Friday, July 22, 2011
ನಿತ್ಯ ನಿರಂಜನ ಅಲ್ಲಮ ಪ್ರಭುದೇವರು
೧೨ನೇ ಶತಮಾನ ಅದು ಭಕ್ತಿ ಬೆಳಗಿನ ಕಾಲ. ಕಲ್ಯಾಣ ರಾಜ್ಯದಲ್ಲಿ ಸಾವಿರಾರು ಶರಣರು ಉದಯಿಸಿದ ಕಾಲ. ಮನಸ್ಸಿನಲ್ಲಿ ಭಕ್ತಿ. ಮಾತಿನಲ್ಲಿ ಜ್ಯೋತಿರ್ಲಿಂಗ, ಕೈಯಲ್ಲಿ ಕಾಯಕ, ರಾಜ್ಯದಲ್ಲಿ ಸಮೃದ್ಧಿ-ಬಸವಣ್ಣ ಭಕ್ತಿಯ ಭಂಡಾರಿ. ಅಲ್ಲಮ ಇವರ ಮಧ್ಯದ ಜ್ಞಾನ-ಚಂದ್ರಮ. ಮಾಯೆ ಮುಟ್ಟದ ಕಾಯ, ಮೋಹ ಸೋಂಕದ ಮನಸ್ಸು, ಕರುಣೆ ತುಂಬಿದ ಹೃದಯ, ಮರೆವೆಯನರಿಯದ ಮತಿ, ದೇಹ ದೇವಾಲಯ, ಜೀವದೇವ, ಹಠದಲ್ಲಿ ಹಠಯೋಗಿ ಮಂತ್ರದಲ್ಲಿ ಪ್ರಣವಸಿದ್ಧ, ಧ್ಯಾನದಲ್ಲಿ ಅನಿಮಿಷ, ಲಿಂಗ-ಮಾರ್ಗದಲ್ಲಿ ಶಿವಯೋಗಿ ಕಣ್ಣಿನಲ್ಲಿ ಕಾಂತಿ, ನಡೆಯಲ್ಲಿ ನಿಶ್ಚಿಂತ, ಅಲ್ಲಮ ಸಾಧಿಸದ ಯೋಗವಿಲ್ಲ. ಪ್ರಸನ್ನತೆಯೇ ಮೂರ್ತಿವೆತ್ತ ಮಹಂತ. ನಿತ್ಯ ಪರಿವ್ರಾಜಕ, ದೇಶ, ದೇಶಾಂತರ ಸುತ್ತಿದ, ಜನಮನದ ಕಾಳಿಕೆ ಕಳೆದ, ಸಾಧಕರಿಗೆ ಸತ್ಯದ ಮಾರ್ಗತೋರಿದ. ತಪಸ್ವಿಗಳ ಅಹಂಕಾರದ ಮದವಳಿದ, ಜ್ಞಾನದ ಮಹಿಮೆಯನ್ನು ಎಲ್ಲೆಲ್ಲೂ ಸಾರಿದ. ಘನಕ್ಕೆ ಘನಮಹಿಮ, ನಿತ್ಯ ನಿರಂಜನ ಜ್ಯೋತಿಯಾಗಿ ಬೆಳಗಿದ ಅನುಪಮ ಚರಿತ ಅಲ್ಲಮಪ್ರಭು.
ಅಲ್ಲಮ ಪ್ರಭುವಿನ ವಚನಗಳು ಅನುಭಾವದ ರತ್ನಗಣಿಗಳು. ಮೊಗೆದಷ್ಟೂ ಆಳ, ಆಳಕ್ಕೆ ಆಳ, ವಿಸ್ತಾರಕ್ಕೆ ವಿಸ್ತಾರ, ಎತ್ತರಕ್ಕೆ ಎತ್ತರ. ಮಾತಿಗೆ ಮೀರಿದ ಅನುಭೂತಿ, ಅದಕ್ಕೆ ತಕ್ಕ ಭಾಷೆ, ಶಬ್ಧಗಳಲ್ಲಿ ಸೊಬಗು ಅಭಿವ್ಯಕ್ತಿಯಲ್ಲಿ ಅಲಂಕಾರ, ಸೂಚ್ಯವಾದ ಸುಂದರ ರೂಪಕಗಳು, ಬೆಡಗು ಬಿನ್ನಾಣ, ತತ್ವಾನುಭವದ ರಸಯಾತ್ರೆ ಅಲ್ಲಮರ ವಚನಗಳನ್ನು ಹಾಡಿ ದಣಿದವರಿಲ್ಲ. ಬಸವಣ್ಣನವರದು ಭಕ್ತಿಮಾರ್ಗ. ಅಲ್ಲಮರದು ಅರಿವಿನ ಮಾರ್ಗ. ಅನುಭಾವದರಿವಿನಲ್ಲಿ ಲೋಕ ಕಲ್ಯಾಣವನ್ನು ಕಂಡವರು ಅಲ್ಲಮ ಪ್ರಭುದೇವರು. ತಮ್ಮ ಆತ್ಮೋದ್ಧಾರದ ಜೊತೆಗೆ ವ್ಯಕ್ತಿಶುದ್ಧಿಯ ಮೂಲಕ ಸಮಾಜಶುದ್ಧಿಗೆ ತೊಡಗಿದ ಅವರು ತನು, ಮನ ಶುದ್ಧಿಗೂ ಆದ್ಯತೆ ನೀಡಿದರು ಅಸ್ಪೃಶ್ಯತೆಯನ್ನು ವಿರೋಧಿಸಿದರು. ಸರ್ವಸಮಾನತೆಯ, ಸ್ವಾವಲಂಬನೆಯ ಬದುಕಿಗೆ ಸತ್ಯಶುದ್ಧ ಕಾಯಕ ಮತ್ತು ದಾಸೋಹ ಜಾರಿಗೊಳಿಸಿದರು. ಸರ್ವರಿಗೆ ಸಮಪಾಲು, ಸರ್ವರಿಗೆ ಸಮಬಾಳು, ವರ್ಣಭೇದ, ಲಿಂಗ ಭೇದ ಸಲ್ಲದು ಎಂದರು.
ಅಲ್ಲಮ ಪ್ರಭು ಆಧ್ಯಾತ್ಮ ಜಗತ್ತಿನ ವಿಸ್ಮಯ, ಸಾಧನೆಯ ದೃಷ್ಟಿಯಿಂದ, ದೇಶ, ಕಾಲಗಳನ್ನು ಮೀರಿ ವಿಶ್ವದ ಮಹಾನ್ ವಿಭೂತಿಗಳ ಸಾಲಿನಲ್ಲಿ ನಿಲ್ಲಬಲ್ಲ ಮಹಾನುಭಾವಿ. ಶರಣ ದರ್ಶನದ ಪ್ರಕಾರ ಮನುಷ್ಯ ಸಾಧಿಸಬಹುದಾದ ಆಧ್ಯಾತ್ಮಿಕ ಜಗತ್ತಿನ ಅತ್ಯಂತ ಉನ್ನತಿಯನ್ನು ಸಾಧಿಸಿದ ಮಹಾಂತ. ಅಲ್ಲಮನನ್ನು ಅರಿಯಲು ಆತನ ವಚನಗಳೇ ಆಧಾರ. ಅವರ ವಚನಾಂಕಿತ "ಗುಹೇಶ್ವರ". ಇದುವರೆಗೆ ಪ್ರಕಟವಾಗಿರುವ ವಚನಗಳು ೧೬೪೫ ಮಾತ್ರ. ಅಲ್ಲಮ ಪ್ರಭುವಿನ ವಚನಗಳು ಬರಿಯ ಶಬ್ದ ಜಾಲಗಳಲ್ಲ. ಅವು ವಿಶ್ವ ಚೈತನ್ಯದ ಕಿಡಿಗಳು ಎಂದಿದ್ದಾರೆ ಡಾ.ದೇ.ಜವರೇಗೌಡರು. ಅವರ ವಚನಗಳಲ್ಲಿ ಅಡಗಿರುವ ಅನುಭಾವದ ಎತ್ತರ ಅರಿಯುವುದು ಕಷ್ಟಸಾಧ್ಯ. ಅವರ ವಚನಗಳಲ್ಲಿ ಅಭಿವ್ಯಕ್ತವಾಗಿರುವ ವೈಚಾರಿಕ ನಿಲುವು ಎಲ್ಲ ಕಾಲ, ದೇಶಗಳಲ್ಲಿಯೂ ಸಲ್ಲಬಹುದಾದಷ್ಟು ವ್ಯಾಪಕವಾದದ್ದು. ಇಂದಿನ ವೈಜ್ಞಾನಿಕ ಯುಗದಲ್ಲಿಯೂ ಆತನ ಸ್ವತಂತ್ರ ವಿಚಾರ ಶಕ್ತಿ ವಿಸ್ಮಯ ಹುಟ್ಟಿಸುತ್ತದೆ. ಈ ಕಾರಣಕ್ಕೆ ಅಲ್ಲಮ ಪ್ರಭು ಎಲ್ಲ ವಿಚಾರವಂತರಿಗೂ ಪ್ರಿಯನಾಗಿದ್ದಾನೆ. ನಾ. ಮೊಗಸಾಲೆ ಅವರಂತ ವೈದ್ಯರಿಗೂ ನನ್ನಂತ ಒಬ್ಬ ವ್ಯಾಪಾರಿಗೂ ಆದರ್ಶನಾಗಿದ್ದಾನೆ.
ಕರ್ನಾಟಕದ ಆಧ್ಯಾತ್ಮಿಕ ಜಗತ್ತಿನಲ್ಲಿ ವೈರಾಗ್ಯನಿಧಿ, ಅನುಪಮಚರಿತ ಅಲ್ಲಮಪ್ರಭುವಿನದು ಬಹುದೊಡ್ಡ ಹೆಸರು. ಆತನ ಅನುಭಾವದ ಎತ್ತರಕ್ಕೆ ಏರಿದವರು ಬಹಳ ವಿರಳ. ಅಲ್ಲಮಪ್ರಭು ದೇವರ ಆಧ್ಯಾತ್ಮಿಕ ಜ್ಞಾನ, ಅನುಭಾವ, ವಿರಾಗ ಜೀವನ, ಮನುಕುಲದ ಆದರ್ಶ. ೮೫೦ ವರ್ಷಗಳ ನಂತರವೂ ಅಲ್ಲಮರ ವ್ಯಕ್ತಿತ್ವ, ಅಧ್ಯಾತ್ಮಿಕ ತತ್ವಗಳು ಮಾನವ ಕುಲಕ್ಕೆ ಮಾರ್ಗದರ್ಶಿಯಾಗಿವೆ "ಜ್ಞಾನದ ಬಲದಿಂದ ಅಜ್ಞಾನದ ಕೇಡು" ನೋಡಾ ಎಂಬ ಪ್ರಭುದೇವರ ಮಾತು ಸಾರ್ವಕಾಲಿಕ ಸತ್ಯವಾಗಿದೆ...
೧೨ನೇ ಶತಮಾನ ಭಾರತದ ಇತಿಹಾಸದಲ್ಲಿ ಧಾರ್ಮಿಕ ಸುವರ್ಣಕಾಲ. ಕರ್ನಾಟಕದ ಮಟ್ಟಿಗೆ ವಿಚಾರಕ್ರಾಂತಿಗೆ, ತನ್ಮೂಲಕ ಸಾಮಾಜಿಕ, ಸಾಹಿತ್ಯಿಕ ಕ್ರಾಂತಿ ವಿಜೃಂಭಿಸಿದ ಕಾಲ. ಕನ್ನಡನಾಡಿನ ಕೇಂದ್ರ ಕಲ್ಯಾಣದಲ್ಲಿ ರಾಜ್ಯವಾಳುತ್ತಿದ್ದ ಬಿಜ್ಜಳ ರಾಜನ ಮಂತ್ರಿಯಾಗಿ ದೇಶವನ್ನು ಸುಭಿಕ್ಷದೆಡೆಗೆ ಕೊಂಡೊಯ್ದ ಭಗವಾನ್ ಬಸವೇಶ್ವರರು ಕ್ರಾಂತಿಯ ಕೇಂದ್ರ ಬಿಂದು. ಈ ಕ್ರಾಂತಿ ದೀಪಕ್ಕೆ ತಾತ್ವಿಕ ನೆಲಗಟ್ಟನ್ನು ನೀಡಿ ಬೆಳಗಿಸಿದವರು ಅನುಪಮ ಚರಿತ ಅಲ್ಲಮಪ್ರಭುದೇವರು. ಬಸವಣ್ಣನವರು ಪ್ರತಿಪಾದಿಸಿದ ಸತ್ಯಶುದ್ಧ ಕಾಯಕ, ದಾಸೋಹಗಳು ಕಲ್ಯಾಣ ರಾಜ್ಯದ ಕೀರ್ತಿಯನ್ನು ನಾಡಿನಾದ್ಯಂತ ಬಿತ್ತರಿಸಿದವು. ಕಲ್ಯಾಣ ರಾಜ್ಯದಲ್ಲಿ ಆರ್ಥಿಕ ಕ್ರಾಂತಿಗೆ ಕಾರಣವಾಯಿತು. ಮೇಲುವರ್ಗದ, ಪುರೋಹಿತಶಾಹಿಗಳ ಸ್ವತ್ತಾಗಿದ್ದ ದೇವರು, ದೇವಾಲಯಗಳನ್ನು ಜನ ಸಾಮಾನ್ಯರ ಬಳಿಗೆ ತಂದು, ಇಷ್ಟ ಲಿಂಗಧಾರಣಿ ಮೂಲಕ ದೇಹವನ್ನೇ ದೇವಾಲಯವನ್ನಾಗಿಸಿದವರು ಭಗವಾನ್ ಬಸವೇಶ್ವರರು.
ತಾವೇ ಏರಬಹುದಾಗಿದ್ದ ಶೂನ್ಯಪೀಠವನ್ನು, ಕೆಳವರ್ಗದಿಂದ ಬಂದ ಮದ್ದಳೆಕಾಯಕದ ಅಲ್ಲಮಪ್ರಭು ದೇವರನ್ನು ಪೀಠಾಧ್ಯಕ್ಷರನ್ನಾಗಿಸಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ. ವೈರಾಗ್ಯಮೂರ್ತಿ ಅಲ್ಲಮಪ್ರಭು ದೇವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆ ಶಿಕಾರಿಪುರ (ತಾ.) ಬಳ್ಳಿಗಾವಿ. ತಂದೆ ನಿರಂಹಕಾರಿ, ತಾಯಿ ಸುಜ್ಞಾನಿ. ಕೆಲವು ಚರಿತ್ರಕಾರರು ಅಲ್ಲಮಪ್ರಭು ಹುಟ್ಟಿದ ಊರು ’ಬನವಾಸಿ’ ಎಂದೂ ಹೇಳಿದ್ದಾರೆ. ಭಾರತೀಯ ಪರಂಪರಾಗತ ಪದ್ಧತಿಯಂತೆ ಅಲ್ಲಮ ಪ್ರಭುವನ್ನೂ ಅವತಾರ ಪುರುಷರನನ್ನಾಗಿ ಚಿತ್ರಿಸಿದ್ದಾರೆ. ಬಳ್ಳಿಗಾವಿಯ ಘಟಿಕಾಸ್ಥಾನದಲ್ಲಿ ವಿದ್ಯೆ ಪಡೆದ ಅಲ್ಲಮಪ್ರಭು ಮದ್ದಳೆ ನುಡಿಸುವ ಕಾಯಕ ಕೈಗೊಳ್ಳುತ್ತಾನೆ. ಬಳ್ಳಿಗಾವಿಯ ಕೇದಾರೇಶ್ವರ ದೇವಾಲಯದ ರಂಗ ಮಂಟಪದಲ್ಲಿ ನೃತ್ಯ ಮಾಡುತ್ತಿದ್ದ ಮಾಯಾದೇವಿಗೆ ಮದ್ದಳೆ ನುಡಿಸುತ್ತಿದ್ದ ಅಲ್ಲಮ ಆಕೆಯ ಪ್ರೇಮಭಿಕ್ಷೆಯನ್ನು ನಿರಾಕರಿಸುತ್ತಾನೆ. ವಿರಾಗ ಜೀವನದತ್ತ ಒಲವು ಹೊಂದಿದ್ದ ಅಲ್ಲಮ ಮಾಯೆಯನ್ನು, ಬಳ್ಳಿಗಾವಿಯನ್ನು ತೊರೆದು ಜಂಗಮವಾಗಿ ದೇಶದ ತುಂಬ ಸಂಚರಿಸುತ್ತಾ, ಹಿಮಾಲಯದಲ್ಲಿ ಮಹಾಮಹಿಮರ ಸಂದರ್ಶನ ಪಡೆದು ಶಿವಯೋಗಿಯಾಗಿ ಅಂತರಂಗದ ಸಾಧನೆಯಲ್ಲಿ ತೊಡಗುತ್ತಾರೆ. "ತನುವ ತೊಂಟವ ಮಾಡಿ, ಮನವ ಗುದ್ದಲಿಯ ಮಾಡಿ, ಅಗೆದು ಕಳೆದನಯ್ಯಾ ಭ್ರಾಂತಿಯ ಬೇರ, ಒಡೆದು ಸಂಸಾರದ ಹೆಂಟೆಯ ಬಗಿದು ಬಿತ್ತಿದೆನಯ್ಯಾ ಬ್ರಹ್ಮಬೀಜವ, ಅಖಂಡ ಮಂಡಲವೆಂಬ ಬಾವಿ, ಪವನವೇ ರಾಟಾಳ, ಸುಷುಮ್ನನಾಲದಿಂದ ಉದಕವ ತಿದ್ದಿ ಬಸವಗಳೈವರು ಹಸಗೆಡಿಸಿಹವೆಂದು ಸಮತೆ ಸೈರಣೆಯೆಂಬ ಬೇಲಿಯ ನಿಕ್ಕಿ, ಆವಾಗಳೂ ಈ ತೋಟದಲ್ಲಿ ಜಾಗರವಿದ್ದ ಸಸಿಯ ಸಲಹಿದೆನು ಕಾಣಾ ಗುಹೇಶ್ವರಾ!" ಎಂದಿದ್ದಾರೆ ಅಲ್ಲಮ ಪ್ರಭುದೇವರು.
ಶಿವಮೊಗ್ಗ, ಬನವಾಸಿ-ಉಡುಪಿ-ಮಂಗಳೂರು ಭಾಗದಲ್ಲಿ ಪ್ರಭು ಎಂಬ ಹೆಸರು ಮತ್ತು ಮನೆತನದ ಹೆಸರುಗಳು ಇಂದಿಗೂ ಬಳಕೆಯಲ್ಲಿವೆ. ಕರ್ನಾಟಕದ ಮಧ್ಯಕಾಲಿನ ಇತಿಹಾಸದಲ್ಲಿಯೂ ಇಂಥಹ ಮನೆತನದ ಹೆಸರುಗಳು ಪ್ರಸಿದ್ಧವಾಗಿದ್ದವು. ಕಾರಣ "ಅಲ್ಲಮಪ್ರಭು" ಎಂಬುದು ಅಲ್ಲಮ ಪ್ರಭುದೇವಶ್ಚ ಎಂಬ ಪ್ರಯೋಗವನ್ನು ಇಲ್ಲಿ ಗಮನಿಸಬಹುದಾಗಿದೆ ಎಂದಿದ್ದಾರೆ. ಡಾ.ವೃಷಭೇಂದ್ರ ಸ್ವಾಮಿ ಅವರು ಹರಿಹರ ಕವಿ "ಅಲ್ಲಮ್ಮ "ಅಲ್ಲಮ್ಮಯ್ಯ "ಅಲ್ಲಮದೇವ" ಎಂದು ತನ್ನ ರಗಳೆಯಲ್ಲಿ ಬಳಸಿದ್ದಾನೆ. ಸಿದ್ಧರಾಮ ಚಾರಿತ್ರ, ಬಸವಪುರಾಣಗಳಲ್ಲಿ ಅಲ್ಲಮ, ಅಲ್ಲಮ ಪ್ರಭು ಎಂಬ ಪ್ರಯೋಗಗಳಿವೆ. ಪ್ರಭುಲಿಂಗ ಲೀಲೆಯಲ್ಲಿ ಅಲ್ಲಮ, ಅಲ್ಲಮಪ್ರಭು, ಪ್ರಭು ಮುಂತಾಗಿ ಉಲ್ಲೇಖವಾಗಿವೆ. "ಅಲ್ಲಮ" ಶಬ್ದವನ್ನೇ ಮೂಲವನ್ನಾಗಿಟ್ಟುಕೊಂಡು ಅಲ್ಲಮದೇವ, ಅಲ್ಲಮಪ್ರಭು, ಅಲ್ಲಮಯ್ಯ, ಮುಂತಾಗಿ ರೂಢಿಯಲ್ಲಿ ಬಂದಿವೆ ಎನ್ನುತ್ತಾರೆ ಶ್ರೀ ಕಪಟರಾಳ ಕೃಷ್ಣರಾಯರು. ಇಸ್ಲಾಂನ ಅಲ್ಲಾಃ ಮತ್ತು ಟಿಬೆಟ್ ಗುರು ಲಾಮಾ ಮತ್ತು ಅಲ್ಲಮಕ್ಕೂ ಸಂಬಂಧವಿರಬಹುದೇ ಎನ್ನುತ್ತಾರೆ ಡಾ.ಎಲ್ ಬಸವರಾಜು ಅವರು. ನಾಗಮಂಗಲದ ಒಂದು ಶಾಸನದಲ್ಲಿ ಅಲ್ಲಾಳನಾಥ ವಿಗ್ರಹ ಮಾಡಿಸಿದ ಉಲ್ಲೇಖವಿದೆ. ಕ್ರಿ.ಶ.೧೦೯೧ರ ಶಾಸನದಲ್ಲಿ ಅಲ್ಲಮೇಶ್ವರದೇವ" ಎಂಬ ಹೆಸರಿದೆ ಅಲ್ಲದೆ ಪ್ರಾಚೀನ ಕಾವ್ಯಗಳಲ್ಲಿ ಅಲ್ಲಮರಸನ್, ಅಲ್ಲಾಲೇಶ್ವರ, ಅಲ್ಲಾಹುಲಿದೇವನ್ ಎಂಬ ಉಲ್ಲೇಖಗಳೂ ಇವೆ.
ಶಿವಮೊಗ್ಗ ಜಿಲ್ಲೆ ಶಿಕಾರಿಪುರ (ತಾ) ಬಳ್ಳಿಗಾವಿನಾಡು-ಬನವಾಸಿ ೧೨೦೦೦ದ ಉಪರಾಜಧಾನಿ. ಇಲ್ಲಿರುವ "ಗೋಗಾವಿ" ಅಲ್ಲಮಪ್ರಭುವಿನ ಜನ್ಮಸ್ಥಳ ಎಂದಿದ್ದಾರೆ ಶಿರಾಳ ಕೊಪ್ಪದ ಸಂಶೋಧಕರೂ, ನನ್ನ ಮಾಧ್ಯಮಿಕ ಶಾಲೆ ಉಪಧ್ಯಾಯರೂ ಆಗಿದ್ದ ಎಸ್.ಭೀಮಪ್ಪನವರು. ಹೊಸವೊಳಲು ಗ್ರಾಮದಲ್ಲಿನ ಪ್ರಭುಲಿಂಗದೇವರ ಮಂದಿರವನ್ನು ನಗರದ ಜನ ಜೀರ್ಣೋದ್ಧಾರ ಮಾಡಿಸಿ ದತ್ತಿ ಬಿಟ್ಟ ಉಲ್ಲೇಖ ಕ್ರಿ.ಶ.೧೧೫೮ರ ಶಾಸನದಲ್ಲಿದೆ ಎಂದು ಖ್ಯಾತ ವಿದ್ವಾಂಸ ಡಾ.ಪಿ.ಬಿ.ದೇಸಾಯಿ ದಾಖಲಿಸಿದ್ದಾರೆ. ಬಳ್ಳಿಗಾವಿ ತ್ರಿಪುರಾಂತಕೇಶ್ವರ ದೇವಾಲಯದ ಹಿಂದಿರುವ ಹೊಂಡದ ಪಕ್ಕದ ಕಲ್ಲು ಮಂಟಪ ಇರುವ ಸ್ಥಳವೇ ಅಲ್ಲಮರ ಜನ್ಮಸ್ಥಳವೆಂದು ಸ್ಥಳೀಯರು ಪರಂಪರೆಯಿಂದ ನಂಬಿಕೊಂಡು ಬಂದಿದ್ದಾರೆ. ಈಗ ಅಲ್ಲಿ ಒಂದು ವಿರಕ್ತ ಮಠ ಇರುವುದು ಈ ನಂಬಿಕೆಗೆ ಸಾಕ್ಷಿಯಾಗಿದೆ. ಬಳ್ಳಿಗಾವಿಯಲ್ಲಿರುವ ಕೇದಾರೇಶ್ವರ ದೇವಾಲಯದ ಆವರಣದಲ್ಲಿ ಪ್ರಾಚೀನ ವಿಶ್ವವಿದ್ಯಾಲಯ ಕೋಡಿಮಠವಿದ್ದಿತು. ಇಲ್ಲಿಯೇ ಅಲ್ಲಮನ ಬಾಲ್ಯ ವಿದ್ಯಾಭ್ಯಾಸ ನಡೆಯಿತೆಂದೂ ಪಕ್ಕದಲ್ಲಿರುವ ಚಿಕ್ಕದೇವಾಲಯವನ್ನು ನಗರೇಶ್ವರ ದೇವಾಲಯ ಎಂದೂ ಕರೆಯುತ್ತಾರೆ. ಇಲ್ಲಿರುವ ೩ ಗರ್ಭ ಗೃಹಗಳಲ್ಲಿ ಮಧ್ಯದಲ್ಲಿ ಪ್ರಭುಲಿಂಗ ಎಡಭಾಗದಲ್ಲಿ ಬ್ರಹ್ಮಲಿಂಗ ಬಲಭಾಗದಲ್ಲಿ ವೀರಭದ್ರ ವಿಗ್ರಹಗಳಿವೆ. ಇಲ್ಲಿ ನಡೆಯುವ ಜಾತ್ರೆಯಲ್ಲಿ "ಪ್ರಥಮ ಕಲ್ಯಾಣದ ಪ್ರಭುದೇವ ಉಘೇ, ಉಘೇ" ಎಂದು ಇಂದಿಗೂ ಘೋಷಿಸುತ್ತಾರೆ. ಬಳ್ಳಿಗಾವಿಯಿಂದ ೨ ಕಿ.ಮೀ. ದೂರದಲ್ಲಿ ಗೊಗ್ಗೇಶ್ವರ ದೇವಾಲಯ, ಗೊಗ್ಗಯ್ಯನ ಹೊಂಡ, ಅನಿಮಿಷ ದೇವರ ಗದ್ದುಗೆ ಇವೆ. ಹತ್ತಿರದಲ್ಲೇ ಗೊಗ್ಗಯ್ಯ ಶರಣನ ಸಮಾಧಿ ಇದೆ. ಅನಿಮಿಷಾರಣ್ಯ ಪತ್ರೆ ವನವಿದೆ. ಸಮೀಪದ ಶಿವಪುರದಲ್ಲಿ ಪತ್ರೆ ವನದ ಮಧ್ಯೆ ಅಲ್ಲಮರ ಗದ್ದುಗೆಯೂ ಇದೆ. ಅಲ್ಲಮರ ಮೊದಲು ಅನಿಮಿಷರಿಂದ ಲಿಂಗದೀಕ್ಷೆ ಪಡೆದು, ಅನುಷ್ಠಾನ ಮಾಡಿದ ಸ್ಥಳ ಸ್ಮಾರಕವಾಗಿರಬಹುದು.
"ಕಲ್ಯಾಣವೆಂಬ ಪ್ರಣತೆಯಲ್ಲಿ, ಭಕ್ತಿ ರಸವೆಂಬ ತೈಲವನೆರೆದು, ಆಚಾರವೆಂಬ ಬತ್ತಿಯಲ್ಲಿ ಬಸವಣ್ಣನೆಂಬ ಜ್ಯೋತಿಯ ಮುಟ್ಟಿಸಲು ತೊಳಗಿ ಬೆಳಗುತ್ತಿರ್ದುದಯ್ಯಾ ಶಿವನ ಪ್ರಕಾಶ ಆ ಬೆಳಗಿನೊಳಗೊಪ್ಪುತ್ತಿರ್ದರಯ್ಯಾ ಅಸಂಖ್ಯಾತ ಭಕ್ತ ಮಹಾಗಣಂಗಳು" ಎಂದಿದ್ದಾರೆ ಅಲ್ಲಮಪ್ರಭು ದೇವರು. ಬಸವಣ್ಣನವರ ಬದುಕಿನ ಪ್ರಧಾನ ಆಶಯವನ್ನು ಅವರ ಒಂದು ವಚನಗಳಲ್ಲಿ ಕಾಣಬಹುದು. ಮಾನವನು ತನ್ನ ಬದುಕಿನಲ್ಲಿ ಅನುಸರಿಸಬೇಕಾದ ಸಪ್ತ ಶೀಲಗಳನ್ನು ಕುರಿತು, "ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ. ಇದೇ ನಮ್ಮ ಕೂಡಲ ಸಂಗಮದೇವನೊಲಿಸುವ ಪರಿ" ಎಂದಿದ್ದಾರೆ. ಸರಳವಾದ ಪದಗಳಲ್ಲಿ ಜೀವನ ಸೂತ್ರಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ತಿಳಿಸಿದ್ದಾರೆ. ಆದರೆ ಬದುಕಿನಲ್ಲಿ ಅನುಸರಿಸಲೇಬೇಕಾದ ಈ ಸಪ್ತ ಸೂತ್ರಗಳನ್ನು ನಾವು ಅನುಸರಿಸುತ್ತಿದ್ದೇವೆಯೇ? ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಾಗಿದೆ. ಸಪ್ತ ಸೂತ್ರಗಳು ಅಂದಿನ ಬದುಕಿನ ಅವಿಭಾಜ್ಯ ಅಂಗಗಳಾಗಿ ಜನಜೀವನವನ್ನು ಸಮೃದ್ಧಗೊಳಿಸಿರುವ ಸತ್ಯ ನಮ್ಮ ಮುಂದಿದೆ. ಈ ಕುರಿತು ಚಿಂತನೆ ನಡೆಯಬೇಕಾಗಿದೆ. ನಮ್ಮ ಧರ್ಮಾಧಿಕಾರಿಗಳು, ರಾಜಕೀಯ ಮುತ್ಸದ್ಧಿಗಳು ಮೌಲ್ಯಗಳನ್ನು, ಜೀವನ ಪ್ರೀತಿಯನ್ನು ರಾಷ್ಟ್ರಪ್ರೇಮವನ್ನು, ಭಾಷಾ ಪ್ರೇಮವನ್ನು ಉದ್ದೀಪನಗೊಳಿಸುವ ಕಾರ್ಯವನ್ನು ಆದ್ಯತೆಯ ಮೇಲೆ ಕೈಗೊಳ್ಳಬೇಕಾಗಿದೆ. ಸತ್ಯ ಶುದ್ಧ ಕಾಯಕ ಮತ್ತು ದಾಸೋಹಗಳಿಂದ ದೇಶದಲ್ಲಿ ಸಮೃದ್ಧಿ ಸಾಧ್ಯ. ಕಾರ್ಲ್‌ಮಾರ್ಕ್ಸ್‌ನ ಆರ್ಥಿಕ ಸಿದ್ಧಾಂತವೂ ಇದನ್ನೇ ಸೂತ್ರವಾಗಿ ಪ್ರತಿಪಾದಿಸುತ್ತದೆ. ಪ್ರತಿಯೊಬ್ಬರೂ ದುಡಿದು ಉಣ್ಣಬೇಕು, ಸತ್ಯಮಾರ್ಗದಲ್ಲಿ ನಡೆಯಬೇಕು. ಗಳಿಸಿದ್ದರಲ್ಲಿ ಹೆಚ್ಚಾದುದನ್ನು ಮಕ್ಕಳಿಗೆ, ವಯಸ್ಸಾದವರಿಗೆ, ರೋಗಿಗಳಿಗೆ ಸಹಾಯ ಮಾಡಲು ಬಳಸಬೇಕು. ಸಪ್ತ ಸೂತ್ರಗಳ ಪ್ರಾಮಾಣಿಕ ಅನುಷ್ಠಾನದಿಂದ ಸಾಮಾಜಿಕ ಬಡತನ ತೊಲಗುತ್ತದೆ. ಸಮೃದ್ಧಿಯಿಂದ ಶಾಂತಿ, ಶಾಂತಿಯಿಂದ ಆಧ್ಯಾತ್ಮಿಕ ಉನ್ನತಿ, ಕಲೆ, ಸಾಹಿತ್ಯ, ಸಂಗೀತ ನೃತ್ಯಕಲೆ, ಶಿಲ್ಪಕಲೆಗಳು ಅರಳುತ್ತವೆ. ಶರಣರು ದೇವರನ್ನು ದೇವಾಲಯಗಳನ್ನು ನಿರಾಕರಿಸಲಿಲ್ಲ, ನಾಶ ಮಾಡಲಿಲ್ಲ ಬದಲಾಗಿ ಎಲ್ಲರಿಗೂ ಪ್ರವೇಶವಿಲ್ಲದ ದೇವಾಲಯಗಳಿಗೆ ಪರ್ಯಾಯವಾಗಿ ಶಿವನ ಕುರುಹಾದ ಇಷ್ಟಲಿಂಗವನ್ನು ದೇಹದ ಮೇಲೆ ಧರಿಸಿ ದೇಹವನ್ನೇ ದೇವಾಲಯವನ್ನಾಗಿಸುವ ದಾರಿ ತೋರಿದರು. ನಿನ್ನ ಹಸಿವನ್ನು ನೀನೇ ಉಂಡು ನೀಗಿಸಿಕೊಳ್ಳಬೇಕು, ನಿನ್ನರತಿ ಸುಖವನ್ನು ನೀನೇ ಅನುಭವಿಸಬೇಕು. ನಿನ್ನ ಆಧ್ಯಾತ್ಮಿಕ ಹಸಿವನ್ನು ನೀನೇ ನೀಗಿಸಿಕೊಳ್ಳಬೇಕು ನಿನ್ನ ಅಂತರಂಗವನ್ನು ಪ್ರವೇಶಿಸಿ, ನಿನ್ನಿಷ್ಟಲಿಂಗವನ್ನು ನೀನೇ ಪೂಜಿಸಬೇಕು. ನಿನ್ನ ಪರವಾಗಿ ಬೇರೆಯವರು ಈ ಮೂರು ಕೆಲಸಗಳನ್ನು ಮಾಡುವುದು ಸಲ್ಲದು ಎಂದರು. ದೇವರು ಮತ್ತು ನಿನ್ನ ಮಧ್ಯೆ ಪುರೋಹಿತರೆಂಬ ದಲ್ಲಾಳಿಗಳು ಬೇಡ ಎಂದರು. ಬಸವಣ್ಣ ಮತಾಂತರಿಯಲ್ಲ ಮನಾಂತರಿ ಎಂಬ ಡಾ.ನಾ.ಮೊಗಸಾಲೆ ಅವರ ಮಾತು ಉಲ್ಲೇಖನಾರ್ಹವಾಗಿದೆ.
ಅಲ್ಲಮಪ್ರಭು, ಹಠಯೋಗ, ಲಯಯೋಗ, ರಾಜಯೋಗ ಸಾಧಕರಾಗಿ, ಶಿವಯೋಗದ ಸಿದ್ಧಿಯನ್ನು ಪಡೆಯುತ್ತಾರೆ. ಬಳ್ಳಿಗಾವಿ ಸಮೀಪದ ಅನಿಮಿಷಾರಣ್ಯದಲ್ಲಿ ಶಿವಯೋಗ ನಿರತರಾಗಿದ್ದ ಅನಿಮಿಷ ಗುರುಗಳಿಂದ ಲಿಂಗದೀಕ್ಷೆಯನ್ನು ಪಡೆಯುತ್ತಾರೆ. ಪರಿವ್ರಾಜಕರಾಗಿ ನಾಡಿನಲ್ಲೆಲ್ಲ ಸಂಚರಿಸುತ್ತಾ ಗೊಗ್ಗಯ್ಯ, ಮುಕ್ತಾಯಕ್ಕ, ಸಿದ್ಧರಾಮ, ಗೋರಕನಾಥ ಮುಂತಾದವರಿಗೆ ಶಿವಯೋಗ ಸಾಧನೆಯ ಮಾರ್ಗ ತೋರುತ್ತಾರೆ. ಅಹಂಕಾರವನ್ನು ಜಯಿಸಿದ ಅಲ್ಲಮ ಪ್ರಭುದೇವರು "ನಾನೆಂಬ ಅಹಂಕಾರದಲ್ಲಿ ನಾನುಂಡೆನಾದರೆ ನನಗದೇ ಭಂಗ, ಸ್ತುತಿನಿಂದೆಗೆನೊಂದೆನಾದರೆ, ಅಂಗೈಯಲ್ಲಿರ್ಪ ಗುಹೇಶ್ವರ ಲಿಂಗಕ್ಕೆ ದೂರ" ಎಂದಿದ್ದಾರೆ. "ಕಾಮವನ್ನು ಸುಟ್ಟವನೇ ಯೋಗಿ, ಕಾಮನ ಬಲೆಗೆ ಬಿದ್ದವನೇ ಭೋಗಿ" ಎನ್ನುವ ಅಲ್ಲಮಪ್ರಭು, ಕಾಮನನ್ನು ಗೆದ್ದರೆ ಮಾಯೆಯನ್ನು ಗೆದ್ದಂತೆಯೇ ಸರಿ ಎನ್ನುತ್ತಾರೆ. ಗುಹೇಶ್ವರ ಲಿಂಗದ ವಿರಹದಲ್ಲಿ ಬೆಂದವರ ಮರಳಿ ಸುಡಲುಂಟೆ ಮರುಳೇ? ಎಂದಿದ್ದಾರೆ. ಅಲ್ಲಮ ಪ್ರಭುವಿನ ಅನುಭಾವ ಜ್ಞಾನ ಪೂರ್ಣವಾದದ್ದು. ಆತ ಯ್ಯೋಮ ಮೂರ್ತಿ, ಪರಿಪೂರ್ಣ ಅನುಭಾವಿ. ಕಾಮವನ್ನು ಗೆದ್ದವನು ಭಕ್ತ. ಗುರು ಕರುಣೆಯಿಂದ ದೇಹ ಶುದ್ಧ, ತನು ಶುದ್ಧ. ಇಷ್ಟಲಿಂಗ ಅನುಷ್ಠಾನದಿಂದ ಪ್ರಾಣಲಿಂಗ, ಭಾವಲಿಂಗದ ಅರಿವು. ಗುರುಲಿಂಗ ಜಂಗಮದಿಂದ ಐಕ್ಯ ಸ್ಥಳವನ್ನು ಸಾಧಿಸಬೇಕು "ಅನುಭಾವದಿಂದ ಹುಟ್ಟಿತ್ತು ಲಿಂಗ, ಅನುಭಾವದಿಂದ ಹುಟ್ಟಿತ್ತು ಜಂಗಮ, ಅನುಭಾವದಿಂದ ಹುಟ್ಟಿತ್ತು ಪ್ರಸಾದ, ಅನುಭಾವದನುವಿನಲ್ಲಿ ಗುಹೇಶ್ವರಲಿಂಗ ಅನುಪಮ ಸುಖಿ" ಎಂದಿದ್ದಾರೆ. "ನಾನೆಂಬುದು ಅಜ್ಞಾನ, ನೀನೆಂಬುದು ಮಾಯೆ, ನಾನೆನ್ನದೆ, ನೀನೆನ್ನದೆ ಬೇಕೆನ್ನದೆ, ಬೇಡವೆನ್ನದೆ, ಅಹುದೆನ್ನದೆ, ಅಲ್ಲವೆನ್ನದೆ, ತನ್ನ ತಾ ತಿಳಿದು ತಾನನ್ಯವಲ್ಲವೆಂದರಿತು ವ್ಯವಹರಿಸುವುದೇ ನಿರ್ಲಿಪ್ತತೆ. ಅದು ಪರಮ ಸುಖದ ಬೀಡು, ಅದೇ ಲಿಂಗಾನಂದ ಮುಕ್ತಿ" ಲಿಂಗ ದೇವನಲ್ಲಿ ನಿಷ್ಠೆ ಉಳ್ಳ ಭಕ್ತ ಐಕ್ಯಸ್ಥಳ ತಲುಪಿದಾಗ ಪರಮಾನಂದ. ಅಲ್ಲಿಂದ ಮುಂದೆ ಪುನರ್‌ಜನ್ಮ ಇಲ್ಲ ಎನ್ನುತ್ತಾರೆ. ಆತ್ಮ ದೇಹದಲ್ಲಿದ್ದರೂ ಅದಕ್ಕೆ ಅಂಟಿಕೊಳ್ಳದಿರುವುದೇ ಶಿವಯೋಗ. ಬಯಲಿನಲ್ಲಿ ಬಯಲಾಗುವುದನ್ನು ಸಾಧಿಸಿದ ಅಲ್ಲಮಪ್ರಭು ಬಯಲದೇಹಿಯಾದ, ಬಯಲ ಜೀವನ, ಬಯಲ ಭಾವನೇ, ಆತನಲ್ಲಿ ಅಳವಟ್ಟವು ಬಯಲಿನೊಳಗೆ ಬಯಲಾಗುವ ರಹಸ್ಯವನ್ನು ಅರಿತು, ಭೋದಿಸಿದ ಪ್ರಭುದೇವರು ತತ್ವ ಪ್ರಸಾರ ಮಾಡುತ್ತಾ ಜಂಗಮವಾಗಿ ಸುಳಿದಾಡಿದರು.
"ಅರಿದೆನೆಂಬುದು ತಾ ಬಯಲು, ಅರಿಯೆನೆಂಬುದು ತಾ ಬಯಲು, ಅರಿವಿನ ಕುರುಹಿನ, ಮರಹಿನೊಳಗೆ ಗುಹೇಶ್ವರನೆಂಬುದು ತಾ ಬಯಲು" ಇಂತಹ ಚಿಕ್ಕ ಪದಗಳನ್ನು ಬಳಸಿ, ಅಧ್ಯಾತ್ಮದ ಉನ್ನತ ಹಂತವನ್ನು ಪರಿಣಾಮಕಾರಿಯಾಗಿ ತಿಳಿಸುವುದು ಅಲ್ಲಮಪ್ರಭುವಿನ ವಿಶಿಷ್ಟತೆ. ನಾವಾಡುವ ಮಾತು ಹೇಗಿರಬೇಕು? ಅಲ್ಲಮ ಪ್ರಭು ನುಡಿದು ಸೂತಕಿಗಳಲ್ಲ, ಭಾವಶುದ್ಧಿಯಿಂದ ನುಡಿದುದೇ ವಚನ. ಶರಣರು ವಚನಕಾರರು, ಕವಿಗಳಲ್ಲ ಪಂಡಿತರಲ್ಲ ಅವರ ಮನದಾಳದ ಭಾವನೆಗಳು ಹರಳುಗಟ್ಟಿದಾಗ ಮೂಡಿದ ಉದ್ಗಾರಗಳೇ ವಚನಗಳಾಗಿ ಕನ್ನಡ ಭಾಷೆಯನ್ನು ಶ್ರೀಮಂತವಾಗಿಸಿವೆ ಎನ್ನುತ್ತಾರೆ ಫ.ಗು.ಹಳಕಟ್ಟಿಯವರು.
ಜಯದೇವಪ್ಪ ಜೈನಕೇರಿ
ನಂ.೮೭, ಶಾಂತಲಾ, ಕುವೆಂಪು ರಸ್ತೆ, ಶಿವಮೊಗ್ಗ-೫೭೭ ೨೦೧
ಮೊಬೈಲ್: ೯೮೮೬೩ ೭೬೭೯೫
Subscribe to:
Post Comments (Atom)
ಹಿಂದಿನ ಬರೆಹಗಳು
-
▼
2011
(92)
-
▼
July
(11)
- ಕಲಾಲೋಕಕ್ಕೆ ರೆಕ್ಕೆ-ಪುಕ್ಕ ಕಟ್ಟಿಕೊಟ್ಟ ಹುಸೇನ್
- ಶರಣ ಮಾರ್ಗ (ರೂಪಕ)
- ಜಾನಪದ: ಒಂದಿಷ್ಟು ವಿಚಾರಗಳು
- ಅನನ್ಯ ಕಲಾಕೃತಿ ಮೂಡಬೇಕಾದರೆ ಅಸಾಧ್ಯ ಪರಿಶ್ರಮ ಬೇಕೇ ಬೇಕು
- ಕರ್ನಾಟಕ ರತ್ನ ಪ್ರಶಸ್ತಿಯ ಪ್ರತಿಭೆಯಲ್ಲಿ ದೇಜಗೌ
- ಕೆಂಪೇಗೌಡರು ಕಟ್ಟಿದ ಪೇಟೆ, ದೇಗುಲಗಳು....
- ನೀಗಿಕೊಂಡ ಹಳೆಮನೆ
- ನಿವೃತ್ತಿ ವಯೋಮಿತಿ ಏರಿಕೆ ನಿವೃತ್ತಿ ವಯೋಮಿತಿ ಏರಿಕೆ ಯುವ ...
- ನಿತ್ಯ ನಿರಂಜನ ಅಲ್ಲಮ ಪ್ರಭುದೇವರು
- ದೇವದುರ್ಗದ ಈರಣ್ಣ
- ಅತ್ಯುತ್ತಮ ಸಂಘಟನಾಕಾರ ಕೆ.ಟಿ.ರವೀಂದ್ರಕುಮಾರ್
-
▼
July
(11)
No comments:
Post a Comment