Friday, July 22, 2011

ಕರ್ನಾಟಕ ರತ್ನ ಪ್ರಶಸ್ತಿಯ ಪ್ರತಿಭೆಯಲ್ಲಿ ದೇಜಗೌ


“ದೇಜಗೌ ಅವರಿಗೆ
ಕನ್ನಡವೇ ಕಾಯಕ
ಕನ್ನಡವೇ ಕೈಲಾಸ”
-ಡಾ. ಚನ್ನವೀರ ಕಣವಿ

ಇಂದಿನ ಮಾನವ ಜಗತ್ತಿನ ಮೇರುಸದೃಶ ಮಾರ್ಗದರ್ಶಕರ ಮುಂಚೂಣಿಯಲ್ಲಿರುವವರಲ್ಲಿ ಡಾ.ದೇಜಗೌ ಪ್ರಮುಖರು. ಗುರು ಪರಂಪರೆಯಲ್ಲಿ ಆದರ್ಶ ಗುರುವಾಗಿ ಅಗ್ರಸ್ಥಾನ. ವಿಶ್ವಕವಿ ಕುವೆಂಪು ಅವರ ಪರಮಾಪ್ತ ಶಿಷ್ಯರಾಗಿ, ಕನ್ನಡವೇ ಬದುಕಾಗಿ, ಬದುಕೆಲ್ಲ ಕನ್ನಡವಾಗಿರುವ ಹಿರಿಯ ಚೇತನ, ಕನ್ನಡದ ಮಹರ್ಷಿ. ಅವರಿಗೆ ಪ್ರತಿಷ್ಠಿತ "ಕರ್ನಾಟಕ ರತ್ನ ಪ್ರಶಸ್ತಿ"ಯ ಹೊನ್ನಗರಿ.
ದೇಜಗೌ ಎಂಬ ತ್ರ್ಯಕ್ಷರಿ ಸಮಸ್ತ ಕನ್ನಡಿಗರ ಗಾಯತ್ರಿ ಮಂತ್ರ. ’ಕನ್ನಡ’ ಎನ್ನುವುದು ನೆಲ, ಜಲ, ಭಾಷೆ, ಸಂಸ್ಕೃತಿ, ಬದುಕು ಹೀಗೆ ಸರ್ವಸ್ವವನ್ನು ಒಳಗೊಳ್ಳುವಂಥದು. ಹೀಗೆ ಸರ‍್ವಾಂಗೀಣವಾಗಿ ನಾಡು-ನುಡಿಯ ಬದುಕನ್ನು ಕಟ್ಟಿಕೊಟ್ಟವರು ದೇಜಗೌ. ಕನ್ನಡದ ವೀರಸೇನಾನಿಯಾಗಿ, ಸಾಂಸ್ಕೃತಿಕ ರಾಯಭಾರಿಯಾಗಿ ಇಪ್ಪತ್ತು ಹಾಗೂ ಇಪ್ಪತ್ತೊಂದನೆಯ ಶತಮಾನದಲ್ಲಿ ನಾಡವರನ್ನು ಮುನ್ನಡೆಸುತ್ತಿರುವ ಕನ್ನಡದ ಸ್ವಾಭಿಮಾನಿ ದೇಜಗೌ.
ಶ್ರೀ ರಾಮಕೃಷ್ಣ ಪರಮಹಂಸ ಹಾಗೂ ಸ್ವಾಮಿ ವಿವೇಕಾನಂದ ಅನನ್ಯ ಗುರು-ಶಿಷ್ಯ ಸಂಬಂಧದಂತೆ, ’ಯುಗದ ಕವಿ ಜಗದ ಕವಿ’ ಕುವೆಂಪು ಹಾಗೂ ನಾಡೋಜ ದೇಜಗೌ ಅವರ ನಡುವಣ ಗುರು-ಶಿಷ್ಯ ಸಂಬಂಧ. ನಿತ್ಯ ನಿರಂತರವೂ ಶ್ರೀ ಗುರು ಕುವೆಂಪು ಧ್ಯಾನದಲ್ಲಿ ಅಂತರಂಗದಲ್ಲಿ ತನ್ಮಯರಾಗಿರುವ ದೇಜಗೌ ಅವರ ಪಾಲಿಗೆ ಕುವೆಂಪು ಅವರೇ ಸರ್ವಸ್ವ. ಕುವೆಂಪು ಅವರ ಪರಮಾಪ್ತ ಶಿಷ್ಯರಾಗಿ ಶ್ರೀ ಗುರುವಿನ ಅಂತರಂಗವನ್ನು ಗೆದ್ದ ದೇಜಗೌ ಬದುಕು ಧನ್ಯ. "ನನ್ನ ದೇಜಗೌ ಸಂಬಂಧವನ್ನು ಯಾವ ಪದಗಳಿಂದ ವರ್ಣಿಸಬಹುದೋ ನನಗೆ ಅರಿಯದು. ಮಾತುಗಳಿಗೇನು? ಬೇಕಾದಷ್ಟಿವೆ. ಮಾತಿಗೆ ಮೀರಿದ್ದನ್ನು ಹೇಳುವಾಗ ಮಾತಿಲ್ಲದಿರುವುದು ಲೇಸು... ಶ್ರೀ ಸ್ವಾಮಿ ಸಿದ್ಧೇಶ್ವರಾನಂದರು ನನ್ನ ಆಧ್ಯಾತ್ಮಿಕ ಗುರುಗಳು. ಶ್ರೀ ಜವರೇಗೌಡರು ನನ್ನ ಮಾರ್ಗದರ್ಶಕರು" ಎಂದಿದ್ದಾರೆ ಕುವೆಂಪು ಅವರು.
"ಪ್ರೊ||ದೇ.ಜವರೇಗೌಡ" ಎಂದರೆ ಸುಲಭಕ್ಕೆ ಎಲ್ಲರಿಗೂ ಅರ್ಥವಾಗದಿರಬಹುದು. "ದೇಜಗೌ" ಎಂದರೆ ಸಾಕು ಇವರು ಗೊತ್ತಿಲ್ಲದವರೇ ಇಲ್ಲವೆನ್ನಬಹುದು. "ದೇಜಗೌ" ಎಂಬ ಮೂರಕ್ಷರ ಮಾತ್ರದಿಂದಲೇ ಪ್ರಸಿದ್ಧರಾಗಿರುವ ಕನ್ನಡ ಸಾರಸ್ವತ ಲೋಕದ ಮೇರುಪರ್ವ ದೇ.ಜವರೇಗೌಡರು ಸಾಹಿತ್ಯದಲೆಂತೋ ಹಾಗೆಯೇ ಕನ್ನಡಪರ ಹೋರಾಟದಲ್ಲೂ ಮಹಾಪರ್ವವೇ! ಹೋರಾಟಕ್ಕೆ ನಿಂತರೆ ಜಪ್ಪಯ್ಯ ಎಂದರೂ ಜಗ್ಗರು. ಒಂದು ರೀತಿಯಲ್ಲಿ ಕನ್ನಡದ ಹೆಬ್ಬಂಡೆ. ಹೋರಾಟದಿಂದಲೇ ಹತ್ತು ಹಲವು ಫಲಗಳನ್ನು ಕನ್ನಡಕ್ಕೆ ದಕ್ಕಿಸಿಕೊಟ್ಟ ಕರುನಾಡಿನ ಸಿರಿಫಸಲಿನವರು. "ಹೋರಾಟದ ಬದುಕು" ದೇಜಗೌರ ಆತ್ಮ ಕಥನದ ಹೆಸರೂ ಹೌದು. ಇವರು ನಡೆದು ಬಂದ ಹಾದಿಗೆ ಅನ್ವರ್ಥವಿದು. ನಿಜಕ್ಕೂ ಇವರು ಕನ್ನಡದ ಉಸಿರು.
"ಕನ್ನಡಕ್ಕೆ ಕುತ್ತು ಬಂತೆಂದರೆ ನನ್ನಿಂದ ಸಹಿಸಲಾಗದು. ನನ್ನ ಮೈಮೇಲೆ ಉಗ್ರನರಸಿಂಹನೇ ಬಂದಂತಾಗುತ್ತದೆ. ಕನ್ನಡದ ಹಗೆ-ನನಗೆ ಹಗೆ" ಎನ್ನುವ ದೇಜಗೌ ಕನ್ನಡ ನಾಡು ನುಡಿ ವಿಚಾರದಲ್ಲಿ ಸ್ವಾಭಿಮಾನದ ಶಿಖರ. ಇಲ್ಲಿ ಯಾವ ಮುಲಾಜು ಗಿಲಾಜು, ರಾಜಿ ಗೀಜಿ, ಮರ್ಜಿ ಗಿರ್ಜಿಗಳಿಲ್ಲ. ಕನ್ನಡಕ್ಕಷ್ಟೇ ದೇಜಗೌ. ಮಾತು ಮಾತ್ರ ದೊಣ್ಣೆ ಆದರೆ ಹೃದಯ ಮೃದು ಬೆಣ್ಣೆ. ಕನ್ನಡವೆಂದರೆ ಬಹುಬೇಗ ಕರಗಿಬಿಡುವ ಕನ್ನಡದ ಕರುಣಾಳಿವರು ಕನ್ನಡಕಟ್ಟಾಳು.
ರಸಋಷಿ ಕವಿ ಕುವೆಂಪು ಅವರ ಪರಮಾಪ್ತ ಶಿಷ್ಯರಾದ ದೇಜಗೌ ತಮ್ಮ ಗುರು ಕುವೆಂಪು ಅವರನ್ನು ಒಪ್ಪಿಕೊಂಡಂತೆ ಮತ್ತಾರನ್ನೂ ಒಪ್ಪಿಕೊಳ್ಳಲಿಲ್ಲ. ದೈವವನ್ನೂ ಕೂಡ. ಇವರಿಗೆ ಗುರು ಕುವೆಂಪು ಒಂದು ಕಣ್ಣಾದರೆ ಕನ್ನಡ ಇನ್ನೊಂದು ಕಣ್ಣಾಗಿತ್ತು. ಇವರ ಮಾತೃಭಾಷೆ ಪ್ರೀತಿಗೆ, ಗುರುಭಕ್ತಿಗೆ ಕಡಲೇಳೂ ಸಾಟಿಯಿಲ್ಲ. ದೇಜಗೌ ಮಾತಿನಲ್ಲೇ ಹೇಳುವುದಾದರೆ "ಜೀವನ ನನಗೆ ಕೊಡಬೇಕಾದ್ದೆಲ್ಲವನ್ನೂ ಕೊಟ್ಟಿದೆ. ಆ ಬಗ್ಗೆ ಅತೃಪ್ತಿ ಇಲ್ಲ. ಆದರೆ ಇಲ್ಲಿಯವರಗೆ ನಾನು ಏನನ್ನಾದರೂ ಒಳ್ಳೆಯದನ್ನು ಮಾಡಿದ್ದರೆ, ಸಾಧಿಸಿದ್ದರೆ, ಅದು ಕೇವಲ ಗುರುಕೃಪೆಯಿಂದ ಮಾತ್ರ. ನನ್ನದು ಎನ್ನುವುದು ಏನು ಇಲ್ಲ. ಎಲ್ಲವೂ ನನ್ನ ಗುರು ಕುವೆಂಪುರವರ ದಿವ್ಯ ಚೈತನ್ಯ ಬಲದಿಂದಲೇ ಆಗಿರುವುದು" ಎಂದು ಎಲ್ಲವನ್ನೂ ಗುರು ಕೃಪಾಶೀರ್ವಾದವೆನ್ನುವ ದೇಜಗೌ ತಮ್ಮ ರಕ್ತದ ಕಣಕಣದಲ್ಲೂ ಗುರು ಕುವೆಂಪುರವರನ್ನೇ ತುಂಬಿಕೊಂಡವರು.
"ಕನ್ನಡವೆಂಬತ್ರಕ್ಷರಿಯೇ ನನಗೆ ಗಾಯತ್ರಿಮಂತ್ರ. ಕನ್ನಡವೇ ನನ್ನ ತಾಯಿ-ತಂದೆ, ಅದೇ ನನ್ನ ಬಂಧು-ಬಳಗ, ಅದೇ ನನ್ನ ಜಾತಿ-ಧರ್ಮ, ಅದೇ ನನ್ನ ಗತಿ-ಮತಿ. ನನಗಾಗಿ ನಾನೇನನ್ನೂ ಸಾಧಿಸಬೇಕಾದ್ದಿಲ್ಲ. ಕನ್ನಡದ ಗೆಲುವಿಗಾಗಿ ಎಂತಹ ಅವಮಾನವನ್ನಾದರೂ ಸಹಿಸಿಯೇನು. ಕನ್ನಡ ಬಾವುಟ ರಕ್ಷಣೆಗೆ ನನ್ನ ಪ್ರಾಣ ಕೊಟ್ಟೇನು. ಮುಂದಿನ ಪೀಳಿಗೆ ಈ ಬಾವುಟವನ್ನೇರಿಸಿ ಹಾರಿಸಬೇಕಿದೆ" ಎನ್ನುವ ದೇಜಗೌ, ಗುರು ಕುವೆಂಪುರವರಿಂದಲೇ ಕನ್ನಡ ದೀಕ್ಷೆ ಪಡೆದವರು. ಗುರು ಕುವೆಂಪು ಹೇಳಿದಂತೆ ಕನ್ನಡಕ್ಕಾಗಿ ಕೈಯೆತ್ತಿ ಕಲ್ಪವೃಕ್ಷವಾಗಿದ್ದಾರೆ. ಕನ್ನಡಕ್ಕಾಗಿ ಕೊರಳೆತ್ತಿ ಪಾಂಚಜನ್ಯವೇ ಆಗಿದ್ದಾರೆ. ಇಳಿವಯಸ್ಸಿನಲ್ಲೂ ದಣಿವಿಲ್ಲದೆ ಕನ್ನಡ ಡಿಂಡಿಮವನ್ನು ಇಂದಿಗೂ ಬಾರಿಸುತ್ತಲೇ ಇದ್ದಾರೆ.
ಶಾಂತಿಪ್ರಿಯ ದೇಜಗೌ ಅವರು ಕನ್ನಡ ಚಳವಳಿಗೆ ಹೋರಾಟಕ್ಕೆ ಒಂದು ಘನತೆ ತಂದುಕೊಟ್ಟವರು. ಶಾಂತಿದೂತ ಮಹಾತ್ಮ ಗಾಂಧೀಜಿಯಿಂದ ಪ್ರಭಾವಿತರಾದ ಇವರು ಕನ್ನಡಕ್ಕಾಗಿ ನಡೆಸಿದ ಉಪವಾಸ ಸತ್ಯಾಗ್ರಹಗಳು ದಾಖಲಾರ್ಹ. ಅದರಲ್ಲೂ ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನ ದೊರಕಿಸಿಕೊಡಲು ಹಠವಿಡಿದು ವಿವಿಧ ಹಂತಗಳಲ್ಲಿ ಇವರು ನಿರಂತರವಾಗಿ ನಡೆಸಿದ ಉಪವಾಸ ಸತ್ಯಾಗ್ರಹ ಅತ್ಯಂತ ಪ್ರಮುಖವಾದುದು. ಇಂದು ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನದ ಗೌರವ ದೊರೆತಿರುವುದಕ್ಕೆ ದೇಜಗೌ ಬಹುಮುಖ್ಯರೆಂಬುದು ಉತ್ಪ್ರೇಕ್ಷೆಯ ಮಾತಲ್ಲ. ಹಾಗೆಯೇ ಇಂಗ್ಲೀಷ್ ಭಾಷೆಯಲ್ಲಿ ಮಾತ್ರ ನಡೆಯುತ್ತಿದ್ದ ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಪರೀಕ್ಷೆಗಳಲ್ಲಿ ಕನ್ನಡವನ್ನೂ ಅಳವಡಿಸುವಂತೆ ಮಾಡಿದ್ದು ಇವರ ಉಪವಾಸ ಸತ್ಯಾಗ್ರಹ ಫಲಶೃತಿಗಳಲ್ಲೊಂದು. ಇಂಥ ಅನೇಕ ಕನ್ನಡಪರ ಕೈಂಕರ್ಯಗಳು ಇವರ ಹೋರಾಟಗಳಿಂದಲೇ ಆಗಿವೆ. ಯಾವುದೇ ಆಸ್ತಿಪಾಸ್ತಿಗೆ ಹಾನಿಯಾಗದಂತೆ, ಸಮಾಜದ ಶಾಂತಿ ಕದಡದಂತೆ ಅಹಿಂಸಾ ಮಾರ್ಗದಲ್ಲೇ ತಮ್ಮ ಗುರಿ ಸಾಧಿಸುವುದು ಇವರ ಹೋರಾಟದ ವೈಶಿಷ್ಟ್ಯ.
ಇದೆಲ್ಲಾ ಇವರಿಗೆ ಸಾಧ್ಯವಾದದ್ದು ರಾಷ್ಟ್ರಪಿತ ಗಾಂಧೀಜಿ ಅವರ ಪ್ರಭಾವದಿಂದಲೇ. "ಹೋರಾಟ, ಉಪವಾಸ, ಸತ್ಯಾಗ್ರಹ ಇವುಗಳೆಲ್ಲ ಗಾಂಧಿಮಂತ್ರಗಳು. ಇವುಗಳನ್ನೇ ಹೋರಾಟಗಾರರು ಅಳವಡಿಸಿಕೊಳ್ಳಬೇಕಾಗಿರುವುದು. ನಾನೂ ಅವುಗಳನ್ನೇ ಅಳವಡಿಸಿಕೊಂಡದ್ದು. ನನ್ನ ಗುರು ಕುವೆಂಪು ಅವರಷ್ಟು ಗಾಂಧೀಜಿಯವರನ್ನು ಆರಾಧಿಸಿದವರು ಬಹಳ ಇಲ್ಲ ಎನ್ನುವ ದೇಜಗೌ, ಬಾಲ್ಯದಲ್ಲೇ ಗಾಂಧೀಜಿಯವರನ್ನು ಬಹಳ ಹತ್ತಿರದಿಂದ ಕಂಡು ಅವರ ಮಾತುಗಳನ್ನು ಆಲಿಸಿ ಅಂದಿನಿಂದಲೇ ಖಾದಿ ಧರಿಸಿ ಗಾಂಧಿತತ್ವದೆಡೆ ಆಕರ್ಷಿತರಾದರು. ಈಗಲೂ ಅವರು ಹಾಗೆಯೇ ಇದ್ದಾರೆ. ಅಪ್ಪಟ ಖಾದಿಧಾರಿಯಾಗಿ ಗಾಂಧಿತತ್ವಗಳ ತಂಪು ನೆರಳಲ್ಲಿ ಕನ್ನಡದ ಗಾಂಧಿಯೇ ಆಗಿದ್ದಾರೆ.
ದೇಜಗೌ ಅವರು ಗಾಂಧೀಜಿಯವರನ್ನು ದರ್ಶನ ಮಾಡಿ ಸ್ಪರ್ಶಿಸಿದ್ದಾದರೂ ಹೇಗೆ ಗೊತ್ತೇ? ಒಮ್ಮೆ ಚನ್ನಪಟ್ಟಣಕ್ಕೆ ಬಂದಿದ್ದ ಗಾಂಧೀಜಿ ಭಾಷಣಕ್ಕೆಂದು ವೇದಿಕೆಗೆ ಬರುವಾಗ ಸಾಲುಗಟ್ಟಿ ನಿಂತಿದ್ದ ವಿದ್ಯಾರ್ಥಿಗಳ ಪೈಕಿ ಬಾಲಕ ದೇಜಗೌ ಒಬ್ಬರಾಗಿದ್ದರು. ಗಾಂಧೀಜಿ ಬಾಲಕ ದೇಜಗೌರ ಸಮೀಪದಲ್ಲೇ ನಿಂತಿದ್ದರಿಂದ ಅವರು ಹೊದ್ದುಕೊಂಡಿದ್ದ ಶಾಲನ್ನು ಮುಟ್ಟಿ ನೋಡುವ ಸುವರ್ಣಾವಕಾಶ ಇವರದ್ದಾಗಿತ್ತು. "ಗಾಂಧೀಜಿ ಹೊದ್ದಿದ್ದ ಶಾಲಿನ ತುದಿಯನ್ನು ಮುಟ್ಟಿ ಅರೆಕ್ಷಣ ಹಿಡಿದಾಗ ಎಂಥದೋ ಮಿಂಚು ಸೋಕಿದ ಅನುಭವ ನನಗೆ! ನಿಜಕ್ಕೂ ಆ ದಿನವನ್ನು ನಾನು ಎಂದೂ ಮರೆಯುವಂತಿಲ್ಲ." ಎಂದು ಈಗಲೂ ದೇಜಗೌ ಅವರು ಆ ಅವಿಸ್ಮರಣೀಯ ಘಟನೆಯನ್ನು ನೆನೆದು ರೋಮಾಂಚಿತರಾಗುವುದುಂಟು.
ವಯಸ್ಸಾಯಿತೆಂದು ಇವರ ಎದೆಯಲ್ಲಿ ಹೋರಾಟದ ನದಿ ಬತ್ತಿಲ್ಲ. ಈಗಲೂ ಸಹ ಹದಿಹರೆಯದ ಯುವಕರನ್ನೂ ನಾಚಿಸುವಂತೆ ಉಕ್ಕಿ ಭೋರ್ಗರೆಯುತ್ತಿದೆ. ಬದುಕಿನುದ್ದಕ್ಕೂ ಹೋರಾಡುತ್ತಲೇ ಬಂದ ದೇಜಗೌ ’ಹೋರಾಟದ ಬದುಕಿ’ನಲ್ಲೇ ಬದುಕಿನ ಅನ್ವೇಷಣೆ ನಡೆಸಿದ್ದಾರೆ. ತಮ್ಮ ಸಾಧನೆ-ಸಿದ್ಧಿಗಳ ಅಮೃತಫಲವನ್ನು ಜನಕೋಟಿಗೆ ಜ್ಞಾನದಾಸೋಹ ಮಾಡಿದ್ದಾರೆ.
’ನನ್ನ ಬಾಳೇ ಒಂದು ಪವಾಡ’ ಎನ್ನುತ್ತಾರೆ ದೇಜಗೌ. ಬಡತನದ ಬಸಿರಿನಲ್ಲಿ ಬೆಳಕಿನತ್ತ ಸಾಗಿಬಂದವರು. ಗೊತ್ತುಗುರಿಯಿಲ್ಲದ ಪಯಣದಲ್ಲಿ ಶ್ರೀ ಗುರು ಕೃಪೆಯಿಂದ ಗುರಿಯತ್ತ ಮುನ್ನಡೆದವರು. ಕಿರುಕುಳದ ದವಡೆಯಿಂದ ಪಾರಾಗಿ, ವಿಜಯದುಂದುಭಿ ಮೊಳಗಿಸಿದವರು. ಕನ್ನಡದ ಗರಡಿಯಲ್ಲಿ ಎದುರೀಸಿನ ಪಯಣಿಗರಾಗಿ, ಶ್ರೀ ಗುರುವಿನ ಆದೇಶ ಪರಿಪಾಲಿಸುತ್ತ ಕನ್ನಡದ ಕಂಕಣ ಕಟ್ಟಿಕೊಂಡು ನಾಡು-ನುಡಿಗೆ ತಮ್ಮನ್ನು ಅರ್ಪಿಸಿಕೊಂಡಿರುವವರು ದೇಜಗೌ. ತೆರೆದ ಮನ, ಪರಿಶುದ್ಧ ಅಂತಃಕರಣ, ಮೃದು ಹೃದಯ, ಹೆಂಗರುಳಿನ ಮಾತೃವಾತ್ಸಲ್ಯ ಇವೆಲ್ಲವೂ ದೇಜಗೌ ವ್ಯಕ್ತಿತ್ವಕ್ಕೆ ಭೂಷಣಪ್ರಾಯವಾದ ಗುಣಾಂಶಗಳು. ಕುವೆಂಪು ಅವರ ’ವಿಶ್ವಮಾನವ ಸಂದೇಶ’ವನ್ನು ಲೋಕಕ್ಕೆ ಬಿತ್ತರಿಸುವ ಕೈಂಕರ್ಯದಲ್ಲಿ ನಿತ್ಯಕಾಯಕನಿರತರು. ಜಾತ್ಯತೀತ ಮನೋಧರ್ಮದ ಮಹಾನ್ ಮಾನವತಾವಾದಿ ಅವರು.
ಲೋಕವೇ ನಿಬ್ಬೆರಗುಪಡುವಂಥ ಅದ್ವಿತೀಯ ಸಾಧನೆ ದೇಜಗೌ ಅವರದು. ಅದ್ವಿತೀಯ ಪ್ರತಿಭೆ ಹಾಗೂ ಅಪ್ರತಿಮ ಪಾಂಡಿತ್ಯಗಳ ಸಂಗಮವಾಗಿರುವ ಕನ್ನಡ ಸಾರಸ್ವತ ಹಾಗೂ ಸಾಂಸ್ಕೃತಿಕ ಲೋಕದ ದಿಗ್ಗಜ. ದೇಜಗೌ ಎಂದರೆ ಜಂಗಮ ವಿಶ್ವಕೋಶ ಎಂದೇ ಅರ್ಥ.
ನಮ್ಮ ಸಾರಸ್ವತ ಲೋಕದಲ್ಲಿ, ಬಹುತೇಕ ಎಲ್ಲ ಪ್ರಕಾರಗಳಲ್ಲಿಯೂ ಸಮೃದ್ಧ ಕೃಷಿ ಮಾಡಿದವರು ದೇಜಗೌ. ಪ್ರವಾಸ ಸಾಹಿತ್ಯ, ಜೀವನ ಚರಿತ್ರೆ, ಆತ್ಮಕಥೆ, ಗ್ರಂಥ ಸಂಪಾದನೆ, ಕವಿತೆಗಳು, ಜನಪದ ಸಾಹಿತ್ಯ, ಪ್ರಬಂಧ, ಹರಟೆ, ಅಂಕಣ, ಮುನ್ನುಡಿ, ಸಂಪಾದಕೀಯ, ಭಾಷಣಗಳು, ದಿನಚರಿ, ವಚನಗಳು, ಚುಟುಕುಗಳು, ನಾಟಕಗಳು, ಅನುವಾದಿತ ಕೃತಿಗಳು, ಐತಿಹಾಸಿಕ ಕಾದಂಬರಿಗಳು, ಶಿಶುಸಾಹಿತ್ಯ, ಶಿಕ್ಷಣ ಸಾಹಿತ್ಯ, ಕನ್ನಡ ನಾಡು-ನುಡಿಗೆ ಸಂಬಂಧಿಸಿದ ಕೃತಿಗಳು, ಇಂಗ್ಲೀಷ್ ಭಾಷೆಯಲ್ಲಿ ರಚಿತಗೊಂಡಿರುವ ಕೃತಿಗಳು ಇತ್ಯಾದಿ. ವಿಶ್ವಕವಿ ಕುವೆಂಪು ಅವರ ವ್ಯಕ್ತಿತ್ವ-ಸಾಧನೆ-ಸಿದ್ಧಿಗಳ ಹಿನ್ನೆಲೆಯಲ್ಲಿ ಕುವೆಂಪು ಸಾಹಿತ್ಯವನ್ನು ಕುರಿತಂತೆ ಅಗಾಧವಾಗಿ, ಮೌಲಿಕವಾಗಿ ಅತಿಹೆಚ್ಚು ಬರವಣಿಗೆ ಮಾಡಿದವರು ದೇಜಗೌ ಅವರಂತೆ ಮತ್ತೊಬ್ಬರಿಲ್ಲ.
ಯಾವುದೇ ಪ್ರಕಾರದ ಕೃತಿಗಳಾಗಲಿ, ಎಲ್ಲದರಲ್ಲೂ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿರುವುದು ದೇಜಗೌ ಅವರ ವೈಶಿಷ್ಟ್ಯ. ದೇಜಗೌ ಕೇವಲ ಗದ್ಯ ಸಾಹಿತಿಯಲ್ಲ. ಕಥೆ, ಕವಿತೆ, ವಚನ, ಚುಟುಕುಗಳು, ನಾಟಕಗಳ ಮೂಲಕ ಸೃಜನಶೀಲ ಸಾಹಿತ್ಯಕ್ಕೆ ಅವರದು ಗಮನಾರ್ಹ ಕೊಡುಗೆ. ವಿದ್ಯೆಯ ಅಧಿದೇವತೆಯ ಭಂಡಾರ ಶ್ರೀಮಂತಗೊಳಿಸಿದ ಮಹಾನ್ ಲೇಖಕ.
ಆಡಳಿತ ರಂಗದಲ್ಲಿ ದೇಜಗೌ ಯಶಸ್ವಿಯಾಗಿ ನಿರ್ವಹಿಸಿದ ಜವಾಬ್ದಾರಿ ಸ್ಥಾನಗಳ ಹೊಣೆಗಾರಿಕೆ ದಾಖಲಿಸುವಂಥದು. ಸುಮಾರು ಮೂವತ್ತಕ್ಕೂ ಹೆಚ್ಚಿನ ವಿವಿಧ ಹುದ್ದೆಗಳನ್ನು ಅಲಂಕರಿಸಿ ದಕ್ಷತೆ, ಪ್ರಾಮಾಣಿಕತೆ ಹಾಗೂ ಕರ್ತವ್ಯನಿಷ್ಠೆಯಿಂದ ನಿಜವಾದ ಅರ್ಥದಲ್ಲಿ ಶುದ್ಧಕಾಯಕ ಮಾಡಿದವರು.
ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಯಾಗಿ ಅವರ ಸಾಧನೆ ಅದ್ವಿತೀಯ. ಇಪ್ಪತ್ನಾಲ್ಕು ವಿಭಾಗಗಳನ್ನು ನಲವತ್ತೆಂಟು ವಿಭಾಗಗಳಿಗೆ ಹೆಚ್ಚಿಸಿ, ಜ್ಞಾನದಿಗಂತವನ್ನು ವಿಸ್ತರಿಸಿದ ಹಿರಿಮೆ ಅವರದು. ಕನ್ನಡದ ಸರ್ವತೋಮುಖ ಪ್ರಗತಿಗೆ ಅವರು ರೂಪಿಸಿದ ದೂರದೃಷ್ಟಿಯ, ಪ್ರಗತಿಪರ ಯೋಜನೆಗಳು ಅಸಂಖ್ಯಾತ. ಕನ್ನಡ ಅಧ್ಯಯನ ಸಂಸ್ಥೆ, ಕನ್ನಡ ವಿಶ್ವಕೋಶ, ಜಾನಪದ ಮತ್ತು ವಸ್ತುಸಂಗ್ರಹಾಲಯ ಇವೇ ಮೊದಲಾದವು ದೇಜಗೌ ಮಹತ್ಸಾಧನೆಯ ಹೆಗ್ಗುರುತುಗಳಾಗಿವೆ.
ಶ್ರೀ ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ಶ್ರೀಮಾತೆ ಶಾರದಾದೇವಿ, ಬುದ್ಧ, ಬಸವ, ಗಾಂಧೀ, ಅಂಬೇಡ್ಕರ್, ಕುವೆಂಪು, ಟಾಲ್‌ಸ್ಟಾಯ್ ಇವರೇ ಮೊದಲಾಗಿ ಮಾನವ ಜಗತ್ತಿನ ಮೇರುಚೇತನಗಳ ಗಾಢ ಪ್ರಭಾವದಿಂದ ದೇಜಗೌ ಅವರ ಮಹೋನ್ನತ ವ್ಯಕ್ತಿತ್ವ ವಿಕಸನಗೊಂಡಿದೆ. ನೂರರ ಹೊಸ್ತಿಲಿನತ್ತ ಸಾಗಿರುವ ಅವರಲ್ಲಿ ಪರಿಪಕ್ವವಾದ ದಾರ್ಶನಿಕ ದೃಷ್ಟಿ ಮನಗಾಣಬಹುದು. ಕುಟೀರವಾಸಿ ದೇಜಗೌ ಅವರದು ತಪಸ್ವಿಯ ಬದುಕು. ನಮ್ಮ ಸಾರಸ್ವತ ಹಾಗೂ ಸಾಂಸ್ಕೃತಿಕ ಲೋಕದ ಮಹಾತಪಸ್ವಿ. ಲೋಕೋದ್ಧಾರ ಬಯಸುವ ಹೃದಯವಂತ.
ಜುಲೈ ೬, ೧೯೯೯ರ ಪವಿತ್ರ ದಿನದಂದು ಬೆಂಗಳೂರು ಜಿಲ್ಲೆ ಚೆನ್ನಪಟ್ಟಣದ ಚಕ್ಕೆರೆ ಗ್ರಾಮದಲ್ಲಿ ದೇವೇಗೌಡ-ಚೆನ್ನಮ್ಮ ಪುಣ್ಯದಂಪತಿಗಳ ಸುಪುತ್ರರಾಗಿ ದೇಜಗೌ ಕಡುಬಡತನದ ರೈತ ಕುಟುಂಬದಲ್ಲಿ ಜನಿಸಿದವರು. ಬವಣೆ ಬದುಕಿನಲ್ಲಿ ನೊಂದು ಬೆಂದು ಅಪರಂಜಿಯಾದವರು. ಅವರ ಹೋರಾಟದ ಬದುಕು ಪ್ರಶ್ನೆ-ವಿಸ್ಮಯಗಳ ಸರಮಾಲೆ.
ನಿರ್ಲಿಪ್ತ ಬದುಕಿನ ದೇಜಗೌ ಪದವಿ, ಅಂತಸ್ತು, ಸ್ಥಾನಮಾನ, ಪ್ರಶಸ್ತಿ, ಪುರಸ್ಕಾರ, ಸನ್ಮಾನ ಯಾವುದನ್ನೂ ಬಯಸಿದವರಲ್ಲ. ಜನಪ್ರೀತಿಯೇ ಸಾಗರವಾಗಿ, ಜನಕೋಟಿ ಹೃದಯಾಂತಃಕರಣದಿಂದ ಅವರ ಮೇಲಿನ ಅಪ್ಪಟ ಪ್ರೀತಿಯಿಂದ ದೇಶ ವಿದೇಶದ ಉದ್ದಗಲಕ್ಕೂ ಅವರನ್ನು ಗೌರವಿಸಿದೆ. ಅವರನ್ನು ಅರಸಿ ಬಂದ ಗೌರವ ಪುರಸ್ಕಾರಗಳು ಅಸಂಖ್ಯಾತ.
ಡಾ.ಡಿ.ಎಲ್.ನರಸಿಂಹಾಚಾರ್ಯ ಅವರು ಎಂದೋ ನುಡಿದಿರುವಂತೆ "ಅಮೆರಿಕಾದ ಮಹಾಧ್ಯಕ್ಷರಲ್ಲಿ ಒಬ್ಬನಾದ ಅಬ್ರಹಾಂ ಲಿಂಕನ್ನನ ಕುರಿತು; ಅವನು ಮರದ ಗುಡಿಸಿಲಿನಿಂದ ಶ್ವೇತಭವನಕ್ಕೆ ಏರಿದನೆಂದು ಹೇಳುವುದುಂಟು ದೇಜಗೌರಲ್ಲಿ ಲಿಂಕನ್‌ನ ನಿದರ್ಶನವನ್ನು ಕಾಣಬಹುದು. ಅವರು ಸೃಜನಶೀಲ ಲೇಖಕ. ಸ್ವತಂತ್ರ ಬರಹಗಾರ. ಉತ್ತಮ ಭಾಷಾಂತರಕಾರ. ಅವರದು ಸಮೃದ್ಧ ಸಾಹಿತ್ಯ ಬರವಣಿಗೆ. ಅಷ್ಟೇ ಉತ್ತಮ ಆಡಳಿತಗಾರ. ಅವರು ಕನ್ನಡ ನಾಡಿನ ಹೆಮ್ಮೆಯ ಆಸ್ತಿ".
ದೇಜಗೌ ಅವರನ್ನು ಅಲಂಕರಿಸಿರುವ ಪ್ರಮುಖ ಪ್ರಶಸ್ತಿ ಪುರಸ್ಕಾರಗಳು: ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ತಿರುವಾಂಕೂರಿನ ದ್ರಾವಿಡ ಭಾಷಾ ವಿಜ್ಞಾನ ಸಂಸ್ಥೆಯ ಸೀನಿಯರ್ ಫೆಲೋ ಗೌರವ, ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಮೈಸೂರು ವಿ.ವಿ.ಯ ಗೌರವ ಡಾಕ್ಟರೇಟ್, ಹಂಪಿ ವಿ.ವಿ.ಯ ನಾಡೋಜ ಪುರಸ್ಕಾರ, ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ, ಅಲ್ಲಮಶ್ರೀ ಪ್ರಶಸ್ತಿ, ಬಸವಶ್ರೀ ಪ್ರಶಸ್ತಿ, ಪಂಪ ಪ್ರಶಸ್ತಿ, ಚಿದಾನಂದ ಪ್ರಶಸ್ತಿ, ಜೀಶಂಪ ಜಾನಪದ ಪ್ರಶಸ್ತಿ, ಅನಕೃ ಪ್ರಶಸ್ತಿ, ಕುವೆಂಪು ಸಾಹಿತ್ಯ ಪ್ರಶಸ್ತಿ, ಲಕ್ಕೇಗೌಡ ಶೈಕ್ಷಣಿಕ ಪ್ರಶಸ್ತಿ, ಕಾಯಕ ಪ್ರಶಸ್ತಿ, ಜ್ಞಾನಪೀಠ ಪ್ರಶಸ್ತಿಯ ಮೊತ್ತಕ್ಕಿಂತಲೂ ಅಧಿಕವಾಗಿರುವ ಐದು ಲಕ್ಷ ಒಂದು ರೂಪಾಯಿಗಳ ಗೌರವದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಆಯೋಜಿಸಿ ಕನ್ನಡ ಸಾಹಿತ್ಯ ಪರಿಷತ್ ನೀಡಿರುವ ನೃಪತುಂಗ ಸಾಹಿತ್ಯ ಪ್ರಶಸ್ತಿ, ೪೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಸೇರಿದಂತೆ ನೂರಾರು ಪ್ರಶಸ್ತಿ ಪುರಸ್ಕಾರಗಳ ಗೌರವಾಭರಣಗಳು ದೇಜಗೌ ಅವರ ಸಾಧನೆಯ ಕೊರಳನ್ನು ಅಲಂಕರಿಸಿವೆ. ಇದೀಗ ಇವೆಲ್ಲಕ್ಕೂ ರತ್ನಪ್ರಾಯವಾಗಿ ಕರ್ನಾಟಕದ ಸರ್ಕಾರದ ಅತ್ಯುನ್ನತ ಗೌರವವಾದ "ಕರ್ನಾಟಕ ರತ್ನ" ಪ್ರಶಸ್ತಿ ಇವರನ್ನು ಅರಸಿಕೊಂಡು ಬಂದಿದೆ. ಹಾಗೆಯೇ ಅಂತಃಕರಣ, ದೇಜಗೌ ವ್ಯಕ್ತಿತ್ವ ಮತ್ತು ಸಾಹಿತ್ಯ, ರಸಷಷ್ಟಿ, ಎಪ್ಪತ್ತರ ಹೊಸ್ತಿಲಲ್ಲಿ, ಅಮೃತವರ್ಷ, ಪುಸ್ತಕ ಪ್ರಪಂಚ, ಕಾಯಕ ವಿಭೂತಿ... ಮುಂತಾದ ಹತ್ತು ಅಭಿನಂದನಾ ಗ್ರಂಥಗಳಿಂದ ಇವರು ಅಭಿನಂದಿತರಾಗಿದ್ದಾರೆ.
ದೇಜಗೌ ಅವರನ್ನು ಕುರಿತು ರಚಿತವಾಗಿರುವ ಕೃತಿಗಳು: ಕನ್ನಡ ಕಣ್ಮಣಿ, ಕರ್ಮಯೋಗಿ, ಕನ್ನಡ ಸೇನಾನಿ, ಕುಲಪತಿಯ ಸಾಧನೆಗಳು, ಗುಡಿಸಲಿನಿಂದ ಗಂಗೋತ್ರಿಗೆ, ದೇಜಗೌ-೭೫, ಕನ್ನಡದೀಪ.... ಮುಂತಾದವು.
ದೇಜಗೌ ಸ್ಥಾಪಿಸಿರುವ ಸಂಸ್ಥೆಗಳು: ಶ್ರೀ ಕುವೆಂಪು ವಿದ್ಯಾವರ್ಧಕ ಟ್ರಸ್ಟ್, ಶ್ರೀ ಕುವೆಂಪು ವಿದ್ಯಾಪರಿಷತ್, ಭಾರತೀಯ ಸ್ಥಳನಾಮ ಸಂಸ್ಥೆ, ಭಾಷಾಂತರ ಪರಿಷತ್ತು, ಕನ್ನಡ ಅಧ್ಯಯನ ಸಂಸ್ಥೆ, ಹಿರಿಯ ನಾಗರೀಕ ಸಭಾ, ಕನ್ನಡ ಅಧ್ಯಾಪಕ ಪರಿಷತ್ತು, ಕೆ.ವಿ.ಶಂಕರಗೌಡ ಸಾಂಸ್ಕೃತಿಕ ಪ್ರತಿಷ್ಠಾನ, ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ... ಮೊದಲಾದವು.
ದೇಜಗೌ ಪ್ರವಾಸ ಮಾಡಿರುವ ದೇಶಗಳು: ಅಮೆರಿಕಾ, ಆಫ್ರಿಕಾ, ಆಸ್ಟ್ರೇಲಿಯಾ, ಜಪಾನ್, ಜರ್ಮನಿ, ಸ್ವಿಟ್ಜರ್‌ಲ್ಯಾಂಡ್, ಇಟಲಿ, ಇಸ್ರೇಲ್, ಐರ‍್ಲೆಂಡ್, ಕೀನ್ಯಾ, ಗ್ರೇಟ್ ಬ್ರಿಟನ್, ಘಾನಾ, ನೈಜಿರೀಯಾ, ಫ್ರಾನ್ಸ್, ಶ್ರೀಲಂಕಾ, ಸಿಂಗಪುರ, ಕೆನಡಾ.... ಮೊದಲಾದವು.
ದೇಜಗೌ ಮಾರ್ಗದರ್ಶನದಲ್ಲಿ ಪಿ.ಹೆಚ್.ಡಿ.ಪದವಿ ಪಡೆದವರು: ಡಾ.ಹೆಚ್.ಜಿ.ಲಕ್ಕಪ್ಪಗೌಡ, ಡಾ.ವಿ.ಎಸ್.ವೇಣುಗೋಪಾಲರಾವ್, ಡಾ.ಜಿ.ಶಂ.ಪರಮಶಿವಯ್ಯ, ಡಾ.ಬಿ.ನಂ.ಚಂದ್ರಯ್ಯ, ಡಾ.ಡಿ.ಕೆ.ರಾಜೇಂದ್ರ, ಡಾ.ಟಿ.ಎನ್.ಶಂಕರನಾರಾಯಣ, ಡಾ.ಎ.ಆರ್.ಮಂಜುನಾಥ್..... ಮೊದಲಾದವರು.

ಬನ್ನೂರು ಕೆ.ರಾಜು, ಸಾಹಿತಿ-ಪತ್ರಕರ್ತ

No comments:

Post a Comment