಗಳ ಮೇಲೆ ಕೆಲ ಅಸ್ಪಷ್ಟ ಉಬ್ಬುಶಿಲ್ಪಗಳನ್ನು ಕೆತ್ತಲಾಗಿದೆ. ಈ ಕಟ್ಟೆಯ ಪೂರ್ವದಿಕ್ಕಿನ ಚಪ್ಪಡಿಯ ಮೇಲೆ ಅಸ್ಪಷ್ಟ ಯುದ್ಧದ ದೃಶ್ಯಗಳನ್ನು ಮತ್ತು ಒಂದು ಆನೆಯ ಶಿಲ್ಪವನ್ನು ಕೆತ್ತಲಾಗಿದೆ. ಉತ್ತರದ ಚಪ್ಪಡಿಯ ಮೇಲೆ ಒಂದು ಗಿಳಿ, ಕುದುರೆಸವಾರಿ ಮಾಡಿರುವ ಒಬ್ಬ ವೀರನ ಉಬ್ಬುಶಿಲ್ಪ ಮತ್ತು ಒಂದು ಹೋರಿಯನ್ನು ಕೆತ್ತಲಾಗಿದೆ. ದಕ್ಷಿಣದ ಚಪ್ಪಡಿಯ ಮೇಲೆ ಯಾವ ಚಿತ್ರವೂ ಇಲ್ಲ. ಈ ಕಟ್ಟೆಯ ಸಮೀಪದಲ್ಲಿ ತೀರ ಇತ್ತೀಚಿನ ಸಮಾಧಿಗಳಿವೆ. ಈ ಸಮಾಧಿಗಳು ಕೊತ್ವಾಲ ಮನೆತನ ಸಮಾಧಿಗಳು. ಸಮೀಪದಲ್ಲಿ ಸಮಾಧಿಗಳಿರುವುದರಿಂದ ಇದೊಂದು ಸ್ಮಶಾನ ಭೂಮಿಯಾಗಿದೆ ಎಂದು ಊಹಿಸಿದರೆ ತಪ್ಪಾಗದು. ಈ ಕಟ್ಟೆಯನ್ನು ಸಮೀಪದ ಮರ್ಕಮದಿನ್ನಿ ಗ್ರಾಮದ ದೊರೆಗಳು ಯುಗಾದಿಯಂದು ಬಂದು ಪೂಜಿಸುತ್ತಾರೆ. ಆದ್ದರಿಂದ ಈ ಕಟ್ಟೆಯ ಉತ್ತರದ ಚಪ್ಪಡಿಯ ಮೇಲಿರುವ ವೀರನ ಉಬ್ಬು ಶಿಲ್ಪ ಕೇಸಲಯ್ಯನನ್ನು ಸೂಚಿಸುತ್ತದೆಂದೂ, ಈ ಕಟ್ಟೆಯು ಈ ಮಲ್ಲೆದೇವರ ದುರ್ಗವನ್ನು (ಮಲ್ಲೆದೇವರಗುಡ್ಡ) ನಿರ್ಮಿಸಿದ ಈ ಗೌಡನ ಸಮಾಧಿ ಇರಬಹುದೆಂದು ಊಹಿಸಿದರೆ ತಪ್ಪಾಗದು.
ಕೇಸವಯ್ಯಗೌಡನು ಕಟ್ಟಿಸಿದ ಮೂರನೆಯ ಗಿರಿದುರ್ಗ ಅರಕೇರಿಯ ಕೋಟೆ. ಇಂದಿನ ಅರಕೇರಿ ಗ್ರಾಮಕ್ಕೆ ಹೊಂದಿಕೊಂಡೇ ಸುಮಾರು ೪೦೦ ಮೀ. ಎತ್ತರದ ಗುಡ್ಡವಿದೆ. ಈ ಗುಡ್ಡದ ಮೇಲೆ ಹಾಳಾಗಿರುವ ಮನೆಗಳು ಮತ್ತು ಕೋಟೆಯ ಗೋಡೆಗಳನ್ನು ನೋಡಬಹುದು. ಈ ಕೋಟೆಯೇ ಕೇಸವಯ್ಯಗೌಡನು ತಾನು ಹುಟ್ಟಿದ ಊರಿನಲ್ಲಿ ಕಟ್ಟಿಸಿದ ಕೋಟೆ.
ಅರಕೇರಿಯ ಊರ ಮಧ್ಯದಲ್ಲಿ ಗೌಡರ ದೊಡ್ಡಮನೆ ಇದೆ. ಇದೇ ಕೇಸವಯ್ಯನ ವಂಶಜರ ಮನೆ. ಇದರ ವಿಸ್ತಾರ ದೇವದುರ್ಗದ ರಾಜಗೃಹಕ್ಕೆ ಹೋಲಿಸಿದರೆ ತುಂಬಾ ಚಿಕ್ಕದು. ಅಂಥ ಯಾವ ವಿಶೇಷತೆಯೂ ಇಲ್ಲ. ಆದರೂ ಇದನ್ನು ದರ್ಬಾರ ಎಂದೇ ಕರೆಯುತ್ತಾರೆ. ಬಹುಶಃ ಕೇಸವಯ್ಯಗೌಡನ ವಂಶಜರು, ಮನೆತನದ ಆರ್ಥಿಕ ಪರಿಸ್ಥಿತಿ ಇಳಿಮುಖವಾದ ನಂತರ ಸಧ್ಯದ ನಿವೇಶನದ ಮೇಲೆ ಕಟ್ಟಲಾದ ಮನೆ. ಇದು ತುಂಬಾ ಬದಲಾವಣೆಗಳಾಗಿವೆ. ಸಧ್ಯ ಈ ಮನೆಯಲ್ಲಿ ವಾಸವಾಗಿರುವವರು ವಿರುಪಣ್ಣ ಮಾಸ್ತರರು. ಇವರು ಮಲ್ಲೇದೇವರಗುಡ್ಡ ಗ್ರಾಮದ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ಮಾಸ್ತರರಾಗಿದ್ದಾರೆ. ತುಂಬಾ ಸಭ್ಯಸ್ಥರೆಂದು ಹೆಸರು ಪಡೆದಿದ್ದಾರೆ. ನಾನು ಚರ್ಚೆಯಲ್ಲಿ ತೊಡಗಿದಾಗ ಸಹೃದಯಿಯಾಗಿ ಚರ್ಚಿಸಿದರು. ಇವರ ಚಿಕ್ಕಪ್ಪ ಗೌಡಯ್ಯ ನಾಯಕ ದೊರೆ, ೪-೧-೨೦೦೭ರಂದು ತೀರಿದರೆಂದು ತಿಳಿಸಿದರು. ಈ ಗೌಡಣ್ಣನಾಯಕರು ಈ ಮನೆತನದ ಬಗ್ಗೆ ಸಾಕಷ್ಟು ಮಾಹಿತಿಯನ್ನು ಹೊಂದಿದ್ದರೆಂದು ತಿಳಿದುಬರುತ್ತದೆ. ಸದ ಆ ಮಾಹಿತಿಯ ಆಧಾರದ ಮೇಲೆ ಸುಮಾರು ಕ್ರಿ.ಶ.೧೮೦೦ರ ನಂತರದ ವಂಶವೃಕ್ಷವನ್ನು ವಿರುಪಣ್ಣ ಮಾಸ್ತರರೇ ಬರೆದುಕೊಟ್ಟು ಸಹಕರಿಸಿದರು.
ಇವರ ಮನೆಯಲ್ಲಿ ಯಾವ ಬಗೆಯ ಪುರಾತನ ದಾಖಲೆಗಳಿಲ್ಲ. ಕೇವಲ ೪ ಆಯುಧಗಳು ನೋಡಲು ಸಿಕ್ಕವು. ಇವುಗಳ ಮೇಲೆ ಯಾವ ಬಗೆಯ ಅಕ್ಷರಗಳಾಗಲೀ ಮತ್ತು ನಕ್ಷೆ ಇಲ್ಲದಿರುವುದರಿಂದ ಕಾಲವನ್ನು ನಿರ್ಧರಿಸಲಾಗಿಲ್ಲ. ಇವುಗಳು ಕೈಗೆತ್ತಿ (ಜಂಬ್ಯಾ) ವರ್ಗಕ್ಕೆ ಸೇರುವ ಚಿಕ್ಕ ಆಯುಧಗಳು. ಇವರ ಮನೆಯಲ್ಲಿದ್ದ ಎಲ್ಲಾ ಬಂದೂಕುಗಳನ್ನು ಹೈದ್ರಬಾದದ ರಜಾಕಾರರ ಪತನಾನಂತರ ಬಂದ ಸರ್ಕಾರದ ಅಧಿಕಾರಿಗಳು ತಮ್ಮ ವಶಕ್ಕೆ ತೆಗೆದುಕೊಂಡರು. ಇದೇ ರೀತಿಯಾಗಿ ಆಗ ನಿಜಾಂ ಪ್ರಾಂತ್ಯಕ್ಕೆ ಸೇರಿದ್ದ ಊರುಗಳಲ್ಲಿ, ಪೊಲೀಸ್ ಕಾರ್ಯಾಚರಣೆಯ ನಂತರ ಮಿಲ್ಟ್ರಿಯ ಆಡಳಿತಗಾರರು ಎಲ್ಲಾ ಖಾಸಗಿ ಮನೆಗಳಲ್ಲಿದ್ದ ಆಯುಧಗಳನ್ನು ಜಪ್ತಿ ಮಾಡಿದರು.
ಉಪಸಂಹಾರ
ಈರಣ್ಣದೇವರ ಗುಡ್ಡದ ಶಿಖರದ ಮೇಲಿರುವ ಶಾಸನದ ಅಧ್ಯಯನ ಮತ್ತು ನಾನು ಕೈಗೊಂಡ ಕ್ಷೇತ್ರ ಕಾರ್ಯಗಳ ಆಧಾರಗಳ ಮೇಲೆ ಈ ಕೆಳಗಿನ ಅಂಶಗಳು ಸ್ಪಷ್ಟವಾಗುತ್ತವೆ.
Friday, July 22, 2011
Subscribe to:
Post Comments (Atom)
ಹಿಂದಿನ ಬರೆಹಗಳು
-
▼
2011
(92)
-
▼
July
(11)
- ಕಲಾಲೋಕಕ್ಕೆ ರೆಕ್ಕೆ-ಪುಕ್ಕ ಕಟ್ಟಿಕೊಟ್ಟ ಹುಸೇನ್
- ಶರಣ ಮಾರ್ಗ (ರೂಪಕ)
- ಜಾನಪದ: ಒಂದಿಷ್ಟು ವಿಚಾರಗಳು
- ಅನನ್ಯ ಕಲಾಕೃತಿ ಮೂಡಬೇಕಾದರೆ ಅಸಾಧ್ಯ ಪರಿಶ್ರಮ ಬೇಕೇ ಬೇಕು
- ಕರ್ನಾಟಕ ರತ್ನ ಪ್ರಶಸ್ತಿಯ ಪ್ರತಿಭೆಯಲ್ಲಿ ದೇಜಗೌ
- ಕೆಂಪೇಗೌಡರು ಕಟ್ಟಿದ ಪೇಟೆ, ದೇಗುಲಗಳು....
- ನೀಗಿಕೊಂಡ ಹಳೆಮನೆ
- ನಿವೃತ್ತಿ ವಯೋಮಿತಿ ಏರಿಕೆ ನಿವೃತ್ತಿ ವಯೋಮಿತಿ ಏರಿಕೆ ಯುವ ...
- ನಿತ್ಯ ನಿರಂಜನ ಅಲ್ಲಮ ಪ್ರಭುದೇವರು
- ದೇವದುರ್ಗದ ಈರಣ್ಣ
- ಅತ್ಯುತ್ತಮ ಸಂಘಟನಾಕಾರ ಕೆ.ಟಿ.ರವೀಂದ್ರಕುಮಾರ್
-
▼
July
(11)
No comments:
Post a Comment